.
ಯಕ್ಷಗಾನ ಸವಿಯುವ ಅವಕಾಶ ಇತ್ತೀಚೆಗೆ ಅತ್ಯಂತ ಕ್ಷೀಣವಾಗಿರುವಾಗ ಉತ್ತಮ ಕಾರ್ಯಕ್ರಮವೊಂದು ಸವಿಯುವ ಅವಕಾಶ ಒದಗಿಬಂತು. ಇದು ತೆಂಗು ಕಂಗಿನ ತಂಪಾದ ಪರಿಸರದ ಹಳ್ಳಿಯ ಮನೆಯೊಂದರ ಅಂಗಳದಲ್ಲಿ ಎಂಬುದು ಮತ್ತೋಂದು ಉಲ್ಲೇಖನೀಯ ಅಂಶ. ರುಚಿಯಾದ ಹಳ್ಳಿಯ ಉಪಚಾರದೊಂದಿಗಿನ ಪುಷ್ಕಳ ಭೋಜನದೊಂದಿಗೆ ಯಕ್ಷಗಾನ ಕಾರ್ಯಕ್ರಮ ಸವಿಯುವುದು ನನ್ನಂತಹವರಿಗೆ ಅಪರೂಪದ ಅನುಭವ.
ಸಹೋದರನ ಮದುವೆ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮವಿದು. ಹಿರಿಯ ಭಾಗವತರಾದ ಶ್ರೀ ಪದ್ಯಾಣ ಗಣಪತಿ ಭಟ್ ರವರ ನೇತೃತ್ವದಲ್ಲಿ ಇದರ ರೂಪುರೇಷೆಯನ್ನು ಸಿದ್ದಪಡಿಸಲಾಗಿತ್ತು. ಮದುವೆಯಂತಹ ಶುಭಸಮಾರಂಭದಲ್ಲಿ ಅದೂ ಸಹೋದರನ ಮದುವೆ ಎಂದಾದಾಗ ಅತ್ಯಂತ ಸೂಕ್ತವಾದ ಪ್ರಸಂಗ ಪಾದುಕಾಪ್ರದಾನವನ್ನು ಯಕ್ಷಗಾನ ತಾಳಮದ್ದಲೆಗೆ ಆಯ್ಕೆ ಮಾಡಿದ್ದರು.ರಾಮಾಯಣದ ಅತ್ಯಂತ ಭಾವಪೂರ್ಣ ಪ್ರಸಂಗಗಳಲ್ಲಿ ಒಂದಾದ, ಸಾಹೋದರ್ಯದ ಆಳ ಅಗಲದ ವಿಸ್ತಾರವನ್ನು ಮನಸ್ಸಿಗೆ ತೋರಿಸಿಕೊಡುವ ವಿಶಿಷ್ಟ ಪ್ರಸಂಗವಿದು.ಸಾಹೋದರ್ಯ ಎಂಬುದು ಜನ್ಮದಿಂದ ಬರುವಂತಹುದು. ನಮ್ಮ ಸಂಸ್ಕೃತಿಯಲ್ಲಿ ಇದಕ್ಕೆ ಉನ್ನತವಾದ ಸ್ಥಾನವಿದೆ. ರಾಮನ ಅದರ್ಶಮಯ ವ್ಯಕ್ತಿತ್ವದಲ್ಲಿ ಸಾಹೋದರ್ಯಕ್ಕೆ ವಿಶಿಷ್ಟಮಯ ಸ್ಥಾನವಿದೆ. ಹಾಗಾಗಿ ಈ ಪ್ರಸಂಗ ಬರೆಕೆರೆ ಯಲ್ಲಿ ಹೆಚ್ಚು ಅರ್ಥಪೂರ್ಣವಾಗಿ ತೋರುತ್ತದೆ. ಮಾತ್ರವಲ್ಲ ಅದಕ್ಕೆ ಸೂಕ್ತವಾಗಿ ಹಿರಿಯ ಅರ್ಥಧಾರಿಗಳಾದ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯ, ಶ್ರೀ ಉಮಾಕಾಂತ ಭಟ್ ಭಾಗವಹಿಸುವಿಕೆ ನಿಗದಿಯಾಗಿರುವುದರಿಂದ ಇದಕ್ಕೆ ಅನುಸಾರವಾಗಿಯೂ ಭಾವಪೂರ್ಣ ಸನ್ನಿವೇಶವನ್ನು ಒಳಗೊಂಡ ಈ ಪ್ರಸಂಗವನ್ನು ಆಯ್ಕೆ ಮಾಡಿದ್ದರು.
ಕಾರ್ಯಕ್ರಮದ ರೂಪುರೇಶೆ ಮೇಲ್ನೋಟಕ್ಕೆ ಗಮನಿಸಿದಾಗ ಹಲವು ನಿರೀಕ್ಷೆಗಳು ಮನೆ ಮಾಡಿದ್ದುವು. ಹಲವು ಸಮಯದಿಂದ ನಂತರ ಹಿರಿಯ ಕಲಾವಿದರ ಅರ್ಥಗಾರಿಕೆ ಸವಿಯುವುದು,ಭಾವಪೂರ್ಣ ಪದ ಸನ್ನಿವೇಶಗಳಿಂದ ಕೂಡಿದ ಭರತಾಗಮನ ಅಥವಾ ಪಾದುಕಾ ಪ್ರದಾನ ಪ್ರಸಂಗ ದರ್ಶನ ಹೀಗೆ. ಹಲವು ನಿರೀಕ್ಷೆಗಳಿಗನುಸಾರವಾಗಿ ಭಾವಪೂರ್ಣ ಸನ್ನಿವೇಶಕ್ಕೆ ಭಾವಪೂರ್ಣವಾಗಿ ಮನಸ್ಸು ಸಜ್ಜಾಗಿತ್ತು. ಭಾವಪೂರ್ಣ ಪದ ಅರ್ಥಗಾರಿಕೆಯ ನಿರೀಕ್ಷೆಯಿದ್ದುದರಿಂದ ಹೃದಯ ಭಾರವಾಗುವ ನೀರೀಕ್ಷೆಯು ಜತೆಗೆ ಇದ್ದುದರಿಂದ ಅದಕ್ಕಾಗಿ ಆದಷ್ಟು ಮನಸ್ಸು ಹೃದಯವನ್ನು ಹಗುರವಾಗಿಸಿ ಎಲ್ಲ ದುಗುಡ ದುಮ್ಮಾನಗಳನ್ನು ದೂರವಿರಿಸಿ ಈ ಭಾವುಕ ಸನ್ನಿವೇಶವನ್ನು ಕಾಣುವುದಕ್ಕೆ ಬಹುಶಃ ಎಲ್ಲರ ಮನಸ್ಸು ಸಿದ್ದಗೊಂಡಿತ್ತು. ಪಕ್ವವಾದ ಹಣ್ಣು ಅದುಮಿದಾಗ ರಸ ಚಿಮ್ಮಿಸಿದಂತೆ ಅದ್ಭುತ ರಸಾನುಭವಕ್ಕೆ ವೇದಿಕೆಯೊಂದು ನಿರ್ಮಾಣವಾಗಿದ್ದು ಅದು ಪ್ರತ್ಯಕ್ಷವಾಗಿ ನಿಜವಾಗಿಬಿಟ್ಟಿತು.ಅಂದು ಉಮಾಕಾಂತರ ವಿದ್ವತ್ ಕಾಂತ ಎಲ್ಲರನ್ನು ಆಕರ್ಶಿಸಿತುಪಾದುಕಪ್ರದಾನದಲ್ಲಿ ಭರತ ಹಾಗು ಶ್ರೀರಾಮನ ಪಾತ್ರಗಳು ಅತ್ಯಂತ ಪ್ರಮುಖವಾದವು. ಇವುಗಳಲ್ಲಿ ಭರತನ ಪಾತ್ರ ಉಡುವೇಕೋಡಿಯವರು ನಿರ್ವಹಿಸಿದರೆ, ಶ್ರೀರಾಮನ ಪಾತ್ರ ಉಮಾಕಾಂತರವರು ನಿರ್ವಹಿಸಿದರು.ಯಕ್ಷಗಾನದಲ್ಲೇ ಆಗಲಿ ಅಥವ ಸಮಗ್ರ ಪುರಾಣಗಳಲ್ಲೇ ಆಗಲಿ ಶ್ರೀರಾಮನ ವ್ಯಕ್ತಿತ್ವದಂತಹ ತೂಕವುಳ್ಳ ಪಾತ್ರ ಇನ್ನೊಂದಿಲ್ಲ. ಅದರ್ಶ ಪುರುಷ,ಪುರುಷೋತ್ತಮನ ಪಾತ್ರವನ್ನು ಯಾವುದರಲ್ಲೆ ಆಗಲಿ ನಿರ್ವಹಿಸುವುದು ಅತಿ ದೊಡ್ಡ ಸವಾಲಿನ ಕೆಲಸ. ಘನಗಂಭೀರ ವ್ಯಕ್ತಿತ್ವದ ರಾಮನ ಪಾತ್ರ ನಿರ್ವಹಿಸುವಾಗ ಬಯಲಾಟದಲ್ಲಿ ಆದರೆ ಗಿರಿಕಿ ಕುಣಿಯುವಾಗ ಕುತ್ತು ಹಾರಬಾರದೆನ್ನುವ
ರಾಮ ಮತ್ತು ಗುಹನ ಸನ್ನಿವೇಶದಿಂದ ಆರಂಭಗೊಂಡ ಕಥಾಭಾಗದಲ್ಲಿ ಗುಹನಾಗಿ ಮಿತ್ರ ಮುಳಿಯ ರಘುರಾಮಣ್ಣ ಸಿಕ್ಕಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು. ಸೂರ್ಯ ಅಸ್ತಮಿಸುವಾಗ ಕಳೆದ ಆ ಒಂದು ದಿನದ ಬಗ್ಗೆ ನಿಟ್ಟುಸಿರು ಬಿಡುತ್ತಾ, ಉತ್ತರದ ಅಯೋಧ್ಯೆಯಿಂದ ವನವಾಸದೀಕ್ಷಾಬದ್ದನಾಗಿ ಬಂದ ಶ್ರೀರಾಮನ ದರ್ಶನವಾದಾಗ , ಪಡುವಣದಲ್ಲಿ ಮುಳುಗಿದ ಸೂರ್ಯ ಉತ್ತರದಿಂದ ಉದಿಸಿದನೇ ಎಂದು ಉದ್ವೇಗಭರಿತನಾಗುವ ಗುಹನ ಪಾತ್ರ ತಕ್ಕ ಮಟ್ಟಿಗೆ ಉತ್ತಮವಾಗಿತ್ತು. ಉಮಾಕಾಂತರೊಂದಿಗಿನ ಸಂವಾದದಿಂದ ಸಹಜವಾಗಿ ರಘುರಾಮಣ್ಣ ಉದ್ವೇಗಭರಿತರಾಗಿದ್ದರು...!!
ಶ್ರೀರಾಮ ಸೀತಾ ಲಕ್ಷ್ಮಣರೊಂದಿಗೆ ಗಂಗಾನದಿಯನ್ನು ದಾಟುವ ಮಹತ್ತರ ಭಾವುಕ ಸನ್ನಿವೇಶವನ್ನು ಭಾವ ಪರವಶರಾಗಿ ಉಮಾಕಾಂತ ಭಟ್ಟರು ಮಾತಿನಲ್ಲೆ ತೋರಿಸಿಕೊಟ್ಟಲ್ಲಿಂದ ಹೃದಯ ತುಂಬುವುದಕ್ಕಾರಂಭಿಸಿತು.
ಸರ್ಪಂಗಳ ಈಶ್ವರ ಭಟ್ ರವರ ಲಕ್ಷ್ಮಣನ ಪಾತ್ರ ಸಮಯೋಚಿತವಾಗಿದ್ದು ಸರಳ ಹಾಗು ಅರ್ಥಗರ್ಭಿತ ಮೊನಚಾದಮಾತುಗಳಿಂದ ವಿಜ್ರಂಭಿಸಿತು. ನಂತರದ ಬಹು ನಿರೀಕ್ಷೆಯ ಸನ್ನಿವೇಶವೇ ರಾಮ ಭರತರ ಸಮಾಗಮ. ಯಕ್ಷಗಾನದ ವೈಶಿಶ್ಟ್ಯ ದರ್ಶನವೇ ಇಂತಹ ಪೌರಾಣಿಕ ಕಥಾನಕಗಳಲ್ಲಿದೆ. ಆಲ್ಲಿ ಸೇರಿದ್ದ ಅಷ್ಟೂ ಮಂದಿಗೆ ರಾಮ ಭರತರ ಪಾತ್ರವಾಗಲಿ , ಪಾದುಕಾ ಪ್ರದಾನದ ಕಥೆಯಾಗಲಿ ತಿಳಿಯದುದೇನಲ್ಲ. ಹಾಗಿದ್ದರೂ ಅತಿಯಾದ ನಿರೀಕ್ಷೆ ಇರಬೇಕಾದರೆ. ಮಾತಿನಲ್ಲೇ ಚಿತ್ರಕೂಟದ ಚಿತ್ರವನ್ನು ಬಿಡಿಸಿತೋರಬಲ್ಲ ಸಮರ್ಥ ಕಲಾವಿದರು ಇರಬೇಕಾದರೆ ಯಕ್ಷಗಾನವೆಂಬ ಕಲಾಮಾತೆ ಪುಣ್ಯಗರ್ಭೆಯೂ ಹಿರಣ್ಯು ಗರ್ಭೆಯು ಎಂಬುದರಲ್ಲಿ ಸಂಶಯವಿಲ್ಲ. ಎಂತೆಂತಹ ವಿದ್ವನ್ಮಣಿಗಳು ಈ ಮಾತಿನ ಪ್ರಪಂಚದಲ್ಲಿ ತಮ್ಮ ವಿದ್ವತ್ ಪೂರ್ಣ ಮಾತುಗಳಿಂದ ಸಂಚಲನ ಉಂಟುಮಾಡುತ್ತಾರೆ.ಆಶ್ಚರ್ಯವಾಗುವುದಿಲ್ಲವೇ?
ಭರತನನ್ನು ಕಂಡರಾಮ ಪದ್ಯಾಣರ ಬಂದೆಯ ಇನವಂಶವಾರಿಧಿ ಚಂದ್ರ... ಎಂಬ ಭಾವಾನಾತ್ಮಕ ಪದಕ್ಕೆ ನೆರೆದ ಜನಸಮೂಹ ತಮಗರಿವಿಲ್ಲದೇ ಮೌನವಾಯಿತು. ಎಂತಹ ಪದಗಳು ಇವುಗಳು. ರಾಮಾಲಿಂಗನವನ್ನು ಬಯಸಿದ ಭರತ ತನ್ನ ಪರಿವಾರವನ್ನು ಬಿಟ್ಟು ಓಡೋಡಿ ಬರುವ ಸನ್ನಿವೇಶ, ಬಂದು ರಾಮಾಲಿಂಗನದ ಬಿಗಿದಪ್ಪುಗೆಯಲ್ಲಿ ರಾಮನ ಬೆನ್ನನ್ನು ಕಂಬನಿಯಿಂದ ತೋಯಿಸುವ ಸನ್ನಿವೇಶವನ್ನು ಹಿರಿಯ ಕಲಾವಿದರು ಮಾತಿನಲ್ಲೇ ತೋರಿಸಿದಾಗ ರಾಮನ ಬೆನ್ನಿಗೆ ಬದಲಾಗಿ ನೆರೆದ ಮಂದಿಯ ಕಣ್ಣಿವೆಗಳೇ ತೊಯ್ದು ಹೋದವು. ಇದಲ್ಲವೆ ತಾಳಮದ್ದಲೆ? ಇದಲ್ಲವೇ ಯಕ್ಷಗಾನ? ನಾವೇಷ್ಟು ಭಾಗ್ಯವಂತರು ಎಂಬ ಅರಿವಾಗುವುದು ಇದನ್ನು ಸವಿಯುವಾಗ.
ಉದಯೋನ್ಮುಖ ಪ್ರತಿಭಾವಂತ ಪದ್ಮನಾಭ ಉಪಾಧ್ಯಾಯರ ಮದ್ದಲೆವಾದನವನ್ನು ಯಾವರೀತಿ ಉಲ್ಲೇಖಿಸಿದರೂ ಕಡಿಮೆಯೇ. ಸುತ್ತ ಮುತ್ತ ಹಬ್ಬಿದ ತೆಂಗು ಕಂಗಿನ ತೋಟದ ಮಧ್ಯೆ ಈ ಮದ್ದಲೆ ವಾದನ ಮಾರ್ದನಿಸುವುದನ್ನು ಹೊರಗೆ ಹೋಗಿ ಕೇಳಿದೆ. ಎಂತಹ ಅವರ್ಣನೀಯ ಅನುಭವವದು.
ಉತ್ತಮ ತಾಳ ಮದ್ದಲೆ ಅದೂ ಮಿತ್ರ ಬರೆಕೆರೆ ಕೇಶವಣ್ಣನ ಮನೆಯಲ್ಲಿ ಸವಿಯುವಾಗ ನಮ್ಮಲ್ಲಿ ಅದರ ಮೌಲ್ಯ ಇನ್ನೂ ಅಧಿಕವಾಗಿಬಿಡುತ್ತದೆ. ಉಮಾಕಾಂತರ ರಾಮನ ಪಾತ್ರದ ಮೂಲಕ ಹರಿದ ವಾಕ್ಪ್ರವಾಹಕ್ಕೆ ಸಿಕ್ಕಿ, ರಾಮನ ಅದರ್ಶಮಯ ವ್ಯಕ್ತಿತ್ವದ ಮುದ್ರೆಯನ್ನು ಹೃದಯದಲ್ಲಿ ಮೂಡಿಸಿ, ಅದನ್ನು ಭದ್ರವಾಗಿ ಕೈಯಿಂದ ಹಿಡಿದು, ಮೃದುವಾಗಿ ಸವರಿ, ಉತ್ತಮ ರಸಾನುಭವಕ್ಕೆ ಅವಕಾಶ ಮಾಡಿಕೊಟ್ಟ ಬರೆಕೆರೆ ಕುಟುಂಬಕ್ಕೆ ಮನಸಾ ಕೃತಜ್ಞತೆಯನ್ನು ಅರ್ಪಿಸುವ ಮನಸ್ಸಾಯಿತು.
nice writeup.. i missed to attend :(
ReplyDeleteThanks a lot Rajanna for attending and write-up.
ReplyDelete