"ಇದು ವಿಮರ್ಶೆಯಲ್ಲದ ಚಿಂತನ"

Friday, May 23, 2014

ಅಂತರಂಗದ ರಾವಣ ಭಾಗ ೯ ರಾವಣ ಮೋಕ್ಷ



ಜೀವ ಭಾವದ ಮಮಕಾರ ಅಹಂಕಾರವಾಗಿ ಗುರುತಿಸಲ್ಪಡುತ್ತದೆ. ನಾನು ನನ್ನದು ಎಂಬ ಅಹಂ ಅತಿಯಾಗಿ ರಾವಣ ದರ್ಪದಿಂದ ಗಹಗಹಿಸುತ್ತಿದ್ದ. ತನ್ನೆತ್ತರವನ್ನು ತಾನೇ ಏರಿಸಿದಂತೆ ದುರಹಂಕಾರದಿಂದ ರಾಮನಿಗೆ ಸವಾಲೆಂಬಂತೆ ಬಿಂಬಿತವಾಗುತ್ತಿದ್ದ. ’ಲಾಲಿಸು ಮಯತನುಜೆ..’ ಎಂದು ತನ್ನ ಜನ್ಮ ವೃತ್ತಾಂತವನ್ನು  ಮಂಡೋದರಿಯೊಂದಿಗೆ ಹಂಚಿಕೊಂಡ ರಾವಣ ಈಗ ಈ ದುರಹಂಕಾರದಿಂದ ಮದೋನ್ಮತ್ತತೆಯನ್ನು ಪ್ರದರ್ಶಿಸುವುದು ವಿಪರ್ಯಾಸವಾಗಿ ಕಂಡುಬರುತ್ತದೆ.   ಕಡಿದಷ್ಟು ಚಿಗುರೊಡೆಯುತ್ತಿದ್ದ ಶಿರಸ್ಸು ರಾಮನ ಬಾಣಕ್ಕೆ ಅಂತ್ಯಕಾಣದ ಪ್ರಶ್ನೆಯಾಗಿ ಪರಿಣಮಿಸುತ್ತಿದ್ದರೆ  ರಾಮ ಹತಾಶನಾಗುತ್ತಾನೆ. ಆದರೆ ಪ್ರತಿಯೊಂದೂ ನಿರ್ದಿಷ್ಟ  ಸಂಕಲ್ಪದ ಚೌಕಟ್ಟಿನ ಒಳಗಿನ ಘಟನೆಗಳಂತೆ ಭಾಸವಾಗುತ್ತದೆ. ನಾಟಕದ ನಿರ್ದೇಶಕ ಅಥವಾ ಸೂತ್ರಧಾರಿ  ಸ್ವತಃ  ಪಾತ್ರವಾಗಿ ರಂಗದಲ್ಲಿ ಕಾಣಿಸಿಕೊಂಡರೆ, ಆ ಪಾತ್ರದಲ್ಲಿ ಸಹಜತೆಯನ್ನೂ ನೈಜತೆಯನ್ನು ಬಿಂಬಿಸಿ ನಾಟಕಕ್ಕೂ ರಂಗ ಧರ್ಮಕ್ಕೂ ನ್ಯಾಯ ಒದಗಿಸುವಲ್ಲಿ ತನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಾನೆ.  ರಾಮನೂ ಇಲ್ಲಿ ಸೂತ್ರಧಾರನಾಗುವುದಿಲ್ಲ ಒಬ್ಬ ನಟನಾಗಿ ತನ್ನ ಅಸ್ತಿತ್ವಕ್ಕೆ ನ್ಯಾಯವನ್ನು ಒದಗಿಸುತ್ತಾನೆ. ಹಾಗಾಗಿ ರಾಮ ಬಾಣವೂ ಉತ್ತರವಿಲ್ಲದೇ ಅಭಿನಯದ ಪರಿಕರಗಳಾಗುತ್ತವೆ. ರಾವಣನ ವಿಜ್ರಂಭಣೆ ರಾಮನ ಹತಾಶ ಭಾವ ಅದು ಇನ್ನಷ್ಟು ಪರಿಣಾಮಕಾರಿ ಚಿತ್ರಣಕ್ಕೆ ಸಾಕ್ಷಿಯಾಗುತ್ತದೆ. ರಾಮ ಪಾತ್ರವಾಗಿ ಭಾವ ಪರವಶನಾಗುತ್ತಾನೆ. ಎಲ್ಲವನ್ನು ಮರೆಯುತ್ತಾನೆ. ರಂಗದ ಪಾತ್ರ ಗಾಢವಾಗುತ್ತಾ ಸಾಗಿದಂತೆ ದೇವತೆಗಳು ಸುಮ್ಮನಿರಬಹುದೇ? ಹಾಗಾಗಿ ಇಂದ್ರ ಪ್ರತಿನಿಧಿಯಾದ ಸಾರಥಿ ಮಾತಲಿ ಎಚ್ಚರಗೊಳ್ಲುತ್ತಾನೆ.  ರಾಮ ನಾಟಕದ ಪಾತ್ರವಾಗಿ ಭುವಿಗೆ ಇಳಿದು ಬಂದರೆ ಆ ನಿಬಂಧನೆಗಳು ಮಾತಲಿಗೆ ಇರುವುದಿಲ್ಲ. ಅಲ್ಲಿಯೂ ಇಲ್ಲಿಯೂ ಆತ ಸುರಪನ ಸಾರಥಿ. ಹಾಗಾಗಿ ವಾಸ್ತವವನ್ನು ಅರಿತ ಪ್ರೇಕ್ಷಕನಂತೆ ರಾಮನನ್ನು ಎಚ್ಚರಿಸುತ್ತಾನೆ. ಪಾತ್ರ ಪ್ರಜ್ಞೆಯೊಂದಿಗೆ ನಿರ್ಣಯಾತ್ಮಕವಾದ ಹಂತವನ್ನು ದಾಟಬೇಕಲ್ಲ?


ಮಾತಲಿಯೆ ನಾನೆಂಬ | ಮಾತ ನೀ ಕೇಳು ||
ಯಾತುಧಾನನೊಳು ಕೈ | ಸೋತುದಿಂದಿನೊಳು || ಪಲ್ಲವಿ ||

ನೂಕಿದೆವು ಶರಗಳ ಸ | ಮೀಕ ಬಾಹಿರನೆಡೆಗೆ |
ಛೀಕರಿಸಿದಳು ಮತ್ಯು | ಈ ಕಡುಗಲಿಯೊಳು |
ಯಾಕೆ ಜಯದಭಿಲಾಷೆ | ಸಾಕು ಬಳಲಿದೆಬರಿದೆ |
ನಾಕೇಶನೆಡೆಗೆ ಸುವಿ | ವೇಕದಿಂ ತೆರಳು |||

ಬಲ್ಲೆ ದೇವ ನಿನ್ನ ಚರಿತ | ಇದ |
ನೆಲ್ಲ ತೋರಿಸಲ್ಯಾಕೊ ಶ್ರೀ ರಘುನಾಥ ||
ಮಲ್ಲ ಮಾಯಾವಿ ನೀನೆನುತ | ನರ |
ನಲ್ಲ ನೀ ಪುಲ್ಲಲೋಚನ ನೆಂಬಮಾತ | ಬಲ್ಲೆ |||  

ಈ ಹಿಂದಿನ ಲೇಖನಗಳ ಪುಟಗಳು ಈ ಕೆಳಗೆ ತೆರೆದುಕೊಳ್ಳುತ್ತವೆ.


            ರಾಮನ ವೈರಾಗ್ಯ ಮಾತಲಿಗೆ ಅರ್ಥವಾಗಿಬಿಡುತ್ತದೆ. ಯುದ್ದವೂ ಬೇಡ ರಾಜ್ಯವೂ ಬೇಡ ಯಾವುದೂ ಬೇಡ ಬದರಿಕಾಶ್ರಮಕ್ಕೆ ಹೋಗಿ ಇನ್ನುಳಿದ ಬದುಕನ್ನು ಕಳೆಯುತ್ತೇನೆ. ರಾವಣನನ್ನು ಸೋಲಿಸಲಾಗದ ರಾಮ ಇದ್ದೇನು ಪ್ರಯೋಜನ.ವ್ಯಾಕುಲ ಚಿತ್ತನಾಗಿ ಭ್ರಮಾಧೀನನಾದ ರಾಮನನ್ನು ಕಂಡು ಮಾತಲಿ ಯಾವ ಭಾವಕ್ಕೂ ಬದಲಾಗದೇ ಸ್ಥಿತ ಪ್ರಜ್ಞನಾಗಿ ರಾಮನನ್ನು ಎಚ್ಚರಿಸುತ್ತಾನೆ.

            ರಾವಣ ವಧೆ ಪ್ರಸಂಗದಲ್ಲಿ ಮಾತಲಿ ಎಂಬ ಪಾತ್ರ ಕೇವಲ ಸಾಂದರ್ಭಿಕ ಪಾತ್ರ. ವಾಡಿಕೆಯಲ್ಲಿ ಸಾಮಾನ್ಯ ಕಲಾವಿದ ನಿರ್ವಹಿಸುವ ಪಾತ್ರ. ಪ್ರಾಮುಖ್ಯತೆ ಬಹಳ ಕಡಿಮೆ. ಆದರೆ ಒಬ್ಬ ಪ್ರತಿಭಾವಂತ ವಾಗ್ಮಿಯ ಕೈಗೆ ಇದೇ  ಪಾತ್ರ ಸಿಕ್ಕಿದಾಗ ಇಂತಹ ಪಾತ್ರಗಳೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಮಾತಲಿಯಾಗಿ ತೆಕ್ಕಟ್ಟೆ ಆನಂದ ಮಾಸ್ತರ್ ತಮ್ಮ ಸಹಜವಾದ ವಿಡಂಬನಾ ಶೈಲಿಯಲ್ಲಿ ಪ್ರಖರವಾದ ಮಾತಿನ ಮೂಲಕ ಪಾತ್ರವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಯಕ್ಷಗಾನ ಅರ್ಥ ಸಾಹಿತ್ಯ ಒಂದು ಬೆರಗುಗೊಳಿಸುವ ಪ್ರಪಂಚ. ವ್ಯಕ್ತಿಯಿಂದ ವ್ಯಕ್ತಿಗೆ ಪಾತ್ರದಿಂದ ಪಾತ್ರಕ್ಕೆ ಇಲ್ಲಿ ವಿಭಿನ್ನ ವಿಚಿತ್ರ ದೃಷ್ಟಿಕೋನಗಳು ಕಂಡುಬರುತ್ತವೆ.  ವಾದಗಳು,  ಅವುಗಳನ್ನು ಪುಷ್ಟೀಕರಿಸುವ ತರ್ಕ ಮಂಡನೆಗಳು ಇದರ ಬೆಂಬತ್ತಿ ಹೋದ ಹಾಗೆ ಚಿಂತನೆಯ ಅಲಗು ಮತ್ತಷ್ಟು ಹರಿತವಾಗುತ್ತದೆ. ಯಕ್ಷಗಾನ ಅರ್ಥ ಸಾಹಿತ್ಯದ ವಿಪುಲ ಪ್ರಪಂಚ ದಿಗಂತದ ಸೀಮೆಯಂತೆ ಹೋದಷ್ಟೂ ಮತ್ತೂ ತೆರೆದುಕೊಂಡು ವಿಸ್ಮಯವನ್ನುಂಟು ಮಾಡುತ್ತದೆ.
            ರಾಮಾಯಣದ ಒಂದು ಚಿಕ್ಕ ಸನ್ನಿವೇಶದ ಚಿಕ್ಕ ಪಾತ್ರ ಮಾತಲಿಯ ದೃಷ್ಟಿಕೋನ ರಾಮಾಯಣದ ವೈಶಾಲ್ಯತೆಯನ್ನು ತೋರಿಸುತ್ತದೆ.

             ಇಲ್ಲಿ ಉಳಿದವರೆಲ್ಲ  ಕಣ್ಣೀರು ಸುರಿಸಿ ಕಂಗಾಲಾಗಬಹುದು. ಆದರೆ ಮಾತಲಿ ಯಾವುದೇ ಭಾವಾವೇಶ ತೋರದೆ ತಟಸ್ಥವಾಗಿರುವುದಕ್ಕೆ ಕಾರಣ ಈ ಮಾತಲಿ ಚೌಕಿಯಿಂದ ಬಂದವನು. ಪ್ರೇಕ್ಷಕರು ವೇಷದವನ ಪರಿಚಯ ಸಿಗದೇ ತಬ್ಬಿಬ್ಬಾಗಬಹುದು. ಆದರೆ ಚೌಕಿಯಲ್ಲಿ ವೇಷಕ್ಕೆ ಪರಿಕರವನ್ನು ಒದಗಿಸಿದವನು ತಬ್ಭಿಬ್ಬಾಗುವುದಕ್ಕೆ ಸಾಧ್ಯವೇ? ಅರ್ಥಧಾರಿಗಳು ಇಲ್ಲಿ ಮೇಲಿನ ಲೋಕವನ್ನು ಚೌಕಿಯನ್ನಾಗಿ ಬಿಂಬಿಸುತ್ತಾರೆ. ಬಹಳ ಸುಂದರ ಕಲ್ಪನೆ. ವೇಷ ಹಾಕಿ ಬಂದವರನ್ನು ಕೆಲವರು ಗುರುತು ಹಿಡಿಯದೇ ತಬ್ಬಿಬ್ಬಾದರೆ, ಕೆಲವರು ಇಂದು ಇಂಥವನೇ ಎಂದು ಗುರುತು ಹಿಡಿಯುತ್ತಾರೆ. ಆದರೆ ಚೌಕಿಯಲ್ಲಿದ್ದವರು ಯಾವ ವೇಷದವರನ್ನೂ ಗುರುತು ಹಿಡಿದು ಬಿಡುತ್ತಾರೆ. ಯಾಕೆ ಎಲ್ಲವನ್ನೂ ಕೊಟ್ಟು ಕಳುಹಿಸುವುದು ಅವರೇ ಅಲ್ಲವೇ?

            ಎಲ್ಲವೂ ನಾಟಕವೆಂದು ಭಾಸವಾದರೂ ಅದನ್ನೇ ನೈಜ ಎಂದು ತಿಳಿದು ಭಾವಾವೇಶವಾಗುತ್ತಾರೆ. ನಾಟಕವೆಂದು ತಿಳಿದರೂ ಅದನ್ನು ನೋಡುವ ಕಾರಣವಾದರೂ ಏನು? ಅದರಿಂದ ಸಿಗುವ ರಂಜನೆ. ಅದರಿಂದ ಸಿಗುವ ಸ್ವಾರಸ್ಯಕಾಗಿಯೇ ಬರುತ್ತಾರೆ.  ನಿದ್ದೆ ಕೆಟ್ಟು ದುಡ್ಡುಕೊಟ್ಟು ಆಟ ನೋಡುವವರು ಇದ್ದಾರೆ. ಅವರನ್ನು ಭಾವಾವೇಶಕ್ಕೆ ಒಳಪಡಿಸಿ ವಂಚಿಸಿದರೂ ತನ್ನನ್ನು ರಾಮ ವಂಚಿಸುವ ಕಾರಣವಾದರೂ ಏನು? ರಾಮ ಎಲ್ಲವನ್ನೂ ಬಿಟ್ಟು ಬದರಿಕಾಶ್ರಮಕ್ಕೆ ಹೋಗಬಹುದು. ಆದರೆ ಜೀವನಕ್ಕೆ ಹೆದರಿ ಕೈಸೋತು ಹೋಗುವವರಿಗೆ ಬದರಿಕಾಶ್ರಮದಲ್ಲಿ ಜಾಗ ಉಂಟು ಅಂತ ಯಾವ ಪುಸ್ತಕದಲ್ಲಿ ಬರೆದಿದೆ? ಇಲ್ಲಿ ಸಲ್ಲುವವನು ಮಾತ್ರ ಅಲ್ಲಿ ಸಲ್ಲುವುದು. ರಾಮ ಇಂತಹ ಮಾತುಗಳನ್ನು ಮಂಗಗಳ ಮಧ್ಯೆ ಹೇಳಬಹುದು. ಅವುಗಳು ಭಾವಾವೇಶ ಗೊಳ್ಳಬಹುದು. ಆದರೆ ಮಾತಲಿ ಹಾಗೋ?

            ರಾಮ ಬಳಲಿದೆ ಬಸವಳಿದೇ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಯಾಕೆಂದರೆ ಬಲ ಅತಿಬಲ ಎಂಬ ಮಂತ್ರೋಪದೇಶವನ್ನು ವಿಶ್ವಾಮಿತ್ರನಿಂದ ಪಡೆದ ರಾಮನಿಗೆ ಬಳಲಿಕೆ ಉಂಟು ಎಂದರೆ ನಂಬಲು ಸಾಧ್ಯವೇ? ಕೈ ಸೋತೆ ಅಂತ ಅಂತ ರಾಮ ಹೇಳಬಹುದು. ಸೋತದ್ದು ಕೈ ಮಾತ್ರ ರಾಮ ಅಲ್ಲವಲ್ಲ?  ಹಾಗಾದರೆ ಇದೆಲ್ಲ ಅಭಿನಯ. ರಾಮನ ಬಾಣ ವ್ಯರ್ಥವಾಯಿತು. ಉದ್ದೇಶ ಸಿದ್ದಿ ಮಾಡಲಿಲ್ಲ ಎಂದುಕೊಳ್ಳುವುದೇಕೆ. ರಾಮ ಬಿಟ್ಟ ಬಾಣದಲ್ಲಿ ರಾವಣನ ಶಿರಸ್ಸು ಕತ್ತರಿಸಲ್ಪಟ್ಟಿದೆ. ಆದರೆ ಮತ್ತೆ ಚಿಗುರಿಕೊಂಡದ್ದು ಬಾಣದ ತಪ್ಪು ಹೇಗಾಗುತ್ತದೆ?  ಬಾಣ ಪ್ರಯೋಗದ ಸಂಕಲ್ಪ ಸಿದ್ಧಿಯಾಗಿದೆ. ರಾವಣನ ಪ್ರಾಣ ನಾಶವಾಗಲಿಲ್ಲ. ಅದಕ್ಕೆ ಕಾರಣ ಹುಡುಕಬೇಕು. ರಾವಣ ಎಲ್ಲ ರಕ್ಕಸರಂತಲ್ಲ. ಬ್ರಾಹ್ಮಣ ವಂಶಜ. ಯಾತುಧಾನರ. ಇದೆಲ್ಲ ಮೊದಲೇ ಸಂಕಲ್ಪವಾದ ನಿರ್ಣಯ. ಹಾಗಾಗಿಯೇ ಅಂತಹ ರಾವಣನ ಸಂಹಾರಕ್ಕೆ ಇಂದ್ರ ಪಾಯಸದ ರೂಪವಾಗಿ ದಶರಥನ ಸುತನಾಗಿ ಬರುತ್ತೇನೆ ಅಂತ ರಾವಣನನ್ನು ಮೊದಲು ವೇಷಮಾಡುವುದಕ್ಕೆ ಕಳುಹಿಸಿದ್ದಲ್ಲವೇ? ನೀನು ಮೊದಲು ಹೋಗು ಸಮಯಕ್ಕಾಗುವಾಗ ಆಮೇಲೆ ನಾನು ಬರುತ್ತೇನೆ.

            ರಾವಣನ ಮಹತ್ವದಂತೆ ರಾಮನ ಮಹಿಮೆಯನ್ನು ಪರೋಕ್ಷವಾಗಿ ಹೇಳುವುದು ಇಲ್ಲಿನ ಮೂಲ ಆಶಯ. ಯಕ್ಷಗಾನದಲ್ಲಿ ಅದನ್ನು ಸುಂದರವಾಗಿ ಹೆಣೆಯಲಾಗಿದೆ. ಕಲಾವಿದ ಆ ಅಶಯವನ್ನು ಅರಸಿ ಅರ್ಥವಿಸಿ ನಿರ್ವಹಿಸಿದರೆ ಅಡಕವಾದ ಸಂದೇಶವನ್ನು ಅನಾವರಣ ಗೊಳಿಸುವ ಉದ್ದೇಶ ಸಫಲವಾಗುತ್ತದೆ.

ಎನಗೆ ಹೊಸಬ ನೇನಲ್ಲಾ | ನಿನ್ನ |
ಘನ ಮಾಯೆಯನು ಇವರರಿತವರಲ್ಲ ||
ಚಿನುಮಯಾತ್ಮಕ ನಿನ್ನ ನಿಜವ | ನಾನು |
ಮನದಿ ನಿಶ್ಚಯಿಸಿಹೆ ತೆಗೆಧನುಶರವ || ಬಲ್ಲೆ ||

ರಾಮ ಏನು ಎಂದು ಇಲ್ಲಿನ ಇತರರಿಗೆ ಅದರ ಅರಿವಿಲ್ಲ. ಓದಿದವನಾದರು ಮಂಗ ಮಂಗನೇ ಅಲ್ವ? ಹಾಗಾಗಿ ರಾಮನ ಮಾಯೆಯನ್ನು ಅರಿತವನು ಮಾತಲಿ. ರಾಮ ಲಂಕೆಗೆ ಆಗಮಿಸಿದ್ದು. ಸೀತೆಗಾಗಿ ಮಾತ್ರವಲ್ಲ, ಅಥವಾ ಅನರಣ್ಯಕನನ್ನು ಕೊಂದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮಾತ್ರವೂ ಅಲ್ಲ, ಅಥವಾ ಅಯೋಧ್ಯೆಯ ರಾಜ ಸಿಂಹಾಸನದ ಮೇಲೆ ಬೆಳಗುತ್ತಿರುವ ಬೆಳ್ಗೊಡೆ ರಾವಣನಿಂದ ಭಗ್ನಗೊಂಡಿದೆ ಎಂಬ ವಿರೋಧಕ್ಕಾಗಿ ರಾಮ ಬಂದವನು ಎಂದಾದರೆ ರಾಮನಿಗೆ ಜಯದ ಅಭಿಲಾಷೆ ಬೇಕಿತ್ತು. ಹಾಗಾದರೆ ಇವಿಷ್ಟೇ ಭಾವನೆಯಲ್ಲ. ವಿಭೀಷಣ ಶರಣನಾಗಿ ಬಂದಾಗ ಅವನಿಗೆ ಅಭಯವನ್ನು ದಯಪಾಲಿಸುವ ದ್ವಾರ  ಲಂಕೆಯ ಅಧಿಪತ್ಯವನ್ನು ಆತನಿಗೆ ಬಿಟ್ಟ ಮೇಲೆ,  ಆಗ ಜ್ಞಾನಿಯಾದ ಹನುಮ ಸಂದೇಹದಲ್ಲಿ ಒಂದು ಪ್ರಶ್ನೆ ಕೇಳಿದ, ಒಂದು ವೇಳೆ ತನ್ನ ತಪ್ಪನ್ನು ಅರಿತು ರಾವಣ ಶರಣನಾಗಿ ಬಂದನೆಂದರೆ, ಲಂಕೆಯನ್ನು ವಿಭೀಷಣನಿಗೆ ಕೊಟ್ಟರೆ ರಾವಣನಿಗೆ ಸಿಗುವ  ಪ್ರಾಪ್ತಿ ಯಾವುದು? ಆವಾಗ ರಾಮ ಹೇಳಿದ್ದ, ವಿಭೀಷಣನಿಗಿತ್ತ ಲಂಕೆ ಅದು ವಿಭೀಷಣನಿಗೇ, ಬದಲಾಗಿ  ರಾಮ ತನ್ನದ್ದಾದ ಅಯೋಧ್ಯೆಯನ್ನು ರಾವಣನಿಗೆ ಬಿಟ್ಟುಕೊಡುವುದಾಗಿ ಮಾತ್ರವಲ್ಲ, ಅಯೋಧ್ಯೆಗೆ ತಾತ್ಕಾಲಿಕವಾಗಿ ಮತ್ತು ಆಗಾಮಿಯಾಗಿ ಅಧಿಕಾರವುಳ್ಳ ಭರತನಿಗೆ ವೈಕುಂಠ ಪದವಿಯನ್ನು ಇತ್ತೇನು.  ಅಯೋಧ್ಯೆ ಮತ್ತು ಲಂಕೆ ಸೂರ್ಯವಂಶದ ಆಡಳಿತಕ್ಕೆ ಒಳ ಪಟ್ಟಿದ್ದರೆ, ವೈಕುಂಠಕ್ಕೆ ಸೂರ್ಯವಂಶದ ಪಾರುಪತ್ಯಇಲ್ಲವಲ್ಲ. ಹಾಗಾದರೆ ಆ ಮಾತಿನ ಮರ್ಮ ಏನು? ವೈಕುಂಠಕ್ಕೇ ಸೇರಬೇಕಾದರೆ ವೈಕುಂಠನೇ ಆಗಬೇಕಲ್ಲ.
 “ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವೃತಂ ಮಮಃ” ಅಂದರೆ “ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ಕರ್ತವ್ಯ”  ಹೀಗೆ ಹೇಳಿದ ರಾಮ ಯಾರು ಏನು ಎಂದು ಮಾತಲಿ ಅರಿತೇ ಈ ಮಾತುಗಳನ್ನಾಡುತ್ತಾನೆ.  ಅಗಸ್ತ್ಯರು ಕೊಟ್ಟಂತಹ  ಶಾರ್ಙ ಧನುಸ್ಸು, ಇದನ್ನು ದೇವೇಂದ್ರನೇ ಅಗಸ್ತ್ಯರಿಗೆ ಕೊಟ್ಟು ರಾಮನಿಗೆ ಪ್ರದಾನ ಮಾಡುವಂತೆ ಕೇಳಿಕೊಂಡಿದ್ದ.  ಆ ಧನುಸ್ಸನ್ನು ಕೈಗೆ  ತೆಗೆದುಕೋ ರಾವಣನನ್ನು ವಧಿಸಿಬಿಡು.

ಮೆರೆವ ಶಾರ್ಙ್ಗಮಹಾಶರವ ಕರ |
ಸರಸಿರುಹದಲಿ ಪಿಡಿದ ಧನುವಿಗೆ |
ಗುರಿವಿಡಿಯಲನಿತರೊಳು ವಿಶ್ವಾಕಾರ ತಾನಾದ ||
ಹರಪಿತಾಮಹ ಸುರಪ ಮನುಮುನಿ |
ವರರನುರೆ ಬ್ರಹ್ಮಾಂಡಕೋಟಿಯ |
ಧರಿಸಿರುವ ಶ್ರೀ ವಿಮಲ ಮೂರ್ತಿಯ ಕಂಡನಸುರೇಂದ್ರ ||



ಕಂಡನು ದಶವದನ | ಕೋದಂಡರಾಮನ   ||
ಪುಂಡರೀಕಾಂಬಕನ ಜಗದೋ |
ದ್ದಂಡರೂಪನ ಖಂಡಬಲ ಬ್ರ |
ಹ್ಮಾಂಡಕೋಟಿಯ ತಂಡಗಳ ಕಪೆ |
ಗೊಂಡು ಸಲಹುವ ಜಾಂಡಧೀಶನ ||

ಶಾರ್ಙ ಧನುಸ್ಸು ಹಿಡಿದು ವಿಶ್ವಾಕಾರದಲ್ಲಿ ನಿಂತ ರಾಮನನ್ನು ನೋಡಿ ರಾವಣ ದಿಗ್ಭ್ರಮೆಗೊಳ್ಳುತ್ತಾನೆ. ಆವರೆಗೆ ತನ್ನ ನಿಯತಿಯೇ ಅಂತಿಮ ಎಂದುಕೊಂಡ ರಾವಣ ಎಲ್ಲ ಪ್ರಶ್ನೆಗಳಿಗೂ ಅಂತಿಮ ಪ್ರತಿಕ್ರಿಯೆಯಾಗಿ ನಿಂತ ರಾಮನ ವಿಶ್ವರೂಪವನ್ನು ಕಂಡು ಬೆರಗಾಗಿ ಮಂಡಿಯೂರಿಬಿಡುತ್ತಾನೆ.  ಇಲ್ಲಿ ಪುರಾಣದಲ್ಲಿ ಮತ್ತು ಪ್ರಸಂಗದಲ್ಲಿರುವ ರಾವಣನ ದ್ವಂದ್ವ ವ್ಯಕ್ತಿತ್ವವನ್ನು ಅಭಿವ್ಯಕ್ತಿಗೊಳಿಸುವ ಪ್ರಯತ್ನ ಈ ಪದದ ಅರ್ಥಗಾರಿಕೆಯಲ್ಲಿ ಕಾಣಬಹುದು.

“ ನನ್ನ ಛಲ ಸಿದ್ಧಿಯಾಯಿತು. ಇದನ್ನೆ ನಾನು ರಾಮನಲ್ಲಿ ಹೇಳಿದ್ದೆ.  ಇದೂ ಸಾಲದು. ಅದೂ ಸಾಲದು. ಮತ್ತೂ ಬೇಕಾದೀತು. ನಾನು ಕಂಡೆ ಅಂತ ಅಂದ್ರೆ ಪ್ರಪಂಚದಲ್ಲಿ ಅನೇಕರು ಒಪ್ಪಲಿಕ್ಕಿಲ್ಲ.  ಯಾಕೆ ಅಂದ್ರೆ ನಾನು ಕಂಡದ್ದನ್ನು ನಾನು ಹೇಳಿದರೆ ಅವರು ಕಂಡಿದ್ದಾರೋ?  ಇಲ್ಲಿ ಹಿಂದೆ ಒಂದು ಹಿಮ್ಮೇಳ ಉಂಟು.  ನಾನು ಮೊದಲು ಅದನ್ನೇ ಹೇಳಿದ್ದು.  ಲಾಲಿಸು ಮಯ ತನುಜೆ, ರಾಮನಲ್ಲಿಯೂ ಹೇಳಿದ್ದು ಅದೇ.  ನಮ್ಮೊಳಗೆ ಹೀಗೆ ತಾಗಿಸಿ ಹಾಕುವ ಉದ್ದೇಶವೇ ಕೆಲವರಿಗೆ ಉಂಟು ಅಂತ. ಈಗ ಆವರೇ ಅಲ್ವ ಹೇಳುವುದು ಅಲ್ಲಿಂದ ಕರೆದು. “ಕಂಡನು ದಶವದನ” ನಿನ್ನೆಯವರೆಗೆ ಇವರು ಎನು ಹೇಳ್ತಿದ್ರು?  “ಮಂದ ಮತಿ ರಾವಣನು ಐತಂದು ಇತ್ತನೋಲಗವ”  ಅವರ ಬಾಯಿಯಿಂದಲೇ ಈ ಹೊತ್ತು ಏನು ಹೇಳ್ತಾರೆ?  ಕಂಡನೂ ದಶವದನ. ಏನು ಈ ದಶವದನ ಕಂಡದ್ದು ಏನನ್ನು???  ಕೋದಂಡ ರಾಮನನು,    ಇದು ರಾವಣತ್ವ.  ಎಂತಹಾ ರಾಮನನ್ನು ಕಂಡೆ ನಾನು. ಕೋದಂಡರಾಮನನ್ನು.  ಕೋದಂಡರಾಮ ಅಂತಂದ್ರೆ ದಶರಥ ರಾಮನೂ ಹೌದು.  ಅಲ್ಲಾಂತ ಅಲ್ಲ. ಆದರೆ ಕೋದಂಡರಾಮ ತತ್ವಕ್ಕೆ ಈ ಕೋದಂಡರಾಮ ಪ್ರತಿಮೆ ಅಷ್ಟೆ.  ಈ ರಾಮ ಮಂತ್ರ ದೇವತೆ. ದಶರಥನ ಮಗ ರಾಮ ನಾಮ ದೇವತೆ.  ( ಅತ್ಯಂತ ವಿಶಿಷ್ಟ ನಿರೂಪಣೆ ಇದು)  ಅಲ್ಲಿ ರಾಮ ನಾಮ, ಇಲ್ಲಿ ರಾಮ ಮಂತ್ರ. ( ಮೊದಲು ಮಾತಲಿ ಮಂಡಿಸಿದ ಜಿಜ್ಞಾಸೆಗೆ ಹೀಗೂ ಒಂದು ರೂಪವನ್ನು ಕಲ್ಪಿಸುವ ಯತ್ನ)  ಇದನ್ನು ಮೊದಲು ಕಂಡವರು ಅವರು. ಸಪ್ತ ಋಷಿಗಳು. ಅವರು ಪ್ರಪಂಚದಲ್ಲಿ ಇದನ್ನು ಬಿತ್ತಿದರು.  ಆದ್ದರಿಂದ ಯಾವನೋ ಒಬ್ಬ ಕಿರಾತ, ದಸ್ಯು ಅವನು ಪರಮ ಋಷಿಯಾದದ್ದು.  ನಮ್ಮ ರಾಕ್ಷಸರೂ ಈಗ ಸತ್ತು ಮೋಕ್ಷ ಪಡೆದದ್ದು ಆ ಮಂತ್ರ ದೇವತೆಯನ್ನು ಕಂಡು.  ಹಾಗಾಗಿ ಅಲ್ವ, ಆ ಬಡತಾಯಿ ಮಗ, ಏನೂ ಗೊತ್ತಿಲ್ಲದವ,  ಯುದ್ದದಲ್ಲಿ ಏನಾಯಿತೋ ನೋಡಿ ಬಾ  ಎಂಬ ಉದ್ಯೋಗಕ್ಕೆ ನಾನು ನೇಮಿಸಿದವ,  ಏನು ಹೇಳಿದ ’ ಗೂಢ ಬ್ರಹ್ಮನಲಿ ಹಗೆ ಮಾಡಿ ಕೆಡದಿರು’  ಅವನಿಗೆ ಯಾರು ಉಪದೇಶ ಮಾಡಿದ್ದು?  ರಾವಣ ಏನು ಮಾಡಿದ್ದಾನೆ ಲಂಕೆಯಲ್ಲಿ?  ನೋಡಿ ಇಷ್ಟು ಮಾಡಿದ್ದಾನೆ. ಇಷ್ಟು ವರ್ಷ ಅಯೋಧ್ಯೆಯಲ್ಲಿ ದಶರಥಾದಿಗಳು ಏನು ಮಾಡಿದ್ದಾರೆ?  ನನ್ನ ಮಗ ರಾಮ...ನನ್ನ ಮಗ. ನನ್ನ ಸೊಸೆ ಸೀತೆ. ಹುಟ್ಟಿಸಿದ ಅಪ್ಪನೇ ಕಂಡದ್ದು ರಾಮನನ್ನು ಹಾಗೆ.  ಮತ್ತೆ ಅವರಿಬ್ಬರು ಗಡ್ಡದ ಋಷಿಗಳು ... ಅವರು ಕಂಡದ್ದು ದೊಡ್ಡದಲ್ಲ.  ದಶರಥ ಈ ರಾಮನ ಕುರಿತಾಗಿ ಕಣ್ಣೀರು ಹಾಕುವಾಗ ಆ ವಿಶ್ವಾಮಿತ್ರ ಹೇಳಿದ್ದಾನಂತೆ,  ಅಹಂ ವೇದ್ಮಿ ಮಹತ್ಮಾನಂ ರಾಮಂ ಸತ್ಯಪರಾಕ್ರಮಂ,   ವಸಿಷ್ಠನಿಗೆ ಗೊತ್ತುಂಟು  ನಿನ್ನ ಮಗ  ಏನುಂತ. ನನಿಗೂ ಸ್ವಲ್ಪ ಗೊತ್ತುಂಟು. ನಿಮಗೆಲ್ಲ ಏನೂ ಗೊತ್ತಿಲ್ಲ.  ಆಲ್ಲ ರಾಮನನ್ನು ಗೊತ್ತುಂಟು ಅಂತ ಎದೆ ತಟ್ಟಿ ಹೇಳಿದವರು ಇಬ್ಬರು ಮಾತ್ರ. ಇಲ್ಲಿ ನನ್ನ ಚಾಕರಿಯವ ಗೊತ್ತುಂಟು ಅಂತ ಧೈರ್ಯವಾಗಿ ಹೇಳಿದನಲ್ಲ. ಗೂಢ ಬ್ರಹ್ಮ.  ಮತ್ತೆ ಏನಾಗಬೇಕು? ಸಂಸ್ಕಾರ ವಿದ್ಯೆ ಅಂತಂದ್ರೆ.  ನಮ್ಮ ಜಾತಿಯವರು..,, ಎದ್ದಾದರೂ ಕುಡಿದರು, ಬಿದ್ದಾಗ ಕುಡಿದದ್ದನ್ನು ವಾಂತಿ ಮಾಡಿಕೊಂಡರು.  ರಾಕ್ಷಸ ಆದದ್ದಷ್ಟೇ,  ನನ್ನ ತಾಯಿ ನನಗೊಂದು ಆಶೀರ್ವಾದ ಮಾಡಿದಳು, ಮಗನೇ  ವಂಶೋದ್ಧಾರಕನಾಗಬೇಕು.  ಹೇಳಿಸಬೇಕು ಹಿಂದಿನಿಂದ ಭಳಿರೇ ರಾಕ್ಷಸ ಕುಲೋಧ್ಧಾರಕ.  ಇದೂ ಒಂದು ತರಹದ ಉದ್ದಾರ ಮಾರ್ಗವೇ ಅಲ್ವ?  ಅಯೋಧ್ಯೆಯಲ್ಲಿ ಇನ್ನು ಪ್ರಚಾರ ಆಗಬೇಕಷ್ಟೇ , ರಾಮ ಪುರುಷೋತ್ತಮ ಅಂತ.  ಪುರುಷೋತ್ತಮ ಅಂದ್ರೆ ನಾನು ಹೇಳುವ ಪುರುಷೋತ್ತಮ ಬೇರೆ. ಓಂ ಸಹಸ್ರ ಶೀರ್ಷಾಪುರುಷಃ . ಆ ಪುರುಷೋತ್ತಮ. ಈ ಪುರುಷೋತ್ತಮನಾದ ಕೋದಂಡರಾಮನನ್ನು ಈಗ ನಾನು ಕಂಡದ್ದು. ಆದ್ದರಿಂದ ಅಲ್ವ ಅವರೆಲ್ಲ ಧೈರ್ಯವಾಗಿ ಹೇಳಿದ್ದು. ಬ್ರಹ್ಮಾಂಡ ನಾಯಕನ. ಅವರು ಹೇಳಿದ್ದನ್ನೆ ನಾನು ಕಂಡದ್ದಾಗುವಾಗ ನಾನು ಕಂಡದ್ದು ಕನಸಲ್ಲ ಅಂತ ಅಯಿತಲ್ಲ. ಹೀಗೆ ಪರಮ ಜ್ಞಾನಿಗಳು ದೇವತೆಗಳು ಎಲ್ಲ ರಾವಣನಿಗೆ ವಿಶ್ವರೂಪದ ದರ್ಶನವಯಿತು ಎಂದು ಹೇಳುವಾಗ,  ಈಗ ಪಶ್ಚಾತ್ತಾಪ ಪಡೀಲಿಕ್ಕಿಲ್ಲವ , ರಾವಣ ಚರಿತ್ರೆಯನ್ನು ಈ ಮೊದಲೇ ಬರೆದು ಉದ್ಘಾಟಿಸಿದವರು?  ಯಕೆ? ಯಾವುದೇ ಚಿತ್ರವನ್ನು ಬರೆದು ಅವಸರವಸರವಾಗಿ ಉದ್ಘಾಟನೆ ಮಾಡಿದ್ರೆ ಹೀಗಾಗುವುದು.  ಅವನು ಹೇಳ್ಬೇಕು. ನನ್ನ ಚಿತ್ರ ಮುಗೀತು. ಇನ್ನು ವಿಮರ್ಶೆ ಮಾಡಿ.  ಜೀವನದ ಕೊನೆಗೆ ಜನ ಹೇಳುವುದು ಪ್ರಾಮಾಣಿಕವಾಗಿ, ಇದು ರಾವಣನ ಪೂರ್ಣ ಜೀವನ.  ಈ ಪೂರ್ಣ ಜೀವನ ಈ ಮೋಕ್ಷ, ಈ ಅನಂದ ಈ ವಿಶ್ವರೂಪ ದರ್ಶನ ನನಗೆ ಆಗ್ಯದೆ ಅಂತ ಹೇಳಿದ ಈ ಸರ್ವಸಾಕ್ಷೀ ಸ್ವರೂಪರಾಗಿ ಇದ್ದವರು,  ರಾವಣ ಅಧರ್ಮಿ ಅಂತ ಇನ್ನು ಹೇಳಿಯಾರ?  ಅಧರ್ಮ ಮಾಡಿದವನಿಗೆ ಇದು ಸಿಗ್ತದಾ?  ಸಿಕ್ಕೂದಿಲ್ಲ. ಕೇವಲ ಕಾಮದಾಸ ಅಂತ ಹೇಳಿಯಾರೋ?  ಅರ್ಥ ದಾಸ ಅಂತ ಹೇಳಿಯಾರ? ಹೇಳ್ಳಿಕ್ಕಿಲ್ಲ.  ತನ್ನ ಅರ್ಥವನ್ನೂ,  ತನ್ನ ಕಾಮವನ್ನೂ, ತನ್ನದ್ದಾದ ಧರ್ಮವನ್ನೂ ಇದಕ್ಕಾಗಿ ಸಂಪೂರ್ಣ ವಿನಿಯೋಗಿಸಿದಾ.. ಎಲ್ಲರಿಗೂ ಸಾಧ್ಯವಲ್ಲ ಅದು. ರಾವಣನಿಗೆ ಸಾಧ್ಯವಾಯಿತು. ಆದಕಾರಣ ಪೂರ್ಣ ವಿಕಾಸಗೊಂಡಮೇಲೆ ಮತ್ತೆ ಮರಳಿ ಈ ಮಣ್ಣಿಗೆ ಬರಕೂಡದು. ಕಂಡಿದ್ದೇನ, ಸಂತೋಷ ಪಟ್ಟಿದ್ದೇನೆ. ರಾಮಚಂದ್ರಾ.... ಇದಕ್ಕೇ ಕಾದದ್ದು ನಾನು. ದಶರಥನ ಮಗ ರಾಮನ ಅಭಿನಯ ಸೋತಿತು. ತಪ್ಪ ತಿಳ್ಕೊಳ್ಳಬೇಡ.  ಸೀತೆಯ ವ್ಯಾಜ್ಯಕ್ಕಾಗಿ ರಾವಣನಿಗೂ ರಾಮನಿಗೂ ಜಗಳವಾಯಿತು ಎನ್ನುವ ವರದಿಯೂ  ಸುಳ್ಳಾಯಿತು.  ಇದು ಸತ್ಯ ಆಯಿತು. ಆದರೆ ನೀನು ದಶರಥನ ಮಗ ರಾಮನೇ ಆಗಬೇಕು.  ಆ ಸಣ್ಣ ಪ್ರಾಯದ ಹುಡುಗಿಗೆ ದಾಂಪತ್ಯವನ್ನು ಇಲ್ಲಿಗೇ ಮುಗಿಸಬೇಕು ಅಂತ ಹಟತೊಡುವ ಸಂಸಾರವಂದಿಗ ಅಲ್ಲ ನಾನು.  ಸೀತೆಗೆ ಗಂಡನಾಗಿ,  ಮಕ್ಕಳಿಗೆ ತಂದೆಯಾಗಿ,  ಮತ್ತೆ ಬೇಕಾದರೆ ನಿಜಧಾಮವನ್ನು ನೀನು ಸೇರು. ನನಗಾಗಿ ಆದಂತಹ ಈ ಪೂರ್ಣ ಮನುಷ್ಯ ಸ್ವರೂಪ ಏನಿದೆಯಲ್ಲ ಅದನ್ನು ನನಗಾಗಿಯೇ ವಿನಿಯೋಗಿಸು.  ನಿನ್ನ ವಿಶ್ವಾಮಿತ್ರ ಕೊಟ್ಟ ಅಸ್ತ್ರವೂ ಉಪಯೋಗವಿಲ್ಲ.  ಆಮೇಲೆ ನೀನು ಸಂಗ್ರಹಿಸಿದ್ದೂ ಪ್ರಯೋಜನ ಇಲ್ಲ. ಆದುದರಿಂದಲೇ ನಾನು ಹೇಳಿದ್ದು ಇದೆಲ್ಲ ಸಾಕೋ ಅಂತ. ನನಗೆ ಏನು ಬೇಕು? ಅದೋ ಅಗಸ್ತ್ಯ ದತ್ತವಾದಂತಹ ಬಿಲ್ಲು,   ಈಗ ನಿನ್ನ ವಿಶ್ವರೂಪ ದರ್ಶನಕ್ಕೆ ಪೂರಕವಾಗಿ ಅಗಸ್ತ್ಯರು ಉಪದೇಶಿಸಿದ ಮಂತ್ರ,  ನಮ್ಮ ಈ ದಕ್ಷಿಣಾ ಪಥದಲ್ಲಿ ಬ್ರಹ್ಮ ಋಷಿಯೂ,  ಆಚಾರ್ಯನೂ ಎಲ್ಲವೂ  ಅಗಸ್ತ್ಯರೇ. ನಿಮ್ಮ ವಸಿಷ್ಠ ಎಲ್ಲ ಅಲ್ಲಿ ಊರಿನಲ್ಲಿ. ಈ ಬದಿಗೆ ಬೆಳೆದದ್ದೆಲ್ಲಾ ಅಗಸ್ತ್ಯನದ್ದು.  ಹಾಗಾಗಿ ಪರಮ ಗುರು ಆದಂತಹ ಅಗಸ್ತ್ಯ ನಿನ್ನನ್ನು ಈ ದಕ್ಷಿಣಾ ಪಥದಲ್ಲಿ ಮೆರೆಸುವದಕ್ಕಾಗಿ ಕೊಟ್ಟಂತಹ ಅನುಗ್ರಹ ರೂಪ ಅದು.  ಅಗಸ್ತ್ಯ ದತ್ತ ಬಿಲ್ಲು. ಅಗಸ್ತ್ಯರೇ ಕೊಟ್ಟ ಬ್ರಹ್ಮಾಸ್ತ್ರ. ಇದರಿಂದ ನಿನಗೂ ಕಾರ್ಯ ಸಾಧನೆಯಾಗ್ತದೆ.  ರಾವಣನಿಗೂ ಉತ್ಕರ್ಷವಾಗ್ತದೆ.  ಅಲ್ಲಿಯವರೆಗೂ ನನ್ನದೊಂದು ಹಟ. ನಮ್ಮ ಮಣ್ಣಿನ ಬೆಳೆಯಿಂದಲೇ ನಮಗಾಗಬೇಕು ಪೂರ್ತಿ. ನನ್ನ ನಂತರ ಬೇಕಾದರೆ ದಕ್ಷಿಣೊತ್ತರ ಒಂದಾಗಲಿ. ವಿಭೀಷಣ ಇದ್ದಾನೆ,  ಒಂದು ತತ್ವಕ್ಕಾಗಿ ಹೋರಾಟ ಮಾಡಿದ್ದೇನೆ. ಮನುಷ್ಯನಾಗಿ ನಿನ್ನ ಕಾಲಲ್ಲೇ ನೀನು ನಿಲ್ಲು. ಅದೋ ಬ್ರಹ್ಮಾಸ್ತ್ರವನ್ನು ಹೂಡು.  ರಾವಣ ಆತ್ಮ ನಿವೇದನೆ ಮಾಡ್ತಾನೆ. ರಾಮನಿಗಲ್ಲ. ಬ್ರಹ್ಮಾಸ್ತ್ರಕ್ಕೆ. ನಾನು ಸಾಧಿಸಿದಂತಹ ಏನು ಸಂಪತ್ತು ಉಂಟು,  ಇದನ್ನು ಭಾವೀ  ರಾಕ್ಷಸರ ಸಾಮ್ರಾಜ್ಯಕ್ಕೆ ಅಸ್ತಿವಾರವಾಗಿ  ಈ ಮಣ್ಣಿನಿಂದ ಬೆಳೆದ ಈ ಮಣ್ಣಿನ ಮಗನ ಮೈ  ಮಣ್ಣಿನಲ್ಲಿ ಸೇರಿ ಹೋಗಿ ಸೂಕ್ತವಾದಂತಹ ಪ್ರಚೋದನ ಮುಂದೆ ನನ್ನ ಜನಾಂಗಕ್ಕೆ ನಾನು ಕೊಡ್ತೇನೆ. ಇದರಿಂದ ಇಹವನ್ನು ನಾನು ಚೆನ್ನಾಗಿ ಸಾಧಿಸಿದೆ. ಪರವೂ ನನ್ನ ಕೈಬಿಟ್ಟು ಹೋಗ್ಲಿಲ್ಲ. ರಾಮನಿಗೂ ಪ್ರತಿಸ್ಪರ್ಧಿ ಇನ್ನು ಮಂದೆಯೂ ಇಂಥವ ಸಿಕ್ಕೂದಿಲ್ಲ. ರಾಮಾವತಾರದ ಭೂಷಣಕ್ಕೆ ಈ ರಾವಣನಿಲ್ಲದಿದ್ದರೆ ಕಿರಟವೇ ಇಲ್ಲ. ರಾಮ ರಾವಣ ಅಂತಂದ್ರೆ ಹಾಗೆ.  ಇಂತಹ ಒಂದು ನೆನಪು ಭಾವಿ ಜನಾಂಗಕ್ಕೆ ಸ್ಫೂರ್ತಿ ದಾಯಕವಾಗಲಿ. ರಾಮಾ ರಾಮ ಬಿಡು ಬಿಡು ಬ್ರಹ್ಮಾಸ್ತ್ರ..... ರಾಮಾ ರಾಮಾ...

ಮಂಗಳಂ



ಕೇವಲ ಯಕ್ಷಗಾನ ಅರ್ಥ ಸಾಹಿತ್ಯದೊಳಗಿನ ಕೆಲವು ದೃಷ್ಟಿಕೋನಗಳನ್ನು ತೋರಿಸುವುದಷ್ಟೇ ಇಲ್ಲಿನ ಪ್ರಯತ್ನ. ಈ ಸಾಹಿತ್ಯ ಪ್ರಪಂಚದಲ್ಲಿ ಹೀಗೆ ಒಮ್ಮೆ ವಿಹರಿಸುವ ಮನಸ್ಸಾದಲ್ಲಿ ಈ ಶ್ರಮ ಸಾರ್ಥಕತೆಯನ್ನು ಪಡೆಯುತ್ತದೆ. ಯಕ್ಷಗಾನದ ಅತ್ಯಮೂಲ್ಯ ಮತ್ತು ಬಹು ಪ್ರಧಾನವಾದ ಈ ಅಂಗ ಬಾಹ್ಯ ಪ್ರಪಂಚ ಇಂದಿಗೂ ಗುರುತಿಸುವುದಿಲ್ಲ. ಯಕ್ಷಗಾನ ಎಂಬ ತಿಳುವಳಿಕೆ ಬಗೆ ಬಗೆಯ ವೇಷ ಕುಣಿತ ಇಷ್ಟಕ್ಕೇ ಸೀಮಿತವಾಗಿಬಿಟ್ಟಿದೆ. ಯಕ್ಷಗಾನಕ್ಕೆ ತನ್ನದೇ ಆದ ಆಯಾಮವನ್ನು ತಂದು ಕೊಟ್ಟ ಈ ಮಾತಿನ ಪ್ರಾಕಾರ ಇನ್ನಷ್ಟು ವೈಭವಯುತವಾಗಿ ಬೆಳೆಯಲಿ, ಮಾತ್ರವಲ್ಲ  ಆ ಬೆಳೆಗೆ ಈ ಬಗೆಯಲ್ಲಿ ಒಂದು ಪೂರಕ ದೇಣಿಗೆಯಾಗಲಿ ಎಂಬ ಆಶಯದೊಂದಿಗೆ ಅಂತರಂಗದ ರಾವಣ ಎಂಬ ಲೇಖನ ಮಾಲೆ ಇಲ್ಲಿಗೆ ಪೂರ್ಣವಾಗುತ್ತದೆ. 
"ಯಕ್ಷಗಾನಂ ಗೆಲ್ಗೆ"

Thursday, May 8, 2014

ಅಂತರಂಗದ ರಾವಣ ಭಾಗ ೮


ಹಲವು ದಿವಸಗಳ ಹಿಂದೆ ಸರಣಿರೂಪದಲ್ಲಿ ಅಂತರಂಗದ ರಾವಣ ಎಂಬ ಲೇಖನ ಬರೆದಿದ್ದೆ.  ರಾವಣ ವಧೆ ತಾಳಮದ್ದಲೆಯೊಂದರ ಅವಲೋಕನ ಓದಿ ಒಂದು ಸಂವಾದ ಜತೆಗೆ ಒಂದು ಜಿಜ್ಞಾಸೆ ಕೆಲವರಲ್ಲಿ ಮೂಡಿತ್ತು.  ಅದು ಆ ತಾಳ ಮದ್ದಲೆಯ ರಾವಣ ಹಾಗೂ ಮಂದೋದರಿಯ ಸಂವಾದವನ್ನು ಆಧರಿಸಿ ಸಿದ್ದಪಡಿಸಿದ ಲೇಖನ.  ಹೀಗೆ  ಚಿಂತನ ಮಂಥನಗಳಿಗೆ ಕಾರಣವಾದ ಆ ಲೇಖನ ಆ ಅರ್ಹತೆಯನ್ನು ಗಿಟ್ಟಿಸಿತಲ್ಲಾ ಎಂಬ ಒಂದು ರೀತಿಯ ಅಳುಕು ಕಾರಣವಾದರೆ,  ಅದು ಹುಟ್ಟು ಹಾಕಿದ  ಜಿಜ್ಞಾಸೆಗಳು ಏನೇ ಇದ್ದರೂ ನನ್ನ ನಿಲುಮೆ ಏನು ಎಂಬುದು ನನ್ನಲ್ಲಿ ನಾನೇ ಹಲವು ಸಲ ಪ್ರಶ್ನಿಸಿಕೊಳ್ಳುವಂತಾಯಿತು. ಇದಕ್ಕೆ ಕಾರಣ ಮನಸ್ಸಿನ ಪ್ರಾಮಾಣಿಕತೆ ಎಂದಷ್ಟೇ ವ್ಯಾಖ್ಯಾನಿಸಬಹುದು.

ಈ ಹಿಂದಿನ ಲೇಖನಗಳ ಪುಟಗಳು ಈ ಕೆಳಗೆ ತೆರೆದುಕೊಳ್ಳುತ್ತವೆ.
1.    ಅಂತರಂಗದ ರಾವಣ ಭಾಗ ೭

ದುಷ್ಟ ಕಥಾಪಾತ್ರವೊಂದು ವೈಭವೀಕರಿಸುವ  ಔಚಿತ್ಯ  ಎಷ್ಟು ಸರಿ? ರಾವಣನೆಂಬ ಅಸುರ ಪಾತ್ರವೊಂದು ವೈಭಕರಿಸುವಾಗ ಶ್ರೀರಾಮನ ವ್ಯಕ್ತಿತ್ವ  ಪ್ರಶ್ನಾರ್ಹವಾಗುವುದಿಲ್ಲವೇ? ವಾಸ್ತವದಲ್ಲಿ ಇವುಗಳೆಲ್ಲ ಸತ್ಯ ಎಂದು ಅಂಗೀಕರಿಸಲೇಬೇಕು. ಆದರೂ ಲೇಖನದ ಮೂಲ ಉದ್ದೇಶ  ಮೊದಲೇ ಸ್ಪಷ್ಟ ಪಡಿಸಿದಂತೆ ನಿಚ್ಹಳ. ಆದರೂ ಅದು ಸ್ಪಷ್ಟವಾಗಲಿಲ್ಲವೋ ಎಂಬ ಆತಂಕ ಮೂಡುವ ಹಾಗಾದದ್ದು  ಸುಳ್ಳಲ್ಲ.

ವಾಸ್ತವದಲ್ಲಿ ಯಕ್ಷಗಾನದ ಸಾಹಿತ್ಯ ಪ್ರಕಾರದ ಕಿಂಚಿತ್ ಪರಿಚಯವನ್ನು ಸ್ಥೂಲವಾಗಿ ತೋರಿಸುವ ಆಸಕ್ತಿ ಮಾತ್ರ ಇಲ್ಲಿ ಇದ್ದದ್ದು. ಆದರೆ ಅಂತರಗದ ರಾವಣ ಎಂದು ವ್ಯಾಖ್ಯಾನಿಸುವಾಗ , ರಾವಣನ ಪಾತ್ರಕ್ಕೆ  ಅಷ್ಟೊಂದು ಪ್ರಾಮುಖ್ಯತೆಯ ಔಚಿತ್ಯವಿದೆಯೆ?  ನಿಜವಾಗಿಯೂ ಇಲ್ಲ ಎಂದೇ ಹೇಳಬೇಕು. ಆದರೆ ಇದನ್ನು ಎರಡೇ ಎರಡು ಅಕ್ಷರಗಳಲ್ಲಿ ತಳ್ಳಿ ಹಾಕುವಂತಹುದಲ್ಲ.  ಕೆಲವೊಮ್ಮೆ ಯಕ್ಷಗಾನ ಕಾರ್ಯಕ್ರಮ ಅಯೋಜನೆಗೊಂಡಾಗ ಕೆಲವೊಂದು ವಿಶೇಷ ವಿಷಯದ ಉದ್ದೇಶವಿರುತ್ತದೆ. ಆಗ ಕಲಾವಿದ ತನ್ನ ನಿರ್ವಹಣೆಯಲ್ಲಿ ಕೆಲವೊಂದು ದೃಷ್ಟಿಕೋನವನ್ನು ಇರಿಸಿಕೊಂಡು ನಿರ್ವಹಿಸುತ್ತಾನೆ. ಯಕ್ಷಗಾನದಲ್ಲಿ ಇದು ಸಾಮಾನ್ಯ. ಕೆಲವೊಮ್ಮೆ ಔಚಿತ್ಯದೊಳಗೆ ಕಲಾವಿದ ಸ್ವತಂತ್ರನಾಗುತ್ತಾನೆ. ಇಲ್ಲಿ ಒಂದು ಪಾತ್ರ ಅಥವಾ ವ್ಯಕ್ತಿತ್ವ ಹೇಗೆ ವೈಭವೀಕರಿಸಲ್ಪಡುತ್ತದೆ ಎಂಬುದಕ್ಕಿಂತಲೂ ಅದರ ಪರಿಣಾಮ ಏನು ಎನ್ನುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಮಂಡೋದರೀ ಸಂವಾದಕ್ಕೆ ಇದು ಸಮಾಪ್ತಿಯಾಗದೇ ಮುಂದುವರೆಸುವುದು ಅನಿವಾರ್ಯವಾಗುತ್ತದೆ. ಅಷ್ಟೇ ಅಲ್ಲ ಒಂದು ಬಾಧ್ಯತೆ ಈ ನಡುವೆ ತನ್ನಿಂತಾನಾಗಿ ಸೃಷ್ಟಿಯಾಗುತ್ತದೆ. ಕೇವಲ ರಾವಣ ಮಂಡೋದರಿಯ ಸಂವಾದದಲ್ಲಿ ಒಂದು ದೃಷ್ಟಿಕೋನ ಪರಿಸಮಾಪ್ತಿಯಾದರೆ ಅದು ಅಪೂರ್ಣವಾಗುತ್ತದೆ.
 
ಛಾಯ ಚಿತ್ರ ಕೃಪೆ: ಶ್ರೀ ರಾಮ್ ನರೇಶ್ ಮಂಚಿ ಸಂಗ್ರಹ
ಮಂಡೊದರಿಯಿಂದ ಬೀಳ್ಕೊಟ್ಟ ರಾವಣ ಅಳಿದುಳಿದ ಬಲ ಕ್ರೋಢೀಕರಿಸಿ ರಾಮನೊಡನೆ ಹೋರಾಟಕ್ಕೆ ಅಣಿಯಾಗುತ್ತಾನೆ.
ಅಳಿದುಳಿದ ಬಲಸಹಿತ ರಾವಣ |
ಕೊಳಗುಳಕೆ ನಡೆತರಲಿಕಿತ್ತಲು |
ನಳ ಹನುಮ ನೀಲಾಂಗದರು ಕಳ | ವಳಿಸುತಿರಲು ||


ಎಂದು ಸುರಪತಿ ನುಡಿಯೆಮಾತಲಿ |
ಸ್ಯಂದನದಿ ಪೀಯೂಷವಿಟ್ಟಾ |
ನಂದದಲಿ ಧರೆಗಯ್ದಿ ರಾಮನ ಚರಣಕಭಿನಮಿಸಿ ||
ಸಿಂಧುಶಯನನೆ ನೀನಖಿಳ ಸುರ |
ವಂದ ರಕ್ಷಕನಮಿತ ವಿಕ್ರಮ |
ನೆಂದು ಪೊಗಳುತ ಬಿನ್ನವಿಸಿದನು ಸುರಪನೆಂದುದನು |

ಇತ್ತ ರಾಮ ಪಾಳಯಕ್ಕೆ ಸುರಪ ಸಾರಥಿ ರಥದೊಂದಿಗೆ ಬರುತ್ತಾನೆ.
ದೇವ ನೀ ಲಾಲಿಸಿ ಕೇಳು ಬಿನ್ನಪವ |
ನಾ ವಿವರಿಪೆ ನಾಕ ಪತಿಯ  ಸನ್ಮತವ ||
ದುರುಳನಾಥನು ರಥವೇರಿ ನಿಂದಿರುವ |
ಪರಮಾತ್ಮ ನೀ ಪಾದಚಾರಿಯಾಗಿರುವ ||
ಪರಿಗಳ ಯೋಚಿಸುತೀಗವರೆಲ್ಲ |
ಹರುಷದಿ ರಥವನು ಕಳುಹಿದರಲ್ಲ ||

 ಎನ್ನುತ್ತಾ ತನ್ನೊಡೆಯನ ಅಣತಿಯನ್ನೂ ಒಡೆಯನ ಮನದ ಇಂಗಿತವನ್ನೂ ತಿಳಿಸುತ್ತಾನೆ. ರಥವೇರಿ ಯುದ್ದಕ್ಕೆ ಬರುತ್ತಿರುವ ರಾವಣನೆದುರು ಬರಿಗಾಲಲ್ಲಿ ನೆಲದ ಮೇಲೆ ನಿಂತು ಹೋರಾಡುವ ರಾಮನಿಗೆ ದೇವೇಂದ್ರ ರಥವನ್ನು ಕಳಿಸುತ್ತಾನೆ. ಇಲ್ಲಿ ತೆಕ್ಕೆಟ್ಟೆ ಆನಂದ ಮಾಸ್ತರ್ ರವರು ಮಾತಲಿಯಾಗಿಬಿಡುತ್ತಾರೆ. ಆರಂಭದಲ್ಲಿ ಶ್ರೀರಾಮ ರಥವನ್ನು ಸ್ವೀಕರಿಸುವುದಕ್ಕೆ ಏರುವುದಕ್ಕೆ ನಿರಾಕರಿಸುತ್ತಾನೆ. ಆಗ ಮಾತಲಿ ಹೇಳುವ ಮಾತು. ಭೌತಿಕವಾಗಿ ಕಾಣುವ ಈ ರಥ ಮುಖ್ಯವೋ ಅಲ್ಲ ರಾಮನ ಮನೋ ರಥ ಮುಖ್ಯವೋ , ರಾಮನಿಗೆ ಈವರೆಗೆ ಹಲವು ಸಂದರ್ಭಗಳಲ್ಲಿ ದೇವತೆಗಳಿಂದ ಯಾವ ಸಹಾಯವೂ ಒದಗಿ ಬಂದದ್ದಿಲ್ಲ. ರಾಮ ಅದನ್ನು ಪಡೆಯಲೂ ಇಲ್ಲ. ಈ ಕಡಲ ತಡಿಯಲ್ಲಿ ಮೂರು ದಿವಸ ಉಪವಾಸ ಮಲಗಿದಾಗಲೂ ದೇವತೆಗಳ ಸಹಾಯ ಬಯಸದೆ ಈ ಕಡಲಿನಲ್ಲಿ ದಾರಿಮಾಡಿಕೊಂಡವನು. ಅಂತಹ ರಾಮ ಈಗ ದೇವೇಂದ್ರ ಕಳಿಸಿಕೊಟ್ಟ ರಥವನ್ನು ಸ್ವೀಕರಿಸಿ ಅದನ್ನು ಏರುತ್ತಾನೆ ಎಂದಾದರೆ ಪರರ ಹಂಗನ್ನು ಆಶ್ರಯಿಸಿದಂತೆ. ರಾಮ ದೇವೇಂದ್ರನ ಕೊಡುಗೆಯನ್ನು ಸ್ವೀಕರಿಸುವುದಕ್ಕೆ ಒಪ್ಪದಿರುವಾಗ ಮಾತಲಿ ಮತ್ತಷ್ಟು ವಿನಯದಿಂದ ದೇವೇಂದ್ರನ ಕೊಡುಗೆಗೆ ಸಮರ್ಥನೆಯನ್ನು ನೀಡುತ್ತಾನೆ.

          ಪ್ರತೀಯೊಬ್ಬನಿಗೂ ಮನೋರಥವೇ ಕಾರ್ಯಸಿದ್ಧಿಗೆ ಕಾರಣವಾದರೂ ಅದು ಮಾತ್ರ ಸಾಲದು ಅಂತ, ಮೈ ಅಂತ ದೇವರು ಕೊಡುವುದು, ಆ ದೇಹವನ್ನೇ ರಥ ಎಂದು ಹೇಳುವುದು ಹೊರತು ಮನಸ್ಸನ್ನು ರಥ ಎಂದು ಹೇಳಿಲ್ಲ. ಮನಸ್ಸಿನ ಕಾಮನೆಗಳನ್ನು ಈಡೆರಿಸುವಲ್ಲಿ ದೇಹವೆಂಬುದನ್ನು ಆಶ್ರಯಿಸುವುದು ಕರ್ಮ ಎಂದೆನಿಸುವಾಗ, ಇಲ್ಲಿ ರಥವೂ ಅವಶ್ಯ ಎನಿಸಿಕೊಳ್ಳುತ್ತದೆ. ಇನ್ನು ದೇವೇಂದ್ರನ ಹಂಗಿನಲ್ಲಿ ನಾನು ಗೆಲ್ಲಬೇಕೆ ಎಂಬ ಸಂದೇಹ ಮೂಡುವಾಗ , ಈ ’ನಾನು ’ ಎಂಬ ಭಾವಕ್ಕೆ ಅಭಿಮಾನಿ ದೇವತೆಯೇ ಇಂದ್ರ. ನಾನು ಎಂಬುದು ಎಲ್ಲಿಯವರೆಗೆ ಇರುವುದೋ ಅಲ್ಲಿವರೆಗೆ ಇಂದ್ರನ ಆಶ್ರಯ ಇರುತ್ತದೆ.  ಇನ್ನು ಹಂಗು ಎಂಬುದು, ಈ ರಾಮ ಎಂಬ ನಾಮದಿಂದ ಕಾಣಿಸಿಕೊಳ್ಳುವ ಈ ದೇಹ, ಇದಕ್ಕೆ ಕಾರಣವೇ ಇಂದ್ರ. ಅದಲ್ಲವಾದರೆ ಋಷಿಗಳು.  ಆ ಋಷಿಗಳಿಂದ ಉಪದೇಶ, ಸಲಹೆ,  ಸೂಚನೆಗಳು ರಾಮನಿಗೆ ಗ್ರಾಹ್ಯವಾದರೆ ದೇವೇಂದ್ರನ ರಥವನ್ನು ಸ್ವೀಕರಿಸುವುದು ಅಪಥ್ಯವಾಗ ಕೂಡದು. ರಥವಿಲ್ಲದೇ ಹೋದರೆ ರಾಮನಿಂದ ಅಸಾಧ್ಯವೇ? ಇದನ್ನು ಮಾತಲಿ ಅಲ್ಲಗಳೆಯುತ್ತಾನೆ. ಬ್ರಾಹ್ಮಣರು ಸಂಧ್ಯಾವಂದನೆಮಾಡುವಾತ ಸಮುದ್ರಕ್ಕೆ ಅರ್ಘ್ಯವನ್ನು ಬಿಡುತ್ತಾರೆ. ಅದು ಸಮುದ್ರದಲ್ಲಿ ನೀರು ಕಡಿಮೆ ಎಂದಲ್ಲವಲ್ಲ? ಲೋಕವನ್ನೇ ಬೆಳಗುವ ಸೂರ್ಯನಿಗೆ ಮಂಗಳ ನೀಲಾಂಜನವನ್ನು ಬೆಳಗಿದರೆ ಸೂರ್ಯನಲ್ಲಿ ಬೆಳಕು ಕಡಿಮೆ ಉಂಟು ಎಂದೆ? ಸೂರ್ಯನಿಗೆ ಆರತಿ ಬೆಳಗಿದ್ದೆನೆ ಪ್ರಭಾಕರನಂತಿರುವ ಶ್ರೀರಾಮ ಅದನ್ನು ಸ್ವೀಕರಿಸಬೇಕು.  ದೇವರಿಗೆ ರಥೋತ್ಸವ ಮಾಡುವುದು ದೇವರಿಗೆ ಕಾಲುನೋವು ಎಂದಲ್ಲವಲ್ಲ?
ಭಾಮಿನಿ
ದಾನವಾಂತಕನಂಘ್ರಿಯೊಳಗಾ |
ಭಾನುಸುತ ನಳ ನೀಲ ಹನುಮ ಸು |
ಷೇಣಜಾಂಬವ ಮುಖ್ಯರೆರಗಲು ಕಂಡು ರಘುಪತಿಯು ||

ವಾನರರ ಮತವಿಡಿದು ನಾ ಗೀ |
ರ್ವಾಣ ಪತಿ ಹಂಗಿನೊಳು ಗೆಲುವ ವಿ |
ಧಾನ ತಪ್ಪದುಯೆನುತ ರಥವೇರಿದನು ಖರವೈರಿ ||
          ರಾಮ ಈ ದೇವೆಂದ್ರನ ಕೊಡುಗೆಯನ್ನು ಹಂಗು ಎಂದು ಪರಿಗಣಿಸಿ ಆ ಬಗೆಯ ಸಂಶಯವನ್ನು ವ್ಯಕ್ತ ಪಡಿಸದೇ ಇರುತ್ತಿದ್ದರೆ ಬಹುಶಃ ರಾಮನೆಂಬ ಪರಿಪೂರ್ಣವ್ಯಕ್ತಿತ್ವಕ್ಕೆ ಈ ಘಟನೆ ಅಪರ್ಯಾಪ್ತವನ್ನು ಕಲ್ಪಿಸಿದ ಹಾಗಾಗುತ್ತದೆ. ಧರ್ಮ ಸಂರಕ್ಷಣೆಯಲ್ಲಿ ತನ್ನ ಕಿಂಚಿತ್ ಅನುದಾನದ ಸೇವೆ ಎಂದು ಪರಿಗಣಿಸಿಯೇ ದೇವೇಂದ್ರ ಈ ಕೊಡುಗೆಯನ್ನು ಕಲ್ಪಿಸಿದ್ದ. ಹಾಗಾಗಿ ರಾಮ ಮುಂದೆ ವಾನರರ ಮತವಿಡಿದು ಖರ ವೈರಿ ರಾಮ  ರಥವನ್ನು  ಏರುತ್ತಾನೆ.
ಕಳುಹಿದ ನಿನಗೀರಥವ | ಎನ್ನ | ಕೊಳಗುಳಕೆನುತಲೆ ಮಘವ ||
ತಳುವದೆ ನಿನ್ನನು ಗೆಲುವೆ | ಬಳಿ | ಕಳವಿಯೊಳಾತನ ಕೊಲುವೆ ||

ದೇವೆಂದ್ರ ಕಳುಹಿಸಿದ ರಥವನ್ನು ಏರಿದ ರಾಮನನ್ನು ಕಂಡಾಗ ರಾವಣ ಗಹ ಗಹಿಸಿ ಆಡುವ ಮಾತಿದು.

ಕಾಣುವವರ ದೃಷ್ಟಿಯಲ್ಲಿ ಈ ಸಂಧ್ಯಾಕಾಲದಲ್ಲಿ ಏಕಾಂಗ ವೀರನಾಗಿ ಕೇವಲ ಈ ಲಂಕೇಶ್ವರ ಉಳಿದಿದ್ದಾನೆ. ಎಲ್ಲಾ ಸಮೃದ್ದಿಯಿಂದ ರಾವಣನು ರಾಮನನ್ನು ಇದಿರಿಸುವಾಗ ರಾಮನಿಗೆ ಇದ್ದದ್ದೇ ಹೆಚ್ಚಾಗಿತ್ತು. ಅಂದರೆ ಅಷ್ಟು ಬಲ ಬೇಕಾಗಿರಲಿಲ್ಲ. ಆದರೆ ರಾವಣನಲ್ಲಿ ಎಲ್ಲವೂ ಮುಗಿದಾಗ ರಾಮನಿಗೆ ಇದ್ದದ್ದು ಸಾಲದೆ ಈಗ ಅಲ್ಲಿಂದ ಬರಬೇಕಾಯಿತು. ಇದು ಜೀವನದಲ್ಲಿ ಏಕೈಕ ರಸ,  ವೀರ ರಸ ಎಂದು ನಂಬಿದ ರಾವಣನ ಅಸ್ತಿತ್ವಕ್ಕೆ ಪೂರಕವಾಗಿಯೇ ಉಂಟು.  ಇನ್ನು ರಾವಣ ರಾಮನಲ್ಲಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುವ ರೀತಿಯೇ ಅತ್ಯಂತ ವಿಶಿಷ್ಟವಾಗಿದೆ.

“ ವಿನಾಕಾರಣ ನಾನು ಯಾರ ಮೇಲೂ ಹಲ್ಲೆ ಮಾಡುವವನಲ್ಲ. ನಿನ್ನ ಚಾರಿತ್ರ್ಯ ಹನನ ಮಾಡುವ ಉದ್ದೇಶವೂ ನನ್ನದಲ್ಲ. ಹಲವಾರು ಆದರ್ಶಗಳು ನಿನ್ನಲ್ಲಿವೆ ರಾಮಾ. ಲಂಕೆಯವರಿಗೆ ಅಲ್ಲದೇ ಇದ್ದರೂ, ಬಹಳ ಮೊದಲಿಂದಲೂ ಈ ದಕ್ಷಿಣೋತ್ತರ ಎಲ್ಲಾ ವಿಚಾರದಲ್ಲೂ ದಕ್ಷಿಣೋತ್ತರವಾಗಿಯೇ ಉಳಿದಿದೆ. ನಮ್ಮ ಅಚಾರ ವಿಚಾರ ಎಲ್ಲ ವಿಂಧ್ಯಾ ಪರ್ವತದ ಶುದ್ದ ವೈದಿಕ ಧರ್ಮವನ್ನು ಅವಲಂಬಿಸುವವರಿಗೆ ಪಥ್ಯವೂ ಅಲ್ಲ , ಅನುಸರಣೀಯವೂ ಅಲ್ಲ. ನನಗೆ ಬಂದ ಅಕ್ಷೇಪ ಎಲ್ಲೀಂತ ಅಂದ್ರೆ, ನಿಮ್ಮದ್ದಾದ ಆಚಾರ ವಿಚಾರವನ್ನು ಈ ದಕ್ಷಿಣಾ ಪಥದಲ್ಲಿ ಕೂಡ ಸ್ಥಾಪಿಸಬೇಕು ಎಂದು ಹೊರಟು,  ನಾವು ಈವರೆಗೆ ದುರಾಚಾರಿಗಳಾಗಿ ಇದ್ದೇವೆ,  ಎಂಬ ಐತಿಹಾಸಿಕ ಸತ್ಯವನ್ನು ಸ್ಥಾಪಿಸಬೇಕು ಎಂದು ಹೊರಟದ್ದರಲ್ಲಿ ಮಾತ್ರ. “
ಮುಂದೆ ತಂಗಿ ಶೂರ್ಪನಖಿಯನ್ನು ರಾವಣ ಸಮರ್ಥಿಸುತ್ತಾನೆ. ಆಕೆ ರಾಮನಲ್ಲಿ ಪ್ರಣಯ ಭಿಕ್ಷೆಯನ್ನು ಬೇಡಿದ್ದನ್ನು ಸಮರ್ಥಿಸುವ ರೀತಿ ಹೀಗಿದೆ.  
“ನನ್ನ ತಂಗಿಯ ಬಗ್ಗೆ ಆಕ್ಷೇಪ ಕೇಳಿದೆ ನಾನು. ಅವಳು ಸುಂದರನಾದಂತಹ ಪುರುಷನನ್ನು ಕಂಡರೆ ಕಾಮಿಸುವವಳು. ಅದು ನಿಮ್ಮ ದೃಷ್ಟಿಯಲ್ಲಿ ಅನ್ಯಾಯ ಅನಾಚಾರ ಎಂದು ಕರೆಯಲ್ಪಡುತ್ತದಂತೆ. ಆದರೆ ನಮ್ಮ ಲ್ಲಿ ಅಂತದ್ದು ಅಪಚಾರ ಅನ್ಯಾಯ ಎಂದು ಈವರೆಗೆ ಇಲ್ಲ ಮುಂದೆ ಏನೋ ಗೊತ್ತಿಲ್ಲ. ಇದೆಲ್ಲ ಅನ್ಯಾಯ ಅನಾಚಾರ ಎಂದಾಗುತ್ತಿದ್ದರೆ ನಮ್ಮಲ್ಲಿ ತಂದೆ ಒಂದು ಜಾತಿ ತ್ತಾಯಿ ಒಂದು ಜಾತಿ ಅಂತ ಇರಲಿಕ್ಕೆ ಸಾದ್ಯವಿರಲಿಲ್ಲ. ನಮಗೆಲ್ಲ ತಾಯಿಯ ಜಾತಿ. ತಂದೆಯ ಜಾತಿಯಲ್ಲ.  ನಮ್ಮ ತಾಯಿ ಮಿಶ್ರವಸು ಬ್ರಹ್ಮನಲ್ಲಿ ಹೋಗಿ ಸಂತಾನ ಭಿಕ್ಷೆಯನ್ನು ಪಡೆಯಬಹುದು ಎಂಬ ಸಿದ್ದಾಂತದ ಅಡಿಗಲ್ಲಿನಲ್ಲಿ, ನಮ್ಮ ತಂಗಿಯೂ ಯಾರಲ್ಲಿಯಾದರೂ ಹೋಗಿ ಪ್ರಣಯ ಭಿಕ್ಷೆಯನ್ನು ಬೇಡಿದರೆ ಅದು ಅನ್ಯಾಯ ಎಂದು ಹೇಳುವ ನ್ಯಾಯಾಂಗ ನಮ್ಮಲ್ಲಿ ಇಲ್ಲದೇ ಹೋಗಿದೆ.”
ದೇವೇಂದ್ರ ರಥ ಕಳುಹಿದ ದೃಷ್ಟಿಕೋನವನ್ನು ರಾವಣ ವಿಶ್ಲೇಶಿಸುವುದು ಹೀಗೆ.

“ತೆಂಕು ಬಡಗು ಎಂಬ ಸಂಘರ್ಷ ಇಂದು ನಿನ್ನೆಯದಲ್ಲ. ದಕ್ಷಿಣದಲ್ಲಿ ಭದ್ರ ಪೀಠ ಯಾವಾಗಿಂದ ಸ್ಥಾಪನೆಗೊಂಡಿತೋ ಆಗಿನಿಂದ ಉತ್ತರಕ್ಕು ದಕ್ಷಿಣಕ್ಕು ಸಂಘರ್ಷ ಬೆಳೆದು ಬಂತು. ಇದು ಇತಿಹಾಸ. ಆದರೆ ಇಂದು ಈ ಪಂಥಾಹ್ವಾನ ನಿರ್ಣಾಯಕ ಹಂತಕ್ಕೆ ಮುಟ್ಟಿದೆ. ಉತ್ತರದ ಪ್ರಾತಿನಿಧ್ಯ ರಾಮನಿಗಾದರೆ ದಕ್ಷಿಣದ ಪ್ರಾತಿನಿಧ್ಯ ರಾವಣನಿಗೆ. ಈಗ ದೇವೆಂದ್ರನಿಗೆ ಅರಿವಿದೆ ರಾವಣ ಎಷ್ಟು ದೊಡ್ಡವ. ರಾಮನಿಗೆ ಅರಿವಾಗಲಿಲ್ಲ. ಯಾಕೆ? ರಾಮನ ಪರಿಸರ ಅದಕ್ಕೆ ಅವಕಾಶ ಕೊಡಲಿಲ್ಲ.  ರಾಮನ ಸುತ್ತಮುತ್ತಲು ಇರುವವರು ಅವರೆ ಅಲ್ವ? ಈಗಲೂ ರಾಮನಿಗೆ ಮತ ಹಾಕುವವರು ಯಾರು ವಾನರರರು. ವಾನರರ ಮತವಿಡಿದು.... ಇವರಿಗೆ ಮೊದಲಿಂದಲೂ ಪೂರ್ವಾಗ್ರಹ ಲಂಕೆಯವರಲ್ಲಿ. ಹಾಗೆಂದು ಇವರು ಅಯೋಧ್ಯೆಗೂ ಅನುಗ್ರಹ ಹೊಂದಿದವರಲ್ಲ.  ಈ ಕಿಷ್ಕಿಂಧೆಯವರು ಉತ್ತರದ ಅಯೋಧ್ಯೆಗೂ ಬದ್ಧರಲ್ಲ. ದಕ್ಷಿಣದ ಲಂಕೆಗೂ ವಿಧೇಯರಲ್ಲ. ಅವರನ್ನು ಅಂಕೆಯಲ್ಲಿ ತರುವುದಕ್ಕೆ ಅಯೋಧ್ಯೆಯವರು ಯತ್ನಿಸಲಿಲ್ಲ. ನಾನು ಪ್ರಯತ್ನ ಪಟ್ಟೆ.  ಮತ್ತೆ ಈಗ ಅವರು ರಾಮನಿಗೆ ಮತ ಹಾಕಿದ್ದಾರೆ ಎಂದರೆ..ಇಲ್ಲಿ ವಾನರರ ಮತ ಅದು ಗೌಣ.  ಹಾಗಾದರೆ ರಾಮನನ್ನು ಬೆಂಬಲಿಸುವವರು ಯಾರು . ಆ ದೇವತೆಗಳು. ದೇವೇಂದ್ರ. ಅವರಿಗೆ ರಾವಣನ ಪೆಟ್ಟಿನ ಉರಿ ತಿಳಿದಿದೆ. ಹಳೆಯ ದ್ವೇಷವನ್ನು ತೀರಿಸುವುದಕ್ಕಾಗಿ ಈ ರಥದ ಕೊಡುಗೆ. ಇದರಿಂದ ರಾಮ ಸಣ್ಣವ ಎಂದಲ್ಲ. ರಾಮನ ಶಕ್ತಿಗೆ ದೇವೆಂದ್ರನ ಶಕ್ತಿಯೂ ಸೇರಿಕೊಂಡರೆ..ಇದರಿಂದ ರಾವಣನ ಸಾಮಾರ್ಥ್ಯ ಏನೆಂದು ಅರಿವಾಗುತ್ತದೆ. ದೇವೆಂದ್ರ ಹಳೆಯ ಅಪಾರಾಧಿ ಅವನನ್ನು ಆಮೇಲೆ ನೋಡಿಕೊಂಡೇನು. ಅದಕ್ಕಿಂತ ಮೊದಲು ನಿನ್ನನ್ನು. ನೀವಿಬ್ಬರೂ ನನಗೆ ಲಕ್ಷ್ಯವೇ ಅಲ್ಲ. “ 

ಎಮ್ಮೀರ್ವರ ಗೆಲುವುದನು | ನೀ | ನೆಮ್ಮಿದ ಬಗೆಯಿನ್ನೇನು ||
ಸಮ್ಮತವಾಗಿಹ ರಣವೊ | ಕಡು | ಹಮ್ಮಿನ ಮಾರಣದಿರವೊ ||
ರಾಮನನ್ನು ಸೋಲಿಸಿ, ಆಮೇಲೆ ದೇವೆಂದ್ರನನ್ನು ನೋಡಿಕೊಳ್ಳುತ್ತೇನೆ. ಆದರೆ ಅದನ್ನು ಸಾಧಿಸುವ ಮಾರ್ಗ ಯಾವುದು?  ಕೆಚ್ಚೆದೆಯ ಹೋರಾಟದಿಂದಲೋ ಅಥವಾ ಮಾಟ ಮಾರಣ ಮುಂತಾದ ಮಾಯಾ ವಿದ್ಯೆಗಳಿಂದಲೋ? ಎಂಬುದಾಗಿ ರಾಮ ಕಟಕಿಯಾಡುತ್ತಾನೆ.

ರಾವಣ ಮಾಟ ಮಾರಣ ಮುಂತಾದವುಗಳನ್ನು ವೈರಿಗಳ ದಮನಕ್ಕೆ ಮಾಡಿದ್ದಾನೆ, ಮಾಡಿಸಿಯೂ ಇದ್ದಾನೆ. ಅದು ಅಪರಾಧವಲ್ಲ ಯಾಕೆ? ರಾಮನ ಕಟಕಿಗೆ ರಾವಣ ಉತ್ತರಿಸುತ್ತಾನೆ.

ದನುಜರು ಮಾಯಾವಿಗಳು | ಬಲು | ಘನತರ ಅಷ್ಟಸಿದ್ದಿಗಳು ||
ಅನುಕರಿಸಿರುವರು ನೋಡು | ಇದ | ನರಿತು ವಿಚಾರವ ಮಾಡು ||

ಈ ಪ್ರಪಂಚದಲ್ಲಿ ಮೈ ಒಡೆದು ಬಂದಿರುವಂತಹ ಸಕಲ ಜೀವಗಳಿಗೂ ಆನುವಂಶಿಕವಾದಂತಹ ಕೆಲವು ಕೊಡುಗೆಗಳು ಇರುತ್ತವೆ ಅದಕ್ಕೆ ಸಹಜ ಗುಣ ಅಂತ ಹೆಸರು. ಹುಲಿ ಘರ್ಜಿಸುತ್ತದೆ, ಕೋಗಿಲೆ ಹಾಡುತ್ತದೆ.  ಇದು ಹೊಸತಾದ ಸಂಗ್ರಹವಲ್ಲ. ಹಾಗೆ ರಾಕ್ಷಸರಿಗೆ ಈ ಅಣಿಮಾದಿ ಅಷ್ಟಸಿದ್ಧಿಗಳು ಹುಟ್ಟುಗುಣ. ರಕ್ಕಸನಾದಂತಹ ರಾವಣನಲ್ಲಿ ಊರ್ಜಿತ ಶಕ್ತಿ ಅದು. ರಾವಣನ ತಪ್ಪಸ್ಸಿನ ಶಕ್ತಿ.  ರಾವಣನ ದೊಡ್ಡಸ್ತಿಕೆ.

ಶಿವದೇವರ ವಾಹನವಾದಂತಹ ನಂದಿಯನ್ನು ಇದಿರು ಹಾಕಿಕೊಳ್ಳುವಾಗ, ಆ ನಂದಿಯನ್ನು ಇದಿರಿಸುವಾಗ ಆ ನಂದಿಯಲ್ಲಿ ಕೇಳಬಹುದೋ? ಅಯ್ಯಾ ನಂದೀಶ್ವರರೆ  ನೀವು  ಹಾಯುವುದೋ?  ಮೆಟ್ಟುವುದೋ? ಎರಡೂ ಹೌದು. ಅದಕ್ಕೇನು ಮಾಡಬಹುದು? ಹುಲಿಯಾದರೆ ಮೆಟ್ಟುವುದಿಲ್ಲ.. ಹಾರುವುದು ಮಾತ್ರ. ನಂದಿಗೆ ಇದೊಂದು ವೈಶಿಷ್ಟ್ಯ ಹಾಯುತ್ತದೆ. ಮೆಟ್ಟುತ್ತದೆ. ರಾವಣನಿಗೂ ಹಾಗೆ ಮಾಟವೂ ಹೌದು, ನೇರಕ್ರಮದ ಯುದ್ದವೂ ಹೌದು. ಇಂತಹ ಉಭಯ ಶಕ್ತಿಯ ರಾವಣನನ್ನು ಅನುಮೋದಿಸಿ ಮೆಚ್ಚಬೇಕೆ ಹೋರತು, ಮಾಟ ಮಾಡ್ತಿಯ? ಬಾಣ ಬಿಡ್ತಿಯಾ?  ಇದು ಹುಡುಗಾಟಿಕೆಯ ಮಾತು. ರಾಮಾ,,,  ಪ್ರಪಂಚ ನಿನ್ನಿಂದ ಈ ಉತ್ತರವನ್ನು ನಿರೀಕ್ಷಿಸುವುದಿಲ್ಲ. ಬಹಳ ಮಾತೇಕೆ. ರಾವಣ... ರಾವಣನಾಗಿ ರಾಮನಲ್ಲಿ ಇದನ್ನು ನಿರೀಕ್ಷಿಸಲಿಲ್ಲ.  ನಾನು ತಿಳಿದಹಾಗೆ, ಹಿಂದೆ ವಿರೋಧ ಮಾಡಿದ್ದಿ ಎಂಬ ನೋವು ನನಗೆ ನಿನ್ನಲ್ಲಿ ದ್ವೇಷ ಹುಟ್ಟಿಸಿದೆಯೇ ಹೊರತು, ಊರಿನವರಿಗೆ ನೀನು ತೋರಿಸಿದ ಆದರ್ಶದ ಅರ್ಧಾಂಶದಷ್ಟು ನನ್ನಲ್ಲಿ ತೋರಿಸುತ್ತಿದ್ದರೆ, ನನಗೂ ನೀನು ವಂದ್ಯನೇ ಆಗ್ತಿದ್ದಿ. ನಿನ್ನನ್ನು ನನ್ನನ್ನು ಒಂದುಗೂಡಿಸುವಲ್ಲಿ ಸಾಕ್ಷೀ ರೂಪದಲ್ಲಿರಬೇಕಾದ ದೇವತೆಗಳಿಗೆ ಇಷ್ಟವಿಲ್ಲ. ಮತ್ತೂ ಮತ್ತೂ ವಿರೋಧ ಬೆಳಸಲಿಕ್ಕೆ ಆಲ್ಲಿಂದ ಅವರು ಹಾಗೆ ಕೊಡುತ್ತಾರೆ ಎಂದ ಮೇಲೆ, ಏನು ಹೇಳೋದು. ಈ ದಕ್ಶಿಣೋತ್ತರ ಒಂದಾದರೆ ಅವರಿಗೆ ನಷ್ಟವಾಗ್ತದೋ ಏನೋ, ಆದ್ದರಿಂದ ರಾಮ ಒಂದು ನಿಮಿಷ ನಿನ್ನ ಪಕ್ಷ ನಿನ್ನ ಗುಂಪುಗಾರಿಗೆ ಮೌನವಾಗಿದ್ದು ಕೊಂಡು ನೋಡು. ರಾವಣನದ್ದಾದ ಅಂತಃ ಶಕ್ತಿಯ ಕುರಿತು ಯೋಚನೆ ಮಾಡು. ಇದನ್ನು ಅರಿತು ವಿಚಾರವ ಮಾಡು.

ಈ ರೀತಿಯ ವಿದ್ಯದೊಳು | ಕಲಿ | ಯೇರಿತೆ ನಮ್ಮ ಧುರದೊಳು ||
 ಸಾರಿದೆಯಪಮಾನದೊಳು | ಮೂ | ರ್ಬಾರಿಯ ಮರೆತೆಯೊ ಪೇಳು ||
ರಾಮನ ಪ್ರತ್ಯುತ್ತರ ಹೀಗಿದೆ.
                “ರಾವಣ ನಿನ್ನ ಬದುಕಿನಲ್ಲಿ ಅತ್ಯಂತ ವಿಶಿಷ್ಟ ರೀತಿಗಳಲ್ಲಿ ಲೋಕವೇ ದಂಗಾಗುವ ರೀತಿಯಲ್ಲಿ ಸಾಧನೆಗಳನ್ನು ಮಾಡಿದವನು. ಭಕ್ತಿ ಮಾರ್ಗದಲ್ಲೂ ಅಮೋಘವಾದ ಸಾಧನೆಗಳನ್ನು ಮಾಡಿದವನು ನಿನ್ನ ತಲೆಯನ್ನೇ ಶಿವಾರ್ಪಣ ಎಂದು ಯಜ್ಞಕ್ಕೆ ಅರ್ಪಿಸಿಕೊಂಡವನು, ಈ ಯದ್ಧದಲ್ಲೂ ಅನೇಕ ರೀತಿಯ ವಿದ್ಯೆಗಳನ್ನು ಪ್ರಯೋಗಿಸಿದವನು ಅದರಲ್ಲಿ ಬಹಳಷ್ಟು ಪ್ರಯೋಜನಗಳನ್ನು ಕಂಡವನು. ಮಾರಣವನ್ನು ಮಾಡಿದವನು. ಮಾಡಿಸಿದವನು. ಜಯಕ್ಕಾಗಿ ಏನೆಲ್ಲ ಮಾಡಿದ ನೀನು ಈಗ ನಮ್ಮೀರ್ವರನ್ನು ಗೆಲುವುದರಲ್ಲಿ ಯಾವ ಬಗೆಯಲ್ಲಿ ಹೋರಾಟ ಮಾಡುವೆ? ಮಾಟ ಮಂತ್ರದ ಮೂಲಕವೋ? ಅಥವಾ ನಿರ್ದಿಷ್ಟವಾದ ಹೋರಾಟದಿಂದ ಸಾಧಿಸುವೆಯಾ?  ಇದನ್ನೆಲ್ಲ ಅರಿತು ನೀನೇ ವಿಚಾರ ಮಾಡುವ ಹಂತಕ್ಕೆ ಬಂದುಬಿಟ್ಟಿರುವೆ.”

“ಈ ಪ್ರಪಂಚದಲ್ಲಿ ಮೈಒಡೆದು ಬಂದಂತ ಸಕಲ ಜೀವಗಳಿಗೂ ಆನುವಂಶಿಕದ್ದಾದಂತಹ ಒಂದು ಕೊಡುಗೆ ಇರ್ತದೆ. ಇದಕ್ಕೆ ಸಹಜ ಗುಣ ಅಂತ ಹೆಸರು.  ಹುಲಿ ಘರ್ಜಿಸುತ್ತದೆ, ಕೋಗಿಲೆ ಹಾಡ್ತದೆ, ಇದೆಲ್ಲ ಆನುವಂಶಿಕವಾಗಿ ಬಂದದ್ದು. ಹಾಗೇ ರಾಕ್ಷಸರಿಗೆ ಈ ಅಣಿಮಾದಿ ಅಷ್ಟ ಸಿದ್ಧಿಗಳೂ ಆನುವಂಶಿಕವಾದವು.


ಹೌದಲ್ಲ, ರಾವಣ ಯಾವ ಯಾವ ಬಗೆಯಲ್ಲಿ ಹೋರಾಟ ಮಾಡಿದ. ಎಂತೆಂತಹ ರಾಕ್ಷಸ ವೀರರ ಬಳಗವನ್ನು ಕಟ್ಟಿಕೊಂಡಿದ್ದ ರಾವಣ ಈಗ ಏಕಾಂಗಿಯಾದ್ದಾನೆ. ಅದರೂ ತನ್ನ ಛಲ ಬಿಡದ ರಾವಣ ರಾಮನ ಕಟಕಿಯನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುತ್ತಾನೆ.
“ಹೌದು, ನೀನೀಗ ಇಂದ್ರನ ಕೊಡುಗೆಯ ರೂಪವಾದ ರಥವನ್ನು ಏರಿ ಏಕಾಂಗಿಯಾದ ರಾವಣನನ್ನು ಇದಿರಿಸುವುದಕ್ಕೆ ಸಮಯ ಬಂದೊದಗಿದಾಗ ಇದರಿಂದ ಇನ್ನೊಂದರ್ಥವೂ ಹುಟ್ಟಿಕೊಳ್ಳುತ್ತದೆ. ರಾವಣ ಹೀಗೆಲ್ಲ ಸಾಹಸ ಮಾಡುತ್ತಾ ಬಂದದ್ದರಿಂದ ರಾಮ ಈಗ ಇಷ್ಟು ತಯಾರು ಮಾಡಬೇಕಾಯಿತು. ಹೌದಲ್ಲ, ಇದೂ ಒಂದು ಮುಖ, ಹಾಗಾದರೆ ಮಾಟ ಮಾಡಿದ್ದೇನೆ.”

ಮಾಟ ಮಾಯ ವಿದ್ಯೆ ಇವುಗಳನ್ನು ರಾವಣನು ಸರಿಯೆಂದು ಸಾಧಿಸುತ್ತಾನೆ. ಮಾವ ಮಾರೀಚನ ಮಾಯಾ ವಿದ್ಯೆಯಿಂದ ರಾಮ ಲಂಕೆಯವರೆಗೆ ಬರುವಂತೆ ಮಾಡೀತಲ್ಲ. ಯಾವುದೇ ಒಂದು ಕೆಲಸದಲ್ಲಿ ಎಷ್ಟು ಪ್ರತಿಫಲ ಬೇಕೋ ಅಷ್ಟು ಸಿದ್ದಿಯಾದರೆ ರಾವಣ ಗೆದ್ದಂತೆ. ಮಾಯಾ ಸೀತೆಯ ಪ್ರಕರಣವೂ ಅಷ್ಟೆ, ಒಂದು ಕ್ಷಣ ರಾಮ ಭ್ರಮಾಧೀನನಾಗಿ ಯುದ್ದದಿಂದ ವಿಮುಖನಾಗಬೇಕಿತ್ತು. ಆವಾಗ ಇನ್ನೊಂದಷ್ಟು ಹೊಸ ಸಿದ್ದತೆಗಳಿಂದ ಯುದ್ದಕ್ಕೆ ಅಣಿಯಾಗುವುದು ರಾವಣನ ಕಾರ್ಯತಂತ್ರ. ಇದೆಲ್ಲ ಯುದ್ದ ಕೌಶಲ. ರಾಮ ಏನು ಎಂದು ನೋಡುವ ತಂತ್ರ. ರಾಮನನ್ನು ಕೊರಡಾಗಿ ಇಲ್ಲಿ ಉಪಯೋಸಿದ ರಾವಣ ಕಲ್ಲಾಗಿ ಸವಿಯದೇ ಉಳಿದ..!! ಹಾಗಾಗಿ ಇವರೆಗೆ ರಾವಣನ ಒಂದೊಂದು ಪರೀಕ್ಷೆಗೂ ಉತ್ತರಿಸಿದ ರಾಮ ಇವತ್ತು ಇಷ್ಟು ಎತ್ತರಕ್ಕೆ ಇಂದ್ರನ ರಥದಲ್ಲಿ ಏರಿ ನಿಂತಿದ್ದಾನೆ ಎಂದರೆ ರಾವಣನ ಎತ್ತರ ಎಲ್ಲಿ ಕಡಿಮೆಯಾಗ್ತದೆ? ಇನ್ನು ರಾಮನನ್ನು ಎದುರಿಸಲಿಕ್ಕೆ ಮಾಯ ಮಾಟ ಮಂತ್ರದ ಆವಶ್ಯಕತೆ ಇಲ್ಲ. ಇದ್ದ ತನ್ನ ಸಂಗ್ರಹವನ್ನೇ ವಿನಿಯೋಗಿಸುವುದು.

ಅನರಣ್ಯಕ ನೆಂಬವನು | ನೀ |
ಮ್ಮನುವಯದೊಳಗೆ ಪುಟ್ಟಿಹನು ||
ರಣದೊಳು ತರಿದಂಥವ ನಾ | ನೀ |
ಕೆಣಕಲು ನೋಡಿಕೊ ಹವಣ ||

ಸೂರ್ಯವಂಶದವರಿಗೆ ಒಂದು ಹೆಮ್ಮೆ ಇತ್ತು. ಸೂರ್ಯ ಸಂಚಾರ ಇದ್ದ ಪ್ರದೇಶವೆಲ್ಲ ನಮ್ಮ ಸ್ವಾಧೀನ ಎಂದು. ಊರವರೆಲ್ಲ ನಾವು ಹೇಳಿದ ಹಾಗೆ ಕೇಳ್ಬೇಕು ಕೇಳತಕ್ಕದ್ದು. ಅಂತಹ ಹಟದ ವಿರುದ್ದ ತಿರುಗಿಬಿದ್ದವನು ರಾವಣ. ಅಯೋಧ್ಯಯ ಚಕ್ರವರ್ತಿತ್ವವನ್ನು ಅಂದು ಪ್ರಶ್ನಿಸಿ ಅನರಣ್ಯಕ ಎಂಬವನ ತಲೆಯನ್ನು ಕಡಿದು ಅವನು ಮಾಡುತ್ತಿದ್ದ ಯಜ್ಞಕ್ಕೆ ಆಹುತಿಯಾಗಿ ಕೊಟ್ಟವನು. ಈಗ ಇದನ್ನೇ ರಾಮನಿಗೆ ನೆನಪಿಸಿ ಛೇಡಿಸುತ್ತಾನೆ. ಆನಂತರ ಅದೆಷ್ಟು ಅರಸರು ಒಡ್ಡೊಲಗ ಕೊಟ್ಟು ಬಲ್ಲಿರೇನಯ್ಯಾ ಎಂದು ಹೇಳಿದರು. ಎಷ್ಟು ಜನ ಒಡ್ಡೊಲಗಸ್ಥರಾದರು.? ಆದರೆ ರಾವಣನಿಟ್ಟ ಸವಾಲು ಸವಾಲೇ ಆಗಿ ಉಳಿದಿದೆ. ಅದನ್ನು ನೆನಪಿಸುವುದಕ್ಕಾಗಿಯೇ ರಾಮನ ಎದುರು ಶ್ವೇತ ಛತ್ರಧಾರಿಯಾಗಿ ಬಂದದ್ದು. ( ಛತ್ರ ಭಂಗಕ್ಕೆ ರಾವಣನ ವ್ಯಾಖ್ಯಾನವಿದು.) ಆನಂತರ ಒಬ್ಬರೂ ಬಂದಿಲ್ಲ. ಅನರಣ್ಯಕನ ಎಷ್ಟನೇ ಶ್ರಾದ್ಧ ಸಂದು ಹೋಯಿತೋ ಈಗ ಸೀತಾ ನಿಮಿತ್ತವಾಗಿ ರಾಮ ಬಂದಿದ್ದಾನೆ.

ಗುರುದ್ರೋಹವು ನಿನ್ನೊಳಗೆ | ಇರು |
ತಿರೆ ಕಾದುವೆಯಾಂ ಹೀಗೆ ||
ತರುಣಿಯ ದೆಸೆಯಿಂದಲ್ಲ | ಕೇಳ್ |
ದುರುಳನೆ ಸಾರಿದೆನೆಲ್ಲ ||

ರಾವಣ ಛೇಡಿಕೆಗೆ ರಾಮ ಸಮರ್ಥವಾಗಿ ಪ್ರತ್ಯುತ್ತರಿಸುತ್ತಾನೆ. ಕೇವಲ ತರುಣಿಗಾಗಿ ಲಂಕೆಗೆ ಬಂದವನಲ್ಲ. ರಾವಣನ ಸವಾಲು ಎಂದು ಏನು ಹೇಳಿದ್ದನೋ ಅದನ್ನು ಪ್ರಶ್ನಿಸುವುದಕ್ಕಾಗಿಯೇ ರಾಮ ಕಂಕಣ ಬದ್ಧನಾದದ್ದು. ಹಾಗಾಗಿ ರಾಮ ಚಕ್ರವರ್ತಿಯಾಗಿ ಪಟ್ಟಾಭಿಷಿಕ್ತನಾಗುವ ಮೊದಲೇ ಈ ಕಾರ್ಯದಲ್ಲಿ ಉದ್ಯುಕ್ತನಾಗಿಬಿಟ್ಟದ್ದು. ಕೈಕೆಯಿಯಾಗಲೀ ಮಂಥರೆಯಾಗಲಿ ಇಲ್ಲಿ ನಿಮಿತ್ತವಾಗಿ ಪರಿಣಮಿಸಿದರು. ಬಹುಶಃ ಕೈಕೇಯಿಗೆ ಉಂಟಾದ ಪ್ರೇರಣೆಯೇ ಅದು. ಹಾಗಾಗಿಯೆ ಅವಳು ರಾಮ ದಂಡಕಾರಣ್ಯ ಪ್ರವೇಶಿಸಬೇಕು ಅದು ಹದಿನಾಲ್ಕು ವರ್ಷ!! ಅದರ ಅರ್ಥ ಜೀವನ ಪರ್ಯಂತ ಎಂದು ಅಲ್ಲವಲ್ಲ. ಆ ಹದಿನಾಲ್ಕು ವರ್ಷದ ನಂತರ ಏನು? ಹಾಗಾಗಿಯೇ ಕೈಕೆಗೆ ಉಂಟಾದ ಪ್ರೇರಣೆಯನ್ನು ಹೀಗೆ ವಿನಿಯೋಗಿಸುವುದು.

ಕೈಕೇಯಿಗೆ ಮತ್ತು ಮಂಥರೆಗೆ ಉಂಟಾದ ಪ್ರೇರಣೆಗೆ ರಾವಣನ ವ್ಯಾಖ್ಯಾನ ಬಹಳ ಸುಂದರವಾಗಿದೆ. ಬಹುಶಃ ಯಕ್ಷಗಾನ ತಾಳಮದ್ದಲೆಯಲ್ಲಷ್ಟೇ ಇಷ್ಟು ಸರಳವಾಗಿ ಇದು ಪ್ರಕಾಶಕ್ಕೆ ಬರುವುದು ಸಾಧ್ಯ. ರಾಮನ ದೇಶದಲ್ಲಿ ಗಂಡಸರಿಗೆ ಯಾರಿಗೂ ರಾಜಕೀಯ ಗೊತ್ತಿಲ್ಲ. !! ಆಗಿನ ಕಾಲ ಪ್ರಭುದ್ದ ರಾಜ ಕಾರಿಣಿ ಎಂದರೆ ಅದು ಕೈಕೇಯಿ. ಅವಳ ಊರಿನಿಂದಲೇ ಬಂದ ಮಂಥರೆಗೆ ಹೀಗೆ ಪ್ರೇರಣೆಯಾಗುವುದಕ್ಕೆ ಕಾರಣ ಅದೂ ಒಂದು. ಆನಂತರ ಶಂಬರನ ಪ್ರಕರಣ. ಅದು ಆದದ್ದು ದಂಡಕಾರಣ್ಯದಲ್ಲಿ. ದೇವೇಂದ್ರ ದಶರಥನ ಮೂಲಕ ಶಂಬರನನ್ನು ಕೊಂದ. ಆವಾಗಲೂ ರಥಿಕಳಾಗಿ ಜತೆಯಲ್ಲಿದ್ದದ್ದು ಕೈಕೆಯಿ. ಬಹುಶಃ ರಾಮ ದಂಡಕಾರಣ್ಯಕ್ಕೆ ಬರುವಲ್ಲಿ ಬೀಜ ಹುಟ್ಟಿಕೊಂಡದ್ದೇ ಅಲ್ಲಿ. ಹಾಗಾಗಿ ಕೈಕೆಯಿಯನ್ನು ರಾಜಕಾರಿಣಿ ಎಂದು ಹೇಳುವುದು.

ಆದರೆ ಈಗ ಪ್ರಾಮಾಣಿಕವಾಗಿ ರಾಮ ಹೇಳಿಬಿಟ್ಟ. ಈಗಿನ ಈ ಯುದ್ದ ಸಂಘರ್ಷ ಕೇವಲ ಸೀತೆಗಾಗಿ ಅಲ್ಲ. ಇದರಿಂದ ರಾವಣನಿಗೂ ಒಂದು ಗೌರವ ಬಂದಂತಾಯಿತು. ಇಲ್ಲವಾದರೆ ಸೀತೆಯನ್ನು ಕದ್ದುಕೊಂಡು ಬಂದ ರಾವಣ ಅದಕ್ಕಾಗಿ ಪೆಟ್ಟು ತಿಂದ. ಹಾಗಾಗಿ ವಿಭೀಷಣನಲ್ಲಿ ಹೇಳಿದ್ದು “ ಬೇರ ಬಲ್ಲಾತಂಗೆ ಬೇರ ಮರದೆಲೆಯನು ತಂದು ತೋರುವುದೇತಕೆ” ತನಗೆ ಇದರ  ಬೇರು ಎನೆಂಬುದರ  ಅರಿವಿತ್ತು ಎಂಬುದನ್ನು ರಾವಣ ಹೇಳುತ್ತಾನೆ.   ಕೇವಲ ಹೆಣ್ಣಿಗಾಗಿ ಅಲ್ಲ. ಆದರೂ ಇಬ್ಬರೂ ಹೆಣ್ಣಿನ ನೆವನವನ್ನೇ ಮುಂದು ಮಾಡಿಕೊಂಡರು. ಅದಲ್ಲವಾದರೆ ಶೂರ್ಪನಖಿಯ ಮೂಗಿಗೆ ಅಷ್ಟು ಬೆಲೆಯನ್ನು ರಾಮ ಕಲ್ಪಿಸಬಹುದೇ? ಶೂರ್ಪನಖಿಯನ್ನು ಹೆಣ್ಣನೆವನವಾಗಿ ರಾಮ ಉಪಯೋಗಿಸಿದರೆ ಸೀತೆಯನ್ನು ನೆವನವಾಗಿ ರಾವಣ ಉಪಯೋಗಿಸಿಕೊಂಡ. ಈಗ ತಂದ ಸೀತೆಯನ್ನು ರಾಮನಿಗೆ ಬಿಟ್ಟು, ಉಪದೇಶ ಮಾಡಿದ ತಮ್ಮನನ್ನು ರಾವಣ ಸೇರಿಸಿಕೊಂಡರೆ,  ಯುದ್ದ ನಿಲ್ಲಿಸಿ ಸದ್ಯ ನೀನು ಹೋಗಬಹುದು. ಆದರೆ ಈ ಒಳಗಿನ ವಿಚಾರಗಳು ಹಾಗೇ ಉಳಿಯುವುದಲ್ಲ. ಹಾಗಾಗಿ ಈಗಲೇ ಇದನ್ನು ಇತ್ಯರ್ಥ ಮಾಡಿಬಿಡುವ.

ಯುದ್ದವಾಗುತ್ತದೆ. ರಾಮ ಕಡಿದಂತೆ ರಾವಣನ ಶಿರಗಳು ಮತ್ತೂ ಹುಟ್ಟಿ ಬರುತ್ತವೆ. ರಾಮ ಬಸವಳಿದುಬಿಡುವಾಗ ರಾವಣ ಗಹ ಗಹಿಸಿ ನಗುತ್ತಾ ಹೇಳುತ್ತಾನೆ. ( ಇದರಲ್ಲಿ ಬಹಳಷ್ಟು ಪರೋಕ್ಷವಾಗಿ ಶೇಣಿ ರಾವಣ ಪಾತ್ರದ ವಿಶ್ಲೇಷಣೆ ಎಂದು ತಿಳಿಯಬಹುದು)

“ ರಾಮಾ,  ಕೇವಲ ಬಾಯಿಯಿಂದ ಆಡಂಬರದ ನುಡಿಗಳನ್ನಾಡುವವನು ರಾವಣ, ಅಲ್ಲ ಕೃತಿಯಿಂದ ತೋರಿಸುವವನೋ? ಈವರೆಗೆ ಎಂತಹ ರಾವಣನನ್ನು ಕಂಡೆ ಇಲ್ಲಿ? ಇವತ್ತಿನ ರಾವಣ ಹೇಗೆ? ಇದು ರಾವಣತ್ವ. ಇಲ್ಲಿವರೆಗೆ ಬಂದದ್ದೆಲ್ಲ ರಾವಣನ ಸ್ವರೂಪ. ಮಾತು ಮಾತಿಗೆ ಅಟ್ಟ ಹಾಸ. ರಾವಣತ್ವ ಇದು. ರಾವಣನ ಹೊರಮೈ ಚಿತ್ರ ಅದು. ಎಷ್ಟು ಸಲ ಕತ್ತರಿಸಿದೆ ನನ್ನ ತಲೆ. ಈವರೆಗೆ ರಾಮನ ಬಾಣ ಏನನ್ನಾದರೂ ಮಾಡದೆ ಹಿಂದೆ ಬಂದದ್ದು ಉಂಟಾ? ಆದರೆ ಈಗ ಏಷ್ಟು ಬಾಣ ಖರ್ಚಾಯಿತು. ಕತ್ತರಿಸಿದಷ್ಟು ತಲೆ ಚಿಗುರುತ್ತದಲ್ಲ...ರಾಮಾ  ಇದು ಇದು ರಾವಣ. ನೆನಪಿಸಿಕೋ ದೇವೆಂದ್ರ ಕೊಟ್ಟ ರಥ ಸಾಕಾಗುವುದಿಲ್ಲ. ತ್ರಿಮೂರ್ತಿಗಳೂ ಕೊಟ್ಟ ರಥವೂ ಸಾಕಾಗಲಾರದು. ರಾಮಾ ನೀನೆಷ್ಟು ಎತ್ತರಕ್ಕೆ ಏರುವೆಯೋ ರಾವಣ ಅಷ್ಟೆತ್ತರಕ್ಕೆ ಬೆಳಯಬಲ್ಲ. ರಾಮನ ಹಾಗೆ ಬೇರೊಬ್ಬರಿಲ್ಲ ರಾವಣನ ಹಾಗೆ ಇನ್ನೊಬ್ಬರಿಲ್ಲ. ಒಳ್ಳೆ ಜತೆ ನಮ್ಮದು. ಎಲ್ಲಿ ನಿನ್ನ ಹುಟ್ಟಿಗಾಗಿ ಪಾಯಸ ಮಾಡಿದ ಆ ದೇವೆಂದ್ರ, ಈಗ ಆ ಪಾಯಸಕ್ಕೆ ರುಚಿ ಬರ್ಲಿ. ನೋಡೋಣ ಬೆಳಿ..ನಾನೆಷ್ಟು ಬೆಳೆಯಬಲ್ಲೆ ಎಂಬುದನ್ನು ತೋರಬಲ್ಲೆ.”

( ಮುಂದಿನ ಭಾಗದಲ್ಲಿ ಮುಂದುವರೆಯುವುದು)