ತಂದೆಯಳಿದ
ದಿವಸದಿಂದ ನಮ್ಮ ರಕ್ಷಿಸಿ |
ಇಂದು ಕುರು
ನೃಪಗೆ ಸಹಾಯದಿಂದ ಗರ್ಜಿಸಿ
ಬಂದು
ಪಸುಳರೊಡನೆ ಕಾದುವುದು ವಿವೇಕವೆ |
ಕಂದರುಭಯ ಪಕ್ಷದಲ್ಲಿ ನಿಮಗೆ ಭೇದವೆ |
ಶೂನ್ಯ
ಹಸ್ತನಾಗಿ ತನ್ನ ತಾಯಿ ಕುಂತಿಯ ಕೈಬೆರಳನ್ನು ಹಿಡಿದು ಋಷಿಗಳ ಜತೆಯಲ್ಲೇ ಹಸ್ತಿನಾವತಿಯನ್ನು
ಪ್ರವೇಶಿಸಿದ ಅದೇ ಶಿಶು, ಬಹಳಷ್ಟು ಸಾಧನೆ ಮಾಡಿ ಇಂದು ಭೀಷ್ಮನಲ್ಲಿ ಕೇಳುವ ಪ್ರಶ್ನೆ
ಇದು..ಕಂದರುಭಯ ಪಕ್ಷದಲ್ಲಿ ನಿಮಗೆ ಭೇದವೆ? ಅಜ್ಜನಲ್ಲಿ ಕೇಳುವಲ್ಲಿವರೆಗೆ ಈ ಮಗುವಿನ ಸಾಧನೆ ಮುಂದುವರೆದು ಬಿಟ್ಟಿತಲ್ಲ? ಏದುಸಿರು
ಬಿಡುತ್ತಾ ಕೈಯಲ್ಲಿ ಗಾಂಢೀವವನ್ನು ಎತ್ತಿಹಿಡಿದು ಅರ್ಜುನ ಕೇಳುತ್ತಿದ್ದಾನೆ?. ಭೀಷ್ಮ ತಾನು
ನೋಡುತ್ತಾನೆ. ಹಿಂದೊಮ್ಮೆ ಗೋಗ್ರಹಣ ಪ್ರಕರಣದಲ್ಲಿ ಅರ್ಜುನನ ಎದುರಾದ ಬಗೆಗೂ ಇಂದು ಎದುರು ನಿಂತ
ಬಗೆಗೂ ಅಜಗಜಾಂತರ ವೆತ್ಯಾಸ.
ತಂದೆ ಮಡಿದ ದಿವಸದಿಂದ ಎಮ್ಮ ರಕ್ಷಿಸಿ..... ಆ
ರಕ್ಷಣೆಯ ನೆನಪುಂಟಲ್ವ. ಅಂದಿನ ಆ ರಕ್ಷಣೆಗೂ ಇಂದಿನ ಈ ಹಸ್ತಿನಾವತಿಯ ಸೇನಾಧಿಪತ್ಯದ ರಕ್ಷಣೆಗೂ
ಅರ್ಥ ಒಂದೇ...ಅದು ಈ ಅರ್ಜುನನಿಗೆಲ್ಲಿ
ಅರಿವಾಗಬೇಕು? ನಾನೂ ಇಂದು ಅದನ್ನೇ ಕೇಳಬೇಕು..ಎನ್ನ.ತಂದೆಯಳಿದ ದಿವಸದಿಂದ......ಈ ಹಸ್ತಿನೆಯ
ಸಿಂಹಾಸನದ ರಕ್ಷಣೆ, ಆದರೆ ಯಾರಲ್ಲಿ ಕೇಳುವುದು?
ಅಣ್ಣತಮ್ಮಂದಿರು ಜಗಳ ಮಾಡುವುದು ಊರವರಿಗೆ ವಿನೋದ ಇರಬಹುದು ಆದರೆ ಆದರೆ ಹೆತ್ತ ತಾಯಿಗೆ?
ಯುದ್ದಾರಂಭದ ಮೊದಲೇ ಸಾವಿರ ಮುಕುಟ ಮರ್ದನರ ಶಿರವನ್ನು
ಕತ್ತರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದರೂ ಪಾಂಡವರನ್ನು ಏನೂ ಮಾಡುವುದಿಲ್ಲ ಎಂದು ಹೇಳಿದವನು
ನಾನು. ಬಹುಶಃ ಅದರ ಅರಿವಿದ್ದೇ ಇಂದು ಎದುರು ಬಂದು ನಿಂತಿದ್ದಾನೋ? “ಕಂದರುಭಯ ಪಕ್ಷದಲ್ಲಿ ನಿಮಗೆ
ಭೇದವೆ.” ಇದು ಶ್ರೀಕೃಷ್ಣನ ಪ್ರಚೋದನೆಯ ಮಾತೇ?
ಅಲ್ಲ ಶ್ರೀಕೃಷ್ನನ ಇರಾದೆಯೇ
ಇದಾಗಿರಬಹುದೇ? ಯಾವುದು ತಪ್ಪು? ಯಾವುದು ಸರಿ?
ಎಂದು ಇತ್ಯರ್ಥಕ್ಕೆ ಸಿಗದೇ ಇರುವಾಗ ಕ್ಷತ್ರಿಯರಾದವರು ನಾವು ಮಾಡುವುದೊಂದೆ, ಹಿಂದೆ
ಗುರು ಪರಶುರಾಮರಲ್ಲಿಯೂ ಅದನ್ನೇ ಕಂಡವನು ಹಾಗಾಗಿ ಇಂದು ಅದೇ ಶಸ್ತ್ರಗಳ ಮೂಲಕ ಕಂಡುಕೊಳ್ಳಬೇಕು.
ಈ ವರೆಗೆ ಪಾರ್ಥನ ಹಲವು ಪರಾಕ್ರಮಗಳ ವರದಿಯನ್ನಷ್ಟೆ ಕೇಳಿದವನು,, ಇಂದು ಈ ಮೊಮ್ಮಗ
ಕ್ಷತ್ರಿಯೋಚಿತ ರೀತಿಯಲ್ಲೇ ಯುದ್ದ ಅರಂಭಿಸಿದ. ಪಿತಾಮಹನಾದ ತನಗೆ, ಶರಸಂಧಾನದ ಮೂಲಕವೇ ಅಭಿವಾದನವನ್ನು
ಮಾಡುತ್ತ ಶರಗಳೆರಡನ್ನು ತನ್ನ ಚರಣಗಳ ಮಧ್ಯೆಯೇ ನೆಟ್ಟುಬಿಟ್ಟನಲ್ಲ?
ಇದೀಗ
ಅವನ ಅಸ್ತ್ರಗಳ ಮೊನಚು ಎಂಥಾದ್ದು ಎಂದು ಕಾಣುವ ಬಯಕೆ. ಅದೋ ಅದೋ ನರನಾರಾಯಣರು ಎದುರೇ ನಿಂತ ಮೇಲೆ
ತೋರಬೇಕಲ್ಲವೇ ಪರಶುರಾಮರಿಂದ ಕಲಿತದ್ದು.
ಭೀಷ್ಮ ಬಾಣಗಳ
ಸುರಿಮಳೆಯನ್ನೇ ಸುರಿಸುತ್ತಾನೆ.
ಶರವರ್ಷ
ಧಾರೆಯನ್ನು ಹರಿಸುವಾಗ ಮೊಮ್ಮಗನ ಬಗ್ಗೆ ಯೋಚಿಸುವುದಿಲ್ಲ ಭೀಷ್ಮ. ಗುರು ಸೇವೆ ಮಾಡಿ ಕಲಿತ
ಧನುರ್ವೇದವದು. ಅಲ್ಲಿ ಬಿಲ್ಲನ್ನು ಹೆದೆ ಏರಿಸಿದಾಗ ಭೀಷ್ಮನಿಗೆ ಲೋಕ ಕಾಣುವುದಿಲ್ಲ . ಈವರೆಗಿನ
ಯುದ್ದಗಳಲ್ಲಿ ಅದು ವ್ಯಕ್ತವಾಗಿದೆ. ಮಾತ್ರವಲ್ಲ.... ಸೋಲಿಸುವ ಪಣವನ್ನು ಇಬ್ಬರೂ
ಕಟ್ಟಿಯಾಗಿದೆ. ಯುದ್ದಾರಂಭದಲ್ಲಿ ಹೇಳಿದ ಮಾತು ಪಾಂಡವರನ್ನೇನು ಮಾಡಲಾರೆ
ಎಂಬುದು ಆದರೂ ಬಾಣಗಳ ಪ್ರವಾಹ, ಅಲ್ಲಿ ಕೃಷ್ಣನಿದ್ದಾನೆ, ಹಾಗಾಗಿ ಭೀಷ್ಮ ನಿಶ್ಚಿಂತೆಯಿಂದ ವೈವಿಧ್ಯಮಯವಾಗಿ
ಯುದ್ದ ಪ್ರಕಟನೆಯನ್ನು ತೋರಿಸುತ್ತಾರೆ. ಬಹುಶಃ ತನ್ನದೆಲ್ಲವನ್ನೂ ತೋರುವ ತವಕವೂ
ಸೇರಿಕೊಂಡಿತ್ತು. ಎದುರಿಗೆ ತನ್ನ ಮೊಮ್ಮಗ ಜಗತ್ತು ಕಂಡ ಮೂರು ಲೋಕದ ಗಂಡು ಪಾರ್ಥನಲ್ಲವೇ?
ಯುಕ್ತವಾದಂತಹ ಶರಸಂಧಾನ ಮಾಡಿದರೆ. ಭೀಷ್ಮ
ಆಶ್ಚರ್ಯ ಚಕಿತನಾಗಿ ತುಟಿಗೆ ಬೆರಳನ್ನು ತೋರುತ್ತಾನೆ. ಪ್ರಯೋಗಿಸಿದ ಒಂದು ಅಸ್ತ್ರವೂ
ಅರ್ಜುನನ್ನು ಘಾಸಿಗೊಳಿಸುವುದಿಲ್ಲ !!. ಆದರೆ ಆತನ ಅಸ್ತ್ರ ನೇರಾಗಿ ತನ್ನನ್ನು ಆಕ್ರಮಿಸುತ್ತದೆ.
ಮಾತ್ರವಲ್ಲ ತನ್ನ ಸಾರಥಿಯೂ ಪ್ರಜ್ಞೆಯನ್ನು
ಕಳೆದುಕೊಂಡನಲ್ಲಾ, ಏನಿದು? ತಿಳಿಯದೇ ಕೃಷ್ಣನತ್ತ
ದೃಷ್ಟಿ ಹರಿಸಿದರೆ...... ಆತ ಅದೇ ಕಿರುನಗುವಿನಲ್ಲಿ ಸಾರಥ್ಯದಲ್ಲೇ ಮಗ್ನನಾಗಿದ್ದಂತೆ ಭಾಸವಾಗುತ್ತದೆ.
ಎಲಾ
ಎಲಾ ಕೃಷ್ಣಾ ನಿನ್ನ ಜಾಣತನವೇ? ನಿನ್ನ ಸಾರಥೀತನದ ಪಾತ್ರ ತನ್ನ ಸೀಮೆಯನ್ನು ಮೀರುವುದಕ್ಕೆ ಕಾರಣ
ಪಾರ್ಥ ಸಂರಕ್ಷಣೆ. ಆ ಕಾರ್ಯದಲ್ಲಿ ತನ್ನ ಕಡೆಗಿನ ಗಮನ ಕಡೆಗಣಿಸಲ್ಪಟ್ಟಿತೇ.? ಇದೆಯಲ್ಲಾ
ಆತನದ್ದೇ ಇನ್ನೊಂದು ರೂಪ, ಗುರುವಾಗಿ
ದಯಪಾಲಿಸಿದ್ದು, ಪರಶುರಾಮ ದತ್ತ ಶರ...
ಭಳಿರೆ ವಂಜರೆ ಪಾರ್ಥ ಎನುತ ಸಕಲ ಶಸ್ತ್ರದಿ |
ಹಳಚಲಪಜಯವು ಕಿರೀಟಿಗಾಗದಂದದಿ ||
ನಳಿನನಾಭ ರಥವ ನಡೆಸುತಿರಲು ಭೀಷ್ಮನು |
ಬಳಲಿ ಹರಿಯ ಗೆಲುವೆನೆಂದು ಕ್ರೋಧಗೊಂಡನು||
ಪರಶುರಾಮದತ್ತ ಶರವ ತೆಗೆದು ಪೂಡಲು |
ಉರಿಯನುಗುಳ್ವ ಶರವು ಹರಿಯ ಹಣೆಗೆ ನಾಂಟಲು
ಪೊರಳಿದವು ತುರಗ ಹನುಮನಳುಕೆಸ್ಯಂದನ |
ತಿರುಗುಲಸುರಹರನ ನೊಸಲು ಬಿರಿದುದಾಕ್ಷಣ ||
ಗುರುಗಳಾದ ಪರಶುರಾಮರು ನೀಡಿದ್ದ
ಅಸಿರತ್ನವೆಂಬ ಶರ ಗುರುವಿನ ಇನ್ನೊಂದು ಅವತಾರವಾದ ಶ್ರೀಕೃಷ್ಣನ ಮೇಲೆ ಪ್ರಯೋಗಿಸುತ್ತಾನೆ. ಈ
ಬಾರಿ ಭೀಷ್ಮನ ಬಾಣ ಗುರಿತಪ್ಪುವುದಿಲ್ಲ. ಕೃಷ್ಣನ ನೊಸಲು ಒಡೆದು ರಕ್ತ ಚಿಮ್ಮುತ್ತದೆ. ಪಾರ್ಥನ ರಥದ ಕುದುರೆಗಳು
ನಿಯಂತ್ರಣದಿಂದ ಹೊರಬರುತ್ತವೆ. ತ್ರೇತಾಯುಗದ
ಯುದ್ದವನ್ನು ಕಂಡು ಈ ಯುದ್ದವನ್ನು ಕಾಣಲಾರೆ
ಎಂದು ತಿರುಗಿದ ಹನುಮ ಒಂದು ಕ್ಷಣ ಕಂಪಿಸುತ್ತಾನೆ.,
ನೊಸಲೊಡೆದು ರಕ್ತ ಸೂಸಲು ದೃಗುದ್ವಯದಿ ಕಿಡಿ |
ಮಸಗಲೌಡ್ಜಗಿದು ಘನರೋಷದಿಂ ಕುರುಬಲವ |
ನಸಿಯರೆದು ಭೀಶ್ಮನ ವಿಭಾಸುವೆನೀರೇಳು ಜಗವೆರಸಿ ಶತಕೋಟಿಯು ||
ಬಿಸಜಪೀಠ ಮಹೇಷ ಶಕ್ರ ವೈವಸ್ವತರ್ |
ಮುಸುಕಿದಂ ಬಿಡೆನೆಂದ ಗರ್ಜಿಸುತ ವಾಘೆಯಂ |
ಬಿಸುಟು ಚಕ್ರವಗೊಂಡು ದುಮ್ಮಿಕ್ಕಲಾಗ ಚತುರ್ದಶಭುವನ ತಲ್ಲಣಿಸಿತು ||
ನೊಸಲೊಡೆದು
ರಕ್ತ ಚಿಮ್ಮುತ್ತಿದ್ದಂತೆ ಶ್ರೀಹರಿ ಕುದುರೆಯ ವಾಘೆಗಳನ್ನು ಕಿತ್ತೆಸೆಯುತ್ತಾ ರಥದಿಂದ
ದುಮ್ಮಿಕ್ಕುತ್ತಾನೆ. ಸಕಲ ತತ್ವ ಶಾಸ್ತ್ರಗಳಲ್ಲಿ ಪಾರಂಗತನಾದ ಓರ್ವ ಜ್ಞಾನಿ ಭೀಷ್ಮ, ಹೀಗೆ ವರ್ತಿಸುವುದೇ? ಭೀಷ್ಮ ಮಾತಿನಲ್ಲಿ ಈ ವರೆಗೆ ಕರ್ಮ
ಜಿಜ್ಞಾಸೆಯಲ್ಲಿ ಹೋರಾಟಕ್ಕೆ ನಿಂತವನು, ಈವಾಗ ನೇರ ಹೋರಾಟಕ್ಕೆ ಇಳಿದುಬಿಟ್ಟನಲ್ಲ? ಪ್ರಳಯ ರುದ್ರನಾಗಿ ಬಿಡುತ್ತಾನೆ. ಕಣ್ಣುಗಳು ದಾವಾನಲವನ್ನು
ವಮನ ಮಾಡುತ್ತಿದ್ದರೆ ಭೂಮಿಯೇ ಕಂಪಿಸುತ್ತದೆ, ವಾಘೆಯನ್ನು ಬಿಸುಟ ಕೈಯಲ್ಲಿ ಸುದರ್ಶನ
ಜ್ವಲಿಸುತ್ತದೆ. ಶತರುದ್ರರೇ ಬರಲಿ, ಯಾವ ಶಕ್ತಿಯೇ ಇದಿರಾಗಲಿ ಕ್ಷತ್ರಿಯ ಧರ್ಮ ಯುದ್ದ
ಧರ್ಮವನ್ನು ಮರೆತ ಭೀಷ್ಮನ ಶಿರಸನ್ನು ಕಡಿದು ಚೆಲ್ಲುತ್ತೇನೆ ಎಂದು ಆರ್ಭಟಿಸುತ್ತಿರಬೇಕಾದರೆ,
ಕೈಯಲ್ಲಿ ವಾಘೆಯ ಬದಲು ಸುದರ್ಶನ ಕಾಣಿಸಿಕೊಳ್ಳುತ್ತದೆ. ಯಾರು ಬೇಕಾದರೂ ಬರಲಿ ಎಂದು ಕ್ರೋಧದಿಂದ
ಶ್ರೀಕೃಷ್ಣ ಭೀಷ್ಮನ ರಥದತ್ತ ಧಾವಿಸಬೇಕಾದರೆ ಚತುರ್ದಶ ಭುವನ ತಲ್ಲಣಿಸಿತು.
ಯಾರಕೈಯಲ್ಲಿ ಸುದರ್ಶನವನ್ನು
ಕಾಣಬೇಕೆಂದು ಬಯಸಿದನೋ...ಯಾರನ್ನು ಸಾರಥೀ ಸ್ಥಾನದಿಂದ ಕೆಳಕ್ಕಿಳಿಯುವಂತೆ ಪ್ರೇರೆಪಿಸಿದನೋ ಆತ
ಅವೆರಡನ್ನೂ ಪೂರೈಸಿ ಇತ್ತಲೇ ಧಾವಿಸಿ ಬರುತ್ತಿದ್ದಾನೆ. ದಾವಾನಿಲ ತನ್ನನ್ನೇ ಸುಡುವುದಕ್ಕೆ
ಧಾವಿಸಿ ಬರುತ್ತದೆ. ತನ್ನನ್ನು ಸುಡಬಲ್ಲುದೇ? ಇಲ್ಲ ಈ ಸಮಸ್ತ ಭೂಮಂಡಲವನ್ನು ಸುಡುವುದೇ? ಸುಡುವುದೋ
ಇಲ್ಲವೋ ಆ ತರ್ಕವಲ್ಲ, ಆದರೆ... ಆದರೆ ಈ ಭೀಕರ
ರುದ್ರ ರೂಪವನ್ನು ಕಾಣುವ ಶಕ್ತಿಯಾದರೂ ಯಾರಿಗಿದೆ?
ಹರಿಯ ಖಾತಿಯ ತಡೆವಾರೆಂ |
ದೆರಡು ಬಲ ಬೆರಗಾಗಿ ಕಣ್ಮು |
ಚ್ಚಿರಲು ಭೀಷ್ಮನು ಬೆದರಿ ರಥದಿಂದಿಳಿದು ನಡೆತಂದು ||
ದುರಿತವನದಾವಾಗ್ನಿ ಲಕ್ಶ್ಮೀ |
ವರ ಮುಕುಂದ ಮುರಾರಿ ಜಯವೆನಂ |
ತೆರಗಿ ಮಗುಳೆದ್ದಚ್ಯುತನ ಮೃದುಕರವ ಪಿಡಿದೆಂದಾ ||
ಸಿಟ್ಟಿನಿಂದ
ಕಂದನಿಗೆ ತಾಯಿ ಹೊಡೆಯುವುದಕ್ಕೆ ಕೈ ಎತ್ತಿದಾಗ, ಆ ಮಗು ತಾಯಿಯ ಆ ರೂಪವನ್ನು ನೋಡಲಾಗದೆ, ತಾಯಿಯ
ಏಟನ್ನೂ ತಪ್ಪಿಸಿಕೊಳ್ಳಲೂ ಅಗದೇ ತಾಯಿಯನ್ನು ಮತ್ತಷ್ಟು ಬಿಗಿದಪ್ಪಿ ಹಿಡಿಯುತ್ತದೆ. ತಾಯಿಯ
ಕ್ರೋಧದಿಂದ ತಪ್ಪಿಸಿಕೊಳ್ಳಲು ಬೇರೆ ಯಾವುದನ್ನೂ ಆ ಪುಟ್ಟ ಕಂದನೂ ಆಶ್ರಯಿಸುವುದಿಲ್ಲ. ಬದಲಾಗಿ
ಆಮ್ಮನ ಸಿಟ್ಟು ಹೆಚ್ಚಾದಷ್ಟು ಅಮ್ಮನನ್ನೇ ತಬ್ಬಿ ಹಿಡಿವಂತೆ ಭೀಷ್ಮ ಮಗುವಾಗಿಬಿಡುತ್ತಾನೆ. ಲೋಕವನ್ನೇ
ಸುಟ್ಟುಬಿಡುವ ದಾವಾಗ್ನಿಯನ್ನು ಶಮನ ಮಾಡುವ ಯಾವ ಶಕ್ತಿಯೂ ತನ್ನ ಬಳಿ ಇಲ್ಲ. ತನ್ನಮ್ಮನ ಜನ್ಮ
ಸ್ಥಾನ ಅದೇ ಹರಿಪಾದವಲ್ಲವೇ? ಭೋರ್ಗರೆದು ಉಕ್ಕಿ ಬರುವ ತನ್ನವ್ವೆ ಗಂಗಾ ಮಾತೆಯನ್ನೇ
ಕಾಣುತ್ತಾನೆ. ಹಾಗಾಗಿ ಈ ಪ್ರವಾಹವನ್ನು ಬೇರಾವುದೇ ಶಕ್ತಿಯಿಂದ ಎದುರಿಸಲಾಗದು. ಭೀಷ್ಮ ತನ್ನ
ಅಸ್ತ್ರ ಶಸ್ತ್ರಗಳನ್ನೆಲ್ಲ ಬಿಸುಟು ಕೈ ಎತ್ತಿ ಬರುವ ಹರಿಯ ಮೃದುಕರವನ್ನು
ಹಿಡಿಯುತ್ತಾ....ಸ್ವಾಮೀ ಸ್ವಾಮಿ.....
ಪ್ರೇಮದೊಳೆನ್ನಯ ಮಾತ ಲಾಲಿಸಬೇಕು ||
ಎನ್ನಯ ಕಂಠವ ನಿರಿಯಲು ಚಕ್ರವ |
ಚಿನ್ಮಯ ಕೈಯಲಿ ಪಿಡಿದಿಹೆಯಾ ||
ಚೆನ್ನಾಯ್ತು ಸೇವಕ ಜಯವ ಪಾಲಿಸೆ ಲೋಕ |
ವನ್ನು ರಕ್ಷಿಪ ದೇವ ಮಹಾನುಭಾವ ಶ್ರೀಮನೊಹರ ||
ಓ ಚಿನ್ಮಯ
ಮೂರ್ತಿಯೇ, ನಿನ್ನ ಅಭಿನಯ ಚೆನ್ನಾಗಿದೆ. ರಾಗಾದಿ ವಿಕಾರಗಳು ನಮ್ಮಂತಹ ಪ್ರಾಕೃತ ಪುರುಷರ
ಚಿತ್ತದಲ್ಲಿ. ಪ್ರಕೃತಿಯ ಪರಿಧಿಯನ್ನು ಮೀರಿ ನಿಂತಿರುವ ಕೇವಲ ಚಿನ್ಮಾತ್ರವಾದಂತಹ ದಿವ್ಯ
ಮೂರ್ತಿಯನ್ನು ಹೊಂದಿರುವಂತಹ ನಿನ್ನಲ್ಲಿ, ಪ್ರಕೃತಿ ಜನ್ಯವಾದಂತಹ ರಾಗಾದಿ ವಿಕಾರಗಳು
ಹುಟ್ಟುವುದಾದರೂ ಹೇಗೆ ಸ್ವಾಮಿ? ಪ್ರಕೃತಿಯ ನಿಯಮದಂತೆ ಹುಟ್ಟಿಕೊಂಡವನೋ ಹೇಳು. ವಸುದೇವ ದೇವಕಿಯರ
ಮಡಿಲಲ್ಲಿ ನಿನಗೆ ಬೇಕು ಎಂಬಾಗ ಅವತರಿಸಿದವನು ನೀನು. ನಿನಗೆ ಬೇಕೂಂತ ಹಾಲು ಕುಡಿದವನೂ ಅಲ್ಲ
ಬೇಡಾಂತ ಎಸೆದವನೂ ಅಲ್ಲ. ನಗು ಬಂದ್ರೆ ಅದು ನಗುವು ಅಲ್ಲ ಅತ್ತರೆ ಅದು ಅಳುವೂ ಅಲ್ಲ. ಎಲ್ಲವೂ
ನಿನ್ನ ಲೀಲೆ ಎಂದು ತಿಳಿದುಕೊಂಡವರು ಸ್ವಾಮಿ ನಾವು.
ಕೌರವನ ಅನ್ನದ ಋಣ, ಕೆಟ್ಟ ಅಹಾರ ದೇಹದಲ್ಲಿ ಕೆಟ್ಟ ಪರಿಣಾಮವನ್ನೇ ಉಂಟು ಮಾಡಿದಂತೆ ಅದು
ನನ್ನಿಂದ ಏನೆಲ್ಲ ಹೇಳಿಸಿತು. ಏನೆಲ್ಲ ಪ್ರೇರೇಪಣೆಯನ್ನು ಕೊಟ್ಟಿತು. ಅಸಿರತ್ನ ಶರ ಪ್ರಯೋಗಿಸಿದ್ದು ಹೌದು. ನಿನ್ನ
ನೊಸಲು ಒಡೆದದ್ದು ಹೌದು ರಕ್ತ ಬಂದದ್ದೂ ಹೌದು. ಅಪರಾಧ ಆಗಿದ್ರೆ ಮನ್ನಿಸಬೇಕು. ನನ್ನಿಂದ
ಯಾವುದನ್ನು ಮಾಡಿಸಬಾರದೋ ಅವನ್ನೆಲ್ಲ ಮಾಡಿಸಿತು.ಆದರೆ ಈಗ ವಿಶುದ್ದ ಅಂತಃ ಕರಣ ನಾನು. ಕೆಟ್ಟದ್ದು ಎಲ್ಲ ತೊಳೆದು
ಹೋಯಿತು ಸ್ವಾಮಿ.
ಅರ್ಜುನನನ್ನು ಗೆಲ್ಲಿಸ್ತೇನೆ ಅಂತ
ವಾಘೆಯನ್ನು ಹಿಡಿದೆ. ಈಗ ಅದನ್ನು ಬಿಸುಟು ಚಕ್ರವನ್ನು ಹಿಡಿದಿದ್ದಿಯಲ್ಲ. ಯಾಕೆ ನನ್ನನ್ನು ಕೊಲ್ಲುವುದಕ್ಕೆಯೇ? ಅಲ್ಲ, ಇದು
ನನ್ನನ್ನು ಗೆಲ್ಲಿಸುವುದಕ್ಕೇಯೇ? ಅರ್ಜುನ ಗೆದ್ದರೆ
ಅಜ್ಜ ನಾನು ಗೆಲ್ಲಬೇಕಲ್ಲ? ಹರಿಯ
ಮಾಯವನುಳಿದು..ಎಂದು ದ್ರೋಣರು ಸುಯೋಧನನಿಗೆ ಯುದ್ದಾರಂಭದ ಮೊದಲೇ ಹೇಳಿದ ಬಗೆಯಲ್ಲಿ, ಈ ಹರಿಯನ್ನು ಇದಿರಿಸುವಲ್ಲಿ ಮೊದಲು ಮಾಡಿದ್ದು
ನನ್ನನ್ನು. ಇಂದು ಇದಿರಾದದ್ದು ಹೌದು ಸ್ವಾಮಿ ಆದರೆ ಆ ಮಾಯೆಯನ್ನು ಕಂಡೆನಲ್ಲಾ ಸ್ವಾಮಿ.
ಕಣ್ಣುಗಳು ದಾವಾನಲವನ್ನು ಉಗುಳ್ತಾ ಇದೆ. ಉಸಿರು ಬುಸುಗುಡುತ್ತಾ ಇದೆ. ಇದು ಹರಿಯ ರೂಪವೇ?
ಕೈಯಲ್ಲಿ ಚಕ್ರ ತಿರುಗುತ್ತಾ ಇದೆ...ಈ ರೂಪ ಯಾರನ್ನು ಶಿಕ್ಷಿಸುವುದಕ್ಕಾಗಿ? ಚಕ್ರವನ್ನು ಹಿಡಿವ
ಕೈಯಲ್ಲಿ ನನ್ನ ಮೊಮ್ಮಗನ ರಥದ ಕುದುರೆಯ ವಾಘೆಗಳನ್ನು ಕಂಡು, ಅಲ್ಲಿ ಚಕ್ರವನ್ನು ಕಾಣುವ ಬಯಕೆ ಆದದ್ದು ಸತ್ಯ. ಆದರೆ
ಸ್ವಾಮಿ ಅದು ನನ್ನ ತರಿಯುವುದಕ್ಕೆ ಎಂದಾದರೆ,
ಹಲವು ದುರುಳರನ್ನು ತರಿದ ಚಕ್ರ. ಆಗ ರೂಪ ಇದೇ ಇತ್ತೋ ತಿಳಿಯದು. ಹೆಚ್ಚೇಕೆ
ಶಿಶುಪಾಲನನ್ನು ಸಹನೆಯಿಂದಲೇ ತರಿದೆ. ಸ್ವಾಮಿ ಅವರೆಲ್ಲರಿಗಿಂತಲೂ ದುರುಳ ನಾನಾದೆನಾದರೆ, ಇಗೋ
ತಲೆ ತಗ್ಗಿಸಿದ್ದೇನೆ, ಕೊರಳು ಬಗ್ಗಿಸಿದ್ದೇನೆ ಕಡಿದುಬಿಡು. ಹೋಗಲಿ ಈ ಜೀವ. ನಿನ್ನ ಆಗ್ರಹಕ್ಕೆ
ತುತ್ತಾದ ಜೀವಿಗೆ ಮತ್ತೆ ಬದುಕುವ ಹಕ್ಕು ಇಲ್ಲ. ಮತ್ತಿನ್ನು ಈ ಭೀಷ್ಮನಿಗೆ ಬೇಕೆ ಹೇಳು?
ಅಲ್ಲ ಸ್ವಾಮಿ ಇದು ವಾಸ್ತವ ಅಲ್ಲ. ಇದು ಅಭಿನಯ. ಯಾಕೆ ಹೇಳ್ತಾ ಇದ್ದೇನೆ? ಹಿಂದೆ ಇದೇ ಅವತಾರದಲ್ಲಿ ಚಾಣೂರ ಮುಷ್ಠಿಕರನ್ನು
ಕೊಂದೆ, ಕಂಸನನ್ನು ಕೊಂದೆ ಆವಾಗ ನಿನ್ನ ಕೈಯಲ್ಲಿ ಚಕ್ರವಿತ್ತೇ? ಹಿರಣ್ಯ ಕಶಿಪುವನ್ನು ಕೊಂದೆಯಲ್ಲ. ಪ್ರಹ್ಲಾದನನ್ನು
ಉದ್ದರಿಸುವುದಕ್ಕೆ ಆವಾಗ ಚಕ್ರ ಹಿಡಿದಿಯೋ? ಈಗ ಬೇರೆ ಯಾವ ಅಯುಧವೂ ಸಿಕ್ಕಲಿಲ್ಲ. ಚಕ್ರ
ಹಿಡಿದಿದ್ದಿ . ನಿನಗೆ ಕೊಲ್ಲುಬೇಕೆಂಬ ಬಯಕೆ ಇದ್ದಲ್ಲಿ ಚಕ್ರವೇ ಆಗಬೇಕೆಂದೇನೂ ಇಲ್ಲ. ಕೈಯ ಶಂಖವಾದರೂ ಸರಿಯೇ. ಅದರ ನಾದದಿಂದ ಪಾತಾಳ ಗರ್ಭದ
ರಕ್ಕಸರ ಎದೆಯನ್ನು ಬಗೆಯುವ ನೀನು, ಈ
ಯುದ್ದಾರಂಭದ ಮೊದಲು ಅದನ್ನು ಮೊಳಗಿಸಿ ಶತ್ರುಪಾಳಯದ ಎದೆಯನ್ನೇ ಬಿರಿಯುವಂತೆ ಮಾಡಿದವನು .
ಅದರಿಂದಲೇ ಊದಿ ನನ್ನನ್ನು ಸಂಹರಿಸಬಹುದಿತ್ತಲ್ಲವೇ? ನೀನು ಹಾಗೆ ಮಾಡಲಿಲ್ಲ. ಚಕ್ರವನ್ನು ಹಿಡಿದೆ. ನಿನ್ನ ಹರಿ
ಎಲ್ಲೇಲ್ಲು ಇದ್ದಾನೋ? ಈ ಕಂಬದೊಳಗೂ ಇದ್ದಾನೋ? ಇದ್ದಾನೆ. ಎಂದು ಪ್ರಹ್ಲಾದ ಹೇಳಿದಾಗ ಕಂಬಂದಿಂದ
ಒಡೆದು ಬಂದವನು ನೀನು. ಯಾಕೆ. ಆ ಭಾಗವತೋತ್ತಮ ಪ್ರಹ್ಲಾದನ ಮಾತುಗಳು ಸುಳ್ಳಾಗಬಾರದಲ್ಲಾ? ಇಲ್ಲೂ
ಹಾಗೆ, ಸಾಯುವ ಕಾಲಕ್ಕೆ ಈ ಮುದುಕ ಏನೋ ಹೇಳಿದ.
ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ ಎಂದು. ಪ್ರಹ್ಲಾದನ ಹಾಗೆ ಪೂರ್ಣ ಜ್ಞಾನದಿಂದಲೂ
ಅರ್ಪಣಾ ಭಾವದಿಂದಲೂ ಹೇಳಿದ ಮಾತುಗಳಲ್ಲ. ಕೇವಲ ನಾನು ನಿನ್ನ ಭಕ್ತ ಎಂಬ ಅಹಂಕಾರದಿಂದ ಒದರಿದ
ಮಾತುಗಳು. ಸ್ವಾಮೀ ಆದರೂ ಅದು ನಿನ್ನ ಅನುಗ್ರಹಕ್ಕೆ ಕಾರಣವಾಯಿತಲ್ಲ? ಚಕ್ರ ಹಿಡಿಯದೇ ಇದ್ದರೇನಂತೆ? ಬದಲು ಪಾಂಡವರನ್ನೇ ಆಯುಧಗಳನ್ನಾಗಿ ಮಾಡಿಕೊಂಡವನು ನೀನು. ಮೂಢ
ಕೌರವ ಇದು ತಿಳಿಯದೇ ಹೋದ.
ಇಂದಿರೇಶನೆ ನಾನು ಇವರ ಜಗಳವನ್ನು
ನಿಂದು ಈಕ್ಷಿಸಲಾರೆ ತಿಳಿದು ಕಣ್ಣಾರೆ ||
ಎಂದಾದರೀ ಕಾಯ ಎರವಿನೊಡವೆ ಜೀಯ
ಇಂದೇ ಪೋಗಲಿ ತೀರ್ಚು | ಚಕ್ರವನೆಚ್ಚು || ಶ್ರೀಮನೋಹರ ||
ಸ್ವಾಮೀ..ಈವರೆಗೆ ನನ್ನ ಮಾತು ಕೇಳು ಎಂದು ನಿನ್ನಲ್ಲಿ
ಹೇಳಿದವನಲ್ಲ. ಇಂದು ಈಗ ಹೇಳ್ತಾ ಇದ್ದೇನೆ..ಸ್ವಾಮೀ ಎನ್ನ ಮಾತ ಕೇಳು. ಬೇರೆ ಯಾರಾದರೂ ನನ್ನ
ಮಾತು ಕೇಳ್ತಾರೆಯೇ? ಆ ವಿಶ್ವಾಸ ಹೊರಟು ಹೋಯಿತು ಸ್ವಾಮಿ. ಒಂದು ಕಾಲದಲ್ಲಿ ಭೀಷ್ಮ ಹೇಳಿದ ಮಾತು
ಶಿಲಾ ಲೇಖವಾಗಿತ್ತು..ನನ್ನ ಹೆಸರೇ ನನ್ನ ಮಾತನ್ನು ಕೇಳುವಂತೆ ಮಾಡ್ತಿತ್ತು. ಆದರೆ ಇಂದು ಸ್ವಾಮಿ
ಪ್ರಪಂಚ ಬಿಡಿ ನನ್ನ ಮಕ್ಕಳು ಮೊಮ್ಮಕ್ಕಳು ಕೇಳುವುದಿಲ್ಲ. ಭೀಷ್ಮ ಈ ವರೆಗೆ ಎಲ್ಲಿಯೂ ಸೋತ ಇತಿಹಾಸವಿಲ್ಲ. ಪ್ರಪಂಚವನ್ನು ಗೆದ್ದು ಬಂದ ಭೀಷ್ಮನ ಸೋಲು
ಅರಿವಾಗುವಾಗುವುದು... ಈ ಮಕ್ಕಳನ್ನು ನೋಡುವಾಗ. ಕುರುಕ್ಷೇತ್ರದಲ್ಲಿ ಈ ವರೆಗೆ ಗೆಲ್ಲುತ್ತಾ
ಬಂದೆ ಸ್ವಾಮಿ. ಗೆಲ್ಲುತ್ತೇನೆ ಎಂದುಕೊಂಡೇ ಇಲ್ಲಿ ಪ್ರವೇಶ ಮಾಡಿದೆ. ಆದರೆ ಸ್ವಾಮಿ ಕುರುಕ್ಷೇತ್ರದ ಯುದ್ದ ಆರಂಭವಾಯಿತು ಎಂದರೆ ಅದು ಭೀಷ್ಮನ ಅತಿ ದೊಡ್ಡ ಸೋಲು. ಇದನ್ನು ತಿಳಿಯದವನಲ್ಲ.
ಆದರೆ ಅಭಿನಯಿಸುವುದಕ್ಕೆ ಪಾತ್ರವಾಗಿ ವೇದಿಕೆ ಏರಿದ ಮೇಲೆ ತನ್ನ ಹೆಂಡತಿಯೋ ತಾಯಿಯೋ ಬಂದಳು ಎಂದು
ಮಾತನಾಡುವುದಕ್ಕೆ ಆಗುವುದೇ? ಹಾಗಾಯಿತು ಸ್ವಾಮಿ.
ಬದುಕುಬೇಕು ಎಂಬ ಬಯಕೆಯಿಂದ ನಾನು
ಈವರೆಗೆ ಬದುಕನ್ನು ಸಾಗಿಸಿದವನಲ್ಲ. ಆಹಾರದಲ್ಲಾಗಲೀ ನಿದ್ರಾ ಭಯ, ಮೈಥುನಾದಿಗಳಲ್ಲಾಗಲೀ ನನ್ನನ್ನು
ನಾನು ತೊಡಗಿಸಿಕೊಂಡವನೂ ಅಲ್ಲ. ಅದಕ್ಕೆ ನಾನು ದಾಸನಾದವನೂ ಅಲ್ಲ. ಎಳವೆಯಲ್ಲಿಯೇ ಈ ವಂಶದ
ಅಭಿವೃದ್ಧಿಗೆ ನಾನು ಕಂಕಣತೊಟ್ಟವನು. ಕೃಷ್ಣಾ ಒಳ್ಳೆಯದಾಗಲೀ ಅಂತ ಬಯಸಿದೆ. ನನ್ನ ಬಯಕೆ
ಅಸ್ಥಾನದ್ದೂ ಅಲ್ಲ ಆಪಾರ್ಥವನ್ನು ಕಲ್ಪಿಸುವಂಥದ್ದೂ ಅಲ್ಲ. ಮಾಡಿದ್ದೆಲ್ಲ ಒಳ್ಳೆಯದಕ್ಕೆಂತಲೇ ಮಾಡಿದ್ದು.
ನಿನಗೆ ಗೊತ್ತುಂಟು. ಆದರೆ ಹಾಗೆ
ಆಗಲಿಲ್ಲ. ಎಲ್ಲ ವೈಪರೀತ್ಯವನ್ನೇ ಉಂಟು ಮಾಡಿತು. ಸಾಕಾಯಿತು. ನನ್ನ ಮಕ್ಕಳು ನನ್ನ ಮಕ್ಕಳು,
ಒಳ್ಳೆದಾದರೂ, ತುಂಬಿದ ಸಂಸಾರ ಕಂಡು ಕೃಷ್ಣಾ ಅಂತ
ಕಣ್ಣು ಮುಚ್ಚಿಯೇನು. ಇವರ ಹೆಗಲ ಮೇಲೆ ಹೋದೇನು ಅಂತ ತಿಳ್ಕೊಂಡೆ. ಆಗೋದಿಲ್ಲ ಕೃಷ್ಣ. ಆಗು
ಮಾಡುವುದಕ್ಕೆ ನಿನ್ನಿಂದಲೂ ಆಗಲಿಲ್ಲ ಯುದ್ದವೇ ಆಗ್ತಾ ಇದೆ. ಯಾರೆ ಸಾಯಲಿ ಸೂತಿಕ ನನಗೆ ತಾನೆ. ಆದಕಾರಣ
ಯುದ್ದದಲ್ಲಿ ಯಾರು ಉಳೀತಾರೆ ಯಾರು ಅಳೀತಾರೆ ಇನ್ನು ಕಾಣಲಾರೆ. ಇನ್ನು ನೋಡಲಾರೆ. ಹಾಗಂತ
ಜೀವಗಳ್ಳನಾಗಿ ಸಾಯಲಾರೆ. ನಾನು ಇಚ್ಛಾಮರಣಿ ಆದರೆ
ನನ್ನಲ್ಲಿ ಬದುಕುವ ಆಶೆ ತುಂಬುವುದಕ್ಕಾಗಿಯೇ ನನ್ನಪ್ಪ ಆ ವರ ದಯಪಾಲಿಸಿದನೋ ಏನೊ? ಈ ವರೆಗೆ ಮರಣದ
ಇಚ್ಛೆ ಆಗಲೇ ಇಲ್ಲ. ಬದುಕಿದೆ ಬದುಕಿದೆ, ಇಂದಲ್ಲ ನಾಳೆ ಸರಿಯಾದೀತು. ಕೃಷ್ಣಾ ಯಾಕೆ ಹುಟ್ಟಿಸಿದೆಯೋ ಗೊತ್ತಿಲ್ಲ. ಹುಟ್ಟಿಸಿದ್ದಕ್ಕೆ ಈವರೆಗೆ ಬದುಕಿಸಿದೆ. ಸಾಕು ಮಾಡು
ನಮ್ಮ ತಂದೇ ಚಕ್ರ ಬಿಡು. ಹೋಗಲಿ ಈಜೀವ.
ಎನಲು ಕಿರುನಗೆಗೂಡಿ ಚಕ್ರವ |
ದನುಜದಲ್ಲಣ ಮುಚ್ಚಿ ವರಸ್ಯಂ |
ಬಲಿಸುವೆಯ ಮುಂದಿನ್ನರಣ್ಯವ ಮರುಳಲಾ ಮಗನೆ ||
ಕೊಲುವರಾರೆನ್ನನು ಜಗತ್ಪ್ರಯ |
ದೊಳಗೆ ಸಾಕಿದು ಪಡೆವೆ ಮುಕ್ತಿಯ |
ನಳಲಬೇಡೆಂದೊರೆದು ಕೃಷ್ಣಗೆ ನಮಿಸಿ ಕಳುಹಿದನು ||
ಇದು
ಭೀಷ್ಮರನ್ನು ತರಿಯುವುದಕ್ಕೆ ಹಿಡಿದ ಚಕ್ರವಾ? ಚಕ್ರ ಎಲ್ಲಿ? ಹಿಡೀತೇನೆ ಚಕ್ರ ಎಂದು ಈವರೆಗೆ
ಕೃಷ್ಣ ಚಕ್ರವನ್ನು ಹಿಡಿದವನಲ್ಲ. ಚಕ್ರ ಹಿಡಿವ ಸಂಕಲ್ಪ ಮಾತ್ರ ಸಾಕು. ಭೀಷ್ಮ ಹೇಗೆ ವೇದಿಕೆಯ ಮೇಲೆ ಪಾತ್ರವಾಗಿ
ಅಭಿನಯಿಸಿದನೋ..ಹಾಗೇ...ಇದು ಕೃಷ್ಣನ ಅಭಿನಯ. ಈಗ ಭೀಷ್ಮ ವೇದಿಕೆ ಬಿಟ್ಟು ಇಳಿದನೋ?
ಭೀಷ್ಮರೆ?
ಈವರೆಗೆ ಕೌರವನ ಉಪ್ಪಿನ ಋಣ ಅಂತ ಹೇಳಿದವರು ನೀವು. ಏನು ಕೌರವ ಹುಟ್ಟುವ ಮೊದಲು ಉಪ್ಪನ್ನು
ತಿಂದಿಲ್ಲವೇ? ಆ ಉಪ್ಪಿನ ಋಣ ತೀರಿಸುವುದಕ್ಕಾಗಿಯೇ ಚಕ್ರ ಹಿಡಿದದ್ದು. ಇನ್ನು ಸಾಲ ಉಂಟೋ
ಕೌರವನಲ್ಲಿ ? ಇಲ್ಲ. ಈಗ ಶರಣಾಗಿದ್ದೀರಿ ನನಗೆ. ನೊಂದೆ, ಇನ್ನು ನೋಯುವುದಕ್ಕೆ ಈ ಶರೀರದಲ್ಲಿ
ಶಕ್ತಿಯಿಲ್ಲ. ಆದಕಾರಣ ಈ ಬಂಧನದಿಂದ ನನ್ನನ್ನು ಬಿಡಿಸು ಎಂಬ ಧ್ವನಿ ತಾನೆ? ಇವರ ಕಲಹವ ನೋಡಿ
ಸಹಿಸಲಿಕ್ಕೆ ಆಗುದಿಲ್ಲ ಕೃಷ್ಣಾ. ಈಗ ಹೇಗೆ ತೃಪ್ತಿಯಾಯಿತೇ? ಯುದ್ದಾರಂಭದ ಮೊದಲು ನಿಮ್ಮ ಮೇಲೆ
ಕೌರವನಿಗೂ ಕರ್ಣನಿಗೂ ಒಂದು ಅನುಮಾನವಿತ್ತು. ಎಂತಹ ಶಪಥವನ್ನು ಮಾಡಿದರೂ ಪಾಂಡವರನ್ನೇನೂ
ಮಾಡುವುದಿಲ್ಲ, ಎಂಬ ಮಾತು, ಭೀಷ್ಮರನ್ನು ಪಾಂಡವ ಪಕ್ಷಪಾತಿಯನ್ನಾಗಿ ಅನುಮಾನದಿಂದ ಕಾಣುವ ಹಾಗೆ
ಮಾಡಿತ್ತು. ಈಗ ಅರ್ಜುನನ ಆಯುಧ ಸಾಲದೆ ಕೃಷ್ಣ ಚಕ್ರ ಹಿಡಿದ.... ಸಾಲದೇ ಇಷ್ಟು. ಇನ್ನು ಕೌರವನ
ಉಪ್ಪಿನ ಋಣ ತೀರಿತಲ್ಲ? ಭೀಷ್ಮ ಕೌರವನಿಗಾಗಿ
ದುಡಿದ. ತೃಪ್ತಿಯಾಯಿತಲ್ಲಾ?
ಅರ್ಜುನಾ.... ಅಗೋ ಸೂರ್ಯಾಸ್ತವಾಗ್ತಾ ಇದೆ.
ಇಂದಿಗೆ ಈ ಯುದ್ದ ಸಾಕು. ಬಿಡದಿಗೆ ನಡೆಯೋಣ.