"ಇದು ವಿಮರ್ಶೆಯಲ್ಲದ ಚಿಂತನ"

Saturday, April 4, 2015

ಬೇಡವಾಗುವ ವಿಮರ್ಶೆ

               "ಪತಿತ ಪಾವನ ಶ್ರೀರಾಮ". 

           ಶಾಪಗ್ರಸ್ಥ ಜನ್ಮವನ್ನು ಮೋಕ್ಷಪದದತ್ತ ಕೊಂಡೊಯ್ಯುವ ರಾಮನ ಕುರಿತು ಹೇಳುವ ನುಡಿಯಿದು. ವೈಶಾಖ ಮಾಸದ ಬಿರು ಬೇಸಗೆಯ ಸಮಯ. ಬೀಸುವ ಗಾಳಿಯೂ ಸ್ತಬ್ಧವಾಗಿ ಶಾಖ ಇನ್ನೂ ಅಧಿಕವಾದ ಅನುಭವ. ಶಾಖ ಅಧಿಕವಾಗಿ ಬೆವರು ಒಡೆಯುತ್ತದೆ. ಆಕಾಶದಲ್ಲಿ ಒಮ್ಮಿಂದೊಮ್ಮೆಗೆ ಮೋಡ ಕಪ್ಪಾಗಿ ಇನ್ನೇನು ಮಳೆ ಸುರಿಯಬಹುದು ಎಂಬ ಸೂಚನೆ. ಆದರೆ ಮಳೆ ಸುರಿಯುವುದಿಲ್ಲ.  ಉಷ್ಣ ಅಧಿಕವಾಗುತ್ತಾ ಒಂದು ಚರಮ ಸ್ಥಿತಿಗೆ ತಲುಪಿದಂತೆ ಒಮ್ಮೇಲೆ ಮಳೆ ಹನಿ ಸುರಿಯಲಾರಂಭಿಸಿ ತಂಪಾದ ಹವೆ ಬೀಸಿದಂತೆ,  ವೃಣಒಂದ ಕೀವು ಕಟ್ಟಿ ವೇದನೆ ಸಹಿಸದಾಗಿ ಯಾತನೆಯ ಉತ್ಕಟ ಸ್ಥಿತಿಯಲ್ಲಿ ವೃಣ ಒಡೆದು ಕೀವು ಹರಿದು ವೇದನೆಯ ಮೋಕ್ಷವನ್ನು ಅನುಭವಿಸುವ ನಿರಾಳ ಸ್ಥಿತಿಯಂತೆ ಕೈವಲ್ಯ ಧರ ಶ್ರೀರಾಮನ ಆಗಮನವಾದಾಗ ಬಿರುಬೇಸಗೆಯ ತಂಪಾದ ಹವೆಯ ಅಹ್ಲಾದಕರ ಅನುಭವವಾಗುತ್ತದೆ.
          ಪಾದ ಪ್ರತೀಕ್ಷ ಯಕ್ಷಗಾನದ ಕ್ಷಣವೊಂದರ ಅನುಭವವಿದು. ಒಂದು ರೀತಿಯ ನೀರಸ ಘಳಿಗೆಯ ಮೋಕ್ಷವೋ ಎಂಬಂತೆ ಚೆಂಡೆಯ ಬಿರುಸಿನ ಪೆಟ್ಟಿಗೆ ಮೊದಲು ಲಕ್ಷ್ಮಣನ ಪ್ರವೇಶವಾಗುತ್ತದೆ. ಲಕ್ಷ್ಮಣನ ಒಂದಷ್ಟು ದಿಗಿಣದ ಸುತ್ತು ಕಳೆದಾಗ ಸಹಜವಾಗಿ ರಾಮನ ಪ್ರವೇಶ ಹೇಗಾಗುತ್ತದೆ ಎಂಬ ಕುತೂಹಲ ಮೂಡುತ್ತದೆ. ಯಕ್ಷಗಾನದ ಕುಣಿದಲ್ಲಿ ಶ್ರೀರಾಮನ ಪಾತ್ರದ ಕುಣಿತದ ಮಹತ್ವ ಅದಕ್ಕೆ ಕಾರಣ. ಆಗ ರಾಮನಾಗಿ ವಾಸುದೇವ ರಂಗ ಭಟ್ಟರ ಪ್ರವೇಶವಾಗುತ್ತದೆ. ಮೂರು ದಿಗಿಣದಲ್ಲಿ ಕುಣಿತ ಮುಕ್ತಾಯವಾಗುವಾಗುತ್ತದೆ. ರಾಮನ ಪಾತ್ರದ ಇತಿಮಿತಿಯ ಕುಣಿತದ ಲೆಕ್ಕಾಚಾರಕ್ಕೆ ಅನುಗುಣವಾದ ಪ್ರವೇಶ ಮತ್ತು ಕುಣಿತ. ನಿಜಕ್ಕೂ ಭಟ್ಟರ ಶ್ರದ್ಧೆ ಮತ್ತು ಕಾಳಜಿ ಇಲ್ಲಿ ಇಷ್ಟವಾಗುತ್ತದೆ.  ಯಕ್ಷಗಾನದಲ್ಲಿ ರಾಮನ ಪಾತ್ರಕ್ಕಿರುವ ಘನತೆ ಬೇರೆ ಯಾವುದಕ್ಕೂ ಇರುವುದಕ್ಕಿಲ್ಲ. ಪರಿಪೂರ್ಣ ವ್ಯಕ್ತಿತ್ವದ, ಮರ್ಯಾದಾ ಪುರುಷೋತ್ತಮನ ಪಾತ್ರ ನಿರ್ವಹಣೆ ಕುಣಿತದಲ್ಲೂ ಮಾತುಗಾರಿಕೆಯಲ್ಲೂ ಬಹಳ ತೂಕವುಳ್ಳದ್ದಾಗಿರಬೇಕು. ಇದರ ಮಹತ್ವವನ್ನು ತಿಳಿಯದವರು ನಿರ್ವಹಿಸಿದಲ್ಲಿ ರಾಮನ ವ್ಯಕ್ತಿತ್ವಕ್ಕೇ ಪರೋಕ್ಷವಾಗಿ ಅಪಚಾರವೆಸಗಿದಂತೆ.  ರಾಮನ ಪಾತ್ರ ಗಿರಕಿ ಸುತ್ತುವ ಪರಿಪಾಠವಿಲ್ಲ. ರಾಮನ ಗಿರಕಿ ಸುತ್ತುವುದಿದ್ದರೆ ಅದು ಪಟ್ಟಾಭಿಷೇಕದ ಬಾಲ ರಾಮನ ಪಾತ್ರದಲ್ಲಿ ಮಾತ್ರ.
          ವಾಸ್ತವದಲ್ಲಿ ರಂಗಾ ಭಟ್ಟರು ರಂಗಸ್ಥಳದ ಕಲಾವಿದರಲ್ಲ ಎಂದು ಅವರು ಒಪ್ಪಿಕೊಂಡರೂ ಪಾತ್ರದ ಪ್ರಭುದ್ದತೆಯಲ್ಲಿ ಹಾಗನಿಸುವುದಿಲ್ಲ. ಹಲವು ಕಲಾವಿದರು ತಮ್ಮ ಹಲವು ನ್ಯೂನ್ಯತೆಗಳನ್ನು ತಮ್ಮ ಮತ್ತೋಂದು ನಿರ್ವಹಣೆಯ ಮುಖದಲ್ಲಿ ಅಳಿಸಿ ಹಾಕುತ್ತಿದ್ದರು. ಮಾತುಗಾರಿಕೆಯಿಂದಲೋ ಅಭಿನಯದಿಂದಲೋ ಸಮಯ ಪ್ರಜ್ಞೆಯಿಂದಲೋ ಕುಣಿತದ ಕೊರತೆಯನ್ನು ನೀಗಿಸುತ್ತಿದ್ದರು. ಇವರ ನಿರ್ವಹಣೆಯಲ್ಲಿ ಆ ಪ್ರಮೇಯವೇ ಒದಗಿ ಬರುವುದಿಲ್ಲ. ಕುಣಿತದಲ್ಲಿ ಅಭಿನಯದಲ್ಲಿ ತೋರುವ ಶ್ರದ್ಧೆ ತೃಪ್ತಿಕರ ಅನುಭವವನ್ನು ನೀಡುತ್ತದೆ. ಮಾತಿಗಿಳಿದರೆ ತಾನಿನ್ನೂ ಕುಣಿತ ರಂಗನಡೆಯ ಅಭ್ಯಾಸದಲ್ಲೇ ಇದ್ದೇನೆ ಎಂದು ವಿನಮ್ರವಾಗಿ ಒಪ್ಪಿಕೊಂಡುಬಿಡುತ್ತಾರೆ. ಹಲವು ಕಲಾವಿದರು ತಮ್ಮ ಪಾತ್ರ ನಿರ್ವಹಣೆಯ ಬಗ್ಗೆ ಪ್ರತಿಕ್ರಿಯೆಯನ್ನು ಮುಕ್ತವಾಗಿ ನೀಡುವಂತೆ ಕೇಳಿದರೂ ವಾಸ್ತವದಲ್ಲಿ ಅದರಲ್ಲಿ ಧನಾತ್ಮಕ ಗುಣಗಳನ್ನಷ್ಟೆ ಬಹಳವಾಗಿ ಬಯಸುತ್ತಾರೆ. ಆದರೆ ಇಲ್ಲಿ ಋಣಾತ್ಮಕವಾಗಲಿ ಧನಾತ್ಮಕವಾಗಲಿ ಅದನ್ನು ಅರಿತು ನಿರ್ವಹಿಸುವ ಸಾಲಿಗೆ ಭಟ್ಟರು ಸೇರುತ್ತಾರೆ. ಇದು ಬಹಳ ವಿಶೇಷ ಅಂತ ಹೇಳಬೇಕು.
          ಸಾಮಾನ್ಯವಾಗಿ ಕಲಾವಿದನಾದವನು ತನ್ನ ಕೊರತೆಗಳತ್ತ ಗಮನ ಹರಿಸಬೇಕು. ಆಗಲೇ ಪರಿಪೂರ್ಣತೆಯತ್ತ ಸಾಗುವುದಕ್ಕೆ ಸಾಧ್ಯವಾಗುತ್ತದೆ. ಇದು ಎಲ್ಲರಿಗೂ ಇದು ತಿಳಿದಿರುವ ವಿಚಾರವೇ.  ಯಕ್ಷಗಾನದ ಮಟ್ಟಿಗೆ ಇದಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಅದರತ್ತ ಗಮನ ಹರಿಸುವುದು ಬಹಳ ಕಡಿಮೆ. ತಮ್ಮ ನ್ಯೂನ್ಯತೆಗಳನ್ನು ರಂಗದ ಮೇಲೆ ತತ್ಸಮಯದಲ್ಲೇ ತಿದ್ದಿಕೊಳ್ಳುವ ಅವಕಾಶ ಯಕ್ಷಗಾನದಲ್ಲಿದ್ದಷ್ಟು ಬೇರೆ ಕಲೆಯಲ್ಲಿ ಸಾಧ್ಯವಿಲ್ಲ. ಆದರೂ ಇದನ್ನು ಪರಿಗಣಿಸುವವರು ಬಹಳ ಕಡಿಮೆ. ಇಂದು ಬಹಳಷ್ಟು ಕಲಾವಿದರು ವಿಮರ್ಶೆಯನ್ನು ಬಯಸುತ್ತಾರೆ. ಆದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದಿಲ್ಲ. ತಮ್ಮ ನಿರ್ವಹಣೆ ಗಮನಾರ್ಹವಾಗಬೇಕು ಆದರೆ ಇಲ್ಲಿ ಫಲಿತಾಂಶದ ಅವಶ್ಯಕತೆ ಇರುವುದಿಲ್ಲ. ಇದು ಒಂದು ರೀತಿಯಲ್ಲಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟ ಉಡುಗೆಯಂತೆ ಅದು ದರ್ಶನಕ್ಕೆ ಮಾತ್ರ ತೊಡುವುದಕ್ಕೆ ಇಲ್ಲ.  ರಂಗಾ ಭಟ್ಟರ ವೇಶ ಕಾಣುವಾಗ ಈ ವಿಚಾರಗಳೆಲ್ಲ ಇಲ್ಲಿ ಸ್ಪಂದನೆಯನ್ನು ಉಂಟುಮಾಡಿದೆಯೋ ಎಂಬ ಪರಿಪಕ್ವತೆ ಕಂಡುಬರುತ್ತದೆ. ಒಬ್ಬ ಕಲಾವಿದ ತನ್ನ ನಿರ್ವಹಣೆಯಲ್ಲಿ ಎಷ್ಟು ತಾದಾತ್ಮ್ಯವನ್ನು ಅನುಭವಿಸುತ್ತಾನೋ ಅದರ ಮೇಲೆ ಆತನ ಬದುಕು ಆಧರಿಸಲ್ಪಟ್ಟಿದೆ. ಭಟ್ಟರು ಅದನ್ನು ಅನುಭವಿಸಿ ರಂಗದಲ್ಲಿ ಪಾತ್ರವಾಗುತ್ತಾರೆ. 
          ಒಂದು ಪಾತ್ರದ ಬಗ್ಗೆ. ಪಾತ್ರಧಾರಿಯ ಬಗ್ಗೆ ಹೇಳುವಾಗ ಅದನ್ನು ವಿಮರ್ಶೆ ಎಂದು ಪರಿಗಣಿಸುವುದುಂಟು. ಆದರೆ ವಿಮರ್ಶೆಗೆ  ಬಹಳಷ್ಟು ಅರ್ಹತೆಗಳನ್ನು ಗುರುತಿಸಬೇಕಾಗುತ್ತದೆ. ಅದನ್ನು ಗುರುತಿಸದೇ ವಿಮರ್ಶೆ ಎಂದು ಪರಿಗಣಿಸುವುದರಿಂದ ಮೂಲಭಾವನೆಗೆ ಮತ್ತು ಪರಿಣಾಮಕ್ಕೆ ಅದು ತೊಂದರೆಯನ್ನುಂಟು ಮಾಡುತ್ತದೆ. ವಿಮರ್ಶೆ ಮತ್ತು ಅನಿಸಿಕೆ ಅಥವಾ ಪ್ರತಿಕ್ರಿಯೆ  ಪರಸ್ಪರ ತೀರಾ ಭಿನ್ನವಾದ ರೂಪವನ್ನು ಪಡೆದವುಗಳು. ಅವುಗಳ ವೆತ್ಯಾಸ ತಿಳಿಯದೆ ಅನಗತ್ಯ ಗೊಂದಲ ವಿವಾದಗಳಿಗೆ ಇದು ಕಾರಣವಾಗುತ್ತದೆ. ಆದುದರಿಂದ ಇಲ್ಲಿ ಕೆಲವೊಂದು ಅಂಶಗಳನ್ನು ಹೇಳುವ ಮನಸ್ಸಾಗುತ್ತದೆ. ಮೂಲ ವಿಷಯಕ್ಕೆ ಇದು ಸಂವಹನ ಉಂಟು ಮಾಡದೇ ಇದ್ದರೂ ಇದು ಅಪರಾಧವಲ್ಲ ಎಂದು ನನ್ನ ಭಾವನೆ.
          ಯಕ್ಷಗಾನ ವಿಮರ್ಶೆ ಎಂಬುದು ಈಗ ಬೇಡಿಕೆ ಸಲ್ಲಿಸಿ ಪಡೆಯುವ ವಸ್ತುವಾಗಿದೆ.. ಒಮ್ಮಿಂದೊಮ್ಮೆ ವಿಮರ್ಶೆ ಮಾಡಿದರೆ ತನಗೆ ಎಷ್ಟು ತಿಳಿದಿದೆ ಎಂಬುದರ ಬದಲಾಗಿ ವಿಮರ್ಶಕನ ಜ್ಞಾನವೇ ಪ್ರಶ್ನಾರ್ಹವಾಗುವುದು ಒಂದು ವಿಡಂಬನೆ. ಹಾಗಾಗಿ ಅಭಿಪ್ರಾಯ ಸೂಚಿಸಿದರೂ ಅದು ಕೇವಲ ಧನಾತ್ಮಕ ಅಂಶಗಳಷ್ಟೇ ಇರುತ್ತದೆ. ಋಣಾತ್ಮಕವಾದುದನ್ನು ಹೇಳಿ ಈತನ ಜ್ಞಾನವು ಪ್ರಶ್ನಾರ್ಹವಾಗಿ ಕಲಾವಿದನೇ ವಿಮರ್ಶಕನಾಗುವ ಅಪಾಯವಿರುತ್ತದೆ! ಆದುದರಿಂದ ವಿಮರ್ಶೆ ಎಂಬುದು ಕತ್ತಿಯ ಅಲಗಿನಂತೆ ಪರಿಣಾಮ ಉಂಟುಮಾಡುವುದಿಲ್ಲ. ವಿಮರ್ಶೆಗೂ ಪ್ರಶಂಸೆಗೂ ವೆತ್ಯಾಸ ತಿಳಿಯದೇ ಹೋಗುತ್ತದೆ.

          ವಿಮರ್ಶೆಯಾಗಲಿ ಪ್ರತಿಕ್ರಿಯೆಯಾಗಲಿ ಎಲ್ಲಿ ಋಣಾತ್ಮಕ ಅಂಶಗಳಿವೆಯೋ ಅವುಗಳು ಕಲಾವಿದನಲ್ಲಿ ಧನಾತ್ಮಕ ಪರಿಣಾಮವನ್ನು ಬೀರಬೇಕು. ಹಾಗೇಯೆ ಧನಾತ್ಮಕ ಅಂಶಗಳು ಋಣಾತ್ಮಕ ಧೋರಣೇಯಲ್ಲೇ ಸ್ವೀಕರಿಸಲ್ಪಡಬೇಕು. ಆದರೆ ಇಂದು ಧನಾತ್ಮಕವಾದವುಗಳು ಸ್ವೀಕೃತವಾಗಿ ಮಿಕ್ಕುಳಿದವುಗಳು ಕಸದ ಬುಟ್ಟಿಯನ್ನು ಸೇರುವ ಕಸವಾಗಿಬಿಟ್ಟಿದೆ. ವಿಮರ್ಶೆ ಮಾಡುವವನೂ ಆತಂಕವನ್ನು ಎದುರಿಸುವ ಇಚ್ಛೆಯಿಲ್ಲದೆ ಕಸವನ್ನು ಹೊರಗೆ ಎಸೆಯದೇ ಮನಸ್ಸಿನಲ್ಲೇ ಇರಿಸಿಬಿಡುತ್ತಾನೆ. ತನ್ನ ಅನಿಸಿಕೆಗಳನ್ನೂ ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರತಿಕ್ರಿಯಿಸಿದರೆ ಅದು ವಿವಾದಕ್ಕೆ ಕಾರಣವಾಗುವ ಭಯ. ಹಾಗಾಗಿ ಒಂದು ಯಕ್ಷಗಾನವನ್ನು ನೋಡಿದಾಗ ಹೇಳಿದುದಕ್ಕಿಂತಲೂ ಹೇಳದೇ ಇರುವದ್ದು ಬಹಳವಿದೆ ಎಂದನಿಸುತ್ತದೆ.

          ಯಕ್ಷಗಾನದ ವೇಷಧಾರಿಗೆ ಕನ್ನಡಿ ಎಂದರೆ ಅತ್ಯಂತ ಹತ್ತಿರದ ಸಹಚರನಿದ್ದಂತೆ.  ಆತನ ಕುಂದುಕೊರತೆಗಳನ್ನು ಮೊದಲು ತೋರಿಸುವ ಸ್ನೇಹಿತ. ಆದರೆ ಸಮಷ್ಟಿಯಲ್ಲಿ ಒಬ್ಬ ಕಲಾವಿದನಾದವನು ಪ್ರೇಕ್ಷಕನಲ್ಲೇ ಇದನ್ನು ಕಾಣಬಹುದು. ಮಾತ್ರವಲ್ಲ ಕಾಣಲೇಬೇಕು. ಹಾಗಾಗಿ ಪ್ರೇಕ್ಷಕನೆಂದರೆ ಕಲಾವಿದನಿಗೆ ಕನ್ನಡಿಯಂತೆ. ಅದು ನೀರಲ್ಲಿ ಕಾಣುವ ಪ್ರತಿಬಿಂಬವಲ್ಲ. ಆದರೆ ಅದನ್ನು ನೀರ ಪ್ರತಿಬಿಂಬದಂತೆ ಮರೆತು ಬಿಡುವುದೇ ಹೆಚ್ಚು. ಕಲೆಗೆ ಸಂಬಂಧಿಸಿ ಪ್ರೇಕ್ಷಕನ ಪ್ರತಿಕ್ರಿಯೆ ನೀರ ಪ್ರತಿಬಿಂಬವಾಗದೆ ಅದು ನೇರ (ಸತ್ಯ) ಪ್ರತ್ರಿಬಿಂಬವಾಗಿರುತ್ತದೆ.  ಹೀಗಾಗಿ ಕಲಾಸ್ವಾದನೆಯಲ್ಲಿ ಕನ್ನಡಿಯಾಗಿ ಪ್ರೇಕ್ಷಕನ ಕರ್ತವ್ಯವೂ ಬಹಳ ಹಿರಿದಾಗಿರುತ್ತದೆ. ಆದರೆ ವಿಪರ್ಯಾಸವೆಂದರೆ ಇಲ್ಲಿ ಕನ್ನಡಿ ಯಥಾವತ್ ಸತ್ಯ ಬಿಂಬವನ್ನು ತೋರಿಸಿದರೆ ಆ ಕನ್ನಡಿಗೆ ಮಸಿ ಬಳಿದು ಕನ್ನಡಿಯ ಗುಣವನ್ನೇ ಅಡಗಿಸಿಬಿಡುವ ಪ್ರಯತ್ನವೂ ಇಲ್ಲದಿರುವುದಿಲ್ಲ. ಇದರಿಂದ ವಿಮರ್ಶೆಯಲ್ಲಿ ಅಥವಾ ಪ್ರತಿಕ್ರಿಯೆಯಲ್ಲಿ ಸತ್ಯದರ್ಶನವಾಗಬೇಕಾದರೆ ಅಂತಹ ಪರಿಸರವೂ ಅನಿವಾರ್ಯವಾಗುತ್ತದೆ. ವಾಸ್ತವದ ಯಕ್ಷಗಾನದಲ್ಲಿ ಅಂತಹ ಪರಿಸರ ಖಂಡಿತವಾಗಿಯೂ ಇಲ್ಲ ಎಂಬುದು ಬೇಸರದ ಸಂಗತಿ.

          ಒಂದು ಯಕ್ಷಗಾನವನ್ನು ನೋಡಿ ಬರಿದೇ ಒಂದು ಪ್ರತಿಕ್ರಿಯೆಯನ್ನು ಸಾರ್ವಜನಿಕವಾಗಿ ಮಂಡಿಸಿದರೆ ಮಂಡಿಸಿದವನ ಜಾತಕ ಅನ್ವೇಷಣೆಗೆ ವಸ್ತುವಾಗುತ್ತದೆ. ಆತನ ಇತಿಮಿತಿಗಳ ಬಗ್ಗೆ ಅನಪೇಕ್ಷಿತ    ಭಾವ ಪ್ರಕಟನೆಯಾಗುತ್ತದೆ. ಇದರ ಬಗ್ಗೆ ಹೇಳುವುದಕ್ಕೆ ಆತನಿಗೆಷ್ಟು ತಿಳಿದಿದೆ ಎಂಬುದಷ್ಟೇ ಪ್ರಧಾನವಾಗಿ ಆತನ ಪ್ರತಿಕ್ರಿಯೆಯ ವಿಚಾರಗಳು ಗೌಣವಾಗಿಬಿಡುತ್ತದೆ. ಹಾಗಾಗಿ ಉಂಡ ಅಹಾರ ಹುಳಿಯೋ ಒಗರೋ ಎಂದು ತಿಳಿಯುವ ಪ್ರಧಾನ ಮಾಧ್ಯಮವನ್ನೇ ಇಂದಿನ ವಾತಾವರನ ನಾಶಮಾಡುತ್ತದೆ. ಒಬ್ಬಾಕೆ ತಾಯಿ ತನ್ನ ಪುಟ್ಟ ಎಳೆ ಮಗುವಿಗೆ ಅಂಬಲಿಯನ್ನು ಮಾಡಿ ಉಣಿಸುತ್ತಾಳೆ. ಆ ಬಾಯಿಬಾರದ ಮಗು ಅದನ್ನು ತಿನ್ನದೇ ತಳ್ಳಿಬಿಡುತ್ತದೆ. ತಾಯಿ ತಾಳ್ಮೆಯಿಂದ ಯಾವರೀತಿಯ ತಂತ್ರ ಮಾಡಿದರೂ ಮಗು ಅಂಬಲಿಯನ್ನು ಉಣ್ಣುವುದಿಲ್ಲ. ಕೊನೆಗೆ ತಾಯಿ ಒಂದಿಷ್ಟು ಅಂಬಲಿಯ ರುಚಿ ನೋಡುತ್ತಾಳೆ ಆಗ ಅರಿವಿಗೆ ಬರುತ್ತದೆ ಅದಕ್ಕೆ ನಿತ್ಯ ಸಹಜವಾಗಿ ಹಾಕುವಂತಹ ಉಪ್ಪು ಅಥವಾ ಸಿಹಿಯೋ ಹಾಕುವುದನ್ನು ಮರೆತಿರುತ್ತಾಳೆ.  ಎಲ್ಲವನ್ನು ತಿಳಿದ ತಾಯಿಗೆ ಏನೂ ತಿಳಿಯದ ಪುಟ್ಟ ಮಗು ಅಂಬಲಿಯ ದೋಷವನ್ನು ಪ್ರತಿಕ್ರಿಯೆಯಾಗಿ ಹೇಳುತ್ತದೆ. ಇಲ್ಲಿ ಮಗುವಿಗೆ ಏನೂ ತಿಳಿಯದೇ ಇರುವುದರಿಂದ ಅದರ ಅಜ್ಞಾನದಿಂದ ಹೇಳಿದ ಸತ್ಯ ಸತ್ಯವಾಗದಿರಲು ಸಾಧ್ಯವಿಲ್ಲ. ಅದನ್ನು ತಾಯಿಯಾದವಳು ತಿಳಿಯಬೇಕಾಗುತ್ತದೆ. ಇದರಿಂದ ಸ್ವತಃ ತಾಯಿಯ ತಿಳುವಳಿಕೆ ವೃದ್ಧಿಯಾಗಿ ಮುಂದೆ ಹೀಗಾಗದೇ ಇರುವಂತೆ ಎಚ್ಚರಿಕೆಯನ್ನು ನೀಡುತ್ತದೆ.

          ಶೇಣಿಯವರು ಹೇಳಿದ ಮಾತೊಂದು ನೆನಪಿಗೆ ಬರುತ್ತದೆ. ಆಟವನ್ನು ನೋಡಿದ ಪ್ರೇಕ್ಷಕ ಮರುದಿನ ಹೇಳುತ್ತಾನೆ. “ ನಿನ್ನೆ ಎಂತಹ ರಾವಣ ಮಾರಾಯ್ರೆ.  ಭಾರಿ ಒಳ್ಳೆಯ ರಾವಣ.”  ಈ ಮಾತಿನ ಅರ್ಥವನ್ನು ಗ್ರಹಿಸುವಲ್ಲಿ ನಾವು ಪ್ರಾಮಾಣಿಕರಾಗಬೇಕು. “ರಾವಣ ಒಳ್ಳೆಯವನಾದರೆ ... ಹೋಗಿ ,  ಹೋಗಿ ರಾವಣ ಒಳ್ಳೆಯವ ಅಂತ ಹೇಳ್ತಾನಲ್ಲ?  ಲೋಕ ಉಳಿದಿತೋ ಅದೊಂದು ದುರಂತ ಅಲ್ಲವೇ?”  ಆದರೆ ಇಲ್ಲಿ ಈ ಮಾತಿನ ಪ್ರಾಮಾಣಿಕ ಭಾವ,  ಅದು ನಾವು ಅರ್ಥವಿಸಿಕೊಳ್ಳುವುದರಲ್ಲಿದೆ.  ಇಲ್ಲಿ ಆತ ಹೇಳಿದ್ದು ರಾವಣನ ಪಾತ್ರದ ರಸಾಭಿವ್ಯಕ್ತಿಯನ್ನಷ್ಟೇ ಹೇಳಿದ್ದು. ಬದಲಾಗಿ ರಾವಣ ವ್ಯಕ್ತಿತ್ವದ ವಿಮರ್ಶೆಯಲ್ಲ. ಕೀಚಕ ವಧೆಯನ್ನು ನೋಡಿ ಎಂತಹಾ ಒಳ್ಳೆಯ ಕೀಚಕ ಎಂದು ಹೇಳಿದರೆ ಅದರ ಮೂಲಾರ್ಥವನ್ನು ಗ್ರಹಿಸುವಾಗ ಪ್ರೇಕ್ಷಕನ ಪ್ರತಿಕ್ರಿಯೆಯನ್ನು ದಮನಿಸುವುದು ಸರಿಯಲ್ಲ.   ಕಲೆ ಅಂದರೆ ಅಷ್ಟೆ. ಅದು ಕೇವಲ ರಸಾಭಿವ್ಯಕ್ತಿ.  ಒಂದಲ್ಲ ಒಂದು ರಸವನ್ನು ಬಿಂಬಿಸುವುದಷ್ಟೇ ಅದರ ಉದ್ದೇಶ. ಆ ರಸವನ್ನು ಗ್ರಹಿಸುವುದರಲ್ಲೇ ರಸಿಕನಾದ ಪ್ರೇಕ್ಷಕನ ಅಸ್ತಿತ್ವ ಇರುವುದು.  ಯಕ್ಷಗಾನದಲ್ಲಿ ಕಿಂಚಿತ್ತೂ ಸಂಭಾವನೆ ಇಲ್ಲದವನು ಎಂದರೆ ಅದು ಪ್ರೇಕ್ಷಕ ಮಾತ್ರ. ಇದನ್ನು ಅರ್ಥವಿಸಿಕೊಳ್ಳಬೇಕು. ಪ್ರೇಕ್ಷಕ ಸಂಭಾವನೆ ರೂಪದಲ್ಲಿ ಯಾವುದನ್ನು ಬಯಸುತ್ತಾನೋ ಅದು ಅವನ ಪ್ರಾಮಾಣಿಕತೆಗೆ ಸಂದ ವಿಚಾರ. ಆದರೂ ಕಲೆಗೆ ಸಂಬಂಧಿಸಿ ಮುಕ್ತವಾದ ಪ್ರತಿಕ್ರೆಯೆಯೂ ಪ್ರಧಾನವಾಗಿಬಿಡುತ್ತದೆ.


          ಕಲೆಯ ಬಗ್ಗೆ ವಿಮರ್ಶೆ ಬಂದರೆ ಅದರ ಬಗ್ಗೆ ಗಮನ ಹರಿದಿದೆ ಎಂದರ್ಥ. ಕಲಾವಿದನಿಗೂ ಅವನ ಅಸ್ತಿತ್ವಕ್ಕೂ ಈ ವಿಮರ್ಶೆಗಳೇ  ನಿದರ್ಶನವಾಗುತ್ತದೆ. ಒಬ್ಬನ ಪಾತ್ರದ ಬಗೆಯೋ ಅಥವ ಗಾಯನದ ಬಗೆಯೋ ಅವನಲ್ಲಿರುವ ಕಲೆಯ ಬಗ್ಗೆ ವಿಮರ್ಶೆ ಇಲ್ಲವೆಂದಾದರೆ ಕಲಾಪ್ರಪಂಚದಲ್ಲಿ ಆತನ ಅಸ್ತಿತ್ವ ಪ್ರಶ್ನಾರ್ಹವಾಗುತ್ತದೆ. 

Thursday, March 26, 2015

’ಪಾದ ಪ್ರತೀಕ್ಷ’ ಹೊಸ ಪ್ರತೀಕ್ಷೆಗಳೊಂದಿಗೆ.

ಮಧುರತರಾಂಬುಜವದನೇ | ಮದಗಜಸನ್ನಿಭಗಮನೇ |
ಪದುಮದಳಾಯತನಯನೇ | ಪರಮಪತಿವ್ರತೆ ಶಬರೀ ||
ಸೀತೆಯ ಕಾಣದರಿಂದ | ಅರಸುತ ಬಂದೆ ಕಬಂಧ |
ರೀತಿಯ ಪೇಳಲು ನಮಗೆ | ಬಂದೆವು ನಾವ್ ನಿನ್ನೆಡೆಗೆ||

ಇದು ಶಬರೀ ಮೋಕ್ಷ ಪ್ರಸಂಗದ ಪದ. ಶಬರಿಯಲ್ಲಿ ರಾಮ ಕಂಡುಕೊಂಡ ಬಗೆಯನ್ನು ಕವಿ ವರ್ಣಿಸುವುದು ಬಹಳ ವಿಶಿಷ್ಟ ವಾಗಿದೆ. ಅಧ್ಯಾತ್ಮಿಕವಾಗಿಯೂ ಲೌಕಿಕವಾಗಿಯೂ ಅವರವರ ಚಿಂತನೆಯ ದೃಷ್ಟಿಕೋನವನ್ನೂ,  ಅದರ ಆಳವನ್ನೂ ಪರಿಕಿಸಬಲ್ಲ ಈ ಪದ ನಿಗೂಢ ಅರ್ಥ ಗಂಭೀರವನ್ನೇ ತುಂಬಿಕೊಂಡಿದೆ.
  ಬಾಲ್ಯದಿಂದಲೇ ಆಧ್ಯಾತ್ಮದತ್ತ ಮುಖಮಾಡಿ ಲೌಕಿಕ ಜೀವನದ ಬಗ್ಗೆ ವಿರಕ್ತಳಾದ ಶಬರಿಯನ್ನು ಶ್ರೀರಾಮನ ಕಣ್ಣಲ್ಲಿ ಕವಿ ಹೀಗೆ ವೈವಿಧ್ಯಮಯವಾಗಿ ಕಾಣುತ್ತಾನೆ ಎಂದರೆ, ಅದರಲ್ಲೂ ಅದು ಯಕ್ಷಕವಿ ಎಂದಾಗುವಾಗ ಬಹಳಷ್ಟು ಚಿಂತನೆಗೆ ಗ್ರಾಸವಾಗುತ್ತದೆ. ಮಧುರತರಾಂಬುಜ ವದನೆ ಮದಗಜ ಸನ್ನಿಭಗಮನೇ ಇಲ್ಲಿ ಶೃಂಗಾರ ಕಾವ್ಯಕನ್ನಿಯ ವರ್ಣನೆ ಶಬರಿಯಾದರೆ, ನಂತರ ಆಜನ್ಮ ಪರ್ಯಂತ ಕನ್ಯೆಯಾಗಿ ವಿರಾಗಿಣಿಯಾದ ಶಬರಿಯನ್ನು ಪರಮ ಪತಿವೃತೆ ಎಂದು ಕೊಂಡಾಡುತ್ತಾನೆ.

ಶ್ರೀರಾಮ ಕಂಡ ವಿವಿಧ್ಯಮಯ ವ್ಯಕ್ತಿತ್ವದ ಶಬರಿಯ ಈ ಕಥಾನಕವೇ ಹೊಸನಗರ ಮೇಳದ “ಪಾದ ಪ್ರತೀಕ್ಷ”  ಎಂಬ ಪ್ರಸಂಗ.  ಒಂದಿಷ್ಟು ಅಬ್ಬರ, ಒಂದಿಷ್ಟು ಹಾಸ್ಯ ಶೃಂಗಾರ ಹೀಗೆ ಆರಂಭದಲ್ಲಿ ಕಂಡು ಬರುವ ಈ ಪ್ರಸಂಗ ಅಂತ್ಯದಲ್ಲಿ ಬಹಳ ಅರ್ಥಗರ್ಭಿತ  ಮಂಗಳ ಹಾಡುತ್ತದೆ. ರಾಮಾಯಣ ಪ್ರಸಂಗಗಳಲ್ಲಿ ಶಬರೀ ಪ್ರಸಂಗ ಯಕ್ಷಗಾನದ ಬಯಲಾಟದಲ್ಲಿ ರಂಗವೇರುವುದು ಬಹಳ ಅಪರೂಪ. ಜಟಾಯು ಮೋಕ್ಷದ ನಂತರೆ ಕೆಲವೇ ಕೆಲವು ಪದಗಳಲ್ಲಿ ಮುಗಿಯುವ ಶಬರೀ ಮೋಕ್ಷ ಪ್ರಸಂಗವನ್ನು ಪುನಃ ಸೃಷ್ಟಿಸಿ ರಂಗದ ಮೇಲೆ ತರುವಲ್ಲಿ ಬಹಳಷ್ಟು ಸಂಕಲನದ ಪ್ರಯೋಗವನ್ನು ಕಂಡಿದೆ. ಹಲವು ಪ್ರಸಂಗ ಸೇರಿಸಿ ಒಂದು ಬಯಲಾಟ ಮಾಡಿದಂತೆ ಇಲ್ಲಿ ಮೂಲತಹ  ಪ್ರಸಂಗನ್ನು ಒಂದಾಗಿ ಮಾಡಲಾಗಿದೆ. ಯಕ್ಷಗಾನಕ್ಕೆ ಇದು ಹೊಸ ಪ್ರಯೋಗವೇನೂ ಅಲ್ಲ. ಏಕತಾನತೆಯ ಪ್ರವಾಹಕ್ಕೆ ಒಂದಿಷ್ಟು ತಿರುವು ಮರುವನ್ನು ಕಲ್ಪಿಸುವುದಷ್ಟೆ. ಹಾಗಾಗಿ ಇಲ್ಲಿ ಶಬರಿ ಮೋಕ್ಷದ ಜತೆಗೆ ಕಬಂಧ ಮೋಕ್ಷವೂ ಸೇರಿಕೊಂಡಿದೆ. ಮೂಲ ಪಾರ್ತಿ ಸುಬ್ಬನ ಪ್ರಸಂಗದಲ್ಲಿ ಒಂದೆರಡು ಪದಗಳ ಅಂತರದ ಪ್ರಸಂಗಗಳು ಇಲ್ಲಿ ಪೂರ್ಣ ರಾತ್ರಿಯ ಪ್ರಸಂಗಕ್ಕೆ ವಿಷಯವನ್ನು ಒದಗಿಸಿದೆ.
ಛಾಯಾ ಚಿತ್ರ ಕೃಪೆ : ಶ್ರೀ ಉಲ್ಲಾಸ್

            ಹಲವು ಪ್ರಸಂಗಗಳಂತೆ ಸಹಜವಾಗಿ ಇಲ್ಲಿ ದೇವೇಂದ್ರನ ಒಡ್ಡೋಲಗ, ಅಲ್ಲಿ ಅಪ್ಸರೆಯ ನಾಟ್ಯ. ಅಸಹಜ ನಾಟ್ಯದಿಂದ ಶಚೀದೇವಿಯ ಆಗ್ರಹಕ್ಕೆ ಒಳಗಾದ ಆಕೆಗೆ ಭೂಮಿಯಲ್ಲಿ ಜನಿಸುವಂತೆ ಶಪಿಸುತ್ತಾಳೆ. ಮುಂದೆ ಶ್ರೀರಾಮನ ಪಾದ ದರ್ಶನದಿಂದ ಶಾಪವಿಮೋಚನೆಯನ್ನೂ ಸೂಚಿಸುತ್ತಾಳೆ. ಇದು ಶಬರಿಯ ಜನ್ಮಕ್ಕೆ ಕಾರಣವಾದರೆ.  ಇದರಂತೇ  ತನುವೆಂಬ ಗಂಧರ್ವ  ಕನ್ಯೆಯೊಂದಿಗೆ ಜಲಕೇಳಿಯಾಡುವಾಗ ಸ್ಥೂಲ ಶಿರವೆಂಬ ಮುನಿಗೆ ಅವಮಾನ ಮಾಡಿ ಶಾಪಗ್ರಸ್ಥನಾಗಿ ಕಬಂಧನೆಂಬ ದಾನವನಾಗಿ ಹುಟ್ಟುತ್ತಾನೆ. ಕಬಂಧನು ಮದೋನ್ಮತ್ತನಾಗಿ ಸ್ವರ್ಗಲೋಕಕ್ಕೆ ಧಾಳಿ ಮಾಡಿದಾಗ ದೇವೆಂದ್ರನ ವಜ್ರಾಯುಧದ ಅಘಾತದಿಂದ ಶಿರಸ್ಸು ಉದರದೊಳಗೆ ತಳ್ಳಲ್ಪಡುತ್ತದೆ. ಇಲ್ಲಿಯೂ ರಾಮ ಪಾದ  ದರ್ಶನದಿಂದ ಶಾಪವಿಮೋಚನೆಯನ್ನು ದೇವೇಂದ್ರ ಸೂಚಿಸುತ್ತಾನೆ. ಹೀಗೆ ಇಬ್ಬರು ಪತಿತರಾಗಿ ತಮ್ಮ ಶಾಪ ವಿಮೋಚನೆಗಾಗಿ ರಾಮನ ಪಾದ ದರ್ಶನದ ಪ್ರತೀಕ್ಷೆಯಲ್ಲಿರುವುದೇ ಪಾದ ಪ್ರತೀಕ್ಷವಾಗುತ್ತದೆ.
ಛಾಯಾ ಚಿತ್ರ ಕೃಪೆ : ಶ್ರೀ ಉಲ್ಲಾಸ್

            ಮೂಲ ಕಥೆಗೆ ಭಿನ್ನವಾಗಿ ಬಹಳಷ್ಟು ಬದಲಾವಣೆಗಳನ್ನು ಈ ಪ್ರಸಂಗದಲ್ಲಿ ಸೇರಿಸಲಾಗಿದೆ. ಮೂಲದಲ್ಲಿ ನನ್ನ ಅರಿವಿನಂತೆ, ನ್ಯಗ್ರೋಧನೆಂಬ ವ್ಯಾಧನಿಗೆ ಸಂತಾನವಾಗದೆ ಇದ್ದಾಗ ಮತಂಗಮುನಿಗಳು ಪ್ರಸಾದರೂಪವಾಗಿ ನೀಡಿದ ಚೂತ ಫಲದಲ್ಲಿ ನ್ಯಗ್ರೋಧನಿಗೆ ಆಕೆಯ ಪತ್ನಿಯಲ್ಲಿ ಸಂತಾನ ಪ್ರಾಪ್ತಿಯಾಗಿ ಶಬರಿ ಹುಟ್ಟಿಕೊಳ್ಳುತ್ತಾಳೆ. ಆದರೆ ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದು ಕೊಂಡ ಈಕೆ ಮತಂಗರ ಆಶ್ರಮದಲ್ಲೇ ಬೆಳೆಯುತ್ತಾಳೆ. ಆದರೆ ಇಲ್ಲಿ ವ್ಯಾಧನೊಬ್ಬನಿಗೆ ಹೆಣ್ಣು ಮಗುವೊಂದು ಕಾಡಿನಲ್ಲಿ ಸಿಗುತ್ತದೆ. ಆಕೆಗೆ ಶಬರಿ ಎಂದು ನಾಮಕರಣ ಮಾಡಲಾಗುತ್ತದೆ. ಬಲು ಮುಖ್ಯವಾದ ಚೂತ ಫಲ ಪ್ರಸಾದ ಉಲ್ಲೇಖ ಎಲ್ಲೂ ಕಂಡು ಬರುವುದಿಲ್ಲ. ಕಾಡಿನಲ್ಲಿ ಸಿಗುವ ಹೆಣ್ಣು ಮಗುವಿನ ಹಿನ್ನೆಲೆಯನ್ನು ಕತ್ತಲೆಯಲ್ಲಿಟ್ಟಂತೆ  ಭಾಸವಾಗುತ್ತದೆ. ಬಹಳ ಮುಖ್ಯವಾದ ಅಂಶವೊಂದಕ್ಕೆ ಬೆಳಕು ಚೆಲ್ಲುವ ಅಗತ್ಯವಿತ್ತು. ಹೀಗೆ ಒಂದು ಹೆಣ್ಣು ಮಗು ಕಾಡಿನಲ್ಲಿ ಸಿಗುವುದು ಎಂದರೆ ಒಂದು ಅಸಹಜ ಕೊಂಡಿ ಕಳಚಿದಂತೆ.
 
ಛಾಯಾ ಚಿತ್ರ ಕೃಪೆ : ಶ್ರೀ ಉಲ್ಲಾಸ್
ಯಕ್ಷಗಾನದ ಹಲವಾರು ಪ್ರಸಂಗಗಳು ಮೂಲ ಪುರಾಣ ಕಥೆಗಿಂತ ಭಿನ್ನವಾಗಿ ಚಿತ್ರಿಸಲ್ಪಟ್ಟಿವೆ. ಅದರಂತೆ ಪಾದ ಪ್ರತೀಕ್ಷ.  ಯಕ್ಷಗಾನ ಬಯಲಾಟಕ್ಕೆ ಸೂಕ್ತವಾಗುವಂತೆ ಹಲವು ದೃಶ್ಯಗಳನ್ನು ಸಂಯೋಜಿಸಲಾಗಿದೆ. ಹಲವು ಕಲಾವಿದರಿಗೆ ಹೊಂದಿಕೊಂಡು ಈ ದೃಶ್ಯಗಳೂ ಪಾತ್ರಗಳು ಸಂಯೋಜನೆಗೊಂಡದ್ದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಒಟ್ಟು ಯಶಸ್ಸನ್ನು ಪರಿಗಣಿಸುವಾಗ ಅದು ತಪ್ಪೂ ಅಲ್ಲ. ಆದರೆ ಹಲವಾರು ಸನ್ನಿವೇಶಗಳು ಒಂದರೊಡನೊಂದು ಸಮನ್ವಯಸಾಧಿಸುವಲ್ಲಿ ವಿಫಲವಾಗುವುದರಿಂದ ಹಲವಾರು ಸಲ ಪ್ರೇಕ್ಷಕ ಗೊಂದಲದಲ್ಲಿ ಬೀಳುತ್ತಾನೆ. ಹಲವಾರು ಸನ್ನಿವೇಶಗಳು ಒಂದೊಂದು ಆವರಣವನ್ನು ಅಲ್ಪವಿರಾಮ (ಕೋಮ) ವನ್ನು ಎಳೆದು ಮತ್ತೊಂದು ಸನ್ನಿವೇಶಕ್ಕೆ ಪ್ರಸಂಗ ಮುಂದುವರೆಯುತ್ತದೆ.  ಅಂದರೆ ಅದೆಷ್ಟೇ ಪೌರಾಣಿಕ ಮಾಹಿತಿ ಇದ್ದರೂ ಎಲ್ಲಿಂದಲೋ ಸೃಷ್ಟಿಯಾಗುವ ಪಾತ್ರಗಳ ಹಿನ್ನೆಲೆಯನ್ನು ಅರಿಯುವ ಮೊದಲೇ ಆ ಪಾತ್ರದ ಸನ್ನಿವೇಶ ಅಷ್ತರಲ್ಲೇ  ಪೂರ್ಣಗೊಂಡಿರುತ್ತದೆ. ಬಹುಶಃ ಕಾಲ ಮಿತಿಗೆ ಇದನ್ನು ಹೊಂದಿಸುವಲ್ಲಿ ಇದು ಸಂಭವಿಸ್ತುತ್ತದೆ ಎಂದು ಭಾವಿಸಬೇಕು.  ಹಲವು ಕಲಾವಿದರಿಗೋಸ್ಕರ ದೃಶ್ಯಗಳನ್ನು ಸಂಯೋಜಿಸಿದ್ದರೂ ಯಾವುದೇ ಪಾತ್ರ ಯಾವುದೇ ಕಲಾವಿದನಿಗೆ ಮಾತ್ರ ಎಂದು ಮುಡಿಪಾಗುವುದಿಲ್ಲ. ಒಂದು ಪಾತ್ರವನ್ನು ಪರ್ಯಾಯವಾಗಿ ಹಲವು ಕಲಾವಿದರೂ ನಿರ್ವಹಿಸುವಂತೆ  ಪ್ರಸಂಗ ಸೃಷ್ಟಿಯಾಗಿರುವುದು ವೈಶಿಷ್ಟ್ಯ ಎನ್ನಬೇಕು. ಆದರೂ ಕಬಂಧನ ಪಾತ್ರ ಮತ್ತು ವೃದ್ದೆ ಶಬರಿಯ ಪಾತ್ರ ಈ ಪ್ರಸ್ತುತ ಕಲಾವಿದರಲ್ಲದೇ ಬೇರೆಯವರು ನಿರ್ವಹಿಸುವುದನ್ನು ಕಲ್ಪಿಸುವುದು ಕಷ್ಟವಾಗುತ್ತದೆ. ಅಷ್ಟು ಅದ್ಭುತವಾಗಿ ಈ ಪಾತ್ರ ಸೃಷ್ಟಿಯಾಗಿದೆ ಎನ್ನಬಹುದು.

            ಇಲ್ಲಿ ವೈಯಕ್ತಿಕವಾಗಿ ಪ್ರತಿಯೊಬ್ಬ ಕಲಾವಿದರೂ ತಮ್ಮ ಸಾಮಾರ್ಥ್ಯಕ್ಕೆ ಅನುಗುಣವಾಗಿ ನಿರ್ವಹಿಸುತ್ತಾರೆ. ಪಾತ್ರಕ್ಕೆ ಪರಿಪೂರ್ಣತೆಯನ್ನು ಒದಗಿಸುವ ಪ್ರಯತ್ನ ಪ್ರತಿಯೊಬ್ಬರಲ್ಲಿ ಕಂಡರೂ ಇಲ್ಲಿ ಒಟ್ಟು ತಂಡವಾಗಿ ನಿರ್ವಹಣೆ ಅಂದರೆ ಟೀಮ್ ಸ್ಪಿರಿಟ್   ಎನ್ನುವುದು ಕಂಡು ಬರುವುದಿಲ್ಲ. ಇದನ್ನು ಒಂದು ದಿನದ ನಿರ್ವಹಣೆಯಲ್ಲಿ ಹೇಳೂವುದು ಕಷ್ಟವಾದರೂ ಪ್ರಸ್ತುತ ಪ್ರದರ್ಶನದಲ್ಲಿ ಇದರ ಕೊರತೆ ಬಹಳಷ್ಟು ಸಲ ಕಂಡುಬಂದು ಯಾಂತ್ರಿಕವಾದ ಪ್ರಸಂಗದಂತೆ ಭಾಸವಾಯಿತು. ಅನಗತ್ಯ ಹಾಸ್ಯ ಲಂಬಿಸುವುದು, ಹಾಸ್ಯ ಬಹಳಷ್ಟು ಸಲ ಲೌಕಿಕ ವಿಚಾರಗಳನ್ನೇ ಆಧರಿಸುವುದು ಯಕ್ಷಗಾನವನ್ನು ನಾಟಕದ ಹಂತಕ್ಕೆ ತಲುಪಿಸುತ್ತದೆ. ಕೆಲವೊಂದೆಡೆ ಬಿಟ್ಟರೆ  ಹಾಸ್ಯವು ಪ್ರಸಂಗ ಗಾಂಭೀರ್ಯವನ್ನು ಪರಿಗಣಿಸಿದಲ್ಲಿ ಅದು ಅತಿರೇಕ ಅಂತ ಅನ್ನಿಸುತ್ತದೆ.  ಯಾಕೆಂದರೆ ಉಜ್ವಲವಾದ ಅಧ್ಯಾತ್ಮ ಜೀವನದ ದರ್ಶನದಂತಿರುವ ಈ ಪ್ರಸಂಗದಲ್ಲಿ ಅನಗತ್ಯ ಹಾಸ್ಯದ  ಸೃಷ್ಟಿ ಒಟ್ಟು ಪರಿಣಾಮವನ್ನು ಉಂಟುಮಾಡುವಲ್ಲಿ ತೊಂದರೆಯನ್ನು ಕೊಡುತ್ತದೆ. ಅಪರೂಪದ ಪ್ರಸಂಗ ರಂಗದ ಮೇಲೆ ತಂದ ಕಾರ್ಯ ಶ್ಲಾಘನೀಯ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಯೋಗಿಸುವ ನಿಟ್ಟಿನಲ್ಲಿ ಸಾಗಬೇಕು.

                       


Sunday, March 15, 2015

ಮಾಡು ಸಿಕ್ಕದಲ್ಲ...?


ಇತ್ತೀಚೆಗೆ ಮಿತ್ರರ ಸಲುವಾಗಿ ಯಕ್ಷಗಾನ ಬಯಲಾಟಕ್ಕೆ ಸಭಾಭವನ ಹುಡುಕುವ ಅನಿವಾರ್ಯ ಅವಕಾಶ ಒದಗಿಬಂತು. ಒಂದ ಅರ್ಥದಲ್ಲಿ ಇದು ಅನಿವಾರ್ಯವೂ ಹೌದು. ಯಕ್ಷಗಾನದ ಕಾರ್ಯಕ್ರಮವಲ್ಲವೇ? ಅದನ್ನು ಒಂದು ಸದವಕಾಶ, ಯೋಗ ಎಂದು ತಿಳಿಯಬೇಕು. ಆ ನಂತರ ಈ ಅವಕಾಶ ಒಂದು ಯೋಗವೆಂಬಂತೆ ಕಂಡಿತಾದರೂ ಅದು ಯಾವ ರೀತಿಯ ಯೋಗ ಎಂಬುದಾಗಿ ಯೋಚಿಸುವಂತೆ ಆದದ್ದು ಮಾತ್ರ ವಿಪರ್ಯಾಸ ಎನ್ನಬೇಕು.

ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರ ಅದರ ಪಕ್ಕದಲ್ಲೇ ಇರುವ ಪುರಭವನ ಮತ್ತದರ ಜತೆಗಿರುವ ಇತರ ಸಭಾಭವನಗಳು ದುರಸ್ತಿಗಾಗಿ ಕದಮುಚ್ಚಿಯಾಗಿತ್ತು. ಇದರಿಂದ ಸಭಾಭವನ ಸಮಯಕ್ಕೆ ಲಭ್ಯವಿಲ್ಲವಾಗಿತ್ತು. ರಾಜಾಜಿನಗರದ ರಾಜ್ ಕುಮಾರ್ ಕಲಾಕ್ಷೇತ್ರ ಈ ಮೊದಲೇ ದುರಸ್ತಿಗಾಗಿ ಮುಚ್ಚಿತ್ತು. ಸಾಮಾನ್ಯವಾಗಿ ಯಕ್ಷಗಾನಕ್ಕೆ ಲಭ್ಯವಿದ್ದ ಭವನಗಳು ಹೀಗೆ ಎಕಾ ಎಕಿ ಮುಚ್ಚಿದ ಬಾಗಿಲನ್ನು ತೋರಿಸಿದಲ್ಲಿ ನಿಗದಿ ಮಾಡಿದ ಕಾರ್ಯಕ್ರಮ ನಿರ್ವಹಿಸ ಬೇಕಾದರೆ ಹೆಗಲಲ್ಲಿ ಮಣಭಾರದ ಹೊರೆಯನ್ನು ಹೊತ್ತ ಅನುಭವ. ಹೆಗಲ ಮೇಲೆ ಹೊರೆ ಇದ್ದಾಗ ಇನ್ನೊಬ್ಬನ ಹೆಗಲು ಬಯಸುವುದು ಸಹಜ. ಹಾಗಾಗಿ ನನ್ನ ಒಂದು ಭುಜ ಆ ಭಾರವನ್ನು ಹೊರುವುದು ಅನಿವಾರ್ಯವಾಗಿತ್ತು. ಮಿತ್ರನ ಮನವಿಯಂತೆ ಒಂದಷ್ಟು ನಾನು ಸುತ್ತಾಡಿದೆ. ಅದು ವಿಚಿತ್ರ ಅನುಭವವನ್ನು ಒದಗಿಸಿಬಿಟ್ಟಿತು.
ಎಲ್ಲದರಲ್ಲೂ ವಿಭಿನ್ನ ಅಭಿರುಚಿಯನ್ನು ತೋರಿಸುವ ನಾವು, ಕಲೆಯಲ್ಲೂ ಅದನ್ನು ತೋರಿಸುತ್ತೇವೆ. ಬೆಂಗಳೂರಿನಂತಹ ವಿಬ್ಭಿನ್ನ ಸಾಂಸ್ಕೃತಿಕ ಅಭಿರುಚಿಯ ತಾಣದಲ್ಲಿ ಸಭಾಭವನ ಸಿಗದಿರಲು ಸಾಧ್ಯವಿಲ್ಲ ಎಂಬುದೇ ನನ್ನೆಣಿಕೆಯಾಗಿತ್ತು. ಆದರೆ ಹೊಳೆಗೆ ಹಾರಿದ ಮೇಲೆ ಸುಳಿಯ ಅನುಭವವಾದಂತೆ ಸಮಸ್ಯೆಯ ನಿಜವಾದ ಅನುಭವ ಆಗತೊಡಗಿತು. ಅದರಲ್ಲೂ ಒಂದು ಸಭಾಭವನ ಕಛೇರಿಯಲ್ಲಿ ಆದ ಅನುಭವ ಬಹಳ ವಿಚಿತ್ರವೂ ಗಾಬರಿಯೂ ತರಿಸುವಂತಹುದಾಗಿತ್ತು. ಅಲ್ಲಿ ಹೋದಾಗ ಅಧ್ಯಕ್ಷ ಮಹಿಳಾ ಮಣಿ ಒಬ್ಬರು ಇಲ್ಲದೇ ಕಾದು ಕಾದು ಅವರ ಸಮಯ ಹೊಂದಿಸಿ ಹೇಗೋ ಬೇಟಿಯಾಯಿತು. ಸಭಾಭವನದ ಬೇಡಿಕೆ ಇಟ್ಟಾಗ ಬಹಳ ಆಕೆಗೆ ಸಂತಸವಾಯಿತು. ದಿನಾಂಕ ಎಲ್ಲ ಕೇಳಿ ಡೈರಿ ನೋಡಿ ಕೊನೆಯಲ್ಲಿ ಕೇಳಿದರು ಯಾವ ಕಾರ್ಯಕ್ರಮಕ್ಕೆ?  ಎಂದು  ’ಯಕ್ಷಗಾನ’ ಎಂದೊಡನೆ ಸನ್ನಿವೇಶವೇ ಬದಲಾದ ಅನುಭವ.  ’ಯಕ್ಷಗಾನಕ್ಕೆ ಇಲ್ಲ. ಕ್ಷಮಿಸಿ’  ಹೌಹಾರಿದಂತೆ ಹೇಳಿ ಮುಗಿಸಿದಳು. ಅಂಗವೈಕಲ್ಯವೋ ಕುಜದೋಷವೋ ಇದ್ದ ಹುಡುಗಿಗೆ ವಿವಾಹ ಸಂಭಂಧವನ್ನು  ಕೇಳಿದೆನೋ ಎಂಬ ಭಾವದಲ್ಲಿ ಆಕೆ ಹೇಳಿದಂತಾಯಿತು.  ಜತೆಗೆ ಕ್ಷಮಿಸಿ.... ಈ ಕ್ಷಮಾ ಯಾಚನೆಯ ಔಚಿತ್ಯ ಯಾಕೋ ಎಂದುಕೊಂಡೆ.
ಬಹಳಷ್ಟು ಕಡೆಗಳಲ್ಲಿ ಇದೇ ಅನುಭವ. ರೂಪ ಬೇರೆಯಾದರೂ ಒಳಗಿನ ಭಾವ ಒಂದೇ. ಸಭಾಭವನ ಯಕ್ಷಗಾನಕ್ಕೆ ಇಲ್ಲ. ಯಕ್ಷಗಾನದ ಮೇಲಿರಿಸಿದ ಅಭಿಮಾನಕ್ಕೆ ಈ ರೀತಿಯ ಮೌಲ್ಯಮಾಪನವಾದೀತು ಎಂಬ ನಿರೀಕ್ಷೆ ನನಗಿರಲಿಲ್ಲ. ಹಾಡಿ ಹೊಗಳುವುದಕ್ಕೆ ಸಾವಿರವಿರುತ್ತದೆ ಆದರೆ ವಾಸ್ತವದ ಚಿತ್ರಣ ವಿಭಿನ್ನವಾಗಿರುತ್ತದೆ. ಬಹಳಷ್ಟು ಕಡೆಗಳಲ್ಲಿ ಕೊಟ್ಟ ಕಾರಣ ಸಾಮಾನ್ಯ ಒಂದೇ....ಅದು ಮೇಲೆ ನೋಡಿ ಉಗುಳಿದಂತೆ.
ಇಲ್ಲಿ ಯಾವ ವ್ಯವಸ್ಥೆಯತ್ತ ನೋಟ ಹರಿಸಬೇಕೆಂಬುದೇ ತಿಳಿಯದಂತಾಯಿತು. ನಮ್ಮಲ್ಲಿ ಎಲ್ಲವೂ ಇದ್ದ ಸುಸಂಸ್ಕೃತ ಜೀವನವೇ ಪ್ರಶ್ನಾರ್ಹವಾದಾಗ ಯಾವುದರತ್ತ ಬೆರಳು ತೋರಬೇಕು? ಇನ್ನಾದರೂ ಎಚ್ಚತ್ತುಕೊಳ್ಳಬೇಕು. ಕಾರಣ ಇಷ್ಟೆ, ಒಂದು ಕಡೆ ಶಾಲಾವಠಾರದಲ್ಲಿನ ರಂಗಮಂಟಪದಲ್ಲಿ ಮೊದಲೊಮ್ಮೆ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮರುದಿನ ಶಾಲೆಯ ಶೌಚಾಲಯ ಮತ್ತು ಪರಿಸರ ಸಿಗರೇಟು ತುಂಡು, ಗುಟ್ಕಾವರ್ಣಗಳಿಂದ ತುಂಬಿ ಗಬ್ಬೆದ್ದು ನಾರುವಂತಾಗಿತ್ತು. ಅಷ್ಟು ಮಾತ್ರವಲ್ಲ, ಶಾಲೆಯ ಚಿಣ್ಣರಿಗೆ ಎಂದು ಕಾಣದ ಹೆಂಡದ ಬಾಟಲಿ ಕಂಡರೆ ಅದರ ಪರಿಣಾಮವೇನಾಗಬಹುದು. ಒಂದು ವೇಳೆ ನಮ್ಮ ಮಕ್ಕಳಿಗೆ ಇಂತಹ ಸಂದರ್ಭ ಎದುರಾದರೆ ನಾವೆಷ್ಟು ಶಾಲೆಯ ಆಢಳಿದ ಬಗ್ಗೆ ಪ್ರತಿಭಟಿಸುವುದಿಲ್ಲ?  ಯಾರೋ ಕೆಲವರ ಮತಿಗೆಟ್ಟ ವ್ಯವಹಾರಕ್ಕೆ ಯಕ್ಷಗಾನ ಸಮುದಾಯವೇ ಮೌಲ್ಯ ಮಾಮನಕ್ಕೆ ತುತ್ತಾದದ್ದು ಖೇದನೀಯ ವಿಚಾರವಾಗುತ್ತದೆ.
ದುಶ್ಚಟಗಳು ದುರ್ವ್ಯಸನಗಳು ಸ್ವತಃ ಆತನನ್ನು ಬಾಧಿಸಿದರೆ ಅದು ಆತನ ವಿಧಿ. ಆದರೆ ಅದು ಪರರಿಗೆ ಬಾಧೆಯಾದರೆ? ಪುಟ್ಟ ಮಗುವನ್ನು ಮುದ್ದಿನಿಂದ ಎತ್ತಿಕೊಂಡು ಬಾಯಿಯಲ್ಲಿ ಸಿಗರೇಟು ಇರಿಸಿ ಅದರ ಹೊಗೆಯನ್ನು ಆ ಮಗುವಿನ ಮುಖಕ್ಕೆ ರಾಚಿದರೆ ಪರಿಣಾಮ ಅದೇ ಮಗು ಅನುಭವಿಸುವಂತಾಗುತ್ತದೆ. ಇದು ಹಾಗೆ. ಮುದ್ದಿನಿಂದ ತಮ್ಮ ಬಾಧೆ ಇನ್ನೊಬ್ಬರ ಹೆಗಲಿಗೇರಿಸಿದಂತೆ.  ಇಲ್ಲಿ ಯಾರದೋ ದುರ್ವ್ಯಸನದ ಬಾಧೆ ಎಲ್ಲರಿಗೂ ಅಂಟಿಸಿದಂತೆ.
 ಇನ್ನು ಕಾರ್ಯಕ್ರಮವನ್ನು  ನಡೆಸುವಾಗ ಜತೆಯಲ್ಲಿ ಇನ್ನೂ ಒಂದು ಫಲಕ ಹಾಕುವ ಅನಿವಾರ್ಯತೆ ಒದಗಿಬರುತ್ತದೆ. ’ ಮದ್ಯ ಮಾಂಸ ಧೂಮ ಪಾನ ಮುಂತಾದವುಗಳು ನಿಷೇಧಿಸಲ್ಪಟ್ಟಿದೆ’. ಇದು ಪರೋಕ್ಷವಾಗಿ ನಮ್ಮ ಸ್ಥಾನವನ್ನು ನಾವೇ ಗುರುತಿಸಿದಂತೆ. ಇವುಗಳನ್ನೆಲ್ಲ ನಿಯಮ ನಿಬಂಧನೆ ಒದಗಿಸಿ ನಿಯಂತ್ರಿಸುವ ಸ್ಥಿತಿಗೆ ನಾವು ತಲುಪಿದ್ದೇವೆ ಎಂದರೆ ಯಾವುದನ್ನು ಬೆರಳೆತ್ತಿ ತೋರುವುದು? ವಿದ್ಯಾರ್ಥಿಗಳ ಹಾಸ್ಟೆಲ್ ಒಂದರಲ್ಲಿ ಹೊರಗೆ ಒಂದು ನಿಯಮಾವಳಿಯ ಫಲಕ ತೂಗು ಹಾಕಿತ್ತು. ಅದರಲ್ಲಿದ್ದ ಒಂದು ನಿಯಮ, ’ ಮದ್ಯ ಮಾಂಸ ಧೂಮ ಪಾನ ಮುಂತಾದವುಗಳು ನಿಷೇಧಿಸಲ್ಪಟ್ಟಿದೆ’. ಇದನ್ನು ಕಂಡು ಆವಾಗ ಅನ್ನಿಸಿತ್ತು ನಮ್ಮ ವಿದ್ಯಾರ್ಥಿಗಳ ಮೌಲ್ಯವನ್ನೇ ಈ ನಿಯಮ ಪ್ರಶ್ನಿಸಿದಂತೆ ಅಲ್ಲವೇ? ವಿದ್ಯಾರ್ಥಿ ನಿಲಯದಲ್ಲಿ ನಿಯಮ ಮಾಡಿ ನಿಷೇಧಿಸುವ ಮಟ್ಟಿಗೆ ನಮ್ಮ ವಿದ್ಯಾರ್ಥಿಗಳ ಜೀವನ ಮೌಲ್ಯ ತಗ್ಗಿದೆ ಎಂದರೆ ಅದು ನಿಜ ಅರ್ಥದಲ್ಲಿ ಮೇಲೆ ನೋಡಿ ಉಗುಳಿದ ಹಾಗೆ. ಇಂತಹ ವಿಚಾರ ಸೂಕ್ಷ್ಮವನ್ನು ತಿಳಿದುಕೊಳ್ಳುವ ಜ್ಞಾನ ನಮಗಿಲ್ಲವಾಗಿದೆ. ನಮ್ಮ ಮನೆಯ ತಿಜೋರಿಗೆ ನಾವು ಬೀಗ ಹಾಕುವಾಗ ನಮ್ಮ ಮನೆ ಮಂದಿಯನ್ನೂ ನಾವು ಅನುಮಾನಿಸಿದಂತೆ ಅಲ್ಲವೇ ? ಬಹಳ ಸೂಕ್ಷ್ಮ ವಿಚಾರವಿದು.  
ಎದುರು ದೊಡ್ಡದಾಗಿ ನಿಯಮಗಳ ನಿಷೇಧಗಳ ಫಲಕವನ್ನು ಹಾಕಿದರೂ,  ಒಳಗೆ ವೇಷ ರೈಸ ಬೇಕು ಎಂದು ಮದಿರೆಯನ್ನು  ನಾವೇ ಒದಗಿಸಿ ಅತಿಥಿ ಸತ್ಕಾರ ಮಾಡಿಬಿಡುತ್ತೇವೆ. ಅದೇನೋ ಕಲಾವಿದರನ್ನು ಸತ್ಕರಿಸುವಲ್ಲಿ ಇದೆಲ್ಲ ಅನಿವಾರ್ಯ ಅಂಗಗಳಾಗುವುದು ದುರಂತ ಎನ್ನಬೇಕು.  ಎಂತಹ ವಿಪರ್ಯಾಸ?  ಊಟ ವಸನಕ್ಕಿಂತ ಅದುವೇ ಪ್ರಧಾನವಾದರೆ,  ಅದರ ಪರಿಣಾಮ ಮರುದಿನ ಸುತ್ತಲ ಪರಿಸರದಲ್ಲಿ ಆರಂಭವಾಗಿ ಈಗ ಅದು ಸಂಪೂರ್ಣ  ಜಗತ್ತನ್ನೇ ಅವರಿಸಿದೆ. ಈಕಾರಣದಿಂದ ಯಕ್ಷಗಾನಕ್ಕೆ ಸಭಾಭವನವೇ ಲಭ್ಯವಿಲ್ಲವಾಗುವುದು ಒಂದು ಅಪರಾಧಿ ಪ್ರಜ್ಞೆಯನ್ನಾದರೂ ನಮ್ಮಲ್ಲಿ ಬೆಳೆಸುವುದಿಲ್ಲವಲ್ಲ ಎಂಬುದು ಖೇದನೀಯ. ದುರ್ವ್ಯಸನ ಕೇವಲ ಯಕ್ಷಗಾನಕ್ಕಷ್ಟೇ ಸೀಮಿತವಲ್ಲ. ಆದರೂ ಪ್ರಹಾರದ ಪೆಟ್ಟು ಬೀಳುತ್ತಿರುವುದು ಇಲ್ಲಿಗೇ ಅಂತ ಅನ್ನಿಸುತ್ತದೆ. ಯಾವ ದುರಂತದತ್ತ ನಮ್ಮ ಮುಖ ತಿರುಗಿದೆ? ದುಶ್ಚಟಗಳಿಗೆ ಯಾರೂ ಹೊರತಲ್ಲ ಎಂದು ಉಡಾಫೆಯಲ್ಲಿ ಪ್ರತಿಕ್ರಿಯಿಸಿದರೂ ಅವುಗಳ ಪರಿಣಾಮವನ್ನು ತಿಳಿಯುವ ಸಾಮಾನ್ಯ ಜ್ಞಾನವಾದರೂ ಇರಬೇಕು. ಇದನ್ನು ಮಾನವೀಯತೆ ಎಂದು ಗುರುತಿಸಬೇಕು. ಹಾಗಾಗಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಎಲ್ಲವನ್ನೂ ನಿಯಮದಿಂದ ನಿಬಂಧನೆಯಿಂದ ಕಟ್ಟಿಹಾಕುವುದು ಸಾಧ್ಯವಿಲ್ಲ. ನಮ್ಮ ತನವನ್ನು ನಾವು ಗೌರವಿಸಿ ಜತನದಿಂದ ರಕ್ಷಿಸಿಕೊಳ್ಳಬೇಕು. ಆಗ ನಮ್ಮ ಜತೆಗೆ ನಮ್ಮ ಪರಿಸರವೂ ಹಿತಕರವಾಗುತ್ತದೆ. ಇಲ್ಲವಾದರೆ ನಾವು ಪರಿತಪಿಸಬೇಕು ಮಾಡು ಸಿಕ್ಕದಲ್ಲ...?

ಯಕ್ಷಗಾನಂ ಗೆಲ್ಗೆ

Tuesday, February 3, 2015

ಶಬರೀ ಮೋಕ್ಷ (ಯದ್ಭಾವಂ ತದ್ಭವತಿ)


ಯಕ್ಷಗಾನದ ಸರಳವಾದ ಪ್ರಬುದ್ದ ಮನರಂಜನೆಯ ರೂಪವೇ ತಾಳಮದ್ದಲೆ.ಯಕ್ಷಗಾನ ತಾಳಮದ್ದಲೆ ಪ್ರಸಿದ್ದವಾಗಿರುವುದು ವೈವಿಧ್ಯಮಯ ಅರ್ಥಗಾರಿಕೆಗೆ.  ಇದಕ್ಕೆ ಪೂರಕವಾಗಿ ಹಿಮ್ಮೇಳ ನಿರ್ವಹಿಸುವುದು ಸಾಮಾನ್ಯ. ಕೇವಲ ಮಾತುಗಾಗಿರಿಕೆಯಲ್ಲಿ ಪಾತ್ರವನ್ನು ಸನ್ನಿವೇಶವನ್ನು ಕಟ್ಟಿಕೊಡುತ್ತ ಕಥಾಪ್ರಸಂಗವನ್ನು ಬೆಳೆಸುತ್ತಾ ಹೋಗುವುದು ಯಕ್ಷಗಾನ ಕಲೆಯ ವೈವಿಧ್ಯತೆಗೆ ಸಾಕ್ಷಿಯಗುತ್ತದೆ. ಹಲವು ಸಲ ಅರ್ಥಗಾರಿಕೆಯನ್ನು ಗುರಿಯಾಗಿಸಿಕೊಂಡು ಪ್ರಸಂಗ ನಿರ್ಣಯಿಸುವುದುಂಟು. ಕೇವಲ ಅರ್ಥಗಾರಿಕೆ ವಾಕ್ಚಾತುರ್ಯ ವಾಕ್ಸಮರ ಮತ್ತು ಗಾನ ಮಾಧುರ್ಯ ಈ ಆವರಣದೊಳಗೇ ತಾಳಮದ್ದಲೆಯನ್ನಿರಿಸುವುದು ಯಕ್ಷಗಾನದ ಪರಿಪೂರ್ಣತೆಯನ್ನು ಮರೆಮಾಡಿದಂತೆ. ಜಿದ್ದಾ ಜಿದ್ದಿನ ಮಾತುಗಾರಿಕೆಯ ನಿರೀಕ್ಷೆಯಲ್ಲೇ ತಾಳ ಮದ್ದಲೆಯನ್ನು ಕಾಣುವುದರಿಂದ ಹಲವಾರು ಪ್ರಸಂಗಗಳು ಮತ್ತದರ ಮೂಲ ಆಶಯಗಳು ಮರೆಯಾಗಿಬಿಡುತ್ತವೆ. ಇದರಿಂದ ಪಾಂಡಿತ್ಯದ  ವಾಕ್ಚಾತುರ್ಯ ವಾಕ್ಸಮರವಾಗಿ ಬದಲಾಗಿ ವೈಯಕ್ತಿಕ ಹಿತಾಸಕ್ತಿಯೇ ಬೆಳೆಯುತ್ತದೆ. ಒಬ್ಬರನ್ನೊಬ್ಬರು ಸೋಲಿಸುವುದರಲ್ಲೇ ತಾಳಮದ್ದಲೆಯ ಯಶಸ್ಸು ನಿರ್ಣಯಿಸಲ್ಪಡುತ್ತದೆ. ಇದೊಂದು ರೀತಿ ತಾಳಮದ್ದಲೆ ಮಾತ್ರವಲ್ಲ ಯಕ್ಷಗಾನದ ಸಂಪತ್ತನ್ನು ಬಂಧನದಲ್ಲಿರಿಸಿ ಶಿಕ್ಷಿಸಿದಂತೆ. ಹೀಗಾಗಿ ಒಂದು ತಾಳಮದ್ದಲೆಯ ಆಶಯ ಸಂಪೂರ್ಣವಾಗಿ ನೆರವೇರಬೇಕಾದರೆ ಅದನ್ನು ಅನುಭವಿಸುವ ನಮ್ಮ ದೃಷ್ಟಿಕೋನ ಬದಲಾಗಬೇಕು.  ಕೇವಲ ಮನರಂಜನೆಯ ಉದ್ದೇಶವಷ್ಟೇ ಈಡೇರಿದರೆ ಸಾಲದು. ಅದರ ಪ್ರತಿಯೋಂದು ಅಂಶವನ್ನು ಅನುಭವಿಸುವ ಮನೋಭಾವ ನಮ್ಮದಾಗಬೇಕು. ಪಾತ್ರ ಪ್ರಸ್ತುತಿಯಲ್ಲೂ ಆ ಪಾತ್ರದ ಮೂಲ ಆಶಯವೇನು,  ಜತೆಗೆ ಸನ್ನಿವೇಶಗಳು ಪ್ರತಿಪಾದಿಸುವ ತತ್ವಗಳೇನು ಇದನ್ನು ಕಾಣುವಂತಾಗಬೇಕು. ಇಲ್ಲವಾದರೆ ತಾಳ ಮದ್ದಲೆಯ ಪಾಂಡಿತ್ಯ ಪೂರ್ಣ ಅರ್ಥಗಾರಿಕೆಗೆ ಮನ್ನಣೆಯೇ ಇಲ್ಲದಂತಾಗುತ್ತದೆ. ಕೇವಲ ಮನರಂಜನೆಯನ್ನು ಪರಿಗಣಿಸಿ ಇಂದು  ಹಲವಾರು ಸುಂದರ ಪ್ರಸಂಗಗಳು ರಂಗವನ್ನೇರುವುದೇ ಇಲ್ಲ. ಅವುಗಳಲ್ಲಿ ಒಂದು ಶಬರಿ ಮೋಕ್ಷ.

ಸೀತಾಪಹಾರ ಪ್ರಸಂಗದ ಕೊನೆಯ ಭಾಗದ ಕೆಲವು ಪದಗಳಲ್ಲೇ ಶಬರೀ ಮೋಕ್ಷ ಚಿತ್ರಿತವಾಗಿದೆ. ಇದನ್ನು ಕಂಡರೆ ರಾಮಾವತಾರದ ಮೂಲ ತತ್ವದ ಪೂರ್ಣ ದರ್ಶನ ಇಲ್ಲಿ ಸಾಧ್ಯವಾಗುತ್ತದೆ. ಈ ಪ್ರಸಂಗವನ್ನು ಈ ರೀತಿಯ ಒಂದು ದೃಷ್ಟಿಕೋನದಲ್ಲಿ ಅನುಭವಿಸುವ ಪ್ರಯತ್ನವಿದು. ಸಾಮಾನ್ಯವಾಗಿ ಹೃದಯ ಸ್ಪರ್ಶೀ ಘಟನೆಗಳು ರಾಮಾಯಣದ ಅದ್ಯಂತ ಕಂಡುಬರುತ್ತವೆ. ಭಾವನಾತ್ಮಕವಾಗಿ ಚಿಂತಿಸುವಂತೆ ಮಾಡುವ ಈ ಸನ್ನಿವೇಶಗಳು ವಿಪರ್ಯಾಸದ ವಿಚಿತ್ರದರ್ಶನವನ್ನು ತೋರಿಸುತ್ತದೆ. ’ಎಲ್ಲವೂ ಸರಿ...... ಆದರೆ?’  ಎಂಬ ಪ್ರಶ್ನಾರ್ಥಕದ ಅಂಕಿತವನ್ನು ಪ್ರತೀ ಸನ್ನಿವೇಶಗಳಲ್ಲಿ ಬಿಂಬಿಸುವಂತೆ ಭಾಸವಾಗುತ್ತದೆ. ಪಟ್ಟಾಭಿಷೇಕದಲ್ಲಿ ಮಂಥರೆಯ ಪ್ರಚೋದನೆಯೊಂದಿಗೆ ಒಂದೊಂದೇ ಘಟನೆಗಳು ಪೂರ್ವ ನಿಯೋಜನೆಯ ದಾಳಗಳಿಗೆ ಸಿಲುಕುತ್ತಾ ಸಾಗುತ್ತದೆ. ಇಲ್ಲಿ ಬರುವ ಪಾದುಕಾ ಪ್ರದಾನವಾಗಬಹುದು ಅಥವಾ ಪಂಚವಟಿಯ ಘಟನೆಗಳು, ಎಲ್ಲವೂ ಹೃದಯ ಸ್ಪರ್ಶಿಯಾಗಿ ಚಿಂತನೆಯ ಬೀಜಗಳನ್ನು ಬಿತ್ತುತ್ತಾ ಸಾಗುತ್ತದೆ. ಅದರಂತೇ  ಬರುವ ಪಾತ್ರಗಳೂ  ಭಾತೃ ಪ್ರೇಮದ ಪರಾಕಾಷ್ಠೆಯನ್ನು ಮೆರೆಯುವ ಭರತ, ಅಣ್ಣನಲ್ಲೇ ತಂದೆಯನ್ನು ಕಾಣುವ ಲಕ್ಷ್ಮಣ, ಸ್ವಾಮಿ ನಿಷ್ಠೆಯ ಪ್ರತೀಕ ಹನುಮ ಪ್ರತಿಯೊಂದೂ ಭಾವನಾತ್ಮಕವಾಗಿ ಹೃದಯಸ್ಪರ್ಶೀ ವ್ಯಕ್ತಿತ್ವವನ್ನು ತೋರಿಸುತ್ತದೆ. ಇದೆಲ್ಲದರ ಜತೆಗೆ ನಮ್ಮ ಹೃದಯವನ್ನೇ ಕಲುಕುವ ಒಂದು ಪಾತ್ರವಿದೆ ಅದು ಶಬರಿ. ಕಾಯುವಿಕೆ ಅನ್ವರ್ಥವಾಗಿ ಬಳಕೆಯಾಗುವ ವ್ಯಕ್ತಿತ್ವವಿದು. ಬದುಕಿನಾದ್ಯಂತ ರಾಮ ದರ್ಶನಕ್ಕೆ ಕಾದು ಕುಳಿತ ಶಬರಿ ಕೊನೆಗೆ ರಾಮ ದರ್ಶನವಾಗುವಾಗ  ಪ್ರಾಕೃತಿಕ ಕಣ್ಣಿನಿಂದ ರಾಮನನ್ನು ಕಾಣುವಲ್ಲಿ ಸೋತರೂ ಅಂತರಂಗದ ಕಣ್ಣಿನಿಂದ ರಾಮನ ದರ್ಶನವನ್ನು ಮಾಡಿ ಪುನೀತಳಾಗಿಬಿಡುತ್ತಾಳೆ. ಯಕ್ಷಗಾನದಲ್ಲಿ ಈ ಪಾತ್ರಚಿತ್ರಣ ಬಹಳ ಹೃದಯಂಗಮಯವಾಗಿದೆ. ಯಕ್ಷವಾಲ್ಮೀಕಿ ಪಾರ್ತಿಸುಬ್ಬನಿಂದ ರಚಿಸಲ್ಪಟ್ಟ ಈ ಪ್ರಸಂಗದ ಪದಗಳೂ ಸಹ ಭಾವನಾತ್ಮಕ ಸಂವೇದನೆಯನ್ನುಂಟುಮಾಡುತ್ತಾ ಕಥಾನಕದ ನೈಜ ಚಿತ್ರಣವನ್ನು ತೋರಿಸುತ್ತದೆ.

ಶಬರೀ ಮೋಕ್ಷ ಆರಂಭವಾಗುವುದು ಸೀತಾಪಹಾರ ಪ್ರಸಂಗದ ಅಂತ್ಯದಲ್ಲಿ. ಮಾಯಾ ಮೃಗವನ್ನು ಬೆಂಬತ್ತಿದ ರಾಮ ಲಕ್ಷಣನ ಜತೆಯಾಗಿ ಪರ್ಣಕುಟೀರದತ್ತ ಮರಳುತ್ತಾನೆ..
ದುರುಳಂ ಮಾಯದಿ ಸೀತಾ
ತರುಣಿಯನಪಹರಿಸುತೊಡನೆ ಗಗನಾಂತರದೊಳ್ |
ಶರಧಿಯ ದಾಂಟುತ ಲಂಕಾ
ಪುರಕಯ್ದಲು ಲಕ್ಷ್ಮಣ ಬಂದಗ್ರಜಗೆಂದಂ ||

ಮೃಗವ ಕೊಂದಾ ದಶರಥಾತ್ಮಜರು ಬದಲೊಂದು
ಮೃಗವ ನಿರ್ಮಿಸಿಕೊಂಡು ಜಾನಕಿಗೆ ಕೊಡಲೆಂದು
ಮಿಗೆ ವಹಿಲದಿಂ ಬಂದು ಪರ್ಣಶಾಲೆಯಲಿ ನೋಡಿದರೆ ಸತಿಯಿಲ್ಲದಿರಲು |
ಹಗಲು ಕತ್ತಲೆಯಾಯ್ತು ಸಿಡಿಲೆರಗಿದಂತೆ ನಾ
ಲಗೆ ಸೆಳೆದುದೆದೆಯಾರಿ ಲಕ್ಷ್ಮಣಂ ನಡುಗಿ ಕೈ
ಮುಗಿದು ನಿಂದಿರೆ ಸೀತೆಯೇನಾದಳೆಂದು ಚಿಂತಿಸುತನುಜನೊಡನೆಂದನು ||

ತವಕದಿಂದ ಸೀತೆಗಾಗಿ ಮಾಯಾಮೃಗವನ್ನು ಬೆಂಬತ್ತಿ ಬಂದ ರಾಮ. ಆ ಬಂಗಾರವರ್ಣದ ಮೃಗವದು ಮಾಯಾವಿಗಳ ತಂತ್ರವೆಂದು ತಿಳಿಯದವನೇನಲ್ಲ. ಆದರೂ ಬೆನ್ನಟ್ಟಿ ಬರುತ್ತಾನೆ. ಇದಕ್ಕೆ ಬಹಳ ಸುಂದರವಾದ ವಿಶ್ಲೇಷಣೆಯನ್ನು ರಾಮನಾಗಿ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ಟರು ಒಂದು ಕಡೆ ನೀಡುತ್ತಾರೆ.

“ಅಸುರರ ಮಾಯೆ ಎಂದು ಎಷ್ಟು ಹೇಳಿದರೇನು? ಸೀತೆ ಕೇಳಲಿಲ್ಲ. ಹಾಗೆಂತ ಅವಳ ಮಾತಿಗೆ ವಶವರ್ತಿಯಾಗಿ ನಾನು ಕಪಟದ ಮೃಗ ಅಂತ ಹೇಳಿಯೂ, ಅದೇ ಮೃಗವನ್ನು ಹಿಡಿದು ತರುತ್ತೇನೆ ಅಂತ ಹೊರಟವನು. ಯಥಾರ್ಥಕ್ಕಾದರೆ ಮೃಗ ಕಪಟದ್ದೂ ಅಂತಲೇ ಸಿದ್ದಾಂತ. ಆದರೂ ಸೀತೆಯ ಮಾತಿಗೆ ಮರುಳಾದದ್ದಲ್ಲ. ರಾಜಋಷಿಯಾದ ಜನಕ ರಾಜನ ಸಾಕು ಮಗಳಾಗಿ    ಶೃಂಗಾರ ಬಂಗಾರ ಎಲ್ಲ ವೈಭವದಿಂದ ಕೂಡಿ ನನ್ನ ಅರ್ಧ ಶರೀರೆಯಾಗಿ ಪರಿಣಮಿಸಿ, ಚಕ್ರವರ್ತಿ ದಶರಥನ ಸೊಸೆಯಾಗಿ ಭೂರಿ ಭಾಗ್ಯದಿಂದ ಮೆರೆಯಬೇಕಾದವಳು, ನನಗೋಸ್ಕರ ನನ್ನನ್ನು ಹಿಂಬಾಲಿಸಿ, ಬರೇ ನಾರುಡೆಯನ್ನುಟ್ಟು, ಹದಿಮೂರು ವರ್ಷ ವನವಾಸವನ್ನು ಅನುಭವಿಸಿದವಳು. ಅಪರೂಪವಾಗಿ ಕಾಂಚನ ಮೃಗವನ್ನು ಕಂಡಳು. ಪೆಟ್ಟಿಗೆ ಪೆಟ್ಟಿಗೆ ಚಿನ್ನಾಭರಣವನ್ನು ತೃಣವಾಗಿ ಉಪೇಕ್ಷಿಸಿ ಬಂದವಳು ಬಂಗಾರದ ಬಣ್ಣಕ್ಕೆ ಹುಚ್ಚುಕಟ್ಟಿದಳು,  ಅಂತ ಅಂದ್ರೆ ಅರ್ಥವೇನು? ಕಾಲಾಯ ತಸ್ಮೈ ನಮಃ . ಆದರೆ ನನ್ನ ಹೃದಯ ಅದನ್ನು ಹೀಗೆ ಅರ್ಥ ಮಾಡಿಕೊಂಡಿತು. ಸರ್ವಸ್ವವನ್ನು ತ್ಯಾಗಮಾಡಿ ಹಿಂಬಾಲಿಸಿದ ಸೀತೆಗೆ ನಾನು ಏನು ಕೊಟ್ಟಿದ್ದೇನೆ?  ಹಾಗಾಗಿ ಕಾಡಿನಲ್ಲಾದರೂ ಅವಳು ಬಯಸಿದಂತಹ ಮೃಗವನ್ನು ತಂದುಕೊಡ್ತೇನೆ. ಅಂತ ಹೊರಟವನು.
         
          ಸೀತೆಗಾಗಿ ಕೈಯಲ್ಲಿ ಕೃತಕ ಜಿಂಕೆಯನ್ನು ಹಿಡಿದುಕೊಂಡು ಬರುತ್ತಿರಬೇಕಾದರೆ, ಪರ್ಣಶಾಲೆಯಲ್ಲಿ ಕಾವಲಿರಬೇಕಾದ ಲಕ್ಷ್ಮಣ ಎದುರು ಬರುತ್ತಿದ್ದಾನೆ. ಯಾವುದೋ ಅಪಾಯದ ಮುನ್ಸೂಚನೆ ಕಂಡಂತೆ ರಾಮ ಗಾಬರಿಗೊಳಗಾಗಿಬಿಡುತ್ತಾನೆ. ಬಂದು ನೋಡಿದರೆ.....ಎದುರು ಜಿಂಕೆಯ ನಿರೀಕ್ಷೆಯಲ್ಲಿ ಸೀತೆ ಕುಪ್ಪಳಿಸಿಕೊಂಡು ಬರಬೇಕಾದವಳನ್ನು ರಾಮ ನಿರೀಕ್ಷಿಸಿದರೆ,  ಸೀತೆಯನ್ನು ಕಾಣದಾಗುತ್ತಾನೆ.

          “ ಓ ಲಕ್ಷ್ಮಣಾ ಒಳಗೆ ಹೋಗಿ ನೋಡು, ಸೀತೆ ಬಚ್ಚಿಟ್ಟುಕೊಂಡಿರಬಹುದು. ಎನ್ನೊಡನೆ ಆಟಕ್ಕಾಗಿ ಅವಿತು ಕುಳಿತು ನನ್ನ ತವಕವನ್ನು ಹೆಚ್ಚಿಸುತ್ತಿರಬಹುದು. ಲಕ್ಷ್ಮಣ ರೇಖೆಯನ್ನು ಕ್ರಮಿಸಿ ಸೀತೆ ಹೆಜ್ಜೆಯೂರಲಾರಳು. ಹಾಗಾಗಿ ಖಂಡಿತ ಆಕೆ ಮನೆಯೊಳಗಿದ್ದಾಳೆ. ದೂರದಿಂದಲೇ ನನ್ನನ್ನು ಕಂಡವಳು ಕುಣಿದಾಡಿ ಓಡಿ ಬರಬೇಕಿತ್ತು. ಖಂಡಿತ ಆಕೆ ಮನೆಯೊಳಗೆ ಅವಿತು ನನ್ನ ಚಂದವನ್ನು ನೋಡುತ್ತಿದ್ದಾಳೆ. ಕೂತೂಹಲಿಯಾಗಿ ನನ್ನ ಕೈಯನ್ನೇ ನೋಡುತ್ತಿರಬಹುದು. ಅದೋ ಅದೋ ನೀನೆಳೆದ ರೇಖೆಯ ಪಕ್ಕದಲ್ಲೇ ಭೂಮಿಯೇ ಬಾಯಿತೆರೆದು ನಿಂತಿದೆ. ನಮ್ಮ ಈ ಸರಸವನ್ನು ಕಂಡ  ಈ ಭೂಮಿ ತನ್ನ ಮಗಳ ಇರವನ್ನು ಹೇಳುವುದಕ್ಕೆ ಬಾಯಿತೆರೆದಿರಬಹುದೇ? ಏನಾಯಿತು? ಆದರೆ... ಆದರೆ ನನ್ನ ತಳಮಳ ಇನ್ನೂ ಹೆಚ್ಚಾಗುತ್ತಿದೆ. ದೇವತೆಗಳನ್ನು ಅವಾಹಿಸಿ ಬಿಟ್ಟಂತಹ ಲಕ್ಷ್ಮಣ ರೇಖೆ ಆಕೆ ದಾಟದೆ ವಿನಾ ಹೋಗಲು ಸಾಧ್ಯವಿಲ್ಲ. ಎತ್ತ ಪೋದಳು? ಈ ಭೂಮಿ ಹೆತ್ತ ಮಗಳು. ಹೆತ್ತ ತಾಯಿ ಇರಬೇಕಾದರೆ ಮಗಳನ್ನು ಅಪಹರಿಸಿ ಒಯ್ಯಬಹುದೇ? ಹೆತ್ತ ತಾಯಿಯನ್ನು ವಂಚಿಸಿ ಕೊಂಡೊಯ್ದರೆ? ಅದಕ್ಕೆ ಪುರಾವೆ ಈ ಭೂಮಿ ಬಾಯೆ ತೆರೆದು ನಿಂತಿದೆ.
          .
         
ಎತ್ತಹೋದಳೊ | ಏನನಾದಳೊ |
ಮತ್ತಕಾಶಿನಿ | ಮಂದಗಾಮಿನಿ |
ಪೃಥ್ವಿಜಾತೆಯ | ಕಾಣದೆನ್ನಯ |
ಚಿತ್ತಚಂತಲ | ವಾಯಿತಲ್ಲಯ್ಯ |

          ರಾಮ ತನ್ನ ಅಸಹನೆಯಿಂದ ನರಳುತ್ತಾನೆ. ತಮ್ಮ ಲಕ್ಷ್ಮಣ ಕಳೆದು ಕೊಂಡೆವಲ್ಲಾ...ತಮ್ಮ ಅಸಹನೀಯವಾಗಿದೆ ಈ ನೋವು..ಯಾವುದಾದರೂ ಕಳೆದು ಕೊಳ್ಳುವುದು, ಅದು ಎಷ್ಟು ಮೌಲ್ಯವಾದದ್ದರೂ ಸಹನೆಗೆ ಕಷ್ಟವಾಗ್ತದೆ. ಕೊಟ್ಟು ಹೋಗಲಿ ಅಥವಾ ನಮ್ಮ ಒಪ್ಪಿಗೆಯಲ್ಲಿ ಪಡೆದುಕೊಂಡು ಹೋಗಲಿ ಆಗ ನಷ್ಟವಾದದ್ದಕ್ಕೆ ಮನಸ್ಸು ನೋಯುದಿಲ್ಲ. ಪರಿತಪಿಸುವುದಿಲ್ಲ. ಆದರೆ ಬಿದ್ದು ಹೋಗುವುದು ಇದು ನಷ್ಟ. ಕಳೆದು ಹೋದದ್ದನ್ನು ಪಡೆದುಕೊಳ್ಳುವಲ್ಲಿ ಅದರ ನೂರು ಪಟ್ಟು ಭಂಡವಾಳವನ್ನು ವಿನಿಯೋಗಿಸಿದರೂ ತಪ್ಪಲ್ಲ. ಸೀತೆಯನ್ನು ಕಳೆದುಕೊಂಡೆವಲ್ಲಾ.

          ಲಕ್ಶ್ಮಣ ನೀನು ತಪ್ಪು ಮಾಡಿದ್ದಿ ಅಂತ ಹೇಳಿಯೇನೆ? ಇಲ್ಲ ಸಾಧ್ಯವಿಲ್ಲ. ಮತ್ತೆ ಸೀತೆ ತಪ್ಪು ಮಾಡಿದಳೇ? “ಲಕ್ಷ್ಮಣಾ ಹೋಗು..ಅಂತ ಹೇಳುವಾಗ ಸೀತೆಯ ಮಾತಿಗೆ ಕಿವಿಗೊಡದೆ ಕಂಬದಂತೆ ನಿಂತ ನಿನ್ನನ್ನು ಆಕೆ ಅರಿಯಳೇ? ಮತ್ತು ಹೇಳೀದಳಲ್ಲ. ರಾಮನಳಿದರೆ..ಬಾಲಕ ನಿನ್ನ ಭಾವವೇನಯ್ಯ? ಶ್ರೀಲಲಾಮ ತಾನಳಿದಮೇಲೆನ್ನ ಆಳುವೇನೆಂಬ....ಛೇ ಎಂತಹ ಕಠೋರ ಮಾತು. ಯಾಕೆ ನಿನ್ನನ್ನು ತಿಳಿಯದೇ ಹೇಳಿದಳೆ?  ಇಲ್ಲ.

          ರಾಮನು ಎಂತಹ ವಿವೇಕಿಯಾದರೂ ಕೂಡ ಒಂದಲ್ಲ ಒಂದು ಪ್ರಕರಣದಲ್ಲಿ ಕೈಹಿಡಿದ ಹೆಂಡತಿ ಎತ್ತಿ ಆಡಿಸುವ ಚಿತ್ರಿತ ಬೊಂಬೆಯಾಗಿಬಿಟ್ಟ. ನಮ್ಮ ಅಪ್ಪನಿಗೂ ಅದದ್ದು ಅದೇ.  ಕೊನೇಗೆ ಕೈಕೇಯಿ ಮಾತಿನಲ್ಲಿ ಸಿಕ್ಕಿಬಿದ್ದ. ತಮ್ಮಾ,   ನಿನ್ನ ತಾಯಿ ಸುಮಿತ್ರೆ ಹೇಳಿದಳಲ್ಲ,  ದಶರಥನ ಮಗ ರಾಮ ಎಂದು ಊಹಿಸಿ ಹೇಳಿದಳಲ್ಲ?  ನನ್ನಂತೇ.... ಸೀತೆಯನ್ನು ತಿಳಿ. ಅಂದರೇ ಸೀತೆಯಲ್ಲಿ ತಾಯಿಯನ್ನು ಕಾಣು.  ರಾಮನಿಗಾಗಿ ನನ್ನನ್ನೂ ಬಿಟ್ಟು ಹೋಗು,  ರಾಮನಿಗಾಗಿ ತಾಯಿಯನ್ನು ಬಿಟ್ಟು ಬಂದವನು ನೀನು,  ರಾಮನಿಗಾಗಿ ಈಗ ಸೀತೆಯನ್ನೂ ಬಿಟ್ಟು ಬರುವ ಪ್ರಸಂಗ ನಿನಗಾಯಿತು.  ಸೀತೆ ಹೇಳಿದಳಲ್ಲ...ಹೋಗು ರಾಮನನ್ನು ಹಿಂಬಾಲಿಸು. ಅಲ್ಲಿ ಅಯೋಧ್ಯೆ ಕೈ ತಪ್ಪಿತು... ಇಲ್ಲಿ ದಂಡಕಾರಣ್ಯ ಕೈತಪ್ಪಿದೆ.

          ಇಲ್ಲಿ ಯಾರನ್ನೂ ದೂರಿ ಪ್ರಯೋಜನವಿಲ್ಲ. ಕಾಣದ ಕೈ ಒಂದು ಸನ್ನಿವೇಶವನ್ನು ಸೃಷ್ಟಿಸುತ್ತಾ ಹೋಗುತ್ತದೆ. ರಾಮನ ಈ ಮಾತಿಗೆ ಮುಂದಿನ ಸನ್ನಿವೇಶಗಳು ಸಾಕ್ಷಿಯಾಗುತ್ತದೆ.

ತರುಣಿ ಜಾನಕಿ ನಿಮ | ಗರುಹಬೇಕೆನಲು ನಾ |
ನರಳುತ್ತಲಿಹೆನಿಷ್ಟು | ದಿನ ಪರಿಯಂತ |
ಕರುಣವಿದ್ದಿರಲೆಂದು | ಚರಣದೆಡೆಗೆ ಬಿದ್ದು |
ಮರಣವಿಟ್ಟ ಜಟಾಯು | ಶರಣರ ಶ್ರೇಷ್ಠ |
         
          ಸೀತೆಯನ್ನರಸುತ್ತಾ ಮುಂದೆ ಬಂದಾಗ ಜಟಾಯು ಜರ್ಝರಿತನಾಗಿ ಬಿದ್ದದ್ದನ್ನು ಕಾಣುತ್ತಾರೆ, ಆತನಿಂದ ಸೀತೆಯನ್ನು ಅಪಹರಿಸಿದವನು ರಾವಣ ಎಂದು ತಿಳಿದುಬರುತ್ತದೆ.  ಆ ವಿಷಯವನ್ನು ಅರುಹುದಕ್ಕಾಗಿ ಸೀತೆಗಿದ್ದ ನಿಗ್ರಹಾನುಗ್ರಹ ಶಕ್ತಿಯ ಅನುಗ್ರಹದಿಂದ ಜಟಾಯು ರಾಮನ ಅಗಮನದವರೆಗೆ ಜೀವ ಹಿಡಿದು ಕಾಯುತ್ತಿರುತ್ತಾನೆ.  ರಾಮನ ಪದತಲದಲ್ಲಿ ಜೀವ ನಿಸ್ತೇಜವಾಯಿತು ಪಕ್ಷಿರಾಜನ ಶರೀರ. ಜಟಾಯುವಿನಲ್ಲಿ ತಂದೆಯನ್ನು ಕಾಣುತ್ತಾನೆ ರಾಮ. ಪಿತೃಯಜ್ಞದ ಮೂಲಕ  ಅತನ ಅಂತ್ಯವಿಧಿಯನ್ನು ಮಾಡಿ ಮುಗಿಸುತ್ತಾನೆ.

          ಋಷಿಮುನಿಗಳ ಮಾರ್ಗದರ್ಶನದಂತೆ ಮುಂದೆ ಮುಂದೆ ಬಂದಾಗ ಕಬಂಧನೆಂಬ ದಾನವ ಬಾಹುಗಳನ್ನು ಬೀಸುತ್ತಾನೆ. ಕಬಂಧ ಶಾಪಗ್ರಸ್ಥ ಗಂಧರ್ವ. ರಕ್ಕಸನಾಗಿದ್ದ ಈತ ತನ್ನ ವರಬಲದಿಂದಲೂ ತನ್ನ ದೈತ್ಯಾಕೃತಿಯಿಂದಲೂ ಋಷಿಮುನಿಗಳನ್ನು ಪೀಡಿಸುತ್ತಿದ್ದ. ಈತನ ಪೀಡೆ ಅತಿಯಾದಾಗ ದೇವೇಂದ್ರ ತನ್ನ ಆಘಾತದಿಂದ ಕಬಂಧನ ದೇಹ ಕುಸಿಯುವಂತೆ ಮಾಡುತ್ತಾನೆ. ಕೇವಲ ಬಾಯಿ  ಹೊಟ್ಟೆ ಮತ್ತು ಎರಡು ದೈತ್ಯ ಬಾಹುಗಳನ್ನು ಹೊಂದಿದ. ಆ ಬಾಹುಗಳಿಂದಲೇ ಸುತ್ತ ಮುತ್ತ ಸಂಚರಿಸುತ್ತಿದ್ದ ಮನುಷ್ಯ ಪ್ರಾಣಿಗಳನ್ನು ತಿಂದು ಬದುಕುತ್ತಿದ್ದ. ರಾಮ ಲಕ್ಷ್ಮಣರು ಬಂದು  ಆ ಬಾಹುಗಳನ್ನು ಕಡಿದು ಚೆಲ್ಲಿದಾಗ ರಾಮನಿಂದ ಕಬಂಧ ಮೋಕ್ಷವಾಗುತ್ತದೆ.  ಆತನೇ  ಮತಂಗ ಮುನಿಯ ಆಶ್ರಮವಾಸಿಯಾದ ಶಬರಿಯನ್ನು  ಕಂಡು ಆಕೆಯ ಮಾರ್ಗದರ್ಶನವನ್ನು ಪಡೆಯುವಂತೆ ಸೂಚಿಸುತ್ತಾನೆ.   ಅಯೋಮುಖಿ, ಕಬಂಧ ಮೊದಲಾದ ಅಸುರೀಶಕ್ತಿಗಳು  ರಾಮನ ಆಗಮನದಿಂದ ಮೋಕ್ಷಪ್ರಾಪ್ತಿಯನ್ನು ಕಾಣುತ್ತವೆ. ಅಸುರೀ ಸ್ವಭಾವದಿಂದಲೇ  ರಾಮನ ಆಗಮನವನ್ನೇ ಕಾಯುತ್ತಿದ್ದ ಶಕ್ತಿಗಳು ರಾಮ ದರ್ಶನದಿಂದ ಮೋಕ್ಷವನ್ನು ಕಾಣುತ್ತವೆ. ಇವುಗಳನ್ನು ಕಂಡ ರಾಮ ಲಕ್ಷಣನಲ್ಲಿ ಹೇಳುತ್ತಾನೆ.

          “ ಈ ವರೆಗೆ ನಮ್ಮ ಸ್ವಂತಿಕೆಯಿಂದ ಬಾಳಿ ಬದುಕಿದ್ದೇವೆ. ಆದರೆ ಈಗ ಹಾಗಲ್ಲ. ಯಾವುದೋ ಕಾಲವೋ ದೈವವೋ ಇನ್ನೇನೋ ಶಕ್ತಿಯ ಸೂತ್ರದಿಂದ ನಾವು ಬಂಧಿಯಾಗಿದ್ದೇವೆ ಎಂದು ಅನಿಸುತ್ತದೆ. ನಾವು ನಾಲ್ಕುಜನರ ಹುಟ್ಟಿಗೆ ಸಂಕಲ್ಪ ಕೇವಲ ತಾಯಿಯದ್ದು ಮತ್ತು ತಂದೆಯದ್ದು ಮಾತ್ರ ಆಗಿರಲಿಲ್ಲ. ಮೊದಲಾಗಿ ಋಷಿ ಸಂಕಲ್ಪವೂ ಇತ್ತು. ದೇವ ಸಂಕಲ್ಪವೂ ಇತ್ತು. ಹೀಗೆ ದೇವ ಕಲ್ಪವಾದ ಪಾಯಸವನ್ನು ಯಜ್ಞೇಶ್ವರನ ಮೂಲಕ ಕರುಣಿಸಿದ ಮೇಲೆ,  ಬಹುಶಃ ಈಗ ಈ ಋಷಿಗಳೂ ದೇವತೆಗಳೂ ನಮ್ಮನ್ನು ದುಡಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದಾರೆ. 

          ಹೀಗೆ ದೈವಚಿತ್ತವನ್ನು ಮನ್ನಿಸುತ್ತಾ ಮುಂದೆ ಮುಂದೆ ಬರುವಾಗ ಒಂದು ದಿವ್ಯಾಶ್ರಮವನ್ನು ಕಾಣುತ್ತಾನೆ. ಅತ್ಯಂತ ವಿಶಿಷ್ಟ ಭಾವುಕ ಸನ್ನಿವೇಶಕ್ಕೆ ಆ ಅಶ್ರಮ ಸಾಕ್ಷಿಯಾಗುತ್ತದೆ. ಮತಂಗ ಮುನಿಗಳ ಆಶ್ರಮವದು.  ಮತಂಗ ಮುನಿಗಳ ವರ ಪ್ರಸಾದದಿಂದ ನ್ಯಗ್ರೋಧನೆಂಬ ವ್ಯಾಧನೊಬ್ಬನಿಗೆ ಹುಟ್ಟಿಕೊಂಡವಳು ಶಬರಿ . ಶಿಥಿಲ ಶರೀರೆಯಾಗಿ ಅಲ್ಲಿ ಒಬ್ಬಳೇ ವಾಸಿಸುತ್ತಿದ್ದಾಳೆ.  ಭರತ ಮುನಿಯ ಶಿಷ್ಯೆಯಲ್ಲಿ ಒಬಳಾದ ವಿಭಾವರಿ ಶಾಪಗ್ರಸ್ಥೆಯಾಗಿ ಶಬರಿಯಾಗಿ ಭೂಮಿಗೆ ಪತನ ಹೊಂದಿ ಪತಿತಳಾದವಳು. ತಂದೆಯ ಮರಣಾನಂತರ  ಮತಂಗ ಮುನಿಯ ಆಸರೆಯಲ್ಲಿ ಬೆಳೆದವಳು ಶಬರಿ.

 ಒಂದು ದಿನ ಕನಸಿನಲ್ಲಿ ದಿವ್ಯಜ್ಯೋತಿಯೊಂದು ಭೂಮಿಗೆ ಇಳಿದು ಬರುವುದನ್ನು ಕಂಡು ಮತಂಗರಲ್ಲಿ ಕೇಳಿದಾಗ, ಅಂದು ಆಂಗೀರಸ ನಾಮ ಸಂವತ್ಸರದ, ಚೈತ್ರ ಶುದ್ದ ನವಮಿಯಾಗಿರುತ್ತದೆ. ಮಾತ್ರವಲ್ಲ ಪುನರ್ವಸು ನಕ್ಷತ್ರದ ದಿನ. ಶ್ರೀ ಶೇಣಿಯವರು ಮತಂಗರಾಗಿ ಒಂದು ಕಡೆಯಲ್ಲಿ ಹೇಳುತ್ತಾರೆ. “ ಪೂರ್ಣ ಬ್ರಹ್ಮಕ್ಕೆ ರಾಮ ಎಂಬ ಮಂತ್ರ ಪೂರಕ, ಅಕಾರಾದಿ ಮಕಾರಾಂತ ಪದವದು. ಈ ದಿವ್ಯವಾದ ಮಂತ್ರ ಉಪದೇಶಿಸಲ್ಪಟ್ಟದ್ದು ಹುಟ್ಟಿನಿಂದ ಕಿರಾತನಾದ ವಾಲ್ಮೀಕಿಗೆ. ಅವನು ರಾಮ ಎಂಬ ಎರಡಕ್ಷರದ ಮಂತ್ರವನ್ನು ಸಿದ್ದಿ ಮಾಡಿದಂತಹ ಬಲು ದೊಡ್ಡ ಜ್ಞಾನಿ. ಅವನು ಸಿದ್ದಿಯನ್ನು ಪಡೆದಾವಾಗ ಯಾವ ಆಕಾರ ಯಾವ ಗುಣವನ್ನು ಮನಸ್ಸಿನಲ್ಲಿ ರೂಪಿಸಿದ್ದನೋ ಅದೇ ಧ್ಯಾನವಾಗಿದೆ. ಹಾಗಾಗಿ ರಾಮ ಮಂತ್ರ ಮೊದಲಿಗೆ ಹುಟ್ಟಿತು. ಈಗ ಆ ಮಂತ್ರಕ್ಕೆ ವ್ಯಕ್ತವಾದಂತಹ ಸ್ವರೂಪ ಭೂಮಿಯಲ್ಲಿ ಹುಟ್ಟಿಕೊಂಡದೆ. ಈದನ್ನು ನಿನಗೆ ಹೇಳಿ ಆ ರಾಮಧ್ಯಾನದಿಂದ ಪುನೀತಳಾಗುವೆ ಎಂಬ ಸಂದೇಶ ಕೊಡುವಲ್ಲಿಗೆ ನನ್ನ ಬದುಕು ಸಾರ್ಥಕವಾಯಿತು ಅಂತ ತಿಳೀತೇನೆ. ಯಾವ ಬೇಡರ ವರ್ಗದಲ್ಲಿ ಹುಟ್ಟಿದವನು ಈ ದಿವ್ಯವಾದಂತಹ ಮಂತ್ರವನ್ನು ಜಗತ್ತಿಗೆ ಕೊಟ್ಟನೋ, ರಾಮ ನಾಮವೆಂಬ ಬೀಜವನ್ನು ಬಿತ್ತಿದನೋ ಇದರಲ್ಲಿ ಬ್ರಾಹ್ಮಣ, ಅಬ್ರಾಹ್ಮಣ ಪಾಪಿ ಪತಿತ ಎಂಬ ವೆತ್ಯಾಸವಿಲ್ಲದೆ ಎಲ್ಲರೂ ಆತ್ಮಾರಾಮರಾಗುವಂತಹ  ಬಲು ದೊಡ್ಡ ಬೆಳಕೇ ಇದೆ. ಪತಿತ ಪಾವನ ನಾಮ ಅದು. ಈ ಪ್ರಪಂಚದಲ್ಲಿ ಪತಿತರೆಲ್ಲಿದ್ದಾರೆ ಅವರನ್ನೆಲ್ಲರನ್ನೂ ಉದ್ದರಿಸುವಂತಹ ದಿವ್ಯ ಪಾದದಿಂದಲೇ ಆ ಪುರುಷೋತ್ತಮನು ತನ್ನ ಪಾದವನ್ನು ಈ ಭೂಮಿಯಲ್ಲಿ ಇರಿಸಿದ್ದಾನೆ. ಅದನ್ನು ನಿನಗೂ ಉಪದೇಶಿಸಿ ಆ ರಾಮನ ಸಾಕ್ಷಾತ್ಕಾರದಿಂದ ನೀನು ಕೈವಲ್ಯವನ್ನು ಪಡೆ, ಎಂದು ಆಶೀರ್ವದಿಸುವಲ್ಲಿಗೆ   ನನ್ನ ಜನ್ಮ ನನ್ನ ದೇಹಧರ್ಮದಿಂದ ಸಾಕು ಮಾಡಬೇಕು ಅಂತ ತೋರಿದೆ”. 

“ ಆದರೆ ಮಗಳೇ ನನಗೊಂದು ಕರ್ತವ್ಯವಿದೆ. ನೀನು ಹೀಗೆ ಯೋಗಿನಿಯಾಗಿ ಬಾಳಿ ಬದುಕುಬೇಕು ಅಂತ ಇಲ್ಲ. ನಿನಗೊಂದು ಉಪದೇಶ ಹೇಳ್ತೇನೆ. ಯಾವ ಹೆಣ್ಣಾದರೂ ಓರ್ವ ಪುರುಷನನ್ನು ಆಶ್ರಯಿಸಿ ಬಾಳಿ ಬದುಕಬೇಕು.  ಈವರೆಗೆ ಪಿತೃ ಸ್ಥಾನದಲ್ಲಿ ಗುರು ಸ್ಥಾನದಲ್ಲಿ  ನಾನಿದ್ದೆ. ನಾನು ಈ ಮತಂಗಾಶ್ರಮದಿಂದ ಹೊರಟು ಹೋದಮೇಲೆ ಇದು ಆಶ್ರಮವಾಗಿ ಮಾತ್ರ ಉಳೀತದೆ ಹೊರತು ಮತಂಗನ ಸನ್ನಿಧಾನ ಇರುವುದಿಲ್ಲ. ನಿನಗೊಂದು ಮದುವೆ ಮಾಡಿ ಆ ಋಣದಿಂದ ಮುಕ್ತನಾಗಬಹುದು ಅಂತ ತಿಳಿದಿದ್ದೇನೆ.”
ಮದುವೆಯಾಗುವುದಕ್ಕೆ ಶಬರಿ ನಿರಾಕರಿಸುತ್ತಾಳೆ. ತಂದೆ ತಾಯಿ ಬಂಧು ಬಾಂಧವರು ಎಲ್ಲರನ್ನು ಆಕೆ ಗುರು ಮತಂಗರಲ್ಲಿ ಕಂಡವಳು. ಮದುವೆಯಾಗಿ ಆ ಸಾಂಸಾರಿಕ ಗೊಂದಲದಲ್ಲಿ ಸಿಕ್ಕಿಬೀಳುವುದಕ್ಕೆ ಬಯಸುವುದಿಲ್ಲ. ಏಕಾಂಗಿನಿಯಾಗಿಯೇ ಬದುಕುವ ಇರಾದೆಯನ್ನು ವ್ಯಕ್ತಪಡಿಸುತ್ತಾಳೆ.

ಆಗ ಮತಂಗರು ಹೇಳುತ್ತಾರೆ “ ನಾನು ಇಲ್ಲಿಂದ ನಿರ್ಗಮಿಸಿದ ಮೇಲೆ ನಿನಗೆ ಆಧಾರಕ್ಕೆ ಒಂದು ದಿವ್ಯವಾದಂತ ರೂಪ ದರ್ಶನವೊಂದು ಬೇಕು ಅಂತಃಕರಣದಲ್ಲಿ. ಪ್ರತಿಯೊಬ್ಬರೂ ಸ್ವತಂತ್ರರಾಗಿ ಬಾಳಿ ಬದುಕಬೇಕು ಎಂಬುದು ತತ್ವವಾದರೂ ಹೆಣ್ಣಿಗೆ ಮತ್ತೊಂದು ಆಶ್ರಯ ಬೇಕಾಗುತ್ತದೆ. ಹೇಳಿ ಕೇಳಿ ಹೆಣ್ಣಾದಂತಹ ನಿನಗೆ ಸ್ವಾಶ್ರಯ ಸಲ್ಲದು.  ಹೆಣ್ಣು ರಕ್ಷಣೆಯಲ್ಲಿರಬೇಕು.  ನ ಸ್ತ್ರೀ ಸ್ವಾತಂತ್ರ ಮರ್ಹಸಿ    ಎಂದರೆ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲ ಎಂದರ್ಥವಲ್ಲ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರದೇವತಾಃ. ಇಲ್ಲಿ ಹೆಂಗಸರು ಪೂಜಿಸಲ್ಪಡುವಂತಹ ದಿವ್ಯ ಪ್ರತಿಮೆಗಳು. ಯಾವಾಗ ದಿವ್ಯವಾದದ್ದು ದೇವರ ವಿಗ್ರಹದಂತೆ ಇದ್ದದ್ದು ಅದು ಇನ್ನೊಬ್ಬರ ರಕ್ಷಣೆಯಲ್ಲಿರಬೇಕಾದದ್ದು ಅನಿವಾರ್ಯ. ಬಂಗಾರವು ಕಬ್ಬಿಣದ ಪೆಟ್ಟಿಗೆಯಲ್ಲಿ ರಕ್ಷಿಸಲ್ಪಡುವಂತೆ, ಈ ಹೆಣ್ಣು ರಕ್ಷಿಸಲ್ಪಡಬೇಕು. ಇದು ನಮ್ಮ ಸನಾತನ ಧರ್ಮ. ನಮ್ಮ ಭಾರತೀಯ ಸಂಸ್ಕೃತಿ. ನೀನು ರಾಮನನ್ನೇ ಮನಸಾ ಧ್ಯಾನಿಸುತ್ತ, ತನು ಮನಗಳನ್ನು ಆ ರಾಮನಿಗೇ ಅರ್ಪಣೆ ಮಾಡುತ್ತಾ ಇರಬೇಕು.”

ಆದರೆ ರಾಮ ಹೇಗಿರುತ್ತಾನೆ ಎಂದು ಶಬರಿಗೆ ತಿಳಿದಿಲ್ಲ. ಮೂರ್ತಿಯೊಂದನ್ನು ಅಂತರಂಗದಲ್ಲಿ ಸ್ಥಾಪಿಸಿ ಪೂಜೆಸಬೇಕು ಎಂದಿದ್ದರೆ ಅದಕ್ಕೊಂದು ರೂಪ ಬೇಡವೇ?  ಬೇಡರ ಒಡನಾಟದಲ್ಲೆ ಎಳವೆಯಿಂದ ಬೆಳೆದು ಬಂದವಳು ಆಕೆ. ಜಟಾವಲ್ಕಧಾರಿಗಳನ್ನೇ ನಿತ್ಯವೂ ಕಂಡವಳು. ಹಾಗಾಗಿ ಬೇರೆ ರೂಪ ಅವಳಿಗೆ ಗೋಚರಿಸದು. ಮೂರ್ತಿ ಪೂಜೆಯ ಹಿನ್ನೆಲೆಯ ಉದಾತ್ತ ಧ್ಯೇಯವನ್ನು ಇಲ್ಲಿ ಕಾಣಬಹುದು. ಯದ್ಭಾವ್ಯಂ ತದ್ಬವತಿ. ಭಾವನೆಯಲ್ಲಿ ಏನಿರುತ್ತದೋ ಅದೇ ರೂಪದಲ್ಲಿ ಕಾಣುವುದು. ಶೂನ್ಯದಲ್ಲಿ ಮನಸ್ಸು ನಿಲ್ಲುವುದಿಲ್ಲ. ಅದಕ್ಕೊಂದು ರೂಪ ಬೇಕು. ಆ ರೂಪಕ್ಕೆ ಒಂದು ಭಾವನೆ ಇರಬೇಕು. ಅದಕ್ಕೊಂದು ಮೂರ್ತ ಸ್ವರೂಪ ಬೇಕು. ಈವರೆಗೆ ಆ ಮೂರ್ತಸ್ವರೂಪ ಮತಂಗರಲ್ಲಿ ಕಂಡವಳು. ಇನ್ನು ರಾಮನನ್ನು ಅದೇ ರೂಪದಲ್ಲಿ ಕಾಣಬಲ್ಲಳು.  ರಾಮನೂ ಸಹ ಅದೇ ರೂಪದಲ್ಲಿ ಆಕೆಗೆ ಕಂಡು ಬರುವ,  ಈ ದಿವ್ಯ ತತ್ವದ ನಿದರ್ಶನವನ್ನು ಇಲ್ಲಿ ಕಾಣಬಹುದು. ರಾಮನಲ್ಲಿ ತಂದೆಗೆ ಮಗನಾಗಿ ಮಗನಿಗೆ ತಂದೆಯಾಗಿ ಸತಿಗೆ ಪತಿಯಾಗಿ ತಾಯಿಗೆ ಮಗನಾಗಿ ಹೀಗೆ ಎಲ್ಲ ರೂಪವನ್ನು ಕಾಣುವಂತಹ ಉಪದೇಶವನ್ನು ಮತಂಗರಿಂದ ಪಡೆಯುತ್ತಾಳೆ.  

ರಾಮ ಹೋದಲ್ಲೆಲ್ಲಾ ಪ್ರತಿಯೊಂದು ಕಲ್ಲು ಮರಗಳೂ ಕೂಡ ಅವನ ಬರುವಿಕೆಗೆ ಕಾದಿರುತ್ತವೆ. ಆದರೆ ಈ ಎಲ್ಲ ಕಾದಿರುವೆಕೆಗಿಂತ ಶಬರಿಯ ಕಾಯುವಿಕೆ ಇಡೀ ರಾಮಾಯಣದಲ್ಲೇ ಅತ್ಯಂತ ವಿಶಿಷ್ಟವಾಗಿರುತ್ತದೆ. ರಾಮನೆಂದು ಬರುವನೋ.....ಅತ್ಯಂತ ದಯನೀಯ ಅವಸ್ಥೆಯ ವೃಧ್ದಾಪ್ಯ ಅವಳದು. ಕಣ್ಣು ಕಾಣಿಸದು ಕಿವಿಯೂ ಕೇಳಿಸದು. ಶರೀರವದು ಬಾಗಿ ಬಾಗಿ ರಾಮನ ಹಾದಿಯನ್ನು ನೋಡುವುದಕ್ಕೆ ಮಾತ್ರ ನೆಟ್ಟಗೆ ನಿಂತು ಬಿಡುತ್ತದೆ.ತನ್ನವರೆಂದು ಯಾರು ಇಲ್ಲ. ಅದನ್ನವಳು ಬಯಸಿಯೂ ಇಲ್ಲ. ರಾಮನೊಬ್ಬನೇ ತನ್ನವ. ಆತನನ್ನು ಕಾಣುವುದಕ್ಕಾಗಿ ಈ ದೇಹ ಉಳಿಯಬೇಕು. ಆ ದೇಹ ಉಳಿಯುವುದಕ್ಕಾಗಿ ಒಂದಿಷ್ಟು ಅಹಾರ...ಅದೂ ಕಾಡಿನಲ್ಲಿ ಸಿಗುವ ಹಣ್ಣುಗಳು.
ಕರುಣಿಸಿ ಮುಂದೆಯ್ತರಲಾ
ವರಶಬರಿಯು ಭಕ್ತಿಯಿಂದಲಾ ರಘುಪತಿಯಾ |
ಚರಣಕೆ ನಮಿಸುತಲಂದಾ
ಗುರುಭಾವದೊಳಂಬುಜಾಕ್ಷಿ ಬಲು ನುತಿಸಿದಳು ||
ಪಾಲಯ ಮಾಂ ಪಾಹಿ ರಾಮ | ಸಮರನಿಸ್ಸೀಮ ||
ಕಾಲಭಯನಾಶ ಶ್ರೀ | ಲೋಲ ವೈಕುಂಠಾಧೀಶ ||
ದುರ್ಜನರ ವಿಘಾತ | ಸಜ್ಜನರ ಸಂಪ್ರೀತ |
ನಿರ್ಜರಗಣವಂದಿತ | ಗರ್ಜನ ಸಿಂಧುಸಮೇತ ||
ಅಂಗಜಕೋಟಿಲಾವಣ್ಯ | ಆಶ್ರಿತಜನವರೇಣ್ಯ |
ತುಂಗವಿಕ್ರಮಕಾರುಣ್ಯ | ಸಂಗೀತಲೋಲಾಗ್ರಗಣ್ಯ || 
                ಅಶ್ರಮದ ಅಂಗಳದ ತುದಿಗೆ ಎರಡು ಆಕೃತಿ, ಮೊದಲು ಅಸ್ಪಷ್ಟವಾಗಿ ಗೋಚರವಾಗುತ್ತದೆ. ಯಾರು ಬಂದಿರಬಹುದು?  ಈ ಕಾಡಿನಲ್ಲಿ ಒಂದೋ ತನ್ನ ಪೂರ್ವಾಶ್ರಮದ ಕಾಡಿನ ಮಕ್ಕಳು. ಅವರು  ಇತ್ತ,  ಈ ಮುದುಕಿಯತ್ತ ಗಮನವೇ ಹರಿಸುವುದಿಲ್ಲ. ಮತ್ತೆ ಯಾರು?  ಸುತ್ತಲ ಪರಿಸರದಲ್ಲಿ ಅದೇನೋ ಬದಲಾವಣೆಯಾದಂತೆ ಭಾಸವಾಗುತ್ತದೆ. ಸುತ್ತಲೂ ದಿವ್ಯ ಪ್ರಭೆಯೊಂದು ಪಸರಿಸಿ ಆ ಪ್ರಕಾಶ ತನ್ನ ಕುರುಡು ಕಣ್ಣಿಗೂ ಗೋಚರವಾಗುತ್ತದೆ. ಬಾಗಿ ನಿಂತ ಮೈ ನೋಡುವುದಕ್ಕಾಗಿ ಸೆಟೆಯುವಾಗ ಯಾವುದೋ ಒಂದು ಚೈತನ್ಯ ದೇಹದಲ್ಲಿ ಹೊಮ್ಮಿದಂತೆ ಭಾಸವಾಗುತ್ತದೆ. ಮತಂಗ ಮುನಿಗಳು ಅಂತ್ಯದಲ್ಲಿ ಮಾಡಿದ ಆಶೀರ್ವಾದವೊಂದಿದೆ, ಉದ್ದರಿಸುವುದಕ್ಕಾಗಿ ರಾಮ ಬರುತ್ತಿದ್ದಾನೆ. ಪಾದದಲ್ಲೇ ಗಂಗೆಯನ್ನು ಹರಿಸಿದವನ ಪಾದ ಈ ಆಶ್ರಮವನ್ನು ಸ್ಪರ್ಶಿಸಿ ಪಾವನಗೊಳಿಸಲಿದೆ. ಹೌದೇ? ಅದೇ ಅದೇ…ಹೌದು ರಾಮ ಬಂದ ….ಅದೋ….ವೃದ್ದೆಯ ಕಣ್ಣು ಅರಳುತ್ತದೆ. ದೇಹ ನವಜೈತನ್ಯವನ್ನು ತುಂಬುತ್ತದೆ. ರಾಮ ಲಕ್ಷ್ಮಣರನ್ನು ಕರೆದು ಕೂರಿಸುತ್ತಾಳೆ.  ಆಕೆಯಲ್ಲಿದ್ದ ಒಂದೇ ಒಂದು ಪಾತ್ರೆಯಂದರೆ ಅದು ಸೋರೆ ಬುರುಡೆಯೊಂದಿರುತ್ತದೆ. ಅದರಲ್ಲಿನ ನೀರಲ್ಲೇ ರಾಮನ ಪಾದ ತೊಳೆಯುತ್ತಾಳೆ. ಯೋಚಿಸುತ್ತಾಳೆ. ಗಂಗೆ ಉದಿಸಿದ ಪಾದವಿದು. ಅದಕ್ಕೆ ಈ ಸೋರೆ ಬುರುಡೆಯಲ್ಲಿ ಎಂದೋ ಇಟ್ಟ ನೀರು. ಒಂದರ್ಥದಲ್ಲಿ ಸಮುದ್ರದ ನೀರು ಸಮುದ್ರಕ್ಕೆ ಚೆಲ್ಲಿದ ಹಾಗೆ.

          ಹಾಗೇ ಉಪಚರಿಸುತ್ತಾಳೆ... “ ಅದೆಷ್ಟು ಸಮಯದಿಂದ ಕಾದಿದ್ದೆ  ಓ ದೇವರೆ.  ಬಹಳ ದೂರದಿಂದ ನಡೆದು ಬಂದಿದ್ದೀರಿ. ದಣಿದಿರುವಿರಿ. ಹಸಿವಾಗುತ್ತಿದೇಯೇ? ಉಪಚರಿಸುವುದಕ್ಕೆ ಎನೂ ಇಲ್ಲ ಬಡ ಮುದುಕಿ ನಾನು. ನಾನು ತಿನ್ನುವುದು ಇದೇ ಇದೇ.. ಈ ಹಣ್ಣುಗಳನ್ನು.”

          ಹಾಗೇ ಹಣ್ಣುಗಳನ್ನು ನೋಡುತ್ತಾಳೆ, ಯಾವುದು ಹಣ್ಣು? ಯಾವುದು ಕಾಯಿ? ಯಾವುದು ಹುಳಿ ? ಯಾವುದು ಚೊಗರು? ವೃದ್ಧೆಯ ಮಂದ ಕಣ್ಣುಗಳಿಗೆ ಕಾಣಿಸುವುದಿಲ್ಲ. ಒಂದೊಂದೇ ಹಣ್ಣುಗಳನ್ನು ಕಚ್ಚಿ ನೋಡಿ ಹಣ್ಣಾದುದನ್ನು ರಾಮನಿಗೆ ಕೊಡುತ್ತಾಳೆ. ಲಕ್ಷ್ಮಣ ಎಚ್ಚರಿಸುತ್ತಾನೆ  “ ಆರ್ಯ ಸಂಸ್ಕೃತಿಯಲ್ಲಿ ಉಚ್ಚಿಷ್ಟ ವರ್ಜ್ಯ... ಅದು ವಿಸರ್ಜಿಸಲ್ಪಡಬೇಕಾದದ್ದು...” ಆದರೆ ರಾಮ ಹೇಳುತ್ತಾನೆ,

          “ ಅಯೋಧ್ಯೆ ಬಿಟ್ಟು ಅದೆಷ್ಟು ಸಮಯಗಳಾದವು.  ಅಂದಿನಿಂದ ತಾಯಿಯನ್ನು ಕಾಣಲಿಲ್ಲ. ಆ ಅಕ್ಕರೆ ಪ್ರೀತಿಯನ್ನು ಕಾಣಲಿಲ್ಲ. ಇಂದು ನೋಡಬಾರದೇ ತಾಯಿ ಕೌಸಲ್ಯೆಯನ್ನೇ ಕಂಡಂತಾಗಿದೆ.   ಮಕ್ಕಳು ದಣಿದು ಬಂದಾಗ ತಾಯಿಯಾದವಳು ಮಕ್ಕಳ ಹಸಿವನ್ನು ಮೊದಲು ಕಾಣುತ್ತಾಳೆ. ಉಣ್ಣುವುದಕ್ಕೆ ಹಾಲು ತಿನ್ನುವುದಕ್ಕೆ ಆಹಾರವನ್ನು ನೀಡುತ್ತಾಳೆ. ಇದು ತಾಯಿಯಾದವಳ ಮಮಕಾರ. ಅಹಾ..ಇಂದು ಅದನ್ನೇ ಇಲ್ಲಿ ಕಾಣುತ್ತಿದ್ದೇನೆ. ಕಲಸಿದ ತಟ್ಟೆಯಲ್ಲಿದ್ದ ಅಹಾರಕ್ಕೆ ಏನು ಕೊರತೆಯಾಗಿದೆ ಎಂದು,  ತಾನೆ ಮೊದಲು ರುಚಿ ನೋಡುತ್ತಾಳೆ. ಅದು ಆ ಮಗುವಿನಲ್ಲಿ ತೋರುವ ಅಕ್ಕರೆಯೇ ಹೊರತು ಅದು ಮಗುವಿಗೆ ಉಚ್ಚಿಷ್ಟವಾಗುವುದಕ್ಕೆ ಸಾಧ್ಯವೆ? ಲಕ್ಷ್ಮಣಾ...ಈಕೆಯಲ್ಲಿ ತಾಯಿ ಕೌಸಲ್ಯೆಯನ್ನೇ ಕಾಣುತ್ತಿದ್ದೇನೆ.”

          ಕೇವಲ ಉತ್ತಮವಾದುದನ್ನು ಮಾತ್ರವೇ ಕೊಡಬೇಕೆಂಬ ಶಬರಿಯ ಶ್ರದ್ಧೆಯನ್ನು ತಾಯಿಯ ಪ್ರೀತಿಯನ್ನಾಗಿ ರಾಮ ಕಾಣುತ್ತಾನೆ.
ಮಧುರತರಾಂಬುಜವದನೇ | ಮದಗಜಸನ್ನಿಭಗಮನೇ |
ಪದುಮದಳಾಯತನಯನೇ | ಪರಮಪತಿವ್ರತೆ ಶಬರೀ ||
ಸೀತೆಯ ಕಾಣದರಿಂದ | ಅರಸುತ ಬಂದೆ ಕಬಂಧ |
ರೀತಿಯ ಪೇಳಲು ನಮಗೆ | ಬಂದೆವು ನಾವ್ ನಿನ್ನೆಡೆಗೆ
ಯಕ್ಷಗಾನದ ಈ ಪದ ಸಾಲುಗಳು ಇಡೀ ಪ್ರಸಂಗದ ಸಾರವನ್ನು ಹೊಂದಿದೆ ಅಂತಲೇ ಹೇಳಬಹುದು. ರಾಮನನ್ನು ಆಕೆ ಯಾವ ಮೂರ್ತ ಸ್ವರೂಪದಿಂದ ಕಂಡಳೋ ಅದೇ ಭಾವದಿಂದ ರಾಮ ಶಬರಿಯನ್ನು ಕಾಣುತ್ತಾನೆ. ತಾಯಿ ಕೌಸಲ್ಯೆಯನ್ನೂ ಕಾಣುವುದು ಮಾತ್ರವಲ್ಲ ತನ್ನ ರಕ್ಷಣೆಯಲ್ಲಿರಬೇಕಾದ ಸತಿಯಂತೆಯೂ ಕಾಣುತ್ತಾನೆ. ಬಹುಶಃ ಮದಗಜ ಸನ್ನಿಭ ಗಮನೇ ಅಂತ ಉದ್ದರಿಸುವ ಆಶಯವೂ ಅದೇ ಇರಬೇಕು.  ಅದನ್ನು ಇದೇ ಶೇಣಿಯವರು ಮತ್ತು ಸಾಮಗರು ರಾಮನಾಗಿ ಒಂದು ಕಡೆಯಲ್ಲಿ ಬಹಳ ಸುಂದರವಾಗಿ ಹೇಳುತ್ತಾರೆ. ಅದನ್ನು ಪ್ರತ್ಯೇಕವಾಗಿ ಸ್ಥೂಲವಾಗಿ ತಿಳಿಸುವ ಪ್ರಯತ್ನ.

          “ನಮ್ಮ ಆರ್ಷ್ಯ ಸಂಪ್ರದಾಯದಲ್ಲಿಯೂ ಭಾರತೀಯ ಸಂಸ್ಕೃತಿಯಲ್ಲಿಯೂ ಕಮಲಕ್ಕೆ ವಿಶಿಷ್ಟವಾದ ಸ್ಥಾನವುಂಟು. ಬ್ರಹ್ಮನ ಪೀಠವೂ ಅದೇ, ವಿಷ್ಣುವಿನ ನಾಭಿಯೂ ಅದೇ, ಲಕ್ಷ್ಮಿಯ ಮನೆಯೂ ಅದೇ, ರುದ್ರನ ಪಾದವೂ ಅದೇ. ಪಾದ ಕಮಲವೆಂದು ಕಮಲವನ್ನು ವಿಶಿಷ್ಟವಾದ ವಸ್ತುವಿಗೆ ಸಮನ್ವಯ ಮಾಡುತ್ತಾ ಬಂದಿದೆ. ಜಗತ್ತಿನ ರಹಸ್ಯವನ್ನು ತನ್ನ ಮೂಲಕ ಹೇಳುತ್ತಿದೆ. ಅದರ ಮೂಲ ಕೆಸರಿನಲ್ಲಿ, ಅದರ ಬದುಕು ನೀರಿನಲ್ಲಿ, ಆದರೂ ಬುಡ ಕೆಸರು ಬದುಕು ನೀರು, ಹೀಗಿದ್ದರೂ ಅರಳಿದ ತಾವರೆ ನೀರನ್ನು ಸೋಂಕಿಸುವುದೇ ಇಲ್ಲ. ಅದು ನೀರಿಂದ ಮೇಲೆ. ಸೂರ್ಯೋದಯವಾದಾಗ ಮಾತ್ರ ಅರಳುತ್ತದೆ. ಕತ್ತಲಾದಾಗ ಮುದುಡುತ್ತದೆ. ಕಮಲದ ಮಹತ್ವವಾದರೂ ಏನು? ಸೌಂದರ್ಯವೋ ಪರಿಮಳವೋ..ಅದಕ್ಕಿಂತಲೂ ಸುಂದರವಾದ ಗಂಧಯುಕ್ತವಾದ ಹೂವುಗಳು ಬೇರೆಯೂ ಇವೆ. ಎಲ್ಲೋ ಸರೋವರದಲ್ಲಿ ಅರಳುತ್ತದೆ ತಾವರೆ. ದಶದಿಕ್ಕುಗಳಿಗೂ ಸಮಾನವಾಗಿ ದಳಗಳನ್ನು ಚಾಚಿಕೊಳುತ್ತದೆ. ಹರದಾರಿ ಇರುವ ಭೃಂಗಗಳಿಗೆ ಸೆಳೆತ ಉಂಟಾಗುತ್ತದೆ. ಅವುಗಳು ಕೂಟ ಕೂಟವಾಗಿ ಅರಳಿದ ತಾವರೆಗೆ ಮುತ್ತುತ್ತಾವೆ. ಯಾಕೆ? ಅದರ ಹೃದಯದಲ್ಲಿ ಅತ್ಯಂತ ಮಧುರಾತ್ ಮಧುರತರವಾದ ಜೇನು ತುಂಬಿಕೊಂಡಿದೆ. ಈ ಮಕರಂದ ಜೇನನ್ನು ಈ ದುಂಬಿಗಳು ಕುಡೀತಾ ಇದ್ದಾವಾಗ ಸೂರ್ಯಾಸ್ತಮಾನವಾಗುತ್ತದೆ.  ಸೂರ್ಯಾಸ್ತಮಾನವಾದಾಗ ಕಮಲದಳ ಮುದುಡ್ತಾವೆ. ಮುದುಡಿದರೂ  ಈ ಮಧುರವನ್ನು ಈಂಟಿ ಈಂಟಿ ಈ ಭೃಂಗಗಳು ಅದರಲ್ಲೇ ಲೀನವಾಗಿ ಹೋಗುತ್ತಾವೆ. ಇದು ಬಲು ದೊಡ್ಡ ವೇದಾಂತ. ಹಾಗಾದರೆ ಅಂಬುಜ, ಮಧುರತರವಾದಂತಹ ಅಂಬುಜ. ತಾಯೀ, ಮುದುಕಿಯಾಗಿ ಸುಕ್ಕುಗಟ್ಟಿ ವಾರ್ಧಕ್ಯದ ಪರಾಕಾಷ್ಠೆಗೆ ಮುಟ್ಟಿದಂತಹ ನಿನ್ನ ಮುಖದಲ್ಲಿ ನಾನು ಆ ತಾವರೆಯನ್ನು ದರ್ಶಿಸಿದೆ. ಮಧುರತರಾಂಬುಜ ವದನೆ, ಆ ತಾವರೆ ಎಂಬಂತಹ ನಿನ್ನ ಮುಖದಿಂದ ಹೊರಟಂತಹಾ ಆ ಮಧುರತರವಾದ ಮಾತು, ಏನು ಮಾಧುರ್ಯ ಉಳ್ಳದ್ದು. ನೀನು ಮುದುಕಿಯಾದರೂ ಕೂಡ, ಆ ಊರುಗೋಲನ್ನು ಹಿಡಿದುಕೊಂಡು ಎಲ್ಲಿಗೆ ಸಾಗಬೇಕೊ ಅಲ್ಲಿಗೆ ಬಾಗಿದ ಸೊಂಟವಾದರೂ ಕೂಡ ಧೈರ್ಯವಾಗಿ ಗುರಿಯತ್ತ ಸಾಗುತ್ತ ಇದ್ದಿ. ಆವಾಗ ನನಗೆ ತೋರುತ್ತದೆ. ಆನೆ ಯಾವ ಸಂಕಲೆಯಲ್ಲಿ ಕಟ್ಟು ಒಡೆಯಲ್ಪಡುತ್ತದೆ. ಎಷ್ಟು ದೊಡ್ಡದಾದರೂ ಅದು ಕಟ್ಟಿದವನು ಹೇಳಿದ ಹಾಗೆ ದುಡಿಬೇಕಾಗ್ತದೆ. ಅದೇ ಪ್ರಪಂಚದಲ್ಲಿ ಕೆಲವರು ಇರುತ್ತಾರೆ. ಒಂದೊಂದು ನಿರ್ಬಂಧಕ್ಕೆ ಒಳಗಾಗಿ ಲೌಕಿಕವಾದ ಭೋಗಾಸಕ್ತಿಯಿಂದ, ಅರ್ಥಾಸಕ್ತಿಯಿಂದ ತಮ್ಮನ್ನು ತಾವು ತಿಳಿಯದೆ ದಾಸ್ಯವನ್ನು ಮಾಡ್ತಾರೆ, ಅಪರೂಪಕ್ಕೆ ಆನೆಗೆ ಕೆಲವು ಸಲ ಮದ ಬಂದಾಗ ಅದು ಯಜಮಾನನ್ನು ಧಿಕ್ಕರಿಸಿ ಸಂಕಲೆಯನ್ನೂ ಕಡಿದು, ಅದು ತಾನು ತನ್ನ ದಾರಿಯನ್ನೇ ಮಾಡಿಕೊಂಡು ಹೋಗ್ತದೆ.  ಮುದುಕಿಯಾದ ನಿನ್ನ ಗಮನದಲ್ಲಿ ನಾನು ಕಂಡದ್ದು ಅದು. ಸಂಸಾರದ ಸಂಕಲೆಯನ್ನು ಕಳಚಿ ಪ್ರಾಪಂಚಿಕ ಆಸಕ್ತಿಗಳನ್ನು ತೊರೆದು ನಿತ್ಯವೂ ಸತ್ಯವೂ ಆದಂತಹ ಪರಬ್ರಹ್ಮದ ಐಕ್ಯಕ್ಕೆ ನೀನು ಮೇಲ್ನೋಟದಿಂದ ಸಾಗ್ತಾ ಇದ್ದಿ.”

          ಮೋಕ್ಷದೆಡೆಗೆ, ಮತ್ತೆ ಹುಟ್ಟಲಾರದ ಸ್ಥಿತಿಯೆಡೆಗೆ ಶಬರಿಯ ಗಮನ ಆ ಮದಗಜದಂತೆ. ವ್ಯಾಧಕುಲ ಕನ್ಯೆ ಬೇರೆಯಾವುದೇ ಮಂತ್ರ ಸಿದ್ಧಿಯಿಲ್ಲದೇ ಕೇವಲ ರಾಮನಾಮವೆಂಬ ತಾರಕ ಮಂತ್ರದಿಂದ ಕೈವಲ್ಯವನ್ನು ಸೇರುತ್ತಾಳೆ ಎಂದಾದರೆ ಆ ದಿವ್ಯ ತತ್ವಕ್ಕೆ ಶಬರಿಗಿಂತಲೂ ಪೂರ್ಣವಾದ ನಿದರ್ಶನ ಬೇರೆ ಬೇಕೆ?  ಇದಕ್ಕಾಗಿಯೇ ಅತ್ಯಂತ ನಿಕಟವಾದ ಸಂಭಂಧದ ಸಂಕೇತವನ್ನು ರಾಮ ಶಬರಿ ಇತ್ತ ಹಣ್ಣನ್ನು ಉಚ್ಚಿಷ್ಟವಾದರೂ ಅದನ್ನು ಸೇವಿಸುವ ಮೂಲಕ ತೋರಿಸಿಕೊಡುತ್ತಾನೆ. ಸಮರ್ಪಿಸುವ ವಸ್ತುವಿನ ಗುಣವಲ್ಲ, ಅದರ ಹಿಂದಿರುವ ಭಾವ. ಕೊಡುವ ವ್ಯಕ್ತಿಯಲ್ಲ. ಕೊಡುವ ಚಿತ್ತ. ಅದನ್ನು ಶಬರಿಯ ಮೂಲಕ ಕಾಣಬಹುದು. ಇಲ್ಲಿ ಭಕ್ತಿಯ ಪರಾಕಾಷ್ಠೆ ಇಲ್ಲ. ಆದರೆ ಉತ್ಕಟವಾದ ಪ್ರಾಮಾಣಿಕತೆ ಇದೆ. ಬಾಹ್ಯ ಕಣ್ಣಿನ ದೃಷ್ಟಿ ಮಂದವಾದರೂ ಅಂತಃಕರಣದ ದೃಷ್ಟಿ ಗಾಢವಾಗುತ್ತದೆ.  

          ಇದೇ ಪದಕ್ಕೆ ರಾಮನಾಗಿ ಶ್ರೀ ರಾಮದಾಸ ಸಾಮಗರು ವಿಶ್ಲೇಷಣೆಯೂ ಬಹಳ ಸುಂದರವಾಗಿಯೂ ಮಾರ್ಮಿಕವಾಗಿಯೂ ಇದೆ. ಶ್ರೀರಾಮ ಶಬರಿಯ ಭಕ್ತಿಯನ್ನು ಆತಿಥ್ಯವನ್ನು ಮತ್ತು ಆ ಉಪಾಸನೆಯನ್ನು ಕಂಡು ಆಕೆಯನ್ನು ವರ್ಣಿಸುವ ಪದ. ಒಂದೆರಡು ಸಾಲಿನ ಪದವಾದರೂ ಕವಿಯ ಆಶಯ ಹಲವು ಅರ್ಥಗಳನ್ನು ಬಿಂಬಿಸಬಲ್ಲುದು. ಯಾವ ರೂಪದಲ್ಲಿ ಇದನ್ನು ನೋಡುವುದಕ್ಕೆ ಸಮರ್ಥರೋ ಆ ರೂಪಗಳಲ್ಲಿ ಇದರ ಸಾರವನ್ನು ಅರ್ಥವಿಸುವುದಕ್ಕೆ ಬರುತ್ತದೆ.

          ಮಧುರತರಾಂಬುಜ ವದನೆ....ಹಣ್ಣು ಹಣ್ಣು ಮುದುಕಿ ಶಬರಿ. ಆ ಶಬರಿಯ ಮುಖದಲ್ಲಿ ಕಮಲವನ್ನು ಆ ಮಧುರತೆಯನ್ನು ರಾಮ ಕಾಣುತ್ತಾನೆ. ಹಾಗೆಯೇ ಮದಗಜದ ನಡೆಯನ್ನೂ,   ಕೋಲೂರಿಕೊಂಡು ಬಂದು ತನ್ನನ್ನು ಒಳಗೆ ಕರೆದೊಯ್ದ ಶಬರಿ ಮದಗಜ ಗಮನೆಯಾಗಿ ಕಾಣುತ್ತಾನೆ ಶ್ರೀರಾಮ. ಸಾಮಗರು ಹೇಳುತ್ತಾರೆ ಆನೆಯಾದರೂ ಶಬರಿಗಿಂತಲೂ ವೇಗವಾಗಿ ನಡೆಯಬಹುದೋ ಏನೋ. ಅನೆಯ ನಡೆ ಸ್ಥೂಲಾವಲೋಕನಕ್ಕೆ ಮಂದವಾಗಿಯೇ ಇರುತ್ತದೆ. ಸರಿಯಾಗಿ ಕಾಣೀಸದೇ ಇದ್ದ,  ಕೃಶವಾಗಿ ಇಂಗಿ ಹೋದ ಕಣ್ಣುಗಳು ಪದುಮದಳಾಯತನಯನೆಯಾಗಿ ಕಾಣುತ್ತಾನೆ ಎಂದರೆ,   ಮತ್ತೂ ಒಂದು,  ಅದುವರೆಗೂ ಕನ್ಯೆಯಾಗಿ ಏಕಾಂಗಿಯಾಗಿಯೇ ಉಳಿದ ಶಬರಿ ಪತಿವೃತೆಯಾಗಿ ರಾಮ ಕಾಣುತ್ತಾನೆ. ಒಂದು ರೀತಿಯಲ್ಲಿ ಸುಲಭವಾಗಿ ವಿಶ್ಲೇಷಣೆ ಮಾಡಲಾಗದ ಪದವಿದು.

ಇಲ್ಲಿ ಸಾಮಗರ ಅರ್ಥಗಾರಿಕೆಯ ಸೌಂದರ್ಯ ಅದು ವಿವರಿಸುವುದಕ್ಕೆ ಕಷ್ಟವಾಗುತ್ತದೆ. ಇಲ್ಲಿ ರಾಮ ಶಬರಿಯಲ್ಲಿ ಕಾಣುವುದು ಬಾಹ್ಯ ಪ್ರಕೃತಿಯನ್ನಲ್ಲ. ಹೊರಗಿನ ನಡೆಯನ್ನಾಗಲೀ ಜೀವನ ಶೈಲಿಯನ್ನಾಗಲೀ ಅಲ್ಲ. ಆಕೆಯ ಅಂತರಂಗದ ಅಧ್ಯಾತ್ಮಿಕ ಮನಸ್ಸು. ಹಾಗಿದ್ದುದರಿಂದಲೇ ಆಕೆ ಮತಂಗರ ಸಹವಾಸದಲ್ಲಿ ಆಸರೆಯಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ರಾಮನಾಮ ತಾರಕ ಮಂತ್ರದ ಸಿದ್ದಿಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅಂತರಂಗವೆಂಬುದು ಎಲ್ಲರಿಗೂ ಒಂದೇ ರೀತಿಯಲ್ಲಿರುತ್ತದೆ. ಆನೆಯಲ್ಲಿದ್ದ ಆತ್ಮವೇ ನಾಯಿಯಲ್ಲಿರುತ್ತದೆ. ಹಕ್ಕಿಯಲ್ಲಿದ್ದದ್ದೇ ಮನುಷ್ಯನಲ್ಲೂ ಇರುತ್ತದೆ. ಶೂದ್ರನಲ್ಲಿದ್ದ ಆತ್ಮವೇ ಬ್ರಾಹ್ಮಣನಲ್ಲೂ ಇರುತ್ತದೆ. ಇದೊಂದು ಸಮನ್ವಯ ಆಧ್ಯಾತ್ಮಿಕ ತತ್ವ. ಒಬ್ಬಳು ಬೇಡರವಳಾಗಿ ಶಬರ ಪುತ್ರಿಯಾಗಿದ್ದವಳಲ್ಲಿ ಇದ್ದ ಆ ಅಂತರಾತ್ಮ ಅದನ್ನೇ ರಾಮ ವರ್ಣಿಸವುದು. ಮೇಲೆ ಶೇಣಿಯವರು ಇದನ್ನು ಮೋಕ್ಷದ ಕಡೆಗಿನ ನಡೆ,  ಮದಗಜ ನಡೆಯಂತೆ ಅಂತ ವರ್ಣಿಸಿದ್ದಾರೆ. ಇಲ್ಲಿ ಆತ್ಮವೆಂದರೆ ರಾಮ. ಆ ಆತ್ಮದ ರೂಪದಲ್ಲಿ ಯಾವುದೇ ವೆತ್ಯಾಸ ಇಲ್ಲ ಎಂದು ತೋರಿಸುವುದಕ್ಕಾಗಿಯೇ ರಾಮ ಶಬರಿ ತಿಂದುಳಿದ ಹಣ್ಣನ್ನು ತಿನ್ನುತ್ತಾನೆ. ತಾನು ಶಬರಿಯಲ್ಲೂ ಇದ್ದೇನೆ ಎಂದು ಸೂಕ್ಷ್ಮವಾಗಿಯೂ ಪರೋಕ್ಷವಾಗಿಯೂ ಹೇಳುವಂತಹ ಸನ್ನಿವೇಶವಿದು. ಹಾಗಾಗಿ ಕವಿ ರಚಿಸಿ ಕೊಟ್ಟ ಈ “ಮಧುರತಳಾಂಬುಜ ವದನೆ....” ಎಂಬ ಪದ ಎಷ್ಟೊಂದು ಅರ್ಥಗರ್ಭಿತ ಎಂದು ಕಾಣಬಹುದು.  ಹಲವು ವರ್ಷಗಳಿಂದ ರಾಮನಿಗಾಗಿ ಶಬರಿ ಕಾಯುತ್ತಾಳೆ. ವ್ಯಾಧರೂಪದಲ್ಲೆ ಕನಸು ಕಂಡುದರಿಂದಲೋ ಅದೇ ರೂಪದಲ್ಲಿ ಪ್ರತ್ಯಕ್ಷವಾಗಿಯೂ ಸಾಕ್ಷಾತ್ಕರಿಸಿಕೊಳ್ಳುತ್ತಾಳೆ. ನಾರುಮಡಿಯಲ್ಲಿ ಜಟಾ ವಲ್ಕಲ ಧಾರಿಯ ರಾಮ ಆಕೆಗೆ ಶಬರನಂತೆ ಕಂಡರೆ ಅಚ್ಚರಿಯಿಲ್ಲ. ಇದೊಂದು ರೀತಿಯ ’ಯದ್ಭಾವಂ ತದ್ಬವತಿ’  ಎಂಬುದರ ಪ್ರತ್ಯಕ್ಷ ದರ್ಶನ. ಅಷ್ಟು ವರ್ಷಕಾದ ಶಬರಿಗೆ ಅದೇ ಸಿದ್ದಿಯಾಗುತ್ತದೆ. ಆದರೆ ರಾಮ ದರ್ಶನದಲ್ಲೇ ಆಕೆಗೆ ಕೈವಲ್ಯ ಸಾಧ್ಯವಾಗುತ್ತದೆ. ಅದನ್ನು ಈ ರೀತಿಯಲ್ಲಿ ಕಾಣಬಹುದು.  ಮೂರು ದಿನದಿಂದ ಒಂದು ಕೋಣೆಯಲ್ಲಿ ಕತ್ತಲು ತುಂಬಿದೆ. ಆದರೆ ಅಲ್ಲಿ ದೀಪ ಉರಿಸಿಟ್ಟ ಕೂಡಲೆ ಕತ್ತಲು ಮಾಯವಾಗುತ್ತದೆ.  ಬೆಳಕು ಹೇಳುವುದಿಲ್ಲ, ಮೂರು ದಿನದಿಂದ ತುಂಬಿಕೊಂಡಿದ್ದ ಕತ್ತಲು ಕಳೆಯಲು ಮೂರು ದಿನ ಬೇಕು ಎಂದು. ಪರಮಾತ್ಮನ ದರ್ಶನ ಭಾಗ್ಯ ಎಂದರೆ ಅದು. ದರ್ಶನವಾದ ಮಾತ್ರಕ್ಕೆ ಬದುಕಿನ ಕತ್ತಲು ಕಳೆದು ಹೋಗುತ್ತದೆ.
ದಾರಿಯದಾವುದು ತರುಣಿ | ತೋರಿಕೊಡೆ ನಾರೀಮಣಿ |
ಚಾರು ಸರೋವರದೆಡೆಗೆ | ಪೋಗಲುಬೇಕೀಗೆಮಗೆ ||
ರಾಘವಕೇಳೀ ಪಥದಿ | ಸಾಗಿದರಾ ಸುರವನದಿ |
ಮೇಗೆ ಸರೋವರವಿಹುದು | ತೋರುವುದೇ ಪಂಪೆಯದು ||
ಪ್ರತಿಯೊಬ್ಬನ ಬದುಕಲ್ಲೂ ಒಂದೊಂದು ಸಲ ಹೀಗಾಗುವುದುಂಟು. ಸಂಕಷ್ಟಗಳಿಂದ ಬಳಲಿ ಏನೂ ಮಾಡಲಾಗದಂತಹ ಪರಿಸ್ಥಿತಿ. ಹೇಗೆ ನಿವಾರಣೆ ಮಾಡಬೇಕು ಎಂದು ಆಯೋಮಯರಾಗುವ ಒಂದು ಸ್ಥಿತಿಯಲ್ಲಿ ಕೊನೆಯ ಸಾಂತ್ವನ ಎಂಬಂತೆ ತಾಯಿ ಮಡಿಲು ಸೇರಿಬಿಡುತ್ತೇವೆ. ತಾಯಿಗೆ ಸಾಧ್ಯವಾಗುತ್ತದೋ ಇಲ್ಲವೋ ಆದರೆ ಸಾಂತ್ವಾನದ ಪರಮ ಸ್ಥಿತಿಯದು. ಸೀತೆಯನ್ನು ಕಳೆದುಕೊಂಡ ರಾಮನ ಸ್ಥಿತಿಯೂ ಲೌಕಿಕವಾಗಿ ಅದೇ ಆಗಿರುತ್ತದೆ. ಚಿತ್ತವಿಭ್ರಮಣೆಗೊಂಡ ಆತನಿಗೆ ಕೌಸಲ್ಯೆಯ ಸ್ಥಾನವನ್ನು ತುಂಬಿಕೊಟ್ಟವಳು ಶಬರಿ. ತನ್ನ ಪತ್ನಿ ರಾವಣನಿಂದ ಅಪಹರಿಸಲ್ಪಟ್ಟ ಸಂಗತಿಯನ್ನು ಆಕೆಯಲ್ಲಿ ಹೇಳುತ್ತಾನೆ. ಆಗಲೇ ಅವಳು ಮುಂದಿನ ದಾರಿಯನ್ನು ರಾಮನಿಗೆ ತೋರುತ್ತಾಳೆ. ಮುಂದೆ ಪಂಪಾ ನದಿಯ ತಟದಲ್ಲಿ ತನ್ನಂತೆ ರಾಮನಿಗಾಗಿ ಕಾದು ಕುಳಿತ ಹನುಮನ ಬಗ್ಗೆ ಹೇಳುತ್ತಾಳೆ. ಆ ಮೂಲಕ ಸೂರ್ಯನಂದನ ಸುಗ್ರೀವನ ಸಖ್ಯವನ್ನು ಬೆಳಸಿದರೆ,  ರಾವಣನ ವಶದಲ್ಲಿದ್ದ ಸೀತೆಯನ್ನು ಅನ್ವೇಷಣೆ ಮಾಡುವುದು ಸುಲಭವಾಗುತ್ತದೆ. ಕತ್ತಲಲ್ಲಿದ್ದ ಶಬರಿಗೆ ರಾಮನೊಂದು ಬೆಳಕಾಗಿ ತೋರಿಬಂದರೆ, ಮುಂದೇನು ಎಂದು ತಿಳಿಯದೇ ಇದ್ದ ರಾಮನಿಗೆ ದಾರಿಯನ್ನು ತೋರುತ್ತಾಳೆ.  ರಾಮನಿಗೆ ದಾರಿ ತೋರಿದ ಶಬರಿ ರಾಮ ಬೆಳಕು ಚೆಲ್ಲಿದ ಕೈವಲ್ಯದ ಹಾದಿಯಲ್ಲಿ ಸಾಗುತ್ತಾ ರಾಮನಲ್ಲೇ ಐಕ್ಯಳಾಗುವಲ್ಲಿಗೆ ಮಂಗಳವಾಗುತ್ತದೆ.
ಕರದೊಳು ಪರಶು ಪಾಶಾಂಕುಶ ಧಾರಗೆ |  ಹರುಷದೀ ಭಕ್ತರ ಪೊರೆವವಗೇ ||
ಉರಗ ಭೂಷಣನ ಕುಮಾರಗಜವದನನ | ಚರಣಕಮಲಗಳಿಗಾರತಿ ಎತ್ತಿರೆ ||
ಗಜಮುಖದವಗೆ ಗಣಪಗೆ ||
ಮಂಗಳಂ