"ಇದು ವಿಮರ್ಶೆಯಲ್ಲದ ಚಿಂತನ"

Thursday, May 31, 2012

ಅನುದಾನ ಮತ್ತು ಯಕ್ಷಗಾನ




ಚಿತ್ರಕೃಪೆ : ಶ್ರೀ ಉಲ್ಲಾಸ್
ಮಹಾಭಾರತದಲ್ಲಿ ಬರುವ ಅತ್ಯಂತ ವೈಶಿಷ್ಟ್ಯ ಪಾತ್ರಗಳಲ್ಲಿ ಒಂದು ಕರ್ಣನ ಪಾತ್ರ. ಸ್ವಂತಿಕೆ ಇಲ್ಲದ ಈ ಪಾತ್ರವನ್ನು ತಮ್ಮ ಸ್ವಂತ ಚಿಂತನೆಗಳಿಂದ ಹಲವು ವಿಧದಲ್ಲಿ ಕಟ್ಟಿ ಬೆಳೆಸಿದ್ದುದನ್ನು  ಯಕ್ಷಗಾನದಲ್ಲಿ ಬಹಳಷ್ಟು ಕಾಣಬಹುದು. ಯಕ್ಷಗಾನದ ವೈಷಿಷ್ಟ್ಯ ಉಲ್ಲೇಖಿಸಲ್ಪಡುವುದೇ ಇಂತಹ ಹಲವು ಅಂಶಗಳಿಂದ. ಸ್ವಂತ ಚಿಂತನೆ ಇಲ್ಲದ ಪಾತ್ರಗಳಲ್ಲಿ ಇದು ಒಂದು ಅಂತ ಹೇಳುವುದಕ್ಕೆ ಬಲವಾದ ಕಾರಣ ಆರಂಭದಿಂದ ಅಂತ್ಯದ ವರೆಗೂ ಕರ್ಣನ ಬದುಕು ಕೌರವನ ಪ್ರಾಯೋಜಕತ್ವದಲ್ಲಿ ಸಾಗುತ್ತದೆ. ಕೌರವನ ಈ ಹಂಗಿನ ಉರುಳು ಅದು ಕೌರವ ಬಿಗಿಯದೇ ಇದ್ದರೂ ಪರೋಕ್ಷವಾಗಿ ಬಿಗಿಸಿಕೊಳ್ಳುತ್ತಾ ಸಾಗುತ್ತದೆ. ಕೌರವನ ಮನಸ್ಸಿನ ಭಾವನೆಗೆ ಅನುಸಾರವಾಗಿ ಕರ್ಣನ ಕಲ್ಪನೆಗಳು ಅರಳಿಕೊಳ್ಳುತ್ತವೆ. ಕರ್ಣನಲ್ಲಿ ಒಂದು ಸ್ವಂತ ವ್ಯಕ್ತಿತ್ವ ಇದ್ದರೂ ಅದು ಕೌರವನಿಂದಲೇ ರೂಪೀಕರಿಸಿದಂತೆ ಸಾಗುತ್ತದೆ. ಕರ್ಣನ ಧ್ವನಿ ಅವನದ್ದಾಗಿದ್ರೆ ಅದರ ಭಾವ ಕೌರವನದ್ದು.
ಇತ್ತೀಚೆಗೆ ಒಂದು ಬ್ಲಾಗ್ ಪುಟಗಳಲ್ಲಿ ಬಂದ ಲೇಖನ ಈ ಕರ್ಣನ ಬದುಕನ್ನು ನೆನಪಿಗೆ ಬರುವಂತೆ ಮಾಡಿಬಿಟ್ಟಿತು. ಯಕ್ಷಗಾನದ ಬಗ್ಗೆ ಹಲವಾರು ಟೀಕೆಯೊಂದಿಗೆ ಕೆಲವೊಂದು ಅಂಶಗಳನ್ನು ವಿಮರ್ಶಿಸಿ ಬರೆಯಲಾಗಿತ್ತು.  ಆ ಲೇಖನ ಹೇಗೇ ಇರಲಿ ಅದರ ಬಗೆಗಿನ ವಿಮರ್ಶೆಯಾಗಲೀ ಅಭಿಪ್ರಾಯವಾಗಲೀ ಈ ಚಿಂತನದ ಉದ್ದೇಶವಲ್ಲ. ಬದಲಾಗಿ ಹೀಗೊಂದು ದೃಷ್ಟಿಕೋನದತ್ತ ಹರಿದ ಚಿಂತನೆಯ  ಹೊಲಬುಗಳು ಮಾತ್ರವನ್ನಷ್ಟೆ ತೋರಿಸುವ ಪ್ರಯತ್ನ. ಒಂದು ರೀತಿಯಲ್ಲಿ ವಾಸ್ತವದಲ್ಲಿ ವಿಡಂಬನೆಯೆಂಬುದು ಪ್ರತಿಯೊಂದು ವಿಷಯಗಳಲ್ಲೂ ಅಡಕವಾಗಿರುತ್ತದೆ ಎಂಬುದಷ್ಟೆ ಭಾವ.
ಇಂದು ಯಕ್ಷಗಾನ ಪ್ರದರ್ಶನಗಳು ಅದರಲ್ಲೂ ತೆಂಕುತಿಟ್ಟು ವ್ಯಾಪಾರಿ ಉದ್ಯಮದಂತೆ ಉಳಿದಿಲ್ಲ. ವ್ಯವಸಾಯೀ ಮೇಳಗಳು.. ತಮ್ಮ ಡೇರೆಯನ್ನು ಎಂದೋ ಸುರುಳಿ ಸುತ್ತಿ ಆಗಿ ಹೋಗಿದೆ. ಆಡೇರೆಯ ಧೂಳಿನ ಕಣಗಳು ಇತಿಹಾಸದ ಗರ್ಭಕ್ಕೆ ಸೇರಿ ಆಗಿಹೋಗಿದೆ. ಹಾಗಾಗಿ ಇಂದು ಅದನ್ನು ಒಂದು ಕಾಲದಲ್ಲಿದ್ದಂತೆ ಉದ್ಯಮ ಎಂದು ಗುರುತಿಸಿಕೊಳ್ಳುವುದು ಕಷ್ಟವಾಗುತ್ತದೆ. ಬಡಗುತಿಟ್ಟಿಗೆ ಇದು ಅನ್ವಯವಾಗುತ್ತದೆಯೋ ಎಂದು ಅನುಮಾನ. ಯಾಕಂದರೆ ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಉದ್ಯದ ರೂಪದಲ್ಲಿ ಇದು ಉಳಿದುಕೊಂಡಿದೆ ಅಂತ ನನ್ನ ಭಾವನೆ. ಅದಾವುದು ಇಲ್ಲಿನ ವಿಚಾರವಲ್ಲ. ಬದಲಾಗಿ ಯಕ್ಷಗಾನ ಎಂಬುದರಿಂದ ಆದಾಯದ ಮೂಲ ಹೇಗೆ ಕಳಚಿಕೊಂಡಿತೊ ಯಕ್ಷಗಾನದ ಅಸ್ತಿತ್ವ ಬೇರೆ ಮೂಲಾಧರವನ್ನೇ ಅಶ್ರಯಿಸ ತೊಡಗಿತು. ಮುಖ್ಯವಾಗಿ ಹಲವಾರು ಕಡೆ ( ಇದು ಬೆಂಗಳೂರಲ್ಲಿ ಅತ್ಯಂತ ವಾಸ್ತವದ ಸಂಗತಿ.)  ಇದು ರಾಜ್ಯದ ಕಲೆ ಎಂಬ ಲೇಬಲ್ ನಲ್ಲಿ ಪ್ರಾಯೋಜಕತ್ವ ಅರಸುವಂತೆ ಮಾಡಿತು. ಹಲವು ಸಲ ರಾಜ್ಯದ ಕಲೆ ಎಂಬ ಈ ಗೌರವ ಅದು ಕಲೆಯ ಮೇಲಿನ ಅಭಿಮಾನದಿಂದಲ್ಲ, ಅದರಲ್ಲೂ ಒಂದು ಜಾಹೀರಾತಿನ ವಾಸನೆಯನ್ನು ಕಾಣಬಹುದು. ದೇವರಿಗೆ ಜಾಹೀರಾತು ಕೊಟ್ಟು ಹರಕೆ ಪೂಜೆ ಒಪ್ಪಿಸಿದಂತೆ,,, ಜಾತ್ರ ಉತ್ಸವದ ಫಲಕಗಳಲ್ಲಿ ದೇವರ ಪ್ರತಿಮೆಗಿಂತ ಮುಖ್ಯವಾಗಿ ತಮ್ಮ ಚಿತ್ರವನ್ನು ಅಚ್ಚು ಹಾಕುವಂತೆ ಇದು ಒಂದು ಕಲಾಸೇವೆ ರೂಪದಲ್ಲಿ ಕ್ರಿಯಾತ್ಮಕವಾಗುವುದುಂಟು. ಹಾಗಾಗಿ ಯಕ್ಷಗಾನ ಒಂದು ರೀತಿಯಲ್ಲಿ ಪ್ರಾಯೋಜಕತ್ವದಡಿಯಲ್ಲೇ ಉಸಿರಾಡುವಂತೆ ಭಾಸವಾಗುತ್ತದೆ.
ಮೊದಲೆಲ್ಲ ಹಲವು ಕಲೆಗಳು ಕಲಾವಿದರು ಬದುಕುತ್ತಿದ್ದದ್ದು ರಾಜಾಶ್ರಯದಿಂದಲೇ ಆದರೂ ಇಂದು ಇದು ಇನ್ನೊಂದು ರೂಪದಲ್ಲಿ ಮುಂದುವರೆಯುತ್ತಿದೆ ಎಂದು ಭಾವಿಸಿ ತೃಪ್ತರಾಗಬೇಕಷ್ಟೆ. ಆದರೆ ವಾಸ್ತವ ಅದು ಇನ್ನೊಂದು ಚಿಂತನೆಗೆ ತೆರೆದುಕೂಳ್ಳುವಂತೆ ಮಾಡುತ್ತದೆ. ಯಕ್ಷಗಾನದ ಮೇಲೆ ಅಭಿಮಾನದಿಂದ ಗೌರವ ಪ್ರೀತಿಯಿಂದ ಅದಕ್ಕೆ ಪ್ರಾಯೋಜಕತ್ವ ಇದ್ದರೆ ಅದು ಯಕ್ಷಗಾನ ಕಲೆಗೆ ಪೂರಕವಾಗಿಯೇ ಉಪಯೋಗವಾಗುತ್ತದೆ. ಆದರೆ ಅದರ ಗಂಭೀರತೆಯ ಅರಿವಿಲ್ಲದೆ ಹರಿದು ಬರುವ ಸಹಾಯದ ಪರಿಣಾಮ ಅದು ಹಾಗೇ  ಪೂರಕವಾಗುತ್ತದೆ ಎಂದು ಹೇಳಬಹುದೇ?
ಇಂದು ಒಂದು ಸಂಘ ಸಂಸ್ಥೆ ಕಟ್ಟಿ ಅದನ್ನು ನೋಂದಾಯಿಸಿ ಅದರ ಆಶ್ರಯದಲ್ಲಿ ಕಲಾಸೇವೆಯನ್ನು ಮಾಡುತ್ತ ತಾವು ಮಾಡಿದ ಸೇವೆಗೆ ಸಹಾಯವಾಗಿ ಸರಕಾರದಿಂದ ಅನುದಾನವನ್ನು ಪಡೆಯುತ್ತಾರೆ. ಸರಕಾರದಿಂದ ಸಿಗುವ ಈ ಸಹಾಯಕ್ಕೆ ಸದ್ಯದಲ್ಲಿ ನಿಯಮ ನಿಬಂಧನೆಗಳು ಅಷ್ಟೊಂದು ಕಠಿಣವಾಗಿಲ್ಲದೇ ಇರಬಹುದು. ಆದರೆ ಮುಂದೊಂದು ದಿನ ಅದು ಬರಲಾರದು ಎನ್ನಲಾದೀತೆ? ಸರಕಾರೀ ಕೃಪಾಪೋಷಿತರಾಗುವುದು ಇನ್ನಿನ್ನು ಹಲವು ಸಮಸ್ಯೆಗಳನ್ನೂ ಗೊಂದಲಗಳನ್ನು ಸೃಷ್ಟಿಸಬಹುದು.  ಈಗಲಂತು ಯಕ್ಷಗಾನಕ್ಕೆ ಒಂದು ಪ್ರತ್ಯೇಕ ಅಕಾಡೆಮಿ ರೂಪುಗೊಂಡ ಮೇಲೆ ಮುಚ್ಚಿದ್ದ ಕಣ್ಣುಗಳು ಅರೆತೆರೆದು ನಿಧಾನವಾಗಿ ಅರಳಿಕೊಂಡದ್ದು ಮಾತ್ರವಲ್ಲ ಅದು ತಿಕ್ಕಿ ತಿಕ್ಕಿ ಕೆಂಪಗಾಗುತ್ತಿವೆ. ಕಾರಣಗಳು ಏನೇ ಇರಲಿ ಮುಂದಾಗುವ ಪರಿಣಾಮಗಳು ಯೋಚಿಸುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
          ಆರಾಧನಾ ಸ್ಥಳಗಳು ರಾಷ್ಟ್ರೀಕರಣಗೊಂಡ ಮೇಲೆ ಮನಸ್ಸು ತೆರೆದು ಕಣ್ಣು ಮುಚ್ಚಿ  ಪ್ರಾರ್ಥನೆ ಮಾಡುವುದಕ್ಕೂ ನಿಬಂಧನೆಗಳು ನಿಯಮಗಳು ಬಂದಿವೆ. ಈ ನಿಯಮಗಳಿಗೆ ಭಗವಂತನೂ ಒಗ್ಗಿಕೊಂಡ ಮೇಲೆ ನ್ಯಾಯ ನಿಬಂಧನೆಯ ಬಾಹುಗಳು ಭಗವಂತನ ಸುತ್ತಲು ಬಿಗಿಯತೊಡಗಿವೆ. ಪ್ರತಿಯೊಂದು ಹೆಜ್ಜೆಗಳನ್ನು ಯೋಚಿಸಿಯೇ ಮುಂದಡಿಯಿಡಬೇಕಾದಂತಹ ಅನಿವಾರ್ಯತೆಯನ್ನು ಮನುಷ್ಯನೇ ನಿರ್ಮಿಸಿಕೊಂಡು ಮಾನವೀಯತೆಯ ಆತ್ಮೀಯತೆಯ ಕವಚವನ್ನು ಎಂದೋ ಕಳಚಿಟ್ಟಾಗಿದೆ.  ಆ ಕವಚ ಕೈಗೆ ಸಿಗದಷ್ಟು ಮರೆಯಲ್ಲಿ ಈಗ ಅಡಗಿ ಕುಳಿತಿದೆ. ಎಲ್ಲವು ಮನುಷ್ಯ ನಿರ್ಮಾಣ ಇದರಲ್ಲಿ ಭಗವಂತ ನಿಸ್ಸಹಾಯೀ ಅಂತ  ಹೇಳಬಹುದೇ?
           
          ಯಕ್ಷಗಾನಕ್ಕೊಂದು ಅಕಾಡೆಮಿ ಹಲವು ದಿನದ ಕನಸು ನನಸಾಗಿದೆ. ಯಕ್ಷಗಾನದ ಬೆಳವಣಿಗೆ ಇದರಿಂದ ಬಹಳ ಅನುಕೂಲವಾಗಬಹುದು ಎಂದು ಬಹಳ ಅಭಿಮಾನಿಗಳ ನಿರೀಕ್ಷೆ. ಇದು ಸುಳ್ಳಲ್ಲ.  ಯಕ್ಷಗಾನದಂತಹ ಕಲೆಗೆ ಇದು ಎಂದೋ ಆಗಬೇಕಿತ್ತು. ಎಲ್ಲ ಅನುಕೂಲಗಳು ಒದಗಿ ಯಕ್ಷಗಾನ ಯಕ್ಷಗಾನವಾಗಿಯೇ ಉಳಿಯಲಿ ಎಂದು ಹಾರೈಸಬಹುದು. ಎಲ್ಲ ಅನುದಾನವು ಪೂರಕವಾಗಿದ್ದಲ್ಲಿ ಇದು ನಿಜವಾಗಿಯೂ ಅನುಕೂಲವಾಗಬಹುದು. ಅನುದಾನದೊಂದಿಗೆ ನಿಯಂತ್ರಣದ ವಾಘೆಯೂ ಬಂಧಿಸಲ್ಪಟ್ಟರೆ ... ಹಲವು ವಿಧದ ಅವಿಷ್ಕಾರ ಕಾದುಕುಳಿತಂತೆ ಬಳಕೆಗೆ ಬರಬಹುದು. ಪ್ರತಿಯೊಂದು ಹೆಜ್ಜೆಗೂ ಎಚ್ಚರಿಕೆವಹಿಸಬೇಕಾದ ಅನಿವಾರ್ಯತೆ ಬರಬಹುದು. ಹಲವು ಜಿಜ್ಞಾಸೆಗಳು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು.  ಯಕ್ಷಗಾನ ಮನು ಮಹರ್ಷಿಯ ಸಿದ್ದಾಂತವನ್ನು ಪ್ರತಿಪಾದಿಸುತ್ತಿದೆ ಅದು ಸರಿಯಲ್ಲ ಅದನ್ನು ಬದಲಾಯಿಸಬೇಕು. ಕೋಮುವಾದ ರಾಜಕೀಯ ಕಾರಣಗಳಿಂದ ಅರ್ಥಗಾರಿಕೆಗೆ ಸೆನ್ಸಾರ್ ಹಾಕುವ ಅನಿವಾರ್ಯತೆ ಬರಬಹುದು. ಕರ್ಣನನ್ನು “ ಸೂತನ ಮಗ ...” ಎಂದು ಕರೆದರೆ ಅದು ಜಾತಿ ನಿಂದನೆಯಾಗಬಹುದು. “ದುಷ್ಯಾಸನ ವಧೆ” ಅತ್ಯಂತ ಭೀಭತ್ಸ ಪ್ರಸಂಗ ಎನಿಸಿ ಅದು ರಂಗದಿಂದ ಮಾಯವಾಗಬಹುದು.  ಪ್ರತಿ ಅರ್ಥವಿಲ್ಲದ ಬದಲಾವಣೆಗಳು ಬಳಕೆಗೆ ಬರಬಹುದು. ಹೀಗೆ ಯೋಚಿಸಿದಾಗ ಎಲ್ಲ ಅನುದಾನವನ್ನು ಪಡೆದುಕೊಂಡ ನಂತರ ಹೇಗಿರಬಹುದು? ಕೃತಕ ಗೊಬ್ಬರ ಹಾಕಿ ಕಸಿ ಮಾಡಿ ಬೆಳೆಸಿದ ಮಾವಿನ ಮರದಂತೆಯೋ ಇನ್ನಾವುದೊ ಸಸಿಯಂತೆ ಕಂಗೊಳಿಸಬಹುದು. ಅನುದಾನ ಮೂಗಿಗೆ ಹಚ್ಚಿದ ತುಪ್ಪದಂತೆ ಆಗದೇ ಉಳಿದರೆ ಅದು ಭಾಗ್ಯ ಎಂದೇ ತಿಳಿಯಬೇಕು. ನಮ್ಮ ಮನೆಯ ಸಮಾರಂಭ ಅದು ನಮ್ಮೊಳಗಿನ ಅತ್ಮಾಭಿಮಾನದ ವಿಷಯವಾಗಿ  ಹೇಗೆ ಕಾಣಬಲ್ಲೇವೊ ಹಾಗೆ ನಮ್ಮ ಸಂಸ್ಕೃತಿಯ ಕಲೆ. ಅದು ಅಭಿಮಾನದ ಸಂಕೇತವಾಗಬೇಕು. ನಮ್ಮ ಅಭಿಮಾನದಲ್ಲಿ ದೂಷಣೆ ಶೋಷಣೆ ಕಲೆಯಲ್ಲಿ ಸುಳಿಯದೆ ಅದು ಭವ್ಯ ಸಂಸ್ಕೃತಿಯ ಕಲೆಯಾಗಿಯೇ ಉಳಿಯಬೇಕು.
          ಆದರೂ ಒಂದು ಆಶಯ ಯಕ್ಷಗಾನ ಬೆಳಗಬೇಕು. ಅದು ಪ್ರಾಮಾಣಿಕ ಅಭಿಮಾನದಿಂದ ಬೆಳಗಿದರೆ ಆ ಬೆಳಕಿನ ಪ್ರಬೆಯೂ ಹೆಚ್ಚು. ಅನುದಾನದ ಅಥವಾ ಇನ್ನಿತರ ಸಹಾಯ ನಿರೀಕ್ಷೆಯಿಂದ ಅದು ಬೆಳೆಯುವಂತಾಗಬಾರದು. ನಿಸ್ವಾರ್ಥ ಸೇವೆ ಲಭ್ಯವಾದಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಪೂರ್ಣ ಪ್ರಮಾಣದಲ್ಲಿ ನೈಜ ರೂಪದಲ್ಲೇ ಕಲೆ ಅರಳಬಹುದು.  
         







Saturday, May 12, 2012

ಪ್ರವೃತ್ತಿ ಮತ್ತು ನಿವೃತ್ತಿ

          ಪಾತ್ರಧಾರಣೆ ಮುಗಿಸಿ ರಂಗ ಬಿಟ್ಟು ಚೌಕಿ ಸೇರಿದಾಗ ತಿರುವಿ ತಿರುವಿ ಕುಣಿದು ಕುಣಿದು ಕುತ್ತು ಹಾರಿದ ಪರಿಣಾಮ, ಅಂಗಾಂಗಗದಲ್ಲೆಲ್ಲ ಉಸಿರ ಬಿಸಿಗೆ ಬಿಸಿಯಾದ ರಕ್ತ ಹರಿದಾಡಿ ಬೆವರಾಗಿ ಚರ್ಮಕ್ಕಂಟಿದ ಅನುಭವ. ಅವಸರವಸರವಾಗಿ ಧರಿಸಿದ ವೇಷದ ಉಡುಗೆಗಳನ್ನು ಕಿತ್ತೊಗೆಯುತ್ತಿರುವಾಗಲೂ ಕಿಕ್ಕಿರಿದ ಪ್ರೇಕ್ಷಕರ ಕರತಾಡನದ ಘೋ ಎಂಬ ಶಭ್ದದಲ್ಲಿ ಅಂತ್ಯವಾಗುವ ಸದ್ದಿಗೆ ದಣಿವಿನ ಅರಿವಾಗುವುದಿಲ್ಲ. ಅದು ಅರಿವಾಗಬೇಕಾದರೆ ಈ ಕಲಾವಾತಾವರಣದಿಂದ ಕ್ಷಣ ಹೊತ್ತಾದರೂ ದೂರವಾಗಬೇಕು. ಕಡಲ ಕಿನಾರೆಯಲ್ಲಿ ಬಹು ಹೊತ್ತು ನಡೆದಾಡಿ ಸಮುದ್ರ ಘೋಷದ ಸದ್ದನ್ನು ಮನಸ್ಸಿನಲ್ಲಿ ಮಾರ್ದನಿಸಿ ಕಿನಾರೆ ಬಿಟ್ಟು ದೂರ ಬಂದಾಗ ಅ ಧ್ವನಿ ತಂರಂಗಗಳು ಮನಸ್ಸಿನಲ್ಲಿ ಬಹು ಹೊತ್ತು ಶಭ್ದ ಮಾಡುತ್ತಿರುತ್ತವಂತೆ ಈ ಪ್ರೇಕ್ಷಕರ ಕರತಾಡನ. ರಂಗದ ಮೇಲೆ ಕುಣಿಯುತ್ತಿರಬೇಕಾದರೆ ಸಮುದ್ರದಲ್ಲಿ ಇಳಿದು ಸಮುದ್ರದ ಅಲೆಗಳೊಂದಿಗೆ ಚೆಲ್ಲಾಟವಾಡಿದ ಅನುಭವವಾದರೆ ಚೌಕಿಗೆ ಬಂದು ನಿಂತಾಗ ಸಮುದ್ರ ಬದಿಯಲ್ಲಿ ನಿಂತ ಅನುಭವ. ಈ ಪರಿಸರದಿಂದ ದೂರವಾಗಿ ಹೋದರೂ ಸಮುದ್ರ ಘರ್ಜನೆಯಂತೆ ಈ ಕರತಾಡನ ಮತ್ತೂ ಮತ್ತೂ ಮಾರ್ದನಿಸುತ್ತಿರುತ್ತದೆ. ಆಗ ಮುಷ್ಠಿಯೊಳಗಿದ್ದ ಸಂಭಾವನೆಗಿಂತ ಅತ್ಮದಲ್ಲಿ ತುಂಬಿದ ತೃಪ್ತಿಯೇ ಹಿರಿದಾಗುತ್ತದೆ. ದೈಹಿಕವಾದ ನೋವು ದಣಿವು ಎಲ್ಲವೂ ತೃಣಮಾತ್ರವಾದ ಅನುಭವ.

          ಬಹುಷಃ ಯಕ್ಷಗಾನದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ವೇಷಧಾರಿಯ ಅದರಲ್ಲೂ ಪುಂಡುವೇಷಧಾರಿಯ ಅನುಭವ ಇದಕ್ಕಿಂತ ಭಿನ್ನವಾಗಿರುವುದು ಅಸಾಧ್ಯ. ಬದುಕಿ ಜೀವನಕ್ಕೆ ಅನಿವಾರ್ಯವೋ ಅಥವಾ ಬದುಕಿನ ಅರ್ಥದ ಒಂದು ಪರಿಯೋ ಈ ರಂಗವನ್ನು ಅಂಟಿಸಿಕೊಂಡು ಅದರಲ್ಲಿ ಲೀನವಾದ ಬದುಕು ಮೆತ್ತನೆಯ ಪಲ್ಲಂಗವಾಗುವುದು ಸಾಧ್ಯವೇ ಇಲ್ಲ ಎಂಬ ಅನುಭವವಾಗಿರುವಾಗ, ವಾಸ್ತವದಲ್ಲಿ ಎಲ್ಲೆಂದರಲ್ಲಿ ಒರಗಿಕೊಂಡು ಸಮಯ ಕಳೆದು ನಂತರ ರಂಗಕ್ಕೆ ಸಜ್ಜಾಗುವ ನಡುವಿನ ಜೀವನದಲ್ಲಿ ಪಲ್ಲಂಗ ಎಂತಿದ್ದರೂ ಕನಸೇ ಸರಿ. ಮನೆ, ಕುಟುಂಬ, ಸಂಸಾರ ವಂಚಿತವಾದ ಜೀವನದ ಅಂಗಗಳು ಹಲವಾರು.ಆದರೂ ಕಲಾ ಜೀವನದ ಹಾದಿಯಲ್ಲಿ ಕಂಡ ನಿಲುಮೆ ಎಂತಹುದು ಎಂದು ಯೋಚಿಸುತ್ತ ಹೋದರೆ ಅದ್ಭುತ ಎನ್ನಿಸುತ್ತದೆ.



          ಆದರೂ ಇಲ್ಲಿ ಅಧೀರನಾಗುವ ಹಂತ ಎಂದರೆ ನಿವೃತ್ತಿ. ಸಹಜವಾಗಿ ಇದು ಮನುಷ್ಯ ಜೀವನದ ಒಂದು ಗತಿ, ಪ್ರವೃತ್ತಿ... ಪ್ರವೃತ್ತಿ ..ಹೀಗೆ ಒಂದು ಹಂತದ ಅತ್ಯುನ್ನತಿಗೆ ಏರಿದ ನಂತರ ಮತ್ತೆ ನಿವೃತ್ತಿ. ಕೆಲವೊಂದು ಸಲ ಸ್ವತಃ ಮನುಷ್ಯ ಇದನ್ನು ಅರಗಿಸಿಕೊಳ್ಳುವುದಕ್ಕೆ ಮತ್ತು ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟಪಡುತ್ತಾನೆ. ಹೇಗಿದ್ದರೂ ಪ್ರಕೃತಿ ಮಾತ್ರ ಅದನ್ನು ಅನಿವಾರ್ಯವಾಗಿಸುತ್ತದೆ ಇದು ಪರಮ ಸತ್ಯ. ಮಾತ್ರವಲ್ಲ ಅದು ಪ್ರಕೃತಿ ಧರ್ಮವೂ ಹೌದು.ಕೇವಲ ವೈಯಕ್ತಿಕ ಬದುಕನ್ನು ಮಾತ್ರವೇ ಅವಲಂಬಿಸಿರುವವನಿಗೆ ಈ ನಿವೃತ್ತಿ ಎಂಬುದು ಕೇವಲ ವೈಯಕ್ತಿಕವಾಗಿ ಸೀಮಿತವಾಗಿದ್ದರೆ ಈ ಸಾರ್ವಜನಿಕ ಜೀವನವನ್ನು ಅವಲಂಬಿಸುವವರಿಗೆ ಹಾಗಲ್ಲ ಸಾರ್ವಜನಿಕವಾಗಿ ಒಂದನ್ನೊಂದು ಅವಲಂಬಿಸಿರುವಾಗ ಈ ನಿವೃತ್ತಿ ಎಂಬುದು ಹಲವು ಕಡೆ ಸಂಚಲನವನ್ನು ಉಂಟುಮಾಡುತ್ತದೆ. ವೈಯಕ್ತಿಕವಾದ ಚಿಂತನೆ ಅನಿಸಿಕೆ ಹೇಗೂ ಇರಲಿ ಆದರೆ, ಸಾರ್ವಜನಿಕ ಬದುಕು ಮತ್ತು ಆ ಪರಿಸರ ಪ್ರವೃತ್ತಿಯಿಂದ ಆಚೆಗಿನ ಬದುಕನ್ನು ಯೋಚಿಸುವುದಕ್ಕೆ ಬಿಡುವುದಿಲ್ಲ. ಆವಾಗ ವಸ್ತುಸ್ಥಿತಿಯನ್ನು ಸರಿಯಾಗಿ ಗ್ರಹಿಸಿ ಆ ಬಗೆಯಲ್ಲಿ ಪ್ರಾಮಾಣಿಕವಾಗಿ ನಡಕೊಂಡವನು ಪರಿಸ್ಥಿತಿಗೆ ಬೇಗನೇ ಹೊಂದಿಕೊಳ್ಳುತ್ತಾನೆ. ಇದನ್ನೇ ಅನಿವಾರ್ಯ ಎಂದು ಒಪ್ಪಿಕೊಳ್ಳುತ್ತಾನೆ. ನಿವೃತ್ತಿಯೆಂದರೆ ರೈಲು ಬಂಡಿಯಿಂದ ಭೋಗಿಯೊಂದನ್ನು ಕಳಚಿ ದೂರ ಇಟ್ಟ ಹಾಗೆ. ಅಲ್ಲಿಯ ತನಕ ಎಲ್ಲ ಭೋಗಿಯ ಜತೆ ಒಂದಾಗಿ ಚಲಿಸುತ್ತಿದ್ದ ಭೋಗಿಯೊಂದು ಕಳಚಿ ದೂರ ಇಟ್ಟಾಗ ಮಿಕ್ಕುಳಿದ ಭೋಗಿಗಳು ನಿಂತಿರಲು ಸಾಧ್ಯವೇ . ನಿಧಾನವಾಗಿ ತಮ್ಮ ಚಲನೆಯನ್ನು ಆರಂಭಿಸುತ್ತದೆ. ಆದರೆ ಹಳಿಯಿಂದ ಸರಿದು ನಿಲ್ಲುವ ಅನಿವಾರ್ಯತೆ ಪ್ರತಿಯೊಂದು ಭೋಗಿಗೂ ಇರುತ್ತದೆ. ಹಳಿಯಿಂದ ಸರಿದು ನಿಂತ ಭೋಗಿ ಉಳಿದ ಭೋಗಿಯ ಚಲನೆಯನ್ನಷ್ಟೇ ನೋಡಲು ಸಾಧ್ಯ.

           ಇದೆಲ್ಲ ಪ್ರಕೃತಿ ಸಹಜವಾಗಿ ನಡೆದು ಹೋದರೆ ಎಲ್ಲ ಅನಿವಾರ್ಯತೆ ಎಂದು ಒಪ್ಪಿಕೊಳ್ಳಬಹುದು. ವಯೋಮಾನಕ್ಕೆ ಅನುಗುಣವಾಗಿ ಮನಸ್ಥಿತಿಯು ಬದಲಾಗಿಬಿಡುತ್ತದೆ. ಆದರೆ ಇದು ಅನೀರೀಕ್ಷಿತವಾದಾಗ ಮಾತ್ರಾ ನಿಜ ಬದುಕನ್ನು ಒಪ್ಪಿಕೊಳ್ಳುವಲ್ಲಿ ಹೆಣಗಾಡಬೇಕಾಗುತ್ತದೆ.



          ಸಾರ್ವಜನಿಕ ಬದುಕನ್ನು ಅನುಭವಿಸುವ ಒಬ್ಬ ಕ್ರೀಡಾಳು ಇರಬಹುದು ಅಥವಾ ಕಲಾವಿದ ಇರಬಹುದು ಆತ ಅತನಿಗಾಗಿ ಮಾತ್ರ ಬದುಕುವುದಲ್ಲ. ಆತನ ಏರು ಪೇರು ಅವಲಂಬಿಸಿಕೊಂಡು ಸಾರ್ವಜನಿಕ ಪ್ರಪಂಚ ಇರುತ್ತದೆ. ಜೀವನದ ಗತಿಯನ್ನು ನಿರ್ಧರಿಸುವುದೇ ಈ ಪ್ರಪಂಚ. ಆದರೆ ಒಬ್ಬ ಕ್ರೀಡಾಳುವಿಗೆ ಆತನ ಕ್ರೀಡಾಜೀವನವನ್ನು ನಿರ್ವಶಿಸುವುದಕ್ಕೆ ಯುಕ್ತವಾಗುವಂತೆ ತರಬೇತುದಾರ ಒಬ್ಬ ಜತೆಗೇ ಇರುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ, ಸಾಂಸಾರಿಕವಾಗಿ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಲಹೆ ಸೂಚನೆಗಳನ್ನಿತ್ತು ಆತನ ಕ್ರೀಡಾ ಜೀವನವನ್ನು ಸುಲಭವಾಗಿ ಮಾಡುವುದು ಮಾತ್ರವಲ್ಲ ಕ್ರೀಡಾ ಜೀವಿತದ ಅವಧಿಯನ್ನು ವಿಸ್ತರಿಸುವುದಕ್ಕು ಕಾರಣೀಭೂತನಾಗಿರುತ್ತಾನೆ. ಕ್ರೀಡಾಳುವಿನ ಸಂಪೂರ್ಣ ದಿನಚರಿಗೆ ಒಂದು ರೂಪು ರೇಷೇಯನ್ನು ಕೊಡುತ್ತಾ... ಆಟಗಾರ ಎಷ್ಟು ಹೊತ್ತು ಅಡಬಹುದು.. ಯಾವಾಗ ತರಬೇತಿ ತಾಲೀಮು ನಡೆಸಬಹುದು...ಯಾವುದು ಬದ್ಧ ಯಾವುದು ನಿಷಿದ್ದ..ಹೀಗೆ ಎಲ್ಲದರಲ್ಲು ಸಲಹೆ ಸೂಚನೆಯನ್ನು ಕೊಡುತ್ತ ಕ್ರೀಡಾಳು ಏಕಾಂಗಿ ಎಂಬ ಭಾವನೆ ಬಾರದಂತೆ ನೋಡಿಕೊಳ್ಳುತ್ತಾನೆ. ಕೆಲವೊಂದು ವಿಭಾಗದ ಕಲಾವಿದರೀಗೂ ಈ ಬಗೆಯ ಸೌಕರ್ಯಗಳಿರುತ್ತದೆ. ಈ ಬಗೆಯ ಯಾವುದೇ ಸೌಕರ್ಯಗಳಾಗಲೀ ತರಬೇತಿಯಾಗಲೀ ಆತನ ವಿದ್ಯಾರ್ಥಿ ಜೀವನದಲ್ಲಿ ಆವಶ್ಯಕವೆನಿಸುವುದಿಲ್ಲ. ಬದಲಾಗಿ ವೃತ್ತಿ ಜೀವನವಾಗಿ ಆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಸ್ವತಂತ್ರನಾಗಿ ಪ್ರವೃತ್ತನಾದಾಗ ಇದು ಅವಶ್ಯವೆನಿಸಲ್ಪಡುತ್ತದೆ. ಶಿಕ್ಷಣ ಮತ್ತು ಶಿಸ್ತು ಬದ್ದ ಜೀವನ ಆಯಾಚಿತವಾಗಿ ರೂಢಿಗೆ ಬರುತ್ತದೆ.



          ಸಾಮಾನ್ಯವಾಗಿ ಎಲ್ಲಾ ಕಲಾವಿದರ ಜೀವನ ಬಹಳ ದುರ್ಭರವಾಗಿರುತ್ತದೆ. ಕಲೆಗೆ ಸಂಬಂಧಿಸಿ ಎಲ್ಲಾ ಸಾಮಾರ್ಥ್ಯಗಳಿದ್ದರೂ ವ್ಯವಹಾರ ಚಾತುರ್ಯ ಬೇಕಾದಷ್ಟಿರುವುದಿಲ್ಲ. ಯೋಜನಾಬದ್ಧವಾದ ಜೀವನ ಎಂದರೇನೆಂದೇ ಅರಿವಿಲ್ಲದಿರುವಾಗ ಕಲಾ ಜೀವನ ಕೇವಲ ಕಲಾ ಜೀವನವಾಗಿಯೇ ಉಳಿಯುತ್ತದೆ. ಕಲಾಸಾಧನೆಯೇ ಎಲ್ಲಕ್ಕಿಂತ ಹಿರಿದಾಗಿ ಕಂಡರು ಅದು ಕೇವಲ ತಾತ್ವಿಕ ಯಶಸ್ಸಾಗಿಯಷ್ಟೇ ಉಳಿಯುತ್ತದೆ. ನಿಜ ಜೀವನದ ವಾಸ್ತವಕ್ಕೆ ಇಳಿದಾಗ ಯಾವ ಸಾಧನೆಯತ್ತ ನೋಡಬೇಕು ಎಂಬುದೇ ಗೊಂದಲ. ರಂಗದ ಮೇಲೆ ದಿನಕ್ಕೊಂದು ಬಗೆಯಲ್ಲಿ ಕಲೆಯನ್ನು ಪ್ರದರ್ಶಿಸುವಾಗ ದೈಹಿಕ ಶ್ರಮ ಮತ್ತು ಸಮಯ ಹೀಗೆ ಸ್ವರ್ವಸ್ವವನ್ನೂ ವಿನಿಯೋಗಿಸಿದರೂ ಆದಿನದ ಪ್ರದರ್ಶನ ಆದಿನದ ಕಲಾಜೀವನಕ್ಕೆ ಮಾತ್ರ ಮೀಸಲಾಗಿರುತ್ತದೆ. ಅಂದರೆ ಕಳೆದು ಹೋದ ಅಂದಿನ ಪ್ರದರ್ಶನವನ್ನು ಪುನಃ ತೋರಿಸುವುದಕ್ಕಾಗುವುದಿಲ್ಲವಲ್ಲ. ಒಂದು ವೇಳೆ ತೋರಿಸಿದರೂ ಅದು ಜೀವಂತ ಪ್ರದರ್ಶನದ ಮಹತ್ವವನ್ನು ಉಳಿಸಿಕೊಂಡಿರುವುದಿಲ್ಲ. ಹೀಗಾಗಿ ಯಕ್ಷಗಾನದ ಒಂದು ದಿನದ ಪ್ರದರ್ಶನವಾದರೂ ಅದು ನಿತ್ಯ ನೂತನ ದರ್ಶನವೇ ಆಗಿರುತ್ತದೆ. ಒಂದೊಂದು ಪ್ರದರ್ಶನವೂ ಸಿನಿಮಾದಂತೆ ಕಂಪ್ಯೂಟರ್ ಕಾಪಿ ಯಾಗಿರದೆ ಪರಿಶ್ರಮದ ಕೈಬರಹದ ಹಾರ್ಡ್ ಕಾಪಿಯೇ ಆಗಿರುತ್ತದೆ. ಇದು ಕಲಾವಿದನ ಬದುಕಿನಲ್ಲೂ ಪರಿಣಾಮ ಬೀರುತ್ತದೆ. ಅದರಲ್ಲು ರಾತ್ರಿಯನ್ನು ಹಗಲಾಗಿಸುವ ಈ ಕಲಾಜೀವನ ಒಂದು ರೀತಿಯಲ್ಲಿ ಪ್ರಕೃತಿ ವಿಧಾನ ವಿರುದ್ದವಾಗಿರುತ್ತ ಒಟ್ಟಿನಲ್ಲಿ ಕಲಾವಿದನ ಜೀವನವನ್ನು ಆಯ್ಕೆ ಮಾಡಬೇಕಿದ್ದರೆ ಅತ್ಯಂತ ಕಲಾಬದ್ದತೆ ಅತ್ಯವಶ್ಯ. ಇಲ್ಲಿ ಪ್ರವೃತ್ತಿ ಯಾಗಲೀ ನಿವೃತ್ತಿಯಾಗಲೀ ತೀರ ಭಿನ್ನ. ಅದು ಅನಿರೀಕ್ಷೀತ ಸ್ಥಿತಿಯಾದಲ್ಲಿ ಜೀವನ ಕಲಿಸುವ ಪಾಠವನ್ನು ಕಲಿಯುವುದಕ್ಕೇ ಸಾಧ್ಯವಿಲ್ಲ.



           ಯಕ್ಷಗಾನದಲ್ಲಿ ವಯೋಮಾನದ ಪ್ರಭಾವ ಪಾತ್ರಗಳಲ್ಲಿ ಆಗುತ್ತಿದ್ದರು ಕೆಲವೊಮ್ಮೆ ಅದಕ್ಕೆ ವ್ಯತಿರಿಕ್ತವಾದುದು ಕಂಡುಬಾರದೆ ಇರುವುದಿಲ್ಲ. ಯಾರೂ ಯಾವುದೇ ಪಾತ್ರವನ್ನು ಮಾಡಲು ಸಾಧ್ಯವಿರುವ ಒಂದು ಕಲೆ. ವಯಸ್ಸಿನ ಭೇದವಿಲ್ಲದೇ ಯಾರೂ ಯಾವುದೇ ಬಗೆಯ ಪಾತ್ರ ಮಾಡಬಹುದಾದ ಒಂದು ಸ್ಠಿತ್ಯಂತರದ ವೈಶಿಷ್ಟ್ಯ ಈ ಕಲೆಯಲ್ಲಿದೆ. ಇದರ ವೇಷಗಾರಿಕೆ ವರ್ಣ ವೈವಿಧ್ಯತೆ ಇವುಗಳೆಲ್ಲದರಿಂದ ಅಸಲೀ ವೇಷದೊಳಗಿನ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚುವುದು ಸುಲಭವಲ್ಲ. ಹಾಗಾಗಿ ವಯೋ ಮಾನಕ್ಕೆ ವ್ಯತಿರಿಕ್ತವಾಗಿ ಪಾತ್ರವನ್ನು ನಿಭಾಯಿಸುವುದು ಸರ್ವೇ ಸಾಮನ್ಯ. ಗಂಡು ನಿಜ ಹೆಣ್ಣಿಗಿಂತ ಚೆನ್ನಾಗಿ ಬಳುಕುತ್ತ ನರ್ತಿಸುವುದು,, ಅತಿ ಸೌಮ್ಯ ವ್ಯಕ್ತಿ ಭಯಂಕರ ರಕ್ಕಸನಾಗಿ ಅಬ್ಬರಿಸುವುದು,, ಇಲ್ಲಿ ದೇಹಕ್ಕೂ ವಯಸ್ಸಿಗೂ ಮಾಡುವ ವೇಷಕ್ಕೂ ಸಂಬಂಧವೇ ಇರುವುದಿಲ್ಲ. ತನ್ನ ಸಾಮಾರ್ಥ್ಯಕ್ಕನುಗುಣವಾಗಿ ವೇಷಧಾರಿ ರಂಗಸ್ಥಳ ಏರುತ್ತಾನೆ. ಅತ್ಯಂತ ಸಕ್ರಿಯನಾಗಿ ರಂಗದಲ್ಲಿ ವ್ಯಹರಿಸುವ ವ್ಯಕ್ತಿ ಒಮ್ಮಿಂದೊಮ್ಮೆಗೆ ಸಹಜ ಪ್ರವೃತ್ತಿಯಿಂದ ನಿವೃತ್ತನಾಗಿ ರಂಗದಿಂದ ದೂರ ಉಳಿಯುವಾಗ ಮಾತ್ರ ಎಲ್ಲ ಕಡೆ ಒಂದು ಶೂನ್ಯತೆ ಕವಿದ ಹಾಗೆ. ಕಲಾವಿದನ ಮನಸ್ಸು ಸಮುದ್ರದಡ ದಿಂದ ದೂರ ಬಂದು ನಿಂತ ಅನುಭವ. ಆ ಘೋಷ ಅದರ ರೋಮಾಂಚನದಲ್ಲಿ ವಾಸ್ತವಕ್ಕೆ ಹೊಂದಿಕೊಳ್ಳಲು ಬಹಳ ಮಾನಸಿಕ ಸ್ಥಿರತೆಯನ್ನು ತಂದುಕೊಳ್ಳಬೇಕಾಗುತ್ತದೆ.



           ಕಲಾವಿದ ತನ್ನ ಜೀವನವನ್ನು ಯೋಜನಾಬದ್ದವಾಗಿ ರೂಪಿಸಿಕೊಳ್ಳುವಲ್ಲಿ ವ್ಯವಹಾರ ಕುಶಲಿಯಾಗದೇ ಇರುವುದೇ ಕೆಲವೊಂದು ಸಲ ಕಾರಣವೇ ಅಂತ ಅನ್ನಿಸುವುದುಂಟು. ಮಿತಿಮೀರಿದ ಪ್ರೇರೇಪಣೆಯಿಂದ ದಣಿವರಿಯದ ಕುಣಿತ, ವಯಸ್ಸನ್ನು ಕಾಲವನ್ನು ಮೀರಿ ರಂಗದಲ್ಲಿ ಕುಣಿಯುವಾಗ ಆತನಿಗರಿಯದೇ ದೇಹ ಆಂತರಿಕವಾಗಿ ಸೊರಗಿ ಹೋಗುತ್ತದೆ. ಯಾವ ಭದ್ರತೆಯೂ ಇಲ್ಲದ ಜೀವನ ದಿನಳಿಗೊಂದು ದಿನವನ್ನು ಸೇರಿಸುತ್ತಾ ಕಳೆದು ಹೋಗುತ್ತದೆ. ಆದರೂ ಕಲಾವಿದನ ಕಲೆಗೆ ಅಂಟಿಕೊಂಡು ಕಲೆಗಾಗಿ ತನ್ನ ಜೀವನವನ್ನೇ ಮೌಲ್ಯವಾಗಿಸುವ ಆ ನಿಲುಮೆ ಭಾವನಾತ್ಮಕವಾಗಿ ಚಿಂತಿಸುವಾಗ ಮಾತ್ರವೇ ಅರಿಯಲು ಸಾಧ್ಯ.

Wednesday, April 25, 2012

ವಿಚಾರ ಗಮನ








"ಇದು ವಿಮರ್ಶೆಯಲ್ಲದ ಚಿಂತನ"








“ಭಗವಂತ ಮತ್ತು ಮಾಯೆ ಎಂಬುದು ಮನುಷ್ಯ ಮತ್ತು ನೆರಳಿನಂತೆ. ಒಂದು ಅವಿನಾಭಾವ ಸಂಬಂಧಂತೆ. ಮಾಯೆ ಎಂದರೆ ಭಗವಂತನೇ ಮಾಯೆಯೋ? ಅಲ್ಲ ಭಗವಂತನೊಳಗೆ ಮಾಯೆಯೋ.?”
ಎಂಬ ಕೌರವನ ಪ್ರಶ್ನೆಗೆ ಭೀಷ್ಮನ ಪಾತ್ರಧಾರಿ ಸರಳವಾದ ಉಧಾಹರಣೆಯ ಮೂಲಕ ಅತ್ಯಂತ  ಸ್ವಾರಸ್ಯವಾಗಿ ಉತ್ತರಿಸುತ್ತಾ- “ಮಾಯೆ ಎಂದರೆ ಮನುಷ್ಯನ ನೆರಳು ಹೇಗೋ ಹಾಗೆ. ಬೆಳಕು ಬಿದ್ದಾಗ ಆ ನೆರಳಿನ ಅಸ್ತಿತ್ವವೇ ಇಲ್ಲವಾಗುತ್ತದೆ. ಆ ವರೆಗೆ ಅದು ಅವನ ನೆರಳು..ಅದರ ಉದ್ದ ಅಳತೆ ಅಳಿಯಲು ಬೆಳಕನ್ನು ಹಿಡಿದಾಗ ಅದು ಇಲ್ಲವಾಗುತ್ತದೆ. ಮೊದಲು ದೃಶ್ಯವಾದ ನೆರಳು ಮತ್ತೆ ಬೆಳಕು ಬಂದಾಗ ಅದೃಶ್ಯವಾಗುವ ಹಾಗೆ. ಮಾಯೆ ಎಂದರೆ ಭಗವಂತನ ಅವಿಭಾಜ್ಯ ಅಂಗ... ಒಬ್ಬ ಸಂಗೀತಗಾರ ಹಾಡುತ್ತಾನೆ. ಹಾಡುವುದು ಅವನೆಯೋ ಅಥವಾ ಅವನೊಳಗಿನ ಶಕ್ತಿಯೋ.. ಅವನೊಳಗಿನ ಶಕ್ತಿಯಾದರೆ, ಅವನು ಬೇಡ ಅವನೊಳಗಿನ ಶಕ್ತಿಮಾತ್ರ ಸಾಕು ನಮಗೆ .. ಅದು ಸಾಧ್ಯವೋ? ಅವನು ಮತ್ತು ಅವನ ಶಕ್ತಿ ಎಂಬಲ್ಲಿಗೆ ಒಂದು ಅವಿನಾಭಾವ ಸಂಬಂಧ ಅಂದರೆ ಅವಿನಾದ್ವೈತ ಸಂಬಂಧ ಎಂಬುದು ಅದು” . ಭಗವಂತ ಮತ್ತು ಮಾಯೆ ..ಎಂಬುದಕ್ಕೆ ಸರಳವಾದ ವ್ಯಖ್ಯಾನವನ್ನು ನೀಡುತ್ತಾರೆ.

ಯಕ್ಷಗಾನ ತಾಳಮದ್ದಲೆಯಲ್ಲಿ ಇಂತಹ ಸನ್ನಿವೇಶ ಚಿತ್ರಣಗಳದ್ದೇ ಒಂದು ವಿಶೇಷತೆ ಇದೆ. ತಾಳ ಮದ್ದಲೆ ಯಕ್ಷಗಾನದ ಹೂರಣ ಇದ್ದಂತೆ. ಇದು ಕೇವಲ ಭಾಗವತರ ಹಾಡಿನ ಶಬ್ದಾರ್ಥ ಹೇಳುವುದು ಎಂದರೆ ತಪ್ಪಾಗುತ್ತದೆ. ಹಾಗೆಂದು ಪಾತ್ರಗಳ ನಡುವಿನ ನಾಟಕೀಯ ಸಂಭಾಷಣೆ ಎಂದರೂ ತಪ್ಪಾಗುತ್ತದೆ. ತಾಳ ಮದ್ದಲೆಯ ವಿಶೇಷತೆ ಇಷ್ಟಕ್ಕೆ ಸೀಮಿತವಾಗಿಲ್ಲ. ತಾಳ ಮದ್ದಲೆ ಒಂದು ರೀತಿಯ ವಿದ್ವಜ್ಜನರ ಸಮ್ಮೇಳನ ಇದ್ದಂತೆ. ಯಕ್ಷಗಾನದ ಸರಳ ರೂಪವೇ ಇದು ಎಂದು ತೋರಿದರು ಇದರ ವೈಶಾಲ್ಯದ ಅರಿವು ಅದನ್ನು ಸವಿದೇ ಅರಿಯಬೇಕು. ನನ್ನ ಅನಿಸಿಕೆಯಂತೆ... ಯಕ್ಷಗಾನ ಬಯಲಾಟ ಎಂದರೆ ಅದು ಹಾಲು ಹಾಕಿದ ಕ್ರಮಬದ್ಧ ಚಹದಂತೆ. ತಾಳ ಮದ್ದಲೆ ಎಂದರೆ ಕೇವಲ ಚಹದ ಮೂಲ ಸ್ವಾದವನ್ನು ಕೊಡುವ ಕಣ್ಣ ಚಹ (ಕಪ್ಪು ಚಹ) ಇದ್ದಂತೆ. ಇದಕ್ಕೆ ಕೆಲವೊಂದು ಸಲ ಕೇವಲ ನೀರು ಮತ್ತು ಚಹಪುಡಿ ಮಾತ್ರವೇ ಆದರೂ ಅದನ್ನು ಸವಿಯುವ ರೀತಿ ಗೊತ್ತಿದ್ದರೆ ಅದರ ಅನುಭವವೇ ಬೇರೆ. ರುಚಿಯಲ್ಲಿ ಮೇಲ್ನೋಟಕ್ಕೆ ಒಂದೇ ಕಂಡರು ಅದರ ಅನುಭವ ಮತ್ತು ಆ ಅನುಭವವನ್ನು ಗಂಟಲಲ್ಲಿ ಉಳಿಸುವ ಅವಧಿ ಎಲ್ಲವೂ ವೆತ್ಯಾಸವಿದೆ. ಸರಳತೆಯಲ್ಲೂ ವೈಭವವನ್ನು ಗುರುತಿಸುವ ಅರಿವು ಇರಬೇಕು ಅಷ್ಟೇ. ಚಹದ ಗಾಢವಾದ ರುಚಿಯನ್ನು ಅಷ್ಟಕ್ಕೇ ಬಯಸುವವನು ಯಾವಾಗಲೂ ಬಯಸುವುದು ಕಣ್ಣ ಚಹವನ್ನು. ಇದಕ್ಕೆ ಮೇಲ್ನೋಟಕ್ಕೆ ಬಡತನ ಕಾರಣವಾಗಿದ್ದರೂ ಅದು ಅಂತ ಒಪ್ಪುವುದು ಮಾತ್ರ ಕಷ್ಟ. ಹಾಲು ಹಾಕಿದ ಕ್ರಮಬದ್ಧ ಚಹಕ್ಕೆ ಬೆಳಗಾಗುವ ತನಕ ಮತ್ತು ದನ ಇದ್ದರೂ ದನ ಹಾಲು ಕೊಡುವ ತನಕ  ಕಾಯಬೇಕು. ಮಾತ್ರವಲ್ಲ ಅದಕ್ಕೆ ಬಹಳ ಸಿದ್ದತೆಯ ಅವಶ್ಯಕತೆಯೂ ಅಗತ್ಯವಿದೆ. ಆದರೆ ಕಣ್ಣ ಚಹಕ್ಕೆ ಕೇವಲ ಚಹ ಪುಡಿಸಿಕ್ಕಿದರೂ ಸರಳವಾಗಿ ಪೂರ್ಣ ಚಹದ ಅನುಭವವನ್ನು ಪಡೆಯುವ ಅವಕಾಶ ಇರುತ್ತದೆ. ಹಾಗಾಗಿ ಸರಳವಾಗಿ ನಡೆಯುವ ಯಕ್ಷಗಾನ ತಾಳ ಮದ್ದಲೆ ಮೇಲ್ನೋಟಕ್ಕೆ ಬಡವಾಗಿ ಕಂಡರೂ ಇದರಲ್ಲಿ ಇಲ್ಲದ ಶ್ರೀಮಂತಿಕೆ ಅದರಲ್ಲಿ ಇದೆ. ಅನುಭವಿಸುವ ಮನೋಭಾವ ಇರಬೇಕು ಅಷ್ಟೆ.

 ಇತ್ತೀಚೆಗೆ ಕರ್ಮಬಂಧ ಎಂಬ ಹಳೆಯ ತಾಳ ಮದ್ದಲೆಯ ಧ್ವನಿ ಮುದ್ರಣವೊಂದು ಸಿಕ್ಕಿ ಅದನ್ನು ಕೇಳಿದಾಗ ಗರಿಗೆದರಿದ ಕಲ್ಪನೆಗಳು ಹಲವು. ನೆಬ್ಬೂರು ಮತ್ತು ಕಡತೋಕರ ಭಾಗವತಿಕೆಯ ಅತ್ಯಂತ ಹಳೆಯ ತಾಲಮದ್ದಲೆಯದು. ಭೀಷ್ಮನಾಗಿ ರಾಮದಾಸ ಸಾಮಗರು, ಕೌರವನಾಗಿ ಎಂ ಪ್ರಭಾಕರ ಜೋಶಿಯವರು, ಕೊನೆಯುಲ್ಲಿ ಕೃಷ್ಣನಾಗಿ ಗುರು ಪೆರ್ಲ ಕೃಷ್ಣ ಭಟ್ ರವರು ಸೇರಿ ನಡೆಸಿಕೊಟ್ಟ ಅದ್ಭುತ ತಾಳ ಮದ್ದಲೆಯದು.  ಕರ್ಮ ಬಂಧ ಎಂಬ ಪ್ರಸಂಗ ಕುರುಕ್ಷೇತ್ರ ಯುದ್ದದ ಆರಂಭದಲ್ಲೇ ಬಂದು ಬಿಡುತ್ತದೆ. ಪ್ರಸಂಗದ ಆರಂಭದಲ್ಲಿ ಕೌರವನ ಜಿಜ್ಞಾಸೆಗೆಳಿಗೆ ಉತ್ತರಿಸುವ ಭೀಷ್ಮ ಉತ್ತರಾರ್ಧಲ್ಲಿ ಶ್ರೀ ಕೃಷ್ಣನಲ್ಲೇ ಹಲವು ಜಿಜ್ಞಾಸೆಗೆ ಉತ್ತರವನ್ನು ಬಯಸುತ್ತಾನೆ. ಯುದ್ದ ಸನ್ನಿವೇಶದಲ್ಲಿ ಕೇವಲ ವಿಚಾರ ಸಂಘರ್ಷವನ್ನು ತೋರಿಸುವ ಅತ್ಯಂತ ವಿಶಿಷ್ಟ ಪ್ರಸಂಗವಿದು. ದ್ವಂದ್ವದಿಂದ ಕೂಡಿದ ಭೀಷ್ಮನ ಪಾತ್ರ ನಿರ್ವಹಿಸುವುದು ಬಹಳ ಕಷ್ಟವಾಗಿ ಕಂಡರೂ ಮಿಕ್ಕ ಪಾತ್ರಗಳು ಕೂಡ ಕಬ್ಬಿಣದ ಕಡಲೆಯೇ. ಇದು ಯಕ್ಷಗಾನ ತಾಳ ಮದ್ದಲೆಯ ವೈಶಿಷ್ಟ್ಯ. ಯುದ್ದ ಆರಂಭ ಯಾವಾಗ ಅಗುತ್ತದೆ? ಚೆಂಡೆ ಪೆಟ್ಟು ಯಾವಾಗ ಕೇಳಬಹುದು?   ಎಂದು ಇಲ್ಲಿ ಕಾಯುವ ಹಾಗಿಲ್ಲ. ಸನ್ನಿವೇಶ ಚಿತ್ರಣ ದರ್ಶನವಾಗುವುದೇ  ವಿಚಾರ ಸಂಘರ್ಷಮಯವಾಗಿ  ಮತ್ತು ಹಲವು ಜಿಜ್ಞಾಸೆಗಳನ್ನು ಮೂಡಿಸಿ ಅದರಲ್ಲೇ ಅವುಗಳಿಗೆ ಪರಿಹಾರವನ್ನು ನೀಡುತ್ತದೆ. ಕಥಾ ಹಂದರಕ್ಕೆ ಮಹತ್ವ ಇದ್ದರೂ ಸನ್ನಿವೇಶದಲ್ಲಿ ಅದು  ಬಹಳ ಸೂಕ್ಷ್ಯವಾಗಿಯೇ ಚಿತ್ರಿತವಾಗುತ್ತದೆ.  ಮಾತಿನಲ್ಲಿ ವಿಚಾರ ಸಂಘರ್ಷಕ್ಕೆ ಹೆಚ್ಚು ಒತ್ತು.

ಈ ಪ್ರಸಂಗದ ಪ್ರಥಮಾರ್ಧದಲ್ಲಿ ಭೀಷ್ಮ ಕೌರವನ ಸಂಭಾಷಣೆಯಲ್ಲಿ ಒಂದು ರೀತಿಯ ವಿಚಾರ ಮಂಥನ ನಡೆದರೆ ಉತ್ತರಾರ್ಧದ ಭೀಷ್ಮ ಕೃಷ್ಣರ ಸಂಭಾಷಣೆಯಲ್ಲಿ ಬೇರೊಂದು ರೀತಿಯ ವಿಚಾರ ಮಂಥನ. “ಪಂಕಜಾಕ್ಷ ಭೇದವೇಕೋ ಕಿಂಕರನಲ್ಲವೇ ನಾನು..”  ಎಂದು ಭೀಷ್ಮ ಪರಮಾತ್ಮನ ಭೇದವನ್ನು ಪ್ರಶ್ನಿಸುತ್ತಾನೆ. ಅರ್ಜುನನಲ್ಲಿ ಭಕ್ತನೆಂದು ತೋರುವ ಪರಿಗಣನೆ ತನಗೇಕೆ ಇಲ್ಲ? ಪಾರ್ಥಸಾರಥಿಯಾದವನು ಭೀಷ್ಮ ಸಾರಥಿ ಯಾಕೆ ಆಗುವುದಿಲ್ಲ? ಈ ಜಿಜ್ಞಾಸೆಗೆ ಕೃಷ್ಣ ಕೊಡುವ ಉತ್ತರ ಅಷ್ಟೇ ಮಾರ್ಮಿಕವಾಗಿರುತ್ತದೆ. ಉತ್ತಮ ಉದಾಹರಣೆಯ ಮೂಲಕ ಅದಕ್ಕೆ ಉತ್ತರವನ್ನು ತೋರಿಸುವ ರೀತಿ ಬಹಳ ಸ್ವಾರಸ್ಯವಾಗಿರುತ್ತದೆ. ಯಕ್ಷಗಾನದ ಅರ್ಥಗಾರಿಕೆಯಲ್ಲಿ ಬರುವ ಈ ಉದಾಹರಣೆಗಳೇ ಹಲವು ಸಲ ನಮ್ಮ ಜ್ಞಾನ ಪರೀಕ್ಷೆಯನ್ನು ಮಾಡುತ್ತವೆ. ಬಹಳ ಸರಳ ಉಧಾಹರಣೆಗಳು ಉದ್ದರಿಸಲ್ಪಡುವಾಗ ಯಕ್ಷಗಾನದ ವಾಙ್ಮಯ ಪ್ರಪಂಚದ ವೈಶಾಲ್ಯತೆಗೆ ಬೆರಗಾಗುವ ಹಾಗೆ ಅಗುತ್ತದೆ. ಒಬ್ಬಾಕೆ ತಾಯಿಗೆ ನಾಲ್ಕು ಮಕ್ಕಳಿರುವಾಗ  ಹಿರಿ ಮಗನಿಗೆ ಮೀಸೆ ಬಂದಿರುತ್ತದೆ.ಅತ್ಯಂತ ಸಣ್ಣ ಮಗುವಿಗೆ ಇನ್ನೂ ಸ್ತನ್ಯಪಾನವನ್ನು  ತಾಯಿ ಕೊಡುತ್ತಿದ್ದಾಳೆ. ನಾಲ್ಕು ಮಕ್ಕಳನ್ನೂ ಸಮಾನ ಪ್ರೀತಿಯಲ್ಲಿ ಕಾಣುವ ತಾಯಿ, ಕಿರಿಯ ಮಗುವಿಗೆ ಮಾತ್ರ ಮೊಲೆಹಾಲನ್ನು ಕೊಡುವುದನ್ನು  ಹಿರಿ ಮಗ   ಭೇದ ಮಾಡುವುದೆಂದು ಪ್ರಶ್ನಿಸಬಹುದೇ? ಸಮಾನತೆ ಎಂಬುದು ಶಬ್ದ ಒಂದೇ.ಆಂತರಿಕ ಸಮಾನತೆ ಬಾಹ್ಯ ಭಿನ್ನತೆ. ತಾಯಿಯ ಅಂತರಂಗದ ಭಾವನೆಯಲ್ಲಿ ಸಮಾನತೆ ಇದ್ದರೂ ಬಾಹ್ಯ ಪ್ರಪಂಚದ ವ್ಯವಹಾರದಲ್ಲಿ ಭಿನ್ನತೆ ಇರಲೇ ಬೇಕಾಗುತ್ತದೆ.

ಇಂತಹ ಹಲವು ವಿಚಾರಗಳು ತೆರೆದ ಪುಸ್ತಕದ ಬರಹದಂತೆ ಇಲ್ಲಿ ಸಿಗುತ್ತದೆ. ಕಬ್ಬಿಣದ ಕಡಲೆಯಾದ ಚಿಂತನೆಗಳು ರುಚಿಯಾದ ಗೋಡಂಬಿಯಂತೆ ಬಾಯಿಯೊಳಗೆ ಹಾಕಲ್ಪಡುತ್ತದೆ. ತಾಳ ಮದ್ದಲೆಯ ಮಹತ್ವ ಇಂತಹುದರಲ್ಲಿ ಮತ್ತು ಇಂತಹ ಹಲವು ಪ್ರಸಂಗಗಳಲ್ಲಿ. ಮನುಷ್ಯನ ಚಿಂತನೆಗೆ ಸರಿಯಾದ ದಿಶೆಯನ್ನು ಮಾರ್ಗಸೂಚಿಯನ್ನು ಕೊಡುವ ಈ ವಿಚಾರ ಸಂಘರ್ಷಗಳು ಇಷ್ಟೊಂದು ಸರಳವೇ ಎಂದು ಬೆರಗಾಗುವಂತೆ ಮಾಡುತ್ತದೆ.

ಆದರೂ, ಈ ತಾಳಮದ್ದಲೆಯನ್ನು ಕೇಳುತ್ತಿದ್ದಂತೆ ವಾಸ್ತವದ ಯಕ್ಷಗಾನ ತಾಳ ಮದ್ದಲೆಯ ಸ್ಥಿತಿಗತಿಗಳನ್ನು ಯೋಚಿಸುವಂತೆ ಮಾಡಿತು. ಸದ್ಯ ಕೇಳಿದ ಕರ್ಮ ಬಂಧದಂತೆ ಇನ್ನೋಂದು ಪ್ರಸಂಗ ರುಕ್ಮಾಂಗದ ಚರಿತ್ರೆ. ಇದರಲ್ಲಿ ಶೇಣಿಯವರ ರುಕ್ಮಾಂಗದ,  ಗೋವಿಂದ ಭಟ್ಟರ ಜಗನ್ಮೋಹಿನಿ ಅದ್ಭುತವಾಗಿ ಮೂಡಿ ಬಂದಿತ್ತು. ಕೇಳುತ್ತ ಹೋದಂತೆ ಈಗಿನ ತಾಳಮದ್ದಲೆಯ ವಾಸ್ತವವನ್ನು ಚಿಂತಿಸುವಂತೆ ಮಾಡಿದ್ದು ಸುಳ್ಳಲ್ಲ. ಈ ಎರಡು ಪ್ರಸಂಗಗಳನ್ನು ಗಮನಿಸಿದಾಗ ಇಂತಹ ಪ್ರಸಂಗವನ್ನು ಈಗ ಪ್ರಸ್ತುತ ಪಡಿಸುತ್ತಿದ್ದರೆ,  ಸದ್ಯ ಅದನ್ನು ನಿರ್ವಹಿಸಬಲ್ಲ ಸಮರ್ಥ ಕಲಾವಿದರನ್ನು ಗಮನಿಸುತ್ತ ಹೋದರೆ,  ಹಲವು ಹಿರಿಯ ಕಲಾವಿದರನ್ನು ಬಿಟ್ಟರೆ ಇಂದಿನ  ಹೊಸ ತಲೆಮಾರಿನ ಕಲಾವಿದರಿಗೆ ಇಂತಹ ಪ್ರಸಂಗಗಳು ಸವಾಲಾಗಿಯೇ ಇದೆ. ಪ್ರಸ್ತುತ ಯುವ ತಲೆಮಾರಿಗೆ ವೈಚಾರಿಕ ಬಡತನ ಬಂದಿರುವುದು ಇದರಿಂದ ಸ್ಪಷ್ಟವಾಗಿ ಗೋಚರವಾಗುತ್ತದೆ. ಹಾಗಾಗಿ ವಾಲಿವಧೆ, ಕರ್ಣಾವಸಾನ, ಜಾಂಬವತಿ ಕಲ್ಯಾಣ, ಸಮರ ಸನ್ನಾಹ ಇಂತಹ ಪ್ರಸಂಗಗಳೇ ಪುನರಾವರ್ತನೆಯಾಗುತ್ತಿರುವುದು. ಈ ಪ್ರಸಂಗಗಳು ವಿಚಾರಪ್ರದವಾಗಿಲ್ಲ ಎಂದು ಅರ್ಥವಲ್ಲ, ಆದರೆ ಆ ಸಂಘರ್ಷಗಳಿಗೆ ಹೆಚ್ಚು ಒತ್ತುಕೊಡದೆ ಇದನ್ನು ಪ್ರಸ್ತುತ ಪಡಿಸುವುದು ಸಾಧ್ಯವಾಗುತ್ತದೆ. ಇದರಲ್ಲಿ ರಂಜನೆಗೆ, ಆಕರ್ಷಣೆಗೆ  ಬೇರೆ ಹಲವು ವಿಷಯಗಳು ಇರುವುದೇ ಕಾರಣವಾಗುತ್ತದೆ. ಒಂದೆರಡು ಕಲಾವಿದರನ್ನು ಬಿಟ್ಟರೆ ಕರ್ಮ ಬಂಧ, ಗೀತೋಪದೇಶ ದಂತಹ ಪ್ರಸಂಗಗಳನ್ನು ಒಪ್ಪಿಕೊಳ್ಳುವ ಕಲಾವಿದರು ಇಲ್ಲವಲ್ಲ? ಈ ವೈಚಾರಿಕ ಬಡತನ ಗಮನಕ್ಕೆ ಬಾರದ ವಿಚಾರವಾಗಿದೆ.

ಯಕ್ಷಗಾನದ ಬಯಲಾಟದಲ್ಲಿ ಮಹಿಷಾಸುರನ ಅರ್ಧ ತಾಸಿನ ಅವಧಿಯ ಪ್ರವೇಶ,  ಅಷ್ಟು ಸಭೆಯನ್ನು ಚೆಲ್ಲಾಪಿಲ್ಲಿ ಮಾಡಿ ರಂಜನೆ ಉಂಟುಮಾಡಿದಲ್ಲಿ ಯಕ್ಷಗಾನ ಸೇವೆಯ ಕೃತಾರ್ಥತೆಯನ್ನು ಕಾಣುತ್ತ, ಅರ್ಥ ಗಂಟೇ ಒಂದೇ ಪದಕ್ಕೆ ಕುಣಿದು  ಬೆವರು ಸುರಿಸಿದಲ್ಲಿ ಯಕ್ಷಗಾನ ಭಾವಾಭಿನಯ ಅಭಿವ್ಯಕ್ತಗೊಳ್ಳುವ ಪರಿ ಯಕ್ಷಗಾನದಲ್ಲಿದ್ದರೆ, ತಾಳ ಮದ್ದಲೆಯ ಇಂತಹ ಜ್ವಲಂತ ಸಮಸ್ಯೆಗಳು ಅದರಿಂದಲೂ ಹಲವರನ್ನು ವಿಮುಖರನ್ನಾಗಿಸುವುದು ಸುಳ್ಳಲ್ಲ. ಹಲವಾರು ತತ್ವಾದರ್ಶಗಳ ದರ್ಶನದೊಂದಿಗೆ ವಿಚಾರ ಸಂಘರ್ಷಗಳನ್ನು , ಸನಾತನ ಅಧ್ಯಾತ್ಮಿಕ ವಿಚಾರಗಳನ್ನು ಸರಳವಾಗಿ ಅಷ್ಟೇ ಮಾರ್ಮಿಕವಾಗಿ ಅರ್ಥ ಮಾಡಿಕೊಡುವ ತಾಳಮದ್ದಲೆಗಳು ಜನ ಮುಖದಿಂದ ದೂರವಾಗುತ್ತಿವೆ. ಇದ್ದರು, ಬಹಳ ನೀರಸವಾಗಿ ಯಾಂತ್ರಿಕ ಕಾರ್ಯಕ್ರಮವಾಗಿ ಭಾಸವಾಗುತ್ತಿದೆ. ಗಹನವಾದ ವಿಚಾರಗಳನ್ನು ಚರ್ಚಿಸುತ್ತಿದ್ದರೆ ಪ್ರೇಕ್ಷಕರಿಗೆ ಅದು ಬೇಡವಾಗುತ್ತ ಗಮನದ ಹಾದಿ ಬದಲಾಗುತ್ತಿದೆ. ವಿಚಾರ ಸಂಘರ್ಷ ಚರ್ಚೆಗಳು ಪ್ರತಿಸ್ಪರ್ಧಿಯನ್ನು ಸೋಲಿಸುವ ಗುರಿಯನ್ನು ಮಾತ್ರವೇ ಹೊಂದಿ ಸಂಘರ್ಷ ಕೇವಲ ಸಂಘರ್ಷವೇ ಅಗುತ್ತಿದೆ. ಇದಕ್ಕೆ ಕಾರಣಗಳು ಹಲವಿದೆ.ಮಾತ್ರವಲ್ಲ  ಬಹುಮಂದಿಗೆ ಇದರ ಅರಿವೂ ಇದೆ. ಆದರೆ ಆ ಸಮಸ್ಯೆಯ ಬಗ್ಗೆ ಗಂಭೀರತೆ ಇಲ್ಲ. ಒಂದು ಕಾರ್ಯಕ್ರಮ ಆರಂಭಿಸಿ ಜನರಂಜನೆಯನ್ನು ಗಳಿಸಿದರೆ ಸಾಕು ಎಂಬ ಭಾವ. ಅದಕ್ಕಾಗಿ ಅನಾವಶ್ಯಕ ಪ್ರಯೋಗಗಳ ಜತೆ ಹೊಸತನ ಆವಿಷ್ಕಾರಗಳು.ಆದರೆ ಇವುಗಳು ಯಾವುದು ಇಂದಿನ ತಲೆಮಾರಿನ ಅಧ್ಯಯನ ಶೀಲದ ಕೊರತೆಯನ್ನು ನೀಗಿಸುವುದಿಲ್ಲ. ಗಹನವಾದ ವಿಚಾರಗಳ ಬಗ್ಗೆ ಉತ್ತಮ ಅಧ್ಯಯನದ ಅವಶ್ಯಕತೆ ಇದೆ ಅದಕ್ಕೆ ಅಗತ್ಯವಾದ ಮಾಹಿತಿ ಮತ್ತು ಸೌಕರ್ಯಗಳು ಸುಲಭವಾಗಿ ಲಬ್ಯವಾಗಬೇಕಿದೆ. ಸೋಲಿಸುವ ಸ್ಪರ್ಧೆಗಿಂತ ಉತ್ತಮವಾದುದನ್ನು ಕೊಡುವಲ್ಲಿ ಸ್ಪರ್ಧಾ ಮನೋಭಾವವನ್ನು ಬೆಳೆಸುವಂತಾಗಬೇಕು. ಆ ಮೂಲಕ ತಾಳ ಮದ್ದಲೆಯ ಸತ್ವ ಸಂಪೂರ್ಣ ಅನಾವರಣಗೊಳ್ಳಬೇಕು.
ಯಕ್ಷಗಾನಂ ಗೆಲ್ಗೆ




Sunday, April 15, 2012

ನಾದ ಬ್ರಹ್ಮನ ಸೆಳೆತ


ಸೆಳೆತವೆಂದರೆ ಹಾಗೆ. ಅದು ಆಕರ್ಷಿಸುತ್ತಾ ಹೋಗುತ್ತದೆ. ಬೇಡವೆಂದು ಔದಾಸಿನ್ಯ ತಾಳಿದರೂ ಮನಸ್ಸಿನ ಮೂಲೆಯಲ್ಲಿದ್ದ ಬಯಕೆ ತನ್ನ ನೆರಳನ್ನು ಕ್ರಮೇಣವಾಗಿ ವ್ಯಾಪಿಸುವಂತೆ ಮಾಡಿ ಮಿಕ್ಕೆಲ್ಲ ಯೋಚನೆಯನ್ನು ಮುಸುಕಿನೊಳಗೆ ಅಮರಿಸಿಬಿಡುತ್ತದೆ. ಆ ಸೆಳೆತವೆಂಬ ಮೋಹಿನಿಯ  ಬಾಹುಗಳು ವಿಶಾಲವಾದಂತೆ ಭಾಸವಾಗಿ ಬೇಡವೆಂದು ಇದ್ದ ಔದಾಸಿನ್ಯ ಜಡತ್ವ ಸೆಳೆತದ ಬಲಕ್ಕೆ ಪ್ರೇರಣೆಯನ್ನೆ ಒದಗಿಸುತ್ತದೆ. ಆ ಮೋಹಕ ಸೆಳೆತದ ಅನುಭವ ಒಂದಿಒಲ್ಲೊಂದು ಬಗೆಯಲ್ಲಿ ಬಾರದೆ ಇದ್ದವರು ಇರಲಾರರು.


 ಈ ಬಾರಿಯ ಎಡನೀರು ಮೇಳದ ಆಟಗಳತ್ತ  ಸೆಳೆತ ಮೊಳೆತದ್ದು ಆ ಬಗೆಯಲ್ಲಿ. ಬಿಡುವಿಲ್ಲದ ದಿನದ ಕೆಲಸಗಳ ಚಿಂತನೆಯಲ್ಲಿ ಯಾವುದೂ ಬೇಡ, ಒಂದು ಆಟ ನೋಡಿ ಅಷ್ಟಿಷ್ಟು ಸಂತೃಪ್ತವಾಗಿದ್ದ ಮನಸ್ಸಿನ ಆ ತೃಪ್ತಿ ಮರೆಯಾಗಿ ಸಾಯಂಕಾಲ ವಾಗುತ್ತಿದ್ದಂತೆ ಸೆಳೆತದ ಹಸಿವು ಜಾಸ್ತಿಯಾಗಿ  ಮನಸ್ಸಿನ ತುಂಬ ವ್ಯಾಪಿಸುತ್ತ ಮತ್ತದರ ಕಡೆಗೆ ಮುಖಮಾಡುವಂತೆ ಮಾಡಿದ್ದು ವಿಚಿತ್ರ.  ಸಮಯ ಮೀರಿದಂತೆ ಔದಾಸಿನ್ಯ  ಕಡಿಮೆಯಾಗಿ ಚಿತ್ತ ಅತ್ತ ಕಡೆಯೇ ಸೆಳೆದುಬಿಟ್ಟಿತಲ್ಲ? ಒಂದು ಆಟ ನೋಡಿ ಈ ಬಾರಿಗೆ ಇಷ್ಟು ಸಾಕು ಎಂದು ಬಲವಂತವಾಗಿ ಅದುಮಿ ಹಿಡಿದ ಮನಸ್ಸು ಸಾಯಂಕಾಲವಾಗುತ್ತಿದ್ದಂತೆ ಮೆಲ್ಲಗೆ ಆ ಸೆಳೆತ ಸುಳಿಗೆ ಇಣುಕಿ ನೋಡ ಹತ್ತಿತು. ಇಂದು ಯಾವ ಪ್ರಸಂಗ, ಅದು ಹೇಗೆ ಇರಬಹುದು? ಹೀಗೆ ಮಂಡಿಗೆಯ ರುಚಿಯನ್ನು ಸವಿಯತೊಡಗಿತು.


ಇಷ್ಟಕ್ಕೂ ಅಂತಹ ಸೆಳೆತ ಉಂಟಾದ ಕಾರಣವಾದರೂ ಏನು? ಒಂದೆರಡಲ್ಲ ಯೋಚಿಸುತ್ತ ಹೋದಂತೆ  ಹಲವಿದೆ ಅಂತ ನಂತರ ಹೊಳೆದದ್ದು. ಕಳೆದ ಒಂದೆರಡು ಬಾರಿ ಮೇಳದ ಆಟವನ್ನು ನೋಡುವುದು ಸಾಧ್ಯವಾಗಲಿಲ್ಲ. ಆದೇನು ವಿಶೇಷವಲ್ಲ. ಆದರೆ  ಕೊನೆಯದಾಗಿ ನೋಡಿದ ಕೋರಮಂಗಲದ ಎಡನೀರು ಮೇಳದ ಆಟದ ನೆನಪು ಮಾತ್ರ ಮತ್ತು ಮತ್ತು ಮರುಕಳಿಸಿದ್ದು ಸುಳ್ಳಲ್ಲ. ಎರಡು ವರ್ಷದ ಹಿಂದೆ ಇದೇ ರಂಗಸ್ಥಳದಲ್ಲಿ ಮಹಾನ್ ಚೆಂಡೆ ಮದ್ದಲೆ ವಾದಕರಾದ ಚಿಪ್ಪಾರು ಬಲ್ಲಾಳರನ್ನು ಕೊನೆಯದಾಗಿ ನೊಡಿದ್ದ ನೆನಪು ರಂಗ ಸ್ಥಳದ ಮೂಲೆಯನ್ನು ನೋಡುತ್ತಿದ್ದಂತೆ ಮರುಕಳಿಸಿತು. ಕೇವಲ ಅಷ್ಟಕ್ಕೇ ಆ ಪ್ರೇರಣೆ ಉಂಟಾದದ್ದಲ್ಲ. ಅದಕ್ಕೆ ಆದಿನದ ಆ ಯುವಕಲಾವಿದರ ಮದ್ದಲೆ ವಾದನವೂ ಸ್ವಲ್ಪ ಪ್ರೇರಣೆಯಾಗಿತ್ತು. ಯುವ ಕಲಾವಿದರಾದ ಕಡಬ ಶ್ರೀನಿವಾಸ ನಿಜಕ್ಕೂ ಪ್ರಭಾವ ಬೀರಿದರು.  ಅಮ್ಮಣ್ಣಾಯರ ಜತೆ ವಾದನದ ಸುಖವನ್ನು ತನ್ಮಯರಾಗಿ ಸ್ವತಃ ಅನುಭವಿಸುತ್ತ ಬಡಿಯುತ್ತಿದ್ದ ರೀತಿ ಬಹಳ ಪ್ರಭಾವ ಬೀರಿತು ಮಾತ್ರವಲ್ಲ, ನಂತರ ಮುಖತಃ ಭೇಟಿಯಾಗಿ ಆ ಬಗ್ಗೆ ಪ್ರಾಮಾಣಿಕ ಅಭಿನಂದನೆ ಸಲ್ಲಿಸಿದ್ದೆ.

ಅಂದು ಹಲವು ವಿಧದಲ್ಲಿ ಬಲ್ಲಾಳರ ನೆನಪು ಕಾಡಿತು. ೨೦೦೯ ರ ಎಪ್ರಿಲ್ ತಿಂಗಳ ಎಡನೀರು ಮೇಳದ ಪ್ರವಾಸ ಮರೆಯದ ನೆನಪನ್ನು ಆ ಬಗೆಯಲ್ಲಿ ತರುವಂತಾದದ್ದು ಮಾತ್ರ ವಿಷಾದನೀಯ. ಆ ನೆನಪಿನ ಸೆಲೆ ಎಂಬಂತೆ ಮೊನ್ನೆಯೂ ಮೇಳದ ಆಟವಾದಾಗ ಒತ್ತೊತ್ತಿದ ಬಲ್ಲಾಳರ ಛಾಪುಗಳು ಸ್ವರ ಎಬ್ಬಿಸಿ ಅವರ ಅಸ್ತಿತ್ವವನ್ನು ಅನುಮಾನಿಸುವಂತೆ ಮಾಡಿದವು. ನಿರ್ಲಿಪ್ತ ಭಾವದ ನಿಲುಮೆ ಕಣ್ಣಿಗೆ ಕಂಡರೆ  ಆ ರಾಜ ಗಾಂಭೀರ್ಯದ ಮೌನ ಹರಿದು  ಆವ್ಯಕ್ತ ಭಾವಗಳು ಮದ್ದಲೆಯಲ್ಲಿ ಮಾರ್ದನಿಗೊಳಿಸುವ ಬಲ್ಲಾಳ ಶೈಲಿ ಮರೆಯಲಾಗದೆ,  ಅರಿಯದ ಒಂದು ಸೆಳೆತ ಮನದ ಮೂಲೆಯಿಂದ ಆ ಕಡೆಗೇ ಸೆಳೆಯುತ್ತಿತ್ತು. ಮತ್ತೆ ಕನವರಕೆ ಕರಗಿ ವಾಸ್ತವಕ್ಕೆ ಬಂದಾಗ ವಿಷಾದದ ದುಮ್ಮಾನ ಮಾತ್ರ ವ್ಯಕ್ತವಾಗಿಬಿಟ್ಟಿತು. ಯಕ್ಷರಂಗ ಕಳೆದು ಕೊಂಡ ರತ್ನದ ಮೌಲ್ಯ ತುಲನೆ ಮಾಡುವುದು ಅಸಾಧ್ಯವಾದದ್ದು. ಆ ಚೆಂಡೆ ಮದ್ದಲೆಗಳ ಧ್ವನಿ ಮೊಳಗಿ ಮತ್ತೆ ಮೌನ ಆವರಿಸಿರಬಹುದು. ಆದರೆ ಅವುಗಳು ಹೃದಯದಲ್ಲಿ ಎಬ್ಬಿಸಿದ ಆ ನಾದ ತರಂಗದ ಅಲೆಗಳು ಇನ್ನೂ ಹೃದಯದ ಆವರಣಕ್ಕೆ ಮೆತ್ತಗೆ ತಟ್ಟುತ್ತಾ ಇದೆ. ಮರಯ ಬಹುದೇ ಆ ಪೆಟ್ಟುಗಳು? ಇನ್ನು ಆ ತರಂಗಗಳ ಹೊಸ ಉತ್ಪತ್ತಿಯಾಗಬಹುದೇ? ಇನ್ನು ಹಳೆಯ ದ್ವನಿ ಸಂಗ್ರಹದಿಂದ ಆ ಮಧುರ ಸ್ಮರಣಿಕೆಯನ್ನು ಮತ್ತೆ ಮತ್ತೆ ನನಪಿನ ಪೆಟ್ಟಿಗೆಯೊಳಗಿನಿಂದ ತೆಗೆದು ಹೃದಯಕ್ಕೆ ಅಲೆಗಳ ಕಂಪನಗಳನ್ನು ಸೋಕುವಂತೆ ಮಾಡುವುದು ಮಾತ್ರ ಸಾಧ್ಯ. ತಾಯಿ  ಜೋಗುಳದ ಕರತಟ್ಟುವಿಕೆಯ ಬಡಿತಕ್ಕೆ ಮುದುರಿ ಮಲಗಿದ ನಿದ್ರಿಸಿದ ಮಗು,  ಕರ ತಟ್ಟುವಿಕೆ ನಿಲ್ಲಿಸಿದಾಗ ಅರೆ ನಿದ್ರೆಯಲ್ಲಿ ಮಿಸುಕಾಡಿ ಪುನಃ ಆ ಬಡಿತವನ್ನು ಬಯಸುವಂತೆ ಬಲ್ಲಾಳರ ಕರಸ್ಪರ್ಶಕ್ಕೆ ಮಗುವಾಗುವ ಬಯಕೆ. ಆ ಮಟ್ಟಿಗೆ ತಬ್ಬಲಿಯಾದ ಅನುಭವ ಆದರೂ ತಬ್ಬಲಿ ಮನಸ್ಸು ಆ ಧ್ವನಿಯನ್ನೆ ತಬ್ಬಲಿ ಎಂದು ಮನಸ್ಸು ಹಂಬಲಿಸುತ್ತಿರುವುದು ಸುಳ್ಳಲ್ಲ. ಹಂಬಲಿಸಿದ ಮನಸ್ಸಿನ ಸೆಳೆತ ಏನೆಂದು ಅರಿವಾದದ್ದು  ಆನಂತರವವೇ.

ಇದೊಂದು ಬಗೆಯ ನೆನಪಾದರೆ ಎಡನೀರು ಮೇಳದ ಮದ್ದಲೆ ಎಂದರೆ ನೆನಪಾಗುವುದು ಪ್ರಭಾಕರ ಗೋರೆಯವರ ಮುಖ. ಇದು ಹಿಮ್ಮೇಳದ ಆ ಮೂಲೆಯನ್ನು ಅಲಂಕರಿಸಿ ಮನಸ್ಸಿಗೆ  ಒತ್ತಿದ ಅ ಮುದ್ರೆ ಅಚ್ಚಳಿಯದೆ ಇನ್ನೂ ಹಾಗೆ ಉಳಿದಿದೆ. ವೇದಿಕೆಯ ತುದಿಯಂಚಿನಿಂದ ಬರುವ ಧ್ವನಿ ತರಂಗಗಳು ಅಲ್ಲಿಂದ ಅಲೆಯೆಬ್ಬಿಸುವುದನ್ನು ನಿಲ್ಲಿಸಿದರೂ ಆ ನೆನಪಿನ ತರಂಗಗಳು ಇನ್ನೂ ಮಾಸಿಲ್ಲ. ಭಾಗವತರ ಗಾಯನಕ್ಕೆ ಹಿಂಬಾಲಿಸುತ್ತ ಸಾಗಿ ಭಾವತರು ಎಲ್ಲಿ ಅವಕಾಶ ನೀಡುತ್ತಾರೋ .. ಎಲ್ಲಿ ಬಿಡಿತವನ್ನು ನೀಡುತ್ತಾರೋ ಎಂದು ಕಾದು ಆ ಘಳಿಗೆಯಲ್ಲಿ ಮದ್ದಲೆಯ ಮುಖವನ್ನು ಕರದಿಂದ ಸ್ಪರ್ಶಿಸಿ ಬಿಡಿತವನ್ನು ಕಲಾತ್ಮಕ ಗೊಳಿಸುವ ಗೋರೆ ಶೈಲಿ ಮರೆಯಲಾಗದು. ಸ್ವಯಂಚಾಲಿತ ಯಂತ್ರದಂತೆ  ಭಾಗವತರ ಶ್ರುತಿಗೆ ಜತೆಯಾಗಿ ಔದಾಸಿನ್ಯ ಭಾವದಲ್ಲಿ ಬರಿದೇ ನೀಡುವ ಬಲವಾದ ಛಾಪಿನಲ್ಲೂ ಒಂದು ಕಲಾತ್ಮಕತೆ. ಅಲ್ಲಿ ಯಾರು ಬಡಿದರೇನಂತೆ ಅಂದು ನೆನಪಾಗಿ ಕಾಡಿ ಸೆಳೆದದ್ದು ಗೋರೆಯ ಮದ್ದಲೆಯ ನೆನಪುಗಳು. ಅವರು ವಿಶೇಷವಾಗಿ ಬಳಸುತ್ತಿದ್ದ ಆ ತಬಲದ ನೆನಪು. ಈಗ ಅನ್ನಿಸುವುದಿಲ್ಲವೇ ಆ ತಬಲ ಈಗ ಎಲ್ಲಿರಬಹುದು? ಹೇಗಿರಬಹುದು?


ಅಂದು ಯುವ ಮದ್ದಲೆವಾದಕ ಸೆಳೆದ ಪರಿಯೇ ಹಾಗೆ. ಕೆಲವೊಮ್ಮೆ ಅನ್ನಿಸಿದ್ದಿದೆ ಆ ಮೂಲೆಯಲ್ಲಿ ಯಾರು ಕುಳಿತು ಬಡಿದರೂ ಆ ಬಗೆಯ ನಾದ ಹೊರಡುವುದೇ?  ಅದು ಆ ಸ್ಥಾನದ ಮಹಿಮೆ. ಯುವ ಕಲಾವಿದರಲ್ಲಿ ವಿಚಾರಿಸಿದಾಗಲೂ ಇದೇ ಪ್ರತಿಕ್ರಿಯೆ. ನಿಜವಾಗಿ ಆ ಸ್ಥಾನ ವಿಶೇಷವಾದದ್ದು. ಯಾವ ಮದ್ದಲೆಗಾರನೂ ಅನುಭವಿಸಿ ಬಾರಿಸ ಬಹುದಾದ ಭಾಗವತಿಕೆ ಅಮ್ಮಣ್ಣಾಯರದು. ಮದ್ದಲೆಗಾರ ಸ್ವತಃ ತನ್ನೆಲ್ಲ ಕಸುವನ್ನು ತೋರಿಸಲು ಮುಕ್ತ ಅವಕಾಶ ಆಗ ಸಿಗುತ್ತದೆ. ಅತಿ ಬಲವಾದ ಪೆಟ್ಟುಗಳಂತೆ ಮೆತ್ತಗೆ ಸೂಕ್ಷ್ಮವಾಗಿ ಕೇಳುವ ಪೆಟ್ಟುಗಳಿಗೂ ಸಮಾನ ಅವಕಾಶ ಕೊಡುವುದು ಅಮ್ಮಣ್ಣಾಯರು ಮಾತ್ರ. ಅವರ ಜತೆ ಮದ್ದಲೆ ಬಾರಿಸುವುದನ್ನು ಕಲಾವಿದ ಸ್ವತಹ ಅನುಭವಿಸಿ ಸುಖಿಸಬಹುದು.  ಇದನ್ನು ಕೇಳಿದಾಗ ಗೋರೆ ಅಮ್ಮಣ್ಣಾಯ ಜತೆಗಾರಿಕ್  ಯಾಕೆ ಅಪ್ಯಾಯಮಾನ ವಾಗುತ್ತದೆ ಎಂದು ಅರಿವಾಗುತ್ತದೆ. ಸ್ವತಹ ಕಲಾವಿದನೇ ಸುಖಿಸುವಾಗ ಪ್ರೇಕ್ಷಕ ಆ ಸುಖದಲ್ಲಿ ಪಾಲುಗಾರನಾಗದೇ ಇರಲು ಸಾಧ್ಯವೇ?



ಒಂದೆಡೆ ಬಲ್ಲಾಳರು ಅಗಲಿದ ನೋವು ಇನ್ನೊಂದೆಡೆ ಬರಿ ನೆನಪು ಮಾತ್ರವೇ ಅಗಿ ಹೋದ ಗೋರೆ. ಈ ಸಲದ ಎಡನೀರು ಮೇಳದ ಆಟ ಆ ಬಗೆಯಲ್ಲೂ ಒಂದು ವಿಧದ ಸೆಳೆತವನ್ನು ಉಂಟು ಮಾಡಿದೇಯೇ ಎಂಬ ಅನುಮಾನ ಕಾಡುತ್ತಿದೆ. ಕಳೆದ ಬರವಣಿಗೆಯಲ್ಲಿ ಹೇಳಿದ್ದೆ  ಇನ್ನಿಲ್ಲವಾದ ಗೋರೆಯ ಸ್ಮೃತಿ ಮೌನದಲ್ಲಿ ಅಮ್ಮಣ್ಣಾಯರ ವಿಷಾದ ಭಾವ ಸ್ಪುರಿಸುತ್ತಿದೇಯೇ? ಅಲ್ಲವಾದಲ್ಲಿ  ಮನಸ್ಸನ್ನು ಆ ಬಗೆಯಲ್ಲಿ ಎಳೆದು  ಎಳೆದು ಕಟ್ಟಿ ಹಾಕುವ ಅನುಭವವಾದರೂ ಯಾಕೆ? ಇದು ಕೇವಲ ಅನಿಸಿಕೆಯೆ? ಅಮ್ಮಣ್ಣಾಯರ ಆ ಗಾನದ ಸೆಳೆತ,   ಛೇ ಈ ಬಾರಿ ಒಂದು ಆಟ ನೋಡಿ ಮತ್ತೊಂದಕ್ಕೆ ಸೆಳೆದ ಆ ಸೆಳೆತಕ್ಕೆ ಕಾರಣಗಳು,  ಹುಡುಕುತ್ತ ಹೋದಂತೆ ಹಲವು ಸಿಗುತ್ತವೆ. ಅಮ್ಮಣ್ಣಾಯರು ಯಕ್ಷಗಾನ ಕಲೆಗಾಗಿ ಮಾತ್ರವೇ ಸ್ವತಹ ಮೈದುಂಬಿದ ಕಲಾವಿದಾನಾಗಿ ಹಾಡುತ್ತಿದ್ದಾರೆ ಎಂದು ಭಾಸವಾಗುತ್ತಿದೆ. ಇಲ್ಲಿ ಯಾವುದೇ ಪ್ರತಿಫಲದ ಬಯಕೆ ಇದೆ ಎಂದು ಅನ್ನಿಸುವುದಿಲ್ಲ. ಈಗ ಅವರು ದಿವಸಕ್ಕೆ ಒಂದು ಕಾರ್ಯಕ್ರಮವನ್ನು ಮಾತ್ರವೇ ಒಪ್ಪುಕೊಳ್ಳುವುದು. ಅದರಲ್ಲಿ ಮೈದುಂಬಿ ಹಾಡುವುದು.  ಭಾವತುಂಬಿದ ಕಂಠದಿಂದ ರಾಗ ಭಾವಗಳು ಹೊರ ಹೊಮ್ಮುವ ಪರಿಯನ್ನೊಮ್ಮೆ  ಸ್ವತಃ ಅನುಭವಿಸಿದಾಗ ಅದು ಅರಿವಿಗೆ ಬರುತ್ತದೆ. ಸಮಯವಾಗುತ್ತಿದ್ದಂತೆ ದನದ ಕರು ಹಾಲಿಗಾಗಿ ಕರೆದಂತೆ ತನ್ನಮ್ಮ ಬಳಿಗೆ ಬಂದಾಗ ಅಮ್ಮನ ಕೆಚ್ಚಲಿಗೆ ಬಾಯಿ ಹಾಕಿದಂತೆ ಸಮಯವಾಗುತ್ತಿದ್ದಂತೆ ಆಗುವ ಆ ಸೆಳೆತದ ಅನುಭವ ಇಲ್ಲಿಯೂ ಅದದ್ದು ಯಾಕೋ? ಅದು ಈಗ ಸಹಜ ಎಂದು ತೋರುತ್ತದೆ. ಆ ಸೆಳೆತ ಅನುಭವಿಸ ಬೇಕಿದ್ದರೆ ಒಂದು ಸಲ ಮೇಳದ ಆಟ ನೋಡಿ. ಎಡನೀರು ಮೇಳ ಪುನಃ ಬರುತ್ತಿದೆ. ಅಮ್ಮಣ್ಣಾಯರು ಪುನಃ ಬರುತ್ತಿದ್ದಾರೆ. ಆ ಸೆಳೆತದ ಸುಳಿಯಲ್ಲಿ ಸಿಲುಕಲು ನಾವು ಪುನಃ ಕಾಯುತ್ತಿದ್ದೇವೆ. 

Wednesday, March 21, 2012

ಎಡನೀರು ಮೇಳದ ಗಂದರ್ವ ಗಾಯಕ


“ ದಾನವಾಂತಕ ನೀ ಎನಗೆ.......”  ಮಧುರವಾದ ಕಂಠದಿಂದ ಪ್ರಸಂಗ ಪದ ಪರಿಸರ ತುಂಬ ಯಕ್ಷತರಂಗಗಳನ್ನು ಉಂಟು ಮಾಡುತ್ತಿದ್ದಂತೆ ಗಂಧರ್ವ ಗಾಯಕನ ಗಾಯನಕ್ಕೆ ಇರವನ್ನು ಮರೆತು ತನು ಮನ  ಸ್ಪಂದನೆಯ ರಾಗವನ್ನು ಹೊರಡಿಸಿತು. ಕೃಷ್ಣ ಲೀಲೆಯ ಉತ್ತರಾರ್ಧದ ಭಾಗದಲ್ಲಿ ಬರುವ ಅಕ್ರೂರ ಮತ್ತು ಶ್ರೀಕೃಷ್ಣರ ನಡುವಿನ ಸಂಭಾಷಣೆಯ ಸನ್ನಿವೇಶ ಅದು. ಭಾವ ಪೂರ್ಣ ಪದಕ್ಕೆ ಅಕ್ರೂರ ಭಾವುಕನಾಗಿ ಬಿಡುವ ಸನ್ನಿವೇಶ. ಅದೇನು ಗಾನ ಮಾಧುರ್ಯ. ಮೂಗಿನ ತುದಿಯ ಕನ್ನಡಕವನ್ನು ಸರಿಸಿ ನೋಡುತ್ತ ರಂಗದ ಮೇಲಿನ ಕಲಾವಿದರನ್ನು ಉತ್ತೇಜಿಸುವ ನೋಟ, ಕಣ್ಣನ್ನು ಕಿರಿದಾಗಿಸಿ ಹುಬ್ಬುಗಂಟಿಕ್ಕಿ ಆ ಸಂಗೀತದ ಲಯದೊಂದಿಗೆ ಲೀನವಾಗುವ ಭಂಗಿ.. ಭಲೇ ಅಮ್ಮಣ್ಣಾಯರೇ ನಾವು ಧನ್ಯರಾಗಿಬಿಟ್ಟೆವು ಅಂದು. ಬೇಸಗೆಯ ಬಿಸಿ ತನುವಿಗಾದರೆ ಹೃದಯಕ್ಕಾದ ಆ ಅಮೃತ ಸಿಂಚನ  ಛೇ!!!    ಸ್ಪುರಿಸುವ ಭಾವಕ್ಕೆ ನೋಡಿ,  ಅಕ್ಷರಗಳೇ ಇಲ್ಲವಲ್ಲ? ಅಮ್ಮಣ್ಣಾಯರ ಪದಗಳೆಂದರೆ ಹಾಗೆ, ಸ್ವತಹ ಭಾವ ತುಂಬಿ ಆಲಾಪಿಸಿದಾಗ ಕಲಾವಿದರೂ ಭಾವ ಪರವಶರಾದರೆ .. ಪ್ರೇಕ್ಷಕರೂ ಭಾವುಕರಾಗಿಬಿಡುತ್ತಾರೆ. ರಾಗ ಯಾವುದೋ, ತಾಳ ಯಾವುದೋ,  ಪ್ರಸಂಗ ಯಾವೂದೋ, ಪದಯಾವುದೋ ಅದು ಅರಿವಿಗೆ ಬರುವುದಿಲ್ಲ. ಕೇವಲ ಗಾನ ಮಾಧುರ್ಯ ಮಾತ್ರ ಸ್ಥಾಯಿಯಾಗಿ ಬಿಡುತ್ತದೆ. ಅಲ್ಲಿ ಕಲೆಯೊಂದಿಗಿನ ತಾದಾತ್ಮ್ಯ ಭಾವ ಒಂದೇ ಗೋಚರವಾಗಿಬಿಡುತ್ತದೆ.ಅದರ  ಪ್ರಭಾವ ಎಷ್ಟೆಂದರೆ ಎಡನೀರು ಮೇಳವೆಂದರೆ  ಮೊದಲು ಮನಸ್ಸಿನಲ್ಲಿ ಸುಳಿಯುವ ಮುಖ ಅಮ್ಮಣ್ಣಾಯರದ್ದು...!!! ಮತ್ತೊಂದು ಗೋರೆಯದ್ದು !!! ವಿಷಾದನೀಯವೆಂದರೆ ಗೋರೆ ಪ್ರಭಾಕರರು ನೆನಪನ್ನು ಉಳಿಸಿ ಅಸ್ತಮಿಸಿದ್ದಾರೆ. ಆ ಇರುಳ  ವಿಷಾದ  ಇಲ್ಲಿ ಸ್ಫುರಿಸುತ್ತಿದೆಯೆ? ಕಲೆಯೊಳಗಿನ ಈ ಬಂಧಗಳ ಅರಿವು ನಮಗಿಲ್ಲ. ಆದರೆ  ಅಂದು ಕಿಂಚಿತ್ ಆದರೂ ಮನಸ್ಸು ಸಾಂತ್ವನಗೊಂಡಿತು ಅದು ಎಡನೀರು ಮೇಳದ ಆಟದಲ್ಲಿ.
ಸರಳವಾದ ಕಾರ್ಯಕ್ರಮಗಳು ಹೃದಯಸ್ಪರ್ಶಿಯಾಗಿರುತ್ತದೆ. ಮತ್ತು ಮನಸ್ಸಿಗೆ ಹತ್ತಿರವಾಗುತ್ತದೆ ಎಂಬ ನಂಬಿಕೆಗೆ ಅನ್ವಯವಾಗುವಂತಹ ರೀತಿಯಲ್ಲಿ ಜರಗುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಎಡನೀರು ಮೇಳದ ಯಕ್ಷಗಾನ ಬಯಲಾಟಗಳು ನಡೆಯುತ್ತಿರುವುದು. ಅಲಿಖಿತ ವಾಡಿಕೆಯೆಂಬಂತೆ ಬೇಸಗೆಯ ಅಂತ್ಯದಲ್ಲಿ ಎಡನೀರು ಮೇಳ ಕೆಲವು ಪ್ರದರ್ಶನಗಳಿಗಾಗಿ ಬೆಂಗಳೂರಿಗೆ ಬಂದಿದೆ. ಮೇಲ್ನೋಟಕ್ಕೆ ಅದ್ಧೂರಿಯ ಜಾಹೀರಾತುಗಳಾವುದೂ ಇಲ್ಲದೆ ಕೇವಲ ಅಭಿಮಾನೀ  ಬಳಗದ ಒಳಗಿನ ಸಂವಹನವೇ ದೊಡ್ಡ  ಮಾಧ್ಯಮವಾಗಿ ಹೆಚ್ಚಿನ ಎಲ್ಲರಿಗೂ ಎಡನೀರು ಮೇಳದ ಆಟದ ಬಗ್ಗೆ ಅರಿವಾಗಿದೆ. ಹಲವರು ಅವರ ಅನುಕೂಲವನ್ನು ಹೊಂದಿಕೊಂಡು ಯಕ್ಷಗಾನವನ್ನು ಸವಿಯುತ್ತಿದ್ದಾರೆ.   ಹಾಗೆ ನನ್ನ ಅನುಕೂಲವನ್ನ ಹೊಂದಿಸಿಕೊಂಡು ಶನಿವಾರದಂದು ನಡೆದ ಯಕ್ಷಗಾನ ಕಾರ್ಯಕ್ರಮವನ್ನು ಸವಿದು ಅದರ  ಅಚ್ಚುಕಟ್ಟುತನ ಅಪ್ಯಾಯಮಾನವಾಯಿತು. ಅತ್ಯಂತ ಸರಳವಾದರೂ ಕೆಲವು ವಿಧದಲ್ಲಿ ಅದೇ ಅದ್ಧೂರಿಯಾಗಿ ಭಾಸವಾಗುತ್ತದೆ.

ಎಡನೀರು ಮೇಳವೆಂದರೆ ಮೊದಲು ಕಲ್ಪನೆಗೆ ಬರುವುದು ಅದರ ಶ್ರೀಮಂತ ಹಿಮ್ಮೇಳ. ಬಹುಷಃ ನನ್ನ ಮನಸ್ಸು ಆಕರ್ಷಣೆಗೆ ಒಳಗಾದ ರೀತಿಯೇ ಅದು. ಒಂದೆರಡಾದರೂ ಅಮ್ಮಣ್ಣಾಯರ ಪದಗಳನ್ನು ಕೇಳುವ ಬಯಕೆ. ನನಗಂತು ಅದು ಅಸಂಭವನೀಯ ಬಯಕೆಗಳಾಗಿಬಿಟ್ಟಿವೆ. ಹಾಗಾಗಿ  ಅವಕಾಶ ಇರುವಷ್ಟು ಹೊತ್ತು ಆ ಮಧುರ ಗಾನಾಮೃತವನ್ನು ಸವಿಯುವ ಬಯಕೆಯಿಂದಲೇ ಎಡನೀರು ಮೇಳದ ಆಟಗಳನ್ನು ನಿರೀಕ್ಷಿಸಿ ಶನಿವಾರದಂದು ತಡವಾಗಿಯಾದರೂ ಹೋಗಿದ್ದೆ. ಅತಿ ಸಾಮಾನ್ಯ ಎನಿಸಬಹುದಾಂತಹ ಕೃಷ್ಣ ಲೀಲೆ ಪ್ರಸಂಗ. ತಡವಾಗಿ ಹೋದಕಾರಣ ಮೊದಲು ಕುಳಿತ ಅಮ್ಮಣ್ಣಾಯರ ಕೆಲವು ಪದಗಳಿಂದ ವಂಚಿತನಾಗಿದ್ದೆ. ಆದರೂ ಆನಂತರದ ಕೆಲವು ಪದಗಳು ಮೊದಲು ಹೇಳಿದಂತೆ  ನನ್ನಿರವನ್ನೇ  ಮರೆಸಿಬಿಟ್ಟಿದ್ದವು!!

ಅತ್ಯಂತ ಸೀಮಿತ ಕಲಾವಿದರು ಇರುವ ಮೇಳ. ಕಾಲಮಿತಿಯ ಯಕ್ಷಗಾನಕ್ಕೆ ಮೇಳದ ರೂಪ ಹೀಗೆ ಇದ್ದರೆನೇ ಸೂಕ್ತ. ಅರ್ಧ ಘಂಟೆ ಅರ್ಥವಿಲ್ಲದ ಭಂಗಿಯಲ್ಲಿ ಕುಣಿದು ತಾನು ಮಾತ್ರವಲ್ಲ ಪ್ರೇಕ್ಷಕರನ್ನೂ ದಣಿಸುವ ಪ್ರಮೇಯ ಇಲ್ಲಿ ಬರಬಾರದು. ಯಾವ ಭಾಗ ಎಲ್ಲಿ ಮೀಟಬೇಕೋ ಅಷ್ಟನ್ನೇ ಮೀಟಬೇಕು. ಶ್ರುತಿ ಬರಿಸುವುಕ್ಕೂ ನಿಗದಿತ ಸಮಯಾವಧಿ.ಕಲಾವಿದರೂ ಹಾಗೆ ಮಿತಿಯೊಳಗೆ ವ್ಯವಹರಿಸಿಕೊಳ್ಳಬೇಕಾದುದು ಅನಿವಾರ್ಯವಾಗಿಬಿಡುತ್ತದೆ. ಹಸಿದು ಊಟಕ್ಕೆ ಕುಳಿತವನಿಗೆ ಹಸ್ತೋದಕದ ಭೋಜನವಿಧಿ ಅರ್ಧತಾಸು ತೆಗೆದು ಕೊಂಡರೆ ಹೇಗೆ? ಶಾಸ್ತ್ರಗಳು ಹೇಗೆ ಇರಲಿ ಹಸಿವೇ ಪ್ರಧಾನವಾಗಿಬಿಡುತ್ತದೆ.  ಕೆಲವೊಂದು ಸಲ ಈ ಕಟ್ಟು ಪಾಡುಗಳೂ ಈ ಕಾಲಮಾನದಲ್ಲಿ ಉಪಯುಕ್ತವೆನಿಸುತ್ತದೆ. ಕಾಲಮಿತಿಯೋ,  ಮತ್ತೋಂದೋ,  ಒಂದೆರಡು ಪದಗಳನ್ನು ಕೇಳಿದ ಆ ಘಳಿಗೆ ಮಾತ್ರ ಸ್ಮರಣೀಯವಾಗಿ ಬಿಟ್ಟಿತು. ಅಮ್ಮಣ್ಣಾಯಾರ ರಾಗಾಲಾಪನೆಯ   ತಂಗಾಳಿಗೆ ನಸುಬಿರಿದ  ಹೂವಿನ ಎಸಳು ಕಂಪಿಸಿ ಆ ಸ್ಪರ್ಶ ಸುಖವನ್ನು ಅನುಭವಿಸಿದ ಹಾಗೆ  ಮನಸ್ಸಿನ ಕೋಮಲ ಎಸಳುಗಳು ಕಂಪಿಸುತ್ತಿವೆ. ಭಾವ ಪರವಶವಾಗಿ ಸ್ಪಂದಿಸುತ್ತಾ ಆ ಅಲಾಪನೆಯ ತನ್ನ ಅರಿವಿನಂತೆ ಮೆಲುವಾಗಿ ಪ್ರತಿಧ್ವನಿಸುತ್ತವೆ. ಆ ಅಲಾಪನೆಯ ಸೆಳೆತದ ಬಗೆ ಹೇಗೆಂದರೆ,  ಮಾಧುರ್ಯ ಮನಸ್ಸಿನ ಬರಿದಾದ ಕೊಡದಲ್ಲಿ ತುಂಬುವಷ್ಟು ತುಂಬಿಸಿ ತುಳುಕಾಡದೆ ಜೋಪಾನವಾಗಿಸುವ ಕಾಳಜಿ.,  ಆದರೂ ಈ ಗಡಿಬಿಡಿಯ ಕೆಲಸಭಾರದ ನಡುವೆಯೂ ಒಂದೆರಡು ಹನಿ ಈ ರೂಪದಲ್ಲಿ ಸಿಂಪಡಿಸಿ ಧನ್ಯರಾಗುವಾಗ  ಆಗುವ ಅತ್ಮ ಸಂತೃಪ್ತಿ ಅನನ್ಯ.  

Sunday, February 26, 2012

ಚಪ್ಪಾಳೆಯಿಲ್ಲದ ಪದಗಳು



“ನೋಡಿ ನಿರ್ಮಲ ಜಲ ಸಮೀಪದಿ  ಮಾಡಿಕೊಂಡರು ಪರ್ಣ ಶಾಲೆಯ....”  ಹೀಗೆ  ಪೀಠಿಕೆ ಮುಗಿದು ಆರಂಭವಾದ ಪಂಚವಟಿ ಪ್ರಸಂಗದ ಪದಕ್ಕೆ ಆಟ ಆರಂಭವಾದ ಸಡಗರಕ್ಕೆ ಪ್ರೇಕ್ಷಕರು ಕೆಲವರು ಚಪ್ಪಾಳೆ ತಟ್ಟುತ್ತಾರೆ. ಪದದ ಆರಂಭಕ್ಕೆ ಬೀಳುವ ಚಪ್ಪಾಳೆಯ ಅಂಕ ಅದು ಭಾಗವತನಿಗೋ ಇನ್ನಾರಿಗೋ ಸಲ್ಲದೇ ಇನ್ನಾದರೂ ಆಟ ಆರಂಭಗೊಂಡಿತಲ್ಲಾ?-  ಎಂಬ ಕಾರಣವೂ ಇರುತ್ತದೆ.  ಆರಂಭದಿಂದಲೇ ಕಿಚ್ಚು ಹಚ್ಚಿಸಿದಂತೆ ಹಾಡಬೇಕೆನ್ನುವ ಉಮೇದಿನಲ್ಲಿ ಕೆಲವೊಮ್ಮೇ ಭಾಗವತರಾದವರೂ ಉತ್ಸಾಹದಲ್ಲಿರುತ್ತಾರೆ...ಹೀಗೆ ಚಪ್ಪಾಳೆ ಯಾರಿಗೆ? ಯಾವುದಕ್ಕೆ?  ಎನ್ನುವುದು ಪ್ರಧಾನವಲ್ಲ. ಹಾಗೆಂದು ಮೊದಲ ಪದ ಕಳಪೆಯಾಯಿತು... ಅಂತಲ್ಲ ಅದನ್ನು ಆ ರೀತಿಗೆ ಅನುಭವಿಸುವುದಕ್ಕೆ ಪ್ರೇಕ್ಷ್ಗಕ ಸಿದ್ದನಾಗಲಿಲ್ಲ  ಅಷ್ಟೆ. ಹೀಗೆ ಪ್ರಸಂಗದೊಳಗೆ ಲೀನವಾಗಿ ಹೋಗುವ ಪದಗಳು ಹಲವಿದೆ. ಅದರಬಗ್ಗೆ ಗಮನವೇ ಹೋಗದೇ ಅದು ಚಪ್ಪಾಳೆಯಿಲ್ಲದ ಪದಗಳೇ ಆಗಿಬಿಡುತ್ತವೆ.!! ಹಾಗೆಂದು ಚಪ್ಪಾಳೆಗಾಗಿ ಪದಗಳು ಹಾಡಲ್ಪಡುತ್ತವೆ ಎಂಬ ಭಾವನೆಯಲ್ಲ. ವಿಷಯವೆಂದರೆ  ಇದೂ ಒಂದು ಸ್ವಾರಸ್ಯದ ಸಂಗತಿ.

ಮೆಚ್ಚಿನ ಗಾಯಕನೋ ಅಥವಾ ಸಂಗೀತಗಾರನೋ ಒಂದು ಕಾರ್ಯಕ್ರಮದಲ್ಲಿ ಒಂದು ಹಾಡನ್ನೂ ಅಥವಾ ಯಾವುದೋ ಗಾಯನವನ್ನು  ತನ್ನ ಪ್ರತಿಭಾ ವಿಶೇಷವಾಗಿ ಪ್ರದರ್ಶಿಸಿದಾಗ ಮಧ್ಯಂತರವಾಗಿ ಅಥವಾ ತಾತ್ಕಾಲಿಕವಾಗಿ ಆ ಕೃತಿಗೆ ಪ್ರೇಕ್ಷಕರು ತಮ್ಮ ಅಭಿರುಚಿಗೆ ತಕ್ಕಂತೆ ಚಪ್ಪಾಳೆ ಹೊಡೆಯುತ್ತಾರೆ.  ಇದು ಹಲವೊಂದು ಸಲ ಕಲಾವಿದನ್ನು ಉತ್ತೇಜಿಸುವುದು ಮಾತ್ರವಲ್ಲ ಕಾರ್ಯಕ್ರಮದ ಮುಂದಿನ ದಿಕ್ಸೂಚಿಯನ್ನು ನೀಡುತ್ತದೆ.

ಹಾಡುಗಳು ಅಥವಾ ಗಾಯನದಿಂದಲೇ ಕೂಡಿರುವ ಕಲಾ ಕಾರ್ಯಕ್ರಮಗಳು ಹಲವಿರಬಹುದು. ಹಲವು ನೃತ್ಯ ಕಾರ್ಯಕ್ರಮಗಳೋ ಅಥವಾ ರಸಮಂಜರಿಯೋ ಯಾವುದೇ ಆದರೂ ಅಲ್ಲಿ ಗಾಯಕನಿಗೆ ಕೇವಲ ಗಾಯನ ಮಾತ್ರವಿದ್ದರೂ ಸಹ ಆತ ಹಾಡುವ ಸಂಖ್ಯೆಯನ್ನು ಗಮನಿಸಿದರೆ ಮಿತವಾಗಿರುತ್ತದೆ.ಹೆಚ್ಚೆಂದರೆ ಕೆಲವು ಹಾಡುಗಳಿಗೆ ಗಾಯನ ವಿಭಾಗವನ್ನು ಸೀಮಿತಗೊಳಿಸಿ ಗಾಯಕ ದಣಿದು ಬಿಡುತ್ತಾನೆ ಇಲ್ಲವೆ, ತನ್ನ ವ್ಯಾಪಾರಿ ಮನೋಭಾವದಿಂದಲೋ ವಿರಮಿಸುತ್ತಾನೆ. ಪ್ರಖ್ಯಾತ ಗಾಯಕರು  ಅವರ ಬೇಡಿಕೆಗನುಸಾರವಾಗಿ ತಮ್ಮ ಸಾರ್ವಜನಿಕ ಗಾಯನ ಕಾರ್ಯಕ್ರಮದ ಹಾಡುಗಳ ಬಗ್ಗೆ ಮಿತಿಯನ್ನು ಇರಿಸಿಕೊಂಡಿರುತ್ತಾರೆ. ವಿಶೇಷವಾದ ರಚನೆಗಳನ್ನು ಆಲ್ಪಂ ಹಕ್ಕು ಮಾರಾಟಕ್ಕಾಗಿ ಪಣವಿಟ್ಟಿರುತ್ತಾರೆ.  ಒಂದು ಹಾಡನ್ನೂ ಇದಕ್ಕಿಂತ ಮಿಗಿಲಾಗಿ ಹಾಡುವುದಿಲ್ಲ. ಅದೆಲ್ಲ ವೈಯಕ್ತಿಕ ವಿಚಾರಗಳು.

ಒಂದು ಸಂಗೀತ ಕಾರ್ಯಕ್ರಮ ಸಾಯಂಕಾಲ ೬.೩೦ ಯಿಂದ ೯.೩೦ರ ವರೆಗೆ  ಎಂದು ಕರಪತ್ರದಲ್ಲಿ ಮುದ್ರಿಸಿರುತ್ತದೆ.  ಮೂರುಗಂಟೆಯ ಅವಧಿಯ ಕಾರ್ಯಕ್ರಮ ಎಂದು ಐನೂರರ ಟಿಕೇಟ್ ತೆಗೆದು ಒಳ ಹೊದರೆ ಗಾಯಕರು ವೇದಿಕೆ ಏರುವಾಗಲೇ ೭ ಘಂಟೆಯಾಗಿರುತ್ತದೆ. ಆನಂತರ ಶ್ರುತಿ ಹಿಡಿಯುವುದು.. ಸ್ವಗತವಾದ ಮಾತುಗಳು ಕಲಾವಿದರ ಪರಿಚಯ ಹೀಗೆ ಕಾಲು ಘಂಟೆ ಅದರಲ್ಲಿ ಕಳೆದು ಕೊನೆಗೆ ೭.೩೦ಗೆ ಸಂಗೀತ  ಕಾರ್ಯಕ್ರಮ ನಿಜವಾಗಿ ಆರಂಭವಾಗುತ್ತದೆ. ಹೀಗೆ ಆರಂಭವಾದ ಕಾರ್ಯಕ್ರಮ ಅಮೋಘವಾಗಿ ಸಾಗುತ್ತದೆ. ಪ್ರೇಕ್ಷಕರು ಸಂಗೀತ ಸಾಗರದಲ್ಲಿ ಮುಳುಗಿ ತೇಲಾಡಿ ಮತ್ತೆ ಪುನಃ ಮುಳುಗುತ್ತಾರೆ. ಇದರ ಮದ್ಯೆ ಖೆಮ್ಮುತ್ತಾ  ಗಂಟಲು ಸರಿ ಪಡಿಸಿಕೊಳ್ಳಲು.. ಶ್ರುತಿಯನ್ನು ಹೊಂದಿಸಿಕೊಳ್ಳುವುದಕ್ಕೆಂದೇ ಒಂದಷ್ಟು ಅವಧಿ ಹಾಗೆಯೇ ಕಳೆದಿರುತ್ತದೆ. ಕೊನೆಗೆ ೮.೩೦ ಆಗುತ್ತಿದ್ದಂತೆ ಧ್ಯನ್ಯವಾದ ಹೇಳುತ್ತಾ ಮಂಗಲ ಗೀತೆಯನ್ನು ಹಾಡಿ ೮.೪೫ಕ್ಕೆ ಕಾರ್ಯಕ್ರಮ ಮುಗಿಸುತ್ತಾರೆ. ಮಾತ್ರವಲ್ಲ ಕೆಲವೊಂದು ಕಾರ್ಯಕ್ರಮಗಳು ಹೀಗೂ ಇರುತ್ತದೆ ಅಂತಾರಾಷ್ಟ್ರೀಯ ಮಟ್ಟದ ಗಾಯಕನೊಬ್ಬನ ಕಾರ್ಯಕ್ರಮ.. ಒಂದು ತಿಂಗಳ ಮೊದಲೇ ನಗರದ ತುಂಬೆಲ್ಲ ಆತನ ವಿವಿಧ ಭಂಗಿಯ ವಾಲ್ ಪೋಸ್ಟರ್ ಕಟೌಟ್ ಗಳು ರಾರಾಜಿಸುತ್ತವೆ. ಸಾಯಂಕಾಲ ಆರುಘಂಟೆಯಿಂದ ಹತ್ತರವರೆಗೆ ಎಂದು ಜಾಹಿರಾತು ಬೇರೆ. ಒಂದು ತಂಡವಾಗಿ ಬರುವ ಈ ಸಂಗೀತಗಾರನ  ಈ  ಕಾರ್ಯಕ್ರಮ, ಆರಂಭದಲ್ಲಿ  ಅದಾವುದೋ ಅಷ್ಟೇನು ಪ್ರಸಿದ್ಧಿಯಿಲ್ಲದ  ಗಾಯಕರಿಂದ  ಅಥವಾ ಶಿಷ್ಯವರ್ಗಗಳಿಂದ  ಗಾಯನ ಕೂಡಿರುತ್ತದೆ. ಒಂದು ಘಂಟೆಯಷ್ಟು ತಡವಾಗಿ ಬರುವ ಅಂತಾರಾಷ್ಟ್ರೀಯ  ಕಲಾವಿದ ಬರುತ್ತಿದ್ದಂತೆ ಪ್ರೇಕ್ಷಕರೆಲ್ಲ ಅಷ್ಟು ತಡವಾದ ಸಂಕಟವನ್ನೇಲ್ಲ ಮರೆತು ಬಿಡುತ್ತ,  ಆತನ ಅಮೋಘ ಗಾಯನಕ್ಕೆ ಮನಸೋಲುತ್ತಾರೆ. ಕೇವಲ ಒಂದು ಗಂಟೆಯಷ್ಟೇ ಆ ಗಾಯಕ ಹಾಡಿ ತನ್ನ ಬೇಡಿಕೆಯ ಮಟ್ಟವನ್ನು ಪ್ರದರ್ಶಿಸುತ್ತಾನೆ. ಇಷ್ಟಕ್ಕೆ ಗಾಯಕ ಮತ್ತು ಆತನ ತಂಡ ಕೆಲವು ಲಕ್ಷಗಳಷ್ಟನ್ನು ಜೇಬಿಗಿಳಿಸಿರುತ್ತದೆ. ಕಲೆ ಜನಪ್ರಿಯತೆಯನ್ನು ಹೊಂದಿಕೊಂಡು ವಾಣಿಜ್ಯಮಯ ಮೌಲ್ಯವನ್ನು ಪಡೆಯುತ್ತದೆ. ಜತೆಗೇ ಕಲಾರಾಧನೆ ಮತ್ತು ಕಲಾಸೇವೆಯ ತೋರ್ಪಡಿಕೆ ಬೇರೆ.

ಇದನ್ನೆಲ್ಲ ಗಮನಿಸುವಾಗ ಒಂದು ರೀತಿಯ ಹತಾಶೆಯ ಭಾವ ಮನಸ್ಸಿನಲ್ಲಿ ಮೂಡುತ್ತದೆ. ಕಲಾಸೇವೆಯ  ವಾಣಿಜ್ಯ ರೂಪ ಅಲ್ಲಿ ಕಂಡರೆ ಇಲ್ಲಿ ಯಕ್ಷಗಾನದಲ್ಲಿರುವ ಕಲಾಸೇಯ ಆಳ ಅರಿವಾಗಬೇಕಾದರೆ ಆ ಬಗೆಯಲ್ಲಿ ನಿಂತು ಯೋಚಿಸಬೇಕು.  ಕಾರ್ಯಕ್ರಮದ  ಆರಂಭದಿಂದ ತೊಡಗಿ ಅಂತ್ಯದವರೆಗೂ, ರಾತ್ರಿಯಿಂದ ಬೆಳಗ್ಗಿನವರೆಗೆ, ಕೆಲವೊಂದು ಸಲ ಹಲವಾರು ಘಂಟೆಗಳ ಕಾಲ ರಂಗವನ್ನೇ ನೋಡುತ್ತ ಒಟ್ಟು ಪ್ರದರ್ಶನದ ಜವಾಬ್ದಾರಿಯನ್ನು ಹೆಗಲಿಗೇರಿಸಿ ಎಲ್ಲವನ್ನು ನಿಭಾಯಿಸುತ್ತ ಹಾಡುವ ಭಾಗವತರು ಚಪ್ಪಾಳೆ ಗಿಟ್ಟಿಸುವುದು ಕೆಲವು ಹಾಡುಗಳಿಗೆ ಮಾತ್ರ...!!!  ತುಣುಕು ಪದಗಳು, ಸ್ತುತಿಪದಗಳು, ಕಿಸೆ ಪದಗಳು ಪ್ರಸಂಗ ಪುಸ್ತಕದ ಹಲವು ಪದಗಳು ಪ್ರದರ್ಶನ ಒಟ್ಟು ಯಶಸ್ಸಿಗಾಗಿ ಹಾಡುತ್ತಾರೆ. ಇಲ್ಲಿ ಯಕ್ಷಗಾನದ ನಡೆ ಮಾತ್ರ ದೃಷ್ಟಿಯಲ್ಲಿರುತ್ತದೆ. ಯಕ್ಷಗಾನದ ಅವಧಿಯ ನಾಲ್ಕೈದು ಘಂಟೆಗಳ ಹೊತ್ತು ಅದೆಷ್ಟೋ ಹಾಡುಗಳನ್ನು ಹಾಡುವ ಇವರ ಕೆಲಸ ಗಿನ್ನಿಸ್ ದಾಖಲೆ ಸೇರಿಸುವಷ್ಟು ಅರ್ಹವಾಗಿರುತ್ತದೆ.  ಅನ್ಯ ಕ್ಷೇತ್ರದ ಕಲಾವಿದರಿಗೆ ಹೋಲಿಸಿದಲ್ಲಿ ಇವರ  ಕಲಾಸೇವೆಯ ಪ್ರಾಮಾಣೀಕತೆಗೆ ಸಿಗುವ  ಅಲ್ಪ ಸಂಭಾವನೆ ಮಾತ್ರ ನಿಜಜೀವನದಲ್ಲಿ ಇದು ಅತ್ಯಂತ ಹಿರಿದಾದ ಕಲಾಸೇವೆಯಾಗಿ ಭಾಸವಾಗುವುದಿಲ್ಲವೇ? ಹಾಡುವ ಭಾವ ಪ್ರವೃತ್ತಿ  ಹೇಗೂ ಇರಲಿ ಅಷ್ಟೋಂದು ಅಸಂಖ್ಯ ಪದಗಳನ್ನು ಹಾಡುವಾಗ ಗಮನ ಹರಿಸದೆ ಹಾಗೆಯೇ ಬಂದು ಹೋಗುವಪದಗಳಲ್ಲೂ ವೈಶಿಷ್ಟ್ಯವಿರುತ್ತದೆ. ಯಾವುದೇ ಪ್ರತಿಫಲವಿಲ್ಲದೆ ಶುದ್ದವಾಗಿ ಯಕ್ಷಗಾನಕ್ಕಾಗಿಯೇ  ಹಾಡುವ ಪದಗಳತ್ತ ಒಂದು ಸಲ ಗಮನ ಹರಿಸಿ ಚಪ್ಪಾಳೆ ಹಾಕದಿದ್ದರೆ ಹೇಗೆ ಹೇಳಿ?


ಚಪ್ಪಾಳೆಯನ್ನು ಮಾನದಂಡವನ್ನಾಗಿ ನೋಡುವುದು ಔಚಿತ್ಯವಲ್ಲವಾದರೂ ಹಲವಾರು ಪದಗಳನ್ನು ಕೇಳುವಾಗ ಒಂದು ವರ್ಗೀಕರಣದ ಕಲ್ಪನೆಯುಂಟಾಗುತ್ತದೆ. ಕೆಲವು ಪದಗಳು ಅತ್ಯಮೋಘವಾಗಿ ಆಲಾಪಿಸಿ,ಕೆಲವು ಸಲ ಪ್ರೇಕ್ಷಕರ ಕರತಾಡನಕ್ಕಾಗಿಯೇ ಹಾಡಲ್ಪಟ್ಟರೂ ಅವುಗಳು ಪ್ರಶಂಸೆಯನ್ನು ಪಡೆದಾಗ ಉಳಿದವುಗಳು ಕಳಪೆಯೆಂದೆನಿಸುವುದಿಲ್ಲ. ಆ ಪದಗಳ ಮಟ್ಟಿಗೆ ಗಮನ ಅಷ್ಟಾಗಿ ಹೋಗುವುದಿಲ್ಲ. ನಿಜಕ್ಕಾದರೆ ಆ ಪದಗಳನ್ನು ಅಸ್ವಾದಿಸುವ ರೀತಿಯೇ ಬೇರೆಯದಾಗಿರುತ್ತದೆ. ಹಾಗಾಗಿ ಒಂದು ಕಾರ್ಯಕ್ರಮದ ಪದಗಳನ್ನು ಕೇಳುತ್ತಾ ಹೋದಂತೆ ಅದರಲ್ಲಿ ಕೆಲವು ಪದಗಳನ್ನು ಕೇಳಿದಾಗ ಅವುಗಳು ಚಪ್ಪಾಳೆ ಗಳಿಸದೇ ಇದ್ದರೂ ಅವುಗಳನ್ನು ಮತ್ತು ಮತ್ತು ಗುನು ಗುನಿಸುತ್ತಾ ನಮ್ಮ ಮನಸ್ಸು ಅದರ ಆಲಾಪನೆಯ ಉಯ್ಯಾಲೆಯಲ್ಲಿ ಕುಳಿತು ಜೋಕಾಲಿಯಾಡುತ್ತದೆ. ಅಂತಹ ಕೆಲವು ಪದಗಳೇ ಎಷ್ಟು ಗಮನಾರ್ಹ  ಎಂದು ಯೋಚಿಸಿ  ಆ ಬಗೆಯಲ್ಲಿ ಕೇಳಿದಾಗ ಆಗುವ ಅನಂದವೇ ಬೇರೆ. ಒಂದು ರೀತಿಯಲ್ಲಿ ಈ ಪದಗಳೇ ಜೀವಾಳ. ಇಂತಹ ಕೆಲವು ಪದಗಳನ್ನು ಇಲ್ಲಿ ಕೇಳಬಹುದು. ಈ ಪದಗಳು ಎಷ್ಟು ಮಧುರವಾಗಿ ಇದೆ. ಮನಸ್ಸಿಟ್ಟು ಕೇಳಿದಾಗ ಮತ್ತದೆ ಮನಸ್ಸಿನಲ್ಲಿ ಮೊಳಗುತ್ತ ಇರದೇ ಇದ್ದರೆ ಮತ್ತೆ ಹೇಳಿ. ಸ್ವಾರಸ್ಯವೆಂದರೆ ಇವುಗಳು ಯಾರೂ ಗಮನ ಹರಿಸದ ಪದಗಳು. ಅರ್ಥಾತ್ ಚಪ್ಪಾಳೆ ಇಲ್ಲದ ಪದಗಳು. ನಿಮಗೆ ಹೇಗೆ ಅನ್ನಿಸುತ್ತದೆ?
                  

Sunday, February 19, 2012

ಆಶುಗಾನ ಯಕ್ಷಗಾನ


ಕರ್ಣಾವಸಾನ ಎಂಬ ಎರಡು ಧ್ವನಿಸುರುಳಿಗಳಿರುವ ಯಕ್ಷಗಾನವನ್ನು ಕೇಳದ ಯಕ್ಷಗಾನ ಅಭಿಮಾನಿಗಳು ಬಹಳ ಅಪರೂಪ. ಪದ್ಯಾಣ ಮತ್ತು ಹೊಳ್ಳರ ಮಾಸ್ಟರ್ ಪೀಸ್ ಎನ್ನಬಹುದಾದ ಭಾಗವತಿಕೆ ಮತ್ತು ಶೇಣಿಯವರ ಅದ್ಭುತ ಅರ್ಥಚಿತ್ರಣವನ್ನು ಒಳಗೊಂಡ ಯಕ್ಷಗಾನ ಕ್ಯಾಸೆಟ್ ಅದು. ಅದರಲ್ಲಿ ಕರ್ಣನ ಸಾರಥಿ ಬಿಟ್ಟು ಹೋಗಿ ರಥವು ವಸುಂಧರೆಯಲ್ಲಿ ಕುಸಿದ ಸಂದರ್ಭದಲ್ಲಿ ಶೇಣಿಯವರು ತಮ್ಮ ಎಂದಿನ ಶೈಲಿಯಲ್ಲಿ ಕರ್ಣನ ಮಾತುಗಳನ್ನು ಹೇಳುವುದನ್ನು ಹಲವು ಬಾರಿಕೇಳಿದ್ದೇನೆ. ಒಂದು ಅರ್ಥಗಾರಿಕೆಯ ಪಂಚಾಂಗವನ್ನು ಹಾಗಿ ಅದರಲ್ಲೇ ಅರ್ಥಗಾರಿಕೆಯ ಸುಂದರ ಮಹಲನ್ನು ಕಟ್ಟುತ್ತಾ ಪಾತ್ರ ಪೋಷಣೆಯೊಂದಿಗೆ ಆ ದೃಶ್ಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಕೇವಲ ಮಾತುಗಾರಿಕೆಯಲ್ಲೇ ತುಂಬಿಸುವ ಶೇಣಿಯವರ ಅರ್ಥಗಾರಿಕೆಯನ್ನು ಮರೆಯಲು ಸಾಧ್ಯವೇ? “ ಸಾರಧಿ ಬಿಟ್ಟು ಹೋದ .  ಯುದ್ದ ಮಾಡ್ತಾ ಇದ್ದಹಾಗೇನೇ ರಥದ ಗಾಲಿಗಳು ನೆಲದಲ್ಲಿ ಹೂತು ಹೋದ  ಅನುಭವಾಯಿತು” ಎಂದು ಸನ್ನಿವೇಶವನ್ನು ಮಾತುಗಾರಿಕೆಯನ್ನೂ ಅರ್ಧದಲ್ಲೇ ಆರಂಭಿಸಿ ಮತ್ತೆ ಸನ್ನಿವೇಶದ ಮತ್ತು ಮಾತುಗಾರಿಕೆಯ ಆರಂಭಕ್ಕೆ ಬರುವ ಶೇಣಿಯವರ ವಿಶಿಷ್ಟ ಶೈಲಿ ನಾವು ಯಕ್ಷಗಾನ ಅಭಿಮಾನ ಬೆಳೆಸಿಕೊಂಡದ್ದಕ್ಕೆ ಸಾರ್ಥಕವೆನಿಸುವಹಾಗೆ ಮಾಡುತ್ತದೆ.

 “ಶಿವನೇ ..ಸಾರಧಿ ಬಿಟ್ಟು ಹೋದ .  ಯುದ್ದ ಮಾಡ್ತಾ ಇದ್ದಹಾಗೇನೇ ರಥದ ಗಾಲಿ ನೆಲದಲ್ಲಿ ಹೂತು ಹೋದ  ಅನುಭವಾಯಿತು. ಕುದುರೆಗಳು ಎಷ್ಟು ಕಷ್ಟ ಪಟ್ಟು ಮೇಲಕ್ಕೆ ರಥವನ್ನು ಎಳೆದರೂ  ಕೂಡ ಅಲುಗಾಡುವುದಿಲ್ಲ ರಥ. ಕುದುರೆಗಳು ಆಯಾಸಗೊಂಡಿದ್ದಾವೆ. ಛೇ...ಹೂಂ.. ದೈವದ ಮುನಿಸು. ದೈವಾನುಗ್ರಹ ಇಲ್ಲ.  ಶಿವನೇ... ಅಂತ ನಾನು ಉದ್ಗರಿಸಬಹುದೇ ಹೊರತು ಪ್ರತ್ಯಕ್ಷವಾಗಿ ಆ ಕಡೆಗೇ ಅನುಗ್ರಹ ಮಾಡಿದ. ಪಾಶುಪತ ಶರ ಅರ್ಜುನನಿಗೆ ನೀಡಿ ಪ್ರಪಂಚದಲ್ಲಿ ಯಾವ ಯೋಧನೂ ಇದಿರಾಗುವುದಕ್ಕಿಲ್ಲ  ಅಂತ ಮಾಡಿ ತೋರಿಸಿದ ಮೇಲೆ  ಶಿವನು ಕೊಟ್ಟ ಪಾಶುಪತ ಶಕ್ತಿ  ಯಾವನ ಸ್ವಾಧೀನ ಇದೆಯೋ  ಅವನ ಮುಂದೆ ಶಿವಾನುಗ್ರಹ ನನಗುಂಟು  ಅಂತ ಅಂದರೆ ಮೂರ್ಖತನ. ಕೃಷ್ಣಸ್ತು  ಭಗವಾನ್ ಸ್ವಯಂ. ಕೃಷ್ಣ ಪ್ರತ್ಯಕ್ಷವಾಗಿ  ಅರ್ಜುನನ್ನು ರಕ್ಷಿಸ್ತಾನೆ ಅಂತ ಸರ್ಪಾಸ್ತ್ರ ತಪ್ಪಿ ಹೋದದ್ದೇ ಉಧಾಹರಣೆ. ರಕ್ಷಿಸ್ತಾನೆ., ಮತ್ತೇ ಯಾವ ದೇವರಪ್ಪಾ?  ನಮಗಿರುವುದು ನಾವು ನಂಬಿದಂತಹ  ಈ   ಸ್ಥಿರೆ. ಆದಂತಹ ಭೂಮಿ.  ಕ್ಶತ್ರಿಯರಿಗೆ ಇವಳು ಸ್ಥಿರೆಯೆ. ಈ ಯುದ್ದಕ್ಕೆ ವಿಷಯವೇ  ಈ ಭೂಮಂಡಲದ ಆಢಳಿತ. ರಣದ ಅಭಿಮಾನೀ ದೇವತೆಯೇ ಇವಳು.  ಅವಳೇ ಮುನಿದಳು. ನನ್ನ ದುಡಿಮೇ ಯಾವನಿಗಾಗಿಯೋ ಆ ಕೌರವನಿಗೆ ಈ ಮಣ್ಣು ಮುನಿಲಿಲ್ಲಾಂತ ಆದರೆ ಕೆಸರಿಲ್ಲದೇ ಇದ್ದಂತಹ ಈ ರಣ ಕ್ಷೇತ್ರದಲ್ಲಿ ನನ್ನ ರಥದ ಗಾಲಿಯನ್ನೇ ಭೂಮಿ ಕಚ್ಚಿ ಹಿಡಿದದ್ದು ಅಂತ ಅಂದ್ರೆ ಕೆಸರಿನಲ್ಲಿ ಹೂತು ಹೋದದ್ದಲ್ಲ. ಮಾತುಂಟು ಹಾವು ಕಚ್ಚಿದರೆ ಔಷಧಿ ಇದೆ ಮಣ್ಣು ಕಚ್ಚಿದರೆ? ಹಾ ದೈವ ವಿಹೀನ  ಕರ್ಣನಲ್ಲ.. ಕರ್ಣನಲ್ಲ. ದೈವವಿಹೀನಲ್ಲಾ ನೃಪತಿ. ಕೌರವೇಶ್ವರ..... ಏನು ಮಾಡಲಿ?  ಅದರೆ ಒಂದು ಆಶೆ ಇತ್ತು.  ಸರ್ವ ಶಕ್ತಿಯನ್ನು ಉಪಯೋಗಿಸಿ ಕೊನೆಯ ಉಸಿರಿನವರೆಗೂ ಹೋರಾಟ ಮಾಡಬೇಕು ಅರ್ಜುನನಲ್ಲಿ.  ಯುದ್ದದ ಜಯಾಪಜಯವಲ್ಲ  ಆದರೆ ಈ ಊನ ಬಂದದ್ದರಿಂದ  ಸಮ ಭಟನಾಗಿ ಯುದ್ದ ಮಾಡುವುದಕ್ಕೆ ಸಾಧ್ಯವಿಲ್ಲದೇ ಹೋಯಿತಲ್ಲ.  ಏನು ಮಾಡುವುದು. ಈಗ?   ಮಾಡುವುದೇನು..??  ?   ಮಾಡುವುದೇನು..??   ಈ ರಥದಿಂದ ಕೆಳಕ್ಕೆ ಧುಮುಕುತ್ತೇನೆ”.

ಈ ಸ್ವಗತವಾದ  ಮಾತುಗಾರಿಕೆ ಕೇಳುವಾಗ ಯಾವುದೇ ಕಾವ್ಯದ ಸುಂದರ ಕಲ್ಪನೆಗೆ ಮಿಗಿಲಾಗಿ ತೋರುವುದಿಲ್ಲವೇ? ಒಂದು ಕಾವ್ಯವೋ ಕಥೆಯೋ ಸಾಹಿತಿಯಿಂದ ರಚಿಸಲ್ಪಡುವಾಗ ಕೆಲವೊಮ್ಮೆ ಹಲವು ಬಾರಿ ಅದು ತಿದ್ದು ಪಡಿಗೆ ಒಳಗಾಗಿ ಅಂತಿಮವಾಗಿ ಕಾವ್ಯ ರೂಪದಲ್ಲಿ ಬಹಿರಂಗ ಪ್ರಕಟವಾಗುತ್ತದೆ. ಆದರೆ ಇಲ್ಲಿ ಪೂರ್ವ ಯೋಜನೆಯ ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲದಂತೆ ಏಕಾ ಏಕಿಯಾಗಿ ಪ್ರಕಟಗೊಳ್ಳುವುದು ಅದೇನು ಸಾಮಾನ್ಯ ಪ್ರತಿಭೆಯೆ? ಕೌರವನಿಗೆ ಮುನಿದ ಭೂಮಿ, ಆ ಭೂಮಿಗಾಗಿ ಹೋರಾಟ,  ಪರೋಕ್ಷವಾಗಿ ಅದರ ಪ್ರಭಾವ ಕರ್ಣನಲ್ಲಿ ಕಾಣಿಸಿಕೊಳ್ಳುವುದು.ಹಂದರ ಹಂದರವಾಗಿ ಆ ಚಿತ್ರಣವನ್ನು ಮನ ಮುಟ್ಟುವಂತೆ ಕ್ಷಣ ಮಾತ್ರದಲ್ಲೇ ಅನಾವರಣಗೊಳಿಸುವುದು, ನಿಜಕ್ಕಾದರೆ ಯಕ್ಷಗಾನದ ಅರಿವಿರುವರು ಮಹಾ ಪುಣ್ಯವಂತರು ಅಂತ ಅನಿಸುತ್ತದೆ. ಬಹುಷಃ ಬೇರೆಯಾವುದೇ ಕ್ಷೇತ್ರದಲ್ಲಿ ಈ ಬಗೆಯ ಒಂದು ನಿರ್ಮಾಣವಿರುತ್ತಿದ್ದರೆ ಅದನ್ನೆ ಹಾಡಿ ಹೊಗಳಿ ಅದಕ್ಕೆ ವಿಶ್ವವ್ಯಾಪಿ ಮನ್ನಣೆ ಸಿಗುತ್ತಿತ್ತು. ಇಂದು ಹಲವು ಕಾವ್ಯ ಕೃತಿಗಳು ಸಾಹಿತಿಗಳು ಜ್ಞಾನ ಪೀಠದಂತಹ ಮನ್ನಣೆಗೆ ಪಾತ್ರವಾಗುವಾಗ ಇದರ ಮುಂದೆ ಅವೆಲ್ಲ ಸಾಮಾನ್ಯ ಎಂದೆನಿಸುತ್ತದೆ.  ನಿಜಕ್ಕೂ ಯಕ್ಷಗಾನದಲ್ಲಿ ಸಿಗಬೇಕಾದ ಮನ್ನಣೆ ಸಿಗಬೇಕಾದ ಕ್ಷೇತ್ರಗಳಿಗೆ ವಿಭಾಗಗಳಿಗೆ ದಕ್ಕಲಿಲ್ಲವಲ್ಲ ಎಂದು ಖೇದವಾಗುತ್ತದೆ.

ಅಶು ಕವಿತ್ವ ಎಂಬುದು ಒಂದು ಅದ್ಭುತ ಪ್ರತಿಭೆ. ಎಲ್ಲೆಂದರಲ್ಲಿ ಯಾವುದರ ಪರಿಮಿತಿಯಿಲ್ಲದೆ ಕವಿತೆ ಹುಟ್ಟಿದರೆ ಅದು ಅಶು ಕವಿತ್ವವಾಗುತ್ತದೆ. ನಿಂತ ನಿಲುಮೆಯಲ್ಲೆ ಬಗೆ ಬಗೆಯ ಸ್ವಕಲ್ಪನೆಗೆ ರೂಪಕೊಟ್ಟು ಅದನ್ನು ಪ್ರಕಾಶಿಸುವಂತೆ ಮಾಡುವ ಕಲೆ ಅದು ಕವಿಯ ಕವಿತಾ ರಚನೆಗೆ  ಮಾತ್ರ ಸೀಮಿತವಾಗಿಲ್ಲ. ಅಶು ಭಾಷಣ ಇತ್ಯಾದಿ ಹಲವು ರೂಪಗಳಲ್ಲಿ ಇದ್ದರೂ ಈ ಅಶು ಕಲೆ ಅತಿ ಹೆಚ್ಚು  ಪ್ರಯೋಗಕ್ಕೆ ಬರುವುದು ಯಕ್ಷಗಾನದಲ್ಲಿ. ಅರ್ಥಗಾರಿಕೆಯ ಕ್ಷೇತ್ರಕ್ಕೆ ಬರುವಾಗ ತೆಂಕುತಿಟ್ಟು ಇದನ್ನು ಅತ್ಯಂತ ಅಧಿಕವಾಗಿ ಬಳಸಿಕೊಂಡಿದೆ ಎನ್ನಬಹುದು.

ಯಕ್ಷಗಾನದಲ್ಲಿ ಬರವಣಿಗೆ ಅಥವಾ ಲಿಪಿರೂಪದಲ್ಲಿ ಇರುವುದು ಪ್ರಸಂಗ ಪುಸ್ತಕ ಮಾತ್ರ. ಅದರಲ್ಲಿ ಛಂದೋಬದ್ದವಾಗಿ ಹಲವು ಪದಗಳು ಕಾವ್ಯ ರೂಪದಲ್ಲಿದ್ದು ಪ್ರಸಂಗದ ಚೌಕಟ್ಟು ಮಾತ್ರವೇ ಇಲ್ಲಿಂದ ರೂಪಿತವಾಗುತ್ತದೆ.ಉಳಿದ ಎಲ್ಲಾ ಅಂಗವೂ ಅಶುಕವಿತ್ವದ ರೂಪದಲ್ಲಿ ರಂಗದ ಮೇಲೆ ಸೃಷ್ಟಿಯಾಗುವುದು ಅತ್ಯಂತ ಸೋಜಿಗ. ಪ್ರಸಂಗದ ಪುಸ್ತಕದ ಪದಗಳು ಹಿಮ್ಮೇಳ ಕಲಾವಿದರಿಗೆ ಮುಖ್ಯವಾಗಿ ಭಾಗವತರಿಗೆ ಹೊಂದಿಕೊಂಡು ಒಂದು ಬಗೆಯ ಅಶುಕಾವ್ಯದ ರೂಪದಲ್ಲಿ ಪ್ರಸ್ತುತಗೊಳ್ಳುವುದರಿಂದ ಯಕ್ಷಗಾನ  ಬಹಳವಾಗಿ ಅಶು ಕಾವ್ಯದ ಸಾಮಾರ್ಥ್ಯವನ್ನು ಅವಲಂಬಿಸಿದೆ. ಪಾತ್ರಧಾರಿಯಿಂದ ಅರ್ಥಗಾರಿಕೆಯಿಂದ  ಮೊದಲ್ಗೊಂಡು ಸಮಗ್ರವಾಗಿ ಇಷ್ಟು ಬೃಹತ್ ರೂಪದಲ್ಲಿ ರಂಗದ ಮೇಲೆ ಪ್ರಕಟಗೊಳ್ಳುವ ಪ್ರಾಕಾರ ಬೇರೆ ಯಾವುದೂ ಇಲ್ಲ. ಸಿನಿಮಾ ನಾಟಕ ಅಥವಾ ಇನ್ಯಾವುದೇ ಕಲಾಪ್ರಕಾರಗಳಲ್ಲಿ ಅದರ ಸೃಷ್ಟಿಗೆ ಹಿನ್ನೆಲೆಯಲ್ಲಿ ಬೇರೆ ಯಾವುದೋ ಪ್ರತಿಭೆ ಕೆಲಸ ಮಾಡಿರುತ್ತದೆ. ಯಾರೋ ಬರೆದ ಸಂಭಾಷಣೆಯನ್ನು ಒಪ್ಪಿಸಿ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಗಿಟ್ಟಿಸುವುದು ಯಕ್ಷಗಾನದ ಅರ್ಥಗಾರಿಕೆಯ ಮುಂದೇ ಎನೂ ಅಲ್ಲ ಅಂತ ಅನ್ನಿಸಿಬಿಡುತ್ತದೆ. ಯಾರೋ ಬರೆದ ಸಂಭಾಷಣೆಯನ್ನು ಕೇಳಿ ರಂಗದ ಮೇಲಿನ ಕಲಾವಿದನೇ  ಹೇಳಿದನೆಂದು ಆರಾಧಿಸುವ ಅಭಿಮಾನಿಸುವುದನ್ನು ನೋಡಿದಾಗ ಅವೆಲ್ಲ ಯಕ್ಷಗಾನ ಅಭಿಮಾನಿಗೆ ಹುಂಬತನದ್ದು ಅಂತ ಅನ್ನಿಸಿಬಿಡುತ್ತದೆ.

ಹಲವಾರು ಪ್ರಸಂಗಗಳು ಅದು ರಾವಣ ವಧೆಯಾಗಲೀ , ವಾಲಿ ಮೋಕ್ಷವಾಗಲೀ ಯಾವುದೇ ಆದರೂ ಇಂದು ರಂಗದ ಮೇಲೆ ಕಂಡ ಹಾಗೆ ಇನ್ನೊಂದು ಬಾರಿ ಕಾಣಿಸುವುದಿಲ್ಲ. ಇಲ್ಲಿ ಪ್ರಸಂಗ ಪುಸ್ತಕದ ಪದಗಳು ಅದೇ ಆಗಿರುತ್ತದೆ. ಮಾತ್ರವಲ್ಲ ರಂಗದ ಮೇಲೆ ಬರುವ ಕಲಾವಿದರು ಅದೇ ಆಗಿದ್ದರು ಇಂದಿನ ಹಾಗೆ ನಾಳೆ ಇರುವುದಿಲ್ಲ. ಇಂದು ಕಂಡ ರಾಮ ರಾವಣ ನಾಳೆ ಇರುವುದಿಲ್ಲ. ಎಲ್ಲ ವಿಭಿನ್ನವಾಗಿ ಗೋಚರವಾಗುತ್ತದೆ. ಶೇಣಿಯವರ ರಾವಣ,  ಗೋವಿಂದ ಭಟ್ಟರ ಕೌರವ ಒಂದೇ ಸ್ಥಳದಲ್ಲಿ ಹತ್ತು ಬಾರಿ ಪ್ರದರ್ಶಿತವಾದರೂ ಮತ್ತೂ ಮತ್ತೂ ಇನ್ನೂ ಇನ್ನೂ ಪ್ರೇಕ್ಷಕ ಹಾಜರಾಗುತ್ತಿದ್ದುದು ನಿನ್ನೆಯ ರಾವಣ ಅಥವಾ ಕೌರವನ ಇಂದಿನ ರೂಪ ಹೇಗಿರಬಹುದು ಎಂಬ ಕುತೂಹಲದಿಂದ. ಒಂದೇ ಪ್ರಸಂಗವಾದರೂ ವೈವಿಧ್ಯಮಯ ಪಾತ್ರ ಮಾತ್ರವಲ್ಲ ಹಿಮ್ಮೇಳದ ಕಲಾವಿದರು ವೈವಿಧ್ಯಮಯವಾಗಿ ರಂಗದ ಮೇಲೆ ಪ್ರತಿಭೆಯನ್ನು ಮೆರೆಯುತ್ತಾರೆ. ಇದು ಕೇವಲ ಒಂದಿಬ್ಬರು ಕಲಾವಿದರ ಸಾಮಾರ್ಥ್ಯವೂ ಅಲ್ಲ ಸಮಗ್ರ ಯಕ್ಷಗಾನವೇ ಇಂತಹ ಅದ್ಭುತ ಕಲಾ ರತ್ನಗಳಿಂದ ಕಂಗೊಳಿಸುತ್ತದೆ.  ಇದಕ್ಕೆ ಪೂರ್ವ ಯೋಜನೆ ಎನೂ ಇರುವುದಿಲ್ಲ. ರಂಗದ ಮೇಲೆ ಏನು ಸಾಕಾರಗೊಂಡಿತೋ ಅದು ಆ ದಿನದ ಮಾತ್ರವಲ್ಲ ಆ ಕ್ಷಣದ ಸೃಷ್ಟಿಯಾಗಿರುತ್ತದೆ. ಯೋಚಿಸಿದಂತೆ ಇವೆಲ್ಲ ಅದ್ಭುತ ಎಂದೆನಿಸುವುದಿಲ್ಲವೆ? ನಮ್ಮ ಕಲೆಯ ಬಗ್ಗೆ ಅಭಿಮಾನ ಇರಿಸಿಕೊಳ್ಳುವುದೇ ಒಂದು ಹೆಮ್ಮೆ ಎಂದೆನಿಸುತ್ತದೆ.  

ಸಿನಿಮಾ ನಾಟಕಗಳಂತೆ ಬಿಟ್ಟ ರೀಲನ್ನು ಪುನಹ ಬಿಟ್ಟುಬಿಡುವ ಎಕತಾನತೆ ಯಕ್ಷಗಾನದಲ್ಲಿ ಅಪರೂಪ. ಇಂದಿನ ಪಾತ್ರಗಳು ನಾಳೆ ಬೇರೆಯೇ ಆಗಿ ರಂಗದ ಮೇಲೆ ವಿಜ್ರಂಭಿಸುತ್ತವೇ. ಯಾವುದು ಉತ್ತಮ ಎಂಬ ಲೆಕ್ಕಾಚಾರದಲ್ಲೇ ತಲ್ಲೀನವಾಗುವ ಪರಿಸ್ಥಿತಿ. ಪೌರಾಣಿಕ ಪ್ರಸಂಗಗಳಿಗೆ ಮಾತ್ರ  ಈ ವೈವಿಧ್ಯತೆ  ಇರುವುದು ಮತ್ತೊಂದು ವೈಶಿಷ್ಟ್ಯ. ಒಂದು ಯಕ್ಷಗಾನ ಅದು ಯಾವುದೇ ಪ್ರಸಂಗ ಆಗಿರಲಿ ಅದಕ್ಕೆ ಪರಂಪರೆಯಿಂದ ಬಂದ ಒಂದು ಸಂಪ್ರದಾಯ ಇರುತ್ತದೆ ಅದು ಚೌಕಟ್ಟು ಮಾತ್ರ. ಭಾಗವತರ ಚಿಂತನೆಗೆ ಪೂರಕವಾಗಿ ಒಳಗಿನ ಹೂರಣ ತುಂಬಿಸಲ್ಪಡುತ್ತದೆ. ಇದಕ್ಕೆ ಪೂರ್ವ ತಯಾರಿ ಏನೂ ಇರದೆ.. ಯಕ್ಷಗಾನ ನಡೆಯುವ ಮೊದಲು ಕೆಲವೊಮ್ಮೆ ಭಾಗವತರಲ್ಲಿ ಬಂದು ವೇಷಧಾರಿ ಪ್ರಸಂಗ ನಡೆಯನ್ನು ಕೇಳುವ ಪರಿಪಾಠ ಮಾತ್ರ ಇರುತ್ತದೆ. ಭಾಗವತರನ್ನು ಹೊಂದಿಕೊಂಡು ಕೆಲವೊಮ್ಮೆ ಪ್ರಸಂಗ ನಡೆ ಬದಲಾಗುವುದೂ ಇದೆ. ಅದರೆ ಅದೆಲ್ಲ ಬಹಳ ಅತ್ಯಲ್ಪ ಪೂರ್ವ ತಯಾರಿ. ಯಾವ ಪದ ಯಾವ ರಾಗದಲ್ಲಿ ಹೇಗೆ ಹಾಡಬೇಕೆನ್ನುವ ಪೂರ್ವ ತಯಾರಿ ಇಲ್ಲದೆ ರಂಗದ ಮೇಲೆಯೆ ಅದನ್ನು ಆಗ ತೋಚಿದಂತೆ ಹಾಡುತ್ತಾರೆ. ವೇಶಧಾರಿಗಳೂ ಹಾಗೆ ಯಾವುದೇ ಪೂರ್ವ ತಯಾರಿ ಇಲ್ಲದೆ ವ್ಯವಹರಿಸುತ್ತಾರೆ. ಪೂರ್ಣ ರಾತ್ರಿಯ ಅವಧಿಗೆ ಬೃಹತ್ ಮಟ್ಟದಲ್ಲಿ ಆಶು ಕವಿತ್ವ ರಂಗದಲ್ಲಿ ಸಾಕಾರಗೊಳ್ಳುವುದು ಅದು ಅಷ್ಟು ಸುಂದರವಾಗಿ ಯಕ್ಷಗಾನದಲ್ಲಿ ಮಾತ್ರ.

ಆದರೂ ವ್ಯವಸಾಯೀ ಮೇಳಗಳ ನವ್ಯ ಪ್ರಸಂಗಗಳು ಇದಕ್ಕೆ ಅಪವಾದ. ಪೌರಾಣಿಕ ಆಧಾರಿತ ಪ್ರಸಂಗಗಳಾದರೂ ಕೆಲವೊಂದು ಸಲ ಬಿಟ್ಟ ರೀಲು ಸುಂದಿಟ್ಟು ಅದನ್ನೆ ಪುನಃ ಬಿಡಿಸುವ ಪರಿಪಾಠ ಇನ್ನೂ ಇದೆ. ಬಗೆ ಬಗೆಯ ಪ್ರಯೋಗಗಳಿಗೆ ಒಳಗಾದ ಪೌರಾಣಿಕ ಕಥಾನಕಗಳ ಮೂಲಕ  ಅದೇ ಸವಕಲುತನವನ್ನೇ ತೆರೆದಿಡುತ್ತ  ವ್ಯವಸಾಯಿ ಮೇಳಗಳು ಯಶಸ್ವೀ(!!!)  ತಿರುಗಾಟವನ್ನು ಮುಗಿಸುತ್ತವೆ. ಕಾರಣಗಳು ಯಾವುದೇ ಇರಲಿ ಆದರೆ ನಿಜವಾದ ಅಪ್ಪಟ ಯಕ್ಷಗಾನದ ಅಭಿಮಾನಿ ಈ ಏಕತಾನತೆಯ ಬಗ್ಗೆ ಮಡಿವಂತನೇ ಅಗಿರುತ್ತಾನೆ. ಅದುದರಿಂದಲೇ ಇರಬೇಕು ಹೆಚ್ಚಿನ ಎಲ್ಲ ತೆಂಕು ತಿಟ್ಟಿನ ವ್ಯವಸಾಯಿ ಮೇಳಗಳು ತಮ್ಮ ತಿರುಗಾಟವನ್ನು ನಿಲ್ಲಿಸಿವೆ. ಬಹುಶಃ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಉಂಟಾಗಲೂ ಇದೂ ಒಂದು ಕಾರಣವಾಗಿರಲೂ ಬಹುದು. ಈಗಲೂ ಅಲ್ಲಲ್ಲಿ ಆಗುವ ಉತ್ತಮ ಪೌರಾಣಿಕ ಯಕ್ಷಗಾನಗಳಿಗೆ ಸಹೃದಯ ಪ್ರೇಕ್ಷಕರ ಕೊರತೆ ಅಷ್ಟಾಗಿ ಇಲ್ಲ ಅಂತ ಅನ್ನಿಸುತ್ತದೆ.