ಮಾರ್ನೆಮಿ ವೇಷವೂ ಯಕ್ಷಗಾನವೂ..
ಮಾರ್ನೆಮಿ(ಮಹಾನವಮಿ)ಗೆ ಯಕ್ಷಗಾನದ ವೇಷಹಾಕಿದವನ ವೇಷ ಕಳಚಿದ ವಿಷಯ ಓದಿ ಒಂದಷ್ಟು ಅನಿಸಿಕೆಗಳು ಬೇಡವೆಂದರೂ ನುಸುಳಿಬಿಟ್ಟಿತು. ವ್ಯಾಧಿಗೆ ಬರೇ ಲೇಪನ ಮಾತ್ರ ಸಾಧ್ಯವಿಲ್ಲ. ಆಂತರಿಕ ಚಿಕಿತ್ಸೆ ಅನಿವಾರ್ಯತೆ ಇದೆ. ಆದರೆ ಅದನ್ನು ಅರ್ಥವಿಸುವ ಮನೋಭಾವ ಎಂದೋ ನಶಿಸಿ ಹೋಗಿದೆ. ಈಗ ಕೇವಲ ಹೊರಾವರಣವನ್ನು ಸ್ವಚ್ಛಗೊಳಿಸುವುದನ್ನು ಮಾಡಿ ಒಂದಷ್ಟು ಬದ್ದತೆಯನ್ನು ತೋರಿಸುವುದಷ್ಟೇ ಕಾಣುತ್ತದೆ.
ಊರಿಗೆ ನವರಾತ್ರಿ ಸಮಯದಲ್ಲಿ ಹೋಗುವಾಗಲೆಲ್ಲ ಕಣ್ಣಿಗೆ ಮೊದಲು ಬೀಳುವುದು ಬಗೆ ಬಗೆಯ ವೇಷಗಳು. ಬಾಲ್ಯದಲ್ಲಿ ಹೀಗೆ ವೇಷಗಳು ಮನೆ ಮನೆಗೆ ಬರುವಾಗ ಖುಷಿಯಾಗುತ್ತಿತ್ತು. ಎಲ್ಲ ಮನೆಗೆ ಬಂದು ನಮ್ಮ ಮನೆಗೆ ಬಾರದೇ ಇದ್ದರೆ ಯಾಕೋ ನಮಗೆ ಏನೋ ಕಳೆದುಕೊಂಡ ಅನುಭವವಾಗುತ್ತಿತ್ತು. ಹಲವು ಸಲ ನಾವು ಬಡವರಾಗಿದ್ದುದರಿಂದಲೋ ಏನೋ, ಮನೆಗೆ ಬಂದರೂ ನಾವು ಸಾಕಷ್ಟು ಕೊಡಲಾಗದವರು ಎಂಬ ಭಾವನೆಯಿಂದಲೋ ಏನೋ ಗೊತ್ತಿಲ್ಲ, ವೇಷಗಳು ಹಾಗಿಂದ ಹಾಗೇ ಹೋಗುತ್ತಿದ್ದವು. ಆದರೆ ಮೊನ್ನೆ ನವರಾತ್ರಿಗೆ ಊರಿಗೆ ಹೋದಾಗ ಈ ವೇಷಗಳನ್ನು ಕಂಡಾಗ ಅವರು ಮನೆ ಮನೆಗೆ ಹೋಗಿ ಕುಣಿಯುವುದನ್ನು ಕಾಣುವಾಗ ಇದೊಂದು ಅನಿಷ್ಟ ಅಂತ ಭಾವನೆ ಬಂದು ಬಿಟ್ಟಿತು. ಅದರಲ್ಲಿ ಹುಲಿ ಕರಡಿ ವೇಷಗಳು ಒಂದು ಜಾನಪದೀಯ ಗಂಭೀರತೆ, ಮತ್ತು ಸಾಕಷ್ಟು ಪರಿಶ್ರಮ ಅಭ್ಯಾಸಗಳಿಂದ ಕೂಡಿ ಒಂದು ಸಾಂಸ್ಕೃತಿಕ ಪ್ರತಿನಿಧಿತ್ವ ತೊರಿಸಿದರೆ ಮಿಕ್ಕುಳಿದಂತೆ ವೇಷಗಳನ್ನು ಕಾಣುವಾಗ ಇದೊಂದು ಅನಿಷ್ಟ ಸಂಪ್ರದಾಯದಂತೆ ಭಾಸವಾಯಿತು. ಮೊದಲೆಲ್ಲ ಇದಕ್ಕಾಗಿ ಹರಕೆ ಹೊತ್ತು ಒಂಭತ್ತು ದಿನ ವೇಷ ಹಾಕಿ ಸುತ್ತಾಡಿ ಭಿಕ್ಷಾಟನೆ ಮಾಡಿ ತಂದ ಭಿಕ್ಷೆಯನ್ನು ಊರ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಒಪ್ಪಿಸಿ ವೇಷಕಳಚಿ ಮಾಡಿದ ಪಾಪವನ್ನು ಕಳಚಿದಂತೆ ಪರಿಶುದ್ದರಾಗುತ್ತಿದ್ದರು. ಆ ಭಾವನೆ ಒಂದು ಪಾವಿತ್ರ್ಯತೆಯನ್ನು ತೋರಿಸಿದರೆ ಇಂದು ಇದು ಒಂದು ರೀತಿಯ ದಂಧೆಯೋ ಇನ್ನೇನೋ ಆಗಿ ಹೋಗಿದೆ. ಸುಡುವ ಬಿಸಿಲಿಗೆ ಆ ವೇಷಗಳನ್ನು ತೊಟ್ಟು ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡುವುದು ನಿಜಕ್ಕೂ ಅಸಹ್ಯವನ್ನು ಹುಟ್ಟಿಸುತ್ತದೆ. ಮೊದಲು ಹರಕೆ ರೂಪದಲ್ಲಿ ಮೊದಲು ಹರಕೆ ರೂಪದಲ್ಲಿ ಕಪ್ಪು ಮಸಿಯನ್ನು ಬಳಿದು ಒಂದು ಜಾತಿ ಸೂಚಕದ ವೇಷವನ್ನು ತೊಟ್ಟು ತಿರುಗುವವರನ್ನು ಕಂಡಿದ್ದೆ. ರಾತ್ರಿ ಇವುಗಳನ್ನು ಕಂಡು ಭಯಭೀತರಾಗುತ್ತಿದ್ದೆವು. ಆನಂತರ ಸರಕಾರ ಅದನ್ನು ಸೂಕ್ತವಾಗಿ ನಿಷೇಧಿಸಿತ್ತು. ನನ್ನ ಅಭಿಪ್ರಾಯದಲ್ಲಿ ಉಳಿದವುಗಳನ್ನೂ (ಹುಲಿವೇಷವನ್ನು ಹೊರತುಪಡಿಸಿ) ನಿಷೇಧಿಸಿಬಿಡಬೇಕು. ಅದರಲ್ಲೂ ಆರಾಧಿಸುವ ದೇವರ ವೇಷಗಳನ್ನು ರಾಮ ಈಶ್ವರ ಹನುಮಂತ ಹೀಗೆ ಹಾಕುವುದು ಮಾತ್ರವಲ್ಲ ಮದ್ಯಸೇವಿಸಿ ನಶೆಯಲ್ಲಿ ಅಸಭ್ಯತನವನ್ನು ಪ್ರದರ್ಶಿಸಿ ಎಲ್ಲೋ ಕುಡಿದು ಓಲಾಡುವುದನ್ನು ಕಾಣುವಾಗ ಇವೆಲ್ಲ ಒಂದು ಕೆಟ್ಟ ಸಂಸ್ಕೃತಿಯನ್ನು ತೋರಿಸಿದಂತೆ ಭಾಸವಾಗುತ್ತದೆ. ಈ ಶುದ್ದಿಕರಣ ಕೇವಲ ಯಕ್ಷಗಾನಕ್ಕೆ ಸಂಭಂಧಿಸಿ ಸೀಮಿತಗೊಂಡರೆ ಸಾಲದು. ಕರಾವಳಿಯ ಸಂಸ್ಕೃತಿಗೆ ರೋಗಬಾಧೆಯಂತಿರುವ ಇವುಗಳು ಸಂಪೂರ್ಣ ನಿಷೇಧಕ್ಕೆ ಒಳಗಾಗಬೇಕು. ಮೊದಲು ಅದಕ್ಕೊಂದು ದೈವೀ ಭಾವನೆ ಹರಕೆಯ ರೂಪವಿತ್ತು. ಈಗ ಅದು ಇದೆ ಎಂದು ಅನಿಸುವುದಿಲ್ಲ. ಹಲವು ಕಡೆ ಇದು ಇನ್ನಿಲ್ಲದ ಅವಾಂತರಗಳಿಗೆ ಅಹಿತಕರ ಕೃತ್ಯಗಳಿಗೆ ಪ್ರಚೋದನೆ ಕೊಡುತ್ತದೆ.
ನವರಾತ್ರಿ ವೇಷಗಳು ಆರಾಧನೆಯ ರೂಪದಲ್ಲಿರಬೇಕು. ಅದಕ್ಕಾಗಿ ಅದು ಇನಷ್ಟು ಸಾಂಕೇತಿಕವಾಗಿ ಆಚರಿಸುವಂತಾದರೆ ಒಂದು ಶುದ್ದ ಸಂಸ್ಕೃತಿಯ ರಕ್ಷಣೆಯಾಗುತ್ತದೆ. ಸಾಂಕೇತಿಕವಾಗಿ ವೇಷತೊಟ್ಟು ಅಲ್ಲಿ ಇಲ್ಲಿ ಅಂಡಲೆಯದೆ ನೇರ ದೇವಸ್ಥಾನಕ್ಕೆ ಹೋಗಿ ಹರಕೆ ಸಲ್ಲಿಸಿ ಶುಭ್ರರಾದರೆ ಅದು ದಿವ್ಯ ಅನುಭವದ ಜತೆಗೆ ಒಂದು ಸಭ್ಯತೆಯನ್ನೂ ಶಿಸ್ತನ್ನೂ ಕಾಪಾಡಿದಂತಾಗುತ್ತದೆ.
ಈಗೀಗ ಸಾಮಾನ್ಯವಾಗಿ ಯಕ್ಷಗಾನದವೇಷಗಳನ್ನು ತೊಟ್ಟು ಓಡಾಡುವುದು ಯಥೇಚ್ಛವಾಗಿ ಕಣ್ಣಿಗೆ ಬೀಳುತ್ತದೆ. ಇನ್ನು ಕಂಠ ಮಟ್ಟ ಕುಡಿದು ಸಿಕ್ಕ ಸಿಕ್ಕ ಹಾಗೆ ವೇಷವನ್ನು ತೊಟ್ಟು ತಿರುಗಾಡಿ ಎಲ್ಲೆಂದರಲ್ಲಿ ಬೀಳುವುದು ಜನರಿಗೆ ಅಂಗಲಾಚಿ ತೊಂದರೆಯನ್ನು ಕೊಡುವಾಗ ಅಸಹ್ಯ ಭಾವನೆಯನ್ನು ಹುಟ್ಟು ಹಾಕುತ್ತದೆ. ಯಕ್ಷಗಾನ ಅದಕ್ಕೋಂದು ಮೌಲ್ಯವಿದೆ ಅದು ಯಕ್ಷಗಾನದ ವಲಯದಲ್ಲೇ ಕಳೆದು ಹೋಗುವುದು ನಿಜಕ್ಕೂ ಅಸಹನೀಯ. ಯಕ್ಷಗಾನದ ಬಗ್ಗೆ ಹೇಳುವಾಗ ಇನ್ನೂ ಒಂದೆರಡು ಅನಿಸಿಕೆಗಳು ಮತ್ತಷ್ಟೂ ಹೇಳಬೇಕೆನಿಸುತ್ತದೆ. ಮುಖ್ಯವಾಗಿ ಬೀದಿಯಲ್ಲಿ ಯಾರೋ ಒಬ್ಬನ ವೇಷ ಕಳಚಿ ಔಷಧಿ ಹಚ್ಚಿದರೆ ಯಾವ ಕ್ರಾಂತಿಯೂ ಸಾಧ್ಯವಾಗುವುದಿಲ್ಲ. ಯಾಕೆಂದರೆ ರಂಗಸ್ಥಳದಲ್ಲೇ ಯಕ್ಷಗಾನ ಮೌಲ್ಯಗಳು ಕಳೆದು ಇನ್ನೇನು ಕಳೆಯುವುದಕ್ಕೆ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ ಇಂದು ಯಕ್ಷಗಾನವಿದೆ. ಯಕ್ಷಗಾನ ಮುಖ್ಯವಾಗಿ ಆಂತರಿಕ ವ್ಯಾಧಿಯಿಂದ ತತ್ತರಿಸುತ್ತದೆ. ಇನ್ನು ಇವುಗಳೆಲ್ಲ ಹೊರಗಿಂದ ಹಚ್ಚುವ ಮುಲಾಮು ಆದೀತೇ ಹೊರತು ಒಳಗೆ ಬ್ರಹತ್ತಾಗಿ ಬೆಳೆದ ವೃಣ ವಾಸಿಯಾಗುವುದಕ್ಕೆ ಸಾಧ್ಯವಿಲ್ಲ. ಮೊದಲು ರಂಗಸ್ಥಳದಲ್ಲಿ ಆಗುವ ಆಭಾಸಗಳನ್ನು ನಿಲ್ಲಿಸಬೇಕು. ರಂಗಸ್ಥಳದ ಅಸಹ್ಯ ವೇಷಗಳನ್ನು ಕಳಚುವ ಮಹತ್ಕಾರ್ಯವನ್ನು ಮಾಡಬೇಕು. ವಿಪರ್ಯಾಸವೆಂದರೆ ಅದಕ್ಕೆ ಯಾವ ಕಲಾವಿದರೂ ಧ್ವನಿ ಎತ್ತುವುದಿಲ್ಲ. ಹೀಗೆ ರಸ್ತೆಯ ಬದಿಯ ಬಡಪಾಯಿ ಮೇಲೆ ಧಾಳಿ ಮಾಡಿ ಒಂದಷ್ಟು ಹೆಸರನ್ನು ಗಳಿಸಬಹುದು. ಅದರಿಂದ ಯಕ್ಷಗಾನಕ್ಕೆ ಕಳೆದು ಹೋದ ಗೌರವ ಲಭ್ಯವಾಗುವುದಕ್ಕೆ ಸಾಧ್ಯವಿಲ್ಲ. ಮುಖ್ಯವಾಗಿ ಹೀಗೆ ಯಕ್ಷಗಾನದ ವೇಷ ಹಾದಿ ಬೀದಿಯಲ್ಲಿ ಓಡಾ(ಲಾ)ಡುತ್ತಿರುವುದಕ್ಕೆ ಮೂಲತಃ ಯಕ್ಷಗಾನದ ಕಲಾವಿದರೂ ಇಲ್ಲ ಅದಕ್ಕೆ ಸಂಭಂಧಿಸಿದವರೇ ಕಾರಣರಾಗಿರುತ್ತಾರೆ. ಯಕ್ಷಗಾನದ ಗಾಂಭೀರ್ಯತೆಯನ್ನು ಗೌರವವನ್ನು ಸ್ವತಃ ಯಕ್ಷಗಾನ ಕಲಾವಿದರೆ ಮಾರಾಟಕ್ಕೆ ಇಟ್ಟರೆ ಅದರ ಬಗ್ಗೆ ಉಳಿದವರಿಗೆ ಭಯ ಭಕ್ತಿ ಗೌರವ ಹೇಗೆ ಪ್ರಚೋದನೆ ಗೊಳ್ಳಬಹುದು? ರಂಗದಲ್ಲಿ ಕಲಾವಿದರು ಕಳೆದು ಬೀಸಾಕಿದ್ದನ್ನು ಈವರು ಬೀದಿಯಲ್ಲಿ ತೊಟ್ಟು ಕಳೆಯುತ್ತಾರೆ. ನಿಜಕ್ಕಾದರೆ ಈಗ ಎರಡೂ ಕಡೆಯಲ್ಲಿ ಆಗುವುದು ಒಂದೇ.
ಯಕ್ಷಗಾನದ ಬಗ್ಗೆ ಒಂದಷ್ಟು ಕಾಳಜಿ ಇದ್ದರೆ ಈ ಶುದ್ದೀಕರಣ ಆಂತರಿಕವಾಗಿ ರಂಗಸ್ಥಳದಿಂದಲೇ ಆರಂಭವಾಗಲೀ ಪರಂಪರೆಯನ್ನು ನಾಶ ಮಾಡಿದವರಿಗೆ ಈ ಗಂಭೀರತೆ ಅರಿವಾಗುವುದಕ್ಕೆ ಸಾಧ್ಯವಿಲ್ಲ. ಹಿಮ್ಮೇಳ ಮುಮ್ಮೇಳ ವನ್ನು ಕುಲಗೆಡಿಸಿ ಸಮಗ್ರ ಯಕ್ಷಗಾನವೇ ವೇಷ ಬದಲಿಸಿ ವಿರೂಪವಾಗಿ ಹೋಗಿದೆ. ಮೊದಲು ಹೊರಗಿನ ಗಾಯಾಕ್ಕೆ ಔಷಧಿ ಹಚ್ಚುವ ಬದಲು ಒಳಗಿನ ವ್ಯಾಧಿಗೆ ಚಿಕಿತ್ಸೆಯಾಗಬೇಕು. ಯಕ್ಷಗಾನಕ್ಕೆ ಭಕ್ತಿ ಗೌರವ ಸಲ್ಲಿಸುವಂತೆ ಯಕ್ಷಗಾನರಂಗವೇ ಬದ್ದತೆಯನ್ನು ತೋರಿಸಬೇಕು. ಇಲ್ಲವಾದರೇ ಹೀಗೆ ಯಕ್ಷಗಾನದ ಘನತೆ ಬೀದಿಯಲ್ಲಿ ಚಿಲ್ಲರೆ ದುಡ್ಡಿಗೆ ಮಾರಾಟವಾಗಿಬಿಡುತ್ತದೆ.
ಈ ಲೇಖನ ಪೋಟೋ ಹಾಕಬೇಕೆಂದು ಯೋಚಿಸಿದ್ದೆ ಆದರೆ ತೆಗೆದ ಫೋಟೋಗಳು ಅಸಹ್ಯ ವೆನಿಸಿ ಅದನ್ನು ಹಾಕುವ ಯೋಗ್ಯತೆಯನ್ನು ಕಳೆದುಕೊಂಡು ಬಿಟ್ಟಿದೆ ಅನ್ನಿಸಿತ್ತು.
No comments:
Post a Comment