ತಲೆ
ಬರಹವೇ ಒಂದು ವಿಷಮದಿಂದ ಆರಂಭವಾಗುತ್ತದೆ. ಆದರೂ ವಿಷಮವೇ ಮಥನದಲ್ಲಿ ಮೊದಲು ಬಂದಂತೆ
ತಿಳಿದುಕೊಂಡು ಮುಂದುವರಿಯುವ.
ಹತ್ತಿರದ ಮನೆಯೊಂದರಲ್ಲಿ
ಸಮಾರಂಭವೊಂದು ನಡೆಯುತ್ತದೆ. ಅದಕ್ಕಾಗಿ ನೆರೆಕರೆಯವರಿಂದ ಹಲವಾರು ವಸ್ತುಗಳನ್ನು
ಒಂದು ಸಲದ ಉಪಯೋಗಕ್ಕಾಗಿ ಎರವಲು ತರುವುದುಂಟು. ಹಾಗೆ ಒಂದು ಮನೆಯಿಂದ ದೇವರ
ಪೂಜೆಗಾಗಿ ಮೀಸಲಿರಿಸಿದ್ದ ಗಿಂಡಿಯನ್ನು ತರುತ್ತಾರೆ. ಆ ಮನೆಯಾತ ದೇವರ ಸೇವೆಗಲ್ಲವೇ
ಎಂದುಕೊಂಡು ಸಂತೋಷದಿಂದ ಕೊಡುತ್ತಾನೆ. ನಂತರ ಎರವಲು ಕೊಟ್ಟವನು ಅದೇ ಮನೆಗೆ
ಹೋದಾಗ ಪೂಜೆಗೆ ಕಲಶವಾಗಿ ಉಪಯೋಗಿಸಲ್ಪಡಬೇಕಾದ ಗಿಂಡಿ ಇನ್ನೆಂತದೋ ಅಪವಿತ್ರ ಕ್ರಿಯೆಗೆ ಉಪಯೋಗವಾಗುವುದನ್ನು ಕಾಣುತ್ತಾನೆ.
ಅವಾಗ ಆತನ ಮನಸ್ಸಿಗಾಗುವ ವೇದನೆ ಎಂತಹುದಾಗಿರಬೇಡ.
ನಮ್ಮಲ್ಲಿ ಔಷಧಿ ತರುವುದಕ್ಕಾಗಿ ಉಪಯೋಗಿಸುವ ಬಾಟ್ಲಿ ಎರವಲು ತೆಗೆದುಕೊಂಡವನು ಅದರಲ್ಲಿ
ಮದ್ಯವನ್ನು ತರುತ್ತಾನೆ ಎಂದಾದರೆ ನಮಗಾಗುವ ನೋವಿನ ಪರಿಮಾಣ ವಿವರಿಸುವುದು ಸಾಧ್ಯವೇ?
ಇತ್ತೀಚೆಗೆ ಮೌನದ
ಬಿಗುಮಾನವನ್ನೇ ಹೊತ್ತು ಬಂದ ಒಂದು ಈ-ಮೇಲ್ ಸಂದೇಶದಲ್ಲಿನ ಯಕ್ಷಗಾನ ಪೋಟೋಗಳನ್ನು ಕಂಡಾಗ ಸತ್ಯ ಹೇಳಬೇಕೆಂದರೆ ಇದೇ
ನೋವುಗಳನ್ನು ಅನುಭವಿಸಿದಹಾಗಿತ್ತು. ನಮ್ಮ ಮನೆಯ ಪವಿತ್ರ ಪಾತ್ರೆಯಲ್ಲಿ ನೆರೆ ಮನೆಯವನು
ಹೆಂಡವನ್ನು ಕ್ಷುದ್ರ ದೇವರಿಗೆ ಅರ್ಪಿಸುತ್ತಾನೆ ಎಂದಾದರೆ ಮಾಡುವುದೇನು? ನಮಗೆ ಅಪವಿತ್ರ
ಎನಿಸಿದ್ದು ಅವನಿಗೆ ಪವಿತ್ರವಾಗಿರುವುದಕ್ಕೆ ಯಾರನ್ನು ಹೇಳಬೇಕು? ಇದು ಕೇವಲ ನನ್ನ ಮನಸ್ಸಿನ
ಚಿಂತನೆಗೆ ಮಾತ್ರವೇ ಸೀಮಿತವಾಗಿ ವ್ಯಕ್ತವಾಗುವ ನೋವಿನ ನಿಟ್ಟುಸಿರು. ಈ ಗೌರವದ ಭಾವನೆಯೇ
ಅಪರಾಧವಾಗಿ ಪರಿಣಮಿಸಿತೇ ಎಂಬ ಭ್ರಮೆ ಆವರಿಸಿಬಿಡುತ್ತದೆ. ಇಲ್ಲಿ ನಮ್ಮ ಭಾವನೆಗಳನ್ನೇ ನಾವು
ವಿಮರ್ಶಿಸುವ ಅನಿವಾರ್ಯತೆ ಬಂದು ಬಿಡುತ್ತದೆ.
ಯಕ್ಷಗಾನ ಇಂದು
ಹಲವಾರು ರೀತಿಯಲ್ಲಿ ಸಂಕ್ರಮಣ ಕಾಲವನ್ನು ಅನುಭವಿಸುತ್ತಿದೆ. ಒಂದು ಬದಿ ಅದರ ಸಾಂಸ್ಕೃತಿಕ
ಹಿರಿಮೆ ಗರಿಮೆಗಳಿಂದ ಹೆಮ್ಮೆ ಎನಿಸುವ ಹಾಗೆ ಮಾಡಿದರೆ, ಮತ್ತೊಂದು ಮಗ್ಗುಲು ಖಿನ್ನತೆಯ ದುರಂತವನ್ನೇ ಎದುರು
ತಂದು ನಿಲ್ಲಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನದ ಚೆಂಡೆನಾದ ಕೇಳಿಸುತ್ತದೆ ಎಂದಾಗ
ಹಲವು ಸಲ ಒಂದು ರೀತಿಯ ರೋಮಾಂಚನವಾಗುವ ಕಾಲವಿತ್ತು. ಆದರೆ ಈಗ “ಅಂತಾರಾಷ್ಟ್ರೀಯ ಮಟ್ಟಕ್ಕೆ
ಯಕ್ಷಗಾನ” ಎಂಬ ಕೆಲವು ಅಕ್ಷರ ನೋಡಿದೊಡನೆ
ಗಾಬರಿ, ದಿಗಿಲು, ಭಯ ಎಲ್ಲಾ ಒಟ್ಟಾಗಿ ಆಗಿಬಿಡುತ್ತದೆ. ಅದಕ್ಕೆ ಕಾರಣ ಲಂಡನ್ ನ ಬೀದಿಯಲ್ಲಿ
ಯಕ್ಷಗಾನ ತೆರೆದುಕೊಂಡ ಅಸಹ್ಯಕರ ರೀತಿ. ಈ ಫೋಟೋಗಳನ್ನು ಕಂಡಾಗ ಮನಸ್ಸು ತಲ್ಲಣಿಸದೇ ಇರಲು
ಸಾಧ್ಯವೇ?
ಒಂದೆರಡು
ಸಾವಿರಗಳನ್ನು ಖರ್ಚುಮಾಡಿ ಬಯುಲಾಟವೋ ತಾಳಮದ್ದಲೆಯೋ ಮಾಡಿ ತಮ್ಮ ಬಡ ಅಭಿಮಾನವನ್ನು
ಪ್ರಕಟಿಸುವವರಿಗೆ, ಈ ಲಕ್ಷಗಳ ಬಜೆಟ್ ಕೇಳುವಾಗಲೇ ಗಾಬರಿಯಾಗಿ ಕೀಳರಿಮೆ ಹುಟ್ಟಿಬಿಡಬೇಕು. ನಮ್ಮ
ಯಕ್ಷಗಾನಕ್ಕೂ ಬೃಹತ್ ಭಂಡವಾಳ ಹರಿದು ಬಂತಲ್ಲ. ಇದನ್ನು ಕಲ್ಪಿಸುವುದಕ್ಕೂ ಕಷ್ಟವಾದ
ಭ್ರಮಾಲೋಕದಂತೆ ಭಾಸವಾಗಿತ್ತು. ಆದರೆ ಈಗ ಈ ಪೋಟೋಗಳು ಇದನ್ನೆಲ್ಲ ಹುಸಿಯನ್ನಾಗಿಸೀತೆ ಎಂಬ ಸಂಶಯ
ಮೂಡಿಸಿದೆ. ಸಂಶಯವಲ್ಲ. ಆ ಭ್ರಮೆ ಕಳಚಿ ಬಿದ್ದಿದೆ ಎಂದು ಹೇಳಿಬಿಡಬೇಕು. ಆ ಪ್ರಸಿದ್ಧಿಯ ಗರಿಮೆಯೇ ಬೇಡವಾಗಿತ್ತು. ಅಂತಾರಾಷ್ಟ್ರೀಯ ಮಟ್ಟಕ್ಕಿಂತಲೂ ನಮ್ಮ ನಿಮ್ಮ ಅಂಗಳದ
ತಾಳಮದ್ದಲೆಯಲ್ಲೇ ತೃಪ್ತಿ ಅನುಭವಿಸಬಹುದಿತ್ತು.
ಮನುಷ್ಯನ
ಜೀವನದಲ್ಲಿ ಅಡಕವಾಗಿರುವ ಹಲವು ವಿಚಾರಗಳಿಗೆ ಜೀವನ ಶೈಲಿಗೆ ಒಂದು ನೀತಿ ಸಂಹಿತೆ ಪ್ರಕಟವಾಗಿಯೋ
ಪ್ರಕಟವಾಗದೆಯೋ ಇರುತ್ತದೆ. ಒಬ್ಬ ವಾಹನ ಚಾಲಕ, ಕಾರ್ಖಾನೆಯ ಕಾರ್ಮಿಕ ಅಥವಾ ಆಸ್ಪತ್ರೆಯ
ವೈದ್ಯರು, ನರ್ಸ್ ಗಳು ಇವರಿಗೆ ಕರ್ತವ್ಯ
ನಿರತರಾಗಿರುವಾಗ ಒಂದು ನೀತಿ ಸಂಹಿತೆ ಪಾಲಿಸಲ್ಪಡುತ್ತದೆ. ಇವರೆಲ್ಲ ಕರ್ತವ್ಯ ನಿರ್ವಹಿಸಿ ಆ
ಕ್ಷೇತ್ರದಿಂದ ಹೊರಬಂದಾಗ ತಮ್ಮ ಸಮವಸ್ತ್ರಗಳನ್ನೋ
ಅಥವಾ ಇನ್ನಿತರ ವಸ್ತುಗಳನ್ನೂ ದೂರವಿಟ್ಟು ಸಾರ್ವಜನಿಕ ಲೋಕಕ್ಕೆ ತೆರೆದುಕೊಳ್ಳುತ್ತಾರೆ.
ಸಮವಸ್ತ್ರ ಆಯಾಯ ಕ್ಷೇತ್ರದಲ್ಲಷ್ಟೇ ವೃತ್ತಿ ಗೌರವದಿಂದ ಬಳಕೆಯಾಗುತ್ತದೆ. ಹೊರ ಪ್ರಪಂಚದಲ್ಲಿ
ಅದೆಲ್ಲವನ್ನು ಕಳಚಿಟ್ಟು ಸಾಮಾನ್ಯರಂತೆ ಗುರುತಿಸುವುದನ್ನು ರೂಢಿಯಾಗಿಸಿಕೊಂಡರೆ, ಇಲ್ಲಿ ನೋಡಬಾರದೇ
ಯಕ್ಷಗಾನದ ವೇಶಗಳು ಜೋಕರ್ ಗಳಂತೆ ರಸ್ತೆಯಲ್ಲಿ ಅಸಹ್ಯವಾಗಿ ಕುಣಿದಾಡುತ್ತದೆ. ಬಿಳಿ ತೊಗಲಿಗರ
ಮನರಂಜನೆಗೆ ಏನನ್ನಾದರೂ ಮಾಡುವ ಯಾವ ಕೋಲವನ್ನಾದರೂ ಕಟ್ಟುವ ಉತ್ಸಾಹದಲ್ಲಿದ್ದಂತೆ
ಭಾಸವಾಗುತ್ತದೆ. ರಂಗಸ್ಥಳದ ಬೆಳಕಿನಲ್ಲಿ ಕುಣಿದು
ಭ್ರಮಾಲೋಕವನ್ನು ಸೃಷ್ಟಿಸಬೇಕಾದ ವೇಷಗಳು ಯಾವ ಗೌಪ್ಯತೆಯೂ ಉಳಿಯದಂತೆ ಎಲ್ಲವನ್ನು ತೆರೆದು
ಬೆಳಕಿಗೆ ಬಂದು ನಿಂತಿದೆ. ಹಾಗಾದರೆ ನಾವು ಅಭಿಮಾನದಿಂದ ನಮ್ಮ ಸಂಸ್ಕೃತಿಯ ಭಾಗವಾಗಿ
ಕಾಣುವ ಯಕ್ಷಗಾನಕ್ಕೆ ಇದಾವ ಘನತೆಯೂ ಇಲ್ಲದಾಗಿ ಬತ್ತಲಾಗಿಬಿಟ್ಟಿತೆ? ಇವುಗಳಿಗೆ ಒಂದು ಕ್ಷೇತ್ರ ಪರಿಧಿ ಎಂಬುದಿಲ್ಲವೇ? ನಿಜಕ್ಕೂ ಆತಂಕವಾಗುತ್ತದೆ. ಎತ್ತರಕ್ಕೆ ಹಾರುವಾಗ ಎಷ್ಟು
ರೋಮಾಂಚನವಾಗುತ್ತದೋ ಬಿದ್ದಾಗ ನಾವು ಕಲ್ಪಿಸಿಕೊಂಡ ನೆಲೆಯೇ ಕಳೆದು ಹೋಗಿ
ಪ್ರಪಾತವಾಗಿಬಿಡುತ್ತದೆ. ಎತ್ತರಕ್ಕೆ ಏರಿದಂತೆ ನಾವು ಬೀಳುವ ಎತ್ತರದ ಅಂತರವೂ ಏರುತ್ತಾ
ಸಾಗುತ್ತದೆ ಎಂಬ ಸಾಮಾನ್ಯ ಕಲ್ಪನೆಯೂ ನಮಗಿಲ್ಲವಾಗುತ್ತದೆ.
ವಿದೇಶೀ
ರಸ್ತೆಗಳಲ್ಲಿ ಯಕ್ಷಗಾನದ ವೇಷಗಳನ್ನು ವಿದೇಶಿಗರು
ವಿಸ್ಮಯ ದೃಷ್ಟಿಯಿಂದ ಕಂಡರೂ ನನ್ನ ಮನಸ್ಸೇಕೋ ಅವಮಾನದಿಂದ ಖಿನ್ನತೆಯನ್ನು ಅನುಭವಿಸಿ ಕುಗ್ಗಿ
ಹೋಗುತ್ತದೆ. ಕಾಲಿಗೆ ಬೂಟು ತೊಟ್ಟ ಯಕ್ಷಗಾನದ ವೇಷಗಳು. ಇದು ಕ್ರಾಂತಿಯ ಸಂಕೇತವೇ? ಯಕ್ಷಗಾನ
ಬಾನೆತ್ತರಕ್ಕೆ ಏರಿದ ಸಂಕೇತವೇ? ಅರ್ಥವಾಗುವುದಿಲ್ಲ. ಹೀಗಾದರೆ ಪಂಚವಟಿಯ ಮಾಯಾ ಶೂರ್ಪನಖಿ
ರಾಮನನ್ನು ಆಕರ್ಷಿಸುವುದಕ್ಕೆ ಸ್ಕರ್ಟ್, ಬಿಕಿನಿಯಲ್ಲಿ ಬರಬಹುದೇ? ಅವಾಗ ಪಡ್ಡೆ ಹೈಕಳ ಶಿಳ್ಳೆ
ಯಾವ ರೀತಿಯದ್ದಾಗಿರಬಹುದು? ಇಂತಹ ಕಾರಣಗಳಿಂದ ಲಕ್ಷ ಲಕ್ಷಗಳು ಇಲ್ಲಿ ಭಂಡವಾಳವಾಗಿ ಕಾಣುವುದು.
ಯಕ್ಷಗಾನಕ್ಕೆ ಲಕ್ಷ ಲಕ್ಷ ಖರ್ಚು ಮಾಡುವುದು ಇಂದು ಹೊಸತೇನಲ್ಲ. ಆದರೆ ಅಲ್ಲಿ ಅದು ಭಂಡವಾಳವಾಗಿ
ಕಂಡುಬರುವುದಿಲ್ಲ. ಹೆಚ್ಚೆಂದರೆ ಅಭಿಮಾನ ಇನ್ನು
ಕೆಲವೊಮ್ಮೆ ಮರುಳು ಎಂದೂ ಕರೆಸಿಕೊಳ್ಳಬಹುದು.
ಯಕ್ಷಗಾನ ಕಲೆ
ರಂಗಸ್ಥಳ ಬಿಟ್ಟು ಬರುವುದಕ್ಕೂ ಒಂದು ಮಿತಿ ಇರುತ್ತದೆ. ಮಹಿಷಾಸುರನೋ ಇನ್ನಾವುದೋ ವೇಷಗಳು ರಂಗಸ್ಥಳದ
ಹೊರಗೆ ಒಂದಷ್ಟು ಸಭೆಯನ್ನು ರಂಗವಾಗಿ ಬಳಕೆ ಮಾಡುವುದುಂಟು. ಆವಾಗೆಲ್ಲ ಅದು ಔಚಿತ್ಯ ಮೀರಿದೆ
ಎಂದನಿಸುವುದಿಲ್ಲ. ಮೀರಿದರು ಅದು ಅದರ ಅಂಗವಾಗಿ ಪರಿಗಣಿಸಬಹುದು. ಆದರೆ ಅಂತಹ ವಿದ್ಯಮಾನಗಳನ್ನೇ
ಕೆಲವೊಮ್ಮೆ ಸಹಿಸುವುದಕ್ಕೆ ಮನಸ್ಸು ಮುಜುಗರವನ್ನು ಅನುಭವಿಸುತ್ತಿರಬೇಕಾದರೆ.. ಇದು ಲಂಡನ್
ಬೀದಿಯಲ್ಲಿ..... ಶೂ ಧರಿಸಿ ...ಬಹಳ ಅಸಹ್ಯವೆಂದೆನಿಸುತ್ತದೆ.
ದೇವಾಲಯದ
ಗರ್ಭಗುಡಿಯೊಳಗಿನ ದೇವರು ನಂದಾದೀಪದ ಮಂದ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಂಡಾಗ ಭಯ ಭಕ್ತಿ
ಮೂಡಿಸಿದರೆ... ಅದೇ ದೇವರ ಮೂರ್ತಿಯನ್ನು ಹೊರಗೆ ಪ್ರಕಾಶಕ್ಕೆ ತಂದಾಗ ಆ ಭಾವನೆಯೂ ಹಲವು ಸಲ ಬದಲಾಗಿ
ಬಿಡುತ್ತದೆ. ಆ ಭಯ ಭಕ್ತಿ ಉಳಿಯುವುದೇ ಇಲ್ಲ. ಯಕ್ಷಗಾನವನ್ನು ನಾವೆಲ್ಲ ಕಂಡುಕೊಂಡ ಪರಿಯೂ
ಅಂತಹುದೇ. ಮಂದ ಬೆಳಕಿನಲ್ಲಿ ಯಕ್ಷಗಾನದ ವೇಷಗಳು ಹುಟ್ಟಿಸುವ ಭಾವನೆ ಅವುಗಳು ರಸ್ತೆ ಮಧ್ಯೆ
ಬೆಳಕಿಗೆ ಬಂದು ನಿಂತಾಗ ಉಳಿಯುವುದಿಲ್ಲ. ಗೌಪ್ಯವಾಗಿರಬೇಕಾದ ಹಲವು ಸಂಗತಿಗಳು ಅಲ್ಲಿ
ಬಹಿರಂಗವಾಗಿ ಅಸಹ್ಯವಾಗಿ ಕಾಣುತ್ತದೆ. ಅದು ವೇಷಭೂಷಣವಾಗಬಹುದು, ಮುಖವರ್ಣಿಕೆಯಾಗಬಹುದು..
ಅದನ್ನು ಕಾಣುವ ರೀತಿಯಲ್ಲಿ ಕಂಡಾಗಲೇ ಅದರ ಗೌರವ ಭಾವನೆಗೆ ಮಾನ್ಯತೆ ದೊರಕುತ್ತದೆ. ರಂಗದ ಮಂದ
ಬೆಳಕಿನಲ್ಲಿ ಮುತ್ತು ರತ್ನದಂತೆ ಹೊಳೆಯುವ ಆಭರಣಗಳು ಬೆಳಕಿಗೆ ಬಂದಾಗ ಕೇವಲ ಗಾಜಿನ ಚೂರುಗಳಂತೆ
ಕಂಡು ಬಂದು ಗೌರವದ ಭಾವನೆಯನ್ನೇ ಲೇವಡಿಯಾಡಿದಂತಾಗುತ್ತದೆ. ಆದರೂ ಸಹಿಸಿಬಿಡಬಹುದು. ಆದರೆ ಶೂ
ತೊಟ್ಟ ಯಕ್ಷಗಾನದ ವೇಷಗಳು ಅದನ್ನು ಸಹಿಸುವುದು ಕಷ್ಟವಾಗುತ್ತದೆ. ಯಾವುದನ್ನು ಮಾಡಿದರೂ ಯಕ್ಷಗಾನ
ವಾತಾವರಣದಲ್ಲಿ ಸಹ್ಯವಾಗುತ್ತದೆ ಎಂಬ
ಅಸಡ್ಡೆಯಂತೆ ಇದು ಭಾಸವಾಗುತ್ತದೆ.
ಇದನ್ನು
ಸಂಘಟಿಸಿದವರು ಬಹಳ ಸಾಹಸ ಪಟ್ಟು ಶ್ರಮ ವಹಿಸಿ, ಸಾಕಷ್ಟು ದುಡ್ಡು ಸುರಿದು ಇದನ್ನು ಕನಸೆಂಬಂತೆ ಭಾಸವಾಗುವಂತೆ
ಮಾಡಿದ್ದಾರೆ. ಅವರ ಪರಿಶ್ರಮವನ್ನು ಶ್ಲಾಘಿಸದೇ ಇರುವುದು ನಿಜಕ್ಕೂ ಅಸಾಧ್ಯವಾದುದು. ಒಂದು ಜಾನ
ಪದ ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ಶ್ಲಾಘನೀಯ. ಆದರೆ
ಶ್ಲಾಘನೀಯವಾಗಬೇಕಾದ ಕಾರ್ಯ ಈ ರೀತಿಯಾಗಿ ತೆರೆದುಕೊಳ್ಳುವುದು, ನಿಜಕ್ಕೂ ಯಕ್ಷಗಾನದ ದುರದೃಷ್ಟ ಎನ್ನಬೇಕು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಮೊಳಗುತ್ತದೆ ಎಂದಾಗ ಕನಸೋ ಎಂಬಂತೆ ಭಾಸವಾಗಿದ್ದು ಈ
ರೀತಿಯಲ್ಲಿ ಭಯಾನಕ ಸ್ವಪ್ನ ವಾಗಿಬಿಡುತ್ತದೆ ಎಂದರೆ ಅದನ್ನು ದುರಾದೃಷ್ಟ ಎನ್ನಲೇಬೇಕಷ್ಟೆ.
ಯಾರಾದರೂ ಒಂದು
ಯೋಜನೆಯನ್ನು ಸಿದ್ದ ಪಡಿಸುವಾಗ ಅದರಲ್ಲಿ ಬಹಳಷ್ಟು ತಮ್ಮ ಹಗಲಿರಳನ್ನು ಒಂದು ಮಾಡಿ ತಮ್ಮ
ಶ್ರಮವನ್ನು ಸುರಿಯುತ್ತಾರೆ. ಅವರ ಶ್ರಮ ಸಾರ್ಥಕವಾಗುವುದು ಯೋಜನೆ ಕಾರ್ಯಗತವಾಗಿ ಯಶಸ್ವಿಯಾದಾಗ.
ನಷ್ಟವೋ ಲಾಭವೋ ಎಲ್ಲವನ್ನು ಯಾವುದಾದರೊಂದು ಬಗೆಯ ಯಶಸ್ಸು ಮರೆಸಿಬಿಡುತ್ತದೆ. ಪ್ರತಿಯೊಬ್ಬರೂ
ತಮ್ಮ ಶ್ರಮದ ಸಾರ್ಥಕತೆಯನ್ನೇ ಬಯಸುವುದು. ಆ ಶ್ರಮವು ಸಾರ್ಥಕವಾದರೆ ಒಂದಷ್ಟು ಯಕ್ಷಗಾನವೂ, ಆ ಅಭಿಮಾನವೂ ಸಾರ್ಥಕತೆಯನ್ನು ಪಡೆಯಬಹುದೆಂಬ
ನಿರೀಕ್ಷೆಯೂ ಇರುತ್ತದೆ. ಒಂದು ಉತ್ತಮವಾದ ಕೆಲಸ
ಈ ರೀತಿ ಪ್ರಕಟವಾದಾಗ ಮನಸ್ಸು ಭಾವನೆಯ ಹೊಯ್ದಾಟದಲ್ಲಿ ನೋವನ್ನು ಅನುಭವಿಸುತ್ತದೆ. ಹಾಗಾಗಿ
ಇಲ್ಲಿ ಯಾವುದನ್ನೂ ವಿಮರ್ಶಿಸುವ ಪ್ರಮೇಯ ತೋರಿ ಬರುವುದಿಲ್ಲ. ಕೇವಲ ಮನಸ್ಸಿನ ನೋವಷ್ಟೇ
ವ್ಯರ್ಥವಾಗಿ ಪ್ರಕಟಗೊಳ್ಳುತ್ತದೆ.
ಇಂದು ಸಿನಿಮಾ ಟಿ.
ವಿ.ಯಲ್ಲಿ ಯಕ್ಷಗಾನವನ್ನು ಅಸಹ್ಯವಾಗಿ ತೋರಿಸುವುದನ್ನು ಅವಮಾನ ಎಂದು ಪರಿಗಣಿಸುವಾಗ ಇದನ್ನು
ಏನೆಂದು ಕರೆಯಬಹುದು. ಅಲ್ಲಾದರೆ ಯಕ್ಷಗಾನದ ಅರಿವಿಲ್ಲದವರು ಅದರ ಗೌರವವನ್ನು ಪೂಜ್ಯಭಾವನೆಯ
ಪೂರ್ಣವಾದ ಅರಿವಿಲ್ಲದೇ ಯಕ್ಷಗಾನ ಎಂದರೆ ವೇಷಗಳು ಎಂದು ಅಸಹ್ಯವಾಗಿ ತೋರಿಸುತ್ತಾರೆ. ಆದರೆ
ಇಲ್ಲಿ ನಾವು ಎಲ್ಲದರ ಅರಿವಿದ್ದು ಮಾಡುತ್ತಿರುವುದೇನು? ಹಳ್ಳಿಯ ಮನೆಯಿಂದ ನಮ್ಮ ಅಮ್ಮನನ್ನು
ಕರೆದು ಕೊಂಡು ಬಂದು ಪೇಟೆಯ ಬೀದಿಯಲ್ಲಿ ಸ್ಕರ್ಟ್ ಹಾಕಿ ಸುತ್ತಾಡಿಸಿದರೆ ಹೇಗಾಗಬಹುದು
ಕಲ್ಪಿಸುವ. ಇಲ್ಲಾಗುವ ಅವಮಾನಕ್ಕೆ ಬೇರಾರೂ ಕಾರಣರಲ್ಲ ಸ್ವತಃ ನಾವೇ. ಇಲ್ಲಿ ನಮ್ಮ ಸೊತ್ತನ್ನು
ಅಭಿಮಾನವನ್ನು ನಾವೇ ಕೀಳಾಗಿ ಕಾಣುವುದು. ಸಂಪದ್ಭರಿತವಾದ ಯಕ್ಷಗಾನ ಎಲ್ಲವನ್ನು ಕಳಚುವುದಕ್ಕೆ
ಸಿದ್ದವಾದಂತೆ ಭಾಸವಾದರೆ ನನಗಂತೂ ಅಳಿಸಲಾಗದ ನೋವನ್ನು ಉಂಟು ಮಾಡುತ್ತದೆ. ಯಕ್ಷಗಾನದಲ್ಲಿ
ಯಕ್ಷಗಾನವನ್ನು ಮಾತ್ರವೇ ಕಾಣುವ ಮನಸ್ಸು ನಮ್ಮದು ಹಾಗಾಗಿ ನೊಂದ ಮನಸ್ಸಿನ ಪ್ರತಿಕ್ರಿಯೆ ಎಂದು
ತಿಳಿಯಬೇಕು. ಅವರವರ ನೆಲೆಯಲ್ಲಿ ಚಿಂತನೆಯಲ್ಲಿ ಇಂತಹುದಕ್ಕೆ ಬಹಳಷ್ಟು ಸೃಷ್ಟೀಕರಣ ಸಿಗಬಹುದು.
ಅನಿವಾರ್ಯತೆಯ ಬಂಧನವೂ ಇರಬಹುದು. ಆದರೆ ಕೆಲವೊಂದನ್ನು ಕಲೆಯ ಹಿರಿಮೆಯ ದೃಷ್ಟಿಯಿಂದ ಆಭಾಸವನ್ನು ಮಾಡದೇ
ಇದ್ದು ಗೌರವದಿಂದ ಕಾಣಲು ಸಾಧ್ಯವಿದೆ. ಇಲ್ಲಿ ಯಕ್ಷಗಾನದ ಬಗ್ಗೆ ಅಭಿಮಾನ ಪ್ರೀತಿ ಇಲ್ಲ ಎಂದು
ಹೇಳುವುದಲ್ಲ. ಆದರೆ ಇದೆಲ್ಲವನ್ನು ಮೀರಿ ಅದಾವುದೋ ಉದ್ದೇಶ ಈ ಅಭಿಮಾನಗಳನ್ನೆಲ್ಲ ಮರೆಸಿ
ಹಾಕಿದೆಯೋ ಎಂದು ಅನುಮಾನಿಸುವ ಹಾಗಾಗುತ್ತದೆ. ಇಂದು ಯಾವುದೇ ಸಮಾರಂಭಕ್ಕೆ ಹೋದಾಗ ಯಾವುದೋ
ಖಾದ್ಯಗಳನ್ನು ತಿಂದು ಕೊನೆಯಲ್ಲಿ ನಮ್ಮ ಅನ್ನವನ್ನು ಅನ್ನವಾಗಿಯೇ ತಿಂದರೆ ಮಾತ್ರ ಮನಸ್ಸು
ತೃಪ್ತವಾಗುತ್ತದೆ ಹಾಗಾಗಿ ಯಾವುದೇ ರೀತಿಯಾದರೂ ಯಕ್ಷಗಾನ ಯಕ್ಷಗಾನವಾಗಿ ಮಾತ್ರವೇ ಉಳಿಯಲಿ ಎಂಬ
ಆಶಯ. ಇದು ಮೀರಿದರೆ ಯಾರಿಗೆ ಹೇಗನಿಸಿತೋ ಅದರ ಬಗ್ಗೆ ಯೋಚಿಸದೇ ಹೇಳಿಬಿಡುವ,,,,, ನಮ್ಮ ಮಟ್ಟಿಗೆ
ಇದು ಖಂಡಿತಾ ಅವಮಾನ. ನಮ್ಮ ಮನಸ್ಸಿನ ಈ ಭಾವನೆಯೇ ತಪ್ಪು ಎಂದು ಪರಿಗಣಿಸಿದರೂ ನಮ್ಮ ಭಾವನೆ ನಮಗೆ
ಹಿರಿದಲ್ಲವೆ?







