ಬಲ್ಲಿರೇನಯ್ಯಾ.......ಯಾರೆಂದುಕೊಳ್ಳಬಲ್ಲಿರಿ.....ಹಾಗೆಂದುಕೊಳ್ಳಬಹುದು.
ಬಂದಂತಹ ಕಾರ್ಯ ಅನೇಕವಿದೆ. ಯಕ್ಷಗಾನದ ಒಡ್ಡೋಲಗದ ಆದ್ಯ ಮಾತುಗಳಿವು. ಮುಖ್ಯವಾಗಿ ರಾಜವೇಶವೊಂದು
ಪ್ರವೇಶಗೊಂಡು ಸಿಂಹಾಸನಾರೂಢವಾದಮೇಲೆ ಗತ್ತಿನಿಂದ ಸಭೆಯನ್ನು ನಾಲ್ದೆಸೆಗೆ ನೋಡಿ ಹೇಳುವಂತಹ ಈ
ಮಾತಿನಿಂದಲೇ ಪ್ರೇಕ್ಷಕನನ್ನು ಸನ್ನಿಗೊಳಪಡಿಸುತ್ತವೆ. ಅದರಲ್ಲೂ ತೆಂಕುತಿಟ್ಟು ಯಕ್ಷಗಾನದ
ಪ್ರವೇಶದ ಅಬ್ಬರದ ವೈಶಿಷ್ಟ್ಯ ಆ ಸೊಗಸು ಪೂರ್ಣವಾಗಿ ಅನುಭವಿಸಿದ್ದಲ್ಲಿ ಯಕ್ಷಗಾನದ ಮುಂದಿನ
ಸನ್ನಿವೇಶಕ್ಕೆ ಪ್ರೇಕ್ಷಕ ಅಣಿಯಾದಂತೆ. ತೆಂಕುತಿಟ್ಟು ಯಕ್ಷಗಾನದ ರಾಜಗಾಂಭೀರ್ಯವನ್ನು ತೋರಿದ
ಪ್ರಮುಖರ ಹೆಸರನ್ನು ಇಂದು ಯಕ್ಷಗಾನ ಅಭಿಮಾನಿಗಳಲ್ಲಿ ಕೇಳಿನೋಡಿ, ಆ ಪಟ್ಟಿಯಲ್ಲಿ ಮೊದಲು ಕಂಡು
ಬರುವ ಹೆಸರು ಸಂಪಾಜೇ ಶೀನಪ್ಪ ರೈಗಳದ್ದು.
ಹದವಾದ ಮತ್ತು ಅಷ್ಟೇ ಬಲಿಷ್ಠವಾದ ಹೆಜ್ಜೆಗಾರಿಕೆ, ಬಾಹುಗಳನ್ನು ಅಗಲಿಸಿ
ಶಿರವನ್ನು ನಿಮಿರಿಸಿ ಕಣ್ಣುಗಳನ್ನು ಅರಳಿಸಿ ತಾಳಕ್ಕೆ ಸರಿಯಾಗಿ ರೈಗಳ ರಾಜವೇಶದ ಪ್ರವೇಶ ಕಾಣುವುದೆಂದರೆ ಅದು ಮಾದರಿ
ಯಕ್ಷಗಾನವನ್ನು ಕಂಡಂತೆ. ಇಂದು ಯಕ್ಷಗಾನಕ್ಕೆ ಪ್ರೇಕ್ಷಕ ಹಂಬಲಿಸಿ ಅದರ ಹುಚ್ಚು ಬೆಳೆಸಿದ್ದರೆ
ಅದರಲ್ಲಿ ಇಂತಹ ರಾಜವೇಷಗಳ ಪಾಲು ಬಹಳಷ್ಟಿವೆ. ಸಾಂಪ್ರದಾಯಿಕ ಒಡ್ದೋಲಗದ ದೇವೇಂದ್ರನಿಂದ ತೊಡಗಿ
ಅರ್ಜುನ, ಅತಿಕಾಯ, ಹಿರಣ್ಯಾಕ್ಷ ರಕ್ತ ಬೀಜ, ಛೇ
ಒಂದೇ ಎರಡೆ ಹಲವು ಸಲ ಪ್ರಸಂಗ ನಿರ್ಣಯವಾಗುವುದೂ ಇಂತಹ ವೈಶಿಷ್ಟ್ಯತೆಗಳಿಂದ. ಆ
ವೈಶಿಷ್ಟ್ಯತೆಯನ್ನು ತುಂಬಿದ ಪ್ರಮುಖರಲ್ಲಿ ಸಂಪಾಜೆ ರೈಗಳು ಅಗ್ರಗಣ್ಯರು.
ಅತ್ಯಂತ ಸರಳ ಸಜ್ಜನಿಕೆಯ ವಿನಯವಂತ ಕಲಾವಿದ. ಸದಾ ಮಂದಸ್ಮಿತ
ಮುಖದಲ್ಲಿ ಹೊಳೆಯುವ ಕಣ್ಣುಗಳು ಹಲವು ಪಾತ್ರಗಳಿಗೆ ಹಲವು ಭಾವಗಳನ್ನು ತುಂಬಿಸಿಬಿಡುತ್ತವೆ.
ಆಕರ್ಷಕ ಮುಖವರ್ಣಿಕೆ , ಅಚ್ಚುಕಟ್ಟಿನ ವೇಷಗಾರಿಕೆ, ಲಯಬದ್ದ ಕುಣಿತ ಅದಕ್ಕೊಪ್ಪುವ ಅಭಿನಯ
ಇದೆಲ್ಲದಕ್ಕೂ ಸರಿಮಿಗಿಲೆನಿಸುವ ಹಿತಮಿತವಾದ ಮಾತುಗಾರಿಕೆ ಎಲ್ಲವೂ ಯಕ್ಷಗಾನ ಪರಂಪರೆಯ ದರ್ಶನವನ್ನು
ಮಾಡಿಸುತ್ತವೆ. ಕುಣಿತವಾಗಲಿ ಮಾತುಗಾರಿಕೆಯಾಗಲಿ ಅಭಿನಯವಾಗಲಿ ಯಕ್ಷಗಾನ ಪರಂಪರೆಯನ್ನು
ಉಲ್ಲೇಖಿಸಿ ಹೇಳುವುದಾದರೆ ಈಗ ಸಂಪಾಜೆಯವರ ಹೆಸರನ್ನು ಮೊದಲು ಹೇಳಬೇಕಾಗುತ್ತದೆ. ಅಂತಹ ಸುದೃಢ
ಸಂಪೂರ್ಣ ವೇಷಗಾರಿಕೆ.
ಕಟೀಲು ಮೇಳದಲ್ಲಿನ ಇವರ ವೇಷಗಾರಿಕೆ ಅದರಲ್ಲೂ ಬಲಿಪ್ಪರು ಇರಾ ಭಾಗವತರು (ಕುಂಡಚ್ಚ) ಮೊದಲಾದವರೊಂದಿಗಿನ ಇವರ ವೇಷಗಳು,
ಅದು ಹಿರಣ್ಯಾಕ್ಷ, ರಕ್ತಬೀಜನ ಅಬ್ಭರ, ಕಾರ್ತವೀರ್ಯನ ಬೇಟೆಯಾಡುವ ದೃಶ್ಯ ಇಂದಿಗೂ ಯಕ್ಷರಸದ
ಸ್ವಾದದ ನೆನಪನ್ನು ಉಳಿಸಿಬಿಟ್ಟಿದೆ. ಇವರ ಕುಣಿತ ಬಹಳ ಸರಳವಾಗಿರುತ್ತದೆ, ದೇಹ ದಂಡನೆಯಿಲ್ಲದ
ಕುಣಿತ. ಪ್ರತಿ ಹೆಜ್ಜೆಯೂ ತಾಳಬದ್ದ. ರಂಗ ಸ್ಥಳದಲ್ಲಿನ ನಿಲುವಿನಲ್ಲೂ ಲೆಕ್ಕಾಚಾರ. ರಂಗವನ್ನು
ತನ್ನ ಕುಣಿತಕ್ಕೆ ಹಾವ ಭಾವಕ್ಕೆ ಬಳಸಿಕೊಳ್ಳುವಲ್ಲಿ ರಂಗ ತುಂಬಿಕೊಳ್ಳುವಾಗ ವೇಷಗಾರಿಕೆ
ಮಾತ್ರವಲ್ಲ ಯಕ್ಷಗಾನ ಸೋಲುವುದೇ ಇಲ್ಲ.
ಹಿರಣ್ಯಾಕ್ಷ ಸತ್ತು ಬಿದ್ದರೂ ಪ್ರೇಕ್ಷಕ ಮನದಲ್ಲಿ ಪಾತ್ರ ಜೀವಂತವಾಗಿ ಮತ್ತೂ
ವಿಜ್ರಂಭಿಸುತ್ತದೆ. ಇರುಳಿಡೀ ಆಟ ನೋಡಿ ಮರುದಿನ ನಿದ್ದೆಯ ಗುಂಗಿನಲ್ಲಿ ತಿರುಗಾಡುವಾಗ ತಲೆಯಲ್ಲಿ
ರಾಜವೇಷದ ಕಿರೀಟ ಹೊತ್ತಂತೆ ತಲೆ ಅಲುಗಾಡುತ್ತಾ ಸಂಪಾಜೆ ರೈಗಳ ವೇಷ ಭಂಗಿಯ ಕನಸನ್ನು ಕಾಣುತ್ತದೆ.
ಇದು ರೈಗಳ ವೇಷಗಳ ಸಮ್ಮೋಹನ ಎಂದು ಹೇಳಬಹುದು.
ಶ್ರೀ ಸಂಪಾಜೆ ಶೀನಪ್ಪರೈಗಳಿಗೆ ಈ ಬಾರಿಯ ರಾಜ್ಯ ಪ್ರಶಸ್ತಿ ಬಂದಿದೆ
ಎಂದರೆ ಅದು ಕೇಳುವಾಗಲೂ ಹರುಷ, ಬರೆಯುವಾಗಲೂ ಹರುಷ,,,ಆ ಸ್ಮೃತಿಗಳೇ ಒಂದು ಮಂದಹಾಸದ ಮಧುರತೆಯಿಂದ
ತುಂಬಿರುತ್ತದೆ. ಇದು ಕೇವಲ ರೈಗಳಿಗೆ ಸಂದ ಪ್ರಶಸ್ತಿಯಲ್ಲ. ಯಕ್ಷಗಾನದ ಅದರಲ್ಲೂ ತೆಂಕುತಿಟ್ಟಿನ
ರಾಜವೇಷಕ್ಕೆ ದೊರಗಿದ ರಾಜ ಸನ್ಮಾನ. ಈ ಘಳಿಗೆ ಯಕ್ಷಗಾನ ಅಭಿಮಾನಿಗಳಿಗೆ ಮಧುರ ನೆನಪಾಗಿ ಉಳಿಯಲಿ
ಕಲಾವಿದರು ಸಲ್ಲಿಸಿದ ಸೇವೆಗೆ ಮತ್ತಷ್ಟು ಮೆರುಗನ್ನು ಒದಗಿಸಲಿ ಎಂದು ಹಾರೈಸುತ್ತಾ ಹೃದಯ ತುಂಬಿ ಹೇಳುವಂತಾಗುತ್ತದೆ.....ಯಕ್ಷಗಾನಂ
ಗೆಲ್ಗೆ.

No comments:
Post a Comment