"ಇದು ವಿಮರ್ಶೆಯಲ್ಲದ ಚಿಂತನ"

Friday, November 10, 2017

ಬಲಿಪ ಅಗರಿಯ ಸುತ್ತ


“ಮಣಿದಾತ ನುಡಿದಾ ಪಾವನನಾದೆ...”  ವಾಮನ ಚರಿತ್ರೆ ಪ್ರಸಂಗದ ಸುಂದರ ಪದ, ಹಿರಿಯ ಭಾಗವತ ಶ್ರೀ ಅಗರಿ ಶ್ರೀನಿವಾಸ ಭಾಗವತರ ಕಂಠದಲ್ಲಿ ಕೇಳುವಾಗ ಮನಸ್ಸು ತಲ್ಲೀನವಾಗಿ ಹೃದಯ ತಾಳ ಬಡಿಯುತ್ತದೆ. ಮಧುರವಾದ ಆಲಾಪನೆಯ ಗುಂಗು ಬಹಳ ಹೊತ್ತು ರಿಂಗಣಿಸುತ್ತಾ ಸುತ್ತುತ್ತಿರುತ್ತದೆ. ನನ್ನ ಯಕ್ಷಗಾನ ಸಂಗ್ರಹದಲ್ಲಿ ಅತ್ಯಮೂಲ್ಯ ಸಂಗ್ರಹಗಳಲ್ಲಿ ಅಗರಿ ಪದಗಳೂ ಸೇರಿವೆ. ಮನಸ್ಸು ಏಕತಾನತೆಗೆ ಜಾರಿದಾಗ ಕಂಪ್ಯೂಟರ್ ಮೂಲೆಯಲ್ಲಿದ್ದ ಆಗರಿ ಪದವನ್ನು ತೆರೆದು ಕೇಳಿದರೆ ಸಾಕು ಮನಸ್ಸಿಗೆ ಆವರಿಸಿದ್ದ ಮ್ಲಾನತೆ  ದೂರವಾಗಿ ಯಕ್ಷಗಾನದ ಅಮಲು ಏರಿಬಿಡುತ್ತದೆ. ಅದನ್ನು ಅಮಲು ಎನ್ನುವುದೇ ಸೂಕ್ತ. ಒಂದು ಸಲ ಅದರ ಮೋಹಕ್ಕೆ ಒಳಗಾಯಿತೋ ನಂತರ ಅದರ ಬಾಹುಗಳಿಂದ ಹೊರಬರುವುದು ಸುಲಭವಲ್ಲ. ಅಗರಿ ಪದಗಳ ಮೋಡಿ ಅಂತಹುದು. ಅಗರಿ ಪದ ಇದ್ದರೆ ಅಲ್ಲಿ ದೀವಾಣ ನೆಡ್ಲೆ ಚಿಪ್ಪಾರು ಅಥವಾ ಕುರುಪ್ ಇವರಲ್ಲಿ ಯಾರಾದರು ಒಬ್ಬರು ಇದ್ದೇ ಇರುತ್ತಾರೆ. ಅದೊಂದು ಬಗೆಯ ಲಯ ವಿನ್ಯಾಸದಲ್ಲಿ ಅಗರಿಯ ಮಧುರ ಕಂಠ ಬೆರೆತು ಹೋದರೆ ಮತ್ತೆ ನಮ್ಮ ಮನಸ್ಸು ಆ ಪ್ರವಾಹಕ್ಕೆ ಸೆಳೆಯಲ್ಪಡುವುದಕ್ಕೆ ಬೇರೆ ಕಾರಣ ಬೇಕಾಗಿಲ್ಲ.

ಹೀಗೆ ಮ್ಲಾನವಾದ ಮನಸ್ಸು ಅಗರಿಯ ಪದಗಳಿಗೆ ತಡಕಾಡಿದಾಗ ಸಿಕ್ಕಿದ್ದು ಗದಾಯುದ್ದ ಪ್ರಸಂಗ ಪದಗಳು. ಅದನ್ನು ಕೇಳುತ್ತಿದ್ದಂತೆ ಚಂದ್ರಲೋಕ ಪ್ರಯಾಣ ಮಾಡಿದ ಅನುಭವ. "ಕೇಳು ಧರ್ಮಜ ಮಾತಾ ನಾ ಪೇಳುವೆನೈ ಯಮಜಾತ..." ಎನ್ನುವಾಗ ಭಗವಂತ ಅಗರಿಯ ಮುಖೇನ ನಮಗೇ ಸಾಂತ್ವನ ಹೇಳುತ್ತಿದ್ದಾನೋ ಎನ್ನುವ ಮುದ್ದಾದ ಸ್ವರ ನಮ್ಮನ್ನಾವರಿಸುತ್ತದೆ.  ಹೀಗೆ ಅಗರೀ ಕಂಠದ ಗದಾಯುದ್ದದ ಒಂದೊಂದು ಪದಗಳು ಅದೆಷ್ಟು ಸೌಂದರ್ಯದಿಂದ ಲಯಬದ್ಧವಾಗಿ ಕೂಡಿದೆ ಎನ್ನುವ ಹಾಗೇ ಆಗುತ್ತಿದ್ದರೆ, ಈಗ ಅದೇ ಗದಾಯುದ್ಧದ ಮೈನವಿರೇಳಿಸುವ ಪದಗಳು ಕಳೆ ಗುಂದಿ ಕಳಪೆಯಾಗಿರುವುದು ಮಾತ್ರವಲ್ಲ ಒಂದು ಭವ್ಯ ಪರಂಪರೆಯನ್ನೇ ಕುಲಗೆಡಿಸಿ ಬಿಟ್ಟಿದೆ ಅನ್ನಿಸುತ್ತದೆ.
ಅಗರಿಯ ಪದಗಳ ಸೌಂದರ್ಯ ಇರುವುದೇ ಹಾಗೆ. ಮಿಂಚಂತೆ ಮಿಂಚಿ ಮರೆಯಾಗುವ ಸ್ನಿಗ್ಧ ಸೌಂದರ್ಯ. ಪದ ಆರಂಭವಾಗಿ ಅರೆನಿಮಿಷದಲ್ಲಿ ಪದ ಮುಗಿದು ಹೋದರು ಆ ಪ್ರಭಾ ವಲಯ ಅರೆ ತಾಸಿಗೂ ವಿಸ್ತರಿಸಿಬಿಡುತ್ತದೆ.  .  ಅದ್ಭುತ ಶ್ರೀಮಂತಿಕೆಯ ಗಾಯನ ಲಯವಿನ್ಯಾಸ ನಮ್ಮನ್ನು ಮೋಡಿ ಮಾಡಿಬಿಡುತ್ತದೆ.  ಈಗ ಒಂದು ಪದವನ್ನು ಅನಾವಶ್ಯಕ ಅರೆ ತಾಸು ಕೊರೆದು ತಿಕ್ಕಿದರೂ ಮನಸ್ಸು ಯಕ್ಷಗಾನದ ಆಸ್ವಾದನೆಯ ಅನುಭವವನ್ನು ಪಡೆಯುವುದಿಲ್ಲ.  ಅಗರಿ ಶೈಲಿ ಈಗ ಗತ ಇತಿಹಾಸದ ಕುರುಹಾಗಿ ಮಾಯವಾಗುತ್ತಿದೆ. ಅಲ್ಲೋ ಇಲ್ಲೊ ಒಂದೊಂದು ಪದಗಳು ಕೇಳಿ ಬಂದರೂ ಅದನ್ನು ಅಗರಿ ಶೈಲಿ ಎಂದು ತೃಪ್ತರಾಗುವುದಕ್ಕೆ  ಮನಸ್ಸು ಒಪ್ಪುವುದಿಲ್ಲ. ಹರಿದ ವಸ್ತ್ರದ ತೂತನ್ನು  ವಿನ್ಯಾಸವಾಗಿ ಬದಲಿಸಿ ಹರುಕನ್ನು ಮುಚ್ಚಿದಂತೆ. ಏನಿಲ್ಲವೆಂದರೂ ವಸ್ತ್ರವನ್ನು ಹಾಕಿಕೊಂಡವನಿಗೆ ವಸ್ತ್ರ ಹರಿದಿದೆ ಎಂಬ ಅನಿಸಿಕೆ ಒಳಗೇ ಇರುತ್ತದೆ.

ತೆಂಕುತಿಟ್ಟು ಯಕ್ಷಗಾನದ ಪರಂಪರೆಯಲ್ಲಿ ಎರಡು ಪ್ರಧಾನ ಶೈಲಿಗಳು ಪರಂಪರೆಯ ಯಕ್ಷಗಾನ ಶೈಲಿ ಎಂದು ಕರೆಸಲ್ಪಡುತ್ತದೆ. ಒಂದು ಅಗರಿ ಶೈಲಿ ಇನ್ನೊಂದು ಬಲಿಪ ಶೈಲಿ. ಎರಡೂ ಕೂಡ ವಿಭಿನ್ನವಾದರೂ ಯಕ್ಷಗಾನದ ಪರಂಪರೆಯ ಶೈಲಿಗಳು. ಒಂದಷ್ಟು ಕಾಲ ಯಕ್ಷಗಾನದ ಸ್ತಂಭದಂತೆ ಆಧಾರವಾಗಿದ್ದು, ಶುದ್ದ ಯಕ್ಷಗಾನ ಲಯವನ್ನು ಕಾಯ್ದುಕೊಂಡು ಬಂದಂತಹಾ ಶೈಲಿಗಳು.  ಈ ಪದಗಳನ್ನು ಕೇಳುವಾಗ ಮನಸ್ಸು ಎಷ್ಟು ಹಿಂದಕ್ಕೆ ಸರಿಯುತ್ತದೊ ಹಾಗೇನೆ ವಾಸ್ತವಕ್ಕೆ ಬಂದಪ್ಪಳಿಸಿ ಈಗಿನ ವರ್ತಮಾನವನ್ನು ನೆನೆದು  ಗಾಬರಿಗೊಳ್ಳುತ್ತದೆ.  ಅದರಲ್ಲೂ ಅಗರಿ ಶೈಲಿ ಸಂಪೂರ್ಣವಾಗಿ ಇಲ್ಲವಾಗಿದೆ ಎನ್ನಬಹುದು. ಪರಿವರ್ತನೆಯ ಪ್ರವಾಹದಲ್ಲಿ ಇಂತಹ ಅದೆಷ್ಟೋ ವಿಷಯಗಳು ನಶಿಸಿದ್ದರೂ ಅಗರಿ ಶೈಲಿ ಮಾಯವಾಗಿದ್ದು ಯಕ್ಷಗಾನಕ್ಕೆ ಎಸಗಿದ ಅಪಚಾರವಾಗಿದೆ.
ಇಂದು ಯಕ್ಷಗಾನ ಭಾಗವತಿಕೆಯಲ್ಲಿ ಅಗರಿ ಬಲಿಪ ಶೈಲಿಯಲ್ಲದೇ ಇನ್ನೂ ಹಲವಾರು ಶೈಲಿಯನ್ನು ಹುಡುಕಿ ಕೊಡುವ ಬುದ್ದಿವಂತರಿರಬಹುದು. ಆದರೆ ಅದಾವುದೂ  ಸ್ವಂತ ಶೈಲಿಯಲ್ಲ. ಆ ಶೈಲಿ ಈ ಶೈಲಿ ಎಂಬ ಮುಖಚಿತ್ರಮಾತ್ರ. ವಾಸ್ತವದಲ್ಲಿ ಅದು ಒಂದೇ ಆಗಿದೆ.  ಸ್ವಂತವಾದ ಆಯಾಮವೇ ಇರುವುದಿಲ್ಲ. ಹಲವು ಪ್ರಭಾವಕ್ಕೆ ಒಳಗಾಗಿ ಒಂದು ರೂಪವನ್ನು ಪಡೆದುಕೊಂಡಿದೆ. ಒಂದಷ್ಟು ಅದು ಯಕ್ಷಗಾನದಲ್ಲಿ ಆಸ್ವಾದನೆಯಿಂದ ಸಂಚಲನೆಯನ್ನು ಉಂಟು ಮಾಡಿದರೂ ಅದು ಸ್ಥಾಯಿಯಾಗಿ ಒಂದೇ ಸ್ವಭಾವವನ್ನು ಹೊಂದಿಲ್ಲ. ಪರಿವರ್ತನೆಯಾಗುತ್ತಾ ಇದೆ.

ಅಗರಿ ಶೈಲಿಯಂತೆ ಅಲ್ಲದಿದ್ದರೂ ಬಲಿಪ ಶೈಲಿ ಸುದೃಢವಾಗಿ ತೋರಿದರೂ ಅದು ಅದೇ ಹಾದಿಯಲ್ಲಿ ಕ್ರಮಿಸುತ್ತಿದೆಯೋ  ಹೇಳುವುದು ಕಠಿಣ. ವಿಷಾದದಿಂದ ಕೆಲವರು ನಿಷ್ಠೂರವಾಗಿ ಹೇಳುವವರಿದ್ದಾರೆ. ಈ ಶೈಲಿಯೂ ಅಳಿವಿನಂಚಿನಲ್ಲಿದೆ ಎಂದು. ಅದನ್ನು ಅಲ್ಲಗಳೆಯುವ ಧೈರ್ಯವಿದೆಯೇ? ಆದರೂ ಸಹ ಬಲಿಪ ಶೈಲಿ ಯಕ್ಷಗಾನ ಪರಂಪರೆಯ ಅತೀ ಪುರಾತನ ಶೈಲಿ. ಇಂದು ಆ ಶೈಲಿ ಜೀವಂತವಾಗಿ ಉಳಿದಿದೆ ಎಂಬುದು ಸತ್ಯ. ಅದು ಉಳಿಯುವುದಕ್ಕೆ  ಈಗಿನ ಹಿರಿಯ ಬಲಿಪ್ಪರು ಕಾರಣ. ಯಕ್ಷಗಾನದ ಕಾಳಿಂಗ ನಾವಡರ  ಶಕೆ ಆರಂಭವಾದ ನಂತರ ಆ  ಪ್ರಭಾವವಕ್ಕೆ ಒಳಗಾಗದ ಭಾಗವತರೇ ಇಲ್ಲ.  ತೆಂಕು ಬಡಗು ಎಂಬ ಭೇದವಿಲ್ಲದೇ ಎಲ್ಲಾ ಭಾಗವತರೂ ಅದಕ್ಕೆ ಪ್ರಭಾವಿತರಾಗಿ ಒಂದಷ್ಟು ಜನ ತಮ್ಮ ತನವನ್ನು ಅಲ್ಲೋ ಇಲ್ಲೋ ಉಳಿಸಿದ್ದರೂ ಸ್ಥಾಯಿಯಾಗಿ ಅದೇ ಪ್ರಭಾವ ಸಾರ್ವತ್ರಿಕವಾಗಿ ಉಳಿದುಕೊಂಡಿದೆ. ಆದರೆ ಬಲಿಪ್ಪರು ಮಾತ್ರ ಆದಾವ ಪ್ರಲೋಭನೆಗೂ ಒಳಗಾಗದೆ ತಾನು ನಂಬಿದ ಹಾದಿ, ತಾನು ಅನುಸರಿಸಿದ ಕ್ರಮವನ್ನು ಎಷ್ಟೇ ಕಷ್ಟವಾದರು ಬಿಟ್ಟು ಬಿಡದೆ ಆ ಪ್ರಭಾವಕ್ಕೆ ಒಳಗಾಗದೇ ಜತನದಿಂದ ಉಳಿಸಿದರು. ಇದನ್ನು ವಿದ್ವಾಂಸ ಶ್ರೀ ಪ್ರಭಾಕರ ಜೋಷಿಯವರು ಹೇಳುವುದನ್ನು ಕೇಳಿದ್ದೇನೆ. ಮಾತ್ರವಲ್ಲ ಇದು ಸತ್ಯವೂ ಹೌದು. ಬಲಿಪ್ಪರು ಆ ಶೈಲಿಯೊಂದಿಗೇ ಉಸಿರಾಡಿದರು. ಇಂದಿನ ಜನಾಂಗ ಆ ಶೈಲಿಯನ್ನು ಆಸ್ವಾದಿಸುವುದಕ್ಕೆ ಅನುಭವಿಸುವುದಕ್ಕೆ ಸಾಧ್ಯಾವಾಗಿದ್ದರೆ ಅದಕ್ಕೆ ಕಾರಣ ಬಲಿಪ್ಪರ ಅಚಲವಾದ ನಿಲುವು, ಅವರ ನಿಷ್ಠೆ. ಮತ್ತು ಅರ್ಪಣಾ ಭಾವದಿಂದ ಇಂದು ಆ ಶೈಲಿ ಉಸಿರಾಡಿಕೊಂಡಿದೆ. ಈ ವಿಚಾರದಲ್ಲಿ ಯಕ್ಷಗಾನ ಲೋಕ ಬಲಿಪ್ಪರಿಗೆ ಕೃತಜ್ಞರಾಗಿರಬೇಕು. ಮುಂದೆಯು ಇದರ ಉಳಿವಿಗೆ ಈ ನಿಷ್ಠೆ ಅರ್ಪಣಾಭಾವದ ಆವಶ್ಯಕತೆ ಇದೆ.

          ಬಲಿಪ ಶೈಲಿ ಈಗಲೂ ಉಸಿರಾಡಿಕೊಂಡಿದೆ. ಯಕ್ಷಗಾನದಲ್ಲಿ ಈ ಶೈಲಿಗೆ ಅದರದ್ದೇ ಆದ ಒಂದು ಭದ್ರವಾದ ವಲಯವಿದೆ. ಅದೇ ಶೈಲಿಯನ್ನೇ ಗಾಢವಾಗಿ ಅನುಭವಿಸುವ ಬಹು ಸಂಖ್ಯೆಯ ಪ್ರೇಕ್ಷಕ ವರ್ಗವಿದೆ. ಅಭಿಮಾನಿಗಳಿದ್ದಾರೆ. ಹೆಚ್ಚೇಕೆ ಯಕ್ಷಗಾನ ಭಾಗವತಿಕೆ ಎಂದರೆ ಅದು ಬಲಿಪ ಶೈಲಿ ಮಾತ್ರಾ ಎಂಬ ಪ್ರತಿಪಾದಕರಿದ್ದಾರೆ.    ಆದರೆ ಇದೊಂದರಿಂದ ತೃಪ್ತರಾಗಿರುವುದು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸಾಧುವಾದದ್ದಲ್ಲ. ಯಾಕೆಂದರೆ ಯಕ್ಷಗಾನದ ಪರಂಪರೆಯ ವಿಚಾರ ಬಂದಾಗ ಒಂದು ಸ್ತಂಭವಾಗಿ ಆಧಾರವಾಗಿ ಇರಬೇಕಾದ ವಸ್ತು ಕೇವಲ ಒಂದು ವಲಯಕ್ಕೆ ಮಾತ್ರವೇ ಸೀಮಿತವಾಗಿದ್ದರೆ ಸಾಕೇ? ಹಾಗಾಗಿ ಇಂದು ಈ ಶೈಲಿಗೂ ಪೂರಕವಾದ ವಾತಾವರಣ ಇದೆ ಎಂದು ಅನ್ನಿಸುವುದಿಲ್ಲ. ಈವರೆಗೆ ಉಸಿರಾಡಿದ್ದು ಮುಂದೆ ಉಸಿರಾಟವನ್ನು ಮುಂದುವರೆಸಬಹುದೇ? ಅಥವಾ ಕೇವಲ ಉಸಿರಾಡಿಕೊಂಡಿದ್ದರೆ ಸಾಕೆ? ಇದು  ಉಳಿಯಬೇಕು ಎಂಬುದೇ ಆಶಯ. ಆದರೆ ಕೇವಲ ಆಶಯ ಒಂದರಿಂದ ಮಾತ್ರಾ  ಉಳಿಯಲಾರದು. ವ್ಯಾವಹಾರಿಕ ಪ್ರಪಂಚದಲ್ಲಿ ಯಕ್ಷಗಾನ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಈ ಬದಲಾವಣೆ ಆವಶ್ಯಕವೋ ಅನಾವಶ್ಯಕವೋ ತರ್ಕಿಸುವುದು ಬೇರೆ ವಿಚಾರ. ಆದರೆ ಪರಂಪರೆಯ ಶೈಲಿ ಉಳಿಯಬೇಕಾದದ್ದು  ಎಲ್ಲಾ ತರ್ಕಗಳನ್ನು ಮೀರಿದ ವಿಚಾರ. ಯಾಕಂದರೆ ಮೇಲೆ ಹೇಳೀದ ಹಾಗೆ ಪರಂಪರೆಯ ಎರಡು ಶೈಲಿಯಲ್ಲಿ ಎರಡೂ ಅಮೂಲ್ಯವೇ, ಇವುಗಳಲ್ಲಿ  ಒಂದಾದರೂ ಉಳಿಯದೇ ಇದ್ದರೆ ಬುಡವಿಲ್ಲದ ಮರದಂತೆ ಅದು ಯಾವ ಕಡೆಗೆ ಯಾವಾಗ  ವಾಲಿ ಬೀಳುತ್ತದೋ ಊಹಿಸುವುದು ಕಷ್ಟ
          ದಶಕಗಳ ಹಿಂದೆ ಯಕ್ಷಗಾನದ ಬದಲಾವಣೆಯ ಹಾದಿಯಲ್ಲಿರುವಾಗ ಹಿಮ್ಮೇಳದಲ್ಲೂ ಒಟ್ಟು ಯಕ್ಷಗಾನದಲ್ಲೂ ಸಾಕಷ್ಟು ಕ್ರಾಂತಿಯಾಗಿಬಿಟ್ಟಿತು. ಆಗ. ನವೀಕೃತ ಶೈಲಿಯನ್ನು ಇದು ಯಕ್ಷಗಾನವೇ ಅಲ್ಲ ಎಂಬ  ಒಂದಷ್ಟು ಅಭಿಪ್ರಾಯಗಳೂ ಇತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಬದಲಾಗಿ ಬದಲಾಗಿ ಈ ಬದಲಾವಣೆ ಮುಂದೊಂದು ದಿನ ಬಲಿಪ ಶೈಲಿಯೇ ಯಕ್ಷಗಾನದ್ದಲ್ಲ  ಎಂಬ ಸ್ಥಿತಿಯೂ ಬರಬಹುದು. ಹಾಗಾಗಿ ಇಂದು ತುದಿಯೂ ಇಲ್ಲದ ಬುಡವು ಇಲ್ಲದ ಒಂದು ಮಧ್ಯಂತರ ನೆಲೆಯಲ್ಲಿ ಯಕ್ಷಗಾನ ಜೀವಂತವಾಗಿದೆ. ಯಕ್ಷಗಾನ ಎಂಬುದರ ನೈಜ ರೂಪವೇ ಬದಲಾಗಿ ಹೋಗಿ ಯಕ್ಷಗಾನ ಎಂದರೆ ಯಾವುದು ಎಂಬ ಸಂದೇಹ ಬರುವಂತಾಗಿದೆ.     ವ್ಯಾವಹಾರಿಕ ಪ್ರಪಂಚದಲ್ಲಿ ಜೀವನ ಶೈಲಿ ಬದಲಾಗುವುದು ಸ್ವಾಭಾವಿಕ. ಅದು ಅನಿವಾರ್ಯ. ಆದರೂ ಕಳೆದು ಹೋಗಿದೆ ಎಂದು ಅನ್ನಿಸುವಾಗ ಒಂದಿಷ್ಟಾದರೂ ಸ್ಮರಣೆಗೆ ಉಳಿಸುವುದು ಬದಾಲಾವಣೆಯ ಅಪರಾಧಕ್ಕೆ ಪ್ರಾಯಶ್ಚಿತ್ತವಾಗಬಹುದು. ಮುಂದೊಂದು ದಿನ ಈ ಪ್ರಾಯಶ್ಚಿತ್ತಕ್ಕೂ ಅವಕಾಶ ದೊರೆಯದೇ ಇದ್ದಾಗ ನಮ್ಮ ಪೀಳಿಗೆಯೇ ಕ್ಷಮಿಸದೇ ಇರಬಹುದು.

          ಹಲವು ಗಿಡಗಳನ್ನು ನೆಟ್ಟು ಹೂದೋಟದ ಅಂದವನ್ನು ನೋಡಬಹುದು. ಆದರೆ ಅದರಲ್ಲಿ ಒಂದಾದರೂ ತುಳಸೀ ಗಿಡಬೇಡವೇ? ಮನುಷ್ಯನ ಹುಟ್ಟಿನಿಂದ ತೊಡಗಿ ಅದೆಷ್ಟೊ ಜನರು ನಮ್ಮ ಜೀವನದಲ್ಲಿ  ಭಾಗಿಗಳಾಗಿ ಬಂದು ಹೋಗಬಹುದು. ಆದರೆ ತಂದೆ ತಾಯಿ ಎಂಬ ಸ್ಥಾನ ಯಾವುದಕ್ಕೂ ಹೋಲಿಕೆಯಾಗದು. ಯಾಕೆಂದರೆ ನಮ್ಮ ಸಂಸ್ಕಾರ ನಮ್ಮ ಜೀವನ ಶೈಲಿ ರೂಪತಳೆಯುವುದೇ ಅಲ್ಲಿಂದ. ಅನ್ನವನ್ನು ಮರೆತವನು ಹಸಿವನ್ನೂ ಮರೆಯುತ್ತಾನೆ. ಹಸಿವನ್ನು ಮರೆತವನು ಜೀವನವನ್ನೂ ಮರೆಯುತ್ತಾನೆ. ಜೀವನವನ್ನು ಮರೆತ ಮೇಲೆ ಈ ಬದುಕಿಗೆ ಅರ್ಥವಾದರೂ ಇರಬಹುದೇ? ಜೀವನ ಮಾರ್ಗದಲ್ಲಿ ಪಯಣಿಸುವಾಗ ತಿಳಿದೋ ತಿಳೀಯದೆಯೋ ಈ ಮಹಾವೃಕ್ಷದ ನೆರಳಿಗೆ ತಾತ್ಕಾಲಿಕವಾಗಿಯಾದರೂ ಅಸರೆ ಪಡೆದಾಗಿದೆ. ಹಾಗೆ ಬಂದು ನಿಂತಾಗ ನೆರಳುಕೊಟ್ಟು ತಂಪೆರದ ಮರದ ತುದಿಯನ್ನು ಹೊರಬಂದು ನೋಡಿದಾಗ ಮರಕ್ಕೆ ಇನ್ನೂ ಚಿಗುರಿ ಬೆಳೆಯುವ ಶಕ್ತಿಯಿದೆ. ಅದರೆ ಕಿತ್ತು ಹೋದ ಬುಡವನ್ನು ಗಮನಿಸಬೇಡವೇ? 
                ಪರಂಪರೆಯ ಶೈಲಿಗೆ ಬೇರಾವುದೇ ಶಕ್ತಿಯ ಆವಶ್ಯಕತೆ ಇರುವುದಿಲ್ಲ. ಅದು ಉಳಿದು ಬಂದಿರುವುದೇ ಅದಕ್ಕೆ ಸಾಕ್ಷಿ. ಹಲವು ಶೈಲಿಗಳು ಹಲವು ಆಯಾಮಗಳು ಬಂದಂತೆ ಸರಿದು ಹೋದವು. ಯಾಕೆಂದರೆ ಯಕ್ಷಗಾನದ ಜೀವಜಲವನ್ನು ಹೀರಿಕೊಳ್ಳಲಿಲ್ಲ. ತಮ್ಮ ಅಸ್ತಿತ್ವವನ್ನಷ್ಟೇ ಅವಲಂಬಿಸಿ ಬಂದವುಗಳು. ಆದರೆ ಬಲಿಪ ಶೈಲಿಯಾಗಲೀ ಅಗರಿ ಶೈಲಿಯಾಗಲೀ ಅದು ಯಕ್ಷಗಾನದ ಜೀವರಸವನ್ನೂ ಹೀರಿಕೊಂಡು ಅದು ಇದಾಗಿ ಇದು ಅದಾಗಿ ಅಸ್ತಿತ್ವವನ್ನು ಕಂಡುಕೊಂಡ ಶೈಲಿಗಳು. ಹಾಗಾಗಿ ಅದನ್ನು ಯಕ್ಷಗಾನದಿಂದ ಭಿನ್ನವಾಗಿ ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ.
  ಹಿಂದೆ ಹಿರಿಯ ಬಲಿಪರು ಅಂದರೆ,  ಈಗಿನ ಹಿರಿಯ ಬಲಿಪ್ಪರ ಅಜ್ಜ ಅವರ ಪದಕ್ಕೂ ಈಗೀನ ಹಿರಿಯ ಬಲಿಪ್ಪರ ಪದಕ್ಕೂ ಯಾವುದೇ ವೆತ್ಯಾಸ ವಿರುತ್ತಿರಲಿಲ್ಲ. ಕೇವಲ ಧ್ವನಿ ರೂಪದಲ್ಲೋ ಅಥವಾ ಕಂಠ ಶಕ್ತಿಯಲ್ಲೋ ವೆತ್ಯಾಸವಿರಬಹುದಾದರೂ ಶೈಲಿ ಬದಲಾಗಲಿಲ್ಲ. ಅದು ಅಂದಿನಿಂದ ಇಂದಿನವರೆಗೂ ಉಳಿದು ಬಂದಿದೆ. ಹಾಗದಲ್ಲಿ ಅದರ ಅಂತಃ ಸತ್ವದದ ಅರಿವಾಗುತ್ತದೆ. ಅದಕ್ಕೆ ಕಾರಣ ಮೇಲೆ ಹೇಳಿದ ಹಾಗೆ ಈಗಿನ ಹಿರಿಯ ಬಲಿಪ್ಪರ ನಿಷ್ಠೆ ಮತ್ತು ಪ್ರಾಮಾಣಿಕತೆ ಕಾರಣ. ಅವರ ಅಚಲವಾದ ಅರ್ಪಣಾ ಭಾವ , ಸ್ಥಿರಚಿತ್ತ..ಹೀಗೆ ಕಾರಣ ವಿಶೇಷಗಳನ್ನು ಹಲವಾರು ನೀಡುತ್ತಾ ಹೋಗಬಹುದು. ಅದುದರಿಂದಲೇ ಇಂದು ಬಲಿಪ ಶೈಲಿ ಎಂದರೆ ಏನು ಎಂಬುದನ್ನು ಪೂರ್ಣವಾಗಿ ಅನುಭವಿಸುವುದಕ್ಕೆ ಸಾಧ್ಯವಾಗುತ್ತದೆ. ಯೋಚಿಸಿದರೆ ಇದರ ಗಂಭೀರತೆಯ ಅರಿವಾಗುತ್ತದೆ. ಒಂದಿಷ್ಟು ಬಾಹ್ಯ ಆಮಿಷಕ್ಕೋ ಪ್ರಭಾವಕ್ಕೊ ಒಳಗಾಗಿದ್ದರೆ ಇಂದು ಅಪೂರ್ವವಾದ ಶೈಲಿ ಇತಿಹಾಸದ ಭಾಗವಾಗಿಬಿಡುತ್ತಿತ್ತು.  ಕಲೆಯ ದೃಷ್ಟಿಯಲ್ಲಿ ಕಲೆಗೆ ಕಲಾವಿದನ ಕೊಡುಗೆ ಇರುವುದಿಲ್ಲ ಎಂದು ಹೇಳುತ್ತಾರೆ. ಕಲಾವಿದನೇ ಆ ಕಲೆಯಿಂದ ಪಡೆದುಕೊಳ್ಳುತ್ತಾನೆ ಎಂಬ ಮಾತಿದೆ. ಹಾಗೆ ನೋಡುವುದಾರೆ ಬಲಿಪ್ಪರು ಆ ಶೈಲಿಯನ್ನು ಜತನದಿಂದ ಉಳಿಸಿಕೊಂಡಿರುವುದೇ ದೊಡ್ಡ ಕೊಡುಗೆಯಾಗಬಹುದು. ಅದನ್ನು ಅದೇ ರೀತಿಯಲ್ಲಿ ಮುಂದಿನ ಪೀಳಿಗೆಗೆ ಉಳಿಸುವ ಮಹತ್ತರ ಜವಾಬ್ದಾರಿ ಆನಂತರದ ಭುಜಗಳ ಮೇಲೆ ಇದೆ. ಹಿರಿಯರು ತೋರಿದ ಅದೇ ಅರ್ಪಣಾ ಮನೋಭಾವ ನಿಷ್ಠೆ ಪ್ರಾಮಾಣಿಕತೆ ಇದ್ದಲ್ಲಿ ಈ ಶೈಲಿ ಇನ್ನೂ ಶ್ರೀಮಂತವಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ . ಆ ಮಹತ್ತರವಾದ ಜವಾಬ್ದಾರಿ ಇಂದಿನ ತಲೆಮಾರಿನಲ್ಲಿದೆ. ಅದು ಹೇಗೆ ನಿರ್ವಹಿಸಲ್ಪಡುವುದೋ  ಅದನ್ನು ಕಾಲವೇ ನಿರ್ಣಯಿಸಬೇಕು.
ಪರಿವರ್ತನೆ ಎಂಬುದು ಕಾಲಧರ್ಮ. ಅದಕ್ಕೆ ತಕ್ಕಂತೆ ಯಕ್ಷಗಾನವೂ ಸಾಕಷ್ಟು ಬದಲಾವಣೆಯನ್ನು ಅನುಭವಿಸಿದೆ. ಸಾಮಾನ್ಯವಾಗಿ ಹೇಳುವ ಮಾತಿನಮ್ತೆ ಯಾವುದು ಹೇಗೆ ತನ್ನ ಅಸ್ತಿತ್ವವನ್ನು ಉಳಿಸುತ್ತದೆ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ. ಅದರಂತೆ ಯಕ್ಷಗಾನ ಪರಂಪರೆಯ ಈ ಅಂಗವೂ ಶತಮಾನಗಳಿಂದ ಬದಲಾವಣೆ ಕಾಣದೆ ಅಸ್ತಿತ್ವದಲ್ಲಿ ಉಸಿರಾಡಿದ್ದು ಮುಂದೆಯೂ ಇದಕ್ಕಿಂತ ಉಜ್ವಲವಾಗಿ ನಿರಾಳವಾಗಿ ಉಸಿರಾಡಬೇಕು. ಇದು ಪ್ರಾಮಾಣಿಕವಾದ ಆಶಯ.
ಯಕ್ಷಗಾನಂ ಗೆಲ್ಗೆ


Monday, October 30, 2017

ಯಕ್ಷಲೋಕದ ಕುಮಾರ ರಾಮ ಶಿವರಾಮ ಜೋಗಿ

                        ಪೈವಳಿಕೆ ನಮ್ಮ ಮನೆಯ ಬಳಿಯ ವಳಚ್ಚಾಲು. (ಮುಳಿ ಹುಲ್ಲಿನ ಗುಡ್ಡೆ)ಯ ಮೈದಾನದಲ್ಲಿ ಸುರತ್ಕಲ್ ಮೇಳದ ಯಕ್ಷಗಾನ ಬಯಲಾಟ. ಪ್ರಸಂಗ “ ಅಮರ ಶಿಲ್ಪಿ ವೀರ ಕಲ್ಕುಡ”. ಅದರ ಒಂದು ಸನ್ನೀವೇಶ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಸಾಧಾರಣವಾಗಿ ಸುರತ್ಕಲ್ ಮೇಳದವರ ಪ್ರಸಂಗಗಳು ಕನ್ನಡ ಪೌರಾಣಿಕ ಪ್ರಸಂಗಗಳು ಎಂಬ ನಿರೀಕ್ಷೆಯೇ ಹೆಚ್ಚು. ಇದು ಎರಡೂ ಸೇರಿದ ಪ್ರಸಂಗ. ಇದರ ದ್ವಿತೀಯಾರ್ಧದಲ್ಲಿ ಕಲ್ಕುಡ ಮತ್ತು ಕಲ್ಲುರ್ಟಿ ಎರಡೂ ಅಣ್ಣ ತಂಗಿ ಯರಾಗಿ ಜನ್ಮವೆತ್ತುತ್ತವೆ. ಅದಾಗಲೇ ತಂದೆಯನ್ನು ಕಳೆದುಕೊಂಡು ತಬ್ಬಲಿಗಳಾಗಿ ಬದುಕುತ್ತಿರುವ ಕಾಲ. ಊರ ಬೈರರಸನ ಕುತಂತ್ರದಿಂದ ಅಣ್ಣ ವೀರ ಕಲ್ಕುಡ ಕೈ ಕಳೆದುಕೊಳ್ಳುತ್ತಾನೆ. ತಂಗಿ ಅಣ್ಣನನ್ನು ಅರಸಿಕೊಂಡು ಬರುವ ಸನ್ನಿವೇಶ. ಅಣ್ಣಾ ಅಣ್ಣಾ ಎಂಬ ತಂಗಿಯ ಧ್ವನಿಗೆ ಆರ್ತತೆಯಿಂದ ತಂಗಡೀ ಎಂದು ಕರೆಯುವ ಧ್ವನಿ ಎಂತಹವರ ಮನಸ್ಸನು ಕಲಕುತ್ತದೆ. ಅತ್ಯಂತ ಭಾವಪೂರ್ಣ ಅಭಿನಯ. ಈ ಭಾವ ಪೂರ್ಣ ಸನ್ನಿವೇಶಕ್ಕೆ ಸಭೆ ದಂಗಾಗಿ ಕಣ್ಣೀರು ಮಿಡಿಯುತ್ತದೆ. ಅಭಿನಯಿಸುವ ಕಲಾವಿದರು ಆಭಾಗದಲ್ಲಿ ಸ್ವಲ್ಪ ಅಪರಿಚಿತರೇ. ಸುರತ್ಕಲ್ ಮೇಳದ ಪ್ರಥಮ ಆಟ ಬೇರೆ. ಆ ಕಲಾವಿದರು ಬೇರೆ ಯಾರೂ ಅಲ್ಲ.  ಮಾತಿನಲ್ಲಿಯೂ ಭಾವಾಭಿನಯದಲ್ಲೂ ನಾಟ್ಯದಲ್ಲೂ ಹೆಣ್ಣಾಗಿ ತಂಗಿಯಾಗಿ ಹೆಸರಾಂತ ಕಲಾವಿದ ಎಂ ಕೆ, ರಮೇಶ್ ಆಚಾರ್, ಅಣ್ಣ ವೀರಕಲ್ಕುಡನಾಗಿ ಪ್ರಸಿದ್ದ ಪುಂಡುವೇಷಧಾರಿ ಶ್ರೀ ಶಿವರಾಮ ಜೋಗಿ.  ಜೋಗಿಯವರ  ಅತ್ಯಂತ ವಿಶಿಷ್ಟ ಧ್ವನಿ, ಅಪ್ಪಟ ಯಕ್ಷಗಾನದ  ಆಳವಾದ ಸ್ವರವದು. ಎಂತಹವರನ್ನೂ ತನ್ನೆಡೆಗೆ ಸೆಳೆಯುವ ಸೆಳೆತ ಅದರಲ್ಲಿತ್ತು. ವಾಸ್ತವದಲ್ಲಿ ಪ್ರಸಂಗದ ಆರಂಭದ ಭಾಗ ಪೌರಾಣಿಕ. ಅದರಲ್ಲಿ ಅದಾಗಲೇ ಶೇಣಿಯವರು ವಿಶ್ವರೂಪ ಮುನಿಯಾಗಿ ಮೋಡಿ ಮಾಡಿದ್ದರು. ಇನ್ನೂ ಪ್ರೇಕ್ಷಕ ಆ ಗುಂಗಿನಿಂದ ಹೊರಬಂದಿರಲಿಲ್ಲ. ನಂತರ ತೆಕ್ಕಟ್ಟೇ ಮಾಸ್ತರ್ ರವರ ಶಂಭು ಕಲ್ಕುಡ.  ಇದೆಲ್ಲದರ ನಡುವೆ    ಅಪ್ಪಟ  ಪುಂಡುವೇಷಧಾರಿಯ ಪಾತ್ರ ಅತ್ಯಂತ ಸೊಗಸಾಗಿ ಜನಮನ್ನಣೆಯನ್ನು ಪಡೆದಿತ್ತು. ಶೇಣಿಯವರು, ತೆಕ್ಕಟ್ಟೆ ಮಾಸ್ತರ್, ಕೊಕ್ಕಡ ಈಶ್ವರ ಭಟ್, ಬಾಬು ಕುಡ್ತಡ್ಕ ಹೀಗೆ ಅತ್ಯಂತ ಉತ್ತುಂಗದ ಕಲಾವಿದ ಅತಿರಥ ಮಹಾರಥರಿರುವಂತಹ ಸಮಯದಲ್ಲೂ ತನ್ನ ಮಾತಿನಿದಿಂದಲೂ ಕುಣಿತದಿಂದಲೂ ಜೋಗಿಯವರ ಪಾತ್ರ ಪ್ರಭಾವ ಬೀರುತ್ತಿತ್ತು. ಈ ಕಲಾವಿದರೂ ಯಾರಪ್ಪಾ?  ಎನ್ನುವಷ್ಟರ ಮಟ್ಟಿನ ನಿರ್ವಹಣೆ ಅದು ಅಂತಹ ಕಲಾವಿದರ ನಡುವೆ ಸಾಮಾನ್ಯವೇನಲ್ಲ.

                         ಅದು ಪುರಭವನದಲ್ಲಿ ಮಳೆಗಾಲದ ಪ್ರದರ್ಶನ. ಪ್ರಸಂಗ ಕಡುಗಲಿ ಕುಮಾರ ರಾಮ. ಇದು ಐತಿಹಾಸಿಕ ಪ್ರಸಂಗ.  ಬಹುತೇಕ ಸುರತ್ಕಲ್ ಮೇಳದ ಕಲಾವಿದರೇ ಆಗಿದ್ದರು ಇನ್ನೂ ಕೆಲವು ಅತಿಥಿ ಕಲಾವಿದರಿದ್ದರು. ಆ ಪ್ರಸಂಗದಲ್ಲಿ ವಿಶೇಷ ಆಕರ್ಷಣೆಯಾಗಿದ್ದದ್ದು ಶೇಣಿಯವರ ಮಹಮ್ಮದ್ ಬಿನ್ ತೊಗಲಕ್ ಪಾತ್ರ. ಆ ಪ್ರಸಂಗ ಹಲವು ವೈಶಿಷ್ಟ್ಯಗಳಿಂದ ಪ್ರಸಿದ್ದಿಯನ್ನು ಪಡೆದಿತ್ತು. ತೊಗಲಕನ್ ಮಗಳು ನೂರ್ ಜಹಾ( ಹೆಸರು ಸರಿಯಾಗಿ ನೆನಪಿಲ್ಲ) ಪ್ರಸಿದ್ದ ಸ್ರೀವೇಷಧಾರಿ ಶ್ರೀ ಶಾಮ ಸುಂದರ್, ಅಂತೇ ಮಾತಂಗಿಯಾಗಿ ಎಂ. ಕೆ ರಮೇಶ ಆಚಾರ್ ಅದ್ಭುತ ಪಾತ್ರ ನಿರ್ವಹಣೆ. ಶೇಣೀಯವರ ತೊಗಲಕ್ ನ ಮೋಡಿ ಇವುಗಳೆಲ್ಲದರ ನಡುವೆ ತನ್ನದೇ ಸಹಜ ಪ್ರಭಾವದಿಂದ ರಂಜಿಸಿದ್ದು ಶಿವರಾಮ ಜೋಗಿಯವರ ಕುಮಾರ ರಾಮನ ಪಾತ್ರ. ಬಹಳ ನಾನು ಇಷ್ಟ ಪಟ್ಟ ಅತ್ಯಂತ ಶ್ರೇಷ್ಠ ಪಾತ್ರ. ಪುಂಡು ವೇಷಧಾರಿಯಾಗಿ ಜೋಗಿಯವರ ನಿರರ್ಗಳ ಮಾತುಗಾರಿಕೆ ಹಿತಮಿತವಾದ ಕುಣಿತ ಭಾವೋತ್ಕರ್ಷ ಸನ್ನಿವೇಷದಲ್ಲಿ ಬಡಿದೆಬ್ಬಿಸುವ ಅಭಿನಯ ಅದು ಒಬ್ಬ ಪುಂಡುವೇಷಧಾರಿ ಸಂಪೂರ್ಣ ಅವಾಹನೆಗೊಂಡಂತೆ. ಇದು ಬಹಳ ಅಪರೂಪದ ಸಮ್ಮಿಲನ. ಇಂದು ಪುಂಡುವೇಷವೆಂದರೆ ಬರೀ ಕುಣಿತ. ಅರ್ಧ ತಾಸು ಕುಣಿದರೆ ಒಂದು ನಿಮಿಷ ಮಾತನಾಡುತ್ತಾರೆ.

                         ಅದರಂತೆ ಮತ್ತೊಂದು ಪ್ರಸಂಗ ಧರ್ಮದಾಸಿ ಅಥವಾ ರಾಜಾ ಯಯಾತಿ. ಇದರಲ್ಲಿ ಪ್ರಥಮಾರ್ಧದ ಯಯಾತಿಯ ನಿರ್ವಹಣೆ ಜೋಗಿಯವರದ್ದು ಇದು ಒಂದು ಅದ್ಭುತ ಪಾತ್ರ ಕಲ್ಪನೆ. ನಂತರ ಶೇಣಿಯವರ ಯಾಯಾತಿ ಪಾತ್ರ ನಿರ್ವಹಿಸಿದರೂ ಜೋಗಿಯವರ ಪಾತ್ರದ ಸಮ್ಮೋಹನ ಜೀವಂತವಾಗಿರುತ್ತದೆ. ಅಂತೇ ಸತೀ ಶೀಲವತಿಯ ವೀರಚಂದ್ರ,  ರಾಣಿ ರತ್ನಾವಳಿಯ ಉದಯನ ಮಹಾರಾಜ,  ಕುರುಕ್ಷೇತ್ರದ ಅಭಿಮನ್ಯು, ಹೀಗೆ ಹತ್ತು ಹಲವು ಪ್ರಸಂಗಗಳ ಹೆಸರಾಂತ ಪಾತ್ರಗಳು ಇಂದಿಗೂ ಸ್ಮೃತಿಯಲ್ಲಿ ಉಳಿದಿದ್ದರೆ ಅದರಲ್ಲಿ ಜೋಗಿಯವರ ಪಾಲು ಬಹಳಷ್ಟಿದೆ. ಆರಕ್ಕೇರದ ಮೂರಕ್ಕಿಳಿಯದ ಪಾತ್ರ ನಿರ್ವಹಣೆ, ಘಟಾನು ಘಟಿ ಕಲಾವಿದರ ನಡುವೆಯೂ ತನ್ನ ಅಸ್ತಿತ್ವವನ್ನು ತೋರಿಸುತ್ತಿದ್ದ ಆ ನಿರ್ವಹಣೆಗಳನ್ನು ಮರೆಯುವುದು ಯಕ್ಷ ರಸಿಕನಿಗೆ ಅಸಾಧ್ಯ.  ಸುಂದರವಾದ ನಾಟ್ಯ ಅದ್ಭುತವಾದ ರಂಗ ಪ್ರಜ್ಞೆ. ಉತ್ತಮವಾದ ವೇಷಗಾರಿಕೆ , ಹರಿತವಾದ ಬಹಳ ದೂರಕ್ಕೆ ಕೇಳುವ ಕಂಠ ಸ್ವರ ಹೀಗೆ   ಶರೀರ ಮತ್ತು ಶಾರೀರ  ಎರಡು ಅಪ್ಪಟ ಯಕ್ಷಗಾನ ಶೈಲಿಯಲ್ಲಿ ಮಿಳಿತವಾಗಿರುವ ಅಪರೂಪದ ಕಲಾವಿದ ಶ್ರೀ ಶಿವರಾಮ ಜೋಗಿ ಎಂಬುದರಲ್ಲಿ ಅನುಮಾನವಿಲ್ಲ. ಇಂದಿಗೂ ಅವರ ಸ್ವರ ಬಹಳ ಆಕರ್ಷಕ.  ಅವರ ಅರ್ಥಗಾರಿಕೆಯ ಒಂದು ಮೆರುಗು ಎಂದರೆ ಅದು ಕಂಠದಾಳದಿಂದ ಹೊರ ಹೊಮ್ಮುವ ಸ್ವರ ಭಾರ. ಪಾತ್ರ ಯಾವುದೇ ಅದರೂ ಅದಕ್ಕೆ ಸೂಕ್ತವಾದ ಹೊಂದಾಣಿಕೆಯ ಸ್ವರ.

                         ಯಕ್ಷಗಾನ ಪಾತ್ರ ನಿರ್ವಹಣೆಯಲ್ಲಿ ಮೂರು ಅಂಶಗಳು ಪ್ರಥಮವಾಗಿ ಪ್ರೇಕ್ಷಕನನ್ನು ಹಿಡಿದು ನಿಲ್ಲಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ.  ಒಂದು ಪ್ರವೇಶ. ಇದು ಅರ್ಧದಷ್ಟು ಕೆಲಸವನ್ನು ಮಾಡಿದರೆ ನಂತರ ನಾಟ್ಯ ಮತ್ತು ನಿಲುವು ಮುಂದೆ ಮಾತುಗಾರಿಕೆ. ಮಾತುಗಾರಿಕೆ ಸೆಳೆಯಲ್ಪಡುವುದು ಆಕರ್ಷಕ ಕಂಠ ಸಿರಿಯಿದ್ದರೆ ಮಾತ್ರ. ಅದೂ ಯಕ್ಷಗಾನದಲ್ಲಿ ಅತ್ಯಂತ ಪ್ರಾಮುಖ್ಯ. ಈ ಎಲ್ಲ ಗುಣಗಳು ಶಿವರಾಮ ಜೋಗಿಯಲ್ಲಿ ಧಾರಾಳವಾಗಿದ್ದ್ದು ಒಂದು ಮೇಳದ ಅನಿವಾರ್ಯ ಪ್ರಧಾನ ಕಲಾವಿದನಾಗಿ ಬೆಳೆಯುವಲ್ಲಿ ಸಹಕಾರಿಯಾಯಿತು. ಈಗಲೂ  ಜೋಗಿಯವರ ಪ್ರವೇಶ ನಂತರ ರಂಗವನ್ನಾಕ್ರಮಿಸಿ ನಿಲ್ಲುವ ಪರಿ ಅನನ್ಯ. ಯಾವ ವೇಷ ಯಾವ ಸನ್ನಿವೇಶದಲ್ಲಿ ರಂಗದಲ್ಲಿ ಹೇಗೆ ನಿಂತಿರಬೇಕು, ಆ ನಿಲುಮೆ ಏನು?  ಇದನ್ನು ಜೋಗಿಯವರ ವೇಷವನ್ನು ನೋಡಿ ಕಲಿಯಬೇಕು.  ಅದು ಯಕ್ಷಗಾನ ಪರಂಪರೆಯ ಶಿಕ್ಷಣ.  ಇದು ಅಸಾಮಾನ್ಯ ರಂಗ ಪ್ರಜ್ಞೆ.
                         ಪುಂಡುವೇಷದ ಪರ್ವಕಾಲ ಕಳೆದನಂತರ ಅಷ್ಟೇ ಸಮರ್ಥವಾಗಿ ರಾಜವೇಷದಂತ ಮಾಗಿದ ವೇಷಗಳನ್ನು ನಿರ್ವಹಿಸುತ್ತಿದ್ದರು. ಸಾಮಾನ್ಯವಾಗಿ ಪುಂಡು ವೇಷಧಾರಿಗಿರುವ ತೊಂದರೆ ಎಂದರೆ ಅದು. ಅತ್ತ ಪುಂಡುವೇಷ ನಿರ್ವಹಣೆಗೆ ದೇಹ ಕೇಳುವುದಿಲ್ಲ. ಇತ್ತ ರಾಜ ವೇಷ ಒಗ್ಗುವುದಿಲ್ಲ. ಇಂತಹ ಸಂದಿಗ್ದದಲ್ಲಿ ತಮ್ಮ ನಿರ್ವಣೆಯಲ್ಲಿ ಬದಲಾವಣೆಯನ್ನು ತಂದು ಯಶಸ್ವಿಯಾದವರು ಶಿವರಾಮ ಜೋಗಿಯವರು. ಅವರ ಪುಂಡುವೇಷವಾಗಲಿ ರಾಜವೇಷವಾಗಲಿ ಯಾವುದೇ ಆದರೂ ಅದನ್ನು ಸಲೀಸಾಗಿ ನಿರ್ವಹಿಸುತ್ತಾರೆ. ಆ ಪಾತ್ರದೊಂದಿಗೆ ರಂಗವನ್ನು ಪ್ರವೇಶಿಸುವಾಗ ಅವರಲ್ಲಿರುವ ಆತ್ಮ ವಿಶ್ವಾಸ ಅದು ಪಾತ್ರದಲ್ಲಿ ಹೊಮ್ಮುತ್ತದೆ.  ಅವರ ಪುಂಡುವೇಷಗಳಲ್ಲಿ ಲೆಕ್ಕವಿಲ್ಲದ ಗಿರಕಿಗಳು ಇರುತ್ತಿರಲಿಲ್ಲ. ಹಿತಮಿತವಾದ ಕುಣಿತ. ಹೆಜ್ಜೆಗಾರಿಕೆಯ ಸೊಗಸು ನೋಡವುದೇ ಹಬ್ಬ. ಯಕ್ಷಗಾನದ ಪಂಪರೆಯ ಕುಣಿತವನ್ನು ಅಲ್ಲಿ ಕಾಣಬಹುದು.

                         ಇಂತಹ ಒಬ್ಬ ಯಕ್ಷಗಾನ ಕೂಟದ ಅನಿವಾರ್ಯ ಕಲಾವಿದನಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಇದು ಕೇವಲ ಜೋಗಿ ಎಂಬ ಕಲಾವಿದನಿಗೆ ಸಲ್ಲುವ ಸನ್ಮಾನವಲ್ಲ. ಬದಲಾಗಿ ಪರಂಪರೆಯ ಪುಂಡುವೇಷಕ್ಕೆ ಸಲ್ಲುವ ಅಂಗೀಕಾರ. ಪರಂಪರೆಯ ರಾಜವೇಷಕ್ಕೆ ಸಲ್ಲುವ ಮನ್ನಣೆ.  ಒಬ್ಬ ಸರ್ವಾಂಗೀಣ ಕಲಾವಿದನಿಗೆ ಸಲ್ಲುವ ಅರ್ಥ ಪೂರ್ಣ ಮಾನ್ಯತೆ. ಯಕ್ಷಗಾನಂ ಗೆಲ್ಗೆ. 

Sunday, October 15, 2017

ತೇಜೋವಧೆ


ಅದು ಅಯೋಧ್ಯೆಯ ರಾಜ ಸಭೆ. ಋತುಪರ್ಣ ಮಹಾರಾಜ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದಾನೆ. ಒಮ್ಮಿಂದೊಮ್ಮೆಗೆ ಮಹಾರಾಜನಿಗೆ ಕುಳಿತ ಸಿಂಹಾಸನ ಅಲುಗಿದ ಅನುಭವ. ಅಷ್ಟೇ ಕುಳಿತಲ್ಲಿಂದ ಧಿಗ್ಗನೆ ಕೆಳಗೆ ಹಾರಿ ಬಿಡುತ್ತಾನೆ. ಅದು ಕ್ಷಣ ಮಾತ್ರದ ಪ್ರಚೋದನೆ ಮತ್ತು ಪ್ರತಿಕ್ರಿಯೆ. ಯಾಕೆ ಹೀಗಾಯಿತು. ಆಗಲೇ ರಾಜಸಭೆಗೆ ದೂರದಲ್ಲಿ ಒಂದು ಆಕೃತಿಯ ಪ್ರವೇಶವಾಗುತ್ತದೆ. ಅದು ಮನುಷ್ಯಾಕೃತಿ ಎನ್ನುವುದಕ್ಕೇ ಅನುಮಾನ ಪಡುವಂತೆ ವಿಕೃತ ರೂಪ. ಆದರೂ ಅದು ನೇರವಾಗಿ ಸಭೆಯೊಳಗೆ ಬರುತ್ತದೆ. ಆ ಧೈರ್ಯ ಆತ್ಮ ಶಕ್ತಿಗೆ ರಾಜ ಗೊಂದಲಕ್ಕೆ ಸಿಲುಕುತ್ತಾನೆ. ತಾನೇಕೆ ಕುಳಿತಲ್ಲಿಂದ ಎದ್ದೆ? ಅದಾವ ಪ್ರಚೋದನೆ ತನ್ನನ್ನು ತಳ್ಳಿಬಿಟ್ಟಿತು. ಆಂತರ್ಯವನ್ನು ಬಡಿದೆಬ್ಬಿಸಿದ ಆ ಶಕ್ತಿ ಅದಾವುದು?

ಅದು ಬೇರಾವ ಶಕ್ತಿಯೂ ಅಲ್ಲ. ಅದು ಚಕ್ರವರ್ತಿಯೊಬ್ಬನ ತೇಜಸ್ಸು ಎಂಬುದು  ಋತುಪರ್ಣನಿಗೆ ಅರಿವಾಗುವುದು ಕಥೆಯ ಅಂತ್ಯದಲ್ಲಿ. ಚಕ್ರವರ್ತಿಯೊಬ್ಬನಿಗಿರುವ ತೇಜಸ್ಸು ಸಾಮಂತನಾದ ಋತು ಪರ್ಣನನ್ನು ಬಡಿದೆಬ್ಬಿಸಿತು. ಮುಂದೆ ಆತನ ಅನುಮಾನಕ್ಕೇ ಅದೂ ಒಂದು ಕಾರಣವಾಯಿತು. ವಿಚಿತ್ರ ಕುರೂಪಿಯಾದ ಆ ಬಾಹುಕನೆಲ್ಲಿ? ಸುರಸುಂದರ ಚಕ್ರವರ್ತಿ ನಳನೆಲ್ಲಿ? ಕಾರ್ಕೋಟಕ ವಿಷ ಪ್ರಭಾವದಿಂದ ತನ್ನ ದೇಹ ವಿಕಾರವಾಗಿದ್ದರೂ ನಳನ ಅಂತಶಕ್ತಿಯಿಂದ ಆತ್ಮದಲ್ಲಿ ಅಡಕವಾಗಿದ್ದ ಆತ್ಮ ವರ್ಚಸ್ಸು ತನ್ನ ಪ್ರಭೆಯನ್ನು ಕಳೆದುಕೊಳ್ಳಲಿಲ್ಲ. ಅದನ್ನು ಕಸಿಯುವುದಕ್ಕೆ ಬಹುಶಃ ಆತನನ್ನು ಕಾಡುವ ಶನಿದೇವನಿಗೂ ಸಾಧ್ಯವಾಗಲಿಲ್ಲವೋ ಏನೋ? ತೇಜಸ್ಸು!  ಎನ್ನುವುದು ಇದನ್ನು.

ಅದು ನರ್ಮದೆಯ ತೀರದಲ್ಲಿನ ಬಲಿ ಚಕ್ರವರ್ತಿಯ ಯಾಗ ಶಾಲೆ. ಇನ್ನೇನು ಪೂರ್ಣಾಹುತಿಗೆ ಎಲ್ಲವೂ ಸಿದ್ಧವಾಗಿದೆ. ಅಸುರ ಗುರು ಶುಕ್ರ ನಿಂದ ತೊಡಗಿ ಅದೆಷ್ಟೋ ಮುನಿಗಳು ಋಷಿ ಪ್ರಮುಖರು, ಋತ್ವಿಜರು ಯಾಗ ಶಾಲೆಯಲ್ಲಿ ಉಪಸ್ಥಿತರಿದ್ದಾರೆ. ಇನ್ನೊಂದು ಆಹುತಿಯೊಂದಿಗೆ ಬಲಿಗೆ ಇಂದ್ರಪದವಿ ಸಿದ್ದಿಸುತ್ತದೆ. ಆವಾಗ ಯಾಗ ಶಾಲೆಯ ದ್ವಾರದಲ್ಲಿ ದಿವ್ಯ ಬಾಲಕನ ಆಗಮನವಾಗುತ್ತದೆ. ಬಾಲಕನ ತೇಜಸ್ಸು ಕಂಡು ಯಾಗದೀಕ್ಷೆಯಲ್ಲಿ ಕುಳಿತಿದ್ದ ಬಲಿ ಚಕ್ರವರ್ತಿ ತನಗರಿವಿಲ್ಲದೇ ಎದ್ದೇಳುತ್ತಾನೆ. ಅದೆಂತಹ ತೇಜಸ್ಸು.  ಅಲ್ಲಿದ್ದ ಅಷ್ಟೂ ಋಷಿ ಪ್ರಮುಖರ ತೇಜಸ್ಸು ಈ ಬಾಲಕನ ತೇಜಸ್ಸಿಗೆ ಶರಣಾಗಿ ಆತನನ್ನು ಹಿಂಬಾಲಿಸುತ್ತದೆ. ಶುಕ್ರ ಪ್ರಮುಖರೆಲ್ಲ ಬೆಕ್ಕಸ ಬೆರಗಾಗುತ್ತಾರೆ. ತೇಜಸ್ಸು!  ಎನ್ನುವುದು ಇದನ್ನು.

ವಿಚಿತ್ರವೆಂದರೆ ಇಂದು ಸಾರ್ವಜನಿಕ ವಲಯದಲ್ಲಿ ತಿಳಿಯದೇ ಚರ್ಚೆಗೊಳಗಾಗುವ ಶಬ್ದವೆಂದರೆ ತೇಜೋವಧೆ. ತನ್ನ ತೇಜೋವಧೆಯಾಯಿತು ಎನ್ನುವುದೇ ಒಂದು ಸ್ವಾರ್ಥದ ಸಂಕೇತ. ತನ್ನ ಬೆನ್ನನ್ನು ತಾನೆ ಚಪ್ಪರಿಸಿಕೊಂಡ ಹಾಗೆ. ನಿಜವಾಗಿ  ತೇಜಸ್ಸು ಎಂಬುದು ಅಡಕವಾಗಿದ್ದಲ್ಲಿ ಅದು ಬೇಡವೆಂದರೂ ಗೌರವವನ್ನು ಎಳೆದು ತರುತ್ತದೆ. ಅಂತಹ ತೇಜಸ್ಸು ಇದ್ದವನು ತೇಜೋವಧೆಯಾಯಿತು ಎಂದು ಅಲವತ್ತುಕೊಳ್ಳುವುದಿಲ್ಲ. ಯಾಕೆಂದರೆ ಆತನ ತೇಜಸ್ಸು ಅದು ವಿಕ್ರಯಿಸುವ ಸೊತ್ತಲ್ಲ. ಇನ್ನೊಬ್ಬರು ಕೊಡುವ ಮೌಲ್ಯಕ್ಕೆ ಅದು ಕಾದು ಕುಳಿತುಕೊಳ್ಳುವುದಿಲ್ಲ.     ತೇಜಸ್ಸು ಇಲ್ಲದವರೆ ತಮ್ಮೈಲಿ ಇಲ್ಲದೇ ಇದ್ದುದರ ವಧೆಯಾಯಿತು ಎಂದು ಪರಿತಪಿಸುವುದು. ಪ್ರಪಂಚ ನಿಯಮವೇ ಹಾಗೆ, ಕಳುವಾದಾಗ ತನ್ನಲ್ಲಿ ಇಲ್ಲದೇ ಇದ್ದ ವಸ್ತುವೂ ಕಳುವಾಗಿದೆ ಎಂದು ಹೇಳುವುದು ಜಾಣತನ. ಹಾಗಾದರೂ ತನ್ನ ಅರ್ಹತೆಯನ್ನು ಬಾಹ್ಯ ಪ್ರಪಂಚ ಗುರುತಿಸಲಿ ಎಂಬ ಸ್ವಾರ್ಥ.

ತೇಜಸ್ಸು ಸತ್ವಯುತ ಬದುಕಿನ ಪ್ರತೀಕ. ಅದು ಅರ್ಹತೆಯಿಲ್ಲದಲ್ಲಿ ಬೆಳಗುವುದಿಲ್ಲ. ನಂದಾದೀಪ ಬೆಳಗಿ ಪ್ರಬೆಯನ್ನು ಬೀರುವುದಕ್ಕೆ ಹೇಗೆ ಸೂಕ್ತವಾದ ವಾತಾವರಣ ಬೇಕೋ ಹಾಗೆ ಸೂಕ್ತ ನೆಲೆ ಸಿಕ್ಕಿದಲ್ಲಿ ಮಾತ್ರ  ತೇಜಸ್ಸು ಬೆಳಗುವುದು.

 ದೇಹ ಮನಸ್ಸು ಮತ್ತು ದೈವ ಹೀಗೆ ಬರುವ ತಾಪಗಳನ್ನು ಮೂರು ವಿಭಾಗ ಮಾಡಿ ಅದನ್ನು ತಾಪತ್ರಯ ಎಂದರೆ , ಇಂದು ನೂರೆಂಟು ತಾಪತ್ರಯ ಎನ್ನುವುದೂ ಇದೆ. ನಿಜವಾಗಿ ತಾಪಗಳು ಮೂರೆ. ಅದರಂತೆ ತೇಜಸ್ಸು ಎಂಬ ಶಬ್ದ ಪ್ರಯೋಗದ ಉಪಯೋಗದಲ್ಲಿ ಶಬ್ದ ತೇಜಸ್ಸೇ ಕಾಣೆಯಾಗಿದೆ.

ವಿದ್ಯಾವಂತನಾದ ವ್ಯಕ್ತಿಯಲ್ಲಿ ಆತ ಆರ್ಜಿಸಿದಂತಹ ವಿದ್ಯೆ ಆತನಲ್ಲಿ ವರ್ಚಸ್ಸನ್ನು ಮೂಡಿಸುತ್ತದೆ. ಆ ವರ್ಚಸ್ಸು ವಿದ್ಯಾರ್ಹತೆ.  ಅದು ಅತನ ಬದುಕಿನ ಶೈಲಿಯೊಂದಿಗೆ ಬೆರೆತಿರುತ್ತದೆ. ಅದು ಪ್ರಕಾಶಿಸುವುದು ಅಥವಾ ಕಂದಿಹೋಗುವುದು ಅದೇನಿದ್ದರು ಅವನನ್ನು ಸಂಬಂಧಿಸಿಯೇ ಹೊರತು ಅವನೊಳಗಿನ ಪ್ರಕಾಶವನ್ನು ಮತ್ತೊಬ್ಬನಿಂದ ನಾಶ ಪಡಿಸುವುದಕ್ಕೆ ಸಾಧ್ಯವಿಲ್ಲ. ಕ್ರೋಧಗೊಂಡಾಗ ಶರೀರ ಕಂಪಿಸಬಹುದು. ಮುಖದ ತುಂಬ ರಕ್ತ ತುಂಬ ಬಹುದು. ಉದ್ವೇಗ ಅಧಿಕವಾಗಿ ಎದೆಯ ಬಡಿತ ಹೆಚ್ಚಾಗಬಹುದು. ಕಣ್ಣುಗಳು ರೂಪ ಕೆಡಿಸಿಕೊಳ್ಳಬಹುದು. ಹೀಗೆ ದೇಹದ ಹಲವು ಭಾಗಗಳ ಸ್ಪಂದನೆಗೆ ಸ್ವತಃ ಜೀವ ಭಾವವೇ ಕಾರಣ ಹೊರತು, ಸಿಟ್ಟು ಬರುವಂತೆ ಮಾಡುವ ಇನ್ನೊಬ್ಬನಲ್ಲ. ತಮ್ಮ ಸಿಟ್ಟಿಗೆ ಇನ್ನೊಬ್ಬನನ್ನು ನಿಮಿತ್ತ ಮಾಡುವುದರಲ್ಲೂ ಇದೆಯೊಂದು ಸ್ವಾರ್ಥ.

ನಮ್ಮಲ್ಲಿನ ಅರ್ಹತೆಗಳಿಗೆ ನಮ್ಮನ್ನು ನಾವೆ ಕಾರಣರನ್ನಾಗಿ ಮಾಡುತ್ತೇವೆ. ಅದೇ ದೌರ್ಬಲ್ಯಗಳಿಗೆ ಹೊರಗಿನ ವಿಚಾರಗಳನ್ನು ಕಾರಣವನ್ನಾಗಿಸುತ್ತೇವೆ. ನಮ್ಮ ಅರ್ಹತೆಗೆ ಮಿಗಿಲಾಗಿ ಸ್ವಾಭಿಮಾನವನ್ನು ಬೆಳೆಸುತ್ತೇವೆ. ಅದು ಅಹಂಕಾರವಾಗುತ್ತದೆ. ಅದರೊಂದಿಗೆ ಸ್ವಾರ್ಥ ಬೆರೆತು ಅದು ದುರಹಂಕಾರವಾಗಿ ಪ್ರತಿಷ್ಠೆಯಾಗುತ್ತದೆ. ಹೀಗೆ ನಮ್ಮ ಅಹಮಿಕೆಗೆ ನಾವು ಕೊಡುವ ಹೆಸರೇ ತೇಜಸ್ಸು!  

ಮನುಷ್ಯನ ದೇಹ ಕೊಳೆಯಾದಾಗ ಅತ ಸ್ನಾನ ಮಾಡಲು ಕೊಳಕ್ಕೆ ಇಳಿಯುತ್ತಾನೆ. ತನ್ನ ದೇಹದ ಕಲ್ಮಷವನ್ನು ಕೊಳದ ನೀರಿಗೆ ಬೆರೆಸುತ್ತಾನೆ. ಆಗ ಯೋಚಿಸುವುದಿಲ್ಲ ನನ್ನಿಂದ ನೀರು ಕಲುಷಿತಗೊಂಡಿತು ಎಂದು. ತನ್ನ ದೇಹದ ಮಲೀನತೆ ಕಳೆದುಕೊಳ್ಳುವುದಷ್ಟೇ ಆಗಿರುತ್ತದೆ. ಆತನಿಗೆ ಬೇರೆನೂ ಕಾಣುವುದಿಲ್ಲ. ಅದೇ ನೀರು ಕೊಳೆಯನ್ನು ಕಳೆದುಕೊಂಡು ನಂತರವೂ ಶುದ್ದವಾಗಬಹುದು. ಆದರೂ ತನ್ನ ಕೊಳೆಯನ್ನು ಅಲ್ಲಿ ಕಳೆದುಕೊಂಡದ್ದು ಸತ್ಯ. ಹಕ್ಕಿಯೊಂದು ಮರದ ಮೇಲೆ ಕುಳಿತಿರುತ್ತದೆ. ವ್ಯಾಧ್ಯನೊಬ್ಬ ಅದಕ್ಕೆ ಬಾಣ ಎಸೆಯುತ್ತಾನೆ. ಇಲ್ಲ ಮನುಷ್ಯ ತನ್ನ ಕೋವಿಯಿಂದ ಗುಂಡು ಸಿಡಿಸಲೂ ಬಹುದು. ಆದರೆ ಬಾಣ ಅಥವಾ ಗುಂಡು ಹಕ್ಕಿಗೆ ತಾಕಿ ಹಕ್ಕಿ ಸಾಯುತ್ತದೆ. ಜತೆಯಲ್ಲಿ ಹಕ್ಕಿ ಅವಿತುಕುಳಿತಲ್ಲಿನ ಹಲವು ಎಲೆಗಳು ಉದುರಿಬೀಳಬಹುದು. ಮರದ ಗೆಲ್ಲು ಘಾಸಿಯಾಗಬಹುದು. ಆಸರೆ ಪಡೆದ ಹಕ್ಕಿ ಯೋಚಿಸುವುದಿಲ್ಲ. ಬಾಣ ಬಿಟ್ಟ ಬೇಟೆಗಾರನೂ ಯೋಚಿಸುವುದಿಲ್ಲ. ಮರಕ್ಕೆ ಯಾವ ಅಪರಾಧಕ್ಕೆ ಘಾಸಿಗೊಳಗಾಗಬೇಕಾಯಿತು. ಬೇಟೆಗೆ ಆಸರೆಯನ್ನು ಕೊಟ್ಟ ಅಪರಾಧವೇ? ಅದರ ಎಲೆಗಳನ್ನು ಕಳೆದುಕೊಳ್ಳುವುದಕ್ಕೆ ಅದರ ಅಪರಾಧವೇನು?

ಸಂಗೀತಗಾರನೊಬ್ಬ ಹಾಡುತ್ತಾನೆ. ಅಥವಾ ಸಂಗೀತ ನುಡಿಸುತ್ತಾನೆ. ಅದಕ್ಕೊಂದು ರಾಗ ಅದು ಶಂಕರಾಭರಣ, ಕಲ್ಯಾಣಿ ಮತ್ತೇನೋ ರಾಗವಾಗಿರಬಹುದು. ತಾಳವೂ ಅಷ್ಟೇ. ಆದರೆ ಕೇಳುಗನೊಬ್ಬ ಆತನ ಶಂಕರಾಭರಣದ ಅವರೋಹಣವನ್ನು ವಿಮರ್ಶಿಸಬಹುದು. ಇದು ತಪ್ಪು ಎಂದು ಸಾರ್ವಜನಿಕವಾಗಿ ಹೇಳಬಹುದು.  ಸಂಗೀತಗಾರ ಹೇಗೆ ಸಂಗೀತದ ಅಂಗವೋ ಕೇಳುಗನೂ ಅದರ ಅಂಗವೇ. ಶಂಕರಾಭರಣ ಕೆಡುವುದನ್ನು ಆತನಿಗೆ ಕೇಳುವುದಕ್ಕಾಗುವುದಿಲ್ಲ. ಕೆಟ್ಟು ಹೋದ ಸಂಗಿತವನ್ನು ಆಸ್ವಾದಿಸುವುದಕ್ಕೆ ಆಗುವುದಿಲ್ಲ. ಹೋಗಲಿ ಸಂಗೀತ ಕೆಡುವುದನ್ನು ಸಹಿಸುವುದಕ್ಕೂ ಸಾಧ್ಯವಾಗುವುದಿಲ್ಲ.   ಆದರೆ ಸಂಗೀತಗಾರನ ಅಹಮಿಕೆ ಪೆಟ್ಟುಬೀಳುತ್ತದೆ . ಹಾಡುವುದಕ್ಕೆ ಆಗದವನು ಸಂಗೀತ ನುಡಿಸುವುದಕ್ಕೆ ಅರಿಯದವನು ತನ್ನ ರಾಗದ ಬಗ್ಗೆ ವ್ಯಾಖ್ಯಾನ ಮಾಡುತ್ತಾನೆ.  ಆತ ಒರಲುತ್ತಾನೆ ತನ್ನ ತೇಜೋವಧೆಯಾಯಿತು.  ಅಹಂಕಾರ ಇಲ್ಲದೇ ಇರುತ್ತಿದ್ದರೆ ಸಂಗೀತಗಾರ ಸಂಗೀತದ ಬಗ್ಗೆ ಯೋಚಿಸುತ್ತಿದ್ದ. ನಂತರ ತನ್ನ ಬಗ್ಗೆ ಯೋಚಿಸುತ್ತಿದ್ದ. ಹಾಗಾಗಿದ್ದರೆ ಅಲ್ಲಿ ಸಹೃದಯ ವಾತಾವರಣ ಮೂಡುತ್ತಿತ್ತು. ಒಂದು ವೇಳೆ ಹಾಡುವುದಕ್ಕೆ ಅರಿತ್ತಿದ್ದವನೂ ಸಾರ್ವಜನಿಕವಾಗಿ ಹೇಳಿದರೆ ಅಗಲೂ ಅದು ತೇಜೋವಧೆಯಾಗುತ್ತದೆ. ವಿಚಿತ್ರವೆಂದರೆ  ಸಾರ್ವಜನಿಕವಾಗಿ ಹಾಡಬಹುದು. ಸಾರ್ವಜನಿಕವಾಗಿ ಪ್ರತಿಕ್ರಿಯೆ ಸಲ್ಲದು
ಈ ಸಂಗೀತ ಆ ಶಂಕರಾಭರಣ ಇದ್ದ ಕಾರಣವೇ ಆತ ಸಂಗೀತಗಾರನಾಗಿದ್ದು. ಕೇಳುಗನೂ ಅಷ್ಟೇ ಶಂಕರಾಭರಣವನ್ನು ಅಥವಾ ಸಂಗೀತವನ್ನು ಸವಿಯುವುದಕ್ಕೆ ಕುಳಿತಿದ್ದ. ಇಬ್ಬರಿಗೂ ಆಸರೆಯಾಗಿದ್ದು ಸಂಗೀತವೆಂಬ ಮಾಧ್ಯಮ. ಬೆಸೆಯುವ ಕೊಂಡಿಯನ್ನೇ ಸಂಗೀತಗಾರ ತುಂಡರಿಸುವ ಪ್ರಯತ್ನ ಮಾಡುತ್ತಾನೆ! ಸಂಗೀತದ ಬಗ್ಗೆ ಯೋಚಿಸದೇ ತನ್ನ ತೇಜೋವಧೆಯ ಬಗ್ಗೆ ಯೋಚಿಸುತ್ತಾನೆ!!  ಆದರೆ ಆ ತೇಜಸ್ಸು ಆತನಲ್ಲಿ ಇದೆ ಎಂದು ಅನ್ನಿಸುವುದೇ ಇಲ್ಲ.  ಸಂಗೀತದ ಅಸ್ತಿತ್ವ ಇದ್ದರೆ ಮಾತ್ರ ಸಂಗೀತಗಾರ ಅಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಬಹುದು. ಆತನ ಶಂಕರಾಭರಣವನ್ನು ಸವಿಯಲು ತಿಳಿದಿದ್ದವನು ಇದ್ದರೆ ಮಾತ್ರ ಆತನ ಶಂಕರಾಭರಣಕ್ಕೆ ಮೌಲ್ಯ ಬರುವುದು. ಒಬ್ಬ ಕಲಾವಿದನಲ್ಲಿ ಇರುವ  ಪ್ರತಿಭೆ ಅತನದ್ದು ಸ್ವಂತ ನಿಜ. ಆದರೆ ಕಲೆ ಅದು ಸಾರ್ವಜನಿಕ ಸೊತ್ತು. ಇದಕ್ಕೆ ಆತ ಬದ್ಧನಾಗಿರಬೇಕು. ತಂಡ ಸೋತರೂ ಆಟಗಾರ ಶತಕ ಸಿಡಿಸಿದ ಹಾಗೆ ಏನು ಪ್ರಯೋಜನ? ಕಲೆ ವ್ಯಕ್ತಿ ನಿಷ್ಠವಾದರೆ ಕಲೆ ಜೀವಸತ್ವವನ್ನು ಕಳೆದುಕೊಂಡಂತೆ. ಬಾಡಿಗೆ ದಾರ ಮನೆ ಬಿಡುವಾಗ ಎಷ್ಟೇ ಬದಲಾವಣೆ ಮಾಡಿದರೂ ಅದು ತಾತ್ಕಾಲಿಕ. ಆತ ಬಿಟ್ಟು ಹೋಗುವಾಗ ಮನೆ ಮೊದಲಿನಂತೆ ಇರಬೇಕು. ಅದು ಕರಾರು.


ತಪ್ಪೆಸಗುವುದಕ್ಕೆ ಅನಿವಾರ್ಯವಾದ  ಹಲವಾರು  ಕಾರಣಗಳು ಇರಬಹುದು. ಆದರೆ ತಪ್ಪನ್ನು ಒಪ್ಪದಿರುವುದಕ್ಕೆ ಒಂದು ಕಾರಣವೂ ಇರುವುದಿಲ್ಲ. ತೇಜಸ್ಸು ಇರುವಲ್ಲಿ ತಪ್ಪನ್ನು ಒಪ್ಪಿಕೊಳ್ಳುವ ವಿಶಾಲ ಮನಸ್ಸು ಇದ್ದೇ ಇರುತ್ತದೆ. ಕ್ಷಮಿಸುವುದು ದೊಡ್ಡ ಗುಣವಿರಬಹುದು. ಅದರೆ ಕ್ಷಮೆ ಕೇಳುವ ಮನಸ್ಸು ವಿಶಾಲವಾಗಿರುತ್ತದೆ .  ಮನಸ್ಸು ವಿಶಾಲವಾಗಿ ಸ್ಥಿತ ಪ್ರಜ್ಞವಾಗಿದ್ದರೆ  ತೇಜಸ್ಸು ವಾಸವಾಗಿರುತ್ತದೆ.  ನಿಜವಾದ ತೇಜಸ್ಸು ಎಂದಿಗೂ ವಧೆಯಾಗುವುದಿಲ್ಲ. ಒಂದು ವೇಳೆ ಅದು ವಧೆಯಾಗಿ ಹೋದರೆ,  ಅದು ಸ್ವಯಂಕೃತ ಅಪರಾಧದ ಆತ್ಮ ಹತ್ಯೆಯೇ ಹೊರತು ವಧೆಯಾಗುವುದಿಲ್ಲ. 

Thursday, October 12, 2017

ಜೋಷಿಯೊಡನೊಂದು ಸಂಜೆ

          

ಮಂಗಳೂರಿನ ನಮ್ಮ ಕಛೇರಿಯಲ್ಲಿ ಕುಳಿತು ಈ ಮೇಲ್ ಗಳನ್ನು ಅವಲೋಕಿಸುತ್ತಿದ್ದೆ. ಮಜರಾಯಿ ಇಲಾಖೆಗೆ ವರದಿ ಸಲ್ಲಿಸುವ ಕಾರಣ  ದೇವಸ್ಥಾನಗಳ ಲೆಕ್ಕ ಪರಿಶೋಧನೆಗಾಗಿ ಹೊರಡುವ ಅವಸರವೂ ಇತ್ತು. ಯಾರದ್ದೋ ಕರೆಗಾಗಿ ಕಾದು ಕುಳಿತಿದ್ದೆ. ಆದರೂ ಗಡಿಬಿಡಿಯಲ್ಲಿ ಕಂಡ  ಹಲವು ಸಂದೇಶಗಳ ನಡುವೆ ಒಂದು ಸಂದೇಶ ಕುತೂಹಲವನ್ನು ಹುಟ್ಟಿಸಿತು. ಅದು ಯಕ್ಷಗಾನದ ಘನ ವಿದ್ವಾಂಸ, ಸಂಶೋಧಕ ಹಿರಿಯ ಅರ್ಥದಾರಿ ಶ್ರೀ ಎಂ ಪ್ರಭಾಕರ ಜೋಷಿಗಳ ಮೇಲ್ ಸಂದೇಶವಾಗಿತ್ತು. ಹಿಂದಿನ ದಿನವಷ್ಟೇ ಬೆಂಗಳೂರಿನಲ್ಲಿ ಮುಖತಃ ಭೇಟಿಯಾಗಿದ್ದೆ. ಅದೇ ರಾತ್ರಿ ಮಂಗಳೂರು ಹೊರಟು ಬಂದಿದ್ದೆ. ಇದೀಗ ಮೇಲ್ ಪುಂಜಗಳಲ್ಲಿ  ಅವರ ಹೆಸರೂ ಕಂಡಾಗ ಏನಾಗಿರಬಹುದು ಎಂಬ ಅದಮ್ಯ ಕುತೂಹಲವದು  ಮೇಲ್ ಅಂಚೆ ತೆರೆದು ನೋಡಿದ ಮೇಲೆ ತಣಿಯಿತು. ಬಹಳ ಸಂಕ್ಷೇಪವಾಗಿ ಶ್ರೀ ಪ್ರಭಾಕರ ಜೋಷಿಯವರು ಸಂದೇಶವನ್ನು ಬರೆದಿದ್ದರು. “ ನಿನ್ನೆ ನಿಮ್ಮನ್ನು ಬೇಟಿಯಾಗಿದ್ದು ಬಹಳ ಸಂತೋಷ ತಂದಿದೆ. ಮಂಗಳೂರು ಕಡೆಗೆ ಬಂದಾಗ ಸಮಯವಕಾಶವಿದ್ದಲ್ಲಿ ಕರೆಮಾಡಿ. ಮುಖತಃ ಕುಳಿತು ಒಂದಷ್ಟು ಸಮಯವನ್ನು ಕಳೆಯೋಣ”  ಅತ್ಯಂತ ಸಂಕ್ಷೇಪ ಮತ್ತು ನೇರ ಮಾತುಗಳು.

ಅವರ ಈ ಮೇಲ್ ಗಳು ಇಂದೇನು ಹೊಸತಲ್ಲ. ಅಗಾಗ ಬರೀತಿರುತ್ತಾರೆ.  ಅವೆಲ್ಲ ಆತ್ಮಿಯವಾದ ಸಂಕ್ಷೇಪ ಮಾತುಗಳು. ಹಲವು ಸಲ ನನ್ನ ಬ್ಲಾಗ್ ಲೇಖನಗಳನ್ನು ನೋಡಿ ಅದರಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿರುತ್ತಾರೆ. ಅದು ಒಂದೆರಡು ವಾಕ್ಯದೊಳಗಿನ ಬರಹಗಳು.  ಕೆಲವೊಮ್ಮೆ ಸಂಕೋಚದಿಂದ  ನನ್ನ ಲೇಖನಗಳನ್ನು ಅವರಿಗೆ ಕಳುಹಿಸದೇ ಉಳಿದಿದ್ದೇನೆ. ಅವರಂತಹ ಹಿರಿಯ ವಿದ್ವಾಂಸರಿಗೆ  ನನ್ನ ಬಾಲಿಷ  ಲೇಖನಗಳನ್ನು ತೋರಿಸುವುದು ಹಾಸ್ಯಾಸ್ಪದವಾಗಿ ಕಾಣುತ್ತಿತ್ತು ಇದೊಂದು ನಾನು ಅವರಿಗೆ . ಸುಮ್ಮನೆ ನೀಡುವ  ಹಿಂಸೆ  ಎಂಬ ಹಿಂಜರಿಕೆ ನನ್ನದಾದರೆ, ನಾನು ಕಳುಹಿಸಿದ ಯಾವುದೇ ಲೇಖನವಾಗಲಿ ಒಂದೂ ಸಹ ಅವರ ಪ್ರತಿಕಿಯೆ ಇಲ್ಲದೇ ಇರುತ್ತಿರಲಿಲ್ಲ. ಅದು ನನ್ನ ಮೇಲೆ ಇಟ್ಟಿರುವ ಪ್ರೀತಿ ಅಂತ ಅನಿಸುವುದಿಲ್ಲ. ಬದಲಾಗಿ ಯಕ್ಷಗಾನದ ಬಗೆಗಿರುವ ಅವರ ಕಾಳಜಿಯನ್ನು ತೋರಿಸುತ್ತಿತ್ತು. ಇಲ್ಲವಾದರೆ ಅದ್ಭುತ ಎನ್ನುವಂತಹ ಲೇಖಕರ ಒಡನಾಟದಲ್ಲಿರುವ ಹಿರಿಯರಿಗೆ ನನ್ನ ಲೇಖನ ಕಿರಿ ಕಿರಿಯಾಗಬೇಕಿತ್ತು. ಹಾಗಾಗಲಿಲ್ಲ, ಬದಲಾಗಿ ಪ್ರತಿಯೊಂದು ಯಕ್ಷಗಾನದ ಬರಹಗಳಿಗೆ ಅವರು ಅಭಿಪ್ರಾಯ ತಿಳಿಸಿದಾಗ ಬೆನ್ನು ತಟ್ಟಿದ ಅನುಭವ ನನಗಾಗಿದೆ. ಸದ್ಯ ಯಾವುದೇ ಲೇಖನ ಕಳುಹಿಸಿರಲಿಲ್ಲ. ಆದರೂ ಬರೆದಿದ್ದಾರೆ ಎಂದರೆ ವಿಚಾರ ಇರಲೇಬೇಕು.
          ಅವರ ಸಂದೇಶ ಅರ್ಧ ಓದಿದ ಕೂಡಲೇ ಅದಕ್ಕೆ ಉತ್ತರ ಬಹಳ ಸಂಕ್ಷೇಪವಾಗಿಯೇ ಬರೆದೆ. ”ನಾನು ಮಂಗಳೂರಲ್ಲಿ ಇದ್ದೇನೆ.”  ಮೇಲ್ ಕಳುಹಿಸಿ ಎರಡು ನಿಮಿಷವಾಗಿಲ್ಲ. ಅವರ ಕರೆ ಬಂತು. ನನ್ನ ಕೆಲಸಗಳ ಬಗ್ಗೆ ವಿಚಾರಿಸಿ ಸಮಯವಿದ್ದರೆ ಸಾಯಂಕಾಲ ನನಗೆ ಸ್ವಲ್ಪ ಬಿಡುವಿದೆ ನಿಮಗೆ ಬಿಡುವಾದಾಗ ತಿಳಿಸಿ ನೀವಿದ್ದಲ್ಲಿಗೆ ಬಂದು ಕರೆದು ಕೊಂಡು ಬರುತ್ತೇನೆ. ನನಗೆ ನಂಬುವುದಕ್ಕೆ ಸಾಧ್ಯವಾಗಿಲ್ಲ. ಹಿಂದೆ ಒಂದು ಸಲ ಯಕ್ಷಚಿಂತನದಲ್ಲಿ ಅವರ ಬಗ್ಗೆ ಒಂದು ಸರಳ ನುಡಿ ನಮನ ಬರೆದಿದ್ದೆ. ಇತ್ತೀಚೆಗಷ್ಟೇ ಅದನ್ನು ಪುನಃ ನನ್ನಲ್ಲಿ ಕೇಳಿ ಪಡಿದಿದ್ದರು. ಅದು ಯಾಕೆ ಎಂದು ನಾನು ಕೇಳಲೂ ಇಲ್ಲ. ನನಗದರ ಅವಶ್ಯಕತೆಯೂ ಇರಲಿಲ್ಲ ಬಿಡಿ.
          ಸಾಯಂಕಾಲ ನಾಲ್ಕು ಐದು ಘಂಟೆಯಷ್ಟು ಹೊತ್ತಿಗೆ ನಾನೇ ಕರೆ ಮಾಡಿದೆ. ಕೂಡಲೆ ನಾನು ಎಲ್ಲಿದ್ದೇನೆ ಎಂದು ತಿಳಿದು ಅಲ್ಲಿಗೆ ಬರ್ತೇನೆ ಅಂತ ಹೇಳಿದಾಗ ನಾನು ಸಂಕೋಚದಿಂದ ಬೆವೆತು ಹೋದೆ. ಮಲ್ಲಿಕಟ್ಟೆಯ ಬಳಿಗೆ ಬರ್ತೇನೆ ಅಂತ ಹೇಳಿದರೆ, ಅಲ್ಲಿಗೆ ಬಂದು ಕರೆ ಮಾಡಿ ಬರ್ತೇನೆ ಅಂತ ಹೇಳಿದರು. ಹೇಳಿದ್ದು ಮಾತ್ರವಲ್ಲ, ನನ್ನ ಬರವನ್ನು ಕಾದು ಕುಳಿತಂತೆ ಕಾರು ಚಲಾಯಿಸಿಕೊಂಡು ಬಂದು ಬಿಟ್ಟರು. ಹಾಗೇ ಆತ್ಮೀಯವಾಗಿ ಮನೆಯತ್ತ ಕರೆದುಕೊಂಡು ಹೋದರೆ ಹಿರಿಯ ಸಂಬಂಧಿಯೊಬ್ಬರ ಹಿಂದೆ ನಡೆದಂತೆ ಭಾಸವಾಗಿ  ನಿಧಾನವಾಗಿ ಅವರ ಜತೆಯಾದೆ.
          ಮನೆಯಲ್ಲಿ ಅವರ ಧರ್ಮಪತ್ನಿಯವರು  ಆತ್ಮೀಯವಾಗಿ ಸ್ವಾಗತಿಸಿದರು. ಆದರ ಉಪಚಾರ ಮಾಡಿದ ನಂತರ ಜೋಷಿಯವರ ಜತೆಯಲ್ಲಿ ಆತ್ಮೀಯವಾದ ಸಂವಾದ. ನನಗಂತೂ ಸ್ವರ್ಗಕ್ಕೆ ಮೂರೇ ಗೇಣು. ಹಲವು ಕಡೆ ಕಾರ್ಯಕ್ರಮಗಳಲ್ಲಿ ಸಿಕ್ಕಿದಾಗ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಆದರೆ ಅಲ್ಲೆಲ್ಲ ಒಂದು ಪರಿಧಿಯಿರುತ್ತಿತ್ತು. ಇಲ್ಲಿ ಅದಾವುದೂ ಇಲ್ಲದೇ,  ಶುದ್ದ ಆತ್ಮೀಯ ಸಂವಾದ. ಕಟ್ಟುಪಾಡುಗಳಿಲ್ಲ  ಜಗಳವಾಡಿ ಗುದ್ದಾಡಿದರೂ ಗಂಧದ ಜತೆಗೆ ಆಗಬೇಕಂತೆ. ಇದು ಬೇರೆ ಆತ್ಮೀಯ ಸಂವಾದ. ಅದು ಅಲ್ಲಿನ ನನ್ನ ಅನುಭವ. ಜೋಷಿ ಎಂಬ  ಗಂಧ ತೇಯುತ್ತಿದ್ದಂತೆ ಪರಿಮಳ ಬೀರುವುದಕ್ಕೆ ಆರಂಭವಾಗಿಬಿಟ್ಟಿತು. ಇದಕ್ಕೆ ಜಗಳವಾಡುವ ಅವಶ್ಯಕತೆ ಇಲ್ಲ. ಗಂಧ ಕಡ್ಡಿಯ ಪೊಟ್ಟಣ ತೆರೆದಂತೆ ಸುತ್ತೆಲ್ಲ ಘಮ ಘಮವಾಗಿ  ಪುಂಖಾನು ಪುಂಖವಾಗಿ ವಿಚಾರಗಳು. ಪ್ರತಿಯೊಂದು ವಿಚಾರಗಳನ್ನು ಅದೆಷ್ಟು ಸರಳವಾಗಿ ವಿವರಿಸುತ್ತಿದ್ದರೆಂದರೆ ನಾನು ಮಾತಿಲ್ಲದೇ ಕುಳಿತೆ. ಬಹಳಷ್ಟು ಮಾತುಗಳು ಇಂದಿನ ಯಕ್ಷಗಾನದ ಬಗ್ಗೆ. ಹಳೆಯ ಕೆಲವು ನೆನಪುಗಳ ಬಗ್ಗೆ, ಇದ್ದರೆ  ಮತ್ತದೇ ತಮ್ಮ ವಿಚಾರ ಲಹರಿಗಳು. ಮನೆಯೊಳಗೆ ವಿಪರೀತ ಸೆಕೆ ಅಂತ ಕಿಟಕಿ ಬಾಗಿಲು ತೆರೆದರೆ ಚಂಡ ಮಾರುತದಂತೆ ಕುಳಿರ್ಗಾಳಿ ಒಮ್ಮೆಲೇ ನುಗ್ಗಿ ಬಂದರೆ ಹೇಗಾಗಬಹುದು? ಹಾಗೆ ಇವರ ವಿಚಾರಧಾರೆಗಳು ಪುಂಖಾನು ಪುಂಖವಾಗಿ ಅದರಲ್ಲಿ ನಾನು ಕೊಚ್ಚಿ ಹೋದ ಅನುಭವ. ಯಾವುದನ್ನು ನೆನಪಿಟ್ಟುಕೊಳ್ಳಲಿ?  ಎಂಬ ಗೊಂದಲ. ಅದರೆ ಪ್ರತಿಯೋಂದು ಚಿಂತನಾರ್ಹ. ಅದ್ಭುತ ರಮ್ಯ ವಿಚಾರಗಳು.  
ವಾಸ್ತವದಲ್ಲಿ  ಜೋಷಿಯವರ ಪ್ರವಚನ ಭಾಷಣ ಇದ್ದರೆ ನಾನು ಅದನ್ನು ಕಳೆದುಕೊಳ್ಳುವುದಕ್ಕೆ ಸಿದ್ದನಿರುವುದಿಲ್ಲ. ಅದರ ಪ್ರತೀ ಶಬ್ದ ಶಬ್ದಗಳನ್ನು ಹೀರುವುದಕ್ಕೆ ಸಿದ್ಧನಾಗಿರುತ್ತೇನೆ. ನಮ್ಮ ಯಕ್ಷಗಾನಕ್ಕೆ ಒಂದು ಅಭಿನಂದನಾ ಭಾಷಣದ ರೂಪದರ್ಶಿತ್ವ ಇದ್ದರೆ ಅದು ಜೋಷಿಯವರ ಮಾತುಗಳು ಎಂಬಷ್ಟರ ಮಟ್ಟಿಗೆ ಅವರ ಪ್ರಭಾಷಣ ಕಲೆ ರಮ್ಯತೆಯನ್ನು ಒದಗಿಸುತ್ತದೆ. ಸ್ವತಃ ಉಪನ್ಯಾಸಕಾರದ ಇವರು ಕೇಳುಗರನ್ನು ಬೇಗನೇ ಸಂಮೋಹನ ಗೊಳಿಸುತ್ತಾರೆ. ಹಾಸ್ಯವಾಗಿ, ವಿಡಂಬನೆಯಾಗಿ ಹಲವು ಸಲ ತೀವ್ರವಾದ ಭಾವ ಉತ್ಕರ್ಷಕ್ಕೆ ಕಾರಣವಾಗುವಂತೆ ಮಾತನಾಡಿ ಹೃದಯಕ್ಕೆ ಹತ್ತಿರವಾಗುತ್ತಾರೆ. ಬಹಳ ಪ್ರಾಪಂಚಿಕ ಉದಾಹರಣೆಗಳೇ ಅಲೌಕಿಕತೆಯ ಅನುಭವವನ್ನು ಕೊಡುತ್ತವೆ. ಅದವರ ಮಾತುಗಳ ಶೈಲಿ. ಮೊದಲೇ ಅವರ ಮಾತುಗಳನ್ನು ಬಿಡದ ನಾನು ಇಲ್ಲಿ ಸಮಯವನ್ನು ಹಾಗೆ ವ್ಯಯಿಸುವುದಕ್ಕೆ ಸಿದ್ಧನಿರಲಿಲ್ಲ. ಹಾಗಾಗಿ ಕಿವಿಯೊಂದಿಗೆ ಮನಸ್ಸು ಸಿದ್ದಪಡಿಸಿ ಕುಳಿತಿದ್ದೆ.
ಜೋಷಿಯವರು ಹಲವು ಸಲ ಹೇಳುತ್ತಾರೆ, ನಾನು ಸ್ವಲ್ಪ ಪೆದಂಬು.  ಅದು ನಾನು ಜೀವನದ ಘಟನೆಗಳನ್ನು ಕಾಣುವ ಅವಲೋಕಿಸುವ ರೀತಿ. ಎಲ್ಲದರಲ್ಲೂ ವಿಡಂಬನೆಯನ್ನೂ ಚಿಕಿತ್ಸಕ ದೃಷ್ಟಿಯನ್ನು ನೋಡುತ್ತೇನೆ.  ಇದವರ ವಿಲಕ್ಷಣತೆಯ ಬಣ್ಣ. ಎಷ್ಟು ವಿಲಕ್ಷಣವೋ ಅದರಲ್ಲಿ ಅಷ್ಟೇ ಆತ್ಮೀಯತೆ ಸಲುಗೆ ಇರುತ್ತದೆ. ಬಹಳ ಸರಳವಾಗಿ ಸಂಬಂಧಿಯಂತೆ ಹತ್ತಿರವಾಗುತ್ತಾರೆ. ಈಗಂತೂ ಎಪ್ಪತ್ತರ ಜೀವನಾನುಭವ ಪ್ರತಿ ಮಾತಿನಲ್ಲೂ ಕಂಡು ಬರುತ್ತದೆ. ಅದು  ಯಕ್ಷಗಾನದ ಅರ್ಥಗಾರಿಕೆಯ ವಿಚಾರದಲ್ಲೂ  ಹಾಗೆ.  ಅದನ್ನು ಅರ್ಥವಿಸುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಗಹನವಾದ ವಿಚಾರಗಳು ಅರ್ಥವಾಗುವುದಕ್ಕೆ ಕಷ್ಟವಾದರೂ   ಏಕಾಗ್ರತೆಯಿಂದ ಹೊಕ್ಕು ನೋಡಿದರೆ ಮತ್ತೆ ಆ ಮಾತಿನ ಹೊಯಿಲಿನಿಂದ ಹೊರ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಅದು ಜೋಷೀ ಶೈಲಿ. ಅವರೊಂದಿಗಿನ ದೀರ್ಘ ಸಂವಾದವೂ ಇದೇ ಅನುಭವವನ್ನು ನೀಡಿತು.
ಯಾವುದೋ   ಘಟನೆಯನ್ನು ವಿವರಿಸುತ್ತಾ  ಶ್ವೇತ ಕುಮಾರ ಚರಿತ್ರೆ ಎಂಬ ಪ್ರಸಂಗದ ವಿಶ್ಲೇಷಣೆಯನ್ನು ಬಹಳ ಸರಳವಾಗಿ ವಿವರಿಸಿದರು. ಶ್ವೇತ ಕುಮಾರ ಲೌಕಿಕ ಪ್ರಪಂಚದಿಂದ ಅಲೌಕಿತೆಯತ್ತ ಹೋಗುತ್ತಾನೆ. ಮೋಕ್ಷ ಮಾರ್ಗದಲ್ಲಿ ಒಂದು ಪುಣ್ಯದ ಕೆಲಸದಿಂದ ಮತ್ತೂ ಅಲೌಕಿಕತೆ ಹೋಗಬೇಕಾದವನು ರಂಭೆಯ ಮೇಲಿನ ಮೋಹ ಪುನಃ ಲೌಕಿಕ ಪ್ರಪಂಚಕ್ಕೆ ಎಳೆದು ತರುತ್ತದೆ. ದೇವಲೋಕಕ್ಕೆ ಹೋದರೂ ಲೌಕಿಕತೆಯ ಚಿಂತನೆಯೇ ಇರುವುದಾದರೆ  ದೇವಲೋಕಕ್ಕೆ ಹೋದ ಸಾರ್ಥಕತೆಯಾದರು ಎಂತಹುದು? ಅಲ್ಲೂ ಲೌಕಿಕ ಚಿಂತನೆಗಳು ಆವರಿಸುತ್ತವೆ ಎಂದಾದರೆ ದೇವಲೋಕ ಎಂಬುದಕ್ಕೆ ಅರ್ಥವೆಂತಹಹುದು? ಒಬ್ಬ ಪ್ರಸಂಗ ಕರ್ತ ಇಂತಹ ಲೌಕಿಕ ಅಲೌಕಿಕ ವಿಚಾದ ದೃಷ್ಟಿಕೋನದಲ್ಲೇ ಪ್ರಸಂಗ ರಚಿಸಿದರೂ ಯಾವೊಬ್ಬ ಕಲಾವಿದನು ಪ್ರಸಂಗದ ಗಾಢವಾದ ತತ್ವವನ್ನು ಗಮನಿಸುವುದಿಲ್ಲ. ಅದಕ್ಕೇ ಇನ್ನೇನೋ ಮಸಾಲೆ ಸೇರಿಸಿ ಇನ್ನೇನೋ ಮಾಡಿ ಒಟ್ಟು ಪ್ರಸಂಗ ಅರ್ಥಹೀನವಾಗುತ್ತದೆ. ಮೋಕ್ಷ ಸಿಗದ ಆತ್ಮಕ್ಕೆ  ಒಂದು ಶಿವನಾಮ ಸ್ಮರಣೆಯಿಂದ ಲೌಕಿಕತೆಯತ್ತ  ಹೊರಳುವಂತೆ ಮಾಡುವ ಉದ್ದೇಶವಾದರೂ ಏನು? ಪ್ರಸಂಗದ ತತ್ವ ನಿಗೂಢವಾಗಿಯೇ ಉಳಿದುಬಿಡುತ್ತದೆ.

ಇಂತಹ ಮಾತುಗಳು ನನ್ನಂಥಹವನಿಗೆ ಗಾಢ ಚಿಂತನೆಯನ್ನು ಹುಟ್ಟಿಸುತ್ತವೆ. ಇಂದು  ಕೇವಲ ರಂಜನೆಯನ್ನಷ್ಟೇ ಗಮನಿಸುತ್ತೇವೆ. ಈ ಕಾರಣದಿಂದಾಗಿಯೇ ಶೇಣಿಯ ನಂತರದ ಪೀಳಿಗೆಯ ತಾಳಮದ್ದಲೆಗಳು ಸಪ್ಪೆಯಾಗುತ್ತಿರುವುದು. ಪ್ರಸಂಗಕ್ಕೆ ಇರುವ ತಾತ್ವಿಕ ವಿಚಾರಗಳತ್ತ ಗಮನ ಹರಿಸುವುದಿಲ್ಲ. ಹಲವು ಸಲ ಅರ್ಥಧಾರಿ ಪಾತ್ರದ ಒಳ ಹೊಕ್ಕರು ಆತ ಏನು ಹೇಳುತ್ತಾನೆ ಎಂಬುದರಲ್ಲಿ ಗಮನ ಇರುವುದಿಲ್ಲ. ಏನಾದರೂ ಚರ್ಚೆ ಮುರುಟುವಾದ ಬರುವಾಗಲಷ್ಟೇ ಪ್ರೇಕ್ಷಕ ಗಮನ ಹರಿಸುತ್ತಾನೆ. ಬಹಳಷ್ಟು ಇಂದಿನ ಅರ್ಥಗಾರಿಕೆಯ ದಿಕ್ಕೂ ಅದೇ ಆಗಿರುತ್ತದೆ. ಶ್ವೇತ ಕುಮಾರ ಚರಿತ್ರೆಯಲ್ಲಿ ಮೋಕ್ಷ ಪಡೆಯದ ಆತ್ಮ ಪುನಃ ಶರೀರದಲ್ಲಿ ಬರುವಂತಾಗುವಾಗ ಅದರ ತಾತ್ವಿಕ ತಳಹದಿಯನ್ನು ಯಾರೂ ಗಮನಿಸುವುದಿಲ್ಲ. ಪ್ರೇತ ವೇಷದವನು ಏನೋ ಸರ್ಕಸ್ ಮಾಡಿ ಹಾಸ್ಯಕ್ಕಾಗಿ ಅಶ್ಲೀಲತೆಯನ್ನೇ ತೋರಿಸುವಾಗ ಪ್ರಸಂಗದ ಆಶಯವೂ ಸಾಯುತ್ತದೆ.  ಶುದ್ದ ಯಕ್ಷಗಾನದ ದೃಷ್ಟಿಕೋನವೂ ನಾಶವಾಗುತ್ತದೆ. ಯಾವುದೇ ಪಾತ್ರವಾಗಲೀ ಅದು ಅಭಿವ್ಯಕ್ತೀಕರಿಸುವ ಸನ್ನಿವೇಶವಾಗಲೀ ಪ್ರಸಂಗದ ಚೌಕಟ್ಟು ಮೀರುವಂತಿರಬಾರದು. ಮತ್ತದಕ್ಕೆ ಯಕ್ಷಗಾನದ ತಳಹದಿಯೂ ಅಗತ್ಯ. ಪಾತ್ರ ಕೇವಲ ಒಂದು ಸನ್ನಿವೇಶ ಒಂದು ಪದ ಇಷ್ಟನ್ನೇ ಗಮನಿಸಿದರೆ ಸಾಕೇ? ಹಾಗಾಗಿ ನಾಟ್ಯಾಭಿನಯ ವಿಕೃತಿಯಾಗಿ ಬಿಂಬಿಸುವುದು. ಅದು ಯಕ್ಷಗಾನಕ್ಕೆ ಅನಿವಾರ್ಯವೇ? ಯಕ್ಷಗಾನಕ್ಕೆ ಅದರ ಕೊರತೆ ಬಾಧಿಸುತ್ತದೆಯೇ? ಇದನ್ನು ಯೋಚಿಸುವುದಿಲ್ಲ. ಒಟ್ಟು ಹೊಸತನವಾಗಬೇಕು. ಜನರಂಜನೆ ಆಗ್ಬೇಕು. ಅದನ್ನು ನೋಡಿ ಮತ್ತಷ್ಟು ಕಾರ್ಯಕ್ರಮ ನಿಗದಿಯಾಗಬೇಕು. ಇದಿಷ್ಟೇ ಕಲಾವಿದನ ಕರ್ತವ್ಯವಾದರೆ ಯಕ್ಷಗಾನ ದೃಷ್ಟಿಕೋನ ಕಲಾಸೇವೆ ಏನು ಬಂತು?   ತನಗೆಲ್ಲವನ್ನೂ ಕೊಟ್ಟ ಕಲೆಗೆ ಕಲಾವಿದನಾದವನು  ಕೊಡುವ ದೇಣಿಗೆ ಎಂತಹುದು? ಅದು ಹಿತವಾಗಿ ಸಭ್ಯವಾಗಿ ಇರಬೇಕಾದದ್ದು ಅನಿವಾರ್ಯವಲ್ಲವೇ?  ಇದರಲ್ಲಿ ಪ್ರೇಕ್ಷಕನೂ ಒಬ್ಬ ಪಾಲುದಾರ.  
          ಜೋಷಿಯವರು ಚಿಂತನೆಗಳು ಹೇಳುವುದಕ್ಕೆ ತೊಡಗಿದರೆ ಅದಕ್ಕೆ ಸೀಮೆ ಪರಿಮಿತಿಗಳಿರುವುದಿಲ್ಲ. ಯಕ್ಷಗಾನದಿಂದಾಚೆವರೆಗೂ ಸ್ವಾರಸ್ಯವನ್ನು ತುಂಬಬಲ್ಲರು. ಆದರೂ ಯಕ್ಷಗಾನೀಯ ಚಿಂತನೆಗಳೊಂದಿಗೆ ಸುಲಭವಾಗಿ ಬೆರೆಯುತ್ತಾರೆ  ಯಕ್ಷಗಾನದ ಅಂಗ ಅಂಗ ರೋಮ ರೋಮಗಳು ಅವರಿಗೆ ಚಿರ ಪರಿಚಿತ. ತೀರ ಚಿಕ್ಕ ಕಲಾವಿದನಾದರೂ ಅವರ ತಿಳುವಳಿಕೆಯ ಪುಟಗಳಲ್ಲಿ ಆ ಕಲಾವಿದನ ಬಗ್ಗೆ ಉಲ್ಲೇಖವಿರುತ್ತದೆ.  ಯಕ್ಷಗಾನವೆಂದರೆ ಇಂದು ಹಲವು ಮನೆಯ ಹಸಿವನ್ನು ನೀಗಿಸುತ್ತದೆ. ಹಲವು ಮಂದಿಯ ಬದುಕನ್ನು ಕಟ್ಟಿಕೊಟ್ಟಿದೆ. ಇಂದು ಕೇವಲ ಒಂದು ಕ್ಷೇತ್ರದಲ್ಲಿ ಇನ್ನೂರೈವತ್ತಕ್ಕೂ ಮಿಕ್ಕಿ ಕಲಾವಿದರು ಬದುಕನ್ನು ಕಂಡುಕೊಂಡಿರುವುದು ನಿಜಕ್ಕೂ ವಿಸ್ಮಯ ತರುವ ವಿಚಾರ.
          ಆಗ ನನ್ನ ಚಿಂತನೆಯನ್ನು ನನ್ನ ಅಭಿಪ್ರಾಯವನ್ನು ಸೂಕ್ಷ್ಮವಾಗಿ ಮಂಡಿಸಿದೆ. ಐದಾರು ಮೇಳಗಳು ಒಂದು ಕ್ಷೇತ್ರದಿಂದ ಹೊರಡುತ್ತವೆ. ಅದರ ಜತೆಯಲ್ಲಿ ನೂರಾರು ಕಲಾವಿದರ ಬದುಕು ಬೆಸೆದುಕೊಂಡಿದೆ. ಇಲ್ಲಿ ಒಂದು ಬದಿಯ ತಾಳ ತಪ್ಪಿದರೂ ಕಲಾವಿದರ ಮೇಲೆ ಪರಿಣಾಮ ಬೀರುತ್ತದೆ. ಇಂದು ಅದೆಷ್ಟೋ  ಸಂಘ ಸಂಸ್ಥೆಗಳು ಯಕ್ಷಗಾನದ ಚಟುವಟಿಕೆಯಲ್ಲಿ ತೊಡಗಿವೆ. ಯಕ್ಷಗಾನ ಚಟುವಟಿಕೆಗೆ ಇಂದು ಕೊರತೆಯಿಲ್ಲ. ಆದರೆ ಶುದ್ದವಾದ ಯಕ್ಷಗಾನದ ಕೊರತೆಯನ್ನು ಅನುಭವಿಸುವಂತಾಗಿದೆ. ಇಷ್ಟು ಮೇಳಗಳಲ್ಲಿ ಒಂದು ಮೇಳವಾದರೂ ಎಲ್ಲಾ ಬಾಧ್ಯತೆಗಳನ್ನು ಬದಿಗಿರಿಸಿ ಪರಂಪರೆಯಿಂದ ಬಂದ ಯಕ್ಷಗಾನಕ್ಕೆ ಮೀಸಲಾಗಿರಿಸಿಕೊಳ್ಳಬೇಕು. ಯಾವುದೇ ವಿಷಯದಲ್ಲಿ ರಾಜಿ ಹೊಂದಾಣಿಕ ಮಾಡಿಕೊಳ್ಳದೆ, ಕೇವಲ ಹಿಂದಿನ ಪರಂಪರೆಯಲ್ಲಿ ಯಕ್ಷಗಾನ ಹೇಗಿತ್ತೋ ಅದನ್ನು ತೋರಿಸುವ ಪ್ರಯತ್ನ ಮಾಡಬೇಕು. ಇದು ಸಂಪೂರ್ಣವಾಗಿ ಅದಕ್ಕೇ ಮೀಸಲಾಗಿರಿಸಬೇಕು. ಅಲ್ಲಿ ಚಾಲುಕುಣಿತ, ಅಥವಾ ಸಂಗೀತ ಕಛೇರಿಯಂತಹ ಹಾಡುಗಾರಿಕೆ  ಅದಾವುದೂ ಇಲ್ಲದ ಕೇವಲ ಶುದ್ದ ಪರಂಪರೆಗೆ ಮೀಸಲಾಗಿರಿಸಿಕೊಳ್ಳಬೇಕು. ಅಲ್ಲಿ ಯಾವುದೇ ಹೊಂದಾಣಿಕೆ ಇಲ್ಲದೆ ಪರಂಪರೆಯಲ್ಲಿ ಏನಿತ್ತೋ ಅದರ ಅಧ್ಯಯನದ ಜತೆಗೆ ಸಂಶೋಧನೆಯೂ ಸಾಧ್ಯವಾಗುತ್ತದೆ. ಮುಂದಿನ ಪೀಳಿಗೆಗೆ ಒಂದು ಶುದ್ದವಾದ ಯಕ್ಷಗಾನವನ್ನು ಉಳಿಸಿದಂತಹ ಮಹತ್ಕಾರ್ಯವೂ ಆಗಿಬಿಡುತ್ತದೆ. ಇಷ್ಟು ಮೇಳಗಳು ಸಂಘ ಸಂಸ್ಥೆಗಳು ಅಂಕೆಗೆ ಸಿಗದ ಪ್ರದರ್ಶನಗಳು ಇದ್ದು ಏನು ಪ್ರಯೋಜನ? ಯಕ್ಷಗಾನದ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಐದಾರು ಮೇಳಗಳು ಒಂದು ಕ್ಷೇತ್ರದಿಂದ ಹೊರಡುವಾಗ ಇದರಲ್ಲಿ ಒಂದು ಮೇಳದ,  ಪೂರ್ಣ ಆಟವಲ್ಲದೇ ಇದ್ದರೂ ಒಂದು ಪ್ರಸಂಗವನ್ನಾದರೂ ಶುದ್ದ ಪರಂಪರೆಗೆ ಮೀಸಲಿರಿಸಬಾರದೇ?  ಎಲ್ಲದಕ್ಕೂ ಪ್ರೇಕ್ಷಕರತ್ತ ಬೊಟ್ಟು ಮಾಡಿ ತೋರಿಸುತ್ತಾರೆ. ಕಲಾವಿದ ತನ್ನ ಹೊಟ್ಟೆಯನ್ನು ತೋರಿಸುತ್ತಾನೆ.    ತನ್ನ ಹೊಟ್ಟೆ,   ಪ್ರೇಕ್ಷಕರೂ,  ಹೀಗೆ ಎಲ್ಲದಕ್ಕೆ ಮರುಗುವಾಗ ಯಾರಿಗೂ  ಯಕ್ಷಗಾನದದ ಬಗ್ಗೆ ಮರುಗುವ ಮತ್ತು  ಕನಿಕರ ತೋರಿಸುವ ಮನಸ್ಸಾಗುವುದಿಲ್ಲ. ಕಲೆ ಹಾಳಾಗಿ ನಾಶವಾಗಿ ಹೋದರೂ ಕಲಾವಿದ ಕ್ಷೇಮವಾಗಿರಬೇಕು.  ತಾನು ಉದ್ದಾರವಾಗಬೇಕು ನಮಗೆ ರಂಜನೆ ಸಿಗಬೇಕು ಎನ್ನುವ ಮನೋಭಾವಕ್ಕೆ ಏನು ಹೇಳಬಹುದು? ಹೊಸ ಅವಿಷ್ಕಾರಗಳಿಗೆ ಹೊಸತನಕೆ ಅಥವಾ ಇನ್ನೇನೋ ಪ್ರಯೋಗಗಳಿಗೆ ಹತ್ತು ಮೇಳಗಳು ಇರುವಾಗ ನೂರಾರು ಕಲಾವಿದರು ಇರುವಾಗ ಒಂದು ಮೇಳ ಒಂದಷ್ಟು ಕಲಾವಿದರು ಪರಂಫರೆಯ ಯಕ್ಷಗಾನಕ್ಕೆ ಸಿಗುವುದಿಲ್ಲ ಎನ್ನಲು ಸಾಧ್ಯವೇ. ಮನುಷ್ಯ ಇಷ್ಟೂ ಸ್ವಾರ್ಥಿಯಾಗಬಹುದೇ. ಪ್ರೇಕ್ಷಕರತ್ತ ಬೊಟ್ಟು ಮಾಡುವಾಗ ಇಂದು ಹರಕೇ ಆಟಗಳಿಗೆ ಬರುವ ಪ್ರೇಕ್ಷಕನ ಸಂಖ್ಯೆ ಎಷ್ಟಿದೆ? ಯಾವ ಪ್ರೇಕ್ಷಕನಿಗಾಗಿ ಹೊಸ ಹೊಸ ಪ್ರಯೋಗಗಳು? ಪ್ರೇಕ್ಷಕನಿಲ್ಲದೇ ಇದ್ದರೂ ಅದರ ಕಡೆಗೆ ಗಮನ ಕೊಡದೆ ಶುದ್ದ ಹರಕೆಯಂತೆ ಪರಂಪರೆಯ ಯಕ್ಷಗಾನ ಪ್ರದರ್ಶನಗೊಳ್ಳಬೇಕು.  ಆ ಮೂಲಕ ಮುಂದಿನ ಪೀಳಿಗೆಗೆ ಯಕ್ಷಗಾನ ಎಂದರೆ ಇದು ಎಂದು ತೋರುವಂತಾಗಬೇಕು. ಖಂಡಿತವಾಗಿ ಇದಕ್ಕೆ ಸ್ಪಂದಿಸುವ ಪ್ರೇಕ್ಷಕ ಸಂಖ್ಯೆ ದೊಡ್ಡದೇ ಇದೆ. ಆದರೆ ತೀರ ಬೇಕಾಗಿದ್ದು ಮಾಡುವಲ್ಲಿ ಯಾವ ಆಸಕ್ತಿಯೂ ಮೂಡುವುದಿಲ್ಲ. ತಪ್ಪಿದ ಹಾದಿಯನ್ನೇ ತಿಳಿದೂ ತಿಳಿದೂ ತುಳಿಯುವ ಹಂಬಲ.
          ಯಕ್ಷಗಾನವೆಂದರೆ ಇಂದು ಸೂಪರ್ ಮಾರ್ಕೆಟ್ ತರಹ ಆಗಿಬಿಟ್ಟಿದೆ. ಅಲ್ಲಿ ಎಲ್ಲಾ ಬಗೆಯ ಸರಕುಗಳೂ ಸಿಗುತ್ತದೆ. ಸಂಗೀತ ಕಛೇರಿಯೂ ಸಿಗುತ್ತದೆ. ವಿವಿಧ ಬಗೆಯ ಹಿಮ್ಮೇಳವೂ ಸಿಗುತ್ತದೆ. ಯಾವುದೇ ಬಗೆಯ ನರ್ತನವೂ ಸಿಗುತ್ತದೆ..ಭರತ ನಾಟ್ಯದಿಂದ ತೊಡಗಿ ಯಗಳ ಗೀತೆಯ ವರೆಗೂ ಸಿಗುವ ದೊಡ್ಡ ಮಾರ್ಕೆಟ್ ಆಗಿಹೋಗಿದೆ. ಅದಕ್ಕೆ ಇಂತಹುದೇ ಒಂದು ನಿಯಮಿವಲ್ಲ. ನಾವು ನಿತ್ಯ ಪೂಜೆ ಮಾಡುವ ಭಕ್ತಿ ಗೌರವದಿಂದ ಕಾಣುವ ದೇವರ ಕೋಣೆಯೊಂದಿದೆ ಎಂದುಕೊಂಡರೆ ಅಲ್ಲಿ ಕೇವಲ ಮಂಗಳ ದ್ರವ್ಯಗಳು ಪೂಜಾಸುವಸ್ತುಗಳು ಮಾತ್ರಾ ಇರುವುದನ್ನು ಬಯಸುತ್ತೇವೆ. ಅಲ್ಲಿ ಚಪ್ಪಲಿಯೋ ಮಾಂಸವೋ ಮತ್ತೊಂದೊ ಮಗುದೊಂದೋ ಇದ್ದರೆ, ನಮಗೆ ದೇವರ ಮೇಲೆ ಭಕ್ತಿ ಗೌರವ ಮೂಡುವುದಿಲ್ಲ. ಹಾಗೇನೆ ಯಕ್ಷಗಾನ ಅದು ಶುದ್ದವಾಗಿರಬೇಕು. ಅಶ್ಲೀಲತೆಯಿಂದ ದೂರವಾಗಿರಬೇಕು. ಹಾಗಾದರೆ ಅದರ ಗೌರವ ಭಾವ ಮೂಡುತ್ತದೆ. ಚಿಂತನೆಗಳು ಹಲವು.    
          ದರ್ಮಸ್ಥಳದ ಮೇಳದ ಆಟಗಳು ಮತ್ತು ಕಡತೋಕರ ಬಗ್ಗೆ ಒಂದು ಮಾತು ಬಂತು. ಕುಂಬಳೆ ಸುಂದರ್ ರಾವ್, ಪುತ್ತೂರು ನಾರಾಯಣ ಹೆಗಡೆ, ಸೂರಿಕುಮೇರಿ ಗೋವಿಂದ ಭಟ್ ಈ ಮೂರು ಕಲಾವಿದರನ್ನು ಆಧಾರವಾಗಿಟ್ಟು ಪಾತ್ರ ಹಂಚಿಕೆಯಾಗುತ್ತಿತ್ತು. ರಂಗಸ್ಥಳದಲ್ಲಿ ಈ ಮೂರು ಕಲಾವಿದರಲ್ಲಿ ಯಾರಾದರೂ ಒಬ್ಬರಾದರೂ ಬಿಟ್ಟು ಬಿಟ್ಟು ಇಡೀ ರಾತ್ರಿಯ ಪ್ರಸಂಗದಲ್ಲಿ ರಂಗಸ್ಥಳದಲ್ಲಿ ಸಕ್ರಿಯವಾಗಿರುತ್ತಿದ್ದರು. ಇವುಗಳನ್ನು ಬೆಸೆಯುವಂತೆ ಪಾತಾಳ ವೆಂಕಟ್ರಮಣ ಭಟ್,  ಎಂಪೆಕೆಟ್ಟೆ ರಾಮಯ್ಯ ರೈ, ಶ್ರೀಧರ ಭಂಡಾರಿ ಚಂದ್ರಗಿರಿ ಅಂಬು,  ಪಕಳ ಕುಂಜ ಕೃಷ್ನ ನಾಯ್ಕ ಮುಂತಾದ ಕಲಾವಿದ ಪ್ರಮುಖರ ಗಡಣವೇ ಇರುತ್ತಿತ್ತು. ಹಾಗಾಗಿ ಪ್ರೇಕ್ಷಕನ ಗಮನ ಸದಾ ರಂಗಸ್ಥಳದಲ್ಲಿ ಸ್ಥಿರವಾಗಿರುತ್ತಿತ್ತು.
ಇಂದು ಕಲಾವಿದರನ್ನು  ನೋಡಿ ಪ್ರಸಂಗ ನಿಗದಿಯಾಗುತ್ತದೆ. ಆ ಪ್ರಸಂಗವಾದರೆ ಅವನಿಗೆ ವೇಷವಿಲ್ಲ ಇದಾದರೆ ಇವರಿಗೆ ಕಷ್ಟ. ಆದರೆ ಮೊದಲು ಪ್ರಸಂಗಕ್ಕೆ ಕಲಾವಿದ ನಿಗದಿಯಾಗುತ್ತಿದ್ದ. ಅದೇ ಕಾರಣದಿಂದ ಕಡತೋಕರ ನಿರ್ದೇಶನದಲ್ಲಿ ಧರ್ಮಸ್ಥಳ ಮೇಳ ವಿಜ್ರಂಭಿಸುತ್ತಿತ್ತು. ಇದು ನನ್ನ ಅನಿಸಿಕೆ.
ನನ್ನ ಲೇಖನಗಳ ಬಗ್ಗೆ ಮರೆಯದೇ ಪ್ರತಿಕ್ರಿಯಿಸಿದರು. ಅವರ ಬಗ್ಗೆ ಬರೆದ ಲೇಖನದ ಅಂಶಗಳನ್ನು ಹೇಳಿದರು.
 “ನನ್ನ ಬಗ್ಗೆ ಹಲವು ಲೇಖನಗಳು ಬಂದಿವೆ. ಬಹಳಷ್ಟು ಲೇಖನಗಳು ಯದ್ವಾ ತದ್ವಾ ಹೊಗಳಿಯೇ ಬರೆಯುತ್ತಾರೆ. ಕೆಲವೊಮ್ಮೆ ಅದು ಅತಿರೇಕ ಅಂತ ಅನ್ನಿಸುತ್ತದೆ. ಒಬ್ಬ ವ್ಯಕ್ತಿಯ ಬಗ್ಗೆ ಬರೆಯುವಾಗ ಆತನ ವೈಯಕ್ತಿಕ  ವಿಚಾರಗಳನ್ನು ವಿಶೇಷವಾಗಿ ಉಲ್ಲೇಖಿಸುವುದು ಅತಿಶಯವಾಗುತ್ತದೆ. ಯಾವುದಕ್ಕೋ ಹೋಲಿಸಿ ಅಂಥವರು ಇಂಥವರು ಅಂತ ಬರೆಯುತ್ತಾರೆ. ಅದನ್ನು ಓದುವಾಗ ಸಂತೋಷಕ್ಕಿಂತಲೂ ಗಾಬರಿಯಾಗಿಬಿಡುತ್ತದೆ. ಅದು ನಮಗೆ ನಾವೇ ಮಾಡಿಕೊಂಡ ಆತ್ಮವಂಚನೆಯಾಗುತ್ತದೆ. ಆದರೆ ನಿಮ್ಮ ಲೇಖನದ ವೈಶಿಷ್ಟ್ಯ ಇರುವುದು ಅಲ್ಲೇ. ಅಲ್ಲಿ ಕೇವಲ ನಿಮ್ಮ ಅನುಭವವ ಮಾತ್ರ ಹೇಳುವುದು. ನಿಮ್ಮ ದೃಷ್ಟಿಕೋನದಲ್ಲಿ ಜೋಷಿಯ ವ್ಯಕ್ತಿತ್ವ ಮತ್ತವರ ವೈಶಿಷ್ಟ್ಯ ಬಹಳ ಇಷ್ಟವಾಯಿತು. ಅತಿಯಾದ ಹೊಗಳಿಕೆ ಇಲ್ಲ. ಅತಿರೇಕದ ಭಾವೋದ್ರೇಕ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ  ಅಡಕವಾಗುವ ಯಕ್ಷಗಾನದ ದೃಷ್ಟಿಕೋನ ಬಹಳ ಇಷ್ಟವಾಯಿತು.ಇನ್ನೂ ಬರೀತಾ ಇರಿ.”
ಅವರ ಆಶೀರ್ವಾದ ಒಂದು ಅತಿಯಾದ ಚೈತನ್ಯವನ್ನು ತುಂಬಿಸಿದ ಅನುಭವ. ಯಾವುದೇ ವ್ಯಾಕರಣ ನಿಬದ್ದವಾಗಿರದ , ಬಾಲಿಷವಾದ ನನ್ನ ಲೇಖನಗಳೆಲ್ಲಿ ಅದು ಕೇವಲ ಜೋಷಿಯವರ ಗಮನಕ್ಕೆ ಬಂದಿದೆ ಅವರು ಓದಿದ್ದಾರೆ ಎನ್ನ್ನುವುದೇ ಆಭಿಮಾನದ ಹಿರಿಮೆಯಾಗಿ ಭಾಸವಾಗುವಲ್ಲಿ , ಇನ್ನೂ ಬರೀತಾ ಇರಿ ಎಂಬ ಆಶೀರ್ವಾದ ಸಾರ್ಥಕತೆಯನ್ನು ತಂದಿತು.

ವಿಚಾರಗಳು ಹಲವಾರು. ಆದರೆ ಸಮಯ ಯಾವತ್ತಿಗೂ ನಮ್ಮನ್ನೂ ಮೀರಿ ಬೆಳೆಯುತ್ತದೆ. ಅವಾಗ ಸಮಯದ ಜತೆ ನಾವು ಓಡಬೇಕಾಗುತ್ತದೆ. ಗಡಿಯಾರ ನೋಡಿದೆ. ಅದಾಗಲೇ ಎಂಟು ಗಂಟೆಯಾಗಿತ್ತು. ಅವರಿಗೂ ಒಂದೆರಡು ಫೋನ್ ಕರೆಗಳು ಈನಡುವೆ ಬಂತು. ಅದಾವುದೋ ಕೌಟುಂಬಿಕ ಕಾರ್ಯಕ್ರಮಕ್ಕೆ ಹೊರಡುವ ಅನಿವಾರ್ಯತೆ ಒದಗಿ ಬಂತು. ಇನ್ನು ನಾನು ಹೊರಡಲು ಉದ್ಯುಕ್ತನಾದೆ. ನನ್ನನ್ನು ಆಸನವೊಂದರಲ್ಲಿ ಕೂರಿಸಿದರು. ನಾನು ಕಕ್ಕಾಬಿಕ್ಕಿಯಾದೆ. ಶಾಲೊಂದನ್ನು ನನಗೆ ಹೊದೆದು ಎರಡು ಪುಸ್ತಕಗಳನ್ನು ಕೈಯಲ್ಲಿ ಇರಿಸಿದರು. “ಮೊದಲ ಸಲ ಬಂದಿದ್ದೀರ. ಇದು ನನ್ನ ಖುಷಿಗೆ.”  ಜೋಷಿಯವರ ಖುಷಿಯನ್ನು ಕಂಡು ಮೂಕನಾದೆ.  ಎರಡು ಪುಸ್ತಕಗಳು, ಒಂದು ಅವರದೇ ಕೃತಿ. “ಯಕ್ಷಗಾನ ಸ್ಥಿತಿಗತಿ.” ಇನ್ನೊಂದು “ಪುಚ್ಚೆಕೆರೆ ಕೃಷ್ಣ ಭಟ್ಟ ಜೀವನ ಸಾಧನೆ” 
ಈ ವರೆಗೆ ಯಕ್ಷಗಾನಕ್ಕೆ ಸಂಬಂಧಿಸಿ ನನಗೆ  ಇಂತಹ ಅನುಭವವಾಗಿಲ್ಲ. ಯಕ್ಷಗಾನ ಕ್ಷೇತ್ರದ ಹಿರಿಯರೊಬ್ಬರು ನನ್ನ ಆದರಿಸಿ ಸತ್ಕರಿಸಿ ನನ್ನನ್ನು ರೋಮಾಂಚನಗೊಳಿಸಿದರು. ಯಾವೊಂದೂ ಅರ್ಹತೆಯಿಲ್ಲದ ನನ್ನನ್ನು ಸ್ನೇಹದಿಂದ ಪ್ರೀತಿಯಿಂದ ಕಂಡರು. ಹತ್ತಿರದ ಬಂಧುವಂತೆ ಉಪಚರಿಸಿದರು. ಎಲ್ಲದಕ್ಕೂ ನಾನು ಕೃತಜ್ಜ ಎನ್ನುವ ಪರಿಮಿತಿಯಲ್ಲಷ್ಟೇ ನಾನಿದ್ದೆ. ಹೊರಡುತ್ತಾ ಎಲ್ಲಿ ಬಿಡಬೇಕು ಎಂದು ಕೇಳಿದರು. ಹಾಗೇನೆ ನಾನು ಹೋಗಬೇಕಾದ ಸ್ಥಳಕ್ಕೆ ತಂದು ಬಿಟ್ಟು ಇನ್ನೊಮ್ಮೆ ಇದೇ ರೀತಿ ಭೇಟಿಯಾಗೋಣ ಎನ್ನುತ್ತಾ ಬೀಳ್ಕೊಂಡಾಗ ಆತ್ಮೀಯ ಬಂಧು ಮನೆಗೆ ಹೋಗಿ ಬಂದ ಅನುಭವ.