"ಇದು ವಿಮರ್ಶೆಯಲ್ಲದ ಚಿಂತನ"

Wednesday, August 4, 2010

ಅಗರಿ ಎಂಬ ಗಾನ ಕೋಗಿಲೆ

ಅಗರಿ ಶ್ರೀನಿವಾಸ ಭಾಗವತರು ಚಿತ್ರ ಕೃಪೆ: ರಾಮ್ ನರೇಶ್ ಮಂಚಿ

ಅಂದು ಶನಿವಾರದ ಒಂದು ದಿನ ಬೆಳಗ್ಗೆ ಕಛೇರಿಗೆ ಹೊರಡುವ ತರಾತುರಿಯಲ್ಲಿದ್ದೆ. ಜೇಬಿನಲ್ಲಿದ್ದ ಮೊಬೈಲ್ ಸಂದೇಶ ಗ್ರಹಿಸಿ ಮೆಲುವಾಗಿ ಕಂಪಿಸಿತು. ಅದನ್ನು ತೆಗೆದು ನೋಡುವಷ್ಟು ಸಮಯವಿಲ್ಲದೆ ಹಾಗೆ ಬಿಟ್ಟು ನಿತ್ಯ ನಿಯಮಿತ ದಿನಚರಿಯತ್ತ ಉದ್ಯುಕ್ತನಾದೆ. ಸ್ವಲ್ಪ ವಿರಾಮ ಸಿಕ್ಕಿ ಯಾರದೋ ಕರೆ ಬಂದಾಗ ಮರೆತು ಹೋದ ಸಂದೇಶ ತೆರೆದು ಓದುವ ಕೆಲಸ ನೆನಪಾಗಿ ಕುತೂಹಲದಿಂದ ನೋಡಿದೆ. ಮಿತ್ರರಾದ ಸುಬ್ಬಣ್ಣ ತುಮಕೂರಿನಿಂದ ಸಂದೇಶ ಕಳಿಸಿದ್ದರು. “ಮಧಾಹ್ನದ ವೇಳೆ ನಿಮ್ಮಲ್ಲಿಗೆ ಬರುತ್ತಿದ್ದೇನೆ.”



ಸುಬ್ಬಣ್ಣ ತುಮಕೂರಿಂದ ನನ್ನನ್ನು ಕಾಣಲು ಬರುವುದೇನು ಹೊಸತಲ್ಲ. ಹಾಗಾಗಿ ಹೆಚ್ಚಿನ ಗಮನ ಆ ಕಡೆಗೆ ಹರಿಸದೆ ಯಥಾವತ್ತಾಗಿ ಕೆಲಸದಲ್ಲಿ ಪ್ರವೃತ್ತನಾದೆ. ಮಧ್ಯಾಹ್ನ ಊಟ ಮಾಡುತ್ತಿರಬೇಕಾದರೆ ಸುಬ್ಬಣ್ಣನ ಕರೆ,

“ ನಾನು ಯಶವಂತಪುರದ ರೈಲು ನಿಲ್ದಾಣದಲ್ಲಿದ್ದೇನೇ.” ಇದು ಸುಬ್ಬಣ್ಣನ ಮಾಮೂಲು ಕ್ರಮ. ಅವರನ್ನು ಕರೆದುಕೊಂಡು ಬರೋಣವೆಂದು, ದ್ವಿಚಕ್ರ ಏರಿ ಯಶವಂತಪುರದತ್ತ ತೆರಳಿದೆ. ಮನೆಯಿಂದ ಐದು ನಿಮಿಷದ ಹಾದಿ. ರೈಲು ನಿಲ್ದಾಣದ ಹತ್ತಿರದ ಬಸ್ ನಿಲ್ದಾಣಕ್ಕೆ ಬರುತ್ತಾ ಸುಬ್ಬಣ್ಣನ ಅರಸುತ್ತ ಕತ್ತು ತಿರುಗಿಸುತ್ತಾ ಕಣ್ಣು ದೂರಕ್ಕೆ ಹಾಯಿಸಿದೆ. ಆ ಜನ ಮತ್ತು ವಾಹನದ ಮಧ್ಯೆ ಹುಡುಕುವುದು ಸ್ವಲ್ಪ ಕಷ್ಟವೇ. ಅದರೂ ದೂರದಲ್ಲೇ ಕಪ್ಪು ಬ್ಯಾಗನ್ನು ಜನಿವಾರ ಮಾಡಿ ಹೆಗಲಿಗೇರಿಸಿಕೊಂಡು ನಿಂತುಕೊಂಡ ವ್ಯಕ್ತಿ ಸುಬ್ಬಣ್ಣ ಆಗಿರಬಹುದು ಎಂದು ಅತ್ತ ಹೋದ ನನ್ನ ಅನುಮಾನ ನಿಜವಾಗಿತ್ತು. ಅತ್ತ ಸರಿದು ಹಸ್ತಲಾಘವ ಇತ್ತು ಅವರನ್ನು ವಾಹನದಲ್ಲಿ ಕೂರಿಸಿ ಕಛೇರಿ ಕಡೆ ಹೊರಟೆ.



ದಾರಿಯಲ್ಲಿ ಬರುತ್ತಿದ್ದಂತೆ ಸುಬ್ಬಣ್ಣ ಹೇಳಿದರು... “ಹಳೆಯ ತಾಳಮದ್ದಲೆ ಕ್ಯಾಸೆಟ ಕೆಲವು ತಂದಿದ್ದೇನೆ. ಎಲ್ಲಿಯೋ ಆದ ತಾಳ ಮದ್ದಲೆಯ ಧ್ವನಿ ಮುದ್ರಣವದು . ಅದನ್ನು MP3 ಮಾಡಿ ಕೊಡಬೇಕು.” ಎಂದಿನಂತೆ ಇದು ಕೂಡ ಮಾಮೂಲು ಮಾತುಗಳು. ಔಪಚಾರಿಕ ಮಾತುಗಳೊಂದಿಗೆ ಇದು ಕೂಡ ಔಪಚಾರಿಕವಾಗಿಬಿಟ್ಟಿದೆ. ಕಛೇರಿಗೆ ಬಂದವರೆ..ಬ್ಯಾಗ್ ಕೆಳಗಿಟ್ಟು ದೊಡ್ಡ ಉಸಿರು ಬಿಟ್ಟು ನಮ್ಮ ತಿರುಗು ಆಸನದಲ್ಲಿ ಮೈಚೆಲ್ಲಿ ಕುಳಿತರು. ಮೇಜಿನ ಮೇಲಿದ್ದ ಬಾಟಲ್ ನಿಂದ ಒಂದಷ್ಟು ನೀರನ್ನು ಗಟ ಗಟ ಕುಡಿದು.. ಬ್ಯಾಗಿನೊಳಗಿಂದ ಒಂದಷ್ಟು ಕ್ಯಾಸೆಟ್ ಮೇಜಿನ ಮೇಲೆ ಹರಡಿ ಒಂದೊಂದಾಗಿ ವಿವರಿಸತೊಡಗಿದರು. ಅವಸರವಸರವಾಗಿ ವಿವರಿಸುತ್ತಿದ್ದ ಅವರ ಅವಸರವನ್ನು ಗಮನಿಸುತ್ತ ಜತೆಗೆ ತಂದ ಕ್ಯಾಸೆಟ ಕೆಲವನ್ನು ಟೇಪ್ ರೆಕಾರ್ಡರ್ ಗೆ ಹಾಕಿ ಒಂದು ಸಲ ಕೇಳಿದೆ. ಇದು ಕೂಡ ಸಾಮಾನ್ಯ ನನ್ನ ಸುಬ್ಬಣ್ಣನ ಬಾಂಧವ್ಯವೇ ಹಾಗೆ. ಎಲ್ಲೇಲ್ಲಿಂದಲೋ ಜೀರ್ಣಾವಸ್ಥೆಯಲ್ಲಿರುವ ತುಂಬ ಹಳೆಯ ಕ್ಯಾಸೆಟ್ ತರುವುದು ಅದನ್ನು ರೂಪಾಂತರಿಸಿ ಕಂಪ್ಯೂಟರ್ ಗೆ ಏರಿಸಿ ನಮ್ಮ ಯಕ್ಷಗಾನ ಸಂಗ್ರಹವನ್ನು ಮತ್ತೂ ಹಿಗ್ಗಿಸುವುದು, ಮತ್ತು ಅದನ್ನು ಕೇಳುವುದು. ಯಕ್ಷಾಗಾನ ಸಂಗ್ರಹವೆಂಬ ಹವ್ಯಾಸತೊಡಗಿದಂದಿನಿಂದ ನಮ್ಮ ನಡುವಿನ ಬಾಂಧವ್ಯ ಗಟ್ಟಿಯಾಗುತ್ತ ಹೋಗಿ ಇಂದು ಆ ಯಕ್ಷಗಾನದ ವಿಚಾರ ಸೀಮೆಯನ್ನು ದಾಟಿ ಇನ್ನೂ ಗಾಢವಾಗಿದೆ.

ಅಗರಿ ಶ್ರೀನಿವಾಸ ಭಾಗವತರ ಕೆಲವು ಪದಗಳು


ಈ ಬಾರಿ ತಂದ ಹಲವು ಧ್ವನಿ ಸುರುಳಿಯಲ್ಲಿ ಯಾವುದೋ ಊರಲ್ಲಿ ಆದ ತಾಳಮದ್ದಲೆಯ ಧ್ವನಿ ಮುದ್ರಣದ ಕೆಲವು ಧ್ವನಿ ಸುರುಳಿಗಳಿದ್ದುವು. ಹಿರಿಯ ಭಾಗವತ ಶ್ರೀ ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯ ತಾಳಮದ್ದಲೆಯ ಧ್ವನಿಸುರುಳಿಯದು. ನಮ್ಮ ಸಂಗ್ರಹದಲ್ಲಿರುವ ಯಕ್ಷಗಾನ ಕಡತಗಳಲ್ಲಿ ಅಗರಿಯವು ತುಂಬಾ ಕಡಿಮೆ. ಅಂದು ಸಮಯದ ಅಭಾವ ಸುಬ್ಬಣ್ಣ ವಾಡಿಕೆಯಂತೆ ತುಸು ಹೊತ್ತು ಹರಟೆ ಹೊಡೆದು ಹೊರಟು ನಿಂತರು. ಅವರನ್ನು ಮೆಜೆಸ್ಟಿಕ್ ಬಸ್ ಹತ್ತಿಸಿ ಬಂದ ನನಗೆ ಮತ್ತೆ ಅನಿವಾರ್ಯ ಹಲವು ಕೆಲಸದ ಮಧ್ಯೆ ಸುಬ್ಬಣ್ಣ ಕೊಟ್ಟ ಧ್ವನಿಸುರುಳಿ ನೋಡುವುದಕ್ಕೆ ಆಗಲಿಲ್ಲ.



ಮರುದಿನ ಆದಿತ್ಯವಾರ. ಸಹಜವಾಗಿ ರಜೆಯ ಒಂದು ಜಡತನ ಇತ್ತು. ನಿಧಾನವಾಗಿ ಸುಬ್ಬಣ್ಣ ಕೊಟ್ಟ ಸುರುಳಿಯನ್ನು ತೆಗೆದು ನೋಡಿದೆ. ಯಾವುದೋ ತುಂಬ ಹಳೆಯದಾದ ಧ್ವನಿಸುರುಳಿ. ತೆಗಿದಿಟ್ಟ ಟೇಪ್ ರೆಕಾರ್ಡರ್ ಕಂಪ್ಯೂಟರ್ಗೆ ಜೋಡಿಸಿ ಕ್ಯಾಸೆಟ್ ಹಾಕಿ ತಿರುಗಿಸುವ ಯತ್ನ ಮಾಡಿದೆ. ಮೊದಲು ಒಂದೆರಡು ಪದ ಕೇಳುವ ತವಕ. ಸ್ಯಾಂಪಲ್ ಹೇಗಿದೆ ನೋಡೋಣ. ಅಗರಿಯ ಕಂಠದ ಇಂಪಾದ ಪದ ಸ್ವಲ್ಪ ಕೇಳಿದ್ದೆ ಕ್ಯಾಸೆಟ್ ನಿಂತು ಬಿಟ್ಟಿತು.



ಇನ್ನು ಇದರ ಶಸ್ತ್ರ ಕ್ರಿಯೆ ಅನಿವಾರ್ಯವೆಂದು, ಕೆಲವು ಸ್ಕ್ರೂ- ಡ್ರೈವರ್ ತೆಗೆದು ಕ್ಯಾಸೆಟ್ ಹೊರ ಕವಚವನ್ನು ತೆಗೆದು ಒಳಗೆ ದಪ್ಪನೆ ಅಂಟಿದ್ದ ಧೂಳನ್ನು ತೆಗೆದು ಅದರ ಒಳಕವಚದ ಪರೆಯನ್ನು ತೆಗೆದು ಸುತ್ತಿಕೊಂಡ ಕರ್ರಗಿನ ಟೇಪ್ ಸ್ವಚ್ಚ ಗೊಳಿಸುವಲ್ಲಿ ತೊಡಗಿದೆ. ತುಂಬ ಹಳೆಯ ಧ್ವನಿಸುರುಳಿ. ನಿಶ್ಚಲವಾಗಿ ಹಲವು ವರ್ಷಗಳೆ ಸಂದಿದ್ದುವು. ಎಲ್ಲ ಸ್ವಚ್ಚ ಗೊಳಿಸಲು ಅರ್ಧತಾಸು ಬೇಕಾಯಿತು. ನಂತರ ಟೇಪ್ ರೆಕಾರ್ಡರ್ ಸ್ವಚ್ಚಗೊಳಿಸಿ ಕ್ಯಾಸೆಟ್ ಹಾಕುವಲ್ಲಿವರೆಗೆ ಒಂದು ಬಗೆಯ ತವಕ. ನಿರಾತಂಕವಾಗಿ ಧ್ವನಿಸುರುಳಿ ಅಗರಿಯ ಧ್ವನಿಯೊಂದಿಗೆ ಸುರುಳಿ ಬಿಚ್ಚಿಕೊಂಡಾಗ ಜತೆಗೆ ಹಳೆಯ ಯಕ್ಷಗಾನ ಬಯಲಾಟದ ನೆನಪಿನ ಸುರುಳಿಯು ಬಿಚ್ಚತೊಡಗುತ್ತದೆ.

ಸುಮಾರು ಒಂದುವರೆ ಘಂಟೆ ಅವಧಿಯ ತಾಳ ಮದ್ದಲೆ ಉತ್ತಮ ಧ್ವನಿ ಮುದ್ರಣ ಅಲ್ಲದಿದ್ದರೂ ಅಗರಿಯ ಕಂಠದ ಆಕರ್ಷಟೆ ಜತೆಗೆ ದಿವಾಣ ರ ಮದ್ದಲೆ ಸವಿಯುವವರಿಗೆ ಇದು ಧಾರಳ ಸಾಕು. ಇಲ್ಲಿ ಪ್ರಸಂಗ ಯಾವುದೋ, ಅರ್ಥಧಾರಿಗಳು ಯಾರೋ.. ಎಲ್ಲವೂ ಗೌಣವಾಗಿಬಿಡುತ್ತದೆ. ಈ ಹಿಮ್ಮೇಳದ ಚುಂಬಕ ಶಕ್ತಿಯೇ ಅದು. ಮಗುವಿನ ಧ್ವನಿಯಂತೆ ತೋರುವ ಕೆಲವು ಪದಗಳು, ಆ ಧ್ವನಿಯೋಂದಿಗೆ ಬೆಂಬತ್ತುವ ಮತ್ತು ನಮ್ಮ ಎದೆಯ ಬಡಿತವನ್ನೇ ನಿಯಂತ್ರಿಸುವಂತೆ ಇರುವ ಮದ್ದಳೆಯ ಗಂಡುಭೀರಿ ಸ್ವರ .



ಕ್ಯಾಸಟ್ ಸಂಪೂರ್ಣವಾಗಿ ಕಂಪ್ಯೂಟರಿಗೆ ವರ್ಗಾಯಿಸಿದೆ. ಇದು ಸುಮಾರು ಎರಡು ಘಂಟೆ ಅವಧಿಯ ಕೆಲಸ. ತುಂಬ ತಾಳ್ಮೆಯಿಂದ ಕಾಯಬೇಕು. ಟೇಪ್ ರೆಕಾರ್ಡರ್ ಎಂಬ ಅಸ್ಥಿಪಂಜರ ಮಾತ್ರವಿರುವ ಪೆಟ್ಟಿಗೆ ಕೇವಲ ಕ್ಯಾಸಟ್ ತಿರುಗಿಸುವುದಕ್ಕೆ ಮಾತ್ರ ಅಣಿಗೊಳಿಸಿದ್ದೆ. ಅದರಲ್ಲಿರುವ ಮಿಕ್ಕೆಲ್ಲ ಭಾಗಗಳು ಯಾವುದು ಉಳಿದಿಲ್ಲ. ನನ್ನ ಸೌಕರ್ಯಕ್ಕೆ ತಕ್ಕಂತೆ ಬದಲಾಯಿಸಿದ್ದೆ. ಆದರು ಅದನ್ನೇ ನೋಡುತ್ತಾ ಕೂರಬೇಕು. ಅದು ಎಲ್ಲಿ ಸುದ್ದಿ ಇಲ್ಲದೆ ನಿಂತು ಬಿಡುವುದೊ.. ಸುರುಳಿಗಳು ಸಿಕ್ಕಿಕೊಂಡು ನಿಂತು ಬಿಟ್ಟರೆ ಮತ್ತೆ ಎಲ್ಲವೂ ವ್ಯರ್ಥ. ಅತ್ಯಂತ ತಾಳ್ಮೆಯ ಕೆಲಸವದು. ಪೂರ್ಣವಾಗಿ ತಿರುಗಿ ಧ್ವನಿಯೆಲ್ಲವೂ ಕಂಪ್ಯೂಟರ್ ನಲ್ಲಿ ದಾಖಲಾಗಿ ಅಲ್ಲಿಂದಲೇ ಆಲಿಸಿದ ಮೇಲೆ ಅದನ್ನು ಒಪ್ಪ ಒರಣ ಮಾಡುವ ಆತುರ. ನಂತರ ಎಲ್ಲವು ಪೂರ್ಣಗೊಂಡ ಕೂಡಲೇ ಅದನ್ನು ಅಲ್ಲಲ್ಲಿ ಮೊಳಗಿಸಿ ಕೇಳುತ್ತಾ ಚಪ್ಪರಿಸುವಾಗ ಅದೊಂದು ಅವರ್ಣನಿಯ ಅನುಭವ. ಇಂತಹ ಹಿರಿಯ ಕಲಾವಿದರು ಎಂದೋ ಹಾಡಿದ ಹಳೆಯಧ್ವನಿಯನ್ನು ಹೊಸದಾಗಿ ಕೇಳುವಾಗ ಎಲ್ಲವನ್ನು ಮರೆತ ಅನುಭವ. ಹೀಗೆ ಯಾವುದೋ ಧ್ವನಿಸುರುಳಿಯನ್ನು ಮೂಲ ರೂಪದಿಂದ ಬದಲಾಯಿಸುವುದು ಕೇವಲ ಯಕ್ಷಗಾನದ ಹಳೆಯ ಪ್ರತಿಗಳನ್ನು ದಾಖಲಿಸುವುದು ಮತ್ತು ಅದನ್ನು ಸುರಕ್ಷಿತವಾಗಿಸುವುದು ಮಾತ್ರ ಉದ್ದೇಶ. ಸಾಧ್ಯವಾದಷ್ಟು ಇದನ್ನು ವ್ಯಾಪಾರಿಕರಣಗೊಳ್ಳದ ಹಾಗೆ ವಿಶ್ವಾಸಿ ಮಿತ್ರರ ಮಧ್ಯೆ ಕೆಲವೇ ಮಂದಿಗಳಲ್ಲಿ ಇದನ್ನು ಹಂಚಿಕೊಳ್ಳುವುದು. ಇದನ್ನು ಕೇವಲ ಹವ್ಯಾಸವಾಗಿ ಮಾತ್ರ ಉಳಿಸಿಕೊಳ್ಳುವ ಉದ್ದೇಶ.



ಅಗರಿಯವರ ಕೆಲವು ತಾಳ ಮದ್ದಲೆಯ ಪದಗಳನ್ನು ಕೇಳಿದಾಗ ಅದರಲ್ಲಿ ಮದ್ದಲೆಗಾರರಾದ ದಿವಾಣ ,ಕುರುಪ್, ಶಿರಂಕಲ್ಲು ಮುಂತಾದವರು ವಿಜ್ರಂಭಿಸಿದ ರೀತಿ ನೋಡಿದರೆ ಮೊದಲಿನ ಹಿಮ್ಮೇಳದವರ ಸೃಜನ ಶೀಲತೆ ನೈಪುಣ್ಯತೆ ಗುರುತಿಸಲು ದೊಡ್ಡ ಪ್ರತಿಭೆ ಎನೂ ಬೇಡ. ಸಾಮಾನ್ಯನೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದಾದ ನಡೆಗಳು. ಇಂದಿನ ವ್ಯರ್ಥ ಅಲಾಪನೆಯ ಕಸರತ್ತು ಇಲ್ಲ.ಚಾಲು ಕುಣಿತದ ಹುಚ್ಚು ಎಳೆದಾಟವಿಲ್ಲ ಆದರು ಹಿಮ್ಮೇಳ ವೈಭವೀಕೃತ ಗೊಳ್ಳುವ ಬಗೆ ಅಚ್ಚರಿ ಮೂಡುತ್ತದೆ. “ ರಂಗನಾಯಕ ರಾಜೀವ ಲೋಚನ, ಪೋಗಿಬರುವೆನು ಗೋಪ ನಾಗ ವೇಣಿಯರೆ .. ಮುಂತಾದ ಉದಯರಾಗದ ಪದಗಳು ಹಲವು ಅಗರಿಯವರ ಕಂಠದಲ್ಲೇ ಕೇಳುವ ಸುಖ ಬೇರೆ ಅನುಕರಣೆಯ ಧ್ವನಿಯಲ್ಲಿ ಸಿಗಲಾರದು. ಅಗರಿ ಶೈಲಿ ಅನುಕರಣೀಯವಾಗಿ ಸುಲಭ ಎಂದು ಕಂಡರೂ , ಹಲವರು ಇದು ಅಗರಿ ಶೈಲಿ ಎಂದು ಗುರುತಿಸಿಕೊಂಡರೂ ಅಗರಿ ಎಂತಿದ್ದರೂ ಅಗರಿಯೆ.



ಅಗರಿ ಶ್ರೀನಿವಾಸ ಭಾಗವತರ ಪದಗಳನ್ನು ಇಂದಿನ ತಲೆಮಾರಿನವರು ಹೆಚ್ಚು ಕೇಳಿರಲಾರರು. ಕೇಳಿದ ಹಳಬರು ಇಂದಿಗೂ ಮೆಲುಕು ಹಾಕುವ ಅಗರಿಯ ಸ್ವರ ಶೈಲಿಯ ಕಲ್ಪನೆ ಮಾತ್ರ ಈಗ ಸಂಗ್ರಹವಾಗುವ ಪದಗಳಿಂದ ಸಾಧ್ಯ. ಚುರುಕು ನಡೆಯ ಮೊಟಕು ಆಲಾಪನೆಯ ಶೈಲಿ, ಬೆರಳೆಣಿಕೆಯ ಕ್ಷಣಗಳಲ್ಲಿ ಮದ್ದಲೆವಾದಕರಿಗೆ ವಿಪುಲ ಅವಕಾಶ ಒದಗಿಸುವ ಲಯ, ಕೇಳುಗನ ಎದೆಯಲ್ಲಿ ಅಲಾಪನೆಯ ಅಲೆಯ ಕಂಪನವನ್ನುಂಟುಮಾಡುವ ಅಲಾಪನೆ ಎಲ್ಲವೂ ಅಗರಿ ಪದಗಳ ವಿಶೇಶತೆ. ಪ್ರತಿಸಲ ಕೇಳಿದಾಗಲೂ ವಿಭಿನ್ನ ಅನುಭವನ್ನು ನೀಡಬಲ್ಲ ಪದಗಳು ಮತ್ತೂ ಮತ್ತೂ ಮೆಲುಕು ಹಾಕುವಂತೆ ಮಾಡುತ್ತಿವೆ. ಕೇವಲ ಪೂರ್ವಾಗ್ರಹದಿಂದ, ಅಂಧಾಭಿಮಾನದಿಂದ ಇಂತಹ ಪದಗಳನ್ನು ಕೇಳದೆ ಉಳಿಯುವವರು ಖಂಡಿತ ನಾದ ಮಧುರ್ಯ ಸವಿಯುವಲ್ಲಿ ವಂಚಿತರಾದರೆಂದೇ ಹೇಳಬೇಕು.









Monday, July 26, 2010

ಅನುಭವದ ಸಿಂಚನ





ಮಿತ್ರರಾದ ಶ್ರೀ ಉಲ್ಲಾಸ್ ಧ್ವನಿ ಮುದ್ರಿಸಿ ಕೊಟ್ಟ ಧ್ವನಿ ಮುದ್ರಣವನ್ನು ಇಲ್ಲಿ ಅಳವಡಿಸಿದ ತತ್ರಾಂಶವನ್ನು ಪೂರ್ಣವಾಗಿ ಕೇಳಿ.ಇಲ್ಲಿ ಶ್ರೀ ಬಲಿಪ ನಾರಾಯಣ ಭಾಗವತರ ಅಪರೂಪವೆನಿಸುವಂತಹ ಭಾಷಣದ ಧ್ವನಿ ಮುದ್ರಣ ಕೇಳಬಹುದು. ಕೇಳುತ್ತ ಹೋದಂತೆ ಏನನಿಸಬಹುದು. ಬಲಿಪ್ಪರು ಹೊಸ ಸ್ಪೂರ್ತಿಯಲ್ಲಿದ್ದಂತೆ ಭಾಸವಾಗುವುದಿಲ್ಲವೇ? ಬಲಿಪ್ಪರು ಮಾತಾಡಿದರೆಂದರೆ ಅದು ಮಗುವಿನ ಮಾತಿನಂತೆ ಮುಗ್ಧ ಎಂದು ಹಾಗೇ ಸುಮ್ಮನಿರುವ ಹಾಗಿಲ್ಲ.ಅವರೇ ಹೇಳುವಂತೆ ಬಲಿಪ್ಪರು ಮಾತುಗಾರರಲ್ಲ. ಆದರೆ ಅವರೊಂದಿಗೆ ಮಾತಾಡಲು ಕುಳಿತರೆ ನಮಗೆ ಮಾತೆ ಇರುವುದಿಲ್ಲ..!! ಅವರೆ ಮಾತಿನ ಹರಿಕಾರರಾಗಿಬಿಡುತ್ತಾರೆ. ಇಲ್ಲಿಯೂ ಬಲಿಪ್ಪರು ಅವರ ಮಟ್ಟಿಗೆ ನಿರರ್ಗಳ ಮಾತಿನ ಪ್ರವಾಹವನ್ನೇ ಹರಿಸಿದ್ದಾರೆ. ಇದರಲ್ಲಿ ಹುರುಳಿಲ್ಲದ್ದು ಅಂತ ಯಾವುದಾದರು ಉಲ್ಲೇಖಿಸಿಯಂತೆ...ಅದೇ ಬಲಿಪ್ಪರ ವಿಶೇಷತೆ.

ಇದು ಸದ್ಯ ಸುರತ್ಕಲ್ ನಲ್ಲಿ ಆದ ಕಾರ್ಯಕ್ರಮದಲ್ಲಿನ ಬಲಿಪ್ಪರ ಭಾಷಣದ ಧ್ವನಿಮುದ್ರಣ. ತುಂಬ ಆಸಕ್ತಿಯಿಂದ ಅದನ್ನು ಕೇಳಿದ ಮೇಲೆ ಅದನ್ನು ಅರಗಿಸಿಕೊಳ್ಳುವುದಕ್ಕೆ ಕಷ್ಟವಾಗಿಬಿಟ್ಟಿತು. ಹಲವು ಸಲ ಕೇಳಿದೆ. ಆಗ ಅನಿಸಿದ್ದು ಬಲಿಪ್ಪರು ಹೊಸ ಹುರುಪು ಉತ್ಸಾಹದಲ್ಲಿದ್ದಾರೆಯೇ? ಇತ್ತೀಚೆಗೆ ಅವರ ಹಲವು ಕಾರ್ಯಕ್ರಮಗಳನ್ನು ಹತ್ತಿರದಿಂದ ಗಮನಿಸಿದಾಗ ಹೀಗೆ ಅನ್ನಿಸಿದ್ದಿದೆ. ಈ ವಯಸ್ಸಿನಲ್ಲೂ ಬಲಿಪ್ಪರು ಹಾಡುವ ರೀತಿ ನೋಡಿದಾಗ, ಯಾವೊಂದೂ ಕಾರ್ಯಕ್ರಮವೂ ಬಲಿಪ್ಪರ ಪದದಲ್ಲಿ ಸೊರಗಿದೆ ಎಂದು ಹೇಳದಂತೆ ಅದೇ ಸ್ವರ ಸ್ಥಾಯಿ ಕಾಯ್ದುಕೊಂಡು ಬಂದಿದ್ದಾರೆ.ಈ ಭಾಷಣದಲ್ಲಿ ಎಂದು ತೋರದ ವಿಚಾರ ತೀಕ್ಷ್ಣತೆಯನ್ನು ತೋರಿದ್ದಾರೆ. ಸಮಕಾಲೀನ ಯಕ್ಷಗಾನ ಕಲೆಯ ಹೊಲಬನ್ನು ತನ್ನದೇ  ರೀತಿಯಲ್ಲಿ ವಿಮರ್ಶಿಸಿದ್ದಾರೆ. ಬಲಿಪ್ಪರು ಆಕ್ರಮಣ ಶೀಲ ಮನೋಭಾವವಲ್ಲ. ಯಾವುದರ ಬಗ್ಗೆಯು ತುಂಬ ಸಮಧಾನದಿಂದ , ಮತ್ತು ತಣ್ಣನೆಯ ಮಾತುಗಳಿಂದ  ಯಾರಿಗೂ ನೋವಾಗದಂತೆ  ಸರಳವಾಗಿ ಹೇಳುವ ಸ್ವಭಾವದವರು. ಸ್ವ- ಗೌರವವನ್ನು ತನ್ನೆಡೆಗೆ ಎಳೆದು ತರುವಂತಹ ವ್ಯಕ್ತಿತ್ವ. ಹೀಗಿದ್ದರು ಈ ಭಾಷಣದ ಮಾತುಗಳು ಕೆಲವೊಂದು ಎಷ್ಟು ಮುಗ್ಧವೋ ಅಷ್ಟೇ ತೀಕ್ಷ್ಣವೂ ಆಗಿದೆ.ಇದೊಂದು ಸಂಗ್ರಾಹ್ಯ ಮಾತುಗಳು ಎನ್ನುವುದಕ್ಕೆ ಹಲವು ಪುರಾವೆಗಳನ್ನು ಅಲ್ಪಾವಧಿಯ ಭಾಷಣದಲ್ಲಿ ಹೇಳಿದ್ದಾರೆ. ಓರ್ವ ಪಳಗಿದ ಭಾಷಣಕಾರನಂತೆ ಒಂದೆಡೆ ತೋರಿದರೆ..ಇನ್ನೋಂದೆಡೇ ಸರಳವಾಗಿ “ಇಲ್ಲ ನಾನು ಏನು ಹೇಳುವುದಿಲ್ಲ” ಹೇಳುವ ರೀತಿಯಲ್ಲಿ ಒಂದು ವಿಧದ ಮುಗ್ಧತೆಯನ್ನು ಮೆರೆಯುತ್ತಾರೆ. ಕಲೆಯನ್ನು ತಪಸ್ಸೆಂದು ತಿಳಿದು ಆ ಹಾದಿಯಲ್ಲಿ ಮಹಾತಪಸ್ವಿಯಂತೆ ಸಾಧನೆಯನ್ನು ತೋರಿದವರು. ಇದನ್ನು ಸಿದ್ದಿಸಬೇಕಾದಲ್ಲಿ,  ಇಂದಿನ ಯುವಕಲಾವಿದರು ಅನುಸರಿಸಬೇಕಾದ ಕ್ರಮವನ್ನು ಹೇಳುವ ರೀತಿ,  ಯುವ ಕಲಾವಿದರು ಕೇಳುವ ಸ್ಥಿತಿಯಲ್ಲಿ ಇಲ್ಲ ಅದು ತಿಳಿದೂ ತನ್ನ ಕರ್ತವ್ಯ ಅದರಲ್ಲೂ ತೋರಿದ್ದಾರೆ. ಅವರ ಒಂದೊಂದು ಅನುಭವವೇದ್ಯ ಮಾತುಗಳು ಒಂದು ಬೃಹತ್ ಪ್ರಂಬಂಧಕ್ಕೆ ವಿಷಯವಾಗಬಲ್ಲುದು. ಅದನ್ನು ಇಂದಿನ ತಲೆಮಾರು ಎಷ್ಟರವರೆಗೆ ಅರಗಿಸಿಕೊಳ್ಳಬಹುದೋ ಅದು ಊಹಿಸುವುದು ಕಷ್ಟ. ತಾನು ನಂಬಿದ ಕ್ರಮ ಸಿದ್ದಾಂತಗಳಿಗೆ ಅಂಟಿಕೊಂಡು ಒಂದೆ ಹಾದಿಯಲ್ಲಿ ಅರ್ಧ ಶತಕವನ್ನು ಈ ಕಲಾ ಜಗತ್ತಿನಲ್ಲಿ  ಬಾಳುವುದು ಎಂದರೆ ಕಲ್ಪಿಸಿಕೊಳ್ಳುವುದು ಅಸಾಧ್ಯ. ಇಲ್ಲಿ ಇವರ ಕ್ರಮವನ್ನು ಇವರು ಜಾಹೀರಾತು ಮಾಡಲಿಲ್ಲ ಆಷ್ಟೇ. ಆದರೆ ಬಲಿಪ್ಪಜ್ಜನ ಕ್ರಮಗಳು ಕಲೆಗೆ ಬೇಕು , ಕಲಾಭಿಮಾನಿಗಳಿಗೆ ಬೇಕು ,ಅದುದರಿಂದಲೇ ಇದು ಸಾಧ್ಯವಾಯಿತು. ಯಾಕೆಂದರೆ ಎಲ್ಲಿಯೂ  ಬಲಿಪ್ಪರ ಹೇರಿಕೆಯ ಗುಣ ಅಕ್ರಮಣ ಪ್ರವೃತ್ತಿ ಕಾಣುವುದು ಸಾಧ್ಯವಿಲ್ಲದ ಮಾತು. ಒಂದೇ ಗುರು, ಒಂದೇ ಕ್ರಮ, ಒಂದೇ ಹಾದಿ ,, ಯೋಚಿಸಿದರೆ ಅಚ್ಚರಿಯಾಗದೆ ಇದ್ದೀತೇ?

ಇಂದು ಕಲಾವಿದನಿಗೆ ಇಲ್ಲವಾದುದು ಅಷ್ಟೆ. ತನ್ನ ಹಾದಿಯಲ್ಲಿ ನಂಬಿಕೆ ಇಲ್ಲದ ಚಂಚಲತೆ. ಹಲವು ದಾರಿಗಳನ್ನು ಒಂದೆ ಸಲ ತುಳಿಯುವ ಚಪಲ. ತಾಳಕ್ಕೆ ಒಬ್ಬ ಗುರು, ರಾಗಕ್ಕೆ ಇನ್ನೊಬ್ಬ ಗುರು. ನಡೆಯುವ ಹಾದಿಯೋ ಇದೆರಡಕ್ಕಿಂತಲೂ ತೀರ ಭಿನ್ನ. ಅಪೂರ್ಣತೆಯ ಸಾಧನೆಯನ್ನೇ ಪೂರ್ಣತೆ ಎಂದು ತಿಳಿದು ಅದನ್ನೇ ಹೇರುವ ಪ್ರವೃತ್ತಿ. ಕಲೆ ಅಸ್ವಾದಿಸುವವರಿಗೂ ಒಂದು ವಿಧದಲ್ಲಿ ಅನಿವಾರ್ಯತೆಯನ್ನು ತಂದಿಡುವ ರೀತಿ ಎಲ್ಲವೂ ಗೊಂದಲಮಯ.

ತನ್ನ ಹಲವು ಅನುಭವಗಳನ್ನು ಅತ್ಯಂತ ಸೂಕ್ಷ್ಮವಾಗಿ ಸರಳವಾಗಿ ತಮ್ಮದೆ ರೀತಿಯಲ್ಲಿ ಹಂಚಿಕೊಂಡರೂ ಅದನ್ನು ಅಷ್ಟೇ ತಾಳ್ಮೆಯಲ್ಲಿ ಅರ್ಥೈಸುವುದು ಬಲಿಪ್ಪರನ್ನು ಅರ್ಥೈಸಿದಷ್ಟೇ  ಕಷ್ಟ. ಅತೀ ಸಣ್ಣ ಸೂಕ್ಷ್ಮ ವಿಷಯಗಳೂ ಅವರಿಗೆ ಇತ್ತೀಚೆಗೆ ನಡೆದಂತೆ ನೆನಪಿನಲ್ಲಿದೆ. ಇವರು ದಂಡಕ ವಾಚನದ ಬಗ್ಗೆ ಹೇಳಿದಾಗ, ನಮ್ಮ ಬಾಯಾರು ಗ್ರಾಮದ ಆವಳ ಮಠದಲ್ಲಿ ಇಂತಹ  ಹಲವು ಕಾರ್ಯಕ್ರಮ ಆಗಿದೆ ಎಂದು  ಬಾಲ್ಯದಲ್ಲಿ ಹಿರಿಯರು ಹೇಳುತ್ತಿದ್ದ ನೆನಪು ಪುನಃ ಮರುಕಳಿಸಿತು. ಹೀಗೆ ಹೇಳಿದಷ್ಟು ಮತ್ತೂ ಕೇಳಬೇಕು, ಇನ್ನೇನಿದೆ ಬಲಿಪ್ಪಜ್ಜನ ಸಂಗ್ರಹ ಎಂದು ತಿಳಿಯುವ ಕುತೂಹಲ ನಮಗಿದ್ದರೆ,  ಆದರೆ ಆ ನೆನಪಿನ ಜ್ಞಾನವನ್ನು ಎಷ್ಟರ ಮಟ್ಟಿಗೆ ಇಂದಿನವರು ಉಪಯೋಗಿಸಿ ಸಾರ್ಥಕಗೊಳಿಸುವವರು ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದುಬಿಡುತ್ತದೆ. ಯಾರಿಗೂ ಮಾಗಿದ ಅನುಭವ ಬೇಕಾಗಿಲ್ಲ. ಕೇವಲ ಜನಪ್ರಿಯತೆ , ಅರ್ಥ ಮತ್ತು ಸ್ವಾರ್ಥ ಇಷ್ಟರಲ್ಲೇ ಗಮನ. ಬಲಿಪ್ಪರು ಹೇಳಿದ ಮೂವತ್ತೈದು ತಾಳಗಳು,ಇಂದು ಯಾರಿಗೆ ತಿಳಿದಿದೆ? ಉತ್ತರ ಮಾತ್ರ ಸಿಗಲಾರದು. ಪ್ರಧಾನ ಭಾಗವತ ಅಂತ ಕರೆಯಿಸಿಕೊಳ್ಳುವುದರಲ್ಲೇ ಧಾವಂತ. ಅದರೂ ಇಂತಹವರೇ ಮನ್ನಣೆಗೊಳಗಾಗುವುದು ದೊಡ್ಡ ದುರಂತ.

ಅದೇನೆ ಇದ್ದರು ಬಲಿಪ್ಪರ ಅಪಾರವಾದ ಅನುಭವ  ದಾಖಲಿಸುವಂತಹ ಕೆಲಸವಾಗಬೇಕು. ಬಲುದೀರ್ಘವಾದ ಕಲಾಬದುಕಿನ ಒಂದೊಂದು ಅನುಭವವನ್ನು ಅವರಿಂದ ಸಂಗ್ರಹಿಸುವುದು ತುಂಬ ಕಷ್ಟ. ಮೊದಲಾಗಿ ಅದರ ಮೌಲ್ಯ ಇಂದಿನ ಪೀಳಿಗೆಗೆ ಅರ್ಥಮಾಡಿಸುವ ಕೆಲಸ ಆಗಬೇಕು. ಕ್ಷಣಿಕ ಮನರಂಜನೆಯಿಂದ ತೃಪ್ತರಾಗುವ ಹಾಗಿಲ್ಲ.ಇವರೊಂದಿಗೆ ಒಡನಾಡುವ ಒಡನಾಡಿದ ಹತ್ತು ಹಲವು ಕಲಾವಿದರಾಗಲೀ ವ್ಯಕ್ತಿಗಳಾಗಲೀ , ಬಲಿಪ್ಪರ ಬಗೆಗಿನ ಅವರ ಅಂತರಾಳ ಹೇಗಿರುತ್ತದೆ ಎಂದು ಪ್ರಶ್ನೆ ಮಾಡಿದರೆ ಅವರೊಂದಿಗಿನ  ಪ್ರತೀ ಘಳಿಗೆಯೂ ಅದ್ಭುತ ಜ್ಞಾನ ಸಿದ್ದಿಗೆ ಅವಕಾಶವನ್ನು ಒದಗಿಸಿ ಕೊಡಬಲ್ಲುದು ಎಂಬುದು ಅವರ ಅಂಬೋಣ.  

ಅದರೆ ಇಂದು ಕಾಲ ಮಾತ್ರ ತೀರ ಭಿನ್ನವಾಗಿದೆ. ಅವರ ಪ್ರತೀ ಮಾತಿನ ಆಂತರ್ಯದ ಧ್ವನಿ ಅದೇ ಅಗಿದೆ.ನಕಲಿ ಚಿನ್ನದ ಹೊಳಪಿಗೂ ಅಪ್ಪಟ ಬಂಗಾರದ ಹೊಳಪಿಗೂ ವೆತ್ಯಾಸ ಗುರುತಿಸದ ಪೀಳಿಗೆ ಇಂದು. ಪ್ರತಿಯೊಂದು ಯಕ್ಷಗಾನ, ತಾಳ ಮದ್ದಲೆ ಕೂಟದ ಆಹ್ವಾನ ಪತ್ರಿಕೆ ನನ್ನ ಗಮನಕ್ಕೆ ಬಂದಾಗ ಮೊದಲು ಗಮನ ಹೋಗುವುದು ಹಿಮ್ಮೇಳದ ಕಡೆಗೆ. ಅಲ್ಲಿ ಬಲಿಪ್ಪರ ಹೆಸರಿದ್ದರೆ ಅದಕ್ಕೆ ಹೊಸತೊಂದು ಮೌಲ್ಯ ಕಂಡಂತೆ ಭಾಸವಾಗುತ್ತದೆ. ಈ ಬೆಂಗಳೂರಿನಲ್ಲಂತೂ ಹಲವು ಯಕ್ಷಗಾನದ ಕೂಟದಲ್ಲಿ ಬಲಿಪ್ಪರ ಹೆಸರು ಕಾಣುವುದೇ ಅಸಾಧ್ಯ. ಕೋಗಿಲೆ ಎಂತಿದ್ದರೂ ಮಾಮರದಲ್ಲೇ ಹಾಡುವುದಲ್ಲವೆ? ಇಲ್ಲಿ ಆ ಮಾಮರವ ಹುಡುಕಾಟದಲ್ಲಿ ನಾನಿದ್ದೇನೆ.  





Friday, July 16, 2010

ದೊಂದಿ ಬೆಳಕಿನ ಯಕ್ಷಗಾನ...ಹೀಗೊಂದು ಚಿಂತನ



ಯಕ್ಷಗಾನ ಅತೀ ಪುರಾತನ ಕಲೆ. ಹಲವು ನೂರು ವರ್ಷಗಳ ಇತಿಹಾಸ ಈ ಸುಂದರಗೆ ಕಲೆಗೆ ಇದೆ.ಈಗಿನ ಈ ಅಧುನಿಕ ಯುಗಕ್ಕೂ ಇದು ಹಲವು ರೀತಿಯಲ್ಲಿ ಹೊಂದಿಕೊಳ್ಳುತ್ತ ತನ್ನ ಅಂತರ್ಗತ ಸತ್ವಗಳಿಂದ ಸೆಳೆತವನ್ನು ಉಳಿಸಿಕೊಳ್ಳುತ್ತಾ ಈ ವರೆಗು ಹಲವು ಬಗೆಯಲ್ಲಿ ಬದಲಾವಣೆ ಕಂಡರೂ ಇಂದಿಗೂ ಹಲವು ವಿಧದಲ್ಲಿ ಮೂಲ ಸತ್ವವನ್ನು ಉಳಿಸುತ್ತಾ ಬಂದಿದೆ. ಅತೀ ಪುರಾತನ ಕಲೆ, ಹಲವು ಬದಲಾವಣೆ ಆವಿಷ್ಕಾರಗಳಿಗೆ ಒಳಗಾದರೂ ಇಂದಿಗೂ ಅದೇ ಪ್ರಾಚೀನ ಪರಂಪರೆಯ ತಳಹದಿಯನ್ನೆ ಮುಖ್ಯವಾಗಿರಿಸಿಕೊಂಡು ಹಲವು ಬದಲಾವಣೆಯ ದಿಕ್ಕಿನಲ್ಲಿ ಸಾಗುತ್ತ ಬಂದಿದೆ. ಹಲವು ಬಗೆಯ ಸಾಧನೆಗೆ ಗುರಿಯಾಗಿ ಬದಲಾವಣೆಯನ್ನು ಕಂಡರೂ ಇನ್ನು ಹಳೆಯಕಾಲದ ಸೊಗಡನ್ನು ತೊರುವ ಪ್ರಯತ್ನಕ್ಕೆ ಮತ್ತು ಆ ದಿನಗಳನ್ನು ಮರೆಯದಂತೆ ಮಾಡುವ ಯತ್ನಕ್ಕೆ ಸಾಕ್ಷಿಯಾಗುತ್ತ ಬಂದಿದೆ. ಈ ನಿಟ್ಟಿನಲ್ಲಿ ಉತ್ತಮ ಪ್ರಯುತ್ನ ಫಲರೂಪವಾದ ಯಕ್ಷಗಾನ ದಾಖಲೀಕರಣದ ಚಿತ್ರಣ ಕಾಣುವ ಯೋಗ ನನಗಾಯಿತು.

ಯಕ್ಷಗಾನದ ಎರಡು ಮುಖ್ಯ ಪ್ರಾಕಾರಗಳ ಹಳೆಯ ಕಾಲದ ಪ್ರದರ್ಶನ ಹೇಗಿರಬಹುದೆಂಬ ಪ್ರಶ್ನೆಗೆ ತಕ್ಕಮಟ್ಟಿಗೆ ಉತ್ತರವಾಗುವಂತೆ ಅದರ ದಾಖಲೀಕರಣದ ಪ್ರಯತ್ನಕ್ಕೆ ಯತ್ನಿಸಿ ಎರಡು ಪೂರ್ಣ ಯಕ್ಷಗಾನ ಬಯಲಾಟವನ್ನು ಸಂಪೂರ್ಣ ದೊಂದಿ ಬೆಳಕಿನ ಪ್ರಭೆಯಲ್ಲೇ ಚಿತ್ರಿಸುವ ಸಾಹಸಕ್ಕೆಶ್ರೀ ಅಶೋಕ ವರ್ಧನ ಹಾಗು ಬಳಗದವರು   ಕೈ ಹಾಕಿದರು. ಅಧುನಿಕ ನಗರದ ವಾತಾವರಣದಿಂದ ದೂರವಾಗಿ ತುಂಬ ಸರಳ ಹಾಗು ಅರ್ಥಪೂರ್ಣವಾಗಿ ನಡೆಸಿ ಅದನ್ನು ಅದೆ ಮೂಲ ರೂಪಕ್ಕೆ ಧಕ್ಕೆಯಾಗದ ಹಾಗೆ ದಾಖಲಿಸುವ ಕೆಲಸ ನಡೆಯಿತು. ಇದರ ಹಿಂದಿನ ಶ್ರಮ, ಕಾಳಜಿ ಮತ್ತು ಶ್ರದ್ದೆ ಗಮನಾರ್ಹ. ಊರಿಂದ ದೂರ ಹೋಗಿ ಕಾಡಿನ ಮದ್ಯೆ ಪುರಾತನ ಕಾಲಮಾನದ ಮಬ್ಬು ಬೆಳಕಿನಲ್ಲಿ ದೊಂದಿಬೆಳಕಿನ ಯಕ್ಷಗಾನದ ದಾಖಲಿಕರಣ ನಡೆಯಿತು. ಯಕ್ಷಗಾನದಂತಹ ಪುರಾತನ ಕಲೆಗೆ ಇಂತಹ ಒಂದು ದಾಖಲೀಕರಣ ತುಂಬ ಆವಶ್ಯಕ. ಅದೂ ಇಂದಿನ ಅಧುನಿಕ ಕಾಲಮಾನಕ್ಕೆ ತೀರ ಆವಶ್ಯಕ.

ದಾಖಲೀಕರಣದ ಸುದ್ದಿ ಕೇಳಿಯೇ ನಾವು ಮಿತ್ರರೆಲ್ಲ ಅದೆಂದು ಕೈಸೇರುವುದೋ ಎಂಬ ತವಕದಲ್ಲಿ ಇದ್ದೆವು. ಮೊನ್ನೆಯೊಂದು ದಿನ ಅತ್ರಿಯವರ ಬ್ಲಾಗ್ ಪುಟದಲ್ಲಿ ಯಕ್ಷಗಾನ ವೀಡಿಯೋ ಲಭ್ಯತೆಯ ವಿವರ ದಾಖಲಾದದಿನವೇ ತರಿಸುವಲ್ಲಿ ಉದ್ಯುಕ್ತನಾದೆ. ಹಾಗೆ ತರಿಸುವಾಗ ಬಡಗು ಯಕ್ಷಗಾನ ರೂಪದಲ್ಲಿ ಬಂದ ವೀಡಿಯೊ ಪ್ರಸಂಗ ಹಿಡಿಂಬಾವಿವಾಹ ಅಥವಾ ಅರಗಿನ ಮನೆ ಯಕ್ಷಗಾನ ಮೊದಲಾಗಿ ಕೈ ಸೇರಿದರೆ ನಂತರ ತೆಂಕು ಯಕ್ಷಗಾನ ಕುಂಭಕರ್ಣ ಕಾಳಗ ಕೈಸೇರಿತು. ಆಸಕ್ತಿಯಿಂದ ನೋಡಿ ಅನುಭವಗಳನ್ನು ಯಥಾವತ್ತಾಗಿ ಹಂಚಿಕೊಳ್ಳುವ ಯತ್ನವಿದು.

ಮೂರು ಘಂಟೆ ಅವಧಿಯ ಪ್ರತಿಯೊಂದು ಯಕ್ಷಗಾನದಲ್ಲಿ ಪ್ರಥಮಾರ್ಧದಲ್ಲಿ ತೆಂಕುತಿಟ್ಟಿನ ಕೇಳಿಕೆ ಅದರ ಜತೆ ಮಹನೀಯರ ಅಭಿಪ್ರಾಯಗಳ ವಿನಿಮಯದ ಚಿತ್ರಣ. ರಂಗಸ್ಥಳದ ನಿರ್ಮಾಣದ ಪ್ರತಿಹಂತದ ಚಿತ್ರಣ . ತುಂಬ ಸರಳವಾದ ರಂಗಸ್ಥಳವಾದರೂ ಕಾಡಿನ ನಡುವೆ ಎಲ್ಲವು ಸಜ್ಜುಗೊಳಿಸುವುದು ಸುಲಭದ ಕಾರ್ಯವಲ್ಲ. ಚೌಕಿ ಪೂಜೆಯೊಂದಿಗೆ ಆರಂಭಗೊಳ್ಳುವ ಯಕ್ಷಗಾನ ಬಡಗು ಹಿಡಿಂಬಾವಿವಾಹ.. ದೊಂದಿ ಬೆಳಕಿನಲ್ಲಿ ಪ್ರದರ್ಶಿಸುವುದಕ್ಕೆ ಅರ್ಹ ಪ್ರಸಂಗ. ಪೂರ್ವರಂಗದೊಂದಿಗೆ ಸಂಪ್ರದಾಯದಂತೆ ಶುರುವಾಗುವ ಯಕ್ಷಗಾನ ಹಿಡಿಂಬ ವಿವಾಹ ಸದ್ಯ ನಾನು ಕಂಡ ಬಡಗು ಯಕ್ಷಗಾನಕ್ಕಿಂತ ತುಂಬ ಭಿನ್ನ ಅನುಭವ ನೀಡಿತು. ಯಕ್ಷಗಾನ ವೀಡೀಯೋ ನಿರ್ಮಿಸುವುದರಲ್ಲಿ ಬಡಗು ಸ್ವಲ್ಪ ಮುಂದು ಅಂತಲೇ ಹೇಳಬಹುದೇನೋ. ಅತೀಯಾಗಿ ವಿಡಿಯೊಗಳು ಬರುವುದರಿಂದಲೋ ಏನೊ ಹವ್ಯಾಸಿ ಕಲಾವಿದರಾದರು ಬೇಗ ಹೊಂದಿಕೊಂಡಂತೆ ಭ್ಹಾಸವಾಗುತ್ತದೆ. ಪಾಂಡವರ ಒಡ್ಡೋಲಗ   ಮಂದ ಬೆಳಕಿನಲ್ಲಿ ಸುಂದರವಾಗಿದೆ. ಅಂತೆಯೇ ಹಿಡಿಂಬಾಸುರ... ಹಿಡಿಂಬೆ ಹೀಗೇ ಇತ್ತೀಚೆಗೆ ಅಪರೂಪವಾದ ಬಡಗಿನ ಬಣ್ಣದ ವೇಷಗಳು ಸಾಂಪ್ರದಾಯಿಕವಾಗಿ ಮೂಡಿದೆ. ಎಲ್ಲ ಪಾತ್ರಗಳು ಮಿತಿಯೊಳಗೆ ಔಚಿತ್ಯ ಪೂರ್ಣವಾಗಿ ಮೂಡಿಬಂದಿದೆ. ಭೀಮನ ಪಾತ್ರ ತುಂಬ ಭಾವುಕ ಅಭಿನಯಕ್ಕೆ ಒತ್ತುಕೊಟ್ಟಂತೆ ಅನಿಸಿಬಿಡುತ್ತದೆ. ಶ್ರವ್ಯವೆನಿಸುವ ಹಿಮ್ಮೇಳ ತುಂಬ ಉತ್ತಮವಾಗಿದ್ದರೂ ಇಳಿ ಶ್ರುತಿಯಿಂದ ಕೆಲವೊಮ್ಮೆ ಮಕ್ಕಳ ಶಾಲೆ ವಾರ್ಷಿಕೋತ್ಸವವನ್ನು ನೆನಪಿಗೆ ತರುತ್ತದೆ. ಹೆಚ್ಚಿನ ಎಲ್ಲಾ ದೃಶ್ಶಗಳಿಗೆ ಬರೀ ಅಲಾಪನೆಯನ್ನೇ ಹೋರಡಿಸುವುದು ಕೆಲವೊಮ್ಮೆ ಹೊಂದಿಕೊಳ್ಳದಿದ್ದರೂ ಮಿಕ್ಕವುಗಳಲ್ಲಿ ಒಟ್ಟು ಸಾಂಘ್ಹಿಕ ಯತ್ನ ಗಮನ ಸೆಳೆಯುತ್ತದೆ. ಅರಗಿನ ಮನೆಯ ದಹನ ದೃಶ್ಯ ಮಂದಬೆಳಕಿನಲ್ಲಿ ಸುಂದರಾವಾಗಿ ಕಂಡರೂ ಅದು ಈ ಪರಂಪರೆಯ ದಾಖಲೀಕರಣ ಯಕ್ಷಗಾನಕ್ಕೆ ಹೊಂದಿಕೊಳ್ಳುವುದಿಲ್ಲ ಎಂದು ನನ್ನ ಅಭಿಪ್ರಾಯ. ರಂಗಸ್ಥಳದಿಂದ ತುಸುದೂರದಲ್ಲಿ ಒಣ ಹುಲ್ಲಿನಿಂದ ಮನೆಯಂತೆ  ನಿರ್ಮಿಸಿ, ಅದಕ್ಕೆ ಬೆಂಕಿ ಕೊಟ್ಟು ಮಿರು ಮಿರುಗುವ ಯಕ್ಷಗಾನದ ವೇಷಗಳೂ ಅದರ ನಡುವೆ ಓಡಾಡುವುದು ಇಂತಹ ಯಕ್ಷಗಾನದಲ್ಲ ಆಭಾಸದಂತೆ ಕಾಣುವುದಿಲ್ಲವೇ ಎಂಬ ಚೋದ್ಯ ನನಗೆ. ಬದಲಾಗಿ ಅದನ್ನೇ ಭಾವಾಭಿನಯದಿಂದ ರಂಗದ ಮೇಲೆಯೆ ಅಭಿವ್ಯಕ್ತೀಕರಿಸುತ್ತಿದ್ದರೆ ತುಂಬ ಉತ್ತಮವಾಗುತ್ತಿತ್ತೋ ಏನೋ? ಇದನ್ನು ಯಾಕೆ ಸಂಯೋಜಿಸಿದರೋ ತಿಳಿಯದು. ರಂಗ ಬಿಟ್ಟ ಯಕ್ಷಗಾನ ಸಂಪ್ರದಾಯದೊಳಗೆ ಇದೆಯೋ ತಿಳಿಯದು. ಅಲ್ಲದೆ ಶುದ್ದವಾದ
.ಕಲಾತ್ಮಕ ಯಕ್ಷಗಾನದಲ್ಲಿ ಇಂತಹ ದೃಶ್ಯವೈಭವ ಚಿತ್ರೀಕರಿಸುವ ಅಗತ್ಯವಾದರೂ ಏನು?

ಕೆಲವು ಕಡೆ ಪದ (ಹಾಡುಗಾರಿಕೆ) ಪುನರಾವರ್ತನೆ..ಒಂದು ರೀತಿಯ ಚಾಲು ಕುಣಿತ ಗಮನಕ್ಕೆ ಬಾರದಂತೆ ನುಸುಳುವ ಪ್ರಯತ್ನ ಮಾಡುತ್ತದೆ ಅಂತ ನನ್ನ ಅನುಮಾನ. ಹೇಳಿದ ಪದ ಸಾಲುಗಳನ್ನು ಭಾಗವತರು ಎರಡಕ್ಕಿಂತ ಹಲವು ಸಲ ಹೇಳುವಾಗ ಹಳೆಯ ಪರಂಪರೆಯಲ್ಲಿ ಹೀಗಿತ್ತೆ? ಎಂಬ ಪ್ರಶ್ನೆ ಮೂಡುತ್ತದೆ. ಸಾಂಪ್ರದಾಯಿಕವಾಗಿ ಸಂಭಾಷಣೆ ನಡೆಸುವ ಪಾತ್ರ ರಂಗಸ್ಠಳದ ಬಲಭಾಗದಲ್ಲಿ ಕುಣಿತ ಸಂಭಾಷಣೆ ಒಪ್ಪಿಸುವ ಕ್ರಮ ಭೀಮ ಹಿಡಿಂಬ ಸನ್ನಿವೇಶದಲ್ಲಿ ಇದನ್ನು  ಪಾಲಿಸಲೇ ಇಲ್ಲ.ಎಲ್ಲವೂ ಬರೆದಿಟ್ಟ ನಾಟಕದ ದೃಶ್ಯಗಳಂತೆ ನಿಗದಿ ಪಡಿಸಿದ ಸಂಭಾಷಣೆ ಒಪ್ಪಿಸಿದಂತೆ ಕೆಲವೊಮ್ಮೆ ಭಾಸವಾಗುತ್ತದೆ. ಆದರು ಇಂತಹ ಕಾರ್ಯಕ್ರಮಕ್ಕೆ ಇಂತಹ ಸಂಕಲನಗಳು ಅನಿವಾರ್ಯ ಎಂದು ಒಪ್ಪಿಕೊಳ್ಳಬಹುದು. ಹಿಡಿಂಬ ವಧೆಯ ತನಕ ಯಕ್ಷಗಾನದ ನಿಜ ಶೈಲಿಯಲ್ಲೇ ಮುಂದುವರೆದರೂ ಕೊನೆಯ ದೃಶ್ಯ ತೀರ ನಾಟಕದ ಸಂಭಾಷಣೆಯನ್ನು ನೆನಪಿಗೆ ತರುತ್ತದೆ. ಆದರು  ಎಲ್ಲರ ಸಾಂಘಿಕ ಯತ್ನ ಮಾತ್ರ ಗಮನ ಸೆಳೆಯದೆ ಇರುವುದಿಲ್ಲ. ಯಕ್ಷಗಾನದ ಕೊನೆಯಲ್ಲಿ ಭಾಗವತರು “ ರಾಮಕೃಷ್ಣರು ಮನೆಗೆ ಬಂದರು ಮನೆಗೆ ಬಂದರು ಬಾಗಿಲ ತೆರೆಯಿರೊ... ಎಂದು ಮಂಗಲ ಪದದೊಂದಿಗೆ ಹಾಡಿದದು ಹೀಗೆ ಪ್ರತಿಯೊಂದು ಅಂಶವನ್ನು ಗಮನವಿರಿಸಿದ್ದು ಎಲ್ಲವೂ ಉತ್ತಮದಾಖಲೀಕರಣ ಕಾರ್ಯ ಮಾಡುವ ಯತ್ನ ಶ್ಲಾಘನೀಯ.
ಇನ್ನು ತೆಂಕುತಿಟ್ಟು ವೀಡಿಯೊ ನೋಡಿದ ಇದರಬಗ್ಗೆ ಬರೆಯೋಣ ಅನ್ನಿಸಿದ್ದು. ಮೊದಲೇ ವರದಿಯಾದಂತೆ ತೆಂಕಣ ಕಲಾವಿದರ ಅಸಹಕಾರ ಪೂರ್ವ ರಂಗದಲ್ಲೆ ಅನುಭವಕ್ಕೆ ಬರುತ್ತಿತ್ತು. ಯಾವ ಭಾಗ ಎಲ್ಲಿ ಆರಂಭಿಸಬೇಕು ಮತ್ತು ಮುಗಿಸಬೇಕು ಎನ್ನುವ ಅನುಮಾನದಲ್ಲೆ ಹಾಗೋ ಹೀಗೊ ಪೂರ್ವರಂಗ ಹರಕೆ ಸಲ್ಲಿಸಲಾಗಿದೆ. ಸಂಪ್ರದಾಯದಂತೆ ಮುಖ್ಯ ಭಾಗವತರು ಪೀಠಿಕೆ ಆದ ಕೂಡಲೆ ತೊಡಗಿ ಉತ್ತಮವಾದ ಆರಂಭ ಸಿಕ್ಕರೂ. ಒಡ್ಡೋಲಗದಲ್ಲಿ ಎಲ್ಲ ಆಯೋಮಯ..ಹಿರಿಯ ಪಾತ್ರಧಾರಿ ರಾಮನ ಮುಖ ರಂಗದಲ್ಲಿ ಗೋಚರಿಸುವುದೇಇಲ್ಲ. ಇನ್ನು ರಂಗ ಕ್ರಮ ಮತ್ತು ನಡೆಗಳು ಅವುಗಳ ಬಗ್ಗೆ ನಾನು ಬರೆಯಲು ಅಸಮರ್ಥ ಆದರು ಎಲ್ಲವು ಗೊಂದಲದಿಂದ ಕೂಡಿದಂತೆ ಭಾಸವಾಗುತ್ತದೆ.ರಾಮ ಲಕ್ಷಮಣರಂತಹ ಜೀವಾಳದ ಪಾತ್ರಗಳೂ ಕೊನೆವರೆಗೊ ಕಳೆ ಕಟ್ಟುವುದಿಲ್ಲ. ಆರಂಭದಲ್ಲಿ ಹಲವು ಹಿರಿಯರು ತಮ್ಮ ಅಭಿಪ್ರಾಯ ಮಂಡಿಸುವಾಗ ಅಭಿಮಾನವಿರಿಸಿದ್ದ ಕಲಾವಿದರು ಒಂದು ವಿಧಧಲ್ಲಿ ಪೂರ್ಣ ಕಾರ್ಯಕ್ರಮದ ಬಗ್ಗೆ ಟಿಪ್ಪಣಿ ಮಾಡಿದಂತೆ ,ಭಂಡಾಯದ ಧ್ವನಿಯನ್ನು  ಬೇಕೊ ಬೇಡವೋ ಎಂಬಂತೆ ತಮ್ಮ ಮಾತಿನಲ್ಲಿ ವ್ಯಕ್ತ ಪಡಿಸಿದ್ದರು. ಇದೆಲ್ಲ ಆನಂತರದಲ್ಲಿ ಪರಿಣಾಮ ಬಿರಿತೊ ಏನೋ? ಅವರ ಮಾತು ಹೇಗೆ ಇರಲಿ ಒಂದು ತಂಡವಾಗಿ ಆಡುವಾಗ ಅಲ್ಲಿ ಪೂರ್ಣ ಕಾರ್ಯಕ್ರದ ಯಶಸ್ಸಿಗೆ ಸದಸ್ಯನಾದವ ತೊಡಗಿಕೊಳ್ಳದೆ ಇದ್ದರೆ, ಅನುಸರಿಸುವ ಕಿರಿಯ ಸದಸ್ಯರಿಗೆ ತಪ್ಪು ಸಂದೇಶ ಕೊಟ್ಟಂತೆ ಅಲ್ಲವೆ? ಇದು ಯಾವುದು ತಪ್ಪು ಯಾವುದು ಸರಿ ಎಂದು ವಿಶ್ಲೇಷಣೆಯಲ್ಲ. ಎಲ್ಲ ಅತ್ಯಂತ ಸಂಪನ್ನರು ಹೀಗೆ ವರ್ತಿಸಿದಾಗ ನಿಜಕ್ಕೂ ತುಂಬ ಬೇಸರವಾಗುತ್ತದೆ. ಹೀಗಿದ್ದ ಒಂದು ಯೋಜನೆ ಯೋಚಿಸುವುದೇ ಕಷ್ಟ , ಇದರ ಹಿನ್ನೆಲೆಯಾಗಿ ಶ್ರಮವಹಿಸಿ ದುಡಿವಾಗ ಆ ದುಡಿಮೆಗೆ ಕೇವಲ ಆರ್ಥಿಕ ಬೆಂಬಲದ ಬಯಕೆ ಮಾತ್ರವಲ್ಲ ಎಲ್ಲ ಸಂಪೂರ್ಣ ಸಹಕಾರವೂ ಬಹಳ ಅಗತ್ಯ. ಇದನ್ನು ಅವಗಣನೆ ಮಾಡಿದಲ್ಲಿ ಮೊದಲೇ ಯಾವುದೇಬೆಂಬಲ ಪ್ರೋತ್ಸಾಹ ಇಲ್ಲದ ಕಲೆಯೂ ಅವಗಣನೆಗೆ ಒಳಗಾಗುವುದಿಲ್ಲವೇ?

ಹೀಗಿದ್ದರು ಕೆಲವೊಂದು ಅಂಶಗಳು ಅತ್ಯುತ್ತಮ ಮಾದರಿಯಂತಿದೆ. ಎಲ್ಲದರಲ್ಲೂ ಸರಳತೆ, ಎಲ್ಲಿಯು ಅದ್ಧೂರಿಯ ಪ್ರದರ್ಶನ ಇಲ್ಲ. ಸರಳವಾದ ಹಳ್ಳಿಯ ಬಯಲಾಟದಂತೆ ಉತ್ತಮ ಅನುಭವ ನೀಡುತ್ತದೆ. ದೊಂದಿ ಬೆಳಕಲ್ಲಿ ತೆಂಕಿನ ಯಕ್ಷಗಾನ ಬಡಗಿನ ಯಕ್ಷಗಾನಕ್ಕಿಂತ ಉತ್ತಮವಾಗಿ ಕಂಡಿದೆ.ತೆಂಕು ತಿಟ್ಟಿನ ಭಾಗವತರು ಪರಂಪರೆಯ ರಾಗ -ತಾಳಗಳನ್ನು ಕ್ರಮಬದ್ಧವಾಗಿ ಬಳಸಿ ಪದ್ಯವನ್ನು ಕೇಳಲು ಹಿತವಾಗಿಸಿದ್ದರೆ, ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರನ್ನು ಪೂರ್ವರಂಗಕ್ಕೆ ಬಳಸಿಕೊಂಡದ್ದು ಸಾರ್ವಕಾಲಿಕ ದಾಖಲೆಗೆ ಒಂದು ಹೆಮ್ಮೆಯ ವಿಷಯವೇ ಸರಿ. ಹನುಮಂತ ಒಡ್ಡೊಲಗ ಮಾತ್ರ ಅದ್ಭುತವಾಗಿ ಮೂಡಿಬಂದಿದೆ. ಯುವ ಪಾತ್ರಧಾರಿ ಅದನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ರಾವಣ , ಕುಂಭಕರ್ಣ ಬಣ್ಣದ ಪಾತ್ರಗಳೂ ಉತ್ತಮವಾಗಿ ಮೂಡಿಬಂದಿದೆ. ಇಲ್ಲಿ ಕೆಲವು ಕಡೆ ಉತ್ತಮ ಸಹಕಾರದಿಂದ ರಂಗ ಕಳೆ ಕಟ್ಟುತ್ತದೆ. ಅದರಂತೆ ತೆಂಕುವಿನ ಛಾಯಾಗ್ರಹಣ  ತುಂಬ ಸ್ಪಷ್ಟ ಗೋಚರಿಸುತ್ತದೆ. ಅಗಾಗ ಕ್ಯಾಮರವನ್ನು ಹತ್ತಿರ ಕೊಂಡೊಯ್ದು ಹತ್ತಿರದಿಂದ ದರ್ಶನ ಕೊಡುವುದು ಯಕ್ಷಗಾನದ ಮಟ್ಟಿಗೆ ಸರಿಹೊಂದುವುದಿಲ್ಲ. ಒಂದು ಸರಿಯಾದ ನೆಲೆಯಲ್ಲಿ ನೆಲೆಗೊಳಿಸಿ ಅಲ್ಲೆ ಒಂದೇ ದೂರದಿಂದ ಚಿತ್ರಿಸಿದರೆ ಪರಿಣಾಮ ಚೆನ್ನಾಗಿರಬಹುದು. ಬಣ್ಣದ ವೇಶಗಳನ್ನು ಹೀಗೆ ತೋರಿಸಿದಾಗ ದೊಂದಿ ಬೆಳಕಿನ ಪ್ರಭಾವವೇ ಇಲ್ಲದಂತಾಗುವುದು. ಚೌಕಿಯನ್ನು ನೇರ ವೇದಿಕೆ ಹಿಂಭಾಗಕ್ಕೆ ಬರುವ ಹಾಗೆ ವ್ಯವಸ್ಥೆ ಮಾಡಿದ್ದಿದ್ದರೆ ವೇಶ ಪ್ರವೇಶ ಆಗುವ ಮೊದಲು ಗೋಚರಿಸುವ ಪ್ರಮೇಯ ಬರುತ್ತಿರಲಿಲ್ಲ. ಇದು ಸ್ವಲ್ಪ ಪರಿಣಾಮಕಾರಿಯಾಗಬಹುದು.

ಇದನ್ನು ನಿರ್ಮಿಸುವಲ್ಲಿನ ನಿರ್ಮಾಪಕ ತಂಡದ ಸದಸ್ಯರ ಸಾಧನೆ ಪ್ರತಿ ಹಂತದಲ್ಲು ಕಾಣಬಹುದು. ಆ ಕಾಳಜಿಗೆ ನಾವೆಲ್ಲ ಸ್ವಲ್ಪ ಪ್ರೋತ್ಸಾಹದ ಕಾಳಜಿ ತೋರಿಸಿದಲ್ಲಿ ಇನ್ನೂ ಮುಂದಕ್ಕೆ ಇಂತಹ ಕಾರ್ಯಕ್ರಮಗಳು ಇನ್ನೂ ವ್ಯವಸ್ಥಿತವಾಗಿ ಮಾಡುವಲ್ಲಿ ಚೈತನ್ಯ ಬರುವುದು.ಆ ಚೈತನ್ಯ ಭಗವಂತನು ಅನುಗ್ರಹಿಸಲಿ ಎಂದು ಆಶಿಸೋಣ.







.

Friday, July 2, 2010

ನಮ್ಮ ಬಲಿಪಜ್ಜನ ಯಶೋಗಾಥೆ.

Bali Pa


ನಮ್ಮ  ಬಲಿಪಜ್ಜನ ಯಶೋಗಾಥೆ.
ಇಂದು ದಿನಾಂಕ ಶುಕ್ರವಾರ ೦೨-೦೭-೨೦೧೦ ರ ಉದಯವಾಣಿ ಪತ್ರಿಕೆಯ ವರದಿಯಲ್ಲಿ ಬಂದ ಈ ಲೇಖನ ಓದಿದಾಗ ಬಲಿಪ್ಪಜ್ಜನ ಸರಳ ಮುಗ್ಧ ಮುಖ ಮನಃ ಪಟಲದಲ್ಲಿ ಒಂದು ಸಲ ಮೂಡದೆ ಇರಲಾರದು. ಅಂತಹ ಅದ್ಭುತ ವ್ಯಕ್ತಿತ್ವಕ್ಕೆ ಸಾಕ್ಷಿಯೆಂಬಂತೆ ಈ ಲೇಖನ ಮೂಡಿ ಬಂದಿದೆ. ಬಲಿಪ್ಪಜ್ಜನಿಗೆ ಇಂದು ಎಷ್ಟು ಅಭಿಮಾನಿಗಳಿದ್ದಾರೊ ನಾನರಿಯೆ. ಆದರೆ ಇರುವ ಪ್ರತಿಯೊಬ್ಬ ಅಭಿಮಾನಿಯ ಬಗ್ಗೆ ಹೇಳಬಹುದಾದರೆ ಸಂಪೂರ್ಣ ಯಕ್ಷಗಾನದ ಕಲಾಭಿಮಾನಿ. ಇದು ಕೇವಲ ನಮ್ಮ ಮನೆ ನಮ್ಮ ಪರಿಸರದಲ್ಲಿ ನಮ್ಮದೇ ಸಂಸ್ಕೃತಿಯನ್ನು ಹೊತ್ತು ಬದುಕುವಲ್ಲಿ ಸಿಗುವ ಮನ್ನಣೆ ಯಾದರೆ ಇಲ್ಲಿ ಬಿನ್ನ ವ್ಯಕ್ತಿಗಳ ಭಿನ್ನಸಂಸ್ಕೃತಿಯ ಬಿನ್ನಪರಿಸರದಲ್ಲಿ ಸಿಕ್ಕಿದ ಮನ್ನಣೆ ಮತ್ತು ಅಜ್ಜನ ಪ್ರತಿಭೆಗೆ ಯಾವುದೇ ವಶೀಲಿ ಇಲ್ಲದೆ  ಸಿಕ್ಕ ಅಂಗೀಕಾರ. ಅದಕ್ಕೆ ಇದು ವಿಶೇಷ. ಬಲಿಪ್ಪಜ್ಜನಿಗೆ ಸಿಗುವ ಪ್ರತಿಯೊಂದು ಪುರಸ್ಕಾರಕ್ಕೂ ವಶೀಲಿಯ ಅಗತ್ಯವೇ ಇರುವುದಿಲ್ಲ. ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.
ಅಜ್ಜನಿಗೆ ಅಜ್ಜನ ಹಿರಿಮೆ ತಿಳಿಯದು. ಅಂತಹ ಮುಗ್ಧ ಮನಸ್ಸಿನ ನಿರಾಡಂಬರ ವ್ಯಕ್ತಿತ್ವ ಅವರದ್ದು ಹಾಗಾಗಿ ಈ ಲೇಖನ ಇಲ್ಲಿನ್ ಮಂಡಿಸುವ ಪ್ರಯತ್ನವಿದು. ಸಹ್ರಿದಯರು ಓದಿ ಈ ಹಿರಿಯ ಕಲಾವಿದರಿಗೆ ಕಿರುನಗಿವಿನೊಂದಿಗೆ ಅಭಿಮಾನದಿಂದ ಅಭಿನಂದಿಸಿದರೆ ಈ ಪ್ರಯತ್ನ ಪಲಿಸಿತು ಎಂಬ ಭಾವನೆ ನಮ್ಮದು. 

Friday, June 18, 2010

ಗಾಬರಿ ಪಡುವ ಸಂಗತಿಗಳು

ಹೊಳ್ಳರ ಮತ್ತು ಅಮ್ಮಣ್ಣಾಯರ ದ್ವಂದ್ವ ಹಾಡುಗಾರಿಕೆಯ ಯಾವುದೋ ಕಾರ್ಯಕ್ರಮದ ಧ್ವನಿಮುದ್ರಣವನ್ನು ಕೇಳುತ್ತಿದ್ದೆ. ಎರಡೂ ವಿಬ್ಭಿನ್ನ ಶೈಲಿಯ ಕಲಾವಿದರ ಪ್ರೌಢಿಮೆಗೆ ಸಾಕ್ಷಿಯಾದಂತೆ ಹಲವು ಪದಗಳ ಅಲಾಪನೆಗಳು ತಲ್ಲೀನಾನಾಗುವಂತೆ ಮಾಡುತ್ತಿದ್ದವು.ಒಂದು ಲಯ ಬೋರ್ಗರೆದು ಧುಮ್ಮಿಕ್ಕುವ ರಭಸದ ಜಲಪಾತದ ಧಾರೆ. ಹರಿದು ಧುಮ್ಮಿಕ್ಕುವ ನೀರಿಗೆಅರಿವಿಲ್ಲ ಆಳ ಗಮ್ಯ ಯಾವುದೆಂದು. ಆದರೆ ಹೊಳ್ಳರ ಭೋರ್ಗರೆವ ಜಲಧಾರೆಯಂತಹ ಸ್ವರದ ಆಳದ ಮತ್ತು ಗಮ್ಯದ ಅರಿವು ಇಲ್ಲ ಎಂದು ಹೇಳಲಾಗದಿದ್ದರೂ ಆ ರಭಸಕ್ಕೆ ಸಿಕ್ಕಿ ನಮ್ಮ ಮನಸ್ಸಿನ ಭಾವನಾತ್ಮಕ ಪ್ರಪಂಚ ಮಾತ್ರ ಸುಂದರ ತಾಣವಾಗಿಬಿಡುತ್ತದೆ. ಇನ್ನು ತಣ್ಣನೆಯ ಮಂದಗಮನೆಯ ಮಂದಾಕಿನಿಯ ಹರಿವು ಇದೇ ಎನೋ ಎಂದು ಭ್ರಮಿಸುಂತೆ,  ಆ ಸಂಗೀತದ ಅಲೆಗೆ ಸಿಕ್ಕಿ ತಮ್ಮ ಮನಸ್ಸು ಕೊಚ್ಚಿ ಹೋಗದಂತೆ ತಡೆಯುವ ವ್ಯರ್ಥ ಪ್ರಯತ್ನವನ್ನೇನೋ ಮಾಡುತ್ತ ತನ್ನಲ್ಲೇ ಐಕ್ಯವಾಗುವ ಹೊತ್ತಿಗೆ, ಚಿರಸ್ಥಾಯಿಯಾಗಿ ನಿಲ್ಲುವ ಈ ಕಲೆಗೆ ಅಂತ್ಯವಿಲ್ಲ ಎಂದು ಮನಸ್ಸು ನುಡಿಯಿತು.  ಆದರೂ ಒಂದು ಗಾಬರಿ, ಏನು?
ಯಕ್ಷಗಾನ ಕಲೆಯ ಹಿಮ್ಮೇಳ ಲೋಕದ ಸದ್ಯ ಆಧಾರ ಸ್ತಂಭಗಳು ನಾಲ್ಕು. ಬಲಿಪ್ಪ,ಪದ್ಯಾಣ,ಹೊಳ್ಳ, ಅಮ್ಮಣ್ಣಾಯ,ಪ್ರತಿಯೊಂದು ಸ್ತಂಭಗಳು ಅತೀ ಪರಿಶ್ರಮದ ಫಲದಿಂದ ನಿರ್ಮಿತವಾಗಿ ಸಮಗ್ರ ಕಲೆಯನ್ನೆ ಆಧರಿಸಿ ಇಂದು ನಿಂತಂತೆ ಭಾಸವಾದರೆ ಅದು ಇವರ ಅನಿವಾರ್ಯತೆಯನ್ನು ಸಾರುತ್ತಿವೆ.  ಇಂದು ಯಾವುದೇ ಪೌರಾಣಿಕ ಪ್ರಸಂಗವಾಗಲಿ ಅದನ್ನು ಸಮರ್ಥವಾಗಿ ತಮ್ಮದೆ ರೀತಿಯಲ್ಲಿ ಆಡಿಸಬಲ್ಲ ಸಾಮಾರ್ಥ್ಯ ಇವರಲ್ಲಿದೆ. ಆದರೆ ಇಂದು ಗಾಬರಿ ಪಡುವ ಸಂಗತಿಯೊಂದು ಇದೆ. ಏನು? ಇಂದು ಇವರಂತೆ ಸಾಮಾರ್ಥ್ಯವನ್ನು ತೋರ್ಪಡಿಸುವ ಕಲಾವಿದರು ಹೊಸತಲೆಮಾರಿನಲ್ಲಿ ಗೋಚರಿಸದೆ ಇರುವುದು ಗಾಬರಿ ತರುವ ಸಂಗತಿಯಲ್ಲವೆ. ಯಾವುದೇ ಪ್ರಸಂಗವನ್ನು ಸಮರ್ಥ ನೇತ್ರ್ ತ್ವ ನೀಡಿ ಮುನ್ನಡೆಸುವ  ಇವರಂತೆ ಸಮರ್ಥರು ಯಾರಿದ್ದಾರೆ ? ಇದು ಗಾಬರಿ ಪಡುವ ಸಂಗತಿಯಲ್ಲವೇ?

ಹಿರಿಯ ಬಲಿಪ್ಪರಾಗಲಿ, ಹೊಳ್ಳರಾಗಲಿ  ಅಥವಾ ಅಮ್ಮಣ್ಣಾಯ ಪದ್ಯಾಣರೇ ಆಗಲಿ ತಮ್ಮದೇ ಶಿಷ್ಯವರ್ಗ ಹೊಂದಿದ್ದರೂ ಅವರಲ್ಲಿ  ಇಂದು ಸಮರ್ಥ ಉತ್ತರಾಧಿಕಾರಿಯನ್ನು ಹೊಂದಿರುವರೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವಾಗ ಗಾಬರಿಯಾಗುತ್ತದೆ. ಕಲೆ ಎಂಬುದು ದೈವದತ್ತ ಹಾಗು ಸ್ವ ಪರಿಶ್ರಮದಿಂದ ಸಿದ್ದಿಸುವಂತಹುದು. ಇದರಲ್ಲಿ ಮೊದಲಿನದ್ದು ನಮ್ಮೆಣಿಕೆಯಲ್ಲವಾದರೆ ನಂತರದ ಪರಿಶ್ರಮ ತೋರುವ ಮನೋಭಾವವೇ ಅಪರೂಪವಾಗಿದೆ. ಕೇವಲ ಕಣ್ಣು ಮುಚ್ಚಿ ಮುಂಚೂಣಿಯವನ ಮೇಲೆ ಅವಲಂಬಿತನಾಗಿಯೋ, ವಿಶ್ವಾಸದಿಂದಲೊ ಕೇವಲ ಹಿಂಬಾಲಿಸುವುದಷ್ಟೇ ಇಂದಿನ ಕಲಾವಿದರಲ್ಲಿ ಕಾಣಬಹುದು. ಮತ್ತು ಇದು ಸುಲಭವಾಗಿ ತೃಪ್ತಿ ಪಡುವ ಸುಲಭಮಾರ್ಗವೂ ಹೌದು.

ಇಂದಿನ ಪೀಳಿಗೆಯ ಯುವ ಕಲಾವಿದರಲ್ಲಿ ಕೆಲವೊಮ್ಮೆ ಒಂದು ಬಗೆಯ  ಕುರುಡುತನ ಮತ್ತು ಅನುಕರಣೆ ಕಂಡಾಗ , ಒಂದು ಸಲ ಧರಿಸಿದ ಚಿಂದಿಯಾದ ಬಟ್ಟೆಯನ್ನು ಕಲಾಮಾತೆ, ತೇಪೆ ಹಾಕಿ ಪುನಃ ಧರಿಸಲು ಪ್ರಯತ್ನಿಸಿದಂತೆ ಭಾಸವಾಗುತ್ತದೆ. ಆಷ್ಟೂ  ಕುರುಡು ಅನುಕರಣೆ.  ತಮ್ಮ ಅಭಿಮಾನದ ಹಿರಿಯ ಕಲಾವಿದರನ್ನು ಅನುಕರಿಸುವಾಗ ಯಾವುದು ಯೋಗ್ಯವೋ, ಯಾವುದು ಅನುಕರಿಸಲ್ಪಡಬೇಕೋ ಅದನ್ನು ಅನುಸರಿಸದೆ ಇನ್ನಾವುದೋ ಅನುಕರಣೆ ಮಾಡಿ ತಮ್ಮ ಅಭಿರುಚಿಯ ಮಟ್ಟ ಪ್ರದರ್ಶಿಸುವಾಗ ಗಾಬರಿಯಾಗಿ ಬಿಡುತ್ತದೆ.ಪ್ರತಿಯೋರ್ವರ ಅಭಿರುಚಿ ಪ್ರತ್ಯೇಕವಾಗಿದ್ದರೂ ಅರ್ಥವಿಲ್ಲದ ಅಭಿರುಚಿ ಗಾಬರಿ ಹುಟ್ಟಿಸುತ್ತದೆ.ಒಬ್ಬ ಕಲೆ ಯಲ್ಲಿ ಒಬ್ಬರಿಂದ ಒಬ್ಬರಿಗೆ ಅನುಕರಣೆ ಸಾಮಾನ್ಯವಾಗಿ ಕಂಡುಬರುವ ಅಂಶವಾದರೂ, ಕಲೆಯ  ಶೈಲಿಯನ್ನು ಅನುಕರಿಸುವುದರಲ್ಲಿ ಅಸಹಜ ಕಾಣುವುದಿಲ್ಲ. ಆದರೆ ಅನುಕರಣೆ ಸಮರ್ಥವಾಗಿದ್ದರೆ ಅದು ಆಭಾಸವೂ ಅಗುವುದಿಲ್ಲ. ಇದು ನವಿಲು ಕುಣಿತ ಕಂಡು ಕಾಗೆ ಕುಣಿದಂತೆ ಆದರೆ ಹೇಗೆ? ಆನೆಯನ್ನು ನೋಡಿ ಕೋಣ ಅನುಕರಿಸಿದಂತೆ. ಆನೆ ತನ್ನ ದಾಡೆಯಲ್ಲಿ ತಿವಿದಾಗ ಇದು ತನ್ನ ಕೊಂಬಿನಲ್ಲಿ ತಿವಿಯಲು ಹೋಯಿತಂತೆ ಆಗ ಅದಕ್ಕೆ ಅರಿವಿಗೆ ಬಂದದ್ದು ತನ್ನದು ಹಿಮ್ಮುಖವಾಗಿದೆ ಎಂದು.


ಇಂದು ಈ ಅನುಕರಣೆಯೇ ಪ್ರಧಾನವಾಗಿದೆ. ಒಬ್ಬ ಭಾಗವತ ಒಂದು ಪದವನ್ನು ಒಂದು ಸ್ವರ ಸ್ಥಾಯಿಯಲ್ಲಿ ಅನುಸರಿಸಿ ಹಾಡುತ್ತಿದ್ದರೆ ಅದನ್ನು ಅನುಕರಿಸಿದರೆ ಅದು ಒಂದು ಕಲೆಯೆಂದು ತಿಳಿಯಬಹುದು. ಮೂಲ ಅನುಕರಣೆಯಂತೆ ಕಂಡರೂ ತನ್ನದಾದ ರೀತಿಯನ್ನು ಸೇರಿಸಿ ಸ್ವ ಸಾಮಾರ್ಥ್ಯದಿಂದ ಹೊಸ ರೂಪದಲ್ಲಿ ಹಾಡಿದರೆ ಅದನ್ನು ನಿಜವಾದ ಕಲೆಯೆಂದು ಮನ್ನಣೆ ಕೊಡುವಲ್ಲಿ ಗಾಬರಿಯಾಗುವುದಿಲ್ಲ.


ಮಗು ಎಳವೆಯಲ್ಲಿ ತನ್ನ ಹಿರಿಯನ್ನು ಅನುಕರಿಸಿಯೇ ಬೆಳೆಯುತ್ತ ಅಪ್ಪನಂತೆಯೋ ಅಮ್ಮನಂತೆಯೊ ಹಲವು ವಿಷಯಗಳಲ್ಲಿ ಅನುಕರಿಸಿ ತನ್ನದೇ ಒಂದು ಶೈಲಿಯನ್ನು ರೂಡಿಸಿಕೊಳ್ಳುತ್ತಾ ಆ ಶೈಲಿಗೆ ತಾನೆ ಒಡೆಯನಾಗಿಬಿಡುವುದು ಸಾಮಾನ್ಯ.
ಒಬ್ಬ ಕಲಾವಿದನ ಶ್ಶಲಿಯನ್ನು ಆತನಂತೆ  ಹಿಂಬಾಲಿಸುವಲ್ಲಿ  ತಾನು ಅಸಮರ್ಥನಾದಾಗ, ಆತನಂತೆ ಕಲೆಯನ್ನು ತೋರುವಲ್ಲಿ ಅಸಫಲನಾದಾಗ ಅವನ ಮಿಕ್ಕುಳಿದ ಶೈಲಿಯನ್ನು ಅನುಕರಿಸುವದರಲ್ಲಿ ತೃಪ್ತಿಪಟ್ಟು ತನ್ನನ್ನು ಆತನಲ್ಲಿ ಹೋಲಿಸಿಕೊಳ್ಳುವುದು ತೀರಾ ಹಾಸ್ಯಾಸ್ಪದವಾಗಿಬಿಡುವುದು.


ತನ್ನ ಮೆಚ್ಚಿನ ಕಲಾವಿದ ವೇಶ ತೊಟ್ಟು ಅಂಗೈಯಲ್ಲಿ ಮಿರಿ ಮಿಂಚುವ ಕರವಸ್ತ್ರ ಹಿಡಿದುಕೊಂಡು ರಂಗ ಪ್ರವೇಶ ಮಾಡಿದರೆ, ಈತನೂ ಅದರಂತೆ ಅನುಕರಿಸುವುದು, ಹಿರಿಯ ಭಾಗವತರೊಬ್ಬರನ್ನು ಅನುಕರಿಸುವುದು ಯಾವ ರೂಪದಲ್ಲಿ ಇದೆ ಎಂದರೆ, ಆತ ಧರಿಸಿದ ರೀತಿಯಲ್ಲೇ ಶಾಲು ಹೊದ್ದುಕೊಳ್ಳುವುದು, ಅವಾಗವಾಗ ತೊಟ್ಟ ಅಂಗಿಯನ್ನು ಆತನಂತೇ ಸರಿ ಮಾಡಿಕೊಳ್ಳುವುದು, ಆ ಹಿರಿಯ ಭಾಗವತ ಅಗಾಗ ನಿಂತುಕೊಂಡು ಪದ ಹೇಳಿದರೆ ಈತನೂ ಅದೇ ರೀತಿ ನಿಂತುಕೂಳ್ಳುವುದು, ಹಾಗೆ ಹಿರಿಯರು ಅಗಾಗ ವೇದಿಕೆ ಹಿಂಭಾಗಕ್ಕೆ ಹೋಗಿ ನೇತು ಹಾಕಿದ ಪರದೆ ಸರಿಸಿ ಚೌಕಿಯಲ್ಲಿ ಇಣುಕಿ ನೋಡಿದರೆ , ಇವರು ಹೀಗೆ ಕಲಾವಿದರಿಗೆ ನಿರ್ದೇಶನ ಕೊಡುತ್ತಿದ್ದರೆ,ಈತನು ಆಗಾಗ ವಿನಾ ಕಾರಣವಾಗಿ ಅದೆ ಶೈಲಿಯಲ್ಲಿ ಒಳಗೆ ಇಣುಕುವುದು ಈತನ ಇಣುಕುವಿಕೆಗೆ ಯಾರೂ ಪ್ರಾಮುಖ್ಯತೆ ಕೊಡದಿದ್ದರೂ ಹಿರಿಯ ಭಾಗವತನ ಹಾಗೆ ಒಂದು ಘಳಿಗೆಯ ಅವಧಿಗಾದರೂ ತಾನಾದೆ ಎಂಬ ಅಲ್ಪತೃಪ್ತಿ. ತನ್ನ ಅಭಿಮಾನಧನ ಕಲಾವಿದ ತಲೆಯುನ್ನೋ ಕೂದಲನ್ನೊ ಸರಿ ಮಾಡಿಕೊಂಡರೆ ಈತನೂ ಚಾಚು ತಪ್ಪದೇ ಅದೇ ರೀತಿ ಅನುಕರಿಸಿ, ಕೊನೆಗೆ ಮೈ ಮೇಲೆ ಹುಣ್ಣಾಗಿ ತುರಿಕೆ ಯುಂಟಾಗಿ ಹಿರಿಯ ಭಾಗವತ ತುರಿಸಿಕೊಂಡರೆ ಈತನೂ ಅದೇ ರೀತಿ ಕೆರೆದು ಕೊಳ್ಳುವುದು.. ಇದೆಲ್ಲ ಸತ್ಯವಾಗಿಯೂ ಗಾಬರಿ ಹುಟ್ಟಿಸುತ್ತದೆ.

ಈ ರೀತಿ ಅಸಹಜ ಹಿಂಬಾಲಕನಾಗುವುದು ಬಿಟ್ಟು ತನಗೊಲಿದ ಕಲೆಯ ಉನ್ನತಿಯತ್ತ ಗಮನ ಹರಿಸುವ ಕಲಾವಿದರ ಸಂಖ್ಯೆ ತುಂಬಾ ಕ್ಷೀಣ. ಕಲೆಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಕಲೆಗೆ ತಾನು ಕೊಟ್ಟು ಮತ್ತು ಪಡಕೊಂಡು ನಿರಂತರ ಸಾಧಕನಾಗುವ ಕಲಾವಿದ ಸಹಜವಾಗಿ ಕಲಾಜೀವನವನ್ನು ಅಸ್ವಾದಿಸಬಲ್ಲ.
ಅನೇಕ ಹಿರಿಯ ಕಲಾವಿದರು ಒತ್ತಿದ ಛಾಪು ಅವರ ನಂತರದ ಪೀಳೀಗೆಗಳಲ್ಲಿ ಆ ಗುಣಮಟ್ಟ ಉಳಿಯದೆ ಹಳೆಯದನ್ನೇ ಮೆಲುಕು ಹಾಕುವ ..ಇದೆಂಥದು ..ಅದು ನೋಡಬೇಕಿತ್ತು ಎನ್ನುವ ಮಾತೆ ಸಾರ್ವತ್ರಿಕವಾಗಿದೆ. ಕಾಲ ಸರಿದಂತೆ ಕಡಿಮೆಯಾಗುವ ಗುಣಮಟ್ಟ ಮತ್ತು ಇದರ ಈ ಇಳಿಯುವಿಕೆಯ ಅವರೋಹಣ ಇಳಿದಿಳಿದು ಇನ್ನು ಯಾವ ಮಟ್ಟ ತಲಪಬಹುದು ಎಂದು ಕಲ್ಪಿಸುವಾಗ ಗಾಬರಿಯಾಗದೆ ಇದ್ದೀತೆ?
ಮೈಸೂರಲ್ಲಿ ಕಳೆದ ಬಾರಿ ಒಂದು ಯಕ್ಷಗಾನ ಬಯಲಾಟ ನಡೆಯಿತು. ಹಿರಿಯ ಭಾಗವತರ ಜತೆ ಇನ್ನಿಬ್ಬರು ಯುವ ಭಾಗವತರು ಇದ್ದರು. ಅಂದು ಅಪರೂಪದ ಪ್ರಸಂಗ “ಸಂಜಯ ರಾಯಭಾರ” . ಇದರಲ್ಲಿ ಸಂಪ್ರದಾಯದಂತೆ ಪಾಂಡವರ ಒಡ್ಡೋಲಗ ಮಾಡುವಲ್ಲಿ ಯುವ ಭಾಗವತರಲ್ಲಿ ಒಬ್ಬರು ಹಿಂಜರಿದು ಮತ್ತೊಬ್ಬರು ಪೂರ್ವ ನಿಗದಿಗಿಂತ ಬದಲಿಸಿ ಮೊದಲೇ ಭಾಗವತಿಕೆಗೆ ಕುಳಿತುಕೊಳ್ಳುವ ಸಂದರ್ಭ ಬಂತು. ಯುವಕರು ತನ್ನಿಂದ ಅಸಾಧ್ಯವೆಂದು ಪ್ರಾಮಾಣಿಕತೆ ಯಿಂದ ದೊಡ್ಡ ಗುಣ ಮೆರೆದರೂ, ಕಲೆಯ ಬಗ್ಗೆ ಯೋಚನೆ ಮಾಡುವಾಗ ಗಾಬರಿಯಾಗದೇ ಇದ್ದೀತೆ?

ಕಲಾವಿದನಿಗೆ ಕಲಿಯುವಲ್ಲಿ ಸೀಮಿತ ಪರಿಧಿ ಅರಿವಿಲ್ಲದೇ ಬೆಳೆದು ಬಿಟ್ಟಿದೆ. ಈಗಿನ ವೃತ್ತಿ ರೀತಿಗೆ ಇಷ್ಟು ಸಾಕು ಎಂಬ ಧೋರಣೆ, ಎಲ್ಲದರಲ್ಲು ಒಂದು ರೀತಿ ಅಸಡ್ಡೇ ಮನೋಭಾವ ಇಷ್ಟಕ್ಕೆ ಇಷ್ಟು ಸಾಕು ಎಂಬ ಭಾವ , ಇಂದು ಯಕ್ಷಗಾನಕ್ಕೆ ಹೊಸ ಪ್ರೇಕ್ಷಕನ ಅಗತ್ಯವಿದೆ ಎಂದು ಹೇಳುವಾಗ ಆ ಹೊಸ ಪ್ರೇಕ್ಷಕನಿಗೆ ಯಾವ ಗುಣಮಟ್ಟವನ್ನು ಕೊಡುವ ಸಿದ್ದತೆಯಿದೆ? ಊಹಿಸಿದರೆ ಗಾಬರಿಯಾಗುವುದಿಲ್ಲವೇ?


ಇಂದು ವೃತ್ತಿಪರ ಕಲಾವಿದರಿಗೆ ಇದ್ದ ಅನಿವಾರ್ಯತೆ ಹವ್ಯಾಸಿಗಳಿಗೆ ಕಡಿಮೆಯಾದಾಗ ಸಹಜವಾಗಿ ಒಟ್ಟು ಗುಣಮಟ್ಟದ ಕೊರತೆ ಧಾರಾಳವಾಗಿ ಕಂಡುಬರುತ್ತಿದೆ. ಹವ್ಯಾಸಿಗಳು  ಗುರುತರವಾದ ತಮ್ಮ ಜವಾಬ್ದಾರಿಯ ಅರಿವಿಲ್ಲದೆ ವರ್ತಿಸುವುದು ಅಭಿಮಾನದಿಂದ ಕಂಡ ಕಲೆಗೆ ಅಪಚಾರ ಎಸಗಿದಂತೆ. ಮೊದಲು ವೃತ್ತಿಪರರಿಗೆ ತಮಗೆ ಜೀವನ ಕೊಡುತ್ತಿರುವ ಮತ್ತು ಜೀವನ ನಿರ್ವಹಣೆಗೆ ಇದೇ ಅನಿವಾರ್ಯವಾಗಿರುವುರಿಂದ ಅದರಲ್ಲಿ ಅವರಿಗರಿವಿದ್ದು ಇಲ್ಲದೆಯೊ ಕಲೆಯಬಗ್ಗೆ ಬದ್ದತೆಯನ್ನು ತೊರಿಸುವುದೂ ಅನಿವಾರ್ಯವಾಗಿತ್ತು. ಇಂತಹ ಅನಿವಾರ್ಯತೆ ಹವ್ಯಾಸಿಗಳಿಗೆ ಇಲ್ಲ ಮಾತ್ರವಲ್ಲ  ಹವ್ಯಾಸಿಗಳಂತೆ ಇದು ಹೊಟ್ಟೇ ಪಾಡೂ ಅಲ್ಲ. ಮೊದಲಿನಂತೆ ಕಲಾವಿದನಿಗೆ ವಿದ್ಯೆ ಎಂದರೆ ಇದೊಂದೇ ಅರಿವಿನಲ್ಲಿತ್ತು. ಒಂದು ರೀತಿಯ ಶಿಕ್ಷಣ ವಂಚಿತರು. ಹವ್ಯಾಸಿಗಳು ಇಂದು ಹೆಚ್ಚು ಸುಶಿಕ್ಷಿತರು ಮತ್ತು ಬದುಕಿನಲ್ಲಿ ಹೆಚ್ಚು ಭದ್ರತೆಯನ್ನು ಹೊಂದಿದವರು. ಇವರಿಂದ ಕಲಾ ಜಗತ್ತು ಅಧಿಕವನ್ನು ನಿರೀಕ್ಷಿಸುವುದರಲ್ಲಿ ತಪ್ಪೇನಿದೆ. ಆದರೆ ಜವಾಬ್ದಾರಿಯ ಅರಿವು ಬರಬೇಕಷ್ಟೆ. ಕಲೆ ಕೇವಲ ಮನರಂಜನೆಯ ವಸ್ತುವಾಗಿ ಕಾಣದೆ ಅದರಲ್ಲಿ ಪೂಜನೀಯಭಾವನೆ ಬೆಳೆಯುವಂತಾಗಬೇಕು. ವಸ್ತುಸ್ಥಿತಿ ಕಂಡಾಗ ಕೇವಲ ಇಷ್ಟು ಮಾಡಿದ್ದು ಸಾಕು ಏಂಬ ಉಡಾಫೆಯ ತೃಪ್ತಿ ಕಂಡಾಗ ಗಾಬರಿಯಾಗುತ್ತದೆ.


ಕಾಲಮತಿಯೋಳಗೆ ನಡೆಯುತ್ತಿರುವ ಯಕ್ಷಗಾನ ಕಂಡಾಗ ಬಾಲ್ಯದಲ್ಲಿ ಭಯ ಕುತೂಹಲದಿಂದ ಕಂಡ ಯಕ್ಷಗಾನವನ್ನು ಹೋಲಿಸುವಂತಾಗುತ್ತದೆ. ಆತೀ ಹೆಚ್ಚಾಗಿ ಕಾಣುವ ದೇವಿ ಮಹಾತ್ಮೆಯ ಮಹಿಷಾಸುರ, ರುದ್ರಭಯಂಕರನಾಗಿ ಭಯಾನಕ ಲೋಕವನ್ನೆ ಸಾಕ್ಷಾತ್ಕಾರಗೋಳಿಸುತ್ತಿದ್ದ ಮಹಿಷಾಸುರ ಇಂದು ಪ್ರೆಕ್ಷಕರನ್ನು ನಗಿಸುವ ಕಾಯಕದಲ್ಲಿ ಸಬೆಯನ್ನು ಅಟ್ಟಾಡಿಸಿ ಚೆಲ್ಲಾಪಿಲ್ಲಿ ಗೊಳಿಸುವುದು, ಏನೇನೋ ವಿಚಿತ್ರ ಭಂಗಿಯನ್ನು ತೋರಿಸುವುದು... ರುದ್ರಭಯಂಕರ ಬಣ್ಣದವೇಷ ಇಲ್ಲಿ ಹಾಸ್ಯಗಾರನ ಪಾತ್ರ ಮಾಡಿದಾಗ ಗಾಬರಿ ಮಾತ್ರವಲ್ಲ ಒಟ್ಟು ವ್ಯವಸ್ಥೆಯ ಬಗ್ಗೆ ಹೇಸಿಗೆಯಾಗಿ ದೂರವೇ ಉಳಿಯುವಂತಾಗುತ್ತದೆ. ಹೀಗೆ ಎಲ್ಲದರಲ್ಲೂ ಕ್ರಮವಾಗಿ ಬಂದ ಕ್ರಮ ನಿಯಮಗಳಿಗೆ ಅತೀತರಾಗಿ ಪ್ರವರ್ತಿಸುವಾಗ ಏನಾಗಬೇಕು ? ನಾವೆಲ್ಲಿ, ಯಾವ ಯುಗದಲ್ಲಿ ಜೀವ ಹಿಡಿದು ಬದುಕುತ್ತಿದ್ದೇವೆ ಎಂದು ಯೋಚಿಸುವಾಗ ಗಾಬರಿ ಇನ್ನೂ ಜಾಸ್ತಿಯಾಗಿಬಿಡುತ್ತದೆ.  


ಗುರುವನ್ನು ಮೀರಿದ ಶಿಷ್ಯ ಎಂಬಮಾತು ಕೇಳುವಲ್ಲಿ ಮನಸ್ಸು ತವಕಿಸುತ್ತಿದ್ದರೆ,ಈ ಅಂಧಾನುಕರಣೆಯ ಉರುಳಲ್ಲಿ ನರಳಾಡುವ ಕಲೆಯನ್ನು ಕಂಡಾಗ ಗಾಬರಿಯಾಗುತ್ತದೆ. ಯಕ್ಷಗಾನದ ಮಟ್ಟಿಗೆ ಅರಗಿಸಿಕೊಳ್ಳಬೇಕಾದ ಸಂಗತಿಗಳು ಹಲವು ಇರಬಹುದು. ಇಂದಿನ ಯಾವುದೇ ಹಿರಿಯ ಕಲಾವಿದನೂ ತನ್ನ ಸಮರ್ಥ ಉತ್ತರಾಧಿಕಾರಿಯನ್ನು ನಿಯಮಿಸುವಲ್ಲಿ ಸಫಲನಾಗಿಲ್ಲ ಎಂದೇ ಹೇಳಬಹುದು. ತಮ್ಮ ವಿಶಿಷ್ಟ ಶೈಲಿಯಿಂದ ತಮ್ಮ ಗುರುಗಳಿಂದ ವಿಬ್ಭಿನ್ನವಾಗಿ ಗುರುತಿಸಲ್ಪಟ್ಟವರು ತಮ್ಮ ವಿಭಿನ್ನತೆಯ ಕಲ್ಪನೆಗೆ ವಾರಸುದಾರರಿಲ್ಲದ ಪರಿಸ್ಥಿತಿಯಲ್ಲಿ ಮುಂದಿನ ಜನಾಂಗದಲ್ಲಿ ಹೇಗಿರಬಹುದು ಅದು ಕೇವಲ ಒಬ್ಬರಿಗೆ ಸೀಮಿತವಾಗಿರದೆ ಸಮಷ್ಟಿಯಲ್ಲಿ ಎದುರಾಗುವ ಸಮಸ್ಯೆ. ಒಂದು ಸಲ  ಯೋಚಿಸಿದರೆ ಮೇಲೆ ಹೇಳಿದ ಭಾಗವತರಂತೆ, ಯಾವುದೇ ಪ್ರಸಂಗವಾದರು ಸೈ ಎನ್ನುವ ಭಾಗವತರು ಯಾರಿದ್ದಾರೆ?    ಇದು ಗಾಬರಿಯ ಸಂಗತಿಯಲ್ಲವೇ?






Glee: The Music, Volume 3 Showstoppers (Deluxe)Apple iPod touch 32 GB (3rd Generation) NEWEST MODELHDMI TO HDMI 6 foot cableHDMI TO HDMI 6 foot cable








Thursday, June 3, 2010

ಬರೆಕೆರೆಯ ಯಕ್ಷಗಾನ ಹಿಮ್ಮೇಳ ವೈಭವ




ಉತ್ತಮ ಕಾರ್ಯಕ್ರಮವೊಂದು ಇತ್ತಿಚೆಗೆ ಅಂದರೆ ದಿನಾಂಕ ೨೮.೦೫.೨೦೧೦ ರಂದು, ನಮ್ಮ ಬರೆಕೆರೆಯ ಮಿತ್ರ ಕೇಶವ ಪ್ರಶಾಂತರವರವರ ಮನೆಯಲ್ಲಿ ಜರಗಿತು, ತ್ರಿಕಾಲ ಪೂಜೆಯ ದೇವತಾರಾಧನೆಯ ಅಂಗವಾಗಿ ಯಕ್ಷಗಾನ ಹಿಮ್ಮೇಳ ಗಾನ ವೈಭವವನ್ನು ಯಕ್ಷಗಾನದ ಹಿರಿಯ ಭಾಗವತತ್ರಯರ ಕಲಾಪ್ರೌಢಿಮೆಗೆ ಸಾಕ್ಷಿಯಾಗುವಂತೆ ಅತ್ಯುತ್ತಮ ಹಿಮ್ಮೇಳದೊಂದಿಗೆ ಕಾರ್ಯಕ್ರಮ ಯೋಜಿಸಿದ್ದರು.. ಎರಡುವಾರ ಮೊದಲೇ ಕೇಶವ ಕರೆ ಮಾಡಿ ಕಾರ್ಯಕ್ರಮದ ಕರೆ ನೀಡಿದ್ದರು. ಬಲಿಪ, ಪದ್ಯಾಣ, ಹೊಳ್ಳ, ಈ ಮೂರು ತ್ರಿಮೂರ್ತಿಗಳು ಇಂದು ಯಕ್ಷಗಾನಲೋಕದ ಹಿರಿಯ ವ್ಯಕ್ತಿಗಳು. ಇವರ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನಡೆಯುವುದು ಇದೇನೂ ಹೊಸತಲ್ಲ. ಇಲ್ಲಿ ಹೊಸತು ನಮ್ಮ ಮಿತ್ರರ ಮನೆಯಲ್ಲಿ ಆಗುತ್ತಿರುವುದು, ಮಿತ್ರರು ಮತ್ತವರ ಕುಟುಂಬವರ್ಗದವರು ಇದನ್ನು ಮೊದಲೆ ಯೋಚಿಸಿದ್ದರೋ ಗೊತ್ತಿಲ್ಲ. ಈ ಕಾರ್ಯಕ್ರಮ ನನ್ನ ಮಟ್ಟಿಗೆ ದಿಡೀರ್ ಆಗಿ ನಿರ್ಧರಿತ ಕಾರ್ಯಕ್ರಮ.


ಪದ್ಯಾಣ ಗಣಪಣ್ಣನ ನೇತ್ರ್ ತ್ವದಲ್ಲಿ ಯೋಜಿಸಿದ್ದನ್ನು ಅತ್ಯಂತ ಉತ್ಸಾಹದಲ್ಲಿ ಮಿತ್ರ ಕೇಶವ ಹೇಳಿದಾಗ ಈ ಕಾರ್ಯಕ್ರಮ ಕಳೆದುಕೊಳ್ಳಬಾರದು ಎಂದು ಯೊಚಿಸಿದೆ.
ಆದರೆ ಎಲ್ಲ ಬಾರಿಯಂತೆ ಈ ಬಾರಿಯೂ ಕಾರ್ಯಕ್ರಮಕ್ಕೆ ಹೋಗಿ ಸವಿಯುವುದು ಕನಸಾಗಿಯೆ ಉಳಿದು ಬಿಟ್ಟಿತು. ವಾರದ ಮಧ್ಯಭಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಮಯದ ಅಭಾವದಿಂದ ಹೋಗುವುದು ಸಾಧ್ಯವಾಗದೆ ಹೋಯಿತು. ಈ ನಿರಾಶೆಯ ಮಧ್ಯದಲ್ಲೇ ಅದೆ ದಿನ ಸಾಯಂಕಾಲ ಕೇಶವರಿಗೆ ಕರೆ ಮಾಡಿ ಉತ್ಸಾಹದಿಂದಲೇ ಕೇಳಿದಾಗ ನನ್ನಿಂದಲೂ ಹೆಚ್ಚಿನ ಉತ್ಸಾಹದಿಂದ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ವರದಿ ಒಪ್ಪಿಸಿಬಿಟ್ಟರು. ನಿಜಕ್ಕು ಆದಿನ ನನ್ನಂತಹ ಹಲವು ಯಕ್ಷಗಾನ ಮಿತ್ರರು ಈ ಕಾರ್ಯಕ್ರಮದ ಸವಿಯುನ್ನುಣ್ಣುವುದರಲ್ಲಿ ವಂಚಿತರಾಗಿಬಿಟ್ಟೆವು.


ಎಲ್ಲದರ ಮಧ್ಯೆ ಒಂದು ತೃಪ್ತಿ... ಈ ಕಾರ್ಯಕ್ರಮ ಸಂಪೂರ್ಣವಾಗಿ ವೀಡಿಯೊ ದಾಖಲಿಕರಣವಾಗುವುದರಿಂದ ಅಲ್ಪ ಮಟ್ಟಿನ ಆಸ್ವಾದನೆಯನ್ನು ಅನುಭವಿಸುವ ಅವಕಾಶ. ಅದರಂತೆ ಮೊನ್ನೆ ಸೋಮವಾರದಂದು ಕೇಶವ ಹೇಳಿದರು ವೀಡಿಯೊ ಸಿದ್ದವಿದೆ... ಮತ್ತೆ ಮನಸ್ಸು ಕೇಳಲಿಲ್ಲ. ನನ್ನ ಇನ್ನೊರ್ವ ಮಿತ್ರ ಸುಬ್ಬಣ್ಣ ಇದಕ್ಕಾಗಿಯೇ ಕಾದು ಕುಳಿತಿದ್ದರು. ಇಬ್ಬರೂ ಸಾಯಂಕಾಲ ಕೇಶವರ ಮನೆಗೆ ಧಾಳೀ ಇಟ್ಟೇಬಿಟ್ಟೆವು. ಅಲ್ಲಿ ಕೆಲವು ವೀಡಿಯೊ ತುಣುಕು ನೋಡಿದ ಮೇಲೆಯೆ ಮನಸ್ಸಿಗೆ ಸ್ವಲ್ಪ

ಸಮಾಧಾನವಾದದ್ದು.
ಎಲ್ಲವನ್ನು ತಂದು ನನ್ನ ಕಂಪ್ಯೂಟರ್ನಲ್ಲಿ ಹಾಕಿದ ಮೇಲೆ ಎಂದಿನಂತೆ ಒಂದುಸಲ ಸ್ವಲ್ಪ ಸ್ವಲ್ಪ ತುಣುಕಾಗಿ ಸವಿದ ಮೇಲೆ ನನ್ನ ಆಡಿಯೊ ವೀಡಿಯೊ ಕಾರ್ಖನೆಗೆ ಕೆಲಸ ಶುರುವಾಯಿತು. ಹೌದು ಎಲ್ಲವನ್ನು ಸಂಕಲಿಸಿ ಬೇಡದೆ ಇದ್ದ ಭಾಗ ತೆಗೆದು ಫೈಲು ಗಳಸ್ವರಗಳನ್ನು ನೇರ ಒಪ್ಪ ಗೊಳಿಸಿ ಎಲ್ಲದಕ್ಕೂ ಒಂದು ರೂಪಕೊಡುವ ಕೆಲಸ ಶುರುವಾಯಿತು.
ಪದ್ಯಾಣ ಹೊಳ್ಳರ ದ್ವಂದ್ವ ಎಂದರೆ ಮೊದಲು ನೆನಪಿಗೆ ಬರುವುದು ದಶಕದ ಹಿಂದೆ ಸಂಗೀತಾ ರೆಕಾರ್ಡಿಂಗ ಕಂಪೆನಿ ಬಿಡುಗಡೆ ಮಾಡಿದ ಶೇಣಿಯವರು ಕರ್ಣನಾಗಿ ಅರ್ಥಗಾರಿಕೆ ಮೆರೆದ ಕರ್ಣಾವಸಾನ ಧ್ವನಿಸುರುಳಿಯ ಈ ಇಬ್ಬರ ದ್ವಂದ್ವ ಹಾಡುಗಾರಿಕೆ . ಯಕ್ಷಗಾನ ಇತಿಹಾಸದಲ್ಲೆ ಒಂದು ಛಾಪನ್ನು ಒತ್ತಿದ ಕ್ಯಾಸೆಟ್ ಇದು. ಇಲ್ಲಿ ಅದು ಕೆಲವು ಕಡೆ ಮರುಕಳಿಸಿತೇ ಎಂದು ಭಾವಿಸಿಬಿಡುವ ಹಾಗೆ ಪದ್ಯಾಣ ಹೊಳ್ಳರು ಪೂರ್ಣ ಉತ್ಸಾಹಿಗಳಾಗಿದ್ದರೆ.. ಹಿರಿಯ ಬಲಿಪ್ಪಜ್ಜ ಎಂದಿನಂತೆ ಸ್ವರಧಾರೆ ಎರೆಯಲು ಉದ್ಯುಕ್ತರಾಗಿದ್ದರು. ಅದರಲ್ಲೂ ಮೂರುಜನ ಸೇರಿ ಹಾಡಿದ ಕರ್ಣಾವಸಾನದ ಪದಗಳು ಅದ್ಭುತವಾಗಿ ಮೂಡಿಬಂದು ಇಂದಿನ ನನ್ನ ದಿನ ಪೂರ್ಣ ಯಕ್ಷಗಾನ ಮಯವನ್ನಾಗಿಸಿತು,


ಬಲಿಪ್ಪರ ಕೆಲವು ಪೇಟೆಂಟ್ ಪದಗಳು ಮಾರಿಚ ನಿಶಾಚರ,ಪಂಚವಟಿ , ಹಾಗು ಅತಿಕಾಯದ ಪದಗಳು ಈ ಮೊದಲು ಹಲವು ಕಾರ್ಯಕ್ರಮಗಳಲ್ಲಿ ಕೇಳಿದ್ದರೂ ಇಲ್ಲಿ, ಕಟೀಲು ದೇವಾಲಯದ ಮಧ್ಯಾಹ್ನದ ಊಟದ ಸಾರಿನಂತೆ ನಿತ್ಯವೂ ಹೇಗೆ ಹೊಸ ರುಚಿಯನ್ನು ಕೊಡುತ್ತದೋ ಅದೇ ರೀತಿಯಿತ್ತು. ಶುದ್ದ ಪರಂಪರೆಯ ಎಲ್ಲಿಯೂ ರಾಜಿಯಿಲ್ಲದ, ಛಂದೋಬದ್ದ,ರಾಗ ತಾಳಲಯಬದ್ದ ಬಲಿಪ್ಪ ಶೈಲಿ ಎಷ್ಟು ಮೋಹಕ..!!.

ಇನ್ನು ಗದ್ದಾಯುದ್ದದ , ದಕ್ಷಾಧ್ವರ, ಸಹಸ್ರಕವಚ ಮೋಕ್ಷ, ಮುಂತಾದ ಪದಗಳಿಗೆ ತನ್ನದೆ ಛಾಪನ್ನು ಒತ್ತಿದ್ದ ಹೂಳ್ಳರ ಪದಗಳು ಪ್ರತಿಸಲ ಪುನರಾವರ್ತನೆಗೊಳಿಸುವಂತೆ ಮಾಡುತ್ತದೆ.

ಅಗರಿ ಶೈಲಿಯಲ್ಲಿ ಪದ್ಯಾಣ ಹಾಡಿದರೆ ಸ್ವತಃ ಅಗರಿ ಮೈಮೇಲೆ ಬಂದಂತೆ ಹಾಡುವ ಇವರ ಪದಗಳು ಇಂತಹುದೆ ಪ್ರಸಂಗಕ್ಕೆಂದು ಬ್ರಾಂಡ್ ಅಗಿಲ್ಲ. ಸ್ವರದ
ಏರಿಳೀತದ ಶೈಲಿಯ ಪದ್ಯಾಣ ಗಣಪ್ಪಣ್ಣನ ಪದ್ಯಗಳ ಆಲಾಪನೆ ಶೈಲಿಯೇ ಸುಂದರ.
ಕಾರ್ಯಕ್ರಮದ ಆರಂಭದಲ್ಲಿ ಪದ್ಯಾಣ ಹೊಳ್ಳರ ದ್ವಂದ್ವದಲ್ಲಿ ಗಣಪತಿ ಸ್ತುತಿ ಆನಂತರ ಬಲಿಪ್ಪರ ಪ್ರಸಿದ್ದ ಪದಗಳಲ್ಲಿ ಒಂದಾದ ಶರಣುತಿರುವಗ್ರ ಶಾಲಿವಾಹಿನಿ ಸಹಜವಾಗಿ ಸುಂದರವಾಗಿತ್ತು



ಭೀಷ್ಮ ವಿಜಯದ ಪರಮೠಷಿ ಮಂಡಲದ ಮಧ್ಯದಿ... ಪದ್ಯಾಣ ಹೊಳ್ಳರ ದ್ವಂದ್ವದಲ್ಲಿ ಮೂಡಿ ಆನಂತರ ಕರ್ಣಾವಸಾನ ಪ್ರಸಂಗದ ಏನು ಸಾರಥಿ... ಸಾಯಕತೊಡುವ ವಿಚಾರ... ಮತ್ತೀತರ ಪದಗಳು ಮೂವರು ಪರಸ್ಪರ ಸಹಭಾಗಿತ್ವದಲ್ಲಿ ಮೊಳಗಿ ಆಷಾಢ ಮಾಸದ ವರ್ಷಧಾರೆಯಂತೆ ಭೋರ್ಗರೆಯಿತು.


ಈ ಕಾರ್ಯಕ್ರಮದಲ್ಲಿ ಹೊಳ್ಳ ಮತ್ತು ಉಪಾಧ್ಯಾಯರ ಜತೆಗಾರಿಕೆ ಮಾತ್ರ ಸಂಪೂರ್ಣವಾಗಿ ಮೆರೆದಾಡಿತು. ಕೆಲವೊಂದು ಅದ್ಭುತ ಪದಗಳು ಮತ್ತೂ ಮತ್ತು ಮೆಲುಕು ಹಾಕುವಂತಿತ್ತು. ಮಧ್ಯಮಾವತಿಯ ಗಂಡು ಸ್ವರದಲ್ಲಿ ಹಾಡಿದ ದಕ್ಷಾಧ್ವರದ ಒಂದುದಿವಸ ತಾನು ಕುಳಿತಿರ್ಪ ಸಭೆಗೆ.. , ಜಯ ಕಂಸಾಸುರ ಮರ್ದನ ಅಲ್ಲಿ ಸೇರಿದ ಮಂದಿಗೆ ಮರೆಯದ ಅನುಭವ ಉಂಟು ಮಾಡಿರಬಹುದು,ಬಲಿಪ್ಪರು ಹಾಡಿದ ..ಅತಿಕಾಯ ಪ್ರಸಂಗದ ಏತಕೆ ಮರುಳಾದೆ ತಾತ... ಮಾರೀಚ ನಿಷಾಚರ... ದಂಡು ಬಂತೈ ರಾಘವನ...ಎಂಬ ಪದಗಳು ನಮಗೆ ಮೈಮನ ಮರೆವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
ಪದ್ಯಾಣ ಅಗರಿ ಶೈಲಿಯಲ್ಲಿ ಹಾಡಿದ ವಾಮನ ಚರಿತ್ರೆ ಪ್ರಸಂಗದ ಮಣಿದಾತ ನುಡಿದ ಪಾವನವಾದ ತವ ಪಾದ ಅವರ ಅತ್ಯುತ್ತಮ ಪದಗಳಲ್ಲಿ ಒಂದಾಗಿ ಮೂಡಿತು.


ಸುಮಾರು ಮೂರು ಘಂಟೆ ಅವಧಿಯ ಯಕ್ಷಗಾನ ಹಿಮ್ಮೇಳದ ಝೇಂಕಾರ ಮೊಳಗಿಸಿದ ಇವುಗಳನ್ನು ಮೊದಲ ದಿನವೇ ಮೂರು ಬಾರಿ ಕೇಳಿ ನನ್ನ ತೃಷೆಯನ್ನು ನೀಗಿಸಿದೆ ಅಂತಲೇ ಹೇಳಬಹುದು.
ಅತ್ಯಂತ ಶ್ರಮವಹಿಸಿ ಈ ಕಾರ್ಯಕ್ರಮವನ್ನು ನಮ್ಮ ಮಿತ್ರ ಬರೆಕೆರೆ ಕೇಶವ ಹಾಗು ಮನೆಯವರು ಅಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರ ಈ ಕಾರ್ಯಕ್ರಮಕ್ಕೆ ಎರಡುವಾರ ಮೊದಲೇ ಭಾಗವತರು ಹಾಡಬೇಕಾದ ಪದಗಳ ಪಟ್ಟಿ ಸಿದ್ದ ಪಡಿಸುವಂತೆ ನನ್ನಲ್ಲಿ ಕೇಳಿಕೊಂಡಿದ್ದರು. ಅದರಂತೆ ನನ್ನಲ್ಲಿದ್ದ ಸಂಗ್ರಹಗಳನ್ನೆಲ್ಲಾ ಜಾಲಾಡಿ ನನಗೆ ಅತ್ಯುತ್ತಮವೆನಿಸಿದಂತಹ ಪದಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಸಿದ್ದ ಮಾಡಿ ಕಳುಹಿಸಿದ್ದೆ, ದೊಡ್ಡ ಮನಸ್ಸಿನಿಂದ ಅವುಗಳಲ್ಲಿ ಕೆಲವು ಪದಗಳನ್ನು ಆಯ್ಕೆ ಮಾಡಿ ಹಾಡಿಸಿದ್ದಾರೆ. ಸಾಮಾನ್ಯವಾಗಿ ಹಾಡುವಂತಹ ಪದಗಳಿಗೆ ಬದಲಾಗಿ ಅಪರೂಪಕ್ಕೆ ಹಾದುವಂತಹ ಪದಗಳನ್ನು ಆಯ್ಕೆ ಮಾಡಿ ಪಟ್ಟಿ ಸಿದ್ದ ಮಾಡಿ ಕಳುಹಿಸಿ ಅದರಲ್ಲಿ ಕೆಲವು ಪದಗಳು ಆಯ್ಕೆ ಗೊಂಡು ಹಾಡಲ್ಪಟ್ಟದ್ದು ತುಂಬ ಖುಷಿ ಕೊಟ್ಟಿತು. ಅಪರೂಪಕ್ಕೆ ತಮ್ಮದೆ ಮನೆಯಲ್ಲಿ ನಡೆಯುವ ಕಾರ್ಯಕ್ರಮ, ಹಾಗಾಗಿ ಮನೆಯವರದ್ದೆ ಆದ ಆಶಯಗಳು ಬೇಡಿಕೆಗಳು ಹಲವು ಇರುತ್ತವೆ. ಬೇರೆಲ್ಲೊ ಲೌಡ್ ಸ್ಪೀಕರ್ ನಲ್ಲಿ ದಿನವೂ ನಮಗಿಷ್ಟವಾದ ಹಾಡುಗಳನ್ನು ಕೇಳೀದರೂ ನಮ್ಮದೆ ಮನೆಯ ಪುಟ್ಟ ಟೇಪ್ ರೇಕಾರ್ಡರ್ ನಲ್ಲಿ ಕೇಳುವ ಅನುಭವವೆ ಬೇರೆ. ಹಾಗಾಗಿ ಹಲವು ಇತಿಮಿತಿಗಳ ನಡುವೆ ಅತ್ಯುತ್ತಮ ಎನ್ನಬಹುದಾದ ಹಲವು ಪದಗಳ ಸರಪಣಿ ನಿನಾದವನ್ನು ಕೇಳಿದ ಅನುಭವ ಆಯಿತು.







“ಬರೀ ಪದ ಹೇಳೀದ್ರೆ ಕೇಳ್ಳಿಕ್ಕೆ ಜನ ಸೇರ್ತಾರೆ...ಬರೀ ಅರ್ಥ ಮಾತ್ರ ಅದ್ರೆ ಯಾರು ಸೇರುದಿಲ್ಲ.” ಎಂಬ ಬಲಿಪ್ಪರ ಮಾತಿಗೆ ಪುಷ್ಟಿ ಕೊಡುವಂತೆ ಯಕ್ಷಗಾನ ಹಿಮ್ಮೇಳ ಮಾತ್ರ ಅಧಾರಿತ ಇಂತಹ ಹಿಮ್ಮೇಳ ವೈಭವ ಇತ್ತಿಚೆಗೆ ಬಹಳ ಜನಪ್ರಿಯತೆಯನ್ನು ಗಳಿಸುತ್ತಿದೆ.
ಒಂದು ಉತ್ತಮ ಕಾರ್ಯಕ್ರಮ ನಡೆಸಿ ಅದನ್ನು ಮುದ್ರಿಸಿ, ನಮಗೆಲ್ಲ ಸವಿಯುವಂತೆ ಮಾಡಿದ ಮಿತ್ರ ಕೇಶವ ಹಾಗು ಮನೆ ಮಂದಿಗೆ ತುಂಬು ಹೃದಯದ ಧನ್ಯವಾದಗಳು. ಮೊದಲ ಕಾರ್ಯಕ್ರಮದಿಂದ ಉತ್ಸಾಹಿತರಾದ ಮನೆ ಮಂದಿ ಮುಂದೆ ಯಕ್ಷಗಾನ ಬಯಲಾಟ ಏರ್ಪಡಿಸುವ ಬೃಹದಾಶೆಯನ್ನು ಇಟ್ಟುಕೊಂಡಿದ್ದಾರೆ. ಆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಚೈತನ್ಯವನ್ನು ಈ ಕುಟುಂಬ ವರ್ಗದವರಿಗೆ ಭಗವಂತನು ನೀಡಲಿ,ಹಾಗು ಅದನ್ನು ಕಾಣುವ ಭಾಗ್ಯ ನಮ್ಮದಾಗಲಿ ಎಂದು ಹಾರೈಸೋಣ ಅಲ್ಲವೆ?



Sunday, May 16, 2010

ಶ್ರಿ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್

ಅದು ಮಂಗಳೂರಲ್ಲಿ ಕೆಲಸಕ್ಕಿದ್ದ ಸಮಯ. ಕೈಯಲ್ಲಿ ನಾಲ್ಕು ಕಾಸು ನನ್ನದು ಅಂತ ಒಡಾಡ್ತಾ ಇತ್ತು. ದುಂದು ವೆಚ್ಚದಲ್ಲಿ ನಾನು ಮೊದಲಿಂದಲೂ ಹಿಂದೆ. ವಾರಕ್ಕೊಮ್ಮೆ ಮನೆಗೆ ಬರುವ ಕ್ರಮ. ಶನಿವಾರ ಕೆಲಸ ಮುಗಿಸಿ ಅವಾಗ ತಾನೆ ಮಂಗಳೊರಿನ ಕೆ ಎಸ್ ಅರ್ ಟಿ ಸಿ ಬಸ್ ಸ್ಟಾಂಡ್ ಹೊಸದಾಗಿ ಬಿಜೈ ಯಲ್ಲಿ ಸುರುವಾಗಿದ್ದ ಕಾಲ. ಮೊದಲು ಆ ಜಾಗ ತೆಂಗಿನ ತೋಟವೂ ಹೊಲಗದ್ದೆಯಿಂದ ಕೂಡಿತ್ತು. ಕೆಲಸ ಮುಗಿಸಿ ಕಾಸರಗೋಡಿಗೆ ಇದ್ದ ಏಕ ಮಾತ್ರ ಕರ್ನಾಟಕ ಸರಕಾರಿ ಬಸ್ ಗೆ ಕಾದು ಕುಳಿತಿದ್ದೆ. ಹೊಸದಾಗಿ ಆದ ಬಸ್ ಸ್ಟಾಂಡ್ ಕೇವಲ ಕೆಲವೇ ಮಂದಿ ಹಾಗು ಅದರಂತೆ ಕೆಲವೆ ಬಸ್ಸುಗಳು. ಒಂದೆರಡು ಅಂಗಡಿ.

ನನ್ನ ಪಕ್ಕದಲ್ಲಿ ಕುಳಿತಿದ್ದ ಒಬ್ಬಾತ ಆಗಂತುಕ ಅಂದಿನ ಉದಯವಾಣಿ ಓದುತ್ತಾಇದ್ದ. ಪೇಪರಿನ ಕೋನೆ ಪುಟದಲ್ಲಿದ್ದ ಒಂದು ಜಾಹೀರಾತು ನನ್ನ ಕಣ್ಣೆಗೆ ಬೀಳಬೇಕೆ. ಒಂದು ವೇಳೆ ಅದು ನನ್ನ ಕಣ್ಣಿಗೆ ಬೀಳದಿರುತ್ತಿದ್ದರೆ..ಅಂದು ಬಸ್ ಗೆ ಒಂದು ಜನ ನನ್ನ ರೂಪದಲ್ಲಿ ಹೆಚ್ಚಾಗಿರುತ್ತಿತ್ತು. ಅದೊಂದು ಆವಾಗ ಮಮೂಲಾಗಿದ್ದ ಅಟದ ಜಾಹಿರಾತು. ಅದೆ ಕೊನೆಯ ಪುಟದ ಎಡಭಾಗದ ತಳದಲ್ಲಿ ಆವಾಗ ಚಾಲ್ತಿಯಲ್ಲಿದ್ದ ಯಕ್ಷಗಾನಾ ಮೇಳಗಳ ಎರಡು ದಿನದ ಕಾರ್ಯಕ್ರಮ ಅಲ್ಲಿ ಸಂಕ್ಷೇಪವಾಗಿ ಇರುತ್ತಿತ್ತು. ತುತ್ತ ತುದಿಯಲ್ಲಿ ಧರ್ಮಸ್ಠಳ ಮೇಳ , ಅದರ ಕೆಳಗೆ ಕರ್ಣಾಟಕ ಮೇಳ ಆ ನಂತರ ಮೂರನೆಯದಾಗಿ ಸುರತ್ಕಲ್ ಮೇಳ..

ಹೆಚ್ಚಾಗಿ ಆವಾಗೆಲ್ಲ ನನ್ನ ಕಣ್ಣು ಉದಯವಾಣಿ ಕಂಡ ಕೂಡಲೆ ಮೊದಲು ಓಡುತ್ತಿದ್ದ ಜಾಗ ಅದು. ಅದರಲ್ಲೂ ಮೂರನೆಯದಾಗಿದ್ದ ಸುರತ್ಕಲ್ ಮೇಳದ ಆಂದಿನ ಆಟ ಎಲ್ಲಿ ಎಂದು ನೋಡುವ ಸಹಜ ಚಪಲ ಅಂದು ಕೂಡ ನನ್ನ ಪ್ರಯಾಣದ ಯೋಜನೆಯನ್ನೇ ಬದಲಿಸಿತು. ಹೌದು ಅಂದು ಸುರತ್ಕಲ್ ಮೇಳದ ಆಟದ ಜಾಹಿರಾತು ಕಂಡೊಡನೇ ಕಾರ್ಯಕ್ರಮ ಸಂಪೂರ್ಣ ಬದಲಾಗಿಬಿಟ್ಟಿತು. ಅಂದು ಮೇಳದ ಆಟ ಮಂಗಳೊರಿನ ಕೇಂದ್ರ ,ನೆಹರೂ ಮೈದಾನಿನಲ್ಲಿ. ಅದೂ ಪ್ರಸಂಗ ನೋಡಿದ ಕೂಡಲೆ ಮತ್ತೆ ಪುನಃ ಯೊಚಿಸುವ ಮನಸ್ಸು ಆಗಲಿಲ್ಲ.



ಶ್ರಿ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್. ಈ ಮೇಳದ ಅಂದಿನ ಆಟ ಮತ್ತು ಆಮೇಳದ ಹಿಟ್ ಪ್ರಸಂಗವಾದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ..ಇನ್ನು ಬೇರೆ ಬೇಕೆ? ಅದಾಗಲೆ ಯಾವ ಬಸ್ಸಿಗಾಗಿ ಕಾಯುತ್ತಿದ್ದೆನೋ ಆ ಬಸ್ಸು ಖಾಲಿಯಗಿ ಬಂದು ನಿಂತಿತ್ತು. ಮನಸ್ಸು ಎರಡಾಗುವ ಮೊದಲೇ ಕುಳಿತಲ್ಲಿಂದ ಎದ್ದು ಹೊರಬಂದೆ. ಉಪ್ಪಳದ ಸಾಯಿಬರೊಬ್ಬರು ಬಸ್ ಸ್ಟಾಂಡಿಂದ ಹೊರಬರುವ ನನ್ನ ಪರಿಚಿತ ಮುಖ ನೋಡಿ ಒಳಗೆ ಹೋದರು.. ಅವರು ಅದೇ ಬಸ್ ಗೆ ಏದುಸಿರು ಬಿಡುತ್ತಾ ಹೋಗುತ್ತಿದ್ದರು. ನಾನು ಮಾತ್ರ ಪೂರ್ಣ ನಿರ್ಧರಿಸಿ ನೆಹರೂ ಮೈದಾನಿನತ್ತ ನಡೆದೆ.
ಇದು ನನಗೆ ಆ ಕಾಲದಲ್ಲಿ ಆ ಮೇಳದಲ್ಲಿದ್ದ ಆಕರ್ಷಣೆ...!!!

ಹತ್ತು ಹಲವು ವೃತ್ತಿಪರ ಮೇಳಗಳು ಕಾರ್ಯಪ್ರವೃತ್ತವಾಗಿದ್ದ ಯಕ್ಷಗಾನ ಕಲೆಯ ಮಟ್ಟಿಗೆ ಸುವರ್ಣಯುಗದ ಆ ಕಾಲದಲ್ಲಿ ಎಲ್ಲ ಮೇಳಗಳೂ ತಮ್ಮದೆ ವೈಶಿಷ್ಟ್ಯವನ್ನು ಪಡೆದುಕೊಂಡು ಸ್ಪರ್ಧಾತ್ಮಕವಾದ ಪ್ರತಿಭೆಯನ್ನು ತೋರುತ್ತಿದ್ದ ಕಾಲವದು. ಈ ಸುರತ್ಕಲ್ ಮೇಳ ನನಗೆ ಇಷ್ಟವಾಗಿದ್ದುದು ಅದರ ಬಹುಮುಖ ಪ್ರತಿಭೆ. ಹಲವು ಸೂಪರ್ ಹಿಟ್ ಪ್ರಸಂಗಗಳು ಅದು ಎಲ್ಲಾ ರಂಗಕ್ಕೂ ಅನ್ವಯವಾಗುತ್ತಿತ್ತು. ಹಲವು ಪೌರಾಣಿಕ ಪ್ರಸಂಗಳಂತೆ ತುಳು ಮತ್ತು ಸಾಮಾಜಿಕ ಪ್ರಸಂಗಗಳನ್ನು ಪ್ರದರ್ಶಿಸುವುದರಲ್ಲಿ ತನ್ನದೆ ಆದ ವೈಶಿಷ್ಟ್ಯವನ್ನು ಹೊಂದಿಕೊಂಡಿತ್ತು.ನನಗಿನ್ನೂ ನೆನಪಿದೆ ಸುರತ್ಕಲ್ ಮೇಳದ ಆಟ ನಾನು ನೋಡಿದ್ದು ಅದು ಉಪ್ಪಳದಲ್ಲಿ ಆದ ರಾಣಿ ರತ್ನಾವಳಿ ಪ್ರಸಂಗ. ಅತ್ಯುತ್ತಮ ಕಥಾಹಂದರವನ್ನು ಹೊಂದಿದ್ದ ಈ ಪ್ರಸಂಗ ಆಗಿನ ಪ್ರಬುದ್ದ ಕಲಾವಿದರಿಂದಾಗಿ ಇಂದೂ ಅದು ನೆನಪಿನಲ್ಲಿ ಉಳಿಯುವಂತಾಗಿದೆ. ಆವಾಗಿನ್ನು ಶಿವರಾಮ ಜೋಗಿ ಅತ್ಯುತ್ತಮ ಪುಂಡುವೇಷಧಾರಿಯಾಗಿದ್ದ ಕಾಲ ಅವರಿಗೆ ಹಾಸ್ಯದಲ್ಲಿ ಜತೆಯಾಗಿ ವೇಣೂರು ಸುಂದರ ಆಚಾರಿ ಸಹ ಅಷ್ಟೇ ಪ್ರತಿಭೆಯನ್ನು ತೋರುತ್ತಿದ್ದ ಯುವ ಹಾಸ್ಯಗಾರ. ಇಷ್ತೆ ಅಲ್ಲ, ಅತ್ಯುತ್ತಮ ರಾಜ ವೇಶದಲ್ಲಿ ಮಿಂಚುತ್ತಿದ್ದ ಮಧೂರು ಗಣಪತಿ ರಾವ್ ಹಾಗು ಖಳ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಬಾಬು ಕುಡ್ತಡ್ಕ, ಬಣ್ಣದ ವೇಷಕ್ಕೆಂದೇ ಪ್ರಸಿದ್ದರೂ ಯಕ್ಷಗಾನದ ಬಣ್ಣದ ವೇಷಕ್ಕೆ ಮಾದರಿಯಾಗಿ ನಿಂತ ಬಣ್ಣದ ಮಾಲಿಂಗ, ಸ್ತ್ರೀ ಪಾತ್ರಗಳಲ್ಲಿ ನಾನು ನೋಡಿದ ಆರಂಭದ ದಿನಗಳಲ್ಲಿ ಈಶ್ವರ ಭಟ್ ಕೊಕ್ಕಡ ತಮ್ಮ ಲಾಸ್ಯ ಬೆಡಗು ಬಿನ್ನಾಣಕ್ಕೆ ಮುಂಚೂಣಿಯಲ್ಲಿದ್ದರೆ ಎಂ. ಕೆ. ರಮೇಶ ಆಚಾರ್ಯ ತಮ್ಮ ವಿಶಿಷ್ಟಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದರು. ಅಂತೆ ಶ್ಯಾಮಸುಂದರ ಅವರು ಇವರೊಂದಿಗೆ ಜತೆಯಾಗಿ ತಮ್ಮದೇ ಸ್ಥಾನ ಗುರುತಿಸಿಕೊಂಡಿದ್ದರು. ಇವೆಲ್ಲದಕ್ಕು ಮಿಗಿಲಾಗಿ ಹಿರಿಯರಾದ ಶ್ರೀ ಶೇಣಿ ಗೋಪಾಲ ಕೃಷ್ಣ ಭಟ್ ಆ ಮೇಳದ ಪ್ರಧಾನ ಅಂಗವಾಗಿದ್ದುದು ತಿಳಿಯದವರಾರು? ಮತ್ತೊಬ್ಬ ಹಿರಿಯ ಕಲಾವಿದ ಆನಂದ ಮಾಸ್ತರ್ ತೆಕ್ಕಟ್ಟೆ ಇವರ ಪಾಂಡಿತ್ಯ ಪೂರ್ಣ ಅರ್ಥಗಾರಿಕೆ ಪ್ರತೀ ವೇಷಗಳೂ ಕಳೆ ಕಟ್ಟುತ್ತಿದ್ದವು. ಇನ್ನು ಹಿಮ್ಮೇಳದಲ್ಲಿ ಅಗರಿ ರಘುರಾಮ ಭಾಗವತ, ಮತ್ತು ಪದ್ಯಾಣ ಗಣಪತಿ ಭಟ್, ಚೆಂಡೆ ಹಾಗು ಮದ್ದಲೆಯಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ ಮತ್ತು ಕಡಬ ನಾರಾಯಣ ಅಚಾರಿ. ಹೀಗೆ ಒಟ್ಟಂದದಲ್ಲಿ ಒಂದು ತಂಡವಾಗಿ ಸುರತ್ಕಲ್ ಮೇಳದ ಆಟಗಳು ತಮ್ಮದೆ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದವು. ಈ ಮೇಳದ ಹಲವು ಅದ್ಭುತ ಎನ್ನಬಹುದಾದ ಆಟಗಳನ್ನು ನೋಡಿದ್ದೇನೆ.

ಅವುಗಳ ನೆನಪು ಇನ್ನೂ ಹಸಿರಾಗಿರುವಂತೆ ಅವುಗಳು ಗಾಢವಾದ ಮುದ್ರೆಯೂನ್ನೊತ್ತಿವೆ. ಮೊದಲಾಗಿ ಸಮಗ್ರ ಭೀಷ್ಮ. ಶಂತನು ಮಹಾರಾಜನ ಒಡ್ಡೋಲಗದಿಂದ ಆರಂಭವಾಗುವ ಈ ಪ್ರಸಂಗ ಭೀಷ್ಮ ಪರ್ವದವರೆಗೂ ಸಾಗುತ್ತದೆ. ಶಂತನುವಾಗಿ ಮಧೂರು ಗಣಪತಿ ರಾವ್,ಗಂಗೆಯಾಗಿ ಕೊಕ್ಕಡ ಈಶ್ವರ ಭಟ್ ಮೊದಲಾರ್ಧದಲ್ಲಿ ನಿರ್ವಹಿಸಿದರೆ.ಭೀಷ್ಮ ಪ್ರತಿಙ್ಙೆಯ ಸತ್ಯವೃತನಾಗಿ ಶಿವರಾಮ ಜೋಗಿ ,ದಾಶರಾಜನಾಗಿ ತೆಕ್ಕಟ್ಟೆ ಆನಂದ ಮಾಸ್ತರ್, ಸತ್ಯವತಿಯಾಗಿ ಪುನಃ ರಂಗವೇರುವ ಈಶ್ವರ ಭಟ್ ,ಆನಂತರ ನಡುವಿರುಳು ಕಳೆದು ಶೇಣಿಯವರ ಭೀಷ್ಮ ಪ್ರವೇಶವಾದರೆ ಎಂ. ಕೆ. ರಮೇಶ ಅವರ ಅಂಬೆ, ಒಟ್ಟಿನಲ್ಲಿ ಆ ಬಾಲ್ಯದಲ್ಲಿ ನೋಡಿದ ಆ ಪ್ರಸಂಗ ಇನ್ನು ಮನಸ್ಸಿನಲ್ಲಿ ಅಚ್ಚೋತ್ತಿದೆ.

ಹೆಸರಿಸುತ್ತಾ ಹೋದರೆ ಹಲವಾರು ಪ್ರಸಂಗಗಳ ಅದ್ಭುತ ವರ್ಣನೆಯನ್ನೆ ಮಾಡಿಬಿಡಬಹುದು. ಸಮಗ್ರ ವಾಲಿ, ರಾಜಾಯಯಾತಿ, ಇವೆರಡೊ ಪ್ರಸಂಗಗಳು ಅದ್ಭುತವಾಗಿ ಪ್ರದರ್ಶಿತವಾಗುತ್ತಿದ್ದವು. ಸಮಗ್ರ ವಾಲಿಯ ಮೊದಲ ವಾಲಿ ಜೋಗಿ ಅದ್ಭುತವಾಗಿ ನಿರ್ವಹಿಸಿದರೆ ನಂತರದ ಶೇಣಿಯವರ ವಾಲಿ ಚರಿತ್ರಾರ್ಹವಾಗಿರುತ್ತಿತ್ತು. ರಾಜಾ ಯಯಾತಿಯಲ್ಲಿ ಸುರತ್ಕಲ್ ಮೇಳದಲ್ಲಿ ಅಡಕವಾಗಿದ್ದ ಪ್ರತಿಭೆ ಸಂಪೂರ್ಣವಾಗಿ ಹೊರಬರುವಂತಹ ಪ್ರಸಂಗವಾಗಿತ್ತು. ರಾಜಾ ಯಯಾತಿ ಅಥವಾ ಧರ್ಮ ದಾಸಿ ಎಂದು ಇದ್ದ ಪ್ರಸಂಗ ಸುರತ್ಕಲ್ ಮೇಳಕ್ಕೆ
ಇನ್ನಿಲ್ಲದ ಪ್ರಸಿದ್ದಿಯನ್ನು ತಂದು ಕೊಟ್ಟಿತ್ತು. ಮೊದಲ ಯಯಾತಿಯಾಗಿ ಜೋಗಿ.. ನಂತರ ಶೇಣಿಯವರು.. ದೇವಯಾನೆಯಾಗಿ ಎಂ. ಕೆ. ರಮೇಶ ಆಚಾರ್ಯ, ಶರ್ಮಿಷ್ಟೆಯಾಗಿ ಕೊಕ್ಕಡ ಈಶ್ವರ ಭಟ್. ಹೀಗೆ ಹಿಮ್ಮೇಳದ ಅದ್ಭುತ ಹೊಂದಾಣಿಕೆಯಿಂದ ಈ ಪ್ರಸಂಗ ಅಂದು ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಮೇಳದ ಇನ್ನು ಹಲವು ಪ್ರಸಂಗಗಳು, ಚಂದ್ರಾವಳಿ ವಿಲಾಸ, ರಾಣಿ ರತ್ನಾವಳಿ, ಸತೀ ಶೀಲವತಿ ವೀರಚಂದ್ರ ವಿಜಯ, ಪಾಪಣ್ಣ ವಿಜಯ ಗುಣಸುಂದರಿ, ತಿರುಪತಿ ಕ್ಷೇತ್ರ ಮಾಹಾತ್ಮೆ, ಈ ಪ್ರಸಂಗವಂತೂ ಇತ್ತಿಚೆಗೆ ಹೃಸ್ವಗೊಂಡು ಶ್ರೀನಿವಾಸ ಕಲ್ಯಾಣವಾಗಿ ಪ್ರದರ್ಶಿತವಾದರೂ, ಅಗರಿಯವರ ಈ ಪ್ರಸಂಗ ಅಂದು ಈ ಮೇಳ ಆದ್ಭುತವಾಗಿ ಪ್ರದರ್ಶಿತವಾಗುತ್ತಿತ್ತು. ಶೇಣಿಯವರ ಮಾಧವ ಭಟ್ಟ ಮರೆಯಲು ಸಾಧ್ಯವೆ? ಹಾಗೆ ಜೋಗಿ ಮತ್ತು ವೇಣೂರು ಜತೆಯ ಕಿರಾತನ ಪಾತ್ರವೂ ಈಗ ಪ್ರದರ್ಶಿತವಾಗುವ ಶ್ರೀನಿವಾಸ ಕಲ್ಯಾಣ ವನ್ನು ತುಲನೆ ಮಾಡುವಂತೆ ಮಾಡುತ್ತದೆ. ಎಂತಿದ್ದರು ಸರಳ ಹಾಗು ಸುಂದರಾವಾದ ಅಂದಿನದೇ ಹಲವು ಸಲ ಉತ್ತಮ ಅನ್ನಿಸಿಬಿಟ್ಟಿದೆ.

ಈ ಮೇಳದ ಇನ್ನೊಂದು ಅದ್ಭುತ ಪ್ರಸಂಗ ಕಡುಗಲಿ ಕುಮಾರ ರಾಮ.. ಎಂಬ ಚಾರಿತ್ರಿಕ ಪ್ರಸಂಗ..ಯಕ್ಷಗಾನಕ್ಕೆ ಇದನ್ನು ಅಳವಡಿಸಿದ ರೀತಿ ಮಾತ್ರ ಅದ್ಭುತ. ಇಂದಿನ ಹಲವು ನವ್ಯ ಪ್ರಸಂಗ ಕರ್ತರು ಈ ಪ್ರಸಂಗ ನಡೆಯನ್ನು ಒಂದು ಸಲ ಗಮನಿಸಿದರೆ ಉತ್ತಮ. ಇದರ ಮುಖ್ಯ ಆಕರ್ಷಣೆ ಶೇಣಿಯವರ ಔರಂಗ ಜೇಬ್ ನ ಪಾತ್ರ. ಇದೊಂದು ಪ್ರಸಂಗದಂತೆ ಪಾತ್ರ ನಿರ್ವಹಣೆಯೂಚರಿತ್ರಾರ್ಹ.
ವಿಲಕ್ಷಣ ವ್ಯಕ್ತಿತ್ವದ ಔರಂಗ ಜೇಬನ ಪಾತ್ರ ಶೇಣಿ ಮುಖೇನ ಅನಾವರಣ ಗೊಳ್ಳುವ ಪರಿ ಮಾತ್ರ ಅಸಾದೃಶವಾಗಿತ್ತು. ಕುಮಾರ ರಾಮನಾಗಿ ಜೋಗಿಯವರ ಮಿಂಚಿನ ಅಭಿನಯ, ಖಳ ಪಾತ್ರವೊಂದರಲ್ಲಿ ಬಾಬು ಕುಡ್ತಡ್ಕ, ಮಾತಂಗಿಯಾಗಿ ಎಂ. ಕೆ ರಮೇಶ ಅಚಾರ್ಯ ಎಂದೂ ಮರೆಯದ ಅಭಿನಯ ನೀಡಿದರೆ, ಹಾಸ್ಯ ಪಾತ್ರಗಳಲ್ಲಿ ವೇಣೂರು ನಕ್ಕು ನಗಿಸಿ ಬಿಡುತ್ತಿದ್ದರು. ಔರಂಗಜೇಬನ ಮಗಳ ವೇಶವನ್ನು ಶ್ಯಾಮಸುಂದರ್ ಎಂಬ ಸ್ತ್ರೀ ಕಲಾವಿದ ಪರಕಾಯ ಪ್ರವೇಶ ಮಾಡಿ ನಿರ್ವಹಿಸುತ್ತಿದ್ದರು. ಹಲವು ಸಮಯದ ನಂತರ ಇದೆ ಹೆಸರಿನಲ್ಲಿ ಕನ್ನಡ ಚಲನ ಚಿತ್ರ ಬಂದರೂ ಎಂದಿಗೂ ಅದು ಈ ಅದ್ಭುತ ಪ್ರಸಂಗಕ್ಕೆ ಯಾವ ರೀತಿಯಲ್ಲೂ ಸಾಟಿಯಾಗಲೇ ಇಲ್ಲ.

ಹೀಗೆ ಹತ್ತು ಹಲವು ಪ್ರಸಂಗಗಳ ನೆನಪು ಮನಸೆಂಬ ಕ್ಷೀರ ಸರೋವರದ ಕೆನೆಯಂತೆ ಪ್ರತ್ಯೇಕವಾಗಿ ಇನ್ನೂ ಶಾಶ್ವತ ಕುರುಹಾಗಿ ನಿಂತಿದೆ.