“ರಾಮನ ವ್ಯಕ್ತಿತ್ವ
ದರ್ಶನಕ್ಕೆ ಮೂಲ ಕಾರಣ ರಾವಣ. ರಾಮನ ವ್ಯಕ್ತಿತ್ವ ಅದು ಹೀಗೆ. ಅದೊಂದು ಪರಿಪೂರ್ಣ. ಆದರೆ ಆ
ಪರಿಪೂರ್ಣತೆ ಅರಿವಾಗಬೇಕಾದರೆ ಅದು ರಾವಣ ವ್ಯಕ್ತಿತ್ವದೊಂದಿಗೆ ಘರ್ಷಿಸಬೇಕು. ರಾಮ ರಾವಣರ ಸಂಘರ್ಷಣೆಯ ಮೂಲ ಉದ್ದೇಶವೇ
ರಾಮದರ್ಶನ”
“ ಪುರಾಣದಲ್ಲಿ ರಾಮನ ವ್ಯಕ್ತಿತ್ವವಾಗಲಿ ಕೃಷ್ಣನ ವ್ಯಕ್ತಿತ್ವವಾಗಲಿ
ಅದಕ್ಕೆ ಟಿಪ್ಪಣಿ ವಿವರಣೆಯ ಅಗತ್ಯ ಬೇಡ. ರಾಮನ ವ್ಯಕ್ತಿತ್ವ ಕೃಷ್ಣನ ವ್ಯಕ್ತಿತ್ವ ಜನ
ಮಾನಸದಲ್ಲಿ ಅಚ್ಚೊತ್ತಿರುವಾಗ ಅದರ ಬಗ್ಗೆ ಹೆಚ್ಚು ವಿವರಣೆಯ ಅಗತ್ಯವಿರುವುದಿಲ್ಲ. ಆದರೆ ಇದಕ್ಕೆ
ಪ್ರತಿಯಾದ ರಾವಣನ ಪಾತ್ರ ಅಥವಾ ಕೌರವನ ಪಾತ್ರಗಳ ಬಗ್ಗೆ ಅರಿವಿಲ್ಲದಿದ್ದರೆ ರಾಮ ಕೃಷ್ಣ ರ
ವ್ಯಕ್ತಿತ್ವ ಬೀರಬೇಕಾದ ಪ್ರಭಾವವನ್ನು ಬೀರುವುದೇ ಇಲ್ಲ.”
“ ಒಬ್ಬ ಪಳಗಿದ ಚಿತ್ರಕಾರ
ಚಿತ್ರದ ಬಗ್ಗೆ ಚಿಂತಿಸುವಷ್ಟೇ ಚಿತ್ರದ ಹಿನ್ನೆಲೆಯಬಗ್ಗೆ ಚಿಂತಿಸುತ್ತಾನೆ. ಆ ಚಿತ್ರ ಎದ್ದು
ಕಾಣಬೇಕಾದರೆ ಚಿತ್ರದ ಹಿನ್ನೆಲೆ ಬಹಳ ಪ್ರಾಮುಖ್ಯವಾಗಿರುತ್ತದೆ. ಅದರಂತೆ ರಾಮನ ವ್ಯಕ್ತಿತ್ವ. ಆ
ವ್ಯಕ್ತಿತ್ವ ದರ್ಶನವಾಗಬೇಕಾದರೆ ಅದಕ್ಕೊಂದು ಹಿನ್ನೆಲೆಯ ವ್ಯಕ್ತಿತ್ವ ಬೇಕಲ್ಲ. ಅದು ರಾವಣನ
ವ್ಯಕ್ತಿತ್ವ”
“ ಹಿನ್ನೆಲೆಯಲ್ಲಿ ಕಪ್ಪು
ಇದ್ದಾಗಲೇ ಬಿಳಿ ಚಿತ್ರ ಗೋಚರಕ್ಕೆ ಬಂದು ಗಾಢವಾದ ಪ್ರಭಾವವನ್ನು ಬೀರುತ್ತದೆ. ಇಲ್ಲವಾದರೆ
ಅದೊಂದು ಎಲ್ಲ ಬಣ್ಣದಂತೆ ಒಂದು ಬಣ್ಣವಾಗಿ ಕಾಣುತ್ತದೆ. ಆಕಾಶ ಕಪ್ಪಾಗಿದ್ದಾಲೇ ನಕ್ಷತ್ರ
ದರ್ಶನವಾಗುವುದು.”
ಖಳ ಪಾತ್ರಗಳಿಗೆ
ಒಂದು ರೂಪವನ್ನು ಕೊಟ್ಟಂತಹ ಶೇಣಿಯವರ ಪ್ರತಿಪಾದನೆಗಳಿವು. ಹಲವು ಸಲ ಪ್ರಶ್ನೆಗಳು ವಿಮರ್ಶೆಗಳು
ಎದುರಾದದ್ದು ಉಂಟು. ರಾವಣ ಪಾತ್ರ ವೈಭವೀ ಕರಿಸುವಾಗ ರಾಮನ ಪಾತ್ರ ಗೆಲ್ಲುವುದಿಲ್ಲ.
ಮೇಲ್ನೋಟಕ್ಕೆ ಇದು ಸರಿಯಾಗಿರಬಹುದು ಎಂದು ಕಂಡರೂ ಖಳ ವ್ಯಕ್ತಿತ್ವಗಳು ಬೆಳಗುವಾಗ ಪರೋಕ್ಷವಾಗಿ
ಪ್ರತಿಸ್ಪರ್ಧಿಯ ಪ್ರಭೆಯನ್ನು ಬೆಳಗಿಸುತ್ತವೆ. ಖಳ ಪಾತ್ರಗಳ ವ್ಯಕ್ತಿತ್ವವನ್ನು ಪರಿಚಯಿಸಿ ಆ
ಮೂಲಕ ಹೊಸ ಹಾದಿಯನ್ನು ತೋರಿಕೊಟ್ಟವರು ಶೇಣಿಯವರು. ಇವುಗಳ ವಿಭವಗಳನ್ನು ತೋರುತ್ತ ಆ ಪಾತ್ರದ ನಿರ್ವಹಣೆಗೂ ಒಂದು ಮಾನದಂಡವನ್ನು ತಂದು
ಕೊಟ್ಟವರು. ಆನಂತರ ಇವುಗಳ ನಿರೂಪಣೆಗಳು
ಪ್ರಾಯೋಗಿಕವಾಗಿ ಹಲವು ರೀತಿಯಲ್ಲಿ ಪ್ರಸ್ತುತ ಪಡಿಸಲ್ಪಟ್ಟಿತು. ಆದರೆ ಈಗೀಗ ಖಳ ಪಾತ್ರಗಳಷ್ಟೇ
ವೈಭವೀಕರಿಸಲ್ಪಡುತ್ತಾ ಪ್ರತಿಸ್ಪರ್ಧಿಯನ್ನು ಸೋಲಿಸುವುದಷ್ಟೇ ಗುರಿಯಾಗಿಸಿವೇ. ಯಕ್ಷಗಾನ ದ ಅತಿ
ಯಶಸ್ವೀ ಪ್ರಸಂಗಳಲ್ಲಿ ಒಂದಾದ ದೇವಿ ಮಹಾತ್ಮೆಯಲ್ಲಿ ಮಹಿಷಾಸುರ ಪಾತ್ರ ಇದಕ್ಕೆ ಸ್ಪಷ್ಟ
ಉದಾಹರಣೆ. ಮಹಿಷಾಸುರ ಪಾತ್ರ ಹೇಗಾಯಿತು ಎಂಬ ಮಾನದಂಡವೇ ಒಟ್ಟು ಪ್ರದರ್ಶನದ ಮಾನದಂಡವಾಗಿ
ಬದಲಾಗಿದೆ. ಹಲವು ಸಲ ಇದು ಒಂದು ರೀತಿಯ ವಿಕೃತಿದರ್ಶನಕ್ಕೂ ಕಾರಣವಾಗಿದೆ. ದೇವಿಯನ್ನು
ನೋಡುವುದಕ್ಕಿಂತ ಜಾಸ್ತಿ ಆದಿನದ ಮಹಿಷಾಸುರ ಪ್ರವೇಶಕ್ಕೆ ಹೆಚ್ಚಿನ ಮಹತ್ವವನ್ನು ಕೊಡುವುದನ್ನು
ಕಾಣುವಾಗ ಮನುಷ್ಯನ ಸ್ವಭಾವವೇ ಪ್ರಶ್ನಾರ್ಹವಾಗುತ್ತದೆ. ಹಿರಿಯರು ತುಳಿದ ಹಾದಿಯನ್ನು ತಪ್ಪಾಗಿ
ಕಲ್ಪಿಸುವುದರಿಂದ ಆಗುವ ವಿಕಲ್ಪಗಳತ್ತ ಚಿಂತಿಸುವ ಅಗತ್ಯವಿದೆ. ಶೇಣಿಯವರು ಹಲವು ಪಾತ್ರಗಳನ್ನು
ತಮ್ಮದೇ ರೀತಿಯಲ್ಲಿ ರೂಪೀಕರಿಸಿ ಮುದ್ರೆಯನ್ನೊತ್ತಿದ್ದರೆ ಅವುಗಳ ವೈವಿಧ್ಯತೆಯೇ ವಿಶಿಷ್ಟವಾಗಿ
ಗುರುತಿಸಲ್ಪಟ್ಟಿವೆ. ಅದರಲ್ಲಿ ರಾವಣ ಕೌರವ ಇನ್ನಿತರ ಯಾವುದೇ ಪಾತ್ರಗಳಾದರೂ ಪ್ರತಿಯೋಂದು
ಪಾತ್ರವೂ ಸಹ ಅಧ್ಯಯನಕ್ಕೆ ಯೋಗ್ಯವಾಗಿದೆ.
ಯಕ್ಷಗಾನ
ಅರ್ಥಗಾರಿಕೆಯಲ್ಲಿ ಶೇಣಿಯವರಷ್ಟೇ ಅಲ್ಲ ಹಲವಾರು ಘನ ವಿದ್ವಾಂಸರು ಅರ್ಥಗಾರಿಕೆಗೆ ಹೊಸ
ದಿಶೆಯನ್ನು ತೋರಿಸಿ ಇದೊಂದು ಸಾಹಿತ್ಯ ಪ್ರಾಕಾರವಾಗುವಂತೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಪ್ರತಿಯೊಂದು ಪಾತ್ರನಿರ್ವಹಣೆಯಲ್ಲೂ ಹೊಸ ಹೊಸ ಅಯಾಮಾಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುತ್ತ
ಯಕ್ಷಗಾನ ಅರ್ಥಗಾರಿಕೆಯು ಸಾಹಿತ್ಯ ಶಿಖರದ ಸೋಪಾನವಾಗುವಂತೆ ಮಾಡಿದ್ದಾರೆ. ಯಕ್ಷಗಾನ ಎಂಬುದು
ಕೇವಲ ರಂಗಸ್ಥಳದ ಕಲೆಯಾಗಿ ಮಾತ್ರಾ ಬಿಂಬಿಸುವ ಹಾಗಿಲ್ಲ. ಅದರ ಹಲವಾರು ಮುಖಗಳ ದರ್ಶನವಾಗಬೇಕು. ಯಕ್ಷಗಾನ ಎಂದೊಡನೆ ಬಣ್ಣ ಬಣ್ಣದ ಝಗ ಝಗಿಸುವ ವೇಷಭೂಷಣವಷ್ಟೇ ಎಂಬಲ್ಲಿಗೆ ಸೀಮಿತವಾಗಬಾರದು. ಹಿಮ್ಮೇಳ
ಪ್ರಕಾರಗಳಲ್ಲಾಗಲೀ, ಅರ್ಥಗಾರಿಕೆಯಲ್ಲಾಗಲೀ ಅದ ಸೃಜನ ಶೀಲತೆಯನ್ನು ಗುರುತಿಸುವ ಯತ್ನ
ಮಾಡಬೇಕು. ಆ ದಿಶೆಯಲ್ಲಿ ಹೊಸ ಸಂಶೋಧನೆ ನಡೆದಲ್ಲಿ ಯಕ್ಷಗಾನ ಅರ್ಥ
ಗಾರಿಕೆಗೆ ಸಮಗ್ರವಾದ ಸಂಪನ್ಮೂಲವಾಗಬಲ್ಲುದು. ಕೇವಲ ಯಕ್ಷಗಾನಕ್ಕೆ ಏಕೆ ಸಮಗ್ರ ಸಾಹಿತ್ಯ
ಲೋಕಕ್ಕೆ ಇದು ಬಹುದೊಡ್ಡ ಕೊಡುಗೆಯಾಗಬಲ್ಲುದು.
“ಚದುರಂಗ ಸೇನೆಗಾಗಿ
ಮರುಗುವವನಲ್ಲ..... “ ಎಲ್ಲವನ್ನೂಕಳೆದು ಕೊಂಡೆವು ಎಂದು ಹಲುಬುತ್ತಿದ್ದ ಮಂಡೋದರಿಗೆ ರಾವಣ
ಹೇಳುವ ಮಾತಿದು. ಆದುದರಿಂದಲೇ ವಿಚಾರಿಸಿ ಖೂಳನನು ಮಾಡೆನ್ನ ಅಂತ ಹೇಳೀದ್ದು. ಚದುರಂಗ ಸೇನಾ
ನಷ್ಟಕ್ಕೆ ರಾವಣ ಮರುಗಿದನೇ?
“ಮಂಡೋದರಿ ನಾನು ಏನನ್ನೂ ಕಳಕೊಳ್ಳಿಲ್ಲ..”
“ ಬಂದದ್ದು ಹೋಗಿದೆ ಅಂದ್ರೆ ಅದು ಕಳಕೊಂಡದ್ದು ಅಲ್ವೇ?” ಮಂಡೋದರಿಯ ಅಚ್ಚರಿಯ ನುಡಿ.
“ ಇದು ಮೊದಲೂ ಇರಲಿಲ್ಲ.”
“” ಹಾಗಾದರೆ ಬಂದದ್ದು ಹೋಗಿದೆ
ಅಂದ್ರೆ ಅದು ಕಳಕೊಂಡದ್ದು ಅಲ್ಲ? ಯಾಕೆ ಹೇಳ್ತೇನೆ? ನಾನು ನಾನೆ. ಎಲ್ಲವೂ ನನ್ನದು ನಾನು ಯಾವುದರದ್ದೂ ಅಲ್ಲ. ಕೆಲವರೆಲ್ಲ
ಇದ್ದಾರೆ, ದೊಡ್ಡವರು ಯಾಕೆ? ಉಂಟು ದೊಡ್ಡ ಗಂಟು. ಅದಿಲ್ಲ ಅಂದರೆ ಅವರು ಏನೂ ಅಲ್ಲ. ರಾವಣ ಹಾಗೋ?
ರಾವಣನಿದ್ದಾನೋ ಇದು ಎಲ್ಲವು ಯಾವಾಗಲೂ ಉಂಟು. ಬೇಕಾದಾವಾಗ. ಸ್ವಯಂ ಸಂಪಾದಿಸುವ ಸಾಮಾರ್ಥ್ಯ ಇದ್ದವ ಬಡವ ಅಂತ ಹೇಳಕೂಡದು. ಬಡವ ಯಾರು? ಈಗ ತಿನ್ನದೇ ಕಟ್ಟಿಡುವವ. ನಾಳೆಗೆ ಏನು ಮಾಡುವ? ಕಳಕೊಂಡರೆ ಅವನಿಗೆ
ಸಂಪಾದಿಸುವುದಕ್ಕಾಗುವುದಿಲ್ಲ. ಸಂಪಾದಿಸುವವನಿಗೆ ಕಳೆದುಕೊಳ್ಳುವ ಹಕ್ಕಿರುವುದು. ಏನು ನನ್ನ
ಅಪ್ಪ ನನಗೆ ಕೊಟ್ಟ ಆಸ್ತಿಯೋ ಈ ಲಂಕೆ? ಅಲ್ಲ ನನ್ನಲ್ಲಿ ತುಂಬಿದಂತಹ ಈ ಐಶ್ವರ್ಯ ಏನು
ವರದಕ್ಷಿಣೆಯಾಗಿ ಬಂದದ್ದೋ? ಹಾಗಾದರೆ ಎಲ್ಲವೂ ನಾನು ನನ್ನಿಂದ. ಹೀಗೆ ಹೇಳಕೂಡದು ಹೌದು. ಆದರೆ.
ರಾಜ ಕಾರಿಣಿಯಾದವ ಅಧ್ಯಾತ್ಮ ವಾದಿಯಲ್ಲ. ಎಲ್ಲ ದೇವರು ಕೊಟ್ಟದ್ದು ಅಂತ ಹೇಳ್ತಾ ಕೂತ್ರೆ ನಾಳೆ
ಊರಲ್ಲಿ ಪ್ರಜೆಗಳು “ ಮಹಾರಾಜ ಊರಲ್ಲಿ ಮಳೆ ಇಲ್ಲ ಬೆಳೆ ಇಲ್ಲ” ಅಂಥ ಹೇಳಿದ್ರೆ ದೇವರು ಕೊಟ್ಟಾನು
ಅಂತ ಹೇಳ್ಬೇಕಾದೀತು. ಆದರೆ ಅದನ್ನು ಹೇಳುವುಕಕ್ಕೆ ಸಿದ್ಧನಿಲ್ಲದೇ ಇದ್ದಂತಹ ಪ್ರಭು...ಎಲ್ಲವನ್ನು
ನಾನೇ ಮಾಡ್ತೇನೆ ಅಂತ ಒಪ್ಪಿಕೊಳ್ಳಬೇಕು. “
“ ಚದುರಂಗ ಸೇನೆ... ಇದು ನಾನು ಪ್ರಭುವಾದದ್ದರಿಂದ ಬಂದು ಸೇರಿದ್ದು
ಇಲ್ಲಿ. ನನ್ನಿಂದ ಅದು. ನಾನಾದ ಮೇಲೆ ಅದು.
ಎಲ್ಲಾ ಆದ ಮೇಲೆ ನಮ್ಮಲ್ಲಿ ಯಾರು ಮುಖಂಡ? ನೀವೆಲ್ಲ ಕೂಡಿ ನನ್ನನ್ನು ಮುಖಂಡನನ್ನಾಗಿ ಮಾಡಿ ಅಂತ
ಬೇಡಿಕೊಂಡವನಲ್ಲ. ನನ್ನ ನಾಯಕತ್ವದಲ್ಲಿ ಚಂದುರಂಗ ಸೇನೆ ವ್ಯವಸ್ಥೆ ನಾನು ಮಾಡಿದ್ದು. ಹಾಗಾಗಿ ಈ
ಸಂಪೂರ್ಣ ಸೈನ್ಯ ನನಗೋಸ್ಕರ. ಅದು ನನಗಾಗಿ ನಾಶ ಅದ್ರೆ ಸಂತೋಷ ಪಡುವವ. ಯಾಕೆ? ಇಷ್ಟುದಿನ ಕಟ್ಟಿ
ಸಾಕಿದ್ದೇನಲ್ಲ? ಇದು ಪ್ರಯೋಜನಕ್ಕೆ ಒಂದು ಕಾಲದಲ್ಲಿ ಬಿತ್ತು ಅಂತ ಅಂದ್ರೆ ತೃಪ್ತ ನಾನು. “
ಸೈನಿಕರು ತನಗಾಗಿ
ಸತ್ತರೂ ತೃಪ್ತನಾಗುವ ರಾವಣ ತನಗಾಗಿ ಸತ್ತ ಒಬ್ಬನಿಗಾಗಿ ಬಹಳ ಮರುಗುತ್ತಾನೆ.
ಇಷ್ಟೆಲ್ಲ ಚದುರಂಗ
ಸೇನೆ ನನಗಾಗಿ ಪ್ರಾಣ ತೆತ್ತಿತು. ಆದರೂ ಯಾರೂಅಲ್ಲಿ ತಲೆ ಕತ್ತರಿಸುವಾಗ ಜೀವ ಭಯದಿಂದ ರಾಮನಲ್ಲಿ
ಶರಣಾಗಲಿಲ್ಲವಲ್ಲ.? ಆದರೂ ಆದರೂ ಒಬ್ಬ ಜೀವಗಳ್ಳನಾಗಿ ಹೋದನಲ್ಲ ರಾಮನ ಬಳಿಗೆ.
ಸಾಹೋದರ್ಯದ ವಿಷಯದಲ್ಲಿ ರಾಮ ಗೆದ್ದು ಬಿಟ್ಟ. ಎಂಥಹಾ ಅವಿಭಕ್ತ ಕುಟುಂಬ ನಮ್ಮದ್ದು. ಅಂಥಹ
ಸಾಹೋದರ್ಯ ನಮ್ಮದು. ಅವನಿಗಿರುವ ಸಾಹೋದರ್ಯ ಎಂಥದ್ದು? ತನ್ನ ಬೆವರು ಬೀಳುವಲ್ಲಿ ನೆತ್ತರನ್ನೇ
ಹರಿಸ ಬಲ್ಲ ಸಹೋದರ! ಇಲ್ಲಿ ಸಾಹೋದರ್ಯವನ್ನು ಗೌರವಿಸುವ ರಾಮ , ಹೋದಲ್ಲೆಲ್ಲ ಸಹೋದರ್ಯವನ್ನು ಬೇದಿಸಿಯೇ ಬಿಟ್ಟನಲ್ಲ. ಆ
ಒಂದು ವಿಚಾರದಲ್ಲಿ ರಾವಣ ತನ್ನ ಸೋಲನ್ನು ಒಪ್ಪಿಕೊಳ್ಳದೆ ನಿರ್ವಾಹವಿಲ್ಲ. ಯಾಕೆ? ತನ್ನ ತಮ್ಮ
ವಿಭೀಷಣನ್ನು ಆ ಕಡೆಗೆ ಸೆಳೆದುಕೊಂಡು ಬಿಟ್ಟನಲ್ಲ. ಇಲ್ಲಿ ಕೆಟ್ಟವ ಅಂತ ಅನ್ನಿಸಿಕೊಂಡರೂ ಅಲ್ಲಿ
ಒಳ್ಳೆಯವ ಅಂತ ಹೊಗಳಿಸಿಕೊಂಡ, ವಿಭೀಷಣ...ಒಬ್ಬನನ್ನು ರಾವಣ ಆತ ಬದುಕಿದ್ದರೂ ಕಳೆದುಕೊಂಡ ತಾನು
ಕಳೆದುಕೊಂಡರೂ ಆತ ಬದುಕಿದ್ದಾನೆ... ಇನ್ನೊಬ್ಬ ಇನ್ನೊಬ್ಬ...ತನಗಾಗಿ ಸತ್ತು ಅತನನ್ನು
ಕಳೆದುಕೊಂಡು ಬಿಟ್ಟ. ಬಲು ದೊಡ್ಡ ನಷ್ಟ. ಎಂತಹಾ ಮಗ ಮೇಘನಾದ. ಅತ್ಮಾವೈ ಪುತ್ರನಾಮಾಸಿ. ಅಪ್ಪ
ಮನಸ್ಸಿನಲ್ಲಿ ಭಾವಿಸಿದ್ದನ್ನು ಮಾಡಿತೋರಿಸುವವ. ಆ ಮಟ್ಟಿಗೆ ರಾವಣ ದಶರಥನಲ್ಲಿ
ಸ್ಪರ್ಧಿಸಬಹುದಿತ್ತು. ಎಂತ ರಾಮನನ್ನು ಪಡೆದ ದಶರಥ? ಆತ ತಾನು ಸತ್ತು ರಾಮನನ್ನು ಉಳಿಸಿದ. ಆದರೆ ಎಂತಹ ಪುತ್ರನನ್ನು ಬಲಿಕೊಟ್ಟು ರಾವಣ ಬದುಕಿದ.
ರಾವಣ ಮರುಗಿದ.
ಮಗ ಇಂದ್ರಜಿತುವಿನ
ಬಗ್ಗೆ ರಾವಣ ಅಂತರಂಗದ ಮಾತುಗಳು...” ಹುಡುಗ ಪಾದ ಮುಟ್ಟಿ ನಮಸ್ಕಾರ ಮಾಡಿಯಾನು ಮುಖ ನೋಡಿ ಅರ್ಥ
ಮಾಡಿಕೊಂಡಾನು. ‘ಚಿಂತೆ ಏಕೆಲೆ ಜೀಯಾ? ರಿಪುಕುಲಕೆ ಅಂತಕನು ತಾನು..” ಇಂಥ ಮಕ್ಕಳು ಎಲ್ಲಿದ್ದಾರೆ
ಯಾವ ಅಪ್ಪನಿಗಿದ್ದಾರೆ ಅಂತಹ ಇಂದ್ರಾರಿ ರಣವೀಳ್ಯವನ್ನು ಬೇಡಿದ., ನಾನೇಕೆ ಕೊಟ್ಟೆ?
ಯಥಾರ್ಥಕ್ಕಾಗಿ ಹೇಳುವುದಾದರೆ..ಸತ್ತ ಸೇನೆಗೆ ಮರುಗೆನು ,ತನ್ನ ಸಾವಿಗೆ ಮರುಗನು ರಾವಣ.ಹೆತ್ತ
ಮಕ್ಕಳೊಳ್ ಅಧಿಕನಲ್ಲಾ ಮಗ ಸುರೇಂದ್ರಜಿತು. ಇವತ್ತು ಅವನು ಸತ್ತು ನಾನು ಬದುಕಿದ್ದೇನೆ. ಹೇಳಬಹುದು,
ಈಗ ಯಾಕೆ ನಿಮಗೆ ಈ ನೆನಪು ಬಂತು? ಇದು
ನೆನಪು ಬಂದದ್ದಲ್ಲ ವಿಭೀಷಣನಿಂದಾದ ವೃಣ ಕೆದಕಲ್ಪಟ್ಟಿತು. ಇಂದ್ರಾರಿಯ ಮರಣದಿಂದ ಆ ವೃಣ
ಕೆದಕಲ್ಪಟ್ಟು ಎಲ್ಲ ನೆನಪಿಗೆ ಬಂತು. ಇಲ್ಲಿ ಬಂದಾಗ ಹಿಂದೆ ನಡೆದದ್ದೆಲ್ಲ ನೆನಪಿಗೆ ಬಂತು. ಇಲ್ಲಲ್ಲವೇ
ಇಂದ್ರಾರಿಗೆ ಕಟ್ಟಿದ್ದು,. ಬಂಗಾರದ ತೊಟ್ಟಿಲಲ್ಲಿ ಮಲಗಿಸಿ ಮಂಡೋದರಿ ಇಲ್ಲಲ್ಲವೇ ತೂಗಿದ್ದು.
ಒಂದು ಬಾರಿ ಆ ಶಿವ ಪಾರ್ವತಿಯರಿಗೆ ಜೋಗುಳ ಹಾಡಿದ್ದೆ . ಈ ಇಪ್ಪತ್ತು ಕೈಗಳಲ್ಲಿ ಇಡೀ
ಕೈಲಾಸವನ್ನೇ ಜೋಗುಳ ಹಾಡಿ ತೂಗಿದ್ದೆ. ಮತ್ತೊಮ್ಮೆ ನನ್ನ ಇಪ್ಪತ್ತು ಕೈಗಳನ್ನು ತೊಟ್ಟಿಲಾಗಿ
ತೂಗಿದ್ದು ಆ ಪುತ್ರೋತ್ಸವದಲ್ಲಿ. ಅದರೆ ಅದು ಅರ್ಥ ಹೀನವಾಯಿತು. ಇದು ನಿಷ್ಫಲವಾಯಿತು. ಎಲ್ಲಿದೆ?
ರಾವಣನ ಜೀವನದಲ್ಲಿ ಜೀವರಸ ಎಲ್ಲಿದೆ? ಆದರೂ ಬದುಕಿದ್ದೇನೆ ಯಾಕೆ ಬದುಕಿದ್ದೇನೆ? ಅರ್ಥಪೂರ್ಣವಾದ
ಬದುಕನ್ನೇ ನಾನು ಸಾಗಿಸಿದವ. ಇನ್ನು ಬದುಕು ಇದ್ದಷ್ಟು ದಿವಸ ಅದು ಅರ್ಥ ಪೂರ್ಣವಾಗಬೇಕು ಎಂದು
ಹಟತೊಟ್ಟವ. ಆದಕಾರಣ ನಿನ್ನ ರಾಮನೋ ರಣ ಭೀಮನೋ..
(ಮುಂದುವರೆಸುವ ಪ್ರಯತ್ನದಲ್ಲಿ)


