ಇಂದಿನ
ದಿನಗಳಲ್ಲಿ ಮಧ್ಯಮಗಳ ದಾರಿ ವಿಶಾಲವಾದಂತೆ ಸಂವಹನದ ವೇಗವೂ ಹೆಚ್ಚಾಗಿ ಬಿಡುತ್ತದೆ. ರಸ್ತೆ ಅಗಲವಾದಾಗ ಸಂಚಾರ ತಡೆ ನಿವಾರಣೆಯಾದಂತೆ ಈ
ಮಾಧ್ಯಮಗಳೂ ಅವುಗಳನ್ನು ಉಪಯೋಗಿಸುವ ರೀತಿಯೂ ಮನೋವೇಗಕ್ಕಿಂತಲೂ ವೇಗವೋ ಎಂಬಂತೆ
ಭಾಸವಾಗುತ್ತದೆ. ಯಾಕೆಂದರೆ ಊರ ಯಾವುದೋ ಮೂಲೆಯ
ಯಕ್ಷಗಾನ ಕಾರ್ಯಕ್ರಮ ಆಲ್ಲಿ ದಿನಾಂಕ ನಿರ್ಧರಿಸುವ ಮೋದಲೇ ಅದರ ರೂಪು ರೇಷೆ ಇನ್ನೊಂದು ಭಾಗಕ್ಕೆ
ಕ್ಷಣಮಾತ್ರದಲ್ಲಿ ಬಿತ್ತರವಾಗಿಬಿಡುತ್ತದೆ. ಹೀಗೆ ವಾರದಲ್ಲಿ ಕನಿಷ್ಟ ಪಕ್ಷ ಮೂರು ನಾಲ್ಕಾದರೂ
ಯಕ್ಷಗಾನ ಕಾರ್ಯಕ್ರಮದ ಆಮಂತ್ರಣ ವಿವಿಧ ಮಾಧ್ಯಮಗಳ ಮೂಲಕ ಕೈ ಸೇರಿಬಿಡುತ್ತದೆ. ವಿಚಿತ್ರವೆಂದರೆ
ಒಂದೇ ಕಾರ್ಯಕ್ರಮಕ್ಕೆ ಹಲವು ವಿಧದ ಆಮಂತ್ರಣಗಳು ವೆತ್ಯಸ್ತ ರೀತಿಯಲ್ಲಿ ಒದಗಿಬರುತ್ತದೆ. ಈ ಮೇಲ್
ಮುಖಾಂತರ ಕಳುಹಿಸಿ ಮತ್ತೆ ವಾಟ್ಸಪ್ ಮುಖಾಂತರವೂ ಕಳುಹಿಸಿ ಸಾಲದೆಂಬಂತೆ ಪ್ರಾಮುಖ್ಯತೆಗೋಸ್ಕರ
ವೈಯಕ್ತಿಕ ಕರೆ ಮಾಡಿ ಒತ್ತಾಯದ ಆಮಂತ್ರಣ ನೀಡುವ ಪ್ರಮೇಯವನ್ನು ಕಾಣಬಹುದು. ಈಗೀಗ ಈ
ಅಮಂತ್ರಣಗಳನ್ನು ಬಂದಂತೆ ಬದಿಗಿರಿಸಿ ಇಲ್ಲವೇ ಹರಿವ ನದಿಯಲ್ಲಿ ತೇಲಿಬಿಟ್ಟಂತೆ ಇನ್ನೋಂದು
ಮಾಧ್ಯಮಕ್ಕೆ ತೇಲಿಸಿಬಿಡುತ್ತೇವೆ.
ಮೊದಲೆಲ್ಲ
ಆಮಂತ್ರಣ ನೀಡಿದಾಗ ಅದನ್ನು ಮನ್ನಿಸುವುದಿತ್ತು. ವ್ಯಕ್ತಿಗತ ಕಾರಣವೇನಿದ್ದರೂ ಗೌರವದಿಂದ
ಸ್ನೇಹದಿಂದ ಆಮಂತ್ರಿಸಿದ್ದಾರಲ್ಲಾ ಎಂಬ ಭಾವದಲ್ಲಿ ಕಾರ್ಯಕ್ರಮಕ್ಕೆ ಹೋಗುವುದೂ ಇತ್ತು.
ಈಗೀಗಲಂತೂ ಅದರ ಬಗ್ಗೆಯೂ ಒಂದು ರೀತಿಯ ವಿರಕ್ತಿ ಕಾಡಲಾರಂಭಿಸುತ್ತದೆ. ಇದು ಒಬ್ಬಿಬ್ಬರಿಗಲ್ಲ
ಹಲವು ಜನರಲ್ಲಿ ಈ ಭಾವ ಬೆಳೆದು ಬಿಟ್ಟಿದೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲೆಲ್ಲ ನಮ್ಮ ಆತ್ಮೀಯ
ಪರಿಧಿಯೊಳಗಿನವರ ಕಾರ್ಯಕ್ರಮ ಕರಪತ್ರ ಎಲ್ಲೋ ಸಿಕ್ಕಿದರೆ ಛೇ ನನಗೆ ಹೇಳಲೇ ಇಲ್ಲ ಮಾರಾಯ್ರೆ ಎಂದು
ಮರುಗುವ ಕಾಲವಿತ್ತು. ಈಗ ಆ ಮರುಗುವಿಕೆಯ ಪ್ರಭಾವ ಕಡಿಮೆಯಾಗುತ್ತಿದೆ ಮಾತ್ರವಲ್ಲ ಇಲ್ಲವೇ ಇಲ್ಲ
ಎನ್ನಬಹುದು. ಮೊದಲು ಹೇಳಲಿಲ್ಲವಲ್ಲ ಎಂಬ ಕಾರಣಕ್ಕೆ
ಆ ಅತ್ಮೀಯರಲ್ಲಿ ಮುನಿಸಿಕೊಂಡು ಮಾತು ಬಿಟ್ಟದ್ದು ಇರಬಹುದು. ಆದರೆ ಈಗ ಹಾಗಿದೆ ಎಂದು
ಹೇಳುವುದಕ್ಕೆ ಆಮನಸ್ಸು ಒಪ್ಪಿಕೊಳ್ಳುವುದಿಲ್ಲ. ಯಾಕೆ ಹೀಗೆ ?
ಯಥೋ ಹಸ್ತ ತಥೋ ದೃಷ್ಟಿರ್ | ಯಥೋ ದೃಷ್ಟಿರ್ ತಥೋ ಮನಃ||
ಯಥೋ ಮನಃ ತಥೋ ಭಾವಃ | ಯಥಾ ಭಾವಃ ತಥೋ ರಸಃ ||
[ಹಸ್ತವು ಎಲ್ಲಿ ಸಾಗುತ್ತದೋ ಅಲ್ಲಿ
ದೃಷ್ಟಿ ಚಲಿಸುತ್ತದೆ. ಎಲ್ಲಿ ದೃಷ್ಟಿ ಚಲಿಸುತ್ತದೋ ಅಲ್ಲಿ ಮನಸ್ಸು ಹೋಗುತ್ತದೆ. ಎಲ್ಲಿ ಮನಸ್ಸು
ಹೋಗುತ್ತದೋ ಅಲ್ಲಿ ಭಾವ ಸಂಚರಿಸುತ್ತದೆ. ಎಲ್ಲಿ ಭಾವ ಸಂಚಾರವಿದೆಯೋ ಅಲ್ಲಿ ರಸ
ಉತ್ಪತ್ತಿಯಾಗುತ್ತದೆ.]
ಇಲ್ಲಿ ರಸ ಎಂದರೆ
ಅದು ಕಲೆ. ರಸೋತ್ಮತ್ತಿಯನ್ನೇ ಕಲೆ ಎಂದು ಕರೆಯುತ್ತಾರೆ. ಕಲೆ ಎಂದರೆ ಅದು ನೈಜವಲ್ಲ. ನೈಜವಾದರೆ
ಅದು ಕಲೆ ಅಂತ ಅನಿಸಿಕೊಳ್ಳುವುದಿಲ್ಲ. ಇದು ಪ್ರಾಜ್ಞರು ಹೇಳುವಂತಹ ಮಾತು. ಒಬ್ಬ ನಟನಾದವನು ರಂಗದ
ಮೇಲೆ ಪಾತ್ರವಾಗಿ ಅಭಿನಯಿಸಬೇಕು....ಅದರೆ ಪಾತ್ರವೇ ಅವನಾದರೆ ಅಭಾಸವಾಗುತ್ತದೆ. ಅಭಿನಯಿಸುವುದೆಂದರೆ
ಅದರಂತೆ ಎಂಬ ಉತ್ಪ್ರೇಕ್ಷೇ ಅಲ್ಲಿ ಉಂಟಾಗಬೇಕು. ಅದುವೇ ಎಂದಾಗಬಾರದು. ಗಂಡನಾಗಿಯೋ
ಹೆಂಡತಿಯಾಗಿಯೋ ಮಗನಾಗಿಯೋ ಅಭಿನಯಿಸಬೇಕು ಅದುವೇ ಆದರೆ ಅಲ್ಲಿ ರಂಗಕ್ಕೆ ಅಭಾಸವೆಸಗಿದಂತೆ.
ಕೈ ಹೋದೆಡೆ
ದೃಷ್ಟಿ ದೃಷ್ಟಿ ಇದ್ದೆಡೆ ಮನಸ್ಸು ಹೀಗೆ ಕೊನೆಯಲ್ಲಿ ರಸೋತ್ಪತ್ತಿ ಉಂಟಾಗಬೇಕು. ಇಲ್ಲಿ ಬಲವಂತ
ಕೂಡದು. ಅದರ ಅರ್ಥ ಕಲಾವಿದ ಹೃದಯದಿಂದ ಸ್ವತಃ ಭಾವ ತುಂಬಿ ರಸೋತ್ಮಾದನೆ ಮಾಡಬೇಕು. ಇನ್ನೊಬ್ಬನ
ಒತ್ತಡಕ್ಕೋ ಬೇಡಿಕೆಗೋ ಪ್ರಚೋದನೆಗೋ ಒಳಗಾಗಿ ಆತ ತನ್ನ ಕಲೆಯನ್ನು ತೋರಿಸುತ್ತಾನೆ ಎಂದಾದರೆ ಅದು
ಮೇಲೆ ಹೇಳಿದ ರಸೋತ್ಪತ್ತಿ ಎನಿಸುವುದಿಲ್ಲ. ಕೀಲಿ ಗೊಂಬೆಗೆ ಕೀಲಿತಿರುಗಿಸಿ ಬಿಟ್ಟಂತೆ ಕೀ ಕೊಟ್ಟ
ಗೊಂಬೆಯಂತಾಗುತ್ತದೆ. ಮೇಲೆ ಹೇಳಿದಂತೆ ಅದು ಸಹಜ ಲಕ್ಷಣವಾಗುವುದಿಲ್ಲ. ಹಾಗಾಗುವುದಿಲ್ಲ ಎಂದಾದಾಗ ಅಲ್ಲಿ ರಸೋತ್ಮತ್ತಿಯೂ ಸಾಧ್ಯವಾಗುವುದಿಲ್ಲ.
ರಸೋತ್ಪತ್ತಿ ಇಲ್ಲದ ಮೇಲೆ ಅಲ್ಲಿ ಕಲೆ ಹೇಗೆ ಸಾಧ್ಯವಾಗುತ್ತದೆ? ಸೂಕ್ಷ್ಮವಾಗಿ ಯೋಚಿಸಿದಾಗ ಕಲೆ ಇಲ್ಲದ ಮೇಲೆ ಕಲಾವಿದ ಎನಿಸಿಕೊಳ್ಳುವುದು ಹೇಗೆ?
ಇಂತಹ
ಸಾಮಾನ್ಯವಾದ ಸಂಗತಿಯನ್ನು ಕಲಾವಿದನಾದವನು ಗಂಭೀರವಾಗಿ ಪರಿಗಣಿಸಿ ಕಲಾವಿದನಾಗುವ
ಪ್ರಯತ್ನದಲ್ಲಿಯಾದರೂ ವ್ಯಸ್ತನಾಗಬೇಕು. ಆದರೆ ವಾಸ್ತವದಲ್ಲಿ ಹಾಗಿಲ್ಲ. ಇದನ್ನೆಲ್ಲ ಹೇಳಿದಿರೆಂದಾದರೆ ಹಾಸ್ಯದ
ವಸ್ತುವಾಗುತ್ತದೆ. ಕಲೆ ಅರಳುವಲ್ಲಿ ಸ್ವಾರ್ಥವಿರಬಾರದು. ಸ್ವಾರ್ಥವಿದ್ದಾಗ ಮೇಲೆ ಹೇಳಿದ ಯಾವ
ಕ್ರಿಯೇಯೂ ಪರಿಪೂರ್ಣವಾಗಿ ಸಾಧ್ಯವಾಗುವುದಿಲ್ಲ. ಬಂಧನದಿಂದಲೂ ದಮನದಿಂದಲೂ ಉತ್ಪತ್ತಿಯಾಗುವ ಕಲೆ ಅದು ಕಲೆ ಎನಿಸಲ್ಪಡುವುದಿಲ್ಲ.
ಕೋಗಿಲೆ ಮಾಮರದಲ್ಲಿ ಕೂಗಿದಾಗ ಯಾರ ಒತ್ತಡವೂ ಇರುವುದಿಲ್ಲವಂತೆ. ಹೀಗಿದ್ದರೂ ಇಂದು ದಮನಕಾರೀ ಪ್ರವೃತ್ತಿ ಬೇಡ ಬೇಡವೆಂದರೂ
ಸವಾರಿ ಮಾಡಿಬಿಡುತ್ತದೆ. ಯಕ್ಷಗಾನಕ್ಕೆ
ಸಂಭಂಧಿಸಿ ಇದು ಹಲವುಸಲ ನಿಜವಾಗುವುದು ವಿಷಾದನೀಯ ಎನ್ನಬೇಕು. ಹೀಗಾಗಿ ಯಕ್ಷಗಾನದಷ್ಟು ಆವಿಷ್ಕಾರಕ್ಕೆ ಒಳಗಾದ ಕಲೆ
ಬೇರೆ ಇಲ್ಲ ಎಂದು ಭಾಸವಾಗುತ್ತದೆ. ಯಾಕೆಂದರೆ
ಮೂಲ ಸ್ವರೂಪ ಎಂಬುದಕ್ಕಿಂತಲೂ ಹಲವು ವರ್ಷಗಳಿಗಿಂತ ಮೊದಲ ಯಕ್ಷಗಾನಕ್ಕೂ ಈಗಿನ ಯಕ್ಷಗಾನಕ್ಕೂ
ವೆತ್ಯಾಸ ಕಂಡಾಗ ಈ ಮಾತು ತರ್ಕಬದ್ಧವೆನಿಸುತ್ತದೆ.
ರಂಗದ ಮೇಲೆ
ಕಲಾವಿದ ತನ್ನ ಸ್ವತಂತ್ರವಾಗಿ ಕಲೆಯನ್ನು
ಹೊಮ್ಮಿಸುತ್ತಿರಬೇಕು. ಎಂದರೆ ಆತನಿಗೆ ತೋಚಿದ್ದು ಎಂದಲ್ಲ. ಆ ಕಲೆಗೆ ಅನುಗುಣವಾಗಿ ಯಾವ
ಒತ್ತಡಕ್ಕೂ ಒಳಗಾಗದೆ ಕಲೆ ಹೊಮ್ಮುತ್ತಿರಬೇಕು. ಒಂದು ಹೂವು ಸಹಜವಾಗಿ ಅರಳುತ್ತಿದ್ದರೆ ಅದು
ಸಹಜವಾದ ಪರಿಮಳವನ್ನು ಪರಿಪೂರ್ಣವಾಗಿ ನೀಡುತ್ತದೆ. ಆದರೆ ಬಲವಂತವಾಗಿ ಆ ಹೂವಿನ ಎಸಳನ್ನು ತಮಗೆ
ಬೇಕಾದಂತೆ ಅರಳಿಸಿದರೆ ಅದು ಅಸಹಜವಾಗಿಬಿಡುತ್ತದೆ. ಈಗ ಇಂತಹ ಪ್ರಮೇಯಗಳೇ ಒದಗಿ ಬರುವಾಗ ಸಹಜವಾದ ಕಲೆಯನ್ನು ಕಾಣುವುದಕ್ಕೆ
ಸಾಧ್ಯವಾಗುವುದಿಲ್ಲ. ಕಲಾವಿದನಾದವನು ಯಾವುದೊ ಒತ್ತಡಕ್ಕೆ ಒಳಗಾದಂತೆ ಬಾಸವಾಗುತ್ತಾನೆ. ಭಾಗವತನ
ಹಾಡುವಿಕೆಯಲ್ಲಿ ಪಾತ್ರಧಾರಿಯ ಕುಣಿತದಲ್ಲಿ ಈ ತುಡಿತವನ್ನು ಕಾಣಬಹುದು. ಇದಕ್ಕೆ ಹಲವು ಕಾರಣಗಳು
ಇರಬಹುದು. ಬಹುಪಾಲು ನ್ಯಾಯಯುತವಾದದ್ದೇ ಎಂದು ಭಾಸವಾಗಬಹುದು. ಅದರೆ ಇಲ್ಲೆಲ್ಲ ಮೌನವಾಗಿ ಕಮರಿ
ಹೋಗುವುದು ಶ್ರೀಮಂತವಾದ ಕಲೆ. ಕಲ್ಪ ವೃಕ್ಷವಾದ ತೆಂಗಿನ ಫಲಗಳನ್ನು ಕಿತ್ತು ಕಿತ್ತೂ ನಂತರ
ಸಾಲದೆಂಬಂತೆ ಗರಿಗಳನ್ನೂ ಕೀಳತೊಡಗಿದಾಗ ಅಲ್ಲಿ ಏನು ಉಳಿಯುತ್ತದೆ. ಕೇವಲ ಅಸ್ಥಿಪಂಜರದಂತೆ ಕಂಬ
ಮಾತ್ರ ಏಕಾಂಗಿಯಾಗಿ ನಿಂತು ಬಿಡುತ್ತದೆ.
ವಿಚಿತ್ರವೆಂದರೆ ಕಲಾವಿದನಿಗೆ
ಮಾತ್ರ ಒತ್ತಡವಲ್ಲ ಇಂದು ಪ್ರೇಕ್ಷಕ ಕೂಡ ಈ ಒತ್ತಡವನ್ನು ಅನಿಭವಿಸುತ್ತಿದ್ದಾನೆ ಎಂಬುದು ಈಗ
ಅನುಭವಕ್ಕೆ ಬರುತ್ತಿದೆ.
ದೈನಂದಿನ
ವ್ಯಾವಹಾರಿಕ ಪ್ರಪಂಚದ ಒತ್ತಡಗಳು ಬದುಕಿಗೆ ಅನಿವಾರ್ಯ. ಅದರಿಂದ ಹೊರತಾಗಿ ಬದುಕನ್ನು
ನಿರ್ವಹಿಸುವುದು ದೊಡ್ಡ ಸವಾಲಾಗುತ್ತದೆ. ಹಾಗಾಗಿ
ಈ ಒತ್ತಡದಿಂದ ಕ್ಷಣ ಹೊತ್ತಾದರೂ ಹೊರ ಬರುವ ಎಂದು ಮನುಷ್ಯ ಕಲಾಸ್ವಾದನೆಯನ್ನು
ಆಶ್ರಯಿಸುವುದು. ಎಲ್ಲ ಒತ್ತಡದಿಂದಲೂ ಮುಕ್ತನಾಗಿ
ಶಾಂತಿಯನ್ನು ಅನುಭವಿಸುವುದಕ್ಕೆ ದೇವಸ್ಥಾನಕ್ಕೆ ಹೋದರೆ ಗ್ರಹಚಾರವೆಂಬಂತೆ ಅಲ್ಲಿ ಅದಕ್ಕಿಂತಲೂ
ಹೆಚ್ಚು ಒತ್ತಡ ಅನುಭವಿಸುವುದಿದ್ದರೆ ಅಲ್ಲಿಗೆ ಹೋಗುವ ಉದ್ದೇಶದ ಸಾರ್ಥಕತೆ ಏನು? ಕಲೆ ಮನಸ್ಸನ್ನು
ಅರಳಿಸಬೇಕೆ ಹೊರತು ಕೆರಳಿಸುವಂತಾಗಬಾರದು. ಆಗ ಅಲ್ಲಿಂದಲೂ ಪಲಾಯನ ಮಾಡುವ ಮನೋಭಾವ ಬೆಳೆದು
ಬಿಡುತ್ತದೆ. ಇಂದು ಕಲೆ ಒತ್ತಡವನ್ನು ಶಮನವಾಗಿಸುವ ಹಾಗಾಗುವುದು ಅದೃಷ್ಟವಿದ್ದಲ್ಲಿ ಮಾತ್ರ.
ಇಂದು
ಕಾರ್ಯಕ್ರಮದ ಸಂಖ್ಯಾ ಹೋಲಿಕೆಯಿಂದ ನೋಡಿದಲ್ಲಿ ಯಕ್ಷಗಾನ ಕಾರ್ಯಕ್ರಮಗಳು ವಿಪುಲವಾಗಿ ಆಗುತ್ತದೆ.
ಆದರೆ ಗುಣಮಟ್ಟದ ವಿಷಯಕ್ಕೆ ಬಂದಾಗ ಗಾಬರಿಯಾಗಿಬಿಡುತ್ತದೆ. ಇದರಲ್ಲಿ ಹವ್ಯಾಸಿಗಳು ವ್ಯವಸಾಯಿಗಳು
ವರ್ಗೀಕರಣ ಸಾಧ್ಯವಾಗುವುದಿಲ್ಲ. ವ್ಯವಸಾಯಿಗಳು ಹೊಟ್ಟೆಪಾಡು ಎಂಬ ಧೋರಣೆಯಿದ್ದರೆ ಹವ್ಯಾಸಿ ಪಟ್ಟ
ಎಂಬುದು ಎಲ್ಲದಕ್ಕೂ ಪರವಾನಿಗೆ (ಲೈಸೆನ್ಸ್) ತೆಗೆದುಕೊಂಡಹಾಗೆ ಅನ್ನಿಸುತ್ತದೆ. ಹವ್ಯಾಸಿಗಳಲ್ವ
ಇಷ್ಟುಧಾರಳ ಎಂಬ ಭಾವನೆ. ಆದರೆ ಧಾರಳತನದಿಂದ ರಂಗದ ಮೇಲೆ ಅಭಾಸಗಳನ್ನು ನೋಡುವ ದುರ್ದೈವ
ಪ್ರೇಕ್ಷಕನದ್ದು. ಕುಣಿಯಲು ಬಾರದವ ಹಾಗೆ ಹೇಳುವುದಕ್ಕಿಂತ ಸರಿಯಾಗಿ ಕಲಿಯದವನು ಎಂದರೆ
ಸೂಕ್ತ ವೇಷತೊಟ್ಟರೆ ಆತ ಆಷ್ಟು ಮಾಡಿದ್ದೇ ದೊಡ್ಡದು ಎನ್ನವ ಶ್ಲಾಘನೆ. ಇಲ್ಲಿ ಈ ಅಭಾಸ ರಂಗದ ಮೇಲೆ ಕಂಡಾಗ ಪ್ರೇಕ್ಷಕ ಸ್ಪಂದಿಸುತ್ತಾನೆ. ಆ
ಸ್ಪಂದನೆ ಧನಾತ್ಮಕವಾಗಿದ್ದರೆ ಉತ್ತಮ ವಿಮರ್ಶೆ, ಆದರೆ ಋಣಾತ್ಮಕವಾಗಿದ್ದಲ್ಲಿ ಬೆದರಿಕೆ ಹಂತದವರೆಗೂ
ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಮನಸ್ಸನ್ನು ಮುದಗೊಳಿಸಬೇಕಾದ ಕಲೆ, ಆ ಕಲೆಯ ಮೇಲಿನ
ಅಭಿಮಾನ ಇನ್ನಿಲ್ಲದ ಒತ್ತಡವನ್ನು ಅನುಭವಿಸುವಂತೆ ಮಾಡುತ್ತದೆ. ಆಟದ ಆಮಂತ್ರಣದ ಉದ್ದೇಶ ಸ್ಪಷ್ಟವಾಗುತ್ತಾ ಹೋಗುತ್ತದೆ. ಕೇವಲ
ಯಕ್ಷಗಾನದ ಕಲೆಯ ಹಿತ ಎಂಬುದು ಪ್ರಶ್ನಾರ್ಹವಾಗಿಬಿಡುತ್ತದೆ. ಕಲೆ ಎಂಬುದು ಹೆಸರುಗಳಿಸುವ ಮಾಧ್ಯಮವಾದಾಗ ಸ್ವಾರ್ಥ
ಹೆಡೆಯಾಡಿ ಯಕ್ಷಗಾನ ನಂತದರ ವಿಷಯವಾಗಿಬಿಡುತ್ತದೆ. ಹಾಗಾಗಿ ಆಮಂತ್ರಣ ಓದುವುದಕ್ಕಷ್ಟೆ ಸೀಮಿತವಾಗುತ್ತದೆ.
ಯಕ್ಷಗಾನ
ಪೂರ್ಣವಾಗಿ ಅಭ್ಯಸಿಸಿ ತರಬೇತಿಗಳಿಸುವುದು ಅಸಂಭವ ಎನಿಸಿದರೂ ರಂಗದ ಮೇಲೆ ಏರಿದಾಗ ತಾನು
ಪರಿಪೂರ್ಣನಲ್ಲ ಎಂಬ ಭಾವ ಹೊಂದಿರಬೇಕು. ಇದು ಆ ಕಲೆಯ ಬಗೆಗಿನ ಪ್ರಾಮಾಣಿಕತೆಯನ್ನು
ತೋರಿಸುತ್ತದೆ. ಈ ಭಾವಕ್ಕೆ ಪ್ರಾಮಾಣಿಕನಾದರೆ ಯಾವ ರೀತಿಯ ವಿಮರ್ಷೆಯನ್ನಾದರೂ ವಿಶಾಲವಾಗಿ ಸ್ವೀಕರಿಸುವ ಮನೋಭಾವ ತನ್ನಿಂತಾನೆ
ಉಂಟಾಗುತ್ತದೆ. ಋಣವೋ ಧನವೋ ಆ ಗುಣಗಳನ್ನು ನೋಡುವುದಿಲ್ಲ.
ಅದು ಒಳಗಿನ ಕಲೆಯನ್ನು ಉದ್ದೀಪನ ಗೊಳಿಸುವುದಕ್ಕೆ
ಸಹಕಾರಿಯಾಗುತ್ತದೆ. ಅಪೂರ್ಣತೆಯಲ್ಲಿ ಪೂರ್ಣತೆಯನ್ನು ಕಾಣಬಹುದು. ಆದರೆ ಇಲ್ಲಿ ಅಪ್ರಾಮಾಣಿಕನಾದಗ ವಿಮರ್ಶೆಯನ್ನೋ
ಅನಿಸಿಕೆಗಳನ್ನೋ ಧಿಕ್ಕರಿಸುವ ಮನೋಭಾವ ಸ್ಫುಟಿಸುತ್ತದೆ. ಅವಾಗ ಸಹಜ ಪ್ರೇಕ್ಷಕ ದೂರ ಉಳಿದುಬಿಡುತ್ತಾನೆ. ತಮ್ಮ ತಾಳಕ್ಕೆ ಪ್ರೇಕ್ಷಕ
ಕುಣಿಸಬೇಕೆಂಬ ಬಯಕೆ ಇದು.. ಪ್ರೇಕ್ಷಕನ ತಾಳ ತಪ್ಪಿಹೋಗುತ್ತದೆ. ನಿಂತ ನಿಲುವುಗನ್ನಡಿಯಲ್ಲಿ ಪ್ರತಿಬಿಂಬ ವಾರೆಯಾದಾಗ ತಾವು
ನೇರವಾಗುವ ಬದಲು ಕನ್ನಡಿಯನ್ನೇ ವಾರೆಯಾಗಿಸುವ ಪ್ರವೃತ್ತಿ.





.jpg)