"ಇದು ವಿಮರ್ಶೆಯಲ್ಲದ ಚಿಂತನ"

Monday, December 24, 2012

ಭಾಗವತ ಸಂವಾದ


ನಿರೀಕ್ಷೆಯಂತೆ ಬಲಿಪ್ಪ ನಾರಾಯಣ ಭಾಗವತರ ಸಂದರ್ಶನದ ನೇರ ಪ್ರಸಾರ ಮುಂಜಾನೆಯ ಚಳಿಯೊಂದಿಗೆ ರೋಮಾಂಚನವನ್ನು ಉಂಟು ಮಾಡಿಬಿಟ್ಟಿತು. ಮೊದಲ ದಿನ ಹಲವರಿಗೆ ಸಂದೇಶವನ್ನು ಕಳುಹಿಸಿದ್ದಾಯಿತು. ಎಲ್ಲರೂ ಬಹಳ ಉತ್ಸಾಹದಿಂದ ಸ್ಪಂದಿಸಿಬಿಟ್ಟರು. ಮುಂಜಾನೆಯ ಹಲವು ನಿಯಮಿತ ಕೆಲಸಗಳ ಸಮಯವನ್ನು ಹೊಂದಿಸಿಕೊಂಡು ಟಿ.ವಿ.ಯನ್ನು ಹಾಕಿದ್ದಾಯಿತು. ಅದಾಗಲೇ ಕಾರ್ಯಕ್ರಮ ಅರಂಭವಾಗಿ ಕೆಲವು ಸೆಕೆಂಡುಗಳು ಸರಿದುದಕ್ಕೆ ಸಾಕ್ಷಿಯಾಗಿ ಬಲಿಪ್ಪಜ್ಜನ ಮುಖ ಪರದೆ ಮೇಲೆ ಬೆಳಗುತ್ತಿತ್ತು.

ಆರಂಭಿಕ ಸಂಪ್ರದಾಯದೊಂದಿಗೆ ಕಾರ್ಯಕ್ರಮ ಆರಂಭವಾಗಿಬಿಟ್ಟಿತು. ದೊಡ್ದ ಕೊಪ್ಪರಿಗೆಯ ಮುಂದೆ ಸಣ್ಣ ಕೌಳಿಗೆ ಸೌಟು ಹಿಡಿದು ನಿಂತಂತೆ ಸಂದರ್ಶಕರನ್ನು ನೋಡಿದಾಕ್ಷಣ ಅನ್ನಿಸಿತು. ಯಾಕಾಗಿರಬಹುದು? ಯಕ್ಷಗಾನಕ್ಕೆ ಸಂಬಂಧಿಸಿದಂತೆ ಬಲಿಪ್ಪರಿಗೆ ಇರುವ ಜ್ಞಾನ ಪ್ರಶ್ನಾತೀತ. ಬೃಹತ್ ಜ್ಞಾನ ಭಂಡಾರ ಅವರು. ಅವರೆದುರು ಯಕ್ಷಗಾನದ ಬಗ್ಗೆ ಒಂದು ಸಣ್ಣ ಪ್ರಶ್ನೆ ಕೇಳುವುದಕ್ಕೂ ತಿಳುವಳಿಕೆ ಅವಶ್ಯ. ಸಂದರ್ಶಕರಿಗೆ ಈ ಬಗ್ಗೆ ಎಷ್ಟು ಅರಿವಿದೆಯೋ ನನಗೆ ಗೊತ್ತಿಲ್ಲ. ಆದರೂ ಹೀಗನ್ನಿಸಿತು. ಇದು ಅನಿಸಿದ ಪ್ರಾಮಾಣಿಕ ಅನಿಸಿಕೆ ಮಾತ್ರ. ಆದರೂ ಇದು ಬಹಳ ಶ್ರೇಷ್ಠ ಅಂತ ಅಂದುಕೊಳ್ಳುತ್ತೇನೆ. ನಿಗದಿತ ಮುಕ್ಕಾಲು ಗಂಟೆಯೊಳಗೆ ಸಂದರ್ಶನ ಮುಗಿಸಬೇಕಾದ ಅನಿವಾರ್ಯತೆ ಇದೆ. ಕೆಲವೆಲ್ಲ ಪರಿಮಿತಿಯೊಳಗೆ ವ್ಯವಹರಿಸ ಬೇಕಾದ ಕಾರಣ ಬೇಡವೆಂದರೂ ಆ ಕಾರಣಗಳೇ ಮೊದಲು ಕಂಡುಬಿಡುತ್ತವೆ. ಬಲಿಪ್ಪರು ಟೀವಿ ಪರದೆ ಮೇಲೆ ಅದೂ ನೇರ ಪ್ರಸಾರ..ಇವಿಷ್ಟೇ ಸಾಕು ನಮ್ಮಂತಹವರಿಗೆ ರೋಮಾಂಚನವಾಗಲಿಕ್ಕೆ. ಮತ್ತೆ ದೂರದರ್ಶನದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಯಾವ ಕಾರ್ಯಕ್ರಮವಾದರೂ ನೋಡಿಬಿಡುವ ಮನಸ್ಸಾಗುತ್ತದೆ. ಆದರೂ ಇತ್ತೀಚೆಗೆ ಸರಕಾರಿ ದುಡ್ದು ಅದಷ್ಟು ಕಸಿದುಕೊಳ್ಳುವ ಎಂಬ ಮನೋಭಾವದಿಂದ ಯಕ್ಷಗಾನಕ್ಕೆ ಸಂಬಂಧಿಸಿ ಕಾರ್ಯಕ್ರಮಗಳು ಬರುತ್ತಿರುತ್ತವೆ. ಕೆಲವನ್ನು ನೋಡುವಾಗ ಎಲ್ಲ ನವರಸಗಳೂ ಒಂದು ಪಾಕ ಮಾಡಿ ಮುಸುರೆಗೆ ಎಸೆದಂತೆ ಭಾಸವಾಗುತ್ತವೆ. ಅರ್ಹತೆಇಲ್ಲದ ಕಲೆಯನ್ನು ಅಪಹಾಸ್ಯಕ್ಕೆ ತಳ್ಳುವಂತಹ ಕಾರ್ಯಕ್ರಮಗಳು. ಇದರ ಸಾರ್ಥಕತೆ ಏನು ಎಂದು ಬಗೆದರೂ ಉತ್ತರ ಸಿಗುವುದಿಲ್ಲ. ಕೇವಲ ಸರಕಾರದ ದುಡ್ಡು. ಈ ಮೂಲಕ ಜೇಬಿಗಿಳಿಸುವ. ಅಂತೂ ಯೋಜನೆ ಕಾರ್ಯಗತವಾಗಬೇಕು. ಹಾಗಾಗಿ ಇದೆಲ್ಲ ಗಮನಿಸಿದರೆ ಇದು ಬಹಳ ಶ್ರೇಷ್ಠ ಅನಿಸುವುದಿಲ್ಲವೇ? . ಹೌದು ಚಂದನದ ಮುಖ ಚಂದನವಾಗುವುದು ಇಂಥವುಗಳಿಂದಲೇ.
ಎಂದಿನಂತೆ ಔಪಚಾರಿಕ ಪ್ರಶ್ನೆಗಳ ಮರುಕಳಿಕೆ ಇಲ್ಲೂ ಆಗಿದೆ. ಬಲಿಪ್ಪರು ತಮ್ಮ ಜೀವ ಮಾನದಲ್ಲಿ ಇಂತಹ ಪ್ರಶ್ನೆಗಳನ್ನು ಅದೆಷ್ಟು ಸಲ ಇದಿರಿಸಿದ್ದಾರೋ ಗೊತ್ತಿಲ್ಲ. ಆದರೂ ಬಲಿಪ್ಪರ ವೈಶಿಷ್ಟ್ಯತೆ ಎಂದರೆ ಪ್ರಶ್ನೆಗಳು ಹಳೆಯದೇ ಆದರೂ ಅದರ ಉತ್ತರ ಮಾತ್ರ ವೈವಿದ್ಧ್ಯತೆಯಿಂದ ಕೂಡಿರುತ್ತವೆ. ಹೊಸ ರೂಪದ ಉತ್ತರಗಳನ್ನು ಕೇಳುವಾಗ ನಮಗೆ ಎದೆಯೊಳಗೆ ಕಚಗುಳಿಯಿಟ್ಟಂತೆ ಆಗುವುದು ಸುಳ್ಳಲ್ಲ. ಮುಗ್ಧತೆಯ ಭಾವದ ಉತ್ತರಗಳಾದರೂ ಬಲಿಪ್ಪರು ಉತ್ತರದಲ್ಲಿ ಮುಗ್ಧರಲ್ಲ ಅಂತ ಅನಿಸುತ್ತದೆ. "ಮೊದಲಿನವರು ಕಲೆಗಾಗಿ ಸಾಲ ಮಾಡಿ ಕಲೆ ಉಳಿಸಿದರು. ಈಗಿನವರು ದುಡ್ದಿಗಾಗಿ ಕಲೆ ಹಿಂದೆ ಬೀಳ್ತಾರೆ" ಬಲಿಪ್ಪಜ್ಜನ ಮಾತುಗಳು ಕೆಲವೊಮ್ಮೆ ನಿರಾಶೆಯ ಒಂದು ನಗುವನ್ನು ನಮ್ಮ ಮುಖದಲ್ಲಿ ತರಿಸುತ್ತದೆ. ನಯವಾದ ಪ್ರತಿಕ್ರಿಯೆಯಾದರೂ ಅರ್ಥ್ ಮಾಡಿಕೊಳ್ಳುವವನಿಗೆ ಖಾರವಾದ ಚಾಟಿ ಏಟಿನಂತೆ ಇರುತ್ತವೆ. ಆದರೆ ಅದನ್ನು ಅರ್ಥ ಮಾಡಿಕೊಂಡು ಪೆಟ್ಟು ತಿನ್ನುವವರು ಬೇಕಲ್ಲ? ಹಾಗಾಗಿ ಇಂತಹ ಮಾತುಗಳು ಹಲವು ಸಲ ಕರ್ಣ ತಮ್ಮಟೆಯನ್ನು ಸ್ಪರ್ಶಿಸದಂತೆ ಆಕಡೆಗೆ ಜಾರಿಸಿಬಿಡುತ್ತಾರೆ.

ಬಲಿಪ್ಪರ ಮಾತುಗಳೇ ಹಾಗೆ. ಮನಸ್ಸನ್ನು ತೆರೆದಿಟ್ಟ ಪ್ರಾಮಾಣಿಕ ಮಾತುಗಳು. ಆಡುವುದರಲ್ಲು ಮನದೊಳಗೂ ಕಪಟವಿಲ್ಲ. ಯಾರನ್ನೂ ದ್ವೇಷಿಸದ ಕೇವಲ ಕಲೆಯನ್ನು ಮಾತ್ರ ಚಿಂತಿಸುವ ಮನಸ್ಸಿನ ಮಾತುಗಳು. ಈ ನಿಷ್ಕಪಟ ನಿಷ್ಕಲ್ಮಷವನ್ನು ಕೇವಲ ಕೆಲವು ಮಾತುಗಳಿಂದ ಹೇಳುವುದು ಅಸಾಧ್ಯ. ಕಪಟವಿಲ್ಲದ ಮಾತು ಇವರ ಹಿಂದೆ ಕುಳಿತು ಇವರ ಆಸನದ ಕಾಲುಗಳನ್ನು ಅಲುಗಾಡಿಸಿದವರೂ ಯೋಚಿಸುವಂತೆ ಮಾಡುತ್ತವೆ. ಆದರೆ ಯೋಚಿಸುವ ಅರ್ಥೈಸುವ ಮನಸ್ಸು ಬೇಕು.

ಕಾರ್ಯಕ್ರಮ ಹೇಗಿತ್ತು ಎನ್ನುವುದಕ್ಕಿಂತ ಕಾರ್ಯಕ್ರಮ ಕಂಡೆವಲ್ಲ ಅದೇ ಬಹಳ ಸಂತೃಪ್ತಿಯನ್ನು ಕೊಡುತ್ತದೆ. ಕಾರ್ಯಕ್ರಮದ ಮಾಹಿತಿಯನ್ನು ಮೊದಲಾಗಿ ಹಂಚುವುದಕ್ಕಾಗಿ ನಾವೆಲ್ಲ ಬಹಳ ಆಸಕ್ತಿಯಿಂದ ಪ್ರಯತ್ನಿಸಿದ್ದೇವೆ. ದೂರದ ವಿದೇಶದ ಮಿತ್ರರಿಗೆ ಕಾಣುವುದಕ್ಕೆ ಸಾಧ್ಯವಾದೀತೆ ಎಂದು ಮೊದಲ ದಿನ ರಾತ್ರಿ ಅಂತರ್ಜಾಲದ ಲೋಕ ಬಹಳಷ್ಟು ಸುತ್ತಾಡಿ ಒಂದು ವೆಬ್ ತಾಣವನ್ನು ಫೇಸ್ ಬುಕ್ ನಲ್ಲಿ ಹಾಕಿದೆ.ಹಾಗಾಗಿ ಸಂದರ್ಶನ ಕಾರ್ಯಕ್ರಮ ಮುಗಿದಾಗ ದೂರದ ಅಮೇರಿಕದ ಮಿತ್ರ ಕೂಡ ನೋಡಿ ಧನ್ಯವಾದ ಸಂದೇಶ ತಿಳಿಸಿದ್ದ. ಆ ಕ್ಷಣ ನಿಜಕ್ಕೂ ಧನ್ಯತೆಯ ಭಾವ ಆವರಿಸಿಬಿಟ್ಟಿತು. ಬಲಿಪ್ಪಜ್ಜ ಎಲ್ಲಿ? ಚಂದನ ಎಲ್ಲಿ? ನಾನು ಎಲ್ಲಿ? ದೂರದ ಅಮೇರಿಕ ಎಲ್ಲಿ? ಇಲ್ಲಿ ಮುಂಜಾನೆ ಆದರೆ ಅಲ್ಲಿ ರಾತ್ರಿ.. ಆದರೂ ಯಕ್ಷಗಾನದ ಮೇಲಿನ ಅಭಿಮಾನ ಮಹಾನ್ ಕಲಾವಿದರ ಮೇಲಿನ ಅಭಿಮಾನ ಈ ಮೂಲಕ ಹೊರ ಹೊಮ್ಮಿತಲ್ಲ.

Sunday, December 9, 2012

ರಂಗಸ್ಥಳದಲ್ಲಿ ಚಪ್ಪರಮಂಚ

          ರಸ್ತೆಯ ಬದಿಗೆ ಬೆಳೆದ ಮರವೊಂದು ಹೊರಲೋಕಕ್ಕೆ ತನ್ನ ನಿಜ ಬಣ್ಣವನ್ನು ತೋರದೆ ಸ್ಥಿತ ಪ್ರಜ್ಞನಂತೆ ನಿಂತು ಬಿಟ್ಟಿದೆ. ಅದೆಷ್ಟು ಸ್ಥಿತ ಪ್ರಜ್ಞತೆಯೆಂದರೆ ತನ್ನ ಪರಿಚಯವನ್ನೂ ಅದು ಹೊರಲೋಕಕ್ಕೆ . ತೋರಗೊಡುವುದಿಲ್ಲ.. ಇದೊಂದು ಕಾರಣವಷ್ಟೇ. ಮರ ಹೇಗಿದ್ದರೇನು? ಅದರ ಪರಿಚಯದಿಂದ ಆಗಬೇಕೇನು? ಹೊರ ಪ್ರಪಂಚದ ಈ ಅಸಡ್ಡೆಗೆ ಮರ ಸ್ಥಿತಪ್ರಜ್ಞನಾಗಿ ಬೆಳೆದದ್ದರಲ್ಲಿ ಆಶ್ಚರ್ಯವೂ ಇಲ್ಲ. ಈ ಅಸಡ್ಡೆ ಮತ್ತು ಸ್ಥಿತ ಪ್ರಜ್ಞತೆಯ ನಡುವೆ ಕಳೆದು ಹೋಗುವ ವಿಷಯಗಳು ಕೆಲವೊಮ್ಮೆ ಅಚಾನಕ್ಕಾಗಿ ಪ್ರಕಾಶಕ್ಕೆ ಬರುತ್ತದೆ. ಮರ ತನ್ನ ಇರವನ್ನು ತಿಳಿಸದೇ ಇದ್ದರೂ ಮರದ ತುದಿಯಲ್ಲಿ ಬಿಟ್ಟ ಕುಸುಮವೊಂದು ಅರಳಿ ಪರಿಮಳ ಬೀರಿ ತನ್ನ ಇರವಿನ ಜತೆ ಮರದ  ಅಸ್ತಿತ್ವವನ್ನೂ  ಲೋಕಕ್ಕೆ ಸಾರಿಬಿಡುತ್ತದೆ. ಲೋಕದ ತಳ್ಳಿಯೇ ಬೇಡ ಎಂದು ತನ್ನ ಮೈ ಅಡಗಿಸಿ ಕುಳಿತ ಮರದ ಮೌಲ್ಯ ಆಗ ಅರಿವಿಗೆ ಬರುತ್ತದೆ. ಹಾಗೆಂದು ಆ ಮರಕ್ಕೆ ಕುಸುಮ ಹೊಸತೇನೂ ಅಲ್ಲ...  ಅದು ಹೂವರಿಳಿಸುವುದು ಸಹ  ಹೊಸತೇನೂ ಅಲ್ಲ. ಆದರೆ ಜನ ಅದನ್ನು ಮರೆತಿದ್ದಾರೆ. ಅರಳಿ ಹೂವು ಕಂಪು ಪಸರಿಸಿದಾಗ ಮರದ ಬಗ್ಗೆ ಯೊಚಿಸ ತೊಡಗುವುದು.

          ಈ ವರ್ಷ ಯಕ್ಷಗಾನದ ಯುಗ ಪುರುಷ ಎನ್ನಿಸಿಕೊಂಡ ಕುರಿಯ ವಿಠಲ ಶಾಸ್ತ್ರಿಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಹಲವಾರು ದಾಖಲಾರ್ಹ ಕಾರ್ಯಕ್ರಮಗಳು ಏರ್ಪಾಡಾದುವು. ಪ್ರತೀಯೋಂದು ಕೆಲವು ವಿಚಾರಗಳಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಹೀಗೆ ಇತ್ತೀಚೆಗಷ್ಟೇ ಉಜಿರೆಯಲ್ಲಿ ನಡೆದ ಕುರಿಯ ಜನ್ಮ ಶತಮಾನೋತ್ಸವದ ಅಮೂಲ್ಯ ವೀಡಿಯೋ ತುಣುಕೊಂದು ನೋಡುವ ಅವಕಾಶ ಲಭ್ಯವಾಯಿತು. ಹಿರಿಯ ಕಲಾವಿದರು ನಡೆಸಿಕೊಟ್ಟ ಯಕ್ಷಗಾನ ಪೂರ್ವ ರಂಗದ ಅಪೂರ್ವ ಸನ್ನಿವೇಶ. ಬಹುಶಃ ಯಕ್ಷಗಾನದಲ್ಲಿ ಇಂದಿನ ತಲೆಮಾರು ಕಂಡು ಕೇಳರಿಯದ ಭಾಗ. “ ಚಪ್ಪರ ಮಂಚ”  ಪೂರ್ವ ರಂಗವೇ ಪಶ್ಚಿಮದತ್ತ ಚಲಿಸಿ ಅಸ್ತಮಾನಕ್ಕೆ ಸಿದ್ಧವಾಗಿರುವಾಗ ಪೂರ್ವ ರಂಗದ ಅಪೂರ್ವ ಭಾಗ ಕಾಣುವುದಕ್ಕೆ ಉಂಟೇ ಕೇಳುವುದಕ್ಕೆ ಉಂಟೇ? ಆದರೂ ಮರದ ತುದಿಯಲ್ಲಿ ಅರಳಿದ ಕುಸುಮ ಪರಿಮಳ ಬೀರಿದಂತೆ ಆ ಪೂರ್ವ ರಂಗದ ಹಿತವಾದ ಅನುಭವ ಕಂಡಂತಾಯಿತು.
          ಯಕ್ಷಗಾನ ಪೂರ್ವ ರಂಗ ಎಂದೊಡನೆ ಇಂದು ಜ್ಞಾಪಕಕ್ಕೆ ಬರುವ ಮೊದಲ ಹೆಸರು ಶ್ರೀ ಬಲಿಪ್ಪ ನಾರಾಯಣ ಭಾಗವತರು. ಎಲ್ಲರೂ ರಸ್ತೆಯನ್ನು ಹೆದ್ದಾರಿಯನ್ನಾಗಿಸಿ ಚತುಷ್ಪಥವಾಗಿಸಿ ಇಂದಿನ ಸಮಯವಿಲ್ಲದ ಆದ್ಭಾನಕ್ಕೆ ಉತ್ತರ ಕಂಡುಕೊಂಡಂತೆ ಯಕ್ಷಗಾನದಲ್ಲೂ ಚತುಪ್ಷಥದ ಪ್ರಯಾಣದ ನೆನಪು ಬರುವಂತೆ ಮಾಡಿದ್ದಾರೆ. ಸಾಂಪ್ರದಾಯಿಕವಾದುವುಗಳನ್ನೆಲ್ಲ ಬದಿಗೆ ಸರಿಸುತ್ತ ಮೌಲ್ಯವನ್ನು ಅಣಕವಾಡುತ್ತ ಓಡುವಾಗ ಈ ಓಟಕ್ಕೆ ಒಂದು ಸಲ ತಡೆಯೊಡ್ಡಿದ ಹಾಗೆ ಈಗ ಪೂರ್ವರಂಗ. ಇಲ್ಲಿಯೂ ಪೂರ್ವರಂಗ ನೆನಪಾಗುವಾಗ ಬಲಿಪ್ಪರ ಮನೆಯಂಗಳದ ತುದಿಗೆ ಬಂದು ನಿಲ್ಲಬೇಕು.

          ಇಲ್ಲಿ  ಉಳಿದ   ಪೂರ್ವರಂಗದ ಭಾಗವನ್ನು ನಡೆಸಿಕೊಟ್ಟವರು ಶ್ರೀಪ್ರಸಾದ ಬಲಿಪರು.  ಹೆಚ್ಚಿನ ಯುವ ಭಾಗವತರು ಸಾಂಪ್ರದಾಯಿಕತೆಯನ್ನು ಬದಿಗೆ ತಳ್ಳಿ ಏಣಿ ಇಟ್ಟು ಮರ ಹತ್ತುವ ಜಾಣತನವನ್ನು ತೋರುತ್ತಾರೆ. ಹೇಗಾದರೇನು ಭಾಗವತರ ಪೇಟ ಧರಿಸಿದರಾಯಿತು. ಭಾಗವತ ಪಟ್ಟ ಸಿದ್ದಿಸಿದ ಹಾಗೆ. ಆದರೆ ಅದು ಕೇವಲ ಪೇಟ ಧರಿಸಿದ ಭಾಗವತ ವೇಷ ಎಂಬುದು ಅರಿವಿಗೆ ಬರುವುದು ಇಂತಹ ಸಂದರ್ಭದಲ್ಲಿ.   ಹಾಗೇಯೇ ಈ ಪೂರ್ವ ರಂಗದಲ್ಲಿ ಅತ್ಯಪೂರ್ವವೆನಿಸಿದ ಚಪ್ಪರ ಮಂಚ ಏರಿ ತೋರಿಸಿದ್ದು ಶ್ರೀ ಬಲಿಪ್ಪ ನಾರಾಯಣ ಭಾಗವತ ಮತ್ತು  ಶ್ರೀ ಸೂರಿಕುಮೇರು ಗೋವಿಂದ ಭಟ್ಟರು ಜತೆಗೆ ಹಿರಿಯ ಮದ್ದಲೆವಾದಕರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್.

          ಯಕ್ಷಗಾನ ಪೂರ್ವ ರಂಗ ಒಂದು ಸಾಂಪ್ರದಾಯಿಕ ಆರಾಧನಾ ಕ್ರಮದಂತೆ. ಮೇಲ್ನೋಟಕ್ಕೆ ಕಾಲಯಾಪನೆ ಎಂದು ಭಾಸವಾದರೂ ಅದಕ್ಕೆ ಅದರದ್ದೇ ಆದ ಮಹತ್ವ ಇದೆ. ಇದನ್ನು ಮನಗಂಡು ಹಲವರು ಇದರ ಮಹತ್ವವನ್ನು ಅರಿತು ವಿವರಿಸಿದ್ದಾರೆ. ಪೂರ್ವರಂಗದಲ್ಲಿ ಮೊದಲ ಭಾಗ ಕೇಳಿಕೆ ಕೇಳಿ ಬಡಿಯುವುದು ಇದು ರಂಗಸ್ಥಳದ ಹೊರಗೆ. ನಂತರ ಕೋಡಂಗಿ ಕುಣಿತ (ಇದೂ ಈಗಿನ ಪೂರ್ವರಂಗದಲ್ಲಿ ಕಡಿತಕ್ಕೊಳಗಾಗಿದೆ).  ಕೋಡಂಗಿ ಕುಣಿತ ಮತ್ತು ಬಾಲಗೋಪಾಲ ಕುಣಿತ ಒಂದೇ ಹಂತದಲ್ಲಿ ನಡೆಯುತ್ತದೆ. ಆನಂತರ  ಸ್ತ್ರೀ ವೇಷಗಳು ಮತ್ತು ಹಾಸ್ಯಗಾರನ ವೇಷ. ಈಗ ಕೆಲವು ಕಡೆ ಇಲ್ಲಿಗೆ ಯಕ್ಷಗಾನ ಪ್ರಸಂಗ ಅರಂಭವಾಗುತ್ತದೆ. ಸ್ರೀ ವೇಷ ಆದ  ನಂತರ ಅರ್ಧ ನಾರೀಶ್ವರ ಆ ಮೇಲೆ ಷಣ್ಮುಖ ಸುಬ್ರಾಯ ಈ ಭಾಗ ಇಂದು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶಿಸಿ ಪರಿಚಯವಾದರೂ ಸಹ ಇದರ ನಂತರದ “ಚಪ್ಪರ ಮಂಚ” ಕುಣಿತದ ಬಗ್ಗೆ ಯಾರಿಗೂ ತಿಳಿಯದು. ಹಿರಿಯ ಕಲಾವಿದರಲ್ಲಿ ಇದರ ಬಗ್ಗೆ ಗೊತ್ತಿದ್ದವರು ಬಲಿಪ್ಪರು ಮಾತ್ರ!  ಈ ಚಪ್ಪರ ಮಂಚ ನೋಡಿದಾಗ ಆಶ್ಚರ್ಯವಾಗುವುದು, ಹೀಗೆ ಅದೆಷ್ಟು ಅನುಭವದ ಪುಟಗಳು ಬಲಿಪ್ಪರ ಭಂಡಾರದಲ್ಲಿ ತೆರೆಯದೆ ಉಳಿದು ಬಿಟ್ಟಿದೆ?

          ಬಹಳ ಹಿಂದಿನ ನೃತ್ಯ ಸಂಪ್ರದಾಯ ಚಪ್ಪರಮಂಚ. ಇದರಲ್ಲಿ ಮುಖ್ಯವಾಗಿ ಒಂದು ಸ್ತ್ರೀ ವೇಷ. ಆವಾಗ  ವೇಷದ ಆಭರಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆಗೆ ದೊಡ್ಡ ಗಾತ್ರದ ಬೆತ್ತದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಹೊತ್ತುಕೊಂಡು ಸಾಗಿಸುವುದಕ್ಕಾಗಿ ಉಪಯೋಗಿಸುತ್ತಿದ್ದರು. ಅತ್ಯಂತ ಹಗುರವಾದ ಈ ಪೆಟ್ಟಿಗೆ ಕಿರೀಟ ಆಭರಣಗಳ ಸಾಗಾಣಿಕೆಗೆ ಅತ್ಯಂತ ಸೂಕ್ತವಾಗಿತ್ತು. ನನಗೆ ಈ ಪೆಟ್ಟಿಗೆಯನ್ನು ನೋಡಿದ ನೆನಪಿದೆ. ಈ ಪೆಟ್ಟಿಗೆಯ ಮುಚ್ಚಳವನ್ನು ಚಪ್ಪರ ಮಂಚದಲ್ಲಿ ಸ್ತ್ರೀ ವೇಷದವರು ಸೊಂಟಕ್ಕೆ ಕಟ್ಟಿ ಅದನ್ನು ಚಪ್ಪರ ಮಂಚದ ಸಂಕೇತವಾಗಿಸಿ ವಿಶೇಷ ನೃತ್ಯವನ್ನು ಪ್ರದರ್ಶಿಸುತ್ತಿದ್ದರು. ಇಲ್ಲಿ ಬಲಿಪ್ಪರ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಲ್ಪಟ್ಟ ಚಪ್ಪರ ಮಂಚ ನೃತ್ಯದಲ್ಲಿ ಮೂರು ಪದಗಳು ಹಾಡಲ್ಪಟ್ಟಿವೆ. ಬಾಯಿ ತಾಳಗಳಿಂದ ಕೂಡಿದ ಈ ಪದಗಳು ಅತ್ಯಂತ ವಿಶಿಷ್ಟವಾಗಿದೆ. ಬಲಿಪ್ಪರ ಜತೆಗೆ ಸೂರಿಕುಮೇರಿಯವರು ಅಪರೂಪದ ನೃತ್ಯವನ್ನು ಪ್ರದಶಿಸಿದರೆ ಶಂಕರಣ್ಣನ ಮದ್ದಲೆ ಅದ್ಭುತವಾಗಿ ಮೂಡಿ ಬಂದಿದೆ. ಕೇವಲ ಮೂರು ಪದಕ್ಕಾಗಿ ರಂಗ ಸ್ಥಳ ಏರಿದ್ದು ಒಂದು ವಿಶೇಷತೆ ಎನ್ನಿಸುತ್ತದೆ.  

          ಕುರಿಯ ವಿಠಲ ಶಾಸ್ತ್ರಿ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಾಕಾರವನ್ನು ನೆನಪಿಗೆ ತಂದು ಕೊಂಡದ್ದು ಸಹ ಪ್ರಾಮುಖ್ಯವೆನಿಸಲ್ಪಡುತ್ತದೆ. ಇಲ್ಲವಾದರೆ ಇದನ್ನು ದೈರ್ಯವಾಗಿ ಮತ್ತು ಆಸಕ್ತಿಯಿಂದ ನಡೆಸುವವರು ಇಲ್ಲದೆ ಮುಂದಿನ ಜನಾಂಗಕ್ಕೆ ಇಂತಹದ್ದೊಂದು ಇತ್ತು ಎನ್ನುವುದಕ್ಕೆ ಯಾವುದೇ ದಾಖಲೆಯೂ ಉಳಿಯುತ್ತಿರಲಿಲ್ಲ. ಇದಕ್ಕಾಗಿ ಶತಮಾನೋತ್ಸವ ಸಮಿತಿಯ ಭಾರವಾಹಿಗಳ ಆಸಕ್ತಿಗೆ ಮತ್ತು ಕರ್ತೃತ್ವ ಶಕ್ತಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಇಪ್ಪತ್ತು ನಿಮಿಷದ ಈ ವಿಡಿಯೋ ತುಣುಕು ನೋಡಿ ಆದ ಮೇಲೆ ಭೇಷ್ ಬಲಿಪ್ಪಜ್ಜ.. ಬೇಷ್ ಗೋವಿಂದಣ್ಣ ಎನ್ನುವುದಲ್ಲದೆ ಶಂಕರಣ್ಣನ ಮಾಂತ್ರಿಕ ಸ್ಪರ್ಶಕ್ಕೆ  ಮನಸ್ಸು ಆ ಹಿಂದಿನ ಕಾಲವನ್ನು ಕಲ್ಪಿಸುವುದಾರೊಂದಿಗೆ  ಒಂದು ನಿಟ್ಟುಸಿರು ಹೊರಬರುತ್ತದೆ. ಪರಂಪರೆಯ ಪುಟಗಳಲ್ಲಿ ಇನ್ನು ಇಂತಹ ಪುಟಗಳೆಷ್ಟಿವೆಯೋ..? ತರೆದು ನೋಡುವ ಭಾಗ್ಯವಾದರೂ ನಮಗಿದೆಯೇ?                    

         



Saturday, November 24, 2012

ವೈಭವ ಮತ್ತು ದಾಖಲೀಕರಣ

           ಕಾಲ ಗರ್ಭಕ್ಕೆ ಸರಿದು ಹೋದ ನಿನ್ನೆಯ ದಿನಗಳು ಅಥವ ಕಳೆದು ಹೋದ ಸಮಯ ಇತಿಹಾಸ ಎನಿಸಲ್ಪಡುತ್ತವೆ. ಸಂದು ಹೋದ ಭೂತಕಾಲ ಅದು ಇತಿಹಾಸ. ಇತಿಹಾಸದ ಅನುಭವವನ್ನು ಭವಿಷ್ಯತ್ ಕಾಲಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಅವುಗಳನ್ನು ದಾಖಲಿಸಿ ಸ್ಮರಣಿಕೆಗಳನ್ನಾಗಿ ಉಳಿಸುವಂತಹ ಕಾರ್ಯ ಹಲವು ವಿಧದಲ್ಲಿ ಆಗುವುದುಂಟು. ಮುಂದಿನ ದಿನಗಳ ದೃಷ್ಟಿಯಲ್ಲಿ ಈ ಇತಿಹಾಸಗಳೇ ತಳೆಯುವ ನಿರ್ಧಾರಕ್ಕೆ ಪ್ರೇರಕವಾಗಿರುತ್ತದೆ. ಇದನ್ನು ಹೀಗೆ ಎಂದು ವರ್ಗೀಕರಿಸುವುದು ಕಠಿಣವಾದರೂ ಇತಿಹಾಸದ ದಿನಗಳನ್ನು ನೆನಪಿಸುವಂತೆ ಯಥಾ ಸೃಷ್ಟಿಯನ್ನು ಪುನಃ ಸೃಜಿಸಿ ಅದನ್ನು ದಾಖಲಿಸುವ ಪ್ರಯತ್ನ ವರ್ತಮಾನದ ಮೌಲ್ಯಕ್ಕನುಸಾರವಾಗಿ ಆಗುವುದುಂಟು. ಯಾವುದೇ ವಸ್ತುವಿನ ಮೌಲ್ಯ ಇರವುದು ಅದನ್ನು ಹೊಂದಿರುವ ಮತ್ತು ಕೊಂಡುಕೊಳ್ಳುವವನ ಅಭಿರುಚಿಯನ್ನು ಹೊಂದಿಕೊಂಡು. ಇದನ್ನು ಅವನ ಮನೋಭಾವವೇ ಅದನ್ನು ನಿರ್ಧರಿಸುತ್ತದೆ.
 
          ವಾಸ್ತವದಲ್ಲಿ ಮೌಲ್ಯ ಕಂಡುಕೊಳ್ಳಲಾಗದೆ ಇದ್ದದ್ದು ಭವಿಷ್ಯತ್ ನಲ್ಲಿ ಮೌಲ್ಯ ವನ್ನು ಪಡೆದುಕೊಳ್ಳುತ್ತದೆ. ಸ್ಥಿರ ಚರ ವಸ್ತುಗಳು ಕಾಲಕ್ಕೆ ತಕ್ಕಂತೆ ಮೌಲ್ಯ ವರ್ಧಿಸಿದರೂ ಅದು ಕೇವಲ ಭೌತಿಕ ಪ್ರಪಂಚದ ಸೊತ್ತಾಗಿರುತ್ತದೆ. ಆದರೆ ಇದೆಲ್ಲವನ್ನು ಮೀರಿ ಮಾನಸಿಕ ಭಾವನೆಗಳ ಮೌಲ್ಯಮಾಪನ ಮಾಡುವಾಗ ಕಳೆದು ಹೋದ ಘಟನೆಗಳು ಅವುಗಳ ನೆನಪುಗಳು ಬಹಳ ಮೌಲ್ಯಯುತವಾದದ್ದೆಂದು ನಂತರ ಅನಿಸುವುದುಂಟು.

          ಹಲವು ವರ್ಷಗಳ ಹಿಂದೆ ಸುಮ್ಮನೇ ಕಾಲಕ್ಕೆ ತಕ್ಕಂತೆ ಹುಚ್ಚು ಕಟ್ಟಿ , ಕತ್ತಲೆಯಲ್ಲಿ ತೆಂಗಿನ ಮಡಲಿನ ಸೂಟೇ (ದೊಂದಿ) ಉರಿಸಿಕೊಂಡು ಮೈಲು ದೂರ ನಡೆದು ನೋಡಿದ ಕಟೀಲು ಮೇಳದ ಆಟ, ಆಗ ಬರೇ ಟಿಕೆಟಿಲ್ಲದ ಧರ್ಮದ ಆಟ. ಆದರೆ, ಅದರ ಒಂದು ತುಣುಕಾದರೂ ಈಗ ಕಣ್ಣಿಗೆ ಕಾಣುವಹಾಗಿದ್ದರೇ ...? ಹೌದಲ್ಲ? ಈ ಅಸಂಭವನೀಯ ಸತ್ಯಗಳೇ ಭಾವನಾ ಸಂಘರ್ಷಕ್ಕೆ ಕಾರಣವಾಗುವುದು. ಧರ್ಮಸ್ಠಳ ಮೇಳದ ಅಂದಿನ ಆಟದಲ್ಲಿನ ಪುತ್ತೂರು ಹೆಗಡೆಯ ವೇಷ ಇಂದು ಅದಕ್ಕೆ ಮೌಲ್ಯವನ್ನು ನಿರ್ಧರಿಸುವುದು ಸಾಧ್ಯವೇ? ಈಗ ಬೇಕೆಂದರೂ ವಿಟ್ಲ ಜೋಷಿಯ ಮೂಕಾಸುರನನ್ನು ನೋಡಲು ಸಾಧ್ಯವೇ? ಶೇಣಿಯ ರಾವಣ, ಸಾಮಗರ ರಾಮ, ಕೇವಲ ಇತ್ತೀಚಿನ ಘಟನೆಗಳೇ ಈಗ ಅಪ್ರಸ್ತುತವಾಗಿ ಪರಿಣಮಿಸಿ ದಾಖಲೆಗಳೇ ಇಲ್ಲದೆ ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿವೆ. ಕೇವಲ ಕಲ್ಪನೆಯನ್ನೇ ವಿನಿಮಯ ಮಾಡಿಕೊಳ್ಳುವ ಅನಿವಾರ್ಯತೆ. ಕಾಲಗರ್ಭದ ಪುಟಳಲ್ಲಿ ತುಂಬಿರುವ ಕಲ್ಪನೆಯನ್ನು ತೋರಿಸುವುದಾದರೂ ಹೇಗೆ. ಹಾಗಾಗಿ ದಾಖಲೀಕರಣಗಳು ಭೌತಿಕ ಲೋಕದ ಪುಟಗಳಲ್ಲಿ ದಾಖಲಾದದ್ದು. 

          ಈ ದಾಖಲೀಕರಣಗಳ ಮೌಲ್ಯವನ್ನು ತುಲನೆ ಮಾಡುವುದು ಸರಿಯಲ್ಲ. ಇಂದು ಮೌಲ್ಯವನ್ನು ಕಾಣದೇ ಇದ್ದದ್ದು ಮುಂದೊಂದು ದಿನ ಮೌಲ್ಯವನ್ನು ನಿರ್ಧರಿಸಲಾಗದೇ ಇರುವಂತಹ ಸ್ಥಿತಿಗೆ ಬಂದು ಬಿಡುತ್ತದೆ. ಮೊದಲು ಹತ್ತಿಪ್ಪತ್ತು ರೂಪಾಯಿಗೆ ಸಿಗುತ್ತಿದ್ದ ಯಕ್ಷಗಾನ ಕ್ಯಾಸೆಟ್ . ಅಭಿರುಚಿಯಿದ್ದವನು ಯಾವ ಬೆಲೆ ಕೊಟ್ಟು ಕೊಂಡುಕೊಳ್ಳುತ್ತಾನೋ ಅವನಿಗೇ ಬಿಟ್ಟದ್ದು.

          ಈ ದಾಖಲೆಗಳು ಯಾವ ರೀತಿ ಅನಿವಾರ್ಯವೋ ಅದು ಕೆಲವೊಮ್ಮೆ ಗಮನಾರ್ಹ ವಿಷಯವಾಗುತ್ತದೆ. ಕೇವಲ ಕಲಾವಿದನಿಗೆ ಸಂಬಂಧಿಸಿ ಅಥವಾ ಘ್ಹಟನೆಗೆ ಸಂಬಂಧಿಸಿ ಇಲ್ಲವೇ ಸಂಪೂರ್ಣ ಯಕ್ಷಗಾನವನ್ನೆ ಸಂಬಂಧಿಸಿ ದಾಖಲಾತಿ ಮಾಡಬಹುದು. ಅದರೆ ಕಲೆಯನ್ನು ಈಗಿರುವ ರೀತಿಯಷ್ಟಾದರೂ, ಅದೇ ರೂಪದಲ್ಲಿ ಉಳಿಸಿಕೊಂಡು ಹೋಗುವುದು ದಾಖಲೀಕರಣದಷ್ಟೇ ಮಹತ್ವವನ್ನು ಪಡೆದುಕೊಳ್ಳುತ್ತದೆ. ಯಾಕೆಂದರೆ ಮುಂದೊಂದುದಿನ ಕಲಾರೂಪವೆ ರೂಪಾಂತರಗೊಂಡು ಇನ್ನೇನೋ ಆಗುವ ಸಂಭವ ಇಲ್ಲದಿಲ್ಲ. ವಾಸ್ತವವನ್ನು ಚಿಂತಿಸುವಾಗ ದಿಗಿಲಾಗುವುದುಂಟು. ಮನುಷ್ಯನ ಜೀವನ ಕ್ರಮ ಹೇಗೆ ಬದಲಾಗಿಬಿಡುತ್ತದೋ ಹೇಳುವುದು ಕಷ್ಟ.. ಮುಂದೊಂದು ದಿನ " ದನ ಹೇಗೆ ಸೆಗಣಿ ಹಾಕುತ್ತಿತ್ತು" ಎಂಬುದನ್ನು ದಾಖಲೀಕರಣದ ಮೂಲಕ ಮಾತ್ರವೇ ತೋರಿಸುವಷ್ಟು ಬದಲಾವಣೆಯ ಕ್ರಾಂತಿ ಆಗುತ್ತಿದೆ. ಹಳೆಯ ಮುಕ್ಖಾಲು ಆಣೆಯ ನಾಣ್ಯ ಬೊಗಸೆ ತುಂಬ ಹಿಡಿದು ಕೊಟ್ಟರೂ ಅದಕ್ಕೆ ಬೆಲೆ ಇದ್ದೀತೆ? ಆದರೂ ಹಿಂದಿನ ಮೆಟ್ಟಲು ಮುಂದೇ ಹತ್ತುವುದಕ್ಕೆ ಸಹಾಯ.

          ಯಕ್ಷಗಾನದಲ್ಲಿ ದಾಖಲೀಕರಣ ಹಲವು ಬಗೆಯಲ್ಲಿ ಹಲವು ಕಡೆ ನಿರಂತರವಾಗಿ ಆಗುತ್ತಾ ಇದೆ. ತಮ್ಮ ತುಲನೆಯಲ್ಲಿ ಯಾವುದು ಅಮೂಲ್ಯವೋ ಅದನ್ನು ಗೌರವಿಸಿ ಜೋಪಾನವಾಗಿಡುವ ಕಾಳಜಿ. ಕೆಲವೊಮ್ಮೆ ಈ ಜೋಪಾನವೇ ಸಂಗ್ರಹದ ಮೌಲ್ಯವನ್ನು ಹೆಚ್ಚಿಸಿಬಿಡುತ್ತದೋ ಎಂಬ ಅನುಮಾನ ಬರುತ್ತದೆ. ಎಂತಿದ್ದರೂ ಸಂಗ್ರಹ ಇದೆಯಲ್ಲ.? ಆ ತಿಳುವಳಿಕೆಯಿಂದ ಮಾತ್ರ ತೃಪ್ತರಾಗಬಹುದು. ಅಜ್ಜ ಬ್ರಹ್ಮ ಕರ್ಮದ ಪುಸ್ತಕವನ್ನು ಬಟ್ಟೆಯಲ್ಲಿ ಬಿಗಿದು ಸುತ್ತಿ ಜೋಪಾನವಾಗಿ ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಿದ ಹಾಗೆ. ಆ ಪುಸ್ತಕವನ್ನು ಬರಿದೇ ಸ್ಪರ್ಶಿಸುವುದಿದ್ದರೂ ಸ್ನಾನ ಮಾಡಿ ಮಡಿವಂತರಾಗಿ ಬರಬೇಕು. ಅಜ್ಜ ಕೊಡುವ ಮೌಲ್ಯ ಮಾತ್ರವಲ್ಲ ನಾವೂ ಗೌರವಿಸಬೇಕಾದ ಮೌಲ್ಯ. ವೆತ್ಯಾಸವೆಂದರೆ ಅಜ್ಜ ಓದಿ ಅರಗಿಸಿಕೊಂಡಿದ್ದರೆ ನಮಗೆ ಓದಿದರೂ ಅರ್ಥವಾಗದು.. ಹಾಗಾಗಿ ದೂರದಿಂದ ಭಯದಿಂದ ನೋಡುವುದಷ್ಟೇ, ಅದರೂ ಗೌರವ, ಅದು ಇದ್ದೇ ಇರಬೇಕು.

         ಇತ್ತೀಚೆಗೆ ಲಭ್ಯ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ದಾಖಲೀಕರಣಕ್ಕಾಗಿ ಹಲವಾರು ಕಡೆ ಪ್ರಯತ್ನಗಳು ನಡೆಯುತ್ತಿವೆ. ಇದು ಒಂದು ಉತ್ತಮ ಲಕ್ಷಣ.ಆದರು ಹಲವು ದಾಖಲೀಕರಣಗಳು ಮೌಲ್ಯ ಇದ್ದರೂ ಮೌಲ್ಯಗಳಿಸುವುದಿಲ್ಲ. ನೋಡಿದಾಗ ಏನೊ ಕಳಕೊಂಡ ಹಾಗೆ ವಂಚಿತರಾದೇವೋ ಎಂಬ ಭಾವ ಪ್ರಚೋದನೆಗೆ ಒಳಗಾಗುತ್ತೇವೆ. ಇದು ನನ್ನ ಅನಿಸಿಕೆ. ಹಿರಿಯ ಕಲಾವಿದರನ್ನು ಕರೆದು ಅವರ ವೈಭವದ ದಿನಗಳನ್ನು ಮರುಕಳಿಸುವಂತೆ ಮಾಡುವುದು, ಸಾಧ್ಯವಾದಷ್ಟು ಈ ಭಾವನೆಯನ್ನು ಅವರಲ್ಲಿ ಆವಾಹನೆ ಮಾಡುವಷ್ಟರ ಮಟ್ಟಿಗೆ ಸಿದ್ದರಾಗ್ತೇವೆ. ಹೌದು ಕಲೆಯ ಮೇಲೆ ಕಲಾವಿದನ ಮೇಲೆ ಇಡುವ ಆ ಅಭಿಮಾನವೇ ಹಾಗೆ. ಅದು ಬೇರೆಲ್ಲ ಚಿಂತನೆಯನ್ನು ಮುಚ್ಚುವಂತೆ, ಮರೆಯುವಂತೆ ಮಾಡಿಬಿಡುತ್ತದೆ. ಒಬ್ಬ ಬಾಲ ಕಲಾವಿದ ಬಾಲ್ಯದಲ್ಲಿ ಅದ್ಭುತವಾಗಿ ನಿರ್ವಹಿಸುತ್ತಿದ್ದ ಪಾತ್ರಗಳನ್ನು, ಅದು ಲವ ಕುಶ ಆಗಿರಬಹುದು, ಅಭಿಮನ್ಯುವಿನ ವೇಷವಾಗಿರಬಹುದು, ಅದರ ನೈಜ ವೈಭವ ಬಾಲ್ಯದ ಉತ್ತುಂಗಾವಸ್ಥೆಯಲ್ಲೇ ಹೊರಹೊಮ್ಮುತ್ತದೆ. ಅದು ಪೂರ್ಣಪ್ರಮಾಣದಲ್ಲಿ ಪ್ರಕಾಶಿಸುವಾಗಲೇ ನಿಜವಾದ ವೈಭವ ಎಂದು ಹೇಳಬಹುದು. ವಿಜಯನಗರದ ಸ್ವರ್ಣ ಯುಗ ಎಂದು ನಾವು ಚರಿತ್ರೆಯಲ್ಲಿ ದಾಖಲಾಗಿದ್ದನ್ನು ಏನು ಓದುತ್ತಿದ್ದೇವೋ ಅದು ಕೇವಲ ಆ ಕಾಲಕ್ಕೆ ಅಂದರೆ ಶ್ರೀಕೃಷ್ಣ ದೇವರಾಯನ ಆಡಳಿತಕ್ಕೆ ಮಾತ್ರ ಸೀಮಿತ. ಅದರ ನಂತರ ಅದರ ವೈಭವದ ಸ್ಮರಣೆ ಮಾತ್ರ ಸಾಧ್ಯ. ಹಾಗೆ ಒಬ್ಬ ಕಲಾವಿದನ ವೈಭವ ಎಂಬುದು ಅವಧಿ ದಾಟಿದ ಮೇಲೆ ಆಚರಿಸಲ್ಪಟ್ಟರೆ ಒಂದು ರೀತಿಯ ಅಸೌಕರ್ಯ ಮನಸ್ಸಿಗೆ ತಂದು ಕೊಂಡ ಹಾಗೆ. ಸ್ವತಃ ಕಲಾವಿದ ಎಷ್ಟು ಸ್ಪೂರ್ತಿಗೊಂಡರೂ ಎಲ್ಲೋ ಒಂದು ಕಡೆ ಕೊರತೆಯ ಸೂಕ್ಷ್ಮವಾದ ಅನುಭವ ಮನಸ್ಸಿಗಾಗುತ್ತದೆ. ಹಲವು ಸಲ ಸ್ವತಃ ಕಲಾವಿದನ ಅಂತರಂಗದಲ್ಲಿ ವೇದನೆಯ ಸ್ಪರ್ಶವಾದರೂ ಅಚ್ಚರಿಯಿಲ್ಲ. ಪ್ರೇಕ್ಷಕ ಯಾವುದೋ ಸಮ್ಮೋಹನಕ್ಕೋ ಭಾವೋದ್ವಿಗಕ್ಕೋ ಒಳಗಾಗಿ ಸ್ವೀಕರಿಸಿದರೂ ಎಲ್ಲೋ ಒಂದು ಕಡೆ ಕಸಿವಿಸಿಯಂತೂ ಇದ್ದೇ ಇರುತ್ತದೆ.

          ಒಬ್ಬ ಕಲಾವಿದನನ್ನು ಒತ್ತಾಯ ಪೂರ್ವಕವಾಗಿ ಕರೆದು ಹಾಡಿಸಿ ಅಥವಾ ಕುಣಿಸಿ ತೃಪ್ತರಾಗುವಾಗ ಸ್ವತಃ ಕಲಾವಿದನ ಮನಸ್ಸಿನಲ್ಲಿ ಏನಿರಬಹುದು? ಅಭಿಮಾನಕ್ಕೆ ಸರಿಯಾಗಿ ಸ್ಪಂದಿಸಿ ಅದಕ್ಕೆ ತಕ್ಕ ಹಾಗೆ ನೈಪುಣ್ಯವನ್ನು ತೋರಿಸುವುದಕ್ಕೆ ಆಗುತ್ತಿಲ್ಲವಲ್ಲಾ? ಈ ಭಾವನೆ ಯಾಕೆ ಬರಬಾರದು? ಆವಾಗ ಈ ಅಭಿಮಾನವೇ ಒಂದು ರೀತಿಯಲ್ಲಿ ನೋವನ್ನು ಕೊಟ್ಟಹಾಗೆ ಅನಿಸುದಿಲ್ಲವೇ? ಅದು ಹೇಗೂ ಇರಲಿ ದಾಖಲೀಕರಣದ ವಿಚಾರಕ್ಕೆ ಬಂದಾಗ ದಾಖಲಿಕರಣದ ಸಮಯ ನಿರ್ಧಾರ ಮಾತ್ರ ಬಹಳ ಪ್ರಾಮುಖ್ಯತೆಯನ್ನುಗಳಿಸುತ್ತದೆ.ಹಾಗಾಗಿ ಆ ರೀತಿಯಲ್ಲಿ ಯೋಚಿಸುವಾಗ ಪ್ರಸ್ತುತ ಉತ್ತುಂಗದ ನಿರ್ವಹಣೆಯನ್ನು ತೋರುವ ಕಲಾವಿದನ ವೈಭವದ ದಿನಗಳನ್ನು ದಾಖಲಿಸುವುದು ಅತ್ಯಂತ ಅರ್ಥಪೂರ್ಣ ಎನಿಸುತ್ತದೆ. ಹಿಂದೆ ಪಂಜಿನ ಬೆಳಕಲ್ಲಿ ಯಕ್ಷಗಾನ ನಡೆಯುತ್ತಿತ್ತು. ಹಿಂದಿನ ಕಾಲಕ್ಕೆ ಅದು ಅನಿವಾರ್ಯವಾಗಿತ್ತು. ಅದರೂ ಅದು ಈಗ ವೈಭವ ಎಂದು ಭಾವಿಸುವುದು ತಪ್ಪಲ್ಲ. ಕಷ್ಟ ಪಟ್ಟು ಆ ವಾತಾವರಣನ್ನು ಉಂಟು ಮಾಡಿ ಅದನ್ನು ಮರು ಸೃಷ್ಟಿಸಿ ದಾಖಲಿಸುವ ಉತ್ಸಾಹ ಮೆಚ್ಚತಕ್ಕದ್ದೇ ಮಾತ್ರವಲ್ಲ ವಾಸ್ತವದಲ್ಲಿ ಅದು ಅನಿವಾರ್ಯವೆನಿಸುತ್ತದೆ. ಆದರೂ ಅದು ಒಂದು ಕೃತಕ ಸೃಷ್ಟಿ ಎಂಬ ಅನಿಸಿಕೆ ಬಾರದೆ ಇರಬಹುದೇ? ಏನೋ ಸದ್ಯಕ್ಕೆ ಇಷ್ಟು ಮಾತ್ರ ಸಾಧ್ಯ ಎಂದು ತೃಪ್ತಿ ಪಟ್ಟುಕೊಳ್ಳಬಹುದು. ಆದರೂ ರಂಗದ ಮೇಲಿನ ವೈಭವ ಕಾಲ ಸಂದ ಮೇಲೆ ದಾಖಲಿಸುವುದು ಕಾಲ ಸರಿದಂತೆ ಅದು ಅದೇ ಭಾವನೆಯನ್ನು ಹೊಂದಿರುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಕೇವಲ ದಾಖಲೆ ಮಾತ್ರವೇ ಉಳಿದಿರುತ್ತದೆ. ಯಾಕೆಂದರೆ ಕಣ್ಣಾರೆ ಪ್ರತ್ಯಕ್ಷ ಕಂಡವನ ಸಾಕ್ಷ್ಯ ಅನುಭವ ಅಲ್ಲಿ ಇರುವುದಿಲ್ಲ.

           ಪ್ರಸ್ತುತ ಉತ್ತುಂಗದಲ್ಲಿ ವೈಭವೀಕರಿಸುವ ಕಲಾವಿದರು ಹಲವರಿದ್ದಾರೆ. ಆದರೆ ಅವರ ಉತ್ತುಂಗದ ಈ ಹಂತವನ್ನು ಪರಮ ಉಚ್ಚ್ರಾಯ ಸ್ಥಿತಿ ಎಂದು ನಿರ್ಣಯಿಸುವುದು ತಪ್ಪಾಗುತ್ತದೆ. ಇದಕ್ಕಿಂತ ಅತ್ಯುತ್ತಮ ನಿರ್ವಹಣೆ ಮುಂದೆ ಇರಬಹುದು ಎಂಬ ಆಶಾಭಾವನ್ನು ಹೊಂದಿರಬೇಕು. ಯಾಕೆಂದರೆ ಸಮಯವನ್ನು ಊಹಿಸುವುದು ಸರಿಯಾಗುತ್ತದೆ ಹೊರತು ನಿರ್ಣಯಿಸುವುದಲ್ಲ. ಸರ್ವಾಲಂಕಾರ ಸಂಪನ್ನಗೊಂಡ ಮೇಲೆ ಮಹಾ ಪೂಜೆ. ನಂತರ ಏನಿದ್ದರೂ ದೇವರ ದರ್ಶನ ಮಾತ್ರ. ಸಮಯಾನುಸಾರ ಅದು ಎಷ್ಟು ಹೊತ್ತು ಬೇಕಾದರೂ ಇರಬಹುದು. ಆಗ ದಾಖಲೆಯ ಪುಟಗಳನ್ನು ಹೆಚ್ಚಿಸುತ್ತಾ ಹೋಗಬಹುದು. ಆದರೆ ಮುಹೂರ್ತ ಮೀರಿದ ಮೇಲೆ ಅನಿವಾರ್ಯತೆಯ ಕಂಕಣ ಬಲವನ್ನು ಅರಸುವುದು ಅನಿವಾರ್ಯ ಎನಿಸಿದರೂ ಅದು ಅಷ್ಟು ಸೂಕ್ತವಲ್ಲ.

         ಹಲವು ವೈಭವಗಳ ಮರುಸೃಷ್ಟಿಯನ್ನು ಕಂಡಿದ್ದೇವೆ. ಈ ವೈಭವದ ದಾಖಲೆಗಳು ಕೇವಲ ಮುಮ್ಮೇಳ ಅಂದರೆ ವೇಷಧಾರಿಯನ್ನು ಅವಲಂಬಿಸಿ ಇರುವುದು ಚೋದ್ಯದ ಸಂಗತಿ. ಬಹುಷಃ ಈ ವೈಭವ ಎನ್ನುವುದು ಕಣ್ಣಿಗೆ ಕಾಣುವುದಕ್ಕೆ ಮಾತ್ರವೇ ಇರುವುದೋ ಎಂಬ ಭ್ರಮೆ. ಆದರೂ ಬಹಳಷ್ಟು ಸಮಯ ಮೀರಿ ಅವಧಿ ಭಾಧಕವಾದವುಗಳೇ. ನಮ್ಮ ಮನೋಭಾವನೆಗೆ ಅನುಸರಿಸಿ ಇದರಿಂದ ನಾವು ತೃಪ್ತರಾಗಬಹುದು. ಹೆಮ್ಮೆ ಪಟ್ಟುಕೊಳ್ಳಬಹುದು. ಆದರೂ ಅತೃಪ್ತಿಯ ಛಾಯೆ ಸುಳಿಯದೆ ಇರಲು ಸಾಧ್ಯವೇ ಇಲ್ಲ.












Thursday, November 8, 2012

ಬಲಿಪ್ಪಜ್ಜ ಬರುತ್ತಿದ್ದಾರೆ

ಈಗ ಎರಡು ದಿನ ಮೊದಲು ಮಿತ್ರ ನರಸಿಂಹ ಭಟ್ ಬೇಟಿಯಾಗಿ ಯಕ್ಷಗಾನ ತಾಳ ಮದ್ದಲೆ ಕಾರ್ಯಕ್ರಮದ ಬಗ್ಗೆ ಹೇಳಿ ಚಕಿತ ಗೊಳಿಸಿದರು. ಚಕಿತನಾಗುವುದಕ್ಕೆ ಕಾರಣ ಬೇರೇನೂ ಅಲ್ಲ. ನರಸಿಂಹಣ್ಣ ಬಲಿಪ್ಪರ ಬಗ್ಗೆ ಅಪಾರವಾದ ಅಭಿಮಾನವನ್ನೂ ಗೌರವವನ್ನು ಇಟ್ಟುಕೊಂಡವರು. ಹಾಗಾಗಿ ಅವರ ಯೋಜನೆ ಇದ್ದರೆ  ಅದು ಹೇಗಿರಬಹುದು ಎಂಬ ಊಹನೆಯೇ ನನ್ನನ್ನು ಚಕಿತನನ್ನಾಗಿ ಮಾಡಿದ್ದು. ಹಲವು ದಿನಗಳಿಂದ ಯೋಚನೆಯಾಗಿಯೇ ಇದ್ದ ನನ್ನ ಯೋಜನೆ ಅವರು ದಿಢೀರನೆ ಕಾರ್ಯರೂಪಕ್ಕೆ ತಂದಿದ್ದರು. ವೇಳೆ ದಿನಾಂಕ ಸ್ಥಳ ಹೀಗೆ ಪ್ರಾಧಮಿಕವಾದ ಎಲ್ಲಾ ಸಿದ್ದತೆಯಲ್ಲಿಯೇ ಬಂದಿದ್ದರು. ಹಿರಿಯ ಕಲಾವಿದರಾದ ಶ್ರೀ ಪ್ರಭಾಕರ ಜೋಷಿ, ಶ್ರೀ ಉಮಾಕಾಂತ್ ಭಟ್, ಜಬ್ಬಾರ್ ಸಮೋ ಇವರನ್ನೇಲ್ಲ ಒಪ್ಪಿಸಿ ಕಾರ್ಯಕ್ರಮದ ರೂಪುಷೆಯ ಬಗ್ಗೆ ಚರ್ಚಿಸುವ ಉದ್ದೇಶದಲ್ಲಿ ನನ್ನ ಬಳಿಗೆ ಬಂದಿದ್ದರು. ಹಾಗೆ ನೋಡಿದರೆ ನನ್ನಲ್ಲಿ ಚರ್ಚಿಸುವಂತಹುದೇನೂ ಇರಲಿಲ್ಲ. ಯಾಕೆಂದರೆ ಹಲವಾರು ಸಾರ್ವಜನಿಕ ಕಾರ್ಯಕ್ರಮ ಮಾಡಿ ಅನುಭವ ಇದ್ದವರು ನರಸಿಂಹಣ್ಣ. ಈಗ ತನ್ನೆಲ್ಲ ತೊಂದರೆಗಳನ್ನು ಲೆಕ್ಕಿಸದೇ ಉತ್ಸಾಹಿತರಾದದ್ದು ಯಾರೂ ಅಭಿಮಾನಿಸಬೇಕಾದದ್ದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸುವುದೆಂದರೆ ಅದು ಸುಲಭವಲ್ಲ. ಆದರೂ ಉತ್ಸಾಹ, ಅದೇ ಯೋಚನೆಯಲ್ಲಿ ಹೇಳಿದರು, ಎಲ್ಲರೀಗೂ ಒಂದು ಮೇಲ್ ಮುಖಾಂತರ ಸುದ್ದಿ ತಿಳಿಸಿಬಿಡಿ. ಇನ್ನು ಯಾರಾದರೂ ಕಾರ್ಯಕ್ರಮ ಅದೇ ದಿನ ನಿಶ್ಚಯ ಮಾಡಿದರೆ? ಬಹುಷಃ ಅವರು ಈ ರೀತಿ ಗಾಬರಿ ಮತ್ತು ಕಾಳಜಿ ವ್ಯಕ್ತ ಪಡಿಸದೇ ಇರುತ್ತಿದ್ದರೆ ನಾನು ಇದನ್ನು ಬರೆಯುತ್ತಿದ್ದೆನೋ ಇಲ್ಲವೋ ತಿಳಿಯದು. ಅವರ ಈ ಬಗೆಯ ಚಿಂತನೆ ಮಾತ್ರ ನನ್ನನ್ನು ಗಾಢವಾಗಿ ಯೋಚಿಸುವಂತೆ ಮಾಡಿತು. ಜಾಗ್ರತರಾಗಿ ಯಾವ ಜಾಗರೂಕತೆಯನ್ನು ಹೇಗೆ ತೆಗೆದುಕೊಂಡರು ನಮ್ಮ ವ್ಯವಸ್ಥೆ ಇನ್ನೂ ರಾಜಕೀಯ ಮುಕ್ತವಾಗಿಲ್ಲವಲ್ಲ ಎಂದು ಬೇಸರಿಸುಂತಾಯಿತು. ಹಿಂದೂಮ್ಮೆ ಬರೆದಿದ್ದೆ. ಕಾರ್ಯಕ್ರಮ ಯಶಸ್ಸಿನಲ್ಲಿ ಈ ರಾಜಕೀಯದ ಪ್ರಭಾವವೂ ಸಾಕಷ್ಟಿದೆ. ಅದೂ ಬೆಂಗಳೂರಿನಂತಹ ಸೀಮಿತ ಪ್ರೇಕ್ಷಕ ವಲಯದಲ್ಲಿ ಅತ್ಯಂತ ಹೆಚ್ಚು ಜೀವಂತವಾಗಿರಬೇಕಾದರೆ, ಅದು, ಅದು ಮಾತ್ರ ಚಿಂತಿಸುವ ಹಾಗೆ ಮಾಡಿದ್ದು. ">ಹಿಂದೆ ರಾಜ ಮಹಾರಾಜರುಗಳು ರಾಜ್ಯ ಉದ್ದಾರಕ್ಕಾಗಿ, ಪ್ರಜಾಕ್ಷೇಮಕ್ಕಾಗಿ ಮಂತ್ರಾಲೋಚನೆ ಮಾಡಿಕೊಂಡು ರಾಜ ನೀತಿಯನ್ನು ಪಾಲಿಸುತ್ತ ಆಳ್ವಿಕೆ ನಡೆಸುತ್ತಿದ್ದರೆ ಅದೇ ರಾಜಕೀಯ ಎಂದು ಸಾಮಾನ್ಯರಿಂದಲೂ ಗುರುತಿಸಲ್ಪಡುತ್ತಿತ್ತು. ಅಂತಹ ಗೌರವ ಭಾವದ ಹಿರಿತನದ ಪ್ರಕ್ರಿಯಯ ಭಾವವೇ ಇಂದು ಬದಲಾಗಿಬಿಟ್ಟು ಅದು ಯಕ್ಷಗಾನಕ್ಕೂ ಹಬ್ಬಿ ಅಭಿಮಾನಿಗಳ ನಿದ್ದೆಗೆಡಿಸುವುದು ಸುಳ್ಳಲ್ಲ. ಯಕ್ಷಗಾನ ಮೊದಲೆ ನಿದ್ದೆಗೆಡುವ ಕಲೆ ಅದರಲ್ಲಿ ಕಣ್ಮನ ಪಾವನವಾದರೆ ಇದರಲ್ಲಿ ಮಂಡೆಯೇ ಹಾಳಾಗಿ ಬಿಡ್ತದೆ.ನಾವು ಯಕ್ಷಗಾನ ದೃಷ್ಟಿಯಲ್ಲಿಟ್ಟು ಕಾರ್ಯಕ್ರಮ ರೂಪಿಸಬೇಕು. ಪ್ರೇಕ್ಷಕರನ್ನು ಆನಂತರ ಗಮನಿಸಬೇಕು” ನನ್ನ ಅನಿಸಿಕೆ ಹೇಳಿದೆ. ಅದಕ್ಕೆ ಕಾರಣವಿಷ್ಟೆ. ಒತ್ತಾಯದಿಂದ ಪ್ರೇಕ್ಷಕರನ್ನು ಸೆಳೆಯುವ ಕ್ರಮ ಸರಿಯಲ್ಲ. ಅಭಿಮಾನ ಇದ್ದವರು ಅಭಿರುಚಿ ಬೆಳೆಸಿಕೊಂಡವರು ಬಂದರಷ್ಟೇ ಕಾರ್ಯಕ್ರಮ ಅರ್ಥಪೂರ್ಣ ಎನಿಸುವುದು. ಕಲೆಯನ್ನು ಮನಸ್ಸಿಗೆ ಮುದನೀಡುವುದಕ್ಕಾಗಿ ಅನುಭವಿಸಬೇಕೇ ಹೊರತು ಯಾತನೆ ಅನುಭವಿಸುವುದಕ್ಕಾಗಿ ಅಲ್ಲ. ಬಹುಷಃ ಚಿಕಿತ್ಸೆಯ ರೂಪದಲ್ಲಿ ಕೆಲವೊಮ್ಬಲವಂತದಲ್ಲಿ ಯಾತನೆ ಅನುಭವಿಸುವುದುಂಟು. ಆ ರೀತಿಯಲ್ಲಿ ಅನುಭವಿಸಬೇಕೆ? ಎಷ್ಟೋ ಬಾರಿ ಕಾರ್ಯಕ್ರಮಕ್ಕೆ ಹೋದಾಗ ಕಂಡದ್ದಿದೆ ಸಂಘಟಕರ ಮೇಲಿನ ದಾಕ್ಷಿಣ್ಯಕ್ಕೆ ಹಲವರು ಕಾರ್ಯಕ್ರಮಕ್ಕೆ ಬಂದಂತೆ ಮಾಡಿ ಅಸಹನೆ ಸ್ವತಹ ಅನುಭವಿಸುವುದಲ್ಲದೆ ಪರರಿಗೂ ಅದನ್ನು ವರ್ಗಾಯಿಸಿಬಿಡುತ್ತಾರೆ. ಈ ನಿಟ್ಟಿನಲ್ಲಿ ಕಲೆಗೆ ಅದರಲ್ಲೂ ಯಕ್ಷಗಾನಕ್ಕೆ ಒತ್ತಾಯದ ಪ್ರೇಕ್ಷಕನ ಅಗತ್ಯವಿದೇಯೇ? ಸಂಖ್ಯೆಯಲ್ಲಿ ಪ್ರೇಕ್ಷಕ ಇರುವುದಕ್ಕಿಂತ ಇರುವ ಪ್ರೇಕ್ಷಕ ಸ್ವತಂತ್ರವಾಗಿ ಅನುಭವಿಸುವಂತೆ ಇರಬೇಕು. >ಬೆಂಗಳೂರಿನಂತಹ ನಗರದಲ್ಲಿ ಯಕ್ಷಗಾನಕ್ಕೆ ಬಹಳ ಸೀಮಿತ ಪ್ರೇಕ್ಷಕ ಸಂಖ್ಯೆ ಇರುತ್ತದೆ. ಇದನ್ನು ನೋಡುವುದಕ್ಕೆ ಕೇಳುವುದಕ್ಕೆ ಕೇವಲ ಅಭಿಮಾನ ಮಾತ್ರ ಇದ್ದರೆ ಸಾಲದು ಸಾಕಷ್ಟು ಶ್ರದ್ದೆ ಮತ್ತು ಪ್ರಯತ್ನವನ್ನೂ ಹಾಕಬೇಕಾಗುತ್ತದೆ. ಈ ಬಗೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಸದಾ ಹೋಗುತ್ತಿದ್ದರೆ ನಮ್ಮ ಅಭಿಮಾನ ಪ್ರೀತಿ ಲೆಕ್ಕಕ್ಕೆ ಬರುವುದು ಆನಂತರ. ನಮಗೆ ಅರಿವಿಲ್ಲದೆಯೇ ಕಾರ್ಯಕ್ರಮ ನೀಯೋಜಕರು ಸೃಷ್ಟಿಸಿದ ಪ್ರೇಕ್ಷಕ ಲೆಕ್ಕಕ್ಕೆ ನಾವು ಸೇರಿಕೊಳ್ಳುತ್ತೇವೆ. ಅಂದರೆ ಅವರಿಂದಾಗಿ ನಾವು ಯಕ್ಷಗಾನ ಪ್ರೇಕ್ಷಕರಾದ ಭಾವನೆ ಉಂಟಾಗಿಬಿಡುತ್ತದೆ. ಇದೊಂದು ರೀತಿಯ ರಾಜಕೀಯಕ್ಕೆ ಕಾರಣವಾಗುವುದು ಮಾತ್ರ ವಿಪರ್ಯಾಸ. ತಮ್ಮ ಪ್ರೇಕ್ಷಕ ವರ್ಗ ಎಂಬ ಅನಧಿಕೃತ ಮುದ್ರೆ ನಮಗರಿವಿಲ್ಲದೆಯೇ ಬಿದ್ದುಬಿಡುತ್ತದೆ.ಬೀದಿಯಲ್ಲಿ ಸ್ವತಂತ್ರವಾಗಿ ಹೋಗುತ್ತಿರುವ ಗ್ರಾಹಕನನ್ನು ವರ್ತಕರಿಬ್ಬರು ತಮ್ಮ ಸ್ಪರ್ಧೆಗೆ ಬಳಸಿಕೊಂಡಂತೆ. ಇದು ಒಂದು ರೀತಿಯಲ್ಲಿ ಪ್ರೇಕ್ಷಕರಿಗಾಗಿ ರಾಜಕೀಯವಾಗುವುದು.ಹೀಗಾಗಿ ನನ್ನ ಯೋಚನೆ ಯಕ್ಷಗಾನ ಕಾರ್ಯಕ್ರಮಗಳು ಆಹ್ವಾನವಾಗದೇ ಸೂಚನೆಯಾದರೆ ಹೇಗೆ? ಯಾಕೆಂದರೆ ಕರೆಯದೇ ಇದ್ದರೂ, ಸೆಳೆಯುವಂತಹ ಚುಂಬಕ ಶಕ್ತಿ ಯಕ್ಷಗಾನದಲ್ಲಿ ಇದೆ ಎಂಬ ವಿಶ್ವಾಸ ನನ್ನದು. ಬರೀ ಚೆಂಡೆಯ ಸದ್ದಿಗೆ ನಿಮಿರಿಸುವ ಕಿವಿ ಇದೆಯಲ್ಲ? ನಾವು ನಮ್ಮ ಕೆಲಸ ಮಾಡುವುದು.. ಅದರ ಸೂಚನೆ ಮಾತ್ರ, ಅಸಕ್ತಿಯಿದ್ದವರು ಸುಮ್ಮನೆ ಕುಳಿತಿರಲು ಸಾಧ್ಯವೇ? ನಿಮಿರುವ ಕಿವಿ ಅರಳುವ ಮನ ತಣಿಯುವ ಹೃದಯ ವ್ಯಕ್ತವಾಗುವ ಅಭಿಮಾನ ಇಷ್ಟಿದ್ದರೆ ಅರ್ಥಪೂರ್ಣವಾಗುತ್ತದೆ. ಯಕ್ಷಗಾನದಿಂದ ಪ್ರಚೋದಕನಾಗುವ ಪ್ರೇಕ್ಷಕ, ಪ್ರೇಕ್ಷಕನಿಂದ ಪ್ರಚೋದನೆಯಾಗುವ ಕಲಾವಿದ ಈ ಸಮತ್ರಿಕೋನದ ಮಧ್ಯೆ ವಿಜ್ರಂಭಿಸುವ ಕಾರ್ಯಕ್ರಮ ಬರೀ ಕಾರ್ಯಕ್ರಮವಾಗುವುದಿಲ್ಲ. ಕಲೆಯ ಆರಾಧನೆ ಎಂದಾಗುವುದು ಆಗಲೇ. ಭಕ್ತ ತಾನಾಗಿ ದೇವಾಲಯಕ್ಕೆ ಬಂದು ಪೂಜೆಯನ್ನು ಕೈಗೊಂಡಾಗಲೇ ಅದು ನಿಜವಾದ ಪೂಜೆಯಾಗುವುದು. ಆವಾಗ ಬಂದ ಪ್ರೇಕ್ಷಕ ಅಪ್ಪಟ ಯಕ್ಷಗಾನ ಪ್ರೇಕ್ಷಕನಾಗಿ ಕಾರ್ಯಕ್ರಮ ಮತ್ತಷ್ಟೂ ಅರ್ಥ ಪೂರ್ಣವಾಗುತ್ತದೆ. ವೈಯಕ್ತಿಕ ಹಿತಾಸಕ್ತಿ , ರಾಜಕೀಯದ ದ್ವೇಷ ವೈಷಮ್ಯಗಳು ಯಕ್ಷಗಾನದ ವಿಚಾರದಲ್ಲಿ ಬದಿಗೆ ಸರಿದು ನಿಲ್ಲಬೇಕು. ಸಹೋದರತ್ವದ ಸಾಹೋದರ್ಯದಲ್ಲಿ ಯಕ್ಷಗಾನ ಇವೆಲ್ಲವನ್ನು ಮೀರಿ ನಿಲ್ಲಬೇಕು. ಯಕ್ಷಗಾನ ತನ್ನ ಉಳಿವಿಗೇ ಹೋರಾಡುವಂತಹ ಸನ್ನಿವೇಶದಲ್ಲಿಈ ಚಿಲ್ಲರೆ ರಾಜಕೀಯಗಳು ಕಲೆಗೆ ಪ್ರತಿಬಂಧಕಗಳಾಗಬಾರದು.ಸುಸಂಸ್ಕೃತ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಈ ಮೂಲಕ ಬಿತ್ತರಗೊಳ್ಳಬೇಕು.ಯಕ್ಷಗಾನ ಪರಂಪರೆಯ ರಸಧಾರೆಯಲ್ಲಿ ಈ ರಾಜಕೀಯ ದ್ವೇಷಾಸೂಯೆಗಳೆಂಬ ಮಾಲಿನ್ಯ ಬದಿಗೆ ನಿಂತು ಪರಿಶುಭ್ರ ಪ್ರವಾಹ ಹರಿಯಬೇಕು. ಎಲ್ಲವನ್ನೂ ಮರೆತು ಇದೀಗ ಮೈ ಮನ ಪುಳಕಿತರಾಗುವ ಸನ್ನಿವೇಶ ಬಂದಿದೆ. ನಮ್ಮ ಬಲಿಪ್ಪಜ್ಜ ಬರುತ್ತಿದ್ದಾರೆ. ವರ್ಷಾಂತ್ಯದ ಚಳಿಗಾಲದ ಸಮಯ. ರೋಮ ರೋಮಗಳೂ ಸೆಟೆದು ನಿಲ್ಲುವಂತಹ ತಂಗಾಳಿಗೆ ಯಕ್ಷಾಗಾನದ ಝೇಂಕಾರ ಮಿಳಿತಗೊಂಡರೆ ರೋಮಗಳು ಮತ್ತಷ್ಟು ಸೆಟೆದು ನಿಲ್ಲಿವುದರಲ್ಲಿ ಅನುಮಾನವಿಲ್ಲ. ಜತೆಗೆ ಹಿರಿಯ ವಿದ್ವಾಂಸರೂ ಯಕ್ಷಗಾನ ವಾಕ್ ಪ್ರಪಂಚದ<ಮತ್ಸದ್ಧಿಗಳೂ ಆದ ಶ್ರೀ ಪ್ರಭಾಕರ ಜೋಷಿ ಮತ್ತು ವಿದ್ವಾನ್ ಶ್ರೀ ಉಮಾಕಾಂತ್ ಭಟ್ ರವರ ವಿದ್ವತ್ ಪೂರ್ಣ ಮಾತುಗಾರಿಕೆ ಮಾತ್ರವಲ್ಲ ಪರಂಪರೆಯ ಭಾಗವತಿಕೆಯ, ಯುವ ಪೀಳಿಗೆಯ ಭಾಗವತ ಶ್ರೀ ಬಲಿಪ ಶಿವಶಂಕರರ ಮಾಧುರ್ಯದ ಭಾಗವತಿಕೆಗೆ ಕಾದು ಕುಳಿತುಕೊಳ್ಳುವ ಆ ತವಕವೇ ಅಹ್ಲಾದನೀಯ ಅನುಭವ.

Saturday, November 3, 2012

ಯಕ್ಷವಾಹಿನಿ


 ಕೆಲವು ವರ್ಷಗಳ ಕೆಳಗೆ ಈ ಅಂತರ್ಜಾಲದ ಲೋಕಕ್ಕೆ ಪ್ರವೇಶ ಮಾಡಿದಾಗ ಯಕ್ಷಗಾನದ ಶಬ್ದಗಳನ್ನು ಒತ್ತಿದಲ್ಲಿ ಕೆಲವೇ ಕೆಲವು ಮಾಹಿತಿ ಸಿಗುತ್ತಿತ್ತು. ಆಗ ಇದ್ದ ಯಕ್ಷಗಾನದ ಏಕೈಕ ವೆಬ್ ಸೈಟ್ ಸಾಧ್ಯವಾದಷ್ಟು ಮಟ್ಟಿಗೆ ಸುಂದರವಾಗಿ ತನ್ನದೇ ರೀತಿಯಲ್ಲಿ ಹಲವು ಮಾಹಿತಿಗಳನ್ನು ಒದಗಿಸುತ್ತಿತ್ತು. ಆ ಕಾಲದಲ್ಲಿ ಆರ್ಕುಟ್ ಮುಂತಾದ ಸಾರ್ವಜನಿಕ ವೆಬ್ ಲೋಕ ಉಂಟು ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ. ಯಾವುದು ಹೇಗೆ ಪರಿಣಾಮ ಬೀರಲಿ ನಾವು ಕೆಲವು ಮಿತ್ರರಂತು ಈ ಆರ್ಕುಟ್ ಜಗತ್ತನ್ನು ಮರೆಯುವಂತಿಲ್ಲ. ಕಾರಣವಿಷ್ಟೇ ನಮ್ಮ ಇರುವಿಕೆಗೆ ಸಾಕ್ಷಿಯಾಗಿ ನಿಂತು ಬೆಸೆದ ಲೋಕ  ಈ ಅಂತರ್ಜಾಲ ಲೋಕ. ಪರಸ್ಪರ ಪರಿಚಯವಿಲ್ಲದೇನೆ ಈ ಆಟದ ಮರುಳರು ಒಂದಾದ ಬಗೆ ಮಾತ್ರ ನಮ್ಮ ಪಾಲಿಗೆ ಅದ್ಭುತ. ಕೇವಲ ಐದಾರು ಮಂದಿಗಳು ಮಾತ್ರವೇ ಆದರೂ ನಮ್ಮ ಮನದಲ್ಲಿ ಹುದುಗಿಕೊಂಡ ಯಕ್ಷಗಾನದ ಅಭಿಮಾನ ನಮ್ಮೊಳಗೆ ಕೆಲವೊಂದು ಕನಸನ್ನು, ಬಯಕೆಗಳನ್ನು ಉಂಟು ಮಾಡಿದ್ದು ಬಹಳ ಮಹತ್ವವೆನಿಸುತ್ತದೆ.  
ಆವಾಗಿನ ಸಮಯ ಯಕ್ಷಗಾನದ ಬಗ್ಗೆ ಅದರಲ್ಲೂ ತೆಂಕು ತಿಟ್ಟಿನ ಬಗ್ಗೆ ಬಹಳ ಅತ್ಯಲ್ಪ ಮಾಹಿತಿ ಮಾತ್ರವೇ ಲಭ್ಯವಿರುತ್ತಿತ್ತು. ಆಗ ಲಕ್ಷ್ಮೀನಾರಾಯಣ (ಲಾನ) ಸೃಷ್ಟಿಸಿದ ಯಕ್ಷಗಾನ ಅಂತರ್ಜಾಲ ಹಲವರಿಗೆ ಯಕ್ಷಗಾನದ ದ್ವನಿಯನ್ನು ಅಂತರ್ಜಾಲದಲ್ಲಿ ಕೇಳುವಂತೆ ಮಾಡಿತ್ತು. ತಣಿಯದ ದಾಹಕ್ಕೆ ಅಮೃತಸಿಂಚನವಾಗಿದ್ದ ಈ ತಾಣ ನಮ್ಮೋಳಗೆ ಮತ್ತೂ ಮಹದಾಶೆಗಳನ್ನು ಪ್ರಚೋದಿಸುವಂತೆ ಮಾಡಿತ್ತು.
ಆಗ  ಯಕ್ಷಗಾನ ಆಲಿಸುವುದಕ್ಕೂ ಈ ನಗರದಲ್ಲಿ  ಬಹಳ ಕಷ್ಟವಾಗಿತ್ತು. ದಿನವೂ ಕರ್ಣ ತಮ್ಮಟೆಯ ಸತ್ವ ಪರೀಕ್ಷೆಯನ್ನು ಮಾಡುವ ಈ ಎಫ್ ಎಂ ರೇಡಿಯೋ ಎಂಬ ಭೂತ ಚೇಷ್ಟೆ ಸಹಿಸದೆ ಬೇರೆ ದಾರಿಯೇ ಇಲ್ಲವಾಗಿತ್ತು. ಯಕ್ಷಗಾನ ಕೇಳೋಣವೋ ಹಳೆಯದಾದ ಸಾಕಷ್ಟು ಧೂಳನ್ನು ತುಂಬಿಕೊಂಡು ತಾನಿನ್ನು ಅಸಮರ್ಥನೆಂದು ಗೋಳಿಡುವ ಕ್ಯಾಸೆಟ್ ಅದನ್ನು ಸ್ವಲ್ಪ ತಿರುಗಿಸೋಣವೋ ಹಳೆಯದಾದ ಟೇಪ್ ರೆಕಾರ್ಡರ್ ಕೆಲಸ ಮಾಡದೆ ತಳ್ಳಿ ತಳ್ಳಿ ಅತ್ತ ಅಟ್ಟಕ್ಕೆ ಸೇರಿಯಾಗಿತ್ತು. ಬೇರೆಲ್ಲ ಸಿಕ್ಕರೂ ಯಕ್ಷಗಾನವೊಂದು ಸಿಗದ ಹಪಹಪಿಕೆ ನಮ್ಮಲ್ಲಿರುವಾಗ ಕೆಲವರು ಸಿಕ್ಕಿದ ಯಕ್ಷಗಾನ ತುಣುಕುಗಳನ್ನು ತಮ್ಮೊಳಗೆ ಹಂಚಿಕೊಂಡು ಅದರಲ್ಲೇ ತೃಪ್ತಿ ಪಟ್ಟುಕೊಳ್ಳಲಾರಂಭಿಸಿದರು. ಸಿಕ್ಕಿದ ವೀಡಿಯೊ ತುಣುಕನ್ನು YOUTUBE  ಮುಂತಾದ ಜಾಲತಾಣಗಳಿಗೆ ಏರಿಸಿ ಸಂತಸ ಪಡುತ್ತಿದ್ದೆವು. ಆಗ ಅಂತರ್ಜಾಲದಲ್ಲಿ ಹುಡುಕಿದರೆ ಸಾಕಷ್ಟು ಮಾಹಿತಿಯು ಸಿಗದಾಗ ಎಲ್ಲರೂ ಸೇರಿ ಯಕ್ಷಗಾನದ ಬಗ್ಗೆ ಅತ್ಯಲ್ಪವಾದರೂ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಾಗಲೆಂದು ಹಲವಾರು ವಿಡಿಯೋಗಳನ್ನು ಧ್ವನಿ ಮುದ್ರಣಗಳನ್ನು  ಅಲ್ಲಿ ಏರಿಸಿದೆವು. ಇಂದು ಯಕ್ಷಗಾನ ಎಂದು ಸುಮ್ಮನೇ ಅದುಮಿದರೂ ಈ ಬಗ್ಗೆ ಹಲವಾರು ಮಾಹಿತಿಗಳು  ಬಗೆ ಬಗೆಯ ಯಕ್ಷಗಾನದ ವೈವಿಧ್ಯತೆಯ ಮುಖದರ್ಶನವಾಗಿಬಿಡುತ್ತದೆ.
ಆಗ ಯಕ್ಷಗಾನದ ದ್ವನಿಮುದ್ರಣಗಳು ಸಿಗುತ್ತಿದ್ದುದೇ ಅಪರೂಪ. ಎಲ್ಲೋ ಕೆಲವರು ಸ್ವಂತ ಆಸಕ್ತಿಯಿಂದ ತಮ್ಮಲ್ಲಿರುವ ಹಳೆಯ ಕ್ಯಾಸೆಟ್ ರೂಪದ ಸಂಗ್ರಹಗಳನ್ನು ಸ್ವಂತ ಖರ್ಚಿನಲ್ಲಿ ಸಿ. ಡಿ ಗೆ ರೂಪಾಂತರಿಸಿ ಕೇಳುತ್ತಿದ್ದರೆ, ಅದರಲ್ಲಿ ಕೆಲವನ್ನು ನೀಡುತ್ತಿದ್ದರು. ಸ್ವಂತ ಖರ್ಚಿನಲ್ಲಿ ಮಾಡಿದ ಕಾರಣ ಅವುಗಳನ್ನು ಯಾರಿಗೂ ನೀಡದೆ ಸಾರ್ವಜನಿಕವಾಗಿ ಹೊರಹಾಕದೇ ಇರುತ್ತಿದ್ದರು. ಆದರೂ ಕೆಲವೊಂದು ಯಕ್ಷಗಾನ ತುಣುಕುಗಳು ಯಕ್ಷಗಾನ ಪದಗಳು ಅಲ್ಲೊ ಇಲ್ಲೋ ಸಿಗುತ್ತ ನಮ್ಮ ನಡುವೆ ಒಡಾದಿಕೊಂಡಿತ್ತು. ಹಿರಿಯ ಭಾಗವತರ ಹಲವು ಪದಗಳನ್ನು ಸಂಗ್ರಹಿಸಿಟ್ಟ ಮಿಡಿ ಉಪ್ಪಿನ ಕಾಯಿಯಂತೆ.  ಸ್ವಲ್ಪ ಸ್ವಲ್ಪವಾಗಿ ಕೇಳುತ್ತಾ ಅದರಲ್ಲೇ ತೃಪ್ತಿಪಟ್ಟುಕೊಳ್ಳುವ ಅನಿವಾರ್ಯತೆಗೆ ಒಳಗಾಗುತ್ತಿದ್ದೆವು. ಆದಿ ಶಂಕರಾಚರ್ಯ ಕ್ಯಾಸೆಟ್ ನ   ಹೊಳ್ಳರ  “ ಎನ್ನ ಶಂಕರಾ...”  ದಿನವಿಡೀ ಮೊಳಗುತ್ತ ಇರುತ್ತಿತ್ತು.
          ಆಗ ಧ್ವನಿಮುದ್ರಣದ ಸಂಗ್ರದ ಯೋಜನೆ ಮತ್ತು ಅದರ ರೂಪುರೇಷೆ ನಾನು ಸಿದ್ದ ಪಡಿಸಿದೆ. ಕ್ಯಾಸೆಟ್ ನಿಂದ ಸಿ.ಡಿ. ಗೆ ರೂಪಾಂತರಿಸುವ ತಂತ್ರಜ್ಞಾನಗಳನ್ನು ಕೇಳಿ ತಿಳಿದು ಆಬಗೆಯಲ್ಲಿ ಉದ್ಯುಕ್ತನಾಗಿ ಅಲ್ಪ ಯಶಸ್ಸನ್ನು ಗಳಿಸಿದಾಗ ಆದ ಅನಂದ ಅಷ್ಟಿಷ್ಟಲ್ಲ. ಸಿಕ್ಕ ಸಿಕ್ಕವರಲ್ಲಿ ಅವರ ಕ್ಯಾಸೆಟ್ ಸಂಗ್ರಹಿಸಿ ಬಿಡುವಿನ ವೇಳೆಯಲ್ಲಿ  ( ಇದಕ್ಕಾಗಿ ಬಿಡುವು ಮಾಡಿಕೊಂಡದ್ದೇ ಅಧಿಕ) ಅದನ್ನು ರೂಪಾಂತರಿಸಿ ಅದನ್ನು ನಾನು ಸ್ವತಹ ಕೇಳಿ ಮಿತ್ರರಿಗೆ ಹಂಚಿಕೊಂಡು ಪಡುತ್ತಿದ್ದ ಆನಂದ ಅಷ್ಟಿಷ್ಟಲ್ಲ. ಈಗಲೂ ಅದು ನಿರಂತರವಾಗಿ ಮುಂದುವರೆದಿದೆ. ಒಂದು ವೆತ್ಯಾಸವೆಂದರೆ ಆಗ ಅದಕ್ಕಾಗಿ ಅಲೆಯುತ್ತಿದ್ದ ನನಗೆ ಇಂದು ಹಲವು ಮಿತ್ರರು ಸ್ವತಹ ಅವರೇ ತಂದು ನೀಡುತ್ತಾರೆ. ಹಾಗೆ ಯಾವುದೇ ಸ್ವಾರ್ಥ ಫಲಾಪೇಕ್ಷೆ ಇಲ್ಲದೇ ಹುಟ್ಟಿಕೊಂಡ ಹವ್ಯಾಸ ಇದು. ಇದರ ಬಗ್ಗೆ ಹಿಂದೆ ಒಂದು ಸಲ ಇದೇ ಪುಟಗಳಲ್ಲಿ ಮರುಳು ಅಲ್ಲವೀ ಹವ್ಯಾಸ. ಎಂದು ಬರೆದಿದ್ದೆ. 

          ಕಲೆ ಸಾಹಿತ್ಯ ಹಂಚಿಕೊಂಡು ಸವಿದಷ್ಟು ಅದಕ್ಕೆ ರುಚಿ ಅಧಿಕವಾಗುತ್ತದೆ. ಅದಕ್ಕಾಗಿ ಪ್ರತಿ ನಿತ್ಯ ನಾನು ಕೇಳಿದ ಯಕ್ಷಗಾನದಿಂದ ಒಂದೊಂದೇ ಪದಗಳನ್ನು ಮಿತ್ರರೊಂದಿಗೆ ಹಂಚಿಕೊಳ್ಳುತ್ತಾ ಸವಿಯಲಾರಂಭಿಸಿದ ಹವ್ಯಾಸ ಇಂದು ಅದರದ್ದೇ ಅದ ಪ್ರತ್ಯೇಕ ಕ್ಸೇತ್ರವನ್ನೇ ಸೃಷ್ಟಿಸಿದೆ. ಸಮಾನ ಅಭಿರುಚಿಯ ನಾಲ್ಕೈದು ಮಿತ್ರರೊಂದಿಗೆ ತೊಡಗಿಕೊಂಡ ಹವ್ಯಾಸ ಈಗ ವಿಶ್ವದಾದ್ಯಂತ ಮಿತ್ರರಿಗೆ ಯಕ್ಷಗಾನ ಆಸ್ವಾದನೆಯ ಕಿಂಚಿತ್ ಬಯಕೆಯನ್ನು ತಣಿಸುವಂತೆ ಮಾಡಿದೆ. ಈಗಲೂ ಹಲವರು ತಮ್ಮ ಮೈಲ್ ವಿಳಾಸವನ್ನು ಕಳಿಸಿ ಆ ಮೈಲ್ ಸಮೂಹಕ್ಕೆ ತಮ್ಮದನ್ನು  ಸೇರಿಸುವಂತೆ ಕೇಳಿಕೊಳ್ಳುತ್ತಾರೆ.    ಹಲವರ ಸಂತಸದ ಪ್ರತಿಕ್ರಿಯೆ ಬಂದಾಗ ಇದೊಂದು ಹವ್ಯಾಸ ಹುಟ್ಟು ಹಾಕಿದ್ದರ ಬಗ್ಗೆ ಅಭಿಮಾನವೆನಿಸುತ್ತದೆ. ಈ ಮೂಲಕ ಹಲವು ಸನ್ಮಿತ್ರರ ಪರಿಚಯ ಮತ್ತು ಒಡನಾಟದ ಸುಖ ಲಭಿಸಿದೆ. ಅಪರಿಚಿತರೂ ಈ ಮೂಲಕ ಪರಿಚಿತ ನಗುವನ್ನು ಬೀರುವಂತೆ ಪ್ರೇರೇಪಣೆ ಗಳಿಸಿದ್ದರೆ ಅದರ ಶ್ರೇಯಸ್ಸು ಯಕ್ಷಗಾನಕ್ಕೆ ಮತ್ತು ಅದರ ಕಲಾವಿದರಿಗೆ ಸಲ್ಲಬೇಕು. ಹೀಗೆ ಮರೆಯದ ಚುಂಬಕ ಸ್ನೇಹ ಸಿಂಚನವನ್ನುಂಟು ಮಾಡುವ ಈ ಕಿರು ಯಕ್ಷಗಾನ ಪ್ರಸಾರ ಅಂತರ್ಜಾಲವನ್ನು ಹೊಕ್ಕವರಿಗೆ ಸ್ನೇಹದ ಅಂತರಂಗದರ್ಶನವನ್ನು ಮಾಡುತ್ತದೆ. ಈ ಮೇಲ್ ನಿಂದ ಮೈಲಾಚೆಗೆ  ಹರಿಯುವ ಈ ಯಕ್ಷಗಂಗೆ ಅದೆಷ್ಟು ಜನರ ಕಿವಿಯನ್ನು ಪಾವನಗೊಳಿಸುತ್ತದೋ ಅರಿಯದು. ಈ ನಡುವೆ ಆಗುವ ವಿಚಿತ್ರ ಅನುಭವಗಳು ಒಂದು ಬಗೆಯಾಗಿರುತ್ತದೆ.
 ಹಲವು ಸಲ ಊರಲ್ಲಿ ಆಟ ಆಡಿಸುವುದಿದ್ದರೆ ಬಯಲು ಅಥವಾ ಮೈದಾನ ಎಲ್ಲೆಡೆ ಇರುವುದಿಲ್ಲ. ಅವಾಗ ಮುಳಿ ಹುಲ್ಲು ಬೆಳೆಯಲೆಂದು ಬಿಟ್ಟ ಖಾಲಿ ಸ್ಥಳದಲ್ಲೇ ಆಟವಾಡುತ್ತಾರೆ. ಅತ್ತ ಯಾರೂ ಸಾರ್ವಜನಿಕವಾಗಿ ಓಡಾಡಬಾರದೆಂದು ಕಟ್ಟಿದ ಕಲ್ಲಿನ ಕೋಟೆಯನ್ನು ಒಂದೆಡೆ ಒಡೆದು ಇದಕ್ಕೆ ತಾತ್ಕಾಲಿಕ ಅನುಕೂಲ ಮಾಡಿಕೊಡುತ್ತಾರೆ. ಆ ರಹದಾರಿ ಕೇವಲ ಅ ದಿನಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ. ಆದರೆ ಆಟ ಆಡಿ ಮೇಳ ಹೋದ ಮೇಲೂ ಆ ರಹದಾರಿ ಹಾಗೇ ತೆರೆದಿರುತ್ತದೆ. ಯಕ್ಷಗಾನದ ಉದ್ದೇಶಕ್ಕಾಗಿ ತೆರೆದಿಟ್ಟ ದಾರಿ ಆಮೇಲೆ ಬೇರೆ ಖಾಸಗೀ ಉದ್ದೇಶಕ್ಕೆ ಬಳಕೆಯಾಗುವಂತೆ ಯಕ್ಷಗಾನ ಮಿತ್ರರ ಮೈಲ್ ಗ್ರೂಪ್ ಈಗೀಗ ಅನ್ಯ ವಿಷಯಗಳಿಗೆ ಬಳಕೆಯಾಗುವಾಗ ಮಾತ್ರ ಗಾಬರಿಯಾಗುತ್ತದೆ. ತಮ್ಮ ಖಾಸಗೀ ವಿಚಾರಗಳನ್ನು ಹರಿಸಲು ದಾರಿ ಇಲ್ಲಿ ಕಂಡುಕೊಂಡಾಗ ಬಹಳ ಖೇದವಾಗುತ್ತದೆ. ಹೆಚ್ಚಿನ ಎಲ್ಲ ಮಿತ್ರರು ಇದರಿಂದ ಕಿರಿ ಕಿರಿಯನ್ನು ಅನುಭವಿಸಿದರೂ, ನನ್ನ ಮೇಲೆ ಹರಿ ಹಾಯಬಹುದಾಗಿದ್ದರೂ ಯಕ್ಷಗಾನದ ಮೇಲಿನ ಗೌರವಕ್ಕೆ ಮತ್ತು ಶಿಷ್ಟಾಚಾರಕ್ಕೆ ಸುಮ್ಮನಿರುತ್ತಾರೆ. ಎಲ್ಲರಿಗೂ ನನ್ನ ಬಗ್ಗೆ ಅರಿತಿರುವುದರಿಂದ ನಾನು ಸಮಾಧಾನ ಪಟ್ಟುಕೊಂಡರೂ ಈ ದುರ್ಬಳಕೆಗೆ ಏನೂ ಮಾಡಲಾಗದ ಅಸಹಾಯಕತೆಗೆ ಬೇಸರವಾಗುತ್ತದೆ.  ಯಕ್ಷಗಾನಕ್ಕಾಗಿ ತೆರೆದಿಟ್ಟ ದಾರಿ ಇನ್ನಾರೋ ದುರ್ಬಳಕೆ ಮಾಡಿ ಅತಿ ಬುದ್ಧಿವಂತಿಕೆ ತೋರುವಾಗ ಆ ಮುಳಿಹಿತ್ತಲಿನ ಯಜಮಾನ ತಾನೆ ಏನು ಮಾಡಿಯಾನು. ಕಲ್ಲು ಕಟ್ಟಿ ಅದನ್ನು ಪೂರ್ಣ ಮುಚ್ಚಿ ಬಿಡಬಹುದಾಗಿದ್ದರೂ ಮುಂದಿನ ಸಲ ಆಟ ಆಡಿಸುವವನು ಕೇಳಿದಾಗ ಮರು ಯೋಚಿಸುವಂತೆ ಮಾಡುವುದಿಲ್ಲವೇ? ಅಲ್ಲಿ ಕಲ್ಲಿನ ಕೋಟೆಯನ್ನು ಪುನಹ ಕಟ್ಟಿ ಅನೈಚ್ಚಿಕ ಸಂಚಾರವನ್ನು ತಡೆಯಬಹುದಾದರೂ ಇಲ್ಲಿ, ಮಾನಸಿಕವಾಗಿ ಕಲ್ಲಿನ ಗೋಡೆಯನ್ನು ಕಟ್ಟಿ ಪ್ರತಿಬಂಧಕವನ್ನು ನಿರ್ಮಿಸಬೇಕಷ್ಟೆ.
ಆದರೂ ಹರಿಯುವ ಈ ಯಕ್ಷವಾಹಿನಿ ನಿರಂತರವಾಗಿ ಹರಿಯಲೆಂದು ತಿಳಿದವರು ಯಾರೂ ಇದನ್ನು ದುರ್ಬಳಕೆ ಮಾಡಲಾರರು ಎಂಬ ಹಾರೈಕೆ ಮಾತ್ರ ಮನದಾಳದಲ್ಲಿ ಒಸರುತ್ತ ಹರಿಯುತ್ತಿದೆ. 

Thursday, October 11, 2012

ಯಕ್ಷರಂಗದ ಚೌಕಿ ದೇವಕಾನ


ಕೆಲವೊಮ್ಮೆ  ಹಿತ್ತಿಲಲ್ಲಿ ಯಾವತ್ತೋ  ಹಾಕಿದ ಸೌತೆಕಾಯಿ .ಬೀಜ ಮೊಳೆತು ಬಳ್ಳಿಯಾಗಿಬಿಡುತ್ತದೆ. ಆ ಕಡೆ ಈ ಕಡೆ ಇದ್ದ ತೇವಯುಕ್ತ ಮಣ್ಣಿನ ತೇವವನ್ನು ಹೀರಿ ನಮಗರಿವಿಲ್ಲದೇ  ತಾನಾಗಿ ಬೆಳೆಯುತ್ತದೆ, ಬೆಳೆದು ಬೆಳೆದು  ದೊಡ್ದ ಬಳ್ಳಿಯಾದರೂ ನಮ್ಮ ಗಮನ ಅತ್ತ ಕಡೆಗೆ ಹರಿಯುವುದಿಲ್ಲ. ಹಾಗೆ ಹೇಳುವುದಕ್ಕಿಂತಲೂ ಔದಾಸಿನ್ಯ ಅಸಡ್ದೆ ಎಂದರೆ ಸೂಕ್ತವೋ ಏನೋ. ಆದರೆ ಆ ಬಳ್ಳಿಯ ಮಹತ್ವ ಗೊತ್ತಾಗುವುದು  ಅದರ ಟಿಸಿಲಿನ ಎಲೆಯೊಂದರ ಮರೆಯಲ್ಲಿ ಹೂ ಅರಳಿ ಮಿಡಿ ಬೆಳೆದು ಸೌತೆಕಾಯಿ  ಫಲ ಬಿಟ್ಟಾಗಲೇ? !!!  ಎಲಾ, ಆಗಲೇ ಕಾಯಿ ಆಗಿಬಿಟ್ಟಿತಲ್ಲ... ಆಮೇಲೆ ಅದರ ಬುಡ ಎಲ್ಲಿದೆ ಎಂದು ಹುಡುಕಿ ನೀರು ಸೊಪ್ಪು ಸೆಗಣಿ ಹಾಕಿ ಆರೈಕೆಗೆ ತೊಡಗುತ್ತೇವೆ. ಅಲ್ಲಿವರೆಗೆ ಹಿತ್ತಲ ಗಿಡ ಹೆಸರಿಗಾಗಿ ಹಿತ್ತಲ ಗಿಡವಾಗಿಯೇ ಇತ್ತಲ್ಲ?  
ಬೆನಕ ಯಕ್ಷಗಾನ ಕಲಾ ಸಂಸ್ಥೆ ಪೈವಳಿಕೆ ಇದರ ದಶಮಾನೋತ್ಸವ ಕಾರ್ಯಕ್ರಮದ ಕರಪತ್ರ ಕಂಡಾಗ ಅನಿಸಿದ ಅನಿಸಿಕೆಗಳು ಇವು. ಪೈವಳಿಕೆ ನಾವು ಬಾಳಿ ಬದುಕಿದ ಊರು. ಇಲ್ಲಿ ಗುಡ್ಡ ಬೆಟ್ಟ ತೋಟ ಹಳ್ಳ ತೊರೆಗಳು ನಮ್ಮ ಬದುಕಲ್ಲಿ ಹಲವು ಸ್ಮರಣೀಯ ನೆನಪುಗಳನ್ನು ಹೇಗೆ ತುಂಬಿಸಿದೆಯೋ ಹಾಗೆ ಅಲ್ಲಿನ ಪರಿಸರದ ಆಗು ಹೋಗುಗಳೂ ಸ್ಮರಣೀಯವಾಗಿವೆ.  ಪ್ರಸ್ತುತ ಯಕ್ಷಗಾನದ ಮಟ್ಟಿಗೆ ಪೈವಳಿಕೆ ಎಂದಾಕ್ಷಣ ಪಕ್ಕನೆ ನೆನಪಿಗೆ ಬರುವುದು ನಮ್ಮ ಗುರು ಸಾದೃಶ ವ್ಯಕ್ತಿತ್ವದ ದೇವಕಾನ ಕೃಷ್ಣ ಭಟ್ಟರು ಮತ್ತು ಇವರ ಬಳಗ ಹುಟ್ಟು ಹಾಕಿದ ಎರಡು ಸಂಘಗಳು.  ಒಂದು ಶ್ರೀ ಗಣೇಶ ಕಲಾವೃಂದ ಪೈವಳಿಕೆ ಮತ್ತೊಂದು ಶ್ರೀ ಬೆನಕ ಯಕ್ಷಕಲಾವೃಂದ ಪೈವಳಿಕೆ.ಹೀಗೆ ಯಕ್ಷಗಾನದ ಎರಡು ಪ್ರಧಾನ ಅಂಶಗಳಿಗೆ ಮಹತ್ವವನ್ನು ಮನ್ನಣೆಯನ್ನು ತಂದು ಕೊಟ್ಟವರು ಇವರು.

ಅತ್ಯಂತ ವ್ಯವಸ್ಥಿತವಾಗಿ ವಿಭಿನ್ನ ರೀತಿಯಲ್ಲಿ ನಡೆದು ಕೊಂಡು ಬಂದ  ಪೈವಳಿಕೆಯ ಬೆನಕನಿಗೆ ಈಗ ಹತ್ತರ ಹರಯ!! ನಮಗೆಲ್ಲ ಹಿತ್ತಿಲ ಗಿಡವಾಗಿಯೇ ಆ ಕಾಲದಲ್ಲಿ ಭಾಸವಾದರೂ ಈಗ ಮಾತ್ರ ಅದು ಬೆಳೆದು ನಿಂತ ಪರಿ ಆಶ್ಚರ್ಯವಾಗಿ ಕಾಣುತ್ತದೆ. ಇದರ ಮಹತ್ವ ಮತ್ತು ಮೌಲ್ಯದ ಅರಿವಿಗೆ ಬರುವುದು ಈವಾಗಲೇ. ಹಾಗಾಗಿ ಅನ್ನಿಸಿಬಿಟ್ಟದ್ದ್ದು ಹಿತ್ತಲಗಿಡವಾಗಿಯೇ ಇತ್ತಲ್ಲ ಎಂದು. ಬಾಲ್ಯದಲ್ಲಿ,  ಮನೆಯಲ್ಲಿ ನಿತ್ಯ ಬೆಳಗ್ಗೆ ಕುಚ್ಚಿಲಕ್ಕಿ ಗಂಜಿ ಊಟ ಮಾಡುವಾಗ ಕೆಲವೊಮ್ಮೆ ಸಿಂಡರಿಸಿಕೊಳ್ಳುವುದಿತ್ತು.ಛೇ “ ಇವತ್ತು ತಿಂಡಿ ಗಂಜಿಯೋ? “ ನಿತ್ಯ ಅದನ್ನೇ ನೋಡಿ ನೋಡಿ ಕೊನೆಗೊಂದು ದಿನ ಅದು ಸಿಗದ ಊರಿಗೆ ಹೋದಾಗ ವಾಯು ಪ್ರಕೋಪಕ್ಕೆ ತುತ್ತಾದಾಗ ಗೊತ್ತಾಗುತ್ತದೆ ಗಂಜಿಯ ಮಹತ್ವ ಎಂತದು ಎಂದು. ನಮ್ಮ ಸ್ಥಿತಿಯೂ ಹೆಚ್ಚು ಕಮ್ಮಿ ಅದೇ ಅಗಿಬಿಡುತ್ತದೆ.
ದೇವಕಾನ ಮಾಸ್ಟ್ರು ಎಂದೇ ಚಿರ ಪರಿಚಿತರಾಗಿರುವ ಕೃಷ್ಣ ಭಟ್ಟರು,  ಅಧ್ಯಾಪನದೊಂದಿಗೆ ಯಕ್ಷಗಾನವನ್ನು  ಹವ್ಯಾಸವಾಗಿ  ತಮ್ಮ ದೇಹದ ರಕ್ತ ಕಣಗಳೊಂದಿಗೆ ಬೆರೆಸಿಬಿಟ್ಟವರು. ಶಾಲೆಯ ಚಿಣ್ಣರಿಗೆ ಉತ್ಸಾಹ ತುಂಬುತ್ತ ಉತ್ಸಾಹದಿಂದಲೇ ಯಕ್ಷಗಾನವನ್ನು ಕಲಿಸುತ್ತಾ,  ಪ್ರತಿವರ್ಷದ ನಮ್ಮ ಸ್ಕೂಲ್ ಡೇಗೆ ಒಂದು ಆಟವನ್ನು ಸಿದ್ದಪಡಿಸುವ ರೀತಿ ಈಗಲೂ ನೆನಪಾಗುತ್ತಿದೆ. ಅವಾಗೆಲ್ಲ ಮಕ್ಕಳ ಆಟದ ಜತೆಗೆ ಊರ ಕಲಾವಿದರ ಆಟ ಶಾಲಾ ವಾರ್ಷಿಕೋತ್ಸವದಲ್ಲಿ ಸರ್ವೇ ಸಾಮಾನ್ಯ. ಅದಕ್ಕೆ ಹಳೆ ವಿದ್ಯಾರ್ಥಿಗಳಿಂದ ಎಂಬ ಹೆಸರೂ ಬೇರೆ ಇರುತ್ತಿತ್ತು. ಅದೇನಿದ್ದರೂ ಎಲ್ಲದರಲ್ಲೂ ದೇವಕಾನದ ಹೆಸರು ಉಲ್ಲೇಖವಾಗದೇ ಇರುತ್ತಿರಲಿಲ್ಲ. ಈಗ ಹಿರಿಯ ಭಾಗವತರಾಗಿರುವ ತೆಂಕಬೈಲು, ಕುರಿಯ, ಉಪ್ಪಳ ಮಾಸ್ತರ್, ಚೇವಾರು ಕಮ್ತಿಯವರು,  ಪೂಕಳ ಲಕ್ಷ್ಮೀನಾರಯಣ ಭಟ್, ಕಟ್ಟದ ಮನೆ ಕೃಷ್ಣ ಭಟ್ ಹೀಗೆ ಹತ್ತು ಹಲವು ಊರ  ಕಲಾವಿದರ ಆಟ ಈಗಲೂ ನೆನಪಾಗುತ್ತದೆ.
 ದೇವಕಾನ ಮಾಸ್ತರಿಗೆ ಯಕ್ಷಗಾನದ ಹವ್ಯಾಸದಿಂದ ಜತೆಗೇ ಹುಟ್ಟಿಕೊಂಡ ಹೊಸ ಕ್ಷೇತ್ರ ವೇಷ ಭೂಷಣಗಳದ್ದು. ಮಾತ್ರವಲ್ಲ ಯಕ್ಷಗಾನಕ್ಕೆ ಸಂಬಂದಿಸಿ ಅತ್ಯಂತ ಮಹತ್ವದ ಹವ್ಯಾಸ. ಆವಾಗಿನ ಕಾಲದಲ್ಲಿ ವೇಷಭೂಷಣಗಳು ನಮ್ಮೂರಲ್ಲಿ ಲಭ್ಯವಾಗುವುದು ಬಹಳ ಕಷ್ಟಕರವಾಗಿತ್ತು. ಎಲ್ಲೆಲಿಂದಲೋ ತಂದು ಕಾರ್ಯಕ್ರಮವನ್ನು ಅದಕ್ಕೆ ಹೊಂದಿಕೊಂಡು ಅನುಸರಿಸುವ ಪರಿಸ್ಥಿತಿಯೂ ಇಲ್ಲದೇ ಇರುತ್ತಿರಲಿಲ್ಲ. ಹಾಗೇ ವೇಷಭೂಷಣಗಳಿಗಾಗಿ ಹುಟ್ಟಿಕೊಂಡದ್ದು ಶ್ರೀ ಗಣೇಶ ಕಲಾವೃಂದ ಪೈವಳಿಕೆ. ಇದು ಬಹಳ ಹಿಂದೆ ಹುಟ್ಟಿಕೊಂಡು ಆನಂತರ ಅಂದರೆ ಹತ್ತುವರ್ಷದ ಹಿಂದೆ  ಯಕ್ಷಗಾನದ  ಅಭ್ಯಾಸಕ್ಕಾಗಿ,  ಆಸಕ್ತರಿಗೆ ಕಲಿಸುವುದಕ್ಕಾಗಿ ರೂಪುಗೊಂಡ ಸಂಘ ಶ್ರೀ ಬೆನಕ ಯಕ್ಷ ಕಲಾವೃಂದ.
ನಮ್ಮೂರ ಸುತ್ತ ಮುತ್ತ ಈಗ ಹತ್ತು ಹಲವು ಮರಿ ಕಲಾವಿದರಿಂದ ತೊಡಗಿ ಹಿರಿಯ ಹವ್ಯಾಸಿಗಳ ವರೆಗೂ ಕಲಾವಿದರು ಇದ್ದರೆ ಅದಕ್ಕೆ ಕಾರಣ ದೇವಕಾನದ ಉಸಿರಾದ ಈ ಎರಡು ಸಂಘಗಳು. ನಮ್ಮ ಪೈವಳಿಕೆ ಗ್ರಾಮದ ಅತಿ ಕುಗ್ರಾಮವೆಂದು ಗುರುತಿಸಲ್ಪಡುವ ಊರು ದೇವಕಾನ. ನಾವು ಚಿಕ್ಕವರಿರುವಾಗ ವಿದ್ಯುತ್,  ವಾಹನ,  ಹೀಗೆ ಅಧುನಿಕ ಜಗತ್ತಿನ  ಯಾವುದೇ ಆಧುನಿಕ ಸೌಕರ್ಯವಿಲ್ಲದ ಅತ್ಯಂತ ತೀರ ಹಿಂದುಳಿದ ಪ್ರದೇಶ ಈ ದೇವಕಾನ. ಪೈವಳಿಕೆಯಿಂದ ಒಂದು ಗಂಟೆಯ ಕಾಲುನಡಿಗೆಯ ದೂರ, ಅಂತಹ ಕುಗ್ರಾಮ ಇಂದು ಯಕ್ಷಗಾನ ಲೋಕದಲ್ಲಿ ತನ್ನದೇ ಮನ್ನಣೆ ಸ್ಥಾನವನ್ನು ಗುರುತಿಸಿಕೊಂಡಿದೆ ಎಂದರೆ ಆಶ್ಚರ್ಯವಾಗುತ್ತದೆ.
 ಸಾಮಾನ್ಯವಾಗಿ ಕರಾವಳೀ ಪ್ರದೇಶದಲ್ಲಿ ಊರಿನ ಹೆಸರು ಗುರುತಿಸಲ್ಪಡಬೇಕಿದ್ದರೆ ಆ ಊರಲ್ಲಿ ಒಬ್ಬನಾದರೂ ಯಕ್ಷಗಾನ ಕಲಾವಿದ ಹುಟ್ಟಿ ಪ್ರಸಿದ್ದಿಗೆ ಬಂದರೆ, ಆಗ ಕಲಾವಿದನೊಂದಿಗೆ ಊರೂ ಗುರುತಿಸಲ್ಪಡುತ್ತದೆ. ಇದಕ್ಕ ನಮ್ಮೂರಲ್ಲಿ ಹೇರಳ ನಿದರ್ಶನ ಸಿಗುತ್ತದೆ. ಹಾಗೆನೇ,  ಈ ದೇವಕಾನ ಇಂದು ಯಕ್ಷಗಾನ ಸಾರಸ್ವತ ಲೋಕದಲ್ಲಿ ಒಂದು ಅವಿಭಾಜ್ಯ ಹೆಸರಾಗಿ ಗುರುತಿಸಲ್ಪಟ್ಟು ಅವಿನಾಭಾವ ಸಂಬಂಧದೊಂದಿಗೆ ಬೆಳೆದು ಬಂದಿದೆ. ಇದು ಕೇವಲ ದೇವಕಾನಕ್ಕೆ ಸೀಮಿತವಾಗಿರಿಸದೇ ಇಡೀ ಪೈವಳಿಕೆಯನ್ನು ಈ ಬಗೆಯಲ್ಲಿ ಗುರುತಿಸುವಂತೆ ಅದದ್ದು ದೇವಕಾನದವರ ಸಾಧನೆ. ಹಿತ್ತಲ ಬಳ್ಳಿ ಹಿತ್ತಲು ತುಂಬ ಹರಡಿ ಸಮೀಪದ ಬೇಲಿ ದಾಟಿ ಫಲ ಕೊಡುವುದಕ್ಕೆ ಆರಂಭಿಸಿ ಬಹುಶಃ ಕಾಲ ಹಲವು ಸಂದಿತು.
ಯಕ್ಷಗಾನದ ರಂಗಸ್ಥಳದಿಂದ ಹೊರತಾದ ಕಾರ್ಯಗಳು ಸಹ ಬಹಳ ಜವಾಬ್ದಾರಿಯುತವಾದದ್ದು  ಎಂದು ಇವರ ಚೌಕಿಯ ಸಿದ್ದತೆಯನ್ನು  ನೋಡಿ ಅನಿಸುತ್ತದೆ. ರಂಗದ ಮೇಲೆ ಕಲೆ ಹೂವಾಗಿ ಅರಳಿದರೆ ಅದಕ್ಕೆ ಪೋಷಣೆ ಹಿನ್ನೆಲೆಯಿಂದಲೇ ಆಗಬೇಕು.  ಯಕ್ಷಗಾನ ತರಗತಿಯಲ್ಲಿ ಮುಂದಿನ ತಲೆಮಾರು ಸಿದ್ದಗೊಂಡರೆ ರಂಗಸಜ್ಜಿಕೆ ಮತ್ತು ವೇಷಭೂಷಣಗಳು ಕಲೆಯ ಮತ್ತೊಂದು ಪ್ರಧಾನ ಅಂಶ. ಇಲ್ಲಿನ ವೇಷಭೂಷಣಗಳು ಯಕ್ಷಗಾನದ ಸೊಗಸಿಗೆ ಮತ್ತು ಆವಶ್ಯಕತೆಗೆ ತಕ್ಕಂತೆ ಗಾಢವಾದ ಬಣ್ಣ ಮತ್ತು ಹೊಳಪುವಿಕೆಯಿಂದ ಕೂಡಿದ್ದು “ದೇವಕಾನದ ಡ್ರೆಸ್ಸು” ಎಂದಾಗ ಉತ್ಕೃಷ್ಟತೆಯ ವೈಶಿಷ್ಟ್ಯವನ್ನೇ ಸಾರುತ್ತದೆ. ಪ್ರತೀ ಯೊಂದರ ಅಚ್ಚುಕಟ್ಟುತನ ರಂಗದ ಹಿಂದೆ ಮತ್ತು ರಂಗದ ಮೇಲೆ ತನ್ನದೇ ಪ್ರಭಾವವನ್ನು ಬೀರುತ್ತದೆ. ಹಾಗಾಗಿ ಇಲ್ಲಿನ ಯಕ್ಷಗಾನದ ವೇಷಭೂಷಣಗಳು ಮಾದರಿ ಎನಿಸಲ್ಪಟ್ಟಿದೆ. ಯಕ್ಷಗಾನದ ಕಿರೀಟ ಆಭರಣ ವಸ್ತ್ರವಿನ್ಯಾಸ ಇವುಗಳ ತಯಾರಿಯಲ್ಲಿ ಮತ್ತು ಅವುಗಳ ನಿರ್ವಹಣೆಯ ಪ್ರತಿಹಂತದಲ್ಲೂ ಮುತುವರ್ಜಿಯಿದೆ. ಹಲವು ಸಂಘ ಸಂಸ್ಥೆಗಳಿಗೆ ಕಿರೀಟವೇ ಮೊದಲಾದ ಯಕ್ಷಗಾನ ವಸ್ತ್ರಾಭರಣಗಳನ್ನು ಸ್ವತಃ ಇಲ್ಲೇ ಸಿದ್ದ ಪಡಿಸಿ ಒದಗಿಸುತ್ತಾರೆ.
  ಬಯಲಾಟಕ್ಕೆ ಚೌಕಿಯನ್ನು ಸಿದ್ದಪಡಿಸುವಾಗ ವೇದಿಕೆಯ ಹಿಂಭಾಗದಲ್ಲಿ ಒಂದು ಬೆಂಚನ್ನು ಇಟ್ಟಿರುತ್ತಾರೆ. ವೇಷತೊಟ್ಟನಂತರ ವೇಷಧಾರಿಗೆಳು  ರಂಗ ಪ್ರವೇಶದವರೆಗೆ ಇಲ್ಲಿಯೇ ಕುಳಿತುಕೊಳ್ಳಬೇಕು. ಸಿಕ್ಕ ಸಿಕ್ಕಲ್ಲಿ ಕುಳಿತರೆ ಮಾಸ್ತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.  ಇಂತಹ ಹಲವು ಸೂಕ್ಷ್ಮ ವಿಚಾರಗಳನ್ನು ಸ್ವತಃ ಕಲಾವಿದರಾದ ಅನುಭವದಲ್ಲಿ  ಬಳಕೆತಂದು ಯಕ್ಷಗಾನದ ಬಗೆಗಿನ ತಮ್ಮ ಕಾಳಜಿಯನ್ನು ತೋರಿದ್ದಾರೆ. ಇಲ್ಲಿನ ವೇಷಭೂಷಣಗಳೆಂದರೆ ಎಲ್ಲ ಕಲಾವಿದರಿಗೂ ಹಿತವಾದ ಅನುಭವವನ್ನು ನೀಡುತ್ತದೆ. ತಲೆಗೆ ಹೊಂದುವಂತೆ ಕೂರುವ ಕಿರೀಟ  ಮತ್ತು ಕೇಶ ವಿನ್ಯಾಸಗಳು ದೇಹಕ್ಕೆ ಹಿತವಾಗಿ ಹೊಂದಿಕೊಳ್ಳುವ ವಸ್ತ್ರಗಳು ಪ್ರತಿಯೋಂದು ಯಕ್ಷಗಾನದ ಸೊಬಗನ್ನು ಸಾರುತ್ತವೆ.
ಇಂದು ಯಕ್ಷಗಾನ ಕ್ಷೇತ್ರದಲ್ಲಿ ಪೈವಳಿಕೆಯ ಹೆಸರು ಕೇಳಿಬರುತ್ತಿದ್ದರೆ ಅದಕ್ಕೆ “ಗಣೇಶ ಕಲಾವೃಂದ ಪೈವಳಿಕೆ” ತನ್ನದೆ ಆದ ಕೊಡುಗೆಯನ್ನು ನೀಡಿದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಅಭಿಮಾನದ ದೇವಕಾನ ಮಾಸ್ಟ್ರು ಈ ಬಗೆಯಲ್ಲಿ ಯಕ್ಷಗಾನದ ಬಳ್ಳಿಯಲ್ಲಿ ಹೂವನ್ನು ಅರಳಿಸಿ ಆ ಕಂಪು ಎಲ್ಲೆಡೆ ಪಸರಿಸುವಂತೆ ಮಾಡಿಬಿಟ್ಟಿದ್ದಾರೆ. ದೇವಕಾನವನ್ನು ಇಂದು ಯಕ್ಷರಂಗದ ಚೌಕಿಯನ್ನಾಗಿಸಿ ಯಕ್ಷಗಾನದಲ್ಲಿ ಚೌಕಿಯ ಮಹತ್ವ ಏನಿದೆ ಎಂದು ತಿಳಿಸಿಕೊಟ್ಟಿದ್ದಾರೆ.     ಯಕ್ಷಗಾನದ ಅಭಿಮಾನಿಗಳ ಹೃದಯದ ಅಂಗೀಕಾರ ಬಹಳಷ್ಟುಗಳಿಸಿದರೂ,  ಸಿಗಬೇಗಾದ ಪ್ರಶಸ್ತಿಯ ಗರಿಮೆಯಾಗಲೀ ಆ ಮೂಲಕ ಇವರ ಕಾರ್ಯವನ್ನು ಗುರುತಿಸುವ ಪ್ರಯತ್ನ ಆಗಲಿಲ್ಲ ಎಂದೇ ನನ್ನ ಅನಿಸಿಕೆ. ಆದರೂ ಅದಾವುದನ್ನು ಎದುರು ನೋಡದ ಇವರು ಚೌಕಿಯ ಒಳಗಿನ ಸಾಮ್ರಾಜ್ಯದಲ್ಲಿ ಮಹಾರಾಜನಾಗಿ ಭಲ್ಲಿರೇನಯ್ಯ... ಎಂಬ ಪ್ರಶ್ನೆಗೆ  ಉತ್ತರವಾಗಿಬಿಡುತ್ತಾರೆ.



Tuesday, September 4, 2012

ಸ್ಥಿತ್ಯಂತರ ಭಾಗ - ೨



ಭಾಗ ೧ ರಿಂದ ಮುಂದುವರೆಸಿ
ಪದವಿಲ್ಲದೇ ಅರ್ಥ ಹೇಳಿದಂತೆ ಮಾತಿನ ಮಲ್ಲ...ಮಾತೇ ಇಲ್ಲ ಎಂಬಂತಾಗಿಬಿಟ್ಟಿತು. ಹಳೆಯ ಜೀವನ ಚರಿತ್ರೆ ಪುಟಗಳು  ಧೂಳು ಕೊಡವಿಕೊಂಡು ಅಕ್ಷರಗಳು ಸ್ಪುಟವಾಗಿ ಗೋಚರಿಸತೊಡಗಿದವು. ಹೌದು, ಸುಮಂಗಲ ಒಂದು ಕಾಲದ ರೋಮಾಂಚನ ತುಂಬುವ ಅಕ್ಷರಗಳು ಈಗ ಆ ರೋಮಾಂಚನವನ್ನು ನೆನಪಿಗೆ ತಂದವು. .ಸ್ನಾನ ಮಾಡಿ ಒದ್ದೆ ಕೂದಲಿಗೆ ಬಿಳಿ ಬೈರಾಸನ್ನು ಬಿಗಿಯಾಗಿ ಕಟ್ಟಿ ಶುಭ್ರ ಮುಖದಲ್ಲಿ ಪ್ರಸನ್ನ ಭಾವದಿಂದ ಅಚ್ಹರಿಯ ಕಣ್ಣುಗಳಿಂದ ತನ್ನನ್ನೇ ನೋಡುತ್ತಿದ್ದಾಳೆ..ಫಳ ಫಳ ಹೊಳೆಯುವ ಕಣ್ಣಿನ ಹೊಳಪು  ಇನ್ನೂ ಹಾಗೆ ಇದೇ ..ಹೊಳಪಲ್ಲೂ ಸೂರ್ಯಕಿರಣಗಳು ಮಿಂಚುತ್ತಿವೆಯೇ? ತೇವಗೊಂಡ ಕಣ್ಣುಗಳ ತೇವ ಇನ್ನೂ ಆರಿಲ್ಲವೇ? ಎಲ್ಲವೂ ಕ್ಷಣ ಚಿತ್ತದ ಭಾವಗಳು. ಆದರೆ  ಈಗ ಆ ಮನೋಭಾವದ ಕಿಂಚಿತ್ ಆದರೂ ಮುಖದಲ್ಲಿ ವ್ಯಕ್ತವಾದರೆ ಅಸಭ್ಯ ಎನಿಸಲಾರದೆ? ಯಾವ ವಿಪರೀತ  ಕಲ್ಪನೆಯೂ ಇಲ್ಲದ ಒಂದು ಸಾಮಾನ್ಯ ಭಾವ...ಸಂಸ್ಕೃತರಿಗೆ ಮಾತ್ರ ಸಾಧುವೇನೋ?  ಹಾಗಾಗಿ  ಪರಿಚಯದ ನಗೆ ನಕ್ಕು  ಪಡಸಾಲೆಯ ಕುರ್ಚಿಯಲ್ಲಿ ಕುಳತುಕೊಳ್ಳಲು ಅಣಿಯಾದಾಗ ಇಲ್ಲಿ ಬೇಡ ಒಳಗೆ ಬನ್ನಿ ಎಂದು ಅತ್ಮೀಯ ಭಾವದಿಂದ ಒಳಗೆ ಕರೆದ ಸುಮಂಗಲಳನ್ನು ಹಿಂಬಾಲಿಸಿ  ಮನೆಯ ಒಳಗೆ ನಡೆದರು. ಅದು ಹೌದು ಭಾವಗಳು ಸಂಸ್ಕಾರದ ಅಚ್ಚಿನಲ್ಲಿ ಎರಕ ಹೊಯ್ಯಲ್ಪಡುತ್ತವೆ. ಅಸಹಜವೇ ಸಹಜವಾಗಿರುವ ಸಂಸ್ಕಾರವೇ ಇದಕ್ಕೆ ನಿದರ್ಶನ. ಬಹಿರಂಗವಾಗುವ ಭಾವ ಹೇಗೆ ಸಂಸ್ಕಾರವನ್ನು ಅವಲಂಭಿಸದೇಯೋ ಅಂತರಂಗದ ಭಾವವೂ ಅದನ್ನೆ ಅವಲಂಬಿಸಿದೆ. ಕೆಲವೆಲ್ಲ ಕಲ್ಪಿಸುವುದೂ ಅಪರಾಧ ಎಂದು ಅನಿಸುತ್ತದೆ.  ತಾಯಿಯಲ್ಲಿ ಕಲ್ಪಿಸಲಾಗದೇ ಇದ್ದದ್ದನ್ನು ಸಹಧರ್ಮಿಣಿಯಲ್ಲಿ ಕಲ್ಪಿಸಿದ ಹಾಗೆ. ಮನಸ್ಸನ್ನು ರೂಪಿಸುವ ಸಂಸ್ಕಾರದ ನಿಯಂತ್ರಣ ವಿಚಿತ್ರ ಎನಿಸಲ್ಪಡುತ್ತದೆ. ನಿತ್ಯವೂ ರಾತ್ರಿಯಾಗುತ್ತಿದ್ದಂತೆ ನಶೆ ಏರಿಸುತ್ತಿದ್ದ ತಮ್ಮ ಸಹವರ್ತಿಗೆ ಒಂದು ಸಲ ಉಪದೇಶ ಮಾಡಿ ಹೇಳಿದ್ದು ವಿಚಿತ್ರ ಆದರೂ ಪರಿಣಾಮಕಾರಿಯಾಗಿತ್ತು. ಸಾಯಂಕಾಲದ ಹೊತ್ತು ಸ್ನಾನ ಮಾಡಿ ಶುಚಿಯಾಗಿ .ಬಿಳಿ ಪಂಚೆಯನ್ನು ಧರಿಸು.... ಸ್ನಾನ ಮಾಡಿ ಶುಚಿಯಾದ ದೇಹ ಮನಸ್ಸಿಗೆ ಮುದವನ್ನು ನೀಡಿದರೆ ಆ ಮುದವನ್ನು ಬಿಳಿ ವಸ್ತ್ರ ಕಾಪಿಡುತ್ತದೆ. ಮಾತ್ರವಲ್ಲ ಬಿಳಿ ವಸ್ತ್ರ ಉಟ್ಟು ಹೆಂಡದಂಗಡಿ ಹೊಕ್ಕುವುದು ಅಸಹಜವೆನ್ನಿಸುತ್ತದೆ. ಅಥವ ಶುಭ್ರವಾದ ನಂತರ ತೂರಾಡುವುದು ಒಂದು ರೀತಿಯಲ್ಲಿ ಕಿರಿ ಕಿರಿಯೇ ಅನ್ನಿಸಿಬಿಡುತ್ತದೆ. ಶುಭ್ರವಾಗಿ ಆದ ಮುದವಾದ ಅನುಭವ ಮತ್ತೆ ಬಿಳಿವಸ್ತ್ರ ಅದರಿಂದ ಹೊರ ಬಾರದ ಇಕ್ಕಟ್ಟಿಗೆ ತಂದು ಸಿಲುಕಿಸುತ್ತದೆ. ಈ ದ್ವಂದ್ವದಲ್ಲಿ ಆ ಸಮಯ ಕಳೆಯುತ್ತದೆ... ಮತ್ತೆ ಬೇರೆ ಇನ್ನೆನಾಗಬೇಕು ಸಂಸ್ಕಾರ ರೂಪುಗೊಳ್ಳುವ ಬಗೆ ಅದು.
          ಛೇ ಘಳಿಗೆಯೊಳಗೆ ಮನಸ್ಸು ಯಾವೆಲ್ಲ ಯೋಚನೆ ಮಾಡಿತಲ್ಲ. ಅಷ್ಟರಲ್ಲಾಗಲೇ ಒಳಗೆ ಬಂದಾಗಿತ್ತು. ಬಹುಷಃ  ತೀರ ಆತ್ಮೀಯ ಬಂಧುಗಳಿಗೆ ಮಾತ್ರ ಅಂತರಂಗದ ಗೃಹದ ಒಳಗೆ ಪ್ರವೇಶ.  ಈಚಣ್ಣ ಬಂಧು ಎಂಬ ಅಂಗೀಕಾರವೇ? ಈಚಣ್ಣನಿಗೆ ಹಾಗೆ ಅಂದುಕೊಳ್ಳುವುದಕ್ಕೆ ಕಾರಣವಿತ್ತಲ್ಲ?

          ಆಗಿನ್ನು ಹದಿ ಹರಯವನ್ನು ಮೀರಿದ ವಯಸ್ಸು. ಶಾಲೆಯಲ್ಲಿದ್ದಾಗಲೇ ಸಾಕಷ್ಟು ಯಕ್ಷಗಾನ ತರಬೇತಿಯಾಗಿದ್ದ ತಾನು ಬಾಲಕರಲ್ಲಾಗಲೇ ಪ್ರಸಿದ್ದ ಕಲಾವಿದನಂತಾಗಿದ್ದದ್ದು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತನ್ನ ಅಂಗ ಪ್ರಾಧಾನ್ಯತೆಯನ್ನು ಪಡೆದದ್ದು.... ನೆರೆಕೆರೆ, ನಿತ್ಯ ಪರಿಚಿತರಂತಹ ಮನೆಯಿಂದ ತಾನು ಮತ್ತು ಸುಮಂಗಲ ಒಂದೇ ಹಾದಿಯಲ್ಲಿ ಶಾಲೆಯ ಹಾದಿಯಲ್ಲಿ ಪಯಣಿಗರಾಗಿ ಅದು ಹೇಗೋ ಆತ್ಮೀಯತೆ,  ಸಲುಗೆ ಬೆಳೆದದ್ದು. ಅಷ್ಟಿಷ್ಟು ಯಕ್ಷಗಾನದ ಅಭಿರುಚಿ ಆಕೆಯಲ್ಲಿ ತರಿಸಿ ಆಕೆಗೆ ಪ್ರಾಥಮಿಕ ಗುರುವಾದದ್ದು, ಅದು ಬಾಲ್ಯದ ದಿನಗಳಾದರೂ ಅದಕ್ಕೂ ಒಂದು ಅರ್ಥವಿದೆ ಎಂದು ಹಲವು ಸಲ ಅನ್ನಿಸಿದ್ದಿದೆ. ಅವಾಗ ಅಲ್ಲದಿದ್ದರೂ ಹದಿ ಹರಯ ದಾಟಿದ ನಂತರ ವಯೋಸಹಜವಾಗಿ ಆತ್ಮೀಯತೆ ಸಲುಗೆಯ ರೂಪವೇ ಬದಲಾಗಿ ಹೋದದ್ದು ಎಲ್ಲ ನಿಮಿತ್ತದಂತೆ ಆಗ ಅನಿಸಿತ್ತು.

          ಹೈಸ್ಕೂಲು ಮುಗಿಸಿ ಆಕೆ ಮುಂದಿನ ಶಿಕ್ಷಣಕ್ಕೆ ಇನ್ನೂ ಪ್ರೌಢೆಯಾಗಿ ಕಾಲೇಜು ಹೋಗ ತೊಡಗಿದರೂ ತಾನು ಹೈಸ್ಕೂಲು ಫೇಲ್ ಆಗಿ.. ಮುಂದೆ ಯಕ್ಷಗಾನವನ್ನೇ ಗಟ್ಟಿ ಮಾಡಿಕೊಂಡದ್ದು ಬಾಲ್ಯದ ಕನಸುಗಳೆಲ್ಲ ಯಕ್ಷಗಾನದ ವೇಷಗಳಂತೆ ಭಾಸವಾಗತೊಡಗಿತು. ಹೌದಲ್ಲ? ತಮ್ಮ ನಡುವಿನ ಪ್ರೀತಿಯಲ್ಲಿ ಅರ್ಥವಿತ್ತು.. ಆದರೆ ತನ್ನ ಜೇಬು ಎಂದೂ ಅರ್ಥವಿಲ್ಲದೇ ಜೀವನ ಅರ್ಥವನ್ನು ಮನವರಿಕೆ ಮಾಡಿಸುತ್ತಿತ್ತು. ಯಕ್ಷಗಾನದಲ್ಲಿ ಸಹಜವಾಗಿ ಒಂದೊಂದಾಗಿ ಸಿದ್ಧಿ ಸಾಧನೆಗಳು ರಂಗಸ್ಥಳದ ಒಡ್ಡೋಲಗದಂತೆ ಕಳೆ ಕಟ್ಟತೊಡಗಿದರೂ. ಭಲ್ಲಿರೇನಯ್ಯಾ ಎಂದು ತೊಡಗಿಸುವ ಮಾತು ನಿಜ ಜೀವನದಲ್ಲಿ ಅರ್ಥವನ್ನೇ ತರಲಿಲ್ಲ. ಯಕ್ಷಗಾನದಲ್ಲೂ ಹಾಗೆ ಕೆಲವು ಪದಗಳಿಗೆ ಅರ್ಥವೇ ಇಲ್ಲ!! ಅರ್ಥ ಎಂದರೆ ಅಲ್ಲಿ ಅರ್ಥ ಹೇಳುವುದಕ್ಕಿಲ್ಲ. ಸಂದರ್ಭೋತವಾಗಿ ಪದವನ್ನು  ಮಾತ್ರ ಭಾಗವತರು ಹಾಡಿ ಮುಂದಿನ ಹಂತಕ್ಕೆ ದಾಟಿಸುತ್ತಾರೆ.  ಒಂದು ವೇಳೆ ಅರ್ಥವನ್ನು ಹೇಳಿದರೂ ಅದು ಅಭಾಸವಾಗಿಬಿಡುತ್ತದೆ. ಅರ್ಥವೇ ಅರ್ಥವನ್ನು ಕಳೆದುಕೊಳ್ಳುತ್ತದಲ್ಲ ಎಂದು ಸಲ ವಿಡಂಬನೆಯಿಂದ ಸಂವಾದಿಸಿದ್ದು ಉಂಟು. ಆದರೆ ಅರ್ಥವಿಲ್ಲದ ಪದಗಳು ಅರ್ಥವಿಲ್ಲದೇ ಸಂದರ್ಭಕ್ಕೆ ಮತ್ತು ಕಥೆಗೆ ಅರ್ಥವನ್ನು ಕೊಡುತ್ತಿತ್ತು. ಅಲ್ಲಿ ಶೂನ್ಯಾರ್ಥವಾಗಿ ಅರ್ಥವನ್ನು ಕೊಡುತ್ತಿದ್ದದ್ದು ನಿಜ ಜೀವನದಲ್ಲಿ ಮಾತ್ರ ವಿಪರ್ಯಾಸವನ್ನೇ ಬಿಂಬಿಸತೊಡಗಿತ್ತು. ಕ್   ಕೈಯಲ್ಲಿ ಅರ್ಥವಿಲ್ಲದಿದ್ದರೂ ಅರ್ಥಪೂರ್ಣ ಪ್ರೀತಿಗೆ ಕೊರತೆ ಇರಲಿಲ್ಲ. ಆದರೂ ಇಲ್ಲಿ ಇದ್ದ ಶೂನ್ಯಾರ್ಥ ಮತ್ತೂ ಶೂನ್ಯತೆಯನ್ನೇ ಬಿಂಬಿಸುವುದು ವಿಪರ್ಯಾಸವಲ್ಲವೇ.?
  ಬಹುಶಃ ಪ್ರೀತಿ ಗಾಢವಾಗುವುದು ಅಂತಹ ಸಂದಿಗ್ಧಾವಸ್ಥೆಯಲ್ಲೇ ಇರಬೇಕು. ಅನನುಕೂಲ,  ಪ್ರತಿಕೂಲ , ಪ್ರತಿರೋಧ ಇದ್ದಾಗಲೇ ನಮ್ಮೊಳಗಿನ ಕಥಾ ನಾಯಕತ್ವ ಆವೇಶಗೊಳ್ಳುವುದು. ಪ್ರತಿಯೊಬ್ಬರೂ ಅವರವರ ಬದುಕಿನ ಕಥೆಗೆ ಅವರೇ ನಾಯಕನೋ ನಾಯಕಿಯೋ ಆಗಿರುತ್ತಾರಲ್ಲ?  ಅತ್ಯಂತ ಉತ್ಕಟವಾದ ಪ್ರೇಮಾಚರಣೆಯಲ್ಲಿ ನಾವುಗಳು ಒಂದಾಗಿದ್ದೇವೆ ಭ್ರಮೆ ಆವರಿಸಿಕೊಳ್ಳುವುದು. ಎಲ್ಲ ವಯೋಸಹಜವಾದ ಮೌಢ್ಯ ಎಂದು ಈಗ, ಇಷ್ಟು ದೂರ ಸಾಗಿ ಬಂದ ಮೇಲೆ ಅನ್ನಿಸುವುದಿದೆ. ಹಸಿವೆಯಲ್ಲೋ, ಹೊಟ್ಟೆತುಂಬಿಯೋ ದುಃಖದಲ್ಲೋ ಸಂತಸದಲ್ಲೋ ಅಂತು ದಿನದ ಪ್ರತಿ ಘಳಿಗೆಯೂ ಸ್ವಲ್ಪ ಸ್ವಲ್ಪವಾಗಿ ಕಳೆದು ಹೋಗುತ್ತಿರುವಾಗ ಇರುವಾಗ ಆನುಭವಿಸುವ ವರ್ತಮಾನದ ಸಮಯದ ಮೌಲ್ಯ ಅರಿವಾಗುವುದಿಲ್ಲ. ಇದ್ದ ಸ್ಥಿತಿಯೇ ಸ್ಥಾಯೀಭಾವವಾಗಿಬಿಡುತ್ತದೆ.

          ಹೌದಲ್ಲ..?  ತಾನು ಚಿಂತಿಸುವಾಗಲೂ ಯಕ್ಷಗಾನದ ಪಾತ್ರವಾಗುತ್ತಿದೇನೆಯೇ? ಮನದೊಳಗೇ ನಕ್ಕರು ಈಚಣ್ಣ.   ಆದರೆ ತನ್ನ ಪ್ರೇಮ ಸಂಪೂರ್ಣವಾಗಿ ಅರ್ಥವನ್ನು ಕಳೆದುಕೊಂಡದ್ದು ತಾನೊಬ್ಬ ಯಕ್ಷಗಾನ ಕಲಾವಿದನಾಗಿ ರೂಪುಗೊಂಡ ಕಾರಣ, ಆಟದವನಿಗೆ ಕೂಸನ್ನು ಕೊಡಲಾರೆ ಎಂದು ಸುಮಂಗಲಳ ಅಪ್ಪ ಛಲತೊಟ್ಟಾಗ ಬಹಳಷ್ಟು ಭ್ರಮನಿರಸನ ಗೊಂಡಿದ್ದರು. ಆವರೆಗೆ ತಪಸ್ಸು ಎಂದು ತಿಳಿದ ಯಕ್ಷಗಾನದ ಹಾದಿಯೂ ವೈಫಲ್ಯದ ದರ್ಶನವನ್ನೇ ಮಾಡಿಸಿತಲ್ಲ? ಯಕ್ಷಗಾನದ ವೇಷ ಭೂಷಣಗಳು ಕಳಚಿ ಬಿಚ್ಚಿಟ್ಟರು ಮತ್ತೂ ಅದು ಮತ್ತೊಂದು ರೂಪದಲ್ಲಿ  ಮೈಗೆ ಅಂಟಿಕೊಂಡು ಅಣಕಿಸಿದಂತೆ ಭಾಸವಾಗಿತ್ತು. ರಂಗಸ್ಥಳದಿಂದ ದೂರವಾದಾಗ ಬಣ್ಣ ಕಳೆದುಕೊಂಡ ವೇಷದಂತೆ, ವಜ್ರ ವೈಢೂರ್ಯ ಅಭರಣಗಳು ಹೊಳಪನ್ನು ಕಳೆದುಕೊಂಡಂತೆ ಬದುಕೂ ವೇಷ ಕಳಚಿ ನಿಂತು ಬಿಟ್ಟಿತಲ್ಲ. ಸಂಸಾರಿಕ ಬದುಕಿಗೆ ಆಟದವನು ಸಲ್ಲುವುದಿಲ್ಲವೇ?  ವೇಷವೇ ಇಲ್ಲ ಪಾತ್ರೆವೇ ಇಲ್ಲ. ಬರೀ ಆಟದ ನೋಟಿಸಿನಲ್ಲಿ ಮುದ್ರಿಸಿದ ಹೆಸರು ಮಾತ್ರವೇ ಆಗಿಹೋಯಿತು. ಸುಮಂಗಲ ಅನ್ಯರಿಗೆ ಮಂಗಲವಾಗಿ ಪರಿಣಮಿಸಿ ಅರ್ಥಹೀನತೆಯೇ ಬದುಕಿನ ಅರ್ಥ ಎಂದು ತೋರಿಕೊಟ್ಟ ಮೇಲೆ  ವಿಶ್ವಾಮಿತ್ರ ತಪಸ್ಸಿಗೆ ಕುಳಿತಂತೆ ಈಚಣ್ಣ ಸ್ತಿತ ಪ್ರಜ್ಞರಾಗಿರಾಗಿಬಿಟ್ಟರು. 
 (ಕ್ಷಮಿಸಿ... ಇನ್ನೂ ಇದೆ)