ಧೃತರಾಷ್ಟ್ರ ಮೋಹ ಕುರುಕ್ಷೇತ್ರ ಯುದ್ದಕ್ಕೆ ಕಾರಣವಾದರೆ ಅರ್ಜುನನ ಮೋಹ ಭಗವದ್ಗೀತೆಗೆ ಕಾರಣವಾಯಿತು
ಅರ್ಜುನಾ;
“ಯೋಧ ಯುದ್ದ ರಂಗಕ್ಕೆ ಬರುವುದು ಕೇವಲ ಯುದ್ಧ
ಮಾಡುವುದಕ್ಕಲ್ಲ. ಯುದ್ಧವನ್ನು ಎದುರಿಸುವುದನ್ನೂ ಮಾಡಬೇಕಾಗುತ್ತದೆ. ಯುದ್ದ ಆತನ ಕರ್ಮ. “
ಯಕ್ಷಗಾನದ ದಂತ ಕಥೆ , ಹರಿದಾಸ
ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಶ್ರೀಕೃಷ್ಣನಾಗಿ ಅರ್ಜುನನಿಗೆ ಹೇಳುವ ಮಾತು ಇದು.
ಕರ್ಮಯೋಗದ ಬಗ್ಗೆ ಸರಳವಾಗಿ ಸೂಚಿಸುವ ವಾಕ್ಯ ಇದು. ಇದರ ಅರ್ಥವಿಶಾಲತೆ ತಿಳಿಯಬೇಕಾದರೆ
ಭಗವದ್ಗೀತೆಯನ್ನು ಒಂದೆರಡು ಸಲವಾದರೂ ಅಧ್ಯಯನ
ಮಾಡಬೇಕು. ಆದರೆ ಎಲ್ಲರಿಗೂ ಅದು ಸಾಧ್ಯವಾಗುವ ಮಾತಲ್ಲ. ಹಾಗಿದ್ದರೆ ಇದರ ಆಳ ವಿಸ್ತಾರವನ್ನು ತಿಳಿಯುವ ಆಸಕ್ತಿ
ಇದ್ದರೆ ಯಕ್ಷಗಾನದ ಈ ಗೀತೋಪದೇಶ ಪ್ರಸಂಗವನ್ನು ಒಂದೆರಡು ಸಲ ಕೇಳಿಬಿಡಬೇಕು. ಆದರೆ ಈಗ
ಅದೂ ಸಹ ಅಷ್ಟು ಸುಲಭವಲ್ಲ. ಕಾರಣ ಶೇಣಿಯಂತಹ ವಾಕ್ ತಪಸ್ವಿ ಇಂದು ಸಿಗುವುದು ದುರ್ಲಭ. ಶೇಣಿಯವರು
ಯಕ್ಷಗಾನ ವ್ಯಾಪ್ತಿಯಲ್ಲಿ ಬೆಳೆದ ರೀತಿ ಅದು. ಆ ಅರ್ಥಗಾರಿಕೆ ಕೇವಲ ಯಕ್ಷಗಾನದ
ಅರ್ಥಗಾರಿಕೆಯಲ್ಲ. ಅದೊಂದು ಪ್ರವಚನ. ಗೀತಾವಚನ. ಭಗವದ್ವಚನಕ್ಕೆ ಸಮ. ಅದರ ಅರಿವಾಗಬೇಕಾದರೆ ಗೀತೋಪದೇಶ ಎಂಬ ಯಕ್ಷಗಾನವನ್ನು
ಕೇಳಬೇಕು. ಬಹುಶಃ ಬಯಲಾಟಕ್ಕೆ ಸೂಕ್ತವಲ್ಲದ ಕೇವಲ ತಾಳಮದ್ದಲೆಗೆ ಸೀಮಿತವಾಗುವ ಒಂದು
ಪ್ರಸಂಗವಿದ್ದರೆ ಅದು ಗೀತೋಪದೇಶ. ಯಾಕೆಂದರೆ ಇದು ಕೇವಲ ಯಕ್ಷಗಾನವಾಗಿ ನಿಲ್ಲುವುದಿಲ್ಲ. ಒಂದು
ಸಂಸ್ಕೃತಿಯ ಪ್ರತೀಕವಾಗಿ ನಿಲ್ಲುತ್ತದೆ.
ಪರಮಾತ್ಮನ ಅಂತರಾಳದ ಕಲ್ಪನೆಗೆ ಇದು ಸಾಕ್ಷಾತ್ಕಾರವಾಗುತ್ತದೆ. ಹಾಗಾಗಿ ಈ ಯಕ್ಷಗಾನ
ಕೇವಲ ಗದ್ದಲ ಅಂತ ಹೇಳುವವರು ಒಂದು ಸಲ ತಿರುಗಿ ನೋಡುವಂತೆ ಮಾಡುತ್ತದೆ!! ಇದೇ ಪ್ರಸಂಗದ ಬಗ್ಗೆ ಹಿಂದೊಮ್ಮೆ
ಬರೆದಿದ್ದೆ. ಅದರಿಂದ ಭಿನ್ನವಾಗಿ ಈ ತಾಳ ಮದ್ದಲೆಯಲ್ಲಿ ಶ್ರೀಕೃಷ್ಣನಾಗಿ
ಪಾತ್ರ ವಿಶ್ಲೇಷಣೆಯನ್ನು ತೋರಿಸಿಕೊಟ್ಟಿದ್ದಾರೆ.
ಹಲವುಸಲ ಇಲ್ಲಿ ವಾದವನ್ನು ಖಂಡಿಸಬಹುದು.
ಮೊಂಡುವಾದವನ್ನು ಮಂಡಿಸಬಹುದು. ಅದಕ್ಕೆ ಹೇರಳ ಅವಕಾಶವನ್ನು ಇಟ್ಟೇ ತಮ್ಮ ಅರ್ಥಗಾರಿಕೆಯನ್ನು
ತೋರಿಸುವುದು ಶೇಣಿಯವರ ಬುದ್ಧಿವಂತಿಕೆ ಎನ್ನಬೇಕು. ಮೊಂಡುವಾದ ಎಂಬುದು ಮೂರ್ಖತನವಾಗುತ್ತದೆ. ಅದು
ಅಪ್ರಾಕೃತಿಕವಾಗುತ್ತದೆ. ಅಸಹಜತೆಯಿಂದ ಕೂಡಿರುತ್ತದೆ.
ಈ ಮೂರ್ಖತನವನ್ನು ತೋರಿಸುವುದಕ್ಕೇ ಅವಕಾಶವನ್ನು ಒದಗಿಸುತ್ತಾರೆ. ಅದರ ಅರ್ಥ
ಮೂರ್ಖತನವನ್ನು ತೋರಿಸುವುದೇ ಆಗಿರುತ್ತದೆ.
ಬಹಳ ದೀರ್ಘವಾದ ಲೇಖನ. ಅದರೂ ಇದು
ಸಂಕ್ಷೇಪವಾಗಿ ನನ್ನ ದೃಷ್ಟಿಗೆ ಮುಖ್ಯವಾಗಿ ವಿಶಿಷ್ಟವಾಗಿ ಕಂಡದ್ದನ್ನು ನನ್ನ ರೀತಿಯಲ್ಲೇ ಉಲ್ಲೇಖಿಸಿದ್ದೇನೆ. ಸಹಜವಾಗಿ ಇಲ್ಲಿ ಶೇಣಿಯವರ
ಅರ್ಥಗಾರಿಕೆಯ ತರ್ಕಗಳು ವಿಭಿನ್ನ ದೃಷ್ಟಿಕೋನದಲ್ಲಿ ಅವಲೋಕಿಸಲ್ಪಡಬೇಕೆಂಬ ಹಂಬಲ ಜತೆಯಲ್ಲೇ
ಇರುತ್ತದೆ. ಇದು ಒಟ್ಟು ರಸಾನುಭವಕ್ಕೆ ಇಂಬನ್ನು
ಕೊಡುತ್ತದೆ. ಭಗವದ್ಗೀತೆಯನ್ನು ಹಲವು ವಿಧದಲ್ಲಿ
ಕಂಡು ಅಧ್ಯಯನ ಮಾಡಿದವರು ಹಲವರಿದ್ದಾರೆ. ಹಲವು ವಿಧಗಳಲ್ಲಿ ಅದನ್ನು ಲೋಕ ಅದನ್ನು ಕಂಡಿದೆ. ಶೇಣಿಯವರ ಅರ್ಥಗಾರಿಕೆ ಅದೇ ದಿಶೆಯಲ್ಲಿ ಇದೆ ಅಂತ ನನ್ನ
ಭಾವನೆ.
ಭಾಮಿನಿ|| ಕರೆದುತರೆ
ಶ್ರೀಕೃಷ್ಣನಿತ್ತಲು | ತುರಗವನು ಚಪ್ಪರಿಸಿ ಮುಂದಕೆ |
ಹರಿಸಿಸ್ಯಂದನವ ಪಾರ್ಥನ ಕರೆದು ಪೇಳಿದನು ||
“ಯದ್ ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಾಃ”
ಶ್ರೇಷ್ಠರು ಏನು ಆಚರಿಸುತ್ತಾರೋ ಅದನ್ನೇ ಇತರರು ಅನುಸರಿಸುತ್ತಾರೆ.
ಶ್ರೀಕೃಷ್ಣ ಪರಮಾತ್ಮ ಭಗವದ್ಗಿತೆಯಲ್ಲಿ ಹೇಳುವ ಮಾತು ಇದು. ಅನುಸರಣೆ
ಜಗತ್ತಿನ ಅತ್ಯಂತ ದೊಡ್ಡ ಅನೈಚ್ಛಿಕ ವಿದ್ಯೆ. ಶೇಣಿಯವರು ಶ್ರೀಕೃಷ್ಣನಾಗಿ ಇದರ ವಿಶಾಲತೆಯನ್ನು
ಹೇಳುತ್ತಾರೆ. ಶ್ರೇಷ್ಠವಾದುದು ಯಾವಾಗಲೂ ಅನುಸರಣೆಗೆ ಯೋಗ್ಯವಾಗುತ್ತದೆ. ಹಾಗಾಗಿ ಶ್ರೀ ಪರಮಾತ್ಮನೇ ಸ್ವತಃ ಆಚರಿಸಿ ತೋರಿಸುತ್ತಾನೆ. ಬಂಧು ಬಾಂಧವರನ್ನು ಕೊಲ್ಲಲಾರೆ ಎಂದು ಅರ್ಜುನ ಮೋಹ
ಪರವಶನಾದಾಗ ಶ್ರೀಕೃಷ್ಣ ಆತನ ಮೋಹ ಹೇಗೆ ಅಸಾಧುವಾಗುತ್ತದೆ
ಎಂದು ವಿವರಿಸುವುದೇ ಈ ಪ್ರಸಂಗ. ಅದು ಮಹಾಭಾರತದ
ಶ್ರೀಕೃಷ್ಣನ ಬದ್ದತೆಯಾದರೆ ಅಲ್ಲಿ ಕೃಷ್ಣನಿಗಿರುವ ಜವಾಬ್ದಾರಿ ಮತ್ತು ಒಂದು ಕಾಳಜಿ ಇಲ್ಲಿ
ಯಕ್ಷಗಾನದ ಮೇರು ಪರ್ವತ ಶೇಣಿಯವರ ಮೇಲೂ ಇರುತ್ತದೆ. ಕೇಳುಗರು ಇದನ್ನು ಗಮನಿಸಬೇಕಾದದ್ದು ಅತೀ
ಮುಖ್ಯ ! ಮುಂದೊಂದು ದಿನ ಈ ಪರ್ವತವನ್ನು
ಹತ್ತುವುದಕ್ಕೆ ಹಲವರು ಪ್ರಯತ್ನಿಸಬಹುದು. ಅದಕ್ಕಾಗಿ ಶುದ್ದವಾದ ಹಾದಿಯೊಂದು ನಿರ್ಮಾಣವಾಗಬೇಕು.
ಶೇಣಿಯವರ ಅರ್ಥಗಾರಿಕೆಯಲ್ಲಿ ಈ ಕಾಳಜಿಯನ್ನೂ ಸಹ ಗುರುತಿಸಬಹುದು. ಯಾಕೆಂದರೆ ಶ್ರೇಷ್ಠರ ಆಚರಣೆ ಮುಂದೆ
ಅದೇ ಅನುಸರಣೆಯಾಗುತ್ತದೆ. ಆಗುತ್ತದೆ ಮಾತ್ರವಲ್ಲ ಆಗಲೇಬೇಕು ಕೊನೆಯಲ್ಲಿ ಇದೇ ಮಾತನ್ನು ಪುಷ್ಟೀ
ಕರಿಸುವಂತೆ ಹೇಳುತ್ತಾರೆ. ಆಚರಿಸಿ ತೋರಿಸುವಾಗ ಗುರು ನಿಜವಾದ ಆಚಾರ್ಯನಾಗುತ್ತಾನೆ. ಶೇಣಿಯವರ ಅರ್ಥಗಾರಿಕೆಗೆ ಇರುವ ಜವಾಬ್ದಾರಿ ಅದು. ಮುಂದೆ
ಅದುವೇ ಅನುಸರಣೆಯಾಗುತ್ತದೆ. ಶೇಣಿಯವರ ಶ್ರೀಕೃಷ್ಣ ನನ್ನಲ್ಲಿ ಆಸಕ್ತಿಯನ್ನು ಹುಟ್ಟಿಸುವುದು ಇದೇ
ಕಾರಣಕ್ಕೆ. ಅದಕ್ಕೆ ಸೂಕ್ತವಾದ ಪ್ರಸಂಗವೇ ಗೀತೋಪದೇಶ ಎಂಬ ಪ್ರಸಂಗ. ನಾವು
ನಡೆಯುವಾಗ ನಮ್ಮ ಕಿರಿಯರಿಗೆ ಅದು ಶಾಸನವಾಗುತ್ತದೆ. ಶೇಣಿಯವರ
ರಾವಣ ಕೌರವ ಭೀಷ್ಮರ ನಡುವೆ ಈ ಶ್ರೀಕೃಷ್ಣ
ಅತ್ಯಂತ ವಿಶಿಷ್ಟವಾಗಿ ಕಂಡು ಬರುತ್ತದೆ.
ಉಭಯ ಸೇನೆಯ ನಡುವೆ ರಥವನ್ನು
ನಿಲ್ಲಿಸು ಎಂದಾಗ ಶ್ರೀಕೃಷ್ಣ ಹುರುಪಿನಿಂದಲೇ ನಿಲ್ಲಿಸಿ ಯುದ್ದ ತೊಡಗಿದ್ದಕ್ಕೆ ಶಂಖನಾದ
ಮಾಡುತ್ತಾನೆ. ಆರಂಭದ ಪ್ರಸ್ತಾವಿತ ಮಾತುಗಳಲ್ಲೇ
ಅರ್ಜುನನ ಮೇಲಿನ ಭರವಸೆಯನ್ನು ವ್ಯಕ್ತ ಪಡಿಸುತ್ತಾರೆ.
ಮುಂದಿನ ಕಥಾ ಭಾಗದ ಹಂದರಕ್ಕೆ ಅಸ್ಥಿವಾರವನ್ನು ಇಲ್ಲಿಂದಲೇ ಕಟ್ಟುವುದಕ್ಕೆ ಆರಂಭಿಸುತ್ತಾರೆ. ಅವರ ಅರ್ಥಗಾರಿಕೆಯಲ್ಲಿ ಸೂಕ್ಷ್ಮವಾಗಿ ಇದು
ವ್ಯಕ್ತವಾಗುತ್ತ ಹೋಗುತ್ತದೆ. ಅದಕ್ಕಾಗಿಯೇ ಶ್ರೀಕೃಷ್ಣ ಹೇಳುವುದು. “ ಇಲ್ಲಿ ಇರುವುದು ಕೇವಲ ವಿರೋಧಿಗಳು. ವಿರೋಧ
ಮಾತ್ರವೇ ನೋಡಬೇಕು.”
ಅರ್ಜುನ ಮೋಹ ಪರವಶನಾಗುತ್ತಾನೆ ಎಂಬುದರ ಮುನ್ಸೂಚನೆ ಇದು. “ಕುರುಕ್ಷೇತ್ರದಲ್ಲಿ ವಿರೋಧವಲ್ಲದೇ ಬೇರೆ ಏನೂ
ಇಲ್ಲ. ನಮ್ಮ ಇದಿರು ನಿಂತದ್ದು ವಿರೋಧ ಪಕ್ಷ. ಅವರು ಹೇಳುವುದೂ ಹಾಗೇ ಇದು
ವಿರೋಧ ಪಕ್ಷ. ಸರಿಯಾದ ಪಕ್ಷ ಯಾವುದೂ ಇಲ್ಲ. ಇದಕ್ಕೆ ಅದು ವಿರೋಧ ಅದಕ್ಕೆ ಇದು ವಿರೋಧ. ” ಇದರ ಅರ್ಥ ವಿರೋಧಕ್ಕೆ ಅನ್ವಯವಲ್ಲದೇ ಇದ್ದದ್ದನ್ನು
ಅರ್ಜುನ ಕಾಣುತ್ತಾನೆ ಎಂಬ ಮರೆಯೊಳಗಿನ ಭಾವನೆ. ಮುಂದಿನ ಅರ್ಜುನ ಪಾತ್ರಧಾರಿಗೂ ಇದೂ ಒಂದು
ಸೂಚನೆ.
ತಾಳಮದ್ದಲೆಯ ಅರ್ಥಗಾರಿಕೆಯೇ ಹಾಗೆ. ಒಂದು ಮಾತಿಗೆ ಹತ್ತು ಮುಖಗಳು
ಇರಬೇಕು. ಇದಿರು ಪಾತ್ರಧಾರಿ ಯಾವ ದಿಕ್ಕಿಗೆ ಚಲಿಸುತ್ತಾನೋ ನಿಖರತೆ ಇರುವುದಿಲ್ಲ. ಆಗ ಈ
ಕವಲುಗಳನ್ನು ಉಪಯೋಗಿಸಿಕೊಳ್ಳಬೇಕು. ಶೇಣಿಯ ಅರ್ಥಗಾರಿಕೆಯ ಆಯಾಮವೇ ಹಾಗಿರುತ್ತದೆ. ಎಲ್ಲವೂ
ಸೂಕ್ಷ್ಮ ಪ್ರತಿಪಾದನೆಗಳು.
ಈ ಸೂಕ್ಷ್ಮ
ಸಂಕೇತವನ್ನು ಹಂತ ಹಂತವಾಗಿ ಅರ್ಥ ಮಾಡಿಕೊಂಡಲ್ಲಿ ಶೇಣಿಯವರ ಅರ್ಥಗಾರಿಕೆಯ ಸೊಗಸನ್ನು ಅರ್ಥವಿಸಿಕೊಳ್ಳಬಹುದು.
ಅದನ್ನು ಆಸ್ವಾದಿಸಬಹುದು. ಅಂದರೆ ಅರ್ಜುನ ಈ
ವಿರೋಧವನ್ನು ಮರೆಯುತ್ತಾನೆ ಎಂಬುದೇ ಇಲ್ಲಿ ಸೂಚನೆ. ಇಲ್ಲಿ ವಿರೋಧವೇ ಪ್ರಧಾನವಾಗುತ್ತದೆ. ಪ್ರಸಂಗದ ಆಶಯ, ಕಥಾ ಆಶಯ. ಮತ್ತು ವಾಸ್ತವದ ಸತ್ಯ
ಎಲ್ಲವನ್ನೂ ಚೌಕಟ್ಟನ್ನಾಗಿಸುವ ತಂತ್ರಗಾರಿಕೆ ಅದು ಶೇಣಿಯವರ ಅರ್ಥಗಾರಿಕೆಯ ಸೌಂದರ್ಯ ಅಂತಲೇ
ಹೇಳಬೇಕು. ಅದು ಯಕ್ಷಗಾನದ ರಾಜ ಗಾಂಭೀರ್ಯ. ಒಂದು ಸಲ ಆ ವಾದ ಸರಣಿಯನ್ನು ಹಿಂಬಾಲಿಸಿದರೆ ಸಾಕು. ಅದರಲ್ಲಿ
ಆಸಕ್ತಿ ಕೆರಳುತ್ತದೆ. ಹೆಜ್ಜೆಯ ಮೇಲೆ ಮತ್ತೊಂದು ಹೆಜ್ಜೆಯಂತೆ ಹಿಂಬಾಲಿಸುವಂತಾಗುತ್ತದೆ.
ಯಕ್ಷಗಾನ ಅದರಲ್ಲೂ ತಾಳ ಮದ್ದಲೇ
ಕೇವಲ ಕಥೆಯನ್ನಷ್ಟೇ ಹೇಳುವುದಿಲ್ಲ. ಅದರ ವಿವರಣೆ
ಇಲ್ಲಿದೆ.
ಭಗವದ್ಗೀತೆಯಲ್ಲಿ ಅರ್ಜುನನಿಗೆ ಆವರಿಸುವ ಮೋಹವಾಗಲಿ, ಆತ ಮುಂದಿಡುವ ಸಂದೇಹಗಳಾಗಲಿ ಅದು ಕೇವಲ ಅರ್ಜುನನದ್ದಲ್ಲ. ಹಲವು ಸಲ ಇಲ್ಲಿ ಅರ್ಜುನನನ್ನು ಮೂರ್ತ
ಸ್ವರೂಪದಂತೆ ಶ್ರೀಕೃಷ್ಣ ಪರಿಗಣಿಸುತ್ತಾನೆ. ಅರ್ಜುನನ ಪ್ರಶ್ನೆಗಳು ಅದು ಅರ್ಜುನ ಕೇಳದೇ
ಇದ್ದರೂ ಹುಟ್ಟಿಕೊಳ್ಳಬಹುದು ಎಂಬ ಕಾಳಜಿಯಲ್ಲಿ ಮಂಡಿಸಲ್ಪಡುತ್ತವೆ. ಮತ್ತು
ಆ ಸಂದೇಹ ನಿವಾರಣೆಯನ್ನು ಮಾಡಿ ಶ್ರೀಕೃಷ್ಣನ ಚಿಂತನೆಯನ್ನು ಆ ಮುಖೇನ ಲೋಕಕ್ಕೆ ತಿಳಿಸುವುದಾಗಿರುತ್ತದೆ.
ಹಾಗಾಗಿ ಅರ್ಜುನ ಅದು ಕೇವಲ ಪ್ರಾತಿನಿಧಿಕ ಪಾತ್ರವಾಗಲೂ ಬಹುದು. ಭಗವದ್ಗೀತೆಯ ಅವಲೋಕನದಲ್ಲಿ ಈ ಭಾವನೆ ಸ್ಪಷ್ಟವಾಗಿ
ಮೂಡುತ್ತದೆ.
ಶ್ರೀ ಕೃಷ್ಣ ಉಭಯ ಸೇನೆಯ ಮಧ್ಯದಲ್ಲಿ ರಥವನ್ನು ನಿಲ್ಲಿಸುತ್ತಾನೆ.
ಈ ಮೊದಲು ಪಾಂಚ ಜನ್ಯವೇ ಮೊದಲಾದ ಶಂಖಗಳು ಮೊಳಗಿ ಯುದ್ಧ ಅಧಿಕೃತವಾಗಿ ತೊಡಗಿರುತ್ತದೆ.
ಯುಧಿಷ್ಠಿರ ವಿರೋಧಿ ಪಾಳಯದಲ್ಲಿದ್ದ ತನ್ನ ಗುರು ಹಿರಿಯರ ಆಶೀರ್ವಾದವನ್ನೂ ಪಡೆಯುತ್ತಾನೆ.ಇದೇ
ಸಂದರ್ಭದಲ್ಲಿ ರಥವನ್ನು ತಂದು ನಿಲ್ಲಿಸಿದ
ಶ್ರೀಕೃಷ್ಣ ಅರ್ಜುನನೆಡೆಗೆ ನೋಡಿದಾಗ, ಅರ್ಜುನ ಕೌರವ ಸೇನೆಯನ್ನು ಬೆಕ್ಕಸ
ಬೆರಗಾಗಿ ನೋಡುತ್ತಾನೆ. ಅರ್ಜುನನ್ನು ಉತ್ತೇಜಿಸುವ
ಸಲುವಾಗಿ. ಸಹಜವಾಗಿ ತಮ್ಮ ಪಕ್ಷದ ಧನಾತ್ಮಕವನ್ನು
ವಿರೋಧಿಗಳ ಋಣಾತ್ಮಕಗಳನ್ನು ಹೇಳುವುದು ಅನಿವಾರ್ಯ.
“ ಅರ್ಜುನಾ
ಈ ಪಕ್ಷದ ನಾಯಕ ಯಾರು? ನಾನು ಯಾಕೆ ಕೇಳಿದೆ ಅಂತಂದ್ರೆ ಅದು ನಿನ್ನ ಮಟ್ಟಿಗೆ ಇರುವ ನಾಯಕತ್ವ. ಇದು ನನ್ನ ನಾಯಕತ್ವ. ಮಹಾನಾಯಕನಾಗಿ ಧರ್ಮರಾಯ ,
ಸೇನಾನಾಯಕನಾಗಿ ಭೀಮ, ’ಬಲಂ ಭೀಮಾಭಿರಕ್ಷಿತಂ’” ಹೀಗೆ ಶೇಣಿಯವರು ಬಹುನಾಯಕತ್ವವನ್ನು ಪಾಂಡವರಲ್ಲಿ
ಕಾಣುವುದು ಮಾತ್ರವಲ್ಲ, ಕೌರವನ ಏಕ ನಾಯಕತ್ವ ಹೇಗೆ ಸರ್ವಾಧಿಕಾರವಾಗುತ್ತದೆ ಎಂಬುದನ್ನೂ
ವಿವರಿಸುತ್ತಾರೆ. ಪ್ರಥಮವಾಗಿ ಮಾತುಗಳು ಇದನ್ನೇ ಅನುಸರಿಸುತ್ತವೆ.
“ಅಲ್ಲಿಯೂ
ಇದ್ದಾರೆ ಪ್ರಮುಖರು. ಆ ಪ್ರಮುಖರಿಗೆ ಉದ್ಯೋಗ ಎಷ್ಟು ಅಂತಂದ್ರೆ, ಅಲ್ಲಿ ಉಳಿದವರು ವಿಚಾರ
ವಿನಿಮಯಕ್ಕಷ್ಟೇ ಸೀಮಿತ, ನಿರ್ಣಯ ಆತನ ಒಬ್ಬನದ್ದೇ. ಅಲ್ಲಿ ನಾಯಕರು ಬೇರೆ ಇದ್ದರೂ ಬರೆದು
ತೆಗೆದುಕೊಂಡು ಬಂದದ್ದನ್ನು ಮುದ್ರೆಯೊತ್ತುವುದಷ್ಟೇ ಆ ನಾಯಕತ್ವದ ಕೆಲಸ.” ಹೀಗೆ ನಾಯಕತ್ವದ ಬೋಧನೆ ಆರಂಭದಲ್ಲೇ ಆಗುತ್ತದೆ.
ಯಾಕಂದರೆ ಮುಂದಿನದ್ದಕ್ಕೆ ಅರ್ಜುನನನ್ನು ಸಿದ್ದ ಪಡಿಸಬೇಕಲ್ಲ? ನಾಯಕತ್ವ ಶಿಥಿಲವಾಗಬಾರದು. ತಾತ್ವಿಕ ಸಿದ್ಧಾಂತಗಳು ಏನೇ ಇದ್ದರೂ ಸರ್ವಾಧಿಕಾರಕ್ಕೆ
ಸಿಕ್ಕಿದಾಗ ಅವುಗಳು ಅರ್ಥವನ್ನು ಕಳೆದುಕೊಳ್ಳುತ್ತವೆ.
ಇಲ್ಲಿ ಶೇಣಿಯವರು ಧರ್ಮರಾಯನ ರಾಜನೀತಿಯನ್ನು ಧರ್ಮಾಚರಣೆಯನ್ನು
ಹೇಳುತ್ತಾರೆ. “ ಅರ್ಜುನಾ
ಯುದ್ದಾರಂಭದಲ್ಲಿ ಧರ್ಮರಾಯ ವಿರೋಧಿ ಸೇನಾಪತಿಯ ಆಶೀರ್ವಾದ ಮೊದಲು ಬೇಡುತ್ತಾನೆ. ಅವನಂತಹ ರಾಜಕೀಯ
ತಜ್ಞ ಈಗ ಯಾರೂ ಬದುಕಿಲ್ಲ. ವಿರೋಧಿ ಪಕ್ಷದ ನಾಯಕನ ಹಾರ್ದಿಕ ಬೆಂಬಲ ಈ ಪಕ್ಷಕ್ಕೆ ಸಿಕ್ಕಿ
ಆಯ್ತು!!. ಕೌರವ ಓದಿದವನು. ಆದರೆ ಆತ ಓದಿದ್ದು ಅರ್ಥಶಾಸ್ತ್ರಮಾತ್ರ. ಅವ ಓದುವಾಗ ಅದನ್ನು
ಉಪಯೋಗಿಸುವ ಧರ್ಮ ಶಾಸ್ತ್ರದ ಪುಟ ಹರಿದು ಹೋಗ್ಯದೆ. ಕೌರವ ಹೇಳಬಹುದು ಧರ್ಮ ಏನು ಅಂತ
ಗೊತ್ತುಂಟು. ಹಿಂದೆ ಹಿರಣ್ಯಕಶ್ಯಪುವಿಗೂ ಗೊತ್ತಿತ್ತು. ರಾವಣನಿಗೂ ಗೊತ್ತಿತ್ತು. ಇಷ್ಟೆಲ್ಲ ಗೊತ್ತಿದ್ದೂ ಕೌರವ ಮಾಡ್ತಾನೆ ಎಂದರೆ ಅದು
ಪ್ರಪಂಚಕ್ಕೆ ಪಂಥಾಹ್ವಾನ” .
ಎಂತಹ ಸುಂದರ ವಿಶ್ಲೇಷಣೆ ಇದು. ಶ್ರೀಕೃಷ್ಣ ಅದು ಕೇವಲ ಪಾತ್ರವಾದರೆ ಸಾಲದು. ಶೇಣಿಯವರ ರಾವಣ,
ಅರ್ಥಗಾರಿಕೆ ಅತ್ಯಂತ ಶ್ರೇಷ್ಠ. ಭೀಷ್ಮನಾಗಿ ತಮ್ಮ ವೃದ್ದಾಪ್ಯವನ್ನು
ಅದರಲ್ಲಿ ಆರೋಪಿಸುವುದನ್ನೂ ಕಂಡಿದ್ದೇವೆ.
ಆದರೆ ಅಲ್ಲಿ ಮಂಡಿಸುವ ವಾದ ಸಿದ್ಧಾಂತವಾಗುವುದಿಲ್ಲ. ಅದು ಪಾತ್ರೋಚಿತ ವಚನ. ಆದರೆ ಶ್ರೀಕೃಷ್ಣನಾಗುವಾಗ ಈ ಎಲ್ಲದಕ್ಕಿಂತ
ವಿಭಿನ್ನ ಪ್ರತಿಪಾದನೆ ಆಗಲೇಬೇಕು. ಇಲ್ಲಿ ತತ್ವಾದರ್ಶಗಳೆ ವಿಚಾರಗಳು. ಶ್ರೀಕೃಷ್ನನಾಗಿ ಮಂಡಿಸುವ ವಾದ ಅದು ಸಿದ್ದಾಂತವಾಗುತ್ತದೆ.
ಹಾಗೇ ಶ್ರೀಕೃಷ್ಣ ರಥವನ್ನು
ತಂದು ಉಭಯ ಸೇನೆಯ ಮಧ್ಯದಲ್ಲಿ ನಿಲ್ಲಿಸುತ್ತಾನೆ. ಇದು ಪ್ರಸಂಗ ಪೀಠಿಕೆ.
ನಂತರ ಒಂದು ರಾಜಕೀಯ ವಿಶ್ಲೇಷಣೆ. ಇಲ್ಲಿ ಅರ್ಜುನನ ಸ್ಥಾನ ಏನು? ಅವನ ಪಾತ್ರ ಏನು?
“ಶಿವನನ್ನು ಒಲಿಸಿ ಪಡೆದ ಅಸ್ತ್ರಗಳು, ಪರಾಶಕ್ತಿಯಾದ
ಜಗದೀಶ್ವರಿಯಿಂದ ಸಿಕ್ಕಿದ್ದು ಆಂಜಲಿಕ ಪ್ರಾಂಜಲಿಕ, ಇದೆಲ್ಲ ಬತ್ತಳಿಕೆಯಲ್ಲಿ ಸ್ಥಳ ಉಂಟು ಅಂತ
ತುಂಬಿಸುವುದಕ್ಕಲ್ವಲ್ಲ? ಈ ಹೋರಾಟದಲ್ಲಿ ಅರ್ಜುನ
ಏನು ಮಾಡ್ತಾನೆ? ಎಲ್ಲರ ಕೂತೂಹಲ ಅದು. ಬಾಕಿ ಇದ್ದವರೆಲ್ಲ ಯುದ್ದ ಮಾಡ್ಲಿ ಜಯಿಸಲಿ. ಆದರೆ ಪಾರ್ಥ
ವಿಜಯಕ್ಕೆ ಮಹತ್ವ ಬೇರೆಯೇ ಇದೆ. ಇಲ್ಲಿ ಧನಂಜಯನಾದರೆ ಸಾಲದು.. ಇಲ್ಲಿ ಎಂಥಹಾ ಅರ್ಜುನ
ಬೇಕು. ವಿಕ್ರಮಾರ್ಜುನ . ಇಲ್ಲಿ ನಿನ್ನ
ವಿಕ್ರಮವನ್ನು ತೋರಿಸಬೇಕು. ಹಾಗಾಗಿ ಸೇನೆಯುಭರರ ಮಧ್ಯೆ ರಥ ಅಂತ ಹೇಳಿದ್ದಿಯಲ್ಲ ತಂದು ನಿಲ್ಲಿಸಿದ್ದೇನೆ. ನೋಡು
ಪರಿಕಿಸು. “
ಪರಿಕಿಸು ಪಾರ್ಥನೆ ನಿಂದಿರಿಪುಮೋ| ಹರದೊಳು ರತಿಕರನು|| ಕರದೊಳು
ಶಸ್ತ್ರಾಸ್ತ್ರಗಳುರೆ ಧರಿಸುತ| ತಿರುಹುತ ಮೀಸೆಯನು .
“ಪಾರ್ಥ, ಇಲ್ಲಿ ನೋಡಬೇಕಾದ್ದು ನನ್ನನ್ನಲ್ಲ. ಅಲ್ಲಿ
ನೋಡು ಪಾರ್ಥ . ಪರಿಕಿಸು ಪಾರ್ಥನೆ ಅಂತ ಹೇಳಿದ್ದು ಅದಕ್ಕೆ. ಯಾರೆಲ್ಲಾ ನಿಂತಿದ್ದಾರೆ . ಇಲ್ಲಿ
ವೃಷ್ಟಿ ದರ್ಶನ ಮಾಡುವುದಲ್ಲ. ಸಮಷ್ಟೀ ದರ್ಶನ ಮಾಡಬೇಕು. ಇದಿರು ನಿಂತದ್ದು ಬೇರೆ ಏನೂ ಅಲ್ಲ.
ವಿರೋಧ ಪಕ್ಷ. ಇಲ್ಲಿ ವ್ಯಕ್ತಿ ನಿಷ್ಠವಾದ ವಿರೋಧವಲ್ಲ.” ಪ್ರತಿ ಮಾತಿನಲ್ಲೂ ಕೃಷ್ಣನ ಕಾಳಜಿ ಗಮನಿಸಬೇಕು.
ಪಾರ್ಥನನ್ನು ಎಚ್ಚರಿಸುವುದು. ಶೇಣಿ ಯಕ್ಷಗಾನದ
ಕೃಷ್ಣ ನಾಗುತ್ತಾರೆ. ಅದನ್ನೆ ಮೊದಲಿಗೆ ನಾನು ಹೇಳಿದ್ದು.
ಇದು ಅನುಸರಣೆಗೆ ಯೋಗ್ಯವಾಗುತ್ತದೆ ಎಂಬ ಸ್ವ
- ಅರಿವು ಇಲ್ಲಿದೆ.
ಮುಂದಿನ ಹಂತದಲ್ಲಿ ಪ್ರಸಂಗದ ಆಶಯವನ್ನು ಗಟ್ಟಿಗೊಳಿಸುವ ಅರ್ಥಗಾರಿಕೆ.
,
“ಪಾರ್ಥ ನಾವು ತಿಳಿದುಕೊಂಡಿದ್ದೆವು, ಇವರೆಲ್ಲ
ನಿವೃತ್ತರಾಗಿ ವರ್ಷ ಎಷ್ಟ್ ಆಯ್ತು. ಈ ಸಲ ಯೇನಿವರೆಲ್ಲ ರಂಗ ಪ್ರವೇಶಕ್ಕೆ ಬಂದಿದ್ದಾರೆ?
ಹಾಗಾದರೆ ಪಕ್ಷ ಬೆಳೆದದೆ. ಯಾಕೆ ಬೆಳೀತು. ಎಲ್ಲ ನಿರ್ನಾಮಕ್ಕೆ ಬೆಳೀತು. ಏನು ಹೊಂದಾಣಿಕೆ ಎಲ್ಲ
ವಿಷಮ ಹೊಂದಾಣಿಕೆ. “
ಯಾರೆಲ್ಲ ತೀರ್ಮಾನವನ್ನು ಹೇಳುವ ನಿರ್ಣಾಯಕರಾಗಬೇಕೋ ಅವರೆಲ್ಲ ಕಕ್ಷೀದಾರರಾಗಿ ಕೈ ಮಸೆಯುತ್ತಿದ್ದಾರೆ.
ಅದುವರೆಗೆ ಭೀಷ್ಮರ ಯುದ್ಧವನ್ನು ಏಲ್ಲೂ ಕಂಡಿಲ್ಲ. ದ್ರೋಣರ ಹೋರಾಟ
ಇತಿಹಾಸದಲ್ಲಿ ಇಲ್ಲ. ಅವರೆಲ್ಲ ಇಂದು ಪಾಂಡವ ಸೇನೆ ಎದುರು ಮೀಸೆ ತಿರುವುತ್ತಾ
ನಿಂತಿದ್ದಾರೆ. ನಿವೃತ್ತರು
ಅಂತ ಅರ್ಜುನನನ್ನು ಎಚ್ಚರಿಸುತ್ತಾನೆ ಶ್ರೀ ಕೃಷ್ಣ. ಅರ್ಥಗಾರಿಕೆಗೆ ಇದಕ್ಕಿಂತ ಗಟ್ಟಿತನ ಯಾವುದು
ಇದೆ? ಇದನ್ನು ಅನುಭವಿಸುವುದೇ ಒಂದು ಶ್ರೇಷ್ಠ ಅನುಭವ. ತಾಳ ಮದ್ದಲೆ ಎಂದರೆ ಪ್ರತಿಸ್ಪರ್ಧಿಯನ್ನು ಚುಚ್ಚುವುದಲ್ಲ. ಪರಸ್ಪರ ಕಚ್ಚಿಕೊಳ್ಳುವುದಲ್ಲ. ( ಈಗ ಕಚ್ಚಿಕೊಳ್ಳೂವುದೇ
ತಾಳಮದ್ದಲೆ. ಈ ತಪ್ಪು ಕಲ್ಪನೆ ಯಥೇಚ್ಛವಾಗಿದೆ) ಅನಾವಶ್ಯಕ ಚರ್ಚೆಯಲ್ಲ. ಸ್ಪರ್ಧೆಯಲ್ಲ. ಪ್ರಸಂಗದ
ಔಚಿತ್ಯವನ್ನು ಗಮನಿಸಬೇಕು. ಚರ್ಚೆಗಾಗಿ ವಿಷಯವನ್ನು
ಅನ್ವೇಷಿಸುವಾಗ ಪಾತ್ರ ಸಾಯುತ್ತದೆ. ಪಾತ್ರದ ಧ್ಯೇಯ ನಿಲುವು ಇದರತ್ತ ಗಮನ ಕಡಿಮೆಯಾಗುತ್ತದೆ. ಒಂದರ್ಥ.
ಇದಿರಾಳಿಯನ್ನು ಕಟ್ಟಿ ಹಾಕುವ ತಂತ್ರಗಾರಿಕೆಯೇ ಮುಖ್ಯವಾಗುತ್ತದೆ. ಮತ್ತೆ ಶ್ರೀಕೃಷ್ಣ ಚಿಂತನೆ ಹೇಗೆ ಸಾಧ್ಯ? ಹಾಗಾಗಿ ಶೇಣಿಯವರು ನಭೂತೋ ನಭವಿಷ್ಯತಿ
ಅಂತ ಆಗುವುದು. ಇಲ್ಲಿ ಶ್ರೀಕೃಷ್ಣನ ಮಾತುಗಳನ್ನು ಕೇಳುವಾಗ, ಭೀಷ್ಮರು ಎಷ್ಟೇ ದೊಡ್ಡ ಭಾಗವತೋತ್ತಮರಾದರೂ ಶ್ರೀಕೃಷ್ಣನ ಆಳ ಅಂತರ್ಯ ತಿಳಿಯಲಾರದೇ ಹೋದರು
ಅಂತನೇ ಅನ್ನಿಸುತ್ತದೆ. ಒಂದು ವೇಳೆ ಅದು ಅರಿತಿದ್ದರೆ, ಹತ್ತು ದಿನದ ಭಾರತ ಯುದ್ದದ ಕಥೆಯೇ ಬೇರೆ ಇರುತ್ತಿತ್ತು. ಭಾಗವತೋತ್ತಮ
ಭೀಷ್ಮರನ್ನೂ ಬಿಡದ ಶ್ರೀಕೃಷ್ಣನ ಕಟಕಿ, ಆಶ್ಚರ್ಯವಾಗುತ್ತದೆ. ಭೀಷ್ಮ ಹೇಗೆ ಇರಬಹುದು. ಅಲ್ಲಿ
ಚಿತ್ತಶುದ್ದಿಯಿರಲಿಲ್ಲ. ಶೇಣಿಯವರ
ಶ್ರೀಕೃಷ್ಣ ಅದ್ವಿತೀಯ ಅನ್ನಿಸುವುದು ಈ ಬಗೆಯ
ಚಿಂತನೆ ಮೂಡಿದಾಗ. ಮುಂದಿನ ಮಾತಿನಲ್ಲಿ ನೋಡಿ ಈ ತೀಕ್ಷಣತೆ ಕುರು ಸೇನಾಧಿಪತ್ಯ ಸ್ಥಾನವನ್ನು ಬಲವಾಗಿ
ವಿಮರ್ಶಿಸಿದಂತೆ.
“ ಅರ್ಜುನ ಕೆಲವು ಸಲ ತೋರ್ತದೆ, ನಾನು ಆಯುಧ ಹಿಡಿಯೋದಿಲ್ಲ ಅಂತ ಹೇಳಿ ಮೋಸ ಮಾಡಿದೆನೋ ಅಂತ. ಯಾಕೆ?
ಇಷ್ಟೆಲ್ಲ ಕಲ ಬೆರಕೆಯಾಗಿ ನನ್ನಿದಿರು ಬರ್ತದೆ ಅಂತ ನನಗೆ ಗೊತ್ತಿರಲಿಲ್ಲ.
ಈ ಬೆರಕೆಗೆಲ್ಲ ಪಂಚಗವ್ಯ ಕೊಡಬೇಕಾಗಿದ್ರೆ ನೀನು ಸಾಕು. ನನಗೆ ಭರವಸೆ ಮಾತ್ರ
ಕೊಡಬೇಕು. ಇಲ್ಲದಿದ್ರೆ ನಾನೇ ಬೇಕು ಅಂತಾದ್ರೆ, ಅನ್ನಿಸ್ತದೆ - ಇದು ಪಕ್ಕನೆ ಶುದ್ದವಾಗುವ ಪಕ್ಷ ಅಲ್ಲ.”
ಧರ್ಮವನ್ನು ಅರಿತವರೆ, ಗುರು ಸ್ಥಾನದಲ್ಲಿದ್ದು ಪಿತೃಸ್ಥಾನದಲ್ಲಿದ್ದು
ಆ ಸ್ಥಾನವನ್ನು ಕಲುಷಿತಗೊಳಿಸಿದ್ದಾರೆ.
“ ಅಪರ್ಯಾಪ್ತಂ ತದಸ್ಕಾಕಂ ಬಲಂ ಭೀಷ್ಮಾಭಿ ರಕ್ಷಿತಂ” ಕೌರವನ ಮಾತಿಗೆ ಒಂದು ವಿವರಣೆಯನ್ನು ಒಂದು
ಟಿಪ್ಪಣಿಯನ್ನು ಕೊಡುತ್ತಾರೆ. “ ಹನ್ನೊಂದಕ್ಷೋಹಿಣಿ ಸೈನ್ಯ ವಿದ್ದರೂ ಕೂಡಾ,
ಸೇನೆ ಸ್ವಲ್ಪ ದುರ್ಬಲವಾಗಿದೆ.
ಕೌರವ ಸಾಲದು ಅಂತ ಯಾಕೆ ಹೇಳಿದ? ಕೌರವ ಮಹಾ ಮತ್ಸದ್ಧಿ.
ನಮ್ಮ ಸೇನೆಯಲ್ಲಿ ಭೀಷ್ಮರಿಗೂ ಒಂದು ಮುಳ್ಳುಂಟು. ಇಲ್ಲಿ
ನಿಮ್ಮ ಹೌದಲ್ಲ? ಗಂಡಸೇ ಅವ ಮಹಾರಥಿಯೇ ಆದರೆ ಒಮ್ಮೆ ಹೆಣ್ಣಾಗಿ ಆಮೇಲೆ ಗಂಡಾಗಿ,
ಒಬ್ಬ ಶಿಖಂಡಿ ಇಲ್ಲಿದ್ದಾನೆ. ಆದ್ದರಿಂದಲೇ ಇರಬೇಕು.
ದ್ರೋಣನಲ್ಲಿ ಗುಟ್ಟಾದ ಶೈಲಿಯಲ್ಲಿ ಒಂದು ಮಾತು ಹೇಳಿದನಂತೆ. ಭೀಷ್ಮಾಭಿರಕ್ಷಿತವಾದ ನಮ್ಮ ಬಲ ಅಪರ್ಯಾಪ್ತವಾಗಿದೆ. ಆದ್ದರಿಂದ
“ ಅಯನೇಶುಚ ಸರ್ವೇಷು” ಭೀಷ್ಮರನ್ನು ನೋಡಿಕೊಳ್ಳಬೇಕು.
“ ಇಷ್ಟಾದರೆ ಕೌರವ ಮತ್ಸದ್ಧಿ ಹೇಗಾಗ್ತಾನೆ. ಮುಂದೆ ಕೇಳಿ ” ಭೀಷ್ಮರನ್ನು ದ್ರೋಣರು ನೋಡಿಕೊಳ್ಳಬೇಕು. ಅದೇ ದ್ರೋಣರಲ್ಲಿ ಮೊದಲೇ
ಹೇಳಿಬಿಟ್ಟಿದ್ದಾನೆ, “ ತವ ಶಿಷ್ಯೇಣ ಧೀಮತಾಂ” ಅವ ಸೇನಾಪತಿಯಾಗಿದ್ದಾನೆ. ಯಾರು ಅರ್ಜುನ. ಹೀಗೆ ಯಾಕೆ ಹೇಳಿದ? ಅದರ ಅರ್ಥ ಏನು. ನಿಮ್ಮನ್ನು ಭೀಷ್ಮಾಚಾರ್ಯರು ನೋಡಿಕೊಳ್ತಾರೆ. ಹೀಗಾಗ್ಯದೆ. ಭೀಷ್ಮರನ್ನು ನೋಡ್ಲಿಕ್ಕೆ ದ್ರೋಣರು. ದ್ರೋಣರನ್ನು ರಕ್ಷಿಸಲಿಕ್ಕೆ
ಭೀಷ್ಮಾಚಾರ್ಯರು!!!”
ಹೀಗೆ ಯುದ್ದ ಮಾಡು ಅಂತ ಅರ್ಜುನನನ್ನು ಶ್ರೀಕೃಷ್ಣ ಹುರಿದುಂಬಿಸುತ್ತಾನೆ. ನೀನು ಯೋಧ, ಅದು ವಿರೋಧ ಪಕ್ಷ,
ಅಲ್ಲಿರುವವರ ನಿಲುವು ಏನು. ಎಲ್ಲವನ್ನೂ ವಿವರಿಸಿ ಅರ್ಜುನ
ಬತ್ತಳಿಕೆಗೆ ಕೈ ಹಾಕು. ಹೊಡಿ ಬಾಣ ಅಂತ ಹೇಳ್ತಾನೆ ಶ್ರೀ ಕೃಷ್ನ
ಯೋಧನಾದವನು ತಾನು ನಿಂತ ನೆಲವನ್ನು ಅಂದರೆ ಭೂಮಿಯನ್ನು ನೋಡಬಾರದು.
ದೂರದಲ್ಲಿ ಕಾಣುವ ಭೂಮಿಯನ್ನು ನೋಡಬೇಕು. ಆಗ ತಲೆತಗ್ಗಿಸುವ
ಪ್ರಮೇಯ ಬರುವುದಿಲ್ಲ. ಕಾಲ ಬುಡದ ಭೂಮಿ ನೋಡಬೇಕಾದರೆ ತಲೆ ತಗ್ಗಿಸಲೇ ಬೇಕು.
ಆದರೆ ಅರ್ಜುನ ಯೋಧ ದರ್ಮದಿಂದ ದೂರ ಸರಿಯುತ್ತಾನೆ. ” ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ “ ತನ್ನೆದುರು ನಿಂತ ಬಂಧುಗಳನ್ನು ನೋಡಿ ಅರ್ಜುನ ಮೋಹಪರವಶನಾಗುತ್ತಾನೆ. ನನ್ನವರು ಗುರುಗಳು ಬಂಧುಗಳು ಎಂಬ ಮೋಹ
ಆವರಿಸಿಬಿಡುತ್ತದೆ. ಇವರನ್ನೆಲ್ಲ ಕೊಲ್ಲುವುದೇ?
ಗುರುಗಳನ್ನು ಪಿತೃಗಳನ್ನು ಬಂಧುಗಳನ್ನು ಹತ್ಯೆ ಮಾಡಬಹುದೇ?
ಯುದ್ದಾವೇಶದಿಂದ
ಹೂಂಕರಿಸಿ ಭುಜ ಕುಣಿಸಿ ಮುಂದೆ ಬಂದು ನಿಂತಾಗ ಮೋಹಾವೇಶಗೊಂಡರೆ ಹೇಗೆ? ಅರ್ಜುನ ತಟಸ್ಥನಾಗಿ ಇನ್ನೂ ಪ್ರೇರೆಪಣೆಗೊಳ್ಳದೆ
ಸುಮ್ಮನಿರುವುದನ್ನು ನೋಡಿ ಶ್ರೀ ಕೃಷ್ಣ ಹೇಳುವ ಮಾತಿದು.
“ಕುತಸ್ತ್ಪಾ ಕಶ್ಮಲಮಿದಂ ವಿಶಮೇಸಮುಪಸ್ಥಿತಂ” ಅರ್ಜುನಾ, ನಾನು
ಆವಾಗಲೇ ಹೇಳಿದ್ದೇನೆ- ಸ್ಥಾನ ಮರ್ಯಾದೆ ಅಂತ ಒಂದ್ ಹೌದಲ್ಲ? ಈಗ ನಿನ್ನಲ್ಲಿದ್ದ ದಯೆ ಅಂದರೆ ಭೂತ
ದಯೆ., ಅನುಕಂಪೆ, ಸಹಾನು ಭೂತಿ ಇನ್ನು ಏನೆಲ್ಲ
ಹೇಳಬಹುದೋ ಮೆಚ್ಚತಕ್ಕದ್ದೆ. ಆರ್ಯವಂಶಜನಾದ ನಿನಗೆ, ಸುಸಂಸ್ಕೃತನಾದ ನಿನಗೆ ಕೋಟಿ ಕೋಟಿ ನರರ
ಮಧ್ಯೆ ಪ್ರತ್ಯೇಕ ನರನೆಂದು ಬಾಕಿದ್ದವರಿಂದ ಕರೆಯಲ್ಪಡುವ ನಿನಗೆ ಈ ಹೃದಯ ವೈಶಾಲ್ಯ ಬಂದರೆ
ಆಕ್ಷೇಪ ಅಲ್ಲ. ಆದರೆ, ಈ ಸ್ಥಳಕ್ಕೆ ಮಾತ್ರ
ಬರಬಾರದದು. ಪ್ರತಿಯೊಂದು ವಿಚಾರಕ್ಕು ಒಂದು ಸ್ಥಾನ ಎಂಬುದಿದೆ. ಈಗ ನಾನು ನೀನು ಚರ್ಚೆ
ಮಾಡಿದ್ರೆ, ಮುಂದೆ ಪ್ರಪಂಚಕ್ಕೂ ಸ್ವಲ್ಪ ಲಾಭ ಆಗಬೇಕು. “
ಮುಂದೆ ಒಂದು ಉತ್ತಮ ಉದಾಹರಣೆ ಕೊಡುತ್ತಾರೆ. “ಜನಿವಾರ ಯಾವ್ಯಾವ ಕಾಲಕ್ಕೆ ಹೇಗೆ ಹೇಗೆ ಉಪಯೋಗಿಸಬೋದು
ಅಂತ ಕಲ್ತಿರಬೇಕು. ನಾವೆಲ್ಲ ಜನಿವಾರ ಇದ್ದ
ಜಾತಿಯವರು. ಹಾಗಂತ ಕಿವಿಯಲ್ಲಿಟ್ರೆ ಸಾಕೋ? ದೇವಸ್ಥಾನದ ಅಂಗಳವೂ ಆಗಬಾರದಲ್ಲ? ಹಾಗಾದರೆ ಇದೆರಡು
ಒಟ್ಟಿಗೆ ಕೂಡಿ ಬರಬೇಕು. ಶ್ರಧಾ ಮೇಧಾ... ಅಲ್ಲವೇ? ಅಲ್ಲಿ ಸ್ಥಳ ದೋಷ ಬಂತಲ್ಲಾ? ಎಲ್ಲಿ?
ದೇವಸ್ಥಾನದ ಅಂಗಣ ಎನ್ನುವಾಗ ಅಲ್ಲಿ ಆಚಾರ್ಯತ್ವ ಉಳಿಯಿತು ಹೌದು- ಇಟ್ಟದ್ದು ಕಿವಿಯಲ್ಲೇ
ಅರ್ಜುನಾ ನೀನೂ ಹೀಗೆ....... ಹೃದಯ ದೌರ್ಬಲ್ಯದಿಮ್ದ ಮರುಳನಂತೆ ಅನಾರ್ಯರಂತೆ ನುಡಿಯುವುದೇ?
ಇದಕ್ಕೆ ಅಸ್ಥಾನ ವೈರಾಗ್ಯ ಅಂತ ಹೆಸರು.
ದೇವಸ್ಥಾನದ ಮುಂದೆ ನಿಮ್ತು ಕೈ ಮುಗಿವಾಗ ಮಂಗಳಾರತಿ ಆಗುವಾಗ ಈ ಭಾವ ಬರಲಿ. ಆದರೆ ಇಲ್ಲಿ
ಬಂದು ನೀನು ಕಿವಿಗೆ ಜನಿವಾರ ಇಡುವ ಮಟ್ಟಿಗೆ , ನನ್ನ ಭಾವ ನೀನು ತಪ್ಪುವುದಿಲ್ಲ. ವಿಷಮವಾದ
ಸಮಯದಲ್ಲಿ ಈ ನಿನ್ನ ಕೊಡುಗೆ ಕಷ್ಮಲ. “
“ ಗುರುಗಳೋ ಅರ್ಚಕರೋ ತೀರ್ಥ ಕೊಡುವಾಗ ನಾವು ಶ್ರದ್ದೆಯಿಂದ
ತೀರ್ಥಕ್ಕೆ ಕೈ ಕೊಡಬೇಕು. ಕೈ ಒಡ್ಡುವಾಗ ಕೈ ತೊಳೆದು ಕೊಳ್ಳಬೇಕಲ್ಲ? ಏನೋ ಮಾಡಿ ಬಂದ ಕೈಯಲ್ಲಿ “
ಓ ತೀರ್ಥವೋ ಕೊಟ್ಟುಬಿಡಿ” ತೀರ್ಥವನ್ನು ಕೆಡಿಸಬಾರದು. ಈ ನಿನ್ನ ಕೊಡುಗೆ ವಿರೋಧಿಗಳ ಮಟ್ಟಿಗೆ ಹೇ
.....ದೇವ್ರೆ . ಏನಂತ ನೀನು ಹೇಳುವುದು? “
ಇಲ್ಲಿ ಕೃಷ್ಣನ ಕಳವಳ ಎಷ್ಟು ಸಹಜವಾಗಿ ವೇದ್ಯವಾಗುತ್ತದೆ ಎಂಬುದನ್ನು
ಗಮನಿಸಬೇಕು.
“ ಅರ್ಜುನಾ ಪ್ರಪಂಚದಲ್ಲಿ ಏನು ಹೇಳ್ತಾರೆ. ಆಚಾರ್ಯರಾದ ದ್ರೋಣರೂ ಏನು
ಹೇಳಿದ್ರು? ಪಾರ್ಥ ಏವ ಧನುರ್ಧರಃ. ಅಲ್ವೋ? ಶಿವ ಪಾಶು ಪತ ಏಕೆ ಕೊಟ್ಟ? ಅವನಲ್ಲಿ ಸುಮ್ನೇ ಉಂಟು
ಅಂತಲೋ? ಹೋಗಲಿ ತಪಸ್ಸಿಗೆ ನಿಮ್ಮಣ್ಣ ನಿನ್ನನ್ನೇ ಯಾಕೆ ಕಳುಹಿಸಿದ. ಭೀಮನನ್ನು ಯಾಕೆ
ಕಳುಹಿಸಲಿಲ್ಲ? ವೇದ ವ್ಯಾಸರು ಕೂಡ ಯಾರ ಹೆಸರನ್ನು ಹೇಳಿದ್ದು.? “
ನಿದ್ರಿಸಿದ ರೋಗಗ್ರಸ್ಥನಾದವನನ್ನು ಎಚ್ಚರಗೊಳಿಸಿ ಅವನ
ಅಂಗಾಗವನ್ನೆಲ್ಲ ಮುಟ್ಟಿ ತಟ್ಟಿ ಎಬ್ಬಿಸಿದಂತೆ, ಶ್ರೀಕೃಷ್ಟ ಅರ್ಜುನನ ಮನಸ್ಸಿನ ಮೂಲೆ ಮೂಲೆಯ
ಕಲ್ಮಷವನ್ನು ದೂರ ಎಸೆಯುವ ಪ್ರಯತ್ನ ಮಾಡುತ್ತಾನೆ. ಶ್ರೀ ಕೃಷ್ಣನ ಶ್ರಮ ಹೇಗೋ ಆದರೆ ಶೇಣಿಯವರ
ಶ್ರಮ ಪ್ರತಿ ವಾಕ್ಯದಲ್ಲೂ ಕೊಡುವ ಉದಾಹರಣೆಯಲ್ಲೂ ವ್ಯಕ್ತವಾಗುತ್ತದೆ.
“ ಯುದ್ದ ಬೇಡ ಅನ್ನುವುದಕ್ಕೆ ಕಾರಣ ಏನು? ಈ ರಾಜ್ಯದಿಂದ ಸುಖ ಇಲ್ಲ.
ಅದರ ಧ್ವನಿ ಏನು? ರಾಜ್ಯದಿಂದ ಸುಖ ಇದ್ದರೆ ಯುದ್ಧ ಮಾಡಿಯೇನು ಅಂತ ಅಲ್ವೋ? ಹಾಗಾದ್ರೆ ಎಲ್ಲಿ ಕಷ್ಟ ಉಂಟೋ ಅಲ್ಲಿ ನೀನಿಲ್ಲ. ಒಂದು
ವೇಳೆ ಬಹುದೊಡ್ಡದಾದ ಔದಾರ್ಯವನ್ನು ಈ ವಿರೋಧಿ ಪಕ್ಷದ ಮೇಲೆ ತೋರಿಸಬಹುದು. ಅವರು ಅಲ್ಲಿ ಬಿಟ್ಟು
ಇಲ್ಲಿಗೆ ಬಂದಾರೋ? “
ಹಂತ ಹಂತವಾಗಿ ವಿಚಾರ ಆವರಿಸುವಾಗ ಕೊನೆಗೊಮ್ಮೆ ಕೃಷ್ಣ ಹೇಳುವುದು
“ಮೂರ್ಖ ಕೌರವ ಒಬ್ಬನೇ ಅಲ್ಲ ನೀನು ಮೂರ್ಖನೇ.”
ಸಂಪೂರ್ಣ ಮೋಹ ಆವರಿಸಿದ ಅರ್ಜುನನ್ನು ಹುರಿದುಂಬಿಸಿ ಅವನ ಭಾವನೆಯನ್ನು
ಒರೆಗೆ ಹಚ್ಚುವ ಶ್ರೀಕೃಷ್ಣ ಹತಾಶನಾಗುವುದಿಲ್ಲ.ಮತ್ತಷ್ಟು ಚಿಂತನೆಗಳನ್ನು ವಿಚಾರಗಳನ್ನು
ಒದಗಿಸುತ್ತಾ ಸಾಗುತ್ತಾನೆ. ಹೀಗೆ ಕೃಷ್ಣ ಪ್ರತಿಯೊಂದನ್ನು ಬಿಡದೇ ಹೇಳುವುದು ಹತಾಶನಾಗಿ ಅಲ್ಲ.
ಅರ್ಜುನನಲ್ಲಿ ಕಲ್ಮಷ ಉಳಿಯದಿರಲಿ ಅಂತ.
ಅವರೆಲ್ಲ ನನ್ನವರು
ಬಂಧುಗಳು ಅವರನ್ನು ಕೊಲ್ಲುವುದು ಪಾಪದ ಕೆಲಸ. ಬಂಧು ಹತ್ಯೆ ಗುರು ಹತ್ಯೆ ಈ ಪಾಪ ಭಯ ಅರ್ಜುನನಿಗೆ ಆವರಿಸುತ್ತದೆ. ಆಯುಧ ಕೈ
ಜಾರುತ್ತದೆ ಅಂತ ಹೇಳುತ್ತಿದ್ದಾನೆ.
“ ಅರ್ಜುನಾ, ಕತ್ತಲೆ ಹೊತ್ತಿಗೆ
ಮಾರ್ಗ ಕ್ರಮಣ ಮಾಡುವವನಿಗೆ ಅಲ್ಲಿ ಬಿದ್ದಿದ್ದಂತಹ ಹಗ್ಗ ಸರ್ಪವಾಗಿ ಕಾಣುತ್ತದೆ. ಅಂದರೆ ಅವ ಸುಳ್ಳುಗಾರ ಅಂತ ನಾನು ಹೇಳಿಯೇನೋ” ( ಅವರು ಪಾಪಿಗಳು
ಕೊಲ್ಲು ಅಂತ ಶ್ರೀಕೃಷ್ಣ ಹೇಳುವಾಗ ಅವರನ್ನು ಕೊಂದು ನಾನು ಪಾಪಿಯಾಗುತ್ತೇನೆ ಅಂತ ಅರ್ಜುನ ಪಾಪಭಯವನ್ನು
ವ್ಯಕ್ತಪಡಿಸುತ್ತಾನೆ. ಇಲ್ಲಿ ರಾತ್ರಿಯ ಹಾವಿನಂತೆ ಪಾಪ ಭಯ ಅರ್ಜುನನ್ನು
ಕಾದುತ್ತದೆ) ಹಾಗಂತಹಾವಾಗಿ ಕಂಡದ್ದನ್ನು ಒಪ್ಪುವುದು ಸರಿಯೇ? ಇವರು ಪಾಪಿಗಳು ಇದು ಗೊತ್ತಿದ್ದೂ ಅವರನ್ನು ಬದುಕುವುದಕ್ಕೆ ಬಿಡುವುದು ನಿನ್ನಂತಹ ಪುಣ್ಯಾತ್ಮರು
ಸಂಹರಿಸಲ್ಪಡುವುದು ಈ ಪಾಪದಲ್ಲಿ ಸಣ್ಣದು ದೊಡ್ಡದು ಅಂತ ನಿರ್ಣಯಿಸುವುದು ಹೇಗೆ?
“ಅರ್ಜುನ ನಿನ್ನ ಪುಣ್ಯದಲ್ಲಿ ನೀನೊಬ್ಬ ಪುಣ್ಯವಂತನಾಇ
ಸ್ವರ್ಗಕ್ಕೆ ಹೋಗುವ ಆಲೋಚನೆಯೋ? ಇಲ್ಲಿ ಯಾರದೋ ಒಬ್ಬರದು ಕಣ್ಣು
ಕುರುಡಾಗಿದೆ.) ನನ್ನ ಕಣ್ಣು ಕುರುಡಾಗಿದೆ ಅಂತ ಹೇಳುವಷ್ಟು ಧೈರ್ಯ ಉಂಟೋ ನಿನಗೆ” ( ಮಾರ್ಗದಲ್ಲಿ
ನೋಡಿದ ಹಗ್ಗವನ್ನು ಹಾವು ಅಂತ ಹೇಳಿದವನೋ ಅಲ್ಲ ಅದು ಸರಿಯಲ್ಲ ಅಂತ ಹೇಳಿದವನೋ ಒಬ್ಬನಿಗೆ
ಕುರುಡಾಗಿದೆ)
ಅತ್ತಕಡೆ ಕುರುಡಾದವನು ಮಗನೆಂಬ ಮೋಹದಲ್ಲಿ ಬಿದ್ದ. ಇಲ್ಲಿ ಕಣ್ಣಿದ್ದೂ
ಕುರುಡಾಗಿ ಮೋಹದಲ್ಲಿ ಬಿದ್ದಿದ್ದಾನೆ.
“ ಎತ್ತಿದ ಬಿಲ್ಲು ಕೆಳಗಿಳಿಸಬೇಕಾದರೆ ದಿನವೊಂದಕ್ಕೆ ಹತ್ತು ಸಾವಿರ ಮಂದಿಯನ್ನು ಕೊಲ್ಲುತ್ತೇನೆ. ಆ ಭೀಷ್ಮನೂ
ಧರ್ಮರಾಯನಿಗೆ ಮಾತುಕೊಟ್ಟಿದ್ದಾನೆ. ನಿಮ್ಮ ಐವರನ್ನು ಏನೂ ಮಾಡೋದಿಲ್ಲ. ಉಳಿದವರು ಸತ್ರ ಸಾಯ್ಲಿ
ನಾವೈದು ಮಂದಿ ಉಳೀತೇವೆ ಅಂತ ತಾತ್ಸಾರವೋ?
“ಅರ್ಜುನ ನಿಮ್ಮಣ್ಣ ಯುದ್ದದ ಮೊದಲೇ ನಿಮ್ಮಜ್ಜನಿಂದ ಅಭಯ ಪಡೆದಿದ್ದಾನೆ.
ನಿಮ್ಮಜ್ಜನಿಂದ ತೊಂದರೆ ಬರಲಿಕ್ಕಿಲ್ಲ.
ನಮ್ಮಲ್ಲಿ ಅಜ್ಜ ದಿನಕ್ಕೆ ಹತ್ತುಸಾವಿರ ತೆಗೀಲಿ . ನಮ್ಮವರೆಲ್ಲ ಸತ್ರೂ ಈ ಐದು ಜನರ
ಮಟ್ಟಿಗೆ ಬಾಧಕ ಇಲ್ಲ ಎಂಬ ಭರವಸೆಯೇ? ಕೈಯಿಂದ ಗಾಂಡೀವ ಜಾರುತ್ತದೆ, ನೀನಾಗಿ ಕೆಳಗೆ ಹಾಕುವುದಲ್ವಲ್ಲಾ? ಯೆಲ್ಲಾ ಸಂಗ್ರಹ ಮಾಡಿ ಇವ ಇಟ್ಟುಕೊಂಡಿದ್ದಾನೆ ಇಡೀ
ಪಕ್ಷಕ್ಕೆ ಬೇಕಾದಷ್ಟು. ಅದನ್ನು ವೆಚ್ಚ ಮಾಡೋದಿಲ್ಲ”
ಕೈಯಲ್ಲಿರುವ ತಂಬಿಗೆಯಲ್ಲಿ ನೀರು ಹಿಡಿದು ಬೆಂಕಿಗೆ ಹಾರಿದ್ರೂ ದೇಹ
ಸುಡದೆಇರುವುದಿಲ್ಲ. ತಂಬಿಗೆಯ ನೀರು ಮೊದಲು ಬೆಂಕಿಯನ್ನು ಆರಿಸಬೇಕು. ಅರ್ಜುನ ಸಂಗ್ರಹ ಅರ್ಥಹೀನವಾಗುತ್ತಿದೆ.
ಕುಲ ಕ್ಷಯ ಕೃತಂ ಪಾಪಂ”
ಅರ್ಜುನನ ಕುಲ ಕ್ಷಯದ ಪ್ರಶ್ನೆಗೆ
“ ಅರ್ಜುನಾ, ಕುಲ ಅಂದರೆ ಏನು.? ಕುಲ ಅಂತಂದ್ರೆ ಹತ್ತುದಿನ ಸೂತಕ
ಆಚರಿಸ್ತೇವೆ ಎಂಬ ಅರ್ಥ ಮಾತ್ರವೋ ಇರುವುದು? ನಮ್ಮ ರಕ್ತದಲ್ಲಿ ಹುಟ್ಟಿದ್ದೆಲ್ಲ ನಮ್ಮ
ಕುಲವಾಗುವುದಿಲ್ಲ. ರಕ್ತದಲ್ಲಿ ಹುಳ ಕೂಡ ಹುಟ್ಟುತ್ತವೆ. “ ಹೀಗೆ ಇಲ್ಲಿ ಕೌರವ
ರಕ್ತದಲ್ಲಿನ ಹುಳುವಾಗುತ್ತಾನೆ ಎಂಬುದನ್ನು ತೋರಿಸುತ್ತಾರೆ. ಮತ್ತು ಮುಂದುವರಿಸಿ
ಹೇಳುತ್ತಾರೆ
“ ನಿನಗೆ ಗೋವತ್ಸ ನ್ಯಾಯ ಅಂತೊಂದು ಗೊತ್ತುಂಟಲ್ಲ? ಅದ್ಯಾಕೆ ದನದ ಕರು
ಅಂತ ಹೇಳೋದು? ನಿಜವಾಗಿ ಅದು ಹುಟ್ಟಿದ್ದು ಎತ್ತಿನಿಂದ ಅಲ್ವೋ? ಈಗ ರೂಢಿಯಲ್ಲಿ ಎಲ್ಲರೂ ದನದ ಕರು
ಅಂತ ಹೇಳಿದ್ದಾರೆಯೇ ಹೊರತು ಎತ್ತಿನ ಕರು ಅಂತ ಹೇಳುದಿಲ್ಲ. ನಮ್ಮ ಕುಲ ಅಂತ ಹೇಳಿದ ಮಾತ್ರಕ್ಕೆ ಅದು ಕುಲ
ಆಗುದಿಲ್ಲ ನಮ್ಮ ಹೊಟ್ಟೆಯಲ್ಲಿ ಹುಟ್ಟಿದ
ಹುಳಗಳಿಗೆ ನಾವು ಅಪ್ಪ ಆಗ್ತೇವಾ? “
ಅರ್ಜುನ ಸ್ವಜನಂ ಅಂತ ಉದ್ದರಿಸುತ್ತಾನೆ. ಶೇಣಿಯವರು ಅದನ್ನು
ಆಕ್ಷೇಪಿಸುತ್ತಾರೆ. “ಸ್ವಜನ ಯಾರು ಈ ಕೌರವರು!! ಇದು ಭೀಷ್ಮರ ಪಕ್ಷವೋ? ಅಲ್ಲಿಗೆ
ಬಾ. ಅದು ಯಾವುದು ಪಕ್ಷ? ಇವರೆಲ್ಲ ಯಾಕೆ ಆ ಪಕ್ಷ ಸೇರಿದ್ದು? ಒಳ್ಲೆಯವರ ಪಕ್ಷಕ್ಕೆ
ಬರಬಾರದಿತ್ತೆ? ಇಷ್ಟು ವರ್ಷ ನಿವೃತ್ತಿ ಪಡೆದು ವಿಶ್ರಾಂತಿ ಪಡೆಯುತ್ತಿದ್ದವರು ಈಗ ಯಾಕೆ ಎದ್ದು
ಬಂದ್ರು? “ ಕೃಷ್ಣನ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.
“ ಕುರುಕ್ಷೇತ್ರದ ಬಯಲಿನಲ್ಲಿ ಜಾಗ ಉಂಟು ಅಂತ ಸೇನೆ ಬಂದು
ಸೇರಿದ್ದಲ್ವ . ಹೋರಾಟಕ್ಕೆ. ಧರ್ಮ ಕ್ಷೇತ್ರವಾದ ಕುರುಕ್ಷೇತ್ರ ಇಂದು ರಣರಂಗವಾಗಿದೆ. ಇದನ್ನು ವ್ಯಾಪಕವಾಗಿ ನೊಡಬೇಕು.
ಕೇವಲ ಮನಸ್ಸಿನ ಭಾವನೆಯಿಂದ ವ್ಯಷ್ಠಿಯಿಂದ
ನೋಡುವುದಲ್ಲ. ಸಮಷ್ಠಿಯಿಂದ ನೋಡಬೇಕು. “
“ಯಾರ ಕಾಲು ಹಿಡಿದು
ಅರ್ಜುನ ಅಯುಧ ಹಿಡೀಬೇಕೋ ಅವರೆಲ್ಲ ಅಂದು ಹಸ್ತಿನಾವತಿಯಲ್ಲಿದ್ದರು. ನಾನು ನಿಷ್ಕ್ರಿಯನಿದ್ದೇನೆ
ಅಂತ ಜಾರಿಕೊಂಡವರೆಲ್ಲ ಇಂದು ಆಯುಧ ಹಿಡಿದುಕೊಂಡು ಇಲ್ಲಿ ಬಂದಿದ್ದಾರೆ.”
“ಯೇನು ಮಾಡೋದು ನಾನು ನಿಷ್ಕ್ರಿಯನಿದ್ದೇನೆ.
ನನ್ನ ಮಾತು ಯಾರೂ ಕೇಳೋದಿಲ್ಲ ಹಸ್ತಿನಾವತಿಯಲ್ಲಿ ಅಂತ ಹೇಳಿಕೊಂಡು ಜಾರುವವರು ಕೆಲವರು.
ಮಾತು ಕೇಳೋದಿಲ್ಲ ಅಂತ ಹೇಳಿದವರೇ ಈಗ ನಾಯಕರಾಗಿದ್ದಾರೆ. ಮುದುಕನಿಗೆ ದಿನವೊಂದಕ್ಕೆ ಹತ್ತು ಸಾವಿರಕ್ಕೆ
ಕಡಿಮೆ ಇಲ್ಲದೆ ತಲೆ ಕತ್ತರಿಸಲಿಕ್ಕೆ ಬರ್ತದೆ. ಆದರೆ ಒಬ್ಬ ಕೌರವನನ್ನು
ಏನು ಮಾಡಲಿಕ್ಕೂ ಬರುವುದಿಲ್ಲ.”
ಇದನ್ನೇ ಮೋಹ ಅಂತ ಹೇಳುವುದು. ಮಕ್ಕಳ
ಮೇಲಿನ ಮೋಹದಲ್ಲಿ ಮಕ್ಕಳು ಮಾಡಿದ ತಪ್ಪನ್ನು ಯಾರು ಕಾಣುವುದಿಲ್ಲವೋ ಅವರು ಕಣ್ಣಿದ್ದರೂ ಕುರುಡರೆ. ಇನ್ನು ಆ ಧೃತರಾಷ್ಟ್ರ
ಕೌರವನ ಮೇಲಿನ ಮೋಹ ಅತ ಒಳಗಣ್ಣನ್ನೂ ಮಸುಕಾಗಿಸಿತು.
ಅದನ್ನು ನೋಡುವ ಮನಸ್ಸಾಗಲಿಲ್ಲ.
ಯಾವುದನ್ನೂ ಕಾಣದಿದ್ದವನಿಗೂ ಈ ಅಣ್ಣತಮ್ಮಂದಿರು ಜಗಳಾಡುವುದನ್ನುಸಂಜಯನ
ಮೂಲಕ ನೋಡುವ ಚಟ. ದುಷ್ಟ ಸಂಹಾರಕ್ಕೆ ಈ ಕಾಲದಲ್ಲಿ
ಶ್ರೀಕೃಷ್ಣನೇ ಯುದ್ದವನ್ನು ಬಯಸುತ್ತಾನೆ ಅಂತ ಹೇಳುವವರಿದ್ದಾರೆ. ಈ ವರೆಗೆ ಲೋಕವನ್ನು ಕಾಣದೇ ಇದ್ದದ್ದು
ಕುರುಡನಿಗೆ ಚಿಂತೆಯ ವಿಷಯವಾಗಲಿಲ್ಲ, ಬದಲಿಗೆ ಕಾಣಲಾಗದೇ ಇದ್ದ ಮಕ್ಕಳ ಮೊಮ್ಮಕ್ಕಳ ಜಗಳವನ್ನು
ನೋಡುವ ಹಂಬಲ...! ಈ ಕಾಲಕ್ಕೆ ಇದು ಎಂತಹಾ
ರಕ್ತದಾಹ !!
“ವಾರಣಾವತದಲ್ಲಿ ಲಾಕ್ಷಾಗೃಹ
ದಗ್ಧವಾಯಿತು. ಪಾಂಡವರೇ ಸುಟ್ಟು ಹೋದರು
ಅಂತ ಮುದುಕ ಕಣ್ಣೀರು ಹಾಕಿದ್ದಾನೆ. ವಿದುರ ಯೇನೋ ಕರ್ಣ ಮಂತ್ರ ಹೇಳಿದ್ದರಿಂದ
ಸ್ನಾನ ಮಾಡದೆ ಹಾಗೇ ಬಂದಿದ್ದಾನೆ ಅಂತ ಸುದ್ದಿ. ಅಂದರೆ “ ನೀವು ಸೂತಕ ಆಚರಿಸುವ ಅಗತ್ಯ ಇಲ್ಲ.
ಅಂತ ಭೀಷ್ಮರಿಗೆ ಹೇಳಿರಬೇಕು. ಲಾಕ್ಷಾ ಗೃಹದಲ್ಲಿ ಪಾಂಡವರು ಸುಟ್ಟು ಹೋದರೊ ಇಲ್ವೋ,
ಲಾಕ್ಷಾಗೃಹ ನಿರ್ಮಾಣ ಮಾಡಿದ್ದು ಯಾರು ಅಂತ ಯಾಕೆ ವಿಚಾರಿಸಲಿಲ್ಲ.
ಬಹುಶಃ ಒದು ಸಣ್ಣ ವಿಚಾರಣೆ ಮಾಡಿದ್ದರೆ ಸತ್ಯ ಹೊರಗೆ ಬರುತ್ತಿತ್ತೋ ಏನೋ.?
“
“ ಬಂಧು ಮೋಹದಿಂದ ಯುದ್ದ
ಮಾಡಲಾರೆ ಎನ್ನುತ್ತಾನೆ. ಆದರೆ ಬಂಧುಗಳ ಬಗ್ಗೆ ಇಷ್ಟು ಗಂಭೀರವಾಗಿ ಯೋಚಿಸುವ
ಅರ್ಜುನ ಒಂದನ್ನು ಮರೆಯುತ್ತಾನೆ. ಅದು, ಪಾಂಡವರ
ರಾಯಭಾರಿಯಾಗಿ ಸಂಧಾನಕ್ಕೆ ಹೋದ ಕೃಷ್ಟ, ಚಕ್ರಗಹಣ ಮಾಡುವುದಿಲ್ಲ ಎಂದು ಹೇಳಿದ
ಕೃಷ್ಣಆವಾಗ ಯುದ್ದಕ್ಕೆ ಹೋಗಿದ್ದಲ್ಲವಲ್ಲ. ಹಾಗಿದ್ದರೂ ಅಲ್ಲಿ ಕೌರವ ಅವಮಾನಿಸುತ್ತಾನೆ.
ಈಗ ಯುದ್ದಾಕಾಂಕ್ಷಿಗಳಾಗಿ ಭುಜ ಉಬ್ಬಿಸಿ ಬಂದವರೆಲ್ಲರೂ ಆಗ ಅಲ್ಲಿದ್ದರು.
ಪಾಂಡವ ರಾಯಭಾರಿಯಾಗಿ ಬಂದ ಕೃಷ್ಣನಿಗೆ ಆದ ಅವಮಾನವನ್ನು ಹಾಗೇ ನೋಡುತ್ತಾ ಕುಳಿತು
ಬಿಟ್ಟರು. ಹೋಗಲಿ ಆನಂತರ ಅರ್ಜುನ ನಲ್ಲಾದರು ಅದಕ್ಕೆ ಪ್ರತಿಕಾರ ಬೇಡವೆ.
ಅವನ ಪ್ರತಿನಿಧಿಗಾದ ಅವಮಾನಕ್ಕೆ ಆತನ ಪ್ರತಿವಿಧಿ ಏನು?”
ಎಂತಾ ನಿಲುವು ಕೃಷ್ಣನದು? ಯಾರೆಲ್ಲಾ ಬಂದಿದ್ದಾರೆ ನೋಡು ಅಂತ ಹೇಳುವ ಕೃಷ್ಣನ
ಮಾತಿನ ಅಂತರಾರ್ಥ ಹಲವು ಇರುತ್ತದೆ. ಒಂದು ಇವರೆಲ್ಲ ಹಸ್ತಿನೆಯಲ್ಲಿದ್ದರೂ
ಹಾಗಾಯಿತು. ಇನ್ನೊಂದು ಯುದ್ದ ಬೇಡ ಬೇಡ ಅಂತ ಅನ್ನಬೇಕಾದವ ವೃದ್ಧರು ಉತ್ಸಾಹದಲ್ಲಿ
ಅಧರ್ಮದ ಪರವಾಗಿ ಯುದ್ದಕ್ಕೆ ಪ್ರತಿನಿಧಿಗಳಾಗಿದ್ದಾರೆ. ಏನು ವಿಪರ್ಯಾಸ?
“ನನ್ನ ಅರ್ಜುನ ಒಬ್ಬ ಶಿಷ್ಯ. ಅವ ತನಗಿಂತ ಇಮ್ಮಡಿ ವಿದ್ವಾಂಸನಾದರೆ ನನ್ನ ಗುರುತ್ವ ಸಾರ್ಥಕವಾಯಿತು ಅಂತ ಹೇಳಿದ ನಿಮ್ಮ
ಪ್ರಾಚೀನ ಗುರುಕುಲದ ಪ್ರಾಚಾರ್ಯರು ದ್ರೋಣಾಚಾರ್ಯರು ಹೌದೋ? ಈ ಹೊತ್ತು ಅವರು
ಇಲ್ಲಿಗೆ ಬಂದದ್ದು ಯಾಕೆ? ನಮ್ಮ ಹುಡುಗ ಏನು ಮಾಡ್ತಾನೆ ಅಂತ ನೋಡಲಿಕ್ಕೆ
ಇದೇನು ಪರೀಕ್ಷಾರಂಗವೇ? ಅವರು ಹಸ್ತಿನಾವತಿಗೆ ಬಂದ ಉದ್ದೇಶ ಏನು? ವಿದ್ಯೆ ಕಲಿಸಿ ಕೈಗೆ ಕತ್ತಿ ಕೊಟ್ಟು ಪೆಟ್ಟು
ಮಾಡಿಕೊಳ್ಳಿ ಮಕ್ಕಳೇ ಅಂತ ಹೇಳುವುದಕ್ಕೆ. “
ಅರ್ಜುನನಲ್ಲಿ ಹುಟ್ಟಿಕೊಂಡ ವ್ಯಾಮೋಹ ಯಾವ ರೀತಿಯಲ್ಲೂ
ಸಮರ್ಥನೀಯವಲ್ಲ. ಇದನ್ನು ಒಂದೆರಡು ಮಾತುಗಳಲ್ಲಿ ಹೇಳಬಹುದು, ಅರ್ಜುನನಂಥವರು ಅರ್ಥವಿಸಲೂ ಬಹುದು.
ಆದರೆ ಅದು ಶ್ರೀ ಕೃಷ್ಣ ಪಾಠವಾಗುವುದಿಲ್ಲ. ಇದು ಕೇವಲ ಅರ್ಜುನನಿಗಿರುವ ಪಾಠವಲ್ಲ.
“ನಿಜವಾಗಿ ಆದ್ರೆ ಆ ಭೀಷ್ಮಾಚಾರ್ಯ ತನ್ನ ನಂತ್ರ ಹುಟ್ಟಿದವರಿಗೆ
ಯೆಳ್ಳು ನೀರು ಬಿಟ್ಟದ್ದು ಯೆಷ್ಟು ನೋವಾಗಿದ್ದೀತು ಆ ದೊಡ್ಡ ಜೀವಕ್ಕೆ. ನಾನು ಬಲ್ಲೆ. ಆವಾಗ
ಒಂದೇ ಸಲ ಹುಟ್ಟಿಕೊಂಡರು ನೂರು ಅಪಸ್ವರವೋ ಸುಸ್ವರವೋ !! ಒಂದು ಸಂತೋಷ ಆಯ್ತು, ಏನೇ ಆಗ್ಲಿ
ಮನೆಯಲ್ಲಿ ನೂರು ತೊಟ್ಟಿಲು ಕಟ್ಟಿತಲ್ಲಾ? ಆ ಸಂತೋಷದ ಮಧ್ಯೆ ವೈಚಾರಿಕ ಪ್ರಜ್ಞೆ
ಮಸುಳಿಸಿತು. ನಾನು ನಿನ್ನಲ್ಲಿ ಕೇಳೋದು, ಅವಳಿಗೆ
ಬೇಡದೇ ಇದ್ದದ್ದು ಯಾರಿಗೆ? ನಿನ್ನ
ದೊಡ್ಡಮ್ಮನಿಗೆ, ಅವಲೂ ಹೆತ್ತಾಕಿದ್ದೋ ಹೊತ್ತಾಕಿದ್ದೋ ...ಈ ಬ್ರಹ್ಮಚಾರಿಯಾದ ಮುದುಕನಿಗೆ ಯಾಕೆ ಬೇಕಿತ್ತು?. ಊರಲ್ಲಿದ್ದ
ತುಪ್ಪ ಯೆಲ್ಲ ತರಿಸಿ, ಬೇರೆ ಬೇರೆಯಾದ ತುಂಡಿಗೆ
ಬೇರೆ ಬೇರೆ ಕೋಣೆ ಮಾಡಿ ಈ ಆಜ್ಯದಲ್ಲಿ ಆ ಪಿಂಡಗಳನ್ನು ಬೆಳೆಸಿದ್ದು.!!! ಆದಕಾರಣ! ಯೇನೊ ಒಂದು ಥರದ ವ್ಯಾಮೋಹ. ಕೌರವನನ್ನ ಅಕ್ಷೇಪಿಸ್ತಾರೆ ಭೀಷ್ಮಾಚಾರ್ಯರು, ಸಾವಿರ
ಬಾಯಿಂದ ತೆಗಳ್ತಾರೆ, ಕೊನೆಗೆ ಅಜ್ಜಾ ಅಂತ ಕೂಗ್ದಾಗ ನಾನಿದ್ದೇನೆ ಮಗನೆ ಅಂತ ಹೇಳ್ತಾರೆ. ಇದೂ
ಒಂದು ಧರದ ದೌರ್ಬಲ್ಯ. ಬರಬಾರದಿತ್ತು ಭೀಷ್ಮರಂಥವರಿಗೆ. ಆದರೆ ಉಂಟು. ಸ್ವಲ್ಪ ಸ್ವಲ್ಪ
ದೋಷಗಳಿಲ್ಲದ ವ್ಯಕ್ತಿಗಳ್ಯಾರು? ಇಗೆ ವೈಚಾರಿಕವಾಗಿ ನಾವು ಸಂಶೋಧನೆ ಮಾಡ್ಲಿಕೆ ಹೊರಟ್ರೆ
ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನನ್ನೂ ಆಕ್ಷೇಪಿಸಲಿಕ್ಕೆ ಬರ್ತದೆ. ಅದರೆ ಅದೆಲ್ಲ ಚಂದ್ರನಲ್ಲಿ
ಕಳಂಕ ಇದ್ದ ಹಾಗೆ. ನಿನ್ನ ಕೊಡುಗೆ ಯಾರಿಗೆ ಹೇಳು.”
ಆರು ನೀನೆಲೆ ಪಾರ್ಥ ಬಂಧುವರ್ಗಗಳೆಲ್ಲಿ| ತೋರಿಸು ರಣಕೆ ನಿಂದು || ತೋರಿಸು ರಣಕೆ ನಿಂದು||
ಕಾರುಣ್ಯದಿಮ್ದ ಶೋಕವ ಕೊಂಡು ಬರಿನಗೆ| ಗೇಡಾದೆ ಹೇಸಿಕೆಯು||
ಗೀತೋಪದೇಶದ ಮುಖ್ಯ
ವಿಚಾರಗಳಲ್ಲಿ ಒಂದು ಆರ್ಜುನನನ ಬಗ್ಗೆ ಸ್ವಯಂ ಅರಿವು ಮೂಡಿಸುವ ಪ್ರಯತ್ನ. ಇಲ್ಲಿ ಸತ್ಯ ಮತ್ತು ಮಿಥ್ಯೆಯ ಬಗ್ಗೆ ಅವಲೋಕನ
ಬರುತ್ತದೆ.
“ಅರ್ಜುನಾ,
ಪ್ರತಿಯೊಬ್ಬರೂ ನಾವು ನಮ್ಮನೇ ಬೆಟ್ಟು ಮಾಡಿ ತೋರಿಸಿಕೊಳ್ಳುತ್ತಿದ್ದೇವೆ. ’ನಾನು’. ಹೌದಲ್ಲ?” ( ನಾನು....ಅಂತ ನಮ್ಮನ್ನು ನಾವು
ತೋರಿಸುತ್ತಿದ್ದೇವೆ. ಇಲ್ಲಿ ನಾನು ಎಂದರೆ ಏನು? ಎಂಬ ಬಗ್ಗೆ ಒಂದು ಅವಲೋಕನ ಇದೆ. ಅರ್ಜುನ ಬಂಧುಗಳನ್ನು ನಾನು
ಕೊಲ್ಲಲಾರೆ ಎಂದು ಹೇಳುತ್ತಾನೆ. ನಾನು ಎಂಬುದರ
ಉತ್ತರ ಸಿಕ್ಕಿದರೆ ಅವನು ಯಾವುದನ್ನು ಕೊಲ್ಲುತ್ತಾನೆ ಎಂಬುದಕ್ಕೆ ಉತ್ತರವೂ ಸಿಕ್ಕಂತಾಗುತ್ತದೆ.
)
ನಾನು.....ಅರ್ಜುನ ನಿನ್ನಲ್ಲಿ ಕೇಳ್ತೇನೆ. ಈ ನೀನೆಂದರೆ ಏನು? ಎಷ್ಟು? ನಾನು ಅಂತ ನೀನ್ ಹೇಳ್ತಿ; ನಿನ್ನಲ್ಲಿದ್ದ
’ನಾನು’ ಅಂತ ಹೇಳುವುದು ಯಾವುದನ್ನು? “
ಇದು ಸುಲಭದಲ್ಲಿ ಉತ್ತರ
ಸಿಗದ ಪ್ರಶ್ನೆ. ಭಗವದ್ಗೀತೆಯ ಸಾರವೇ ಈ ಒಂದು ಪ್ರಶ್ನೆಯ ಉತ್ತರದಲ್ಲಿದ್ದಂತೆ ಭಾಸವಾಗುತ್ತದೆ.
ನಮ್ಮನ್ನು ಆಧ್ಯಾತ್ಮಿಕ ಚಿಂತನೆಗೆ ಒಳ ಪಡಿಸುವ ಜಿಜ್ಞಾಸೆ ಇದು.
“ ನಿನ್ನಲ್ಲಿದ್ದ ನಾನು ಅಂತ ನೀನು ಹೇಳುವುದು , ನಿನ್ನ ದೇಹ, ಆ
ದೇಹದಲ್ಲಿದ್ದ ಅವಯವಗಳು ಆದರೆ ಇವೊಂದು ನೀನಲ್ಲ. ರೂಢಿಯಲ್ಲಿ ನಾವು ಹೇಳ್ತೇವೆ, ಈ ದೇಹ ನನ್ನದು
ಜೀವ ನನ್ನದು. ಈ ಪ್ರಾಣ ನನ್ನದು. ಈ ಶ್ವಾಸ ನನ್ನದು. ...ಬೇಕಾದಷ್ಟನ್ನು ಇದರಲ್ಲಿ ಸೇರಿಸಬಹುದು.
ಎಲ್ಲ ನನ್ನದು ಅನ್ನುವಾಗ ನಾನು ಎಂಬುದು ಉಳಿತದೆ. “
ನಮ್ಮ ದೇಹದ ಪ್ರತಿಯೊಂದು
ಭಾಗವನ್ನು ವಿಂಗಡಿಸಿ ತೆಗೆದಾಗ, ಇದು ನನ್ನ ಕೈ, ನನ್ನ ಕಾಲು , ನನ್ನ ಹೃದಯ ಹೀಗೆ ಇರುತ್ತದೆ ಹೊರತು ಎಲ್ಲಿಯೂ ನಾನು ಎಂಬುದು
ಇರುವುದೇ ಇಲ್ಲ. ದೇಹದ ಎಲ್ಲಾ ಭಾಗಗಳನ್ನು ತೆಗೆದಿರಿಸಿದರೂ ನಮ್ಮನ್ನು ನಾವು ಹುಡುಕಬೇಕು.
ಹಾಗಾದರೆ ನಾನು ಎಂಬುದು ಎಲ್ಲಿ ಕಳೆದು ಹೋಗುತ್ತದೆ. ನಾವು ಎನನ್ನು ನಾನು ಅಂತ ಹೇಳುತ್ತೇವೆ.
ನಾನು ಮತ್ತು ನನ್ನದು ಎರಡು ಒಂದೇ ಆಗಿರುವುದಕ್ಕೆ ಸಾಧ್ಯವಿಲ್ಲ. ನಾವು
ನನ್ನದು ಅಂತ ಏನು ತಿಳಿದಿರುತ್ತೇವೆಯೋ
ಅದು ನಾನಲ್ಲ. ದೇಹ ನಾಶವಾಯಿತು. ನನ್ನದು ನಾಶವಾಯಿತು ಅಂತ ಅರ್ಥವಾಗುತ್ತದೆ ಹೊರತು ನಾನು
ನಾಶವಾದಂತೆ ಅಲ್ಲ. ಅರ್ಜುನ ಯಾರನ್ನು ಕೊಲ್ಲುತ್ತೇನೆ ಅಂತ ಆತಂಕ ಪಟ್ಟಿದ್ದನೊ ಅದು ಕೊಲ್ಲಲ್ಪಡುವುದಿಲ್ಲ.
ಹಾಗಾದರೆ ಕೊಲ್ಲುವುದಕ್ಕೆ ಕೊಲ್ಲಿಸುವುದಕ್ಕೆ ಅರ್ಥವೆಲ್ಲಿ ಬಂತು?
(ಇದು ನನ್ನ ದೇಹ, ನನ್ನ ಕೈ ನನ್ನ ಕಾಲು ಹೀಗೆ ಪ್ರತಿಯೊಂದು
ಅಂಗವನ್ನು ಹೇಳುವಾಗಲೂ ನನ್ನ ಅಂತಲೇ ಹೇಳುವಾಗ ನಾನು ಎಂಬುದು ಎಲ್ಲಿಯೂ ಬರುವುದಿಲ್ಲ. ಹೀಗಿದ್ದರು
ಕಳೆದು ಹೋದ ಅಥವ ಇಲ್ಲದೇ ಇರುವ ನಾನು ಎಂಬ ಅಹಮಿಕೆಯಲ್ಲ ನಾವಿರುತ್ತೇವೆ. )
“ ನಾವು ಅಂದರೆ ಶರೀರ,
ಶರೀರ ನಾಶವಾಗುತ್ತದೆ ಅಂತ ಹೇಳೋಣ. ಶರೀರಕ್ಕೆ ಇರುವಿಕೆ ಯಾವಾಗಾ?”
ನಾಸತೋ ವಿದ್ಯೋ ಭಾವೋ ನಾ
ಭಾವೊ ವಿದ್ಯತೆ ಸತಃ
“ಸತ್ಯ
ಅಂತ ಹೇಳುವುದು ಯಾವುದನ್ನು. ಅಸ್ತಿತ್ವದಲ್ಲಿ ಇರುವುದನ್ನು. ಸತ್ಯ ಸದಾ ಇರುವಂತಹುದು. ಇಲ್ಲದೇ
ಇರುವುದು ಸತ್ಯವಾಗುವುದಿಲ್ಲ. ಹಾಗೇನೆ ಇರುವ ಸತ್ಯವೂ ಅದು ಇಲ್ಲವಾಗುವುದಿಲ್ಲ. ಸತ್ಯ ಯಾವಾಗಲೂ
ಇದ್ದೇ ಇರುತ್ತದೆ. ಪ್ರಪಂಚದಲ್ಲಿ ಯಾವುದು ಶಾಶ್ವತವಲ್ಲವೋ ಅದು ಸತ್ಯವಲ್ಲ. ಅದು ಸುಳ್ಳು ಅಲ್ಲ.
ಅದು ಮಿಥ್ಯ. ಅಂದರೆ ಅಲ್ಲದೇ ಇಲ್ಲದೇ ಇರುವವಗಳು. ಸರ್ಪವಾಗಿ ಕಾಣುವ ಹಗ್ಗದಂತೆ. ಸತ್ಯ
ಎಂದಿಗೂ ಬದಲಾವಣೆಯಾಗದೆ ಸ್ಥಿರವಾಗಿರುತ್ತದೆ. ದೇಹ ಶಾಶ್ವತವಲ್ಲ. ದೇಹದಲ್ಲಿನ ಆತ್ಮ ಅದು ಸತ್ಯ.
ಹಾಗಾದರೆ ಅರ್ಜುನನಿಂದ ಹತರಾಗುವುದು ಅವರ ದೇಹ ಮಾತ್ರ. ಶೇಣಿಯವರು ಕೊಡುವ ಸತ್ಯ ಅಸತ್ಯ ದೇಹ ಸಾವು ಇವುಗಳ
ಬಗೆಗಿನ ವಿಶ್ಲೇಷಣೆ ಸರಳವಾಗಿ ಅದ್ಭುತವಾಗಿದೆ.”
“ ಮಿಥ್ಯೆಯೂ ಕೂಡಾ
ಕಾಣುವುದು ಯಾವುದನ್ನಾಧರಿಸಿ? ಅಲ್ಲಿ ಸತ್ಯ ರೂಪವಾದ ಹಗ್ಗವೇ ಇಲ್ಲದೇ ಇದ್ರೆ ಹಾವು ಕಾಣುವುದಕ್ಕೆ
ಸಾಧ್ಯವಿಲ್ಲ. ಮಿಥ್ಯಾದರ್ಶನವಾದಾಗಲು ಅಲ್ಲಿ ಇರುವುದು ಸತ್ಯವೇ. ಹಾಗಾದರೆ ತ್ರಿಕಾಲಾಭಾಧಿತ ಸತ್ಯ
ಎಂಬುದು ಮಾತ್ರ ಅಲ್ಲಿಗೆ ಸಲ್ಲುತ್ತದೆ.”
ಇದನ್ನು
ವಿಶ್ಲೇಸುವುದಾದರೆ, ಸತ್ಯ ಎಂಬುದನ್ನು ತಿಳಿಯುವುದಕ್ಕೆ ಬೆಳಕು ಎಂಬ ಜ್ಞಾನ ಅವಶ್ಯ. ಕೈಯಲ್ಲಿದ್ದ
ದೀಪದಿಂದ ಅಥವಾ ಬೆಳಕಿಗೆ ಹಿಡಿದಾಗ ಹಾವು ಹಗ್ಗವಾಗಿ ಕಂಡು ಜ್ಞಾನೊತ್ಪತ್ತಿ ಸಾಧ್ಯವಾಗುತ್ತದೆ. ಅರ್ಜುನ ಕೇವಲ ಮಿಥ್ಯೆಯ ಪರ ಚಿಂತಿಸುತ್ತಾನೆ
ಎಂಬುದಕ್ಕೆ ಮುಂದೆ ವಿವರಣೆ ಇದೆ.
“ ಮಿಥ್ಯೆ ಎಂದರೆ ಏನು? ಒಬ್ಬ ಕೊಲೆ ಮಾಡುವುದಕ್ಕೆ ಉಂಟೇ?
ಇದ್ದಕ್ಕಲ್ವೋ ನಾಶ...... ಹಾಗದರೆ ಇಲ್ಲದೇ ಇದ್ದಕ್ಕೆ ನಾಶ ಎಂಥದ್ದು? ಒಬ್ಬನಿಗೆ ಹುಟ್ಟದೇ ಇದ್ದ
ಮಗನಿಗೆ ಮದುವೆಯ ಆಲೋಚನೆ ಯಾಕ್ ಮಾಡೋದು? ಇಲ್ಲದೇ ಇರುವಿಕೆಗೆ ಇರುವಿಕೆ ಎಂಬುದು ಇಲ್ಲ.
ಇರುವಂಥಾದ್ದಕ್ಕೆ ಇಲ್ಲದಿರುವಿಕೆ ಎಂಬುದಿಲ್ಲ. ಇದು ನಾಸತೊ ವಿದ್ಯತೇ ಭಾವೋ , ನಾ ಭಾವೋ ವಿದ್ಯತೆ
ಸತಃ ಎಂಬ ನನ್ನ ಮಾತಿನ ಅರ್ಥ. ಅರ್ಜುನಾ, ನೀನು ಎಂಬಲ್ಲಿ, ಈ ಕಣ್ಣು, ಈ ಕಿವಿ , ಮೂಗು ಇದೊಂದು
ನಿನ್ನದೇ ಅದರೂ ಅದು ನೀನಲ್ಲ. “
(ಒಬ್ಬ ಒಬ್ಬನನ್ನು ಕೊಲೆ
ಮಾಡುತ್ತಾನೆ. ಕೊಲೆ ಹೇಗಾಗುತ್ತದೆ ಎಂಬುದೇ ಇಲ್ಲಿಯ ಪ್ರಶ್ನೆ. ಇದು ಆಧ್ಯಾತ್ಮಿಕವಾಗಿ
ಚಿಂತಿಸಬೇಕು. ಭೂಮಿಯಲ್ಲಿ ಇಲ್ಲದೇ ಇರುವಂತಹುದು. ಮಿಥ್ಯವಾಗಿರುವಂತಹುದು ...ಆತನ ದೇಹ. ಅದನ್ನು
ಒಬ್ಬ ಕೊಲ್ಲುವುದಕ್ಕೆ ಸಾಧ್ಯವೇ? ಇಲ್ಲದೇ ಇದ್ದದ್ದನ್ನು ಕೊಂದು ನಾಶ ಮಾಡುವುದು ಹೇಗೆ?)
ಕಣ್ಣು ಹೋದರೆ ಮನುಷ್ಯ
ಬದುಕುತ್ತಾನೆ. ಕೈ ಹೋದರೂ ಬದುಕುತ್ತಾನೆ.
ಹಾಗಾದರೆ ಯಾವುದು ಇಲ್ಲದಿದ್ದರೆ ಬದುಕುವುದಿಲ್ಲ.?
ಉತ್ತರ ಬಹಳ ಸರಳ. ಆದರೆ ಅಷ್ಟೇ ಗಂಭೀರ. ಚೈತನ್ಯ.
ಅದು ನಾಶವಾಗುವಂತದ್ದಲ್ಲ (. ಅದನ್ನೇ ಯೋಗದಲ್ಲಿ ಚೇತನ ಅಂತ ಹೇಳುವುದು. )
ಆತ್ಮ ತತ್ವಕ್ಕೆ ಸಂಭಂದಿಸಿ
ಶ್ರೀಕೃಷ್ಣ ಹೇಳುತ್ತಾನೆ. ಇದನ್ನೇ
ಉಪನಿಷತ್ತುಗಳಲ್ಲಿ ಹೇಳಿದ್ದು. ಜಗತ್ತಿನ ಏಕಮೇವಾದ್ವಿತೀಯವಾದದ್ದು ಚೈತನ್ಯ. ( ತತ್ಸ ವಿತುರ್ವರೇಣ್ಯಂ). ಅಂದರೆ ಅದೊಂದೇ
, ಅದ್ವೈತವಾದದ್ದು. ಅದು ಸತ್ಯ ಮತ್ತು ಶಾಶ್ವತ.
ಅದು ಸ್ಥಾಯಿಯಾಗಿ ಇದ್ದ ಮೇಲೆ ಬಾಕಿದ್ದ ವಿಚಾರಗಳಿಗೆ ಇಲ್ಲಿ ಸ್ಥಳ ಯಾಕೆ ಕೊಡಬೇಕು? ( ಬಹಳ ಅಂತರಾರ್ಥದ ಮಾತುಗಳಿವು.
ಸುಲಭದಲ್ಲಿ ಒಳಗಿನ ಭಾವ ಅರ್ಥವಾಗುವುದಿಲ್ಲ. ಮಿಕ್ಕ ಎಲ್ಲವೂ ಶಾಶ್ವತ ವಲ್ಲದ್ದು
ಮಿಥ್ಯವಾದದ್ದು. ಆ ಚೈತನ್ಯವನ್ನು ಮಾತ್ರವೇ ಸತ್ಯ ಎಂದು ತಿಳಿಯಬೇಕು)
ಮುಂದೆ ಈ ಚೈತನ್ಯದ ಬಗ್ಗೆ
ಹಲವು ಉದಾಹರಣೆಗಳು ಜತೆಯಲ್ಲಿ ವಿವರಣೆಗಳು ಬಹಳ ವಿಶಿಷ್ಟ ವಿಚಾರಗಳನ್ನು ಒದಗಿಸುತ್ತದೆ.
ಈ ಎಲ್ಲ ವಿವರಣೆಗಳು ಈ
ಪ್ರಪಂಚದಲ್ಲಿ ಸತ್ಯ ಯಾವುದು ಎಂಬುದು ತಿಳಿಯುವುದಾಗಿರುತ್ತದೆ. ಪ್ರಪಂಚದಲ್ಲಿ ಸತ್ಯ ಅಂತ ನಾವು
ತಿಳಿದಿರುವವುಗಳೆಲ್ಲ ಶಾಶ್ವತವಲ್ಲದ್ದೂ ಸುಳ್ಳೂ ಆಗಿರುತ್ತದೆ. ಈ ಸುಳ್ಳನ್ನು ಅರಿಯುವುದೇ
ಪರಮಾತ್ಮನ ಅಸ್ತ್ನಿತ್ವ.
ಮೋಹವನ್ನು ಬಿಟ್ಟು ಬಿಡುವಂತೆ
ಹೇಳುತ್ತಾನೆ. ಎದುರು ಏನು ಇವನು ಬಂಧುಗಳು ಅಂತ ಹೇಳುತ್ತಿದ್ದಾನೋ ಅವರು
ಸತ್ಯವಲ್ಲದ ದೇಹದಿಂದ ಇಲ್ಲವಾದವರು. ಇಲ್ಲವಾದವರನ್ನು ಕೊಲೆ ಮಾಡುವುದು ಎಂದರೆ ಅದು
ಸಾಧ್ಯವಿಲ್ಲ. ಆವರನ್ನು ನಾಶ ಮಾಡುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ಅವರನ್ನು ಕೊಂದರೂ ಅದು
ಅರ್ಜುನ ಮಾಡುವ ಕೊಲೆಯಾಗುವುದಿಲ್ಲ. ದೇಹಕ್ಕೆ
ಹುಟ್ಟು ಸಾವು ಜಗತ್ತಿನಲ್ಲಿ ಒಂದೇ ಸಲ ಸಂಭವಿಸುವವುಗಳು.
ಈ ಜಗತ್ತಿನಲ್ಲಿ
ಶಾಶ್ವತವಾಗಿ ಇರುವದು ಅದೊಂದೆ, ಅದೊಂದೇ ಸತ್ಯ .
ಸರ್ವಂ ಖಲ್ವಿದಮ್ ಬ್ರಹ್ಮಾ ಈಶಾವಾಸ್ಯ
ಮಿದಂ ಓಂ ತತ್ ಸತ್ ಹೀಗೆ ಹೇಳುವುದು ಸ್ಥಾಯಿಯಾದದ್ದು. ಇದನ್ನು
ನಂಬುವುದಾದರೆ ಉಳಿದದ್ದು ಸತ್ಯ ಅಂತ ತಿಳಿಯುವುದಕ್ಕೆ ಜಗತ್ತಿನಲ್ಲಿ ಜಾಗ ಎಲ್ಲಿ ಉಂಟು? ದೇವರೂ ಇದ್ದಾನೆ ಜೀವರೂ ಇದ್ದಾರೆ ಅಂತ ದ್ವೈತದಲ್ಲಿ ಹೀಗೆ ಹೇಳುವಾಗ ದೇವರಿಗೂ ಪೂರ್ಣತೆ ಇಲ್ಲ ಅಂತ ಪರ್ಯಾಯವಾಗಿ ಹೇಳಿದಂತೆ. ಅದನ್ನು
ಬ್ರಹ್ಮ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ.
ಇದೇ ರೀತಿಯಲ್ಲಿ ಚೈತನ್ಯ
ಅಂತ ಹೇಳುವುದಕ್ಕೂ ಒಂದು ವಿವರಣೆ ಇಲ್ಲಿ ಕಾಣಬಹುದು.
“ಕೆಲವು ದೇಹದಲ್ಲಿ ಮಾವನಾಗಿ, ಕೆಲವು
ದೇಹದಲ್ಲಿ ಅಜ್ಜನಾಗಿ ಅಥವಾ ನಮ್ಮ ಜನ್ಮದಾತರಾದ
ತಂದೆಯೇ ಇರಲಿ, ಈ ಆತ್ಮ ನಷ್ಟವಾದ ಬಳಿಕ ಅದನ್ನು ತಂದೆ ಅಂತ ಕರಿತೇವೋ? ಜಡ. ದೇಹವನ್ನು ಸುಟ್ಟು
ಔರ್ಧ್ವ ಕ್ರಿಯನ್ನು ಮುಗಿಸಿ ಬಿಡ್ತೇವೆ. ಮತ್ತೂ ನಾವು ಪಿತೃ ಶ್ರಾದ್ಧ ಅಂತ ಮಾಡ್ತೇವಲ್ಲ.
ಹಾಗಾದ್ರೆ ಪಿತೃ ಉಳಿದಿರ್ತಾನೆ. ದೇಹ ಸುಟ್ಟು
ಹೋಗಿರ್ತದೆ. ಅಲ್ಲಿ ಪಿತೃ ಅಂತ ಸಂಭೋಧಿಸುವುದು ಯಾವುದಕ್ಕೆ? ದೇಹದಲ್ಲಿದ್ದ ಚೈತನ್ಯಕ್ಕೆ. “
ಚೈತನ್ಯ ಎಂಬುದಕ್ಕೆ
ಇನ್ನೂ ಒಂದು ಸೂಕ್ತ ನಿದರ್ಶನವನ್ನು ವಿವರಿಸುತ್ತಾರೆ. ಊರ ಜಾತ್ರೆಯಲ್ಲಿ ಬೇತಾಳ ಕುಣಿತ ಅಂತ
ಇದೆ. ತಟ್ಟಿರಾಯ. ತಟ್ಟಿರಾಯ ಕುಣಿಯುತ್ತದೆ. ಎಲ್ಲಿವರೆಗೆ ಅದರೊಳಗೆ ಹೋದವನು ಕುಣಿಯುವವರೆಗೆ ಆ
ಬೇತಾಳ ಕುಣೀತದೆ. ನಿಜವಾದ ಕುಣಿತ ಯಾರದ್ದು? ಒಳಗಿದ್ದವನದ್ದು. ಹೊರಗಿನಿಂದ ಹೆಣ್ಣು ಬೇತಾಳವೋ
ಗಂಡು ಬೇತಾಳವೋ ಯಾವುದೇ ಆದರೂ ಅದು ಒಂದೇ ಬೇತಾಳ.
ಒಳಗಿದ್ದ ಮನುಷ್ಯ ಇಳಿದು ಹೋದನಂತರ ಅದು ಏನೂ ಅಲ್ಲ.
ಕಬ್ಬಿಣದ ತುಂಡು ತಣ್ಣಗೇ
ಇರುತ್ತದೆ. ಅದು ಬೆಂಕಿಯ ಸಂಪರ್ಕಕ್ಕೆ ಬಂದೊಡನೆ
ಬಿಸಿಯಾಗುತ್ತದೆ. ಹಾಗಂತ ಬಿಸಿ ಕಬ್ಬಿಣದ ಗುಣವೋ ಅಲ್ಲ. ಬೆಂಕಿಯೂ ಬಿಸಿ. ಕಬ್ಬಿಣವೂ ಬಿಸಿ
ವೆತ್ಯಾಸ ಇಲ್ಲವೇ? ಕಬ್ಬಿಣ ಬಿಸಿ...ಆ ಬಿಸಿ
ಕಣ್ಣಿಗೆ ಕಾಣುವುದಿಲ್ಲ. ಅದೇ ಚೇತನ ಅದು ಕಣ್ಣಿಗೆ ಕಾಣಿಸುವುದಿಲ್ಲ. ಆತ್ಮನನ್ನು ದೇಹದಿಂದ
ಪ್ರತ್ಯೇಕಿಸಿದರೆ ಮತ್ತೆ ಇರುವುದೆಂತಹುದು ಜಡ. ಹಾಗದರೆ ಜಡವಾದ ದೇಹವನ್ನು ಕೊಲ್ಲುವುದು ಅಂದರೆ
ಅರ್ಥವಿಲ್ಲ.
ದೇಹ ಮತ್ತು ಆತ್ಮ
ಸಂಬಂಧವನ್ನು ವಿಶ್ಲೇಷಿಸಿದಂತೆ ಮನಸ್ಸು ಮತ್ತು ಬುದ್ಧಿಯ ವಿಶ್ಲೇಷಣೆ ವಿಚಾರಾತ್ಮಕವಾಗಿದೆ. ಮನಸ್ಸಿನ ಭಾವಗಳು ಅದು ಮನೊವಿಕಾರವಷ್ಟೇ ಅದು ಎಂದಿಗೂ
ಜ್ಞಾನವಾಗುವುದಿಲ್ಲ.
ಮನಸ್ಸು ಬೇರೆ ಬುದ್ಧಿ
ಬೇರೆ. ಬುದ್ಧಿ ನಿಜವಾದುದನ್ನು ತೋರಿಸುತ್ತದೆ. ಮನಸ್ಸು ಭಾವಾತಿರೇಕದಿಂದ ಸಂಚಾರೀ ಮನೋಭಾವವನ್ನು
ತಾಳುತ್ತದೆ. ಅದ್ದರಿಂದಲೇ ಸುಖ ದುಃಖ ಈ ರೀತಿಯಾದ ಅನುಭವಗಳನ್ನು ಸಂವೇದನೆ ಅಂತ ಹೇಳ್ತೇವೆ ಹೊರತು
ಅವುಗಳು ಜ್ಞಾನವಲ್ಲ. ಸಂವೇದನಾ ಅಂತಂದ್ರೆ
ಮನಸ್ಸಿಗೆ ಆಗುವಂತದ್ಧು. ಅದು ಸತ್ಯವಲ್ಲ. ಅದು ಮನಸ್ಸಿನ ವೃತ್ತಿ. ಮನಸ್ಸಿನ ವೃತ್ತಿಯಿಂದಲ್ಲ
ಪ್ರಪಂಚವನ್ನು ಕಾಣಬೇಕಾದದ್ದು. ವಿವೇಕದ ವೃತ್ತಿಯಿಂದ.
ಅರ್ಜುನ ಯುದ್ದ ಬೇಡ ಅಂತ ರಾಜ್ಯ
ಭೋಗಗಳೆಲ್ಲವನ್ನೂ ಬಿಟ್ಟು ಕಾಡಿಗೆ ಹೋಗುವುದಕ್ಕೆ ಸಿದ್ಧನಿದ್ದಾನೆ. ಅದು ಸನ್ಯಾಸ ಅಂತ ಅಂದು ಕೊಳ್ಳಬಹುದು. ಆದರೆ ಸನ್ಯಾಸ ಅರ್ಥವಾಗಬೇಕಲ್ಲ?
ಎಲ್ಲವನ್ನೂ ಬೇಡ ಎಂದು ತ್ಯಾಗಮಾಡಿ
ಬಿಟ್ಟು ಬಂದವನು ಸನ್ಯಾಸಿಯಾದರೂ ಮುಂದೊಮ್ಮೆ ಅದನ್ನು ಬಿಡುತ್ತಾನೆ. ಯಾಕೆಂದರೆ ಎಲ್ಲವನ್ನು ಬೇಡ ಎಂದು ಬಿಟ್ಟಾಗ ಅಲ್ಲಿ
ಸನ್ಯಾಸತ್ವ ಬೇಕು ಎಂಬ ಭಾವ ಬಂದು ಬಿಡುತ್ತದೆ. ಅಂದರೆ ಎಲ್ಲವೂ ಬೇಡ
ಅಂತ ಇದ್ದವನಿಗೆ...ಸನ್ಯಾಸ ಒಂದು ಬೇಕು ಅಂತಾಗುತ್ತದಲ್ಲ?
ಎಲ್ಲಿ ಬೇಕುಗಳು ಇರುತ್ವವೆಯೋ ಅಲ್ಲಿ ತ್ಯಾಗ
ಇರುವುದಿಲ್ಲ. ಬೇಡ ಅಂತ ಇದ್ದವನು ಸನ್ಯಾಸದ ಬಗ್ಗೆಯೂ ವಿರಕ್ತನಾಗಬೇಕು.
ಈ ಮಾತು ಇಂದಿನ ಹವಾನಿಯಂತ್ರಿತ ಕೋಣೆಯ ಸನ್ಯಾಸವನ್ನು ವಿಮರ್ಶಿಸಿದ ಹಾಗೆ. ತ್ಯಾಗ ಎಂಬುದು ಕೇವಲ ಮನದಾಳದ ಭಾವವಾಗಬೇಕು. ಅಲ್ಲಿ ಯಾವ ಬೇಕುಗಳೂ ಉದ್ಭವಿಸಬಾರದು. ಸನ್ಯಾಸ ಬೇಕು ಎಂಬ ಭಾವದಿಂದ ಸನ್ಯಾಸ ತಾಳುವುದು ಅದು ವೇಷವಾಗಬಹುದು.
ಈ ಸನ್ಯಾಸೀ ವೇಶ ಅಂದರೆ ಅದು ಆತ್ಮವಂಚನೆ. ಸಂಪೂರ್ಣವಾದ ವಿರಕ್ತಿಯಲ್ಲಿ ಸನ್ಯಾಸ ಬೇಕು ಎಂಬ ಆಶೆಯೂ
ಇರುವುದಿಲ್ಲ. ”ಜಟಿಲೋ ಮುಂಡಿ ಲುಂಛಿತ ಕೇಶಃ ಕಾಶಾಯಾಂಬರ ಬಹುಕೃತ ವೇಶಃ.
ಚಿಂತೆ ಮೋಹ ಕಾಮಾದಿ
ಭಾವಗಳಿಗೆ ಮನಸ್ಸಿನಲ್ಲಿ ಜಾಗವಿರುತ್ತದೆ. ಆದಕ್ಕೆ ಮನಸ್ಸಿನಲ್ಲಿ ಜಾಗ ಒದಗಿಸುತ್ತಾ ಹೋದರೆ
ಪರಮಾತ್ಮನಿಗೆ ಮನಸ್ಸಿನಲ್ಲಿ ಜಾಗ ಎಲ್ಲಿರುತ್ತದೆ? ಯಾವುದಕ್ಕೆ ಜಾಗ ಇರಬೇಕೋ ಅದಕ್ಕೆ
ಜಾಗವಿರುವುದಿಲ್ಲ.!!!
ಮುಂದೆ
ಕರ್ಮದ ಬಗ್ಗೆ ಸ್ಥೂಲವಾಗಿ ಕರ್ಮಯೋಗದ ಬಗ್ಗೆ
ಸರಳವಾದ ವಿವರಣೆ ಇದೆ. ವೇದದಲ್ಲಿ ಹೇಳುವ ಕರ್ಮಕಾಂಡ ಅದು ಯೋಗವಾಗುವುದಿಲ್ಲ. ಅಲ್ಲಿ
ಸೌಂದರ್ಯವಿಲ್ಲ. ಅಲ್ಲಿ ಸನ್ಯಾಸವಿಲ್ಲ. ಪ್ರಲೋಭನೆ ಇರುತ್ತದೆ. ಆ ಕರ್ಮಗಳು ಗುಣವನ್ನು ಹೇಳುತ್ತವೇ. “ ತ್ರೈಗುಣ್ಯ
ವಿಷಯಾ ವೇದಾಃ” ಅಲ್ಲೆಲ್ಲ ಇಂತಿಂಥಾ ಕರ್ಮ ಮಾಡಿದರೆ ಇಂತಿಂಥಾ ಪಲ. ಇಲ್ಲಿ ಫಲ ಎಂಬುದು ವ್ಯಾಪಾರದ
ಲಾಭದಂತೆ. ಇಷ್ಟು ಕರ್ಮ ಮಾಡಿದರೆ ಹೀಗೆ. ಹಾಗಾಗಿ ಕರ್ಮಯೋಗದ ವೆತ್ಯಾಸವನ್ನು ಗಮನಿಸಬೇಕು. ಕರ್ಮ ಮತ್ತು ಲಾಭ ಇದು ಆಳವಾದ ಅಧ್ಯಯನಕ್ಕಿರುವ ವಿಚಾರ.
ಇಂದು ಆರಾಧನೆ ಎಡವುದೇ ಇಲ್ಲಿ. ಹಾಗಾದರೆ ಕರ್ಮಯೋಗ ಅಂದರೇನು?
ಶ್ರೀ
ಕೃಷ್ಣ ಹೇಳುವ ನಿಜವಾದ ಕರ್ಮ ಏನು? ನಿಜವಾದ ಕರ್ಮ ಅಂತರಂಗವನ್ನು ತಿದ್ದಬೇಕು. ಅಂತರಂಗವನ್ನು
ಕಲುಷಿತಗೊಳಿಸುವ ಯಾವುದೇ ಕೆಲಸವಾದರೂ ( ಅದು ದೇವತಾರಾಧನೆಯಾದರೂ ಎಂಬ ಒಕ್ಕಣಿಕೆ ಅತ್ಯವಶ್ಯ) ಅದು
ಕರ್ಮವಾಗುವುದಿಲ್ಲ. ಯೋಗ ಕ್ಷೇಮಂ ಅಂತಂದ್ರೆ,
“ಸಮದೃಷಿಂ ಯೋಗ ಇತಿ” ಲಾಭವೋ ನಷ್ಟವೋ ಸುಖವೋ ದುಃಖವೋ ಸ್ತುತಿಯೋ ನಿಂದೆಯೋ ಇದರ ಕಡೆಗೆ
ಲಕ್ಷ್ಯವಿಲ್ಲದೇ ತಾನು ಮಾಡಲೇ ಬೇಕಾದ ಕಾರ್ಯ ಅಂತ ಮಾಡುವುದು. ಆ ಸಮ ಭಾವ ಸಮದೃಷ್ಟಿ ಅದಕ್ಕೆ ಯೋಗ
ಅಂತ ಹೆಸರು. ಯೋಗ ಸಮದೃಷ್ಟಿ ಮಾತ್ರ
ಸಾಕಾಗುವುದಿಲ್ಲ. ಅವನು ತನ್ನ ಕ್ರಿಯೆಯಲ್ಲಿ ಕೌಶಲವನ್ನು ತೋರಿಸಬೇಕು. ಆಗ ಯೋಗಃ ಕರ್ಮಸು ಕೌಶಲಂ
ಎಂದಾಗುತ್ತದೆ. ಈ ಕರ್ಮವನ್ನು ಮಾಡದೆ ಇರುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.
“
ಚಿತ್ತಶುದ್ಧಿಗಾಗಿ ಕರ್ಮ. ಅರ್ಜುನಾ ನೀನು ದೇವರ ಭಜನೆ ಮಾಡು, ಯುದ್ಧಮಾಡು, ಯಜ್ಞಮಾಡು ಶಾಸ್ತ್ರ
ಓದು ದಾನ ಧರ್ಮ ಮಾಡು. ಏನನ್ನು ಮಾಡು. ಅದರಲ್ಲಿ ಚಿತ್ತ ಶುದ್ಧಿಯಾದರೆ ಅದು ಕರ್ಮ ಯೋಗ. “
ಯಜ್ಞ ದಾನ ತಪಸ್ಸು ಈ ಮೂರರಲ್ಲಿ ದಾನ ಅನ್ನುವುದು ಮೈಗೆ ಸಂಬಂಧ ಪಟ್ಟದ್ದು. ಕರೆದು ದಾನವ ಮಾಡು. ಆದರೆ ನಾನು ಅಷ್ಟು ಮಾಡಿದ್ದೇನೆ ಇಷ್ಟು ಮಾಡಿದ್ದೇನೆ
ತಾಮ್ರಪಟದಲ್ಲಿ ಬರೆದಿಡಬೇಕು, ಹಾಗಾದಾಗ ಅದು ದಾನವಲ್ಲ. ದೇಹ ಮನಸ್ಶು ಬುದ್ಧಿ ಈ ಮೂರಕ್ಕೂ ಇರುವ
ಕರ್ಮಗಳು ಭಿನ್ನ. ಆಯುರ್ವೇದದಲ್ಲಿ ದೇಹದ ಒಳಗೆ ಕೊಡುವ ಕಷಾಯಕ್ಕೂ ದೇಹದ ಹೊರಗೆ ಲೇಪಿಸುವ
ತೈಲಕ್ಕೂ ವೆತ್ಯಾಸವಿದ್ದಂತೆ. ಹೊರಗೆ ಲೇಪಿಸುವದ್ದನ್ನು ಹೊಟ್ಟೆಗೆ ಕೊಡುವುದಕ್ಕೆ ಸಾಧ್ಯವಿಲ್ಲ.
ದೇಹದ ಒಳಗೆ ಕೊಡುವದ್ದನ್ನು ಲೇಪಿಸುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ಸರಿಯಾದ ವೆತ್ಯಾಸವನ್ನು ಗಮನಿಸಬೇಕು
ಮನಸ್ಸು ಮಾಡಬೇಕಾದ ಕರ್ಮವನ್ನು ದೇಹ ಮಾಡುವುದಕ್ಕಿಲ್ಲ. ದೇಹ ಮನಸ್ಸು ಬುದ್ಧಿ
ಈ ಮೂರಕ್ಕೂ ವೆತ್ಯಾಸಗಳಿವೆ. ಹಾಗಾಗಿ ಯೋಗಃ ಕರ್ಮಸು ಕೌಶಲಂ ಅಂತ ಕರೆಯುವುದು. ದಾನ ಕೊಡುವುದು ಇದು ದೇಹಸಂಬಂಧಿಯಾದರೆ ಕೊಡುವ ಅಭ್ಯಾಸ ಅದು ಬುದ್ಧಿಗೆ ಸಂಬಂಧಿಸಿಯಾಗಿರುತ್ತದೆ. ಸಂಪತ್ತು ಕೂಡಿಸಿದಂತೆ ಕೊಡುವುದಕ್ಕೂ ಸಂತೋಷ
ಪಡಬೇಕು. ಇದು ಮನಸ್ಸಿಗೆ ಸಂಬಂಧಿಸಿರುತ್ತದೆ.
ಒಟ್ಟಿನಲ್ಲಿ ಕರ್ಮ ಅದು ಬಿಟ್ಟು ಬಿಡಬಾರದು. ಬಿಟ್ಟರೆ ದೋಷ ಬರುತ್ತದೆ. ಹಾಗಂತ ಆಚರಿಸಿದರೆ ಫಲ? ಫಲ ಏನೇ ಆಗಲಿ ಮಾಡಲೇ ಬೇಕಾದದ್ದು.
ಫಲದ ಬಗ್ಗೆ ವಿವರಿಸುತ್ತಾ…ಕರ್ಮದ ವೈವಿಧ್ಯತೆ ಏನು ಎಂಬ ವಿವರಣೆ
ಅರ್ಥವತ್ತಾಗಿದೆ. ನೋಡಿ,
“ಅರ್ಜುನ ನೀನು ಕ್ಷತ್ರಿಯ. ಸಮಾಜದ ಸ್ವಾಸ್ಥ್ಯಕ್ಕೆ ವರ್ಣವ್ಯವಸ್ಥೆ ಬೇಕಾಗುತ್ತದೆ. ವರ್ಣ
ವ್ಯವಸ್ಥೆ ಅಂದರೆ ಹೇಗೆ? ವರ್ಣ ಅದು ಜಾತಿಯಲ್ಲ. ವರ್ಣ ಅದು ನಾಗರೀಕತೆಯ ಸಂಕೇತ. ಹೇಗೆ. ತಲೆ ಕೆಲಸ ಮಾಡುವ ಒಂದು ವರ್ಣ. ಕೈ ಕೆಲಸ ಮಾಡುವ ಒಂದು ವರ್ಣ.
ಕೈ ಕೆಲಸ ಮಾಡುವವರು ಸೈನಿಕರು. ಅದು ಹೋರಾಟಕ್ಕೆ ಇರೋದು.
ಹೀಗೆ ವರ್ಣ ನಾಲ್ಕಾಗಿ ವಿಭಾಗಿಸಲ್ಪಡುತ್ತದೆ. ಕೈಯ ಕೆಲಸ ಏನು ಹೋರಾಟ ಮಾಡೋದು.
ವಿರೋಧಿಯನ್ನು ನಿವಾರಿಸುವಂಥದ್ದು. ಹೊಡೆಯುವುದಲ್ಲ.
ಹೀಗೆ ಅರ್ಜುನನಿಗೆ ಕರ್ಮಯೋಗದ
ಔಚಿತ್ಯವನ್ನು ಆತ ಮಾಡಲೇ ಬೇಕಾದ ಕರ್ಮವನ್ನು ವಿವರಿಸುತ್ತಾರೆ.
“ ಅರ್ಜುನ,
ಸ್ವಜನ್ಮದಿಂದ ಬಂದ ಯುದ್ಧ ವೃತ್ತಿ ಅಭ್ಯಾಸ ಬಲದಿಂದ ಬಂದಂತಹ ಯುದ್ಧವೃತ್ತಿ,ಯಲ್ಲಿ ಅಳುಕು ಹುಟ್ಟಿದ್ರೆ ಮುನಿವೃತ್ತಿ ಹಿಡಿದಿತೋ. ಪ್ರವಾಹಕ್ಕೆ
ಅನುಕೂಲವಾಗಿ ಈಚಲಿಕ್ಕೆ ಬರುವುದಿಲ್ಲ ಅಂತ ಹೇಳುವವನು ಪ್ರವಾಹಕ್ಕೆ ವಿರುದ್ಧವಾಗಿ ಈಜುವುದಕ್ಕುಂಟೋ?
ನೀನು ತಪ್ಪಸ್ಸಿಗೆ ಹೋದರೂ ಮೃಗ ಬೇಟೆಯಾಡುವವನು. ಹಾಗಾಗಿ
ಪ್ರಾಮಾಣಿಕವಾಗಿ ಒಂದು ತೀರ್ಮಾನಕ್ಕೆ ಬಾ.
“ಕರ್ಮಣ್ಯೇ
ವಾಧಿಕರಸ್ತೇ ಮಫಲೇಷು ಕದಾಚನ” ಕರ್ತವ್ಯಕ್ಕಾಗಿ ಕರ್ಮ ಮಾಡು.”
ಅರ್ಜುನನನ್ನು ಪ್ರೇರೇಪಿಸುವ ಶ್ರೀಕೃಷ್ಣ
ತಾನು ಕೂಡ ಕರ್ಮಕ್ಕೆ ನಿಷ್ಠನಾದವನು. ಇದೇ ಈ ಅವತಾರದ ರಹಸ್ಯ. ಶ್ರೀ ಕೃಷ್ಣ ದೇವನಾಗಿ ಭಗವಂತನಾಗಿ ಯಾಕೆ ಕರ್ಮಿಷ್ಠನಾದ ಎನ್ನುವುದಕ್ಕೆ ವಿವರಣೆ ಇದೆ.
“ ಸ್ವಯಂಭೂವಾದಂತಹ ಪರ್ಮಾತ್ಮ ದುಷ್ಟರ ಶಿಕ್ಷೆಗೆ ಶಿಷ್ಟರ ಪರಿಪಾಲನೆಗೆ ಇದ್ದಲ್ಲಿಂದ
ಸಂಕಲ್ಪ ಮಾಡಿದರೆ ಸಾಲದೋ, “ ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಈ ಪ್ರಶ್ನೆ
ಮೂಡುವುದು ಸಹಜ. ಪರಮಾತ್ಮನ ಅವತಾರದ ಆವಶ್ಯಕತೆಯನ್ನೇ ವಿಮರ್ಶಿಸುವ ಪ್ರಶ್ನೆ
ಇದು. ಬಹಳ ಸರಳವಾದ ತರ್ಕದ
ಚೌಕಟ್ಟಿನಲ್ಲಿರುವ ಈ ಉತ್ತರಗಳನ್ನು ಅವರದೇ ಮಾತಿನಲ್ಲಿ ಗಮನಿಸಬೇಕು.
“ ರಾಜನಾದವನು
ಹೊಸ ಶಾಸನ ಮಾಡುತ್ತಾನೆ. ಹೊಸ ಶಾಸನ ಮಾಡುವಾಗ ಕೆಲವೊಂದು ಮೌಲ್ಯಗಳು
ಹಳೆಯದಾಗಿ ಬಿಡುತ್ತವೆ. ಅದು ಒಳ್ಳೆಯದ್ದೆ ಆದರು ವರ್ತಮಾನದಲ್ಲಿ ಅವು ಚಲಾವಣೆಗೆ
ಆಗೋದಿಲ್ಲ. ಹಾಗಂತ ಹಳೇ ಮೌಲ್ಯಗಳಿಂದ ಕೆಲವೊಂದು ಹೊಸ ಮೌಲ್ಯಗಳನ್ನು ಸೃಷ್ಟಿಸಬೇಕಾಗುತ್ತದೆ.
ಆಗ ರಾಜನದವನು ಒಬ್ಬನೇ ಕುಳಿತು ಯೋಚನೆ ಮಾಡಿದರೆ ಸಾಕೋ? ಸಾಲುವುದಿಲ್ಲ. ಅದಕ್ಕೆ ಸಂಬಂಧಿಸಿದವರಲ್ಲಿ ಪರಾಮರ್ಶಿಸಬೇಕು.
ಸಂಬಂಧಿಸಿದವರು ರಾಜನಿದ್ದಲ್ಲಿಗೆ ಬರಲಿಲ್ಲ ಎಂದಾಗುವಾಗ ರಾಜ ಅವರ ಬಳಿಗೆ ಹೋಗಬೇಕಾಗುತ್ತದೆ.
ಭಗವಂತನ ಅವತಾರದ ಉದ್ದೆಶ ಅದು.
ಒಂದೊಂದು ಅವತಾರದಲ್ಲಿ ಒಂದೊಂದು ಮೌಲ್ಯಗಳನ್ನು ಉಳಿಸಬೇಕಾಗುತ್ತದೆ. ಆ ಮೌಲ್ಯ ಈ ಕಾಲಕ್ಕೆ ಅಳಿಸಬೇಕಾಗುತ್ತದೆ. ಅಳಿಸಬೇಕಾಗುತ್ತದೆ
ಎಂದಾಗುವಾಗ ನಾನಿದ್ದಲ್ಲಿಂದ ಸಯಂಭೂವಾಗಿ ಹೇಳಲಿಕ್ಕಾಗ್ತದೋ? ರಾಮಾವತಾರದ ಮೌಲ್ಯಗಳನ್ನೆಲ್ಲ ಕೃಷ್ಣಾವತಾರದಲ್ಲಿ
ಇಟ್ಟುಕೊಂಡಿದ್ದೇನೋ? ಅದನ್ನು ಭಂಡಾರದಲ್ಲಿಟ್ಟಿದ್ದೇನೆ. ಅದು ಸದ್ಯ ಚಲಾವಣೆಗೆ ಇಲ್ಲ. “
“ಧರ್ಮದ ಮೌಲ್ಯಗಳನ್ನು
ಬದಲಾವಣೆ ಮಾಡೋದಲ್ಲ. ಪರಶುರಾಮಾವತಾರದಲ್ಲಿ ತಾಯಿಯ ತಲೆ ಕಡಿದವ ನಾನು ಅಂತಲೇ
ಹೇಳ್ತಾರೆ. ಹಾಗಂತ ಭೀಷ್ಮನ ಹಾಗಿದ್ದವರು ತಾಯಿಯ ತಲೆ ಕಡಿಬಹುದೋ? (ಗುರು ಮಾಡಿದ್ದು ಶಿಷ್ಯನಿಗೆ ಅನುಕರಣೀಯವಲ್ಲ. ಅದು ಕಾಲ ಕಳೆದಂತೆ
ಬದಲಾಗುತ್ತದೆ. ಅದು ಒಂದು
ಮುಖ ಅಷ್ಟೇ) ಆ ಕಾಲಕ್ಕೆ ಅದು ಮೌಲ್ಯ. ಯಾಕೆ?
ತಾಯಿಯ ತಲೆಯನ್ನು ಮಗ ಕಡಿದ್ರೂ ಬದುಕಿಸುವ ಅಪ್ಪ ಇದ್ದ!. “
“ ವ್ಯಾವಹಾರಿಕ
ಜಗತ್ತಿನ ಮನುಷ್ಯರನ್ನು ಆಚಾರ್ಯ ರೂಪಿನಿಂದ ತಿದ್ದಬೇಕಿದ್ರೆ ನಾನು ಬಂದು ಆಚರಿಸಬೇಕಾಗುತ್ತದೆ.
ಯದ್ ಯದಾಚರತಿ ಶ್ರೇಷ್ಠಃ ತತ್ತ ದೇವೇತರೋ ಜನಾಃ ದೊಡ್ಡಮನುಷ್ಯನಾಗಿ ಅವನು ಏನು ಮಾಡ್ತಾನೆ
ಅದನ್ನು ಬಾಕಿದ್ದವರು ಅನುಸರಿಸುತ್ತಾರೆ. “
ಶ್ರೀ ಕೃಷ್ಣ ಮನುಷ್ಯನಂತೆ
ಕರ್ಮ ಮಾಡಿದರೂ ಆತನಿಗೆ ಯಾವ ಕರ್ಮವೂ ಅಂಟೋದಿಲ್ಲ. ರಂಗದ ಮೇಲಿನ ಪಾತ್ರದಂತೆ. ಶ್ರೀ ಕೃಷ್ಣ ಕೊನೆಯಲ್ಲಿ ಹೇಳುತ್ತಿದ್ದಾನೆ,
ಪಾಪ ಪುಣ್ಯ ಯಾವುದೂ ಇಲ್ಲ. ದೇವರಾದುದರಿಂದ ಇಲ್ಲ ಅಂತಲ್ಲ.
ಕರ್ಮದ ಕುಶಲಗಾರಿಕೆಯದು. ಶ್ರೀ ಕೃಷ್ಣ ಯೋಗಾಚಾರ್ಯ ನಾಗುವುದು
ಹಾಗೆ. ಎಲ್ಲವೂ ಮಾಡು ಯಾವುದನ್ನೂ ಅಂಟಿಸಿಕೊಳ್ಬೇಡ. “
ಹೀಗೆ ಅರ್ಜುನನಿಗೆ ಆವರಿಸಿದ
ಮೋಹವನ್ನುಕಳೆಯುತ್ತಾನೆ. ಅವಲ್ಲಿ
ಉಂಟಾಗಿದ್ದ ಕ್ಲಬ್ಯ ಯುದ್ದ ಮಾಡಲಾರೆ ಎಂಬ ಷಂಢತನವನ್ನು ದೂರ ಮಾಡುತ್ತಾನೆ.
ಕೊನೆಯಲ್ಲಿ ಈ ವಾಗ್ದೇವಿಯ
ಪ್ರವಾಹ ಸಾಗರಕ್ಕೆ ಸೇರಿ ಪರಿಸಮಾಪ್ತಿಯಾಗಬೇಕಲ್ಲ. “ ಅರ್ಜುನಾ, ಈ ಕಣ್ಣಿಂದ ನೀನು ಕಾಣಲಾರೆ. ನಿನಗೆ ನಾನು ನನ್ನ ಕಟ್ಟು ಕೊಟ್ಟಿದ್ದೇನೆ.
ಯಾಕಂದರೆ ನೀನು ನಾನೆ. ನಾನು ನೀನೆ. ಈ ದರ್ಶನ ಆಗಬೇಕಿದ್ರೆ ನಿನ್ನ ಕಣ್ಣಿನಿಂದಾಗೋದಿಲ್ಲ. ನನ್ನ ಕಣ್ಣಿಂದ
ನೋಡು. ಅನುಗ್ರಹ ಮಾಡಿದ್ದೇನೆ. “
ಕಾಣಬೇಕಾದ ಅವಶ್ಯ ವಸ್ತು ಹಲವು ಸಲ ಕಣ್ಣೆದುರಿಗಿದ್ದರೂ ಗೋಚರವಾಗುವುದಿಲ್ಲ. ಕಾಣಬೇಕಾದ ನಮ್ಮ ದೃಷ್ಟಿಯಲ್ಲಿ ಬದಲಾವಣೆ
ತಂದಾಗ ಅದೇ ವಸ್ತು ಪ್ರಖರವಾಗಿ ಕಾಣಿಸುತ್ತದೆ.
ಪರಮಾತ್ಮ ಎಲ್ಲದರಲ್ಲೂ ಎಲ್ಲೆಲ್ಲೂ ಇರುತ್ತಾನೆ. ಕಾಣಬೇಕಾದ ದೃಷ್ಟಿಯನ್ನು ಹೊಂದಿಸಿದಾಗ ಅದೃಶ್ಯವಾಗಿ ಅದೃಷ್ಟವಾಗಿರುವ ಪರಮಾತ್ಮ ದೃಷ್ಟನಾಗುತ್ತಾನೆ ಎಂಬ ಸಾರ ಇಲ್ಲಿ ವೇದ್ಯವಾಗುತ್ತದೆ. ದೃಷ್ಟಿ ವರವಾಗುವ ತನಕ ಪಾರ್ಥನಂತೆ ಮೋಹ
ಆವರಿಸಿ ನಾವು ಅರಸುತ್ತಾ
ಇರುತ್ತೇವೆ.
-----------------------------
(ಶ್ರೀ ಡಾ. ಗೋಪಾಲಕೃಷ್ಣ ಎಲ್ . ಹೆಗಡೆ ಬರೆದ “ಶೇಣಿಭಾರತ” ಎಂಬ
ಪುಸ್ತಕದ ಲೇಖನದ ಅಂಶಗಳನ್ನು ಆಧರಿಸಿ ಸ್ವ ವಿಶ್ಲೇಷಣೆಯೊಂದಿಗೆ ಈ ಲೇಖನವನ್ನು ಸಿದ್ದ ಪಡಿಸಲಾಗಿದೆ. ಪುಸ್ತಕದ ಲೇಖಕರಿಗೆ ಮತ್ತು ಪ್ರಕಾಶಕರಿಗೆ ಹೃತ್ಪೂರ್ವಕ
ನಮನಗಳು.)



