ಬಹಳ ಹಿಂದೆ ಕಟೀಲು ಮೇಳದ ಆಟದ ಸಂದರ್ಭ. ಶ್ರೀ ದೇವಿ ಮಹಾತ್ಮೆ ಪ್ರಸಂಗ. ಆಟ ಆಡಿಸುವವರು ಮಹಾನ್ ದೇವಿಭಕ್ತರು. ಪ್ರತಿವರ್ಷವೂ ಯಕ್ಷಗಾನದ ಹರಕೆ ಆಟ ಅಡಿಸುವವರು. ಒಂದು ಸಲ ರಂಗದಲ್ಲಿ ದೇವಿ ಪ್ರವೇಶವಾಗುವಾಗ ದೇವಿಗೆ ಮಾಲೆ ಹಾಕುವುದಕ್ಕೆ ಬಂದರೆ. ಆಗ ಆದಿನ ಭಾಗವತಸ್ಥಾನದಲ್ಲಿದ್ದ ಶ್ರೀ ಬಲಿಪ ನಾರಾಯಣ ಭಾಗವತರು, ಮಾಲೆ ಹಾಕುವುದನ್ನು ವಿರೋಧಿಸಿದ್ದರು. ದೇವಿಯೇ ಆಗಿರಲಿ ರಂಗದಲ್ಲಿ ಭಾಗವತನ ಸ್ಥಾನ ಹಿರಿದು, ಭಾಗವತರಿಗೆ ಮೊದಲು ಅಂಗೀಕಾರ ಅಥವಾ ಭಾಗವತರ ಅನುಮತಿ ಇಲ್ಲದೆ ಮಾಲೆ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಬಿಟ್ಟರು. ಅದು ಯಕ್ಷಗಾನ ರಂಗಸ್ಥಳದಲ್ಲಿ ಭಾಗವತರಿಗಿರುವ ಸ್ಥಾನ. ಇದನ್ನು ಅತಿಕ್ರಮಿಸುವುದು ಸಾಧ್ಯವಿಲ್ಲ. ಭಾಗವತರು ಸ್ಥಾನ ಗೌರವವನ್ನು ಎತ್ತಿ ಹಿಡಿದಿದ್ದರು. ಆನಂತರ ಆ ಸಂಘಟಕರು ತಮ್ಮ ಆಟಗಳಲ್ಲಿ ಬಲಿಪರ ಮೇಳವನ್ನು ಆಡಿಸುತ್ತಿರಲಿಲ್ಲ. ಈ ಘಟನೆಯನ್ನು ನಮ್ಮ ಮನೆಯಲ್ಲಿ ಹಿರಿಯರು ಹೇಳುತ್ತಿರುವುದನ್ನು ಕೇಳಿದ್ದೇನೆ. ಬಲಿಪ್ಪರು ಒಂದು ಸಲ ಇದನ್ನು ಪ್ರಸ್ತಾಪ ಮಾಡಿದ್ದರು.
ಸುರತ್ಕಲ್ ಮೇಳದ ಆಟಗಳು ಆಡುತ್ತಿದ್ದ ಸಂದರ್ಭ, ಹಿರಿಯ ಕಲಾವಿದ ತೆಕ್ಕಟ್ಟೆ ಆನಂದ ಮಾಸ್ತರ್ ಮರುದಿನದ ಮೇಳದ ಆಟಗಳ ಪರಿಚಯವನ್ನು ನಂತರ ಧನ್ಯವಾದ ಸಮರ್ಪಣೆಯನ್ನು ಮಾಡುತ್ತಿದ್ದುದನ್ನು ಹಲವು ಸಲ ನೋಡಿದ್ದೇನೆ. ಅಂತ ಸಂದರ್ಭಗಳಲ್ಲಿ ಹಿರಿಯ ಕಲಾವಿದರಾಗಿದ್ದೂ ಅವರು ಭಾಗವತರ ಅನುಮತಿಯನ್ನು ಹಲವು ಸಲ ಸಂಜ್ಞೆಯಿಂದಲಾದರೂ ಕೇಳುವುದನ್ನು ನೋಡಿದ್ದೇನೆ.
ಇವುಗಳೆಲ್ಲ ರಂಗದ ಮೇಲೆ ಭಾಗವತರ ಸ್ಥಾನದ ಮಹತ್ವವನ್ನು ತೋರಿಸುತ್ತದೆ. ರಂಗವೆಂದರೆ ಅದು ಭಾಗವತ ನಿಯಂತ್ರಣದಲ್ಲಿರುತ್ತದೆ. ಅಲ್ಲಿ ಏನೇ ಆಗುವುದಿದ್ದರೂ ಅದು ಭಾಗವತನ ಅಂಗೀಕಾರದಿಂದಲೇ ನಡೆಯಬೇಕು. ದುರ್ದೈವ ಎಂದರೆ ಇದು ಆಗಾಗ ಉಲ್ಲಂಘಿಸಲ್ಪಡುತ್ತದೆ. ಹಲವು ಹಿರಿಯ ಕಲಾವಿದರೂ ತಾಳಮದ್ದಲೆಯಲ್ಲಿ ಆಟಗಳಲ್ಲಿ ಇದನ್ನು ಅತಿಕ್ರಮಿಸಿ ತಮ್ಮ ಹಿರಿಮೆಯನ್ನು ತೋರಿಸುವುದಕ್ಕೆ ತೊಡಗಿಬಿಡುತ್ತಾರೆ. ಯಕ್ಷಗಾನ ಎಂಬುದು ಸಭ್ಯಕಲೆ. ಪರಂಪರೆಯಲ್ಲಿ ಇದಕ್ಕೊಂದು ಶಿಸ್ತು ಇದೆ. ಆದರೆ ಈಗ ಯಕ್ಷಗಾನಕ್ಕೆ ಗೌರವ ಇಲ್ಲ ಎನ್ನುವ ಸನ್ನಿವೇಶದಲ್ಲಿ ಇವುಗಳಿಗೆಲ್ಲ ಲೆಕ್ಕವೇ ಇಲ್ಲ ಎಂಬಂತಾಗಿದೆ. ಕಾರ್ಯಕ್ರಮದ ನಡುವೆ ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಏನಾದರೋಂದು ಅಭಿಪ್ರಾಯ ಹೇಳುವುದಕ್ಕೆ ಇರುವುದು ತಪ್ಪೇನಲ್ಲ. ಆದರೆ ಅಂತ ಸನ್ನಿವೇಶಗಳಲ್ಲಿ ಭಾಗವತರ ಅನುಮತಿಯೊಂದಿಗೆ, ಯಾಕೆಂದರೆ ಮುಂದೆ ಏನು ನಡೆಯುತ್ತದೆ ಎಂಬುದು ಭಾಗವತನಿಗೆ ಅರಿವಿರಬೇಕಾಗುತ್ತದೆ. ಅದು ಅವರ ಜವಾಬ್ದಾರಿ. ಆಗ ಒಂದೆರಡು ಮಾತುಗಳನ್ನಾಡುವಾಗಲೂ ಪರಿಮಿತಿಯನ್ನು ಅರಿತಿರಬೇಕಾಗಿರುವುದು, ಮಾತನಾಡುವವರ ಜವಾಬ್ದಾರೆ. ಅಲ್ಲಿ ತಮ್ಮ ಮಾತಿನ ಪರಿಣಾಮಕಾರಿತ್ವಕ್ಕೆ ಯಾವುದೋ ಜನಾಂಗವನ್ನೋ ಧರ್ಮವನ್ನೋ ಹೊಲಿಸಿ ಅಥವಾ ನಿಂದಿಸಿ ಮಾತನಾಡುವುದು ನಿಯಮ ಬಾಹಿರ ಮಾತ್ರವಲ್ಲ ಯಕ್ಷಗಾನದ ಮಾತ್ರವಲ್ಲ ಒಂದು ಕಲೆಗೆ ಕಾರ್ಯಕ್ರಮದ ಸಭ್ಯತೆಗೆ ಅನುಸರಿಸಿಕೊಂಡು ಅದು ಸೂಕ್ತವಲ್ಲ ಮಾತ್ರವಲ್ಲ ಆಕ್ಷೇಪಾರ್ಹ. ಕೊನೆಗೆ ಯಾರೊ ಒಬ್ಬ ಮೈಕಿನ ಮುಂದೆ ಏನೋ ಒದರಿದರೂ ರಂಗದಲ್ಲಿದ್ದ ಭಾಗವತನೂ ಅದರ ಅನಾವಶ್ಯಕವಾಗಿ ಅದರ ಹೊಣೆ ಹೊರಬೇಕಾಗುತ್ತದೆ. ಈ ಸಾಮಾನ್ಯ ಜ್ಞಾನದ ಅರಿವು ತಮ್ಮ ಹೆಗ್ಗಳಿಕೆ ಹಿರಿಮೆಯನ್ನು ಮೆರೆಸುವಾಗ ಇರಬೇಕಾಗುತ್ತದೆ.
ವಿಪರ್ಯಾಸವೆಂದರೆ, ಈಗೀಗ ಇದೆಲ್ಲ ಅರಿತಿರುವ ಹಿರಿಯರೇ ಇದನ್ನೆಲ್ಲ ಅತಿಕ್ರಮಿಸುತ್ತಾರೆ. ವೈಯಕ್ತಿಕ ಘನತೆ ಎಂಬುದು ಯಕ್ಷಗಾನದ ಕಲೆಯ ಘನತೆಗಿಂತಲೂ ಮುಖ್ಯವಾಗುತ್ತದೆ. ಇದು ಆಗಬಾರದು. ಆದರು ಸಂಭವಿಸುತ್ತದೆ. ಯರೋ ಹೇಳಿದ್ದರು, ಮೇಳಗಳು ಉಳಿಯುತ್ತವೆ, ಕಲಾವಿದರು ಉಳಿಯುತ್ತಾರೆ ಆದರೆ ಯಕ್ಷಾಗಾನ ಕಲೆ ಉಳಿಯುವುದಿಲ್ಲ ಎಂದು. ವಾಸ್ತವದಲ್ಲಿ ಈ ಮಾತು ಪದೇ ಪದೇ ಸತ್ಯವಾಗುತ್ತದೆ.
ಯಾಕೋ ಈ ಅನಿಸಿಕೆಗಳನ್ನು ವ್ಯಕ್ತ ಪಡಿಸಬೇಕು ಎನಿಸಿತು. ತಪ್ಪು ಒಪ್ಪು ಏನೇ ಇರಲಿ ಸಾರ್ವತ್ರಿಕ ನಿಯಮ ಶಿಸ್ತು ಎಲ್ಲರಿಗೂ ಅನಿವಾರ್ಯವಾಗಬೇಕು.
No comments:
Post a Comment