"ಇದು ವಿಮರ್ಶೆಯಲ್ಲದ ಚಿಂತನ"

Tuesday, November 17, 2015

ತೆಂಕಣದ ಚಂಪಕಾವತಿ (ಸುಧನ್ವ ಮೋಕ್ಷವೆಂಬ ತೆಂಕುತಿಟ್ಟಿನ ಪ್ರಸಂಗ)

ಗೋಪುರದ ತುದಿಯಲ್ಲಿರುವ ಬೃಹದ್ಗಾತ್ರದ  ಘಂಟೆಯಿಂದ ನಾದ ಹೊರಡಿಸಬೇಕಿದ್ದರೆ ಅದನ್ನು ಬಾರಿಸುವವನಿಗೂ ಅಷ್ಟೇ ಯೋಗ್ಯತೆ ಅಂದರೆ ಶಕ್ತಿ ಇರಬೇಕಾಗುತ್ತದೆ. ಹಾಗೆಂದು ಆ ಘಂಟೆ ಯಾವುದೇ ಸದ್ದು ಮಾಡದೇ ಸುಮ್ಮನಿದ್ದರೆ ಅದು ಘಂಟೆಯ ತೊಂದರೆಯೂ ಅಲ್ಲ. ಅದರ ಯೋಗ್ಯತೆಯನ್ನು ಅಷ್ಟಕ್ಕೆ ಸೀಮಿತವಾಗಿಸುವುದಕ್ಕೆ ಸಾಧ್ಯವಾಗುವುದೂ ಇಲ್ಲ. ಬಾರಿಸುವ ಯೋಗ್ಯರು ಇಲ್ಲದಾಗ ಘಂಟೆಯೂ ತನ್ನ ಯೋಗ್ಯತೆಯನ್ನು ಪ್ರಕಟಿಸುವುದಿಲ್ಲ ಅಷ್ಟೆ.  ಗೋಪುರದ ತುದಿಯಂಚಿನಲ್ಲಿ ಘಂಟೆಯೊಂದು ಮೌನವಾಗಿದೆ ಎಂದಾದರೆ ಅದನ್ನು ಬಾರಿಸುವವನು ಅಥವಾ ಎಳೆದು ಅಲುಗಾಡಿಸುವವನು ಇಲ್ಲವೆಂದೇ ತಿಳಿಯಬೇಕು.

ಹೀಗೆ ಮೌನವಾಗುವ ಘಂಟೆಯ ಮೌನ ಗಾನದಂತೆ ಯಕ್ಷಗಾನದ ಹಲವು ಯೋಗ್ಯತೆಗಳು ಗುಣಗಳು ಇಂದು ಸುಮ್ಮನಾಗುತ್ತವೆ.  ಅದರಲ್ಲೊಂದು ಯಕ್ಷಗಾನ ಪ್ರಸಂಗ ಸಾಹಿತ್ಯಗಳು. ಹಲವು ಯಕ್ಷಗಾನ ಪ್ರಸಂಗ ಕಾವ್ಯಗಳು ಯಕ್ಷಗಾನ ಪ್ರಪಂಚದ ಹೊರಗೆ ಅಪರಿಚಿತವಾಗಿದ್ದರೆ ಇನ್ನು ಕೆಲವು ಯಕ್ಷಗಾನಲೋಕದಲ್ಲೇ ತಮ್ಮ ಮೌನಗಾನವನ್ನು ಜಪಿಸುತ್ತಿವೆ ಎಂದರೆ ತಪ್ಪಾಗಲಾರದು. ಚಲಾವಣೆಯಾಗದ ವಾಹನದಂತೆ ಸುಮ್ಮನಿದ್ದರೆ ಅದರ ಚಾಲಕನಿಲ್ಲವೆಂದು ತಿಳಿಯಬೇಕೆ ಹೊರತು ಅದು ಚಲನಾಶಿಲವನ್ನು ಕಳೆದುಕೊಂಡಿದೆ ಎಂದು ಅರ್ಥವಲ್ಲ.  ಅಂತಹ ಒಂದು ಮೌನದಲ್ಲಿ ಹುದುಗಿಹೋದ ಪ್ರಸಂಗ ಎಂದರೆ ಸುಧನ್ವ ಕಾಳಗವೆಂಬ ಅಪ್ಪಟ ತೆಂಕುತಿಟ್ಟಿನ ಪ್ರಸಂಗ. ಇಲ್ಲಿ ತೆಂಕುತಿಟ್ಟಿನ ಪ್ರಸಂಗವೆಂದು ಉಲ್ಲೆಖಿಸುವುದಕ್ಕೆ ಕಾರಣವಿದೆ. ಸುಧನ್ವ ಕಾಳಗವೆಂಬ ಪ್ರಸಂಗ ಎರಡು ತಿಟ್ಟಿನಲ್ಲೂ  ಪ್ರಚಲಿತದಲ್ಲಿರುವ ಒಂದು ಪ್ರಸಂಗ. ಇಂದು ಎರಡು ತಿಟ್ಟಿನಲ್ಲಿ ಬಹುಜನಪ್ರಿಯವಾಗಿ ಆಡುತ್ತಿರುವ ಪ್ರಸಂಗ. ಇಂದು ಆಡುತ್ತಿರುವ ಈ ಪ್ರಸಂಗ ವಾಸ್ತವದಲ್ಲಿ  ಮೂಲತಃ ಬಡಗು ತಿಟ್ಟಿನಲ್ಲಿ ಆಡುತ್ತಿದ್ದಂತಹ ಪ್ರಸಂಗ ಆನಂತರ ಅದು ತೆಂಕುತಿಟ್ಟಿನಲ್ಲೂ ಬಹಳ ಜನಪ್ರಿಯವಾಯಿತು.  ಅತ್ಯಂತ ಸುಂದರವಾದ ಪ್ರಸಂಗ ನಡೆಯಿಂದಲೂ,  ಹಾಡುಗಳಿಂದಲೂ ಕೂಡಿರುವ ಈ ದೃಶ್ಯಕಾವ್ಯ ತಾಳ ಮದ್ದಲೆಗೂ ಬಯಲಾಟಕ್ಕೂ ಒಂದೇರೀತಿ ಹೊಂದಿಕೊಳ್ಳುವ ಒಂದು  ವಿಶಿಷ್ಟ ಪ್ರಸಂಗ. ಇಂದು ಜನಪ್ರಿಯವಾಗಿರುವ ಈ ಪ್ರಸಂಗ ಬಡಗಿನಿಂದ ತೆಂಕಿಗೆ ಬಂದ ಪ್ರಸಂಗ. ಇದರ ಲೇಖಕರು ಶ್ರೀ ವೆಂಕಟೇಶ ಭಕ್ತ ಮುಲ್ಕಿ. ಸುಧನ್ವ ಕಾಳಗವೆಂಬ ಈ ಪ್ರಸಂಗದ ಘಂಟೆಯ ಝೇಂಕಾರ ತೆಂಕು ಬಡಗು ಎಂಬ ಭೇದವಿಲ್ಲದೆ ಮೊಳಗುತ್ತದೆ. ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ಸುಧನ್ವ ಮೋಕ್ಷವೆಂಬ ಇನ್ನೋಂದು ಪ್ರಸಂಗ. ಇದು ಅಪ್ಪಟ ತೆಂಕುತಿಟ್ಟಿನಲ್ಲಿ ಬಳಕೆಯಲ್ಲಿದ್ದಂತಹ ಪ್ರಸಂಗ. ಆದರೆ ಈ ಘಂಟೆಯ ಝೇಂಕಾರ ಮೊಳಗುವುದೇ ಇಲ್ಲ ಎನ್ನಬಹುದು.

ತೆಂಕು ತಿಟ್ಟಿನ ಈ ಪ್ರಸ್ತುತ ಪ್ರಸಂಗ. ಪಾಂಡವರ ಒಡ್ಡೋಲಗದೊಂದಿಗೆ ಆರಂಭವಾಗುವ ಅಶ್ವಮೇಧದ ಪ್ರಸಂಗವಿದು. ಅಶ್ವಮೇಧದ ಸಿದ್ಧತೆಯಲ್ಲಿ ಧರ್ಮರಾಯನು ಭೀಮನನ್ನು ದ್ವಾರಕೆಗೆ ಕಳುಹಿಸುವಲ್ಲಿಂದ ಕಥಾಭಾಗ ಆರಂಭವಾಗುತ್ತದೆ.  ಅದಾಗಲೇ ಕುರುಕೇತ್ರ ಸಂಗ್ರಾಮವು ಮುಗಿದಿರುತ್ತದೆ. ಒಂದು ದಿನ ಬಂದ ವ್ಯಾಸ ಮುನಿಗಳು  ಸ್ವಗೋತ್ರವಧೆಯ ದೋಷ ಪರಿಹಾರಾರ್ಥವಾಗಿ ಅಶ್ವಮೇಧವನ್ನು ನಡೆಸುವಂತೆ ಹೇಳುತ್ತಾರೆ. ಅದರಂತೆ ಧರ್ಮರಾಯ ಭೀಮನನ್ನು ದ್ವಾರಕೆಗೆ ಕಳುಹಿಸುವಲ್ಲಿಂದ ಪ್ರಸಂಗ ಕಥೆ ತೆರೆದುಕೊಳ್ಳುತ್ತದೆ.

ನೀ ಕರತಾರೋ ಭೀಮ ಆ ಕಮಲಾಕ್ಷನ ||ಪ|| ಮಖವು ಸಮೀಪಕೆ  ಬಂದುದೆಂದು | ರುಕುಮಿಣಿಯರಸಗೆ ತಿಳಹು ಬೇಗಿಂದು | ಹರುಷದಿ ದ್ವಾರಕೆ ನಗರಕೆ  ಪೋಗಿ || ೨ ||  ತಡೆಯದೆ ಬಂದೆಮ್ಮ ಮೇಲತಿ ದಯದಿಂದ | ನಡೆಸಿಕೊಡಬೇಕೆಂದು ಮಖವನ್ನು ಭರದಿ || ೩ ||

ಮುಂದಿನ ಹಂತದಲ್ಲಿ ಅನುಸಾಲ್ವ ಪ್ರಕರಣ ಬಹಳ ರಂಜನೀಯವಾಗಿ ಹೆಣೆಯಲ್ಪಟ್ಟಿದೆ. ಅನುಸಾಲ್ವ ಪೂರ್ವ ಹಗೆತನದಿಂದ ಪಾಂಡವರ ಕುದುರೆಯನ್ನು ಅಪಹರಿಸುವುದು. ಅದನ್ನು ಬಿಡಿಸಿ ತರುವುದಕ್ಕಾಗಿ ಹಲವಾರು ವೀರಾಧಿ ವೀರರು ತೆರಳಿ ಸೋಲೊಪ್ಪಿಕೊಂಡಾಗ ಸ್ವತಃ ಶ್ರೀಕೃಷ್ಣ ಬಂದಾಗ ಅನುಸಾಲ್ವ ಸೋತು ಶರಣಾಗಿ ತನ್ನ ಸೇವೆಯನ್ನು ಪಾಂಡವರ ಪಕ್ಷಕ್ಕೆ ಮೀಸಲಾಗಿರಿಸುವನು,  ಅಲ್ಲಿಂದ ನಂತರ ಅರ್ಜುನ ದಿಗ್ವಿಜಯದಲ್ಲಿ ಅನುಸಾಲ್ವನ ಸಾನಿಧ್ಯವೂ ಇರುತ್ತದೆ.

ಕಂದ
          ಬಿಗಿದಪ್ಪಿ ಸಂತಸದಿಂ || ಖಗಪತಿವಾಹನ ತಾನತಿಕಾರುಣ್ಯದೊಳು|| ಪಗೆ ಬಿಟ್ಟನುಸಾಲ್ವನು ಕರ || ಕರಯುಗಳವ ಜೋಡಿಸಿ ಹರಿಪದಕೆರಗುತ ನುಡಿದನಂ ||
        

  ಸಾವೇರಿ ತ್ರಿವುಡೆ
          ರಕ್ಷಿಸೋ ಎನ್ನ ನೀನು |  ಮಮತೆಯಿಂದ | ರಕ್ಷಿಸೋ ಎನ್ನ ನೀನು||ಪ||  ರಕ್ಷಿಸು ಕರುಣ ಕಟಾಕ್ಷದಿ ಪಾಂಡವ | ಪಕ್ಷವನೊಲಿದೆನ್ನ | ರಕ್ಷಿಸು ಕರುಣದಿ ||೧||  ಪಕ್ಷಿವಾಹನ ವನಜಾಕ್ಷ ಸೇವಕ ಜನ || ರಕ್ಷದಾನವ ಕುಲಶಿಕ್ಷ ದೇವರ ದೇವ ||೨|| ಅರಿಯದೆ ನಾನಿಂಥ ದುರುಳ ಸ್ವಭಾವದಿ | ಮರುಳುಗೊಂಡೆನು ದೇವ ಶರಣು ಸಂಜೀವ ||೩||

ಬಡಗುತಿಟ್ಟಿನ  ಸುಧನ್ವಕಾಳಗದ ಈ ಸಂದರ್ಭದ ಭೈರವೀ ರಾಗ ಝಂಪೆ ತಾಳದಲ್ಲಿ ಪದ ಹೀಗಿದೆ.

ಕಂದೆರೆದನು ದಾನವನು | ಹರಿ | ಗೊಂದನೆಯ ಮಾಡಿದನು ||
ಬಂದುದು ನಿರ್ಮಲ ಮತಿಯ | ಗೋ | ವಿಂದಗೊಪ್ಪಿಸ್ಸಿದನು ಸ್ಥಿತಿಯ ||
ಇಂದಿರೆಯರಸೆನ್ನಿಂದ | ಅ | ಯ್ತಂದಪ ಕೃತಿ ಕ್ಷಮಿಸೆಂದ ||
ಎಂದಗೆಡಹಿದ ತನುವ  | ಮು | ಮುಕುಂದನೊಳಿಟ್ಟನು ಮನವ ||

ಶ್ರೀಕೃಷ್ಣನ ಕೃಪೆಯಲ್ಲಿ ವ್ಯಾಸರ ಆದೇಶದಂತೆ ಅಶ್ವ ಮೇಧದ ಸಕಲ ಸಿದ್ಧತೆಯೂ ಆಗಿ ಅಶ್ವ ವನ್ನು ಸಿಂಗರಿಸಿ ದಿಗ್ವಿಜಯಕ್ಕೆ ಸಿದ್ಧಪಡಿಸುತ್ತಾರೆ.

ಶಂಕರಾಭರಣ  ತ್ರಿವುಡೆ ತಾಳ
ಪನ್ನೀರಿನಿಂದಲಿ ಮೀಸಿ ಮೈಯಿಗೆ | ಕಮ್ಮೆಣ್ಣೆಗಳನು ಪೂಸಿ ಕಾಲಿಗೆ | ರನ್ನ ಗೆಜ್ಜೆಯ ಚೆಲುವ ಕಡಗಗಳನು ಬಿಗಿದು || ೧ || ಭರದಿ ಮುತ್ತಿನ ರತ್ನ ಸರವನು | ಕೊರಳಿಗಿಟ್ಟು ಪತ್ರಿಕೆ ಬರೆಸಿ || ಕರಣಿಕರೊಡೆನೆ ಕುದುರೆಯ ಫಣೆಯೊಳಿಟ್ಟ || ೨ || ಎಸೆವ ಕಸ್ತುರಿ ಗಂಧ ಅಕ್ಷತೆ ಸುಮಗಳಿಂದಾ ತೋಷಿಸಿ || ವಸುಮತೀಪತಿ ಪೂಜಿಸಿದನತಿ ಕುಶಲದಿಂದ || ೩ ||

          ಎಲ್ಲ ಸಿದ್ಧತೆಯನ್ನು ಮಾಡಿ ಅರ್ಜುನನಿಗೆ ಅಶ್ವ ರಕ್ಷಣೆಯ ಭಾರವನ್ನು ಹೊರಿಸಿ ಸಕಲ ಸೇನಾ ಸನ್ನಾಹಗಳೊಂದಿಗೆ ದಿಗ್ವಿಜಯಕ್ಕೆ ಅರ್ಜುನನನ್ನು ಹರಸಿ ಕಳುಹಿಸಿಕೊಡುತ್ತಾರೆ. ಹೀಗೆ ಸಕಲ ಸೇನಾ ಸನ್ನಾಹದೊಂದಿಗೆ ಅರ್ಜುನ ಕುದುರೆಯ ರಕ್ಷಣೆಯ ಭಾರಹೋತ್ತು ಮುನ್ನಡೆಯುತ್ತಾನೆ. ಹೀಗೆ ಬರುತ್ತಿರುವಾಗ ಶಬರಿ ಮುನಿಯ ಆಶ್ರಮಕ್ಕೆ ಹೊಕ್ಕು ಮುನಿಪನ ಅಶೀರ್ವಾದವನ್ನು ಬೇಡುತ್ತನೆ. ಆವಾಗ ಮುನಿಯು ಹೇಳುವ ಮಾತು ಬಹಳ ಮಾರ್ಮಿಕವಾಗಿರುತ್ತದೆ. ಮನೆಯಲ್ಲಿ ಕಾಮಧೆನುವನ್ನು ಕಟ್ಟಿ ಕಾಡಿನ ಹೆಬ್ಬುಲಿಯನ್ನು ಹುಡುಕುವಂತೆ ಮನೆಯಂಗಳದಲ್ಲಿ ಕಲ್ಪವೃಕ್ಷವು ಇರಲು ಬನ್ನಿಯ ಮರವನ್ನು ತಂದಂತೆ ವನಜಾಕ್ಷನಾದ ಶ್ರೀಕೃಷ್ಣನ ಕೃಪೆ ಇರಲು ಯಜ್ಜವನ್ನು ಮಾಡುವ ಮೌಢ್ಯ ಧರ್ಮರಾಯನಿಗೆ ಬಂತಲ್ಲ. ಶ್ರೀಕೃಷ್ಣ ಆಜ್ಞೆಯಿಂದಲೇ ಈ ಯಾಗವನ್ನು ಕೈಗೊಂಡಿರುವುದಾಗಿ ಮುನಿಪನಿಗೆ ತಿಳಿಸಿ ಕಾಲಿಗೆರಗುತ್ತಾನೆ. ಆಗ ಮುನಿಯು ಶಾಪಗ್ರಸ್ಥಳಾದ ಚಂಡಿ ಎಂಬ ಹಟಮಾರಿ ಹೆಂಗಸಿನ ಕಥೆಯನ್ನು ಹೇಳುತ್ತಾನೆ. ಈಗೆ ಶಾಪವಿಮೋಚನೆಗಾಗಿ ಅರ್ಜುನನ ಆಗಮನವನ್ನೇ ಎದುರು ನೋಡುತ್ತಿರುತ್ತಾಳೆ. ಪರೋಕ್ಷವಾಗಿ ಅರ್ಜುನನ ಆಗಮನವು ದೈವ ಸಂಕಲ್ಪ ಎಂಬುದಾಗಿ ಮುನಿಪ ಹೇಳುತ್ತಾನೆ.

            ನಂತರ ಚಂಡಿಯ ವಿಶಾಪವಾಗಿ ಯಜ್ಞಾಶ್ವವು ಚಂಪಕಾಪುರವನ್ನು ಪ್ರವೇಶಿಸುತ್ತದೆ. ಚಂಪಕಾ ಪುರದ ಅರಸ ಹಂಸಕೇತ ಆತನಿಗೆ ಆತ ಧರ್ಮಾತ್ಮನೂ ಭಗವದ್ಭಗ್ತನೂ ಆದ  ವೀರವೈಷ್ಣವ ಪಂಥದವನು. ಅತ್ಯಂತ ಭಾಗ್ಯವಂತನಾದ ಈತನು ಏಕ ಪತ್ನೀವೃತಸ್ಥನಾಗಿ ನಾಲ್ಕು ಮಕ್ಕಳೊಂದಿಗೆ ಪ್ರಜೆಗಳನ್ನು ಪೊರೆಯುತ್ತಿದ್ದನು.  ಹೀಗಿರಲು ಪಾಂಡವಾಶ್ವವು  ಚಂಪಕಾವತಿಯ ಉದ್ಯಾನವನಕ್ಕೆ ಪ್ರವೇಶಿಸುತ್ತದೆ. ಕಾವಲುಭಟರು ಅರಸ ಹಂಸಕೇತನಿಗೆ ವರದಿ ಒಪ್ಪಿಸುತ್ತಾರೆ. “ ದೇವ ಬಂದಿದೆ ಯಶ್ವತಾವುದ್ಯಾವನದೊಳು..ಕರಿತುರಗ ರಥದಂತಿ ಸಂಕುಲದಿಂದ”  ಯಜ್ಞಾಶ್ವವು ಪ್ರವೇಶ ಮಾಡಿದೆ. 

            ಚಾರರಿತ್ತ ಸುದ್ದಿಯನ್ನು ಕೇಳಿ ಹಂಸಕೇತ ಎಲ್ಲವನ್ನು ಪರಿಕಿಸಿ ಕುದುರೆಯ ಮೇಲೆ ಬರೆದ ಫಲಕವನ್ನು ಕಾಣುತ್ತಾನೆ.
            ಕೇದಾರಗೌಳ : ಝಂಪೆ ತಾಳ.

ಹಸ್ತಿನಾಪುರದರಸನು | ಅರಿನೃಪರ | ಮಸ್ತಕಾಂಕಿತ ಶೂರನು || ಪೃಥ್ವಿಯೊಳಗತಿ ಧೀರೆನು | ಪುಂಡರಿಕ ಮಿತ್ರಜಾತನ ತನಯನು || ೧ || ಬಿಟ್ಟು ಹಯವನು ಮಖಕೆ | ಕಪ್ಪವನು ಕೊಟ್ಟು ಬರುವುದು ಸಹಯಕೆ || ದಿಟ್ಟರಾದವರು ದುರದಿ | ಅಶ್ವವನು | ಕಟ್ಟಿ ನಿಲುವುದು ಸಮರದಿ ||
ತಂದೆಯ ಮನದಿಂಗಿತವನ್ನು ಅರಿತು ಮಗ ಸುಧನ್ವ ನ ವೀರರಸದ ನುಡಿಗಳು ಹೀಗಿದೆ.
ಮಾರವಿ : ಅಷ್ಟತಾಳ
ಬರಿದೆ ಚಿಂತಿಪುದ್ಯಾಕೆ |  ಅಪ್ಪಯ್ಯ ಈ | ತುರಗ ಕಟ್ಟಿ ಸುವುದಕ್ಕೆ || ಗರುವದೊಳೆಮ್ಮಯ ಪುರಕೆ ಬಂದಿರುವಂಥ| ಅರಿಗಳ ಪಡೆಯನ್ನು ಸವರುವೆ ನಿಮಿಷದಿ ||
ಮುರಿವೆ ಪಾರ್ಥನ ಬಿಂಕವ | ಸಂಗ್ರಾಮದಿ ಮೆರೆವೆ ಕಟ್ಟಿಸು ಅಶ್ವವ || ಹರಿಬಕೊದಗಿ ಬಂದರಾ ಕೃಷ್ಣರಾಯನ | ಚರಣಕಮಲ ಮೆಚ್ಚಿಸುವೆ ನಾನೀಕ್ಷಣದಿ ||

            ಮಗನ ಪೌರುಷದ ನುಡಿಗೆ ಹಂಸಕೇತ ಸಂತಸಪಡುತ್ತಾನೆ.
ಮಧುಮಾಧವಿ ಯ ಏಕತಾಳದ ಪದ ಹೀಗಿದೆ.

ವರಮಂತ್ರಿಗಳು ಕೇಳಿ ಧರೆಯ ಭಾರವನು | ಪರಿ | ಹರಿಸಲು ಕ್ಷೀರ ಶಯನ ತಾನು |
ಧರೆಯೊಳಗವತರಿಸುವನೆಂಬರು | ಶ್ರೀ | ಯರಸನ ದರುಶನ ನಮಗಿಲ್ಲವಲ್ಲ ||
ಈ ಕುದುರೆಯ ಕಟ್ಟಿಕೊಂಡೀಗ ರಣದಿ | ಆ ಕುಂತೀಶಯನ ದಣಿಸಲು ಭರದಿ ||
ಆಕಳು ಕರು ಹುಡುಕುವ ತೆರದಿಂದಲಿ | ಗೋಕುಲ ಪತಿ ಬಹನೀ ಕ್ಷಣದಲ್ಲಿ ||
ರೂಢಿಯೊಳಿಷ್ಟು ದಿವಸವನ್ನು ಬರಿದೆ | ಮೂಢತನದೊಳಲ್ಪ ಭಾಗ್ಯದಿ ಮೆರೆದೆ ||
ಗಾಢದೊಳೈದಿ ಲಾಯದಿ ಕಟ್ಟು ಹಯವ | ನೋಡಬಹುದು ಕೃಷ್ಣರಾಯನ ಪದವ ||

ಮ ತ್ತೊಂದು ಪ್ರಸಂಗದ ರಾಗ ಪಂತುವರಾಳಿ ಅಷ್ಟತಾಳದ ಪದ ಹೀಗಿದೆ

ಮಂತ್ರಿಗಳಿರ ಕೇಳಿರೀಗ | ಶ್ರೀ | ಕಾಂತನ ಕಾಣುವ ಯೋಗ ||
ಬಂತು ಮತ್ಪುಣ್ಯವನೇನೆಂಬೆ ವಹಿಲದಿ |
ಕುಂತಿಸುತನಧ್ವರದ ಹಯ ತ | ನ್ನಂತ್ಗೆ ತಾನೇ ಬಂದುದಿಲ್ಲಿಗೆ ||

            ವೀರ ವೈಷ್ಟವನಾದ ಹಂಸಧ್ವಜ ನೃಪಾಲನ ಚಿಂತನೆಯಲ್ಲಿ ವೈಷ್ಣವ ಪಂಥದ ಚಿಂತನೆಯನ್ನು ಪ್ರಸಂಗದಲ್ಲಿ ಸ್ಥೂಲವಾಗಿ ಅಳವಡಿಸಲಾಗಿದೆ ಎನ್ನಬಹುದು. ಈ ಪದಗಳು ಜೀವನ ಸಾರವನ್ನು ಬಿಂಬಿಸುವಲ್ಲಿ ಬೆಳಕನ್ನು ಚೆಲ್ಲುತ್ತದೆ. ವೈಷ್ಣವನಾದವನಿಗೆ ಎಲ್ಲವನ್ನೂ ಮೀರಿದ ಬದುಕಿನ ಒಂದು ಹಂತವೆಂಬುದು ಇದ್ದರೆ ಅದು ಶ್ರೀಕೃಷ್ಣ ದರ್ಶನ. ಅದನ್ನೇ ಪರಮ ಪದ ಎಂದು ಕರೆಯುವುದು. ವೈಷ್ಣವನಾಗಿ ಜನ್ಮ ತಳೆದ ಮೇಲೆ ಆ ಬದುಕಿಗೆ ಬಾಲ್ಯದ ಆಶೆಗಳಾಗಲೀ ಯೌವ್ವನದ ಸುಖಭೋಗದ ಬಯಕೆಗಳಾಗಲೀ ಮುಖ್ಯವಾಗುವುದಿಲ್ಲ. ಪ್ರಾಪಂಚಿಕ ಬದುಕಿನ ಎಲ್ಲ ವಿಷಯಗಳ ಅಂತ್ಯವನ್ನು ಕಾಣುವುದು ಶ್ರೀಹರಿ ಎಂಬ ಪರಮ ಪದದಲ್ಲಿ. ಆ ಪರಮ ಪದ ಸಿದ್ಧಿಯಾದರೆ ಮತ್ತೆ ಈ ಐಹಿಕ ಬದುಕಿನ ಅಗತ್ಯವಿಲ್ಲ ಎಂದೇ ಬಗೆದಂತೆ ಈ ಪ್ರಸಂಗ ಸನ್ನಿವೇಶ ಕಾಣುತ್ತದೆ.
            ಅಶ್ವಮೇಧದ ಕುದುರೆ ರಾಜ್ಯವನ್ನು ಹೊಕ್ಕಾಗ ಭಗವನ್ ಸಾನ್ನಿಧ್ಯದ ಮೋಕ್ಷಪದ ಹಾದಿಯನ್ನೇ ಇಲ್ಲಿ ಕಾಣುತ್ತಾರೆ. ಹಾದಿಯಲ್ಲಿ ಸಾಗುವುದಕ್ಕೆ ಬೆಳಕಾಗಿ ಈ ಕುದುರೆಯನ್ನು ಕಂಡು,  ಮಿಡುಕುಳ್ಳವರು ಕಾಧುವುದು ಎಂಬ ಉಕ್ತಿಯನ್ನು ಕೇವಲ ದೈಹಿಕ ಶಕ್ತಿಯಾಗಿ ಹಂಸಧ್ವಜ ಗುರುತಿಸುವುದಿಲ್ಲ. ಬದಲಾಗಿ ಮಿಡುಕು ಎಂಬುದು ತನ್ನೊಳಗಿನ ಅಂತಃ ಶಕ್ತಿಯ ಪರೀಕ್ಷೆ ಎಂಬುದಾಗಿ ತಿಳಿದು ಅಶ್ವಮೇಧ ಎಂಬುದು ಅದರ ಪಣವಾಗಿ ಪರಿಗಣಿಸುತ್ತಾನೆ. ಈ ಚಿಂತನೆಯಿಂದಲೇ ಢಂಗುರ ಸಾರುತ್ತಾನೆ. ಆಕಳು ಬಾರದಾಗ ಕರುವನ್ನು ಎತ್ತಿಕೊಂಡು ಒಯ್ದು ಕಟ್ಟಿದಂತೆ ಕರುವನ್ನು ಕಟ್ಟುವ ಪ್ರಯತ್ನ ಮಾಡಿಬಿಡುತ್ತಾನೆ. ಕರು ಕರೆದಾಗ ಅಕಳು ಬರಲೇಬೇಕಲ್ಲ? ಅರ್ಜುನನ ವ್ಯಕ್ತಿತ್ವದಲ್ಲಿ ಸ್ವತಃ ಅರ್ಜುನ ಕಾಣದದ ವಸ್ತುವೊಂದನ್ನು ಹಂಸಧ್ವಜ ಗುರುತಿಸುತ್ತಾನೆ. ಆದುದರಿಂದಲೇ ಅತ್ಯಂತ ಕಠಿಣವಾದ ರಾಜಾಜ್ಞೆಯನ್ನು ಹೊರಡಿಸುತ್ತಾನೆ. ಯಾರು ಹಿಂದುಳಿಯುತ್ತಾರೋ ಅವರನ್ನು ಕಾದ ಎಣ್ಣೆಯ ಕೊಪ್ಪರಿಗೆಗೆ ಎಸೆಯಲಾಗುತ್ತದೆ.  ತಾತ್ಪರ್ಯ ಇಷ್ಟೆ, ಭಗವಂತನನ್ನು ಕಾಣುವಲ್ಲಿ ಯಾರು ಔದಾಸಿನ್ಯವನ್ನು ತೋರಿಸುತ್ತಾರೋ ಅವರು ಆ ರಾಜ್ಯದಲ್ಲಿ ಯಾಕೇ ಈ ಭೂಮಿಯ ಮೇಲೆ ಬದುಕುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಈ ಭೂಮಿಯ ಮೇಲಿನ ಬದುಕು ಎಂಬುದು ಶ್ರೀಕೃಷ್ಣನ ಪರಮ ಪದದ ಲಕ್ಷ್ಯವೆಂದೇ ಪರಿಗಣಿಸಲ್ಪಡುತ್ತದೆ. ಯಾರ ಸಾವನ್ನೂ ಸಹ  ಸಾವು ಅಥವಾ ಅಂತ್ಯ ಎಂದು ಬಗೆಯುವುದಿಲ್ಲ.
            ಅತ್ಯಂತ ಉದಾತ್ತವಾದ ತತ್ವವನ್ನು ಸರಳರೀತಿಯಲ್ಲಿ ಈ ಪ್ರಸಂಗದಲ್ಲಿ ಚಿತ್ರಿಸಲಾಗಿದೆ.
            ಮುಂದೆ ಸುಧನ್ವ ತನ್ನ ತಾಯಿಯಲ್ಲಿ ಧುರಕ್ಕಾಗಿ ಅಪ್ಪಣೆಯನ್ನು ಕೇಳುವ ಪದ್ಯ.
          
  ಘಂಟಾರವ ಏಕ ತಾಳ :

ಕರುಣಿಸು ತಾಯೆ ನೀ ಎನ್ನ ಭಿನ್ನಪವನ್ನು | ನರನೊಳು ದುರಕೆನ್ನ ಬೇಗ || ಹರುಷದಿ ಕಳುಹಿಸು ಹರಸಿ ಎನಲು ಕೇಳಿ ತರಳನೊಳೆಂದಳಾ ಮಾತೆ||
ಕಂದ ಕೇಳೆಲೊ ಇಂದ್ರ ತನಯನೊಳನುವರ | ಒಂದೆ ಮನಸಿನೊಳು ಗಯ್ಯೋ || ಇಂದಿರೆಯರಸನ ನೋಡಬಹುದು ನೀನೀ | ಗೊಂದಳಾತ್ಮಜನೊಳು ಜನನಿ ||

ತಾಯಿ ಹೆತ್ತ ಒಡಲನ್ನು ಮರೆತು ಮಗನನ್ನು ಗೆದ್ದು ಬಾ ಎಂದು ಬೀಳ್ಕೊಡುತ್ತಾಳೆ. ಗೆಲುವು ಎಂಬು ಪಾರ್ಥನವಿರುದ್ದ ಅಲ್ಲ. ಅದು ಐಹಿಕ ಬದುಕಿನ ವಿರುದ್ದದ ಗೆಲುವು ಎಂದು ಸಾರಿ ಹೇಳುತ್ತಾಳೆ. ಪರಮೋನ್ನತಿಯ ಶಿಖರದ ಮೆಟ್ಟಲಾಗಿ ಈಗ ಅರ್ಜುನನಿದ್ದಾನೆ.

ತಾಯಿ ಮತ್ತು ಸಹೋದರಿಯರ ಹಾರೈಕೆಗಳನ್ನು ಸ್ವೀಕರಿಸಿದ ನಂತರ ಪ್ರಸಂಗದ ಅತ್ಯಂತ ಮುಖ್ಯ ಸನ್ನಿವೇಶಗಳಲ್ಲಿ ಒಂದು ಸತಿ ಪ್ರಭಾವತಿ ಜತೆಗಿನ ಸಮಾಗಮ. ಸರ್ವಾಲಂಕರ ಭೂಷಿತೆಯಾಗಿ ಪತಿಯಾಗಮನವನ್ನೇ ಕಾಯುತ್ತಿರುವಾಗ ಶಸ್ತ್ರ ಸನ್ನದ್ಧನಾಗಿ ಬಂದ ಸುಧನ್ವನನನ್ನು ಕಂಡಾಗ ಅಚ್ಚರಿಯಿಂದ ಕೇಳುತ್ತಾಳೆ.

ಕೇದಾರಗೌಳ ಅಷ್ಟ ತಾಳ
ನಲ್ಲ ನೀನಿಷ್ಟುಗ್ರ ಕೋಪದಿ ಪೋಗುವು | ದೆಲ್ಲಿಗೆ ಪಯಣವಿದು || ಸೊಲ್ಲಿಸಬೇಕು ತನ್ನೊಡನೆಂದು ಪ್ರೀತಿಯೊಳ್ | ಪ್ರಫುಲ್ಲ ಲೋಚನೆ ಪೇಳ್ದಳು ||  ಎಲೆಗೆ ಕೇಳೆನ್ನಯ ನರನ ವಾಜಿಯ ಕಟ್ಟಿ | ಕಲಹಕೊದಗಲಿಕಾನು || ಛಲದೆಣಿಕೆಯನುಂಟು ಮಾಡಿಯೆ ಕಾದಿ | ಫಲುಗುಣನೊಡನೆ ನಾನು || ೨ || ರಮಣ ನೀ ಲಾಲಿಸು ಆ ಸವ್ಯ ಸಾಚಿಗೆ | ಕಮಲ ನಾಭನು ಮಿತ್ರನು || ಸಮರದೊಳಪಜಯವದು ಸೋಂಕಲರಿಯದು | ಅಮರೇಂದ್ರ ತನಯನಿಗೆ ||

ಶ್ರೀ ಹರಿಗೆ ಪ್ರಿಯನಾದ  ಪಾರ್ಥನ ಎದುರು ಹೋರಾಡಿ ತನ್ನ ಪತಿ ಗೆಲುವುದಕ್ಕುಂಟೆ?  ಮಡದಿಯ ಆತಂಕದಿಂದ ಸುಧನ್ವ ಆವೇಶ ಭರಿತನಾಗುತ್ತಾನೆ.

ಮಾರವಿ : ಏಕತಾಳ
ಬಿಡು ಬಿಡು ಮಾನಿನಿ ನುಡಿಯದಿರಾತನ | ಸಡಗರವೆನ್ನೊಡನೆ || ಕಡಿದು ರಥಾಶ್ವವ ಬಡಿವೆನು ಸೇನೆಯ | ಮಡದಿ ಕೇಳೀ ಕ್ಷಣದಿ || ೧ || ಬಿಟ್ಟಂಬುಗಳನು ಕುಟ್ಟಿ ಮುರಿದು ನಾ ದಿಟ್ಟ ಪಾರ್ಥನ ಧುರದಿ | ಥಟ್ಟನೆ ಮುರಿದು ಶ್ರೀಕೃಷ್ಣನ ಕರೆಸದೆ | ಬಿಟ್ಟರೆ ಮೀಸೆಯಿದೆ || ೨ ||

ಸುಧನ್ವ ಪ್ರಭಾವತಿಯ ಸಂಭಾಷಣೆ ಇಲ್ಲಿಯೂ ರಸವತ್ತಾಗಿ ಹೆಣೆಯಲ್ಪಟ್ಟಿದೆ. ಇಲ್ಲಿ ಪ್ರಸಂಗದ ಓಘಕ್ಕೆ ಅಡ್ಡಿಯಾಗಬಾರದು. ಪ್ರಭಾವತಿಯದ್ದು ಇಲ್ಲಿ ಮೂರು ಬಗೆಯ ಅಭಿವ್ಯಕ್ತಿಯ ಪಾತ್ರ. ಆರಂಭದಲ್ಲಿ ಸಹಜವಾಗಿ ಲಜ್ಜೆಯಿಂದಲೂ ಅಲ್ಪ ಶೃಂಗಾರದಿಂದಲೂ ಗಂಡನನ್ನು ಎದುರುಗೊಂಡರೆ ಆನಂತರ ಗಂಡನನ್ನು ಕಂಡಾಗ ಆತಂಕ ಮನಳಾಗುತ್ತಾಳೆ. ಶಸ್ತ್ರ ಸನ್ನದ್ಧನಾಗಿ ವೀರ ಕ್ಷತ್ರಿಯನಂತೆ ಯುದ್ಧಕ್ಕೆ ಹೊರಟ ಕಾರಣದಿಂದ ಆಕೆಗೆ ಆತಂಕವಾಗುವುದಿಲ್ಲ.  ಕ್ಷತ್ರಿಯರಿಗೆ ಯುದ್ದವೆಂಬುದು ಶಿರದ ತಿಲಕದಂತೆ. ವೀರ ಕ್ಷತ್ರಿಯಾಣಿ,  ಮೇಲಾಗಿ ವೀರ ವೈಷ್ಣವ ವನಿತೆ. ಯುದ್ದ ಎಂದಿಗೂ ಆತಂಕದ ವಿಚಾರವಾಗುವುದಿಲ್ಲ. ಆದರೆ ಇಂದು ಯುದ್ದದಲ್ಲಿ ಪ್ರತಿಭಟನಾಗಿರುವುದು ವೀರ ಪಾರ್ಥ. ಶ್ರೀಕೃಷ್ಣನ ಪರಮ ಆಪ್ತ. ಇಲ್ಲಿ ಗಂಡ ಗೆದ್ದು ಬರುವುದಕ್ಕೆ ಸಾಧ್ಯವೇ? ಹಾಗಾದರೆ? ಅಪೂರ್ಣವಾಗುವ ತನ್ನ ಬದುಕಿನ ಬಗ್ಗೆ ಆತಂಕ ಪಡುತ್ತಾಳೆ.
ಸಹಜವಾಗಿ ಬಹುತೇಕ ಪ್ರಸಂಗಗಳಲ್ಲಿ ಗಂಡನಾದನು ಯುದ್ದಕ್ಕೆ ಹೊರಡುವುದು ಹೆಂಡತಿ ಅಥವಾ ತಾಯಿ ಬಂದು ತಡೆಯುವುದು.ಸಾಮಾನ್ಯ. ಆದರೆ ಈ ಪ್ರಸಂಗ ವಿಶಿಷ್ಟ ಅನ್ನಿಸಿಕೊಳ್ಳುವುದು ಇದೇ ಕಾರಣದಿಂದ. ಪಾತ್ರಧಾರಿಯಾದವನು ಇದರ ಆಳ ಅಗಲವನ್ನು ಅರ್ಥ ಮಾಡಿಕೊಂಡಲ್ಲಿ ಮಾತ್ರವೇ ಪ್ರಸಂಗಕ್ಕೆ ಕವಿಯ ಆಶಯಕ್ಕೆ ನ್ಯಾಯ ಒದಗಿಸುವುದಕ್ಕೆ ಸಾಧ್ಯವಾಗುತ್ತದೆ. ಗಂಡ ಯುದ್ದಕ್ಕೆ ಹೋಗಿ ಸತ್ತರೆ ತಾನು ವಿಧವೆಯಾಗುತ್ತೇನೆ ಎಂಬ ದುಗುಡವಿಲ್ಲ. ಆದರೂ ಆಕೆಗೆ ಆತಂಕ. ಇದನ್ನೇ ಪ್ರಸಿದ್ಧ ಕಲಾವಿದ ಶ್ರೀ ಕೋಳ್ಯೂರು ರಾಮಚಂದ್ರರಾವ್ ಸಂವಾದವೊಂದರಲ್ಲಿ ಹೇಳಿರುತ್ತಾರೆ.
ಪ್ರಭಾವತಿಯ ಪಾತ್ರ ವಿಶಿಷ್ಟವಾದ ಪಾತ್ರ. ಆ ಪಾತ್ರದಲ್ಲಿ ಶೃಂಗಾರವಿಲ್ಲ. ಆ ಪಾತ್ರದ ಒಳ ತುಡಿತವನ್ನು ಅರ್ಥ ಮಾಡಿಕೊಂಡು ಅದನ್ನು ರಂಗದಲ್ಲಿ ಅಳವಡಿಸಿಕೊಳ್ಳಬೇಕು. ಯುದ್ದಕ್ಕೆ ಹೊರಟು ನಿಂತ ಗಂಡನನ್ನು ಸಮಾಗಮಕ್ಕೆ ಆಹ್ವಾನಿಸುತ್ತಾಳೆ. ಅದು ಶೃಂಗಾರದಿಂದಲೋ ವಿರಹ ವೇದನೆಯಿಂದಲೋ ಅಥವಾ ಇನ್ನಾವುದೋ ವಾಂಛೆ ಬಯಕೆಗಳಿಂದ ಅಲ್ಲ. ಪರಮ ವೈಷ್ಣವನಾದವನ ಬದುಕಿನ ಪರಮ ಲಕ್ಷ್ಯವೇನು? ಅದನ್ನು ತಂತುವಾಗಿರಿಸಿಕೊಂಡು ಇಲ್ಲಿ ಬರುವ ಪ್ರತಿಪಾತ್ರಗಳು ಹೆಣೆಯಲ್ಪಟ್ಟಿದ್ದೆ. ಪ್ರತಿಯೊಂದು ಪಾತ್ರದ ಸ್ಪಂದನೆಯ ಮುಖ  ಆ ಪರಮ ಲಕ್ಷ್ಯದೆಡೆಗೆ ಇರುತ್ತದೆ. ಏನು ಆ ಲಕ್ಶ್ಯ?  ಮೋಕ್ಷ್ಯ ಪ್ರಾಪ್ತಿ. ಭಗವಂತನ ದರ್ಶನವೇ ಮೋಕ್ಷ. ಅದುವೇ ಪರಮ ಲಕ್ಷ್ಯ.  ಆ ತುಡಿತ ಪ್ರಭಾವತಿಯಲ್ಲೂ ವ್ಯಕ್ತವಾಗುತ್ತದೆ.
ಚರಮದಲ್ಲಿ ಸಿದ್ದಿಸುವ ಪರಮ ಪದದಿಂದ ಸುಧನ್ವನಿಗೆ ಯಾವುದೇ ದೈಹಿಕ ಬಯಕೆಗಳು ಇರುವುದಿಲ್ಲ. ಆ ಎಲ್ಲ ಬಯಕೆಗಳು ಅಲ್ಲಿ ಇರದೆ ಇರುವುದರಿಂದಲೇ ಸುಧನ್ವ ಸಂದಿಘ್ದವನ್ನು ಅನುಭವಿಸುವಂತಾಗುತ್ತದೆ. ವೀರ ವೈಷ್ಣವನಾದವನಿಗೆ ಪರಮಲಕ್ಷ್ಯವಾದ ಭಗವಂತನ ದರ್ಶನದ ಅವಕಾಶ ಸಿದ್ದಿಯಾಗುವಾಗ ಉಳಿದ ಪ್ರಾಪಂಚಿಕ ಸುಖಾಭೋಗಗಳು ಗೌಣವಾಗುತ್ತದೆ. ಶ್ರೀ ಕೃಷ್ಣ ದರ್ಶನವಾದ ಮೇಲೆ ಬದುಕಿನಲ್ಲಿ ಮತ್ತೆ ಸಾಧಿಸುವುದಕ್ಕೆ ಏನೂ ಉಳಿದಿರುವುದಿಲ್ಲ. ಅದುವೇ ಪರಮ ಪದ. ಇದನ್ನು ಅರಿತಿದ್ದ ಪ್ರಭಾವತಿಯಾಗಲೀ ತಾಯಿ ಅಥವಾ ಸಹೋದರಿಯೇ ಆಗಲಿ ಯುದ್ಧಕ್ಕೆ ಹೋಗುವಂತೇ  ಪ್ರೇರೇಪಿಸುತ್ತಾರೆ. ತಾಯಿಯಂತೂ ಹೇಳಿಯೇ ಬಿಡುತ್ತಾಳೆ ಸೋತು ಹಿಂದಿರುಗದಿರು. ಅಂದರೆ ಅಲ್ಲಿ ವೀರ ಮರಣವನ್ನು ಅಪ್ಪಿದರೂ ಅದು ಮೋಕ್ಷಸಿದ್ದಿಯಾದಂತೆ. ಅದುದರಿಂದಲೇ ಇಲ್ಲಿ ಪ್ರಭಾವತಿಯ ಬೇಡಿಕೆ ಅತಿ ಮಹತ್ವವನ್ನು ಪಡೆಯುತ್ತದೆ. ಅಕೆಗೆ ಅರಿವಿದೆ. ಈ ಯುದ್ದದಲ್ಲಿ ಗೆದ್ದರೂ ಭಗವಂತನ ದರ್ಶನದಿಂದಲೇ ಮೋಕ್ಷ ಸಿದ್ಧಿಯಾಗುತ್ತದೆ. ಆದರ ತನ್ನ ಬದುಕಿನ ಮೋಕ್ಷ ಯಾವುದರಿಂದ?  ಇನ್ನೂ  ಪುತ್ರವತಿಯಾಗದ ಆಕೆ ತನ್ನ ಬದುಕಿನ ಗಮ್ಯವನ್ನು ಯೋಚಿಸುತ್ತಾಳೆ.  
ಯಕ್ಷಗಾನ ಮತ್ತು ಕಲಾವಿದನಿಂದ ಹೀಗೆ ಪಾತ್ರಗಳ ಅಂತರಂಗ ಅಭಿವ್ಯಕ್ತವಾಗುವುದಾದರೆ ಅಂತಹ ಕಲೆಯನ್ನು ಅನುಭವಿಸುವ ಧನ್ಯತೆ ನಮ್ಮಲ್ಲಿರಬೇಕು. ಹಲವಾರು ಗ್ರಂಥ ಓದುವುದರಿಂದಲೂ ಯಕ್ಷಗಾನ ಒಂದು ಅಧ್ಯಯನ ಮಾಡಿದರೆ ಸಾಕು ಜ್ಞಾನದ ವಿಪುಲತೆ ಅವಾಗ ಸಾಧ್ಯವಾಗುತ್ತದೆ.
ಇಂತಹ ಧರ್ಮ ಸಂಕಟದಲ್ಲಿ ಸುಧನ್ವ ಸ್ವಗತವಾಗಿ ವಿವೇಚಿಸುವ ಪದ  “ ಸತಿಗೆ ಷೋಡಷದ ಋತು ಸಮಯ....”. ಆದರೆ ಈ ಪ್ರಸಂಗದಲ್ಲಿ ಇದಕ್ಕೆ ಸಮಾನಾಂತರವಾಗಿ ಭಾಮಿನೀ ಪದ ಹೀಗಿದೆ.  

ಭಾಮಿನಿ :
ಇನಿತು ದೈನ್ಯದಿ ಹೇಳಿಕೊಳಲಾ |
ಜನಪ ಪಿತೃದಿವಸವಾದರು |
ವನಿತೆಯರ ಋತುಕಾಲ ಸಮಯದಿ ನೆರೆಯಬಹುದೆನುತ ||
ಘನ ವಿವೇಕದ ನೆಲೆಯ ಮನದೊಳ |
ಗನುಕರಿಸಿ ದಶ ಕೂಟದಿಂದಲಿ |
ವಿನಯದಿಂ ತನ್ನರಸಿಯನು ಕೂಡಿರೆ ವಿಲಾಸದಲಿ ||
           
            ಪತ್ನಿಯ ಬೇಡಿಕೆಯನ್ನು ಅಂಗೀಕರಿಸಿದ ಸುಧನ್ವ ಪತ್ನಿಯೊಂದಿಗೆ ಕಳೆಯುತ್ತಾನೆ. ಆತ್ತ ಇದನ್ನು ತಿಳಿದ ಹಂಸಧ್ವಜ,   ಮಡದಿ ಮನೆಯೊಳು ರತಿಕಲಾಪದಿ ಸಡಗರದೊಳಿಹ ವರ ಸುಧನ್ವನ  ಬಂಧಿಸಿ ಕರೆದು ತರುವಂತೆ ಆಜ್ಞಾಪಿಸುತ್ತಾನೆ. ಮಂತ್ರಿ ಅರಸನನ್ನು ಬೇಡಿಕೊಳ್ಳುತ್ತಾನೆ. ಏಕವಚನ ವಿಖ್ಯಾತನೆಂದೆ ಅತಿಸಂಭೋಧಿಸಿ, ಅಂಗನೆಯ ಋತುಕಾಲವೆಂದು ತಡೆದಾತನಲ್ಲ. ಸಂಗರಕಂಜುವನೇ ನಿನ್ನ ವೀರ ಕುವರ? ಆದರೆ ರಾಜನಿಗೆ ಇದು  ಸಂದೇಹಕ್ಕೆ ಏಡೆಯಾಗುತ್ತದೆ.  ಆಗ ವಿಪ್ರರಾದ ಶಂಖಲಿಖಿತರನ್ನು ಕರೆಸಿ ಸಂದೇಹವನ್ನು ಭಿನ್ನವಿಸುತ್ತಾನೆ. ಆದರೆ ಅವರು ಅರಸನನ್ನು ಮೂದಲಿಸುತ್ತಾರೆ, ಏಕವಚನ ಈತಗುಂಟೆಂದು ಈ ರಾಜ್ಯದಲ್ಲ ಕಳೆದರೆ  ಇವನ ಗುಣವೀಗ ಬಯಲಾಯಿತು. ಇಂತಹ ವಚನ ಭ್ರಷ್ಟರಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ.  ಅರಸಾ ಕೊಡು ಎಮಗಪ್ಪಣೆ.  ಅರಸಾ ತನಯನ ಮೇಲಣಾಶೆಯಿಂದ ಮಾತು ತಪ್ಪಿದೆ ನೀನು. ಇನ್ನು ಚಂಪಕಾ ಪುರದೊಳಿಪ್ಪುದಿಲ್ಲ ನಾವು.
          
  ಈಗ ಅರಸ ಮಂತ್ರಿಗೆ ಕಟ್ಟಪ್ಪಣೆಯನ್ನು ಮಾಡಿಬಿಡುತ್ತಾನೆ. 

ಮಧುಮಾಧವಿ ಆದಿರಾಗದ ಪದ
           
ಹಾಕಿಸಿರೀತನ ತೈಲ ಕಟಾಹದಿ | ಸಾಕು ನಿಮ್ಮಯ ಬುದ್ಧಿ ಮಂತ್ರಿಯೀ ಕ್ಷಣದಿ || ೧ ||  ಮಗನಾದರೀತನು ಹಗೆಯರವರಿತು ತನ್ನ | ಮುಗುದೆಯೊಳೊಡಗೂಡಿ ಸೊಗಸಿಂದಿರುವನೆ || ೨ || ಇಷ್ಟು ದಿವಸ ನಮಗೇಕೆ ವಚನವೆಂದು | ಸೃಷ್ಟಿಯೊಳೆಲ್ಲರು ಅರಿತಿಹರು || ೩ || ಭ್ರಷ್ಟವಾಗುವುದಿನ್ನು ಉಳಿಸಿದರಿವನನ್ನು| ಕಟ್ತಿ ಕೈಕಾಲನ್ನು ಕಟಹದೊಳಿರಿಸು || ೪ ||

            ಇಲ್ಲಿ ಸುಧನ್ವ ಭಕ್ತಿ ಪರೀಕ್ಷೆಯಾಗುತ್ತದೆ.  ಹರಿಧ್ಯಾನದಿಂದ ಸ್ಥಿತಪ್ರಜ್ಞನಾಗಿ ತೈಲ ಕಟಾಹದಲ್ಲಿಸುಧನ್ವ ಕುಳಿತು ಬಿಡುತ್ತಾನೆ. ಇದನ್ನು ಕಂಡು ಶಂಕಲಿಖಿತರು ಹುಡುಗ ಶ್ರೀಶ ಪರಮ ಭಕ್ತನು ಬಿಡದೆ ದ್ರೋಹವು ಕೆಡಿಸಿತಲ್ಲವೆ ತಡೆಯದೆಮಗೆ ಎಂದು ಯೋಚಿಸಿ ತನುವಿನಾಶೆಯ ತ್ಯಜಿಸಿ ತೈಲಕಟಾಹಕ್ಕಿ ಧುಮುಕಿಬಿಡುತ್ತಾರೆ. ಕುವರನ ಸಂಗದಿ ಉಳಿದರು ಶಂಖಲಿಖಿತರು. ಸಭೆಯೇ ಬೆಕ್ಕಸ ಬೆರಗಾಗುತ್ತದೆ. ಹೀಗೆ ಹರಿಭಕ್ತಿ ಪಾರಮ್ಯದಲ್ಲಿ ಮಿಂದು ಸುಧನ್ವನು ಹೊಸ ಹುಮ್ಮಸ್ಸಿನಿಂದ ನಿರ್ಧಾರವನ್ನು ಮತ್ತಷ್ಟು ಸ್ಥಿರವಾಗಿಸಿ  ರಣರಂಗಕ್ಕೆ ಬರುತ್ತಾನೆ.
           
ಮುಂದಿನ ಪ್ರಧಾನ ಭಾಗ ಅರ್ಜುನ ಸುಧನ್ವರ ಕಾಳಗ.

ಶಂಕರಾಭರಣ ಮಟ್ಟೆ ತಾಳದ ಪದ
ಎಲವೊ ಹಂಸಕೇತ ಜಾತ ಕಲಹಕೆನ್ನೊಳು | ತಳುವುದೀಗ ನಿನ್ನ ಪಿತನ ಕಳುಹು ಭರದೊಳು ||
 ಕೊಲುವರಲ್ಲ ನಾವು ನಿನ್ನ ತರಳತನದಲಿ | ಸುಲಭದಿಂದ ಮನೆಗೆ ನಡೆ ವಿವೇಕದಿಂದಲಿ || ೧ ||  

ಅರ್ಜುನ ಹುಡುಗನ ಆತ್ಮಸ್ಥೈರ್ಯವನ್ನು ಕೆಣಕಿ ಕುಂದಿಸುವ ಪ್ರಯತ್ನ ಮಾಡುತ್ತಾನೆ. ಕೊಲುವರಲ್ಲ ನಾವು ಎಂದು ತನ್ನ ಹಿರಿಮೆಯನ್ನು ಪ್ರದರ್ಶಿಸುತ್ತಾನೆ. ವಿಚಲಿತನಾಗದ ಸುಧನ್ವನ ಉತ್ತರದ ಪದ ಹೀಗಿದೆ.

ಎಲವೊ ಪಾರ್ಥ ಜಗುಲಿ ಹಾರಿ ಗಗನ ಬಯಸಿಕೋ |  ಜಲಜನೇತ್ರನನ್ನು ಬೆಂಬಲಕೆ ಕರೆಸಿಕೋ ||
 ಸುಲಭವಲ್ಲ ಸಮರದಾಯಾಸ ಬೇಡವು | ತಳುವದಿಂದ ಪುರಕೆ ತೆರಳುವುದು ವಿವೇಕವು ||
          ಜಲಜ ನೇತ್ರನಾದ ಶ್ರೀಕೃಷ್ಣನನ್ನು ಕರೆಸುವಂತೆ ಸುಧನ್ವ ಹೇಳುತ್ತಾನೆ. ವೃಥಾ ಸಮಯಹಾಳು ಮಾಡದೇ ಹಿಂದಿರುಗಿ ಹೋಗು ಎಂಬಂತೆ ಲೇವಡಿಯಾಡುತ್ತಾನೆ. ಯುದ್ದ ಇನ್ನೂ ತೀವ್ರವಾಗುತ್ತದೆ. ಯುದ್ದದ ಸನ್ನಿವೇಶದ ಪದಗಳನ್ನು ಬಹಳ ಸುಂದರವಾಗಿ ಸರಳವಾಗಿ ಅರ್ಥವಾಗುವುಂತೆ ಚಿತ್ರಿಸಲಾಗಿದೆ. ಕಿರ್ರೆಂದು ಸ್ಯಂದನದ ಗಾಲಿಗಳ ಕೀಲುಗಳು ಫರ್ರೆಂದು ಕಳಚಿದವು, ಅಶ್ವಗಳು ಕೂಗಿದವು.
            ಅದ್ಭುತ ಪರಾಕ್ರಮಿ ವೀರ ಬಾಲಕ ಸುಧನ್ವನನ್ನು ಸೋಲಿಸುವುದು ಅರ್ಜುನನಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮಂತ್ರಾಸ್ತ್ರ ಪಯೋಗವನ್ನು ಆರಂಭಿಸುತ್ತಾನೆ. ಆದಕ್ಕೆ ಅಂಜದ ಸುಧನ್ವ ಬಾಣ ಪ್ರಯೋಗದಿಂದ ಅರ್ಜುನನ ಸಾರಥಿಯನ್ನು ಕೊಂದುಬಿಡುತ್ತಾನೆ.  ತರುಣನೆದುರು ಪಾರ್ಥನಿ ಸೋಲಿನ ಅನುಭವವೇ ಆಗಿಬಿಡುತ್ತದೆ. ಸಾರಥಿಯಿಲ್ಲದ ರಥವಾಯಿತು ಅರ್ಜುನನ ರಥ. ಸುಧನ್ವ ಮೂದಲಿಸುವ ಪದ ಹೀಗಿದೆ.

            ವಾರ್ಧಿಕ
ಗೌರಿಯರಸನ ಕೂಡೆ ಕಾದಿದ ಪರಾಕ್ರಮದ | ಸೌರಂಭಮಿಂತುಟೆ ನಿವಾತ ಕವಚರನಿರಿದ | ಗೌರವಮಿದೀಗಲೇ ಭೀಷ್ಮ ಕರ್ಣದ್ರೋಣ ಮಾದ್ರಪತಿ ಮೊದಲಾಗಿಹ || ಕೌರವ ಬಲದೊಳಖಿಲ ವೀರ ಭಟರಂ ಗೆಲ್ದ | ಪೌರುಷಮಿನಿತೆ ಸಾಕು ಬರಿದೆ ಬಳಲಿಸಬೇಡ | ಶೌರಿಯಂ ಕರೆಸೆನುತ ಕಣೆಗಳಂ ಕಡಿದೆಚ್ಚನಾ ಸುಧನ್ವಂನದನನು||

ಸಾರಥಿಯ ಸ್ಥಾನ ಬರಿದಾಗಿದೆ. ಶಿವನೊಡನೆ ಕಾದಿದ ಪರಾಕ್ರಮ, ನಿವಾತ ಕವಚರನ್ನು ಮಲಗಿಸಿದ ಶೌರ್ಯ ಭೀಷ್ಮ ಕರ್ಣಾದಿಗಳನ್ನು

ಸೋಲಿಸಿದ ಬಲ ಪೌರುಷ ಇಲ್ಲಿಗೇ  ಸಾಕು,  ಬರಿದೆ ಬಳಲದೆ ಶ್ರೀಕೃಷ್ಣನನ್ನು ಕರೆ.
            ಅರ್ಜುನನನ್ನು ಸೋಲಿಸುವ ಉದ್ದೇಶ ಸುಧನ್ವನಲ್ಲಿ ಇಲ್ಲ. ಬದಲಾಗಿ ಶ್ರೀಕೃಷ್ಣ ದರುಶನದ ಅದಮ್ಯ ಉತ್ಸಾಹ ಪಾರ್ಥನೊಡನೆಯ ಯುದ್ದವನ್ನು ಮೀರಿ ನಿಂತುಬಿಡುತ್ತದೆ. ಅದಕ್ಕಾಗಿ ಸಾರಥಿಯ ಸ್ಥಾನವನ್ನು ಬರಿದಾಗಿಸಿ ಭಗವಂತನ ಪೀಠವನ್ನು ಕಾದಿರಿಸುತ್ತಾನೆ. ಪ್ರತಿ ಹಂತದಲ್ಲೂ “ಕರೆ ಶ್ರೀಕೃಷ್ಣನನ್ನು” ಎಂದು ಕೃಷ್ಣನ ನೆನಪನ್ನು ಮಾಡುತ್ತಾನೆ. ಬಹುಶಃ ಸ್ವತಃ ಅರ್ಜುನನೂ ಶ್ರೀಕೃಷ್ಣನನ್ನು ಮರೆತನೋ ಎಂದು ಜ್ಞಾಪಿಸುವ ಕಾಯಕ ಸುಧನ್ವನದು.

          ಸಾರಥಿಯ ಮರಣದಿಂದ ಪಾರ್ಥ ಸೋಲಿನ ಮುಖವನ್ನು ಕಾಣುತ್ತಾನೆ. ಯಃಕಶ್ಚಿತ್ ಅಂಗೈಯಗಲದ ರಾಜ್ಯದ ಬೆರಳ ನೀಳದ ಕುವರನೆದುರು ಸೋಲಾಯಿತೇ? ಪಾರ್ಥ ಮರುಗಿ ಕೃಷ್ಣನನು ಕರೆಯತ್ತಾನೆ.  ಮತ್ತೆ ಇವನೊಳು ಕಾದುವ ಭಟರು ಧಾರುಣಿಯೊಳ್ಯಾರಿರಲ್ಲ, ವಾರಿಜಾಕ್ಷನೆ ಬಲ್ಲ ಯಾರಿಗೆ ಪೇಳುವೆ ನಿನ್ನ ಬಾಣವಾರಿಧಿ ತುಂಬಿದನಿವನು. ವೀರಾಧಿವೀರಗೆಲಿದ. ಸೇನೆಯನ್ನು ಯಮನೂರಿಗಟ್ಟಿದ, ಇವನಿಗೆ ಸರಿಮಿಗಿಲು ಯಾರು? ಈ ವಾರ್ತೆಯನ್ನು ಹಸ್ತಿನೆಗೆ ಅರುಹುವರು ಯಾರು?

            ಪಾರ್ಥನ ಕರೆ ಹಸ್ತಿನೆಯಲ್ಲಿದ್ದ ವಾಸುದೇವನ ಅರಿವಿಗೆ ಬರುತ್ತದೆ. ಕರೆಗೆ ಓಗೊಟ್ಟು ಸ್ವಶ್ಯಾಲಕನ ರಥಾಗ್ರಕೆ ಪೂರ್ಣ ಸ್ಕಂಧದಿ ಮುರಹರನು ತಾನಿಳಿದನು. ಪಾರ್ಥ ಮುರಹರನ ಪಾದಕ್ಕೆ ಸಾಷ್ಟಾಂಗವೆರಗುತ್ತಾನೆ.  ಹರಿ ಪಾರ್ಥನ ಮೈದಡವಿ ಕುಳ್ಳಿರಿಸಿ ಕುದುರೆಯ ವಾಘೆಯನ್ನು ಹಿಡಿಯುತ್ತಾನೆ.  ವರ ಸುಧನ್ವನು ಪಾರ್ಥ ಸಾರಥಿಯನ್ನು ಕಾಣುತ್ತಾನೆ. ಪುಳಕ ಗೊಳ್ಳುತ್ತಾನೆ.
            ಕೇದಾರಗೌಳ ಅಷ್ಟತಾಳ
            ವಾರಿಜಾಕ್ಷನೆ ನಿನ್ನ ಪಾದಕಾಣಬೇಕೆಂಬಾ | ತುರದೊಳಿರ್ದೆ ನಾನು || ಸೇರಿ ನರನೊಳಿಷ್ಟು ಯುದ್ಧಗೈದರು ನಿನ್ನ | ತೋರಿಸುವವರಾರಿನ್ನು ||  ಕಾಣದೆ ಬಳಲಿದುವರೆಗೆ ಧೇನುವು ತನ್ನ ಸೂನುವ ಹುಡುಕುವಂತೆ || ನೀನಿಲ್ಲಿಗೈತಂದು ಎನಗೆ ಕಾಣಿಸಿಕೊಂಡು | ದ್ದೇನುಪಕಾರ ಮತ್ತೆ ||

            ಜನನಿಯೊಳರಿಹಿದ ಭಾಷೇ ಇಂದು ಕೈಗೂಡಿತು.  ಹರಿಯದರ್ಶನವಾಯಿತು.  ಪರಮ ಸಾಯುಜ್ಯ ಪದವನ್ನು ಕಂಡುಕೊಂಡ ಸುಧನ್ವ ಪಾರ್ಥನಿಗೆ ಹೇಳುತ್ತಾನೆ.

            “ನರನೆ ನೀ ಕೇಳಾನು ನುಡಿದ      ಪ್ರತಿಜ್ಞೆಗೆ  ಪರಿಕಿಸು ಕೃಷ್ಣನನು  ಅರುಹು ಬೇಗ ದೊಳಿಂದು ಭಾಷೆ”   ಹೀಗೆ ಪಾರ್ಥನನ್ನು ಪ್ರತಿಜ್ಞಾಬದ್ಧನಾಗಿ ಯುದ್ಢ ಮಾಡುವಂತೆ ಪ್ರಚೋದಿಸುತ್ತಾನೆ.  ಪ್ರತಿಜ್ಞೆ ಎಂದೊಡನೆ ಪಾರ್ಥ ಕೆರಳುತ್ತಾನೆ.

            ರೂಢಿಯೊಳಗೆ ನಿನ್ನ ತಲೆಯ ಮೂರ್ಬಾಣದಿ ಗಾಢದಿಂದಿಳುಹುವೆನು | ಕೂಡದಿರಗ್ನಿಯ  ಹೋಗುವೆನೆಂದೆನುತಲಿ ನೋಡಿದಾತನನು|
          
  ಮೂರು ಬಾಣಗಳಿಂದ ಸುಧನ್ವನ ತಲೆ ಕತ್ತರಿಸಿಬಿಡುವೆನು, ಪಾರ್ಥನ ಪ್ರತಿಜ್ಞೆಯದು. ಸುಧನ್ವ ತನ್ನ ಹರಿಭಕ್ತಿಯನ್ನೆ ಅದಕ್ಕೆ ಪಣವಾಗಿರಿಸಿ ಮರು ಪ್ರತಿಜ್ಞೆಯನ್ನು ಗೈಯುತ್ತಾನೆ.  “ಸರ್ವಶಕ್ತಿಯೊಳೆಸೆದ ಮೂರು ಬಾಣಂಗಳಂ ನಡುವೆ ಖಂಡಿಸದಿರ್ದೊಡೇ  ಉರ್ವಿಯೊಳ್ ಪಾತಕಿಗಳಾಗಿರ್ದವರ ಗತಿಗಡರ್ವೆನೆಂದಾ”
            ಈರ್ವರ ಶಪಥ ಕಂಡು ಶ್ರೀಕೃಷ್ಣ ತಳಮಳಿಸುತ್ತಾನೆ. ಆಗ ಸುಧನ್ವ ಹೇಳುವ ಪದ ಹೀಗಿದೆ.
           
ಘಂಟಾರವ  : ಝಂಪೆ ತಾಳ
ಲೋಕ ನಾಯಕ ನೀನು| ಯಾಕೀ ಮಾತುಗಳೊರೆವೆ | ಸಾಕು ಬಲ್ಲೆನು ನೀ ಲೋಕೈಕನೆಂಬುದನು || ೧ ||  ಶೇಷ ಶಯನನೆ ನಿನ್ನ ಮೈದುನನಿಂದಿನಲಿ | ಪೋಷಿಸುವೆ ನೀಭರಿತ ತೋಷದೊಳಗೆನುತ || ೨ || ಅರಿತು ನಾ ಬಂದಿಹೆನು | ದೃಢ ದೊಳಿಂದಿಲಿ ನಿನ್ನ | ಚರಣ ಕಮಲಕೆ ಎನ್ನ | ಹರಣ ಗಾಣಿಕೆಯ || ೩ ||  ಮುನ್ನ ನಿನ್ನ ಕಟಾಕ್ಷವಿಲ್ಲದಿರೆ ರಣದಲ್ಲಿ | ಕರ್ಣಮುಖ್ಯರ ಗೆಲಿದ | ಕುನ್ನಿಯೇ ಇವನು ||೪|| ಅಳುಕಿದರೆ ನಾನಿನ್ನ ಚರಣ ಸೇವಕನಲ್ಲ | ತಳುವದಿಂದಿಗೆ ಕಾರ್ಯ ಪರಿಕಿಸೆಂದೆನುತ || ೫||

            ಶ್ರೀಕೃಷ್ಣನ ಸಂಧಿಗ್ಧತೆಗೆ ಪರಿಹಾರ್ಯವಾಗಿ ಈ ಪದ ಮೂಡಿ ಬರುತ್ತದೆ.  ಪಾರ್ಥನ ಎದುರಿನ ಸಮರವನ್ನು ಸುಧನ್ವ ಕಾಣುವ ದೃಷ್ಠಿಕೋನವನ್ನು ಇಲ್ಲಿ ಕಾಣಬಹುದು.  ಪ್ರಾಪಂಚಿಕ ವ್ಯವಹಾರಕ್ಕೆ ಅತೀತವಾಗಿ ಪರಿಗಣಿಸಿ ಭಗವಂತನ ಸಾನ್ನಿಧ್ಯದ ಪರಮ ಪದವನ್ನು ಗಳಿಸುವ ಸಮರವಾಗಿ ಇದನ್ನು ಕಾಣುತ್ತಾನೆ.  ಆದುದರಿಂದಲೇ ಭಗವಂತನ ಸಂದಿಗ್ಧವನ್ನು ಈ ರೀತಿಯಲ್ಲಿ ದೂರಮಾಡಲು ಪ್ರಯತ್ನಿಸುತ್ತಾನೆ.  ಪಾರ್ಥನಿಗೆ ಬೇಕಾದ ಲೌಕಿಕ ಜಯವನ್ನು ಅವನಿಗೆ ಕರುಣಿಸು, ಅಲೌಕಿಕವಾದ ನಿನ್ನ ಸಾನ್ನಿಧ್ಯದ ಜಯದ ಬಾಗಿಲನ್ನು ನನಗೋಸ್ಕರ ತೆಗೆದು ಆ ಲೋಕದ ಸ್ಥಾನವನ್ನು ಕಲ್ಪಿಸು.
           
            ಭಾಮಿನಿ
ಪೃಥ್ವಿಯೊಳ್ ಕೃಷ್ಣಾವತಾರ ದೊ | ಳುತ್ತಮರ ಪಾಲಿಸಿದ ಪುಣ್ಯವ | ನಿತ್ತ ಶ್ರೀಹರಿಯೊಡನೆ ಬಂದು ಸುಧನ್ವನಿಂತೆಂದ || ಚಿತ್ತವಿಸು ಎಲೆದೇವ ಈ | ಶರ ಕತ್ತರಿಸದಿರೆ ನಡುವೆ ಶ್ರೀಹರಿ | ಭೃತ್ಯರನು ಹರಿದಿವಸ ಕೊಂದಾ ದೋಷ ತನಗೆಂದ ||೧ ||

            ಪಾರ್ಥ ಶಪಥದಂತೆ ಮೂರು ಬಾಣಗಳನ್ನು ಮುಂದೆ ಪಾರ್ಥ ಪ್ರಯೋಗಿಸುತ್ತಾನೆ. ಶ್ರೀ ಕೃಷ್ಣ  ಆ ಬಾಣಗಳಲ್ಲಿ ವಿಷೇಷ ಶಕ್ತಿಯನ್ನು ಸಂಚಯನ ಗೊಳಿಸುತ್ತಾನೆ. ಗೋವರ್ಧನ ಗಿರಿಯನ್ನೆತ್ತಿ ಜಗವನ್ನು ರಕ್ಷಿಸಿದ ಪುಣ್ಯ ಶಕ್ತಿಯನ್ನು ಮೊದಲ ಬಾಣದಲ್ಲಿ ಸಂಚಯನಗೊಂಡರೆ,  ಸುಧನ್ವ ಅದನ್ನು ಖಂಡಿಸಿ ಆ ಸಂಚಯನವನ್ನು ಹೊಂದುವ ಶಪಥವನ್ನು ಮಾಡಿ ಪೂರೈಸಿಕೊಳ್ಳುತ್ತಾನೆ.  ಎರಡನೇ ಬಾಣದಲ್ಲಿ ಕೃಷ್ಣಾವತಾರದ ಪುಣ್ಯ ಸಂಚಯನವಾದರೆ ಕೊನೆಯ ಬಾಣದಲ್ಲಿ ರಾಮಾವತಾರದ ಪುಣ್ಯ ಆವಾಹನೆಯಾಗುತ್ತದೆ.  ಕೊನೆಯ ಬಾಣ ಖಂಡನೆಯಾದರೂ ಅದರಲ್ಲಿ ಸುಧನ್ವನ ಶಿರಸ್ಸು ಕತ್ತರಿಸಲ್ಪಡುತ್ತದೆ.        ಹೀಗೆ ಮೂರು ಬಾಣಗಳಲ್ಲಿ ಪಾರ್ಥ ಬಯಸಿದ್ದು ಪಾರ್ಥನಿಗೆ ಸುಧನ್ವ ಬಯಸಿದ್ದು ಸುಧನ್ವನಿಗೆ ಕಲ್ಪಿತವಾಗಿ ಸುಧನ್ವ ಮೋಕ್ಷ ಪ್ರಾಪ್ತಿಯಾಗುತ್ತದೆ.
          

  ಮಂಗಳಂ


           


           
           














Tuesday, October 13, 2015

ಹಕ್ಕು ಸ್ವಾಮ್ಯವೆಂಬ ಭೂತ


ನಮ್ಮಿಂದ ಅಪರಿಹಾರ್ಯವಾದ ದುರಿತಗಳು ಎದುರಾದಾಗ ಭಗವಂತನಿಗೆ ಶರಣಾಗುವುದು ಸ್ವಾಭಾವಿಕ. ಈ ದುರಿತ ಪರಿಹಾರಕ್ಕಾಗಿ   ಮಂತ್ರ ಅಥವಾ ಶ್ಲೋಕ ಪಾರಾಯಣವನ್ನು ಮಾಡುತ್ತೇವೆ. ಇದೊಂದು ಆತ್ಮ ತೃಪ್ತಿ. ಇದರಿಂದ ಬಸವಳಿದ ಜೀವನದಲ್ಲಿ ಕಿಂಚಿತ್ತಾದರೂ ಆತ್ಮವಿಶ್ವಾಸ ಗಳಿಸುವ ನಂಬಿಕೆ. ಹೀಗೆ ಮಂತ್ರ ಜಪವನ್ನು ಮಾಡುವಾಗ ಪ್ರತೀ ಮಂತ್ರಕ್ಕೆ ಒಂದು ಋಷಿ ಛಂದಸ್ಸು ಎಂಬುದಿದೆ. ಅದನ್ನು ಕಡ್ಡಾಯವಾಗಿ ಪಠಿಸಲೇ ಬೇಕು. ಇಲ್ಲವಾದರೆ ನಾವು ಗೈಯ್ಯುವ ಕರ್ಮದ ಸತ್ಫಲ ಸಿಗದೇ ಉದ್ದೇಶ ಸಿದ್ಧಿಯಾಗುವುದಿಲ್ಲ. ಗುರು ಮುಖೇನ ಮಂತ್ರೋಪದೇಶವಾದಲ್ಲಿ ಈ ಛಂದಸ್ಸಿನ ಬಗ್ಗೆ ತಿಳಿಯುವುದು ಸಾಧ್ಯವಾಗುತ್ತದೆ. ಏನು ಈ ಛಂದಸ್ಸು?

ಯಾವುದೇ ಮಂತ್ರಕ್ಕೂ  ದೃಷ್ಠಾರ ನಾಗಿ ಋಷಿ ಇರುತ್ತಾನೆ. ದೃಷ್ಠಾರ ಆ ಮಂತ್ರವನ್ನು ಪ್ರತ್ಯಕ್ಷೀಕರಿಸಿಕೊಂಡವನು.  ವಿಶ್ವಾಮಿತ್ರ ಗಾಯತ್ರಿಮಂತ್ರವನ್ನು ಪ್ರತ್ಯಕ್ಷೀಕರಿಸಿಕೊಂಡಹಾಗೆ,   ಆದರೆ ದೃಷ್ಠಾರ ಎಂದರೆ ಸೃಷ್ಟಿಕರ್ತನಲ್ಲ. ಕೇವಲ ಕಂಡುಕೊಂಡವನು ಎಂದರ್ಥ. ಮಂತ್ರಗಳು ಯಾರದೇ ಕೃತಿಯೂ ಅಲ್ಲ ಸೃಷ್ಟಿಯೂ ಅಲ್ಲ.  ಹಾಗಾಗಿ ಆ ಮಂತ್ರಗಳನ್ನು ಪಠಿಸುವ ಮೊದಲು ಮಂತ್ರದ ದೃಷ್ಟಾರನನ್ನು ಸ್ಮರಿಸುವುದೇ ಮಂತ್ರದ ಛಂದಸ್ಸು ಎಂದು ಹೇಳುವುದು.  ಇದನ್ನು ಪ್ರತೀ ಮಂತ್ರದ ಆರಂಭದಲ್ಲಿ ಪಠಿಸಿ,  ಮಂತ್ರದ ದೃಷ್ಠಾರರಾದಂತಹ ಋಷಿಗಳನ್ನು ಸ್ಮರಿಸುವುದು ಅವಶ್ಯ.  ಇದೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ ಇದ್ದ ಹಾಗೆ.  ಸನಾತನ ಧರ್ಮಾವಲಂಬಿಗಳಾಗಿ ಇದನ್ನು ಅನುಸರಿಸಿಕೊಂಡು ಬಂದಿರುವಲ್ಲಿ ನಮ್ಮ ಸಂಸ್ಕಾರ ಸಾಕ್ಷಿಯಾಗುತ್ತದೆ.  ಸನಾತನ ಧರ್ಮದಲ್ಲಿ ನಂಬಿಕೆ ಇರಿಸಿಕೊಂಡವನು ಇದಕ್ಕೆ ಬದ್ಧನಾಗಿ ಆತ್ಮ ವಂಚನೆ ಗೈಯದೆ ನಡೆದುಕೊಂಡಲ್ಲಿ ಅನುಸರಿಸಿದ ಕರ್ಮಾನುಷ್ಠಾನದಲ್ಲಿ ಇಷ್ಟಾರ್ಥ ನೆರವೇರುತ್ತದೆ ಎಂಬುದು ನಂಬಿಕೆ. ಪಠಿಸಿದ ಮಂತ್ರ ಜಪದಿಂದ ದುರಿತ ಪರಿಹಾರದ ಸಾಧನೆ ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೋ ಅಥವಾ ಆ ಮಾರ್ಗದಲ್ಲಿ ನಾವು ಗಮ್ಯವನ್ನು ಸೇರುತ್ತೇವೋ ಇಲ್ಲವೋ ಅದು ಬೇರೆ, ಆದರೆ ನಾವು ಗಮಿಸಿದಂತಹ ದಾರಿ ಎಷ್ಟು ಪರಿಶುದ್ದ ಎಂಬುದು ಆತ್ಮ ತೃಪ್ತಿಯ ಪ್ರಶ್ನೆಯಾಗಿಬಿಡುತ್ತದೆ. ದೃಷ್ಟಾರನಾದಂತಹ ಋಷಿಯನ್ನು ಸ್ಮರಿಸುವುದರಿಂದ ಆ ಮಟ್ಟಿಗೆ ನಾವು ಪೂರ್ಣ ಶುಭ್ರತೆಯನ್ನು ಹೊಂದಿ ನಮ್ಮ ಹಾದಿಯೂ ಪರಿಶುದ್ದತೆಯಿಂದ ಕೂಡಿರುತ್ತದೆ. ನಾವು ಪ್ರಾಮಾಣಿಕರು ಎಂಬ ಅತ್ಮತೃಪ್ತಿ ಇದ್ದಾಗ ಗಳಿಸಿದ ಸಿದ್ಧಿಯಲ್ಲಿ ಪರಿಪೂರ್ಣತೆ ಇರುತ್ತದೆ. ಇಲ್ಲವಾದರೆ ಪರರಿಂದ ಅಪಹರಿಸಿದ ವಸ್ತುವಿನಂತೆ ಅದು ಆತ್ಮ ವಂಚನೆಯನ್ನು ತೋರಿಸುತ್ತಾ ಇರುತ್ತದೆ.  ಅನಾದಿ ಕಾಲಾದಿಂದಲೇ ಹಕ್ಕುಸ್ವಾಮ್ಯ ಎಂಬುದು ನಮ್ಮ ಸಂಸ್ಕಾರದಲ್ಲಿ ಮಿಳಿತವಾಗಿದೆ ಎಂಬುದಕ್ಕೆ ಇದು ದೃಷ್ಟಾಂತ. ನಮಾ ಸನಾತನ ಧರ್ಮ ಸಂಸ್ಕಾರಗಳು ಇದಕ್ಕೆ ಪುರಾವೆಯನ್ನು ಒದಗಿಸುತ್ತಿವೆ.  ಅನಾದಿ ಕಾಲದಿಂದಲೇ ನಾವು  ಹಕ್ಕು ಸ್ವಾಮ್ಯ ಅಂದರೆ Copy Right ನ ಬಗ್ಗೆ ಆದರ ಮತ್ತು ಅರಿವಿದ್ದವರು ಎಂದು ಅರ್ಥ.  ಇಷ್ಟಾದರೂ ಇಂದು  ಹಕ್ಕು ಸ್ವಾಮ್ಯದ ಬಗ್ಗೆ ಹೇಳುವುದು ಅಪರಾಧ ಎಂದು ಪರಿಗಣಿತವಾಗುವುದಿದ್ದರೆ...  ನಾವು ಆ ಸಂಸ್ಕಾರದಿಂದ ದೂರವೇ ಇದ್ದೇವೆ ಎಂಬುದಕ್ಕೆ ನಿದರ್ಶನ. ಇಲ್ಲಿ  ತಾತ್ಪರ್ಯ ಇಲ್ಲಿ ಸಂಸ್ಕಾರ ಕ್ಕಿಂತಲೂ ಹೆಸರುಗಳಿಸುವುದೇ ಖ್ಯಾತಿಯ ಸ್ವಾರ್ಥವೇ  ಮುಖ್ಯವಾಗಿಬಿಡುತ್ತದೆ.

ಹಕ್ಕುಸ್ವಾಮ್ಯ ಏನು ಎಂಬುದನ್ನು  ಇತ್ತೀಚೆಗೆ ಸವಿವರವಾಗಿ ಲೇಖನ  ಒಂದರಲ್ಲಿ  ಯಕ್ಷಗಾನ ಕ್ಷೇತ್ರದಲ್ಲಿ - ಹಕ್ಕುಸ್ವಾಮ್ಯ ಅಥವಾ ಕೃತಿಸ್ವಾಮ್ಯ ತಕ್ಕ ಮಟ್ಟಿಗೆ ವಿಶದೀಕರಿಸಿರುವುದನ್ನು ಕಂಡು ಈ ಅನಿಸಿಕೆಗಳು ತುಂಬಿ ಬಂದಿದೆ.  ಈಗ ಯಕ್ಷಗಾನದಲ್ಲಿ ಅತ್ಯಂತ ಪ್ರಚಲಿತದಲ್ಲಿರುವ ವಿಚಾರಗಳಲ್ಲಿ ಇದೂ ಒಂದು. ದಾರಿಬದಿಯ ಜಾಹೀರಾತು ಕರಪತ್ರವನ್ನು ನೋಡಿರಬಹುದು. ಕೈಗೆ ಬಂದಂತೆ ಅದು ಎಲ್ಲೆಂದರಲ್ಲಿ ಎಸೆದುಬಿಡುತ್ತಾರೆ. ಅದರಂತೇ  ಅಂತರ್ಜಾಲದಲ್ಲಿ ಹರಿದಾಡುತ್ತಿದ್ದ ಯಕ್ಷಗಾನ ಧ್ವನಿತುಣುಕುಗಳು ಅಥವಾ ದೃಶ್ಯ ಗಳು ಹಲುವು ಸಲ ಮೌಲ್ಯವನ್ನು ಕಳೆದುಕೊಂಡಂತೆ ಭಾಸವಾಗಿದ್ದರೆ ಅದು ಅತಿಶಯವಲ್ಲ. ಆದರೆ ಇಂದು ಬಹಳಷ್ಟು ಹಂಚಿಕೆಗಳು ಮೂಲವನ್ನು ಸ್ಮರಿಸುವಲ್ಲಿ ಅಥವಾ ಅದನ್ನು ಗೌರವಿಸುವಲ್ಲಿ ಪ್ರಾಮಾಣಿಕತೆಯನ್ನು ತಕ್ಕಮಟ್ಟಿಗೆ ಮೆರೆಯುತ್ತಿದೆ ಎನ್ನಬಹುದು. 

ಅನಾದಿ ಕಾಲದಿಂದಲೂ ಈ ಬಗ್ಗೆ ಪ್ರಜ್ಞಾವಂತರಾಗಿರುವುದನ್ನು ಕಂಡುಕೊಂಡರೂ ಹಕ್ಕುಸ್ವಾಮ್ಯ ಗಂಟಲಲ್ಲಿ ಇಳಿಯದ ಅಗುಳಾಗಿದ್ದರೆ ಅದಕ್ಕೆ ನಮ್ಮ ಮನೋಭಾವದಲ್ಲಿ ಅಡಗಿದ ಸ್ವಾರ್ಥವೇ ಕಾರಣ. ಹೇಳಿ ಕೇಳೀ ಯಕ್ಷಗಾನದಲ್ಲಿ ಪರಂಪರೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವಾಗ,  ಸನಾತನ ಪರಂಪರೆಯೇ ಹಕ್ಕುಸ್ವಾಮ್ಯವನ್ನು ಗೌರವಿಸಿದೆ ಎಂದು ಹೇಳಿದರೆ ಅದು ಪಥ್ಯವಾಗಲಾರದು. ಯಾಕೆಂದರೆ ಅದು ಪರಂಪರೆಯನ್ನು ಪ್ರಶ್ನಿಸುವ ಮನೋಭಾವ.

ಯಾವುದೇ ಒಂದು ವಸ್ತುವನ್ನೋ ವಿಷಯವನ್ನೋ ಪರಭಾರೆ ಮಾಡುವಾಗ, ಅಲ್ಲಿಅದರಲ್ಲಿರುವ ಸ್ವಾಮ್ಯ ಅಥವ ಹಕ್ಕು ಕುಂಠಿತಗೊಳ್ಳುತ್ತದೆ. ಅಂತಹ ವಸ್ತುವನ್ನು ನೀಡುವುದಕ್ಕೆ ನಾವೆಷ್ಟು ಅರ್ಹರು ಎಂಬುದನ್ನು ಮೊದಲು ಪರಿಗಣಿಸಬೇಕು. ಇದು ಸಾರ್ವಜನಿಕ ಸೌಜನ್ಯವನ್ನು  ತೋರಿಸುತ್ತದೆ. ಯಾವುದೋ ವಿಶೇಷ ಕಾರ್ಯಕ್ರಮಕ್ಕೆ ನಮ್ಮ ಮನೆಗೆ ನೆರೆಮನೆಯಾತನ ಪಾತ್ರೆಯೋ ಮತ್ತೊಂದೊ ವಸ್ತುವನ್ನು ತಾತ್ಕಾಲಿಕ ಉಪಯೋಗಕ್ಕಾಗಿ ತರುತ್ತೇವೆ. ಆದರೆ ನಮ್ಮ ಹಕ್ಕು ಆ ವಸ್ತುವಿನಲ್ಲಿರುವುದು ಕೇವಲ ತಾತ್ಕಾಲಿಕವಾಗಿ ಮಾತ್ರ. ಆದರೆ ನಮ್ಮಲ್ಲಿಂದ ಇನ್ನೊಬ್ಬನಿಗೆ ಅದನ್ನು ಉಪಯೋಗಕ್ಕೆ ಕೊಡುವಾಗ ನೆರೆಮನೆಯಾತನ ಒಪ್ಪಿಗೆ ಅವಶ್ಯ. ಇಲ್ಲಿ ನಾವು ಅತಿಬುದ್ಧಿವಂತರಂತೆ ಆತನಿಗೆ ಅರಿವಿಲ್ಲದೆ ಉಪಯೋಗಕ್ಕೆ ಕೊಟ್ಟುಬಿಡಬಹುದು. ಆದರೆ ಅದು ಸೌಜನ್ಯತೆ ಎನಿಸಿಕೊಳ್ಳುವುದಿಲ್ಲ.

ಹಿಂದೆ ಒಂದು ಸಲ ಹೆಸರಾಂತ ಗಾಯಕರ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಕ್ಕೆ ಹೋಗಿದ್ದೆ. ಆಗ ಗಾಯಕ ಕಾರ್ಯಕ್ರಮದ ಆರಂಭದಲ್ಲೇ ರಾಗವೈವಿಧ್ಯಗಳ ಬಗ್ಗೆ ಹೇಳುತ್ತಾ ಇಂದು ಬಹಳಷ್ಟು ಕಲಾವಿದರು ಅಪರೂಪವಾದ ರಾಗಗಳನ್ನು ಸಾರ್ವಜನಿಕವಾಗಿ ಹಾಡುವುದಕ್ಕೆ ಭಯಪಡುವಂತಹ ವಾತಾವರಣವಿದೆ. ಹಾಗಾಗಿ ಕೇವಲ ಕೆಲವೇ ರಾಗಗಳಿಗೆ ಮಾತ್ರವೇ ಸಂಗೀತ ಕಛೇರಿ ಸೀಮಿತವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಅಂದರೆ ಸಭಿಕರು ಪ್ರಾಮಾಣಿಕರಾಗಿಲ್ಲದೇ ಇರುವುದು. ಎಷ್ಟೋ ರಾಗಗಳನ್ನು ಪ್ರಯತ್ನದಿಂದ ಕಷ್ಟಪಟ್ಟು ಅಭ್ಯಾಸಮಾಡಿ ಅವಿರತ ಸಾಧನೆಯಿಂದ ಅದರಲ್ಲಿ ಪಾಂಡಿತ್ಯವನ್ನು ಪಡೆದಿರಬಹುದು. ಆದರೆ ಆತನ ಪಾಂಡಿತ್ಯ ಕೇವಲ ಆತನ ಅಂತರಂಗ ತೃಪ್ತಿಗೆ ಮಾತ್ರವೇ ಸೀಮಿತವಾಗಿಬಿಡುತ್ತದೆ. ಅದರಿಂದ ಸಾರ್ವಜನಿಕವಾಗಿ ಯಾವ ಅನುಭವವೂ ಸಿಗುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ಅಪ್ರಾಮಾಣಿಕತೆ.

ಒಬ್ಬ ಗಾಯಕ ಜೀವಿತ ಸಾಧನೆಯ ಒಂದು ರಾಗವನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಇಟ್ಟ ನೆಂದಾದರೆ ಆತ ಅಮೂಲ್ಯವಾದ ನಿಧಿಯೊಂದನ್ನು ಹರಿಸಿಬಿಟ್ಟು ಕಳೆದುಕೊಂಡು ಬಿಟ್ಟ ಎಂದೇ ಹೇಳಬೇಕು. ಕಾರಣ ಅವನಿಗಿಂತಲೂ ಸುತ್ತಲಿನ ಮಾಧ್ಯಮ ಆತನಿಗೆ ಅರಿವಿಲ್ಲದೇ ಅದರಲ್ಲಿ ತನ್ನ ಸ್ವಾರ್ಥವನ್ನು ಸಾಧಿಸಿಯಾಗಿರುತ್ತದೆ. ಹಾಗಾಗಿ ಕಾರ್ಯಕ್ರಮದ ಆರಂಭದಲ್ಲೇ ಗಾಯಕ ವಿನಮ್ರವಾಗಿ ಅರಿಕೆ ಮಾಡಿಕೊಳ್ಳುತ್ತಾನೆ ದಯವಿಟ್ಟು ಧ್ವನಿಮುದ್ರಿಸಬೇಡಿ.  ಮಾತ್ರವಲ್ಲ ಕಾರ್ಯಕ್ರಮದ ಸಂಘಟಕರೂ ಸಭಿಕರಲ್ಲಿ ಹದ್ದಿನ ಕಣ್ಣಿಟ್ಟು ನೋಡುತ್ತಾರೆ . ಯಾರಾದರೂ ಮುದ್ರಿಸಿಕೊಳ್ಳುತ್ತಿದ್ದಾರೋ ಎಂದು.  ಯಾಕೆಂದರೆ ಅಲ್ಲಿ ಹಾಡಿದ ಹಾಡು ಅಥವಾ ಪ್ರದರ್ಶಿತವಾದ ಸಂಗೀತ ಸೃಷ್ಟಿ ಮತ್ತೋಂದು ಕಡೆಯಲ್ಲಿ ಸಿ. ಡಿ. ರೂಪದಲ್ಲಿ ಹೊರಬಂದು ಮನುಷ್ಯನ ಹಣದ ತೆವಲಿಗೆ ಸಾಕ್ಷಿಯಾಗುತ್ತದೆ.  ಇಲ್ಲಿ ಸಂಗೀತಗಾರ ಕಲಾವಿದ ಇಂಗು ತಿಂದ ಮಂಗನಂತಾಗುವುದು ಮಾತ್ರವಲ್ಲ ಸಂಘಟಕರೂ ಕೂಡ ವಂಚನೆಗೆ ಒಳಗಾಗುತ್ತಾರೆ. ನಮ್ಮ ಮನೆಯಲ್ಲಿ ಮಾಡಿದ ಅಡುಗೆ ಇನ್ನೊಂದು ಮನೆಯಲ್ಲಿ ಸಂತರ್ಪಣೆಯಾಗುವುದಿದ್ದರೆ ಯಾರಿಗೆ ದುಃಖವಾಗುವುದಿಲ್ಲ ಹೇಳಿ? ಹಾಗಾಗಿ ಗಾಯಕ ಹೊಟ್ಟೆಪಾಡಿಗೆ ಎಷ್ಟು ಬೇಕೋ ಅಷ್ಟನ್ನೇ ಹಾಡುತ್ತಾನೆ ಹೊರತು ಆತ್ಮತೃಪ್ತಿಗೆ ಹಾಡುವುದಿಲ್ಲ. ಇಷ್ಟಾದರೂ ಕಲಾವಿದ ಹಕ್ಕು ಸ್ವಾಮ್ಯದ ಬಗ್ಗೆ ಮಾತನಾಡುತ್ತಾನೆ ಎಂದಾದರೆ ಆತ ಅಪರಾಧಿ ಮಾತ್ರವಲ್ಲ ಕಲೆಗೆ ವಿರೋಧಿಯಾಗಿ ಚಿತ್ರಿಸಲ್ಪಡುತ್ತಾನೆ.  ಇದಕ್ಕೆ ಕಾರಣ ಕಲೆಯ ಮೇಲಿನ ಕುರುಡು ಅಭಿಮಾನ ಮತ್ತೇನೂ ಅಲ್ಲ.
ಯಕ್ಷಗಾನ ಕಾರ್ಯಕ್ರಮವಾಗುತ್ತದೆ. ಸಂಘಟಕ ಅದೆಷ್ಟೊ ಶ್ರಮವಹಿಸಿ ಕಾರ್ಯಕ್ರಮ ರೂಪಿಸಿಬಿಡುತ್ತಾನೆ. ಅಷ್ಟರಲ್ಲಿ ಆತ ಅನುಭವಿಸುವ ಮಾನಸಿಕ ಒತ್ತಡ ದೈಹಿಕ ಶ್ರಮ ಉದ್ದೇಶ ಯಾವುದೇ ಆಗಿರಲಿ ಅಲ್ಲಿ ಆತ ಮಾಡುತ್ತಿರುವ ಕ್ರಿಯೆಯ ಪ್ರಧಾನ. ಇಂದು ಯಕ್ಷಗಾನದಂತಹ ಕಾರ್ಯಕ್ರಮದಲ್ಲಿ ಒಳ ಹೊರಗಿನ ರಾಜಕೀಯವೇ ಬಹಳಷ್ಟು ಒತ್ತಡಕ್ಕೆ ಕಾರಣವಾಗುತ್ತದೆ.  ಬರಬೇಕಾದ ಕಲಾವಿದರೂ ಬೇಕೆಂದೇ ಕೈಕೊಡುವುದು. ಅಥವಾ ಆತನನ್ನು ಹೋಗದಂತೆ ವಶೀಲಿ ಮಾಡುವುದು ಹೀಗೆ ತೊಂದರೆಗಳಿಗೆಲ್ಲ ತಲೆಕೊಟ್ಟು ಆತ ಒಂದು ಕಾರ್ಯಕ್ರಮ ಮಾಡಿದ.  ಇಲ್ಲಿ ಆತನ ಪರಿಶ್ರಮದ ಫಲ ಪ್ರಾಪ್ತಿ ಎಷ್ಟೋ ಅದು ಬೇರೆ. ಆದರೆ ಆ ಕಾರ್ಯಕ್ರಮವನ್ನು ಮುದ್ರಿಸಿ ಜಾಲದಲ್ಲಿ ಹರಿಯಬಿಡುವಾಗ ಆತನ ಪರಿಶ್ರಮವನ್ನು ಸ್ಮರಿಸಬೇಕಾಗುತ್ತದೆ. ಆತನಿಂದ ಅದಕ್ಕೆ ಮೌಖಿಕ ಅನುಮತಿಯನ್ನಾದರೂ ಪಡೆಯಬೇಕಾಗುತ್ತದೆ. ಕಲೆಯ ಮೇಲಿನ ಪ್ರೀತಿಯಿಂದ ಅಷ್ಟು ಮಾಡುವುದು ಅನಿವಾರ್ಯ. ಇಲ್ಲಿ ಪ್ರೀತಿ ಅಭಿಮಾನ ಎಂಬುದು ಎರಡು ಕಡೆಯಲ್ಲೂ ಗಮನಾರ್ಹವಾಗಿಬಿಡುತ್ತದೆ.  ಇದು ಮೇಲೆ ಹೇಳಿದ ಪ್ರಾಮಾಣಿಕತೆ ಸಂಸ್ಕಾರಕ್ಕೆ ಅನುಗುಣವಾಗಿರುತ್ತದೆ. ಅದರೆ ಇದಕ್ಕೆ ಬದಲಾಗಿ ಮಹದುಪಾಕರ ಮಾಡಿದಂತೆ ಇದರಲ್ಲಿ ಯಾವುದೇ ಹಕ್ಕು ಸ್ವಾಮ್ಯ ಇಲ್ಲ ಎಂದು ಸಾರುವುದು ಬೊಗಸೆಯಲ್ಲಿ ಹಿಡಿದ ನೀರಿನಲ್ಲಿ ತಮ್ಮ ಹಕ್ಕು ಸ್ಥಾಪಿಸಿದಂತೇ  ಆಗುತ್ತದೆ.

ಒಂದು ವಸ್ತುವಿನ ಮೌಲ್ಯ ಎಂಬುದು ನಿರ್ಧಾರವಾಗುವುದು ಅದರ ಬೇಡಿಕೆಗೆ ಅನುಸಾರವಾಗಿ. ಇದು ವ್ಯಾವಹಾರಿಕ ಪ್ರಪಂಚದ ನೀತಿ. ನಾವು ಕಷ್ಟ ಪಟ್ಟು ಸಾಧಿಸಿ ಕೊಂಡು ತಂದ ವಸ್ತು ಒಂದರ ಮೌಲ್ಯವನ್ನು ನಾವು ದೊಡ್ಡದಾಗಿ ಭಾವಿಸುವಾಗ ಅದೇ ವಸ್ತು ಹೊರಗೆ ಉಚಿತವಾಗಿ ಬಿಕರಿಯಾಗುವಾಗ ಮೌಲ್ಯಧಾರಣೆ ಮಾಡಿದ ನಮ್ಮ ಮನಸ್ಸಿಗೆ ಹೇಗಾಗಬೇಡ. ಒಂದು ವಸ್ತುವಿನ ಅದರಲ್ಲು ಕಲೆಯ ಮೌಲ್ಯ ಅಧಿಕವಾಗುವುದು ಅದನ್ನು ಗೌರವಿಸುವಲ್ಲಿ ಮಾತ್ರ. ಅದನ್ನು ಗೌರವಿಸುವವನು ಅದಕ್ಕೆ ಮೌಲ್ಯವನ್ನು ಕೊಟ್ಟೇ ಕೊಡುತ್ತಾನೆ. ಅದನ್ನು ವಾಮ ಮಾರ್ಗಾ ವ್ಯವಹಾರಕ್ಕೆ ಆತ ಪ್ರಚೋದಿಸುತ್ತಿದ್ದಾನೆ ಎಂದಾದರೆ ಖಂಡಿತವಾಗಿ ಆತನಿಗೆ ಆ ಕಲೆಯಲ್ಲಿ ಗೌರವ ಇಲ್ಲವೆಂದೇ ಪರಿಗಣಿಸಲ್ಪಡುತ್ತದೆ. ಇದು ಸಾಮಾನ್ಯ ಜ್ಞಾನ. ಅತ್ಯಮೂಲ್ಯ ಪುಸ್ತಕವೊಂದಕ್ಕೆ ಬೇಡಿಕೆ ಇರುವುದನ್ನು ಪರಿಗಣಿಸಿ ಅವಿದ್ಯಾವಂತ ವರ್ತಕ ತನ್ನ ಅಂಗಡಿಯಲ್ಲಿ ಅದನ್ನು ಮಾರಾಟಕ್ಕೆ ಇಡುತ್ತಾನೆ. ಆದರೆ ಅವನಿಗೆ ಅದರ ನಿಜವಾದ ಮೌಲ್ಯ ತಿಳಿದಿರುವುದಿಲ್ಲ ಕೇವಲ ವ್ಯವಹಾರದ ಲಾಭ ನಷ್ಟ ಲೆಕ್ಕಾಚಾರದ ಪರಿಧಿಯ ಮೌಲ್ಯ. ಆದರೆ ಕೊಂಡುಕೊಳ್ಳುವವನಿಗೆ ಮತ್ತು ಅದನ್ನು ಬರೆದು ಪ್ರಕಟಿಸಿದವನಿಗೆ ಅದರ ಮೌಲ್ಯದ ಅರಿವಿರುತ್ತದೆ. ಈ ಎರಡು ಮನೋಭಾವದ ನಡುವೆ ಲಾಭಮಾಡುವ ಸ್ವಾರ್ಥವಷ್ಟೆ ಅಂಗಡಿಯ ವರ್ತಕನಿಗಿರುತ್ತದೆ. ಆದರೆ ಇಲ್ಲಿ ಸ್ವಾರ್ಥದ ರೂಪಗಳು ಹಲವಿದೆ.
ಅನುಮತಿಯಿಲ್ಲದೇ ತೆಗೆದುಕೊಳ್ಳಬಹುದಾದ ವಸ್ತುವಿದ್ದರೆ ಅದು ಉಚ್ಚಿಷ್ಟ ಅಂದರೆ ಎಂಜಲು ಮಾತ್ರ. ಉಂಡು ಎಸೆದ ಎಲೆಯಿಂದ ಅಲೆಮಾರಿ ಹೆಕ್ಕಿ ತಿನ್ನುವಾಗ ಯಾರ ಅನುಮತಿಯನ್ನು ಪಡೆಯುವುದಿಲ್ಲ. ಬದಲಾಗಿ ಸುತ್ತಲಿದ್ದ ಹಂದಿನಾಯಿಗಳೊಂದಿಗೆ ತನ್ನ ಹಕ್ಕಿಗಾಗಿ ಹೊರಾಡಬೇಕಾಗುತ್ತದೆ. ವಿಚಿತ್ರವೆಂದರೆ ಇಂದು ಎಂಜಲೆಲೆಯಲ್ಲೂ ಹಕ್ಕು ಸ್ಥಾಪಿಸಲ್ಪಡುವುದನ್ನು ಕಾಣಬಹುದು. ಅದಕ್ಕೆ ಛತ್ರದ ಅಥವ ಹೋಟೆಲಿನ ಹಿಂಬಾಗಿಲ ದರ್ಶನವನ್ನು ಮಾಡಬೇಕು. ಇಷ್ಟಿದ್ದರೂ ಇಂದು ಹಕ್ಕು ಸ್ವಾಮ್ಯದ ಬಗ್ಗೆ ಹೇಳುವಾಗ ಆತನನ್ನು ಸಮಾಜ ವಿರೋಧಿಯಂತೆ ಕಾಣಲಾಗುತ್ತದೆ. ಕಲೆಗೆ ಮಾರಕನೆಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಇದು ಮೇಲೆ ಹೇಳಿದ ಉನ್ನತ ಸಂಸ್ಕಾರವನ್ನು ಹೀಯಾಳಿಸಿದಂತೆ ಅಲ್ಲವೇ?
ಕಲೆಯ ಮೇಲೆ ಅಭಿಮಾನ ಇರಬೇಕು. ಆದರೆ ಅದು ಮತ್ತೊಬ್ಬನ ಶ್ರಮದ ಮೇಲೆ ಕಟ್ಟುವ ಗೋರಿಯಾಗಕೂಡದು.


Monday, October 5, 2015

ಯಕ್ಷ ಸರಣಿಯ ಒಂದು ದಿನ

ಕೀಲಾರು ಪ್ರತಿಷ್ಠಾನದ ರಜತಮಹೋತ್ಸವದ ಅಂಗವಾಗಿ ಸರಣಿ ತಾಳಮದ್ದಲೆ ಆಯೋಜನೆಯ ಸುದ್ದಿ ಸಿಕ್ಕಿದಾಗಲೇ ನಿರೀಕ್ಷೆಗಳು ಮೊಳಕೆಯೊಡೆದಿದ್ದವು. ಆ ಸರಣಿಯಲ್ಲಿ ಒಂದು ತುಣುಕಾದರೂ ಬೆಂಗಳೂರಿಗೆ ಚಿಮ್ಮದೇ ಇರಲಾರದು.  ಅದರಂತೇ ಬಹು ನಿರೀಕ್ಷಿತ ತಾಳ ಮದ್ದಲೆ ಬೆಂಗಳೂರಿನ ಪುರಭವನದಲ್ಲಿ ನಡೆದೇ ಬಿಟ್ಟಿತು. ಅಂಗದ ಸಂಧಾನ ಮತ್ತು ಕರ್ಣ ಪರ್ವ. ಯಕ್ಷಗಾನದಲ್ಲಿ ಬಹಳ ಜನಪ್ರಿಯ ಪ್ರಸಂಗಗಳು. ಆಯೋಜಕರ ಯೋಜನೆಯಂತೆ ಸಹಜವಾಗಿ ಪ್ರಸ್ತುತ ಯಕ್ಷಗಾನ ರಂಗದ ಬಹುದೊಡ್ಡ ಕಲಾವಿದರ ಸಮೂಹವೇ ಇದರಲ್ಲಿ ಭಾಗಿಯಾಗುವ ನಿರೀಕ್ಷೆಯೂ ಸುಳ್ಳಾಗಲಿಲ್ಲ.
ಹೊಳ್ಳಣ್ಣನ ಸ್ತುತಿ ಪದ್ಯದ ನಂತರ ಶಂಕರಣ್ಣನ ಚೆಂಡೆಯ ಪೀಠಿಕೆ ಅಚ್ಚುಕಟ್ಟಾಗಿ ಮೂಡಿ ಬಂದರೆ ಔಪಚಾರಿಕತೆಯ ವ್ಯರ್ಥ ಕಾರ್ಯಕ್ರಮವಾದ ಸಭಾಕಾರ್ಯಕ್ರಮದ ರಗಳೆ ಇಲ್ಲಿರಲಿಲ್ಲ. ಆರಂಭದಲ್ಲಿ ವಾಸುದೇವ ರಂಗ ಭಟ್ಟರಿಂದ ಅತ್ಯಂತ ಚೊಕ್ಕ ಸುಂದರ ಪ್ರಸ್ತಾವಿತ ಮಾತುಗಳು. ಆನಂತರ, ದೀಪ ಜ್ವಲನ ಇಷ್ಟಕ್ಕೇ ಸೀಮಿತಗೊಳಿಸಿ ಅಂಬುರುದಳನೇತ್ರೆ ರಂಗದಲ್ಲಿ ಅರಳಿತು.
ಅಂಗದಸಂಧಾನದ ಉಳಿದೆಲ್ಲ ಭಾಗವನ್ನು ಬಿಟ್ಟು ಅತಿ ಮುಖ್ಯವಾದ ಅಂಗದ ಪ್ರಹಸ್ತ ಸಂಭಾಷಣೆಗಷ್ಟೇ ಪ್ರಸಂಗವನ್ನು ಸೀಮಿತಗೊಳಿಸಲಾಯಿತು. ಅಂಗದನಾಗಿ ಶ್ರೀ ವಾಸುದೇವ ರಂಗ ಭಟ್ಟರು ಸಮಕಾಲೀನ ಯುವ ಪ್ರತಿಭಾವಂತರು, ಪ್ರಹಸ್ತನಾಗಿ ಹಿರಿಯ ಕಲಾವಿದ  ವಾಗ್ಮಿ ಲೇಖಕ ಶ್ರೀ ಮೂಡಂಬೈಲು ಗೋಪಾಲ ಕೃಷ್ಣ ಶಾಸ್ತ್ರಿಗಳು ಭಾಗವಹಿಸಿದರೆ, ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಮದ್ದಲೆ ಶ್ರೀ ಚೈತನ್ಯ ಕೃಷ್ಣ ಪದ್ಯಾಣ, ಚೆಂಡೆ ಪದ್ಯಾಣ ಶ್ರೀ ಶಂಕರನಾರಾಯಣ ಭಟ್ ಭಾಗವಹಿಸಿದರು.
ಕೇವಲ ಎರಡು ಪಾತ್ರಕ್ಕೇ ಪ್ರಸಂಗವನ್ನು ಸೀಮಿತಗೊಳಿಸಿದರೂ ಸಹಜವಾಗಿ ಎರಡು ಎರಡುವರೆ ಘಂಟೆಗೆ ಸೀಮಿತಗೊಳ್ಳಬೇಕಾದ ಪ್ರಸಂಗ ಲಂಬಿಸಿ ಮೂರುವರೆ ತಾಸು ಎಳೆದು ಹೋಯಿತು. ಕೇವಲ ಇಬ್ಬರ ವಾಕ್ಚಾತುರ್ಯದಲ್ಲಿ ಮೂರುವರೆ ಘಂಟೆ ಎಳೆಯುದುವುದು ನಿಜಕ್ಕೂ ಶ್ಲಾಘಿಸಬೇಕಾದರೂ ಇದು ಅತಿಯಾದದ್ದು ಮಾತ್ರ ಸುಳ್ಳಲ್ಲ. ಷಡ್ರಸ ಭೋಜನದ ಮೊದಲು ಉಪಾಹಾರ ಸೇವಿಸಿದಂತೆ ನಂತರ ಷಡ್ರಸದ ರುಚಿ ಸವಿಯುವ ಸಾಮಾರ್ಥ್ಯ ಮತ್ತು ಸಮಯ ಮನಸ್ಸಿಗೆ ಇರಲಿಲ್ಲ. ಇಬ್ಬರೂ ತಂತಮ್ಮ ಕುಶಲತೆಯನ್ನು ಸುಂದರವಾಗಿ ಸಾದರ ಪಡಿಸಿದರು ಅದು ಆ ಸಮಯದಲ್ಲಿ ಅಪ್ರಸ್ತುತವಾಗಿ ಸಮಯ ಸರಿದೇ ಬಿಟ್ಟಿತು. ಆದರೂ ಸಮಯ ಸರಿದದ್ದು ಅರಿವಿಗೆ ಬಂದದ್ದು ಮನಸ್ಸು ತುಂಬಿದಂತೆ ಹೊಟ್ಟೆ ಖಾಲಿಯಾದಾಗ.  ಆವಾಗ ಅನ್ನಿಸಿದ್ದು ಪ್ರಸಂಗವನ್ನು ಸ್ವಲ್ಪ ಮಟ್ಟಿಗೆ ಹಿಡಿದಿಡಬಹುದಿತ್ತು. ತಾಳ ಮದ್ದಲೆ ಎಂದರೆ ಅದು ಕೇವಲ ಚರ್ಚಾ ಕೂಟವಲ್ಲ ಅದರಲ್ಲಿ ಇನ್ನೂ ವಿಚಾರಗಳು ಹಲವಿದೆ. ಆದರೂ ಪರವಾಗಿಲ್ಲ ಅಂಗದ ಸಂಧಾನ ಯಶಸ್ವಿ ಎನ್ನಬಹುದು. ಹಿಮ್ಮೇಳ ಸುಶ್ರಾವ್ಯವಾಗಿತ್ತು, ಕೆಲವು ಪದ ಕೇಳುವಾಗ ಬಲಿಪ್ಪರ ಹೊಳ್ಳರ ದ್ವಂದ್ವದ  ಹಳೆಯ ತಾಳಮದ್ದಲೆಯೊಂದು ನೆನಪಿಗೆ ಬಂದದ್ದು ಸುಳ್ಳಲ್ಲ.

ಮದ್ದಲೆಯಲ್ಲಿ ಯಕ್ಷಗಾನದ ಭರವಸೆಯ ಕಲಾವಿದ ಚೈತನ್ಯ ಕೃಷ್ಣ ಉತ್ತಮ ಪ್ರತಿಭಾವಂತ ಎರಡು ಮಾತಿಲ್ಲ. ಹಾಗೆ ನೋಡಿದರೆ ಪ್ರಸ್ತುತ ಯಕ್ಷಗಾನದಲ್ಲಿ ಮದ್ದಲೆವಾದನಕ್ಕೆ ಯುವ ಪ್ರತಿಭಾವಂತರ ದಂಡೇ ಇದೆ ಎನ್ನಬಹುದು. ಇದಕ್ಕೆ ಸಾಕ್ಷಿಯಾಗುವಂತೆ ನಿನ್ನೆಯ ತಾಳಮದ್ದಲೆಯ ಹಿಮ್ಮೇಳ ಮೇಳವಿಸಿತ್ತು. ಆದರೂ ಮದ್ದಲೆಯಲ್ಲಿ ಸಂಗೀತದ ಪೆಟ್ಟುಗಳೇ ಕೇಳಿಬಂದು ಶುದ್ದ ಯಕ್ಷಗಾನದ ಮಟ್ಟುಗಳು ಬಹಳ ಅಪರೂಪವಾಗಿತ್ತು. ಕೇಳುವುದಕ್ಕೆ ಅನುಭವಿಸುವುದಕ್ಕೆ ಸುಂದರವಾಗಿ ರಂಜನೀಯ ಎನಿಸಿದರೂ ಯಕ್ಷಗಾನದ ಮಟ್ಟುಗಳೂ ಅವಶ್ಯವೇ ತಾನೇ.  ಹಾಗಾಗಿ ಎರಡು ಮೇಳವಿಸಿ ಒಟ್ಟಾಗಿ ಅನುಭವಿಸುವಂತಾದರೂ ಆಗಬೇಕು. ಇಲ್ಲವಾದರೆ ಇದನ್ನು ಅನುಭವಿಸುವಲ್ಲಿ ಕೆಲವೊಮ್ಮೆ ತ್ರಾಸವಾಗಿಬಿಡುತ್ತದೆ.  ಇದು ನನ್ನ ಅನುಭವ.
ಯಕ್ಷಗಾನದ ಆಟವಾಗಲೀ ಕೂಟವಾಗಲಿ ಕರ್ಣ ಪರ್ವ ಪ್ರಸಂಗ ಒಂದು ಜನಪ್ರಿಯ ಪ್ರಸಂಗ ಎಂಬುದರಲ್ಲಿ ಅನುಮಾನವಿಲ್ಲ. ’ಕರ್ಣ ಪರ್ವ’ ’ವಾಲೀ ಮೋಕ್ಷ’ ಇದು ಪ್ರಸಂಗ ಕೇಳಿದಾಗಲೇ ಅರ್ಥಧಾರಿಗಳು ಕಲಾವಿದರು ನಿಟ್ಟು ಸಿರುಬಿಡುತ್ತಾರೆ.  ಆದರೂ ಇಲ್ಲಿ ಪ್ರೇಕ್ಷಕ ತುದಿಗಾಲಲ್ಲಿ ಕಾದು ಕುಳಿತದ್ದು ಪ್ರಸಂಗದ ಜನಪ್ರಿಯತೆಗೆ ಸಾಕ್ಷಿ. ಎಲ್ಲ ಸರಕುಗಳನ್ನು ತುಂಬಿಸಿಕೊಂಡ ಈ ಪ್ರಸಂಗ ಆರಂಭದಲ್ಲೇ ಮೈಕ್ ಹೆದರಿ ಕಂಗೆಟ್ಟದ್ದು ಇರುಸು ಮುರುಸಾಗುವಂತೆ ಆದರೂ ನಂತರ ಎಲ್ಲರೂ ಹೊಂದಿಸಿಕೊಂಡರು ಎನ್ನಬೇಕು. ಈ ಪ್ರಸಂಗದ ಮಧ್ಯೆ ಮೈಕ್ ಹಲವು ಬಾರಿ ತನ್ನ ಅಸ್ತಿತ್ವವನ್ನು ಸಾರಿ ಹೇಳುತ್ತಿತ್ತು. ಅದರ ಮೇಲ್ವಿಚಾರಣೆಯ ಬಗ್ಗೆ ತುಸೂ ಯೋಚಿಸುವ ಹಾಗಾಯಿತು. ಇದೆಲ್ಲ ಒಂದು ಕಾರ್ಯಕ್ರಮದಲ್ಲಿ ಸಹಜವೇ ...ಹಾಗಾಗಿ ಇತ್ತಲು ಕರ್ಣಾರ್ಜುನರಿಗೆ ಹತ್ತಿತು ಎನುವಾಗ ಪ್ರೇಕ್ಷಕ ಮತ್ತೆ ಆಕಡೆಗೆ ತಿರುಗಿಬಿಟ್ಟ.

ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್ ಮತ್ತು ಪುತ್ತಿಗೆ ರಘುರಾಮ ಹೊಳ್ಳರ ದ್ವಂದ್ವ ಭಾಗವತಿಕೆ ಮೆರುಗನ್ನು ತರುವಲ್ಲಿ ಉತ್ತಮ ಪ್ರಯತ್ನವನ್ನೇ ಮಾಡಿತು.  ಮದ್ದಲೆಯಲ್ಲಿ ಮತ್ತೊಬ್ಬ ಯುವ ಪ್ರತಿಭೆ ಶ್ರೀ ಕಡಬ ವಿನಯ ಆಚಾರ್ಯ ಉತ್ತಮ ಜತೆಗಾರಿಕೆಯನ್ನು ನೀಡಿತು. ಮೈಕ್ ನ ಕಾರಣದಿಂದಲೋ ಏನೋ ಚೆಂಡೆ ನಿಜಸ್ವರವನ್ನು ಹೊರಡಿಸಲೇ ಇಲ್ಲ.
ಕರ್ಣ ಪರ್ವದ ಮೊದಲ ಕರ್ಣಾರ್ಜುನ ಭಾಗದ ಕರ್ಣನಾಗಿ ಹೆಸರಾಂತ ಕಲಾವಿದ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಅರ್ಜುನನಾಗಿ ವಿಟ್ಲ ಶಂಭುಶರ್ಮ ತುರುಸು ಮುರುಸಾದ ವಾಗ್ವಾದಕ್ಕೆ ತೊಡಗಿ ಪ್ರೇಕ್ಷಕ ನನ್ನು ರೋಮಾಂಚನಗೊಳಿಸಿದರು. ಆದರೂ ಶಂಭು ಶರ್ಮರ ನಿರೀಕ್ಷಿತ ಮಾತುಗಾರಿಕೆ ಬರಲಿಲ್ಲ ಎನ್ನಬಹುದು.  ವಿಶ್ವಣ್ಣನದ್ದು ಎಂದಿನಂತೆ ಸಹಜತೆಯ ಎಲ್ಲೆ ಮೀರದ ಮಾತುಗಾರಿಕೆ ಸ್ವರಭಾರದಿಂದಲೂ ಶಬ್ದಾಲಂಕಾರದಿಂದಲೂ ಆಕರ್ಷಣೀಯವಾಗಿತ್ತು ಎನ್ನಬಹುದು. ಅದೇ ಹಳೆಯ ಪ್ರಖರತೆ.   ಶ್ರೀಕೃಷ್ಣನಾಗಿ ಹಿರಿಯ ಶ್ರೀ ಕುಂಬಳೆ ಸುಂದರ್ ರಾವ್ ಯಥೋಚಿತವಾಗಿ ಅರ್ಥಗಾರಿಕೆಯನ್ನು ಮೆರೆದರು.  ಇದು ಅವರ ಎಷ್ಟನೇ ಕೃಷ್ಣನೋ ಯೋಚಿಸಿದರೆ ಗಾಬರಿಯಾಗಿಬಿಡುತ್ತದೆ. ಇದರಲ್ಲೂ  ಯಕ್ಷಗಾನದ ಸೌಂದರ್ಯ ಅಡಗಿದೆ.
ಈ ತಾಳ ಮದ್ದಲೆಯ ಅತ್ಯಂತ ಸುಂದರ ಸನ್ನಿವೇಶ ಎಂದರೆ ಕರ್ಣ ಶಲ್ಯ ಸಂಭಾಷಣೆ ಎಂದರೆ ಅತಿಶಯವವಲ್ಲ. ಬಹಳ ವಿದ್ವತ್ ಪೂರ್ಣ ಸಂದರ್ಭೋಚಿತ ಮಾತುಗಾರಿಕೆ . ಸಮಯ ಮೀರಿ ಸ್ವಲ್ಪ ಲಂಬಿಸಿದರು ಸ್ವಾರಸ್ಯವಾಗಿ ಸಾಗುತ್ತಿದ್ದುದರಿಂದ ಪ್ರೇಕ್ಷಕ ತಡವಾದರೂ ಏಳಲಾರದೇ ದ್ವಂದ್ವದಲ್ಲಿ ಸಿಲುಕಿದ ಎನ್ನಬೇಕು. ತಾಳ ಮದ್ದಲೆಯ ನಿಜ ಸೊಗಡು ಅನುಭವಾದ ಸನ್ನಿವೇಶ ಇದು. ಯಾಕೆಂದರೆ ತಾಳ ಮದ್ದಲೆ ಎಂದರೆ ಅದು ಕೇವಲ ಚಪ್ಪಾಳೆಯನ್ನು ಗಿಟ್ಟಿಸುವ ಚರ್ಚಾಕೂಟ ಆಗಬಾರದು. ಅಲ್ಲಿ ಸಂಭಾಷಣೆ ಹೊಸೆದುಕೊಂಡು ಬೆಳೆಯಬೇಕು. ವಾದ ಪ್ರತಿವಾದವನ್ನು ಖಂಡಿಸಬೇಕೆ ಹೊರತು ಮಲಗಿಸಬಾರದು. ಪಾತ್ರ ಪಾತ್ರಗಳು ಒಂದಾಗಿ ಬೆಳೆದಾಗ ಸುಂದರ ತಾಳಮದ್ದಲೆಯ ಆವಿಷ್ಕಾರವಾಗುತ್ತದೆ. ಇದನ್ನು ತಿಳಿಯದೆ ಅದ್ಭುತ ಅದ್ಭುತ ಎಂದು ಚಪ್ಪಾಳೆ ತಟ್ಟಿದರೆ ಕಲಾವಿದನೂ ಅದೇ ನೀರಿಗೆ ಕೈ ಅದ್ದಿಬಿಡುವ ಮನೋಭಾವ ತೋರಿಸುತ್ತಾನೆ. ಇದು ವಾಸ್ತವ. ಪ್ರತಿಯೊಂದು ಪಾತ್ರದ ಅರ್ಥಗಾರಿಕೆ ತೊಡಗುವಾಗ ಪ್ರೇಕ್ಷಕ ಚಿಂತಿಸಬೇಕು ಇದು ಯಾವ ಪದದ ಅರ್ಥ, ಇದರ ಪರಮೊನ್ನತಿಗೊಂಡು ಇದು ಮುಂದಿನ ಪದಕ್ಕೆ ಹೇಗೆ ಪ್ರಚೋದಿಸುತ್ತದೆ. ಇಲ್ಲ ಮುಂದಿನ ಕಲಾವಿದನಿಗೆ ಹೇಗೆ ಅವಕಾಶವನ್ನು ಕಲ್ಪಿಸುತ್ತದೆ. ಹೇಳಿ ಕೇಳಿ ಇದು ಅಶು ಸಾಹಿತ್ಯ. ಇದರ ಸೌಂದರ್ಯ ಕೇವಲ ವಾದ ಪ್ರತಿವಾದಕ್ಕೆ ಮತ್ತೆ ಚಪ್ಪಾಳೆಗೆ ಸೀಮಿತವಾಗಬಾರದು. ಈ ಎಲ್ಲ ಅಂಶಗಳನ್ನು ಗಣಿಸಿದಾಗ ಶಲ್ಯ ಕರ್ಣ ಮತ್ತೂ ಮತ್ತೂ ನೆನಪಾಗುತ್ತಾರೆ.  ಇದೇ ಭಾಗದಲ್ಲಿ ಬರುವ ಶ್ರೀರಾಮ ಜೋಯಿಸರ ಸರ್ಪಾಸ್ತ್ರದ ಬಗ್ಗೆ ಹೇಳದೇ ಉಳಿಯಲು ಸಾಧ್ಯವಿಲ್ಲ. ಸಣ್ಣದಾದ ಪಾತ್ರವೂ ಎಷ್ಟು ಗಮನಾರ್ಹವಾಗಿಬಿಡುತ್ತದೆ ಎಂದು ತನ್ನ ಚಿಂತನ ಮಂಥನಗಳಿಸಿಂದ ತೋರಿಸಿಕೊಟ್ಟ ಅರ್ಥಗಾರಿಕೆ.
ಕೊನೆಯ ಭಾಗದ ಅವಾಸನದ ಕರ್ಣ ನೋಡುವ ಅವಕಾಶವಿದ್ದರೂ ಸಮಯವಿಲ್ಲದೆ ವಂಚಿತನಾದೆ ಎನ್ನಬೇಕು.  ಸಂಪಾಜೆಯ ಯಕ್ಷೋತ್ಸವದಂತೆ ಪ್ರತಿ ಕಲಾವಿದನೂ ತನ್ನ ಮಹತ್ತಾದ ದೇಣಿಗೆಯನ್ನು ನೀಡುವ ಪ್ರಯತ್ನವನ್ನು ಸ್ಪರ್ಧಾತ್ಮಕವಾಗಿ ಇಲ್ಲಿಯೂ ಮಾಡಿದ ಎನ್ನಬೇಕು. ಎಲ್ಲವನ್ನು ಒಂದೆ ಮಾನದಂಡದಿಂದ ಅಳೆಯುವುದು ಹಾಸ್ಯಾಸ್ಪದವಾಗಿಬಿಡುತ್ತದೆ. ಆದಿನದ ಕಲಾವಿದನ ಮನಸ್ಥಿತಿ ಮತ್ತು ಪರಿಸರ ಅಂದಿನ ನಿರ್ವಹಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಹಾಗಾಗಿ ಅಭಿಪ್ರಾಯ ಅನಿಸಿಕೆಗಳು ಕೇವಲ ಆದಿನಕ್ಕೆ ಮಾತ್ರವೇ ಸೀಮಿತವಾಗಿಬಿಡಬೇಕು. ಇದು ಕೇವಲ ನನ್ನ ಮನಸ್ಸಿನ ಅನಿಸಿಕೆ. ಅದು ಅದಕ್ಕಷ್ಟೆ ಸೀಮಿತ.
ಒಂದು ಉತ್ತಮ ಎನ್ನಬಹುದಾದ ಕಾರ್ಯಕ್ರಮ ಆಯೋಜನೆ. ಒಂದೇ ಸವನೆ ಸುರಿಯುತ್ತಿದ್ದ ಮಳೆಗೆ ಬಿಸಿಬಿಸಿ ಉಪಾಹಾರ,  ಯಕ್ಷಗಾನ ಆಸ್ವಾದನೆಯೊಂದಿಗೆ ಮನಸ್ಸಿಗೆ ಬಹಳ ಮುದವನ್ನು ನೀಡಿತ್ತು. ಇದಕ್ಕಾಗಿ ಡಾ|| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಭಾರವಾಹಿಗಳಿಗೂ ಪೋಷಕ ವರ್ಗದವರಿಗೂ ಕೃತಜ್ಞತೆಯನ್ನು ಸಲ್ಲಿಸಬೇಕು.
ಎಂದು ಅನ್ನಿಸುವ ಕೊನೆಯ ಒಂದು ಮಾತಿದೆ ಅದೇ ” ಯಕ್ಷಗಾನಂ ಗೆಲ್ಗೆ”






Monday, September 7, 2015

ಪ್ರತಿಬಿಂಬವಾಗುವ ಪ್ರೇಕ್ಷಕ

            ಇಂದಿನ ದಿನಗಳಲ್ಲಿ ಮಧ್ಯಮಗಳ ದಾರಿ ವಿಶಾಲವಾದಂತೆ ಸಂವಹನದ ವೇಗವೂ ಹೆಚ್ಚಾಗಿ ಬಿಡುತ್ತದೆ.  ರಸ್ತೆ ಅಗಲವಾದಾಗ ಸಂಚಾರ ತಡೆ ನಿವಾರಣೆಯಾದಂತೆ ಈ ಮಾಧ್ಯಮಗಳೂ ಅವುಗಳನ್ನು ಉಪಯೋಗಿಸುವ ರೀತಿಯೂ ಮನೋವೇಗಕ್ಕಿಂತಲೂ ವೇಗವೋ ಎಂಬಂತೆ ಭಾಸವಾಗುತ್ತದೆ.  ಯಾಕೆಂದರೆ ಊರ ಯಾವುದೋ ಮೂಲೆಯ ಯಕ್ಷಗಾನ ಕಾರ್ಯಕ್ರಮ ಆಲ್ಲಿ ದಿನಾಂಕ ನಿರ್ಧರಿಸುವ ಮೋದಲೇ ಅದರ ರೂಪು ರೇಷೆ ಇನ್ನೊಂದು ಭಾಗಕ್ಕೆ ಕ್ಷಣಮಾತ್ರದಲ್ಲಿ ಬಿತ್ತರವಾಗಿಬಿಡುತ್ತದೆ. ಹೀಗೆ ವಾರದಲ್ಲಿ ಕನಿಷ್ಟ ಪಕ್ಷ ಮೂರು ನಾಲ್ಕಾದರೂ ಯಕ್ಷಗಾನ ಕಾರ್ಯಕ್ರಮದ ಆಮಂತ್ರಣ ವಿವಿಧ ಮಾಧ್ಯಮಗಳ ಮೂಲಕ ಕೈ ಸೇರಿಬಿಡುತ್ತದೆ. ವಿಚಿತ್ರವೆಂದರೆ ಒಂದೇ ಕಾರ್ಯಕ್ರಮಕ್ಕೆ ಹಲವು ವಿಧದ ಆಮಂತ್ರಣಗಳು  ವೆತ್ಯಸ್ತ ರೀತಿಯಲ್ಲಿ ಒದಗಿಬರುತ್ತದೆ. ಈ ಮೇಲ್ ಮುಖಾಂತರ ಕಳುಹಿಸಿ ಮತ್ತೆ ವಾಟ್ಸಪ್ ಮುಖಾಂತರವೂ ಕಳುಹಿಸಿ ಸಾಲದೆಂಬಂತೆ ಪ್ರಾಮುಖ್ಯತೆಗೋಸ್ಕರ ವೈಯಕ್ತಿಕ ಕರೆ ಮಾಡಿ ಒತ್ತಾಯದ ಆಮಂತ್ರಣ ನೀಡುವ ಪ್ರಮೇಯವನ್ನು ಕಾಣಬಹುದು. ಈಗೀಗ ಈ ಅಮಂತ್ರಣಗಳನ್ನು ಬಂದಂತೆ ಬದಿಗಿರಿಸಿ ಇಲ್ಲವೇ ಹರಿವ ನದಿಯಲ್ಲಿ ತೇಲಿಬಿಟ್ಟಂತೆ ಇನ್ನೋಂದು ಮಾಧ್ಯಮಕ್ಕೆ ತೇಲಿಸಿಬಿಡುತ್ತೇವೆ.     

            ಮೊದಲೆಲ್ಲ ಆಮಂತ್ರಣ ನೀಡಿದಾಗ ಅದನ್ನು ಮನ್ನಿಸುವುದಿತ್ತು. ವ್ಯಕ್ತಿಗತ ಕಾರಣವೇನಿದ್ದರೂ ಗೌರವದಿಂದ ಸ್ನೇಹದಿಂದ ಆಮಂತ್ರಿಸಿದ್ದಾರಲ್ಲಾ ಎಂಬ ಭಾವದಲ್ಲಿ ಕಾರ್ಯಕ್ರಮಕ್ಕೆ ಹೋಗುವುದೂ ಇತ್ತು. ಈಗೀಗಲಂತೂ ಅದರ ಬಗ್ಗೆಯೂ ಒಂದು ರೀತಿಯ ವಿರಕ್ತಿ ಕಾಡಲಾರಂಭಿಸುತ್ತದೆ. ಇದು ಒಬ್ಬಿಬ್ಬರಿಗಲ್ಲ ಹಲವು ಜನರಲ್ಲಿ ಈ ಭಾವ ಬೆಳೆದು ಬಿಟ್ಟಿದೆ. ಇದಕ್ಕೆ ಹಲವು ಕಾರಣಗಳಿವೆ. ಮೊದಲೆಲ್ಲ ನಮ್ಮ ಆತ್ಮೀಯ ಪರಿಧಿಯೊಳಗಿನವರ ಕಾರ್ಯಕ್ರಮ ಕರಪತ್ರ ಎಲ್ಲೋ ಸಿಕ್ಕಿದರೆ ಛೇ ನನಗೆ ಹೇಳಲೇ ಇಲ್ಲ ಮಾರಾಯ್ರೆ ಎಂದು ಮರುಗುವ ಕಾಲವಿತ್ತು. ಈಗ ಆ ಮರುಗುವಿಕೆಯ ಪ್ರಭಾವ ಕಡಿಮೆಯಾಗುತ್ತಿದೆ ಮಾತ್ರವಲ್ಲ ಇಲ್ಲವೇ ಇಲ್ಲ ಎನ್ನಬಹುದು. ಮೊದಲು  ಹೇಳಲಿಲ್ಲವಲ್ಲ ಎಂಬ ಕಾರಣಕ್ಕೆ ಆ ಅತ್ಮೀಯರಲ್ಲಿ ಮುನಿಸಿಕೊಂಡು ಮಾತು ಬಿಟ್ಟದ್ದು ಇರಬಹುದು. ಆದರೆ ಈಗ ಹಾಗಿದೆ ಎಂದು ಹೇಳುವುದಕ್ಕೆ ಆಮನಸ್ಸು ಒಪ್ಪಿಕೊಳ್ಳುವುದಿಲ್ಲ. ಯಾಕೆ ಹೀಗೆ ? 
ಯಥೋ ಹಸ್ತ ತಥೋ ದೃಷ್ಟಿರ್ | ಯಥೋ ದೃಷ್ಟಿರ್ ತಥೋ ಮನಃ||
ಯಥೋ ಮನಃ ತಥೋ ಭಾವಃ | ಯಥಾ ಭಾವಃ ತಥೋ ರಸಃ ||

[ಹಸ್ತವು ಎಲ್ಲಿ ಸಾಗುತ್ತದೋ ಅಲ್ಲಿ ದೃಷ್ಟಿ ಚಲಿಸುತ್ತದೆ. ಎಲ್ಲಿ ದೃಷ್ಟಿ ಚಲಿಸುತ್ತದೋ ಅಲ್ಲಿ ಮನಸ್ಸು ಹೋಗುತ್ತದೆ. ಎಲ್ಲಿ ಮನಸ್ಸು ಹೋಗುತ್ತದೋ ಅಲ್ಲಿ ಭಾವ ಸಂಚರಿಸುತ್ತದೆ. ಎಲ್ಲಿ ಭಾವ ಸಂಚಾರವಿದೆಯೋ ಅಲ್ಲಿ ರಸ ಉತ್ಪತ್ತಿಯಾಗುತ್ತದೆ.]

ಇಲ್ಲಿ ರಸ ಎಂದರೆ ಅದು ಕಲೆ. ರಸೋತ್ಮತ್ತಿಯನ್ನೇ ಕಲೆ ಎಂದು ಕರೆಯುತ್ತಾರೆ. ಕಲೆ ಎಂದರೆ ಅದು ನೈಜವಲ್ಲ. ನೈಜವಾದರೆ ಅದು ಕಲೆ ಅಂತ ಅನಿಸಿಕೊಳ್ಳುವುದಿಲ್ಲ. ಇದು ಪ್ರಾಜ್ಞರು ಹೇಳುವಂತಹ ಮಾತು. ಒಬ್ಬ ನಟನಾದವನು ರಂಗದ ಮೇಲೆ ಪಾತ್ರವಾಗಿ ಅಭಿನಯಿಸಬೇಕು....ಅದರೆ ಪಾತ್ರವೇ ಅವನಾದರೆ ಅಭಾಸವಾಗುತ್ತದೆ. ಅಭಿನಯಿಸುವುದೆಂದರೆ ಅದರಂತೆ ಎಂಬ ಉತ್ಪ್ರೇಕ್ಷೇ ಅಲ್ಲಿ ಉಂಟಾಗಬೇಕು. ಅದುವೇ ಎಂದಾಗಬಾರದು. ಗಂಡನಾಗಿಯೋ ಹೆಂಡತಿಯಾಗಿಯೋ ಮಗನಾಗಿಯೋ ಅಭಿನಯಿಸಬೇಕು ಅದುವೇ ಆದರೆ ಅಲ್ಲಿ ರಂಗಕ್ಕೆ ಅಭಾಸವೆಸಗಿದಂತೆ.

ಕೈ ಹೋದೆಡೆ ದೃಷ್ಟಿ ದೃಷ್ಟಿ ಇದ್ದೆಡೆ ಮನಸ್ಸು ಹೀಗೆ ಕೊನೆಯಲ್ಲಿ ರಸೋತ್ಪತ್ತಿ ಉಂಟಾಗಬೇಕು. ಇಲ್ಲಿ ಬಲವಂತ ಕೂಡದು. ಅದರ ಅರ್ಥ ಕಲಾವಿದ ಹೃದಯದಿಂದ ಸ್ವತಃ ಭಾವ ತುಂಬಿ ರಸೋತ್ಮಾದನೆ ಮಾಡಬೇಕು. ಇನ್ನೊಬ್ಬನ ಒತ್ತಡಕ್ಕೋ ಬೇಡಿಕೆಗೋ ಪ್ರಚೋದನೆಗೋ ಒಳಗಾಗಿ ಆತ ತನ್ನ ಕಲೆಯನ್ನು ತೋರಿಸುತ್ತಾನೆ ಎಂದಾದರೆ ಅದು ಮೇಲೆ ಹೇಳಿದ ರಸೋತ್ಪತ್ತಿ ಎನಿಸುವುದಿಲ್ಲ. ಕೀಲಿ ಗೊಂಬೆಗೆ ಕೀಲಿತಿರುಗಿಸಿ ಬಿಟ್ಟಂತೆ ಕೀ ಕೊಟ್ಟ ಗೊಂಬೆಯಂತಾಗುತ್ತದೆ.  ಮೇಲೆ ಹೇಳಿದಂತೆ ಅದು ಸಹಜ ಲಕ್ಷಣವಾಗುವುದಿಲ್ಲ.  ಹಾಗಾಗುವುದಿಲ್ಲ ಎಂದಾದಾಗ ಅಲ್ಲಿ ರಸೋತ್ಮತ್ತಿಯೂ ಸಾಧ್ಯವಾಗುವುದಿಲ್ಲ. ರಸೋತ್ಪತ್ತಿ ಇಲ್ಲದ ಮೇಲೆ ಅಲ್ಲಿ ಕಲೆ ಹೇಗೆ ಸಾಧ್ಯವಾಗುತ್ತದೆ? ಸೂಕ್ಷ್ಮವಾಗಿ ಯೋಚಿಸಿದಾಗ  ಕಲೆ ಇಲ್ಲದ ಮೇಲೆ ಕಲಾವಿದ ಎನಿಸಿಕೊಳ್ಳುವುದು ಹೇಗೆ?

ಇಂತಹ ಸಾಮಾನ್ಯವಾದ ಸಂಗತಿಯನ್ನು ಕಲಾವಿದನಾದವನು ಗಂಭೀರವಾಗಿ ಪರಿಗಣಿಸಿ ಕಲಾವಿದನಾಗುವ ಪ್ರಯತ್ನದಲ್ಲಿಯಾದರೂ ವ್ಯಸ್ತನಾಗಬೇಕು. ಆದರೆ ವಾಸ್ತವದಲ್ಲಿ ಹಾಗಿಲ್ಲ.  ಇದನ್ನೆಲ್ಲ ಹೇಳಿದಿರೆಂದಾದರೆ ಹಾಸ್ಯದ ವಸ್ತುವಾಗುತ್ತದೆ. ಕಲೆ ಅರಳುವಲ್ಲಿ ಸ್ವಾರ್ಥವಿರಬಾರದು. ಸ್ವಾರ್ಥವಿದ್ದಾಗ ಮೇಲೆ ಹೇಳಿದ ಯಾವ ಕ್ರಿಯೇಯೂ ಪರಿಪೂರ್ಣವಾಗಿ ಸಾಧ್ಯವಾಗುವುದಿಲ್ಲ. ಬಂಧನದಿಂದಲೂ ದಮನದಿಂದಲೂ  ಉತ್ಪತ್ತಿಯಾಗುವ ಕಲೆ ಅದು ಕಲೆ ಎನಿಸಲ್ಪಡುವುದಿಲ್ಲ. ಕೋಗಿಲೆ ಮಾಮರದಲ್ಲಿ ಕೂಗಿದಾಗ ಯಾರ ಒತ್ತಡವೂ ಇರುವುದಿಲ್ಲವಂತೆ.  ಹೀಗಿದ್ದರೂ ಇಂದು ದಮನಕಾರೀ ಪ್ರವೃತ್ತಿ ಬೇಡ ಬೇಡವೆಂದರೂ ಸವಾರಿ ಮಾಡಿಬಿಡುತ್ತದೆ.  ಯಕ್ಷಗಾನಕ್ಕೆ ಸಂಭಂಧಿಸಿ ಇದು ಹಲವುಸಲ ನಿಜವಾಗುವುದು ವಿಷಾದನೀಯ ಎನ್ನಬೇಕು.  ಹೀಗಾಗಿ ಯಕ್ಷಗಾನದಷ್ಟು ಆವಿಷ್ಕಾರಕ್ಕೆ ಒಳಗಾದ ಕಲೆ ಬೇರೆ ಇಲ್ಲ ಎಂದು ಭಾಸವಾಗುತ್ತದೆ.  ಯಾಕೆಂದರೆ ಮೂಲ ಸ್ವರೂಪ ಎಂಬುದಕ್ಕಿಂತಲೂ ಹಲವು ವರ್ಷಗಳಿಗಿಂತ ಮೊದಲ ಯಕ್ಷಗಾನಕ್ಕೂ ಈಗಿನ ಯಕ್ಷಗಾನಕ್ಕೂ ವೆತ್ಯಾಸ ಕಂಡಾಗ ಈ ಮಾತು ತರ್ಕಬದ್ಧವೆನಿಸುತ್ತದೆ.

ರಂಗದ ಮೇಲೆ ಕಲಾವಿದ ತನ್ನ ಸ್ವತಂತ್ರವಾಗಿ  ಕಲೆಯನ್ನು ಹೊಮ್ಮಿಸುತ್ತಿರಬೇಕು. ಎಂದರೆ ಆತನಿಗೆ ತೋಚಿದ್ದು ಎಂದಲ್ಲ. ಆ ಕಲೆಗೆ ಅನುಗುಣವಾಗಿ ಯಾವ ಒತ್ತಡಕ್ಕೂ ಒಳಗಾಗದೆ ಕಲೆ ಹೊಮ್ಮುತ್ತಿರಬೇಕು. ಒಂದು ಹೂವು ಸಹಜವಾಗಿ ಅರಳುತ್ತಿದ್ದರೆ ಅದು ಸಹಜವಾದ ಪರಿಮಳವನ್ನು ಪರಿಪೂರ್ಣವಾಗಿ ನೀಡುತ್ತದೆ. ಆದರೆ ಬಲವಂತವಾಗಿ ಆ ಹೂವಿನ ಎಸಳನ್ನು ತಮಗೆ ಬೇಕಾದಂತೆ ಅರಳಿಸಿದರೆ ಅದು ಅಸಹಜವಾಗಿಬಿಡುತ್ತದೆ.  ಈಗ ಇಂತಹ ಪ್ರಮೇಯಗಳೇ  ಒದಗಿ ಬರುವಾಗ ಸಹಜವಾದ ಕಲೆಯನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಕಲಾವಿದನಾದವನು ಯಾವುದೊ ಒತ್ತಡಕ್ಕೆ ಒಳಗಾದಂತೆ ಬಾಸವಾಗುತ್ತಾನೆ. ಭಾಗವತನ ಹಾಡುವಿಕೆಯಲ್ಲಿ ಪಾತ್ರಧಾರಿಯ ಕುಣಿತದಲ್ಲಿ ಈ ತುಡಿತವನ್ನು ಕಾಣಬಹುದು. ಇದಕ್ಕೆ ಹಲವು ಕಾರಣಗಳು ಇರಬಹುದು. ಬಹುಪಾಲು ನ್ಯಾಯಯುತವಾದದ್ದೇ ಎಂದು ಭಾಸವಾಗಬಹುದು. ಅದರೆ ಇಲ್ಲೆಲ್ಲ ಮೌನವಾಗಿ ಕಮರಿ ಹೋಗುವುದು ಶ್ರೀಮಂತವಾದ ಕಲೆ. ಕಲ್ಪ ವೃಕ್ಷವಾದ ತೆಂಗಿನ ಫಲಗಳನ್ನು ಕಿತ್ತು ಕಿತ್ತೂ ನಂತರ ಸಾಲದೆಂಬಂತೆ ಗರಿಗಳನ್ನೂ ಕೀಳತೊಡಗಿದಾಗ ಅಲ್ಲಿ ಏನು ಉಳಿಯುತ್ತದೆ. ಕೇವಲ ಅಸ್ಥಿಪಂಜರದಂತೆ ಕಂಬ ಮಾತ್ರ ಏಕಾಂಗಿಯಾಗಿ ನಿಂತು ಬಿಡುತ್ತದೆ.

ವಿಚಿತ್ರವೆಂದರೆ ಕಲಾವಿದನಿಗೆ ಮಾತ್ರ ಒತ್ತಡವಲ್ಲ ಇಂದು ಪ್ರೇಕ್ಷಕ ಕೂಡ ಈ ಒತ್ತಡವನ್ನು ಅನಿಭವಿಸುತ್ತಿದ್ದಾನೆ ಎಂಬುದು ಈಗ ಅನುಭವಕ್ಕೆ ಬರುತ್ತಿದೆ.  

ದೈನಂದಿನ ವ್ಯಾವಹಾರಿಕ ಪ್ರಪಂಚದ ಒತ್ತಡಗಳು ಬದುಕಿಗೆ ಅನಿವಾರ್ಯ. ಅದರಿಂದ ಹೊರತಾಗಿ ಬದುಕನ್ನು ನಿರ್ವಹಿಸುವುದು ದೊಡ್ಡ ಸವಾಲಾಗುತ್ತದೆ.  ಹಾಗಾಗಿ ಈ ಒತ್ತಡದಿಂದ ಕ್ಷಣ ಹೊತ್ತಾದರೂ ಹೊರ ಬರುವ ಎಂದು ಮನುಷ್ಯ ಕಲಾಸ್ವಾದನೆಯನ್ನು ಆಶ್ರಯಿಸುವುದು.  ಎಲ್ಲ ಒತ್ತಡದಿಂದಲೂ ಮುಕ್ತನಾಗಿ ಶಾಂತಿಯನ್ನು ಅನುಭವಿಸುವುದಕ್ಕೆ ದೇವಸ್ಥಾನಕ್ಕೆ ಹೋದರೆ ಗ್ರಹಚಾರವೆಂಬಂತೆ ಅಲ್ಲಿ ಅದಕ್ಕಿಂತಲೂ ಹೆಚ್ಚು ಒತ್ತಡ ಅನುಭವಿಸುವುದಿದ್ದರೆ ಅಲ್ಲಿಗೆ ಹೋಗುವ ಉದ್ದೇಶದ ಸಾರ್ಥಕತೆ ಏನು? ಕಲೆ ಮನಸ್ಸನ್ನು ಅರಳಿಸಬೇಕೆ ಹೊರತು ಕೆರಳಿಸುವಂತಾಗಬಾರದು. ಆಗ ಅಲ್ಲಿಂದಲೂ ಪಲಾಯನ ಮಾಡುವ ಮನೋಭಾವ ಬೆಳೆದು ಬಿಡುತ್ತದೆ. ಇಂದು ಕಲೆ ಒತ್ತಡವನ್ನು ಶಮನವಾಗಿಸುವ ಹಾಗಾಗುವುದು ಅದೃಷ್ಟವಿದ್ದಲ್ಲಿ ಮಾತ್ರ.

ಇಂದು ಕಾರ್ಯಕ್ರಮದ ಸಂಖ್ಯಾ ಹೋಲಿಕೆಯಿಂದ ನೋಡಿದಲ್ಲಿ ಯಕ್ಷಗಾನ ಕಾರ್ಯಕ್ರಮಗಳು ವಿಪುಲವಾಗಿ ಆಗುತ್ತದೆ. ಆದರೆ ಗುಣಮಟ್ಟದ ವಿಷಯಕ್ಕೆ ಬಂದಾಗ ಗಾಬರಿಯಾಗಿಬಿಡುತ್ತದೆ. ಇದರಲ್ಲಿ ಹವ್ಯಾಸಿಗಳು ವ್ಯವಸಾಯಿಗಳು ವರ್ಗೀಕರಣ ಸಾಧ್ಯವಾಗುವುದಿಲ್ಲ. ವ್ಯವಸಾಯಿಗಳು ಹೊಟ್ಟೆಪಾಡು ಎಂಬ ಧೋರಣೆಯಿದ್ದರೆ ಹವ್ಯಾಸಿ ಪಟ್ಟ ಎಂಬುದು ಎಲ್ಲದಕ್ಕೂ ಪರವಾನಿಗೆ (ಲೈಸೆನ್ಸ್) ತೆಗೆದುಕೊಂಡಹಾಗೆ ಅನ್ನಿಸುತ್ತದೆ. ಹವ್ಯಾಸಿಗಳಲ್ವ ಇಷ್ಟುಧಾರಳ ಎಂಬ ಭಾವನೆ. ಆದರೆ ಧಾರಳತನದಿಂದ ರಂಗದ ಮೇಲೆ ಅಭಾಸಗಳನ್ನು ನೋಡುವ ದುರ್ದೈವ ಪ್ರೇಕ್ಷಕನದ್ದು.  ಕುಣಿಯಲು ಬಾರದವ  ಹಾಗೆ ಹೇಳುವುದಕ್ಕಿಂತ ಸರಿಯಾಗಿ ಕಲಿಯದವನು ಎಂದರೆ ಸೂಕ್ತ ವೇಷತೊಟ್ಟರೆ ಆತ ಆಷ್ಟು ಮಾಡಿದ್ದೇ ದೊಡ್ಡದು ಎನ್ನವ  ಶ್ಲಾಘನೆ. ಇಲ್ಲಿ ಈ  ಅಭಾಸ ರಂಗದ ಮೇಲೆ ಕಂಡಾಗ ಪ್ರೇಕ್ಷಕ ಸ್ಪಂದಿಸುತ್ತಾನೆ. ಆ ಸ್ಪಂದನೆ ಧನಾತ್ಮಕವಾಗಿದ್ದರೆ ಉತ್ತಮ  ವಿಮರ್ಶೆ,  ಆದರೆ ಋಣಾತ್ಮಕವಾಗಿದ್ದಲ್ಲಿ ಬೆದರಿಕೆ ಹಂತದವರೆಗೂ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ.  ಮನಸ್ಸನ್ನು ಮುದಗೊಳಿಸಬೇಕಾದ ಕಲೆ, ಆ ಕಲೆಯ ಮೇಲಿನ ಅಭಿಮಾನ ಇನ್ನಿಲ್ಲದ ಒತ್ತಡವನ್ನು ಅನುಭವಿಸುವಂತೆ ಮಾಡುತ್ತದೆ.  ಆಟದ ಆಮಂತ್ರಣದ ಉದ್ದೇಶ ಸ್ಪಷ್ಟವಾಗುತ್ತಾ ಹೋಗುತ್ತದೆ. ಕೇವಲ ಯಕ್ಷಗಾನದ ಕಲೆಯ ಹಿತ ಎಂಬುದು ಪ್ರಶ್ನಾರ್ಹವಾಗಿಬಿಡುತ್ತದೆ.  ಕಲೆ ಎಂಬುದು ಹೆಸರುಗಳಿಸುವ ಮಾಧ್ಯಮವಾದಾಗ ಸ್ವಾರ್ಥ ಹೆಡೆಯಾಡಿ ಯಕ್ಷಗಾನ ನಂತದರ ವಿಷಯವಾಗಿಬಿಡುತ್ತದೆ.  ಹಾಗಾಗಿ ಆಮಂತ್ರಣ ಓದುವುದಕ್ಕಷ್ಟೆ ಸೀಮಿತವಾಗುತ್ತದೆ.

ಯಕ್ಷಗಾನ ಪೂರ್ಣವಾಗಿ ಅಭ್ಯಸಿಸಿ ತರಬೇತಿಗಳಿಸುವುದು ಅಸಂಭವ ಎನಿಸಿದರೂ ರಂಗದ ಮೇಲೆ ಏರಿದಾಗ ತಾನು ಪರಿಪೂರ್ಣನಲ್ಲ ಎಂಬ ಭಾವ ಹೊಂದಿರಬೇಕು. ಇದು ಆ ಕಲೆಯ ಬಗೆಗಿನ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಈ ಭಾವಕ್ಕೆ ಪ್ರಾಮಾಣಿಕನಾದರೆ  ಯಾವ ರೀತಿಯ ವಿಮರ್ಷೆಯನ್ನಾದರೂ  ವಿಶಾಲವಾಗಿ ಸ್ವೀಕರಿಸುವ ಮನೋಭಾವ ತನ್ನಿಂತಾನೆ ಉಂಟಾಗುತ್ತದೆ. ಋಣವೋ ಧನವೋ  ಆ ಗುಣಗಳನ್ನು ನೋಡುವುದಿಲ್ಲ.  ಅದು ಒಳಗಿನ ಕಲೆಯನ್ನು ಉದ್ದೀಪನ ಗೊಳಿಸುವುದಕ್ಕೆ ಸಹಕಾರಿಯಾಗುತ್ತದೆ. ಅಪೂರ್ಣತೆಯಲ್ಲಿ ಪೂರ್ಣತೆಯನ್ನು ಕಾಣಬಹುದು.  ಆದರೆ ಇಲ್ಲಿ ಅಪ್ರಾಮಾಣಿಕನಾದಗ ವಿಮರ್ಶೆಯನ್ನೋ ಅನಿಸಿಕೆಗಳನ್ನೋ ಧಿಕ್ಕರಿಸುವ ಮನೋಭಾವ ಸ್ಫುಟಿಸುತ್ತದೆ.  ಅವಾಗ ಸಹಜ ಪ್ರೇಕ್ಷಕ ದೂರ ಉಳಿದುಬಿಡುತ್ತಾನೆ. ತಮ್ಮ ತಾಳಕ್ಕೆ ಪ್ರೇಕ್ಷಕ ಕುಣಿಸಬೇಕೆಂಬ ಬಯಕೆ ಇದು.. ಪ್ರೇಕ್ಷಕನ ತಾಳ ತಪ್ಪಿಹೋಗುತ್ತದೆ.  ನಿಂತ ನಿಲುವುಗನ್ನಡಿಯಲ್ಲಿ ಪ್ರತಿಬಿಂಬ ವಾರೆಯಾದಾಗ ತಾವು ನೇರವಾಗುವ ಬದಲು ಕನ್ನಡಿಯನ್ನೇ ವಾರೆಯಾಗಿಸುವ ಪ್ರವೃತ್ತಿ.






Saturday, July 4, 2015

ಯಕ್ಷ ಸತ್ಸಂಗದಲ್ಲಿ ಒಂದು ಅಭಾಸಕರ ವರ್ತನೆ

ಕಟೀಲು ಕ್ಷೇತ್ರದಲ್ಲಿ ನಡೆಯುವ ಯಕ್ಷ ಸತ್ಸಂಗ ಎಂಬ ಕಾರ್ಯಕ್ರಮದಲ್ಲಿನ ಒಂದು ಅಭಾಸಕರ ಪ್ರವೃತ್ತಿಯಿಂದ ಬೇಸತ್ತು,. ಇದರಿಂದ ತೀವ್ರವಾಗಿ ನೊಂದ ಮನಸ್ಸಿನಿಂದ ಈ ಅನಿಸಿಕೆಗಳನ್ನು ಹೇಳುತ್ತಿದ್ದೇನೆ. ಅತೀ ಹಿರಿಯ ವ್ಯಕ್ತಿಗಳೆನಿಸಿದವರ ಸಹಭಾಗಿತ್ವದಲ್ಲಿ ನೇತೃತ್ವದಲ್ಲಿ ನಡೆಯುವ ಒಂದು ಮೂರ್ಖತನದ ಪರಮಾವಧಿ ಇದು. 

ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹೆಚ್ಚಿನ ಎಲ್ಲಾ ಭಾಗವತರುಗಳು ಹಾಡಿದ ಹಾಡುಗಳ ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡುವ ಮೂಲಕ ತಮ್ಮಲ್ಲಿನ ಸ್ವಾರ್ಥ ಬುದ್ದಿಯ, ಕುತ್ಸಿತ ಮನಸ್ಸನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದೇ ನನ್ನ ಅಭಿಪ್ರಾಯ. ಯಾಕೆಂದರೆ, ಈ ಮುದ್ರಿಕೆಯಲ್ಲಿ ಅಕ್ಷಯ ಕೃಷ್ಣ ರ ಸಂಗ್ರಹ ಎಂದು ಹಲವು ಹಾಡುಗಳನ್ನು ಕ್ರೋಢೀಕರಿಸಿ ಮುದ್ರಿಸಲಾಗಿದೆ. ವಾಸ್ತವದಲ್ಲಿ ಅದರಲ್ಲಿ ಬಹಳಷ್ಟು ಹಾಡುಗಳು ನನ್ನ ಸಂಗ್ರದಿಂದ ಈ ಮೊದಲು ಉಚಿತವಾಗಿ ಯಾವುದೇ ಸ್ವಾರ್ಥವಿಲ್ಲದೆ ಹಂಚಿಕೊಂಡು ಪ್ರಸಾರವಾದವುಗಳಾಗಿವೆ. ಇದನ್ನು ಅಕ್ಷಯ ಕೃಷ್ನರಲ್ಲಿ ಖಚಿತ ಪಡಿಸಿಯೇ ಈ ಪ್ರತಿಕ್ರಿಯೆಯನ್ನು ಮಂಡಿಸುತ್ತಿರುವುದು. ಹೀಗಿದ್ದು ನನ್ನ ಅನುಮತಿ ಬಿಡಿ ನನಗೆ ಒಂದು ಸೂಚನೆಯನ್ನೂ ನೀಡದೇ ಈರೀತಿಯ ವರ್ತನೆಯನ್ನು ತೋರುವ ಸತ್ಸಂಗ ಕಾರ್ಯಕ್ರಮದ ನಿರ್ವಾಹಕರುಗಳಾದ ಡಾಕ್ಟರ್ ಶ್ರೀ ಪದ್ಮನಾಭ ಕಾಮತ್, ಶ್ರೀ ಹರಿನಾರಾಯಣ ಅಸ್ರಣ್ಣ ಮತ್ತು ಇತರರಿಗೆ ಶೋಭೆ ತರುವಂಥಹುದೇ? ಇದು ಈ ಕ್ಷೇತ್ರದ ಘನತೆಗೆ ಪಾವಿತ್ರ್ಯತೆಗೆ ತಕ್ಕುದಾದುದೆ? ಎಂಬುದು ಪ್ರಶ್ನೆ. ಇದು ಅತ್ಯಂತ ಮೂರ್ಖತನದ ದುಡ್ಡು ಮತ್ತು ಹೆಸರು ಮಾಡುವ ತೆವಲು ಎಂದರೆ ತಪ್ಪಾಗಲಾರದು. ದುಡ್ಡುಮಾಡುವ ತೆವಲು ಇರುವುದು ಸಮಾಜದಲ್ಲೀ ಹೀನ ಪ್ರವೃತ್ತಿಯನ್ನು ನಡೆಸುವವರಿಗೆ. ಆ ಕೆಲಸಕ್ಕೆ ಇವರು ಈ ಪವಿತ್ರವಾದ ಕ್ಷೇತ್ರವನ್ನು ಉನ್ನತವಾದ ಕಲೆಯನ್ನೂ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ ಎಂದಾದರೆ ಈ ಹೀನ ಸಂಸ್ಕೃತಿಗೆ ಏನು ಹೇಳಬೇಕು. 


ನನ್ನಲ್ಲಿರುವ ಧ್ವನಿಮುದ್ರಣ ಸಂಗ್ರಹಕ್ಕೆ ಸುಮಾರು ಏಳೆಂಟು ವರ್ಷಗಳ ಶ್ರಮವಿದೆ. ಅದು ಕೇವಲ ನನ್ನ ಒಬ್ಬನಿಂದ ಆಗಿ ಹೋದ ಕಾರ್ಯವಲ್ಲ. ನನ್ನಂತೆ ನನ್ನ ಮಿತ್ರ ಬಳಗ ನನ್ನ ಕಾರ್ಯದಲ್ಲಿ ಸಹಕಾರವನ್ನು ನೀಡಿ ನನ್ನನ್ನು ಪ್ರೋತ್ಸಾಹಿಸಿ ಮತ್ತು ಆ ಸಂಗ್ರಹಗಳಿಗೆ ನಿಸ್ವಾರ್ಥದಿಂದ ಕೇವಲ ಯಕ್ಷಗಾನ ಕಲೆಯ ಹಿತದೃಷ್ಟಿಯಿಂದ ನೆರವಾದವರು. ಈಗ ಯಾವುದೋ ಮೂರ್ಖರ ದುಡ್ಡಿನ ತೆವಲಿಗೂ ಹೆಸರು ಗಳಿಸುವ ತೆವಲಿಗೂ ಅದು ಉಪಯೋಗವಾಗಿಬಿಟ್ಟಿತು ಎಂದಾದರೆ ನಮ್ಮೆಲ್ಲರ ಶ್ರಮಕ್ಕೆ ನಮ್ಮ ಭಾವನೆಗೆ ಅವಹೇಳನ ಮಾಡಿದಂತೆ ಅಲ್ಲವೇ? ಇದರಲ್ಲಿ ಹೆಚ್ಚಿನವರೆಲ್ಲರೂ ಅತಿ ವಿದ್ಯಾವಂತರೂ ವಿದ್ವಾಂಸರೂ ಮಹನೀಯರು ಇವರಿಗೆಲ್ಲ ಇದು ಶೋಭೆ ತರುವಂತಹುದೆ? ಇದಕ್ಕೆಲ್ಲ ಅವರಲ್ಲಿ ಯಾವ ಉತ್ತರವಿದೆ? ಆದರೆ ಇವರೆಲ್ಲ ಇದಕ್ಕೆ ಉತ್ತರಿಸುವುದಕ್ಕೆ ಬಾಧ್ಯಸ್ಥರು. 

ನಾನಾಗಲೀ ನನ್ನ ಮಿತ್ರ ವರ್ಗವಾಗಲಿ ಈ ಮೇಲ್ ಮುಖಾಂತರ ಅಥವಾ ಇನ್ನಿತರ ಮಾಧ್ಯಮದಲ್ಲಿ ಯಕ್ಷಗಾನದ ಬೆಳವಣಿಗೆ ಪ್ರೋತ್ಸಾಹವನ್ನು ಹೊಂದಿಕೊಂಡು ಯಕ್ಷಗಾನದ ಬಗ್ಗೆ ಒಂದು ಜಾಗೃತಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಹಂಚಿಕೊಳ್ಳುತ್ತಿದ್ದೆವು. ಇದರ ಮೂಲ ಉದ್ದೇಶ ನಿಸ್ವಾರ್ಥ ಸೇವೆ ಮಾತ್ರ. ಈ ರೀತಿಯಿಂದ ನಾನು ಈ ಮೇಲ್ ನಲ್ಲಿ ಬಹಳ ದೊಡ್ದ ಬಳಗವನ್ನೇ ಹೊಂದಿದವನು. ಅದು ಐದಾರು ವರ್ಷಗಳ ಹಿಂದಿನ ಕಥೆ. ಆದರೆ ಈವರೆಗೆ ಎಲ್ಲೂ ಅದು ಸ್ವಾರ್ಥ ಪಿಶಾಚತ್ವಕ್ಕೆ ಬಲಿಯಾಗಲಿಲ್ಲ. ಈಗ ಅದು ಆಯಿತೆಂದರೆ ಮನುಷ್ಯನ ಪಿಪಾಸು ತನಕ್ಕೆ ಏನೆನ್ನಬೇಕು? 


ನನ್ನಿಂದ ಹಂಚಿಹೋದ ಧ್ವನಿಮುದ್ರಣದ ಬಗ್ಗೆ ನಾನು ಹೇಳುವುದಲ್ಲ ಅದನ್ನು ಸ್ವೀಕರಿಸಿ ಪ್ರೋತ್ಸಾಹಿಸಿದ ಬಳಗವೇ ಮಾತನಾಡುತ್ತದೆ. ಹಲವಾರು ಕ್ಯಾಸೆಟ್ ಗಳು ತೀರ ಜೀರ್ಣಾವಸ್ಥೆಯಲ್ಲಿದ್ದರೆ ಅದನ್ನು ತಡರಾತ್ರಿಯವರೆಗೂ ಛಲದಿಂದ ದುರಸ್ತಿಗೊಳಿಸಿ ಕಂಪ್ಯೂಟರ್ ನಲ್ಲಿ ದಾಖಲಿಸುವುದಕ್ಕೆ ಬಹಳಷ್ಟು ಶ್ರಮವನ್ನು ವಿನಿಯೋಗಿಸಿದವನು. ಅದರ ಸಂಗ್ರಹಕ್ಕಾಗಿಯೂ ಬಹಳಷ್ಟು ಸಮಯವನ್ನು ಧನವನ್ನೂ ವ್ಯಯಮಾಡಿದವನು. ಇದು ಕೇವಲ ಯಕ್ಷಗಾನದ ಅಮೂಲ್ಯ ರತ್ನಗಳು ದಾಖಲೆಯಲ್ಲಿ ಉಳಿದು ಬಿಡಲಿ ಎಂಬ ಉದ್ದೇಶಮಾತ್ರ ಅಲ್ಲಿತ್ತು. ಈ ಯಕ್ಷಗಾನ ಧ್ವನಿ ಮುದ್ರಣಗಳನ್ನು ಮೂಲದಲ್ಲಿ ನಿರ್ಮಿಸಿದ ಕಲಾವಿದರುಗಳಿಗೆ, ನಿರ್ಮಾತೃಗಳಿಗೆ ಸದಾ ಕೃತಜ್ಞನಾಗಿ ಇದು ಮಾರಾಟದ ವಸ್ತುವಾಗಬಾರದು. ಕೇವಲ ಚಿಲ್ಲರೆ ದುಡ್ಡಿನ ಆಸೆಗೆ ಇದರ ಮೌಲ್ಯ ಸೀಮಿತಗೊಳ್ಳದೇ ಮೌಲ್ಯವನ್ನು ನಿರ್ಧರಿಸಲಾಗದ ವಸ್ತುವೆಂದೇ ನನ್ನ ಅನಿಸಿಕೆ. ನನಗೆ ಇದರಿಂದ ಕೀರ್ತಿಯನ್ನೋ ಹಣವನ್ನೋ ಆರ್ಜಿಸುವ ಇರಾದೇ ಇರುತ್ತಿದ್ದರೆ ಇಷ್ಟುವರ್ಷ ಅದನ್ನು ಹಾಗೇ ಇರಿಸಬೇಕಿತ್ತೇ? ಬುದ್ಧಿ ಇದ್ದವರು ತಿಳಿದುಕೊಳ್ಳಬೇಕು. ನನ್ನಲ್ಲಿ ಬಂದು ಕೇಳಿದವರಿಗೆ ಧರ್ಮಾರ್ಥವಾಗಿ ಅಭಿಮಾನದಿಂದ ಹಂಚಿದ ನನಗೆ ಈಗ ಇವರ ಈ ಸ್ವಾರ್ಥ ಪ್ರವೃತ್ತಿಯಿಂದ ತೀವ್ರವಾದ ಅಘಾತವಾಗಿದೆ. ಬಣ್ಣ ಬಣ್ಣದ ಕವರ್ ನಲ್ಲಿ ತಮ್ಮ ತಮ್ಮ ಕಲರ್ ಪೋಟೋದೊಂದಿಗೆ ಸಿ, ಡಿ. ಅಥವಾ ಡಿವಿಡಿಯನ್ನು ಬಿಡುಗಡೆಮಾಡುವ ಇವರ ಪ್ರಚಾರ ಪ್ರಿಯ ಸ್ವಾರ್ಥ ಲೋಲುಪತೆಗೆ ನಿಸ್ವಾರ್ಥ ಯಕ್ಷಗಾನ ಅಭಿಮಾನಿಗಳ ಶ್ರಮ ಬೇಕಾಗಿತ್ತೆ? 
ಒಂದುವೇಳೆ ಇಂತಹ ಧ್ವನಿ ಮುದ್ರಣವನ್ನು ಉಚಿತವಾಗಿ ಯಕ್ಷಗಾನ ಅಭಿಮಾನಿಗಳಿಗೆ ಹಂಚುತ್ತಿದ್ದರೆ ನಮ್ಮ ಆಕ್ಷೇಪವಿರುತ್ತಿರಲಿಲ್ಲ. ಆದರೆ ಇದನ್ನು ಮಾರಟ ಮಾಡುವುದು ಮತ್ತು ಅವರಲ್ಲಿನ ಹೆಸರು ಮಾಡಬೇಕೆನ್ನುವ ಮೂಲ ಸ್ವಾರ್ಥಮಯ ಉದ್ದೇಶ ಮಾತ್ರ ನಮ್ಮ ನಿಸ್ವಾರ್ಥ ಉದ್ದೇಶವನ್ನು ಅಣಕಿಸುವಂತೆ ಅವಹೇಳನ ಮಾಡುವಂತಹುದಾಗಿದೆ. ಇದೊಂದು ಅಕ್ಷಮ್ಯ ಅಪರಾಧ. ಯಕ್ಷಗಾನ ಸಂಬಂಧಿಸಿದ ಈ ಕಾರ್ಯಕ್ರಮಕ್ಕೆ ನನ್ನ ಯಾವುದೇ ಅಕ್ಷೇಪವಾಗಲೀ ಇರುವುದಿಲ್ಲ. ಕಾರ್ಯಕ್ರಮ ನಡೆಯಲಿ ಯಕ್ಷಗಾನಂ ಗೆಲ್ಗೆ ಎಂದು ಹಾರೈಸುವವ ನಾನು. 
ಇದರ ಪದಾಧಿಕಾರಿಗಳು ಇದರಲ್ಲಿ ಭಾಗಿಯಾದವರೆಲ್ಲರೂ ಈ ಸ್ವಾರ್ಥ ಸಾಧನೆಯ ಅಭಾಸಕ್ಕೆ ಉತ್ತರಿಸಬೇಕಾದವರು. ದಕ್ಷಯಜ್ಞದಲ್ಲಿ ಭಾಗಿಯದವರೆಲ್ಲರೂ ಈಶ್ವರ ದ್ವೇಷಿಗಳು ಎಂದು ಶಿವನು ಪರಿಗಣಿಸಿದ ಹಾಗೆ, ಇದು ಸಮಸ್ತ ಯಕ್ಷಗಾನಕ್ಕೆ ಅವಮಾನಿಸಿ ಲೇವಡಿ ಮಾಡಿದಂತೆ. ತೀರಾ ವಿಷಾದನೀಯ ಮತ್ತು ಅವಹೇಳನಕಾರೀ ಕೃತ್ಯವಿದು. ಈ ಬಳಗದಲ್ಲಿರುವ ಎಲ್ಲರೂ ಇದಕ್ಕೆ ಜವಾಬ್ದಾರರು.

ಈ ಧ್ವನಿ ಮುದ್ರಣ ಬಿಡುಗಡೆಯಾಗುವ ಪ್ರಕಟನೆಯನ್ನು ಕಂಡು ನಮ್ಮ ಹಲವು ಮಿತ್ರರು ಈಬಗ್ಗೆ ಹಾಡುಗಲನ್ನು ಒದಗಿಸಿದ ಸಂಗ್ರಹಕಾರಲ್ಲಿ ಕೇಳಿದಾಗ ಉಡಾಫೆಯಿಂದ ಮತ್ತು ಪ್ರಶ್ನೆಯ ಗಂಭೀರತೆಯನ್ನು ತಿಳಿಯದೇ ಪ್ರತಿಕ್ರಿಯಿಸಿದ್ದಾರೆ. ಸ್ವತಃ ನಾನೂ ಸಹ ಅಕ್ಷಯ ಕೃಷ್ಣರಲ್ಲಿ ಕೇಳಿದಾಗ ಅಗಲೂ ಅವರೂ ತೀರ ನೀರಸವಾಗಿ ಉಡಾಫೆಯಿಂದ ಸಂದೇಶದ ಉತ್ತರ ನೀಡಿದ್ದಾರೆ. ಇದು ನಿಜಕ್ಕೂ ಖೇದನೀಯ. 
ಮೂಲತಃ ನಿರ್ಮಿಸುವಾಗ ನಾನಾಗಲೀ ನಮ್ಮ ಮಿತ್ರರಾಗಲೀ ಸಂಬಂಧಿಸಿದವರಿಂದ ನಿರ್ಮಾತೃಗಳಿಂದ ಯಾವುದೇ ಹಕ್ಕುಗಳನ್ನು ಆಗಲೀ ಸಮ್ಮತಿಯನ್ನಾಗಲೀ ಪಡೆದಿಲ್ಲ ನಿಜ. ಅದು ಅಪರಾಧವೂ ಹೌದು. ಹಿಂದಿನನ ಮೌಲ್ಯ ಕಟ್ಟಲಾಗದ ಪಳೆಯುಳಿಕೆಗಳನ್ನು ಉಳಿಸಿ ಸಂರಕ್ಷಿಸುವಲ್ಲಿ ಇದು ಅಪರಾಧ ಎಂದು ಪರಿಗಣಿಸಬೇಕಾದ್ದಿಲ್ಲ ಎಂಬುದು ನಮ್ಮ ನಂಬಿಕೆ. ನಿರ್ನಾಮವಾಗಿ ಹೋಗುವ ಅಮೂಲ್ಯ ವಸ್ತುಗಳನ್ನು ಉಳಿಸುವ ಏಕಮಾತ್ರ ಉದ್ದೇಶಮಾತ್ರ ಆಗ ನಮ್ಮಲ್ಲಿ ಇದ್ದದ್ದು. ಮತ್ತು ಅದನ್ನು ಜನಮಾನಸದಲ್ಲಿ ಜೀವಂತವಾಗುವಂತೆ ಮಾಡಿ ಕಲೆ ಮತ್ತು ಕಲಾವಿದರ ಸ್ಮರಣೆಯನ್ನು ಜಾಗೃತವಾಗಿಸುವ ನಿಸ್ವಾರ್ಥ ಉದ್ದೇಶದಿಂದ ಮಾಡಿದೆವು. ಇದನ್ನು ಚಿಕ್ಕಾಸೂ ಬೇಡದೆ ಮಾರಾಟ ಮಾಡದೆ ಉಳಿಸಿಕೊಂಡು ಬಂದಿದ್ದೇವೆ. 

ಇನ್ನು ಇದಕ್ಕಾಗಿ ಸೃಷ್ಟೀಕರಣವನ್ನೋ ಇನ್ನೇನೋ ಮುಚ್ಚಿಹಾಕುವ ವಿವರಣೆಯನ್ನು ಇವರುನೀಡಬಹುದು. ಆದರೆ ಅಷ್ಟೆ ಸಾಕೆ? ಇದರಿಂದ ಸಂಗ್ರಹವಾದ ಹಣವನ್ನು ಕ್ಷೇಮನಿಧಿಯೋ ಮತ್ತೋಂದು ಎಂದು ಸಮಾಧಾನ ಪಡಿಸುವ ಮಾತುಗಳಿರಬಹುದು. ಆದರೆ ಒಂದು ಸಲ ಚೌರ್ಯತನದಿಂದ ಕದ್ದದ್ದನ್ನು ಕಾಣಿಕೆಯಾಗಿಯೋ ದಾನವಾಗಿಯೋ ನೀಡಿದ್ದಲ್ಲಿ ಮಾಡಿದ ಕಳ್ಳತನ ಅಪರಾಧ, ಸಾಚವಾಗುವುದಕ್ಕೆ ಸಾಧ್ಯವಿದೆಯೆ? ಸಾಧ್ಯವಿದೇ ಎಂದಾದರೆ ಇವರ ಮನೋಭಾವದ ಬಗ್ಗೆ ಮರುಗಬೇಕು.

Thursday, June 4, 2015

ತಿಳಿಯದೇ ಇರುವಲ್ಲಿ ತಿಳಿಯುಬೇಕಾದವುಗಳು

ನಾವು ಮಗುವನ್ನು ದೇವರಂತೆ ಕಾಣುತ್ತೇವೆ. ನಿಷ್ಕಲ್ಮಷ ಮುಗ್ದ ಮನಸ್ಸಿನ ಪುಟ್ಟ ಕಂದನನ್ನು ದೇವರಂತೆ ಕಾಣುವುದು ಸಾಮಾನ್ಯ. ಇಲ್ಲಿ ಮಗುವಿನ ದೇಹವಾಗಲಿ ವಯಸ್ಸಾಗಲೀ ಗೌರವಿಸಲ್ಪಡುವುದಲ್ಲ. ಇಲ್ಲಿ ದೈವೀ ಭಾವ ಅಗೋಚರವಾಗಿ ಪ್ರೇರೇಪಣೆಗೆ ಕಾರಣವಾಗುತ್ತದೆ. ಇಂತಹ ದೈವೀಗುಣ  ವಿರಳವಾಗಿ ದರ್ಶನವಾದಾಗ ಅದು ಚಿರಸ್ಥಾಯಿಯಾಗಿ ಉಳಿದು ಬಿಟ್ಟು ನಮ್ಮೊಳಗಿನ ಸದ್ಭಾವನೆಯನ್ನು ಮೀಟಿ ಜಾಗೃತಗೊಳಿಸುತ್ತದೆ. ಅಂತಹ ಒಂದು ಘಟನೆ ಇದು.  
ಅದು ದೂರದರ್ಶನ ಚಂದನವಾಹಿನಿಯಲ್ಲಿ ಸಂದರ್ಶನ ಕಾರ್ಯಕ್ರಮದ ಚಿತ್ರೀಕರಣ. ಹಿರಿಯ ಭಾಗವತರಾದ ಶ್ರೀ ಬಲಿಪ್ಪ ನಾರಾಯಣ ಭಾಗವತರ ಸಂದರ್ಶನ. ಸಂದರ್ಶಕ ಶ್ರೀ ಮಹಾಬಲ ಮೂರ್ತಿ ಕೊಡ್ಲೆಕೆರೆ ಮತ್ತು ಭಾಗವತರು ಕ್ಯಾಮೆರಕ್ಕೆ ಅಭಿಮುಖರಾಗಿ ಕುಳಿತಿದ್ದಾರೆ. ಒಂದೆರಡು ಮಂದಿ ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ. ಇನ್ನೇನು ಸಂದರ್ಶನ ಆರಂಭವಾಗಬೇಕು. ಕ್ಯಾಮೆರ ಮತ್ತು ತಂತ್ರಜ್ಞರು ಸಿದ್ಧವಾಗಿದ್ದಾರೆ. ಕಾರ್ಯಕ್ರಮದ ನಿರ್ದೇಶಕರು ಮೊದಲೇ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಬೇರೆ ಯಾರೂ ಮಾತನಾಡಕೂಡದು. ನಿಶ್ಯಭ್ದತೆಯನ್ನು ಪಾಲಿಸಬೇಕು. ಎಲ್ಲವೂ ನೀರವ ಗಂಭೀರ ಮೌನದ ವಾತಾವರಣ. ಕಣ್ಣು ಕೋರೈಸುವ ಬೆಳಕಿನಡಿ ಇಬ್ಬರು ಕುಳಿತಿದ್ದಾಗ ....ಬಲಿಪ್ಪರು ಕೇಳೀದರು  ಅವರಿಗೂ ಸುತ್ತಲಿನ ವಾತವಾರಣ ಒಂದು ರೀತಿಯ ಭಯವನ್ನು ಕುತೂಹಲವನ್ನೂ ಹುಟ್ಟಿಸಿತ್ತು. ಶಿಸ್ತಿನಲ್ಲಿ ಗಂಭೀರವಾಗಿ ಕುಳಿತಿದ್ದರು.  ಹಾಗಾಗಿ ನಿಧಾನವಾಗಿ ಕೇಳಿದರು
    " ಇದು.... ಕೈ ಎಲ್ಲ ತುರಿಕೆ ಆದ್ರೆ ತುರಿಸಬಹುದಲ್ಲಾ? "  ಈ ಪ್ರಶ್ನೆ ಅದೆಂತಹ ಮುಗ್ಧತೆಯ ದರ್ಶನವನ್ನು ಮಾಡಿಸಿತ್ತು ಎಂದರೆ ಕೇಳುವ ಕಿವಿಯೂ ಕಾಣುವ ಕಣ್ಣೂ ನಂಬಲಿಲ್ಲ. ಮತ್ತೂ ಸ್ವಲ್ಪ ಕಳೆದು ಮತ್ತೊಂದು ಪ್ರಶ್ನೆಯಂತು ಮುಗ್ದತೆಯ ಸಾಕ್ಷಾತ್ ದರ್ಶನವನ್ನು ಮಾಡಿಸಿತ್ತು.   ಅಲ್ಲೇ ಅವರೆದುರು ಒಂದು ಟೀಪಾಯ್ ಮತ್ತು ಅದರ ಮೇಲೆ ಎರಡು ಲೋಟ ನೀರು ಇಟ್ಟಿದ್ದರು. ಅದನ್ನು ನೋಡಿ " ಇದು ನೀರು ಬೇಕಿದ್ರೆ ಕುಡಿಬಹುದಲ್ಲಾ?"  ಇದು ಮುಗ್ಧತೆಯ ಪರಮಾವಧಿ !
          ಕೇಳುವಾಗ ಇದು ಹಾಸ್ಯಾಸ್ಪದವಾಗಿ ಕಾಣುವವರು ಇರಬಹುದು. ಆದರೆ ಅದರೊಳಗಿನ ಭಾವ ಗುರುತಿಸುವಾಗ, ಇಂತಹವ್ಯಕ್ತಿಗಳು ಇರುವುದಕ್ಕೆ ಸಾಧ್ಯವೇ? ಆಶ್ಚರ್ಯವಾಗುತ್ತದೆ.  ಮಕ್ಕಳನ್ನೂ ಮರಿಮಕ್ಕಳನ್ನು ಒಂದೇ ಮನೆಯಲ್ಲಿ ಇಂದಿಗೂ ಕಾಣುವ ಅವಿಭಕ್ತ ಕುಟುಂಬದ ಒಬ್ಬ ಹಿರಿಯ ಯಜಮಾನ ವ್ಯಾವಹಾರಿಕ ಪ್ರಪಂಚದಲ್ಲಿ ಯಶಸ್ವೀ ಸಂಸಾರಿಯಾದ ಗೃಹಸ್ಥ ಹೇಳುವ ಮಾತು. ಹೌದು, ಇವರು ತನ್ನ ಮುಗ್ದತೆ ಸಧ್ಭಾವನೆಯಿಂದಲೇ ಎಲ್ಲವನ್ನು ಕಂಡವರು ಪಡೆದವರು..   ಆದರೆ ಕಳಕೊಂಡವರು ಎಂದು ನಾನು ಹೇಳುವುದಿಲ್ಲ. ಕಳಕೊಂಡದ್ದೇನಿದ್ದರೂ ಅದು ಕಳೆದುಕೊಂಡದ್ದಲ್ಲ ಅದು ದೈವೀಗುಣದ ಪ್ರಸಾದರೂಪ. ಮದುವೆಯಾಗಿ ಕೆಲವು ದಿನಕ್ಕೆ ಬಂಧುವರ್ಗದಿಂದ ದೂರಾಗಿ  ಬದುಕುವ ಇಂದಿನ ಪ್ರಪಂಚದಲ್ಲಿ ಈ ಬಲಿಪ್ಪರದ್ದು ಮಹತ್ಸಾಧನೆ. ಇಂದಿನ ಜನಾಂಗಕ್ಕೆ ಬದಕನ್ನು ಬದುಕಿ ತೋರಿಸುವ ರೀತಿ ಇದು. ಇದರಲ್ಲಿ ಮುಗ್ಧತೆಯನ್ನು ಕಾಣುವುದು ಸಾಧ್ಯವಿಲ್ಲ. ಇಂತಹ ವ್ಯಕ್ತಿ     ಸರಿ ಸುಮಾರು ಎಪ್ಪದರ ದಶಕದ ವಯೋವೃದ್ಧರ ಈ ಸರಳವಾದ ಪ್ರಶ್ನೆಗಳು ಮೂಕ ವಿಸ್ಮಿತನನ್ನಾಗಿ ಮಾಡಿತ್ತು.  ಇದಕ್ಕೆ ಕಾರಣ ಪ್ರತಿಯೋಂದನ್ನೂ ಗೌರವ ಪೂರ್ಣವಾಗಿ ಮನ್ನಿಸಿ ನೋಡುವ ಈ ವೃದ್ದ ಮನಸ್ಸಿನ ಗುಣ. ಎಲ್ಲಿ ಅಪಚಾರವಾದೀತೋ ಎಂಬ ಆತಂಕ. ದುರಹಂಕಾರದ ದಾರ್ಷ್ಟ್ಯ ರವಷ್ಟೂ ಇಲ್ಲದ ಸರಳತೆ. ಯಕ್ಷಗಾನವೆಂದೇಕೇ ಎಲ್ಲಿಯೂ ಕಾಣಲಾಗದ ವ್ಯಕ್ತಿತ್ವವಿದು.
    ಇಂದು ಪೂಜ್ಯನೀಯ ಎನ್ನಿಸಿಕೊಂಡವರು ತಮ್ಮ ದುರಹಂಕಾರಿ ಢಾಂಬಿಕ ವ್ಯಕ್ತಿತ್ವವನ್ನು ತುಂಬಿಕೊಂಡು ಪೂಜನೀಯ ಸ್ಥಾನಕ್ಕೆ ಪ್ರಶ್ನೆಯಾಗಿ ಕಾಡುವಾಗ ಬಲಿಪ್ಪರ  ಈ ಮುಗ್ಧತನ ಪೂಜ್ಯನೀಯ ಸ್ಥಾನದಲ್ಲಿ ಅವರನ್ನು ಕೂರಿಸುತ್ತದೆ. ತನ್ನ ಹಿಂದೆ ಚೂರಿ ಹಾಕುವುದನ್ನು ತಿಳಿದಿದ್ದರೂ ಅಂತಹಾ ವ್ಯಕ್ತಿಗಳನ್ನು ಇವರು ನಮ್ಮವರು ಎಂದು ಮುಕ್ತವಾಗಿ ಸೇರಿಸುವ ಗುಣ,  ಮಗು ಅತ್ತರೂ ನಕ್ಕರೂ ತಾನು ಮಗುವಾಗಿಯೇ ಇದ್ದುಬಿಡುವಂತೆ ಇರುವ ಗುಣ, ಇದು ಕೇವಲ ಮನುಷ್ಯ ಸ್ವಭಾವಕ್ಕೆ ದಕ್ಕುವದ್ದಲ್ಲ. ಇದನ್ನು ಕಂಡಾಗ ನೆನಪಿಗೆ ತಂದುಕೊಂಡಾಗ ಎಂತಹ ಉದ್ರಿಕ್ತ ಮನಸ್ಸು ಶಾಂತವಾಗಿ ಬಿಡುತ್ತದೆ. ಹೌದು ಏನೂ ತಿಳಿಯದೇ ಇರುವಲ್ಲೂ ಕಲಿಯುವಂಥದ್ದು ಬಹಳಷ್ಟಿದೆ  ಎಂದನ್ನಿಸುತ್ತದೆಯಲ್ಲವೆ?