ಮೊನ್ನೆ ಒಂದು ದಿನ ಮಿತ್ರ ಸುಬ್ಬಣ್ಣ ಒಂದು ಯಕ್ಷಗಾನ ತಾಳ ಮದ್ದಲೆಯ ಧ್ವನಿ ಮುದ್ರಣವನ್ನು ಕಳುಹಿಸಿ “ ರಾಜಣ್ಣ ಇದನ್ನು ಸ್ವಲ್ಪ ಕೇಳುವಹಾಗೆ ರಿಪೇರಿ ಮಾಡಿ ಕೊಡಿ” ಎಂದರು. ಸುಬ್ಬಣ್ಣ ಹೀಗೆ ಹೇಳುವುದು ಹೊಸತೇನೂ ಅಲ್ಲ. ಊರಲ್ಲಿ ಆಗುವ ವಿಶೇಷ ತಾಳ ಮದ್ದಲೆ ಯಕ್ಷಗಾನವನ್ನು ತಮ್ಮ ಐ ಪೋಡ್ ನಲ್ಲಿ ದಾಖಲಿಸಿ ಅದನ್ನು ಹಾಗೆ ನನಗೆ ರವಾನಿಸುವುದು, ಅದನ್ನು ಹಾಗೆ ಹೀಗೆ ಸ್ವಲ್ಪ ಸಂಕಲನ ಗೊಳಿಸಿ ಸಾಮಾನ್ಯರೂಪಕ್ಕೆ ತಂದು ಕೇಳುವುದು ಸಾಮಾನ್ಯ. ಆದರೆ ಮೊನ್ನೆ ಅವರು ನೀಡಿದ್ದುದರಲ್ಲಿ ನನಗಂತೂ ಸ್ವಲ್ಪ ವಿಶೇಷವೇ ಇತ್ತು ಎನ್ನಬಹುದು. ಕೆಲವರ ಅಭಿರುಚಿಗಳೇ ಹಾಗೆ. ಕೇಳುವಾಗಲೇ ಮುದ ನೀಡುವಂತಹುದು.
ಮನೆಯಲ್ಲಿ ಅಪರೂಪದ ಬಂಧು ಭಾಂಧವರು ಯಾವುದೇ ದಿನದಲ್ಲಿ ಮನೆಯಲ್ಲಿ ಒಟ್ಟು ಸೇರಿದಾಗ ತಿಥಿ ವಾರ ದಿನ ನೋಡದೇ ಆ ದಿನ ಹಬ್ಬದ ದಿನವೇ ಆಗಿಬಿಡುವುದಿಲ್ಲವೆ. ಎಲ್ಲರೂ ಬಂದ ದಿನದ ವಿಶೇಷವೊಂದು ಬೇಡವೇ ಊಟ ಆಟದ ವಿನೋದಕ್ಕೆ ಎಲ್ಲೆಯೇ ಇರುವುದಿಲ್ಲ. ಅಂತೆ ಒಂದುದಿನ ಸುಬ್ಬಣ್ಣ ಮತ್ತವರ ಮಿತ್ರರು ಒಟ್ಟು ಸೇರಿದರು. ಏನು ಮಾಡುವುದೆಂದು ಯೋಚಿಸಿ ತೀರ ಅಂತರಂಗದ ಒಂದು ತಾಳ ಮದ್ದಲೆಯೇ ಮಾಡಿಬಿಡುವ ಎಂಬ ಯೋಚನೆ ಬಂದು ಬಿಟ್ಟಿತು. ತಾಳಮದ್ದಲೆ ಅಥವಾ ಇನ್ನಿತರ ಕಾರ್ಯಕ್ರಮ ಮಾಡುವ ಯೋಚನೆ ಹೊಸತಲ್ಲವಾದರೂ ಇಲ್ಲಿ ಹೊಸತನ ಇದ್ದುದ್ದು ಅದನ್ನು ಮಾಡಿದ ರೀತಿ. ಯಾವುದೇ ಕಟ್ಟು ಪಾಡುಗಳಿಲ್ಲದೆ ಅತ್ಯಂತ ಸರಳವಾಗಿ ಮಾಡಿದ ಬಗೆ.
ತಾಳಮದ್ದಲೆ ಯೋಚನೆ ಬಂದಿದ್ದೇ ತಡ ಸಿದ್ದತೆಗಳು ಕ್ಷಣದೊಳಗೇ ಆರಂಭವಾಯಿತು.ಭಾಗವತ ಪ್ರಸಾದ ಬಲಿಪ್ಪರನ್ನು ಕರೆಸಿದರು. ಸರಳವಾದ ತಾಳ ಮದ್ದಲೆ. ಪ್ರೇಕ್ಷಕರೂ ಕಲಾವಿದರು ಎಲ್ಲ ಒಂದೇ ಅದೇ ಇದರ ವೈಶಿಷ್ಟ್ಯ.ಇದೇ ನೋಡಿ ಅಭಿರುಚಿ. ಕೇವಲ ಕೆಲವೇ ಪಾತ್ರಗಳಿರುವ ಪ್ರಸಂಗವೂ ನಿರ್ಣಯಿಸಿದರು. “ಮುದ್ರಿಕಾ ಪ್ರದಾನ”, ಸನ್ಮನಸ್ಸು ಮತ್ತು ಸದಭಿರುಚಿಯೊಂದಿದ್ದದ್ದು ಸಹಮನಸ್ಕರು ಒಟ್ಟಾಗಿ, ಇಂತಹ ಯೋಚನೆಗಳು ಮೂಡಿ ಕಾರ್ಯಗತವಾದರೆ ಅದೇ ಒಂದು ಸ್ಮರಣೀಯ ಘಟನೆಯಾಗಿಬಿಡುತ್ತದೆ. ಹೀಗೆ ಮಿತ್ರರೆಲ್ಲ ಒಟ್ಟು ಸೇರಿ ಅತ್ಯಂತ ಸರಳವಾಗಿ ತಾಳಮದ್ದಲೆಯ ಎಲ್ಲ ಸಂವೇದನೆಯನ್ನು ಅನುಭವಿಸಿಬಿಟ್ಟರು. ಇದರಲ್ಲಿ ಇನ್ನೂ ವೈಶಿಷ್ಟ್ಯಗಳಿವೆ. ಮುಖ್ಯವಾಗಿ ಯಾವುದೇ ಆಡಂಬರವಿಲ್ಲ ಸ್ವಕೀಯವಾಗಿ ಮಾಡಿದ ಕಾರ್ಯಕ್ರಮ. ಹಿಮ್ಮೇಳಕ್ಕೆ ಭಾಗವತ ಮತ್ತು ಮದ್ದಲೆಗಾರರು ಮಾತ್ರ. ಪ್ರಸಾದ ಬಲಿಪರು ಮತ್ತು ಹಾಗೆ ಕೊನೆಯ ಕ್ಷಣದಲ್ಲಿ, ಕರೆದ ಕೇವಲ ಐದಾರು ನಿಮಿಷದ ಒಳಗೇ ಹಾಜಾರಾಗಿ ಮದ್ದಲೆಯ ಛಾಪು ಬಡಿದ ಚಂದ್ರಶೇಖರ ಕೊಂಕಣಾಜೆ. ಎಲ್ಲ ಒಟ್ಟು ಎಂಟು ಜನ ಅರ್ಥಧಾರಿಗಳು. ಮಾತ್ರವಲ್ಲ ಪ್ರೇಕ್ಷಕರೂ ಅವರೇ. ಅದಕ್ಕೆ ಪೂರಕವಾಗಿ ನಿರಾಡಂಬರಕ್ಕೆ ನಿದರ್ಶನವೆಂಬಂತೆ ಅಬ್ಬರಿಸುವ ಧ್ವನಿವರ್ಧಕ ಮೈಕ್ ಗಳಿಲ್ಲ. ಕೇವಲ ಕೆಲವೇ ಮಂದಿ ಒಟ್ಟಾಗಿ ಖಾಸಗಿಯಾಗಿ ಕುಳಿತು ಹೊರಗೆ ಅಬ್ಬರಿಸುವ ಮಳೆಗೆ ರಾವಣನ ಅಶೋಕವನ ಧರೆಗಿಳಿಸಿ ಆನಂದಿಸಿದರು. ಆ ಸಂತಸದ ಘಳಿಗೆಯನ್ನು ಧ್ವನಿ ಮುದ್ರಿಸಿ ಸುಬ್ಬಣ್ಣ ನನಗೆ ಕಳಿಸಿದ್ದರು.
ಯಾವ ಪೂರ್ವ ಯೋಜನೆಯೂ ಇಲ್ಲದೆ ಮಿತ್ರರೆಲ್ಲ ಒಟ್ಟು ಸೇರಿದಾಗ ಯೋಚನೆಯಾದದ್ದು ತಾಳ ಮದ್ದಲೆಯದ್ದು. ಕೆಲವರ ಬಯಕೆಗಳೇ ಹಾಗೆ ಅದನ್ನು ಸಾಧಿಸಿಯೆ ಬಿಡಬೇಕು ಎನ್ನುವ ಛಲ. ತಾಳ ಮದ್ದಲೆಯ ಯೋಚನೆಗೆ ತಕ್ಕ ಹಾಗೆ ಪ್ರಸಂಗವೂ “ ಮುದ್ರಿಕಾ ಪ್ರದಾನ” ಜಾಂಬವನ ಅನುಜ್ಞೆಯನ್ನು ಪಡೆದ ಹನುಮ ಲಂಕೆಗೆ ಹಾರುವುದು.. ಲಂಕಿಣಿಯ ಸಂಹಾರ, ಅಶೋಕವನದ ದುಃಖತಪ್ತ ಸೀತೆಯ ದುಃಖ ಹನುಮನ ಸಾಂತ್ವಾನ.. ಮುದ್ರಿಕಾ ಪ್ರದಾನ.. ಇಷ್ಟರಲ್ಲೇ ತಾಳ ಮದ್ದಲೆ ಮುಗಿದು ಬಿಡುತ್ತದೆ. ಕೇವಲ ಮಿತಿಯೊಳಗಿನ ಪಾತ್ರಗಳು.ಇದು ಪಾರ್ತಿಸುಬ್ಬನ ಪ್ರಸಂಗ ಹಾಗಾಗಿ ಪದಗಳಿಗೆ ಮತ್ತೆ ಹೇಳಬೇಕೆ.. ಮೊದಲೇ ಉಜಿರೆಯವರು ಎಂದಂತೆ ಪಾರ್ತಿಸುಬ್ಬನ ಪ್ರಸಂಗ ಪದಗಳು ಬಲಿಪ್ಪರಿಗೆ ಪೇಟೆಂಟ್ ಮಾಡಿದ ಹಾಗೆ. ಅದನ್ನು ಆ ಶೈಲಿಯಲ್ಲಿ ಕೇಳುವುದೇ ಒಂದು ಭಾಗ್ಯ. ಇಲ್ಲಿ ಪ್ರಸಾದ ಬಲಿಪರು ಅದನ್ನೇ ಮುಂದುವರೆಸಿದ್ದಾರೆ. ಅದೇ ಶೈಲಿ ಅದೇ ಸರಳ ಖಚಿತತೆಯ ಒಂದಿನಿತೂ ತಪ್ಪದ ತಾಳಬದ್ದ ಲಯಬದ್ದ ಶೈಲಿ. ಅಜ್ಜಿ ಮಾಡಿದ ಅಡುಗೆ ಉಂಡ ನಾಲಿಗೆ ಹಲವು ವರ್ಷಕಳೆದ ಮೇಲೆ ಮೊಮ್ಮಗಳ ಕೈಯಲ್ಲೂ ಅದೇ ಸ್ವಾದವನ್ನು ಅನುಭವಿಸಿದ ಹಾಗೆ, ಪ್ರಸಾದ ಬಲಿಪ್ಪರು ಅಜ್ಜಿ ಮಾಡಿದ ಆಡುಗೆಯನ್ನೇ ಅದ್ಭುತವಾಗಿ ಒದಗಿಸಿದ್ದಾರೆ. ಈ ಪ್ರಸಂಗದ ಹಲವು ಪದಗಳು ಮಗುದೊಮ್ಮೆ ಮಗುದೊಮ್ಮೆ ಕೇಳುವ ಚಪಲ ಉಂಟಾಗುತ್ತದೆ. ಕೇವಲ ಮದ್ದಲೆಯನ್ನು ಮಾತ್ರ ಹೊಂದಿಸಿಕೊಂಡು ಯಾವುದೇ ಗೌಜಿ ಗದ್ದಲವಿಲ್ಲದ ಕಾರ್ಯಕ್ರಮ ಊಹಿಸುವಾಗಲೇ ಮನಸ್ಸಿಗೆ ಅಪ್ಯಾಯಮಾನದ ಅನುಭವವಾಗಿಬಿಡುತ್ತದೆ. ನಿಜ ಅರ್ಥದಲ್ಲಿ ಇದು ತಾಳ ಮತ್ತು ಮದ್ದಲೆಯೇ ಆಗಿಬಿಟ್ಟಿದೆ.
ಶ್ರೀ ಪ್ರಸಾದ ಬಲಿಪರ ಕೆಲವು ಪದಗಳು
ಶ್ರೀ ಪ್ರಸಾದ ಬಲಿಪ್ಪರ ಸರಳತೆ ಮತ್ತು ಕಲೆಯ ಬಗೆಗಿನ ಅರ್ಪಣಭಾವ ಇದರಲ್ಲಿ ಅರಿವಿಗೆ ಬರುತ್ತದೆ. ಬೇರೆ ಯಾವುದೇ ಭಾಗವತನೂ ಇಷ್ಟು ವಿಶಾಲ ಮನಸ್ಕರಾಗಿ ಇಂತಹ ಸರಳ ಸ್ವಕೀಯದಂತಹ ಕಾರ್ಯಕ್ರಮದಲ್ಲಿ ಹಾಡಲು ಮನಸ್ಸು ಮಾಡುವುದು ಅಸಾಧ್ಯ. ಹಾಗಾಗಿ ಈ ಯುವ ಭಾಗವತರು ತಂದೆಯವರಿಂದ ಬಳುವಳಿಯಾಗಿ ಕೇವಲ ಕಲೆಯನ್ನು ಮಾತ್ರವಲ್ಲ ಸದ್ಗುಣಗಳನ್ನೂ ಧಾರಾಳವಾಗಿ ಪಡೆದಿದ್ದಾರೆ. ದೊಡ್ಡ ದೊಡ್ಡ ವೇದಿಕೆಯನ್ನೇ ಲಕ್ಷ್ಯವಿರಿಸಿದ ಭಾಗವತರ ಮಧ್ಯೆ ಕೇವಲ ಕಲೆಯನ್ನೆ ಲಕ್ಷ್ಯವಿರಿಸಿದ ಇಂತಹ ಹಿರಿಯ ಮನಸ್ಸಿನ ಯುವ ಕಲಾವಿದರು ನಮ್ಮೊಂದಿಗೆ ಇದ್ದಾರೆ ಎನ್ನುವುದೇ ಸಂತಸದ ವಿಚಾರ.

good one and Thank you
ReplyDeletemay god bless all of them to have many more sessions.. and bless me with opportunities attend a few :)
ReplyDeleteರಾಜಣ್ಣಾ ಸೂಪರ್.. ಅವರಿಗೆಲ್ಲಾ ಅಭಿನಂದನೆಗಳು.
ReplyDeleteಮತ್ತೆ ಪ್ರಸಾದ್ ಬಲಿಪರು ನನಗೆ ಈಗ ತುಂಬಾ ಇಷ್ಟದ ಭಾಗವತರು. ಈಗ ಇದನ್ನು ಓದಿದ ಮತ್ತೆ ಕೇಳಿದ ಮೇಲೆ ಇನ್ನೂ ಆಪ್ತರಾದರು .ಧನ್ಯವಾದಗಳು ಹಂಚಿಕೊಂಡದ್ದಕ್ಕೆ .
Balipa mattu is delectable
ReplyDelete