"ಇದು ವಿಮರ್ಶೆಯಲ್ಲದ ಚಿಂತನ"

Tuesday, July 30, 2013

ಅಂತರಂಗದ ರಾವಣ ಭಾಗ ೫




ಯಾವುದೇ ವಸ್ತುವಿನ ಮೌಲ್ಯ ವೃದ್ಧಿಯಾಗುವುದು ಅದರ ಬೇಡಿಕೆ ಮತ್ತು ಜನಪ್ರಿಯತೆಗನುಸಾರ.  ಕಲೆಯ ಬಗ್ಗೆ ಅರಿವನ್ನು ಮೂಡಿಸಿ ಅದರ ಸ್ವಾದವನ್ನು ಅನುಭವಿಸುವಂತೆ ಮಾಡುವ ಪ್ರಚೋದನೆಯನ್ನು ಸೃಷ್ಟಿ ಮಾಡಬೇಕು ಕೇವಲ ಒಂದು ಆಟ ಒಂದು ತಾಳ ಮದ್ದಲೆ ಎಂಬಲ್ಲಿಗೆ ಇದು ಸೀಮಿತವಾಗದೆ ಅದರ ಅಸ್ವಾದನೆಯನ್ನು ತೋರಿಸಿಕೊಡಬೇಕು. ಅಸ್ವಾದಕರು ಆಸ್ವಾದನೆಯನ್ನು ಕಲಿತರೆ ಕಲೆ ತಾನಾಗಿ ಬೇಡಿಕೆಯನ್ನು ಜನಪ್ರಿಯತೆಯನ್ನೂ ವೃದ್ಧಿಸುತ್ತದೆ. ಒಂದು ಹೊಸದಾದ ಖಾದ್ಯ ಭಕ್ಷ್ಯವನ್ನು ಮಾಡಿದಾಗ ಅದರ ಅಸ್ವಾದನೆಯನ್ನು ತಿನ್ನುವ ಕ್ರಮವನ್ನು ಹೇಳಿಕೊಡುತ್ತಾರೆ. ಹೊಸತಾದ ಒಂದು ವಸ್ತು ಮಾರುಕಟ್ಟೆಗೆ ಬಿಡುವಾಗ ಅದರ ಬಳಕೆಯ ಬಗ್ಗೆಯೂ ತರಬೇತಿ ಕೊಡುತ್ತಾರೆ. ಒಂದು ವಸ್ತುವಿನ ಪೂರ್ಣ ಬಳಕೆಯ ಅರಿವಾದರೇ ಮಾತ್ರ ಆ ವಸ್ತು ಜನಪ್ರಿಯವಾಗಲು ಸಾಧ್ಯ. ಅಂತೇ ಯಕ್ಷಗಾನ ಕಲೆಯ ಅಸ್ವಾದನೆಯನ್ನೂ ತಿಳಿಸುವಂತಾಗಬೇಕು. 
‘ಮಗ ಮೇಘನಾದನ ಮರಣ‘ ಯೋಗ್ಯತಾವಂತ ಪುತ್ರನ ಮರಣ, ಅರಗಿಸಿಕೊಳ್ಳದಾದ ರಾವಣ.ಪರಾಜಯವನ್ನು ಮನಸ್ಸು ಸಾರಿಹೇಳಿದರೂ ಹಿಡಿದ ಛಲ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮತ್ತೂ ಕ್ರೋಧಾವಿಷ್ಟನಾಗುತ್ತಾನೆ. ಇಂದ್ರಜಿತುವಿನ ಮರಣವನ್ನು  ಕಾಣುವ ರೀತಿ ಆ ದೃಷ್ಟಿ ಕೋನವೇ ಬೇರೆ.
“ ಆ ರಾಮ ಲಕ್ಷಣರ ಸಹಿತ......”
“ ಸೇಡು ಸೇಡು...ರಾಮಲಕ್ಷ್ಮಣರು ಇಬ್ಬರಲ್ಲಿ  ಆವಿರ್ಭವಿಸಿದ್ದು ಅಂದು. ಬೇಡದೇ ಇದ್ದ ಉದ್ಯೋಗ ಇದು ಅವರಿಗೆ. ಏನೇ ಆಗಲಿ ನನಗೆ ನೋವನ್ನುಂಟು ಮಾಡಿದರು. ನನ್ನ ಅಭಿಮಾನಕ್ಕೆ ಅವರು ಪ್ರತಿಸ್ಪರ್ಥಿಗಳಾದರು.ರೂಢಿಯ ಭಾಷೆಯಲ್ಲಿ ಹೇಳ್ತೇನೆ, ನನಗೆ ಪಂಥಾಹ್ವಾನವನ್ನು ಕೊಟ್ಟರು. ನನಗೆ ಸವಾಲಯಿತು ರಾಮಲಕ್ಷ್ಮಣರ ಕೃತಿ. ಅದನ್ನು ಸವಾಲನ್ನಾಗಿಯೇ ಸ್ವೀಕರಿಸಿದ್ದೇನೆ.ಆದರೇನಾದಿತು? ನನಗೆ ಗೊತ್ತುಂಟು ಪ್ರಪಂಚದಲ್ಲಿ ಇಬ್ಬರು ಸ್ಪರ್ಧಿಗಳಲ್ಲಿ ಇಬ್ಬರೂ ಜಯಿಸುವುದಿಲ್ಲ. ಜಯಿಸುವುದು ಯಾರಾದರೊಬ್ಬ. ನಾನು ಅದನ್ನು ಉದ್ದೇಶಿಸಿದವನಲ್ಲ. ಜಯ ಅಪಜಯವಲ್ಲ. ಯಾರು ಬದುಕುತ್ತಾರೆ ಯಾರು ಸಾಯ್ತಾರೆ ನೋಡುವ. ನೇರ ಯುದ್ದ,  ಸತ್ರೆ ಸತ್ತೇನು”

          “ಈಗ ನನಗೆ ತೋರ್ತದೆ ಏನೋ ಒಂದು ಕಾಣದ ಕೈಯ ಆಟ ಇದೆ ಇದರಲ್ಲಿ. ನೀನು ಆಲೋಚನೆ ಮಾಡು, ಸೀತೆಯರನ್ನು ರಘುವರರಿಗಿತ್ತು....ರಾಮನಿಗೆ ಸೀತೆಯನ್ನು ಕೊಡುವ ಮಾತು ಬಿಡು.. ಈ ಸೀತೆಯನ್ನು ತಾರದೇ ಇದ್ದರೂ ಈ ಯುದ್ದ ನಡೀತಿತ್ತು ಅಂತ ನನಗೆ ಈಗ ಅನ್ನಿಸ್ತದೆ.  ಇಂದ್ರಜಿತುವಿನ ಮರಣ ಕಂಡದ್ದರಿಂದ. ಈಗ ಸೀತೆಯನ್ನು ತಂದ ಮೇಲೆ ಇಂದ್ರಜಿತುವಿಗೆ ಮೃತ್ಯು ತಯಾರಾದದ್ದೇ? ಆದರೆ ಸರಿ ನೀನು ಹೇಳುವುದು. “ 
         
          ಮಂಡೋದರಿಯ ವಿನಂತಿ ಏನಿತ್ತು?   ಸೀತೆಯನ್ನು ಬಿಟ್ಟು ಕೊಟ್ಟು ಕಾಲಿಗೆ ಬಿದ್ದು ಶರಣಾದರೆ ಎಲ್ಲವೂ ಪರಿಹಾರವಾಗುತ್ತದೆ. ಸೀತೆಯನ್ನು ಒಪ್ಪಿಸು  ರಾಮನಿಗೆ ಶರಣಾಗು. ಇದನ್ನೆ ಇಲ್ಲಿ ಅಕ್ಷೇಪಿಸಿ ವಿಶ್ಲೇಷಿಸುತ್ತಾರೆ..  ಸೀತೆಗಾಗಿ ಈ ಯುದ್ದವಲ್ಲ. ಅದು ಹೇಗೆ?
“ಇಂದ್ರಾರಿಯ ಮರಣ ಯಾರಿಂದಾಗಬೇಕು? ಹನ್ನೆರಡು ವರ್ಷ ನಿದ್ರೆ ಆಹಾರ ಸತಿ ಸಂಗವನ್ನು ಬಿಟ್ಟವನಾಗಿರಬೇಕು. ಹೌದಲ್ಲ? ಇಂದ್ರಾರಿ...ಸತ್ತದ್ದು ಹೌದು. ಲಕ್ಷ್ಮಣನ ಕೈಯಿಂದ...ಹಾಗಾದರೆ ಅವನು ಹನ್ನೆರಡು ವರ್ಷ ಅನ್ನ ಬಿಟ್ಟದ್ದು ಯಾಕೆ?’

         ಸೀತೆಯನ್ನು ತರುವ ಮೊದಲೇ ಲಕ್ಷ್ಮಣ ನಿದ್ರಾಹಾರ ತೋರೆಯಬೇಕಾದರೆ ಅದಕ್ಕೆ ಪ್ರೇರಣೆ ಯಾರು?
 
“ ಲಕ್ಷ್ಮಣ ನಿದ್ರೆ ಬಿಟ್ಟದ್ದು ಯಾಕೆ? ಹೆಂಡತಿಯನ್ನು ಅಯೋಧ್ಯೆಯಲ್ಲಿ ಬಿಟ್ಟು ಬಂದದ್ದು ಯಾಕೆ? ಇಂದ್ರಜಿತುವನ್ನು ಕೊಲ್ಲುವುದಕ್ಕೆ ಬೇಕಾಗಿಯೋ?  ಏನು ಅಲ್ಲ...ಹಾಗಾದರೆ ಹಾಗೆ ಒಬ್ಬ ತಯಾರಾದ್ದಕ್ಕೆ ಅವನಿಗೆ ಗೊತ್ತಿಲ್ಲ ಉತ್ತರ ಹೇಳ್ಳಿಕ್ಕೆ..ಆಗ ನಾವು ಸನಾತನಿಗಳು ಆಸ್ತಿಕರು ಒಪ್ಪಿಕೊಳ್ಳುವುದು ವಿಧಿನಿರ್ಣಯವನ್ನು. ಸೀತೆಯನ್ನು ತಾರದೇ ಇದ್ದರೂ  ಇದು ಅನಿವಾರ್ಯ ತಾನೆ?”
ಲಕ್ಷ್ಮಣ ನಿದ್ರಾಹಾರ ಬಿಟ್ಟು ಹಲವು ವರ್ಷ ಕಳೆದ ಮೇಲೆ ಸೀತಾಪಹಾರ  ಯಾಕಾಯಿತು? ಸೀತೆಯಿಂದ ರಾವಣ ದಂಡಿಸಲ್ಪಟ್ಟ... ಸೀತೆಗಾಗಿ ಯುದ್ದ ಒಪ್ಪತಕ್ಕದ್ದೇ?         
“ಸೀತೆಯನ್ನು ನಾನು ತಂದದ್ದರಿಂದ..ಮಗನನ್ನು ಬಲಿಯಾಗಿ ಕೊಟ್ಟೆ ಅಂತ ಯಾರಾದರೂ ಹೇಳಿದರೆ ಅವರು ಪೂರ್ಣ ಜ್ಞಾನಿಗಳಲ್ಲ...ಸರಿ, ಇಂದ್ರಾರಿ ಸತ್ತ. ಯಾವುದೋ ದೈವದ ಕೈವಾಡ ಉಂಟು ಅಂತ ಗೊತ್ತಾಯಿತು. ನಾವೇನು ದೈವ ಎತ್ತಿ ಆಡಿದ ಕೈಗೂಸಾಗಿಯೇ ಕೊನೇ ಉಸಿರನ್ನು ಬಿಡೋಣವೇ?”
“ಆದರೂ ಪ್ರತೀಕಾರ ಸಾಧ್ಯವಾದೀತೆ ಸ್ವಾಮೀ?”
“ಕೊಲುವೆನೆಂಬ ಪ್ರತಿಜ್ಞೆ ದೈವಕ್ಕಿರಲಿ. ಗೆಲುವೆನೆಂಬ ಪ್ರತಿಜ್ಞೆ ಜೀವನಿಗೆ ಇದ್ರೆ ಅವನು ಪುರುಷ. ವೇದಾಂತದಲ್ಲಿ ಪುರುಷ ಶಭ್ದ ಉಂಟು. ಪುರುಷ ಅಂದ್ರೆ ಅದು ಚೇತನ. ರೂಢಿಯಲ್ಲಿ ಪುರುಷ,  ಸ್ತ್ರೀ ಅಂತ ದೇಹವನ್ನು ನೋಡಿ ಹೇಳುವುದು. ಒಳಗಿನ ಚೇತನ ಅದಕ್ಕೆ ಪುರುಷ ಅಂತ ಹೇಳುವುದು. ಆ ಪುರುಷ ಸಾಧಿಸಬೇಕಾದ್ದಕ್ಕೆ ಹೆಣ್ಣು ಶರೀರದಿಂದಾಗಲೀ ಅಥವಾ ಗಂಡು ದೇಹದಿಂದಾಗಲೀ ಪುರುಷಾರ್ಥಗಳು ಅಂತಲೇ ಹೇಳುದು. ಧರ್ಮ, ಅರ್ಥ, ಕಾಮ, ಮೋಕ್ಷ ಹೀಗೆ ಚತುರ್ವಿಧ ಪುರುಷಾರ್ಥಗಳು ಇದು ಹೆಣ್ಣಿಗೂ ಪುರುಷಾರ್ಥವೇ. ಗಂಡಿಗೂ ಪುರುಷಾರ್ಥವೇ. ಪುರುಷಾಯತ್ತ ಸಿದ್ಧಿ ಅಂದ್ರೆ ಅದು. ದೈವ ಏನು ಮಾಡಿತು? ದೈವ ಈ ಪೌರುಷದ ಮುಂದೆ ಸೋತೇ ತೀರಬೇಕು. ಸೋತು..... ಈ ಪುರುಷತ್ವಕ್ಕೆ ಅದು ಅಧೀನವಾಗಬೇಕು. ಇಲ್ಲದಿದ್ದರೆ ನಮ್ಮಲ್ಲಿ ಹೇಳುತ್ತಿಲ್ಲವ ಶಾಸ್ತ್ರದ ಮೋಕ್ಷಕ್ಕೆ ಅರ್ಥವೇ ಇಲ್ಲ. ಮೋಕ್ಷ ಪ್ರಾಪ್ತಿ. ಮೋಕ್ಷ ಸಿದ್ಧಿ. ಮೋಕ್ಷದಾನವಲ್ಲ ಮೋಕ್ಷವನ್ನು ಯಾರದರು ದಾನ ಮಾಡಿ ಪಡಕೊಳ್ಳುವದ್ದಲ್ಲ ಮೋಕ್ಷ ಸಿದ್ಧಿ. ಯಾರು ಕೊಡುವಂಥದ್ದಲ್ಲ ದೇವರೇ ಕೊಡುವಂಥದ್ದಾಗಿದ್ದರೆ ಮೋಕ್ಷ ಎಂಬುದು ಪುರುಷಾರ್ಥದ ಪಟ್ಟಿಯಿಂದ ಬಿದ್ದು ಹೋಗುತ್ತಿತ್ತು. ಧರ್ಮಾರ್ಥಕಾಮ....ಮೂರೇ ಪುರುಷಾರ್ಥ ಅಂತ..ಚತುರ್ವಿಧ ಪುರುಷಾರ್ಥ ಎಂಬುದು ಸತ್ಯ ಎಂದಾದರೆ..ದೈವವೋ, ವಿಧಿಯೋ , ಇನ್ನೊಂದೋ ಅದರ ಹಂಗ್ಯಾಕೆ. ಆದಕಾರಣ ಅದನ್ನು ಬದಿಗೊತ್ತಿ ನಾನು ಬೆಳೆಸಿಕೊಂಡು ಬಂಧಂತಹಾ ಯಾವ ಶಕ್ತಿವಿಶೇಷವಿದೆಯೋ. ....ಸಾಗಿ ಬಂದು ಆಗಿಹೋಯ್ತೇನೇ ನಿಮಗೆಲ್ಲ ಇದು ಹೇಳಿದ್ರೆ ತಲೆಗೆ ಹೋಗುವುದಿಲ್ಲ. ಒಬ್ಬ ಜೀವನದ ಯಾತ್ರೆಯಲ್ಲಿ ಬಹಳಷ್ಟು ಮುಂದೆ ಬಂದಾದ ಮೇಲೆ,  ಎಡವದೇ ತಡವದೇ.   ತನ್ನ ಮಾರ್ಗವನ್ನು ತಾನು ರೂಪಿಸಿಕೊಂಡು ಹೋದಮೇಲೆ, ಇನ್ನು ಮರಳಿ ಹಿಂದೆ ಬಾ.  ದಾರಿ ಬೇರೆ ಮಾಡು....ಅಂತ ಹೇಳುವವರಿಗೆ ದಾರಿಯ ಪರಿಚಯವೇ ಇಲ್ಲಾಂತ ಅರ್ಥ. ಇಲ್ಲಿಯವರೆಗೆ ಸಾಗಿ ಬಂದಿದ್ದೇನೆ.  ಸಾಗಿ ಬಂದ ನಾನು ಇನ್ನು ಹಿಂದೆ ಬರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಒಂದುಂಟು ಬಗ್ಗುವ ಜಾತಿಯೇ ಅಲ್ಲ.  
 ಕಠಿಣವಾದದ್ದರಲ್ಲಿ ಎರಡು ಉಂಟು. ಒಂದು ಲೋಹ..ಇನ್ನೊಂದು ವಜ್ರ...ಅಥವಾ ಕಲ್ಲು ಪಾಷಾಣ..ಆದರೆ ಲೋಹಕ್ಕೆ ಒಂದು ಸ್ವಭಾವ ಉಂಟು ಬಿಸಿತಾಗಿದ್ರೆ ಮಿದುವಾಗ್ತದೆ  ಬಗ್ಗೀತು.. ಅದರೆ ಇದು ಬಿಸಿತಾಗಿದ್ರೂ ಮಾರ್ದವತೆ ಬಂದೀತು ಅಂತ ತಿಳ್ಕೊಳ್ಬೇಡ. ಇದನ್ನು ಯಾರಾದರೂ ಮುರೀಬೇಕು ಬಗ್ಗಿಸಿಬೇಕು ಅಂತ ಹೊರಟ್ರೆ.  ಅದ್ರೆ ಇದು ತುಂಡಾದೀತು. ಹೊರತು ಬಗ್ಗಲಾರದು.ರಾವಣನ ವ್ಯಕ್ತಿತ್ವ ಆ ತರಹದ್ದು. ತುಂಡಾದೀತು..ಆದರೆ ಬಿಸಿಯಾಗುವಾಗ ಕಾಠಿಣ್ಯವನ್ನ ಬಿಟ್ಟು ಕೊಟ್ಟು ಮಿದುವಾಗುವುದು.. ತಣ್ಣಗಾಗುವಾಗ ಕಾಠಿಣ್ಯವನ್ನು ತಾಳುವುದು..ಈ ಬಗೆಯ ದ್ವಂದ್ವ ರಾವಣನ ಜೀವನದಲ್ಲಿ ಇಲ್ಲ. ಆದಕಾರಣ ರಾಮಲಕ್ಷ್ಮಣರ ಸಹಿತ...ಆ ಕಪಿಭಟ ಸ್ತೋಮವನ್ನು ಗೆಲಿದು ...ಮತ್ತೆ ಆ ಕಥೆ ಬಿಡು..”
ಗೆಲ್ಲುತ್ತೇನೆ ಎನ್ನುವ ಆತ್ಮ ವಿಶ್ವಾಸದ ನುಡಿ ಕೇಳಿ ಮಂಡೋದರಿ ಕೇಳ್ತಾಳೆ..
.” ಅವರನ್ನೆಲ್ಲ ಗೆದ್ರು ಕೂಡ ಇವರು ಬರ್ತಾರ ಸ್ವಾಮಿ?”
“ ಯಾರು ಬರ್ಬೇಕು ನಿನಗೆ?”
“ ನಮ್ಮ ಮಕ್ಕಳಿಲ್ಲ ಸೇನಾ ಪತಿಗಳಿಲ್ಲ ಮಂತ್ರಿಗಳಿಲ್ಲ ...ಯಾರೂ ಬದುಕುಳಿದಿಲ್ಲ ನಮ್ಮಲ್ಲಿ..”
ಆದರೂ ರಾವಣನ ಅತ್ಮ ವಿಶ್ವಾಸ ...ಸತ್ತವರನ್ನೂ ಬದುಕಿಸಿಯೇನು...ಇಂದ್ರಾರಿ ಮಾಯಾಸೀತೆಯನ್ನು ಸೃಷ್ಟಿಸಿದ ಹಾಗೆ.. ಆದರೂ ಬಿಡಲಾರದ ಈ ಸಂಘರ್ಷದ ಒಳ ಮರ್ಮವೇನು? ರಾವಣ ಅದರ ಮರ್ಮವನ್ನು ಬಿಚ್ಚಿಡುತ್ತಾನೆ...
“ ನಮ್ಮಲ್ಲಿ  ವಿದ್ಯುಜ್ಜಿಂಹ ಇವನ ಮೂಲಕವಾಗಿ ರಾಮ ಲಕ್ಷ್ಮಣರ ತಲೆಯನ್ನು ಕೃತಕವಾಗಿ ನಿರ್ಮಿಸಿ ಸೀತೆಯ ಎದುರು ಎಸೆದಾಗ ಸೀತೆ ಆತ್ಮಹತ್ಯೆಗೆ ಹೊರಟಿದ್ದಳು. ನಾನು ಪರೀಕ್ಷೆ ಮಾಡದೆ ಯಾರಬಗ್ಗೆಯೂ ಏನೂ ಹೇಳುವವನಲ್ಲ.  ಆ ಕಡೆಗೆ ರಾಮ ಈ ಕಡೆಗೆ ಸೀತೆ...ಸಾಯದೆ ಉಳಿದ್ರು. ಆ ಮಾತು ಬೇರೆ. ಏನು ಮಾಡುದೂ..? ನಮ್ಮ ಒಬ್ಬ ರಾಮನ ಪಕ್ಶಕ್ಕೆ ಸಿಗದೇ ಇರುತ್ತಿದ್ದರೆ..ರಾಮಾಯಣದ ಅಧ್ಯಾಯ ಆ ಕಾಂಡಕ್ಕೆ ಮುಗಿದು ಮುಂದಿನ ಕಾಂಡ ರಾವಣಾಯಣ ಆಗಿಹೋಗುತ್ತಿತ್ತು. ಅಷ್ಟು ಮಂತ್ರಶಕ್ತಿಯಿದ್ದವನು ನಿನ್ನ ಗಂಡ ರಾವಣ. ರಾಮ ಲಕ್ಷ್ಮಣರನ್ನು ಗೆಲಿದ ಮೇಲೆ, ಈ ಗ್ರಹಣ ಇದೆಯಲ್ಲ ಇದು ಸರೀತದೆ..ಈ ಚಂದ್ರನಿಗೆ.  ಮತ್ತೊಮ್ಮೆ ಪೂರ್ಣ ಚಂದ್ರನಾಗಿ ರಾರಾಜಿಸಿ..ಸೃಷ್ಟಿಸಿಯೇನು...ಎಲ್ಲವನ್ನು ಸೃಷ್ಟಿಸಿಯೇನು ...ಆದರೂ...ಇಂದ್ರಜಿತುವಿನಂತಹ ಮಗನನ್ನು ಪಡೆದೇನೆ? ಅನುಮಾನ. ಮತ್ತೆ ದಶರಥನ ಹಾಗೆ ಪುತ್ರಕಾಮೇಷ್ಠಿ ಮಾಡಿ ಯಾರಿಗೊ ಹುಟ್ಟಿದವನಿಗೆ ಅಪ್ಪ ಆಗುವವ ನಾನಲ್ಲ. ಇಂದ್ರಜಿತುವನ್ನು ಸೃಷ್ಟಿಸಿದ್ದೇನೆ...ನನ್ನ ಮಗ ಅಂತ ತೋರಿಸಿಕೊಟ್ಟಿದ್ದೇನೆ..ಜನ ಮೆಚ್ಚಿದ್ದಾರೆ ಈ ಅಪ್ಪನಿಗೆ ಈ ಮಗ ಸರಿ. ಮಂಡೋದರಿ,  ಇದು ನೋವನ್ನು ಮರೆಯಿಸ್ಲಿಕ್ಕೆ ಈ ವಿಡಂಬನಾ ಶೈಲಿಯನ್ನು ಅನುಸರಿಸಿದ್ದು. ಏನು ಮಾಡಿದರೂ ಆ ನೋವು ಹೋಗುವುದಿಲ್ಲ.ನನ್ನ ಮಗ ಇಂದ್ರಾರಿ ಎಲ್ಲಿ ಮಣ್ಣಿಗೆ ಮಣ್ಣಾಗಿ ಹೋದ ಅಲ್ಲೇ ಮಣ್ಣಾಗಿ ಹೋದೇನು ಆದರೂ ಸೀತೆಯನ್ನಿತ್ತು ಶರಣಾಗು ಅಂತ ಮಾತ್ರ  ಹೇಳದಿರು.”
          ಇದು ಶೇಣಿಯವರ ಯೋಜನಾಬದ್ಧ ಅರ್ಥಗಾರಿಕೆ. ರಾವಣನನ್ನು ಪದರು ಪದರಾಗಿ ಬಿಚ್ಚಿಡುವಪರಿ. ಪ್ರಸಂಗ ಪಾತ್ರದ ಮೊದಲ ಪದದಿಂದಲೇ ಹೀಗೆ ಈ ಪಾತ್ರ ಅಭಿವ್ಯಕ್ತವಾಗುತ್ತದೆ ಎಂಬ ಕಲ್ಪನೆಯಿಂದಲೇ ತೊಡಗಿಸುತ್ತಾರೆ. ದೊಡ್ಡದಾದ ಹಣ್ಣನ್ನು ತುಂಡು ತುಂಡಾಗಿ ಕತ್ತರಿಸಿ ತಿನ್ನಲು ಕೊಟ್ಟಂತೆ... ಮೊದಲು ಹಣ್ಣಿನ ಮಧ್ಯಭಾಗವೇ ಆದರೂ ಆಗಬಹುದು.. ಕೆಳಭಾಗವಾದರೂ ಆಗಬಹುದು..ಹಣ್ಣಿನೆ ತೊಟ್ಟಿರುವ ಭಾಗವಾದರೂ ಆಗ ಬಹುದು. ಒಟ್ಟಿನಲ್ಲಿ ಆ ಪೂರ್ಣ ಹಣ್ಣಿನ ರಸಾಸ್ವಾದನೆಯನ್ನು ತೋರಿಸುವ ಯತ್ನ..ಬೇರೆ ಬೇರೆ ವಿಧದಲ್ಲಿ ತಿಂದು ಸವಿದ ಮೇಲೆ ಬೇರೆ ಬೇರೆ ಅನುಭವವಾಗುತ್ತದೆ. ಚಿತ್ರಕಥೆ ಸಂಭಾಷಣೆಯ ಕಡತವಿಲ್ಲದ ಈ ಅರ್ಥಗಾರಿಕೆ ಸಾಹಿತ್ಯ ಅದು ಯಕ್ಷಗಾನ ತಾಳ ಮದ್ದಲೆಯ ವೈಶಿಷ್ಟ್ಯ. ಮೊದಲ ಹಂತದಿಂದಲೇ ನಾವು ಕಂಡು ಅರಗಿಸಿದ ಪಾತ್ರದಲ್ಲೇ ನಿಗೂಢತೆಯನ್ನು ಸೃಷ್ಟಿಸಿ ಅದನ್ನು ಎಸಳೆಸಳಾಗಿ ಬಿಚ್ಚಿಡುವ ಕಲೆ, ಅದನ್ನು ಅಸ್ವಾದಿಸಿಯೇ ತಿಳಿಯಬೇಕು.
ಇಷ್ಟಾದರೂ ರಾವಣನ ಅಂತರಂಗ ಪೂರ್ಣವಾಗಿ ಬಹಿರಂಗವಾಗುವುದಿಲ್ಲ.
ರಾವಣ ಏನು ಹೇಳಿದರೂ ಮಂಡೋದರಿ ತನ್ನ ಯತ್ನ ಮುಂದುವರೆಸುತ್ತಾಳೆ. ರಾವಣ ಮಂಡೋದರಿ ಸಂಭಾಷಣೆ ಮುಂದುವರೆಯುತ್ತದೆ.
“ದೋಷೀ ನಿನ್ನಯ ಭಗಿನಿ...ರಕ್ಕಸ ಕುಲಘಾಸಿಗೈದಳು ತರುಣಿ.....”
“ಸ್ವಾಮೀ ತಾವು ಹೇಳುತ್ತಿದ್ದ ಈ ವಾದ ಸರಣಿಯನ್ನು ಕೇಳಿದಾಗ ನನಗೂ ಹೌದೇನೋ ಅನ್ನಿಸ್ತಾ ಇದೆ..ಆದರೆ ಈ ಪರಿಸ್ಥಿತಿ ನಮ್ಮ ಲಂಕಾರಾಷ್ಟ್ರಕ್ಕೆ ಬಂತಲ್ಲ? .ಯಾಕೆ? “
“ರಾಮನ ದೋಷದಿಂದ..”
“ಅಲ್ಲ ನನಗೆ ಹಾಗನ್ನಿಸುವುದಿಲ್ಲ...ಈ ಬಗ್ಗೆ ನನ್ನ ಮುಖ ಬೇರೆ ಅಂತ ತಾವು ಕೋಪಿಸಿಕೊಳ್ಳಬಾರದು.” ಮಂಡೋದರಿ ಅನುಮಾನಿಸುವಾಗ ರಾವಣ ಹೇಳ್ತಾನೆ...
“ರಾಮ ಎಷ್ಟೋ ದೂರದಲ್ಲಿದ್ದುಕೊಂಡು ನನ್ನ ಹೃದಯಕ್ಕೇ ನೋವು ಮಾಡಿದ. ನಿರಪರಾಧಿನಿಯಾದ ಹೆಣ್ಣಾದ ವಿವ್ಹಲೆಯಾದ ಗತಿಗೆಟ್ಟ..ನನ್ನ ತಂಗಿಯನ್ನು ಉಪಾಧಿಯಾಗಿ ಉಪಯೋಗಿಸಿಕೊಂಡ.”
“ಸ್ವಾಮೀ ಅವಳೇ ನಿಮ್ಮ ಕುಟುಂಬದವಳು, ನಿಮ್ಮ ತಂಗಿ. ಈ ಲಂಕಾರಾಷ್ಟ್ರದ ದುಸ್ಥಿತಿಗೆ ಅವಳೇ ಕಾರಣ. ನಾನೇನು ನಾದಿನಿಎಂಬ ದುರುದ್ದೇಶದಿಂದ ಮಾತ್ಸರಿಕ ದೃಷ್ಟಿಯಿಂದ ಹೇಳ್ತೇನೆ ಅಂತ ತಿಳೀಬಾರದು. ಏನುಂಟು ಅವಳಲ್ಲಿ ತುದಿಯೂ ಇಲ್ಲ ಬುಡವೂ ಇಲ್ಲ.ನನಗೆ ಅವಳ ಬಗ್ಗೆ ಯಾವುದೇ ಮತ್ಸರ ಇಲ್ಲ. ಸ್ವಾಮೀ ನನಗೆ ಅನ್ನಿಸ್ತದೆ ಈ ನಮ್ಮ ಲಂಕಾರಾಷ್ಟ್ರದ ದುರ್ಗತಿಗೆ ಅವಳೇ ದೋಷಿ. ಯಾಕೆಂದರೆ ಈಗ ರಾಮನಿಂದಾಗಿ ಇಷ್ಟೆಲ್ಲ ಆಯಿತು ಅಂತ ದೂಷಿಸಿತ್ತೀರಿ. ಅದರೆ ನನಗೆ ಅನ್ನಿಸ್ತದೆ ರಾಮನ ಬಳಿಗೆ ಹೋಗಿ , ರಾಮನಲ್ಲಿ ತನ್ನ ಅಲ್ಲ ಸಲ್ಲದ ವ್ಯವಹಾರವನ್ನು ಮುಂದಿಟ್ಟು ಆ ಬಳಿಕ ರಾಮನಿಂದ ಶಾಸ್ತಿಯನ್ನು ಪಡೆಯಬೇಕಾದ ಪರಿಸ್ಥಿತಿಯನ್ನು ತಂದ ಶೂರ್ಪನಖ ಕೃತ್ಯವೇ ದೋಷಪೂರ್ಣ ಅಂತ ನನಗನ್ನಿಸ್ತದೆ.”
“ ಅದು ಹೌದು, ಅದು ಒಂದು ಮುಖದ ವಾದ. ಅಷ್ಟು ತಿಳಿಯದೇ ಇದ್ದವನಲ್ಲ ನಾನು.ನಾನೇ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ಡೆನಲ್ಲ...”ತಂಗಿಯೇ ಕುಲಕೆ ಕೇಡಾದಳು.. ನೀನು ಬರುವುದಕ್ಕೆ ಮೊದಲು ನಾನು ಅದನ್ನೇ ಮೆಲುಕು ಹಾಕ್ತಾ ಇದ್ದೆ. ತಂಗಿಯ ಸವಿ ಮಾತಿಗೆ ಹಂಗಿಗನಾದುದರಿಂದಲೇ ಭಂಗ ಪಡುವುದಾಯಿತೇ? ನಾನವಳನ್ನು ಮರೀಲಿಲ್ಲ. ನನಗೆ ಗೊತ್ತುಂಟು.  ಈಗ ಅವಳು ನನ್ನ ಉದ್ಧಾರಕ್ಕೋಸ್ಕರವಾಗಿ ಆ ಜನಸ್ಥಾನದಲ್ಲಿ ದುಡೀತಾ ಇದ್ದಾಳೆ ಅಂತ ನಾನು ಸ್ವಪ್ನದಲ್ಲಿಯೂ ಊಹಿಸಿದವನಲ್ಲ. ಅವಳನ್ನು ಇಲ್ಲಿಂದ ಅಲ್ಲಿಗೆ ಕಳುಹಿಸಿದರ ಹಿನ್ನೆಲೆ ಗೊತ್ತಿದ್ದವಳು ನೀನು. ಏನು ಮಾಡೋಣ ಅವಳ ಗಂಡ ನನ್ನ ಕೈಯಿಂದ ಸಾಯಬೇಕಾಯಿತು. ಕಾಲಕೇಯರನ್ನು ನಾನು ಗೆಲುವುದಕ್ಕೆ ಹೋದಾಗ ಇವನಿಗೂ ಬಂತು ವಂಶಾಭಿಮಾನ.ಇಲ್ಲಿ ಮನೆಯಳಿಯನಾಗಿದ್ದ. ನನಗೆ ಹಿಂದಿನಿಂದ ಚೂರಿ ಹಾಕುವುದಕ್ಕೆ ಯತ್ನಿಸಿದ. ನಾನವನಿಗೆ ತಂಗಿಯನ್ನು ಮದುವೆ ಮಾಡಿಕೊಡುವವರೆಗೆ ಅವನಿಗೆ ಅವನ ಊರಿನಲ್ಲಿ ಜಾಗವಿರಲಿಲ್ಲ. ಹಾಗಾದರೆ ಸ್ವಾಭಿಮಾನ ದೇಶಾಭಿಮಾನ...ಮೆಚ್ಚೋಣ ತಂಗಿಯ ಗಂಡ ಅಂತ ನೋಡದೆ ತಲೆಕತ್ತರಿಸಿದೆ. ಇವಳಿಗಾದ ನೋವನ್ನೂ ನಾನು ಅರ್ಥಮಾಡಿಕೊಳ್ಳಬಲ್ಲೆ. ಬಹುಕಾಲ ದಾಟಿದ ಮೇಲೆ ಅವಳಿಗೊಂದು ಪತಿಯೋಗವನ್ನು ಒದಗಿಸಿಕೊಡುವುದಕ್ಕೆ ಸಾಧ್ಯವಾದದ್ದು ನನಗೆ. ನಮ್ಮ ದೂರದ ಸಂಬಂಧಿ ಮಾವ ಮಾರೀಚ ಆಮಟ್ಟಿಗೆ ಚೆನ್ನಾಗಿ ದುಡಿದಿದ್ದಾನೆ. ನಿನಗೆ ಗೊತ್ತುಂಟು. ಏನನ್ನು ನೋಡಿ ಅವಳನ್ನು ಗಂಡಸರು ಮದುವೆಯಾಗುವುದು. ಸೌಂದರ್ಯವಾ? ಸ್ವಭಾವವೋ? ಏನಾದರೂ ಒಂದು ಬೇಕಲ್ಲ ಹೆಣ್ಣಿನಲ್ಲಿದ್ದದ್ದು. “
“ಯಾವೂದೇ ಸೌಂದರ್ಯ ಇಲ್ಲದ ಶೂರ್ಪನಖಿ ನನ್ನ ಅನುಗ್ರಹದಿಂದ ವಿವಾಹವಾದಳು. ಆದರೆ ದಾಪಂತ್ಯ ಜೀವನ ಅನುಭವಕ್ಕೆ ಬಾರದೆ ಅಕಾಲದಲ್ಲಿ ವೈಧವ್ಯ ಬಂತು. ನನ್ನಲ್ಲಿ ಹಗೆ ಹುಟ್ಟಿತು.
ಶೂರ್ಪನಖಿಯನ್ನು ದೋಷಿ ಎಂದು ಜರೆವ ಮಂಡೋದರಿಯ ಮಾತಿಗೆ ಒತ್ತು ಕೊಡುವಂತೆ ಶೂರ್ಪನಖಿಯ ವೃತ್ತಾಂತದೊಂದಿಗೆ ತನ್ನ ಅಂತರಂಗವನ್ನು ರಾವಣ ತೋರುವುದಕ್ಕೆ ಪ್ರಯತ್ನಿಸುತ್ತಾನೆ. ಈ ಸನ್ನಿವೇಶ ಬಹಳ ಸುಂದರವಾಗಿ ಸಾಂದರ್ಭಿಕವಾಗಿ ಪ್ರಸಂಗದಲ್ಲಿ ಹೆಣೆಯಲ್ಪಟ್ಟಿದೆ.  ರಾವಣನಿಂದ ರಾಮನನ್ನು ಕಾಣಬೇಕಾದರೆ ರಾವಣನ್ನು ಪೂರ್ಣವಾಗಿ ಅರಿಯದಿದ್ದರೆ ಹೇಗೆ?  ರಾಮ ಹುಟ್ಟುವ ಮೊದಲೇ ರಾಮನಾಮದ ಮೂಲಕ ಅವನನ್ನು  ತಿಳಿದರೂ, ರಾಮನೇನು ಎಂದು ರಾವಣ ಮೂಲಕ ತಿಳಿವಾಗ ಆ ಜ್ಞಾನಕ್ಕೆ ಹೆಚ್ಚು ಅರ್ಥ ಬರುತ್ತದೆ. ದನವನ್ನು ಕಂಡಾಗ ಎಳೆ ಕರು ಹೌ ಹಾರಿ ಹೋದ ಹಾಗೆ..ಹೋಗಿ ತಾಯಿದನದ ಕೆಚ್ಚಲನ್ನು ಕುಟ್ಟಿ ಕುಟ್ಟಿ ಹಾಲು ಕುಡಿದಂತೆ, ಇಲ್ಲಿ ತನಗೆ ಬೇಕಾದ ಅಮೃತ ಪಡೆಯಲು ತಾಯಿಯನ್ನು ಹಿಂಸಿಸಿ ನೋವನ್ನು ಕೊಡುತ್ತದೆ. ಕೊನೆಗೆ ತನಗೆ ಬೇಕಾದ್ದನ್ನು ತನಗೆ ಅರ್ಹವಾದುದನ್ನು ಪಡೆಯುತ್ತದೆ. ಆದರೂ ದನ ಆ ನೋವಿನಲ್ಲು ಸುಖವನ್ನು ಅನುಭವಿಸುತ್ತದೆ. ನೋವು ನಲಿವನ್ನು ಸಮನಾಗಿ ಕಾಣುವ ಬಗೆ ಹೀಗೆ. ರಾಮನನ್ನು ಹಿಂಸಿಸಿ ತನಗೆ ಬೇಕಾದುದನ್ನು ಪಡೆವದು ರಾವಣನ ಧೋರಣೆ.ಹಾಗಾಗಿಯೇ ರಾಮನೊಡನೆ ಸಂಘರ್ಷ.






Friday, July 12, 2013

ಅಂತರಂಗದ ರಾವಣ ಭಾಗ ೪



“ರಾಮನ ವ್ಯಕ್ತಿತ್ವ ದರ್ಶನಕ್ಕೆ ಮೂಲ ಕಾರಣ ರಾವಣ. ರಾಮನ ವ್ಯಕ್ತಿತ್ವ ಅದು ಹೀಗೆ. ಅದೊಂದು ಪರಿಪೂರ್ಣ. ಆದರೆ ಆ ಪರಿಪೂರ್ಣತೆ ಅರಿವಾಗಬೇಕಾದರೆ ಅದು ರಾವಣ ವ್ಯಕ್ತಿತ್ವದೊಂದಿಗೆ  ಘರ್ಷಿಸಬೇಕು. ರಾಮ ರಾವಣರ ಸಂಘರ್ಷಣೆಯ ಮೂಲ ಉದ್ದೇಶವೇ ರಾಮದರ್ಶನ” 

 “ ಪುರಾಣದಲ್ಲಿ ರಾಮನ ವ್ಯಕ್ತಿತ್ವವಾಗಲಿ ಕೃಷ್ಣನ ವ್ಯಕ್ತಿತ್ವವಾಗಲಿ ಅದಕ್ಕೆ ಟಿಪ್ಪಣಿ ವಿವರಣೆಯ ಅಗತ್ಯ ಬೇಡ. ರಾಮನ ವ್ಯಕ್ತಿತ್ವ ಕೃಷ್ಣನ ವ್ಯಕ್ತಿತ್ವ ಜನ ಮಾನಸದಲ್ಲಿ ಅಚ್ಚೊತ್ತಿರುವಾಗ ಅದರ ಬಗ್ಗೆ ಹೆಚ್ಚು ವಿವರಣೆಯ ಅಗತ್ಯವಿರುವುದಿಲ್ಲ. ಆದರೆ ಇದಕ್ಕೆ ಪ್ರತಿಯಾದ ರಾವಣನ ಪಾತ್ರ ಅಥವಾ ಕೌರವನ ಪಾತ್ರಗಳ ಬಗ್ಗೆ ಅರಿವಿಲ್ಲದಿದ್ದರೆ ರಾಮ ಕೃಷ್ಣ ರ ವ್ಯಕ್ತಿತ್ವ ಬೀರಬೇಕಾದ ಪ್ರಭಾವವನ್ನು ಬೀರುವುದೇ ಇಲ್ಲ.” 

“ ಒಬ್ಬ ಪಳಗಿದ ಚಿತ್ರಕಾರ ಚಿತ್ರದ ಬಗ್ಗೆ ಚಿಂತಿಸುವಷ್ಟೇ ಚಿತ್ರದ ಹಿನ್ನೆಲೆಯಬಗ್ಗೆ ಚಿಂತಿಸುತ್ತಾನೆ. ಆ ಚಿತ್ರ ಎದ್ದು ಕಾಣಬೇಕಾದರೆ ಚಿತ್ರದ ಹಿನ್ನೆಲೆ ಬಹಳ ಪ್ರಾಮುಖ್ಯವಾಗಿರುತ್ತದೆ. ಅದರಂತೆ ರಾಮನ ವ್ಯಕ್ತಿತ್ವ. ಆ ವ್ಯಕ್ತಿತ್ವ ದರ್ಶನವಾಗಬೇಕಾದರೆ ಅದಕ್ಕೊಂದು ಹಿನ್ನೆಲೆಯ ವ್ಯಕ್ತಿತ್ವ ಬೇಕಲ್ಲ. ಅದು ರಾವಣನ ವ್ಯಕ್ತಿತ್ವ” 

“ ಹಿನ್ನೆಲೆಯಲ್ಲಿ ಕಪ್ಪು ಇದ್ದಾಗಲೇ ಬಿಳಿ ಚಿತ್ರ ಗೋಚರಕ್ಕೆ ಬಂದು ಗಾಢವಾದ ಪ್ರಭಾವವನ್ನು ಬೀರುತ್ತದೆ. ಇಲ್ಲವಾದರೆ ಅದೊಂದು ಎಲ್ಲ ಬಣ್ಣದಂತೆ ಒಂದು ಬಣ್ಣವಾಗಿ ಕಾಣುತ್ತದೆ. ಆಕಾಶ ಕಪ್ಪಾಗಿದ್ದಾಲೇ ನಕ್ಷತ್ರ ದರ್ಶನವಾಗುವುದು.” 

ಖಳ ಪಾತ್ರಗಳಿಗೆ ಒಂದು ರೂಪವನ್ನು ಕೊಟ್ಟಂತಹ ಶೇಣಿಯವರ ಪ್ರತಿಪಾದನೆಗಳಿವು. ಹಲವು ಸಲ ಪ್ರಶ್ನೆಗಳು ವಿಮರ್ಶೆಗಳು ಎದುರಾದದ್ದು ಉಂಟು. ರಾವಣ ಪಾತ್ರ ವೈಭವೀ ಕರಿಸುವಾಗ ರಾಮನ ಪಾತ್ರ ಗೆಲ್ಲುವುದಿಲ್ಲ. ಮೇಲ್ನೋಟಕ್ಕೆ ಇದು ಸರಿಯಾಗಿರಬಹುದು ಎಂದು ಕಂಡರೂ ಖಳ ವ್ಯಕ್ತಿತ್ವಗಳು ಬೆಳಗುವಾಗ ಪರೋಕ್ಷವಾಗಿ ಪ್ರತಿಸ್ಪರ್ಧಿಯ ಪ್ರಭೆಯನ್ನು ಬೆಳಗಿಸುತ್ತವೆ. ಖಳ ಪಾತ್ರಗಳ ವ್ಯಕ್ತಿತ್ವವನ್ನು ಪರಿಚಯಿಸಿ ಆ ಮೂಲಕ ಹೊಸ ಹಾದಿಯನ್ನು ತೋರಿಕೊಟ್ಟವರು ಶೇಣಿಯವರು. ಇವುಗಳ ವಿಭವಗಳನ್ನು ತೋರುತ್ತ  ಆ ಪಾತ್ರದ ನಿರ್ವಹಣೆಗೂ ಒಂದು ಮಾನದಂಡವನ್ನು ತಂದು ಕೊಟ್ಟವರು. ಆನಂತರ ಇವುಗಳ  ನಿರೂಪಣೆಗಳು ಪ್ರಾಯೋಗಿಕವಾಗಿ ಹಲವು ರೀತಿಯಲ್ಲಿ ಪ್ರಸ್ತುತ ಪಡಿಸಲ್ಪಟ್ಟಿತು. ಆದರೆ ಈಗೀಗ ಖಳ ಪಾತ್ರಗಳಷ್ಟೇ ವೈಭವೀಕರಿಸಲ್ಪಡುತ್ತಾ ಪ್ರತಿಸ್ಪರ್ಧಿಯನ್ನು ಸೋಲಿಸುವುದಷ್ಟೇ ಗುರಿಯಾಗಿಸಿವೇ. ಯಕ್ಷಗಾನ ದ ಅತಿ ಯಶಸ್ವೀ ಪ್ರಸಂಗಳಲ್ಲಿ ಒಂದಾದ ದೇವಿ ಮಹಾತ್ಮೆಯಲ್ಲಿ ಮಹಿಷಾಸುರ ಪಾತ್ರ ಇದಕ್ಕೆ ಸ್ಪಷ್ಟ ಉದಾಹರಣೆ. ಮಹಿಷಾಸುರ ಪಾತ್ರ ಹೇಗಾಯಿತು ಎಂಬ ಮಾನದಂಡವೇ ಒಟ್ಟು ಪ್ರದರ್ಶನದ ಮಾನದಂಡವಾಗಿ ಬದಲಾಗಿದೆ. ಹಲವು ಸಲ ಇದು ಒಂದು ರೀತಿಯ ವಿಕೃತಿದರ್ಶನಕ್ಕೂ ಕಾರಣವಾಗಿದೆ. ದೇವಿಯನ್ನು ನೋಡುವುದಕ್ಕಿಂತ ಜಾಸ್ತಿ ಆದಿನದ ಮಹಿಷಾಸುರ ಪ್ರವೇಶಕ್ಕೆ ಹೆಚ್ಚಿನ ಮಹತ್ವವನ್ನು ಕೊಡುವುದನ್ನು ಕಾಣುವಾಗ ಮನುಷ್ಯನ ಸ್ವಭಾವವೇ ಪ್ರಶ್ನಾರ್ಹವಾಗುತ್ತದೆ. ಹಿರಿಯರು ತುಳಿದ ಹಾದಿಯನ್ನು ತಪ್ಪಾಗಿ ಕಲ್ಪಿಸುವುದರಿಂದ ಆಗುವ ವಿಕಲ್ಪಗಳತ್ತ ಚಿಂತಿಸುವ ಅಗತ್ಯವಿದೆ. ಶೇಣಿಯವರು ಹಲವು ಪಾತ್ರಗಳನ್ನು ತಮ್ಮದೇ ರೀತಿಯಲ್ಲಿ ರೂಪೀಕರಿಸಿ ಮುದ್ರೆಯನ್ನೊತ್ತಿದ್ದರೆ ಅವುಗಳ ವೈವಿಧ್ಯತೆಯೇ ವಿಶಿಷ್ಟವಾಗಿ ಗುರುತಿಸಲ್ಪಟ್ಟಿವೆ. ಅದರಲ್ಲಿ ರಾವಣ ಕೌರವ ಇನ್ನಿತರ ಯಾವುದೇ ಪಾತ್ರಗಳಾದರೂ ಪ್ರತಿಯೋಂದು ಪಾತ್ರವೂ ಸಹ ಅಧ್ಯಯನಕ್ಕೆ ಯೋಗ್ಯವಾಗಿದೆ. 

ಯಕ್ಷಗಾನ ಅರ್ಥಗಾರಿಕೆಯಲ್ಲಿ ಶೇಣಿಯವರಷ್ಟೇ ಅಲ್ಲ ಹಲವಾರು ಘನ ವಿದ್ವಾಂಸರು ಅರ್ಥಗಾರಿಕೆಗೆ ಹೊಸ ದಿಶೆಯನ್ನು ತೋರಿಸಿ ಇದೊಂದು ಸಾಹಿತ್ಯ ಪ್ರಾಕಾರವಾಗುವಂತೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಪ್ರತಿಯೊಂದು ಪಾತ್ರನಿರ್ವಹಣೆಯಲ್ಲೂ ಹೊಸ ಹೊಸ ಅಯಾಮಾಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುತ್ತ ಯಕ್ಷಗಾನ ಅರ್ಥಗಾರಿಕೆಯು ಸಾಹಿತ್ಯ ಶಿಖರದ ಸೋಪಾನವಾಗುವಂತೆ ಮಾಡಿದ್ದಾರೆ. ಯಕ್ಷಗಾನ ಎಂಬುದು ಕೇವಲ ರಂಗಸ್ಥಳದ ಕಲೆಯಾಗಿ ಮಾತ್ರಾ ಬಿಂಬಿಸುವ ಹಾಗಿಲ್ಲ. ಅದರ ಹಲವಾರು ಮುಖಗಳ ದರ್ಶನವಾಗಬೇಕು. ಯಕ್ಷಗಾನ ಎಂದೊಡನೆ ಬಣ್ಣ ಬಣ್ಣದ ಝಗ ಝಗಿಸುವ ವೇಷಭೂಷಣವಷ್ಟೇ ಎಂಬಲ್ಲಿಗೆ ಸೀಮಿತವಾಗಬಾರದು. ಹಿಮ್ಮೇಳ ಪ್ರಕಾರಗಳಲ್ಲಾಗಲೀ, ಅರ್ಥಗಾರಿಕೆಯಲ್ಲಾಗಲೀ ಅದ ಸೃಜನ ಶೀಲತೆಯನ್ನು ಗುರುತಿಸುವ ಯತ್ನ ಮಾಡಬೇಕು.    ಆ ದಿಶೆಯಲ್ಲಿ ಹೊಸ ಸಂಶೋಧನೆ ನಡೆದಲ್ಲಿ ಯಕ್ಷಗಾನ ಅರ್ಥ ಗಾರಿಕೆಗೆ ಸಮಗ್ರವಾದ ಸಂಪನ್ಮೂಲವಾಗಬಲ್ಲುದು. ಕೇವಲ ಯಕ್ಷಗಾನಕ್ಕೆ ಏಕೆ ಸಮಗ್ರ ಸಾಹಿತ್ಯ ಲೋಕಕ್ಕೆ ಇದು ಬಹುದೊಡ್ಡ ಕೊಡುಗೆಯಾಗಬಲ್ಲುದು.

“ಚದುರಂಗ ಸೇನೆಗಾಗಿ ಮರುಗುವವನಲ್ಲ..... “ ಎಲ್ಲವನ್ನೂಕಳೆದು ಕೊಂಡೆವು ಎಂದು ಹಲುಬುತ್ತಿದ್ದ ಮಂಡೋದರಿಗೆ ರಾವಣ ಹೇಳುವ ಮಾತಿದು. ಆದುದರಿಂದಲೇ ವಿಚಾರಿಸಿ ಖೂಳನನು ಮಾಡೆನ್ನ ಅಂತ ಹೇಳೀದ್ದು. ಚದುರಂಗ ಸೇನಾ ನಷ್ಟಕ್ಕೆ ರಾವಣ ಮರುಗಿದನೇ?
          “ಮಂಡೋದರಿ ನಾನು ಏನನ್ನೂ ಕಳಕೊಳ್ಳಿಲ್ಲ..”

“ ಬಂದದ್ದು ಹೋಗಿದೆ ಅಂದ್ರೆ  ಅದು ಕಳಕೊಂಡದ್ದು ಅಲ್ವೇ?”  ಮಂಡೋದರಿಯ ಅಚ್ಚರಿಯ ನುಡಿ. 

“ ಇದು ಮೊದಲೂ ಇರಲಿಲ್ಲ.” 

“” ಹಾಗಾದರೆ ಬಂದದ್ದು ಹೋಗಿದೆ ಅಂದ್ರೆ ಅದು ಕಳಕೊಂಡದ್ದು ಅಲ್ಲ? ಯಾಕೆ ಹೇಳ್ತೇನೆ? ನಾನು ನಾನೆ.  ಎಲ್ಲವೂ ನನ್ನದು ನಾನು ಯಾವುದರದ್ದೂ ಅಲ್ಲ. ಕೆಲವರೆಲ್ಲ ಇದ್ದಾರೆ, ದೊಡ್ಡವರು ಯಾಕೆ? ಉಂಟು ದೊಡ್ಡ ಗಂಟು. ಅದಿಲ್ಲ ಅಂದರೆ ಅವರು ಏನೂ ಅಲ್ಲ. ರಾವಣ ಹಾಗೋ? ರಾವಣನಿದ್ದಾನೋ ಇದು ಎಲ್ಲವು ಯಾವಾಗಲೂ ಉಂಟು. ಬೇಕಾದಾವಾಗ. ಸ್ವಯಂ ಸಂಪಾದಿಸುವ ಸಾಮಾರ್ಥ್ಯ  ಇದ್ದವ ಬಡವ ಅಂತ ಹೇಳಕೂಡದು.  ಬಡವ ಯಾರು? ಈಗ ತಿನ್ನದೇ ಕಟ್ಟಿಡುವವ.  ನಾಳೆಗೆ ಏನು ಮಾಡುವ? ಕಳಕೊಂಡರೆ ಅವನಿಗೆ ಸಂಪಾದಿಸುವುದಕ್ಕಾಗುವುದಿಲ್ಲ. ಸಂಪಾದಿಸುವವನಿಗೆ ಕಳೆದುಕೊಳ್ಳುವ ಹಕ್ಕಿರುವುದು. ಏನು ನನ್ನ ಅಪ್ಪ ನನಗೆ ಕೊಟ್ಟ ಆಸ್ತಿಯೋ ಈ ಲಂಕೆ? ಅಲ್ಲ ನನ್ನಲ್ಲಿ ತುಂಬಿದಂತಹ ಈ ಐಶ್ವರ್ಯ ಏನು ವರದಕ್ಷಿಣೆಯಾಗಿ ಬಂದದ್ದೋ? ಹಾಗಾದರೆ ಎಲ್ಲವೂ ನಾನು ನನ್ನಿಂದ. ಹೀಗೆ ಹೇಳಕೂಡದು ಹೌದು. ಆದರೆ. ರಾಜ ಕಾರಿಣಿಯಾದವ ಅಧ್ಯಾತ್ಮ ವಾದಿಯಲ್ಲ. ಎಲ್ಲ ದೇವರು ಕೊಟ್ಟದ್ದು ಅಂತ ಹೇಳ್ತಾ ಕೂತ್ರೆ ನಾಳೆ ಊರಲ್ಲಿ ಪ್ರಜೆಗಳು “ ಮಹಾರಾಜ ಊರಲ್ಲಿ ಮಳೆ ಇಲ್ಲ ಬೆಳೆ ಇಲ್ಲ” ಅಂಥ ಹೇಳಿದ್ರೆ ದೇವರು ಕೊಟ್ಟಾನು ಅಂತ ಹೇಳ್ಬೇಕಾದೀತು. ಆದರೆ ಅದನ್ನು ಹೇಳುವುಕಕ್ಕೆ ಸಿದ್ಧನಿಲ್ಲದೇ ಇದ್ದಂತಹ ಪ್ರಭು...ಎಲ್ಲವನ್ನು ನಾನೇ ಮಾಡ್ತೇನೆ ಅಂತ ಒಪ್ಪಿಕೊಳ್ಳಬೇಕು. “  

          “ ಚದುರಂಗ ಸೇನೆ... ಇದು ನಾನು ಪ್ರಭುವಾದದ್ದರಿಂದ ಬಂದು ಸೇರಿದ್ದು ಇಲ್ಲಿ. ನನ್ನಿಂದ ಅದು.  ನಾನಾದ ಮೇಲೆ ಅದು. ಎಲ್ಲಾ ಆದ ಮೇಲೆ ನಮ್ಮಲ್ಲಿ ಯಾರು ಮುಖಂಡ? ನೀವೆಲ್ಲ ಕೂಡಿ ನನ್ನನ್ನು ಮುಖಂಡನನ್ನಾಗಿ ಮಾಡಿ ಅಂತ ಬೇಡಿಕೊಂಡವನಲ್ಲ. ನನ್ನ ನಾಯಕತ್ವದಲ್ಲಿ ಚಂದುರಂಗ ಸೇನೆ ವ್ಯವಸ್ಥೆ ನಾನು ಮಾಡಿದ್ದು. ಹಾಗಾಗಿ ಈ ಸಂಪೂರ್ಣ ಸೈನ್ಯ ನನಗೋಸ್ಕರ. ಅದು ನನಗಾಗಿ ನಾಶ ಅದ್ರೆ ಸಂತೋಷ ಪಡುವವ. ಯಾಕೆ? ಇಷ್ಟುದಿನ ಕಟ್ಟಿ ಸಾಕಿದ್ದೇನಲ್ಲ? ಇದು ಪ್ರಯೋಜನಕ್ಕೆ ಒಂದು ಕಾಲದಲ್ಲಿ ಬಿತ್ತು ಅಂತ ಅಂದ್ರೆ ತೃಪ್ತ ನಾನು. “

                ಸೈನಿಕರು ತನಗಾಗಿ ಸತ್ತರೂ ತೃಪ್ತನಾಗುವ ರಾವಣ ತನಗಾಗಿ ಸತ್ತ ಒಬ್ಬನಿಗಾಗಿ ಬಹಳ ಮರುಗುತ್ತಾನೆ. 

ಇಷ್ಟೆಲ್ಲ ಚದುರಂಗ ಸೇನೆ ನನಗಾಗಿ ಪ್ರಾಣ ತೆತ್ತಿತು. ಆದರೂ ಯಾರೂಅಲ್ಲಿ ತಲೆ ಕತ್ತರಿಸುವಾಗ ಜೀವ ಭಯದಿಂದ ರಾಮನಲ್ಲಿ ಶರಣಾಗಲಿಲ್ಲವಲ್ಲ.?   ಆದರೂ ಆದರೂ ಒಬ್ಬ ಜೀವಗಳ್ಳನಾಗಿ ಹೋದನಲ್ಲ ರಾಮನ ಬಳಿಗೆ. ಸಾಹೋದರ್ಯದ ವಿಷಯದಲ್ಲಿ ರಾಮ ಗೆದ್ದು ಬಿಟ್ಟ. ಎಂಥಹಾ ಅವಿಭಕ್ತ ಕುಟುಂಬ ನಮ್ಮದ್ದು. ಅಂಥಹ ಸಾಹೋದರ್ಯ ನಮ್ಮದು. ಅವನಿಗಿರುವ ಸಾಹೋದರ್ಯ ಎಂಥದ್ದು? ತನ್ನ ಬೆವರು ಬೀಳುವಲ್ಲಿ ನೆತ್ತರನ್ನೇ ಹರಿಸ ಬಲ್ಲ ಸಹೋದರ!  ಇಲ್ಲಿ  ಸಾಹೋದರ್ಯವನ್ನು ಗೌರವಿಸುವ ರಾಮ ,  ಹೋದಲ್ಲೆಲ್ಲ ಸಹೋದರ್ಯವನ್ನು ಬೇದಿಸಿಯೇ ಬಿಟ್ಟನಲ್ಲ. ಆ ಒಂದು ವಿಚಾರದಲ್ಲಿ ರಾವಣ ತನ್ನ ಸೋಲನ್ನು ಒಪ್ಪಿಕೊಳ್ಳದೆ ನಿರ್ವಾಹವಿಲ್ಲ. ಯಾಕೆ? ತನ್ನ ತಮ್ಮ ವಿಭೀಷಣನ್ನು ಆ ಕಡೆಗೆ ಸೆಳೆದುಕೊಂಡು ಬಿಟ್ಟನಲ್ಲ. ಇಲ್ಲಿ ಕೆಟ್ಟವ ಅಂತ ಅನ್ನಿಸಿಕೊಂಡರೂ ಅಲ್ಲಿ ಒಳ್ಳೆಯವ ಅಂತ ಹೊಗಳಿಸಿಕೊಂಡ, ವಿಭೀಷಣ...ಒಬ್ಬನನ್ನು ರಾವಣ ಆತ ಬದುಕಿದ್ದರೂ ಕಳೆದುಕೊಂಡ ತಾನು ಕಳೆದುಕೊಂಡರೂ ಆತ ಬದುಕಿದ್ದಾನೆ... ಇನ್ನೊಬ್ಬ ಇನ್ನೊಬ್ಬ...ತನಗಾಗಿ ಸತ್ತು ಅತನನ್ನು ಕಳೆದುಕೊಂಡು ಬಿಟ್ಟ. ಬಲು ದೊಡ್ಡ ನಷ್ಟ. ಎಂತಹಾ ಮಗ ಮೇಘನಾದ. ಅತ್ಮಾವೈ ಪುತ್ರನಾಮಾಸಿ. ಅಪ್ಪ ಮನಸ್ಸಿನಲ್ಲಿ ಭಾವಿಸಿದ್ದನ್ನು ಮಾಡಿತೋರಿಸುವವ. ಆ ಮಟ್ಟಿಗೆ ರಾವಣ ದಶರಥನಲ್ಲಿ ಸ್ಪರ್ಧಿಸಬಹುದಿತ್ತು. ಎಂತ ರಾಮನನ್ನು ಪಡೆದ ದಶರಥ? ಆತ ತಾನು ಸತ್ತು ರಾಮನನ್ನು ಉಳಿಸಿದ.  ಆದರೆ ಎಂತಹ ಪುತ್ರನನ್ನು ಬಲಿಕೊಟ್ಟು ರಾವಣ ಬದುಕಿದ. ರಾವಣ ಮರುಗಿದ.

ಮಗ ಇಂದ್ರಜಿತುವಿನ ಬಗ್ಗೆ ರಾವಣ ಅಂತರಂಗದ ಮಾತುಗಳು...” ಹುಡುಗ ಪಾದ ಮುಟ್ಟಿ ನಮಸ್ಕಾರ ಮಾಡಿಯಾನು ಮುಖ ನೋಡಿ ಅರ್ಥ ಮಾಡಿಕೊಂಡಾನು. ‘ಚಿಂತೆ ಏಕೆಲೆ ಜೀಯಾ? ರಿಪುಕುಲಕೆ ಅಂತಕನು ತಾನು..” ಇಂಥ ಮಕ್ಕಳು ಎಲ್ಲಿದ್ದಾರೆ ಯಾವ ಅಪ್ಪನಿಗಿದ್ದಾರೆ ಅಂತಹ ಇಂದ್ರಾರಿ ರಣವೀಳ್ಯವನ್ನು ಬೇಡಿದ., ನಾನೇಕೆ ಕೊಟ್ಟೆ? ಯಥಾರ್ಥಕ್ಕಾಗಿ ಹೇಳುವುದಾದರೆ..ಸತ್ತ ಸೇನೆಗೆ ಮರುಗೆನು ,ತನ್ನ ಸಾವಿಗೆ ಮರುಗನು ರಾವಣ.ಹೆತ್ತ ಮಕ್ಕಳೊಳ್ ಅಧಿಕನಲ್ಲಾ ಮಗ ಸುರೇಂದ್ರಜಿತು. ಇವತ್ತು ಅವನು ಸತ್ತು ನಾನು ಬದುಕಿದ್ದೇನೆ.  ಹೇಳಬಹುದು,  ಈಗ ಯಾಕೆ ನಿಮಗೆ ಈ ನೆನಪು ಬಂತು?  ಇದು ನೆನಪು ಬಂದದ್ದಲ್ಲ ವಿಭೀಷಣನಿಂದಾದ ವೃಣ ಕೆದಕಲ್ಪಟ್ಟಿತು. ಇಂದ್ರಾರಿಯ ಮರಣದಿಂದ ಆ ವೃಣ ಕೆದಕಲ್ಪಟ್ಟು ಎಲ್ಲ ನೆನಪಿಗೆ ಬಂತು. ಇಲ್ಲಿ ಬಂದಾಗ  ಹಿಂದೆ ನಡೆದದ್ದೆಲ್ಲ ನೆನಪಿಗೆ ಬಂತು. ಇಲ್ಲಲ್ಲವೇ ಇಂದ್ರಾರಿಗೆ ಕಟ್ಟಿದ್ದು,. ಬಂಗಾರದ ತೊಟ್ಟಿಲಲ್ಲಿ ಮಲಗಿಸಿ ಮಂಡೋದರಿ ಇಲ್ಲಲ್ಲವೇ ತೂಗಿದ್ದು. ಒಂದು ಬಾರಿ ಆ ಶಿವ ಪಾರ್ವತಿಯರಿಗೆ ಜೋಗುಳ ಹಾಡಿದ್ದೆ . ಈ ಇಪ್ಪತ್ತು ಕೈಗಳಲ್ಲಿ ಇಡೀ ಕೈಲಾಸವನ್ನೇ ಜೋಗುಳ ಹಾಡಿ ತೂಗಿದ್ದೆ. ಮತ್ತೊಮ್ಮೆ ನನ್ನ ಇಪ್ಪತ್ತು ಕೈಗಳನ್ನು ತೊಟ್ಟಿಲಾಗಿ ತೂಗಿದ್ದು ಆ ಪುತ್ರೋತ್ಸವದಲ್ಲಿ. ಅದರೆ ಅದು ಅರ್ಥ ಹೀನವಾಯಿತು. ಇದು ನಿಷ್ಫಲವಾಯಿತು. ಎಲ್ಲಿದೆ? ರಾವಣನ ಜೀವನದಲ್ಲಿ ಜೀವರಸ ಎಲ್ಲಿದೆ? ಆದರೂ ಬದುಕಿದ್ದೇನೆ ಯಾಕೆ ಬದುಕಿದ್ದೇನೆ? ಅರ್ಥಪೂರ್ಣವಾದ ಬದುಕನ್ನೇ ನಾನು ಸಾಗಿಸಿದವ. ಇನ್ನು ಬದುಕು ಇದ್ದಷ್ಟು ದಿವಸ ಅದು ಅರ್ಥ ಪೂರ್ಣವಾಗಬೇಕು ಎಂದು ಹಟತೊಟ್ಟವ. ಆದಕಾರಣ ನಿನ್ನ ರಾಮನೋ ರಣ ಭೀಮನೋ..


(ಮುಂದುವರೆಸುವ ಪ್ರಯತ್ನದಲ್ಲಿ)






Saturday, July 6, 2013

ಭಾಗವತೋ ಅಭಿನಂದನಮ್




ನಮ್ಮ ಮಿತ್ರರ ಅಥವ ನಮ್ಮ ಆತ್ಮೀಯರಲ್ಲಿ ಯಾರೋ ಒಬ್ಬರು ಮದುವೆಯಾಗಲು ಯೋಗ ಕೂಡಿಬರದೆಯೋ ಸಂಗಾತಿಯ ಹೊಂದಾಣಿಕೆಯಾಗದೆಯೋ ಹಲವರ ಮರುಕಕ್ಕೆ ಕಾರಣರಾಗುತ್ತಾರೆ. ಎಲ್ಲಾ ಅರ್ಹತೆ ಇದ್ದು ಮದುವೆಯ ಯೋಗ ಕೂಡದೇ ಇದ್ದಲ್ಲಿ ಏನು ಮಾಡೋಣ?  ಮದುವೆಯಾಗಲಿಲ್ಲ ಹೆಣ್ಣು ಅಥವಾ ಗಂಡು ಸಿಗಲಿಲ್ಲ ಎಂದು ಆತ ತನ್ನ ಸ್ವಭಾವ ಬದಲಿಸಿ ಕೆಟ್ಟವನಾಗುವುದಕ್ಕೆ ಸಾಧ್ಯವೇ? ಬಂದದ್ದು ಅನುಭವಕ್ಕೆ ಎಂದು ಪ್ರಾರಭ್ದದ ಹಾದಿಯನ್ನು ಸವೆಸುತ್ತಾ ಬದುಕುವುದು ರೂಢಿ. ಆದರೆ ಅಂಥವನು ಒಂದು ದಿನ ತನ್ನ ಮದುವೆ ಆಮಂತ್ರಣ ಹಿಡಿದು ಕೈ ಮುಂದೆ ಒಡ್ದಿದಾಗ ಕಿರುನಗುವೊಂದು ಬರದೆ ಉಳಿಯಲು ಸಾಧ್ಯವೇ? ಆ ಆಮಂತ್ರಣ ಓದುತ್ತಿದ್ದಂತೆ ಸಂಭ್ರಮಿಸುವ ಮನಸ್ಸಾಗುತ್ತದೆ. ಮದುವೆಯ ದಿನಾಂಕ ನೋಡಿ ತಮ್ಮ ಪುರುಸೊತ್ತನ್ನು ಲೆಕ್ಕ ಹಾಕುತ್ತದೆ ನಮ್ಮ ಮನಸ್ಸು.  ಇತ್ತೀಚೆಗೆ  “ ರಘುರಾಮಾಭಿನಂದನಮ್” ಎಂಬ ಆಮಂತ್ರಣದ ಕರೆಯೋಲೆ ನೋಡಿದಾಗಲೂ ಇದೇ ಭಾವ ಸುಳಿದುದಕ್ಕೆ ಅಚ್ಚರಿ ಪಡಬೇಕೋ ತಿಳಿಯದು.  ಯಾಕೆಂದರೆ ಯಕ್ಷಗಾನದ ತಮ್ಮ ಪ್ರತಿಭೆಯಿಂದ ಹಿರಿಯ ದೈತ್ಯ ಭಾಗವತ ಅಂತಲೇ ಹೇಳಬಹುದು ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ಸನ್ಮಾನಿಸಲ್ಪಡುತ್ತಾರೆ ಎಂದಾಗ ಮುಖದಲ್ಲಿ ಕಿರುನಗುವೊಂದು ಮೂಡದೇ ಇದ್ದರೆ,  ಅವರ ಹಾಡುಗಾರಿಕೆಗೆ ಕೈಚಪ್ಪಾಳೆ ತಟ್ಟಿದುದಕ್ಕೆ ಅರ್ಥಉಂಟೇ? 


ತನ್ನ ಪ್ರತಿಭೆಗೆ ತಾನೇ ಬೆನ್ನು ತಟ್ಟಿಕೊಳ್ಳುವುದು., ತನಗೆ ಪ್ರಶಸ್ತಿಗಾಗಿ ತಾನೇ ಅರ್ಜಿಗುಜರಾಯಿಸಿ ವ್ಯವಹಾರ ಕುದುರಿಸುವುದು. ತನ್ನ ಕಲಾಪ್ರೋತ್ಸಾಹಕ್ಕೆ ತಾನೇ ಗುಂಪು ಕಟ್ಟಿ ಚಪ್ಪಾಳೆ ಹೊಡೆಸುವುದು...ಇದೆಲ್ಲ ಇಂದಿನ ಕಲಾ ಪ್ರಪಂಚದಲ್ಲಿ ಸಾಮಾನ್ಯವಾಗುವ ಅಂಶ. ಒಂದೆರಡು ರಾಗ ಕಲಿತವನು ವಾಸ್ತವದಲ್ಲಿ ಅದೂ ದೊಡ್ಡ ಸಾಧನೆಯೇ. ಆದರೂ ಒಂದೆರಡು ರಾಗ ಪಾಂಡಿತ್ಯಕ್ಕೆ ಗಾನ ಗಂಧರ್ವನೋ ಗಾನ ಕೋಗಿಲೆಯೋ ಆಗಿ ಸಪ್ತಾಹ ಆಚರಿಸಿ ಶಾಲು ಹೊದೆಸಿಕೊಳ್ಳುವುದು ಇದೆಲ್ಲ ಒಂದು ಸಾಮಾರ್ಥ್ಯಕ್ಕೆ ನಿದರ್ಶನವಾಗುತ್ತದೆ.  ಒಂದು ಸಿನಿಮಾದಲ್ಲಿ ನಟಿಸಿದ ಕೂಡಲೇ (ಸಖತ್ತಾಗಿ ಫೈಟಿಂಗ್ ಸಾಂಗುಗಳಲ್ಲಿ) ಮಿಂಚಾಗುತ್ತಾನೆ. ಯಾವುದೋ ಒಂದು ಸ್ಟಾರ್ ಬಿರುದು ಅದೂ ಕನ್ನಡ ನಟನಿಗೆ ಬಂದು ಬಿಡುತ್ತದೆ. ಹುಚ್ಚು ಕುರುಡು ಅಭಿಮಾನ ಹೆಚ್ಚಿಸುವುದೇ ಆ ನಟನ ವ್ಯವಹಾರ ಕುಶಲತನಕ್ಕೆ ನಿದರ್ಶನವಾಗುತ್ತದೆ. ಹಾಗೆ ಅಭಿಮಾನ ಹೆಚ್ಚಿದಂತೆ ಆತನ ಕಾಲ್ ಶೀಟ್ ಸಂಭಾವನೆ ಕೂಡ ಹೆಚ್ಚುತ್ತಾ ಸಾಗುತ್ತದೆ. ಇದಕ್ಕೆ ಅವನ ಭಂಡವಾಳ ಏನೂ ಇರುವುದಿಲ್ಲ. ಈ ನಡುವೆ  ಹೆಚ್ಚಿದ ಸಂಭಾವನೇ ಕೂಡ ಒಂದು ಮಾನದಂಡ (ಮಾನವೇ ದಂಡ) ವಾಗಿರುತ್ತದೆ. ಪರೋಕ್ಷವಾಗಿ ನಿರ್ಮಿಸುವ ಸಿನಿಮಾ ಬಜೆಟ್ ಕೂಡ ಹೆಚ್ಚುತ್ತದೆ. ಈ ಮಧ್ಯೆ ಬಡ ಪ್ರೇಕ್ಷಕ ಮಾತ್ರ ತನ್ನ ಕಿರು ಸಂಪಾದನೆಯಿಂದ ಟಿಕೆಟ್ ತೆಗೆದು ಈ ಬಜೆಟ್ ನ್ನು ತುಂಬಿಸುತ್ತಾನೆ. ಪರೋಕ್ಷವಾಗಿ ನಟನ ಐಷಾರಾಮಿ ಜೀವನದ ಪಲ್ಲಂಗ ಸುಖಕ್ಕೆ ಈತ ಕಷ್ಟ ಪಟ್ಟು ದುಡಿದ ಚಿಕ್ಕಾಸು ದೇಣಿಗೆಯಾಗಿ ಸಲ್ಲುವುದು ಪ್ರೇಕ್ಷಕನ ಅರಿವಿಗೇ ಬರುವುದಿಲ್ಲ. ಈತ ಸ್ಟಾರ್ ಗಿರಿ ಕೊಟ್ಟು ಅತನನ್ನು ಮೇಲಕ್ಕೆ ಏರಿಸಿಯಾಗಿಬಿಟ್ಟಿದೆ. ಇದಕ್ಕೆ ಕಲಾ ಸೇವೆಯ ಲೇಬಲ್ ಬೇರೆ. ಯಾವೋಬ್ಬ ನಟನೂ ತನ್ನ ಅಭಿಮಾನಿಗಾಗಿ ಸಂಭಾವನೆ ಇಲ್ಲದೇ ನಟಿಸಿದ ದೃಷ್ಟಾಂತ ಇದೆಯೇ? 

 ಈಗಿನ ಕಲಾ ಪ್ರಪಂಚ ವ್ಯಾಪಾರೀ ಮಯವಾಗಿದೆ  ಕೇವಲ ಕಲಾಸಂಪತ್ತು ಮಾತ್ರ ಇದ್ದರೆ ಸಾಲದು ವ್ಯವಹಾರ ಕುಶಲಿಗಳೂ ಆಗಿರಬೇಕು. ಈಗಿನ ಕಲಾಪ್ರಪಂಚ ಎಂದರೆ,  ಮೊದಲು ಊರಿನ ಗೋಳಿ ಮರದ ಅಡಿಯಲ್ಲಿ ಆಗುವ ವಾರದ ಸಂತೆಯನ್ನು ಜ್ಞಾಪಕಕ್ಕೆ ತರುತ್ತದೆ. ಸಂತೆಯಲ್ಲಿ ಹೇಗೆ? ತನ್ನಲ್ಲಿದ್ದ ವಸ್ತುವಿಗೆ ಗ್ರಾಹ್ಯ ಗುಣವಿಲ್ಲದೇ ಇದ್ದರೂ ಅದನ್ನು ತುಂಬಿಸಿ, ಅದಕ್ಕೆ ಬೇಡಿಕೆಯನ್ನು ಸೃಷ್ಟಿಸಬಲ್ಲವನು ನಿಜವಾದ ವ್ಯವಹಾರ ಕುಶಲಿ ವ್ಯಾಪಾರಿಯಾಗುತ್ತಾನೆ. ಬೇಡಿಕೆ ಕೃತ್ರಿಮದ್ದಾದರೂ ವ್ಯಾಪಾರ ಲಾಭದಾಯಕವಾಗಿರುತ್ತದೆ. ಅದೇ ಅಲ್ಲವೇ ಆಗಬೇಕಾದದ್ದು. ವ್ಯಾಪಾರ ಎನ್ನುವುದೇ ಅದಕ್ಕೆ. ಇಲ್ಲಿ ಎಲ್ಲ ಪ್ರಯೋಗಗಳೂ ಸಹಜ ಮತ್ತು ನ್ಯಾಯಯುತವಾದದ್ದು ಎನಿಸಲ್ಪಡುತ್ತದೆ. ಆದರೆ ಕಲಾ ಪ್ರಪಂಚದಲ್ಲೂ ಇದೇ ಸಹಜವಾದಾಗ ನಿಜವಾಗಿ ಕಲಾಸ್ವಾದಿ ನೈಜ ಕಲೆ ಮರೆಗೆ ಸರಿದಂತೆ ತಾನು ಮರೆಗೆ ಸರಿಯುತ್ತಾನೆ. 

ಹೊಳ್ಳಣ್ಣನಿಗೆ ಸನ್ಮಾನ ಆಗುವುದೇ ಅಪರೂಪ. ಬಹಶಃ ಮಳೆ ಬಾರದೆ ಮೋಡ ಕಪ್ಪಾಗಿ ಕಪ್ಪಾಗಿ ಗಾಳಿಯ ರಭಸಕ್ಕೆ ಎಲ್ಲೋ ಹೋದಂತೆ ಮತ್ತೊಂದು ದಿನ ಇದ್ದಕ್ಕಿದ್ದಂತೆ ಯಾವುದೇ ಸೂಚನೆಇಲ್ಲದೇ ಧೋ ಎಂದು ಮೇಘವರ್ಷವಾದರೆ...? ಹಾಗೆ ಎಂತಹ ಸನ್ಮಾನ ನೋಡಿ ಮೂರು ದಿನ ಅತ್ಯಂತ ವಿಭವದಲ್ಲಿ ವೈವಿಧ್ಯಮಯ ಸನ್ಮಾನ ಕಾರ್ಯಕ್ರಮ. ಅದು ಯಕ್ಷಗಾನ ಕೇಂದ್ರವಾದ ಮಂಗಳೂರು ಪುರಭವನದಲ್ಲಿ.ನಿಜಕ್ಕೂ ಇದು ಶ್ಲಾಘನೀಯ ಕಾರ್ಯಕ್ರಮ. ಮಿತ್ರನ ಮದುವೆಗೆ ಹೋಗಲಿಕ್ಕೆ ಆಗುತ್ತದೋ ಇಲ್ಲವೋ ಬೇರೆ ಮಾತು.. ಆದರೆ ಮದುವೆ ಅಗ್ತ್ತದಲ್ಲ ಅದಕ್ಕಿಂತ ಸಂತೋಷ ಬೇರೆ ಇರದು. 

ಹೊಳ್ಳಣ್ಣ ಯಕ್ಷಗಾನ ಕಂಡ ಅದ್ಭುತ ಭಾಗವತ. ದೈತ್ಯ ಕಂಠದ ದೈತ್ಯ ಪ್ರತಿಭೆಯ ಕಿರು ಶರೀರದ ಭಾಗವತ. ಹಲವು ಸಲ ರಂಗಸ್ಥಳದ ಸಿಂಹಾಸನದ ಹಿಂದೆ ಇವರು ಕಾಣುವುದೇ ಇಲ್ಲವೇನೋ ಎನ್ನಿಸಿದರು ಹೊರ ಹೊಮ್ಮುವ ಏರು ಶ್ರುತಿಯ ಸ್ವರ ಮಾತ್ರ ಅದ್ಭುತ ಎನಿಸಲ್ಪಡುತ್ತದೆ. ಅದು ಕಂಠದ ಪೂರ್ಣ ಸಾಮಾರ್ಥ್ಯಕ್ಕೆ ಸವಾಲು ಹಾಕಿದ ಹಾಗಿರುವ ಸ್ವರ. ಇಷ್ಟಾದರೂ ಸಲೀಸಾದ ಮುಖಭಾವ. ಸಹಕಲಾವಿದರನ್ನು ಪ್ರಚೋದಿಸುವ ಹಾವಭಾವ. ಎಲ್ಲೇಲ್ಲಿಯೋ ನೋಡಿ ಮಾತಾಡಿ ವಾಹನ ಚಲಾಯಿಸಿದರೂ ವಾಹನ ರಸ್ತೆಯಲ್ಲಿ ಸುರಕ್ಷಿತವಾಗಿ ಸಾಗಿದಂತೆ ಇರುವ ಗಾಯನ ಶೈಲಿ ನಿಜಕ್ಕೂ ಅದ್ಭುತ ಪ್ರತಿಭೆ. ತಾಳ ಬಡಿಯದೇ ಇದ್ದರೂ ಶೂನ್ಯವಾಗಿ ಇದ್ದ ತಾಳ ಧುತ್ತನೇ ಪ್ರತ್ಯಕ್ಷವಾದ ಹಾಗೆ ಇರುವ ಲಯಶುದ್ದಿ. ಇದು ಕೇವಲ ಪ್ರತಿಭೆ ಮಾತ್ರ ಇದ್ದರೆ ಸಾಲದು ಸಾಧನೆಯೂ ಬೇಕಾಗುತ್ತದೆ. ಈ ಮಟ್ಟಿಗೆ ಹೊಳ್ಳರದ್ದು ಅದ್ವಿತೀಯ ಸಾಧನೆ. ಪದ ಹೇಳುತ್ತಾ ಪಕ್ಕದವರೋಂದಿಗೇ ಕೈಸನ್ನೇ ಕಣ್ಸನ್ನೇಯಲ್ಲಿ ಮಾತನಾಡುತ್ತಾ ನಂತರದ ಚರಣವನ್ನು ಅದೇ ವೇಗದಲ್ಲಿ ಅದೇ ಲಯದಲ್ಲಿ ತೆಗೆಯುತ್ತಾರೆ. ಅದು ಎಷ್ಟು ಸಲೀಸು...? ಅಚ್ಚರಿಯಾಗದೇ ಇರಲು ಸಾಧ್ಯವೇ?

ಅರ್ಜಿ ಗುಜರಾಯಿಸದೇ ಪಾಠ ಒಪ್ಪಿಸದೇ ಖಾಸಗಿಯಾಗಿ ಅಭಿಮಾನಿಗಳಿಂದ ಸಿಗುವ ಸ್ವಯಂಪ್ರೇರಿತ ಸನ್ಮಾನ,  ಕಲಾವಿದನೆನ್ನಿಸಿಕೊಂಡವನಿಗೆ ಬಹಳ ಮೌಲ್ಯವನ್ನು ತರುತ್ತದೆ. ಇಲ್ಲಿ ಯಾವ ವಶೀಲಿಯಾಗಲೀ ಯಾವುದೇ ಅಂಧಾಭಿಮಾನವಿಲ್ಲದೆ ಅಪ್ಪಟ ಅಭಿಮಾನದಿಂದ ಸನ್ಮಾನ ನಡೆಯುತ್ತಿದ್ದರೆ ಅದಕ್ಕೆ ನಮ್ಮ ಹೊಳ್ಳಣ್ನನಷ್ಟು ಅರ್ಹವ್ಯಕ್ತಿ ಬೇರೆ ಇಲ್ಲ.
ನಮ್ಮ ಹೊಳ್ಳಣ್ಣನಿಗೆ ಶುಭ ಹಾರೈಕೆಗಳನ್ನು ಹಾರೈಸುತ್ತಾ ಸಂಭ್ರಮದಿಂದ ಸನ್ಮಾನಿಸುವ ಕಲಾಭಿಮಾನಿಗಳಿಗೆ ಈ ಮೂಲಕ ಶುಭ ಹಾರೈಕೆಗಳನ್ನು ಹಾರೈಸುತ್ತೇನೆ.
ಯಕ್ಷಗಾನಂ ಗೆಲ್ಗೆ

Saturday, June 29, 2013

ಅಂತರಂಗದ ರಾವಣ ಭಾಗ ೩


ರಾಮಾಯಣದಲ್ಲಿ ಬಹು ಮುಖ್ಯವಾಗಿ ಎರಡು ಪುರುಷ ಪಾತ್ರಗಳು ಎಷ್ಟು ಪ್ರಾಮುಖ್ಯವಾಗಿದೆಯೋ ಹಾಗೇ ಎರಡು ಸ್ತ್ರೀ ಪಾತ್ರಗಳು. ಸೀತಾ ಮತ್ತು ಮಂಡೋದರಿ. ಇಬ್ಬರೂ ಪತಿವೃತಾ ಸಾಧ್ವಿಯರು. ರಾಮ ಮರ್ಯಾದಾ ಪುರುಷೋತ್ತಮನಾಗಿ ಅದರ್ಶಗಳನ್ನೇ ಪ್ರತಿಪಾದಿಸಿದ ವ್ಯಕ್ತಿತ್ವವಾದರೆ ರಾವಣನ ತದ್ವಿರುದ್ಧ ವ್ಯಕ್ತಿತ್ವದಿಂದ ದ್ವಂದ್ವ ಸಂಘರ್ಷವನ್ನೇ ಮಾಡುತ್ತ ಇದ್ದರೆ ಈ ವಿಭಿನ್ನ ವ್ಯಕ್ತಿತ್ವದ ನೆರಳಾಗಿ ಈ ಸ್ತ್ರೀ ವ್ಯಕ್ತಿತ್ವಗಳು ಈ ಘರ್ಷಣೆಯ ಉರಿಗೆ ಸಿಕ್ಕಿಬೀಳುತ್ತವೆ. ರಾವಣ ದುರುಳನಾದರೂ ಪತಿವೃತಾ ಮಂಡೋದರಿಯನ್ನು ಹೊಂದಿದವನು. ತನ್ನ ಪತ್ನಿ ಪತಿವೃತೆಯಾದರೂ ತನ್ನ ವ್ಯಕ್ತಿತ್ವವನ್ನು ಇದಕ್ಕೆ ತದ್ವಿರುದ್ದವಾಗಿ ರೂಢಿಸಿಕೊಂಡವನು. ಬಹಳಷ್ಟು ಹೆಣ್ಣು ಮಕ್ಕಳನ್ನು ಬಲವಂತವಾಗಿ ದಮನಿಸಿ, ದಾರ್ಷ್ಟ್ಯತನದಿಂದ ತನ್ನಾಧೀನ ಇರಿಸಿಕೊಂಡವನು. ಇಂತಹ ದುರುಳ ರಾವಣನಿಗೆ ಮಂಡೋದರಿಯಂತಹ ಪತಿವೃತೆ ಇದು ವಿಪರ್ಯಾಸ.  ತನ್ನಾಧೀನ ಬಹಳಷ್ಟು ಹೆಣ್ಣುಗಳಿದ್ದರೂ ಮನಸ್ಸು ವ್ಯಾಕುಲಗೊಂಡಾಗ ಅಲ್ಲೆಲ್ಲೂ ಸಿಗದೇ ಇರುವದ್ದನ್ನು ಮಂಡೋದರಿಯ ಅಂತಃ ಪುರದಲ್ಲಿ ಅರಸಿ ಬರುತ್ತಾನೆ. ರಾವಣ ಪರಮ ಶಿವಭಕ್ತ,  ಬ್ರಾಹ್ಮಣನೂ ಹೌದು ರಾಕ್ಷಸನೂ ಹೌದು. ವಿಭಿನ್ನ ವ್ಯಕ್ತಿತ್ವದ ದ್ವಂದ್ವಗಳನ್ನೆಲ್ಲಾ ತನ್ನೊಳಗೆ ಗೂಢವಾಗಿಸಿದ ರಾವಣನ ಅಂತರಂಗ ಇನ್ನೂ ಗೂಢವಾಗಿ ಅದು ಅವನ ಅರಿವಿಗೇ ಬಂದಿರುತ್ತದೆ. ಈ ರಾವಣನ  ಅಂತರಂಗ ತೆರೆದುಕೊಳ್ಳುವುದೇ ಮಂಡೋದರಿಯ ಅಂತಃ ಪುರದಲ್ಲಿ.  ರಾವಣ ವಧೆ ಅಥವ ರಾವಣ ಮೋಕ್ಷ ಪ್ರಸಂಗದ ಬಹು ಮುಖ್ಯ ಸನ್ನಿವೇಶ ಇದು. ಯಕ್ಷಗಾನ ಬಯಲಾಟದಲ್ಲೂ ತಾಳ ಮದ್ದಲೆಯಲ್ಲೂ ಇದಕ್ಕೆ ಬಹಳ ಮಹತ್ವ. ಆದರೂ  ತಾಳಮದ್ದಲೆಯಲ್ಲಿ ಈ ಸನ್ನಿವೇಶ ವಿಸ್ತರಿಸಿದಷ್ಟು ಯಕ್ಷಗಾನ ಬಯಲಾಟದಲ್ಲಿ ತೆರೆದುಕೊಳ್ಳುವುದಿಲ್ಲ.  ಮುಂದಿನ ಸನ್ನಿವೇಶ ಮಂಡೋದರಿಯ ಅಂತಃ ಪುರದಲ್ಲಿ ಏಕಾಂಗಿಯಾಗಿ ತಳಮಳಿಸುತ್ತಾ ಇದ್ದರೆ,  ಮಂಡೋದರಿ ತನ್ನ ಪತಿ ತನ್ನ ಅಂತಃಪುರದಲ್ಲಿ ಏಕಾಂಗಿಯಾಗಿದ್ದಾನೆ ಎಂದು ತಿಳಿದು ಬರುತ್ತಾಳೆ. ಎಂದು ಇಲ್ಲದ ರಾವಣನ ದುಗುಡ ಇಂದು ಬಹಿರಂಗವಾಗಿ ಕಾಣುತ್ತಾಳೆ.  ಮೂಡಂಬೈಲು ಶಾಸ್ತ್ರಿಗಳು ಮಂಡೋದರಿಯ ವ್ಯಕ್ತಿತ್ವವನ್ನು ಸಾದರ ಪಡಿಸುವ ರೀತಿ ಬಹಳ ಅದ್ಭುತವಾಗಿದೆ.

“ ದುರುಳ ನೀ ತೆರದೊಳು ತರಹರ ಗೊಳುತಿರೆ........”

“ಶಿವ ಶಿವಾ ನಮ್ಮ ಮನೆಯಲ್ಲಿ ನಮ್ಮಲ್ಲೇ ಈ ರೀತಿಯಾದ ಅಪಶಬ್ದವನ್ನು ನಾನು ಈ ಕಿವಿಯಿಂದ ಕೇಳಿಯೇನು ಅಂತ ಭಾವಿಸಿರಲಿಲ್ಲ. ಅದೋ ದಾಸಿಯರು ಈಗಿಂದೀಗ ಹೇಳುವ ಮಾತೇನು. ಅಂತಃ ಪುರದ ಕಡೆಗೇ ಅರಸರು ಬಂದಿದ್ದಾರೆ. ಬಹಳಷ್ಟು ತರಹರ ಗೊಳ್ಳುತ್ತಿದ್ದಾರೆ. ಮನಶ್ಯಾಂತಿ ಸ್ವಲ್ಪವೂ ಇಲ್ಲದೆ ಅಶಾಂತಿಯಿಂದ ಏನೋ ಕೊರಗುತ್ತಾ ಅಲ್ಲಿ ಬಸವಳಿದು ತನ್ನ ಮನಸ್ಸಿನಲ್ಲೇ ಏನೋ ಚಿಂತಿಸುತ್ತಿದ್ದಾರೆ. ಜತೆಯಲ್ಲೇ ಹೇಳಿದರು ನಮ್ಮಲ್ಲಿ ರಾವಣನನ್ನು ದುರುಳ ಅಂತ ಹೇಳುವುದಕ್ಕೆ ತೊಡಗಿದ್ದಾರೆ. ಅಯ್ಯೋ ರಾವಣೇಶ್ವರ ಮಹಾ ಪ್ರಭುಗಳು !  ಈ ರೀತಿಯ ಕೆಟ್ಟ ಶಬ್ದಗಳು !!  ಅದನ್ನು ನಾನು ಕೇಳುವಂತಾಯಿತಲ್ಲ?  ಒಬ್ಬ ಪತಿವೃತೆಯಾದ ಸ್ತ್ರೀ ಯಾವುದನ್ನು ಕಿವಿಗಳಿಂದ ಕೇಳಬಾರದೋ ಅಂತಹ ಒಂದು ಧ್ವನಿ, ಒಂದು ಶಬ್ಧ,  ಇತ್ತೀಚಿನ ದಿನಗಳಲ್ಲಿ ನಮ್ಮವರು ಬಹಳಷ್ಟು ಮಾನಸಿಕ ಯಾತನೆಯಲ್ಲಿದ್ದಾರೆ ಅಂತ ನಮಗೆ ಅರ್ಥವಾಗಿದೆ. ಆದರೆ ಬಹಿರಂಗಗೊಳಿಸುತ್ತಿರಲಲ್ಲ. ಏನೋ ಮೊನ್ನೆ ಮೊನ್ನೆ ಮಕರಾಕ್ಷ ಮಡಿದಾಗ ಸಭೆಯಲ್ಲೇ ಒಮ್ಮೆ ದುಃಖ ಪಟ್ಟಿದ್ದರಂತೆ. ನಮ್ಮಲ್ಲಿ ಹೇಳಿದ್ದರು ದಶಮುಖ ಧೈರ್ಯಗುಂದಿ ಕ್ಲೇಶತಾಳಿ ತರಹರಿಸುತ್ತಾ ಅಲ್ಲೇ ಒರಗಿದ್ದರು ಅಂತ. ಆದರೆ ಅಂತಃ ಪುರಕ್ಕೆ ಬರಲಿಲ್ಲ ಆ ದುಃಖ.  ಅವರು ಮನಸ್ಸು ಮಾಡ್ಲಿಲ್ಲ. ಪತ್ನಿಯಲ್ಲ ಇದನ್ನು ತೋರ್ಪಡಿಸಬಾರದು ಅಂತ ಇದ್ದಿರಬೇಕು. ನಾನೂ ಹಾಗೆ ಇತ್ತೀಚೆಗೆ ಅವರನ್ನು ಸಾಕಷ್ಟು    ಪ್ರಾಮಾಣಿಕವಾದ ವ್ಯವಹಾರದಿಂದ ಅವರ ಮನಸ್ಸಿಗೆ ಒಂದಿಷ್ಟು ನೋವಾಗದ ಹಾಗೆ ನೋಡಿಕೊಳ್ಳಬೇಕು ಅಂತ ಬಯಸ್ತಿದ್ದದ್ದು.  ಇಂದಿನ ದಿನಗಳಲ್ಲಾದರೆ ನಾನೊಬ್ಬಳೇ ಅಲ್ಲ, ಹಲವಾರು ಮಂದಿ ರಾಣಿಯರು ರಾವಣೇಶ್ವರನ ಸುಖಕ್ಕೋಸ್ಕರವಾಗಿ ಸಾಕಷ್ಟು ಶ್ರಮಿಸ್ತಾ ಇದ್ದರು. ಆದರೆ ಈಗೀಗ ಅಂತು ಆದಿನ ಕಳೆದು ಹೋಗಿದೆ ಅಂತ ಅನ್ನಿಸ್ತಾ ಇದೆ. ಕೆಲವರಂತು ಮಕ್ಕಳು ಸತ್ತು ಹೋಗಿದ್ದಾರೆ ಅಂತ ಅಳುತ್ತಿದ್ದಾರೆ. ಕೆಲವರಂತೂ ಇನ್ನೇನು ಈ ಪ್ರಪಂಚದಲ್ಲಿ ಉಳಿದದ್ದಿಲ್ಲ. ನಾವು ರಾವಣೇಶ್ವರನ ಜತೆ ಓಡಿ ಬಂದದ್ದೇ ತಪ್ಪಾಯ್ತು ಅಂತ ಹೇಳ್ತಿದ್ದಾರೆ. ಕೆಲವರಂತೂ ತಂದ ಒತ್ತಾಯಕ್ಕೆ ಕಟ್ಟು ಬಿದ್ದು ನಾವು ಒಲಿದೆವಲ್ಲಾ ? ಇನ್ನು ನಮಗೆ ಯಾರಿದ್ದಾರೆ ಅಂತ ಅಳುತ್ತಿದ್ದಾರೆ. ಆದರೆ ನಾನು ಹಾಗಲ್ಲ. ನಾನು ಕಟ್ಟೊತ್ತಾಯಕ್ಕೆ ಬಂದವಳಲ್ಲ. ಪತಿಯನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ, ನನ್ನ ಅಪ್ಪನಿಂದ ಧಾರಾದತ್ತವಾಗಿ ಕೊಡಲ್ಪಟ್ಟು, ರಾವಣೇಶ್ವರನೇ ಸರ್ವಸ್ವ ಅಂತ ತಿಳಿದು ಮನೆ ಹೊಕ್ಕವಳು ನಾನು. ರಾವಣೇಶ್ವರನ ಪ್ರಥಮ ಪಟ್ಟ ಮಹಿಷಿ. ಆದ್ದರಿಂದ ಎಂದೂ ಇವರ ಆಗು ಹೋಗುಗಳು ನನ್ನ ಆಗು ಹೋಗುಗಳೇ. ಆದುದರಿಂದ ಶ್ವೇತ ಕಾಕೀಯ ಎಂದು ಹಿರಿಯರು ಹೇಳಿದ ನೀತಿ ಉಂಟು. ಶ್ವ ಅಂದರೆ ಶ್ವಾನದಂತೆ  ನಾಯಿಯಂತೆ ಬಹಳಷ್ಟು ಜಾಗರೂಕತೆಯಿಂದ ಪತಿಯ ಸೇವೆ ಮಾಡುತ್ತ ಬಂದವಳು. ಏತ ಅಂದರೆ ಜಿಂಕೆಯಂತೆ ಭಯದ ಆಶಂಕೆಯಿಂದ ಪತಿಯ ಇಂಗಿತವನ್ನರಿತು ಬೇಕಾದಂತೆ ಮಾಡಿದವಳು. ಹಾಗೆ ಕಾಕ, ಕಾಗೆಯಂತೆ ಗಂಡನಿಗೆ ಹೇಗೆ ಬೇಕೋ ಹಾಗೆ,  ಅವರ ಅಂತರ್ಭಾವವನ್ನು ಊಹಿಸಿಯೇ ಬೇಕಾದಂತೆ ನಡೆದು ಕೊಂಡು ಬಂದವಳು. ಈಗಂತೂ ಅದನ್ನು ಚಾಚೂ ತಪ್ಪದೇ ಅನುಸರಿಸುತ್ತಾ ಬಂದವಳು. ಅವರು ಈ ಪರಿಸ್ಥಿತಿಯಲ್ಲಿ ಇದ್ದಾರೆ ಅಂತ ಹೇಳುವಾಗ ನಾನು ಹೀಗೆ ಇರುವುದಕ್ಕಾಗುತ್ತದೆಯೇ? ಅಂತಃ ಪುರ ಬಿಟ್ಟು ಹೊರಗೆ ಬಂದದ್ದು ಅಷ್ಟಕ್ಕೇಯೇ. ಈಗೀಗ, ಈಗೀಗ... ನಮ್ಮ ಆಚೆ ಈಚೆ ಏನು ನಡೆಯುತಾ ಇದೆ ಅಂತ. ಹೊರಗಲ್ಲ ಇವತ್ತು ನಮ್ಮ ಒಳಗೇ , ವೈರಿಗಳ ಸುಳಿವು ಯಾವರೀತಿಯಾಗಿ ನಮ್ಮ ಅಂತಃಪುರದ ಒಳಗಿರುವ ಗುಟ್ಟನ್ನು ರಟ್ಟು ಮಾಡ್ತಾ ಇದೆ. ಹೇಳುವುದಕ್ಕೆ ಕಷ್ಟವಾಗಿದೆ. ಇಂದೋ ನಾಳೆಯೋ ನಮ್ಮ ಲಂಕಾ ರಾಷ್ಟ್ರದ ಈ ಅರಮನೆಯ ಒಳಗೆ ಏನಾದೀತು ಊಹಿಸುವುದಕ್ಕೂ ಬರುವುದಿಲ್ಲ. ತ್ರಿಕೂಟಾಚಲ ಲಂಕೆಯ ಲಂಬಾಚಲವೂ ಇಲ್ಲ, ನಿಕುಂಬಿಳಾಚಲವೂ ಇಲ್ಲ ಎಲ್ಲ ವೈರಿಗಳ ಪಾಲಾಗಿದೆ. ಇವತ್ತು ನಮ್ಮ ಅರಮನೆಯ ಪ್ರದೇಶ ಮಾತ್ರ ನಮ್ಮಲ್ಲಿದೆ ಅಂತ ಮಾತ್ರ ಹೇಳಬಹುದು. ಅಲ್ಲಿಗೂ ಇನ್ನು ಕೊಳ್ಳಿ ಯಾವಾಗ ಇಡ್ತಾರೋ ಗೊತ್ತಿಲ್ಲ. ಆದ್ದರಿಂದ ನನಗೆ ತಿಳಿದಷ್ಟಾದರೂ ಏನಾದರೂ ಸಂಗ್ರಹ ಮಾಡಿ ನಮ್ಮ ಪತಿಯನ್ನು ಸಕಾಲಕ್ಕೆ ಎಚ್ಚರಿಸೋಣ ಅಂತ ನಾನು ಪ್ರಯತ್ನ ಪಟ್ಟದ್ದು. ಆಗಲಿ ಈ ಕಾಲ ಪತಿದೇವನಲ್ಲಿ ಹೋಗಿ ಕಾಡಿ ಬೇಡಿ ನನ್ನ ಮಾನಸಿಕವಾದಂತಹ ಆ ತೊಳಲಾಟವನ್ನು ಹೇಳಿಕೊಂಡು, ನನ್ನ ಆಂತರಿಕವಾದಂತಹ ಬಹಳ ದೊಡ್ಡ ದುಃಖವನ್ನು ಅವರ ಮುಂದೆ ಇಟ್ಟಾಗ ಅವರೇನು ಅನ್ನುತ್ತಾರೋ ಅಂತ ನೋಡ್ಬೇಕು. ನನ್ನ ಪತಿದೇವನ ಅಂತಃ ಕರಣವನ್ನು ಬಹಿಂರಂಗ ಪಡಿಸುವುದಕ್ಕೆ ಯಾರಿಗೂ ಸಾಧ್ಯವಾಗಲಿಲ್ಲ. ಅವರ ತಮ್ಮ ಸಾಕಷ್ಟು ಹೇಳಿದ್ದ ಆದರೆ ರಾಜ್ಯವನ್ನೇ ಬಿಡಬೇಕಾಯಿತು. ಜತೆಗೆ ಅಮ್ಮ ಸಾಕಷ್ಟು ನೀತಿಯನ್ನು ಅವನಿಗೆ ಒರೆದರೂ ಈ ಕುಟಿಲತನ ಬೇಡ ಅಂತ ಸಾಕಷ್ಟು ಸಾರಿದರು. ಆಗಲಿಲ್ಲ. ತನ್ನ ಅಂತಃ ಕರಣದಲ್ಲಿದ್ದ ಗುಟ್ಟನ್ನು ಪತ್ನಿಯಲ್ಲಾದರೂ ಹೇಳಲಾರರೇ? ಕೆಲವೊಂದು ಮಾತುಗಳು, ಇತ್ತೀಚೆಗೆ ನನಗ್ಯಾಕೋ ವಿಚಿತ್ರ ಕಾಣಿಸ್ತಾ ಇದೆ. ಮೊನ್ನೆ ಮೊನ್ನೆ ಯುದ್ದ ಪ್ರಾರಂಭದಲ್ಲಿ     ಶುಕ ಸಾರಣರು ಬಂದು ಹೇಳಿದಾಗ ಒಂದ ಧ್ವನ್ಯಾತ್ಮಕವಾದ ಮಾತು ಅವರ ಬಾಯಿಂದ ಬಂದಿತ್ತು. ಮರುಳಾದೆಯೇನೋ ಅಂತ, ಬೇರ ಬಲ್ಲವನಿಗೆ ಮರದೆಲೆಯನ ತಂದು ತೋರಲೇತಕೋ?  ಮರದೆಲೆಯೇ ತೋರುತ್ತಿದ್ದಾರೆ ಬೇರೇ ನನಗೆ ಗೊತ್ತುಂಟು, ರಾಮನ ಬೇರೋ? ವ್ಯಾಜ್ಯದ ಬೇರೋ ? ಸೀತೆಯ ಮೂಲವೋ?  ಅಲ್ಲ ತಾನು ಮಾಡುವ ಕ್ರಿಯೆಯ ಅಂತರಾರ್ಥವೋ? ನಿನಗೇನು ಗೊತ್ತುಂಟೋ ? ಹಾಗಾದರೆ ಈ ಮಾತಿನ ಸುಳಿವು ಏನು? ಏನು ಇದರ ಅಂತರಾರ್ಥ? ಏನೂ ತಿಳಿಯದವರ ನಮ್ಮವರಲ್ಲ. ಹತ್ತು ಮುಖದಲ್ಲಿ ಹತ್ತು ವ್ಯಕ್ತಿತ್ವವೂ ನಮ್ಮ ರಾವಣೇಶ್ವರನಿಗಿದೆ. ಅಂತಾ ವ್ಯಕ್ತಿತ್ವದಲ್ಲಿ ಪರಮೇಶ್ವರನನ್ನು ಕುಣಿಸುವ ವ್ಯಕ್ತಿತ್ವವೂ ಇದೆ. ವೇದ ಗಾನವನ್ನು ಮಾಡುವಂತಹ ವ್ಯಕ್ತಿತ್ವವೂ ಅವರಲ್ಲಿದೆ. ಹಾಗಾದರೆ ಇದೆಲ್ಲ ಯಾಕೆ? ಗೊತ್ತಿಲ್ಲದೆ ಮಾಡುವಂತದ್ದಲ್ಲ. ಹಾಗಾದರೆ ನನ್ನಲ್ಲಾದರೂ ಹೇಳಲಾರರೇ? ಅಂತಃ ಪುರಕ್ಕೆ ಹೋಗ್ತೇನೆ ಮೊದಲಾಗಿ ಅವರನ್ನು ಕೊರಗಿಸ್ತೇನೆ. ಕರಕರೆಯ ಮಾತುಗಳನ್ನಾದರೂ ಹೇಳ್ತೇನೆ ಕಾಡ್ತೇನೆ ಬೇಡ್ತೇನೆ. ಅಂತರಂಗದ ಮಾತುಗಳನ್ನು ಹೇಳ್ತಾರೋ ನೋಡೋಣ....”

“ಚಿಂತಿಸುವದ್ಯಾತಕಿಂತೂ ಪ್ರಾಣ ಕಾಂತಾ.... “ ಮಂಡೋದರಿ ಕರೆ ಕರೆಯ ಮಾತುಗಳು ಆರಂಭವಾಗುತ್ತದೆ.

“ ಪ್ರಾಣ ಕಾಂತ ಬಹಳಷ್ಟು ದುಃಖದಿಂದ, ಯಾವುದೋ ಗಹನವಾದ ವಿಚಾರವನ್ನು ಯೋಚಿಸುತ್ತಾ ದುಃಖಿಸುತ್ತಿದ್ದೀರಲ್ಲ. ಈ ಚಿಂತೆಯ ಕಾರಣವಾದರೂ ಏನೂ? ಹೀಗೆ ಸಜೀವವಾಗಿ ಸುಡುತ್ತಿರುವ ಚಿಂತೆ ಅದು ನಿಮಗೆ ಮಾತ್ರವಲ್ಲ. ನಮಗೆಲ್ಲರಿಗೆ ಕೂಡಾ ನೋವನ್ನು ತರುತ್ತಿದೆ.. ನಿಮ್ಮ ಶ್ರೇಯಸ್ಸು ಲಂಕಾರಾಷ್ಟ್ರದ ಶ್ರೇಯಸ್ಸು.  ನೀವು ತಲೆಯೆತ್ತಿ ತಿರುಗಾಡಿದರೆ ಲಂಕಾರಾಷ್ಟ್ರವೇ ತಲೆ ಎತ್ತಿ ತಿರುಗಾಡಿದಂತೆ. ಅಂತಹ ನೀವು  ಹೀಗೆ ದುಃಖಸುತ್ತಿದ್ದರಲ್ಲ?
 ಯಾರೋ ಒಬ್ಬ ಸಾಮಾನ್ಯ ದಾನವನೋ ಹೀಗ ದುಃಖಿಸಬಹುದಾಗಿತ್ತು. ಆದರೆ ತಾವು ಸಾಮಾನ್ಯ ದಾನವನಾಗಿದ್ದರೆ ತನ್ನ ದುಸ್ಥಿತಿಗೆ ಮರುಗಬಹುದಾಗಿತ್ತು. ಆದರೆ ತಮ್ಮಂಥವರು ರಾವಣ ಪ್ರಭುಗಳು ಅಸಾಮಾನ್ಯ ಪರಾಕ್ರಮಿಗಳು  ಹೀಗ ದುಃಖಿಸುವುದಂದರೆ, ಈ ದುಸ್ಥಿತಿಗೆ ಇಳಿಯುವುದೆಂದರೆ  ಬಹಳ ವಿಚಿತ್ರ ಕಾಣುತ್ತಿದೆ. ಹೀಗೆ ನಿಮ್ಮ ಮೇಲೆ ಆಗಬೇಕಿದ್ದರೆ ಯಾರ ಪ್ರಭಾವ ಇದು? ನಿಮಗಾದ ಈ ಪರಿಭವ ಅದರ ಕಾರಣವಾದರೂ ಏನು? ಇದಕ್ಕೆಲ್ಲ ಕಾರಣ ಅ ಸೀತಾಕಾಂತನೇ ಆಗಿರಬೇಕು. ಈ ತನಕದ ಯುದ್ದದ ಪರಿಭವವನ್ನು ಗ್ರಹಿಸುವುದಾದರೆ,   ತನ್ನ ಕಾಲಿಗೆರಗಿ ಸೀತೆಯನ್ನು ಒಪ್ಪಿಸುತ್ತಿಯಾ ಅಂತ ಬಲವಂತವಾಗಿ ನಿಮ್ಮನ್ನು ಬಗ್ಗಿಸುತ್ತಿರಬೇಕು. ಅದಲ್ಲವಾದರೆ ಅತ್ಯಂತ ಬಲಶಾಲಿಗಳಾದ ನಿಮಗೆ ಈ ದುಸ್ಥಿತಿ ಬಂದೀತೇ ಸ್ವಾಮೀ? ಒಂದು ಕಾಲದಲ್ಲಿ ನೀವೇ ಹೇಳಿದ ಮಾತುಂಟು. ಧನುಜರ ಸೈನ್ಯವಿದೆ. ತಮ್ಮ ಕುಂಭಶ್ರವಣನಿದ್ದಾನೆ. ಈರೇಳು ಜಗದ ಒಡೆತನ ನಮಗುಂಟು. ಮಾರ ವೈರಿಯ ಅನುಗ್ರಹವುಂಟು, ದಿಕ್ಪಾಲಕರು ನನ್ನ ಪದತಲದಲ್ಲಿದ್ದಾರೆ ಅಂತ ಹೇಳ್ತಾ ಇದ್ದಿರಿ. ಅದೆಂತೆಂಥಹ ರಾಕ್ಷಸ ವೀರರಿದ್ದರು ಎಲ್ಲ ಏನಾಗಿಬಿಟ್ಟಿತು? ಒಂದು ವೇಳೆ ರಾಮ ಪಾಳಯ ಬಂದರೂ ಏನಾದೀತು ಅಂತ ಇದ್ದಿರಿ. ಈಗೇನಾಯಿತು.?  ಈಗ ಅದೆಲ್ಲ ಕ್ಷೀಣಿಸಿತು ಅಂತ ದುಃಖವೋ?  ಇದಕ್ಕೆಲ್ಲ ಕಾರಣ ಹಿರಿಯರ ಅನುಗ್ರಹ ಇಲ್ಲ.
“ ಹಿರಿಯರೆಂದಾ ಮಾತ ಮೀರಿ ಪ್ರಾಣಕಾಂತ.......”
“ಎಲ್ಲಿ ಹಿರಿಯರ ಅನುಗ್ರಹ ಇಲ್ಲವೋ ಅಲ್ಲಿ ಆ ಕಾರ್ಯ ಸಫಲವಾಗುವುದಿಲ್ಲ. ಹೀಗಿದ್ದರೂ ನಿಮ್ಮ ಸೀತಾ ಅಪಹರಣದ ಒಂದು ಕಾರ್ಯ ಹಿರಿಯರ ಅನುಗ್ರಹದಿಂದ ವಿರಹಿತವೆ. ಯಾಕೆಂದರೆ ಹಿರಿಯರ ಮಾತುಗಳನ್ನು ನೀವು ಹೆಜ್ಜೆ ಹೆಜ್ಜೆಗೂ ಉಲ್ಲಂಘಿಸಿದಿರಿ. ಸೀತಾಪಹಾರಕ್ಕಾಗಿ ಹೋದಾಗ ಮಾರೀಚ ಮಾವ ಹಲವು ಬಗೆಯಲ್ಲಿ ಹೇಳಿದರೂ ಅವನನ್ನೇ ತಲೆ ಕಡಿತೇನೆ ಅಂತ ಉಲ್ಲಂಘಿಸಿದಿರಿ ಮತ್ತೆಲ್ಲಿಗೆ ಹಿಡಿದ ಕಾರ್ಯ ಸಫಲವಾದೀತು? ಆ ಕ್ರಿಯೆ ಆದರೂ ಮತ್ತೆ ಕೂಡಾ ಹೆತ್ತ ತಾಯಿ ತಮ್ಮನನ್ನು ಬಿಡಬೇಡ..ಸೀತೆ ಬೇಡ ನಮಗೆ ಬಿಟ್ಟು ಬಿಡು ಅಂತ ಸಾರಿ ಸಾರಿ ಹೇಳಿದರು. ಇದು ತಾನೇ ತಾನು ಗರ್ವದಿಂದ ಮೆರೆದುದರ ಪಲವಲ್ಲವೇ? ಇನ್ನು ಮರುಗಿ ಫಲವೇನು?  ಇನ್ನು ಕೊನೆಗಾಲಕ್ಕಾದರೂ ಮಾಡಿದ್ದು ತಪ್ಪು ಅಂತ ತಿಳಿದುಕೊಂಡು ಯಾಕೆ ತಗ್ಗಿಕೊಳ್ಳಬಾರದು?  ಆ ಶ್ರೀರಾಮನ ಪದಕ್ಕೆರಗಿದರೆ ಆಗದೇ? ಈಗ ಎಲ್ಲವನ್ನು ಕಳೆದುಕೊಂಡಿದ್ದೇವೆ. ಯಾವ ಸೈನ್ಯವೂ ಇಲ್ಲ ಏನೂ ಇಲ್ಲ. ಆಗದೇ ಸ್ವಾಮೀ”
ಮಂಡೋದರಿ ಇಷ್ಟೆಲ್ಲ ಹೇಳಿದರೂ ರಾವಣನ ಮೇಲೆ ಯಾವುದೇ ಪ್ರಭಾವವಾಗುವುದಿಲ್ಲ ಅದು ಕೇವಲ ಒಂದು ಮಾತಿನಿಂದ ವ್ಯಕ್ತವಾಗುತ್ತದೆ.
“ ಸದ್ಯ ನೀನು ಹೇಳುವುದಕ್ಕೆ ಉದ್ದೇಶಿಸಿದ್ದೇಲ್ಲ ಮುಗಿಯಿತೋ ಅಲ್ಲ ಇನ್ನೂ ಉಂಟೋ...ಮುಗಿಯಿತೂ ಅಂತಾದರೆ ಮತ್ತೆ ನಾನು ನಿದ್ದೆ ಮಾಡಬಹುದಲ್ಲ?”
“ಮಂಡೋದರೀ... ಒಂದು ಮಾತು ಹೇಳ್ತೇನೆ...ಕಾರ್ಯವನ್ನು ಕಂಡು, ಕಾರಣವನ್ನು ತಿಳಿಯದೆ, ಪರಿಹಾರಮಾರ್ಗವನ್ನು ಸೂಚಿಸಬಾರದು. ಈಗ ನೀನು ಇದು ಮೂರನ್ನೂ ಮಾಡಿಯಾಯ್ತಲ್ಲ? ನನ್ನ ದುಃಖವನ್ನು ಕಂಡೆ. ಕಾರಣವನ್ನು ಊಹಿಸಿದೆ, ಪರಿಹಾರವನ್ನು ಹೇಳಿದೆ. ಇನ್ನು ನಾನು ಏನು ಹೇಳುವುದಕ್ಕುಂಟು.?  ಮಂಡೋದರಿ ಆಲೋಚಿಸು ಎಲ್ಲವರಂಥಲ್ಲ ನೀನು. ಊರಿನವರೆಲ್ಲ ಹೇಳಲಿ,  ‘ದುರುಳ’  ರಾವಣ ಅಂತ. ನಾನು ಅವರ ಹೊಗಳಿಕೆ ಬೇಕಾಗಿ ಹುಟ್ಟಿಕೊಂಡವನೇ ಅಲ್ಲ. ಸರ್ವಸ್ವವನ್ನು ಕಳೆದುಕೊಂಡ ನನ್ನ ಸಂಪಾದನೆ ದೇವರಾಣೆಗೂ ಇವರ ಕೊಡುಗೆಯಲ್ಲ. ಆದಕಾರಣ, ಜನ ನನ್ನನ್ನು ಏನು ಹೇಳ್ತಾರೆ ಅಂತ ನಾನು ಆಕಡೆಗೆ ಕಿವಿ ಹಾಕಿದವನೇ ಅಲ್ಲ. ಸ್ತುತಿಗೆ ಹಿಗ್ಗುವವ, ನಿಂದನೆಗೆ ಕುಗ್ಗುವವ ಈ ಸ್ಥಾನಕ್ಕೆ ಆಗ್ಲಿಕ್ಕಿಲ್ಲ.
“ನನಗೊಂದು ಧ್ಯೇಯವಿದೆ. ಒಂದು ಲಕ್ಷ್ಯವಿದೆ. ನಿನಗೆ ಗೊತ್ತುಂಟು. ಹೌದಲ್ಲ ನೀನಿಗ ಒಂದು ಮಾತು ನನ್ನಲ್ಲಿ ಹೇಳ್ಬೇಕು. ಮದುವೆಯಾದ ತರುಣದಲ್ಲಿ ಸರ್ವೇ ಸಾಮಾನ್ಯ ಪ್ರಪಂಚದಲ್ಲಿ ನನ್ನಂತಹ ಆರೋಗ್ಯ ಇದ್ದ ಪುರುಷನಿಗೆ ಹೆಂಡತಿಯಲ್ಲಿ ಮಾತಾಡುವುದೇ ಬೇಡ ಅಂತ ತೋರಿ ತಪಸ್ಸಿಗೆ ಹೋಗುವ ಸ್ವಭಾವ ಎಲ್ಲಿಯಾದರೂ ಉಂಟಾ? ಶಾರೀರಿಕ ಸುಖವನ್ನು ಭೋಗವನ್ನು ಅನುಭವಿಸಬೇಕಾದ ಕಾಲದಲ್ಲಿ ನನ್ನ ಮಂಡೋದರಿ ನೀನೆಲ್ಲಿ.. ನೀನು ಇಲ್ಲೇ ನಾನು ಎಲ್ಲಿ? ಎಲ್ಲೆಲ್ಲಿಯೋ. ಹೌದಲ್ಲ. ಮಕ್ಕಳನ್ನು ಹೆತ್ತ ತಾಯಿ ನೀನು ಮೊಮ್ಮಕ್ಕಳಿಗೆ ಜೋಗುಳ ಹಾಡಿದ ಅಜ್ಜಿನೀನು. ಆ ಪ್ರಾಯಕ್ಕೆ ನನಗಿಲ್ಲದೇ ಇದ್ದಂತಹ ಹುಚ್ಚು,  ಈ ಪ್ರಾಯಕ್ಕೆ ಬಂತು ಅಂತ ಹೇಳಿದ್ರೆ,  ನೀನು ಒಪ್ತಿಯಾ ಅಂತ ನಾನು ಕೇಳುವುದು”
“ಬರ್ಲಿಕ್ಕೆ ಸಾಧ್ಯವೂ ಇಲ್ಲ ಒಪ್ಪುವುದೂ ಕಷ್ಟ”
“ಬಂತು ಅಂತ ನಿನಗೆ ಯಾರು ಉಪದೇಶ ಮಾಡಿದ್ದು?.  ಆದುದರಿಂದ , ಆದ್ದರಿಂದ  ಓ ಮಂಡೋದರಿ ವಿಚಾರಿಸಿ ಖೂಳನನು ಮಾಡೆನ್ನ. ವಿಚಾರಿಸಿ ಅಂದ್ರೆ ನನ್ನನ್ನು ವಿಚಾರಣೆಗೆ ಗುರಿಪಡಿಸಿ ಅಂತ ಅಲ್ಲ, ನಿನ್ನ ಮನದಲ್ಲೇ ವಿಚಾರಿಸಿ...ಆದದ್ದೇನು ಎಂಬುದರ ಕಡೆಗೆ ದೃಷ್ಟಿಯನ್ನು ಹರಿಯಿಸಿ ನಿನ್ನದ್ದೇ ಅದಂಥ ಮನಸ್ಸಿನಲ್ಲಿ ಮಂಥನ ಮಾಡಿ, ವಿವೇಕದ ಬೆಳಕಿನಲ್ಲಿ, ಸತ್ಯವನ್ನು ಕಂಡುಕೊಳ್ಳುವುದಕ್ಕೆ ಯತ್ನಿಸಿ, ಹೊರತು ಹಿರಿಯರೆಂದ ಮಾತ ಮೀರಿ ....ಹೀಗಾಯಿತೋ... ರಘುನಾಥ ನಿನಗೇನು ಮಾಡಿದ..? ಅವನೇನು ಮಾಡಿದ ಅವನ ಅಪ್ಪ ಏನು ಮಾಡಿದ.? ಇದೆಲ್ಲ ಮಾತೇನೇ? ಒಬ್ಬ ನನ್ನ ನ್ನು ಏನಾದರೂ ಮಾಡಿಬಿಟ್ಟಾನು ಅಂತ ಇದ್ರೆ ನಾನು ಮನೆಯೊಳಗೆ ಎರಡು ಚಿಲಕ ಹಾಕಿ ಮಲಗುದಿಲ್ವಾ? ಯಾರು ಯಾರು ಏನೇನು ಮಾಡ್ತಾರೆ ಅಂತ ಬಹಳ ಸಣ್ಣ ವಯಸ್ಸಿನಿಂದಲೇ ಹೋರಾಟಕ್ಕೆ ಇಳಿದ ಜೀವ ಇದು. ಕೈಲಾಸವನ್ನೆ ಎತ್ತುತ್ತೇನೆ ಅಂತ ಒಬ್ಬ ಹೊರಡ್ತಾನೆ.... ಅಂತ ಆದ್ರೆ ಅವನು ಮನೆಗೆ ಪುನಃ ಬರ್ತಾನೆ ಅಂತ ಹೊರಡುವುದೋ? ಐರಾವತವನ್ನೇ ಮುಷ್ಠಿ ಘಾತದಿಂದ ಮಂಡಿ ಊರಿಸ್ತೇನೆ ಅಂತ ಹೊರಟವ ಮತ್ತೊಮ್ಮೆ ಹೆಂಡ್ತಿ ಮಕ್ಕಳ ಮುಖ ಕಂಡೇನು ಅಂತ ಎಣಿಸಿ ಹೋಗೋದಿಲ್ಲ. ನನ್ನ ಸ್ವಭಾವವೇ ಹಾಗೆ,  ನಿನಗೆ ಗೊತ್ತುಂಟು.  ಯಾರೋ ಅಸಾಧ್ಯ ಅಂತ ಹೇಳ್ತಾರೆ ಅವರಲ್ಲಿ ಸಾಧ್ಯ ಅಂತ ಹಟ ಮಾಡುವುದಕ್ಕೆ ನಾನು ಹೋಗುವುದಿಲ್ಲ. ಅದನ್ನು ಕೇಳಿದ ಮಾತ್ರಕ್ಕೆ ಹೌದೋ  ಅಂತ ಮಾಡಿ ತೋರಿಸುವವ ನಾನು. ಹೀಗೆ ಸಾಹಸವೇ ಜೀವನದ ಜೀವಾಳವಾಗಿ, ಹೋರಾಟವೇ ಜೀವನದ ಭದ್ರ ಬುನಾದಿಯಾಗಿ ಹೊರಟ ದೊಡ್ಡ ಚರಿತ್ರೆ ಇದ್ದವ ನಿನ್ನ ಗಂಡ. ಇಷ್ಟು ಗೊತ್ತಿದ್ದು ನೀನು, ರಾಮ ಏನಾದ್ರೂ ಮಾಡಿದ ಅಂತಾದ್ರೆ , ನಾನು ಬಂದು ಹೆಂಡತಿ ಎಲ್ಲಿದ್ದಾಳೆ ಅಂತ ಕೋಣೆಗೆ ಬಂದು ಮುಸುಕು ಹಾಕಿ ಕಣ್ಣೀರು ಇಳಿಸುವ ಷಂಡ ಭಂಡನೋ? ನಿನ್ನ ಗಂಡ?”
ಬಹಳ ಸ್ಪಷ್ಟವಾದ ರಾವಣ ವ್ಯಕ್ತಿತ್ವದ ಸ್ಥಾಪನೆ. ರಾವಣನ ಹತ್ತು ಮುಖದ ಕಲ್ಪನೆ ಏನು? ರಾವಣ ಅಂದರೆ ಏನು ಅದರ ಸೂಕ್ಷ್ಮವಾದ ಪ್ರತಿಪಾದನೆ ಶೇಣಿಯವರದ್ದು. ರಾವಣನ ಪ್ರತಿ ಹೆಜ್ಜೆ ಹೆಜ್ಜೆಯೂ ಕಂಡು ಕೊಂಡ ರೀತಿ ಆ ದೃಷ್ಟಿಕೋನ ಅದ್ಭುತ. ಊಹನೆಗೆ ನಿಲುಕ ರಾವಣನ ದುಗುಡವನ್ನು ಆತನ ಕಣ್ಣೀರ ಹನಿ ಹನಿಗೆ ಅರ್ಥ ಕಟ್ಟುವ ಪರಿ ಅದು ಇಲ್ಲಿ ಮಾತ್ರ ಸಾಧ್ಯ.  ಮಹಾಕಾವ್ಯವನ್ನು ಸುಲಭವಾಗಿ ಬಹಳ ಸರಳ ವಾಕ್ಯಗಳಿಂದ ವ್ಯಾಖ್ಯಾನಿಸಿ ಬಿಡುತ್ತಾರೆ.



Saturday, June 8, 2013

ಅಂತರಂಗದ ರಾವಣ ಭಾಗ ೨


"ಹರನೇ ಶಂಕರನೇ ಶಂಕರ ಪಾರ್ವತಿ ವರನೇ .....ಧುರದೊಳು ರಕ್ಕಸ ಸೇನೆಯು ಬರಿದಾಯಿತೆ ಶಿವನೇ"
ರಾವಣ ಏಕಾಂಗಿಯಾಗಿ ಅಂತಃ ಪುರದಲ್ಲಿ ರೋಧಿಸುತ್ತಿದ್ದಾನೆ. ಕಳೆದೂ ಕಳೆದೂ ಕೊನೆಗೆ ಯಃಕಶ್ಚಿತ್ ದೂತ ಪರಿಚಾರಕ "ಗೂಢ ಬ್ರಹ್ಮನೊಳು ಹಗೆ ಮಾಡಿ ಕೆಡದಿರು..." ಉಪದೇಶಿಸುತ್ತಾನೆ. ಇದರಲ್ಲಿ ಪರೋಕ್ಷವಾಗಿರುವ ಲಂಕಾ ಪ್ರಜೆಗಳ ಧ್ವನಿಯನ್ನು ಗುರುತಿಸುತ್ತಾನೆ. ಸ್ವಾಯತ್ತವಾದ ಸರ್ವಾಧಿಕಾರ ಏನೂ ಇಲ್ಲದೇ ಇದ್ದ ರಕ್ಕಸ ಗಡನಕ್ಕೆ ಬುದ್ಧಿಮತ್ತೆಯಲ್ಲಿ ದಶಶಿರನಾಗಿ , ಧ್ವನಿಯಲ್ಲಿ ದಶಕಂಠನಾಗಿ ರಾವಣೋ ಏಕರಾವಣನಾಗಿ ಮೆರೆದವನು ಇಂದು ಎಲ್ಲವನ್ನು ಕಳೆದು ಕೊಂಡು ರೋಧಿಸುತ್ತಿದ್ದಾನೆ. ದಶಮುಖನಾಗಿ ದಶದಿಕ್ಕುಗಳ ಸುಖವನ್ನು ಕಂಡ ರಾವಣ, ರಕ್ಕಸರಿಗೆ ರಾಷ್ಟ್ರವಾಗಿ ಅಧಿಕಾರಿಯಾಗಿ ಮೆರೆದ ಮೇಲೆ ರಕ್ಕಸರ ಇಚ್ಛಾ ಕ್ರಿಯಾ ಜ್ಞಾನ ಎಲ್ಲವೂ ಆದ ರಾವಣ ಲಂಕಾ ಪ್ರಜೆಗಳಿಗೆ ಎಲ್ಲವನ್ನೂ ಕೊಟ್ಟ... ಪ್ರಜಾಯತ್ತವಾದದ್ದು ಯಾವುದೂ ಇಲ್ಲ. ಆದರೆ ಇಂದು ಅದೇ ಪ್ರಜೆಗಳು ರಾವಣನ ಉಚ್ಛ್ರಾಯಸ್ಥಿತಿಯಲ್ಲಿ ಬದುಕಿಗೆ ಭರವಸೆಯನ್ನು ಕಲ್ಪಿಸಿದವರು, ಅದಿಲ್ಲದೇ ಆಗುವಾಗ ತನ್ನ ಮಕ್ಕಳೆಲ್ಲಿ... ತನ್ನ ಗಂಡನೆಲ್ಲಿ ಅಣ್ಣ ನೆಲ್ಲಿ ತಮ್ಮನೆಲ್ಲಿ ಎಂಬ ಪ್ರಜೆಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕಿಕೊಂಡನೇ? ಶೂನ್ಯವಾಗಿದ್ದ ಲಂಕೆಯಲ್ಲಿ ಸುವರ್ಣ ಲಂಕೆಯನ್ನೇ ರೂಪಿಸಿದಾಗ ಎಲ್ಲವನ್ನು ಅನುಭವಿಸಿದ ಪ್ರಜೆಗಳು ಇಂದು ಗೂಢ ಬ್ರಹ್ಮನನ್ನು ತೋರಿಸುತ್ತಿದ್ದಾರೆ ಎಂದ ಮೇಲೆ, ಹರನೇ ,,,,,,,,,, ಎಂಬುದು ಈಗ ದಶ ಕಂಠದ ದ್ವನಿಯಾಗಿಬಿಟ್ಟಿತೇ?

" ಹೌದು ನನ್ನನ್ನು ಆಕ್ಷೇಪಿಸುವವರ ಮತಕ್ಕೆ ಕೆಲವು ಪುಷ್ಟಿ ಉಂಟು. ಇದೇನು ಗತಕಾಲದ ವರದಿಯೋ? ಮೊನ್ನೆ ಮೊನ್ನೆ ವರೆಗೆ ಪ್ರತ್ಯಕ್ಷ ಜನ ಕಂಡದ್ದು. ತುಂಬಿದಂತಹ ರಾಜಸಭೆ. ಆ ಸಭೆಯಲ್ಲಿ ಎಂತೆಂಥವರು? ಬೃಹಸ್ಪತಿಯನ್ನು ನಾಚಿಸುವ ಅಥವಾ ಇತರೆ ಇತರೆ ವಿದ್ವಾಂಸರನ್ನು ಕೂಡಾ ತಲೆ ಬಾಗುವಂತೆ ಮಾಡುವ ಅರ್ಥ ಶಾಸ್ತ್ರವೋ ? ಧರ್ಮ ಶಾಸ್ತ್ರವೋ.? ಯಾವ ಶಾಸ್ತ್ರ ಬೇಕು ಹೇಳುವ ಘನವಿದ್ವಾಂಸರ ಬಳಗವೇ ಒಂದು ಕಡೆ ಇತ್ತು. ಮತ್ತೊಂದು ಕಡೆ ಮೃತ್ಯುದೇವತೆಯ ಕೋರೆ ದಾಡೆಯನ್ನು ಕಿತ್ತು ತಂದು ಕೊಡಬೇಕೆ? ದಂಡಧಾರಿಯಾದ ಯಮನ ದಂಡವನ್ನು ಅವನು ಕೊಡುವ ದಂಡ ಸಮೇತ ನಿಮ್ಮ ಪಾದದ ಬುಡಕ್ಕೆ.......ಎಂದು ಹೇಳುವವರಿದ್ದರು. ಆದರೆ ಹೀಗೆ ಹೇಳುವವರು ಪ್ರಪಂಚದಲ್ಲಿ ಧಾರಾಳ ಸಿಗಬಹುದು. ಕೇಳುವವರು ಅವರಿಗಿಂತ ಸಣ್ಣವರಾದರೆ. ಆದರೆ ರಾವಣನ ಮುಂದೆ ಹೇಳುವವರು ಧೈರ್ಯ ಇಲ್ಲದಿದ್ದರೆ ಹೇಳಿಯಾರ? ಕೇವಲ ಈ ಹುಂಬತನದ ಅಟ್ಟಹಾಸವನ್ನೆಲ್ಲಾ ಕೇಳಿ ತಲೆದೂಗುವವನಲ್ಲ ದಶಕಂಠ ರಾವಣ ಅಂತ ಇವರಿಗೆ ನನ್ನ ಜೀವನದ ಇತಿವೃತ್ತದಿಂದ ಗೊತ್ತುಂಟು. ಆದಕಾರಣ ಯಾರು ಯಾರು ಇಂತಹ ಆ ವೀರಶ್ರೀರಾದಿತ ಗಾತ್ರವಾದ ದೇಹಕಾಂತಿಯಿಂದಲೂ, ಮುಖ ಕಾಂತಿಯಿಂದಲೂ, ಅಲ್ಲ ಅರ್ಥ ಪುಷ್ಟಿಯಿಂದಲೂ ಜೀವಂತವಾದಂತಹ ಒಂದು ದರ್ಶನವನ್ನು ಕೊಡುತ್ತ ಇದ್ದರೋ ಅಂಥವರು ಇರಬೇಕಾದಂತಹ ಸಾಲಿನಲ್ಲಿ.. ಅಮೇಲೆ ಸಂಗೀತವೋ ನರ್ತನವೋ .. ಬಹಳ ಮಾತ್ಯಾಕೆ.. ರಾವಣೇಶ್ವರನ ರಾಜಸಭೆಯಲ್ಲಿ ರಾವಣಾನಾಳುತ್ತಿರುವ ರಾಜ್ಯದಲ್ಲಿ ಏನುಂಟು ಅಂತ ಒಬ್ಬನೂ ಕೇಳುತ್ತಿರಲಿಲ್ಲ. ಅಲ್ಲಿ ಏನಿಲ್ಲ? ಇಲ್ಲಿ ಇಲ್ಲದ್ದು ಸ್ವರ್ಗದಲ್ಲೂ ಇಲ್ಲ. ಇಲ್ಲಿ ಇಲ್ಲದ್ದು ಮತ್ತೆಲ್ಲಿಯೂ ಇಲ್ಲ. ಹೀಗಿತ್ತಲ್ಲ? ಆದಕಾರಣ ಶೂನ್ಯ ಕಾಣುವುದು ಯಾರಿಗೆ? ನನ್ನನ್ನು ಆಕ್ಷೇಪಿಸುವವರಿಗೆ. ಇಲ್ಲದಿದ್ದರೆ ಈಗ ಇದ್ದದ್ದು ವರ್ತಮಾನಕಾಲದಲ್ಲಿ ಪ್ರಪಂಚದಲ್ಲಿ ಒಬ್ಬ ರಾಜಶ್ರೇಷ್ಠನಿದ್ದರೆ ಅವನಲ್ಲಿ ಇರುವುದಕ್ಕಿಂತ ಹೆಚ್ಚಿಗೆ ಉಂಟು. ಈ ಜನರ ಕಣ್ಣಿಗೆ ಕಾಣುವುದು ಹಾಗಲ್ವ? ಏಳು ಮಾಳಿಗೆ ಇದ್ದದ್ದು ಕುಸಿದು ಮೂರು ಮಾಳಿಗೆ ಅಗುವಾಗ ಬಡವನಾದದ್ದು. ಒಂದೇ ಮಾಳಿಗೆ ಇದ್ದವ ಇನ್ನೂ ಶ್ರೀಮಂತನಾಗಿ ಕಾಣುತ್ತಾನೆ. ಆದರೆ.. ಏಳು ಮಾಳಿಗೆ ಇದ್ದದ್ದು ಕುಸಿದದ್ದು ಹೌದಲ್ಲ? ಬರಿದಾದದ್ದು ಹೌದಲ್ಲ.?" ರಾವಣ ಉತ್ತುಂಗದಿಂದ ಕುಸಿದದ್ದನ್ನು ಮಥನ ಮಾಡುತ್ತಾನೆ. ಕಳೆದು ಹೋದ ಘನತೆ ವರ್ಚಸ್ಸು ಕಳೆಯಿತಲ್ಲಾ ಎಂದು ವ್ಯಾಕುಲನಾದರೂ ಆ ಉತ್ತುಂಗ ಶಿಖರವನ್ನು ಏರಿದುದನ್ನು ಮತ್ತೊಮ್ಮೆ ನೆನಪಿಸುತ್ತಾ ವಿಶ್ಲೇಷಿಸುತ್ತಾನೆ.

ಇವತ್ತು ಯಾರಾದ್ರು ರಾಕ್ಷಸ ಶಬ್ಧಕ್ಕೆ ಅರ್ಥ ಏನು ಅಂತ ಕೇಳಿ? ಹೊಸ ಭಾಷಾಶಾಸ್ತ್ರಾ ಪಂಡಿತರು ಏನು ಹೇಳ್ತಾರೆ? ರಾಕ್ಷಸರು ಅಂತ ಅಂದ್ರೆ ಕೆಟ್ಟವರು. ದುರಾಚಾರಿಗಳು. ಆ ಶಬ್ದದ ಅರ್ಥವೇ ವೆತ್ಯಾಸವಾಯಿತು. ನಮ್ಮವರೇ ಮಾಡಿದ್ದು ಬೇರೆ ಯಾರೂ ಮಾಡಿದ್ದಲ್ಲ. ಇನ್ನೊಬ್ಬರು ನಮ್ಮನ್ನು ಹೇಗೆ ಕೆಳಕ್ಕೆ ತಳ್ಳಿಯಾರು? ನಾವು ದುರ್ಬಲರು ಅಲ್ಲದೇ ಇದ್ದರೆ. ನಮ್ಮ ಸ್ಥಾನದಲ್ಲಿ ನಾವು ಇದ್ದರೆ. ಇನ್ನೊಬ್ಬರ ಒತ್ತಡದಿಂದ ಏನೂ ಅಗೋದಿಲ್ಲ. ಹಾಗಾಗಿ ಜಗತ್ತನ್ನೇ ರಕ್ಷಿಸುತ್ತೇವೆ ಅಂತ ಪ್ರಮಾಣ ಮಾಡಿ ಸಕಲ ಧರ್ಮವನ್ನು ಶಾಸ್ತ್ರವನ್ನು ಜ್ಞಾನ ವಿಜ್ಞಾನಗಳನ್ನು ತಮ್ಮ ಕೈಯಲ್ಲಿ ಹಿಡಕೊಂಡವರೇ ಅದರ ಭಕ್ಷಕರಾದರಂತೆ. ಹಾಗಾಗಿ ನಾವು ಕಥೆ ಕೇಳ್ತೇವೆ 'ವೇದವ ಕದ್ದೊಯ್ದ.... ಆದಿರಾಕ್ಷಸ'. ಕದ್ದು ಎಲ್ಲಿಗೆ ತೆಕ್ಕೊಂಡು ಹೋಗುದು.. ಅದನ್ನು ನಾಶ ಮಾಡಿದ..ನೀರಿನಲ್ಲಿ ಮುಳುಗಿಸಿದ..ಆ ಕಾಲಕ್ಕೆ ವೇದ ಪುರುಷ ವೇದಾನುದ್ದರತೆ, ಅವನನ್ನು ಕೊಂದು ವೇದವನ್ನು ರಕ್ಷಿಸಿದ. ಈ ವರ್ಗದವರೇ ದುರಾಚಾರಿಗಳು ಅಂತ ಪಟ್ಟಕಟ್ಟಿದ. ಇವರ ಕೈಯಲ್ಲಿ ಆಢಳಿತ ಕೊಟ್ಟರೆ ಹೀಗೆ ಮಾಡ್ತಾರೆ ನ್ಯಾಯಾಂಗ ಧರ್ಮಾಂಗ ತಿಂದು ಹಾಕ್ತಾರೆ. ಹೀಗಿರುವಾಗಲೇ ಆದಿತೇಯರಿಗೆ ಹಕ್ಕನ್ನು ಕೊಟ್ಟ. ಹೀಗೆ ಅದಿತೇಯರ ಕೈಯಲ್ಲಿ ಲೋಕರಕ್ಷಣೆಯ ಹಕ್ಕನ್ನು ನಮ್ಮವರೇ ನಮ್ಮ ದೌರ್ಬಲ್ಯದಿಂದ ನಿಕ್ಶೇಪಿಸಿದರು. ಅವರು ಅವರ ಸ್ಥಾನದಲ್ಲೇ ಇರ್ತಿದ್ದರೆ ಇದು ಹೋಗುತ್ತಿತ್ತೋ..? ಹೀಗೆ ಆಲೋಚನೆ ಮಾಡಿದಂತಹ ನಾನು ಮತ್ತೊಮ್ಮೆ..ಅದೇ ಎತ್ತರಕ್ಕೆ ನಾನೂ ಬೆಳೆಯುವುದರ ಜತೆಗೆ ನನ್ನ ಸಮಾಜವನ್ನು ಬೆಳೆಸಬೇಕು ಅಂತ ಯತ್ನಿಸಿದೆ. ನನ್ನ ತಾಯಿಯಂತೂ ಅದಕ್ಕಾಗಿ ಬಲು ದೊಡ್ಡದಾದ ತ್ಯಾಗವನ್ನೇ ಮಾಡಿದಳು. ವಿಶ್ರವಸು ಬ್ರಹ್ಮನ ಮನಸ್ಸೊಲಿಸಿ, ಆತನ ಕೃಪಾ ಭಿಕ್ಷಾರೂಪವಾಗಿ ವಂಶೋದ್ದಾರಕನಾದ ಸತ್ಪುತ್ರನನ್ನು ಕರುಣಿಸಬೇಕು. ಒಂದು ವ್ಯಕ್ತಿಯಲ್ಲಿ ಹತ್ತುವ್ಯಕ್ತಿಯ ಶಕ್ತಿಬೇಕು. ಅಂತ ಕೇಳಿದ್ದರಿಂದ ಉದಾರಚಿತ್ತರಾದಂತಹ ವಿಶ್ರವಸು ಬ್ರಹ್ಮರು ನನ್ನ ಅಮ್ಮನಿಗೆ ನನ್ನ ಮೂಲಕವಾಗಿ ತೃಪ್ತಿಯನ್ನು ತಂದರಂತೆ. ಅಂದು ನನ್ನ ತಾಯಿ ಹೇಳಿದ ಮಾತು. ಮಗನೇ ಮೊದಲು ರಾಕ್ಷಸ ಕುಲದ ಉದ್ದಾರ. ಆಮೇಲೆ ನಿನಗೆ ವಿಶ್ರಾಂತಿ. ಅಂದು ನಾನು ಪ್ರತಿಜ್ಞಾಬದ್ಧನಾದದ್ದು. ತಾಯಿ, `ಸುರನರಭುಜಂಗಮ ಭುವನದಲ್ಲಣ' ಅಂತ ಹೇಳಿಸಿದ ಮೇಲೆ ನಿನ್ನ ಮುಖಕಂಡೇನು. ಯಾರಿಗೆ ಗೊತ್ತಿಲ್ಲ? ಪ್ರಾಯದ ಕಾಲದಲ್ಲಿ ಒಂದು ದಿನ ಸುಖವೆಂಬ ಶಬ್ದದ ಅನುಭವ ಬಿಡಿ ಶ್ರವಣ ನಾನು ಮಾಡ್ಲಿಲ್ಲ. ನಾನು ನೀರಿನಲ್ಲಿ ಮುಳುಗಿದ್ದು ಎಷ್ಟು ಸಾವಿರ ವರ್ಷವಾದೀತು? ಪಂಚಾಗ್ನಿ ಮಧ್ಯದಲ್ಲಿ ನಿಂತು ನಾನು ಮಾಡಿದ ತಪಸ್ಸಿಗೆ ಎಷ್ಟು ಶತಮಾನ ಶತಮಾನವಾದೀತು. ಇಷ್ಟು ಸಾಧಿಸಿದೆ.ತಾಯಿಗೆ ಸಂತೋಷವಾಯಿತು. ಗಂಡು ಮಗನ ಹೆಡೆದ ತಾಯಿ ಅಂತ ನಮ್ಮ ಅಮ್ಮ ಹೆಮ್ಮೆ ಪಟ್ಟಳು. ಜತೆಗೆ ತಮ್ಮಂದಿರೂ ಇದ್ದರು. ಆದರೆ ತಮ್ಮಂದಿರ ತಲೆಯ ಮೇಲೆ ಹತ್ತನೇ ಒಂದು ಅಂಶ ಭಾರವನ್ನು ಹೊರಿಸಿದ ಅಣ್ಣ ಅಲ್ಲ ನಾನು. ಯಾಕೆ? ದುಡಿಯುವುದಕ್ಕೆ ನನಗೆ ಸಾಧ್ಯಇದೆ ಅಂತ ನಂಬಿದವನು ನಾನು. ಮೈ ನನಗೂ ತಮ್ಮಂದಿರಿಗೂ ಒಂದೊಂದೇ? ಆದರೆ ಒಂದು ಮೈಗೆ ಎರಡು ಕೈಯಂತೆ ಒಂದು ತಲೆ ಅವರಿಗೆ ಇದ್ದಿತ್ತು. ನನ್ನ ಒಂದು ಮೈಗೆ ಹದಿನೆಂಟು ಹೆಚ್ಚು ಕೈ ಉಂಟು.. ಒಂಭತ್ತು ಹೆಚ್ಚಿಗೆ ತಲೆ ಉಂಟು. ಹತ್ತು ತಲೆಗೆ ನನ್ನ ನಿಲುಮೆಗೆ ಇದ್ದದ್ದು ಕಾಲು ಎರಡೇ. ಯಾಕೆಂದರೆ ರಾವಣನ ನಿಲುಮೇ ಒಂದೇ. ಸ್ಥಿರವಾದದ್ದು. ಆದರೆ ಈ ಕಾಲಕ್ಕೆ ಏನಾಗಿಬಿಟ್ಟಿತು? ಅಹಾ ಸಕಲ ಸಂಪದ್ಭರಿತವಾದಂತಹ ಸುವರ್ಣ ಲಂಕೆಯಾಯಿತು. ಇದನ್ನು ನೋಡಿದೆ ನಾನು ಸಹಭಾಗಿಯಾದೆ. ಸಂತೋಷಗೊಂಡೆ. ಬಹುಶಃ ಈ ಮಾತು ಸತ್ಯವೋ ಏನೋ. ಅತ್ಯುನ್ನತಿ ಪತನ ಹೇತುಃ. ಬಹಳ ಎತ್ತರಕ್ಕೆ ಏರುವುದು ಬೀಳುವ ಭಯವನ್ನು ಇಟ್ಟುಕೊಂಡೆ. ಆದರೆ ಆ ಭಯ ನನಗಿರಲಿಲ್ಲ. ಆದರೆ ಆದರೆ ಆ ಭಯ ಬಂತಲ್ಲ... ಬಂತಲ್ಲ ಮೊನ್ನೆ. ನನ್ನ ತಂಗೀ..ನನ್ನ ತಂಗಿ.....

" ತಂಗಿಯ ಸವಿ ಮಾತಿಗೆ ನಾ ಹಂಗಿಗನಾದುದರಿಂದಲೀ.."
ಅದೇ ಅದೇ ಶೂರ್ಪನಖ ಬಂದಳು. ಕರ್ಣನಾಸಾಚ್ಹೇದನವಾದ ಬಳಿಕ ಆ ವಿಚಿತ್ರತರವಾದಂತಹ ಭೀಭತ್ಸದ ಚಿತ್ರಣವನ್ನೇ ನನ್ನ ಮುಂದೆ ಉದ್ಘಾಟಿಸಿದಳು. ಏನು ಮಾಡಲಿ? ವೈಭವದ ಒಡ್ಡೋಲಗದಲ್ಲಿ ನಾನಿದ್ದಾಗ ಶೂರ್ಪನಖಿ ಸಭಾ ಪ್ರವೇಶ ಮಾಡಿ ತನ್ನ ಕರ್ಣನಾಸಾಚ್ಹೇದನದ ವೃತ್ತಾಂತವನ್ನು ಹೇಳುತ್ತ, ನನ್ನ ಅಭಿಮಾನದ ಗೌರವದ ಮುಖಕ್ಕೆ ಕನ್ನಡಿಯನ್ನು ಕೊಟ್ಟಳು. ನಿನ್ನ ಮುಖದಲ್ಲಿ ಮೂಗು ಉಂಟಾ ನೋಡು? ಕಾಲಾಯ ತಸ್ಮೈ ನಮಃ.ಎನ್ನುವುದೋ? ಅಲ್ಲ ತಸ್ಮೈ ನಮಃ ಕರ್ಮಣೆ ಎನ್ನುವುದೋ? ಸಿಕ್ಕಿಬಿದ್ದೆ ನಾನು. ಸುದ್ದಿ ಅಕಂಪನದ್ವಾರ ನಮಗೆ ಮೊದಲೇ ಬಂದಿತ್ತು. ಅಯೋಧ್ಯೆಯ ರಘುವರನಾದಂತಹ ರಾಮ ಪಂಚವಟಿ ಕ್ಷೇತ್ರದಲ್ಲಿ ಇದ್ದಾನೆ. ಜತೆಗೆ ಅವನಿಗೊಬ್ಬಳು ಹೆಂಡತಿ, ಮತ್ತೊಬ್ಬ ತಮ್ಮ, ಅಲ್ಲಿ ಹೀಗೀಗೆ ನಡಿಸುತ್ತಿದ್ದಾರೆ ಅಂತ ಸುದ್ದಿ ಸಿಕ್ಕಿತ್ತು. ಏನು ಮಾಡೋಣಾಂತಲೂ ಆಲೋಚಿಸುತ್ತಲೂ ಇದ್ದೆ. ಶೂರ್ಪನಖ ಪ್ರವೇಶ ಆದ ಬಳಿಕ ಬಹಿರಂಗವಾಗಿ ಸಭೆಯಲ್ಲಿ ಅವಳು ಹೇಳಿದಾಗ ಸಾರ್ವಜನಿಕರ ದೃಷ್ಟಿಯಲ್ಲಿ ಎತ್ತರಕ್ಕೆ ಇದ್ದಂತಹ ಮಾನಧನನಾದಂತಹ ಲಂಕೇಶ್ವರ ನಾನು ಹೇಳಬೇಕಾಗಿತ್ತು. ಈಗ ಅನನಗೆ ಅನಿಸುವುದು ಈ ದೊಡ್ಡಸ್ಥಿಕೆ ನನಗೆ ಬೇಡವಾಗಿತ್ತು. ಆ ಮೊದಲಿನ ಬಡತನದಲ್ಲೇ ನಾನಿರುತ್ತಿದ್ದರೆ ಇಷ್ಟು ಸುಲಭದಲ್ಲಿ ಎಲ್ಲ ಹೋಗುವ ಮರ್ಯಾದೆ ಅಗ ಇರಲಿಲ್ಲ ಆ ಕಾಲದಲ್ಲಿ. ಹೊಟ್ಟೆ ಹಸಿವಿಗೆ ಬೇಕಾಗಿ ಋಷಿ ಮುನಿಗಳು ಊಟ ಮಾಡಿದ ಉಚ್ಚಿಷ್ಟಕ್ಕಾಗಿ ಕಾದವ. ನಾನು ಅಂತ ಏನು ನನ್ನ ತಮ್ಮ, ತಮ್ಮಂದಿರು ಅಂತ ಏನು ನನ್ನ ಅಮ್ಮ.ನು ಎಲ್ಲಾದರೂ ಕುಳಿತುಕೊಳ್ಳಬೇಕಾಗಿದ್ದರೆ ಬಂಡೆ ಕಲ್ಲೇ. ಮಲಗಬೇಕಾಗಿದ್ದರೆ ಹಸಿ ಹುಲ್ಲೇ ಹೀಗೆ ನನ್ನ ಬಾಲ್ಯ ಸಂದದೆ. ಆ ಅವಸ್ಥೆಯಲ್ಲಿ ನನ್ನ ತಂಗಿಯ ಕಿವಿ ಹೋಗಲಿ, ಮೂಗು ಹೋಗಲಿ, ಜೀವವೇ ಹೋಗಲಿ ಅಣ್ಣ ನೀನೆನು ಮಾಡುತ್ತಿ ಅಂತ ಕೇಳುವ ತಂಗಿ ಆಗಿದ್ದಿರಲಿಕ್ಕಿಲ್ಲ.

ರಾವಣಾಂತರ್ಯದ ಸುಂದರ ವಿಶ್ಲೇಷಣೆ. ತಂಗಿ ಶೂರ್ಪನಖಿಯ ಪ್ರಚೋದನೆಗೆ ಪರಿಸ್ಥಿತಿ ಎಷ್ಟು ಕಾರಣವಾಗುತ್ತದೆ ಎಂಬುದನ್ನು ತೋರಿಸುತ್ತದೆ. ಮನುಷ್ಯ ಎಲ್ಲವೂ ಗಳಿಸಿದಾಗ ಗಳಿಸಿದ್ದರ ಬಗ್ಗೆ ಚಿಂತಿಸುತ್ತಾನೆ ಎಂಬುದಕ್ಕೆ ನಿದರ್ಶನ. ರಾವಣ ಉನ್ನತಿಗೆ ಏರಿದ್ದರಿಂದಲೇ ಶೂರ್ಪನಖಿ ಅವನ ಉನ್ನತಿಯನ್ನು ಪ್ರಶ್ನಿಸುವಂತೆ ಮಾಡಿ ತನ್ನ ಸ್ವಾರ್ಥವನ್ನು ಮುಚ್ಚಿಡುತ್ತಾ ಎಲ್ಲದಕ್ಕೂ ಅವಳೇ ನಿಮಿತ್ತವಾಗಿಬಿಡುತ್ತಾಳೆ. ಮೇಲ್ನೋಟಕ್ಕೆ ಇದು ನಿಮಿತ್ತ ಎಂದು ಕಂಡರೂ ರಾವಣ ಒಳ ಆಂತರ್ಯದ ಭಾವನೆಯತ್ತ ಶೇಣಿಯವರು ಬೆಳಕು ಚೆಲ್ಲುತ್ತಾರೆ. ಇದು ಕೇವಲ ಯಕ್ಷಗಾನ ತಾಳ ಮದ್ದಲೆಯಲ್ಲಷ್ಟೇ ಕಾಣಬಹುದು. ಈ ಪ್ರಸಂಗದಲ್ಲಿ ಪ್ರತಿ ಹಂತದಲ್ಲೂ ಅದು ಗಮನಕ್ಕೆ ಬರುತ್ತದೆ. ಇಲ್ಲಿ ಸಿಕ್ಕಿಬಿದ್ದೆ ನಾನು ಅಂತ ರಾವಣ ಅಲವತ್ತು ಕೊಂಡರೂ ಕಾಲಾಯ ತಸ್ಮೈ ನಮಃ ಅಂತ ಆತ ಹೇಳುವುದು ಅದಕ್ಕೆ. ರಾವಣನ ಅನಿವಾರ್ಯತೆಯನ್ನು ತೋರುವುದು ಮಾತ್ರವಲ್ಲ ಅದೇ ಅನಿವಾರ್ಯ ಅಂತ ಅದನ್ನೇ ಅಪ್ಪಿಕೊಳ್ಳುವ ಹಾಗೆ ಮಾಡುತ್ತದೆ. ರಾಮನನ್ನು ಬರುವ ಹಾಗೆ ಮಾಡಬೇಕು ರಾಮ ಬರಬೇಕು ಆ ರಾಮನಿಗೆ ರಾವಣ ಅಂದರೆ ಏನು? ಯಾಕಾಗಿ ಬರುವ ಹಾಗೆ ಮಾಡಿದ? ಮೂಲ ಗೂಢಾರ್ಥದ ಸ್ಥಾಯೀ ಭಾವನನ್ನು ವ್ಯಕ್ತ ಪಡಿಸುತ್ತದೆ. ರಾವಣ ವಧೆ ಕೇವಲ ರಾವಣ ಸಂಹಾರವಲ್ಲ ಎಂಬುದನ್ನು ಪ್ರತಿಪಾದಿಸುವ ತಂತ್ರ ಬಹಳ ಅದ್ಭುತವಾಗಿರುತ್ತದೆ.

ಶೂರ್ಪನಖ ಪ್ರಸಂಗದಲ್ಲಿ ರಾಮ ತನ್ನ ಕೃತಿಯ ಮೂಲಕ ಎಚ್ಚರಿಕೆಯನ್ನು ಕೊಡುತ್ತಾನೆ. ತ್ರಿಶಿರಾದಿ ಹದಿನಾಲ್ಕು ಸಾವಿರ ದಾನವರ ಶಿರಗಳನ್ನು ನಿಂತ ನಿಲುವಿನಲ್ಲೇ ಕತ್ತರಿಸಿ ನಂತರ ಬೆವರೋರೆಸುತ್ತಾನೆ. ಅಕಂಪನನ ವರದಿ ರಾವಣನಿಗೆ ಇದನ್ನು ಸ್ಪಷ್ಟವಾಗಿ ಮನವರಿಗೆ ಮಾಡುತ್ತದೆ. ಹಾಗಾಗಿ ರಾವಣ ತನ್ನ ಹಲವು ತಂತ್ರಗಳಿಗೆ ತನ್ನ ನಿಲುಮೆಯ ಸಹಾಯವನ್ನು ಮೂಡಿಸುತ್ತಾನೆ. ಶೂರ್ಪನಖ ಪ್ರಕರಣಕ್ಕೆ ಪ್ರತಿಕಾರ ತೋರುವುದು ಹೇಗೆ ಅನಿವಾರ್ಯವಾಗುತ್ತದೋ ಅದನ್ನು ರಾಮನಿರುವಲ್ಲಿಗೆ ಹೋಗಿ ತೋರುವುದು ಅಸಾಧ್ಯ ಎಂದು ರಾವಣನಿಗೆ ಮನವರಿಕೆಯಾಗುತ್ತದೆ. ಅದಕ್ಕಾಗಿ ರಾಮನನ್ನು ಬರಿಸಬೇಕು.ಅದಕ್ಕೆ ರಾಮನ ಸರ್ವಸ್ವವೇ ಆಗಿರುವ ಸೀತೆಯನ್ನು ಕರೆತರಬೇಕು. ಅರ್ಥಾತ್ ಸೀತೆಯ ಮೂಲಕ ರಾಮನನ್ನು ಕಾಣಬೇಕು. ಪರೋಕ್ಷವಾಗಿ ಸೀತೆ ರಾಮದರ್ಶನಕ್ಕೆ ಕಾರಣವಾಗಬೇಕು. ಸೀತೆಯ ಅಪಹಾರವಾಗುತ್ತದೆ. ಈಗ ರಾಮದರ್ಶನ ಸನ್ನಿಹಿತವಾಗಿದೆ. ರಾವಣ ಭಾವುಕನಾಗುತ್ತಾನೆ. ಪಲ್ಲಂಗದಲ್ಲಿ ಪವಡಿಸಿದರೂ ನಿದ್ದೆ ಬಾರದೆ ಅನ್ನುವುದಕ್ಕಿಂತ ನಿದ್ದೆ ಮಾಡದೆ ಪರಿತಪಿಸುತ್ತಾನೆ.