"ಇದು ವಿಮರ್ಶೆಯಲ್ಲದ ಚಿಂತನ"

Saturday, September 1, 2012

ಸ್ಥಿತ್ಯಂತರ ಒಂದು ಕಧೆ

ಭಾಗ-೧
ಒಂದು ಕಥೆ ಹೇಳುವುದಕ್ಕೆ ಹೊರಟಾಗ ಮನಸ್ಸಿನಲ್ಲಿ ಗಂಟು ಹಾಕಿ ಹುದುಗಿಸಿಟ್ಟುದನ್ನು ಹೊರತಂದು ಬಿಚ್ಚಿದಂತೆ. ದೂರದಿಂದ ಹೊರೆಯೊಂದನ್ನು ಹೊತ್ತು ತಂದು ಇಳಿಸಿ ಬಿಚ್ಚಿ ಒಳಗಿನ ಕೌತುಕದ ವಸ್ತುವನ್ನು ತೋರಿಸಿದಂತೆ. ಒಂದು ನಿರಾಳ ಭಾವ. ಆ ವರೆಗಿನ ಆಯಾಸವೆಲ್ಲ ಪರಿಹಾರವಾದಂತೆ. ಕಥೆ ಅಂದರೆ ಅದನ್ನು ಸಂದರ್ಭಾನುಸಾರ ಹಲವು ರೀತಿಯಲ್ಲಿ ಉಪಯೋಗಿಸುವುದುಂಟು. ಸೂಚ್ಯಾರ್ಥವನ್ನು ಹೇಳುವುದಕ್ಕೆ. ಹೇಳಬೇಕಾದುದನ್ನು ನೇರವಾಗಿ ಹೇಳಲು ಅಸಾಧ್ಯಾವಾದಗ ಕಥಾ ಮೂಲಕ ಪರೋಕ್ಷವಾಗಿ ಹೇಳಿ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ,   ಕೆಲವೊಂದು ಸಲ ಮುಖಾಮುಖಿಯಾಗಿ ಹೇಳಲು ಮುಜುಗರ ಪಡುವಾಗ ಕಥೆಯನ್ನು ಉಪಯೋಗಿಸುವುದುಂಟು. ದೂರವಾಣಿ ಎಂಬ ಸಂಪರ್ಕಸಾಧನ ಬಂದಂತಹ ಸಮಯದಲ್ಲಿ ನಮ್ಮಲ್ಲಿ ಒಬ್ಬರು ಹೇಳುತ್ತಿದ್ದರು, “ಮುಖಾಮುಖಿಯಾಗಿ ಬೈದು ಹೇಳಲಿಕ್ಕೆ ಅಸಾಧ್ಯವಾದದನ್ನು ಸಾಧ್ಯ ಮಾಡುವಂತಹ ಸಂಪರ್ಕ ಸಾಧನ ಈ ದೂರವಾಣಿ ದೂರದಿಂದಲೆ ಬೈದು ಬಿಡಬಹುದು.”  ನಮ್ಮಲ್ಲಿ ಒಬ್ಬರು ಇದ್ದರು ಎದುರಿಗೆ ಕಂಡರೆ ಬಹಳ ಸೌಜನ್ಯದ  ಸಾಧು ಮನುಷ್ಯ. ಪರರು ಹೇಳಬೇಕಾದುದೆಲ್ಲವನ್ನು ಹೇಳಿದರೂ ತಾನು ಹೇಳಬೇಕಾದುದನ್ನು ಹೇಳಲು ಸಂಕೋಚ ಪಡುವ ಪಾಪದ ಮನುಷ್ಯ. ಆದರೆ ಈ ಫೋನು ಮಾಡುವಾಗ ಅದೆಲ್ಲಿ ಇರುತ್ತದೋ,  ಮುಖನೋಡಿ ಬೈಯಲಾಗದೇ ಇದ್ದುದನ್ನೆಲ್ಲ ಕಕ್ಕಿ ಮನಸ್ಸು ಹಗುರ ಮಾಡಿಕೊಳ್ಳುವ ಅವರ ಸ್ವಭಾವ. ಇಂದು ಫೋನಿನಲ್ಲಿ ವಾಚಾಮಗೋಚರವಾಗಿ ಬೈದು ಮರುದಿನ ಸಿಕ್ಕಿದಾಗ ಅದೇ ಮಾಮುಲೀ ಸಾಧು ಮನುಷ್ಯನಂತೆ ಮಾತನಾಡವುದನ್ನು ಕಂಡಾಗ ಅನ್ನಿಸುತ್ತದೆ, ಈ ಫೋನ್ ಎಂಬ ಸಾಧನ ಬಾರದಿರುತ್ತಿದ್ದರೆ ಈ ಮನುಷ್ಯ ಅತ್ಯಂತ ಸಂಭಾವಿತ ವ್ಯಕ್ತಿಯಾಗಿಬಿಡುತ್ತಿದ್ದರಲ್ಲ. ಆದರೆ ಈ ಕಥೆಗೂ ಈ ಯಾವುದೇ ವಿಷಯಗಳಿಗೂ ಪರಸ್ಪರ ಸಂಬಂಧವೇ ಇಲ್ಲ. ಇದು ಕೇವಲ ಕಥೆ. ಕೆಡುಕಿಲ್ಲದ ವೈಷಮ್ಯವಿಲ್ಲದ ಲೋಕ ಕಲ್ಪನೆಗೆ ಮಾತ್ರ ಸರಿ. ವಾಸ್ತವದಲ್ಲಿ ಅದು ಅಸಂಭವ.ಅವಾಸ್ತವಿಕ ಎನ್ನಬಹುದು. ಆದರೆ ನಮ್ಮ ಕಲ್ಪನೆಯ ಕಥೆಯಲ್ಲಿ ವಾಸ್ತವವಲ್ಲವೇ? ಹಾಗಾಗಿ ಆ ಪ್ರಯತ್ನ ಇಲ್ಲೀಯೂ ಬರಿಸುವ ಯತ್ನ. ವೈಷಮ್ಯವಿಲ್ಲದ ಕೆಟ್ಟವರಿಲ್ಲದ ಕೆಟ್ಟ ಯೋಚನೆಗಳಿಲ್ಲದ ಲೋಕ. ಪ್ರಾರಭ್ದವಶಾತ್ ದೈವ ಚಿತ್ತ ಮಾತ್ರ ಕೆಡುಕಾಗಬಹುದು, ಮನುಷ್ಯಚಿತ್ತ ಕೆಡುಕಾಗಬಾರದು. ಕೆಟ್ಟ ದೇಹ...ಅಂಗವಿಹೀನ ದೇಹ ಅದು ದೈವ ಚಿತ್ತ. ಆದರೆ ಮನಸ್ಸಿನ ಯೋಚನೆಗಳು ಮನುಷ್ಯ ಚಿತ್ತ.

ಈಚಣ್ಣ ತನ್ನ ಪಾತ್ರ ಮುಗಿಸಿ, ಚೌಕಿಯ ಒಂದು ಬದಿಯಲ್ಲಿ ಕಳಚಿಟ್ಟ ವೇಷದ ಒಂದೊಂದೇ ವಸ್ತುಗಳನ್ನು ಜೋಡಿಸಿಡುತ್ತಿದ್ದರು. ಇದೇನು ಕಥೆಯ ಆರಂಭದಲ್ಲೇ ಪಾತ್ರ ಮುಗಿಸಿ ವೇಷ ಕಳಚಿತೇ? ಹೌದು, ಯಕ್ಷಗಾನ ಕಲಾವಿದರ ನಿಜ ಕಥೆ ಆರಂಭವಾಗುವುದು ವೇಷ ಕಳಚಿದ ಮೇಲೆಯೆ. ರಂಗದ ಮೇಲಿನ ಪಾತ್ರಗಳು ಹಲವು ಸಲ ಹೃದಯದ ದ್ವನಿಯಾಗುತ್ತವೆಯೋ ಹೊರತು ಅದು ವಾಸ್ತವವಾಗುವುದಿಲ್ಲ. ಕನ್ನಡಿಯ ಒಳಗಿನ ವಸ್ತು ಅದೇನಿದ್ದರೂ ಮಿಥ್ಯ.  ಕೈಗೆ ಸಿಗದು. ಕನ್ನಡಿಯ ಒಳಗಿನ ವಸ್ತು ಸಿಗಬೇಕಾದರೆ ಅದಕ್ಕೆ ಅಭಿಮುಖವಾಗಿ ಪ್ರಯತ್ನಿಸಿದರೆ ಕೆಲವೊಮ್ಮೆ ಕೈಗೆ ಸಿಗಬಹುದೇನೋ. ಒಂದು ರೀತಿಯ ವಿರೋಧಾಭಾಸದ ಪಯಣವಾಗಬೇಕು.  ಕಲಾವಿದರ ಬದುಕು ಹಾಗೆ. ವಿರೋಧಾಭಾಸವೇ? ಅಲ್ಲಿ ತೆರೆದಾಗ ಇಲ್ಲಿ ಮುಚ್ಚಿತು. ಇಲ್ಲಿ ತೆರೆದಾಗ ಅಲ್ಲಿ ಮುಚ್ಚಿತು.  ಅಪರೂಪಕ್ಕೆ ಇದಕ್ಕೆ ತದ್ವಿರುದ್ದ ಎನಿಸಿದರು ಅದು ಸಹಜವಾಗುವುದಿಲ್ಲ. ಅದುವೇ ಕಲಾಜೀವನ.
ಎಲ್ಲರಂತೆ ಕಲಾವಿದರಾದ ಈಚಣ್ಣನದ್ದು ಇಲ್ಲಿ ಮುಚ್ಚಿತು ಎಂದು ಸುಮ್ಮನಿರುವ ಹಾಗಿಲ್ಲ. ಇದು ಮುಚ್ಚಿದ ಮೇಲೆ ತೆರೆದುಕೊಂಡ ಜಗತ್ತಿನಲ್ಲಿ ನಿಜ ಪಾತ್ರವನ್ನು ಅಭಿನಯಿಸಬೇಕು. ಇದು ಎಲ್ಲರಿಗೂ ಅನಿವಾರ್ಯ. ಆದರೂ ಕಥೆ, ಕಥೆಯಾಗಬೇಕಲ್ಲ? ಬಣ್ನ ಎಲ್ಲ ತೆಗೆದು ಹಾಗಿದ ಚಲ್ಲಣ ಕಳಚಿ ಪಂಚೆ ಅಂಗಿ ತೊಟ್ಟು ತಾಂಬೂಲ ಹಾಕಿದರೆಂದರೆ ಯಕ್ಷಗಾನದ ಪಾತ್ರ ಮುಗಿಯಿತು ಮತ್ತೊಂದು ಆರಂಭವಾಯಿತು ಎಂದೇ ಅರ್ಥ. ಒಂದರ ಅಂತ್ಯದಲ್ಲಿ ಇನ್ನೊಂದರ ಆರಂಭ,  ಬಹುಷಃ ಇಲ್ಲಿಗೆ ಹೆಚ್ಚು ಸೂಕ್ತವೋ ಎನೋ?
ತಾಂಬೂಲ ಜಗಿದು ಜಗಿದು ಉಗುಳು ರಸ ಬಾಯಿತುಂಬಿ ಮೈ ಮನ ಚುರುಕಾದಂತೆ ಅನಿಸಿದಾಗ, ಚುರುಕಾಗುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಚಟುವಟಿಕೆಗೆ ವಿಶ್ರಾಂತಿಯೇ ಇಲ್ಲದ ಮೇಲೆ ಚುರುಕಾಗುವುದೇನು ಬಂತು. ಅಥವಾ ಎಲೆ ಅಡಿಕೆ ಹಾಕಿದರೆ ಚುರುಕಾಗುತ್ತದೆ ಎಂದಿಲ್ಲವಲ್ಲ. ಅವರರವ ಭಾವ ಅಷ್ಟೇ. ಬಾಯಿಒಂದು ಬದಿಯಲ್ಲಿ ತಾಂಬೂಲವನ್ನು ಸರಿಸಿ ಚೌಕಿಯಿಂದ ಒಂದಷ್ಟು ದೂರ ಹೋಗಿ ಬಾಯಿಯಲ್ಲೇ ಹಿಂಡಿದ ರಸವನ್ನು ಪಿಚಕ್ಕನೆ ಉಗಿದು ತಿರುಗಿದಾಗ ದೂರದಲ್ಲೇ ಬರುತ್ತಿರುವ ನಾರು ಭಟ್ಟರನ್ನು ಕಂಡು ಒಂದು ನಿಟ್ಟುಸಿರು ಬಿಟ್ಟರು. ನಾರು ಭಟ್ಟರ ಕುರಿತು ಹೇಳುವುದಿದ್ದರೆ ಅವರ ಪೂರ್ಣ ಹೆಸರು ಸಂತೇ ಮನೆ ನಾರಾಯಣ ಭಟ್ಟ ಅಂತ. ಅದನ್ನೇ ನಾರು ಅಂತ ಸಣ್ಣದು ಮಾಡುವುದಕ್ಕೂ ಒಂದು ಕಾರಣವಿದೆ. ಅವರ ಸ್ವಭಾವ ನಾರಿನಂತೆ ಅಂತ ಬಲ್ಲವರು ಹೇಳುವುದಿದ್ದರೂ ಆ ಸ್ವಭಾವಕ್ಕೆ ಸಹಜ ಎನ್ನುವಂತೆ ಅವರ ಒಂದೊಂದೇ ಕೆಲಸಗಳು. ಸಂತೇ ಮನೆ ಅವರ ಹಿರಿಯರಿಂದ ಬಂದ ಮನೆ. ಸ್ವಲ್ಪ ತೋಟ ಗುಡ್ಡೆ ಹೀಗೆ ಹಳ್ಳಿ ಜಮೀನು. ಆ ಊರಿಗೆ ಮೊತ್ತ ಮೊದಲಾಗಿ ರಬ್ಬರ್ ತಂದು ಅದರ ಕೃಷಿಮಾಡಿದವರು ಈ ನಾರು ಭಟ್ಟರು. ರಬ್ಬರಿನಂತಿರುವ ಅವರ  ಸ್ವಭಾವಕ್ಕೆ ಹೊಂದಿಕೊಂಡ ರಬ್ಬರು ಕೃಷಿ ಅವರಿಗೆ ಈ ಹೆಸರನ್ನು ತಂದಿದೆ ಅಂತ ಕೆಲವರ ಅಂಬೋಣ. ಕೆಲವು ವರ್ಷ ಮೊದಲು ಇದ್ದ ತೋಟ ಮನೆ ಮಾರಿ ಮಕ್ಕಳ ಸಂಪಾದನೆಯಲ್ಲಿ ಅಲ್ಲಿ ಇಲ್ಲಿ ಅಂತ ಜೀವನ ಸಾಗಿಸುತ್ತ ಇರುವಾಗ ಒಂದು ಸೈಡು ಬಿಸಿನೆಸ್ಸು ಅದುವೇ ಮದುವೇ ದಲ್ಲಾಳಿ. ಒಂದು ಸಲ ಗುರಿಯಿಟ್ಟು ಭಟ್ಟರು ಅಂಟಿಕೊಂಡರೆ ಅಲ್ಲಿಗೆ ಮುಗೀತು. ಸ್ವಭಾವ ಸಹಜದಂತೆ ಈ ನಾರು ಬೇಗನೇ ಬಿಡುವುದಿಲ್ಲ. ಕರಗುವುದೂ ಇಲ್ಲ.
ತನ್ನನ್ನೇ ಕಾಣಲು ಬರುವ ನಾರು ಭಟ್ಟರನ್ನು ಕಂಡ ಈಚಣ್ಣ ಚೌಕಿಯ ಒಳ ನಡೆಯುವ ಮನಸ್ಸು ಮಾಡಲಿಲ್ಲ. ಚೌಕಿಯ ಒಳಗೆ ಈ ನಾರು ಹಿಡಕೊಂಡರೆ ಉಳಿದವರು ಏನು ಕಥೆ ಅಂತ ಸಂಕಲನ ಶುರು ಮಾಡಿಬಿಡುತ್ತಾರೆ. ಹಾಗಾಗಿ ಮತ್ತೂ ಸ್ವಲ್ಪ ದೂರ ಹೋಗಿ ನಿಂತಾಗ ಊಹಿಸಿದಂತೆ ನಾರು ಅಲ್ಲಿಗೇ ಕಾಲೆಳೆದುಕೊಂಡು ಬಂದರು.
ಭಟ್ಟರು ಔಪಚಾರಿಕ ಮಾತುಗಳನ್ನು ಚುಟುಕಾಗಿ ಮುಗಿಸಿ ಹೇಳಿದರು “ ಕೂಸಿನ ಜಾತಕ ಸರಿ ಹೋಗ್ತದೆ...”  ಇನ್ನು ಮುಚ್ಚು ಮರೆ ಏಕೆ? ಈ ಭಟ್ಟರ ಆಗಮನದ ಮುಖ್ಯ ಕಾರಣವೇ ಅದು. ಈಚಣ್ಣನಿಗೆ ಪ್ರಾಯಕ್ಕೆ ಬಂದು ನಿಂತ ಮಗಳಿದ್ದಾಳೆ. ಒಬ್ಬಳೇ ಮಗಳು ಸುನಂದ. ಅವಳಿಂದ ನಂತರ ಮಗ ಒಬ್ಬ ಇದ್ದಾನೆ ಅವನಿನ್ನು ಸ್ವಲ್ಪ ಚಿಕ್ಕವನು. ಬಡತನದ ಜೀವನ ಏಂದೋ ಕಳೆದಿದ್ದರೂ ಶ್ರೀಪತಿಯವರಿಗೆ ಈಗಲೂ ಬಹಳ ಅನುಕೂಲ ಎಂದು ಹೇಳುವ ಹಾಗಿಲ್ಲ. ಜೀವನ ಸಾಗುತ್ತದೆ. ಒಬ್ಬಳೇ ಮಗಳು.. ಇವಳು ಹುಟ್ಟುವ ಸಮಯದಲ್ಲಿ ಹೆಣ್ಣು ಮಗುವಾ.....  ಎಂದು ಗುಣು ಗುಣಿಸಿದವರೂ ಇದ್ದಾರೆ.  ಹಾಗೆಂದು ಇವರಿಗೆ ಅಧೀರತೆ ಎನೂ ಇರಲಿಲ್ಲ ಯಾವುದಾದರೇನು ಭ್ರೂಣ ಮಾಗಿ ಅವಯವ ತುಂಬಿ ಮನುಷ್ಯ ರೂಪ ಪಡೆದಿಲ್ಲವೇ?
ಈಚಣ್ಣ ಒಂದು ಕ್ಷಣ ಹೊತ್ತು ಕಣ್ಣು ಮುಚ್ಚಿ
“ ನಿಮಿಗೆ ಗೊತ್ತುಂಟಲ್ಲ ಈಗ ಬೇರೆ ಒಂದು ಕಡೆ ಕೊಟ್ಟಿದ್ದೇನೆ ಜಾತಕ, ಆ ಮಾಣಿ  ದೊಡ್ಡ ಕಂಪೆನಿಯಲ್ಲಿ  ಒಳ್ಳೆ ಕೆಲಸದಲ್ಲಿ   ಬೇರೆ ಇದ್ದಾನೆ. ಬಹುಷಃ ಅಸ್ಟ್ರೇಲಿಯ ಇಂಗ್ಲಂಡೊ ..ಅಲ್ಲಿದ್ದಾನ. ಬಹುಶಃ ಮಗಳು ಕೂಡ ಅದನ್ನೇ ನೋಡಿಯಾಳು.”
ಭಟ್ಟರಿಗೆ ಇದೆಲ್ಲ ಮಾಮೂಲಿ ಮಾತುಗಳು. ಬ್ರಾಹ್ಮಣರ ಹುಡುಗಿಯರಿಗೆ ಈ ಮಾದರಿ ಡಿಮಾಂಡು ಬಂದಮೇಲೆ ಅವರು ಹೇಳಿದ್ದೇ ಮಾತು. ತಾನು ತಂದ ಹುಡುಗ ನಾಗೇಶನಿಗೆ ಕೆಲಸ ಹೇಳುವಂತಹುದು ಏನೂ ಇಲ್ಲ. ಹಾಗೆಂದು ಅವನಿಗೆ ಕೆಲಸ ಮಾಡಿ ಬದುಕುವ ಅನಿವಾರ್ಯತೆಯೂ ಇಲ್ಲ.  ಹತ್ತಿರದ ನಗರದಲ್ಲಿ ಎರಡು ಫ್ಲಾಟ್ ಬಾಡಿಗೆ, ಒಂದು ವ್ಯಾಪಾರ   ಮನೆಯಲ್ಲಿ ತೋಟ ಅದು ಇದು ಅಂತ.. ಇರುವ ಒಬ್ಬನೇ ಮಗ. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸಂಭಾವಿತ ಹುಡುಗ...
ಹೌದು ಹುಡುಗ ನಾಗೇಶನ ಬಗ್ಗೆ ಈಚಣ್ಣ ಚೆನ್ನಾಗಿ ಬಲ್ಲರು. ಬಹಳ ಸಾಧು. ತೀರ ಅಪರಿಚಿತ ಏನೂ ಅಲ್ಲ. ಆದರೂ ನಾನು ಸೋಲ ಬಾರದಲ್ಲ. ಸುನಂದ ಇತ್ತೀಚೆಗಷ್ಟೆ ಎಂ.ಬಿ. ಎ ಮುಗಿಸಿ ಇನ್ನೇನೋ ಕಲೀತಾ ಇದ್ದಾಳೆ. ಅವಳಿಗೂ ಆತುರ ಏನಿಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲುವುದು ಮಾತ್ರವಲ್ಲ ಉತ್ತಮ ಭವಿಷ್ಯದ ಯೋಜನೆ ಹಾಕಿಬಿಟ್ಟಿದ್ದಾಳೆ. ಹಾಗೆ ಹೀಗೆ ಯೋಚಿಸುವ ಹುಡುಗಿಯಲ್ಲ. ತಾನು ಕಲಿತು ಕೆಲಸ ಹಿಡಿದು ತನ್ನ ವಿದ್ಯಾಭ್ಯಾಸಕ್ಕಾಗಿ ಅಪ್ಪ ಮಾಡಿದ ಸಾಲವನ್ನು ತೀರಿಸಿದ ನಂತರೆವೇ ಮದುವೆ ಬಗ್ಗೆ ಯೋಚನೆ ಮಾಡುವ ಅವಳ ಮನಸ್ಸು ಕಂಡಾಗ ಹೆಣ್ಣು ಮಗುವಾದರೇನಂತೆ ಎಷ್ಟೆಲ್ಲಾ ಯೋಚನೆ ಮಾಡ್ತಿದ್ದಾಳೆ. ಮದುವೆಯಾದ ಮೇಲೆ ತನ್ನ ಆದಾಯ ಅಪ್ಪನಿಗೆ ಸಲ್ಲಿಸುವಲ್ಲಿ ಅವಳಿಗೆ ವಿಶ್ವಾಸವಿರೆಲಿಲ್ಲ. ಇದನ್ನೆಲ್ಲ ಈ ಭಟ್ಟರಿಗೆ ಹೇಳುವುದಕ್ಕೆ ಆಗ್ತದೆಯೆ? ಆದರೂ ಭಟ್ಟರು ಬಿಡಲಾರರು. ಭಟ್ಟರು ಒಂದುವಾರದಿಂದ ಬೆನ್ನು ಹತ್ತಿ ಪೋನ್ ಮಾಡಿ ಇಂದಿನವರೆಗೆ ಕಾದಿದ್ದರು. ಇಂದು ಮೇಳದ ಆಟ ಇಲ್ಲಿ ಅಂತ ಗೊತ್ತಿದ್ದ ಕಾರಣ ಏನೂ ಹೇಳುವ ಹಾಗಿಲ್ಲ. ನಾಗೇಶನ ಮನೆ ಇರುವುದು ಇಲ್ಲೆ ಹತ್ತಿರ..!!!
ಪಂಚೆ ಎತ್ತಿ ಕಟ್ಟುತ್ತ ಭಟ್ಟರು ಹೊರಡುವ ಸೂಚನೆಯನ್ನು ತೋರಿಸಿದರು. ಈಚಣ್ಣನನ್ನೇ ನೋಡುವ ಮುಖಭಾವದಲ್ಲಿ ಹಲವಾರು ಭಾವ ಒಂದೇ ಸಲಕ್ಕೆ ಕಂಡ ಹಾಗಾಯಿತು. ನವರಸಗಳನ್ನೂ ರಂಗದಲ್ಲಿ ನಾಜೂಕಾಗಿ ಅಭಿವ್ಯಕ್ತಿಗೊಳಿಸುತ್ತಿದ್ದ ಈಚಣ್ಣನೂ ಆ ಭಾವ ಪ್ರಕಟನೆಗೆ ಬೆರಗಾಗಿ ಹೋದರು. ಅಂದು ಆಟ ಆಡಿಸಿದ ಶೆಟ್ಟರ ಮನೆಯ ಹಿಂದಿನ ಗುಡ್ಡ ಹತ್ತಿ ಇಳಿದು ಚಿಕ್ಕ ತೊರೆಯನ್ನು ಸಂಕವನ್ನು ದಾಟಿದರೆ ನಾಗೇಶನ ಮನೆಯ ಬೇಲಿಯ ದಣಪೆಯನ್ನು ದಾಟಬೇಕು. ಅಲ್ಲಿಂದ ಸ್ವಲ್ಪದೂರ ಅವರದೇ ತೋಟದ ಓಣಿಯಲ್ಲಿ ನಡೆದು ಆ ತುದಿಯಲ್ಲಿರುವ ದಣಪೆ ದಾಟಿದರೆ ಒಂದು ಮಣ್ಣಿನ ರಸ್ತೆ. ಇದು ಇತ್ತೀಚೆಗೆ ಆದ ರಸ್ತೆ. ರಸ್ತೆಯ ಕೂಗಳತೆಯಲ್ಲೆ ನಾಗೇಶನ ಮನೆ.
ತೋಟವನ್ನು ಹಾದು ದಣಪೆ ದಾಟಿ ಮಣ್ಣರಸ್ತೆಗೆ ಇಬ್ಬರೂ ಬಂದರು. ದೂರದಲ್ಲಿ  ನಾಗೇಶನ ಮನೆಯ ಗೇಟು ಆ ಬದಿಗೆ ನಿಂತ ಕಾರು ಕಂಡಿತು. ಕಾರಿನ ಪಕ್ಕವೇ ಹೊಸ ಬೈಕು ಕಂಡಿತು. ಇದು ರಸ್ತೆಗೆ ತೆರೆದು ಕಾಣುವಂತೆ ಇದ್ದಹಾಗೆ ಭಾಸವಾಯಿತು. ಅದಕ್ಕೆ ಕಾರಣವಿಲ್ಲದಿಲ್ಲ. ಮದುವೆ ಪ್ರಾಯದ ಗಂಡು ಮಗ ಬ್ರಾಹ್ಮಣರ ಮನೆಯಲ್ಲಿದ್ದರೆ ಆ ಮನೆಯ ಸಿರಿವಂತಿಕೆ ಅಲ್ಪ ಸ್ವಲ್ಪ ಹೊರಗೆ ಪ್ರದರ್ಶನವಾಗದಿದ್ದರೆ ಹೇಗೆ? ಗೇಟು ತೆರೆದು ಸೂಕ್ಷ್ಮವಾದ ದೃಷ್ಟಿಯನ್ನು ಬೀರುತ್ತ ನಿಧಾನವಾಗಿ ಮನೆಯ ಅಂಗಳಕ್ಕೆ ಬಂದು ನಿಂತಾಗ ಈಚಣ್ಣ ದಂಗಾಗಿ ಬಿಟ್ಟರು.
          (ಮುಂದೆ ಭಾಗ ೨ರಲ್ಲಿ)

Sunday, August 19, 2012

ಯಕ್ಷ ಪಾಂಚಾಲಿ




ಹಸ್ತಿನಾವತಿಯ ರಾಜಸಭೆಯಲ್ಲಿ ದುಶ್ಯಾಸನನ ಧಾಳಿಗೆ ನಲುಗಿದ ದ್ರೌಪದಿ ಅವಮಾನದಿಂದ ಬೆಂದು ಯಾಚನೆಯ ದೃಷ್ಟಿಯಿಂದ ಸಭೆಯನ್ನು ದಿಟ್ಟಿಸುತ್ತಾಳೆ. ತಲೆ ತಗ್ಗಿಸಿ ಕುಳಿತ ತನ್ನ ಐವರು ಗಂಡಂದಿರ ಮುಖ ಕಾಣಿಸುವುದಿಲ್ಲ. ಭೀಷ್ಮ ಧೃತರಾಷ್ಟ್ರ ದ್ರೋಣ....ಹೀಗೆ ಹಸ್ತಿನೆಯ ಸಮಸ್ತ ಹಿರಿಯರನ್ನು ಕಾಡುತ್ತಾಳೆ ಬೇಡುತ್ತಾಳೆ. ಎಲ್ಲವೂ ಮೌನವಾದಾಗ ಕೈಯಲ್ಲಿ ಬಿಗಿಯಾಗಿ ಹಿಡಿದ ಸೀರೆ, ತೊಟ್ಟಿಕ್ಕುವ ಕಣ್ಣೀರು  .ಸುತ್ತಲೂ ನೋಡುವ ಆ ದ್ರೌಪದಿಯ ಹತಾಶೆಯನೋಟ ಏನೂ ಮಾಡಲೂ ತೋಚದೆ ದಯನೀಯ ಸ್ಥಿತಿಯ ಅನಾವರಣವಾಗುತ್ತಿದ್ದಂತೆ ಸ್ತಬ್ಧವಾದ ನಿಶ್ಯಬ್ದ ಸಭೆ ಹಸ್ತಿನಾವತಿಯ ಸಭೆಯಲ್ಲಿ ತಮ್ಮನ್ನು ಅವಾಹಿಸಿಕೊಂಡು ಮೈಮರೆಯುವ ಸನ್ನಿವೇಶ...  ಹಿನ್ನೆಲೆಯಲ್ಲಿ ಭಾಗವತರ ಪದ   “ಕರುಣದಿ ಕಾಯೋ ಗೋವಿಂದ...ನಿನ್ನ ಮೊರೆಯ ಹೊಕ್ಕೆನು ವಸುದೇವ ಕಂದ..” ಭಗವಂತನ ಮೊರೆಯಿಡುವ ದಯನೀಯ ಸ್ಥಿತಿಯ ಪಾಂಚಾಲಿ ತನ್ನೆರಡುಕೈಯನ್ನು ಬಿಟ್ಟಾಗ ಇಡೀ ಸಭೆಯೇ ಸ್ತಬ್ದ...  ಇದು ಕರ್ನಾಟಕ ಮೇಳದ ದಶಕಗಳ ಹಿಂದಿನ ಒಂದು ಪ್ರಸಂಗದ ಸನ್ನಿವೇಶ. 

ಅಲ್ಲಿ ಬಂದವರಿಗೆ ಅದೆಷ್ಟನೇ ಸಲವೋ ಅಕ್ಷಯಾಂಬರ ವಿಲಾಸ ಪ್ರಸಂಗ ದರ್ಶನವಾಗುತ್ತಿರುವುದು, ಮಹಾಭಾರತ ಕಥೆಯ ಪ್ರತಿ ಸನ್ನಿವೇಶ ಅರಿವಿದ್ದವರೂ ನಿಂತಲ್ಲೇ ಕುಳಿತಲ್ಲೇ ಗಲ್ಲಕ್ಕೆ ಕೈ ಊರಿ ಕಲ್ಲಾಗುವ ದೃಶ್ಯ,   ಪ್ರತಿಸಲವೂ ಹಸ್ತಿನಾವತಿಯ ರಾಜಸಭೆಯ ಅಂಗ ತಾವಾದಂತೆ ಬೆಕ್ಕಸ ಬೆರಗಾಗಿ ತನ್ಮಯರಾಗುವ ಅನುಭವಿದೆಯಲ್ಲ? ಅದು ಯಕ್ಷಗಾನದ ಅಂತರಂಗದ ಸತ್ವ. ದ್ರೌಪದೀ ವಸ್ತ್ರಾಪಹಾರ ಕಥೆ ತಿಳಿಯದವರು ಯಾರು? ಆದರೂ ರಂಗಸ್ಥಳಕ್ಕೆ ಅನುರೂಪವಾಗಿ ಸಭೆಯ ಈ ಉತ್ಕಟ ಭಾವಾವೇಶ ಯಾಕೆ? ಇದೆಲ್ಲವೂ ಸಹಜ ಅನ್ನಿಸುವುದು ಕೋಳ್ಯೂರು ರಾಯರ ಅಗ್ನಿಸಂಭವೇ ದ್ರೌಪದಿ ರಂಗಸ್ಥಳದಲ್ಲಿ ಭಾವಾವೇಶಗೊಂಡಾಗ. 

ಯಕ್ಷಗಾನ ಅದರಲ್ಲೂ ತೆಂಕುತಿಟ್ಟು ಯಕ್ಷಗಾನ ವೀರರಸಭರಿತ ಇದರಲ್ಲಿ ಅಬ್ಬರದ ವೀರಾವೇಶದ ಗಂಡು ವೇಷಗಳಿಗೇ ಮಹತ್ವ. ಹಲವಾರು ಪ್ರಸಂಗಗಳು ಇಂತಹ ಪಾತ್ರಗಳೊಂದಿಗೆ ಗಿರಕಿ ಹೊಡೆಯುವುದನ್ನು ಕಾಣಬಹುದು. ದೇವಿ ಮಹಾತ್ಮೆಯಲ್ಲಿ ದೇವಿ ಯಾರು ಎನ್ನುವುದು ಮಹತ್ವವನ್ನು ಕಾಣುವುದಿಲ್ಲ. ಬದಲ್ಲಗಿ ಮಹಿಷ. ಚಂಡ ಮುಂಡ, ರಕ್ತಬೀಜ ಈ ವೇಷಗಳ ಬಗ್ಗೆ ಕುತೂಹಲ. ಇವುಗಳ ಪ್ರವೇಶವಾಗುವಾಗ ಆಸನದ ತುದಿಗೆ ಪೃಷ್ಠವನ್ನು ತಂದು ನೆಟ್ಟಗಾಗುವವರು ಎಷ್ಟು? ಇಂತಹ ವೀರ, ರೌದ್ರಾವತಾರದ ವೇಷಗಳೊಂದಿಗೆ ಸಡ್ಡು ಹೊಡೆಯುತ್ತ ಸೀತೆಯೋ ಮಂಡೋದರಿಯೋ ಸೈರಂಧ್ರಿಯೋ ಆಗಿ ರಾಯರು ವಿಜ್ರಂಭಿಸಿದರೆ ಅದು ರಾಯರ ಅಂತಸತ್ವ ದರ್ಶನವಾದಂತೆ.

ಹೀಗೇ ಕೋಳ್ಯೂರು ರಾಮಚಂದ್ರ ರಾಯರ ಗತಕಾಲದ ವೈಭವಗಳ ನೆನಪುಗಳು ಅಂದು ಯುವನಿಕ ರಂಗಮಂದಿರವನ್ನು ಬಿಡುವಾಗ ಮನಸ್ಸಿನ ತುಂಬ ವ್ಯಾಪಿಸಿತ್ತು. ಅಂದು ಬೆಂಗಳೂರಿನ ಯುವನಿಕ ಸಭಾಂಗಣದಲ್ಲಿ ಕೋಳ್ಯೂರರಿಗೆ ಸನ್ಮಾನವನ್ನು ಕಂಡು ಹೊರಬರುತ್ತಿದ್ದಂತೆ ಕೋಳ್ಯೂರು ಎಂಬ ಮಹಾನ್ ಕಲಾವಿದರಿಗೆ ಅರ್ಥಪೂರ್ಣ ಸನ್ಮಾನವಯಿತಲ್ಲ ಎಂಬ ತೃಪ್ತಿಯ ಭಾವ ಹೃದಯದಲ್ಲಿ ತುಂಬಿತ್ತು. ಪ್ರಶಸ್ತಿ ಸ್ವೀಕರಿಸಿ ಕೋಳ್ಯೂರರಿಗೆ ಆಗಬೇಕಾದ್ದೇನೂ ಇಲ್ಲ. ಆದರೆ ನೆರವೇರಿಸಿದ ಯಕ್ಷಪ್ರಭ ಸಂಘದ ಭಾರವಾಹಿಗಳು ಅಂದು ಸಂತೋಷದಲ್ಲಿ ನಿದ್ರಿಸಿರಲಾರರು. ಉತ್ತಮ ಶಿಸ್ತುಬದ್ದ ಕಾರ್ಯಕ್ರಮ .. ಬಹುಶಃ ಇದಕ್ಕೂ ಕೋಳ್ಯೂರರ ವ್ಯಕ್ತಿತ್ವವೇ ಕಾರಣವಿರಬಹುದು. ಅರ್ಥ ಪೂರ್ಣ ಕಾರ್ಯಕ್ರಮ, ಅದು ಕೋಳ್ಯೂರರ ಹಿರಿಯ ಒಡನಾಡಿಗಳ ಸ್ಮರಣೆಯೊಂದಿಗೆ ಎಂಬುದು ಇನ್ನೂ ಹೆಚ್ಚು ಅರ್ಥವನ್ನು ಕಂಡುಕೊಳ್ಳುತ್ತದೆ. 

ಹಿರಿಯ ಕಲಾವಿದರಾದ  ಬೋಳಾರ ನಾರಾಯಣ ಶೆಟ್ಟಿ ಮತ್ತು ಮಲ್ಪೆ ರಾಮದಾಸ ಸಾಮಗ, ಇವರ ಸ್ಮರಣೆಯಲ್ಲಿ ಈ ಪ್ರಶಸ್ತಿ ಕೋಳ್ಯೂರರ ಮುಡಿಗೇರಿದ್ದು ಬಹಳ ಅರ್ಥವನ್ನು ತರುತ್ತದೆ.  ಬೋಳಾರರು ರಾವಣ, ಕಂಸ, ಹಿರಣ್ಯಕಶಿಪು ಮುಂತಾದ ಖಳ ಪಾತ್ರಗಳಿಗೆ ಹೆಸರಾದರೆ, ಸಾಮಗರು ರಾಮ ಕೃಷ್ಣ... ಪರಮೇಶ್ವರನಂತಹ ದೈವೀ ಸ್ವಭಾವದ ಪಾತ್ರಗಳಿಗೆ ಹೆಸರಾದವರು. ಹೀಗೆ ಪೌರಾಣಿಕ ಪ್ರಸಂಗದಲ್ಲಿ ಸಹಜವಾಗಿ ಸುರಾಸುರ ಸ್ವಭಾವದ ಮಧ್ಯೆ ಬರುವ ಸ್ತ್ರೀ ಪಾತ್ರವನ್ನು ಎರಡು ಬದಿಯಿಂದ ಕಟ್ಟಿ ಬೆಳೆಸುವಂತೆ  ಹಿರಿಯ ಸಮರ್ಥ ಕಲಾವಿದರು ಮಾಡಿದ್ದರೆ ಅವರನ್ನು ಸ್ಮರಿಸುವುದು ಮತ್ತು ಆ ನಿಟ್ಟಿನಲ್ಲಿ ಕೋಳ್ಯೂರನ್ನು ಸ್ಮರಿಸುವುದು ಅದರ ಔಚಿತ್ಯದ ಔನ್ನತ್ಯವನ್ನು ತೋರಿಸುತ್ತದೆ. ಈಗೀಗ ಇಂತಹ ಸದ್ಭಾವನೆ ಪ್ರಚೋದಿಸಲ್ಪಡುವ ವ್ಯಕ್ತಿಗಳಿಗೇ  ಪ್ರಶಸ್ತಿಯನ್ನು ಕೊಡುವುದು ಸೂಕ್ತ ಅನ್ನಿಸಬಹುದು. ಯಾಕೆಂದರೆ  ಪ್ರಪಂಚದಲ್ಲಿ ಪ್ರಶಸ್ತಿ ತನ್ನ ಮೌಲ್ಯವನ್ನೇ ಕಳೆದುಕೊಂಡಿದೆ.   ಆದರೆ ಇಲ್ಲಿ ಈ ಅಯ್ಕೆಯಿಂದ  ಈ ಪ್ರಶಸ್ತಿಗೇ ಸ್ ಮೌಲ್ಯ ಬಂದಿದೆ ಅನ್ನಿಸುತ್ತದೆ.

ಸಮಾರಂಭದಲ್ಲಿ ಹಲವು ಗಣ್ಯರು ಹಿರಿಯ ಕಲಾವಿದರನ್ನು ಮತ್ತು ಅವರ ವಿಶೇಷತೆಗಳನ್ನು ಸ್ಮರಿಸಿದರು. ಸಾಮಗರ ಹತ್ತು ಹಲವು ವಿಶೇಷತೆಗಳನ್ನು ಬಹಳ ಸುಂದರವಾಗಿ ಶ್ರೀ ವಸಂತ ಭಾರಧ್ವಾಜರು ಹೇಳಿದರೆ ಬೋಳಾರರ ಬಗ್ಗೆ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿಯವರು ಸ್ಮರಿಸಿದರು. 

ಕೋಳ್ಯೂರರು ಪ್ರಶಸ್ತಿ ಸ್ವೀಕರಿಸಿ ತಮ್ಮ ಹಲವು ಅನುಭವಗಳನ್ನು ಹಂಚಿಕೊಂಡರು. ಯಕ್ಷಗಾನದಲ್ಲಿ ಬೋಳಾರರಂತಹ ಸದ್ಗುಣ ಸಂಪನ್ನ ವ್ಯಕ್ತಿ ಬರಲೆ ಇಲ್ಲ ಎಂಬುದನ್ನು ಹಲವು ಸಲ ಹೇಳಿದರು. ಅವರೊಂದಿಗಿನ ರಂಗ ಸ್ಥಳ ಚೌಕಿ ಮತ್ತು ಮೇಳದ ಬಿಡಾರದ ( ಈ ಮೂರೂ ಯಕ್ಷಗಾನ ಕಲಾವಿದ ಯಾವಾಗಲೂ ಇರುವ ಮೂರು ಮನೆಗಳು. ಅದು ಬಿಟ್ಟರೆ ಕಲಾವಿದನಿಗೆ ಬೇರೆ ಇಲ್ಲ) ಜೀವನವನ್ನುಅತ್ಯಂತ ಭಾವುಕವಾಗಿ ಹೇಳಿದರು. ಹಾಗೇ ತಮ್ಮೊಂದಿಗೆ ಯಕ್ಷದಂಪತಿಯ ಅನ್ವರ್ಥಕ್ಕೆ ಕಾರಣರಾದ ಹಿರಿಯ ಕಲಾವಿದರಾದ ಸಾಮಗರನ್ನು ಕಳೆದುಕೊಂಡ ಮೇಲೆ ಗಂಡನಿಲ್ಲದ ಹೆಂಡತಿಯಂತಾಗಿದ್ದೇನೆ ಎಂದು ಹೇಳಿದರು. ಯಾವುದೂ ಅತಿಶಯವೆಂದು ಅನ್ನಿಸಲೇ ಇಲ್ಲ. 

ಕೋಳ್ಯೂರು ತಾವು ಬೆಳೆದು ಬಂದ ಯಕ್ಷಗಾನದ ಅಂಗಳ ಇಂದು ಎಷ್ಟು ಕೊಳಕಾಗಿದೆ ಎಂದು ನೋವಿನಿಂದ ಹೇಳಿ..ಯಕ್ಷಗಾನದಲ್ಲಿ ಅಭಾಸಗಳು ನಿಯಂತ್ರಣ ವಾಗಬೇಕಾದರೆ ಪ್ರೇಕ್ಷಕ ಮನಸ್ಸು ಮಾಡಿ ಪ್ರತಿಭಟಿಸಬೇಕು. ರಂಗಸ್ಥಳದಲ್ಲಿ ಯಕ್ಷಗಾನ ಚೌಕಟ್ಟನ್ನು ಮೀರುತ್ತದೆ. ರಾಮಾಯಣ ಮಹಾಭಾರತ ಮುಂತಾದ ಪೌರಾಣಿಕ ಕಥೆಗಳನ್ನೊಳಗೊಂಡ ಪ್ರಸಂಗಗಳು ಆಯಾಯ ಕಾಲವನ್ನೇ ತೋರಿಸಬೇಕು. ಕಲಿಕಾಲಕ್ಕೆ ಯಕ್ಷಗಾನ ಬರಬಾರದು. ಅಂದರೆ ವರ್ತಮಾನಸ ಸಂಗತಿಗಳು ರಂಗಸ್ಥಳದಲ್ಲಿ ಬರಬಾರದು. ಕಲಾವಿದ ರಂಗಸ್ಥಳ ತ್ರೇತಾ ದ್ವಾಪರ.ಯುಗಗಳನ್ನು ಬಿಟ್ಟು ವ್ಯವರಿಸಿದರೆ ಅದು ಅಭಾಸವಾಗುತ್ತದೆ. ಹೀಗೆ ಯಕ್ಷಗಾನ ಹಾದಿ ತಪ್ಪುವಾಗ ಚಪ್ಪಾಳೆ ಬಡಿವ ಬದಲು ಕಲ್ಲು ಬಡಿಯಬೇಕು. ಇದು ಅವರು ಬಹಳ ನೋವಿನಿಂದ ಹೇಳಿದಂತಹ ಮಾತು.
ಹೌದಲ್ಲವೇ? ಇಂದು ಯಕ್ಷಗಾನ ರಂಗಸ್ಠಳವನ್ನು ಬಿಟ್ಟು ಸಭೆಯನ್ನೇ ಅತಿಕ್ರಮಿಸ ತೊಡಗಿದೆ. ರಂಗಸ್ಥಳವನ್ನು ಬಿಟ್ಟ ಅಟ ಅದು ಯಕ್ಷಗಾನವಲ್ಲ. ಸಿಡಿ ಮದ್ದು ಪಟಾಕಿಯೊಂದಿಗೆ ವಾದ್ಯದ ಸದ್ದಿಗೆ ಬರುವ  ಮಹಿಷ ಮುಂತಾದ ವೇಷಗಳು ರಂಗಸ್ಥಳವನ್ನು ಬಿಟ್ಟೇ ವ್ಯವಹರಿಸುತ್ತಿವೆ. ಇಂದಿನ ಹವ್ಯಾಸಿಗಳಾಗಲಿ ವೃತ್ತಿಪರರಾಗಲೀ ಅದುವೇ ಯಕ್ಷಗಾನ ಎಂದು ಬಿಂಬಿಸಿಕೊಳ್ಳುತ್ತಾರೆ. ಹೀಗೆ ಸಾಗಿದರೆ ಯಕ್ಷಗಾನದ ರೂಪ ಯಾವರೀತಿಯಲ್ಲಿ ಬದಲಾಗಬಹುದು? 

ರಂಗಸ್ಥಳವನ್ನು ಬಿಟ್ಟ ಯಕ್ಷಗಾನದ ಬಗ್ಗೆ ಸ್ವಾರಸ್ಯವಾದ ಘಟನೆಯೊಂದು ಮೊನ್ನೆ ಸ್ಮರಣೆಗೆ ಬಂದು. ಬ್ರಹ್ಮ ಕಪಾಲ ಪ್ರಸಂಗದ ಈಶ್ವರನಾದ ಸಾಮಗರು.., ಈಶ್ವರ ಬೇಡುತ್ತಾ ಸಾಗುವ ಸನ್ನಿವೇಶದಲ್ಲಿ ಸಭೆಯಲ್ಲಿ ತಟ್ಟೆ ಹಿಡಿದುಕೊಂಡು ಹೋದಾಗ ಸಭೆಯಲ್ಲಿ ಇದ್ದ ಹಿರಿಯ ಕಲಾವಿದರಾದ ದೇರಾಜೆಯವರು ಕೈಲ್ಲಿದ್ದ ಸಿಗರೇಟ್ ತುಂಡನ್ನೇ ತಟ್ಟೆಗೆ ಹಾಕಿದರಂತೆ. ಸಾಮಗರು ಕಾರಣ ಕೇಳಿದಾಗ... ದೇರಾಜೆಯವರು ಹೇಳಿದ ಮಾತು ಶಿವ ಅದು ರಂಗಸ್ಥಳದಲ್ಲಿದ್ದಾಗ ಮಾತ್ರ... ಸಭೆಗೆ ಬಂದರೆ ಬರೀ ಸಾಮಗ..ರಂಗಸ್ಥಳವನ್ನು ಬಿಟ್ಟು ವೇಶ ಬರಬಾರದು ಬಂದು ವ್ಯಹರಿಸಬಾರದು. ಅಂದಿನಿಂದ ಸಾಮಗರು ಆ ರೀತಿ ಸಭೆಯಲ್ಲಿ ಹೋಗುವುದನ್ನು ನಿಲ್ಲಿಸಿದರಂತೆ. ಗಮನಿಸಿ..ಬ್ರಹ್ಮ ಕಪಾಲದದ ಈಶ್ವರ ಎಂದರೆ ಸಾಮಗರ ಅತ್ಯುತ್ಕೃಷ್ಟ ವೇಷಗಳಲ್ಲಿ ಒಂದು. ಅಂತಹ ವೇಶ ರಂಗಸ್ಥಳ ಬಿಟ್ಟು ಬಂದಾಗ ಆ ರೀತಿಯ ಪ್ರತಿಕ್ರಿಯೆಯನ್ನು ಹಿರಿಯ ಕಲಾವಿದರು ಮಾಡಬೇಕಿದ್ದರೆ ವಿಷಯದ ಗಾಂಭೀರ್ಯದ ಅರಿವಾಗಬಹುದು. ಯಕ್ಷಗಾನ ರಂಗಸ್ಥಳದ ಚೌಕಟ್ಟಿನೊಳಗೇ ಇರಬೇಕು.

ಯಕ್ಷಗಾನದಲ್ಲಿ ಕೋಳ್ಯೂರರ ಯಾವುದೇ ಪಾತ್ರವಾಗಿರಲಿ ಅದನ್ನು ಅಷ್ಟು ಮುತುವರ್ಜಿಯಿಂದ ಕಟ್ಟಿ ಬೆಳೆಸುತ್ತಾರೆ. ಸ್ತ್ರೀಪಾತ್ರದ ಯಾವುದೇ ಸ್ವಭಾವಗಾಗಲೀ.. ಸೀತೆಯ ಕರುಣಾರಸ, ದ್ರೌಪದಿ ಪಾತ್ರದ ವಿಭಿನ್ನ ಸ್ವಬಾವಗಳು.. ಪ್ರಭಾವತಿಯಾಗಿ ದಾಕ್ಷಾಯಿಣಿಯಾಗಿ ವೀರ ಸ್ತ್ರೀ ವೇಷಗಳಾದ ಶಶಿಪ್ರಭೆ ಪ್ರಮೀಳೇ ಹೀಗೆ ಯಾವುದೇ ಪಾತ್ರಗಳನ್ನು ಅಷ್ಟು ಸಮರ್ಥವಾಗಿ ಭಾವ ತುಂಬಿ ಅಭಿನಯಿಸುವ ಕಲಾವಿದರನ್ನು ನಾನು ಕಾಣಲಿಲ್ಲ. ಇಂದು ಸ್ತ್ರೀವೇಶವೆಂದರೆ ಬರೀ ಶೃಂಗಾರಕ್ಕೆ ಮತ್ತು ಅವಧಿ ಮೀರಿದ ನಾಟ್ಯಕ್ಕೇ ಸೀಮಿತಗೊಂಡಿದ್ದರೆ ಕೋಳ್ಯೂರರಂತೆ ಬಹುಮುಖ ವ್ಯಕ್ತಿತ್ವದ ಸ್ತ್ರೀಪಾತ್ರ ದರ್ಶನ ತೆಂಕು ಬಡಗು ಎರಡರಲ್ಲೀ ಎಲ್ಲೂ ಕಾಣುವುದಕ್ಕೆ ಸಿಗದು. ಅದು ಕೋಳ್ಯೂರರ ಕಲಾವಂತಿಕೆ. ಯಾವುದೇ ಪಾತ್ರವನ್ನು ಇಂದಿಗೂ ಪಾತ್ರವಾಗಿ ಅದರ ಒಳ ಹೊಕ್ಕು ಅಭಿನಯಿಸುತ್ತಾರೆ. ಭಾವಾವೇಶಕ್ಕೆ ಒಳಗಾಗಿಬಿಡುತ್ತಾರೆ. ಇತ್ತೀಚೆಗೆ ತಾಳಮದ್ದಲೆಯೊಂದರಲ್ಲಿ ಕೀಚಕ ವಧೆಯ ಸೈರಂಧ್ರಿಯನ್ನು ನೋಡುವ ಭಾಗ್ಯ ನನ್ನದಾಯಿತು. ಅಂದು ಕೋಳ್ಯೂರರ ಸೈರಂಧ್ರಿ ಭಾವಾವೇಶದಿಂದ ಕಣ್ಣೀರ್ಗರೆದು ನೆರೆದವರನ್ನು ಅಳುವಂತೆ ಮಾಡಿದ್ದು ಇಂದಿಗೂ ಕೋಳ್ಯೂರರ ಕಸುವು ಏಷ್ಟು ಕಠಿಣವಾಗಿದೆ ಎಂದು ತೋರಿಸುತ್ತದೆ. ಮಂಡೋದರಿಯಾಗಿ ಅತ್ತು ಬಿಡುತ್ತಾರೆ, ದ್ರೌಪದಿಯಾಗಿ ವೀರಾವೇಶ ತಾಳುತ್ತಾರೆ. ಯಾವುದೇ ಪಾತ್ರವಾಗಲೀ ಸಮಾನವಾಗಿ ಅದಕ್ಕೆ ನ್ಯಾಯ ಒದಗಿಸುವಲ್ಲಿ ಕೋಳ್ಯೂರರಿಗೆ ಸರಿ ಸಾಟಿ ಖಂಡಿತ ಯಾರು ಇಲ್ಲ
.
ಕೋಳ್ಯೂರರು ಪೌರಾಣಿಕ ಪ್ರಸಂಗಗಳಂತೆ ತುಳು ಪ್ರಸಂಗಗಳಲ್ಲೂ ಪಾತ್ರಗಳನ್ನು ಕಟ್ಟಿ ಬೆಳೆಸಿದ್ದಾರೆ. ಅದು ಸಿರಿ ಮಹಾತ್ಮೆಯ ಸಿರಿಯಾಗಿರಬಹುದು, ಕಾಡ ಮಲ್ಲಿಗೆಯ ಬೊಮ್ಮಕ್ಕೆಯಾಗಿರಬಹುದು ಅದನ್ನು ಇನ್ನೊಬ್ಬರು ನಿರ್ವಹಿಸುವುದು ಅಸಾಧ್ಯ. ಆದರೂ ಅವರ ಪೌರಾಣಿಕ ಪಾತ್ರಗಳ ಆ ಹಿರಿಮೆ ತುಳು ಪಾತ್ರಗಳಿಗೆ ಬರುವುದಕ್ಕೆ ಸಾಧ್ಯವೇ ಇಲ್ಲ.  ದುರಂತ ಎಂದರೆ, ಇಂದು ಕೋಳ್ಯೂರರನ್ನು ನೆನಪಿಸುವಾಗ ಅವರ ಬೊಮ್ಮಕ್ಕನ ಪಾತ್ರವನ್ನು ಬೇಗನೇ ನೆನಪು ಮಾಡಿಕೊಂಡು ಹೇಳತೊಡಗುತ್ತಾರೆ. ಆದರೆ ಅದಕ್ಕಿಂತಲೂ ಶ್ರೇಷ್ಠ ಪೌರಾಣಿಕ ಪಾತ್ರಗಳು ನೆನಪಿಗೆ ಬರುವುದೇ ಇಲ್ಲ. ಮನುಷ್ಯನ ಅಭಿರುಚಿಯ ಮಟ್ಟವನ್ನು ಇದು ತೋರಿಸುತ್ತದೆ. ನಿಜಕ್ಕೂ ಅಂತಹ ಪಾತ್ರಗಳಿಗೆ ಪೌರಾಣಿಕ ಪಾತ್ರಗಳ ಹಿನ್ನೆಲೆ ಇರುವುದಿಲ್ಲ. ಒಂದು ಸೀತೆ, ಕೈಕೇ, ಮಂಥರೆ, ದ್ರೌಪದಿ ಅಥವಾ ಮಂಡೊದರಿ ಇಲ್ಲ ದಾಕ್ಷಾಯಿಣಿ  ಅಥವಾ ಅಂಬೆ  ಮುಂತಾದ ಹಲವು ಪಾತ್ರಗಳಿಗೆ ಪೂರಕವಾಗಿ ಹಲಾವರು ಉಪಕಥಗಳು ಪಾತ್ರಗಳು ಸುತ್ತಿಕೊಂಡಿರುತ್ತವೆ. ಬೊಮ್ಮಕ್ಕೆಯಾಗಲಿ ಮಗುದೊಂದಾಗಲಿ ಅದಕ್ಕೆ ಅದೇ ಎಂಬಲ್ಲಿಗೆ ಸೀಮಿತ. ಇಲ್ಲಿ ಕೋಳ್ಯೂರ ಕಲಾವಂತಿಕೆ ಪೌರಾಣಿಕ ಪಾತ್ರಗಳಂತೆ ಉಪಯೋಗಿಸಲ್ಪಡಲಿಲ್ಲ ಅಂತ ಹೇಳಬಹುದು. ಅವರ ಭಾವಾವೇಶದ ದರ್ಶನ ಆಗುವುದು ಪೌರಾಣಿಕ ಪಾತ್ರಗಳಲ್ಲಿ. ಆದರೆ ಇಂದು ಬೊಮ್ಮಕ್ಕೆಯಾಗಿ ಕೋಳ್ಯೂರರನ್ನು ನೆನೆಸುವುದನ್ನು ಕಂಡಾಗ  ನಿಜವಾದ ಯಕ್ಷಗಾನ ಅಭಿಮಾನಿ ನೋವನ್ನು ಅನುಭವಿಸುತ್ತಾನೆ. 

ಇಂದು ಸ್ತ್ರಿ ಪಾತ್ರವೆಂದರೆ ಅದು ಮಿತಿ ಮೀರಿದ ರೂಪವಿಲ್ಲದ ಕುಣಿತವಾಗಿಬಿಟ್ಟಿದೆ. ನೆಲದಲ್ಲಿ ಇಡುವ ಹೆಜ್ಜೆ ತಟ್ಟೆಯ ಮೇಲೆ ಬಂದು ನಿಂತು ಸರ್ಕಸ್ ಮಾಡುತ್ತಿದೆ. ಅದನ್ನು ಪ್ರೋತ್ಸಾಹಿಸುವ ಪ್ರೇಕ್ಷಕವರ್ಗ ಬೇರೆ.  ಗಂಟೆ ಕಟ್ಟಲೆ ಕುಣಿತ ಅಭಿನಯವೂ ಇಲ್ಲ ನಂತರ ಅರ್ಥಗಾರಿಕೆಯೂ ಇಲ್ಲ. ಏನು ಪ್ರದರ್ಶಿಸುವುದಕ್ಕೆ ರಂಗವೇರುತ್ತಾರೆ ಎಂದು ಸ್ವತಃ ಪಾತ್ರಧಾರಿಗೇ ಅರಿವಿರುವುದಿಲ್ಲ. ಜತೆಗೇ ಇದನ್ನು ಯಕ್ಷಗಾನ ಎಂದು ಬಿಂಬಿಸುವ ಪ್ರಯತ್ನ. ಕೋಳ್ಯೂರರ ಸ್ತ್ರೀ ಪಾತ್ರ ಔಚಿತ್ಯ ಮೀರಿ ಕುಣಿಯುವುದಿಲ್ಲ. ಎಲ್ಲೆ ಮೀರಿ ವರ್ತಿಸುವುದಿಲ್ಲ. ವೇಷ ಪಾತ್ರವಾಗಿಯೇ ಮೈತಳೆಯುತ್ತದೆ.ಅವರ ವೇಷ ಮಿತಿಮೀರಿ ಕುಣಿದದ್ದನ್ನು ಅಥವ ಮಾತಾಡಿದ್ದನ್ನು ಕಂಡವರಿಲ್ಲ. ಅಪ್ಪಟ ಯಕ್ಷಗಾನ ಶೈಲಿಯ ಹಾವಭಾವಗಳು ಕುಣಿತ ಶೈಲಿಗಳು.

ಯಕ್ಷಗಾನದಲ್ಲಿ ಸ್ತ್ರೀಪಾತ್ರಕ್ಕೆ ಒಂದು ವ್ಯಕ್ತಿತ್ವ ಇದೆ ಒಂದು ಆಯಾಮ ಇದೆ ಎಂದು ತೋರಿಸಿಕೊಟ್ಟವರು ಕೋಳ್ಯೂರರು. ಅದು ಯಾವ ರೀತಿಯ ಯಾವ ಬಗೆಯ ಪಾತ್ರವೇ ಆಗಲಿ ಕೋಳ್ಯೂರರಿಗೆ ಅವರೇ ಸಾಟಿ. ಹರಿತವಾದ ಧ್ವನಿ ಸಂಪತ್ತು. ಅಭಿನಯಕ್ಕೆ ಒತ್ತು ಕೊಡುವ ಅಂಗಾಂಗ ಚಲನೆ. ಯಾವ ಭಾವವನ್ನೂ ಅತಿ ಸುಲಭವಾಗಿ ತೋರಿಸುವ ಆ ಮುಖಭಾವ .. ಕಲಾವಿದ ಎನ್ನುವುದು ಇದಕ್ಕೆ ಅಲ್ಲವೇ.? ಯಾವುದೇ ಪ್ರಸಂಗವಾಗಲಿ ಒಂದು ಸ್ತ್ರೀ ಪಾತ್ರ ಪ್ರವೇಶವಾದಾಗ ಪ್ರಸಂಗದ ವೇಗ ಕಡಿಮೆಯಾಯಿತು..ಇನ್ನು ಪ್ರಸಂಗ 
ಚಪ್ಪೆಗುದ್ದುತ್ತದೆ ಅಂತ ಅನ್ನಿಸುವಾಗ ಕೋಳ್ಯೂರರ ಸ್ತ್ರೀ ಪ್ರವೇಶ ಒಂದು ಮಿಂಚಿನ ಸಂಚಾರವನ್ನುಂಟು ಮಾಡುತ್ತದೆ. 
ಕೇವಲ ಯಕ್ಷಗಾನ ಬಯಲಾಟಕ್ಕೆ ಸೀಮಿತವಲ್ಲ ಕೋಳ್ಯೂರರು ತಾಳಮದ್ದಲೆಯಲ್ಲೂ ಅಷ್ಟೇ ನಿರರ್ಗಳವಾಗಿ ಮಾತಾಡಬಲ್ಲರು, ಎದುರಾಳಿಯ ಬೆವರಿಳಿಸಬಲ್ಲರು. ಅರ್ಥಗಾರಿಕೆಯಲ್ಲಿ ಅವರ ಜ್ಞಾನ ಅಪಾರ. ಅದು ಅಂಬೆಯಾಗಿಬರಬಹುದು ಮಂಡೋದರಿಯಾಗಿರಬಹುದು, ವಾಲಿವಧೆಯ ತಾರೆಯಾಗಿರಬಹುದು. ಯಾವುದೇ ಆದರೂ ಕೋಳ್ಯೂರರು ನಿರ್ವಹಿಸುವಾಗ ಇವರು ಯಕ್ಷಗಾನದ ಸ್ತ್ರೀ ಪಾತ್ರಧಾರಿಯೇ ಎಂಬ ಅನುಮಾನ ಯಾಕೆಂದರೆ ಯಕ್ಷಗಾನದ ಸ್ತ್ರೀ ನಿರರ್ಗಳವಾಗಿ ಮಾತಾಡುವುದು ಬಹಳ ಕಡಿಮೆ. ಇಷ್ಟಾದರೂ ಕೋಳ್ಯೂರರದು ಚೌಕಟ್ಟು ಮೀರದ ಪರಿಶುದ್ದ ಯಕ್ಷಗಾನದ ಪಾತ್ರ ಪೋಷಣೆ.

 ಕೋಳ್ಯೂರರ ತಾಳಮದ್ದಲೆಯ ಅರ್ಥಗಾರಿಕೆ ಇಲ್ಲಿದೆ


ನನಗೆ ನಿಜಕ್ಕೂ ಮೊನ್ನೆ ಯಕ್ಷಗಾನವಿಲ್ಲದ ಒಂದು ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮವಾಗಿಬಿಟ್ಟಿತು. ಮಕ್ಕಳ ಯಕ್ಷಗಾನ ಇದ್ದರೂ ನಾನು ಆವರೆಗೆ ಅಲ್ಲಿರಲಿಲ್ಲ. ಯಕ್ಷಗಾನಕ್ಕೆ ಉಳಿಯದೆ ಕೇವಲ ಸಭಾಕಾರ್ಯಕ್ರಮ ಮುಗಿದಾಗ ಸಂತೃಪ್ತಿಯಿಂದ ಬಂದದ್ದು ಇದೇ ಮೊದಲಿರಬೇಕು. ಇದಕ್ಕಾಗಿ ಎದ್ದು ಬರುವಾಗ ಅನಿಸಿದ್ದು ಇದು ಒಂದು ಅರ್ಥ ಪೂರ್ಣ ಕಾರ್ಯಕ್ರಮ, ಇದನ್ನು  ನೆರವೇರಿಸಿದ ಯಕ್ಷಪ್ರಭದ ಭಾರವಾಹಿಗಳು ಪ್ರಶಂಸಾರ್ಹರು
ಮತ್ತೆ ಇನ್ನು ಕೋಳ್ಯೂರರ ಬಗ್ಗೆ ಅವರ ಪಾತ್ರಗಳ ಬಗ್ಗೆ ನನ್ನಂತಹವರು ಹೇಳುವುದು ಅದು ಪರ್ಯಾಪ್ತ ಎನಿಸದು. ಒಂದು ದೊಡ್ಡ ಕೊಪ್ಪರಿಗೆಯಲ್ಲಿದ್ದ ಹಾಲನ್ನು ಅಳೆಯುವುದಕ್ಕೆ ಕೆಲವರು ಸೇರನ್ನೋ , ಕುಡುತೆಯನ್ನೋ ಉಪಯೋಗಿಸಿದರೆ..ಇವರ ಬಗ್ಗೆ ನಾನು ಹೇಳಿದರೆ ಸಣ್ಣ ಸೌಟಿನಿಂದ ಅಳೆದಂತಾದೀತು. ನಮ್ಮ ತಿಳುವಳಿಕೆ ತೀರ ಅಲ್ಪವಾಗಿಬಿಡುತ್ತದೆ. ಅದರೂ ನನ್ನಿಂದಾದಷ್ಟು ಮೊಗೆದು ನೋಡುವ ಆಶೆ. ಸನ್ಮಾನ ಎಂದರೆ ಅದುವೆ. ಸತ್ ಮಾನ.. ಎಂದರೆ ಅಳೆಯಲಿಕ್ಕಾಗದ ಮಾನ.. ಅದೂ  ಒಂದು ಮಾನದಂಡ.
 ಅವರು ಹಲವಾರು ಪಾತ್ರ ಮಾಡಿರಬಹುದು. ಬಹುಶಃ    ಪೌರಾಣಿಕದ ಎಲ್ಲಾ ಬಗೆಯ ಸ್ತ್ರೀಪಾತ್ರಗಳನ್ನು ಯಶಸ್ವಿಯಾಗಿ ಮಾಡಬಲ್ಲ ಪರಿಪೂರ್ಣ ಕಲಾವಿದರು. ಅದು ಸೀತೆ, ಮಂಡೋದರಿ, ದಾಕ್ಷಾಯಿಣಿ, ಅಂಬೆ, ದ್ರೌಪದಿ, ಮಾಯಾ ಹಿಡಿಂಬೆ, ಮಾಯಾ ಶೂರ್ಪನಖಿ.. ಹೀಗೆ ವೈವಿಧ್ಯಮಯ ಪಾತ್ರ ಚಿತ್ರಣಗಳು ಅವರ ನೈಪುಣ್ಯತೆಗೆ ಸಾಕ್ಷಿಯಾಗಿದೆ. ಬರೀ ಸ್ತ್ರೀಪಾತ್ರವಾಗಿರದೇ ಆರಂಭದಲ್ಲಿ ಅವರು ಮಾಡುತ್ತಿದ್ದ ಪುಂಡುವೇಷಗಳನ್ನು ಸ್ಮರಿಸುವವರಿದ್ದಾರೆ. ಚಕ್ರವ್ಯೂಹದ ಅಭಿಮನ್ಯು ಒಂದು ಕಾಲದಲ್ಲಿ ಹೆಸರಾಂತ ಪಾತ್ರವಾಗಿತ್ತಂತೆ. ಅದೇನಿದ್ದರೂ ಮಹಾಭಾರತದ ದ್ರೌಪದಿಯಂತೆ ... ವಿವಿಧ ರೂಪದ ಸ್ತ್ರೀ ಸಂಕೇತ ಅವಳು ಮಹಾಸಾಧ್ವಿಯಾಗಿ ಪತಿವೃತೆಯಾಗಿ ಒಲಿದರೆ ನಾರಿಯಾಗಿ ಮುನಿದರೆ ಮಹಾ ಚಂಡಿಕೆಯಾಗಿ ಬಗೆ ಬಗೆಯ ರೂಪಿನಿಂದ ಕಂಡಂತೆ ಕೋಳ್ಯೂರರು ರಂಗದಲ್ಲಿ ಬಗೆ ಬಗೆಯ ರೂಪದಲ್ಲಿ ಕಂಡ ಪಾಂಚಾಲಿಯಂತೆ. ಸಂಫೂರ್ಣ ಯಕ್ಷ ಪಾಂಚಾಲಿ ಎಂದರೆ ಅದು ಕೋಳ್ಯೂರು ರಾಮಚಂದ್ರ ರಾಯರು.   





Sunday, August 12, 2012

ಯುವ ಗಾನ ಲಹರಿ



ಒಬ್ಬ ಪಳಗಿದ ಓಟಗಾರ ದೂರಗಮನವನ್ನುಆರಂಭಿಸುವಾಗ ನಿಧಾನವಾಗಿ ಆರಂಭಿಸಿ ನಂತರ ವೇಗವನ್ನು ಹೆಚ್ಚಿಸಿಕೊಂಡು ಇನ್ನೇನು ಗಮ್ಯ ಹತ್ತಿರವಿದ್ದು ಓಟ ಮುಕ್ತಾಯ ಹಂತಕ್ಕೆ ಬರುತ್ತಿರಬೇಕಾದರೆ ವೇಗ ಗರಿಷ್ಠವಾಗಿ ಒಂದು ರೀತಿಯ ತುರ್ಯಾವಸ್ಥೆಗೆ ಬಂದು ತಲುಪಿರುತ್ತದೆ. ಸಹಜವಾದ ಮತ್ತು ಸಾಂಪ್ರದಾಯಿಕ ಬೆಳವಣಿಗೆ ಎಂದರೆ ಇದುವೇ. ಆರಂಭದ ವೇಗವನ್ನು ಕೊನೆಯ ಹಂತದವರೆಗೂ ಕಾಯ್ದುಕೊಳ್ಳಲು ಬಹಳಷ್ಟು ಶ್ರಮಿಸಬೇಕಾಗುತ್ತದೆಆದುದರಿಂದ ನಿಧಾನವಾಗಿ ತೊಡಗಿ ಎಲ್ಲವೂ ಒಂದು ಹಂತಕ್ಕೆ ಬಂದಾಗ ನಂತರ ಹಂತ ಹಂತವಾಗಿ ವೇಗವನ್ನು ಪಡೆದುಕೊಳ್ಳುವುದು, ಇದು ಸಾಂಪ್ರದಾಯಿಕ ನಡೆ. ಹೀಗೆ ನಿಧಾನವಾದ ಚಲನೆ ಭದ್ರವಾಗುತ್ತ ಹೋಗುತ್ತದೆ. ಪಂಚಾಗದ ಮೇಲೆ ಕಟ್ಟಿದ ಗೋಡೆಯಂತೆ. ಮೊದಲೆಲ್ಲ ಮಣ್ಣಿನ ಗೋಡೆಯ ಕಾಲ. ಆವಾಗ ಮಣ್ಣಿನ ಗೋಡೆ ಕಟ್ಟಬೇಕೆಂದರೆ ಸ್ವಲ್ಪವೇ ಸ್ವಲ್ಪವೇ ಗೋಡೆಯನ್ನು ಕಟ್ಟುವುದು. ಮೊದಲ ಗೋಡೆಯ ಹಸಿ ಮಣ್ಣು ಒಣಗಿ ಗಟ್ಟಿಯಾದ ಮೇಲೆ,  ಅಷ್ಟರಲ್ಲೇ ಹೊಡಿ ಮಣೆಯಿಂದ ಪೆಟ್ಟು ತಿಂದು ಆ ಗೋಡೆ ಬಹಳಷ್ಟು ಗಡುಸಾಗಿರುತ್ತದೆ  ಗೋಡೆ. ಹೀಗೆ ಗಡುಸಾದ ಗೋಡೆಯ ಮೇಲೆ ನಂತರದ ಗೋಡೆ ಕಟ್ಟುತ್ತಾರೆ.ಒದ್ದೆ ಮಣ್ಣಿನ ಮೇಲೆಯೇ ಅವಸರವಸರವಾಗಿ ಗೋಡೆ ಕಟ್ಟುವಂತಿಲ್ಲ.  ಹೀಗೆ ನಿಧಾನವಾಗಿ ಹಂತ ಹಂತವಾಗಿ ಏರುವ ಗೋಡೆ ಎಂತಹ ಜಡಿ ಮಳೆ ಬಂದರೂ ಕರಗದ ನಿದರ್ಶನ ಕಣ್ಣ ಮುಂದೇ ಇದೆ. ಈ ರೀತಿಯ ನಡೆಗಳು ಇಂದಿನ ಪೀಳಿಗೆಯಲ್ಲಿ ಕಂಡು ಬರುವುದು ತೀರ ವಿರಳ. ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದಲ್ಲಿ ಇಂತಹ ಸಾಂಪ್ರದಾಯಿಕ ನಡೆಗಳು ಅನಿವಾರ್ಯವಾದರೂ ಅದು ಅನುಸರಿಸುವುದು ವಿರಳವಾಗುತ್ತಿದೆಯೇ?
ಇತ್ತೀಚೆಗೆ ಅವಸರದ ಬಿಡುವಿಲ್ಲದ ಸಮಯದ ನಡುವೆ ಒಂದು ವೀಡಿಯೋವನ್ನು ನೋಡುವ ಅವಕಾಶ ಸಿಕ್ಕಿತು. ಒಟ್ಟು ಕಾರ್ಯಕ್ರಮ ಶಿಸ್ತುಬದ್ದವಾಗಿ ಸುಂದರವಾಗಿ ಮೂಡಿಬಂದಿತ್ತು. ಯುವ ಭಾಗವತರುಗಳ ಗಾನವೈಭವ. ಪಟ್ಲ ಸತೀಶ್, ರವಿಚಂದ್ರ ಕನ್ನಡಿ ಕಟ್ಟೆ, ಬಲಿಪ ಶಿವಶಂಕರ ಮತ್ತು ಪ್ರಪುಲ್ಲ ಚಂದ್ರ ಈ ಯುವ ಪ್ರತಿಭಾವಂತರು ಭಾಗವಹಿಸಿದ ಕಾರ್ಯಕ್ರಮ ಬಹಳ ಸುಂದರವಾಗಿ ಅಚ್ಚು ಕಟ್ಟಾಗಿ ಮೂಡಿ ಬಂದಿತ್ತು. ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಬಹಳ ಯಶಸ್ವಿಯಾಯಿತೆಂದೇ ಹೇಳಬಹುದು. ಹೊರನೊಟಕ್ಕೆ ಯಶಸ್ವೀ ಕಾರ್ಯಕ್ರಮ ನಿಜವಾದರೂ ಕೆಲವೊಂದು ಜಿಜ್ಞಾಸೆಗಳು ಮೂಡಿಬಂದದ್ದು ಸುಳ್ಳಲ್ಲ.

ಎಲ್ಲರೂ ಬಿಸಿರಕ್ತದ ಯುವ ಕಲಾವಿದರು. ಪ್ರೇಕ್ಷಕರಲ್ಲೂ ನಿರೀಕ್ಷೇ ಕುತೂಹಲ ಬಹಳಷ್ಟಿರಬಹುದು. ಸ್ವತಹ ಯುವಕಲಾವಿದರಲ್ಲೂ ಇದು ತುಂಬಿಕೊಂಡು ನಿರೀಕ್ಷೆ ಕುತೂಹಲ ನಂತರ ಉದ್ವೇಗಕ್ಕೆ ತಿರುಗಿರಲೂ ಬಹುದು. ಆ ಉದ್ವೇಗ ಆರಂಭದ ಪಲ್ಲವಿಯಲ್ಲೇ ಹೊರಹೊಮ್ಮಿದ್ದು ವಿಶೇಷ. ಮೊದಲ ಹಂತದ ಪ್ರತಿ ಪದದ ಚರಣದಲ್ಲೂ ಅದು ಪ್ರಕಟಗೊಂಡು ಸ್ಪರ್ಧಾತ್ಮಕತೆಯನ್ನು ಗುರಿಯಾಗಿಸಿ ಅದನ್ನೇ ಅವಾಹನೆ ಮಾಡಿಕೊಂಡಂತೆ ಹಾಡತೊಡಗಿದರು. ಸಹಜವಾಗಿ ಬಹಳ ಮೇಲಿನ ಶೃತಿಯಿಂದಲೇ ತೊಡಗಿದಾಗ ಧ್ವನಿವರ್ಧಕದ ಸ್ವರವೇ ಅಧಿಕವಾಯಿತೋ ಎಂಬ ಭ್ರಮೆ. ಆದರೆ ಈ ಲೋಕದಿಂದ ಹೊರಬರಲು ಹೆಚ್ಚು ವೇಳೆ ಬೇಕಾಗಲಿಲ್ಲ... ಮೊದಲ ಹಂತ ಎರಡು ಪದ ಕಳೆದಾಗ ದೊಡ್ಡ ಮಳೆ ಬಂದು ನಿಂತು ಬಿಸಿಲು ಬಂದಂತಾದ ಅನುಭವ.
ಇದ್ದುದರಲ್ಲಿ ಕನ್ನಡಿಕಟ್ಟೆ ಆ ವೇಗವನ್ನು ಆ ರಭಸವನ್ನು ಕೊನೆಯ ವರೆಗೂ ಬಹಳ ಶ್ರಮವಹಿಸಿ ಸಮರ್ಥವಾಗಿ ಕಾಪಾಡಿಕೊಂಡು ಬಂದರೆ  ಪಟ್ಲ ಮತ್ತು ಪ್ರಪುಲ್ಲರು ಮೊದಲ ಎರಡು ಪದ ಬಹಳ ಸುಂದರವಾಗಿ ಮುಕ್ತಾಯಗೊಳಿಸಿದರೂ ನಂತರ ಅದನ್ನು ಮುಂದುವರಿಸುವಲ್ಲಿ ಎಡವಿದಂತೆ ಅನಿಸಿತು.ಆರಂಭದ ಕ್ಷಮತೆ ಮತ್ತೆ ಕಡಿಮೆಯಾಗುತ್ತ ಹೋಯಿತು.ಹಾಗೆಂದು ಕಳಪೆಯೆಂದು ಪರಿಗಣಿಸುವ ಹಾಗಿಲ್ಲ. ಆದರೂ ಆ ಪ್ರಭಾವ ಮತ್ತೆ ತೋರಿಬರಲಿಲ್ಲ. ಸ್ಪರ್ದಾತ್ಮಕ ಮನೋಭಾವವನ್ನು ಗಂಭೀರವಾಗಿ ಪರಿಗಣಿಸಿದಂತೆ ಭಾಸವಾಯಿತು. ಸ್ಪರ್ಧೆಯ ಫಲಾಫಲಗಳ ಬಗ್ಗೆ ಇದ್ದ ಗಮನ ಅಸ್ತಿತ್ವದತ್ತ ಸರಿಯದೇ ಹೋಯಿತು.ಅಸ್ತಿತ್ವ ಗಟ್ಟಿಯಾದಮೇಲೆ ಬೆಳವಣಿಗೆಯತ್ತ ನೋಡಬೇಕು. ಆ ಮನೋಭಾವ ಗೋಚರಿಸದೆ ರಭಸದಿಂದ ಬಿದ್ದ ಮಳೆ ಭೂಮಿಯಲ್ಲಿ ಇಂಗುವ ಮೊದಲೇ ರಭಸದಿಂದ ಹರಿದು ಹೋದಂತೆ ಮಳೆಯೇನೋ ಬಂತು ಆದರೆ ಪರಿಣಾಮ ಮಾತ್ರ ಪ್ರಶ್ನಾರ್ಥಕವಾಯಿತು.
ಉಳಿದಂತೆ ಬಲಿಪ ಶಿವ ಶಂಕರ ನಿಧಾನವಾಗಿ ತೊಡಗಿದುದರಿಂದ ಈ ಸಮಸ್ಯೆ ಅವರ ಗೊಡವೆಗೆ ಬಂದಂತೆ ಇರಲಿಲ್ಲ. ಸಾಂಪ್ರದಾಯಿಕವಾಗಿ ನಿಧಾನವಾಗಿ ಹಾಡುತ್ತಾ ಬಡಿದಿಟ್ಟ ಒಂದೊಂದೇ ಮೊಳೆ ಆಳವಾಗಿ ಭದ್ರವಾಗಿ ನೆಲೆಯೂರಿತು.
ಆರಂಭದ ಹಂತದಲ್ಲಿ ಪಟ್ಲ ಸತೀಶರು ಹಾಡಿದ “ ಆವಲ್ಲಿಗೆ ಪಯಣವಯ್ಯ ಪ್ರಾಣ ಕಾಂತ....” ಸುಧನ್ವ ಮೋಕ್ಷ ಪ್ರಸಂಗದ ಈ ಪದ ಸುಂದರವಾಗಿ ಮೂಡಿ ಬಂತು ಉತ್ತಮ ಹಿಮ್ಮೇಳ ಉತ್ತಮ ಸಹಕಾರಿಯಾಗಿತ್ತು. “ ಕರುಣದಿ ಪೊರೆದೆನ್ನ...” ಪ್ರಪುಲ್ಲಚಂದ್ರ ಸುಂದರವಾಗಿ ಹಾಡಿದರೆ... ಕನ್ನಡಿಕಟ್ಟೆ ರವಿಚಂದ್ರ ಹೇಳಿದ ಹೆಚ್ಚಿನ ಎಲ್ಲ ಹಾಡುಗಳನ್ನು ಉತ್ತಮವಾಗಿ ಪ್ರಸ್ತುತಪಡಿಸಿದರೂ “ಸತಿ ಶಿರೋಮಣಿ ಪ್ರಭಾವತಿ...” ಉತ್ತಮವಾಗಿತ್ತು. ಬಲಿಪ ಶಿವ ಶಂಕರ ಹಾಡಿದ ಅಪರೂಪದ ಪದ “ ಶ್ರೀಕರ ಶತಮುಖನುತ ತ್ರದಶಾ” ಬಹಳ ಉತ್ತಮವಾಗಿತ್ತು. ಕಷ್ಟಕರ ಚಂದಸ್ಸು ರಾಗಬದ್ಧವಾಗಿ ಮೂಡಿಬಂತು. 


ಅತ್ಯಂತ ಪ್ರಸಿದ್ದ ಪದಗಳನ್ನೇ ಆಯ್ಕೆ ಮಾಡುವುದರ ಬದಲಾಗಿ ಇಂತಹ ಕಾರ್ಯಕ್ರಮದಲ್ಲಿ ಅಪರೂಪದ ಪದಗಳನ್ನು ಬಹಳಷ್ಟಾದರೂ ಸೇರಿಸಿಕೊಳ್ಳಬೇಕು. ಕಾರ್ಯಕ್ರಮದ ರಂಜನೆಗೆ ಪ್ರಸಿದ್ದ ಪದಗಳ ಆಯ್ಕೆ ತಪ್ಪಲ್ಲ. ಆದರೆ ಅಪರೂಪದ ಪದಗಳನ್ನು ಹೇಳಿ ಅದರಲ್ಲಿ ತನ್ನ ಪ್ರತಿಭೆಯನ್ನು ತೋರಿಸುವುದು ಕಲಾವಿದನ ನಿಜವಾದ ಸವಾಲಾಗಿರುತ್ತದೆ. ಪ್ರಸಿದ್ದ ಪದಗಳನ್ನು ಹೇಳಿ ಪ್ರಶಂಸೆಗಳಿಸುವುದು ಸಾಮಾನ್ಯ ವಿಷಯವಾಗಿರುತ್ತದೆ. ನಳ ಮಹಾರಾಜ ಬಡಕಲು ಕುದುರೆಯನ್ನು ಆಯ್ಕೆ ಮಾಡಿದಂತೆ ಯಾರೂ ಗಮನ ಹರಿಸದ ಪದಗಳನ್ನು ಹೇಳಿ ಅದರಲ್ಲಿ ಯಶಸ್ಸನ್ನು ಕಾಣುವುದು ಪ್ರತಿಭಾವಂತನ ಲಕ್ಷಣ.
 
ಯಕ್ಷಗಾನದ ಇಂದಿನ ಯುವ ಕಲಾವಿದರಲ್ಲಿ ಅಪಾರವಾದ ಪ್ರತಿಭೆಯಿದೆ. ಹಲವರು ಒಂದಲ್ಲ ಒಂದು ವಿಧದಲ್ಲಿ ಪ್ರತಿಭಾವಂತರು. ಬಹುಶಃ ಬೇರಾವುದೇ ಕಲೆಯಲ್ಲೂ ಕಂಡುಬಾರದ ಅನರ್ಘ್ಯ ಸಂಪತ್ತು ಯಕ್ಷಗಾನ ಕಲೆಯಲ್ಲಿದೆ. ಅದು ಸರಿಯಾದ ದಿಶೆಯಲ್ಲಿ ಪ್ರಕಾಶಿಸಬೇಕು. ಹಿಡಿದ ಕೈದೀಪ ಪ್ರಖರವಾಗಿ ಉರಿದರೆ ಸಾಕೆ? ಅದರ ಪ್ರಖರತೆ ಅಂಧಕಾರದತ್ತ ಹರಿದರೆ ಅದರ ಪ್ರಕಾಶ ಮತ್ತೂ ಪ್ರಕಾಶಮಾನವಾಗುತ್ತದೆ. ಈ ಹಿಂದೆ ಹೇಳಿದಂತೆ ಗುರು ಪಾಠದನಂತರ ಸರಿಯಾದ ಮಾರ್ಗದರ್ಶನಕ್ಕೆ ಯುವ ಮನಸ್ಸು ತೆರೆದುಕೊಂಡು ಪ್ರತಿಭೆಯಗಂಧ ಹರಡುವಂತಾಗಬೇಕು. ಉದ್ವೇಗರಹಿತ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡಾಗ ಜ್ಞಾನದ ಪ್ರಪಂಚವೂ ತೆರದುಕೊಳ್ಳುತ್ತದೆ. ಚಿಂತನೆಗಳನ್ನು  ಕಲೆಗೆ ಪೂರಕವಾಗುವ  ಅನಿವಾರ್ಯತೆಯನ್ನು ಬೆಳೆಸಿಕೊಳ್ಳಬೇಕು.

ಕಲೆಯಲ್ಲಿ ಸ್ಪರ್ಧೆ ಇರಬೇಕು ಅದು ಗುರಿಮುಟ್ಟುವುದಕ್ಕೆ ಮಾತ್ರ ಇರಬೇಕು ಹಿಂದಿಕ್ಕುವುದಕ್ಕಲ್ಲ. ಯಾಕಂದರೆ ಸೋಲು ಗೆಲುವು ಅದು ಕಲಾವಿದನ ಸ್ವಂತ ಸೊತ್ತಲ್ಲ ಅದು ಕಲೆಯ ಸೊತ್ತು. ಕಲಾವಿದನ ಸೋಲು ಗೆಲುವೆಂದರೆ ಅದು ಪರೋಕ್ಷವಾಗಿ ಕಲೆಯೇ ಆಗಿರುತ್ತದೆ. ಕಲಾವಿದ ಗೆದ್ದರೆ ಪ್ರದರ್ಶನ ಗೆದ್ದ ಹಾಗೆ, ಪ್ರದರ್ಶನ ಗೆದ್ದರೆ ಕಲೆಯೇ ಗೆದ್ದ ಹಾಗಲ್ಲವೆ?





Friday, June 22, 2012

ಯಕ್ಷ ಸಂಭ್ರಮ




("ಕಲಾ ಕೌಶಿಕ" ಎಂಬ ಬಿರುದು ಲೇಖನದ ಕಲ್ಪನೆಯೂ ಜತೆಯಾದದ್ದು ಒಂದು ಅಭಿಮಾನಕ್ಕೆ ಅರ್ಥವನ್ನು ತಂದುಕೊಟ್ಟಿತ್ತು)
ಎಲ್ಲ ಪ್ರತಿರೋಧಗಳಿಗೂ ಸಡ್ಡು ಹೊಡೆದು ಜೀವಿತಾವಧಿಯಲ್ಲಿ ಗುರಿಸಾಧನೆಯ ಹಾದಿಯನ್ನು ಉಪಕ್ರಮಿಸಲು ಹೋರಾಟವನ್ನೇ ಅನಿವಾರ್ಯವಾಗಿಸುವ ವ್ಯಕ್ತಿತ್ವ ಹಲವು ಸಲ ಗೋಚರಿಸಬಹುದು. ತಾನು ಉನ್ನತಿಯಲ್ಲಿದ್ದರೂ  ಜೇವನದಲ್ಲಿ ಅತ್ಯುನ್ನತಿ ಎಂಬುದು ಇನ್ನೊಂದಿದೆ ಎಂಬುದರ ಅರಿವಾಗುವಾಗ ಅದರ ಬೆನ್ನತ್ತಿ ಹೋಗಿ, ಅದನ್ನು ವಶವಾಗಿಸುವಲ್ಲಿ ತನ್ನ ಅರ್ಹತೆಯನ್ನು ಸರಿದೂಗಿಸಿ ಪರಿಸ್ಥಿತಿಯನ್ನು ಎಲ್ಲಾ ಪ್ರತಿರೋಧದ ನಡುವೆ ಗೆಲ್ಲುವ ಛಲ ಇದು ಮಹತ್ತರ ಸಾಧನೆಗೆ ನಿಮಿತ್ತವಾಗುತ್ತದೆ. ಪೌರಾಣಿಕದಲ್ಲಿ ಬರುವ ರಾಜಾ ಕೌಶಿಕನ ವ್ಯಕ್ತಿತ್ವ ಆ ಬಗೆಯದು. ಬ್ರಹ್ಮಋಷಿ  ಪದವಿ ಎಂಬುದೊಂದು ಇದೆ ಎಂದು ಅರಿವಾದಾಗ ಅದನ್ನು ಹೊಂದಿಕೊಳ್ಳಲು ಕಠಿಣ ಸಾಧನೆಗೆ ಉಪಕ್ರಮಿಸುವ ಕೌಶಿಕ ವಿಶ್ವಾಮಿತ್ರನಾಗಿ ಬ್ರಹ್ಮಋಷಿಯಾಗುವ ಹಾದಿ ಆ ವ್ಯಕ್ತಿತ್ವದ ಸತ್ವವನ್ನು ಬಹಿರಂಗಗೊಳಿಸುತ್ತದೆ.
YAKSHAGANA FILE INDEX

ಅದೇಬಗೆಯಲ್ಲಿ ಯಕ್ಷಗಾನದಲ್ಲಿ ಕೌಶಿಕನಾಗಿ ಮೆರೆದವರು ನಮ್ಮ ಗೋವಿಂದಣ್ಣ. ಧರ್ಮಸ್ಥಳ ಮೇಳದ  ಮಹಾಬ್ರಾಹ್ಮಣ ಪ್ರಸಂಗದ ರಾಜಾ ಕೌಶಿಕನ ಪಾತ್ರದಂತೆ,  ನಿಜ ಬದುಕಿನ ಹಾದಿಯಲ್ಲೂ ಕೌಶಿಕನ ಛಲವನ್ನು ತೋರಿದವರು ಇಂದಿಗೂ ರಾಜಾ ಕೌಶಿಕನಾಗಿ ಯಾವುದೇ ಎಗ್ಗಿಲ್ಲದೆ ರಂಗಸ್ಥಳವನ್ನೇರುವ ಗೋವಿಂದಣ್ಣನ ರಂಗಸ್ಥಳದ ಆ ನಿಲುಮೇ ಮತ್ತು ಅತಿ ದೀರ್ಘ ಬದುಕು ಸಾಮಾನ್ಯರಿಗೆ ಕೈಗೆಟುಕದ ರೀತಿಯದ್ದು.

ಇಂತಹ ಗೋವಿಂದಣ್ಣನ ಅರ್ಥಪೂರ್ಣ ಸಂಭ್ರಮ ಎಂದು ಕೇಳಿದಾಗ ಆ ಕೌಶಿಕನ ಛಲದ ಹಾದಿಯೇ ಕಾಣಿಸುವುದು. ಅದಕ್ಕಾಗಿಯೋ ಏನೋ ನನ್ನ ಮಟ್ಟಿಗೆ ಗೋವಿಂದಣ್ಣನ ರಾಜಾ ಕೌಶಿಕ ಜೀವಿತಶ್ರೇಷ್ಠ ಪಾತ್ರ. ಒಬ್ಬ ಕಲಾವಿದನ ಪ್ರತಿಭೇ ಕೇವಲ ಒಂದು ಪಾತ್ರದ  ಕರಂಡಕದಲ್ಲಿ ಮಾತ್ರವೇ ತುಂಬಿಸಿಡುವುದಲ್ಲ. ಆದುದರಿಂದಲೇ ಗೋವಿಂದಣ್ನ ನಿರ್ವಹಿಸದ ಪಾತ್ರವೇ ಇಲ್ಲ ಎನ್ನಬಹುದು. ಪಾತ್ರ ಇಲ್ಲದಿರುವುದು ಇಲ್ಲಿ ವಿಶೇಷವೆಂದಿನಿಸುವುದಿಲ್ಲ. ಬದಲಾಗಿ ಹಸುರು ಮಾಸದ ಆ ಹುರುಪು ಆಶ್ಚರ್ಯವೆನಿಸಲ್ಪಡುತ್ತದೆ. ಇಂದಿಗೂ ಯಾವುದೇ ಪಾತ್ರವಾದರೂ ಸೈ.. ತೊಡುವ ಕೆಲವು ಕ್ಷಣ ಮೊದಲು ಹೇಳಿದರು ಯಾವುದೇ ಬಿಗುಮಾನವಿಲ್ಲದೆ ಗೋವಿಂದಣ್ಣ ತಲೆಗೆ ಪಟ್ಟಿ ಕಟ್ಟಿ ಬಣ್ಣ ಬಳಿಯಲು ಅಣಿಯಾಗುತ್ತಾರೆ. ಬಾಲ್ಯದಲ್ಲಿ ರಂಗಸ್ಥಳದಲ್ಲಿ ನಾನು ನೋಡಿದ ಗೋವಿಂದಣ್ಣನ ವೇಷಕ್ಕೂ   ಈಗ ನೋಡುವ ವೇಷಕ್ಕೂ,  ಕುಣಿತದಲ್ಲಾಗಲಿ ಪಾತ್ರ ನಿರ್ವಹಣೆಯಲ್ಲಾಗಲೀ ವೆತ್ಯಾಸವನ್ನು ಗುರುತಿಸುವಲ್ಲಿ ನಾನು ಅಭಿಮಾನದಿಂದಲೇ ಸೋಲುತ್ತೇನೆ. ಪ್ರತೀ ಹಂತದಲ್ಲೂ ಗೋವಿಂದಣ್ಣನ ಪಾತ್ರಗೆಲ್ಲುತ್ತದೆ ನಾನು ಸೋಲುತ್ತೇನೆ. ಮೊದಲು ಈಸಿ ಚೆಯರಿನ ತುದಿಯಲ್ಲಿ ಕುಳಿತು (ಇಲ್ಲವಾದರೆ ಕಾಣುವುದಿಲ್ಲ) ಗೋವಿಂದಣ್ಣನ ಪ್ರವೇಶ ನೋಡುತ್ತಿದ್ದವನು, ದೈಹಿಕವಾಗಿ ನನ್ನಲ್ಲಿ ಬದಲಾವಣೆಯಾಗಿದೆಯೇ ಹೊರತು ಅಣ್ಣನ ರಂಗಸ್ಥಳದ ಪ್ರವೇಶದಲ್ಲಿ ಬದಲಾವಣೇಯೇ ಇಲ್ಲ. ಅದೇ ರಭಸ.. ಅ ರಭಸಕ್ಕೆ ಕುಳಿತಲ್ಲೇ ನನ್ನ ದೇಹವನ್ನು ನಿಮಿರಿಸುವ ಶಕ್ತಿ ಈಗಲೂ ಇದೆ. ವಿಚಿತ್ರ ಎನಿಸುವುದಿಲ್ಲವೆ?

ಇವರ ಪಾತ್ರದಲ್ಲಾಗಲೀ ವ್ಯಕ್ತಿತ್ವದಲ್ಲಾಗಲೀ  ವಿಶೇಷಗಳನ್ನು ಹುಡುಕುವ ಅವಶ್ಯಕತೆ ಬರುವುದಿಲ್ಲ. ಅದು ತನ್ನಿಂತಾನಾಗಿ ಅನಾವರಣಗೊಳ್ಳುವ ಶಕ್ತಿಯನ್ನು ಹೊಂದಿದೆ. ಒಬ್ಬೊಬ್ಬರ ದೃಷ್ಟಿಗೆ ಒಂದೊಂದು ಗೋಚರಿಸಬಹುದು. ಆ ಬಗೆಯಲ್ಲಿ ನಾನು ಕಂಡದ್ದು ಕೆಲವು.

ಮುಖ್ಯವಾಗಿ ಅತ್ಯಂತ ಖಚಿತವಾದ ಮತ್ತು ಸುಲಭವಾದ ಶಾರೀರಿಕ ಭಾಷೆ. ಬಹುಶಃ ಭರತ ನಾಟ್ಯದ ಮೂಲಕ ಅದನ್ನು ಒಲಿಸಿರಬೇಕು. ಇದರಿಂದಾಗಿ ಪಾತ್ರಕುಣಿತದೊಂದಿಗೆ ರಂಗಸ್ಥಳಕ್ಕೇ ಒಂದು ಚಲನ ಶಕ್ತಿ ಆವೇಶಗೊಂಡ ಹಾಗೆ ಅನಿಸುತ್ತದೆ. ಒಂದು ಪದಕ್ಕಾಗಲೀ ಅಥವ ಅದರ ಕುಣಿತಕ್ಕಾಗಲೀ  ಶ್ರುತಿ ಮೀಟುವ ಕುಣಿತ ಇವರದ್ದು.ಅನಾವಶ್ಯಕ ಕುಣಿವ ಜಾಯಮಾನ ಕಂಡುಬರುವುದೇ ಇಲ್ಲ. ಆದರೆ ಕುಣಿದದ್ದು ಮಾತ್ರ ಆ ಸಂದರ್ಭಕ್ಕೆ ಅತ್ಯಂತ ಸೂಕ್ತ ಯಾವಾಗ ಅನ್ನಿಸುತ್ತದೋ ಆವಾಗ ಕುಣಿದು ಬಿಡುತ್ತಾರೆ. ಇದೇ ಶ್ರುತಿ ಮೀಟುವ ಕುಣಿತ ಅಂತ ನನ್ನ ಅನಿಸಿಕೆ. ಕುಣಿತ ಮತ್ತು ನಿಲುವು ಹತ್ತಾರು ಭಂಗಿಯ ಭಾವ ಒಂದರಲ್ಲೇ ತರುವ ಪ್ರಯತ್ನ, ನೋಡುಗರಿಗೆ ಅನಿಸುವುದುಂಟು,  ಎಲಾ,   ಯಕ್ಷಗಾನ ಕುಣಿತ ಇಷ್ಟೂ ಸುಲಭವೇ? ಗೋವಿಂದಣ್ಣನ ಕುಣಿತ ಅದು ದ್ವಾಪರದ ಗೋವಿಂದನ ಕುಣಿತ.
ಬಹಳ  ಆಸಕ್ತಿಪೂರ್ಣ ವಿಚಾರಗಳು ಕೇಳುತ್ತಾ ಹೋದರೆ ಹಲವರಲ್ಲಿ ಇರಬಹುದು ಹಲವಾರು ಸಿಗಬಹುದು.  ಹಾಗೆ ನೋಡಿದರೆ ಯಕ್ಷಗಾನ ಗರ್ಭದಲ್ಲಿ ಪ್ರತೀ ಕಲಾವಿದರ ವಿಶೇಷತೆಗಳೂ ವಿಶಿಷ್ಟವಾಗಿರುತ್ತದೆ. ಅಪಾರ ಪ್ರತಿಭಾವಂತರ ಕಲೆ ಇದು. ಹೊರ ಪ್ರಪಂಚ ಯೋಚಿಸುವುದಕ್ಕೂ ಸಾಧ್ಯವಿಲ್ಲದಂತಹ ಸಾಮಾರ್ಥ್ಯ ವಿಶೇಷಗಳು ಹಲವಾರು ಕಾಣ ಸಿಗುತ್ತದೆ. ಇಂತಹ ಶ್ರೀಮಂತ ಕಲಾಸಾಮ್ರಾಜ್ಯದಲ್ಲಿ ಜೀವಿಸುವ ಶ್ರೀಮಂತ ಧನಿಕನ ಹಾಗೇ ಗೋವಿಂದಣ್ಣ. ಅವರ  ವೈಶಿಷ್ಟ್ಯಗಳನ್ನೇ ಸಾಕಷ್ಟು ಹೇಳುತ್ತಾ ಹೋಗಬಹುದು. ಇದು ಪ್ರತಿಭಾ ಶ್ರೀಮಂತಿಕೆ.

ಯಾವುದೇ ಪ್ರತಿಭೆಯಾಗಲೀ ಅದು ಅರ್ಹರಿಗೆ ಒಲಿದಲ್ಲಿ ಅದರ ಬೆಳವಣಿಗೆ ಪರಿಣಾಮಕಾರಿಯಾಗಿರುತ್ತದೆ. ಸೂಕ್ತ ವಾತಾವರಣದಲ್ಲಿ ಮೊಳೆಕೆಯೊಡೆದ ಬೀಜದಂತೆ. ಬಹಳ ಬೇಗನೇ ಗಗನವನ್ನು ಚುಂಬಿಸುವ ಪ್ರಯತ್ನ ಗೈಯ್ಯುತ್ತಾ ಬೆಳೆದು ನಿಂತು ಹೆಮ್ಮರವಾಗಿ ಫಲ ಪುಷ್ಪವನ್ನು ನೀಡುತ್ತದೆ. ಗೋವಿಂದಣ್ಣನ ಬಗ್ಗೆ ಹೇಳಿದರೆ ಇದನ್ನೂ ಹೇಳಬೇಕಾಗುತ್ತದೆ. ಯಕ್ಷಗಾನ ಕಲೆ ಗೋವಿಂದಣ್ಣನಿಗೆ ಆ ಬಗೆಯಲ್ಲಿ ಒಲಿದಿದೆ ಮಾತ್ರವಲ್ಲ ಅದು ಮತ್ತು ಬೆಳೆಯುತ್ತಾ.. ಬೆಳೆಯುತ್ತಾ ಇನ್ನೂ ಗಗನವನ್ನು ಚುಂಬಿಸುತ್ತಾ ಇದೆ.
ಇಂದಿಗೂ ಇವರ ರಾಜ ಠೀವಿಯ ರಂಗಸ್ಥಳ  ಪ್ರವೇಶವನ್ನು ನೋಡುವುದು ಒಂದು ಬಗೆಯ ಸಂಭ್ರಮ. ಪ್ರವೇಶದಲ್ಲೇ ಸರಳವಾಗಿ ಕುಣಿದು ಭಲ್ಲಿರೇನಯ್ಯಾ.. ಎಂದು ತೊಡಗುವಾಗ ಯಕ್ಷಗಾನ ಒಂದು ನಿಜ ವೇಷ ಅನಾವರಣಗೊಂಡ ಅನುಭವವಾಗುತ್ತದೆ.ಯಕ್ಷಗಾನ ವೇಷವೆಂದರೆ ನನಗೆ ಗೋವಿಂದಣ್ಣನ ಮುಖದ ವೇಷವೇ ಮೊದಲಿಗೆ ನೆನಪಿಗೆ ಬರುವುದು. ಇದು ಇವರಲ್ಲಿ ಯಕ್ಷಗಾನ ಕಲೆ ಆವಾಹನೆಗೊಂಡ ಪರಿ.
ಇನ್ನೋಂದು ಬಹಳವಾಗಿ ನಾನು  ಗಮನಿಸಿದ ಮಾತ್ರವಲ್ಲ ಕೌತುಕದ ವಿಚಾರವೆಂದರೆ, ಇಷ್ಟು ವರ್ಷದ ದೀರ್ಘವಾದ  ರಂಗ ಪರಂಪರೆಯಿರುವ ಗೋವಿಂದಣ್ಣ ರಂಗಸ್ಥಳದಲ್ಲಿ ಸುಸ್ತಾದವರಂತೆ ಕುಳಿತದ್ದು ಯಾರಾದರೂ ಕಂಡಿದ್ದಿರಾ? ಇದು ಅವರ ದೈಹಿಕ ಕ್ಷಮತೆ. ಒಂದು ವಿಧದ ದಣಿವರಿಯದ ಕಲಾವಿದ. ಕುಣಿ ಕುಣಿದು ಏದುಸಿರು ಬಿಡುವ ಇಂದಿನ ಯುವ ಕಲಾವಿದರೆಲ್ಲಿ ಎಪ್ಪತ್ತರ ಹರಯದ ಇವರೆಲ್ಲಿ... ಇದು ಗೋವಿಂದಣ್ಣ ಸಾಧಿಸಿದ ಅದ್ಭುತ ಮಾತ್ರವಲ್ಲ ಆ ಬಗೆಯಲ್ಲಿ ಯಕ್ಷಗಾನ ಕಲೆಯೇ ಬಚ್ಚಿಟ್ಟುಕೊಂಡ ಅದ್ಭುತ. ಸುಮಾರು ಮೂವತ್ತು ವರ್ಷಕ್ಕೂ ಹಿಂದಿನಿಂದ ಗೋವಿಂದಣ್ಣನ ವೇಷ ನೋಡುತ್ತಾ ಬರುತ್ತಿದ್ದೇನೆ. ಗೋವಿಂದಣ್ಣನ ತೀಕ್ಷ್ಣವಾದ ಕಂಠಸ್ವರ ಹೇಗೋ ಕುಣಿವೂ ಅಷ್ಟೇ ಒಂದು ಬಗೆಯ ಹರಿತ.. ಒಂದು ಪರಿಪೂರ್ಣತೆ. ಅಂದಿನಿಂದ ಇಂದಿನವರೆಗೂ ಗೋವಿಂದಣ್ಣ ರಂಗದಲ್ಲಿ ಸುಸ್ತಾಗಿ ಕುಳಿತದ್ದನ್ನು ನಾನು ಕಂಡಿಲ್ಲ.  ಧೂಳಿಪಟಗೊಳ್ಳುವಂತೆ ಕುಣಿವ ಹಲವು ಕಲಾವಿದರೂ ತಮ್ಮ ಪ್ರತಿಭೆಗೆ ಒರೆ ಹಚ್ಚಿದ ಆ ಕುಣಿತಕ್ಕಿಂತಲೂ  ಗೋವಿಂದಣ್ಣನ ರಂಗ ತುಂಬುವ ಆ ಸರಳ ನರ್ತನ ಶೈಲಿಗೂ ಒಂದು ಸಿರಿವಂತಿಕೆ ಇದೆ.
 ಇಷ್ಟು ದೀರ್ಘವಾದ ಇವರ ಕಲಾಜೀವನ ಬೆರಗು ಹುಟ್ಟಿಸುತ್ತದೆ. ಆದರೆ ಒಂದು ಸಲ ಇವರ ಜೀವನ ಶೈಲಿಯನ್ನು ಗಮನಿಸಿದರೆ ಅಚ್ಚರಿ ಪಡುವ ಹಾಗಿಲ್ಲ. ಯೋಗಾಭ್ಯಾಸದಿಂದ ಕಾಪಾಡಿಕೊಂಡು ಬಂದ ಶರೀರ ಮತ್ತು ಶಾರೀರ ಸಂಪತ್ತು,  ಸಾತ್ವಿಕ ಜೀವನ ಶೈಲಿ, ಯಾವ ದುರ್ವ್ಯಸನವನ್ನು ಹತ್ತಿರವೂ ಬಿಡದ ಮಾನಸಿಕ ಸ್ಥಿರತೆ ಎಲ್ಲವೂ ಯಶಸ್ವೀ ಜೀವನಕ್ಕೆ ಪೂರಕವಾಗಿದೆ. ಇಂದಿಗೂ ಇವರದ್ದಾಗಲೀ ಇವರಂತೆ ಬಲಿಪ್ಪರದ್ದಾಗಲೀ.. ಮುಖದ ಗಾಂಭೀರ್ಯ ಆ ಓಜಸ್ಸು ಧೀಮತಿಕೆಯ ಕಳೆ ಖಂಡಿತ ಸುಲಭದಲ್ಲಿ ಒಲಿದದ್ದಲ್ಲ. ಅದು ಪರಿಶುದ್ದ ಜೀವನ ಶೈಲಿಯ ಸಂಕೇತ.  ವೇಷಗಾರಿಕೆ ತೊಡಗುವ ಮೊದಲೇ ಹಲವಾರು ದುರ್ವ್ಯಸನ ದುಶ್ಚಟವನ್ನು ಅಂಟಿಸುವ ಕಲಾವಿದರು ಒಮ್ಮೆ ಇವರ ಜೀವನ ಶೈಲಿಯನ್ನು ಗಮನಿಸಬೇಕು. ಇದು ಇವರು ಕೃತಿಯ ಮೂಲಕ ಸಾಗಿಬಂದು ನೀಡಿದ ಸಂದೇಶ.
ಈಗ ಉಡುಪಿಯ ಗೋವಿಂದನ ಮಡಿಲಲ್ಲಿ ಈ ಗೋವಿಂದನ ಯಕ್ಷಸಂಭ್ರಮ. ಅದು ಕೇವಲ ಗೋವಿಂದ ಸಂಭ್ರಮವಲ್ಲ.. ಅದು ಯಾವುದೇ ಕಲಾವಿದನ ಕಲಾಸಂಭ್ರಮ . ಯಕ್ಷಗಾನದ ಯಕ್ಷ ಸಂಭ್ರಮ.  






Saturday, June 16, 2012

ಸಂಗೀತಾ ನೆನಪಿನ ಯಕ್ಷಗಾನ ಸುರುಳಿಗಳು



“ಕಂಡು ನಮಿಸಿದ ತಾಯಿಯಂಘ್ರಿಗೇ ....”  ಈ ಪದ ಕೇಳಿದಾಗ ಒಂದು ಸನ್ನಿವೇಶ ಕಣ್ಣಮುಂದೆ ಕಟ್ಟಿದಂತೆ ಇರುತ್ತದೆ. ಕರ್ಣ ಅರ್ಘ್ಯವನ್ನು ಹಿಡಿದಿದ್ದಾನೆ. ಭಾಸ್ಕರನನ್ನು ನೋಡುತ್ತಾ.. ನೋಡುತ್ತ ತನ್ನನ್ನೇ ಮರೆಯುತ್ತಾನೆ. ಅದಾಗಲೇ ಆತನಿಗೆ ತನ್ನ ಜನ್ಮದಾತ ಯಾರೆಂಬ ಅರಿವಾಗಿದೆ. ಸೂತ ಪುತ್ರನೆಂಬ ಭಾವನೆಯ ತಿರುಳು ಬದಲಾಗಿರುತ್ತದೆ. ಯಾಕೆಂದರೆ ಲೋಕದವರ ಕಣ್ಣಿನಲ್ಲಿ ಆತನಿನ್ನೂ ರಾಧೇಯ ಸೂತನ ಮಗ. ಸೂತಪುತ್ರನ ಆ ಒಂದು ಹೊರಕವಚ ಹಾಗೇ ಉಳಿದಿರುತ್ತದೆ.  ಆಗ ನಿಧಾನವಾಗಿ ಬಂದ ತಾಯಿ ಕುಂತಿ ದೂರದಿಂದಲೇ ಕರ್ಣನನ್ನು ನೋಡುತ್ತಾಳೆ. ಕರ್ಣನ ಹಿಂಭಾಗವಷ್ಟೇ ಗೋಚರಿಸುತ್ತಿತ್ತು.
“  ಮಗನೇ ಕರ್ಣ” ಎಂದು ಭಾವಪೂರ್ಣವಾಗಿ ಕರೆಯುತ್ತಾಳೆ. ಬಂದ ಕಾರಣವನ್ನೂ ಹೇಳಿ ಐವರು ಮಕ್ಕಳ ಪ್ರಾಣವನ್ನು ಉಳಿಸಿಕೊಡೆಂದು ಬೇಡುತ್ತಾಳೆ, ಜೀವನದಲ್ಲಿ ಮೊದಲ ಬಾರಿ ನೋಡಿದ ಅಮ್ಮನ ಆಶೆಯನ್ನು ಈಡೇರಿಸಿ ಐದು ಮಕ್ಕಳ ಲೆಕ್ಕವನ್ನು ಬಿಡಿಸಿ ಹೇಳುತ್ತಾನೆ. ಅರ್ಜುನನ್ನು ಬಿಟ್ಟುಳಿದ ಅಭಯದ ತನ್ನ ಅಚಲವಾದ ನಿರ್ಧಾರವನ್ನು ಹೇಳುತ್ತಾನೆ. ತಾಯಿ ಕುಂತಿ ಅಧೀರಳಾಗುತ್ತಾಳೆ..ತನ್ನ ಕಣ್ಣೀರಿಗೆ ಮೌಲ್ಯವಿಲ್ಲವೇ ಎಂದು ಕೇಳಿದಾಗ ತುಸು ನಿಧಾನವಾಗಿ ಕರ್ಣ ಕೇಳುವ ಮಾತು  “ ಕಾಡ್ತಿಯಾ ತಾಯಿ?”
          ಆಳದಿಂದ ದುಮ್ಮಾನವನ್ನು ಹೊತ್ತು ಬರುವ ಕರ್ಣನ ದನ್ಯವಾದ ಮಾತು  ಕೇಳುವಾಗ  ನಮ್ಮ ಕಣ್ಣಂಚು ತೇವಗೊಳ್ಳದೇ ಇರಲು ಸಾಧ್ಯವೇ?

          ಇದು ಬಹಳ ಹಳೆಯ ಯಕ್ಷಗಾನ ಧ್ವನಿಸುರುಳಿಯಾದ ರಣವೀಳ್ಯ ಕರ್ಣಭೇದನದ  ಒಂದು ಭಾಗ. ಸಂಗೀತ ಕ್ಯಾಸೆಟ್ ಬಳಗ ಹೊರತಂದ ಹಲವು ಯಕ್ಷಗಾನ ಧ್ವನಿಸುರುಳಿಯಲ್ಲಿ ಇದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬಹುದು. ಹಾಗೇನೇ ಇನ್ನು ಹಲವು ಶ್ರೇಷ್ಠ ಸುರುಳಿಗಳನ್ನ ಇದೇ ಸಂಸ್ಥೆಯವರು ನಮ್ಮ ಮುಂದೆ ಬಿಚ್ಚಿ ಇಟ್ಟು ಬಹಳ ಕಾಲ ಸಂದಿತು.

ಇತ್ತೀಚೇಗೆ ಸಂಗೀತಾ ಸಂಸ್ಥೆ ತನ್ನ  ಅಂತರ್ಜಾಲ ತಾಣದಲ್ಲಿ  ತನ್ನ ಎಲ್ಲ ಯಕ್ಷಗಾನ  ಸಂಗ್ರಹವನ್ನು ಪುನಃ  ಕೇಳುಗರಿಗೆ ತೆರೆದಿಟ್ಟಿತು.. ಇದರ ಸದುಪಯೋಗ ಒಂದು ರೀತಿಯಲ್ಲಿ ನನಗಾಗಿದೆ. ಎಲ್ಲಾ ಧ್ವನಿ ಸುರುಳಿ ನನ್ನ ಸಂಗ್ರಹದಲ್ಲಿದ್ದರೂ ಭೀಷ್ಮ ವಿಜಯ ಎಂಬ ಪ್ರಸಂಗದ ಸುರುಳಿ ಅರಸುತ್ತಿದ್ದವನಿಗೆ ಇದರಲ್ಲಿ ಸಿಕ್ಕಿಬಿಟ್ಟಿತು.
ಹೀಗೆ ರಣ ವೀಳ್ಯ ಕರ್ಣ ಬೇದನ ಮತ್ತು ಭೀಷ್ಮ ವಿಜಯ ಎರಡು ಧ್ವನಿ ಮುದ್ರಣವನ್ನು ಕೊಂಡು ಹಿಂದಿನ ಕಾಲದತ್ತ ಒಂದು ಬಾರಿ ಹೋಗಿ ಬಂದೆ. ಈ ಎರಡು ಕ್ಯಾಸೆಟ್ ನಾನು ಮೊತ್ತ ಮೊದಲು ಕೊಂಡುಕೊಂಡ ಯಕ್ಷಗಾನ ಕ್ಯಾಸೆಟ್ ಗಳು. ಎಂಭತ್ತರ ದಶಕದ ಕೊನೆಯ ಅವಧಿಯದು. ಅದು ಯಕ್ಷಗಾನದ ಸುವರ್ಣ ಯುಗ ಎಂಬಂತಹ ಕಾಲ. ಯಕ್ಷಗಾನ ಧ್ವನಿ ಸುರುಳಿಗಳು ಇತರ ವರ್ಗದ ಧ್ವನಿ ಸುರುಳಿಗಳಿಗೆ ಸಡ್ಡು ಹೊಡೆವಷ್ಟು ಬಿಡುಗಡೆಯಾಗುತ್ತಿದ್ದವು.  ಆಗ ಬಂದ ರಣವೀಳ್ಯ ಮತ್ತು ಭೀಷ್ಮ ವಿಜಯ ಇವುಗಳು ಮಾತ್ರವಲ್ಲ ಸಂಗೀತದವರೇ ಹೊರಡಿಸಿದ ವಾಲಿಮೋಕ್ಷ , ಅಂಗದ ಸಂಧಾನ್, ಅಶ್ವಥಾಮ, ಶಲ್ಯ ಹೀಗೆ ಕೆಲವು ಕ್ಯಾಸೆಟಗಳ ಕಲಾವಿದರುಗಳು ಒಂದೇ ತಂಡದಂತೆ ಇದ್ದು,  ಹಿಮ್ಮೇಳದಲ್ಲಿ, ಬಲಿಪ್ಪರು, ನಿಡ್ಲೆ, ಚಿಪ್ಪಾರು, ಹಾಗೆ ಮುಮ್ಮೇಳದಲ್ಲಿ ಕುಂಬಳೆ, ಉಡುವೆಕೋಡಿ, ಕೋಳ್ಯೂರು, ಪ್ರಭಾಕರ ಜೋಷಿ ಈ ಜತೆಗಾರಿಕೆಯಲ್ಲಿ ಬಿಡುಗಡೆಯಾದ ಕ್ಯಾಸೆಟ್ಗಳಲ್ಲಿ ನನಗೆ ಅತಿ ಹೆಚ್ಚು ಪ್ರಿಯವಾದದ್ದು ರಣವೀಳ್ಯ ಕರ್ಣ ಭೇದನ ಮತ್ತು ಭೀಷ್ಮ ವಿಜಯ.
ರಣವೀಳ್ಯದಲ್ಲಿ ಭಾಗವತರಾಗಿ ಬಲಿಪ ನಾರಾಯಣ ಭಾಗವತ, ಮದ್ದಲೆವಾದಕರಾಗಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಲ್, ಚೆಂಡೆಯಲ್ಲಿ ನಿಡ್ಲೆ ನರಸಿಂಹ ಭಟ್  ಇನ್ನು ಶ್ರೀ ಕೃಷ್ಣನಾಗಿ ಎಂ ಪ್ರಭಾಕರ ಜೋಷಿ, ಕೌರವನಾಗಿ ಉಡುವೆಕೋಡಿ ಸುಬ್ಬಪ್ಪಯ್ಯ, ಕರ್ಣನಾಗಿ ಕುಂಬಳೆ ಸುಂದರ್ ರಾವ್, ಕುಂತಿಯಾಗಿ ಕೋಳ್ಯೂರು ರಾಮಚಂದ್ರ ರಾವ್, ಹೀಗೆ ಸೀಮಿತ ಪರಿಧಿಯಲ್ಲಿ ಮುದ್ರಿಸಿದ ಈ ಪ್ರಸಂಗ ಅದ್ಭುತ ಸಂಯೋಜನೆಯಾಗಿತ್ತು. ಹಲವು ಸಲ ಈ ಸೀಮಿತ ಅವಧಿಯೊಳಗೆ ಮಾಡುವ ಯಕ್ಷಗಾನದಲ್ಲಿ ನಾಟಕೀಯತೆ ಹೆಚ್ಚಾಗಿ ಸುಳಿಯುತ್ತದೆ, ಪದವೇ ಇಲ್ಲದೆ ಸಂಭಾಷಣೆಯನ್ನು ರೂಪಿಸಿ ಸನ್ನಿವೇಶವನ್ನು ನಿರ್ಮಿಸಬೇಕಾಗುತ್ತದೆ. ಆದರೆ ಈ ರಣವೀಳ್ಯ ಕರ್ಣ ಭೇದನದಲ್ಲಿ ಅದ್ಯಾವ ನಾಟಕೀಯತೆ ಸುಳಿಯದೆ ಒಂದು ಅಚ್ಚು ಕಟ್ಟಿನ ಸಂಯೋಜನೆಯಾಗಿದೆ. ಆರಂಭದಲ್ಲಿ ಬರು ಕೌರವ ಕೃಷ್ಣರ ಸಂಭಾಷಣೆ ಚುಟುಕಾಗಿದ್ದರೂ ಮಾರ್ಮಿಕವಾಗಿ ಮತ್ತು ಅಷ್ಟೇ ವೇಗದಲ್ಲಿ ಬರುತ್ತಿರುವಾಗ ಒಂದು ರೀತಿಯ ಆವೇಶ ಕೇಳುಗನಿಗೂ ಆಗುತ್ತದೆ. ಉಡುವೆಕೋಡಿಯವರ ಕೌರವನಂತೂ ಕಿಡಿ ಉರಿಸಿದಂತೆ ಮಿಂಚಿನ ವೇಗದಲ್ಲಿ ಕೌರವನ ಅರ್ಥವನ್ನು ಹೇಳುವಾಗ ಇಂದಿಗೂ ಸಂಧಾನದ ಕೌರವನೆಂದರೆ ಅದೇ ನೆನಪಿಗೆ ಬರುವಂತಿರುತ್ತದೆ. ಶ್ರೀಕೃಷ್ಣ ನಾಗಿ ಜೋಷಿಯವರೂ  ಬಹಳ ಹಿತಮಿತವಾಗಿ ಅತ್ಯಂತ ಸ್ವಾರಸ್ಯಭರಿತ ಮಾತುಗಾರಿಕೆಯನ್ನು ಒಪ್ಪಿಸಿಬಿಟ್ಟಿದ್ದಾರೆ. ಕೌರವನ ಸನ್ನಿವೇಶದಲ್ಲಿ ಮಾತ್ರವಲ್ಲ ಮುಂದೆ ಕರ್ಣನ ಜತೆಗಿನ ಸಂಭಾಷಣೆಯಲ್ಲೂ ಸನ್ನಿವೇಶ ಸೃಷ್ಟಿಯಲ್ಲಿ ಜೋಷಿಯವರ ಚಿನಕುರುಳಿಯಂತಹ ಚುರುಕಿನ ಮಾತುಗಾರಿಕೆ ಅಧ್ಬುತ. ಇಡೀ ಧ್ವನಿಸುರುಳಿಯ ಮತ್ತೊಂದು ವಿಶೇಷತೆಯೆಂದರೆ ಕುಂಬಳೆಯವರ ಕರ್ಣ. ಧರ್ಮಸ್ಥಳ ಮೇಳದ ಆ ಕಾಲದ ಪ್ರಸಿದ್ಧ ಪ್ರಸಂಗ ಮಹಾರಥಿಕರ್ಣ ್ದ ಅದೇ ಪಾತ್ರ ಸಂಭಾಷಣೆಯ ಭಾಗವನ್ನು ಕುಂಬಳೆಯವರು ನಿರ್ವಹಿಸಿದ್ದು ಮಾತ್ರವಲ್ಲ ಆನಂತರದ ಈ ಪ್ರಸಂಗದ ತಾಳ ಮದ್ದಲೆಗಳಲ್ಲಿ ಇದನ್ನೇ ಒಂದು ಮಾದರಿಯಾಗಿ ಅನುಕರಿಸುವಂತೆ ಅಗಿದ್ದು ಮಾತ್ರ ಇತಿಹಾಸ.
ಕರ್ಣನ ಜನ್ಮ ವೃತ್ತಾಂತವನ್ನು ಅವನಿಗೆ ಅರುಹುದಕ್ಕಾಗಿ ಶ್ರೀಕೃಷ್ಣ ತನ್ನೊಂದಿಗೆ ಕರೆದೊಯ್ಯುತ್ತಾ ಆ ಸಂಭಾಷಣೆ ಪದಕ್ಕೆ ಅನುಸಾರವಾಗಿ ಬೆಳೆಸಿಕೊಂಡು ಹೋಗುವ ರೀತಿ ಕೇಳುಗನನ್ನು ಸಮ್ಮೋಹನ ಮಾಡುತ್ತದೆ. ಸರಸವಾಡುವಂತೆ ಛೇಡಿಸುತ್ತಾ .. ಕೃಷ್ಣ ಕರ್ಣನನ್ನು ಅತ್ತೆಯಮಗ ಎಂದು ಸಂಬೋಧಿಸುತ್ತಾನೆ ಆಗ ಕರ್ಣ ಹೇಳುವ ಮಾತು “ ಯಾವ ಅತ್ತೆಯ ಮಗೆ? ನಿನಗೆಷ್ಟು ಅತ್ತೆಯರುಂಟು ಎಂದು ಲೆಕ್ಕ ಇಟ್ಟವರಾರು? ನಿನ್ನ ಅತ್ತೆಯರ ಕೂಟದಲ್ಲಿ ನನ್ನ ತಾಯಿ ಪತ್ತೆ ಆಗಬೇಕೋ ಬೇಡ್ವೋ?” ಇಂತಹ ಮಾರ್ಮಿಕ ಸಂಭಾಷಣೆಯನ್ನು ಇಂದಿಗೂ ಕೇಳುಗರು ಜ್ಞಾಪಿಸಿಕೊಳ್ಳುತ್ತಾರೆ. ಮುಂದಿನ ಸನ್ನಿವೇಶ ಕುಂತಿ ಮತ್ತು ಕರ್ಣನ ಭೇಟಿ. ಭಾವನಾತ್ಮಕವಾಗಿ ಬಿಂಬಿಸಲ್ಪಟ್ಟರೂ ಕೃಷ್ಣ ಆದೇಶದಂತೆ ಬರುವ ಕುಂತಿ ಆ ಭಾವಾವೇಶವನ್ನು ತೋರಿಸುವುದು ಕಡಿಮೆಯಾದರೂ ಕರ್ಣ ಮಾತ್ರ ತಾಯಿಯನ್ನು ಕಂಡು ಬಹಳ ಭಾವುಕನಾಗಿಬಿಡುತ್ತಾನೆ. ಚುರುಕು ಸಂಭಾಷಣೆಯೊಂದಿಗೆ ಬಲಿಪ್ಪರ “ಚಿನ್ನಾ ಕೇಳೆನಗೆ ಹಿರಿಯ ನಂದನಾಗಿ....” ಎಂಬ ಪದ ಸನ್ನಿವೇಶವನ್ನೂ ಗಂಬೀರತೆಗೆ ತಳ್ಳಿಬಿಡುತ್ತದೆ.
ಎಕಾಂತ ಮತ್ತು ನಿಶ್ಯಬ್ಧ ಪರಿಸರದಲ್ಲಿ ಈ ಯಕ್ಷಗಾನ ಒಂದಲ್ಲ ಹಲವು ಸಲ ಕೇಳಿದರೂ ಮನಸ್ಸಿಗೆ ತಟ್ಟುತ್ತದೆ. ಪರಿಸ್ಥಿತಿ ತನ್ನ ನಿಯಂತ್ರಣದಲ್ಲಿದೆ ಎಂದು ಭಾವಿಸುವ ಕೌರವ ನಿಯಂತ್ರಣದ ವಾಘೆಯ ತುದಿ ಕೃಷ್ಣ ನ ಕೈಯಲ್ಲಿರುವುದನ್ನು ತಿಳಿಯದೇ ಹೋಗುತ್ತಾನೆ. ಅತ್ಯಂತ ಯೋಜನಾಬದ್ಧವಾಗಿ ರಚಿಸಿದ ಈ ಪ್ರಸಂಗ ಅದೆಷ್ಟು ಸಹಜವಾಗಿ ಒಂದು ಘಂಟೆಯ ಧ್ವನಿ ಸುರುಳಿಗೆ ಹೊಂದಿಕೊಳ್ಳುತ್ತದೆ ಎಂದರೆ ಎಲ್ಲಿಯೂ ಅದು ಸಂಕಲನ ಗೊಂಡಿದೆ ಎಂದನಿಸುವುದಿಲ್ಲ. ಇದರಲ್ಲಿ ಇನ್ನೊಂದು ಅಂಶ ನನಗೆ ಅಪ್ಯಾಯಮಾನವಾಗಿ ಪರಿಣಮಿಸಿದ್ದು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಲೆ.ಪ್ರತೀ ಯೊಂದು ಪೆಟ್ಟುಗಳು ನೆನಪಿನ ಪುಸ್ತಕದ ಪುಟಗಳಿಗೆ ಒತ್ತಿದ ಮುದ್ರೆಯಂತೆ ಭಾಸವಾಗುತದೆ. ಆ ಮೃದಂಗದಿಂದ ಬರೆದ ಕಾವ್ಯ  ಅದ್ಭುತ.
ಇದೇ ಯಕ್ಷಗಾನದೊಂದಿಗೆ ಕೊಂಡುಕೊಂಡ ಇನ್ನೊಂದು ಯಕ್ಷಗಾನ ಭೀಷ್ಮ ವಿಜಯ... ಇದೇ ತಂಡದ ಒಂದು ಸುಂದರ ಯಕ್ಷಗಾನ. ಇದರಲ್ಲಿ ಬಲಿಪ್ಪ ,ನಿಡ್ಲೆ, ಮತ್ತು ಚಿಪ್ಪಾರು ಹಿಮ್ಮೇಳದಲ್ಲಿದ್ದರೆ, ಭೀಷ್ಮನಾಗಿ ಕುಂಬಳೆ  , ಸಾಲ್ವನಾಗಿ ಉಡುವೆಕೋಡಿ, ಪರಶುರಾಮನಾಗಿ ಜೋಷಿ ಹಾಗು ಅಂಬೆಯಾಗಿ ಕೋಳ್ಯೂರು. ನಿಡ್ಲೆ ನರಸಿಂಹ ಭಟ್ ರವರ ಮದ್ದಲೆ ವಾದನ ಬಹಳ ಅಪರೂಪ. ಹದವಾದ ನಿಡ್ಲೆ ಶೈಲಿ ಪ್ರತಿಯೋಂದು ಪದವನ್ನೂ ಬಿಡದೆ ಆಲಿಸುವಂತೆ ಮಾಡುತ್ತದೆ. “ ಎನುತಲಾಜ್ಞೆಯನಿಂತು ಕಾಶೀ ಜನಪ...” ಒಡ್ಡೋಲಗದ ಪದ, “ ಸರಸಿಜಾನನೆ  ಕೇಳು ಪೇಳುವೆನು.. ...” “ ವಸುಧೇಶ ಕೇಳಯ್ಯ...” ಮುಂತಾದ ಪದಗಳು ಕೇಳಿ ಮುಗಿಸಿದಾಗ ಮತ್ತಿನ ಪದಕೇಳಲು ಅರ್ಥ ಯಾವಗ ಮುಗಿಯುತ್ತದೆ ಎಂದು ತವಕದಿಂದ ಕಾಯುವ ಹಾಗೆ ಮಾಡುತ್ತದೆ. ಎರಡೂ ಕ್ಯಾಸೆಟ್ ನಲ್ಲಿ ಹಿಮ್ಮೇಳವೂ ಮುಮ್ಮೇಳವೂ ಸಮ ತೂಕದಿಂದ ಕೂಡಿದ್ದು ಯಕ್ಷಗಾನದ ಹೂರಣದ ತುಣೂಕನ್ನು ಸವಿದ ಅನುಭವವಾಗುತ್ತದೆ.
ಸಹಸ್ರ ಸಹಸ್ರ ಸಂಖ್ಯಯಲ್ಲಿ ಯಕ್ಷಗಾನ ಧ್ವನಿ ಸುರುಳಿಗಳು ಮಾರುಕಟ್ಟೆಗೆ ಬಂದಿದ್ದರೂ ಅದರಲ್ಲಿ ಗುಣಮಟ್ಟವನ್ನು ಗಮನಿಸಿದರೆ ಇವುಗಳು ಅಗ್ರಪಂಕ್ತಿಯಲ್ಲಿ ವರ್ಗೀಕರಿಸಲ್ಪಡುತ್ತದೆ.ಯಕ್ಷಗಾನಕ್ಕೆ ಅನುಕೂಲವಾಗುವಂತೆ  ಈ ಮಾಧ್ಯಮವನ್ನು ಸಮರ್ಥವಾಗಿ ಬಳಸಿಕೊಂಡದ್ದನ್ನು ಈ ಮೂಲಕ ಕಾಣಬಹುದು.ಇಂದು ಯಕ್ಷಗಾನ ಸಂಗ್ರಹದಲ್ಲಿ ಅತಿ ಹೆಚ್ಚು ಭಾಗವನ್ನು ಕ್ಯಾಸೆಟ್ ಮೂಲಕವೆ ಇದ್ದು ಅವುಗಳಲ್ಲಿ ಇಂತಹ ಹಲವು ಕ್ಯಾಸೆಟ್ ಗಳು ಅರ್ಥಪೂರ್ಣ ದಾಖಲೀಕರಣ ಎನ್ನಬಹುದು. ಬಲಿಪ್ಪ ನಿಡ್ಲೆ ಚಿಪ್ಪಾರು ಜತೆಗಾರಿಕೆಯ ಯಕ್ಷಗಾನ ಪದಗಳು ಕೇಳಬೇಕೆಂದರೆ ಇಂದು ಇವುಗಳ ಮೊರೆ ಹೋಗಬೇಕು. ಮುಂದಿನ ಜನಾಂಗಕ್ಕೆ ಇವರುಗಳ ಶೈಲಿಯನ್ನು ಪರಿಚಯಿಸಬೇಕಿದ್ದರೆ  ಇವುಗಳು ಸೂಕ್ತ ಉದಾಹರಣೆಯಾಗಬಲ್ಲುದು.
ಯಾವುದೇ ಯಕ್ಷಗಾನ ಕೇಳುವಂತಾಗಬೇಕಾದರೆ ಅವುಗಳ ಧ್ವನಿ ಮುದ್ರಣದ ಪಾಲು ಮಹತ್ವವೆನಿಸುತ್ತದೆ. ಯಕ್ಷಗಾನಕ್ಕೂ ಅನ್ಯ ಪ್ರಾಕಾರಕ್ಕೂ ಧ್ವನಿ ಮುದ್ರಣ ರೀತಿಯಲ್ಲಿ ಬಹಳವೆತ್ಯಾಸವಿದೆ. ದ್ವನಿ ಮುದ್ರಣ ಸ್ಪಷ್ಟವಾಗಿ ಆಗದೇ ಇದ್ದಲ್ಲಿ ಚೆಂಡೆ ಮದ್ದಲೆ ಪೆಟ್ಟುಗಳಾಗಲೀ ಹಾರ್ಮೋನಿಯಂ ಶೃತಿಯಾಗಲೀ ಸಹಜವಾಗಿ ಕೇಳಿಸದೇ ಇನ್ನಾವುದೋ ದ್ವನಿ ತಂರಂಗಗಳನ್ನು ಹೊಮ್ಮಿಸಿ ಸಹಜ ಯಕ್ಷಗಾನದ ಸೊಗಡನ್ನು ಬಿಂಬಿಸುವುದಿಲ್ಲ.

 ಸಂಗೀತದವರ ದ್ವನಿ ಮುದ್ರಣದಲ್ಲಿ ಸ್ಪಷ್ಟ ಹಾಗು ಶುಭ್ರ ದ್ವನಿ ಮುದ್ರಣ. ಚೆಂಡೆ ಮದ್ದಲೆ ಪೆಟ್ಟುಗಳು ಸಹಜವಾಗಿ ಮುದ್ರಣಗೊಂಡಿರುತ್ತದೆ.ಅತ್ಯುತ್ತಮ ಮಟ್ಟದ ದ್ವನಿ ಮುದ್ರಣ ಕರ್ಣಾನಂದಕರವಾಗಿದ್ದು ಕೇಳುವಲ್ಲಿ ತಲ್ಲೀನರಾಗಿ ಆಲೀಸಬಹುದು.ಸಂಗೀತಾ ಕಂಪೆನಿಯವರು ತಮ್ಮ ಹಳೆಯ ಕಡತಗಳನ್ನು ತೆರೆದು ಪುನಃ ಬಹಿರಂಗ ಪ್ರಪಂಚಕ್ಕೆ ತೆರೆದಿಟ್ಟದ್ದು ಯಕ್ಷಗಾನ ಕೇಳುಗರಿಗೆ ಅತ್ಯಂತ ಸಹಕಾರಿಯಾಗಬಲ್ಲುದು. ಸ್ಮರಣೀಯ ಎನ್ನಬಹುದಾದ ಹಲವು ಯಕ್ಷಗಾನಗಳು ಇಲ್ಲಿ ಲಭ್ಯ. ಅವರ ಅಂತರ್ಜಾಲ ತಾಣಕ್ಕೆ ಭೇಟಿ ಕೊಟ್ಟು ಅದರಲ್ಲಿ ನೋಂದಾಯಿಸಿಕೊಂಡು ತಮಗೆ ಇಷ್ಟವಾದುದನ್ನು ಪಡೆಯಬಹುದು. ಒಂದು ಸಲ ಬೇಡಿಕೆ ಸಲ್ಲಿಸುವಾಗ ಕಡಿಮೆ ಎಂದರೆ ನೂರು ರೂಪಾಯಿಗಲ ಮೌಲ್ಯಕ್ಕೆ ಬೇಡಿಕೆ ಸಲ್ಲಿಸಬೇಕು. ಹಣ ಪಾವತಿಯಾದ ಕೆಲವೇ ಕ್ಷಣಗಳಲ್ಲಿ ನಮ್ಮ ಬಯಕೆಯ ಯಕ್ಷಗಾನ ಅಲ್ಲಿ ಲಭ್ಯವಿರುತ್ತದೆ. ಯಕ್ಷಗಾನ ಕೇಳುಗರು ಇವನ್ನು ತಮ್ಮ ಅಭಿರುಚಿಗೆ ತಕ್ಕಂತೆ ಉಪಯೋಗಿಸಿಕೊಳ್ಳಬಹುದು.  


Thursday, May 31, 2012

ಅನುದಾನ ಮತ್ತು ಯಕ್ಷಗಾನ




ಚಿತ್ರಕೃಪೆ : ಶ್ರೀ ಉಲ್ಲಾಸ್
ಮಹಾಭಾರತದಲ್ಲಿ ಬರುವ ಅತ್ಯಂತ ವೈಶಿಷ್ಟ್ಯ ಪಾತ್ರಗಳಲ್ಲಿ ಒಂದು ಕರ್ಣನ ಪಾತ್ರ. ಸ್ವಂತಿಕೆ ಇಲ್ಲದ ಈ ಪಾತ್ರವನ್ನು ತಮ್ಮ ಸ್ವಂತ ಚಿಂತನೆಗಳಿಂದ ಹಲವು ವಿಧದಲ್ಲಿ ಕಟ್ಟಿ ಬೆಳೆಸಿದ್ದುದನ್ನು  ಯಕ್ಷಗಾನದಲ್ಲಿ ಬಹಳಷ್ಟು ಕಾಣಬಹುದು. ಯಕ್ಷಗಾನದ ವೈಷಿಷ್ಟ್ಯ ಉಲ್ಲೇಖಿಸಲ್ಪಡುವುದೇ ಇಂತಹ ಹಲವು ಅಂಶಗಳಿಂದ. ಸ್ವಂತ ಚಿಂತನೆ ಇಲ್ಲದ ಪಾತ್ರಗಳಲ್ಲಿ ಇದು ಒಂದು ಅಂತ ಹೇಳುವುದಕ್ಕೆ ಬಲವಾದ ಕಾರಣ ಆರಂಭದಿಂದ ಅಂತ್ಯದ ವರೆಗೂ ಕರ್ಣನ ಬದುಕು ಕೌರವನ ಪ್ರಾಯೋಜಕತ್ವದಲ್ಲಿ ಸಾಗುತ್ತದೆ. ಕೌರವನ ಈ ಹಂಗಿನ ಉರುಳು ಅದು ಕೌರವ ಬಿಗಿಯದೇ ಇದ್ದರೂ ಪರೋಕ್ಷವಾಗಿ ಬಿಗಿಸಿಕೊಳ್ಳುತ್ತಾ ಸಾಗುತ್ತದೆ. ಕೌರವನ ಮನಸ್ಸಿನ ಭಾವನೆಗೆ ಅನುಸಾರವಾಗಿ ಕರ್ಣನ ಕಲ್ಪನೆಗಳು ಅರಳಿಕೊಳ್ಳುತ್ತವೆ. ಕರ್ಣನಲ್ಲಿ ಒಂದು ಸ್ವಂತ ವ್ಯಕ್ತಿತ್ವ ಇದ್ದರೂ ಅದು ಕೌರವನಿಂದಲೇ ರೂಪೀಕರಿಸಿದಂತೆ ಸಾಗುತ್ತದೆ. ಕರ್ಣನ ಧ್ವನಿ ಅವನದ್ದಾಗಿದ್ರೆ ಅದರ ಭಾವ ಕೌರವನದ್ದು.
ಇತ್ತೀಚೆಗೆ ಒಂದು ಬ್ಲಾಗ್ ಪುಟಗಳಲ್ಲಿ ಬಂದ ಲೇಖನ ಈ ಕರ್ಣನ ಬದುಕನ್ನು ನೆನಪಿಗೆ ಬರುವಂತೆ ಮಾಡಿಬಿಟ್ಟಿತು. ಯಕ್ಷಗಾನದ ಬಗ್ಗೆ ಹಲವಾರು ಟೀಕೆಯೊಂದಿಗೆ ಕೆಲವೊಂದು ಅಂಶಗಳನ್ನು ವಿಮರ್ಶಿಸಿ ಬರೆಯಲಾಗಿತ್ತು.  ಆ ಲೇಖನ ಹೇಗೇ ಇರಲಿ ಅದರ ಬಗೆಗಿನ ವಿಮರ್ಶೆಯಾಗಲೀ ಅಭಿಪ್ರಾಯವಾಗಲೀ ಈ ಚಿಂತನದ ಉದ್ದೇಶವಲ್ಲ. ಬದಲಾಗಿ ಹೀಗೊಂದು ದೃಷ್ಟಿಕೋನದತ್ತ ಹರಿದ ಚಿಂತನೆಯ  ಹೊಲಬುಗಳು ಮಾತ್ರವನ್ನಷ್ಟೆ ತೋರಿಸುವ ಪ್ರಯತ್ನ. ಒಂದು ರೀತಿಯಲ್ಲಿ ವಾಸ್ತವದಲ್ಲಿ ವಿಡಂಬನೆಯೆಂಬುದು ಪ್ರತಿಯೊಂದು ವಿಷಯಗಳಲ್ಲೂ ಅಡಕವಾಗಿರುತ್ತದೆ ಎಂಬುದಷ್ಟೆ ಭಾವ.
ಇಂದು ಯಕ್ಷಗಾನ ಪ್ರದರ್ಶನಗಳು ಅದರಲ್ಲೂ ತೆಂಕುತಿಟ್ಟು ವ್ಯಾಪಾರಿ ಉದ್ಯಮದಂತೆ ಉಳಿದಿಲ್ಲ. ವ್ಯವಸಾಯೀ ಮೇಳಗಳು.. ತಮ್ಮ ಡೇರೆಯನ್ನು ಎಂದೋ ಸುರುಳಿ ಸುತ್ತಿ ಆಗಿ ಹೋಗಿದೆ. ಆಡೇರೆಯ ಧೂಳಿನ ಕಣಗಳು ಇತಿಹಾಸದ ಗರ್ಭಕ್ಕೆ ಸೇರಿ ಆಗಿಹೋಗಿದೆ. ಹಾಗಾಗಿ ಇಂದು ಅದನ್ನು ಒಂದು ಕಾಲದಲ್ಲಿದ್ದಂತೆ ಉದ್ಯಮ ಎಂದು ಗುರುತಿಸಿಕೊಳ್ಳುವುದು ಕಷ್ಟವಾಗುತ್ತದೆ. ಬಡಗುತಿಟ್ಟಿಗೆ ಇದು ಅನ್ವಯವಾಗುತ್ತದೆಯೋ ಎಂದು ಅನುಮಾನ. ಯಾಕಂದರೆ ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಉದ್ಯದ ರೂಪದಲ್ಲಿ ಇದು ಉಳಿದುಕೊಂಡಿದೆ ಅಂತ ನನ್ನ ಭಾವನೆ. ಅದಾವುದು ಇಲ್ಲಿನ ವಿಚಾರವಲ್ಲ. ಬದಲಾಗಿ ಯಕ್ಷಗಾನ ಎಂಬುದರಿಂದ ಆದಾಯದ ಮೂಲ ಹೇಗೆ ಕಳಚಿಕೊಂಡಿತೊ ಯಕ್ಷಗಾನದ ಅಸ್ತಿತ್ವ ಬೇರೆ ಮೂಲಾಧರವನ್ನೇ ಅಶ್ರಯಿಸ ತೊಡಗಿತು. ಮುಖ್ಯವಾಗಿ ಹಲವಾರು ಕಡೆ ( ಇದು ಬೆಂಗಳೂರಲ್ಲಿ ಅತ್ಯಂತ ವಾಸ್ತವದ ಸಂಗತಿ.)  ಇದು ರಾಜ್ಯದ ಕಲೆ ಎಂಬ ಲೇಬಲ್ ನಲ್ಲಿ ಪ್ರಾಯೋಜಕತ್ವ ಅರಸುವಂತೆ ಮಾಡಿತು. ಹಲವು ಸಲ ರಾಜ್ಯದ ಕಲೆ ಎಂಬ ಈ ಗೌರವ ಅದು ಕಲೆಯ ಮೇಲಿನ ಅಭಿಮಾನದಿಂದಲ್ಲ, ಅದರಲ್ಲೂ ಒಂದು ಜಾಹೀರಾತಿನ ವಾಸನೆಯನ್ನು ಕಾಣಬಹುದು. ದೇವರಿಗೆ ಜಾಹೀರಾತು ಕೊಟ್ಟು ಹರಕೆ ಪೂಜೆ ಒಪ್ಪಿಸಿದಂತೆ,,, ಜಾತ್ರ ಉತ್ಸವದ ಫಲಕಗಳಲ್ಲಿ ದೇವರ ಪ್ರತಿಮೆಗಿಂತ ಮುಖ್ಯವಾಗಿ ತಮ್ಮ ಚಿತ್ರವನ್ನು ಅಚ್ಚು ಹಾಕುವಂತೆ ಇದು ಒಂದು ಕಲಾಸೇವೆ ರೂಪದಲ್ಲಿ ಕ್ರಿಯಾತ್ಮಕವಾಗುವುದುಂಟು. ಹಾಗಾಗಿ ಯಕ್ಷಗಾನ ಒಂದು ರೀತಿಯಲ್ಲಿ ಪ್ರಾಯೋಜಕತ್ವದಡಿಯಲ್ಲೇ ಉಸಿರಾಡುವಂತೆ ಭಾಸವಾಗುತ್ತದೆ.
ಮೊದಲೆಲ್ಲ ಹಲವು ಕಲೆಗಳು ಕಲಾವಿದರು ಬದುಕುತ್ತಿದ್ದದ್ದು ರಾಜಾಶ್ರಯದಿಂದಲೇ ಆದರೂ ಇಂದು ಇದು ಇನ್ನೊಂದು ರೂಪದಲ್ಲಿ ಮುಂದುವರೆಯುತ್ತಿದೆ ಎಂದು ಭಾವಿಸಿ ತೃಪ್ತರಾಗಬೇಕಷ್ಟೆ. ಆದರೆ ವಾಸ್ತವ ಅದು ಇನ್ನೊಂದು ಚಿಂತನೆಗೆ ತೆರೆದುಕೂಳ್ಳುವಂತೆ ಮಾಡುತ್ತದೆ. ಯಕ್ಷಗಾನದ ಮೇಲೆ ಅಭಿಮಾನದಿಂದ ಗೌರವ ಪ್ರೀತಿಯಿಂದ ಅದಕ್ಕೆ ಪ್ರಾಯೋಜಕತ್ವ ಇದ್ದರೆ ಅದು ಯಕ್ಷಗಾನ ಕಲೆಗೆ ಪೂರಕವಾಗಿಯೇ ಉಪಯೋಗವಾಗುತ್ತದೆ. ಆದರೆ ಅದರ ಗಂಭೀರತೆಯ ಅರಿವಿಲ್ಲದೆ ಹರಿದು ಬರುವ ಸಹಾಯದ ಪರಿಣಾಮ ಅದು ಹಾಗೇ  ಪೂರಕವಾಗುತ್ತದೆ ಎಂದು ಹೇಳಬಹುದೇ?
ಇಂದು ಒಂದು ಸಂಘ ಸಂಸ್ಥೆ ಕಟ್ಟಿ ಅದನ್ನು ನೋಂದಾಯಿಸಿ ಅದರ ಆಶ್ರಯದಲ್ಲಿ ಕಲಾಸೇವೆಯನ್ನು ಮಾಡುತ್ತ ತಾವು ಮಾಡಿದ ಸೇವೆಗೆ ಸಹಾಯವಾಗಿ ಸರಕಾರದಿಂದ ಅನುದಾನವನ್ನು ಪಡೆಯುತ್ತಾರೆ. ಸರಕಾರದಿಂದ ಸಿಗುವ ಈ ಸಹಾಯಕ್ಕೆ ಸದ್ಯದಲ್ಲಿ ನಿಯಮ ನಿಬಂಧನೆಗಳು ಅಷ್ಟೊಂದು ಕಠಿಣವಾಗಿಲ್ಲದೇ ಇರಬಹುದು. ಆದರೆ ಮುಂದೊಂದು ದಿನ ಅದು ಬರಲಾರದು ಎನ್ನಲಾದೀತೆ? ಸರಕಾರೀ ಕೃಪಾಪೋಷಿತರಾಗುವುದು ಇನ್ನಿನ್ನು ಹಲವು ಸಮಸ್ಯೆಗಳನ್ನೂ ಗೊಂದಲಗಳನ್ನು ಸೃಷ್ಟಿಸಬಹುದು.  ಈಗಲಂತು ಯಕ್ಷಗಾನಕ್ಕೆ ಒಂದು ಪ್ರತ್ಯೇಕ ಅಕಾಡೆಮಿ ರೂಪುಗೊಂಡ ಮೇಲೆ ಮುಚ್ಚಿದ್ದ ಕಣ್ಣುಗಳು ಅರೆತೆರೆದು ನಿಧಾನವಾಗಿ ಅರಳಿಕೊಂಡದ್ದು ಮಾತ್ರವಲ್ಲ ಅದು ತಿಕ್ಕಿ ತಿಕ್ಕಿ ಕೆಂಪಗಾಗುತ್ತಿವೆ. ಕಾರಣಗಳು ಏನೇ ಇರಲಿ ಮುಂದಾಗುವ ಪರಿಣಾಮಗಳು ಯೋಚಿಸುವಂತೆ ಮಾಡುವುದರಲ್ಲಿ ಅನುಮಾನವಿಲ್ಲ.
          ಆರಾಧನಾ ಸ್ಥಳಗಳು ರಾಷ್ಟ್ರೀಕರಣಗೊಂಡ ಮೇಲೆ ಮನಸ್ಸು ತೆರೆದು ಕಣ್ಣು ಮುಚ್ಚಿ  ಪ್ರಾರ್ಥನೆ ಮಾಡುವುದಕ್ಕೂ ನಿಬಂಧನೆಗಳು ನಿಯಮಗಳು ಬಂದಿವೆ. ಈ ನಿಯಮಗಳಿಗೆ ಭಗವಂತನೂ ಒಗ್ಗಿಕೊಂಡ ಮೇಲೆ ನ್ಯಾಯ ನಿಬಂಧನೆಯ ಬಾಹುಗಳು ಭಗವಂತನ ಸುತ್ತಲು ಬಿಗಿಯತೊಡಗಿವೆ. ಪ್ರತಿಯೊಂದು ಹೆಜ್ಜೆಗಳನ್ನು ಯೋಚಿಸಿಯೇ ಮುಂದಡಿಯಿಡಬೇಕಾದಂತಹ ಅನಿವಾರ್ಯತೆಯನ್ನು ಮನುಷ್ಯನೇ ನಿರ್ಮಿಸಿಕೊಂಡು ಮಾನವೀಯತೆಯ ಆತ್ಮೀಯತೆಯ ಕವಚವನ್ನು ಎಂದೋ ಕಳಚಿಟ್ಟಾಗಿದೆ.  ಆ ಕವಚ ಕೈಗೆ ಸಿಗದಷ್ಟು ಮರೆಯಲ್ಲಿ ಈಗ ಅಡಗಿ ಕುಳಿತಿದೆ. ಎಲ್ಲವು ಮನುಷ್ಯ ನಿರ್ಮಾಣ ಇದರಲ್ಲಿ ಭಗವಂತ ನಿಸ್ಸಹಾಯೀ ಅಂತ  ಹೇಳಬಹುದೇ?
           
          ಯಕ್ಷಗಾನಕ್ಕೊಂದು ಅಕಾಡೆಮಿ ಹಲವು ದಿನದ ಕನಸು ನನಸಾಗಿದೆ. ಯಕ್ಷಗಾನದ ಬೆಳವಣಿಗೆ ಇದರಿಂದ ಬಹಳ ಅನುಕೂಲವಾಗಬಹುದು ಎಂದು ಬಹಳ ಅಭಿಮಾನಿಗಳ ನಿರೀಕ್ಷೆ. ಇದು ಸುಳ್ಳಲ್ಲ.  ಯಕ್ಷಗಾನದಂತಹ ಕಲೆಗೆ ಇದು ಎಂದೋ ಆಗಬೇಕಿತ್ತು. ಎಲ್ಲ ಅನುಕೂಲಗಳು ಒದಗಿ ಯಕ್ಷಗಾನ ಯಕ್ಷಗಾನವಾಗಿಯೇ ಉಳಿಯಲಿ ಎಂದು ಹಾರೈಸಬಹುದು. ಎಲ್ಲ ಅನುದಾನವು ಪೂರಕವಾಗಿದ್ದಲ್ಲಿ ಇದು ನಿಜವಾಗಿಯೂ ಅನುಕೂಲವಾಗಬಹುದು. ಅನುದಾನದೊಂದಿಗೆ ನಿಯಂತ್ರಣದ ವಾಘೆಯೂ ಬಂಧಿಸಲ್ಪಟ್ಟರೆ ... ಹಲವು ವಿಧದ ಅವಿಷ್ಕಾರ ಕಾದುಕುಳಿತಂತೆ ಬಳಕೆಗೆ ಬರಬಹುದು. ಪ್ರತಿಯೊಂದು ಹೆಜ್ಜೆಗೂ ಎಚ್ಚರಿಕೆವಹಿಸಬೇಕಾದ ಅನಿವಾರ್ಯತೆ ಬರಬಹುದು. ಹಲವು ಜಿಜ್ಞಾಸೆಗಳು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು.  ಯಕ್ಷಗಾನ ಮನು ಮಹರ್ಷಿಯ ಸಿದ್ದಾಂತವನ್ನು ಪ್ರತಿಪಾದಿಸುತ್ತಿದೆ ಅದು ಸರಿಯಲ್ಲ ಅದನ್ನು ಬದಲಾಯಿಸಬೇಕು. ಕೋಮುವಾದ ರಾಜಕೀಯ ಕಾರಣಗಳಿಂದ ಅರ್ಥಗಾರಿಕೆಗೆ ಸೆನ್ಸಾರ್ ಹಾಕುವ ಅನಿವಾರ್ಯತೆ ಬರಬಹುದು. ಕರ್ಣನನ್ನು “ ಸೂತನ ಮಗ ...” ಎಂದು ಕರೆದರೆ ಅದು ಜಾತಿ ನಿಂದನೆಯಾಗಬಹುದು. “ದುಷ್ಯಾಸನ ವಧೆ” ಅತ್ಯಂತ ಭೀಭತ್ಸ ಪ್ರಸಂಗ ಎನಿಸಿ ಅದು ರಂಗದಿಂದ ಮಾಯವಾಗಬಹುದು.  ಪ್ರತಿ ಅರ್ಥವಿಲ್ಲದ ಬದಲಾವಣೆಗಳು ಬಳಕೆಗೆ ಬರಬಹುದು. ಹೀಗೆ ಯೋಚಿಸಿದಾಗ ಎಲ್ಲ ಅನುದಾನವನ್ನು ಪಡೆದುಕೊಂಡ ನಂತರ ಹೇಗಿರಬಹುದು? ಕೃತಕ ಗೊಬ್ಬರ ಹಾಕಿ ಕಸಿ ಮಾಡಿ ಬೆಳೆಸಿದ ಮಾವಿನ ಮರದಂತೆಯೋ ಇನ್ನಾವುದೊ ಸಸಿಯಂತೆ ಕಂಗೊಳಿಸಬಹುದು. ಅನುದಾನ ಮೂಗಿಗೆ ಹಚ್ಚಿದ ತುಪ್ಪದಂತೆ ಆಗದೇ ಉಳಿದರೆ ಅದು ಭಾಗ್ಯ ಎಂದೇ ತಿಳಿಯಬೇಕು. ನಮ್ಮ ಮನೆಯ ಸಮಾರಂಭ ಅದು ನಮ್ಮೊಳಗಿನ ಅತ್ಮಾಭಿಮಾನದ ವಿಷಯವಾಗಿ  ಹೇಗೆ ಕಾಣಬಲ್ಲೇವೊ ಹಾಗೆ ನಮ್ಮ ಸಂಸ್ಕೃತಿಯ ಕಲೆ. ಅದು ಅಭಿಮಾನದ ಸಂಕೇತವಾಗಬೇಕು. ನಮ್ಮ ಅಭಿಮಾನದಲ್ಲಿ ದೂಷಣೆ ಶೋಷಣೆ ಕಲೆಯಲ್ಲಿ ಸುಳಿಯದೆ ಅದು ಭವ್ಯ ಸಂಸ್ಕೃತಿಯ ಕಲೆಯಾಗಿಯೇ ಉಳಿಯಬೇಕು.
          ಆದರೂ ಒಂದು ಆಶಯ ಯಕ್ಷಗಾನ ಬೆಳಗಬೇಕು. ಅದು ಪ್ರಾಮಾಣಿಕ ಅಭಿಮಾನದಿಂದ ಬೆಳಗಿದರೆ ಆ ಬೆಳಕಿನ ಪ್ರಬೆಯೂ ಹೆಚ್ಚು. ಅನುದಾನದ ಅಥವಾ ಇನ್ನಿತರ ಸಹಾಯ ನಿರೀಕ್ಷೆಯಿಂದ ಅದು ಬೆಳೆಯುವಂತಾಗಬಾರದು. ನಿಸ್ವಾರ್ಥ ಸೇವೆ ಲಭ್ಯವಾದಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಪೂರ್ಣ ಪ್ರಮಾಣದಲ್ಲಿ ನೈಜ ರೂಪದಲ್ಲೇ ಕಲೆ ಅರಳಬಹುದು.  
         







Saturday, May 12, 2012

ಪ್ರವೃತ್ತಿ ಮತ್ತು ನಿವೃತ್ತಿ

          ಪಾತ್ರಧಾರಣೆ ಮುಗಿಸಿ ರಂಗ ಬಿಟ್ಟು ಚೌಕಿ ಸೇರಿದಾಗ ತಿರುವಿ ತಿರುವಿ ಕುಣಿದು ಕುಣಿದು ಕುತ್ತು ಹಾರಿದ ಪರಿಣಾಮ, ಅಂಗಾಂಗಗದಲ್ಲೆಲ್ಲ ಉಸಿರ ಬಿಸಿಗೆ ಬಿಸಿಯಾದ ರಕ್ತ ಹರಿದಾಡಿ ಬೆವರಾಗಿ ಚರ್ಮಕ್ಕಂಟಿದ ಅನುಭವ. ಅವಸರವಸರವಾಗಿ ಧರಿಸಿದ ವೇಷದ ಉಡುಗೆಗಳನ್ನು ಕಿತ್ತೊಗೆಯುತ್ತಿರುವಾಗಲೂ ಕಿಕ್ಕಿರಿದ ಪ್ರೇಕ್ಷಕರ ಕರತಾಡನದ ಘೋ ಎಂಬ ಶಭ್ದದಲ್ಲಿ ಅಂತ್ಯವಾಗುವ ಸದ್ದಿಗೆ ದಣಿವಿನ ಅರಿವಾಗುವುದಿಲ್ಲ. ಅದು ಅರಿವಾಗಬೇಕಾದರೆ ಈ ಕಲಾವಾತಾವರಣದಿಂದ ಕ್ಷಣ ಹೊತ್ತಾದರೂ ದೂರವಾಗಬೇಕು. ಕಡಲ ಕಿನಾರೆಯಲ್ಲಿ ಬಹು ಹೊತ್ತು ನಡೆದಾಡಿ ಸಮುದ್ರ ಘೋಷದ ಸದ್ದನ್ನು ಮನಸ್ಸಿನಲ್ಲಿ ಮಾರ್ದನಿಸಿ ಕಿನಾರೆ ಬಿಟ್ಟು ದೂರ ಬಂದಾಗ ಅ ಧ್ವನಿ ತಂರಂಗಗಳು ಮನಸ್ಸಿನಲ್ಲಿ ಬಹು ಹೊತ್ತು ಶಭ್ದ ಮಾಡುತ್ತಿರುತ್ತವಂತೆ ಈ ಪ್ರೇಕ್ಷಕರ ಕರತಾಡನ. ರಂಗದ ಮೇಲೆ ಕುಣಿಯುತ್ತಿರಬೇಕಾದರೆ ಸಮುದ್ರದಲ್ಲಿ ಇಳಿದು ಸಮುದ್ರದ ಅಲೆಗಳೊಂದಿಗೆ ಚೆಲ್ಲಾಟವಾಡಿದ ಅನುಭವವಾದರೆ ಚೌಕಿಗೆ ಬಂದು ನಿಂತಾಗ ಸಮುದ್ರ ಬದಿಯಲ್ಲಿ ನಿಂತ ಅನುಭವ. ಈ ಪರಿಸರದಿಂದ ದೂರವಾಗಿ ಹೋದರೂ ಸಮುದ್ರ ಘರ್ಜನೆಯಂತೆ ಈ ಕರತಾಡನ ಮತ್ತೂ ಮತ್ತೂ ಮಾರ್ದನಿಸುತ್ತಿರುತ್ತದೆ. ಆಗ ಮುಷ್ಠಿಯೊಳಗಿದ್ದ ಸಂಭಾವನೆಗಿಂತ ಅತ್ಮದಲ್ಲಿ ತುಂಬಿದ ತೃಪ್ತಿಯೇ ಹಿರಿದಾಗುತ್ತದೆ. ದೈಹಿಕವಾದ ನೋವು ದಣಿವು ಎಲ್ಲವೂ ತೃಣಮಾತ್ರವಾದ ಅನುಭವ.

          ಬಹುಷಃ ಯಕ್ಷಗಾನದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ವೇಷಧಾರಿಯ ಅದರಲ್ಲೂ ಪುಂಡುವೇಷಧಾರಿಯ ಅನುಭವ ಇದಕ್ಕಿಂತ ಭಿನ್ನವಾಗಿರುವುದು ಅಸಾಧ್ಯ. ಬದುಕಿ ಜೀವನಕ್ಕೆ ಅನಿವಾರ್ಯವೋ ಅಥವಾ ಬದುಕಿನ ಅರ್ಥದ ಒಂದು ಪರಿಯೋ ಈ ರಂಗವನ್ನು ಅಂಟಿಸಿಕೊಂಡು ಅದರಲ್ಲಿ ಲೀನವಾದ ಬದುಕು ಮೆತ್ತನೆಯ ಪಲ್ಲಂಗವಾಗುವುದು ಸಾಧ್ಯವೇ ಇಲ್ಲ ಎಂಬ ಅನುಭವವಾಗಿರುವಾಗ, ವಾಸ್ತವದಲ್ಲಿ ಎಲ್ಲೆಂದರಲ್ಲಿ ಒರಗಿಕೊಂಡು ಸಮಯ ಕಳೆದು ನಂತರ ರಂಗಕ್ಕೆ ಸಜ್ಜಾಗುವ ನಡುವಿನ ಜೀವನದಲ್ಲಿ ಪಲ್ಲಂಗ ಎಂತಿದ್ದರೂ ಕನಸೇ ಸರಿ. ಮನೆ, ಕುಟುಂಬ, ಸಂಸಾರ ವಂಚಿತವಾದ ಜೀವನದ ಅಂಗಗಳು ಹಲವಾರು.ಆದರೂ ಕಲಾ ಜೀವನದ ಹಾದಿಯಲ್ಲಿ ಕಂಡ ನಿಲುಮೆ ಎಂತಹುದು ಎಂದು ಯೋಚಿಸುತ್ತ ಹೋದರೆ ಅದ್ಭುತ ಎನ್ನಿಸುತ್ತದೆ.



          ಆದರೂ ಇಲ್ಲಿ ಅಧೀರನಾಗುವ ಹಂತ ಎಂದರೆ ನಿವೃತ್ತಿ. ಸಹಜವಾಗಿ ಇದು ಮನುಷ್ಯ ಜೀವನದ ಒಂದು ಗತಿ, ಪ್ರವೃತ್ತಿ... ಪ್ರವೃತ್ತಿ ..ಹೀಗೆ ಒಂದು ಹಂತದ ಅತ್ಯುನ್ನತಿಗೆ ಏರಿದ ನಂತರ ಮತ್ತೆ ನಿವೃತ್ತಿ. ಕೆಲವೊಂದು ಸಲ ಸ್ವತಃ ಮನುಷ್ಯ ಇದನ್ನು ಅರಗಿಸಿಕೊಳ್ಳುವುದಕ್ಕೆ ಮತ್ತು ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟಪಡುತ್ತಾನೆ. ಹೇಗಿದ್ದರೂ ಪ್ರಕೃತಿ ಮಾತ್ರ ಅದನ್ನು ಅನಿವಾರ್ಯವಾಗಿಸುತ್ತದೆ ಇದು ಪರಮ ಸತ್ಯ. ಮಾತ್ರವಲ್ಲ ಅದು ಪ್ರಕೃತಿ ಧರ್ಮವೂ ಹೌದು.ಕೇವಲ ವೈಯಕ್ತಿಕ ಬದುಕನ್ನು ಮಾತ್ರವೇ ಅವಲಂಬಿಸಿರುವವನಿಗೆ ಈ ನಿವೃತ್ತಿ ಎಂಬುದು ಕೇವಲ ವೈಯಕ್ತಿಕವಾಗಿ ಸೀಮಿತವಾಗಿದ್ದರೆ ಈ ಸಾರ್ವಜನಿಕ ಜೀವನವನ್ನು ಅವಲಂಬಿಸುವವರಿಗೆ ಹಾಗಲ್ಲ ಸಾರ್ವಜನಿಕವಾಗಿ ಒಂದನ್ನೊಂದು ಅವಲಂಬಿಸಿರುವಾಗ ಈ ನಿವೃತ್ತಿ ಎಂಬುದು ಹಲವು ಕಡೆ ಸಂಚಲನವನ್ನು ಉಂಟುಮಾಡುತ್ತದೆ. ವೈಯಕ್ತಿಕವಾದ ಚಿಂತನೆ ಅನಿಸಿಕೆ ಹೇಗೂ ಇರಲಿ ಆದರೆ, ಸಾರ್ವಜನಿಕ ಬದುಕು ಮತ್ತು ಆ ಪರಿಸರ ಪ್ರವೃತ್ತಿಯಿಂದ ಆಚೆಗಿನ ಬದುಕನ್ನು ಯೋಚಿಸುವುದಕ್ಕೆ ಬಿಡುವುದಿಲ್ಲ. ಆವಾಗ ವಸ್ತುಸ್ಥಿತಿಯನ್ನು ಸರಿಯಾಗಿ ಗ್ರಹಿಸಿ ಆ ಬಗೆಯಲ್ಲಿ ಪ್ರಾಮಾಣಿಕವಾಗಿ ನಡಕೊಂಡವನು ಪರಿಸ್ಥಿತಿಗೆ ಬೇಗನೇ ಹೊಂದಿಕೊಳ್ಳುತ್ತಾನೆ. ಇದನ್ನೇ ಅನಿವಾರ್ಯ ಎಂದು ಒಪ್ಪಿಕೊಳ್ಳುತ್ತಾನೆ. ನಿವೃತ್ತಿಯೆಂದರೆ ರೈಲು ಬಂಡಿಯಿಂದ ಭೋಗಿಯೊಂದನ್ನು ಕಳಚಿ ದೂರ ಇಟ್ಟ ಹಾಗೆ. ಅಲ್ಲಿಯ ತನಕ ಎಲ್ಲ ಭೋಗಿಯ ಜತೆ ಒಂದಾಗಿ ಚಲಿಸುತ್ತಿದ್ದ ಭೋಗಿಯೊಂದು ಕಳಚಿ ದೂರ ಇಟ್ಟಾಗ ಮಿಕ್ಕುಳಿದ ಭೋಗಿಗಳು ನಿಂತಿರಲು ಸಾಧ್ಯವೇ . ನಿಧಾನವಾಗಿ ತಮ್ಮ ಚಲನೆಯನ್ನು ಆರಂಭಿಸುತ್ತದೆ. ಆದರೆ ಹಳಿಯಿಂದ ಸರಿದು ನಿಲ್ಲುವ ಅನಿವಾರ್ಯತೆ ಪ್ರತಿಯೊಂದು ಭೋಗಿಗೂ ಇರುತ್ತದೆ. ಹಳಿಯಿಂದ ಸರಿದು ನಿಂತ ಭೋಗಿ ಉಳಿದ ಭೋಗಿಯ ಚಲನೆಯನ್ನಷ್ಟೇ ನೋಡಲು ಸಾಧ್ಯ.

           ಇದೆಲ್ಲ ಪ್ರಕೃತಿ ಸಹಜವಾಗಿ ನಡೆದು ಹೋದರೆ ಎಲ್ಲ ಅನಿವಾರ್ಯತೆ ಎಂದು ಒಪ್ಪಿಕೊಳ್ಳಬಹುದು. ವಯೋಮಾನಕ್ಕೆ ಅನುಗುಣವಾಗಿ ಮನಸ್ಥಿತಿಯು ಬದಲಾಗಿಬಿಡುತ್ತದೆ. ಆದರೆ ಇದು ಅನೀರೀಕ್ಷಿತವಾದಾಗ ಮಾತ್ರಾ ನಿಜ ಬದುಕನ್ನು ಒಪ್ಪಿಕೊಳ್ಳುವಲ್ಲಿ ಹೆಣಗಾಡಬೇಕಾಗುತ್ತದೆ.



          ಸಾರ್ವಜನಿಕ ಬದುಕನ್ನು ಅನುಭವಿಸುವ ಒಬ್ಬ ಕ್ರೀಡಾಳು ಇರಬಹುದು ಅಥವಾ ಕಲಾವಿದ ಇರಬಹುದು ಆತ ಅತನಿಗಾಗಿ ಮಾತ್ರ ಬದುಕುವುದಲ್ಲ. ಆತನ ಏರು ಪೇರು ಅವಲಂಬಿಸಿಕೊಂಡು ಸಾರ್ವಜನಿಕ ಪ್ರಪಂಚ ಇರುತ್ತದೆ. ಜೀವನದ ಗತಿಯನ್ನು ನಿರ್ಧರಿಸುವುದೇ ಈ ಪ್ರಪಂಚ. ಆದರೆ ಒಬ್ಬ ಕ್ರೀಡಾಳುವಿಗೆ ಆತನ ಕ್ರೀಡಾಜೀವನವನ್ನು ನಿರ್ವಶಿಸುವುದಕ್ಕೆ ಯುಕ್ತವಾಗುವಂತೆ ತರಬೇತುದಾರ ಒಬ್ಬ ಜತೆಗೇ ಇರುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ, ಸಾಂಸಾರಿಕವಾಗಿ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಲಹೆ ಸೂಚನೆಗಳನ್ನಿತ್ತು ಆತನ ಕ್ರೀಡಾ ಜೀವನವನ್ನು ಸುಲಭವಾಗಿ ಮಾಡುವುದು ಮಾತ್ರವಲ್ಲ ಕ್ರೀಡಾ ಜೀವಿತದ ಅವಧಿಯನ್ನು ವಿಸ್ತರಿಸುವುದಕ್ಕು ಕಾರಣೀಭೂತನಾಗಿರುತ್ತಾನೆ. ಕ್ರೀಡಾಳುವಿನ ಸಂಪೂರ್ಣ ದಿನಚರಿಗೆ ಒಂದು ರೂಪು ರೇಷೇಯನ್ನು ಕೊಡುತ್ತಾ... ಆಟಗಾರ ಎಷ್ಟು ಹೊತ್ತು ಅಡಬಹುದು.. ಯಾವಾಗ ತರಬೇತಿ ತಾಲೀಮು ನಡೆಸಬಹುದು...ಯಾವುದು ಬದ್ಧ ಯಾವುದು ನಿಷಿದ್ದ..ಹೀಗೆ ಎಲ್ಲದರಲ್ಲು ಸಲಹೆ ಸೂಚನೆಯನ್ನು ಕೊಡುತ್ತ ಕ್ರೀಡಾಳು ಏಕಾಂಗಿ ಎಂಬ ಭಾವನೆ ಬಾರದಂತೆ ನೋಡಿಕೊಳ್ಳುತ್ತಾನೆ. ಕೆಲವೊಂದು ವಿಭಾಗದ ಕಲಾವಿದರೀಗೂ ಈ ಬಗೆಯ ಸೌಕರ್ಯಗಳಿರುತ್ತದೆ. ಈ ಬಗೆಯ ಯಾವುದೇ ಸೌಕರ್ಯಗಳಾಗಲೀ ತರಬೇತಿಯಾಗಲೀ ಆತನ ವಿದ್ಯಾರ್ಥಿ ಜೀವನದಲ್ಲಿ ಆವಶ್ಯಕವೆನಿಸುವುದಿಲ್ಲ. ಬದಲಾಗಿ ವೃತ್ತಿ ಜೀವನವಾಗಿ ಆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಸ್ವತಂತ್ರನಾಗಿ ಪ್ರವೃತ್ತನಾದಾಗ ಇದು ಅವಶ್ಯವೆನಿಸಲ್ಪಡುತ್ತದೆ. ಶಿಕ್ಷಣ ಮತ್ತು ಶಿಸ್ತು ಬದ್ದ ಜೀವನ ಆಯಾಚಿತವಾಗಿ ರೂಢಿಗೆ ಬರುತ್ತದೆ.



          ಸಾಮಾನ್ಯವಾಗಿ ಎಲ್ಲಾ ಕಲಾವಿದರ ಜೀವನ ಬಹಳ ದುರ್ಭರವಾಗಿರುತ್ತದೆ. ಕಲೆಗೆ ಸಂಬಂಧಿಸಿ ಎಲ್ಲಾ ಸಾಮಾರ್ಥ್ಯಗಳಿದ್ದರೂ ವ್ಯವಹಾರ ಚಾತುರ್ಯ ಬೇಕಾದಷ್ಟಿರುವುದಿಲ್ಲ. ಯೋಜನಾಬದ್ಧವಾದ ಜೀವನ ಎಂದರೇನೆಂದೇ ಅರಿವಿಲ್ಲದಿರುವಾಗ ಕಲಾ ಜೀವನ ಕೇವಲ ಕಲಾ ಜೀವನವಾಗಿಯೇ ಉಳಿಯುತ್ತದೆ. ಕಲಾಸಾಧನೆಯೇ ಎಲ್ಲಕ್ಕಿಂತ ಹಿರಿದಾಗಿ ಕಂಡರು ಅದು ಕೇವಲ ತಾತ್ವಿಕ ಯಶಸ್ಸಾಗಿಯಷ್ಟೇ ಉಳಿಯುತ್ತದೆ. ನಿಜ ಜೀವನದ ವಾಸ್ತವಕ್ಕೆ ಇಳಿದಾಗ ಯಾವ ಸಾಧನೆಯತ್ತ ನೋಡಬೇಕು ಎಂಬುದೇ ಗೊಂದಲ. ರಂಗದ ಮೇಲೆ ದಿನಕ್ಕೊಂದು ಬಗೆಯಲ್ಲಿ ಕಲೆಯನ್ನು ಪ್ರದರ್ಶಿಸುವಾಗ ದೈಹಿಕ ಶ್ರಮ ಮತ್ತು ಸಮಯ ಹೀಗೆ ಸ್ವರ್ವಸ್ವವನ್ನೂ ವಿನಿಯೋಗಿಸಿದರೂ ಆದಿನದ ಪ್ರದರ್ಶನ ಆದಿನದ ಕಲಾಜೀವನಕ್ಕೆ ಮಾತ್ರ ಮೀಸಲಾಗಿರುತ್ತದೆ. ಅಂದರೆ ಕಳೆದು ಹೋದ ಅಂದಿನ ಪ್ರದರ್ಶನವನ್ನು ಪುನಃ ತೋರಿಸುವುದಕ್ಕಾಗುವುದಿಲ್ಲವಲ್ಲ. ಒಂದು ವೇಳೆ ತೋರಿಸಿದರೂ ಅದು ಜೀವಂತ ಪ್ರದರ್ಶನದ ಮಹತ್ವವನ್ನು ಉಳಿಸಿಕೊಂಡಿರುವುದಿಲ್ಲ. ಹೀಗಾಗಿ ಯಕ್ಷಗಾನದ ಒಂದು ದಿನದ ಪ್ರದರ್ಶನವಾದರೂ ಅದು ನಿತ್ಯ ನೂತನ ದರ್ಶನವೇ ಆಗಿರುತ್ತದೆ. ಒಂದೊಂದು ಪ್ರದರ್ಶನವೂ ಸಿನಿಮಾದಂತೆ ಕಂಪ್ಯೂಟರ್ ಕಾಪಿ ಯಾಗಿರದೆ ಪರಿಶ್ರಮದ ಕೈಬರಹದ ಹಾರ್ಡ್ ಕಾಪಿಯೇ ಆಗಿರುತ್ತದೆ. ಇದು ಕಲಾವಿದನ ಬದುಕಿನಲ್ಲೂ ಪರಿಣಾಮ ಬೀರುತ್ತದೆ. ಅದರಲ್ಲು ರಾತ್ರಿಯನ್ನು ಹಗಲಾಗಿಸುವ ಈ ಕಲಾಜೀವನ ಒಂದು ರೀತಿಯಲ್ಲಿ ಪ್ರಕೃತಿ ವಿಧಾನ ವಿರುದ್ದವಾಗಿರುತ್ತ ಒಟ್ಟಿನಲ್ಲಿ ಕಲಾವಿದನ ಜೀವನವನ್ನು ಆಯ್ಕೆ ಮಾಡಬೇಕಿದ್ದರೆ ಅತ್ಯಂತ ಕಲಾಬದ್ದತೆ ಅತ್ಯವಶ್ಯ. ಇಲ್ಲಿ ಪ್ರವೃತ್ತಿ ಯಾಗಲೀ ನಿವೃತ್ತಿಯಾಗಲೀ ತೀರ ಭಿನ್ನ. ಅದು ಅನಿರೀಕ್ಷೀತ ಸ್ಥಿತಿಯಾದಲ್ಲಿ ಜೀವನ ಕಲಿಸುವ ಪಾಠವನ್ನು ಕಲಿಯುವುದಕ್ಕೇ ಸಾಧ್ಯವಿಲ್ಲ.



           ಯಕ್ಷಗಾನದಲ್ಲಿ ವಯೋಮಾನದ ಪ್ರಭಾವ ಪಾತ್ರಗಳಲ್ಲಿ ಆಗುತ್ತಿದ್ದರು ಕೆಲವೊಮ್ಮೆ ಅದಕ್ಕೆ ವ್ಯತಿರಿಕ್ತವಾದುದು ಕಂಡುಬಾರದೆ ಇರುವುದಿಲ್ಲ. ಯಾರೂ ಯಾವುದೇ ಪಾತ್ರವನ್ನು ಮಾಡಲು ಸಾಧ್ಯವಿರುವ ಒಂದು ಕಲೆ. ವಯಸ್ಸಿನ ಭೇದವಿಲ್ಲದೇ ಯಾರೂ ಯಾವುದೇ ಬಗೆಯ ಪಾತ್ರ ಮಾಡಬಹುದಾದ ಒಂದು ಸ್ಠಿತ್ಯಂತರದ ವೈಶಿಷ್ಟ್ಯ ಈ ಕಲೆಯಲ್ಲಿದೆ. ಇದರ ವೇಷಗಾರಿಕೆ ವರ್ಣ ವೈವಿಧ್ಯತೆ ಇವುಗಳೆಲ್ಲದರಿಂದ ಅಸಲೀ ವೇಷದೊಳಗಿನ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚುವುದು ಸುಲಭವಲ್ಲ. ಹಾಗಾಗಿ ವಯೋ ಮಾನಕ್ಕೆ ವ್ಯತಿರಿಕ್ತವಾಗಿ ಪಾತ್ರವನ್ನು ನಿಭಾಯಿಸುವುದು ಸರ್ವೇ ಸಾಮನ್ಯ. ಗಂಡು ನಿಜ ಹೆಣ್ಣಿಗಿಂತ ಚೆನ್ನಾಗಿ ಬಳುಕುತ್ತ ನರ್ತಿಸುವುದು,, ಅತಿ ಸೌಮ್ಯ ವ್ಯಕ್ತಿ ಭಯಂಕರ ರಕ್ಕಸನಾಗಿ ಅಬ್ಬರಿಸುವುದು,, ಇಲ್ಲಿ ದೇಹಕ್ಕೂ ವಯಸ್ಸಿಗೂ ಮಾಡುವ ವೇಷಕ್ಕೂ ಸಂಬಂಧವೇ ಇರುವುದಿಲ್ಲ. ತನ್ನ ಸಾಮಾರ್ಥ್ಯಕ್ಕನುಗುಣವಾಗಿ ವೇಷಧಾರಿ ರಂಗಸ್ಥಳ ಏರುತ್ತಾನೆ. ಅತ್ಯಂತ ಸಕ್ರಿಯನಾಗಿ ರಂಗದಲ್ಲಿ ವ್ಯಹರಿಸುವ ವ್ಯಕ್ತಿ ಒಮ್ಮಿಂದೊಮ್ಮೆಗೆ ಸಹಜ ಪ್ರವೃತ್ತಿಯಿಂದ ನಿವೃತ್ತನಾಗಿ ರಂಗದಿಂದ ದೂರ ಉಳಿಯುವಾಗ ಮಾತ್ರ ಎಲ್ಲ ಕಡೆ ಒಂದು ಶೂನ್ಯತೆ ಕವಿದ ಹಾಗೆ. ಕಲಾವಿದನ ಮನಸ್ಸು ಸಮುದ್ರದಡ ದಿಂದ ದೂರ ಬಂದು ನಿಂತ ಅನುಭವ. ಆ ಘೋಷ ಅದರ ರೋಮಾಂಚನದಲ್ಲಿ ವಾಸ್ತವಕ್ಕೆ ಹೊಂದಿಕೊಳ್ಳಲು ಬಹಳ ಮಾನಸಿಕ ಸ್ಥಿರತೆಯನ್ನು ತಂದುಕೊಳ್ಳಬೇಕಾಗುತ್ತದೆ.



           ಕಲಾವಿದ ತನ್ನ ಜೀವನವನ್ನು ಯೋಜನಾಬದ್ದವಾಗಿ ರೂಪಿಸಿಕೊಳ್ಳುವಲ್ಲಿ ವ್ಯವಹಾರ ಕುಶಲಿಯಾಗದೇ ಇರುವುದೇ ಕೆಲವೊಂದು ಸಲ ಕಾರಣವೇ ಅಂತ ಅನ್ನಿಸುವುದುಂಟು. ಮಿತಿಮೀರಿದ ಪ್ರೇರೇಪಣೆಯಿಂದ ದಣಿವರಿಯದ ಕುಣಿತ, ವಯಸ್ಸನ್ನು ಕಾಲವನ್ನು ಮೀರಿ ರಂಗದಲ್ಲಿ ಕುಣಿಯುವಾಗ ಆತನಿಗರಿಯದೇ ದೇಹ ಆಂತರಿಕವಾಗಿ ಸೊರಗಿ ಹೋಗುತ್ತದೆ. ಯಾವ ಭದ್ರತೆಯೂ ಇಲ್ಲದ ಜೀವನ ದಿನಳಿಗೊಂದು ದಿನವನ್ನು ಸೇರಿಸುತ್ತಾ ಕಳೆದು ಹೋಗುತ್ತದೆ. ಆದರೂ ಕಲಾವಿದನ ಕಲೆಗೆ ಅಂಟಿಕೊಂಡು ಕಲೆಗಾಗಿ ತನ್ನ ಜೀವನವನ್ನೇ ಮೌಲ್ಯವಾಗಿಸುವ ಆ ನಿಲುಮೆ ಭಾವನಾತ್ಮಕವಾಗಿ ಚಿಂತಿಸುವಾಗ ಮಾತ್ರವೇ ಅರಿಯಲು ಸಾಧ್ಯ.