ಕೆಲವೊಮ್ಮೆ ನಮ್ಮ ವಿಚಾರಗಳೇ ಗೊಂದಲಮಯವೆಂಬ ಸಂಶಯ ಮೂಡುವುದುಂಟು. ನಮ್ಮ ವಿಚಾರ ಚಿಂತನೆಗಳು
ಹೀಗೆ ನಿರ್ಧಿಷ್ಟವಾಗಿ ರೂಪಿಸಿರುವಾಗ ಅವುಗಳಿಂದ ವಿಚಲಿತರಾಗುವಂತೆ ಸಂದರ್ಭಗಳು ಎದುರಾಗುತ್ತದೆ.
ಹಾಗಲ್ಲ ಹೀಗೆ ಎಂದು ಅಂದುಕೊಳ್ಳುವಂತಹ ದ್ವಂದ್ವಗಳು ಮನಸ್ಸನ್ನು ಕಾಡತೊಡಗುತ್ತವೆ. ತಾತ್ವಿಕ ಸಂಘರ್ಷಗಳು ಹೊಲಬನ್ನು ಅರಿಯದ ಬಗೆಯಲ್ಲಿ
ಸಾಗಿಬಿಡುತ್ತದೆ. ಆವಾಗ ಯಾವುದು ಸರಿ ಎಂಬ ಜಿಜ್ಞಾಸೆ ಹಾಗೆ ಉಳಿದು ಬಿಡುತ್ತದೆ.
ಕಳೆದ ಭಾನುವಾರ ಹೊಸವರ್ಷದ ಮೊದಲ ದಿನ.
ಹಿಂದಿನ ಒಂದೆರಡು ದಿನಗಳು ಹವಾಮಾನ ವೈಪರಿತ್ಯದಿಂದಾಗಿ ಮನೆಯೊಳಗಿಂದ ಹೊರಬರಲಾಗದಂತಹ ಮೈಕೊರೆಯುವ
ಚಳಿಯಿಂದ ಬೇಸತ್ತು ಅಂದು ಬಿದ್ದ ಸೂರ್ಯಕಿರಣಕ್ಕೆ ಮೈಕೊಡವಿಕೊಂಡು, ನಮ್ಮದೇ ಯಕ್ಷಗಾನದ
ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯಿರುವುದು ಸಾಮಾನ್ಯ. ಇದು
ತಾಳಮದ್ದಲೆ ಬೇರೆ, ಕೇವಲ ಒಂದು ಕೈಯ ಬೆರಳುಗಳಿಂದಲೇ ಎಣಿಸಬಹುದಾದಷ್ಟು ಜನ. ನನ್ನ ಮಟ್ಟಿಗೆ
ಇದೇನು ಹೊಸತಲ್ಲ. ಆದರು ಭೀಕೊ ಎನ್ನುವಂತಿದ್ದ ಸಭಾಂಗಣ ಹಿಂದಿನ ನೆನಪನ್ನು ಪುನಹ ಪುನಹ ನೆನಪಿಗೆ
ಬರುವಂತೆ ಮಾಡುತ್ತಿತ್ತು. ಹೌದು, ಆ ಸಭಾಂಗಣದ ನೆನಪು ಬಂದಾಗಲೇ ಮನಸ್ಸು ಭಾವನಾತ್ಮಕವಾದ
ಸ್ಪಂದನೆಗೆ ಒಳಗಾಗಿಬಿಡುತ್ತದೆ. ಸರಿಯಾಗಿ ಒಂದು
ವರ್ಷಮೊದಲು ನಮ್ಮ ಅಭಿಮಾನದ ಸಂಕೇತವೆಂಬಂತೆ
ಅತಿಯಶಸ್ವಿಯಾಗಿ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಚಾಮರಾಜಪೇಟೆಯ ಹತ್ವಾರ್ ಸಭಾಂಗಣ. ಇಂದು ನಿರ್ವಾತ
ಜಾಗದಂತೆ ಸ್ತಭ್ಧವಾಗಿ ನಿಂತಂತೆ ಅನಿಸಿತು. ಹತ್ವಾರ್ ಸಭಾಂಗಣ ಎಂದರೆ ನಮ್ಮ ಮಿತ್ರ ಬಳಗ ಇನ್ನೂ
ರೋಮಾಂಚನ ಗೊಳ್ಳುವುದುಂಟು. ಅಷ್ಟು ಪ್ರಭಾವ ಬೀರಿವೆ ಆ ಮಧುರ ನೆನಪುಗಳು.
ಯಾವುದೇ ಕಾರ್ಯಕ್ರಮ ಯಶಸ್ವೀ ಎನಿಸುವುದು ಸೇರಿದ ಪ್ರೇಕ್ಷಕರ ಸಂಖ್ಯೆಯನ್ನು ಹೊಂದಿಕೊಂಡು
ಎಂಬುದಕ್ಕೆ ನನ್ನ ಪೂರ್ಣ ಸಹಮತವಿಲ್ಲ. ಆದರೂ ನಿರೀಕ್ಷೆಯಂತೆ ಪ್ರೇಕ್ಷಕರ ಕೊರತೆ ಬಹಳವಾಗಿತ್ತು. ಸೀಮಿತ
ಪರಿಧಿಯೊಳಗಿನವರಿಗೆ ಮಾತ್ರ ಕಾರ್ಯಕ್ರಮದ ಅರಿವಿದ್ದುದು ಅದರಲ್ಲೂ ಕಾರಣಾಂತರದಿಂದ ಸ್ವಲ್ಪ ಕಡಿಮೆಯಾದಾಗ ಇದೆಲ್ಲ ಸಹಜವೇ. ಕಾರ್ಯಕ್ರಮದಲ್ಲಿ
ಮೊದಲೇ ಹೇಳಿಕೊಳ್ಳುವಂತಹ ವಿಶೇಷ ಆಕರ್ಷಣೆಯಿಲ್ಲದೆ ಸಾಮಾನ್ಯ ಒಂದು ಯಕ್ಷಗಾನ ಕಾರ್ಯಕ್ರಮವಾಗಿ
ಎಂಬಂತೆ ವ್ಯವಸ್ಷೆಯಾಗಿತ್ತು. ಇನ್ನುಳಿದಂತೆ ಚೆಂಡೆ ಪೆಟ್ಟು ಕೇಳಿದಾಗ ಅಥವಾ ಅದರ ಕಲ್ಪನೆಯ
ಭ್ರಮೆಗೆ ಸಿಕ್ಕಿ ಜನರು ಬರುವಂತಹ ಕಾಲ ಈಗ ಇಲ್ಲ. ನಗರದ ಪರಿಸರವು ಹಾಗಿಲ್ಲ. ಹಾಗಾಗಿ
ಕಾರ್ಯಕ್ರಮಕ್ಕೆ ಬಾರದೆ ಇರುವುದಕ್ಕ ಹಲವು
ಕಾರಣಗಳಿದ್ದಂತೆ ಬಂದು ಕುಳಿತುಕೊಳ್ಳುವುದಕ್ಕೂ ಹಲವು ಕಾರಣಗಳಿರುತ್ತವೆ. ಬಾರದೆ ಇರುವುದಕ್ಕೆ
ಹಲವು ಕಾರಣಗಳನ್ನು ಸುಲಭದಲ್ಲಿ ಕೊಡಬಹುದು. ಪ್ರಚಾರದ ಕೊರತೆ, ಕಾರ್ಯಕ್ರಮದ ನಿರೀಕ್ಷೆ, ಬರುವವರ
ಹಾಗು ಇರುವವರ ಆಸಕ್ತಿ ಇದೆಲ್ಲವೂ ಗಣನೆಗೆ ಬರುತ್ತದೆ. ಅದರ ಬಗ್ಗೆ ಯೋಚಿಸುವಂತಾಗುತ್ತದೆ. ಆದರೆ ಬಂದವರಲ್ಲಿ
ಬಂದ ಕಾರಣವನ್ನು ಯಾರೂ ಕೇಳುವುದಿಲ್ಲ ಆದಕಾರಣ
ಅದು ಅಂತರಂಗದಲ್ಲೇ ಇದ್ದುಬಿಡುತ್ತದೆ.
ಕಾರ್ಯಕ್ರಮದ ನಿರೀಕ್ಷೆಗಳ ಬಗ್ಗೆ ಸ್ವಲ್ಪ
ಔದಾಸಿನ್ಯವೇ ಇತ್ತು. ಹಾಗೆ ಹೇಳುವುದಕ್ಕಿಂತ ಆ ಭಾವವನ್ನೇ ತಳೆದಿದ್ದೆ. ಆದನ್ನು
ಪುಷ್ಟೀಕರಿಸುವಂತೆ ಅಂದಿನ ಪ್ರಸಂಗ “ವಾಲಿ ಮೋಕ್ಷ” ಬಹುಶಃ ನಮ್ಮಲ್ಲಿ ಅತ್ಯಂತ ಔದಾಸಿನ್ಯವನ್ನು
ಬಿಂಬಿಸುವ ಪ್ರಸಂಗ ಇದು. ವಾಲಿಗೆ ಮೋಕ್ಷ ಕರುಣಿಸಿ ಕರುಣಿಸಿ ಆ ಪ್ರಸಂಗದಿಂದ ಮಾತ್ರ ಮೋಕ್ಷ
ಸಿಕ್ಕಿಲ್ಲ. ಹಾಗೆಂದು ಪಾರ್ತಿಸುಬ್ಬನ ಪ್ರಸಂಗ ಕಳಪೆಯೆಂದೇನು ಅಲ್ಲ.ವಿಚಾರ ಮಂಥನಗಳಿಂದ ಕೂಡಿದ
ಉತ್ಕೃಷ್ಟ ಪ್ರಸಂಗ. ಆದರೂ ಸಾವಿರಕ್ಕೂ ಮಿಕ್ಕಿ ಪ್ರಸಂಗಗಳು ಇರುವಾಗ ಇನ್ನೂ ಅದನ್ನೇ
ಅವಲಂಬಿಸುವುದರಲ್ಲಿ ಅರ್ಥವೇನಿದೆ. ಇದು ಮನವರಿಕೆಯಾದರೂ ಅದರ ಬಗ್ಗೆ ಒಂದು ಔದಾಸಿನ್ಯ ಅದರ
ಪರಿಣಾಮ ಆಗುವುದು ಮಾತ್ರ ಇನ್ನೊಂದು ರೀತಿಯಲ್ಲಿ. ಬಹುಶಃ ಅಲ್ಲಿ ನೆರದವರಲ್ಲಿ ಹಲವರಿಗಾದರು
ವಾಲಿಮೋಕ್ಷದ ಪದಗಳು ಕಂಠಪಾಠ ಇರಬಹುದು.
ತಾಳ ಮದ್ದಲೆಯೆಂದರೆ ಒಂದು ಗ್ರಹಿಕೆಯಿದೆ. ಇಲ್ಲಿ ಮಾತು ಚರ್ಚೆ ವಾದ ವಾಗ್ವಾದವೇ ಪ್ರಧಾನ. ಅರ್ಥಗಾರಿಕೆ ಪ್ರಾಮುಖ್ಯತೆ. ಮಾತಿನ ಜಟಾಪಟಿ
ಇದ್ದರೆ ತಾಳಮದ್ದಲೆ ರೈಸಿದೆ ಎಂದು ಅರ್ಥ. ಮಾತಿನಲ್ಲೆ
ಪಾತ್ರ ಸನ್ನಿವೇಶ ಚಿತ್ರಣ ಹೀಗೆ. ಆದನ್ನು ನಿಶೇಧಿಸುವುದಲ್ಲವಾದರೂ ಇದೆಲ್ಲಕ್ಕಿಂತಲೂ
ಪ್ರಧಾನವೊಂದಿದೆ, ಅದು ಹಿಮ್ಮೇಳ.ಯಕ್ಷಗಾನದಲ್ಲಿ ಇದೇ ಪ್ರಧಾನ. ಅದಕ್ಕೆ ಪ್ರಾಮುಖ್ಯತೆ ನೀಡಿದಲ್ಲಿ
ಮಿಕ್ಕರಂಗದಲ್ಲಿ ಕೊರತೆಯಾದರೂ ಅದು ಗಮನಾರ್ಹವೆನಿಸುವುದು ನಿಧಾನ. ಹಾಗಾಗಿ ಹಿಮ್ಮೇಳದಲ್ಲಿ
ಭಾಗವತನದ್ ನಾಯಕತ್ವ. ಪೂರ್ಣವಾಗಿ ತಾಳಮದ್ದಲೆಯಲ್ಲೂ ಭಾಗವತನೇ ಪ್ರಧಾನ. ಆದರೆ ಇದರ ಬಗ್ಗೆ ಗಮನ
ಹರಿಸದೆ ಇದ್ದದ್ದು.. ಕೇವಲ ಹರಿಕೆ ಸಂದಾಯದಂತೆ ಭಾಸವಾಯಿತು. ಚೆಂಡೆ ಮದ್ದಲೆ ತಕ್ಕ ಮಟ್ಟಿಗೆ
ಹವ್ಯಾಸಿಗಳ ನೆಲೆಯಿಂದ ಕಂಡುಕೊಂಡರೆ ಪರವಾಗಿಲ್ಲ ಎನಿಸಿದರೂ ಭಾಗವತಿಕೆ ಮಾತ್ರ ಹೊಲಬು ಅರಿಯದ
ನೀರಿನಂತ ಎತ್ತೆತ್ತಲೊ ಹರಿದು ಅದು ಉಳಿದ ಹಿಮ್ಮೇಳದ ಅಂಗದಲ್ಲೂ ಪರಿಣಾಮ ಬೀರಿತು. ಆಗ ಆನಿಸಿತು
ಹಿಮ್ಮೇಳದ ಮಟ್ಟಿಗೆ, ಇನ್ನು ಅಭ್ಯಾಸಕ್ಕಾಗಿಯಾದರೂ ಈ ಪ್ರಸಂಗ ಸೂಕ್ತ ಆಯ್ಕೆ..!!! ಇಷ್ಟು
ಪ್ರಚಲಿತವಿರುವ ಪ್ರಸಂಗ !!!!.
ಅರ್ಥಗಾರಿಕೆ ಮತ್ತು ಪಾತ್ರ ಚಿತ್ರಣ ತಕ್ಕ ಮಟ್ಟಿಗೆ ಉತ್ತಮವಾಗಿಯೇ ಇತ್ತು. ಕೆಲವು
ಆಸಾಂದರ್ಭಿಕ ಸಂಭಾಷಣೆ, ಕೆಲವು ಸತ್ವರಹಿತ ಮಾತುಗಾರಿಕೆ ಪದಕ್ಕು ಅರ್ಥಕ್ಕು ಹೊಂದಿಕೆಯಾಗದ
ಮಾತುಗಳು ಕೆಲವೊಂದು ಸಲ ಹೇಳಿದ ಅರ್ಥದ ಪದ ಮತ್ತೆ ಪುನಹ ಮರುಕಳಿಕೆಯಾದದ್ದು ಮುಂತಾದ ಹೊಂದಾಣಿಕೆ
ಯನ್ನು ಹೊರತು ಪಡಿಸಿದರೆ ಅರ್ಥಗಾರಿಕೆ ಉತ್ತಮವಾಗಿತ್ತು.ಇದರಲ್ಲಿ ಬೇಗಾರ್ ರವರ ತಾರಾ ಪಾತ್ರ ವಿಶೇಷವಾಗಿ
ಉಲ್ಲೇಖಿಸಲ್ಪಡುವ ಹಾಗೆ ಇತ್ತು. ವಾಲಿ ತಾರ ಸಂಭಾಷಣೆಯ ಸಂದರ್ಭದಲ್ಲಿ ಪದಕ್ಕು ಅರ್ಥಕ್ಕು ಒಟ್ಟು
ಗೊಂದಲವಿದ್ದಂತೆ ಒಂದೆರಡು ಸಲ ಅನಿಸಿದರೂ ಅದು ದೊಡ್ಡದಲ್ಲ. ಕೊನೆಯ ಹಂತದಲ್ಲಿ ರಾಮ ವಾಲಿಯ ಪಾತ್ರಗಳು
ತೃಪ್ತಿಕರವಾಗಿತ್ತು. ಎಲ್ಲ ಸರಿಯಿದ್ದರು ಮೊದಲಾಗಿ ಅತಿ ಅವಶ್ಯವೆನಿಸುವ ಹೊಂದಾಣಿಕೆ ಅಲ್ಲಲ್ಲೆ
ಲೋಪವಾಗುತ್ತಿತ್ತು. ಇದಕ್ಕೆಪೂರ್ವ ತಯಾರಿಯ ಅವಶ್ಯಕತೆ ಇದೆ. ಪೂರ್ವತಯಾರಿಯ ಮಟ್ಟಿಗೆ ವೃತ್ತಿಪರ
ಕಲಾವಿದರಂತೆ ವ್ಯವಹರಿಸುವುದು ಸರಿಯಲ್ಲ. ಒಡ್ಡೋಲಗದ ಸುಗ್ರೀವ ಸಹಜವಾಗಿ ಮಂದ್ರ ಸ್ವರದಲ್ಲಿದ್ದು
ನಿಧಾನವಾಗಿ ಶ್ರುತಿಯನ್ನು ಸ್ವರವನ್ನು ಏರಿಸುತ್ತ ಸಾಗಬೇಕು. ಮತ್ತೆ ಸನ್ನಿವೆಶದಲ್ಲಿ ಸುಗ್ರೀವನ
ಪಾತ್ರ ಚಿತ್ರಣವೂ ಅದೇರೀತಿ ದಯನೀಯವಾಗಿರುತ್ತದೆ. ಆದರೆ ಅದನ್ನು ಗಮನಿಸದೇ ಏಕಾಏಕಿ ಏರುತ್ತ ಮೈಮೇಲೆ ಹಾರಿಹೋದಂತೆ ಚಿತ್ರಿಸುವುದು
ಸರಿಕಾಣವುದಿಲ್ಲ. ಹಾಗಿದ್ದರು ಅರ್ಥಗಾರಿಕೆಯಲ್ಲಿ ವಿಚಾರ ಮಂಡನೆಯ ಪ್ರಾಮಾಣಿಕ ಪ್ರಯತ್ನ ಕಂಡರೂ ಶರೀರ ಭಾಷೆ ಸ್ವಲ್ಪ ಪಳಗಬೇಕು.
ಒಟ್ಟಿನಲ್ಲಿ ಹವ್ಯಾಸಿಗಳ ಮಟ್ಟಿಗೆ ಮುಮ್ಮೇಳ ಧಾರಳ. ಆದರೆ ಹಿಮ್ಮೇಳದ ಅಸಡ್ಡೆ ಸರಿಯಲ್ಲ. ಭಾಗವತ
ಮತ್ತು ಹಿಮ್ಮೇಳ ಆರಂಭದಿಂದ ಅಂತ್ಯದವರೆಗೂ ವೇದಿಕೆಯಲ್ಲಿರಬೇಕು. ಆದರೆ ಹಲವು ಸಲ ಹಿಮ್ಮೇಳ ಪೂರ್ಣ
ವಾಗಿ ಖಾಲಿಯದದ್ದು ಅಶಿಸ್ತನ್ನು ಅಶ್ರದ್ದೆಯನ್ನು ತೋರಿಸುತ್ತದೆ. ಭಾಗವತ ಚೆಂಡೆ ಮದ್ದಲೆಗಾರರು
ಒಟ್ಟಾಗಿ ಎದ್ದು ಹೋಗುವುದು, ಅದೂ ಅರ್ಥಧಾರಿ ಸ್ವಗತದಿಂದ ಕೂಡಿದ ಅರ್ಥ ಹೇಳುವಾಗ, ಅದು ಅತ್ಯಂತ
ಆಭಾಸಕರವಲ್ಲವೇ? ಭಾಗವತನ ನಿಯಂತ್ರಣದಲ್ಲಿರಬೇಕಾದ ರಂಗದ ಕಲ್ಪನೆಯೇ ಇಲ್ಲದೇ ಇರುವುದು ವಿಚಿತ್ರ
ಎನಿಸುತ್ತದೆ. ಇಲ್ಲಿ ಹಿಮ್ಮೇಳ ಬಹಳ ಹಿಂದೆಯೇ ಉಳಿದುಬಿಟ್ಟಿತು.
ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷರು ಬಾರದಿರುವರ ಬಗ್ಗೆ ಮರುಗಿ ಹೇಳಿದ್ದರು..
ಬಾರದಿರುವವರು ಒಂದು ಉತ್ತಮ ಅವಕಾಶವನ್ನು ಕಳಕೊಂಡಿದ್ದಾರೆ ಎಂದು. ಅವರ ಚಿಂತನೆ ತಪ್ಪು ಎಂದು
ಹೇಳುವ ಹಾಗಿಲ್ಲ. ಇತ್ತೀಚಿನ ಯಕ್ಷಗಾನ ತಾಳ ಮದ್ದಲೆ ಅಥವಾ ಯಕ್ಷಗಾನದ ಬಗ್ಗೆ ಅವರಿಗೆ ಅರಿವಿಲ್ಲದೆ ಹೇಳಿರಬಹುದು.
ಆದರೆ ಬಾರದಿರುವವರು ಇದಕ್ಕಿಂತ ಉತ್ತಮವಾದುದನ್ನು
ನೋಡಿಲ್ಲ ಎಂದು ತೀರ್ಮಾನಿಸುವುದು ಸರಿಯಲ್ಲ. ಹಾಗಾಗಿ ಅವಕಾಶ ವಂಚಿತರಾಗುವ ಪ್ರಶ್ನೇಯೇ
ಉದ್ಭವಿಸುವುದಿಲ್ಲ. ಒಟ್ಟಿನಲ್ಲಿ ಹತ್ತರ ಜತೆ ಹನ್ನೊಂದು ಎಂದು ಸುಮ್ಮನಿರುವುದು.
ಈ ಕಾರ್ಯಕ್ರಮದ ಮಟ್ಟಿಗೆ ಹೇಳುವುದಾದರೆ ಒಬ್ಬ ಉತ್ತಮ ಭಾಗವತ ಇರುತ್ತಿದ್ದರೆ ಕಾರ್ಯಕ್ರಮದ
ಚಿತ್ರಣವೇ ಬದಲಾಗಿಬಿಡುತ್ತಿತ್ತು. ಆದರೆ ಒಟ್ಟಿನಲ್ಲಿ ಒಂದು ಕಾರ್ಯಕ್ರಮವಾಗಿ ಚೆಂಡೆ ಮದ್ದಲೆ
ಮೊಳಗುವುದೇ ಯಕ್ಷಗಾನ ಎಂದು ಭಾವನೆ ಇದ್ದರೆ ಹೇಗೆ? ಬೆಂಗಳೂರಿನಂತಹ ನಗರದಲ್ಲಿ ಇಷ್ಟಾದರೂ
ಇದೆಯಲ್ಲ ಎಂದು ತೃಪ್ತಿಪಟ್ಟುಕೊಳ್ಳಬೇಕೆ?ಏನು ಇಲ್ಲದೆ ನಿಷ್ಕ್ರಿಯವಾಗಿರುವುದಕ್ಕಿಂತ ಇದು ಲೇಸು
ಎಂದು ತಿಳಿದುಕೊಳ್ಳುವ ಅನಿವಾರ್ಯತೆ ಇದೆ.
ಪಿತೃಗಳ ಶ್ರಾದ್ಢ ಮಾಡುವುದಕ್ಕಾಗಿ ಪುರೋಹಿತರನ್ನು ಕರೆದು, ಮನೆಯಲ್ಲಿ ಎಲ್ಲ ವ್ಯವಸ್ಥೆಯನ್ನು ಶ್ರಧ್ದೆಯಿಂದ ಮಾಡಿಯಾಯಿತು. ನಗರದಲ್ಲಿ ಪುರೋಹಿತರಿಂದ
ತೊಡಗಿ ಎಲ್ಲವನ್ನು ವ್ಯವಸ್ಥೆ ಮಾಡುವುದು ಶ್ರಮದಾಯಕವೆ. ಹಳ್ಳಿಯ ಹಾಗೆ ಅಲ್ಲ. ಪುರೋಹಿತರು
ಬಂದನಂತರ ಮುಳುಗು ಹಾಕೊಣವೆಂದರೆ ಗಂಗೆ ಗೋದಾವರಿಯ ಅಥವ ಹರಿವ ತೋಡಿನ ಮಾತು ಬಿಡಿ ಮನೆಯ ನಳ್ಳಿಗೆ ತಲೆಕೊಡೋಣವೆಂದರೆ ವಠಾರಕ್ಕೆ ನೀರು ಬಾರದೆ ಎರಡು
ದಿನವಾಗಿರುತ್ತದೆ. ಯಾವತ್ತೋ ತುಂಬಿಸಿಟ್ಟ ನೀರು ಬೇರೆಯೂ ಕೆಲ ಅನಿವಾರ್ಯ ಕೆಲಸಗಳಿಗೆ
ಆವಶ್ಯವಿದೆ. ಮತ್ತೆ ಹೇಗೆ? ಬಂದ ಭಟ್ಟರು ಹೇಳುತ್ತಾರೆ...ಕೈಕಾಲು ತೊಳೆದು ಬನ್ನಿ ಸಾಕು.. ಆಯ್ತು
ಎಲ್ಲ ಆಗಿ ಗೋಗ್ರಾಸ ದನಕ್ಕಿಡುವುದಕ್ಕಾಗಲಿ ಪಿಂಡ ವಿಸರ್ಜನೆಗಾಗಲಿ ಅವಕಾಶವೇ ಇರುವುದಿಲ್ಲ.
ಗೋಗ್ರಾಸವನ್ನು ಬಕೆಟ್ ಗೆ ಸುರುವಿ ಇನ್ನಾವುದೋ ಮನೆಯ ದನಕ್ಕೆ ತಿನ್ನಿಸ ಹೊದರೆ ಆ ಮನೆಯವನು ಗುರು
ಗುಟ್ಟುವ ಪರಿಸ್ಥಿತಿ. ಇನ್ನು ಪಿಂಡ ಅದನ್ನು ಕಲ್ಪಿಸುವ ಹಾಗೆ ಇಲ್ಲ. ಭಟ್ಟರೆ ಅನುಕೂಲ ಶಾಸ್ತ್ರ
ಉಪದೇಶ ಮಾಡುತ್ತಾರೆ. ನಗರದಲ್ಲಿ ಆದರೆ ಮಾಡುವ ಕರ್ಮದಲ್ಲಿ ಕಾಲುವಾಸಿಯಾದರು ಬದ್ದತೆ ಇದ್ದರೆ
ಸಾಕು ಎಂದು ಶಾಸ್ತ್ರ ಹೇಳುತ್ತದೆ.ಇಲ್ಲಿ ಕರ್ಮದಲ್ಲಿ ತೋರುವ ಶ್ರದ್ದೆ ಮಾತ್ರ ಪ್ರಾಧಾನ್ಯ.
ಸಮಯುದಲ್ಲಿ ಪಿತೃಗಳ ಸ್ಮರಣೆ ಮಾತ್ರ ಸಾಧ್ಯ.
ಇದು ಕೆಲವೊಂದು ಸಲ ಇಲ್ಲಿ ಮಾಡುವ ಕಾರ್ಯಕ್ರಮಕ್ಕು ಅನ್ವಯ ಮಾಡುವ ಅನಿವಾರ್ಯತೆ
ಬಂದುಬಿಡುತ್ತದೆ. ಹಾಗಾಗಿ ನಮ್ಮ ವಿಚಾರಗಳನ್ನು ಮರು ಅವಲೋಕನೆ ಮಾಡುವ ಅನಿಸಿಕೆ ಬರುತ್ತಿದೆ.
ಮಾಡಿದ್ದು ತಪ್ಪು ಅಥವ ಹೀಗೆ ಆಗಬಾರದಿತ್ತು ಇದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸುವ
ಹಾಗೆಯೇ ಇಲ್ಲ. ಎಲ್ಲದಕ್ಕೂ ಒಂದು ಸಮಾಧಾನ ಕಾರಣಗಳ ಸೃಷ್ಟೀಕರಣ ಇದ್ದೇ ಇರುತ್ತದೆ. ಇಲ್ಲಿ ಇಷ್ಟು
ಮಾಡುವುದೇ ಜಾಸ್ತಿ ಎಂಬ ಭಾವ ಸುಳಿದರೆ ಇಷ್ಟು ಸಾಕು ಎಂದು ದಾಕ್ಷಿಣ್ಯ ಭಾವ ತಾಳಬೇಕಾಗುತ್ತದೆ. ಹಾಗಾಗಿ ವೈಚಾರಿಕ ದ್ವಂದ್ವಗಳು ಕಾಡುತ್ತಿರುತ್ತವೆ.
ಮಾಡುವ ಕ್ರಿಯಯಲ್ಲಿ ಶ್ರದ್ದೆ ಮಾತ್ರ ಇದ್ದರೆ ಸಾಲದು. ಯಕ್ಷಗಾನ ಕೇವಲ ಒಂದು ಸ್ಮರಣೆಯಲ್ಲ ಇಲ್ಲಿಗೆ
ಇಷ್ಟು ಸಾಕು ಎಂಬ ಭಾವ ಇದ್ದರೆ ಸಾಕೇ ? ಹೇಗೆ
ಅನಿಸುತ್ತದೆ.
ಹತ್ವಾರ್ ಸಭಾಂಗಣ ಎಂದರೆ ನಮ್ಮ ಮಿತ್ರ ಬಳಗ ಇನ್ನೂ ರೋಮಾಂಚನ ಗೊಳ್ಳುವುದುಂಟು - I agree :)
ReplyDeletevery super chinthane
ReplyDeleteಈ ಕಾರ್ಯಕ್ರಮದ ಸಂಯೋಜಕರು - ಅರ್ಥಧಾರಿಗಳು ಯಾರು ಎಂದು ತಿಳಿಸಿದರೆ ಚೆನ್ನಾಗಿತ್ತು. - ಸದಾಶಯ ಭಟ್
ReplyDeleteಸದಾಶಯ..
ReplyDeleteಕಾರ್ಯಕ್ರಮದ ಸಂಯೋಜಕರು.. ಕರಾಡ ಬ್ರಾಹ್ಮಣ ಸಮಾಜ ಬೆಂಗಳೂರು ಕರಾಡ ಕಲಾ ಪ್ರತಿಷ್ಟಾನ ಬೆಂಗಳೂರು. ಯಕ್ಷಗಾನ ತಾಳಮದ್ದಲೆ ಕಲಾವಿದರು: ಶ್ರೀರಾಮ ಕಲಾಸಂಘ ಬೆಂಗಳೂರು. ಕಲಾವಿದರ ವಿವರದ ಬಗ್ಗೆ ಪೂರ್ಣ ಅರಿವಿಲ್ಲ.
ಪ್ರಿಯ ರಾಜ್, ನಾವೊಂದು ತಾಳಮದ್ದಳೆ ಸಂಘಟಿಸಬೇಕೆಂದಿದ್ದೇವೆ. ಬೆಂಗಳೂರಿನಲ್ಲಿ ಅತ್ಯುತ್ತಮ ಭಾಗವತರು ಯಾರು? ಹಿಮ್ಮೇಳಕ್ಕೆ ಯಾರನ್ನು ಕರೆಯಬಹುದು?
ReplyDeleteಅದು ಅವರವರ ಅಭಿರುಚಿಗೆ ಬಿಟ್ಟ ವಿಚಾರ. ಈ ಬಗ್ಗೆ ನನ್ನ ಮಾಹಿತಿ ಅಪೂರ್ಣ.
ReplyDeleteನಿಮ್ಮ ಬರಹದ ಆಶಯ ಚೆನ್ನಾಗಿದ್ದರೂ,ಬರವಣಿಗೆಯಲ್ಲಿ ತುಂಬಾ ತಪ್ಪುಗಳಿವೆ.ಉದಾಹರಣೆಗೆ- ನಿರ್ಧಿಷ್ಟ, ವೈಪರಿತ್ಯ, ಬೆಸತ್ತು, ಸ್ತಭ್ಧ, ಆವಶ್ಯ, ನೆರದವರು - ಇತ್ಯಾದಿ.
ReplyDelete'ಕೆಲವೊಂದು ಸಲ ಹೇಳಿದ ಅರ್ಥದ ಪದ ಮತ್ತೆ ಪುನಹ ಮರುಕಳಿಕೆಯಾದದ್ದು' ಎನ್ನುವಲ್ಲಿ 'ಮತ್ತೆ-ಪುನಃ -ಮರುಕಳಿಕೆ' ಅಂತ ನೀವೂ ಪುನರಾವರ್ತಿಸಿದ್ದು ಉದ್ದೇಶಪೂರ್ವಕ ಅಂದುಕೊಂಡಿದ್ದೇನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಿಮಗೆ ವಿಮರ್ಶಕರಾಗಿ ಒಳ್ಳೆಯ ಭವಿಷ್ಯವಿದೆ. ಧನ್ಯವಾದಗಳು
ನೀವಂದುಕೊಂಡಂತೆ ನಾನು ವಿಮರ್ಶಕನೂ ಅಲ್ಲ... ಪಳಗಿದ ಬರಹಗಾರನೂ ಅಲ್ಲ. ಅಥವ ಒಂದು ಬರಹಗಾರ ಎಂದು ಗುರುತಿಸಲ್ಪಡಬೇಕಾದ ಯಾವುದೇ ಅರ್ಹತೆ ನನ್ನಲ್ಲಿ ಇದೆ ಎಂದು ಅನಿಕೆಗಳೂ ಇಲ್ಲ. ಉಲ್ಲೇಖಿಸಲ್ಪಡುವ ವಿಚಾರಗಳೇ ಸರ್ವ ವಿದಿತ ಅದುವೇ ಶಾಸನ ಸಮಾನ ಎಂಬ ಭಾವವೂ ಇಲ್ಲ. ಕೇವಲ ಮನಸ್ಸಲ್ಲಿ ಮೂಡಿದ ಭಾವನೆಗಳನ್ನು ನನ್ನ ಸ್ವಾತಂತ್ರ್ಯದ ಪರಿದಿಯಲ್ಲಿ ತೋರಿಸುವ ಹಂಬಲ. ತಪ್ಪುಗಳು ಒಪ್ಪುಗಳ ಬಗ್ಗೆ ಜಾಗರೂಕತೆ ಇರಬೇಕೆಂಬ ಹಂಬಲವಿದೆ ಆದರೆ ಅದು ಸಾಧ್ಯತೆಯ ಅರಿವು ಇಲ್ಲ. ಮತ್ತೆ ಕೆಲವು ತಪ್ಪುಗಳು ಉದ್ದೇಶಪೂರ್ವಕ ಅಲ್ಲ. ಮುದ್ರಣ ತಪ್ಪುಗಳು ಅಲ್ಪ ತಾಂತ್ರಿಕವಾದ ತಪ್ಪುಗಳು ಮತ್ತು ಕೆಲವು ಅವಸರದ ತಪ್ಪುಗಳೂ ಇರುತ್ತವೆ. ಎಲ್ಲವೂ ಮಿತ್ರರು ಅದನ್ನು ಸರಿಯಾಗಿ ಗ್ರಹಿಸಿ ಅರ್ಥೈಸಿಕೊಳ್ಳುತ್ತಾರೆ ಎಂಬ ಅಚಲ ವಿಶ್ವಾಸ.ನಿಮ್ಮ ಹಾರೈಕೆಗೆ ಹೃದಯಾಂತರಾಳದ ಕೃತಜ್ಞತೆಗಳು
ReplyDelete