"ಇದು ವಿಮರ್ಶೆಯಲ್ಲದ ಚಿಂತನ"

Friday, March 16, 2018

ಯಕ್ಷಗಾನ ಸ್ಥಿತಿಗತಿ ಒಂದು ವಿಮರ್ಶೆ


ಇತ್ತೀಚೆಗೆ ಹಿರಿಯ ವಿದ್ವಾಂಸ,  ಯಕ್ಷ ಚಿಂತಕ ಶ್ರೀ  ಡಾ.  ಎಂ ಪ್ರಭಾಕರ ಜೋಷಿಯವರ ಮನೆಗೆ ಹೋಗಿದ್ದಾಗ ಎರಡು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ವೃತ್ತಿಯಲ್ಲಿ ಪ್ರಾಧ್ಯಾಪಕರೂ ಸಹ ಆಗಿದ್ದ ಜೋಷಿಯವರಿಗೆ ಓದುವಿಕೆಯ ಮಹತ್ವ ಬಹಳಷ್ಟು ತಿಳಿದಿದೆ. ಹಾಗಾಗಿ ಅದೇ ಬೆಳೆಯನ್ನು ನನ್ನಲ್ಲೂ ಗುರುತಿಸಿದ್ದು ನನಗೆ ಅಚ್ಚರಿಯನ್ನು ತಂದಿತು. ಸದ್ಯ ಪುಸ್ತಕ ಓದುವುದೆಂದರೆ ತುಸು ಶ್ರಮದಾಯಕ ಕೆಲಸ. ಮತ್ತದಕ್ಕೆ ಅತ್ಯಂತ ಕಟಿಬದ್ದತೆ ಅನಿವಾರ್ಯ. ಯಾಕೆಂದರೆ ದಿನದ ಇಪ್ಪತ್ನಾಲ್ಕು ಘಂಟೆಯಲ್ಲಿ ಕೇವಲ ದಿನ ಪತ್ರಿಕೆಯನ್ನು ಓದುವುದಕ್ಕೇ ಸಮಯ ಸಾಲುವುದಿಲ್ಲ.  ಇನ್ನು ಈ  ಪುಸ್ತಕ?

    ಆದರೂ ಕೆಲವು ಸಮಯದ ಮೊದಲು ಭಗವದ್ಗೀತೆ ಓದುವುದಕ್ಕೇ ಒಂದಷ್ಟು ಸಮಯ ಮೀಸಲಿರಿಸಿದ್ದೆ. ಎಲ್ಲರೂ ಭಗವದ್ಗೀತೆ ಎಂದು ಹೇಳುತ್ತಾ ಪವಿತ್ರ ಗ್ರಂಥವೆಂಬಂತೆ ಕಾಣುತ್ತಾರೋ ಆದರೆ ಅದನ್ನು ಪೂರ್ಣವಾಗಿ ಓದಿದವರೆಷ್ಟು ಮಂದಿ? ಅದನ್ನು ಗಮನಿಸಿದರೆ ಆಘಾತವಾಗಿಬಿಡುತ್ತದೆ. ಭಗವದ್ಗೀತೆ  ಕೇವಲ ಪವಿತ್ರ ಸ್ಥಾನಕ್ಕೆ ಮಾತ್ರ ಸೀಮಿತವಾಗುತ್ತದೆ. ಪವಿತ್ರವೆಂದರೆ ಗರ್ಭಗುಡಿಯ ದೇವರಂತೆ ಅದೂ ದೂರದಿಂದ ನೋಡಿ ನಮಸ್ಕರಿಸುವುದಕ್ಕಷ್ಟೇ ಸೀಮಿತ.

 ಬಾಲ್ಯದಲ್ಲಿ ನಾನು ಒಂದು ರೀತಿಯ ಪುಸ್ತಕದ ಹುಳುವೇ ಆಗಿದ್ದೆ. ಎನಾದರೂ ಒಂದು ಓದುವುದಕ್ಕೆ ಇರಲೇ ಬೇಕಿತ್ತು. ಅಂಗಡಿಯಿಂದ ಸಾಮಾನು ಕಟ್ಟಿತರುವ ಕಾಗದದ ಚೂರೂ ಸುಮ್ಮನೇ ಕೈಯಿಂದ ಜಾರುತ್ತಿರಲಿಲ್ಲ.  ಆದರೆ ಜೀವನ ನಿರ್ವಹಣೆಗಾಗಿ ಅರ್ಥದ ಹಿಂದೆ ಧಾವಿಸುವಾಗ ಜೀವನ ಅರ್ಥವಿಲ್ಲದಂತೆ ಭಾಸವಾಗಿತ್ತು. ಓದುವಿಕೆ  ವಾಚನ ಎಷ್ಟು ಅನಿವಾರ್ಯವೋ ಅಷ್ಟಕ್ಕೆ ಮಾತ್ರ ಸೀಮಿತವಾಗಿ ವರ್ಷಗಳು ಕಳೆದಿತ್ತು. ಜೋಷಿಯವರ ದ್ವಾರ ಮತ್ತೊಮ್ಮೆ ಚಿಗುರಿತು. ಹಾಗೆ ಸಿಕ್ಕಿದ ಎರಡು ಪುಸ್ತಕಗಳಲ್ಲಿ ಒಂದು ’ಯಕ್ಷಗಾನ ಸ್ಥಿತಿಗತಿ’  ಎಂಬುದು.  ಬಹಳ ಪ್ರಯತ್ನದಿಂದ ಆಸಕ್ತಿಯಿಂದ ಓದುವುದಕ್ಕೆ ತೊಡಗಿದೆ. ಇದಕ್ಕೆ ಒಂದು ಕಾರಣ ಆ ಪುಸ್ತಕ. ಅದು ಒಂದಷ್ಟು ಆಸಕ್ತಿಯನ್ನು ಮೂಡಿಸುತ್ತಾ ಸಾಗಿತ್ತು. ಓದುವುದು ಎಂದರೆ ಅದು ಕೇವಲ ಓದು ಅಲ್ಲ. ಅದರೊಂದಿಗೆ ನಮಗೆ ಅರಿವಿಲ್ಲದೇ ಅಧ್ಯಯನವೂ ಜತೆಗಿರುತ್ತದೆ.

ಅನುಭವ ಮತ್ತು ಅಧ್ಯಯನ ಬದುಕನ್ನು ಹಣ್ಣಾಗಿಸುತ್ತದೆ ಅಂದರೆ ಮಾಗಿಸುತ್ತದೆ. ಹಣ್ಣು ಹೆಚ್ಚಾದರೆ ಮರ ಬಾಗುತ್ತದೆ. ಆದರೆ ಅಧ್ಯಯನ ಹೆಚ್ಚಾದಂತೆ ಮನುಷ್ಯನ ತಲೆ ನೆಟ್ಟಗಾಗುತ್ತದೆ. ಆತ ತಲೆಬಾಗಿಸುವ ಪ್ರಮೇಯ ಒದಗುವುದಿಲ್ಲ. ಆತನ ವಿದ್ಯೆಗೆ ಜಗತ್ತೇ ಬಾಗುತ್ತದೆ. ಅಧ್ಯಯನದ ಮೂಲರೂಪವೇ ಬರಹ. ಅದು ಶಾಸನವಾಗಿ ಲೇಖನವಾಗಿ ಬದುಕನ್ನು ತೋರಿಸುತ್ತದೆ. ಓದುವ ಮನುಷ್ಯ ತಿಳಿಯುತ್ತಾ ಹೋಗುತ್ತಾನೆ. ಅದುವೇ ಜ್ಞಾನ. ಅ ಜ್ಞಾನದ ಹೆಜ್ಜೆಗಳೇ ಅಕ್ಷರಗಳು.

ವಿದ್ಯೆ ಮತ್ತು ಅನುಭವ ಅವುಗಳು ಹುಟ್ಟುವುದು ಮಾತ್ರ. ಅವುಗಳಿಗೆ ನಾಶವಿಲ್ಲ. ಅದು ಇಲ್ಲ ಎಂದಾದರೆ ಅದರ ಅರ್ಥ ನಾವು ಅದರ ಬಳಿಗೆ ಹೋಗಿಲ್ಲ ಎಂದೇ ಆಗುತ್ತದೆ. ಹಾಗಾಗಿಯೇ ವಿದ್ಯೆ ಮತ್ತು ಅಕ್ಷರ ಒಂದಾಗಿಯೇ ಭಾಸವಾಗುತ್ತದೆ. ಕ್ಷರ ಅಂದರೆ ಚ್ಯುತಿ, ಅಕ್ಷರವೆಂದರೆ ಬೇರೆ ಹೇಳಬೇಕಾಗಿಲ್ಲ. ಚ್ಯುತಿ ಇಲ್ಲದೇ ಇರುವಂತಹುದು, ಪೂರ್ಣಾರ್ಥದಲ್ಲಿ ನಾಶವಾಗದೇ ಶಾಶ್ವತವಾಗಿರುವಂತಹುದು. ಈ ಅಕ್ಷರಕ್ಕೆ ಮನುಷ್ಯ ಮೌಲ್ಯವನ್ನು ಕಟ್ಟುತ್ತಾನೆ. ಅದು ಅಪಮೌಲ್ಯವಾಗದೇ ಇರುವುದಕ್ಕೆ ಬಯಸುತ್ತಾನೆ. ಈ ಅಕ್ಷರರೂಪದಲ್ಲಿ ಯಾವುದು ಕಾಣಿಸುತ್ತಿದೆಯೋ ಅದು ಶಾಶ್ವತ ಎಂಬ ಭಾವನೆ ಬಂದುಬಿಡುತ್ತದೆ. ಹಾಗಾಗಿ ಅಕ್ಷರವೆಂಬುದು ದಾಖಲೆಯ ಮಾಧ್ಯಮವಾಗಿ ಆ ಅಕ್ಷರ ಸಮೂಹವೇ ಪುಸ್ತಕವಾಗಿ ಗ್ರಂಥವಾಗಿ ಸಾಕ್ಷ್ಯವಾಗಿಬಿಡುತ್ತದೆ. ವಿದ್ಯೆಯ ಮೂಲ ಸ್ವರೂಪವೇ ಅಕ್ಷರ. ವಿದ್ಯೆ ಅಂದರೆ ಜ್ಞಾನದ ಪ್ರತೀಕ. ಅಕ್ಷರದ ವೀಕ್ಷಣೆಯಲ್ಲಿ ಜ್ಞಾನ ಅಡಗಿದೆ. ಅಕ್ಷರವನ್ನು ಅವಲೋಕಿಸುತ್ತಿದ್ದರೆ ಅದು ಓದುವಿಕೆ ಅಥವಾ ಅಧ್ಯಯನವಾಗಿ  ಜ್ಞಾನ ಸಿದ್ದಿಯಾಗುತ್ತದೆ. ಜ್ಞಾನಕ್ಕೂ ಅಧ್ಯಯನಕ್ಕೂ ಇರುವ ಅವಿನಾಭಾವ ಸಂಭಂಧವಿದು. ಯಾವುದೇ ಜ್ಞಾನ ವಿದ್ಯೆ ಮೂಲ ರೂಪದಲ್ಲಿ ಅಕ್ಷರ ಸಮೂಹವೇ ಆಗಿರುತ್ತದೆ. ಹಾಗಾಗಿ ವಿದ್ಯೆ ಎಂಬುದು ಜ್ಞಾನ ಮಾತ್ರವಲ್ಲ ಅದು ಯಾರೂ ಅಪಹರಿಸದ ಶಾಶ್ವತ ಸಂಪತ್ತಾಗಿ  ಅಕ್ಷರ ಎಂಬುದು ಅರ್ಥದಿಂದಲೂ ಅನ್ವರ್ಥವಾಗಿಬಿಡುತ್ತದೆ. ಅಧ್ಯಯನ, ಓದುವಿಕೆಗೆ  ಅಕ್ಷರವಾದ ಪುಸ್ತಕವೂ ಅತ್ಯವಶ್ಯ. ಜ್ಞಾನದ ಮೂಲ ಮಾಧ್ಯಮವೇ ಪುಸ್ತಕ. ಯಾರು ಪುಸ್ತಕದ ಜತೆ ಮಸ್ತಕವನ್ನು ತೊಡಗಿಸುರುತ್ತಾರೋ ಅವರು ಜ್ಞಾನಿಗಳೇ ಆಗಿರುತ್ತಾರೆ. ಓದುವಿಕೆಗೂ ಓದುಗನಿಗೂ ಇರುವ ಮಹತ್ವವದು. ವಿದ್ಯೆ ಎಂದರೆ ಓದು.  ಮತ್ತೊಬ್ಬರ ಮನಸ್ಸನ್ನೂ ವ್ಯಕ್ತಿತ್ವವನ್ನೂ ಅರಿಯಬೇಕಾದರೆ,  ಅವರನ್ನು ಓದಲೇಬೇಕು. ಈ ಕಂಪ್ಯೂಟರ್ ಯುಗದಲ್ಲಿ ಎಲ್ಲವನ್ನೂ ನಾವು  ತತ್ರಾಂಶ ಅಂದರೆ ಸಾಪ್ಟ್ ರೂಪದಲ್ಲಿ ಕಾಣುವುದಕ್ಕೆ ಬಯಸುತ್ತೇವೆ. ಹಾಗಿದ್ದರೂ ಪುಸ್ತಕಕ್ಕೆ ಅದರದ್ದೇ ಆದ ಮಹತ್ವವಿದೆ.  ಈ ಪುಸ್ತಕವನ್ನು ಓದುವ ಮತ್ತು ಅಕ್ಷರೋಪಾಸನೆಯನ್ನು ಮಾಡುವ ಹವ್ಯಾಸ ಜ್ಞಾನ ವೃದ್ಧಿಗೆ ಕಾರಣವಾಗುತ್ತದೆ. ಪೀಠಿಕೆ ತುಸು ಉದ್ದ ಆದಂತೆ ಕಾಣಬಹುದು. ಇರಲಿ.

ಯಕ್ಷಗಾನ ಸ್ಥಿತಿಗತಿಯನ್ನು ಅವಲೋಕಿಸಿ  ಯಾರೂ ಸಹ ಹೇಳಬಲ್ಲರು. ಯಾಕೆಂದರೆ ಯಕ್ಷಗಾನ ತೀರ ಸರಳ ಮನುಷ್ಯನೂ ಅನುಭವಿಸಬಹುದಾದಂತಹ ಕಲೆ. ಏನೂ ತಿಳಿಯದವನಿಗೂ ಅಲ್ಲಿ ನೋಡುವಂತಹುದು ಇರುತ್ತದೆ. ಅದರೆ   ಯಕ್ಷಗಾನವನ್ನು ಅಮೂಲಾಗ್ರವಾಗಿ ತಿಳಿದ ಜೋಷಿಯವರು ಹೇಳಿದಾಗ ಅದರಲ್ಲಿ ಕುತೂಹಲ ಸಹಜ. ಯಕ್ಷಗಾನ ಅರ್ಥಗಾರಿಕೆಯಂತೆ ಮತ್ತವರ ಪ್ರವಚನದಂತೆ ಅದಕ್ಕೊಂದು ಜೋಷಿ ಸ್ಪರ್ಶ ಎಂಬುದು ಇದ್ದೇ ಇರುತ್ತದೆ.

“ಯಕ್ಷಗಾನ ಸ್ಥಿತಿಗತಿ” ಎಂಬ ಪುಸ್ತಕದಲ್ಲಿ ಮುಖ್ಯವಾಗಿ ಇಪ್ಪತ್ತೆರಡು  ಭಾಗಗಳ ಅಥವಾ ಅಧ್ಯಾಯಗಳ ಮೂಲಕ ಅವಲೋಕಿಸಲ್ಪಟ್ಟಿದೆ. ಇಲ್ಲಿ ಭೂತ ವರ್ತಮಾನ ನಂತರ ಭವಿಷ್ಯ ಇದರ ಹದವಾದ ವಿಶ್ಲೇಷಣೆ ಇದೆ. ವಾಡಿಕೆಯಲ್ಲಿ ಜೋಷಿ ಎಂದರೆ ಜೋಯಿಸರು ಎಂದೂ ಸಹ ಹೇಳುವಾಗ ಜೋಷಿಯವರ ಈ ಪುಸ್ತಕ ಮತ್ತು ಚಿಂತನೆ ಈ  ಭೂತ ಭವಿಷ್ಯತ್ ಗಳ ನಡುವಿನ ಸಂಚಾರ  ಅರ್ಥಪೂರ್ಣ ಎನಿಸುತ್ತದೆ. ಯಕ್ಷಗಾನದ ವರ್ತಮಾನದ ಸ್ಥಿತಿಗೆ ಈ ಚಿಂತನೆ ಎಷ್ಟು ಅನಿವಾರ್ಯ ಎಂಬುದು ಈ ವಿಭಾಗಗಳನ್ನು ಗಮನಿಸಿದರೆ ಅರಿವಿಗೆ ಬರುತ್ತದೆ. ಇದಕ್ಕೆ ಮಹತ್ವವಿರುವುದು, ಯಕ್ಷಗಾನವೆಂದರೆ ಪಂಡಿತರಿಂದ ಪಾಮರನ ವರೆಗೆ ಹೇಗೆ ಅದಕ್ಕೆ ಪ್ರೇಕ್ಷಕನಿದ್ದಾನೋ ಅದೇ ರೀತಿ ಯಕ್ಷಗಾನದ ಬಗ್ಗೆ ಹೇಳಿ ಅದನ್ನು ವ್ಯಾಖ್ಯಾನಿಸುವುದರಲ್ಲೂ ಆ ವರ್ಗವಿದೆ. ಹಾಗಾಗಿ ಈ ಪುಸ್ತಕ ಮತ್ತದರ ವಿಚಾರಗಳು ಮಹತ್ವವೆನಿಸುವುದು.

ಮೊದಲಿಗೆ ರಂಗಭೂಮಿಯ ವ್ಯಾಕರಣದ ಮೂಲಕ ಯಕ್ಷಗಾನ ಸೂಕ್ಷ್ಮ ಅವಲೋಕನವಿದೆ. ರಂಗಭಾಷೆಗೆ ಯಕ್ಷಗಾನ ಹೇಗೆ ಬೆಸೆದುಕೊಂಡಿದೆ ಎಂಬ ವಿವರಣೆಯಿಂದ ತೊಡಗಿ ಯಕ್ಷಗಾನದ ಪ್ರಾಥಮಿಕ ಪಾಠವನ್ನು ವಿವರಿಸಲಾಗುತ್ತದೆ. ಎಲ್ಲಾ ರಂಗಕಲೆಗಳಂತೆ ಯಕ್ಷಗಾನಕ್ಕೂ ಅದೇ ಸೌಂದರ್ಯ ವ್ಯಾಕರಣ ಎಲ್ಲವೂ ಇದೆ. ಹಲವು ರಂಗಕಲೆಗಳನ್ನು ಸೂಕ್ತವಾಗಿ ಉದಾಹರಿಸಿ ಬಹಳ ಅರ್ಥೈಸುವ ಹಾಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. “ಅವಸ್ಥಾನುಕರಣಂ” ಎಂಬುದಕ್ಕೆ ಯಕ್ಷಗಾನದಂತಹ ಕಲಾಪ್ರಕಾರಗಳು ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು, ಅವಸ್ಥಾನುಕರಣೆಯೇ ನಾಟ್ಯ ಹೀಗೆ ಅದನ್ನನುಸರಿಸಿ ಭರತನಾಟ್ಯ ಸೃಷ್ಟಿ ಈ ತತ್ವದ ಮೂಲಕ ಯಕ್ಷಗಾನದಂತಹ ಕಲಾಪ್ರಕಾರಗಳು ಭರತ ನಾಟ್ಯಕ್ಕಿಂತಲೂ ಮೊದಲು ಅಸ್ತಿತ್ವದಲ್ಲಿ ಇತ್ತು ಎಂಬುದರ ಪ್ರತಿಪಾದನೆ ಸುಂದರವಾಗಿದೆ.

ಈ ಲೇಖನ ಮಾಲೆಯ ಆರಂಭದಲ್ಲಿ ಯಕ್ಷಗಾನದ ಪ್ರಾಥಮಿಕ ಹಂತದಿಂದ ತೊಡಗಿ ಅದರ ಪ್ರತಿ ಅಂಗವನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಕೆಲವು ಕಡೆ  ವಿವರಿಸುತ್ತಾ ಅವುಗಳು ಬದಲಾದ ರೀತಿಯನ್ನೂ ಅವುಗಳ ಅಸಹಜತೆಯನ್ನು ವಿವರಿಸುತ್ತಾರೆ. ಅದು ಭಾಗವತಿಕೆ ಹಿಮ್ಮೇಳ ವೇಷ ಭೂಷಣ ಬಣ್ಣಗಾರಿಕೆ ಹೀಗೆ ಇವುಗಳು ಹೇಗಿತ್ತು ಮತ್ತೆ ಅದರಲ್ಲಿ ಬದಲಾವಣೆಗಳ ವಿಶ್ಲೇಷಣೆ ಸೊಗಸಾಗಿದೆ. ಕೆಲವು ಬದಲಾವಣೆಗಳು ಯಕ್ಷಗಾನಕ್ಕೆ ಹೇಗೆ ಅಸಹಜವಾಗಿವೆ ಮತ್ತು ಕೆಲವು ಬದಲಾವಣೆಗಳು ಸೂಕ್ತವೂ ಆಗಿದೆ ಇವುಗಳನ್ನು ಸ್ಥೂಲವಾಗಿ ವಿವರಿಸಿದ್ದಾರೆ. ಅದಕ್ಕೆ ಕೆಲವು ಸೂಕ್ತ ಉದಾಹರಣೆಯನ್ನೂ ನೀಡಿದ್ದಾರೆ.

ಇಲ್ಲಿ ಶಬ್ದ ಶಬ್ದಗಳಲ್ಲೂ ಯಕ್ಷಗಾನದ ಬಗೆಗಿನ ಮೋಹ ವ್ಯಕ್ತವಾಗುತ್ತದೆ. ಅದರ ನಡುವೆ  ಬದಾಲಾವಣೆಯ ಭೀತಿಯೂ ಅಲ್ಲಲ್ಲಿ ಕಾಣಬಹುದು. ಉತ್ತರಭಾರತದ ಕೆಲವೆಡೆ ಇಲ್ಲಿನ ತಂಡಗಳ ಯಕ್ಷಗಾನ ಪ್ರದರ್ಶನಗಳಾದಾಗ “ರಂಗ ರೂಢಿ” ಗಳಾದ ಪ್ರವೇಶ ಒಡ್ದೋಲಗ ಇವುಗಳ ಲೋಪವಾಗಬಾರದೆಂಬ ಅಭಿಪ್ರಾಯ ಅಲ್ಲಿ ವ್ಯಕ್ತವಾಗುತ್ತದೆ.ನಮ್ಮ ಕಲೆಯ ಶ್ರೀಮಂತಿಕೆಯನ್ನು ನಮಗೇ ನೆನಪಿಸುವುದು. ಅದೂ ಯಕ್ಷಗಾನದ ಬಗ್ಗೆ ಏನೊಂದೂ ಅರಿವಿರದ ಕ್ಷೇತ್ರದಲ್ಲಿ ವ್ಯಕ್ತವಾಗುವ ಅಭಿಪ್ರಾಯ. ರಂಗದ ಒಂದು ಸರಳ ಪೀಠ  (ರಥ),  ಅದು  ಪರ್ವತ ಆಕಾಶ ರಥ ಸಿಂಹಾಸನ ಎಲ್ಲವೂ ಆಗುವುದು ಕಲೆಯ ಬಡತನವಲ್ಲ. ಆದರೆ ಇದರ ಅರಿವಿಲ್ಲದವರು ಇದನ್ನು ಬಡತವೆಂದೇ ಪರಿಗಣಿಸುವುದು ಯಕ್ಷಗಾನದ ದೊಡ್ಡ ದುರಂತ ಎನ್ನಬೇಕು. (ಉದಾಃ ವೇಷಗಳ ಪ್ರವೇಶಕ್ಕೆ ಇವರಿಗೆ  ಚೆಂಡೆ ಮದ್ದಲೆ ಸಾಕಾಗುವುದಿಲ್ಲ. ಢೋಲು ವಾದ್ಯಗಳ ಹರಟೆಯೇ ಬೇಕು ಅದಕ್ಕಾಗಿ ಸಾವಿರ ಸಾವಿರ ವೆಚ್ಚ ಮಾಡುತ್ತಾರೆ. ಅರ್ಥಾತ್ ಯಕ್ಷಗಾನವನ್ನು ನಾಶ ಮಾಡುವುದಕ್ಕೆ  ಕೊಡುವ ಸುಪಾರಿಯದು.)   ಅಲ್ಲಿ ನೈಜತೆಗೋಸ್ಕರ ವಾಸ್ತವದ ದೃಶ್ಯಗಳನ್ನು ನಿರ್ಮಿಸಿದರೆ ಅದು ಯಕ್ಷಗಾನದ ವಿಕೃತಿಯಾಗುತ್ತದೆ. ಯಕ್ಷಗಾನದಲ್ಲಿ ಕಣ್ಣಿಗೆ ದೃಶ್ಯ ಕೇವಲ ಸಂಕೇತವಾಗಿರುತ್ತದೆ. ಅದು ಅದೃಶ್ಯವಾಗಿ ಸಂಕೇತದಿಂದ ಪ್ರೇಕ್ಷಕನ ಕಲ್ಪನಾ ಸಾಮಾರ್ಥ್ಯವನ್ನೂ ಭ್ರಮಾ ಲೋಕದ ವಿಸ್ತಾರವನ್ನು ಹೆಚ್ಚಿಸುತ್ತದೆ. ಇಲ್ಲಿ ಸ್ನಾನ ಮಾಡುವಾಗ ತಲೆಗೆ ನೀರು ಸುರಿದುಕೊಳ್ಳುವುದಿಲ್ಲ. ಮೈ ಸುಡುವಾಗ ಬೆಂಕಿ ಹಚ್ಚಿಕೊಳ್ಳುವುದಿಲ್ಲ. ತಲೆ ಕಡಿಯುವಾಗ ತೊಟ್ಟು ರಕ್ತದ ಕಲೆಯೂ ಇರುವುದಿಲ್ಲ. ಎಲ್ಲವೂ ಪ್ರೇಕ್ಷಕನ ಕಲ್ಪನೆಗೆ ಭ್ರಮೆಗೆ ಬಿಡಲ್ಪಡುತ್ತದೆ. ಯಕ್ಷಗಾನ ಪ್ರೇಕ್ಷಕ ಭ್ರಮಾಧೀನನಾಗುವುದಿಲ್ಲ ಎಂದರೆ ಅದು ಸುಳ್ಳು. ಆದರೆ ಇಂದು ಪ್ರೇಕ್ಷಕನ ಕಲ್ಪನೆಯನ್ನು ಮೊಟಕುಗೊಳಿಸಲಾಗುತ್ತದೆ. ಚಿಂತನೆಯ ಅಸ್ತಿತ್ವವನ್ನು ನಾಶಮಾಡಲಾಗುತ್ತದೆ.  ಇಂದಿನ ಯಕ್ಷಗಾನದ ಸ್ಥಿತಿಗಳು ಪ್ರೇಕ್ಷಕನನ್ನು ಈ ಭ್ರಮಾಲೋಕದಿಂದ ದೂರ ಮಾಡಿ ಯಕ್ಷಗಾನ ಕೇವಲ ವಾಸ್ತವದ ಚಿತ್ರವಾಗಿ ಬದಲಾಗುತ್ತದೆ. ಯಕ್ಷಗಾನ ನಾಟಕವೂ ಅಲ್ಲ ಸಿನಿಮಾವೂ ಅಲ್ಲ ಅತ್ತ ನಾಟ್ಯ ಪ್ರಕಾರವೂ ಅಲ್ಲ. ಇಷ್ಟೆಲ್ಲಾ  ಆದರೂ ಅಲ್ಲಿಲ್ಲದೇ ಇದ್ದದ್ದು ಇಲ್ಲಿ ಇದೆ. ಅದೇ ಯಕ್ಷಗಾನದ ಸಂಪತ್ತು. ಆದರೆ ನಾಟಕ ನೈಜತೆ  ಅದನ್ನೆಲ್ಲವನ್ನೂ ಅಲ್ಲಿ ಕಾಣುವ ಪ್ರೇಕ್ಷಕ ಇಲ್ಲಿ ಕಾಣ ಬಯಸುವುದು ಬೇರೆಯದನ್ನೆ. ಅದನ್ನೇ ಮತ್ತೂ ಇಲ್ಲಿ ಬಿಡಿ ಬಿಡಿಯಾಗಿ ತೋರಿಸಿದರೆ? ಯಕ್ಷಗಾನದ ಸ್ಥಿತಿಗತಿಯ ವಾಸ್ತವ ಇದು. ಇದಕ್ಕೆಲ್ಲ ರಂಗಭೂಮಿಯ ತತ್ವವನ್ನು ಅರಿಯಬೇಕು. ಆ ಅರಿವು ಈ ಪುಸ್ತಕದಲ್ಲಿದೆ.

ಯಕ್ಷಗಾನ ಕಲಾ ಸ್ವರೂಪವೆಂಬ ಎರಡನೇ ಭಾಗದಲ್ಲಿ ಯಕ್ಷಗಾನದ ಅಮೂಲಾಗ್ರ ವಿವರಣೆಯಿದೆ. ಪಠ್ಯ ಪುಸ್ತಕದ ವಿವರಣೆಗಳಿವು. ಇಲ್ಲಿ ಸ್ಥೂಲವಾಗಿ ಸಿಗುವ ಮಾಹಿತಿಯೇ ಯಕ್ಷಗಾನ ರಚನೆಯನ್ನು ಬಹಳಷ್ಟು ವಿವರಿಸುತ್ತದೆ.

ಯಕ್ಷಗಾನ ತಾಳ ಮದ್ದಲೆ ಅದು ಒಂದು ಕಲೆಯೇ ಅಲ್ಲ ಎಂದು ಸಾಹಿತ್ಯ ಸಮ್ಮೇಳನ ಒಂದರಲ್ಲಿ  ಹಿರಿಯ ವಿದ್ವಾಂಸರೊಬ್ಬರು ಹೇಳಿದ್ದರು.  ಅದರ ಬಗ್ಗೆ ಇರುವ ವಿಮರ್ಶೆ ಬಹಳ ಮಾರ್ಮಿಕವಾಗಿದೆ.. ಅದಕ್ಕೆ ಯಾರ ಅನುಗ್ರಹ ಮನ್ನಣೆಯ ಕೊಡುಗೆ ಮೇಲಿನಿಂದ ಕೊಡುವ ಒಪ್ಪಿಗೆ ಅಗತ್ಯವಿಲ್ಲ. ತಾಳ ಮದ್ದಲೆ ಕಲೆಯಲ್ಲದಿದ್ದರೆ ಬೇಡ , ಅದು ತಾಳ ಮದ್ದಲೆ ಎಂದೇ ಕರೆಯಬಹುದು. ಇದಕ್ಕೆ ಹಲವಾರು ಟಿಪ್ಪಣಿಗಳು ಇಲ್ಲಿವೆ. ಊರಲ್ಲಿ ಭಜನೆ ಮಾಡುವಾತನಲ್ಲಿ ಶಾಸ್ತ್ರಿಯ ಸಂಗೀತದ ರಾಗದ ಬಗ್ಗೆ ಹೇಳಿ ಭಜನೆಯೇ ಶಾಸ್ತ್ರೀಯವಾಗಿಲ್ಲ ಎಂದು ಹೇಳುವುದು ಎಷ್ಟು ಸರಿ? ಅದು ಭಜನೆ ಹೊರತು ಸಂಗೀತ ಕಛೇರಿಯಲ್ಲ. ಅಲ್ಲಿ ರಾಗಕ್ಕೆ ಪ್ರಾಮುಖ್ಯತೆ ಇಲ್ಲ.  ಯಕ್ಷಗಾನಕ್ಕೆ ಈ ಮಾತು ಬಹಳ ಅನ್ವಯವಾಗುತ್ತದೆ. ಇಲ್ಲಿನ ಅರ್ಥಗಾರಿಕೆಯಾಗಲಿ ಕುಣಿತ ವೇಷಗಾರಿಕೆಯ ಬಗ್ಗೆ ಹಲವು ಕಡೆ ಅಭಾಸ ಎನ್ನಬಹುದಾದ ವಿಶ್ಲೇಷಣೆ ಪ್ರತಿಕ್ರೆಯಗಳನ್ನು ನಾವು ಕಾಣುತ್ತೇವೆ. ಆ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವನ್ನು ಕಂಡುಕೊಳ್ಳಲಾಗಿದೆ. ಯಕ್ಷಗಾನ ಅದು ಕೇವಲ ಯಕ್ಷಗಾನ ಒಂದು ಸ್ವತಂತ್ರ ಕಲೆ.  

ಯಕ್ಷಗಾನದ ಬಗ್ಗೆ ಹಲವಾರು ಸೂಕ್ಷ್ಮ ವಿಶ್ಲೇಷಣೆಗಳಿವೆ. ಅದು ಹಿಮ್ಮೇಳ ಕುಣಿತ  ಬಣ್ಣಗಾರಿಕೆ ಅರ್ಥಗಾರಿಕೆ ಹೀಗೆ ಪ್ರತಿಯೊಂದು ಅಂಶವನ್ನು ಯಥಾ ಸಾಧ್ಯ ಹಿಂಬಾಲಿಸಿ ವಿಶ್ಲೇಷಿಸಲಾಗಿದೆ. ಕೆಲವೆಲ್ಲ ಗಾಬರಿ ಎನ್ನುವಷ್ಟು ಚಿಂತನೆಗಳನ್ನು ಸ್ಫುರಿಸುತ್ತವೆ. ಯಕ್ಷಗಾನವೆಂದರೆ ಅದು ಕೇವಲ ಹಿಮ್ಮೇಳ ಮುಮ್ಮೇಳ ಕುಣಿತ ವೇಷಗಾರಿಕೆ ಯಲ್ಲ. ಅಲ್ಲಿರುವ ವ್ಯಾಪಾರೀ ವ್ಯವಹಾರಗಳು ಕಲಾವಿದರ  ಜೀವನ ಸಂಘಟನೆಯ ಸಮಸ್ಯೆ, ಪ್ರೇಕ್ಷಕ ಚಿಂತನೆ ಹೀಗೆ  ಈ ಎಲ್ಲದರ ಬಾಹುಳ್ಯತೆಯ ವಿಪುಲ ಚಿಂತನೆ ಇಲ್ಲಿದೆ.

ಯಕ್ಷಗಾನದಲ್ಲಿ ಚಿತ್ರಾಭಿನಯದ ಕುರಿತು ವೈಚಾರಿಕ ವಿಶ್ಲೇಷಣೆ ಇದೆ. ಬಹುಶಃ ಇಂದಿನ ಕಲಾವಿದರಲ್ಲಿ ಎಷ್ಟು ಮಂದಿಗೆ ಚಿತ್ರಾಭಿನಯದ ಬಗ್ಗೆ ಮಾಹಿತಿ ಇದೆಯೋ ತಿಳಿಯದು. ಅಭಿನಯ ಎಂದರೆ ಪ್ರೇಕ್ಷಕನಲ್ಲಿಗೆ ಭಾವನೆಗಳನ್ನು ಕೊಂಡುಹೋಗುವುದು ಎಂದರ್ಥ. ಇದಕ್ಕಾಗಿ ಹಲವು ಅಂಶಗಳನ್ನು ಬಳಸಿಕೊಳ್ಳುತ್ತಾರೆ. ಆಂಗಿಕ ವಾಚಿಕ ಆಹಾರ್ಯ ಮತ್ತು ಸಾತ್ವಿಕ. ಅಂಗಗಳಿಂದ ಮಾತಿನಿಂದ ವೇಷಗಳಿಂದ ಮತ್ತು ಸಾತ್ವಿಕ ಇದ್ದು ಭಾವನೆಯ ಉತ್ಕಟತೆಯ ದರ್ಶನ. ಇವುಗಳೆಲ್ಲ ಪ್ರೇಕ್ಷಕನಲ್ಲಿಗೆ ತಲುಪಿಸುವ ಮಾಧ್ಯಮಗಲು. ಯಕ್ಷಗಾನದಲ್ಲಿ ಎರಡು ಹಂತಗಳಲ್ಲಿ ಅಭಿನಯ ವ್ಯಕ್ತವಾಗುತ್ತದೆ ಒಮ್ಮೆ ಹಿಮ್ಮೇಳದ ಹಾಡುಗಾರಿಕೆಯೊಂದಿಗೆ ನಂತರ ಸಂಭಾಷಣೆಯೊಂದಿಗೆ. ಇವುಗಳಲ್ಲಿ ಮೂರು ವಿಧಾನಗಳನ್ನು ಬಹಳ ವಿಸ್ತೃತವಾಗಿ ಮತ್ತು ಮಾರ್ಮಿಕವಾಗಿ ವಿವರಿಸಲ್ಪಟ್ಟಿದೆ. ಇದು ಕಾಲ ಕಾಲಕ್ಕೆ ಹೇಗೆ ಬದಲಾವಣೆ ಕಂಡಿತು, ನಂತರದಲ್ಲಿ ಅದು ಹೇಗೆ ಅತಿಯಾಗಿ ಬಳಕೆಯಾಗಿ ಕೆಲವೆಲ್ಲ ಹೇಗೆ ಅಭಾಸವಾಗಿ ಮೂಲ ರಂಗ ವಿಧಾನಗಳನ್ನು ಬದಿಗೆ ಸರಿಸಿತು ಎಂಬುದನ್ನು ವಿವರಿಸಿದ್ದಾರೆ.
ಯಕ್ಷಗಾನದಲ್ಲಿ ಭಾವಾಭಿನಯ ಯಾವ ರೀತಿಯಲ್ಲಿರಬೇಕು, ಅದು ಕ್ರಮ ತಪ್ಪಿದಾಗ ಅಭಾಸವಾಗುತ್ತದೆ. ಭರತನಾಟ್ಯ ಅಥವಾ ಇನ್ನಾವುದೇ ನರ್ತನ ಪ್ರಕಾರದಿಂದ ಯಕ್ಷಗಾನ ಭಾವಾಭಿನಯ ಹೇಗೆ ಭಿನ್ನವಾಗಿದೆ ಎಂಬುದನ್ನು ಬಹಳ ಅರ್ಥವತ್ತಾಗಿ ವಿವರಿಸಿದ್ದಾರೆ. ಬಹಳ ಸೂಕ್ಷ್ಮವಿಚಾರಗಳ ಮಂಡನೆ ಇಲ್ಲಿದೆ. ಉದಾಃ ಯುದ್ದ ವಿಕ್ರಮದಲ್ಲಿ ನೀ ಮಡಿದೆಯಲ್ಲಾ ಎಂದು ತಂದೆ ರೋದಿಸುವಾಗ ಅಲ್ಲಿ ವಿಕ್ರಮವನ್ನು ವಿವರಿಸುವುದು ಅಥವಾ ತೋರಿಸುವುದು ಆಭಾಸವಾಗುತ್ತದೆ. ಅಲ್ಲಿ ವಿಕ್ರಮವೆಂದು ಕೇವಲ ನೆನಪು ಅಷ್ಟೇ.  ಯಾಕೆಂದರೆ ಅಲ್ಲಿ ಮುಖ್ಯವಾಗಿ ಇರುವುದು ತಂದೆಯಾದವನ ದುಃಖ. ಆದರೆ ಇಂದು ಈ ತತ್ವಗಳನ್ನು ತಿಳಿಯದೆ ಯಕ್ಷಗಾನ ಪಾತ್ರಧಾರಿಯಾಗುವುದನ್ನು ಕಾಣುತ್ತೇವೆ.

ಹೆಚ್ಚಿನ ಎಲ್ಲಾ ವಿಚಾರಗಳಲ್ಲೂ ಚಿಂತನೆ ನಡೆಸಿದ ಅಮೂಲ್ಯ ಲೇಖನ ಮಾಲೆ ಇದು. ಬಹಳ ಸೂಕ್ಷ್ಮ ವಿಚಾರಗಳಲ್ಲೂ ಕೈಗಾರಿಕೆ ನಡೆಸಿದ್ದಾರೆ. ಒಂದು ಪುಟ್ಟ ಪುಸ್ತಕದಲ್ಲಿ ಇಷ್ಟೇಲ್ಲಾ ಮಾಹಿತಿಗಳನ್ನು ವಿಶ್ಲೇಷಣೆ ಮಾಡಿ ಮನವರಿಕೆಯಾಗುವಂತೆ ಮಾಡುವುದು ನಿಜಕ್ಕೂ ಸಾಹಸದ ಕೆಲಸ. ಇನ್ನೊಂದು, ಯಾವುದೇ ವಿಚಾರದ ಬಗ್ಗೆ ಬಹಳ ದೀರ್ಘವಾದ ವಿವರಣೆ ಕೆಲವೊಮ್ಮೆ ಆಕರ್ಷಣೆಯನ್ನು ಉಳಿಸಿಕೊಳ್ಳುವುದಿಲ್ಲ. ತಿಳಿದುಕೊಳ್ಳುವವನ ಉತ್ಸಾಹ ಶ್ರದ್ದೆಯನ್ನು ಅವಲಂಬಿಸಿರುತ್ತದೆ. ಹಾಗಾದುದರಿಂದಲೇ ಈ ಪುಸ್ತಕದ ಲೇಖನಗಳು ಆಕರ್ಷಣೀಯವಾಗುವುದು. ಸ್ವತಃ ಪ್ರಾಧ್ಯಾಪಕರಾದ ಜೋಷಿಯವರು ಇದರಲ್ಲಿ ಯಶಸ್ವಿಯಾಗಿದ್ದಾರೆ. ಲೇಖನಗಳು ತಾಂತ್ರಿಕವಾಗಿಯೂ ಉತ್ತಮವಾಗಿ ತೋರುತ್ತದೆ.

ಪುಸ್ತಕವನ್ನು ಸಮಗ್ರವಾಗಿ ಓದಿ ಮುಗಿಸಿದಾಗ ಮತ್ತೂ ಒಂದು ಮುಖ್ಯ ಅನಿಸಿಕೆ ನನಗನಿಸಿದ್ದನ್ನು ಪ್ರಾಮಾಣಿಕವಾಗಿ ವ್ಯಕ್ತ ಪಡಿಸಬೇಕು. ಯಕ್ಷಗಾನದ ಬಗ್ಗೆ ಹೇಳುವಾಗ ಹೀಗಿತ್ತು ಹೀಗಾಗಬೇಕು ಎಂದು ಹಲವು ವಿಚಾರಗಳ ಮಂಡನೆಯನ್ನು ಸೂಕ್ತವಾಗಿ ಮಾಡಿದ್ದಾರೆ. ಆದರೆ ಕೆಲವೊಂದು ಕಡೆಗಳಲ್ಲಿ ಹೀಗೂ ಮಾಡಬಹುದು, ಹೀಗೂ ಆಗಬಹುದು ಎಂದು ತೃಪ್ತರಾಗಬಯಸುವ ನಿಲುವು ಕಂಡು ಬರುತ್ತದೆ. ಜೋಷಿಯವರದ್ದು ಯಕ್ಷಗಾನದಲ್ಲಿ ಒಂದು ಗುರು ಸ್ಥಾನ. ಬಹಳ ಹಿರಿಯ ವ್ಯಕ್ತಿತ್ವ. ಯಕ್ಷಗಾನವನ್ನು ಅಮೂಲಾಗ್ರವಾಗಿ ಕಂಡುಕೊಂಡು ಅನುಭವಿಸಿದವರು. ಅವರ ಮಾತು ಅಭಿಪ್ರಾಯಗಳು ಸರ್ವಮಾನ್ಯತೆಯನ್ನು ಗಳಿಸುವ ಅರ್ಹತೆಯನ್ನು ಗಳಿಸುತ್ತವೆ. ಹಾಗಾಗಿ ಹೀಗೂ ಆಗಬಹುದು  ಎಂದು ಹೇಳುವುದಕ್ಕಿಂತ ಹೀಗೇಯೇ ಆಗಬೇಕು ಎಂದು ಹೇಳುವುದು ಸೂಕ್ತ ಅನ್ನಿಸುತ್ತದೆ. ಹಾಗಾಗಿ ನಿರ್ದಿಷ್ಟವಾಗಿ ವಸ್ತುನಿಷ್ಠರಾಗಿ ಹೇಳುವಂತಾಗಬೇಕು. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ. ಆದರೆ ಚರಿತ್ರೆಗೆ ಸೇರುವ ಅಭಿಪ್ರಾಯಗಳು ಅತ್ಯಂತ ವಸ್ತು ನಿಷ್ಠವಾಗಿರುವಾಗ ವ್ಯಕ್ತಿತ್ವವೂ ಚರಿತ್ರೆಗೆ ದಾಖಲಾಗುತ್ತದೆ. ಇದು ನನ್ನ ಅನಿಸಿಕೆಗೆ ಸೀಮಿತವಾದ ಅಭಿಪ್ರಾಯ.

          ಕಲಾವಿದನಾಗುವವನು ಯಕ್ಷಗಾನದ ಬಗ್ಗೆ ತುಸುವಾದರೂ ತಿಳಿಯಬೇಕೆಂಬ ಆಸಕ್ತಿಯಿರುವವನು ಇದನ್ನು ಅವಶ್ಯ ಓದಬೇಕು. ಬಹುಶಃ ಯಕ್ಷಗಾನದ ಒಂದು ಕೊರತೆ ಇದುವೇ ಆಗಿರಬಹುದು, ಅದು ಓದುವಿಕೆ ಅಥವಾ  ಅಧ್ಯಯನ ಅದು ಪ್ರತಿ ಕಲಾವಿದನಲ್ಲೂ ಪ್ರೇಕ್ಷಕನಲ್ಲೂ ಜಾಗ್ರತವಾಗಬೇಕು.






Wednesday, February 7, 2018

ಶಲ್ಯ ಸಾರಥ್ಯ ಭಾಗ - ೨




ಭಾಗ - ೨ ಭಾಗ 
ಶಲ್ಯ ಬಿಡದೆ ಹೆಗಲಲ್ಲಿ ರಾರಾಜಿಸುವಂತಹುದು ಎಂದರ್ಥ.  ಹಲವು ಸಲ ಶಲ್ಯ ಹರಿದಿದ್ದರೂ ಅದು ಹೆಗಲಲ್ಲಿ ರಾರಾಜಿಸುತ್ತದೆ. ಅದರಂತೆ ಶಲ್ಯ ಕರ್ಣನ ಪಾಲಿಗೆ. ಬಿಡದೇ ಕಾಡುವ ಹಿತಶತ್ರುವಾಗಿ ತಾನೇ ಬೇಡಿ ಪಡೆದುಕೊಳ್ಳುವ ಪೆಡಂಭೂತವಾಗಿ ಶಲ್ಯ ಕಂಡುಬರುತ್ತಾನೆ. ಶಲ್ಯ ಎಂದರೆ ಮಲಯಾಳಂ ನಲ್ಲಿ ತಲೆನೋವು ಎಂದಿದೆ. ಅದರಂತೆ ಕರ್ಣನಿಗೆ ಇದೊಂದು ಕೊನೆಯವರೆಗೂ ತಲೆನೋವಾಗಿ ಕಾಡಿದ್ದು ಸುಳ್ಳಲ್ಲ. ಕೌರವನ ದಾಳಕ್ಕೆ ಮಗುಚಿ  ಬಿದ್ದ ಈ ಒಂದು ಕಾಯಿ ಎದ್ದು ನಿಲ್ಲಲು ಹಪ ಹಪಿಸುತ್ತಿತ್ತು.

ಮನ್ನಿಸಿ ಭೂಪಾಲಕನಂ | ತನ್ನ ನಿಜಾಲಯಕಯ್ದಿಸಿ ಶಲ್ಯನೃಪಾಲಂ ||
ಉನ್ನತ ನಿಶಿಯೊಳು ಬರಲೇ | ಕೆನ್ನುತ ಬೆಸಗೊಳಲವನಿಂತೆಂದನು ನಗುತಂ ||
ಇದೀಗ ಮಧ್ಯ ರಾತ್ರಿ ಕಳೆದಿದೆ. ಎಷ್ಟೇ ಪ್ರಯತ್ನಿಸಿದರೂ ನಿದ್ದೆ ಬರುವುದಿಲ್ಲ. ಕರೆದರೂ ಕರೆಯದೇ ಬರುವುದು ಎಂದರೆ ನಿದ್ದೆ.  ನಿದ್ದೆ ...ಅದು ಶಲ್ಯ ಮಾಡದೇ ಬಹಳ ದಿನಗಳು ಕಳೆದುವು.  ಮತ್ತೂ ಒಂದು ಸೇನಾ ಶಿಬಿರದಲ್ಲಿ ರಾತ್ರಿಯಾದರೂ ಮಾಡುವ ನಿದ್ದೇ ಅದೆಂತಹದ್ದು. ಹೋಗಲಿ, ನಿದ್ದೆ ಅದು ಬಾರದೇ ದಿನಗಳೆಷ್ಟು ಸಂದಿತು?
ಆತ್ಮ ಸಾಕ್ಷಿ....ಮನುಷ್ಯನಿಗೆ ಅದು ಯಾವಾಗ ಆಕ್ಷೇಪಿಸುವುದಕ್ಕೆ ತೊಡಗುತ್ತದೋ ಆವಾಗ ಉದ್ವೇಗ ಅಧಿಕವಾಗುತ್ತದೆ. ನಿದ್ದೆ ದೂರಾಗುತ್ತದೆ. ಆತ್ಮ ಸಾಕ್ಷಿ ಒಳ್ಳೆಯದನ್ನೇ ಹೇಳುತ್ತಾ ಇರುತ್ತದೆ. ಹಲವು ಸಲ ಸಂದರ್ಭಾನುಸಾರ ಕೆಟ್ಟ ಕೆಲಸವನ್ನು ಮಾಡುತ್ತಾನೆ. ಬುದ್ದಿಯು ಅದರ ಕಾರಣಗಳನ್ನು ಸಮರ್ಥಿಸುತ್ತದೆ. ಹೀಗಾದುದರಿಂದ ಹಾಗೆ ಮಾಡಬೇಕಾಯಿತು. ಇದು ಕೇವಲ ಕಾರಣ. ಆದರೆ ಆತ್ಮ ಸಾಕ್ಷಿ ಈ ಕೆಲಸವನ್ನು ಪ್ರಶ್ನಿಸುತ್ತದೆ. ಆಗ ಮನಸ್ಸು ಉದ್ವೇಗಕ್ಕೆ ಒಳಗಾಗುತ್ತದೆ. ನಿದ್ದೆ ದೂರಾಗುತ್ತದೆ.
ಇದೇ ವಿಚಾರವನ್ನು ಅನುಸರಿಸಿ ಶಲ್ಯನ ಚಿಂತನೆ ಆರಂಭವಾಗುತ್ತದೆ. ಬಹಳ ಸುಂದರ ಪ್ರಸ್ತುತಿ. ಶಲ್ಯನ ಬೇಗುದಿಯ ಕಾರಣವನ್ನು ಹೂರಣವನ್ನಾಗಿಸಿ ತರ್ಕಸರಣಿ ಮುಂದುವರೆಯುತ್ತದೆ.
ಶಲ್ಯ ಕೌರವನ ಸತ್ಕಾರದ ಉರುಳಿಗೆ ತಿಳಿಯದೇ ಕಟ್ಟು ಬಿದ್ದು ಮಾತು ಕೊಡುತ್ತಾನೆ. ಮಾತು ಕೊಟ್ಟನಂತರ ಅದನ್ನು ಉಳಿಸುವ ಅನಿವಾರ್ಯತೆ. ಈ ನಡುವೆ ಆತ್ಮ ಸಾಕ್ಷಿ ಪ್ರಶ್ನಿಸುತ್ತಾ ಇರುತ್ತದೆ.     
ಭಗವಾನ್ ಶ್ರೀಕೃಷ್ಣನ ಸಂಧಾನ ಮುರಿದು ಸಂಗ್ರಾಮವೇ ನಿರ್ಣಯವಾಯಿತು. ಯುದ್ದ ನಿರ್ಣಯ ಅಧಿಕೃತವಾಗಿ ಆಗಲೇ ನಿರ್ಣಯವಾದರೂ ಯುದ್ದ ಸಿದ್ದತೆ ಅದಕ್ಕಿಂತ ಮೊದಲೇ ಆಗಿತ್ತು. ಯಾಕೆ? ಕೌರವನ ಮನಸ್ಥಿತಿ. ಇಂತಹ ಮೂರ್ಖ ಧೂರ್ತ ದಾಯಾದಿ ಪಾಂಡವರಿಗೆ ಕೊಡಬೇಕಾದಂತಹ ರಾಜ್ಯ ಅಥವಾ ಗ್ರಾಮವನ್ನು ಸಾಮದಿಂದ ಕೊಡಲಾರ ಎಂದು ತಿಳಿಯಿತೋ ಆಗಲೇ ಯುದ್ದ ನಿರ್ಣಯವಾಗಿಬಿಟ್ಟಿತ್ತು.  ಹೀಗೊಂದು ಯುದ್ದವಾದರೆ ಮುಂದೆ ಏನು ಮಾಡಬೇಕು?   ತನ್ನ ಅಳಿಯಂದಿರಾದ ನೆಂಟರಾದ ಪಾಂಡವರಿಗೆ ಸಹಾಯ ಮಾಡಬೇಕು. ಹೆಣ್ಣುಕೊಟ್ಟ ಮಾವನ ಕರ್ತವ್ಯ ಅದು. ಕೇವಲ ಮಾವ ಎಂಬುದಷ್ಟೇ ಕಾರಣವಲ್ಲ. ಇದಕ್ಕೊಂದು ಸೂಕ್ತ ಕಾರಣವನ್ನು ಕೊಡುತ್ತಾರೆ. ಈ ಪ್ರಸಂಗದ ಜೀವಾಳವೇ ಅದು. ಶಲ್ಯ ಸಾರಥ್ಯ ಯಾಕೆ ಪ್ರಮುಖವಾಗುತ್ತದೆ ಎಂಬುದನ್ನು ಪೆರ್ಲ ಕೃಷ್ಣ ಭಟ್ಟರು ತಮ್ಮ ಅರ್ಥಗಾರಿಕೆಯಿಂದ ತೋರಿಸಿಕೊಡುತ್ತಾರೆ.
ಹಿಂದೊಮ್ಮೆ ದಿಗ್ವಿಜಯ ಸಂದರ್ಭದಲ್ಲಿ ಅಳಿಯನಾದ ಪಾಂಡು ಚಕ್ರವರ್ತಿಗೆ ಶಲ್ಯ ಸಾರಥಿಯಾಗಿದ್ದ. ಹಸ್ತಿನಾವತಿಯ ಚಕ್ರವರ್ತಿಗೆ ಸಾರಥಿಯಾದ ಹಿರಿಮೆ ಆತನದ್ದು. ಇದೀಗ ಯುದ್ದವಾಗುತ್ತದೆ ಎಂದಾಗ ಪಾಂಡವರಲ್ಲಿ ವಿಕ್ರಮಿಯಾದಂತಹ ಪಾರ್ಥನಿಗೆ ಸಾರಥಿಯಾಗಬೇಕು. ಈ ಮೂಲಕ ಮಾವನಾಗಿ ತನ್ನ ಕರ್ತವ್ಯ ನಿಭಾಯಿಸಬೇಕು ಎಂದುಕೊಂಡಿದ್ದ.ಆದರೆ ಆಗಿದ್ದೇನು. ತನಗೆ ದಕ್ಕದೇ ಇದ್ದ ಸ್ಥಾನದಲ್ಲಿ ಇಂದು ಶ್ರೀಕೃಷ್ಣ ವಿರಾಜಮಾನನಾಗಿದ್ದಾನೆ. ಹೋಗಲಿ ಕೊಟ್ಟ ಮಾತಿಗೆ ಪ್ರಾಮಾಣಿಕವಾಗಿ ದುಡಿಯೋಣ ಅಂದುಕೊಂಡು ದುಡಿದರೆ ಕುರುಕ್ಷೇತ್ರ ಯುದ್ದಾರಂಭದ ಮೊದಲದಿನ ಯಾರಾಗುತ್ತಾರೆ ಸೇನಾಧಿಪತಿ, ಕೇಳಿರೈ ಮಾದ್ರಾಧೀಶ ಮುಖ್ಯರು ಅಂತ ನಮ್ಮನ್ನು ಮುಂದಿರಿಸಿಯೇ ಮಾತನಾಡಿದ್ದ. ಕೊನೆಯಲ್ಲಿ ಗುರುಗಳ ಸಲಹೆಯಂತೆ ಭೀಷ್ಮರಿಗೆ ಸೇನಾಧಿಪತಿತ್ವ. ಭೀಷ್ಮರ ಹೆಸರು ಎತ್ತಿದ ನಂತರ ಅಲ್ಲಿ ಮತ್ತೆ ಪ್ರಶ್ನೆ ಇಲ್ಲ. ಹತ್ತು ದಿನ ಅವರ ಅಧಿಪತಿತ್ವದಲ್ಲಿ ದುಡಿದದ್ದಾಯಿತು. ಅವರು ಶಸ್ತ್ರ ಕೆಳಗಿಟ್ಟ ಮೇಲೆ ನಂತರ ದ್ರೋಣರ ಸೇನಾಧಿಪತಿತ್ವ. ಅದೂ ಕೊನೆಯಾದಗ ಮೊನ್ನೆ ಮೊನ್ನೆ ಹದಿನಾರನೇ ದಿನ ಕುಲೋನ್ನತಿಯೂ ಬಲೊನ್ನತಿಯೂ ಪರಿಗಣಿಸಿದರೆ ಸೇನಾಧಿಪತಿ ಶಲ್ಯನಲ್ಲದೆ ಬೇರೆ ಆಯ್ಕೆ ಇರಲಾರದು ಎಂದು ಭಾವಿಸಿದರೆ...ಹದಿನಾರನೆ ದಿನ ಬೆಳಗ್ಗೆ ಈ ಕರ್ಣ ಸೇನಾಪತಿ ಎಂದು ಘೋಷಣೆಯಾಗಿಬಿಟ್ಟಿತು. ಯಾರ ಮುಖವನ್ನು ಕನಸಿನಲ್ಲೂ ಕಂಡರಾಗದೋ ಅವನೇ ಅಧಿಪತಿಯಾದ ಮೇಲೆ....ಮತ್ತೆ  ನಿದ್ದೆ ಎಲ್ಲಿಂದ ಬರಬೇಕು.  ಕರ್ಣನ ಮೇಲಿನ ದ್ವೇಷ ವ್ಯಕ್ತವಾಗುತ್ತದೆ.
ಕೌರವನಿಗೆ ಸಹಾಯ ಮಾಡುತ್ತೇನೆ ಎಂದು ಕೊಟ್ಟ ಮಾತು ಉಳಿಸುವುದಕ್ಕೊಸ್ಕರ ಸೇನೆಯ ಹಾದಿಯನ್ನು ಕೌರವನ ಶಿಬಿರದತ್ತ ಬದಲಿಸಿದೆ. ಆಗ ಎಲ್ಲಿದ್ದನೋ ಧರ್ಮರಾಯ ಎದುರಿಗೆ ಬಂದ. ನಾನು ಹೇಗೆ ಆತನ ಮುಖ ನೋಡಲಿ? ಆದರೆ ಆತ ಎದುರಿಗೆ ಬಂದು ನನ್ನ ಮುಖ ನೋಡಿದ. ಜಗತ್ತಿನಲ್ಲಿ ಭಯವಿಲ್ಲದೇ ಅಳುಕಿಲ್ಲದೇ ಮುಖ ನೋಡುವವನು ಎಂದಿದ್ದರೆ ಅದು ಆ ಯುಧಿಷ್ಠಿರ ಮಾತ್ರ. ಅವನಿಗಷ್ಟೇ ಸಾಧ್ಯ. ಅಂತಹ ಧರ್ಮಾತ್ಮ. ಬಂದು ಹೇಳಿದ” ಮಾವ ನೀವು ಶತ್ರು ಪಕ್ಷಕ್ಕೆ ಹೋದರೂ ಚಿಂತೆ ಇಲ್ಲ. ಕೌರವನ ಪಕ್ಷದಲ್ಲಿ ವೀರಾಧಿ ವೀರರು ಹಲವರಿರಬಹುದು. ಅವರ ಚಿಂತೆ ಇಲ್ಲ. ಭೀಷ್ಮ ದ್ರೋಣ ಧರ್ಮಾತ್ಮರು. ಧರ್ಮ ಮೀರಿ ನಡೆಯಲಾರರು. ಅಲ್ಲಿರುವ ಒಬ್ಬನ ಬಗ್ಗೆ ಆತಂಕ. ಅವನೇ ಕರ್ಣ. ಒಂದು ವೇಳೆ ಆತ ಸೇನಾಧಿಪತಿಯಾಗುವ ಸಂದರ್ಭ ಒದಗಿ ಬಂದರೆ ಅಲ್ಲಿ ಇದ್ದುಕೊಂಡು ಅವನ ತೇಜೋವಧೆ ಮಾಡಬೇಕು.” ಮುಖ ಎತ್ತುವುದಕ್ಕೆ ಶಲ್ಯ ಇದನ್ನು ಮಾಡಲೇಬೇಕು. ಒಪ್ಪಿಕೊಂಡೆ.
ಹೋಗಲಿ. ಅದಾರೋ ಬಂದಂತಾಯಿತಲ್ಲ.....ಓ ಸುಯೋಧನ. ಬಾರಯ್ಯ ಬಾ.. ಒಡನೇಯೆ ಮಾವಾ ಮಾವ ಎನ್ನುತ್ತ ಒಳಬಂದ ಕೌರವ. ಮಾವ ಎಂದರೆ ಇದು ಅಧಿಕೃತ ಭೇಟಿಯಲ್ಲ. ತೀರ ಖಾಸಗೀ ವಿಚಾರ. ಏನು ಬಂದ. ಈ ಇರುಳಿನಲ್ಲಿ?
ಕೇಳ್ದೆಲೈ ಮಹವೀರ ಶಲ್ಯಭೂಪಾಲ |
ತಾಳ್ದು ಪಾಲಿಸಬೇಕು ಬಿನ್ನವಿಪಸೊಲ್ಲ || ಕೇಳ್ದೆಲೈ   || ಪ ||

ಧುರದೊಳಿಂದಿನ ದಿನದೊಳತಿರಥ ಮಹಾರಥರು |
ಮುರಿದು ಹರಿಹಂಚಾದರೀ ಪರಿಯೊಳೆಲ್ಲ ||
ಪರಿಭವಕೆ ಸಂದುದೆಮ್ಮಯ ಸೇನೆ ನೀವಿರ್ದು |
ಹರಿಬಕನುವಾಗುವರ ಕಾಣೆ ಮಿಕ್ಕವರ || ಕೇಳ್ದೆಲೈ ||

            ಕೌರವ : ಮಾವ,  ಜಯವನ್ನು ಅಭಿಲಕ್ಷ್ಯವಾಗಿಸಿ ಹೋರಾಡುತ್ತಿದ್ದೇವೆ. ಇಂದಿನ ದಿನದ ಯುದ್ದದಲ್ಲಿ ತಮ್ಮಂತಹ ಅತಿರಥ ಮಹಾರಥರೂ ಇದ್ದೂ ಇಂದು ಘೋರವಾದ ಸೋಲು ಬಂದೊದಗಿತು. ಈ ಸೋಲು ಮಾನಧನರಾದ ನಾವುಗಳು ಪ್ರಾತಃ ಕಾಲದಿಂದ ಸಂಧ್ಯಾಕಾಲದವರೆಗೆ ನಡೆದ ಯುದ್ದದಲ್ಲಿ ಸೋಲು ಅನುಭವಿಸಿ ಹರಿಹಂಚಾಗಿ ತಲೆ ಮರೆಸಿಕೊಂಡು ಶಿಬಿರವನ್ನು ಸೇರುವ ಅವಸ್ಥೆಯೊದಗಿತು. ಅದೂ ನಿಮ್ಮಂತಹ ಅತಿರಥರೂ ಮಹಾರಥಿಗಳು ಇದ್ದೂ ಈ ಸೋಲು ನೀವು ಕಂಡಿದ್ದೀರಿ.
          ಸೇನಾಧಿಪತಿ ತಾನಾಗಲಿಲ್ಲ ಎಂಬ ಹಪ ಹಪಿಕೆಯಲ್ಲಿ ಇದ್ದ ಶಲ್ಯ ಭೂಪಾಲನನ್ನು ಕೆಣಕುವಂತೇ ಕೌರವ ಕೇಳುತ್ತಾನೆ. ಇದು ಕೌರವನ ಸಹಜವಾದ ಮಾತುಗಾರಿಕೆ. ಆಗ ಶಲ್ಯ, ಮಹಾ ವಿಕ್ರಮಿ, ವೀರನಾದ ಕರ್ಣನಿದ್ದೂ ಈ ಸೋಲು ಬಂದು ಬಿಟ್ಟಿತಲ್ಲಾ ಎಂಬುದನ್ನು ಕುಹಕಿಯಾಡುತ್ತಾನೆ.
ಕರ್ಣನತಿಬಲನೆಮ್ಮ ಭಟರೊಳಗೆ ಪೆಗ್ಗಳನು |
ಪೂರ್ಣವಿಕ್ರಮನವನಿಗೊಂದರಲಿ ಕೊರತೆ |
ಸ್ವರ್ಣಮಯ ರಥಕೋರ್ವ ಸಾರಥಿಯು ದೊರಕಿದಡೆ |
ನಿರ್ನಾಮವನು ಗೆಯ್ವ ರಿಪುಗಳನು ಕ್ಷಣದಿ  || ಕೇಳ್ದೆಲೈ ||
ಮಾವಾ, ಇಂದಿನ ಸೋಲಿನ ಬಗ್ಗೆ ಕಾರಣಗಳನ್ನು ತಿಳಿಯಬೇಕಾದರೆ ಅದರ ವಿಚಾರ ಸಂಗ್ರಹವಾಗಬೇಕಾದದ್ದು ಸೇನಾಪತಿಯ ಶಿಬಿರದಿಂದ, ಅಲ್ಲಿಗೆ ಹೋಗಿದ್ದೆ.ಕರ್ಣ ಎಂತಹ ಪರಾಕ್ರಮಿ ಎಂಬುದು ಗೊತ್ತಿದೆ. ಕರ್ಣ ಅತಿ ಬಲವಂತ ಇದರ ಬಗ್ಗೆ ಇಂದಿನ ಸೋಲು ಕಂಡೂ ಎಳ್ಳಿನ ಏಳು ಭಾಗದಷ್ಟು ಅನುಮಾನ ಉಳಿಸಿಕೊಂಡವನಲ್ಲ. ನಾವು ಅಣ್ಣ ತಮ್ಮಂದಿರು ವಿದ್ಯಾಭ್ಯಾಸ ಪೂರ್ತಿಯಾದ ಮೇಲೆ ಹಸ್ತಿನಾವತಿಯಲ್ಲಿ ಅದರ ಪ್ರದರ್ಶನವಾಯಿತು. ಆಗ ಅರ್ಜುನನಿಗೆ ಸರಿಮಿಗಿಲೆನಿಸಿದ ಪ್ರದರ್ಶನವನ್ನು ಕರ್ಣ ನೀಡುತ್ತಾನೆ. ನೆರೆದ್ ಸಭೇ ಉಘೆ ಉಘೆ ಎಂದು ಕರ್ಣನನ್ನು ಹೊಗಳುತ್ತದೆ.  ಒಂದು ಹಂತದಲ್ಲಿ ಕರ್ಣ ಅರ್ಜುನನೊಡನೆ ಸ್ಪರ್ಧಿಸಿ ಹೋರಾಟಕ್ಕಿಳಿಯುತ್ತಾನೆ. ಆವಾಗ ಕೃಪರು ಅದಕ್ಕೆ ಆಕ್ಷೇಪ ಎತ್ತುತ್ತಾರೆ. ಚಂದ್ರವಂಶ ಸಂಜಾತ, ಚಕ್ರವರ್ತಿ ಕುಮಾರ, ಕುಂತೀ ಪುತ್ರನನ್ನು ಇದಿರಿಸುವುದಕ್ಕೆ ಕರ್ಣನ ಹಿನ್ನೇಲೆ ಏನು. ಆತ ಸೂತನಾದ ಅದಿರಥನ ಮಗ ಎಂದಾಗ ಆ ಸ್ಪರ್ಧೆಗೆ ಅನರ್ಹನಾಗಿಬಿಡುತ್ತಾನೆ. ಆದರೆ ಆತನ ಪರಾಕ್ರಮವನ್ನು   ಕಂಡು ಈತ ನನಗೆ ಅನುಕೂಲಕ್ಕೆ ಒದಗುತ್ತಾನೆ ಎಂದು ತಿಳಿದು ನಾನು  ಅಂಗರಾಜ್ಯದ ಪಟ್ಟವನ್ನು ಕಟ್ಟಿದೆ. ಮುಂದೆ ಪಾಂಡವರು ರಾಜಸೂಯಾಧ್ವರವನ್ನು ಮಾಡಿದಾಗ ನಾನೂ ಮಾಡೋಣವೆಂದಿದ್ದೆ. ಆದರೆ ತಂದೆ ತಾಯಿಗಳು ಬದುಕಿರುವಾಗ ರಾಜಸೂಯವನ್ನು ಮಾಡುವ ಹಕ್ಕು ಇರುವುದಿಲ್ಲ ಎಂದು ತಿಳಿದು ತತ್ಸಮವಾದ ವೈಷ್ಣವಯಜ್ಞವನ್ನು ಮಾಡಿದ್ದೆ. ಆಗ ಸಂಪಾದಿಸಿದ್ದ ಕೀರ್ತಿಗೆ  ಸಂಪತ್ತಿಗೆ ಪೂರ್ಣ ಕಾರಣ ಕರ್ಣನೇ,   ಆ ಕಾಲದಲ್ಲಿ ಕರ್ಣ ತನ್ನ ಸಾಮಾರ್ಥ್ಯದಿಂದ ದಿಗ್ವಿಜಯವನ್ನು ಸಾಧಿಸಿದ್ದ ವೀರ ಜರಾಸಂಧನನ್ನೂ  ದಿಗ್ವಿಜಯ ಕಾಲದಲ್ಲಿ ಕರ್ಣ ಸೋಲಿಸಿದ್ದ.  ಅತಿಬಲನಾದ ಕರ್ಣನಿದ್ದೂ ಹೀಗಾಯಿತು. ಕಾರಣ ತಿಳಿದಾಗ ಕರ್ಣನೇ ಹೇಳಿದ ಸಾರಥಿಯ ಕೊರತೆ.  ಒಬ್ಬ ವೀರ ಯೋಧನಿಗೆ ಶಸ್ತ್ರ ಅಯುಧಗಳು ಎಷ್ಟು ಪ್ರಾಮುಖ್ಯವೋ ಅಷ್ಟೇ ಪ್ರಾಮುಖ್ಯ ಬುದ್ಧಿಯ ಸ್ಥಾನದಲ್ಲಿರುವ ಸಾರಥಿ.  ಒಬ್ಬ ಸಮರ್ಥ ಸಾರಥಿ ದೊರಕಿದೊಡೆ ಜಯ ನಮ್ಮದೇ ಅನುಮಾನ ಬೇಡ ಅಂತ ಹೇಳಿದ.
          ಅದಕ್ಕೆ ಶಲ್ಯ  ಹೇಳಿದ  “ಸಾರಥಿಗಳಿಗೇನು ಹಸ್ತಿನಾವತಿಯಲ್ಲಿ ಕೊರತೆಯೇ. ಮತ್ತೇಕೆ ನ್ನನ್ನಲ್ಲಿ ಹೇಳಿದೆ? ಮಾದ್ರಾದೇಶದಿಂದ ತರಿಸಬೇಕೆ?”
ಅದರಿಂದ ನಿನ್ನೊಡನೆ ಬೇಡಿಕೊಳ್ಳುವುದಾನು |
ಸದಮಲನವನ ರಥಕೆ ಸೂತತನವನ್ನು ||
ಪದುಳದಿಂ ಗೆಯ್ದೆಮ್ಮ ಕುರುವಂಶವನು ಕಾಯ್ದು |
ಮುದದಿಂ ಸುಕೀರ್ತಿಯನು ನೀ ಧರಿಸಬೇಕು || ಕೇಳ್ದೆಲೈ ||
“ಮಾವಾ, ವೀರೋಚಿತವಾದ ಯುದ್ದದಲ್ಲಿ ಕರ್ತವ್ಯ ನಿಷ್ಠೆಯಿಂದ ದುಡಿಯುವ  ಸದಮಲವ್ಯಕ್ತಿತ್ವ ಕರ್ಣನದ್ದು.  ಅಂತಹ ವೀರನಾಗಿರುವ, ವೀರಶ್ರೀ ಲಲಿತ ಕೋಮಲ ಗಾತ್ರನಾಗಿ,   ಯುದ್ದವ್ಯವಹಾರದಲ್ಲಿ ನಿಷ್ಕಳಂಕ ಚಾರಿತ್ರ್ಯಶುದ್ಧಿಯುಳ್ಳ ಕರ್ಣನಿಗೆ ಸಾರಥಿಯ ಕೊರತೆ ಸಂಭವಿಸಿದೆ. ಒಬ್ಬ ವೀರ ಯೋಧನಿಗೆ ಕವಚ ಆಯುಧ ಅಶ್ವ ರಥ ಇತ್ಯಾದಿಗಳು ಎಷ್ಟು ಮುಖ್ಯವೋ ಅದೇ ರೀತಿ ಸಮರ್ಥನಾದ ಸಾರಥಿಯೂ ಮುಖ್ಯ. ಒಬ್ಬ ಸಮರ್ಥ ಸಾರಥಿ ಸಿಕ್ಕಿದರೆ ಆತ ಯಾವ ಪರಾಕ್ರಮಿ ಮುಂದೆ ಬಂದರೂ ಸದೆಬಡಿದು ಜಯ ಕೊಡಿಸಬಲ್ಲ ಈ  ವಿಶ್ವಾಸ ನನಗಿದೆ. “
ಕರ್ಣನ ಹೊಗಳಿಕೆ ಶಲ್ಯನಿಗೆ ಪಥ್ಯವಾಗುವುದಿಲ್ಲ. ಆತ ಹೇಳುತ್ತಾನೆ,
“ಕರ್ಣನನ್ನು ನೀನು ಎಷ್ಟು ಬೇಕಾದರೂ ಹೊಗಳು. ನೀನು ಕೌರವ. ಕೇವಲ ಸಾರಥಿಗಾಗಿ ಈ ಮಧ್ಯರಾತ್ರಿಯಲ್ಲಿ ಇಲ್ಲಿವರೆಗೆ ಬರಬೇಕೋ. ಕೇವಲ ಒಬ್ಬ ಆಳಿನಲ್ಲಿ ಹೇಳಿ ಕಳುಹಿಸಿದರೆ ಒಬ್ಬ ಸಾರಥಿ ಏಕೆ, ನೂರು ಸಾರಥಿಯನ್ನೂ ಒದಗಿಸಬಹುದು, ಅಷ್ಟಕ್ಕೇ ಇಷ್ಟು ಕರ್ಣನನ್ನು ಹೊಗಳುವ ಅವಶ್ಯಕತೆ ಇದೆಯೇ? “ 
ಕೌರವ ಹೇಳ್ತಾನೆ ,
ಕರ್ಣನ ಶ್ಲಾಘನೆ ನನ್ನ ಉದ್ದೇಶವಲ್ಲ. ಕರ್ಣನ ಸಾಮಾರ್ಥ್ಯದ ಪ್ರತಿಪಾದನೆಯೂ  ನನ್ನ ಉದ್ದೇಶವಲ್ಲ. ಇವತ್ತಿನ ಕಾಳಗದಲ್ಲಿ ಇಷ್ಟಿದ್ದ ಕರ್ಣ ಸೋಲುವಂತಾಯಿತು. ಕಾರಣ ತಿಳಿಯಿತಲ್ಲ? ಕೇವಲ ಸಾರಥಿಯಲ್ಲ. ಆತನಿಗೆ ನೀವೇ ಬುದ್ಧಿಯ ಸ್ಥಾನದಲ್ಲಿ ನಿಂತು ಸಾರಥಿಯಾಗಿ ಯೋಗ್ಯ ಮಾರ್ಗದರ್ಶನವನ್ನು ನೀಡಿ ನಮ್ಮೊಡನೆ ಸಹಕರಿಸಬೇಕು. 
ಎನೆ ಕೇಳ್ದಾಗಲೆ ರೋಷದಿ | ತನು ಕಂಪಿಸುತಲಿ ಕೆಂಪಡರಿದ ಆಲಿಗಳುಂ ||
ಕೊನೆಮೀಸೆಗಳಲುಗಲು ಶ | ಲ್ಯನು ಗರ್ಜಿಸುತಲಿ ಕುರುಭೂಮಿಪಗಿಂತೆಂದಂ ||
ಇನ್ನು ಬಗುಳಿನ್ನೊಮ್ಮೆ ಕುರುಪತಿ | ನಿನ್ನ ಭಾವವನರಿತೆ ಚಿತ್ತದೊ |
ಳುನ್ನತದ ಸಿರಿಮದದಿ ನುಡಿದೆಯೊ | ಎನ್ನೊಳಿದನು  ||
ಕೌರವ ಅತಿವಿನಯಂ ಧೂರ್ತ ಲಕ್ಷಣಂ ಎಂಬ ಗಾದೆಮಾತನ್ನು ಸತ್ಯವಾಗಿಸಿದೆಯಲ್ಲ. ಮಾವಾ ಮಾವ ಎಂದು ಏನು ಹೇಳಿದೆ. ಕರ್ಣನಿಗೆ ಸಾರಥಿಯಾಗಬೇಕೆ. ನಾನು ನಿನಗೆ ಮಾವನಾಗಿರಬಹುದು.  ನಾನು ನಿನಗೆ ಆಶ್ರಿತನಾಗಿ ಬಂದವನಲ್ಲ. ನಿನಗೆ ಸಹಾಯಕ್ಕೋಸ್ಕರ ಬಂದವನು. ನನ್ನ ಸಹಾಯ ಯಾಚಕ ನೀನು. ನಾನು ಕರ್ಣನಿಗೆ ಸಾರಥಿಯಾಗಬೇಕೆ?
ಆತ ಗಡ ಸಮರದೊಳು ಕಲಿ ವಿ | ಖ್ಯಾತ ಗಡ ಸುಭಟರೊಳು ಮೇಣಾ |
ಸೂತಸುತನೇಸರವನೆಂಬೀ | ಮಾತನರಿಯೈ  ||
ಸುಯೋಧನ, ಕರ್ಣನಬಗ್ಗೆ ನೀನು ಈಗ ಆಡಿದ ಮಾತಿಗಿಂತ ಮೂರು ಪಾಲು ನೀನು ಆಡಬಹುದು. ನಿನಗೆ ಸ್ವಾತಂತ್ರ್ಯ ಉಂಟು. ಆದರೆ ಯಾತಾರ್ಥ್ಯವನ್ನು ಆಲೋಚನೆ ಮಾಡಬೇಕು.  ವಾಸ್ತವವೇ ಬೇರೆ. ಕರ್ಣನಿಗೆ ಕಿರೀಟ ತೊಡಿಸಿ ಆತನನ್ನು ಅಂಗಾಧಿಪತಿಯಾನಾಗಿ ಮಾಡಿದ್ದು ನಿನಗೆ ಕರ್ಣನ ಮೇಲೆ ಪ್ರೀತಿಯೋ ವಾತ್ಸಲ್ಯವೋ ಗೌರವವೋ  ಮತ್ತೋಂದೋ ಯಾವುದೂ ಅಲ್ಲ. ಆತನನ್ನು ಅಂಗರಾಜನನ್ನಾಗಿ ಮಾಡಿದ್ದು ಯಾಕೆ? ನಿನಗೆ ಪಾಂಡವರ ಮೇಲೆ ದ್ವೇಷ. ಅದರಲ್ಲೂ ಅರ್ಜುನನ ಮೇಲೆ ಅತಿಯಾದ ದ್ವೇಷ. ಪಾಂಡವರನ್ನು ಯಾರೇ ತೆಗಳಲಿ ವಿರೋಧಿಸಲಿ ನಿನಗೆ ಅವರು ಪರಮಾಪ್ತ ಮಿತ್ರರು. ಕರ್ಣ ಎಂಥವ. ಒಬ್ಬ ಸೂತ ಪುತ್ರ. ತನ್ನ ಸ್ವಾರ್ಥವನ್ನು ಸಾಧಿಸುವವನ್ನು. ಯಾವುದೇ ಕುಲದ ಹಿನ್ನೆಲೆಯೂ ಇಲ್ಲದವನು..ಆತ ಅರ್ಜುನನಿಗೆ ಸರಿಸಮ ಎನ್ನಿಸುವುದಕ್ಕೆ ನೋಡಿದಿ. ಹಲವು ಸಲ ತಿಕ್ಕಿಯೂ ನೋಡಿದಿ. ಪರಿಣಾಮ ಅರ್ಜುನನ ಯೋಗ್ಯತೆ ಅರಿವಾಯಿತು. ಎಲ್ಲಿಯಾದರೂ ಕರ್ಣ ಗೆದ್ದುಕೊಂಡ ನಿದರ್ಶನ ಉಂಟೋ ಹೇಳು? ಚಿನ್ನವನ್ನು ಒಂದು ಸಲ ತಿಕ್ಕಿನೋಡಿದರೆ ಗೊತ್ತಾಗುತ್ತದೆ. ಅದು ಚಿನ್ನವೋ ಎಂದು. ಅದನ್ನು ಪರೀಕ್ಷಿಸುವುದಕ್ಕೆ ಹಲವು ಸಲ ತಿಕ್ಕುವ ಆವಶ್ಯಕತೆ ಇರುವುದಿಲ್ಲ. ಆದರೆ ಕರ್ಣನನ್ನು ಎಷ್ಟು ಸಲ ತಿಕ್ಕಿಯಾಯಿತು. ಪ್ರತಿ ಸಲವೂ ಸೋಲು. ಈಗ ಹಸ್ತಿನಾವತಿಯ ಪ್ರಚಂಡ ಸೇನಾಪತಿ, ನಿನಗೆ ಜಯವನ್ನು ಒದಗಿಸಿಕೊಡುವವ. ಏನು ಈಗ ನಾನು ಅವನಿಗೆ ಸಾರಥ್ಯ ಮಾಡಬೇಕು. ಇದನ್ನು ಹೇಳುವುದಕ್ಕೆ ನೀನು ಹಲವು ಸಲ ಯೋಚಿಸಿ ಅಳುಕಿನಲ್ಲಿಯೇ ಹೇಳುತ್ತಿದ್ದಿಯಾ. ಆದರೂ ಮತ್ತೊಮ್ಮೆ ಯೋಚಿಸು. ಕರ್ಣ ನಿನಗೆ ಪರಮಾಪ್ತ ಇರಬಹುದು. ನಿನಗೆ ಪರಾಕ್ರಮಿಯಾಗಿ ಕಾಣಬಹುದು. ಆದರೆ ಆದರೆ ಯಾರವನು?
ಧೀವರನ ಮಗನೆತ್ತಲೆಮ್ಮಯ  | ಭೂವರತ್ವವಿದೆತ್ತಲಿಂದಿನ |
ಲೀ ವಿಧಿಯು ಪ್ರಾಪ್ತಿಸಿತೆ ತಪ್ಪೇ | ನಾವುದಹಿತ  ||
ನದೀ ಪ್ರವಾಹದಲ್ಲಿ ತೇಲಿ ಬಂದವನು. ಆಮೇಲೆ ಅದಿರಥನ ಕೈಗೆ ಸಿಕ್ಕಿದವನು. ಈ ನದಿ ಪ್ರವಾಹದಲ್ಲಿ ತೇಲಿ ಬರುವುದಕ್ಕೆ ..ಆತ ಎಲ್ಲಿಂದ ಬಂದ ಎನ್ನುವುದು ಯಾರಿಗೂ ಗೊತ್ತಿಲ್ಲ. ಸೂತನ ಕೈಗೆ ಸಿಕ್ಕಿ ಆತನ ಸಂಸ್ಕಾರದಲ್ಲೇ ಬೆಳೆದವನು. ಸೂತನಾದವನು ಸೇನಾಧಿಪತಿಯಾಗುತ್ತಾನೆ. ನಾನು ಆತನ ಸೂತ ಆಗಬೇಕೆ? ಮುಂದೆ ಏನಾಗಬಹುದು. ಸೂತನ ಸೂತ ಎಂದು ನನ್ನನ್ನು ಪ್ರಪಂಚ ಕಾಣಬಹುದು. ಭಗವಾನ್ ಶ್ರೀಕೃಷ್ಣನನ್ನು ಹೇಳುವುದುಂಟು ದೇವ ದೇವೋತ್ತಮ ಎಂದು , ಹಾಗೆ ನನ್ನನ್ನು ಸೂತ ಸೂತೋತ್ತಮ ಎಂದು ಕರೆಯಬಹುದು. ಅಂತಹ ಸ್ಥಾನ ಮಾನ ದೊರಕಿಸುವುದಕ್ಕೆ ಬಂದವನು. ಅವನ ಕುಲ ಏನು? ಗೋತ್ರ ಏನೂ. ಒಂದು ನಿಖರವಾಗಿಲ್ಲ. ಅಂಥವನು . ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಹುಟ್ಟಿನಿಂದ ನಿರ್ಣಯಿಸುವುದಕ್ಕೆ ಸಾಧ್ಯವಿಲ್ಲ, ಹುಟ್ಟಿನಿಂದ ಕುಲ ಮಾತ್ರ ನಿರ್ಣಯವಾಗಬಹುದು. ವ್ಯಕ್ತಿತ್ವ ಅಲ್ಲ. ಜನ್ಮನಾಃ ಯಾರೂ ದೊಡ್ಡವರಾಗುವುದಿಲ್ಲ. ಮಹಾತ್ಮರಾಗುವುದಿಲ್ಲ. ಆದರೆ ಮುಂದೆ ಪ್ರಪಂಚದಲ್ಲಿ ಅವನ ಜೀವನ ಹೇಗೆ ಅಂತ ನೋಡ್ತಾರೆ, ಅವನ ಗುಣ ಸ್ವಭಾವ ಹೇಗೆ ಅಂತ ನೋಡುತ್ತಾರೆ. ಸಂಸ್ಕಾರ ಹೇಗೆ ಅಂತ ಪರೀಕ್ಷಿಸುತ್ತಾರೆ. ಕರ್ಣ ಜನ್ಮನಾ ಏನೂ ಅಲ್ಲ. ಹಾಗಿದ್ದರೂ ಮುಂದೆ ಏನಾಗಿದ್ದಾನೆ ಅವನು. ಅವನ ವ್ಯಕ್ತಿತ್ವ ಏನು. ಪಾಂಡವರನ್ನು ವಿರೋಧಿಸುತ್ತಲೇ ಬಂದವನು. ಅರ್ಜುನ ದ್ವೇಷ ಮತ್ತೆ ನಿನ್ನ ಸಖ್ಯ. ಅರ್ಜುನ ದ್ವೇಷಕ್ಕೆ ನಿನ್ನ ಸ್ನೇಹ ಕೂಡಿಬಂದದ್ದು. ಒಂದು ವೇಳೆ ಅರ್ಜುನನ ಮೇಲೆ ಆತನಿಗೆ  ದ್ವೇಷ ಇಲ್ಲ ಎಂದಾದರೆ, ನಿನಗೆ ಅವನಲ್ಲಿ ಏನನ್ನು ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಆತನ ಪರಾಕ್ರಮವೋ ಮತ್ತೊಂದೊ ಯಾವುದೂ ಇಲ್ಲ. ಯೋಚನೆ ಮಾಡು. ನಿನ್ನ ಉತ್ಕರ್ಷಕ್ಕೆ ಅವನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾನ? ಹೆಜ್ಜೆ ಹೆಜ್ಜೆಗೂ ನಿನಗೆ ಪ್ರಚೋದನೆ ಕೊಟ್ಟವನು, ಅದು ಅವನ ಉತ್ಕರ್ಷಕ್ಕೆ. ನಿನ್ನ ಅಧಃ ಪತನಕ್ಕೆ ಒಂದೊಂದು ಮೆಟ್ಟಲು ಕಟ್ಟಿ ಇಟ್ಟವನು. ನಿಜವಾಗಿ ನಿನ್ನ ಹಿತೈಷಿ ಆಪ್ತ ಆಗುತ್ತಾನೋ ಆಗ ಎಲ್ಲಿ ತನ್ನ ಮಿತ್ರ ಹಾದಿ ತಪ್ಪುತ್ತಾನೋ ಅಂತ ನೋಡಿ ನಿನ್ನ ಕೈ ಹಿಡಿದು ಎಳೆಯಬೇಕಿತ್ತು.. ಮಾಡಿದನೋ ಅವನು,  ಇಲ್ಲ. ನೀನು ಪ್ರಪಾತಕ್ಕೆ ಹಾರಲು ಹೋದಾಗ ಸ್ವಲ್ಪ ಮುಂದಕ್ಕೆ ಹೋಗು ಅಂತ ಪ್ರಚೋದಿಸಿದವನು ಅವನು.
ಖತಿಯಿದೇನೈ ಮಾವ ನೀನೇ |
ಗತಿಯೆನುತ ನಾ ಬಂದರೆನ್ನೊಡ |
ನತಿಶಯದ ಮಾತೇಕೆ ಬಿಡು ಕಾರುಣ್ಯದೃಷ್ಟಿಯನು ||
ಮಾವಾ...ಸಿಟ್ಟು ಬಂತೇ..[ಕೌರವ ಈಗ ನಿಜವಾದ ಕೌರವನಾಗಿಬಿಡುತ್ತಾನೆ. ಶಲ್ಯನ ಸಿಟ್ಟು ಮೊದಲೇ ನಿರೀಕ್ಷಿಸಿದವನಿಗೆ ಅದಕ್ಕೆ ಇರುವ ಪ್ರತಿತಂತ್ರಗಾರಿಕೆ ತಿಳಿಯದ್ದೇನಲ್ಲ. ಶಲ್ಯನನ್ನು ಬಳಸಿಕೊಳ್ಳ ಬಯಸುವ ವಾದ ಸರಣಿ ಅದ್ಭುತವಾಗಿದೆ]  ಶಲ್ಯ ಎಂದು ಹೇಳಿದರೆ ಅದು  ಸಿಟ್ಟು ಆಗುವುದಿಲ್ಲ  . ಶಲ್ಯ ಭೂಪಾಲರಿಗೆ ಬಂದ ಸಿಟ್ಟು. ಹಾಗಾಗಿ  ಸಿಟ್ಟನ್ನು ಬೇರೆ ಇಟ್ಟು ನಿಮ್ಮ ಹತ್ತಿರ ಕೈಮುಗಿದು ಕಾಲು ಮತ್ತೊಮ್ಮೆ ಮುಟ್ಟಿದ್ದು ನಾನು. ನೋಡಿ ಇನ್ನೂ ನಿಂತೇ ಇದ್ದೇನೆ. ನಿಮಗೆ ಸಿಟ್ಟು ಬಂದದ್ದು ಸರಿಯಲ್ಲ ಅಂತ ಹೇಳುವವನಲ್ಲ. ಉಪ್ಪು ಮೆಣಸು ತಿಂದವನಿಗೆ ಸಿಟ್ಟು ಬಂದೀತು. ಆದರೂ ನನ್ನ ಮೇಲಿನ ದಾಕ್ಷಿಣ್ಯಕ್ಕೋ ಗೌರವಕ್ಕೋ ಏನು ಬಗುಳಿದಿಯೋ ಅಂತ ಕೇಳಲಿಲ್ಲ. ಬೇರೆ ಯಾರಾದರೂ ಆಗಿದ್ದರೆ ನಾನೇ ಬಾಗಿಲು ಎಳೆದು ಹೋಗುತ್ತಿದ್ದೆನೋ ಏನೋ. ಆದರೆ ಇದು ನೀವು. ಏನು ಸಿಟ್ಟು ಇದು? ಹೋಗಲಿ.
          ಕೆಲವು ಮಹಾವ್ಯಕ್ತಿಗಳು ಉಚ್ಚರಿಸಿದ ಅಕ್ಷರಗಳಿಗೆ ವ್ಯಾಖ್ಯಾನ ಮಾಡಬಾರದು.  ಮಾತಿನ ಭಾವನೆಯನ್ನು ಗುರುತಿಸಬೇಕು. ನಾನು ಮಾಡುದಿಲ್ಲ ಎಂದು ಒಂದೇ ಮಾತಿನಲ್ಲಿ ಹೇಳುತ್ತಿದ್ದರೆ ಮಾತುಕತೆ ಮುಗಿಯಿತು ಅಂತ ಈ ಪ್ರಸಂಗಕ್ಕೆ ಮಂಗಳ ಪದ ಹಾಡಬೇಕಿತ್ತು. ಆದರೆ ಹಾಗಾಗಲಿಲ್ಲ. ಎಷ್ಟು ಗಲಾಟೆ ನೀವು ಮಾಡಿದರೂ ಮಾಡೋದಿಲ್ಲ, ಆಗೋದಿಲ್ಲ, ಅಂತ ಹೇಳಲಿಲ್ಲ. ಮಾಡಬೇಕೆ? ಮಾಡಬಹುದೇ? ಅಂತ ಕೇಳುವಾಗ ಅಲ್ಲಿ ನನಗೆ ಆಸ್ಪದ ಉಂಟು ಅಂತ ಧೈರ್ಯ.  ಮಾಡುವುದಿಲ್ಲ ಮಾಡಬಾರದ್ದು ಅಂತ ತೀರ್ಮಾನ ಆಗಿಲ್ಲ. ಅದು ಹಾಗಲ್ಲ ಹೀಗೆ ಅಂತ ನಮ್ಮ ವಿವರಣೆ ನೀಡಿ ನಮ್ಮ ಬಗ್ಗೆ ನಿವೇದಿಸಿಸಿಕೊಂಡರೆ ಸನ್ನಿಧಾನ ಮನಸ್ಸು ಬದಲಾಯಿಸುವ ಸಂಭವಿದೆ.     ಹಾಗೊಂದು ಸಂಭವಕ್ಕೆ ಅವಕಾಶ ಉಂಟು ಎಂದಾಯಿತು. ತಾವು ಆಗದು ಎಂದು ಯಾವುದನ್ನು ಹೇಳಿದ್ದಿರೋ ಅದರ ಬಗ್ಗೆ ಆಜ್ಞಾಪಿಸುವುದಲ್ಲ. ಇದು ವಿಜ್ಞಾಪನೆ. ನಿವೇದನೆ, ಬೇಡಿ ಕೊಳ್ಳುತ್ತಾ ಇದ್ದೇನೆ. ತಮ್ಮ ಮಾತಿನ ವಿರೋಧವಲ್ಲ.
ಕರ್ಣ ಸಾರಥ್ಯ ಎಂದಾಗ ಕೆರಳಿದಿರಲ್ಲಾ? ನೀವೀಗ ಸಹಾಯ ಮಾಡುವುದು ಕರ್ಣನಿಗಲ್ಲ.  ಕರ್ಣನಿಗೆ ಶಲ್ಯ ಭೂಪಾಲರು ಸಾರಥ್ಯ ಮಾಡುತ್ತಾರೆ ಎಂದಾದರೆ, ಕರ್ಣನಿಗೆ ಬಳೆತೊಡಿಸಿ ಶಾಲು ಹೊದಿಸಿ ಸನ್ಮಾನ ಮಾಡುವುದಕ್ಕಿಲ್ಲ. ಕರ್ಣನಿಗೆ ಶಲ್ಯನ ಸಾರಥ್ಯದ ದ್ವಾರ ಜಯ ಪ್ರಾಪ್ತಿಯಾದರೆ, ಈ ಮೊದಲು ಕರ್ಣನಿಗೆ ನಾನು ಕೊಟ್ಟ ಕಿರೀಟ ಶಾಶ್ವತವಾದೀತೇ ಹೊರತು, ಹಸ್ತಿನಾವತಿಯ ಸಾಮ್ರಾಟ ಸಿಂಹಾಸನದ ಕಿರೀಟವಾದೀತೇ?.ಕರ್ಣನಿಗೆ ಶಲ್ಯ ಸಾರಥ್ಯದಿಂದ ಬರುವ ಜಯ ಅದು ಗೌರವದ ಜಯ. ಸಣ್ಣ ಮಗುವಿನ ತಾಯಿಗೆ ಕಷಾಯ ಮಾಡಿ ಕುಡಿಸಿದರೆ ಕುಡಿಯುವ ಕಹಿ ಆಕೆಯ ನಾಲಿಗೆಗೆ ಆದೀತು. ಆದರೆ ಅದು ಅವಳ ರಕ್ತದಲ್ಲಿ ಪ್ರವಹಿಸಿ ಅವಳು ಮೊಲೆಯುಡಿಸುತ್ತಿರುವ ಮಗುವಿನ ಆರೋಗ್ಯಕ್ಕೆ ಕಾರಣವಾಗುತ್ತದೆ. ಹಾಗೇ ಕಷಾಯ ಸ್ವಲ್ಪ ಕಹಿ. ಆದರೆ ಈಗ ಅದನ್ನು ಸ್ವಲ್ಪ ಸಹಿಸಿಕೊಂಡು ಮನಸ್ಸು ಮಾಡಿ ಕುಡಿದರೆ..ಪರಿಣಾಮ ಮಗುವಿನ ಸ್ಥಾನದಲ್ಲಿರುವ  ಕೌರವನ ಜಯಕ್ಕೆ ಕಾರಣವಾಗಬಲ್ಲುದು.
“ಈ ಮಗುವಿನ ರೋಗ ವಾಸಿಯಾಗಬೇಕಾದರೆ...ಕಷಾಯ ಅವನಿಗೆ ಕುಡಿಸಬೇಕು ಅಲ್ವಾ?” ( ನಡುವೆ ಶಲ್ಯ ಕುಹಕವಾಡುತ್ತಾನೆ.) ವಾಸ್ತವದಲ್ಲೂ ಈ ಕುಹಕ ಬಹಳ ಅರ್ಥ ಪೂರ್ಣವಾಗಿರುತ್ತದೆ. ಕೌರವನ ವ್ಯಕ್ತಿತ್ವವನ್ನೂ ಕರ್ಣನ ವ್ಯಕ್ತಿತ್ವವನ್ನೂ ಇದು ಬಿಂಬಿಸುತ್ತದೆ.

(ಮುಂದಿನ ಭಾಗದಲ್ಲಿ ಮುಂದುವರಿಯುವುದು)

Thursday, January 18, 2018

ಯಕ್ಷ ಗೋವಿಂದಗೆ ಮತ್ತೊಂದು ಗರಿ .....

 
   ಹಿಂದೆ ಧರ್ಮಸ್ಥಳ ಮೇಳದ ಆಟವೆಂದರೆ ಅದು ಊರಿಗೆ ಹಬ್ಬ ಜಾತ್ರೆ ಎಲ್ಲವೂ ಆಗಿರುತ್ತಿತ್ತು. ಮಧ್ಯಾಹ್ನವಾದರೆ ಚೌಕಿಯ ಮಹಾಗಣಪತಿ ಪೂಜೆಗೆ ಹಣ್ಣುಕ್ಕಾಯಿ ಕೊಂಡೊಯ್ಯುವ ಸಂಭ್ರಮ, ಇರುಳಿನ ಆಟದ ಪ್ರದರ್ಶನಕ್ಕೆ ರಂಗಸ್ಥಳ ಸಿದ್ದವಾಗುವುದನ್ನು ಬೆರೆಗು ಕಣ್ಣಿಂದ ನೋಡುವ ರೀತಿ. ಈ ನಡುವೆ ನೆತ್ತಿಯಲ್ಲಿ ಮೈಕುಗಳನ್ನು ಕಟ್ಟಿ ಊರೆಲ್ಲ ಕರಪತ್ರವನ್ನು ಚೆಲ್ಲುತ್ತಾ ಆಟದ ಪ್ರಚಾರ ಮಾಡುವ ಜೀಪು ಮತ್ತೆ ಅದರ ಹಿಂದೆ ಕರಪತ್ರವಾದ  ಬಣ್ಣದ ಕಾಗದವನ್ನು ಹೆಕ್ಕುವುದಕ್ಕೆ ಓಡುವ ಚಿಣ್ಣರು, ಊರ ನಡುವೆ ಸರಕಾರಿ ಬಾವಿಯಿದ್ದರೆ ಅದರ ಸುತ್ತ ಮೇಳದ ಕಲಾವಿದರಾದಿಯಾಗಿ ಹಲವರು ಸ್ನಾನ ಬಟ್ಟೆ ಒಗೆಯುತ್ತಿರುವುದು ಇದೆಲ್ಲ ಸರ್ವೇಸಾಮಾನ್ಯವಾದ ದೃಷ್ಯವಾಗಿತ್ತು. ರಾತ್ರಿಯ ಆಟಕ್ಕೆ ಇಂದ್ರನೋ ಭೀಮನೋ ಶೂರ್ಪನಖಿಯೋ ಆಗುವವರನ್ನು ಮಕ್ಕಳು ಬಾಯಿಯೊಳಗೆ ಬೆರಳಿಟ್ಟು ಸಡಗರದಿಂದ ನೋಡುತ್ತಿರುವುದು ಕೇವಲ ಒಂದೂರಿನ ಕಥೆಯಲ್ಲ. ಆಟವೆಂದರೆ ಹಾಗೆ. ಅದೊಂದು ಪರ್ವ. ಅದೇ ಬಾವಿಕಟ್ಟೆಯಲ್ಲಿ ಭುಜದವರೆಗೂ ಇಳಿಬಿಟ್ಟ ಕೂದಲು ಸೊಂಟದೊಲ್ಲೊಂದು ತೋರ್ತಮುಂಡು ಸುತ್ತಿಕೊಂಡು ಸ್ನಾನ ಮಾಡುತ್ತಿದ್ದ ಏರು ಜವ್ವನಿಗ ಗೋವಿಂದಣ್ಣನೂ ಒಬ್ಬರು. ಸರಳತೆಯೇ ಮೈವೆತ್ತ ಮುಂಡು ಬೈರಾಸಿನ  ಗೋವಂದಣ್ಣ ಇಂದು ಭಾರತದ ಪ್ರಥಮ ಪ್ರಜೆ  ರಾಷ್ಟ್ರ ಪತಿ ಕೋವಿಂದರ ಎದುರು ಕೈ ಮುಂದೆ ಮಾಡಿ ನಗುತ್ತಾ ನಿಂತಿದ್ದಾರೆ. ಎಲ್ಲಿನ ನಮ್ಮೂರ ಬಾವಿಕಟ್ಟೆ ಎಲ್ಲಿನ ರಾಷ್ಟ್ರ ಪತಿ. ಅಚ್ಚರಿಯಾಗುತ್ತದೆ. ಮನುಷ್ಯನ ಆದ್ಯಾಕ್ಷರಗಳು ಮತ್ತರದ ಅಂಕಗಳು ತುಂಡು ಬಟ್ಟೆಯಲ್ಲೇ ಬರೆಯಲ್ಪಡುತ್ತದೆ. ಆದರೆ ಆ ಬದುಕಿನ ಪಯಣ ಸಾಗುತ್ತಾ ಸಾಗುತ್ತಾ ರೇಷ್ಮೆಯ ಶಲ್ಯ ಹಗೆಲೇರುತ್ತದೆ. 
ಸೂರಿಕುಮೇರಿ ಅದು ಎಲ್ಲಿದೆ ಎಂದು ಎಷ್ಟು ಜನ ಬಲ್ಲವರೋ ಗೊತ್ತಿಲ್ಲ. ಆದರೆ ಸುಮಾರು ಕಳೆದ ಐದು ದಶಕಗಳಷ್ಟು ಸಮಯ ಧರ್ಮಸ್ಥಳ ಮೇಳದ ಕರಪತ್ರದಲ್ಲಿ ಈ ಹೆಸರು ರಾರಾಜಿಸುತ್ತಾ ಇದೆ. ಈ ಒಂದು ಸಾಧನೆಯೇ ಈ ವ್ಯಕ್ತಿತ್ವದ ಎತ್ತರವನ್ನು ಯೋಗ್ಯತೆಯನ್ನು ಅಳೆಯಬಲ್ಲುದು. ಇದು ಸಾರ್ವಜನಿಕವಾದರೆ, ಮೊನ್ನೆ ಮೊನ್ನೆ ಹೀಗೆ ಗೋವಿಂದಣ್ಣನಿಗೆ ಕರೆ ಮಾಡಿದ್ದೆ. ಫೋನ್ ತೆಗೆದಾಗ ಯಥಾವತ್ ಅದೇ ಶಾಂತ ಸ್ವರ. ಒಂದು ಕ್ಷಣ ಮನಸ್ಸು ಹಿಂದಕ್ಕೇ ಓಡಿತು. ಧರ್ಮಸ್ಥಳ ಮೇಳದ ಆಟ ನಡೆಯುತ್ತಿರುತ್ತದೆ. ತಡರಾತ್ರಿ ಉಚ್ಚೆ ಹೊಯಲ್ಲು ಬಯಲಂಚಿಗೆ ಹೋಗಿ ಕುಳಿತಿರಬೇಕಾದರೆ ಇತ್ತ ರಂಗಸ್ಥಳದಲ್ಲಿ ಅಬ್ಬರದ ರಂಗ ಪ್ರವೇಶ ಹಿಂದೆಯೇ ಅದೇ ಹರಿತವಾದ ಕಂಠ ಸ್ವರ. ಇಂದ್ರನೋ ವಿಶ್ವಾ ಮಿತ್ರನೋ ರಂಗಸ್ಥಳದಲ್ಲಿ ಧೂಳೆಬ್ಬಿಸುವುದಕ್ಕೆ ತೊಡಗಿತ್ತು. ಬಯಲಂಚಿನಲ್ಲಿ ಕುಳಿತಿದ್ದವರು ರಂಗಸ್ಥಳದತ್ತ ಓಡಿ ಬರುವಾಗ ಇನ್ನೂ ಸುರಿಯುತ್ತಿದ್ದದ್ದು ಕಾಲ ಮೇಲೆ ಹೊಯ್ದರೂ ಪರಿವೆ ಇಲ್ಲ. ಬೆರಗು ಕಣ್ಣಿಂದ ರಂಗಸ್ಥಳದಲ್ಲಿ ನೋಡಿದರೆ ಗೋವಿಂದಣ್ಣ ಕುತ್ತು ಹಾರುತ್ತಿದ್ದರು. ಅದೇ ಗೋವಿಂದಣ್ಣನ ಮೃದು ಸ್ವರ  ಈಗ  ಅತ್ತ ಕಡೆಯಿಂದ ಕೇಳಿಸುತ್ತಿತ್ತು. ಆಗಲೇ ಹೇಳಿದ್ದರು ಮುಂದಿನವಾರ ಡೆಲ್ಲಿಗೆ ಹೋಗುತ್ತಿದ್ದೇನೆ. ಒಂದು ಪ್ರಶಸ್ತಿ ತೆಗೆದುಕೊಳ್ಳುವುದಕ್ಕಿದೆ. ಆಹಾ,  ಇನ್ನೊಂದು ಗರಿ ಅಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇವರುನ್ನು ಕಾದು ಕುಳಿತಿದೆ ಎಂದು ಅನಿಸಿತ್ತು. 
ಯಕ್ಷಗಾನದಲ್ಲಿ ಕಲಾವಿದರಾಗಿ ನಿಜ ಜೀವನದ ವ್ಯಕ್ತಿಯಾಗಿ ಗೋವಿಂದಣ್ಣನಷ್ಟು ವ್ಯಾವಹಾರಿಕ ಜ್ಞಾನವನ್ನು ಕಂಡ ವ್ಯಕ್ತಿಯ ಬಗ್ಗೆ ನನಗರಿವಿಲ್ಲ. ಗೋವಿಂದಣ್ಣ ಸ್ವತಃ ಬದುಕನ್ನು ಕಂಡ ರೀತಿಯದು. ವಾಸ್ತವವನ್ನು ಅರಿತುಕೊಂಡ ಮನುಷ್ಯ. ಬಹಳವಾಗಿ ನಿರ್ವಿಕಲ್ಪ ಮತ್ತು ನಿರ್ದಾಕ್ಷಿಣ್ಯ ವ್ಯಕ್ತಿತ್ವ. ತನ್ನನ್ನು ಯಾವ ಬಗೆಯಲ್ಲಿ ಹೇಳಿದರು ಅದೊಂದು ವಿಷಯವೇ ಅಲ್ಲವೇನೋ ಎಂಬಂತೆ ಹೇಳಿದವರನ್ನು ಮುಗುಳು ನಗೆಯಲ್ಲಿ ಮಾತನಾಡಿಸುವ ವ್ಯಾವಹಾರಿಕ ಮತ್ತು ಪ್ರಾಮಾಣಿಕ ವ್ಯಕ್ತಿತ್ವದ ಗೋವಿಂದಣ್ಣ ಒಂದು ರೀತಿಯಲ್ಲಿ ಅಜಾತಶತ್ರು. ಬದುಕನ್ನು ಯಕ್ಷಗಾನಕ್ಕೆ ಅಥವಾ ಕಲೆಗೆ ಮುಡಿಪಾಗಿಟ್ಟೆ ಅಂತ ಹೇಳುವವರಿದ್ದಾರೆ. ಆದರೆ ಇವರು ಅದಾವ ಸಿದ್ಧಾಂತಕ್ಕೂ ಅನ್ವಯವಾಗದೇ ಬದುಕಿಗಾಗಿ ಕಲೆಯನ್ನು ಒಪ್ಪಿಕೊಂಡೆ ಅಂತ ಪ್ರಾಮಾಣಿಕತೆ ತೋರುತ್ತಾರೆ. ಅಲ್ಲಿಯೂ ಎಷ್ಟು ಸಾಧ್ಯ ಎನ್ನುವುದಕ್ಕಿಂತಲೂ ಎಷ್ಟು ಬೇಕೋ ಅನ್ನುವಷ್ಟು ಪ್ರಾಮಾಣಿಕವಾಗಿ ದುಡಿಮೆ ಸಲ್ಲಿಸಿದ್ದಾರೆ. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ ಅಲಂಕರಿಸಲಿದೆ. ರಾಷ್ಟ್ರ ಪತಿ ಭವನದ ಗೊಡೆಗಳಲ್ಲಿ ಒಂದು ಸಲವಾದರೂ ಸೂರಿಕುಮೇರಿ ಗೋವಿಂದ ಭಟ್ ಅಂತ ಮೊಳಗದೇ ಇರಲಾರದು. ಯಕ್ಷಗಾನದ ಮಟ್ಟಿಗೆ ಅದು ಒಂದು ಬೃಹತ್ ಸಾಧನೆ. 
ಕಲಾವಿದರಾಗಿ ಗೋವಿಂದಣ್ಣನನ್ನು ಮೆಚ್ಚಿಕೊಂಡಷ್ಟೇ ಅವರ ವ್ಯಕ್ತಿತ್ವವನ್ನು ಹಿರಿತನವನ್ನು ನಾನು ಮೆಚ್ಚಿಕೊಂಡಿದ್ದೇನೆ. ರಂಗದಲ್ಲಿ ಸುಡು ಜವ್ವನಿಕೆಯ ಗೋವಿಂದಣ್ಣನ ವೇಷವನ್ನೂ ಕಂಡಿದ್ದೇನೆ. ಇದೀಗ ದಶಕಗಳು ಕಳೆದರೂ ಅದೇ ಗೋವಿಂದಣ್ಣನನ್ನು ಅವರ ಪಾತ್ರಗಳಲ್ಲಿ ಕಾಣುತ್ತೇನೆ. ಕಲೆಗಿಂತಲೂ ಮಿಗಿಲಾಗಿದೆ ಇವರ ದೈಹಿಕ ಕ್ಷಮತೆ ಅಂತ ಅನ್ನಿಸುತ್ತದೆ. ಯೋಗ ನಿತ್ಯಾನುಷ್ಠಾನಗಳನ್ನು ಶ್ರಧ್ದೆಯಿಂದ ಆಚರಿಸುವ ಗೋವಿಂದಣ್ಣ ಕಲಾವಿದರಿಗೆ ಕೇವಲ ಅಷ್ಟು ಮಾತ್ರದಿಂದಲೇ ಒಂದು ಮಾದರಿಯಾಗಬಲ್ಲರು. ನನಗೂ ಯೋಗಭ್ಯಾಸಕ್ಕೆ ಮೂಲ ಪ್ರೇರಣೆಯನ್ನು ಒದಗಿಸಿದವರು. ಇಂದಿಗೂ ಪ್ರಾತಃ ಕಾಲದ ಪ್ರಾಣಾಯಾಮದ ವೇಳೆಯಲ್ಲಿ ಒಂದು ಬಾರಿಯಾದರೂ ಇವರ ಸ್ಮರಣೆ ಆಗದೇ ಇರುವುದಿಲ್ಲ. ಆಧ್ಯಾತ್ಮ ಚಿಂತನೆಗೆ  ಚಿತ್ತಶುದ್ದಿಗೆ ಅದೇ ಒಂದು ಪ್ರೇರಣೆ.  ಅಸಂತುಲಿತ ಮನಸ್ಸು ಈ  ಸೌಮ್ಯ ಸ್ಮೃತಿಯಿಂದ ಚಂಚಲತೆಯನ್ನು ಬಿಟ್ಟು ಸ್ಥಿರತೆಯನ್ನು ಕಾಣುತ್ತದೆ. 

 ಪ್ರಶಸ್ತಿಗಾಗಿ ಅರ್ಜಿದಾರರಾಗುವ ಮನೋಭಾವ ಗೋವಿಂದಣ್ಣನದಲ್ಲ. ಆದರೂ ಇಂದಿನ ಸರಕಾರಿ ವ್ಯವಸ್ಥೆಯಲ್ಲಿ ಶ್ರಮವಿಲ್ಲದೇ ಯಾವುದೂ ಬರುವುದಿಲ್ಲ. ಹಾಗಾಗಿ ಇದಕ್ಕೂ ಶ್ರಮಿಸಿದ ವ್ಯಕ್ತಿಗಳು ಇರಬಹುದು. ಅವರಿಗೂ ಒಂದು ಆತ್ಮ ತೃಪ್ತಿ ತಂದಿರಬಹುದು. ಅವರಿಗೂ ಕೃತಜ್ಞತೆ ಸಲ್ಲಿಸಲೇಬೇಕು. 

Wednesday, January 10, 2018

ಶಲ್ಯ ಸಾರಥ್ಯ

ಶಲ್ಯ ಸಾರಥ್ಯ

ಯಕ್ಷಗಾನ ತಾಳಮದ್ದಲೆಯೆಂದರೆ ಗಾನ ಲಯ ಸಂವಾದಗಳಿಂದ ಹೆಣೆದಿರಲ್ಪಡುತ್ತದೆ. ಈ ಮೂರು ಒಟ್ಟುಗೂಡಿದಾಗ ಅಲ್ಲಿ ಯಕ್ಷಲೋಕ ಅನಾವರಣಗೊಳ್ಳುತ್ತದೆ. ಯಕ್ಷಗಾನವೆಂದರೆ ಆರ್ಭಟ ಬೊಬ್ಬೆ ಕುಣಿತ ಹೀಗೆ ಮೂಗು ಮುರಿಯುವವರಿಗೆ ಯಕ್ಷಗಾನದ ನಿಜವಾದ ಸತ್ವ ಇಲ್ಲಿದೆ ಎಂದು ತೋರಿಸಿಕೊಡುವ ಪ್ರಯತ್ನ. ಯಕ್ಷಗಾನದ ವಾಕ್ ಪ್ರಪಂಚವೆಂಬುದು ಹೀಗೂ ಇದೆ ಎಂಬುದಕ್ಕೆ ಪುರಾವೆ ಒದಗಿಸುವಂತೆ ಈ ಲೇಖನ.
          ಉತ್ತರ ಕನ್ನಡದ ಹಳ್ಳಿಯೊಂದರಲ್ಲಿ ನಡೆದ ತಾಳ ಮದ್ದಲೆಯ ಭಾಗವಿದು. ಶಲ್ಯ ಸಾರಥ್ಯ ಎಂಬ ಪ್ರಸಂಗ. ಇದರಲ್ಲಿ ಕಲಾವಿದರಾಗಿ ಹಿರಿಯ ಅರ್ಥಧಾರಿಗಳಾದ  ಶ್ರೀ ಪೆರ್ಲ ಕೃಷ್ಣ ಭಟ್ ಶಲ್ಯನಾಗಿ  ಮತ್ತು ಶ್ರೀ ತೆಕ್ಕಟ್ಟೆ ಆನಂದ ಮಾಸ್ತರ್ ಕೌರವನಾಗಿ ತಮ್ಮ ಪ್ರೌಢಿಮೆಯನ್ನು ತೋರಿಕೊಟ್ಟಿದ್ದಾರೆ. 
ಅದು ಕುರುಕ್ಷೇತ್ರದ ರಣರಂಗ.ಹದಿನಾರು ದಿನದ ಯುದ್ದ ಅದಾಗಲೇ ಕಳೆದು ಹೋಗಿದೆ. ಸಾಕಷ್ಟು ನಷ್ಟಗಳನ್ನು ಎರಡೂ ಕಡೆ ಅನುಭವಿಸಿಯಾಗಿದೆ. ಪಾಂಡವರಿಗೆ ಕಳೆದುಕೊಳ್ಳುವಂತಹುದು ಕಡಿಮೆ ಇದ್ದುದ್ದರಿಂದಲೋ ಏನೋ,   ಕೌರವನಿಗೆ ಸಾಕಷ್ಟು ನಷ್ಟವಾಗಿದೆ. ರಣರಂಗ ಹಗಲು ಒಂದು ರೀತಿಯ ಬೆಂಕಿಯ ಕಿಡಿಯನ್ನು ಹಚ್ಚಿದರೆ ರಾತ್ರೆಯಾಗುತ್ತಲೇ  ಇರುಳ ಮರೆಯಲ್ಲಿ ಯುದ್ಧ ತಂತ್ರವನ್ನು ಹೆಣೆಯುವ ತಂತ್ರಗಾರಿಕೆಯ ಚಟುವಟಿಕೆ.  ಕತ್ತಲಲ್ಲಿ ಎಲ್ಲವನ್ನು ಮರೆಯಲ್ಲೇ ಪ್ರವರ್ತಿಸುತ್ತಾ ತಮ್ಮನ್ನು ಯಾರೂ ಕಾಣಲಾರರೆಂಬ ವಿಶ್ವಾಸ ಎಲ್ಲರಿಗೂ ಇದ್ದರೂ ರಾತ್ರಿಯ ಕತ್ತಲೆಯ ಮುಸುಕಿನಲ್ಲಿ  ಏನು ನಡೆಯುತ್ತದೆ?  ಏನು ನಡೆಯ ಬಲ್ಲುದು? ಎಂಬುದು ಹಗಲಿಗಿಂತಲೂ ಸ್ಪಷ್ಟ.   ರಾತ್ರಿ ಸಂಚಾರ ರಾತ್ರಿ ಯುದ್ದ ಧರ್ಮದ ನೆರಳಲ್ಲೇ ನಡೆದು ಹೋಗಿತ್ತು. ಇಂದು ಹದಿನಾರನೆಯ ದಿವಸ. ಸುಯೋಧನ ಮತ್ತೊಂದು ತಂತ್ರಗಾರಿಯ ರಣ ತಂತ್ರವನ್ನು ಹೂಡುವುದಕ್ಕಾಗಿ ತನ್ನ ಬಿಡದಿಯನ್ನು ಬಿಟ್ಟು ನಡೆದ. ಬಹಳಷ್ಟು ಚಿಂತಿಸಿ ಅದಾಗಲೇ ಕುರು ಸೇನಾಧಿಪತಿ ಮಾತ್ರವಲ್ಲ ಆತ್ಮಿಯ ಮಿತ್ರ ಕರ್ಣನನ್ನು  ಕಂಡು ಬಂದಿದ್ದ. ಇನ್ನೊಂದು ಅದ್ಭುತ ತಂತ್ರಗಾರಿಕೆಯ ಹವಣಿಕೆಯನ್ನು ಯೋಚಿಸುತ್ತಾ  ರಣರಂಗದಲ್ಲಿ ಸಂಚರಿಸುತ್ತಿದ್ದ.
ಛಾಯಾಚಿತ್ರ ಶ್ರೀ ಉಲ್ಲಾಸ್
ಕರ್ಣನಿಗೆ ಭೀಷ್ಮ ದ್ರೋಣರ ನಂತರ ಆತ್ಮೀಯ ಮಿತ್ರ ಕರ್ಣನಿಗೆ ಬಹಳ ನಿರೀಕ್ಷೆ ಭರವಸೆಯಿಂದಲೇ ಸೇನಾಧಿಪತಿತ್ವವನ್ನು ವಹಿಸಿದ್ದ. ಆದರೆ ಇಂದು ಕರ್ಣನ ಅಧಿಪತ್ಯದಲ್ಲಿ ದಾರುಣವಾದ ಸೋಲು ಕೌರವ ಪಡೆಗೆ ಆಗಿಬಿಟ್ಟಿತು. ಅಲ್ಲಿಂದ ಪ್ರಸಂಗ ಆರಂಭವಾಗುತ್ತದೆ.
ಯಕ್ಷಗಾನ ತಾಳ ಮದ್ದಲೆಯಲ್ಲಿ ಪ್ರಥಮವಾಗಿ ಪ್ರಸಂಗ ತಳಹದಿ ರಚನೆಯಾಗುತ್ತದೆ. ಕಥೆ ಎಲ್ಲಿಂದ ಹೇಗೆ ಆರಂಭವಾಗುತ್ತದೆ ಇದನ್ನು ಒಡ್ಡೋಲಗ ಪಾತ್ರ ಸ್ಪಷ್ಟವಾಗಿ ನಿರೂಪಿಸುತ್ತಾ ಪಾತ್ರ ನಿರ್ಮಾಣದ ಜತೆಗೆ ಕಥಾ ನಿರೂಪಣೆಯನ್ನು ಮಾಡಿಬಿಡಬೇಕು. ಹಾಗಿದ್ದಾಗ ತಾಳ ಮದ್ದಲೆಯ ಮುಂದಿನ ಹಂತ ಯಶಸ್ವಿಯಾಗುತ್ತದೆ. ಇಲ್ಲಿ ಕೌರವನಾಗಿ ಶ್ರೀ ತೆಕ್ಕಟ್ಟೆ ಆನಂದ ಮಾಸ್ತರ್ ಅದನ್ನು ಸೊಗಸಾಗಿ ನಿರೂಪಿಸಿ ಬಿಟ್ಟಿದ್ದ್ದಾರೆ. ಕೆಲವು ಸ್ವಾರಸ್ಯಕರ ಅಂಶವನ್ನಷ್ಟೇ ಇಲ್ಲಿ ಉಲ್ಲೇಖಿಸುತ್ತೇನೆ.
ವೀರ ಕರ್ಣನ ನುಡಿಯ ಕೇಳುತ |
ಭೂರಿ ಸಂತಸವೆತ್ತು ಕೌರವ |
ಭೂರಮಣನತಿ ತವಕದಲಿ ಮಾದ್ರೇಶನರಮನೆಗೆ ||
ಚಾರು ವಿಭವದೊಳಯ್ದೆ ಬರಲಾ |
ಚಾರಕರ ಸನ್ನೆಯಲಿ ತಿಳಿದು ವಿ |
ಚಾರಿಸುತ ಬಳಿಕಿದಿರು ಬಂದರಸನನು ಮನ್ನಿಸಿದ || ೨೮ ||
ಇಂದು ಸಂತೋಷವಾಗದೇ ಇದ್ದರೆ ಮುಂದೆ ಎಂದು ಆದೀತು. ಬಹಳ ಭರವಸೆಯಿಂದಲೇ ಕರ್ಣನನ್ನು ಸೇನಾಧಿಪತಿಯನಾಗಿ ಮಾಡಿದೆ. ಆದರೆ ಸೋಲು. ಸೋಲಿನ ಕಾರಣವನ್ನು ಪರಾಮರ್ಶಿಸುವಾಗ ಕರ್ಣನೆಂದ ಮಾತು ಕೇಳಿ ಬಹಳ ಸಂತೋಷವಾಗಿದೆ. ಯಾಕೆ? ಕರ್ಣ ಹೇಳಿದ ವಿಷಯವನ್ನು ಕೇಳಿ. ಇಲ್ಲಿ ಬಹು ಜನರ ಆಕ್ಷೇಪ ನನ್ನ ಮೇಲೆ. ಏನು? ಕುರುಕ್ಷೇತ್ರದ ಯುದ್ದಕ್ಕೆ ಕಾರಣ ಯಾರು? ಅದು ಕೌರವ!!! ಕುಲಕ್ಷಯಕ್ಕೆ ಕಾರಣ ಕರ್ತೃ ನಾನು. ಈ ಯುದ್ದ ಆಗಲೇಬೇಕೆಂದು ಹಟ ಹಿಡಿದ ದುರ್ಯೋಧನ ಕೆಟ್ಟವನೋ ಖೂಳನೋ ಬುದ್ಧಿಹೀನ, ಮೂರ್ಖ  ಹೀಗೆ ಹಲವು ಬಗೆಯಲ್ಲಿ ಆಕ್ಷೇಪಿಸಿದರು. ಆದರೆ.
ಈ ಯುದ್ಧ ಆಗಿಯೇ ತೀರಬೇಕು. ಕೌರವ ಹೀಗೆ ಛಲ ಹಿಡಿದದ್ದಾದರೂ ಯಾಕೆ? ಆಧಿಕಾರ ಒಂದೇ ಅಲ್ಲ. ಇದು ತನಕ ಪಾಂಡವರ ಪರವಾಗಿ ವಾಧಿಸಿದವರು ನ್ಯಾಯ ಧರ್ಮಗಳನ್ನು ಬೋಧಿಸಿದವರು ಪಾಂಡವರು ಒಳ್ಳೆಯವರು, ಧರ್ಮಾವಲಂಬಿಗಳು ಹೀಗೆ ಕಾರಣಗಳನ್ನು ಹೇಳಿದ್ದು ಮಾತ್ರವಲ್ಲ ಈ ಸಿಂಹಾಸನ ಉತ್ತರಾಧಿಕಾರಿಯನ್ನಾಗಿ ಬಿಂಬಿಸಿದರು. ಉತ್ತರಾಧಿಕಾರಿ ವಿಚಾರ ಬರುವಾಗ ಒಳ್ಳೆಯವನೋ ಕೆಟ್ಟವನೋ ಎಂಬ ಪ್ರಶ್ನೆ ಪ್ರಧಾನವೇನೂ ಅಲ್ಲ. ಕ್ರಮ ಬದ್ದವಾದ ನ್ಯಾಯ ಬದ್ದವಾದ ಉತ್ತರಾಧಿಕಾರಿ ಎಂಬ ಪ್ರಶ್ನೆಯೇ ಪ್ರಧಾನ. ಈ ಪ್ರಶ್ನೆಯನ್ನು ತೂಗಿ ನೋಡುವಾಗ ವಿವೇಚಿಸುವಾಗ ನಾನೇ ಕ್ರಮಬದ್ದವಾದ ಉತ್ತರಾಧಿಕಾರಿ ಎಂಬ ತೀರ್ಮಾನಕ್ಕೆ ಬಂದದ್ದು. ಇದಕ್ಕೆ ಅಡ್ದಿಯಾಗಿ ಬಂದವರು...ಅದು ಪಾಂಡವರು ಎಂಬುದು ಬೇರೆ ಅದು ಯಾರೇ ಆಗಿರಲಿ ಶುದ್ದ ರಾಜಕೀಯ ಮತ್ಸದ್ಧಿಯಂತೆ ನಾನು ನಡೆದುಕೊಂಡಿದ್ದೇನೆ. ರಾಜಕಾರಣವೆಂದರೆ ವಿರೋಧಿಯ ದಮನ ಅದು ಪ್ರಭುದ್ದ ರಾಜಕಾರಿಣಿಯ ಲಕ್ಷಣ. ಹಾಗಾಗಿಯೇ ಯುದ್ಧವೇ ಬದ್ದ ಎಂಬ ನಿರ್ಣಯಕ್ಕೆ ಬಂದದ್ದು. ಹೀಗೆ ನಡೆದುಕೊಂಡವರಲ್ಲಿ ಕೌರವನೇನು ಪ್ರಥಮನೇನಲ್ಲ. ಪ್ರಪಂಚ ಹಲವು ಪುರಾವೆಗಳನ್ನು ಕಂಡುಕೊಂಡಿದೆ.
ಪಾಂಡವರಲ್ಲಿ ಎರಡನೆಯವನಾದ ಭೀಮನ ಮದುವೆಯ ಪ್ರಕರಣ, ಅಣ್ಣ ಧರ್ಮರಾಯನಿಗಿಂತ ಮೊದಲು ತಮ್ಮ ಮದುವೆಯ ಬಂಧನಕ್ಕೆ ಒಳಗಾಗಬೇಕಾದದ್ದು ಸಮರ್ಥನೀಯ ಅಂತ ವರ್ತಮಾನ ಕಾಲದ ಮಹಾ ವಿದ್ವಾಂಸರೂ ಆದ ವ್ಯಾಸರೂ ಸಮರ್ಥಿಸಿದರು. ಅವರು ಹೇಳಿದ ಕಾರಣವಾದರೂ ಏನು? ಮುಂದೊಂದು ದಿನ ಭೀಕರವಾದ ಭಾರತ ಯುದ್ದವಾಗಲಿದೆ ಆ ಯುದ್ಧದಲ್ಲಿ ಒಂದು ದಿನ ರಾತ್ರಿಯ ಯುದ್ದ ನಡೆಯಲಿದೆ. ಆವಾಗ ಈ ರಕ್ಕಸ ಕನ್ಯೆಗೆ ಹುಟ್ಟುವ ಪುತ್ರನ ಸಹಾಯವಾಗಲಿಕ್ಕಿದೆ. ವ್ಯಾಸರು ಘೋಷಿಸಿದ ವಾಕ್ಯ ಇದು. ಆವಾಗ ಕೌರವನೇನಾದರೂ ಯುದ್ದದ ಬಗ್ಗೆ ಯೋಚಿಸಿದ್ದನೇ? ಇಲ್ಲ.  ರಾಜ ಸೂಯಾಧ್ವರದ ಸಭೆಯಲ್ಲೂ ವ್ಯಾಸರು ಇದನ್ನೇ ಹೇಳಿದ್ದರು ಮುಂದೆ ಕುಲಕ್ಷಯಕಾರಕವಾದ ಯುದ್ದ ಈ ಕುಲದಲ್ಲಿ ಸಂಭವಿಸುದಕ್ಕಿದೆ. ಇಂತಹ ಪೂರ್ವ ಪುರಾವೆಗಳನ್ನು ಪರಿಶೀಲಿಸಿದಾಗ ಕೌರವವನ್ನು ಆಕ್ಷೇಪಿಸುವುದಕ್ಕೆ ಕಾರಣವೇನು ಅದು ಪೂರ್ವಾಗ್ರಹ ? ವ್ಯಾಸರ ನಿರ್ಣಯವೇ ಹಾಗಿರುವಾಗ ,  ಏನು ಕೌರವ ಯುದ್ದ ಬಯಸಿದ್ದು ಅಪರಾಧವೇ?
ಹತ್ತು ದಿನದ ಭೀಷ್ಮರ ಅಧಿಪತ್ಯ ನಡೆದಾಗ ಅವರಿಂದ ಗೆಲುವಾಗಬೇಕೆಂದು ಆಶೆಯಿತ್ತು. ಆದೀತು ಎಂಬ ಭರವಸೆ ಇರಲಿಲ್ಲ. ಯಾಕೇ ದಿನವೊಂದಕ್ಕೆ ಹತ್ತುಸಾವಿರ ಮುಕುಟ ಮರ್ದನರ ತಲೆ ಕತ್ತರಿಸುತ್ತೇನೆ. ಇದು ಕೇವಲ ವೈಯಕ್ತಿಕ ಪ್ರತಿಷ್ಠೆಗೆ ಹೇಳಿಕೊಂಡ ಮಾತು. ಇದರಿಂದ ಕೌರವನಿಗೇನು ಲಾಭ? ಜಯ ಸಿಕ್ಕಿತೆ? ಯುದ್ದದಲ್ಲಿ ಜಯ ಬೇಕು ಎಂದು ಕತ್ತರಿಸಿದ್ದಲ್ಲ. ಜಯ ಪ್ರಾಪ್ತಿಗೆ ಅದು ಸಾಧನವಲ್ಲ. ಚಕ್ರ ಹಿಡಿಯುವುದಿಲ್ಲ ಆಯುಧ ಹಿಡಿದು ಯುದ್ದ ಮಾಡುವುದಿಲ್ಲ ಎಂದು ಶಪಥ ಮಾಡಿದ ಕೃಷ್ಣ ಕೈಯಲ್ಲಿ ಚಕ್ರ ಹಿಡಿಯುವಂತೆ ಮಾಡುತ್ತೇನೆ. ಫಲ ಏನು ಬಂತು?   ವಿರೋಧಿಯಾದವನು ಆಯುಧವನ್ನು ಕೈಯಲ್ಲಿ ಹಿಡಿಯದಂತೆ ನೋಡಬೇಕಾದದ್ದು ಯುದ್ದ ನೀತಿ. ಕೃಷ್ಣ ಆಯುಧ ಹಿಡಿಯದಂತೆ ಮಾಡುವಲ್ಲಿ ನಾವು ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಯಿತು. ಆತ ಅಯುಧ ಹಿಡಿಯುವುದಿಲ್ಲ ಎಂದು ಹೇಳಿಕೊಂಡವನಲ್ಲಿ,  ಆಯುಧ ಹಿಡಿವಂತೆ ಮಾಡುತ್ತೇನೆ ಎಂದರೆ ಇದು ಪಕ್ಷಗೆಲ್ಲುವ ಶಪಥವಲ್ಲ.  ಯಾವ ಶಪಥವಾದರೂ ಭೀಷ್ಮರು ಮೊದಲೇ ಹೇಳಿದ್ದರು. ಸಾವಿರ ಸಾವಿರ ಕತ್ತರಿಸಿದರೂ ಆ ಐದು ಹುಡುಗರನ್ನು ಏನೂ ಮಾಡುವುದಿಲ್ಲ!! ಪಕ್ಷದ ಪ್ರಧಾನ ಜಯಕ್ಕೆ ಬೇಕಾದ ಆ ಐವರನ್ನು ಏನೂ ಮಾಡುವುದಿಲ್ಲ ಎಂದ ಮೇಲೆ ಪ್ರಯೋಜನ ಏನು ಬಂತು? ಪಕ್ಷ ನಿಷ್ಠೆಗಿಂದ ವ್ಯಕ್ತಿನಿಷ್ಠೆ ದೊಡ್ಡದಾಯಿತು. ಜಯಕ್ಕೆ ಅನಿವಾರ್ಯ ಏನೋ ಅದು ಮಾಡುವುದಿಲ್ಲ ಎಂದ ಮೇಲೆ ಮತ್ತೇನಿದೆ?
ಆಚಾರ್ಯರ ದ್ರೋಣರದ್ದೂ ಅಷ್ಟೆ. ಅರ್ಜುನನೊಬ್ಬ ತಪ್ಪಿದರೆ ಅಂತ ಹೇಳಿದರು. ಅದು ಯಾವ ಅರ್ಥದಲ್ಲಿ ಹೇಳಿದರೋ. ಶಿಷ್ಯ ವಾತ್ಸಲ್ಯವೋ? ಅಥವಾ ಅರ್ಜುನನ್ನು ಎದುರಿಸಲಾರೆ ಎಂಬ ಆತ್ಮ ದೌರ್ಬಲ್ಯವೋ ? ಅಂತು ಅರ್ಜುನ     ಒಬ್ಬ ತಪ್ಪಿದರೆ ಕಟ್ಟುವೆ ಧರ್ಮಜನ. ನಡೀಲಿಲ್ಲ. ಬದಲಿಗೆ ಉತ್ತರಾಧಿಕಾರಿ ಅಭಿಮನ್ಯುವಿನ ಹತ್ಯೆ. ದಾರುಣವಾಗಿ  ಅವರ ಅಧಿಪತ್ಯವೂ ಮುಗಿಯಿತು. ಎಲ್ಲರ ಪರಾಕ್ರಮವೂ ಪಾಂಡವರ ದೌರ್ಬಲ್ಯವನ್ನು ಪರೀಕ್ಷೆಗೊಡ್ಡುವುದಕ್ಕಷ್ಟೇ ಸೀಮಿತ. ಯುದ್ಧಾರಂಭಕ್ಕೂ ಮುನ್ನ ಧರ್ಮರಾಯ ಹಿರಿಯರೆಲ್ಲರ ಕಾಲು ಹಿಡಿಯುವುದಕ್ಕೆ ಹೋಗಿದ್ದ ಅಂತೆ. ಆಗ ಹೇಳಿದ್ದರಂತೆ ರಣದಿ ದುರ್ನುಡಿ ಕೇಳ್ದೊಡೆ ವಿರಮಿಸುವೆ.
ದ್ರೋಣರ ನಿರ್ಯಾಣಕ್ಕೆ ಪ್ರತ್ಯಕ್ಷದಲ್ಲಿ ಅಲ್ಲದೇ ಇದ್ದರೂ  ಧರ್ಮರಾಯನ ಕೈವಾಡ ಇದೆ ಎಂಬುದು ಸ್ಪಷ್ಟ. ಭೀಷ್ಮರಾಗಲೀ ದ್ರೋಣರಾಗಲೀ ಒಂದು ದೌರ್ಬಲ್ಯದೊಂದಿಗೇ ಬಂದಿದ್ದರು. ಆದರೆ ಕರ್ಣ..ವೀರ ಕರ್ಣ...ನನಗಾಗಿ ಏನನ್ನಾದರೂ ಮಾಡುವುದಕ್ಕೆ ಸಿದ್ಧನಿದ್ದವನು. ತಲೆ ಸಾವಿರ ಕಡಿದು ಬಲ ಕಡಿಮೆ ಮಾಡಿದರೇನು ಬಂತು? ಯಾರು ಸಾಯ್ಬೇಕೋ ಅವರು ಸಾಯದೇ ಇದ್ದರೆ. ಆದರೆ ಕರ್ಣ ಯಾರು ಸಾಯ್ಬೇಕೋ ?  ಅವರ ಬಗ್ಗೆ ಬದ್ಢದ್ವೇಷ ಇದ್ದವನು ಕರ್ಣ ನನ್ನ ಆತ್ಮಿಯ ಸಖ. ಹಾಗಾಗಿ ಇಂದಿನ ದಯನೀಸೋಲು..ಕಾರಣವನ್ನು ತಿಳಿಯಬೇಕಲ್ಲ? ಹಾಗಾಗಿ ಕರ್ಣನನ್ನು ವಿಚಾರಿಸಿದ್ದು  ಆವಾಗ ಸೋಲಿಗೆ ಕಾರಣವನ್ನು ವಿವರಿಸುವಾಗ ಹೇಳಿದ ಸಾವಿರ ಇದ್ದರೂ ಸರಿಯಾದ ಸಾರಥಿಯ ಕೊರತೆ. ಶತ್ರು ಪಾಳಯದಲ್ಲಿ ನೋಡಬಾರದೇ. ಅರ್ಜುನನಿಗೆ ಸಾರಥಿಯಾಗಿ ಕೃಷ್ಣ. ಆತನ ಸಾರಥಿತ್ವದಲ್ಲೇ ಅರ್ಜುನ ವಿಜ್ರಂಭಿಸುತ್ತಾನೆ. ತನಗೆ ಸಾರಥಿಯ ಕೊರತೆ ಇದೆ. ಮೊದಲಿಗೆ ಇದರ ಒಳ ಮರ್ಮ ಅರ್ಥವಾಗಲಿಲ್ಲ. ನಂತರ ಬಿಡಿಸಿ ಹೇಳಿದ. ಆತನಿಗೆ ಸಾರಥಿಯಾಗಿ ಬರಬೇಕಾದವರು ಮಾದ್ರಾಧೀಶ ಶಲ್ಯ ಮಹಾ ಪ್ರಭುಗಳು. ಇದನ್ನು ಕೇಳಿ ತಲೆಗೆ ಹೊಡೆದ ಹಾಗಾಯಿತು.
ವರ್ತಮಾನ ಕಾಲದಲ್ಲಿ ಬಹು ವರ್ಚಸ್ವೀ ವ್ಯಕ್ತಿತ್ವ ಹೊಂದಿದವರು ಶಲ್ಯ ಭೂಪಾಲರು. ಮಾನಧನರು. ಸಾಮ್ರಾಟ್ ಮನೆತನಕ್ಕೆ ಮೈ ಸಂಭಂಧವನ್ನು ಮಾಡುವುದಕ್ಕೆ ಧೀಮಂತ ಶ್ರೀಮಂತ ವ್ಯಕ್ತಿತ್ವ ಉಳ್ಳವರು. ಪಾಂಡುಚಕ್ರವರ್ತಿಯೊಂದಿಗೆ ಸಂಬಂಧಿಯಾದ ಹಿರಿಮೆ ಇದ್ದವರು.  ಮಾತಿಗೆ ಕಟ್ಟು ಬಿದ್ದು ಇಂದು ನಮ್ಮ ಪಕ್ಷದಲ್ಲಿದ್ದಾರೆ. ಸ್ವಲ್ಪ ತಂತ್ರದಿಂದಲೇ ಅವರನ್ನು ಒಲಿಸಿಕೊಂಡದ್ದು. ಯುದ್ದ ಆಗ್ತದೆ ಅಂತ ಸುದ್ದಿ ತಿಳಿದು ಅಳಿಯನ ಮನೆಗೆ ಸಹಾಯ ಹಸ್ತವನ್ನು ಚಾಚುವುದಕ್ಕೆ ಬಂದವರನ್ನು ಸತ್ಕರಿಸಿ ನನ್ನತ್ತ ಸೆಳೆಯುವುದರಲ್ಲಿ ತಂತ್ರಗಾರಿಕೆ ಫಲಿಸಿತ್ತು. ನಾನಾಗಿ ಕೇಳಿ ಕರೆದು ಈಗ ಸಾರಥ್ಯಕ್ಕೆ ಅವರನ್ನು ಕೇಳುವುದು ಅಪಚಾರವಾಗಲಾರದೇ? ಅವಾಗ ಕರ್ಣ ಅವನ ಜೀವನ ಚರಿತ್ರೆಯ ತೋರಿಸದೇ ಇದ್ದ ಪುಟಗಳನ್ನು ಬಹಿರಂಗ ಪಡಿಸಿದ್ದು.  
ಧನುರ್ವಿದ್ಯಾ ಅಭ್ಯಾಸಕ್ಕಾಗಿ ಗುರುಗಳಾದ ಭಾರ್ಗವರಲ್ಲಿ ಸೇರಿದ ಸಂದರ್ಭ ಗುರು ಶಾಪ ಮತ್ತು ಅದರ ವಿಶಾಪ. ಆಗ ಹೇಳಿದ್ದರು ಗುರುಗಳು. ಎಲ್ಲಿಯವರೆಗೆ ಕರ್ಣ ನಿನಗೆ ಶಲ್ಯ ಸಾರಥ್ಯ ಇರುವುದೋ ಅಲ್ಲಿಯ ತನಕ ನೀನು ವಿಜಂಭಿಸುತ್ತಿ. ನಿನಗೆ ಸೋಲೆಂಬುದಿಲ್ಲ.  ತ್ರಿಕಾಲ ಜ್ಞಾನಿಗಳಾದ ಪರಶುರಾಮರು ಸುಮ್ಮನೇ ಹೇಳಿರಲಾರರು. ಮುಂದೊಂದು ದಿನ ಇಂತಹ ಪರಿಸ್ಥಿತಿ ಬರುತ್ತದೆ. ಮಹಾಭಾರತ ಯುದ್ದವಾಗಲಿದೆ ಎಂದು ತಿಳಿದುಕೊಂಡೆ ಹೇಳೀದ್ದು. ಹೌದಲ್ಲ. ಹಾಗಾದರೆ ತಾನು ಶಲ್ಯ ಭೂಪಾಲರನ್ನು ತನ್ನತ್ತ ಸೆಳೆಯುವಂತೆ ಆದದ್ದರಲ್ಲಿ ದೈವ ಸಂಕಲ್ಪ ಇದ್ದಿರಬಹುದಲ್ಲ. ಹಾಗಾಗಿಯೇ ಇಂದು ಸೋಲು ಅನುಭವಿಸಿದರೂ ಒಂದು ಸಂತಸ.

           ಸೋಲಿನಲ್ಲೂ ಸುಯೋಧನನ ಮುಖದಲ್ಲಿ ಮತ್ತೊಂದು ಕುಹಕ ನಗೆ ಮೂಡುತ್ತದೆ. ತಂತ್ರದ ಮೇಲೆ ಮತ್ತೊಂದು ತಂತ್ರಕ್ಕೆ ಮನಸ್ಸು ಸಿದ್ದವಾಗುತ್ತದೆ. ನಾಳೆ ಕುಲ ಕ್ಷಯವಾಗಿ ಸರ್ವನಾಶವಾಗಲಿ. ಕೌರವ ಪಾತಕಿ ಎಂದವರು ಮತ್ತೊಮ್ಮೆ ಯೋಚಿಸಬೇಕು. ಈ ಯುದ್ದಕ್ಕೆ ಕೌರವನೊಬ್ಬನೇ ಕಾರಣವಲ್ಲ. ಇಲ್ಲವಾದರೆ ಸೋಲುವ ಕರ್ಣನಿಗೂ ಗೆಲುವಿದೆ ಎಂದಾದರೆ ಅದು ಕೌರವನ ಗೆಲುವಲ್ಲವೇ? ನಾಳೆಯ ಮುಂಜಾನೆ ಮತ್ತೆ ಯುದ್ದ ಆರಂಭವಾಗಬೇಕು. ಅದರಮೊದಲು ಈ ತಂತ್ರ ಕೈಗೂಡಬೇಕು. ಹಾಗಾಗಿ ಕೌರವ ನಿಧಾನವಾಗಿ ಹೆಜ್ಜೆ ಇಡುತ್ತ ಬಂದು ನಿಂತದ್ದು ಶಲ್ಯ ಭೂಪಾಲನ ಶಿಬಿರದ ಬಾಗಿಲಲ್ಲಿ.. ಕರ್ಣನ ಮೂಲಕ ಸಿಗುವ ಆ ಒಂದು ಗೆಲುವಿಗೂ ಕೌರವ ಹಾತೊರೆಯುತ್ತಿದ್ದಾನೆ. ಕಾರ್ಯತಂತ್ರಗಾರಿಕೆಯ ಮತ್ಸದ್ಧಿಯ ವ್ಯಂಗ್ಯ ನಗು ಬೇಡದೇ ಇದ್ದರೂ ಮುಖದಲ್ಲಿ ಮೂಡುತ್ತದೆ.

(ಮುಂದಿನ ಭಾಗದಲ್ಲಿ ಮುಂದುವರೆಯುವುದು)

Sunday, December 31, 2017

ದೈತ್ಯ ಪ್ರತಿಭೆಯ ಸೌಮ್ಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ಟ

ಅದು ಸುಮಾರು ಎಪ್ಪತ್ತರ ದಶಕದ ಸಮಯವಿರಬಹುದು.  ಪೈವಳಿಕೆ ಗ್ರಾಮದ ಚೇವಾರು ಎಂಬ ಹಳ್ಳಿ ಆವಾಗ ಅದು ಕುಗ್ರಾಮವೇ ಸರಿ. ಅಲ್ಲೊಂದು ಶಾಲೆ. ಆ ಶಾಲೆಯಲ್ಲಿ ಅದೊಂದು ವಾರ್ಷಿಕೋತ್ಸವ. ಹಳ್ಳಿಯ ಶಾಲಾ ವಾರ್ಷಿಕೋತ್ಸವ ಎಂದರೆ ಕೇಳಬೇಕೆ. ಅರ್ಧರಾತ್ರಿಯಿಂದ ನಂತರ ಯಕ್ಷಗಾನ ಬಯಲಾಟ. ಅಂದು ಕರ್ಣಾವಸಾನ ಪ್ರಸಂಗ. ಊರ ಪರವೂರ ಕಲಾವಿದರು ಸೇರಿ ನಡೆಸುವ ಆಟ. ಹಾಗೋ  ಹೀಗೋ  ಚಿರಪರಿಚಿತ ಮುಖಗಳೇ ಚೌಕಿಯೊಳಗೆ ನುಗ್ಗಿದರೆ ಮತ್ತೆ ರಂಗಸ್ಥಳಕ್ಕೆ ಪ್ರವೇಶ ಮಾಡಿದಾಗ  ನಮಗೆ ತೀರ ಅಪರಿಚಿತರಾಗಿ ವಿಸ್ಮಯದ ಭಾವೋತ್ಕರ್ಷವನ್ನು ತುಂಬಿಬಿಡುತ್ತಾರೆ. ನಾವು ಮಕ್ಕಳು ಹಲವರು,  ಅವರೋ ಇವರೋ ಅಂತ ಚರ್ಚೆ ಮಾಡುವುದಿತ್ತು. ದೇವಕಾನ ಮಾಷ್ಟ್ರು, ಮುಂಜೂಣಿಯಲ್ಲಿ ವೇಷಗಾರರಾಗಿದ್ದರೆ ಚೆಂಡೆಯ ಕಮ್ತಿ ಯವರು ಹಿಮ್ಮೇಳದ ಪ್ರಧಾನ ಅದ್ವರ್ಯುವಾಗಿರುತ್ತಿದ್ದರು.   ವೇದಿಕೆಯಲ್ಲಿ  ಅದುವರೆಗೆ ಯಾವುದೋ ತುಳು ನಾಟಕ ಆಗಿರುತ್ತಿದ್ದರೆ ಪ್ರೇಕ್ಷಕರು ಬಹುಪಾಲು ನಾಟಕದ ಕೊನೆಯ ದೃಶ್ಯ ಅವಸಾನವಾಗುವುದನ್ನೇ ಕಾಯುತ್ತಿದ್ದರು. ಊರಿನವರೇ  ವರ್ಷಕ್ಕೆ ನಾಟಕದಲ್ಲಿ  ಒಂದು ಸಲ ಬಣ್ಣ ಹಚ್ಚುವ ಕಾರಣ ಹಲವು ಸಲ ನಾಟಕವನ್ನು ಮತ್ತಷ್ಟು ಉದ್ದ ಕೊಂಡೊಯ್ಯುತ್ತಿದ್ದರು. ಈ ನಡುವೆ ಕೆಲವರು ಚೌಕಿಯಲ್ಲಿ  ಇಣುಕಿ ನಾಟಕದ ವೇಷ ಇನ್ನೂ ಬಾಕಿ ಉಂಟಾ?  ಎಂದು ದುರುಗುಟ್ಟಿ ನೋಡುತ್ತಿದ್ದರು. ಅದು ನಾಟಕದ ಮೇಲಿನ ದ್ವೇಷವಲ್ಲ. ಬದಲಿಗೆ ಯಕ್ಷಗಾನದ ಮೇಲಿನ ತುಡಿತ.
ಛಾಯಾ ಚಿತ್ರ ಕೃಪೆ ಕಟೀಲು ಸಿತ್ಲ ರಂಗನ ರಾವ್


ನಾಟಕದ ಕೊನೆಯ ದೃಶ್ಯ ಕಳೆದು ಪರದೆ ಎಳೆದು ಒಂದಷ್ಟು ಹೊತ್ತು ವಿರಾಮ. ಹಲವರು ಅಲ್ಲೇ ಶಾಲೆಯ ಜಗಲಿಯ ಬದಿಗೆ ಹಾಕಿದ್ದ ತಾತ್ಕಾಲಿಕ ಕ್ಯಾಂಟೀನ್ ಗೆ ಧಾವಿಸಿ ಅವಲಕ್ಕಿ ಪೋಡಿ ಚಹ ಸವಿದು ಉತ್ಸಾಹ ಏರಿಸುತ್ತಿದ್ದರು. ತುಸು ಹೊತ್ತಿನಲ್ಲೇ ಕರ್ಣಾವಸಾನ ಪ್ರಸಂಗ ಆರಂಭವಾಯಿತು. ಅರ್ಜುನ ಕರ್ಣ ಯುದ್ದಕ್ಕೆ ಹೊರಡು ಪ್ರಾಥಮಿಕ ಪ್ರವೇಶ ಮುಗಿದು ಎಲವೋ ಸೂತನ ಮಗನೇ ಎಂಬ ಪದದೊಂದಿ ಪರಸ್ಪರ ಹೊಕೈ ಆರಂಭವಾಗೇ ಬಿಟ್ಟಿತು. ಅಬ್ಬ ಅದೇನು ಅಬ್ಬರ....ಅದೇನು ರಣೋತ್ಸಾಹ. ನಿಜಕ್ಕೂ ಕುರುಕ್ಷೇತ್ರದಲ್ಲಿ ಕುಳಿತ ಅನುಭವ. ಬಾಲ್ಯದ ಮನಸ್ಸಿನಲ್ಲಿ ಆಗುವ ಅದಾವ ಪ್ರಭಾವ ಅದು ಗಾಢವಾಗಿರುತ್ತವೆ. ಈಗಲೂ ಕರ್ಣಾವಸಾನ ಎಂಬ ಪ್ರಸಂಗ ಕೇಳಿದರೆ ನನಗೆ ಮೊದಲು ನೆನಪಾಗುವುದು ಚೇವಾರು ಶಾಲೆಯಲ್ಲಾದ ಆ ಯಕ್ಷಗಾನ ಬಯಲಾಟ. ಅಂದು ಅರ್ಜುನನಾಗಿ ಶ್ರೀ ಕೃಷ್ಣ ಭಟ್ ದೇವಕಾನ (ದೇವಕಾನ ಮಾಷ್ಟ್ರು) ಆಗಿದ್ದರೆ ಕರ್ಣನಾಗಿ ಶ್ರೀ ಪೂಕಳ ಲಕ್ಷ್ಮೀನಾರಾಯಣ ಭಟ್ ಕುರುಕ್ಷೇತ್ರ ಪ್ರವೇಶ ಮಾಡಿದ್ದರು. ಇಂದಿಗೂ ಪೂಕಳ ಲಕ್ಷ್ಮೀನಾರಾಯಣ ಭಟ್ಟರ ವೇಷಗಳನ್ನು ನೆನಪಿಸಿಕೊಂಡರೆ ಮೊದಲು ನೆನಪಾಗುವುದು ಆ ಕರ್ಣನ  ವೇಷ. ಬುಜದಗಲ ಕೈ ಅಗಲಿಸಿ ರಂಗ ತುಂಬುವ ಆ ಪ್ರವೇಶ ಆ ಕುಣಿತ ಪರಂಪರೆಯ ಯಕ್ಷಗಾನದ ರಾಜವೇಷದ ಪಡಿಯಚ್ಚು ಎಂದರೆ ತಪ್ಪಲ್ಲ.
ಛಾಯಾ ಚಿತ್ರ ಕೃಪೆ ಕಟೀಲು ಸಿತ್ಲ ರಂಗನ ರಾವ್
ಪೂಕಳದವರ ವೇಷಗಳು ಮೇಲ್ನೋಟಕ್ಕೆ ಕೇವಲ ಸೌಮ್ಯವಾಗಿ ಮಾತ್ರವೇ ಕಂಡರೂ ಪಾತ್ರೋಚಿತವಾಗಿ ಸ್ವಯಂ ಭಾವ ವೆತ್ಯಾಸಗಳನ್ನು ಪ್ರಕಟಿಸುತ್ತಾ ಸಾಗುತ್ತದೆ.  ಮುಖವರ್ಣಿಕೆ ಅದಕ್ಕೊಪ್ಪುವ ನೇತ್ರಚಲನೆಗಳು ಅವಡುಗಚ್ಚಿ ಗಂಟಲಾಳದಿಂದ ಹೊಮ್ಮುವ ಮಾತುಗಳು ಇದು ಪಾತ್ರದಿಂದ ಪಾತ್ರಕ್ಕೆ ರಂಗದಲ್ಲಿ ಪರಿಪೂರಕವಾಗಿ ಪ್ರವರ್ತಿಸುತ್ತವೆ. ಅದನ್ನೆಲ್ಲ ಸಮನ್ವಯಗೊಳಿಸುವಂತೆ ರಂಗ ತುಂಬುವ ನಾಟ್ಯ ಇದು ಪ್ರೇಕ್ಷಕನಿಗೆ ಅದ್ಭುತವಾದ ರಸಾಸ್ವಾದನೆಯನ್ನು ಒದಗಿಸುತ್ತದೆ. ಯಕ್ಷಗಾನದಂತಹ ಆಶುಕಲೆಯಲ್ಲಿ ರಂಗ ಪ್ರಜ್ಞೆ ಎಂಬುದು ಕಲಾವಿದನಲ್ಲಿರಬೇಕಾದ ಪ್ರಧಾನ ಅಂಶಗಳಲ್ಲಿ ಒಂದು. ತತ್ಸಮಯದಲ್ಲಿ ಪ್ರಕಟವಾಗಬೇಕಾದ ಈ ಗುಣವನ್ನು ಭಟ್ಟರಲ್ಲಿ ಕಾಣಬಹುದು.
ಹಲವು ವರ್ಷದ ಹಿಂದೆ ನಮ್ಮೂರಲ್ಲಿ ಸುರತ್ಕಲ್ ಮೇಳದ ಯಕ್ಷಗಾನ ಬಯಲಾಟವಾಗಿತ್ತು. ಪ್ರಸಂಗ ಸಂಪೂರ್ಣ ನಳ ದಮಯಂತಿ. ಆವಾಗ ಆಯೋಜಕರಲ್ಲಿ ನಾನು ಕೇಳಿದ್ದೆ ಬೇರೆ ಯಾವ ಪ್ರಸಂಗವೂ   ಹೊಳೆಯಲಿಲ್ಲವೇ? ಇದೇ ರೀತಿ  ಹಲವರು ಆಗ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಕಾರಣವಿಷ್ಟೇ, ತೆಂಕು ತಿಟ್ಟು ಯಕ್ಷಗಾನ ಎಂದರೆ ಒಂದಷ್ಟು ಅಬ್ಬರದ ಪ್ರದರ್ಶನವನ್ನೇ ನಮ್ಮಲ್ಲಿ ಬಯಸುತ್ತಿದ್ದರು. ಒಂದೆರಡಾದರೂ ಯುದ್ದ ಚರ್ಚೆ ಇಲ್ಲವಾದರೆ ಆಟ ರೈಸುವುದಾದರೂ ಯಾವಾಗ? ಇಂತಹ ಒಂದೂ ಸನ್ನಿವೇಶವೂ ನಳ ದಮಯಂತಿ ಪ್ರಸಂಗದಲ್ಲಿ ಇಲ್ಲ. ಆದರೆ ಆಯೋಜಕರಿಗೆ ಮೇಳದ ಕಲಾವಿದರು ಧೈರ್ಯ ತುಂಬಿದ್ದರು. ಬದಲಾಗದೇ ಅದೇ ಪ್ರಸಂಗ ನಿಗದಿಯಂತೆ ನಡೆಯಿತು. ಅಂದು  ರಾತ್ರಿಯಿಂದ ಬೆಳಗಿನ ತನಕ ಪ್ರೇಕ್ಷಕ ಕುಳಿತಲ್ಲಿಂದ ತನ್ಮೂಲಕ  ಕದಲದೇ ಆಟವನ್ನು ನೋಡಿದ.  ಪ್ರತಿಯೊಂದು ಪ್ರೇಕ್ಷಕನನ್ನು ಹಿಡಿದಿಟ್ಟು ತನ್ನತ್ತ ಸೆಳೆಯುವಂತಹ ಪ್ರಸಂಗ ಪ್ರದರ್ಶನ ಕಂಡಿದ್ದರೆ ಅಂದು ಪೂಕಳ ಭಟ್ಟರ ನಳನ ಪಾತ್ರದ ದೇಣಿಗೆ ಅದಕ್ಕೆ ಬಹುವಾಗಿ ಇತ್ತು. ತಡ ರಾತ್ರಿಯವರೆಗೂ ಅಧ್ಬುತವಾದ ನಳ ಮಹಾರಾಜನ ಪಾತ್ರ,  ಭಟ್ಟರ ನಿರ್ವಹಣೆಯಲ್ಲಿ ವೈಭವೀಕರಣಗೊಂಡಿತ್ತು.  ಮೇಳದ ಪ್ರದರ್ಶನಗಳೇ ಹಾಗೆ. ಆಟದ ಕರಪತ್ರದಲ್ಲಿ ಹಲವು ದೊಡ್ಡ ಕಲವಿದರ ಹೆಸರು ಇರುತ್ತದೆ. ಆ ಹೆಸರನ್ನು ಹೇಳಿಕೊಂಡು ಜನ ಸಂದಣಿಯೂ ನೆರೆಯುತ್ತದೆ. ಆದರೆ ಹಲವು ಸಲ ಸದ್ದಿಲ್ಲದೆ ಪ್ರಚಾರವಿಲ್ಲದೆ ಕೆಲವೊಂದು ಕಲಾವಿದರು ಅದ್ಭುತವಾದ ಪ್ರದರ್ಶನ ನೀಡಿ ಪ್ರೇಕ್ಷಕ ಮನ್ನಣೆಯನ್ನು ಗಳಿಸಿಬಿಡುತ್ತಾರೆ. ಲಕ್ಷ್ಮೀನಾರಾಯಣ ಭಟ್ಟರು ಈ ಪಗಂಡಕ್ಕೆ ಸೇರಿಬಿಡುತ್ತಾರೆ. ಕಾರಣವಿಷ್ಟೇ ಪ್ರಚಾರ ಬಯಸದ ನಿಗರ್ವಿ ಮನುಷ್ಯ ಇವರು.
ಕೆಲವು ಸಮಯದ ಹಿಂದೆ ಇವರು ನಿರ್ವಹಿಸಿದ ಸೀತಾ ಪರಿತ್ಯಾಗದ ಲಕ್ಷ್ಮಣನ ಮತ್ತು ಪಾಂಚಜನ್ಯ ಪ್ರಸಂಗದ ಸಾಂದೀಪನಿ ಮುನಿಯ ಪಾತ್ರಗಳನ್ನು ನೋಡಿದ್ದೆ. ಇದು ಎರಡೂ ಪ್ರಸಂಗದ ಪೋಷಕ ಪಾತ್ರಗಳೇ ಆದರೂ ಭಟ್ಟರ ನಿರ್ವಹಣೆಯಲ್ಲಿ ಅದು ಅದ್ಭುತ ಪ್ರೇಕ್ಷಕ ಲಕ್ಷ್ಯವನ್ನು ಸೆಳೆದಿತ್ತು. ಪರಿತ್ಯಾಗದ ಲಕ್ಷ್ಮಣನ ಪಾತ್ರ ಭಾವನಾತ್ಮಕವಾಗಿ ಪ್ರೇಕ್ಷಕನಿಗೆ ಅದ್ವಿತೀಯ ಅನುಭವದಿಂದ ಭಾವ ಪರವಶನನ್ನಾಗಿಸಿತು. ಕಂಬನಿ ಮಿಡಿಯದ ಪ್ರೇಕ್ಶಕನೇ ಇಲ್ಲ ಎನ್ನಬಹುದು.ಬರೀ ವೀರರಸದ ಧೂಳೆಬ್ಬಿಸುವ ಪ್ರಸಂಗದಿಂದ ಪ್ರೇಕ್ಷಕ ಮನಗೆಲ್ಲಬಹುದು ಎಂಬುದನ್ನು ಇವರ ಪಾತ್ರಗಳು ಸುಳ್ಳಾಗಿಸುತ್ತವೆ. ವಿಪರೀತ ಕುಣಿತ ಅತಿರೇಕದ ಅಭಿನಯ ಅದಾವುದೂ ಇಲ್ಲದ ಇವರ ಪಾತ್ರಗಳು ಯುವ ತಲೆಮಾರಿಗೆ ಮಾರ್ಗದರ್ಶನವಾಗಬಲ್ಲುದು. ಪಾಂಚಜನ್ಯದ ಸಾಂದೀಪನಿ ಮಹರ್ಷಿ ಮಗುವನ್ನು ಕಳೆದುಕೊಂಡ ದುಗುಡವನ್ನು ವ್ಯಕ್ತ ಪಡಿಸುವ ರೀತಿ ಛೇ....ತೆಂಕು ತಿಟ್ಟು ಕೇವಲ ಚೆಂಡೆ ಪೆಟ್ಟಿಗೆ ಸೋಲುತ್ತದೆ ಎಂಬುದನ್ನು ಸುಳ್ಳಾಗಿಸಿತ್ತು. ಪೂಕಳ ಲಕ್ಷೀ ನಾರಾಯನ ಭಟ್ಟರಂತಹ ವೇಷಧಾರಿ ಇದ್ದರೆ ಎಂತಹ ಪ್ರಸಂಗವನ್ನಾದರೂ ಧೈರ್ಯದಿಂದ ಒಪ್ಪಿಕೊಳ್ಳಬಹುದು.ಸಾಮಾನ್ಯವಾಗಿ ಪ್ರಾಮುಖ್ಯವಲ್ಲದ  ಅಧಿಕವಾಗಿ  ಅಸಡ್ಡೆಯಿಂದ ಕಾಣುವ ಪಾತ್ರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿ  ಯಕ್ಷಗಾನದಲ್ಲಿ ಯಾವ ಪಾತ್ರವೂ ಕಡೆಗಣಿಸುವ ಹಾಗೆ ಇಲ್ಲ ಎಂದು ತೋರಿಸಿಬಿಡುತ್ತಾರೆ. ಪ್ರಾಮುಖ್ಯವಲ್ಲ ಎಂದು ತಿಳಿದುಕೊಂಡ ಪಾತ್ರಗಳು ಇನ್ನಿಲ್ಲದಂತೆ ಇವರ ವೇಷಗಾರಿಕೆಯಿಂದ ಎಲ್ಲವನ್ನೂ ಮೀರಿಸಿ ನಿಂತು ಬಿಡುತ್ತವೆ. ಆ ನಿಟ್ಟಿನಲ್ಲಿ ಗಮನಿಸಿದರೆ  ಯಕ್ಷಗಾನದಲ್ಲಿ ಇವರಿಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲವೋ ಎಂದನಿಸುತ್ತದೆ.  ವಿಶಿಷ್ಟ ಪ್ರತಿಭೆಯ ಮೇರು ಕಲಾವಿದನಾಗಿ ಪ್ರತಿ ಪ್ರದರ್ಶನದಲ್ಲೂ ತನ್ನ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟವರು. 
ಸಾಮಾನ್ಯವಾಗಿ ನಾನು ಕಂಡಂತೆ ಸೌಮ್ಯ ಭಾವನಾತ್ಮಕ ಪಾತ್ರಗಳಿಗೆ ಮಾದರಿಯಾಗುವಂತಹ ಕಲಾವಿದರಿವರು. ವಿಶಿಷ್ಟವಾದ ಉಚ್ಚಾರದಿಂದಲೂ ಸ್ಪಷ್ಟ ಅರ್ಥಗಾರಿಕೆಯಿಂದಲೂ ಎಂತಹ ಪಾತ್ರವನ್ನೂ ಗಮನಾರ್ಹವೆನಿಸುವಂತೆ ನಿರ್ವಹಿಸಬಲ್ಲರು. ಯಕ್ಷಗಾನ ಲೋಕದ ವಿಶಿಷ್ಟ ಪ್ರತಿಭೆಯ ಕಲಾವಿದರು ಇವರು ಎನ್ನುವುದರಲ್ಲಿ ಅನುಮಾನವಿಲ್ಲ.


Friday, December 1, 2017

ಗುರೂಪದೇಶಂ


“ ಕಪಟ ನಾಟಕ ರಂಗ .....” ಯಾರೋ ಕಳುಹಿಸಿದ ದೃಶ್ಯ ತುಣುಕೊಂದರ ಕಡೆಗೆ ಗಮನ ಹರಿಸಿದಾಗ ಕಂಡ ಪದ್ಯ ಭಾಗವಿದು. ಇದೊಂದೇನು ಇಂದು ಯೂಟ್ಯೂಬ್ ಅಥವಾ ಇನ್ನಿತರ ಅಂತರ್ಜಾಲ ಮಾಧ್ಯಮಗಳಲ್ಲಿ ಬೇಕಾದಷ್ಟು ಇಂತಹ ದೃಶ್ಯಗಳು ಸಾಮಾನ್ಯ. ಇದು ಗದಾಯುದ್ದ ಪ್ರಸಂಗದ ಅತ್ಯಂತ ಜನಪ್ರಿಯ ಪದಗಳಲ್ಲಿ ಒಂದು. ಯಾಥಾರ್ಥ್ಯಕ್ಕಾದರೆ ಯಕ್ಷಗಾನದಲ್ಲಿ ಜನಪ್ರಿಯ ಪದ ಎನ್ನುವ ಬಳಕೆಯೇ ಸರಿಯಲ್ಲ. ಪ್ರಸಂಗದನಡೆಗೆ ಅನುಸಾರವಾಗಿ ಪ್ರತಿಯೊಂದು ಪದವೂ ಪ್ರಮುಖವಾಗಿರುತ್ತದೆ. ಜನಪ್ರಿಯ ಎಂದು ಒಂದನ್ನು ಉಲ್ಲೇಖಿಸುವಾಗ ಪ್ರಸಂಗದ ಉಳಿದ ಕಡೆಗೆ ಗಮನ ಕಡಿಮೆಯಾಗುತ್ತದೆ. ಇದು ಒಟ್ಟು ಪ್ರಸಂಗಕ್ಕೆ ಮಾಡುವ ಅಪಚಾರವಾಗುತ್ತದೆ. ಒಂದು ಪದಕ್ಕೆ ಮಾತ್ರ ಗಮನ ಹರಿಸುವುದೋ ಅಥವಾ ಕಲಾವಿದನೊಬ್ಬನನ್ನು ಮಾತ್ರಾ ಗಮನ ಹರಿಸುವುದೋ ಮಾಡುವುದಾದರೆ ಅದು ಪ್ರಸಂಗಕ್ಕೆ ಎಸಗುವ ಅಪಚಾರ. ಆದರೂ ಈ ಪದವನ್ನು ಜನಪ್ರಿಯ ಪದ ಎಂದು ಹೇಳುವುದರಲ್ಲಿ ಸಮಕಾಲೀನ ಪ್ರವೃತ್ತಿ ಒಂದು ಪದ್ದತಿ ಯಕ್ಷಗಾನದಲ್ಲಿ ಬೆಳೆದು ಬಂದಿದೆ. ತಮಗೆ ಅಗತ್ಯವಾಗಿರುವ ಭಾಗವನ್ನಷ್ಟೇ ತಿದ್ದಿ ತೀಡಿ ಸ್ವಚ್ಛಗೊಳಿಸುವಂತೆ ಆಯ್ದ ಭಾಗಗಳಲ್ಲಷ್ಟೆ ಗಮನ ಕೇಂದ್ರೀಕರಿಸಲ್ಪಡುತ್ತದೆ. ಪ್ರಸಂಗದ ಆಯ್ದ ಪದಗಳಿಗೋ ಸನ್ನಿವೇಶಗಳಿಗೋ  ಭಾಗವತ ನಾಗಲೀ ಕಲಾವಿದನಾಗಲೀ  ತನ್ನನ್ನು ತಾನು ಮೀಸಲಾಗಿರಿಸುವುದೆಂದರೆ ಉಳಿದ ಭಾಗವನ್ನು ಅಲಕ್ಷಿಸುವುದೇ ಆಗಿದೆ. ಅಲಕ್ಷಿಸುವುದೆಂದರೆ ಅಗೌರವಿಸುವುದೇ ಆಗಿರುತ್ತದೆ. ಕಲೆಯನ್ನು ಅಗೌರವಿಸುವಾಗ ಕಲಾವಿದ ಕಲವಿದಾನಗುವುದಕ್ಕೆ ಸಾಧ್ಯವೇ?
          ಕಪಟ ನಾಟಕ ರಂಗ ಎಂದು ಅಭಿನಯಿಸಿ ತೋರಿಸುವಲ್ಲಿನ ಕಾಳಜಿ ಉಳಿದ ಭಾಗಗಳಲ್ಲಿ ಇರುವುದಿಲ್ಲ. ಇಲ್ಲಿ ಹೀಗೆ ಹಾಡಬೇಕು ಎಂದು ಭಾಗವತ ನಿರ್ದೇಶಿಸಲ್ಪಟ್ಟಿದ್ದರೆ, ವೇಷಧಾರಿ ಹೀಗೆ ನಲಿಯಬೇಕು ಎಂದು ಬಹಳಷ್ಟು ಅಭ್ಯಾಸ ಮಾಡಿರುತ್ತಾನೆ. ಭಾಗವತನ  “ ರಂಗಾ.....’ ಅಲಾಪನೆಗೆ ಕೊಳಲ ಕೃಷ್ಣನ ಭಂಗಿಯನ್ನು ನೀಡಿ ಒಂದಷ್ಟು ಕುಣಿಯುತ್ತಾನೆ. ಆದರೆ ಈ ವಿಡಿಯೋ ದೃಶ್ಯ ನೋಡುತ್ತಿದ್ದಂತೆ ಗೊತ್ತಾಗಿಬಿಡುತ್ತದೆ ಇದು ಎಲ್ಲಿಯೋ ಕಂಡ ದೃಶ್ಯವಾಗಿರುತ್ತದೆ. ಮುಂದೇ ಆತ ಹೇಗೆ ಕುಣಿಯುತ್ತಾನೆ ಎಂದು ಕ್ಷಣ ಮಾತ್ರದಲ್ಲೇ ನೀವು ಊಹಿಸಬಲ್ಲಿರಿ. ಯಾಕೆಂದರೆ ಆದೃಶ್ಯಗಳನ್ನು ಹಿರಿಯ ಕಲಾವಿದರು ಅಭಿನಯಿಸುವುದನ್ನು ಎವೆಯಿಕ್ಕದೇ ನೀವು ನೋಡಿರುತ್ತೀರಿ. ಇಲ್ಲೂ ಅದನ್ನೇ ಕಂಡಮೇಲೆ ಈ ಕಾಗೆ ಕುಣಿತದಲ್ಲಿ ಸ್ವಾರಸ್ಯ ಉಳಿಯುವುದಿಲ್ಲ. ಉಳಿಯುವುದೊಂದೆ ಈತ ಅದು ಹೇಗೆ ಅನುಕರಿಸುತ್ತಾನೆ ಎಂಬುದಷ್ಟೇ. ನವಿಲನ್ನು ಅನುಕರಿಸಿದ ಕಾಗೆಯ ನೆನಪಾದರೆ ಅಚ್ಚರಿಯಿಲ್ಲ. ಯಾಕಂದರೆ ಹಿರಿಯ ಕಲಾವಿದರ ಸುಂದರ ಕೌಶಲವನ್ನು ಇಲ್ಲಿ ಯಥಾವತ್ ಅನುಕರಿಸಿ ಮಿಮಿಕ್ರಿ ಮಾಡಿ ಭಟ್ಟಿ ಇಳಿಸಲಾಗುತ್ತದೆ. ಅನುಕರಣೆಯೂ ಒಂದು ಕಲೆಯಂತೆ. ಹಾಗಾದರೆ ಅನುಕರಣೆಯನ್ನು ತೋರುವುದು ಯಕ್ಷಗಾನವೇ? ಇದು ಕೇವಲ ಒಂದು ಪ್ರಸಂಗಕ್ಕೆ ಒಂದು ಪಾತ್ರಕ್ಕೆ ಸೀಮಿತವಾಗಿಲ್ಲ. ಬಹಳಷ್ಟು ಪಾತ್ರಗಳು ಯಕ್ಷಗಾನದಲ್ಲಿ ಕೇವಲ ಅನುಕರಣೆಯಾಗಿ ಬಳಕೆಯಾಗುತ್ತದೆ. ಅಸಲೀ ನಾಯಿ ಬೊಗಳುವಾಗ ಯಾರೂ ಚಪ್ಪಾಳೆ ತಟ್ಟುವುದಿಲ್ಲ. ಬದಲಿಗೆ ಮನುಷ್ಯನಾಯಿಯಂತೆ ಬೊಗಳುವಾಗ ಚಪ್ಪಾಳೆ ತಟ್ಟುತ್ತಾರೆ. ಮೂಲ ರೂಪದಲ್ಲಿರುವ ಕಲೆಗೆ ಗಮನವೇ ಇರುವುದಿಲ್ಲ. ಆದರೆ ನಕಲೀ ಅನುಕರಣೆಗೆ ತಲೆದೂಗುತ್ತಾರೆ. ಯಕ್ಷಗಾನ ಭ್ರಾಮಕ ಕಲೆ. ಇದರಿಂದ ಮತ್ತಷ್ಟು ಭ್ರಮಾಧೀನರಾಗುವಾಗ ನೈಜತೆ ಹರಣವಾಗುತ್ತದೆ.
          ಹೆಸರಾಂತ ಕಲಾವಿದ ಆರೋಗ್ಯ ಸರಿ ಇಲ್ಲದೇಯೋ ಕೈಕಾಲು ಬೇನೆಯಿಂದಲೋ ಒಂದು ದಿನ ಒಂದಿಷ್ಟು ನಾಟ್ಯ ಬದಲಾಯಿಸಿ ಒಟ್ಟು ಭಾವವೆತ್ಯಾಸವಾಗದೆ ಕುಣಿಯುತ್ತಾನೆ. ಅದರಲ್ಲಿ ಏಳುವ ಯಾವುದೇ ಪ್ರಶ್ನೆಗೂ ಆತ ಉತ್ತರವನ್ನೋ ಸ್ಪಷ್ಟೀಕರಣವನ್ನೋ ನೀಡುವುದಕ್ಕೆ ಸಮರ್ಥನಿದ್ದಾನೆ. ಯಾಕಂದರೆ ಯಕ್ಷಗಾನದ ಸಂಪೂರ್ಣ ಜ್ಞಾನ ಹೊಂದಿದ ಕಲಾವಿದನಿಗೆ ಅದೇ ರೂಪದಲ್ಲಿ ಉತ್ತರಿಸುವುದಕ್ಕೆ ಆತ ಸಮರ್ಥನಾಗಿರುತ್ತಾನೆ. ಆದರೆ ಆ ದಿನದ ಒಂದು ಕುಣಿತ ನೋಡಿದ ಅರೆಬೆಂದ ಕಲಾವಿದ ಅದನ್ನು ಹಾಗೇ ಅನುಕರಿಸಿದರೆ ಅದರಲ್ಲಿ ಏಳುವ ಪ್ರಶ್ನೆಗಳಿಗೆ ಆತನಲ್ಲಿ ಉತ್ತರವಿರುವುದಿಲ್ಲ. ಆತನ ಉತ್ತರ ಒಂದೇ ಇಂಥಹವರು ಹೀಗೆ ಮಾಡಿದ್ದಾರೆ. ತಾಯಿಯ ಬಾಣಂತನದಲ್ಲಿ ಚಿಕಿತ್ಸೆಗಾಗಿ ಹಿರಿಯರು ಒಂದಿಷ್ಟು ಮದ್ಯವನ್ನು ಔಷಧಿಯಂತೆ ಕೊಡುವುದನ್ನು ನೋಡಿದ ಮಗ ಅವರು ಹಾಗೆ ಮಾಡಿದ್ದಾರೆ ಎಂದು ತಾನು ಸಂಪೂರ್ಣ ಮದ್ಯವ್ಯಸನಿಯಾಗಿ ಕುಡುಕನಾದಂತೆ. ಯಕ್ಷಗಾನ ಜಾನ ಪದಕಲೆ ಹಾಗಾಗಿ ಅಲ್ಲಿ ಅನುಸರಣೆ ಮುಖ್ಯವಾಗುತ್ತದೆ ಹೊರತು ಅನುಕರಣೆಯಲ್ಲ. ಅನುಸರಣೆ ಸಾಧ್ಯವಾಗಬೇಕಾದರೆ ಅಲ್ಲಿ ಪೂರ್ಣ ಪ್ರಮಾಣದ ಶಿಷ್ಯತ್ವ ಸಾಧ್ಯವಾಗಬೇಕು.
          ಒಬ್ಬ ಕಲಾವಿದ ರೂಪುಗೊಳ್ಳಬೇಕಾದರೆ ಹಲವು ಸಂವತ್ಸರಗಳ ಪರಿಶ್ರಮವಿರುತ್ತದೆ. ಅದನ್ನು ಕೆಲವು ದಿನಗಳಲ್ಲಿ ಅನುಕರಿಸುವುದರಿಂದ ಕಲೆಗೆ ಯಾವ ನ್ಯಾಯ ಸಲ್ಲಿಸಬಹುದು. ಬದಲಾಗಿ ಅದು ಕಲೆಯ ಅವಹೇಳನವೇ ಆಗಿಬಿಡುತ್ತದೆ. ದೂರ ಪಯಣದಲ್ಲಿ ಭೂಮಿಮೇಲಿನ  ಕಾಲ ನಡಿಗೆಯಲ್ಲಿ ವಿಶಾಲವಾದ ಜೀವನಾನುಭವ ಸಿಗುತ್ತದೆ.   ಆಕಾಶದಲ್ಲಿ ಕ್ಷಣಮಾತ್ರದಲ್ಲಿ ಮುಗಿಸುವ ಪಯಣದಲ್ಲಿ ಸಿಗುವ ಅನುಭವ ಅತ್ಯಂತ ಸೀಮಿತ. ಅದೆಂದಿಗೂ ಭೂಮಿಯ ಮೇಲಿನ ಅನುಭವಕ್ಕೆ ತುಲನೆಯಾಗಲಾರದು. ಇಂದಿನ ವಿದ್ಯುತ್ ಯುಗದಲ್ಲಿ ಕ್ಷಿಪ್ರವಾದ ಸಾಧನೆಗ ಗುರಿಯಷ್ಟೇ ಇರುತ್ತದೆ. ಆಗಲೇ ಮಾಡಿ ಈಗಲೆ ಮುಕ್ಕಿಬಿಡುವ ಕ್ಷಿಪ್ರ ಆಹಾರದಂತೆ (fast food) ಎಲ್ಲವೂ ತ್ವರಿತಗತಿಯ ಆಕಾಂಕ್ಷೆಗಳು.
          ಎಲ್ಲೆಂದರಲ್ಲಿ ಮೊಳಗುವ ಗಾಯತ್ರಿ ಮಂತ್ರ,  ಯಾವೂದೇ ವಸ್ತುವು ಅಮೂಲ್ಯವಾಗುವುದು ಅದು ಶ್ರಮವಿಲ್ಲದೇ ಎಲ್ಲೆಂದರಲ್ಲಿ ಸುಲಭವಾಗಿ ಸಿಗದೇ ಇರುವಾಗ. ಎಲ್ಲವೂ ಬೇಕಾದಂತೆ ಪಡೆದು ಕೈವಶ ಮಾಡುವ ಧಾವಂತ ನಮ್ಮದು. ಹಾಗಾಗಿ ಮಂತ್ರಗಳೇನು ಎಲ್ಲೂ ಮೊಳಗುತ್ತದೆ. ಆ ಮಂತ್ರಗಳ  ಮೇಲೆ ವಿಶ್ವಾಸವಿದೆ. ಮಂತ್ರೋಚ್ಚಾರದಿಂದ ಭಗವಂತನ ಅನುಗ್ರಹ ಗಳಿಸುವ  ವಿಶ್ವಾಸವಿರುವಾಗ, ಅದೇ ಮಂತ್ರ ಉಚ್ಚಾರಕ್ಕೆ ಪೂರಕವಾದ ಇತರ ವಿಷಯಗಳಲ್ಲಿ ವಿಶ್ವಾಸವಿಲ್ಲ.ಯಾವುದೇ ಮಂತ್ರವಾದರೂ ಅದು ಕೇವಲ ಅಕ್ಷರಗಳ ಜೋಡಣೆಯಲ್ಲ. ಅದಕ್ಕೆ ಸ್ವರ ಪ್ರಸ್ಥಾರವಿರುತ್ತದೆ. ಶುದ್ದವಾದ ಉಚ್ಚಾರ ಆವಶ್ಯವಿರುತ್ತದೆ. ಒಂದು ಪ್ರಾಣಾಕ್ಷರ ವೆತ್ಯಾಸದಲ್ಲಿ ವಿಸರ್ಗದ ಪ್ರಯೋಗದಲ್ಲಿ ಅದರ ಅರ್ಥವೇ ಬದಲಾಗುತ್ತದೆ. ಅಷ್ಟು  ಸೂಕ್ಷವಿಚಾರಗಳನ್ನು ಕಲಿಯಬೇಕಾಗುತ್ತದೆ. ಇದು ಸಿದ್ದಿಸಬೇಕಾಗದರೆ ಅದಕ್ಕೆ ಸಮರ್ಥವಾದ ಗುರೂಪದೇಶವೂ ಅತ್ಯಂತ ಪ್ರಧಾನ.  ಎಲ್ಲಿಯೋ ಕೇಳಿದ ಬರೆದ ಮಂತ್ರಗಳ  ಪಾರಾಯಣದಲ್ಲಿ ಯಾವ ಫಲವೂ ಪ್ರಾಪ್ತಿಯಾಗುವುದಿಲ್ಲ. ವ್ಯಾದ ವಾಲ್ಮೀಕಿಯಾಗುವುದಕ್ಕೆ ಕಾರಣವಾದ ತಾರಕ ಮಂತ್ರ ರಾಮನಾಮವೂ ಗುರೂಪದೇಶದಿಂದಲೇ ಸಿದ್ದಿಸಿರುತ್ತದೆ. ಇಂದು  ವಿಚಿತ್ರವೆಂದರೆ ಗುರು ಉಪದೇಶದಿಂದ ಕಲಿಯುವ ಬಗ್ಗೆ ಗೌರವವಿಲ್ಲ. ಆದರೆ ಮಂತ್ರದಬಗ್ಗೆ ವಿಶ್ವಾಸವಿರುತ್ತದೆ. ಗುರು ಎಂದರೆ ಹಿರಿದು, ಬೃಹತ್ ದೊಡ್ಡದು ಎಂದು ಅರ್ಥ. ಗುರುವಿನ ಉಪದೇಶದ ಅವಶ್ಯಕತೆ ಇಲ್ಲ ಎಂದರೆ ಹಿರಿದಾದ ಸ್ಥಾನವೂ ಇಲ್ಲ. ಅದರ ತಾತ್ಪರ್ಯ ಸ್ವಯಂ ನಮ್ಮನ್ನು ನಾವೇ ಗುರುವಾಗಿ ಕಾಣುವುದು ಎಂದರೆ ನಮ್ಮಲ್ಲೇ ಹಿರಿತನವನ್ನು ಆರೋಪಿಸುವುದು ಎಂದಲ್ಲವೇ?  ಇದನ್ನೇ ದುರಹಂಕಾರ, ದುರಾಭಿಮಾನ ಎನ್ನುವುದು.   ಗಾಢವಾದ ಶಿಷ್ಯ ಪರಂಪರೆ ಇಲ್ಲದಿರುವುದೇ ಇಂದಿನ ಹಲವು ಮೌಲ್ಯಗಳು ನಾಶವಾಗುವುದಕ್ಕೆ ಮೂಲ ಕಾರಣ. ಯಕ್ಷಗಾನವೂ ಇದರಿಂದ ಹೊರತಾಗಿಲ್ಲ. ಗುರುವಿನ ಅನುಗ್ರಹದಿಂದ ವಿದ್ಯಾವಂತನಾಗಬೇಕು ಎನ್ನುವ ಪ್ರತಿಪಾದನೆಯಲ್ಲಿ ಗುರುವಿನ ಸ್ವಾರ್ಥವನ್ನೇ ಗುರುತಿಸುವ ಶಿಷ್ಯನಿಗೆ ಆ ವಿದ್ಯೆಯ ಪೂರ್ಣ ಸಿದ್ದಿ ಪ್ರಾಪ್ತಿ ಸಾಧ್ಯವಾಗಲಾರಾದು.
                ಸಾಮಾನ್ಯಾವಾಗಿ ಎಲ್ಲದರಲ್ಲೂ ಅಸಲಿಯನ್ನೇ ಬಯಸುವುದು ಸಹಜ. ನಕಲಿಯು ಶಾಶ್ವತವಾಗಿ ಉಳಿಯುವುದಿಲ್ಲ. ಹಾಗಾಗಿ ಅನುಕರಣೆಮಾಡಿ ನಕಲಿಯನ್ನು ತೋರಿಸುವುದು ಕಲಾವಿದನಾದವನ ಕ್ರಿಯಾತ್ಮಕ ಬದುಕನ್ನು ನಾಶಗೊಳಿಸುತ್ತದೆ. ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಕಲೆಯಲ್ಲಿ ಸೃಜನ ಶೀಲತೆ ಅತ್ಯಂತ ಪ್ರಾಮುಖ್ಯ. ಅದು ಅನುಕರಣೆಯಲ್ಲಿ ಅರಳುವುದಿಲ್ಲ. ಇದಕ್ಕೆ ಪರಿಪೂರ್ಣ ಅಧ್ಯಯನ ಮತ್ತು ಅವಿರತ ಪರಿಶ್ರಮ ಅತ್ಯವಶ್ಯ. ಅದನ್ನು ಮೈಗೂಡಿಸುವಲ್ಲಿ ಕಲಾವಿದನಾದವನು ಪ್ರಾಮಾಣಿಕವಾಗಿ ವ್ಯವಹರಿಸಬೇಕಾಗಿದೆ. ಹಿರಿಯ ಕಲಾವಿದರು ಇಂದಿಗೂ ಸ್ಮೃತಿಯಲ್ಲಿ ಜೀವಂತವಾಗಿರುವುದಾದರೆ ಅದಕ್ಕೆ ಕಾರಣ ಅವರ ಸ್ವಂತ ಅಧ್ಯಯನ ಮತ್ತು ಪರಿಶ್ರಮವೇ ಕಾರಣವಾಗಿರುತ್ತದೆ. ಹಾಗಾಗಿ ಹಿರಿಯರನ್ನು ಆ ನಿಟ್ಟಿನಲ್ಲೇ ಅನುಕರಿಸಬೇಕೆ ಹೊರತು ಅಲ್ಪ ಕಲಿಯಿಂದ ಅಲ್ಪ ಜ್ಞಾನವನ್ನು ಪ್ರದರ್ಶಿಸುವುದಲ್ಲ. ಇದು ಕಲೆಗೂ ಕಲಾವಿದನಿಗೂ ಮಾರಕ. ಕಲೆಯಲ್ಲಿ ಶ್ರದ್ದೆ ಗೌರವ ಇರುವ ಕಲಾವಿದ ಎಂದಿಗೂ ತನ್ನ ನೆಲೆಯನ್ನು ಅನುಕರಣೆಯಲ್ಲಿ ಕಂಡುಕೊಳ್ಳುವುದು ಕಲೆಯನ್ನು ಅವಗಣಿಸಿದಂತೆ.
           ಈ ಲೇಖನ ಹಲವು ದಿನಗಳ ಮೊದಲೇ ಬರೆದಿದ್ದೆ. ಆದರೆ ಕಾರಣಾಂತರದಿಂದ ಅದನ್ನು ಪ್ರಕಟಿಸಲಾಗಲಿಲ್ಲ. ವಿಪರ್ಯಾಸವೆಂದರೆ ಸಂಪಾಜೆಯ ಯಕ್ಷೋತ್ಸವದಲ್ಲಿ ನಡೆದ ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ತೀರ್ಪುಗಾರರ ಅಭಿಪ್ರಾಯಗಳು ಈ ಲೇಖನದ ಆಶಯವನ್ನೇ ಬಿಂಬಿಸುತ್ತದೆ. ಹಾಗಾಗಿ ನವಾಗತರಾಗಿ ಬರುವ ಕಲಾವಿದರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.