ಭಾಗ ೧ ರಿಂದ ಮುಂದುವರೆಸಿ
ಪದವಿಲ್ಲದೇ ಅರ್ಥ ಹೇಳಿದಂತೆ ಮಾತಿನ ಮಲ್ಲ...ಮಾತೇ
ಇಲ್ಲ ಎಂಬಂತಾಗಿಬಿಟ್ಟಿತು. ಹಳೆಯ ಜೀವನ ಚರಿತ್ರೆ ಪುಟಗಳು
ಧೂಳು ಕೊಡವಿಕೊಂಡು ಅಕ್ಷರಗಳು ಸ್ಪುಟವಾಗಿ ಗೋಚರಿಸತೊಡಗಿದವು. ಹೌದು, ಸುಮಂಗಲ ಒಂದು
ಕಾಲದ ರೋಮಾಂಚನ ತುಂಬುವ ಅಕ್ಷರಗಳು ಈಗ ಆ ರೋಮಾಂಚನವನ್ನು ನೆನಪಿಗೆ ತಂದವು. .ಸ್ನಾನ ಮಾಡಿ ಒದ್ದೆ
ಕೂದಲಿಗೆ ಬಿಳಿ ಬೈರಾಸನ್ನು ಬಿಗಿಯಾಗಿ ಕಟ್ಟಿ ಶುಭ್ರ ಮುಖದಲ್ಲಿ ಪ್ರಸನ್ನ ಭಾವದಿಂದ ಅಚ್ಹರಿಯ
ಕಣ್ಣುಗಳಿಂದ ತನ್ನನ್ನೇ ನೋಡುತ್ತಿದ್ದಾಳೆ..ಫಳ ಫಳ ಹೊಳೆಯುವ ಕಣ್ಣಿನ ಹೊಳಪು ಇನ್ನೂ ಹಾಗೆ ಇದೇ ..ಹೊಳಪಲ್ಲೂ ಸೂರ್ಯಕಿರಣಗಳು
ಮಿಂಚುತ್ತಿವೆಯೇ? ತೇವಗೊಂಡ ಕಣ್ಣುಗಳ ತೇವ ಇನ್ನೂ ಆರಿಲ್ಲವೇ? ಎಲ್ಲವೂ ಕ್ಷಣ ಚಿತ್ತದ ಭಾವಗಳು.
ಆದರೆ ಈಗ ಆ ಮನೋಭಾವದ ಕಿಂಚಿತ್ ಆದರೂ ಮುಖದಲ್ಲಿ
ವ್ಯಕ್ತವಾದರೆ ಅಸಭ್ಯ ಎನಿಸಲಾರದೆ? ಯಾವ ವಿಪರೀತ
ಕಲ್ಪನೆಯೂ ಇಲ್ಲದ ಒಂದು ಸಾಮಾನ್ಯ ಭಾವ...ಸಂಸ್ಕೃತರಿಗೆ ಮಾತ್ರ ಸಾಧುವೇನೋ? ಹಾಗಾಗಿ ಪರಿಚಯದ ನಗೆ ನಕ್ಕು ಪಡಸಾಲೆಯ ಕುರ್ಚಿಯಲ್ಲಿ ಕುಳತುಕೊಳ್ಳಲು ಅಣಿಯಾದಾಗ
ಇಲ್ಲಿ ಬೇಡ ಒಳಗೆ ಬನ್ನಿ ಎಂದು ಅತ್ಮೀಯ ಭಾವದಿಂದ ಒಳಗೆ ಕರೆದ ಸುಮಂಗಲಳನ್ನು ಹಿಂಬಾಲಿಸಿ ಮನೆಯ ಒಳಗೆ ನಡೆದರು. ಅದು ಹೌದು ಭಾವಗಳು ಸಂಸ್ಕಾರದ
ಅಚ್ಚಿನಲ್ಲಿ ಎರಕ ಹೊಯ್ಯಲ್ಪಡುತ್ತವೆ. ಅಸಹಜವೇ ಸಹಜವಾಗಿರುವ ಸಂಸ್ಕಾರವೇ ಇದಕ್ಕೆ ನಿದರ್ಶನ.
ಬಹಿರಂಗವಾಗುವ ಭಾವ ಹೇಗೆ ಸಂಸ್ಕಾರವನ್ನು ಅವಲಂಭಿಸದೇಯೋ ಅಂತರಂಗದ ಭಾವವೂ ಅದನ್ನೆ ಅವಲಂಬಿಸಿದೆ.
ಕೆಲವೆಲ್ಲ ಕಲ್ಪಿಸುವುದೂ ಅಪರಾಧ ಎಂದು ಅನಿಸುತ್ತದೆ. ತಾಯಿಯಲ್ಲಿ ಕಲ್ಪಿಸಲಾಗದೇ ಇದ್ದದ್ದನ್ನು
ಸಹಧರ್ಮಿಣಿಯಲ್ಲಿ ಕಲ್ಪಿಸಿದ ಹಾಗೆ. ಮನಸ್ಸನ್ನು ರೂಪಿಸುವ ಸಂಸ್ಕಾರದ ನಿಯಂತ್ರಣ ವಿಚಿತ್ರ ಎನಿಸಲ್ಪಡುತ್ತದೆ.
ನಿತ್ಯವೂ ರಾತ್ರಿಯಾಗುತ್ತಿದ್ದಂತೆ ನಶೆ ಏರಿಸುತ್ತಿದ್ದ ತಮ್ಮ ಸಹವರ್ತಿಗೆ ಒಂದು ಸಲ ಉಪದೇಶ ಮಾಡಿ
ಹೇಳಿದ್ದು ವಿಚಿತ್ರ ಆದರೂ ಪರಿಣಾಮಕಾರಿಯಾಗಿತ್ತು. ಸಾಯಂಕಾಲದ ಹೊತ್ತು ಸ್ನಾನ ಮಾಡಿ ಶುಚಿಯಾಗಿ
.ಬಿಳಿ ಪಂಚೆಯನ್ನು ಧರಿಸು.... ಸ್ನಾನ ಮಾಡಿ ಶುಚಿಯಾದ ದೇಹ ಮನಸ್ಸಿಗೆ ಮುದವನ್ನು ನೀಡಿದರೆ ಆ
ಮುದವನ್ನು ಬಿಳಿ ವಸ್ತ್ರ ಕಾಪಿಡುತ್ತದೆ. ಮಾತ್ರವಲ್ಲ ಬಿಳಿ ವಸ್ತ್ರ ಉಟ್ಟು ಹೆಂಡದಂಗಡಿ
ಹೊಕ್ಕುವುದು ಅಸಹಜವೆನ್ನಿಸುತ್ತದೆ. ಅಥವ ಶುಭ್ರವಾದ ನಂತರ ತೂರಾಡುವುದು ಒಂದು ರೀತಿಯಲ್ಲಿ ಕಿರಿ
ಕಿರಿಯೇ ಅನ್ನಿಸಿಬಿಡುತ್ತದೆ. ಶುಭ್ರವಾಗಿ ಆದ ಮುದವಾದ ಅನುಭವ ಮತ್ತೆ ಬಿಳಿವಸ್ತ್ರ ಅದರಿಂದ ಹೊರ
ಬಾರದ ಇಕ್ಕಟ್ಟಿಗೆ ತಂದು ಸಿಲುಕಿಸುತ್ತದೆ. ಈ ದ್ವಂದ್ವದಲ್ಲಿ ಆ ಸಮಯ ಕಳೆಯುತ್ತದೆ... ಮತ್ತೆ
ಬೇರೆ ಇನ್ನೆನಾಗಬೇಕು ಸಂಸ್ಕಾರ ರೂಪುಗೊಳ್ಳುವ ಬಗೆ ಅದು.
ಛೇ ಘಳಿಗೆಯೊಳಗೆ ಮನಸ್ಸು ಯಾವೆಲ್ಲ
ಯೋಚನೆ ಮಾಡಿತಲ್ಲ. ಅಷ್ಟರಲ್ಲಾಗಲೇ ಒಳಗೆ ಬಂದಾಗಿತ್ತು. ಬಹುಷಃ ತೀರ ಆತ್ಮೀಯ ಬಂಧುಗಳಿಗೆ ಮಾತ್ರ ಅಂತರಂಗದ ಗೃಹದ ಒಳಗೆ
ಪ್ರವೇಶ. ಈಚಣ್ಣ ಬಂಧು ಎಂಬ ಅಂಗೀಕಾರವೇ? ಈಚಣ್ಣನಿಗೆ ಹಾಗೆ
ಅಂದುಕೊಳ್ಳುವುದಕ್ಕೆ ಕಾರಣವಿತ್ತಲ್ಲ?
ಆಗಿನ್ನು ಹದಿ ಹರಯವನ್ನು ಮೀರಿದ ವಯಸ್ಸು.
ಶಾಲೆಯಲ್ಲಿದ್ದಾಗಲೇ ಸಾಕಷ್ಟು ಯಕ್ಷಗಾನ ತರಬೇತಿಯಾಗಿದ್ದ ತಾನು ಬಾಲಕರಲ್ಲಾಗಲೇ ಪ್ರಸಿದ್ದ
ಕಲಾವಿದನಂತಾಗಿದ್ದದ್ದು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತನ್ನ ಅಂಗ ಪ್ರಾಧಾನ್ಯತೆಯನ್ನು
ಪಡೆದದ್ದು.... ನೆರೆಕೆರೆ, ನಿತ್ಯ ಪರಿಚಿತರಂತಹ ಮನೆಯಿಂದ ತಾನು ಮತ್ತು ಸುಮಂಗಲ ಒಂದೇ
ಹಾದಿಯಲ್ಲಿ ಶಾಲೆಯ ಹಾದಿಯಲ್ಲಿ ಪಯಣಿಗರಾಗಿ ಅದು ಹೇಗೋ ಆತ್ಮೀಯತೆ, ಸಲುಗೆ ಬೆಳೆದದ್ದು. ಅಷ್ಟಿಷ್ಟು ಯಕ್ಷಗಾನದ ಅಭಿರುಚಿ
ಆಕೆಯಲ್ಲಿ ತರಿಸಿ ಆಕೆಗೆ ಪ್ರಾಥಮಿಕ ಗುರುವಾದದ್ದು, ಅದು ಬಾಲ್ಯದ ದಿನಗಳಾದರೂ ಅದಕ್ಕೂ ಒಂದು
ಅರ್ಥವಿದೆ ಎಂದು ಹಲವು ಸಲ ಅನ್ನಿಸಿದ್ದಿದೆ. ಅವಾಗ ಅಲ್ಲದಿದ್ದರೂ ಹದಿ ಹರಯ ದಾಟಿದ ನಂತರ
ವಯೋಸಹಜವಾಗಿ ಆತ್ಮೀಯತೆ ಸಲುಗೆಯ ರೂಪವೇ ಬದಲಾಗಿ ಹೋದದ್ದು ಎಲ್ಲ ನಿಮಿತ್ತದಂತೆ ಆಗ ಅನಿಸಿತ್ತು.
ಹೈಸ್ಕೂಲು ಮುಗಿಸಿ ಆಕೆ ಮುಂದಿನ
ಶಿಕ್ಷಣಕ್ಕೆ ಇನ್ನೂ ಪ್ರೌಢೆಯಾಗಿ ಕಾಲೇಜು ಹೋಗ ತೊಡಗಿದರೂ ತಾನು ಹೈಸ್ಕೂಲು ಫೇಲ್ ಆಗಿ.. ಮುಂದೆ
ಯಕ್ಷಗಾನವನ್ನೇ ಗಟ್ಟಿ ಮಾಡಿಕೊಂಡದ್ದು ಬಾಲ್ಯದ ಕನಸುಗಳೆಲ್ಲ ಯಕ್ಷಗಾನದ ವೇಷಗಳಂತೆ
ಭಾಸವಾಗತೊಡಗಿತು. ಹೌದಲ್ಲ? ತಮ್ಮ ನಡುವಿನ ಪ್ರೀತಿಯಲ್ಲಿ ಅರ್ಥವಿತ್ತು.. ಆದರೆ ತನ್ನ ಜೇಬು ಎಂದೂ
ಅರ್ಥವಿಲ್ಲದೇ ಜೀವನ ಅರ್ಥವನ್ನು ಮನವರಿಕೆ ಮಾಡಿಸುತ್ತಿತ್ತು. ಯಕ್ಷಗಾನದಲ್ಲಿ ಸಹಜವಾಗಿ
ಒಂದೊಂದಾಗಿ ಸಿದ್ಧಿ ಸಾಧನೆಗಳು ರಂಗಸ್ಥಳದ ಒಡ್ಡೋಲಗದಂತೆ ಕಳೆ ಕಟ್ಟತೊಡಗಿದರೂ. ಭಲ್ಲಿರೇನಯ್ಯಾ
ಎಂದು ತೊಡಗಿಸುವ ಮಾತು ನಿಜ ಜೀವನದಲ್ಲಿ ಅರ್ಥವನ್ನೇ ತರಲಿಲ್ಲ. ಯಕ್ಷಗಾನದಲ್ಲೂ ಹಾಗೆ ಕೆಲವು
ಪದಗಳಿಗೆ ಅರ್ಥವೇ ಇಲ್ಲ!! ಅರ್ಥ ಎಂದರೆ ಅಲ್ಲಿ ಅರ್ಥ ಹೇಳುವುದಕ್ಕಿಲ್ಲ. ಸಂದರ್ಭೋತವಾಗಿ
ಪದವನ್ನು ಮಾತ್ರ ಭಾಗವತರು ಹಾಡಿ ಮುಂದಿನ
ಹಂತಕ್ಕೆ ದಾಟಿಸುತ್ತಾರೆ. ಒಂದು ವೇಳೆ
ಅರ್ಥವನ್ನು ಹೇಳಿದರೂ ಅದು ಅಭಾಸವಾಗಿಬಿಡುತ್ತದೆ. ಅರ್ಥವೇ ಅರ್ಥವನ್ನು ಕಳೆದುಕೊಳ್ಳುತ್ತದಲ್ಲ
ಎಂದು ಸಲ ವಿಡಂಬನೆಯಿಂದ ಸಂವಾದಿಸಿದ್ದು ಉಂಟು. ಆದರೆ ಅರ್ಥವಿಲ್ಲದ ಪದಗಳು ಅರ್ಥವಿಲ್ಲದೇ
ಸಂದರ್ಭಕ್ಕೆ ಮತ್ತು ಕಥೆಗೆ ಅರ್ಥವನ್ನು ಕೊಡುತ್ತಿತ್ತು. ಅಲ್ಲಿ ಶೂನ್ಯಾರ್ಥವಾಗಿ ಅರ್ಥವನ್ನು
ಕೊಡುತ್ತಿದ್ದದ್ದು ನಿಜ ಜೀವನದಲ್ಲಿ ಮಾತ್ರ ವಿಪರ್ಯಾಸವನ್ನೇ ಬಿಂಬಿಸತೊಡಗಿತ್ತು. ಕ್ ಕೈಯಲ್ಲಿ ಅರ್ಥವಿಲ್ಲದಿದ್ದರೂ ಅರ್ಥಪೂರ್ಣ ಪ್ರೀತಿಗೆ
ಕೊರತೆ ಇರಲಿಲ್ಲ. ಆದರೂ ಇಲ್ಲಿ ಇದ್ದ ಶೂನ್ಯಾರ್ಥ ಮತ್ತೂ ಶೂನ್ಯತೆಯನ್ನೇ ಬಿಂಬಿಸುವುದು
ವಿಪರ್ಯಾಸವಲ್ಲವೇ.?
ಬಹುಶಃ ಪ್ರೀತಿ ಗಾಢವಾಗುವುದು ಅಂತಹ
ಸಂದಿಗ್ಧಾವಸ್ಥೆಯಲ್ಲೇ ಇರಬೇಕು. ಅನನುಕೂಲ,
ಪ್ರತಿಕೂಲ , ಪ್ರತಿರೋಧ ಇದ್ದಾಗಲೇ ನಮ್ಮೊಳಗಿನ ಕಥಾ ನಾಯಕತ್ವ ಆವೇಶಗೊಳ್ಳುವುದು.
ಪ್ರತಿಯೊಬ್ಬರೂ ಅವರವರ ಬದುಕಿನ ಕಥೆಗೆ ಅವರೇ ನಾಯಕನೋ ನಾಯಕಿಯೋ ಆಗಿರುತ್ತಾರಲ್ಲ? ಅತ್ಯಂತ ಉತ್ಕಟವಾದ ಪ್ರೇಮಾಚರಣೆಯಲ್ಲಿ ನಾವುಗಳು
ಒಂದಾಗಿದ್ದೇವೆ ಭ್ರಮೆ ಆವರಿಸಿಕೊಳ್ಳುವುದು. ಎಲ್ಲ ವಯೋಸಹಜವಾದ ಮೌಢ್ಯ ಎಂದು ಈಗ, ಇಷ್ಟು ದೂರ
ಸಾಗಿ ಬಂದ ಮೇಲೆ ಅನ್ನಿಸುವುದಿದೆ. ಹಸಿವೆಯಲ್ಲೋ, ಹೊಟ್ಟೆತುಂಬಿಯೋ ದುಃಖದಲ್ಲೋ ಸಂತಸದಲ್ಲೋ ಅಂತು
ದಿನದ ಪ್ರತಿ ಘಳಿಗೆಯೂ ಸ್ವಲ್ಪ ಸ್ವಲ್ಪವಾಗಿ ಕಳೆದು ಹೋಗುತ್ತಿರುವಾಗ ಇರುವಾಗ ಆನುಭವಿಸುವ
ವರ್ತಮಾನದ ಸಮಯದ ಮೌಲ್ಯ ಅರಿವಾಗುವುದಿಲ್ಲ. ಇದ್ದ ಸ್ಥಿತಿಯೇ ಸ್ಥಾಯೀಭಾವವಾಗಿಬಿಡುತ್ತದೆ.
ಹೌದಲ್ಲ..? ತಾನು ಚಿಂತಿಸುವಾಗಲೂ ಯಕ್ಷಗಾನದ ಪಾತ್ರವಾಗುತ್ತಿದೇನೆಯೇ?
ಮನದೊಳಗೇ ನಕ್ಕರು ಈಚಣ್ಣ. ಆದರೆ ತನ್ನ ಪ್ರೇಮ
ಸಂಪೂರ್ಣವಾಗಿ ಅರ್ಥವನ್ನು ಕಳೆದುಕೊಂಡದ್ದು ತಾನೊಬ್ಬ ಯಕ್ಷಗಾನ ಕಲಾವಿದನಾಗಿ ರೂಪುಗೊಂಡ ಕಾರಣ,
ಆಟದವನಿಗೆ ಕೂಸನ್ನು ಕೊಡಲಾರೆ ಎಂದು ಸುಮಂಗಲಳ ಅಪ್ಪ ಛಲತೊಟ್ಟಾಗ ಬಹಳಷ್ಟು ಭ್ರಮನಿರಸನ
ಗೊಂಡಿದ್ದರು. ಆವರೆಗೆ ತಪಸ್ಸು ಎಂದು ತಿಳಿದ ಯಕ್ಷಗಾನದ ಹಾದಿಯೂ ವೈಫಲ್ಯದ ದರ್ಶನವನ್ನೇ
ಮಾಡಿಸಿತಲ್ಲ? ಯಕ್ಷಗಾನದ ವೇಷ ಭೂಷಣಗಳು ಕಳಚಿ ಬಿಚ್ಚಿಟ್ಟರು ಮತ್ತೂ ಅದು ಮತ್ತೊಂದು
ರೂಪದಲ್ಲಿ ಮೈಗೆ ಅಂಟಿಕೊಂಡು ಅಣಕಿಸಿದಂತೆ
ಭಾಸವಾಗಿತ್ತು. ರಂಗಸ್ಥಳದಿಂದ ದೂರವಾದಾಗ ಬಣ್ಣ ಕಳೆದುಕೊಂಡ ವೇಷದಂತೆ, ವಜ್ರ ವೈಢೂರ್ಯ ಅಭರಣಗಳು
ಹೊಳಪನ್ನು ಕಳೆದುಕೊಂಡಂತೆ ಬದುಕೂ ವೇಷ ಕಳಚಿ ನಿಂತು ಬಿಟ್ಟಿತಲ್ಲ. ಸಂಸಾರಿಕ ಬದುಕಿಗೆ ಆಟದವನು
ಸಲ್ಲುವುದಿಲ್ಲವೇ? ವೇಷವೇ ಇಲ್ಲ ಪಾತ್ರೆವೇ
ಇಲ್ಲ. ಬರೀ ಆಟದ ನೋಟಿಸಿನಲ್ಲಿ ಮುದ್ರಿಸಿದ ಹೆಸರು ಮಾತ್ರವೇ ಆಗಿಹೋಯಿತು. ಸುಮಂಗಲ ಅನ್ಯರಿಗೆ
ಮಂಗಲವಾಗಿ ಪರಿಣಮಿಸಿ ಅರ್ಥಹೀನತೆಯೇ ಬದುಕಿನ ಅರ್ಥ ಎಂದು ತೋರಿಕೊಟ್ಟ ಮೇಲೆ ವಿಶ್ವಾಮಿತ್ರ ತಪಸ್ಸಿಗೆ ಕುಳಿತಂತೆ ಈಚಣ್ಣ ಸ್ತಿತ
ಪ್ರಜ್ಞರಾಗಿರಾಗಿಬಿಟ್ಟರು.
(ಕ್ಷಮಿಸಿ... ಇನ್ನೂ ಇದೆ)
(ಕ್ಷಮಿಸಿ... ಇನ್ನೂ ಇದೆ)