ವಾಲೀ
ಮೋಕ್ಷ ತಾಳ ಮದ್ದಲೆಯ ಕರಪತ್ರದಲ್ಲಿ ಹರಿದಾಸ್ ಶ್ರೀ
ಶೇಣಿ ಗೋಪಾಲ ಕೃಷ್ಣ ಭಟ್ಟರ ಹೆಸರು ಕಂಡರೆ ಮೊದಲು
ಕಲ್ಪನೆಗೆ ಅಥವಾ ನಮ್ಮ ಊಹನೆಗೆ ಸಿಗುವ ವಿಷಯವೆಂದರೆ ಶೇಣಿಯವರ ವಾಲಿ ಪಾತ್ರ. ಶೇಣಿಯವರ ಅತಿ
ಶ್ರೇಷ್ಠ ಪಾತ್ರಗಳಲ್ಲಿ ವಾಲಿಯ ಪಾತ್ರವೂ ಒಂದು. ಆ ಪಾತ್ರಕ್ಕೆ ಅವರು ಹಾಕಿಕೊಟ್ಟ ಆಯಾಮಗಳು ಯಕ್ಷಗಾನದಲ್ಲಿ
ಬಹಳ ಪ್ರಚಲಿತ. ಆದರೂ ಈ ಪ್ರಸಂಗದ ಇತರ
ವೈವಿಧ್ಯಮಯ ಪಾತ್ರ ಪ್ರಸ್ತುತಿಯಲ್ಲಿ ಶೇಣಿಯವರು ತಮ್ಮದೇ ಅದ ವೈಶಿಷ್ಟ್ಯವನ್ನು ಮೆರೆದಿದ್ದಾರೆ.
ಹೀಗೆ ಹಳೆಯ ಧ್ವನಿ ಮುದ್ರಣದಲ್ಲಿ ದೊರಕಿದ ಈ ಅಮೂಲ್ಯ ತುಣುಕುಗಳು ಯಕ್ಷಗಾನ ಸಂಗ್ರಹದ
ಮೌಲ್ಯವನ್ನು ಹೆಚ್ಚಿಸಿದೆ.
ಪ್ರೇಕ್ಷಕರ
ನಿರೀಕ್ಷೆಗೂ ಮೀರಿ ಅಥವಾ ನಿರೀಕ್ಷೆಯನ್ನು ತಬ್ಬಿಬ್ಬು ಗೊಳಿಸುವಂತೆ ಶೇಣಿಯವರು ಹಲವು
ಪ್ರಸಂಗಳಲ್ಲಿ ತಮ್ಮ ಪಾತ್ರ ನಿರ್ವಹಣೆ ಮಾಡುತ್ತಿದ್ದರೇ ಎಂಬ ಕೌತುಕದ ವಿಚಾರವೂ ಇರಬಹುದು.
ನಮ್ಮೂರಲ್ಲಿ ಒಂದು ಸಲ ಜರಗಿದ ಕರ್ಣಪರ್ವ ಪ್ರಸಂಗ, ಇಲ್ಲಿ ಶೇಣಿಯವರ ಕರ್ಣನನ್ನು ನಿರೀಕ್ಷಿಸಿ
ಹೋದವರಿಗೆ ಆದಿನ ಶೇಣಿಯವರ ಅಧ್ಬುತವಾದ ಶ್ರಿಕೃಷ್ಣನ ಪಾತ್ರ ಕಾಣುವಂತಾದದ್ದು ಇತಿಹಾಸ. ಅದರಂತೆ ಈ
ತಾಳ ಮದ್ದಲೆಯ ವಾಲೀ ಮೋಕ್ಷ ಪ್ರಸಂಗದ ವೈಶಿಷ್ಟ್ಯವೆ ಈ ಪಾತ್ರವೈವಿಧ್ಯವಾಗಿರುತ್ತದೆ. ಇಲ್ಲಿ
ವಾಲಿ ಸುಗ್ರೀವ ಕಾಳಗದ ಅಂತಿಮ ಹಂತ. ವಾಲಿಯಾಗಿ
ಪ್ರಸಿದ್ಧ ಅರ್ಥಧಾರಿ ವಾಗ್ಮಿ ವಿದ್ವಾನ್ ಶ್ರೀ ಕೆರೆಕ್ಕಾಯಿ ಕೃಷ್ಣ ಭಟ್ಟರು ವಾಕ್
ವಿದ್ವತ್ತನ್ನು ಮೆರೆದರೆ ವಾಲಿಗೆ ಪ್ರತಿದ್ವಂದ್ವಿಯಾಗಿ ಸುಗ್ರೀವನಾಗಿ ಶ್ರೀ ಶೇಣಿಯವರು ಸಡ್ಡು
ಹೊಡೆಯುತ್ತಾರೆ.
ಪುರವಮುತ್ತಿರೆ ವೈರಿಸೇನೆಯು
ಶರಭಶತಬಲಿ ಗಜಗವಯ ಸಂ
ಗರ ಭಯಂಕರ ಸುಮುಖ ದುರ್ಮುಖ ಗಂಧಮಾದನರ |
ಜರಿಯಗೆಡಹುತ ಅಂಗದನ ಪುರ
ಕಿರಿಸಿ ಭೀಕರಗಜ ಸುಷೇಣರ
ನೆರವಿಯಲಿ ನಡೆತಂದು ರವಿಜನ ತಡೆದನಾ ವಾಲಿ ||
ಎಂಬ
ಭಾಮಿನಿಯಲ್ಲಿ ಇಲ್ಲಿ ಪ್ರಸಂಗ ಆರಂಭವಾಗುತ್ತದೆ. ನಾಳೆನೋಡಿಕೊಂಬ ಯುದ್ದ ಎಂಬ ತಾರೆಯನ್ನು
ಸಾಂತ್ವಾನ ಪಡಿಸಿ ಒಂದು ರೀತಿಯ ಆತಂಕಮನನಾಗಿ ವಾಲಿಯ ಪ್ರವೇಶ. ಅಣಕವಲ್ಲ ಮೊದಲಿನಂತೆ ಎಂದು ಹಿಂದೆ
ಸುಗ್ರೀವನ ಎಚ್ಚರಿಕೆ ನುಡಿ ಸಂದೇಹವನ್ನು ಹೆಚ್ಚಿಸುತ್ತದೆ. ಜತೆಗೆ ದ್ವೇಷವನ್ನೂ
ಹೆಚ್ಚಿಸುತ್ತದೆ. ಹಾಗಾಗಿ ಕ್ರೋಧೋನ್ಮತ್ತನಾಗಿ ಪುರವ
ಮುತ್ತಿದ ಸೈನ್ಯವನ್ನು ಎದುರಿಸುವುದಕ್ಕಾಗಿ ಬಂದ ವಾಲಿ ಆಣ್ಣಾ ಎಂದು ಕರೆದ ಸುಗ್ರೀವನೆದುರು
ದಾರ್ಷ್ಟ್ಯದಿಂದಲೇ ಬಂದು ನಿಲ್ಲುತ್ತಾನೆ.
ಮತ್ತು
ಮತ್ತೆನ್ನೊಡನೆ ನಿಂತುಕೊಂಡಿ ರಣದೀ....ಮತ್ತೂ ಮತ್ತೂ ಮತ್ತೇರಿದವನಂತೆ ಏರಿ ಬರುವ ಸುಗ್ರಿವನ
ಬಗ್ಗೆ ಅಚ್ಚರಿಯಾಗುತ್ತದೆ. ಈತನಿಗೆ ಕೇವಲ ಮತ್ತಲ್ಲ. ವಾಲಿಗೆ ಉತ್ತರಿಸುವ ಈತನಿಗೆ ಉತ್ತರದವರ
ಬಲುಹು ಇದೆ ಎಂಬುದು ಈಗ ನಿಸಂಶಯ. ಇದರಿಂದ ಮತ್ತಷ್ಟು ಉದ್ರಿಕ್ತನಾಗಿ ಸುಗ್ರೀವನಲ್ಲಿ
ಕೇಳುತ್ತಾನೆ. ಉತ್ತರವಕೊಡುವೆಯಾ ಬಲು ಧೂರ್ತ ಸುಗ್ರೀವ?
ಪ್ರತಿಯಾಗಿ ಸುಗ್ರೀವ ಉತ್ತರಿಸುವ ರೀತಿ ಹೀಗಿದೆ.
“ ಮತ್ತೂ ಮತ್ತೂ ...ಇದು ಮತ್ತು ಮತ್ತೂ ಇದೆ. ಯಾವಾಗಿನವರೆಗೆ? ನೀನು ನನ್ನ ಹೆಂಡತಿ ರುಮೆಯನ್ನು
ಬಿಟ್ಟುಕೊಡುವವರೆಗೆ. ಯಾವಾಗಿನ ವರೆಗೆ ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲವೋ ಆವಾಗಿನ ವರೆಗೆ
ಮತ್ತೂ ಇದೆ. ಉತ್ತರವ ಕೊಡುವುದು ಮಾತ್ರವಲ್ಲ ಉತ್ತರ ಕ್ರಿಯೆಯನ್ನು ಮಾಡಿಯೇನು. ನನ್ನ
ಹೆಂಡತಿಯನ್ನು ಇಟ್ಟುಕೊಂಡವ ನೀನು. ಮತ್ತೆ ನಾನು ಹೇಗೆ ಧೂರ್ತನಾದೇನು? ನಿನಗೆ
ರಕ್ತದ ಮದ. ರಕ್ತದ ಉರಿ. ರಕ್ತದ ಒತ್ತಡ. ಇದು ಒಳ್ಳೇದಕ್ಕಲ್ಲ.”
ರಕ್ತದ ಮದ ಎಂಬ ವಿಷಯವನ್ನೇ ಅಧರಿಸಿ
ವಾಲಿ ಪ್ರತ್ಯುತ್ತರಿಸುತ್ತಾನೆ.
“
ರಕ್ತದ ಮದ, ಅದು ನನಗೊಬ್ಬನಿಗೆ ಹ್ಯಾಗೋ?. ಒಂದೇ ರಕ್ತ ಹಂಚಿಕೊಂಡು ಬೆಳೆದವರು ನಾವು. ನನಗೆ ಒಂದು
ಹಣ್ಣು ಸಿಕ್ಕಿದರೆ ಅದರಲ್ಲಿ ಅರ್ಥ ಹಂಚಿಕೊಟ್ಟವನು ನಾನು.
ನನ್ನ ವೈರಿಯೇ ನಿನ್ನ ವೈರಿ ನಿನ್ನ ವೈರಿಯೇ ನನ್ನ ವೈರಿ. ಹೀಗೆ
ಇದ್ದವರಲ್ಲವೇ? ನಾನು ಉಣ್ಣುವ ಅಹಾರದಲ್ಲಿ ಅರ್ಧ
ನಿನಗೆ ಕೊಟ್ಟಿದ್ದೆನೆ. ನಿನ್ನ ಬೆನ್ನಹಿಂದೆ ಇದ್ದು ನಿನ್ನ ರಕ್ಷಣೆಯನ್ನು ಮಾಡಿದ್ದೇನೆ. ಹೀಗೆ
ನನಗೊಬ್ಬನಿಗೆ ಮಾತ್ರ ರಕ್ತ ಮದ ಹ್ಯಾಗೋ? ಉತ್ತರಕ್ರಿಯೆ ಮಾಡಿಯೇನು ಎಂದು ಹೇಳುವವ ನೀನು
ಉತ್ತರಕ್ರಿಯೆಯನ್ನು ಮಾಡಿದವನು. ಉತ್ತರ ಕ್ರಿಯೆ ಅದು
ಇನ್ನು ನಾನು ಮಾಡಬೇಕಾದವನು ಇಷ್ಟು ಸಮಯ ಬಿಟ್ಟದ್ದು ಯಾಕೆ ಗೊತ್ತೋ ... ತಮ್ಮ ಎಂಬ ಮೋಹದಿಂದ.
ಇನ್ನು ಈ ಮೋಹ ಇಲ್ಲ. ಉತ್ತರ ಕ್ರಿಯೆ ಮಾಡುವವನು ನಾನು.”
ವಾಲಿಯ
ಮಾತಿನ ತಮ್ಮನೆಂಬ ಭಾವ ಇದನ್ನು ಮುಖ್ಯವಾಗಿ ತೆಗೆದುಕೊಂಡು ಸುಗ್ರೀವ ಹೇಳುವ ಮಾತು, ಅಣ್ಣನಿಗೆ
ಸ್ವಲ್ಪ ಮಾನವೀಯತೆಯಿಂದ ಮಾತನಾಡಿ ವ್ಯವಹರಿಸುವಂತೆ ಹೇಳುತ್ತಾನೆ. ತಮ್ಮನಾಗಿ ತಾನು ನಿರ್ವಹಿಸಿದ
ಕರ್ತವ್ಯದ ಬಗೆಯನ್ನೂ ವಿವರಿಸುತ್ತಾ,
“ಸತ್ತವನು ಹಾಳಾಗಿ ಹೋದ ಉಳಿದವರು ಸುಖದಲ್ಲಿ
ಬದುಕಬೇಕು ಎಂಬ ಭಾವದಲ್ಲಿ ನಾನು ಬರಲಿಲ್ಲ. ಸೂತಿಕ ಅಚರಿಸಿದ್ದೇನೆ. ಸ್ವಲ್ಪ ಹೃದಯ ಬೇಕಣ್ಣ.
ನೀನು ಸತ್ತಿರುವೆ ಎಂಬ ಭ್ರಮೆಯಿಂದ, ಅನಾಥತ್ವದ ಭ್ರಮೆಯಿಂದ ಅರಮನೆಗೂ ಬಾರದೆ ಕಾಡಿನಲ್ಲಿ
ತಿರುಗಾಡಿಕೊಂಡಿದ್ದವನು ನಾನು. ಕಣ್ಣೀರ ತಿಲಾಂಜಲಿಯನ್ನೂ ಬಿಟ್ಟಿದ್ದೇನೆ, ಶಾಸ್ತ್ರೀಯವಾದಂತಹ
ತಿಲಾಂಜಲಿಯನ್ನೂ ಬಿಟ್ಟಿದ್ದೇನೆ. ನಿನ್ನ ಮಗನ ಕೈಯಿಂದ ಮಾಡಿಸಿದ್ದೇನೋ? ಅಣ್ಣಾ ಎಂಬ ಭಕ್ತಿ
ನನಗೆ, ಇದನ್ನು ನೀನು ಅರ್ಥೈಸಿಕೊಳ್ಳದೇ, ಹಿಂದೆ
ನಾವು ಕಳೆದ ದಿನಗಳನ್ನು ನೆನಸಿಕೊಳ್ಳದೇ, ಕೇವಲ ಒಂದು ಅಪಶಕುನದ ಪ್ರಭಾವದಿಂದ ಉಂಟಾದ್ದು ಎಂದು
ತಿಳಿಯದೆ ಮಾನಸಿಕ ವಿದ್ವೇಷದಿಂದ ನಡೆದುಕೊಳ್ಳುತ್ತಿದ್ದಿಯಲ್ಲ? ಈಗ ಏನು ತಮ್ಮನೆಂಬುದರಿಂದ, ಎನು ತಮ್ಮನ ಬಗ್ಗೆ ನಿನಗೆ ಕರುಣೆ ಉಂಟಾ? ತಮ್ಮ
ಎಂಬುದರಿಂದ ಪ್ರಾಣ ಬಿಟ್ಟಿದ್ದೇನೆ ಅಂತ ನೀನು ಹೇಳುವುದು, ತಮ್ಮ ಎಂಬುದನ್ನು ಅಕ್ಷರಾರ್ಥದಲ್ಲಿ
ಅಣ್ಣನಾಗಿ ನೀನು ಸ್ವೀಕರಿಸುವೆ ಎಂತಾದರೆ, ತಮ್ಮನದ್ದಾದದ್ದು ಎಲ್ಲವನ್ನೂ ನೀನು ಬಿಟ್ಟುಕೊಡಬೇಕೋ
ಬೇಡ್ವೋ ಹೇಳು.ಮೊದಲು ಒಳ್ಳೆಯ ಅಣ್ಣನಾಗು. ಆಮೇಲೆ ಒಳ್ಳೆಯ ತಮ್ಮನನ್ನು ತಿದ್ದುಪಡಿ ಮಾಡು.”
ಪ್ರತಿವಾದಿ
ಹೇಳಿದ ’ತಮ್ಮನೆಂಬುದರಿಂದ’ ಎಂಬ ಶಭ್ದವನ್ನು ಮೂಲವಾಗಿ ಇಟ್ಟುಕೊಂಡು ತನ್ನ ಮುಂದಿನ ಮಾತನ್ನು
ಅರ್ಥಗಾರಿಕೆಯನ್ನು ಸುಲಭವಾಗಿ ಇಲ್ಲಿ ಶೇಣಿಯವರು ಹೆಣಿದಿದ್ದಾರೆ. ಅನಿರೀಕ್ಷಿತವಾದ ಶಬ್ಧಗಳು ಅದರ ಹಿಂದಿನ ಭಾವನೆಗಳನ್ನು
ಹಿಡಿದು ತನ್ನ ಮಾತುಕಾರಿಕೆಯನ್ನು ಕಟ್ಟುವುದು ಬಹಳ ಅಧ್ಬುತವಾಗಿ ಗೋಚರಿಸುತ್ತದೆ.
“ಯಾವ
ವ್ಯಕ್ತಿಯೇ ಆಗಲಿ ನಾನು ಎಂಬುದು ವ್ಯಾಪಕವಾಗಿ ಬೆಳೆದು ಬಿಟ್ಟರೆ, ಆ ವ್ಯಾಪಕವಾದ ನಾನಿನ
ಸ್ವರೂಪವನ್ನು ನೋಡುತ್ತಾ ಹೋದರೆ, ಅವನಲ್ಲಿ
ತನ್ನಷ್ಟಕ್ಕೇ ತಾನೆ ಸಣ್ಣತನವು ಆರೋಪಿಸಲ್ಪಡುತ್ತದೆ. ಅದು ನೆರಳನ್ನು ನೋಡಿದ ಹಾಗೆ ನೆರಳನ್ನು
ನೋಡಿ ಅದು ನಾನು ಎಂದರೆ, ನೆರಳು ಉದ್ದವಾಗಿ ದಪ್ಪವಾಗಿ ತೋರುತ್ತದೆ. ಅದೇ ನಾನು ಅಂತ
ತಿಳಿದುಕೊಂಡಾವಾಗ ಸ್ವಾಸ್ಥ್ಯ ಮರೆತುಹೋಗುತ್ತದೆ. ಹೆಮ್ಮೆ ಎಂದರೆ ಅದು. ನಿನಗೆ ಪ್ರಪಂಚ
ಇದಿರಲ್ಲ. ನೀನು ಏನು ಮಾಡಿದರು ಯಾಕೆ ಮಾಡಿದೆ ಅಂತ ಕೇಳುವವರಿಲ್ಲ. ಯಾರೂ ಒಬ್ಬ ವ್ಯಕ್ತಿಯನ್ನು
ಪ್ರಶ್ನಿಸುವುದಿಲ್ಲ ಎಂಬುದರಿಂದ ಅವನು ಪ್ರಶ್ನಾತೀತನಾಗ್ತಾನೆ ಎಂದು ಒಂದು ಮುಖದಿಂದ
ವಾದಿಸಬಹುದಾದರೂ ಪ್ರಶ್ನಾತೀತವಾದುದು ಕೆಲವೊಮ್ಮೆ ನಿಕೃಷ್ಟವಾಗಿರುವುದೂ ಉಂಟು. ನೀನು ಊರಿನ ರಾಜ.
ನಿನ್ನ ಊರಿನಲ್ಲೇ ಒಬ್ಬನ ಹೆಂಡತಿಯನ್ನು ಇನ್ನೊಬ್ಬ ಎಳಕೊಂಡು ಹೋದರೆ ಸಹಿಸ್ತಿಯೋ ನೀನು? ತಾರೆ ಅಂಗದನಿಗಾಗಿ
ಸಿಂಹಾಸನದಲ್ಲಿ ನನ್ನ ಜತೆ ಕುಳಿತಳು. ಹೋಗಲಿ ನೀನು ಒಂದು ಬಾರಿಯಾದರು ತಾರೆಯಲ್ಲಿ ಕೇಳಿದ್ದಿಯಾ?
ಸುಗ್ರೀವ ಏನಾದರೂ ಒತ್ತಡ ಹೇರಿದ್ದನೋ ಇಲ್ಲ ಮಗನಿಗಾಗಿ ನಿನ್ನ ದೇಹವನ್ನು ಸುಗ್ರೀವನ ಸೇವೆಗೆ
ಒಪ್ಪಿಸಿಕೊಂಡೆಯೋ ಅದೊಂದೂ ವಿಚಾರಿಸಲಿಲ್ಲ. ತಾರೆಯ ಮೇಲೆ ಏನೂ ಅಪಾದನೆ ಇಲ್ಲ ನಿನಗೆ. ಇಲ್ಲದೇ
ಇದ್ದ ಅಪಾದನೆ ನನ್ನ ಮೇಲೆ ಮಾಡಿದ್ದಿಯಲ್ಲ? ಏನು ತಾರೆಯನ್ನು ನೀನು ಸತ್ತಿದ್ದೀ ಅಂತ ಸುದ್ದಿ
ಹಬ್ಬಿಸಿದ ಮೇಲೆ ನೋಡಿದೆನೋ ನಾನು. ಅದಕ್ಕಿಂತ ಮೊದಲು ತಾರೆಯನ್ನು ತಾಯಿಯಂತೆ ಗೌರವಿಸಿದ್ದು
ಬಿಟ್ಟಿಯೋ? ಇದನ್ನೆಲ್ಲ ಮರೆತು ನಿನಗೆ ಒಂದು ನಿಮಿಷ ತಲೆಕೆಟ್ಟದ್ದಕ್ಕೆ ನನಗೆ ಈ ಶಿಕ್ಷೆ. ನನ್ನ
ತಪ್ಪಿಗೆ ಯಾವ ಪುರಾವೆಯೂ ಇಲ್ಲ. ನನ್ನ ಹೆಂಡತಿಯೇ ಬೇಕೂಂತ ನಿನಗೆ ಇದ್ದರೆ, ಅವಳನ್ನು ನನಗೆ
ಮದುವೆ ಮಾಡಿಸಿದ್ದು ಯಾಕೆ?”
ವಾಲಿ
ಸುಗ್ರೀವರ ರೋಚಕ ಸಂವಾದದ ಅಂಶವನ್ನಷ್ಟೇ ಇಲ್ಲಿ ಹೇಳಿದ್ದೇನೆ.
ಇನ್ನೊಂದು ವಾಲಿ ಸುಗ್ರೀವ ಪ್ರಸಂಗದಲ್ಲಿ ಶೇಣಿಯವರ
ಶ್ರೀರಾಮನ ಪಾತ್ರ. ರಾಮ ಸುಗ್ರೀವರ ಸಂಭಾಷಣೆ ಮಾತ್ರವೇ ಇಲ್ಲಿ ದಾಖಲಾಗಿದೆ. ವಾಲಿಯೊಂದಿಗಿನ ಯುದ್ದದಲ್ಲಿ
ಸುಗ್ರೀವನಿಗೆ ಸಹಾಯ ಹಸ್ತ ನೀಡುತ್ತೇನೆ ಎಂದು ಹೇಳಿದ ರಾಮ, ತುಲ್ಯಾರಿ ಮಿತ್ರತ್ವ ಭಾವದಲ್ಲಿ ಸುಗ್ರೀವನೊಂದಿಗೆ
ಸಖ್ಯವನ್ನು ಗಳಿಸುತ್ತಾನೆ. ರಾಮನ ಬಲ ಸ್ಫೂರ್ತಿಯಿಂದ ಸುಗ್ರೀವ ವಾಲಿಯನ್ನು ಯುದ್ದಕ್ಕೆ ಕರೆದು,
ವಾಲಿಯೊಂದಿಗಿನ ಯುದ್ದದಲ್ಲಿ ಸೋಲುಂಡು ಪೆಟ್ಟು ತಿನ್ನುತ್ತಾನೆ. ತನ್ನ ಸೋಲಿನ ಸಂದರ್ಭದಲ್ಲಿ ರಾಮ
ಸಹಾಯ ಲಭ್ಯವಾಗದೇ ಇದ್ದಾವಾಗ ಸುಗ್ರೀವ ರಾಮನನ್ನು ನಿಂದಿಸಿ ಛೇಡಿಸುತ್ತಾನೆ. ಆಗ ಶ್ರೀರಾಮ
ಸುಗ್ರೀವನಿಗೆ ಸಾಂತ್ವಾನವನ್ನು ಹೇಳುವ ಸನ್ನಿವೇಶವಿದು. ಇಲ್ಲಿ ಸುಗ್ರೀವನಾಗಿ ಶ್ರೀರಾಮದಾಸ ಸಾಮಗ
ಮಲ್ಪೆ ಅರ್ಥ ಹೇಳಿದ್ದಾರೆ.
“ ಲೋಕ ಸಂಬಂಧಿಯಾದಂತಹ ಪ್ರದೇಶಕ್ಕೆ ದೇವನಾದರೂ
ಇಳಿದರೆ ಅಪ್ರಾಕೃತಿಕವಾದ, ಅಲೌಕಿಕವಾದ ಕೃತಿಯನ್ನು ಪ್ರತ್ಯಕ್ಷವಾಗಿ ಪ್ರಕಟಪಡಿಸಲಾಗದು.
ಅವನಾದರೋ ಅಪ್ರತ್ಯಕ್ಷವಾದಂತಹ ಅಲೌಕಿಕವಾದಂತಹ ತೇಜಸ್ಸು ಓಜಸ್ಸು ಶಕ್ತಿಯನ್ನು ಪ್ರಕಟಿಸಿದ್ದಾನೆ. ಪ್ರಕಟಿಸಬಹುದು. ಈ ಧರ್ಮಕ್ಕೆ
ಕಟ್ಟು ಒಡೆದಂತಹ ಸೂರ್ಯ ವಂಶದ ರಾಜಕುಮಾರ ನಾನು ,
ವಿದ್ಯೆ ಇನ್ನೂ ಇದೆಯಲ್ಲಾ? ಪ್ರಯೋಗಕ್ಕಿದ್ದ
ಸಂಪತ್ತು ಮತ್ತೂ ಇದೆಯಲ್ಲ? ಅವಸರ ಯಾಕೆ ? ಅಂತ ಆಲೋಚಿಸಿ ಸಂದೇಹಕ್ಕೆಅಧೀನನಾದ್ದರಿಂದ ಬಾಣ
ಪ್ರಯೋಗಕ್ಕೆ ಮನಸ್ಸು ಮಾಡ್ಲಿಲ್ಲ. ಪ್ರಮಾದ ನನಗೂ ಉಂಟಾಗ್ತದೆ ಆದ್ರೆ ಪ್ರಮಾದ ಅನ್ನುವುದು ದೊಡ್ಡ
ದೋಷ ಅಲ್ಲ. ಬಂದು ಬಿಡ್ತದೆ. ಈ ಪ್ರಮಾದದಿಂದ ನಾನು ಬಾಣ ಬಿಟ್ಟದ್ದು ವಾಲಿಯ ಮೈಗೆ ಅಲ್ಲದೆ
ಸುಗ್ರೀವನ ಮೈಗೆ ಆದರೆ??? ಆಲೋಚಿಸು. ಸುಗ್ರೀವ ನನ್ನ ರಕ್ಷೆಗೆ ಕಕ್ಷೆಗೆ ಒಳಪಟ್ಟವ. ವಾಲಿ
ವಧಾರ್ಹಕ್ಕೆ ಒಳಪಟ್ಟವ, ಕೊಲ್ಲುವುದು ಯಾವಾಗಲೂ ಆದೀತು. ರಕ್ಷಿಸುವುದು ಶಿಕ್ಷಿಸಿದ ಮೇಲೆ ಆದೀತೆ?
ಆದುದರಿಂದ ಸ್ವಲ್ಪ ಸಾವಧಾನ ಮಾಡಿದೆ. ವಾಲಿ ಯಾರೂ ಅಂತ ಗೊತ್ತಾಗಲಿ. ಸುಗ್ರೀವ ಯಾರು ಅಂತ
ವ್ಯಕ್ತವಾಗಲಿ. ಅಂತ ಕಾದೆ. ಹೋಗುವವ ವಾಲಿ ಅಂತ ಗೊತ್ತುಂಟು. ಬೆನ್ನಟ್ಟಿ ಹೊಡೀಬಾರದು ನೋಡು. ಅದು
ಬೇಟೆಯಾಗ್ತದೆ. ನಾನು ವಾಲಿಯನ್ನು ಆ ದೃಷ್ಟಿಯಿಂದ ಕಾಣುವುದಿಲ್ಲ. ವಾಲಿ ಶಿಕ್ಷಾರ್ಹ ಎಂದು
ಹೇಳಿದ್ದೇ ಅವನು ಪಶು ಅಲ್ಲ ಎಂಬರ್ಥದಲ್ಲಿ. ಬರೀ ಪಶು ಪ್ರಾಣಿ ಅಂತಾದರೆ ಶಿಕ್ಷೆ ಏನು? ರಕ್ಷೆ
ಎನು? ನಾನು ಬೇಟೆಗಾರನಾಗುವುದಿಲ್ಲ ವಾಲಿಯನ್ನುದ್ದೇಶಿಸಿ. ವಾಲಿ ಕಿಷ್ಕಿಂಧೆಯ ರಾಜ.”
“ಕೊಲ್ಲುವುದು ಯಾವಾಗಲೂ ಅದೀತು ರಕ್ಷಿಸುವುದು
ಶಿಕ್ಷಿಸಿದ ಮೇಲೆ ಆದೀತೆ? “ ಎಂತಹ ಮಾರ್ಮಿಕವಾದ
ಮಾತು ಇದು. ರಕ್ಷಣೆ ಮೊದಲು ಆಗಬೇಕು. ಆಮೇಲೆ ಶಿಕ್ಷಣ. ಹಾಗೆಯೇ ವಾಲಿಯನ್ನು ಬೇಟೆಯಾಗಿ
ಕಾಣುವುದಿಲ್ಲ. ಎಂಬ ಸೂಚ್ಯಾರ್ಥವನ್ನು ಆಡಿಬಿಡುತ್ತಾರೆ. ಇದು ಮುಂದಿನ ಪ್ರಶ್ನೆಗೆ ಇಲ್ಲೇ ಉತ್ತರ
ಕೊಟ್ಟಂತೆ. ಪ್ರಸಂಗದ ಕೊನೆಯ ಕ್ಷಣದಲ್ಲಿ ವಾಲಿ ರಾಮನಿಗೆ ನಿಂದಿಸುವ ವಾಕ್ಯದಲ್ಲಿ ರಾಮನನ್ನು
ಬೇಟೆಗಾರನೇ ಎಂದು ನಿಂದಿಸುತ್ತಾನೆ. ಹೀಗಿದ್ದರೂ ರಾಮ ಕೊನೆಯಲ್ಲಿ ಮರೆಯಲ್ಲೇ ನಿಂತು ಬಾಣ ಬಿಡುತ್ತಾನೆ.
ಇಲ್ಲಿಯೂ ಹಾಗೆ ಸುಗ್ರೀವನ ದೂಷಣೆಗೆ ಸಮರ್ಪಕ
ಸಾಂತ್ವಾನವನ್ನು ಸಮಜಯಿಷಿಕೆಯನ್ನು ಹೇಳಿದನಂತರ ಸುಗ್ರೀವನನ್ನು ಹೋರಾಟಕ್ಕೆ ಹುರಿದುಂಬಿಸುತ್ತಾನೆ
ರಾಮ. ರಾಮನಿಂದಲೂ ಮೋಸವಾದಾಗ ತನಗೆ ಯೋಗವಿಲ್ಲ ಇನ್ನು ಹೋರಾಟವೇ ಬೇಡ ಎಂಬಂತಿದ್ದ ಸುಗ್ರೀವನನ್ನು
ರಾಮ ಪುನಃ ಯುದ್ದಕ್ಕಾಗಿ ಪ್ರೇರೇಪಿಸುತ್ತಾನೆ.
“ ಕಪಿರಾಜ, ನೀನು ಹೋರಾಟ ಮಾಡಿಯೇ ಪಡೆಯಬೇಕು.
ನಿರಾಶೆಯಲ್ಲಿ ನೀನೇನು ಹೇಳಿದೆ. ಯೋಗ ಇದ್ರೆ ಸಿಕ್ಕೀತು. ಇರ್ಲಿ. ಕಪಿರಾಜ ವಾಲಿಯಲ್ಲಿ ಇರ್ಲಿ.
ಏನಾಗಿ ಇರ್ಲಿ? ಆಲೋಚಿಸಿದಿಯಾ? ವಾಲಿಯ ಹೆಂಡತಿಯಾಗಿ ಇರ್ತಾಳೋ ಇರ್ಲಿ. ಸುಗ್ರೀವನ ಹೆಂಡತಿಯಾಗಿ
ವಾಲಿಯಲ್ಲಿ ಇದ್ದರೆ? ನಾನೂ ಹಾಗೆ ನೀನು ಹಾಗೆ. ನಾವು ನಿಜವಾದ ಗಂಡಂದಿರು ಎಂದಾದರೆ ಹೋರಾಟ
ಮಾಡಿಯೇ ಪಡೆಯಬೇಕು. ನಾವು ಗಂಡುಸರಾಗಿಯೇ ಮತ್ತೊಮ್ಮೆ ನಮ್ಮ ಹೆಂಡತಿಯರನ್ನು ನಾವು
ಸ್ವೀಕರಿಸಬೇಕಾಗುತ್ತದೆ. ಅದಕ್ಕಾಗಿಯೇ ನಾನು ವಾಲಿಯನ್ನು ಯುದ್ದಕ್ಕೆ ಕರೆಯಲಿಲ್ಲ. ನಾನು ಹೊಡೆದು
ನಿನ್ನ ಹೆಂಡತಿಯನ್ನು ನಾನು ಕೊಡಿಸಿದೆ ಎಂತಾಗಕೂಡದು. ನೀನು ಹೋರಾಟ ಮಾಡಿ ಪಡೆದೆ ಎಂದಾಗಬೇಕು. ಪಡೆದದ್ದು
ಹೇಗೆ ರಾಮನ ಸಹಾಯದಿಂದ ಎಂದಾಗಬೇಕು. ರಾಮನ ಸಹಾಯದಿಂದ, ರಾಮನ ಹೋರಾಟದಿಂದ ಅಲ್ಲ. ಸಹಾಯ ಒಬ್ಬನಿಂದ
ಒಬ್ಬನಿಗೆ ಯಾಜಿಸುವುದು ತಪ್ಪಲ್ಲ. ಹೀಗೆ ಇಲ್ಲಿ ನೀನು ನಾಯಕ. ಮುಂದೆ ರಾವಣನನ್ನು ಕಂಡಾಗ ನಾಯಕ
ನಾನು. ಇದು ತುಲ್ಯಾರಿ ಮಿತ್ರತ್ವ.”
“ಈಗ ತಮ್ಮನಿಗೊಂದು ಆಜ್ಞೆ ಮಾಡ್ತೇನೆ. ಈ
ಪ್ರದೇಶದಲ್ಲಿ ಎಲ್ಲ ಬೆಳದದೆಯಲ್ಲ ಒಂದು ಪ್ರಾದೇಶಿಕ ಪುಷ್ಮ. ಅದಕ್ಕೆ ಗಜ ಪುಷ್ಪ ಅಂತ ಹೇಳ್ತಾರೆ.
ಎಷ್ಟು ದೂರಕ್ಕೂ ಆ ಹೂವು ಗೋಚರಿಸುತ್ತದೆ. ಮಾತ್ರವಲ್ಲ ಬಣ್ಣದಿಂದಲೂ ಗೋಚರಿಸುತ್ತದೆ. ಅದರ
ಮಾಲೆಯೊಂದನ್ನು ಲಕ್ಷ್ಮಣ ತಯಾರಿಸುತ್ತಾನೆ. ನಿನ್ನ ಕುತ್ತಿಗೆ ಹಾಕ್ತಾನೆ. ಮಧ್ಯರಾತ್ರಿಯೇ
ಆಗಿರಲಿ ಮೊದಲಿನ ಸೂಕ್ಷ್ಮ ದೃಷ್ಟಿಗೆ ಬಿದ್ದ ಪ್ರಕಾರ ಆ ಮಾಲೆಯನ್ನು ಧರಿಸಿದವನು ಸುಗ್ರೀವ”
ಮಾಲೆಯನ್ನು ಧರಿಸಿದ ಸುಗ್ರೀವ ಹೊಸ ಹುರುಪು
ಪಡೆದುಕೊಳ್ಳುತ್ತಾನೆ.
“ರಾಮ ಈ ಮಾಲಿಕೆಯಲ್ಲಿ ನೀನು ಹೇಳುವ ವಾಸನೆ
ವರ್ಣ ಯಾವುದೇ ಇರಲಿ, ನನಗೊಂದು ಧೈರ್ಯ ಮನಸ್ಸಿನಲ್ಲಿ ತುಂಬಿ ಬಂತು. ಇಂತಹ ಮಾಲೆಯೊಂದು ವಾಲಿಯ
ಕುತ್ತಿಗೆಯಲ್ಲಿ ಇಲ್ಲ. ಹಾಗೆ ಯಾವನ ಕುತ್ತಿಗೆಯಲ್ಲಿ ಇಂತಹ ಮಾಲೆ ಇಲ್ಲವೋ ಅವನು ಸುಗ್ರೀವ ಅಲ್ಲ
ಅಂತ ಗುರುತಿಸುವುದಕ್ಕೆ ನಿನಗೆ ಒಂದು ಅನುಕೂಲತೆ. “
ಸುಗ್ರೀವ ಸಮಾಧಾನ ಗೊಂಡು ಹೇಳುತ್ತಾನೆ. ವಾಲಿಯ ಒದೆತ ತಿಂದ ನೋವು ಆತನನ್ನು ಹೀಗೆ
ಮಾತನಾಡಿಸಿತು. ಅದಕ್ಕಾಗಿ ಪರಿತಪಿಸುತ್ತಾನೆ.
ಆಗ ರಾಮ ಹೇಳುತ್ತಾನೆ. “ ಕೆಲವರು ಹೇಳುವುದು
ಕೇಳಿದ್ದೇನೆ, ಗುದ್ದಿದ್ದೇನೆ, ಗುದ್ದಿಸಿ ಕೊಂಡಿದ್ದೇನೆ. ನಿಜವಾಗಿ ಅದರಿಂದ ಅವರಿಗೆ
ಏನಾಗಿದೆ? ಗುದ್ದಿದವರಿಗೆ ಮುಷ್ಠಿ ಬೆಳೆದದೆ. ಗುದ್ದಿಸಿಕೊಂಡವರಿಗೆ
ಮೈ ಹದ ಆಗಿದೆ.:
“ ಓಡಿದವನಿಗೆ ಆದಷ್ಟೇ ಆಯಾಸ ಓಡಿಸುವವನಿಗೂ
ಆಗುತ್ತದೆ.”
“ ಹಾಗಾಗಿ ವಾಲಿಯನ್ನು ನೀನು ಗುದ್ದಿದ್ದರಿಂದ
ನಿನ್ನ ಮುಷ್ಠಿ ಏನೂ ದುರ್ಬಲ ಆಗಲಿಲ್ಲ.”
ಸುಗ್ರೀವ ಹೇಳ್ತಾನೆ.
“ ನಾನು ಆದದ್ದರಿಂದ ಉಳಿದಿದ್ದೇನೆ.”
ಅದಕ್ಕೆ ರಾಮ ಹೇಳ್ತಾನೆ “ ನೀನು ಆದದ್ದಕ್ಕೆ ವಾಲಿ ಬಿಟ್ಟಿದ್ದಾನೆ. ಅದೂ ಒಂದು ಧ್ವನಿ ಇದೆ ಅದರಲ್ಲಿ.”
ಸುಗ್ರೀವ “ ಅದು ಹೌದು ಇನ್ನೂ ಒಂದು ನಾನು
ಹೇಳಿಬಿಡ್ತೇನೆ. ನೀನು ಬಂದು ಆಶ್ವಾಸನೆ ಕೋಡುವುದಕ್ಕಿಂತ ಮೊದಲು ಅದೆಷ್ಟು ಬಾರಿ ನಾನು ಹೋಗಿ
ಕೇಳಿಲ್ವ. ಆವಾಗ ರಾಮ ಬಂದು ಆಶ್ವಾಸನೆ ಕೊಟ್ಟದ್ದೋ. “
ರಾಮ:” ಆದ್ದರಿಂದ ಅವನು ಹೇಳಲಿ, ತಮ್ಮ
ಆದದ್ದರಿಂದ ಬಿಟ್ಟಿದ್ದೇನೆ ಅಂತ. ತಮ್ಮ ಆದದ್ದರಿಂದ ಬಿಟ್ಟಿದ್ದೇನೆ ಹೇಳುವಾಗ, ತಮ್ಮ ಆದದ್ದರಿಂದ
ಹೆಂಡತಿಯನ್ನು ಕೊಟ್ಟಿದ್ದೇನೆ ಅಂತ ಹೇಳ್ತಾನೋ? ಇಲ್ಲ. ಹಾಗಾಗಿ ಎರಡೂ ಸುಳ್ಳೇ. ಯಾಕೆ? ತಮ್ಮ
ಅದದ್ದರಿಂದ ತಮ್ಮನನ್ನು ಬಿಡುವ ಅಣ್ಣ ಹೆಂಡತಿಯನ್ನು ಬಿಡದೆ ಹೋಗ್ತಾನೊ? ಅಲ್ಲಿ ತಮ್ಮ ಆಗದೇ
ಹೋಗ್ತಾನೋ? ಕ್ರೋಧ ನಿವಾರಣೆಗೆ ಅವನಿಗೆ ಬೇರೆ ಯಾವ ಮಾರ್ಗವೂ ಇಲ್ಲ. ನಿನ್ನ ಅಂತಃ ಪುರದ
ಬೀಗವನ್ನೇ ಅವನು ಬದಲಾಯಿಸಿದ್ದಷ್ಟೇ. ಈಗ ನಿನ್ನನ್ನು ಇದಿರಿಸಿ ನಿನಗೆ ನೋವನ್ನುಂಟು ಮಾಡ್ಲಿಕ್ಕೆ
ಅವನಿಗೆ ಮಾರ್ಗ ಇಲ್ವೋ ಬೇರೆ? ಈಗ ಈ ಪರ್ವತಕ್ಕೆ ನೀನು ಬಂದ ಮೇಲೆ ಅವನಿಗೆ ದಿಗ್ಬಂಧನ
ಇರುವುದು, ನಿರ್ಬಂಧ. ಇಲ್ಲಿನ್ ಬಂದು ವಸತಿಯನ್ನು
ಹೂಡುವುದಕ್ಕು ಮೊದಲು ನೀನು ಅವನಿಗೂ ಸ್ವಾತಂತ್ರ್ಯ ಇದ್ದ ಪ್ರದೇಶದಲ್ಲಿ ಇರ್ಲಿಲ್ವೋ. ಆಗ ಏನು
ಮಾಡಿದ ಏನೂ ಮಾಡಿಲ್ಲ. ನಿನ್ನ ಹಣದ ಗಂಟಿಗೆ ಅವನು ಬೀಗ ಹಾಕಿದ. ಅವನ ಸಂಪಾದನೆ ಏನೂ ಅಲ್ಲ. ಆದ್ದರಿಂದ
ಈ ಹೂವಿನ ಮಾಲೆ ಹಾಕಿದ್ದೇನೆ. ಮಧ್ಯ ರಾತ್ರೆ ಅಗ್ತ ಉಂಟು. ಬೆಳಗೆ ಆಗುವಾಗ ಅಧ್ಯಾಯವನ್ನು
ಮುಕ್ತಾಯ ಮಾಡುವ ಉತ್ಸಾಹ ನನಿಗೆ ಉಂಟು.
ಅಂತೂ ಕೊನೆಗೆ ಸುಗ್ರೀವ ಮತ್ತೊಮ್ಮೆ
ವಾಲಿಯನ್ನು ಯುದ್ದಕ್ಕೆ ಕರೆಯುತ್ತಾನೆ, ಇಲ್ಲಿಗೆ ಈ ಸನ್ನಿವೇಶ ಮುಕ್ತಾಯವಾಗುತ್ತದೆ.
ಯಕ್ಷಗಾನ ಅರ್ಥಗಾರಿಕೆಯಿಂದ ಪಾತ್ರದ
ಮರುಸೃಷ್ಟಿ ಮಾಡುವಾಗ ಶೇಣಿಯವರು ಬಹಳಷ್ಟು
ವೈಶಿಷ್ಟ್ಯವನ್ನು ಮೆರೆದಿದ್ದಾರೆ. ಆದರೆ ಇಲ್ಲಿ ಪಾತ್ರದ ಆಯ್ಕೆಯಲ್ಲೂ ವೈಶಿಷ್ಟ್ಯತೆಯನ್ನು
ಗುರುತಿಸಬಹುದು. ಪ್ರತಿ ಪಾತ್ರಧಾರಿ ಕೊಟ್ಟ ಶಬ್ದಗಳನ್ನೋ ವಿಷಯಗಳನ್ನೋ ಹಿಡಿದು ಅದರಲ್ಲೇ ತಮ್ಮ
ಪಾತ್ರವನ್ನು ಇವರು ಕಟ್ಟುವ ರೀತಿ ಅಮೋಘವಾಗಿರುತ್ತದೆ. ಸಾಮಾನ್ಯವಾಗಿ ಒಂದಷ್ಟು ಪೂರ್ವ
ತಯಾರಿಯಲ್ಲೇ ರಂಗವೇರುವ ಕಲಾವಿದರೂ ರಂಗದ ಮೇಲೆ ನಿರೀಕ್ಷಿತ ಯಶಸ್ಸನ್ನು ಗಳಿಸುವಲ್ಲಿ
ವಿಫಲರಾಗುವಾಗ, ಇವರು ಪ್ರತಿ ಪಾತ್ರಧಾರಿ ಎಸೆದ
ಹೂವನ್ನು ಹೊಸೆದು ಮಾಲೆ ಮಾಡುವುದನ್ನು ಹಲವು ಕಡೆ ಕಾಣಬಹುದು. ಇದು ತಾನು ಸಾಗಿದಲ್ಲೇ ದಾರಿ
ನಿರ್ಮಾಣ ಮಾಡುವ ಸಾಮಾರ್ಥ್ಯ ಅಂತಲೇ ಹೇಳಬಹುದು.







