ಬಲಿಪ್ಪರ ಬಗ್ಗೆ ಹೇಳುವುದಕ್ಕೆ ನಾವುಗಳು ಎಷ್ಟು ಅರ್ಹರೋ ಎಂದು ಪ್ರತಿ ಸಲವೂ ಅನಿಸುತ್ತದೆ. ಆದರೆ ಅವರ ಮೇಲಿಟ್ಟ ಅಭಿಮಾನ ಹಕ್ಕು ಸ್ಥಾಪಿಸಿಬಿಡುತ್ತದೆ. ಹಲವು ನೆನಪುಗಳನ್ನು ಕಟ್ಟಿಕೊಟ್ಟ ಮಹಾವ್ಯಕ್ತಿತ್ವ. ಎಂಭತ್ತು ವರ್ಷವಾದರೂ ಅವರು ಮಗುವಿನಂತೆ ಜಗತ್ತನ್ನು ದಿಗ್ಭ್ರಮೆಯಿಂದ ನೋಡುತ್ತಿದ್ದರು. ನಮ್ಮ ಮನೆಗೆ ಬಂದಿದ್ದರು. ಆಗ ಸಣ್ಣ ಮಕ್ಕಳಂತೆ ಡಿಸ್ಕವರ್ ಚಾನಲ್ ಹಾಕಿಸಿ ನೋಡುತ್ತಿದ್ದರು. ಕಾರ್ಟೂನು ಕೂಡ ನೋಡುತ್ತಿದ್ದರು. ಜತೆಗೆ ಆಗ ಪುಟ್ಟಮಕ್ಕಳಾಗಿದ್ದ ನನ್ನ ತಮ್ಮನ ಮಕ್ಕಳು ಇರುತ್ತಿದ್ದರು. ಅವರಲ್ಲಿ ಅವರು ಮಾತನಾಡುವುದನ್ನು ಕೇಳಬೇಕು. ಗೊಗ್ಗರು ಧ್ವನಿಯಲ್ಲಿ, ಅದು ಯಾಕೆ ಹಾಗೆ ಇದು ಯಾಕೆ ಹೀಗೆ ....ಮಕ್ಕಳೂ ನಗುತ್ತಾ ಅವರೊಂದಿಗೆ ಬೆರೆತದ್ದು ಛೇ ವಯೋ ವೃದ್ಧ ಹೀಗೆಯೂ ಬೆರೆಯಬಹುದೇ. ವೃದ್ದರಾಗುವಾಗ ಒಂದು ಅಹಂಭಾವ ಇರುತ್ತದೆ. ಯಾಕೆಂದರೆ ನಾನೇ ಅದಕ್ಕೆ ಸಾಕ್ಷಿ. ಅದರೆ ಅದೊಂದು ಇಲ್ಲದ ವ್ಯಕ್ತಿತ್ವ.
ಯೋಗಾಭ್ಯಾಸದಲ್ಲಿ ಒಂದು ವಿಷಯ ತಿಳಿದು ಬರುತ್ತದೆ. ಯೋಗಿಯಾದವನು ಯಾರನ್ನೂ ವಿರೋಧಿಸುವುದಿಲ್ಲ. ಮಾತ್ರವಲ್ಲ ಯೋಗಿನ್ನು ಕಂಡರೆ ಯಾರೂ ಭಯ ಪಡುವುದೂ ಇಲ್ಲ. ಬಲಿಪ್ಪರು ಈ ವರ್ಗಕ್ಕೆ ಸೇರಿದವರು. ಹಾಗಾಗಿಯೇ ಅವರು ಅಷ್ಟು ಮುಗ್ಧರಾಗಿ ಸಾಧುವಾಗಿ ಬದುಕುವುದಕ್ಕೆ ಸಾಧ್ಯವಾಯಿತು.
ನಮ್ಮ ಮನೆಗೆ ಬಂದವರಿಗೆ ಒಂದು ಕೋಟು ಚಳಿಗೆ ಧರಿಸುವುದಕ್ಕೆ ಕೊಳ್ಳುವ ಮನಸ್ಸಾಯಿತು. ಸರಿ ನಾನು ಕಾರಿನಲ್ಲಿ ಮಲ್ಲೇಶ್ವರಂ ಕರೆದುಕೊಂಡು ಹೋದೆ. ಒಂದು ಖಾದೀ ಭವನದ ಅಂಗಡಿಯಲ್ಲಿ ಅವರೇ ಹೋಗಿ ಖರೀದಿಸಿದರು. ಅದನ್ನು ಆನಂತರ ಪ್ರತೀ ಕಾರ್ಯಕ್ರಮಗಳಲ್ಲಿ ಹೊರಗೆ ಹೋದಾಗ ಧರಿಸುವುದನ್ನು ಕಂಡಿರಬಹುದು. ಅದು ನನ್ನೆದುರೇ ಖರೀದಿಸಿದ ಕೋಟು. ಹಾಗೆ ಖರೀದಿಸಿ ಹೊರಬರುವಾಗ ನನಗೂ ಏನಾದರೂ ಬೇಕಾ ಎಂದು ಕೇಳಿದ್ದರು. ....ಹಾಗೆ ಬರಬೇಕಾದರೆ ಚೆಡ್ವಾಂಕ ಕೆಶೆಲ್ಲಿ ಕಂಕಣ್ಣುನ್ನ. ಕರಾಡಭಾಷೆಯಲ್ಲೇ ನಾವು ಮಾತನಾಡುತ್ತಿದ್ದದ್ದು. ಮಕ್ಕಳಿಗೆ ಏನಾದರು ತೆಗೆದುಕೊಳ್ಳಬೇಕು. ಹೌದು ಅವರ ಮನೆ ಎಂದರೆ ಸಣ್ಣ ಶಾಲೆ ಇದ್ದ ಹಾಗೆ ಮೊಮ್ಮಕ್ಕಳು. ಸರಿ ಒಂದು ಬೇಕರಿ ಎದುರು ಕಾರ್ ನಿಲ್ಲಿಸಿದೆ ಅವರ ಮಗನೂ ಇದ್ದರು. ಬಹುಶಃ ಶಶಿ ಆಗಿರಬೇಕು. ಒಂದು ದೊಡ್ಡ ತೊಟ್ಟೆ...ಐದು ಕಿಲೋ ಅಕ್ಕಿ ಹಿಡಿಯುವಂತಹ ದೊಡ್ಡ ತೊಟ್ಟೆ ಅದರಲ್ಲಿ ತುಂಬ ಬಿಸ್ಕತ್ತು ಸಿಹಿತಿಂಡಿ ಏನೇನೋ...ಅವರ ಮೊಮ್ಮಕ್ಕಳಿಗೆ ಹೀಗೊಂದು ಅಜ್ಜ ಸಿಕ್ಕಿದ್ದಾರಲ್ಲ ಎಂಬ ಭಾವನೆ. ಸರಿ ಮನೆಯಲ್ಲಿ ರಾತ್ರಿ ಊಟ ಮಾಡಿ ಅವರು ಹೊರಡುವಾಗ ಕೊಂಡು ತಂದ ಅಷ್ಟೂ ತಿಂಡಿಯ ತೊಟ್ಟೆ ನಮ್ಮ ಪುಟ್ಟ ಮಕಳ ಕೈಯಲ್ಲಿಟ್ಟು ನಿನಗೆ ಆಯ್ತಾ ಎಂದು ಹೇಳುವಾಗ ದಿಗ್ಭ್ರಮೆ ಗೊಂಡವನು ನಾನು. ಅದೇ ಮಗಳು ಈಗ ಕಾಲೇಜು ಹುಡುಗಿ. ಮೊನ್ನೆ ಬಲಿಪ್ಪರು ಅಗಲಿದಾಗ ನಾನು ಉತ್ತರ ಭಾರತ ಪ್ರವಾಸದಲ್ಲಿ ಅಲಹಾಬಾದ್ನ ಪ್ರಯಾಗದಲ್ಲಿದ್ದೆ. ಆದಿನ ರಾತ್ರಿ ಫೇಸ್ ಬುಕ್ ಅಲ್ಲ ಟಿವಿಯಲ್ಲಿ ಬಲಿಪ್ಪರ ನಿಧನದ ಸುದ್ದಿ ನೋಡಿ ಮುಂಜಾನೆ ಐದು ಘಂಟೆ ಮಗಳು ಫೋನ್ ಮಾಡಿದ್ದಳು. ದೊಡ್ಡಪ್ಪಾ ನಿಮಗೆ ತುಂಬ ನೋವಾಗಿರಬೇಕಲ್ಲ. ನನಗೆ ಕಣ್ಣೀರು ಬರ್ತ ಉಂಟು. ನಾನು ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ. ಎಲ್ಲಿಯ ನಮ್ಮ ಹೆಣ್ಣುಮಗಳು? ಎಲ್ಲಿಯ ಬಲಿಪ್ಪಜ್ಜ? ಮರುದಿನ ವಾರಣಾಶಿ ತಲುಪಿದ್ದೆ. ಇಲ್ಲಿಂದ ಕಾಶಿ ಯಾತ್ರೆ ಹೊರಡುವಾಗ ನಮಗೆ ಶ್ರೀಂಗೇರಿ ಜಗದ್ಗುರುಗಳು ಒಂದು ಆಶೀರ್ವಚನ ಸಂದೇಶ ಕಳುಹಿಸಿದ್ದರು. ಪಿತೃಗಳಿಗೆ ತರ್ಪಣ ಬಿಡಲು ಅಸಾಧ್ಯವಾಗಿದ್ದವರು, ಗಂಗೆಯಲ್ಲಿ ಮುಳುಗಿ ಮೂರು ಸಲ ಅವರನ್ನು ಸ್ಮರಿಸಿ ತರ್ಪಣ ಬಿಡಿ. ಅದು ಧಾರಾಳವಾಗಿ ಸಾಕಾಗುತ್ತದೆ. ಪಿತೃ ಆತ್ಮಕ್ಕೆ ಶಾಂತಿ ಲಭ್ಯವಾಗುತ್ತದೆ. ನಾನು ನನ್ನ ಅಪ್ಪನಿಗೆ ತರ್ಪಣ ಬಿಟ್ಟು ನಂತರ ಬಲಿಪ್ಪರನ್ನು ಸ್ಮರಿಸಿ ಅವರಿಗೂ ತರ್ಪಣ ಬಿಟ್ಟು ಬಿಟ್ಟೆ.
ನಾವು ನಮ್ಮ ಬಗ್ಗೆ ಹಲವು ದೂರುಗಳನ್ನು ನಿಂದನೆಯನ್ನು ಕೇಳಿರಬಹುದು. ಅಥವಾ ಇನ್ನೇಲ್ಲೋ ಯಾರೋ ನಮ್ಮ ಬಗ್ಗೆ ನಿಂದನೆ ಹೇಳಿರಬಹುದು. ಬೈದಿರಬಹುದು. ಆದರೆ ಯಾರಾದರೂ ಬಲಿಪ್ಪರ ಬಗ್ಗೆ ವೈಯಕ್ತಿಕವಾಗಿ ನಿಂದನೆಯ ಮಾತು ಹೇಳಿದ ಉದಾಹರಣೆ ಸಿಗಲಾರದು. ಇದೊಂದು ಸಂಗತಿ ಸಾಕು ಅವರ ವ್ಯಕ್ತಿತ್ವಕ್ಕೆ.
ಅವರ ಬಗ್ಗೆ ಹೇಳುವಾಗ ನಮ್ಮ ಬೆಂಗಳೂರಿನ ಸನ್ಮಾನ ಕಾರ್ಯಕ್ರಮ ನಮ್ಮ ಮಟ್ಟಿಗೆ ಅದು ದೊಡ್ಡದು ನಮ್ಮ ಎಲ್ಲ ಮಿತ್ರರಿಗೂ ಅದು ಗೊತ್ತಿದೆ. ಅವರ ಮೇಲಿನ ಗೌರವ ಅಭಿಮಾನಕ್ಕೆ ಅವರು ಸಹಿ ಹಾಕಿ ಅಂಗೀಕಾರ ಒತ್ತಿದ್ದರು. ಯಾಕೆಂದರೆ ನಾವು ಮರೆಯದಿರುವುದು ಬಿಡಿ, ಆದರೆ ಅವರೆಂದೂ ಮರೆಯಲಿಲ್ಲ, ಅದು ನಾನು ಅವರನ್ನು ಭೇಟಿಯಾಗುವಾಗಲೆಲ್ಲ ಅವರ ಕಣ್ಣು ಸಾರಿ ಹೇಳುತ್ತಿತ್ತು. ಒಂದು ಸಣ್ಣ ಸೇವೆಗೂ ಕೃತಜ್ಞತೆ ಸಲ್ಲಿಸುವ ದೊಡ್ಡ ಹೃದಯ ಅವರದು.
ಒಂದೆರಡು ಸಲ ಅವರ ಮನೆಗೆ ಹೋಗಿದ್ದೆ. ಅದು ಭಾಗವತರ ಮನೆ ಎಂದು ಅನಿಸಲಿಲ್ಲ. ನಮ್ಮ ಅತ್ಮೀಯ ಬಂಧುವೊಬ್ಬರ ಮನೆ ಅಂತ ಅನಿಸಿತ್ತು. ಪಾಯಸದ ಊಟ ಅಕ್ಕರೆಯಲ್ಲಿ ಹಾಕಿ, ಅವರ ಜತೆ ಕುಳಿತು ತಾಂಬೂಲ ಸವಿದ ನೆನಪು, ಹೋಗಲಿ ಹೊರಡುವಾಗ ಮನೆಯಲ್ಲೇ ಆದ ಎರಡು ಸೌತೆ ಮತ್ತೇನೋ ತರಕಾರಿ ತಂದು ಕೈಗೆ ಇತ್ತರು. ಅಲ್ಲಿ ಕ್ರಯ ಕೊಡ್ಬೇಡ್ವೋ ತೆಕ್ಕೊಂಡು ಹೋಗು.... ಆ ತರಕಾರಿ ತಿಂದು ಎಲ್ಲಿ ಹೋಯಿತೋ...ಆದರೆ ಆ ನೆನಪು ಇಂದಿಗೂ ತರಕಾರಿಯಂತೆ ಹಸಿರಾಗಿ ಇದೆ.
ಬಲಿಪ್ಪಜ್ಜ ಕುಳಿತಲ್ಲಿ ನಿಂತಲ್ಲಿ .....ಯಕ್ಷಗಾನದ ಜಪ ಮಾಡುವವರು. ಅವರಿದ್ದಲ್ಲಿ ಯಕ್ಷಗಾನದ ತನು ಗಂಧ ಹರಡದೇ ಇರುವುದಕ್ಕೆ ಸಾಧ್ಯವಿಲ್ಲ. ಅವರ ಅಸ್ತಿತ್ವದಲ್ಲಿ ಪರಂಪರೆಯ ಶಕ್ತಿ ಇದೆ. ಅವರ ಅಗಲಿಕೆ ಯಕ್ಷಗಾನದಲ್ಲಿ ಒಂದು ಶೂನ್ಯವನ್ನು ಸುತ್ತಿದೆ ಸತ್ಯ. ಇಂದು ಆ ಶೂನ್ಯತೆಯ ಅರಿವಿನ ಪ್ರಜ್ಞೆ ಉಂಟಾಗಿ ಜಾಗೃತವಾಗಬೇಕು. ಅದು ಅವರಿಗೆ ಸಲ್ಲಿಸುವ ದೊಡ್ಡ ಗೌರವ. ಅವರೂ ದೂರಾದರೂ....ನನಗೂ ಈಗ ಯಕ್ಷಗಾನಕ್ಕೆ ಹತ್ತಿರವಾಗುವುದಕ್ಕೆ ಯಾವ ಕಾರಣವೂ ಸಿಗುತ್ತಿಲ್ಲ. ಯಾಕೆ ಎಂದು ಕೇಳಿದರೆ ಅದಕ್ಕೆ ಉತ್ತರವಿಷ್ಟೆ....ಮನಸ್ಸು ಬಲಿಪ್ಪರನ್ನು ಮತ್ತಷ್ಟು ನೆನಪಿಸುತ್ತದೆ. ಆ ಶೂನ್ಯ ಅದು ಶೂನ್ಯವಾಗಿ ಮತ್ತಷ್ಟು ವ್ಯಾಪಿಸಿದ ಅನುಭವವಾಗುತ್ತದೆ.
No comments:
Post a Comment