ಕಾಲ ಗರ್ಭಕ್ಕೆ ಸರಿದು ಹೋದ ನಿನ್ನೆಯ ದಿನಗಳು ಅಥವ ಕಳೆದು ಹೋದ ಸಮಯ ಇತಿಹಾಸ ಎನಿಸಲ್ಪಡುತ್ತವೆ. ಸಂದು ಹೋದ ಭೂತಕಾಲ ಅದು ಇತಿಹಾಸ. ಇತಿಹಾಸದ ಅನುಭವವನ್ನು ಭವಿಷ್ಯತ್ ಕಾಲಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಅವುಗಳನ್ನು ದಾಖಲಿಸಿ ಸ್ಮರಣಿಕೆಗಳನ್ನಾಗಿ ಉಳಿಸುವಂತಹ ಕಾರ್ಯ ಹಲವು ವಿಧದಲ್ಲಿ ಆಗುವುದುಂಟು. ಮುಂದಿನ ದಿನಗಳ ದೃಷ್ಟಿಯಲ್ಲಿ ಈ ಇತಿಹಾಸಗಳೇ ತಳೆಯುವ ನಿರ್ಧಾರಕ್ಕೆ ಪ್ರೇರಕವಾಗಿರುತ್ತದೆ. ಇದನ್ನು ಹೀಗೆ ಎಂದು ವರ್ಗೀಕರಿಸುವುದು ಕಠಿಣವಾದರೂ ಇತಿಹಾಸದ ದಿನಗಳನ್ನು ನೆನಪಿಸುವಂತೆ ಯಥಾ ಸೃಷ್ಟಿಯನ್ನು ಪುನಃ ಸೃಜಿಸಿ ಅದನ್ನು ದಾಖಲಿಸುವ ಪ್ರಯತ್ನ ವರ್ತಮಾನದ ಮೌಲ್ಯಕ್ಕನುಸಾರವಾಗಿ ಆಗುವುದುಂಟು. ಯಾವುದೇ ವಸ್ತುವಿನ ಮೌಲ್ಯ ಇರವುದು ಅದನ್ನು ಹೊಂದಿರುವ ಮತ್ತು ಕೊಂಡುಕೊಳ್ಳುವವನ ಅಭಿರುಚಿಯನ್ನು ಹೊಂದಿಕೊಂಡು. ಇದನ್ನು ಅವನ ಮನೋಭಾವವೇ ಅದನ್ನು ನಿರ್ಧರಿಸುತ್ತದೆ.
ವಾಸ್ತವದಲ್ಲಿ ಮೌಲ್ಯ ಕಂಡುಕೊಳ್ಳಲಾಗದೆ ಇದ್ದದ್ದು ಭವಿಷ್ಯತ್ ನಲ್ಲಿ ಮೌಲ್ಯ ವನ್ನು ಪಡೆದುಕೊಳ್ಳುತ್ತದೆ. ಸ್ಥಿರ ಚರ ವಸ್ತುಗಳು ಕಾಲಕ್ಕೆ ತಕ್ಕಂತೆ ಮೌಲ್ಯ ವರ್ಧಿಸಿದರೂ ಅದು ಕೇವಲ ಭೌತಿಕ ಪ್ರಪಂಚದ ಸೊತ್ತಾಗಿರುತ್ತದೆ. ಆದರೆ ಇದೆಲ್ಲವನ್ನು ಮೀರಿ ಮಾನಸಿಕ ಭಾವನೆಗಳ ಮೌಲ್ಯಮಾಪನ ಮಾಡುವಾಗ ಕಳೆದು ಹೋದ ಘಟನೆಗಳು ಅವುಗಳ ನೆನಪುಗಳು ಬಹಳ ಮೌಲ್ಯಯುತವಾದದ್ದೆಂದು ನಂತರ ಅನಿಸುವುದುಂಟು.
ಹಲವು ವರ್ಷಗಳ ಹಿಂದೆ ಸುಮ್ಮನೇ ಕಾಲಕ್ಕೆ ತಕ್ಕಂತೆ ಹುಚ್ಚು ಕಟ್ಟಿ , ಕತ್ತಲೆಯಲ್ಲಿ ತೆಂಗಿನ ಮಡಲಿನ ಸೂಟೇ (ದೊಂದಿ) ಉರಿಸಿಕೊಂಡು ಮೈಲು ದೂರ ನಡೆದು ನೋಡಿದ ಕಟೀಲು ಮೇಳದ ಆಟ, ಆಗ ಬರೇ ಟಿಕೆಟಿಲ್ಲದ ಧರ್ಮದ ಆಟ. ಆದರೆ, ಅದರ ಒಂದು ತುಣುಕಾದರೂ ಈಗ ಕಣ್ಣಿಗೆ ಕಾಣುವಹಾಗಿದ್ದರೇ ...? ಹೌದಲ್ಲ? ಈ ಅಸಂಭವನೀಯ ಸತ್ಯಗಳೇ ಭಾವನಾ ಸಂಘರ್ಷಕ್ಕೆ ಕಾರಣವಾಗುವುದು. ಧರ್ಮಸ್ಠಳ ಮೇಳದ ಅಂದಿನ ಆಟದಲ್ಲಿನ ಪುತ್ತೂರು ಹೆಗಡೆಯ ವೇಷ ಇಂದು ಅದಕ್ಕೆ ಮೌಲ್ಯವನ್ನು ನಿರ್ಧರಿಸುವುದು ಸಾಧ್ಯವೇ? ಈಗ ಬೇಕೆಂದರೂ ವಿಟ್ಲ ಜೋಷಿಯ ಮೂಕಾಸುರನನ್ನು ನೋಡಲು ಸಾಧ್ಯವೇ? ಶೇಣಿಯ ರಾವಣ, ಸಾಮಗರ ರಾಮ, ಕೇವಲ ಇತ್ತೀಚಿನ ಘಟನೆಗಳೇ ಈಗ ಅಪ್ರಸ್ತುತವಾಗಿ ಪರಿಣಮಿಸಿ ದಾಖಲೆಗಳೇ ಇಲ್ಲದೆ ಕೇವಲ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿವೆ. ಕೇವಲ ಕಲ್ಪನೆಯನ್ನೇ ವಿನಿಮಯ ಮಾಡಿಕೊಳ್ಳುವ ಅನಿವಾರ್ಯತೆ. ಕಾಲಗರ್ಭದ ಪುಟಳಲ್ಲಿ ತುಂಬಿರುವ ಕಲ್ಪನೆಯನ್ನು ತೋರಿಸುವುದಾದರೂ ಹೇಗೆ. ಹಾಗಾಗಿ ದಾಖಲೀಕರಣಗಳು ಭೌತಿಕ ಲೋಕದ ಪುಟಗಳಲ್ಲಿ ದಾಖಲಾದದ್ದು.
ಈ ದಾಖಲೀಕರಣಗಳ ಮೌಲ್ಯವನ್ನು ತುಲನೆ ಮಾಡುವುದು ಸರಿಯಲ್ಲ. ಇಂದು ಮೌಲ್ಯವನ್ನು ಕಾಣದೇ ಇದ್ದದ್ದು ಮುಂದೊಂದು ದಿನ ಮೌಲ್ಯವನ್ನು ನಿರ್ಧರಿಸಲಾಗದೇ ಇರುವಂತಹ ಸ್ಥಿತಿಗೆ ಬಂದು ಬಿಡುತ್ತದೆ. ಮೊದಲು ಹತ್ತಿಪ್ಪತ್ತು ರೂಪಾಯಿಗೆ ಸಿಗುತ್ತಿದ್ದ ಯಕ್ಷಗಾನ ಕ್ಯಾಸೆಟ್ . ಅಭಿರುಚಿಯಿದ್ದವನು ಯಾವ ಬೆಲೆ ಕೊಟ್ಟು ಕೊಂಡುಕೊಳ್ಳುತ್ತಾನೋ ಅವನಿಗೇ ಬಿಟ್ಟದ್ದು.
ಈ ದಾಖಲೆಗಳು ಯಾವ ರೀತಿ ಅನಿವಾರ್ಯವೋ ಅದು ಕೆಲವೊಮ್ಮೆ ಗಮನಾರ್ಹ ವಿಷಯವಾಗುತ್ತದೆ. ಕೇವಲ ಕಲಾವಿದನಿಗೆ ಸಂಬಂಧಿಸಿ ಅಥವಾ ಘ್ಹಟನೆಗೆ ಸಂಬಂಧಿಸಿ ಇಲ್ಲವೇ ಸಂಪೂರ್ಣ ಯಕ್ಷಗಾನವನ್ನೆ ಸಂಬಂಧಿಸಿ ದಾಖಲಾತಿ ಮಾಡಬಹುದು. ಅದರೆ ಕಲೆಯನ್ನು ಈಗಿರುವ ರೀತಿಯಷ್ಟಾದರೂ, ಅದೇ ರೂಪದಲ್ಲಿ ಉಳಿಸಿಕೊಂಡು ಹೋಗುವುದು ದಾಖಲೀಕರಣದಷ್ಟೇ ಮಹತ್ವವನ್ನು ಪಡೆದುಕೊಳ್ಳುತ್ತದೆ. ಯಾಕೆಂದರೆ ಮುಂದೊಂದುದಿನ ಕಲಾರೂಪವೆ ರೂಪಾಂತರಗೊಂಡು ಇನ್ನೇನೋ ಆಗುವ ಸಂಭವ ಇಲ್ಲದಿಲ್ಲ. ವಾಸ್ತವವನ್ನು ಚಿಂತಿಸುವಾಗ ದಿಗಿಲಾಗುವುದುಂಟು. ಮನುಷ್ಯನ ಜೀವನ ಕ್ರಮ ಹೇಗೆ ಬದಲಾಗಿಬಿಡುತ್ತದೋ ಹೇಳುವುದು ಕಷ್ಟ.. ಮುಂದೊಂದು ದಿನ " ದನ ಹೇಗೆ ಸೆಗಣಿ ಹಾಕುತ್ತಿತ್ತು" ಎಂಬುದನ್ನು ದಾಖಲೀಕರಣದ ಮೂಲಕ ಮಾತ್ರವೇ ತೋರಿಸುವಷ್ಟು ಬದಲಾವಣೆಯ ಕ್ರಾಂತಿ ಆಗುತ್ತಿದೆ. ಹಳೆಯ ಮುಕ್ಖಾಲು ಆಣೆಯ ನಾಣ್ಯ ಬೊಗಸೆ ತುಂಬ ಹಿಡಿದು ಕೊಟ್ಟರೂ ಅದಕ್ಕೆ ಬೆಲೆ ಇದ್ದೀತೆ? ಆದರೂ ಹಿಂದಿನ ಮೆಟ್ಟಲು ಮುಂದೇ ಹತ್ತುವುದಕ್ಕೆ ಸಹಾಯ.
ಯಕ್ಷಗಾನದಲ್ಲಿ ದಾಖಲೀಕರಣ ಹಲವು ಬಗೆಯಲ್ಲಿ ಹಲವು ಕಡೆ ನಿರಂತರವಾಗಿ ಆಗುತ್ತಾ ಇದೆ. ತಮ್ಮ ತುಲನೆಯಲ್ಲಿ ಯಾವುದು ಅಮೂಲ್ಯವೋ ಅದನ್ನು ಗೌರವಿಸಿ ಜೋಪಾನವಾಗಿಡುವ ಕಾಳಜಿ. ಕೆಲವೊಮ್ಮೆ ಈ ಜೋಪಾನವೇ ಸಂಗ್ರಹದ ಮೌಲ್ಯವನ್ನು ಹೆಚ್ಚಿಸಿಬಿಡುತ್ತದೋ ಎಂಬ ಅನುಮಾನ ಬರುತ್ತದೆ. ಎಂತಿದ್ದರೂ ಸಂಗ್ರಹ ಇದೆಯಲ್ಲ.? ಆ ತಿಳುವಳಿಕೆಯಿಂದ ಮಾತ್ರ ತೃಪ್ತರಾಗಬಹುದು. ಅಜ್ಜ ಬ್ರಹ್ಮ ಕರ್ಮದ ಪುಸ್ತಕವನ್ನು ಬಟ್ಟೆಯಲ್ಲಿ ಬಿಗಿದು ಸುತ್ತಿ ಜೋಪಾನವಾಗಿ ದೇವರಕೋಣೆಯಲ್ಲಿ ಇಟ್ಟು ಪೂಜೆ ಮಾಡಿದ ಹಾಗೆ. ಆ ಪುಸ್ತಕವನ್ನು ಬರಿದೇ ಸ್ಪರ್ಶಿಸುವುದಿದ್ದರೂ ಸ್ನಾನ ಮಾಡಿ ಮಡಿವಂತರಾಗಿ ಬರಬೇಕು. ಅಜ್ಜ ಕೊಡುವ ಮೌಲ್ಯ ಮಾತ್ರವಲ್ಲ ನಾವೂ ಗೌರವಿಸಬೇಕಾದ ಮೌಲ್ಯ. ವೆತ್ಯಾಸವೆಂದರೆ ಅಜ್ಜ ಓದಿ ಅರಗಿಸಿಕೊಂಡಿದ್ದರೆ ನಮಗೆ ಓದಿದರೂ ಅರ್ಥವಾಗದು.. ಹಾಗಾಗಿ ದೂರದಿಂದ ಭಯದಿಂದ ನೋಡುವುದಷ್ಟೇ, ಅದರೂ ಗೌರವ, ಅದು ಇದ್ದೇ ಇರಬೇಕು.
ಇತ್ತೀಚೆಗೆ ಲಭ್ಯ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ದಾಖಲೀಕರಣಕ್ಕಾಗಿ ಹಲವಾರು ಕಡೆ ಪ್ರಯತ್ನಗಳು ನಡೆಯುತ್ತಿವೆ. ಇದು ಒಂದು ಉತ್ತಮ ಲಕ್ಷಣ.ಆದರು ಹಲವು ದಾಖಲೀಕರಣಗಳು ಮೌಲ್ಯ ಇದ್ದರೂ ಮೌಲ್ಯಗಳಿಸುವುದಿಲ್ಲ. ನೋಡಿದಾಗ ಏನೊ ಕಳಕೊಂಡ ಹಾಗೆ ವಂಚಿತರಾದೇವೋ ಎಂಬ ಭಾವ ಪ್ರಚೋದನೆಗೆ ಒಳಗಾಗುತ್ತೇವೆ. ಇದು ನನ್ನ ಅನಿಸಿಕೆ. ಹಿರಿಯ ಕಲಾವಿದರನ್ನು ಕರೆದು ಅವರ ವೈಭವದ ದಿನಗಳನ್ನು ಮರುಕಳಿಸುವಂತೆ ಮಾಡುವುದು, ಸಾಧ್ಯವಾದಷ್ಟು ಈ ಭಾವನೆಯನ್ನು ಅವರಲ್ಲಿ ಆವಾಹನೆ ಮಾಡುವಷ್ಟರ ಮಟ್ಟಿಗೆ ಸಿದ್ದರಾಗ್ತೇವೆ. ಹೌದು ಕಲೆಯ ಮೇಲೆ ಕಲಾವಿದನ ಮೇಲೆ ಇಡುವ ಆ ಅಭಿಮಾನವೇ ಹಾಗೆ. ಅದು ಬೇರೆಲ್ಲ ಚಿಂತನೆಯನ್ನು ಮುಚ್ಚುವಂತೆ, ಮರೆಯುವಂತೆ ಮಾಡಿಬಿಡುತ್ತದೆ. ಒಬ್ಬ ಬಾಲ ಕಲಾವಿದ ಬಾಲ್ಯದಲ್ಲಿ ಅದ್ಭುತವಾಗಿ ನಿರ್ವಹಿಸುತ್ತಿದ್ದ ಪಾತ್ರಗಳನ್ನು, ಅದು ಲವ ಕುಶ ಆಗಿರಬಹುದು, ಅಭಿಮನ್ಯುವಿನ ವೇಷವಾಗಿರಬಹುದು, ಅದರ ನೈಜ ವೈಭವ ಬಾಲ್ಯದ ಉತ್ತುಂಗಾವಸ್ಥೆಯಲ್ಲೇ ಹೊರಹೊಮ್ಮುತ್ತದೆ. ಅದು ಪೂರ್ಣಪ್ರಮಾಣದಲ್ಲಿ ಪ್ರಕಾಶಿಸುವಾಗಲೇ ನಿಜವಾದ ವೈಭವ ಎಂದು ಹೇಳಬಹುದು. ವಿಜಯನಗರದ ಸ್ವರ್ಣ ಯುಗ ಎಂದು ನಾವು ಚರಿತ್ರೆಯಲ್ಲಿ ದಾಖಲಾಗಿದ್ದನ್ನು ಏನು ಓದುತ್ತಿದ್ದೇವೋ ಅದು ಕೇವಲ ಆ ಕಾಲಕ್ಕೆ ಅಂದರೆ ಶ್ರೀಕೃಷ್ಣ ದೇವರಾಯನ ಆಡಳಿತಕ್ಕೆ ಮಾತ್ರ ಸೀಮಿತ. ಅದರ ನಂತರ ಅದರ ವೈಭವದ ಸ್ಮರಣೆ ಮಾತ್ರ ಸಾಧ್ಯ. ಹಾಗೆ ಒಬ್ಬ ಕಲಾವಿದನ ವೈಭವ ಎಂಬುದು ಅವಧಿ ದಾಟಿದ ಮೇಲೆ ಆಚರಿಸಲ್ಪಟ್ಟರೆ ಒಂದು ರೀತಿಯ ಅಸೌಕರ್ಯ ಮನಸ್ಸಿಗೆ ತಂದು ಕೊಂಡ ಹಾಗೆ. ಸ್ವತಃ ಕಲಾವಿದ ಎಷ್ಟು ಸ್ಪೂರ್ತಿಗೊಂಡರೂ ಎಲ್ಲೋ ಒಂದು ಕಡೆ ಕೊರತೆಯ ಸೂಕ್ಷ್ಮವಾದ ಅನುಭವ ಮನಸ್ಸಿಗಾಗುತ್ತದೆ. ಹಲವು ಸಲ ಸ್ವತಃ ಕಲಾವಿದನ ಅಂತರಂಗದಲ್ಲಿ ವೇದನೆಯ ಸ್ಪರ್ಶವಾದರೂ ಅಚ್ಚರಿಯಿಲ್ಲ. ಪ್ರೇಕ್ಷಕ ಯಾವುದೋ ಸಮ್ಮೋಹನಕ್ಕೋ ಭಾವೋದ್ವಿಗಕ್ಕೋ ಒಳಗಾಗಿ ಸ್ವೀಕರಿಸಿದರೂ ಎಲ್ಲೋ ಒಂದು ಕಡೆ ಕಸಿವಿಸಿಯಂತೂ ಇದ್ದೇ ಇರುತ್ತದೆ.
ಒಬ್ಬ ಕಲಾವಿದನನ್ನು ಒತ್ತಾಯ ಪೂರ್ವಕವಾಗಿ ಕರೆದು ಹಾಡಿಸಿ ಅಥವಾ ಕುಣಿಸಿ ತೃಪ್ತರಾಗುವಾಗ ಸ್ವತಃ ಕಲಾವಿದನ ಮನಸ್ಸಿನಲ್ಲಿ ಏನಿರಬಹುದು? ಅಭಿಮಾನಕ್ಕೆ ಸರಿಯಾಗಿ ಸ್ಪಂದಿಸಿ ಅದಕ್ಕೆ ತಕ್ಕ ಹಾಗೆ ನೈಪುಣ್ಯವನ್ನು ತೋರಿಸುವುದಕ್ಕೆ ಆಗುತ್ತಿಲ್ಲವಲ್ಲಾ? ಈ ಭಾವನೆ ಯಾಕೆ ಬರಬಾರದು? ಆವಾಗ ಈ ಅಭಿಮಾನವೇ ಒಂದು ರೀತಿಯಲ್ಲಿ ನೋವನ್ನು ಕೊಟ್ಟಹಾಗೆ ಅನಿಸುದಿಲ್ಲವೇ? ಅದು ಹೇಗೂ ಇರಲಿ ದಾಖಲೀಕರಣದ ವಿಚಾರಕ್ಕೆ ಬಂದಾಗ ದಾಖಲಿಕರಣದ ಸಮಯ ನಿರ್ಧಾರ ಮಾತ್ರ ಬಹಳ ಪ್ರಾಮುಖ್ಯತೆಯನ್ನುಗಳಿಸುತ್ತದೆ.ಹಾಗಾಗಿ ಆ ರೀತಿಯಲ್ಲಿ ಯೋಚಿಸುವಾಗ ಪ್ರಸ್ತುತ ಉತ್ತುಂಗದ ನಿರ್ವಹಣೆಯನ್ನು ತೋರುವ ಕಲಾವಿದನ ವೈಭವದ ದಿನಗಳನ್ನು ದಾಖಲಿಸುವುದು ಅತ್ಯಂತ ಅರ್ಥಪೂರ್ಣ ಎನಿಸುತ್ತದೆ. ಹಿಂದೆ ಪಂಜಿನ ಬೆಳಕಲ್ಲಿ ಯಕ್ಷಗಾನ ನಡೆಯುತ್ತಿತ್ತು. ಹಿಂದಿನ ಕಾಲಕ್ಕೆ ಅದು ಅನಿವಾರ್ಯವಾಗಿತ್ತು. ಅದರೂ ಅದು ಈಗ ವೈಭವ ಎಂದು ಭಾವಿಸುವುದು ತಪ್ಪಲ್ಲ. ಕಷ್ಟ ಪಟ್ಟು ಆ ವಾತಾವರಣನ್ನು ಉಂಟು ಮಾಡಿ ಅದನ್ನು ಮರು ಸೃಷ್ಟಿಸಿ ದಾಖಲಿಸುವ ಉತ್ಸಾಹ ಮೆಚ್ಚತಕ್ಕದ್ದೇ ಮಾತ್ರವಲ್ಲ ವಾಸ್ತವದಲ್ಲಿ ಅದು ಅನಿವಾರ್ಯವೆನಿಸುತ್ತದೆ. ಆದರೂ ಅದು ಒಂದು ಕೃತಕ ಸೃಷ್ಟಿ ಎಂಬ ಅನಿಸಿಕೆ ಬಾರದೆ ಇರಬಹುದೇ? ಏನೋ ಸದ್ಯಕ್ಕೆ ಇಷ್ಟು ಮಾತ್ರ ಸಾಧ್ಯ ಎಂದು ತೃಪ್ತಿ ಪಟ್ಟುಕೊಳ್ಳಬಹುದು. ಆದರೂ ರಂಗದ ಮೇಲಿನ ವೈಭವ ಕಾಲ ಸಂದ ಮೇಲೆ ದಾಖಲಿಸುವುದು ಕಾಲ ಸರಿದಂತೆ ಅದು ಅದೇ ಭಾವನೆಯನ್ನು ಹೊಂದಿರುತ್ತದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಕೇವಲ ದಾಖಲೆ ಮಾತ್ರವೇ ಉಳಿದಿರುತ್ತದೆ. ಯಾಕೆಂದರೆ ಕಣ್ಣಾರೆ ಪ್ರತ್ಯಕ್ಷ ಕಂಡವನ ಸಾಕ್ಷ್ಯ ಅನುಭವ ಅಲ್ಲಿ ಇರುವುದಿಲ್ಲ.
ಪ್ರಸ್ತುತ ಉತ್ತುಂಗದಲ್ಲಿ ವೈಭವೀಕರಿಸುವ ಕಲಾವಿದರು ಹಲವರಿದ್ದಾರೆ. ಆದರೆ ಅವರ ಉತ್ತುಂಗದ ಈ ಹಂತವನ್ನು ಪರಮ ಉಚ್ಚ್ರಾಯ ಸ್ಥಿತಿ ಎಂದು ನಿರ್ಣಯಿಸುವುದು ತಪ್ಪಾಗುತ್ತದೆ. ಇದಕ್ಕಿಂತ ಅತ್ಯುತ್ತಮ ನಿರ್ವಹಣೆ ಮುಂದೆ ಇರಬಹುದು ಎಂಬ ಆಶಾಭಾವನ್ನು ಹೊಂದಿರಬೇಕು. ಯಾಕೆಂದರೆ ಸಮಯವನ್ನು ಊಹಿಸುವುದು ಸರಿಯಾಗುತ್ತದೆ ಹೊರತು ನಿರ್ಣಯಿಸುವುದಲ್ಲ. ಸರ್ವಾಲಂಕಾರ ಸಂಪನ್ನಗೊಂಡ ಮೇಲೆ ಮಹಾ ಪೂಜೆ. ನಂತರ ಏನಿದ್ದರೂ ದೇವರ ದರ್ಶನ ಮಾತ್ರ. ಸಮಯಾನುಸಾರ ಅದು ಎಷ್ಟು ಹೊತ್ತು ಬೇಕಾದರೂ ಇರಬಹುದು. ಆಗ ದಾಖಲೆಯ ಪುಟಗಳನ್ನು ಹೆಚ್ಚಿಸುತ್ತಾ ಹೋಗಬಹುದು. ಆದರೆ ಮುಹೂರ್ತ ಮೀರಿದ ಮೇಲೆ ಅನಿವಾರ್ಯತೆಯ ಕಂಕಣ ಬಲವನ್ನು ಅರಸುವುದು ಅನಿವಾರ್ಯ ಎನಿಸಿದರೂ ಅದು ಅಷ್ಟು ಸೂಕ್ತವಲ್ಲ.
ಹಲವು ವೈಭವಗಳ ಮರುಸೃಷ್ಟಿಯನ್ನು ಕಂಡಿದ್ದೇವೆ. ಈ ವೈಭವದ ದಾಖಲೆಗಳು ಕೇವಲ ಮುಮ್ಮೇಳ ಅಂದರೆ ವೇಷಧಾರಿಯನ್ನು ಅವಲಂಬಿಸಿ ಇರುವುದು ಚೋದ್ಯದ ಸಂಗತಿ. ಬಹುಷಃ ಈ ವೈಭವ ಎನ್ನುವುದು ಕಣ್ಣಿಗೆ ಕಾಣುವುದಕ್ಕೆ ಮಾತ್ರವೇ ಇರುವುದೋ ಎಂಬ ಭ್ರಮೆ. ಆದರೂ ಬಹಳಷ್ಟು ಸಮಯ ಮೀರಿ ಅವಧಿ ಭಾಧಕವಾದವುಗಳೇ. ನಮ್ಮ ಮನೋಭಾವನೆಗೆ ಅನುಸರಿಸಿ ಇದರಿಂದ ನಾವು ತೃಪ್ತರಾಗಬಹುದು. ಹೆಮ್ಮೆ ಪಟ್ಟುಕೊಳ್ಳಬಹುದು. ಆದರೂ ಅತೃಪ್ತಿಯ ಛಾಯೆ ಸುಳಿಯದೆ ಇರಲು ಸಾಧ್ಯವೇ ಇಲ್ಲ.

