"ಇದು ವಿಮರ್ಶೆಯಲ್ಲದ ಚಿಂತನ"

Saturday, October 27, 2018

ಶ್ರೀ ಸೂರಿಕುಮೇರಿ ಗೋವಿಂದ ಭಟ್ ನಾನು ಕಂಡಂತೆ.....



ಶ್ರೀ ಕಟೀಲು ಸಿತ್ಲ ರಂಗನಾಥ ರಾವ್ ರವರು 
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು ಇದರ ಸಹಭಾಗಿತ್ವದಲ್ಲಿ ಮಾಡಿದ ಸಂದರ್ಶನಗಳಲ್ಲಿ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರ ಸಂದರ್ಶನವನ್ನು (ಶ್ರೀ ಸೂರಿಕುಮೇರಿ ಗೋವಿಂದ ಭಟ್ಟರ ಸಾಕ್ಷ್ಯ ಚಿತ್ರ) ಮಾಡಿದ್ದರು. ಆ ಸಂದರ್ಶನಕ್ಕೆ ಶ್ರೀ ಗೋವಿಂದ ಭಟ್ಟರ ಪರಿಚಯ ಲೇಖನವನ್ನು ಬರೆಯುವಂತೆ ನನ್ನಲ್ಲಿ ವಿನಂತಿಸಿದ್ದರು, ಅವರು ನೀಡಿದ ಅವಕಾಶದಂತೆ ಈ ಲೇಖನವನ್ನು ನನ್ನ ಅನಿಸಿಕೆ ಎಂಬಂತೆ ಬರೆದಿದ್ದೇನೆ. ಇದೇ ಲೇಖನವನ್ನು ಶ್ರಿ ಭಟ್ಟರ ಸಂದರ್ಶನದ ವಿಡಿಯೋದಲ್ಲಿ ಉಪಯೋಗಿಸಿಕೊಂಡಿದ್ದರು. ಅದನ್ನು ಧನ್ಯತಾ ಪೂರ್ವಕವಾಗಿ ಇಲ್ಲಿ ಹಾಕಿರುತ್ತೇನೆ. 

ಸಂದರ್ಶನ ವೀಡಿಯೋಗಾಗಿ ಈ ಲಿಂಕ್ ಉಪಯೋಗಿಸಿ.


ಹಸಿವು ಇದು ವ್ಯಾವಹಾರಿಕ ಪ್ರಪಂಚದ ಅಸ್ತಿತ್ವದ ಸಂಕೇತ. ಎಷ್ಟೆ ದೊಡ್ಡ ಖಜಾನೆಯನ್ನಾದರೂ ತುಂಬಿಸಿ ಸಂಗ್ರಹಿಸಿ ಇಡಬಹುದು. ಆದರೆ ಹೊಟ್ಟೆಯನ್ನು ತುಂಬಿಸಿ ಇಡುವುದು ಸಾಧ್ಯವಿಲ್ಲ. ಹಸಿವು ಯಾವುದೇ ಪ್ರಾಣಿ ಹುಟ್ಟಿದಾಕ್ಷಣ ಜತೆಯಾಗುವ ಪ್ರವೃತ್ತಿ. ಹಸಿವು...ಹಸಿವು ಇದು ಜೀವ ಜಗತ್ತಿನ ಆರೋಗ್ಯದ ಲಕ್ಷಣ. ಹಾಗಾಗಿ ವ್ಯಾವಹಾರಿಕ ಪ್ರಪಂಚದ ಮೂಲ ಇರುವುದೇ ಹಸಿವಿನಲ್ಲಿ. ಈ ಹಸಿವಿನ ಪರಿಮಾರ್ಜನೆಯೇ ಎಲ್ಲ ಪ್ರವೃತ್ತಿಗೂ ಮೂಲ ಕಾರಣ. ಹಸಿವು ಎಂದಿನ ವರೆಗೆ ಇರುತ್ತದೋ ಅಂದಿನವರೆಗೆ ಪ್ರಪಂಚ ಚಲನ ಶೀಲವಾಗಿರುತ್ತದೆ. ಮನುಷ್ಯ ಪ್ರಾಣಿಗಳೂ  ಹಾಗೆ ಹಸಿವು ಇರುವ ತನಕ ಸದಾ ಪ್ರವೃತ್ತಿಯಲ್ಲಿರುತ್ತವೆ. ಅಥವಾ ಹಸಿವು ಎಲ್ಲವನ್ನೂ ಜೀವಂತವಾಗಿರುಸುತ್ತದೆ. ಇದು ವ್ಯಾವಹಾರಿಕ ಪ್ರಪಂಚದ ಸತ್ಯ. ಈ ಸತ್ಯದ ಬೆನ್ನಟ್ಟಿ ಹೋದ   ಹಲವರು  ಇಂದು ನಮ್ಮ ನಡುವೆ ಮಹಾನ್ ವ್ಯಕ್ತಿಗಳಾಗಿ ಈ ಪ್ರಪಂಚದ ಸತ್ಯವನ್ನು ತೆರೆದು ತೋರಿಸುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಶ್ರೀ ಸೂರಿಕುಮೇರಿ ಗೋವಿಂದ ಭಟ್.

ಸೂರಿಕುಮೇರಿ ಎಂದಾಗ ಯಕ್ಷಗಾನ ಲೋಕದಲ್ಲಿ ಒಂದು ಸ್ಪಷ್ಟ ಕಲ್ಪನೆ ಮೂಡುತ್ತದೆ. ಸೂರಿಕುಮೇರಿ ಎಂಬ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮ ಎಲ್ಲಿದೆಯೋ ಎಷ್ಟು ಜನರಿಗೆ ತಿಳಿದಿದೆಯೋ ಗೊತ್ತಿಲ್ಲ. ಆದರೆ ಸೂರಿಕುಮೇರಿ ಜತೆಗೆ ಗೋವಿಂದ ಭಟ್ಟರ ಹೆಸರು ತಳುಕು ಹಾಕಿಕೊಂಡಾಗ ಸ್ಪಷ್ಟ ಮುಖವೊಂದು ಮನಸ್ಸಿನಲ್ಲಿ ತೇಲಿ ಬರುತ್ತದೆ. ಅದೇ ಪ್ರಶಾಂತ ಮುಖ. ರಂಗದ ಮೇಲೆ ನವರಸಗಳನ್ನು ಕ್ಷಣದಲ್ಲೇ ಚಿಮ್ಮಿಸಬಲ್ಲ ಅದೇ ಮುಖ.  ಯಕ್ಷಗಾನ ಲೋಕದ ಅತ್ಯಂತ ಜನಪ್ರಿಯ ವ್ಯಕ್ತಿ ಸೂರಿಕುಮೇರಿ ಗೋವಿಂದ ಭಟ್.

ಬಡ ಪುರೋಹಿತ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಶ್ರೀ ಭಟ್ಟರ ಜನ್ಮದಿಂದಲೇ ಬಡತನ ಬೆಂಬತ್ತಿ ಬಂದಿತ್ತು. ಕೌಟುಂಬಿಕ ಸಾಮಾಜಿಕ ಹೀಗೆ ಹಲವು ಕಾರಣಗಳಿದ್ದರೂ ಜೀವನದ ಹಲವು ಪರೀಕ್ಷೆಗಳಿಗೆ ಎಳವೆಯಲ್ಲೇ ತನಗರಿವಿಲ್ಲದೇ ಎದೆಯೊಡ್ಡಿದವರು. ತನಗರಿವಿಲ್ಲದೇ ಎಂದು ಹೇಳುವುದಕ್ಕೆ ಕಾರಣವಿದೆ. ಬಾಲ್ಯದಲ್ಲಿ ಅವರನ್ನು ಬಾಧಿಸಿದ್ದು ಎಂದರೆ ಹಸಿವು. ಹಸಿದವನಿಗೆ ಮೊದಲ ಸಮಸ್ಯೆಯೇ ಹಸಿವು. ಅದು ಪರಿಹರಿಸುವವರೆಗೂ ಬೇರೇ ಯಾವ ದುರಿತಗಳೂ ಕಣ್ಣಿಗೆ ಕಾಣಿಸುವುದಿಲ್ಲ. ಆ ಹಸಿವಿನ ಪರಿಹಾರಕ್ಕಾಗಿ ಇವರು ಜೀವನದ ಹಲವು ಸಮಸ್ಯೆಗಳನ್ನು ದಾಟುವ ಪ್ರಯತ್ನ ಅನಿವಾರ್ಯವಾಗಿ ಮಾಡಲೇ ಬೇಕಾಯಿತು. ಹಾಗಾಗಿ ಹಸಿವು ಅವರನ್ನು ಎಲ್ಲೆಲ್ಲೆ ಕರೆದುಕೊಂಡು ಹೋಯಿತೋ ಅಲ್ಲೆಲ್ಲ ಗೋವಿನಂತೆ ಗೋವಿಂದ ಭಟ್ಟರು ಸಂಚರಿಸಿದರು. ಈ ಸಂಚಾರದ ದಿಕ್ಸೂಚಿ ಯಕ್ಷಗಾನ ರಂಗಸ್ಥಳವನ್ನೇ ತೋರಿಸಿದ್ದು ಯಕ್ಷಗಾನದ ಜನಪ್ರಿಯ ಕಲಾವಿದನ ಸೃಷ್ಟಿಗೆ ಕಾರಣವಾಯಿತು. ಇದನ್ನು ಗೋವಿಂದ ಭಟ್ಟರು ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಾರೆ.


ಸಾಮಾನ್ಯವಾಗಿ ಹಸಿವಿನಲ್ಲಿ ಕ್ರಿಯಾಶೀಲವಾಗುವ ಮನಸ್ಸು ಹೊಟ್ಟೆ ತುಂಬಿದಾಗ ಆಲಸ್ಯವನ್ನು ಅನುಭವಿಸುತ್ತದೆ. ಹೊಟ್ಟೆ ಹಸಿವು ಎಂದು ಬೇಡಿಕೊಂಡು ಬರುವ ಭಿಕ್ಷುಕ ಅಥವಾ ಇನ್ನಾರೋ ಅನ್ನ ಹಾಕುವವರೆಗೆ ಬೇಕಾದದ್ದನ್ನು ಮಾಡುವ ಮನಸ್ಸು ಮಾಡುತ್ತಾನೆ. ಹೊಟ್ಟೆ ತುಂಬಿತೋ ಆನಂತರ ಮಾಡಬೇಕಾದ ಕೆಲಸದಲ್ಲಿ ಔದಾಸಿನ್ಯ ಅರಿವಿಲ್ಲದೇ ಬಂದು ಬಿಡುತ್ತದೆ. ಆದರೆ ಗೋವಿಂದ ಭಟ್ಟರು ಯಾವ ಹಸಿವಿಗಾಗಿ ರಂಗಸ್ಥಳವೇರಿದರೋ ಹಸಿವು ನೀಗಿ ಹೊಟ್ಟೆ ತುಂಬಿದಾಗ ಆಲಸಿಗಳಾಗಲಿಲ್ಲ. ಅನ್ನ ಕೊಟ್ಟ ಕಸುಬಿಗೆ ಪ್ರಾಮಾಣಿಕತೆಯನ್ನು ತೋರಿಸಿದರು. ಅದಕ್ಕಾಗಿ ಸಹಜ ಕಲಾವಿದನಿಗಿಂತಲೂ ಅಧಿಕ ತಾದಾತ್ಮ್ಯವನ್ನು ತೋರಿಸಿದರು.  ಈ ಪ್ರಾಮಾಣಿಕತೆ ಅರ್ಪಣಾ ಭಾವ ಭಟ್ಟರನ್ನು ಯಕ್ಷಗಾನ ರಂಗದ ಅದ್ವಿತೀಯ ಕಲಾವಿದನನ್ನಾಗಿಸಿದೆ. ಇಂದಿಂಗೂ ಗೋವಿಂದ ಭಟ್ಟರು ಅದೇ ಭಾವದಿಂದ ರಂಗದಲ್ಲಿ ಕ್ರಿಯಾ ಶೀಲರಾಗಿದ್ದಾರೆ ಎಂದರೆ ವೃತ್ತಿಯಲ್ಲಿ ಅವರ ಬದ್ದತೆಯನ್ನು ತೋರಿಸುತ್ತದೆ. ಇಷ್ಟಾಗಿಯೂ ಅವರು ಹೇಳುವ ಮಾತು ಒಂದೇ “ನಾನು ಕಲಾಪ್ರೇಮದಿಂಡ ಯಕ್ಷಗಾನದ ಹುಚ್ಚಿನಿಂದ ವೇಷ ಹಾಕಿದವನಲ್ಲ. ಜೀವನದ ಪಾಠವೇ ನನಗೆ ಬಣ್ಣವನ್ನು ಬಳಿಯಿತು.”  ಅದೆಂತಹಾ ಪ್ರಾಮಾಣಿಕತೆ?

ಯಕ್ಷಗಾನ ಲೋಕ ಕೊಟ್ಟ ಅನ್ನವನ್ನು ಅವರೆಂದೂ ಮರೆಯಲಿಲ್ಲ. ಹಾಗಾಗಿಯೇ ಅವರ ಮುಖದಲ್ಲಿ ಅಳಿಯದ ಪ್ರಸನ್ನತಾ ಭಾವ ಸದಾ ಹಸಿರಾಗಿರುತ್ತದೆ. ಇಂದಿಗೂ ಇಷ್ಟು ದೀರ್ಘವಾದ ಕಲಾ ಜೀವನವನ್ನು ಜತೆಗೆ ವಾಸ್ತವ ಬದುಕನ್ನು ಕಂಡ ಅವರಲ್ಲಿ ಸಂತೃಪ್ತಿಯ ಭಾವವಿದೆ. ಮನುಷ್ಯನಿಗೆ ಸಂತೃಪ್ತಿ ಮೂಡವುದು ಭಗವಂತನಲ್ಲಿ  ವಿಶ್ವಾಸವಿರಿಸಿದಾಗ ಮಾತ್ರ. ಭಗವಂತನಲ್ಲಿ ವಿಶ್ವಾಸ ಅಚಲವಾಗಿ ಉಳಿಯಬೇಕಾದರೆ ಆತ ನಿತ್ಯಾಹ್ನಿಕಗಳನ್ನು, ಕರ್ಮ ಅನುಷ್ಠಾನಗಳನ್ನು ಪಾಲಿಸಬೇಕು.  ಇವುಗಳು ಯಾವುದೇ ಫಲಾಫಲದ ನಿರೀಕ್ಷೆಯಿಲ್ಲದೇ ಸಂಕಲ್ಪಿಸುವ ಪರಮಾತ್ಮ ಸ್ಮರಣೆಗಳು. ಕರ್ಮಾನುಷ್ಠಾನಗಳಲ್ಲಿ ಅಚಲವಾದ ನಿಷ್ಠೆಯನ್ನು ಪಾಲಿಸುವ ಇವರು ಯಾವತ್ತೂ ಸ್ಥಿರಮಾನಸ ಚಿತ್ತರಾಗಿ ವ್ಯವಹರಸುತ್ತಾರೆ. ವಾಸ್ತವದ ಬದುಕಿನ ಬಗ್ಗೆ ನಿರ್ದಿಷ್ಟವಾಗಿ ಯೋಚಿಸುತ್ತಾರೆ. ಹಾಗಾಗಿ ನಿತ್ಯ ಶಾಂತರಾಗಿ ಬಾಸವಾಗುತ್ತಾರೆ.  ಯಾವ ಉದ್ವೇಗವಿದ್ದರೂ ಇವರ ಮುಖವನ್ನು ನೋಡಿದರೆ ಆ ಉದ್ವೇಗ ಪರಿಹರಿಸಲ್ಪಡುತ್ತದೆ.

ಇವರ ಬಗ್ಗೆ ನನಗಿಂತಲೂ ಹೆಚ್ಚು ತಿಳಿದವರು ಬಹಳಷ್ಟು ಇದ್ದಾರೆ. ಆದುದರಿಂದ ನಾನು ಹೇಳುವ ಈ ಪರಿಚಯ ಲೇಖನ ನನ್ನ ಅರಿವಿಗಷ್ಟೆ ಸೀಮಿತ. ನನಗರಿಯದ ಗೋವಿಂದ ಭಟ್ಟರ ಪುಸ್ತಕದ ಪುಟಗಳು ಇನ್ನೂ ಬಹಳಷ್ಟಿವೆ.

ಯಕ್ಷಗಾನದ ಹಲವು ದಿಗ್ಗಜರ ವಿದ್ವಾಂಸರ ಸಂದರ್ಶನವನ್ನು ದಾಖಲಿಸಿದ ಮಿತ್ರ ರಂಗಣ್ಣನಿಗೆ ಗೋವಿಂದ ಭಟ್ಟರ ಸಂದರ್ಶನ ಮಾಡಬೇಕೆಂಬ ಬಯಕೆ ಮೊದಲಿನಿಂದಲೇ ಇತ್ತು. ನನ್ನಿಂದ ಅದಕ್ಕೆ ಚಿಕ್ಕ ಮಟ್ಟಿನ ಪ್ರೋತ್ಸಾಹವೂ ದೊರಕಿದಾಗ ರಂಗನಾಥರು ಹತ್ಯಾರ ಹೆಗಲಿಗೇರಿಸಿ ಹೊರಟೇ ಬಿಟ್ಟರು. ಸಾಮಾನ್ಯವಾಗಿ ಸಂದರ್ಶನಕ್ಕೆ ಹೋಗುವಾಗ ಒಂದಲ್ಲ ಸಾವಿರ ಕುತೂಹಲ ವಿರುತ್ತದೆ. ಇಂತಿಂತಹ ಪ್ರಶ್ನೆಗಳಿಗೆ ಹೇಗೆ ಉತ್ತರ ಸಿಗಬಹುದು? ಯಾವ ಪ್ರತಿಕ್ರಿಯೆ ಇರಬಹುದು? ಇದು ಸಹಜ. ಆದರೆ ಗೋವಿಂದ ಭಟ್ಟರ ಸಂದರ್ಶನಕ್ಕೆ ಇವರು ಹೊರಟು ನಿಂತಾಗ ಪ್ರಶ್ನೆಗಳು ಅದಕ್ಕೆ ಉತ್ತರವೂ ನಮ್ಮ ಕೈಯಲ್ಲಿತ್ತು. ಅಂದರೆ ಯಾವುದೇ ಪ್ರಶ್ನೆಗಳಿಗೂ ಗೋವಿಂದ ಭಟ್ಟರ ಉತ್ತರ ಹೀಗೆ ಇರುತ್ತದೆ ಎಂಬ ಖಚಿತ ನಿಲುವು ಅಲ್ಲಿತ್ತು. ಯಾಕೆಂದರೆ ಭಟ್ಟರ ವ್ಯಕ್ತಿತ್ವ ಆ ರೀತಿಯದ್ದು. ಅಲ್ಲಿ ಆಷಾಢ ಭೂತಿ ತನವಿಲ್ಲ. ರಂಗದ ಮೇಲಿರುವ ಅಭಿನಯ ಅಲ್ಲಿ ಇಲ್ಲ. ಎಲ್ಲವೂ ನೇರ ಸ್ಪಷ್ಟ. ಖಚಿತವಾದವುಗಳು. ಹಾಗಾಗಿ ಸಂದರ್ಶನ ಮಾಡಿದ ಸಾಧನೆಯ ತೃಪ್ತಿ ಮಾತ್ರ ಇಲ್ಲಿರುತ್ತದೆ. ಅಂದಿನಿಂದ ಇಂದಿನವರೆಗೂ ಗೋವಿಂದ ಭಟ್ಟರ ನಿಲುವು ಬದಲಾದದ್ದನ್ನು ನಾನು ನೋಡಿಲ್ಲ. ಯಾವುದೇ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾರೆ ಎಂಬ ಸ್ಪಷ್ಟ ನಂಬಿಕೆ ನನಗಿತ್ತು. ಅದು ಪರಮ ಸತ್ಯವಾದ ವಿಚಾರ. ಇದೊಂದು ಭಟ್ಟರ ವ್ಯಕ್ತಿತ್ವದ ವೈಶಿಷ್ಟ್ಯತೆ.

ಗೋವಿಂದ ಭಟ್ಟರಲ್ಲಿ ನಾನು ಕಂಡದ್ದು ಜೀವನದ ವಾಸ್ತವಿಕ ಸತ್ಯಗಳನ್ನು. ಅವರೊಂದಿಗೆ ಹೃದ್ಯವಾಗಿ ಮಾತಿಗಿಳಿದರೆ ಇದು ಅರ್ಥವಾಗುತ್ತದೆ. ಹಾಗಾಗಿ ಅವರು ಯಕ್ಷಗಾನವನ್ನು ಕೇವಲ ಕಲೆಯಾಗಿ ಕಾಣಲಿಲ್ಲ. ತನ್ನ ಜೀವನದ ಸತ್ಯಗಳಿಗೆ ಉತ್ತರವಾಗಿ ಅದನ್ನು ಕಂಡರು.  ಆ ಸತ್ಯಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿದರು. ಅದುದರಿಂದಲೇ  ಒಬ್ಬ ಕಲಾವಿದನಾಗಿ ಭಟ್ಟರು ಬಹಳ ಸ್ವಾವಲಂಬಿಗಳು. ಚೌಕಿಯಲ್ಲಿ ಇದನ್ನು ಕಾಣಬಹುದು.  ಅವರ ವೇಷ ಭೂಷಣಗಳನ್ನು ಸ್ವತಃ ಅವರೇ ಮಡಚಿ ಒಪ್ಪವಾಗಿ ಇಡುತ್ತಾರೆ. ವೃತ್ತಿಯಲ್ಲಿ ಶ್ರದ್ದೆ.   ಅದಕ್ಕೆ ಕಾರಣ ಅನ್ನ ಕೊಟ್ಟು ಹಸಿವು ನೀಗಿದ ಕೈಗಳು. ಹಾಗಾಗಿ ಇನ್ನೂ ವಿರಮಿಸದ ಪ್ರವೃತ್ತಿ. ಹೊಟ್ಟೆ ಹಸಿವು ನೀಗಿದರೂ ಈಗಿನ ಹಸಿವಿನ ರೂಪ ಬೇರೆಯೇ ಇರಬಹುದು.

ಗೋವಿಂದ ಭಟ್ಟರ ಜತೆ ಒಂದಷ್ಟು ಸಮಯವನ್ನು ಹಲವು ಸಲ ಕಳೆದಿದ್ದೇನೆ. ಆದರೆ ಅಷ್ಟೂ ಹೊತ್ತು ನಾನು ಯಕ್ಷಗಾನದ ಬಗ್ಗೆ ಅವರ ಕಲಾಜೀವನದ ಬಗ್ಗೆ ಮಾತನಾಡಿದ್ದು ಕಡಿಮೆ. ಯಾಕೆಂದರೆ ಜೀವನದ ವ್ಯಾವಹಾರಿಕ ಸತ್ಯಗಳು ಅವರನ್ನು ಕಂಡಾಗ ಯೋಚನೆಗೆ ಬರುತ್ತವೆ. ಅದರ ಬಗ್ಗೆ ಮಾತನಾಡಿದಾಗ ಅವರು ಪ್ರಾಮಾಣಿಕವಾಗಿ ಬಿಡುತ್ತಾರೆ. ಮನಸ್ಸಿನ ಅನಿಸಿಕೆಗಳನ್ನು ಸರಳವಾಗಿ ಹೇಳಿಬಿಡುತ್ತಾರೆ. ಕೇಳುವವರು ಏನೇ ತಿಳಿಯಲಿ ತನ್ನ ಜೀವನದಲ್ಲಿ ಕಂಡ ಸತ್ಯಗಳ ಬಗ್ಗೆಅವರು ನಿಷ್ಠೂರರಾಗಿ ಬಿಡುತ್ತಾರೆ. ತತ್ವ ಸಿದ್ದಾಂತಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಜಾಯಮಾನವಿಲ್ಲ. ಅವರು ಕಂಡುಕೊಂಡ ಜೀವನ ಸತ್ಯಗಳಲ್ಲಿ ಅಚಲವಾದ ವಿಶ್ವಾಸ. ಅದನ್ನು ಅಲ್ಲಗಳೆಯುವ ಅನುಭವ ನಮ್ಮದಲ್ಲ.

ಇವರು ಎಂದಿಗೂ ತನ್ನ ಬಗ್ಗೆ ಹೇಳಿಕೊಂಡವರಲ್ಲ. ಹಾಗಾದುದರಿಂದಲೇ ರಂಗನಾಥರು ಸಂದರ್ಶನ ಮಾಡಿ  ಇವರ ಸ್ವ ಪರಿಚಯ ( ಬಯೋಡಾಟ)  ವನ್ನು ಕೇಳಿದರು. ಅದಕ್ಕವರು ಮತ್ತೆ ಯೋಚಿಸದೆ ಒಂದೇ ಮಾತು ಅದನ್ನು ರಾಜಕುಮಾರ ನಲ್ಲೇ ಕೇಳಿಬಿಡಿ. ಎಲ್ಲಾ ವಿವರ ಸಿಗುತ್ತದೆ. ತಮ್ಮ ಸಮೀಪ ವರ್ತಿಗಳಲ್ಲಿ ಅದೊಂದು ವಿಶ್ವಾಸ. ನಾನೇನು ಹೇಳಿಯೇನು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ತಮ್ಮದಲ್ಲದೇ ಇದ್ದದ್ದನ್ನು ಸೇರಿಸಿ ಹೇಳುವವರೇ ಅಧಿಕ. ಹಾಗಿರುವಾಗ ತಾವೇನೂ ಆಡದೆ ಅದನ್ನು ನನ್ನ ತಲೆಗೆ ರವಾನಿಸಿಬಿಟ್ಟರು.

ಇವರಲ್ಲಿ ನಾನು ಕಂಡ ಅತ್ಯಂತ ಶ್ರೇಷ್ಠ ಗುಣವೆಂದರೆ, ಬ್ರಾಹ್ಮಣನಾಗಿ ಇವರು ಕರ್ಮ ನಿಷ್ಠರಾಗಿ ಅನುಷ್ಠಾನವನ್ನು ಸದಾ ಕಾಯ್ದುಕೊಂಡಿರುವುದು.  ಇವರ ವೃತ್ತಿ ಪ್ರವೃತ್ತಿ ನಿತ್ಯಾಹ್ನಿಕಗಳನ್ನು ಬಾಧಿಸುವುದಿಲ್ಲ. ವ್ಯಾವಹಾರಿಕ ಪ್ರಪಂಚದ ವಾಸ್ತವಗಳೊಂದಿಗೆ ಸದಾ ಸ್ಪಂದಿಸುತ್ತಾರೆ.  ಯಕ್ಷಗಾನವಲ್ಲದೇ ಇದ್ದರೆ ಪೌರೋ ಹಿತ್ಯವನ್ನೂ ಮಾಡಬಲ್ಲರು, ಪಾಜಕರಾಗಿ ಸೌಟನ್ನೂ ಹಿಡಿಯಬಲ್ಲರು. ವ್ಯಾವಹಾರಿಕ ಜೀವನದ ಪ್ರವೃತ್ತಿಯನ್ನು ಎಂದಿಗೂ ಬಿಡದ ಚಲನ ಶೀಲ ವ್ಯಕ್ತಿತ್ವ. ಜೀವನಕ್ಕೆ ಯಾವುದನ್ನಾದರೂ ದುಡಿಯಬೇಕು. ಅದರಲ್ಲಿ ಇರುವ ಶ್ರದ್ದೆ. ಬಹುಶಃ ಬಾಲ್ಯದ ಬವಣೆಗಳು ಇದನ್ನು ಕಲಿಸಿರುತ್ತದೆ.

ವ್ಯಾವಹಾರಿಕ ಪ್ರಪಂಚದ ಪರಮ ಸತ್ಯವನ್ನು ಚೆನ್ನಾಗಿ ಅರಿತವರು. ಹಾಗಾಗಿ ಇವರು ನಿರ್ಲಿಪ್ತರಾಗಿಯೂ ಇರಬಲ್ಲರು. ಅವರ ಪ್ರವೃತ್ತಿಯಲ್ಲಿ ಇದು ಅವರಿಗೆ ಪ್ರಿಯವಾದ ನಿಲುವು.. ಬಹಳಷ್ಟು ಯೋಚಿಸಿ ಮಥಿಸಿ ಪ್ರಪಂಚವನ್ನು ಅವಲೋಕಿಸಿ ಅವರು ತನ್ನ ನಿಲುಮೆಯನ್ನು ತಳೆಯುತ್ತಾರೆ. ಯಾರೇನೇ ಹೇಳಿದರೂ ತನ್ನ ನಿಲುಮೆಯ ಬಗ್ಗೆ ಅಚಲವಾದ ವಿಶ್ವಾಸ. ಸೌಮ್ಯವಾಗಿಯೇ ಪರಿಣಾಮವನ್ನೂ ಬೀರ ಬಲ್ಲ ವ್ಯಕ್ತಿತ್ವ
.
ಇಂದಿನ ಯುವಕರನ್ನೂ ನಾಚಿಸಬಲ್ಲ ಚಲನ ಶೀಲತೆ. ಚಟುವಟಿಕೆ. ರಂಗದ ಮೇಲಿನ ಪ್ರವೃತ್ತಿ, ಇದೆಲ್ಲವೂ ಅವರಿಗೆ ಒಲಿದದ್ದು ಅವರ ಯೋಗಾಭ್ಯಾಸದಿಂದ. ಅದರಿಂದ ಇನ್ನೊಬ್ಬರಿಗೆ ಸ್ಫೂರ್ತಿಯಾಗಬಲ್ಲರು. ಯಕ್ಷಗಾನದಲ್ಲಿ ಹಲವಾರು ಶಿಷ್ಯವರ್ಗವನ್ನು  ಹೊಂದಿದವರು ಇವರು.

ಬಹಳ ಸರಳ ಮತ್ತು ನೇರ ವ್ಯಕ್ತಿತ್ವ. ಶಾಂತ ಸ್ವಭಾವವಾದರೂ ಇವರ ತೀಕ್ಷ್ಣ ಅವಲೋಕನ ಸದಾ ಹಿಂಬಾಲಿಸುತ್ತಿರುತ್ತದೆ.  ಬಹಳ ಬೇಗನೇ ಆತ್ಮೀಯರಾಗಿ ಬಿಡುತ್ತಾರೆ.  ಕಲಾಜೀವನದಲ್ಲಿ ಗೌರವವನ್ನು ಕಾಯ್ದುಕೊಂಡವರು. ನಿರ್ಭಿಡೆಯ ನಡೆ. ಅದಕ್ಕೆ ಅವರದ್ದೆ ಆದ ಕಾರಣಗಳನ್ನು ನಿದರ್ಶನಗಳನ್ನು ಸುಲಭವಾಗಿ ಒದಗಿಸಬಲ್ಲರು. ವ್ಯಯಕ್ತಿವಾಗಿ ಸದ್ಭಾವನೆ ಸಹಕರಣ ಇದೆಲ್ಲದಕ್ಕೂ ಪ್ರತೀಕವಾಗಬಲ್ಲರು. ಒಂದು ಸಲ ಯಕ್ಷಗಾನ ತಾಳ ಮದ್ದಲೆಗೆ ಆಹ್ವಾನಿಸುವ ಅವಕಾಶ ನನಗೆ ಒದಗಿ ಬಂತು. ಕರೆ ಮಾಡಿದೆ. ದಿನ ವಿವರ ಎಲ್ಲ ಕೇಳಿದ ಮೇಲೆ ಬರುತ್ತೇನೆ ಎಂದಷ್ಟೇ ಹೇಳಿ ದಿನಚರಿಯಲ್ಲಿ ಗುರುತು ಮಾಡಿಕೊಂಡರು.  ಬರುತ್ತೇನೆ ಎಂದಷ್ಟೇ ಹೇಳಿದವರು ಮತ್ತೆ ಯಾವ ವಿವರವನ್ನು ಕೇಳಲಿಲ್ಲ. ಸಾಮಾನ್ಯವಾಗಿ ತಾಳ ಮದ್ದಲೆಗೋ ಆಟಕ್ಕೊ ಕರೆದಾಗ ಕಲಾವಿದರು, ಅದರಲ್ಲೂ ತಾರಾಮೌಲ್ಯ ಇದ್ದವರು ಬಹಳಷ್ಟು ಚೌಕಾಶಿಗೆ ಇಳಿಯುವುದುಂಟು. ತಮಗೆ ಇಂತಹುದೇ ಪಾತ್ರವಾಗಬೇಕು, ಇಲ್ಲ ಇಂತಹವರೇ ಪ್ರತಿ ಪ್ರಾತ್ರದಲ್ಲಿ ಇರಬೇಕು. ಇಷ್ಟೇ ಸಂಭಾವನೆ ಸಿಗಬೇಕು. ಇದನ್ನೆಲ್ಲ ಮೊದಲೇ ಮಾತನಾಡಿ ನಿರ್ಧರಿಸಿ ಬಿಡುವ ತವಕ. ಆದರೆ ಗೋವಿಂದ ಭಟ್ಟರು ಎಷ್ಟೇ ವ್ಯಾವಹಾರಿಕವಾಗಿ ಚಿಂತಿಸುವುದಿದ್ದರು ಬರುತ್ತೇನೆ ಎಂಬ ಒಂದು ಒಪ್ಪಿಗೆ ಬಿಟ್ಟರೆ ಬೇರೆ ಮಾತಿಲ್ಲ. ಚೌಕಾಶಿ ಇಲ್ಲ. ಸಂಭಾವನೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕರೆದ ನನ್ನ ಬಗ್ಗೆ ವಿಶ್ವಾಸವೋ ಇಲ್ಲ ಅವರ ಪ್ರವೃತ್ತಿಯೇ ಆ ರೀತಿಯೋ ನನಗೆ ಇಂದಿಗೂ ಕೌತುಕವಾಗಿಯೇ ಉಳಿದಿದೆ. ಕೊನೆಗೆ ನಾನೇ ಕೇಳಿದೆ ಇಂತಹ ಪಾತ್ರ ಮಾಡಬಹುದೇ?  ಆಗ ಶಾಂತವಾದ ಸ್ವರದಲ್ಲಿಯೇ ಹೇಳಿದರು,

“ ನನಗೆಂಥದ್ದೋ? ಎಂಥದ್ದೂ ಅದೀತು? ಯಾವ ಪ್ರಸಂಗವೂ ಯಾವ ಪಾತ್ರವೂ ಅಲ್ಲಿ ಬಂದಾಗ ಹೇಳೀದರೂ ತೊಂದರೆ ಇಲ್ಲ. ಯಾವದೂ ಅದೀತು. “

ಯಕ್ಷಗಾನ ಸಂಘಟಕರಿಗೆ ಇಂತಹ ಕಲಾವಿದರ ಆವಶ್ಯಕತೆ ಈಗ ಬಹಳಷ್ಟಿದೆ ಎನ್ನಿಸಿತು. ಇಷ್ಟು ಹೊಂದಿಕೊಳ್ಳುವ ಕಲಾವಿದರು ಇಂದು ಯಕ್ಷಗಾನದಲ್ಲಿ ಬೆರಳೆಣಿಕೆಯಷ್ಟೇ ಇರುವುದು. ಅಗಾಧವಾದ ಅನುಭವ ಯಾವುದನ್ನೂ ಮಾಡಬಲ್ಲೆ ಎಂಬ ಆತ್ಮ ವಿಶ್ವಾಸ ಇದು ಯಕ್ಷಗಾನ ಅಲ್ಲ ಅವರಿಗೆ ಬದುಕು ಕಲಿಸಿದ ಪಾಠಗಳು. ಅದು ಯಕ್ಷಗಾನದಲ್ಲೂ ವ್ಯಕ್ತವಾಯಿತು.  ಯಕ್ಷಗಾನ ರಂಗದ ಮೇಲೆ ಇವರ ಬದುಕು ಅತೀ ದೀರ್ಘ ಬದುಕು, ಇಷ್ಟು ದೀರ್ಘ ಬದುಕು ಅತ್ಯಂತ ವಿರಳಾತಿ ವಿರಳ ಎನ್ನಬಹುದು. ವಿಶೇಷವೆಂದರೆ ಇವರ ಶಿಷ್ಯಂದಿರು ನಿವೃತ್ತಿ ಪಡೆದುಕೊಂಡು ಮೇಳ ಬಿಟ್ಟು ಹೊರನಡೆದರೂ ಗುರುಗಳಾದ ಇವರು ಇನ್ನೂ ರಂಗದಲ್ಲಿ ಪ್ರವೃತ್ತರಾಗಿಯೇ ಇದ್ದಾರೆ.

ಯಕ್ಷಗಾನದ ವೃತ್ತಿ ಬದುಕಿನಲ್ಲಿ ಇವರು  ಪ್ರವರ್ತಕ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಾರೆ. ಅದಕ್ಕೆ ಅವರದೇ ಆದ ತಾತ್ವಿಕ ಆಧಾರಗಳನ್ನೂ ಸರಳವಾಗಿ ಒದಗಿಸುತ್ತಾರೆ.  ಶ್ರೀ ಕಡತೋಕ ಮಂಜುನಾಥ ಭಾಗವತರ ಸಾರಥ್ಯದಲ್ಲಿ ಗೋವಿಂದಣ್ಣನ ನೈಜ ಪ್ರತಿಭೆ ಪ್ರಕಾಶಕ್ಕೆ ಬಂತು. ಯಾವಾಗ ಕಲಾವಿದನಾದವನು ಪಾತ್ರಕ್ಕೆ ಮಾದರಿಯಾಗುತ್ತಾನೋ ವೃತ್ತಿಜೀವನದ ಪರಮೋತ್ಕರ್ಷ ಸ್ಥಾನವನ್ನು ತಲುಪಿದ ಎಂದೇ ಆಗುತ್ತದೆ.. ಆ ಕಾಲಾದಲ್ಲಿ ಶ್ರೀ ಧರ್ಮಸ್ಥಳ ಮೇಳದ ಗಜ ಪಡೆಯಲ್ಲಿ ಒಂದು ಸೇನಾನಿಯಾಗುವುದು ಮಾತ್ರವಲ್ಲ ಸೇನಾಪತಿ ಸ್ಥಾನಕ್ಕೆ ಸ್ಪರ್ಧಿಯಾಗುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಕಡತೋಕ ಭಾಗವತರಾಗಲೀ ಮೇಳಕ್ಕೆ  ಅನೇಕ ಯಶಸ್ವೀ ಪ್ರಸಂಗವನ್ನು ರಚಿಸಿದ ಶ್ರೀ ಅಮೃತ ಸೋಮೇಶ್ವರರಾಗಲೀ ಇವರನ್ನು ಗಮನಿಸಿಯೇ ಪ್ರಸಂಗ ನಡೆ ರೂಪಿಸಲ್ಪಡುತ್ತಿತ್ತು. ಆಗ ಮೇಳದಲ್ಲಿ ಮೂರು ಜನ ಅಗ್ರಗಣ್ಯ ಕಲಾವಿದರು. ಒಬ್ಬರು ಶ್ರೀ ಕುಂಬಳೆ ಸುಂದರ್ ರಾವ್, ಇನ್ನೊಬ್ಬರು ಪುತ್ತೂರು ಶ್ರೀ ನಾರಾಯಣ ಹೆಗ್ಗಡೆಯವರು, ಮತ್ತೊಬ್ಬರು ಇವರು ಶ್ರೀ ಗೋವಿಂದ ಭಟ್ಟರು. ಇಡೀ ರಾತ್ರಿಯ ಪ್ರಸಂಗದಲ್ಲಿ  ಈ ಮೂವರಲ್ಲಿ ಯಾರಾದರೊಬ್ಬರು ರಂಗದಲ್ಲಿ ಇರುವಂತೆ ಪ್ರಸಂಗ ಸಂಯೋಜನೆಯಾಗುತ್ತಿತ್ತು. ಈ ಮೂರು ಜನರಲ್ಲಿ ಒಬ್ಬರಲ್ಲ ಒಬ್ಬರು ರಂಗಸ್ಥಳದಲ್ಲಿದ್ದರೆ ಪ್ರೇಕ್ಷಕನನ್ನು ಹಿಡಿದುಕೊಳ್ಳುವುದು ಕಷ್ಟವಲ್ಲ. ಇದು ಕಡತೋಕರ ತಂತ್ರಗಾರಿಕೆ. ಪ್ರಸಂಗಗಳು ಯಶಸ್ವಿಯಾಗುವುದಕ್ಕೆ ಇದೂ ಒಂದು ಪ್ರಧಾನ ಕಾರಣವಾಗಿತ್ತು.  ಸಮರ್ಥ ನಿರ್ದೇಶನಕ್ಕೆ ಗೋವಿಂದ ಭಟ್ಟರೂ ಸಾಕ್ಷಿಯಾಗಿದ್ದು ಆ ಕಾಲದಲ್ಲಿ ಯುವಕ ಭಟ್ಟರ ಸಾಧನೆ ಎನ್ನಬೇಕು. ಇವರು ನಿರ್ವಹಿಸಿದ ಪಾತ್ರಗಳನ್ನು ಇವರ ಗೈರು ಹಾಜರಿಯಲ್ಲಿ ಮತ್ತೊಬ್ಬನಿಗೆ ನಿರ್ವಹಿಸುವುದು ಅತ್ಯಂತ ದೊಡ್ಡ ಸವಾಲಾಗಿತ್ತು. ಸವಾಲಾಗಿತ್ತು ಮಾತ್ರವಲ್ಲ ಅದು ಅಸಾಧ್ಯವೂ ಆಗಿತ್ತು.

 ಅದೇನಿದ್ದರೂ ಯಕ್ಷಗಾನದ ವಿಚಾರಕ್ಕೆ ಬಂದಾಗ  ನಾನು ಇವರನ್ನು ಕೆಲವು ಪಾತ್ರವಾಗಿಯೇ ಕಾಣುತ್ತೇನೆ.. ಮಹಾ ಬ್ರಾಹ್ಮಣದ ಕೌಶಿಕ ಅಥವಾ ವಿಶ್ವಾ ಮಿತ್ರನಾಗಿರಬಹುದು, ಪಾದುಕಾ ಪ್ರದಾನದ ಶ್ರೀ ರಾಮನಾಗಿರಬಹುದು ಚಕ್ರವರ್ತಿ ದಶರಥದ ವಾಲ್ಮೀಕಿಯಾಗಿರಬಹುದು ಇಂತಹ ಯುಗ ಪ್ರವರ್ತಕ ಪಾತ್ರಗಳಲ್ಲಿ ಗೋವಿಂದ ಭಟ್ಟರ ಅಂತಃ ಸತ್ವ ಅವರಿಗೆ ಅರಿವಿದ್ದೋ ಇಲ್ಲದೆಯೋ ಅದು ಪ್ರಕಟವಾಗುತ್ತದೆ. ಅದರಲ್ಲೂ ಮಹಾಬ್ರಾಹ್ಮಣದ ಕೌಶಿಕನ ಪಾತ್ರದ ಕಸುವು ಅದನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಮೊದಲಿಗೆ ರಾಜವೇಷದ ಕೌಶಿಕ ಆನಂತರ ತ್ರಿಶಂಕು ಪ್ರಕರಣದ ವಿಶ್ವಾಮಿತ್ರ ಇವೆರಡನ್ನೂ ಒಂದೇ ಎಸೆತಕ್ಕೆ ನಿರ್ವಹಿಸುತ್ತಿದ್ದ ಇವರ ಚೈತನ್ಯ ಅದ್ಭುತ. ರಂಗಸ್ಥಳವನ್ನು ವಿಶ್ವಾಮಿತ್ರನಾಗಿ ಇವರು ಆಕ್ರಮಿಸಿದ ರೀತಿ ನಂತರ ಆ ಪಾತ್ರವನ್ನು ಮುಂದುವರೆಸುವುದೂ ದೊಡ್ಡ ಸವಾಲಾಗಿತ್ತು. ಪ್ರೇಕ್ಷಕ ವಿಶ್ವಾಮಿತ್ರನ ಗುಂಗಿನಿಂದ ಹೊರಬರುವುದು ಸಾಧ್ಯವಿಲ್ಲದ ಮಾತು.   ಬಹುಶಃ ನಿತ್ಯ ಅನುಷ್ಠಾನದ ಪ್ರಭಾವ ಇರಬಹುದು, ಜತೆಗೆ ಸಂಸ್ಕ್ರತ ಭಾಷಾ ಪರಿಣತಿ ಆ ಮೂಲಕ  ಗಳಿಸಿದ ಜ್ಞಾನದ ಸತ್ವವೂ ಇರಬಹುದು, ಇದರಿಂದ  ಈ ಪಾತ್ರಗಳಾಗಿ ಗೋವಿಂದ ಭಟ್ಟರು ರಂಗವೇರಿದಾಗ ಅವರ ಅಂತರಂಗದ ಮುಖ ಅಲ್ಲಿ ತೆರೆದುಕೊಳ್ಳುತ್ತದೆ. ಅದು ಕೇವಲ ಪಾತ್ರವೂ ಆಗುವುದಿಲ್ಲ, ಕೇವಲ ಗೋವಿಂದಣ್ಣನೂ ಆಗುವುದಿಲ್ಲ. ಅಲ್ಲಿ ಇನ್ನೇನೋ ವಸ್ತು ಅಂತರ್ಧಾರೆಯಾಗಿ ಪ್ರವಹಿಸಿದಂತೆ ಭಾಸವಾಗುತ್ತದೆ. ಇಲ್ಲಿ ಕಂಡುಬರುವ ಈ ಅವ್ಯಕ್ತ ಹರಿವು ಏನಿದೆಯೋ  ಅದು ಇವರ ಕೌರವ, ಋತುಪರ್ಣ ತಾಮ್ರಧ್ವಜಂತಹ ರಾಜಸ ಪಾತ್ರಗಳಲ್ಲಿ ಕಂಡುಬರುವುದಿಲ್ಲ. ಹಾಗಿದ್ದರು ಇವರ ರಾಜವೇಷಗಳು ತೆಂಕುತಿಟ್ಟು ಯಕ್ಷಗಾನದ ಮಾದರೀ ವೇಷಗಳಂತೆ ವಿಜ್ರಂಭಿಸುವುದು ಇವರ ಪ್ರವರ್ತಕ ಗುಣಗಳಿಂದಲೇ. ಅಲ್ಲಿ ಪ್ರತೀ ಸಲವೂ ಸೂಕ್ಷವಾಗಿಯಾದರೂ ಒಂದು ಅವಿಷ್ಕಾರ ಕಂಡುಬರುತ್ತದೆ.

 ದೇವಿ ಮಾಹಾತ್ಮೆ ಎಂಬ ಪ್ರಸಂಗದಲ್ಲಿ ಇವರು ಮಾಡದೇ ಇದ್ದ ಪಾತ್ರಗಳೇ ಇಲ್ಲ ಮತ್ತು  ರಾಮಾಯಣದ ಯಕ್ಷಗಾನ ಪ್ರಸಂಗಗಳಲ್ಲಿ ಇವರು ಎಲ್ಲಾ ಪಾತ್ರಗಳನ್ನು ನಿರ್ವಹಿಸಿದವರಿದ್ದಾರೆ. ಅದು ವೃತ್ತಿ ಬದುಕಿನಲ್ಲಿ ಅನಿವಾರ್ಯವಾಗಿತ್ತೇ ಹೊರತು ಅದೊಂದು ಸಾಧನೆ ಎಂದು ಪರಿಗಣಿಸುವ ಹಾಗಿಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ.

ಯಕ್ಷಗಾನವನ್ನು ಇವರು ಕಲೆಯಾಗಿ ಕಂಡು ಮೋಹಿಸಿದವರಲ್ಲ. ವ್ಯವಸ್ಥಿತ ವಿವಾಹದ ರೀತಿಯಂತೆ ವಿವಾಹವಾದ ಮೇಲೆ ಸಹಧರ್ಮಿಣಿಯನ್ನು ಪ್ರೀತಿಸಿದಂತೆ , ಆ ಪ್ರೀತಿಗೆ ಬದ್ಧರಾಗಿ ಕೌಟುಂಬಿಕ ಜೀವನ ವ್ಯವಸ್ಥಿತವಾಗಿ ನಡೆಸುವಂತೆ ಯಕ್ಷಗಾನದೊಂದಿಗೆ ತಾದಾತ್ಯ್ಮವನ್ನು ತೋರಿದವರು. ಯಕ್ಷಗಾನದಲ್ಲಿ ಅನ್ನ ಬ್ರಹ್ಮನನ್ನೇ ಕಂಡ ಇವರು ಅಲ್ಲಿ ಉಂಡ ಅನ್ನದಿಂದ ತಣಿದ ಹಸಿವವನ್ನು ಎಂದಿಗೂ ಮರೆಯಲಿಲ್ಲ. ಆ ಕಾರಣಕ್ಕೆ ಈಗಲೂ ರಂಗದಲ್ಲಿ ಸದಾ ಪ್ರವೃತ್ತರು. ಆ ಅನಿಟ್ಟಿನಲ್ಲಿ ಈಗಲೂ  ಅವರ ಹಸಿವು ಇಂಗಿದಂತೆ ಭಾಸವಾಗುವುದಿಲ್ಲ. 

                ಯಾರನ್ನೇ ಆಗಲಿ ಅವರು ನಿಕೃಷ್ಟವಾಗಿ ಕಾಣುವುದಿಲ್ಲ. ಬಾಲ್ಯದಲ್ಲಿ ತಾನು ಅನುಭವಿಸಿದ ಭರ್ತ್ಸನೆ ಅವಹೇಳನೆ ಹಿಂಸೆ ಇವುಗಳೆಲ್ಲದ ಪರಿಣಾಮ ಅನುಭವ ಮಾಗಿದಾಗ ಅವರ ವ್ಯಕ್ತಿತ್ವದಲ್ಲೂ ಪಕ್ವತೆಯನ್ನು ತಂದಿದೆ. ತಾತ್ವಿಕವಾಗಿ ಸೈದ್ದಾಂತಿಕವಾಗಿ ತನ್ನದೇ ವೆತ್ಯಸ್ತ ಸಿದ್ಧಾಂತವನ್ನು ಹೊಂದಿದ್ದರೂ ಮನಸ್ಸಿನಿಂದ ಯಾರಲ್ಲೂ ವೈಷಮ್ಯವನ್ನು ತೋರಿದವರಲ್ಲ. ಸಿದ್ದಾಂತ ಬೇರೆ, ವಾಸ್ತವದ ಜೀವನ ಧರ್ಮ ಬೇರೆ. ಆದರೆ ಇಂದು ಬಾಹ್ಯ ಜಗತ್ತಿನಲ್ಲಿ ಸಿದ್ದಾಂತವನ್ನು ವಿರೋಧಿಸಿದವನು ಎಲ್ಲದರಲ್ಲೂ ಜನ್ಮ ವಿರೋಧಿಯಾಗಿ ಕಾಣುವುದೇ ಹೆಚ್ಚು. ಇಲ್ಲಿ ಬರುವ ತತ್ವ ಭೇದವಾಗಲಿ ಸಿದ್ದಾಂತ ವೆತ್ಯಾಸಗಳಾಗಲಿ ಇವರಿಗೆ ಅರ್ಥವಾಗುತ್ತದೆ. ಆದರೆ ಕಲಾವಿದನ ತತ್ವ ಸಿದ್ದಾಂತಗಳೇನೆ ಇರಲಿ ಅದನ್ನು ವ್ಯಯಕ್ತಿಕ ನೆಲೆಗೆ ತಳುಕು ಹಾಕಿ ನೋಡುವುದೇ ಅಧಿಕ. ಹಾಗಾಗಿ ಕಲಾವಿದನ ಮೇಲೆ ಅಂಧಾಭಿಮಾನ ಬೆಳೆಯುತ್ತದೆ. ಅಲ್ಲಿ ತತ್ವ ಸಿದ್ದಾಂತಗಳ ಬಗ್ಗೆ ಗಮನವೇ ಇರುವುದಿಲ್ಲ. ಅವುಗಳನ್ನು ಅರ್ಥೈಸಿಕೊಳ್ಳುವ ಮನೋಭಾವವೇ ಇರುವುದಿಲ್ಲ. ಕೇವಲ ಅಭಿಮಾನ. ಈ ಅಭಿಮಾನಕ್ಕೆ ಸ್ಪಷ್ಟ ರೂಪು ರೇಷೆ ಏನು ಇರುವುದಿಲ್ಲ. ಈ ಅಭಿಮಾನ ಆಕ್ಷೇಪಗಳನ್ನು ಸಹಿಸುವುದಿಲ್ಲ. ಆದರೆ ಅಭಿಮಾನವೋ ಪ್ರೀತಿಯೋ ಗೋವಿಂದ ಭಟ್ಟರು ಯಾವುದಕ್ಕೂ ತಲೆ ಕೆಡಿಸಿಕೊಂಡವರಲ್ಲ. ತಾನು ನಡೆವ ಹಾದಿ ತಾನು ತಳೆವ ನಿಲುವು ಎಲ್ಲದರಲ್ಲೂ ಪ್ರಾಮಾಣಿಕವಾಗಿ ವ್ಯವಹರಿಸಿದವರು.

                ಸಂದರ್ಶನಕ್ಕಾಗಿ ನಾನು ಕರೆ ಮಾಡಿದಾಗ ಅದಕ್ಕೊಂದು ಅವಧಿಯನ್ನು ನಿರ್ಣಯಿಸಿ ತಿಳಿಸಿದರು. ಇಂತಹವರು ಈ ಅವಧಿಯಲ್ಲಿ ಸಂಪರ್ಕಿಸುತ್ತಾರೆ ಎಂದು ರಂಗನಾಥನ ಹೆಸರನ್ನು ಸೂಚಿಸಿದ್ದೆ. ಮೊದಲು ರಂಗನಾಥರು ಯಾರೋ ಅಂತ ಆತಂಕ ಕೌತುಕವನ್ನು ತೋರಿದರೂ ರಂಗನಾಥರನ್ನು ಕಂಡ ಮೇಲೆ ಹೋ ಇವನು ನಮ್ಮವನೇ ಅಂತ ಆತ್ಮಿಯತೆಯನ್ನು ತೋರಿ ಸಹಕರಿಸಿದರು. ಆನಂತರ ಅವರು ಪ್ರಶಸ್ತಿ ಸ್ವೀಕಾರಕ್ಕೆ ದೆಹಲಿಗೆ ಹೋಗುವವರಿದ್ದರು. ಆದರೆ ನನಗೆ ಆಶ್ಚರ್ಯವಾದದ್ದು ಇದು ಕಳೆದು ಸುಮಾರು ಹತ್ತು ದಿನಗಳಾದ ಮೇಲೆ ಗೋವಿಂದ ಭಟ್ಟರು ನನಗೆ ಕರೆ ಮಾಡಿ ನಡೆದ ಸಂದರ್ಶನದ ವಿವರಗಳನ್ನು ಕೇಳಿ  “ಹೇಗಾಯಿತೋ ಏನೋ ಅವರಿಗೆ ಸಮಾಧಾನವಾದರೆ ಸಾಕು”  ದೆಹಲಿಯಿಂದ ಊರಿಗೆ ಬಂದೊಡನೆ ನೆನಪಿಟ್ಟು ನನಗೆ ಕರೆ ಮಾಡಿ ವಿಚಾರಿಸಬೇಕಿದ್ದರೆ ಅದರ ಗಂಭೀರತೆ ಅವರು ಸಲ್ಲಿಸಿದ ಗೌರವ ನಿಜಕ್ಕೂ ಆಶ್ಚರ್ಯ ತಂದಿತು.  ಈ ಒಂದು ಕಾರ್ಯಕ್ಕೆ ಅವರು ಕೊಟ್ಟ ಗೌರವ ಆದರ ಅದು ಗೋವಿಂದಣ್ಣನೆಂಬ ವ್ಯಕ್ತಿತ್ವದ ರೂಪವಾಗಿ ಕಂಡಿತ್ತು. ರಂಗಸ್ಥಳದಲ್ಲಿ ಕಿವಿಯನ್ನು ಸೀಳಿ ಮನಸ್ಸಿಗೆ ನಾಟುವ ಇವರ ಹರಿತ ಸ್ವರ ಶಾರೀರ ಹೀಗೆ ಮಾತನಾಡಿದಾಗ ಮಂದ ಮಂದ ಶಾಂತ ಸ್ವರವಾಗುತ್ತದೆ. ಆ ಶಾಂತ ಸ್ವರದಲ್ಲಿ ನಮಸ್ಕಾರ ಎಂದು ಕೇಳುವಾಗ ಮನಸ್ಸು ಭಾರವಾಗುತ್ತದೆ. ಆ ಒಂದು ಘಳಿಗೆ ಒಂದು ಧನ್ಯತಾಭಾವ ಆವರಿಸಿಬಿಡುತ್ತದೆ.


Monday, September 24, 2018

ಮೌಲ್ಯಯುತವಾದ ಅಗರಿಶೈಲಿ

ಹಲವು ವರ್ಷಗಳ ಹಿಂದಿನ ಒಂದು ಘಟನೆ. ನಮ್ಮೂರಿನಿಂದ ಮಹನೀಯರೊಬ್ಬರು ನಮ್ಮಲ್ಲಿಗೆ ಬಂದಿದ್ದರು. ಗುರು ಸಮಾನರು. ಅದಾವುದೋ ಕೆಲಸಕ್ಕೆ ಇಲ್ಲಿ ಬೆಂಗಳೂರಲ್ಲಿ ಹಲವು ಕಡೆಗಳಿಗೆ ಹೋಗುವ ಅನಿವಾರ್ಯತೆ ಅವರಿಗಿತ್ತು. ಅದಕ್ಕಾಗಿ ನನ್ನ ಸಹಾಯ ಕೇಳಿದ್ದರು. ಅದಾಗಲೇ ಅವರು ಬೆಂಗಳೂರಿಗೆ ಬಂದು ಕೆಲವು ದಿನಗಳಾಗಿತ್ತು. ಹಲವು ಕಡೆಗೆ ಹೋಗಿದ್ದರೂ ಕೊನೆಗೆ ನನ್ನ ಸಹಾಯ ಕೇಳಿದ್ದರು. ಮುಕ್ತ ಮನಸ್ಸಿನಿಂದ ಒಂದು ದಿನ ಪೂರ್ಣವಾಗಿ ಅವರೊಡನೆ ಕಳೆದೆ. ಅವರು ಹೇಳಿದೆಡೆಯೆಲ್ಲ ನನ್ನ ವಾಹನದಲ್ಲಿ ಕರೆದುಕೊಂಡು ಹೋದೆ. ಹಲವು ಮನೆಗಳಿಗೆ ಕಛೇರಿಗಳಿಗೆ ನಾವು ಜತೆಯಾಗಿ ಭೇಟಿಕೊಟ್ಟೆವು. ಸಾಯಂಕಾಲವಾಗುತ್ತಿದ್ದಂತೆ ಇನ್ನು ಒಂದೆರಡು ಕಡೆ ಬಾಕಿ ಇದೆ ಅಷ್ಟು ಮುಗಿಸಿ ನನ್ನನ್ನು ಮೆಜೆಸ್ಠಿಕ್ ಬಸ್ ಸ್ಟಾಂಡ್ ಗೆ ಬಿಡು ಅಂತ ಹೇಳಿದರು. ಸರಿ ಎಲ್ಲ ಭೇಟಿಯೂ ಮುಗಿದು ಇನ್ನೇನು ಮೆಜೆಸ್ಟಿಕ್ ಕಡೆಗೆ ನಾನು ಹೋಗಬೇಕಿತ್ತು. ಒತ್ತಾಯದಿಂದ ಮನೆಗೆ ಕರೆದುಕೊಂಡು ಹೋದೆ. ಒಂದಷ್ಟು ಬಿಸಿ ನೀರು ಮಾಡಿ ಸ್ನಾನದ ವ್ಯವಸ್ಥೆ ಮಾಡಿದೆ. ಬೆಚ್ಚಗೆ ಸ್ನಾನ ಮುಗಿಸಿದನಂತರ  ನನ್ನಮ್ಮ ಊರಿನಿಂದ ತಂದ ಕೆಂಪು ಕುಚ್ಚಿಲಕ್ಕಿ ಗಂಜಿ ಸಿದ್ದ ಮಾಡಿಟ್ಟಿದ್ದರು.  ನಾನು ಊಟ  ಮಾಡುವುದಕ್ಕೆ ಒತ್ತಾಯ ಮಾಡಿದೆ. ಸ್ನಾನ ವಾಗುತ್ತಿದ್ದಂತೆ ದಣಿವು ಪರಿಹಾರವಾಗಿ ಹಸಿವಾಗಿರಬೇಕು. ಸರಿ ಎಂದು ಊಟಕ್ಕೆ ಕುಳಿತರು. ಕೆಂಪು ಕುಚ್ಚಿಲಕ್ಕಿಯ ಕೆಂಪು, ಹಾಗಲಕಾಯಿ ಚಟ್ನಿ.  ಗುರುಗಳು ಹೊಟ್ಟೆತುಂಬಾ ಉಂಡರು. ಊಟವೇ ಬೇಡ ಎಂದು ಹೇಳಿದ ಗುರುಗಳು ಎರಡೆರಡು ಸಲ ತಟ್ಟೆ ತುಂಬ ಗಂಜಿ ಚಟ್ನಿ ಉಂಡು ತೃಪ್ತಿಯ ತೇಗು ಬಿಟ್ಟೆದ್ದರು. ಇದನ್ನೇ  ಹೇಳುವುದು, ನಾಡೀ ಮಿಡಿತ.  ನಂತರ ಮೆಜೆಸ್ಟಿಕ್ ತಂದು ಬಿಟ್ಟಾಗ  ಅವರು ಹೇಳಿದ ಒಂದು ಮಾತು ಈಗಲೂ ನೆನಪಿದೆ.
” ಬಂದು ಇಷ್ಟು ದಿನ ಆಯ್ತು ಏನೇನೋ ರುಚಿ ಉಂಟು ಅಂತ ತಿಂದು ಹೊಟ್ಟೆ ಕೆಟ್ಟು ಹೋಗಿತ್ತು. ಆದರೆ ಇವತ್ತಿನ ಕುಚ್ಚಿಲಕ್ಕಿ ಗಂಜಿ ಮತ್ತು ಚಟ್ನಿ ಅದೆಲ್ಲವನ್ನೂ ಅಳಿಸಿ ಹಾಕಿತು.  ಕೆಟ್ಟು ಹೋದ ಹೊಟ್ಟೆ ಸ್ವಲ್ಪ ಸುಧಾರಿಸಿತು.” ಇಂದಿಗೂ ಊರಿನಲ್ಲಿ ಇವರು ಸಿಕ್ಕಿದಾಗ ನಮ್ಮ  ಮನೆಯ ಗಂಜಿ ಊಟ ನೆನಪಿಸುತ್ತಾರೆ. ಬೇರೆ ಹಿತೈಷಿಗಳು ಬಹಳ ಇರಬಹುದು. ಅವರೇನೆಲ್ಲ ವ್ಯಯ ಮಾಡಿ ಉತ್ಕೃಷ್ಟ ಅನ್ನಿಸುವ ಆಹಾರವನ್ನು ತಿನ್ನಿಸಿರಬಹುದು. ಅದು ನೆನಪಿದೆಯೋ ಇಲ್ಲವೊ ಅನುಮಾನ. ಆದರೆ ನಮ್ಮ ಮನೆಯ ಗಂಜಿ ಊಟ ಮರೆಯದಂತಹ ಅನುಭವವನ್ನು ಕೊಟ್ಟಿದೆ.
            ಹಲವು ಸಲ ಮನೆ ಬಿಟ್ಟು ದೂರದೂರಿಗೆ ತೆರಳುತ್ತೇವೆ. ಹಸಿವು ನೀಗಿಸುವುದಕ್ಕೆ ಮಾತ್ರವಲ್ಲ ಬಾಯಿ ಚಪಲಕ್ಕೂ ಏನೇನೋ ತಿಂದು ತೇಗುತ್ತೇವೆ. ಆವಾಗ ಮನೆಯ ಗಂಜಿ ಮಜ್ಜಿಗೆ ನೆನಪಾಗುತ್ತದೆ.  ಅದೆಂತಹ ತಿಂಡಿ ತಿನಿಸುಗಳು ಮನಸೆಳೆದರೂ ಮನೆಯ ಗಂಜಿರುಚಿ ಮರೆಯಲಾಗುತ್ತಿಲ್ಲ. ಗಂಜಿ ಮಜ್ಜಿಗೆಯ ಪರಂಪರೆಯ ಸೆಳೆತವದು.   ಅದೇ ನಮ್ಮ ಪರಂಪರೆಯ ಬೇರು.
            ಲೌಕಿಕ ವ್ಯವಹಾರಕ್ಕೆ ನಾವು ಅನಿವಾರ್ಯತೆಯಿಂದ ಯಾವುದನ್ನೋ ಅನುಸರಿಸಬಹುದು. ಆದರೆ ನಾವು ನಾವಾಗಿ ಹೋಗುವ ಅನುಭವವಾಗುವುದು ಪರಂಪರೆಯ ಹಾದಿಯಲ್ಲಿ ನಡೆದಾಗ. ಕಛೇರಿಯಲ್ಲೋ ನೌಕರಿಯಲ್ಲೋ ನಾವು ನಾವಾಗಿ ಇರದೇ ಯಾವುದೋ ಎರಕಕ್ಕೆ ಬದಲಾಗಿ ಹೋಗಬಹುದು. ಆದರೆ ಮನೆಗೆ ಬಂದು ತುಂಡು ಬೈರಾಸಲ್ಲಿ ಸಹಜವಾಗಿರುತ್ತೇವೆ.  ಹೊರಗೆ ಯಾವುದೋ ವಸ್ತ್ರ ಧರಿಸಿ ಹೋರಲೋಕಕ್ಕೆ ಯಾವುದೋ ರೂಪವನ್ನು ತೋರಿಸಿದರೂ ಮನೆಗೆ ಹೋದಾಗ ಅದೇ ತುಂಡು ಬೈರಾಸು ಕೊಡುವ ಸ್ವಕೀಯ ಭಾವ ಕಳೆದು ಹೋಗುವ ನಮ್ಮತನವನ್ನು ಗುರುತಿಸುತ್ತದೆ.
            ಯಕ್ಷಗಾನದ ವಿಚಾರಕ್ಕೆ ಬಂದಾಗ ಈ ತುಂಡು ಬೈರಾಸಿನ ಪರಂಪರೆ ಆವಾಗವಾಗ ಅನುಭವಕ್ಕೆ ಬರುತ್ತದೆ. ಮೊನ್ನೆ ತಾನೆ ಆಪ್ತ ಮಿತ್ರ ರಂಗನಾಥರು ಯಥಾ ಪ್ರಕಾರ ಹಿಮ್ಮೇಳ ದಾಖಲೀಕರಣವೊಂದನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟರು. ಯಕ್ಷಗಾನದ ಪರಂಪರೆಯ ಅಗರೀ ಶೈಲಿಯ ಹಾಡುಗಾರಿಕೆಯ ವಿಡಿಯೋ ಮುದ್ರಣವದು. ಅದನ್ನು ಕೇಳುತ್ತಿದ್ದಂತೆ ಪರಫರೆಯ ಗಾಢ ಅನುಭವವಾಗಿ ಯಕ್ಷಗಾನ ಪರಂಪರೆಯ ಮುಖ ಒಂದನ್ನು ನೋಡಿದಂತಾಯಿತು.  

            ಇಂದು ಯಕ್ಷಗಾನ ಯಾವ ರೀತಿಯಲ್ಲಿ ಬದಲಾಗಿ ಹೋಗಿದೆ ಎಂದು ಗುರುತಿಸುವುದು ಆಕಾಶದಲ್ಲಿ ನಕ್ಷತ್ರವನ್ನು ಎಣಿಸಿದಂತೆ. ಅಲ್ಲಿ ಪ್ರಭೆಗಳು ಎಷ್ಟಿದ್ದರೂ ಪ್ರಕಾಶವೇ ಇಲ್ಲ. ಯಾವುದನ್ನೋ ತೋರಿಸಿ ಇದೇ ಯಕ್ಷಗಾನ ಎಂದು ಬಿಂಬಿಸುವ ಮಿಥ್ಯಾ ಹಾದಿಯಲ್ಲಿ ಯಾವುದನ್ನೋ ಹಿಂಬಾಲಿಸುವಾಗ ಮೂಲ ಯಕ್ಷಗಾನದ ಅನುಭವ ಕೆಲವೊಮ್ಮೆ ಸಾಧ್ಯವಾಗುತ್ತದೆ. ಮೂಲ ಎಂದರೆ ಅದು ಮೌಲ್ಯಯುತವಾದದ್ದು ಎಂಬ ಅರಿವಾಗುತ್ತದೆ.
            ಕೆಲವು ವಾರದ ಹಿಂದೆ ಯುವ ಮದ್ದಲೆವಾದಕ ಹಾಗೂ ಲೇಖಕ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರ ಲೇಖನ ಒಂದು ಬಹಳವಾಗಿ ಗಮನ ಸೆಳೆಯುತ್ತದೆ.  ಹಿರಿಯ ಭಾಗವತ ಅಗರಿ ಶ್ರೀನಿವಾಸ ಭಾಗವತರ ನೇರ ಶಿಷ್ಯ ಶ್ರೀ ಗಜಂತೋಡಿ ಸುಬ್ರಾಯ ಭಟ್ಟರ ಬಗೆಗಿನ ಲೇಖನವದು. ಅಗರಿ ಪರಂಪರೆಯನ್ನು ಅನುಸರಿಸಿ ಬಂದಿರುವ ಗಜಂತೋಡಿಯವರ ಲೇಖನ ಬಹಳ ಮಾರ್ಮಿಕವಾಗಿ ಗಮನಸೆಳೆದಿದ್ದದ್ದು ಹಲವು ವಿಷಯಗಳಿಂದ.  ಪೂರ್ಣವಾಗಿ ಪಳೆಯುಳಿಕೆಯಾದಂತೆ ಇದ್ದಒಂದು ಅದ್ಭುತ ಶೈಲಿಯೂ ಹಸಿ ಚಿಗುರನ್ನು ಉಳಿಸಿಕೊಂಡಿದೆ ಎಂದು ತಿಳಿದು  ಆಶ್ಚರ್ಯವಾಯಿತು. ಇದನ್ನು ಯಥಾ ಪ್ರಕಾರ ಮಿತ್ರ ರಂಗನಾಥರಲ್ಲಿ   ಹೇಳಿಕೊಂಡೆ. ಆದರೆ ಅದು ಇಷ್ಟು ಬೇಗ ಲಭ್ಯವಾಗುತ್ತದೆ ಎಂದು ಕಲ್ಪಿಸಿರಲಿಲ್ಲ.

            ಗಜಂತೋಡಿಯರು ಸುಮಾರು ಐವತ್ತಕ್ಕೂ ಹೆಚ್ಚು ಪದಗಳನ್ನು ಅದೇ ಅಗರಿಶೈಲಿಯಲ್ಲಿ ಯಾವುದೇ ಮಾರ್ಪಾಟು ಇಲ್ಲದೇ ಹಾಡಿದ್ದಾರೆ.  ಮುನಿವರರು ಲಾಲಿಸುವುದು.. ತ್ರಿವುಡೆ ನಾಟಿಯಲ್ಲಿ ಆರಂಭವಾಗುವ ಪದಗಳು ಅಗರಿ ಶೈಲಿಯ ನಿಜ ಅನುಭವವನ್ನು ಉಣಬಡಿಸುತ್ತಾ ಮುಂದೆ ಹೋಗುತ್ತದೆ. ಒಂದೊಂದು ಪದಗಳೂ ವಿಭಿನ್ನ ಅನುಭವವನ್ನು ಒದಗಿಸುತ್ತದೆ. ಗಜಂತೋಡಿಯವರ ಶ್ರದ್ದೇ ಸಮರ್ಪಣಾ ಮನೋಭಾವ ಸ್ಪಷ್ಟವಾಗಿ ಉಲ್ಲೇಖವಾಗುತ್ತದೆ.  ಅದರಲ್ಲೂ ಭೀಂ ಪಲಾಸ್ ರೂಪಕ ದಲ್ಲಿ ಹಾಡಿದ ಸುರಥ ವೈಶ್ಯರು , ಅದೇ ರಾಗದಲ್ಲಿ ಹಾಡಿದ ದ್ವಾದಶಾದಿತ್ರ್ಯರೇ ಏಕಾದಶ ರುದ್ರರು ಎಂಬ ಪದ, ಪಂಚವಟಿಯ ನೋಡಿ ನಿರ್ಮಲ ಮುಂತಾದ ಪದಳು ಕೇಳುಗನಿಗೆ ಹೊಸ ಅನುಭವವನ್ನು ನೀಡುತ್ತದೆ. ಚರಣ ದಿ ಪೊಗಳುವ ತರುಣಿಯ ಪಿಡಿದೆತ್ತಿ ಅಗರಿ ಶೈಲಿಯ ವಿಶಿಷ್ಟತೆಯನ್ನು ತೋರಿಸುತ್ತವೆ. ಹಾಗೆ ನೋಡಿದರೆ ಪ್ರತಿಯೋಂದು ಪದವೂ ಸಹ ವಿಶೇಷವಾಗಿ ಗಮನಾರ್ಹವಾಗುತದೆ. 


ಸಂದರ್ಶನಕ್ಕಾಗಿ ಇಲ್ಲಿ ನೋಡಿ
https://yaksharangabykateelusitla.blogspot.com/2018/09/blog-post_10.html



            ಇದರಲ್ಲಿ ತುಂಬ ಗಮನಾರ್ಹವಾಗುವುದು ಒಂದು ಶೈಲಿಯ ಕ್ರಮದಲ್ಲಿ ಇರುವ ಬದ್ಧತೆ ಬಹಳ ಆಶ್ಚರ್ಯವಾಗುತ್ತದೆ. ಇಲ್ಲಿ ಬೇರಾವುದೇ ಪ್ರಭಾವಕ್ಕೆ ಒಳಗಾಗದೇ ಅಪ್ಪಟ ಅಪರಂಜೀ ಸ್ವಭಾವ ಇದೆಯಲ್ಲ ಅದು ಇರುವುದರಿಂದಲೇ ಇದು ಸಾಧ್ಯವಾಗುತ್ತದೆ. ಎಲ್ಲೋ ಕಾಡು ಗುಡ್ಡದಲ್ಲಿನ ಸಂಜೀವಿನಿ ಚಿಗುರಿನಂತೆ ಒಂದು ವಿಶಿಷ್ಟ ಅನುಭವವನ್ನು ಕೊಡುತ್ತದೆ. ಕೇಳುತ್ತಾ ಹೋದಂತೆ ಒಂದು ಆವರಣದಲ್ಲಿ ಸಿಲುಕಿದಂತೆ ಅಗರಿ ಶೈಲಿಯ ಒಂದಷ್ಟು ವಿಸ್ತೃತ ಸ್ವರೂಪವನ್ನು   ನೋಡಿದ ಅನುಭವವಾಗುತ್ತದೆ.      
            ಯಕ್ಷಗಾನದಲ್ಲಿ ಅಗರಿ ಶೈಲಿ ಎಂಬುದು    ಅಪ್ಪಟ ಯಕ್ಷಗಾನ ಪರಂಪರೆಯ ಶೈಲಿ. ಯಕ್ಷಗಾನದ ಜಾನಪದೀಯ ಗುಣಗಳಿಗೆ ಇದು ಹೊಂದಿಕೊಳ್ಳುತ್ತದೆ. ಇದಕ್ಕೆ ಕಾರಣ ಇದರಲ್ಲಿರುವ ಒಂದು ರಂಗಸಂಗೀತ ಗುಣ. ಪದಗಳನ್ನು ಕೇಳಿದಂತೆ ಒಂದು ರಂಗ ದೃಶ್ಯ ಕಣ್ಣೆದುರಿಗೆ ಬಂದು ನಿಂತಂತೆ ಭಾಸವಾಗುತ್ತದೆ. ರಂಗನಿಯಮಗಳು ಸರಳವಾಗಿ ಐಕ್ಯವಾಗುವುದರಿಂದಲೇ ಇದು ಸಾಧ್ಯವಾಗುತ್ತದೆ. ರಾಗವಾಗಲೀ ತಾಳವಾಗಲೀ ನೋಡುವುದಕ್ಕೆ ಕೇಳುವುದಕ್ಕೆ ಬಹಳ ಸರಳವಾಗಿ ಕಂಡರೂ ಅದರ ಆಂತರಾಳದಲ್ಲಿ ಒಂದು ಸ್ಪಷ್ಟವಾದ ಗಟ್ಟಿಯಾದ ಭಾವವಿದೆ.  ಅದು ಇಲ್ಲಿ ಸುಲಭವಾಗಿ ವ್ಯಕ್ತವಾಗುತ್ತದೆ. ಹಾಗಾಗಿಯೇ ಇದು ಅಪ್ಪಟ ಅಗರಿ ಶೈಲಿಯಂತೆ ಭಾಸವಾಗುವುದು. ಆರಂಭವಾಗಿ ಕೆಲವು ಘಳಿಗೆಯಲ್ಲಿ ಮುಗಿದು ಹೋಗುವ ಪದ ಶೈಲಿ ಒಂದು ಬಗೆಯಾದರೆ, ಆ ಕ್ಷಣಗಳಲ್ಲಿ ಅದು ಸೃಷ್ಟಿಸುವ ಭಾವ ವೈವಿಧ್ಯ ಅತ್ಯಂತ ವಿಪುಲವಾಗಿರುತ್ತದೆ. ಪಳಗಿದ ಕಲಾವಿದ ಬಿಡಿ ಒಬ್ಬ ಸಾಮಾನ್ಯ ಮನುಷ್ಯನಾದರೂ ಕಲಾವಾಸನೆ ಲವ ಲೇಶವೂ ಇಲ್ಲದ ಪಾಮರನೇ ಆಗಲಿ ಪದ ಕೇಳೀದಂತೆ ತಾಳ ಲಯಕ್ಕೆ ಸ್ಪಂದಿಸತೊಡಗುತ್ತಾನೆ. ಇದು ರಂಗ ಸಂಗೀತದ ಗುಣ. ಇದರ ಭಾವ ವೈವಿಧ್ಯ ಅತ್ಯಂತ ವಿಶಿಷ್ಟ. ಕ್ಷಣಗಳಲ್ಲಿ ವೆತ್ಯಾಸವಾಗುವ ಭಾವ ವೆತ್ಯಾಸಗಳು  ಒಬ್ಬ ಕಲಾವಿದನಿಗೆ ಇದು ಸವಾಲಿನಂತೆ ಭಾಸವಾದರೂ ಕಲಾವಿದನನ್ನು ಅದರಲ್ಲಿ ಲೀನವಾಗುವಂತೆ ಮಾಡಿ ತನ್ನೊಳಗಿನಿಂದ ಭಾವ ವೆತ್ಯಾಸಗಳಿಗೆ ಸ್ಪಂದನೆಯನ್ನು ಸ್ವತಃ ಒದಗಿಸುತ್ತದೆ, ಅಂದರೆ ಒಬ್ಬ ಕಲಾವಿದ ರಂಗದಲ್ಲಿರುವಾಗ ಪದ ಕೇಳಿದಾಗ ಆತನ ಕಾಲುಗಳು ಹೆಜ್ಜೆಹಾಕಿದರೆ ಕೈಗಳು ಮುದ್ರೆಯನ್ನೊದಗಿಸುತ್ತವೆ. ಅಂಗೋಪಾಂಗಗಳು ಸ್ಪಂದಿಸತೊಡಗುತ್ತದೆ. ಇದು ಯಾವುದೇ ಒಂದು ರಂಗ ಪ್ರಾಕಾರದ ಗುಣ. ಹಾಗಾಗಿಯೇ ಅಗರಿ ಶೈಲಿ ಯಕ್ಷಗಾನದಂತಹ ಒಂದು ಜಾನಪದೀಯ ಕಲೆಗೆ ಬಹಳ ಆಪ್ಯಾಯಮಾನವಾಗುತ್ತದೆ.

            ಸರಳವಾಗಿ ಯಾರೂ ಸಹ ಹಿಂಬಾಲಿಸುವಂತಹ ಗುಣ ಇದ್ದರೂ ಅಗರಿ ಶೈಲಿ ತಾಳ ಲಯಕ್ಕೆ ನಿಬದ್ದವಾಗಿ ಒಂದು ಶಾಸ್ತ್ರೀಯ ಚೌಕಟ್ಟಿನಲ್ಲೇ ವ್ಯವಹರಿಸುತ್ತದೆ. ಒಬ್ಬ ಕಲಾವಿದನಿಗೆ ರಂಗದಲ್ಲಿ ಪದ ಕೇಳುವಾಗ ಸ್ವಯಂ ಭಾವ ಪ್ರಕಟನೆಗೆ ಪ್ರಚೋದಿಸುತ್ತದೆ. ಕೆಲವು ಕ್ಷಣಗಳಲ್ಲಿ ಮುಗಿಯುವ ಹಾಡುಗಾರಿಕೆಯಲ್ಲಿ ಭಾವ ವೆತ್ಯಾಸವನ್ನು ಕಲಾವಿದ ಕ್ಷಿಪ್ರವಾಗಿ ತೋರಿಸುತ್ತಾನೆ.  

            ಯಕ್ಷಗಾನ ಚಾಲುಕುಣಿತ ಮತ್ತು ದೀರ್ಘವಾದ ಭಾಗವತಿಕೆಯ ಭಾರದಿಂದ ಸುಸ್ತಾಗಿ ಹೋಗಿದೆ. ಅಗರಿ ಶೈಲಿಯಂತಹ ಒಂದೆರಡು ಘಳಿಗೆಯ ಪದಗಳು ಯಕ್ಷಗಾನ ಪರಂಪರೆಯನ್ನು ಗಾಢವಾಗಿ ಬಿಂಬಿಸಿದರೂ ಹೇಳ ಹೆಸರಿಲ್ಲದಂತಹ ಸ್ಥಿತಿ ಒದಗಿ ಬಂದಿದೆ. ಆದರೂ  ಅಗರಿ ಶೈಲಿ ಇಂದು ಅನುಕರಣೆಯ ಧಾಳಿಗೆ ದಾರುಣವಾಗಿ ತುತ್ತಾಗಿದೆ ಎನ್ನಬಹುದು. ಈ ಧ್ವನಿ ಮುದ್ರಣದ ಪದಗಳು ಇದಕ್ಕೆ ಪೂರಕವಾದ ಸಾಕ್ಷ್ಯವನ್ನು ಒದಗಿಸುತ್ತವೆ. ಅದರ ಆಳ ಅಗಲದ ಅರಿವಿಲ್ಲ ಅದನ್ನು ಗುರು ಮುಖೇನ ಅಭ್ಯಾಸ ಮಾಡದೇ ಕೇವಲ ಅನುಕರಣೆಯಿಂದ ಆಗುವ ಪ್ರಮಾದವಿದು. ಗಜಂತೋಡಿಯವರ ಭಾಗವತಿಕೆಯಲ್ಲಿ ಬೇರೆ ಯಾವುದೇ ಗಿಮಿಕ್ ಕಸರತ್ತುಗಳಿಲ್ಲದೇ ಅದು ಕೇವಲ ಅಗರೀ ಶೈಲಿಗೆ ಮೀಸಲಾಗಿದೆ. ಹಾಗಾಗಿಯೇ ಅದರ ಗಟ್ಟಿತನ ವ್ಯಕ್ತವಾಗುತ್ತದೆ. ಒಬ್ಬ ಸಾಮಾನ್ಯ ಅಗರಿಶೈಲಿಯಂತೆ ಹಾಡಿದರೆ ಅದನ್ನು ಮಿಮಿಕ್ರಿ(ಅನುಕರಣೆ) ಪ್ರತಿಭೆ ಎಂದು ಪುರಸ್ಕರಿಸಬಹುದು. ಆದರೆ ಒಬ್ಬ ಭಾಗವತ ಅದನ್ನು ಅನುಕರಣೆ ಮಾಡಿದರೆ ಅದು ಮಿಮಿಕ್ರಿಯಾದರೂ ಅದು ಒಂದು ಶೈಲಿಗೆ ಗೈಯುವ ಅವಹೇಳನವಾಗುತ್ತದೆ. ಯಾಕೆಂದರೆ ರಾಗ ತಾಳ ಲಯ ಇದರ ಬಗ್ಗೆ ಜ್ಞಾನ ಹೊಂದಿರುವವರು ಎಚ್ಚರ ವಹಿಸಬೇಕಾದ ವಿಚಾರವಿದು.  ಎಲ್ಲ ತಿಳಿದೂ ಅವರು ಅನುಕರಣೆಗಷ್ಟೆ ಬದ್ಧರಾಗುತ್ತಾರೆ ಎಂದಾದರೆ ಅದು ಅಕ್ಷಮ್ಯ ಅಪರಾಧ.  ಇಂದು ಅಗರಿ ಶೈಲಿ ಅಂತ ಕೇಳಿ ಬರುವ ಪದಗಳು ಬಹಳಷ್ಟು ಅನುಕರಣೆಯೇ ಆಗಿರುವುದು ಮಾತ್ರ ವಿಪರ್ಯಾಸ ಎನ್ನಬೇಕು.
            ಈ ದಾಖಲೀಕರಣದಲ್ಲಿ ಧ್ವನಿಮುದ್ರಣದಿಂದ ತೊಡಗಿ ಎಲ್ಲವೂ ಅಚ್ಚುಕಟ್ಟಾಗಿದೆ. ಕೆಲವೊಂದು ದೋಷಗಳಿದ್ದರೂ ಇರಬಹುದು. ಆದರೆ ಒಟ್ಟಿನಲ್ಲಿ ಪ್ರಯತ್ನ ಅತ್ಯಂತ ಸ್ತುತ್ಯರ್ಹವಾಗಿದೆ. ಕಳೆದೇ ಹೋಗಿದೆ ಎನೋ  ಎಂದು ಅಂದುಕೊಂಡಿದ್ದಂತಹ ಗಿಡ ಮೂಲಿಕೆ ಬೇರು ಸಹಿತ ಸಿಕ್ಕಂತಹ ಅನುಭವವಾಗಿದೆ.ಮೌಲ್ಯಯುತವಾದ  ಅಗರಿ ಶೈಲಿ ನಿಜಾರ್ಥದಲ್ಲಿಯೂ ಒಂದು ಮೂಲಿಕೆ. ಇದರಲ್ಲಿ ಮದ್ದಲೆವಾದನದಲ್ಲಿ  ಸಹಕರಿಸಿದ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರೂ ಪ್ರಶಂಸನೀಯ ಕೆಲಸವನ್ನು ಯಥಾ ಪ್ರಕಾರ ಗೈದಿದ್ದಾರೆ.

           






Saturday, August 18, 2018

“’ವಾರೀಜಾನನೇ ಬಾರೆ ಮೋಹನಾಂಗಿಯೇ ಬಾರೆ...”



“’ವಾರೀಜಾನನೇ ಬಾರೆ ಮೋಹನಾಂಗಿಯೇ ಬಾರೆ...”

ಯಕ್ಷಗಾನದ ಪೂರ್ವರಂಗದ ಪದಕ್ಕೆ ಚಪ್ಪರ ಮಂಚದ ಕಲಾವಿದ ನಡುವಿಗೆ ಕಟ್ಟಿದ ಚಪ್ಪರ ಮಂಚದೊಂದಿಗೆ ರಂಗತುಂಬಿಸಿ ಕುಣಿಯುತ್ತಿದ್ದ. ಪೂರ್ವರಂಗದ ಅತಿ ವಿಶಿಷ್ಟ ಪ್ರಕಾರವೊಂದನ್ನು ನೆನಪಿಸುವ ಪ್ರಾತ್ಯಕ್ಷಿಕೆಯದು. ಬಹಳ ಆಸಕ್ತಿಯಿಂದ ನಾವೆಲ್ಲ ನೋಡುತ್ತಿದ್ದೆವು. ಪ್ರಸಿದ್ಧರಾದ ಹಿರಿಯ ಯಕ್ಷಗಾನ ಕಲಾವಿದರೊಬ್ಬರು ನಮ್ಮೊಂದಿಗೆ ಬಹಳ ಆಸಕ್ತಿಯಿಂದ ಗಂಭೀರವಾಗಿ ರಂಗವನ್ನು ಗಮನಿಸುತ್ತಿದ್ದರು. ಸಾಮಾನ್ಯವಾಗಿ ವಾಡಿಕೆಯಲ್ಲಿ ಪೂರ್ವರಂಗವೆಂದರೆ ಯಕ್ಷಗಾನದಲ್ಲಿ ಪ್ರಾಥಮಿಕ ಹಂತದ ಕಲಾವಿದರಿಂದ ನಿರ್ವಹಿಸಲ್ಪಡುವ ಅಂಗ. ಪ್ರಸಂಗದ ಕುತೂಹಲದಲ್ಲಿ ಅದರತ್ತ ಗಮನ ಹರಿಸುವುದು ಬಹಳ ಕಡಿಮೆ. ಆದರೂ ಮೊದಲೆಲ್ಲ ಯಕ್ಷಗಾನದ ವಾತಾವರಣವನ್ನುಹದವಾಗಿ ಉಂಟುಮಾಡುವುದಕ್ಕೆ, ಯಕ್ಷಗಾನದ ಪ್ರಭಾವಕ್ಕೆ ನಮ್ಮನ್ನು ಸೆಳೆಯುವುದಕ್ಕೆ ಇದು ಪ್ರಭಾವವನ್ನು ಬೀರುತ್ತಿತ್ತು. ಹಂತ ಹಂತವಾಗಿ ಪ್ರೇಕ್ಷಕ ಯಕ್ಷ ಪ್ರಭಾವಕ್ಕೆ ಸೆಳೆಯಲ್ಪಡುತ್ತಿದ್ದ. ಕ್ರಮೇಣ ಪೂರ್ವರಂಗ ಪೂರ್ವದಲ್ಲೇ ಉಳಿದು ಕೇವಲ ಪ್ರಸಂಗದ ವರ್ತಮಾನವಷ್ಟೇ ಬಳಕೆಯಾಗತೊಡಗಿತು. ಪೂರ್ವರಂಗದ ವೈಶಿಷ್ಟ್ಯಗಳೆಲ್ಲ ರಂಗದ ಪರಿಚಯವೇ ಇಲ್ಲದಂತೆ ಮೂಲೆ ಸೇರಿತು. ಹಲವು ಸಲ ಹಳೆಯ ಬಟ್ಟೆಯನ್ನೋ ಆಭರಣವನ್ನೋ ನಾವು ಪೆಟ್ಟಿಗೆಯೊಳಗಿನಿಂದ ತೆಗೆದು ಧರಿಸದೇ ಇದ್ದರೂ ಕೈಯಲ್ಲಿ ಹಿಡಿದು ಅದು ನಮ್ಮ ಕೈಸೇರಿದ ಸನ್ನಿವೇಶದ ನೆನಪನ್ನು ಸ್ಮರಿಸುವುದಿದೆ. ಅದರಂತೆ ಇಂದು ಪೂರ್ವರಂಗದ ಕೆಲವೊಂದು ಬಗೆಗಳು ಪ್ರಸಂಗಗಳಿಗಿಂತ ಪ್ರಧಾನವಾಗಿ ಪ್ರದರ್ಶಿಸಲ್ಪಡುತ್ತದೆ.

ಈ ನಡುವೆ ರಂಗವನ್ನೇ ಗಮನಿಸುತ್ತಿದ್ದ ಹಿರಿಯ ಕಲಾವಿದರ ಆಸಕ್ತಿಯನ್ನು ಕಂಡು ಬಹಳ ಆಶ್ಚರ್ಯವಾಯಿತು. ಪೂರ್ವರಂಗವೆಂದರೆ ಯಕ್ಷಗಾನ ಕಲಿಕೆಯ ಒಂದು ಹಂತ. ಯಕ್ಷಗಾನವನ್ನು ಕಲಿತು ರಂಗದಲ್ಲಿ ಹತ್ತು ಮೂವತ್ತು ವರ್ಷ ಅಗ್ರಮಾನ್ಯ ಕಲಾವಿದರಾಗಿ ಪ್ರವೃತ್ತರಾದಂತಹ ಕಲಾವಿದರೂ ಸಹ ಇದರಲ್ಲಿ ಆಸಕ್ತಿ ವಹಿಸಿದ್ದಾರೆ ಎಂದರೆ ಅದು ಸ್ವಲ್ಪ ವಿಶೇಷವಾಗಿ ಕಂಡಿದ್ದು ಸುಳ್ಳಲ್ಲ. ಆದರೂ ಕೆಲವೊಮ್ಮೆ ಹಿರಿಯ ಕಲಾವಿದರು ಮಾಡುವುದಕ್ಕೆ ಬೇರೆ ಕೆಲಸವಿಲ್ಲದೇ ಸಮಯ ಕಳೆಯುವುದಕ್ಕೆ ರಂಗದ ಗೌರವವಕ್ಕೆ ಅದಕ್ಕೆ ಪ್ರೇಕ್ಷಕರಾಗುವ ಸಂದರ್ಭ ಇಲ್ಲದಿಲ್ಲ. ನಾವು ಹಾಗೇ ಭಾವಿಸಿಕೊಂಡಿದ್ದೆವು.  ಆದರೆ ನಮ್ಮ ಅನಿಸಿಕೆ ಸುಳ್ಳೆಂಬಂತೆ ಆ ಹಿರಿಯ ಕಲಾವಿದರು ನಗುತ್ತಾ ಹೇಳಿದರು...

”ರಂಗಕ್ಕೆ ಬಂದು ಮೂವತ್ತು ವರ್ಷ ಆಯಿತು. ನಾನು ಇದನ್ನು  ಇವತ್ತು ಶುರೂ ನೋಡುತ್ತಿರುವುದು.”

ಹಿರಿಯ ಕಲಾವಿದರೊಬ್ಬರ ಪ್ರಾಮಾಣಿಕ ಅನಿಸಿಕೆ ಯೋಚಿಸುತ್ತಾ ಹೋದಂತೆ ಒಂದು ರೀತಿಯಲ್ಲಿ ದಿಗ್ಭ್ರಮೆಯನ್ನು ತರಿಸಬಲ್ಲ ಗಂಭೀರ ವಿಚಾರವಾಗಿತ್ತು.  ಇಷ್ಟು ವರ್ಷ ರಂಗದಲ್ಲಿ ಪ್ರವೃತ್ತರಾದ ಹಿರಿಯ ಕಲಾವಿದರಿಗೆ ಈ ಒಂದು ಪ್ರಕಾರ ಅಪರಿಚಿತವಾಗಿ ಉಳಿಯಬೇಕಿದ್ದರೆ ಯಕ್ಷಗಾನ ಅಧ್ಯಯನ ಪದ್ದತಿ ಯಾವ ರೀತಿಯಲ್ಲಿ ಸಾಗಿ ಬಂದಿದೆ ಎಂದು ಆಶ್ಚರ್ಯವಾಗುತ್ತದೆ. ಇದು ಕಲಾವಿನೊಬ್ಬನ ತಪ್ಪಲ್ಲ ವ್ಯವಸ್ಥೆಯಲ್ಲೂ ಕೆಲವು ದೋಷಗಳಿವೆ.  ಆ ಕಲಾವಿದರು ನೋಡುವುದಿಲ್ಲ ಅಥವಾ ಕಲಿಯುವುದಿಲ್ಲ ಎಂದು ಖಂಡಿತಾ ಸುಮ್ಮನೆ ಉಳಿದದ್ದಲ್ಲ. ಯಕ್ಷಗಾನ ಅಧ್ಯಯನದಲ್ಲಿ ಅದೊಂದು ಅಂಗವಾಗಿಯೇ ಇರಲಿಲ್ಲ ಎಂಬುದು ಪ್ರಮುಖ ವಿಚಾರ. ಪೂರ್ವರಂಗದತ್ತ ಹೆಜ್ಜೆ ಹಾಕದೇ ಇದ್ದರೂ ಯಕ್ಷಗಾನದಲ್ಲಿ ಕಲಾವಿದನಾಗುವುದಕ್ಕೆ ಸಾಧ್ಯವಿದೆ ಎಂಬುದನ್ನು ಇದು ತೋರಿಸಿಕೊಡುತ್ತದೆ. ಇಲ್ಲಿ ಹಿರಿಯ ಕಲಾವಿದರಿಗೆ ಅದರ ಬಗ್ಗೆ ಆಸಕ್ತಿ ಇತ್ತು. ಅದನ್ನು ತಿಳಿಯಬೇಕೆಂಬ ಕುತೂಹಲವೂ ಇತ್ತು. ಆದರೆ ಅವರು ಕಲಿತ ಶಿಕ್ಷಣ ಪದ್ದತಿಯಲ್ಲಿ ಅದು ಅಪರಿಚಿತವಾಗಿಯೇ ಉಳಿದದ್ದರಲ್ಲಿ  ವ್ಯವಸ್ಥೆಯಲ್ಲೇ ತಪ್ಪಿದೆ.  ವ್ಯವಸ್ಥೆಯ ಒಂದು ಅಂಗವಿದು.  ಶಿಕ್ಷಣ  ಮತ್ತು ಶಿಕ್ಷಣ ರೀತಿ ಅಲ್ಲದೇ ಶಿಕ್ಷಕ ಎಲ್ಲವೂ ಇಲ್ಲಿ ಪ್ರಶ್ನಾರ್ಹವಾಗಿದೆ.  ಮೂರು ದಶಕಗಳನ್ನು ಕಳೆದ ಕೇವಲ ಒಬ್ಬ ಕಲಾವಿದನ ಅನುಭವವಲ್ಲ. ಬಹುತೇಕ ಹಲವರ ಅನುಭವವೂ ಇದಾಗಿದ್ದರೆ ಆಶ್ಚರ್ಯವಿಲ್ಲ. ಇವರು ಪ್ರಾಮಾಣಿಕವಾಗಿ ತೆರೆದು ಹೇಳಿದ್ದಾರೆ. ಇಂದು ಕಲಿಸುವಂತಹ ಗುರುಗಳಿಗೇ ತಿಳಿದಿರುವ ಸಂಭಾವ್ಯತೆ ಕಡಿಮೆ ಇರುವಾಗ ಅದು  ಅದನ್ನು ಅನುಸರಿಸುವ ಉಳಿದವರಿಗೆ ತಿಳಿದಿಲ್ಲ ಎಂದರೆ ಆಶ್ಚರ್ಯವನಿಸುವುದಿಲ್ಲ. ಬದಲಾಗಿ ಹೀಗೆ ಇಲ್ಲಿ ಹೇಳುವುದೇ ಆಶ್ಚರ್ಯವಾಗಿಬಿಡಬಹುದು.  ಹಾಗಾಗಿ ಯಕ್ಷಗಾನಕ್ಕೆ ಒಂದು ಲಾಕ್ಷಣಿಕ ಗ್ರಂಥದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ. ಯಕ್ಷಗಾನದ ಆದ್ಯಾಕ್ಷರಗಳೇ ಮಸುಕಾಗಿ ಬಣ್ಣ ಕಳೆದುಕೊಂಡು ಮಸುಕಾಗಿದೆ.

ಆರನೇ ಕ್ಲಾಸು ಕಲಿತು ಬ್ರಹ್ಮೋಪದೇಶವಾಗಿ ವೇದ ಕಲಿಯುವುದಕ್ಕೆ ನಾನು ನನ್ನಜ್ಜನ ಎದುರು ಕುಳಿತಾಗ ಅವರು  ನನಗೆ ಮಂತ್ರ ಹೇಳಿಕೊಡುವ ಮೊದಲು ಆ ಆ ಇ ಈ....ಎಂದು ಅಕ್ಷರಮಾಲೆ ಯಿಂದ ತೊಡಗಿಸಿದ್ದರು. ಅದಾಗಲೇ ಬರೆಯುವುದು ಓದುವುದು ಕಲಿತ ಆರನೇ ಕ್ಲಾಸಿನ ಹುಡುಗನಿಗೆ ಇದೊಂದು ವಿಚಿತ್ರವಾಗಿ ಕಂಡಿತು. ಹಾಗಿದ್ದರೂ ನಾನು ಅಕ್ಷರಮಾಲೆಯನ್ನು ಉಚ್ಚರಿಸುವಾಗ ಬಹಳಷ್ಟು ತಪ್ಪುಗಳಾಗಿ ಕೇವಲ ಅಕ್ಷರ ಮಾಲೆಯನ್ನು ಸರಿಯಾಗಿ ಉಚ್ಚರಿಸುವುದಕ್ಕೆ ಹಲವುದಿನಗಳ ಕಲಿಕೆ ಬೇಕಾಗಿತ್ತು. ಆವಾಗ ಅಜ್ಜ ಹೇಳುತ್ತಿದ್ದರು ಮಂತ್ರ ಕಲಿಯ ಬೇಕಿದ್ದರೆ ಸರಿಯಾದ ಉಚ್ಚಾರ ಅತ್ಯಂತ ಮುಖ್ಯ. ಸರಿಯಾಗಿ ಅಕ್ಷರಗಳನ್ನು ಉಚ್ಚರಿಸದೇ ಇದ್ದು ನಾಲಿಗೆ ಹೊರಳದೇ ಇದ್ದರೆ ಮಂತ್ರ ಅಭ್ಯಾಸ ಸಾಧ್ಯವಿಲ್ಲ. ಸ್ಪಷ್ಟ ಉಚ್ಚಾರ ಮಂತ್ರ ಉಚ್ಚಾರದ ಮೊದಲ ಲಕ್ಷಣ. ಹಾಗಾಗಿ ಒಂದೆರಡು ವಾರ ಬರೀ ಉಚ್ಚಾರ ಶುದ್ದಿಗೆ ಗಮನ ಹರಿಸುವಂತಾಯಿತು. ಇಂದಿಗೂ ಮಂತ್ರಗಳನ್ನು ಮಾತ್ರವಲ್ಲ ಯಾವುದನ್ನೇ ಆಗಲಿ ಸ್ಪಷ್ಟವಾಗಿ ಹೇಳುವಾಗ ನನ್ನಜ್ಜನ ನೆನಪಾಗುತ್ತದೆ. ಹಾಗಾಗಿ ಕೆಲವೊಮ್ಮೆ ಭಾರತ ಎಂದು ಸರಿಯಾಗಿ ಪ್ರಾಣಾಕ್ಷರ ಉಚ್ಚರಿಸಲಿಕ್ಕಾಗದೇ ಇರುವವರು ದೇಶ ಪ್ರೇಮದ ಬಗ್ಗೆ ಆಡುವಾಗ ವಿಚಿತ್ರವಾಗಿ ಕಾಣುತ್ತದೆ. ಇದು ಪ್ರಾಥಮಿಕ ವಿದ್ಯಾಭ್ಯಾಸದ ಮಹತ್ವವನ್ನು ಹೇಳುತ್ತದೆ.

ಯಾವುದೇ ವಿದ್ಯೆಯಾಗಲೀ ಅದರ ಪ್ರಾಥಮಿಕ ಹಂತ ಅತ್ಯಂತ ಪ್ರಧಾನವಾಗಿಬಿಡುತ್ತದೆ.  ಬಿಸಿ ಬಿಸಿಯಾದ ಅನ್ನವನ್ನು ಎಲೆಯಲ್ಲಿ ಹಾಕಿದಾಗ ಒಂದೇ ಬಾರಿ ಮಧ್ಯದಲ್ಲಿ ಕೈ ಹಾಕಿದರೆ ನಾವೇ ತಿನ್ನುವ ಅನ್ನವಾದರೂ ಅದು ನಮ್ಮನ್ನು ಸುಡುತ್ತದೆ. ಇಂದಿನ ವೇಗದ ಯುಗದಲ್ಲಿ ಸಹನೆ ತಾಳ್ಮೆ ನಮಗಿಲ್ಲ. ಹಸಿವೆಯಾದರೂ ಸರಿ, ವ್ಯಾಧಿಯಾದರೂ ಸರಿ ಬೇಗನೇ ಶಮನವಾಗಬೇಕು. ಗಬ ಗಬನೇ ತಿಂದು ಆರೋಗ್ಯ ಕೆಡಿಸಿಕೊಂಡರೂ ಅಡ್ಡಿ ಇಲ್ಲ ತಿಂದು ತೇಗುವ ತವಕ!  ಇದು ನಾವು ಕಲಿಯುವ ವಿದ್ಯೆಗೆ ಅನ್ವಯವಾಗುತ್ತದೆ. ಬಿಸಿಯಾದ ಅನ್ನವನ್ನು ಚೂರು ಚೂರೇ ಬದಿಯಿಂದ ನಿಧಾನವಾಗಿ ತಿನ್ನುತ್ತಾ ಬಂದರೆ ಅದೇ ಅನ್ನ ನಮ್ಮ ಉದರ ಸೇರಿ ದಹನವಾಗಿ ಬಿಡುತ್ತದೆ. ವಿದ್ಯೆ ಅಮೃತ ಸಮಾನವಾದುದು. ಹಾಗಿದ್ದಲ್ಲಿ ಅದು ಅಸ್ತಿತ್ವವನ್ನು ಉಳಿಸುತ್ತದೆ. ಯಕ್ಷಗಾನದ ಅಕ್ಷರಮಾಲೆಗೆ  ಯಕ್ಷಗಾನ ಲೋಕವೇ ಮೌಲ್ಯವನ್ನು ಕೊಟ್ಟಿಲ್ಲ. ಆಸಕ್ತಿ ಇದ್ದಲ್ಲಿ ಮಾತ್ರವೇ ಅದನ್ನು ಕಲಿಯಬಹುದು ಎಂಬ ಉದಾರತೆಯನ್ನು ತೋರಿಸಿತು. ಹಾಗಾಗಿ ಅಮೂಲ್ಯವಾಗಿರುವಂತಹುದು ಹಾಗೇ ಮರೆಯಲ್ಲಿ ಯಾರೂ ಸ್ಪರ್ಶಿಸದೇ ಉಳಿದು ಬಿಟ್ಟಿತು. ಕೊನೇ ಪಕ್ಷ ಕಲಿಸುವ ಗುರುವಾದರೂ ತೋರಿಸಿಕೊಡಬೇಕು. ಆದರೆ ಎಷ್ಟು ಜನ ಗುರುಗಳಿಗೆ ಅರಿವಿದೆ ಎಂದು ಕೇಳದಿರುವುದೇ ವಾಸಿ. ಯಕ್ಷಗಾನ ಕಲಿಕೆಗೆ ಗುರುವಿಗೆ  ಒಂದು ಮಾನದಂಡ ಇಲ್ಲದೇ ಇರುವುದೇ ಇದಕ್ಕೆ ಕಾರಣ. ನ..ಣ. ಶ ಷ ಸ....ಉಚ್ಚಾರದ ವೆತ್ಯಾಸ ಗೊತ್ತಿಲ್ಲದವರೂ ಅರ್ಥ ಹೇಳಿ ಅರ್ಥ ಅನರ್ಥವಾಗಿಸಿದರೂ ಪರವಾಗಿಲ್ಲ ಅರ್ಥಧಾರಿ ಯಾಗುವ ಅವಕಾಶವಿದೆ.

ಯೋಚನೆ ಮಾಡಿ ಉಗ್ಗುವಿಕೆಯಿಂದ ತೊದಲುವವನಲ್ಲಿ ಮೊಬೈಲ್ ನಂಬರ್ ಕೇಳಿದಂತೆ ಇದು.  
ಯಕ್ಷಗಾನ ಶಿಕ್ಷಣಕ್ಕೂ ಒಂದು ನಿಯಮ ಅನ್ವಯವಾಗಬೇಕು. ಕಲಿಸುವ ಗುರುವಿಗೂ ಒಂದು ಅರ್ಹತೆ ನಿರ್ಣಯವಾಗಬೇಕು. ಮಾನ್ಯತೆಯ ಶಿಕ್ಷಣದಲ್ಲಿ ಅಂಗೀಕೃತವಾಗದೇ ಒಬ್ಬ ಕಲಾವಿದ ರಂಗವನ್ನೇರುವುದಕ್ಕೆ ಅವಕಾಶವನ್ನು ಒದಗಿಸಬಾರದು. ಪಕ್ಕದ ಕಥಕ್ಕಳಿಯಲ್ಲಿ ಇಂತಹ ನಿಯಮವಿದೆ. ತಪ್ಪಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ ಇಲ್ಲಿ  ವಾಸ್ತವದಲ್ಲಿ ಇಂತಹ ವಿಚಾರಗಳಲ್ಲಿ ಗಂಭೀರ ಚಿಂತನೆಯೇ ಇರುವುದಿಲ್ಲ. ಒಂದು ಕಾರ್ಯಕ್ರಮದ ಲೆಕ್ಕಕಷ್ಟೇ ಯಕ್ಷಗಾನ ಸೀಮಿತವಾಗುವಾಗ ಶಿಕ್ಷಣದ ಅನಿವಾರ್ಯತೆಯನ್ನು ಯಕ್ಷಗಾನ ಲೋಕ ಕಂಡುಕೊಂಡಿಲ್ಲ. ನಮ್ಮ ಮಕ್ಕಳು ಯಕ್ಷಗಾನ ಅಭ್ಯಾಸ ಮಾಡದೇ ಇದ್ದರೂ ಪರವಾಗಿಲ್ಲ ರಂಗಸ್ಥಳ ಏರಿ ಒಂದಷ್ಟು ಫೋಟೋ ವಿಡಿಯೋ ಮಾಡಿ ಅಂತರ್ಜಾಲಕ್ಕೇ ರಿಸಿ ಮಿತ್ರರಿಂದ ಲೈಕ್ ಗಿಟ್ಟಿಸಿಕೊಂಡರೆ ಸಾಕು ಎಂಬ ಭಾವನೆ ಇದೆ.  ತಮ್ಮ ಮಕ್ಕಳ ವೇಷವನ್ನಷ್ಟೇ ನೋಡುವುದಕ್ಕೆ ಕ್ಯಾಮೆರ ಹಿಡಿದು ವೇದಿಕೆ ಎದುರು ನಿಲ್ಲುವ ಅಪ್ಪ ಅಮ್ಮಂದಿರು ಯಕ್ಷಗಾನದ ಬಗ್ಗೆ ಯೋಚಿಸುವುದಿಲ್ಲ. ಮಕ್ಕಳನ್ನು ಹೀಗೆ ಕೋಲ ಕಟ್ಟಿಸಿ ರಂಗವೇರಿಸುವ ಇವರ ಹೆಗ್ಗಣ ಮುದ್ದಿಗೆ ಯಕ್ಷಗಾನ ಬಲಿಯಾಗುತ್ತದೆ ಎಂಬ ಅರಿವೇ ಇಲ್ಲ.  ಅರಿವಿದ್ದರೂ ನಮ್ಮ ಒಬ್ಬರಿಂದ ಇದು ಕೆಡುವುದಿಲ್ಲ ಎಂಬ ಔದಾಸಿನ್ಯ.  ಇದನ್ನೂ ಯಕ್ಷಗಾನ ಅಭಿಮಾನ ಎನ್ನುವುದಕ್ಕಿಂತ ಮೂರ್ಖತನ ಎನ್ನಬೇಕು. ಯಕ್ಷಗಾನವನ್ನು ನಿಧಾನವಿಷ ನೀಡಿ ಜೀವ ಹಿಂಡುವ ಪೃವೃತ್ತಿ ಇದು.

 ಬಹಳ ಸಂಖ್ಯೆಯಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತದೆ. ಇದರಲ್ಲಿ ಬಹುಪಾಲು ದೇವಿ ಮಹಾತ್ಮೆ. ಯಾಕೆಂದರೆ ಬೇರೆ ತಿಳಿದಿಲ್ಲ. ಹವ್ಯಾಸಿಗಳ ಅತಿ ಪ್ರಿಯವಾದ ಪ್ರಸಂಗ. ಹೆಚ್ಚು ತಯಾರಿ ಏನೂ ಬೇಡ.  ಇದನ್ನೇ ಮಾಡಿ ದೊಡ್ಡ ಸಾಧನೆಯೆಂಬಂತೆ ಉದ್ದ ಲೇಖನ ಬರೆದು ಕೊರೆದು ಬಿಡುತ್ತಾರೆ. ಆದರೆ ನಿಜವಾದ ಯಕ್ಷಗಾನದ ಆಳದ ಅರಿವಿಲ್ಲದೇ ತೊದಲುವ ಮಾತುಗಳಂತೆ ಇದು.   ಯಕ್ಷಗಾನದ ಅತೀ ಕನಿಷ್ಠ ಗುಣವಿರುವ ಈ ಪ್ರಸಂಗ ಯಕ್ಷಗಾನದಿಂದ ದೂರವಾದರೆ ಯಕ್ಷಗಾನ ಉಳಿದಂತೆ.  ಅದೆಷ್ಟು ವರ್ಷಗಳಿಂದ ಅದೆಷ್ಟು ದೇವಿ ಮಹಾತ್ಮೆ ನೋಡಿದ್ದೇನೋ ಗೊತ್ತಿಲ್ಲ. ಆದರೆ ಒಂದು ದೇವಿಮಹಾತ್ಮೆಯೂ ನಿಜವಾದ ಯಕ್ಷಗಾನದ ಅನುಭವವನ್ನು ಈವರೆಗೆ ನನಗೆ ಕೊಟ್ಟಿಲ್ಲ ಎಂಬುದು ಪರಮ ಸತ್ಯ. ಇಂದು ಹವ್ಯಾಸಿಗಳೂ ಬಹಳ ಇಷ್ಟ ಪಟ್ಟು ಆಡುವ ಪ್ರಸಂಗ ಎಂದರೆ ಅದು ಈ ಮಹಾತ್ಮೆ. ಹೀಗೆ ವಿಪರೀತ ದೈವ ಭಕ್ತಿಯೂ ಯಕ್ಷಗಾನಕ್ಕೆ ಮಾರಕವಾಗಿರುವುದು ವಿಪರ್ಯಾಸವೇ ಸರಿ.  ದೇವಿ ಮಹಾತ್ಮೆ ಜನಪ್ರಿಯವಾಗುವುದಕ್ಕೆ ಒಂದು ಕಾರಣ ಇದಕ್ಕೆ ಹೆಚ್ಚಿನ ಶಿಕ್ಷಣದ ಅರಿವೇ ಬೇಡ. ಒಂದಷ್ಟು ಗಿರಕಿ ಹೊಡೆಯಲು ತಿಳಿದರೆ ಸಾಕು. ರಂಗವೇರಬಹುದು.  ಹರಕೇ ಮೇಳದ ಹರಕೆ ಆಟ ಎಲ್ಲಕಡೆಯೂ ಹರಕೆ ಯಾಗುವುದು ದುರಂತ ಎನ್ನಬೇಕು.

ಯಕ್ಷಗಾನದ ಕಲಾವಿದನಾಗುವುದು ಹೇಗೆ ಸುಲಭವೋ ಗುರುವಾಗುವುದೂ ಅಷ್ಟೇ ಸುಲಭ. ಇದಕ್ಕೊಂದು ಮಾನದಂಡವಿದೆ ಎಂದು ಯಕ್ಷಗಾನವನ್ನು ಪ್ರಥಮವಾಗಿ ನೋಡುವವನಿಗೂ ಅನಿಸುವುದಿಲ್ಲ.  ಹತ್ತಿಪ್ಪತ್ತು ಸುಧನ್ವ, ಒಂದಷ್ಟು ಅಭಿಮನ್ಯು ಮಾಡಿದವರೂ ಸಹ ಗುರುವಾಗಿ ಗುರು ನಮನ ಸ್ವೀಕರಿಸಬಹುದು. ಹೀಗೆ ಒಂದೆರಡು ಪಾತ್ರ ಮಾಡಿದಲ್ಲಿ ಯಕ್ಷಗಾನ ಆಮೂಲಾಗ್ರ ಬಿಡಿ ಒಂದಿಷ್ಟಾದರೂ ತಿಳುವಳಿಕೆ ಸಾಧ್ಯವಿಲ್ಲ.  ಯಕ್ಷಗಾನ ಗುರುವಾಗುವುದಕ್ಕೆ ಇರುವ ಮಾನದಂಡವಾದರು ಏನು? ಒಂದು ಸುಧನ್ವ ಅಥವಾ ಬಬ್ರುವಾಹನ ಮಾತ್ರ ತಿಳಿದಲ್ಲಿ ಆತ ಕಲಿಸುವ ಶಿಕ್ಷಣವೂ ಅಷ್ಟಕ್ಕೇ ಸೀಮಿತವಾಗುತ್ತದೆ. ಗುರುವಿಗೂ ಒಂದು ಮಾನದಂಡ ಅತ್ಯವಶ್ಯ.   ಒಬ್ಬ ಗುರುವಿನ ವಿದ್ಯೆಯ ಪರಿಣತಿ ಎಷ್ಟು ತಿಳಿದರೆ ಶಿಷ್ಯನೂ ಅದಕ್ಕಿಂತಲೂ  ಕಡಿಮೆಗೆ ಪರಿಮಿತಿಗೊಳ್ಳುವುದು ಮಾತ್ರವಲ್ಲ ಇಷ್ಟಾದರೂ ಸಾಕಲ್ಲ ಎಂಬ ಭಾವನೆಯಲ್ಲೇ ಇರುತ್ತಾನೆ.  ಕಲಿಯುವಾಗಲೇ ಈ ಪಾತ್ರಕ್ಕೆ ಇಷ್ಟು ನಾಟ್ಯ . ಈ ಪದಕ್ಕೆ ಹೀಗೆ ಕುಣಿತ ಹೀಗೆ ಪರಿಮಿತಿಯೊಳಗೇ ಪಾತ್ರಕ್ಕೆ ತಕ್ಕ ಕಲಿತು ರಂಗವೇರುವುದನ್ನು ಯಕ್ಷಗಾನ ಎನ್ನುವುದಕ್ಕೆ ಮನಸ್ಸೊಪ್ಪುವುದಿಲ್ಲ. ಕೇವಲ ಉರು ಹೊಡೆದು ಪರೀಕ್ಶೆಗೆ ಬರೆದಂತೆ.  ಆ  ಯಕ್ಷಗಾನದ  ನಮ್ಮ ಅನುಭವ ಪರಿಪೂರ್ಣತೆಯನ್ನು ಅನುಭವಿಸುವುದೇ ಇಲ್ಲ.  ಹಾಗಾಗಿ ಗುರುವಾದವನಿಗೆ ಹಲವಾರು ಅರ್ಹತೆಗಳು ಇರಲೇಬೇಕು. ಮೇಳದತಿರುಗಾಟದಲ್ಲಿ ದೀರ್ಘ ಸಮಯದ ಅನುಭವವಿರಬೇಕು. ಪ್ರಸಂಗನಡೆ ಬಣ್ಣಗಾರಿಕೆ ಅರ್ಥಗಾರಿಕೆ ಹಿಮ್ಮೇಳ ಪ್ರತಿಯೊಂದು ಅಂಗದ ಕನಿಷ್ಠ ಪರಿಜ್ಞಾನವಾದರೂ ಇರಲೇಬೇಕು. ಪಾತ್ರ ಪಾತ್ರಗಳ ನಡುವಿನ ಅಭಿವ್ಯಕ್ತಿಯ ವೆತ್ಯಾಸದ ಅರಿವಿರಲೇ ಬೇಕು.  ಗುರು ಎಂಬುದರ ವಿಸ್ತಾರ ಸ್ವತಃ ಅರಿತಿರಬೇಕು.

’ಯಕ್ಷಗಾನವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ.’  ಈ ವಾಕ್ಯ ಬಹಳ ಭಾವನಾತ್ಮಕವಾಗಿ ಸುಂದರವಾಗಿದೆ. ಪ್ರಯಾಣಿಕನಾಗಿ ಸಾರ್ವಜನಿಕ ವಾಹನದಲ್ಲಿ ಸಂಚರಿಸುವಾಗ ವಾಹನ ಚಲಾಯಿಸುವ ಚಾಲಕ ಸಂಫೂರ್ಣ ಚಾಲನೆಯನ್ನು ಕಲಿಯದೇ ಇದ್ದದ್ದು ತಿಳಿದರೆ ಜೀವ ಭಯ ಇರುವವನು ಆ ವಾಹನವನ್ನೇರುವ ಸಾಹಸ ಮಾಡಿಯಾನೇ?  ಹಾಗಿದ್ದರೆ ಅಲ್ಲಿ ನಾವು ನಮ್ಮ ಪ್ರಾಣ ಭಯಕ್ಕೆ ಚಾಲಕನ ಪರಿಪೂರ್ಣ ಶಿಕ್ಷಣವನ್ನೇ ಅಪೇಕ್ಷಿಸುತ್ತೇವೆ. ಆದರೆ ಪ್ರಾಣಕ್ಕಿಂತ ಹೆಚ್ಚು ಎನ್ನುವ ಯಕ್ಷಗಾನದಲ್ಲಿ ಹೀಗೆ ಅರೆಬೆಂದ ಕಾಳುಗಳನ್ನು ತಿನ್ನಿಸುತ್ತೇವೆ.  

ಯಕ್ಷಗಾನಕ್ಕೆ ಒಂದು ಲಾಕ್ಷಣಿಕ ಗ್ರಂಥವಾಗಬೇಕು. ಒಂದು ಭರಣ ಘಟನೆ ಸಿದ್ದವಾಗಬೇಕು.  ಯಕ್ಷಗಾನ ಶಿಕ್ಷಣ ಪ್ರದರ್ಶನ ಎಲ್ಲದಕ್ಕೂ ಈ ನಿಯಮ ಅನ್ವಯವಾಗಬೇಕು.  ಇದೆಲ್ಲ ಬಹಳ ಕ್ಲಿಷ್ಟವೆನಿಸಬಹುದು.  ಸದ್ಯದಲ್ಲಿ ಅದು ಆಸಾಧ್ಯವಾಗಿಬಿಡಬಹುದು.  ಆದರೂ ಕೆಲವೊಂದು ಮಾನದಂಡಗಳು  ಕಲಿತು ಕಲಾವಿದನಾಗುವ ಶಿಷ್ಯನಿಗೂ ಕಲಿಸುವ ಗುರುವಿಗೂ ಅತೀ ಅವಶ್ಯ. ಸರಿಯಾಗಿ ಪೂರ್ವರಂಗದ ವೈವಿಧ್ಯವನ್ನು ತಿಳಿಯದ ಗುರುಗಳನ್ನು ಗುರು ಎಂದು ಒಪ್ಪಿಕೊಳ್ಳುವ ಬಡತನ ಯಕ್ಷಗಾನಕ್ಕೆ ಇಲ್ಲ.  ಗುರುವಾಗಿ ತನ್ನನ್ನು ತಾನು ಅರ್ಹವಾಗಿಸುವುದು ಕೇವಲ ಯಕ್ಷಗಾನದಲ್ಲಷ್ಟೇ ಸಾಧ್ಯ. ಅದೇ ರೀತಿ ಕಲಾವಿದನಾಗಿಯೂ ತನ್ನ ಶ್ರೇಣಿಯನ್ನು ತಾನೇ ನಿರ್ಣಯಿಸುವುದು. ಕೇವಲ ಒಂದೆರಡು ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಅದು ಯಕ್ಷಗಾನವಾಗುವುದಿಲ್ಲ. ಒಂದು ಪಾತ್ರಕ್ಕೆ ಮಾತ್ರ ತಾನು ಗುರು ಎಂದು ಹೇಳಿಕೊಳ್ಳುವುದೂ ಸಾಧ್ಯವಿಲ್ಲ.  ಕೇವಲ ಅಷ್ಟಕ್ಕೆ ಮಾತ್ರ ಕಾದುಕುಳಿತುಕೊಂಡು ಯಕ್ಷಗಾನವೂ ಸೀಮಿತವಾಗುವುದಿಲ್ಲ.

ಯಕ್ಷಗಾನದಲ್ಲಿ ಕೇವಲ ಕುಣಿತಕ್ಕೆ ಮಾತ್ರಾ ಯಕ್ಷಗಾನ ಶಿಕ್ಷಣ ಸೀಮಿತವಾಗುತ್ತದೆ. ಒಬ್ಬ ಕಲಾವಿದನಾದವನಿಗೆ ಹಿಮ್ಮೇಳದ ಜ್ಞಾನವೂ ಅತ್ಯವಶ್ಯ. ಇಂದು ಹಿಮ್ಮೇಳದ ಶ್ರುತಿಯ ಬಗ್ಗೆ ಎಷ್ಟು ಜನರಿಗೆ ಅರಿವಿದೆ? ಶ್ರುತಿ ಬೇಕು ಎನ್ನುವುದೇ ಚರ್ಚಾಸ್ಪದವಾಗುತ್ತದೆ. ಹಿಮ್ಮೇಳ ಮುಮ್ಮೇಳದ ಬಗ್ಗೆ ಸರಿಯಾದ ಜ್ಞಾನವಿದ್ದಲ್ಲಿ ಮಾತ್ರವೇ ರಂಗಸ್ಥಳದ ಅಂಗೀಕಾರ ಸಿಗುವಂತಾಗಬೇಕು. ಕೇವಲ ತಿಂಗಳ ತರಬೇತಿಯ ತಿತ್ತಿಥೈಯಲ್ಲಿ ರಂಗಪ್ರವೇಶ ಮಾಡುವುದೆಂದರೆ ಅದು ಯಕ್ಷಗಾನದಂತಹ ವಿಪುಲ ಕಲೆಗೆ ಸೂಕ್ತವೂ ಅಲ್ಲ.  

ದೇವದಾಸಿಯರು ಆಡುತ್ತಿದ್ದ ಯಕ್ಷಗಾನವನ್ನು ಅದಕ್ಕೆ ಒಂದಷ್ಟು ಸಂಸ್ಕಾರವನ್ನು ಕೊಟ್ಟು ಯಾವುದೇ ಶಾಸ್ತ್ರೀಯ ಕಲೆಗೆ ಕಡಿಮೆಯಿಲ್ಲದಂತೆ ಕಟ್ಟಿದರು. ಕೆಲವೊಮ್ಮೆಇತ್ತೀಚಿನ ಯಕ್ಷಗಾನಗಳನ್ನು ನೋಡುತ್ತಿರುವಾಗ  ನಾವು ಪುನಃ ಅದೇ ಪೂರ್ವಾವಸ್ಥೆಗೆ ತೆರಳುತ್ತಿದ್ದೇವೆ ಅನ್ನಿಸುತ್ತದೆ. ಈ ಎಲ್ಲ ಅನಿಸಿಕೆಗಳು ಕೇವಲ ಯಕ್ಷಗಾನದ ಪ್ರೇಕ್ಷಕನ  ಅನುಭವದ ನೆಲೆಯಲ್ಲಿ ವ್ಯಕ್ತವಾದವುಗಳು. ಹಲವು ವಿದ್ವಾಂಸರ ವಿಚಾರಗಳಿಂದ ಪ್ರೇರಿತವಾದಂತವುಗಳು.  ಅನುಭವಿಸುವ ಪ್ರೇಕ್ಷಕ ಮಾತ್ರವಲ್ಲ ಇಲ್ಲಿ ಪಳಗಿದ ಕಲಾವಿದನು ಅನುಭವದಿಂದ ವಂಚಿತನಾಗಿರುವುದು ಯಕ್ಷಗಾನದ ಮಟ್ಟಿಗೆ ವಿಪರ್ಯಾಸವೇ ಸರಿ.