| ಚಿತ್ರ ಕೃಪೆ ತೆಂಕಬೈಲು ಪ್ರಸನ್ನ |
ಯಕ್ಷಗಾನ ಅಭಿಮಾನ ಬೆಳೆಸಿಕೊಂಡು ಅದನ್ನು ಹವ್ಯಾಸವಾಗಿಸಿಕೊಂಡವರನ್ನು ನಾವುಗಳು ಅದೇ ಅಭಿಮಾನದಿಂದ ಹೇಳುವುದುಂಟು ಮರುಳರು ಅಥವಾ ಹುಚ್ಚರು ಎಂದು. ಬೇರೆ ಯಾವುದೇ ಕಲಾಭಿಮಾನಕ್ಕಿಂತ ಈ ಯಕ್ಷಗಾನಕ್ಕೆ ಸಂಭಂಧಿಸಿ ಈ ಅಭಿಮಾನ ಎಂಬುದು ಮರುಳು ಎಂದು ಕರೆಯುವುದು ಉತ್ಪ್ರೇಕ್ಷೆ ಎಂದು ನನಗನಿಸುವುದಿಲ್ಲ. ಯಕ್ಷಗಾನದಲ್ಲಿ ಹಲವು ವಿಧದ ಹವ್ಯಾಸಗಳನ್ನು ಬೆಳೆಸಿಕೊಂಡ ಅಭಿಮಾನಿಗಳು ಇದ್ದಾರೆ. ನಿಯಮಿತವಾಗಿ ಯಕ್ಷಗಾನವನ್ನು ನೋಡುವ ಹವ್ಯಾಸ. ಇದರಲ್ಲೇ ಹಲವು ವಿಚಿತ್ರಗಳನ್ನು ಕಾಣಬಹುದು. ಅದೆಷ್ಟು ಗಾಢವಾದ ಅಭಿಮಾನವೆಂದರೆ ಅದರ ಎದುರು ಮಿಕ್ಕೆಲ್ಲ ಕಲೆಯೂ ಗೌಣವಾಗಿಬಿಡುತ್ತದೆ. ಬಹುದೂರದ ಕಟೀಲಿಗೆ ಹೋಗಿ ಆಟ ನೋಡುವ ಪರಿ ಒಬ್ಬರದು. ಅದು ಹೇಗೆ ನಿತ್ಯ ರಾತ್ರಿ ಎಂಟುವರೆ ಗಂಟೆಗೆ ರಂಗಸ್ಥಳದ ಎದುರು ಹಾಜರಾಗಿ ಬೆಳಗ್ಗಿನ ಮಂಗಳದ ತನಕ, ಬಿಡದೆ ಒಂದು ವಾರಗಳ ಆಟ ನೋಡುವ ಅಭಿಮಾನ ಅದು ಯಾವ ಬಗೆಯದು? ತಿಂಗಳಿಗೊಂದು ಸಾರಿಯಾದರೂ ಊರ ಕಡೆಗೆ ಹೋಗಿ ಅಲ್ಲಿ ಒಂದೆರಡಾದರು ಆಟ ನೋಡುವ ಹಲವರು. ಆಟಕ್ಕೆಂದೆ ಹಲವು ದಿನ ಕೆಲಸಕ್ಕೆ ರಜೆ ಬರೆದು ಒಂದೆರಡಾದರೂ ಪೂರ್ಣ ರಾತ್ರಿಯ ಆಟನೋಡುವ ಹಲವರು. ಇದು ಒಂದು ರೀತಿಯ ಹವ್ಯಾಸವಾದರೆ. ಇದರಲ್ಲಿ ಇನ್ನು ಹಲವರಿಗೆ ವೇಷ ತೊಡುವುದೋ ಅಥವಾ ಹಿಮ್ಮೇಳದಲ್ಲಿ ಕೈಯಾಡಿಸಿಬಿಡುವ ಬಯಕೆ ಹೀಗ ವೈವಿಧ್ಯಮಯ ಹುಚ್ಚರ ಮುಖದರ್ಶನವನ್ನು ಇಲ್ಲಿ ಕಾಣಬಹುದು ಈ ಕಲೆಯ ಹೆಗ್ಗಳಿಕೆಯೇ ಅದು. ಅನಾರೋಗ್ಯದಿಂದಲೋ ವೃಧ್ಧಾಪ್ಯದಿಂದಲೋ ದೇಹ ಸಹಕರಿಸದೇ ಇದ್ದರೂ ರಂಗಸ್ಥಳಕ್ಕೇರಿದ ಮೇಲೆ ಎಲ್ಲವನ್ನು ಮರೆತು ಕಲೆಯಲ್ಲಿ ವಿಲೀನವಾಗಿಬಿಡುವ ಹಲವರು. ಯಕ್ಷಗಾನದ ಹಿರಿಯ ಕಲಾವಿದರನ್ನು ಅನುಕರಿಸಿ, ಗೋವಿಂದಣ್ಣನ ವೇಶವನ್ನೋ ಅಥವ ಹೊಳ್ಳರ ಪದವನ್ನೋ ಅನುಕರಿಸಿ ಯಕ್ಷಗಾನವನ್ನು ಮಿಮಿಕ್ರಿಯಾಗಿ ಬದಲಾಯಿಸುವ ಒಂದು ವರ್ಗ, ಇದೂ ಒಂದು ಹವ್ಯಾಸ.!!! ಇರಲಿ
![]() |
| ಚಿತ್ರ ಕೃಪೆ ತೆಂಕಬೈಲು ಪ್ರಸನ್ನ |
ಒಟ್ಟಿನಲ್ಲಿ ವೈವಿಧ್ಯಮಯ
ಕಲಾಭಿಮಾನಕ್ಕೆ ಸಾಕ್ಷಿಯಾಗುವ ಈ ಕಲೆಯಲ್ಲಿ ಇನ್ನೋಂದು ಹವ್ಯಾಸ, ಅತ್ಯಂತ ಶ್ರೀಮಂತ ಹವ್ಯಾಸ ಎಂದು
ಕರೆಯಬಹುದಾದ ಹವ್ಯಾಸವೆಂದರೆ ಈ ಆಟ ಆಡಿಸುವ ಹವ್ಯಾಸ.. ಕೆಲವೊಮ್ಮೆ ಇದು ಅತಿರೇಕದ ಹುಚ್ಚು ಅಂತ
ಸಾಮಾನ್ಯವಾಗಿ ಅನ್ನಿಸಿದರೂ ಅದೊಂದು ಹೆಗ್ಗಳಿಕೆಯ
ಹುಚ್ಚು ಎಂದೇ ಪರಿಗಣಿಸಲ್ಪಡಬೇಕು. ಒಂದು ಕಾಲದಲ್ಲಿ ಆಟ ಅಡಿಸುವಲ್ಲಿ ವ್ಯಾಪಾರಿ ಮನೋಭಾವವೂ
ಇದ್ದಿತ್ತು. ಹವ್ಯಾಸಿ ಮೇಳಗಲ ಕಾಲ. ಈಗ ವ್ಯವಸಾಯೀ ಮೇಳಗಳು ಇಲ್ಲವೇ ಇಲ್ಲ ಹಾಗಾಗಿ, ತೆಂಕು ತಿಟ್ಟಿನ ಆಟ ಆಡಿಸುವುದೆಂದರೆ ಅದು
ಹವ್ಯಾಸವೆಂದೇ ತಿಳಿಯಬೇಕು. ಹಲವು ಸಾವಿರ ಅಥವಾ ಲಕ್ಷಗಳನ್ನು ಕೇವಲ ಇರುಳು ಹಗಲಾಗುವುದರೊಳಗೆ ಮುಗಿಸಿ
ಬಿಡುವ ಇದೊಂದು ಶ್ರೀಮಂತ ಹವ್ಯಾಸವೇ ಸರಿ. ಇಂತಹ
ಯಕ್ಷಗಾನ ಕೂಟಗಳು ಅಲ್ಲಲ್ಲಿ ಆಗುತ್ತಾ ಅದು ಯಕ್ಷಗಾನದ ಒಂದು ಜಾತ್ರೆಯಂತೆ ನಡೆದುಬಿಡುತ್ತದೆ. ಹೀಗೆ
ನಡೆದ ಒಂದು ಬರೀ ಯಕ್ಷಗಾನ ಪ್ರವಾಹವಾಗಿ ಹರಿದ
ಮಿತ್ತನಡ್ಕದ ಬಯಲಾಟ. ಬ್ಯಾನರ್ ಕಟೌಟ್ ಗಳ ಸ್ವಯಂ ಪ್ರಶಂಸೆಯ ಫಲಕಗಳಿಲ್ಲದ ಭಾಷಣಗಳ
ಅನಪೇಕ್ಷಿತ ಕೊರೆತಗಳಿಲ್ಲದ, ಸರೀ ದಿನದರ್ಧ ಭಾಗವನ್ನು ಅಂದರೆ ಹೆನ್ನೆರಡು ಘಂಟೆಯ ಅವಧಿಯನ್ನು
ಸಂಪೂರ್ಣ ಯಕ್ಷಗಾನ ಮಯವನ್ನಾಗಿ ಮಾಡಿಬಿಟ್ಟಿತು. ಗ್ರಾಮದ ಶುದ್ದ ನೀರವ ಮೌನದಲ್ಲಿ ಒಂದು
ಯಕ್ಷರಾತ್ರೆ ಜಾತ್ರೆಯಾಗಿ ಮಾರ್ಪಟ್ಟರೆ ಅದಕ್ಕೆ ಕಾರಣ ತೆಂಕಬೈಲು ಕುಟುಂಬದವರ ಶ್ರೀಮಂತ ಹವ್ಯಾಸ.
| ಚಿತ್ರ ಕೃಪೆ ತೆಂಕಬೈಲು ಪ್ರಸನ್ನ |
ಯಕ್ಷಗಾನದ ಸಮಕಾಲೀನ ಹೆಸರಾಂತ ಕಲಾವಿದರ ಗಡಣವೇ
ನೆರೆದಿತ್ತು. ಅದಕ್ಕೆ ಸರಿಯಾಗಿ ಹೊಂದಿಕೆಯಾಗುವಂತೆ, ಭಸ್ಮಾಸುರ ಮೋಹಿನಿ, ಭಾರ್ಗವ
ಕಾರ್ತವೀರ್ಯಾರ್ಜುನ, ಕೃಷ್ಣಾರ್ಜುನ ಮತ್ತು ಕರ್ಣಾರ್ಜುನ ಪ್ರಸಂಗಳು ಒಂದರ ಮೇಲೆ ಒಂದರಂತೆ ಯಶಸ್ವಿಯಾಗಿ ರಂಗಸ್ಥಳ ತುಂಬ ವೈಭವೀಕರಿಸಲ್ಪಟ್ಟಿತು. ಈ
ಬಯಲಾಟದ ವೀಡಿಯೊದಲ್ಲಿ ನೋಡಿದರೂ ಆದ ಅನುಭವದ
ಅವಲೋಕನವೇ ಈ ಚಿಂತನ.
ಕಾರ್ಯಕ್ರಮದ ಆರಂಭದ ಪೀಠಿಕೆಯಲ್ಲಿ.
ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಅಡೂರು ಗಣೇಶ್ ರವರ ಚೆಂಡೆಯ ಜುಗಲ್ಬಂದಿ ಸಾಮಾನ್ಯ
ಮಟ್ಟದಲ್ಲಿತ್ತು. ಬದಲಿಗೆ ನನ್ನ ಅನಿಸಿಕೆಯಂತೆ ಗುರು ಮಾಂಬಾಡಿ ಮತ್ತು ದೇಲಂತ ಮಜಲು ಇವರ ಪೀಠಿಕೆ
ಇರುತ್ತಿದ್ದರೆ ಅದು ಒಂದು ದಾಖಲೀಕರಣಕ್ಕೆ ಯೋಗ್ಯವಾಗಿರುತ್ತಿತ್ತು.
ನಂತರ ಪ್ರಸಿದ್ಧ ಭಾಗವತರಾದ ದಿನೇಶ ಅಮ್ಮಣ್ಣಾಯರ
ಭಾಗವತಿಕೆಯಲ್ಲಿ ಭಸ್ಮಾಸುರ ಮೋಹಿನಿ ಪ್ರಸಂಗ
ಆರಂಭದಲ್ಲಿ ರಂಗದಲ್ಲಿ ಕಳೆಗಟ್ಟತೊಡಗಿ ಒಂದು ಉತ್ತಮ ಪ್ರದರ್ಶನಕ್ಕೆಸಾಕ್ಷಿಯಾಯಿತು. ಹಿಮ್ಮೇಳದಲ್ಲಿ
ಅಮ್ಮಣ್ಣಾಯರೊಂಡಿಗೆ ಪದ್ಮನಾಭ ಉಪಾಧ್ಯಾಯ ಮದ್ದಲೆಯಲ್ಲಿ ಮತ್ತು ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್
ಸಹಕರಿಸಿ.. ಮುಮ್ಮೇಳದಲ್ಲಿ ಒಡೋಲಗದ ಪರಮೇಶ್ವರನಾಗಿ
ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಹಿತಮಿತವಾಗಿ ಪಾತ್ರವನ್ನು ಬೆಳೆಸಿದರು. ಮಧೂರು
ರಾಧಾಕೃಷ್ಣ ನಾವಡರ ಪ್ರಸಿದ್ದ ಪಾತ್ರಗಳಲ್ಲಿ ಒಂದಾದ ಭಸ್ಮಾಸುರ ಈ ಪ್ರಸಂಗದ ವಿಶೇಷತೆಯಾಗಿದ್ದರೂ
ಶಶಿಕಾಂತ ಶೆಟ್ಟಿಯವರ ಪಾದರಸದ ಚಲನೆಯಲ್ಲಿ ಮೋಹಿನಿಯ ಪಾತ್ರ ಮಿಂಚಿನ ಸಂಚಾರವನ್ನುಂಟು ಮಾಡಿತು.
ಅತ್ಯಂತ ಸುಂದರವಾಗಿ ಲಾಸ್ಯ ಭರಿತ ಮೋಹಿನಿ ಮೋಹದ ಬಲೆಯನ್ನೇ ಬೀಸಿದಂತಾಯಿತು. ಶುದ್ದ ಯಕ್ಷಗಾನ
ಶೈಲಿಯ ಯಾವುದೇ ಗಿಮಿಕ್ ಸರ್ಕಸ್ ಇಲ್ಲದ ಮೋಹೀನಿ ಮೋಡಿ ಮಾಡಿದರೆ ಅದು ಅತಿಶಯವೆಂದೆನಿಸದು. ಈ ಯಕ್ಷಗಾನ
ಶೈಲಿಗೆ ಒಪ್ಪುವಂತಹ ನಾಟ್ಯಶೈಲಿ ಅದೇ ಮಟ್ಟಕ್ಕೆ ಏರುವ ಅರ್ಥಗಾರಿಕೆ ಹೀಗೆ ಅಪ್ಪಟ ಪ್ರತಿಭೆ ಹೊರಹೊಮ್ಮಿ ಈ ಪ್ರಸಂಗದ ಮೋಹಿನಿ ಅದ್ಭುತವಾಗಿತ್ತು. ಇನ್ನು
ನಾವಡರ ಭಸ್ಮಾಸುರದ ಪಾತ್ರ ಶಿಸ್ತುಬದ್ದ ಹಾಗು ಯೋಜನಾಬಧ್ಹವಾಗಿ ಪ್ರಸ್ತುತಗೊಂಡಿತ್ತು. ಕೊನೆಯ
ಹಂತದಲ್ಲಿ ಅತಿರೇಕದ ಮಾತುಗಳೋ ಎಂದು ಅನ್ನಿಸುವಂತೆ ಇದ್ದರೂ ಅಷ್ಟರಲ್ಲಾಗಲೇ ನಾವಡಣ್ಣನ ಈ ಅಸುರನ
ಪಾತ್ರ ಸಂಪೂರ್ಣ ಅವರಿಸಿ ಬಿಟ್ಟಿತ್ತು. ಪತ್ರಿಕೆಯೊಂದರಲ್ಲಿ ಬಂದ ವಿಮರ್ಶೆಯಂತೆ ಭಸ್ಮಾಸರನ
ನಾಟ್ಯ ಸಾಲದು ಎಂಬುದು ಮೇಲ್ನೋಟಕ್ಕೆ ನಿಜವೆಂದು ಕಂಡರು. ನಾವಡರ ಭಸ್ಮಾಸುರನ ಪಾತ್ರ ಚಿತ್ರಣವೇ
ಹಾಗೆ. ಅದು ವಿಶಿಷ್ಟ ಹಾಗೂ ವೈವಿಧ್ಯಮಯ.ರಂಗದ ಮೇಲೆ ಸಂಪೂರ್ಣವಾಗಿ ನಿರ್ವಹಿಸುವ ಪಾತ್ರದಲ್ಲಿ ಲೀನವಾಗುವ ಇವರ ಸಹಜತೆ, ಆ ಪಾತ್ರದ ಮನೋಭಾವಕ್ಕೆ
ಹೊಂದಿಕೊಂಡು ಇರುತ್ತದೆ. ಭಸ್ಮಾಸುರನ ಪಾತ್ರ ಒಂದು ಬಗೆಯ ವಿಕ್ಷಿಪ್ತ ಮನಸ್ಸಿನ ಅಸುರ
ಪಾತ್ರ.ಜಗನ್ಮಾತೆಯನ್ನೇ ಮೋಹಿಸಿ ಬಯಸುವ ಒಂದು
ವಿಕೃತ ವ್ಯಕ್ತಿತ್ವದ ಕಾಮಾಂಧನ ಪಾತ್ರ. ಕಾಮಾಂಧನಾದವ
ಸಹಜವಾಗಿ ಬೌಧಿಕವಾಗಿ ಅಂಧನಾಗಿ ನಲಜ್ಜಾಂ ... ನಭಯಂ ಎಂಬಂತೆ ಎಲ್ಲದಕ್ಕೂ ಸಿದ್ದವಾಗುವ
ವ್ಯಕ್ತಿತ್ವದ ಪಾತ್ರ. ಆತ ಮೋಹಿನಿಯಂತೆ ಕುಣಿಯದಿದ್ದರೂ ಪಾತ್ರದ ಮಟ್ಟಿಗೆ ಅದು ಔಚಿತ್ಯ ಪೂರ್ಣವೇ
ಆಗಿರುತ್ತದೆ ಎಂದು ನನಗನಿಸಿತು. ಹಾಗಾಗಿ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಂಡ ಪಾತ್ರ ಸಹಜ
ರೀತಿಯಲ್ಲಿ ರಂಗದ ಮೇಲೆ ಅಭಿವ್ಯಕ್ತೀಕರಿಸಲ್ಪಟ್ಟಿತ್ತು.
ಈ ಪ್ರಸಂಗದ ಎರಡು ಪದಗಳು ಇಲ್ಲಿವೆ: ಕೃಪೆ ತೆಂಕಬೈಲು.
ಈ ಎಲ್ಲ ಪಾತ್ರಗಳೂ ಸನ್ನಿವೇಶಗಳು ಸಹಜವಾಗಿ
ಕಳೆಗಟ್ಟಲು ಅತಿಮುಖ್ಯ ಕಾರಣ ಸಮರ್ಥ ಹಿಮ್ಮೇಳ. ಮದ್ದಲೆಗೆ ಮೈಕ್ ನ ಕೊರತೆಯೊಂದು ಬಿಟ್ಟರೆ
ಹಿಮ್ಮೇಳ ಅತ್ಯದ್ಭುತವಾಗಿತ್ತು. ಪ್ರಸಂಗದ ಆದಿಯಿಂದ ಅಂತ್ಯದ ವರೆಗೆ ಒಂದು ಪದವನ್ನು
ಕಳೆದುಕೊಳ್ಳುವ ಹಾಗಿಲ್ಲ. ಅಮ್ಮಣ್ಣಾಯರ ಸುಶ್ರಾವ್ಯ ಕಂಠ ಒಂದು ಸಲ ಯೋಚಿಸಿದರೆ ಸಾಕು, ಮಿತ್ತನಡ್ಕದಂತಹ ನಿಶಬ್ಧ ನೀರವ ವಾತಾವರಣದ ಗ್ರಾಮೀಣ ಪ್ರದೇಶದಲ್ಲಿ ನಡುವಿರುಳು ಇವರ ಗಾಂಧರ್ವ
ಕಂಠ ಮೊಳಗಿದರೆ ಆ ಅನುಭವ ಹೇಗಿರಬಹುದು. ನೆನಸಿದರೇ ರೋಮಾಂಚನವಾಗುವ ಅನುಭವ. ಸುಮಾರು ಮೂರು
ಘಂಟೆಗಳ ಕಾಲ ಅಮ್ಮಣ್ಣಾಯರು ಹಾಕಿದ ಮೋಡಿಯಿಂದ ಪ್ರೇಕ್ಷಕ ಬಹು ಹೊತ್ತಿನವರೆಗೂ ಹೊರಬಂದಿರಲಾರ.
ಅದರಲ್ಲಿಯೂ “ ಯಾರು ಈಕೆ
ಸುಂದರಾಂಗಿಯೂ....” ಮತ್ತು “ ಯಾರಯ್ಯ ಧನುಜೇಶ...” ಎಂಬ ಪದಗಳು
ಅಮೋಘವಾದ ಸ್ವರ ವೈಭವದ ದರ್ಶನವನ್ನು ಮಾಡಿದ್ದು ಸತ್ಯ. ಇದರ ಜತೆಯಾಗಿ ವಿದ್ಯುತ್ವೇಗದಿಂದ ಚೆಂಡೆಯ
ಲಯ ಮೊಳಗಿಸಿದ ದೇಲಂತ ಮಜಲು ಕೈಚಳಕ ಪ್ರಶಂಸನೀಯ. ಗಾಯನ ವಾದನಗಳೆರಡೂ ಹಿಮ್ಮೇಳವನ್ನ ಅಧ್ಬುತವಾಗಿ
ತೆರೆದಿಟ್ಟವು.
ನೋಡಲು ಇನ್ನೂ ಮೂರುನಾಲ್ಕು ಪ್ರಸಂಗಗಳು
ಬಾಕಿಇದೆ...ಆದಷ್ಟು ಬೇಗ ನೋಡುವ ಹಾಗು ಅನುಭವಗಳನ್ನು ಹಂಚಿಕೊಳ್ಳುವ ತವಕ.. ಮುಂದಿನ
ಕೆಲವುದಿನ ಅದಕ್ಕೇ ಮೀಸಲು....

ಯಕ್ಷಗಾನವನ್ನು ಸಂಘಟಿಸುವ ಕೆಲಸ ನಿಜವಾಗಲೂ ಅತ್ಯಂತ ಕಷ್ಟವೇ. ಕೆಲವೊಮ್ಮೆ ಮುಖ್ಯ ಪಾತ್ರಕ್ಕೆ ಹೇಳಿದ ಕಲಾವಿದರು ಬರದೆ ಇದ್ದಲ್ಲಿ ಸಂಘಟಕರಿಗೂ ಪ್ರೇಕ್ಷಕರಿಗೂ ಪೂರ್ತಿ ಪ್ರದರ್ಶನವೇ ರಸಹೀನವಾಗಿ ಕಂಡರೂ ಅಚ್ಚರಿಯಿಲ್ಲ.
ReplyDeleteಕೆಲವು ಸ್ಟಾರ್ ಕಲಾವಿದರನ್ನು ಕಾಣುವುದಕ್ಕಾಗಿಯೇ ಒಮ್ಮೊಮ್ಮೆ ನಾವೆಲ್ಲ ಹೋಗುವುದುಂಟು.
ಯಕ್ಷಗಾನದ ಪ್ರತಿಯೊಂದು ಕಾರ್ಯಕ್ರಮವನ್ನು ಸಂಘಟಿಸುವ ಸಂಘಟಕರನ್ನು ನಮ್ಮಂತಹ ಕಲಾಭಿಮಾನಿಗಳು ವಿಶೇಷವಾಗಿ ಸ್ಮರಿಸಬೇಕು.
ಒಂದೆರಡು ವರುಷಗಳ ಹಿಂದೆ ಮಂಗಳಾಗಂಗೋತ್ರಿಯಲ್ಲಿ ಎಡನೀರು ಮೇಳದವರ ಭಸ್ಮಾಸುರ ಮೋಹಿನಿ ಪ್ರಸಂಗ ನಡೆದಿತ್ತು, ನಾವುಡರ ಭಸ್ಮಾಸುರ, ಹಾಸ್ಯ, ಶೃಂಗಾರಗಳು ಮಿಳಿತಗೊಂಡು ಪ್ರಸಂಗ ಚೆನ್ನಾಗಿ ಮೂಡಿಬಂದಿತ್ತು...
ಈ ಲೇಖನ ಓದಿದ ಬಳಿಕ ವೀಡಿಯೋ ನೋಡ್ಲೇಬೇಕು ಅನ್ನಿಸ್ತಾ ಇದೆ...