ಭಾಗ – ೩
ಫಸಲು ತೆಗೆಯಲೆಂದು ರೈತ ಬೆಳೆ ಬೆಳೆಯುತ್ತಾನೆ. ಬೆಳೆದ ಬೆಳೆಗೆ ಭದ್ರವಾದ
ರಕ್ಷಣೆ ಬೇಕೆಂದು ಬೇಲಿ ಹಾಕುತ್ತಾನೆ. ಹಲವು ಸಲ ಭದ್ರವಾದ ಬೇಲಿಯ ಒಳಗೆ ಮುಖ್ಯಬೆಳೆಗಿಂತಲೂ ಬಲಿಷ್ಠವಾಗಿ
ಕಳೆ ಗಿಡಗಳೂ ಬೆಳೆಯುತ್ತವೆ. ಬೇಲಿ ಎಂಬುದು ಕೆಟ್ಟದ್ದಕ್ಕೂ ಒಳ್ಳೆಯದಕ್ಕೂ ಏಕಕಾಲದಲ್ಲಿ
ರಕ್ಷಣೆಯನ್ನು ಕೊಡುತ್ತದೆ. ಅಥವಾ ಒಳ್ಳೆಯದರ ರಕ್ಷಣೆಯನ್ನು ಉಪಯೋಗಿಸಿ ಕೆಟ್ಟದ್ದು ಜೀವ ಹಿಡಿದು
ಬದುಕುತ್ತವೆ. ಸಕಾಲದಲ್ಲಿ ಆ ಕಳೆಯನ್ನು
ಗುರುತಿಸಿ ಅದನ್ನು ನಿರ್ಮೂಲನ ಮಾಡುವ ಕರ್ಮದಲ್ಲಿ ರೈತ ಗಮನ ಹರಿಸಬೇಕು. ವಾಸ್ತವದ ಪ್ರಪಂಚ
ವ್ಯವಹಾರಗಳೇ ಹೀಗೆ ವಿಪರ್ಯಾಸ. ಕರ್ಮ ಚ್ಯುತನಾದಾಗ ಸಿಗುವ ಫಲ ಪೂರ್ಣವಾಗಿರುವುದಿಲ್ಲ.
ಮೋಹ ವಶನಾದ
ಅರ್ಜುನನಿಗೆ ಕೃಷ್ಣ ಕರ್ಮ ಬೋಧೆಯನ್ನು ಮಾಡುತ್ತಾನೆ. ಬಂಧು ವರ್ಗವ ಕೊಲ್ಲಲಾರೆ ಎಂದವನು
ಕೊಲ್ಲುವುದು ಏನು ಮತ್ತು ಕೊಲ್ಲುವುದು ಯಾರು ಎಂಬ
ಜಿಜ್ಞಾಸೆಗೆ ಒಳಗಾಗಿ ತನ್ನನ್ನು ಅರಿಯುವ ಹಂತಕ್ಕೆ ಬರುತ್ತಾನೆ. ನಾನು ಯಾರು? ಬಹುಶಃ
ಪ್ರತಿಯೊಬ್ಬರಲ್ಲೂ ಈ ವಿವೇಚನೆಯ ಕೊರತೆ ಈ ವ್ಯಾವಹಾರಿಕ ಪ್ರಪಂಚದಲ್ಲಿ ಬಾಧಿಸುತ್ತದೆ.
ವ್ಯಾವಹಾರಿಕ ಮತ್ತು ಪಾರಾಮಾರ್ಥಿಕದ ಮಧ್ಯೆ ಇರುವ ತನ್ನನ್ನು ಅರಿವ ಜ್ಞಾನ ಇದೆಯಲ್ಲ. ಅದನ್ನು
ಮರೆತುಬಿಡುತ್ತಾನೆ. ನಾನು ಯಾರು ನಾನು ಏನು ಎಂಬುದರ ಅರ್ಥ ಕಂಡುಕೊಂಡಾಗ ಈ ಪ್ರಪಂಚದ ಬಹಳಷ್ಟು
ಸಮಸ್ಯೆಗಳಿಗೆ ಪರಿಹಾರ ಸಾಧ್ಯವಾಗುತ್ತದೆ. ಯಾಕೆಂದರೆ ಈ ಜ್ಞಾನ ಮೂಡಿದಾಗ ಜೀವ ಭಾವದ ಆಶೆ ಕಳೆದು,
ಅಹಂಭಾವದಿಂದ ಮುಕ್ತರಾಗುವುದು ಮಾತ್ರವಲ್ಲ ಜೀವಿಸುವ ಪ್ರತಿಕ್ಷಣವನ್ನೂ ದುಗುಡ ದುಮ್ಮಾನ ಇಲ್ಲದ
ಜೀವನ ತನ್ನದಾಗಿಸುವ ಪ್ರೇರಣೆ ಬರುತ್ತದೆ. ಸುಖ ದುಃಖ ಎಲ್ಲವೂ ನಮ್ಮ ರಕ್ಷಣೆಯಲ್ಲೇ
ಬೆಳೆಯುತ್ತದೆ. ಎಂಬ ಜ್ಞಾನ ಮೂಡುವಾಗ ದುಃಖವನ್ನು ಬದಿಗಿಟ್ಟು ಸುಖದತ್ತ ಗಮನ ಹರಿಸುತ್ತಾನೆ. ಸುಖ
ಎಂದರೆ ಯಾವುದು ಎಂಬ ವಿವೇಚನೆಗೆ ತೊಡಗುತ್ತಾನೆ.
ಇಂದಿನ ವ್ಯಾವಹಾರಿಕ
ಪ್ರಪಂಚದ ಸಮಸ್ಯೆಗಳು ಕೇವಲ ಲೌಕಿಕ ಸಮಸ್ಯೆಗಳು. ಅದೇ ಪರಮಾರ್ಥದ ಸಮಸ್ಯೆಗಳಾಗಿ ಭಾಸವಾಗುತ್ತದೆ.
ಇದಕ್ಕೆ ಮೂಲ ಕಾರಣ ’ನಾನು’ ಏನು ಎಂದು ತಿಳಿಯದೇ ಇರುವುದು. ನನ್ನನ್ನು ನಾನು ತಿಳಿದುಕೊಂಡಿಲ್ಲ ಎಂಬ
ಪ್ರಾಥಮಿಕ ಜ್ಞಾನವೂ ಇರುವುದಿಲ್ಲ. ಆ ಅರಿವಿನ ದಾಹ ಸ್ಪುರಣೆಯಾದಾಗ ಲೌಕಿಕ ಪ್ರಪಂಚದ ಸತ್ಯದ
ಅರಿವಿನ ಹಾದಿಯನ್ನು ಅರಸುವ ಮನಸ್ಸಾಗುತ್ತದೆ. ಹಾಗಾಗಿ ಅರ್ಜುನನಿಗೆ ತನ್ನನ್ನು ಅರಿಯುವ ದಾಹ
ಮೂಡುತ್ತದೆ. ಅದಕ್ಕಾಗಿ ಶ್ರೀಹರಿಯಲ್ಲಿ ಕೇಳುತ್ತಾನೆ “ಕೃಷ್ಣ, ನಾನು ಯಾರು ನಾನು ಏನು ಎಂದು
ತಿಳಿವ ಪ್ರಚೋದನೆಯಾಗಿದೆ. ನಾನು ಯಾರು?”
ಆರು ನೀನೆಲೆ ಪಾರ್ಥ ಬಂಧು
ವರ್ಗಗಳೆಲ್ಲಿ | ತೋರಿಸು ರಣಕೆ ನಿಂದು| ಕಾರುಣ್ಯದಿಂದ ಶೋಕವಗೊಂಡು | ಪರಿಣಕೆ ಕೇಡಾದೆ ಹೇಸಿಗೆಯು||.
ಎಲ್ಲವರಲ್ಲಿಯೂ ಇರುವಂತಹ ಒಂದು ಭಾವ “ನಾನು”
ಇದನ್ನು ಎಲ್ಲರಲ್ಲಿಯೂ ಗುರುತಿಸಬಹುದು. ಅರ್ಜುನನಲ್ಲಿ ಇದ್ದ ನಾನು ಎಂದು ತಿಳುವಳಿಕೆ
ಬಂದಾಗ ಪ್ರತಿಯೊಬ್ಬರಲ್ಲಿ ಇರುವ ನಾನು ಅದೇ ಆಗಿರುತ್ತದೆ. ಇದು ಆತನಿಗೆ ಅರಿವಿಗೆ ಬಂದಿರುತ್ತದೆ.
ನಾನು ನನ್ನ ಜೀವ ನನ್ನ ಭಾವ ಹೀಗೆ ಪ್ರತ್ಯೇಕಿಸಿದ ಅರ್ಜುನನ ಸಮಸ್ಯೆಯಲ್ಲಿ ಹರಿವಿಶ್ಲೇಷಣೆ
ಹೀಗಿದೆ.
ಇಲ್ಲಿ ನನ್ನ ಜೀವ ನನ್ನ ಭಾವ ನನ್ನದು ನನ್ನದು ಎಂಬುದಕ್ಕೆ’ಮಮಕಾರ’ ಅಂತ ಹೇಳಬಹುದು. ನನ್ನದು ಅಂತ ನಾವು ಯಾವುದನ್ನು
ಹೇಳುತ್ತೇವೋ ಆ ವಸ್ತುವಿಗೆ ನಮಗೆ ಇದ್ದಂತಹ ಮಮಕಾರ ಇರಬಹುದೇ? ಅದು ನಮ್ಮ ಬಗ್ಗೆ ನನ್ನದು ಅಂತ ಹೇಳುವುದೇ
ಇಲ್ಲ ? ಯಾಕೆಂದರೆ ಅದಕ್ಕೆ ’ನಾನು’ ಎಂಬುದೇ
ಇಲ್ಲ ! ಈ ಪ್ರಪಂಚದಲ್ಲಿ ವಸ್ತುಗಳು ಎರಡು ವಿಧ ಒಂದು ಜಡ ಇನ್ನೊಂದು ಚೇತನ. ಜಡ ಎಂದರೆ ಉಂಟು
ಅಂತಲೇ ಅರ್ಥವಲ್ಲ. ವಾಸ್ತವದಲ್ಲಿ ಇದು ’ಉಂಟು’ ಎಂಬುದರಿಂದ ಉಂಟು ಅಂತ ತೋರುವುದು. ’ನಾನು’
ಎಂಬುದು ಗುರುತಿಸದೇ ಇರುವಾಗ ನನ್ನದು ಎಂಬುದು ಸೃಷ್ಟಿಯಾಗುತ್ತದೆ. ನನ್ನದು ಎಂಬುದು
ಸೃಷ್ಟಿಯಾಗುವುದು ಯಾವಾಗ? ನಾನು ಎಂಬುದನ್ನು ಪೂರ್ಣವಾಗಿ ತಾತ್ವಿಕವಾಗಿ ಗುರುತಿಸದೇ ಇರುವಾಗ. ನಾನು ಎಂದರೆ ಜೀವ ಭಾವ. ಇದು ಪ್ರತಿಯೊಬ್ಬರಲ್ಲಿಯೂ
ಇರುವಂಥದ್ದು. ಈ ಜೀವ ಭಾವವನ್ನು ’ಅಹಂ” ಅಹಂಕಾರ
ಎನ್ನಬಹುದು. ಅಹಂ ಎಂದರೆ ನಾನು ಎಂಬ ಭಾವನೆ. ನಿಜವಾದ ನಾನು
ಎಂಬುದಕ್ಕೆ ಅಹಂ ಇರುವುದೂ ಇಲ್ಲ. ಯಾಕೆಂದರೆ ನಾನು ಎಂಬುದು ಉಳಿಯುವುದಿಲ್ಲ ಎಂದು ಮೊದಲೇ
ಹೇಳಿಯಾಗಿದೆ. ನಾನು ಎಂಬುದಕ್ಕೆ ಅಸ್ತಿತ್ವವೇ ಇರುವುದಿಲ್ಲ. ಆಗ ಅಹಂ ಭಾವ ಎಲ್ಲಿ ಉಳಿಯುತ್ತದೆ? ಅವಾಗ ಮಮಕಾರವೂ
ಇರುವುದಿಲ್ಲ.
ಜೀವ ಹೋದಾಗ ನಾವು ಹೇಗೆ ನನ್ನ ಜೀವ ಅಂತಲೇ ಹೇಳ್ತೇವೆ. ನಾವು ಅಂತ
ಹೇಳುವುದಿಲ್ಲ. ಹಾಗಾದರೆ ನಾನು ಏನು? ದೇಹವಲ್ಲ, ಬುದ್ಧಿಯಲ್ಲ, ಚಿತ್ತವಲ್ಲ...ಅಹಂಕಾರವೂ ಅಲ್ಲ. ಅಹಂಕಾರ ಎಂದರೆ ಅದು ಜೀವ ಭಾವ, ಲೌಕಿಕವಾದ
ಪ್ರಕೃತಿಯಲ್ಲಿ ಬಿಂಬಿಸುವಂತಹುದು. ಕನ್ನಡಿಯಲ್ಲಿ ನಮ್ಮ ಬಿಂಬವನ್ನು ಕಂಡ ಹಾಗೆ. ಕನ್ನಡಿಗೆ
ಅನುಸರಿಸಿ ಆ ಬಿಂಬ ಕಾಣುತ್ತೇವೆ. ಚಂದ್ರ ಆಕಾಶದಲ್ಲಿ ಸ್ಥಿರವಾದ ರೂಪದಲ್ಲಿ ಇದ್ದರೂ
ಹರಿಯುತ್ತಿರುವ ನೀರಿನಲ್ಲಿ ಚಂದ್ರ ಬಿಂಬ ಅಲ್ಲೊಲ ಕಲ್ಲೋಲ ಸ್ಥಿಯಲ್ಲಿ ಕಂಡು ಬರುತ್ತದೆ. ಅದಕ್ಕೆ
ಕಾರಣ ನೀರು. ಹಾಗಿದ್ದರೂ ಚಂದ್ರನಿಗೆ ಸ್ಥಿರವಾದ ರೂಪ ಇದೆ ಅಂತ ನಾವು ಒಪ್ಪಿಕೊಳ್ಳುತ್ತೇವೆ ಯಾಕೆ
ಮೂಲ ಚಂದ್ರನನ್ನು ನಾವು ನೋಡಿರುವುದಿಲ್ಲ. ಹಾಗಾಗಿ
ಪ್ರಕೃತಿಯಲ್ಲಿ ಕಾಣುವ ಅಹಂ ಎಂಬುದು ಕೇವಲ ಅಹಂ ಭಾವ ಅಷ್ಟೇ. ಅದು ತತ್ವ ಅಲ್ಲ. ಈ ಅಹಂಭಾವವನ್ನು ’ನಾನು’ ಅಂತ
ಗುರುತಿಸಬೇಕು. ನಾನು ಎಂಬುದು ಸರ್ವನಾಮ. ಪ್ರತಿಯೊಬ್ಬರಲ್ಲಿಯೂ ಇರುವಂತಹ ಅಹಂಭಾವಕ್ಕೂ ಹಿಂದೆ
ಹೇಳಿದಂತಹ ಅಹಂ ಎಂಬ ತತ್ವ ಅದು ಸಮಾನವಾದ ಗುಣಕ್ರಮಗಳೂ ಇರುವಂಥಹುದು.
ಜಾಗೃತಾವಸ್ಥಯಲ್ಲಿ ನಮ್ಮ ಅಹಂ ಭಾವ ಸುಖ ದುಃಖ ಕಷ್ಟ ನಷ್ಟ ಎಲ್ಲವನ್ನು
ಅನುಭವಿಸುತ್ತದೆ. ಎನಾದರೂ ಅದರೆ ಅದು ನನಗಾಯಿತು ಎಂದು ತಿಳಿದುಕೊಳ್ಳುತ್ತೇವೆ. ಇದಕ್ಕೆ
ವಿಪರೀತವಾದದ್ದು ದ್ವಂದ್ವ ಕೆಲವೊಮ್ಮೆ ಕನಸಿನಲ್ಲೂ ಅನುಭವಿಸುತ್ತೇವೆ. ಕೆಲವೊಂದು ಸಲ
ಎಚ್ಚರದಲ್ಲಿ ಆದದ್ದನ್ನೇ ಸ್ವಪ್ನದಲ್ಲಿ ಕಾಣುತ್ತೇವೆ.
ಎರಡೂ ಸಂಭಂಧ ಇಲ್ಲವಾದರೂ ಹೋಲಿಕೆ ಕೆಲವೊಮ್ಮೆ ಇರುತ್ತದೆ. ಎಚ್ಚರದಲ್ಲಿ ಶ್ರೀಮಂತನಾದವನು
ಸ್ವಪ್ನದಲ್ಲಿ ಬಡವನಾಗಿ ಭಿಕ್ಷಾಟನೆ ಮಾಡುವುದೂ ಇರಬಹುದು. ಹಾಗಾದರೆ ಇದರಲ್ಲಿ ಸತ್ಯ ಯಾವುದು?
ಎರಡೂ ಸತ್ಯವೇ. ಎರಡು ಸ್ಥಿತಿಗಳೂ ಸತ್ಯವೇ. ಎಚ್ಚರದಲ್ಲಿ ಅದು ಸತ್ಯ ಸ್ವಪ್ನದಲ್ಲಿ ಇದು ಸತ್ಯ. ಆದರೆ
ಎರಡೂ ತೀರ ಭಿನ್ನ. ಇದಕ್ಕೆ ಅವಸ್ಥೆ ಅಂತ ಹೆಸರು. ಈ ಅವಸ್ಥೆಯಲ್ಲಿ ಅನುಭವಿಸುವವನು ಭೋಕ್ತ್ರು ಅದನ್ನೇ ಅಹಂಭಾವ ಅದನ್ನೇ ಜೀವ ಅಂತ ಹೇಳುವುದು. ಸುಷುಪ್ತಿಗೆ
ಬಂದಾಗ ಗಾಢ ನಿದ್ರೆ. ಗಾಢ ನಿದ್ರೆಯಲ್ಲಿ ದ್ವಂದ್ವ ಇರುವುದಿಲ್ಲ. ಸ್ವಪ್ನವೂ ಇಲ್ಲ. ಜಾಗರವೂ ಇರುವುದಿಲ್ಲ. ಮತ್ತೇನಿರುತ್ತದೆ? ಏನೂ
ಇರುವುದಿಲ್ಲ. ಈ ಸುಷುಪ್ತಿಯನ್ನೇ ದೈನಂದಿನ ಮರಣ ಅಂತ ಹೇಳುವುದು. ಎರಡರ ಅನುಭವ ಒಂದೇ
ಆಗಿರುತ್ತದೆ. ಈ ಅನುಭವ ಅರ್ಜುನನದ್ದೂ ಹೌದು ಭೀಷ್ಮನದ್ದು ಹೌದು ಇದು ಎಲ್ಲ ಪಶು ಪಕ್ಷಿಗಳ
ಸಾರ್ವತ್ರಿಕವಾದಂತಹ ಅನುಭವ. ಗಾಢನಿದ್ರೆಯನ್ನು ಆ ಜೀವಾತ್ಮ ಅನುಭವಿಸುತ್ತದೆ. ನಿದ್ದೆಯನ್ನು
ಶರೀರ ಅನುಭವಿಸುತ್ತದೆಯೇ? ಇಲ್ಲ. ನಿದ್ರೆಯನ್ನು ಅನುಭವಿಸುವುದೂ ಅಹಂಭಾವವೇ ಆಗಿರುತ್ತದೆ.
ಯಾಕೆಂದರೆ ನಿದ್ದೆ ಮಾಡಿದವನು ಮರುದಿನ ಎದ್ದು ಸುಖವಾಗಿ ನಿದ್ದೆ ಮಾಡಿದೆ ಎಂದು ಹೇಳುವುದು ಯಾಕೆ?
ಆ ನಿದ್ದೆಯನ್ನು ಅನುಭವಿಸುವುದು ಜೀವನೇ ಆಗಿರುತ್ತದೆ. ಅದೂ ಅಹಂಭಾವವೇ. ಆದರೆ
ನಿದ್ರೆಯಲ್ಲಿ ಅನುಭವ ಪರಿಣಾಮ ಏನು ಆಗಿರುವುದಿಲ್ಲ. ಕೇವಲ ಅನುಭವ. ದುಃಖವೂ ಇಲ್ಲ. ಸುಖವೂ ಇಲ್ಲ. ಇಲ್ಲಿ ದ್ವಂದ್ವ ಇಲ್ಲ. ಗಾಢ ನಿದ್ರೆಯ
ಅನುಭವ ಎಲ್ಲರದ್ದೂ ಒಂದೇ ಆಗಿರುತ್ತದೆ. ಮರುದಿನ ಮರಣ ದಂಡನೆ ವಿಧಿಸಬೇಕಾದ ಖೈದಿಯೂ ವಿಧಿಸುವ
ನ್ಯಾಯಾಧೀಶನು ಮೊದಲ ದಿನದ ಗಾಢನಿದ್ರೆಯಲ್ಲಿ ಒಂದೇ ಅನುಭವವನ್ನು ಪಡೆಯುತ್ತಾರೆ. ಹಾಗಾದರೆ ಗಾಢ
ನಿದ್ರಾವಸ್ಥೆಯಲ್ಲಿ ಸರ್ವ ಜೀವರ ಅನುಭವ ಒಂದೇ ಅಂತ ಆಗ್ತದೆ.
ಈಗ ಅರ್ಜುನ ಮಾನಸಿಕವಾಗಿ ಒಂದು ನಿರ್ಣಯಕ್ಕೆ ಬರುತ್ತಾನೆ. ಈ
ಮೊದಲು ನಾನು ಶತ್ರುಗಳನ್ನು ಕೊಲ್ಲುತ್ತೇನೆ ಅಂತ
ಹೇಳುವಾಗ, ಇಲ್ಲಿ ನಾನು ಬೇರೆ ಶತ್ರು ಬೇರೆ ಅಂತ ಭಾವಿಸಿ ಹೇಳಿದ್ದ. ವಾಸ್ತವದಲ್ಲಿ ತಾನು ಭೀಷ್ಮ
ದ್ರೋಣ ಅಥವ ಯಾರನ್ನೆ ಆಗಲಿ ಅವರನ್ನು ಆತ ಗುರುತಿಸಿರುವುದು ಕೇವಲ ಜಡವಾದ ಶರೀರವನ್ನು
ಹೊಂದಿಕೊಂಡು. ಅಂದರೆ. ಕೇವಲ ಶರೀರದಿಂದ ಮಾತ್ರ ಅವರು ಭೀಷ್ಮ ದ್ರೋಣಾದಿಗಳಾಗಿ
ಗುರುತಿಸಲ್ಪಡುತ್ತಾರೆ. ಆದರೆ ಜಡವಾದ ಶರೀರವೇ ಅವರಲ್ಲ. ಅದು ಸತ್ಯವೂ ಅಲ್ಲ. ಭೀಷ್ಮನ ತಲೆ
ಕಡಿದಾಗ.. ಅದು ಭೀಷ್ಮನ ಹೆಣ ಅಂತ ಹೇಳುತ್ತಾರೆಯೇ ಹೊರತು ಅದು ಭೀಷ್ಮ ಅಂತ ಹೇಳುವುದಿಲ್ಲ.
ಹಾಗಾದರೆ ಭೀಷ್ಮ ಅಂತ ಹೇಳವುದು ಯಾವುದನ್ನು? ಜಡವಾದ ಹೆಣ ಬೇರೆ. ಅದರಲ್ಲಿ ಇದ್ದ ಆತ್ಮ ಬೇರೆ. ಶರೀರಕ್ಕೆ
ಅವಸ್ಥಾ ಭೇದ ಉಂಟು. ಅದು ಹುಟ್ಟುತ್ತದೆ. ಬೆಳೆಯುತ್ತದೆ ಸಾಯುತ್ತದೆ. ಒಳಗಿರುವ ಜೀವಕ್ಕೆ ಅದು
ಯಾವುದೂ ಇಲ್ಲ. ಒಳಗಿನ ಜೀವ ಬೇರೆ ಹೊರಗಿನ ಶರೀರ ಬೇರೆ. ಹಾಗಾದರೆ ಮೊದಲೇ ಜಡ ಎಂದು ತಿಳಿದ
ದೇಹವನ್ನು ಕೊಲ್ಲುವುದು ಎಂದರೆ ಅದು ಅರ್ಥ ಹೀನ. ಒಂದು ಕಲ್ಲನ್ನು ಸಾಯಿಸುವಂತೆ. ಹಾಗೆ ಒಳಗಿದ್ದ
ಅತ್ಮ, ಅದನ್ನು
ಕೊಲ್ಲುವುದಕ್ಕೆ ಸಾಧ್ಯವೇ? ಇಲ್ಲ. ಸಾಧ್ಯವೇ ಇಲ್ಲ. ಆದುದರಿಂದ ಕೊಲ್ಲುತ್ತೇನೆ ಎಂಬ ಅರ್ಜುನನ
ನಂಬುಗೆ ಅದು ಅಸಂಗತ?
ಯಾವುದಕ್ಕೆ ನಾಶ ಇದೆಯೋ ಅದನ್ನು ಮತ್ತೊಬ್ಬ ನಾಶ ಮಾಡಬೇಕಾದ್ದಿಲ್ಲ. ಜೀವವನ್ನೂ
ನಾಶ ಮಾಡುವ ಹಾಗಿಲ್ಲ. ಇಲ್ಲಿ ಅಹಂಭಾವವೇ ಜೀವವಾಗಿ ತೋರಿಸಿದ್ದು. ಈ ಅಹಂಭಾವ ಎಂಬ ಜೀವಭಾವಕ್ಕೂ
ನಾಶವಿದೆ. ಪ್ರಕೃತಿಯಲ್ಲಿ ಪ್ರತಿಬಿಂಬಿಸುವ ಆವರಣ ವಿಕ್ಷೇಪದಿಂದ ಕೂಡಿದ ಒಂದು ಅವಸ್ಥೆಯಲ್ಲಿ
ಮಾತ್ರಾ ಆನಂದವನ್ನು ಅನುಭವಿಸುವ ಅಹಂಕಾರ ಜೀವಭಾವ. ಆದಕಾರಣ ಜೀವರು ಅಂತ ಹೇಳಿಕೊಳ್ಳುವ
ಅಹಂಭಾವಕ್ಕೂ ಗಾಢನಿದ್ರೆಯಲ್ಲಿ ಒಂದೇ ಅನುಭವ ಬರುತ್ತದೆ. ಆ ಜೀವಭಾವಕ್ಕೆ ಅಧಿಷ್ಠಾನ ಅದರ
ಒಳಗಿನದ್ದು. ಅದು ಗಾಢನಿದ್ದೆಯನ್ನು ಅನುಭವಿಸುವುದಿಲ್ಲ, ಎಚ್ಚರವನ್ನೂ ಅನುಭವಿಸುವುದಿಲ್ಲ.
ಸ್ವಪ್ನವನ್ನೂ ಅನುಭವಿಸುವುದಿಲ್ಲ. ಎಲ್ಲದಕ್ಕೂ ಅದು ಸಾಕ್ಷಿಯಾಗಿರುತ್ತದೆ. ಆದುದರಿಂದ ಈ ಅವಸ್ಥೆಯಿಂದ
ಜಾಗೃತಗೊಂಡ ಜೀವಕ್ಕೆ ಅದರಿಂದಲಾಗಿ ಪ್ರಜ್ಞೆ ಹುಟ್ಟುವುದು. ಹಾಗಾಗಿ ಅವಸ್ಥೆಯ ಅನುಭವನ್ನು ಅದು
ಕಂಡುಕೊಳ್ಳುತ್ತದೆ. ’ಸುಖವಾಗಿ ನಾನು ನಿದ್ದೆ ಮಾಡಿದೆ’ ಅಂತ ನಾವು ಹೇಳುವುದಿಲ್ಲವೇ? ಅದಕ್ಕೆ ’
ಜ್ಞಾನ ’ ಅಂತ ಹೆಸರು. ಆ ಜ್ಞಾನ ಸ್ವರೂಪಕ್ಕೆ
ನಾವಿಲ್ಲಿ ಹೇಳುವುದು ’ಸತ್’, "ನಾಸತೋ ವಿದ್ಯತೇ
ಭಾವೋ” ಅಸ್ತಿತ್ವದಲ್ಲಿ ಇಲ್ಲದೇ ಇರುವುದು
ಉಳಿಯುವುದಿಲ್ಲ. ಉಳಿಯುವಂತದ್ದು ಶಾಶ್ವತವಾಗಿ ಬದಲಾವಣೆ ಹೊಂದುವುದಿಲ್ಲ. ಇಲ್ಲಿ ಆತ್ಮವೇ
ಶಾಶ್ವತ. ಅದಕ್ಕೆ ಬದಲಾವಣೆ ಇಲ್ಲ. ಈ
ಗಾಢನಿದ್ದೆ, ಸ್ವಪ್ನ ಮತ್ತು ಎಚ್ಚರ ಈ ಮೂರು ಅವಸ್ಥೆಯನ್ನು ಅನುಭವಿಸುವ ಅಹಂಭಾವ, ಅದು ಉಪಾಧಿಯ
ಸಂಬಂಧದಿಂದ ಬಂದದ್ದೇ ಹೊರತು ಅದರ ಸ್ವಭಾವ ಗುಣದಿಂದ ಅಲ್ಲ. ಆದುದರಿಂದ ಇಲ್ಲಿ ಕೊಲ್ಲುವವನು
ಯಾರು? ಕೊಲ್ಲಲ್ಪಡುವವನು ಯಾರು? ಆದುದರಿಂದ ಮೊದಲೇ ಚೇತನ ಇಲ್ಲದಂತಹ ಆನಾತ್ಮವಾದ ವಸ್ತುಗಳು, ಈ ವಸ್ತುಗಳಿಗೆ ನಿಜವಾದ ಜ್ಞಾನದಲ್ಲಿ ಅಸ್ತಿತ್ವವೇ ಇಲ್ಲದಿರುವಾಗ ಅದನ್ನು ಕೊಲ್ಲುವುದು
ಅದಂರೆ ಅರ್ಥಹೀನವಲ್ಲವೇ?
ಕತ್ತಲೆಯಲ್ಲಿ ಮಾರ್ಗ
ಕ್ರಮಣ ಮಾಡುವಾಗ ದಾರಿಯಲ್ಲಿ ಬಿದ್ದ ಸರ್ಪವನ್ನು ಹೋಲುವ
ಯಾವೂದೋ ಒಂದು ಉಪಾಧಿ ಅದು ಹಗ್ಗವೋ ಇನ್ನೊಂದೋ ಆಗಿರಬಹುದು, ಅದನ್ನು ಹಾವು ಅಂತ
ಭ್ರಮಿಸಿ, ಬೆಳಕನ್ನು ತಂದಾಗ ಭ್ರಮೆ ಕರಗಿ ಅದು ನಿರ್ಜೀವ ವಸ್ತು ಎಂದು ಅರಿವಾಗುತ್ತದೆ. ಆ
ಬೆಳಕಿನಿಂದ ಅರ್ಥಾತ್ ಜ್ಞಾನದಿಂದ ಆ ವಸ್ತುವನ್ನು ಕೊಂದ ಎನ್ನುವುದಕ್ಕಾಗುವುದೇ? ಕೊಲ್ಲುವುದಕ್ಕೆ ಆ ಇವನು ಕಂಡ ಹಾವು ಹುಟ್ಟಿರಬೇಕಲ್ಲ.
ಹುಟ್ಟದೇ ಇದ್ದ ಹಾವನ್ನು ಕೊಲ್ಲುವುದೆಲ್ಲಿಂದ ? ಹಾಗಾಗಿ ಇವುಗಳೆಲ್ಲ ಮಧ್ಯದಲ್ಲಿ
ವ್ಯಕ್ತವಾಗುವಂತವುಗಳು. ಮಧ್ಯದಲ್ಲಿ ಕಂಡ ಇವುಗಳು ಹುಟ್ಟಲೇ ಇಲ್ಲ ಮತ್ತೆ ಅದಕ್ಕೆ ಸಾವು
ಎಲ್ಲಿಂದ? ಯಾವುದಕ್ಕೆ ಹುಟ್ಟು ಇಲ್ಲ ಸಾವು ಇಲ್ಲ ಅದು ನಿಜವಾದಂತಹ ’ನಾನು’.
ಈ ನಾನು ಎಂಬುದಕ್ಕೆ
ಇಲ್ಲಿ ಕನ್ನಡಿಯ ಉದಾಹರಣೆಯನ್ನು ನೀಡುತ್ತಾರೆ.
ಮೂಲಸ್ವರೂಪ ಕನ್ನಡಿಯಲ್ಲೋ ಜಲದಲ್ಲೋ ಪ್ರತಿಬಿಂಬಿಸಿ ಕಾಣುತ್ತದೆ. ಹಲವಾರು ತರಹದ
ಕನ್ನಡಿಗಳಲ್ಲಿ ಒಂದೊಂದು ವಿಧದಲ್ಲಿ ಕಾಣುತ್ತದೆ. ಚಪ್ಪಟೆಯಾಗಿಯೋ ಉದ್ದವಾಗಿಯೋ ಕಾಣುತ್ತದೆ. ಇದು
ಕನ್ನಡಿಯ ದೋಷವಲ್ಲ. ಕನ್ನಡಿಯ ಹಿಂದೆ ಇರುವ ಲೇಪನ. ಆ ಲೇಪನ ತೆಗೆದರೆ ಮತ್ತೆ ಪ್ರತಿಬಿಂಬವೇ
ಇರುವುದಿಲ್ಲ. ಎಲ್ಲಿಯವರೆಗೆ ಈ ಲೌಕಿಕವಾದ ವಸ್ತುಗಳನ್ನು ಈ ಉಪಾಧಿಗಳಿಂದ ನೋಡುತ್ತೇವೆಯೋ ಆವಾಗ
ಇವುಗಳೆಲ್ಲ ಮಸುಕು ಮಸುಕಾಗಿ ಕಾಣುವುದು.
ಈಗ ಅರ್ಜುನನಿಗೆ
’ಸದ್ವಸ್ತು ಆತ್ಮಾ’ , ಈ ಲೋಕದ ಸತ್ಯ ಮತ್ತು
ಅಸತ್ಯದ ಜ್ಜಾನ ಉಂಟಾಗುತ್ತದೆ. ಆತ್ಮ ಒಂದೇ ಸತ್ಯ. ಅದೊಂದೇ ಅಸ್ತಿತ್ವದಲ್ಲಿ ಇರುವುದು. ಮಿಕ್ಕೆಲ್ಲವು
ಮಿಥ್ಯ ಅಂದರೆ ಅಸತ್ಯವಾದವುಗಳು ಎಲ್ಲವೂ ಭ್ರಮೆ .
ಈ ದೇಹ ಈ ಬಂಧುವರ್ಗ ಇದೆಲ್ಲ ಮಿಥ್ಯ ಭ್ರಮೆ, ಭ್ರಮಾಧೀನವಾದದ್ದು ಎಂಬ ಅರಿವಾದಾಗ ಅರ್ಜುನ ಮತ್ತಷ್ಟು ವಿಷಾದಕ್ಕೆ
ಒಳಗಾಗುತ್ತಾನೆ. ಈ ಬಂಧು ಸ್ನೇಹ ಈ ಮೋಹ ವೈಷಮ್ಯ ಈ ಉಪಾಧಿಗಳು ಭ್ರಮೆ ಎಂದಾದರೆ, ಆಭ್ರಮೆಯಿಂದ ಹೊರಬರಬೇಕು. ಎಲ್ಲವೂ ಅಸತ್ಯ ಎಂದಾದರೆ ಎಲ್ಲವನ್ನು ತ್ಯಾಗ ಮಾಡುವುದೇ
ಸೂಕ್ತ. ತ್ಯಾಗ ಮಾಡಿ ಕಾಡಿಗೆ ಹೋಗುವುದೇ ಲೇಸು.
ಪಾರ್ಥನ ಈ
ಜಿಜ್ಞಾಸೆಯನ್ನು ಕೃಷ್ಣ ಪರಿಹರಿಸುತ್ತಾನೆ. ಬಂಧುಗಳಾಗಿ
ಕಂಡದ್ದು ಭ್ರಾಂತಿ ಎಂದಾದರೆ ಇವುಗಳು
ಬ್ರಹ್ಮಮಯವಾಗಿ ಕಾಣಬೇಕು. “ಸರ್ವಂ ಖಲುವಿದಂ ಬ್ರಹ್ಮಾ” ಬ್ರಹ್ಮವನ್ನು ಅರಿಯಬೇಕು. ಭ್ರಹ್ಮ ವನ್ನು ಅರಿಯಬೇಕಾದರೆ
ಬ್ರಹ್ಮಮಯವಾಗಿ ಕಾಣಬೇಕು. ಅದು ಕಾಣಬೇಕಿದ್ದರೆ ಬ್ರಹ್ಮವೇ ಆಗಬೇಕು. ಆ ಬ್ರಹ್ಮ ಜ್ಞಾನ
ಅರಿಯಬೇಕಾದರೆ, ಬ್ರಹ್ಮವೇ ಆಗಬೇಕಾದರೆ ಸಾಕಷ್ಟು ಅಡೆತಡೆಗಳೀದ್ದಾವೆ. ಜಗತ್ತಿನ ಹುಟ್ಟು ಸಾವು
ಎಂದರೆ ಅದು ಶೃಂಖಲೆಯ ಹಾಗೆ. ಹುಟ್ಟುತ್ತಾನೆ ಸಾಯ್ತಾನೆ,
ಮತ್ತೆ ಹುಟ್ಟುತ್ತಾನೆ ಹಾಗಾದರೆ ಈ ಹುಟ್ಟು ಸಾವಿನ ಆದಿ ಯಾವುದು ಅದು ಗೊತ್ತಿಲ್ಲ.
ಅನಾದಿ. ಅನಾದಿ ಎಂದರೆ ಅದು ಅಸತ್ಯ ಎಂಬರ್ಥವೂ ಇದೆ. ಅಸತ್ಯ ಎಂದರೆ ಕಣ್ಣಿಗೆ ಕಾಣದಿದ್ದದ್ದು. ಇದನ್ನು
ತಿಳಿಯಬೇಕಾದರೆ ಆ ಜ್ಞಾನವನ್ನು ಅರಿಯಬೇಕಾದರೆ ಕರ್ಮವನ್ನು ಅರಿಯಬೇಕು.
ಇನ್ನು ಕೃಷ್ಣ ಕರ್ಮದ ಬಗ್ಗೆ ತಿಳಿಸಿಕೊಡುತ್ತಾನೆ. ಆತ್ಮಸತ್ಯ
ಆತ್ಮ ,,ಸಾವು ಇದನ್ನೇ ಯೋಚಿಸಿ ಐಹಿಕ ಲೋಕದಲ್ಲಿ ಕಾಣುವವುಗಳನ್ನು ಭ್ರಾಂತಿ ಎಂದು ತಿಳಿದು ಈ
ಭ್ರಮಾಲೋಕದಿಂದ ಪಲಾಯನ ಮಾಡುವ ಹಾಗಿಲ್ಲ. ಪಾರಮಾರ್ಥಿಕ ಎಂದು ಜಗತ್ತಿನಲ್ಲಿ ಯಾವುದನ್ನು
ತಿಳಿಯುತ್ತೇವೋ ಅದರತ್ತ ಎಲ್ಲವನ್ನು ತ್ಯಜಿಸಿ ಹೋಗುವುದಲ್ಲ. ಹುಟ್ಟಿದ ಗಿಡ ಮರವಾಗಿ ಸತ್ತು
ಕಾಷ್ಠವಾಗುತ್ತದೆ. ಅದು ಮೊದಲೇ ಅರಿವಾಗಿ ಕಾಷ್ಠವಾಗುವುದಕ್ಕಾಗುತ್ತದೇಯೇ. ಬದುಕಬೇಕು
ಬದುಕಬೇಕಾದರೆ ಈ ಲೌಕಿಕ ಕರ್ಮ ಸಂಬಂಧವನ್ನು ಹೊಂದಿಕೊಳ್ಳಬೇಕು. ಎಲ್ಲವನ್ನು ಬಿಟ್ಟು ಕಾಡಿಗೆ
ಹೋಗುತ್ತೇನೆ ಎಂದಾಗ ಕಾಡಿಗೆ ಹೋಗಿ ಏನು ತಿನ್ನುವುದು? ಬದುಕಬೇಕಾದರೆ ತಿನ್ನಬೇಕು. ತಿನ್ನುವುದು ಎಂದಾಗ ಅದು ಈ ಕರ್ಮಕ್ಕೆ ಬಂಧನದ ಸಂಕೇತ.
ಅನಾದಿಯನ್ನು
ತಿಳಿಯಬೇಕಾದ್ರೆ ಅದು ನಮ್ಮ ಬುದ್ಧಿಗೆ ನಮ್ಮ ಹೃದಯದ ಮೂಲಕವಾಗಿ ಮುಟ್ಟಬೇಕು. ಬ್ರಹ್ಮ ಒಂದೇ
ಸತ್ಯ. ಬ್ರಹ್ಮ ಮಯವಾಗಿ ಕಾಣಿಸಬೇಕಾದರೆ ಅದು ಅನುಭವಕ್ಕೆ ಬರಬೇಕು. ಆ ಅನುಭವ ಹೃದಯದಲ್ಲಿ
ಹುಟ್ಟಬೇಕು. ಆ ಅನುಭವ ಹೃದಯದಲ್ಲಿ ಹುಟ್ಟದಿರುವುದಕ್ಕೆ ಕಾರಣ ಅಜ್ಞಾನ. ಈ ಅಜ್ಞಾನ ಉಂಟು ಅಂತ
ತಿಳಿದು ಅದಕ್ಕೆ ಒಂದು ಉಪಾಧಿಯನ್ನು ಸೃಷ್ಟಿಸುವುದು. ಇರುಳು ಹಗ್ಗವೇ ಎಂದು ಗೊತ್ತಾದವನಿಗೆ ಹಾವು ಹೇಗೆ
ಹುಟ್ಟಿತು? ಅಂತ ಕೇಳಿದರೆ. ಅದು ಅಜ್ಞಾನದಿಂದ
ಹುಟ್ಟಿತು. ಈ ಅಜ್ಞಾನ ಯಾವಾಗ ಹುಟ್ಟಿತು? ಹಗ್ಗದಲ್ಲಿ ಹಾವನ್ನು ಕಂಡಾಗಲೇ ಅಜ್ಞಾನ
ಹುಟ್ಟಿಕೊಂಡಿತು. ಈ ಅಜ್ಞಾನ ಯಾವಾಗ ಹುಟ್ಟಿತೋ ಅಲ್ಲಿಂದ ತೊಡಗಬೇಕು. ಈ ಅಜ್ಞಾನ ಯಾಕೆ
ಹುಟ್ಟಿತು? ಇದನ್ನು ಅರಿಯಬೇಕಾದರೆ ಒಂದು
ಮಾಧ್ಯಮವನ್ನು ಸೃಷ್ಟಿಸಬೇಕು.
ಈ ಮಾಧ್ಯಮ ಯಾವುದು? ಅದರ ಸೃಷ್ಟಿ ಹೇಗೆ?
(ಇನ್ನೂ ಇದೆ
ಮುಂದಿನಭಾಗದಲ್ಲಿ)

No comments:
Post a Comment