ಅಂಬಾ ವೃತ್ತಾಂತ ೪
ದೊಡ್ದದು ಎಂಬ ಒಂದು ಮಾನವನ್ನು ಯಾವುದೇ ವಿಷಯದಲ್ಲಿ ಅರೋಪಿಸುವಾಗ ಚಿಕ್ಕದು ಎಂಬುದರ ಅಸ್ತಿತ್ವ ಅಲ್ಲಿರಬೇಕಾಗುತ್ತದೆ. ಚಿಕ್ಕದು ಎಂದು ಇದ್ದಲ್ಲಿ ದೊಡ್ಡದು ಎಂದಿರಲೇಬೇಕಲ್ಲ. ಅಥವಾ ದೊಡ್ಡದು ಇದ್ದರೆ ಮಾತ್ರವೇ `ಚಿಕ್ಕದು' ಎಂಬ ವಿಶೇಷಣ ಅರ್ಥವನ್ನು ಕಂಡುಕೊಳ್ಳುತ್ತದೆ. ದೊಡ್ಡದು ಎಂಬುದು ಇದ್ದರೆ ಅದನ್ನು ಸಣ್ಣದರ ಎದುರು ನಿಲ್ಲಿಸಿ ತೂಗಿ ನೋಡಿದಾಗ ದೊಡ್ಡದು ಎಂದಾಗುತ್ತದೆ. ಭೀಷ್ಮ ಪರಶುರಾಮರ ತಾರ್ಕಿಕ ಸಮರದ ಫಲವೇ "ಭೀಷ್ಮ ವಿಜಯ". ಭೀಷ್ಮ ಕನ್ಯಾಪಹಾರ ಮಾಡಿದ. ಬಳಿಕ ತಮ್ಮನಿಗೆ ಬಲವಂತವಾಗಿ ವಿವಾಹ ಮಾಡಿಸಿದ ಒಪ್ಪದಿದ್ದ ಅಂಬೆ ಶೋಷಿತಳಾದಳು. ಹೀಗೆ ಲೋಕಾಪವಾದ ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಗಸನ ಸಣ್ಣ ಮಾತಿಗೆ ಜಾನಕಿಯನ್ನು ದೂರ ಮಾಡಿದ ರಾಮ ರಾಮನವ್ಯಕ್ತಿತ್ವಕ್ಕೆ ಸಣ್ಣ ಮಾತಾದರೂ , ಅಲ್ಲಿ ಕಳಂಕ ಸಣ್ಣದಾದರೂ ಅದರ ಪರಿಣಾಮ ದೊಡ್ಡದಾಗಿರುತ್ತದೆ. ಶ್ವೇತ ಪರದೆಯ ಮೇಲೆ ಒಂದು ಸಣ್ಣ ಕಲೆಯಾದರೂ ಅದೇ ಎದ್ದು ಕಾಣುವ ಹಾಗೆ ಭೀಷ್ಮನ ಬದುಕಿನ ಶ್ವೇತ ವಸನದ ಕಲೆ ತೊಳೆಯಲ್ಪಡಬೇಕು ಇದು ಗುರು ಸಂಕಲ್ಪ. ಹಾಗಾಗೀ ಸಂಘರ್ಷಕ್ಕೇ ಒತ್ತು ಕೊಟ್ಟು ಅದಕ್ಕೆ ಕುರುಕ್ಷೇತ್ರವನ್ನೆ ಅಯ್ಕೆ ಮಾಡಿಕೊಂಡರು ಗುರು ಜಮದಗ್ನಿ ಸಂಜಾತ ಪರಶುರಾಮರು. ಭೀಷ್ಮ ಯುದ್ದವನ್ನೇ ಬಯಸಿಯಾನು ಎಂದು ಗುರುಗಳು ಮೊದಲೇ ಊಹಿಸಿಯಾಗಿತ್ತು. ಯಾಕೆಂದರೆ ಪ್ರಿಯ ಶಿಷ್ಯನ ಮನಸ್ಸು ಪರಶುರಾಮರಂತಹ ಗುರುಗಳು ಅರಿಯದೇ ಹೋದಾರೆ? ಹಾಗಾಗಿ ಸಂಘರ್ಷ ಅನಿವಾರ್ಯ ಎಂದು ಅವರು ಕಂಡುಕೊಂಡಾಗಿತ್ತು. ತಾಮ್ರದ ಪಾತ್ರೆಯನ್ನು ತೊಳೆಯಲು ಬೂದಿಯನ್ನೇ ಬಳಸಿದಂತೆ ಬೂದಿ ಬಳಿದು ಕಪ್ಪಾದ ಪಾತ್ರೆ ತೊಳೆದ ನಂತರ ಮತ್ತಷ್ಟು ಪ್ರಭೆಯನ್ನು ಗಳಿಸಿಬಿಡುತ್ತದೆ. ಹಾಗಾಗಿ ಕುರುಕ್ಷೇತ್ರದಲ್ಲಿ ವೈಚಾರಿಕ ಭಸ್ಮದಿಂದ ಭೀಷ್ಮನ ವ್ಯಕ್ತಿತ್ವವನ್ನು ಪರಿಶುದ್ದಗೊಳಿಸುವುದಕ್ಕೆ ಗುರುಗಳು ಮುಂದಾದರು.
ಹಸ್ತಿನಾವತಿಯ ಪ್ರತಿನಿಧಿಯಾಗಿ ಭೀಷ್ಮ ಬರೆದ ಪತ್ರಕ್ಕೆ ಪ್ರತಿಕ್ರಿಯೆಯನ್ನು ಕಾಶೀರಾಜ ನೀಡಲಿಲ್ಲ. ಹಸ್ತಿನಾವತಿಯ ಯುವರಾಜನ ಬಗ್ಗೆ ಇದು ಅಸಮ್ಮತಿಯಾದರೂ ಭೀಷ್ಮ ಸಹಿಸುತ್ತಿದ್ದನೇನೋ. ಆದರೆ ಕರಿಪುರರದ ಭೀಷ್ಮ ರರಿಯದಹಾಗೆ ಎಂದು ಕಾಶೀರಾಜ ಬಗೆದನೋ ಅದಕ್ಕೆ ವಿರುದ್ದವಾಗಿ ಪ್ರತಿಕ್ರಿಯಿಸಬೇಕಾದದ್ದು ಚಕ್ರವರ್ತಿ ಪ್ರತಿನಿಧಿಯಾಗಿ ಭೀಷ್ಮನಿಗೆ ಅನಿವಾರ್ಯವಾಗುತ್ತದೆ. ಹಾಗಾಗಿ ನಾನು ಕನ್ಯಾರ್ಥಿಯಾಗದೇ ಪ್ರತಿನಿಧಿಯಾಗಿ ಹೋದೆ. ಇದು ಗುರುಗಳಲ್ಲಿ ಭೀಷ್ಮನ ನಿವೇದನೆ.
ಗುರುಗಳು ಹೇಳುತ್ತಾರೆ "ಭೀಷ್ಮರರಿಯದ ಹಾಗೆ... ಎಂದು ತೋರುವುದಕ್ಕೆ ಮೊದಲಾಗಿ ಪತ್ರ ಬರೆದು ಕನ್ಯೆಯರನ್ನು ಕೇಳಿದ ಹಸ್ತಿನಾವತಿಯವರೇ ಇದಕ್ಕೆ ಪರೋಕ್ಷವಾಗಿ ಕಾರಣರಾಗುತ್ತಾರೆ. ಹಾಗಾಗಿ ಸ್ವಯಂವರಕ್ಕೆ ಭೀಷ್ಮ ಅಡ್ಡಬರುತ್ತಾನೆ. ಎಂದುಕೊಂಡು ಭೀಷ್ಮ ರರಿಯದ ಹಾಗೆ ಎಂದು ಸಾಮಂತರಸರಿಗೆ ಅಹ್ವಾನವನ್ನು ನೀಡಿದ."
ಭೀಷ್ಮರರಿಯದ ಹಾಗೆ ಎಂಬ ಒಕ್ಕಣಿಕೆಯಿಂದ ಕಾಶೀರಾಜ ಯಾವುದೋ ಹಿನ್ನೆಲೆಯನ್ನು ಅಡಗಿಸಿಟ್ಟಿದ್ದಾನೆ ಎಂದು ಬಹಿರಂಗವಾಗಿ ಹೇಳಿದಂತೆ ಅಲ್ಲವೇ? ಅದರ ಅರ್ಥ ಹಸ್ತಿನಾವತಿಯವರು ಕೇಳಿ ಕನ್ಯಯರರನ್ನು ನೀಡದೇ ಹಸ್ತಿನಾವತಿಯರಲ್ಲಿ ದೌರ್ಬಲ್ಯವಿದೆ ಎಂದು ಜಾಹೀರು ಮಾಡಿದಂತೆ. ಕಾಶೀ ಕನ್ಯೆಯರನ್ನು ಪರಿಗ್ರಹಿಸುವಲ್ಲಿ ಹಸ್ತಿನೆಯ ರಾಜ ಸಮರ್ಥನಲ್ಲ. ಆ ಸಾಮಾರ್ಥ್ಯವನ್ನು ಪ್ರಶ್ನಿಸುವಂತೆ ಮತ್ತು ಅದಕ್ಕೆ ವಿರುದ್ಧವಾಗಿ ಇದು ಧೂರ್ತ ಗೂಢಾಲೋಚನೆ. ಹಾಗಾಗಿ ಯಾವುದೇ ರೀತಿಯಲ್ಲಿ ಭೀಷ್ಮ ರಂಗ ಪ್ರವೇಶ ಮಾಡುವುದು ಅನಿವಾರ್ಯವಾಯಿತು. ಹಸ್ತಿನಾವತಿಯಲ್ಲಿ ಸಾಮಾರ್ಥ್ಯ ಯಾವ ರೀತಿಯಲ್ಲಿ ನಿಕ್ಷೇಪವಾಗಿದೆ ಎಂದು ತೋರಿಸಿ ಕೊಡಬೇಕಿತ್ತು. ಚಕ್ರವರ್ತಿ ಮಾನ್ಯಮಾಡದ ಸ್ವಯವಂರವನ್ನು ಭೀಷ್ಮ ಭೇದಿಸುವುದಕ್ಕಾಗಿಯೇ ಬಂದ. ಭೀಷ್ಮನ ಯೋಚನೆ ಒಂದೇ ನೋಟಕ್ಕೆ ಅರ್ಥವಾಗುವುದಿಲ್ಲ ಬಗೆದಷ್ಟು ಬಗೆದಷ್ಟು ಇದಕ್ಕೆ ಹಲವಾರು ವಿಚಾರಗಳು ಪುಷ್ಟಿಯನ್ನು ಕೊಡುತ್ತವೆ.
ಹಾಗಾದರೆ ಸ್ವಯಂವರಕ್ಕೆ ಹೋಗದಂತೆ ಮೊದಲೇ ಸಾಮಂತರನ್ನು ತಡೆಯಬಹುದಾಗಿತ್ತಲ್ಲ? ಎಂಬ ಪ್ರಶ್ನೆ ಬರುತ್ತದೆ. ತನಗೆ ಸುದ್ದಿ ಬಂದಾಗ ಅರಸರೆಲ್ಲ ಹೋಗಿಯಾಗಿತ್ತು. ಹಾಗಾಗಿ ಅಲ್ಲಿ ಪ್ರವೇಶ ಮಾಡಿದಾಗಲೇ ಯುದ್ದ ನಿಂತಾಗಿತ್ತು. ನಿಂತಿದ್ದ ಕನ್ಯೆಯರಿಗೆ 'ಏರಿರೆನ್ನಯ ರಥವನು' ಎಂದು ಆಜ್ಞಾಪಿಸಿದ. ಗುರುಗಳು ಕೇಳುತ್ತಾರೆ. ಆಗ ಯಾರು ತಡೆಯಲಿಲ್ಲವೇ ? ಯಾರೂ ಪ್ರತಿಭಟಿಸಲಿಲ್ಲವೇ? ಯಾರೂ ಯುದ್ದಕ್ಕೆ ಬರಲಿಲ್ಲವೆ?
ಇಲ್ಲ ಯಾರೂ ಏಳಲಿಲ್ಲ. ಆದರೆ ಸಾಲ್ವನೊಬ್ಬ ಪ್ರತಿಭಟಿಸಿದ. ಆದರೆ ಆತ ಅಲ್ಲಿ ಆಮಂತ್ರಣ ಇದ್ದು ಹೋದವನೇ ಅಲ್ಲ. ಸಾಲ್ವನ ಪ್ರತಿಭಟನೆ ಗಣಿಸಬೇಕಾದದ್ದೇ ಅಲ್ಲ. ಯಾಕೆಂದರೆ ಗಿಂಡಿಯಲ್ಲಿ ನೀರಿಟ್ಟು ಮನೆಯ ಯಜಮಾನ ಸಭೆಯಲ್ಲಿ ವಿನಂತಿಸುತ್ತಾನೆ ಭೋಜನಕ್ಕೆ ಏಳಿ, ಎಂದಾಗ ಹಾದಿಯಲ್ಲಿ ಹೋಗುವ ಭಿಕ್ಷುಕ ಕೂಡ ಬಂದಿದ್ದರೆ ಎದ್ದು ನಿಲ್ಲುತ್ತಾನೆ. ಹಾಗೆಂದು ಅವನನ್ನು ಯಜಮಾನ ಸ್ವಾಗತಿಸಿದ ಎಂದರ್ಥವಲ್ಲ. ಹಾಗಾಗಿ ಸಾಲ್ವನ ಪ್ರತಿಭಟನೆ ಲೆಕ್ಕಕ್ಕಿಲ್ಲದೇ ಹೋಯಿತು.
ಪಾತ್ರ ಪೋಷಣೆಗೆ ಏಕಾಂಗಿಯಾದ ನಿರ್ವಹಣೆಗಿಂತ ಪ್ರತಿ ಪಾತ್ರಧಾರಿಯೂ ಸಮರ್ಥವಾಗಿ ಸ್ಪಂದಿಸಿ ಪ್ರತಿದ್ವಂದ್ವಿಯಾದಾಗ ಮಾತ್ರ ಯಾವುದೇ ಪಾತ್ರ ವಿಜ್ರಂಭಿಸುತ್ತದೆ. ಇಲ್ಲಿ ಸೋಲು ಗೆಲುವಿನ ಸ್ಪರ್ಧೆಗಿಂತ ವೈಚಾರಿಕ ಮಥನ ಪ್ರಾಮುಖ್ಯತೆಯನ್ನು ಪಡೆಯಬೇಕು.ಇಲ್ಲಿ ಮೂಡಂಬೈಲು ಶಾಸ್ತ್ರಿಗಳ ಪರಶುರಾಮ ಸಾಕ್ಷಾತ್ ಅನ್ವರ್ಥ ಗುರುವಿನಂತೆ ವಿಜ್ರಂಭಿಸುತ್ತದೆ ಮುಂದೆ ಪರಶುರಾಮರು ಕೇಳುತ್ತಾರೆ ಭೀಷ್ಮನಾಗಲೀ ಸಾಲ್ವನಾಗಲೀ ಅಲ್ಲಿಗೆ ಹೋದ ಉದ್ದೇಶವೊಂದೇ. ಕನ್ಯಾಪಹಾರ. ಕ್ಷತ್ರಿಯೋಚಿತವಾಗ ರಾಕ್ಷಸವಿವಾಹ. ಸಾಲ್ವನಾದರೋ ರಾಕ್ಷಸನಾಗಿ ಒಂದು ವೇಳೆ ಅಂಬೆಯನ್ನು ಅವನೇ ವಿವಾಹವಾಗುತ್ತಿದ್ದ.. ಆದರೆ ಸ್ವಯಂವರದಲ್ಲಿ ನಿಲುವು ಮಾತ್ರದಿಂದಲೇ ಸೇರಿದ ಎಲ್ಲ ಅರಸರನ್ನು ಸೋಲಿಸಿದ ಭೀಷ್ಮನ ಬಗ್ಗೆ ಕಾಶೀಕುವರಿಯರು ಕಡೆಗಣ್ಣ ನೋಟ ಬೀರಿ ಒಂದು ರೀತಿಯಲ್ಲಿ ಭೀಷ್ಮನಿಗೆ ಒಲಿದೇ ರಥವನ್ನು ಹತ್ತಿದರು. ಹಾಗಾದರೆ ಉಳಿದವರ ಮಾತು ಹಾಗಿರಲಿ ಸಾಲ್ವನನ್ನು ಕಡೆಗಣಿಸಿ ಅಂಬೆ ರಥವನ್ನು ಏರಿದ್ದರಲ್ಲಿ ತಪ್ಪಿಲ್ಲ. ಸಾಲ್ವನಿಂದಲು ಸಾಮಾರ್ಥ್ಯವಂತ ಭೀಷ್ಮ ಎಂಬ ಅವಳ ಆಯ್ಕೆ ಸರಿಯಾಗಿಯೇ ಇತ್ತು.
ಭೀಷ್ಮ ಹೇಳುತ್ತಾನೆ " ಆಕೆ ರಥ ಏರಿದ್ದು ತಪ್ಪಲ್ಲ. ನಾನು ಕನ್ಯೆಯರನ್ನು ತಂದದ್ದು ತಪ್ಪಲ್ಲ"
ಇದಕ್ಕೆ ಗುರುವಿನ ನೇರವಾದ ಅಕ್ಷೇಪ... " ಭೀಷ್ಮ ಕನ್ಯೆಯರನ್ನು ತಂದದ್ದು ತಪ್ಪಲ್ಲ ಆದರೆ ಮದುವೆಯಾಗದೇ ಇದ್ದದ್ದು ತಪ್ಪು"
ಭೀಷ್ಮನೇ ಮದುವೆಯಾಗಬೇಕು ಎನ್ನುವುದಕ್ಕೆ ವೈಚಾರಿಕ ವಿವಾಹಗಳಲ್ಲಿ ಎಂಟು ವಿಧ. ಬ್ರಹ್ಮ, ದೈವ,ರಾಜಾಪತ್ಯ, ಆರ್ಷ್ಯ , ಈ ನಾಲ್ಕೂ ವಿವಾಹಗಳ ಒಕ್ಕಣೆ ಹೇಗೆ? ಇಲ್ಲಿ ಕನ್ಯಾಪಿತೃ ಕನ್ಯೆಯರನ್ನು ಕೊಡುವುದು. ಅಲ್ಲಿ ಪಿತೃವಿಗೇ ಪ್ರಾಮುಖ್ಯ ಸ್ಥಾನ, ಆದರೆ ಉಳಿದ ನಾಲ್ಕು ವಿವಾಹಗಳು ರಾಕ್ಷಸ ಗಾಂಧರ್ವ ಆಸುರ ಪೈಶಾಚ ಇದರಲ್ಲಿ ಕನ್ಯೆಯರನ್ನು ಮದುವೆ ಆಗುವುದು ಅಂತ ಇರುವುದು..ಇಲ್ಲಿ ಕ್ಷತ್ರಿಯೋಚಿತ ಕನ್ಯಾಪಹಾರ ಎಂದಾಗುವಾಗ ಅವರನ್ನು ವಿವಾಹವಾಗಬೇಕಿತ್ತು.
ಹೌದಲ್ಲ ? ರಾಕ್ಷಸ ವಿವಾಹದ ರೀತಿಯಲ್ಲಿ ಪ್ರವೃತ್ತ ನಾಗುವಾಗ ಅಪಹರಿಸಿದವನೇ ಮದುವೆ ಆಗುವುದು. ಆದರೂ ಭೀಷ್ಮನ ಸಮರ್ಥನೆ ಬೇರೆಯೇ ಇರುತ್ತದೆ. ಅದರ ಭಾವ ಹೀಗಿದೆ.
' ಬ್ರಹ್ಮ ದೈವ ಮೊದಲಾದ ವಿವಾಹ ಪದ್ದತಿಯಲ್ಲಿ ಕನ್ಯಾದಾನ.. ಕನ್ಯಾಪಿತೃ ಕನ್ಯೆಯನ್ನು ದಾನ ಮಾಡುತ್ತನೆ.ಅಲ್ಲಿ ಕನ್ಯಾದಾನ ಇದ್ದರೆ ಉಳಿದ ರಾಕ್ಷಸ ವಿವಾಹದಲ್ಲಿ ಕನ್ಯಾಗ್ರಹಣ. ಗ್ರಹಣ ಎಂಬ ಶಬ್ದದಲ್ಲಿ ಪಾಣೀಗ್ರಹಣ ಎಂಬುದು ಸೇರುವುದಿಲ್ಲ. ಅಂದರೆ ಇದು ಕನ್ಯಾ ಸಂಗ್ರಹ. ಅಲ್ಲಿ ಕನ್ಯಾ ಪಿತೃ ವರನ ಕಾಲು ತೊಳೆದು ಮಧುಪರ್ಕಾದಿಗಳನ್ನು ಕೊಟ್ಟು ಪೂಜಿಸಿ ದದಾಮಿ ಅಂತ ಹೇಳಬೇಕು. ಇಂಥಾ ಗೋತ್ರ ಇಂಥಾ ಸೂತ್ರ ಇಂಥಾ ಪ್ರವರ ಇಂಥವನ ಮಗಳು ಇಂಥವನ ಮರಿಮಗಳು ಇಂಥಹಾ ಹೆಸರಿನ ಕನ್ಯೆ ಅಂತ ಹೇಳಿ ನಿಲ್ಲಿಸುವಾಗ,,,ವರನ ಕಡೆಯಿಂದ ಅದನ್ನೆ ಪುನಹ ಹೇಳಿದಾಗ ಅದು ಆರ್ಷ್ಯ ವಿವಾಹ ಪದ್ಧತಿ ಅಲ್ಲಿ ಕನ್ಯೆಯನ್ನು ದಾನ ಮಾಡುವಾಗ ಕೊಡುತ್ತೇನೆ ಅಂತ ಹೇಳುವಾಗ ದೃಣ್ಣಾನಿ ಅಂತ ಹೇಳಬೇಕು. ಹಾಗಾಗಿ ಹುಡುಗಿಯ ಕೈ ಮೇಲೆ ಇಟ್ಟು ಹುಡುಗನ ಕೈ ಕೆಳಗಿಟ್ಟು ವಿವಾಹ ನಡೆಸುವುದು, ಕ್ಷತ್ರಿಯರಾದವರು ಉಳಿದ ನಾಲ್ಕು ಪದ್ದತಿಯಲ್ಲಿ ವಿವಾಹವಾದಾಗ ಕನ್ಯಾ ಗ್ರಹಣ ಅಂದರೆ ಕನ್ಯೆಯರನ್ನು ಸಂಪಾದಿಸುವುದು ಎಂದರ್ಥ. ಯಾವನು ಸಂಪಾದನೆಗೆ ಹೋಗುತ್ತಾನೋ ಅವನೇ ಅದಕ್ಕೆಯಜಮಾನ ಎಂಬುದು ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಲಿಲ್ಲ. ಆದರೆ ವಾಡಿಕೆಯಲ್ಲಿ ಕನ್ಯಾರ್ಥಿಯಾದವನೇ ಹೋಗಿ ತಂದದ್ದು ರೂಢಿ, ಕನ್ಯಾರ್ಥಿಯ ಪರವಾಗಿ ಮತ್ತೊಬ್ಬ ಹೋಗಬಾರದು ಎಂದಿಲ್ಲ.'
ಅದರೂ ಇಷ್ಟೆಲ್ಲ ವಿವಾದ ಚರ್ಚೆಗೆ ಕಾರಣವಾದ ಈ ಪ್ರಕರಣದಲ್ಲಿ ತನ್ನ ಕೊನೆಯ ನಿಲುವನ್ನು ಭೀಷ್ಮ ಸ್ಪಷ್ಟ ಪಡಿಸುತ್ತಾನೆ. ಏರಿರೆನ್ನಯ ರಥವನು ಎನ್ನುವಾಗ ಆಕೆ ರಥವೇರದೇ ಇರುತ್ತಿದ್ದರೆ, ಏರಿದರೂ ಸಾಲ್ವನಿಗೆ ದಂಡಿಸುವಾಗ ತನ್ನ ಪ್ರತಿಭಟನೆಯನ್ನು ಸಲ್ಲಿಸುತ್ತಿದ್ದರೆ ಅವಾಗಲಾದರೂ ತನ್ನ ಮನದ ಅಭಿಲಾಷೆಯನ್ನು ಹೇಳಿರುತ್ತಿದ್ದರೆ ಪ್ರಕರಣ ಇಷ್ಟು ಮುಂದಕ್ಕೆ ಹೋಗುತ್ತಿರಲಿಲ್ಲ. ಏನೇ ಆಗಲಿ ಗುರುಗಳೇ ನೀವು ಬಂದ ಮೇಲೆ ಇದು ಇತ್ಯರ್ಥವಾಗದೆ ಇರಬಾರದು. ನಿಮಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ. ಹಾಗದರೆ ಗುರುವಾಕ್ಯ ಎನು?
"ಗುರುವಾಕ್ಯ ಲಂಘನ. ದೋಷವು" ಎಂದು ತಿಳಿದೇ ಗುರುವಾಕ್ಯಕ್ಕಾಗಿ ನಿರೀಕ್ಷಿಸುತ್ತಾನೆ.
ಗುರು ಪರಶುರಾಮರ ಅಪ್ಪಣೆ ಗುರುವಾಕ್ಯ ಒಂದೇ "ಗುರುವಿಗಾಗಿ ಬ್ರಹ್ಮ ಚರ್ಯವನ್ನು ತ್ಯಾಗಮಾಡಿ ಈಕೆಯನ್ನು ವರಿಸು. ಇದು ಗುರುವಾಕ್ಯವೂ ಹೌದು ಗುರುವಿನ ವಾಕ್ಯವೂ ಹೌದು. ಈ ಗುರುವಾಕ್ಯವನ್ನು ಉಲ್ಲಂಘಿಸಿದೆಯಂತಾದರೆ . " ಅದೋಷವೂ ಬರುತ್ತದೆ ಮಾತ್ರವಲ್ಲ ಈ ಸ್ತ್ರೀಯ ಕಣ್ಣಿರು ಕೋಡಿ ಕೋಡಿಯಾಗಿ ಹರಿದು ಅದು ನಿನ್ನದೆಲ್ಲವನ್ನು ನಾಶಮಾಡುತ್ತದೆ..."
ಭೀಷ್ಮ ಗುರುವಿನ ಕೊನೆಯ ಮಾತು ಕೇಳಿ ಚೋದ್ಯದಿಂದ ಪರೋಕ್ಷವಾಗಿ ಛೇಡಿಸುತ್ತಾನೆ ವ್ಯಂಗ್ಯವಾಗಿ ನುಡಿಯುತ್ತಾನೆ . " ಸ್ತ್ರೀಯ ಕಣ್ಣೀರು ಭೂಮಿಗೆ ಭಿದ್ದರೆ ಸರ್ವ ನಾಶವಾಗುತ್ತದೆ. ಹೆಂಗಸಿನ ಕೊರಳ ರಕ್ತ ಕೆಳಕ್ಕೆ ಬಿದ್ದರೆ ಲೋಕ ಶಾಂತಿಯಾಗುತ್ತದೆ" ವ್ಯಂಗ್ಯವಾಗಿ ಛೇಡಿಸುತ್ತಾನೆ. ತಂದೆಯ ಆಣತಿಯಂತೆ ತಾಯಿಯ ತಲೆ ಕಡಿದ ಕಥೆಯನ್ನು ಪರೋಕ್ಷವಾಗಿ ನೆನಪಿಸುತ್ತಾನೆ.
'ಬ್ರಹ್ಮ ಚರ್ಯವನ್ನು ತ್ಯಾಗ ಮಾಡಿ ಅಂಬೆಯನ್ನು ವರಿಸು' ಎಂಬ ಗುರು ವಚನ ಅದು ಕೇವಲ ವ್ಯಕ್ತಿನಿಷ್ಠವಾಗಿ ಬಂದಿದೆ. ಭೀಷ್ಮ ಗುರುವಚನವನ್ನು ವಿಶ್ಲೇಶಿಸುತ್ತಾ " ಗುರು ಅಪ್ಪಣೆ ಮಾಡಿದರೆ ಯಾವ ತ್ಯಾಗಕ್ಕೂ ಸಿದ್ದನಿದ್ದೇನೆ ಆದರೆ ಗುರುಗಳು ಬಯಸಿದ ತ್ಯಾಗವಾದರೂ ಏನು? ಬ್ರಹ್ಮ ಚರ್ಯ..., ಅಂಬೆಗೆ ನಾನು ತಾಳಿಕಟ್ಟಿದರೆ ಅಲ್ಲಿಗೆ ಪ್ರಕರಣ ಮುಗಿಯಿತು. ಇಲ್ಲಿ ಅಂಬೆ ಏನು ತಪ್ಪಲಿಲ್ಲ ಎಂಬ ಸಿದ್ದಾಂತವನ್ನು ಗುರುಗಳು ಪ್ರತಿಪಾದಿಸಿದಂತೆ ಅಲ್ಲವೇ? ಅಂಬೆ ಇಲ್ಲಿ ಅಪರಾಧಿನಿಯೇ ಅಲ್ಲ. ಆಗಲಿ ಆಕೆ ಅಪರಾಧಿನಿ ಆಗಬೇಕು ಎಂಬ ಆಕ್ಷೇಪ ನನಗಿಲ್ಲ. ಅದರೆ, ಇಲ್ಲಿ ಭೀಷ್ಮ ಅಪರಾಧಿ ಅಂತ ಸ್ಥಾಪಿಸಲ್ಪಡುತ್ತದೆ. ಯಾಕೆ ಭೀಷ್ಮ ತಪ್ಪು ಮಾಡಿದ ನಂತರ ಮದುವೆಯಾದ..ಹಾಗಾಗಿ, ನಾನು ಅಪರಾಧಿ ಅಂತ ಹೇಳಿದರೆ ನಾನು ಅಪರಾಧಿ ಅಲ್ಲ ಅಂತ ಸಾಧಿಸುವ ಸ್ವಾತಂತ್ರ್ಯ ನನಗುಂಟು. ಅಪಾರಧಿ ಅಲ್ಲದೇ ಇದ್ದವನಿಗೆ ತಾವು ವಿಧಿಸಿದ ಶಿಕ್ಷೆ ಏಷ್ಟು ದೊಡ್ಡದು? ತೆಂದೆಗೆ ಬೇಕಾಗಿ ಮರಣ ಪರ್ಯಂತರ ಬ್ರಹ್ಮ ಚರ್ಯವನ್ನು ಕೈಗೊಂಡವನು, ಸಿಂಹಾನಸವನ್ನು ನಾನು ಏರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದವನು, ಇದರಿಂದಾಗಿಯೇ ನಾನು ಭೀಷ್ಮ ಅಂತ ದೇವತೆಯಿಂರಿಂದ ಕರೆಯಿಸಿಕೊಂಡವನು. ಗುರುಗಳು ಹೇಳಬಹುದು.. ಈ ಪ್ರಶಸ್ತಿ ಬೇಡ ಹಿಂತಿರುಗಿಸು...ಹೋಗಲಿ ತಂದೆ 'ಹೇಳಿದರು ಇಚ್ಛಾಮರಣಿಯಾಗು ಮಗನೆ' ಈ ವರವನ್ನು ನಾನು ಎಲ್ಲಿಗೆ ಹಿಂತಿರುಗಿಸಲಿ? ಬ್ರಹ್ಮ ಚರ್ಯ ತ್ಯಾಗ ಮಾಡಿದ್ದಕ್ಕೆ ಪ್ರತಿಫಲ ಪಡೆದಾಗಿದೆ. ಯಾರಿಂದ ಪಡೆದಿದ್ದೇನೋ ಅವರಿಗೆ ಇದನ್ನು ಹಿಂದಿರುಗಿಸುವುದು ಹೇಗೆ? ತಂದೆ ಈಗ ಬದುಕಿಲ್ಲ. ಆದರೂ ಇನ್ನೂ ಒಂದಿದೆ. ಈ ಗುರು ವಚನ ಅಂಬೆಗೆ ಅನುಗ್ರಹವೇ ಆಗುತ್ತದೆ. ಸಾಲ್ವನೇ ಇದ್ರೆ ಸಾಕು ಅಂತ ಹೇಳಿದವಳವಳು. ಈಗ ಭೀಷ್ಮನೇ ಅವಳಿಗೆ ಗಂಡ ಅಂತಾದರೆ ಅವಳಿಗೆ ಎಷ್ಟು ದೊಡ್ಡ ಲಾಭವನ್ನೇ ಒದಗಿಸಿಕೊಟ್ಟ ಹಾಗಿ ಆಗುತ್ತದೆ. ಹಾಗಾದರೆ ಅವಳಿಗೆ ಮಹಾಲಾಭ ಆದರೆ ಭೀಷ್ಮನಿಗೆ ? ಇರಲಿ ಈಗ ಗುರುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದ ಅಂತ ಹೇಳಿಯಾಗಿದೆ. ಈಗೇನು ಬ್ರಹ್ಮ ಚರ್ಯ ಗುರುವಿಗಾಗಿ ತ್ಯಾಗಮಾಡಬೇಕೆ? ತಂದೆಗಾಗಿ ಶರೀರ ಸುಖವನ್ನು ತ್ಯಾಗ ಮಾಡಿಯಾಗಿದೆ ಅಂದರೆ ದಾಂಪತ್ಯವನ್ನು ತ್ಯಾಗ ಮಾಡಿದ್ದೇನೆ. ಅಧಿಕಾರವನ್ನೂ ತ್ಯಾಗ ಮಾಡಿದ್ದೇನೆ ಹಾಗೆ ತ್ಯಾಗ ಮಾಡಿ ಬ್ರಹ್ಮ ಚರ್ಯವನ್ನು ಪಡೆದುಕೊಂಡದ್ದು. ಈಗ ತ್ಯಾಗ ಮಾಡಿದ್ದನ್ನು ಪುನಃ ಪಡೆಯುವುದಕ್ಕೆ ಆಗುತ್ತದೆಯೇ? ತ್ಯಾಗ ಮಾಡಿದ್ದು ಈಗ ನನ್ನ ಸ್ವಾಧೀನ ಇದೇಯೇ? ನನ್ನ ಸ್ವಾಧೀನ ಇಲ್ಲದೆ ಇದ್ದದ್ದನ್ನು ಒಂದು ಸಲ ಬ್ರಹ್ಮಾರ್ಪಣ ಎಂದು ತುಲಸೀ ನಿರನ್ನು ಬಿಟ್ಟದ್ದನ್ನು ಪುನಃ ಹೊಂದುವುದು ಸಾಧ್ಯವೇ? ವಿಚಿತ್ರವೀರ್ಯನ ಅಧಿಕಾರ ಸ್ಥಿರವಾಗಿರುವುದಕ್ಕೆ ಅಧಿಕಾರವನ್ನೂ ದಾಂಪತ್ಯ ಜೀವನವನ್ನೂ ತ್ಯಾಗ ಮಾಡಿಯಾಗಿದೆ. ಈಗ ಗುರುವಿಗಾಗಿ ಏನನ್ನು ತ್ಯಾಗ ಮಾಡಬೇಕು?"
" ತಂದೆಗಾಗಿ ಬಿಟ್ಟ ಸುಖವನ್ನು ಗುರುವಿಗಾಗಿ ಹಿಡಕೊಂಡರೆ ಏನಾಗುತ್ತದೆ? ಗುರುವಿಗಾಗಿ ಬ್ರಹ್ಮ ಚರ್ಯ ಸ್ವೀಕರಿಸಿದ್ದಲ್ಲ. ತಂದೆ ಶಂತನುಗಾಗಿ ತಾಯಿ ಸತ್ಯವತಿ ದೇವಿಗಾಗಿ ಮತ್ತು ಸಹೋದರ ವಿಚಿತ್ರವೀರ್ಯನಿಗಾಗಿ. ಅದನ್ನು ಬಿಡಬೇಕಿದ್ದರೆ ಅವರೇ ಹೇಳಬೇಕು. ಈಗ ಬ್ರಹ್ಮ ಚರ್ಯ ಬಿಟ್ಟೆನೆಂದಾದರೆ ಮೊದಲೊಬ್ಬ ಹೇಳಿದ್ದಂತೆ ಸನ್ಯಾಸದಲ್ಲಿ ಮತ್ತೆ ಸನ್ಯಾಸ ಉಂಟಾ? ಸನ್ಯಾಸದಲ್ಲಿ ಪುನಃ ಸನ್ಯಾಸ ಎನುಂಟು ? ಸನ್ಯಾಸದಲ್ಲಿ ಬಿಡುವುದಕ್ಕೇನುಂಟು.. ಸನ್ಯಾಸವನ್ನೇ ಬಿಟ್ಟು ಪುನಃ ಗೃಹಸ್ಥಾಶ್ರಮ ಸ್ವೀಕರಿಸುವುದೇ? ಆದುದರಿಂದ ಇಲ್ಲಿ ನಿಮಗಾಗಿ ಏನು ಬಿಡಬೇಕು ಹೇಳಿ. ಇನ್ನು ಗುರುವಿಗಾಗಿ ಬಿಡುವುದಕ್ಕೆ ನನ್ನಲ್ಲಿ ಇರುವುದು ಒಂದೇ ಪ್ರಾಣ, ಬಿಟ್ಟರೆ ಅದನ್ನೆ ಬಿಟ್ಟೇನು. ಮತ್ತೊಮ್ಮೆ ಅಪ್ಪನೇ ಪ್ರತ್ಯಕ್ಷ ವಾಗಿ ಹೇಳಿದರೂ ಬಿಟ್ಟದ್ದು ಬಿಟ್ಟದ್ದೆ. ಇಲ್ಲಿ ಅಂಬೆಯೂ ತಪ್ಪು ಮಾಡಿದ್ದಾಳೆ ಭೀಷ್ಮನೂ ತಪ್ಪು ಮಾಡಿಯಾಗಿದೆ. ಹಾಗಿದ್ದಲ್ಲಿ ಭೀಷ್ಮನ ತಪ್ಪಿಗೆ ಶಿಕ್ಷೆಕೊಟ್ಟರೆ, ತಪ್ಪು ಮಾಡಿದ ಅಂಬೆಗೆ ವರಕೊಟ್ಟ ಹಾಗೆ ಅಲ್ಲವೇ? ಹಾಗಾಗಿ ಇಲ್ಲಿ ಪ್ರಾಣವನ್ನಾದರೂ ಬಿಟ್ಟೇನು. ಅದರೆ ಬ್ರಹ್ಮ ಚರ್ಯ ಬಿಡುವ ಪ್ರಶ್ನೆಯೇ ಇಲ್ಲ."
ಭೀಷ್ಮ ತನ್ನ ನಿಲುಮೆಯನ್ನು ಸಮರ್ಥಿಸುವಾಗ ಪರಶುರಾಮ ತನ್ನ ನಿಲುಮೆಯನ್ನು ಸ್ಪಷ್ಟ ಪಡಿಸುತ್ತಾರೆ. ತಂದೆಯ ಮಾತಿನಂತೆ ತಾಯಿಯ ಕೊರಳನ್ನರಿದು ಪುನಃ ತಾಯಿಯನ್ನು ಬದುಕಿಸಿದೆ. ಸಂಹಾರದಿಂದ ಸೃಷ್ಟಿ ಇಲ್ಲಿ ಆಯಿತು. ಒಂದು ವೇಳೆ ತಾನು ತಾಯಿಯ ತಲೆ ಕಡಿಯದೇ ಇರುತ್ತಿದ್ದರೆ, ತಾಯಿಯ ರಕ್ತ ಬೀಳದೇ ಇರುತ್ತಿದ್ದರೆ ಇಡೀ ಸಂಸಾರವೇ ಶಾಪಕ್ಕೆ ತುತ್ತಾಗಿ ನಾಶವಾಗುತ್ತಿತ್ತು. ಅದೇ ರೀತಿ ಭೀಷ್ಮನೂ ತ್ಯಾಗಮಾಡಿ ಒಂದು ಹೆಣ್ಣಿನ ಬದುಕನ್ನು ರಕ್ಷಿಸಬೇಕು.
ಗುರುಗಳು ಸಂಸಾರವನ್ನು ಉಳಿಸುವುದಕ್ಕಾಗಿ ತಾಯಿಯ ತಲೆಕಡಿದು ಪುನಃ ಬದುಕಿಸಿದಂತೆ ಭೀಷ್ಮನು ಅದೇ ರೀತಿ ತನ್ನ ಸಮರ್ಥನೆಯನ್ನು ಮತ್ತು ಬಲಪಡಿಸಿಕೊಳ್ಳುತ್ತಾನೆ. ತಾನಿಂದು ವಿವಾಹವಾದರೆ ತಾಯಿ ಸತ್ಯವತೀ ದೇವಿಯವರಿಗೂ ಸಿಂಹಾಸನದ ಹಕ್ಕಿಲ್ಲ, ವಿಚಿತ್ರ ವೀರ್ಯನಿಗೆ ಪಟ್ಟದ ಹಕ್ಕು ತಪ್ಪುತ್ತದೆ. ಅರ್ಥಾತ್ ಚಂದ್ರವಂಶ ವಿಚ್ಛೇದವಾಗುತ್ತದೆ. ತನ್ನ ಬ್ರಹ್ಮ ಚರ್ಯ ಎಲ್ಲಿವರೆಗೆ ಸ್ಥಿರವಾಗಿರುತ್ತದೋ ಅಲ್ಲಿವರೆಗೆ ಈ ಸತ್ಯವತೀ ಸಂತಾನಕ್ಕೆ ಪಟ್ಟ ಸ್ಥಿರವಾಗಿರುತ್ತದೆ. ತಮಗೆ ತಮ್ಮ ಮನೆತನ ಉಳಿಸುವುದಕ್ಕೆ ತಾಯಿಯ ತಲೆ ಕಡಿಯುವುದು ಧರ್ಮವಾದರೆ ತನ್ನ ಮನೆ ಉಳಿಸುವುದು ತನ್ನ ಕರ್ತವ್ಯವೂ ಆಗಿರುತ್ತದೆ. ಅಚ್ಚುಕಟ್ಟಾದ ಭೀಷ್ಮನ ಸಮರ್ಥನೆ.
ಹೀಗೆ ಉಪಸಂಹಾರವಾಗಿಬಿಡುತ್ತದೆ.
ಯಾವ ತರ್ಕದಲ್ಲೂ ಇತ್ಯರ್ಥಕ್ಕೆ ಬಾರದಾಗ ಕ್ಷತ್ರಿಯರಿಗಿರುವ ಮಾರ್ಗ ಒಂದೇ ಯತೋ ಧರ್ಮಃ ತತೋಜಯಃ ಹಾಗಾಗಿ ಹೋರಾಟ. ಇಲ್ಲಿ ಭೀಷ್ಮ ಇಛ್ಚಾಮರಣಿ ಗುರು ಪರಶುರಾಮರು ಚಿರಂಜೀವಿಗಳು. ಎರಡೂ ಕಡೆಗೆ ಪ್ರಾಣದ ಬಯಕೆ ಇಲ್ಲ. ಹಾಗಿದ್ದಲ್ಲಿ ಧರ್ಮ ಎಲ್ಲಿರುತ್ತದೋ ಅಲ್ಲಿ ಜಯವಿರುತ್ತದೆ. ಶಸ್ತ್ರಕ್ಕೆ ತೀರ್ಮಾನವನ್ನು ಬಿಟ್ಟಂತೆ ಗುರು ಶಿಷ್ಯರು ಹೋರಾಟಕ್ಕೆ ಸಿದ್ಧವಾಗುತ್ತಾರೆ. ಇಲ್ಲಿ ಗುರುಗಳು ಶಿಷ್ಯನ ಸತ್ವವನ್ನು ಪೂರ್ಣವಾಗಿ ಪರೀಕ್ಷಿಸಿದಂತಾಗುತ್ತದೆ. ಶಿಷ್ಯ ಎಷ್ಟು ಧರ್ಮಾತ್ಮನೆಂದು ಇಲ್ಲಿ ಗುರುಗಳು ಶಿಷ್ಯನ ಸತ್ವವನ್ನು ಪೂರ್ಣವಾಗಿ ಪರೀಕ್ಷಿಸಿದಂತಾಗುತ್ತದೆ. ಶಿಷ್ಯ ಪರೀಕ್ಷೆಗೆ ಸಿಧ್ಧನಾದಂತಾಗುತ್ತದೆ.ಹಾಗಾಗಿ ಭೀಷ್ಮ ಮಾಡಿದ ತಪ್ಪೀಗೂ ಒಂದು ಪರಿಮಾರ್ಜನೆಯ ದಾರಿ ಸಿಕ್ಕಹಾಗಾಗುತ್ತದೆ. ಶಿಷ್ಯನಿಗೆ ಗುರು ಸೋಲಬೇಕಾಗುತ್ತದೆ. ತನ್ಮೂಲಕ ಭೀಷ್ಮನ ವಿಜಯವೇ ಆಗಿಬಿಡುತ್ತದೆ.