"ಇದು ವಿಮರ್ಶೆಯಲ್ಲದ ಚಿಂತನ"

Saturday, November 9, 2013

ಪಾತ್ರದ ಅಂತರಂಗದ ಸಂವಾದ

"ಯಕ್ಷ ಚಿಂತನ” ಓದಿ ಹಲವರು ಹೇಳಿದ್ದಿದೆ, ಲೇಖನ ಪತ್ರಿಕೆಗೆ ಕಳುಹಿಸಿ ಚೆನ್ನಾಗಿದೆ.ಅದರ ಯೋಗ್ಯತೆಯನ್ನು ಅವರು ಬಿಂಬಿಸಬಹುದು ಆದರೆ ನನ್ನಿಂದಾಗುವುದಿಲ್ಲ. ಪತ್ರಿಕೆಗೆ ಬರೆದಾಗ ಅದು ಹೋಟೇಲಿನ ಪ್ಲೇಟು ಊಟದಂತೆ ಭಾಸವಾಗುತ್ತದೆ. ಹೊಟ್ಟೆ ತುಂಬಲಿ ಬಿಡಲಿ ಅಲ್ಲಿ ಅದಕ್ಕೊಂದು ಮಿತಿ ಎಂಬುದು ಇರುತ್ತದೆ. ತೆಟ್ಟೆ ಖಾಲಿಯಾದಾಗ ಊಟ ಅಗಿ ಹೋದ ತೃಪ್ತಿಯನ್ನು ಬಲವಂತವಾಗಿ ತರಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಇಟ್ಟ ಹಣ್ಣಿನ ಬುಟ್ಟಿಯ ಹಾಗೆ ಅದಕ್ಕೆ ಒಂದು ಅಲಂಕಾರದ ಶಿಸ್ತು ಇರಬೇಕಾಗುತ್ತದೆ. ಆದರೇ ನಮ್ಮದೇ ಮನೆಯಂಗಳದಲ್ಲಿ..... ಹೇಗೆ ನಲಿದರೆ ಏನು? ಎಷ್ಟು ಹೊತ್ತು ನಲಿದರೂ ಅಡ್ಡಿ ಇಲ್ಲ. ತಾಳ ತಪ್ಪಿದರೂ ಲಯ ಹೋದರೂ ನಮ್ಮ ತೃಪ್ತಿಯ ಕುಣಿತ ಆಗಿಬಿಡುತ್ತದೆ. ಹಾಗಾಗಿ ಯಕ್ಷಚಿಂತನದ ಪುಟಗಳು ನನ್ನ ಮನೆಯಂಗಳ ಇದ್ದಂತೆ. ಪ್ರೇರಣೆ ಬಂದಂತೆ ಕುಣಿಯುತ್ತೇನೆ. ಆ ಪ್ರೇರಣೆಯನ್ನು ಮಾತ್ರ ಶಿಸ್ತಿನೊಡನೆ ಸುಸಂಸ್ಕೃತವಾಗಿ ಇರಿಸುವುದು ಅವಶ್ಯ. 

ಹಲವುಸಲ ಔದಾಸಿನ್ಯದಿಂದಲೇ ನಮ್ಮ ಯೋಚನೆಗಳು ಹೆಪ್ಪುಗಟ್ಟುತ್ತವೆ. ನೆನಪುಗಳು ಹೊರ ಬರದೇ ಒಳಗಿಂದೊಳಗೆ ಕುಲುಕುತ್ತ ನಗುತ್ತಿರುವಂತೆ ಭಾಸವಾಗುತ್ತದೆ. ಒಂದೆಳೆ ಬಂದರೂ ಸಾಕು ಅದಕ್ಕೆ ರೂಪ ಕೊಡಬಲ್ಲೆ ಎಂಬ ವಿಶ್ವಾಸವೂ ಕೆಲವೊಮ್ಮೆ ಮನಸ್ಸಿನ ಜಾಡ್ಯದಿಂದ ಶಿಥಿಲವಾಗುತ್ತದೆ. ಭಾವನೆಗಳು ಪ್ರತಿಘಳಿಗೆಗೂ ನಿತ್ಯ ನೂತನವಾಗಿರುತ್ತವೆ. ಮನಸ್ಸು ಇರುವುದೇ ಈ ಸುಳಿಗಳ ಮಧ್ಯದಲ್ಲಿ. ಇವುಗಳಿಗೆ ಯಾವುದೇ ನಿಯಬಾಧಕವಾಗಿರುವುದಿಲ್ಲ. ಇದು ಕೇವಲ ಸ್ವಭಾವ ಜನ್ಯವಾಗಿ ತಿರುಗುತ್ತಿರುತ್ತದೆ. ಹಾಗಾಗಿ ಪ್ರಮೇಯ ಒದಗಿಬಂದರೂ ಬರವಣಿಗೆ ಸಾಧ್ಯವಾಗುವುದಿಲ್ಲ. “ದಾಸ್ತಾನು ಇಲ್ಲ” ಎಂಬ ಫಲಕ ಹೊರ ಹಾಕಿದಂತೆ  ಭಾವನೆಗಳ ಅಂಗಡಿ ಬಾಗಿಲು ಜಡಿದಂತೆ, ಸೂರ್ಯನ ಬಿಸಿಲಿಗೆ ಮುಖಒಡ್ಡುತ್ತಾ ನಿಂತು ಬಿಟ್ಟಿವೆ. ಅದೇ ಶುಷ್ಕ ಭಾವನೆ ಒಣ ಹವೆಯಂತೆ ತಿರುಗುವಾಗ ಸುಳಿಗೆ ಸಿಕ್ಕಿದ ತರಗೆಲೆಯ ಸದ್ಧಿನಂತೆ ಇಲ್ಲಿ ವಿಷಯ ಸದ್ದು ಮಾಡಿತು ನೋಡಿ.

“ಎನುತಲಾಜ್ಞೆಯೊಳಿಂತು ಕಾಶೀ ಜನಪ ನಂದನೆಯರನು ಕರೆಯುತಾ ವಿನಯದಿಂ ಪೇಳಿದನು ಗಂಗಾ ತನಯರವರನು ಮೋದದಿ…”
ಭೀಷ್ಮ ವಿಜಯ ಪ್ರಸಂಗದ ಒಡ್ದೋಲಗದ ಪದವಿದು. ಇದರಿಂದಲೂ ಮೊದಲು ಅಂಬೆ ಮತ್ತು ಸಾಲ್ವನ ಪ್ರಕರಣವನ್ನು ಹೊರತು ಪಡಿಸಿದರೆ ಸಾಮಾನ್ಯವಾಗಿ ಭೀಷ್ಮ ವಿಜಯ ಆರಂಭವಾಗುವುದು ಈ ಪದದೊಂದಿಗೆ.   ತಾಯಿ ಸತ್ಯವತಿಯ ಆಜ್ಞೆಯಂತೆ ಕಾಶೀ ರಾಜನ ಪುತ್ರಿಯರನ್ನು ತಂದು ಅವರಿಂದ ಅಭಿಮತವನ್ನು ವಿನಯದಿಂದ ಕೇಳುವಲ್ಲಿಂದ ಸಂದರ್ಭ ಹಾಗು ಪ್ರಸಂಗ ಶುರುವಾಗುತ್ತದೆ.   ಯಕ್ಷಗಾನ ಬಯಲಾಟಕ್ಕೂ ತಾಳಮದ್ದಲೆಗೂ ಪಾತ್ರ ತೆರೆದುಕೊಳ್ಳುವ ರೀತಿ ತೀರ ಭಿನ್ನವಾಗಿರುತ್ತದೆ.ಆ ಪಾತ್ರದ ನಿಲುವು ಏನು? ಹಿಂದಿನ ಸನ್ನಿವೇಶಗಳಲ್ಲಿ ಆ ಪಾತ್ರ ತೆರೆದುಕೊಂಡ ವ್ಯಕ್ತಿತ್ವದ ರೂಪಗಳೇನು.ಇದೆನ್ನೆಲ್ಲ ಪರಿಗಣಿಸಿ ಆ ಪಾತ್ರವನ್ನು ಕಟ್ಟಬೇಕಾಗುತ್ತದೆ.  ಬಯಲಾಟದಲ್ಲಿ ಮೌಖಿಕ ಆಂಗಿಕ ಅಭಿನಯದೊಂದಿಗೆ ವೇಷಗಾರಿಕೆಯೂ ಇರುವುದರಿಂದ ಪಾತ್ರ ಬೇಗನೆ ಸ್ಪಷ್ಟವಾಗುತ್ತದೆ. ಆದರೆ ತಾಳ ಮದ್ದಲೆಯಲ್ಲಿ ಬರೀ ಕೇಳುವುದರಿಂದಲೇ ಪಾತ್ರ ನಿರ್ಮಿಸುವ ಸವಾಲು ಪಾತ್ರಧಾರಿಗಿದೆ. ಕೆಲವೊಂದು ಸಲ ಭೀಷ್ಮ ಪಾತ್ರಧಾರಿ ಭೀಷ್ಮನ ಪೂರ್ವಾಪರದ ಜತೆಗೆ ತಂದೆ ಶಂತನುವಿನ ವೃತ್ತಾಂತಗಳನ್ನು ಸಂದರ್ಭಾನುಸಾರ ಉಪಯೋಗಿಸಿಕೊಂಡು ಪಾತ್ರವನ್ನು ಕಟ್ಟುತ್ತಾನೆ. ಆದರೂ ಪ್ರಸಂಗದ ಸನ್ನಿವೇಶದಲ್ಲಿ  ತೋರಲೇ ಬೇಕಾದ ವಿಷಯವೆಂದರೆ  ಕಾಶೀರಾಜ ಇಟ್ಟ ಸ್ವಯಂವರ,  ಕಾಶೀರಾಜನ ಸ್ಥಾನ ಮತ್ತು ನಿಲುವು ಮತ್ತು ಭೀಷ್ಮ ಕೈಗೊಂಡ ನಿರ್ಥಾರದ ಅನಿವಾರ್ಯತೆ ಇವಿಷ್ಟನ್ನು ವಿವರಿಸಿದ ನಂತರವೇ ಪ್ರಸಂಗಕ್ಕೆ ಪೀಠಿಕೆ ಹಾಕಿದಂತಾಗುತ್ತದೆ.

  ವಾಸ್ತವದಲ್ಲಿ ನಾವು ತಾಳ ಮದ್ದಲೆಯನ್ನು ನೋಡುವುದು ಮತ್ತು ಕೇಳುವುದು ಎರಡು ಇದ್ದರೂ ಅದು ನೋಡದೇ ಕೇಳುವಂತಿದ್ದರೆ..?  ಈ ತುಡಿತದಿಂದಲೇ ಒಂದು ಪಾತ್ರ ಹೇಗೆ ಸಾಕ್ಷಾತ್ಕಾರವಾಗುತ್ತದೆ ಎಂಬ ಅವಲೋಕನ ಜತೆಯಲ್ಲೇ ಇದ್ದರೆ,  ತಾಳ ಮದ್ದಲೆಯ ಅಸ್ವಾದನೆ ಅರ್ಥವನ್ನು ಕಂಡುಕೊಳ್ಳುತ್ತದೆ. ಇಲ್ಲಿ ಯಕ್ಷಗಾನ ಪದಕ್ಕೆ,  ಚೆಂಡೆ ಮದ್ದಲೆಯ ಧೀಂಗಿಣಕ್ಕೆ ಕುಣಿತ ಮತ್ತು ಅಭಿನಯ ನಮ್ಮ ಕಲ್ಪನೆಯಲ್ಲಿರುತ್ತದೆ. ಮನಸ್ಸು ಪೂರಕವಾಗಿ ದೃಶ್ಯವನ್ನು ಕಲ್ಪಿಸಿಕೊಳ್ಳುತ್ತದೆ. ವಾಸ್ತವದಲ್ಲಿ  ದೃಷ್ಟಿಗೆ ಕೆಲಸ ಕಡಿಮೆ ಇರುವುದರಿಂದ ಗಮನವೆಲ್ಲವೂ ಕೇಳುವುದಕ್ಕೆ ಕೇಂದ್ರೀಕೃತವಾಗಿರುತ್ತದೆ.    ತಾಳ ಮದ್ದಲೆ ಒಂದು ಉತ್ತಮ ಶ್ರಾವ್ಯ ಕಾವ್ಯ.

          ಯಕ್ಷಗಾನದಲ್ಲಿ ಒಂದೊಂದು ಪಾತ್ರದ ವ್ಯಕ್ತಿತ್ವ ಒಂದೊಂದು ಬಗೆಯಲ್ಲಿದ್ದು ಅದು ತೆರೆದುಕೊಳ್ಳುವ ರೀತಿ ಅದ್ಭುತವಾಗಿರುತ್ತದೆ. ಪಾತ್ರಗಳನ್ನು ನಿರ್ವಹಿಸುವ ವ್ಯಕ್ತಿಯಿಂದ ವ್ಯಕ್ತಿಗೆ ಇದು ಭಿನ್ನವಾಗಿರುತ್ತದೆ. ಕೆಲವು ಸಲ ಇದು ಸಾತ್ವಿಕವಾಗಿ ಅನುಕ್ರಮದಲ್ಲೇ ಪಾತ್ರದ ಸೃಷ್ಟಿಯನ್ನು ಮಾಡುವಾಗ ಪೂರಕವಾದ ಹಿನ್ನೆಲೆಯನ್ನು ಘಟನೆಗೆಗಳನ್ನು ಭಾವನಾತ್ಮಕ ಸಂಭಂಧಗಳನ್ನು ಹೊಸೆದು ಸೃಷ್ಟಿ ಮಾಡಿದರೆ, ಕೆಲವು ಸಲ ಭಿನ್ನವಾಗಿ ವಿತಂಡವಾದವನ್ನೇ ಮುಂದಿಟ್ಟುಕೊಂಡು ವಿಪರ್ಯಾಸಗಳನ್ನೇ ಬೆರೆಸಿಕೊಂಡು ಪಾತ್ರವನ್ನು ನಿರೂಪಿಸಿಬಿಡುತ್ತಾರೆ.  ಇನ್ನೊಂದು ಪಾತ್ರದಿಂದ ತನ್ನ ಪಾತ್ರವನ್ನು ಕಟ್ಟಿಕೊಳ್ಳುವ ಜಾಣತನದ ಹಾದಿಯೂ ಇರುತ್ತದೆ. ತಾಳ ಮದ್ದಲೆಯ ಪ್ರತಿಯೊಂದು ಪಾತ್ರದ ಬಗ್ಗೆ ವಿಶ್ಲೇಷಣೆಯನ್ನು ಮಾಡುತ್ತ ಆಸ್ವಾದಿಸಿದರೆ ಇದೊಂದು ಅದ್ಭುತ ಕಾವ್ಯಪ್ರಪಂಚ. ಮೊಳಕೆಯೊಡೆದ ಚಿಕ್ಕ ಸಸಿಯನ್ನು  ಅದರ ಬುಡದೊಂದಿಗೆ ಮಣ್ನು ಸಮೇತ ಕೈಯಲ್ಲಿ ಹಿಡಿದಂತೆ ಪಾತ್ರಗಳು. ಅದನ್ನು ಆ ನೆಲೆಯಲ್ಲಿ ಅನುಭವಿಸಬೇಕು. ಆ ಸಸಿಯನ್ನು ಬೇರೆ ಸ್ಥಳದಲ್ಲಿ ನೆಟ್ಟಾಗ ಮೂಲಗುಣವನ್ನು ಉಳಿಸಿಕೊಂಡು ಸಸಿ ಬೇರೆಯೇ ರೂಪದಲ್ಲಿ ಬೆಳೆದಂತೆ ಯಕ್ಷಗಾನ ತಾಳ ಮದ್ದಲೆಯ ಪಾತ್ರಗಳು. ಹಲವು ದೃಷ್ಟಿಕೋನದಿಂದ ಇವುಗಳು ಚಿಗುರೊಡೆದು ಅಸ್ತಿತ್ವವನ್ನು ಪಡೆಯುತ್ತವೆ.  ಸಸಿ ಬೆಳೆದಂತೆಲ್ಲ ನಾವು ನಿತ್ಯ ಅದನ್ನು ಗಮನಿಸಿದ ಹಾಗೆ ಪಾತ್ರಗಳನ್ನು ಗಮನಿಸುತ್ತಾ ಸಾಗಬೇಕು. ಆವಾಗ ತಾಳ ಮದ್ದಲೆಯ ಕಾವ್ಯ ಪ್ರಪಂಚದ ಸುತ್ತಾಟ ಅನುಭವಕ್ಕೆ ಬರುವುದು.

          ಒಂದೊಂದು ಪಾತ್ರವೂ ವೈವಿಧ್ಯಮಯವಾದರೆ ಆ ಪ್ರತಿಯೊಂದು ಪಾತ್ರನಿರ್ವಹಣೆಯಲ್ಲಿ ಪುನಹ ಕವಲುಗಳಾಗಿ ಅಲ್ಲೂ ವಿವಿಧತೆಯನ್ನು ಕಾಣಬಹುದು. ಒಂದು ಗಹನವಾದ ಸೂಕ್ಷ್ಮ ಸಮಸ್ಯೆಗಳಿಗೆ ಬೇರೆ ಬೇರೆ ರೀತಿಯ ಉತ್ತರಗಳನ್ನು ತಮ್ಮ ದೃಷ್ಟಿಕೋನದಿಂದ ಸೃಷಿಟಿಸುವ ಕಲೆ ಬಹುಶಃ ತಾಳಮದ್ದಲೆಯಲ್ಲಿ ಮಾತ್ರ ವಿಪುಲವಾಗಿದೆ.  ಸುಕ್ಷಾತಿ ಸೂಕ್ಷ್ಮ ವಿಚಾರಗಳ ಹೊಲಬನ್ನು ಹಿಡಿಯುವುದಕ್ಕೆ ತಾಳ ಮದ್ದಲೆಯಲ್ಲಿ ಸಮಯಾವಕಾಶವು ಇರುತ್ತದೆ. ಆದರೆ ನಮ್ಮ ಗಮನಕ್ಕೆ ಇದು ಬರುವುದಿಲ್ಲ.   ಯಾಕೆಂದರೆ,  ಒಂದು ದೊಡ್ಡ ಕಟ್ಟಡವನ್ನು ಕಟ್ಟುವಾಗ ನಮ್ಮ ಗಮನ ದೊಡ್ಡ ದೊಡ್ಡ ಕಲ್ಲು ಇಟ್ಟಿಗೆಯ ಮೇಲೆ ಮಾತ್ರಾ ಹೋಗುತ್ತದೆ. ಆದರೆ ಒಂದು ಮರಳಿನ ಕಣ ಸಣ್ಣದ್ದಾದರೂ ಕಟ್ಟಡದಲ್ಲಿ ಅದು ತನ್ನ ದೇಣಿಗೆಯನ್ನು ಸಲ್ಲಿಸುವುದು ನಮ್ಮ ಗಮನಕ್ಕೇ ಬರುವುದಿಲ್ಲ. ಹಾಗೆಂದು ಆ ಮರಳಿಲ್ಲವಾದರೆ ಕಟ್ಟಡ ನಿರ್ಮಾಣವೂ ಸಾಧ್ಯವಿಲ್ಲ. ತಾಳ ಮದ್ದಲೆಯಲ್ಲಿ ಇಂತಹ ಸೂಕ್ಷ್ಮ ವಿಷಯಗಳೂ ಕೂಡ ಜಿಜ್ಞಾಸೆಯ ಒರೆಗಲ್ಲಿಗೆ ಸಿಕ್ಕಿಬಿಡುತ್ತದೆ.  ಭೀಷ್ಮನ ಪಾತ್ರ ವಿಶ್ಲೇಷಣೆ ಮಾಡುವಾಗ  ಬ್ರಹ್ಮ ಚಾರಿ ವೃತಸ್ಥನಾದ ಭೀಷ್ಮ ಸ್ವಯಂವರ ಮಂಟಪಕ್ಕೆ ಹೊಕ್ಕಿದ್ದು ಅಪರಾಧ..ಮೇಲ್ನೋಟಕ್ಕೆ ಭೀಷ್ಮನ ಪ್ರವೇಶ ಅಪರಾಧವೆಂದು ವಿಮರ್ಶೆಗೆ ಒಳಗಾದಾಗ,   ಮನಸ್ಸಿನಲ್ಲಿ ಬೇರೊಬ್ಬನನ್ನು ಕಾಮಿಸಿ ಅವನಿಗೆ ಮಾತು ಕೊಟ್ಟ ಆನಂತರ,  ಸ್ವಯಂವರ ಮಂಟಪಕ್ಕೆ ಪ್ರವೇಶಿಸಲಿಕ್ಕೆ ಅಂಬೆ ಎಷ್ಟು ಅರ್ಹಳು? ಅವಳು ಪ್ರವೇಶಿಸಬಹುದೇ? ಇಲ್ಲಿ ಅಂಬೆಯ ಪಾತ್ರವೂ ವಿಮರ್ಶೆಯ ಅಲುಗಿ ಸಿಕ್ಕಿಕೊಳ್ಳುತ್ತದೆ.  ಒಂದು ವೇಳೆ ಅಂಬೆ ಮಂಟಪಕ್ಕೆ ಪ್ರವೇಶ ಮಾಡದೇ ಇರುತ್ತಿದ್ದರೆ..?   ಯಾಕೆ ಬರಲಿಲ್ಲ ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟ ಸಾಧ್ಯವಾಗುತ್ತಿತ್ತು. ? ಸಾಲ್ವನಿಗೆ ಮಾತು ಕೊಟ್ಟಾಕೆ  ಪ್ರವೇಶ ಮಾಡುವುದೂ ಸಹ ಆ ಸಭೆಗೇ ವಂಚನೆ ಮಾಡಿದಂತೆ ಅಲ್ಲವೆ?  ಹಾಗಾಗಿ,   ಇಲ್ಲಿ ಪ್ರವೇಶಕ್ಕೆ ಎರಡೂ ಪಾತ್ರಗಳೂ ಬೇರೆ ಬೇರೆ ಕಾರಣವನ್ನು ಸ್ಪಷ್ಟೀಕರಿಸಿದರೂ ಆ ಎರಡು ಪ್ರವೇಶ ಬೇರೆಯೇ ರೀತಿಯಲ್ಲಿ ಕಥೆಯ ಹಣೆಬರಹವನ್ನು ಬರೆದು ಬಿಟ್ಟಿತು.

“ತರಣೀ ಸುತ ಸುಗ್ರೀವ  ೠಷ್ಯಮೂಕದೊಳು.. “  ವಾಲಿ ಸುಗ್ರೀವಕಾಳಗ ಪ್ರಸಂಗದ ಪದವಿದು. ಋಷ್ಯ ಮೂಕದಲ್ಲಿ ಒಂಟಿಯಾಗಿ ಕುಳಿತಾಗ ಸುಗ್ರೀವ ಪರಿತಪಿಸುವ ಪದವಿದು. “ಹೀಗಾಯ್ತಲ್ಲ..ಸುಗ್ರೀವ ಪರಿತಪಿಸುತ್ತಾನೆ. ಆತ ಋಷ್ಯ ಮೂಕ ಪರ್ವತದಲ್ಲಿ ಆಶ್ರಯಿತನಾಗಿ ಉಳಿದಿರುವುದನ್ನು ನೆನಯುತ್ತಾನೆ. ತನ್ನಣ್ಣನ ವಾಲಿಗೆ ಮತಂಗ ಮುನಿಗಳ ಶಾಪವಿದ್ದುದರಿಂದ ಈ ಕ್ಷೇತ್ರ ವಾಲಿಯ ನೆರಳು ಹಾದು ಹೋಗುವಂತಹುದಲ್ಲ. ಅಣ್ಣನೊಡನಾದ ವೈಮನಸ್ಯ ಪ್ರಕರಣ, ಕೈ ಹಿಡಿದ ಮಡದಿ ಪರವಶಳಾಗಿರುವುದು ಹೀಗೆ ಸುಗ್ರಿವ ಪರಿತಪಿಸುತ್ತಾನೆ. ಯೋಚಿಸುತ್ತಾ ಸುಗ್ರೀವ ಅರ್ಥಧಾರಿ ಹೇಳುತ್ತಾನೆ ... “ ಹೀಗಾಯ್ತಲ್ಲ? ಆಗ ಹಾಗಿದ್ದು ಈಗ ಹೀಗಾಯ್ತಲ್ಲ.... ? ಒಂದು ಕಾಲದಲ್ಲಿ ಒಂದೇ ತಾಯಿಯಂತೆ ಆದ ತಂದೆ ಇಂದ್ರ ಮತ್ತು ಸೂರ್ಯನಿಂದ ಜನಿಸಲ್ಪಟ್ಟು ಒಂದಾಗಿ ಭಾತೃಪ್ರೇಮದಿಂದ ಬದುಕಿ ಲೋಕಕ್ಕೆ ಮಾದರಿಯಾದವರ ಬದುಕು ಹೀಗಾಯ್ತಲ್ಲ? ತರಣಿ ಸುತ ಸುಗ್ರೀವ... ಸೂರ್ಯನ ಮಗನೇ ಆದರೂ..ಬದುಕು ಕತ್ತಲೆಯಲ್ಲಿ.  ದೀಪದ ಅಡಿಗೆ ಕತ್ತಲು ಎಂಬ ಹಾಗೆ. ಜ್ಯೋತಿಷ್ಯದಲ್ಲಿ ಒಂದು ಉಂಟಂತೆ ಯಾವುದೇ ಗ್ರಹದ ಚಾರಸ್ಥಿತಿಯಿಂದಾಗಿ ಜಾತಕದವನಿಗೆ ಗಂಡಾಂತರ ಪ್ರಾಪ್ತಿಯಾಯಿತೋ ಸೂರ್ಯನಿಗೆ ನಮಸ್ಕಾರ ಮಾಡಿದರೆ ಎಲ್ಲವೂ ಪರಿಹಾರ್ಯ..ಸರ್ವ ರೋಗಕ್ಕೂ ಸೂರ್ಯ ನಮಸ್ಕಾರ ಪರಿಹಾರವಾಗುತ್ತದೆ. ಆದರೆ ಸೂರ್ಯನ ಮಗನಿಗೇ ಗ್ರಹಚಾರ ಬಿಡದೇ ಇದ್ದರೆ.? ಸುಗ್ರೀವನಿಗೆ ಗುರುಗಳು ಹೇಳಿದ್ದರಂತೆ ಯಾವುದೇ ಜನ್ಮ ಹುಟ್ಟಿ ಬರುವುದಿದ್ದರೂ ಪೂರ್ವ ಜನ್ಮದ ಪಾಪಕರ್ಮದಿಂದ ಆದರೆ ವಾಲಿ ಸುಗ್ರೀವರ ಜನನ ಇದಕ್ಕೆ ವಿಹಿತವಾದದ್ದು. ಯಾಕೆ? ವೃಕ್ಷ ರಜಸ್ಸು ಎಂಬ ಕಪಿರಾಜ ಸಂಸಾರದಲ್ಲಿ ಮತ್ತು ಜೀವನದಲ್ಲಿ ಎಲ್ಲಸುಖವನ್ನೂ ಅನುಭವಿಸಿದ ನಂತರ ಕಾಡಿಗೆ ಬಂದನಂತೆ, ಬಂದವ ಕೊಳವೊಂದರಲ್ಲಿ ಸ್ನಾನ ಮಾಡಿದಾಗ ಹೆಣ್ಣಾಗಿ ಬದಲಾದನಂತೆ. ಈ ಹೆಣ್ಣನ್ನು ಕಂಡು ಮೇಲೆ ಸಂಚರಿಸುತ್ತಿದ್ದ ದೇವೆಂದ್ರ ಆಕರ್ಷಿತನಾಗಿ ಕೆಳಗೆ ಬಂದನಂತೆ. ಮತ್ತೆ ಕೂಡಿದನಂತೆ...ಇಲ್ಲಿ ಸುಗ್ರೀವ ಯೋಚಿಸುವ ರೀತಿ .. .. ವೃಕ್ಷ ರಜಸ್ಸು ಎಷ್ಟಾದರೂ ಮಂಗನ ಮುಸುಂಡಿನವನು. ಯಾವ ಕೆರೆಗೆ ಹಾರಿದ್ರು ಹೇಗೆ ವೇಷ ಹಾಕಿದ್ರು ಅವನದ್ದು ಮಂಗನ ಮುಸುಂಡು.. ಆದರೂ ದೇವೆಂದ್ರ ಕಣ್ಣು ಹಾಕಿದ. ರಂಭಾದಿ ನಾರಿಯರನ್ನು ಕಂಡವನು ಶಚೀಪತಿ ಈ ಎಲ್ಲ ಸೌಂದರ್ಯವೂ ಈ ಮಂಗನ ಮೂತಿಯ ಹಿಂದೆ ಮರೆಯಾಯಿತೆ? ಹಾಗೆ ಹುಟ್ಟಿದವ ವಾಲಿ. ನಂತರ ಎಲ್ಲವನ್ನು ಕಾಣುವ ಸೂರ್ಯನಿಗೆ ಗಂಡು ಹೆಣ್ಣಾದ ಮುಖ ಸುಂದರವಾಗಿ ಕಂಡದ್ದು ವಿಪರ್ಯಾಸವೇ ಹಾಗಿದ್ದರೂ ಹುಟ್ಟಿದ್ದು ನಾನು ಸುಗ್ರೀವ...ಸುರ್ಯನ ಮಕ್ಕಳಾದ ಯಮನಿಗೂ ನಾನು ಹೆದರುವುದಿಲ್ಲ ಶನಿಗೂ ನಾನು ಹೆದರುವುದಿಲ್ಲ ಆದರೆ ಈಗ ಅಣ್ಣ ವಾಲಿಗೆ ಹೆದರುವ ಗ್ರಹಚಾರ ಬಂದಿದೆಯಲ್ಲ. ಶನಿಯೂ ಯಮನೂ ಒಬ್ಬನೇ ಆಗಿ ಕಾಡ್ತಾ ಇದ್ದಾನಲ್ಲ.” ಗುರುಗಳ ಮಾತಿಗೆ ಸುಗ್ರೀವನಾಗಿ ಹೇಗೆ ತನ್ನದೇ ವಿಶ್ಲೇಷಣೆಯನ್ನು ಸುಂದರವಾಗಿ ಮಂಡಿಸುತ್ತಾರೆ.

“ಧೈರ್ಯ ತಾಳಯ್ಯ ಸೂರ್ಯ ನಂದನ | ಕಾರ್ಯವೆಸಗಲು ಮೋಸವಾಯಿತು | ವಾಲಿಯೊಳ್ ನಿನ್ನ ಕಾಣಲೀರ್ವರ ಆಳ ಭೇದವೇ ತಿಳಿಯದಾಯಿತು|”
ಇದು ವಾಲಿಯಲ್ಲಿ ಸೋತು ಧೃತಿಗೆಟ್ಟು ರಾಮನನ್ನು ಮೂದಲಿಸಿ ಮಾತನಾಡಿದ ವ್ಯಾಕುಲ ಚಿತ್ತ ಸುಗ್ರಿವನಿಗೆ ರಾಮ ಸಾಂತ್ವಾನ  ಪಡಿಸುವ ಪದ. ಇಲ್ಲಿ ಸುಗ್ರೀವನಿಗೆ ರಾಮನ ಪಾತ್ರಧಾರಿ ಒಂದೊಂದು ಬಗೆಯಲ್ಲಿ ಸಾಂತ್ವಾನದ ಅರ್ಥ ಹೇಳುತ್ತಾನೆ.
ಆವರೆಗೆ ಸೋಲುತ್ತಿದ್ದ ವಾಲಿ ಆದಿನ ಗೆಲ್ಲಬಾರದು  ಯಾಕೆ?  ರಾಮನ ಬೆಂಬಲದ ಆತ್ಮ ವಿಶ್ವಾಸ ಆದಿನ ವಾಲಿಯನ್ನು ಸೋಲಿಸಿದಲ್ಲಿ.,  ಬಿದ್ದವನು ವಾಲಿಯೇ ಆಗಿದ್ದಲ್ಲಿ ಎದ್ದು,  ನಿಂತವನು ಸುಗ್ರೀವನಾದರೆ. ಬಿದ್ದವನು  ಸುಗ್ರೀವನೆಂದು ಬಗೆದು ನಿಂತ ಸುಗ್ರೀವನಿಗೆ ಬಾಣ ಬಿಟ್ಟರೆ ಅದು ಅಚಾತುರ್ಯವಲ್ಲವೇ?

ಸುಗ್ರೀವ ಸೋತ, ಸೋತು ಬಿದ್ದ ಸುಗ್ರೀವನನ್ನು ಕೋಪ ತಣಿವವರೆ ವಾಲಿ ತುಳಿದು ಬೆನ್ನು ಹಾಕಿ ಹೋಗುತ್ತಾನೆ. ಹಾಗೆ ಬೆನ್ನು ಹಾಕಿ ಹೋಗುವ ವಾಲಿಯನ್ನು ಒಂದು ಮೃಗವನ್ನು ಹೊಡೆದ ಹಾಗೆ ಹೊಡೆದು ಕೊಲ್ಲುವುದು ಸರಿಯೇ? ಇಲ್ಲಿ ಇನ್ನೊಂದು ಚೋದ್ಯ ವಿದೆ. ಹೀಗೆ ಹೇಳಿದ ರಾಮ ವಾಲಿಗೆ ಭಾಣಾಘಾತ ಮಾಡುವುದು ಮರದ ಮರೆಯಲ್ಲಿ ನಿಂತೇ..ಆದರೂ ಇದೂ ಒಂದು ಮುನ್ಸೂಚನೆಯಂತೆ ಭಾವಿಸಬಹುದು.

ಹೀಗೆ ವಾಲಿಯಾರು? ಸುಗ್ರೀವ ಯಾರು? ಎಂಬ ಸಂದೇಹ ಇದ್ದಾಗ, ಅನುಮಾನದಲ್ಲಿ ಮಾಡಿದ ಕೆಲಸ ಸತ್ಫಲವನ್ನು ನೀಡೀತೆ. ಕೊಲ್ಲುವುದು ಯಾವಾಗಲೂ ಕೊಲ್ಲಬಹುದು ಆದರೆ, ರಾಮ ಹೇಳುವ ಮಾತು ಇದೂ ಒಂದು,

 “ಬಿಟ್ಟ ಬಾಣ ವಾಲಿಯ ಬದಲು ಸುಗ್ರೀವನಿಗಾದರೆ? ಸುಗ್ರೀವ ನನ್ನ ರಕ್ಷೆಯ ಕಕ್ಷೆಗೆ ಒಳ ಪಟ್ಟವನು. ವಾಲಿ ನನ್ನ ದೃಷ್ಟಿಯಲ್ಲಿ ವಧಾರ್ಹನೇ. ಕೊಲ್ಲುವುದು ಯಾವಾಗಲೂ ಅದೀತು. ರಕ್ಷಿಸುವುದು ಶಿಕ್ಷಿಸಿದ ಮೇಲೆ ಆದೀತೇ?”  ಆಹಾ ಎಂತಹ ಮಾತಿದು. ಶಿಕ್ಷೆಯ ಮೇಲಿನ ರಕ್ಷೆ ಅದು ರಕ್ಷೆಯಾಗುವುದೇ ಇಲ್ಲ. ಇಷ್ಟೇ ಅಲ್ಲದೇ ಇನ್ನೂ ಒಂದು ಮಾತನ್ನು ಹೇಳುತ್ತಾನೆ ರಾಮ. “ ಈಗ ವಿಶ್ರಾಂತಿ ತೆಗೆದುಕೊ. ಈ ರಾತ್ರಿ ಕಳೆಯಲಿ ಅಲ್ಲ ಇನ್ನೂ ಹಲವು ರಾತ್ರಿ ಕಳೆಯಲಿ ನೀನೇ ಹೊರಾಟ ಮಾಡಿ ಪಡಿಯಬೇಕು.   ಈಗ ನಿನಗೆ ಸೋಲಾಗಿರಬಹುದು. ನಿರಾಶೆಯಲ್ಲಿ ನೀನೇನು ಹೇಳಿದೆ ?  ನನಗೆ ಯೋಗ ಇದ್ದರೆ ಹೆಂಡತಿ ಸಿಕ್ಕಿಯಾಳು? ಹಾಗಲ್ಲ ಅದು,   ಇರಲಿ ...ವಾಲಿಯಲ್ಲಿ. ಏನಾಯಿತು? ಅವಳು ವಾಲಿಯಲ್ಲೇ ಇರಲಿ. ಏನಾಗಿ ಇರಲಿ? ಆಲೋಚಿಸಿದೆಯಾ? ವಾಲಿಯ ಹೆಂಡತಿಯಾಗಿ ಇರ್ತಾಳೋ ಇರ್ಲಿ. ಆದರೆ ಸುಗ್ರೀವನ ಹೆಂಡತಿಯಾಗಿ ವಾಲಿಯಲ್ಲಿ ಇದ್ರೆ?  ಆಗ ನೀನು ಗಂಡುಸಾಗಿ ಲೋಕಕ್ಕೆ ಹೇಗೆ ಮುಖ ತೋರಿಸುತ್ತಿ? ಅದು ನೀನೆ ಪಡೀಬೇಕು. ಅದಕ್ಕಾಗಿಯೇ ನಾನು ವಾಲಿಯನ್ನು ಯುದ್ದಕ್ಕೆ ಕರೀಲಿಲ್ಲ. ನಾನು ಹೊಡೆದು ನಿನ್ನ ಹೆಂಡತಿಯನ್ನು ನಿನಗೆ ಕೊಡಿಸುವುದು ನಿನ್ನ ಗಂಡಸುತನಕ್ಕೆ ಯೋಗ್ಯವಲ್ಲ ಹೊಡಿಯುದು ನೀನೆ. ನಾನು ಕೊಡಿಸಿದೆ ಎಂದಾಗಬಾರದು. ನೀನೇ ಹೋರಾಟ ಮಾಡಿ ಪಡೆದೆ ಎಂದಾಗಬೇಕು.”
ಬಹಳ ಸ್ವಾರಸ್ಯವಾದ ವಿಶ್ಲೇಷಣೆ ರಾಮನದ್ದು. ಈ ಒಂದು ಮಾತಿನಿಂದ ರಾಮನ ವ್ಯಕ್ತಿತ್ವದ ಪ್ರಭಾವವೂ ಗಾಢವಾಗುವುದಿಲ್ಲವೇ? ಬಾಹ್ಯ ಲೋಕದಲ್ಲಿ ಯಾರು ಹೇಗೇ ಇದ್ದರೂ ಅಂತರಂಗದ ಹೇಗಿರುತ್ತಾರೆ ಎಂಬುದು ಮುಖ್ಯ. ಅದೇ ರಾಮನ ದೃಷ್ಟಿಕೋನ. ಬಹಿರಂಗದ ಪ್ರಪಂಚ ಅದು ಮುಖ್ಯವಲ್ಲ ಅಂತರಂಗದ ಭಾವ ಮುಖ್ಯ. ಸುಗ್ರೀವ ಸಖ್ಯವೇ ಇದಕ್ಕೆ ನಿದರ್ಶನ. ಬಹಿರಂಗದಲ್ಲಿ ಸುಗ್ರೀವ ಒಂದು ಕಪಿ.  ವಾನರ ಮುಖದವನು. ಆದರೆ ಅಂತರಂಗದಲ್ಲಿ? ರಾಮ ಬಯಸಿದ್ದೇ ಅದನ್ನು ಸುಗ್ರೀವನಲ್ಲಿ. ಇದನ್ನು ಪರೋಕ್ಷವಾಗಿ ತಿಳಿಸಿದ್ದು ಮಾತ್ರವಲ್ಲ ರಾಮನ ವ್ಯಕ್ತಿತ್ವ ಎಂತದ್ಧು ಎಂದು ಸುಗ್ರೀವನಲ್ಲಿ ಮುದ್ರೆಯೊತ್ತಿದ ಹಾಗೆ. ಮಾತ್ರವಲ್ಲ ರಾಮನಿಗೆ ತನ್ನ ನಿಲುವು ಏನು ಎಂದು ಪ್ರತಿ ಹಂತದಲ್ಲೂ ಸ್ಪಷ್ಟ ಪಡಿಸಬೇಕಿದೆ. ಯಾಕೆಂದರೆ ತುಲ್ಯಾರಿ ಮಿತ್ರತ್ವ ಎಂದಾಗ ಸುಗ್ರೀವ ಇನ್ನೊಂದು ತುಲನೆಯನ್ನೂ ರಾಮನಿಗೆ ತೋರಿಸಿಕೊಡುತ್ತಾನೆ. ತನ್ನ ಹೆಂಡತಿಯಂತೆ ರಾಮನ ಹೆಂಡತಿಯೂ ಅಪಹೃತಳಾಗಿದ್ದಾಳೆ. ಆದರೆ ರಾಮ ಇದರ ವೆತ್ಯಾಸವನ್ನು ಈ ಮೂಲಕ ತೋರಿಸಿಕೊಡುತ್ತಾನೆ. ಅವನಿಗೆ ಅರಿವಿದೆ. ಸೀತೆಯನ್ನು ರಾವಣ ಅಪಹರಿಸಿದರೂ ಆಕೆ ರಾವಣನ ವಶದಲ್ಲಿ ಹೇಗಿರಬಹುದು? ಸೀತೆಯ ಅಂತರಂಗವನ್ನೇಲ್ಲ ಬಲ್ಲ ರಾಮ ಸುಗ್ರೀವನಿಗೆ ಅದನ್ನೇ ಸೂಕ್ಷ್ಮವಾಗಿ ಪಾಠಮಾಡುತ್ತಾನೆ.

ತಾಳ ಮದ್ದಲೆಯಲ್ಲಿ ಇಂತಹ ಸ್ಥೂಲ ನೋಟಗಳು ಬಹಳ ನಿಗೂಢವಾಗಿ ಅಡಕವಾಗಿರುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಪಾತ್ರದಿಂದ ಪಾತ್ರಕ್ಕೆ ಇದು ತೀರ ಭಿನ್ನವಾಗಿ ಪ್ರಕಟಗೊಳ್ಳುತ್ತದೆ. ಇದನ್ನು ಗಮನಿಸುವ ನೋಟ ನಮ್ಮದಾಗಿರಬೇಕು. ಇದ್ದೂ ಇಲ್ಲದಂತಹ ವಿಚಾರಗಳ ನಿಗೂಢತೆಯನ್ನು ಹಿಂಬಾಲಿಸಿದಾಗಲೇ ಅದರ ಸ್ವಾರಸ್ಯ ಗೊತ್ತಾಗುವುದು. ವಾಸ್ತವದಲ್ಲಿ ತಾಳ ಮದ್ದಲೆ ಎಂದಾಕ್ಷಣ ಒಂದು ಬಹಳ ದೊಡ್ಡ ತಪ್ಪು ಕಲ್ಪನೆ ಇದೆ. ಚರ್ಚೆ ಆಗ್ಬೇಕು ಪರಸ್ಪರ ಕಚ್ಚಿಕೊಳ್ಳಬೇಕು. ಆವಾಗಲೇ ತಾಳ ಮದ್ದಲೆ ರಂಗೇರುವುದು ಎಂದು. ಆದರೆ ತಾಳ ಮದ್ದಲೆ ಎಂಬ ಪರಿಕಲ್ಪನೆ ಇಂತಹ ಭಾವಗಳಿಂದ ಹೊರತಾಗಿರಬೇಕು. ಅಲ್ಲಿ ಚರ್ಚೆ ಇದ್ದು ಅದು ಸಂವಾದವಾಗಿರಬೇಕು. ಅದು ಪರಿಹರಿಸಲಾಗದ ಮೇಲಾಟದ ಜಗಳವಾಗಬಾರದು. ಸ್ಪರ್ಧೆ ಇರಬೇಕು, ಆದರೆ ಹಿಮ್ಮೆಟ್ಟಿಸುವ ಚಪಲ ಇರಬಾರದು. ಪಾತ್ರದ ಮನೋಭಾವದಲ್ಲಿ ಕಥೆಗೆ ಹೊಂದಿಕೊಂಡು ಸಂಘರ್ಷ ಇರಬೇಕು. ಆದರೆ ವ್ಯಕ್ತಿಗತವಾಗಿ ವೈಷಮ್ಯ ಇರಬಾರದು. ಗೆಲುವಿನ ಹಪಹಪಿಕೆ ಅದು ಕೇವಲ ತನ್ನ ಪಾತ್ರವೊಂದಕ್ಕೇ ಸೀಮಿತವಾಗಿರಬಾರದು. ಯಾಕೆಂದರೆ ಒಂದು ಸಣ್ಣ ಪಾತ್ರ ನಿರ್ವಹಣೆಯಲ್ಲಿ ರಂಗದಲ್ಲಿ ಸೋತರೂ ಅದು ಪರೋಕ್ಷವಾಗಿ ತಾಳಮದ್ದಲೆಯ ಪರಿಕಲ್ಪನೆ ಸೋತಂತೆ. ಆಲ್ಲಿ ಸೋಲುವುದು ವ್ಯಕ್ತಿಯಯಲ್ಲ ಪಾತ್ರವಲ್ಲ ಎಂಬ ಪರಿಜ್ಞಾನ ಸದಾ ಜಾಗೃತವಾಗಿರಬೇಕು. ಗಮನಿಸಿ ಜಗಳದ ಹಿಂದಿಕ್ಕುವ ಅಥವಾ ಕಚ್ಚಿಕೊಳ್ಳು ತುರುಸಿನ ಚರ್ಚೆಯಾದಲ್ಲಿ ಭರ್ರನೆ ಸುರಿವ ಮಳೆಯಂತೆ ಅಲ್ಲಿ ವೈಚಾರಿಕ ಸಂಘರ್ಷವೂ ಇರುವುದಿಲ್ಲ. ಗಹನವಾದ ವಿಚಾರಗಳೂ ಇರುವುದಿಲ್ಲ. ಬುದ್ಧಿಮತ್ತೆ ಎಲ್ಲ ಸೋಲಿಸುವುದರಲ್ಲೇ ಕೇಂದ್ರೀಕೃತವಾಗಿರುತ್ತದೆ. ವಿಚಾರಗಳು ಯಾವುದು ತೇಯುವುದೇ ಇಲ್ಲ.  ಇಂತಹ ವಿಚಾರಗಳು ಗಮನಕ್ಕೆ ಬರುವುದೇ ಇಲ್ಲ. ತಾಳ ಮದ್ದಲೆ ಎಂದಾಕ್ಷಣ, ಚರ್ಚೆ ಪರಸ್ಪರ ಚುಚ್ಚು ಮಾತಿನ ವರಸೆಗಳು, ಹೇಗಾದರೂ ಮಟ್ಟ ಹಾಕಬೇಕೆಂಬ ಮನೋಭಾವ. ರಾಮ ಸೋತರೂ ರಾವಣ ಗೆಲ್ಲಬೇಕೆಂಬ ಮನೋಭಾವ ಇದು ಯಾವ ವಿಪರೀತವನ್ನು ಚಿತ್ರಿಸುತ್ತದೆ ಎಂಬ ಕಲ್ಪನೆಯೇ ಇರುವುದಿಲ್ಲ. ಇದು ತಾಳ ಮದ್ದಲೆಯಲ್ಲಿ ಅರಿವಿಗೆ ಬಾರದೇ ಇರುವ ದುರಂತ.

 ಒಂದು ಬಸ್ಸಿನಲ್ಲಿ ನಾವು ಪಯಣಿಸುತ್ತಾ ಇದ್ದೇವೆ. ಬಸ್ಸು ಚಲಿಸುತ್ತಾ ಇದೆ.  ಆಗ ಬಸ್ಸಿನೊಳಗೆ ಒಂದು ಪಂತಂಗ ಹಾರಿ ಬರುತ್ತದೆ. ಬಸ್ಸಿನೊಳಗೆ ಯಾವುದನ್ನೂ ಅದು ಆಧರಿಸಿಕೊಳ್ಳದೇ ಬಸ್ಸಿನೊಳಗಿನ ಗಾಳಿಯಲ್ಲಿ ಹಾರಾಡುತ್ತಿರುತ್ತದೆ. ಗಮನಿಸಿ ಅದು ಬಸ್ಸಿನೊಳಗಿನ ಯಾತ್ರಿಕನೇ? ಅಲ್ಲ ಸ್ವಯಂ ಯಾತ್ರಿಕನೆ? ಬಸ್ಸಿನ ವೇಗಕ್ಕೆ ಹೊಂದಿ ಅದು ಹಾರಾಡಿದರೂ ಅದು ತನ್ನ ಪೂರ್ಣ ಚೈತನ್ಯವನ್ನು ಹಾರಾಟಕ್ಕೆ ವ್ಯಯ ಮಾಡುವುದಿಲ್ಲವೇ? ಬಸ್ಸಿನ ಹೊರಗಾದರೂ ಒಳಗಾದರೂ ಅದಕ್ಕೆ ವ್ಯಯವಾಗುವ ಶಕ್ತಿ ಮತ್ತು ಶ್ರಮ ಅದು ಒಂದೇ ತೆರನಾಗಿಲ್ಲವೇ. ಹಾಗಿದ್ದರೂ ನಾವು ಏನು ಭಾವಿಸುತ್ತೇವೇ ನಮ್ಮೊಂದಿಗಿನ ಸಹಯಾತ್ರಿಕನಂತೆ ಆ ಪತಂಗವನ್ನು ಭಾವಿಸುತ್ತೇವೆ. ಇದೇ ರೀತಿಯ ಹಲವು ಇದ್ದೂ ಇಲ್ಲದಂತಿರುವ ವಿಚಾರಗಳತ್ತ ಗಮನಿಸುವುದೇ ಒಂದು ಸ್ವಾರಸ್ಯವಾಗುತ್ತದೆ. ಯಕ್ಷಗಾನ ತಾಳ ಮದ್ದಲೆ ಎಂಬ ಒಂದು ಅದ್ಭುತ ಲೋಕವನ್ನು ನಾವು ವೈಚಾರಿಕ ತುಮುಲವನ್ನು ಇರಿಸಿ ಗಮನಿಸಬೇಕು. ಇಲ್ಲಿ ಬರುವ ಪ್ರತಿಯೋಂದು ಪಾತ್ರಗಳು ನಮ್ಮ ಅಂತರಂಗದಲ್ಲಿ ಸಂವಾದಿಗಳಾಗುತ್ತದೆ.


Sunday, October 27, 2013

ಪಾತ್ರಾವಲೋಕನ

(ಚಿತ್ರ: ಮಿಥುನ್ ಸುಣ್ಣಂಗುಳಿ)
“ಕೇಳು ಜನಮೇಜಯನೆ ಕುರುಕುಲ ಮಾನಧನನಿಗೆ ಗೈದ ದ್ರೋಹವ……” ಕುರುಕ್ಷೇತ್ರದ ಯುದ್ದದ ಕೊನೆಯಲ್ಲಿ ಭೀಮನಿಂದ ಕೌರವ ಹತನಾದಾಗ ದ್ರೋಣ ಪುತ್ರ ಅಶ್ವತ್ಥಾಮ ಕ್ರೋಧಗೊಂಡು ಸಿಡಿಲಿನಂತೆ ಪ್ರವೇಶಿಸುವ ಸನ್ನಿವೇಶದ ಪದವಿದು. ಆರಂಭದಿಂದಲೇ ಪ್ರಸಂಗಕ್ಕೆ ಕಿಚ್ಚು ಹಚ್ಚಿದಂತಾಗಿ ಪ್ರಸಂಗ ನಡೆ ತೀವ್ರವಾಗಿರುತ್ತದೆ.  ರೋಮಾಂಚಿತನಾಗುವ ಪ್ರೇಕ್ಷಕ ವೃಂದ ಪ್ರಸಂಗದ ಮುಂದಿನ ನಡೆಗೆ ಕಾತುರವಾಗುತ್ತ ಬಂದ ಅಶ್ವತ್ಥಾಮನ ದಿಗಿಣವನ್ನು ನೋಡುತ್ತದೆ. ಈ ದಿಗಿಣದಿಂದಲೇ ಕಥೆಯ ಮುಂದಿನ ಹಂದರವನ್ನು ಮರೆಯಬಾರದಲ್ಲ?  ಕುರುಕ್ಷೇತ್ರದ ಯುದ್ದ ಮುಗಿದ ನಂತರ ಕೊನೆಯದಿನ ರಾತ್ರಿ ಅಶ್ವತ್ಥಾಮನ ರಾತ್ರಿಯಾಗಿಬಿಡುತ್ತದೆ. ತಾನು ಬ್ರಾಹ್ಮಣನೆಂಬುದನ್ನು ಮರೆತು ಪೈಶಾಚಿಕ ಕೃತ್ಯವನ್ನೇ ಎಸಗಿಬಿಡುತ್ತಾನೆ. ಘೋರ ರಾತ್ರಿಯ ಭೀಭತ್ಸ ಸನ್ನಿವೇಶದ ಚಿತ್ರಣವೇ ರಕ್ತ ರಾತ್ರಿ ಪ್ರಸಂಗ. ರನ್ನನ ಗಧಾಯುದ್ದದ ಹಲವಾರು ಪದಗಳನ್ನು ಹೊಸೆದು ಸೃಷ್ಟಿಸಿದ ಜನಪ್ರಿಯ  ಪ್ರಸಂಗವಿದು.

          ತನ್ನೊಡೆಯ ಸುಯೋಧನನ್ನು ಅರಸುತ್ತಾ ಕತ್ತಲೆಯಲ್ಲಿ ರಣಭೂಮಿಗೆ ಕಾಲಿಡುವ ಅಶ್ವತ್ಥಾಮ, ಅದೃಷ್ಟ ಲಕ್ಷ್ಮೀ ಮೊದಲಾದ ಲಕ್ಷ್ಮೀ ತ್ರಯರು ಕೌರವನಿಂದ ದೂರಾಗಿ ಪಾಂಡವರ ಬಿಡದಿಯತ್ತ ಸಂಚರಿಸುವುದನ್ನು ನೋಡಿ ತಡೆದು ನಿಲ್ಲಿಸುತ್ತಾನೆ. ಕೌರವನ ಸುದಿನಗಳು ಮುಗಿದುದರ ಸಂಕೇತವಾಗಿ ಅವರ ನಿರ್ಗಮನವನ್ನು ಅರ್ಥವಿಸಿಕೊಳ್ಳುತ್ತಾನೆ. ಕಟು ಸತ್ಯವನ್ನು ನಂಬಲಾಗದೇ  ಕೌರವನ ಮೇಲಿನ ಅಂಧಾಭಿಮಾನ ಅವನನ್ನು ಭ್ರಾಂತನನ್ನಾಗಿಸುತ್ತದೆ. ಆ ಆವೇಶದಿಂದ ಲಕ್ಷ್ಮೀತ್ರಯರನ್ನು ಬಲವಂತವಾಗಿ ಎಳೆದೊಯ್ದು ಕೌರವನ ಜಂಘೆಗೆ ಎಸೆಯುತ್ತಾನೆ. ತನ್ನಿಂದೇನಾಗಬೇಕು?  ಇನ್ನಾದರೂ ಸೇನಾ ಪತಿತ್ವವನ್ನು ಕೊಡುವಂತೆ ಅವೇಶದಿಂದ ಕೇಳುತ್ತಾನೆ. ಅದಾಗಲೇ ಸೇನೆಯೆಲ್ಲ ಬರಿದಾಗಿದ್ದರೂ ಅದರ ಅಧಿಪತಿತ್ವವನ್ನು ಕೇಳುವುದು ಒಂದು ವಿಪರ್ಯಾಸದಂತೆ ಭಾಸವಾದರೂ ಕೊನೇಯ ಉಸಿರಿನವರೆಗೂ ಪಾಂಡವ ದ್ವೇಷವನ್ನು ಗೆಲ್ಲಲಾಗದ ಸೂಯೋಧನ ಕಟ್ಟ ಕಡೆಯದಾಗಿ ’ನಿಷ್ಪಾಂಡವ ಪೃಥ್ವಿ ’ ಎಂಬ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾನೆ. ಕೇವಲ ಐದು ತಲೆಗಳ ಸನ್ನೆಯನ್ನಷ್ಟೇ ತೋರಿದರೂ ಅಶ್ವಾತ್ಠಾಮ ಕೌರವನ ಇಂಗಿತವನ್ನು ಅರಿತು ಅಲ್ಲಿಂದ ಪಾಂಡವರ ಬಿಡದಿಯತ್ತ ಆ ನಡುವಿರುಳೇ ತೆರಳುತ್ತಾನೆ. ಮುಂದೆ ನಡೆಯುವುದೇ ಮಹಾಭಾರತ ಯುದ್ದದ ಕೊನೆಯ ಅತ್ಯಂತ ಭೀಭತ್ಸ ಮಯ ರಾತ್ರಿಯಾಗುತ್ತದೆ. ಮತಿ ಭ್ರಾಂತನಂತೆ ಪ್ರವರ್ತಿಸುವ ಅಶ್ವತ್ಥಾಮ ಅ ಒಂದು ರಾತ್ರಿಯನ್ನು ರಕ್ತರಾತ್ರಿಯನ್ನಾಗಿ ಮಾಡಿಬಿಡುತ್ತಾನೆ. ಪಾಂಡವರೆಂದು ತಿಳಿದು ದ್ರೌಪದೀ ಪುತ್ರರ ತಲೆಯನ್ನು ಮಲಗಿದಲ್ಲೇ ಕಡಿಯುತ್ತಾನೆ. ಯಾವುದನ್ನೂ ಸಾಧಿಸಲಾಗದೇ  ಹುಚ್ಹನಾಗಿಬಿಡುತ್ತಾನೆ.

          ಈ ಪ್ರಸಂಗದ ಕಥೆ ಬಹಳ ಸರಳವಾಗಿದೆ. ಆದರೆ ಇದು ಪ್ರೇಕ್ಷಕನ ಮನಸ್ಸಿನಲ್ಲಿ ಎಷ್ಟು ಅಚ್ಚೋತ್ತಿರುತ್ತದೆ ಎಂಬುದು ವಿವೇಚನೆಗೆ ಬಿಟ್ಟ ವಿಚಾರ. ಯಾಕೆಂದರೆ ಒಂದೋಂದು ಪದಕ್ಕೂ ಅಭಿನಯ ಮತ್ತು ಮಾತಿಗಿಂತಲೂ ಅಧಿಕ ಕುಣಿತಕ್ಕೆ ಮೀಸಲಾಗಿರಿಸಿದರೆ ಕಥಾಭಾಗ ಅಚ್ಚೊತ್ತುವುದಾದರೂ ಹೇಗೆ? ರಾಮಾಯಣ ಕೇಳಿ ರಾಮನೀಗೆ ಸೀತೆ…. ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಕಲಾವಿದರ ಜವಾಬ್ದಾರಿ ಇರುವುದು ಇಲ್ಲೇ ಆದರೂ ಪ್ರೇಕ್ಷಕ ಗಮನಿಸಿಕೊಳ್ಳಬೇಕಾದ ಹಲವು ಅಂಶಗಳು ಇನ್ನೂ ಇರುತ್ತವೆ. ಹಲವು ಸಲ ಅನ್ನಿಸುವುದಿದೆ ಕಲಾವಿದ ತನ್ನ ಕಲೆಯಲ್ಲಿ ಹೇಗೆ ಪಳಗಬೇಕೋ ಪ್ರೇಕ್ಷಕ ಅದನ್ನು ಅಸ್ವಾದಿಸುವುದರಲ್ಲೂ ಪಳಗಬೇಕು. ಯಕ್ಷಗಾನದಂತಹ ಕಲೆಯನ್ನು ಅಸ್ವಾದಿಸುವುದನ್ನೂ ಕಲಿತುಕೊಳ್ಳದಿದ್ದರೆ ಕಲೆ ಕೊಳದ ನೀರಾಗುತ್ತದೇ ಹೊರತು ತೊರೆಯ ನೀರಾಗುವುದಿಲ್ಲ. ಯಾವುದೇ ಕಲೆಯ ಬೆಳವಣಿಗೆ ಇರುವುದು  ಅದನ್ನು ಪೂರ್ಣವಾಗಿ ಅನುಭವಿಸುವ ಪ್ರೇಕ್ಷಕನಿದ್ದಲ್ಲಿ. ಇಲ್ಲವಾದರೆ ಹಸಿವಿಲ್ಲದವನಿಗೆ, ರೋಗಗ್ರಸ್ಥನಿಗೆ ಮೃಷ್ಠಾನದ ಭೋಜನ ಎದುರು ಇರಿಸಿದಂತೆ.

          ರಕ್ತ ರಾತ್ರಿ ಪ್ರಸಂಗದಲ್ಲಿ ವೀರಾವೇಶದಿಂದ ಪ್ರವೇಶವಾಗುವ ಅಶ್ವತ್ಥಾಮನ ಪಾತ್ರ ಕ್ರೋಧಾವಿಷ್ಟನಾಗಿಯೇ ಇರುವುದು ಮಾತ್ರವಲ್ಲ ಅತ್ಯಂತ ವಿಲಕ್ಷಣ ವ್ಯಕ್ತಿತ್ವವನ್ನೂ ತೋರುವುದು ಪಾತ್ರದ ಔಚಿತ್ಯ. ಆದರೆ ವಿಪರ್ಯಾಸವೆಂದರೆ ಇಂದು ಬರೀ ಕುಣಿತ ಮತ್ತು ದೃಶ್ಯವೈಭವಕ್ಕಷ್ಟೇ ಸೀಮಿತವಾಗಿ ವೇಗದ ನಡೆಯನ್ನಷ್ಟೇ ಪ್ರಸಂಗದಲ್ಲಿ ಕಾಣಬಹುದು.  ಕಲಾವಿದರಲ್ಲಿ ಕೆಲವರು ಅಶ್ವತ್ಥಾಮನ ವ್ಯಕ್ತಿತ್ವವನ್ನು ಅರ್ಥವಿಸಿಕೊಂಡು ಸನ್ನಿವೇಶಕ್ಕೆ ತಕ್ಕ ಅಭಿನಯಿಸಿದರೂ ಸಹ ಪ್ರೇಕ್ಷಕರು ಅಶ್ವತ್ಥಾಮನ ವ್ಯಕ್ತಿತ್ವದ ಅಭಿವ್ಯಕ್ತಿಯತ್ತ ಗಮನ ಹರಿಸುವುದೇ ಇಲ್ಲ. ಬದಲಾಗಿ ದಿಗಿಣದ ಲೆಕ್ಕಾಚಾರ ಮತ್ತು ಕುಣಿತದಲ್ಲೇ ಮೈಮರೆತು ಏನು ನೋಡಬೇಕೋ ಅದನ್ನು ಸವಿಯದೇ ವಂಚಿತರಾಗುತ್ತಾರೆ. ವಂಚಿತರಾಗುವುದು ಮಾತ್ರವಲ್ಲ ನಿಜ ಅಸ್ವಾದನೆಯನ್ನೇ ಮರೆತು ಬಿಡುತ್ತಾರೆ.

          ಪ್ರತಿಯೋಂದು ಪ್ರಸಂಗದ ಪ್ರತೀ ಪಾತ್ರವೂ ಒಂದು ದೃಷ್ಟಿಕೋನದಿಂದ ಚಿತ್ರಿಸಲ್ಪಡಬೇಕು ಆ ದೃಷ್ಟಿಕೋನ,  ಪಾತ್ರದ ವ್ಯಕ್ತಿತ್ವದ  ಔಚಿತ್ಯವನ್ನು ಹೊಂದಿರಬೇಕು. ಪ್ರೇಕ್ಷಕನೂ ಆ ನಿಟ್ಟಿನಲ್ಲೇ ವೀಕ್ಷಿಸಿದರೆ ಯಕ್ಷಗಾನದ ರಸಾಸ್ವಾದನೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತದೆ.  ಆದರೆ ಇಂದು ಪಾತ್ರವನ್ನು ಯೋಜನಾ ಬದ್ಧವಾಗಿ ಕಟ್ಟುವ  ಕಲಾವಿದರ ಸಂಖ್ಯೆ ಕ್ಷೀಣಿಸುವುದು ಮಾತ್ರವಲ್ಲ ಯಾವುದನ್ನು ಹೇಗೆ ಆಸ್ವಾದಿಸಬೇಕೋ ಹಾಗೇ ಅಸ್ವಾದಿಸುವ ಪ್ರೇಕ್ಷಕನ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಪಾತ್ರಧಾರಿ ಒಂದಷ್ಟು ಹೊತ್ತು ವಿಚಿತ್ರವಾಗಿ ಕುಣಿದಾಗ ಅದೇ ಅಭಿನಯವೆಂದು ಭಾವಿಸಲ್ಪಡುತ್ತದೆ. ಕುಣಿದ ಮೇಲೇ ಪಾತ್ರಕ್ಕೆ ಔಚಿತ್ಯವಾಗಿ ಅರ್ಥಗಾರಿಕೆಯೂ ಒಂದು ಅಭಿವ್ಯಕ್ತಿ ಮಾರ್ಗವೆಂದು ಮರೆತು ಬಿಡುವ ಪ್ರಮೇಯವೇ ಹೆಚ್ಚು. ಪ್ರೇಕ್ಷಕನೂ ಅದರತ್ತ ಗಮನ ಹರಿಸದೇ ಏಕತಾನತೆಯ ಕುಣಿತಕ್ಕೆ ಚಪ್ಪಾಳೆ ಹೊಡೆಯುತ್ತಾನೆ. ಪರಿಣಾಮ ಕಲೆಯ ಸತ್ವ ದರ್ಶನವಾಗದೇ ಕಲೆ ಅನಾಥವಾಗುತ್ತದೆ.

          ಲಕ್ಷೀತ್ರಯರ ಸೆಳೆದು ಕೊಂಡುಯ್ಯುವಾಗ ಕೇವಲ ಮಂದಲೆಗೆ ಕೈ ಯಿಕ್ಕಿ ಎಳೆದೊಯ್ಯುವುದರ ಬದಲು ಸಾಮಾನ್ಯ ನಾಟಕದಂತೆ ಅವರನ್ನು ಬಲಾತ್ಕರಿಸಲು ಬೆಂಬತ್ತಿದಂತೆ ಅಭಿನಯಿಸುವುದು ಪಾತ್ರಕ್ಕೂ ಔಚಿತ್ಯವೆನಿಸುವುದಿಲ್ಲ. ಪ್ರಸಂಗಕ್ಕೂ ಔಚಿತ್ಯವೆನಿಸುವುದಿಲ್ಲ. ಹಾಗಾಗಿ ಪಾತ್ರದ ನಿಜವಾದ ವ್ಯಕ್ತಿತ್ವ ಮತ್ತು ಸನ್ನಿವೇಶ ಏನೆಂದು ಗಮನ ಹರಿಸಬೇಕಾಗುತ್ತದೆ. ಪ್ರೇಕ್ಷಕನೂ ಅಷ್ಟೇ ಇಂದು ಕಥಾ ಸಾರಾಂಶವಾಗಲೀ ಸನ್ನಿವೇಶವನ್ನಾಗಲೀ ಅರಿಯದೇ ಇರುವವರು ಬಹಳ ಕಡಿಮೆ. ಹಾಗಾಗಿ ಪ್ರೇಕ್ಶಕರೂ ಸಹ ಇಂತಹ ಸೂಕ್ಷ್ಮ ವಿಚಾರವನ್ನು ಗಮನಿಸದೇ ಯಕ್ಷಗಾನವನ್ನು ವೀಕ್ಷಿಸಿದರೇ ಆ ಕಲೆಯ ನಿಜವಾದ ಅಸ್ವಾದನೆ ಸಾಧ್ಯವಾಗುವುದಿಲ್ಲ. ಪ್ರತೀ ಪಾತ್ರಕ್ಕೂ ಒಂದು ವ್ಯಕ್ತಿತ್ವ ಎಂಬುದು ಇರುತ್ತದೆ. ಅದು ಅಭಿವ್ಯಕ್ತವಾಗದೇ ಇದ್ದರೆ ಕಲೆ ಸೋತಂತೆ ಅಲ್ಲವೇ? ಅಶ್ವತ್ಥಾಮ ಕಾಮಾಂಧನಂತೆಯೋ ರಾಕ್ಷಸನಂತೆಯೋ ಚಿತ್ರಿಸಲ್ಪಟ್ಟರೆ ಅದೆಷ್ಟು ಅಭಾಸವನ್ನುಂಟು ಮಾಡುತ್ತದೆ? ಆದರೆ ಆಟ ಒಟ್ಟು ರೈಸಿದರೆ ಸಾಕು ಎಂಬ ಭಾವದಲ್ಲಿ ಯಾವುದೂ ಇಲ್ಲಿ ಸಲ್ಲುವಂತಾಗುತ್ತದೆ.  
          ಚಕ್ರವ್ಯೂಹ ಪ್ರಸಂಗದ ಸನ್ನಿವೇಶ,
 “ಕಾಮ ಪಿತನಿದ ಬಲ್ಲನಾ,, ಬಲರಾಮ ನರಿವನು ಪಾರ್ಥ ತಿಳಿವನು | ಭೂಮಿಯಲಿ ಸುರಪತಿಯ ಮೊಮ್ಮನು ಬಲ್ಲ ಹೋಗಲಿಕೆ | ಕ್ಷೇಮದಲಿ ಬರಲರಿಯ ಅವನೀ ಸೀಮೆಯಲಿ ಮಿಕ್ಕವರ ಕಾಣೆನು| ಹಾ ಮಹಾ ದೇವನುತ  ಚಿಂತಿಸುತನೀರ್ದನು ಅವನೀಶ || 
ಧರ್ಮರಾಯ ಚಕ್ರವ್ಯೂಹವನ್ನು ಭೇದಿಸಬಲ್ಲವರು ಯಾರು ಎಂದು ಚಿಂತಿಸುತ್ತಾನೆ. ಯಾರೂ ಇಲ್ಲ ಎಂದು ಕಣ್ಣೀರಿಡುವಾಗ ವೀರಾವೇಶದಿಂದ ಅಭಿಮನ್ಯುವಿನ ಪ್ರವೇಶವಾಗುತ್ತದೆ. ಅಭಿಮನ್ಯುವಿನ ರಭಸದ ಪ್ರವೇಶವೇ ಪ್ರಸಂಗದ ದಿಕ್ಷೂಚಿ. ಮಂದ್ರವಾಗಿದ್ದ ಸನ್ನಿವೇಶಕ್ಕೆ ಏಕಾ ಏಕಿ ಕಿಚ್ಚು ಹತ್ತಿಸುತ್ತಾನೆ ಅಭಿಮನ್ಯು. ಆ ಪ್ರವೇಶ ಮಿಂಚಿನಂತೆ ಪ್ರೇಕ್ಷಕನನ್ನು ಬಡಿದೆಬ್ಬಿಸಿದಲ್ಲಿ ಕಲಾವಿದನ ಅರ್ಥ ಕೆಲಸ ಮುಗಿದಂತೆ. ಇಂದು ಇದರಲ್ಲೂ ಏಕತಾನತೆ ಬಂದಿದೆ. ಹಾಗಾಗಿ ಬಲಿಪ್ಪರು ಇಂದಿಗೂ ಕೋಳ್ಯೂರು ರಾಮ ಚಂದ್ರರಾಯರ ಅಭಿಮನ್ಯುವನ್ನು ನೆನಪಿಸಿಕೊಳ್ಳುತ್ತಾರೆ. ಅದೆಂತಹ ಪ್ರವೇಶ..?  ಯಾವುದೇ ಪಾತ್ರವಾದರೂ ಅದರಲ್ಲಿ  ಪರಕಾಯ ಪ್ರವೇಶ ಮಾಡಿ ಪಾತ್ರವೇ ತಾವಾಗಿ ಆವೇಶದಿಂದ ಲೀನವಾಗುವುದು ರಾಯರ ವೈಶಿಷ್ಟ್ಯ.  ಮತ್ತೆ ಕೇಳಬೇಕೆ. ಚೆಂಡೆಯ ಬಡಿತಕ್ಕೆ ಕುರುಕ್ಷೇತ್ರ ಮನೆಯಂಗಳದಲ್ಲೇ ಇದೆ ಎಂದು ಪ್ರವೇಶಿಸುವ ಆ ವೇಗದ ತುಡಿತ ಕೇವಲ ಅಭಿಮನ್ಯುವಿನ ಪಾತ್ರವನ್ನಷ್ಟೇ ಅಲ್ಲ ಸಹಪಾತ್ರವನ್ನೂ ಆವೇಶ ಬರುವಂತೆ ಮಾಡುತ್ತದೆ. ಇದೇ ವೇಗ ಪ್ರಸಂಗದಲ್ಲಿ ನಿರಂತರ ಕಾಯ್ದು ಕೊಂಡು ಬರಬೇಕಾಗುತ್ತದೆ. ಅದು ತಾಯಿ ಸುಭದ್ರೆ ಮತ್ತು ಅಭಿಮನ್ಯುವಿನ ಭಾವನಾತ್ಮಕ ಸನ್ನಿವೇಶದಲ್ಲೂ ಆ ತುಡಿತ ಪ್ರೇಕ್ಷಕನಿಗೆ ಮನದಟ್ಟು ಮಾಡಬೇಕಾಗುತ್ತದೆ. ಚಿತ್ರ ವಿಚಿತ್ರವಾಗಿ ಒಂದು ಪದ ಅರ್ಧ ತಾಸಿಗೂ ಮಿಕ್ಕಿ ಎಳೆದರೆ ಒಟ್ಟು ಪ್ರಸಂಗದ ಭಾವಕ್ಕೇ ಕೊಡಲಿ ಏಟು ಕೊಟ್ಟಂತಾಗುತ್ತದೆ. ಕುಣಿತದಲ್ಲೂ ಪಾತ್ರದ ವ್ಯಕ್ತಿತ್ವ ಗೋಚರವಾಗಬೇಕು. ಸನ್ನಿವೇಶದ ಧಾವಂತ ವ್ಯಕ್ತವಾಗುವಂತಿರಬೇಕು. ಆದರೆ ಇದೆಲ್ಲ ಈಗಿನ ನವೀಕರಣದಲ್ಲಿ ಗಮನಾರ್ಹ ಎನಿಸದೇ ಇರುವುದು ವಿಪರ್ಯಾಸ. ಪಾಂಡವ ಪಾಳಯಕ್ಕೇ ಅಂಧಕಾರದ ಚಕ್ರವ್ಯೂಹ ಸುತ್ತಿರುವಾಗ ಇಲ್ಲಿ ಅಭಿಮನ್ಯು ಚಿತ್ರ ವಿಚಿತ್ರ ಕುಣಿತದ ಸರ್ಕಸ್ ಮಾಡುತ್ತಿದ್ದರೆ ಸನ್ನಿವೇಶದ ಗಾಂಭೀರ್ಯವೇ ಹೊರಟು ಹೋಗುತ್ತದೆ.

          ಮೊದಲ ದೃಶ್ಯದಿಂದಲೇ ಪಾತ್ರವನ್ನು ಕೊಂಡೊಯ್ಯುವ ದೃಷ್ಟಿಕೋನವನ್ನು ಹೊಂದಿರಬೇಕು. ಅದಕ್ಕೆ ಪಾತ್ರದ ವ್ಯಕ್ತಿತ್ವ ಅರಿತಿರುವುದು ಬಹಳ ಮುಖ್ಯವೆನಿಸುತ್ತದೆ. ರಾವಣನಾದವ ಕುಂಭಕರ್ಣನ ನಡೆಯನ್ನು ಅನುಸರಿಸಿದರೆ ಸಹ್ಯವಾಗುತ್ತದೆಯೇ? ಪಾತ್ರ ಎಷ್ಟೇ ಚಿಕ್ಕದಾದರೂ ಸರಿ ಅದರ ವ್ಯಕ್ತಿತ್ವದ ಛಾಪು ಮೂಡದಿದ್ದರೆ ಪಾತ್ರಧಾರಿಯೊಂದಿಗೆ ಪಾತ್ರವೂ ಸೋಲುತ್ತದೆ, ಪ್ರಸಂಗವೂ ಸೋಲುತ್ತದೆ,  ಪರ್ಯಾಯವಾಗಿ ಕಲೆಯೂ ಕಮರಿಹೋಗುತ್ತದೆ.

ಬಹಳ ಹಿಂದೆ ದಮಯಂತಿ ಸ್ವಯಂವರ ಎಂಬ ಪ್ರಸಂಗ ನೋಡಿದ್ದೆ. ಪ್ರಸಂಗ ತಿಳಿದವರಿಗೆ ಗೊತ್ತಿರುತ್ತದೆ ಅದರಲ್ಲಿ ಬರುವ ಪುಷ್ಕರನ ಪಾತ್ರದ ಸಮಯ ಎಷ್ಟು ಚಿಕ್ಕದು ಎಂದು. ಆದರೆ ಪಳಗಿದ ಕಲಾವಿದ ಪಾತ್ರದ ಕಾಯವನ್ನು ಪ್ರವೇಶ ಮಾಡಿದರೆ...?? ಆದಿನ ಮಲ್ಪೇ ವಾಸುದೇವಸಾಮಗರು ಆ ಪಾತ್ರವನ್ನು ಮಾಡಿದ್ದರು. ಪಾತ್ರದ ಪ್ರವೇಶದಿಂದಲೂ ಈ ಪಾತ್ರವನ್ನು ಹೀಗೆ ಎಂದು ಯೋಜನಾಬದ್ದವಾಗಿ ರಂಗದಲ್ಲಿ ತಂದರು. ಅಭಿನಯದಿಂದ, ಅರ್ಥಗಾರಿಕೆಯಿಂದ ಕುಣಿತದಿಂದ ’ಪುಷ್ಕರ ’ ಕೇವಲ ಪಾತ್ರವಾಗಿ ಉಳಿಯಲಿಲ್ಲ. ಇಡೀ ಪ್ರಸಂಗದ ವೈಶಿಷ್ಟ್ಯದಲ್ಲಿ ಅದು ಒಂದಾದ ಪರಿ ಈಗಲೂ ನೆನಪಲ್ಲಿ ಉಳಿದು ಬಿಟ್ಟಿದೆ.  ಇಂತಹ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ಆದರೆ ಗಮನಿಸುವ ದೃಷ್ಟಿಯಿರಬೇಕು.  ಹಿರಿಯ ಕಲಾವಿದರು ಪ್ರಸಂಗದಲ್ಲಿ ಹಾಗೆ ಬಂದು ಹೀಗೆ ಹೋಗುವ ಪಾತ್ರ ಮಾಡುವಾಗ ವಿಚಿತ್ರವೆನಿಸುತ್ತದೆ. ಆದರೆ ಅದರಲ್ಲೂ ಅವರು ಮೂಡಿಸುವ ಛಾಪು ಮುಖ್ಯವೆನಿಸಲ್ಪಡುತ್ತದೆ. ಇಲ್ಲಿ ಕಲಾವಿದನ ನೈಪುಣ್ಯ ಯಾವ ಬಗೆಯಲ್ಲಿರುತ್ತದೆಯೋ ಅದೇ ಬಗೆಯಲ್ಲಿ ಗಮನಿಸುವ ಪ್ರೇಕ್ಷಕನೂ ಇರಬೇಕಾಗುತ್ತದೆ. ಇಲ್ಲವಾದಲ್ಲಿ ರಾಗಜ್ಞಾನ ಇಲ್ಲದವನಲ್ಲಿ ಇಂಪಾದ ಸಂಗೀತ ಹಾಡಿದರೆ ಬರೀ ಇಂಪು ಮಾತ್ರವೇ ಉಳಿದು ರಾಗದ ಪ್ರಭಾವವೇ ಉಳಿಯುವುದಿಲ್ಲ. ಸಂಗೀತದ ಸಂಪೂರ್ಣ ಸಂವೇದನೆ ಸೃಷ್ಟಿಯಾಗುವುದಿಲ್ಲ. ಕಲಾವಿದನ ಶ್ರಮವೂ ನಿರರ್ಥಕವೆನಿಸಿಬಿಡುತ್ತದೆ.

ಸಮಗ್ರವಾಲಿ ಪ್ರಸಂಗದ ವಾಲಿಯ ಪಾತ್ರವನ್ನು ಒಂದೇ ಪ್ರಸಂಗದಲ್ಲಿ ಹಲವರು ಮಾಡುವಾಗ ಪಾತ್ರ ಮನೋಭಾವದ ವೈವಿಧ್ಯತೆಯ ನಡುವೆಯೂ ಒಂದು ತಂತು ಬೆಸೆಯಲ್ಪಡಬೇಕು. ವಾಲಿಯ ವ್ಯಕ್ತಿತ್ವ ಹಂತ ಹಂತವಾಗಿ ಬದಲಾಗಿ ಹೋಗುತ್ತ ಕೊನೆಯಲ್ಲಿ ಮೂಲ ವ್ಯಕ್ತಿತ್ವದಿಂದ ಭಿನ್ನವಾಗಿ ವಾಲಿ ಬದಲಾಗುವುದುಂಟು. ಈ ನೆಲೆಯಲ್ಲಿ ಕಲಾವಿದನೂ  ಆ ಮನೋಭಾವಕ್ಕೆ ಅನುಸರಿಸಿ ಬದಲಾವಣೆಯನ್ನು ತರುತ್ತಾನೆ. ಅದೇ ರಾಮನ ಪಾತ್ರದಲ್ಲಿ ಆರಂಭದಿಂದ ಅಂತ್ಯದವರೆಗೂ ಪಾತ್ರದ ಸ್ವಭಾವ ಬದಲಾಗುವುದಿಲ್ಲ. ಯಾವುದೇ ಪ್ರಸಂಗದಲ್ಲೂ ರಾಮನ ಪಾತ್ರ ಸ್ವಭಾವ ಒಂದೇ ಆಗಿರುತ್ತದೆ. ಇದು ಬಹಳ ವೈಶಿಷ್ಟ್ಯ ಮಾತುಗಾರಿಕೆಯಲ್ಲಿ ಗಾಂಭೀರ್ಯ ತುಂಬಿದ್ದರೆ ಕುಣಿತದಲ್ಲೂ ಅಷ್ಟೆ,  ರಾಮನ ಪಾತ್ರದ ಕುಣಿತದಲ್ಲಿ ಅತ್ಯಂತ ವೈಶಿಷ್ಟ್ಯತೆ ಇರುತ್ತದೆ.  ರಾಮನ ವೇಷ ದಿಗಿಣವನ್ನು ಕುತ್ತು ಹಾರಿ ಹಾಕಬಾರದೇದೆಂದಿದೆ. ಇದು ಪುರಾಣದಲ್ಲಿ ಬರುವ ಅತ್ಯಂತ ಆದರ್ಶಮಯ ಪಾತ್ರ.

ಹಿಂದಿನ ಹಲವು ಹಿರಿಯ ಕಲಾವಿದರು ಒಂದೇ ಪ್ರಸಂಗದಲ್ಲಿ ವೈವಿಧ್ಯಮಯ ಪಾತ್ರವನ್ನು ಮಾಡುವಾಗ ಅವರಿಗಿರುವ ಧನಾತ್ಮಕ ಗುಣಗಳಿಂದ ತಮ್ಮ ಋಣಾತ್ಮಕ ಗುಣಗಳನ್ನು ಮರೆಸಿಬಿಡುತ್ತಿದ್ದರು. ಕುಣಿತ ಇಲ್ಲದಿದ್ದರೇನಂತೆ, ಮಾತುಗಾರಿಕೆ ಇಲ್ಲದಿದ್ದರೇನು? ಸಮಯ ಪ್ರಜ್ಞೆಯ ಅಭಿನಯ ರಂಗವನ್ನು ಉಪಯೋಗಿಸಿಕೊಳ್ಳುವ ರೀತಿ,  ಒಂದು ಪಾತ್ರ ರಂಗದ ಮೇಲೆ ಕೇವಲ ಪಾತ್ರವಾಗಿ ಇರುತ್ತಿರಲಿಲ್ಲ. ಅದಕ್ಕಿರುವ ವ್ಯಕ್ತಿತ್ವವನ್ನು ತೋರಿಸಿಕೊಡುತ್ತಿದ್ದರು. ಪುತ್ತೂರು ನಾರಾಯಣ ಹೆಗಡೆ ದಣಿವರಿಯದೆ ಕುಣಿದದ್ದನ್ನು ನಾನು ಕಂಡಿಲ್ಲ. ಆದರೆ ರಂಗದಲ್ಲಿ ಕುಣಿತದ ಗಾಂಭೀರ್ಯಕ್ಕೆ ಎಂದೂ ಊನ ಬರುತ್ತಿರಲಿಲ್ಲ.  ಅವರ ನಿರರ್ಗಳ ಮಾತುಗಾರಿಕೆ ಕೇಳಿದ್ದಿಲ್ಲ,  ಆದರೆ ಅವರು ಆಡಿದ ಮಾತು ಆ ಧ್ವನಿಯ ಏರಿಳಿತ ಅದಕ್ಕೆ ಹೊಂದಿಕೆಯಾದಂತೆ ಶಾರೀರಿಕ ಅಂಗವಿನ್ಯಾಸದ ಭಾಷೆ ಅದು ಎಂತಹ ಪಾತ್ರವನ್ನಾದರೂ ರಂಗದಲ್ಲಿ ಜೀವಂತವಾಗಿರಿಸುತ್ತಿತ್ತು. ಆರಂಭದ ಪ್ರವೇಶದಿಂದಲೇ ತೊಡಗಿ ಪಾತ್ರ ರಂಗದಲ್ಲಿ ಭಿಚ್ಚಿಕೊಳ್ಳುವಾಗ ಇದು ವ್ಯಕ್ತಿಯಲ್ಲ , ಪಾತ್ರವೆಂಬ ಭ್ರಮೆಯಲ್ಲ ಎಂದನಿಸುತ್ತಿತ್ತು.

ಬಿಡಿಸಿದಂತೆ ಇಂತಹ ಹಲವು ನೆನಪಿನ ಅನುಭವಗಳು ಎಸಳು ಬಿರಿದು ನಳನಳಿಸುತ್ತವೆ. ಈಗೀಗ ಕೆಲವು ಕಲಾವಿದರು ಮಾತ್ರವೇ ಪಾತ್ರದ ವ್ಯಕ್ತಿಯಾಗಿ ಶ್ರಮವಹಿಸುತ್ತಾರೆ. ಪಾತ್ರದ ಮಾನಸಿಕ ರೂಪವೇನು. ಆ ಪಾತ್ರದ ಅಸ್ತಿತ್ವ ಏನು ಅದನ್ನರಿತು ವೈವಿಧ್ಯಮಯವಾಗಿ ರಂಗದಲ್ಲಿ ಕಟ್ಟಿಬಿಡುತ್ತಾರೆ. ಆದರೆ ಏಕತಾನತೆ ಇಲ್ಲಿಯೂ ಬಾಧಿಸುವುದುಂಟು. ವೃತ್ತಿ ಪ್ರವೃತ್ತಿ ಒಂದೇ ಆಗುವಾಗ ಎಕತಾನತೆ ಸಹಜವಾಗಿಬಿಡುತ್ತದೆ. ಆದರೂ ಓದಿದ ಪುಸ್ತಕದ ಹಾಳೆಗಳನ್ನು ಮಗುದೊಮ್ಮೆ ತಿರುವಿದಂತೆ ತಿರುವುತ್ತಿರಬೇಕು. ಮುಖ್ಯವಾಗಿ ಕಲೆಯ ಕ್ರಮಬದ್ಧ ಆಸ್ವಾದನೆಯೂ ಒಂದು ಕಲೆಯಂತೆ ಪರಿಗಣಿಸಬೇಕು. ಉಣ್ಣುವುದಕ್ಕೆ ಅರಿಯದವ ಪೂರ್ಣ ಸ್ವಾದವನ್ನೂ ಸವಿಯಲಾರ.  

         
. 


Monday, October 14, 2013

ರಾಮ ನಿನ್ನ ಬಾಣ ತಾಗಿದಾಮೇಲೆ .......

“ರಾಮ ನಿನ್ನ ಬಾಣ ತಾಗಿದಾಮೇಲೆ ಬದುಕಬೇಕೆಂಬ ಅಶೆಯುಂಟೇ ಎನಗೇ? “ ದರ್ಪದಿಂದಲೂ ದುರಹಂಕಾರದಿಂದಲೂ ಮೆರೆಯುತ್ತಿದ್ದ ವಾಲಿ ರಾಮ ಬಾಣದಿಂದ ಘಾಸಿಗೊಂಡು ಧರೆಗುರುಳಿದಾಮೇಲೆ, ಶಿಕ್ಷೆ ರಕ್ಷೆಗೆ ಬದ್ಢನಾದ ರಾಮನಲ್ಲಿ ಹೀಗೆ ಕೇಳುತ್ತಾನೆ. ಬಲಿಪ್ಪಜ್ಜನ ಪದವೂ ಶೇಣಿ ಅಜ್ಜನ ಅರ್ಥವೂ ಮೇಳವಿಸಿತೆಂದರೆ ಮತ್ತೆ ಕೇಳಬೇಕೆ?
“ಏನ ಮಾಡಲಿ ನಾನು ಇನ್ನೇನ ಕಂಡೆನು ಇಂದು.....” ಕಡತೋಕರ ಪದವೂ ಪುತ್ತೂರು ಹೆಗಡೆಯ ಕಂಸವೂ ಉದಯ ಕಾಲದಲ್ಲಿ ಮೆರೆಯುವ ಪರಿಯೇ ಬೇರೆ.
ಕಂಸ ಎಂದಾಗ ಬಹಳ ಜನಜನಿತವಾದ  ಮಾತು ಹಲವು ಸಲ ನೆನಪಿಗೆ ಬರುತ್ತದೆ. ಮಂಡೆಚ್ಚರ ಪದವೂ ಬೋಳಾರ ಶೆಟ್ಟಿಯವರ ಕಂಸವೂ..... ಆದರೆ ಇದು ನಾನು ಕಂಡಿರದೇ ಇರುವ ಸತ್ಯ. ಹಾಗಾಗಿ ಕಲ್ಮ ನೆ ಮಾತ್ರ. ಹಾಗೇಯೇ-
“ ಕಂಡನೋ ದಶವದನ ಕೋದಂಡ ರಾಮನ ......” ರಾವಣ ಮೋಕ್ಷದ ಸನ್ನಿವೇಶ.
ಇವುಗಳನ್ನು ಕೇಳಿದಾಗಲೇ ಯಕ್ಷಲೋಕದ ನಾಭೀಸ್ಪರ್ಶವಾದ ಅನುಭವವಾಗುವುದಿಲ್ಲವೇ?
ಯಕ್ಷಗಾನದ ಪುರಾಣ ಪ್ರಸಂಗಗಳಲ್ಲಿ ಬಹಳಷ್ಟು ಮೇಲೆ ಹೇಳಿದ ಸನ್ನಿವೇಶಗಳು ಪ್ರಸಂಗದ ಕೊನೆಯ ಹಂತದಲ್ಲಿ ವಿಜ್ರಂಭಿಸಲ್ಪಡುತ್ತದೆ. ಇಲ್ಲಿ ಪಾರಮಾರ್ಥಿಕ ಸತ್ಯ ಏನು ಎಂದು ಸರಳವಾಗಿ ವರ್ಣಿಸಲ್ಪಡುತ್ತದೆ. ಉರ ಪ್ರದೇಶದಲ್ಲಿ ರಾಮ ಬಾಣ ನೆಟ್ಟನೆಂದ ಮೇಲೆ ಆ ರಾಮನ ಉದ್ದೇಶವಾದರೂ ಏನು? ತನ್ನ ನಿಯಂತ್ರಣದಲ್ಲಿ ಎಲ್ಲವನ್ನು ಅಡಗಿಸಬಲ್ಲೆ ಎಂಬ ಅಹಂಕಾರದಿಂದ,  ಕೊರೆ ಕೊರೆದು ಮುಂದೊತ್ತುವ ಸಜೀವ ಶರವನ್ನು ತಾನು ನಿಯಂತ್ರಿಸಿದ್ದೇನೆ ಎಂಬ ಭ್ರಮಾಧೀನನಾದ ವಾಲಿಯ ಭ್ರಮೆಯನ್ನು ಅಲ್ಲಿ ಕಳಿಚಿ ಬಿಡುತ್ತಾನೆ ರಾಮ. ರಾಮಬಾಣ ಬೇರೆ ಯಾರಿಂದಲೂ ನಿಯಂತ್ರಿಸಲಾಗದ ಸತ್ಯ ಅರಿತಾಗ ವಾಲಿಯ ಚಿಂತನೆಯ ದಿಶೆಯೇ ಬದಲಾಗಿಬಿಡುತ್ತದೆ. ರಾಮನಿಂದ ಶಿಕ್ಷಿಸಲ್ಪಡಬೇಕಾದ  ಕಾಯವಿದು, ಎಂಬ ರಾಮ ಸಂಕಲ್ಪ ಬಂದಾದ ಮೇಲೆ ಈ ಕಾಯದ ಮೇಲಿನ ಬಯಕೆಯೇ ನಶಿಸಿ ಹೋಗುತ್ತದೆ. ತಾನು ಏನು ತನ್ನ ಪಾತ್ರದ ಅರಿವೇನು ಎಂದು ವಾಲಿ ಅರಿತಾಗುತ್ತದೆ. ಮೋಕ್ಷಗಾಮಿಯಾಗುವ ವಾಲಿಗೆ ಶರೀರ ಘಾಸಿಯಾಗುವುದು ಹೊಸತೇನಲ್ಲ. ಆದರೆ ರಾಮನಿಂದ ಘಾಸಿಯಾಯಿತಲ್ಲ?  ರಾಮನಿಗೆ ಈ ಶರೀರ ಬೇಡವೆಂದು ಕಂಡು ಯಾವಾಗ ಆತನಿಂದ ಘಾಸಿಗೊಂಡಿತೋ ಶರೀರದ ಮೇಲಿನ ಮಮಕಾರ ಹೊರಟುಹೋಗುತ್ತದೆ.

ಕಂಸನ ಚಿತ್ರಣವೂ ಹಾಗೆ,  ಮರುದಿನ ಶ್ರೀಕೃಷ್ಣನ ದರ್ಶನವಾಗುತ್ತದೆ ಎಂಬ  ಭಯದಲ್ಲೇ ಮೊದಲ ರಾತ್ರಿಯ ನಿದ್ರೆಯನ್ನು ಕಳೆದುಕೊಂಡು ಬಿಡುತ್ತಾನೆ ಕಂಸ. ತನ್ನ ಜನ್ಮ ಜನ್ಮಾಂತರದ ಅರಿವಾಗಿ ಎಲ್ಲಿ ನೋಡಿದರಲ್ಲಿ ಶ್ರೀಕೃಷ್ಣನೇ  ಆ ಇರುಳಲ್ಲಿ ಕಂಡುಬರುತ್ತಾನೆ. ಕೆದರಿದ ತಲೆ, ಭಯದಿಂದ ಅರಳಿದ ಕಣ್ಣು.. ರಂಗಸ್ಥಳದ ತುಂಬಾ ಆವರಿಸುವ ಕಂಸ ಎಂತಹ ಭಯಾನಕ ದೃಶ್ಯವದು. ಸುತ್ತಲೂ ನಿಶ್ಯಬ್ಧ ಸಭಾವಲಯ, ಏರು ಸ್ಥಾಯಿಯಲ್ಲಿ ಭಾಗವತರು ಭಾವತುಂಬುತ್ತಿದ್ದರೆ ಮುನ್ನೆಲೆಯ ಕಂಸನ ಚೀತ್ಕಾರ ಸುತ್ತಲೂ ಮೊಳಗುವಾಗ...ಕಂಸನ ಅಸಹನೀಯ ವೇದನೆ ಅಭಿವ್ಯಕ್ತಿಸಲ್ಪಡುವುದನ್ನು ನೋಡಿದ ಪ್ರೇಕ್ಷಕ ಗಡಣ ಕಂಪಿಸುತ್ತದೆ. ಕಂಸ ಪಾರಮಾರ್ಥಿಕವಾಗಿ ಚಿಂತಿಸತೊಡಗುವುದನ್ನು ಗಾಬರಿಯಿಂದ ಕಾಣುತ್ತದೆ.
ಹಲವು ಅಸುರೀ ಪಾತ್ರಗಳು ಕೊನೆಯ ಹಂತದವರೆಗೂ ಭೀಭತ್ಸ ಮಯವಾಗಿ ವಿಜ್ರಂಭಿಸುತ್ತದೆ. ಅದು ರಾವಣ ಅಗಿರ್ಬಹುದು, ಕಂಸ ಆಗಿರಬಹುದು, ಶೂರ ಪದ್ಮನಾಗಿರಬಹುದು...ಕಾರ್ತವೀರ್ಯನಾಗಿರಬಹುದು ಕೊನೆಯ ಹಂತದಲ್ಲಿ ತಮ್ಮ ಅಸ್ತಿತ್ವದ ಸತ್ಯದ ಅರಿವಾಗಿ ಮೋಕ್ಷಮುಖರಾಗುವ ಪರಿ ಯಕ್ಷಗಾನದಲ್ಲಿ ಸುಂದರವಾಗಿ ವರ್ಣಿಸಲ್ಪಡುತ್ತದೆ. ಅತ್ಯಂತ ಸರಳವಾಗಿ ಮತ್ತು ಸುಲಭವಾಗಿ ಇಲ್ಲಿ ಕಂಡಾಗ ಮನುಷ್ಯ ಬದುಕಿನ ವಾಸ್ತವದ ದರ್ಶನವಾಗುತ್ತದೆ. ಈ ಮನುಷ್ಯ ಜನ್ಮದ ನಿಯಮವೇನು?  ಭಗವಂತನ ನಿಯತಿಯೇನು? ಮೋಕ್ಷ ಎಂದರೇನು? ಸುಲಭವಾಗಿ ಇಲ್ಲಿ ಲಭ್ಯವಾಗುವ ಜ್ಞಾನ ಯಕ್ಷಗಾನದ ವೈಶಿಷ್ಟ್ಯಗಳಲ್ಲಿ ಒಂದು.  ಬದುಕಿನ ಸತ್ಯ ತಿಳಿಯುವುದಕ್ಕೆ ವಿದ್ಯಾವಂತನೇ ಆಗಬೇಕೆಂದೇನೂ ಇಲ್ಲವೆಂಬ ಸತ್ಯವನ್ನು ಹಲವು ಯಕ್ಷಗಾನ ಕಲಾವಿದರು ರಂಗದ ಮೇಲೆ ತೋರಿಸಿದ್ದರೆ. ವಿದ್ಯೆ ಅಂತ ಇಲ್ಲಿ ಉಲ್ಲೇಖಿಸುವುದು ಲೌಕಿಕ ಪ್ರಪಂಚದಲ್ಲಿ ಬಿಂಬಿಸಲ್ಪಡುವ ವಿದ್ಯೆಯನ್ನು. ಆದರೆ ವಿದ್ಯೆಯ  ಪರಿಧಿಗೆ ಇಲ್ಲಿ ಎಲ್ಲವೂ ಒಳಪಡುತ್ತದೆ ಎಂಬ ಸತ್ಯದ ಅರಿವಾಗುವುದು ಯಕ್ಷಗಾನ ಕಲಾವಿದನ ನೈಪುಣ್ಯತೆಗೆ ಸಾಕ್ಷಿ.  ಕಲಾವಿದ ಇಲ್ಲಿ ಎಲ್ಲವೂ ತಿಳಿದ ಜ್ಞಾನಿಯಂತಾಗುತ್ತಾನೆ. “ಮೋಕ್ಷ” ಎಂದರೇನು? ಜನ್ಮ ಜನ್ಮಾಂತರದ ಈ ಜೀವ ಭಾವದ ಸಂಭಂಧಗಳೇನು? ಒಬ್ಬ ಯಕ್ಷಗಾನ ಕಲಾವಿದ ರಂಗ ಮೇಲೆ ಇದನ್ನು ಅಭಿವ್ಯಕ್ತಿಸುವಾಗ ಬಹಳ ಆಶ್ಚರ್ಯವಾಗುತ್ತದೆ. “ ರಾಮ ನಿನ್ನ ಬಾಣ ತಾಗಿದಾ ಮೇಲೆ....” ಶೇಣಿ ಅಜ್ಜ ಒಂದು ಗಂಟೆ ಬೇಕಾದರೂ ವಿವರಣೆ ನೀಡ ಬಲ್ಲರು. ಯಕ್ಷಗಾನದ ನಿಜ ವೈಭವ ಇರುವುದೇ ಇಂಥವುಗಳಲ್ಲಿ. ಇಲ್ಲಿ ಪಂಡಿತ ಪಾಮರ ಎಂಬ ಭೇದವಿಲ್ಲ. ಯಾವುದೇ ಗುರುಕುಲದಲ್ಲಿ ಸಿದ್ದಿಸದ ಜ್ಜಾನ,  ಪುಸ್ತಕಗಳನ್ನ ಓದದೇ, ಗುರುಗಳ ಪಾಠ ಕೇಳದೇ ಇಲ್ಲಿ ಸುಲಭದಲ್ಲಿ  ಆರ್ಜಿಸಲ್ಪಡುತ್ತದೆ. ಯಕ್ಷಗಾನ ಸತ್ವಯುತ ಕಲೆ ಅನ್ನಿಸುವುದು ಇಂಥ ವಿಚಾರಗಳಲ್ಲೇ. 
ಕುರುಕ್ಷೇತ್ರದಲ್ಲಿ ಬಂಧುವರ್ಗದವರನ್ನು ಕೊಲ್ಲಲಾರೆ ಎಂದು ಅರ್ಜುನ ವ್ಯಾಮೋಹಕ್ಕೆ ಒಳಗಾದಾಗ ಶ್ರೀಕೃಷ್ಣ ಪಾರ್ಥನ ಮೋಹ ನಷ್ಟವಾಗುವಂತೆ ಪ್ರೇರೇಪಿಸುವ ಸನ್ನಿವೇಶವಿದೆ. ಗೀತೋಪದೇಶ ತಾಳ ಮದ್ದಲೆ ಪ್ರಸಂಗವೊಂದರಲ್ಲಿ ನಾನು ಎಂಬುದಕ್ಕೆ ಸುಲಭವಾದ ವಿಶ್ಲೇಷಣೆಯನ್ನು ಶೇಣಿ – ಪೆರ್ಲರ ಸಂವಾದ ಒದಗಿಸುತ್ತದೆ. ಸುಮಾರು ಮೂರು ಘಂಟೆಯ ಈ ತಾಳ ಮದ್ದಲೆ ಭಗವದೀತೆಯ ಪಾರಮಾರ್ಥಿಕತೆಯ ಜ್ಞಾನವನ್ನು ಒದಗಿಸುವ ಪರಿ ಹೀಗಿದೆ.
“ಅರ್ಜುನ ಕೊಲ್ಲುವುದು ಮತ್ತು ಕೊಲ್ಲಲ್ಪಡುವುದು. ಇದು ಎರಡೇ ವಿಷಯ ಇಲ್ಲಿ. ನೀನು ಕೊಲ್ಲುವುದು. ಅವರು ಕೊಲ್ಲಲ್ಪಡುವುದು, ನಿನ್ನಿಂದ. ಕೊಲ್ಲುವುದು ಯಾರು?”
“ನಾನು.”
“ಈ ನಾನು ಅಂದ್ರೆ ಏನು?”
“ನಾನಂದ್ರೆ ನಾನೇ,  ಅರ್ಜುನ”
“ಹಾಗಾದ್ರೆ ಕೊಲ್ಲಲ್ಪಡುವುದು ಯಾರು? ಅವರು... ಅಂತ ನೀನು ಹೇಳಕೂಡದು.  ಅವರೂ ಹೇಳ್ಬೇಕು. ಕೊಲ್ಲಲ್ಪಡುವುದು ಯಾರು? ಸಾಯಲ್ಪಡುವುದು ನಾನು. ನಾವು ಅಂತಲೂ ಹೇಳಬಾರದು. ನಾನು ಎಂಬುದು ವ್ಯಕ್ತಿಯಾಗಿ ಒಬ್ಬನ ಸ್ವಗತ ಅಲ್ವೋ? ನಿನ್ನನ್ನು ನೀನು ’ ನಾನು’  ಅಂತ ಹೇಳ್ತಿ. ನನ್ನನ್ನು ..??”
“ಅದಕ್ಕೆ ಅದನ್ನು ಸರ್ವ ನಾಮ ಅಂತ ಹೇಳುವುದು.ಎಲ್ಲರಿಗೂ ನಾನು ಅಂತ ಉಂಟು. ಆದರೆ ನಾನು ಅಂತ ಪ್ರತ್ಯೇಕ ಯಾರೂ ಇಲ್ಲ.”
ಮುಂದೆ ವಿವರಿಸುತ್ತಾ ಕೃಷ್ಣನಾಗಿ ಶೇಣಿ ಹೇಳುತ್ತಾರೆ,  ಪ್ರತಿಯೊಬ್ಬರಲ್ಲಿಯೂ ಇದ್ದ ನಾನು, ಈ ಭೀಷ್ಮ,  ದ್ರೋಣ ಹೀಗೆ ಪ್ರತಿಯೊಬ್ಬರಲ್ಲಿಯೂ ಇದ್ದ ನಾನು, ಅವರೂ ಸ್ವಕೀಯವಾಗಿ ಹೇಳುವಾಗ ನಾನು ಅಂತ ಹೇಳ್ತಾರೆ.  
ಕೊಲ್ಲುವುದು ಯಾರುಂತ ಆಯ್ತು? ಉತ್ತರ “ ನಾನು”
ಸಾಯುವುದು ಯಾರೂಂತ ಆಯ್ತು  ಉತ್ತರ “ನಾನು”
          ಆಗ ಅರ್ಜುನನಾಗಿ ಪೆರ್ಲ ಹೇಳುತ್ತಾರೆ. ಬಹಳ ಸರಳವಾದ ಸಂಭಾಷಣೆ ಇದು.
          “ಇದುವರೆಗೆ ನೀನು ಯಾರು ಅಂದ್ರೆ ಯಾರಾದರು ಕೇಳಿದರೆ. ನಾನು ಅಂದರೆ ಪಾಂಡು ಚಕ್ರವರ್ತಿಯ ಪುತ್ರ, ಅರ್ಜುನ, ಈಗ ಅಲೋಚನೆ ಮಾಡುವಾಗ ನಾನು ಅಂದ್ರೆ ಯಾರು? ನಾನು ಅಂದ್ರೆ ಅರ್ಜುನ. ಹಾಗಾದ್ರೆ ಈಗ ನನ್ನ ಶರೀರ ಅಂತ ಹೇಳ್ತೇನೆ ..ನನ್ನ ಶರೀರ ಅಂತ ಹೇಳುವಾಗ ಶರೀರ ಬೇರೆ ನಾನು ಬೇರೆ ಅಂತ ಆಗುದಿಲ್ವ? ಇದು ನನ್ನ ಮನೆ ಅಂದ್ರೆ ನಾನು ಬೇರೆ ಮನೆ ಬೇರೆ. ಹಾಗೆ ಪ್ರತಿಯೊಂದು...ಹಾಗೇ ನನ್ನ ಅಂತ ಹೇಳುವಾಗ ನಾನು ಅಂತ ಬೇರೆ ಉಂಟು ಅಂತ ಆಯ್ತು. ಹಾಗೆ ನನ್ನ ಬುದ್ದಿ, ನನ್ನ ಮನಸ್ಸು, ನನ್ನ ಭಾವ..ಇದನ್ನೆಲ್ಲ ಹೇಳುತ್ತಾ ನನ್ನ ಕೈ ನನ್ನ ಕಾಲು, ನನ್ನ ಕೊರಳು,  ನನ್ನ ತಲೆ,  ಹೀಗೆ ಒಂದೊಂದನ್ನೆ ಹಾಗೆ ಬೇರೆ ಬೇರೆ ತೆಗೆದು ಇಟ್ಟರೆ,,,ಕೊನೇಗೆ ನಾನು ಎಂದು ಏನು ಉಳೀತದೆ?”
“ ಆವಾಗ ಅದು ಷಷ್ಠೀ ವಿಭಕ್ತಿಯಾಗಿ ಉಳೀತದೆ “ ನನ್ನದು...” ಅಲ್ಲಿ ನಾನು ಇರುವುದೇ ಇಲ್ಲ...ನನ್ನದು ನಾನಲ್ಲದೇ ಹೋಗ್ತದೆ.”
“ಕೆಲವೊಮ್ಮೆ ಹೇಳುವುದುಂಟು ನಾನು ಅಂದ್ರೆ ನನ್ನ ಜೀವ ಅಂತ ಬೇರೆ ಉಂಟು. ನನ್ನ ಜೀವ ಹೋಗ್ತದೆ... ಆಗ ನಾನು ಬೇರೆ,  ಜೀವ ಬೇರೆ...ಹಾಗಾದರೆ ನಾನು..?? ಎಲ್ಲ ತೊಡಕು ಎಲ್ಲ ತೊಡಕು. “

ಆಗ ಕೃಷ್ಣ ..
 “ ತೊಡಕು ಏನೂ ಇಲ್ಲ. ಆ ತೊಡಕು ಬಂದ ಮೇಲೆಯೇ ಇವನಿಗೆ ಉದ್ದಾರದ ದಾರಿ ದೊರಕುವುದು. ಆ ತೊಡಕು ಬಾರದೆಯೇ ಇವರೆಲ್ಲ ಈಗ ಆಯುಧ ಹಿಡಕೊಂಡು ಬಂದಿರುವುದು. ನನ್ನದು ಎಂಬುದು ನಾನಲ್ಲ ಎಂದು ತಿಳಿದರೆ..? ನನ್ನದು ಎಂಬ ಭಾವವನ್ನು ನಾಶ ಮಾಡುವುದಿದ್ದರೆ ಯಾರು ಅದು ನಾನು..,, ನಾನು ಎಂಬುದು ನನ್ನದು ಎಂಬುದನ್ನು ನಾಶ ಮಾಡಿದರೆ ನನ್ನನ್ನು ನಾಶ ಮಾಡಿದ ಹಾಗೆ ಆಗುತ್ತದೋ?
          ಇಂತಹ ಸುಲಭ ವೇದಾಂತ ಸರಳವಾಗಿ ಇಲ್ಲಿ ಈ ಯಕ್ಷಗಾನದಲ್ಲಿ ಸಿಗುತ್ತದೆ. ಯಕ್ಷಗಾನ ಹವ್ಯಾಸದಿಂದ ಯಾವುದೇ ಗ್ರಂಥ ಪಾರಾಯಣ ಇಲ್ಲದೇನೆ ಹಲವಾರು ವಿಷಯ ವಿಸ್ಮಯಗಳನ್ನು ಸ್ವತಃ ನಾನು ಅರಿತಿದ್ದೇನೆ. ಯಕ್ಷಗಾನ ಸರಳವಾಗಿ ಕೊಡುವ ಜ್ಞಾನವನ್ನೇ ಅರಗಿಸಿಕೊಂಡರೂ ನಮ್ಮ ಬದುಕೇನು? ಇದರ ಅರ್ಥವೇನು ಎಂದು ತಿಳಿಯುವುದಕ್ಕಾಗುತ್ತದೆ. ಆದರೂ ಕುರುಡುತನ ನಮ್ಮನ್ನು ಬಿಡುವುದಿಲ್ಲ ಆವರಿಸಿದ ಮೌಢ್ಯ  ಕಳಚುವುದೇ ಇಲ್ಲ. ಹಲವು ಸಲ ಖೇದವಾಗುವಂತಹುದು,  ಪದೇ ಪದೇ ಸಂಭವಿಸುತ್ತದೆ. ಜ್ಞಾನಕ್ಕೆ ಗ್ರಹಣ ಬಡಿದಂತೆ ಅನ್ನಿಸುತ್ತದೆ. ಹೊಸತಾದ ಅಂಗಿ ತೊಟ್ಟಮೇಲೆ ಒಳಗಿನ ಬನಿಯನು ಹರಿದಿರುವುದು ಗಮನಕ್ಕೇ ಬರುವುದಿಲ್ಲ.  ಸ್ವಪ್ರತಿಷ್ಠೆಯ ಸ್ವಾರ್ಥ ಕಂಡಾಗ ಬೆಳಕೆಂದರೆ ಸಿಡಿಮದ್ದಿನ ಬೆಳಕಿನಂತೆ ಅದು ಕ್ಷಣಿಕವೇ ಎಂಬ ಭ್ರಮೆ ಆವರಿಸುತ್ತದೆ. ಕಾರಣ ನಮ್ಮಲ್ಲಿ ಆವರಿಸಿರುವ ಸ್ವ  ಪ್ರತಿಷ್ಠೆಯ  ಸ್ವಾರ್ಥ. ರಾಮ ನಿನ್ನ ಬಾಣ ತಾಗಿದಾ ಮೇಲಿನ ಪಾರಮಾರ್ಥಿಕದ ಬಗ್ಗೆ ಹೇಳುವಾಗ, ರಂಗದ ಮೇಲೆ ಮೋಕ್ಷ ಸಾಧನೆಯ ಮಾತನ್ನಾಡುವಾಗ  ಒಂದು ಕ್ಷಣವಾದರೂ ಈ ಜೀವಭಾವದ ಸಂಭಂಧದ ಅರಿವಾಗದದಿರುತ್ತದೆಯೆ?  ಮನುಷ್ಯನ ಹುಟ್ಟು ಸಾವಿನ ನಡುವಿನ ನಶ್ವರ ಜೀವನದ ಅರ್ಥವೇನು ಎಂದರಿವಾಗಿರುತ್ತದೆ. ಒಂದು ವೇಳೆ ಇದರ ಅರಿವಾಗದೇ ಇದ್ದರೆ, ಕಲಾವಿದನಾಗಿ ವಾಲಿಯಾಗಿ ಪರಕಾಯ ಪ್ರವೇಶ ಸಾಧ್ಯವಾಗುವುದಿಲ್ಲ. ಮಾತ್ರವಲ್ಲ ಪರಿ ಪೂರ್ಣ ವಾಲಿಯ ಪಾತ್ರವೂ ಅಗುವುದಕ್ಕೆ ಸಾಧ್ಯವಿಲ್ಲ.  ರಂಗದ ಮೇಲಿನ ವಾಲಿಯ ಮಾತಿಗೆ ನಾವು ಆಸನದ ತುದಿಗೆ ಬಂದು , ಕಣ್ಣು ತುಂಬಿ ಭಾವಪರವಶರಾಗಿ  ಚಪ್ಪಾಳೆ ಹೊಡೆಯುತ್ತೇವೆ.  ಭಾಗವತರು ಮಂಗಳ ಹಾಡಿದಾಗ ನಮ್ಮ ಭಾವನೆಗಳಿಗೂ ಮಂಗಳ ಹಾಡಿಬಿಡುತ್ತೇವೆ. ಮತ್ತೆ ಯಥಾ ಪ್ರಕಾರ ರಾಗದ್ವೇಷದ ಪ್ರಪಂಚದ ಒಳ ಹೊಕ್ಕು ಸಾಮನ್ಯರೇ ಆಗಿಬಿಡುತ್ತೇವೆ. ಇದಲ್ಲವೇ ವಿಪರ್ಯಾಸ? ಜಗತ್ತು ವಿಪರ್ಯಾಸಮಯ ಎನ್ನುವುದು ಹೀಗೆನೆ.

          ಹಲವು ಸಲ ಅನ್ನಿಸುತ್ತದೆ ಯಕ್ಷಗಾನ ಆಶ್ರಯ,  ಪ್ರೋತ್ಸಾಹವಿಲ್ಲದೆ ಬಡವಾಗುವುದಿಲ್ಲ. ಅದು ಕೇವಲ ಸ್ವ- ಪ್ರತಿಷ್ಠೆಯಿಂದ ಅನಾಥವಾಗುತ್ತದೆ . ಸ್ವ ಪ್ರತಿಷ್ಠೆ ಸ್ವಾರ್ಥಕ್ಕೇ ಪ್ರೇರಣೆಯಾಗುತ್ತದೆ. ಸ್ವಾರ್ಥ ರಾಜಕಿಯಕ್ಕೆ ಹಾದಿ ಹುಡುಕುತ್ತದೆ.  ಕಲಾವಿದನಾಗಲೀ ಪ್ರೇಕ್ಷಕನಾಗಲೀ ಇದರಿಂದ ಮುಕ್ತವಾಗಿ ಚಿಂತಿಸದೇ ಇರುವುದು, ಕೆಲವೊಮ್ಮೆ ಈ ಚಿಂತನೆಗಳೆಲ್ಲ ಬಾಲಿಶಮಯವಾಗಿ ತೋರುವುದು ಮೇಲೆ ಹೇಳಿದ ಪಾತ್ರಗಳ ಸಂಪೂರ್ಣ ಪಾರಾಮರ್ಥಿಕ ಚಿತ್ರಣ ಸಾಕ್ಷಾತ್ಕಾರವಾದಾಗ. ಸ್ವಾರ್ಥ ಸ್ವ ಪ್ರತಿಷ್ಠೆಯನ್ನು ಬಿಟ್ಟವನು ನೆಮ್ಮದಿಯಾಗಿ ಇರಬಲ್ಲ.  ಯಕ್ಷಗಾನದಂತಹ ಕಲೆ ಅದು ಸಮನ್ವಯ ಕಲೆ. ಇಲ್ಲಿ ಒಂದು ಎಂದು ಪ್ರತ್ಯೇಕಿಸುವುದಕ್ಕಿಲ್ಲ. ಸಮಷ್ಟಿಯ ಕಲೆ. ಇದು ಲಘೂಪಹಾರವಲ್ಲ. ಲಘೂಪಹಾರದಲ್ಲಿ ಒಂದು ತುಂಡು ಆಹಾರ ಕೊಟ್ಟರೂ ಅದು ಅರ್ಥ ಕಳೆದುಕೊಳ್ಳುವುದಿಲ್ಲ. ಆದರೆ ಷಡ್ರಸ ಭೋಜನ ಇಲ್ಲಿ ಸಿಹಿ ಕಹಿ ಚೊಗರು ಎಲ್ಲವೂ ಹಿತವಾಗಿ ಜತೆಯಾದರೆ ಮಾತ್ರ ಷಡ್ರಸ ಅರ್ಥವನ್ನು ಕಂಡುಕೊಳ್ಳುತ್ತದೆ. ಆ ಮಟ್ಟಿಗೆ ಯಕ್ಷಗಾನ ಷಡ್ರಸ ಭೋಜನಕ್ಕೆ ಹೋಲಿಸುತ್ತಾರೆ. ಚಿಟಿಕೆ ಉಪ್ಪಾದರೂ ಅದರ ಮಹತ್ವಕ್ಕೆ ಇನ್ನೊಂದು ಅನ್ವಯವಾಗುವುದಿಲ್ಲ. ಅದರ ಅವಶ್ಯಕತೆಯನ್ನು ಇನ್ನೊಂದು ನಿಭಾಯಿಸಿದರೆ ಅದು ಅಭಾಸವಾಗುತ್ತದೆ. ಹಾಗಾಗಿ ಚಕ್ರತಾಳ ಹಿಡಿವವನೂ ರಂಗಸ್ಥಳದ ಪೂರಕ ಅಂಗವಾಗಿರುತ್ತಾನೆ.

          ಹಿರಿಯ ಕಲಾವಿದ ಗೋವಿಂದಣ್ಣನನ್ನು ತಾಳ ಮದ್ದಲೆಗೆ ಕರೆದಾಗ ಅವರು ತನ್ನ ಪಾತ್ರವೇನೆಂದು ಕೇಳುವುದಿಲ್ಲ. ಪ್ರಸಂಗವನ್ನೂ ಕೇಳುವುದಿಲ್ಲ. ಸಹಕಲಾವಿದರ ವಿವರವನ್ನು ಕೇಳುವುದಿಲ್ಲ. ಪಾತ್ರವನ್ನು ಪ್ರಸಂಗವನ್ನು ಬಂದನಂತರ ಹೇಳಿದರೂ ಆದೀತು ಅಂತ ವಿನಮ್ರವಾಗಿ ಹೇಳುವಾಗ ರಾಜಕಿಯದ ಮುಖವೇ ಕಪ್ಪಾಗುತ್ತದೆ ಹೊರತು ಸತ್ವಯುತ ಹಿರಿತನ ಮತ್ತೂ ಬೆಳಗುತ್ತದೆ.
          ಯಕ್ಷಗಾನದಲ್ಲಿ ಪ್ರತಿಯೊಂದು ಅಂಗವೂ ಪೂರಕ. ರಂಗದ ಮೇಲಿನ ಮಂದಿ ಒಂದು ಕುಟುಂಬವಾದರೆ ರಂಗದ ಎದುರಿನ ಮತ್ತೊಂದು ಸಹ ಕುಟುಂಬ. ಸಮಷ್ಟಿಯಲ್ಲಿ ಒಂದು ಪಂಗಡ. ಇಲ್ಲಿ ಒಂದರ ಪ್ರಜ್ಞೆಗೆ ಊನ ಬಂದರೂ ನೋವು ಮೂಲ ಕಲೆಗೆ. ನಗರದ ಒಂದು ಬೀದಿಯಲ್ಲಿ ಸಾಲು ಸಾಲಾಗಿ ಮನೆಗಳಿರುತ್ತವೆ. ಪ್ರತಿ ಮನೆಯವರ ಅಂಗಳ ಎದುರು ಹಾಸಿದ ಸಾಮಾನ್ಯ ಬೀದಿಯೇ ಆಗಿರುತ್ತದೆ. ತಮ್ಮ ಮನೆಯ ಅಂಗಳ ಶುಚಿಯಾಗಿಸಿದಾಗ ಒಂದು ತುದಿಯಿಂದ ಇನ್ನೊಂದು ತುದಿಯವರೆಗಿನ ಬೀದಿಯೇ ಶುಚಿಯಾದಂತೆ. ತಮ್ಮ ಭಾಗದ ಕೆಲಸ ಪರಿಪೂರ್ಣವಾಗಿಸುವುದು.  ಹೃದಯ ವೈಶಾಲ್ಯವಿದ್ದರೆ ಪಕ್ಕದ ಮನೆಯ ಅಂಗಳವನ್ನೂ ಶುಚಿಯಾಗಿಸಬಹುದು.  ಅದು ಸಹಬಾಳ್ವೆಯ ಪ್ರತೀಕವಾಗಿ ಬೀದಿಯಂತೂ ಸುಂದರವಾಗಿಬಿಡುತ್ತದೆ.  ಆದರೆ ಇಂತಹ ಉದಾತ್ತ ಸರಳ ತತ್ವಗಳನ್ನು ಅರಗಿಸಿಕೊಳ್ಳುವುದಕ್ಕೆ ಸ್ವ ಪ್ರತಿಷ್ಠೆ ಬಿಡುವುದಿಲ್ಲ. ಯಾವೂದೂ ಇಲ್ಲದಿದ್ದರೆ ಭುಜಬಲದಿಂದಲಾದರೂ ದಮನಿಸಿ ನಿಯಂತ್ರಿಸುವ ಅತಿಕ್ರಮಣ ಭಾವ.   ಮಕ್ಕಳಲ್ಲಿ ಯಾರಿಗೆ ಪೆಟ್ಟು ಬಿದ್ದರೂ ಹೆತ್ತ ಕರುಳಿಗೆ ಅಲ್ಲವೇ  ನೋವುಂಟಾಗುವುದು. ಕೈಹಿಡಿದ ಗಂಡ ಮತಿಭ್ರಮಿಸಿ ಹೊಡೆದರೂ, ಅಥವಾ ಇನ್ನಾರೂ ದಮನಿಸಿದರೂ ಹೆತ್ತ ಕರುಳು ಅನುಭವಿಸುವ ನೋವು ಗಾಢವಾಗಿರುತ್ತದೆ. ದೇಹ ಬಲದಿಂದ ಏನನ್ನಾದರೂ ನಿಯಂತ್ರಿಸಬಹುದೆಂದು ಭಾವಿಸಿದರೆ ಅದು ಒಂದು ವಿಕೃತ ಮನಸ್ಸಿನ ಭಾವವೇ ಹೊರತು ಮತ್ತೇನು ಅಲ್ಲ. ದೇಹಕ್ಕಂಟಿದ ಕೊಳೆಯನ್ನು ಬಲವಾಗಿ ತಿಕ್ಕಿ ಶುಚಿಗೊಳಿಸಬಹುದು. ಹೃದಯದ ಕಲ್ಮಷವನ್ನು ತೊಳೆಯುವುದಕ್ಕೆ ಸನ್ಮಸ್ಸಿನ ಪ್ರೇರಣೆಯಿಂದ ಮಾತ್ರ ಸಾಧ್ಯ. ಇದಕ್ಕೆ ಪಾರಮಾರ್ಥಿಕ ಎನ್ನುವುದು,  ನಮ್ಮದಾಗಿ ಏನಿದೆಯೋ ಅದನ್ನು ನಮ್ಮದಲ್ಲ ಎಂದು ತಿಳಿವುದು.
 ಯೋಚಿಸೋಣ,  ಇದನ್ನೆಲ್ಲ ತಿಳಿಯದ ಅಜ್ಞಾನಿಗಳೇ ನಾವು?

         


Tuesday, October 1, 2013

“ಕಣ್ಣರಿಯದೊಡಂ ಕರುಳರಿಯದೇ ಕುಮಾರ.....”

“ಕಣ್ಣರಿಯದೊಡಂ ಕರುಳರಿಯದೇ ಕುಮಾರ.....”
ಇದು ಪೃಥೆಯಾದ ಕುಂತೀ ದೇವಿ ಬಾಳಿನುದ್ದಕ್ಕೂ ಅಂತರಂಗದಲ್ಲಿ ಪರಿತಪಿಸಿಕೊಂಡು ಆಡುವ ಕಂಬನಿಯ ಮಾತುಗಳು. ಕಾನೀನ ಪುತ್ರನ ಜನ್ಮಕ್ಕೆ ಕಾರಣಳಾದ ಕುಂತಿದೇವಿಯ ಕರುಳು ಮಿಡಿದುದಕ್ಕಿಂತಲೂ ಹೆಚ್ಚು ಪುತ್ರನಾಗಿ ಕರ್ಣ ಅನುಭವಿಸಿದ ವೇದನೆಯ ಬದುಕೇ ಒಂದು ದುರಂತಮಯ ಚಿತ್ರಣ. ಪ್ರಥಾ ದೇವಿ ಕುಂತೀ ಭೋಜನ ಪುತ್ರಿಯಾದ ಮೇಲೆ ಕುಂತಿಯಾಗುತ್ತಾಳೆ. ಅನಿರೀಕ್ಷಿತವಾಗಿ ಆಗಮಿಸಿದ ದೂರ್ವಾಸ ಮುನಿಗಳ ಸಿಟ್ಟು ಒಂದು ಮಹತ್ತರ ಘಟನೆಗಳಿಗೆ ಕಾರಣವಾಗುತ್ತದೆ. ದೂರ್ವಾಸ ಮುನಿ ಆಗಮಿಸಿದರೂ,  ಸಿಟ್ಟುಗೊಂಡರೂ,  ಹಸನ್ಮುಖಿಯಾದರೂ ಪ್ರತೀ ಬಾರಿಯೂ   ಅದು ಯವೂದೋ ಘಟನೆಗಳಿಗೆ ನಿಮಿತ್ತವಾಗಿಬಿಡುವುದು ಸಹಜ. ದುರ್ವಾಸ ಪ್ರವೇಶವಾಯಿತೋ ಅಲ್ಲಿ ಏನಾದರೂ ಅಘಟಿತ ಘಟನೆ ನಡೆಯಲೇ ಬೇಕು. ಆ ವಿಚಿತ್ರ ಕುಂತೀ ದೇವಿಯ ಬದುಕಿನಲ್ಲೂ ಅದದ್ದು ಪಂಚ ಪಾಂಡವರ ಜನ್ಮಕ್ಕೆ ಕಾರಣವಾಯಿತು. ಮಾತ್ರವಲ್ಲ ಜತೆಗೇ ಕರ್ಣನಂತಹ ವಿಕಲ್ಪ ನಾಯಕನ ಜನನಕ್ಕೂ ಕಾರಣವಾಗಿಬಿಟ್ಟಿತು. ಇದು ಜನಜನಿತವಾದ ಮಹಾಭಾರತದ ಕಥಾಭಾಗ.
ಚಿತ್ರಗಳ ಕೃಪೆ  ಮಿಥುನ್ ಪ್ರಕಾಶ್ ಸುಣ್ಣಂಗುಳಿ

ಕರ್ಣ ಜನ್ಮದಿಂದ ತೊಡಗಿ ಕರ್ಣಾವಸಾನವಾಗುವವರೆಗಿನ ಕಥಾನಕ ಹೃದಯ ಸ್ಪರ್ಶೀ ಘಟನೆಗಳನ್ನು ಒಳಗೊಂಡಿದೆ. ಅತ್ಯಂತ ವಿಲಕ್ಷಣ ಪ್ರಸಂಗಗಳನ್ನೇ ಒಳಗೊಂಡ ಈ ಪುರಾಣ ಕಥೆ ಯಕ್ಷಗಾನದಲ್ಲಿ ವರ್ಣ ರಂಜಿತಪ್ರಸಂಗವಾಗಿ ಹಲವು ಬಗೆಯಲ್ಲಿ ಪ್ರದರ್ಶಿಸುತ್ತಾರೆ. ಇದನ್ನೇ ಆಧರಿಸಿ ವರ್ಷಗಳ ಮೊದಲು ಶ್ರೀ ಧರ್ಮಸ್ಥಳ ಮೇಳದವರು “ಮಹಾ ರಥಿಕರ್ಣ” ಎಂಬ ಪ್ರಸಂಗವನ್ನು ಆಡುತ್ತಿದ್ದರು. ಮೇಳದ ಪ್ರತಿಯೊಬ್ಬ ಕಲಾವಿದರಿಗೂ ಹೊಂದಿಕೆಯಾಗುವಂತೆ ಪಾತ್ರಗಳನ್ನು ನಿರೂಪಿಸಿ ರಂಗದಮೇಲೆ ತಂದ ಅತ್ಯಂತ ಜನಪ್ರಿಯ ಪ್ರಸಂಗವಿದು. ಕುಂಬಳೆ ಸುಂದರ್ ರಾವ್, ಪುತ್ತೂರು ನಾರಾಯಣ ಹೆಗಡೆ ಗೋವಿಂದ ಭಟ್ ಸೂರಿಕುಮೇರಿ,  ಎಂಪೆಕೆಟ್ಟೆ ರಾಮರೈ ಮೊದಲಾದ ಪ್ರಸಿದ್ದ ಕಲಾವಿದರ ಪ್ರತಿಭೆಯಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಡುತ್ತಿದ್ದ ಈ ಪ್ರಸಂಗವನ್ನು , ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ನಿಡ್ಲೆ ಗೋವಿಂದ ಭಟ್ ಬಳಗ ) ದವರು ಬೆಂಗಳೂರಿನ ಪುತ್ತಿಗೆ ಮಠದಲ್ಲಿ ಆಡಿತೋರಿಸಿದರು.ಕಾಲ ಮಿತಿಯೊಳಗೆ ಇದನ್ನು ಸಂಕಲಿಸಿ ಆಡಿತೋರಿಸುವುದು ಬಹಳ ಸಾಹಸಮಯ ಕೆಲಸ. ದುರ್ವಾಸ ಅನುಗ್ರಹ, ಕರ್ಣ ಜನ್ಮ, ವಜ್ರದುಂಬಿ, ಶಸ್ತ್ರ ಪರೀಕ್ಷೆ, ಕರ್ಣ ದಿಗ್ವಿಜಯ, ಕರ್ಣ ಭೇದನ, ಕರ್ಣಾವಸಾನ ಹೀಗೆ ಪ್ರತಿಯೊಂದು ಮಹತ್ವದ ಘಟನೆಗಳಲ್ಲಿ ಯಾವುದನ್ನೂ ಸಂಕ್ಷೇಪಿಸಿದರೂ ಅರ್ಥವನ್ನು ಕಳೆದುಕೊಳ್ಳುವಾಗ ಇದನ್ನು ಕಾಲಮಿತಿಗೆ ಒಳಪಡಿಸಿ ಯಶಸ್ವಿಯಾಗಿ ಆಡುವುದು ಬಹಳ ಕಷ್ಟದ ಕೆಲಸ.
          ಕುಂತೀ ಭೋಜನ ಒಡ್ಡೋಲಗದಿಂದ ತೊಡಗಿ ವಸುಷೇಣನ ಜನ್ಮವಾಗುತ್ತದೆ, ನಂತರ ಬಿಲ್ವಿದ್ಯೆಯ ಮಹತ್ವಾಕಾಂಕ್ಷೆಯಲ್ಲಿ ಪರಶುರಾಮಲ್ಲಿ ಶಿಶ್ಯತ್ವ ಸ್ವೀಕರಿಸುವ ವಸುಷೇಣ, ತನ್ನಲ್ಲಿ ಅರಿವಿಲ್ಲದೇ ವ್ಯಕ್ತವಾಗುವ ಕ್ಷತ್ರಿಯಗುಣಗಳಿಗೆ ಕಾರಣ ತಿಳಿಯದೇ ನಿಜವನ್ನು ಮರೆಮಾಚುವಂತಾಗುತ್ತದೆ. ಇದುವೇ ಪರಶುರಾಮನ ಆಗ್ರಹಕ್ಕೆ ಕಾರಣವಾಗಿ ವಸುಷೇಣ  ಶಾಪಗ್ರಸ್ಥವಾಗುತ್ತಾನೆ. ಈ  ಸನ್ನಿವೇಶದಲ್ಲಿ ಪರಶುರಾಮನಾಗಿ ನಿಡ್ಲೆ ಗೋವಿಂದ ಭಟ್ ತಮ್ಮ ಪ್ರತಿಭೆಗನುಸಾರವಾಗಿ ಮನೋಜ್ಞವಾಗಿ ಅಭಿನಯಿಸುತ್ತಾರೆ. ವಸಂತ ಗೌಡ ಕಾಯರ್ತಡ್ಕ ಶಿಷ್ಯ ವಸುಷೇಣನಾಗುತ್ತಾರೆ. ಮಂದೆ ದಿಗ್ವಿಜಯದ ಕರ್ಣ ಮತ್ತು  ಭೇದನದ ಕರ್ಣನಲ್ಲಿ ವೈಶಿಷ್ಟ್ಯವೇನೂ ಕಂಡು ಬರುವುದಿಲ್ಲ. ಅ ಬಹಳಷ್ಟು ಕುಂಬ್ಳೆಯವರ ಅರ್ಥಗಾರಿಕೆಯನ್ನೇ ಮುಂದುವರೆಸಿ ಕ್ಯಾಸೆಟ್ ಸಂಬಾಷಣೆಯನ್ನು ಅಲ್ಲಲ್ಲಿ ಒಪ್ಪಿಸಿದ್ದು ಬಿಟ್ಟರೆ ಈ ಭಾಗದ ಕರ್ಣ ಪರವಾಗಿಲ್ಲ ಅಂತ ಹೇಳಬಹುದು. ಕೊನೆಯಲ್ಲಿ ಅವಸಾನದ ಕರ್ಣನಾಗಿ ಸುಬ್ರಾಯ ಹೊಳ್ಳ ಇದ್ದ ಅಲ್ಪ ಸಮಯದಲ್ಲೇ ಬಹಳಷ್ಟು ಗಮನಸೆಳೆದರು. ಕುಣಿತ ಮತ್ತು ಮಾತುಗಾರಿಗೆ ಹಿತಮಿತವಾಗಿ ರಂಜಿಸಿತ್ತು.
ಚಿತ್ರಗಳ ಕೃಪೆ  ಮಿಥುನ್ ಪ್ರಕಾಶ್ ಸುಣ್ಣಂಗುಳಿ
          ಒಟ್ಟು ಯಕ್ಷಗಾನ ಪ್ರದರ್ಶನ ಉತ್ತಮವಾಗಿತ್ತು. ಇದಕ್ಕೆ ಮುಖ್ಯ ಕಾರಣ ಹಿಮ್ಮೇಳದ ಉಮೇದ್ವಾರಿಕೆ. ಚೆಂಡೆ ಮದ್ದಳೆಯ ಲಯ ವಿನಿಮಯ ಅದ್ಭುತವಾಗಿತ್ತು. ಯುವ ಪ್ರತಿಭೆ ರಾಮಕೃಷ್ಣ ಮಯ್ಯರ ಭಾಗವತಿಕೆ ಉತ್ತಮವಾಗಿತ್ತು. ಬೃಹತ್ ಪ್ರಸಂಗವನ್ನು ಕಾಲಮಿತಿಯಲ್ಲಿ ಒಳಪಡಿಸುವಾಗ ಭಾಗವತರು ಸ್ವಲ್ಪ ಒತ್ತಡ ಅನುಭವಿಸಲೇ ಬೇಕಾಗುತ್ತದೆ. ಅದು ಕೆಲವೊಮ್ಮೆ ವ್ಯಕ್ತವಾಗುತ್ತಿತ್ತು. ಮುಖ್ಯವಾಗಿ ರಾಗಗಳ ಅಯ್ಕೆ ಅತ್ಯುತ್ತಮ ಎಂದೇ ಹೇಳಬಹುದು. ಆದರೂ ಕೆಲವೊಂದು ಪದಗಳು ನಿರೀಕ್ಷೆಯಂತೆ ಮೂಡಿಬರಲಿಲ್ಲ. “ ಕೊರಳ ಸೆರೆ ಉಬ್ಬಿದವು……” ಮುಂತಾದ ಪದಗಳಿಗೆ ರಾಗ ಸಂಯೋಜನೆ ಮತ್ತು ಆಯ್ಕೆ ಉತ್ತಮವಾಗಿದ್ದರೂ ಕೊನೆಯಲ್ಲಿ ಮುಕ್ತಾಯ ತೃಪ್ತಿಯಾಗಲಿಲ್ಲ. ಬಹುಶಃ ಇದಕ್ಕೆ ಸಮಯದ ಅಭಾವವೂ ಕಾರಣ ಇರಬಹುದೇನೋ.

           ಒಟ್ಟು ತಂಡವಾಗಿ ಪ್ರದರ್ಶನ ನೀಡುವಾಗ ಇಲ್ಲಿ ಯಾವುದೂ ಮುಖ್ಯ ಅನ್ನಿಸುವುದೇ ಇಲ್ಲ. ಅದಕ್ಕೆ ಇವರು ಆಯ್ಕೆ ಮಾಡುವ ಪ್ರಸಂಗಗಳೇ ಸಾಕ್ಷಿ. ಕೇವಲ ಪುಂಡುವೇಷದವರ ಗಿರಿಕಿ ಯನ್ನು ನಂಬಿ ಪ್ರಸಂಗ ನಿರ್ಣಯಿಸುವುದಲ್ಲ.  ಈ ಬಗೆಯಲ್ಲಿ  ಆಟ ಮೇಲೆ ಬೀಳಿಸುವ ನಂಬಿಕೆ ಇಲ್ಲಿಲ್ಲ. ಇದಕ್ಕೆ ಸಣ್ಣ ನಿದರ್ಶನ ಅಮ್ಮುಂಜೆಯಂತಹ ಪುಂಡುವೇಷಧಾರಿ ಈ ಪ್ರಸಂಗದಲ್ಲಿ ಗಿರಕಿಯೇ ಇಲ್ಲದ  ಶ್ರೀ ಕೃಷ್ಣನ ವೇಷ ಮಾಡಿದ್ದು. ವೇಷ ಯಾವುದಾದರೇನು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಹಿರಿಮೆ ಎನ್ನಿಸಲ್ಪಡುತ್ತದೆ. ಕಾಲ ಮಿತಿಯೊಳಗೆ ಕುಣಿತವೂ ಮಿತಿಯೊಳಗೆ ಇರಬೇಕು ಎಂಬ ಅರಿವು ಇಲ್ಲಿದೆ. .. ಭಾರ್ಗವ ವಿಜಯ ಸುದರ್ಶನ ವಿಜಯ ಲವಕುಶ ಮುಂತಾದ ಪ್ರಸಂಗಗಳ ಹಿಂದೆ ಬೀಳದೆ ಸರ್ವಾಂಗೀಣ ಪ್ರದರ್ಶನಕ್ಕೆ ಇಂತಹ ಪ್ರಸಂಗಗಳು ಪುರಾವೆಯಾಗಬಲ್ಲುದು. ದಣಿವರಿಯದ ಗಿರಕಿಯೇ ತೆಂಕು ತಿಟ್ಟು ಯಕ್ಷಗಾನ ಎಂಬ ತಪ್ಪು ತಿಳುವಳಿಕೆ ಹೋಗಲಾಡಿಸುವುದಕ್ಕೆ ಇದು ಕಾರಣವಾಗಬಹುದು. 

          ಶಿಸ್ತಿನ ತಂಡದ ಅಚ್ಚುಕಟ್ಟಾದ ಪ್ರದರ್ಶನಕ್ಕೆ ಸಾಕ್ಷಿಯಾಗಿ ಸಭಾಭವನ ಕಿಕ್ಕಿರಿದು ತುಂಬಿತ್ತು. ಬಹಳಷ್ಟು ಮಂದಿ ನಿಂತುಕೊಂಡೇ ಕೊನೇವರೆಗೂ ಆಟ ನೋಡಿದ್ದು ವಿಶೇಷವೆನಿಸಿತು. ಈ ಸಭಾಭವನದಲ್ಲಿ ಈ ಬಗೆಯ ಜನಸಂದಣಿ ಬಹಳ ಅಪರೂಪ ಎನ್ನಲೇಬೇಕು. ಸಾಮಾನ್ಯವಾಗಿ ಇಲ್ಲಿ  ಹೆಚ್ಚೆಂದರೆ ಐವತ್ತರ ಒಳಗೆ ಇರುತ್ತಿದ್ದ ಜನಸಂಖ್ಯೆ ಈ ಬಾರಿ ಭವನ ಭರ್ತಿಯಾಗುವುದಕ್ಕೆ ಕಾರಣ ನಿಡ್ಲೆಯಣ್ಣನ ತಂಡದ ಹಿರಿಮೆ ಎನ್ನಲೇಬೇಕು. ಒಂದು ತಂಡವಾಗಿ ಆಡುವ ಕಲೆ ಈ ಮಂದಿಗೆ ಕರಗತವಾಗಿದೆ. ಎಲ್ಲೂ ಹೊಂದಾಣಿಕೆ ಕುಸಿದ ಭಾವನೆಯೇ ಕಂಡುಬರಲಿಲ್ಲ. ಪ್ರತಿಯೊಂದು ಸನ್ನಿವೇಶವೂ ಅಚ್ಚುಕಟ್ಟಾಗಿ ಮೂಡಿ ಬಂತು. ನಿಜಕ್ಕೂ ನಿಡ್ಲೆ ಸೆಟ್ಟಿನ ಆಟ ಬೆಂಗಳೂರಿಗರಿಗೆ ವಿಶಿಷ್ಟ ಅನುಭವವನ್ನೊದಗಿಸಿತು. ವಿಶ್ವಾಸ ಇಟ್ಟು ಬಂದವರ ನಿರೀಕ್ಷೆಯನ್ನು ಈಡೇರಿಸಿದ ಸಾರ್ಥಕ ಭಾವ ಗೋವಿಂದಣ್ಣ ಬಳಗಕ್ಕೆ ಬಂದರೆ ಅಶ್ಚರ್ಯ ಪಡಬೇಕಿಲ್ಲ. ಶ್ರೀ ಮಹಾಗಣಪತಿ ಮಂಡಳಿಯ ಇಪ್ಪತೊಂಬತ್ತು ವರ್ಷದ ಸೇವೆ ಅತ್ಯಂತ ಶ್ಲಾಘನೀಯ ಎನ್ನಬೇಕು.  ಕೇವಲ ಬೆಂಗಳೂರಿಗಷ್ಟೇ ಏಕೆ ಕರ್ನಾಟಕಕ್ಕೇ ಮೀಸಲಾಗಿಸದೆ  ಅನ್ಯ ಪ್ರಾಂತ್ಯಕ್ಕೂ ವಿಸ್ತರಿಸಿದ  ಈ ಕಾರ್ಯಕ್ಕೆ ಬಹು ಪರಾಕ್ ಎನ್ನದೇ ಇದ್ದರೆ ಅದು ಯಕ್ಷಗಾನ ಅಭಿಮಾನವಾಗುವುದಿಲ್ಲ.  ನಿಜಕ್ಕೂ ಈ ತಂಡದ ಪ್ರದರ್ಶನದ ದರ್ಶನವಾಗುವಾಗ ಅಭಿಮಾನ ನೂರ್ಮಡಿಸುತ್ತದೆ. ನಿಡ್ಲೆ ಗೋವಿಂದ ಭಟ್ಟ ಸರ್ವಾಂಗೀಣ ಸೇವೆಗೆ  ಪ್ರಾಮಾಣಿಕವಾಗಿ ಡಾಕ್ಟರೇಟ್ ಸಲ್ಲಬೇಕು.  ಆಟ ನೋಡಿ ಹೊರಬಂದಾಗ ’ಕಣ್ಣರಿಯದೇ ಇದ್ದರೂ ಕರುಳರಿಯದೇ ಇದ್ದೀತೆ” ಎಂದು   ಭಾವಿಸಿ ಹೋಗುತ್ತದೆ.   


~ಯಕ್ಷಗಾನಂ ಗೆಲ್ಗೆ~

Monday, September 16, 2013

ಅಂತರಂಗದ ರಾವಣ ಭಾಗ ೭


          ತಾಳ ಮದ್ದಲೆಯ ಅರ್ಥಗಾರಿಕೆಯನ್ನು ಸವಿಯಬೇಕಾದರೆ ಬಹಳಷ್ಟು ತಾಳ್ಮೆ ಬೇಕು. ಸಹನೆಯಿಂದ ಇದರ ಆಸ್ವಾದನೆಗೆ ತೊಡಗಿದರೆ ತೊಡಗುವುದಷ್ಟೆ ನಮ್ಮ ಕೆಲಸ ಮತ್ತೆ ಅದು ಸೆಳೆಯುತ್ತಾ ಹೋಗುತ್ತದೆ. ಈ ಮಾತು ಬಹುಶಃ ಈ ಲೇಖನಕ್ಕೂ ಅನ್ವಯಿಸಬೇಕಾಗುತ್ತದೆ ಏನೋ? ಇದನ್ನು ಓದಬೇಕಾದರೂ ಬಹಳಷ್ಟು ತಾಳ್ಮೆ ಅತ್ಯವಶ್ಯ.  ರಾವಣನ ಹತ್ತು ಮುಖ ದರ್ಶನವಾದ ಹಾಗೆ. ರಾವಣನ ಅಂತರಂಗದ ಮುಖವೂ ಇದರೊಂದಿಗೆ ಸೇರಿಸಬಹುದೇನೋ ಎಂಬ ಸಂದೇಹ ನನಗೆ ಮೂಡುತ್ತದೆ. ಈ ಭಾಗ ಬರೆಯುತ್ತ ಬರೆಯುತ್ತಾ ಬಹಳ ದೀರ್ಘವಾಗಿ ಲಂಬಿಸಿತು.  ಶೇಣಿ ರಾವಣದ ವಾಕ್ ಪ್ರವಾಹವೇ ಹಾಗೆ. ಹರಿಯುವ ನದಿಗೆ ಅಲ್ಲಲ್ಲಿ ಒಡ್ಡನ್ನು ಕಟ್ಟಿ ಅಲ್ಪ ಸ್ವಲ್ಪ ತಡೇ ಒಡ್ಡಬಹುದೇನೋ. ಆದರೆ ಈ ವಾಕ್ ಪ್ರವಾಹಕ್ಕೆ ಈ ಲೇಖನದಲ್ಲಿ ಎಲ್ಲಿ ವಿಶ್ರಾಂತಿಯನ್ನು ಕೊಡಬೇಕೋ ತಿಳಿಯದಾಯಿತು. ಮೋಡ ಕರ್ರಗಾಗಿ  ಸುರಿದ  ಮಳೆ ಮಧ್ಯೆ ರಭಸ ಕಡಿಮೆಯಾದರೂ ಮುಗಿಲು ಕರಗಿ ಬೆಳ್ಳಗಾಗದೆ ಮಳೆ ನಿಲ್ಲುವುದಿಲ್ಲ. ಹಾಗೇ ಈ ವಾಗ್ವರ್ಷಿಣಿ ಹೇಳುವುದು ಸೂಕ್ತ ಅನ್ನಿಸುತ್ತದೆ. ಅದು ಕೂಡ ತಾಳ ಮದ್ದಲೆ ಮಂಗಲ ಹಾಡಿದರೆ ಮಾತ್ರವೇ ನಿಲ್ಲುತ್ತದೆ. ಸಹನೆಯಿಂದ ಬರೀ ನೀರನ್ನು ಕುಡಿದರೂ ಹಸಿವು ನೀಗುತ್ತದೆ. ಹಾಗೆ ಸಹನೆಯಿಂದ ಇದರ ಆಸ್ವಾದನೆಗೆ ತೊಡಗಿದರೆ ಮನಸ್ಸಿನ ಹಲವು ಬಗೆಯ ತೃಷೆಯನ್ನು ನೀಗಿಸಬಹುದು.
         
          ಪತಿಯಾದ ರಾವಣನಲ್ಲಿ ಪರಿ ಪರಿಯಾಗಿ ಬೇಡುವ ಮಂಡೊದರಿ, ತನ್ನ ಪ್ರೀತಿಯಿಂದ ರಾವಣನನ್ನು ಸೆಳೆಯುವ ಯತ್ನ ಮಾಡುತ್ತಾಳೆ. ತಾಯಿಯ ಪ್ರೀತಿಯ ಸೆಳೆತವನ್ನು ಕಳಚಿದಂತೆ ರಾವಣ ತನ್ನ ಛಲದಿಂದಲೇ ಮಂಡೋದರೆ ಪ್ರೀತಿಯ ಸೆಳೆತದಿಂದ ಹೊರಗೆ ಬರುತ್ತಾನೆ. ಬಾರದೆ ರಾವಣನಿಗೆ ವಿಧಿಯಿಲ್ಲ. ಅನಿವಾರ್ಯತೆಯ ಬಂಧನ ಬಿಗಿಯಾಗುತ್ತ ಹೋಗುತ್ತದೆ. ಆ ಬಂಧನವಾದರೂ ಏನು?  ಅದುವೇ ರಾವಣನ ಅಂತರಂಗ. ದೇವರ ಕೋಣೆಯ ನೆಲ ಗೋಮಯದ ಕಪ್ಪಿನಿಂದ ಕರ್ರಗಾದಂತೆ ರಾವಣನ ವ್ಯಕ್ತಿತ್ವ ಕರ್ರಗಾಗಿ ಗೋಚರವಾಗುತ್ತದೆ. ಕಪ್ಪಾದ ನೆಲದ ಮೇಲೆ ಬಿಡಿಸಿದ ಪೂಜಾ ಮಂಡಲದಂತೆ ರಾಮನ ವ್ಯಕ್ತಿತ್ವ ರಾವಣ ಸಂಘರ್ಷದಲ್ಲಿ ಇನ್ನೂ ಪ್ರಭಾವಶಾಲಿಯಾಗುತ್ತದೆ.
 ಒಂದು ಹಂತದಲ್ಲಿ ಮಂಡೋದರಿಯಲ್ಲಿ ರಾವಣ ಹೇಳುತ್ತಾನೆ, “ರಾಮನಿಗೆ ಶರಣಾಗಬೇಕಾದದ್ದು ನಾನಲ್ಲ ನೀನು”  ಎಷ್ಟು ಮಾರ್ಮಿಕವಾದ ಮಾತು ಇದು. ಇವನ ಕಪ್ಪಾದ ವ್ಯಕ್ತಿತ್ವ ದೇವರ ಕೋಣೆಯ ನೆಲದಂತೆ ರಾಮನೊಡನೆಯ ಸಂಘರ್ಷದಿಂದ ಮತ್ತೂ ಪವಿತ್ರವಾಗುತ್ತದೆ. ಕೊಣೆಯ ನೆಲ ಕಂಡಕೂಡಲೇ,  ಪವಿತ್ರ ಪಾಣಿಯಾಗಿ, ಶುದ್ದೀಕೃತಗೊಂಡು ಪೂಜೆಗೆ ಅಣಿಯಾಗುವ ಮನಸ್ಸಾಗುತ್ತದೆ. ಹಾಗಾಗಿ ಮಂಡೋದರಿಗೆ ಹೇಳುವುದು ಈ ಬದು ಕು ರಾಮನೊಡನೆ ಐಕ್ಯವಾಗುತ್ತದೆ. ನೀನು ಶರಣಾಗು ಎಂದು. ರಾವಣನ ವ್ಯಕ್ತಿತ್ವದ ದಶ ಮುಖಗಳಂತೆ , ರಾವಣನ ಕೃತ್ಯಗಳೂ ಹಲವಾರು ಅರ್ಥವನ್ನು ಕಂಡುಕೊಳ್ಳುತ್ತದೆ. ಇಡೀ ಲಂಕೆಯನ್ನು ರಾಮನ ಪದತಲದಲ್ಲಿ ಮಡುಗಿದ ಕ್ರಮವೇ ಇದನ್ನು ಹೇಳುತ್ತದೆ. ಇದರ ಸೂಚನೆ ಮೊದಲೇ ಅತಿಕಾಯನ ಬಾಯಿಯಿಂದ ಬರುತ್ತದೆ. “ ಬನ್ನಿರೈ ಸಂಸಾರ ಶರಧಿಯನು ದಾಟುವರು” ಅದನ್ನವಲಂಬಿಸಿಯೇ ರಾವಣ ಹೇಳುತ್ತಾನೆ “ ರಾಮನಿಗೆ ಶರಣಾಗು”


“ಹರಪಿತಾಮಹ ಸುರಪ ಮುಖ್ಯರ ಧುರಕೆ ಮಣಿಯುವನಲ್ಲ ದಶಶಿರ  ”
ಪತಿವೃತಾ ಮಂಡೋದರಿಯ ಪ್ರೀತಿಗೆ ಒಲಿದು ರಾವಣ ಹೇಳುತ್ತಾನೆ. ನೀನು ಏನು ಬೇಕಾದರೂ ಕೇಳು ಆದರೆ ರಾಮನಿಗೆ ಶರಣಾಗತಿ.. ರಾಮನಲ್ಲಿ ಪ್ರೇಮ..ಅದು ರಾವಣನಿಗೆ ಸಾಧ್ಯವೇ ಇಲ್ಲದ ಮಾತು. ಪ್ರೀತಿಯ ಮಡದಿ ಏನು ಬೇಕಾದರೂ ಕೇಳಲಿ  ಅದನ್ನು ಸಾಧಿಸಿ ಕೊಡುವ ಗಂಡ ಆ ಪ್ರೀತಿಗೆ ಸಾರ್ಥಕತೆಯನ್ನು ಒದಗಿಸುತ್ತಾನೆ. ಅರ್ಥಾತ್ ಹೆಂಡತಿ ಪ್ರೀತಿ ಸರ್ವಸ್ವವಾಗಿ ಕಾಣುತ್ತದೆ. ಆದರೆ ರಾವಣ ಅಂತಹಾ ಪ್ರೀತಿಯ ಬೇಡಿಕೆಯನ್ನೇ ತಳ್ಳಿಹಾಕುತ್ತಾನೆ. ಅದು ಹೆಂಡತಿಯಲ್ಲಿ ಪ್ರೀತಿಯಿಲ್ಲದೆ ಅಲ್ಲ. ಆ ಹೆಂಡತಿಯ ಯೋಗ್ಯತೆ ಅರಿಯದೇನಲ್ಲ. ಆದರೂ ಯಾಕೆ? ಅದು ರಾವಣನಲ್ಲಿ ಜನ್ಮತಃ ಅಡಗಿದ ರಾಮ ದ್ವೇಷ. ವಿಚಿತ್ರವಲ್ಲವೇ? ಏನನ್ನಾದರೂ ಒದಗಿಸಿಯೇನು ಆದರೆ ರಾಮನಿಗೆ ಶರಣಾಗತನಾಗುವುದು ಅದು ಸಾಧ್ಯವಿಲ್ಲದ ಮಾತು. ಯಾಕೆ ಮುಂದೆ ಪ್ರತಿ ಹಂತದಲ್ಲು ರಾಮನ ಮೇಲಿನ  ದ್ವೇಷ ವ್ಯಕ್ತವಾಗುತ್ತದೆ.

“ಅದು ಅಗದ ಮಾತು. ಸೃಷ್ಟಿಕರ್ತನಾದ ಬ್ರಹ್ಮನಿಗಾದರೂ ಬಾಗದ ತಲೆ ಇದು. ಹಟಯೋಗದಿಂದ ಬ್ರಹ್ಮನ ತಲೆಯನ್ನು ನನ್ನ ಪ್ರಯೋಜನಕ್ಕಾಗಿ ವಿನಿಯೋಗಿಸಿಕೊಂಡವನು ನಾನು. ಬ್ರಹ್ಮನಲ್ಲಿ ಕೇಳಿದ್ದೇನೆ..ಏನೂಂತ ಕೇಳಿದ್ದೇನೆ.? ಕತ್ತರಿಸಲ್ಪಟ್ಟ ತಲೆ ಚಿಗುರಬೇಕು. ತಥಾಸ್ತು ಅಂದಿದ್ದ.  ಆವಾಗ ನಗಾಡಿಕೊಂಡು ಹೇಳಿದೆ ಜೀವಗಳ್ಳನಾಗಿ ಕೇಳ್ತೇನೆ ಅಂತ ತಿಳಿಯಬೇಡ ಬ್ರಹ್ಮ ದೇವರೇ ಮರಣವನ್ನು  ಬಯಸ್ತೇನೆ. ಯಾರಿಂದ ಪರದೇಶದವರಿಂದ ಅಲ್ಲ. ಅದು ನನಗೆ ಅಪಮಾನ. ಆದುದರಿಂದ ದೇವತೆಗಳೋ ಯಕ್ಷರೋ ಗಂಧರ್ವರೋ ಅವರಿಗೆ ನನ್ನ ಕೂದಲು ಕೊಂಕಿಸುವ ಸಾಮಾರ್ಥ್ಯ ಇರಕೂಡದು. ಅವರನ್ನು ಎಲ್ಲಾ ನಾನು ಮರ್ದನ ಮಾಡಬೇಕು. ನಾನು ಮಣ್ಣಿನ ಮಗ. ಅಂದರೆ ಏನು? ಮೃತ್ಯು ಇದ್ದವ.ಮರ್ತ್ಯ. ಆದಕಾರಣ ಈ ಮರ್ತ್ಯ ಲೋಕದಲ್ಲಿ ನೂರಕ್ಕೆ ನೂರು ಮನುಷ್ಯನಾದವನ್ನು ಗೌರವಿಸುತ್ತೇನೆ. ತೊಂಭತೊಂಭತ್ತು ಆದರೆ ನನಗೆ ಲೆಕ್ಕವಿಲ್ಲ. ಆದ್ದರಿಂದ ಮಾನುಷಾಧನೈಹಿ ಅವಧ್ಯತ್ವಂ ಮಾನುಷಾತ್ ಅನ್ಯಹಿ ಅವಧ್ಯತ್ವಂ, ತಥಾಸ್ತು.  ಹಾಗಾದರೆ ಮರಣಕ್ಕೆ ಹೆದರಿದವನೋ ನಾನು. ಅಲ್ಲ, ಮರಣದಲ್ಲೂ ನನಗೊಂದು ಗೌರವ ಬೇಕು.  ಯಾರು? ನಾನು ಬದುಕಿದ ಊರಿನಲ್ಲಿ ಬದುಕಿ. ಈ ನೀರು , ಈ ಗಾಳಿ,  ಈ ಹಣ್ಣು,  ಈ ಅನ್ನ, ಇದರಿಂದ ಕೂಡಿದವ ಅವನಿಂದ ನಾನು ಸತ್ತೇನು, ಪರಕೀಯರಿಂದ ಒಂದು ಪೆಟ್ಟು ತಿಂದರೆ ಅವರ ಕುಟುಂಬಕ್ಕೆ ಹತ್ತು ಪೆಟ್ಟು ಕೊಟ್ಟಲ್ಲದೆ ನಾನು ವಿಶ್ರಮಿಸುವುದಿಲ್ಲ. ಅಂತಹ ಸ್ವಾಭಿಮಾನಿ. ಪಿತಾಮಹನಿಗೇ ಅಗ್ಗದ ಬಗ್ಗದ ಸಗ್ಗದ ಔರ್ಧತ್ಯವನ್ನು ಪ್ರಕಟಿಸಿದವನು. ಆಮೇಲೆ ಏನು? ಶಿವಶಕ್ತಿ....ಆಮೇಲೆ ಮತೀಯ ಭಾವನೆ ಅಂತ ಹೇಳಿಯಾರು..ಆದರೆ ಬೇರೆ ಯಾವದೇವರಿಗೆ ಉಂಟು? ಕೆಲವರು ಹೇಳ್ತಾರೆ ವಿಷ್ಣು ದೊಡ್ಡವ.. ಇರಬಹುದು ಆದರೆ ಅವನ ಮಗ? ಮುಖ ನೋಡಿದ್ರೆ ಸಜ್ಜಲ ಗಂಗಾಸ್ನಾನ ಮಾಡಬೇಕು. ಮತ್ತೆ ಲಕ್ಷ್ಮಿ ಭಾಗ್ಯದೇವತೆ...ಆದರೆ ಶಿವನನ್ನು ನೋಡು,  ಶಿವ ಅನುಗ್ರಹಕಾರಕ,  ಜಗದಂಬಿಕೆ ಪಾರ್ವತೀ ದೇವಿ ಸ್ವತಃ ಅನುಗ್ರಕಾರಕಳು. ಗಣಪತಿ ನಿರ್ವಿಘ್ನಕಾರಕ...ವೈದಿಕರು ಪಂಚಾಯತದ ಪೂಜೆ ಅಂತ ಮಾಡುವುದುಂಟು. ಸೂರ್ಯ ಗಣಪತ್ಯಂಬಿಕಾ ಶಿವ ವಿಷ್ಣುಭ್ಯೋ ನಮಃ. ನಮ್ಮ ಅಪ್ಪ ಹೇಳಿಕೊಟ್ಟ ಮಂತ್ರ ಅದು. ಇದರಲ್ಲಿ ಸೂರ್ಯ ಬಿಡು , ವಿಷ್ಣು ಬಿಡು ಮತ್ತೆ ಉಳಿದ ಮೂರು ಜನವೂ ಇರುವುದು ಒಂದೇ ಊರಿನಲ್ಲಿರುವುದು ಕೈಲಾಸದಲ್ಲಿ. ಇಂತಹ ಕೈಲಾಸವನ್ನು ನಾನು ಎತ್ತಿರುವುದು. ನನಗೊಂದು ಹಟಬಂತು ಲಂಕೇಶ್ವರೋವ ಲೋಕೆಶ್ವರೋವ..  ಎತ್ತಿದೆ, ಕೆಲವರು ಹೇಳ್ತಾರೆ ಕೈಲಾಸದ ಅಡಿಯಲ್ಲಿ ಬಿದ್ದ. ಬುದ್ಧಿ ಉಂಟೋ ಈ ಜನಕ್ಕೆ. ಹೊರುವವನು ಆಡಿಯಲ್ಲಿ ಅಲ್ಲದೇ ಮೇಲೆ ಇರುವುದಕ್ಕಾಗುತ್ತದೆಯೆ? ಮೇಲೆ ನಿಂತರೆ ಆಧರಿಸಿ ನಿಂತಹಾಗೆ ಆಗ್ತದೆ. ಕೈಲಾಸದ ಅಡಿಯಲ್ಲಿ ಹೌದು ಬಿದ್ದದ್ದೂ ಹೌದು ...ಅದಲ್ಲ ಯೋಚಿಸಬೇಕಾದದ್ದು. ಕೈಲಾಸದ ಅಡಿಯಲ್ಲಿ ಅಂದರೆ ಇಡೀ ಶರೀರ ಅದರ ಅಡಿಯಲ್ಲಿ ಅಂತ ಅರ್ಥ. ಒಂದು ಚೂರು ಚರ್ಮ ಹರಿದದ್ದಾಗಲೀ ಎಲುಬು ಹುಡಿಯಾದದ್ದಾಗಲೀ ಇದ್ರೆ ಮತ್ತೆ ಹೇಳು. ನೋಡುವ ನನ್ನ ಬದಲಿಗೆ ಬೇರೊಬ್ಬ ಮೂಲೆಯಲ್ಲಿ ಹೆಗಲು ಕೊಡಲಿ. ಅಂಥವನು ಇವನು. ಶರೀರವನ್ನು ಉಳಿಸಿಕೊಂಡವ. ಇಡೀ ಕೈಲಾಸದ ಭಾರ ಎಷ್ಟು ಅಂತ ನನಗೆ ಗೊತ್ತಾಗ್ಯದೆ. ಎಷ್ಟು? ನಾನು ಹೊರುವಷ್ಟು. ಕೈಲಾಸವನ್ನು ನನ್ನ ಎಲ್ಲಾ ಕೈಗಳಿಂದ ತೂಕ ಮಾಡಿದವನು. ಎಷ್ಟು ಭಾರ ಅಂತ ನನಗೆ ಗೊತ್ತಾಗ್ಯದೆ. ಆವಾಗ ಕೆಲವರು ಹೇಳ್ತಾರೆ ರಾವಣ ಕೂಗಿದ್ದ ಅಂತ. ಈ ವರದಿಗಾರರು ಕೈಲಾಸಕ್ಕೆ ಬಂದಿದ್ದಾರ? ಕೈಲಾಸಕ್ಕೆ ಹೋಗಿದ್ದರೆ  ಬರ್ತಾರಾ? ಹಾಗಾದರೆ, “ಕೈಲಾಸದಡಿಯಲ್ಲಿ ಕೂಗಿದ.” ಹಾಗೋ ಶಿವದೇವರು ನನಗೆ ಹೆಸರು ಕೊಟ್ಟದ್ದು ರಾವಣ ಅಂತ. ರೌತೀತಿ ರವಣಃ ಸ ಏವ ರಾವಣಾಃ ಅಂತ ವ್ಯಾಕರಣ ಸೂತ್ರಕ್ಕೆ ಅರ್ಥ ಮಾಡ್ಲಿಕ್ಕೆ ಹೊರಟರು. ಕೈಲಾಸದ ರಾವಣತ್ವಕ್ಕೆ ಅರ್ಥ ಎಂತದ್ದು ಗೊತ್ತೋ?  ರಾವಣೋ ಲೋಕ ರಾವಣಃ ಕೂಗುವವನು ರಾವಣ ಅಲ್ಲ. ಈ ಪ್ರತಿಯೊಂದಕ್ಕೂ ಅಳುವವರಾದರೆ  ಊರಿನಲ್ಲಿ ರಾವಣರೇ ಇರುವುದು. ಬೇರೆ ಯಾರು ಇಲ್ಲ ಅಂತ ಹೇಳ್ಬೇಕಾದೀತು.  ಹಾಗಾಗಿ ಲೋಕವನ್ನೆ ಗೋಳಾಡಿಸುವವ, ಇಷ್ಟು ಮಾತ್ರ ಅಲ್ಲ. ಆ ಕಾಲಕ್ಕೆ ಉತ್ಸಾಹದಿಂದ ಸಾಮಗಾನವನ್ನು ಹಾಡಿದವನು. ನೀನು ಆಲೋಚನೆ ಮಾಡು ಮೈಗೆ ಇಷ್ಟು ಭಾರಬಿದ್ರೆ ಶ್ರುತಿ ಭದ್ದವಾಗಿ ಹಾಡುವ ಒಬ್ಬ ಸಂಗೀತಗಾರ ಇದ್ದಾನೋ ಹೇಳು. ತಲೆ ಭಾರ ಆದ್ರೆ ಕೆಲಸ ಮಾಡೋದಿಲ್ಲ. ಹಾಗಾದ್ರೆ ಮೈಭಾರವಾಗಿದ್ದರೂ ಶಿವ ಮೆಚ್ಚುವಂತ ಸಾಮವೇದವನ್ನು ಹಾಡಿದವನು. ಅದಕ್ಕೆ ಮೆಚ್ಚಿದ ಶಿವ ಅವನು ನಟರಾಜ, ಸಂಗೀತ ಲೋಲ, ಆದರೆ ಅವನದ್ದು ಸಂಗೀತ ಸ್ವಲ್ಪ ಕೈಲಾಸದ ಮಣ್ಣಿನ ವಾಸನೆ ಉಳ್ಳದ್ದು. ಆದಕಾರಣ ಅದು ಶುದ್ದ ದೇವಗಾನ ಗಂಧರ್ವಗಾನವಲ್ಲ ಅದು. ಆದುದರಿಂದಲೇ ಶಿವನ ನಾಟ್ಯ. ಅದು ಲಲಿತವಾದಂತಹ ನರ್ತನ ಅಲ್ಲ. ಸ್ವಲ್ಪ ಲಾಸ್ಯ ಅದಕ್ಕೆ ವಾದ್ಯವೂ ಹಾಗೆ ಘನಗಂಭೀರವಾದದ್ದು. ದೇವಲೋಕದಲ್ಲಿ ಅಭಿನಯಿಸುವಂತಹುದಲ್ಲ. ಕೈಲಾಸದ ಬಟಾಬಯಲಿನಲ್ಲಿ. ಆ ಶಿವ ಪಾರ್ವತಿ ನಲಿಬೇಕು ಆ ನಂದಿ ಏಡಗೈಯಲ್ಲಿ ಮೃದಂಗ ಬಾರಿಸಬೇಕು. ನಂದಿಯ ಮೃದಂಗ, ಶಿವಗಣಗಳೆಲ್ಲ ವಿವಿಧ ವೇಶತೊಟ್ಟು ಕುಣೀತಾ ಇದ್ರೆ ಶಿವ ಪಾರ್ವತಿ ಮಧ್ಯದಲ್ಲಿ ನಲೀತಾ ಇದ್ರೆ ಒಂದೆರಡು ದಿವಸವಲ್ಲ ನೂರು ನೂರು ವರ್ಷ ಇದಕ್ಕೆ ಹಿನ್ನೆಲೆ ಸಂಗೀತವನ್ನು ಒದಗಿಸಿದವನು ರಾವಣ. ಅದಕ್ಕೆ ಮೆಚ್ಚಿ ಶಿವ, ಇಕೋ ತೆಕ್ಕೋ ಮಗನೇ ಚಂದ್ರ ಹಾಸವೆಂಬ ಖಡ್ಬ, ಎಂತಹ ಖಡ್ಗ ಅದು?  ಶಿವನ ಪಾಶುಪತ ಶಕ್ತಿ. ಇಂತಹ ನನಗೆ ಶಿವನು ಕೊಟ್ಟಿದ್ದಾನೆ ಎಂಬುದು ಪ್ರಪಂಚದಲ್ಲಿ  ಹೆಡ್ಡನೂ  ಕಂಡಂತಹ  ಸತ್ಯ. ಇಂತಹ ಶಕ್ತಿಯನ್ನು ಕೂಗಿ ತೆಕ್ಕೊಂಡು ಬಂದಿದ್ದಾನೆ..., ಹೌದೇನೆ ಯಾರಾದರೂ ಕೂಗುವ ಮಕ್ಕಳಿಗೆ ಕತ್ತಿ ಕೊಡ್ತಾರೋ? ಒಂದಿಷ್ಟು ಬಾಳೇಹಣ್ಣೋ ಹಾಲೋ ಕೊಟ್ಟು ಕಳುಹಿಸುದು. ಕೂಗಬೇಡ ಮಗನೆ ಅಂತ.   ಆವಾಗ ಶಿವ ಹೇಳಿರುವುದು ರಾವಣೋ ಲೋಕ ರಾವಣಃ. ಹೀಗೆ ಹರ ಪಿತಾಮಹ...ಆ ಮೇಲಿನ ಕಥೆ ಗೊತ್ತುಂಟಲ್ಲ..ದೇವೆಂದ್ರನನ್ನು ಹೊಡೆದು, ಮದ ಬಂದ ಐರಾವತ ಹಾಯಿಲಿಕ್ಕೆ ಬರುವಾಗ ಎದೆಯೊಡ್ಡಿ ನಿಂತು ನೋಡಿದ್ದಿಯಲ್ಲ ಎದೆಯ ಗಾಯ. ಐರಾವತ ಹಾದದ್ದು? ಸಣ್ಣ ಗಾಯ ಎದೆಭಾಗಕ್ಕೆ ಆದ್ರೆ ಮನುಷ್ಯ ಬದುಕುವುದಿಲ್ಲ ಇದು ಐರಾವತದ ಅ ಕ್ರೂರ ದಾಡೆಯ ಗಾಯವನ್ನು ಸಹಿಸಿಕೊಂಡೂ ಇವತ್ತಿಗೂ ಅದನ್ನು ಬಹುಮಾನದ ದ್ಯೋತಕವಾಗಿ ನಿನಗೆ ಮಾತ್ರ ಪ್ರದರ್ಶಿಸುವ ಈ ಗಂಡ ಎನೂ ರಾಮನ ಕಾಲು ಹಿಡಿದು ಬದುಕಬೇಕೆನೆ? ನನ್ನ ಮಕ್ಕಳ ತಾಯಿ ನೀನು ಹೇಳಿಬಿಟ್ಟೆಯಲ್ಲ?. ಅದಾಗದು ಅದಾಗದು ನೀನು ಹೋಗು. ಸತ್ರೆ ಸತ್ತೇನು ಬದುಕಿದ್ರೆ ಬದುಕಿಯೇನು. ಓ  ನನ್ನ ಹೃದಯೇಶ್ವರಿ, ನನ್ನ ಎಲ್ಲ ಕಾರ್ಯಗಳಿಗೆ ಸೂಕ್ತ ಚಿಶ್ಯಕ್ತಿಯಾಗಿ ಪ್ರವರ್ತಿಸಿದ  ನನ್ನ ಹೃದಯೇಶ್ವರೀ ನಿನಗೇನು ಬೇಕು ಕೇಳು.”

ರಾವಣನಿಗೆ ಒಂದೆರಡು ಹಿತವಚನಗಳನ್ನು ಆಡಿ ರಾಮನಲ್ಲಿ ಶರಣಾಗತಿಯನ್ನು ಕಾಣುವಂತೆ ಹೇಳಲು ಬಂದ ಮಂಡೋದರಿಯ ಯಾವ ಮಾತಿಗೂ ರಾವಣ ಆಸ್ಪದ ಕೊಡುವುದಿಲ್ಲ. ರಾಮನಲ್ಲಿ ಶರಣಾಗತಿ ಅದೊಂದನ್ನು ಬಿಟ್ಟು ನಿನಗೇನು ಬೇಕು ಎಂದು ಕೇಳುತ್ತಾನೆ. ಇಷ್ಟೆಲ್ಲಾ ನಾಶವವಾದರೂ ರಾಮನಲ್ಲಿ ಶರಣಾಗದ ರಾವಣನ ಛಲ ಕಂಡು ಮಂಡೋದರಿ ಅಧೀರಳಾಗಿ ಬಿಡುತ್ತಾಳೆ. ಬೇಡಿಕೊಳ್ಳುತ್ತಾಳೆ.
“ಅಳಲಿದಳು ಬೇಡಕಟಾ, ರಾಮನೊಳು ಅಳವಿಗಿದಿರಾಗದಿರು....”
“ಸ್ವಾಮಿ, ತಮ್ಮ ನಿರ್ಧಾರವೇ ತಮಗೆ ಮಾನ್ಯ. ಆದರೆ ಆ ನಿರ್ಧಾರ ಕೇಳಿದಾಗ ನನಗೆ ಸಂಕಟವಾಗುತ್ತಿದೆ. ಸೀತೆಯನ್ನು ಹಿಂದೆ ಕೊಡುವುದು ಬರೇ ಪೇತುಗ ಎಂಬ ಅಪವಾದಕ್ಕೆ ಕಾರಣವಾಗುತ್ತದೆ ಎಂಬ ದೃಷ್ಟಿಯಿಂದ ತಮ್ಮ ಛಲವನ್ನು ಮೆರೆಸುವ ತಾವು ಅದರಿಂದ ಆಗುವ ಅಪಖ್ಯಾತಿಯನ್ನು ಕೇಳುವಾಗ ನನ ಮನಸ್ಸು ಕೊರೆಯುತ್ತ ಇದೆ.”

“ ಅಪಖ್ಯಾತಿ..ಏನೂ ಇಲ್ಲ ಮಂಡೋದರೀ ಇನ್ನೂ ಬಿಡಿಸಿ ಹೇಳ್ತೇನೆ. ನನ್ನ ಮಗನಾದ ಇಂದ್ರಜಿತುವಿನ ಆತ್ಮಕ್ಕೆ ನಾನು ಅಷ್ಟೂ ಮೌಲ್ಯವನ್ನು ಕೊಡಲಿಲ್ಲ ಎಂದು ಬಂದೀತು. ಅದಕ್ಕೆ ಆಗ ಹೇಳಿದ್ದು. ಸುತನಿಂದ್ರಜಿತುವ ಕೊಂದು ಕಳೆದುದಕ್ಕೆ .....ಆ ಇಂದ್ರಜಿತುವಿನ ಅನಿಸಿಕೆ ಇತ್ತು. ತಂದೆಯವರೇ ಸೀತೆಯನ್ನು ತಂದದ್ದು ಸಣ್ಣ ಕೆಲಸವಾಯಿತು. ನನ್ನ ಇಂದ್ರಜಿತು ಹೇಳಿದ್ದು “ ತಂದೆ ಕೇಳ್ ಪರಸತಿಯನು ವಂಚಿಸಿ ತಂದುದು ಅನ್ಯಾಯ....” ಆದರೆ ಮತ್ತೊಂದು ಮಾತು ಹೇಳಿದ್ದಾನೆ ಅವನು..” ಮುಂದಿನ್ನು ಬೆದರುತ್ತ ಕೊಟ್ಟೆವಾದರೆ..”  ಹೌದು ಅಂತ ಒಪ್ಪಿದ್ದೇನೆ. ಈಗ ಅವನು ಅಳಿದು ಹೋಗಿದ್ದಾನೆ. ಅವನು ಸತ್ತ ಮೇಲೆ ಸೀತೆಯನ್ನು ನಾನು ಹಿಂದೆ ಕೊಟ್ಟೇನಾದರೆ ನನ್ನ ಮಗನ ಪ್ರಾಣಕ್ಕೆ ಏನು ಬೆಲೆಕೊಟ್ಟ ಹಾಗೆ ಆಗ್ತದೆ”

“ಸ್ವಾಮೀ ಆಗಲಿ, ಅವನ ಮಾತಿಗೆ ಬೆಲೆಕೊಡದಂತಾಗ್ತದೆ. ಆದರೆ ನನ್ನದೊಂದು ಮಾತಿದೆ ಆ ಬಗ್ಗೆ. ಈ ಸೀತೆಯನ್ನು ತಂದುದು ಸರಿಯಾದ ದಾರಿಯಲ್ಲ ಅಂತ ನಿಮಗು ಗೊತ್ತಿದೆ, ಇಂದ್ರಜಿತುವಿಗೂ ತಿಳಿದೆ. ಎಲ್ಲರೂ ಇದನ್ನು ತಿಳಿದಿದ್ದಾರೆ. ಆದ್ದರಿಂದ. ಪಂಥಕ್ಕಾಗಿ ರಾಮನಲ್ಲಿ ಯುದ್ದ ಮುಂದುವರೆಸೋಣ ಆದರೆ ಈ ಸೀತೆಯನ್ನು ಇಟ್ಟುಕೊಂಡು ಬೇಡ. ಸೀತೆಯನ್ನು ಒಪ್ಪಿಸಿ ಬೇಕಾದರೆ ಯುದ್ದ ಮಾಡೋಣ ಒಳ್ಳೆಯ ಕಾರ್ಯ ಯುದ್ದ ನಮ್ಮ ಛಲ..”

“ಹೌದೇ.. ಇದೆಲ್ಲ ಯುಕ್ತಿವಾದಗಳೆಲ್ಲ ತುಂಬ ಹೇಳಿದ್ದಾರೆ ಅತಿಕಾಯಾದಿಗಳೆಲ್ಲ. ಸೀತೆಯನ್ನು ರಘುವರನಿಗಿತ್ತು, ಅನುಜಾತನಾದ ವಿಭೀಷಣನ ಕೂಡಿಕೊಂಡು, ಮತ್ತೆ ಬೇಕಾದರೆ ಯುದ್ದ ಮಾಡುವ.”
“ ಸೀತೆಯನ್ನು ರಾಮನಿಗೆ ಕೊಟ್ಟು, ಹೇಳುದು,   ಅಲ್ಲಾ..ನಾನು ಸೀತೆಯನ್ನು ಬೇಕಾಗಿತಂದದ್ದಲ್ಲ, ನನ್ನ ಜಾಗಕ್ಕೆ ಬರಿಸಲಿಕ್ಕೆ ಬೇಕಾಗಿ ಮಾಡಿದ್ದು. ಅಲ್ವೋ?  ಅಲ್ವೋ.. ಈಗ ಸೀತೆಯನ್ನು ತಂದಲ್ಲಿ ಕೂತುಕೊಳ್ಳಿಸಿ ಆಗ್ಯದಲ್ಲ? ಹನುಮಂತನ ಪ್ರಕರಣ ಹೇಳಿದ್ದೇನಲ್ಲ. ಅವಳಲ್ಲಿ ಕುಳಿತಲ್ಲಿಂದ ಏಳುದಿಲ್ವಲ್ಲ? ಅವಳಿಗೆ ಏನೋ ಒಂದು ಹಟ ಉಂಟಂತೆ ಅಲ್ವ?  ಈಗ ಕೂತ ಸೀತೆಯನ್ನು ಅಲ್ಲಿಂದ ಎಬ್ಬಿಸಿ ನಡೆಸಿಕೊಂಡು ರಾಮನ ಬಳಿಗೆ ಹೋಗುವ ಜನಯಾರು?”
“ಸ್ವಾಮೀ..ನೀವಾಗಿ ದೈನ್ಯತೆಯಿಂದ ತಾನು ಆಕೆಯನ್ನು ತಂದದ್ದು ಮಾಡಿದ್ದು ತಪ್ಪು ಅಂತ ಕಂಡ್ರೆ ಅವಳು ಯಾಕೆ ಏಳುವುದಿಲ್ಲ? ತಂದವರೇ ಪುನಃ ಕೊಡ್ತಾರೆ ಅಂತ ಆದಾಗ ಬಂದಾಳು”

“ಹಾಗಾದರೆ ನಾನು ಮಾಡಬೇಕಾದ ನಮಸ್ಕಾರ ಒಂದು ಕೂಡಿಸಿದಿ ನೀನು. ಮೊದಲು ಇಲ್ಲಿ ಸೀತೆಗೆ ನಮಸ್ಕಾರ  ಮಾಡುದು ಮಹಾತಾಯಿ ಇವಳಿಗೆ ನಮಸ್ಕಾರ ಮಾಡಿ ಇವಳನ್ನು ಕರೆದುಕೊಂಡು...ರಾಮಾ ನಿನಗೊಂದು ನಮಸ್ಕಾರ. ತಪ್ಪು ಮಾಡಿಯೇನು ಆದ್ರೆ ಒಪ್ಪಿಕೊಳ್ಳಿಕ್ಕಿಲ್ಲ.  ಪ್ರವಾಹಕ್ಕೆ ಇದಿರಾಗಿಯೇ ನಾನು ಈಜಿದ್ದು. ನಾನು ಅದಲ್ವೋ ಹೇಳಿದ್ದು. ನನ್ನ ಅಪ್ಪನದ್ದು ಪರಂಪರಾಗತವಾಗಿ ಬಂದ ಸಿಂಹಾಸನವಲ್ಲ ಇದು. ನನ್ನ ಬದುಕೇ ಪ್ರವಾಹಕ್ಕೆ ಇದಿರಾಗಿ ಈಜುದು. ರಾವಣನ ಜೀವನವೇ ಹಾಗೆ. ಅನ್ನ ತಿಂದ್ರೆ ಬದುಕ್ತಾರೆ ಅಂತ ನನಗೆ ಗೊತ್ತುಂಟೇ. ಶಿವನಲ್ಲಿಗೆ ನಾನು ಹೋದದ್ದು ಹೀಗೆ ಮಾಡಿಯೋ? ಸ್ವರ್ಗ ಲೋಕಕ್ಕೆ ಹೋದದ್ದು ಹಾಗೋ? ಈವರೆಗೂ ನಾನು ಅಭ್ಯಾಸ ಮಾಡಿದ್ದು ವಿಷ ತಿಂದೆ. ಬದುಕಿದ್ದೇ ವಿಷ ತಿಂದು. ಬಹುಶಃ ನನ್ನ ರೋಗಕ್ಕೆ ಅದೇ ಮದ್ದೋ ಎನೋ ಏನೋ? ನೀನು ಸುಮ್ಮನೇ ರಗಳೆ ಮಾಡ್ಬೇಡ ಮಾತಾಡಿಸ್ಬೇಡ. ಹೋಗು..ಹೋಗು.”
ಮಂಡೋದರಿಯ ಯಾವ ಮಾತಿಗೂ ರಾವಣ ಜಗ್ಗುವುದಿಲ್ಲ.ವಾದಕ್ಕೆ ಪ್ರತಿವಾದ. ಎಲ್ಲ ತಿಳಿದಿದ್ದೂ ರಾವಣ ಯಾಕೆ ಇಷ್ಟು ನಿಷ್ಠೂರನಾಗುತ್ತಾನೆ? ವಾದ ಮುಗಿಯಿತು. ಇನ್ನು ಜಿಜ್ಞಾಸೆ ಎನೂ ಉಳಿದಿಲ್ಲ ಎನ್ನುವಾಗ ಮಂಡೋದರಿ ಅತಿಮುಖ್ಯವಾದ ಪ್ರಶ್ನೆಯನ್ನು ಸರಳವಾಗಿ ಕೇಳಿಬಿಡುತ್ತಾಳೆ.
“ಸ್ವಾಮೀ ನನ್ನದೊಂದು ಕೊನೆಯ ಪ್ರಾರ್ಥನೆ ಉಂಟು.”
“ಏನು ಅದು ಹೇಳು? ಅದು ಹೇಳು,ನಾನು ಅದು ಹೇಳಿದ್ದು,  ದಶರಥ ಮಾತ್ರ ಕೊಡ್ಲಿಕ್ಕೆ ಕಲ್ತದ್ದು ಆಲ್ಲ.”
 ಬರೆದಿಟ್ಟ ಸಂವಾದಂತೆ. ಆ ಸಂವಾದವನ್ನು ಒಂದು ಹಂತಕ್ಕೆ ಮುಕ್ತಾಯಗೊಳಿಸಬೇಕಲ್ಲ? ತಾಳಮದ್ದಲೆ ಕಾವ್ಯಮಯ ಸಂವಾದ, ಅದು ಸಾಹಿತ್ಯಮಯವೂ ಆಗಿಬಿಡುತ್ತದೆ.
“ ಸ್ವಾಮೀ ನನ್ನ ಮಾಂಗಲ್ಯ ಭಾಗ್ಯಕ್ಕಾಗಿ ನೀವು ಹೋರಾಟ ನಡೆಸುವುದು ಅಲ್ಲ. ಯಾಕೆ? ನೀವು ಹೋದ್ರೆ ನನಗೆ ಅದೇ ದೊಡ್ಡ ಮೋಕ್ಷ ಅಂತ ತಾವು ಅನ್ನುತ್ತಾ ಇದ್ದೀರಿ. ನೀವಿದ್ದರೆ ಅಲ್ವೇ ನನಗೆ ನೀವಿದ್ರೆ ಅದೇ ನನಗೆ ದೊಡ್ಡದು ಅಂತ. ನಿಮ್ಮ ಹಟಕ್ಕಾಗಿ ನೀವು ಪ್ರಾಣ ತ್ಯಾಗ ಮಾಡಿದಾಗ  ಪತಿಯೇ ಪರದೈವ ಅಂತ ಭಾವಿಸಿದ ನನಗೂ ಅದೇ  ಮೋಕ್ಷ ಅಂತ ಅಲ್ವೇ ತಮ್ಮ ಅಂಬೋಣ”
“ನೀನೀಗ ಇದನ್ನು ಎಲ್ಲಿಗೆ ತಿರುಗಿಸುತ್ತಿ?”
“ಯಾಕಂದ್ರೆ ನಾನು ಹೇಳುವುದು. ಈಗ ಅ ಮಾರ್ಗ  ನಮಗೆ ಆಗುವುದಿಲ್ಲ ಅಂತಾದ್ರೆ, ಇನ್ನೊಂದು ಮಾರ್ಗದಲ್ಲಿ ನೋಡೋಣ,”
“ಯಾವ ಮಾರ್ಗ?”
“ಈಗ ಸೀತೆಯನ್ನು ಎಬ್ಬಿಸುವುದಕ್ಕೆ ನಮಗೆ ಸಾಧ್ಯ ಆಗುವುದಿಲ್ಲ ಅಂತ ಇಟ್ಟುಕೊಳ್ಳೋಣ.  ಏನೂ ಆಗ್ಲಿ. ಗಂಡ ಸೀತೆಯನ್ನು ತಂದಾಗಿದೆ. ಆಗ್ಲಿ ಆ ಸೀತೆ ಕೆಡ್ತಾಳೋ ಅಂತ ನೋಡೋಣ. ನೀವು ಆಕೆಯ ಬಳಿಗೆ ರಾಮನಾಗಿ ಒಮ್ಮೆ ಹೋಗ್ತೀರಾ ಅಲ್ಲಿಗೆ. ಅಲ್ಲಾದ್ರೂ ನನ್ನ ಪತಿಯ ದೊಡ್ಡಸ್ತಿಕೆ ಪ್ರದರ್ಶನ ಆದ್ರೆ ಮತ್ತೆ ರಾಮ ಎಂತದ್ದು? ನಮ್ಮ ಗಂಡನೂ ರಾಮ ಆಗ್ತಾರೆ. ಸೀತೆ ಅವ್ರಿಗೆ ಒಲೀತಾಳೆ ಅಂತಾದ್ರೆ ಮತ್ತೆ ನಮಗೇನು? ಆ ರಾಮನಿಗಿಂತ ನಮ್ಮ ಈ ರಾವಣ ದೊಡ್ಡವ ಅಂತ ನನ್ನ ಮನಸ್ಸಿಗೆ ಆಯ್ತಲ್ಲ? ಆಗಲಾದರೂ ಈ ಮಂಡೋದರಿ ಸೌಭಾಗ್ಯ ಸಂಪನ್ನೆಯಾಗ್ತಾಳೆ. ಆದೀತೋ?”
“ರಾಮ ಆದ್ರೆ ಆದೀತು”  ರಾವಣನ ಧ್ವನಿ ಕ್ಷ್ಟೀಣಿಸುತ್ತದೆ. ಮರ್ಮ ಸ್ಪರ್ಶವನ್ನು ಮಾಡುವ ಪ್ರಶ್ನೆಯನ್ನು ಕೇಳಿದಾಗ ಮತ್ತೇನು ಆದೀತು? “ ರಾಮ ಅದ್ರೆ ಆದೀತು...”   “ ಆದ್ರೆ” ಎಂಬುದು ಎಷ್ಟೋಂದು ಅರ್ಥಗಳನ್ನು ಸೂಚಿಸುತ್ತದೆ. ಸಂಭಾಷನೆ ಬೆಳೆಸುವುದು ದೊಡ್ಡದಲ್ಲ. ಅದಕ್ಕೆ ಪೂರ್ಣ ಸ್ಪರ್ಶವನ್ನು ನೀಡಬೇಕಲ್ಲ. ಅದಕ್ಕೆ ಎತ್ತುಗಡೆ ನಿಲುಗಡೆ ಬಹಳ ಪ್ರಾಮುಖ್ಯವನ್ನು ಪಡೆಯುತ್ತದೆ. ಮುಂದಿನ ಪದ ಎತ್ತುಗಡೆಯಾಗಬೇಕಾದರೆ ಸಂಭಾಷಣೆಗೆ ಸುಂದರ ರೂಪದ ನಿಲುಗಡೆಯೂ ಆಗಬೇಕಲ್ಲ. ಪಲ್ಲವಿ ಇಲ್ಲವಾದರೆ ಚರಣಕ್ಕೆ ಬೆಲೆ ಏನಿದೆ? ಚರಣ ಇಲ್ಲವಾದರೆ ಪಲ್ಲವಿಗೆ ಅರ್ಥವೇನಿದೆ? ಎಲ್ಲವೂ ಅಪೂರ್ಣ.
ರಾವಣ ನಿರ್ಧಾರಕ್ಕೆ ಬಂದವನಂತೆ ತನ್ನ ಅಂತರಗ ದರ್ಶನದ ಪ್ರಕಾಶಕ್ಕೆ ತೆರೆದುಕೊಳ್ಳುವ ಹಂತಕ್ಕೆ ಬರುತ್ತಾನೆ. ಬಿಟ್ಟ ನಿಟ್ಟುಸಿರನ್ನು ಸಾಕ್ಷಿಯಾಗಿಸಿ ರಾವಣ ಭಾರವಾದ ಸ್ವರದಿಂದ ,
“  ಆದರೆ ಮಂಡೋದರೀ, ನಾನು ರಾಮನಾದರೂ,   ನಿನ್ನ ಮಾಂಗಲ್ಯ ಉಳಿಯುವುದಿಲ್ಲ.”
 ಮಂಡೋದರಿ ತವಕಿಸಿ ಕೇಳುತ್ತಾಳೆ “ಯಾಕೆ ಅದು?’
“ ಮಂಡೋದರಿ ನಾನು ರಾಮನಾದರೂ ನಿನ್ನ ಮಾಂಗಲ್ಯ ಉಳಿಯುವುದಿಲ್ಲ, ನಾನು ರಾವಣನಾಗಿ ನಿನ್ನ ಮಾಂಗಲ್ಯ ಉಳಿಸುವುದಕ್ಕೆ ಸಾಧ್ಯವೂ ಅಗುವುದಿಲ್ಲ.”
“ ಅದು ಏನೋ ಹೃದಯದಲ್ಲಿ ಬೇರೆಯೇ ಇರಬೇಕು.”
“ಏನು ಮಾಡೋದು ನಿನ್ನ ಔದಾರ್ಯದ ಉರುಳಲ್ಲಿ ನಾನು ಸಿಕ್ಕಿದ್ದೇನೆ ಅಂತ ಅವಾಗ ಒಪ್ಪಿದ್ದೇನೆ. ಮಂಡೋದರೀ...”
“ಸ್ವಾಮೀ..”
“ ಈ ಪ್ರಶ್ನೆ ನೀನು ಮೊದಲು ಕೇಳ್ತಿದ್ರೆ..ಬಹುಶಃ ಈ ಕಥೆಯೇ ಇಷ್ಟುದ್ದ ಆಗ್ತಿರಲಿಲ್ಲ. ಅದಕ್ಕೇ ನಾನು ಹೇಳಿರೋದು. ಕಾರ್ಯವನ್ನು ನೋಡುತ್ತಿ. ಕಾರಣವನ್ನು ನೀನೇ ತರ್ಕಿಸಿಕೊಳ್ಳುತ್ತೀ, ಅದಕ್ಕೆ ನಿವಾರಣೋಪಾಯವನ್ನು ನೀನೇ ಉಪದೇಶಮಾಡುತ್ತಿ.”   (ಶೇಣಿಯವರು ಆರಂಭದಲ್ಲಿ ಹೇಳಿದ ಮಾತು ಈಗ ನೆನಪಾಗುತ್ತದೆ. ಒಂದು ಅರ್ಥಗಾರಿಕೆಯ ಅಡಿಗಲ್ಲು ಅಂದರೆ ಇದುವೇ.ಆ ಅಡಿಗಲ್ಲಿನ ಮೇಲೆ ನಿಂತು ಅವಲೋಕಿಸುವ ದೃಷ್ಟಿ ಬೆಳೆಸಿದರೆ ಯಕ್ಷಗಾನದ ಅರ್ಥಗಾರಿಕೆಯ ಗಂಭೀರತೆ ಅರಿವಾಗುತ್ತದೆ.) “ಈವರೆಗೆ ಎಲ್ಲವರೂ ಮಾಡಿದ್ದು ಅಷ್ಟೇ..ಎಷ್ಟು?  ಅವರವರಿಗೆ ಎಣಿಸಿದ್ದನ್ನು ಇದಕ್ಕೆ ಬೆರಕೆ ಹಾಕಿ, ಕಾಮುಕನಾಗಿ ಸೀತೆಯನ್ನು ತಂದು ಈಗ ತಲೆಗೆ ಕೈ ಇಟ್ಟು ಕೂತಿದ್ದಾನೆ. “
“ ಹಾಗೇ ಕಾಣ್ತದೆ. ತಾವು ಮನಸ್ಸು ಬಿಚ್ಚಿ ಹೇಳಿರುತ್ತಿದ್ದರೆ?”
“ನಾನು ಅದಲ್ಲ ಹೇಳುವುದು. ಮಾಯಾ ಮೃಗವನ್ನು ಮಾಡಿದಿಯಲ್ಲ? ಮಾಯಾಸೀತೆಯನ್ನು ಮಾಡಿದಿಯಲ್ಲ? ಮಾಯಾ ರಾಮ ಲಕ್ಷ್ಮಣರ ತಲೆಯನ್ನು ಮಾಡಿದಿಯಲ್ಲಾ? ಹೀಗೆಲ್ಲ ಮಾಡುವುದರ ಬದಲು, ಸನ್ಯಾಸಿ ವೇಷವನ್ನು ಹಾಕಿ ಹೋಗುವುದರ ಬದಲಿಗೆ, ರಾಮನೇ ಆಗಿ ಹೋಗ್ಲಿಲ್ಲ ಯಾಕೆ ಅಂತ ಒಬ್ಬ ಬುದ್ಧಿವಂತ ಲಂಕೆಯಲ್ಲಿ ಪ್ರಶ್ನೆ ಮಾಡುತ್ತಿದ್ದರೆ..? ಆ ಹೊತ್ತಿಗೆ ರಾವಣನ ಮಾತು ನಿಲ್ಲುತ್ತಿತ್ತು. ಭಹಳ ತಡವಾಗಿ ದೇವರೇ ನಿನ್ನ ಬಾಯಿಯಿಂದ ಕೇಳಿಸಿದ ಹಾಗೆ ಕೇಳಿಸಿದ. ರಾಮನಾಗುವುದಕ್ಕೆ ಸಾಧ್ಯ ಇಲ್ಲದೆಯೇ ನಾನು ರಾವಣನಾದದ್ದು.ಆದರೆ  ರಾವಣನಾದದ್ದು ಯಾಕೆ? ಇದು ರಾಮನಾಗಲಿಕ್ಕೇ ತಯಾರಿ ನೋಡು. ಓ ಮಯ ತನುಜೇ...”
“ಲಾಲಿಸು ಮಯ ತನುಜೆ ಮಚ್ಚರಿತವ ಲಾಲಿಸು............................”
“ ಓ ಮಯ ಸುತೇ ಮಂಡೋದರೀ, ಹೇಳಲೇ ಬೇಕಾಯಿತು. ಆದರೆ ಇದೂ ಒಂದು ನಿನ್ನ ನನ್ನ ಸೌಭಾಗ್ಯವೇ. ಬಹಳಷ್ಟು ತಪಸ್ಸು ಮಾಡಿದವ ನಾನು. ಯೋಗಾಭ್ಯಾಸ ಮಾಡಿದವ ನಾನು, ಯೋಗ ಶರೀರವನ್ನೂ ಧರಿಸಿಕೊಂಡವನು ನಾನು ಕೆಲವು ಸಲ. ಕೇವಲ ರಾಕ್ಷಸನಾಗಿ ಅಣಿಮಾದಿ ಸಿದ್ಧಿಯಿಂದಲೇ ನನ್ನ ವ್ಯವಹಾರ ನಡೆದದ್ದಲ್ಲ. ಕೇವಲ ಅಣಿಮಾದಿ ಅಷ್ಟ ಸಿದ್ಧಿ ಇದ್ದವನಿಗೆ ಇಚ್ಚಾ ಮಾತ್ರದಿಂದ ಸತ್ಯಲೋಕಕ್ಕೆ ಹೋಗಿ ಬರುವುದಕ್ಕೆ ಸಾಧ್ಯವಿಲ್ಲ. ಬರೇ ಅಣಿಮಾದಿ ಅಷ್ಟ ಸಿದ್ಧಿಯ ಇಂದ್ರಜಾಲದಿಂದ ಕೈಲಾಸಗಮನ ಸಾಧ್ಯವೇ ಇಲ್ಲ. ಇದು ಎಲ್ಲವೂ ಇವನಿಗೆ ಸಾಧಿಸಿವೆ ಎಂದಾದರೆ, ಸಣ್ಣ ಪ್ರಾಯದಿಂದ ನನ್ನ ತಂದೆಯಿಂದ ಉಪವಿಷ್ಠನಾದಂಥವ ನಾನು, ಈ ಋಷಿಪರಂಪರೆಯಿಂದ ಬಂದಂತಹ ಸಂಸ್ಕಾರ ಉಂಟಲ್ಲ ಪಿತೃತ್ವದ್ದು, ಇದನ್ನು ಹಟದಿಂದ ಸಾಧಿಸಿದೆ ಬಹುಕಾಲ. ಈ ಹೊತ್ತು ನಿನಗೆ ಗೊತ್ತುಂಟು ಚತುರ್ವೇದ ಸ್ವರ ಸಹಿತವಾಗಿ ಹೇಳುವುದಿದ್ದರೆ, ನಮ್ಮ ಜಾತಿಯಲ್ಲಿ ನಾನು ಒಬ್ಬನೇ. ಇಷ್ಟು ಮಾತ್ರವೋ?  ವೇದ, ವೇದಾಂಗ ಪಾರಂಗತ ಯಾರು? ಲಂಕೆಯಲ್ಲಿ? ರಾವಣೇಶ್ವರ. ಜ್ಯೋತಿಶ್ಯಾಸ್ತ್ರದಲ್ಲಿ ನಿರ್ಣಾಯಕವಾದಂತಹ ತೀರ್ಮಾನ ಕೊಡುವವನು ಯಾರು? ನನ್ನ ಯೋಗ ಸಿದ್ಧಿಯಿಂದ ನವಗ್ರರನ್ನೂ ಕೂಡ ಕೆಲವೊಮ್ಮೆ ಏಕ ರಾಶಿಯಲ್ಲಿ ನಿಲ್ಲಿಸಿದವನು ನಾನು “
“ಇಂದ್ರಜಿತುವು ಹುಟ್ಟುವ ಕಾಲಕ್ಕೆ  ತಾವೇ ಪ್ರಯತ್ನ ಪಟ್ಟವರು.”

“ ಇಷ್ಟೆಲ್ಲ ಉಂಟೇ..ಇದು ನನ್ನ ಸಂಗ್ರಹ. ಇದು ನನ್ನ ಸಿದ್ಧಿ. ಮಂಡೋದರೀ,” ರಾವಣ ಸೀತೆಯನ್ನು ಯಾಕೆ ಬಯಸುತ್ತಾನೆ? ಯಾವ ರೀತಿಯಲ್ಲಿ ಬಯಸುತ್ತಾನೆ ಎನ್ನುವುದಕ್ಕೆ ಪ್ರತಿಪಾದನೆ ಮುಂದೆ ನೋಡಬಹುದು. ಕೇವಲ ಕಾಮಕನಾಗಿ ಅಲ್ಲ. ಅದರ ಗೂಢ ವಿಚಾರ ಬೇರೆಯೇ ಇದೆ. ಅದಕ್ಕೆ ತಕ್ಕುದಾದ ಪುರಾವೆಯನ್ನು ನೀಡುತ್ತಾನೆ. 
“ನಿನಗೆ ಗೊತ್ತುಂಟು ಊರವರು ಹೇಳಲಿ ..ರಾವಣ ಕಾಮುಕ ದುರಹಂಕಾರಿ. ಆವತ್ತು ರಾತ್ರಿ ಮಂಗ ಬಂದಿದ್ದ ಅಲ್ವ ಇಲ್ಲಿಗೆ.” 
 “ಹೌದು ಬಂದದ್ದು ಮಾತ್ರವಲ್ಲ ಎಲ್ಲಾ ಸುತ್ತಾಡಿದ್ದ”
“ಸುತ್ತಾಡಿದ್ದು ಅಲ್ಲ. ಅವನು ಅಲ್ಲಿ ಹೋಗಿ ಒಂದು ಮಾತು ಹೇಳಿದ್ದ. “ರಾಮಚಂದ್ರ ನನಗೆ ಅವನ ಬಗ್ಗೆ ಬಹಳ ಅನುಮಾನ. ಜನ ನಾವು ತಿಳ್ಕೊಂಡ ಹಾಗೆ ಅಲ್ವೋ ಅಂತ.”   ಹಾಗಾದ್ರೆ  ಏನಾಗಿತ್ತು? ಬೆಳಗ್ಗೆ ನಮಗೆ ಗೊತ್ತಾಯಿತು. ಮಂಗ ನಮ್ಮ ಕೋಣೆಗೂ ಬಂದು ಹೋಗಿದ್ದಾನೆ ಅಂತ. ಆವಾಗ ನೀನು ನಾಚಿಕೆ ಪಟ್ಟಿ. ಅವನು ಕಂಡಿದ್ದಾನೆ ದೃಶ್ಯ ಏನನ್ನು? ಹೇಳಿದನಂತೆ ರಾಮನ ಹತ್ರ “ನಾನೂ ಅಷ್ಟೇ ಅಂತಃ ಪುರಕ್ಕೆ ಹೋಗಿದ್ದೆ. ಒಂದು ನಿಮಿಷಭ್ರಮಿಸಿದ್ದೆ. ಸೀತಾದೇವಿಯೇ ಅಂತ ಪಕ್ಕದಲ್ಲಿ.  ಆದರೆ ರಾವಣ, ಎಂತಹಾ ಎದೆ ಅವನದ್ದು? ಎಂತಹ ಮೈಬಣ್ಣ? ಕೆಂಪು ಬಟ್ಟೆಯನ್ನು ಉಟ್ಟಿದ್ದ. ನೀಲ ಬಣ್ಣದ ಮೈಗೆ ವಿಭೂತಿಯನ್ನು ಲೇಪಿಸಿದ್ದ. ರಾಮಚಂದ್ರ...ಒತ್ತಿನಲ್ಲಿ ಹೆಂಡತಿಯನ್ನು ಮಲಗಿಸಿಕೊಂಡಿದ್ದ. ಒಂದು ವಿಶೇಷ ಕಂಡೆ ನಾನು. ಮೈಗೆ ಲೇಪಿಸಲ್ಪಟ್ಟ ವಿಭೂತಿಯ ಒಂದೇ ಒಂದು ಅಸ್ತವ್ಯಸ್ತತನ  ಅವನ ಮೈಯಲ್ಲಿ ಇರಲಿಲ್ಲ. ಅರ್ಥ  ನೀನು ಮಾಡಿಕೊ.” ಬ್ರಹ್ಮ ಚಾರಿಯಾದವನು ಹೇಳಿದ ಮಾತು ಇದು. ಯಾಕೆ ವಿಭೂತಿ ಪಟ್ಟೇ ಹೋಗ್ಲಿಲ್ಲ? ನಿನಗೆ ಗೊತ್ತುಂಟೋ? ಅಸಿಧಾರ ವೃತ. ಧರ್ಮ ಪತ್ನಿಯಾದ ಮಂಡೋದರಿಯಲ್ಲಿ ತಿಥಿ, ವಾರ ನಕ್ಷತ್ರ ಯೋಗ ಕರಣ ಇದು ಎಲ್ಲವನ್ನೂ  ನೋಡಿಕೊಂಡು, ಕೇವಲ ಗರ್ಭಾದಾನ ಸಂಸ್ಕಾರಕ್ಕೆ ಕಟ್ಟುಬಿದ್ದವ. ಹೌದಲ್ಲ? ಊರು ಬಿಟ್ಟಾವಾಗ ಈ ಅಚಾರ ಸಂಪೂರ್ಣ ಬಿಟ್ಟವ. ಯಾಕೆ? ಅದು ನನ್ನ ಶಾರೀರಿಕವಾದಂತಹ ವಿಲಾಸ. ನನಗೆ ಆ ಹೆಂಗಸಿನ ಹೊಟ್ಟೆಯಲ್ಲಿ ಹುಟ್ಟಿದವನು ಒಳ್ಳೆಯವನಾಗಿ ಏನು ಲಾಭ ಅಗೋದು ಬೇಡ.  ಆದ್ದರಿಂದ ಅವನು ನಿನ್ನನ್ನು ಕಂಡು ಭ್ರಮಿಸಿದ್ದಾನೆ. ನೀನು ಆಲೋಚಿಸು. ಯಾರೂ?  ಆ ಹಳೆಯ ಬ್ರಹ್ಮ ಚಾರಿ.  ಸೀತೆಯೇ ಸರಿಯೆಂದು, ಹಾಗಾದರೆ ಸಕಲ ಲಕ್ಷಣ ಶಾಸ್ತ್ರ ಪಾರಂಗತನಾದಂತಹ ಆಂಜನೇಯ, ನಿನ್ನನ್ನು ಕಂಡು, ನಿನ್ನನ್ನು ಅಂದ್ರೆ ಹೇಗೆ? ಋಷಿ  ಪಂಚಮಿಗೆ ಸಂದ ನಿನ್ನನ್ನು ಕಂಡು ಸೀತೆಯ ಸೌಂದರ್ಯವನ್ನು ಊಹಿಸುತ್ತಾನೆ ಅಂತಾದರೆ, ಈ ಪ್ರಾಯದಲ್ಲೂ ನೀನು ಸೀತೆಯಷ್ಟೇ ಚಂದ ಅಂತ ಅವನು ಹೇಳ್ತಾನೆ ಅಂತ ಆದ್ರೆ,  ನೀನಿನಿರುವಾಗ ಅವಳು ಬೇಕೋ ನಂಗೆ. ನೀನು ಆಲೋಚಿಸು ನಿನ್ನ ಪ್ರಾಯ ಸೀತೆಗೆ ಆದರೆ ಆಗ ಏನಾದಾಳು ಅವಳು?. ಅಷ್ಟೆಲ್ಲ ಕಲ್ಪಿಸಿಕೊ. ಕಾಮುಕನಾಗಿ  ಸೀತೆಯ ಬಳಿಗೆ ನಾನು ಹೋಗುವುದಿದ್ದರೆ, ನೀನು ನೆನಪಿಸಿಕೊ. ಯಾರಾದರೂ ಬೇರೊಂದು ಹೆಣ್ಣಿನ ಸಂಗ್ರಹಕ್ಕೆ ಹೋಗುವಾಗ ಮದುವೆಯಾದ ಹೆಂಡತಿಯನ್ನು ಅದೂ ಒಳ್ಳೆಯ ಮಕ್ಕಳ ತಾಯಿಯನ್ನು ಒಟ್ಟಿಗೆ ಕರಕೊಂಡು ಹೋಗ್ತಾನೋ? ಇಲ್ಲಿ ಇನ್ನೂ ಒಂದು ಉದ್ದೇಶ ಉಂಟು. ನಿಜಾ ಹೇಳ್ತೇನೆ, ನನಿಗೆ ಸಾಕ್ಷಿ ಹೇಳ್ಳಿಕ್ಕಾಗಿ  ಅಲ್ಲ ನಾನು ನಿನ್ನನ್ನು ಕರೆದುಕೊಂಡು ಹೋಗಿದ್ದು. ನಾಳೆ ಸೀತೆಯ ಪರಿಶುದ್ದತೆಯ ಬಗ್ಗೆ ಸಾಕ್ಷಿ ಹೇಳ್ಳಿಕ್ಕೆ ನಾನು ಕರೆದುಕೊಂಡು ಹೋದದ್ದು. ಯಾರು ಹೇಳ್ತಾರೆ, ಸೀತೆ ಪತಿತಳು ಅಂತ. ನನ್ನಗಂಡ ಮುಟ್ಟಲೇ ಇಲ್ಲ ಸೀತೆಯನ್ನು. ಹೇಳುವವಳು ನಾನು.  ಅವರಿಗೆ ಹೇಳ್ಬೇಕು ನೀನು.( ರಾವಣ ಸೀತೆಯ ಬಗ್ಗೆ  ಹೆಂಡತಿಯನ್ನೇ ಸಾಕ್ಷ್ಯವನ್ನಾಗಿಸುವ ಚಿಂತನೆ ಇದು) ಅರ್ಥ ಮಾಡು ಸೀತೆಯನ್ನು ಕೆಡಿಸುವ ಉದ್ದೇಶವಲ್ಲ ನನ್ನದು.”
“ಮತ್ತೆ ಯಾಕೆ ಸ್ವಾಮಿ ಇದೆಲ್ಲ?”

“ಏನು ಮಾಡುದು? ಈ ಯೊಗೈಶ್ವರ್ಯದಿಂದ ನನಗೆ ಪೂರ್ವಜನ್ಮದ ಸ್ಮರಣೆ ಉಂಟು.  ಅದು ಯೋಗದಿಂದ ಬಂದದ್ದು ಪವಾಡ ಅಲ್ಲ. ಪೂರ್ವ ಜನ್ಮದ ಸ್ಮರಣೆ ಅದು. ಆಜನ್ಮದ ಸ್ಮರಣೆಯೂ ಉಂಟು”

“ಆ ಜನ್ಮದಲ್ಲಿ?”

 “ವೈಕುಂಠದಲ್ಲಿ”

“ವೈಕುಂಠದಲ್ಲಿ?”

 ವೈಕುಂಠದಲ್ಲಿ ಶ್ರೀಮನ್ನಾರಾಯಣನ ಓಲಗ. ಅಲ್ಲಿ ದ್ವಾರ ಪಾಲಕರಾಗಿದ್ದವರೆ ನಾವು.”

“ಅಲ್ಲಿಯ ಹೆಸರು?”

“ಜಯ ಮತ್ತು ವಿಜಯ, ಸನಕಾದಿ ಋಷಿಗಳು ಬಂದಿದ್ದರು. ನಾರಾಯಣ ದರ್ಶನಕ್ಕೆ, ಯಾವತ್ತೂ ಬರುವಂತೆ ಆವತ್ತೂ ಬಂದಿದ್ದರು. ಯಾಕೋ ಜಯವಿಜಯರಾದಂತಹ ನಾವು ತಡೆದೆವು. ಸಿಟ್ಟಿಗೆದ್ದವರು ಶಾಪವನ್ನು ಕೊಟ್ಟರು. ರಾಕ್ಷಸರೇ ಆಗಿ ಹುಟ್ಟಿ. ಅದರೂ ನಮ್ಮ ಅವ್ಯಭಿಚಾರೀ ಭಕ್ತಿಯನ್ನು ನಾವು ಬಿಡ್ಲಿಲ್ಲ. ಶಾಪ ಕೊಟ್ಟವರ ಕಾಲನ್ನು ಹಿಡೀಲಿಲ್ಲ. ಶ್ರೀಶ್ರೀರವರ ತೀರ್ಥ ಮಂತ್ರಾಕ್ಷತೆಯಿಂದ ನಾವು ಉದ್ದಾರ ಆಗ್ತದೆ ಅಂತ ಬಯಸಲಿಲ್ಲ. ಯಾಕೆ? ಇವರೇ ಉದ್ದಾರಕ್ಕಾಗಿ ಅಲ್ಲಿ ಸನ್ನಿಧಾನಕ್ಕೆ ಬರುವವರು. ಮತ್ತೆ ಉದ್ದಾರಕ್ಕಾಗಿ ಬರುವಂಥವರತ್ರ ನಾವು ಎಂಥದ್ದು ಉದ್ದಾರ ಬೇಡುವದು? ನಾವು ಸ್ವಾಮಿಯಲ್ಲಿ ಬೇಡಿದೆವು ಸ್ವಾಮಿ ಹೀಗಿಹೀಗೆ ಆಯ್ತು. ಋಷಿಗಳ ಶಾಪ ಬಂತು. ಮಂತ್ರಾಕ್ಷತೆ ನೀನು ಕೊಡ್ಬೇಕು. ಆವಾಗ ನಾರಯಣ ಹೇಳಿದ. ಅವರು ಶಾಪ ಕೊಟ್ಟರೂ ನನ್ನ ಸಂಕಲ್ಪದಂತೆ ಕೊಟ್ಟದ್ದು. ಯಾಕೆ? ನೀವು ಇಷ್ಟು ಸಾಧನೆ ಮಾಡಿದ ಜೀವರು. ವೈಕುಂಠಕ್ಕೆ ಬಂದಿದ್ದೀರಿ. ಸಾಲೋಕ್ಯ ಆಗ್ಯದೆ. ಸಾರೂಪ್ಯ ಸಿದ್ಧಿಸ್ಯದೆ. ಸಾಮೀಪ್ಯಕ್ಕೂ ಬಂದಿದ್ದೀರಿ. ಸಾಯುಜ್ಜ್ಯ ದೊರಕಲಿಲ್ಲ. ಅಷ್ಟು ಪಕ್ವವಾಗ್ಲಿಲ್ಲ. ಯಾಕೆ ಪಕ್ವ ಅಗ್ಲಿಲ್ಲ. ಈವರೆಗೆ ಮಾಡಿದ ಕರ್ಮ ಪುಣ್ಯ ಅಲ್ಲಿಗೆ ನಿಂತಿತು. ಇನ್ನೂ ಕರ್ಮ ಮಾಡಬೇಕಾಗ್ತದೆ. ಮೋಕ್ಷ ಅನ್ನುವುದು ಅವರವರು ಪಡೆಯುವ ಸಿದ್ಧಿಯದು. ಅದಕ್ಕಾಗಿ ನೀವು ಕರ್ಮ ಭೂಮಿಗೆ ಹೋಗಬೇಕಾಗ್ತದೆ. ಮತ್ತೊಮ್ಮೆ ಕರ್ಮವನ್ನು ಮಾಡ್ಬೇಕು.   ಈವರೆಗೆ ಮಾಡಿದ್ದೆಲ್ಲ ಸಕಾಮ ಕರ್ಮ ಆದದ್ದರಿಂದ ಇದೆಲ್ಲ ಭೋಗ,  ವೈಕುಂಠ ಲೋಕ ಪ್ರಾಪ್ತಿ, ಸಾರೂಪ್ಯ, ಸಾ-ಯುಜ್ಯ, ಅದು ಅಹೇತುಕಿಯಾಗಿರಬೇಕು.”

“ಇಷ್ಟುಕಾಲದ್ದು ಪುಣ್ಯ ಕ್ಷಯವಾದಾಗ ಪುನಃ ಭೂಮಿಗೆ ಹೋಗ್ತೀರಿ.”

“ಆದಕಾರಣ ಜ್ಞಾನಿಗಳಾದವರ ಶಾಪಕ್ಕೆ ನನ್ನದೂ ಒತ್ತು ಉಂಟು. ಮೂರು ಜನ್ಮದಲ್ಲಿ ಹೋಗಿ. ಮೂರು ಜನ್ಮ ನಾರಾಯಣ ಹೇಳಿದ್ದು. ಯಾಕೆ ಎಲ್ಲ ಮೂರು ಸಲ ಆವರ್ತನೆ ! ವೈದಿಕ ಪ್ರಕಿಯೆಯಲ್ಲಿ ಮೂರು ಎಂಬ ಸಂಖ್ಯೆಗೆ ಬಹಳಷ್ಟು ಮಹತ್ವ ಉಂಟು. ತ್ರಿಸಂಧ್ಯ, ತ್ರಿಕರ್ಮ, ಜನಿವಾರಕ್ಕೆ ಮೂರೆಳೆ, ಹೌದಲ್ಲಾ? ಹಾಗೆ ಮೂರರ ಔಚಿತ್ಯವನ್ನರಿತು ನಾರಾಯಣ ನಮಗೆ ಅಪ್ಪಣೆಮಾಡಿದ. ಮೂರು ಜನ್ಮದಲ್ಲಿ ಹೋಗಿ.  ಆಸುರೀ ಸಂಪಂತ್ತಿನಿಂದ ಕೂಡಿ. ಯಾಕೆ ಹೇಳಿದಾಂತ ಗೊತ್ತಿಲ್ಲ. ಬಹುಶಃ ಹೀಗೋ ಏನೋ? ಜನರಿಗೆ ಆದಷ್ಟು ಅಪ್ರಿಯರಾಗಿರುವುದು ಒಳ್ಳೆಯದು. ಯಾಕೆ? ಎಕಾಂತಕ್ಕೆ. ಬಹುಮಂದಿಗೆ ಬೇಕಾದವನಾದರೆ ಕೊನೆಗೆ ಇವನೇ ಇಲ್ಲ. ಇನ್ನೂ ಒಂದು ರಾಕ್ಷಸರು. ಯಾರೂ ಹತ್ತಿರ ಬರುವುದಿಲ್ಲ. ಆ ರಾಕ್ಷಸತ್ವ ನಿಮಗೆ ರಕ್ಷಾಕವಚವಾಗಲಿ. ಕಾಣುವವರ ಕಣ್ಣಿಗೆ ನೀವು ವಿರೋಧಿಗಳೇ ಆಗಲಿ. ಆದರೆ ಮೂರು ಜನ್ಮದಲ್ಲೂ ನೆನಪು ನಿಮಿಗೆ ನನ್ನದು ಬಿಟ್ರೆ ಬೇರೆ ಕಡಿಮೆಯಾಗಲಿ.”

“ಅದ್ದರಿಂದ ಸ್ಪರ್ಧಾತ್ಮಕ ವಿರೋಧ ಬುದ್ದಿ”

“ಮತೆ ಅದಕ್ಕೆ ಬೇರೆ ಎಂಥಾ ಹೆಸರಿಡುದು? ನಮ್ಮ ಜನ್ಮದಂಥಹುಗಳಿಂದಲೇ ನಾರದರಂತಹ ಭಾಗವತೋತ್ತಮರು ವಿರೋಧ ಭಕ್ತಿ ಅಂತ ಸೃಷ್ಟಿಸಿದ್ದು. ಭಕ್ತಿ ಇದ್ದರೆ ವಿರೋಧ ಎಂಥದ್ದು? ವಿರೋಧ ಇದ್ರೆ ಭಕ್ತಿ ಎಂಥದ್ದು? ಬೇರೆ ಶಭ್ದ ಇಲ್ಲದ್ದಕ್ಕೆ.  ಮನಸಾ ಅವನದ್ದೇ ನೆನಪು. ಮೈಯಲ್ಲಿ ಆಸುರೀ ವೃತ್ತಿ. ಇದು ಒಳ್ಳೆದಾಗ್ತದೆ ತಿದ್ದಿಕೊಳ್ಳುವುದಕ್ಕೆ. ನಾರಾಯಣ ದೇವರು ಅಪ್ಪಣೆಕೊಡಿಸಲಾಗಿ,  ಆ ಜಯ ವಿಜಯರಾದಂತಹ ನಾವು, ಹಿಂದೆ ಒಂದು ಜನ್ಮವನ್ನು ಮುಗಿಸಿದೆವು. ಹಿರಣ್ಯ ಕಶಿಪು ಹಿರಣ್ಯಾಕ್ಷ,,ಜಯನೆ ನಾನು ವಿಜಯನೇ ಅವನು. ಈಗ ಜಯನೇ ನಾನು ವಿಜಯನೇ ಕುಂಭಕರ್ಣ. ಇನ್ನೊಂದು ಬಾಕಿ ಉಂಟು ಏನೂ ಅಂತ ಗೊತ್ತಿಲ್ಲ. ಬಹುಶಃ ಅದು ಬೇಗ ಮುಗಿದೀತು. ಯಾಕೆ? ಈ ಜನ್ಮದಲ್ಲಿ ನಾನು ಮಾಡಿದ ತಪಸ್ಸೆಷ್ಟು? ನನ್ನ ತಮ್ಮ ಮಾಡಿದ್ದೆಷ್ಟು? ಅವನು ಮಾಡಿದ ತಪಸ್ಸಿನ ಪುಣ್ಯ ಅನುಭವಿಸಲೇ ಇಲ್ಲ. ಯಾಕೆ? ವರ ಕೇಳುವಾಗ ನಿದ್ರೆಯನ್ನೇ ಕೇಳಿದ್ದಾನೆ. ಮತ್ತೆ ಇದನ್ನು ಅನುಭವಿಸುವುದು ಯಾವಾಗ? ಹಾಗಾಗಿ. ಅವನಿಗೂ ಇನ್ನುಳಿದದ್ದು ಬಹು ಸ್ವಲ್ಪ ಇರ್ಬೇಕು. ಹಾಗಾಗಿ ಮುಂದಿನ ಜನ್ಮ ಅಲ್ಪ ಇದ್ದೀತು. ನನಗೂ ಆಷ್ಟೇ. ಈ ಪುಣ್ಯಗಳನ್ನೆಲ್ಲಾ ನಾನು ಉಪಯೋಗಿಸಿದ್ದೇನೆ. ಲಂಕೆ ಉಳಿಸುವುದಕ್ಕಾಗಿ. ಇಂತಹ ಜ್ಞಾನ ಸಿದ್ಧಿ ಆ ತಪಸ್ಸಿನಿಂದಾಗ್ಯದೆ. ಹಿರಣ್ಯಾಕ್ಷ ಹಿರಣ್ಯಕಶಿಪು ಆಗಿರುವಾಗ ಇರ್ಲಿಲ್ಲ. ಈ ಜನ್ಮದಲ್ಲಿ ಬಂದದೆ. ಆದಕಾರಣ ಆಡಿ ತಪ್ಪಲೂ ಬಹುದೇ.....ಓಡಿ ಸಿಕ್ಕಲೂ ಬಹುದೇ...ನ್ಯಾಯ ಉಂಟಲ್ಲ? ಆದ್ದರಿಂದ ರಾಮ ಯಾರೂಂತ ನನಗೆ ಗೊತ್ತು. ಇಲ್ಲಿ ಎಣಿಸಬೇಕಾದ್ದು ನಾವು ಎಷ್ಟು ದೊಡ್ಡ ಜೀವಗಳು ಅಂತ. ಯಾಕೆ? ನಮ್ಮನ್ನು ಕೊಂಡೊಯ್ಯಲ್ಲಿಕ್ಕೆ ಯಮ ಬರಲಿಲ್ಲ. ಕಾಲ ನಮ್ಮ ಮೇಲೆ ಹಲ್ಲೆ ಮಾಡುವುದಿಲ್ಲ. ಯಾರ ಶಾಪ ಕೋಪ ನಮಗೆ ತಾಗೋದಿಲ್ಲ. ನಮ್ಮ ಸ್ವಾಮಿಯೇ ನಮಗಾಗಿ ಭೂಮಿಗಿಳಿದು ಬಂದಿದ್ದಾನೆ. ಹಾಗಾದರೆ ನಮ್ಮ ಭಕ್ತಿಯ ಪಾಶದ ಸೆಳೆತ ಎಷ್ಟು ಅಂತ ನೋಡು.  ಅವನನ್ನು ನಾವು - ಪ್ರಾಯಶ್ಚಿತ್ತ ಮಾಡುವ ಭೂಮಿಗೆ ಎಳೆದು, ಅವನ ಮೂಲಕ ಶಸ್ತ್ರ ಕ್ರಿಯೆ ಮಾಡಿಸಿಕೊಂಡು, ಇದ್ದ ರೋಗ ನಿವೃತ್ತಿ ಮಾಡುವಂತಹ ಅವನ ಶುಷ್ರೂಷೆ ಯ  ರೋಗಿಗಳು, ದೊಡ್ಡ ದೊಡ್ಡವರೆಲ್ಲ ಇದ್ದಾರಲ್ಲ ಊರಿನಲ್ಲಿ? “

“ ಬಹುಶಃ ಆ ರೋಗನಿವಾರಣೆಗೆ ಆ ತಾಯಿಯೇ ಪ್ರೇರಕಳು.”

“ಮತ್ತೆ ಅಪ್ಪ ಕಷಾಯ ಮಾಡಿಕೊಡುವಾಗ ಶುಷ್ರೂಷೆಗೆ ತಾಯಿ ಬಾರದೆ ಇರುತ್ತಾಳ? ಅದು ನಮ್ಮ ದೊಡ್ಡಸ್ತಿಕೆ. ಬಾಕಿದ್ದವರೆಲ್ಲ ಇದ್ದಾರೆ, ಹುಟ್ತಾರೆ,  ಸಾಯ್ತಾರೆ. ಬಲ್ಲಿರೇನಯ್ಯಾ?ಎಂಥಾ ಪುಣ್ಯ ಎಲ್ಲ ಮಾಡ್ತಾರೆ? ಆದ್ರೆ ಒಂದೋ ಯಮ ತೆಕ್ಕೊಂಡು ಹೋಗ್ತಾನೆ.ತೆಕ್ಕೊಂಡು ಹೋದ್ರೆ ಏನ್ಮಾಡ್ತಾರೆ. ಪುನಃ ಬಿಡ್ತಾರೆ. ಕೃಷಿ ಉದ್ಯೋಗ. ಬೆಳೆ ಎಲ್ಲ ಅನುಭವಿಸೋದು, ಬೀಜ ಇಟ್ಟುಕೊಳ್ಳೋದು ಪುನಹ ಬಿತ್ತೋದು. ಪುನರಪಿ ಜನನಂ.  ಪುನರಪಿ ಮರಣಂ.  ಬಾಕಿದ್ದವರ ಪುಣ್ಯಪಾಪಕ್ಕೆ ಅದು ಫಲ. ಪುಣ್ಯದ ಫಲವಾಗಿ ಬಂಗಾರದ ಅನುಭವ. ಪಾಪದ ಫಲವಾಗಿ ದುಃಖದ ಅನುಭವ. ಇದು ಎರಡೂ ಇಲ್ಲದ ಕೇವಲ ಒಂದು ಪ್ರಾಯಶ್ಶಿತ್ತವಾಗಿ ಮೂರು ಜನ್ಮಕ್ಕೆ ನಾವು ಬಂದವರು. ಪ್ರಾಯಶ್ಚಿತ್ತ. ನಮಗೆ ನಿತ್ಯ ಕರ್ಮ ಇಲ್ಲ. ನಮಗೆ ನಿಮಿತ್ತ ಕರ್ಮ ಇಲ್ಲ. ಕಾಮ್ಯ ಕರ್ಮ ಇಲ್ಲ. ಪ್ರಾಯಶ್ಚಿತ್ತ ಕರ್ಮ ಹೀಗಾಗಬೇಕು ಅಂತ ಉಂಟು. ನಮಗೆ ಮರಣ ಅನ್ನೊದು ಮಹಾನವಮಿ. ಅನುಗ್ರಹ ಅದು ನಿಗ್ರಹ ಅಲ್ಲ ಅಥವಾ ಶಿಕ್ಷೆ ಅಲ್ಲ. ಈ ಕೆಲವರಿಗೆ ರಾಜರು ಮರಣ ದಂಡನೆ ವಿಧಿಸಿದುಂಟು, ಶಿಕ್ಷಾ ರೂಪವಾಗಿ. ಕೆಲವರಿಗೆ ಮರಣ ಪ್ರಕೃತಿ ನಿಯಮದಂತೆ ಬರುವುದುಂಟು. ಕೆಲವರಿಗೆ ಮರಣ ಅನುಗ್ರಹ ರೂಪವಾಗಿ ಬರುವುದುಂಟು. ಇದಕ್ಕೆ ದೇಹಾತೀತವಾದ ಅಂತ ಹೆಸರು. ದೇಹಸಂಬಂಧವನ್ನು ತುಂಡು ಮಾಡುವುದು. ಇಂತಹಾ ಯೋಗ ನಮಗೆ ಉಂಟು. ಅದನ್ನು ಕಳಕೊಂಡು ರಾಮನಲ್ಲಿ ವಿರೋಧ ಬೇಡ ಅಂತ ಹೇಳಿದ್ರೆ. ನಾನು ಯಾಕೆ ರಾಮದಾಸ ಆಗ್ಬೇಕು? ಹನುಮಂತನ ಹಾಗೆ, ನಾನಿನ್ನ ದಾಸಾನಯ್ಯಅನ್ನುವುದಕ್ಕೆ ಹುಟ್ಟಿದವನೋ ನಾನು?  ಅದೆಲ್ಲ ಮಾಡಿ ಮಾಡಿ ಅಲ್ಲಿ ಹೋಗಿ ನೋಡಿ ಆಗ್ಯದೆ. ಆಗಿಯೂ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ವೈಕುಂಠದಲ್ಲಿ ದ್ವಾರಪಾಲಕರಾದರೂ ಕೂಡಾ ಪತನದ ಭಯ ಉಂಟು, ಆದ್ದರಿಂದ ಈ ತಾಳ ತಂಬೂರಿ  ಉಪಯೋಗ ಇಲ್ಲ. ಸಾಧನೆಗೆ ಬೇಕು. ಅದು ಮಾಡಿ ಮಾಡಿ ಅಲ್ಲಿಗೆ ಹೋದ್ರೂ ಕೂಡ ಮೋಕ್ಷ ಪಡಿಯದೇ ಇದ್ರೆ ಈ ತಲೆನೋವು ಯಾವಾಗಲೂ ಇದ್ದದ್ದೆ. ಈ ಮೂರು ಜನ್ಮ ಆದಮೇಲೆ ಬಹುಶಃ ನಮಗೆ ಮೋಕ್ಷ ಆಗ್ತದೆ ಎಂಬ ಆತ್ಮ ವಿಶ್ವಾಸದಿಂದ ನಮ್ಮದ್ದಾದ ಈ ನಾಟಕದಲ್ಲಿ,  ಸೂತ್ರಧಾರನಾಗಿ ಅದಕ್ಕೆ ಅವನನ್ನೇ ಇಟ್ಟುಕೊಂಡು, ಹೆಚ್ಚಿನ ಆಟಗಳಲ್ಲಿ ಸೂತ್ರಧಾರನಾದ ಭಾಗವತ ರಂಗಸ್ಥಳಕ್ಕೆ ಇಳಿದು ಕುಣಿಯುವ ಕ್ರಮ ಇಲ್ಲ. ನಮ್ಮ ಕಾಲಕ್ಕಾಗುವಾಗ ಅವನೂ ಇಳಿದು ಕುಣಿವ ಹಾಗೆ ಮಾಡಿದ ದೊಡ್ಡಸ್ಥಿಕೆ ನಮ್ಮದ್ದು. ಸೀತೆಗೂ ಗೊತ್ತುಂಟು, ನಾವು ಯ್ಯಾರು? ರಾಮನಿಗೂ ಗೊತ್ತುಂಟು ನಾವು ಯಾರು ಅಂತ. ಆದರೆ ಇದನ್ನೆಲ್ಲ ಹೇಳ ಬಹುದೇನೆ? ನಾಟಕದ ಅಂತ್ಯಕ್ಕೆ ಇದರ ಗುಟ್ಟು ಗೊತ್ತಾದರೆ ಮಾತ್ರ ನಾಟಕದ ಸ್ವಾರಸ್ಯ ಉಳಿದೀತಲ್ಲದೆ, ಪ್ರಾರಂಭಕ್ಕೆ ಈ ನಾಟಕದ ಸ್ವಾರಸ್ಯ ಹೀಗೆ ಅಂತ ಹೇಳಿದ್ರೆ ಬಾಕಿದ್ದವರೆಲ್ಲ ಮತ್ತೆ ಕಣ್ಣು ಕೂರಿಯಾರು. ಹೀಗೊಂದು ಕಾವ್ಯದಲ್ಲಿ ಗುಟ್ಟನ್ನು ನಾನು ನಿನಗೆ ಕೊನೇ ಗಳಿಗೆಯಲ್ಲಿ ಹೇಳಿದ್ದು. ಈಗ ಗೊತ್ತಾಯಿತಲ್ಲ ಎಂತಹ ಗಂಡನನ್ನು ಪಡೆದಿದ್ದೀ ಅಂತ. ಅದು ಮಾತ್ರ ಅಲ್ಲ, ನನಗೆ ತೃಪ್ತಿ ಏನಾಯ್ತು ಗೊತ್ತುಂಟಾ? ವೇಶ ಕಟ್ಟಿ ಅಭಿನಯಿಸಿದರೂ, ನನ್ನ ವ್ಯಕ್ತಿತ್ವ ಪ್ರಪಂಚಕ್ಕೆ ಇಷ್ಟರವರೆಗೆ ಗೊತ್ತಾಗಲಿಲ್ಲವಲ್ಲ. ಕೆಲವರು ವೇಶ ಕಟ್ಟಿದರೆ ಇದು ಜನ ಅದೇ ಅಂತ ಹೇಳಿಬಿಡ್ತಾರೆ ಚೌಕಿಯದ್ದು. ಹಾಗಾದರೆ ರಾಮ ವೇಶ ಕಟ್ಟಿ ಸೋತಿದ್ದಾನೆ  ಅಂತಾಯಿತು ಈಗ. ...!!! ರಾಮ ವೇಶ ಕಟ್ಟಿದರೂ ರಾಮನನ್ನು ಗುರುತಿಸದವರು ಇಲ್ಲ.  ನಾನು ವೇಶ ಕಟ್ಟಿದ್ದರಿಂದ ನನ್ನ ಒತ್ತಿನ ಹೆಂಡತಿ ನಿನಗೂ ಗುರುತಿಸಲಿಕ್ಕೆ ಅಗಲಿಲ್ಲ. ಈಗ ಹ್ಯಾಗೆ ಸಾಂತ್ವನ ಆಯ್ತಾ?”

“ ಸ್ವಾಮೀ, ಧನ್ಯಳಾದೆ.”

“ಆದ್ದರಿಂದ ನಾನು ಸಾಯದೇ ಮಾತ್ರ ಇದನ್ನು ಪ್ರಚಾರ ಮಾಡಿಬಿಡಬೇಡ. ಒಂದು ಮಾತು ವಿಭೀಷಣನಿಗೆ ಹೇಳು. ನಾಳೆ ಅಣ್ಣ ಹೀಗೆ ಹೀಗೆ ಹೇಳಿದ್ದಾರೆ ಅಂತ. ಇನ್ನು ಮುಂದೆ ಉತ್ತರಾಧಿಕಾರಿ ನೀನಂತೆ ಲಂಕೆಗೆ. ಅಣ್ಣ ಎಷ್ಟಾದರೂ ಕೃಷಿ ಮಾಡುವಾಗ ಕೆಲವು ಕಡೆಯಲ್ಲಿ ಮುಳ್ಳಿನ ಗಿಡವೂ ಹುಟ್ಟಿದೆ. ಕೆಲವು ಕಡೆಯಲ್ಲಿ ಬೇಲಿಯೂ ಹರದದೇ. ಆದರೆ ಇಷ್ಟು ಮಾಡಿಬಿಟ್ಟಿದ್ದಾರಂತೆ ನಿನ್ನ ಅಣ್ಣ. ಮುಂದೆ ಸಾಗುತ್ತಾ ಕೃಷಿಯನ್ನು ಅಭಿವೃದ್ಧಿ ಮಾಡಿ, ಪ್ರಜೆಗಳನ್ನು ಧರ್ಮದಲ್ಲಿ ಪರಿಪಾಲಿಸಿ, ರಾಮನಲ್ಲಿ ವಿರೋಧ ಇಲ್ಲದೆ, ಹಾಗಂತ ತಮ್ಮ ಸ್ವಾತಂತ್ರ್ಯವನ್ನು ಉತ್ತರದ ಅಯೋಧ್ಯೆಗೆ ವಿಕ್ರಯಿಸದೆ, ಅಳಿದು ಹೋದಂತಹ ರಾಕ್ಷಸ ಸಾಮ್ರಾಜ್ಯ ಮತ್ತೊಮ್ಮೆ ಜೀರ್ಣೋದ್ದಾರಗೊಂಡು, ಇದು ಎಂದೆಂದಿಗೂ ಕಾಣುವಂತೆ ಆಢಳಿತ ಕೆಟ್ಟಂತಹ ರಾಕ್ಷಸರು ಸ್ವತಂತ್ರವಾಗಿ ರಾಜ್ಯವನ್ನು ಕಟ್ಟಿದ್ದಾರೆ ಪ್ರಪಂಚದ ಇತಿಹಾಸದಲ್ಲಿ ಸ್ಥಾಯಿಯಾಗಿ ಉಳಿಯುವ ಹಾಗೆ ಉತ್ತರದಲ್ಲಿ ಅಯೋಧ್ಯೆಯ ಶ್ರೀರಾಮನ ಧರ್ಮಧ್ವಜ ಆಕಾಶದಲ್ಲಿ ಹಾರುವಂತೆ,  ದಕ್ಷಿಣದ ತುತ್ತ ತುದಿಯಲ್ಲಿ ಈಚೆ ಅಸುರ ಸಾರ್ವಭೌಮತ್ವದ ಆ ಸ್ವಾತಂತ್ರ ದ್ಯೋತಕವಾದ ಧ್ವಜ ಹಾರುವುದಕ್ಕೆ ನಿನ್ನದ್ದಾದ ನೆರವನ್ನು ಸದಾ ಕೊಡ್ತಾ ಇರಬೇಕಂತೆ. ಆಮೇಲೆ ಹೇಳು. ಆವಾಗ ನಿನಗೆ ಒಂದು ಕಳಕಳಿ ಇದ್ದೀತು. ಇಷ್ಟೆಲ್ಲ ಮಾಡಿದಿರೀ ಸ್ವಾಮೀ, ನನ್ನನ್ನೂ ಅರ್ಧ ದಾರಿಯಲ್ಲಿ ಬಿಟ್ಟು ಹೋಗ್ತೀರೋ ಅಂತ. ನಾನು ಹ್ಯೇಳಲಾರೆ, ನಾನು ಹೇಳಲಾರೆ. ರಾಮನಲ್ಲಿ ಕೇಳೆ, ಆದ್ದರಿಂದ ನಾನಲ್ಲ ರಾಮನಿಗೆ ಶರಣಾಗಬೇಕಾದ್ದು, ನಾನಲ್ಲ ಸೀತೆಗೆ ಶರಣಾಗಬೇಕಾದ್ದು, ಓ ನನ್ನ ಕೈ ಹಿಡಿದ ಭಾಗ್ಯದ ಮಡದಿ, ನೀನು ಸೀತಾರಾಮರಿಗೆ ಶರಣಾಗು.  ನಿನಗೆ ದಾರಿ ಅದು. ಶುಭವಾಗಲಿ. ಇದ್ದ ರಾತ್ರಿ ಹಾಳು ಮಾಡುವುದು ಬೇಡ.”
“ಸ್ವಾಮೀ, ಧನ್ಯಳಾದೆ.”
“ನೀನು ಹೋಗಿ ನಿದ್ದೆ ಬರುವುದಿದ್ದರೆ ಸ್ವಲ್ಪ ನಿದ್ರೆ ಮಾಡು.... ನಿದ್ರೆ ಎಲ್ಲಿಂದ ಅದೋ ಅದೋ......”  ರಾವಣನ ಉತ್ಸಾಹದ ಉದ್ಗಾರ ಉದಯಕಾಲದಲ್ಲಿ ಲಂಕೆಯ ದಶದಿಕ್ಕುಗಳಿಗೂ ಬಡಿಯುತ್ತದೆ. 

Tuesday, September 3, 2013

ಶ್ರೀ ಗುರು ನುಡಿನಮನ



ಪಂಡಿತ ಗುರು ಶ್ರೀಪೆರ್ಲ ಕೃಷ್ಣ ಭಟ್

ಬಹಳ ಹಿಂದಿನ ತಾಳಮದ್ದಲೆಯ ಒಂದು ತುಣುಕು. ಶೇಣಿ ಗೋಪಾಲಕೃಷ್ಣ ಭಟ್ ಭೀಷ್ಮನಾದರೆ ಪೆರ್ಲ ಕೃಷ್ಣ ಭಟ್ಟರ ಗುರು ಪರಶುರಾಮ.


“ಪಾಂಡಿತ್ಯದ ರುಚಿ ಹತ್ತಿದವರು ಮಾತ್ರವೇ ತಾಳ ಮದ್ದಲೆ ಕ್ಷೇತ್ರವನ್ನು ಬಹಳಷ್ಟು ಗೌರವಿಸುತ್ತಾರೆ. ಅಥವಾ ತಾಳಮದ್ದಲೆಯ ರುಚಿ ತಿಳಿದವರು ಪಾಂಡಿತ್ಯದ ರುಚಿಯನ್ನು ಸವಿಯುತ್ತಾರೆ.”
ಇದು ಯಕ್ಷಗಾನಕ್ಕೆ ಅವಲಂಬಿಸಿಕೊಂಡು ಜನ ಜನಿತವಾದ ಮಾತಾದರೆ ಅದಕ್ಕೆ ಗಹನವಾದ ಅರ್ಥವಿದೆ. ಹೌದು ಯಕ್ಷಗಾನದ ವಿದ್ವತ್ ರೂಪವೇ ತಾಳ ಮದ್ದಲೆ. ಯಕ್ಷಗಾನವೆಂದರೆ  ಬಣ್ಣ ಬಣ್ಣದ ವೇಷ ಕುಣಿತ ಇವಿಷ್ಟೆ ಅಂತ ಕಲ್ಪಿಸುವವರಿಗೆ ತಾಳ ಮದ್ದಲೆ ಎಂಬ ಪಂಡಿತರ ಸಮ್ಮೇಳನವೊಂದಿದೆ ಎಂದರೆ ಆಶ್ಚರ್ಯವಾಗಬಹುದು. ಬಯಲಾಟದಲ್ಲಿ ಇಲ್ಲದಿದ್ದದ್ದು ಹಲವನ್ನು ಇಲ್ಲಿ ಕಾಣಬಹುದು. ಇಂದಿಗೂ ತಾಳ ಮದ್ದಲೆಯನ್ನಷ್ಟೇ ಬಯಸುವ ಯಕ್ಷಗಾನ ಪ್ರೇಮಿಗಳು ಬಹಳಷ್ಟಿದ್ದಾರೆ. ಒಂದು ಕಾಲದಲ್ಲಿ ಮಡಿವಂತರಿಂದ ದೂರವಿದ್ದ ಯಕ್ಷಗಾನ ಕ್ಷೇತ್ರ ಕ್ರಮೇಣ ವಿದ್ವಾಂಸರ ವಿದ್ಯಾವಂತರ ಪ್ರವೇಶದಿಂದ ಬಹಳಷ್ಟು ಮಡಿವಂತಿಕೆಯನ್ನು ಬಿಟ್ಟು ಬೆಳೆದು ಬಂತು. ಶುದ್ದ ಜನಪದದಲ್ಲೆ ಬೆಳೆದು ಬಂದ ಈ ಕಲೆ ಪಂಡಿತ ಪಾಮರೆರೆನಿಸದೆ ರಂಜಿಸಲ್ಪಡುತ್ತಿದ್ದರೂ ಅದು ರಂಗಸ್ಥಳಕ್ಕಷ್ಟೆ ಮೊದಲು ಸೀಮಿತವಾಗಿತ್ತು. ಹಾಡಿಗೆ ತಕ್ಕ ಸಂವಾದ. ಒಂದಷ್ಟು ದೃಶ್ಯ ವೈಭವ. ಯಾವಾಗ ವಿದ್ವಾಂಸರ ಪ್ರವೇಶವಾಯಿತೋ ಆವಾಗಿಂದ ಯಕ್ಷಗಾನದಲ್ಲಿ ಮತ್ತಷ್ಟು ಹೂರಣ ತುಂಬಿಸಲ್ಪಟ್ಟು ಅದು ಬೆಳೆ ಬೆಳೆದು ಇನ್ನೊಂದು ಟಿಸಿಲು ತಾಳ ಮದ್ದಲೆಯ ರೂಪದಲ್ಲಿ ಆವಿಷ್ಕಾರಗೊಂಡಿತು. ಪೌರಾಣಿಕ ಜ್ಞಾನದ ಜತೆಗೆ ಹಲವಾರು ಪಾಂಡಿತ್ಯಗಳ ರಸಬೆರೆತಾಗ ಅದಕ್ಕೆ ಮಾತುಗಾರಿಕೆಯ ಹೊಸ ರೂಪ ಬಂದಿತು. ಹೀಗಾಗಿ ತಾಳ ಮದ್ದಲೆ ಎಂಬುದು ಇದೊಂದು ಪಂಡಿತರ ಕಲೆಯಾಗಿಯೇ ಅನ್ವರ್ಥವಾಯಿತು.
 ಈ ಪಂಡಿತರ ಕಲೆಯಲ್ಲಿ ಪಂಡಿತರು ಗುರುಗಳು ಎಂದು ಅನ್ವರ್ಥರಾದವರು ವಿದ್ವಾನ್  ಗುರು ಪೆರ್ಲ ಕೃಷ್ಣ ಭಟ್ಟರು. ಪೆರ್ಲ ಎಂಬ ಸ್ಥಳಾನಮಕ್ಕೆ ಪಂಡಿತ ಎಂಬ ವಿಶೇಷಣವನ್ನೊದಗಿಸಿದವರು.  ಬಹುಮುಖ ಪ್ರತಿಭೆಯ ವಿದ್ವಾಂಸರು ಇವರು. ವೃತ್ತಿ ಯಲ್ಲಿ ಗುರುಗಳಾಗಿ ಆ ಗುರು ಸ್ಥಾನವನ್ನು ಸ್ಥಾಯಿಯಾಗಿ ಉಳಿಸಿಕೊಂಡವರು. ವೇದ ಭಾಷೆ, ರಾಷ್ಟ್ರ ಭಾಷೆ ಜತೆಗೆ ಕನ್ನಡ ಅಲ್ಲದೆ ಇನ್ನು ಹಲವು ಭಾಷೆಯಲ್ಲಿ ಪ್ರಾವಿಣ್ಯವನ್ನು ಪಡೆದು ನಿಜಕ್ಕೂ ಪಂಡಿತರೆಂದೇ ಖ್ಯಾತಿಯನ್ನು ಗಳಿಸಿದವರು. ತಾಳಮದ್ದಲೆಯಾಗಲಿ ಇನ್ನಿತರ ಕೂಟಗಳಲ್ಲೇ ಆಗಲಿ ಪುರಾಣ ಉಪನಿಷತ್ ಅಥವ ದರ್ಮ ಕರ್ಮಗಳ ಜಿಜ್ಞಾಸೆಯಿರಲಿ ಹಲವು ಸಮಸ್ಯೆಗಳಿಗೆ ಇದಮಿತ್ಥಂ ಎಂಬ ಸ್ಥಾನದಲ್ಲಿದ್ದವರು. ಇದು ಒಡನಾಡಿ ದಿವಂಗತ ಶೇಣಿಯವರ ಮಾತು. ಉತ್ತಮ ಸಂಘಟಕರು ವಾಗ್ಮಿಗಳು ಬರಹಗಾರರೂ  ಗುರುಗಳೂ ಆಗಿ ಕೇರಳ ರಾಜ್ಯ ಪ್ರಶಸ್ತಿಗೆ ಭಾಜನರಾದವರು. ಪಂಡಿತರಾದವರೆಲ್ಲ ಗುರುಗಳಾಗಬೇಕೆಂದೇನೂ ಇಲ್ಲ ಗುರುಗಳಾದವರೂ ಪಂಡಿತ ಅಂತ ಎನಿಸಿಕೊಳ್ಳುವುದೂ ಅಪರೂಪ ಇವರಡನ್ನೂ ತನ್ನಲ್ಲಿ ಹೊಂದಿಕೊಂಡವರು ಪೆರ್ಲ ಪಂಡಿತರು.
          ಯಕ್ಷಗಾನ ತಾಳಮದ್ದಲೆಯಲ್ಲಿ ಪರಿಶುದ್ದ ಅರ್ಥಗಾರಿಕೆ ಹೆಸರಾದವರು. ಅನಾವಶ್ಯಕ ಅಸಾಂದಾರ್ಭಿಕ ಚರ್ಜೆಗೆ ಇವರು ಕಾರಣರಾಗುವುದಿಲ್ಲ. ಪೆರ್ಲ ಪಂಡಿತರ ಅರ್ಥಗಾರಿಕೆಯ ರುಚಿಯನ್ನು ಆ ವರಸೆಯನ್ನು ಅರ್ಥವಿಸಿಕೊಳ್ಳಬೇಕಾದರೆ ಸ್ವಲ್ಪ ಪಾಂಡಿತ್ಯದ ಹಸಿವನ್ನೂ ಹೊಂದಿರಬೇಕು. ವಿದ್ವತ್ ನ ಸರಸ ಅರ್ಥಗಾರಿಕೆಯ ಸೊಗಸು ಅಂಥಾದ್ದು. ಪ್ರಸಂಗಕ್ಕೆ ಪಾತ್ರಕ್ಕೆ ಔಚಿತ್ಯವಲ್ಲದೇ ಇದ್ದದ್ದು ಇವರಿಂದ ನಿರೀಕ್ಷಿಸುವುದೂ ತರವಲ್ಲ. ಎಂತಹಾ ವಾಗ್ಮಿಯೇ ಆಗಲಿ ಇವರ ವಿದ್ವತ್ ಗೆ ತಲೆದೂಗಲೇ ಬೇಕು. ತಾಳ ಮದ್ದಲೆಯ ರಂಗವೇರಿದರೆ ನಿಷ್ಠೂರವಾದಿಯಾಗಿಯೂ ಸೌಜನ್ಯಮೂರ್ತಿಯಾಗಿಯೂ ಕಂಡುಬರುತ್ತಾರೆ.
          ಇಂದಿಗೂ ನಾನು ಯಕ್ಷಗಾನ ತಾಳ ಮದ್ದಲೆಯ ಅಭಿರುಚಿಯನ್ನು ಬೆಳೆಸಿಕೊಳ್ಳುವುದಕ್ಕೆ ಮತ್ತು ಉಳಿಸಿಕೊಳ್ಳುವುದಕ್ಕೆ ಮೂಲ ಕಾರಣ ಪೆರ್ಲ ಕೃಷ್ಣ ಭಟ್ಟರ ಅರ್ಥಗಾರಿಕೆ. ಬಾಲ್ಯದಲ್ಲೇ ಬಾಯಾರು ಪರಿಸರದಲ್ಲಿ ಅದು ನಮ್ಮ ಮಠದ ನೆರಳಲ್ಲಿ ಆದ ಹಲವಾರು ತಾಳ ಮದ್ದಲೆಯನ್ನು ಕಂಡವನು. ಸುಧನ್ವನಾಗಿ, ಅತಿಕಾಯನಾಗಿ ರಾವಣನಾಗಿ ರಾಮನಾಗಿ ಬಹುಮುಖ ರೂಪವನ್ನು ಕಂಡು ತಾಳ ಮದ್ದಲೆಯ ಅರ್ಥವೆಂದರೆ ಮೊದಲು ಮನಸ್ಸಿನಲ್ಲಿ ಬರುತ್ತಿದ್ದದ್ದು ಇವರ ರೂಪ. ಅಕಾಶವಾಣಿಯಲ್ಲಿ ಅಗಾಗ ಪ್ರಸಾರವಾಗುತ್ತಿದ್ದ ಪೆರ್ಲ ಕೃಷ್ಣ ಭಟ್ ಬಳಗದವರ ತಾಳ ಮದ್ದಲೆ ಬಹಳಷ್ಟು ವೈಶಿಷ್ಟ್ಯದಿಂದ ಕೂಡಿರುತ್ತಿತ್ತು. ಹಿಮ್ಮೇಳದಲ್ಲಿ ಬಲಿಪ್ಪ, ಪುಂಡಿಕಾಯಿ, ಕುದ್ರೆಕೂಡ್ಲು ಅಂತೇ  ಅರ್ಥಗಾರಿಕೆಯಲ್ಲಿ ಪೆರ್ಲ ಪಂಡಿತರೊಂದಿಗೆ ಜೋಷಿ ಮೂಡಂಬೈಲು ಮುಂತಾದವರುಗಳೊಂದಿಗೆ ಮೂಡಿಬರುತ್ತಿದ್ದ ಕಿರು ತಾಳಮದ್ದಲೆ ನಾನು ಬಹಳಷ್ಟು ಅಸ್ವಾದಿಸಿದ್ದೇನೆ. ಇಂದಿಗೂ ಅದರ ಧ್ವನಿ ಮುದ್ರಣ ಕೇಳಿ ಆನಂದಿಸುತ್ತೇನೆ.
          ಶೇಣಿಯವರೊಂದಿಗಿನ ಇವರ ಸಂವಾದ ಅದೊಂದು ಪಾಂಡಿತ್ಯದ ಬಿರುಸಾದ ಘರ್ಷಣೆ ಎಂದೇ ಹೇಳಬಹುದು. ಮರಯಲಾಗದ ಹಲವು ಪಾತ್ರಗಳು ಇಂದೂ ಕಣ್ಣೆದುರಿಗೆ ಮಾತನಾಡುತ್ತಿವೆ ಎಂದರೆ ಅದರ ವೈಶಿಷ್ಟ್ಯತೆಯನ್ನು ಬಣ್ಣಿಸುವುದು ಕಷ್ಟೆ. ಶೇಣಿ,  ತೆಕ್ಕಟ್ಟೆ,  ಪೆರ್ಲ, ಕುಂಬ್ಳೆ ಜೋಷಿ ಯವರ ತಾಳ ಮದ್ದಲೆಯ ಘನ ವೈಭವ ಬಹುಷಃ ಇನ್ನು ವರ್ತಮಾನಕ್ಕೆ ಬರಲಾರದು ಎಂದೇ ಅನ್ನಿಸುತ್ತದೆ.  ಗೀತೋಪದೇಶ ಎಂಬ ತಾಳ ಮದ್ದಲೆಯಲ್ಲಿ ಶೇಣಿಯವರು ಕೃಷ್ಣನಾಗಿ ಪೆರ್ಲ ಪಂಡಿತರು ಅರ್ಜುನನಾಗಿ ಇದ್ದ ತಾಳ ಮದ್ದಲೆ ಕೇಳುವಾಗ ಅನ್ನಿಸುತ್ತದೆ ಯಕ್ಷಗಾನ ಅರ್ಥಗಾರಿಕೆ ಅದೆಷ್ಟು ಶ್ರೀಮಂತ? ಹಿಂದೆ ನಡೆದ ಭೀಷ್ಮ ವಿಜಯ ತಾಳ ಮದ್ದಲೆಯ ಭೀಷ್ಮ ಪರಶುರಾಮರ ಸಂಭಾಷಣೆಯಲ್ಲಿ  ಶೇಣಿಯವರು ಭೀಷ್ಮರಾದರೆ ಗುರು ಪರಶುರಾಮರಾಗಿ ಪೆರ್ಲ ಪಂಡಿತರು ಬೆರಗಾಗುವಂತಹ ವಾಕ್ ಸಂಘರ್ಷವನ್ನೇ ನಡೆಸಿದ್ದಾರೆ. ಅದನ್ನು ಅದೆಷ್ಟು ಸಲ ಕೇಳಿದರೂ ರೋಮಾಂಚನವಾಗುತ್ತದೆ. ಅಂತಹ ಶ್ರೀಮಂತ ಸಂವಾದವದು.
          ಭೀಷ್ಮವಿಜಯದ ಭೀಷ್ಮನ ಗುರುಸ್ಥಾನದ ಪರಶುರಾಮರಾಗಿ ಮಾತ್ರವಲ್ಲ ನಿಜ ಜೀವನದಲ್ಲೂ ಅದೇ ಸ್ಥಾನದಲ್ಲಿ ವಿರಾಜಮಾನರಾಗಿರುತ್ತಿದ್ದ ಪೆರ್ಲ ಗುರುಗಳು ಇಂದು ನಮ್ಮೊಂದಿಗಿಲ್ಲ ಎಂದಾಗ ಕಳೆದು ಹೋದ ಹಲವು ಅವಿಸ್ಮರಣೀಯ ಘಳಿಗೆಗಳು ನೆನಪಿಗೆ ಬರುತ್ತದೆ. ಯಕ್ಷಗಾನದ ಶ್ರೀಮಂತ ಅರ್ಥಗಾರಿಕೆಯ ಮತ್ತೊಂದು ಕೊಂಡಿಯೂ ಕಳಚಿಕೊಂಡಿತೇ? ಮನಸ್ಸು ಭಾರವಾಗುತ್ತದೆ.
ಮುಂಜಾನೆ ದೇವರ ಕೊಣೆ ಹೊಕ್ಕು ಸಂಧ್ಯೆಗೆ ಅಣಿಯಾಗುವಾಗ ಪೆರ್ಲ ಕೃಷ್ಣ ಭಟ್ಟರು ಬರೆದ ’ಸಾರ್ಥ ಷೋಡಷ ಸಂಸ್ಕಾರ”  ವೆಂಬ ಪುಸ್ತಕದತ್ತ ಕಣ್ಣು ಹಾಯಿಸುತ್ತೇನೆ,  ಅಲ್ಲಿ ಮೊದಲಿಗೆ ಕಾಣುವ ಈ ಗುರುಮುಖ ಮತ್ತಷ್ಟು ಗುರುಸ್ಮರಣೆಯನ್ನು ಮನಸ್ಸಲ್ಲಿ ಸ್ಫುರಿಸುತ್ತದೆ.  ಆ ಮಹಾನ್ ಚೇತನ ದೇಹರೂಪದಲ್ಲಿ ಇಲ್ಲದೇ ಇದ್ದರೂ ಅವ್ಯಕ್ತವಾಗಿ ಸದಾ ಬೆಳಗುತ್ತಿದೆ. ಈಗ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುವುದರಿಂದ ನಮ್ಮಾತ್ಮ  ತೃಪ್ತಿಯನ್ನು ಅನುಭವಿಸುತ್ತಿದೆ. ಭಗವಂತನು ಶ್ರೀಯವರಿಗೆ ಸದ್ಗತಿಯನ್ನು ಕರುಣಿಸಲಿ ಎಂದು ಮನಸ್ಸು  ಪರಿಶುದ್ದವಾಗಿ ಪ್ರಾರ್ಥಿಸುತ್ತಿದೆ.