ತಾಳ ಮದ್ದಲೆಯ ಅರ್ಥಗಾರಿಕೆಯನ್ನು ಸವಿಯಬೇಕಾದರೆ
ಬಹಳಷ್ಟು ತಾಳ್ಮೆ ಬೇಕು. ಸಹನೆಯಿಂದ ಇದರ ಆಸ್ವಾದನೆಗೆ ತೊಡಗಿದರೆ ತೊಡಗುವುದಷ್ಟೆ ನಮ್ಮ ಕೆಲಸ ಮತ್ತೆ
ಅದು ಸೆಳೆಯುತ್ತಾ ಹೋಗುತ್ತದೆ. ಈ ಮಾತು ಬಹುಶಃ ಈ ಲೇಖನಕ್ಕೂ ಅನ್ವಯಿಸಬೇಕಾಗುತ್ತದೆ ಏನೋ? ಇದನ್ನು
ಓದಬೇಕಾದರೂ ಬಹಳಷ್ಟು ತಾಳ್ಮೆ ಅತ್ಯವಶ್ಯ. ರಾವಣನ
ಹತ್ತು ಮುಖ ದರ್ಶನವಾದ ಹಾಗೆ. ರಾವಣನ ಅಂತರಂಗದ ಮುಖವೂ ಇದರೊಂದಿಗೆ ಸೇರಿಸಬಹುದೇನೋ ಎಂಬ ಸಂದೇಹ ನನಗೆ
ಮೂಡುತ್ತದೆ. ಈ ಭಾಗ ಬರೆಯುತ್ತ ಬರೆಯುತ್ತಾ ಬಹಳ ದೀರ್ಘವಾಗಿ ಲಂಬಿಸಿತು. ಶೇಣಿ ರಾವಣದ ವಾಕ್ ಪ್ರವಾಹವೇ ಹಾಗೆ. ಹರಿಯುವ ನದಿಗೆ ಅಲ್ಲಲ್ಲಿ
ಒಡ್ಡನ್ನು ಕಟ್ಟಿ ಅಲ್ಪ ಸ್ವಲ್ಪ ತಡೇ ಒಡ್ಡಬಹುದೇನೋ. ಆದರೆ ಈ ವಾಕ್ ಪ್ರವಾಹಕ್ಕೆ ಈ ಲೇಖನದಲ್ಲಿ ಎಲ್ಲಿ
ವಿಶ್ರಾಂತಿಯನ್ನು ಕೊಡಬೇಕೋ ತಿಳಿಯದಾಯಿತು. ಮೋಡ ಕರ್ರಗಾಗಿ ಸುರಿದ ಮಳೆ
ಮಧ್ಯೆ ರಭಸ ಕಡಿಮೆಯಾದರೂ ಮುಗಿಲು ಕರಗಿ ಬೆಳ್ಳಗಾಗದೆ ಮಳೆ ನಿಲ್ಲುವುದಿಲ್ಲ. ಹಾಗೇ ಈ ವಾಗ್ವರ್ಷಿಣಿ
ಹೇಳುವುದು ಸೂಕ್ತ ಅನ್ನಿಸುತ್ತದೆ. ಅದು ಕೂಡ ತಾಳ ಮದ್ದಲೆ ಮಂಗಲ ಹಾಡಿದರೆ ಮಾತ್ರವೇ ನಿಲ್ಲುತ್ತದೆ.
ಸಹನೆಯಿಂದ ಬರೀ ನೀರನ್ನು ಕುಡಿದರೂ ಹಸಿವು ನೀಗುತ್ತದೆ. ಹಾಗೆ ಸಹನೆಯಿಂದ ಇದರ ಆಸ್ವಾದನೆಗೆ ತೊಡಗಿದರೆ
ಮನಸ್ಸಿನ ಹಲವು ಬಗೆಯ ತೃಷೆಯನ್ನು ನೀಗಿಸಬಹುದು.
ಪತಿಯಾದ ರಾವಣನಲ್ಲಿ ಪರಿ ಪರಿಯಾಗಿ ಬೇಡುವ ಮಂಡೊದರಿ,
ತನ್ನ ಪ್ರೀತಿಯಿಂದ ರಾವಣನನ್ನು ಸೆಳೆಯುವ ಯತ್ನ ಮಾಡುತ್ತಾಳೆ. ತಾಯಿಯ ಪ್ರೀತಿಯ ಸೆಳೆತವನ್ನು ಕಳಚಿದಂತೆ
ರಾವಣ ತನ್ನ ಛಲದಿಂದಲೇ ಮಂಡೋದರೆ ಪ್ರೀತಿಯ ಸೆಳೆತದಿಂದ ಹೊರಗೆ ಬರುತ್ತಾನೆ. ಬಾರದೆ ರಾವಣನಿಗೆ ವಿಧಿಯಿಲ್ಲ.
ಅನಿವಾರ್ಯತೆಯ ಬಂಧನ ಬಿಗಿಯಾಗುತ್ತ ಹೋಗುತ್ತದೆ. ಆ ಬಂಧನವಾದರೂ ಏನು? ಅದುವೇ ರಾವಣನ ಅಂತರಂಗ. ದೇವರ ಕೋಣೆಯ ನೆಲ ಗೋಮಯದ ಕಪ್ಪಿನಿಂದ
ಕರ್ರಗಾದಂತೆ ರಾವಣನ ವ್ಯಕ್ತಿತ್ವ ಕರ್ರಗಾಗಿ ಗೋಚರವಾಗುತ್ತದೆ. ಕಪ್ಪಾದ ನೆಲದ ಮೇಲೆ ಬಿಡಿಸಿದ ಪೂಜಾ
ಮಂಡಲದಂತೆ ರಾಮನ ವ್ಯಕ್ತಿತ್ವ ರಾವಣ ಸಂಘರ್ಷದಲ್ಲಿ ಇನ್ನೂ ಪ್ರಭಾವಶಾಲಿಯಾಗುತ್ತದೆ.
ಒಂದು ಹಂತದಲ್ಲಿ ಮಂಡೋದರಿಯಲ್ಲಿ ರಾವಣ ಹೇಳುತ್ತಾನೆ, “ರಾಮನಿಗೆ
ಶರಣಾಗಬೇಕಾದದ್ದು ನಾನಲ್ಲ ನೀನು” ಎಷ್ಟು ಮಾರ್ಮಿಕವಾದ
ಮಾತು ಇದು. ಇವನ ಕಪ್ಪಾದ ವ್ಯಕ್ತಿತ್ವ ದೇವರ ಕೋಣೆಯ ನೆಲದಂತೆ ರಾಮನೊಡನೆಯ ಸಂಘರ್ಷದಿಂದ ಮತ್ತೂ ಪವಿತ್ರವಾಗುತ್ತದೆ.
ಕೊಣೆಯ ನೆಲ ಕಂಡಕೂಡಲೇ, ಪವಿತ್ರ ಪಾಣಿಯಾಗಿ, ಶುದ್ದೀಕೃತಗೊಂಡು
ಪೂಜೆಗೆ ಅಣಿಯಾಗುವ ಮನಸ್ಸಾಗುತ್ತದೆ. ಹಾಗಾಗಿ ಮಂಡೋದರಿಗೆ ಹೇಳುವುದು ಈ ಬದು ಕು ರಾಮನೊಡನೆ ಐಕ್ಯವಾಗುತ್ತದೆ.
ನೀನು ಶರಣಾಗು ಎಂದು. ರಾವಣನ ವ್ಯಕ್ತಿತ್ವದ ದಶ ಮುಖಗಳಂತೆ , ರಾವಣನ ಕೃತ್ಯಗಳೂ ಹಲವಾರು ಅರ್ಥವನ್ನು
ಕಂಡುಕೊಳ್ಳುತ್ತದೆ. ಇಡೀ ಲಂಕೆಯನ್ನು ರಾಮನ ಪದತಲದಲ್ಲಿ ಮಡುಗಿದ ಕ್ರಮವೇ ಇದನ್ನು ಹೇಳುತ್ತದೆ. ಇದರ
ಸೂಚನೆ ಮೊದಲೇ ಅತಿಕಾಯನ ಬಾಯಿಯಿಂದ ಬರುತ್ತದೆ. “ ಬನ್ನಿರೈ ಸಂಸಾರ ಶರಧಿಯನು ದಾಟುವರು” ಅದನ್ನವಲಂಬಿಸಿಯೇ
ರಾವಣ ಹೇಳುತ್ತಾನೆ “ ರಾಮನಿಗೆ ಶರಣಾಗು”
“ಹರಪಿತಾಮಹ ಸುರಪ ಮುಖ್ಯರ ಧುರಕೆ ಮಣಿಯುವನಲ್ಲ ದಶಶಿರ ”
ಪತಿವೃತಾ ಮಂಡೋದರಿಯ ಪ್ರೀತಿಗೆ ಒಲಿದು ರಾವಣ
ಹೇಳುತ್ತಾನೆ. ನೀನು ಏನು ಬೇಕಾದರೂ ಕೇಳು ಆದರೆ ರಾಮನಿಗೆ ಶರಣಾಗತಿ.. ರಾಮನಲ್ಲಿ ಪ್ರೇಮ..ಅದು
ರಾವಣನಿಗೆ ಸಾಧ್ಯವೇ ಇಲ್ಲದ ಮಾತು. ಪ್ರೀತಿಯ ಮಡದಿ ಏನು ಬೇಕಾದರೂ ಕೇಳಲಿ ಅದನ್ನು ಸಾಧಿಸಿ ಕೊಡುವ ಗಂಡ ಆ ಪ್ರೀತಿಗೆ
ಸಾರ್ಥಕತೆಯನ್ನು ಒದಗಿಸುತ್ತಾನೆ. ಅರ್ಥಾತ್ ಹೆಂಡತಿ ಪ್ರೀತಿ ಸರ್ವಸ್ವವಾಗಿ ಕಾಣುತ್ತದೆ. ಆದರೆ
ರಾವಣ ಅಂತಹಾ ಪ್ರೀತಿಯ ಬೇಡಿಕೆಯನ್ನೇ ತಳ್ಳಿಹಾಕುತ್ತಾನೆ. ಅದು ಹೆಂಡತಿಯಲ್ಲಿ ಪ್ರೀತಿಯಿಲ್ಲದೆ
ಅಲ್ಲ. ಆ ಹೆಂಡತಿಯ ಯೋಗ್ಯತೆ ಅರಿಯದೇನಲ್ಲ. ಆದರೂ ಯಾಕೆ? ಅದು ರಾವಣನಲ್ಲಿ ಜನ್ಮತಃ ಅಡಗಿದ ರಾಮ
ದ್ವೇಷ. ವಿಚಿತ್ರವಲ್ಲವೇ? ಏನನ್ನಾದರೂ ಒದಗಿಸಿಯೇನು ಆದರೆ ರಾಮನಿಗೆ ಶರಣಾಗತನಾಗುವುದು ಅದು
ಸಾಧ್ಯವಿಲ್ಲದ ಮಾತು. ಯಾಕೆ ಮುಂದೆ ಪ್ರತಿ ಹಂತದಲ್ಲು ರಾಮನ ಮೇಲಿನ ದ್ವೇಷ ವ್ಯಕ್ತವಾಗುತ್ತದೆ.
“ಅದು ಅಗದ ಮಾತು. ಸೃಷ್ಟಿಕರ್ತನಾದ
ಬ್ರಹ್ಮನಿಗಾದರೂ ಬಾಗದ ತಲೆ ಇದು. ಹಟಯೋಗದಿಂದ ಬ್ರಹ್ಮನ ತಲೆಯನ್ನು ನನ್ನ ಪ್ರಯೋಜನಕ್ಕಾಗಿ
ವಿನಿಯೋಗಿಸಿಕೊಂಡವನು ನಾನು. ಬ್ರಹ್ಮನಲ್ಲಿ ಕೇಳಿದ್ದೇನೆ..ಏನೂಂತ ಕೇಳಿದ್ದೇನೆ.?
ಕತ್ತರಿಸಲ್ಪಟ್ಟ ತಲೆ ಚಿಗುರಬೇಕು. ತಥಾಸ್ತು ಅಂದಿದ್ದ.
ಆವಾಗ ನಗಾಡಿಕೊಂಡು ಹೇಳಿದೆ ಜೀವಗಳ್ಳನಾಗಿ ಕೇಳ್ತೇನೆ ಅಂತ ತಿಳಿಯಬೇಡ ಬ್ರಹ್ಮ ದೇವರೇ
ಮರಣವನ್ನು ಬಯಸ್ತೇನೆ. ಯಾರಿಂದ ಪರದೇಶದವರಿಂದ
ಅಲ್ಲ. ಅದು ನನಗೆ ಅಪಮಾನ. ಆದುದರಿಂದ ದೇವತೆಗಳೋ ಯಕ್ಷರೋ ಗಂಧರ್ವರೋ ಅವರಿಗೆ ನನ್ನ ಕೂದಲು
ಕೊಂಕಿಸುವ ಸಾಮಾರ್ಥ್ಯ ಇರಕೂಡದು. ಅವರನ್ನು ಎಲ್ಲಾ ನಾನು ಮರ್ದನ ಮಾಡಬೇಕು. ನಾನು ಮಣ್ಣಿನ ಮಗ.
ಅಂದರೆ ಏನು? ಮೃತ್ಯು ಇದ್ದವ.ಮರ್ತ್ಯ. ಆದಕಾರಣ ಈ ಮರ್ತ್ಯ ಲೋಕದಲ್ಲಿ ನೂರಕ್ಕೆ ನೂರು
ಮನುಷ್ಯನಾದವನ್ನು ಗೌರವಿಸುತ್ತೇನೆ. ತೊಂಭತೊಂಭತ್ತು ಆದರೆ ನನಗೆ ಲೆಕ್ಕವಿಲ್ಲ. ಆದ್ದರಿಂದ
ಮಾನುಷಾಧನೈಹಿ ಅವಧ್ಯತ್ವಂ ಮಾನುಷಾತ್ ಅನ್ಯಹಿ ಅವಧ್ಯತ್ವಂ, ತಥಾಸ್ತು. ಹಾಗಾದರೆ ಮರಣಕ್ಕೆ ಹೆದರಿದವನೋ ನಾನು. ಅಲ್ಲ, ಮರಣದಲ್ಲೂ
ನನಗೊಂದು ಗೌರವ ಬೇಕು. ಯಾರು? ನಾನು ಬದುಕಿದ
ಊರಿನಲ್ಲಿ ಬದುಕಿ. ಈ ನೀರು , ಈ ಗಾಳಿ, ಈ
ಹಣ್ಣು, ಈ ಅನ್ನ, ಇದರಿಂದ ಕೂಡಿದವ ಅವನಿಂದ ನಾನು
ಸತ್ತೇನು, ಪರಕೀಯರಿಂದ ಒಂದು ಪೆಟ್ಟು ತಿಂದರೆ ಅವರ ಕುಟುಂಬಕ್ಕೆ ಹತ್ತು ಪೆಟ್ಟು ಕೊಟ್ಟಲ್ಲದೆ
ನಾನು ವಿಶ್ರಮಿಸುವುದಿಲ್ಲ. ಅಂತಹ ಸ್ವಾಭಿಮಾನಿ. ಪಿತಾಮಹನಿಗೇ ಅಗ್ಗದ ಬಗ್ಗದ ಸಗ್ಗದ
ಔರ್ಧತ್ಯವನ್ನು ಪ್ರಕಟಿಸಿದವನು. ಆಮೇಲೆ ಏನು? ಶಿವಶಕ್ತಿ....ಆಮೇಲೆ ಮತೀಯ ಭಾವನೆ ಅಂತ
ಹೇಳಿಯಾರು..ಆದರೆ ಬೇರೆ ಯಾವದೇವರಿಗೆ ಉಂಟು? ಕೆಲವರು ಹೇಳ್ತಾರೆ ವಿಷ್ಣು ದೊಡ್ಡವ.. ಇರಬಹುದು
ಆದರೆ ಅವನ ಮಗ? ಮುಖ ನೋಡಿದ್ರೆ ಸಜ್ಜಲ ಗಂಗಾಸ್ನಾನ ಮಾಡಬೇಕು. ಮತ್ತೆ ಲಕ್ಷ್ಮಿ
ಭಾಗ್ಯದೇವತೆ...ಆದರೆ ಶಿವನನ್ನು ನೋಡು, ಶಿವ
ಅನುಗ್ರಹಕಾರಕ, ಜಗದಂಬಿಕೆ ಪಾರ್ವತೀ ದೇವಿ ಸ್ವತಃ
ಅನುಗ್ರಕಾರಕಳು. ಗಣಪತಿ ನಿರ್ವಿಘ್ನಕಾರಕ...ವೈದಿಕರು ಪಂಚಾಯತದ ಪೂಜೆ ಅಂತ ಮಾಡುವುದುಂಟು. ಸೂರ್ಯ
ಗಣಪತ್ಯಂಬಿಕಾ ಶಿವ ವಿಷ್ಣುಭ್ಯೋ ನಮಃ. ನಮ್ಮ ಅಪ್ಪ ಹೇಳಿಕೊಟ್ಟ ಮಂತ್ರ ಅದು. ಇದರಲ್ಲಿ ಸೂರ್ಯ
ಬಿಡು , ವಿಷ್ಣು ಬಿಡು ಮತ್ತೆ ಉಳಿದ ಮೂರು ಜನವೂ ಇರುವುದು ಒಂದೇ ಊರಿನಲ್ಲಿರುವುದು ಕೈಲಾಸದಲ್ಲಿ.
ಇಂತಹ ಕೈಲಾಸವನ್ನು ನಾನು ಎತ್ತಿರುವುದು. ನನಗೊಂದು ಹಟಬಂತು ಲಂಕೇಶ್ವರೋವ ಲೋಕೆಶ್ವರೋವ.. ಎತ್ತಿದೆ, ಕೆಲವರು ಹೇಳ್ತಾರೆ ಕೈಲಾಸದ ಅಡಿಯಲ್ಲಿ
ಬಿದ್ದ. ಬುದ್ಧಿ ಉಂಟೋ ಈ ಜನಕ್ಕೆ. ಹೊರುವವನು ಆಡಿಯಲ್ಲಿ ಅಲ್ಲದೇ ಮೇಲೆ ಇರುವುದಕ್ಕಾಗುತ್ತದೆಯೆ?
ಮೇಲೆ ನಿಂತರೆ ಆಧರಿಸಿ ನಿಂತಹಾಗೆ ಆಗ್ತದೆ. ಕೈಲಾಸದ ಅಡಿಯಲ್ಲಿ ಹೌದು ಬಿದ್ದದ್ದೂ ಹೌದು
...ಅದಲ್ಲ ಯೋಚಿಸಬೇಕಾದದ್ದು. ಕೈಲಾಸದ ಅಡಿಯಲ್ಲಿ ಅಂದರೆ ಇಡೀ ಶರೀರ ಅದರ ಅಡಿಯಲ್ಲಿ ಅಂತ ಅರ್ಥ.
ಒಂದು ಚೂರು ಚರ್ಮ ಹರಿದದ್ದಾಗಲೀ ಎಲುಬು ಹುಡಿಯಾದದ್ದಾಗಲೀ ಇದ್ರೆ ಮತ್ತೆ ಹೇಳು. ನೋಡುವ ನನ್ನ
ಬದಲಿಗೆ ಬೇರೊಬ್ಬ ಮೂಲೆಯಲ್ಲಿ ಹೆಗಲು ಕೊಡಲಿ. ಅಂಥವನು ಇವನು. ಶರೀರವನ್ನು ಉಳಿಸಿಕೊಂಡವ. ಇಡೀ
ಕೈಲಾಸದ ಭಾರ ಎಷ್ಟು ಅಂತ ನನಗೆ ಗೊತ್ತಾಗ್ಯದೆ. ಎಷ್ಟು? ನಾನು ಹೊರುವಷ್ಟು. ಕೈಲಾಸವನ್ನು ನನ್ನ
ಎಲ್ಲಾ ಕೈಗಳಿಂದ ತೂಕ ಮಾಡಿದವನು. ಎಷ್ಟು ಭಾರ ಅಂತ ನನಗೆ ಗೊತ್ತಾಗ್ಯದೆ. ಆವಾಗ ಕೆಲವರು
ಹೇಳ್ತಾರೆ ರಾವಣ ಕೂಗಿದ್ದ ಅಂತ. ಈ ವರದಿಗಾರರು ಕೈಲಾಸಕ್ಕೆ ಬಂದಿದ್ದಾರ? ಕೈಲಾಸಕ್ಕೆ ಹೋಗಿದ್ದರೆ
ಬರ್ತಾರಾ? ಹಾಗಾದರೆ, “ಕೈಲಾಸದಡಿಯಲ್ಲಿ ಕೂಗಿದ.”
ಹಾಗೋ ಶಿವದೇವರು ನನಗೆ ಹೆಸರು ಕೊಟ್ಟದ್ದು ರಾವಣ ಅಂತ. ರೌತೀತಿ ರವಣಃ ಸ ಏವ ರಾವಣಾಃ ಅಂತ
ವ್ಯಾಕರಣ ಸೂತ್ರಕ್ಕೆ ಅರ್ಥ ಮಾಡ್ಲಿಕ್ಕೆ ಹೊರಟರು. ಕೈಲಾಸದ ರಾವಣತ್ವಕ್ಕೆ ಅರ್ಥ ಎಂತದ್ದು
ಗೊತ್ತೋ? ರಾವಣೋ ಲೋಕ ರಾವಣಃ ಕೂಗುವವನು ರಾವಣ
ಅಲ್ಲ. ಈ ಪ್ರತಿಯೊಂದಕ್ಕೂ ಅಳುವವರಾದರೆ
ಊರಿನಲ್ಲಿ ರಾವಣರೇ ಇರುವುದು. ಬೇರೆ ಯಾರು ಇಲ್ಲ ಅಂತ ಹೇಳ್ಬೇಕಾದೀತು. ಹಾಗಾಗಿ ಲೋಕವನ್ನೆ ಗೋಳಾಡಿಸುವವ, ಇಷ್ಟು ಮಾತ್ರ ಅಲ್ಲ.
ಆ ಕಾಲಕ್ಕೆ ಉತ್ಸಾಹದಿಂದ ಸಾಮಗಾನವನ್ನು ಹಾಡಿದವನು. ನೀನು ಆಲೋಚನೆ ಮಾಡು ಮೈಗೆ ಇಷ್ಟು
ಭಾರಬಿದ್ರೆ ಶ್ರುತಿ ಭದ್ದವಾಗಿ ಹಾಡುವ ಒಬ್ಬ ಸಂಗೀತಗಾರ ಇದ್ದಾನೋ ಹೇಳು. ತಲೆ ಭಾರ ಆದ್ರೆ ಕೆಲಸ
ಮಾಡೋದಿಲ್ಲ. ಹಾಗಾದ್ರೆ ಮೈಭಾರವಾಗಿದ್ದರೂ ಶಿವ ಮೆಚ್ಚುವಂತ ಸಾಮವೇದವನ್ನು ಹಾಡಿದವನು. ಅದಕ್ಕೆ
ಮೆಚ್ಚಿದ ಶಿವ ಅವನು ನಟರಾಜ, ಸಂಗೀತ ಲೋಲ, ಆದರೆ ಅವನದ್ದು ಸಂಗೀತ ಸ್ವಲ್ಪ ಕೈಲಾಸದ ಮಣ್ಣಿನ
ವಾಸನೆ ಉಳ್ಳದ್ದು. ಆದಕಾರಣ ಅದು ಶುದ್ದ ದೇವಗಾನ ಗಂಧರ್ವಗಾನವಲ್ಲ ಅದು. ಆದುದರಿಂದಲೇ ಶಿವನ
ನಾಟ್ಯ. ಅದು ಲಲಿತವಾದಂತಹ ನರ್ತನ ಅಲ್ಲ. ಸ್ವಲ್ಪ ಲಾಸ್ಯ ಅದಕ್ಕೆ ವಾದ್ಯವೂ ಹಾಗೆ
ಘನಗಂಭೀರವಾದದ್ದು. ದೇವಲೋಕದಲ್ಲಿ ಅಭಿನಯಿಸುವಂತಹುದಲ್ಲ. ಕೈಲಾಸದ ಬಟಾಬಯಲಿನಲ್ಲಿ. ಆ ಶಿವ
ಪಾರ್ವತಿ ನಲಿಬೇಕು ಆ ನಂದಿ ಏಡಗೈಯಲ್ಲಿ ಮೃದಂಗ ಬಾರಿಸಬೇಕು. ನಂದಿಯ ಮೃದಂಗ, ಶಿವಗಣಗಳೆಲ್ಲ
ವಿವಿಧ ವೇಶತೊಟ್ಟು ಕುಣೀತಾ ಇದ್ರೆ ಶಿವ ಪಾರ್ವತಿ ಮಧ್ಯದಲ್ಲಿ ನಲೀತಾ ಇದ್ರೆ ಒಂದೆರಡು ದಿವಸವಲ್ಲ
ನೂರು ನೂರು ವರ್ಷ ಇದಕ್ಕೆ ಹಿನ್ನೆಲೆ ಸಂಗೀತವನ್ನು ಒದಗಿಸಿದವನು ರಾವಣ. ಅದಕ್ಕೆ ಮೆಚ್ಚಿ ಶಿವ,
ಇಕೋ ತೆಕ್ಕೋ ಮಗನೇ ಚಂದ್ರ ಹಾಸವೆಂಬ ಖಡ್ಬ, ಎಂತಹ ಖಡ್ಗ ಅದು? ಶಿವನ ಪಾಶುಪತ ಶಕ್ತಿ. ಇಂತಹ ನನಗೆ ಶಿವನು
ಕೊಟ್ಟಿದ್ದಾನೆ ಎಂಬುದು ಪ್ರಪಂಚದಲ್ಲಿ
ಹೆಡ್ಡನೂ ಕಂಡಂತಹ ಸತ್ಯ. ಇಂತಹ ಶಕ್ತಿಯನ್ನು ಕೂಗಿ ತೆಕ್ಕೊಂಡು
ಬಂದಿದ್ದಾನೆ..., ಹೌದೇನೆ ಯಾರಾದರೂ ಕೂಗುವ ಮಕ್ಕಳಿಗೆ ಕತ್ತಿ ಕೊಡ್ತಾರೋ? ಒಂದಿಷ್ಟು ಬಾಳೇಹಣ್ಣೋ
ಹಾಲೋ ಕೊಟ್ಟು ಕಳುಹಿಸುದು. ಕೂಗಬೇಡ ಮಗನೆ ಅಂತ. ಆವಾಗ ಶಿವ ಹೇಳಿರುವುದು ರಾವಣೋ ಲೋಕ ರಾವಣಃ. ಹೀಗೆ ಹರ
ಪಿತಾಮಹ...ಆ ಮೇಲಿನ ಕಥೆ ಗೊತ್ತುಂಟಲ್ಲ..ದೇವೆಂದ್ರನನ್ನು ಹೊಡೆದು, ಮದ ಬಂದ ಐರಾವತ ಹಾಯಿಲಿಕ್ಕೆ
ಬರುವಾಗ ಎದೆಯೊಡ್ಡಿ ನಿಂತು ನೋಡಿದ್ದಿಯಲ್ಲ ಎದೆಯ ಗಾಯ. ಐರಾವತ ಹಾದದ್ದು? ಸಣ್ಣ ಗಾಯ
ಎದೆಭಾಗಕ್ಕೆ ಆದ್ರೆ ಮನುಷ್ಯ ಬದುಕುವುದಿಲ್ಲ ಇದು ಐರಾವತದ ಅ ಕ್ರೂರ ದಾಡೆಯ ಗಾಯವನ್ನು
ಸಹಿಸಿಕೊಂಡೂ ಇವತ್ತಿಗೂ ಅದನ್ನು ಬಹುಮಾನದ ದ್ಯೋತಕವಾಗಿ ನಿನಗೆ ಮಾತ್ರ ಪ್ರದರ್ಶಿಸುವ ಈ ಗಂಡ ಎನೂ
ರಾಮನ ಕಾಲು ಹಿಡಿದು ಬದುಕಬೇಕೆನೆ? ನನ್ನ ಮಕ್ಕಳ ತಾಯಿ ನೀನು ಹೇಳಿಬಿಟ್ಟೆಯಲ್ಲ?. ಅದಾಗದು
ಅದಾಗದು ನೀನು ಹೋಗು. ಸತ್ರೆ ಸತ್ತೇನು ಬದುಕಿದ್ರೆ ಬದುಕಿಯೇನು. ಓ ನನ್ನ ಹೃದಯೇಶ್ವರಿ, ನನ್ನ ಎಲ್ಲ ಕಾರ್ಯಗಳಿಗೆ ಸೂಕ್ತ
ಚಿಶ್ಯಕ್ತಿಯಾಗಿ ಪ್ರವರ್ತಿಸಿದ ನನ್ನ
ಹೃದಯೇಶ್ವರೀ ನಿನಗೇನು ಬೇಕು ಕೇಳು.”
ರಾವಣನಿಗೆ ಒಂದೆರಡು ಹಿತವಚನಗಳನ್ನು ಆಡಿ
ರಾಮನಲ್ಲಿ ಶರಣಾಗತಿಯನ್ನು ಕಾಣುವಂತೆ ಹೇಳಲು ಬಂದ ಮಂಡೋದರಿಯ ಯಾವ ಮಾತಿಗೂ ರಾವಣ ಆಸ್ಪದ
ಕೊಡುವುದಿಲ್ಲ. ರಾಮನಲ್ಲಿ ಶರಣಾಗತಿ ಅದೊಂದನ್ನು ಬಿಟ್ಟು ನಿನಗೇನು ಬೇಕು ಎಂದು ಕೇಳುತ್ತಾನೆ.
ಇಷ್ಟೆಲ್ಲಾ ನಾಶವವಾದರೂ ರಾಮನಲ್ಲಿ ಶರಣಾಗದ ರಾವಣನ ಛಲ ಕಂಡು ಮಂಡೋದರಿ ಅಧೀರಳಾಗಿ ಬಿಡುತ್ತಾಳೆ.
ಬೇಡಿಕೊಳ್ಳುತ್ತಾಳೆ.
“ಅಳಲಿದಳು ಬೇಡಕಟಾ, ರಾಮನೊಳು
ಅಳವಿಗಿದಿರಾಗದಿರು....”
“ಸ್ವಾಮಿ, ತಮ್ಮ ನಿರ್ಧಾರವೇ ತಮಗೆ ಮಾನ್ಯ.
ಆದರೆ ಆ ನಿರ್ಧಾರ ಕೇಳಿದಾಗ ನನಗೆ ಸಂಕಟವಾಗುತ್ತಿದೆ. ಸೀತೆಯನ್ನು ಹಿಂದೆ ಕೊಡುವುದು ಬರೇ ಪೇತುಗ
ಎಂಬ ಅಪವಾದಕ್ಕೆ ಕಾರಣವಾಗುತ್ತದೆ ಎಂಬ ದೃಷ್ಟಿಯಿಂದ ತಮ್ಮ ಛಲವನ್ನು ಮೆರೆಸುವ ತಾವು ಅದರಿಂದ
ಆಗುವ ಅಪಖ್ಯಾತಿಯನ್ನು ಕೇಳುವಾಗ ನನ ಮನಸ್ಸು ಕೊರೆಯುತ್ತ ಇದೆ.”
“ ಅಪಖ್ಯಾತಿ..ಏನೂ ಇಲ್ಲ ಮಂಡೋದರೀ ಇನ್ನೂ
ಬಿಡಿಸಿ ಹೇಳ್ತೇನೆ. ನನ್ನ ಮಗನಾದ ಇಂದ್ರಜಿತುವಿನ ಆತ್ಮಕ್ಕೆ ನಾನು ಅಷ್ಟೂ ಮೌಲ್ಯವನ್ನು
ಕೊಡಲಿಲ್ಲ ಎಂದು ಬಂದೀತು. ಅದಕ್ಕೆ ಆಗ ಹೇಳಿದ್ದು. ಸುತನಿಂದ್ರಜಿತುವ ಕೊಂದು ಕಳೆದುದಕ್ಕೆ
.....ಆ ಇಂದ್ರಜಿತುವಿನ ಅನಿಸಿಕೆ ಇತ್ತು. ತಂದೆಯವರೇ ಸೀತೆಯನ್ನು ತಂದದ್ದು ಸಣ್ಣ ಕೆಲಸವಾಯಿತು. ನನ್ನ
ಇಂದ್ರಜಿತು ಹೇಳಿದ್ದು “ ತಂದೆ ಕೇಳ್ ಪರಸತಿಯನು ವಂಚಿಸಿ ತಂದುದು ಅನ್ಯಾಯ....” ಆದರೆ ಮತ್ತೊಂದು
ಮಾತು ಹೇಳಿದ್ದಾನೆ ಅವನು..” ಮುಂದಿನ್ನು ಬೆದರುತ್ತ ಕೊಟ್ಟೆವಾದರೆ..” ಹೌದು ಅಂತ ಒಪ್ಪಿದ್ದೇನೆ. ಈಗ ಅವನು ಅಳಿದು
ಹೋಗಿದ್ದಾನೆ. ಅವನು ಸತ್ತ ಮೇಲೆ ಸೀತೆಯನ್ನು ನಾನು ಹಿಂದೆ ಕೊಟ್ಟೇನಾದರೆ ನನ್ನ ಮಗನ ಪ್ರಾಣಕ್ಕೆ
ಏನು ಬೆಲೆಕೊಟ್ಟ ಹಾಗೆ ಆಗ್ತದೆ”
“ಸ್ವಾಮೀ ಆಗಲಿ, ಅವನ ಮಾತಿಗೆ
ಬೆಲೆಕೊಡದಂತಾಗ್ತದೆ. ಆದರೆ ನನ್ನದೊಂದು ಮಾತಿದೆ ಆ ಬಗ್ಗೆ. ಈ ಸೀತೆಯನ್ನು ತಂದುದು ಸರಿಯಾದ
ದಾರಿಯಲ್ಲ ಅಂತ ನಿಮಗು ಗೊತ್ತಿದೆ, ಇಂದ್ರಜಿತುವಿಗೂ ತಿಳಿದೆ. ಎಲ್ಲರೂ ಇದನ್ನು ತಿಳಿದಿದ್ದಾರೆ.
ಆದ್ದರಿಂದ. ಪಂಥಕ್ಕಾಗಿ ರಾಮನಲ್ಲಿ ಯುದ್ದ ಮುಂದುವರೆಸೋಣ ಆದರೆ ಈ ಸೀತೆಯನ್ನು ಇಟ್ಟುಕೊಂಡು ಬೇಡ.
ಸೀತೆಯನ್ನು ಒಪ್ಪಿಸಿ ಬೇಕಾದರೆ ಯುದ್ದ ಮಾಡೋಣ ಒಳ್ಳೆಯ ಕಾರ್ಯ ಯುದ್ದ ನಮ್ಮ ಛಲ..”
“ಹೌದೇ.. ಇದೆಲ್ಲ ಯುಕ್ತಿವಾದಗಳೆಲ್ಲ ತುಂಬ
ಹೇಳಿದ್ದಾರೆ ಅತಿಕಾಯಾದಿಗಳೆಲ್ಲ. ಸೀತೆಯನ್ನು ರಘುವರನಿಗಿತ್ತು, ಅನುಜಾತನಾದ ವಿಭೀಷಣನ
ಕೂಡಿಕೊಂಡು, ಮತ್ತೆ ಬೇಕಾದರೆ ಯುದ್ದ ಮಾಡುವ.”
“ ಸೀತೆಯನ್ನು ರಾಮನಿಗೆ ಕೊಟ್ಟು,
ಹೇಳುದು, ಅಲ್ಲಾ..ನಾನು ಸೀತೆಯನ್ನು
ಬೇಕಾಗಿತಂದದ್ದಲ್ಲ, ನನ್ನ ಜಾಗಕ್ಕೆ ಬರಿಸಲಿಕ್ಕೆ ಬೇಕಾಗಿ ಮಾಡಿದ್ದು. ಅಲ್ವೋ? ಅಲ್ವೋ.. ಈಗ ಸೀತೆಯನ್ನು ತಂದಲ್ಲಿ ಕೂತುಕೊಳ್ಳಿಸಿ
ಆಗ್ಯದಲ್ಲ? ಹನುಮಂತನ ಪ್ರಕರಣ ಹೇಳಿದ್ದೇನಲ್ಲ. ಅವಳಲ್ಲಿ ಕುಳಿತಲ್ಲಿಂದ ಏಳುದಿಲ್ವಲ್ಲ? ಅವಳಿಗೆ
ಏನೋ ಒಂದು ಹಟ ಉಂಟಂತೆ ಅಲ್ವ? ಈಗ ಕೂತ
ಸೀತೆಯನ್ನು ಅಲ್ಲಿಂದ ಎಬ್ಬಿಸಿ ನಡೆಸಿಕೊಂಡು ರಾಮನ ಬಳಿಗೆ ಹೋಗುವ ಜನಯಾರು?”
“ಸ್ವಾಮೀ..ನೀವಾಗಿ ದೈನ್ಯತೆಯಿಂದ ತಾನು
ಆಕೆಯನ್ನು ತಂದದ್ದು ಮಾಡಿದ್ದು ತಪ್ಪು ಅಂತ ಕಂಡ್ರೆ ಅವಳು ಯಾಕೆ ಏಳುವುದಿಲ್ಲ? ತಂದವರೇ ಪುನಃ
ಕೊಡ್ತಾರೆ ಅಂತ ಆದಾಗ ಬಂದಾಳು”
“ಹಾಗಾದರೆ ನಾನು ಮಾಡಬೇಕಾದ ನಮಸ್ಕಾರ ಒಂದು
ಕೂಡಿಸಿದಿ ನೀನು. ಮೊದಲು ಇಲ್ಲಿ ಸೀತೆಗೆ ನಮಸ್ಕಾರ
ಮಾಡುದು ಮಹಾತಾಯಿ ಇವಳಿಗೆ ನಮಸ್ಕಾರ ಮಾಡಿ ಇವಳನ್ನು ಕರೆದುಕೊಂಡು...ರಾಮಾ ನಿನಗೊಂದು
ನಮಸ್ಕಾರ. ತಪ್ಪು ಮಾಡಿಯೇನು ಆದ್ರೆ ಒಪ್ಪಿಕೊಳ್ಳಿಕ್ಕಿಲ್ಲ. ಪ್ರವಾಹಕ್ಕೆ ಇದಿರಾಗಿಯೇ ನಾನು ಈಜಿದ್ದು. ನಾನು ಅದಲ್ವೋ
ಹೇಳಿದ್ದು. ನನ್ನ ಅಪ್ಪನದ್ದು ಪರಂಪರಾಗತವಾಗಿ ಬಂದ ಸಿಂಹಾಸನವಲ್ಲ ಇದು. ನನ್ನ ಬದುಕೇ
ಪ್ರವಾಹಕ್ಕೆ ಇದಿರಾಗಿ ಈಜುದು. ರಾವಣನ ಜೀವನವೇ ಹಾಗೆ. ಅನ್ನ ತಿಂದ್ರೆ ಬದುಕ್ತಾರೆ ಅಂತ ನನಗೆ
ಗೊತ್ತುಂಟೇ. ಶಿವನಲ್ಲಿಗೆ ನಾನು ಹೋದದ್ದು ಹೀಗೆ ಮಾಡಿಯೋ? ಸ್ವರ್ಗ ಲೋಕಕ್ಕೆ ಹೋದದ್ದು ಹಾಗೋ?
ಈವರೆಗೂ ನಾನು ಅಭ್ಯಾಸ ಮಾಡಿದ್ದು ವಿಷ ತಿಂದೆ. ಬದುಕಿದ್ದೇ ವಿಷ ತಿಂದು. ಬಹುಶಃ ನನ್ನ ರೋಗಕ್ಕೆ
ಅದೇ ಮದ್ದೋ ಎನೋ ಏನೋ? ನೀನು ಸುಮ್ಮನೇ ರಗಳೆ ಮಾಡ್ಬೇಡ ಮಾತಾಡಿಸ್ಬೇಡ. ಹೋಗು..ಹೋಗು.”
ಮಂಡೋದರಿಯ ಯಾವ ಮಾತಿಗೂ ರಾವಣ
ಜಗ್ಗುವುದಿಲ್ಲ.ವಾದಕ್ಕೆ ಪ್ರತಿವಾದ. ಎಲ್ಲ ತಿಳಿದಿದ್ದೂ ರಾವಣ ಯಾಕೆ ಇಷ್ಟು
ನಿಷ್ಠೂರನಾಗುತ್ತಾನೆ? ವಾದ ಮುಗಿಯಿತು. ಇನ್ನು ಜಿಜ್ಞಾಸೆ ಎನೂ ಉಳಿದಿಲ್ಲ ಎನ್ನುವಾಗ ಮಂಡೋದರಿ
ಅತಿಮುಖ್ಯವಾದ ಪ್ರಶ್ನೆಯನ್ನು ಸರಳವಾಗಿ ಕೇಳಿಬಿಡುತ್ತಾಳೆ.
“ಸ್ವಾಮೀ ನನ್ನದೊಂದು ಕೊನೆಯ ಪ್ರಾರ್ಥನೆ
ಉಂಟು.”
“ಏನು ಅದು ಹೇಳು? ಅದು ಹೇಳು,ನಾನು ಅದು
ಹೇಳಿದ್ದು, ದಶರಥ ಮಾತ್ರ ಕೊಡ್ಲಿಕ್ಕೆ ಕಲ್ತದ್ದು
ಆಲ್ಲ.”
ಬರೆದಿಟ್ಟ ಸಂವಾದಂತೆ. ಆ ಸಂವಾದವನ್ನು ಒಂದು ಹಂತಕ್ಕೆ
ಮುಕ್ತಾಯಗೊಳಿಸಬೇಕಲ್ಲ? ತಾಳಮದ್ದಲೆ ಕಾವ್ಯಮಯ ಸಂವಾದ, ಅದು ಸಾಹಿತ್ಯಮಯವೂ ಆಗಿಬಿಡುತ್ತದೆ.
“ ಸ್ವಾಮೀ ನನ್ನ ಮಾಂಗಲ್ಯ ಭಾಗ್ಯಕ್ಕಾಗಿ ನೀವು
ಹೋರಾಟ ನಡೆಸುವುದು ಅಲ್ಲ. ಯಾಕೆ? ನೀವು ಹೋದ್ರೆ ನನಗೆ ಅದೇ ದೊಡ್ಡ ಮೋಕ್ಷ ಅಂತ ತಾವು ಅನ್ನುತ್ತಾ
ಇದ್ದೀರಿ. ನೀವಿದ್ದರೆ ಅಲ್ವೇ ನನಗೆ ನೀವಿದ್ರೆ ಅದೇ ನನಗೆ ದೊಡ್ಡದು ಅಂತ. ನಿಮ್ಮ ಹಟಕ್ಕಾಗಿ
ನೀವು ಪ್ರಾಣ ತ್ಯಾಗ ಮಾಡಿದಾಗ ಪತಿಯೇ ಪರದೈವ ಅಂತ
ಭಾವಿಸಿದ ನನಗೂ ಅದೇ ಮೋಕ್ಷ ಅಂತ ಅಲ್ವೇ ತಮ್ಮ
ಅಂಬೋಣ”
“ನೀನೀಗ ಇದನ್ನು ಎಲ್ಲಿಗೆ ತಿರುಗಿಸುತ್ತಿ?”
“ಯಾಕಂದ್ರೆ ನಾನು ಹೇಳುವುದು. ಈಗ ಅ
ಮಾರ್ಗ ನಮಗೆ ಆಗುವುದಿಲ್ಲ ಅಂತಾದ್ರೆ, ಇನ್ನೊಂದು
ಮಾರ್ಗದಲ್ಲಿ ನೋಡೋಣ,”
“ಯಾವ ಮಾರ್ಗ?”
“ಈಗ ಸೀತೆಯನ್ನು ಎಬ್ಬಿಸುವುದಕ್ಕೆ ನಮಗೆ
ಸಾಧ್ಯ ಆಗುವುದಿಲ್ಲ ಅಂತ ಇಟ್ಟುಕೊಳ್ಳೋಣ. ಏನೂ
ಆಗ್ಲಿ. ಗಂಡ ಸೀತೆಯನ್ನು ತಂದಾಗಿದೆ. ಆಗ್ಲಿ ಆ ಸೀತೆ ಕೆಡ್ತಾಳೋ ಅಂತ ನೋಡೋಣ. ನೀವು ಆಕೆಯ ಬಳಿಗೆ
ರಾಮನಾಗಿ ಒಮ್ಮೆ ಹೋಗ್ತೀರಾ ಅಲ್ಲಿಗೆ. ಅಲ್ಲಾದ್ರೂ ನನ್ನ ಪತಿಯ ದೊಡ್ಡಸ್ತಿಕೆ ಪ್ರದರ್ಶನ ಆದ್ರೆ ಮತ್ತೆ
ರಾಮ ಎಂತದ್ದು? ನಮ್ಮ ಗಂಡನೂ ರಾಮ ಆಗ್ತಾರೆ. ಸೀತೆ ಅವ್ರಿಗೆ ಒಲೀತಾಳೆ ಅಂತಾದ್ರೆ ಮತ್ತೆ ನಮಗೇನು?
ಆ ರಾಮನಿಗಿಂತ ನಮ್ಮ ಈ ರಾವಣ ದೊಡ್ಡವ ಅಂತ ನನ್ನ ಮನಸ್ಸಿಗೆ ಆಯ್ತಲ್ಲ? ಆಗಲಾದರೂ ಈ ಮಂಡೋದರಿ
ಸೌಭಾಗ್ಯ ಸಂಪನ್ನೆಯಾಗ್ತಾಳೆ. ಆದೀತೋ?”
“ರಾಮ ಆದ್ರೆ ಆದೀತು” ರಾವಣನ ಧ್ವನಿ ಕ್ಷ್ಟೀಣಿಸುತ್ತದೆ. ಮರ್ಮ ಸ್ಪರ್ಶವನ್ನು
ಮಾಡುವ ಪ್ರಶ್ನೆಯನ್ನು ಕೇಳಿದಾಗ ಮತ್ತೇನು ಆದೀತು? “ ರಾಮ ಅದ್ರೆ ಆದೀತು...” “ ಆದ್ರೆ” ಎಂಬುದು ಎಷ್ಟೋಂದು ಅರ್ಥಗಳನ್ನು
ಸೂಚಿಸುತ್ತದೆ. ಸಂಭಾಷನೆ ಬೆಳೆಸುವುದು ದೊಡ್ಡದಲ್ಲ. ಅದಕ್ಕೆ ಪೂರ್ಣ ಸ್ಪರ್ಶವನ್ನು ನೀಡಬೇಕಲ್ಲ.
ಅದಕ್ಕೆ ಎತ್ತುಗಡೆ ನಿಲುಗಡೆ ಬಹಳ ಪ್ರಾಮುಖ್ಯವನ್ನು ಪಡೆಯುತ್ತದೆ. ಮುಂದಿನ ಪದ
ಎತ್ತುಗಡೆಯಾಗಬೇಕಾದರೆ ಸಂಭಾಷಣೆಗೆ ಸುಂದರ ರೂಪದ ನಿಲುಗಡೆಯೂ ಆಗಬೇಕಲ್ಲ. ಪಲ್ಲವಿ ಇಲ್ಲವಾದರೆ
ಚರಣಕ್ಕೆ ಬೆಲೆ ಏನಿದೆ? ಚರಣ ಇಲ್ಲವಾದರೆ ಪಲ್ಲವಿಗೆ ಅರ್ಥವೇನಿದೆ? ಎಲ್ಲವೂ ಅಪೂರ್ಣ.
ರಾವಣ ನಿರ್ಧಾರಕ್ಕೆ ಬಂದವನಂತೆ ತನ್ನ ಅಂತರಗ
ದರ್ಶನದ ಪ್ರಕಾಶಕ್ಕೆ ತೆರೆದುಕೊಳ್ಳುವ ಹಂತಕ್ಕೆ ಬರುತ್ತಾನೆ. ಬಿಟ್ಟ ನಿಟ್ಟುಸಿರನ್ನು
ಸಾಕ್ಷಿಯಾಗಿಸಿ ರಾವಣ ಭಾರವಾದ ಸ್ವರದಿಂದ ,
“
ಆದರೆ ಮಂಡೋದರೀ, ನಾನು ರಾಮನಾದರೂ,
ನಿನ್ನ ಮಾಂಗಲ್ಯ ಉಳಿಯುವುದಿಲ್ಲ.”
ಮಂಡೋದರಿ ತವಕಿಸಿ ಕೇಳುತ್ತಾಳೆ “ಯಾಕೆ ಅದು?’
“ ಮಂಡೋದರಿ ನಾನು ರಾಮನಾದರೂ ನಿನ್ನ ಮಾಂಗಲ್ಯ
ಉಳಿಯುವುದಿಲ್ಲ, ನಾನು ರಾವಣನಾಗಿ ನಿನ್ನ ಮಾಂಗಲ್ಯ ಉಳಿಸುವುದಕ್ಕೆ ಸಾಧ್ಯವೂ ಅಗುವುದಿಲ್ಲ.”
“ ಅದು ಏನೋ ಹೃದಯದಲ್ಲಿ ಬೇರೆಯೇ ಇರಬೇಕು.”
“ಏನು ಮಾಡೋದು ನಿನ್ನ ಔದಾರ್ಯದ ಉರುಳಲ್ಲಿ
ನಾನು ಸಿಕ್ಕಿದ್ದೇನೆ ಅಂತ ಅವಾಗ ಒಪ್ಪಿದ್ದೇನೆ. ಮಂಡೋದರೀ...”
“ಸ್ವಾಮೀ..”
“ ಈ ಪ್ರಶ್ನೆ ನೀನು ಮೊದಲು
ಕೇಳ್ತಿದ್ರೆ..ಬಹುಶಃ ಈ ಕಥೆಯೇ ಇಷ್ಟುದ್ದ ಆಗ್ತಿರಲಿಲ್ಲ. ಅದಕ್ಕೇ ನಾನು ಹೇಳಿರೋದು.
ಕಾರ್ಯವನ್ನು ನೋಡುತ್ತಿ. ಕಾರಣವನ್ನು ನೀನೇ ತರ್ಕಿಸಿಕೊಳ್ಳುತ್ತೀ, ಅದಕ್ಕೆ ನಿವಾರಣೋಪಾಯವನ್ನು
ನೀನೇ ಉಪದೇಶಮಾಡುತ್ತಿ.” (ಶೇಣಿಯವರು ಆರಂಭದಲ್ಲಿ
ಹೇಳಿದ ಮಾತು ಈಗ ನೆನಪಾಗುತ್ತದೆ. ಒಂದು ಅರ್ಥಗಾರಿಕೆಯ ಅಡಿಗಲ್ಲು ಅಂದರೆ ಇದುವೇ.ಆ ಅಡಿಗಲ್ಲಿನ
ಮೇಲೆ ನಿಂತು ಅವಲೋಕಿಸುವ ದೃಷ್ಟಿ ಬೆಳೆಸಿದರೆ ಯಕ್ಷಗಾನದ ಅರ್ಥಗಾರಿಕೆಯ ಗಂಭೀರತೆ
ಅರಿವಾಗುತ್ತದೆ.) “ಈವರೆಗೆ ಎಲ್ಲವರೂ ಮಾಡಿದ್ದು ಅಷ್ಟೇ..ಎಷ್ಟು? ಅವರವರಿಗೆ ಎಣಿಸಿದ್ದನ್ನು ಇದಕ್ಕೆ ಬೆರಕೆ ಹಾಕಿ,
ಕಾಮುಕನಾಗಿ ಸೀತೆಯನ್ನು ತಂದು ಈಗ ತಲೆಗೆ ಕೈ ಇಟ್ಟು ಕೂತಿದ್ದಾನೆ. “
“ ಹಾಗೇ ಕಾಣ್ತದೆ. ತಾವು ಮನಸ್ಸು ಬಿಚ್ಚಿ
ಹೇಳಿರುತ್ತಿದ್ದರೆ?”
“ನಾನು ಅದಲ್ಲ ಹೇಳುವುದು. ಮಾಯಾ ಮೃಗವನ್ನು
ಮಾಡಿದಿಯಲ್ಲ? ಮಾಯಾಸೀತೆಯನ್ನು ಮಾಡಿದಿಯಲ್ಲ? ಮಾಯಾ ರಾಮ ಲಕ್ಷ್ಮಣರ ತಲೆಯನ್ನು ಮಾಡಿದಿಯಲ್ಲಾ?
ಹೀಗೆಲ್ಲ ಮಾಡುವುದರ ಬದಲು, ಸನ್ಯಾಸಿ ವೇಷವನ್ನು ಹಾಕಿ ಹೋಗುವುದರ ಬದಲಿಗೆ, ರಾಮನೇ ಆಗಿ
ಹೋಗ್ಲಿಲ್ಲ ಯಾಕೆ ಅಂತ ಒಬ್ಬ ಬುದ್ಧಿವಂತ ಲಂಕೆಯಲ್ಲಿ ಪ್ರಶ್ನೆ ಮಾಡುತ್ತಿದ್ದರೆ..? ಆ ಹೊತ್ತಿಗೆ
ರಾವಣನ ಮಾತು ನಿಲ್ಲುತ್ತಿತ್ತು. ಭಹಳ ತಡವಾಗಿ ದೇವರೇ ನಿನ್ನ ಬಾಯಿಯಿಂದ ಕೇಳಿಸಿದ ಹಾಗೆ
ಕೇಳಿಸಿದ. ರಾಮನಾಗುವುದಕ್ಕೆ ಸಾಧ್ಯ ಇಲ್ಲದೆಯೇ ನಾನು ರಾವಣನಾದದ್ದು.ಆದರೆ ರಾವಣನಾದದ್ದು ಯಾಕೆ? ಇದು ರಾಮನಾಗಲಿಕ್ಕೇ ತಯಾರಿ ನೋಡು.
ಓ ಮಯ ತನುಜೇ...”
“ಲಾಲಿಸು ಮಯ ತನುಜೆ ಮಚ್ಚರಿತವ
ಲಾಲಿಸು............................”
“ ಓ ಮಯ ಸುತೇ ಮಂಡೋದರೀ, ಹೇಳಲೇ ಬೇಕಾಯಿತು.
ಆದರೆ ಇದೂ ಒಂದು ನಿನ್ನ ನನ್ನ ಸೌಭಾಗ್ಯವೇ. ಬಹಳಷ್ಟು ತಪಸ್ಸು ಮಾಡಿದವ ನಾನು. ಯೋಗಾಭ್ಯಾಸ
ಮಾಡಿದವ ನಾನು, ಯೋಗ ಶರೀರವನ್ನೂ ಧರಿಸಿಕೊಂಡವನು ನಾನು ಕೆಲವು ಸಲ. ಕೇವಲ ರಾಕ್ಷಸನಾಗಿ ಅಣಿಮಾದಿ
ಸಿದ್ಧಿಯಿಂದಲೇ ನನ್ನ ವ್ಯವಹಾರ ನಡೆದದ್ದಲ್ಲ. ಕೇವಲ ಅಣಿಮಾದಿ ಅಷ್ಟ ಸಿದ್ಧಿ ಇದ್ದವನಿಗೆ ಇಚ್ಚಾ
ಮಾತ್ರದಿಂದ ಸತ್ಯಲೋಕಕ್ಕೆ ಹೋಗಿ ಬರುವುದಕ್ಕೆ ಸಾಧ್ಯವಿಲ್ಲ. ಬರೇ ಅಣಿಮಾದಿ ಅಷ್ಟ ಸಿದ್ಧಿಯ
ಇಂದ್ರಜಾಲದಿಂದ ಕೈಲಾಸಗಮನ ಸಾಧ್ಯವೇ ಇಲ್ಲ. ಇದು ಎಲ್ಲವೂ ಇವನಿಗೆ ಸಾಧಿಸಿವೆ ಎಂದಾದರೆ, ಸಣ್ಣ
ಪ್ರಾಯದಿಂದ ನನ್ನ ತಂದೆಯಿಂದ ಉಪವಿಷ್ಠನಾದಂಥವ ನಾನು, ಈ ಋಷಿಪರಂಪರೆಯಿಂದ ಬಂದಂತಹ ಸಂಸ್ಕಾರ
ಉಂಟಲ್ಲ ಪಿತೃತ್ವದ್ದು, ಇದನ್ನು ಹಟದಿಂದ ಸಾಧಿಸಿದೆ ಬಹುಕಾಲ. ಈ ಹೊತ್ತು ನಿನಗೆ ಗೊತ್ತುಂಟು
ಚತುರ್ವೇದ ಸ್ವರ ಸಹಿತವಾಗಿ ಹೇಳುವುದಿದ್ದರೆ, ನಮ್ಮ ಜಾತಿಯಲ್ಲಿ ನಾನು ಒಬ್ಬನೇ. ಇಷ್ಟು ಮಾತ್ರವೋ?
ವೇದ, ವೇದಾಂಗ ಪಾರಂಗತ ಯಾರು? ಲಂಕೆಯಲ್ಲಿ?
ರಾವಣೇಶ್ವರ. ಜ್ಯೋತಿಶ್ಯಾಸ್ತ್ರದಲ್ಲಿ ನಿರ್ಣಾಯಕವಾದಂತಹ ತೀರ್ಮಾನ ಕೊಡುವವನು ಯಾರು? ನನ್ನ ಯೋಗ
ಸಿದ್ಧಿಯಿಂದ ನವಗ್ರರನ್ನೂ ಕೂಡ ಕೆಲವೊಮ್ಮೆ ಏಕ ರಾಶಿಯಲ್ಲಿ ನಿಲ್ಲಿಸಿದವನು ನಾನು “
“ಇಂದ್ರಜಿತುವು ಹುಟ್ಟುವ ಕಾಲಕ್ಕೆ ತಾವೇ ಪ್ರಯತ್ನ ಪಟ್ಟವರು.”
“ ಇಷ್ಟೆಲ್ಲ ಉಂಟೇ..ಇದು ನನ್ನ ಸಂಗ್ರಹ. ಇದು
ನನ್ನ ಸಿದ್ಧಿ. ಮಂಡೋದರೀ,” ರಾವಣ ಸೀತೆಯನ್ನು ಯಾಕೆ ಬಯಸುತ್ತಾನೆ? ಯಾವ ರೀತಿಯಲ್ಲಿ ಬಯಸುತ್ತಾನೆ
ಎನ್ನುವುದಕ್ಕೆ ಪ್ರತಿಪಾದನೆ ಮುಂದೆ ನೋಡಬಹುದು. ಕೇವಲ ಕಾಮಕನಾಗಿ ಅಲ್ಲ. ಅದರ ಗೂಢ ವಿಚಾರ
ಬೇರೆಯೇ ಇದೆ. ಅದಕ್ಕೆ ತಕ್ಕುದಾದ ಪುರಾವೆಯನ್ನು ನೀಡುತ್ತಾನೆ.
“ನಿನಗೆ ಗೊತ್ತುಂಟು ಊರವರು ಹೇಳಲಿ ..ರಾವಣ
ಕಾಮುಕ ದುರಹಂಕಾರಿ. ಆವತ್ತು ರಾತ್ರಿ ಮಂಗ ಬಂದಿದ್ದ ಅಲ್ವ ಇಲ್ಲಿಗೆ.”
“ಹೌದು ಬಂದದ್ದು ಮಾತ್ರವಲ್ಲ ಎಲ್ಲಾ ಸುತ್ತಾಡಿದ್ದ”
“ಸುತ್ತಾಡಿದ್ದು ಅಲ್ಲ. ಅವನು ಅಲ್ಲಿ ಹೋಗಿ
ಒಂದು ಮಾತು ಹೇಳಿದ್ದ. “ರಾಮಚಂದ್ರ ನನಗೆ ಅವನ ಬಗ್ಗೆ ಬಹಳ ಅನುಮಾನ. ಜನ ನಾವು ತಿಳ್ಕೊಂಡ ಹಾಗೆ
ಅಲ್ವೋ ಅಂತ.” ಹಾಗಾದ್ರೆ ಏನಾಗಿತ್ತು? ಬೆಳಗ್ಗೆ ನಮಗೆ ಗೊತ್ತಾಯಿತು. ಮಂಗ ನಮ್ಮ
ಕೋಣೆಗೂ ಬಂದು ಹೋಗಿದ್ದಾನೆ ಅಂತ. ಆವಾಗ ನೀನು ನಾಚಿಕೆ ಪಟ್ಟಿ. ಅವನು ಕಂಡಿದ್ದಾನೆ ದೃಶ್ಯ
ಏನನ್ನು? ಹೇಳಿದನಂತೆ ರಾಮನ ಹತ್ರ “ನಾನೂ ಅಷ್ಟೇ ಅಂತಃ ಪುರಕ್ಕೆ ಹೋಗಿದ್ದೆ. ಒಂದು
ನಿಮಿಷಭ್ರಮಿಸಿದ್ದೆ. ಸೀತಾದೇವಿಯೇ ಅಂತ ಪಕ್ಕದಲ್ಲಿ.
ಆದರೆ ರಾವಣ, ಎಂತಹಾ ಎದೆ ಅವನದ್ದು? ಎಂತಹ ಮೈಬಣ್ಣ? ಕೆಂಪು ಬಟ್ಟೆಯನ್ನು ಉಟ್ಟಿದ್ದ.
ನೀಲ ಬಣ್ಣದ ಮೈಗೆ ವಿಭೂತಿಯನ್ನು ಲೇಪಿಸಿದ್ದ. ರಾಮಚಂದ್ರ...ಒತ್ತಿನಲ್ಲಿ ಹೆಂಡತಿಯನ್ನು ಮಲಗಿಸಿಕೊಂಡಿದ್ದ.
ಒಂದು ವಿಶೇಷ ಕಂಡೆ ನಾನು. ಮೈಗೆ ಲೇಪಿಸಲ್ಪಟ್ಟ ವಿಭೂತಿಯ ಒಂದೇ ಒಂದು ಅಸ್ತವ್ಯಸ್ತತನ ಅವನ ಮೈಯಲ್ಲಿ ಇರಲಿಲ್ಲ. ಅರ್ಥ ನೀನು ಮಾಡಿಕೊ.” ಬ್ರಹ್ಮ ಚಾರಿಯಾದವನು ಹೇಳಿದ ಮಾತು
ಇದು. ಯಾಕೆ ವಿಭೂತಿ ಪಟ್ಟೇ ಹೋಗ್ಲಿಲ್ಲ? ನಿನಗೆ ಗೊತ್ತುಂಟೋ? ಅಸಿಧಾರ ವೃತ. ಧರ್ಮ ಪತ್ನಿಯಾದ
ಮಂಡೋದರಿಯಲ್ಲಿ ತಿಥಿ, ವಾರ ನಕ್ಷತ್ರ ಯೋಗ ಕರಣ ಇದು ಎಲ್ಲವನ್ನೂ ನೋಡಿಕೊಂಡು, ಕೇವಲ ಗರ್ಭಾದಾನ ಸಂಸ್ಕಾರಕ್ಕೆ
ಕಟ್ಟುಬಿದ್ದವ. ಹೌದಲ್ಲ? ಊರು ಬಿಟ್ಟಾವಾಗ ಈ ಅಚಾರ ಸಂಪೂರ್ಣ ಬಿಟ್ಟವ. ಯಾಕೆ? ಅದು ನನ್ನ
ಶಾರೀರಿಕವಾದಂತಹ ವಿಲಾಸ. ನನಗೆ ಆ ಹೆಂಗಸಿನ ಹೊಟ್ಟೆಯಲ್ಲಿ ಹುಟ್ಟಿದವನು ಒಳ್ಳೆಯವನಾಗಿ ಏನು ಲಾಭ ಅಗೋದು
ಬೇಡ. ಆದ್ದರಿಂದ ಅವನು ನಿನ್ನನ್ನು ಕಂಡು
ಭ್ರಮಿಸಿದ್ದಾನೆ. ನೀನು ಆಲೋಚಿಸು. ಯಾರೂ? ಆ
ಹಳೆಯ ಬ್ರಹ್ಮ ಚಾರಿ. ಸೀತೆಯೇ ಸರಿಯೆಂದು,
ಹಾಗಾದರೆ ಸಕಲ ಲಕ್ಷಣ ಶಾಸ್ತ್ರ ಪಾರಂಗತನಾದಂತಹ ಆಂಜನೇಯ, ನಿನ್ನನ್ನು ಕಂಡು, ನಿನ್ನನ್ನು ಅಂದ್ರೆ
ಹೇಗೆ? ಋಷಿ ಪಂಚಮಿಗೆ ಸಂದ ನಿನ್ನನ್ನು ಕಂಡು
ಸೀತೆಯ ಸೌಂದರ್ಯವನ್ನು ಊಹಿಸುತ್ತಾನೆ ಅಂತಾದರೆ, ಈ ಪ್ರಾಯದಲ್ಲೂ ನೀನು ಸೀತೆಯಷ್ಟೇ ಚಂದ ಅಂತ
ಅವನು ಹೇಳ್ತಾನೆ ಅಂತ ಆದ್ರೆ, ನೀನಿನಿರುವಾಗ
ಅವಳು ಬೇಕೋ ನಂಗೆ. ನೀನು ಆಲೋಚಿಸು ನಿನ್ನ ಪ್ರಾಯ ಸೀತೆಗೆ ಆದರೆ ಆಗ ಏನಾದಾಳು ಅವಳು?. ಅಷ್ಟೆಲ್ಲ
ಕಲ್ಪಿಸಿಕೊ. ಕಾಮುಕನಾಗಿ ಸೀತೆಯ ಬಳಿಗೆ ನಾನು
ಹೋಗುವುದಿದ್ದರೆ, ನೀನು ನೆನಪಿಸಿಕೊ. ಯಾರಾದರೂ ಬೇರೊಂದು ಹೆಣ್ಣಿನ ಸಂಗ್ರಹಕ್ಕೆ ಹೋಗುವಾಗ
ಮದುವೆಯಾದ ಹೆಂಡತಿಯನ್ನು ಅದೂ ಒಳ್ಳೆಯ ಮಕ್ಕಳ ತಾಯಿಯನ್ನು ಒಟ್ಟಿಗೆ ಕರಕೊಂಡು ಹೋಗ್ತಾನೋ? ಇಲ್ಲಿ
ಇನ್ನೂ ಒಂದು ಉದ್ದೇಶ ಉಂಟು. ನಿಜಾ ಹೇಳ್ತೇನೆ, ನನಿಗೆ ಸಾಕ್ಷಿ ಹೇಳ್ಳಿಕ್ಕಾಗಿ ಅಲ್ಲ ನಾನು ನಿನ್ನನ್ನು ಕರೆದುಕೊಂಡು ಹೋಗಿದ್ದು. ನಾಳೆ
ಸೀತೆಯ ಪರಿಶುದ್ದತೆಯ ಬಗ್ಗೆ ಸಾಕ್ಷಿ ಹೇಳ್ಳಿಕ್ಕೆ ನಾನು ಕರೆದುಕೊಂಡು ಹೋದದ್ದು. ಯಾರು
ಹೇಳ್ತಾರೆ, ಸೀತೆ ಪತಿತಳು ಅಂತ. ನನ್ನಗಂಡ ಮುಟ್ಟಲೇ ಇಲ್ಲ ಸೀತೆಯನ್ನು. ಹೇಳುವವಳು ನಾನು. ಅವರಿಗೆ ಹೇಳ್ಬೇಕು ನೀನು.(
ರಾವಣ ಸೀತೆಯ ಬಗ್ಗೆ ಹೆಂಡತಿಯನ್ನೇ
ಸಾಕ್ಷ್ಯವನ್ನಾಗಿಸುವ ಚಿಂತನೆ ಇದು) ಅರ್ಥ ಮಾಡು ಸೀತೆಯನ್ನು ಕೆಡಿಸುವ ಉದ್ದೇಶವಲ್ಲ
ನನ್ನದು.”
“ಮತ್ತೆ ಯಾಕೆ ಸ್ವಾಮಿ ಇದೆಲ್ಲ?”
“ಏನು ಮಾಡುದು? ಈ ಯೊಗೈಶ್ವರ್ಯದಿಂದ ನನಗೆ ಪೂರ್ವಜನ್ಮದ ಸ್ಮರಣೆ
ಉಂಟು. ಅದು ಯೋಗದಿಂದ ಬಂದದ್ದು ಪವಾಡ ಅಲ್ಲ.
ಪೂರ್ವ ಜನ್ಮದ ಸ್ಮರಣೆ ಅದು. ಆಜನ್ಮದ ಸ್ಮರಣೆಯೂ ಉಂಟು”
“ಆ ಜನ್ಮದಲ್ಲಿ?”
“ವೈಕುಂಠದಲ್ಲಿ”
“ವೈಕುಂಠದಲ್ಲಿ?”
ವೈಕುಂಠದಲ್ಲಿ
ಶ್ರೀಮನ್ನಾರಾಯಣನ ಓಲಗ. ಅಲ್ಲಿ ದ್ವಾರ ಪಾಲಕರಾಗಿದ್ದವರೆ ನಾವು.”
“ಅಲ್ಲಿಯ ಹೆಸರು?”
“ಜಯ ಮತ್ತು ವಿಜಯ, ಸನಕಾದಿ ಋಷಿಗಳು ಬಂದಿದ್ದರು. ನಾರಾಯಣ
ದರ್ಶನಕ್ಕೆ, ಯಾವತ್ತೂ ಬರುವಂತೆ ಆವತ್ತೂ ಬಂದಿದ್ದರು. ಯಾಕೋ ಜಯವಿಜಯರಾದಂತಹ ನಾವು ತಡೆದೆವು. ಸಿಟ್ಟಿಗೆದ್ದವರು
ಶಾಪವನ್ನು ಕೊಟ್ಟರು. ರಾಕ್ಷಸರೇ ಆಗಿ ಹುಟ್ಟಿ. ಅದರೂ ನಮ್ಮ ಅವ್ಯಭಿಚಾರೀ ಭಕ್ತಿಯನ್ನು ನಾವು
ಬಿಡ್ಲಿಲ್ಲ. ಶಾಪ ಕೊಟ್ಟವರ ಕಾಲನ್ನು ಹಿಡೀಲಿಲ್ಲ. ಶ್ರೀಶ್ರೀರವರ ತೀರ್ಥ ಮಂತ್ರಾಕ್ಷತೆಯಿಂದ
ನಾವು ಉದ್ದಾರ ಆಗ್ತದೆ ಅಂತ ಬಯಸಲಿಲ್ಲ. ಯಾಕೆ? ಇವರೇ ಉದ್ದಾರಕ್ಕಾಗಿ ಅಲ್ಲಿ ಸನ್ನಿಧಾನಕ್ಕೆ
ಬರುವವರು. ಮತ್ತೆ ಉದ್ದಾರಕ್ಕಾಗಿ ಬರುವಂಥವರತ್ರ ನಾವು ಎಂಥದ್ದು ಉದ್ದಾರ ಬೇಡುವದು? ನಾವು
ಸ್ವಾಮಿಯಲ್ಲಿ ಬೇಡಿದೆವು ಸ್ವಾಮಿ ಹೀಗಿಹೀಗೆ ಆಯ್ತು. ಋಷಿಗಳ ಶಾಪ ಬಂತು. ಮಂತ್ರಾಕ್ಷತೆ ನೀನು
ಕೊಡ್ಬೇಕು. ಆವಾಗ ನಾರಯಣ ಹೇಳಿದ. ಅವರು ಶಾಪ ಕೊಟ್ಟರೂ ನನ್ನ ಸಂಕಲ್ಪದಂತೆ ಕೊಟ್ಟದ್ದು. ಯಾಕೆ?
ನೀವು ಇಷ್ಟು ಸಾಧನೆ ಮಾಡಿದ ಜೀವರು. ವೈಕುಂಠಕ್ಕೆ ಬಂದಿದ್ದೀರಿ. ಸಾಲೋಕ್ಯ ಆಗ್ಯದೆ. ಸಾರೂಪ್ಯ
ಸಿದ್ಧಿಸ್ಯದೆ. ಸಾಮೀಪ್ಯಕ್ಕೂ ಬಂದಿದ್ದೀರಿ. ಸಾಯುಜ್ಜ್ಯ ದೊರಕಲಿಲ್ಲ. ಅಷ್ಟು ಪಕ್ವವಾಗ್ಲಿಲ್ಲ.
ಯಾಕೆ ಪಕ್ವ ಅಗ್ಲಿಲ್ಲ. ಈವರೆಗೆ ಮಾಡಿದ ಕರ್ಮ ಪುಣ್ಯ ಅಲ್ಲಿಗೆ ನಿಂತಿತು. ಇನ್ನೂ ಕರ್ಮ
ಮಾಡಬೇಕಾಗ್ತದೆ. ಮೋಕ್ಷ ಅನ್ನುವುದು ಅವರವರು ಪಡೆಯುವ ಸಿದ್ಧಿಯದು. ಅದಕ್ಕಾಗಿ ನೀವು ಕರ್ಮ
ಭೂಮಿಗೆ ಹೋಗಬೇಕಾಗ್ತದೆ. ಮತ್ತೊಮ್ಮೆ ಕರ್ಮವನ್ನು ಮಾಡ್ಬೇಕು. ಈವರೆಗೆ ಮಾಡಿದ್ದೆಲ್ಲ ಸಕಾಮ ಕರ್ಮ ಆದದ್ದರಿಂದ ಇದೆಲ್ಲ
ಭೋಗ, ವೈಕುಂಠ ಲೋಕ ಪ್ರಾಪ್ತಿ, ಸಾರೂಪ್ಯ, ಸಾ-ಯುಜ್ಯ, ಅದು
ಅಹೇತುಕಿಯಾಗಿರಬೇಕು.”
“ಇಷ್ಟುಕಾಲದ್ದು ಪುಣ್ಯ ಕ್ಷಯವಾದಾಗ ಪುನಃ ಭೂಮಿಗೆ ಹೋಗ್ತೀರಿ.”
“ಆದಕಾರಣ ಜ್ಞಾನಿಗಳಾದವರ ಶಾಪಕ್ಕೆ ನನ್ನದೂ ಒತ್ತು ಉಂಟು. ಮೂರು
ಜನ್ಮದಲ್ಲಿ ಹೋಗಿ. ಮೂರು ಜನ್ಮ ನಾರಾಯಣ ಹೇಳಿದ್ದು. ಯಾಕೆ ಎಲ್ಲ ಮೂರು ಸಲ ಆವರ್ತನೆ ! ವೈದಿಕ
ಪ್ರಕಿಯೆಯಲ್ಲಿ ಮೂರು ಎಂಬ ಸಂಖ್ಯೆಗೆ ಬಹಳಷ್ಟು ಮಹತ್ವ ಉಂಟು. ತ್ರಿಸಂಧ್ಯ, ತ್ರಿಕರ್ಮ,
ಜನಿವಾರಕ್ಕೆ ಮೂರೆಳೆ, ಹೌದಲ್ಲಾ? ಹಾಗೆ ಮೂರರ ಔಚಿತ್ಯವನ್ನರಿತು ನಾರಾಯಣ ನಮಗೆ ಅಪ್ಪಣೆಮಾಡಿದ.
ಮೂರು ಜನ್ಮದಲ್ಲಿ ಹೋಗಿ. ಆಸುರೀ ಸಂಪಂತ್ತಿನಿಂದ
ಕೂಡಿ. ಯಾಕೆ ಹೇಳಿದಾಂತ ಗೊತ್ತಿಲ್ಲ. ಬಹುಶಃ ಹೀಗೋ ಏನೋ? ಜನರಿಗೆ ಆದಷ್ಟು ಅಪ್ರಿಯರಾಗಿರುವುದು
ಒಳ್ಳೆಯದು. ಯಾಕೆ? ಎಕಾಂತಕ್ಕೆ. ಬಹುಮಂದಿಗೆ ಬೇಕಾದವನಾದರೆ ಕೊನೆಗೆ ಇವನೇ ಇಲ್ಲ. ಇನ್ನೂ ಒಂದು
ರಾಕ್ಷಸರು. ಯಾರೂ ಹತ್ತಿರ ಬರುವುದಿಲ್ಲ. ಆ ರಾಕ್ಷಸತ್ವ ನಿಮಗೆ ರಕ್ಷಾಕವಚವಾಗಲಿ. ಕಾಣುವವರ
ಕಣ್ಣಿಗೆ ನೀವು ವಿರೋಧಿಗಳೇ ಆಗಲಿ. ಆದರೆ ಮೂರು ಜನ್ಮದಲ್ಲೂ ನೆನಪು ನಿಮಿಗೆ ನನ್ನದು ಬಿಟ್ರೆ
ಬೇರೆ ಕಡಿಮೆಯಾಗಲಿ.”
“ಅದ್ದರಿಂದ ಸ್ಪರ್ಧಾತ್ಮಕ ವಿರೋಧ ಬುದ್ದಿ”
“ಮತೆ ಅದಕ್ಕೆ ಬೇರೆ ಎಂಥಾ ಹೆಸರಿಡುದು? ನಮ್ಮ ಜನ್ಮದಂಥಹುಗಳಿಂದಲೇ
ನಾರದರಂತಹ ಭಾಗವತೋತ್ತಮರು ವಿರೋಧ ಭಕ್ತಿ ಅಂತ ಸೃಷ್ಟಿಸಿದ್ದು. ಭಕ್ತಿ ಇದ್ದರೆ ವಿರೋಧ ಎಂಥದ್ದು?
ವಿರೋಧ ಇದ್ರೆ ಭಕ್ತಿ ಎಂಥದ್ದು? ಬೇರೆ ಶಭ್ದ ಇಲ್ಲದ್ದಕ್ಕೆ. ಮನಸಾ ಅವನದ್ದೇ ನೆನಪು. ಮೈಯಲ್ಲಿ ಆಸುರೀ ವೃತ್ತಿ. ಇದು
ಒಳ್ಳೆದಾಗ್ತದೆ ತಿದ್ದಿಕೊಳ್ಳುವುದಕ್ಕೆ. ನಾರಾಯಣ ದೇವರು ಅಪ್ಪಣೆಕೊಡಿಸಲಾಗಿ, ಆ ಜಯ ವಿಜಯರಾದಂತಹ ನಾವು, ಹಿಂದೆ ಒಂದು ಜನ್ಮವನ್ನು
ಮುಗಿಸಿದೆವು. ಹಿರಣ್ಯ ಕಶಿಪು ಹಿರಣ್ಯಾಕ್ಷ,,ಜಯನೆ ನಾನು ವಿಜಯನೇ ಅವನು. ಈಗ ಜಯನೇ ನಾನು ವಿಜಯನೇ
ಕುಂಭಕರ್ಣ. ಇನ್ನೊಂದು ಬಾಕಿ ಉಂಟು ಏನೂ ಅಂತ ಗೊತ್ತಿಲ್ಲ. ಬಹುಶಃ ಅದು ಬೇಗ ಮುಗಿದೀತು. ಯಾಕೆ? ಈ
ಜನ್ಮದಲ್ಲಿ ನಾನು ಮಾಡಿದ ತಪಸ್ಸೆಷ್ಟು? ನನ್ನ ತಮ್ಮ ಮಾಡಿದ್ದೆಷ್ಟು? ಅವನು ಮಾಡಿದ ತಪಸ್ಸಿನ
ಪುಣ್ಯ ಅನುಭವಿಸಲೇ ಇಲ್ಲ. ಯಾಕೆ? ವರ ಕೇಳುವಾಗ ನಿದ್ರೆಯನ್ನೇ ಕೇಳಿದ್ದಾನೆ. ಮತ್ತೆ ಇದನ್ನು
ಅನುಭವಿಸುವುದು ಯಾವಾಗ? ಹಾಗಾಗಿ. ಅವನಿಗೂ ಇನ್ನುಳಿದದ್ದು ಬಹು ಸ್ವಲ್ಪ ಇರ್ಬೇಕು. ಹಾಗಾಗಿ
ಮುಂದಿನ ಜನ್ಮ ಅಲ್ಪ ಇದ್ದೀತು. ನನಗೂ ಆಷ್ಟೇ. ಈ ಪುಣ್ಯಗಳನ್ನೆಲ್ಲಾ ನಾನು ಉಪಯೋಗಿಸಿದ್ದೇನೆ.
ಲಂಕೆ ಉಳಿಸುವುದಕ್ಕಾಗಿ. ಇಂತಹ ಜ್ಞಾನ ಸಿದ್ಧಿ ಆ ತಪಸ್ಸಿನಿಂದಾಗ್ಯದೆ. ಹಿರಣ್ಯಾಕ್ಷ
ಹಿರಣ್ಯಕಶಿಪು ಆಗಿರುವಾಗ ಇರ್ಲಿಲ್ಲ. ಈ ಜನ್ಮದಲ್ಲಿ ಬಂದದೆ. ಆದಕಾರಣ ಆಡಿ ತಪ್ಪಲೂ
ಬಹುದೇ.....ಓಡಿ ಸಿಕ್ಕಲೂ ಬಹುದೇ...ನ್ಯಾಯ ಉಂಟಲ್ಲ? ಆದ್ದರಿಂದ ರಾಮ ಯಾರೂಂತ ನನಗೆ ಗೊತ್ತು.
ಇಲ್ಲಿ ಎಣಿಸಬೇಕಾದ್ದು ನಾವು ಎಷ್ಟು ದೊಡ್ಡ ಜೀವಗಳು ಅಂತ. ಯಾಕೆ? ನಮ್ಮನ್ನು ಕೊಂಡೊಯ್ಯಲ್ಲಿಕ್ಕೆ
ಯಮ ಬರಲಿಲ್ಲ. ಕಾಲ ನಮ್ಮ ಮೇಲೆ ಹಲ್ಲೆ ಮಾಡುವುದಿಲ್ಲ. ಯಾರ ಶಾಪ ಕೋಪ ನಮಗೆ ತಾಗೋದಿಲ್ಲ. ನಮ್ಮ
ಸ್ವಾಮಿಯೇ ನಮಗಾಗಿ ಭೂಮಿಗಿಳಿದು ಬಂದಿದ್ದಾನೆ. ಹಾಗಾದರೆ ನಮ್ಮ ಭಕ್ತಿಯ ಪಾಶದ ಸೆಳೆತ ಎಷ್ಟು ಅಂತ
ನೋಡು. ಅವನನ್ನು ನಾವು - ಪ್ರಾಯಶ್ಚಿತ್ತ ಮಾಡುವ
ಭೂಮಿಗೆ ಎಳೆದು, ಅವನ ಮೂಲಕ ಶಸ್ತ್ರ ಕ್ರಿಯೆ ಮಾಡಿಸಿಕೊಂಡು, ಇದ್ದ ರೋಗ ನಿವೃತ್ತಿ ಮಾಡುವಂತಹ
ಅವನ ಶುಷ್ರೂಷೆ ಯ ರೋಗಿಗಳು, ದೊಡ್ಡ
ದೊಡ್ಡವರೆಲ್ಲ ಇದ್ದಾರಲ್ಲ ಊರಿನಲ್ಲಿ? “
“ ಬಹುಶಃ ಆ ರೋಗನಿವಾರಣೆಗೆ ಆ ತಾಯಿಯೇ ಪ್ರೇರಕಳು.”
“ಮತ್ತೆ ಅಪ್ಪ ಕಷಾಯ ಮಾಡಿಕೊಡುವಾಗ ಶುಷ್ರೂಷೆಗೆ ತಾಯಿ ಬಾರದೆ
ಇರುತ್ತಾಳ? ಅದು ನಮ್ಮ ದೊಡ್ಡಸ್ತಿಕೆ. ಬಾಕಿದ್ದವರೆಲ್ಲ ಇದ್ದಾರೆ, ಹುಟ್ತಾರೆ, ಸಾಯ್ತಾರೆ. ಬಲ್ಲಿರೇನಯ್ಯಾ?ಎಂಥಾ ಪುಣ್ಯ ಎಲ್ಲ
ಮಾಡ್ತಾರೆ? ಆದ್ರೆ ಒಂದೋ ಯಮ ತೆಕ್ಕೊಂಡು ಹೋಗ್ತಾನೆ.ತೆಕ್ಕೊಂಡು ಹೋದ್ರೆ ಏನ್ಮಾಡ್ತಾರೆ. ಪುನಃ
ಬಿಡ್ತಾರೆ. ಕೃಷಿ ಉದ್ಯೋಗ. ಬೆಳೆ ಎಲ್ಲ ಅನುಭವಿಸೋದು, ಬೀಜ ಇಟ್ಟುಕೊಳ್ಳೋದು ಪುನಹ ಬಿತ್ತೋದು.
ಪುನರಪಿ ಜನನಂ. ಪುನರಪಿ ಮರಣಂ. ಬಾಕಿದ್ದವರ ಪುಣ್ಯಪಾಪಕ್ಕೆ ಅದು ಫಲ. ಪುಣ್ಯದ ಫಲವಾಗಿ
ಬಂಗಾರದ ಅನುಭವ. ಪಾಪದ ಫಲವಾಗಿ ದುಃಖದ ಅನುಭವ. ಇದು ಎರಡೂ ಇಲ್ಲದ ಕೇವಲ ಒಂದು ಪ್ರಾಯಶ್ಶಿತ್ತವಾಗಿ
ಮೂರು ಜನ್ಮಕ್ಕೆ ನಾವು ಬಂದವರು. ಪ್ರಾಯಶ್ಚಿತ್ತ. ನಮಗೆ ನಿತ್ಯ ಕರ್ಮ ಇಲ್ಲ. ನಮಗೆ ನಿಮಿತ್ತ
ಕರ್ಮ ಇಲ್ಲ. ಕಾಮ್ಯ ಕರ್ಮ ಇಲ್ಲ. ಪ್ರಾಯಶ್ಚಿತ್ತ ಕರ್ಮ ಹೀಗಾಗಬೇಕು ಅಂತ ಉಂಟು. ನಮಗೆ ಮರಣ
ಅನ್ನೊದು ಮಹಾನವಮಿ. ಅನುಗ್ರಹ ಅದು ನಿಗ್ರಹ ಅಲ್ಲ ಅಥವಾ ಶಿಕ್ಷೆ ಅಲ್ಲ. ಈ ಕೆಲವರಿಗೆ ರಾಜರು ಮರಣ
ದಂಡನೆ ವಿಧಿಸಿದುಂಟು, ಶಿಕ್ಷಾ ರೂಪವಾಗಿ. ಕೆಲವರಿಗೆ ಮರಣ ಪ್ರಕೃತಿ ನಿಯಮದಂತೆ ಬರುವುದುಂಟು. ಕೆಲವರಿಗೆ
ಮರಣ ಅನುಗ್ರಹ ರೂಪವಾಗಿ ಬರುವುದುಂಟು. ಇದಕ್ಕೆ ದೇಹಾತೀತವಾದ ಅಂತ ಹೆಸರು. ದೇಹಸಂಬಂಧವನ್ನು
ತುಂಡು ಮಾಡುವುದು. ಇಂತಹಾ ಯೋಗ ನಮಗೆ ಉಂಟು. ಅದನ್ನು ಕಳಕೊಂಡು ರಾಮನಲ್ಲಿ ವಿರೋಧ ಬೇಡ ಅಂತ
ಹೇಳಿದ್ರೆ. ನಾನು ಯಾಕೆ ರಾಮದಾಸ ಆಗ್ಬೇಕು? ಹನುಮಂತನ ಹಾಗೆ, ನಾನಿನ್ನ ದಾಸಾನಯ್ಯಅನ್ನುವುದಕ್ಕೆ
ಹುಟ್ಟಿದವನೋ ನಾನು? ಅದೆಲ್ಲ ಮಾಡಿ ಮಾಡಿ ಅಲ್ಲಿ
ಹೋಗಿ ನೋಡಿ ಆಗ್ಯದೆ. ಆಗಿಯೂ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ವೈಕುಂಠದಲ್ಲಿ ದ್ವಾರಪಾಲಕರಾದರೂ
ಕೂಡಾ ಪತನದ ಭಯ ಉಂಟು, ಆದ್ದರಿಂದ ಈ ತಾಳ ತಂಬೂರಿ ಉಪಯೋಗ ಇಲ್ಲ. ಸಾಧನೆಗೆ ಬೇಕು. ಅದು ಮಾಡಿ ಮಾಡಿ
ಅಲ್ಲಿಗೆ ಹೋದ್ರೂ ಕೂಡ ಮೋಕ್ಷ ಪಡಿಯದೇ ಇದ್ರೆ ಈ ತಲೆನೋವು ಯಾವಾಗಲೂ ಇದ್ದದ್ದೆ. ಈ ಮೂರು ಜನ್ಮ
ಆದಮೇಲೆ ಬಹುಶಃ ನಮಗೆ ಮೋಕ್ಷ ಆಗ್ತದೆ ಎಂಬ ಆತ್ಮ ವಿಶ್ವಾಸದಿಂದ ನಮ್ಮದ್ದಾದ ಈ ನಾಟಕದಲ್ಲಿ, ಸೂತ್ರಧಾರನಾಗಿ ಅದಕ್ಕೆ ಅವನನ್ನೇ ಇಟ್ಟುಕೊಂಡು,
ಹೆಚ್ಚಿನ ಆಟಗಳಲ್ಲಿ ಸೂತ್ರಧಾರನಾದ ಭಾಗವತ ರಂಗಸ್ಥಳಕ್ಕೆ ಇಳಿದು ಕುಣಿಯುವ ಕ್ರಮ ಇಲ್ಲ. ನಮ್ಮ
ಕಾಲಕ್ಕಾಗುವಾಗ ಅವನೂ ಇಳಿದು ಕುಣಿವ ಹಾಗೆ ಮಾಡಿದ ದೊಡ್ಡಸ್ಥಿಕೆ ನಮ್ಮದ್ದು. ಸೀತೆಗೂ
ಗೊತ್ತುಂಟು, ನಾವು ಯ್ಯಾರು? ರಾಮನಿಗೂ ಗೊತ್ತುಂಟು ನಾವು ಯಾರು ಅಂತ. ಆದರೆ ಇದನ್ನೆಲ್ಲ ಹೇಳ
ಬಹುದೇನೆ? ನಾಟಕದ ಅಂತ್ಯಕ್ಕೆ ಇದರ ಗುಟ್ಟು ಗೊತ್ತಾದರೆ ಮಾತ್ರ ನಾಟಕದ ಸ್ವಾರಸ್ಯ ಉಳಿದೀತಲ್ಲದೆ,
ಪ್ರಾರಂಭಕ್ಕೆ ಈ ನಾಟಕದ ಸ್ವಾರಸ್ಯ ಹೀಗೆ ಅಂತ ಹೇಳಿದ್ರೆ ಬಾಕಿದ್ದವರೆಲ್ಲ ಮತ್ತೆ ಕಣ್ಣು
ಕೂರಿಯಾರು. ಹೀಗೊಂದು ಕಾವ್ಯದಲ್ಲಿ ಗುಟ್ಟನ್ನು ನಾನು ನಿನಗೆ ಕೊನೇ ಗಳಿಗೆಯಲ್ಲಿ ಹೇಳಿದ್ದು. ಈಗ
ಗೊತ್ತಾಯಿತಲ್ಲ ಎಂತಹ ಗಂಡನನ್ನು ಪಡೆದಿದ್ದೀ ಅಂತ. ಅದು ಮಾತ್ರ ಅಲ್ಲ, ನನಗೆ ತೃಪ್ತಿ ಏನಾಯ್ತು
ಗೊತ್ತುಂಟಾ? ವೇಶ ಕಟ್ಟಿ ಅಭಿನಯಿಸಿದರೂ, ನನ್ನ ವ್ಯಕ್ತಿತ್ವ ಪ್ರಪಂಚಕ್ಕೆ ಇಷ್ಟರವರೆಗೆ
ಗೊತ್ತಾಗಲಿಲ್ಲವಲ್ಲ. ಕೆಲವರು ವೇಶ ಕಟ್ಟಿದರೆ ಇದು ಜನ ಅದೇ ಅಂತ ಹೇಳಿಬಿಡ್ತಾರೆ ಚೌಕಿಯದ್ದು.
ಹಾಗಾದರೆ ರಾಮ ವೇಶ ಕಟ್ಟಿ ಸೋತಿದ್ದಾನೆ
ಅಂತಾಯಿತು ಈಗ. ...!!! ರಾಮ ವೇಶ ಕಟ್ಟಿದರೂ ರಾಮನನ್ನು ಗುರುತಿಸದವರು ಇಲ್ಲ. ನಾನು ವೇಶ ಕಟ್ಟಿದ್ದರಿಂದ ನನ್ನ ಒತ್ತಿನ ಹೆಂಡತಿ
ನಿನಗೂ ಗುರುತಿಸಲಿಕ್ಕೆ ಅಗಲಿಲ್ಲ. ಈಗ ಹ್ಯಾಗೆ ಸಾಂತ್ವನ ಆಯ್ತಾ?”
“ ಸ್ವಾಮೀ, ಧನ್ಯಳಾದೆ.”
“ಆದ್ದರಿಂದ ನಾನು ಸಾಯದೇ ಮಾತ್ರ ಇದನ್ನು ಪ್ರಚಾರ ಮಾಡಿಬಿಡಬೇಡ. ಒಂದು
ಮಾತು ವಿಭೀಷಣನಿಗೆ ಹೇಳು. ನಾಳೆ ಅಣ್ಣ ಹೀಗೆ ಹೀಗೆ ಹೇಳಿದ್ದಾರೆ ಅಂತ. ಇನ್ನು ಮುಂದೆ
ಉತ್ತರಾಧಿಕಾರಿ ನೀನಂತೆ ಲಂಕೆಗೆ. ಅಣ್ಣ ಎಷ್ಟಾದರೂ ಕೃಷಿ ಮಾಡುವಾಗ ಕೆಲವು ಕಡೆಯಲ್ಲಿ ಮುಳ್ಳಿನ
ಗಿಡವೂ ಹುಟ್ಟಿದೆ. ಕೆಲವು ಕಡೆಯಲ್ಲಿ ಬೇಲಿಯೂ ಹರದದೇ. ಆದರೆ ಇಷ್ಟು ಮಾಡಿಬಿಟ್ಟಿದ್ದಾರಂತೆ
ನಿನ್ನ ಅಣ್ಣ. ಮುಂದೆ ಸಾಗುತ್ತಾ ಕೃಷಿಯನ್ನು ಅಭಿವೃದ್ಧಿ ಮಾಡಿ, ಪ್ರಜೆಗಳನ್ನು ಧರ್ಮದಲ್ಲಿ
ಪರಿಪಾಲಿಸಿ, ರಾಮನಲ್ಲಿ ವಿರೋಧ ಇಲ್ಲದೆ, ಹಾಗಂತ ತಮ್ಮ ಸ್ವಾತಂತ್ರ್ಯವನ್ನು ಉತ್ತರದ ಅಯೋಧ್ಯೆಗೆ
ವಿಕ್ರಯಿಸದೆ, ಅಳಿದು ಹೋದಂತಹ ರಾಕ್ಷಸ ಸಾಮ್ರಾಜ್ಯ ಮತ್ತೊಮ್ಮೆ ಜೀರ್ಣೋದ್ದಾರಗೊಂಡು, ಇದು ಎಂದೆಂದಿಗೂ
ಕಾಣುವಂತೆ ಆಢಳಿತ ಕೆಟ್ಟಂತಹ ರಾಕ್ಷಸರು ಸ್ವತಂತ್ರವಾಗಿ ರಾಜ್ಯವನ್ನು ಕಟ್ಟಿದ್ದಾರೆ ಪ್ರಪಂಚದ
ಇತಿಹಾಸದಲ್ಲಿ ಸ್ಥಾಯಿಯಾಗಿ ಉಳಿಯುವ ಹಾಗೆ ಉತ್ತರದಲ್ಲಿ ಅಯೋಧ್ಯೆಯ ಶ್ರೀರಾಮನ ಧರ್ಮಧ್ವಜ
ಆಕಾಶದಲ್ಲಿ ಹಾರುವಂತೆ, ದಕ್ಷಿಣದ ತುತ್ತ
ತುದಿಯಲ್ಲಿ ಈಚೆ ಅಸುರ ಸಾರ್ವಭೌಮತ್ವದ ಆ ಸ್ವಾತಂತ್ರ ದ್ಯೋತಕವಾದ ಧ್ವಜ ಹಾರುವುದಕ್ಕೆ
ನಿನ್ನದ್ದಾದ ನೆರವನ್ನು ಸದಾ ಕೊಡ್ತಾ ಇರಬೇಕಂತೆ. ಆಮೇಲೆ ಹೇಳು. ಆವಾಗ ನಿನಗೆ ಒಂದು ಕಳಕಳಿ
ಇದ್ದೀತು. ಇಷ್ಟೆಲ್ಲ ಮಾಡಿದಿರೀ ಸ್ವಾಮೀ, ನನ್ನನ್ನೂ ಅರ್ಧ ದಾರಿಯಲ್ಲಿ ಬಿಟ್ಟು ಹೋಗ್ತೀರೋ ಅಂತ.
ನಾನು ಹ್ಯೇಳಲಾರೆ, ನಾನು ಹೇಳಲಾರೆ. ರಾಮನಲ್ಲಿ ಕೇಳೆ, ಆದ್ದರಿಂದ ನಾನಲ್ಲ ರಾಮನಿಗೆ
ಶರಣಾಗಬೇಕಾದ್ದು, ನಾನಲ್ಲ ಸೀತೆಗೆ ಶರಣಾಗಬೇಕಾದ್ದು, ಓ ನನ್ನ ಕೈ ಹಿಡಿದ ಭಾಗ್ಯದ ಮಡದಿ, ನೀನು
ಸೀತಾರಾಮರಿಗೆ ಶರಣಾಗು. ನಿನಗೆ ದಾರಿ ಅದು.
ಶುಭವಾಗಲಿ. ಇದ್ದ ರಾತ್ರಿ ಹಾಳು ಮಾಡುವುದು ಬೇಡ.”
“ಸ್ವಾಮೀ, ಧನ್ಯಳಾದೆ.”
“ನೀನು ಹೋಗಿ ನಿದ್ದೆ ಬರುವುದಿದ್ದರೆ ಸ್ವಲ್ಪ ನಿದ್ರೆ ಮಾಡು....
ನಿದ್ರೆ ಎಲ್ಲಿಂದ ಅದೋ ಅದೋ......” ರಾವಣನ
ಉತ್ಸಾಹದ ಉದ್ಗಾರ ಉದಯಕಾಲದಲ್ಲಿ ಲಂಕೆಯ ದಶದಿಕ್ಕುಗಳಿಗೂ ಬಡಿಯುತ್ತದೆ.