ಅತ್ಮೀಯ ಮಿತ್ರ ಸುಬ್ಬಣ್ಣ ತುಮಕೂರಿನ ಸಿದ್ದಗಂಗಾ ಕಾಲೇಜಿನಿಂದ ವರ್ಗವಾದರು. ಮೊದಲ ಕೆಲವು ದಿನಗಳು ಗೂಗಲ್ ಟಾಲ್ಕ್ ನಲ್ಲಿ ಸುಬ್ಬಣ್ಣನ ಹೆಸರ ಮುಂದೆ ಇರುವ ಚುಕ್ಕೆ ಹಸುರಾಗಿರದೆ ನಸು ಕಪ್ಪಾಗಿ ಗೊಚರಿಸಿ ಅವರ ಗೈರು ಹಾಜರಿಯನ್ನು ಎತ್ತಿ ತೋರಿಸುತ್ತಿತ್ತು. ಹೌದು ಸುಬ್ಬಣ್ಣ ವರ್ಗಾವಣೆಗೊಂಡರು. ನಮ್ಮ ಮಿತ್ರ ಬಳಗದಲ್ಲಿ ಅತಿ ಮುಖ್ಯ ಬದಲಾವಣೆ ಎಂದರೆ ಸುಬ್ಬಣ್ಣನ ವರ್ಗಾವಣೆ. ನಿತ್ಯವೂ ನಿಗದಿತ ಸಮಯದಲ್ಲಿ ಗೂಗಲ್ ನಲ್ಲಿ ಹರಟುವ ಸುಬ್ಬಣ್ಣ ದೂರದ ಉಜಿರೆ ಧರ್ಮಸ್ಥಳದ ಅಯ್ಯನ ಕೃಪಾ ಛತ್ರದ ಒಳಗೆ ಸೇರಿಕೊಂಡರು, ಅಂದರೆ ಉಜಿರೆ ಕಾಲೇಜ್ ನಲ್ಲಿ ಅಧ್ಯಾಪನವನ್ನು ತೊಡಗಿಸಿಕೊಂಡರು. ವೃತ್ತಿ ರೀತ್ಯಾ ಮಹತ್ತರ ಬದಲಾವಣೆ. ತುಮಕೂರಿನ ಕಾಲೇಜ್ ನಲ್ಲಿ ಐ ಪೋಡ್ ಕಿವಿಗೆ ಇಟ್ಟು ಕೇಳೀದ ಯಕ್ಷಗಾನ ಕೇಳಿ ಸಾಕಾದಾಗ “ಇನ್ನು ಹೊಸತ್ತು ಯಾವುದು ಇದೆ ರಾಜಣ್ಣ ?” ಎಂದು ಕೇಳುವ ಸುಬ್ಬಣ್ಣ,ತುಮಕೂರಿನ ಧೂಳಿನ ರಸ್ತೆಗೆ ವಿದಾಯ ಹೇಳಿ ದೂರದ ಉಜಿರೆಯಲ್ಲಿ ತೊಡಗಿಕೊಂಡರು. ಈಗ ಉಲ್ಲಾಸದ ಲವವಲವಿಕೆಯ ಸುಬ್ಬಣ್ಣನಲ್ಲಿ ನಾನೇ ಕೇಳುವಂತಾಗಿದೆ “ ಹೊಸತ್ತು ಏನಿದೆ ಸುಬ್ಬಣ್ಣ?”
ಹೌದು, ಈಗ ಊರಲ್ಲಿ ಸುಬ್ಬಣ್ಣ ಏಕಾಂಗಿಯಾಗಿ..(ನಾವು ಮಿತ್ರರು ಇಲ್ಲದೆ) ಯಕ್ಷಗಾನ ಸಪ್ತಾಹ ಆಚರಿಸುತ್ತಿದ್ದಾರೆ. ಐ ಪೋಡ್ ತೆಕ್ಕೋಂಡು , ಬಿಡುವು ಮಾಡಿಕೊಂಡು ಯಕ್ಷಗಾನ ತಾಳ ಮದ್ದಲೆ, ಬಯಲಾಟದಲ್ಲಿ ಚೆನ್ನಾಗಿ ಧ್ವನಿ ಮುದ್ರಿಸಿ ಮತ್ತು ಮತ್ತು ಕೇಳುತ್ತ ಸುಖಿಸುತ್ತಿದ್ದಾರೆ. ನನಗಂತೂ ಇದು ಸ್ವಲ್ಪ ಹೊಟ್ಟೆಕಿಚ್ಚು ತರಿಸುತ್ತದೆ. ಮನೆಯ ಊಟ...ಊರಿನ ಆಟಾ ಆಹಾ ಸುಬ್ಬಣ್ಣನ ಭಾಗ್ಯವೇ.?
ತಾಳಮದ್ದಲೆಗೆ ಹೋಗಿ ಅದನ್ನು ನೋಡಿ ಕೇಳಿ ಎಂಜಾಯ್ ಮಾಡಿ ಮತ್ತೆ ಕೆಲವುದಿನ ಧ್ವನಿ ಮುದ್ರಿಸಿದ ಮುದ್ರಿಕೆಯನ್ನು ಕೇಳಿ..ಇದೊಂದು ಬಗೆಯ ಅನುಭವ...ನೀವು ಮದುವೆ ಜಂಬರದ ಅಥವಾ ಇನ್ಯಾವುದೋ ಸಮಾರಂಭದ ಊಟ ಗಡದ್ ಹೊಡೆದು ಹೊಟ್ಟೇ ತುಂಬಿಸಿ ಕೊಂಡರೂ, ಕೆಲವೊಮ್ಮೆ ಅಡುಗೇ ಶಾಲೆಗೆ ನುಗ್ಗಿ ಅಡುಗೆ ಭಟ್ಟರಲ್ಲಿ ಕುಶಲ ಸಮಾಚಾರ ಮಾತಾಡುತ್ತ.. ಇವತ್ತು ಸಾರು ಲಾಯಕ್ಕಾಗಿದೆ ಅಂತ ಒಂದು ಸ್ಟೀಲ್ ಲೋಟಕ್ಕೆ ಹಾಕಿ ಚಪ್ಪರಿಸುವುದಿಲ್ಲವೇ? ಹಾಗೆ. ಈ ತಾಳ ಮದ್ದಲೆ ಗಾನವೈಭವ ಆಟ ಇವುಗಳ ಧ್ವನಿ ಮುದ್ರಣ ನಂತರ ಪದೇ ಪದೇ ಕೇಳುವುದೆಂದರೆ ಈ ಸಾರು ಲೋಟಕ್ಕೆ ಹಾಕಿ ಕುಡಿದಂತೆ. ಅದರ ಅನುಭವ ಸವಿದವನೇ ಬಲ್ಲ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ ಉಪ್ ಕರಿ ಮೂರು ಮೂರು ಸಲ ಹಾಕಿಸಿ ತಿಂದರು ಮತ್ತೆ ಎಲ್ಲವು ಆದ ಮೇಲೇ ಒಳಗೆ ಹೋಗಿ ಐದು ಬೆರಳು ತುದಿಗೆ ಬಂದಷ್ಟು ಅವಲಕ್ಕಿಯ ಉಪ್ಕರಿಯನ್ನು ಬಾಚಿ ಕೈಗೆ ಹಾಕಿ ತಿನ್ನದೇ ಇದ್ದರೆ ಕೆಲವರಿಗೆ ಸಮಾಧಾನ ಆಗುದಿಲ್ಲ. ಉಪ್ಕರಿಯ ವಿಶೇಷತೆಯೇ ಅದು.
ಹೀಗೆ ಧ್ವನಿಮುದ್ರಿಸಿದ ಯಕ್ಷಗಾನದಲ್ಲಿ ಇತ್ತಿಚೆಗೆ ಪೆರಡಾಲದ ಗಾನ ವೈಭವ ಮತ್ತು ಅಂಗದ ಸಂಧಾನ ತಾಳ ಮದ್ದಲೆ ಹಾಗೂ ಉಜಿರೆಯಲ್ಲಿ ನಡೆದ ಹಲವು ತಾಳ ಮದ್ದಲೆಗಳ ಧ್ವನಿ ಮುದ್ರಣ ಉತ್ತಮ ಯಕ್ಷಗಾನ ಕೂಟವನ್ನು ಸವಿದ ಅನುಭವವನ್ನು ನೀಡುತ್ತಿದೆ. ಪೆರಡಾಲದ ಗಾನವೈಭವ ಕೆಲವೊಂದು ವೈಶಿಷ್ಟ್ಯಪೂರ್ಣ ಪದಗಳನ್ನು ಕೂಡಿತ್ತು. ಸಾಮಾನ್ಯವಾಗಿ ಇತ್ತೀಚೆಗೆ ನಡೆವ ಗಾನ ವೈಭವಗಳಲ್ಲಿ ಪದೆ ಪದೆ ಮರುಕಳಿಸುವ ಪದಗಳು ಒಂದು ವಿಧದ ಏಕತಾನತೆಯಿಂದ ಕೂಡಿರುತ್ತವೆ. ಕೆಲವು ಕಡೆ ಪದಗಳನ್ನು ಆಯ್ಕೆ ಮಾಡುವವರು ಇದರ ಬಗ್ಗೆ ಗಮನಹರಿಸುವಂತಾಗಬೇಕು. ಇದು ಕೇವಲ ಗಾನ ವೈಭವಕ್ಕೆ ಸೀಮಿತವಲ್ಲ ತಾಳಮದ್ದಲೆಯಾಗಲಿ ಯಕ್ಷಗಾನವಾಗಲಿ ಇದರಿಂದ ಹೊರತಲ್ಲ. ಆ ಮಟ್ಟಿಗೆ ಪೆರಡಾಲದ ಗಾನವೈಭವದಲ್ಲಿ ಬಹುವಂಶ ಪದಗಳು ವಿಶೇಷವಾಗಿದ್ದರೆ, ಪಂಚವಟಿ, ಗಧಾಯುದ್ದ , ದಕ್ಷಾಧ್ವರದ ಪದಗಳೂ ಹಲವು ಸಲ ಕೇಳೀದ ಮತ್ತದೇ ರಾಗವಾಗಿಬಿಟ್ಟಿತ್ತು. ಇಂತಹ ಕಾರ್ಯಕ್ರಮಗಳಿಗೆ ಯಾವುದೇ ಮಿತಿಗಳಿಲ್ಲದಿರುವುದರಿಂದ ಭಾಗವತರಿಗೆ ಸವಾಲೆನಿಸುವಂತಹ ಪದಗಳನ್ನು ಆಯ್ಕೆ ಮಾಡುವಂತಾಗಬೇಕು. ಇದರಿಂದ ಯಕ್ಷಗಾನ ಹಿಮ್ಮೇಳದ ಬಗ್ಗೆ ಅಧಿಕ ಮಾಹಿತಿ ಸಿಗಬಹುದಲ್ಲವೆ.
ಪೆರಡಾಲದ ಗಾನವೈಭವದ ಝಲಕ್
ಉಜಿರೆಯಲ್ಲಿ ಜರಗಿದ ತಾಳಮದ್ದಲೆಯಲ್ಲಿ ಎರಡನ್ನು ಮಾತ್ರ ಅಸ್ವಾದಿಸುವ ಭಾಗ್ಯ ಲಭಿಸಿತ್ತು. ಒಂದು ಭೀಷ್ಮ ಪರ್ವ ಇನ್ನೊಂದು ಶಲ್ಯ ಸಾರಥ್ಯ. ಭೀಷ್ಮ ಪರ್ವ ದಲ್ಲಿ ಯಕ್ಷಗಾನದಲ್ಲಿ ಅದ್ಭುತ ಜತೆಗಾರಿಕೆಯ ಸಂವಹನವನ್ನು ತುಂಬುವ ಹಿಮ್ಮೇಳ ಕಲಾವಿದರಾದ ಅಮ್ಮಣ್ಣಾಯ, ಗೋರೆ ಮತ್ತು ದೇಲಂತ ಮಜಲು ಅವರ ವೈಭವದ ಸಾಥ್ ಕಣ್ಣಾರೆ ತಾಳಮದ್ದಲೆಯನ್ನು ಸವಿದ ಅನುಭವ ನೀಡಿತ್ತು. ಪ್ರತಿಯೊಂದು ಪದವನ್ನು ಹಲವು ಸಲ ಪುನರಾವರ್ತಿಸಿ ಕೇಳುವ ತುಡಿತವನ್ನು ತಡೆ ಹಿಡಿವುದು ತುಂಬ ಕಷ್ಟವಾಗಿತ್ತು. ಅಂತೇ ಇದರಲ್ಲಿ ಭೀಷ್ಮನಾಗಿ ಪ್ರಭಾಕರ ಜೋಷಿ, ಕೃಷ್ಣನಾಗಿ ವಾಸುದೇವ ರಂಗ ಭಟ್ ಉತ್ತಮವಾಗಿ ಮಿಂಚಿದರು. ಅರ್ಜುನನ ಪಾತ್ರ ನಿರ್ವಹಿಸಿದ ವಾದಿರಾಜ ಕಲ್ಲೂರಾಯ ಭರವಸೆಯ ಯುವ ಅರ್ಥಧಾರಿಯಾಗಿ ಗಮನ ಸೆಳೆಯುತ್ತಾರೆ. ಇವರ ಅರ್ಥಗಾರಿಕೆ ಇಂದಿ ಹೊಸ ಚಿಗುರಲ್ಲೂ ಆಶಾಭಾವನೆಯನ್ನು ಮೂಡಿಸುತ್ತದೆ. ಉತ್ತಮ ಹಿತಮಿತವಾದ ಅರ್ಥಗಾರಿಕೆಯ ಅರ್ಜುನ.
ಭೀಷ್ಮ ಪರ್ವ ಉಜಿರೆಯ ಒಂದು ಭಾಗ
ಇನ್ನು ಶಲ್ಯಸಾರಧ್ಯದ ಹಿಮ್ಮೇಳದಲ್ಲಿ ಉಲ್ಲೇಖಿಸಬಹುದಾದ ಅಂಶ ಪದ್ಮನಾಭ ಉಪಾಧ್ಯಾಯರ ಮದ್ದಲೆ ವಾದನ. ಅದ್ಭುತ ಹಸ್ತದ ಈ ಮದ್ದಲೆ ವಾದಕರ ಮದ್ದಲೆ ವಾದನ ಸವಿಯುವುದೇ ಒಂದು ಸೊಗಸು. ಇದರಲ್ಲಿ ಭಾಗವತರಾದ ಕನ್ನಡಿಕಟ್ಟೆ ಯವರ ಭಾಗವತಿಕೆಯಲ್ಲಿ ಉಲ್ಲೇಖಿಸುವ ಅಂಶ ಯಾವುದು ನನ್ನ ಗಮನಕ್ಕೆ ಬಾರಲಿಲ್ಲ ಯುವ ಪ್ರತಿಭಾವಂತ ಭಾಗವರಾದ ಇವರು ತಾಳ ಬದ್ದವಾಗಿ ಹಾಡಿದರೂ ಶ್ರುತಿ ಲಯವನ್ನು ಹಿಡಿದಿಡುವಲ್ಲಿ ವಿಫಲರಾದಂತೆ ಭಾಸವಾಗುತ್ತದೆ. ಆ ಮಟ್ಟಿಗೆ ಇನ್ನು ಸಾಧನೆ ಅಭ್ಯಾಸ ಅತ್ಯವಶ್ಯ ಇದು ಗಮನಕ್ಕೆ ಬರುತ್ತದೆ. ಅರ್ಥಧಾರಿಗಳಾಗಿ ಹಾಸ್ಯಮತ್ತು ವಿಡಂಬನಾತ್ಮಕವಾಗಿ ಪಾತ್ರ ಚಿತ್ರಣವನ್ನು ನೀಡಿದ ಪ್ರಭಾಕರ ಜೋಷಿಯವರ ಶಲ್ಯ ಮತ್ತು ಸುಣ್ಣಂಬಲರ ಕೌರವ ಅತ್ಯುತ್ತಮ ಸಂವಾದದಿಂದ ಕೂಡಿತ್ತು. ಇಬ್ಬರು ತಮ್ಮ ತಮ್ಮ ಶೈಲಿಯಲ್ಲೇ ಈ ಪಾತ್ರಗಳಿಗೆ ಜೀವತುಂಬಿದರೆ, ಕರ್ಣನಾಗಿ ಗೋವಿಂದ ಭಟ್ಟರು ಶಲ್ಯ ಕರ್ಣ ಸಂವಾದದಲ್ಲಿ ಮಿಂಚಿದರು.
ಶಲ್ಯ ಸಾರಥ್ಯ ಉಜಿರೆಯ ಒಂದು ಭಾಗ
ಯಾವುದೋ ರೂಪದಲ್ಲಿ ಬಂದ ಧ್ವನಿ ಮುದ್ರಣದ ಕಡತವನ್ನು ಅಲ್ಲಲ್ಲಿ ಧ್ವನಿ ಹೆಚ್ಚಿಸಿ ಯಾ ಕಡಿಮೆ ಗೊಳಿಸಿ ಧೋ ಎಂದು ಸುರಿದ ಮಳೆ ಛಾವಣಿಗೆ ಅಪ್ಪಳಿಸಿ ಉಂಟಾದ ಶಭ್ದದ ನಡುವೆಯೂ ಇದನ್ನು ಒಂದು ರೂಪಕ್ಕೆ ತಂದು ಈ ತಾಳ ಮದ್ದಲೆಗಳನ್ನು ಅಸ್ವಾದಿಸುವಾಗ, ಇದರ ಕಲಾವಿದರು ಮತ್ತು ಸಂಘಟಕರನ್ನು ಕೃತಜ್ಞತೆಯಿಂದ ಸ್ಮರಿಸುತ್ತದೆ. ಮಾತ್ರವಲ್ಲ ಊರಿಗೆ ಹೋಗಿ ತಾಳ ಮದ್ದಲೆಯನ್ನು ನೋಡುವ ಕೇಳುವ ಅವಕಾಶವಿಲ್ಲದಿರುವಾಗ ಅದನ್ನು ಒದಗಿಸಿದ ಈ ಸುಬ್ಬಣ್ಣನ ವರ್ಗಾವಣೆಯೆ ಕಾರಣವಲ್ಲದೆ ಬೇರೇನು ಅಲ್ಲ. ಸುಬ್ಬಣ್ಣನ ಈ ನಿಷ್ಕಾಮ ಕರ್ಮವನ್ನು ಸ್ಮರಿಸದಿದ್ದರೆ ಹೇಗೆ?


