ಚೆಂಡೆ ಮೃದಂಗ ಹೀಗೆ ಪಕ್ಕ ವಾದ್ಯಗಳೆಲ್ಲವೂ ಸಮಶ್ರುತಿಯಲ್ಲಿಟ್ಟು ಭಾಗವತ ಹಾಡು ಹೇಳುವಾಗ ಎಲ್ಲವೂ ಸಮವಾಗಿದೆ ಎನ್ನುವಾಗ ಅಪಶ್ರುತಿಯೊಂದು ಸೂಕ್ಷ್ಮವಾಗಿಯಾದರೂ ಹೊರಬಂದರೆ ಎಲ್ಲವೂ ಒದಗಿಬಂದರೂ ಸಕಲವೂ ಕಳೆದುಕೊಂಡಂತೆ. ಇನ್ನೇನು ಎಲ್ಲವೂ ಸುಖಪ್ರಾಪ್ತಿಕೆ ಹತ್ತಿರವಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದರೆ ಒಮ್ಮಿಂದೊಮ್ಮೆಲೇ ಎಲ್ಲವೂ ಕಳಚಿಹಾಕಿದ ಅನುಭವವಾಗಿಬಿಡುತ್ತದೆ. ಒಂದು ಸಂಜೆಯಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ಅದಾಗಲೇ ಮತ್ತೊಂದು ಪ್ರಖರ ಸೂರ್ಯ ಅಸ್ತಮಿಸಿದ ವಾರ್ತೆ ಬಡಿದಪ್ಪಳಿಸಿ ಸರ್ವಾಂಗವು ತತ್ತರಿಸಿ ಕತ್ತಲಿಗೆ ದೂಕಿದ ಅನುಭವವಾಯಿತು.
ಯುವ ಭಾಗವತ ಹಿತೈಷಿ ಶ್ರಿ ಪ್ರಸಾದ ಭಾಗವತನ ಭೂಮಿಯ ಸಂಬಂಧ ಕಳಚಿಕೊಂಡ ಸುದ್ದಿ ನಂಬಲು ಸಾಧ್ಯವಿಲ್ಲದಂತಾಗಿತ್ತು. ಕೂಡಲೇ ಮಿತ್ರ ವೇಣೂರ ಸುಬ್ಬಣ್ಣನಿಗೆ ಕರೆ ಮಾಡಿದೆ. ಕರೆ ತಾನೊಬ್ಬನೇ ರಿಂಗಣಿಸಿ ನಿಂತು ಹೋಯಿತು. ಖಂಡಿತ ಸುಬ್ಬಣ್ಣ ಅಳುತ್ತಿರಬಹುದು ಅದು ಸುಳ್ಳಾಗಲಿಲ್ಲ. ತುಸು ಹೊತ್ತಿನಲ್ಲೇ ಸುಬ್ಬಣ್ಣ ಕರೆ ಮಾಡಿದರು. ನನ್ನ ಊಹೆ ನಿಜವಾಗಿತ್ತು. ಸುಬ್ಬಣ್ಣ ಅಕ್ಷರಶಃ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನಿಷ್ಕಲ್ಮಶ ಹೃದಯಕ್ಕೆ ನಿಷ್ಕಲ್ಮಶ ಹೃದಯದ ಕಂಬನಿಯದು. ನಿಜಕ್ಕೂ ದಿಗ್ಭ್ರಾಂತನಾದೆ. ಇಂತಹ ವಾರ್ತೆಗಳು ಇತ್ತೀಚೆಗೆ ಹೊಸತಲ್ಲ. ಆಗೆಲ್ಲ ಮನಸ್ಸಿನ ತುಮುಲಗಳನ್ನು ವ್ಯಕ್ತ ಪಡಿಸಲು ನುಡಿನಮನ ಸಲ್ಲಿಸುವುದಕ್ಕೆ ಮನಸ್ಸು ಸಿದ್ದವಾಗಿಬಿಡುತ್ತಿತ್ತು. ಇಂದೂ ಅದಕ್ಕೆ ಯತ್ನಿಸಿದರೆ ಕೈ ಮುಂದಕ್ಕೆ ಓಡದಂತಹ ಒಂದು ನಿಶ್ಯಕ್ತಿ ಆವರಿಸಿ ಬಿಟ್ಟಿತ್ತು. ಛೇ ....ಹೀಗೂ ಆಯಿತಲ್ಲ!
ಪ್ರಸಾದ ಭಾಗವತ, ಹೆಸರೇ ಸೂಚಿಸುವಂತೆ ಯಕ್ಷಗಾನ ಅದರಲ್ಲೂ ಪರಂಪರೆಯ ಹೆಸರು ಹೇಳುವಾಗ ಇದೊಂದು ವರಪ್ರಸಾದವೆಂಬಂತೆ ಹಲವು ಸಲ ಭಾಸವಾಗುತ್ತಿತ್ತು. ಪರಂಪರೆಯ ಮೊಗ್ಗು ಅರಳಿ ಇನ್ನೇನು ಒಂದು ಎಸಳು ಬಿರಿದು ಅರಳಿತು ಎನ್ನುವಾಗಲೇ ಕಮರಿ ಹೋದದ್ದು ದುರಂತ. ಯಾರು ಅಗಲಿದರು ಮನಸ್ಸು ಮೊದಲು ಯೋಚಿಸುವುದು ಅವರೊಂದಿಗೆ ಕಳೆದ ಘಟನೆಗಳನ್ನು. ಪ್ರಸಾದ ಬಲಿಪರನ್ನು ನಾನು ಮೊದಲು ಯಾವುದೋ ಕಾರ್ಯಕ್ರಮದಲ್ಲಿ ನೋಡಿದ್ದರು ವ್ಯಯಕ್ತಿಕವಾಗಿ ಭೇಟಿ ಯಾಗಿ ಪರಸ್ಪರ ಮಾತನಾಡಿಕೊಂಡದ್ದು ಆವಳ ಮಠದ ಗೋಪುರದಲ್ಲಿ. ಅಂದು ಯಾವುದೋ ತಾಳಮದ್ದಲೆಗೆ ಬಂದವರೊಂದಿಗೆ ಜತೆಯಲ್ಲಿ ಕುಳಿತು ದೇವರ ಪ್ರಸಾದ ಸ್ವೀಕರಿಸಿದ್ದೆ. ಆಗ ಅನ್ನಿಸಿತ್ತು, ಅದೆಂತಹ ವಿನಯ, ಅದೆಂತಹ ಸೌಮ್ಯತೆ. ನಿಜಕ್ಕೂ ಇದು ಬಲಿಪ್ಪಜ್ಜನ ವರ ಪ್ರಸಾದವೇ.
ಪ್ರಸಾದನ ಅದ್ಭುತ ಕಂಠ ಸಿರಿ, ತಂದೆಯಂತೆ ಅವರಿಗೂ ಒಲಿದ ಒಂದು ಜನ್ಮ ಜಾತ ಪ್ರತಿಭೆ. ಸಣಕಲು ಶರೀರ, ಹೊಳೆಯುವ ಚಂಚಲ ಕಣ್ಣುಗಳು,ಛೇ ಆ ಸ್ವರ ಎಲ್ಲಿಂದ ಹೊರಡುತ್ತದೆ ಎಂದು ಬೆರಗಾಗುತ್ತಿತ್ತು. ಸ್ವರದ ಬಗ್ಗೆ ಹೇಳುವಾಗ ನಿನ್ನೆ ನಡೆದ ಒಂದು ಘಟನೆ ಹೇಳುವುದು ಸೂಕ್ತ ಅನ್ನಿಸುತ್ತದೆ. ಸಾಮಾನ್ಯವಾಗಿ ಮನೆಯಿಂದ ಹೊರಗೆ ಹೋದಾಗ, ಯಾವುದಾರೂ ಕೆಲಸದಲ್ಲಿ ಮಗ್ನನಾಗುವಾಗ ಕೆಲಸದ ಏಕತಾನತೆ ದೂರ ಮಾಡುವುದಕ್ಕೆ ಮೊಬೈಲ್ ನಲ್ಲಿ ಸಂಗೀತ ಯಕ್ಷಗಾನ ಹಾಕಿ ಹೆಡ್ ಸೆಟ್ ಕಿವಿಗೆ ಇರಿಸಿ ಆಲಿಸುತ್ತಾ ಕೆಲಸದಲ್ಲಿ ತಲ್ಲೀನನಾಗುವುದು ನನ್ನ ಸ್ವಭಾವ. ಇತ್ತೀಚೆಗೆ ಹೆಚ್ಚಾಗಿ ಶಾಸ್ತ್ರೀಯ ಸಂಗೀತವನ್ನೇ ಕೇಳುತ್ತಿದ್ದ ನನಗೆ ನಿನ್ನೆ ಪ್ರಸಾದನ ಅಗಲಿಕೆಗೆ ಅವರ ಒಂದಷ್ಟು ಪದಗಳನ್ನು ಕೇಳುತ್ತಾ ಕೆಲಸ ಮಾಡುತ್ತಿದ್ದೆ. ವಾಸ್ತವದಲ್ಲಿ ಹೆಡ್ ಸೆಟ್ ನಲ್ಲಿ ಹೊರಡುವ ಧ್ವನಿ ಹೊರ ಪ್ರಪಂಚಕ್ಕೆ ಕೇಳುವುದಿಲ್ಲ. ಆದರೆ ನಿನ್ನೆ ಬ್ಯಾಂಕ್ ಆಡಿಟ್ ನಿಮಿತ್ತ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರಬೇಕಾದರೆ, ಆ ನೀರವತೆಯಲ್ಲಿ ಪ್ರಸಾದನ ಸ್ವರ ಸ್ಪಷ್ಟವಾಗಿ ಹೊರಗೆ ಕೇಳಿಸಿ, ಊರಿನವರೇ ಹೆಚ್ಚಿದ್ದ ಬ್ಯಾಂಕ್ ನಲ್ಲಿ ಒಬ್ಬರು ಕೇಳಿದರು ಅದು ಯಾರದು ಯಕ್ಷಗಾನ ಸ್ವರ? ಅದುವರೆಗೆ ಹೊರಗೆ ಕೇಳಿಸದೇ ಇದ್ದ ಧ್ವನಿ ಪ್ರಸಾದನ ಪದ ಹಾಕಿದ ಕೂಡಲೆ ಸೂಕ್ಷ್ಮವಾಗಿ ಧ್ವನಿ ತರಂಗಗಳನ್ನು ಬಡಿದೆಬ್ಬಿಸಿದ್ದು ನನಗೆ ಅಚ್ಚರಿ ತಂದಿತ್ತು. ಪ್ರಸಾದನ ಸ್ವರದ ಪ್ರಖರತೆ ಅದು. ಏರು ಶ್ರುತಿಯ ಪದಗಳು ಇನ್ನು ಕೇವಲ ನೆನಪು ಮಾತ್ರ.
ಕೆಲವು ವರ್ಷಗಳ ಕೆಳಗೆ ಊರಿನ ಮಿತ್ರರೊಬ್ಬರು, ಹೀಗೆ ಹಲವರು ಹೇಳಿದ್ದಾರೆ, ಕಟೀಲು ಮೇಳದ ಆಟಕ್ಕೆ ಅರ್ಧ ರಾತ್ರಿಗೆ ಹೋಗಿದ್ದರು. ಬೆಂಗಳೂರಿನಿಂದ ಊರಿಗೆ ಹೋಗುತ್ತಿರಬೇಕಾದರೆ ಅದು ಯಾವುದೋ ಊರಲ್ಲಿ ಕಟೀಲು ಎರಡನೇ ಮೇಳದ ಆಟ ಪ್ರದರ್ಶನವಾಗುತ್ತಿತ್ತು. ಬೆಳಗ್ಗಿನ ಜಾವದ ಯಕ್ಷಗಾನ. ಒಂದಷ್ಟು ಹೊತ್ತು ನೋಡೋಣ ಎಂದು ಕಾರು ಬದಿಗೆ ನಿಲ್ಲಿಸಿ ರಂಗಸ್ಥಳದ ಬಳಿಗೆ ಹೋದರು. ಅದು ಹರಕೆ ಬಯಲಾಟ. ಸಹಜವಾಗಿ ಆಟ ಆಡಿಸುವ ಸೇವಾ ಕರ್ತರು ಅದೂ ಒಂದೆರಡು ಮಂದಿ ಬಿಟ್ಟರೆ ಉಳಿದೆಲ್ಲ ಕುರ್ಚಿಗಳು ಮಂಜಿಗೆ ಮೈಯೊಡ್ಡಿ ತಣ್ಣನೇ ಕುಳಿತಿತ್ತು. ಇವರು ಅಷ್ಟೇ ಆ ಛಳಿಗೆ ಸ್ವಟರ್ ಮತ್ತಷ್ಟು ಗಟ್ಟಿ ಮಾಡಿಕೊಂಡು ಒಂದೆರಡು ಪದ ಕೇಳುವ ಎಂದು ಕುಳಿತರೆ ಮಂಗಳವಾಗುವ ತನಕ ಕುಳಿತೇ ಇದ್ದದ್ದು ಕೇವಲ ಪ್ರಸಾದನ ಪದದ ಆಕರ್ಷಣೆ ಎಂದು ಬೇರೆ ಹೇಳಬೇಕಿಲ್ಲ. ಅವರು ಹೇಳಿದ ಮಾತು ಇನ್ನೂ ನೆನಪಿದೆ, " ಎಂತ ರಾಜಣ್ಣ, ಕೇಳುವುದಕ್ಕೆ ಯಾರೂ ಜನ ಇಲ್ಲ. ಆದರೂ ಈ ಜನ ಒಂದು ಸ್ವರ ಬಿಡ್ತಿತ್ತು....ಮಾರಾಯ್ರೆ, ಹೀಗೆಯೂ ಒಬ್ಬ ಭಾಗವತ ಇರಬಹುದಾ ಅಂತ ಆಶ್ಚರ್ಯ ಆಯಿತು." ಮಂಜಿನ ಛಳಿಗೆ ಉರಿ ಬೆಂಕಿಯನ್ನು ಹಚ್ಚಿದ ಅನುಭವ ಅಂತ ಅವರೇ ಹೇಳಿದ್ದರು. ಈ ಮನುಷ್ಯನಿಗೆ ಯಾರೂ ಬೇಡ ಮಾರಾಯ್ರೆ, ಯಾವ ಚೆಂಡೆ ಮದ್ದಲೆಯಾದರೂ ಜನ ಇಲ್ಲದಿದ್ದರು ಭಯಂಕರ ಸ್ವರ ಅಂತ ಹೇಳುವಾಗ ಭಾಗವತ ಪ್ರೇಮ ಕಾಣಬಹುದಿತ್ತು. ಅದು ಪ್ರಸಾದನ ಕಲಾಪ್ರೇಮ. ನಿಷ್ಕಲ್ಮಷ ಪ್ರವೃತ್ತಿ. ಬಹುಶಃ ಇಂದು ಅದು ಅತ್ಯಂತ ವಿರಳ.ಆಗೆಲ್ಲ ನನಗೂ ಅನ್ನಿಸಿತ್ತು, ಒಂದು ಸಲ ಕಟೀಲಿನ ಎರಡನೇ ಮೇಳದ ಆಟಕ್ಕೆ ಬೆಳಗ್ಗಿನ ಜಾವ ಹೋಗಿಬಿಡಬೇಕು. ಮಿತ್ರ ಸುಬ್ಬಣ್ಣನೂ ಹಲವು ಸಲ ಹೇಳಿದ್ದರು, ಬನ್ನಿ ನಮ್ಮ ಮನೆಗೆ ರಾಜಣ್ಣ. ನಾನು ಕರೆದುಕೊಂಡು ಹೋಗುತ್ತೇನೆ ಅಂತ. ಆದರೆ ಬೆಂಗಳೂರಿನಿಂದ ಊರಿಗೆ ಆಟಕ್ಕೆ ಹೋಗುವುದಕ್ಕೆ ಬಹಳ ಪರಿಶ್ರಮ ಪಡಬೇಕಾದ ಅವಸ್ಥೆ ನನ್ನದು. ಆ ಆಶೆ ಕೊನೆಗೂ ಆಶೆಯಾಗಿಯೇ ಉಳಿದು ಹೋಯಿತು.
ಸಾಮಾನ್ಯವಾಗಿ ಒಬ್ಬ ಕಲಾವಿದ ಅಂತ ಅನ್ನಿಸಿಕೊಂಡ ಮೇಲೆ ಒಂದು ತಾರಾಮೌಲ್ಯ ( star value) ಗಳಿಸುವ ಹಂಬಲ ಇರುತ್ತದೆ. ಆನಂತರ ಆ ಸ್ಥಾನವನ್ನು ಶತಾಯ ಗತಾಯ ಉಳಿಸುವ ಪ್ರಯತ್ನ. ಆ ತಾರಾ ಮೌಲ್ಯವೇ ಪ್ರಧಾನವಾಗಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಅದೇ ತಮ್ಮ ಉಳಿವಿನ ಪ್ರಶ್ನೆಯನ್ನಾಗಿ ಕಾಣುತ್ತಾರೆ. ಇದು ಯಕ್ಷಗಾನಕ್ಕೂ ಹೊರತಲ್ಲ. ಒಂದು ಕಾರ್ಯಕ್ರಮಕ್ಕೆ ಕರೆದರೆ, ಕರೆಯುವವರು ಯಾರು? ಕಾರ್ಯಕ್ರಮದ ಸ್ಥಳ ಯಾವುದು? ಆನಂತರ, ಸಹ ಕಲಾವಿದರು ಯಾರು? ಭಾಗವತನಾದರೆ ಚೆಂಡೆ ಮದ್ದಲೆಗೆ ಯಾರು? ಕುಣಿಯುವವರು ಯಾರು? ಹೀಗೆ ಎಲ್ಲಾ ವಿಷಯ ಪರಿಗಣಿಸಿ ತಮ್ಮ ತಾರಾಮೌಲ್ಯಕ್ಕೆ ಧಕ್ಕೆ ಬಾರದ ಆತಂಕವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಹೋಗುತ್ತಾರೆ. ಎಷ್ಟೋ ಸಲ ಭಾಗವತರು, ಇಂತಿಂತಹ ವ್ಯಕ್ತಿಗಳೇ ಚೆಂಡೆ ಮದ್ದಲೆಗೆ ಬೇಕು ಅಂತ ಹಟ ಹಿಡಿಯುವುದು ಸಾಮಾನ್ಯ. ಯಾಕೆಂದರೆ ಅವರ ಪ್ರತಿಭೆಗೆ ಆಸರೆಯಾಗಿರುವುದು ಇನ್ನೊಬ್ಬರ ಪ್ರತಿಭೆ. ಅವರಿಲ್ಲವಾದರೆ ಇವರು ಏನೂ ಅಲ್ಲ ಎಂಬಂತೆ ಭಾಸವಾಗುತ್ತದೆ. ಸ್ವತಃ ತಮ್ಮ ಪ್ರತಿಭೆಯ ಮೇಲಿನ ಆತ್ಮವಿಶ್ವಾಸದ ಕೊರತೆ ಇದು. ಅವರ ಮದ್ದಲೆ ಇಲ್ಲದೆ ಇವರ ಪದ ಏನೂ ಅಲ್ಲ ಅಂತ ಹೇಳಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇದೇ ವಿಷಯ ಹೇಳಿಕೊಂಡು ಕೈ ಕೊಡುವುದು ಸಾಮಾನ್ಯ. ಆದರೆ ಪ್ರಸಾದ ಭಾಗವತರ ದೊಡ್ಡ ಗುಣ ಎಂದರೆ ತಾರಾಮೌಲ್ಯದ ಬಗ್ಗೆ ಯೋಚನೆಯೇ ಇವರು ಮಾಡಿದ್ದನ್ನು ನಾನು ಕಾಣಲೂ ಇಲ್ಲ ಕೇಳಲೂ ಇಲ್ಲ. ಯಾವ ಚೆಂಡೆ ಮದ್ದಲೆಯವರಾದರೂ ಸಹ ಯಾರು ಕಾರ್ಯಕ್ರಮ ಮಾಡಿದರೂ ಏಕ ಮನಸ್ಸಿನಿಂದ ಹೋಗಿ ಏಕ ಪ್ರಕಾರವಾಗಿ ಪದ ಹೇಳುವುದು ತಂದೆಯಂತೆ ಇವರ ಸಹಜ ಗುಣ. ಇಂತಹ ಸನ್ಮನಸ್ಸಿನ ಭಾಗವತ ಇನ್ನು ಕಂಡುಬರುವುದಕ್ಕಿಲ್ಲ. ತಾರಾಮೌಲ್ಯದ ಹಿಂದೆ ಇವರು ಎಂದಿಗೂ ಹೋದವರಲ್ಲ. ಆದರೆ ಅದೇ ತಾರಾಮೌಲ್ಯ ಇವರನ್ನು ಹಿಂಬಾಲಿಸಿ ಇವರನ್ನು ಬಿಡದೇ ಅಂಟಿಕೊಂಡಿತ್ತು. ಇದಕ್ಕೆ ಸಾಕ್ಷಿ ಇವರ ಕಟ್ಟಾ ಅಭಿಮಾನಿಗಳ ಸಂಖ್ಯೆ. ಆ ಸ್ವರದ ಆಕರ್ಷಣೆ ಅಂತಹುದು. ಪ್ರಸಾದನ ಸ್ವರ ಎಂದರೆ ಹಾರಿ ಬೀಳುವ ಅಭಿಮಾನಿಗಳಿಗೆ ಕಡಿಮೆ ಇಲ್ಲ. ಇದನ್ನು ಸ್ವತಃ ನಾನು ಕಂಡಿದ್ದೇನೆ. ಭಾಗವತಿಕೆಗೆ ಯಾರು ಕರೆದರೂ ಹೋಗಿ ಪದಹೇಳುವ ನಮ್ಮ ಪ್ರಸಾದ, ಭಗವಂತ ಕರೆದಾಗಲೂ ಗಡಿಬಿಡಿಯಲ್ಲಿ ಎದ್ದು ಹೋಗಿದ್ದು ದುರ್ದೈವ. ದೈವದ ಬಯಕೆಗೂ ಮನಸ್ಸು ರೋದಿಸಿತು. ಒಂದು ಸಲ ಸಾಧ್ಯವಾದರೆ ಸ್ವರ್ಗದ ಬಾಗಿಲಿಗೆ ಕಿವಿಯಿಟ್ಟು ನೋಡಿ, ಪ್ರಸಾದನ ಏರು ಸ್ವರ ಅಲ್ಲೂ ಮೊಳಗುತ್ತಿರಬಹುದು. ಯಾಕೆಂದರೆ ಈ ಸಣಕಲು ಶರೀರಿ ಹಲವು ಸಲ ರಂಗಸ್ಥಳದಲ್ಲಿ ಕಾಣದೇ ಇದ್ದು ಕೇವಲ ರಮಣೀಯ ಸ್ವರ ಮಾತ್ರ ಮೊಳಗುತ್ತದೆ.
ಇತ್ತೀಚೆಗೆ ಮುಂಜಾನೆಯ ಸಮಯ ಇವರ ಭಾಗವತಿಕೆಗೆ ಮೀಸಲಾಗಿರುತ್ತದೆ. ಹೆಚ್ಚಾಗಿ ಚೆಂಡೆ ಪ್ರಧಾನವಾಗಿರುವ ಪ್ರಸಂಗಗಳು. ಇಂದ್ರಜಿತು, ಲವಕುಶ , ಅಗ್ರಪೂಜೆಯಂತಹ ವೀರ ರಸ ಪ್ರಧಾನದ ಧೂಳೆಬ್ಬಿಸುವ ಪ್ರಸಂಗಗಳು. ಒಂದು ರೀತಿಯ ಕೆಚ್ಚೆಬ್ಬಿಸುವ ಸ್ವರ. ಪದ ಆರಂಭಿಸುವಾಗಲೇ ಆ ಕಿಚ್ಚಿನ ಉರಿಯ ಪ್ರಹಾರಕ್ಕೆ ಇಂದ್ರಜಿತು ಶಿಶುಪಾಲರಿಗೆ ಕುಣಿಯದೇ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ತನ್ನಿಂತಾನಾಗಿ ಹೊರ ಉಕ್ಕುವ ರೌದ್ರತೆಗೆ ಪ್ರಸಾದ ಬಲಿಪ್ಪರ ತಾರಕ ಸ್ವರವೇ ಕಾರಣವಾಗುತ್ತದೆ. ಇಂತಹ ಪ್ರಸಂಗದ ಪಾತ್ರಗಳು ಇವರ ಪದಕ್ಕೇ ಮೀಸಲು ಎಂಬಂತೆ ಪ್ರಸಂಗವನ್ನು ಮೇಲೆತ್ತಿಬಿಡುತ್ತಾರೆ. ಇವರ ಉರಿ ಚೆಂಡಿನಂತಹ ಪದಕ್ಕೆ ಆರ್ಭಟಿಸಿ ಏಳದ ಇಂದ್ರಜಿತು ಇರಲಾರ. ಆ ಸ್ವರ ಪ್ರಚೋದನೆ ಒಂದು ರೀತಿಯಲ್ಲಿ ಸ್ಲಾಗ್ ಓವರ್ ನ ಆಟದಂತೆ. ಸುಂಟರಗಾಳಿಯ ಬೀಸುವಿಕೆ. ದುರ್ದೈವ ಎಂದರೆ ಇನ್ನು ಅದು ಕಾಣುವುದಕ್ಕಿಲ್ಲ.
ಇಂತಹ ತಾರಾಮೌಲ್ಯದ ಒಬ್ಬ ಭಾಗವತ ಕೇವಲ ಸಾಮಾನ್ಯ ಮನುಷ್ಯನಾಗಿ ನನಗೆ ಹತ್ತಿರವಾಗಿದ್ದರು. ಊರಲ್ಲಿ ಎಲ್ಲಿ ಸಿಕ್ಕಿದರೂ, ನಮ್ಮ ಕರಾಡ ಭಾಷೆಯಲ್ಲಿ, " ಘರಾಣಿ ವಚ್ಚ್ಯಂಕಿ" (ಮನೆಗೆ ಹೋಗೋಣವೇ?) ಅಂತ ನನ್ನನ್ನು ಮನೆಗೆ ಕರೆದುಕೊಂಡು ಹೊಗುತ್ತಿದ್ದರು. ಅವರ ಮನೆಯಲ್ಲಿ ಹೊಟ್ಟೆ ತುಂಬ ಊಟಮಾಡಿ ಅಜ್ಜ ಬಲಿಪ್ಪರಲ್ಲಿ ಕುಶಲ ಮಾತನಾಡಿ ಬರುವುದೆಂದರೆ ಅದೊಂದು ಭಾಗ್ಯ. ಒಂದು ಸಲ ಮಿತ್ರ ಸುಬ್ಬಣ್ಣನ ವೇಣೂರಿನ ಮನೆಗೆ ಹೋದಾಗ ನನಗಾಗಿ ಸುಬ್ಬಣ್ಣ ಪ್ರಸಾದ ಭಾಗವತರ ಪದ ವ್ಯವಸ್ಥೆ ಮಾಡಿದ್ದರು. ಮದ್ದಲೆಗಾರರನ್ನು ಕರೆದು, ಪ್ರಸಾದ ಬಲಿಪರಿಗೆ ಕರೆ ಮಾಡಿದ್ದರು. ಕೇವಲ ನನಗಾಗಿ ಪದ ಹೇಳುವುದಕ್ಕೆ ಭಾಗವತರು ಸಮಯಕ್ಕೆ ಸರಿಯಾಗಿ ಜಾಗಟೆ ಹಿಡಿದು ಬಂದಿದ್ದರು. ವೇಣೂರಿನ ಮನೆಯ ಪುಟ್ಟ ಕೋಣೆಯಲ್ಲಿ ಚಾಪೆ ಹಾಸಿ ಶ್ರುತಿ ಪೆಟ್ಟಿಗೆ ತೆರೆದು ಕೇವಲ ಮದ್ದಲೆಯ ಜತೆಗೆ ಪದ ಹೇಳಿದ ಆ ದಿನ ನಾನು ಮರೆಯುವುದಕ್ಕಿಲ್ಲ. ಸುಬ್ಬಣ್ಣನ ಸ್ನೇಹ ಒಂದೆಡೆಯಾದರೆ, ಪ್ರತಿಷ್ಠಿತ ಕಟೀಲು ಮೇಳದ ಪ್ರಧಾನ ಭಾಗವತರ ವಿನಯ ಇನ್ನೊಂದೆಡೆ. ಅಂದು ಸುಮಾರು ಎರಡು ಮೂರು ಘಂಟೆ ಪದ ಹೇಳಿದ್ದರು. ಅಲ್ಲಿ ತಾರಾ ಕಲಾವಿದನ ಪದಕೇಳುವುದಕ್ಕೆ ಸುಬ್ಬಣ್ಣ ಬಿಟ್ಟರೆ ಪ್ರೇಕ್ಷಕ ನಾಗಿ ಇದ್ದದ್ದು ನಾನು ಮಾತ್ರ. ಇಂತಹ ಘಟನೆಗಳು ಎಲ್ಲೂ ನಡೆಯಲಾಗದಷ್ಟು ವಿರಳ. ಆನಂತರ ಸುಬ್ಬಣ್ಣ ಹಲವು ಸಲ ಕರೆದಿದ್ದರು. ಪ್ರಸಾದನನ್ನು ಕರೆಯುತ್ತೇನೆ ಬನ್ನಿ ರಾಜಣ್ಣ. ಆದರೆ ಆ ದಿನ ಮತ್ತೆ ಬರಲಿಲ್ಲ. ಇನ್ನು ಬರುವುದಕ್ಕೂ ಇಲ್ಲ. ಕೇವಲ ಒಬ್ಬ ಸಾಮಾನ್ಯನ ಮನ ತಣಿಸುವ ದೊಡ್ಡ ಮನಸ್ಸು ಪ್ರಸಾದ ಬಲಿಪ್ಪರಲ್ಲಿ ಮಾತ್ರ ಕಾಣಬಹುದು. ಕಲಾವಿದನಿಗೆ ವೃತ್ತಿಯಂತೆ ಪ್ರವೃತ್ತಿಯೂ ಮುಖ್ಯವಾಗುತ್ತದೆ.
ಯಕ್ಷಗಾನದಲ್ಲಿ ಇಂದು ಹಲವು ಭಾಗವತರು ತಮ್ಮದೇ ರೀತಿಯಲ್ಲಿ ಪ್ರವೃತ್ತರಾಗಿರಬಹುದು.
ಆದರೆ ಯಕ್ಷಗಾನದ ಅಮೂಲಾಗ್ರ ಅರಿವಿರುವ ಭಾಗವತರು ಬಹಳ ಕಡಿಮೆ. ಪರಂಪರೆಯ ಪೂರ್ವರಂಗದ ಬಗ್ಗೆ ಖಚಿತವಾದ ಅರಿವು ಜ್ಞಾನ ಇದ್ದರೆ ಅದು ಪ್ರಸಾದ ಬಲಿಪ್ಪರಲ್ಲಿ ಮಾತ್ರ. ಯಾವುದೇ ಪೌರಾಣಿಕ ಪ್ರಸಂಗವನ್ನು ಆಡಿಸುವ ಇವರಂತಹ ಭಾಗವತ ಇನ್ನು ಇರುವುದಕ್ಕಿಲ್ಲ. ಇದು ಅವರ ಕ್ಷಮತೆ. ಸಮಯಕ್ಕೆ ತಕ್ಕ ಹಾಗೆ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಮುಗಿಸುವ ಸಾಮಾರ್ಥ್ಯವಿರುವ ಏಕಮಾತ್ರ ಭಾಗವತ ಎಂದರೂ ತಪ್ಪಾಗಲಾರದು. ಇವರ ಆಟ ಕಳಪೆಯಾದ ನಿದರ್ಶನವೇ ಇಲ್ಲ ಎನ್ನಬಹುದು. ಅದೇನಿದ್ದರು ಪರಮಾತ್ಮ ತೆರೆ ಎಳೆದು ಬಿಟ್ಟ. ಒಂದು ವರ್ಷದ ಮೊದಲು ಭಾಗವತಿಕೆಯಿಂದ ದೂರವಾಗುವಾಗ ಭಾಗವತರು ಗುಣಮುಖರಾಗಿ ಬರಬಹುದು ಎಂಬ ನಿರೀಕ್ಷೆಯಲ್ಲೇ ಇದ್ದರು. ಆದರೆ ಒಮ್ಮಿಂದೊಮ್ಮೆಲೇ ಬಿದ್ದ ಆಘಾತ ತೀವ್ರವಾದ ಸಂಕಟವನ್ನು ತಂದಿದೆ. ಭಾಗವತರ ಆತ್ಮಕ್ಕೆ ಶಾಂತಿಯನ್ನು ಕೋರುವಾಗ ಒಂದು ಯೋಚನೆ ಬರುತ್ತದೆ.
ಮೊನ್ನೆ ಅಂತ್ಯ ಕ್ರಿಯೆಯಲ್ಲಿ ಬಲಿಪ್ಪಜ್ಜ ಸುಬ್ಬಣ್ಣನಲ್ಲಿ ಹೇಳಿದರಂತೆ, " ನನಗೆ ಗೊತ್ತಿರುವುದೆಲ್ಲಾ ಅವನಿಗೆ ಗೊತ್ತುಂಟು. ಆದರೆ ಈಗ ಅವನೇ ಇಲ್ಲ......" ಇದನ್ನು ಕೇಳುವಾಗ ಆಗುವ ಸಂಕಟಕ್ಕೆ ಪರಿಹಾರ ಉಂಟೇ? ಅದೆಷ್ಟು ನೋವಾಗುತ್ತದೆ. ಮಗನ ಸಾವಿನಲ್ಲೂ ಯಕ್ಷಗಾನದ ಬಗ್ಗೆ ಯೋಚಿಸಿ ದುಃಖಿಸುವ ಬಲಿಪ್ಪರಿಗೆ ಸಾಂತ್ವನ ಯಾವ ಬಗೆಯಲ್ಲಿ ಹೇಳಬಹುದು? ಯಕ್ಷಗಾನ ಪರಂಪರೆ ಎಂದರೆ ಈಗಿನ ಮೂಗು ಮುರಿಯುವ ಪ್ರವೃತ್ತಿಯೇ ಅಧಿಕ. ಅದು ಆಗಿನ ಕಾಲಕ್ಕೆ ಈಗ ಪರಂಪರೆಯ ಆವಶ್ಯಕತೆ ಇಲ್ಲ ಎಂಬಂತೆ ವರ್ತಿಸುವ ಈ ಪ್ರವೃತ್ತಿಗೆ ದೈವ ಈ ರೀತಿಯಲ್ಲಿ ತನ್ನ ಮುನಿಸನ್ನು ತೋರಿಸಿರಬಹುದೇ ಎಂಬ ಅನುಮಾನ ಕಾಡುತ್ತದೆ. ಅದು ನಿಜವಾಗಿದ್ದರೆ ಇದಕ್ಕೆ ಇಂದಿನ ಯಕ್ಷಗಾನ ಉತ್ತರ ಕಾಣಬೇಕು. ಬಹುಶಃ ಹಿರಿಯ ಭಾಗವತರ ದುಃಖಕ್ಕೆ ಇದೊಂದು ಮಾತ್ರ ಸಾಂತ್ವನ ನೀಡಬಲ್ಲುದು. ಇಂದು ಅವನೇ ಇಲ್ಲ ಎನ್ನುವ ಬಲಿಪ್ಪರ ಧ್ವನಿ ಶತಮಾನದ ಧ್ವನಿಯಾಗಿ ಯಕ್ಷಗಾನವನ್ನು ಕಾಡಬಹುದು ಇದು ಸತ್ಯ.
