"ಇದು ವಿಮರ್ಶೆಯಲ್ಲದ ಚಿಂತನ"

Tuesday, June 9, 2009

ಶೇಣಿ ಅರ್ಥವೈಭವದಲ್ಲಿ ಮಾಗಧ ವಧೆ


ಯಕ್ಷಗಾನ ಧ್ವನಿ ಸುರುಳಿಗಳಲ್ಲಿ ಮಾಗಧ ವಧೆ ಎಂಬ ಪ್ರಸಂಗ ಹಲವು ಬಂದಿದೆ. ಶೇಣಿಯವರು ಹಲವುಗಳಲ್ಲಿ ಮಾಗಧನಾಗಿ ಧ್ವನಿಸಿದ್ದಾರೆ. ಆದರೂ ಇವರ ಅರ್ಥ ವೈಭವದಲ್ಲಿ ಬಂದ ಒಂದು ಉತ್ತಮ ಜೋಡಿ ಧ್ವನಿ ಸುರುಳಿ ಮಾಗಧ ವಧೆ ಯಕ್ಷಗಾನ ತಾಳಮದ್ದಲೆ.ಇದರಲ್ಲಿ ಭಾಗವತರಾಗಿ ಶ್ರೀ ಪದ್ಯಾಣ ಗಣಪತಿ ಭಟ್ ಚೆಂಡೆ ಮದ್ದಲೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಕುದ್ರೆಕೊಡ್ಲು ರಾಮಭಟ್ ಹಿಮ್ಮೇಳದಲ್ಲಿ ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಅರ್ಥಧಾರಿಗಳಾಗಿ ಪೆರ್ಲ ಕೃಷ್ಣ ಭಟ್,ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರೀ , ಸೂರಿಕುಮೆರಿ ಗೋವಿಂದ ಭಟ್ ಮುಂತಾದವರು ಶೇಣಿಯವರೊಂದಿಗೆ ಸಹಕರಿಸಿದ್ದಾರೆ.

ಎರಡು ಗಂಟೆ ಅವಧಿಯ ಈ ಯಕ್ಷಗಾನದಲ್ಲಿ ಪೂರ್ಣವಾಗಿ ಶೇಣಿಯವರ ಅರ್ಥಗಾರಿಕೆಯ ಪರಿಪೂರ್ಣತೆ ಸಾಧ್ಯವಿಲ್ಲವಾದರೂ ಸ್ಥೂಲವಾಗಿ ಮಾಗಧ ಅದ್ಭುತವಾಗಿ ಮೂಡಿಬಂದಿದೆ. ಕೃಷ್ಣನಾಗಿ ಪೆರ್ಲ ಕೃಷ್ಣ ಭಟ್ ಉತ್ತಮ ಪ್ರತಿವಾದಿಯಾಗಿ ಸಲೀಸಾಗಿ ನಿರ್ವಹಸಿದ್ದಾರೆ. ಮಗಧನಲ್ಲಿಗೆ ಭೀಮಾರ್ಜುನರೊಂದಿಗೆ ಕೃಷ್ಣ ಯುದ್ದಕ್ಕೆ ಹೋಗುವಲ್ಲಿಂದ ಪ್ರಸಂಗ ಆರಂಭವಾಗುತ್ತದೆ. ಭೇರಿತ್ರಯಗಳನ್ನೂ ಮೂವರು ಭೇದಿಸಿದಾಗ ವಿಲಕ್ಷಣ ಸ್ವಭಾವದೊಂದಿಗೆ ಮಾಗಧನ ಪ್ರವೇಶ. ಮಾನಸಿಕವಾಗಿ ಭಯಗೊಂಡು ವ್ಯಾಕುಲತೆಯಿಂದ ಪ್ರವೇಶವಾಗುವ ಶೇಣಿಯವರ ಮಾಗಧ ಒಂದು ಅದ್ಭುತ ಅನುಭವ ನೀಡುತ್ತದೆ. ಪ್ರತಿ ಹಂತದಲ್ಲೂ ಜರಾಸಂಧನ ಮನೋಭಾವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಇವರ ಅರ್ಥಗಾರಿಕೆ ಕೇಳಿಯೇ ಸವಿಯಬೇಕು. ಸ್ನಾತಕ ಬ್ರಾಹ್ಮಣರ ವೇಷಧಾರಿಗಳಾದ ಭೀಮಾರ್ಜುನ ಕೃಷ್ಣರನ್ನು ಕಂಡು ತಡಬಡಾಯಿಸುವ ಜರಾಸಂಧ ಕೊಪದಿಂದಲೂ ಮನದ ಮೂಲೆಯಿಂದ ಎದ್ದಿರುವ ಭಯದಿಂದಲೂ ಪ್ರಶ್ನಿಸುವ ಸನ್ನಿವೇಶ ಅರ್ಥವತ್ತಾಗಿ ಮೂಡಿಬಂದಿದೆ. ಪೇಳಿರೈ ನಿಮಗಾವ ದೇಶ ... ಪದ್ಯಾಣ ಗಣಪತಿ ಭಟ್ ಸುಶ್ರಾವ್ಯವಾಗಿ ಹಾಡಿದ ಒಂದು ಪದ ಈ ಸನ್ನಿವೇಶಕ್ಕೆ ಉತ್ತಮವಾಗಿ ಹೊಂದಿಕೆಯಾಗಿದೆ.

ಬಂದವರು ಬ್ರಾಹ್ಮಣರಲ್ಲದೆ ಕ್ಷತ್ರಿಯರು ಮಾತ್ರವಲ್ಲ ವೈರಿಗಳು ಎಂಬ ನಿರ್ಧಾರಕ್ಕೆ ಬರುವಲ್ಲಿ ಶೇಣಿಯವರ ಅರ್ಥಗಾರಿಕೆಯ ವಿಶ್ಲೇಷಣೆ ಬಹುಶಃ ಪ್ರತಿಯೊಬ್ಬ ತಾಳಮದ್ದಲೆ ಕಲಾವಿದನಿಗೆ ಪಠ್ಯಕ್ರಮವಾಗಬಹುದು. ಭದ್ರ ಬುನಾದಿಯ ಮೇಲೆ ಮಾತಿನಮಹಲನ್ನು ಕಟ್ಟುತ್ತಾ ಭಾವನಾ ಪ್ರಪಂಚದ ತುತ್ತ ತುದಿಗೆ ಕೊಂಡೊಯ್ದು ಮಾಗಧನ ವ್ಯಕ್ತಿ ಚಿತ್ರಣವನ್ನು ಅನಾವರಣಗೊಳಿಸಿಬಿಡುತ್ತಾರೆ. ಬಂದವರು ಬ್ರಾಹ್ಮಣರಲ್ಲ ಎಂಬ ನಿರ್ಧಾರಕ್ಕೆ ಬಂದ ಬಳಿಕ ವೈರಿಗಳು ಬಂದವರು ಎಂದು ತಿಳಿದು ಯಾರು ? ಎಂಬ ಜಿಜ್ಞಾಸೆಗೆ ಒಳಗಾಗುತ್ತಾ ಜರಾಸಂಧನ ಮಾತುಗಳು ಮತ್ತು ತರ್ಕಗಳು ಬಂದವ ಕೃಷ್ಣನೇ ಆಗಿರಬಹುದೇ ಎಂಬ ಬಲವಾದ ಸಂದೇಹಕ್ಕೆ ಮನಸ್ಸು ಒಳಗಾಗುತ್ತದೆ.

ಬಂದವರು ಯಾರೂ ಎಂಬ ಜಿಜ್ಞಾಸೆಗೆ ಒಳಗಾದ ಜರಾಸಂಧನ ಮಾತುಗಳು

ಯಾರಿವರು ? ನನ್ನ ತಲೆಯನ್ನೇ ಕೆಡಿಸಿ ಬಿಟ್ರಲ್ಲ ?ಹಾಗೆಂತ ಕೇಳಿದ್ರೆ ನೇರ ಉತ್ತರಿಸುವುದೂ ಇಲ್ಲ ಯಾವಾಗ ಛದ್ಮವೇಷ ಧರಿಸಿ ಬಂದವರೂಂತ ನಾನು ಊಹಿಸಿಯಾಯಿತೋ ವೇಷಧರಿಸಿದವರು ಸತ್ಯ ಹೇಳಿಯಾರು ಎಂಬುದನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಮತ್ತೆss... ಹೊಡೆದು ಬಡಿದು ಬಾಯಿ ಬಿಡಿಸಬೇಕು .....ಯಾರಿವರು? ಜರಾಸಂಧನದ್ದಾದ ಧೀಶಕ್ತಿಯನ್ನೋ ಆತ್ಮ ಶಕ್ತಿಯನ್ನೂ ಪರೀಕ್ಷಿಸುವದಕ್ಕೊಸ್ಕರ ಈ ಯಾಗ ಶಾಲೆಗೆ ಬಂದ ಇಂದ್ರನಿರಬಹುದೇ? ಅಲ್ಲ.. ನಮ್ಮ ನಮ್ಮ ಜಾತಿಯವರೇsss.... !!? ಈ ಯಜ್ಞೋಪವೀತ ನೋಡಿದ್ರೆ ಕಪ್ಪಾಗಿ ಕಾಣಿಸ್ತಾವೆ. ದ್ವಿಜತ್ವ ಮೂರು ವರ್ಣದವರಿಗೆ ಶಾಸ್ತ್ರಗಳಲ್ಲಿ ಹೇಳಲ್ಪಟ್ಟದೇ. ಅವುಗಳಲ್ಲಿ ವಿಪ್ರರಿಗಾದರೆ ಹತ್ತಿಯ ಜನಿವಾರ, ಕ್ಷತ್ರಿಯರಿಗೋ ಸೆಣಬಿನದ್ದು. ವೈಶ್ಯರಿಗೆ ಉಣ್ಣೆಯದ್ದು. ಹಾಗಾದರೆ ಇವರು ಕ್ಷತ್ರಿಯರೇ.. ಯಾರು? "

ಹೀಗೆ ಶೇಣಿಯವರ ತರ್ಕದಿಂದ ಕೂಡಿದ ಮಾತುಗಾರಿಕೆಯ ಸೊಬಗು ಮಾಗಧನ ವಿರಾಟ್ ದರ್ಶನವನ್ನು ಮಾತಿನಲ್ಲೇ ಮಾಡಿಬಿಡುತ್ತದೆ.ಜರಾಸಂಧನ ಸಂಶಯಗಳಿಗೆ ಉತ್ತಮವಾಗಿ ತರ್ಕದಿಂದಲೇ ಕೃಷ್ಣನಾಗಿ ಪೆರ್ಲ ಕೃಷ್ಣ ಭಟ್ ರವರು ಉತ್ತರಿಸುತ್ತಾರೆ. ಶತ್ರುತ್ವದ ಕಾರಣ, ಮತ್ತು ಆ ಶತ್ರುತ್ವ ಹೊಂದಲು ಕಾರಣ ಎಲ್ಲವನ್ನು ವಸ್ತು ನಿಷ್ಠವಾಗಿ ಕೃಷ್ಣ ಭಟ್ಟರು ಮುಂದಿಡುತ್ತಾರೆ. ಒಂದು ಪರಿಧಿಯೊಳಗೆ ಸುಳಿದಾಡುವ ಇವರ ಅರ್ಥಗಾರಿಕೆಯ ಒಂದು ಸೊಗಸು ಸವಿದೆ ತಿಳಿದುಕೊಳ್ಳಬೇಕು. ಈ ಸಂದರ್ಭದಲ್ಲಿ ಪದ್ಯಾಣರ ಭಾಗವತಿಕೆಯೂ ಅಂತೆ ಶೇಣಿಯವರ ಆತ್ಮ ಸ್ವರದಂತೆ ಭಾಸವಾಗಿಬಿಡುತ್ತದೆ. ಇಬ್ಬರ ಸ್ವರದಲ್ಲೂ ಕಂಡೂ ಕಾಣದ ಒಂದು ಸಾಮ್ಯತೆ ಇಲ್ಲಿ ಕಂಡು ಬರುತ್ತದೆ. ಸೆರೆಯಲ್ಲಿಟ್ಟ ರಾಜರನ್ನು ಬಿಡುವಂತೆ ಕೃಷ್ಣ ಹೇಳುವ ಸಂದರ್ಭದಲ್ಲಿನ ಮಾತುಕತೆ, ತಮ್ಮನೋ ಮೊಮ್ಮನೋ ಯಾವ ಸಂಬಂಧಿಯೋ , ಯಾವ ಸಂಬಂಧಿಯೋ ಹೇಳುವಂತೆ ಅಬ್ಬರಿಸುವ ಶೇಣಿಯವರು ಮಾಗಧನ ಅಂತರ್ಗತವಾದ ರೋಷವನ್ನು ಹೊರಹೊಮ್ಮಿಸುತ್ತಾರೆ.

"ತಿಳಿಯದಾಗಿದೆ ನಮ್ಮ ಕಂಸಗೆ ಅಳಿಯನೀತನು ಎಮಗೆ ಮೊಮ್ಮನು.............." ಈ ಪದ ಮಾಗಧ ವಧೆಯ ಪ್ರಮುಖ ಪದ. ಹಲವು ಭಾಗವತರು ಹಲವು ಶೈಲಿಯಲ್ಲಿ ಹಾಡುವ ಈ ಪದ ಮಾಗಧನು ಕೃಷ್ಣನನ್ನು ಹೀಯಾಳಿಸಿ ಛೇಡಿಸುವ ಪದ. ಇಲ್ಲಿಯೂ ಪದ್ಯನರು ಸಲೀಸಾಗಿ ಸುಂದರವಾಗಿ ಇದನ್ನು ಪ್ರಸ್ತುತ ಪಡಿಸಿದ್ದಾರೆ.ಈ ಪದಕ್ಕೆ ಕೃಷ್ಣನನ್ನು ಹೀಯಾಳಿಸುತ್ತಾ ಮಗಧನ ಮುಖದಲ್ಲಿ ಶೇಣಿಯವರ ಕಲ್ಪನಾಲೋಕದ ಅರ್ಥಗಾರಿಕೆ ಆ ಪಾತ್ರಕ್ಕೆ ನ್ಯಾಯ ಒದಗಿಸುವಂತೆ ಮಾಡುತ್ತದೆ. ' ಎಲ್ಲ ತಂದೆ ತಾಯಿಯರಿಗೆ ಮಕ್ಕಳು ಹುಟ್ಟಿದ ಮೇಲೆ ಪ್ರಾರಬ್ಧ ಶುರುವಾದರೆ, ಇವನು ಹುಟ್ಟುತ್ತಾನೆಎಂಬ ಸಂಕಲ್ಪ ಮಾತ್ರ, ಅಶರೀರವಾಣಿ ಕಂಸನಿಗೆ ಕೇಳಿ ಇಬ್ಬರನ್ನು ಬದುಕಲಿ, ದಾಂಪತ್ಯ ಅನುಭವಿಸಲಿ ಎಂದು ಸೆರೆಗೆ ತಳ್ಳುತ್ತಾನೆ. ಅದು ಕಂಸನ ಔದಾರ್ಯ. ಆದರೆವಸುದೇವ ಎಂತಹ ದ್ರೋಹಿ. ದೇವಕಿ ಎಂತಹ ಘಾತಕಿ ಮಾಗಧ ಹೇಳುವ ರೀತಿ 'ಏಳು ಪರ್ಯಂತವೂ ಎಮಗೆ ಗೋಚರವಿಲ್ಲ.ಆಮೇಲೆ ನಿನಗುದಿಸಿದರೆ ... ಉದಿಸಿದರೆs..s...ಉದಿಸಿದರೆ ಎಂಬುದಕ್ಕೆ ಒಟ್ಟು ಕೊಟ್ಟು ಒಂದು ಹೊಸ ವಿಶ್ಲೇಷಣೆ ಮಾಡುತ್ತಾರೆ.ಹೀಗೆ ಎಂಟನೆಯದ್ದನ್ನು ವಸುದೇವ ದೇವಕಿಯರು ಪಡೆಯುತ್ತಾರೆ ಎಂದಾದರೆ ಅದು ಕಂಸನನ್ನು ಕೊಲ್ಲುಬೇಕಾಗಿ ಈ ಏಳರ ಮಹತ್ಯಾಗಕ್ಕೆ ತಯಾರಾದ ಜೀವಗಳ್ಲರು ಇವರು.ಎಂತಹ ದೃಷ್ಟಿ ಕೋನ? ಇಂತಹ ವಿಶ್ಲೇಷಣೆ ವೈಭವಗಳು ಬಹುಶಃ ಯಾವ ಭಾಷಾ ಸಾಹಿತ್ಯದಲ್ಲೂ ಹೀಗೆ ನಿರರ್ಗಳವಾಗಿ ಸಿಗುವುದು ಅಸಾಧ್ಯ. ಅದು ಶೇಣಿಯ ಅರ್ಥದಲ್ಲಿರುವ ಶ್ರೇಷ್ಠತೆ.

ಜರಾಸಂಧನ ಪಾತ್ರ ಶೇಣಿಯವರ ಹಲವು ವಿಶಿಷ್ಟ ಪಾತ್ರಗಳಲ್ಲಿ ಒಂದು. ಅವರು ಅದನ್ನು ನಿರ್ವಹಿಸುವ ರೀತಿ ಆಪಾತ್ರದ ದೃಷ್ಟಿ ಕೋನ ಸ್ಥೂಲವಾಗಿ ಈ ಧ್ವನಿಸುರುಳಿಯಲ್ಲಿ ಹೊರಹೊಮ್ಮಿದೆ. ಹೊಸ ಕಲಾವಿದರಿಗೆ ಇಂತಹ ಯಕ್ಷಗಾನ ಧ್ವನಿಸುರುಳಿಗಳು ಒಂದು ಕಲಿಕಾ ಸಾಧನವು ಹೌದು.ಶೇಣಿಯವರು ಇಂದು ನಮ್ಮ ನಡುವೆ ಇಲ್ಲ ಆದರೆ ಈ ಮೂಲಕ ನಮ್ಮ ನಡುವೆ ಇಂದು ನಿತ್ಯ ಒಡನಾಡಿಯಾಗಿದ್ದಾರೆ.

ಉದಯೋನ್ಮುಖ ಕಲಾವಿದರು ಇವುಗಳನ್ನು ಎಷ್ಟು ಉಪಯೋಗಿಸುತ್ತಾರೆ ಎಂಬಲ್ಲಿ ಮಾತ್ರ ಚಿಂತಿಸಬೇಕಾದ ಅಗತ್ಯವಿದೆ. ಹಳೆಯ ಪರಂಪರೆಯ ಮೇಲೆ ಹೊಸ ಆಯಾಮಗಳು ಮೊಳೆತಿವೆ. ಹೊಸ ದಿಗಂತದ ಸಾಧನೆಗೆ ಹಳೆಯದೆಂದು ದೂರ ಮಾಡದೆ ಇವುಗಳ ಉಪಯೋಗ ಆಗಬೇಕಿದೆ.

1 comment:

  1. ee cassette nanoo sumaru sarthi kELi koneyillada jihjnasegaLige oLagaagiddene :) aa ondu kaalaghattadali shENiyavra hechchinella thaLamaddaLEgaLige adhbhuta padyagaLannu hELi padyanaru meredaddoo mareyalagada anubhava...

    ReplyDelete