"ಅಪಸವ್ಯಗಳು ಯಕ್ಷಗಾನದಲ್ಲಿ ಮಾತ್ರ ಯಾಕೆ ಮನುಷ್ಯನ ಜೀವನ ಶೈಲಿಯಲ್ಲೂ ಹೆಚ್ಚಾಗಿದೆ. ಬೇಕಾದದ್ದನ್ನು ಮಾತ್ರ ಮನುಷ್ಯ ಎಲ್ಲಿ ಮಾಡುತ್ತಾನೆ? ಅದು ಸಹಜ. "
ಯಕ್ಷಗಾನದಲ್ಲಿ ಅಪಸವ್ಯಗಳೇ ಯಾಕೆ ಹೆಚ್ಚಾಗಿದೆ? ಇದನ್ನು ಒಂದು ಸಲ ಶ್ರೀ ಸೂರಿಕುಮೇರಿ ಗೋವಿಂದಭಟ್ಟರಲ್ಲಿ ಕೇಳಿದ್ದೆ. ಅತೀವ ಅಭಿಮಾನ ಸ್ನೇಹ ಆದರಗಳನ್ನು ನನಗೆ ಅವರಲ್ಲಿದ್ದ ಕಾರಣ ಭೇಟಿಯಾದಾಗ ಕೇಳಿದ್ದೆ. ಅದಕ್ಕೆ ಬಹಳ ಸಹಜವಾಗಿ ಯಾವುದೇ ಆತಂಕವಿಲ್ಲದೆ ಈ ರೀತಿ ಪ್ರತಿಕ್ರಿಯೆ ಕೊಟ್ಟದ್ದು ಅವರ ಸರಳ ವ್ಯಕ್ತಿತ್ವದ ಪ್ರತೀಕವಾಗಿ ಕಂಡಿತ್ತು. ನಿಜಕ್ಕಾದರೆ ನನಗೆ ಈ ಉತ್ತರ ಅಷ್ಟು ಸರಿ ಎಂದೆನಿಸಲಿಲ್ಲ. ಆದರೂ ಅದು ಕೇವಲ ಅವರ ಪ್ರತಿಕ್ರಿಯೆಗೆ ಕೇಳಿದ ಪ್ರಶ್ನೆಯಾಗಿತ್ತು.
ಗೋವಿಂದ ಭಟ್ಟರು ಇರುವುದೇ ಹಾಗೆ. ಅಭಿಪ್ರಾಯ ವೆತ್ಯಾಸ ಏನೇ ಇರಲಿ, ಅವರ ಸ್ನೇಹ ಆದರಕ್ಕೆ ಅವರ ವ್ಯಾವಹಾರಿಕತೆಗೆ ಅದು ತೊಡಕಾಗುವುದಿಲ್ಲ. ಅಭಿಪ್ರಾಯ ವೆತ್ಯಾಸ ಇದ್ದವರಷ್ಟೇ ಆತಂಕ ಪಡಬೇಕು. ಅವರು ಎಂದಿನ ಹಾಗೆ ಸಹಜ ಸಾಮನ್ಯವಾಗಿ ಇರಬಲ್ಲರು ಅದು ಗೋವಿಂದ ಭಟ್ಟರಲ್ಲಿ ನಾನು ಗಮನಿಸಿದ ವಿಶೇಷತೆ. ಹಾಗೆ ನೋಡಿದರೆ ಅವರಿತ್ತ ಪ್ರತಿಕ್ರಿಯೆಯಲ್ಲಿ ನನಗೂ ಅಭಿಪ್ರಾಯ ವೆತ್ಯಾಸವಿತ್ತು. ಅದು ಅವರಿಗೆ ಅರಿವಿದ್ದರೂ ಒಳಗಿನ ಅಂತರಂಗದ ವ್ಯವಹಾರಕ್ಕೆ ಅದೆಂದೂ ಪರಿಣಾಮ ಬೀರಲಿಲ್ಲ.ಯಾವುದನ್ನು ಆಯಾಯ ಕ್ರಮದಲ್ಲೇ ಅವಲೋಕಿಸಿ ಸ್ವೀಕರಿಸುವ ವ್ಯಾವಹಾರಿಕತೆ ಇಷ್ಟವಾಗಿಬಿಡುತ್ತದೆ.ಎಷ್ಟು ವಿಮರ್ಶೆ ಟೀಕೆಗೆ ಎರವಾದರೂ ಸ್ಥಿತ ಪ್ರಜ್ಞೆ ಕಳೆದು ಕೊಳ್ಳದ ಸೌಮ್ಯತೆ ಇಲ್ಲಿದೆ. ಹಾಗಾಗಿ ನನ್ನಂತಹ ಸಾಮನ್ಯನೂ ಇವರನ್ನು ಪ್ರಶ್ನಿಸಬಲ್ಲ. ಗೋವಿಂದಣ್ಣ ಕೇವಲ ಕಲಾವಿದನಾಗಿ ಮಾತ್ರವಲ್ಲ ಒಬ್ಬ ಸ್ಥಿತ ಪ್ರಜ್ಞ ವ್ಯಕ್ತಿತ್ವದ ಪ್ರತೀಕವಾಗಿ ನನಗೆ ಕಂಡರು. ಸೂರಿಕುಮೇರಿ ಗೋವಿಂದ ಭಟ್ಟರು ಅಗಲಿದ ವಾರ್ತೆ ಕೇಳಿದಾಗ ಮೊದಲಿಗೆ ಬಂದ ಸ್ಮರಣೆ ಇದು.
ಹಿಂದೆ ನನ್ನ ತಂದೆಯವರ ಬಗ್ಗೆ ತಿಳಿದನಂತರ ತೀವ್ರ ಆಸಕ್ತಿಯಿಂದ ನನ್ನ ಮನೆಗೆ ಬಂದು ಶುಭಹಾರೈಸಿದ ಆ ದಿನದಿಂದ ತೊಡಗಿ ಆಗಾಗ ಆತ್ಮೀಯವಾಗಿ ಕರೆ ಮಾಡುತ್ತಿದ್ದರು.ವಿಶೇಷವೆಂದರೆ ಪ್ರತಿ ಬಾರಿ ಕರೆದಾಗಲೂ ತಮ್ಮ ಪರಿಚಯವನ್ನು ಅವರು ಒಪ್ಪಿಸುವ ರೀತಿಯೇ ಗೌರವ ಪೂರ್ಣ. ತಮ್ಮ ಪೂರ್ಣ ಹೆಸರನ್ನು ಸೌಮ್ಯವಾಗಿ ಹೇಳುವಾಗ ನಾನು ಬಹಳ ಕುಬ್ಜನಾಗಿ ಬಿಡುತ್ತಿದ್ದೆ. ನನಗೆ ಅವರ ಸರಳತೆ ಸೌಮ್ಯ ಮಾತು ಅತ್ಯಂತ ವಿಶಿಷ್ಟವಾಗಿ ಕಂಡಿತ್ತು. ಇನ್ನು ಅದು ನೆನಪು ಮಾತ್ರ. ಮನೆಗೆ ಬಂದಾಗ ಅವರಲ್ಲಿ ಹೀಗೆ ಮಾತನಾಡುವಾಗ ನಾನು ಹೇಳಿದೆ ಬಾಲ್ಯದಲ್ಲಿ ಧರ್ಮಸ್ಥಳ ಮೇಳದ ಮಹಾ ಬ್ರಾಹ್ಮಣ ಪ್ರಸಂಗದ ಒಡ್ಡೋಲಗದ ಕೌಶಿಕ ಮಹಾರಾಜನ ಪಾತ್ರದಿಂದ ತೊಡಗಿ ಶಂತನು ಸ್ವರ್ಗಾರೋಹಣದ ವರೆಗಿನ ಅವರ ವಿಶ್ವಾಮಿತ್ರನ ಪಾತ್ರ ನೋಡಿದ್ದು ಈಗಲೂ ರೋಮಾಂಚನ ತರುತ್ತದೆ. ಅಷ್ಟೊಂಡು ಚೈತನ್ಯ ಆ ಕೃಶ ಶರೀರದಲ್ಲಿ ಎಲ್ಲಿ ಉದ್ಭವವಾಗುತ್ತದೆ ಎಂದು ಅಚ್ಚರಿಯಾಗಿತ್ತು. ಆನಂತರ ಒಂದು ದಿನ ಅವರು ಅದೇ ವೇಶವನ್ನುಎಲ್ಲೋ ಮಾಡಿದ್ದರು. ಅದನ್ನುಖುದ್ದಾಗಿ ಕಂಡ ಒಬ್ಬ ಮಿತ್ರ ಗೋವಿಂದಣ್ಣನ ವಿಶ್ವಾಮಿತ್ರ ಪಾತ್ರ ವಿಜ್ರಂಭಿಸಿದ್ದನ್ನು ವಿಶೇಷವಾಗಿ ಹೇಳಿದ್ದ. ಬಹುಶಃ ನನ್ನ ಮಾತುಗಳ ಪ್ರೇರಣೆಯಾಗಿದೇಯೇನೋ ಎಂದು ಆಗ ಅನಿಸಿತ್ತು. ಆನಂತರ ಅವರ ಬಗ್ಗೆ ಲೇಖನದಲ್ಲಿ ಅದನ್ನು ಉಲ್ಲೇಖಿಸಿ "ಯಕ್ಷಕೌಶಿಕ" ಅಂತ ಅವರನ್ನು ಕರೆದಿದ್ದೆ, ಈಗ ಅದೇ ಹೆಸರಿನಲ್ಲಿ ಅವರನ್ನು ಹಲವು ಕಡೆ ಕರೆದಿರುವುದು ಮಾತ್ರವಲ್ಲ ಅದೇ ಬಿರುದು ಪ್ರಾಪ್ತವಾಗಿದ್ದು ಒಂದು ವೈಶಿಷ್ಟ್ಯವಾಗಿತ್ತು. ಪದ್ಯಾಣ ಎಂಬ ಪದ ಪದಯಾನ ಎಂದು ನಾನು ಕರೆದು ಅದು ಪ್ರಸಿದ್ಧವಾದಂತೆ ಯಕ್ಷ ಕೌಶಿಕ ಎಂಬ ಹೆಸರು ಕೂಡ ಬಳಕೆಯಾಗಿದ್ದು ವೈಶಿಷ್ಟ್ಯವಾಗಿದೆ.
ತೀವ್ರ ಬಡತನದಲ್ಲಿ ಹೊಟ್ಟೆಯ ಹಸಿವು ಯಕ್ಷಗಾನದತ್ತ ಸೆಳೆಯಿತು. ಯಕ್ಷಗಾನದಲ್ಲಿ ಹೋರಾಟದ ಬದುಕು ಅವರದಾಗಿತ್ತು. ಯಕ್ಷಗಾನವನ್ನು ಬಯಸಿ ಅವರು ಬಂದದ್ದಲ್ಲಎಂದು ಅವರು ಪ್ರಾಮಾಣಿಕತೆಯಿಂದ ಹೇಳಿದರೂ ಯಕ್ಷಗಾನ ಮಾತ್ರ ಅವರನ್ನು ಬಿಡಲಿಲ್ಲ. ಯಾವುದೋ ಕಾರಣಕ್ಕೆ ಒಂದು ಸಲ ಯಕ್ಷಗಾನವೇ ಬೇಡ ಅಂತ ನೀಳವಾದ ಶಿಖೆಯನ್ನು ಕಳೆದು ಎಲ್ಲವನ್ನು ತ್ಯಜಿಸಿದರೂ ಯಕ್ಷಗಾನ ಅವರನ್ನು ಮತ್ತೆ ತೆಕ್ಕೆ ಎಳೆದು ತಂದಿತ್ತು. ಹೀಗೆ ಬೇಡದೇ ಇದ್ದ ಯಕ್ಷಗಾನ ಅವರನ್ನು ಮತ್ತೂ ಮತ್ತೂ ಕರೆದು ಅವರ ಆವಶ್ಯಕತೆಯನ್ನು ಸಾರಿದ್ದು ಒಂದು ವೈಶಿಷ್ಟ್ಯ.
ಸಮಗ್ರ ಯಕ್ಷಗಾನವನ್ನು ತೆಗೆದು ಕೊಂಡರೆ ಅವರು ಮಾಡದ ಪಾತ್ರಗಳಿಲ್ಲ. ಅದರಂತೆ ನಿಜ ಜೀವನದಲ್ಲೂ ಅವರೇ ಹೇಳುವಂತೆ ಪುರೋಹಿತನಾಗಿ ಪಾಜಕವ್ಯಕ್ತಿಯಾಗಿ ಹಲವು ವೇಷಗಳನ್ನು ನಿರ್ವಹಿಸಿದ ಅಪ್ರತಿಮ ಸಾಹಸಿ. ಜೀವನ ಎಂದರೆ ಜಯಿಸಿ ಬದುಕುವುದಕ್ಕಿರುವ ಅವಕಾಶ. ಅದು ಯಾವ ಬಗೆಯಲ್ಲಾದರೂ ಸರಿ. ರಂಗದ ಮೇಲೆ ಅವರ ಪಾತ್ರ ನಿರ್ವಹಣೆಯಲ್ಲಿ ಈ ಪ್ರಭಾವ ದಟ್ಟವಾಗಿದೆ. ಎಲ್ಲವನ್ನೂಮುಕ್ತವಾಗಿ ಸ್ವೀಕರಿಸುವ ಗೋವಿಂದಣ್ಣ ಬದುಕನ್ನು ಸಾಹಸಮಯವಾಗಿ ಸ್ವೀಕರಿಸಿಗೆದ್ದವರು. ಅವರ ದೀರ್ಘಾಯುಷ್ಯಕ್ಕೆ ಇದೇ ಕಾರಣ. ಶಿಸ್ತು ಬದ್ದ ಜೀವನ, ಯಾರಿಗೂ ತಲೆಬಾಗದ ಧೀಮಂತ ನಿಲುವು ಎಲ್ಲವೂ ಅವರು ನಿರ್ವುಹಿಸುವ ರಾಜವೇಶದಂತೆ ಘನ ಗಂಭೀರ. ಅಂತಹ ಗೋವಿಂದಣ್ಣ ಇನ್ನಿಲ್ಲ. ಯಕ್ಷಗಾನ ಕ್ಷೇತ್ರದಲ್ಲಿ ನನಗೆ ಅತ್ಯಂತ ಹೆಚ್ಚು ಆತ್ಮೀಯರಾಗಿ ಹಿತೈಷಿಯಾಗಿ ಇದ್ದವರು ಗೋವಿಂದ ಭಟ್ಟರು. ಆಟವಾಗುವಲ್ಲಿ ಚೌಕಿಗೆ ಹೋದರೆ ಬಾ ರಾಜ ಅಂತ ಹತ್ತಿರ ಕರೆದು ಬಣ್ಣದ ಪೆಟ್ಟಿಗೆಯ ಮೇಲೆ ಕುಳ್ಳಿರಿಸಿ ಉಭಯ ಕುಶಲ ವಿಚಾರಿಸುತ್ತಿದ್ದ ಸರಳತೆ ಹೃದಯಕ್ಕೆ ಹತ್ತಿರವಾದ ಅನುಭವವನ್ನು ಕೊಡುತ್ತಿತ್ತು. ಭೇಟಿಯಾದಾಗಲೆಲ್ಲ ಯಕ್ಷಗಾನದ ಬಗ್ಗೆ ಮಾತನಾಡಿದ್ದು ಬಹಳ ಕಡಿಮೆ. ಅವರ ವೇಷದ ಬಗ್ಗೆ ಹೇಳಿದರೆ ಅದನ್ನು ಎಂದಿಗೂ ಗಂಭೀರವಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ. ಬಹುಶಃ ಅವುಗಳನ್ನು ಕೇಳಿ ಕೇಳಿ ಅವರಿಗೆ ಸಾಕು ಎಂದೆನಿಸಿರಬೇಕು. ಯಕ್ಷಗಾನದ ಬಗ್ಗೆ ಮಾತನಾಡುವುದೇ ಬಹಳ ಕಡಿಮೆ ಏನೋ ಅಂತ ಹಲವು ಸಲ ಅನ್ನಿಸಿದ್ದಿದೆ. ಸುಮಾರು ಅರುವತ್ತು ವರ್ಷಗಳಿಗಿಂತಲೂ ಅಧಿಕ ರಂಗದಲ್ಲಿ ಕಳೆದ ಜೀವನಾನುಭವ ಇರಬೇಕು. ಎಲ್ಲದರ ಬಗ್ಗೆಯೂ ಅಪರಿಮಿತ ತಿಳುವಳಿಕೆ ಮಾಗಿ ಮಾಗಿ ಅದರ ಬಗ್ಗೆ ಮಾತನಾಡುವ ಪ್ರತಿಕ್ರಿಯೆ ಕೊಡುವ ಆಸಕ್ತಿಯನ್ನೇ ಕಳೆದುಕೊಂಡಂತೆ ಅನ್ನಿಸುತ್ತಿತ್ತು. ಹಾಗಾಗಿಯೇ ಯಾರೇ ಸಂಘಟಕರು ಕಾರ್ಯಕ್ರಮಕ್ಕೆ ಕರೆದಾಗ ಅವರು ಪ್ರಸಂಗವನ್ನಾಗಲೀ ಪಾತ್ರವನ್ನಾಗಲೀ ವಿಚಾರಿಸುವುದು ಬಹಳ ಕಡಿಮೆ. ಸಂಘಟಕರೇ ಗಂಭೀರರಾಗಿ ಹೀಗೆ ಹೀಗೆ ಅಂತ ವಿವರಿಸಿದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ವಭಾವವಲ್ಲ. ಪಾತ್ರ ಪ್ರಸಂಗದ ಬಗ್ಗೆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಹೇಳಿದರೂ ಅವರು ಯಾವ ತಕರಾರು ಆತಂಕ ಮುಂದಿಟ್ಟವರಲ್ಲ. ಯಾವ ಪಾತ್ರವನ್ನೂ ಲೀಲಾಜಾಲವಾಗಿ ನಿರ್ವಹಿಸಬಲ್ಲ ಚಾಣಾಕ್ಷತನವೇ ಇದಕ್ಕೆ ಕಾರಣ.
ಒಂದು ಬಾರಿ ಮಿತ್ರರಾದ ಕಜೆ ಸುಬ್ರಹ್ಮಣ್ಯ ಭಟ್ಟರು ಕರೆ ಮಾಡಿ ಗೋವಿಂದ ಭಟ್ಟರನ್ನು ತಾಳಮದ್ದಲೆಗೆ ಕರೆಯಬೇಕು, ಯಾವ ಪ್ರಸಂಗವಾದೀತು ಅಂತ ನನ್ನಲ್ಲಿ ಸಲಹೆ ಕೇಳಿದ್ದರು. ಆಗ ನಾನು ಹೇಳಿದೆ ಕೀಚಕ ವಧೆ ಮಾಡಿ ಅವರಿಂದ ಕೀಚಕನ ಪಾತ್ರ ನಿರ್ವಹಿಸುವಂತೆ ಮಾಡಿ. ಜತೆಗೆ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಕೋಳ್ಯೂರು ಇದ್ದರೆ ಒಳ್ಳೆಯದು ಎಂದು ಸಲಹೆ ಹೇಳಿದ್ದೆ. ಹಾಗೆ ಆ ಸಲ ಸತೀ ಸಂರಕ್ಷಣೆ ಅಂತ ಅದೇ ಪ್ರಸಂಗ ಮಾಡಿದರು. ಗೋವಿಂದ ಭಟ್ಟರ ಕೀಚಕ ಅದ್ಭುತವಾಗಿ ಮೂಡಿ ಬಂತು. ಆಗ ಅವರನ್ನು ಕೇಳಿದೆ ನಿಮಗೆ ಕೀಚಕನ ಪಾತ್ರ ಆದೀತೋ ಅಂತ. ಆಗ ಅವರು ಹೇಳಿದರು ನಾನು ಪಾತ್ರ ಪ್ರಸಂಗದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಬಂದಲ್ಲಿ ಯಾವುದೇ ಆದೀತು ನನಗೆ ಅಭ್ಯಂತರವಿಲ್ಲ ಅಂತ ನಿರಾಳವಾಗಿ ಹೇಳಿದ್ದರು. ಗೋವಿಂದ ಭಟ್ಟರ ರಂಗದ ನಿರ್ವಣೆಯ ಚಾಣಾಕ್ಷತನವದು.
ಅವರ ಆತ್ಮೀಯ ಒಡನಾಟ, ಅಕ್ಕರೆ ಎಲ್ಲವನ್ನೂ ನೋಡಿದ ನನಗೆ ಯಾಕೋ . ಕುಟುಂಬದ ಹಿರಿಯರೊಬ್ಬರು ಅಗಲಿದಂತೆ ಎಲ್ಲವನ್ನು ಕಳೆದುಕೊಂಡ ಅನುಭವ. ನಾನೂ ಎಂದಲ್ಲ, ನನ್ನಂತೆ ಅಪಾರ ಅಭಿಮಾನಿಗಳು ಇದ್ದಾರೆ. ಹಲವರಲ್ಲಿ ಕೇಳಿದರೂ..ಅವರುಚಿಕ್ಕಪ್ಪ ಮಾವ ಅಜ್ಜ ಹೀಗೆ ತಮ್ಮ ಸಂಭಂಧಗಳ ಕುರಿತು ಹೇಳುತ್ತಾರೆ. ಯಕ್ಷಗಾನ ಕ್ಷೇತ್ರದಲ್ಲಿ ಕೇವಲ ಯಕ್ಷಗಾನವಲ್ಲದೇ ಇತರ ಕ್ಷೇತ್ರಗಳಲ್ಲೂ ವಿಶಾಲವಾಗಿ ಬೆಳೆದ ವಟವೃಕ್ಷ ಧರೆಗುರುಳಿದೆ. ಇನ್ನು ಅದರ ನೆರಳಿನ ಕಲ್ಪನೆಯಲ್ಲಿ ಕಳೆಯಬೇಕು. ಗೋವಿಂದ ಭಟ್ಟರು ಇನ್ನಿಲ್ಲ ಎಂದರೆ ಯಕ್ಷಗಾನದ ಒಂದು ಅಂಗವನ್ನು ಕಳೆದುಕೊಂಡ ಅನುಭವ. ಅವರ ಆತ್ಮೀಯ ಅಕ್ಕರೆಯ ಮಾತು ಈಗಲೂ ಪ್ರತಿಧ್ವನಿಸುತ್ತಿದ್ದರೆ ಅದರ ಆಳವನ್ನು ಗುರುತಿಸುವುದು ಕಷ್ಟ. ಅಗಲಿದ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ.


No comments:
Post a Comment