"ಇದು ವಿಮರ್ಶೆಯಲ್ಲದ ಚಿಂತನ"

Tuesday, June 16, 2009

ನೆಚ್ಚಿನ ಗೋವಿನದಣ್ಣನವರಿಗೆ ಒಂದು ಬಹಿರಂಗ ಪತ್ರ




ಅತೀವ ವೇದನೆ ಹಾಗು ತಳಮಳಿಸಿದ ಹೃದಯಾ೦ತರಾಳದ ಮಾತುಗಳನ್ನು ಅತಿ ವಿನಯದಿಂದ ಬಿಂಬಿಸುವ ಪ್ರಯತ್ನವಿದು.



ಗೋವಿಂದಣ್ಣ,

ತಮ್ಮ ಮಿತ್ರರಾದ ಶ್ರೀ ಅಶೋಕವರ್ಧನರವರಿಗೆ ಬರೆದ ಪತ್ರವನ್ನು ನೋಡಿ ನನ್ನ ಮನಸ್ಸು ತಳಮಳಿಸಿದ ವಿಚಾರವನ್ನು ನಿಮ್ಮಲ್ಲಿ ಯಥಾಶಕ್ತಿ ಅರಿಕೆ ಮಾಡುವ ಪ್ರಯತ್ನ ನನ್ನದು. ಈ ಅಂತರ್ಜಾಲ ಪುಟಗಳಲ್ಲಿ ನಿಮ್ಮ ಬಗ್ಗೆ ಬರೆದಷ್ಟು ಬೇರೆ ಯಾರ ಬಗ್ಗೆಯೂ ನಾನು ಬರೆದಿಲ್ಲವೋ ಏನೋ,
ನಿಮ್ಮನ್ನು ನೆನಸಿಕೊಂಡಾಗ ರೋಮಾಂಚಿತನಾಗುವವರಲ್ಲಿ ನಾನು ಒಬ್ಬ. ಆ ಅಪ್ಪಟ ಅಭಿಮಾನವೇ ನನ್ನನ್ನು ಬರೆವಂತೆ ಪ್ರೇರೇಪಿಸಿತು.

ಆ ಪತ್ರದಲ್ಲಿನ ಕೊನೆಯ ಒಕ್ಕಣಿಕೆ ಯಾ ಒಂದು ವಾಕ್ಯ ನನ್ನ ಮನಸ್ಸು ಅತೀವ ತಳಮಳಿಸುವಂತೆ ಮಾಡಿತು. "ಈಗಲಂತೂ ನಾನು ಯಾವುದರಲ್ಲೂ ಆಸಕ್ತನಲ್ಲ." ಇಂದಿನ ಯುವಕರೂ ನಾಚುವಂತೆ ಸದಾ ಉತ್ಸಾಹದ ಚಿಲುಮೆಯಾಗಿರುತ್ತಿದ್ದ ಗೋವಿಂದಣ್ಣ ಹೀಗೆ ಹೇಳುವುದೇ? ಹೀಗೆ ಹೇಳುವಂತೆ ಆಗುವಲ್ಲಿ ನಿಮಗೆ ನಿಮ್ಮದೇ ಆದ ಹಲವು ಸೂಕ್ತ ಕಾರಣಗಳು ಇರಬಹುದು. ಅದಾವುದು ನನ್ನ ತಳಮಳಕ್ಕೆ ಕಾರಣವಲ್ಲ. ಬದಲಾಗಿ ಗೋವಿಂದಣ್ಣನಿಗೆ ನಿರುತ್ಸಾಹ ಉಂಟಾದರೆ ಪರಿಣಾಮವೇನು? ಇಂದು ಗೋವಿಂದಣ್ಣನ ಕೌರವನೋ,ಅತಿಕಾಯನೋ, ಇಂದ್ರಜಿತುವೋ ಹೀಗೆ ನಿಮ್ಮ ಹಲವು ರೂಪಗಳ ವೈಭವವನ್ನು ಕಲ್ಪಿಸಿಕೊಂಡು ಯಕ್ಷಗಾನಕ್ಕೆ ಬರುವ ಅಭಿಮಾನಿಗಳು ನಿಮ್ಮ ನಿರುತ್ಸಾಹದ ಮುಖ ಕಂಡಾರೆ.? ಕೇವಲ ಯಾಂತ್ರಿಕವಾಯಿತೇ ಯಕ್ಷಗಾನ?

ಬಲ್ಲಾಳರ ವಿಯೋಗದಿಂದ ಇನ್ನೂ ಹೊರಬರಲಾಗದ ಅಭಿಮಾನಿಗಳು ಇನ್ನೂ ಅದೇ ಗುಂಗಿನಲ್ಲಿರುವಾಗ, ಈಗಿರುವ ಯಕ್ಷಗಾನದ ಒಂದು ಸಂಕ್ರಮಣ ಕಾಲ, ಅದರಲ್ಲಿ ನಿಮ್ಮ ನಿರುತ್ಸಾಹವನ್ನು ಹೇಗೆ ಕಾಣಬೇಕು ಹೇಳಿ? ಇದೊಂದು ವಿಚಾರದಲ್ಲಿ ನಾವೆಲ್ಲಾ ನಿರ್ದಯಿಗಳಗಿದ್ದೇವೆ ಸ್ವಾಮಿ. ಸವಿದಷ್ಟು ತ್ರಿಷೆ ಅಡಗದ ಈ ಗಂಡುಕಲೆಯಲ್ಲಿ ನಿಮ್ಮ ವೇಷದ ತ್ರಿಷೆ ಅಡಗಿಸುವ ಪರಿಎಂತು. ಜೀವನದ ಹಲವು ಕಷ್ಟಕೋಟಲೆಗಳನ್ನು ಈಸಿ ಬಂದ ನೀವು ಈಗ ಉತ್ಸಾಹವಿಲ್ಲ ಎಂದು ಹೇಳುವಾಗ ನಮ್ಮೆಲ್ಲರ ತಳಮಳ ಊಹಿಸಬಹುದೇ ಸ್ವಾಮಿ?


ಕಾಲಾಯ ತಸ್ಮೈ ನಮಃ . ಎಲ್ಲವೂ ಕಾಲದ ಮೇಲೆಯೇ ನಿಂತಿದೆ. ಆದರೆ ಅದರಲ್ಲೇ ಸಮಾಧಾನ ಪಟ್ಟುಕೊಳ್ಳುವ ಮನೋಭಾವ ನಮ್ಮದಲ್ಲ. ನಿಮ್ಮ ಅದಮ್ಯ ಚೇತನದ ಉತ್ಸಾಹದ ಕುಣಿತವನ್ನು ಸದಾ ನೋಡುವಾಶೆ ಇನ್ನೂ ಕುಗ್ಗಿಲ್ಲ. ಹೊಗಳಿಕೆಯಿಂದ ಹಿಗ್ಗದ ತೆಗಳಿಕೆಯಿಂದ ಕುಗ್ಗದ ನಿಮ್ಮ ವ್ಯಕ್ತಿತ್ವವನ್ನು ಕಣ್ಣಾರೆ ಕಂಡವರು ನಿಮ್ಮ ನಿರುತ್ಸಾಹವನ್ನು ಕಾಣಬೇಕೆ? ಎಲ್ಲದಕ್ಕೂ ಪರ್ಯಾಯ ಇರಬಹುದು. ಆದರೆ ಆ ಪರ್ಯಾಯ ಪರ್ಯಾಪ್ತವಾಗಬಲ್ಲುದೆ? ನಿಮಗಿಂತ ಮಿಗೆಲೆನಿಸಿದ ಕಲಾವಿದ ಬರಬಹುದೋ ಇಲ್ಲವೊ ಅದಾಲ್ಲ ಆದರೆ ನಿಮ್ಮ ನಿರುತ್ಸಾಹ ಕಾಣುವ ಮನೋಸ್ಥೈರ್ಯ ನಮ್ಮಲ್ಲಿ ಇಲ್ಲವಾಗಿದೆಯಲ್ಲ.? ಪ್ರತಿಯೊಬ್ಬ ಅಭಿಮಾನಿಯೂ ನಿಮ್ಮ ನಿರುತ್ಸಾಹ ನೋಡುವಲ್ಲಿ ಶಕ್ತನಲ್ಲ.

ಇತ್ತೀಚಿಗೆ ಹೊಸನಗರ ಮೇಳದ ಅತಿಥಿ ಕಲಾವಿದರಾಗಿ ಮುಂಬಯಿಯಲ್ಲಿ ಭಾಗವಹಿಸಿರುವಿರಿ. ಅತ್ಯುತ್ಸಾಹದಿಂದ ಈಗಲೂ ಪುಂಡುವೇಷಧಾರಿಯಾಗಿ ರಂಗದ ಮೇಲೆ ಬಂದ ವಿಚಾರ ಮಿತ್ರರಿಂದ ತಿಳಿದೇ. ನಿಮ್ಮ ಉತ್ಸಾಹ ಕೇಳಿ ಅಮಿತ ಆನಂದವಾಗಿದೆ. ಈ ಉತ್ಸಾಹ ಚೈತನ್ಯವು ನಿತ್ಯ ನಿಮ್ಮ ನರನಾಡಿಗಳಲ್ಲಿ ಹರಿಯುತ್ತಿರಲಿ. ನಿಮ್ಮ ಪತ್ರ ದ ಉಲ್ಲೇಖ ಏನಿದೆಯೋ ಅದು ಪತ್ರದಲ್ಲೇ ಉಳಿದು ಇನ್ನೂ ಚಿರನೂತನ ಕಲಾವಿದರಾಗಿ ರಂಗದಲ್ಲಿ ಮೆರೆದಾಡಲಿ ಎಂದೇ ನನ್ನ ಮಾತ್ರವಲ್ಲ ಸಕಲ ಅಭಿಮಾನಿಗಳ ಆಗ್ರಹ ಹಾಗು ಹಾರೈಕೆ.

ಇತೀ ನಿಮ್ಮ ಅಭಿಮಾನಿ.

1 comment: