“ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ” ಎಂಬ ಭಗವಂತನ ನಿಯತಿಗೆ ಹಲವು
ಸವಾಲುಗಳು ಎದುರಾಗುತ್ತದೆ. ಕೌರವ ಮೊದಲಾಗಿ ಹರಿಯಲ್ಲಿ ಕೇಳಿಬಿಡುತ್ತಾನೆ ಚಕ್ರವನ್ನು
ಧರಿಸದೇ ಇರಬೇಕು. ಆದರೆ ಹರಿಗೆ ಧರ್ಮ ಸ್ಥಾಪನೆಗೋಸ್ಕರ ತಾನು ಹೋರಾಡದೆ ತನ್ನ ಹೋರಾಟ ಸಂಘಟಿಸಬೇಕು.
ಆ ಮೂಲಕ ಅಧರ್ಮಿಯರನ್ನು ನಾಶ ಮಾಡಿ ಧರ್ಮವನ್ನು ಸ್ಥಿರವಾಗಿಸಬೇಕು. ಹೋರಾಟದ ಹಾದಿಯಲ್ಲಿ ಎದುರಾಗುವ ಸವಾಲುಗಳಲ್ಲಿ ಕೌರವಾದಿಗಳ ಯುದ್ದ ತಂತ್ರಗಳನ್ನು ಎದುರಿಸುವ
ಸವಾಲುಗಳು ಒಂದು ಬಗೆಯಾದರೆ ತಾನು ಯಾವುದನ್ನು ಅಯುಧವಾಗಿ ಪರಿಗಣಿಸಿ ಸ್ವೀಕರಿಸಿರುವೆನೋ ಅದನ್ನು ಸಿದ್ಧಗೊಳಿಸಿ
ಜಾಗ್ರತಗೊಳಿಸುವುದು ಇನ್ನೊಂದು ಸವಾಲು. ಅವೆಲ್ಲದರ ನಡುವೆ ಅರ್ಜುನನಿಗೆ
ಆವರಿಸಿದ ಈ ಮೋಹ ಅದರಿಂದ ಉಂಟಾದ ಕ್ಲೈಬ್ಯ ಅಥವಾ ಷಂಢತನ ಇದನ್ನು ಸಹ ಸವಾಲಾಗಿ ಪರಿಗಣಿಸಬೇಕು.
ಇದಕ್ಕಾಗಿಯೆ ಅರ್ಜುನನಿಗೆ ಧರ್ಮ ಕರ್ಮಗಳ ಸೂಕ್ಷ್ಮದ ಜಿಜ್ಞಾಸೆಗಳಿಗೆ, ಧರ್ಮ ಕ್ಷೇತ್ರ ಕುರುಕ್ಷೇತ್ರದಲ್ಲೇ ಉತ್ತರವನ್ನು ತೋರಿಸುತ್ತಾನೆ ಶ್ರೀ ಹರಿ. ಈ ಹಿನ್ನೆಲೆಯಲ್ಲಿ ಗೀತೋಪದೇಶ ಪ್ರಸಂಗದ ಕೃಷ್ಣನ ಪಾತ್ರವನ್ನು ವಹಿಸುವುದು ಒಂದು ಸವಾಲೇ ಆಗಿಬಿಡುತ್ತದೆ. ಒಂದು ಕ್ಷಿಷ್ಟ ವಿಷಯದ ಪಾಠ ಪುಸ್ತಕವಿರುತ್ತದೆ. ವಿದ್ಯಾರ್ಥಿಗೆ
ಅದನ್ನು ಮೊದಲಾಗಿ ಅದೆಷ್ಟು ಬಾರಿ ಓದಿದರೂ ಅರ್ಥವಾಗುವುದಿಲ್ಲ. ಆದರೆ ಅಧ್ಯಾಪಕನಾದವನು
ಆ ಪಾಠವನ್ನು ಉಪದೇಶಿಸಿದ ನಂತರ ಅದು ಸುಲಭವಾಗಿ ಗ್ರಾಹ್ಯವಾಗಿಬಿಡುತ್ತದೆ. ಈ ಪ್ರಸಂಗವನ್ನು ಕೇಳಿದ ಮೇಲೆ ಗೀತೆಯ ವಿಚಾರ
ಸರಳವಾಗಿ ಅರ್ಥವಾಗಿಬಿಡುತ್ತದೆ.
“ಕೆರಳಿ ಮುರಹರನಾಗಲು ಎಲೆ ನರನೇ ಧುರದಿ
ಮರುಕವಿರಿಸುವರು........................”
ಅಲ್ಲಿ ಸೇರಿದ್ದ ಆ ಹನ್ನೊಂದು ಅಕ್ಷೋಹಿಣಿ
ಸೇನೆಯಲ್ಲಿ ಒಬ್ಬರೇ ಒಬ್ಬರು ಶತ್ರುಗಳನ್ನು
ಕಾಣಲಾರದ ಸ್ಥಿತಿ ಅರ್ಜುನನದ್ದು. ಆತನಿಗೆ ಆವರಿಸಿದ ಮೋಹ ಕೃಷ್ಣನಿಗೆ ತನ್ನ ಹಾದಿಯ ಮುಳ್ಳಾಗಿ
ಭಾಸವಾಗುತ್ತದೆ. ಆತನ ಮೋಹವನ್ನು ಕೃಷ್ಣ ವಿಶ್ಲೇಷಿಸುವ ರೀತಿ ಹೀಗೆ. ವಿರೋಧಿ ಪಾಳಯದಲ್ಲಿ
ಶತ್ರುಗಳು ಗೋಚರಿಸುವುದಿಲ್ಲ ಎಂಬುದು ಅರ್ಜುನನ ವೈಯಕ್ತಿಕ ಭಾವ. ಯಾಕೆ? ಇಲ್ಲಿ ಅರ್ಜುನನಲ್ಲದೇ
ಇದ್ದವರದ್ದು ದೃಷ್ಟಿದೋಷ ಎಂದು ಪರಿಗಣಿಸಬಹುದೇ? ಅರ್ಜುನನಲ್ಲದೇ ಪ್ರತಿಪಕ್ಷವಾಗಿ ಇನ್ನು
ಇದ್ದಾರೆ.ಅವರೆಲ್ಲರ ದೃಷ್ಟಿಯುಲ್ಲಿ ವೈರಿಗಳು ಗೋಚರಿಸುತ್ತಾರೆ. ಈ ಇಷ್ಟೂ ಜನರಿಗೆ ವೈರಿಗಳು
ಕಾಣಿಸುತ್ತಾರೆ. ಅರ್ಜುನನಿಗೆ ಮಾತ್ರ ವಿರೋಧಿಗಳೇ ಕಾಣುವುದಿಲ್ಲ.
ಆ ಮುದುಕ ಧೃತರಾಷ್ಟ್ರ
ಮಹಾರಾಜ, ಆತನಿಗೆ ಜನ್ಮ ಪರ್ಯಂತ ಏನನ್ನೂ ನೋಡುವ ಬಯಕೆ ಆಗಲಿಲ್ಲ. ಹೆಂಡತಿ ಕಪ್ಪೋ ಬಿಳಿಯೋ
ಅದನ್ನು ತಿಳಿವ ಆಶೆ ಉಂಟಾಗಲಿಲ್ಲ. ಕೌಟುಂಬಿಕವಾದ ಸಾಂಸಾರಿಕವಾದ ಯಾವುದನ್ನೂ ಕಾಂಚನವಾಗಲೀ
ಕಾಮಿನಿಯಾಗಲೀ ನೋಡುವ ಬಯಕೆ ಹುಟ್ಟಲಿಲ್ಲ. ಹೋಗಲಿ ತನ್ನನ್ನು ಸ್ವತಹ ನೋಡುವ ಆಶೆಯೂ ಹುಟ್ಟದವನಿಗೆ
ಕೊನೆಯಲ್ಲಿ ಹುಟ್ಟಿದ ಆಶೆ, ಯುದ್ದವನ್ನು
ಕಾಣಲಾರೆನಲ್ಲಾ? ಹಿರಿಯರಾದವರಿಗೆ ಮಕ್ಕಳು ಜಗಳವಾಡುವುದನ್ನಾಗಲೀ ಸಾಯುವುದನ್ನಾಗಲಿ ಕಾಣುವ ಬಯಕೆ
ಹುಟ್ಟುವುದಿಲ್ಲ. ಅವುಗಳು ಒಂದು ವೇಳೆ ಬಂದರೂ ಇದ್ದ ಕಣ್ಣನ್ನು ಮುಚ್ಚಿ ನೋಡಲಾರೆ ಎಂದು
ಕುಳಿತಿರಬೇಕಾದಲ್ಲಿ ಇವನಿಗೆ ಅದನ್ನು ಬಲವಂತವಾಗಿ ಕಾಣುವ ಬಯಕೆ...!!! ಅದೂ ಹೇಗೆ ವರ ಪಡೆದು
ಶ್ರಮ ವಹಿಸಿ ಮಕ್ಕಳು ಜಗಳಾಡುವುದನ್ನು ದೃಷ್ಟಿ ಇಲ್ಲದ ಕಣ್ಣಿನಿಂದ ನೋಡುವ ಹಂಬಲ. ಧೃತರಾಷ್ಟ್ರನ
ಈ ಯುದ್ಧದ ಹಂಬಲವೇ ಕೌರವಾದಿಗಳ ರಕ್ತದಲ್ಲೂ ಹರಿದು ಬಂತು. ಇಲ್ಲವಾದರೆ ಅವನೇ ಬಿಟ್ಟುಕೊಟ್ಟು,
ವಾಸಮಾಡಲು ಕಳುಹಿಸಿದ ಅರಗಿನಾಲಯ ಸುಟ್ಟು ಹೋಯ್ತು ಆನಂತರ ಪಾಂಡವರು ಸುಟ್ಟು ಹೋದರು ಎಂದು
ಕಣ್ಣೀರು ಹಾಕಿದ. ಕುರುಡ ಕಣ್ಣೀರು ಹಾಕಿದ. ಅವನ
ಕಣ್ಣೀರು ಅವನಿಗೇ ಕಾಣಿಸದು. ಅದರಂತೇ ಆ ಪ್ರಕರಣದ ಸತ್ಯಾಸತ್ಯತೆಯನ್ನು, ಹಸ್ತಿನಾವತಿಯಲ್ಲಿ ತಮ್ಮ ಅರಮನೆಗೆ ಬೆಂಕಿ ಕೊಟ್ಟವನಾರು?
ಇದನ್ನೆಲ್ಲ ವಿಚಾರಣೆ ಮಾಡುವ ಯೋಚನೆಯೂ
ಕಾಣಲಿಲ್ಲ.
ದ್ರೌಪದಿಗೆ ತಾನೇ
ಸ್ವತಃ ವರವಾಗಿ ನೀಡಿದ ರಾಜ್ಯವನ್ನು ಸುಹ್ರುದ್ಯೂತವಾಡಿ ಪುನಃ ವಶ ಮಾಡಿಕೊಂಡ ಮಕ್ಕಳನ್ನು ನೋಡಿ
ಕುರುಡ ನಿಜವಾಗಿಯೂ ಕಣ್ಣು ಮುಚ್ಚಿದ. ಮಹಾ ಪಾತಕಿಗಳಾದ ದುರ್ಯೋಧನಾದಿಗಳು, ಇನ್ನು ಅಜ್ಜ ಭೀಷ್ಮ, ಪಾಂಡವರ ಬಗ್ಗೆ ಪ್ರೀತಿ ಉಂಟು
ಆದರೆ, ನೆಂಟರಬಗ್ಗೆ ಪ್ರೀತಿ ಉಂಟು ಆದರೆ ಧಾನ್ಯ ವೆಚ್ಚ ಮಾಡ್ಬೇಕಲ್ಲ ಎಂದು ಹೇಳಿದ ಹಾಗೆ. ಅಂತಹ
ಭೀಷ್ಮರು ಯುದ್ದೋತ್ಸಾಹದಿಂದ ಸೇನಾಪತಿಯಾಗಿ ಶಂಖವನ್ನು ಮೊಳಗಿಸಿದ್ದಾರೆ.ಯುದ್ದಾರಂಭಕ್ಕೂ ಮೊದಲೇ
ಧರ್ಮರಾಯನಲ್ಲಿ ಭೀಷ್ಮರು ಹೇಳಿದ್ದರು ’ಎಲ್ಲರೂ ಅರ್ಥ ದಾಸರು. ಆದರೆ ಅರ್ಥ ಯಾವಾಗಲೂ ದಾಸ್ಯವನ್ನು
ಮಾಡುವುದಿಲ್ಲ’ “ಅರ್ಥಸ್ಯ ಪುರುಷೋ ದಾಸಃ” ಇಲ್ಲಿ ಭೀಷ್ಮ ಬಂದದ್ದು ಹಾಗೆ ಅರ್ಥದಾಸನಾಗಿ.
ಬಂದವರೆಲ್ಲರೂ ಅರ್ಥದಾಸರಾಗಿ. ಅದುದರಿಂದ ಇಲ್ಲಿ ಧರ್ಮ ಜಿಜ್ಜಾಸುವಾಗಿ ಯೋಚಿಸುವುದಲ್ಲ.
ಪುರುಷರೆಲ್ಲ ಕೊಲ್ಲಲ್ಪಟ್ಟರೆ ಶ್ಮಶಾನವಾಗುತ್ತದೆ ಸ್ತ್ರೀಯರೆಲ್ಲರೂ ವಿಧವೆ ಯಾದರೆ ವರ್ಣ
ಸಂಕರವಾಗುತ್ತದೆ, ಸನಾತನ ಧರ್ಮವೇ ಕೆಟ್ಟುಹೋಗುತ್ತದೆ. ನಿನ್ನಂತಹವನಿಗೆ ಈ ಚಿಂತನೆ ಬರುವುದು
ಸಹಜವೇ ಆದರೂ ಅದು ಅಸ್ಥಾನದಲ್ಲಾಗುತ್ತದೆ. ಆದುದರಿಂದ ಆ ಮಾನಸಿಕ ದೌರ್ಬಲ್ಯವನ್ನು ಬಿಡು ಎತ್ತು
ಗಾಂಢೀವ ಮಾಡು ಯುದ್ದ. ಶ್ರೀ ಕೃಷ್ಣ ಪರಿ
ಪರಿಯಾಗಿ ವಿವೇಚಿಸಿ ವಿಶ್ಲೇಷಿಸಿ ಹೇಳುತ್ತಾನೆ.
ಆದರೂ ಅರ್ಜುನನ
ಮನಸ್ಸು ಪ್ರಚೋದನೆಗೆ ಒಳಗಾಗುದಿಲ್ಲ. ಹರಿಯ ಉತ್ತೇಜಿಸುವ ಮಾತುಗಳು ಉತ್ಸಾಹವನ್ನು
ತರುವುದಿಲ್ಲ...
“ಅರಿಗಳು ಪಂಚ ಪಾತಕರೆಂದು ಬಲ್ಲೆನು | ತರಿಯಲೀವರ ವಂಶವಳಿದು ಪರದೊಳು ತಿಲಜನ ಶೂನ್ಯ ರಾಪರು ಮತ್ತೆ ತರುಣೀಯರಿಗೆ ಶೋಕವಹುದು || ”
ಅದುವರೆಗೆ ಶತ್ರುತ್ವ ಅರಿಯದ ಬಗ್ಗೆ ಪಾರ್ಥ ಹೇಳುತ್ತಿದ್ದರೆ ಈಗ ಶತ್ರುತ್ವ ಯಾಕಾಗಿ
ಇರಬೇಕು? ಶತ್ರುತ್ವದ ಅರ್ಥವಾದರೂ ಏನು ? ಈ ಬಗ್ಗೆ ಹರಿಯುತ್ತದೆ ಚಿಂತನೆ. ಲಾಕ್ಷಾಗೃಹದ ಘಟನೆ.
ಅಣ್ಣ ಭೀಮಸೇನನಿಗೆ ವಿಷ ಉಣ್ಣಿಸಿದ್ದು, ಕಪಟ ದ್ಯೂತವಾಡಿದ್ದು, ದ್ರೌಪದೀ ವಸ್ತ್ರಾಪಹಾರ, ಇದಾವುದೂ ಪ್ರತೀಕಾರವನ್ನು ಪ್ರಚೋದಿಸುವುದಿಲ್ಲ. ಯಾಕೆ?
ಯಾವುದು ಕೇಳಿದರು ಮನಸ್ಸಿನಲ್ಲಿ ಸ್ಥ್ರಿರತೆ ಒದಗುವುದಿಲ್ಲ. ಯುದ್ದ ಎಂದಾಗ ಯುದ್ದೋತ್ಸಾಹ
ಬರಬೇಕು. ಉತ್ಸಾಹದಿಂದ ಚೈತನ್ಯ ಬರಬೇಕು. ಆನಂತರ ಯುದ್ದ. ಇದೆಲ್ಲದಕ್ಕೂ ಮುಖ್ಯ
ವಿಪಕ್ಷದಲ್ಲಿದ್ದವರ ಮೇಲೆ ಶತ್ರು ಭಾವ ಬರಬೇಕು. ಶತ್ರುತ್ವ ಇಲ್ಲವಾದರೆ ಆ ಯುದ್ದ ಸರಿಯಾದ ಯುದ್ದವೇ?
ಶತ್ರುತ್ವ ಯಾಕೆ ಹುಟ್ಟಬೇಕು. ಪ್ರತೀಕಾರದಿಂದ. ನಮಗಾದ ಕಷ್ಟ ವಂಚನೆಗೆ ಅದನ್ನು ಎಸಗಿದವನ
ಮೇಲೆ ಪ್ರತೀಕಾರ. ಅದರಿಂದ ಯುದ್ದ. ಯುದ್ದ ಅಂದರೆ ಕೊಲ್ಲುವುದು. ನಮಗೆ ಆಗದ ಶತ್ರುವನ್ನು
ಕೊಲ್ಲುವುದು. ಒಂದೋ ನಾವು ಸಾಯಬೇಕು ಇಲ್ಲಾ ಅವನು ಸಾಯಬೇಕು. ಒಂದು ವೇಳೆ ಅವನು ಸತ್ತರು ನಾವು
ಏನು ಶಾಶ್ವತರೆ? ಒಂದು ಘಳಿಗೆ ಯಾರು ಮೊದಲು ಸಾಯುತ್ತಾನೋ ಅದೇ ಯುದ್ದದ ಉದ್ದೇಶ. ಕೊಲ್ಲುವುದು
ಅಂದರೆ ಅದು ಶಾರೀರಿಕವಾದಂತಹ ಶಕ್ತಿಯನ್ನು ಅವಲಂಬಿಸಿರುವಂತಹುದು. ಇದೆಲ್ಲ ಬೇಕಾಗುವುದು ಯಾವಾಗ?
ಮನುಷ್ಯರಿಗೆ ವಿವೇಚನೆಗೆ ಸಿಕ್ಕಿ ಪರಿಹಾರವನ್ನು ಕಾಣದಾದಾಗ ಮತ್ತೆ ಅಯುಧ ಕೈಗೆ
ತೆಗೆದುಕೊಳ್ಳುವುದು. ಈ ಅಯುಧ ಅಂದ್ರೆ ಎರಡು ಕೋಣಗಳು ಇದ್ದ ಹಾಗೆ. ಅಲ್ಲಿ ಬುದ್ಧಿಗೆ
ಸ್ಥಾನವಿಲ್ಲ. ಶರೀರದಲ್ಲಿ ಏಷ್ಟು ಶಕ್ತಿ ಉಂಟೋ ಅದರ ಹಾಗೆ. ಯಾರು ಗೆಲ್ತಾನೋ ಅವನು ತೋರಿಸಿದ್ದೇ
ನ್ಯಾಯ. ಹಾಗಿದ್ದರೆ ಈ ಯುದ್ದ ಅಂದ್ರೆ ಕೊಲ್ಲುವುದು... ಯಾರನ್ನು ಕೊಲ್ಲುವುದು? ಯಾಕೆ
ಕೊಲ್ಲುವುದು? ಯಾರನ್ನಾದರೂ ಕೊಂದರೂ ತಾನೇನು ಅಜರಾಮರನೇ? ಯಾವಾಗಲಾದರೂ ನಾನೂ ಸಾಯಬೇಕು. ಯುದ್ದ
ಕ್ಕೆ ಹೊರಟವರು ಯೋಚಿಸುವುದೇನು? ತಾನು ಸಾಯುವ ಮೊದಲು ಅವನು ಸಾಯಬೇಕು. ಇದೆ ಅಲ್ಲವೆ
ಯುದ್ದ? ಹಾಗಾದರೆ ಕೊಲ್ಲುವುದು ಇದು ಸಮಸ್ಯೆಗೆ
ಪರಿಹಾರವಲ್ಲ. ಇದು ತನ್ನಿಂದಾಗದು. ಹಾಗಾಗಿ ಅವರು ಬದುಕಲಿ. ಅರ್ಜುನ ಹೇಳ್ತಾನೆ “ ನಾನು
ಸಾಯಬೇಕಾದರೆ ಸಾಯ್ತೇನೆ. ಆದರೆ ಕೊಲ್ಲಲಾರೆ ಕೃಷ್ಣಾ” ಯಾಕೆ ಈ ದೌರ್ಬಲ್ಯವೋ, ಇದು ಹೃದಯ
ದೌರ್ಬಲ್ಯವೇ?” ತಿಳಿಯದೇ ಶ್ರೀಕೃಷ್ಣನಲ್ಲೇ ಶ್ರೇಯಸ್ಸಿನ ಹಾದಿಯನ್ನು ಕೇಳುತ್ತಾನೆ. ಆ ಹಾದಿಯನ್ನು
ತೋರಿಸುವ ಗುರುತ್ವವನ್ನು ಶ್ರೀಕೃಷ್ಣನಲ್ಲಿ ಕಾಣುತ್ತಾನೆ.
ಈವರೆಗೆ ಶತ್ರುತ್ವ ಕಾಣಲಾರೆ
ಎಂದವನು ಈಗ ಕೊಲ್ಲಲಾರೆ, ಬಂಧು ವರ್ಗ ಗುರು ಹಿರಿಯರು ಇವರೆನ್ನಲ್ಲ ಕೊಂದು ಪಾತಕಿಯಾಗಲಾರೆ
ಎನ್ನುತ್ತಿದ್ದಾನೆ. ಮುಂದೆ ಕೊಲ್ಲುವುದರ ಬಗ್ಗೆ,
ಪಾತಕದ ಬಗ್ಗೆ ಶ್ರೀಕೃಷ್ಣ
ವಿಶ್ಲೇಶಿಸುವಂತಾಗುತ್ತದೆ.
“ ಅರ್ಜುನ, ಇದು ಹೃದಯ ದೌರ್ಬಲ್ಯವೇ? ಆದರೆ
ಯಾಕೆ? ನೀನು ಕೇವಲ ಭಾವುಕನಾಗಿ
ಮಾತನಾಡುತ್ತಿರುವೆ. ವಿವೇಕವನ್ನು ಜಾಗೃತ ಗೊಳಿಸಿಲ್ಲ. ವಿವೇಕ ಬುದ್ದಿ ಶಕ್ತಿ ಎಲ್ಲರಿಗೂ ಇದೆ.ಇದಕ್ಕೆ
ವ್ಯವಸಾಯತ್ಮಕವಾದ ಬುದ್ದಿ ಬೇಕು. ಕೌರವ
ಕರ್ಣಾದಿಗಳಿಗೂ ಬುದ್ಧಿ ಇದೆ. ಆದರೆ ಧರ್ಮರಾಯನ ತಮ್ಮ ನೀನು. ನಾನು ಇಲ್ಲಿ ಹೇಳುತ್ತಿರುವಂತಹ
ಬುದ್ದಿ, ಧಿಯೋಯೋನಃ ಪ್ರಚೋದಯಾತ್ ಅಂತ ಹೇಳುವ ಸದ
ಸದ್ವಿವೇಕ. ಅದರಿಂದ ಇದನ್ನು ನೋಡಬಲ್ಲೆ. ಹಾಗಾಗಿ ಆರಂಭದಲ್ಲಿ ಪರಿಕಿಸು ಪಾರ್ಥನೇ ಅಂತ ಹೇಳಿದ್ದು.”
ಆದರೆ ಅರ್ಜುನ ಭಾವುಕ
ಮನಸ್ಸಿನಿಂದಷ್ಟೇ ಪರಿಕಿಸಿದ. ಭಾವುಕ ಮನಸ್ಸು ವಿವೇಕವನ್ನು ಆವರಿಸಿತ್ತು. ಭಾವುಕತನ ಹೃದಯ
ವೈಶಾಲ್ಯ ಇರಬೇಕು ಆದರೆ ಅದನ್ನು ನಿಯಂತ್ರಿಸುಂತಹ
ವಿವೇಕ, ಗಾಳಿ ಇಲ್ಲದ ಕಡೆಯಲ್ಲಿ ದೀಪ ಹೇಗೆ ನೇರವಾಗಿ ಉರಿಯುತ್ತದೋ ಅದೇ ರೀತಿ ಆ
ಸೂಕ್ಷ್ಮ ಬುದ್ದಿ ಇರಬೇಕು. ಅರ್ಜುನನಲ್ಲಿ ಇರುವ ಸೂಕ್ಷ್ಮ ಬುದ್ದಿ, ಜ್ಯೋತಿಗೆ ಆವರಣ ಇದ್ದು ಆ ಆವರಣ ಮಾಸಿದಂತೆ, ಭಾವುಕತನದ ಲೇಪನ ಅದನ್ನು ಮಾಸಿತ್ತು. ಹಾಗಾಗಿ ಆ ಭಾವುಕತನವನ್ನು
ಕಳಚಿಟ್ಟು ಯೋಚಿಸಬೇಕು. ವಿವೇಕದ ನಿಜವಾದ ಪ್ರಭೆ ಹೊರಗೆ ಬರಬೇಕು.
ಕೊಲ್ಲಲಾರೆ ಎಂದ
ಅರ್ಜುನನಿಗೆ, ಈಗ ಕೊಲ್ಲುವುದು ಮತ್ತು
ಕೊಲ್ಲಲ್ಪಡುವುದು ಇವೆರಡರ ಬಗೆಗಿನ ವಿಶ್ಲೇಷಣೆ ಸರಳವಾಗಿ ವಿವರಿಸಲ್ಪಡುತ್ತದೆ. ಇದು ಅಹಂಮಿಕೆ,
ಅಥವಾ ಅಹಂಕಾರದ ವಿಶ್ಲೇಷಣೆಯೂ ಆಗಿಬಿಡುತ್ತದೆ.
ಶ್ರೀ ಕೃಷ್ಣ “ ಅರ್ಜುನ, ಕೊಲ್ಲುವುದು, ಕೊಲ್ಲಲ್ಪಡುವುದು. ಇದು
ಎರಡೇ ವಿಷಯ ಇಲ್ಲಿ. ನೀನು ಕೊಲ್ಲುವುದು. ಅವರು ಕೊಲ್ಲಲ್ಪಡುವುದು ನಿನ್ನಿಂದ. ಕೊಲ್ಲುವುದು ಯಾರು?”
ಅರ್ಜುನ “ ನಾನು. ನಾನು ಕೊಲ್ಲುವುದು.”
ಶ್ರೀ ಕೃಷ್ಣ : “ ನಾನು... ಈ ನಾನು ಅಂದ್ರೆ
ಏನು?”
ಈಗ ಜ್ಯೋತಿಯ ಆವರಣ ಮಸುಕಾಗಿದ್ದದ್ದು ತುಸು
ತಿಳಿಯಾಗುತ್ತದೆ. ಅರ್ಜುನ ಹೇಳ್ತಾನೆ
ಅರ್ಜುನ: “ ನಾನು ಅಂದ್ರೆ
ನಾನೇ..ನಾನೇ ಕೊಲ್ಲುವುದು.”
ಶ್ರೀ ಕೃಷ್ಣ : “ ನಿನ್ನಿಂದ
ಕೊಲ್ಲಲ್ಪಡುವುದು ಯಾರು? ಇದನ್ನು ನೀನಲ್ಲ ಅವರು ಹೇಳ್ಬೇಕು ಹೇಗೆ?. ಸಾಯಲ್ಪಡುವುದು
’ನಾನು’ “ ಈ ನಾನು ಎಂಬುದು ವ್ಯಕ್ತಿಯಾಗಿ ಪ್ರತಿಯೊಬ್ಬನ ಸ್ವಗತ.
ನಿನ್ನನ್ನು ನೀನು ಹೇಗೆ ನಾನು ಅಂತ ಹೇಳ್ತಿಯೋ ಹಾಗೆ, ಅವರನ್ನು ಅವರು ಹೇಳುವುದು “ ನಾನು” ಅಂತಲೇ ..ನಾನು ಎಂಬುದು ಸರ್ವನಾಮ.”
ಅರ್ಜುನ : “ಎಲ್ಲರಿಗೂ ನಾನು ಎಂಬ ಹೆಸರು
ಉಂಟು. ಆದರೆ ನಾನು ಎಂದು ಪ್ರತ್ಯೇಕ ಯಾರೂ ಇಲ್ಲ.”
ಶ್ರೀ ಕೃಷ್ಣ : “ ಹಾಗಾದರೆ
ಪ್ರತಿಯೊಬ್ಬರಲ್ಲಿಯೂ ಇದ್ದ ನಾನು ಯಾರು? ಭೀಷ್ಮ
ದ್ರೋಣ ಅವರೂ ಸ್ವಕೀಯವಾಗಿ ಹೇಳುವಾಗ ನಾನು ಅಂತಲೇ ಹೇಳಬೇಕಲ್ಲವೆ? ನೀನು ನಿನ್ನನ್ನು ನಾನು ಅಂತ
ಹೇಳುತ್ತಿ. ಹಾಗಾದರೆ ಕೊಲ್ಲುವುದು ಯಾರೂಂತ ಆಯಿತು? ಕೊಲ್ಲುವುದು ಯಾರು? ನಾನು, ಸಾಯುವುದು ಯಾರು? ನಾನು.”
ನಾನು ಮತ್ತು ನನ್ನದು ಇದರ ನಡುವಿನ ಸಂಬಂಧ
ಇಲ್ಲಿ ಸರಳವಾಗಿ ವಿಶ್ಲೇಶಿಸಲಾಗಿದೆ.
ಅರ್ಜುನ ಮುಂದುವರೆಸುತ್ತಾನೆ.. ನಾನು ಎಂದು
ಎಲ್ಲರೂ ಹೇಳಬಹುದು. ಇಂಥವನ ಮಗ.. ಮೊಮ್ಮಗ ಗೋತ್ರ ಸೂತ್ರ ಪ್ರವರ ಎಲ್ಲವು ಹೇಳಬಹುದು. ನಾನು ಅಂತ
ಅವನು ಹೇಳುವುದು ಯಾರನ್ನು ಅವನನ್ನೇ.!!!
“ ನಾನು ಅಂದರೆ ಯಾರು? ನಾನು ಅಂದರೆ
ಅರ್ಜುನ. ಹಾಗಾದರೆ ನನ್ನ ಶರೀರ ಅಂತ ಹೇಳುವಾಗ, ನಾನು ಬೇರೆ ಶರೀರ ಬೇರೆ ಅಂತ ಅಯ್ತಲ್ಲ? ನಾನು ಮತ್ತು ನನ್ನ ಶರೀರ. ಹಾಗೇ ಪ್ರತಿಯೊಂದು ನನ್ನ
ಮನೆ. ಹೀಗೆ ನನ್ನದು ನನ್ನದು ...ಹಾಗಾದರೆ ನನ್ನ ಅಂತ ಹೇಳುವಾಗ ನಾನು ಅಂತ ಬೇರೆ ಉಂಟು
ಅಂತಾಯ್ತು. ಹಾಗೆ ನನ್ನ ಬುದ್ಹಿ. ನನ್ನ ಮನಸ್ಸು, ನನ್ನ ಭಾವ, ನನ್ನ ಹೃದಯ, ಹೀಗೆ ಇದನ್ನೆಲ್ಲ
ಹೇಳುವಾಗ ದೇಹದ ಪ್ರತಿಯೊಂದನ್ನು ವಿಭಾಗಿಸಿ ಹೇಳಿಕ್ಕೆ ಆಗ್ತದೆ. ನನ್ನ ತಲೆ, ನನ್ನ ಕಾಲು, ನನ್ನ ಕೈ.”
ಇಲ್ಲಿ ’ನಾನು ಮತ್ತು
ದೇಹವನ್ನು’ ಬೇರೆಯಾಗಿಸುವ ಚಿಂತನೆ ಬಹಳ ಸರಳವಾಗಿ ಗೋಚರವಾಗುತ್ತದೆ. ದೇಹದ ಪ್ರತಿಯೊಂದು
ಅಂಗವನ್ನು ನನ್ನ ಕೈ ನನ್ನ ಕಾಲು ಅಂತ ಬೇರೆ ಬೇರೆಯಾಗಿ ತೆಗೆದಿರಿಸಿದರೆ.. ಕೊನೆಯಲ್ಲಿ ನಾನು
ಎಂಬುದು ಎಲ್ಲಿ ಸಿಗುತ್ತದೆ.. ನಾನು ಎಂಬುದು ಷಷ್ಠೀ ವಿಭಕ್ತಿಯಾಗಿ ಉಳಿಯುತ್ತದೆ. ನನ್ನದು
ಎಂಬುದು ಸಮಷ್ಠಿಯಲ್ಲಿ ನಾನು ಅಲ್ಲದೇ ಹೋಗ್ತದೆ.
ಹಲವು ಸಲ ನಾನು
ಎಂಬುದಕ್ಕೆ ಪರ್ಯಾಯವಾಗಿ ನನ್ನ ಜೀವ ಅಂತ ಹೇಳುವುದುಂಟು. ಜೀವ ಹೋಯ್ತು...ಆಗ ನಾನು ಬೇರೆ ಜೀವ
ಬೇರೆಯಾಗಿ ನಿಲ್ಲುತ್ತದೆ. ಈಗ ಅರ್ಜುನನಿಗೆ ಎಲ್ಲ ತೊಡಕಾಗಿ ಗೋಚರಿಸುತ್ತದೆ. ನಾನು ಬೇರೆ ಜೀವ
ಬೇರೆ ಎಂಬ ತತ್ವಾರ್ಥವಾಗುವಾಗ ಈ ತೊಡಕು ಗುರುತಿಸಲ್ಪಡುತ್ತದೆ. ಆದರೆ ಆ ತೊಡಕನ್ನು ಗುರುತಿಸದೇ ಇದ್ದವರು ಈಗ ಅಯುಧ ಹಿಡಿದು
ವಿರೋಧಿಗಳಾಗಿ ಕೊಲ್ಲುತ್ತೇನೆ ಎಂದು ಮುಂದೆ ಬಂದಿದ್ದಾರೆ.
ಅರ್ಜುನನಿಗೆ
ಆರಂಭದಲ್ಲಿ ಉಂಟಾದ ಬಂಧು ಮೋಹ ಅದರಿಂದ ಉಂಟಾದ ಯುದ್ದ ನಿರುತ್ಸಾಹ, ಈಗ ಬಂಧು ಮೋಹ ಹರಿಸುವಂತಹ
ಚಿಂತನೆ.
ನಾನು ಬೇರೆ ಶರೀರ
ಬೇರೆ. ನಾನು ನನ್ನದು ಬೇರೆ ಬೇರೆ ಎಂಬ ಸಿದ್ದಾಂತ ಅರಿವಾದಾಗ ನನ್ನದು ಎಂಬುದು ನಾನಲ್ಲ ಎಂದಕೊಂಡಾಗ.
‘ನನ್ನ ಬಂಧುಗಳು’ ಅದೂ ಬೇರೆಯಾಗಿಯೇ ನಿಲ್ಲುತ್ತದೆ. ಬಂಧು ಇದು ಕೂಡಾ ಷಷ್ಠೀ ಯಾಗಿಯೇ ಉಳಿಯುವುದು. ಆವಾಗ ’ನನ್ನದು’ ಎಂಬ ಷಷ್ಠಿಯ ನಾಶ ಯಾವುದರಿಂದ ’ನಾನು’ ಎಂಬ ಪ್ರಥಮದಿಂದ. ನಾನು ಎಂಬುದರಿಂದ ನನ್ನದು ಎಂಬುದನ್ನು
ನಾಶ ಮಾಡಿದಾಗ ನಮ್ಮನ್ನು ನಾವೇ ನಾಶ ಮಾಡಿದ ಹಾಗೆ ಆಗುವುದೇ? ಹಾಗಾಗಿ ನಾನು ನನ್ನದು..ನನ್ನದು
ನಾನಲ್ಲ..ಈ ಎರಡು ವಿಭಜನೆ ಒಟ್ಟು ತಾತ್ಪರ್ಯವಾಗುತ್ತದೆ.
ಈಗ ಅರ್ಜುನ ’ನಾನು’ ಏನು ಎಂದು ಪ್ರಶ್ನೆ ಮಾಡಿಕೊಳ್ಳತೊಡಗುತ್ತಾನೆ. ನಾನು
ಹುಟ್ಟಿನಿಂದ ಪಡೆದಂತಹ ಈ ದೇಹ ನಾನಲ್ಲ ಹಾಗಾದರೆ ನಾನು ಯಾರು?
(ಇನ್ನೂ ಇದೆ
ಮುಂದಿನಭಾಗದಲ್ಲಿ)

No comments:
Post a Comment