ಅಂದೊಂದು ದಿನ ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಒಂದು ಯಕ್ಷಗಾನ ಬಯಲಾಟ. ಪ್ರಸಂಗ ಮಾಗಧ ವಧೆ. ಚಂದ್ರಹಾಸ ಚರಿತ್ರೆ. ಆದಿನ ತುಂಬಾ ಉತ್ಸಾಹದಿಂದ ಹೋಗಿದ್ದೆ. ಮಳೆಗಾಲದ ದಿನಗಳು. ಜಿಟಿ ಜಿಟಿ ಮಳೆಯಲ್ಲಿ ಒದ್ದೆಯಗುತ್ತ ಮಂಗಳೂರಿನ ದೇರೆಬೈಲಿನ ನಮ್ಮ ಮನೆಯಿಂದ ಸೈಕಲು ಏರಿ ಹೊರಟಿದ್ದೆ.ಜತೆಗೆ ನನ್ನ ಸಂಬಂಧಿಯೋಬ್ಬರೂ ಇದ್ದರು. ಸುಮಾರು ೭-೮ ಕಿ ಮಿ ಡಬ್ಬಲ್ ರೈಡು ಅದರೂ ಯಕ್ಷಗಾನದ ಮರುಳು. ಮಳೆಗೆ ಒದ್ದೆಯಾಗಿ ಆಟ ನಡೆಯುತ್ತಿದ್ದ ಹಾಲ್ ತಲಪುವಾಗ ಚಳಿಯಿಂದ ನಡುಗುತ್ತಿದ್ದೆವು. ಟಿಕೆಟ್ ಪಡೆದು ನಮ್ಮ ಆಸನ ಪಡೆದು ಅಲ್ಪ ಸ್ವಲ್ಪ ಮಯ್ಯುಜ್ಜಿಕೊಳ್ಳುತ್ತ ಕುಳಿತೆವು. ನನಗೆ ಚೌಕಿಗೆ ಒಂದು ಸಲ ಇಣುಕುವ ಆಶೆ. ಹಾಗಾಗಿ ಕುತೂಹಲದಿಂದ ಯಾರೆಲ್ಲ ಬಂದಿದ್ದಾರೆ ಎಂದು ನೋಡುವ ಎಂದು ಹೋಗಿ ಚೌಕಿಯಲ್ಲಿ ಇಣುಕಿದೆ. ದೈತ್ಯಾಕಾರದ ಒಂದು ವೇಷ ಇನ್ನೇನು ಕಿರೀಟ ಧಾರಣೆಗೆ ಸಜ್ಜಾಗಿ ಮೂಲೆಯಲ್ಲಿ ತಣ್ಣಗೆ ಕುಳಿತಿತ್ತು.ಆ ದೈತ್ಯಾಕಾರ ನೋಡಿಯೇ ಭಯಪಡಬೇಕು.ಕೇವಲ ಬಣ್ಣದಿಂದ ಮಾತ್ರ ಮುಖದಲ್ಲಿ ಕ್ರೌರ್ಯವನ್ನು ಗಮನಿಸಬಹುದು. ವ್ಯಕ್ತಿಶಃ ವೇಷಧಾರಿ ತುಂಬಾ ತಣ್ಣನೆ ನಿರ್ವಿಕಲ್ಪ ಮುಖಭಾವದಿಂದ ತಮ್ಮ ಪ್ರವೇಶದ ಪದಕ್ಕೆ ಕಾದು ಕುಳಿತಿದ್ದರು. ಪ್ರಸಂಗ ನೋಡಿಯೇ ನೀವು ಊಹಿಸಬಹುದು. ಅದು ಆದಿನದ ಜರಾಸಂಧನ ವೇಷ. ಆ ದೈತ್ಯ ತಣ್ಣನೆಯ ವೇಷಧಾರಿ ಮತ್ತಾರೂ ಅಲ್ಲ ಯಕ್ಷಗಾನದ ದೈತ್ಯ ಎಂದರೆ ತಪ್ಪಾಗದು ಅವರೇ ಪುತ್ತೂರು ಶ್ರೀ ನಾರಯಣ ಹೆಗ್ಗಡೆ. ಆಜಾನು ಬಾಹು ಶರೀರಿ.
ಆದಿನ ನಂಗೆ ಆ ವೇಷದ ಬಗ್ಗೆ ನಿಜವಾಗಿಯೂ ಅಂತಹ ನಿರೀಕ್ಷೆ ಇರಲಿಲ್ಲ. ಬದಲಾಗಿ ಎರಡನೇ ಪ್ರಸಂಗ ಚಂದ್ರಹಾಸದಲ್ಲಿ ಹೆಸರಾಂತ ಘಟಾನುಘಟಿ ಕಲಾವಿದರಿದ್ದರು ವಿಶೇಷವಾಗಿ ಶೇಣಿ ಗೋಪಾಲ ಕೃಷ್ಣ ಭಟ್ಟರ ದುಷ್ಟ ಬುದ್ದಿ ಮತ್ತು ಕುಂಬ್ಳೆ ಸುಂದರ್ ರಾವ್ ಅವರ ಚಂದ್ರ ಹಾಸ ಅಂದಿನ ವಿಶೇಷ ಆಕರ್ಷಣೆಯಾಗಿತ್ತು. ನಾನು ಶೇಣಿಯವರ ಕಟ್ಟಾ ಅಭಿಮಾನಿಯಾಗಿದ್ದೆ. ಹಾಗಾಗಿ ಅವರು ವೇಷ ಹಾಕುವುದನ್ನು ಹುಡುಕಿದೆ. ಆದರೆ ಆದಿನ ಬದುಕಿನಲ್ಲಿ ನಾನು ಮರೆಯದ ಒಂದು ಜರಾಸಂಧನ ದರ್ಶನ ಆಗ್ತದೆ ಎಂದು ನಾನು ಊಹಿಸಿರಲಿಲ್ಲ. ಅಂದು ಹಾಗೆಯೇ ಆಯಿತು.. ತಣ್ಣಗಿನ ವೇಷಧಾರಿಯ ಅಬ್ಬರದ ಪ್ರವೇಶ. ವಿಲಕ್ಷಣವಾಗಿ ಭಾವಾಭಿನಯ ಪ್ರಕಟಿಸುತ್ತ. ಸನ್ನಿವೇಶದಲ್ಲಿ - ಭೀಮಾರ್ಜುನರು ಕೃಷ್ಣನೊಂದಿಗೆ ಬಂದು ಭೇರಿಗಳನ್ನೂ ಗುದ್ದಿ ಭೇದಿಸಿದಾಗ ಚೆಂಡೆಯ ಅಬ್ಬರದಲ್ಲಿ ಮಾಗಧನ ಅಬ್ಬರದ ಪ್ರವೇಶ. ವಿಶಿಷ್ಟವಾಗಿ ತಲೆ ಆಡಿಸುತ್ತಿದ್ದ ಭಂಗಿ ಏನು? ಆ ಭಾವಾಭಿನಯವೇನು?ಸ್ಥೂಲ ಶರೀರಿಯ ಕಂಠದಿಂದ ಗೊರ ಗೊರ ಹೊಮ್ಮುವ ತೀಕ್ಷ್ಣ ಮಾತುಗಳೇನು ? ಅಬ್ಬಾ. ನಿಜಕ್ಕೂ ಆವರೆಗೆ ಚಳಿಯಿಂದ ನಡುಗುತ್ತಿದ್ದ ನಮ್ಮನ್ನು ಮಾತ್ರವಲ್ಲ ಸಭೆಯನ್ನೇ ನಿಜಕ್ಕೂ ನಡುಗಿಸಿಬಿಟ್ಟ. ಅಂದಿನ ಮಾಗಧ ವೇಷಧಾರಿ ಬೇರೆ ಯಾರೂ ಅಲ್ಲ ಅವರೇ ಶ್ರೀ ಪುತ್ತೂರು ನಾರಯಣ ಹೆಗಡೆ.
ಆದಿನ ನಿಜಕ್ಕೂ ಆಕರ್ಷಣೆಯ ದಿಕ್ಕನ್ನೇ ಬದಲಿಸಿಬಿಟ್ಟರು ಇವರು. ಕೇವಲ ಹರಿಕೆಗೋಸ್ಕರ ನಡುರಾತ್ರಿಯ ವರೆಗಿನ ಕಾಲಯಾಪನದ ಪ್ರಸಂಗ ಎಂದು ಭಾವಿಸಿ ಕ್ಯಾಂಟೀನ್ ನಲ್ಲಿ ಬಿಸಿ ಚಹಾ ಸೇವಿಸುತ್ತಿದ್ದವರಿಗೆ ರಂಗದ ಮೇಲಿನ ಈ ಆರ್ಭಟನೆ ಬಿಸಿ ಬಿಸಿ ಚಹಾ ತರಾತುರಿಯಲ್ಲಿ ಗಂಟಲಿಗೆ ಇಳಿಸಿ ಗಂಟಲನ್ನು ಉರಿಸಿಕೊಂಡು ಹಾಲ್ ನೊಳಕ್ಕೆ ಓಡುವಂತೆ ಮಾಡಿತ್ತು.ಅಂತಹ ಆಕರ್ಷಣೆ ಈ ಕಲಾವಿದನಲ್ಲಿ ಯಥೇಚ್ಛವಾಗಿತ್ತು. ವಿಶೇಷ ಆಸಾಮಾನ್ಯ ಕಲಾವಿದ. ಇಂದಿನ ಯುಗದಲ್ಲಿ ಅವರೊಬ್ಬರು ದಂತ ಕಥೆಯಾದದ್ದು ಈಗಿನ ಯಕ್ಷಗಾನ ಅಭಿಮಾನಿಗಳ ದುರ್ದೈವವೇ ಸರಿ,ರಂಗ ಪ್ರವೇಶ ಆದನಂತರ ಬೇರೆ ಎಲ್ಲ ಪಾತ್ರಗಳು ತನ್ನಿಂತಾನೆ ಗೌಣವಾಗಿಬಿಡುತ್ತಿದ್ದವು. ಇವರ ಭಾರವಾದ ಹೆಜ್ಜೆ ಅದು ಕೇವಲ ರಂಗಕ್ಕೆ ಮಾತ್ರವಲ್ಲ.ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಹಾಕುತ್ತಿದ್ದವು. ಎಂತಹ ಮಹಾಕಲಾವಿದರು ಇದ್ದರೂ ಇವರು ತಮ್ಮದೇ ವಿಶೇಷತೆ ಯಿಂದ ಪ್ರತ್ಯೇಕ ಸ್ಥಾನವನ್ನು ಹೊಂದಿದ್ದರು.ಇವರ ಬಗ್ಗೆ ಹೆಚ್ಚೇನು ನನಗೆ ತಿಳಿದಿಲ್ಲವಾದರೂ ಇವರ ಮರೆಯಲಾಗದ ಹಲವು ಪಾತ್ರಗಳ ರುಚಿಯನ್ನು ಸವಿದ ಅನುಭವ ಮಾತ್ರ ಹೇಳಬಹುದಷ್ಟೇ. ಯಕ್ಷಗಾನ ಪ್ರಪಂಚ ಕಂಡ ಅದ್ಭುತ ಅಸಾಮಾನ್ಯ ಕಲಾವಿದ, ಮಾತ್ರವಲ್ಲ ದೈತ್ಯ ಕಲಾವಿದ. ದೈತ್ಯಾಕಾರದ ಇವರ ಪಾತ್ರಗಳು ರಂಗದ ಮೇಲೆ ವಿಜ್ರಂಭಿಸುವ ರೀತಿ ಅದು ಈಗ ಕೇವಲ ನೆನಪು ಮಾತ್ರ. ಯಕ್ಷಗಾನದಲ್ಲಿ ದಣಿವರಿಯದೆ ಕುಣಿವ ಕಲಾವಿದರ ಸಾಲಿನಲ್ಲೋ. ವಿಶೇಷ ಅಭಿನಯ, ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದ ಕಲಾವಿದರ ಸಾಲಿನಲ್ಲೋ ಇವರನ್ನು ಗುರುತಿಸುವುದು ಅಸಾಧ್ಯ. ಹಿತ ಮಿತವಾದ ಇವರ ಕುಣಿತ.ಮುಖ್ಯವಾಗಿ ತಮ್ಮ ದೈತ್ಯ ದೇಹವನ್ನು ಅವರು ಅಭಿನಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದ ರೀತಿ ಅಮೋಘ. ಆ ಶರೀರಭಾಷೆ, ಮುಖಾಭಿನಯ, ಹಸ್ತ ಚಲನೆ , ವಿಶಿಷ್ಟವಾಗಿ ತಲೆಯನ್ನು ಆಕಡೆ ಈಕಡೆ ತಿರುಗಿಸುವ ಮತ್ತು ರೀತಿ ಎಲ್ಲದಕೂ ಒಪ್ಪವಾಗಿ ಆ ಗಾಂಭೀರ್ಯ ತುಂಬಿದ ಕಂಠ ಸ್ಪಷ್ಟ ಉಚ್ಚಾರ ಕೆಲವು ಪತ್ರಗಳು ಇವರಲ್ಲಿ ಆವಿರ್ಭಸುವಂತೆ ಮಾಡುತ್ತಿದ್ದವು.
ಒಂದು ದಿನ ನಮ್ಮೂರಿನ ಬಳಿಯ ಉಪ್ಪಳ ಐಲಮೈದಾನಿನಲ್ಲಿ ಧರ್ಮಸ್ಥಳ ಮೇಳದ ಆಟ. ಆವಾಗಿನ ಅತಿ ಹೆಸರಾಂತ ಪ್ರಸಂಗ "ಸಮುದ್ರ ಮಥನ". ಧರ್ಮಸ್ಥಳದಿಂದ ವಿಶೇಷವಾಗಿ ಕೃಷ್ಣಾ ಎಂಬ ಆನೆ ಕೂಡ ಅಂದಿನ ಪ್ರದರ್ಶನಕ್ಕೆ ಬಂದಿತ್ತು. ದೇವೇಂದ್ರ ಐರಾವತ ಸವಾರಿಗೆ ಈ ಆನೆ. ಆದರೆ ನಿಜವಾಗಿ ಆದಿನದ ಆಕರ್ಷಣೆ ಆಗಬೇಕಾದ್ದು ಮಾತ್ರ ಶ್ರೀ ನಾರಾಯಣ ಹೆಗಡೆಯವರ ಪಾತ್ರ. ಅದು ಅಂದಿನ ಆಟ ನೋಡಿದ ಮೇಲೆ ಅನ್ನಿಸಿದ್ದು. ಸಮುದ್ರ ಮಥನ ನಡೆಯತ್ತಾ ಇದ್ದ ಹಾಗೆ ವಾಸುಕಿ ವಿಶವುಗುಳಿ ಸುರಾಸುರರು ಒಮ್ಮಿಂದೊಮ್ಮೆಲೇ ಧರೆಗುರುಳಿದಾಗ,ಪರಮೇಶ್ವರ ನೀಲಕಂಠನಾದಮೇಲೆ, ಒಮ್ಮಿಂದೊಮ್ಮೆಲೇ ಈ ಹೆಗಡೆಯವರು ವಾಲಿಯಾಗಿ ಪ್ರವೇಶ ಮಾಡುವ ಸನ್ನಿವೇಶ ಇನ್ನೂ ನೆನಪಿನಲ್ಲಿದೆ. ತಂದೆ ದೇವೇಂದ್ರನೊಡನೆ ಸಂಭಾಷಿಸಿ ಸಮುದ್ರಮಥನ ಮಾಡುವ ಸನ್ನಿವೇಶ ಇವರ ಅಭಿನಯ ನಿಜವಾಲಿಯೇ ರಂಗದಲ್ಲಿ ಎದ್ದು ಬಂದನೋ ಎಂಬ ಭ್ರಮೆ. ಆನಂತರ ಮಹಾವಿಷ್ಣು ವಾದ ಕುಂಬ್ಳೆಯವರೊಂದಿಗಿನ ಸಂಭಾಷಣೆ ಆದಿನದ ಇಡೀ ಪ್ರಸಂಗಕ್ಕೆ ಮೆರುಗನ್ನು ಕೊಡುತ್ತದೆ. ನಾನು ಮರೆಯಲಾಗದ ಒಂದು ವಾಲಿ ಅಂದು ನೋಡಿದೆ.
ಇನ್ನೊಂದು ಆಟ ಮಂಗಳೂರಿನ ನೆಹರು ಮೈದಾನಿನಲ್ಲಿ ಅದೇ ಧರ್ಮಸ್ಥಳ ಮೇಳದ ಆಟ. ಪ್ರಸಂಗ ನೆನಪಿಲ್ಲ. ಕನಸಿನ ಕಂಸನಾಗಿ ನಾರಾಯಣ ಹೆಗ್ಗಡೆ. ಬಹುಶಃ ನಿಜವಾದ ಕಂಸ ಆಟ ನೋಡುತ್ತಿದ್ದರೂ ಭಯಪಡುವಹಗೆ ಇರುವ ಕಂಸ. ಆ ಬಣ್ಣಗಾರಿಕೆ ಮತ್ತು ವೇಷಗಾರಿಕೆ ಅದಕ್ಕೆ ಒಪ್ಪುವ ಹಾಗೆ ಆ ಅಭಿನಯ,ಕಂಸನ ಕ್ರೂರ ರೂಪ ಕೃಷ್ಣ ನ ಬಗ್ಗೆ ಕನಸುಕಂಡು ಏಳುವ ಸನ್ನಿವೇಶ ಆ ಭಯಗೊಂಡು ಕಿರುಚುವ ಕಂಸ.. ನೋಡಿ," ಅಳ್ಳೆದೆಯವರು ಇದ್ದರೆ ಮೊದಲೇ ಹೃದಯ ಭದ್ರತೆಗೆ ಹೊರ ಹೋಗಿ ಬಿಡುವುದು ಕ್ಷೇಮ" ಎಂದು ಪ್ರಕಟಣೆ ಕೊಟ್ಟರೆ ಒಳ್ಳೆಯದು ಎಂದು ಅನ್ನಿಸಿಬಿಡುತ್ತದೆ.ಅವರ ಕಂಸ ಎಂದರೆ ಬೇರೆ ಮಾತಿಲ್ಲ. ವೇದಿಕೆಯಲ್ಲಿ ಪೂರ್ಣವಾಗಿ ಆಕ್ರಮಣ ಮಾಡಿ ವಿಜ್ರಂಭಿಸುವ ಅವರ ಕಂಸನನ್ನು ಹೋಲಿಸಿ ಇನ್ನೊದು ಕಂಸ ಇರಲಾರದು. ಚಿಟ್ಟು ಹಿಡಿಸುವ ಅತಿಯಾದ ಅಭಿನಯದ ಪುನರಾವರ್ತನೆ ಅಲ್ಲಿಲ್ಲ. ದೈತ್ಯಾಕಾರದ ದೇಹಚಲನೆ ದೊರಗು ಕಂಠದ ಸವಿಸ್ತಾರವಾದ ಪಾತ್ರ ಮಂಡನೆ ಕಂಸನ ಪೂರ್ಣ ಚಿತ್ರಣ ಕೆಲವೇ ಘಳಿಗೆಯಲ್ಲಿ ನಮ್ಮ ಮುಂದಿಡುತ್ತಾರೆ.ಇಂದು ಯಾವುದೇ ಕಂಸ ನೋಡಿದರೂ ನಾರಾಯಣ ಹೆಗ್ಗಡೆಯ ಕಂಸ ನೋಡಿದ ಅನುಭವ ಆಗುವುದೇ ಇಲ್ಲ. ಕೆಲವು ಕಡೆ ಅವರ ಅನುಕರಣೆ ಯಾದರೂ ಅಪ್ಪಟ ಕಂಸ ನಾರಾಯಣ ಹೆಗಡೆ ದೇಹದಲ್ಲಿ ನೋಡುವುದೇ ಒಂದು ಅನುಭವ.ನನ್ನ ಮಟ್ಟಿಗೆ ನನ್ನ ಮನಃಪೂರ್ವಕ ಅಭಿಪ್ರಾಯವೆಂದರೆ ಹೆಗಡೆಯವರ ಕಂಸದಷ್ಟು ಉತ್ಕೃಷ್ಟ ಇನ್ನೊದು ಕಂಸ ಇರಲಾರದು ಎಂದೇ ನನ್ನ ಅನಿಸಿಕೆ.
ಇವರ ಇನ್ನೊಂದು ಪಾತ್ರ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಣ್ಣಪ್ಪ ಪಾತ್ರ. ಬಹುಶ ಈ ಪಾತ್ರ ಇವರಿಗಾಗಿಯೇ ಅಣ್ಣಪ್ಪ ಅವತಾರ ಎತ್ತಿದನೋ ಎಂದು ಭಾವಿಸುವಹಾಗೆ ಇವರ ಅಭಿನಯ. ಅಣ್ಣಪ್ಪನಾಗಿ ಪರಕಾಯ ಪ್ರವೇಶ ಮಾಡುವ ಇವರು ಪ್ರೇಕ್ಷಕರ ಹೃದಯಕ್ಕೂ ಪ್ರವೇಶ ಮಾಡಿಬಿಡುತ್ತಾರೆ. ಕ್ಷೇತ್ರ ಮಹಾತ್ಮೆಯಲ್ಲಿ ಅಣ್ಣಪ್ಪ ಪ್ರವೇಶ ಆಗುವ ಸಂದರ್ಭವೇ ಹಾಗೆ. ಒಂದು ತರಹ ಆಟ ಮಂದ್ರವಾಗಿ ತಣ್ಣಗಾಗುವ ಸಮಯ. ಈ ಪಾತ್ರದ ಪ್ರವೇಶ ಆದ ನಂತರ ಆಟದ ಗತಿಯೇ ಬದಲಾಗಿಬಿಡುತ್ತದೆ. ಅದಕ್ಕೆ ಕಾರಣ ಇವರ ಪಾತ್ರ ಪೋಷಣೆ. ಈ ಪಾತ್ರವನ್ನು ನಾವು ಮರೆಯಬಹುದೇ? ಅಸಾಧ್ಯ. ಅಣ್ಣಪ್ಪ ಎಂದರೆ ಅದು ಹೆಗಡೆಯವರದ್ದು.
ಇಂತಹ ಮೇರು ಕಲಾವಿದ ಆದರೂ ಕೆಲವೊಮ್ಮೆ ಒಂದು ಆಟದಲ್ಲಿ ಎರಡೆರಡು ವೇಷ ಹಾಕಿದ್ದನ್ನು ಹಲವುಸಲ ನೋಡಿದಿದ್ದೇನೆ. ಹಲವು ಪಾತ್ರಗಳ ಪೂರ್ಣ ವಿವರಣೆ ಕೊಡುವುದು ತುಂಬಾ ಕಷ್ಟ ಸಾಧ್ಯ. ಅಮರೇಂದ್ರಪಥ ವಿಜಯಿಯ ತ್ರಿಶಂಕು,ಭಸ್ಮಾಸುರ,ಚಕ್ರವರ್ತಿ ದಶರಥದ ಎರಡನೇ ದಶರಥ ಹಾಗು ವಾಲಿ ಸುಗ್ರೀವ ಕಾಳಗದ ವಾಲಿ ಸ್ಮರಣೀಯ ಪಾತ್ರಗಳು.ಒಂದು ರೀತಿಯ ನಾಟಕೀಯ ಅಸುರವೆಶಗಳನ್ನೇ ಮಾಡುತ್ತಿದ್ದ ಇವರು ಅದರಲ್ಲಿ ರಂಗಸ್ಥಳ ಆಕ್ರಮಣ ಮಾಡುವ ರೀತಿ ಅನನ್ಯ. ಬೇರೆ ಪಾತ್ರಗಳು ರಂಗದಲ್ಲಿ ಕುಣಿಯುತ್ತಿವೆ ಎಂಬುದನ್ನು ನಾವು ಮರೆಯುವಂತೆ ಅಭಿನಯ ಮಾತುಗಾರಿಕೆ ಇವರದ್ದು.ಕಲಾಮತೆ ಇವರಿಗೆ ಒಲಿದ ರೀತಿ ಅದ್ಭುತ. ಇವರನ್ನು ಅನುಕರಿಸುವ ಹಲವು ಕಲಾವಿದರು ಇದ್ದಾರೆ. ಧರ್ಮಸ್ಥಳ ಮೇಳದ ಪ್ರಮುಖ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಇವರನ್ನೇ ಕೆಲವು ರೀತಿಯಲ್ಲಿ ಹೋಲುತ್ತಾರೆ. ಅರ್ಥಗಾರಿಕೆ ಸ್ವರದ ಏರಿಳಿತವನ್ನು ಹೆಗಡೆಯಂತೆ ಅನುಕರಿಸುವ ಪ್ರಯತ್ನ ಮಾಡುತ್ತಾರೆ. ಇನ್ನೋರ್ವ ಕಲಾವಿದ ಮಧೂರು ರಾಧಾಕೃಷ್ಣ ನಾವಡ. ಇವರಂತೂ ಅತಿ ಯಶಸ್ವಿಯಾಗಿ ಹೆಗಡೆಯನ್ನು ಹಲವು ಪಾತ್ರಗಳಲ್ಲಿ ಹೋಲುತ್ತಾರೆ. ವೇದಿಕೆಯನ್ನು ಆಕ್ರಮಿಸುವ ಮತ್ತು ಪಾತ್ರಗಳನ್ನು ಪ್ರಸ್ತುತ ಪಡಿಸುವ ಇವರ ರೀತಿ ಹಲವುಸಲ ನನಗೆ ಹೆಗ್ಗಡೆಯ ನೆನಪನ್ನು ತಂದಿದೆ. ಭಸ್ಮಾಸುರವಂತೂ ಅದು ಹೆಗ್ಗಡೆಯನ್ನೇ ಹೋಲುವಂತೆ ಮಾಡುತ್ತಾರೆ.
ನಾನು ನೋಡಿ ಮರೆಯಲಾಗದ ಇನ್ನೊಂದು ಪಾತ್ರ ಬಹುಶ: ಇದು ಅವರ TRUMP CARD ROLE ಎಂದರೆ ತಪ್ಪಾಗಲಿಕ್ಕಿಲ್ಲ. ಇದನ್ನು ನಾನು ನೋಡಿದ್ದು ನಮ್ಮೂರಿನಲ್ಲಿ ಆದ ಧರ್ಮಸ್ಥಳದ ಮೇಳದ ಆಟದಲ್ಲಿ. ಪ್ರಸಂಗ "ಮಹಾರಥಿ ಕರ್ಣ". ಸಮಗ್ರ ಕರ್ಣನ ಚಿತ್ರಣವನ್ನು ಹೊಂದಿದ ಈ ಪ್ರಸಂಗ ಧರ್ಮಸ್ಥಳ ಮೇಳದ ಸೂಪರ್ ಹಿಟ್ ಪ್ರಸಂಗಗಳಲ್ಲಿ ಒಂದು. ಕರ್ಣನ ಜನನ , ಕರ್ಣ ಶಾಪ, ಸುಯೋಧನ ಸಖ್ಯ, ಕರ್ಣ ವಿವಾಹ, ಕರ್ಣ ಭೇದನ ಹಾಗು ಕರ್ಣಾವಸಾನದಲ್ಲಿ ಮುಗಿಯುವ ಈ ಪ್ರಸಂಗ ಒಂದು ಅತ್ಯುತ್ತಮ ಪ್ರಸಂಗ. ಇದರಲ್ಲಿ ಮೊದಲು ಕುಂಬ್ಳೆ ಸುಂದರ್ ರಾವ್ ಅವರ ಭೇದನದ ಕರ್ಣ ಆದನಂತರ ಕೊನೆಯ ಭಾಗದ ಕರ್ಣನಾಗಿ ಪುತ್ತೂರು ನಾರಾಯಣ ಹೆಗಡೆ ಪ್ರವೇಶಿಸುತ್ತಿದ್ದರು. ನನಗಿನ್ನೂ ನೆನಪಿದೆ ಕುಂಬ್ಳೆಯವರ ಕರ್ಣ ಕೃಷ್ಣನ ಸಮಾಗಮದ hang over ನಿಂದ ಹೊರಬರಲಾಗದ ಪ್ರೇಕ್ಷಕ ಇವರ ಕರ್ಣನಿಂದ ಅಕ್ಷರಃಸಹ ಮೂರ್ಛೆಗೊಳ್ಳುವ ಪರಿಸ್ಥಿತಿ. ಭೇದನದ ಕರ್ಣ ಮುಗಿಯುವಾಗಲೇ ಮುಂಜಾವಿನ ಸಮಯ, ಕುಂಬ್ಳೆಯ ನಿರ್ಗಮನ ಆಟ ಸಾಕು ಎಂದು ಮನೆಯ ಕಡೆ ಮುಖ ಮಾಡುವ ಸಮಯ.ಅದರೂ ಇವರ ಕರ್ಣ ನೋಡುವುದನ್ನು ಬಿಟ್ಟರೋ ಒಂದು ದೊಡ್ಡ ನಷ್ಟವಾದಂತೆ.ಮುಂಜಾವಿನ ಆಟದ ರಸಘಳಿಗೆ. ಅಬ್ಬರದ ಚೆಂಡೆಯ ಸದ್ದು , ಕರ್ಣಾವಸಾನದ ಸನ್ನಿವೇಶ. ಕರ್ಣಾಜುನ ಯುದ್ದ ತೊಡಗುವುದರೊಂದಿಗೆ ನಾರಾಯಣ ಹೆಗ್ಗಡೆಯ ಪ್ರವೇಶ. ವೀರಾವೇಶದ ಪರಾಕಷ್ಟೇಯಿಂದ ಶುರುವಗುವಾಗ ಕರ್ಣ ವಿಜ್ರಂಭಿಸುತ್ತಾನೆ. ವೀರಾವೇಶದ ಗತ್ತಿನ ಕುಣಿತಕ್ಕೆ ಹೆಗ್ಗಡೆಯವರು ನಲಿಯುತ್ತ.. ಕರ್ಣನ ರಥ ಕುಸಿದಾಗ ನಿಜವಾಗಿಯೂ ಕುಸಿದು ಕುಳಿತುಕೊಳ್ಳುವಂತೆ ಭಾಸವಾಗುತ್ತದೆ. ಕುಳಿತಲ್ಲೇ ಕರುಳು ಇರಿಯುವಂತೆ ಮಾತನಾಡುತ್ತ ಇದ್ದಂತೆ, ಇನ್ನೇನು ಆಟ ಮುಗಿಯಿತು ಮನೆ ಕಡೆ ಮುಖ ಮಾಡಿದವರು ಬಿಚ್ಚುತ್ತಿರುವ ಟೆಂಟಿನ ಅಂಚಿನಲ್ಲಿ ನಿಂತೇ ಆಟ ನೋಡುತ್ತಿದ್ದಾರೆ.!!!! ಕಲ್ಲಾಗಿ ನಿಂತಂತೆ ಇದ್ದರೂ ಕಣ್ಣಾಲಿಗಳು ಮಿಡಿಯುತ್ತಿವೆ!!. ಮುಂಜಾವಿನ ಆಟ ಅಬ್ಬರಿಸುವ ಬದಲು ಹೆಗ್ಗಡೆಯ ಕರುಣಾಜನಕ ಸನ್ನಿವೇಶವನ್ನು ಅಸ್ವಾದಿಸುತ್ತಾ ಸೂರ್ಯ ಉದಯಿಸುತ್ತ ಇದ್ದಾನೆ ಎಂಬುದನ್ನೇ ಮರೆತಂತೆ ಭಾಸವಾಗುತ್ತದೆ. ನನ್ನ ಬಳಿ ನಿಂತ ವ್ಯಕ್ತಿಯೊಬ್ಬರು ಕಣ್ಣು ಮನಸ್ಸು ಭಾರವಾಗಿ ನೋಡುತ್ತಿದ್ದದ್ದು ನಾನು ಕಣ್ಣಾರೆ ಕಂಡು ದಂಗಾಗಿ ಹೋದೆ.ಅವರ ಕಣ್ಣಂಚಿನಲ್ಲಿ ತೊಟ್ಟಿಕ್ಕಿದ ಕಣ್ಣೀರ ಬಿಂದು ಅಪ್ರಯತ್ನವಾಗಿ ಒರೆಸುತ್ತಿದ್ದರು. ಇದು ನಂಬಲಾಗದ ಸತ್ಯ.......ಅದ್ಭುತ ಕರ್ಣ.. ಮರೆಯಲಾರೆ ನಾನು. ಇಂದಿಗೂ ಕರ್ಣ ಎಂದರೆ ನೆನಪಾಗುವುದು ಹೆಗಡೆಯ ಕರ್ಣಾವಸಾನದ ಕರ್ಣ.
ಯಕ್ಷಗಾನದ ರಂಗವೆರಿದರೆ ಅದು ಯಾವುದೇ ಪಾತ್ರವಾಗಲಿ ಅದನ್ನು ಅಚ್ಚುಕಟ್ಟಾಗಿ ಮತ್ತು ತುಂಬಾ ಸುಲಭವ್ಮ್ಬಂತೆ ನಿರ್ವಹಿಸುವ ಇವರ ಸಿದ್ದಿ ಸಾಧನೆಗಳು ಇಂದಿನ ಕಲಾವಿದರಿಗೆ ಅನುಕರಣೀಯ. ಇಂತಹ ಮಹಾನ್ ಕಲಾವಿದನ ಕಲಾಪ್ರದರ್ಶನವನ್ನು ನೋಡುವ ಭಾಗ್ಯ ಇಂದಿನ ತಲೆಮಾರಿನ ಅಭಿಮಾನಿಗಳಿಗೆ ಇಲ್ಲದೆ ಇರುವುದು ದೊಡ್ಡ ನಷ್ಟವೇ ಸರಿ.
ಕೆಳಗಿನ ಕೊಂಡಿಯಲ್ಲಿ ೧೮೧ ನೆ ಕ್ರಮ ಸಂಖ್ಯೆಯಲ್ಲಿ ಶ್ರೀ ದೇವಿ ಮಹಾತ್ಮೆಯಲ್ಲಿನ ಹೆಗಡೆಯವರ ರಕ್ತಬೀಜನ ಅರ್ಥಗಾರಿಕೆಯನ್ನು ಕೇಳಬಹುದು.
http://oyakshagana.googlepages.com/audios.htm

dharmasthaLa mELada atyanta vaibhavada kaala du.. nanage narayaNa hegdeyavara veshada nenapella nanna baalya kaaladdu.. avara veshagaLannu nODI vipareeta hedaridda nenapugaLu maatra ive eega.. nidle govinda bhat, ubaradka muntadavaru kelavomme hegdeyavara copy aaDi aa haLeya nenapugaLu marukaLisuvante madtare..
ReplyDeleteಪುತ್ತೂರು ನಾರಾಯಣ ಹೆಗಡೆಯವರ ಕಂಸನ ಪಾತ್ರ ನೋಡಿ ಹೆದರಿ "ಚಡ್ಡಿ ಒದ್ದೆ "ಆದವರಲ್ಲಿ ನಾನೂ ಒಬ್ಬ ! ನಾನು ನಾಲ್ಕನೇ ತರಗತಿಯಲ್ಲಿದ್ದಾಗ ದಕ್ಷಾದ್ವರ -ಕೃಷ್ಣ ಲೀಲೆ -ಕಂಸವಧೆ ಪ್ರಸಂಗದಲ್ಲಿ ಹೆಗಡೆಯವರ ಕಂಸನ ಹೂಂಕಾರಕ್ಕೆ ಹೆದರಿ ನಡುಗಿ ಹೋಗಿದ್ದೆ .
ReplyDeleteಕಿರಿಯ ಕಲಾವಿದರು ರಂಗದಲ್ಲಿ ಅವರ ಎದುರು ವೇಷ ಮಾಡುವಾಗ ಅವರ ಹೂಂಕಾರಕ್ಕೆ ನಡುಗಿ ಹೋಗುತ್ತಿದುದನ್ನು ನಾನು ಗಮನಿಸಿದ್ದೇನೆ .
ಅವರ ಮಾಗಧ , ಬಲಿ ,ಕಂಸ ಮತ್ತು ದಶರಥನ ಪಾತ್ರಗಳನ್ನು ಮಾತ್ರವೇ ನೋಡಿದ ನೆನಪುಗಳು ಇನ್ನು ಹಸಿರಾಗಿದೆ.
ಅದ್ಭುತ ಕಲಾವಿದನಿಗೆ ನುಡಿ ನಮನ ಸಲ್ಲಿಸಿದ ನಿಮಗೆ ಕೃತಜ್ಞತೆಗಳು .
Narayana hegdeyavra vesha nodida nempu nangilla... but casette alli avra swara keliddene ashte... Ghambheeryada arthagarike avraddu...
ReplyDeleteawesome voice ..!! you are lucky to see him on stage.. !!! we are missing technology a lot that time, otherwise videos/audios would have been handy to recall !! :)
ReplyDeleteMahan kalavidana vesha noduva,bhagya manage sivalillavalla endu dukhabaguttide.
ReplyDelete