ಯಕ್ಷಗಾನದ ಸರಳವಾದ ಪ್ರಬುದ್ದ
ಮನರಂಜನೆಯ ರೂಪವೇ ತಾಳಮದ್ದಲೆ.ಯಕ್ಷಗಾನ ತಾಳಮದ್ದಲೆ ಪ್ರಸಿದ್ದವಾಗಿರುವುದು ವೈವಿಧ್ಯಮಯ ಅರ್ಥಗಾರಿಕೆಗೆ.
ಇದಕ್ಕೆ ಪೂರಕವಾಗಿ ಹಿಮ್ಮೇಳ ನಿರ್ವಹಿಸುವುದು ಸಾಮಾನ್ಯ.
ಕೇವಲ ಮಾತುಗಾಗಿರಿಕೆಯಲ್ಲಿ ಪಾತ್ರವನ್ನು ಸನ್ನಿವೇಶವನ್ನು ಕಟ್ಟಿಕೊಡುತ್ತ ಕಥಾಪ್ರಸಂಗವನ್ನು ಬೆಳೆಸುತ್ತಾ
ಹೋಗುವುದು ಯಕ್ಷಗಾನ ಕಲೆಯ ವೈವಿಧ್ಯತೆಗೆ ಸಾಕ್ಷಿಯಗುತ್ತದೆ. ಹಲವು ಸಲ ಅರ್ಥಗಾರಿಕೆಯನ್ನು ಗುರಿಯಾಗಿಸಿಕೊಂಡು
ಪ್ರಸಂಗ ನಿರ್ಣಯಿಸುವುದುಂಟು. ಕೇವಲ ಅರ್ಥಗಾರಿಕೆ ವಾಕ್ಚಾತುರ್ಯ ವಾಕ್ಸಮರ ಮತ್ತು ಗಾನ ಮಾಧುರ್ಯ ಈ
ಆವರಣದೊಳಗೇ ತಾಳಮದ್ದಲೆಯನ್ನಿರಿಸುವುದು ಯಕ್ಷಗಾನದ ಪರಿಪೂರ್ಣತೆಯನ್ನು ಮರೆಮಾಡಿದಂತೆ. ಜಿದ್ದಾ ಜಿದ್ದಿನ
ಮಾತುಗಾರಿಕೆಯ ನಿರೀಕ್ಷೆಯಲ್ಲೇ ತಾಳ ಮದ್ದಲೆಯನ್ನು ಕಾಣುವುದರಿಂದ ಹಲವಾರು ಪ್ರಸಂಗಗಳು ಮತ್ತದರ ಮೂಲ
ಆಶಯಗಳು ಮರೆಯಾಗಿಬಿಡುತ್ತವೆ. ಇದರಿಂದ ಪಾಂಡಿತ್ಯದ ವಾಕ್ಚಾತುರ್ಯ ವಾಕ್ಸಮರವಾಗಿ ಬದಲಾಗಿ ವೈಯಕ್ತಿಕ ಹಿತಾಸಕ್ತಿಯೇ
ಬೆಳೆಯುತ್ತದೆ. ಒಬ್ಬರನ್ನೊಬ್ಬರು ಸೋಲಿಸುವುದರಲ್ಲೇ ತಾಳಮದ್ದಲೆಯ ಯಶಸ್ಸು ನಿರ್ಣಯಿಸಲ್ಪಡುತ್ತದೆ.
ಇದೊಂದು ರೀತಿ ತಾಳಮದ್ದಲೆ ಮಾತ್ರವಲ್ಲ ಯಕ್ಷಗಾನದ ಸಂಪತ್ತನ್ನು ಬಂಧನದಲ್ಲಿರಿಸಿ ಶಿಕ್ಷಿಸಿದಂತೆ.
ಹೀಗಾಗಿ ಒಂದು ತಾಳಮದ್ದಲೆಯ ಆಶಯ ಸಂಪೂರ್ಣವಾಗಿ ನೆರವೇರಬೇಕಾದರೆ ಅದನ್ನು ಅನುಭವಿಸುವ ನಮ್ಮ ದೃಷ್ಟಿಕೋನ
ಬದಲಾಗಬೇಕು. ಕೇವಲ ಮನರಂಜನೆಯ ಉದ್ದೇಶವಷ್ಟೇ ಈಡೇರಿದರೆ
ಸಾಲದು. ಅದರ ಪ್ರತಿಯೋಂದು ಅಂಶವನ್ನು ಅನುಭವಿಸುವ ಮನೋಭಾವ ನಮ್ಮದಾಗಬೇಕು. ಪಾತ್ರ ಪ್ರಸ್ತುತಿಯಲ್ಲೂ
ಆ ಪಾತ್ರದ ಮೂಲ ಆಶಯವೇನು, ಜತೆಗೆ ಸನ್ನಿವೇಶಗಳು ಪ್ರತಿಪಾದಿಸುವ
ತತ್ವಗಳೇನು ಇದನ್ನು ಕಾಣುವಂತಾಗಬೇಕು. ಇಲ್ಲವಾದರೆ ತಾಳ ಮದ್ದಲೆಯ ಪಾಂಡಿತ್ಯ ಪೂರ್ಣ ಅರ್ಥಗಾರಿಕೆಗೆ
ಮನ್ನಣೆಯೇ ಇಲ್ಲದಂತಾಗುತ್ತದೆ. ಕೇವಲ ಮನರಂಜನೆಯನ್ನು ಪರಿಗಣಿಸಿ ಇಂದು ಹಲವಾರು ಸುಂದರ ಪ್ರಸಂಗಗಳು ರಂಗವನ್ನೇರುವುದೇ ಇಲ್ಲ. ಅವುಗಳಲ್ಲಿ
ಒಂದು ಶಬರಿ ಮೋಕ್ಷ.
ಸೀತಾಪಹಾರ ಪ್ರಸಂಗದ ಕೊನೆಯ
ಭಾಗದ ಕೆಲವು ಪದಗಳಲ್ಲೇ ಶಬರೀ ಮೋಕ್ಷ ಚಿತ್ರಿತವಾಗಿದೆ. ಇದನ್ನು ಕಂಡರೆ ರಾಮಾವತಾರದ ಮೂಲ ತತ್ವದ ಪೂರ್ಣ
ದರ್ಶನ ಇಲ್ಲಿ ಸಾಧ್ಯವಾಗುತ್ತದೆ. ಈ ಪ್ರಸಂಗವನ್ನು ಈ ರೀತಿಯ ಒಂದು ದೃಷ್ಟಿಕೋನದಲ್ಲಿ ಅನುಭವಿಸುವ
ಪ್ರಯತ್ನವಿದು. ಸಾಮಾನ್ಯವಾಗಿ ಹೃದಯ ಸ್ಪರ್ಶೀ ಘಟನೆಗಳು ರಾಮಾಯಣದ ಅದ್ಯಂತ ಕಂಡುಬರುತ್ತವೆ. ಭಾವನಾತ್ಮಕವಾಗಿ
ಚಿಂತಿಸುವಂತೆ ಮಾಡುವ ಈ ಸನ್ನಿವೇಶಗಳು ವಿಪರ್ಯಾಸದ ವಿಚಿತ್ರದರ್ಶನವನ್ನು ತೋರಿಸುತ್ತದೆ.
’ಎಲ್ಲವೂ ಸರಿ...... ಆದರೆ?’ ಎಂಬ ಪ್ರಶ್ನಾರ್ಥಕದ
ಅಂಕಿತವನ್ನು ಪ್ರತೀ ಸನ್ನಿವೇಶಗಳಲ್ಲಿ ಬಿಂಬಿಸುವಂತೆ ಭಾಸವಾಗುತ್ತದೆ. ಪಟ್ಟಾಭಿಷೇಕದಲ್ಲಿ
ಮಂಥರೆಯ ಪ್ರಚೋದನೆಯೊಂದಿಗೆ ಒಂದೊಂದೇ ಘಟನೆಗಳು ಪೂರ್ವ ನಿಯೋಜನೆಯ ದಾಳಗಳಿಗೆ ಸಿಲುಕುತ್ತಾ
ಸಾಗುತ್ತದೆ. ಇಲ್ಲಿ ಬರುವ ಪಾದುಕಾ ಪ್ರದಾನವಾಗಬಹುದು ಅಥವಾ ಪಂಚವಟಿಯ ಘಟನೆಗಳು, ಎಲ್ಲವೂ ಹೃದಯ
ಸ್ಪರ್ಶಿಯಾಗಿ ಚಿಂತನೆಯ ಬೀಜಗಳನ್ನು ಬಿತ್ತುತ್ತಾ ಸಾಗುತ್ತದೆ. ಅದರಂತೇ ಬರುವ ಪಾತ್ರಗಳೂ ಭಾತೃ ಪ್ರೇಮದ ಪರಾಕಾಷ್ಠೆಯನ್ನು ಮೆರೆಯುವ ಭರತ,
ಅಣ್ಣನಲ್ಲೇ ತಂದೆಯನ್ನು ಕಾಣುವ ಲಕ್ಷ್ಮಣ, ಸ್ವಾಮಿ ನಿಷ್ಠೆಯ ಪ್ರತೀಕ ಹನುಮ ಪ್ರತಿಯೊಂದೂ
ಭಾವನಾತ್ಮಕವಾಗಿ ಹೃದಯಸ್ಪರ್ಶೀ ವ್ಯಕ್ತಿತ್ವವನ್ನು ತೋರಿಸುತ್ತದೆ. ಇದೆಲ್ಲದರ ಜತೆಗೆ ನಮ್ಮ
ಹೃದಯವನ್ನೇ ಕಲುಕುವ ಒಂದು ಪಾತ್ರವಿದೆ ಅದು ಶಬರಿ. ಕಾಯುವಿಕೆ ಅನ್ವರ್ಥವಾಗಿ ಬಳಕೆಯಾಗುವ
ವ್ಯಕ್ತಿತ್ವವಿದು. ಬದುಕಿನಾದ್ಯಂತ ರಾಮ ದರ್ಶನಕ್ಕೆ ಕಾದು ಕುಳಿತ ಶಬರಿ ಕೊನೆಗೆ ರಾಮ
ದರ್ಶನವಾಗುವಾಗ ಪ್ರಾಕೃತಿಕ ಕಣ್ಣಿನಿಂದ
ರಾಮನನ್ನು ಕಾಣುವಲ್ಲಿ ಸೋತರೂ ಅಂತರಂಗದ ಕಣ್ಣಿನಿಂದ ರಾಮನ ದರ್ಶನವನ್ನು ಮಾಡಿ
ಪುನೀತಳಾಗಿಬಿಡುತ್ತಾಳೆ. ಯಕ್ಷಗಾನದಲ್ಲಿ ಈ ಪಾತ್ರಚಿತ್ರಣ ಬಹಳ ಹೃದಯಂಗಮಯವಾಗಿದೆ.
ಯಕ್ಷವಾಲ್ಮೀಕಿ ಪಾರ್ತಿಸುಬ್ಬನಿಂದ ರಚಿಸಲ್ಪಟ್ಟ ಈ ಪ್ರಸಂಗದ ಪದಗಳೂ ಸಹ ಭಾವನಾತ್ಮಕ
ಸಂವೇದನೆಯನ್ನುಂಟುಮಾಡುತ್ತಾ ಕಥಾನಕದ ನೈಜ ಚಿತ್ರಣವನ್ನು ತೋರಿಸುತ್ತದೆ.
ಶಬರೀ ಮೋಕ್ಷ ಆರಂಭವಾಗುವುದು
ಸೀತಾಪಹಾರ ಪ್ರಸಂಗದ ಅಂತ್ಯದಲ್ಲಿ. ಮಾಯಾ ಮೃಗವನ್ನು ಬೆಂಬತ್ತಿದ ರಾಮ ಲಕ್ಷಣನ ಜತೆಯಾಗಿ ಪರ್ಣಕುಟೀರದತ್ತ
ಮರಳುತ್ತಾನೆ..
ದುರುಳಂ ಮಾಯದಿ ಸೀತಾ
ತರುಣಿಯನಪಹರಿಸುತೊಡನೆ ಗಗನಾಂತರದೊಳ್ |
ಶರಧಿಯ ದಾಂಟುತ ಲಂಕಾ
ಪುರಕಯ್ದಲು ಲಕ್ಷ್ಮಣ ಬಂದಗ್ರಜಗೆಂದಂ ||
ಮೃಗವ ಕೊಂದಾ ದಶರಥಾತ್ಮಜರು ಬದಲೊಂದು
ಮೃಗವ ನಿರ್ಮಿಸಿಕೊಂಡು ಜಾನಕಿಗೆ ಕೊಡಲೆಂದು
ಮಿಗೆ ವಹಿಲದಿಂ ಬಂದು ಪರ್ಣಶಾಲೆಯಲಿ ನೋಡಿದರೆ ಸತಿಯಿಲ್ಲದಿರಲು |
ಹಗಲು ಕತ್ತಲೆಯಾಯ್ತು ಸಿಡಿಲೆರಗಿದಂತೆ ನಾ
ಲಗೆ ಸೆಳೆದುದೆದೆಯಾರಿ ಲಕ್ಷ್ಮಣಂ ನಡುಗಿ ಕೈ
ಮುಗಿದು ನಿಂದಿರೆ ಸೀತೆಯೇನಾದಳೆಂದು ಚಿಂತಿಸುತನುಜನೊಡನೆಂದನು ||
ತವಕದಿಂದ ಸೀತೆಗಾಗಿ ಮಾಯಾಮೃಗವನ್ನು ಬೆಂಬತ್ತಿ ಬಂದ ರಾಮ. ಆ
ಬಂಗಾರವರ್ಣದ ಮೃಗವದು ಮಾಯಾವಿಗಳ ತಂತ್ರವೆಂದು ತಿಳಿಯದವನೇನಲ್ಲ. ಆದರೂ ಬೆನ್ನಟ್ಟಿ ಬರುತ್ತಾನೆ.
ಇದಕ್ಕೆ ಬಹಳ ಸುಂದರವಾದ ವಿಶ್ಲೇಷಣೆಯನ್ನು ರಾಮನಾಗಿ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು ಒಂದು
ಕಡೆ ನೀಡುತ್ತಾರೆ.
“ಅಸುರರ ಮಾಯೆ ಎಂದು ಎಷ್ಟು
ಹೇಳಿದರೇನು? ಸೀತೆ ಕೇಳಲಿಲ್ಲ. ಹಾಗೆಂತ ಅವಳ ಮಾತಿಗೆ ವಶವರ್ತಿಯಾಗಿ ನಾನು ಕಪಟದ ಮೃಗ ಅಂತ
ಹೇಳಿಯೂ, ಅದೇ ಮೃಗವನ್ನು ಹಿಡಿದು ತರುತ್ತೇನೆ ಅಂತ ಹೊರಟವನು. ಯಥಾರ್ಥಕ್ಕಾದರೆ ಮೃಗ ಕಪಟದ್ದೂ
ಅಂತಲೇ ಸಿದ್ದಾಂತ. ಆದರೂ ಸೀತೆಯ ಮಾತಿಗೆ ಮರುಳಾದದ್ದಲ್ಲ. ರಾಜಋಷಿಯಾದ ಜನಕ ರಾಜನ ಸಾಕು ಮಗಳಾಗಿ ಶೃಂಗಾರ ಬಂಗಾರ ಎಲ್ಲ ವೈಭವದಿಂದ ಕೂಡಿ ನನ್ನ ಅರ್ಧ
ಶರೀರೆಯಾಗಿ ಪರಿಣಮಿಸಿ, ಚಕ್ರವರ್ತಿ ದಶರಥನ ಸೊಸೆಯಾಗಿ ಭೂರಿ ಭಾಗ್ಯದಿಂದ ಮೆರೆಯಬೇಕಾದವಳು,
ನನಗೋಸ್ಕರ ನನ್ನನ್ನು ಹಿಂಬಾಲಿಸಿ, ಬರೇ ನಾರುಡೆಯನ್ನುಟ್ಟು, ಹದಿಮೂರು ವರ್ಷ ವನವಾಸವನ್ನು
ಅನುಭವಿಸಿದವಳು. ಅಪರೂಪವಾಗಿ ಕಾಂಚನ ಮೃಗವನ್ನು ಕಂಡಳು. ಪೆಟ್ಟಿಗೆ ಪೆಟ್ಟಿಗೆ ಚಿನ್ನಾಭರಣವನ್ನು
ತೃಣವಾಗಿ ಉಪೇಕ್ಷಿಸಿ ಬಂದವಳು ಬಂಗಾರದ ಬಣ್ಣಕ್ಕೆ ಹುಚ್ಚುಕಟ್ಟಿದಳು, ಅಂತ ಅಂದ್ರೆ ಅರ್ಥವೇನು? ಕಾಲಾಯ ತಸ್ಮೈ ನಮಃ . ಆದರೆ
ನನ್ನ ಹೃದಯ ಅದನ್ನು ಹೀಗೆ ಅರ್ಥ ಮಾಡಿಕೊಂಡಿತು. ಸರ್ವಸ್ವವನ್ನು ತ್ಯಾಗಮಾಡಿ ಹಿಂಬಾಲಿಸಿದ
ಸೀತೆಗೆ ನಾನು ಏನು ಕೊಟ್ಟಿದ್ದೇನೆ? ಹಾಗಾಗಿ
ಕಾಡಿನಲ್ಲಾದರೂ ಅವಳು ಬಯಸಿದಂತಹ ಮೃಗವನ್ನು ತಂದುಕೊಡ್ತೇನೆ. ಅಂತ ಹೊರಟವನು.
ಸೀತೆಗಾಗಿ
ಕೈಯಲ್ಲಿ ಕೃತಕ ಜಿಂಕೆಯನ್ನು ಹಿಡಿದುಕೊಂಡು ಬರುತ್ತಿರಬೇಕಾದರೆ, ಪರ್ಣಶಾಲೆಯಲ್ಲಿ ಕಾವಲಿರಬೇಕಾದ
ಲಕ್ಷ್ಮಣ ಎದುರು ಬರುತ್ತಿದ್ದಾನೆ. ಯಾವುದೋ ಅಪಾಯದ ಮುನ್ಸೂಚನೆ ಕಂಡಂತೆ ರಾಮ
ಗಾಬರಿಗೊಳಗಾಗಿಬಿಡುತ್ತಾನೆ. ಬಂದು ನೋಡಿದರೆ.....ಎದುರು ಜಿಂಕೆಯ ನಿರೀಕ್ಷೆಯಲ್ಲಿ ಸೀತೆ
ಕುಪ್ಪಳಿಸಿಕೊಂಡು ಬರಬೇಕಾದವಳನ್ನು ರಾಮ ನಿರೀಕ್ಷಿಸಿದರೆ,
ಸೀತೆಯನ್ನು ಕಾಣದಾಗುತ್ತಾನೆ.
“
ಓ ಲಕ್ಷ್ಮಣಾ ಒಳಗೆ ಹೋಗಿ ನೋಡು, ಸೀತೆ ಬಚ್ಚಿಟ್ಟುಕೊಂಡಿರಬಹುದು. ಎನ್ನೊಡನೆ ಆಟಕ್ಕಾಗಿ ಅವಿತು
ಕುಳಿತು ನನ್ನ ತವಕವನ್ನು ಹೆಚ್ಚಿಸುತ್ತಿರಬಹುದು. ಲಕ್ಷ್ಮಣ ರೇಖೆಯನ್ನು ಕ್ರಮಿಸಿ ಸೀತೆ
ಹೆಜ್ಜೆಯೂರಲಾರಳು. ಹಾಗಾಗಿ ಖಂಡಿತ ಆಕೆ ಮನೆಯೊಳಗಿದ್ದಾಳೆ. ದೂರದಿಂದಲೇ ನನ್ನನ್ನು ಕಂಡವಳು ಕುಣಿದಾಡಿ
ಓಡಿ ಬರಬೇಕಿತ್ತು. ಖಂಡಿತ ಆಕೆ ಮನೆಯೊಳಗೆ ಅವಿತು ನನ್ನ ಚಂದವನ್ನು ನೋಡುತ್ತಿದ್ದಾಳೆ.
ಕೂತೂಹಲಿಯಾಗಿ ನನ್ನ ಕೈಯನ್ನೇ ನೋಡುತ್ತಿರಬಹುದು. ಅದೋ ಅದೋ ನೀನೆಳೆದ ರೇಖೆಯ ಪಕ್ಕದಲ್ಲೇ ಭೂಮಿಯೇ
ಬಾಯಿತೆರೆದು ನಿಂತಿದೆ. ನಮ್ಮ ಈ ಸರಸವನ್ನು ಕಂಡ ಈ ಭೂಮಿ ತನ್ನ ಮಗಳ ಇರವನ್ನು ಹೇಳುವುದಕ್ಕೆ
ಬಾಯಿತೆರೆದಿರಬಹುದೇ? ಏನಾಯಿತು? ಆದರೆ... ಆದರೆ ನನ್ನ ತಳಮಳ ಇನ್ನೂ ಹೆಚ್ಚಾಗುತ್ತಿದೆ.
ದೇವತೆಗಳನ್ನು ಅವಾಹಿಸಿ ಬಿಟ್ಟಂತಹ ಲಕ್ಷ್ಮಣ ರೇಖೆ ಆಕೆ ದಾಟದೆ ವಿನಾ ಹೋಗಲು ಸಾಧ್ಯವಿಲ್ಲ. ಎತ್ತ
ಪೋದಳು? ಈ ಭೂಮಿ ಹೆತ್ತ ಮಗಳು. ಹೆತ್ತ ತಾಯಿ ಇರಬೇಕಾದರೆ ಮಗಳನ್ನು ಅಪಹರಿಸಿ ಒಯ್ಯಬಹುದೇ? ಹೆತ್ತ
ತಾಯಿಯನ್ನು ವಂಚಿಸಿ ಕೊಂಡೊಯ್ದರೆ? ಅದಕ್ಕೆ ಪುರಾವೆ ಈ ಭೂಮಿ ಬಾಯೆ ತೆರೆದು ನಿಂತಿದೆ.
.
ಎತ್ತಹೋದಳೊ | ಏನನಾದಳೊ |
ಮತ್ತಕಾಶಿನಿ | ಮಂದಗಾಮಿನಿ |
ಪೃಥ್ವಿಜಾತೆಯ | ಕಾಣದೆನ್ನಯ |
ಚಿತ್ತಚಂತಲ | ವಾಯಿತಲ್ಲಯ್ಯ |
ರಾಮ ತನ್ನ ಅಸಹನೆಯಿಂದ ನರಳುತ್ತಾನೆ. ತಮ್ಮ ಲಕ್ಷ್ಮಣ ಕಳೆದು ಕೊಂಡೆವಲ್ಲಾ...ತಮ್ಮ ಅಸಹನೀಯವಾಗಿದೆ
ಈ ನೋವು..ಯಾವುದಾದರೂ ಕಳೆದು ಕೊಳ್ಳುವುದು, ಅದು ಎಷ್ಟು ಮೌಲ್ಯವಾದದ್ದರೂ ಸಹನೆಗೆ ಕಷ್ಟವಾಗ್ತದೆ.
ಕೊಟ್ಟು ಹೋಗಲಿ ಅಥವಾ ನಮ್ಮ ಒಪ್ಪಿಗೆಯಲ್ಲಿ ಪಡೆದುಕೊಂಡು ಹೋಗಲಿ ಆಗ ನಷ್ಟವಾದದ್ದಕ್ಕೆ ಮನಸ್ಸು
ನೋಯುದಿಲ್ಲ. ಪರಿತಪಿಸುವುದಿಲ್ಲ. ಆದರೆ ಬಿದ್ದು ಹೋಗುವುದು ಇದು ನಷ್ಟ. ಕಳೆದು ಹೋದದ್ದನ್ನು
ಪಡೆದುಕೊಳ್ಳುವಲ್ಲಿ ಅದರ ನೂರು ಪಟ್ಟು ಭಂಡವಾಳವನ್ನು ವಿನಿಯೋಗಿಸಿದರೂ ತಪ್ಪಲ್ಲ. ಸೀತೆಯನ್ನು
ಕಳೆದುಕೊಂಡೆವಲ್ಲಾ.
ಲಕ್ಶ್ಮಣ
ನೀನು ತಪ್ಪು ಮಾಡಿದ್ದಿ ಅಂತ ಹೇಳಿಯೇನೆ? ಇಲ್ಲ ಸಾಧ್ಯವಿಲ್ಲ. ಮತ್ತೆ ಸೀತೆ ತಪ್ಪು ಮಾಡಿದಳೇ?
“ಲಕ್ಷ್ಮಣಾ ಹೋಗು..ಅಂತ ಹೇಳುವಾಗ ಸೀತೆಯ ಮಾತಿಗೆ ಕಿವಿಗೊಡದೆ ಕಂಬದಂತೆ ನಿಂತ ನಿನ್ನನ್ನು ಆಕೆ
ಅರಿಯಳೇ? ಮತ್ತು ಹೇಳೀದಳಲ್ಲ. ರಾಮನಳಿದರೆ..ಬಾಲಕ ನಿನ್ನ ಭಾವವೇನಯ್ಯ? ಶ್ರೀಲಲಾಮ
ತಾನಳಿದಮೇಲೆನ್ನ ಆಳುವೇನೆಂಬ....ಛೇ ಎಂತಹ ಕಠೋರ ಮಾತು. ಯಾಕೆ ನಿನ್ನನ್ನು ತಿಳಿಯದೇ ಹೇಳಿದಳೆ? ಇಲ್ಲ.
ರಾಮನು
ಎಂತಹ ವಿವೇಕಿಯಾದರೂ ಕೂಡ ಒಂದಲ್ಲ ಒಂದು ಪ್ರಕರಣದಲ್ಲಿ ಕೈಹಿಡಿದ ಹೆಂಡತಿ ಎತ್ತಿ ಆಡಿಸುವ
ಚಿತ್ರಿತ ಬೊಂಬೆಯಾಗಿಬಿಟ್ಟ. ನಮ್ಮ ಅಪ್ಪನಿಗೂ ಅದದ್ದು ಅದೇ. ಕೊನೇಗೆ ಕೈಕೇಯಿ ಮಾತಿನಲ್ಲಿ ಸಿಕ್ಕಿಬಿದ್ದ. ತಮ್ಮಾ, ನಿನ್ನ ತಾಯಿ ಸುಮಿತ್ರೆ ಹೇಳಿದಳಲ್ಲ, ದಶರಥನ ಮಗ ರಾಮ ಎಂದು ಊಹಿಸಿ ಹೇಳಿದಳಲ್ಲ? ನನ್ನಂತೇ.... ಸೀತೆಯನ್ನು ತಿಳಿ. ಅಂದರೇ ಸೀತೆಯಲ್ಲಿ
ತಾಯಿಯನ್ನು ಕಾಣು. ರಾಮನಿಗಾಗಿ ನನ್ನನ್ನೂ
ಬಿಟ್ಟು ಹೋಗು, ರಾಮನಿಗಾಗಿ ತಾಯಿಯನ್ನು ಬಿಟ್ಟು
ಬಂದವನು ನೀನು, ರಾಮನಿಗಾಗಿ ಈಗ ಸೀತೆಯನ್ನೂ
ಬಿಟ್ಟು ಬರುವ ಪ್ರಸಂಗ ನಿನಗಾಯಿತು. ಸೀತೆ ಹೇಳಿದಳಲ್ಲ...ಹೋಗು
ರಾಮನನ್ನು ಹಿಂಬಾಲಿಸು. ಅಲ್ಲಿ ಅಯೋಧ್ಯೆ ಕೈ ತಪ್ಪಿತು... ಇಲ್ಲಿ ದಂಡಕಾರಣ್ಯ ಕೈತಪ್ಪಿದೆ.
ಇಲ್ಲಿ
ಯಾರನ್ನೂ ದೂರಿ ಪ್ರಯೋಜನವಿಲ್ಲ. ಕಾಣದ ಕೈ ಒಂದು ಸನ್ನಿವೇಶವನ್ನು ಸೃಷ್ಟಿಸುತ್ತಾ ಹೋಗುತ್ತದೆ.
ರಾಮನ ಈ ಮಾತಿಗೆ ಮುಂದಿನ ಸನ್ನಿವೇಶಗಳು ಸಾಕ್ಷಿಯಾಗುತ್ತದೆ.
ತರುಣಿ ಜಾನಕಿ ನಿಮ | ಗರುಹಬೇಕೆನಲು ನಾ |
ನರಳುತ್ತಲಿಹೆನಿಷ್ಟು | ದಿನ ಪರಿಯಂತ |
ಕರುಣವಿದ್ದಿರಲೆಂದು | ಚರಣದೆಡೆಗೆ ಬಿದ್ದು |
ಮರಣವಿಟ್ಟ ಜಟಾಯು | ಶರಣರ ಶ್ರೇಷ್ಠ |
ಸೀತೆಯನ್ನರಸುತ್ತಾ
ಮುಂದೆ ಬಂದಾಗ ಜಟಾಯು ಜರ್ಝರಿತನಾಗಿ ಬಿದ್ದದ್ದನ್ನು ಕಾಣುತ್ತಾರೆ, ಆತನಿಂದ ಸೀತೆಯನ್ನು
ಅಪಹರಿಸಿದವನು ರಾವಣ ಎಂದು ತಿಳಿದುಬರುತ್ತದೆ. ಆ
ವಿಷಯವನ್ನು ಅರುಹುದಕ್ಕಾಗಿ ಸೀತೆಗಿದ್ದ ನಿಗ್ರಹಾನುಗ್ರಹ ಶಕ್ತಿಯ ಅನುಗ್ರಹದಿಂದ ಜಟಾಯು ರಾಮನ
ಅಗಮನದವರೆಗೆ ಜೀವ ಹಿಡಿದು ಕಾಯುತ್ತಿರುತ್ತಾನೆ. ರಾಮನ
ಪದತಲದಲ್ಲಿ ಜೀವ ನಿಸ್ತೇಜವಾಯಿತು ಪಕ್ಷಿರಾಜನ ಶರೀರ. ಜಟಾಯುವಿನಲ್ಲಿ ತಂದೆಯನ್ನು ಕಾಣುತ್ತಾನೆ
ರಾಮ. ಪಿತೃಯಜ್ಞದ ಮೂಲಕ ಅತನ ಅಂತ್ಯವಿಧಿಯನ್ನು
ಮಾಡಿ ಮುಗಿಸುತ್ತಾನೆ.
ಋಷಿಮುನಿಗಳ
ಮಾರ್ಗದರ್ಶನದಂತೆ ಮುಂದೆ ಮುಂದೆ ಬಂದಾಗ ಕಬಂಧನೆಂಬ ದಾನವ ಬಾಹುಗಳನ್ನು ಬೀಸುತ್ತಾನೆ. ಕಬಂಧ
ಶಾಪಗ್ರಸ್ಥ ಗಂಧರ್ವ. ರಕ್ಕಸನಾಗಿದ್ದ ಈತ ತನ್ನ ವರಬಲದಿಂದಲೂ ತನ್ನ ದೈತ್ಯಾಕೃತಿಯಿಂದಲೂ
ಋಷಿಮುನಿಗಳನ್ನು ಪೀಡಿಸುತ್ತಿದ್ದ. ಈತನ ಪೀಡೆ ಅತಿಯಾದಾಗ ದೇವೇಂದ್ರ ತನ್ನ ಆಘಾತದಿಂದ ಕಬಂಧನ ದೇಹ
ಕುಸಿಯುವಂತೆ ಮಾಡುತ್ತಾನೆ. ಕೇವಲ ಬಾಯಿ ಹೊಟ್ಟೆ
ಮತ್ತು ಎರಡು ದೈತ್ಯ ಬಾಹುಗಳನ್ನು ಹೊಂದಿದ. ಆ ಬಾಹುಗಳಿಂದಲೇ ಸುತ್ತ ಮುತ್ತ ಸಂಚರಿಸುತ್ತಿದ್ದ
ಮನುಷ್ಯ ಪ್ರಾಣಿಗಳನ್ನು ತಿಂದು ಬದುಕುತ್ತಿದ್ದ. ರಾಮ ಲಕ್ಷ್ಮಣರು ಬಂದು ಆ ಬಾಹುಗಳನ್ನು ಕಡಿದು ಚೆಲ್ಲಿದಾಗ ರಾಮನಿಂದ ಕಬಂಧ
ಮೋಕ್ಷವಾಗುತ್ತದೆ. ಆತನೇ ಮತಂಗ ಮುನಿಯ ಆಶ್ರಮವಾಸಿಯಾದ ಶಬರಿಯನ್ನು ಕಂಡು ಆಕೆಯ ಮಾರ್ಗದರ್ಶನವನ್ನು ಪಡೆಯುವಂತೆ
ಸೂಚಿಸುತ್ತಾನೆ. ಅಯೋಮುಖಿ, ಕಬಂಧ ಮೊದಲಾದ
ಅಸುರೀಶಕ್ತಿಗಳು ರಾಮನ ಆಗಮನದಿಂದ
ಮೋಕ್ಷಪ್ರಾಪ್ತಿಯನ್ನು ಕಾಣುತ್ತವೆ. ಅಸುರೀ ಸ್ವಭಾವದಿಂದಲೇ ರಾಮನ ಆಗಮನವನ್ನೇ ಕಾಯುತ್ತಿದ್ದ ಶಕ್ತಿಗಳು ರಾಮ
ದರ್ಶನದಿಂದ ಮೋಕ್ಷವನ್ನು ಕಾಣುತ್ತವೆ. ಇವುಗಳನ್ನು ಕಂಡ ರಾಮ ಲಕ್ಷಣನಲ್ಲಿ ಹೇಳುತ್ತಾನೆ.
“
ಈ ವರೆಗೆ ನಮ್ಮ ಸ್ವಂತಿಕೆಯಿಂದ ಬಾಳಿ ಬದುಕಿದ್ದೇವೆ. ಆದರೆ ಈಗ ಹಾಗಲ್ಲ. ಯಾವುದೋ ಕಾಲವೋ ದೈವವೋ
ಇನ್ನೇನೋ ಶಕ್ತಿಯ ಸೂತ್ರದಿಂದ ನಾವು ಬಂಧಿಯಾಗಿದ್ದೇವೆ ಎಂದು ಅನಿಸುತ್ತದೆ. ನಾವು ನಾಲ್ಕುಜನರ
ಹುಟ್ಟಿಗೆ ಸಂಕಲ್ಪ ಕೇವಲ ತಾಯಿಯದ್ದು ಮತ್ತು ತಂದೆಯದ್ದು ಮಾತ್ರ ಆಗಿರಲಿಲ್ಲ. ಮೊದಲಾಗಿ ಋಷಿ
ಸಂಕಲ್ಪವೂ ಇತ್ತು. ದೇವ ಸಂಕಲ್ಪವೂ ಇತ್ತು. ಹೀಗೆ ದೇವ ಕಲ್ಪವಾದ ಪಾಯಸವನ್ನು ಯಜ್ಞೇಶ್ವರನ ಮೂಲಕ
ಕರುಣಿಸಿದ ಮೇಲೆ, ಬಹುಶಃ ಈಗ ಈ ಋಷಿಗಳೂ
ದೇವತೆಗಳೂ ನಮ್ಮನ್ನು ದುಡಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದಾರೆ.
ಹೀಗೆ
ದೈವಚಿತ್ತವನ್ನು ಮನ್ನಿಸುತ್ತಾ ಮುಂದೆ ಮುಂದೆ ಬರುವಾಗ ಒಂದು ದಿವ್ಯಾಶ್ರಮವನ್ನು ಕಾಣುತ್ತಾನೆ.
ಅತ್ಯಂತ ವಿಶಿಷ್ಟ ಭಾವುಕ ಸನ್ನಿವೇಶಕ್ಕೆ ಆ ಅಶ್ರಮ ಸಾಕ್ಷಿಯಾಗುತ್ತದೆ. ಮತಂಗ ಮುನಿಗಳ
ಆಶ್ರಮವದು. ಮತಂಗ ಮುನಿಗಳ ವರ ಪ್ರಸಾದದಿಂದ ನ್ಯಗ್ರೋಧನೆಂಬ
ವ್ಯಾಧನೊಬ್ಬನಿಗೆ ಹುಟ್ಟಿಕೊಂಡವಳು ಶಬರಿ . ಶಿಥಿಲ ಶರೀರೆಯಾಗಿ ಅಲ್ಲಿ ಒಬ್ಬಳೇ
ವಾಸಿಸುತ್ತಿದ್ದಾಳೆ. ಭರತ ಮುನಿಯ ಶಿಷ್ಯೆಯಲ್ಲಿ
ಒಬಳಾದ ವಿಭಾವರಿ ಶಾಪಗ್ರಸ್ಥೆಯಾಗಿ ಶಬರಿಯಾಗಿ ಭೂಮಿಗೆ ಪತನ ಹೊಂದಿ ಪತಿತಳಾದವಳು. ತಂದೆಯ
ಮರಣಾನಂತರ ಮತಂಗ ಮುನಿಯ ಆಸರೆಯಲ್ಲಿ ಬೆಳೆದವಳು
ಶಬರಿ.
ಒಂದು ದಿನ ಕನಸಿನಲ್ಲಿ ದಿವ್ಯಜ್ಯೋತಿಯೊಂದು ಭೂಮಿಗೆ
ಇಳಿದು ಬರುವುದನ್ನು ಕಂಡು ಮತಂಗರಲ್ಲಿ ಕೇಳಿದಾಗ, ಅಂದು ಆಂಗೀರಸ ನಾಮ ಸಂವತ್ಸರದ, ಚೈತ್ರ ಶುದ್ದ
ನವಮಿಯಾಗಿರುತ್ತದೆ. ಮಾತ್ರವಲ್ಲ ಪುನರ್ವಸು ನಕ್ಷತ್ರದ ದಿನ. ಶ್ರೀ ಶೇಣಿಯವರು
ಮತಂಗರಾಗಿ ಒಂದು ಕಡೆಯಲ್ಲಿ ಹೇಳುತ್ತಾರೆ. “ ಪೂರ್ಣ ಬ್ರಹ್ಮಕ್ಕೆ ರಾಮ ಎಂಬ ಮಂತ್ರ ಪೂರಕ,
ಅಕಾರಾದಿ ಮಕಾರಾಂತ ಪದವದು. ಈ ದಿವ್ಯವಾದ ಮಂತ್ರ ಉಪದೇಶಿಸಲ್ಪಟ್ಟದ್ದು ಹುಟ್ಟಿನಿಂದ ಕಿರಾತನಾದ
ವಾಲ್ಮೀಕಿಗೆ. ಅವನು ರಾಮ ಎಂಬ ಎರಡಕ್ಷರದ ಮಂತ್ರವನ್ನು ಸಿದ್ದಿ ಮಾಡಿದಂತಹ ಬಲು ದೊಡ್ಡ ಜ್ಞಾನಿ.
ಅವನು ಸಿದ್ದಿಯನ್ನು ಪಡೆದಾವಾಗ ಯಾವ ಆಕಾರ ಯಾವ ಗುಣವನ್ನು ಮನಸ್ಸಿನಲ್ಲಿ ರೂಪಿಸಿದ್ದನೋ ಅದೇ
ಧ್ಯಾನವಾಗಿದೆ. ಹಾಗಾಗಿ ರಾಮ ಮಂತ್ರ ಮೊದಲಿಗೆ ಹುಟ್ಟಿತು. ಈಗ ಆ ಮಂತ್ರಕ್ಕೆ ವ್ಯಕ್ತವಾದಂತಹ
ಸ್ವರೂಪ ಭೂಮಿಯಲ್ಲಿ ಹುಟ್ಟಿಕೊಂಡದೆ. ಈದನ್ನು ನಿನಗೆ ಹೇಳಿ ಆ ರಾಮಧ್ಯಾನದಿಂದ ಪುನೀತಳಾಗುವೆ ಎಂಬ
ಸಂದೇಶ ಕೊಡುವಲ್ಲಿಗೆ ನನ್ನ ಬದುಕು ಸಾರ್ಥಕವಾಯಿತು ಅಂತ ತಿಳೀತೇನೆ. ಯಾವ ಬೇಡರ ವರ್ಗದಲ್ಲಿ
ಹುಟ್ಟಿದವನು ಈ ದಿವ್ಯವಾದಂತಹ ಮಂತ್ರವನ್ನು ಜಗತ್ತಿಗೆ ಕೊಟ್ಟನೋ, ರಾಮ ನಾಮವೆಂಬ ಬೀಜವನ್ನು
ಬಿತ್ತಿದನೋ ಇದರಲ್ಲಿ ಬ್ರಾಹ್ಮಣ, ಅಬ್ರಾಹ್ಮಣ ಪಾಪಿ ಪತಿತ ಎಂಬ ವೆತ್ಯಾಸವಿಲ್ಲದೆ ಎಲ್ಲರೂ
ಆತ್ಮಾರಾಮರಾಗುವಂತಹ ಬಲು ದೊಡ್ಡ ಬೆಳಕೇ ಇದೆ.
ಪತಿತ ಪಾವನ ನಾಮ ಅದು. ಈ ಪ್ರಪಂಚದಲ್ಲಿ ಪತಿತರೆಲ್ಲಿದ್ದಾರೆ ಅವರನ್ನೆಲ್ಲರನ್ನೂ ಉದ್ದರಿಸುವಂತಹ
ದಿವ್ಯ ಪಾದದಿಂದಲೇ ಆ ಪುರುಷೋತ್ತಮನು ತನ್ನ ಪಾದವನ್ನು ಈ ಭೂಮಿಯಲ್ಲಿ ಇರಿಸಿದ್ದಾನೆ. ಅದನ್ನು
ನಿನಗೂ ಉಪದೇಶಿಸಿ ಆ ರಾಮನ ಸಾಕ್ಷಾತ್ಕಾರದಿಂದ ನೀನು ಕೈವಲ್ಯವನ್ನು ಪಡೆ, ಎಂದು
ಆಶೀರ್ವದಿಸುವಲ್ಲಿಗೆ ನನ್ನ ಜನ್ಮ ನನ್ನ
ದೇಹಧರ್ಮದಿಂದ ಸಾಕು ಮಾಡಬೇಕು ಅಂತ ತೋರಿದೆ”.
“ ಆದರೆ ಮಗಳೇ ನನಗೊಂದು ಕರ್ತವ್ಯವಿದೆ.
ನೀನು ಹೀಗೆ ಯೋಗಿನಿಯಾಗಿ ಬಾಳಿ ಬದುಕುಬೇಕು ಅಂತ ಇಲ್ಲ. ನಿನಗೊಂದು ಉಪದೇಶ ಹೇಳ್ತೇನೆ. ಯಾವ
ಹೆಣ್ಣಾದರೂ ಓರ್ವ ಪುರುಷನನ್ನು ಆಶ್ರಯಿಸಿ ಬಾಳಿ ಬದುಕಬೇಕು. ಈವರೆಗೆ ಪಿತೃ ಸ್ಥಾನದಲ್ಲಿ ಗುರು ಸ್ಥಾನದಲ್ಲಿ ನಾನಿದ್ದೆ. ನಾನು ಈ ಮತಂಗಾಶ್ರಮದಿಂದ ಹೊರಟು ಹೋದಮೇಲೆ
ಇದು ಆಶ್ರಮವಾಗಿ ಮಾತ್ರ ಉಳೀತದೆ ಹೊರತು ಮತಂಗನ ಸನ್ನಿಧಾನ ಇರುವುದಿಲ್ಲ. ನಿನಗೊಂದು ಮದುವೆ ಮಾಡಿ
ಆ ಋಣದಿಂದ ಮುಕ್ತನಾಗಬಹುದು ಅಂತ ತಿಳಿದಿದ್ದೇನೆ.”
ಮದುವೆಯಾಗುವುದಕ್ಕೆ ಶಬರಿ
ನಿರಾಕರಿಸುತ್ತಾಳೆ. ತಂದೆ ತಾಯಿ ಬಂಧು ಬಾಂಧವರು ಎಲ್ಲರನ್ನು ಆಕೆ ಗುರು ಮತಂಗರಲ್ಲಿ ಕಂಡವಳು.
ಮದುವೆಯಾಗಿ ಆ ಸಾಂಸಾರಿಕ ಗೊಂದಲದಲ್ಲಿ ಸಿಕ್ಕಿಬೀಳುವುದಕ್ಕೆ ಬಯಸುವುದಿಲ್ಲ. ಏಕಾಂಗಿನಿಯಾಗಿಯೇ
ಬದುಕುವ ಇರಾದೆಯನ್ನು ವ್ಯಕ್ತಪಡಿಸುತ್ತಾಳೆ.
ಆಗ ಮತಂಗರು ಹೇಳುತ್ತಾರೆ “ ನಾನು
ಇಲ್ಲಿಂದ ನಿರ್ಗಮಿಸಿದ ಮೇಲೆ ನಿನಗೆ ಆಧಾರಕ್ಕೆ ಒಂದು ದಿವ್ಯವಾದಂತ ರೂಪ ದರ್ಶನವೊಂದು ಬೇಕು
ಅಂತಃಕರಣದಲ್ಲಿ. ಪ್ರತಿಯೊಬ್ಬರೂ ಸ್ವತಂತ್ರರಾಗಿ ಬಾಳಿ ಬದುಕಬೇಕು ಎಂಬುದು ತತ್ವವಾದರೂ ಹೆಣ್ಣಿಗೆ
ಮತ್ತೊಂದು ಆಶ್ರಯ ಬೇಕಾಗುತ್ತದೆ. ಹೇಳಿ ಕೇಳಿ ಹೆಣ್ಣಾದಂತಹ ನಿನಗೆ ಸ್ವಾಶ್ರಯ ಸಲ್ಲದು. ಹೆಣ್ಣು ರಕ್ಷಣೆಯಲ್ಲಿರಬೇಕು. ನ ಸ್ತ್ರೀ ಸ್ವಾತಂತ್ರ ಮರ್ಹಸಿ ಎಂದರೆ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲ ಎಂದರ್ಥವಲ್ಲ.
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರದೇವತಾಃ. ಇಲ್ಲಿ ಹೆಂಗಸರು ಪೂಜಿಸಲ್ಪಡುವಂತಹ ದಿವ್ಯ
ಪ್ರತಿಮೆಗಳು. ಯಾವಾಗ ದಿವ್ಯವಾದದ್ದು ದೇವರ ವಿಗ್ರಹದಂತೆ ಇದ್ದದ್ದು ಅದು ಇನ್ನೊಬ್ಬರ
ರಕ್ಷಣೆಯಲ್ಲಿರಬೇಕಾದದ್ದು ಅನಿವಾರ್ಯ. ಬಂಗಾರವು ಕಬ್ಬಿಣದ ಪೆಟ್ಟಿಗೆಯಲ್ಲಿ ರಕ್ಷಿಸಲ್ಪಡುವಂತೆ,
ಈ ಹೆಣ್ಣು ರಕ್ಷಿಸಲ್ಪಡಬೇಕು. ಇದು ನಮ್ಮ ಸನಾತನ ಧರ್ಮ. ನಮ್ಮ ಭಾರತೀಯ ಸಂಸ್ಕೃತಿ. ನೀನು
ರಾಮನನ್ನೇ ಮನಸಾ ಧ್ಯಾನಿಸುತ್ತ, ತನು ಮನಗಳನ್ನು ಆ ರಾಮನಿಗೇ ಅರ್ಪಣೆ ಮಾಡುತ್ತಾ ಇರಬೇಕು.”
ಆದರೆ ರಾಮ ಹೇಗಿರುತ್ತಾನೆ ಎಂದು
ಶಬರಿಗೆ ತಿಳಿದಿಲ್ಲ. ಮೂರ್ತಿಯೊಂದನ್ನು ಅಂತರಂಗದಲ್ಲಿ ಸ್ಥಾಪಿಸಿ ಪೂಜೆಸಬೇಕು ಎಂದಿದ್ದರೆ
ಅದಕ್ಕೊಂದು ರೂಪ ಬೇಡವೇ? ಬೇಡರ ಒಡನಾಟದಲ್ಲೆ
ಎಳವೆಯಿಂದ ಬೆಳೆದು ಬಂದವಳು ಆಕೆ. ಜಟಾವಲ್ಕಧಾರಿಗಳನ್ನೇ ನಿತ್ಯವೂ ಕಂಡವಳು. ಹಾಗಾಗಿ ಬೇರೆ ರೂಪ
ಅವಳಿಗೆ ಗೋಚರಿಸದು. ಮೂರ್ತಿ ಪೂಜೆಯ ಹಿನ್ನೆಲೆಯ ಉದಾತ್ತ ಧ್ಯೇಯವನ್ನು ಇಲ್ಲಿ ಕಾಣಬಹುದು. ಯದ್ಭಾವ್ಯಂ
ತದ್ಬವತಿ. ಭಾವನೆಯಲ್ಲಿ ಏನಿರುತ್ತದೋ ಅದೇ ರೂಪದಲ್ಲಿ ಕಾಣುವುದು. ಶೂನ್ಯದಲ್ಲಿ ಮನಸ್ಸು
ನಿಲ್ಲುವುದಿಲ್ಲ. ಅದಕ್ಕೊಂದು ರೂಪ ಬೇಕು. ಆ ರೂಪಕ್ಕೆ ಒಂದು ಭಾವನೆ ಇರಬೇಕು. ಅದಕ್ಕೊಂದು ಮೂರ್ತ
ಸ್ವರೂಪ ಬೇಕು. ಈವರೆಗೆ ಆ ಮೂರ್ತಸ್ವರೂಪ ಮತಂಗರಲ್ಲಿ ಕಂಡವಳು. ಇನ್ನು ರಾಮನನ್ನು ಅದೇ ರೂಪದಲ್ಲಿ
ಕಾಣಬಲ್ಲಳು. ರಾಮನೂ ಸಹ ಅದೇ ರೂಪದಲ್ಲಿ ಆಕೆಗೆ
ಕಂಡು ಬರುವ, ಈ ದಿವ್ಯ ತತ್ವದ ನಿದರ್ಶನವನ್ನು
ಇಲ್ಲಿ ಕಾಣಬಹುದು. ರಾಮನಲ್ಲಿ ತಂದೆಗೆ ಮಗನಾಗಿ ಮಗನಿಗೆ ತಂದೆಯಾಗಿ ಸತಿಗೆ ಪತಿಯಾಗಿ ತಾಯಿಗೆ
ಮಗನಾಗಿ ಹೀಗೆ ಎಲ್ಲ ರೂಪವನ್ನು ಕಾಣುವಂತಹ ಉಪದೇಶವನ್ನು ಮತಂಗರಿಂದ ಪಡೆಯುತ್ತಾಳೆ.
ರಾಮ ಹೋದಲ್ಲೆಲ್ಲಾ ಪ್ರತಿಯೊಂದು
ಕಲ್ಲು ಮರಗಳೂ ಕೂಡ ಅವನ ಬರುವಿಕೆಗೆ ಕಾದಿರುತ್ತವೆ. ಆದರೆ ಈ ಎಲ್ಲ ಕಾದಿರುವೆಕೆಗಿಂತ ಶಬರಿಯ
ಕಾಯುವಿಕೆ ಇಡೀ ರಾಮಾಯಣದಲ್ಲೇ ಅತ್ಯಂತ ವಿಶಿಷ್ಟವಾಗಿರುತ್ತದೆ. ರಾಮನೆಂದು ಬರುವನೋ.....ಅತ್ಯಂತ
ದಯನೀಯ ಅವಸ್ಥೆಯ ವೃಧ್ದಾಪ್ಯ ಅವಳದು. ಕಣ್ಣು ಕಾಣಿಸದು ಕಿವಿಯೂ ಕೇಳಿಸದು. ಶರೀರವದು ಬಾಗಿ ಬಾಗಿ
ರಾಮನ ಹಾದಿಯನ್ನು ನೋಡುವುದಕ್ಕೆ ಮಾತ್ರ ನೆಟ್ಟಗೆ ನಿಂತು ಬಿಡುತ್ತದೆ.ತನ್ನವರೆಂದು ಯಾರು ಇಲ್ಲ.
ಅದನ್ನವಳು ಬಯಸಿಯೂ ಇಲ್ಲ. ರಾಮನೊಬ್ಬನೇ ತನ್ನವ. ಆತನನ್ನು ಕಾಣುವುದಕ್ಕಾಗಿ ಈ ದೇಹ ಉಳಿಯಬೇಕು. ಆ
ದೇಹ ಉಳಿಯುವುದಕ್ಕಾಗಿ ಒಂದಿಷ್ಟು ಅಹಾರ...ಅದೂ ಕಾಡಿನಲ್ಲಿ ಸಿಗುವ ಹಣ್ಣುಗಳು.
ಕರುಣಿಸಿ
ಮುಂದೆಯ್ತರಲಾ
ವರಶಬರಿಯು
ಭಕ್ತಿಯಿಂದಲಾ ರಘುಪತಿಯಾ |
ಚರಣಕೆ
ನಮಿಸುತಲಂದಾ
ಗುರುಭಾವದೊಳಂಬುಜಾಕ್ಷಿ
ಬಲು ನುತಿಸಿದಳು ||
ಪಾಲಯ ಮಾಂ ಪಾಹಿ
ರಾಮ | ಸಮರನಿಸ್ಸೀಮ ||
ಕಾಲಭಯನಾಶ ಶ್ರೀ | ಲೋಲ
ವೈಕುಂಠಾಧೀಶ ||
ದುರ್ಜನರ ವಿಘಾತ | ಸಜ್ಜನರ
ಸಂಪ್ರೀತ |
ನಿರ್ಜರಗಣವಂದಿತ | ಗರ್ಜನ
ಸಿಂಧುಸಮೇತ ||
ಅಂಗಜಕೋಟಿಲಾವಣ್ಯ
| ಆಶ್ರಿತಜನವರೇಣ್ಯ |
ತುಂಗವಿಕ್ರಮಕಾರುಣ್ಯ
| ಸಂಗೀತಲೋಲಾಗ್ರಗಣ್ಯ ||
ಅಶ್ರಮದ ಅಂಗಳದ ತುದಿಗೆ
ಎರಡು ಆಕೃತಿ, ಮೊದಲು ಅಸ್ಪಷ್ಟವಾಗಿ ಗೋಚರವಾಗುತ್ತದೆ. ಯಾರು ಬಂದಿರಬಹುದು?
ಈ ಕಾಡಿನಲ್ಲಿ ಒಂದೋ ತನ್ನ ಪೂರ್ವಾಶ್ರಮದ
ಕಾಡಿನ ಮಕ್ಕಳು. ಅವರು
ಇತ್ತ, ಈ ಮುದುಕಿಯತ್ತ ಗಮನವೇ ಹರಿಸುವುದಿಲ್ಲ. ಮತ್ತೆ ಯಾರು? ಸುತ್ತಲ ಪರಿಸರದಲ್ಲಿ ಅದೇನೋ ಬದಲಾವಣೆಯಾದಂತೆ
ಭಾಸವಾಗುತ್ತದೆ. ಸುತ್ತಲೂ ದಿವ್ಯ ಪ್ರಭೆಯೊಂದು ಪಸರಿಸಿ ಆ ಪ್ರಕಾಶ ತನ್ನ
ಕುರುಡು ಕಣ್ಣಿಗೂ ಗೋಚರವಾಗುತ್ತದೆ. ಬಾಗಿ ನಿಂತ ಮೈ ನೋಡುವುದಕ್ಕಾಗಿ ಸೆಟೆಯುವಾಗ
ಯಾವುದೋ ಒಂದು ಚೈತನ್ಯ ದೇಹದಲ್ಲಿ ಹೊಮ್ಮಿದಂತೆ ಭಾಸವಾಗುತ್ತದೆ. ಮತಂಗ ಮುನಿಗಳು
ಅಂತ್ಯದಲ್ಲಿ ಮಾಡಿದ ಆಶೀರ್ವಾದವೊಂದಿದೆ, ಉದ್ದರಿಸುವುದಕ್ಕಾಗಿ ರಾಮ ಬರುತ್ತಿದ್ದಾನೆ.
ಪಾದದಲ್ಲೇ ಗಂಗೆಯನ್ನು ಹರಿಸಿದವನ ಪಾದ ಈ ಆಶ್ರಮವನ್ನು ಸ್ಪರ್ಶಿಸಿ ಪಾವನಗೊಳಿಸಲಿದೆ.
ಹೌದೇ? ಅದೇ ಅದೇ…ಹೌದು ರಾಮ ಬಂದ
….ಅದೋ….ವೃದ್ದೆಯ ಕಣ್ಣು ಅರಳುತ್ತದೆ. ದೇಹ ನವಜೈತನ್ಯವನ್ನು ತುಂಬುತ್ತದೆ. ರಾಮ ಲಕ್ಷ್ಮಣರನ್ನು ಕರೆದು
ಕೂರಿಸುತ್ತಾಳೆ. ಆಕೆಯಲ್ಲಿದ್ದ
ಒಂದೇ ಒಂದು ಪಾತ್ರೆಯಂದರೆ ಅದು ಸೋರೆ ಬುರುಡೆಯೊಂದಿರುತ್ತದೆ. ಅದರಲ್ಲಿನ
ನೀರಲ್ಲೇ ರಾಮನ ಪಾದ ತೊಳೆಯುತ್ತಾಳೆ. ಯೋಚಿಸುತ್ತಾಳೆ. ಗಂಗೆ ಉದಿಸಿದ
ಪಾದವಿದು. ಅದಕ್ಕೆ ಈ ಸೋರೆ ಬುರುಡೆಯಲ್ಲಿ ಎಂದೋ ಇಟ್ಟ ನೀರು. ಒಂದರ್ಥದಲ್ಲಿ ಸಮುದ್ರದ ನೀರು
ಸಮುದ್ರಕ್ಕೆ ಚೆಲ್ಲಿದ ಹಾಗೆ.
ಹಾಗೇ
ಉಪಚರಿಸುತ್ತಾಳೆ... “ ಅದೆಷ್ಟು ಸಮಯದಿಂದ ಕಾದಿದ್ದೆ
ಓ ದೇವರೆ. ಬಹಳ ದೂರದಿಂದ ನಡೆದು
ಬಂದಿದ್ದೀರಿ. ದಣಿದಿರುವಿರಿ. ಹಸಿವಾಗುತ್ತಿದೇಯೇ? ಉಪಚರಿಸುವುದಕ್ಕೆ ಎನೂ ಇಲ್ಲ ಬಡ ಮುದುಕಿ
ನಾನು. ನಾನು ತಿನ್ನುವುದು ಇದೇ ಇದೇ.. ಈ ಹಣ್ಣುಗಳನ್ನು.”
ಹಾಗೇ
ಹಣ್ಣುಗಳನ್ನು ನೋಡುತ್ತಾಳೆ, ಯಾವುದು ಹಣ್ಣು? ಯಾವುದು ಕಾಯಿ? ಯಾವುದು ಹುಳಿ ? ಯಾವುದು ಚೊಗರು?
ವೃದ್ಧೆಯ ಮಂದ ಕಣ್ಣುಗಳಿಗೆ ಕಾಣಿಸುವುದಿಲ್ಲ. ಒಂದೊಂದೇ ಹಣ್ಣುಗಳನ್ನು ಕಚ್ಚಿ ನೋಡಿ ಹಣ್ಣಾದುದನ್ನು
ರಾಮನಿಗೆ ಕೊಡುತ್ತಾಳೆ. ಲಕ್ಷ್ಮಣ ಎಚ್ಚರಿಸುತ್ತಾನೆ
“ ಆರ್ಯ ಸಂಸ್ಕೃತಿಯಲ್ಲಿ ಉಚ್ಚಿಷ್ಟ ವರ್ಜ್ಯ... ಅದು ವಿಸರ್ಜಿಸಲ್ಪಡಬೇಕಾದದ್ದು...”
ಆದರೆ ರಾಮ ಹೇಳುತ್ತಾನೆ,
“
ಅಯೋಧ್ಯೆ ಬಿಟ್ಟು ಅದೆಷ್ಟು ಸಮಯಗಳಾದವು.
ಅಂದಿನಿಂದ ತಾಯಿಯನ್ನು ಕಾಣಲಿಲ್ಲ. ಆ ಅಕ್ಕರೆ ಪ್ರೀತಿಯನ್ನು ಕಾಣಲಿಲ್ಲ. ಇಂದು
ನೋಡಬಾರದೇ ತಾಯಿ ಕೌಸಲ್ಯೆಯನ್ನೇ ಕಂಡಂತಾಗಿದೆ. ಮಕ್ಕಳು ದಣಿದು ಬಂದಾಗ ತಾಯಿಯಾದವಳು ಮಕ್ಕಳ ಹಸಿವನ್ನು
ಮೊದಲು ಕಾಣುತ್ತಾಳೆ. ಉಣ್ಣುವುದಕ್ಕೆ ಹಾಲು ತಿನ್ನುವುದಕ್ಕೆ ಆಹಾರವನ್ನು ನೀಡುತ್ತಾಳೆ. ಇದು
ತಾಯಿಯಾದವಳ ಮಮಕಾರ. ಅಹಾ..ಇಂದು ಅದನ್ನೇ ಇಲ್ಲಿ ಕಾಣುತ್ತಿದ್ದೇನೆ. ಕಲಸಿದ ತಟ್ಟೆಯಲ್ಲಿದ್ದ
ಅಹಾರಕ್ಕೆ ಏನು ಕೊರತೆಯಾಗಿದೆ ಎಂದು, ತಾನೆ ಮೊದಲು
ರುಚಿ ನೋಡುತ್ತಾಳೆ. ಅದು ಆ ಮಗುವಿನಲ್ಲಿ ತೋರುವ ಅಕ್ಕರೆಯೇ ಹೊರತು ಅದು ಮಗುವಿಗೆ
ಉಚ್ಚಿಷ್ಟವಾಗುವುದಕ್ಕೆ ಸಾಧ್ಯವೆ? ಲಕ್ಷ್ಮಣಾ...ಈಕೆಯಲ್ಲಿ ತಾಯಿ ಕೌಸಲ್ಯೆಯನ್ನೇ
ಕಾಣುತ್ತಿದ್ದೇನೆ.”
ಕೇವಲ
ಉತ್ತಮವಾದುದನ್ನು ಮಾತ್ರವೇ ಕೊಡಬೇಕೆಂಬ ಶಬರಿಯ ಶ್ರದ್ಧೆಯನ್ನು ತಾಯಿಯ ಪ್ರೀತಿಯನ್ನಾಗಿ ರಾಮ
ಕಾಣುತ್ತಾನೆ.
ಮಧುರತರಾಂಬುಜವದನೇ | ಮದಗಜಸನ್ನಿಭಗಮನೇ |
ಪದುಮದಳಾಯತನಯನೇ | ಪರಮಪತಿವ್ರತೆ ಶಬರೀ
||
ಸೀತೆಯ ಕಾಣದರಿಂದ | ಅರಸುತ ಬಂದೆ ಕಬಂಧ |
ರೀತಿಯ ಪೇಳಲು ನಮಗೆ | ಬಂದೆವು ನಾವ್ ನಿನ್ನೆಡೆಗೆ
ಯಕ್ಷಗಾನದ ಈ ಪದ ಸಾಲುಗಳು ಇಡೀ ಪ್ರಸಂಗದ ಸಾರವನ್ನು ಹೊಂದಿದೆ
ಅಂತಲೇ ಹೇಳಬಹುದು. ರಾಮನನ್ನು ಆಕೆ ಯಾವ ಮೂರ್ತ ಸ್ವರೂಪದಿಂದ ಕಂಡಳೋ ಅದೇ ಭಾವದಿಂದ ರಾಮ
ಶಬರಿಯನ್ನು ಕಾಣುತ್ತಾನೆ. ತಾಯಿ ಕೌಸಲ್ಯೆಯನ್ನೂ ಕಾಣುವುದು ಮಾತ್ರವಲ್ಲ ತನ್ನ
ರಕ್ಷಣೆಯಲ್ಲಿರಬೇಕಾದ ಸತಿಯಂತೆಯೂ ಕಾಣುತ್ತಾನೆ. ಬಹುಶಃ ಮದಗಜ ಸನ್ನಿಭ ಗಮನೇ ಅಂತ ಉದ್ದರಿಸುವ
ಆಶಯವೂ ಅದೇ ಇರಬೇಕು. ಅದನ್ನು ಇದೇ ಶೇಣಿಯವರು
ಮತ್ತು ಸಾಮಗರು ರಾಮನಾಗಿ ಒಂದು ಕಡೆಯಲ್ಲಿ ಬಹಳ ಸುಂದರವಾಗಿ ಹೇಳುತ್ತಾರೆ. ಅದನ್ನು
ಪ್ರತ್ಯೇಕವಾಗಿ ಸ್ಥೂಲವಾಗಿ ತಿಳಿಸುವ ಪ್ರಯತ್ನ.
“ನಮ್ಮ
ಆರ್ಷ್ಯ ಸಂಪ್ರದಾಯದಲ್ಲಿಯೂ ಭಾರತೀಯ ಸಂಸ್ಕೃತಿಯಲ್ಲಿಯೂ ಕಮಲಕ್ಕೆ ವಿಶಿಷ್ಟವಾದ ಸ್ಥಾನವುಂಟು. ಬ್ರಹ್ಮನ
ಪೀಠವೂ ಅದೇ, ವಿಷ್ಣುವಿನ ನಾಭಿಯೂ ಅದೇ, ಲಕ್ಷ್ಮಿಯ ಮನೆಯೂ ಅದೇ, ರುದ್ರನ ಪಾದವೂ ಅದೇ. ಪಾದ
ಕಮಲವೆಂದು ಕಮಲವನ್ನು ವಿಶಿಷ್ಟವಾದ ವಸ್ತುವಿಗೆ ಸಮನ್ವಯ ಮಾಡುತ್ತಾ ಬಂದಿದೆ. ಜಗತ್ತಿನ
ರಹಸ್ಯವನ್ನು ತನ್ನ ಮೂಲಕ ಹೇಳುತ್ತಿದೆ. ಅದರ ಮೂಲ ಕೆಸರಿನಲ್ಲಿ, ಅದರ ಬದುಕು ನೀರಿನಲ್ಲಿ, ಆದರೂ
ಬುಡ ಕೆಸರು ಬದುಕು ನೀರು, ಹೀಗಿದ್ದರೂ ಅರಳಿದ ತಾವರೆ ನೀರನ್ನು ಸೋಂಕಿಸುವುದೇ ಇಲ್ಲ. ಅದು
ನೀರಿಂದ ಮೇಲೆ. ಸೂರ್ಯೋದಯವಾದಾಗ ಮಾತ್ರ ಅರಳುತ್ತದೆ. ಕತ್ತಲಾದಾಗ ಮುದುಡುತ್ತದೆ. ಕಮಲದ
ಮಹತ್ವವಾದರೂ ಏನು? ಸೌಂದರ್ಯವೋ ಪರಿಮಳವೋ..ಅದಕ್ಕಿಂತಲೂ ಸುಂದರವಾದ ಗಂಧಯುಕ್ತವಾದ ಹೂವುಗಳು
ಬೇರೆಯೂ ಇವೆ. ಎಲ್ಲೋ ಸರೋವರದಲ್ಲಿ ಅರಳುತ್ತದೆ ತಾವರೆ. ದಶದಿಕ್ಕುಗಳಿಗೂ ಸಮಾನವಾಗಿ ದಳಗಳನ್ನು
ಚಾಚಿಕೊಳುತ್ತದೆ. ಹರದಾರಿ ಇರುವ ಭೃಂಗಗಳಿಗೆ ಸೆಳೆತ ಉಂಟಾಗುತ್ತದೆ. ಅವುಗಳು ಕೂಟ ಕೂಟವಾಗಿ
ಅರಳಿದ ತಾವರೆಗೆ ಮುತ್ತುತ್ತಾವೆ. ಯಾಕೆ? ಅದರ ಹೃದಯದಲ್ಲಿ ಅತ್ಯಂತ ಮಧುರಾತ್ ಮಧುರತರವಾದ ಜೇನು
ತುಂಬಿಕೊಂಡಿದೆ. ಈ ಮಕರಂದ ಜೇನನ್ನು ಈ ದುಂಬಿಗಳು ಕುಡೀತಾ ಇದ್ದಾವಾಗ ಸೂರ್ಯಾಸ್ತಮಾನವಾಗುತ್ತದೆ. ಸೂರ್ಯಾಸ್ತಮಾನವಾದಾಗ ಕಮಲದಳ ಮುದುಡ್ತಾವೆ.
ಮುದುಡಿದರೂ ಈ ಮಧುರವನ್ನು ಈಂಟಿ ಈಂಟಿ ಈ
ಭೃಂಗಗಳು ಅದರಲ್ಲೇ ಲೀನವಾಗಿ ಹೋಗುತ್ತಾವೆ. ಇದು ಬಲು ದೊಡ್ಡ ವೇದಾಂತ. ಹಾಗಾದರೆ ಅಂಬುಜ,
ಮಧುರತರವಾದಂತಹ ಅಂಬುಜ. ತಾಯೀ, ಮುದುಕಿಯಾಗಿ ಸುಕ್ಕುಗಟ್ಟಿ ವಾರ್ಧಕ್ಯದ ಪರಾಕಾಷ್ಠೆಗೆ
ಮುಟ್ಟಿದಂತಹ ನಿನ್ನ ಮುಖದಲ್ಲಿ ನಾನು ಆ ತಾವರೆಯನ್ನು ದರ್ಶಿಸಿದೆ. ಮಧುರತರಾಂಬುಜ ವದನೆ, ಆ
ತಾವರೆ ಎಂಬಂತಹ ನಿನ್ನ ಮುಖದಿಂದ ಹೊರಟಂತಹಾ ಆ ಮಧುರತರವಾದ ಮಾತು, ಏನು ಮಾಧುರ್ಯ ಉಳ್ಳದ್ದು.
ನೀನು ಮುದುಕಿಯಾದರೂ ಕೂಡ, ಆ ಊರುಗೋಲನ್ನು ಹಿಡಿದುಕೊಂಡು ಎಲ್ಲಿಗೆ ಸಾಗಬೇಕೊ ಅಲ್ಲಿಗೆ ಬಾಗಿದ
ಸೊಂಟವಾದರೂ ಕೂಡ ಧೈರ್ಯವಾಗಿ ಗುರಿಯತ್ತ ಸಾಗುತ್ತ ಇದ್ದಿ. ಆವಾಗ ನನಗೆ ತೋರುತ್ತದೆ. ಆನೆ ಯಾವ
ಸಂಕಲೆಯಲ್ಲಿ ಕಟ್ಟು ಒಡೆಯಲ್ಪಡುತ್ತದೆ. ಎಷ್ಟು ದೊಡ್ಡದಾದರೂ ಅದು ಕಟ್ಟಿದವನು ಹೇಳಿದ ಹಾಗೆ
ದುಡಿಬೇಕಾಗ್ತದೆ. ಅದೇ ಪ್ರಪಂಚದಲ್ಲಿ ಕೆಲವರು ಇರುತ್ತಾರೆ. ಒಂದೊಂದು ನಿರ್ಬಂಧಕ್ಕೆ ಒಳಗಾಗಿ
ಲೌಕಿಕವಾದ ಭೋಗಾಸಕ್ತಿಯಿಂದ, ಅರ್ಥಾಸಕ್ತಿಯಿಂದ ತಮ್ಮನ್ನು ತಾವು ತಿಳಿಯದೆ ದಾಸ್ಯವನ್ನು ಮಾಡ್ತಾರೆ,
ಅಪರೂಪಕ್ಕೆ ಆನೆಗೆ ಕೆಲವು ಸಲ ಮದ ಬಂದಾಗ ಅದು ಯಜಮಾನನ್ನು ಧಿಕ್ಕರಿಸಿ ಸಂಕಲೆಯನ್ನೂ ಕಡಿದು, ಅದು
ತಾನು ತನ್ನ ದಾರಿಯನ್ನೇ ಮಾಡಿಕೊಂಡು ಹೋಗ್ತದೆ. ಮುದುಕಿಯಾದ ನಿನ್ನ ಗಮನದಲ್ಲಿ ನಾನು ಕಂಡದ್ದು ಅದು.
ಸಂಸಾರದ ಸಂಕಲೆಯನ್ನು ಕಳಚಿ ಪ್ರಾಪಂಚಿಕ ಆಸಕ್ತಿಗಳನ್ನು ತೊರೆದು ನಿತ್ಯವೂ ಸತ್ಯವೂ ಆದಂತಹ
ಪರಬ್ರಹ್ಮದ ಐಕ್ಯಕ್ಕೆ ನೀನು ಮೇಲ್ನೋಟದಿಂದ ಸಾಗ್ತಾ ಇದ್ದಿ.”
ಮೋಕ್ಷದೆಡೆಗೆ,
ಮತ್ತೆ ಹುಟ್ಟಲಾರದ ಸ್ಥಿತಿಯೆಡೆಗೆ ಶಬರಿಯ ಗಮನ ಆ ಮದಗಜದಂತೆ. ವ್ಯಾಧಕುಲ ಕನ್ಯೆ ಬೇರೆಯಾವುದೇ ಮಂತ್ರ
ಸಿದ್ಧಿಯಿಲ್ಲದೇ ಕೇವಲ ರಾಮನಾಮವೆಂಬ ತಾರಕ ಮಂತ್ರದಿಂದ ಕೈವಲ್ಯವನ್ನು ಸೇರುತ್ತಾಳೆ ಎಂದಾದರೆ ಆ
ದಿವ್ಯ ತತ್ವಕ್ಕೆ ಶಬರಿಗಿಂತಲೂ ಪೂರ್ಣವಾದ ನಿದರ್ಶನ ಬೇರೆ ಬೇಕೆ? ಇದಕ್ಕಾಗಿಯೇ ಅತ್ಯಂತ ನಿಕಟವಾದ ಸಂಭಂಧದ ಸಂಕೇತವನ್ನು
ರಾಮ ಶಬರಿ ಇತ್ತ ಹಣ್ಣನ್ನು ಉಚ್ಚಿಷ್ಟವಾದರೂ ಅದನ್ನು ಸೇವಿಸುವ ಮೂಲಕ ತೋರಿಸಿಕೊಡುತ್ತಾನೆ. ಸಮರ್ಪಿಸುವ
ವಸ್ತುವಿನ ಗುಣವಲ್ಲ, ಅದರ ಹಿಂದಿರುವ ಭಾವ. ಕೊಡುವ ವ್ಯಕ್ತಿಯಲ್ಲ. ಕೊಡುವ ಚಿತ್ತ. ಅದನ್ನು
ಶಬರಿಯ ಮೂಲಕ ಕಾಣಬಹುದು. ಇಲ್ಲಿ ಭಕ್ತಿಯ ಪರಾಕಾಷ್ಠೆ ಇಲ್ಲ. ಆದರೆ ಉತ್ಕಟವಾದ ಪ್ರಾಮಾಣಿಕತೆ
ಇದೆ. ಬಾಹ್ಯ ಕಣ್ಣಿನ ದೃಷ್ಟಿ ಮಂದವಾದರೂ ಅಂತಃಕರಣದ ದೃಷ್ಟಿ ಗಾಢವಾಗುತ್ತದೆ.
ಇದೇ
ಪದಕ್ಕೆ ರಾಮನಾಗಿ ಶ್ರೀ ರಾಮದಾಸ ಸಾಮಗರು ವಿಶ್ಲೇಷಣೆಯೂ ಬಹಳ ಸುಂದರವಾಗಿಯೂ ಮಾರ್ಮಿಕವಾಗಿಯೂ
ಇದೆ. ಶ್ರೀರಾಮ ಶಬರಿಯ ಭಕ್ತಿಯನ್ನು ಆತಿಥ್ಯವನ್ನು ಮತ್ತು ಆ ಉಪಾಸನೆಯನ್ನು ಕಂಡು ಆಕೆಯನ್ನು
ವರ್ಣಿಸುವ ಪದ. ಒಂದೆರಡು ಸಾಲಿನ ಪದವಾದರೂ ಕವಿಯ ಆಶಯ ಹಲವು ಅರ್ಥಗಳನ್ನು ಬಿಂಬಿಸಬಲ್ಲುದು. ಯಾವ
ರೂಪದಲ್ಲಿ ಇದನ್ನು ನೋಡುವುದಕ್ಕೆ ಸಮರ್ಥರೋ ಆ ರೂಪಗಳಲ್ಲಿ ಇದರ ಸಾರವನ್ನು ಅರ್ಥವಿಸುವುದಕ್ಕೆ
ಬರುತ್ತದೆ.
ಮಧುರತರಾಂಬುಜ
ವದನೆ....ಹಣ್ಣು ಹಣ್ಣು ಮುದುಕಿ ಶಬರಿ. ಆ ಶಬರಿಯ ಮುಖದಲ್ಲಿ ಕಮಲವನ್ನು ಆ ಮಧುರತೆಯನ್ನು ರಾಮ
ಕಾಣುತ್ತಾನೆ. ಹಾಗೆಯೇ ಮದಗಜದ ನಡೆಯನ್ನೂ, ಕೋಲೂರಿಕೊಂಡು ಬಂದು ತನ್ನನ್ನು ಒಳಗೆ ಕರೆದೊಯ್ದ ಶಬರಿ
ಮದಗಜ ಗಮನೆಯಾಗಿ ಕಾಣುತ್ತಾನೆ ಶ್ರೀರಾಮ. ಸಾಮಗರು ಹೇಳುತ್ತಾರೆ ಆನೆಯಾದರೂ ಶಬರಿಗಿಂತಲೂ ವೇಗವಾಗಿ
ನಡೆಯಬಹುದೋ ಏನೋ. ಅನೆಯ ನಡೆ ಸ್ಥೂಲಾವಲೋಕನಕ್ಕೆ ಮಂದವಾಗಿಯೇ ಇರುತ್ತದೆ. ಸರಿಯಾಗಿ ಕಾಣೀಸದೇ
ಇದ್ದ, ಕೃಶವಾಗಿ ಇಂಗಿ ಹೋದ ಕಣ್ಣುಗಳು ಪದುಮದಳಾಯತನಯನೆಯಾಗಿ
ಕಾಣುತ್ತಾನೆ ಎಂದರೆ, ಮತ್ತೂ ಒಂದು, ಅದುವರೆಗೂ ಕನ್ಯೆಯಾಗಿ ಏಕಾಂಗಿಯಾಗಿಯೇ ಉಳಿದ ಶಬರಿ ಪತಿವೃತೆಯಾಗಿ
ರಾಮ ಕಾಣುತ್ತಾನೆ. ಒಂದು ರೀತಿಯಲ್ಲಿ ಸುಲಭವಾಗಿ ವಿಶ್ಲೇಷಣೆ ಮಾಡಲಾಗದ ಪದವಿದು.
ಇಲ್ಲಿ ಸಾಮಗರ ಅರ್ಥಗಾರಿಕೆಯ ಸೌಂದರ್ಯ
ಅದು ವಿವರಿಸುವುದಕ್ಕೆ ಕಷ್ಟವಾಗುತ್ತದೆ. ಇಲ್ಲಿ ರಾಮ ಶಬರಿಯಲ್ಲಿ ಕಾಣುವುದು ಬಾಹ್ಯ
ಪ್ರಕೃತಿಯನ್ನಲ್ಲ. ಹೊರಗಿನ ನಡೆಯನ್ನಾಗಲೀ ಜೀವನ ಶೈಲಿಯನ್ನಾಗಲೀ ಅಲ್ಲ. ಆಕೆಯ ಅಂತರಂಗದ ಅಧ್ಯಾತ್ಮಿಕ
ಮನಸ್ಸು. ಹಾಗಿದ್ದುದರಿಂದಲೇ ಆಕೆ ಮತಂಗರ ಸಹವಾಸದಲ್ಲಿ ಆಸರೆಯಲ್ಲಿ ಉಳಿಯುವುದಕ್ಕೆ
ಸಾಧ್ಯವಾಗುತ್ತದೆ. ರಾಮನಾಮ ತಾರಕ ಮಂತ್ರದ ಸಿದ್ದಿಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ.
ಅಂತರಂಗವೆಂಬುದು ಎಲ್ಲರಿಗೂ ಒಂದೇ ರೀತಿಯಲ್ಲಿರುತ್ತದೆ. ಆನೆಯಲ್ಲಿದ್ದ ಆತ್ಮವೇ
ನಾಯಿಯಲ್ಲಿರುತ್ತದೆ. ಹಕ್ಕಿಯಲ್ಲಿದ್ದದ್ದೇ ಮನುಷ್ಯನಲ್ಲೂ ಇರುತ್ತದೆ. ಶೂದ್ರನಲ್ಲಿದ್ದ ಆತ್ಮವೇ
ಬ್ರಾಹ್ಮಣನಲ್ಲೂ ಇರುತ್ತದೆ. ಇದೊಂದು ಸಮನ್ವಯ ಆಧ್ಯಾತ್ಮಿಕ ತತ್ವ. ಒಬ್ಬಳು ಬೇಡರವಳಾಗಿ ಶಬರ
ಪುತ್ರಿಯಾಗಿದ್ದವಳಲ್ಲಿ ಇದ್ದ ಆ ಅಂತರಾತ್ಮ ಅದನ್ನೇ ರಾಮ ವರ್ಣಿಸವುದು. ಮೇಲೆ ಶೇಣಿಯವರು ಇದನ್ನು
ಮೋಕ್ಷದ ಕಡೆಗಿನ ನಡೆ, ಮದಗಜ ನಡೆಯಂತೆ ಅಂತ
ವರ್ಣಿಸಿದ್ದಾರೆ. ಇಲ್ಲಿ ಆತ್ಮವೆಂದರೆ ರಾಮ. ಆ ಆತ್ಮದ ರೂಪದಲ್ಲಿ ಯಾವುದೇ ವೆತ್ಯಾಸ ಇಲ್ಲ ಎಂದು
ತೋರಿಸುವುದಕ್ಕಾಗಿಯೇ ರಾಮ ಶಬರಿ ತಿಂದುಳಿದ ಹಣ್ಣನ್ನು ತಿನ್ನುತ್ತಾನೆ. ತಾನು ಶಬರಿಯಲ್ಲೂ
ಇದ್ದೇನೆ ಎಂದು ಸೂಕ್ಷ್ಮವಾಗಿಯೂ ಪರೋಕ್ಷವಾಗಿಯೂ ಹೇಳುವಂತಹ ಸನ್ನಿವೇಶವಿದು. ಹಾಗಾಗಿ ಕವಿ ರಚಿಸಿ
ಕೊಟ್ಟ ಈ “ಮಧುರತಳಾಂಬುಜ ವದನೆ....” ಎಂಬ ಪದ ಎಷ್ಟೊಂದು ಅರ್ಥಗರ್ಭಿತ ಎಂದು ಕಾಣಬಹುದು. ಹಲವು ವರ್ಷಗಳಿಂದ ರಾಮನಿಗಾಗಿ ಶಬರಿ ಕಾಯುತ್ತಾಳೆ.
ವ್ಯಾಧರೂಪದಲ್ಲೆ ಕನಸು ಕಂಡುದರಿಂದಲೋ ಅದೇ ರೂಪದಲ್ಲಿ ಪ್ರತ್ಯಕ್ಷವಾಗಿಯೂ
ಸಾಕ್ಷಾತ್ಕರಿಸಿಕೊಳ್ಳುತ್ತಾಳೆ. ನಾರುಮಡಿಯಲ್ಲಿ ಜಟಾ ವಲ್ಕಲ ಧಾರಿಯ ರಾಮ ಆಕೆಗೆ ಶಬರನಂತೆ ಕಂಡರೆ
ಅಚ್ಚರಿಯಿಲ್ಲ. ಇದೊಂದು ರೀತಿಯ ’ಯದ್ಭಾವಂ ತದ್ಬವತಿ’ ಎಂಬುದರ ಪ್ರತ್ಯಕ್ಷ ದರ್ಶನ. ಅಷ್ಟು ವರ್ಷಕಾದ ಶಬರಿಗೆ
ಅದೇ ಸಿದ್ದಿಯಾಗುತ್ತದೆ. ಆದರೆ ರಾಮ ದರ್ಶನದಲ್ಲೇ ಆಕೆಗೆ ಕೈವಲ್ಯ ಸಾಧ್ಯವಾಗುತ್ತದೆ. ಅದನ್ನು ಈ ರೀತಿಯಲ್ಲಿ
ಕಾಣಬಹುದು. ಮೂರು ದಿನದಿಂದ ಒಂದು ಕೋಣೆಯಲ್ಲಿ
ಕತ್ತಲು ತುಂಬಿದೆ. ಆದರೆ ಅಲ್ಲಿ ದೀಪ ಉರಿಸಿಟ್ಟ ಕೂಡಲೆ ಕತ್ತಲು ಮಾಯವಾಗುತ್ತದೆ. ಬೆಳಕು ಹೇಳುವುದಿಲ್ಲ, ಮೂರು ದಿನದಿಂದ ತುಂಬಿಕೊಂಡಿದ್ದ
ಕತ್ತಲು ಕಳೆಯಲು ಮೂರು ದಿನ ಬೇಕು ಎಂದು. ಪರಮಾತ್ಮನ ದರ್ಶನ ಭಾಗ್ಯ ಎಂದರೆ ಅದು. ದರ್ಶನವಾದ
ಮಾತ್ರಕ್ಕೆ ಬದುಕಿನ ಕತ್ತಲು ಕಳೆದು ಹೋಗುತ್ತದೆ.
ದಾರಿಯದಾವುದು ತರುಣಿ | ತೋರಿಕೊಡೆ ನಾರೀಮಣಿ |
ಚಾರು ಸರೋವರದೆಡೆಗೆ | ಪೋಗಲುಬೇಕೀಗೆಮಗೆ ||
ರಾಘವಕೇಳೀ ಪಥದಿ | ಸಾಗಿದರಾ ಸುರವನದಿ |
ಮೇಗೆ ಸರೋವರವಿಹುದು | ತೋರುವುದೇ ಪಂಪೆಯದು ||
ಪ್ರತಿಯೊಬ್ಬನ ಬದುಕಲ್ಲೂ ಒಂದೊಂದು ಸಲ
ಹೀಗಾಗುವುದುಂಟು. ಸಂಕಷ್ಟಗಳಿಂದ ಬಳಲಿ ಏನೂ ಮಾಡಲಾಗದಂತಹ ಪರಿಸ್ಥಿತಿ. ಹೇಗೆ ನಿವಾರಣೆ ಮಾಡಬೇಕು
ಎಂದು ಆಯೋಮಯರಾಗುವ ಒಂದು ಸ್ಥಿತಿಯಲ್ಲಿ ಕೊನೆಯ ಸಾಂತ್ವನ ಎಂಬಂತೆ ತಾಯಿ ಮಡಿಲು
ಸೇರಿಬಿಡುತ್ತೇವೆ. ತಾಯಿಗೆ ಸಾಧ್ಯವಾಗುತ್ತದೋ ಇಲ್ಲವೋ ಆದರೆ ಸಾಂತ್ವಾನದ ಪರಮ ಸ್ಥಿತಿಯದು.
ಸೀತೆಯನ್ನು ಕಳೆದುಕೊಂಡ ರಾಮನ ಸ್ಥಿತಿಯೂ ಲೌಕಿಕವಾಗಿ ಅದೇ ಆಗಿರುತ್ತದೆ. ಚಿತ್ತವಿಭ್ರಮಣೆಗೊಂಡ
ಆತನಿಗೆ ಕೌಸಲ್ಯೆಯ ಸ್ಥಾನವನ್ನು ತುಂಬಿಕೊಟ್ಟವಳು ಶಬರಿ. ತನ್ನ ಪತ್ನಿ ರಾವಣನಿಂದ ಅಪಹರಿಸಲ್ಪಟ್ಟ
ಸಂಗತಿಯನ್ನು ಆಕೆಯಲ್ಲಿ ಹೇಳುತ್ತಾನೆ. ಆಗಲೇ ಅವಳು ಮುಂದಿನ ದಾರಿಯನ್ನು ರಾಮನಿಗೆ ತೋರುತ್ತಾಳೆ.
ಮುಂದೆ ಪಂಪಾ ನದಿಯ ತಟದಲ್ಲಿ ತನ್ನಂತೆ ರಾಮನಿಗಾಗಿ ಕಾದು ಕುಳಿತ ಹನುಮನ ಬಗ್ಗೆ ಹೇಳುತ್ತಾಳೆ. ಆ
ಮೂಲಕ ಸೂರ್ಯನಂದನ ಸುಗ್ರೀವನ ಸಖ್ಯವನ್ನು ಬೆಳಸಿದರೆ,
ರಾವಣನ ವಶದಲ್ಲಿದ್ದ ಸೀತೆಯನ್ನು ಅನ್ವೇಷಣೆ ಮಾಡುವುದು ಸುಲಭವಾಗುತ್ತದೆ. ಕತ್ತಲಲ್ಲಿದ್ದ
ಶಬರಿಗೆ ರಾಮನೊಂದು ಬೆಳಕಾಗಿ ತೋರಿಬಂದರೆ, ಮುಂದೇನು ಎಂದು ತಿಳಿಯದೇ ಇದ್ದ ರಾಮನಿಗೆ ದಾರಿಯನ್ನು
ತೋರುತ್ತಾಳೆ. ರಾಮನಿಗೆ ದಾರಿ ತೋರಿದ ಶಬರಿ ರಾಮ
ಬೆಳಕು ಚೆಲ್ಲಿದ ಕೈವಲ್ಯದ ಹಾದಿಯಲ್ಲಿ ಸಾಗುತ್ತಾ ರಾಮನಲ್ಲೇ ಐಕ್ಯಳಾಗುವಲ್ಲಿಗೆ
ಮಂಗಳವಾಗುತ್ತದೆ.
ಕರದೊಳು ಪರಶು ಪಾಶಾಂಕುಶ ಧಾರಗೆ | ಹರುಷದೀ ಭಕ್ತರ ಪೊರೆವವಗೇ ||
ಉರಗ ಭೂಷಣನ ಕುಮಾರಗಜವದನನ | ಚರಣಕಮಲಗಳಿಗಾರತಿ ಎತ್ತಿರೆ
||
ಗಜಮುಖದವಗೆ ಗಣಪಗೆ ||
ಮಂಗಳಂ



