ಮೊನ್ನೆ ಹಳೆಯ ಮಿತ್ರರೊಬ್ಬರು ಸಿಕ್ಕಿದರು. ಯಕ್ಷಗಾನದ ಬಗ್ಗೆ ಮಾತನಾಡುತ್ತಾ ಈಗ ಯಕ್ಷಗಾನದ ಚಟುವಟಿಕೆ ಕಡಿಮೆಯಾಗಿದೆ ಅಂತ ಕೇಳಿದರು. ವಾಸ್ತವದಲ್ಲಿ ಹೇಗೆ ಇರಲಿ ನಾನು ಚರ್ಚೆ ಬೇಡ ಅಂತ ಪುರುಸೊತ್ತಿಲ್ಲ ಅಂತ ಮಾತು ಜಾರಿಸಿಬಿಡುತ್ತೇನೆ. ಆದರೆ ಅವರು ಹಾಗೆ ಜಾರಿಸುವ ಉತ್ತರಕ್ಕೆ ಕೇಳಿರಲಿಲ್ಲ. ಆಗ ನಾನು ಹೇಳಿದೆ. ಸಮಯ ಬಹಳ ಅಮೂಲ್ಯವಾಗಿ ಹೋಗಿದೆ. ಹಾಗಾಗಿ ಎಲ್ಲ ಕಡಿಮೆಯಾಗಿದೆ.
ಅಭಿರುಚಿಗಳು ಕಾಲಕ್ಕೆ ತಕ್ಕಂತೆ ಬದಲಾಗಿಬಿಡುತ್ತವೆ. ಶೈಶವಾವಸ್ಥೆಯಲ್ಲಿ ಬಯಸಿದ್ದು ಯೌವನಕ್ಕೆ ಬೇಡ. ಯೌವನದಲ್ಲಿದ್ದದ್ದು ವೃದ್ದಾಪ್ಯದಲ್ಲಿ ಅರ್ಥಹೀನವಾಗುತ್ತದೆ. ಆದರೂ ಯಕ್ಷಗಾನ ಇದಕ್ಕೆ ಪರಿಮಿತಿಗೊಳಿಸುವುದು ಸಾಧ್ಯವಿಲ್ಲ. ಯಾಕೆಂದರೆ ಅಂದಿನಿಂದ ಇಂದಿನವರೆಗೂ ನನ್ನಲ್ಲಿ ಬದಲಾಗದ ಅಭಿರುಚಿ ಎಂದಿದ್ದರೆ ಅದು ಯಕ್ಷಗಾನ ಮಾತ್ರ. ಮೊದಲೆಲ್ಲ ಕನ್ನಡ ಚಲನಚಿತ್ರಗಳನ್ನೇ ನೋಡುತ್ತಿದ್ದೆ. ಕ್ರಮೇಣ ಹಿಂದಿ ಸಿನಿಮಾ ಆನಂತರ ಇಂಗ್ಲೀಷ್ ಸಿನಿಮಾ ಮಂಗಳೂರಿನ ಚಿತ್ರಾ ಟಾಕೀಸಿನಲ್ಲಿ ಇಂಗ್ಲೀಷ್ ಸಿನಿಮಾ ನೋಡುವ ಹುಚ್ಚು ಎಷ್ಟಿತ್ತೆಂದರೆ ಅದೂ ರಾತ್ರಿಯ ಎರಡನೆ ಪ್ರದರ್ಶನ ಮುಗಿಸಿ ನಡುರಾತ್ರಿ ಹನ್ನೆರಡರ ಹೊತ್ತಿಗೆ ನಿರ್ಮಾನುಷ ರಸ್ತೆಯಲ್ಲಿ ಸೈಕಲ್ ತುಳಿದು ಬರುತ್ತಿದ್ದೆ. ಅದೊಂದು ಆಸಕ್ತಿ. ಆನಂತರ ಅದೂ ಬದಲಾಗಿ ಮಲಯಾಳಂ ಸಿನಿಮಾದತ್ತ ಆಕರ್ಷಿತನಾಗಿ , ಅದರ ನೈಜತೆಗೆ ಹೆಚ್ಚು ಮಾರು ಹೋಗಿ ಈಗ ಅದೇ ಅಭಿರುಚಿಯಾಗಿ ಬೆಳೆದಿದೆ. ಆದರೆ ಯಕ್ಷಗಾನ...ಹಾಗೆ ಆಗಲಿಲ್ಲ. ಪೂಜ್ಯ ಭಾಗವತೋತ್ತಮ ದಿವಗಂತ ಬಲಿಪ ನಾರಾಯಣ ಭಾಗವತರ ಪದದಂತೆ . ಅದು ಬದಲಾಗಲೇ ಇಲ್ಲ. ಬಹುಶಃ ಬದಲಾಗಬೇಕಿತ್ತು. ಅದೇಕೋ ಅದು ಹಾಗೆ ಉಳಿದು ಕೊಂಡಿತ್ತು. ಹಾಗಾಗಿ ನಾನು ಮಿತ್ರರಿಗೆ ಹೇಳಿದೆ ಈಗ ಯಕ್ಷಗಾನ ಈಗ ವಿಶಾಲವಾಗಿ ಬೆಳೆದಿದೆ. ಎಷ್ಟು ಬೆಳೆದಿದೆ ಎಂದರೆ ಬೆಂಗಳೂರಿನ ಗ್ರಾಮಾಂತರದ ದೊಡ್ಡ ಆಲದ ಮರದಂತೆ. ನೋಡಲು ಎರಡು ಕಣ್ಣು ಸಾಕಾಗುವುದಿಲ್ಲ. ವಿಪರ್ಯಾಸವೆಂದರೆ ದೊಡ್ಡಾಲದ ಮರ ನೋಡಿದವರಿಗೆ ಅರಿವಾಗಬಹುದು. ಆ ಮರದ ಮೂಲ ಮರ ಎಂದೋ ಸತ್ತು ಹೋಗಿದೆ. ಅದರ ಬಿಳಲುಗಳು ನೆಲಕ್ಕೆ ಊರಿ ಈಗ ಅದೇ ದೊಡ್ಡ ಮರದಂತಹ ಭ್ರಮೆಯನ್ನು ಹುಟ್ಟಿಸುತ್ತದೆ. ಹೆಚ್ಚು ಕಡಿಮೆ ಯಕ್ಷಗಾನವೂ ಅದೇ ರೀತಿ.
ಮೊದಲಿನ ಹಾಗೆ ಅಲ್ಲ. ಈಗ ಯಕ್ಷಗಾನ ಬಹಳ ವಿಶಾಲವಾಗಿದೆ. ಮೊದಲು ಒಂದೆರಡು ಮೇಳಗಳು(ಡೇರೆ ಮೇಳ ಅಲ್ಲ) ಅದರಲ್ಲಿ ಒಂದಿಷ್ಟು ಕಲಾವಿದರು. ಈಗ ಐದು ಆರು ಮೇಳಗಳು ಒಂದೇ ಕಡೆಯಿಂದ ಹೊರಡುತ್ತಿವೆ. ಪ್ರತೀ ಊರಲ್ಲಿಯೂ ಹಲವಾರು ಸಂಘಗಳು ಇವೆ. ಮೊದಲು ಕೇವಲ ಪುರುಷರಿಗೆ ಮಾತ್ರ ಸೀಮಿತ ಅಂತ ಇದ್ದದ್ದು ಈಗ ಮಹಿಳೆಯರೂ ಸಮ ಸಮ ಎನ್ನಿಸುವಷ್ಟರ ಮಟ್ಟಿಗೆ ಇದೆ. ಮೊದಲು ನಮ್ಮ ಕರಾವಳಿ ಬಿಟ್ಟು ಇದರ ಬಗ್ಗೆ ತಿಳಿದವರು ಕಡಿಮೆ. ಈಗ ಸೀನಿಮಾ ಟೀವಿ ಯೊಳಗೂ ಯಕ್ಷಗಾನ ಹೊಕ್ಕು ದೀಂಗಿಣ ಹಾಕುತ್ತವೆ. ವೆತ್ಯಾಸ ಇಷ್ಟೆ....ಮೊದಲು ಯಕ್ಷಗಾನಕ್ಕಾಗಿ ಕಲಾವಿದರು ಇದ್ದರು. ಈಗ ಕಲಾವಿದರಿಗಾಗಿ ಯಕ್ಷಗಾನ. ಹಲವಾರು ಭಾಗವತರು ಇದ್ದಾರೆ, ಆದರೆ ಚೆನ್ನಾಗಿ ಹಾಡುತ್ತಾರೆ. ಜನಪ್ರಿಯತೆ ಎಲ್ಲವೂ ಇದೆ. ಆದರೆ...ನನಗೋ ನಿಮಗೋ ಅಥವಾ ಇನ್ನಾರಿಗಾದರೋ ಹಾಡು ಅಂತ ಹೇಳಿದರೆ ಹಾಡುತ್ತಾರೆ. ಅಂದರೆ ಪ್ರೇಕ್ಷಕನಿಗೆ ಹೇಗೆ ಬೇಕೋ ಹಾಗೆ. ಅಥವಾ ಎದುರು ಕುಣಿಯುವ ವೇಷದಾರಿಗೂ ಬೇಕಾದಂತೆ ಆತ ಹೇಳಿದಂತೆ ಹಾಡುತ್ತಾರೆ. ಆಕ್ಷೇಪ ಎನೂ ಅಲ್ಲ. ಆದರೆ ತೀರ ಗಂಭೀರವಾಗಿ ಯೋಚಿಸುವಾಗ ಯಕ್ಷಗಾನಕ್ಕಾಗಿ ಹಾಡುವವರು ಎಷ್ಟು ಜನ ಇರಬಹುದು? ಮೊನ್ನೆ ವಿದ್ವಾಂಸ ರಾಘವ ನಂಬಿಯಾರರ ಲೇಖನ ಓದುವಾಗ ಈ ಭಾವನೆ ಬಂದು ಬಿಟ್ಟಿತು. ಅವರ ಕಾಳಜಿಯನ್ನು ಹತ್ತಿರದಿಂದ ಬಲ್ಲೆ. ವೈಯಕ್ತಿಕವಾಗಿ ಅವರ ಸಂಪರ್ಕದಲ್ಲಿ ಅದನ್ನು ತಿಳಿದಿದ್ದೇನೆ.
ನಾನು ಒಂದು ಸಲ ಬಲಿಪ್ಪರಲ್ಲಿ ಹೀಗೆ ಮಾತನಾಡುವಾಗ ಕೇಳಿದ್ದೆ, ನೀವು ಕಲಾವಿದರು ಹೇಳಿ ಯಾವುದಾದರು ಪದ ವೆತ್ಯಾಸ ಮಾಡಿದ್ದು ಉಂಟೋ ಅಂತ. ಅಂದರೆ ಒಂದು ಪದ ಹೀಗೆ ಹಾಡಬೇಕು ಅಂತ ಒಬ್ಬರು ಹೇಳಿದರೆ ಹಾಗೆ., ಅವರು ಹೇಳಿದರು ಹಾಗೆ ಹೇಳಿದರೆ ಅದು ಯಕ್ಷಗಾನ ಹೇಗಾದೀತು? ತಾತ್ಪರ್ಯ ಇಷ್ಟೆ ಕೇವಲ ಯಕ್ಷಗಾನಕ್ಕಾಗಿ ಹಾಡುವಾಗ ಉಳಿದೆಲ್ಲವೂ ಗೌಣವಾಗಿಬಿಡುತ್ತದೆ. ಸಂಗೀತಗಾರ ಮೈದುಂಬಿ ಹಾಡುವಾಗ ಆತನಿಗೆ ಬೇರೆಯಾವುದೂ ಕಾಣುವುದಿಲ್ಲವಂತೆ ಹಾಗೆ. ಆ ಬಗೆಯಲ್ಲಿ ನೋಡುವಾಗ ಬಲಿಪ್ಪರು ಯಾರೋ ಚಪ್ಪಾಳೆ ಹೊಡೆಯುತ್ತಾರೆ, ಅಥವಾ ಆ ಪದ ಬೇಡ ಅದು ಹೀಗೆ ಹಾಡಿ ಅಂತ ವೇಷಧಾರಿ ಹೇಳಿದ ಹಾಗೆ ಬಲಿಪ್ಪರು ಹಾಡಲೇ ಇಲ್ಲ. ಬಲಿಪ್ಪರು ಅಂತ ಅಲ್ಲ ಅಗರಿ ಮುಂತಾದ ಹಳೆ ತಲೆಮಾರಿನವರು ಎಂದಿಗೂ ತಮ್ಮ ನಿಲುವನ್ನು ಬದಲಿಸಿಲ್ಲ. ಅವರಿಗೆ ಯಕ್ಷಗಾನ ವೈಯಕ್ತಿಕ ಆಗಲಿಲ್ಲ. ಬಲಿಪ್ಪರು ಹಾಗೆ ಅವರು ಎಂದಿಗೂ ಯಾರನ್ನೋ ಮೆಚ್ಚಿಸುವುದಕ್ಕೆ, ಯಾರೋ ಹೇಳಿದ್ದಕ್ಕೆ ರಂಗದಲ್ಲಿ ಪದ ಹೇಳಿದ್ದು ಇರಲಾರದು. ಎಲ್ಲೋ ಗಾನ ವೈಭವದಲ್ಲಿ ಹಾಡಿರಬಹುದು. ಗಾನ ವೈಭವ ಅದು ಅಧಿಕೃತ ಯಕ್ಷಗಾನವೇ ಅಲ್ಲ. ಬಲಿಪ್ಪರಿಗೂ ಗಾನವೈಭವದಲ್ಲಿ ಹಾಡು ಜೋಡಿಸುವಾಗ ಒಂದು ಸಲ ಕೇಳಿದೆ ಈ ಪದ ಈ ರಾಗದಲ್ಲಿ ಹಾಡಬಹುದೇ ಅಂತ. ಶಾಂತ ಸ್ವಭಾವದ ಬಲಿಪ್ಪರೂ ರೇಗಿ ಬಿಟ್ಟರು...ಯಕ್ಷಗಾನ ಪದ ಇರುವುದು ರಾಗದಲ್ಲಿ ಹಾಡುವುದಕ್ಕೆ ಅಲ್ಲ. ನನ್ನ ಅಜ್ಞಾನಕ್ಕೆ ಅವರು ತೋರಿಸಿದ ರೀತಿ ಅದು. ಹಾಗಾಗಿಯೆ ನಾನು ಹೇಳುವುದು ಬಾಲ್ಯದಿಂದ ಇಂದಿನ ವರೆಗೂ ಯಕ್ಷಗಾನದ ಅಭಿರುಚಿ ಬದಲಾಗಿಲ್ಲ. ಈಗ ಯಕ್ಷಗಾನ ಸುಶ್ರಾವ್ಯ ರಾಗ ಸಂಗೀತಮಯವಾಗಿದೆ. ಮೊದಲು ಲಘು ಸಂಗೀತ , ಸಿನಿಮಾ ಹಾಡು ಕೇಳುವ ನನ್ನ ಸಂಗೀತ ಪ್ರೀತಿ ಈಗ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಎನ್ನುವಂತೆ ಬದಲಾಗಿದೆ. ಆದರೆ ಯಕ್ಷಗಾನ ಬದಲಾಗದೇ ಇದ್ದದ್ದು ಯಕ್ಷಗಾನದಿಂದ ದೂರ ಉಳಿಯುವಂತೆ ಮಾಡಿದೆ.
ಬಲಿಪ ಮತ್ತು ಅಗರಿ ಶೈಲಿ ನಾನು ಈಗಲಂತೂ ನನ್ನ ಸಂಗ್ರಹದಿಂದ ಕೆದಕಿ ಕೆದಕಿ ಕೊನೆಗೆ ಕೈ ಹಾಕುವುದು ಈ ಶೈಲಿಗೆ ಮಾತ್ರ. ಅದೇಕೋ ಸಂಗೀತ ಮಯ ಹಾಡುಗಾರಿಕಯಲ್ಲಿ ಆ ಪಕ್ವತೆಯನ್ನು ಗುರುತಿಸುವುದಕ್ಕೆ ನನ್ನ ಮನಸ್ಸು ಒಪ್ಪುವುದೇ ಇಲ್ಲ. ಹಲವರಿಗೆ ಇದು ಆಕ್ಷೇಪ ಅನ್ನಿಸಬಹುದು. ಆದರೂ ನನ್ನ ಅಭಿರುಚಿ ನನ್ನ ಸ್ವಂತ ಆಸ್ತಿ. ಮೊನ್ನೆ ಹೀಗೆ ಬಲಿಪ್ಪಜ್ಜನ ಯಕ್ಷ ಬದುಕಿನ ಅತ್ಯಂತ ಹಳೆಯ ಪದ ಮತ್ತು ಅರ್ಧ ಶತಮಾನದ ನಂತರದ ಅವರ ಪದ ಕೇಳಿದೆ, ಎಲ್ಲೋ ಕಂಠದ ವಯಸ್ಸಿನ ವೆತ್ಯಾಸ ವಷ್ಟೇ ಇತ್ತು. ಆ ಪದಗಳು ಶಿಲಾ ಮೂರ್ತಿಯಂತೆ ಯಾವ ವರ್ಷಧಾರೆಗೂ ಅದು ಬದಲಾಗಿಲ್ಲ.ಹಾಗೇ ಇತ್ತು. ಈಗ ಯಕ್ಷಗಾನ ಹಾಗಿಲ್ಲ. ಸಣ್ಣ ತುಂತುರು ಮಳೆಗೂ ಅದು ಬದಲಾಗಿ ಹೋಗಿದೆ ಮಾತ್ರವಲ್ಲ ಹೋಗುತ್ತಾ ಇದೆ. ಗಟ್ಟಿಯಾಗಿ ಬೇರು ಬಿಟ್ಟ ಅಲದ ಮರ ಕೂಡ ವಯಸ್ಸಾದ ನಂತರ ಮಗುಚಿ ಬೀಳುತ್ತದೆ. ಅದರ ಪಳೆಯುಳಿಕೆಗಳೂ ಅದರ ಅಸ್ತಿತ್ವವನ್ನು ಅಷ್ಟೋ ಇಷ್ಟೋ ಹೇಳಬಹುದು. ಆದರೆ ಮೇಲೆ ಹೇಳಿದ ದೊಡ್ಡ ಆಲದ ಮರದಂತೆ ಯಕ್ಷಗಾನ ಪಳೆಯುಳಿಕೆಯನ್ನೂ ಉಳಿಸಿದೆ ಅಂತ ಅನಿಸುವುದಿಲ್ಲ.
ಈಗ ವಸ್ತು ನಿಷ್ಠ ಅಭಿಪ್ರಾಯಗಳೂ ಸಹ ಬೆಲೆ ಬಾಳುವ ವಸ್ತುಗಳಾಗಿ ಅಭಾವವನ್ನು ಉಂಟು ಮಾಡಿದೆ. ಯಾಕೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರತೆ. ಮೊನ್ನೆ ಸಾಮಾಜಿಕ ತಾಣದಲ್ಲಿ ಒಂದು ವೀಡಿಯೋ ನೋಡಿದೆ. ಯಾವುದೋ ಸಿನಿಮಾ ಥಿಯೇಟರ್ ಹೊರಗೆ ಒಬ್ಬ ವ್ಯಕ್ತಿ ಸಿನಿಮಾ ಚೆನ್ನಾಗಿಲ್ಲ. ನಟನೆ ಚೆನ್ನಾಗಿಲ್ಲ ಅಂತ ಹೇಳಿದ. ಅಲ್ಲಿದ್ದ ಅಂಧ ಅಭಿಮಾನಿಗಳು ಆತನನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡರು. ಈಗೀಗ ಈ ಅಭಿಮಾನಿಗಳೂ ಅಭಿಮಾನಕ್ಕೆ ವೇತನ ಪಡೆಯುತ್ತಾರೆ. ಹಾಗಾಗಿ ಸಂಬಳಕ್ಕೆ ಒಂದಷ್ಟು ದುಡಿಮೆ ಸಲ್ಲಿಸಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸವಾಲೆಸೆದು ಬಿಡುತ್ತಾರೆ. ದುಡ್ಡುಕೊಟ್ಟು ಅಮೂಲ್ಯ ಸಮಯವನ್ನು ಉಪಯೋಗಿಸಿ ಸಿನಿಮಾ ನೋಡಿ ಅಭಿಪ್ರಾಯ ಹೇಳಿದರೆ ಆ ಹಕ್ಕು ಉಂಟು ಅಂತ ಯಾರೂ ಯೋಚಿಸುವುದಿಲ್ಲ. ತಮ್ಮ ಹಕ್ಕು ಪ್ರತಿಪಾದನೆಯಲ್ಲಿ ಉಳಿದವರ ನಿಜವಾದ ಹಕ್ಕನ್ನು ಧ್ವಂಸ ಮಾಡಿಬಿಡುತ್ತಾರೆ. ಅನ್ನದ ಹಕ್ಕು, ಬದುಕಿನ ಹಕ್ಕಿನ ನಡುವೆ ಸಾರ್ವತ್ರಿಕ ಹಕ್ಕು ಎಂದೋ ಕಳೆದು ಹೋಗಿದೆ. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೋ ಕಳೆದು ಹೋಗಿದೆ. ಈಗ ಆಕ್ಷೇಪ ಅಥವಾ ಅನಿಸಿಕೆ ಹೇಳಬೇಕೆಂಬ ತೆವಲು ಇದ್ದರೆ ತೆರೆಯ ಹಿಂದೆ ಆ ನಟ ಎಲ್ಲಿದ್ದಾನೋ ಹೇಗಿದ್ದಾನೋ ಅಂತ ಹುಡುಕಿ ಆತನ ಕಿವಿಯಲ್ಲಿ ಯಾರಿಗೂ ಕೇಳದಂತೆ ರಹಸ್ಯವಾಗಿ ಹೇಳಬಹುದು. ಅದೂ ಆತನಿಗೆ ಕೇಳುವ ವ್ಯವಧಾನ ಇದ್ದರೆ. ಹಾಗಾಗಿ ಈಗ ಇದು ಒಳ್ಳೆಯದುಂಟು ಅಂತ ಹೇಳುವುದಕ್ಕಷ್ಟೇ ಅಭಿಪ್ರಾಯ ಸೀಮಿತಗೊಳ್ಳುತ್ತದೆ. ಹಾಗೆ ಹೇಳುವುದಕ್ಕೆ ಯಾವ ಪುರಾವೆಯನ್ನು ಒದಗಿಸಬೇಕಿಲ್ಲ. ಅದರಿಂದ ಯಾರಿಗೂ ಘಾಸಿಯೂ ಆಗುವುದಿಲ್ಲ. ಅದಕ್ಕೆ ಒಂದಷ್ಟು ಆತ್ಮವೆಂಚನೆ ಖರ್ಚು ಮಾಡಿದರೆ ಸಾಕು. ಅದರೂ ಒಳ್ಳೆಯದುಂಟು ಅಂತ ಹೇಳದಿದ್ದರೆ ಅದು ಒಳ್ಳೆಯದಿಲ್ಲ...ಎಂಬ ಪರೋಕ್ಷ ಸಂದೇಶ ಅರ್ಥವಾಗುವರಿಗಷ್ಟೇ ಅರ್ಥವಾದೀತು. ಹಾಗಾಗಿ ಒಳ್ಳೆಯದಿಲ್ಲ ಅಂತ ಎಂಬ ಪದ, ಶಬ್ದ ಕೋಶದಲ್ಲಿದ್ದರೂ ಅದನ್ನು ಹೆಕ್ಕಿ ತೆಗೆವ ಸಾಹಸ ಮಾಡಬಾರದು.
ಈಗ ಹರಕೆಯ ಮೇಳಗಳೂ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಅದು ಎಷ್ಟಿದ್ದರೂ ಹರಕೆಯ ಮೇಳಗಳು. ಒಂದಿಷ್ಟು ಅದೇ ಆಸರೆ ಅಂತ ಹೇಳುವುದಕ್ಕಷ್ಟೆ ಸಾಧ್ಯ. ಸರಕಾರಿ ಬಸ್ಸುಗಳು ಸಮಯಕ್ಕೆ ಬಂದರೆ ಅದೇ ಭಾಗ್ಯ ಎನ್ನುವ ಹಾಗೆ. ಹೇಳುವುದಕ್ಕೆ ಒಂದು ಸಮಯ ಅಂತ ಇರುತ್ತದೆ. ಯಕ್ಷಗಾನಕ್ಕೆ ಮಾತ್ರ ಹಾಡುವ ಆಡುವ ಕಲಾವಿದರು ಎಷ್ಟಿದ್ದಾರೆ ಅಂತ ಯೋಚಿಸುವ ಹಾಗೆ ಆಗುತ್ತದೆ. ಯಾಕೆಂದರೆ ಬಲಿಪ್ಪರ ಭಾಗವತಿಕೆಯನ್ನು ಸುಮಾರು ಐವತ್ತು ವರ್ಷದಷ್ಟುಅನುಭವಿಸಿದ್ದೇನೆ. ಅವರು ಎಂದಿಗೂ ವೈಯಕ್ತಿಕವಾಗಿ ಹಾಡಲಿಲ್ಲ. ಯಾರಿಗೋ ಬೇಕಾಗಿ ಪದ ಹೇಳಿದ ನೆನಪಿಲ್ಲ. ಕೇವಲ ಯಕ್ಷಗಾನಕ್ಕೆ ಮಾತ್ರ ಅವರ ಪದ. ಈಗ ಹೇಳಿ ಎಷ್ಟು ಜನ ಯಕ್ಷಗಾನಕ್ಕೆ ಮಾತ್ರ ಪದ ಹೇಳುತ್ತಾರೆ.?
No comments:
Post a Comment