ಇತ್ತೀಚೆಗೆ ಒಂದು ಯಕ್ಷಗಾನ ಜಾಹೀರಾತು ನೋಡಿ ಬದಲಾದ ಕಾಲಗತಿಯ ಬಗ್ಗೆ ಆಶ್ಚರ್ಯವಾಯಿತು.ಅಂದಿನ ಪ್ರಸಂಗದ ಹೆಸರಿನೊಂದಿಗೆ ವಿಶೇಷವಾಗಿ ಸಂಪೂರ್ಣ ಪೂರ್ವರಂಗ ಎಂದು ಉಲ್ಲೇಖಿಸಿದ್ದರು. ಆಯೋಜಕರ ಸದುದ್ದೇಶ ಪರಂಪರೆಯ ಬಗೆಗಿನ ಕಾಳಜಿ ಶ್ಲಾಘನೀಯ. ಆದರೂ ಇಲ್ಲಿ ಬದಲಾದ ಕಾಲಗತಿಯ ಬಗ್ಗೆ ಒಂದು ಬಾರಿ ಮನ ಯೋಚಿಸಿತು.
ಯಕ್ಷಗಾನದಲ್ಲಿ ಪೂರ್ವರಂಗ ಎಂದರೆ ಅರಿಯದವರು ಕಡಿಮೆ. ಬಾಲ ಗೊಪಾಲ ಕೋಡಂಗಿ ಇತ್ಯಾದಿ ವೇಶಗಳ ಸಂಪ್ರದಾಯಬದ್ದ ಕುಣಿತ. ಯಕ್ಷಗಾನ ಪ್ರಸಂಗ ಆರಂಭಕ್ಕಿಂತ ಮೊದಲು ಇದು ಸಂಪ್ರದಾಯ. ಹೆಚ್ಚಾಗಿ ದೇವಸ್ಥಾನ ಮೇಳಗಳಲ್ಲಿ ಇದೂ ಒಂದು ಹರಕೆಯ ರೂಪದಲ್ಲೋ, ಸಂಪ್ರದಾಯ ರೂಪದಲ್ಲೋ ಆರಾಧನಾ ಕ್ರಿಯೆಯಾಗಿ ಬಳಕೆಯಲ್ಲಿದೆ. ವಿಶೇಷವಾದ ಖಾಸಗಿ ಅಥವಾ ಸಂಘ ಸಂಸ್ಠೆಗಳ ಯಕ್ಷಗಾನ ಕಾರ್ಯಕ್ರಮದಲ್ಲಿ ಇದನ್ನು ಉಪೇಕ್ಷಿಸುವುದು ಮಾಮೂಲು ಸಂಗತಿ. ಆದರೆ ಬದಲಾದ ಕಾಲಗತಿ ಅಂದರೆ ಇದುವೆ. ಮೇಳಗಳಲ್ಲಿ ಇದು ಕುಂಠಿತವಾಗಿ ಈಗ ಖಾಸಗಿಯಾಗಿ ಈ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ.
ಮೊದಲೆಲ್ಲ ನಾವು ಆಟಕ್ಕೆ ಹೋಗುವಾಗ ಈ ಪೂರ್ವ ರಂಗದ ಸಮಯವನ್ನು ತಪ್ಪಿಸಿಯೇ ಹೋಗುತ್ತಿದ್ದೆವು. ಇದೊಂದು ರಗಳೆಯ ಕಾರ್ಯಕ್ರಮದಂತೆ ಭಾಸವಗುತ್ತಿದ್ದದ್ದು ಸುಳ್ಳಲ್ಲ. ಅದರೆ ಅದರ ಮಹತ್ವದ ಅರಿವಾಗುವುದು ಅದರ ಮೌಲ್ಯದ ಅರಿವಾದಾಗಲೇ. ಬದಲಾದ ಕಾಲಗತಿಗೆ ಅದು ಎಂದಲ್ಲ ಎಲ್ಲವೂ ಬದಲಾಗುತ್ತ ಹೋಗುತ್ತಿದೆ. ಮೊದಲೆಲ್ಲ ಮದುವೆ ಅಥವಾ ಇನ್ನಿತರ ಸಮಾರಂಭಕ್ಕೆ ಊಟಕ್ಕೆ ಹೋದರೆ ಭೂರೀ ಭೋಜನವೆಂದರೆ ಅಲ್ಲಿ ಊಟದ ಪ್ರಧಾನ ಭಾಗವೇ ಅನ್ನ. ಅನ್ನ ಸಂತರ್ಪಣೆ ಎನ್ನುವುದೇ ಅದಕ್ಕಲ್ಲವೆ. ಅದನ್ನೆ ನೈವೇದ್ಯ ಎಂದು ಬಡಿಸುವುದು ಪದ್ದತಿ. ಆವಾಗ ಅನ್ನದ ಬಗ್ಗೆ ಪ್ರೀತಿಯೂ ಅಷ್ಟೇ ಗೌರವ ಭಾವನೆಯೂ ಉಂಟಾಗುತ್ತದೆ. ಆದರೆ ಇಂದು ನೋಡಿ ಅನ್ನ ಬಿಟ್ಟು ಬೇರೆಲ್ಲ ಭಕ್ಷ್ಯಗಳು ಇರುತ್ತವೆ. ಅನ್ನ ಬೇಕಾದರೆ ಕೇಳಿ ಬಡಿಸಿಕೊಂಡರೆ ಒಂದಿಷ್ಟು ತಿನ್ನಬಹುದು. ಅನ್ನವೇ ಇಲ್ಲದಿದ್ದ ಭೋಜನ ಕೂಟ... ಹೇಗಿದೆ ಬದಲಾದ ಕಾಲಗತಿ? ಮುಂದೊಂದುದಿನ ಬರಬಹುದು ಇಂದಿನ ಊಟಕ್ಕೆ ವಿಶೇಷ ಏನು .... ಬೇಕಾದಷ್ಟು ಅನ್ನ ಮಾಡಿದ್ದರು..!! ಹಾಗಾಗಿ ಯಾವುದನ್ನು ಯಾರನ್ನೂ ಪ್ರಮೇಯ ಮಾಡುವ ಹಾಗಿಲ್ಲ. ಮೂಕ (ಕೆಲವೊಮ್ಮೆ ಮೂರ್ಖ) ಪ್ರೇಕ್ಷಕನಂತೆ ನೋಡುವುದಷ್ಟೇ ಕೆಲಸ. ಇಲ್ಲೂ ಹಾಗೆ ಮುಂದೆ ಓಡಿದ ಕಾಲ ಹಿಂದಕ್ಕೆ ಬರುವುದುಂಟು... ಇಂದಿನ ವಿಶೇಷ ಬಾಳೆ ಏಲೆ ಊಟ..ಅಲ್ಲಿ ಅದು ವಿಶೇಷವಾಗುವಾಗ ಇಲ್ಲಿ ಇದು ವಿಶೇಷ.. ಇಂದು ಪೂರ್ವರಂಗ ಇದೆ.
ಮುಂದೊಂದು ದಿನ ಬರಬಹುದು... ಚಿಕ್ಕದಾದ ಪ್ರಸಂಗ.., ಅಗ್ರಪೂಜೆಯ ಹಾಗಿರುವ ಪ್ರಸಂಗವಿರಿಸಿ ಹೆಸರಿಗೊಸ್ಕರ ಇರಿಸಿ ಇಂದಿನ ಪ್ರಸಂಗ..!!! ಪೂರ್ವರಂಗ...!!! ಈಗೆಲ್ಲ ಪೂರ್ವರಂಗ ಕಥಾಭಾಗದ ಮೊದಲು ಹರಕೆಯೊ ಪೂಜಾವಿಧಾನದಂತೆ ಮೊದಲೇ ನಡೆದುಬಿಡುತ್ತದೆ. ಸಣ್ಣ ಮಕ್ಕಳಷ್ಟೇ ಇದರ ಪ್ರೇಕ್ಷಕ. ಹಿರಿಯರಾರಿಗೂ ಇದು ಗಂಭೀರ ಅನ್ನಿಸುವುದಿಲ್ಲ. ಆದರೂ ಮುಂದೊಂದು ದಿನ, ಪ್ರಧಾನ ಪ್ರೇಕ್ಷಕ ಬರಬೇಕೆಂದೋ ಗಣ್ಯ ಅತಿಥಿಗಳಿಗಾಗಿಯೋ ಈ ಪೂರ್ವ ರಂಗ ಉತ್ತರ ರಂಗವಾಗಿ ಚಿಕ್ಕದಾದ ಕಥಭಾಗದ ಪ್ರಸಂಗ ಮೊದಲೇ ಆಗಿಬಿಡಬಹುದು.ಕಾಲದ ಮಹಿಮೆಯ ಬಲ್ಲವರಾರು? ಪ್ರಸಂಗಕ್ಕಿಂತ ದೊಡ್ಡದಾಗಿ ಕರಪತ್ರದಲ್ಲಿ ಪೂರ್ವ ರಂಗದ ಹೇಸರೇ ಕಾಣಬಹುದು. ಮಾತ್ರವಲ್ಲ ಇದರಲ್ಲಿ ಭಾಗವಹಿಸುವ ಪ್ರಧಾನ ಕಲಾವಿದರನ್ನು ಕೂಡ ವಿಶೇಷವೆಂಬಂತೆ ಉಲ್ಲೇಖಿಸಬಹುದಲ್ಲವೆ? ಒಟ್ಟು ಗೊಂದಲವಾಗಿ ಯಾವುದು ಯಕ್ಷಗಾನ ಎಂಬ ಅಯೋಮಯ ಸನ್ನಿವೇಶ ಬರಬಹುದು.
ಯಾವುದೇ ಪರಿವರ್ತನೆಯಲ್ಲಿ ಒಳಿತು ಕೆಡುಕನ್ನು ಯೋಚಿಸುವುದು ಕ್ರಮ. ಹಾಗೇನೇ ಬದಲಾದ ಕಾಲಕ್ಕೆ ತಕ್ಕಂತೆ ಬದಲಾದ ಕಾಲಮಿತಿ ಯಕ್ಷಗಾನದ ಬಗ್ಗೆ ಚರ್ಚೆ ಸಂವಾದಗಳು ನಡೆಯುತ್ತಿವೆ. ಇದರ ಬಗ್ಗೆ ಅಭಿಪ್ರಾಯ ಹೇಳುವಾಗ ನನ್ನಲ್ಲೆ ಕೆಲವೊಮ್ಮೆ ಪ್ರಶ್ನಿಸುವುದುಂಟು. ವಾಸ್ತವದಲ್ಲಿ ಕಾಲಮಿತಿ ಯಕ್ಷಗಾನದ ಬಗ್ಗೆ ನನ್ನಲ್ಲೇನು ಸದಭಿಪ್ರಾಯವಿಲ್ಲ. ಹಾಗೆಂದು ಪೂರ್ಣ ಪ್ರಮಾಣದ ಇಡೀ ರಾತ್ರಿಯ ಯಕ್ಷಗಾನ ನಾನು ನೋಡದೆ ಅದೆಷ್ಟು ಸಮಯವಾಗಿಬಿಟ್ಟಿದೆ.ಈ ಕಾಲಮಿತಿ ಎಂಬ ಯಕ್ಷಗಾನ ಪ್ರಾಕಾರ ರೂಪುಗೊಳ್ಳದಿರುತ್ತಿದ್ದರೆ ನಾನು ಯಕ್ಷಗಾನವನ್ನು ಹಗಲು ಕನಸೆಂದು ಮರೆತುಬಿಡುವ ಪ್ರಮೇಯವಿತ್ತು. ಹೀಗಿದ್ದರೂ ಪೂರ್ಣ ರಾತ್ರಿಯ ಯಕ್ಷಗಾನವನ್ನು ನೋಡಬೇಕೆಂಬ ಆಸೆಯಂತು ಇದ್ದೇ ಇದೆ. ಯಕ್ಷಗಾನದ ನಿಜವಾದ ಸೊಗಸಿರುವುದು ಅದರಲ್ಲೇ.. ಕಾಲಮಿತಿ ಏನಿದ್ದರು ಊರಿನ ನೆನಪನ್ನು ಮಾಡಲಷ್ಟೆ ಸಾಧ್ಯ. ಒಳಿತು ಕೆಡುಕು ಏನಿದ್ದರೂ ಮರೆಯಾಗುತ್ತಿರುವ ಪೂರ್ವ ರಂಗ ಹೊಸ ರೂಪದಲ್ಲಿ ಪ್ರತ್ಯಕ್ಷವಾಗುವ ಬಗೆ ಮಾತ್ರ ವಿಶಿಷ್ಟವಾಗಿದೆ. ಈ ರೀತಿಯಲ್ಲಿ ಪೂರ್ವರಂಗ ಜನಪ್ರಿಯವಾಯಿತೆಂದರೆ ಅದರಲ್ಲಿ ನೈಪುಣ್ಯತೆ ಸಾಧಿಸಿದವರಿಗೆ ಒಮ್ಮಿಂದೊಮ್ಮೆಲೆ ಬೇಡಿಕೆ ಬರಬಹುದು. ಇಲ್ಲ ಬಹುತೇಕ ಮಂದಿಗೆ ಅದರ ಅಧ್ಯಯನ ಅನಿವಾರ್ಯವಾಗಬಹುದು. ಒಂದೆರಡು ಪ್ರದರ್ಶನದಿಂದ ದೇವೆಂದ್ರನ ಬಲ ವೇಶ ಮಾಡುತ್ತಿದ್ದವರು ಬಣ್ಣದ ವೇಶಕ್ಕೊ ಅಥವಾ ಇನ್ನಿತರ ವೇಶಕ್ಕೊ ಭಡ್ತಿಯನ್ನು ಸ್ವಯಂ ಘೋಷಿಸುವವರು ಬಹುಷಃ ಅವರ ಮಟ್ಟಿಗೆ ಹಿಂಭಡ್ತಿಯನ್ನು ಬಯಸಬಹುದೇನೋ? ಮೊದಲಿನ ಹಿರಿಯ ಭಾಗವತರಿಗೆ ಪೂರ್ವ ರಂಗದಲ್ಲಿ ಹಿಡಿತವೂ ಜ್ಞಾನವೂ ಇರುವುದರಿಂದ ಅವರಿಗೆ ಬೇಡಿಕೆ ಬರಬಹುದೆಂದು ತಿಳಿಯುವ ಹಾಗಿಲ್ಲ. ಯಾಕೆಂದರೆ ಪೂರ್ವ ರಂಗವನ್ನು ಪ್ರದರ್ಶಿಸುವುದು ಅಥವಾ ಪ್ರಾತ್ಯಕ್ಷಿಕೆ ಕಮ್ಮಟವನ್ನು ಏರ್ಪಡಿಸುವುದು ಒಂದು ರೀತಿಯಲ್ಲಿ ಸ್ವಯಂ ಜಾಹೀರಾತಿನ ಮತ್ತು ಪ್ರತಿಷ್ಠೆಯ ಕ್ರಮವೇ ಕಂಡು ಬರುವುದು ಅಧಿಕ. ಅದರ ಬಗ್ಗೆ ಕಾಳಜಿ ಇದ್ದು ಕೇವಲ ಕೆಲವೇ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ, ಮತ್ತು ಅವುಗಳಲ್ಲಿ ಹಿರಿಯ ಕಲಾವಿದರ ಮಾರ್ಗದರ್ಶನ ಮತ್ತು ತಿಳುವಳಿಕೆಯ ಲಾಭವನ್ನು ಪಡೆಯುವುದನ್ನು ಕಾಣಬಹುದು. ಮಿಕ್ಕುಳಿದವುಗಳಲ್ಲಿ ಹಿರಿಯ ಕಲಾವಿದರ ಬಗ್ಗೆ ಲಕ್ಷ್ಯವೇ ಇರುವುದಿಲ್ಲ. ಯಾಕೆಂದರೆ ಅದು ಒಟ್ಟು ಒಂದು ಕಾರ್ಯಕ್ರಮ ಎಂಬಲ್ಲಿಗೆ ಸೀಮಿತ. ಹಾಗಾಗಿ ಹಿರಿಯರಾದರೇನು ಯಾರದರೇನು ಒಟ್ಟಿನಲ್ಲಿ ಲೆಕ್ಕ ಭರ್ತಿಯಾಗಬೇಕು, ಕಾರ್ಯಕ್ರಮ ನಡೆಯಬೇಕು.
ಈ ರೀತಿ ಪೂರ್ವ ರಂಗ ಆಯೋಜನೆಗೊಳ್ಳುವುದರಿಂದ ಅದು ಬಹು ಪ್ರಾಮುಖ್ಯತೆಯನ್ನು ಗಳಿಸುತ್ತದೆ. ಈಗಲೂ ಎಲ್ಲಿಯಾದರೂ ಪೂರ್ಣ ಪ್ರಮಾಣದ ಯಕ್ಷಗಾನ ಬಯಲಾಟ ಕಾಣುವ ಅವಕಾಶ ಒದಗಿಬಂದಲ್ಲಿ ಸುಲಭದಲ್ಲಿ ಸಿಕ್ಕರು ನಾವೆಷ್ಟು ಪೂರ್ವರಂಗವನ್ನು ನೋಡುತ್ತೇವೆಯೊ ಅದರ ಬಗ್ಗೆ ಭರವಸೆ ಇಲ್ಲ. ಈಗಲೂ ನೆನಪಿದೆ.. ಸಾಯಂಕಾಲದ ಹೊತ್ತು ಆರಂಭವಾಗುವ ಕಟೀಲು ಮೇಳದ ಆಟಗಳನ್ನು ನೋಡುತ್ತಿದ್ದುದು.ನ್ ನಾವುಗಳು ಬಾಲಕರು ಬಾಲಗೋಮಾಲ ಕೋಡಂಗಿಗಳು ರಂಗಸ್ಥಳದಿಂದ ದೂರವಿರುವ ಚೌಕಿಗೆ ಚಲಿಸುವಾಗ ಕೇಕೆ ಹಾಕಿಕೊಂಡು ಭಯ ಭಕ್ತಿಯಿಂದ ಹಿಂಬಾಲಿಸುತ್ತಿದ್ದುದು. ಕೋಡಂಗಿಯ ಚಿತ್ರವಿಚಿತ್ರ ಹಾವಭಾವ ಹಾಸ್ಯಕ್ಕೆ ನಗುತ್ತಿದ್ದುದು. ಪೂರ್ವರಂಗಕ್ಕಾಗಿಯೇ ಮೀಸಲಾದ ಕಾರ್ಯಕ್ರಮಗಳಲ್ಲಿ ಇದೆಲ್ಲ ಇರಲಾರದು.
ಹಾಗಾಗಿ ಹೀಗೆ ಪ್ರದರ್ಶನಗೊಳ್ಳುವುದು ಒಂದು ರೀತಿಯಲ್ಲಿ ಸೂಕ್ತವೇ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಇದನ್ನು ನೋಡುವ ಅನಿವಾರ್ಯತೆಯೂ ಬಂದು ಅದರ ಮಹತ್ವದ ಅರಿವು ಆಗಬಹುದು. ಯಕ್ಷಗಾನವೇ ಆಗಲಿ ಪೂರ್ವರಂಗವೇ ಆಗಲಿ ಬೆಂಗಳೂರಿನಂತಹ ನಗರದಲ್ಲಿ ಅಯೋಜಿಸುವಾಗ ಎಷ್ಟು ಶ್ರಮವಹಿಸಬೇಕೋ ಅಷ್ಟೇ ಜಾಗರೂಕರಾಗಿ ಶ್ರಧ್ಡಾಪ್ರವೃತ್ತಿಯಿಂದ ನೆರವೇರಿಸಬೇಕು. ಊರಿನ ಹಳ್ಳಿಯಂತೆ ಇಲ್ಲಿ ನಡೆಸುವುದು ಸಾಧ್ಯವೂ ಇಲ್ಲ. ಊರಿನಲ್ಲಿ ಮಾಡಿ ಉಣ್ಣುವ ತಿಂಡಿಯನ್ನು ಇಲ್ಲಿಯೂ ಊರಿನ ನೆನಪಲ್ಲಿ ಮಾಡಿ ತಿಂದಂತೆ ಅದರ ಛಾಯೆ ಮಾತ್ರವೆ ಸಾಧ್ಯ. ಬೆಂಗಳೂರಿನ ಮಂಗಳೂರು ಸ್ಟೊರ್ಸ್ಗ್ ಗಳಲ್ಲಿ ಇಲ್ಲೇ ಮಾಡಿದ ತಿಂಡಿ ಪದಾರ್ಥಗಳನ್ನು ಊರಿಂದ ತರಿಸಿದ್ದು ಎಂದು ಮಾರಾಟ ಮಾಡಿದ ಹಾಗೆ.ನಾವು ಮಂಗಳೂರಲ್ಲೇ ಇದ್ದೇವೋ ಎಂಬ ಭ್ರಮೆಯಲ್ಲಿ ಅದನ್ನು ಕೊಂಡು ತಿಂದ ಹಾಗೆ. ಸಹಜ ವಾತಾವರಣದಿಂದ ಬಿನ್ನವಾಗಿ ಕೊಂಡು ಹೋಗಿ ಅದನ್ನು ಸವಿದು ನೋಡುವ ಜಾಯಮಾನ ನಮ್ಮದು. ಊರಿನದ್ದು ಬೆಂಗಳೂರಲ್ಲಿ ..ಬೆಂಗಳೂರಿನದು ಊರಲ್ಲಿ.
ಪೂರ್ವ ರಂಗವೆಂದರೆ ಪೂರ್ವ ಭಾವಿಯಾಗಿ ನಮ್ಮನ್ನು ಉತ್ತರಾರ್ಧಕ್ಕೆ ಸಿದ್ದಗೊಳಿಸುವಿಕೆ. ಹಂತ ಹಂತವಾಗಿ ಯಕ್ಷಲೋಕಕ್ಕೆ ಸೆಳೆದು ತೆಗೆದುಕೊಂಡು ಹೋಗುವಂತಹ ಈ ಸಾಂಪ್ರಾದಾಯಿಕ ಕ್ರಮ ಅನಿವಾರ್ಯ ಮತ್ತು ಔಚಿತ್ಯಪೂರ್ಣವೂ ಆಗಿದೆ. ಕೇವಲ ಪ್ರತಿಷ್ಠೆಗಾಗಿ ಅಥವಾ ಇನ್ನಾವುದೋ ಸ್ವಾರ್ಥಸಾಧನೆಗಾಗಿ ಇದು ಉಪಯೋಗವಾಗದೆ ಕೇವಲ ಯಕ್ಷಗಾನ ಮತ್ತು ಅದರದ್ದೇ ಅಂಗವಾದ ಪೂರ್ವ ರಂಗದ ಮೇಲಿನ ಕಾಳಜಿಯಿಂದ ಅಧ್ಯಯನ ಶೀಲ ಕಾರ್ಯಕ್ರಮಗಳು ಇನ್ನೂ ನಡೆಯಬೇಕು. ಬದಲಾಗುವ ಅಭಿರುಚಿ ಸದುದ್ದೇಶ ಮತ್ತು ಸದ್ಭಾವನೆಯಿಂದ ಹೊರಹೊಮ್ಮಲಿ. . ಕಾಪಟ್ಯ ರಹಿತ ಕಾರ್ಯಗಳಿಗೆ ಯಶಸ್ಸು ಬೆನ್ನ ಹಿಂದೇ ಇರುತ್ತದೆ.

* ಸಕಾಲಿಕ ಚಿಂತನ.
ReplyDeleteRajanna,
ReplyDeletenanu oorige hogiddaga poorvaranga prarambhavaguva hottige atadalli hajaridde...
poorvarangada hadugalu, chende maddale pettugalannu keluvude ondu hita....
baliparu heluvante adu prekshakanannu munde nadeyuva prasangada mele manassannu kendreekarisuvudakke sahakarisuttade
nanu helida yakshaganada poorvarangada kelavondu photogalu e kondiyallive
http://www.facebook.com/media/set/?set=a.10150289906923084.400610.819733083&l=dcc8a54ff2