ಹಸಿವು ಇದು
ವ್ಯಾವಹಾರಿಕ ಪ್ರಪಂಚದ ಅಸ್ತಿತ್ವದ ಸಂಕೇತ. ಎಷ್ಟೇ ದೊಡ್ಡ ಖಜಾನೆಯನ್ನಾದರೂ ತುಂಬಿಸಿ ಸಂಗ್ರಹಿಸಿ ಇಡಬಹುದು.
ಆದರೆ ಹೊಟ್ಟೆಯನ್ನು ತುಂಬಿಸಿ ಇಡುವುದು ಸಾಧ್ಯವಿಲ್ಲ. ಹಸಿವು ಯಾವುದೇ ಪ್ರಾಣಿ ಹುಟ್ಟಿದಾಕ್ಷಣ
ಜತೆಯಾಗುವ ಪ್ರವೃತ್ತಿ. ಹಸಿವು...ಹಸಿವು ಇದು ಜೀವ ಜಗತ್ತಿನ ಆರೋಗ್ಯದ ಲಕ್ಷಣ. ಹಾಗಾಗಿ
ವ್ಯಾವಹಾರಿಕ ಪ್ರಪಂಚದ ಮೂಲ ಇರುವುದೇ ಹಸಿವಿನಲ್ಲಿ. ಈ ಹಸಿವಿನ ಪರಿಮಾರ್ಜನೆಯೇ ಎಲ್ಲ
ಪ್ರವೃತ್ತಿಗೂ ಮೂಲ ಕಾರಣ. ಹಸಿವು ಎಂದಿನ ವರೆಗೆ ಇರುತ್ತದೋ ಅಂದಿನವರೆಗೆ ಪ್ರಪಂಚ ಚಲನ
ಶೀಲವಾಗಿರುತ್ತದೆ. ಮನುಷ್ಯ ಪ್ರಾಣಿಗಳೂ ಹಾಗೆ
ಹಸಿವು ಇರುವ ತನಕ ಸದಾ ಪ್ರವೃತ್ತಿಯಲ್ಲಿರುತ್ತವೆ. ಅಥವಾ ಹಸಿವು ಎಲ್ಲವನ್ನೂ ಜೀವಂತವಾಗಿರಿಸುತ್ತದೆ.
ಇದು ವ್ಯಾವಹಾರಿಕ ಪ್ರಪಂಚದ ಸತ್ಯ. ಈ ಸತ್ಯದ ಬೆನ್ನಟ್ಟಿ ಹೋದ ಹಲವರು ಇಂದು ನಮ್ಮ ನಡುವೆ ಮಹಾನ್ ವ್ಯಕ್ತಿಗಳಾಗಿ ಈ ಪ್ರಪಂಚದ
ಸತ್ಯವನ್ನು ತೆರೆದು ತೋರಿಸುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಶ್ರೀ ಸೂರಿಕುಮೇರಿ ಗೋವಿಂದ
ಭಟ್.
ಸೂರಿಕುಮೇರಿ
ಎಂದಾಗ ಯಕ್ಷಗಾನ ಲೋಕದಲ್ಲಿ ಒಂದು ಸ್ಪಷ್ಟ ಕಲ್ಪನೆ ಮೂಡುತ್ತದೆ. ಸೂರಿಕುಮೇರಿ ಎಂಬ ದಕ್ಷಿಣ
ಕನ್ನಡ ಜಿಲ್ಲೆಯ ಕುಗ್ರಾಮ ಎಲ್ಲಿದೆಯೋ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಆದರೆ
ಸೂರಿಕುಮೇರಿ ಜತೆಗೆ ಗೋವಿಂದ ಭಟ್ಟರ ಹೆಸರು ತಳುಕು ಹಾಕಿಕೊಂಡಾಗ ಸ್ಪಷ್ಟ ಮುಖವೊಂದು
ಮನಸ್ಸಿನಲ್ಲಿ ತೇಲಿ ಬರುತ್ತದೆ. ಅದೇ ಪ್ರಶಾಂತ ಮುಖ. ರಂಗದ ಮೇಲೆ ನವರಸಗಳನ್ನು ಕ್ಷಣದಲ್ಲೇ
ಚಿಮ್ಮಿಸಬಲ್ಲ ಅದೇ ಮುಖ. ಯಕ್ಷಗಾನ ಲೋಕದ ಅತ್ಯಂತ
ಜನಪ್ರಿಯ ವ್ಯಕ್ತಿ ಸೂರಿಕುಮೇರಿ ಗೋವಿಂದ ಭಟ್.
ಬಡ ಪುರೋಹಿತ
ಅವಿಭಕ್ತ ಕುಟುಂಬದಲ್ಲಿ ಜನಿಸಿದ ಶ್ರೀ ಭಟ್ಟರ ಜನ್ಮದಿಂದಲೇ ಬಡತನ ಬೆಂಬತ್ತಿ ಬಂದಿತ್ತು.
ಕೌಟುಂಬಿಕ ಸಾಮಾಜಿಕ ಹೀಗೆ ಹಲವು ಕಾರಣಗಳಿದ್ದರೂ ಜೀವನದ ಹಲವು ಪರೀಕ್ಷೆಗಳಿಗೆ ಎಳವೆಯಲ್ಲೇ
ತನಗರಿವಿಲ್ಲದೇ ಎದೆಯೊಡ್ಡಿದವರು. ತನಗರಿವಿಲ್ಲದೇ ಎಂದು ಹೇಳುವುದಕ್ಕೆ ಕಾರಣವಿದೆ. ಬಾಲ್ಯದಲ್ಲಿ
ಅವರನ್ನು ಬಾಧಿಸಿದ್ದು ಎಂದರೆ ಹಸಿವು. ಹಸಿದವನಿಗೆ ಮೊದಲ ಸಮಸ್ಯೆಯೇ ಹಸಿವು. ಅದು
ಪರಿಹರಿಸುವವರೆಗೂ ಬೇರೇ ಯಾವ ದುರಿತಗಳೂ ಕಣ್ಣಿಗೆ ಕಾಣಿಸುವುದಿಲ್ಲ. ಆ ಹಸಿವಿನ ಪರಿಹಾರಕ್ಕಾಗಿ
ಇವರು ಜೀವನದ ಹಲವು ಸಮಸ್ಯೆಗಳನ್ನು ದಾಟುವ ಪ್ರಯತ್ನ ಅನಿವಾರ್ಯವಾಗಿ ಮಾಡಲೇ ಬೇಕಾಯಿತು. ಹಾಗಾಗಿ
ಹಸಿವು ಅವರನ್ನು ಎಲ್ಲೆಲ್ಲೆ ಕರೆದುಕೊಂಡು ಹೋಯಿತೋ ಅಲ್ಲೆಲ್ಲ ಗೋವಿನಂತೆ ಗೋವಿಂದ ಭಟ್ಟರು
ಸಂಚರಿಸಿದರು. ಈ ಸಂಚಾರದ ದಿಕ್ಸೂಚಿ ಯಕ್ಷಗಾನ ರಂಗಸ್ಥಳವನ್ನೇ ತೋರಿಸಿದ್ದು ಯಕ್ಷಗಾನದ ಜನಪ್ರಿಯ
ಕಲಾವಿದನ ಸೃಷ್ಟಿಗೆ ಕಾರಣವಾಯಿತು. ಇದನ್ನು ಗೋವಿಂದ ಭಟ್ಟರು ಪ್ರಾಮಾಣಿಕವಾಗಿ
ಹೇಳಿಕೊಳ್ಳುತ್ತಾರೆ. ಕಲೆಯೇ ಜೀವ. ಕಲೆಯೇ ಸರ್ವಸ್ವ ಎಂದು ಹೇಳಿಕೊಳ್ಳುವ ಆಷಾಢಭೂತಿ ತನವಿಲ್ಲ.
ಸಾಮಾನ್ಯವಾಗಿ
ಹಸಿವಿನಲ್ಲಿ ಕ್ರಿಯಾಶೀಲವಾಗುವ ಮನಸ್ಸು ಹೊಟ್ಟೆ ತುಂಬಿದಾಗ ಆಲಸ್ಯವನ್ನು ಅನುಭವಿಸುತ್ತದೆ.
ಹೊಟ್ಟೆ ಹಸಿವು ಎಂದು ಬೇಡಿಕೊಂಡು ಬರುವ ಭಿಕ್ಷುಕ ಅಥವಾ ಇನ್ನಾರೋ ಅನ್ನ ಹಾಕುವವರೆಗೆ
ಬೇಕಾದದ್ದನ್ನು ಮಾಡುವ ಮನಸ್ಸು ಮಾಡುತ್ತಾನೆ. ಹೊಟ್ಟೆ ತುಂಬಿತೋ ಆನಂತರ ಮಾಡಬೇಕಾದ ಕೆಲಸದಲ್ಲಿ
ಔದಾಸಿನ್ಯ ಅರಿವಿಲ್ಲದೇ ಬಂದು ಬಿಡುತ್ತದೆ. ಆದರೆ ಗೋವಿಂದ ಭಟ್ಟರು ಯಾವ ಹಸಿವಿಗಾಗಿ
ರಂಗಸ್ಥಳವೇರಿದರೋ ಹಸಿವು ನೀಗಿ ಹೊಟ್ಟೆ ತುಂಬಿದಾಗ ಆಲಸಿಗಳಾಗಲಿಲ್ಲ. ಅನ್ನ ಕೊಟ್ಟ ಕಸುಬಿಗೆ
ಪ್ರಾಮಾಣಿಕತೆಯನ್ನು ತೋರಿಸಿದರು. ಅದಕ್ಕಾಗಿ ಸಹಜ ಕಲಾವಿದನಿಗಿಂತಲೂ ಅಧಿಕ ತಾದಾತ್ಮ್ಯವನ್ನು
ತೋರಿಸಿದರು. ಈ ಪ್ರಾಮಾಣಿಕತೆ ಅರ್ಪಣಾ ಭಾವ
ಭಟ್ಟರನ್ನು ಯಕ್ಷಗಾನ ರಂಗದ ಅದ್ವಿತೀಯ ಕಲಾವಿದನನ್ನಾಗಿಸಿದೆ. ಇಂದಿಂಗೂ ಗೋವಿಂದ ಭಟ್ಟರು ಅದೇ
ಭಾವದಿಂದ ರಂಗದಲ್ಲಿ ಕ್ರಿಯಾ ಶೀಲರಾಗಿದ್ದಾರೆ ಎಂದರೆ ವೃತ್ತಿಯಲ್ಲಿ ಅವರ ಬದ್ದತೆಯನ್ನು
ತೋರಿಸುತ್ತದೆ. ಇಷ್ಟಾಗಿಯೂ ಅವರು ಹೇಳುವ ಮಾತು ಒಂದೇ “ನಾನು ಕಲಾಪ್ರೇಮದಿಂದ, ಯಕ್ಷಗಾನದ ಹುಚ್ಚಿನಿಂದ ವೇಷ ಹಾಕಿದವನಲ್ಲ. ಜೀವನದ
ಪಾಠವೇ ನನಗೆ ಬಣ್ಣವನ್ನು ಬಳಿಯಿತು.” ಅದೆಂತಹಾ
ಪ್ರಾಮಾಣಿಕತೆ?
ಯಕ್ಷಗಾನ ಲೋಕ
ಕೊಟ್ಟ ಅನ್ನವನ್ನು ಅವರೆಂದೂ ಮರೆಯಲಿಲ್ಲ. ಹಾಗಾಗಿಯೇ ಅವರ ಮುಖದಲ್ಲಿ ಅಳಿಯದ ಪ್ರಸನ್ನತಾ ಭಾವ
ಸದಾ ಹಸಿರಾಗಿರುತ್ತದೆ. ಇಂದಿಗೂ ಇಷ್ಟು ದೀರ್ಘವಾದ ಕಲಾ ಜೀವನವನ್ನು ಜತೆಗೆ ವಾಸ್ತವ ಬದುಕನ್ನು
ಕಂಡ ಅವರಲ್ಲಿ ಸಂತೃಪ್ತಿಯ ಭಾವವಿದೆ. ಮನುಷ್ಯನಿಗೆ ಸಂತೃಪ್ತಿ ಮೂಡವುದು ಭಗವಂತನಲ್ಲಿ ವಿಶ್ವಾಸವಿರಿಸಿದಾಗ ಮಾತ್ರ. ಭಗವಂತನಲ್ಲಿ ವಿಶ್ವಾಸ
ಅಚಲವಾಗಿ ಉಳಿಯಬೇಕಾದರೆ ಆತ ನಿತ್ಯಾಹ್ನಿಕಗಳನ್ನು, ಕರ್ಮ ಅನುಷ್ಠಾನಗಳನ್ನು ಪಾಲಿಸಬೇಕು. ಇವುಗಳು ಯಾವುದೇ ಫಲಾಫಲದ ನಿರೀಕ್ಷೆಯಿಲ್ಲದೇ
ಸಂಕಲ್ಪಿಸುವ ಪರಮಾತ್ಮ ಸ್ಮರಣೆಗಳು. ಕರ್ಮಾನುಷ್ಠಾನಗಳಲ್ಲಿ ಅಚಲವಾದ ನಿಷ್ಠೆಯನ್ನು ಪಾಲಿಸುವ
ಇವರು ಯಾವತ್ತೂ ಸ್ಥಿರಮಾನಸ ಚಿತ್ತರಾಗಿ ವ್ಯವಹರಸುತ್ತಾರೆ. ವಾಸ್ತವದ ಬದುಕಿನ ಬಗ್ಗೆ
ನಿರ್ದಿಷ್ಟವಾಗಿ ಯೋಚಿಸುತ್ತಾರೆ. ಹಾಗಾಗಿ ನಿತ್ಯ ಶಾಂತರಾಗಿ ಬಾಸವಾಗುತ್ತಾರೆ ಮಾತ್ರವಲ್ಲ
ಶಾಂತವಾಗಿರುತ್ತಾರೆ. ಯಾವ ಉದ್ವೇಗವಿದ್ದರೂ ಇವರ ಮುಖವನ್ನು ನೋಡಿದರೆ ಆ
ಉದ್ವೇಗ ಪರಿಹರಿಸಲ್ಪಡುತ್ತದೆ.
ಇವರ ಬಗ್ಗೆ
ನನಗಿಂತಲೂ ಹೆಚ್ಚು ತಿಳಿದವರು ಬಹಳಷ್ಟು ಇರಬಹುದು. ಆದುದರಿಂದ ನಾನು ಹೇಳುವ ಈ ಪರಿಚಯ ಲೇಖನ ನನ್ನ
ಅರಿವಿಗಷ್ಟೆ ಸೀಮಿತ. ನನಗರಿಯದ ಗೋವಿಂದ ಭಟ್ಟರ ಪುಸ್ತಕದ ಪುಟಗಳು ಇನ್ನೂ ಬಹಳಷ್ಟಿವೆ.
ಯಕ್ಷಗಾನದ ಹಲವು
ದಿಗ್ಗಜರ ವಿದ್ವಾಂಸರ ಸಂದರ್ಶನವನ್ನು ದಾಖಲಿಸಿದ ಮಿತ್ರ ರಂಗಣ್ಣನಿಗೆ ಗೋವಿಂದ ಭಟ್ಟರ ಸಂದರ್ಶನ
ಮಾಡಬೇಕೆಂಬ ಬಯಕೆ ಮೊದಲಿನಿಂದಲೇ ಇತ್ತು. ನನ್ನಿಂದ ಅದಕ್ಕೆ ಚಿಕ್ಕ ಮಟ್ಟಿನ ಪ್ರೋತ್ಸಾಹವೂ
ದೊರಕಿದಾಗ ರಂಗನಾಥರು ಹತ್ಯಾರ ಹೆಗಲಿಗೇರಿಸಿ ಹೊರಟೇ ಬಿಟ್ಟರು. ಸಾಮಾನ್ಯವಾಗಿ ಸಂದರ್ಶನಕ್ಕೆ
ಹೋಗುವಾಗ ಒಂದಲ್ಲ ಸಾವಿರ ಕುತೂಹಲ ವಿರುತ್ತದೆ. ಇಂತಿಂತಹ ಪ್ರಶ್ನೆಗಳಿಗೆ ಹೇಗೆ ಉತ್ತರ
ಸಿಗಬಹುದು? ಯಾವ ಪ್ರತಿಕ್ರಿಯೆ ಇರಬಹುದು? ಇದು ಸಹಜ. ಆದರೆ ಗೋವಿಂದ ಭಟ್ಟರ ಸಂದರ್ಶನಕ್ಕೆ ಇವರು
ಹೊರಟು ನಿಂತಾಗ ಪ್ರಶ್ನೆಗಳು ಅದಕ್ಕೆ ಉತ್ತರವೂ ನಮ್ಮ ಕೈಯಲ್ಲಿತ್ತು. ಅಂದರೆ ಯಾವುದೇ
ಪ್ರಶ್ನೆಗಳಿಗೂ ಗೋವಿಂದ ಭಟ್ಟರ ಉತ್ತರ ಹೀಗೆ ಇರುತ್ತದೆ ಎಂಬ ಖಚಿತ ನಿಲುವು ಅಲ್ಲಿತ್ತು.
ಯಾಕೆಂದರೆ ಭಟ್ಟರ ವ್ಯಕ್ತಿತ್ವ ಆ ರೀತಿಯದ್ದು. ಅಲ್ಲಿ ಆಷಾಢ ಭೂತಿ ತನವಿಲ್ಲ. ರಂಗದ ಮೇಲಿರುವ
ಅಭಿನಯ ಅಲ್ಲಿ ಇಲ್ಲ. ಎಲ್ಲವೂ ನೇರ ಸ್ಪಷ್ಟ. ಖಚಿತವಾದವುಗಳು. ಹಾಗಾಗಿ ಸಂದರ್ಶನ ಮಾಡಿದ ಸಾಧನೆಯ
ತೃಪ್ತಿ ಮಾತ್ರ ಇಲ್ಲಿರುತ್ತದೆ. ಅಂದಿನಿಂದ
ಇಂದಿನವರೆಗೂ ಗೋವಿಂದ ಭಟ್ಟರ ನಿಲುವು ಬದಲಾದದ್ದನ್ನು ನಾನು ನೋಡಿಲ್ಲ. ಯಾವುದೇ ಪ್ರಶ್ನೆಗೆ ಹೀಗೆ
ಉತ್ತರಿಸುತ್ತಾರೆ ಎಂಬ ಸ್ಪಷ್ಟ ನಂಬಿಕೆ ನನಗಿತ್ತು. ಅದು ಪರಮ ಸತ್ಯವಾದ ವಿಚಾರ. ಇದೊಂದು ಭಟ್ಟರ
ವ್ಯಕ್ತಿತ್ವದ ವೈಶಿಷ್ಟ್ಯತೆ.
ಗೋವಿಂದ
ಭಟ್ಟರಲ್ಲಿ ನಾನು ಕಂಡದ್ದು ಜೀವನದ ವಾಸ್ತವಿಕ ಸತ್ಯಗಳನ್ನು. ಅವರೊಂದಿಗೆ ಹೃದ್ಯವಾಗಿ
ಮಾತಿಗಿಳಿದರೆ ಇದು ಅರ್ಥವಾಗುತ್ತದೆ. ಹಾಗಾಗಿ ಅವರು ಯಕ್ಷಗಾನವನ್ನು ಕೇವಲ ಕಲೆಯಾಗಿ ಕಾಣಲಿಲ್ಲ.
ತನ್ನ ಜೀವನದ ಸತ್ಯಗಳಿಗೆ ಉತ್ತರವಾಗಿ ಅದನ್ನು ಕಂಡರು.
ಆ ಸತ್ಯಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿದರು. ಅದುದರಿಂದಲೇ ಒಬ್ಬ ಕಲಾವಿದನಾಗಿ ಭಟ್ಟರು ಬಹಳ ಸ್ವಾವಲಂಬಿಗಳು. ಚೌಕಿಯಲ್ಲಿ
ಇದನ್ನು ಕಾಣಬಹುದು. ಅವರ ವೇಷ ಭೂಷಣಗಳನ್ನು
ಸ್ವತಃ ಅವರೇ ಮಡಚಿ ಒಪ್ಪವಾಗಿ ಇಡುತ್ತಾರೆ. ಇದು ವೃತ್ತಿಯಲ್ಲಿನ ಶ್ರದ್ದೆ. ಹಸಿವಿನ ಋಣ. ಯಾರು ಯಾವಾಗ ಈ ಹಸಿವನ್ನು ಮರೆಯುತ್ತಾರೋ
ಅವರು ಈ ರಂಗದಲ್ಲಿ ಮಾತ್ರವಲ್ಲ ಜೀವನ ರಂಗದಲ್ಲಿಯೂ ಇರತಕ್ಕವರಲ್ಲ. ಸ್ಥಿರ ಆರೋಗ್ಯವಿರುವುದರಿಂದ
ಇವರಿಗೆ ಹಸಿವು ಸಮಯಾ ಸಮಯದಲ್ಲಿ ಹಾಜರಾಗುತ್ತದೆ.
ಮತ್ತದೇ ಪ್ರವೃತ್ತಿಯನ್ನು ಜ್ಞಾಪಿಸುತ್ತದೆ. ಅದಕ್ಕೆ ಕಾರಣ ಅನ್ನ ಕೊಟ್ಟು ಹಸಿವು ನೀಗಿದ ಕೈಗಳು.
ಹಾಗಾಗಿ ಇನ್ನೂ ವಿರಮಿಸದ ಪ್ರವೃತ್ತಿ. ಬಹುಷಃ ಹೊಟ್ಟೆ
ಹಸಿವು ನೀಗಿದರೂ ಇವರ ಹಸಿವು ಶಮನವಾಗುವುದಿಲ್ಲ. ಈ ಹಸಿವಿನ ರೂಪ ಬೇರೆಯೇ ಇರಬಹುದು.
ಗೋವಿಂದ ಭಟ್ಟರ
ಜತೆ ಒಂದಷ್ಟು ಸಮಯವನ್ನು ಹಲವು ಸಲ ಕಳೆದಿದ್ದೇನೆ. ಆದರೆ ಅಷ್ಟೂ ಹೊತ್ತು ನಾನು ಯಕ್ಷಗಾನದ ಬಗ್ಗೆ
ಅವರ ಕಲಾಜೀವನದ ಬಗ್ಗೆ ಮಾತನಾಡಿದ್ದು ಕಡಿಮೆ. ಯಾಕೆಂದರೆ ಜೀವನದ ವ್ಯಾವಹಾರಿಕ ಸತ್ಯಗಳು ಅವರನ್ನು
ಕಂಡಾಗ ಯೋಚನೆಗೆ ಬರುತ್ತವೆ. ಅದರ ಬಗ್ಗೆ ಮಾತನಾಡಿದಾಗ ಅವರು ಅತ್ಯಂತ ಪ್ರಾಮಾಣಿಕವಾಗಿ
ಬಿಡುತ್ತಾರೆ. ಮನಸ್ಸಿನ ಅನಿಸಿಕೆಗಳನ್ನು ಸರಳವಾಗಿ ಹೇಳಿಬಿಡುತ್ತಾರೆ. ಕೇಳುವವರು ಏನೇ ತಿಳಿಯಲಿ
ತನ್ನ ಜೀವನದಲ್ಲಿ ಕಂಡ ಸತ್ಯಗಳ ಬಗ್ಗೆಅವರು ನಿಷ್ಠೂರರಾಗಿ ಬಿಡುತ್ತಾರೆ. ತತ್ವ ಸಿದ್ದಾಂತಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಜಾಯಮಾನವಿಲ್ಲ. ಅವರು
ಕಂಡುಕೊಂಡ ಜೀವನ ಸತ್ಯಗಳಲ್ಲಿ ಅಚಲವಾದ ವಿಶ್ವಾಸ. ಅದನ್ನು ಅಲ್ಲಗಳೆಯುವ ಅನುಭವ ನಮ್ಮದಲ್ಲ.
ಇವರು ಎಂದಿಗೂ
ತನ್ನ ಬಗ್ಗೆ ಹೇಳಿಕೊಂಡವರಲ್ಲ. ಹಾಗಾದುದರಿಂದಲೇ ರಂಗನಾಥರು ಸಂದರ್ಶನ ಮಾಡಿ ಇವರ ಸ್ವ ಪರಿಚಯ ( ಬಯೋಡಾಟ) ವನ್ನು ಕೇಳಿದರು. ಅದಕ್ಕವರು ಮತ್ತೆ ಯೋಚಿಸದೆ ಒಂದೇ
ಮಾತು ಅದನ್ನು ರಾಜಕುಮಾರ ನಲ್ಲೇ ಕೇಳಿಬಿಡಿ. ಎಲ್ಲಾ ವಿವರ ಸಿಗುತ್ತದೆ. ತಮ್ಮ ಸಮೀಪ
ವರ್ತಿಗಳಲ್ಲಿ ಅದೊಂದು ವಿಶ್ವಾಸ. ನಾನೇನು ಹೇಳಿಯೇನು ಎನ್ನುವ ಬಗ್ಗೆ
ತಲೆಕೆಡಿಸಿಕೊಳ್ಳುವುದಿಲ್ಲ. ತನ್ನ ಬಗ್ಗೆ ವ್ಯತಿರಿಕ್ತವಾಗಿ ಹೇಳಿದರೂ ಅದಕ್ಕೆ ಯೋಚಿಸುವುದಿಲ್ಲ. ಪ್ರಾಮಾಣಿಕನಾದವನಿಗೆ ವ್ಯತಿರಿಕ್ತದ ಭಯವಿರುವುದಿಲ್ಲ.
ಇದು ಮಾರ್ಮಿಕ. ಅಭಿಮಾನದ ಅರ್ಥ ತಿಳಿಯದೇ
ಹಿಂಬಾಲಿಸುವವರು ಇದನ್ನು ಅರ್ಥವಿಸಿಕೊಳ್ಳಬೇಕು. ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ತಮ್ಮದಲ್ಲದೇ
ಇದ್ದದ್ದನ್ನು ಸೇರಿಸಿ ಹೇಳುವವರೇ ಅಧಿಕ. ಹಾಗಿರುವಾಗ ತಾವೇನೂ ಆಡದೆ ಅದನ್ನು ನನ್ನ ತಲೆಗೆ
ರವಾನಿಸಿಬಿಟ್ಟರು.
ಇವರಲ್ಲಿ ನಾನು
ಕಂಡ ಅತ್ಯಂತ ಶ್ರೇಷ್ಠ ಗುಣವೆಂದರೆ, ಬ್ರಾಹ್ಮಣನಾಗಿ ಇವರು ಕರ್ಮ ನಿಷ್ಠರಾಗಿ ಅನುಷ್ಠಾನವನ್ನು
ಸದಾ ಕಾಯ್ದುಕೊಂಡಿರುವುದು. ಇವರ ವೃತ್ತಿ
ಪ್ರವೃತ್ತಿ ನಿತ್ಯಾಹ್ನಿಕಗಳನ್ನು ಬಾಧಿಸುವುದಿಲ್ಲ. ವ್ಯಾವಹಾರಿಕ
ಪ್ರಪಂಚದ ವಾಸ್ತವಗಳೊಂದಿಗೆ ಸದಾ ಸ್ಪಂದಿಸುತ್ತಾರೆ.
ಯಕ್ಷಗಾನವಲ್ಲದೇ ಇದ್ದರೆ ಪೌರೋ ಹಿತ್ಯವನ್ನೂ ಮಾಡಬಲ್ಲರು, ಪಾಜಕರಾಗಿ ಸೌಟನ್ನೂ
ಹಿಡಿಯಬಲ್ಲರು. ವ್ಯಾವಹಾರಿಕ ಜೀವನದ ಪ್ರವೃತ್ತಿಯನ್ನು ಎಂದಿಗೂ ಬಿಡದ ಚಲನ ಶೀಲ ವ್ಯಕ್ತಿತ್ವ.
ಜೀವನಕ್ಕೆ ಯಾವುದನ್ನಾದರೂ ದುಡಿಯಬೇಕು. ಅದರಲ್ಲಿ ಇರುವ ಶ್ರದ್ದೆ. ಬಹುಶಃ ಬಾಲ್ಯದ ಬವಣೆಗಳು
ಇದನ್ನು ಕಲಿಸಿರುತ್ತದೆ.
ವ್ಯಾವಹಾರಿಕ
ಪ್ರಪಂಚದ ಪರಮ ಸತ್ಯವನ್ನು ಚೆನ್ನಾಗಿ ಅರಿತವರು. ಹಾಗಾಗಿ ಇವರು ನಿರ್ಲಿಪ್ತರಾಗಿಯೂ ಇರಬಲ್ಲರು.
ಅವರ ಪ್ರವೃತ್ತಿಯಲ್ಲಿ ಇದು ಅವರಿಗೆ ಪ್ರಿಯವಾದ ನಿಲುವು.. ಬಹಳಷ್ಟು ಯೋಚಿಸಿ ಮಥಿಸಿ
ಪ್ರಪಂಚವನ್ನು ಅವಲೋಕಿಸಿ ಅವರು ತನ್ನ ನಿಲುಮೆಯನ್ನು ತಳೆಯುತ್ತಾರೆ. ಯಾರೇನೇ ಹೇಳಿದರೂ ತನ್ನ
ನಿಲುಮೆಯ ಬಗ್ಗೆ ಅಚಲವಾದ ವಿಶ್ವಾಸ. ಸೌಮ್ಯವಾಗಿಯೇ ಪರಿಣಾಮವನ್ನೂ ಬೀರ ಬಲ್ಲ ವ್ಯಕ್ತಿತ್ವ.
ಇಂದಿನ
ಯುವಕರನ್ನೂ ನಾಚಿಸಬಲ್ಲ ಚಲನ ಶೀಲತೆ. ಚಟುವಟಿಕೆ. ರಂಗದ ಮೇಲಿನ ಪ್ರವೃತ್ತಿ, ಇದೆಲ್ಲವೂ ಅವರಿಗೆ
ಒಲಿದದ್ದು ಅವರ ಯೋಗಾಭ್ಯಾಸದಿಂದ. ಅದರಿಂದ ಇನ್ನೊಬ್ಬರಿಗೆ ಸ್ಫೂರ್ತಿಯಾಗಬಲ್ಲರು. ಈ
ಸ್ಫೂರ್ತಿಯಿಂದಲೇ ಯಕ್ಷಗಾನದಲ್ಲಿ ಹಲವಾರು
ಶಿಷ್ಯವರ್ಗವನ್ನು ಹೊಂದಿದವರು ಇವರು.
ಬಹಳ ಸರಳ ಮತ್ತು
ನೇರ ವ್ಯಕ್ತಿತ್ವ. ಶಾಂತ ಸ್ವಭಾವವಾದರೂ ಇವರ ತೀಕ್ಷ್ಣ ಅವಲೋಕನ ಸದಾ ಹಿಂಬಾಲಿಸುತ್ತಿರುತ್ತದೆ. ಬಹಳ ಬೇಗನೇ ಆತ್ಮೀಯರಾಗಿ ಬಿಡುತ್ತಾರೆ. ಕಲಾಜೀವನದಲ್ಲಿ ಗೌರವವನ್ನು ಕಾಯ್ದುಕೊಂಡವರು.
ನಿರ್ಭಿಡೆಯ ನಡೆ. ಅದಕ್ಕೆ ಅವರದ್ದೆ ಆದ ಕಾರಣಗಳನ್ನು ನಿದರ್ಶನಗಳನ್ನು ಸುಲಭವಾಗಿ ಒದಗಿಸಬಲ್ಲರು.
ವ್ಯಯಕ್ತಿವಾಗಿ ಸದ್ಭಾವನೆ ಸಹಕರಣ ಇದೆಲ್ಲದಕ್ಕೂ ಪ್ರತೀಕವಾಗಬಲ್ಲರು. ಒಂದು ಸಲ ಯಕ್ಷಗಾನ ತಾಳ
ಮದ್ದಲೆಗೆ ಆಹ್ವಾನಿಸುವ ಅವಕಾಶ ನನಗೆ ಒದಗಿ ಬಂತು. ಕರೆ ಮಾಡಿದೆ. ದಿನ ವಿವರ ಎಲ್ಲ ಕೇಳಿದ ಮೇಲೆ
ಬರುತ್ತೇನೆ ಎಂದಷ್ಟೇ ಹೇಳಿ ದಿನಚರಿಯಲ್ಲಿ ಗುರುತು ಮಾಡಿಕೊಂಡರು. ಬರುತ್ತೇನೆ ಎಂದಷ್ಟೇ ಹೇಳಿದವರು ಮತ್ತೆ ಯಾವ
ವಿವರವನ್ನು ಕೇಳಲಿಲ್ಲ. ಸಾಮಾನ್ಯವಾಗಿ ತಾಳ ಮದ್ದಲೆಗೋ ಆಟಕ್ಕೊ ಕರೆದಾಗ ಕಲಾವಿದರು, ಅದರಲ್ಲೂ
ತಾರಾಮೌಲ್ಯ ಇದ್ದವರು ಬಹಳಷ್ಟು ಚೌಕಾಶಿಗೆ ಇಳಿಯುವುದುಂಟು. ತಮಗೆ ಇಂತಹುದೇ ಪಾತ್ರವಾಗಬೇಕು,
ಇಲ್ಲ ಇಂತಹವರೇ ಪ್ರತಿ ಪ್ರಾತ್ರದಲ್ಲಿ ಇರಬೇಕು. ಇಷ್ಟೇ ಸಂಭಾವನೆ ಸಿಗಬೇಕು. ಇದನ್ನೆಲ್ಲ ಮೊದಲೇ
ಮಾತನಾಡಿ ನಿರ್ಧರಿಸಿ ಬಿಡುವ ತವಕ. ಆದರೆ ಗೋವಿಂದ ಭಟ್ಟರು ಎಷ್ಟೇ ವ್ಯಾವಹಾರಿಕವಾಗಿ
ಚಿಂತಿಸುವುದಿದ್ದರು ಬರುತ್ತೇನೆ ಎಂಬ ಒಂದು ಒಪ್ಪಿಗೆ ಬಿಟ್ಟರೆ ಬೇರೆ ಮಾತಿಲ್ಲ. ಚೌಕಾಶಿ ಇಲ್ಲ.
ಸಂಭಾವನೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕರೆದ ನನ್ನ ಬಗ್ಗೆ ವಿಶ್ವಾಸವೋ ಇಲ್ಲ ಅವರ
ಪ್ರವೃತ್ತಿಯೇ ಆ ರೀತಿಯೋ ನನಗೆ ಇಂದಿಗೂ ಕೌತುಕವಾಗಿಯೇ ಉಳಿದಿದೆ. ಕೊನೆಗೆ ನಾನೇ ಕೇಳಿದೆ ಇಂತಹ
ಪಾತ್ರ ಮಾಡಬಹುದೇ? ಆಗ ಶಾಂತವಾದ ಸ್ವರದಲ್ಲಿಯೇ
ಹೇಳಿದರು,
“ನನಗೆಂಥದ್ದೋ?
ಎಂಥದ್ದೂ ಅದೀತು? ಯಾವ ಪ್ರಸಂಗವೂ ಯಾವ ಪಾತ್ರವೂ ಅಲ್ಲಿ ಬಂದಾಗ ಹೇಳೀದರೂ ತೊಂದರೆ ಇಲ್ಲ. ಯಾವದೂ
ಅದೀತು“.
ಯಕ್ಷಗಾನ
ಸಂಘಟಕರಿಗೆ ಇಂತಹ ಕಲಾವಿದರ ಆವಶ್ಯಕತೆ ಈಗ ಬಹಳಷ್ಟಿದೆ ಎನ್ನಿಸಿತು. ಇಷ್ಟು ಹೊಂದಿಕೊಳ್ಳುವ
ಕಲಾವಿದರು ಇಂದು ಯಕ್ಷಗಾನದಲ್ಲಿ ಬೆರಳೆಣಿಕೆಯಷ್ಟೇ ಇರುವುದು. ಅಗಾಧವಾದ ಅನುಭವ ಯಾವುದನ್ನೂ
ಮಾಡಬಲ್ಲೆ ಎಂಬ ಆತ್ಮ ವಿಶ್ವಾಸ ಇದು ಯಕ್ಷಗಾನ ಅಲ್ಲ ಅವರಿಗೆ ಬದುಕು ಕಲಿಸಿದ ಪಾಠಗಳು. ಅದು
ಯಕ್ಷಗಾನದಲ್ಲೂ ವ್ಯಕ್ತವಾಯಿತು. ಯಕ್ಷಗಾನ ರಂಗದ
ಮೇಲೆ ಇವರ ಬದುಕು ಅತೀ ದೀರ್ಘ ಬದುಕು, ಇಷ್ಟು ದೀರ್ಘ ಬದುಕು ಅತ್ಯಂತ ವಿರಳಾತಿ ವಿರಳ
ಎನ್ನಬಹುದು. ವಿಶೇಷವೆಂದರೆ ಇವರ ಶಿಷ್ಯಂದಿರು ನಿವೃತ್ತಿ ಪಡೆದುಕೊಂಡು ಮೇಳ ಬಿಟ್ಟು ಹೊರನಡೆದರೂ
ಗುರುಗಳಾದ ಇವರು ಇನ್ನೂ ರಂಗದಲ್ಲಿ ಪ್ರವೃತ್ತರಾಗಿಯೇ ಇದ್ದಾರೆ.
ಯಕ್ಷಗಾನದ
ವೃತ್ತಿ ಬದುಕಿನಲ್ಲಿ ಇವರು ಪ್ರವರ್ತಕ
ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಾರೆ. ಅದಕ್ಕೆ ಅವರದೇ ಆದ ತಾತ್ವಿಕ ಆಧಾರಗಳನ್ನೂ ಸರಳವಾಗಿ
ಒದಗಿಸುತ್ತಾರೆ. ಶ್ರೀ ಕಡತೋಕ ಮಂಜುನಾಥ ಭಾಗವತರ
ಸಾರಥ್ಯದಲ್ಲಿ ಗೋವಿಂದಣ್ಣನ ನೈಜ ಪ್ರತಿಭೆ ಪ್ರಕಾಶಕ್ಕೆ ಬಂತು. ಯಾವಾಗ ಕಲಾವಿದನಾದವನು
ಪಾತ್ರಕ್ಕೆ ಮಾದರಿಯಾಗುತ್ತಾನೋ ವೃತ್ತಿಜೀವನದ ಪರಮೋತ್ಕರ್ಷ ಸ್ಥಾನವನ್ನು ತಲುಪಿದ ಎಂದೇ
ಆಗುತ್ತದೆ.. ಆ ಕಾಲಾದಲ್ಲಿ ಶ್ರೀ ಧರ್ಮಸ್ಥಳ ಮೇಳದ ಗಜ ಪಡೆಯಲ್ಲಿ ಒಂದು ಸೇನಾನಿಯಾಗುವುದು
ಮಾತ್ರವಲ್ಲ ಸೇನಾಪತಿ ಸ್ಥಾನಕ್ಕೆ ಸ್ಪರ್ಧಿಯಾಗುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಕಡತೋಕ
ಭಾಗವತರಾಗಲೀ ಮೇಳಕ್ಕೆ ಅನೇಕ ಯಶಸ್ವೀ
ಪ್ರಸಂಗವನ್ನು ರಚಿಸಿದ ಶ್ರೀ ಅಮೃತ ಸೋಮೇಶ್ವರರಾಗಲೀ ಇವರನ್ನು ಗಮನಿಸಿಯೇ ಪ್ರಸಂಗ ನಡೆ
ರೂಪಿಸಲ್ಪಡುತ್ತಿತ್ತು. ಆಗ ಮೇಳದಲ್ಲಿ ಮೂರು ಜನ ಅಗ್ರಗಣ್ಯ ಕಲಾವಿದರು. ಒಬ್ಬರು ಶ್ರೀ ಕುಂಬಳೆ
ಸುಂದರ್ ರಾವ್, ಇನ್ನೊಬ್ಬರು ಪುತ್ತೂರು ಶ್ರೀ ನಾರಾಯಣ ಹೆಗ್ಗಡೆಯವರು, ಮತ್ತೊಬ್ಬರು ಇವರು ಶ್ರೀ
ಗೋವಿಂದ ಭಟ್ಟರು. ಇಡೀ ರಾತ್ರಿಯ ಪ್ರಸಂಗದಲ್ಲಿ ಈ
ಮೂವರಲ್ಲಿ ಯಾರಾದರೊಬ್ಬರು ರಂಗದಲ್ಲಿ ಇರುವಂತೆ ಪ್ರಸಂಗ ಸಂಯೋಜನೆಯಾಗುತ್ತಿತ್ತು. ಈ ಮೂರು
ಜನರಲ್ಲಿ ಒಬ್ಬರಲ್ಲ ಒಬ್ಬರು ರಂಗಸ್ಥಳದಲ್ಲಿದ್ದರೆ ಪ್ರೇಕ್ಷಕನನ್ನು ಹಿಡಿದುಕೊಳ್ಳುವುದು
ಕಷ್ಟವಲ್ಲ. ಇದು ಕಡತೋಕರ ತಂತ್ರಗಾರಿಕೆ. ಪ್ರಸಂಗಗಳು ಯಶಸ್ವಿಯಾಗುವುದಕ್ಕೆ ಇದೂ ಒಂದು ಪ್ರಧಾನ
ಕಾರಣವಾಗಿತ್ತು. ಸಮರ್ಥ ನಿರ್ದೇಶನಕ್ಕೆ ಗೋವಿಂದ
ಭಟ್ಟರೂ ಸಾಕ್ಷಿಯಾಗಿದ್ದು ಆ ಕಾಲದಲ್ಲಿ ಯುವಕ ಭಟ್ಟರ ಸಾಧನೆ ಎನ್ನಬೇಕು. ಇವರು ನಿರ್ವಹಿಸಿದ
ಪಾತ್ರಗಳನ್ನು ಇವರ ಗೈರು ಹಾಜರಿಯಲ್ಲಿ ಮತ್ತೊಬ್ಬನಿಗೆ ನಿರ್ವಹಿಸುವುದು ಅತ್ಯಂತ ದೊಡ್ಡ
ಸವಾಲಾಗಿತ್ತು. ಸವಾಲಾಗಿತ್ತು ಮಾತ್ರವಲ್ಲ ಅದು ಅಸಾಧ್ಯವೂ ಆಗಿತ್ತು.
ಅದೇನಿದ್ದರೂ ಯಕ್ಷಗಾನದ ವಿಚಾರಕ್ಕೆ ಬಂದಾಗ ನಾನು ಇವರನ್ನು ಕೆಲವು ಪಾತ್ರವಾಗಿಯೇ ಕಾಣುತ್ತೇನೆ..
ಮಹಾ ಬ್ರಾಹ್ಮಣದ ಕೌಶಿಕ ಅಥವಾ ವಿಶ್ವಾ ಮಿತ್ರನಾಗಿರಬಹುದು, ಪಾದುಕಾ ಪ್ರದಾನದ ಶ್ರೀ
ರಾಮನಾಗಿರಬಹುದು ಚಕ್ರವರ್ತಿ ದಶರಥದ ವಾಲ್ಮೀಕಿಯಾಗಿರಬಹುದು ಇಂತಹ ಯುಗ ಪ್ರವರ್ತಕ ಪಾತ್ರಗಳಲ್ಲಿ
ಗೋವಿಂದ ಭಟ್ಟರ ಅಂತಃ ಸತ್ವ ಅವರಿಗೆ ಅರಿವಿದ್ದೋ ಇಲ್ಲದೆಯೋ ಅದು ಪ್ರಕಟವಾಗುತ್ತದೆ. ಹಾಗಾಗಿ
ಇಲ್ಲಿ ಕಾಣುವ ಅಂತರಂಗದ ಗೋವಿಂದಣ್ಣ ಉಳಿದ ಕೌರವನಲ್ಲೋ,
ಕಂಸನಲ್ಲೋ ಜರಾಸಂಧನಲ್ಲೋ ಕಾಣುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಮಹಾಬ್ರಾಹ್ಮಣದ ಕೌಶಿಕನ ಪಾತ್ರದ ಅಂತೀಂದ್ರಿಯದ ಕಸುವು ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಮೊದಲಿಗೆ
ರಾಜವೇಷದ ಕೌಶಿಕ ಆನಂತರ ತ್ರಿಶಂಕು ಪ್ರಕರಣದ ವಿಶ್ವಾಮಿತ್ರ ಇವೆರಡನ್ನೂ ಒಂದೇ ಎಸೆತಕ್ಕೆ
ನಿರ್ವಹಿಸುತ್ತಿದ್ದ ಇವರ ಚೈತನ್ಯ ಅದ್ಭುತ. ರಂಗಸ್ಥಳವನ್ನು ವಿಶ್ವಾಮಿತ್ರನಾಗಿ ಇವರು ಆಕ್ರಮಿಸಿದ
ರೀತಿ ನಂತರ ಆ ಪಾತ್ರವನ್ನು ಮುಂದುವರೆಸುವುದೂ ದೊಡ್ಡ ಸವಾಲಾಗಿತ್ತು. ಪ್ರೇಕ್ಷಕ ವಿಶ್ವಾಮಿತ್ರನ
ಗುಂಗಿನಿಂದ ಹೊರಬರುವುದು ಸಾಧ್ಯವಿಲ್ಲದ ಮಾತು. ಬಹುಶಃ ನಿತ್ಯ ಅನುಷ್ಠಾನದ ಪ್ರಭಾವ ಇರಬಹುದು, ಜತೆಗೆ
ಸಂಸ್ಕ್ರತ ಭಾಷಾ ಪರಿಣತಿ, ಆ ಮೂಲಕ ಗಳಿಸಿದ ಜ್ಞಾನದ ಸತ್ವವೂ ಇರಬಹುದು, ಇದರಿಂದ ಈ ಪಾತ್ರಗಳಾಗಿ ಗೋವಿಂದ ಭಟ್ಟರು ರಂಗವೇರಿದಾಗ ಅವರ
ಅಂತರಂಗದ ಮುಖ ಅಲ್ಲಿ ತೆರೆದುಕೊಳ್ಳುತ್ತದೆ. ಅದು ಕೇವಲ ಪಾತ್ರವೂ ಆಗುವುದಿಲ್ಲ, ಕೇವಲ
ಗೋವಿಂದಣ್ಣನೂ ಆಗುವುದಿಲ್ಲ. ಅಲ್ಲಿ ಇನ್ನೇನೋ ವಸ್ತು ಅಂತರ್ಧಾರೆಯಾಗಿ ಪ್ರವಹಿಸಿದಂತೆ
ಭಾಸವಾಗುತ್ತದೆ. ಇಲ್ಲಿ ಕಂಡುಬರುವ ಈ ಅವ್ಯಕ್ತ ಹರಿವು ಏನಿದೆಯೋ ಅದು ಇವರ ಕೌರವ, ಋತುಪರ್ಣ ತಾಮ್ರಧ್ವಜಂತಹ ರಾಜಸ ಪಾತ್ರಗಳಲ್ಲಿ
ಕಂಡುಬರುವುದಿಲ್ಲ. ಹಾಗಿದ್ದರೂ ಇವರ ರಾಜವೇಷಗಳು ತೆಂಕುತಿಟ್ಟು ಯಕ್ಷಗಾನದ ಮಾದರೀ ವೇಷಗಳಂತೆ
ವಿಜ್ರಂಭಿಸುವುದು ಇವರ ಪ್ರವರ್ತಕ ಗುಣಗಳಿಂದಲೇ. ಅಲ್ಲಿ ಪ್ರತೀ ಸಲವೂ ಸೂಕ್ಷವಾಗಿಯಾದರೂ ಒಂದು
ಅವಿಷ್ಕಾರ ಕಂಡುಬರುತ್ತದೆ. ಇದಕ್ಕೆ ಸಾಕ್ಷಿ
ಒಂದೇ ಕಡೆಯಲ್ಲಿ ಗಧಾಯುದ್ದದ ಕೌರವವನಾಗಿ ಹತ್ತು ಸಲ ರಂಗಸ್ಥಳ ವೇರಿದ್ದರು.
ದೇವಿ ಮಾಹಾತ್ಮೆ ಎಂಬ ಪ್ರಸಂಗದಲ್ಲಿ ಇವರು ಮಾಡದೇ ಇದ್ದ
ಪಾತ್ರಗಳೇ ಇಲ್ಲ ಮತ್ತು ರಾಮಾಯಣದ ಯಕ್ಷಗಾನ
ಪ್ರಸಂಗಗಳಲ್ಲಿ ಇವರು ಎಲ್ಲಾ ಪಾತ್ರಗಳನ್ನು ನಿರ್ವಹಿಸಿದವರಿದ್ದಾರೆ. ಅದು ವೃತ್ತಿ ಬದುಕಿನಲ್ಲಿ
ಅನಿವಾರ್ಯವಾಗಿತ್ತೇ ಹೊರತು ಅದೊಂದು ಸಾಧನೆ ಎಂದು ಪರಿಗಣಿಸುವ ಹಾಗಿಲ್ಲ ಎಂದು ಪ್ರಾಮಾಣಿಕವಾಗಿ
ಹೇಳುತ್ತಾರೆ.
ಯಕ್ಷಗಾನವನ್ನು
ಇವರು ಕಲೆಯಾಗಿ ಕಂಡು ಮೋಹಿಸಿದವರಲ್ಲ. ವ್ಯವಸ್ಥಿತ ವಿವಾಹದ ರೀತಿಯಂತೆ ವಿವಾಹವಾದ ಮೇಲೆ ಸಹಧರ್ಮಿಣಿಯನ್ನು
ಪ್ರೀತಿಸಿದಂತೆ, ಆ ಪ್ರೀತಿಗೆ ಬದ್ಧರಾಗಿ ಕೌಟುಂಬಿಕ ಜೀವನ ವ್ಯವಸ್ಥಿತವಾಗಿ ನಡೆಸುವಂತೆ
ಯಕ್ಷಗಾನದೊಂದಿಗೆ ತಾದಾತ್ಯ್ಮವನ್ನು ತೋರಿದವರು. ಯಕ್ಷಗಾನದಲ್ಲಿ ಅನ್ನ ಬ್ರಹ್ಮನನ್ನೇ ಕಂಡ ಇವರು
ಅಲ್ಲಿ ಉಂಡ ಅನ್ನದಿಂದ ತಣಿದ ಹಸಿವವನ್ನು ಎಂದಿಗೂ ಮರೆಯಲಿಲ್ಲ. ಆ ಕಾರಣಕ್ಕೆ ಈಗಲೂ ರಂಗದಲ್ಲಿ
ಸದಾ ಪ್ರವೃತ್ತರು. ಆ ಅನಿಟ್ಟಿನಲ್ಲಿ ಈಗಲೂ ಅವರ ಹಸಿವು ಇಂಗಿದಂತೆ ಭಾಸವಾಗುವುದಿಲ್ಲ.
ಯಾರನ್ನೇ
ಆಗಲಿ ಅವರು ನಿಕೃಷ್ಟವಾಗಿ ಕಾಣುವುದಿಲ್ಲ. ಬಾಲ್ಯದಲ್ಲಿ ತಾನು ಅನುಭವಿಸಿದ ಭರ್ತ್ಸನೆ, ಅವಹೇಳನೆ,
ಹಿಂಸೆ ಇವುಗಳೆಲ್ಲದರ
ಪರಿಣಾಮ ಅನುಭವ ಮಾಗಿದಾಗ ಅವರ ವ್ಯಕ್ತಿತ್ವದಲ್ಲೂ ಪಕ್ವತೆಯನ್ನು ತಂದಿದೆ. ತಾತ್ವಿಕವಾಗಿ
ಸೈದ್ದಾಂತಿಕವಾಗಿ ತನ್ನದೇ ವೆತ್ಯಸ್ಥ ಸಿದ್ಧಾಂತವನ್ನು ಹೊಂದಿದ್ದರೂ ಮನಸ್ಸಿನಿಂದ ಯಾರಲ್ಲೂ
ವೈಷಮ್ಯವನ್ನು ತೋರಿದವರಲ್ಲ. ಸಿದ್ದಾಂತ ಬೇರೆ, ವಾಸ್ತವದ ಜೀವನ ಧರ್ಮ ಬೇರೆ. ಆದರೆ ಇಂದು ಬಾಹ್ಯ
ಜಗತ್ತಿನಲ್ಲಿ ಸಿದ್ದಾಂತವನ್ನು ವಿರೋಧಿಸಿದವನು ಎಲ್ಲದರಲ್ಲೂ ಜನ್ಮ ವಿರೋಧಿಯಾಗಿ ಕಾಣುವುದೇ
ಹೆಚ್ಚು. ಇಲ್ಲಿ ಬರುವ ತತ್ವ ಭೇದವಾಗಲಿ ಸಿದ್ದಾಂತ ವೆತ್ಯಾಸಗಳಾಗಲಿ ಇವರಿಗೆ ಅರ್ಥವಾಗುತ್ತದೆ.
ಆದರೆ ಕಲಾವಿದನ ತತ್ವ ಸಿದ್ದಾಂತಗಳೇನೆ ಇರಲಿ ಅದನ್ನು ವ್ಯಯಕ್ತಿಕ ನೆಲೆಗೆ ತಳುಕು ಹಾಕಿ
ನೋಡುವುದೇ ಅಧಿಕ. ಹಾಗಾಗಿ ಕಲಾವಿದನ ಮೇಲೆ ಅಂಧಾಭಿಮಾನ ಬೆಳೆಯುತ್ತದೆ. ಅಲ್ಲಿ ತತ್ವ ಸಿದ್ದಾಂತಗಳ
ಬಗ್ಗೆ ಗಮನವೇ ಇರುವುದಿಲ್ಲ. ಅವುಗಳನ್ನು ಅರ್ಥೈಸಿಕೊಳ್ಳುವ ಮನೋಭಾವವೇ ಇರುವುದಿಲ್ಲ. ಕೇವಲ
ಅಭಿಮಾನ. ಈ ಅಭಿಮಾನಕ್ಕೆ ಸ್ಪಷ್ಟ ರೂಪು ರೇಷೆ ಏನು ಇರುವುದಿಲ್ಲ. ಈ ಅಭಿಮಾನ ಆಕ್ಷೇಪಗಳನ್ನು
ಸಹಿಸುವುದಿಲ್ಲ. ಆದರೆ ಅಭಿಮಾನವೋ ಪ್ರೀತಿಯೋ ಗೋವಿಂದ ಭಟ್ಟರು ಯಾವುದಕ್ಕೂ ತಲೆ
ಕೆಡಿಸಿಕೊಂಡವರಲ್ಲ. ತಾನು ನಡೆವ ಹಾದಿ ತಾನು ತಳೆವ ನಿಲುವು ಎಲ್ಲದರಲ್ಲೂ ಪ್ರಾಮಾಣಿಕವಾಗಿ
ವ್ಯವಹರಿಸಿದವರು.
ಕಲಾವಿದನಾದವನು ವಿಮರ್ಶೆಯನ್ನು ಒಪ್ಪಿಕೊಳ್ಳಬೇಕು ಎಂದೇ ಹೇಳುತ್ತಾರೆ. ಒಬ್ಬ
ವಿಮರ್ಶಕನಿಗೆ ಪರಿಧಿಗಳು ಅರ್ಹತೆಗಳು ಇರುವ ಅಗತ್ಯವಿಲ್ಲ. ಊಟ ಮಾಡುವವನಿಗೆ ಅಡುಗೆ ಮಾಡುವುದಕ್ಕೆ
ಗೊತ್ತಿರಬೇಕೆಂದೇನು ಇಲ್ಲ. ಇದು ರುಚಿಯಾಗಿಲ್ಲ ಎಂದರೆ ಮಾಡಿ ತೋರಿಸು ಎನ್ನುವುದು ಮೂರ್ಖತನ. ಇದನ್ನು ಸ್ಪಷ್ಟವಾಗಿ ಸಂದರ್ಶನದಲ್ಲಿ ಉಚ್ಚರಿಸಿದ್ದಾರೆ.
ಯಾವುದೇ ವಿವಾದವಿರಲಿ ವಿಮರ್ಶಕರನ್ನು ಯದ್ವಾತದ್ವ
ಹೀಯಾಳಿಸಿ ಚಪಲ ತೀರಿಸಿಕೊಳ್ಳುವ ಅವಕಾಶವಾದಿಗಳು ಇದನ್ನು ಅರ್ಥವಿಸಿಕೊಳ್ಳುವುದಿಲ್ಲ. ಯಾಕಂದರೆ
ಇವೆಲ್ಲ ಚಲಾವಣೆಯಾಗದ ಸವಕಲು ನಾಣ್ಯಗಳು
ಸಂದರ್ಶನಕ್ಕಾಗಿ
ನಾನು ಕರೆ ಮಾಡಿದಾಗ ಅದಕ್ಕೊಂದು ಅವಧಿಯನ್ನು ನಿರ್ಣಯಿಸಿ ತಿಳಿಸಿದರು. ಇಂತಹವರು ಈ ಅವಧಿಯಲ್ಲಿ
ಸಂಪರ್ಕಿಸುತ್ತಾರೆ ಎಂದು ರಂಗನಾಥನ ಹೆಸರನ್ನು ಸೂಚಿಸಿದ್ದೆ. ಮೊದಲು ರಂಗನಾಥರು ಯಾರೋ ಅಂತ ಆತಂಕ
ಕೌತುಕವನ್ನು ತೋರಿದರೂ ರಂಗನಾಥರನ್ನು ಕಂಡ ಮೇಲೆ ಹೋ ಇವನು ನಮ್ಮವನೇ ಅಂತ ಆತ್ಮಿಯತೆಯನ್ನು ತೋರಿ
ಸಹಕರಿಸಿದರು. ಆನಂತರ ಅವರು ಪ್ರಶಸ್ತಿ ಸ್ವೀಕಾರಕ್ಕೆ ದೆಹಲಿಗೆ ಹೋಗುವವರಿದ್ದರು. ಆದರೆ ನನಗೆ
ಆಶ್ಚರ್ಯವಾದದ್ದು ಇದು ಕಳೆದು ಸುಮಾರು ಹತ್ತು ದಿನಗಳಾದ ಮೇಲೆ ಗೋವಿಂದ ಭಟ್ಟರು ನನಗೆ ಕರೆ ಮಾಡಿ
ನಡೆದ ಸಂದರ್ಶನದ ವಿವರಗಳನ್ನು ಕೇಳಿ “ಹೇಗಾಯಿತೋ
ಏನೋ ಅವರಿಗೆ ಸಮಾಧಾನವಾದರೆ ಸಾಕು”. ಇದನ್ನು ದೆಹಲಿಯಿಂದ ಊರಿಗೆ ಬಂದೊಡನೆ ನೆನಪಿಟ್ಟು ನನಗೆ ಕರೆ
ಮಾಡಿ ವಿಚಾರಿಸಬೇಕಿದ್ದರೆ ಅದರ ಗಂಭೀರತೆ ಅವರು ಸಲ್ಲಿಸಿದ ಗೌರವ ನಿಜಕ್ಕೂ ಆಶ್ಚರ್ಯ ತಂದಿತು. ಈ ಒಂದು ಕಾರ್ಯಕ್ಕೆ ಅವರು ಕೊಟ್ಟ ಗೌರವ ಆದರ ಅದು
ಗೋವಿಂದಣ್ಣನೆಂಬ ವ್ಯಕ್ತಿತ್ವದ ರೂಪವಾಗಿ ಕಂಡಿತ್ತು. ರಂಗಸ್ಥಳದಲ್ಲಿ ಕಿವಿಯನ್ನು ಸೀಳಿ
ಮನಸ್ಸಿಗೆ ನಾಟುವ ಇವರ ಹರಿತ ಸ್ವರ ಶಾರೀರ ಹೀಗೆ ಮಾತನಾಡಿದಾಗ ಮಂದ ಮಂದ ಶಾಂತ ಸ್ವರವಾಗುತ್ತದೆ.
ಆ ಶಾಂತ ಸ್ವರದಲ್ಲಿ ನಮಸ್ಕಾರ ಎಂದು ಕೇಳುವಾಗ ಮನಸ್ಸು ಭಾರವಾಗುತ್ತದೆ. ಆ ಒಂದು ಘಳಿಗೆ ಒಂದು
ಧನ್ಯತಾಭಾವ ಆವರಿಸಿಬಿಡುತ್ತದೆ.

No comments:
Post a Comment