ಒಂದು ಕಡೆಯಲ್ಲಿ ಯಕ್ಷಗಾನವಾಗುವಾಗ ಅಲ್ಲಿಗೆ ಊರಿನ ಹವ್ಯಾಸಿ ಕಲಾವಿದರನ್ನು ಜತೆಗೆ ವೇಷಭೂಷಣ ಎಲ್ಲವನ್ನೂ ಕಟ್ಟಿಕೊಂಡು ಬಂದವರಲ್ಲಿ ಆದಿನದ ಪ್ರಸಂಗದ ಬಗ್ಗೆ ಒಂದು ಅಭಿಪ್ರಾಯ ಹೇಳುವ ಸಂದರ್ಭ ಬಂತು. ಕಾರಣ ಆದಿನದ ಪ್ರಸಂಗ ಬೇಡರಕಣ್ಣಪ್ಪ. ಅವರ ಜತೆ ಆತ್ಮೀಯ ಸಲುಗೆ ಇತ್ತು. ಅವರಲ್ಲಿ ನಿಮಗೆ ಬೇರೆ ಪ್ರಸಂಗ ಸಿಗಲಿಲ್ಲವಾ ಎಂದು ಕೇಳಿದೆ. ಅವರು ನಗುತ್ತಾ ಹೇಳಿದರು ಇವರು ಕೊಡುವ ಎರಡು ಸಾವಿರಕ್ಕೆ ನಾನು ತಡ್ಪೆ (ಗೆರಸೆ) ಕಿರೀಟ ತರುವುದಕ್ಕೆ ಸಾಧ್ಯವಾ ಮಾರಾಯ? ಅವರು ಹೇಳಿರುವುದು ವಾಸ್ತವ. ಕಡಿಮೆ ಖರ್ಚಿನಲ್ಲಿ ಅಂತ ಆಗುವಾಗ ಎಲ್ಲದರಲ್ಲೂ ಒಂದಷ್ಟು ಹೊಂದಾಣಿಕೆಯಾಗುತ್ತದೆ. ಯಕ್ಷಗಾನ ಆಗ ಕೇವಲ ಯಕ್ಷಗಾನವಾಗುವುದಿಲ್ಲ. ಅದು ಏನೆಲ್ಲವಾಗಿ ಬದಲಾಗಿ ಪರಿಸ್ಥಿತಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತದೆ. ಯಕ್ಷಗಾನ ಏನಿಲ್ಲದೆಯೂ ಆಗಿಬಿಡುತ್ತದೆ. ಇದು ಹಾಸ್ಯ ವಿಡಂಬನೆಗೆ ಹೇಳುವುದಾದರೂ ಯಕ್ಷಗಾನಕ್ಕೆ ಸಂಬಂಧಿಸಿ ಇದು ವಿಷಾದ ಭಾವನೆಯನ್ನು ತಳೆಯುವಂತೆ ಮಾಡುತ್ತದೆ.
ಯಕ್ಷಗಾನ ಅದೆಷ್ಟು ಮಧುರವಾದ ಶಬ್ಧ? ಹೆಸರಿನಲ್ಲೇ ಅದರ ಮಾರ್ದವತೆ ಅನುಭವಕ್ಕೆ ಬರುವ ರೀತಿ ಬಹುಶಃ ಯಾವ ಕಲೆಯ ಹೆಸರಲ್ಲಿಯೂ ಕಂಡುವರುವುದಿಲ್ಲ. ಆ ಮಾರ್ದವತೆಯ ಮಿಡಿತ ಅದರಲ್ಲಿ ಸೇರಿಕೊಂಡ ರೀತಿ ಅದರ ಸುಸಂಸ್ಕೃತ ಗುಣಗಳಿಂದ. ಈ ಗುಣಗಳು ನಮ್ಮ ಕಣ್ಣಳತೆಯ ಅವಧಿಯಲ್ಲಿ ಆಗಿ ಹೋದ ಆವಿಷ್ಕಾರ. ಈಗ ಅದು ನಮ್ಮ ಕಣ್ಣೆದುರಿಗೇ ಕುಸಿಯುತ್ತಿರುವ ಅನುಭವ. ಯಕ್ಷಗಾನವನ್ನು ಉಸಿರಾಗಿ ಕಂಡ ಹಿರಿಯರ ಅನಿಸಿಕೆ ಇದು. ಯಾಕೆಂದರೆ ಇದೆಲ್ಲದಕ್ಕೂ ಸಾಕ್ಷಿಯಾಗಿ ನಿಂತವರು. ಈಗ ಇದು ಬೇಡ ಎಂದು ದೂರ ಉಳಿದರೂ ಅದು ಯಾವುದೋ ರೂಪದಲ್ಲಿ ಮೈಮೇಲೆ ಬಿದ್ದಂತಾಗುತ್ತದೆ. ಕೊಡವಿಕೊಳ್ಳುವುದಕ್ಕೆ ಸಾಧ್ಯವಾಗದ ಅಸಹಾಯಕತೆ.
ಬಾಲ್ಯದಿಂದಲೇ ಕಲೆ ಎಂದರೆ ಅದು ಯಕ್ಷಗಾನ ಎಂಬಂತೆ ಸರ್ವವ್ಯಾಪಿಯಾಗಿ ಮನಸ್ಸಿನಲ್ಲಿ ಅಚ್ಚೊತ್ತಿರುವುದಕ್ಕೆ ಅದನ್ನು ಸರಳವಾಗಿ ಆಸ್ವಾದಿಸುವುದಕ್ಕೆ ಇದು ಅತಿ ಸೂಕ್ತವಾಗಿತ್ತು.ಕಠಿಣವಾದ ಜ್ಞಾನದ ಅರಿವಿನ ಅವಶ್ಯಕತೆ ಇಲ್ಲದ ಪಾಮರನೂ ಪಂಡಿತನೂ ಏಕರೀತಿಯಲ್ಲಿ ಅನುಭವಿಸ ಬಲ್ಲ ಗುಣ ಆ ಸೆಳೆತ ಅತಿಶಯವೇನೂ ಅಲ್ಲ. ಆದರೆ ಅದೇ ವ್ಯಾಪಕತೆ ಅದಕ್ಕೆ ಈಗ ಮುಳುವಾಗಿ ಪರಿಣಮಿಸಿದೆ. ಯಕ್ಷಗಾನದ flexibility ಅದಕ್ಕೆ ಏನೂ ಸೇರಿಸಬಲ್ಲ ಆವಿಷ್ಕಾರವನ್ನು ತಂದಿದೆ.
ನನಗೆ ಯಕ್ಷಗಾನದ ಸರಳತೆ ಅರ್ಥವಿಸಿದ ಒಂದು ಬಗೆಯಾದರೆ ಅದರಲ್ಲಿನ ವಿಷಯ ಮೌಲ್ಯ ಅರಿವಾದ ನಂತರ ಅದು ಹವ್ಯಾಸವಾಯಿತು. ಬರಿದೇ ಓರ್ವ ಸಾಮಾನ್ಯ ಪ್ರೇಕ್ಷಕನಿಗೂ ತುಂಬಿ ಕೊಡಬಲ್ಲ ಜ್ಞಾನ ಸಂಪತ್ತು ಇಲ್ಲಿ ಸಿಗುವಾಗ ಇದು ಕೇವಲ ಕಲೆ ಹವ್ಯಾಸಕ್ಕೆ ಸೀಮಿತವಾಗಲಿಲ್ಲ. ಇದು ಅಧ್ಯಯನವಾಯಿತು.
ಈಗ ನಮ್ಮ ಅರಿವು ಹೆಚ್ಚಾಯಿತೋ ಇಲ್ಲ ಭ್ರಮಾಧೀನರಾದೆವೋ ಸಂದೇಹ ಪಡುವಂತಾಗಿದೆ. ಯಕ್ಷಗಾನದ ಮೌಲ್ಯ ಕುಸಿಯುವಾಗ ಇನ್ನು ಇದರಲ್ಲಿ ಏನು ಉಳಿದಿದೆ ಎಂಬ ನಿರಾಸಕ್ತಿಯಲ್ಲಿ ಭ್ರಮೆ ಕಳಚಿಬಿಡುತ್ತದೆ. ಕಲ್ಪವೃಕ್ಷದ ಟೊಂಗೆ ಕಳೆದು ಕೇವಲ ಕಂಬವಾದಂತೆ ಯಕ್ಷಗಾನ ನಿರ್ವಾಣವಾಗಿ ಇನ್ನು ಎನಿಲ್ಲ ಎಂಬ ಅಸಹಾಯಕತೆಯಲ್ಲಿ ಅಂಗಲಾಚುತ್ತದೆ. ಇನ್ನೂ ಏನಾದರೂ ಇದೆ ಎಂದು ಹೇಳಿದರೆ ಅದು ಕಸಿದು ತೇಗುವ ಮನೋಭಾವವಾಗುತ್ತದೆ. ಯಾಕೆಂದರೆ ಈಗಿನ ಮನೋವೃತ್ತಿ ಅದೇ ಬಗೆಯಲ್ಲಿದೆ.
ದಶಕಗಳ ಹಿಂದೆ ಅಂದರೆ ಬಾಲ್ಯದಲ್ಲಿ ಕಾಣುತ್ತಿದ್ದ ಯಕ್ಷಗಾನ ಕ್ರಮೇಣ ಹಾದಿ ಪಲ್ಲಟಗೊಂಡಂತೆ ಸಂಗೀತ ಅಳವಡಿಕೆಯಾಯಿತು. ಯಕ್ಷಗಾನದ ಕುಣಿತ ಅದು ಪರಿವರ್ತಿತ ನೃತ್ಯವಾಗಿ ಬದಲಾಗಿ ಯಕ್ಷಗಾನ ಕೇವಲ ಹೊರಾವರಣದಲ್ಲಿ ಉಳಿದು ಅದರ ಒಳಗೆ ಇನ್ನೇನೋ ನುಸುಳುವುದಕ್ಕೆ ತೊಡಗಿತು. ಆದರೆ ಏನೋ ಕಳೆದು ಹೋದ ಅನುಭವ.
ಸಂಗೀತ ಯಕ್ಷಗಾನ ಕಲೆಯ ಆಸ್ವಾದನೆಯ ಹವ್ಯಾಸವಾದರೆ ಬೆವಣಿಗೆ ಒಂದು ರೀತಿಯ ಖಾಸಗೀ ಹವ್ಯಾಸ. ಸಂಗೀತ ಹೀಗೆ ಕಿವಿಯಿಂದ ಹಾದು ಹೋದರೆ ಅದು ಗಾಢವಾದದ್ದು ಮಿತ್ರ ಸಿತ್ಲ ರಂಗನಾಥರ ಸಹವಾಸದಿಂದ, ಅದರಲ್ಲೂ ಶಾಸ್ತ್ರೀಯ ಸಂಗೀತ ಹೇಗೆ ಆಸ್ವಾದಿಸಬೇಕು ಎಂಬುದು ಇವರ ಸಹವಾಸದಲ್ಲಿ ಅರಿವಾಯಿತು. ರಾಗ ತಾಳ ಲಯದ ಬಗ್ಗೆ ಅದ್ಭುತ ಎನಿಸುವ ಮಾಹಿತಿ ಇವರಲ್ಲಿದೆ.
ಇಲ್ಲಿಂದ ನಂತರ ಸಂಗೀತಾಸಕ್ತಿ ಹೊಸರೂಪ ತಳೆದರೆ, ಯಕ್ಷಗಾನ ಅದು ರಕ್ತಗತವಾಗಿ ಬಂದಂತೆ ಸಹಜ ಪ್ರೇಕ್ಷಕನಾದರೂ ಯಕ್ಷಗಾನ ಹೇಗೆ ಆಸ್ವಾದಿಸಬೇಕು ಅದು ಏನು ಎಂದು ಸ್ಥೂಲವಾಗಿ ಅರಿವು ಒದಗಿ ಬಂದದ್ದು ವಿದ್ವಾಂಸ ಡಾ ಶ್ರೀ ರಾಘವ ನಂಬಿಯಾರರ ಸಂಪರ್ಕದಿಂದ. ಅದನ್ನು ಹೇಗೆ ಕಾಣಬೇಕು ಹೇಗೆ ಅನುಭವಿಸಬೇಕು ಎಂದು ಅರಿವಿಗೆ ಬಂತು. ಅದುವೆರೆಗೆ ಯಕ್ಷಗಾನದಲ್ಲಿ ಏನೋ ಕಳೆದುಕೊಂಡಿದ್ದೇವೆ ಎಂದು ಅನುಭವ ವೇದ್ಯವಾದರೂ ಅದು ಏನು ಎಂದು ತೋರಿಸಿಕೊಟ್ಟವರು ಇವರು.
ಗುರು...ಜ್ಞಾನವನ್ನು ಎಲ್ಲಿದೆ ಎಂದು ತೋರಿಸಿದಂತೆ ಏನು ಕಳೆದು ಕೊಂಡಿದ್ದೇವೆ ಎಂದು ತೋರಿಸಿ ಕೊಡುವುದು ಸಹ ಗುರು ಸದೃಶ ಪ್ರಚೋದನೆಯಾಗುತ್ತದೆ. ಇದು ಪರಿಪೂರ್ಣವಲ್ಲ ಎಂಬುದು ಖಾತರಿಯಾಗುವಾಗ ನಂತರ ಅಲ್ಲಿ ಆಸಕ್ತಿ ಸಹಜವಾಗಿ ಇಳಿಮುಖವಾಗಿಬಿಡುತ್ತದೆ.
ಯಕ್ಷಗಾನದಲ್ಲಿ ನನಗೆ ಇಷ್ಟವಾದವು ಎರಡು ಅಂಗ. ಒಂದು ಹಿಮ್ಮೇಳ, ಇನ್ನೊಂದು ಅರ್ಥಗಾರಿಕೆ.ಅದರಲ್ಲಿ ಅರ್ಥಗಾರಿಕೆ ಆಕರ್ಷಣೆಯನ್ನು ಕಳೆದುಕೊಂಡರೆ ಇನ್ನೊಂದು ಸಂಗೀತಮಯವಾಗಿ ಸತ್ವ ಹೀನವಾಗಿದೆ. ಸಂಗೀತ ಇಲ್ಲಿ ಅಸ್ವಾದಿಸುವುದಕ್ಕಿಂತ ಪರಿಶುದ್ಧ ಸಂಗೀತವನ್ನು ಮೂಲದಲ್ಲೇ ಅನುಭವಿಸಬಹುದು.
ಭಗ್ನ ವಾದದ್ದು ಹೇಗೆ ಆರಾಧನೆಗೆ ಅರ್ಹವಲ್ಲವೋ,ಹಾಗೇ ಒಡೆದ ಕನ್ನಡಿಯಲ್ಲಿ ಮುಖಬಿಂಬ ನೋಡಬಾರದು. ಹಾಗಾಗಿ ಅಪೂರ್ಣ ಎಂದು ಅರಿವಾದಾಗ ಮನಸ್ಸಿನ ಅತೃಪ್ತಿ ವೈರಾಗ್ಯ ರೂಪ ತಳೆದು ಬಿಡುತ್ತದೆ. ಭಗ್ನವಾದದ್ದನ್ನು ಉಪಯೋಗಿಸುವುದೆಂದರೆ ಅದು ದಾರಿದ್ರ್ಯದ ಸಂಕೇತ. ಈಗಂತೂ ಅನಿವಾರ್ಯತೆ ಇಲ್ಲ. ಮುಂದೆ ಪರಿಪೂರ್ಣತೆಯಲ್ಲಿ ಅನುಭವಿಸುವ ಆಶಯ ಮಾತ್ರ ಸದ್ಯಕ್ಕೆ ಉಳಿದಿದೆ. ಈಗ ಯಕ್ಷಗಾನ ಪ್ರೇಕ್ಷಕನ ಮಟ್ಟಿಗೆ ಅನಿವಾರ್ಯ ಸಂಗತಿಯಲ್ಲ ಎಂಬುದು ಸತ್ಯ. ಯಕ್ಷಗಾನ ಈಗ ವಿಷಾದ ದರ್ಶನವಾಗುತ್ತದೆ.

No comments:
Post a Comment