"ಇದು ವಿಮರ್ಶೆಯಲ್ಲದ ಚಿಂತನ"

Tuesday, March 18, 2014

ತೆಂಕುತಿಟ್ಟಿನ ರಾಜವೇಷ ಪ್ರವೇಶ

ಕುರುಕ್ಷೇತ್ರ ಯುದ್ದದ ಚಕ್ರವ್ಯೂಹ ಪ್ರಸಂಗ.
“ ಅರ್ಜುನನೊಬ್ಬ ತಪ್ಪಿದರೆ  ಮಿಕ್ಕ
                 ಧೂರ್ಜಟಿ ಮೊದಲಾದವರೆನಗಿದಿರೆ
             ಊರ್ಜಿತ ಚಕ್ರವ್ಯೂಹವನು  ಮಾಡಿ  ಗರ್ಜಿಸಿ ಕಟ್ಟುವೆ ಧರ್ಮಪುತ್ರನನು “  
 ಎಂದು ದ್ರೋಣ ಸುಯೋಧನನಿಗೆ ಸಾಂತ್ವಾನದ ನುಡಿಗಳನ್ನು ನುಡಿದು ಪದ್ಮವ್ಯೂಹವನ್ನು ನಿರ್ಮಿಸಿ ಪಾಂಡವ ಸೇನೆಗೆ ಸವಾಲೊಡ್ಡುತ್ತಾನೆ. ಅರ್ಜುನ ಮತ್ತು ಶ್ರೀಕೃಷ್ಣ ಇಲ್ಲದೇ ಇದ್ದುದರಿಂದ ಕಂಗಾಲಾದ ಯುಧಿಷ್ಠಿರ ಚಕ್ರವ್ಯೂಹ ಭೇದನಕ್ಕೆ ಯಾರನ್ನು ಕಳುಹಲಿ ಎಂದು ಚಿಂತಿಸುತ್ತ ಇರುವ ಸನ್ನಿವೇಶ. ಮಂದವಾಗಿ ಮುಂದುವರೆಯವ ಪ್ರಸಂಗಕ್ಕೆ ಒಮ್ಮಿಂದೊಮ್ಮೆಲೇ ಕಿಚ್ಚು ಹಚ್ಚಿದಂತೆ ಮಿಂಚಿನ ಸಂಚಲನೆಯುಂಟಾಗುತ್ತದೆ. ಅದು ಪಾರ್ಥನಂದನ ಅಭಿಮನ್ಯುವಿನ ಪ್ರವೇಶ.

ಇಂತು ಚಿಂತಿಸುವುದನರಿತಭಿಮನ್ಯು ಮ | ಹಾಂತ ಪರಾಕ್ರಮದಿ ||
ನಿಂತು ಮುಂಗೈಸರಪಣಿಯನು ಸರಿಸುತ | ಪಂಥದಿ ಪಿತಗೆಂದ ||

ಈ ಪದ ಹೇಳಿ ಧಿತ್ತ ಕೊಟ್ಟು ಅಭಿಮನ್ಯುವಿನ ಪ್ರವೇಶಕ್ಕೆ ಹಿಮ್ಮೇಳ ಮೊಳಗುತ್ತದೆ. ಅತ್ಯಂತ ವೇಗದಲ್ಲಿ ಹಾಗು ವಿಶಿಷ್ಟ ರೀತಿಯಲ್ಲಿ ಚೆಂಡೆಯ ಸದ್ದಿಗೆ ಅಭಿಮನ್ಯುವಿನ ಪ್ರವೇಶವಾದೊಡನೆ ಪ್ರಸಂಗ ವೇಗ ಪಡೆದುಕೊಳ್ಳುತ್ತದೆ.
ಛಾಯಾ ಚಿತ್ರ ಕೃಪೆ ಮಿಥುನ್ ಪ್ರಕಾಶ್ ಸುಣ್ಣಂಗುಳಿ

          ಯಕ್ಷಗಾನದಲ್ಲಿ ವಿಶಿಷ್ಟ ರೀತಿಯಲ್ಲಿ ಆಗುವ ವೇಷಗಳ ಪ್ರವೇಶ ನೋಡುವುದೇ ಒಂದು ರೋಮಾಂಚನದ ಅನುಭವ. ಚೆಂಡೆಯ ಅಬ್ಬರಕ್ಕೆ ಆ ವೇಗದ ಸಂಚಲನೆ ಪಾತ್ರದೊಳಗಾಗುತ್ತದೆ. ಅಭಿಮನ್ಯುವಿನ ಪ್ರವೇಶಕ್ಕೆ ಅನುವಾಗುವಂತೆ ಚೆಂಡೆಯವರು ತುಸು ಮುಂದೆ ಸರಿದು ನಿಂತಾಗಲೇ ಒಂದು ರೀತಿಯ ಕೌತುಕಕ್ಕೆ ಪ್ರೇಕ್ಷಕ ಒಳಗಾಗುತ್ತಾನೆ. ಪಳಗಿದ ಪುಂಡುವೇಷಧಾರಿ ಈ ಪಾತ್ರ ಮಾಡುವುದರಿಂದ ಕೌತುಕ ನಿರೀಕ್ಷೆ ಅತಿಯಾಗಿ ದೃಷ್ಟಿಯೆಲ್ಲ ರಂಗಸ್ಥಳದಲ್ಲಿ ಕೇಂದ್ರೀಕರಿಸಲ್ಪಟ್ಟಾಗ ಮಿಂಚಿನ ಪ್ರವೇಶದೊಂದಿಗೆ ಅಭಿಮನ್ಯು ವಿನ ದಿಗಿಣಕ್ಕೆ ಪ್ರೇಕ್ಷಕನೂ ಆವೇಶಕ್ಕೆ ಒಳಗಾಗುವುದು ಸಹಜ. ಇದು ಯಕ್ಷಗಾನದ ಒಂದು ವಿಶಿಷ್ಟ ಸಮ್ಮೋಹನ ಅಂತಲೇ ಹೇಳಬೇಕು. ಅಭಿಮನ್ಯುವಿನ ಪಾತ್ರ ನಿಂತಿರುವುದೇ ಆರಂಭದ ಈ ರಭಸದ ಪ್ರವೇಶದಿಂದ. ಇದು ಒಂದು ತೆಂಕುತಿಟ್ಟು ಯಕ್ಷಗಾನದ ವೈಶಿಷ್ಟ್ಯತೆ ಎನ್ನಬೇಕು.

ವೈವಿಧ್ಯಮಯ ಮತ್ತು ಠೀವಿಯ ಪ್ರವೇಶವೇ ತೆಂಕುತಿಟ್ಟು ಯಕ್ಷಗಾನದ ವೈಶಿಷ್ಟ್ಯತೆಗಳಲ್ಲಿ ಒಂದು. ಇದು ಒಂದು ರೀತಿಯಲ್ಲಿ ರಾಜ ಕಳೆಯನ್ನು ತುಂಬಿಸಿಬಿಡುತ್ತದೆ. ಇಂತಹ ವಿಶಿಷ್ಟವಾದ  ಪ್ರವೇಶಗಳನ್ನು ನೋಡಲೆಂದೇ ಕಾದು ಕುಳಿತುಕೊಳ್ಳುವವರು ಹಲವರು. ಸುಂದರವಾದ ಪ್ರವೇಶದಿಂದಲೇ ಪಾತ್ರದ ನಿರ್ವಹಣೆ ನಿರ್ಣಯವಾಗಿಬಿಡುತ್ತದೆ.  ಪ್ರವೇಶದಿಂದ ನಿರ್ಮಿಸಿದ ಸಂಚಲನೆಯಿಂದ ಕಲಾವಿದನಿಗೆ ಮುಂದಿನ ನಿರ್ವಹಣೆಗೆ ಮುಖ್ಯವಾದ ಉತ್ತೇಜನ ಸಿಕ್ಕಿಬಿಡುತ್ತದೆ. ಆರಂಭದಲ್ಲಿ ಉಂಟಾಗುವ ಈ ಆವೇಶವೇ ನಿರ್ಣಾಯಕವೆನಿಸಿ  ಪಾತ್ರದ ನಿರ್ವಹಣೆಗೆ  ಬಹಳ ಮುಖ್ಯವಾದ   ಚೈತನ್ಯವನ್ನು ನೀಡುತ್ತದೆ.
ತೆಂಕುತಿಟ್ಟು ಯಕ್ಷಗಾನದಲ್ಲಿ ಪುಂಡುವೇಷದ ಪ್ರವೇಶ ಎಷ್ಟು ವೇಗವಾಗಿ ರಭಸದಿಂದ ಕೂಡಿರುತ್ತದೋ ಅದೇ ರೀತಿ ರಾಜವೇಷಗಳ ಪ್ರವೇಶ ನಿಧಾನವಾದ ಚಲನೆಯಿಂದ ಮತ್ತು ಗಾಂಭೀರ್ಯದಿಂದ ಕೂಡಿರುತ್ತದೆ. ಇಂದು ಹಲವು ಕಡೆ ಅನುಭವದ ಅಭ್ಯಾಸದ ಕೊರತೆಯಿಂದ ಪುಂಡುವೇಷ ಮತ್ತು ರಾಜವೇಷದ ಪ್ರವೇಶಗಳಲ್ಲಿ ವೆತ್ಯಾಸವೇ ಕಂಡು ಬರುವುದಿಲ್ಲ. ಸಾಂಪ್ರದಾಯಿಕ ರಾಜವೇಷದ ಪ್ರವೇಶಗಳನ್ನು ಇಂದಿಗೂ ಸಂಪಾಜೆ ಶೀನಪ್ಪರೈ, ಶಿವರಾಮ ಜೋಗಿ, ನಿಡ್ಲೆ ಗೋವಿಂದ ಭಟ್, ಸುಬ್ರಾಯ ಹೊಳ್ಳ, ಸುಣ್ಣಂಬಳ ವಿಶ್ವೇಶ್ವರ ಭಟ್ ಮುಂತಾದ ಹಿರಿಯ ಕಲಾವಿದರಲ್ಲಿ ಮಾತ್ರ ಕಂಡು ಬರುತ್ತದೆ. ಅದರಲ್ಲೂ ಸಂಪಾಜೆಯವರ ತಾಳ ಲಯದಿಂದ ಕೂಡಿದ ರಾಜ ವೇಷದ ಪ್ರವೇಶ ಆ ಪಾತ್ರವನ್ನೇ ಅನಾಮತ್ತಾಗಿ ರಂಗದ ಮೇಲೆ ತಂದು ನಿಲ್ಲಿಸಿದ ಛಾಪನ್ನು ಮೂಡಿಸುತ್ತದೆ. ಬಹಳ ಹೊತ್ತು ಪ್ರೇಕ್ಷಕ ಈ ಗುಂಗಿನಲ್ಲೇ ಉಳಿದು ಬಿಡುತ್ತಾನೆ. ತೆಂಕು ತಿಟ್ಟು ಯಕ್ಷಗಾನದಲ್ಲಿ ರಾಜವೇಷದ ಪ್ರವೇಶಕ್ಕಿರುವಷ್ಟು ಸೊಗಸು ಬೇರೆ ವೇಷಕ್ಕೆ ಇರುವುದಿಲ್ಲ. ಪುಂಡುವೇಷಕ್ಕೆ ಚೆಂಡೆಯಲ್ಲಿ ಹಲವು ಸಲ ಉರುಳಿಕೆ ಪೆಟ್ಟಿನಿಂದ ಪ್ರವೇಶವನ್ನು ಕೊಟ್ಟರೆ ರಾಜವೇಷಕ್ಕೆ ನಿಧಾನಗತಿಯ ಪೆಟ್ಟುಗಳಿಂದಲೇ ನೀಡಬೇಕು. ಹಾಗಿದ್ದರೇನೆ ಈ ಪಾತ್ರದ ಗಾಂಭೀರ್ಯ  ಮೂಡುವುದು.
)


ಬಹಳ ಹಿಂದೆ ಅಳಕೆ ರಾಮ ರೈಯವರ ರಾಜವೇಷದ ಪ್ರವೇಶ ಆ ಕಾಲದಲ್ಲಿ ಅದೆಂತಹ ಗತ್ತು ಗಾಂಭೀರ್ಯದಿಂದ ಕೂಡಿತ್ತು ಎಂದರೆ ಅದನ್ನು ವರ್ಣಿಸುವುದು ಬಹಳ ಕಷ್ಟ. ಸರಳವಾದ ಮತ್ತು ನಿಧಾನಗತಿಯ ಪ್ರವೇಶದೊಂದಿಗೆ ಅನಾವಶ್ಯಕ ಕುಣಿತದ ಗಿಮಿಕ್ ಇಲ್ಲದ ವೈವಿಧ್ಯಮಯ ಪ್ರವೇಶಗಳು ಅವು.  ಹಾಗೇನೆ ಪುತ್ತೂರು ನಾರಾಯಣ ಹೆಗಡೆಯವರ ರಾಜವೇಶಗಳಲ್ಲಿ ಕಂಡು ಬರುವ ಆಂಗಿಕ ಚಲನೆಗಳು ಅವುಗಳ ಮುಕ್ತಾಯ ಮತ್ತು ರಂಗವನ್ನು ಉಪಯೋಗಿಸುವ ಬಗೆಗಳು ಇಡೀ ಯಕ್ಷಗಾನಕ್ಕೆ ಟಿಪ್ಪಣಿಯನ್ನು ಒದಗಿಸುತ್ತಿತ್ತು. ಇಂದು ಹಿರಿಯ ಕೆಲವೇ ಮಂದಿ ಕಲಾವಿದರಲ್ಲಿ ಮಾತ್ರಾ ಈ ಆಸಕ್ತಿಯನ್ನು ಗುರುತಿಸಬಹುದೇ ಹೊರತು ಬಹಳಷ್ಟು ಮಾಯವಾಗಿದೆ. ಎಂತಿದ್ದರೂ ತೆಂಕುತಿಟ್ಟಿನ ರಾಜವೇಷದ ಪ್ರವೇಶವೆಂದರೆ ಅದು ಒಂದು ಯಕ್ಷಗಾನದ ಪೂರ್ಣ ಪ್ರವೇಶ ಅಂತಲೇ ಹೇಳಬೇಕು. ರಾಜವೇಷದ ಪ್ರವೇಶ ಮಾತ್ರವಲ್ಲ ರಾಜ ಸಿಂಹದ ಪ್ರವೇಷವದು.   

ತೆಂಕು ತಿಟ್ಟು ಯಕ್ಷಗಾನದಲ್ಲಿ ರಾಜ ವೇಷದ ಪ್ರವೇಶದಂತೆಯೇ ಬಣ್ಣದ ವೇಷಗಳದ್ದು. “ಭೋರ್ಗರೆವ ರಕ್ಕಸರ ದಂಡು ಬಾಯ್ಬಿಟ್ಟೊದರೆ ನಿರ್ಘೋಷದಬ್ಬರದ ಗಮಕದಾರ್ಭಟೆಯ ಸಿಡಿಲೊಗ್ಗರದ ಬೊಬ್ಬೆಯಿಂ ಶೂರ್ಪಣಖೆ ಬಂದಳಾ ಕಾನನಕೆ ಕುಲಗೇಡಿಯು”  ಎಂಬ ಪದದೊಂದಿಗೆ ಧಿತ್ತ ಕೊಟ್ಟು ಪ್ರವೇಶವಾಗುವ ಪಾತ್ರ  ಶೂರ್ಪನಖಿಯದು.  ಚೌಕಿಯಿಂದಲೇ ಅರ್ಭಟೆಗೆ ತೊಡಗಿ ಮತ್ತೆ ಹಂತ ಹಂತವಾಗಿ ತೆರೆ ಸರಿಸಿ (ತೆರೆ ಪೊರಪ್ಪಾಟ್ಟು) ಸಾಂಪ್ರಾದಾಯಿಕ ಕ್ರಮದೊಂದಿಗಿನ ಪ್ರವೇಶದಲ್ಲಿ ಪಂಚವಟಿಯ ರುದ್ರಭೀಕರತೆಯನ್ನು ಸೃಷ್ಟಿಸಿಬಿಡುತ್ತದೆ. ಇದು ಒಂದು ರೀತಿಯಾದರೆ ಇಂದ್ರಜಿತು ಕಾಳಗದ ಇಂದ್ರಜಿತು ಪ್ರವೇಶ. ಮಕರಾಕ್ಷ ಮಡಿದ ವಾರ್ತೆಯ ಕೇಳಿ ರಾವಣ ದುಃಖಿಸುತ್ತಾ ಹರನೇ ಎಂದು ಹಲುಬುತ್ತಿರುವಾಗ “ಸುರಪಜಿತು ನಡೆತಂದು ಪಿತನಡಿಗೆರಗಿ ಭಿನ್ನಯಿಸಿದನು .....” ಎಂಬ ಪದದೊಂದಿಗೆ ಇಂದ್ರಜಿತು ಪ್ರವೇಶವಾಗುತ್ತದೆ. ಇನ್ನು ಸಾಂಪ್ರದಾಯಿಕವಾಗಿ  ರಾವಣ ಶೂರ ಪದ್ಮನಂತಹ ಅಸುರ ಪಾತ್ರಗಳ ಪ್ರವೇಶವೂ ತೆರೆ ಪೊರಪ್ಪಾಟ್ ಸಂಪ್ರದಾಯದಲ್ಲಿ ಹಂತ ಹಂತವಾಗಿ ರಂಗದಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳು ನಿಧಾನವಾಗಿ ರಂಗದಲ್ಲಿ ಅನಾವರಣಗೊಳ್ಳುವುದು ಅತ್ಯಂತ ವೈಶಿಷ್ಟ್ಯ ಪೂರ್ಣ ಪ್ರವೇಶವಾಗಿರುತ್ತದೆ. ಈ ಸಾಂಪ್ರದಾಯಿಕ ಪ್ರವೇಶ ಆ ಪಾತ್ರದ ಗಂಭೀರತೆಯನ್ನು ಪ್ರಕಟ ಪಡಿಸುತ್ತದೆ. ನಮ್ಮ ಬಾಲ್ಯದ ಕಾಲದಲ್ಲಿ ದಶಕಗಳ ಹಿಂದೆ ನಾವು ಚೌಕಿಯನ್ನು ನೋಡುತ್ತಿರಲಿಲ್ಲ. ಆವಾಗ ಈ ಭೀಕರ ವೇಷಗಳು ಮಂದ ಬೆಳಕಿನಲ್ಲಿ ರಂಗದ ಮೇಲೆ ನಿಧಾನಗತಿಯ ಪ್ರವೇಶವಾಗಿ ಹಂತ ಹಂತವಾಗಿ ತೆರೆದುಕೊಳ್ಳುತ್ತಿದ್ದಂತೆ ನಮಗೆಲ್ಲ ಗಾಬರಿಯಾಗಿ,  ಭಯದಿಂದ ಪಕ್ಕದಲ್ಲಿದ್ದ ಹಿರಿಯರಿಗೆ ಒತ್ತಿಕೂರುತ್ತಿದ್ದೆವು.  ಅತ್ಯಂತ ಭಯಾನಕವಾಗಿ ಕಾಣುತ್ತಿದ್ದ ತೆಡ್ಪೆ ಕಿರೀಟದ ವೇಷಗಳನ್ನು ನೋಡುವುದಕ್ಕೆ ಅಂಜಿ ಮುಖ ಮುಚ್ಚಿಕೊಳ್ಳುತ್ತಿದ್ದೆವು. ಇಂತಹ ಕಲ್ಪನೆಗಳು ಯಕ್ಷಗಾನದ ಬಗ್ಗೆ ಅಪಾರವಾದ ಗೌರವವನ್ನು ಬೆಳೆಸುವುದಕ್ಕೆ ಕಾರಣವಾಯಿತು ಎಂದನಿಸುತ್ತದೆ. ನಂತರ ಕಾಲ ಬದಲಾದಂತೆ ಚೌಕಿಯ ಗೌಪ್ಯತೆ ಕಡಿಮೆಯಾಗಿ ಆ ಬಗೆಯ ಒಂದು ಭಾವನೆ ಬದಲಾಯಿತೋ ಅನ್ನಿಸುತ್ತದೆ. ಇತ್ತಿಚೆಗಂತೂ ರಂಗಸ್ಥಳಕ್ಕೂ ಚೌಕಿಗೂ ವೆತ್ಯಾಸವೇ ಉಳಿದಿಲ್ಲ. ಹಾಗಾಗಿ ಹಲವು ಸಲ ಈ ಸಾಂಪ್ರದಾಯಿಕ ಪ್ರವೇಶಗಳು ಅರ್ಥ ಹೀನ ಎಂದುಕೊಳ್ಳುವ ಹಾಗಾಗುತ್ತದೆ. ಎಲ್ಲೆಂದರಲ್ಲಿ ಫೋಟೊಗೆ ಪೋಸು ಕೊಡುವ ವೇಷಗಳು, ಸೂರ್ಯನ ಬೆಳಕಿಗೆ ತಮ್ಮ ಅಂಗಗಳ ಇಂಚಿಂಚನ್ನೂ ದರ್ಶನ ಮಾಡುವ ವೇಷಗಳು ಯಕ್ಷಗಾನದ ಪಾವಿತ್ರ್ಯತೆಯನ್ನೇ ಕಡಿಮೆ ಮಾಡಿದಂತೆ ಅನಿಸುತ್ತದೆ. ಫೋಟೊ ತೆಗೆಯುವವರಾದರೂ ಒಂದಿಷ್ಟು ಔಚಿತ್ಯವನ್ನು ಅನುಸರಿಸಿ ಪೋಟೋ ತೆಗೆಯುವುದು ಮತ್ತು ಅದಷ್ಟು ಚೌಕಿಯ ಗೌಪ್ಯತೆಯನ್ನು ಕಾಪಾಡಿಕೊಂಡರೆ ಪರೋಕ್ಷವಾಗಿ ಅದು ರಂಗ ಮೇಲೆ ಪ್ರಭಾವ ಬೀರಬಹುದು. ವಿಪರ್ಯಾಸವೆಂದರೆ ನಮ್ಮ ತೀರ ಆಂತರಿಕ ವಿಚಾರಗಳನ್ನು ಬಹಿರಂಗ ಮಾಡುವ ಸಂಸ್ಕೃತಿ ಬೆಳೆಸಿಕೊಂಡ ಮೇಲೆ ಯಕ್ಷಗಾನದಲ್ಲಿ  ಇದನ್ನೆಲ್ಲ ನಿರೀಕ್ಷಿಸುವುದು ಹಾಸ್ಯಾಸ್ಪದವಾಗುತ್ತದೆ
.)

ಹಲವು ಸಲ ಒಂದೊಂದು ಬಣ್ಣದ ವೇಷಗಳು ಮಾತ್ರವಲ್ಲ ಇತರ ಸಾಮಾನ್ಯ ವೇಷಗಳ ಪ್ರವೇಶಗಳಲ್ಲಿ ಸಹ  ಪ್ರಸಂಗಕ್ಕೆ ಹೊಂದಿಕೊಂಡು ಪ್ರವೇಶದ ಕ್ರಮಗಳಲ್ಲಿ ಬದಲಾವಣೆಗಳು ಇರುತ್ತವೆ . ಒಂದೇ ಪ್ರಸಂಗವಾದರೂ ಹಲವುಸಲ ಆದು ಪ್ರದರ್ಶನವಾಗುವ ಸಂದರ್ಭ ಮತ್ತು ಕಾಲಕ್ಕೆ ಹೊಂದಿಕೊಂಡು ಬದಲಾವಣೆಗಳನ್ನು ಮಾಡಲಾಗುತ್ತದೆ. ಕೆಲವೊಮ್ಮೆ ಆಡುವ ಪ್ರಸಂಗಗಳ ಕಾಲವನ್ನು ಗಣನೆಗೆ ತೆಗೆದುಕೊಂಡು ಪ್ರವೇಶದ ಕ್ರಮಗಳಲ್ಲಿ ವೆತ್ಯಾಸವನ್ನು ಕಾಣಬಹುದು. ಉದಾಹರಣೆಗೆ, ಅತಿಕಾಯ ಇಂದ್ರಜಿತು ಮೈರಾವಣ ಕಾಳಗ ಎಂಬ ಮೂರು ಪ್ರಸಂಗಗಳಲ್ಲಿ ಅತಿಕಾಯವನ್ನು ಬಿಟ್ಟು ಕೊನೆಗೆ ರಾವಣ ವಧೆ ಲವಕುಶ ಮುಂತಾದ ಪ್ರಸಂಗಗಳು ಸೇರ್ಪಡೆಯಾದಾಗ ಇಂದ್ರಜಿತು ಪ್ರಸಂಗ ಮಧ್ಯಕಾಲಕ್ಕೆ ಬದಲಾಗಿ ಆರಂಭದಲ್ಲೇ ಇರುತ್ತದೆ. ಆವಾಗ ಇಂದ್ರಜಿತುವಿನ  ಪ್ರವೇಶದಲ್ಲೂ ಪ್ರಸಂಗದ ನಡೆಯಲ್ಲೂ,  ಗತಿಯಲ್ಲೂ ಬಹಳಷ್ಟು ವೆತ್ಯಾಸಗಳಿರುತ್ತದೆ.  ಆರಂಭದ ಪ್ರಸಂಗಗಳಲ್ಲಿ ಸ್ವಲ್ಪ ಮಂದಗತಿಯಲ್ಲಿ ಪ್ರವೇಶವಾಗುವ ವೇಷಗಳು ಕಾಲ ಸರಿದಂತೆ ತೀವ್ರಗತಿಯಲ್ಲಿ ಪ್ರವೇಶಿಸುತ್ತವೆ. ಆದರೂ ವೇಷದ ಗಾಂಭೀರ್ಯ ಏಕಪ್ರಕಾರವಾಗಿರುತ್ತವೆ.   ಈ ಪ್ರವೇಶದ ವೈವಿಧ್ಯಗಳೇ ಬಹಳಷ್ಟು ಕೌತುಕಮಯವಾಗಿದೆ. ಆದರೆ ಇತ್ತೀಚೆಗೆ ಈ ಪ್ರವೇಶಗಳ ವಿಚಾರದಲ್ಲಿ  ಸಾಂಪ್ರದಾಯಿಕ ಕ್ರಮಗಳನ್ನು ಗಣನೆಗೆ ತೆಗೆದುಕೊಳ್ಳುವುದು ಸಹ ಕಡಿಮೆಯಾಗುತ್ತಿದೆ. ಕಾಲರೀತಿ ಮತ್ತು ಪ್ರಸಂಗ ರೀತಿಗಳಲ್ಲಿ ಇರುವ ವೆತ್ಯಾಸಗಳು ಅಯಾಯ ವೇಷಗಳು ಉಂಟುಮಾಡುವ ಪರಿಣಾಮವನ್ನು ಕೂಡ ವೆತ್ಯಾಸವನ್ನುಂಟುಮಾಡುತ್ತದೆ. ಒಂದು ಸಲ ಕ್ರಮಾಗತವಾಗಿ ಪ್ರವೇಶಿಸಿದ ವೇಷ ಪುನಹ ಪ್ರವೇಶವಾಗುವಾಗ ಆ ಕ್ರಮವನ್ನು ಅನುಸರಿಸುವುದಿಲ್ಲ. ಅರ್ಥಾ ಒಡ್ದೊಲಗ ಮುಂತಾದ ಕ್ರಮಗಳು ಒಂದು ಪಾತ್ರಕ್ಕೆ ಆರಂಭದಲ್ಲಿ ಮಾತ್ರವಿದ್ದು ಅದೇ ಪಾತ್ರ ಪುನಃ ಪ್ರವೇಶವಾದಾಗ ನೇರವಾದ ಪ್ರವೇಶವನ್ನೇ ನೀಡಲಾಗುತ್ತದೆ. ಉದಾಹರಣೆಗೆ ಮಂಡೋದರಿಯೊಂದಿಗೆ ಸಂಭಾಷಣೆ ಮಾಡಿದ ರಾವಣನ ವೇಷ ಅಂತ್ಯದಲ್ಲಿ ರಾಮನೊಡನೆ ಯುದ್ದಕ್ಕೆ ಹೊರಡುವಾಗ ಬಣ್ಣದ ವೇಷವಾಗಿ ಪ್ರವೇಶವಾಗುವಾಗ  “ ಅಳಿದುಳಿದ ಬಲ ಸಹಿತ ರಾವಣ.....” ಎಂಬ ಏರು ಪದದೊಂದಿಗೆ ನೇರ ಪ್ರವೇಶವನ್ನು ಕೊಡುವುದು ರೂಢಿ. ಇಂತಹ ವಿಚಾರಗಳನ್ನು ಗಮನಿಸುತ್ತ ಹೋದರೆ ಯಕ್ಷಗಾನದಲ್ಲಿ ವೇಷಗಳ ಪ್ರವೇಶದಲ್ಲೂ ಬಹಳ ವೈವಿಧ್ಯತೆಯನ್ನು ಕಾಣಬಹುದು.
ಯಕ್ಷಗಾನದ ವೇಷ ಪ್ರವೇಶಗಳು ಪ್ರಸಂಗದಿಂದ ಪ್ರಸಂಗಕ್ಕೆ ಬೇರೆಯಾಗಿರುತ್ತದೆ. ಸಂದರ್ಭಾನುಸಾರವಾಗಿ    ಪ್ರಸಂಗ ನಡೆಗೆ ಹೊಂದಿಕೊಂಡು  ಅದರಲ್ಲಿ ಸೂಕ್ತ ಬದಲಾವಣೆಯನ್ನೂ ತರಲಾಗುತ್ತದೆ.  ಇದು ಭಾಗವತರ ನಿರ್ಣಯದಂತೆ ಇರುತ್ತದೆ. ಪ್ರಸಂಗ ನಡೆಯಾಗಲಿ ವೇಷದ ಪ್ರವೇಶ ವಿಧಾನವಾಗಲಿ  ಸಾಮಾನ್ಯವಾಗಿ ಯಕ್ಷಗಾನದಲ್ಲಿ ಅನುಸರಿಸುವ ಒಂದು ಕ್ರಮವಿದೆ. ಅದು ಯಕ್ಷಗಾನ ತಾಳ ಮದ್ದಲೆಗೆ ಕೃಷ್ಣ ಸಂಧಾನ ಮಾದರೀ ಪ್ರಸಂಗವಾದರೆ,  ಯಕ್ಷಗಾನ ಬಯಲಾಟಕ್ಕೆ ದೇವಿಮಹಾತ್ಮೆ. ತಾಳ ಮದ್ದಲೆಯಲ್ಲಿ ಕೃಷ್ಣ ಸಂಧಾನದ ಪ್ರಸಂಗ ನಡೆಯನ್ನು ಅನುಸರಿಸಲಾಗುತ್ತದೆ. ತಾಳ ಮದ್ದಲೆಗೆ ಹೊಂದಿಕೊಂಡಂತಹ ಎಲ್ಲ ಸನ್ನಿವೇಶಗಳೂ ಇದರಲ್ಲಿ ಬರುವುದರಿಂದ ಕೃಷ್ಣ ಸಂಧಾನ ಪ್ರಸಂಗ ನಡೆ ಹೇಗಿದೆ ಅದನ್ನೇ ಮಾದರಿಯಾಗಿ ಅಳವಡಿಸಲಾಗುತ್ತದೆ. ಅದರೆಂತೇ ಬಯಲಾಟಗಳಲ್ಲಿ ದೇವಿ ಮಹಾತ್ಮೆ. ಇದು ಅತ್ಯಂತ ಯಕ್ಷಗಾನದ ಹೊರಾವರಣದ ಪ್ರಸಂಗ. ಯಕ್ಷಗಾನವೆಂದರೆ ದೇವಿಮಹಾತ್ಮೆ ಎಂಬ ಅನ್ವರ್ಥ ಹಾಸುಹೊಕ್ಕಾಗಿ ಇದೆ. ಒಂದು ಮೇಳದ ಸಾಮಾರ್ಥ್ಯವನ್ನು ಅಳೆಯುವ ಒಂದು ಅನಧಿಕೃತ ರೀತಿಯೆಂದರೆ ಅದು ದೇವಿ ಮಹಾತ್ಮೆ. ಎಲ್ಲಾ ವಿಧದ ವೇಷಗಳು ಅದು ಹೊಂದಿಕೊಂಡಂತೆ ಸನ್ನಿವೇಶವನೂ ಇಲ್ಲಿ ಬರುವುದರಿಂದ ದೇವಿ ಮಹಾತ್ಮೆ ಒಂದು ಮಾದರಿಯಾಗುತ್ತದೆ. ಒಂದು ಮೇಳೆ ದೇವಿ ಮಹಾತ್ಮೆಯನ್ನು ಆಡುತ್ತದೆ ಎಂದಾದರೆ ಅದು ಯಾವುದೇ ಪೌರಾಣಿಕ ಪ್ರಸಂಗವನ್ನಾಡುವುದಕ್ಕೂ ಸಾಮಾರ್ಥ್ಯವನ್ನು ಹೊಂದಿದೆ ಎಂದರ್ಥ. ಹಾಗಾಗಿ  ಯಾವುದೇ ಪ್ರಸಂಗ ನಡೆಯನ್ನು ನಿರ್ಣಯಿಸುವಾಗ ಒಂದು ವಿಧದ ವೇಷ ದೇವೀ ಮಹಾತ್ಮೆಯಲ್ಲಿ ಹೇಗಿರುತ್ತದೆ ಎಂಬುದನ್ನು ಪರಿಗಣಿಸುತ್ತಾರೆ.

ತೆಂಕುತಿಟ್ಟು ಯಕ್ಷಗಾನದಲ್ಲಿ ವೀರ ರಸವೇ ಪ್ರಧಾನವಾಗಿ ಗೋಚರವಾಗುವುದು ಅದರಲ್ಲಿನ ವೇಷಗಳ ಪ್ರವೇಶದ ವಿಭಿನ್ನತೆಯಿಂದ. ಗಾಂಭೀರ್ಯದಿಂದ ಕೂಡಿದ ವಿಶಿಷ್ಟ ಪ್ರವೇಶಗಳು ವೀರ ರಸವನ್ನೇ ಬಿಂಬಿಸುತ್ತದೆ. ಇದರಲ್ಲಿ ದೇವೇಂದ್ರಾದಿ ಸುಮನಸರ ಒಡ್ಡೊಲಗದಂತೆ ಪಾಂಡವರ ಒಡ್ದೋಲಗ,  ಇದರಲ್ಲೂ ರಾಜವೇಶದ ಪ್ರವೇಶಕ್ಕೆ ಬಹಳ ಮಹತ್ವವಿದೆ. ಇಲ್ಲಿ ಬರುವ  ದೇವೇಂದ್ರನ ಪ್ರವೇಶದಂತೆ ಅರ್ಜುನನ ಪ್ರವೇಶ ಇವೆರಡೂ ಯಕ್ಷಗಾನದ ಮಾದರೀ ರಾಜವೇಷಗಳು. ಯಕ್ಷಗಾನದ ಎಲ್ಲ ವೇಷಗಳ ಸಾಂಪ್ರದಾಯಿಕ ಪ್ರವೇಶವನ್ನು ಪರಿಗಣನೆಗೆ ತೆಗೆದುಕೊಂಡರೂ ರಾಜವೇಷದ ಪ್ರವೇಶದ ಗಾಂಭೀರ್ಯ, ಸೊಗಸು ನೋಡುವುದೇ ಒಂದು ಮಧುರಾನುಭವ. ಅಳಕೆ ರಾಮರೈ,  ಹೊಸಹಿತ್ಲು ಮಹಾಲಿಂಗ ಭಟ್, ಸಂಪಾಜೆ ಶೀನಪ್ಪರೈ ಮುಂತಾದ ಮಹಾನ್ ಕಲಾವಿದರು ರಾಜವೇಷಕ್ಕೆ ತಮ್ಮದೇ ದೇಣಿಗೆಯನ್ನು ಸಲ್ಲಿಸಿದ್ದರೆ ಇವರ ರಾಜವೇಷದ ಪ್ರವೇಶದ ಗತ್ತು ಗಾಂಭೀರ್ಯಗಳು ಯಕ್ಷಗಾನದ ಅದರಲ್ಲೂ ತೆಂಕುತಿಟ್ಟಿನ ವೈಶಿಷ್ಟ್ಯತೆಯನ್ನು ಸಾರುತ್ತವೆ.




Friday, March 7, 2014

ಅಹಂಭಾವ ಮತ್ತು ಅಭಿಮಾನ


ಹೊಗಳಿಕೆ ಹೊನ್ನ ಶೂಲವಯ್ಯಾ ಅಂತ ಬಲ್ಲವರು ತಮ್ಮ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ಹೊನ್ನ ಶೂಲದಂತೆ ಅದು ಸುಂದರವಾಗಿ ಕಾಣುತ್ತದೆ ಪರೋಕ್ಷವಾಗಿ ಅರಿವಿಲ್ಲದಂತೆ ಇರಿಯತೊಡಗುತ್ತದೆ. ವಿಚಿತ್ರವೆಂದರೆ ಹೊನ್ನ ಶೂಲ ಇರಿದು ಇರಿದು ತನ್ನ ಗಮ್ಯ ಸೇರಿದಮೇಲೆ ಹೊನ್ನಿನ ಬಣ್ಣವನ್ನೇ ಕಳೆದುಕೊಳ್ಳುತ್ತದೆ ಮಾತ್ರವಲ್ಲ ಹೊಗಳಿಕೆ ಎಂಬುದು ಮಾಯವಾಗಿಬಿಡುತ್ತದೆ. ಆದರೂ ಮಿಥ್ಯವಾದ ಈ ಹೊನ್ನಿನ ಶೂಲಕ್ಕೆ ಬೇಕೆಂದೇ ಎದೆ ಕೊಡುವುದು ಮಾತ್ರ ಮನಸ್ಸಿನ ವಿಕಲ್ಪಗಳಿಗೆ ಸ್ಪಷ್ಟ ಉದಾಹರಣೆಯಾಗಬಲ್ಲುದು. ಮನುಷ್ಯನ ಮಹತ್ವಾಕಾಂಕ್ಷೆಯಲ್ಲಿ ಮನ್ನಣೆ ಎಂಬುದು ಮೊದಲ ಸಾಲಿನಲ್ಲಿ ಕಂಡುಬಂದಾಗ ಅದರಹಿಂದೆಯೇ ಈ ಹೊನ್ನ ಶೂಲ ತನ್ನ ಪ್ರಭೆಯನ್ನು ಬೀರಲಾರಂಭಿಸುತ್ತದೆ. ಅದರಲ್ಲೂ ಸಾರ್ವಜನಿಕ ಜೀವನವಾಗಿದ್ದರಂತೂ ಇದು ಅನಿವಾರ್ಯವಾಗಿ ಈ ಪ್ರಭೆ ಬೇಡವಾಗಿದ್ದರೂ ಮೈತುಂಬೆಲ್ಲ ತನ್ನ ಪ್ರಭಾವವನ್ನು ಬೀರಿಬಿಡುತ್ತದೆ. ಆವಾಗ ಭಗವದ್ಗೀತೆಯ ಮಾತು ನೆನಪಿಗೆ ಬರುತ್ತದೆ.
ಯಂ ಹಿ ನ ವೃಥಯಂತ್ಯೇತೇ ಪುರುಷಂ ಪುರುಷರ್ಷಭ |
ಸಮ ದುಃಖಸುಖಂ ಧೀರಂ ಸೋಮೃತತ್ವಾಯ ಕಲ್ಪತೇ ||
( ಶೀತ ಉಷ್ಣಗಳಂತಹ ದ್ವಂದ್ವಗಳಿಗೆ ಯಾರು ಉದಾಸೀನರಾಗಿರುತ್ತಾರೋ, ಇವುಗಳು ಯಾರನ್ನು ಬಾಧಿಸುವುದಿಲ್ಲವೋ, ಯಾರಿಗೆನೋವು ನಲಿವು ಒಂದೇ ಆಗಿರುತ್ತವೆಯೋ ಅಂತಹ ಧೀರನು ಆತ್ಮನ ಅಮೃತತ್ವವನ್ನು ತಿಳಿಯುವುದಕ್ಕೆ ಅರ್ಹನಾಗುತ್ತಾನೆ.)

ಭಗವದ್ಗೀತೆಯಲ್ಲಿರುವ   ಶ್ಲೋಕವಿದು. ಸುಖ ದುಃಖ ನೋವು ನಲಿವಿಗೆ ಯಾರು ಸಮಚಿತ್ತವನ್ನು ಹೊಂದಿರುತ್ತಾರೋ  ಅವರು ನಿಜವಾದ ಪುರುಷನಾಗಿದ್ದು ಅಮೃತತ್ವದ ಹಾದಿಯಲ್ಲಿ ಸಾಗಬಹುದು. ಇದು ಕೇವಲ ಬದುಕಿನ ಸಂಕೇತ ಶಬ್ದಗಳು. ಇದು ವಿಶ್ಲೇಷಣೆಗೆ ಸಿಲುಕಿದಾಗ ವಿಶಾಲವಾದ ಅರ್ಥಗಳನ್ನು ಬಿಂಬಿಸುತ್ತವೆ.

ಸಮಚಿತ್ತ ಎಂಬುದು ಸಾರ್ವಜನಿಕ ಜೀವನವನ್ನು ತಬ್ಬಿಕೊಂಡವರಿಗೆ ಅತೀ ಅಗತ್ಯ. ಹೊಗಳಿಕೆ ಮತ್ತು ತೆಗಳಿಕೆ ಇದು ಸಾರ್ವಜನಿಕ ಜೀವನದ ದ್ವಂದ್ವ ಮುಖಗಳಲ್ಲಿ ಒಂದು. ಸಮುದ್ರ ಮಥನದ ದೇವಾಸುರರಂತೆ ಈ ಹೊಗಳಿಕೆ ಮತ್ತು ತೆಗಳಿಕೆ ಎರಡೂ ಬದಿಯಲ್ಲಿ ನಿಂತಿರುತ್ತದೆ. ವಿಪರ್ಯಾಸವೆಂದರೆ ಈ ಮಧ್ಯೆ ನಮ್ಮಲ್ಲಿರುವ ಅಮೃತತ್ವವು ನಮಗೆ ಅರಿವಿಲ್ಲದಂತೇ ಸೋರಿಹೊಗುತ್ತದೆ. ಅಲ್ಲಿ ಮನಸ್ಸು ಹೊಗಳಿಕೆ ಮತ್ತು ತೆಗಳಿಕೆಯ ಸ್ಪಂದನೆಯಲ್ಲೇ ಮುಳುಗಿರುತ್ತದೆ. ಸಮಚಿತ್ತವೆಂಬುದು ಸ್ಥಿರತೆ ಮತ್ತು ಬೆಳವಣಿಗೆಯ ಸಂಕೇತ. ಯಾವುದು ಎಲ್ಲಿವರೆಗೆ ಸ್ಥಿರವಾಗಿರಬಲ್ಲುದೋ ಅಲ್ಲಿ ತನಕ ಅದು ಬೆಳವಣಿಗೆಯನ್ನು ಕಾಣುತ್ತದೆ. ಕಲಾವಿದನಿಗೆ ಇದು ಅತ್ಯವಶ್ಯ.

ಇದೇ ಬಗೆಯಲ್ಲಿ ಅಭಿಮಾನ. ಯಾವುದೇ ಒಂದು ವಿಚಾರ ಪ್ರಿಯವಾದಾಗ ಜತೆಯಲ್ಲೆ ಅದರ ಬಗ್ಗೆ ಬೆಳೆದು ಬರುವ ಮೋಹ ಅಭಿಮಾನವಾಗಿ ಬದಲಾಗುತ್ತದೆ. ಅಭಿಮಾನ ಸ್ಥಿರತೆಯನ್ನು ಹೊಂದಿದ್ದರೆ ಅದು ಮನದ ಮೂಲೆಯಲ್ಲಾದರೂ ಜೀವಂತವಾಗಿರುತ್ತದೆ. ಅನುಕೂಲ ಸಮಯದಲ್ಲಿ ತೃಣವೂ ಚಿಗುರಿದಂತೆ ಅದು ಬೇಕಾದಾಗ ಚಿಗುರಿ ನಂತರ ಅಂತಸತ್ವವನ್ನು ಜೀವಂತವಾಗಿರಿಸಿ ಅಂತರಂಗದಲ್ಲಿ ಹುದುಗಿಕೊಳ್ಳುತ್ತದೆ. ಆದರೆ ಅಹಂಭಾವದಿಂದ ಕೂಡಿದ ಅಭಿಮಾನ ಚಂಡ ಮಾರುತಕ್ಕೆ ಸಿಕ್ಕಿದ ಬಳ್ಳಿಯಂತೆ ತನ್ನ ಹೊಲಬನ್ನು ಮರೆತುಬಿಡುತ್ತದೆ. ಅಭಿಮಾನ ಹುಟ್ಟಿಕೊಂಡಾಗ ಪೂರ್ವಾಗ್ರಹವೂ ಜತೆಯಲ್ಲೇ ಹುಟ್ಟಿಕೊಳ್ಳುತ್ತದೆ. ಈ ಪೂರ್ವಾಗ್ರಹ ಎಲ್ಲವನ್ನೂ ಕುರುಡಾಗಿಸುತ್ತದೆ. ಆವಾಗಲೇ ಅಭಿಮಾನ ಅಂಧಾಭಿಮಾನವಾಗುವುದು. ಇದು  ಅಭಿಮಾನವು ಬೆಳೆಯುವ ಹಾದಿಯನ್ನೇ ಮರೆಸಿಬಿಡುತ್ತದೆ. ಪೂರ್ವಾಗ್ರಹದಿಂದ ಪ್ರಚೋದಿತ ಅಭಿಮಾನ ಉಳಿದ ಎಲ್ಲಾ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಒಬ್ಬ ಕಲಾವಿದನಲ್ಲಿ ಅಪರಿಮಿತ ಅಭಿಮಾನವನ್ನು ಪೂರ್ವಾಗ್ರಹದಿಂದ ತೋರಿದಾಗ, ಹಲವು ಸಲ ಅದೇ  ಕಲಾವಿದನಲ್ಲಿ ಅದು ಅಹಂಭಾವವನ್ನು ಬೆಳೆಸುತ್ತದೆ. ಅಹಂಭಾವ ಅಥವಾ ಅಹಂಕಾರ ಎಂಬುದು ಕಲೆಯ ಕಣ್ಣುಗಳನ್ನೇ ಮುಚ್ಚಿಬಿಡುತ್ತದೆ.  ಉನ್ನತಿಯ ಹಾದಿಯೇ ಮುಚ್ಚಿಕೊಂಡ ಮೇಲೆ ಕಲೆಯ ಉನ್ನತಿ ಹೇಗೆ ಸಾಧ್ಯ? ಸಮಚಿತ್ತ ಹೊಂದಿದಲ್ಲಿ ಅಹಂಭಾವ ದೂರವಾಗಿ ಉನ್ನತಿಯ ಹಾದಿ ಸುಗಮವಾಗುತ್ತದೆ.

ಇಂದು ಯಕ್ಷಗಾನದಲ್ಲಿ ಈ ಎರಡು ವಿಚಾರಗಳು ಬಹಳಷ್ಟು ವೈಷಮ್ಯವನ್ನೇ ಹುಟ್ಟಿಸುತ್ತದೆ. ಸಾಮರಸ್ಯ ಸಮಾಧಾನ ಇಲ್ಲವಾದರೆ ಚಿತ್ತ ಚಾಂಚಲ್ಯ ಉಂಟಾಗುತ್ತದೆ. ಕ್ಷೋಭೆ ತುಂಬಿದ ಮನಸ್ಸಿನಿಂದ ಪ್ರಾಮಾಣಿಕ ಕಲಾಸ್ವಾದನೆ ಸಾಧ್ಯವಾಗುವುದಿಲ್ಲ. ಕಲೆಯ ಮೇಲೆ ಅಥವಾ ಕಲಾವಿದನ ಮೇಲೆ ಅಭಿಮಾನ ಹೊಂದುವುದು ಹಲವು ಸಲ ಇನ್ನೊಬ್ಬನಲ್ಲಿ ದ್ವೇಷವನ್ನೇ ಹುಟ್ಟಿಸುತ್ತದೆ.  ಕಲೆ ಎಂಬುದು ಮನಸ್ಸನ್ನು ನವಿರಾಗಿಸಬೇಕೇ ಹೊರತು ದ್ವೇಷ ಮಾತ್ಸರ್ಯವನ್ನು ಪ್ರಚೋದಿಸುವಂತಾದರೆ ಮೂಲ ಭಾವನೆಯನ್ನೇ ಅಪಹಾಸ್ಯ ಮಾಡಿದಂತೇ ಅಲ್ಲವೇ?

ಮೇಳದಲ್ಲಿ ಹಿರಿಯ ಭಾಗವತನೊಬ್ಬನಿರುತ್ತಾನೆ. ಜತೆಗೆ ಈತನ ನಂತರ ಬಂದ, ಈತನ ಮಾರ್ಗದರ್ಶನದಲ್ಲೇ ಬೆಳೆಯುವ ಯುವ ಭಾಗವತ ಬರುತ್ತಾನೆ. ಹೊಸಚಿಗುರು ಚಿಗುರದೇ ಇದ್ದರೆ ಬೆಳವಣಿಗೆ ಹೇಗೆ ಸಾಧ್ಯ? ಬೆಳೆದ ಯುವ ಭಾಗವತ ಬೆಳೆಯುತ್ತಾ ಬೆಳೆಯುತ್ತ ಹಿರಿಯನಿಂದಲೂ ಪ್ರಧಾನನಾಗಿಬಿಡುತ್ತಾನೆ.  ಹಿರಿಯವನು ಮುಟ್ಟುವ ಗಮ್ಯವನ್ನು ಏರುವ ಎತ್ತರವನ್ನು ಅದಾವಗಲೋ ಮುಟ್ಟಿಯಾಗಿರುತ್ತದೆ. ಪರಿಪಕ್ವತೆಯ ಪರಮೋಚ್ಚ ಸ್ಥಿತಿಗೆ ತಲುಪಿದವನು ಈ ಯುವ ಶಕ್ತಿಯನ್ನು ಬೆಳೆಸಿದರೆ ಅದು ಆತನ ನಿಜವಾದ ಕಲಾ ಸ್ನೇಹವನ್ನು ತೋರಿದಂತಾಗುತ್ತದೆ. ತನಗೆ ಬದುಕು ಕೊಟ್ಟ ಕಲೆಯ ಸೇವಯನ್ನು ಅರ್ಥ ಪೂರ್ಣವಾಗಿ ಮಾಡಿದಂತಾಗುತ್ತದೆ. ಇಲ್ಲಿ ಯುವ ಶಕ್ತಿ ಪ್ರಖರವಾಗುತ್ತದೆ ಎಂದರೆ ಹಿರಿಯವನು ಮಸುಕಾಗುತ್ತಾನೆ ಎಂದರ್ಥವಲ್ಲ. ತನ್ನ ಸರದಿ ಮುಗಿಸಿದ ಕೃತಾರ್ಥತೆ ಇಲ್ಲಿರಬೇಕೇ ಹೊರತು ಪರಾಜಯವಲ್ಲ. ಹೊಸಚಿಗುರು ಉತ್ಸಾಹದಲ್ಲಿ ಸೆಟೆದು ನಿಂತಾಗ ಬಲಿತ ಎಲೆ ಅದಕ್ಕೆ ಬಲವನ್ನು ನೀಡುತ್ತದೆ. ಅದು ಅದರ ಅಪಜಯವಲ್ಲ. ತಂದೆ ಎತ್ತಲಾಗದ ಹೊರೆಯನ್ನು ಮಗ ಹೊರುತ್ತಾನೆ ಎಂದಾದರೆ ಅದು ತಂದೆಯ ಪರಾಜಯ ಹೇಗಾಗುತ್ತದೆ? ಹಲವು ಸಲ ವಾಸ್ತವದ ಸತ್ಯವನ್ನು ಸದ್ಬಾವನೆಯಿಂದ ಹಿರಿಯಾತ ಒಪ್ಪಿಕೊಂಡರೂ ಇಂದು ಸುತ್ತಲಿನ ಪರಿಸರ ಆತನನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿಬಿಡುತ್ತದೆ. ಇದಕ್ಕೆ ಕಾರಣ ಅದೇ ಅಭಿಮಾನ, ಅಂಧಾಭಿಮಾನ.  ಕಲೆಯನ್ನು ಕಾಣುವ ದೃಷ್ಟಿಕೋನವೇ ಇಲ್ಲಿ ಪ್ರಶ್ನಾರ್ಹವಾಗಿಬಿಡುತ್ತದೆ. ಅಭಿಮಾನವೂ ದುರಹಂಕಾರಿಯಾಗಿಬಿಡುತ್ತದೆ.

ಇಂದು ಕಲಾವಿದ ಕಲಾವಿದರೊಳಗೆ ಅಭಿಮಾನಿ ಅಭಿಮಾನಿಗಳೊಳಗೆ ಈ ದುರಹಂಕಾರೀ ಪ್ರವೃತ್ತಿಯಿಂದ ದ್ವೇಷ ಮಾತ್ಸರ್ಯ ಹೆಡೆಯಾಡುತ್ತದೆ.  ದ್ವೇಷ ಶತ್ರುತ್ವ ಇದ್ದಲ್ಲಿ ಯಾವುದೇ ಸತ್ಕ್ರಿಯೆಯು ಸತ್ಫಲವನ್ನು  ಕೊಡುವುದಿಲ್ಲ. ದುಷ್ಪರಿಣಾಮವೇ ಕಂಡುಬರುತ್ತದೆ. ಮನೆಯಲ್ಲಿರುವ ನಾಯಿಗಳಿಗೆ ಯಜಮಾನ ತಿನಿಸನ್ನು ಹಾಕಿದಾಗ ಅವು ಎಲ್ಲವನ್ನು ಮರೆತು ಕಚ್ಚಾಡುವುದಕ್ಕೆ ತೊಡಗುತ್ತವೆ. ಮಾತ್ರವಲ್ಲ ಕಚ್ಚಾಡುತ್ತಾ  ಯಜಮಾನ ಹಾಕಿದ ತಿನಿಸನ್ನು ಮೂರಾಬಟ್ಟೆ ಮಾಡಿ ನಾಶಮಾಡಿಬಿಡುತ್ತವೆ. ಒಂದು ಉತ್ತಮವಾದ ಕ್ರಿಯೆ ಇಲ್ಲಿ ಪರಸ್ಪರ ದ್ವೇಷದಿಂದ ದುಷ್ಪರಿಣಾಮವನ್ನು ಬೀರುವುದನ್ನು ಕಾಣುತ್ತೇವೆ. ಅದುದರಿಂದ ಯಾವುದೇ ಕ್ಷೇತ್ರದಲ್ಲಿ ನೀವು ಸತ್ಕ್ರಿಯೆಯ ಬಿತ್ತನೆಯನ್ನು ಮಾಡುವುದಕ್ಕಿಂತಲೂ ಅಲ್ಲಿಯ ದ್ವೇಷವನ್ನು ಹೋಗಲಾಡಿಸಿ ಸ್ನೇಹ ಸೌಹಾರ್ದವನ್ನು ಕಾಯುವಂತೆ ಮಾಡುವುದು ಮೊದಲು ಆಗಬೇಕಾದ ಕೆಲಸ. ಇಂದು ಸಮಾಜಕ್ಕೆ ವಿದ್ಯಾದಾನ ಮಾಡಬಹುದು, ಆಹಾರ ನೀಡಬಹುದು ಅಥವಾ ಮನೆಕಟ್ಟಿ ಊರನ್ನೇ ನಿರ್ಮಾಣ ಮಾಡಿಕೊಡಬಹುದು. ಎಲ್ಲದಕ್ಕಿಂತ ಮೊದಲು ಅಲ್ಲಿ ಸ್ನೇಹ ಸೌಹಾರ್ದವನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇಲ್ಲವಾದರೆ ನೀಡುವ ಕೊಡುಗೆ ಸದ್ವಿನಿಯೋಗವಾಗದೆ ಕೆಟ್ಟ ಪರಿಣಾಮವನ್ನೇ ಬೀರುತ್ತದೆ.


ಆದುದರಿಂದ ಈ ಯಕ್ಷಗಾನ ಕಲಾಪ್ರಪಂಚದಲ್ಲಿ ಪರಸ್ಪರ ದ್ವೇಷ ಆಸೂಯೆಯೆಂಬ ಅಹಂಕಾರವನ್ನು ತೊರೆದಲ್ಲಿ ಕಲೆಗೆ ನೀಡುವ ಯಾವುದೇ ಕೊಡುಗೆಯು ಸದ್ವಿನಿಯೋಗವಾಗುತ್ತದೆ. 

Tuesday, February 25, 2014

ಅಪವಿತ್ರ ಸಿಂಹಾಸನ

          
          ತಲೆ ಬರಹವೇ ಒಂದು ವಿಷಮದಿಂದ ಆರಂಭವಾಗುತ್ತದೆ. ಆದರೂ ವಿಷಮವೇ ಮಥನದಲ್ಲಿ ಮೊದಲು ಬಂದಂತೆ ತಿಳಿದುಕೊಂಡು ಮುಂದುವರಿಯುವ.


ಹತ್ತಿರದ ಮನೆಯೊಂದರಲ್ಲಿ ಸಮಾರಂಭವೊಂದು ನಡೆಯುತ್ತದೆ. ಅದಕ್ಕಾಗಿ ನೆರೆಕರೆಯವರಿಂದ ಹಲವಾರು ವಸ್ತುಗಳನ್ನು ಒಂದು ಸಲದ ಉಪಯೋಗಕ್ಕಾಗಿ ಎರವಲು ತರುವುದುಂಟು. ಹಾಗೆ ಒಂದು ಮನೆಯಿಂದ ದೇವರ ಪೂಜೆಗಾಗಿ ಮೀಸಲಿರಿಸಿದ್ದ ಗಿಂಡಿಯನ್ನು ತರುತ್ತಾರೆ. ಆ ಮನೆಯಾತ ದೇವರ ಸೇವೆಗಲ್ಲವೇ ಎಂದುಕೊಂಡು ಸಂತೋಷದಿಂದ ಕೊಡುತ್ತಾನೆ. ನಂತರ ಎರವಲು ಕೊಟ್ಟವನು ಅದೇ ಮನೆಗೆ ಹೋದಾಗ ಪೂಜೆಗೆ ಕಲಶವಾಗಿ ಉಪಯೋಗಿಸಲ್ಪಡಬೇಕಾದ ಗಿಂಡಿ ಇನ್ನೆಂತದೋ ಅಪವಿತ್ರ  ಕ್ರಿಯೆಗೆ ಉಪಯೋಗವಾಗುವುದನ್ನು ಕಾಣುತ್ತಾನೆ. ಅವಾಗ ಆತನ ಮನಸ್ಸಿಗಾಗುವ ವೇದನೆ ಎಂತಹುದಾಗಿರಬೇಡ.

          ನಮ್ಮಲ್ಲಿ ಔಷಧಿ ತರುವುದಕ್ಕಾಗಿ ಉಪಯೋಗಿಸುವ ಬಾಟ್ಲಿ ಎರವಲು ತೆಗೆದುಕೊಂಡವನು ಅದರಲ್ಲಿ ಮದ್ಯವನ್ನು ತರುತ್ತಾನೆ ಎಂದಾದರೆ ನಮಗಾಗುವ ನೋವಿನ ಪರಿಮಾಣ ವಿವರಿಸುವುದು ಸಾಧ್ಯವೇ?

ಇತ್ತೀಚೆಗೆ ಮೌನದ ಬಿಗುಮಾನವನ್ನೇ ಹೊತ್ತು ಬಂದ ಒಂದು ಈ-ಮೇಲ್ ಸಂದೇಶದಲ್ಲಿನ ಯಕ್ಷಗಾನ  ಪೋಟೋಗಳನ್ನು ಕಂಡಾಗ ಸತ್ಯ ಹೇಳಬೇಕೆಂದರೆ ಇದೇ ನೋವುಗಳನ್ನು ಅನುಭವಿಸಿದಹಾಗಿತ್ತು. ನಮ್ಮ ಮನೆಯ ಪವಿತ್ರ ಪಾತ್ರೆಯಲ್ಲಿ ನೆರೆ ಮನೆಯವನು ಹೆಂಡವನ್ನು ಕ್ಷುದ್ರ ದೇವರಿಗೆ ಅರ್ಪಿಸುತ್ತಾನೆ ಎಂದಾದರೆ ಮಾಡುವುದೇನು? ನಮಗೆ ಅಪವಿತ್ರ ಎನಿಸಿದ್ದು ಅವನಿಗೆ ಪವಿತ್ರವಾಗಿರುವುದಕ್ಕೆ ಯಾರನ್ನು ಹೇಳಬೇಕು? ಇದು ಕೇವಲ ನನ್ನ ಮನಸ್ಸಿನ ಚಿಂತನೆಗೆ ಮಾತ್ರವೇ ಸೀಮಿತವಾಗಿ ವ್ಯಕ್ತವಾಗುವ ನೋವಿನ ನಿಟ್ಟುಸಿರು. ಈ ಗೌರವದ ಭಾವನೆಯೇ ಅಪರಾಧವಾಗಿ ಪರಿಣಮಿಸಿತೇ ಎಂಬ ಭ್ರಮೆ ಆವರಿಸಿಬಿಡುತ್ತದೆ. ಇಲ್ಲಿ ನಮ್ಮ ಭಾವನೆಗಳನ್ನೇ ನಾವು ವಿಮರ್ಶಿಸುವ ಅನಿವಾರ್ಯತೆ ಬಂದು ಬಿಡುತ್ತದೆ.

ಯಕ್ಷಗಾನ ಇಂದು ಹಲವಾರು ರೀತಿಯಲ್ಲಿ ಸಂಕ್ರಮಣ ಕಾಲವನ್ನು ಅನುಭವಿಸುತ್ತಿದೆ. ಒಂದು ಬದಿ ಅದರ ಸಾಂಸ್ಕೃತಿಕ ಹಿರಿಮೆ ಗರಿಮೆಗಳಿಂದ ಹೆಮ್ಮೆ ಎನಿಸುವ ಹಾಗೆ ಮಾಡಿದರೆ,  ಮತ್ತೊಂದು ಮಗ್ಗುಲು ಖಿನ್ನತೆಯ ದುರಂತವನ್ನೇ ಎದುರು ತಂದು ನಿಲ್ಲಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನದ ಚೆಂಡೆನಾದ ಕೇಳಿಸುತ್ತದೆ ಎಂದಾಗ ಹಲವು ಸಲ ಒಂದು ರೀತಿಯ ರೋಮಾಂಚನವಾಗುವ ಕಾಲವಿತ್ತು. ಆದರೆ ಈಗ “ಅಂತಾರಾಷ್ಟ್ರೀಯ ಮಟ್ಟಕ್ಕೆ ಯಕ್ಷಗಾನ”  ಎಂಬ ಕೆಲವು ಅಕ್ಷರ ನೋಡಿದೊಡನೆ ಗಾಬರಿ, ದಿಗಿಲು, ಭಯ ಎಲ್ಲಾ ಒಟ್ಟಾಗಿ ಆಗಿಬಿಡುತ್ತದೆ. ಅದಕ್ಕೆ ಕಾರಣ ಲಂಡನ್ ನ ಬೀದಿಯಲ್ಲಿ ಯಕ್ಷಗಾನ ತೆರೆದುಕೊಂಡ ಅಸಹ್ಯಕರ ರೀತಿ. ಈ ಫೋಟೋಗಳನ್ನು ಕಂಡಾಗ ಮನಸ್ಸು ತಲ್ಲಣಿಸದೇ ಇರಲು ಸಾಧ್ಯವೇ? 

          ಒಂದೆರಡು ಸಾವಿರಗಳನ್ನು ಖರ್ಚುಮಾಡಿ ಬಯುಲಾಟವೋ ತಾಳಮದ್ದಲೆಯೋ ಮಾಡಿ ತಮ್ಮ ಬಡ ಅಭಿಮಾನವನ್ನು ಪ್ರಕಟಿಸುವವರಿಗೆ, ಈ ಲಕ್ಷಗಳ ಬಜೆಟ್ ಕೇಳುವಾಗಲೇ ಗಾಬರಿಯಾಗಿ ಕೀಳರಿಮೆ ಹುಟ್ಟಿಬಿಡಬೇಕು. ನಮ್ಮ ಯಕ್ಷಗಾನಕ್ಕೂ ಬೃಹತ್ ಭಂಡವಾಳ ಹರಿದು ಬಂತಲ್ಲ. ಇದನ್ನು ಕಲ್ಪಿಸುವುದಕ್ಕೂ ಕಷ್ಟವಾದ ಭ್ರಮಾಲೋಕದಂತೆ ಭಾಸವಾಗಿತ್ತು. ಆದರೆ ಈಗ ಈ ಪೋಟೋಗಳು ಇದನ್ನೆಲ್ಲ ಹುಸಿಯನ್ನಾಗಿಸೀತೆ ಎಂಬ ಸಂಶಯ ಮೂಡಿಸಿದೆ. ಸಂಶಯವಲ್ಲ. ಆ ಭ್ರಮೆ ಕಳಚಿ ಬಿದ್ದಿದೆ ಎಂದು ಹೇಳಿಬಿಡಬೇಕು.  ಆ ಪ್ರಸಿದ್ಧಿಯ ಗರಿಮೆಯೇ ಬೇಡವಾಗಿತ್ತು.  ಅಂತಾರಾಷ್ಟ್ರೀಯ ಮಟ್ಟಕ್ಕಿಂತಲೂ ನಮ್ಮ ನಿಮ್ಮ ಅಂಗಳದ ತಾಳಮದ್ದಲೆಯಲ್ಲೇ ತೃಪ್ತಿ ಅನುಭವಿಸಬಹುದಿತ್ತು.

          ಮನುಷ್ಯನ ಜೀವನದಲ್ಲಿ ಅಡಕವಾಗಿರುವ ಹಲವು ವಿಚಾರಗಳಿಗೆ ಜೀವನ ಶೈಲಿಗೆ ಒಂದು ನೀತಿ ಸಂಹಿತೆ ಪ್ರಕಟವಾಗಿಯೋ ಪ್ರಕಟವಾಗದೆಯೋ ಇರುತ್ತದೆ. ಒಬ್ಬ ವಾಹನ ಚಾಲಕ, ಕಾರ್ಖಾನೆಯ ಕಾರ್ಮಿಕ ಅಥವಾ ಆಸ್ಪತ್ರೆಯ ವೈದ್ಯರು,  ನರ್ಸ್ ಗಳು ಇವರಿಗೆ ಕರ್ತವ್ಯ ನಿರತರಾಗಿರುವಾಗ ಒಂದು ನೀತಿ ಸಂಹಿತೆ ಪಾಲಿಸಲ್ಪಡುತ್ತದೆ. ಇವರೆಲ್ಲ ಕರ್ತವ್ಯ ನಿರ್ವಹಿಸಿ ಆ ಕ್ಷೇತ್ರದಿಂದ ಹೊರಬಂದಾಗ  ತಮ್ಮ ಸಮವಸ್ತ್ರಗಳನ್ನೋ ಅಥವಾ ಇನ್ನಿತರ ವಸ್ತುಗಳನ್ನೂ ದೂರವಿಟ್ಟು ಸಾರ್ವಜನಿಕ ಲೋಕಕ್ಕೆ ತೆರೆದುಕೊಳ್ಳುತ್ತಾರೆ. ಸಮವಸ್ತ್ರ ಆಯಾಯ ಕ್ಷೇತ್ರದಲ್ಲಷ್ಟೇ ವೃತ್ತಿ ಗೌರವದಿಂದ ಬಳಕೆಯಾಗುತ್ತದೆ. ಹೊರ ಪ್ರಪಂಚದಲ್ಲಿ ಅದೆಲ್ಲವನ್ನು ಕಳಚಿಟ್ಟು ಸಾಮಾನ್ಯರಂತೆ ಗುರುತಿಸುವುದನ್ನು ರೂಢಿಯಾಗಿಸಿಕೊಂಡರೆ, ಇಲ್ಲಿ ನೋಡಬಾರದೇ ಯಕ್ಷಗಾನದ ವೇಶಗಳು ಜೋಕರ್ ಗಳಂತೆ ರಸ್ತೆಯಲ್ಲಿ ಅಸಹ್ಯವಾಗಿ ಕುಣಿದಾಡುತ್ತದೆ. ಬಿಳಿ ತೊಗಲಿಗರ ಮನರಂಜನೆಗೆ ಏನನ್ನಾದರೂ ಮಾಡುವ ಯಾವ ಕೋಲವನ್ನಾದರೂ ಕಟ್ಟುವ ಉತ್ಸಾಹದಲ್ಲಿದ್ದಂತೆ ಭಾಸವಾಗುತ್ತದೆ.  ರಂಗಸ್ಥಳದ ಬೆಳಕಿನಲ್ಲಿ ಕುಣಿದು ಭ್ರಮಾಲೋಕವನ್ನು ಸೃಷ್ಟಿಸಬೇಕಾದ ವೇಷಗಳು ಯಾವ ಗೌಪ್ಯತೆಯೂ ಉಳಿಯದಂತೆ ಎಲ್ಲವನ್ನು ತೆರೆದು ಬೆಳಕಿಗೆ ಬಂದು ನಿಂತಿದೆ.   ಹಾಗಾದರೆ ನಾವು ಅಭಿಮಾನದಿಂದ ನಮ್ಮ ಸಂಸ್ಕೃತಿಯ ಭಾಗವಾಗಿ ಕಾಣುವ ಯಕ್ಷಗಾನಕ್ಕೆ ಇದಾವ ಘನತೆಯೂ ಇಲ್ಲದಾಗಿ ಬತ್ತಲಾಗಿಬಿಟ್ಟಿತೆ?   ಇವುಗಳಿಗೆ ಒಂದು ಕ್ಷೇತ್ರ ಪರಿಧಿ ಎಂಬುದಿಲ್ಲವೇ?  ನಿಜಕ್ಕೂ ಆತಂಕವಾಗುತ್ತದೆ. ಎತ್ತರಕ್ಕೆ ಹಾರುವಾಗ ಎಷ್ಟು ರೋಮಾಂಚನವಾಗುತ್ತದೋ ಬಿದ್ದಾಗ ನಾವು ಕಲ್ಪಿಸಿಕೊಂಡ ನೆಲೆಯೇ ಕಳೆದು ಹೋಗಿ ಪ್ರಪಾತವಾಗಿಬಿಡುತ್ತದೆ. ಎತ್ತರಕ್ಕೆ ಏರಿದಂತೆ ನಾವು ಬೀಳುವ ಎತ್ತರದ ಅಂತರವೂ ಏರುತ್ತಾ ಸಾಗುತ್ತದೆ ಎಂಬ ಸಾಮಾನ್ಯ ಕಲ್ಪನೆಯೂ ನಮಗಿಲ್ಲವಾಗುತ್ತದೆ.

ವಿದೇಶೀ ರಸ್ತೆಗಳಲ್ಲಿ ಯಕ್ಷಗಾನದ ವೇಷಗಳನ್ನು   ವಿದೇಶಿಗರು ವಿಸ್ಮಯ ದೃಷ್ಟಿಯಿಂದ ಕಂಡರೂ ನನ್ನ ಮನಸ್ಸೇಕೋ ಅವಮಾನದಿಂದ ಖಿನ್ನತೆಯನ್ನು ಅನುಭವಿಸಿ ಕುಗ್ಗಿ ಹೋಗುತ್ತದೆ. ಕಾಲಿಗೆ ಬೂಟು ತೊಟ್ಟ ಯಕ್ಷಗಾನದ ವೇಷಗಳು. ಇದು ಕ್ರಾಂತಿಯ ಸಂಕೇತವೇ? ಯಕ್ಷಗಾನ ಬಾನೆತ್ತರಕ್ಕೆ ಏರಿದ ಸಂಕೇತವೇ? ಅರ್ಥವಾಗುವುದಿಲ್ಲ. ಹೀಗಾದರೆ ಪಂಚವಟಿಯ ಮಾಯಾ ಶೂರ್ಪನಖಿ ರಾಮನನ್ನು ಆಕರ್ಷಿಸುವುದಕ್ಕೆ ಸ್ಕರ್ಟ್,  ಬಿಕಿನಿಯಲ್ಲಿ ಬರಬಹುದೇ? ಅವಾಗ ಪಡ್ಡೆ ಹೈಕಳ ಶಿಳ್ಳೆ ಯಾವ ರೀತಿಯದ್ದಾಗಿರಬಹುದು? ಇಂತಹ ಕಾರಣಗಳಿಂದ ಲಕ್ಷ ಲಕ್ಷಗಳು ಇಲ್ಲಿ ಭಂಡವಾಳವಾಗಿ ಕಾಣುವುದು. ಯಕ್ಷಗಾನಕ್ಕೆ ಲಕ್ಷ ಲಕ್ಷ ಖರ್ಚು ಮಾಡುವುದು ಇಂದು ಹೊಸತೇನಲ್ಲ. ಆದರೆ ಅಲ್ಲಿ ಅದು ಭಂಡವಾಳವಾಗಿ ಕಂಡುಬರುವುದಿಲ್ಲ. ಹೆಚ್ಚೆಂದರೆ  ಅಭಿಮಾನ ಇನ್ನು ಕೆಲವೊಮ್ಮೆ ಮರುಳು ಎಂದೂ ಕರೆಸಿಕೊಳ್ಳಬಹುದು.

ಯಕ್ಷಗಾನ ಕಲೆ ರಂಗಸ್ಥಳ ಬಿಟ್ಟು ಬರುವುದಕ್ಕೂ ಒಂದು ಮಿತಿ ಇರುತ್ತದೆ. ಮಹಿಷಾಸುರನೋ ಇನ್ನಾವುದೋ ವೇಷಗಳು ರಂಗಸ್ಥಳದ ಹೊರಗೆ ಒಂದಷ್ಟು ಸಭೆಯನ್ನು ರಂಗವಾಗಿ ಬಳಕೆ ಮಾಡುವುದುಂಟು. ಆವಾಗೆಲ್ಲ ಅದು ಔಚಿತ್ಯ ಮೀರಿದೆ ಎಂದನಿಸುವುದಿಲ್ಲ. ಮೀರಿದರು ಅದು ಅದರ ಅಂಗವಾಗಿ ಪರಿಗಣಿಸಬಹುದು. ಆದರೆ ಅಂತಹ ವಿದ್ಯಮಾನಗಳನ್ನೇ ಕೆಲವೊಮ್ಮೆ ಸಹಿಸುವುದಕ್ಕೆ ಮನಸ್ಸು ಮುಜುಗರವನ್ನು ಅನುಭವಿಸುತ್ತಿರಬೇಕಾದರೆ.. ಇದು ಲಂಡನ್ ಬೀದಿಯಲ್ಲಿ..... ಶೂ ಧರಿಸಿ ...ಬಹಳ ಅಸಹ್ಯವೆಂದೆನಿಸುತ್ತದೆ.

          ದೇವಾಲಯದ ಗರ್ಭಗುಡಿಯೊಳಗಿನ ದೇವರು ನಂದಾದೀಪದ ಮಂದ ಬೆಳಕಿನಲ್ಲಿ ಅಸ್ಪಷ್ಟವಾಗಿ ಕಂಡಾಗ ಭಯ ಭಕ್ತಿ ಮೂಡಿಸಿದರೆ... ಅದೇ ದೇವರ ಮೂರ್ತಿಯನ್ನು ಹೊರಗೆ ಪ್ರಕಾಶಕ್ಕೆ ತಂದಾಗ ಆ ಭಾವನೆಯೂ ಹಲವು ಸಲ ಬದಲಾಗಿ ಬಿಡುತ್ತದೆ. ಆ ಭಯ ಭಕ್ತಿ ಉಳಿಯುವುದೇ ಇಲ್ಲ. ಯಕ್ಷಗಾನವನ್ನು ನಾವೆಲ್ಲ ಕಂಡುಕೊಂಡ ಪರಿಯೂ ಅಂತಹುದೇ. ಮಂದ ಬೆಳಕಿನಲ್ಲಿ ಯಕ್ಷಗಾನದ ವೇಷಗಳು ಹುಟ್ಟಿಸುವ ಭಾವನೆ ಅವುಗಳು ರಸ್ತೆ ಮಧ್ಯೆ ಬೆಳಕಿಗೆ ಬಂದು ನಿಂತಾಗ ಉಳಿಯುವುದಿಲ್ಲ. ಗೌಪ್ಯವಾಗಿರಬೇಕಾದ ಹಲವು ಸಂಗತಿಗಳು ಅಲ್ಲಿ ಬಹಿರಂಗವಾಗಿ ಅಸಹ್ಯವಾಗಿ ಕಾಣುತ್ತದೆ. ಅದು ವೇಷಭೂಷಣವಾಗಬಹುದು, ಮುಖವರ್ಣಿಕೆಯಾಗಬಹುದು.. ಅದನ್ನು ಕಾಣುವ ರೀತಿಯಲ್ಲಿ ಕಂಡಾಗಲೇ ಅದರ ಗೌರವ ಭಾವನೆಗೆ ಮಾನ್ಯತೆ ದೊರಕುತ್ತದೆ. ರಂಗದ ಮಂದ ಬೆಳಕಿನಲ್ಲಿ ಮುತ್ತು ರತ್ನದಂತೆ ಹೊಳೆಯುವ ಆಭರಣಗಳು ಬೆಳಕಿಗೆ ಬಂದಾಗ ಕೇವಲ ಗಾಜಿನ ಚೂರುಗಳಂತೆ ಕಂಡು ಬಂದು ಗೌರವದ ಭಾವನೆಯನ್ನೇ ಲೇವಡಿಯಾಡಿದಂತಾಗುತ್ತದೆ. ಆದರೂ ಸಹಿಸಿಬಿಡಬಹುದು. ಆದರೆ ಶೂ ತೊಟ್ಟ ಯಕ್ಷಗಾನದ ವೇಷಗಳು ಅದನ್ನು ಸಹಿಸುವುದು ಕಷ್ಟವಾಗುತ್ತದೆ. ಯಾವುದನ್ನು ಮಾಡಿದರೂ ಯಕ್ಷಗಾನ ವಾತಾವರಣದಲ್ಲಿ  ಸಹ್ಯವಾಗುತ್ತದೆ ಎಂಬ ಅಸಡ್ಡೆಯಂತೆ ಇದು ಭಾಸವಾಗುತ್ತದೆ.

ಇದನ್ನು ಸಂಘಟಿಸಿದವರು ಬಹಳ ಸಾಹಸ ಪಟ್ಟು ಶ್ರಮ ವಹಿಸಿ, ಸಾಕಷ್ಟು ದುಡ್ಡು ಸುರಿದು ಇದನ್ನು ಕನಸೆಂಬಂತೆ ಭಾಸವಾಗುವಂತೆ ಮಾಡಿದ್ದಾರೆ. ಅವರ ಪರಿಶ್ರಮವನ್ನು ಶ್ಲಾಘಿಸದೇ ಇರುವುದು ನಿಜಕ್ಕೂ ಅಸಾಧ್ಯವಾದುದು. ಒಂದು ಜಾನ ಪದ ಕಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವುದು ಶ್ಲಾಘನೀಯ. ಆದರೆ ಶ್ಲಾಘನೀಯವಾಗಬೇಕಾದ ಕಾರ್ಯ ಈ ರೀತಿಯಾಗಿ ತೆರೆದುಕೊಳ್ಳುವುದು,  ನಿಜಕ್ಕೂ ಯಕ್ಷಗಾನದ ದುರದೃಷ್ಟ ಎನ್ನಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನ ಮೊಳಗುತ್ತದೆ ಎಂದಾಗ ಕನಸೋ ಎಂಬಂತೆ ಭಾಸವಾಗಿದ್ದು ಈ ರೀತಿಯಲ್ಲಿ ಭಯಾನಕ ಸ್ವಪ್ನ ವಾಗಿಬಿಡುತ್ತದೆ ಎಂದರೆ ಅದನ್ನು ದುರಾದೃಷ್ಟ ಎನ್ನಲೇಬೇಕಷ್ಟೆ.

ಯಾರಾದರೂ ಒಂದು ಯೋಜನೆಯನ್ನು ಸಿದ್ದ ಪಡಿಸುವಾಗ ಅದರಲ್ಲಿ ಬಹಳಷ್ಟು ತಮ್ಮ ಹಗಲಿರಳನ್ನು ಒಂದು ಮಾಡಿ ತಮ್ಮ ಶ್ರಮವನ್ನು ಸುರಿಯುತ್ತಾರೆ. ಅವರ ಶ್ರಮ ಸಾರ್ಥಕವಾಗುವುದು ಯೋಜನೆ ಕಾರ್ಯಗತವಾಗಿ ಯಶಸ್ವಿಯಾದಾಗ. ನಷ್ಟವೋ ಲಾಭವೋ ಎಲ್ಲವನ್ನು ಯಾವುದಾದರೊಂದು ಬಗೆಯ ಯಶಸ್ಸು ಮರೆಸಿಬಿಡುತ್ತದೆ. ಪ್ರತಿಯೊಬ್ಬರೂ ತಮ್ಮ ಶ್ರಮದ ಸಾರ್ಥಕತೆಯನ್ನೇ ಬಯಸುವುದು. ಆ ಶ್ರಮವು ಸಾರ್ಥಕವಾದರೆ ಒಂದಷ್ಟು ಯಕ್ಷಗಾನವೂ,  ಆ ಅಭಿಮಾನವೂ ಸಾರ್ಥಕತೆಯನ್ನು ಪಡೆಯಬಹುದೆಂಬ ನಿರೀಕ್ಷೆಯೂ ಇರುತ್ತದೆ.  ಒಂದು ಉತ್ತಮವಾದ ಕೆಲಸ ಈ ರೀತಿ ಪ್ರಕಟವಾದಾಗ ಮನಸ್ಸು ಭಾವನೆಯ ಹೊಯ್ದಾಟದಲ್ಲಿ ನೋವನ್ನು ಅನುಭವಿಸುತ್ತದೆ. ಹಾಗಾಗಿ ಇಲ್ಲಿ ಯಾವುದನ್ನೂ ವಿಮರ್ಶಿಸುವ ಪ್ರಮೇಯ ತೋರಿ ಬರುವುದಿಲ್ಲ. ಕೇವಲ ಮನಸ್ಸಿನ ನೋವಷ್ಟೇ ವ್ಯರ್ಥವಾಗಿ ಪ್ರಕಟಗೊಳ್ಳುತ್ತದೆ.

ಇಂದು ಸಿನಿಮಾ ಟಿ. ವಿ.ಯಲ್ಲಿ ಯಕ್ಷಗಾನವನ್ನು ಅಸಹ್ಯವಾಗಿ ತೋರಿಸುವುದನ್ನು ಅವಮಾನ ಎಂದು ಪರಿಗಣಿಸುವಾಗ ಇದನ್ನು ಏನೆಂದು ಕರೆಯಬಹುದು. ಅಲ್ಲಾದರೆ ಯಕ್ಷಗಾನದ ಅರಿವಿಲ್ಲದವರು ಅದರ ಗೌರವವನ್ನು ಪೂಜ್ಯಭಾವನೆಯ ಪೂರ್ಣವಾದ ಅರಿವಿಲ್ಲದೇ ಯಕ್ಷಗಾನ ಎಂದರೆ ವೇಷಗಳು ಎಂದು ಅಸಹ್ಯವಾಗಿ ತೋರಿಸುತ್ತಾರೆ. ಆದರೆ ಇಲ್ಲಿ ನಾವು ಎಲ್ಲದರ ಅರಿವಿದ್ದು ಮಾಡುತ್ತಿರುವುದೇನು? ಹಳ್ಳಿಯ ಮನೆಯಿಂದ ನಮ್ಮ ಅಮ್ಮನನ್ನು ಕರೆದು ಕೊಂಡು ಬಂದು ಪೇಟೆಯ ಬೀದಿಯಲ್ಲಿ ಸ್ಕರ್ಟ್ ಹಾಕಿ ಸುತ್ತಾಡಿಸಿದರೆ ಹೇಗಾಗಬಹುದು ಕಲ್ಪಿಸುವ. ಇಲ್ಲಾಗುವ ಅವಮಾನಕ್ಕೆ ಬೇರಾರೂ ಕಾರಣರಲ್ಲ ಸ್ವತಃ ನಾವೇ. ಇಲ್ಲಿ ನಮ್ಮ ಸೊತ್ತನ್ನು ಅಭಿಮಾನವನ್ನು ನಾವೇ ಕೀಳಾಗಿ ಕಾಣುವುದು. ಸಂಪದ್ಭರಿತವಾದ ಯಕ್ಷಗಾನ ಎಲ್ಲವನ್ನು ಕಳಚುವುದಕ್ಕೆ ಸಿದ್ದವಾದಂತೆ ಭಾಸವಾದರೆ ನನಗಂತೂ ಅಳಿಸಲಾಗದ ನೋವನ್ನು ಉಂಟು ಮಾಡುತ್ತದೆ. ಯಕ್ಷಗಾನದಲ್ಲಿ ಯಕ್ಷಗಾನವನ್ನು ಮಾತ್ರವೇ ಕಾಣುವ ಮನಸ್ಸು ನಮ್ಮದು ಹಾಗಾಗಿ ನೊಂದ ಮನಸ್ಸಿನ ಪ್ರತಿಕ್ರಿಯೆ ಎಂದು ತಿಳಿಯಬೇಕು. ಅವರವರ ನೆಲೆಯಲ್ಲಿ ಚಿಂತನೆಯಲ್ಲಿ ಇಂತಹುದಕ್ಕೆ ಬಹಳಷ್ಟು ಸೃಷ್ಟೀಕರಣ ಸಿಗಬಹುದು. ಅನಿವಾರ್ಯತೆಯ ಬಂಧನವೂ ಇರಬಹುದು. ಆದರೆ ಕೆಲವೊಂದನ್ನು ಕಲೆಯ ಹಿರಿಮೆಯ ದೃಷ್ಟಿಯಿಂದ ಆಭಾಸವನ್ನು ಮಾಡದೇ ಇದ್ದು ಗೌರವದಿಂದ ಕಾಣಲು ಸಾಧ್ಯವಿದೆ. ಇಲ್ಲಿ ಯಕ್ಷಗಾನದ ಬಗ್ಗೆ ಅಭಿಮಾನ ಪ್ರೀತಿ ಇಲ್ಲ ಎಂದು ಹೇಳುವುದಲ್ಲ. ಆದರೆ ಇದೆಲ್ಲವನ್ನು ಮೀರಿ ಅದಾವುದೋ ಉದ್ದೇಶ ಈ ಅಭಿಮಾನಗಳನ್ನೆಲ್ಲ ಮರೆಸಿ ಹಾಕಿದೆಯೋ ಎಂದು ಅನುಮಾನಿಸುವ ಹಾಗಾಗುತ್ತದೆ. ಇಂದು ಯಾವುದೇ ಸಮಾರಂಭಕ್ಕೆ ಹೋದಾಗ ಯಾವುದೋ ಖಾದ್ಯಗಳನ್ನು ತಿಂದು ಕೊನೆಯಲ್ಲಿ ನಮ್ಮ ಅನ್ನವನ್ನು ಅನ್ನವಾಗಿಯೇ ತಿಂದರೆ ಮಾತ್ರ ಮನಸ್ಸು ತೃಪ್ತವಾಗುತ್ತದೆ ಹಾಗಾಗಿ ಯಾವುದೇ ರೀತಿಯಾದರೂ ಯಕ್ಷಗಾನ ಯಕ್ಷಗಾನವಾಗಿ ಮಾತ್ರವೇ ಉಳಿಯಲಿ ಎಂಬ ಆಶಯ. ಇದು ಮೀರಿದರೆ ಯಾರಿಗೆ ಹೇಗನಿಸಿತೋ ಅದರ ಬಗ್ಗೆ ಯೋಚಿಸದೇ ಹೇಳಿಬಿಡುವ,,,,, ನಮ್ಮ ಮಟ್ಟಿಗೆ ಇದು ಖಂಡಿತಾ ಅವಮಾನ. ನಮ್ಮ ಮನಸ್ಸಿನ ಈ ಭಾವನೆಯೇ ತಪ್ಪು ಎಂದು ಪರಿಗಣಿಸಿದರೂ ನಮ್ಮ ಭಾವನೆ ನಮಗೆ ಹಿರಿದಲ್ಲವೆ?







Thursday, February 13, 2014

ಜಾನಕೀ ನೀಡುವ ಯಕ್ಷಮಣಿ ಚೂಡಾಮಣಿ


“ಶ್ರೀರಾಮಾ... ಕರಕಂಜದಂಗುಲಿಯೊಳಿಟ್ಟಾ ಮುದ್ರೆಯಂ ನೋಡುತಂ | ನಾರೀ ಜಾನಕಿ ಶೋಕಿಸುತಾ ಅದನಂ ಕಂಗಳ್ಕೆ ತಾ ಒತ್ತುತಂ | ಹೇರಾಳಾಸ್ರುತ ಶೋಕ ಬಿಂದು ಜಲದಿಂ ಸರ್ವಾಂಗಮಮ್ ಲೇಪಿಸಲ್|  ಕಾರುಣ್ಯಾಂಬುದಿ ರಾಮ ರಾಮಾ ಎನುತ ಆಶಾಭಾವದಿಂ ಕಂಡಳು... ಶ್ರೀರಾಮಾ...”



          ಗಂಗಾನದಿಯ ಪ್ರವಾಹದಂತೆ ಒಮ್ಮೆ ಮಂದಗಾಮಿನಿಯಾಗಿ ಮಗುದೊಮ್ಮೆ ರಭಸದಿಂದ ವಿದ್ಯುತ್ ಸಂಚಾರ ಮಾಡುತ್ತ ಈ ರಾಗ ಪ್ರವಾಹ ದೇಹದಲ್ಲಿ ರೋಮಾಂಚನದ ಅಲೆಗಳನ್ನೇ ಎಬ್ಬಿಸಿಬಿಡುತ್ತದೆ.
ಪಾರ್ತಿ ಸುಬ್ಬನ ಚೂಡಾಮಣಿ ಪ್ರಸಂಗದ ಈ ಪದವೊಂದು ಸಾಕು ಯಕ್ಷ ಕವಿಯ ಭಾವ ಸದೃಶ ಹೃದಯದ ಸಾಕ್ಷ್ಯ ಬರೆಯಲು. ಕೆಲವು ಘಳಿಗೆಯ ಮೊದಲು ಬಂದ ದಶಕಂಠ ಉಡುಗೊರೆಯ ರಾಶಿ ರಾಶಿಯನ್ನು ತನ್ನ ಪದತಲದಲ್ಲಿಟ್ಟು ಕಾಲಿಗೆರಗಿ ಗೋಗರೆದರೂ ಅತ್ತ ನೋಡದ ಜಾನಕಿ,  ತನ್ನ ದುರವಸ್ಥೆಗೆ ಮರುಗುತ್ತಾಳೆ. ತನ್ನ ಇನಿಯ ರಾಮಚಂದ್ರನನ್ನು ನೆನೆಯುತ್ತಾ ನೆನೆಯುತ್ತಾ  ತೀರಾ ಅಪರಿಚಿತ ಸ್ಥಳ ಅಶೋಕವನದಲ್ಲಿ ಶೋಕ ಸಾಗರದಲ್ಲಿ ಮುಳುಗಿರುತ್ತಾಳೆ.
ರಾತ್ರಿ ಅಂತಃ ಪುರದಲ್ಲಿ ನಿದ್ರಿಸಲಾಗದ ರಾವಣ ಮಂಡೋದರಿಯ ಬಾಹುವನ್ನು ತಳ್ಳಿ  ಅಶೋಕವನದತ್ತ ಬಂದು ಸೀತೆಯೆದುರು ಮಂಡಿಯೂರುತ್ತಾನೆ. ತನ್ನದೆಲ್ಲವನ್ನು ಅರ್ಪಿಸಿ “ರಾವಣೋ ಲೋಕ ರಾವಣಾ...” ಎನ್ನಿಸಿಕೊಂಡವ ಇಲ್ಲಿ ತೃಣ ಮಾತ್ರಕ್ಕೆ ತನ್ನ ವ್ಯಕ್ತಿತ್ವವನ್ನು ಮಾರಿಕೊಳ್ಳುತ್ತಾನೆ. ಮೂರು ಲೋಕವನ್ನು ನಡುಗಿಸಿದ ಭುವನದಲ್ಲಣ ರಾವಣ ಸೀತೆಯಲ್ಲಿ ಕಂಪನವನ್ನು ತರಿಸುವಲ್ಲಿ ವಿಫಲನಾಗಿ ದಾಸಾನು ದಾಸ ಭಾವದಿಂದ ನಿಂತರೂ ಜಾನಕಿ ಕಂಪಿಸುವುದಿಲ್ಲ. ಆಕೆಯ ಹೃದಯ ಮಾತ್ರ ರಾಮನಿಗಾಗಿ ಕಂಪಿಸುತ್ತದೆ. ರಾವಣ ನೀಡಿದ ಪ್ರಲೋಭಗಳೆಲ್ಲವೂ ಮುಳ್ಳಿನಂತೆ ಚುಚ್ಚಲಾರಂಭಿಸುತ್ತವೆ. ಅತ್ತು ಅತ್ತು ಕಣ್ಣೀರು ಬತ್ತಿರುರುತ್ತದೆ. ಲೋಕ ವೀರ ರಾವಣ ಜಾನಕಿ ಎಂಬ ಬಾಲೆಯ ಸ್ಥಿರತೆಯ ಮುಂದೆ ಘೋರವಾಗಿ ಸೋತು ಅವಮಾನಿತನಾಗಿ ತೆರಳಿ ಬಿಡುತ್ತಾನೆ.
ಅಶೋಕವನ ಮೌನವಾದಂತೆ ಸೂಕ್ಷ ರೂಪಿಯಾಗಿ ಅವಿತಿದ್ದ ಹನುಮ ಸೀತೆಯೆದುರು ಬಂದು ನಿಂತು ತನ್ನ ಮತ್ತು ರಾಮನ ಬಗ್ಗೆ ಹೇಳತೊಡಗಿದರೂ ರಾವಣನ ಮಾಯೆಯ ಅನುಮಾನದಿಂದ ಅತ್ತ ತಿರುಗದೇ ತನ್ನವ್ವೆ ಅವನಿಯನ್ನೇ ನೋಡುತ್ತಿರುತ್ತಾಳೆ. ಆಗ ಹನುಮ ತನ್ನ ಕೈ ಅಗಲಿಸಿ ತನ್ನೊಡೆಯ ರಾಮನಿತ್ತ ಚೂಡಾಮಣಿಯನ್ನು ತೋರಿಸಿ ಸೀತೆಯ ಕೈಯ್ಯಲ್ಲಿರಿಸುತ್ತಾನೆ....ಅಷ್ಟೇ   ಬತ್ತಿ ಹೋದ ಹೃದಯ ರಾಮನ ಕಾರುಣ್ಯಾಂಬುದಿಯಲ್ಲಿ ಮಿಂದುಬಿಡುತ್ತದೆ. ಅತ್ತು ಅತ್ತು ಕಣ್ಣೀರು ಬತ್ತಿದ್ದ ಕಣ್ಣಿಗೆ ಅದನ್ನು ಒತ್ತುತ್ತಿದ್ದಂತೆ ಮಧುರ ಅನುಭವಕ್ಕೆ ಸ್ಪಂದಿಸಿ ಕಣ್ಣೀರು ಒಸರುತ್ತದೆ. ಶೋಕ ಬಿಂದು ಸರ್ವಾಂಗವನ್ನೂ ವ್ಯಾಪಿಸಿಕೊಳ್ಳುತ್ತದೆ.
ಈ ಸನ್ನಿವೇಶದ ಪದವಿದು  “ ಕರಕಂಜದೊಳಿಟ್ಟಾ ಮುದ್ರೆಯಂ.........”
ಯಕ್ಷಗಾನದ ಅಗ್ರಗಣ್ಯ ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳರು ಹಾಡಿದ ಈ ಹಾಡು ಕೇಳಿ ಹೃದಯ ತುಂಬಿಕೊಳ್ಳದ ಯಕ್ಷಗಾನ ಅಭಿಮಾನಿಗಳಿದ್ದಾರೆಯೇ ಹೇಳಿ? ಸೀತೆಯಾದ ಕಲಾವಿದ ಪಾತ್ರದ ಒಳಹೊಕ್ಕಿ ಪರಕಾಯ ಪ್ರವೇಶ ಮಾಡಲು ಇನ್ನೊಂದೇ ಪಡಿ ಮೆಟ್ಟಲು ಉಳಿದಿದ್ದರೆ,   ಮಾಯೆಯೇ ಆವರಿಸಿಕೊಂಡಂತೆ ಸಹಜವಾಗಿ ಆ ಮೆಟ್ಟಲು ದಾಟಿ ಪರಕಾಯ ಪ್ರವೇಶದಿಂದ ಜಾನಕಿಯೇ ಆಗಿಬಿಡುವಂತಹ ಗಾಯನವದು. ಯಕ್ಷಗಾನದ ಚೂಡಾಮಣಿ ಪ್ರಸಂಗ ಅತ್ಯಂತ ಪ್ರಾಚೀನವಾದ ಪ್ರಸಂಗ. ರುದ್ರ ಭೀಕರ ಶೃಂಗಾರ ಹಾಸ್ಯ ಕರುಣ ಹೀಗೆ ಬಹು ರಸಾಭಿವ್ಯಕ್ತಿಗೆ ಹತ್ತಿರವಾಗುವ ಈ ಪ್ರಸಂಗ ಮನಸ್ಸಿಗೆ ಬಹಳ ಹತ್ತಿರವಾಗುತ್ತದೆ.
ಯಕ್ಷಗಾನದ ಹಿಮ್ಮೇಳ ಅರ್ಥ ಕಂಡುಕೊಳ್ಳುವುದೇ ಇಂತಹ ಪ್ರಸಂಗಗಳಿಂದ. ಯಕ್ಷಗಾನಕ್ಕೆ ಅಪರಿಚಿತರಾದವರು ಹಲವರು ನನ್ನಲ್ಲಿ ಕೇಳಿದಂತಹ ಪ್ರಶ್ನೆಯೊಂದಿದೆ....”ಯಕ್ಷಗಾನದ ಭಾಗವತರೇಕೆ ಕಿರಿಚಿಕೊಂಡು ಹಾಡುತ್ತಾರೆ?” ಆಗ ಅನ್ನಿಸಿ ಬಿಡುತ್ತದೆ. ಮಂಡೂಕ ತಾನು ಸಿಕ್ಕಿಹಾಕಿಕೊಂಡ ಕೂಪವನ್ನೇ ಪ್ರಪಂಚವೆಂದು ತಿಳಿದುಕೊಳ್ಳುತ್ತದೆಯಂತೆ. ಇಲ್ಲಿ “ಸಿಕ್ಕಿಹಾಕಿಕೊಂಡ” ಎಂಬ ಶಬ್ದ ಪ್ರಯೋಗ ಅದೇಕೋ ಬಹಳಷ್ಟು ಹಿತವಾಗಿ ಕಾಣುತ್ತದೆ. ಗಾಯನ ನರ್ತನ ಅಭಿನಯ ನಾಟಕ ಇದು ಸಮನ್ವಯಗೊಳ್ಳುವುದು ಭಾವನೆಯಿಂದ. ಆ ಭಾವ ಪ್ರಚೋದನೆಗೊಳಗಾಗಿ ಬಹಿರಂಗಕ್ಕೆ ಕಾಣುವಾಗಲೇ ಅದು ’ ಕಲೆ ’ ಎಂದು ಕರೆಸಲ್ಪಡುವುದು. ಸನ್ನಿವೇಶದ ಒಳ ಹೊಕ್ಕು ಭಾಗವತ ಭಾವ ಪ್ರಚೋದನೆಗೆ ಒಳಗಾಗಿ ಹಾಡಿದರೆ ಅದು ಮುನ್ನೆಲೆಯ ಕಲಾವಿದನಲ್ಲಿ ಪ್ರಚೋದನೆಯನ್ನುಂಟುಮಾಡುತ್ತದೆ. ಆಗಲೇ ಪಾತ್ರಧಾರಿಯು ರಂಗದ ಮೇಲೆ ಅವತಾರ ಪುರುಷನಾಗುವುದು. ಅವೇಶಗೊಂಡು ಉತ್ಕಟಾವಸ್ಥೆಗೆ ತಲಪುವುದು. ಇಲ್ಲಿ ದೃಶ್ಯ  ಬಹಳ ಗೌಣವಾಗಿ ಪರಿಸರ ಕೇವಲ ಸಂಕೇತವಾದರೆ ಅಭಿನಯ ಮಾತ್ರ ನೈಜತೆಯನ್ನು ಬಿಂಬಿಸುತ್ತದೆ. ಹಾಗಾಗಿ ಸಂಕೇತವಾಗಿರುವ ಮಾಧ್ಯಮವನ್ನು ಭಾಗವತ ಹಿಮ್ಮೇಳದೊಂದಿಗೆ ಪರಿಪೂರ್ಣಗೊಳಿಸುತ್ತಾನೆ. ಬರೆದ ಬರಹದಲ್ಲಿ ಗಮನಾರ್ಹವಾದುದನ್ನು ಉಲ್ಲೇಖಿಸುವುದಕ್ಕೆ ಬಣ್ಣ ಲೇಪಿಸಿ ಗಾಢವಾಗಿಸಿದಂತೆ ಭಾಗವತ ತನ್ನ ಗಾಯನದಿಂದ ದೃಶ್ಯಕ್ಕೆ ಬಣ್ಣವನ್ನು ತುಂಬಿ ಗಾಢವಾಗಿಸುತ್ತಾನೆ. ಗಾಢವಾದುದು ಅತಿರೇಕ ಎಂದು ಅಂದುಕೊಂಡರೂ ಯಕ್ಷಗಾನದಲ್ಲಿ ಪ್ರತಿಯೊಂದೂ ಸಾಂಕೇತಿಕವಾಗಿ ಬಿಂಬಿಸಲ್ಪಡುವುದರಿಂದ ಭಾಗವತ ಹಾಡಿನಿಂದಲೇ ಎಲ್ಲವನ್ನು ತುಂಬಿಕೊಡಬೇಕಾಗುತ್ತದೆ.
ಯಕ್ಷಗಾನ ಗಾನಮಯವೂ ಅಗುವುದನ್ನು ಇಂತಹ ಸನ್ನಿವೇಶಗಳಿಂದಲೇ ತಿಳಿದುಕೊಳ್ಳಬಹುದು. ಅಭಿನಯದ ಭಾವೋತ್ಕಟತೆಯಿಂದ ಮಾತಿಲ್ಲದೇ ಕೇವಲ ಷಟ್ಪದಿಯಿಂದ  ಈ ಸನ್ನಿವೇಶವನ್ನು  ಭಾವ ಪೂರ್ಣಗೊಳಿಸಬಹುದು. ಯಾಕೆಂದರೆ ರಾಮಲಾಂಛನವನ್ನು ಕಂಡ ಸೀತೆ ಮೂಕಳಾಗುತ್ತಾಳೆ. ಭಾವ ಪ್ರಕಟಣೆಯಿಂದ ಮನದ ತುಮುಲವನ್ನು ಸಂವೇದನೆಯನ್ನು ಹಾಡುತ್ತಿದ್ದಂತೆ ವ್ಯಕ್ತ ಪಡಿಸುತ್ತಾಳೆ. ಕಲಾವಿದನಿಗೆ ಇಲ್ಲಿ ಮಾತಿನ ಅವಶ್ಯಕತೆಯಿರುವುದಿಲ್ಲ. ಅಂತರಂಗದಲ್ಲಿ ಅವಿತಿದ್ದ ಸೀತೆಯ ಮನಸ್ಸು ಕಲಾವಿದನಲ್ಲಿ ಅವೇಶಗೊಳ್ಳುತ್ತದೆ. ಆಡಬೇಕಾದ ಮಾತು,  ಸೀತೆಯ ಭಾವನೆ, ಆವರೆಗೆ ಸೀತೆ ಅನುಭವಿಸಿದ್ದ ಅಗಲಿಕೆಯ ನೋವು,  ಅದರ ಉತ್ಕಟ ಭಾವ ಉದ್ವೇಗದಿಂದ ಹೊರಬರಬೇಕಾದರೆ ಭಾಗವತ ಮೊದಲು ಆ ಸರೋವರಕ್ಕೆ ಇಳಿಯಬೇಕು. ನಂತರ ನಿಧಾನವಾಗಿ ಕಲಾವಿದನ ಕೈ ಹಿಡಿದು ಒಂದೊಂದೇ ಮೆಟ್ಟಲು ಕೆಳಗಿಳಿಸಿ ಭಾವನೆಯ ಆಳದ ವರೆಗೂ ಎಳೆದೊಯ್ಯಬೇಕು. ಆ ಮೂಲಕ ಮಾತು ಹೇಳದೇ ಇದ್ದುದನ್ನು ಭಾಗವತ ಸನ್ನಿವೇಶದ ಮೂಲಕ ಹೇಳಬೇಕು.
ಹನುಮಂತನ ಪ್ರಹಾರಕ್ಕೆ ಲಂಕಿಣಿಯು ಪ್ರಾಣಬಿಡುವಾಗಲೂ ಒಂದು ಷಟ್ಪದಿಇದೆ.
ಹಲವು ಪರಿಯಲಿ ಕಾದಿ ದಣಿದು ಲಂಕಾಲಕ್ಷ್ಮಿ|
ತೊಲಗಿದಳು ರಾವಣಗೆ ಬಂತು ಕೀಳ್ದೆಸೆಯೆನುತ|
ಬಳಿಕ ಹನುಮಂತನಣುರೂಪಿನಿಂದಲ್ಲಲ್ಲಿ ಸುಳಿದಾಡಿ ಹುಡುಕುತಿರಲು ||
ಬಲವಂತ ನಿದ್ರೆಯಲಿ ಗೋರಿಡುತ ಮೆಯ್ಮರೆದು |
ಮಲಗಿರ್ದ ಕುಂಭಕರ್ಣನ ಸುಯ್ಲೊಳಗೆ ಸಿಕ್ಕಿ|
ಸುಳಿ ಸುಳಿದು ವಜ್ರಕಂಬಕೆ ಬಡಿದು ಅಲ್ಲಿಂದ ಪೊರವಂಟು ದಣಿದನಂದು||
ಈ ಪದದಲ್ಲಿ ಲಂಕಿಣಿಯ ಮಾತು ಹನುಮಂತನ ಮಾತು ಮತ್ತು ಮುಂದಿನ ಪ್ರವೃತ್ತಿ ಎಲ್ಲವೂ ಒಂದು ವಾರ್ಧಕ ಷಟ್ಪದಿಯಲ್ಲಿ ತೋರಿಸಲ್ಪಡುತ್ತದೆ. ಚೂಡಾಮಣಿ ಪ್ರಸಂಗದ ವೈಶಿಷ್ಟ್ಯವೇ ಅಂತಹುದು. ಸಮರ್ಥ ಭಾಗವತ ತನ್ನ ಹಾಡಿನಿಂದಲೇ ಬಹಳಷ್ಟನ್ನು ರಂಗದ ಮೇಲೆ ತರಿಸಬಲ್ಲ. ಆರಂಭದಿಂದ ಅಂತ್ಯದವರೆಗೂ ಬರುವ ಹಲವು ಪದಗಳು ಭಾಗವತರು ಸ್ವತಃ ಮೈದುಂಬಿ ಹಾಡುವಂತಹ ಪದಗಳು.
ರಾವಣನ ಶೈಯಾಗಾರದಲ್ಲಿ ಮಲಗಿದ್ದ ಮಂಡೋದರಿಯನ್ನು ಕಂಡು ಸೀತೆಯೆಂದು ಭ್ರಮಿಸಿ ಹನುಮನು ವಿಲಪಿಸುವ ದ್ವಿಪದಿ ಅದೆಷ್ಟು ಸನ್ನಿವೇಶಕ್ಕೆ ಒಪ್ಪುವಂತೆ ಚಿತ್ರಿಸಲ್ಪಟ್ಟಿದೆ.
ಬಲುದೋಷಕೊಳಗಾದ ಪಾಪಿದಶಕಂಠ
ಮಲಗಿದಾತನು, ಇವಳು ವೈದೇಹಿ ತಾನೆ ||
ಕಲೆಯಾಯ್ತು ರಾಘವಗೆ ಕಾಂತೆಯಿವಳಿಂದ
ಗೆಲವಿಲ್ಲ ಮುಂದೆಮಗೆ ದಣಿವುದಿದು ವ್ಯರ್ಥ ||
ತರಹರಿಸಿ ಮನದೊಳಗೆ ತನ್ನೊಡೆಯ ರಾಮ
ಕುರುಹುಗಳ ಪೇಳ್ದೆಡೆಯ ಕಂಡನಾ ಹನುಮ ||
ಪದುಮರೇಖೆಗಳಿಲ್ಲ ಪಾದದಲಿ ಮುಂದೆ
ವಿಧವತ್ವ ತೋರುತಿದೆ ಹೆಡತಲೆಯ ಹಿಂದೆ ||
ಮತ್ಸ್ಯಲಾಂಛನ ನೋಡೆ ಬಲ ತೊಡೆಯೊಳಿಲ್ಲ |
ಅಚ್ಯುತನ ಸತಿಯಿವಳು ಸರ್ವಥಾ ಅಲ್ಲ ||
ಇವಳು ಜಾನಕಿಯಲ್ಲವೆಂದು ನಿಶ್ಚಯ್ಸ
ತವಕದಲಿ ಹೊರವಂಟ ಭೂಸುತೆಯನರಸಿ ||
ರಾಮ ಹನುಮ ದೇಹ ಎರಡಾದರೂ ಅದು ಒಂದಾದ ಬಗೆ ಹೇಗೆ, ಹನುಮನ ರಾಮನೊಡನೆ ಹೊಂದಿದ ತಾದಾತ್ಮ್ಯಭಾವ ಜತೆಗೆ ಆತನ ಕರ್ತವ್ಯ ಪ್ರಜ್ಞೆ ಇದೆಲ್ಲವನ್ನು ಅವ್ಯಕ್ತವಾಗಿ ವ್ಯಕ್ತ ಪಡಿಸುವ ಈ ದ್ವಿಪದಿಗಳು ಚೂಡಾಮಣಿ   ಪ್ರಸಂಗದ ಜೀವಾಳವಾಗಿ ಭಾಸವಾಗುತ್ತದೆ.  ಹಲವಾರು ಭಾವಗಳನ್ನು ಸನ್ನಿವೇಶಗಳನ್ನು ಒಂದೆರಡು ಶಬ್ದಗಳ ಮೂಲಕ ತೆರೆದಿಡುವ ಯಕ್ಷಗಾನದ ದ್ವಿಪದಿಗಳು ಕಲಾವಿದನನ್ನು ಮಾತ್ರವಲ್ಲ ಪ್ರೇಕ್ಷಕನನ್ನು ರಂಗದಲ್ಲಿ ಒಂದಾಗುವಂತೆ ಮಾಡಿಬಿಡುತ್ತದೆ. ಮಾತಿಲ್ಲದೇ ಇದ್ದರೂ ಈ ದ್ವಿಪದಿಗಳಲ್ಲಿ ಬರುವ ಅಷ್ಟೊಂದು ಭಾವಸದೃಶ ಸನ್ನಿವೇಶಗಳು ವ್ಯಕ್ತವಾಗುವುದು ಭಾಗವತನ ಗಾನ ವೈವಿಧ್ಯತೆಯಿಂದ. ಹಲವುಸಲ ಅನುಮಾನ ಹುಟ್ಟಿಸುವುದು ಇದೇ , ಯಕ್ಷಗಾನದಲ್ಲಿ ಯಾವ ಭಾಗ ಪ್ರಾಮುಖ್ಯತೆಯನ್ನು ಪಡೆಯುತ್ತದೆ? ಗಾಯನವೇ? ಅಭಿನಯವೇ? ಮಾತುಗಾರಿಕೆಯೇ? ಎಲ್ಲವೂ ಪ್ರಾಮುಖ್ಯತೆ ಪಡೆದರೂ ಗಾಯನ ಇದೆಲ್ಲವನ್ನು ಪೋಣಿಸಿಕೊಂಡು ತನ್ನ ನಿಯಂತ್ರಣದಲ್ಲಿಟ್ಟು ಬಿಡುತ್ತದೆ.
.
ಮಂಡೋದರಿಯ ರೂಪಿನಿಂದ ಮೋಸಹೋದಂತಾದ ಹನುಮ ನಂತರ ಸೀತೆಯನ್ನು ರಾಮನ ಮಡದಿಯಾಗಿ ಒಪ್ಪಿಕೊಳ್ಳುವ ಒಂದು ಪದವಿದೆ.
 ಇವಳೀಗ ರಾಮನ ಕಾಂತೆ ಸದ್ಗುಣವಂತೆ |
ಇವಳು ಸಜ್ಜನಪಾಲೆ ಶೀಲೆ ||
ಇವಳು ಬ್ರಹ್ಮಾದಿ ಸುರೌಘವಂದಿತೆ ಮಾತೆ |
ಇವಳು ರಾಮನ ಪ್ರೀತೆ ಸೀತೆ ||
ಧರಣಿನಂದನೆಯೊಳು ದೋಷವನೆಣಿಸಿದೆ |
ದುರುಳ ರಾವಣನ ಕಂಡಲ್ಲಿ ||
ಕರವೆರಡಲಿ ಬಾಯ ಹೊಯ್ದು ತಪ್ಪಾಯ್ತೆಂದು |
ಶಿರವ ಬಾಗಿದ ರಾಮಾಯೆಂದು ||
ಹನುಮನಾಗಿ ಕವಿ ಪರಕಾಯ ಪ್ರವೇಶಿಸಿದರೆ ರಂಗದಲ್ಲಿ ಪಾತ್ರಧಾರಿ ಈ ಹೊಲಬನ್ನು ಅರಿತರೆ ಸಾಕು ಪ್ರವೇಶ ಸುಲಭವಾಗಿಬಿಡುತ್ತದೆ. ಹಲವು ಕಲಾವಿದರು ಕವಿಯ ಈ ದಾರಿಯನ್ನು ಅರ್ಥವಿಸಿಕೊಂಡು ಪಾತ್ರವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಾರೆ. ಯಕ್ಷಗಾನ ಪದಗಳು ಪಾತ್ರಾವಾಹನೆ ಹೇಗೆ ಸಹಕಾರಿಯಾಗುತ್ತದೆ ಎಂಬುದಕ್ಕೆ ಚೂಡಾಮಣಿಯ ಪದಗಳು ಉತ್ತಮ ನಿದರ್ಶನವಾಗಬಲ್ಲುದು.
ಬೆಕ್ಕುಗಳಿಗೂ ಕೋಡು ಬಂದರು |
ಸಕ್ಕರೆಯು ಕಹಿಯಾಗಿ ಸಂದರು |
ಮಿಕ್ಕುಮಾತಿದು ನಿನಗೆ ಜಾನಕಿ | ಸಿಕ್ಕಳಯ್ಯ ||
ಪರ್ವತವ ನೊಣ ನುಂಗಿತಾದರು |
ಇರುವೆ ಶರಧಿಯ ಕುಡಿದುಹೋದರು
ಸರ್ವಥಾ ಜಾನಕಿಯನೊಲಿಸಲು | ಸಾಧ್ಯವಿಲ್ಲ ||  

ಸೀತೆಯನ್ನು ಕಂಡು ಮರುಳಾದ ರಾವಣ ಶೃಂಗಾರ ರಾವಣನಾಗಿ ಕಾಮಾಂಧನಾದಾರೆ, ಜತೆಗಿದ್ದವರು ಹೇಳಿದ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳದ ರಾವಣ .” ಮಾತನಾಡ ಬಾರದೇನ…. ಓ ಜಾಣೆ….”  ಎಂದು ದಾಸಾನು ದಾಸನಾಗಿ ಬಿಡುತ್ತಾನೆ. ಶೃಂಗಾರ ರಾವಣ, ರಾವಣನ ಮತ್ತೊಂದು ವಕ್ರತೆಯನ್ನು ಸುಂದರವಾಗಿ ಬಹಿರಂಗಗೊಳಿಸುತ್ತದೆ.
ರಾವಣಾದಿಗಳ ಮಾಯಾ ವಂಚನೆಗೆ ತಾನೆ ಸ್ವತಃ ಸಾಕ್ಷಿಯಾಗಿ ಬಲಿಪಶುವಾದ ಸೀತೆ ಹನುಮನನ್ನು ಅನುಮಾನಿಸುವಾಗ ಹನುಮ ತನ್ನ ವಿಶ್ವಾಸ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೆರೆಯುವ ಸನ್ನಿವೇಶವಿದೆ. ಆ ಸನ್ನಿವೇಶದ ಪ್ರತೀ ಪದಗಳು ಛಂದಸ್ಸು, ವ್ಯಾಕರಣ ಮತ್ತು ಶಬ್ದಾಲಂಕಾರದೊಂದಿಗೆ ರಾಮ ಸೀತೆಯರ ವೈವಾಹಿಕ ಜೀವನದ ನವಿರುತನವನ್ನು ಯಕ್ಷಕವಿ ಬಹಳ ನವಿರಾಗಿ ಚಿತ್ರಿಸುತ್ತಾನೆ. ಅದರಲ್ಲೂ ಈ ಪದದಲ್ಲಿನ ಶಬ್ದ ವೈಭವ ನೋಡಿದರೆ ಅದರ ಭಾವಸ್ಪಂದನೆಗೂ ಅದು ತೆರೆದಿಡುವ ಸನ್ನಿವೇಶದ ಚಿತ್ರಣಕ್ಕೂ  ಕವಿ ಹೃದಯದ ಸ್ವ ಮಿಡಿತದ ಅನುಭವ ಭಾಸವಾಗುತ್ತದೆ.   ” ತರಹರಿಸಿ ಮನದೊಳಗೆ ತನ್ನೊಡೆಯ ರಾಮ |  ಕುರುಹುಗಳ ಪೇಳ್ದೆಡೆಯ ಕಂಡನಾ ಹನುಮ|| “ ಕವಿಯ ಈ ಭಾವವನ್ನು ಅರಿತು ಕಲಾವಿದ ರಂಗದಲ್ಲಿ ಪ್ರವೃತ್ತನಾದರೆ ರಂಗಸ್ಥಳದಲ್ಲಿ ಕಾವ್ಯಮಯ ಲೋಕದ ಅನಾವರಣವಾಗಿಬಿಡುತ್ತದೆ.  ರಾಮ ಹನುಮರ ನಡುವಿನ ಸಂಭಂಧ ಯಾವ ಬಗೆಯಲ್ಲಿ ಬಿಗಿಯಲ್ಪಟ್ಟಿದೆ ಇದು ಸೀತೆಗೆ ಈ ಮೊದಲು ಅರಿವು ಇರುವುದಿಲ್ಲ. ಹಾಗಾಗಿ ರಾಮ ಈ ಅವಕಾಶವನ್ನು ಉಪಯೋಗಿಸಿಕೊಂಡು ಹನುಮನಮೂಲಕವೇ ಆ ಬೆಸುಗೆಯ ಅನಾವರಣ ಮಾಡಿಸಿಬಿಡುತ್ತಾನೆ. ಹಾಗಾಗಿ ಕವಿ ಬಹಳ ಸಾಹಸ ಪಟ್ಟು ಸ್ವತಃ  ಪಾತ್ರವಾಗಿ ಈ ಸನ್ನಿವೇಶದ ಕಾವ್ಯ ಲಯಬದ್ಧವಾಗಿ ಪೋಣಿಸಿದ್ದಾನೆ. ಅದರ ಅನುಭವ,  ಚೂಡಾಮಣಿ ಪ್ರಸಂಗ ರಂಗದಲ್ಲಿ ಪ್ರದರ್ಶನವಾಗುವಾಗ ಅನುಭವಕ್ಕೆ ಬರುತ್ತದೆ. ಯಕ್ಷಗಾನ ಎಂದೋ ಇದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಿದ್ದರೆ ಅದಕ್ಕೆ ಇಂತಹ ಪ್ರಸಂಗಗಳು ತಮ್ಮ ದೇಣಿಗೆಯನ್ನು ಖಂಡಿತಾ ಸಲ್ಲಿಸಿರಬಹುದು ಎಂದು ಅರ್ಥೈಸಿಕೊಳ್ಳಬಹುದು.
ರಾವಣನ ಅಟ್ಟಹಾಸದಿಂದ ನೊಂದು ಕೊಂಡ ಸೀತೆ ರಾಮನೆಂದು ಬರುವನೋ ಎಂದು ವಿಲಪಿಸುತ್ತಾಳೆ. ತನ್ನನ್ನು ರಾಮ ಮರೆತನೇ ಎಂದು ದುಮ್ಮಾನದಿಂದ ದುಃಖಿಸುತ್ತಾಳೆ. ದುಃಖ ಅತಿಯಾಗಿ ನಿರಾಶಾಭಾವದಿಂದ ನಿರ್ವಕಾರದಿಂದ ಇರಬೇಕಾದರೆ ಬಂದ ಹನುಮ  ಚಿತ್ರಕೂಟದಲ್ಲಿ ಕಳೆದ ರಾಮ ಸೀತೆಯರು ಕಳೆದ ಮಧುರ ಘಳಿಗೆಗಳನ್ನು ಹೇಳಿದ ನಂತರ ಜಾನಕಿಗೆ ಆ ನೆನಪುಗಳು ಒಂದು ಮಾರ್ದವತೆಯನ್ನು ಸೃಷ್ಟಿಸುತ್ತಾ ಹೋಗುತ್ತದೆ. ಕೊನೆಯಲ್ಲಿ ಹನುಮ ತನ್ನೊಡೆಯನಿತ್ತ ಚೂಡಾಮಣಿಯನ್ನು ಕರಗಂಜದಂಗುಲಿಯೊಳಿಟ್ಟಾಗ.. ಮಾರ್ದವತೆ ಉತ್ತುಂಗಕ್ಕೇರಿ ಕಟ್ಟೊಡೆದು ಕಣ್ಣೀರಾಗಿ ಸರ್ವಾಂಗವನ್ನು ಲೇಪಿಸಿಕೊಳ್ಳುತ್ತದೆ. ಕರದಂಗುಲಿಯಲ್ಲಿಟ್ಟ ಆ ರಾಮ ಮುದ್ರೆಯೇ ಕರಗಿ  ಹೋಗುತ್ತದೋ ಎಂಬ ಭ್ರಮೆಯಾವರಿಸಿಬಿಡುತ್ತದೆ.  ಸೀತೆ ಭಾವ ಪರವಶಳಾಗಿ ರಾಮಾ ..ರಾಮಾ ಎಂದು. ಗೋಗರೆದಾಗ ಹನುಮ ಅದುವರೆಗಿನ ದಣಿವನ್ನು ಮರೆತು ಜಾನಕಿಯ ಪಾದಕ್ಕೆರಗಿಬಿಡುತ್ತಾನೆ.
ಪ್ರಸಂಗ ಮಂಗಳವಾದಾಗ ನಮಗರಿಯದೇ ನಮ್ಮ ಹೃದಯ ರಾಮನಾಮದ ಪ್ರಚೋದನೆಯಿಂದ ರಾಮಾ ರಾಮ ಎಂದು ರಾಮಗಾನ ಹಾಡಿದರೆ ಅದು ಯಕ್ಷಗಾನದ ಮಧುರಾಮೃತದ ಸಿಂಚನವಾದಂತೆ.  “ಚೂಡಾಮಣಿ” ಜಾನಕಿ ನೀಡುವ ಯಕ್ಷ ಮಣಿಯಾಗಿಬಿಡುತ್ತದೆ.  ರಾಮ ನೀಡಿದ ಚೂಡಾಮಣಿ ಮುದ್ರೆಯುಂಗುರ ಬಲಾವದ ಮುದ್ರೆಯನ್ನು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತದೆ.