ತುಳಸೀ ಜಲಂಧರ ಎಂಬ ಪೌರಾಣಿಕ ಪ್ರಸಂಗ ಒಂದಿದೆ. ಅಸುರರು ದೇವೇಂದ್ರನಿಗೆ ಹೆಂಡ ಕುಡಿಸಿ ಪರಮೇಶ್ವರನ
ಆಗ್ರಹಕ್ಕೆ ತುತ್ತಾಗುವಂತೆ ಮಾಡುತ್ತಾರೆ. ಇಲ್ಲಿ ದೇವೆಂದ್ರನಿಗೆ ಅದು ದುರ್ವ್ಯಸನವಲ್ಲ. ಆದರೆ ಅಸುರರ ಮಾಯೆಗೆ ಆತ ಪ್ರಚೋದಿತನಾಗುವುದು ಮತ್ತು
ಅದರ ವಶವರ್ತಿಯಾಗಿ ತನ್ನ ಯೋಗ್ಯತೇಯ ಜತೆಗೆ ಪರರ ಯೋಗ್ಯತೆಯನ್ನು ಮರೆತು ಬಿಡುತ್ತಾನೆ. ವಾಸ್ತವದಲ್ಲಿ ಇಂತಹ ರಾಕ್ಷಸೀ ಪ್ರವೃತ್ತಿಗಳ
ಪ್ರಚೋದನೆಗೆ ಮನುಷ್ಯರೂ ಹೊರತಾಗಿಲ್ಲ ಎಂಬುದು ಅಪ್ಪಟ ಸತ್ಯ. ತಾನು ಕೆಡುವುದು ಮಾತ್ರವಲ್ಲ, ಊರ ಕೆಡಿಸಿತು ಎಂಬ
ಗಾದೆಯಂತೆ ಊರು ಕೆಡುತ್ತದೋ ಇಲ್ಲವೋ ಆದರೆ ನಶೆಯಲ್ಲಿ ಆತನ ಪಾಲಿಗೆ ಕೆಟ್ಟು ಹೋದ ಪರಿಸರ ಮತ್ತೆ
ಸರಿಯಾಗುವುದೇ ಇಲ್ಲ.
“ಅನುಭವ” ಮನುಷ್ಯ ಹುಟ್ಟಿದಕೂಡಲೆ ನೋಡುವಂತಹ ಮುಖವಿದು.
ಅದೊಂದು ಪಾಠವಿದ್ದಂತೆ. ನಮ್ಮ ವರ್ತಮಾನದ ಘಟನೆಗಳೆಲ್ಲಾ ಸಮಯ ಜಾರಿದಂತೆ ಇತಿಹಾಸದ ಪುಟಗಳಿಗೆ
ಸೇರಿಬಿಡುತ್ತವೆ. ಕಳೆದ ಇತಿಹಾಸವನ್ನು ತಿಳಿದುಕೊಳ್ಳುವುದೆಂದರೆ ಇತಿಹಾಸದ ಅಧ್ಯಯನ ಜತೆಯಲ್ಲಿ ಅದು
ಭವಿಷ್ಯತ್ ಗೆ ಅನುಭವವೂ ಆಗುತ್ತದೆ. ಆದರೆ ಅನುಭವದಿಂದ ಮನುಷ್ಯ ಪಾಠ ಕಲಿಯುವುದಿಲ್ಲ ಎಂಬುದನ್ನು
ಹಲವುಘಟನೆಗಳು ಶ್ರುತ ಪಡಿಸುತ್ತಾ ಸಾಗುತ್ತದೆ. ಅದರಲ್ಲೊಂದು ದುರ್ವ್ಯಸನ. ಬದುಕಿನ ಸಮಸ್ಯೆಗಳನ್ನು ಹಿರಿದಾಗಿ ತೋರಿಸಿ, ಭ್ರಾಮಕ
ಲೋಕದಲ್ಲಿ ತಾತ್ಕಾಲಿಕ ಶಮನವನ್ನು ಮಾಡಿ ಸಮಸ್ಯೆಗಳನ್ನು ಮತ್ತೂ ದೊಡ್ಡದಾಗಿಸುತ್ತದೆ. ಕ್ಷಣಿಕ ಮುಕ್ತತೆಯನ್ನು ವ್ಯಸನ ಮುಖನಾಗುವುದು
ಸಾಮಾನ್ಯ.
ದುರ್ವ್ಯಸನ ಇರುವುದಕ್ಕಿಂತ ಅದನ್ನು ಪ್ರೇರೇಪಿಸುವ
ಪರಿಸರವನ್ನು ಮೊದಲು ನಿಯಂತ್ರಿಸಬೇಕು. ಶರೀರಕ್ಕೆ ಗಾಯವಾದಾಗ ಆ ಗಾಯ ಶಮನವಾಗುವುದಕ್ಕೆ ರೋಗ
ನಿರೋಧಕ ( ಆಂಟಿ ಬಯೋಟಿಕ್) ಔಷಧವನ್ನು ಪ್ರಯೋಗಿಸುತ್ತೇವೆ. ಅದರ ಕೆಲಸ ಬ್ಯಾಕ್ಟೀರಿಯಾ
ಸೋಂಕಿನಿಂದ ಬೇರೆ ರೋಗಗಳು ಬಾರದಿರುವಂತೆ ಕೇವಲ ತಡೆಯುವುದಷ್ಟೇ ಕೆಲಸ. ಶಮನ ಮಾಡುವುದಲ್ಲ. ಅಷ್ಟರಲ್ಲೇ ಆ ಗಾಯ ಗುಣವಾಗಿಬಿಡುತ್ತದೆ. ಅಂದರೆ ರೋಗ
ಶಮನವನ್ನು ಶರೀರವೇ ಹೊಂದಿದೆ ಎಂದಾಯಿತಲ್ಲ? ಹಾಗಾಗಿ ಪರಿಸರವನ್ನು ಶುದ್ದವಾಗಿಸುವುದು ಇಲ್ಲಿ
ಮುಖ್ಯವಾಗುತ್ತದೆ. ಪರಿಸರ ಕೆಟ್ಟು ಹೊದರೆ ಎಂತಹ ಆರೋಗ್ಯವಂತ ಜೀವವಾದರೂ ಜೀವಿಸುವುದಕ್ಕೆ
ಸಾಧ್ಯವಾಗುವುದಿಲ್ಲ.
ಒಬ್ಬ ದುರ್ವ್ಯಸನ ಬಾಧಿತನಾಗಿದ್ದಾನೆ ಎಂದಾದರೆ
ಪೂರ್ಣ ಪರಿಸರ ಕೆಟ್ಟಿದೆ ಎಂದರ್ಥವಲ್ಲ. ಆತನ
ಸುತ್ತಲು ಪರಿಸರ ಕೆಡದಂತೆ ನೋಡಿಕೊಳ್ಳಬೇಕಾದದ್ದು ಮೊದಲ ಅನಿವಾರ್ಯತೆ. ಅಲ್ಲಿ ಮತ್ತಷ್ಟು
ಪ್ರಯತ್ನ ಪೂರ್ವಕವಾಗಿ ಪರಿಸರವನ್ನು ಕೆಡಿಸಿ ದುರ್ವ್ಯಸನಕ್ಕೆ ಪ್ರೇರಪಣೆಯನ್ನು ಒದಗಿಸುತ್ತಾನೆ
ಎಂದಾದಲ್ಲಿ ಅನುಭವದಿಂದ ಪಾಠ ಕಲಿಯಲಿಲ್ಲ ಎಂದೇ ಖೇದ ಪೂರ್ವಕವಾಗಿ ಹೇಳಬೇಕು.
ವ್ಯಸನ ಬಾಧೆ ಎಂಬುದು ಸರ್ವೇಸಾಮಾನ್ಯವಾದರೂ
ಕಲಾವಿದನಿಗೆ ಇದು ಸ್ವಲ್ಪ ಗಣನೀಯವಾಗಿರುತ್ತದೆ. ಇದೊಂದು ಅನಧಿಕೃತ ಪ್ರಕೃತಿ ನಿಯಮ. ಯಾಕೆಂದರೆ
ಇಲ್ಲಿ ಲಭ್ಯವಾಗುವ ವಿಪುಲ ಅವಕಾಶಗಳೊಂದಿಗೆ ಹಲವು ಸಮರ್ಥನೆಗಳೂ ಕಾರಣವಾಗುತ್ತವೆ. ಹಲವು ಸಲ
ಇದನ್ನು ಸ್ವಯಂಕೃತ ಅಪರಾಧವೆಂದು ಪರಿಗಣಿಸಿದರೂ ಇಲ್ಲಿ ಪರಿಸರದ ಜವಾಬ್ದಾರಿಯನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಾಗುವುದಿಲ್ಲ.
ಕಲೆ ಮತ್ತು ಕಲಾವಿದ ಎರಡೂ ಒಂದೇ ಮುಖಗಳಾಗಿ ಕಂಡಾಗ
ಕಲಾವಿದ ಕಲೆಯ ಒಂದು ಅಂಗವೇ ಆಗಿಬಿಡುತ್ತಾನೆ. ಇದೊಂದು ಅವಿನಾಭಾವ ಸಂಬಂಧ. ಕಲಾವಿದ ಕೆಡುವಾಗ ಕಲೆಯೂ ಕೆಟ್ಟಹಾಗೆ. ಕಲಾವಿದ
ನೇಪಥ್ಯದಿಂದ ಸರಿದಾಗಲೂ ಕಲೆಯಿಂದ ದೂರಾಗುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ಹೂವನ್ನು ದೇವರ ಪ್ರಸಾದ ಎಂದು ಕಲ್ಪಿಸಿಕೊಂಡಾಗ ಭಕ್ತಿಯಿಂದ ಎತ್ತಿಕೊಂಡು ಹೋಗುತ್ತೇವೆ. ಕಾರಣ ಅದು ದೇವರ
ಸಾನ್ನಿಧ್ಯದಲ್ಲಿ ಮಾತ್ರವಲ್ಲ ಪ್ರಸಾದವಾಗಿರುವುದು.
ಈ ಸಂಬಂಧದ ಗಂಭೀರತೆಯನ್ನು ಅರಿತಾಗ ಕಲೆ ಮತ್ತು ಕಲಾವಿದನ ಅನ್ವರ್ಥ ಸಾಧ್ಯವಾಗುವುದು. ಕಲಾವಿದನ ಕಲಾ ಪ್ರವೃತ್ತಿಗೆ ನೈಪುಣ್ಯತೆಗೆ
ಪ್ರೋತ್ಸಾಹಿಸುವಾಗ ಪರೋಕ್ಷವಾಗಿ ಕಲೆಯ ಪ್ರೋತ್ಸಾಹ ಹೇಗೆ ಸಾಧ್ಯವಾಗುತ್ತದೋ ಕಲಾವಿದನ
ದೌರ್ಬಲ್ಯವನ್ನು ಸತ್ಕರಿಸಿ ಹುರಿದುಂಬಿಸುವುದು
ಕಲೆಗೆ ಅಪಚಾರವೆಸಗಿದಂತೆ. ಆದರೆ ಅಪ್ಪಟ ಕಲಾಭಿಮಾನ ಎಂದು ಹೇಳಿಕೊಳ್ಳುವಾಗ ಇಂತಹ ಗಹನ ವಿಚಾರಗಳು
ಯೋಚನೆಗೆ ಸಿಲುಕುವುದೇ ಇಲ್ಲ. ದೀಪದಲ್ಲಿ ಎಣ್ಣೆ
ಬತ್ತಿಹೋದಾಗ ತುಸು ನೀರು ಹಾಕಿದರೂ ದೀಪ ಮತ್ತಷ್ಟು ಹೊತ್ತು ಉರಿಯುತ್ತದೆ. ಹಾಕಿದ ನೀರಿನ ಪ್ರಭಾವದಿಂದ ಎಣ್ಣೆಯನ್ನು ಮತ್ತಷ್ಟು ಹಿಂಡಿ, ಹೀರಿ ದೀಪ ಬೆಳಗುತ್ತದೆ. ನಮ್ಮ ಸ್ವಾರ್ಥ, ದೀಪ ಒಂದಷ್ಟು ಉರಿದರೆ ಸಾಕು. ಮತ್ತೆ ಆರಿ ಹೋದರೂ
ಪರವಾಗಿಲ್ಲ. ದೀಪವನ್ನು ಎಸೆದು ಬಿಡುವ ಮನೋಭಾವ ಇಂದು ಕಲಾವಿದನನ್ನು ದುರಂತದತ್ತ ಮುಖಮಾಡುವಂತೆ
ಮಾಡಿದೆ. ಹೀಗಿರುವಾಗ ಮಿಡಿವ ಕಂಬನಿಯ ಹೃದಯದ ಭಾವನೆಗಳ ಪ್ರಾಮಾಣಿಕತೆಯನ್ನು ಗೇಲಿ ಮಾಡಿದಂತೆ
ಅನ್ನಿಸುತ್ತದೆ.
ಕಾಲ ಮಿತಿ ಯಕ್ಷಗಾನ ಇಂತಹ ಅನಪೇಕ್ಷಿತ ಸತ್ಕಾರಕ್ಕೆ
ಸೂಕ್ತ ಅವಕಾಶವನ್ನು ನೀಡಿದೆಯೋ ನಿರ್ಧರಿಸುವುದು ಕಷ್ಟ.
ಆದರೆ ಬೇಗನೇ ಮುಗಿಯುವ ಪ್ರದರ್ಶನ ಇದಕ್ಕಂತೂ ಕಾಲವನ್ನು ಒದಗಿಸಿದೆ ಎನ್ನಬಹುದು. ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿ ಇದು ಬೆಳೆದು
ಬಂದಿರುವುದು ಕತ್ತಲೆಯಲ್ಲೂ ಗೋಚರಿಸುವ ಅಪ್ಪಟ ಸತ್ಯ. ಕಾರ್ಯಕ್ರಮದ ಆಯೋಜನೆಯಲ್ಲಿ ಇದೊಂದು ರಹಸ್ಯ
ಅಜೆಂಡಾ ಆಗಿರುವುದು ನಿಜಕ್ಕೂ ಕಳವಳಿಸಬೇಕು. ಯಕ್ಷಗಾನ
ಪ್ರಾಯೋಜಕರ ಹಣ ಇದಕ್ಕೂ ವಿನಿಯೋಗವಾಗುವುದು ಹಲವು ಸಲ ಪ್ರಾಯೋಜಕರಿಗೂ ಅರಿವಿರುವುದಿಲ್ಲ.
ಅರಿವಿದ್ದರೂ ಅವರಿಗೆ ಅಸಹಾಯಕತೆ ಅನಿವಾರ್ಯವಾಗುತ್ತದೆ. ಯಕ್ಷಗಾನದ ಮೇಲಿನ ಅಭಿಮಾನದಿಂದ ನೀಡಿದ ದೇಣಿಗೆ ಹೀಗೆ
ದುರ್ವ್ಯಸನಗಳಿಗೆ ದುರ್ವಿನಿಯೋಗ ವಾಗುವುದಿದ್ದರೆ
ಕೊಟ್ಟವರಿಗೆ ಹೇಗಾಗಬೇಡ. ? ಪೂಜೆಯಾದಮೇಲೆ
ಸಮಾರಾಧನೆ ಸಹಜವೇ. ಆದರೆ ಸಮವಾಗಿ ಮಾಡುವ ಆರಾಧನೆ ಹೀಗೆ ದುರಂತ ಪ್ರಸಾದವನ್ನು ವಿತರಿಸಬಾರದು.
ಇಂತಹ ವಿಷವರ್ತುತಲದಿಂದ ಕಲಾವಿದರನ್ನು ಹೊರತರುವ ಪ್ರಯತ್ನ ಕಲೆಯ ದೃಷ್ಟಿಯಿಂದ
ಮಾತ್ರವಲ್ಲ ಮಾನವೀಯತೆಯಿಂದಲೂ ಶ್ಲಾಘನೀಯ. ಆದರೇನು ಮಾಡುವುದು? ಈ ಪ್ರಯತ್ನಗಳು ಕೆಲವೇ ಕ್ಷಣದ ದೌರ್ಬಲ್ಯದ ಪರೀಕ್ಷೆಗೆ
ಸೋತುಬಿಡುತ್ತದೆ. ಕುಂಬಾರನಿಗೆ ವರುಷ ಎಂಬ ಗಾದೆ
ನೆನಪಾಗುತ್ತದೆ. ಇದಕ್ಕೆ ಕಾರಣ ಕಲೆಗಿಂತಲೂ ಕಲಾವಿದರನ್ನು ಅಭಿಮಾನಿಸುವ ಉತ್ಕಟ ಅಭಿಮಾನಿಗಳು
ಮತ್ತವರ ಅಭಿಮಾನದ ಪ್ರಕಟನೆ. ಕ್ಷಣವೊಂದರ ಮೋಜಿಗೆ
ಎಲ್ಲವೂ ಬಲಿಯಾಗಿ ಪೂರ್ಣ ವ್ಯವಸ್ಥೆಯನ್ನೇ ಅಣಕಿಸಿದಂತಾಗುತ್ತದೆ. ಮನುಷ್ಯನ ಸಹಜ ಸ್ಥಿತಿ ಎಂದರೆ ಅದು ನಶೆಯೊಳಗಿನ
ಲೋಕವಾದರೆ, ಆವಾಗ ಬಂದು ಬಳಗ ಸ್ನೇಹಿತರು ಹಿತೈಷಿಗಳು ಹೀಗೆ ಪರಿಸರವೇ ಅಸಹಜವಾಗಿಬಿಡುತ್ತದೆ. ಜೀವನ ಎಂಬುದು ಪ್ರಕೃತಿಗೆ ವಿರುದ್ದವಾದ
ಜೀವನವಾಗುತ್ತದೆ.
ಪ್ರೀತಿ ಪಾತ್ರರು ಅಭಿಮಾನವೆತ್ತವರ ಬದುಕು
ದುರಂತಮಯವಾದಾಗ ಪ್ರತಿಯೊಬ್ಬರ ಮನಸ್ಸು ಪರಿತಪಿಸುತ್ತದೆ. ಅದು ಪ್ರಾಮಾಣಿಕ ಮನಸ್ಸಿನ ಭಾವನೆ.
ಭಾವನೆ ಪ್ರಾಮಾಣಿಕವಾದಾಗ ನಮ್ಮ ಕ್ರಿಯೆಯೂ ಪ್ರಾಮಾಣಿಕವಾಗಿರಬೇಡವೇ? ಭಾವನೆಗೆ ವಿರುದ್ದವಾದ
ಕ್ರಿಯೆ ಎಂದರೆ ದುರಂತದ ಅರಿವಿದ್ದರೂ ಆದುರಂತದೆಡೆಗೆ ತಳ್ಳುವ ಕ್ರಿಯೆ ನಮ್ಮದಾದರೆ, ನಮ್ಮ
ಭಾವನೆಯನ್ನು ನಾವೇ ಅಣಕಿಸಿದಂತೆ. ಅದಕ್ಕೆ ನಾವೇ ಅಪ್ರಾಮಾಣಿಕರಾದಂತೆ. ಹೀಗಿರುವಾಗ ಮಿಡಿಯುವ
ಕಂಬನಿಗೆ ಅರ್ಪಿಸುವ ಶ್ರದ್ಧಾಂಜಲಿಗೆ ಅರ್ಥವಾದರೂ ಏನು? ಕಾಯಾ ವಾಚಾ ಮನಸಾ ಪ್ರಾಮಾಣಿಕರಾದಾಗ ಕಳೆದು ಅನುಭವಗಳು
ಪಾಠವಾಗಿ ಎಚ್ಚರಿಸುತ್ತವೆ. ಆವಾಗ ಭಾಷ್ಪಾಂಜಲಿ ಸ್ಪಟಿಕದಂತೆ ತನ್ನೊಳಗೆ ಕೇವಲ ಭಾವನೆಯನ್ನಷ್ಟೆ
ಉಳಿಸಿಕೊಳ್ಳುತ್ತದೆ. ಇಲ್ಲವಾದರೆ ನಾವು ಸುರಿಸುವ ಭಾಷ್ಪಾಂಜಲಿ ಬಣ್ಣಗೆಟ್ಟು ಕಲುಷಿತವಾಗಿ ಅದು
ತೋರಿಕೆಯ ವಂಚನೆಯಾದೀತೆ ಹೊರತು ಶ್ರದ್ಧಾಂಜಲಿಯಾಗದು. ಹಾಗಾಗಿ ಕಳೆದು ಹೋದದ್ದು ನಮ್ಮ ಅಸಹಾಯಕತೆ
ಎಂದು ಸಾಂತ್ವನಿಸುತ್ತಾ ಮುಂದೆಯಾದರೂ ನಮ್ಮ ಪ್ರಚೋದನೆಗಳು ಅಭಿಮಾನದ ಕುರುಡು ನೋಟವಾಗದಿರಲಿ ಎಂದು
ಹಾರೈಸುವ.
ಈ ಲೇಖನ ಈ ಅನಿಸಿಕೆಗಳು ಕೇವಲ ನನ್ನ ವೈಯಕ್ತಿಕ.
ಯಾರನ್ನೂ ನೋಯಿಸಲು ಬಯಸದ ವಿಷಾದನೀಯ ಮಾತುಗಳು.
ಯಾವುದೇ ಬ್ಲಾಗಿನಿಂದ ಎರವಲು ಅಥವಾ ಕದ್ದು ಬರೆದು ನನ್ನ ಯೋಗ್ಯತೆಯನ್ನು ಹೆಚ್ಚಿಸಿ ಹೆಸರು ಗಳಿಸುವ
ಆ ಯೋಗ್ಯತೆಯ ಅವಶ್ಯಕತೆ ಇಲ್ಲಿರುವುದೇ ಇಲ್ಲ. ಉಲ್ಲೇಖಿಸುವ ಪ್ರತಿಯೋಂದು ಅನಿಸಿಕೆಗಳೂ ನನಗಷ್ಟೇ
ಸೀಮಿತ. ಎಲ್ಲರ ಭಾವನೆ ಇದೇ ಆಗಿರಬೇಕೆಂದೇನು ಇಲ್ಲವಲ್ಲ. ಇವುಗಳನ್ನು ಓದುವಂತೆ ಬಲವಂತವಾಗಿ
ಹೇರುವ ಮನೋಭಾವ ಇಲ್ಲಿಲ್ಲ. ಆಸಕ್ತಿ ಇಲ್ಲದ ಅವಲೋಕನ ವ್ಯರ್ಥವೆಂದೇ ನನ್ನ ಭಾವನೆ.
No comments:
Post a Comment