"ಇದು ವಿಮರ್ಶೆಯಲ್ಲದ ಚಿಂತನ"

Tuesday, May 22, 2018

ಸ್ಥಿತ್ಯಂತರ


ಸ್ಥಿತ್ಯಂತರ
ಭಾಗ - ೧
ಒಂದು ಕಥೆ ಹೇಳುವುದಕ್ಕೆ ಹೊರಟಾಗ ಮನಸ್ಸಿನಲ್ಲಿ ಗಂಟು ಹಾಕಿ ಹುದುಗಿಸಿಟ್ಟುದನ್ನು ಹೊರತಂದು ಬಿಚ್ಚಿದಂತೆ. ದೂರದಿಂದ ಹೊರೆಯೊಂದನ್ನು ಹೊತ್ತು ತಂದು ಇಳಿಸಿ ಬಿಚ್ಚಿ ಒಳಗಿನ ಕೌತುಕದ ವಸ್ತುವನ್ನು ತೋರಿಸಿದಂತೆ. ಒಂದು ನಿರಾಳ ಭಾವ. ಆ ವರೆಗಿನ ಆಯಾಸವೆಲ್ಲ ಪರಿಹಾರವಾದಂತೆ. ಕಥೆ ಅಂದರೆ ಅದನ್ನು ಸಂದರ್ಭಾನುಸಾರ ಹಲವು ರೀತಿಯಲ್ಲಿ ಉಪಯೋಗಿಸುವುದುಂಟು. ಸೂಚ್ಯಾರ್ಥವನ್ನು ಹೇಳುವುದಕ್ಕೆ. ಹೇಳಬೇಕಾದುದನ್ನು ನೇರವಾಗಿ ಹೇಳಲು ಅಸಾಧ್ಯಾವಾದಗ ಕಥಾ ಮೂಲಕ ಪರೋಕ್ಷವಾಗಿ ಹೇಳಿ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ,   ಕೆಲವೊಂದು ಸಲ ಮುಖಾಮುಖಿಯಾಗಿ ಹೇಳಲು ಮುಜುಗರ ಪಡುವಾಗ ಕಥೆಯನ್ನು ಉಪಯೋಗಿಸುವುದುಂಟು. ದೂರವಾಣಿ ಎಂಬ ಸಂಪರ್ಕಸಾಧನ ಬಂದಂತಹ ಸಮಯದಲ್ಲಿ ನಮ್ಮಲ್ಲಿ ಒಬ್ಬರು ಹೇಳುತ್ತಿದ್ದರು, “ಮುಖಾಮುಖಿಯಾಗಿ ಬೈದು ಹೇಳಲಿಕ್ಕೆ ಅಸಾಧ್ಯವಾದದನ್ನು ಸಾಧ್ಯ ಮಾಡುವಂತಹ ಸಂಪರ್ಕ ಸಾಧನ ಈ ದೂರವಾಣಿ ದೂರದಿಂದಲೆ ಬೈದು ಬಿಡಬಹುದು.”  ನಮ್ಮಲ್ಲಿ ಒಬ್ಬರು ಇದ್ದರು ಎದುರಿಗೆ ಕಂಡರೆ ಬಹಳ ಸೌಜನ್ಯದ  ಸಾಧು ಮನುಷ್ಯ. ಪರರು ಹೇಳಬೇಕಾದುದೆಲ್ಲವನ್ನು ಹೇಳಿದರೂ ತಾನು ಹೇಳಬೇಕಾದುದನ್ನು ಹೇಳಲು ಸಂಕೋಚ ಪಡುವ ಪಾಪದ ಮನುಷ್ಯ. ಆದರೆ ಈ ಫೋನು ಮಾಡುವಾಗ ಅದೆಲ್ಲಿ ಇರುತ್ತದೋ,  ಮುಖನೋಡಿ ಬೈಯಲಾಗದೇ ಇದ್ದುದನ್ನೆಲ್ಲ ಕಕ್ಕಿ ಮನಸ್ಸು ಹಗುರ ಮಾಡಿಕೊಳ್ಳುವ ಅವರ ಸ್ವಭಾವ. ಇಂದು ಫೋನಿನಲ್ಲಿ ವಾಚಾಮಗೋಚರವಾಗಿ ಬೈದು ಮರುದಿನ ಸಿಕ್ಕಿದಾಗ ಅದೇ ಮಾಮುಲೀ ಸಾಧು ಮನುಷ್ಯನಂತೆ ಮಾತನಾಡವುದನ್ನು ಕಂಡಾಗ ಅನ್ನಿಸುತ್ತದೆ, ಈ ಫೋನ್ ಎಂಬ ಸಾಧನ ಬಾರದಿರುತ್ತಿದ್ದರೆ ಈ ಮನುಷ್ಯ ಅತ್ಯಂತ ಸಂಭಾವಿತ ವ್ಯಕ್ತಿಯಾಗಿಬಿಡುತ್ತಿದ್ದರಲ್ಲ.! ಆದರೆ ಈ ಕಥೆಗೂ ಈ ಯಾವುದೇ ವಿಷಯಗಳಿಗೂ ಪರಸ್ಪರ ಸಂಬಂಧವೇ ಇಲ್ಲ. ಇದು ಕೇವಲ ಕಥೆ. ಕೆಡುಕಿಲ್ಲದ ವೈಷಮ್ಯವಿಲ್ಲದ ಲೋಕ ಕಲ್ಪನೆಗೆ ಮಾತ್ರ ಸರಿ. ವಾಸ್ತವದಲ್ಲಿ ಅದು ಅಸಂಭವ.ಅವಾಸ್ತವಿಕ ಎನ್ನಬಹುದು. ಆದರೆ ನಮ್ಮ ಕಲ್ಪನೆಯ ಕಥೆಯಲ್ಲಿ ವಾಸ್ತವವಲ್ಲವೇ? ಹಾಗಾಗಿ ಆ ಪ್ರಯತ್ನ ಇಲ್ಲೀಯೂ ಬರಿಸುವ ಯತ್ನ. ವೈಷಮ್ಯವಿಲ್ಲದ ಕೆಟ್ಟವರಿಲ್ಲದ ಕೆಟ್ಟ ಯೋಚನೆಗಳಿಲ್ಲದ ಲೋಕ. ಪ್ರಾರಭ್ದವಶಾತ್ ದೈವ ಚಿತ್ತ ಮಾತ್ರ ಕೆಡುಕಾಗಬಹುದು, ಮನುಷ್ಯಚಿತ್ತ ಕೆಡುಕಾಗಬಾರದು. ಕೆಟ್ಟ ದೇಹ...ಅಂಗವಿಹೀನ ದೇಹ ಅದು ದೈವ ಚಿತ್ತ. ಆದರೆ ಮನಸ್ಸಿನ ಯೋಚನೆಗಳು ಮನುಷ್ಯ ಚಿತ್ತ.
*****
ಈಚಣ್ಣ ತನ್ನ ಪಾತ್ರ ಮುಗಿಸಿ, ಚೌಕಿಯ ಒಂದು ಬದಿಯಲ್ಲಿ ಕಳಚಿಟ್ಟ ವೇಷದ ಒಂದೊಂದೇ ವಸ್ತುಗಳನ್ನು ಜೋಡಿಸಿಡುತ್ತಿದ್ದರು. ಇದೇನು ಕಥೆಯ ಆರಂಭದಲ್ಲೇ ಪಾತ್ರ ಮುಗಿಸಿ ವೇಷ ಕಳಚಿತೇ? ಹೌದು, ಯಕ್ಷಗಾನ ಕಲಾವಿದರ ನಿಜ ಕಥೆ ಆರಂಭವಾಗುವುದು ವೇಷ ಕಳಚಿದ ಮೇಲೆಯೆ. ರಂಗದ ಮೇಲಿನ ಪಾತ್ರಗಳು ಹಲವು ಸಲ ಹೃದಯದ ದ್ವನಿಯಾಗುತ್ತವೆಯೋ ಹೊರತು ಅದು ವಾಸ್ತವವಾಗುವುದಿಲ್ಲ. ಕನ್ನಡಿಯ ಒಳಗಿನ ವಸ್ತು ಅದೇನಿದ್ದರೂ ಮಿಥ್ಯ.  ಕೈಗೆ ಸಿಗದು. ಕನ್ನಡಿಯ ಒಳಗಿನ ವಸ್ತು ಸಿಗಬೇಕಾದರೆ ಅದಕ್ಕೆ ಅಭಿಮುಖವಾಗಿ ಪ್ರಯತ್ನಿಸಿದರೆ ಕೆಲವೊಮ್ಮೆ ಕೈಗೆ ಸಿಗಬಹುದೇನೋ. ಒಂದು ರೀತಿಯ ವಿರೋಧಾಭಾಸದ ಪಯಣವಾಗಬೇಕು.  ಯಕ್ಷಗಾನ ಕಲಾವಿದರ ಬದುಕು ಹಾಗೆ. ವಿರೋಧಾಭಾಸವೇ? ಅಲ್ಲಿ ತೆರೆದಾಗ ಇಲ್ಲಿ ಮುಚ್ಚಿತು. ಇಲ್ಲಿ ತೆರೆದಾಗ ಅಲ್ಲಿ ಮುಚ್ಚಿತು.  ಅಪರೂಪಕ್ಕೆ ಇದಕ್ಕೆ ತದ್ವಿರುದ್ದ ಎನಿಸಿದರು ಅದು ಸಹಜವಾಗುವುದಿಲ್ಲ. ಅದುವೇ ಕಲಾಜೀವನ.
ಎಲ್ಲರಂತೆ ಕಲಾವಿದರಾದ ಈಚಣ್ಣನದ್ದು ಇಲ್ಲಿ ಮುಚ್ಚಿತು ಎಂದು ಸುಮ್ಮನಿರುವ ಹಾಗಿಲ್ಲ. ಇದು ಮುಚ್ಚಿದ ಮೇಲೆ ತೆರೆದುಕೊಂಡ ಜಗತ್ತಿನಲ್ಲಿ ನಿಜ ಪಾತ್ರವನ್ನು ಅಭಿನಯಿಸಬೇಕು. ಇದು ಎಲ್ಲರಿಗೂ ಅನಿವಾರ್ಯ. ಆದರೂ ಕಥೆ, ಕಥೆಯಾಗಬೇಕಲ್ಲ? ಬಣ್ಣವೆಲ್ಲ ತೆಗೆದು,  ಹಾಗಿದ ಚಲ್ಲಣ ಕಳಚಿ, ಪಂಚೆ ಅಂಗಿ ತೊಟ್ಟು,  ತಾಂಬೂಲ ಹಾಕಿದರೆಂದರೆ ಯಕ್ಷಗಾನದ ಪಾತ್ರ ಮುಗಿಯಿತು ಮತ್ತೊಂದು ಆರಂಭವಾಯಿತು ಎಂದೇ ಅರ್ಥ. ಒಂದರ ಅಂತ್ಯದಲ್ಲಿ ಇನ್ನೊಂದರ ಆರಂಭ,  ಬಹುಷಃ ಇಲ್ಲಿಗೆ ಹೆಚ್ಚು ಸೂಕ್ತವೋ ಎನೋ?
ತಾಂಬೂಲ ಜಗಿದು ಜಗಿದು ಉಗುಳು ರಸ ಬಾಯಿತುಂಬಿ ಮೈ ಮನ ಚುರುಕಾದಂತೆ ಅನಿಸಿದಾಗ, ಚುರುಕಾಗುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಚಟುವಟಿಕೆಗೆ ವಿಶ್ರಾಂತಿಯೇ ಇಲ್ಲದ ಮೇಲೆ ಚುರುಕಾಗುವುದೇನು ಬಂತು. ಅಥವಾ ಎಲೆ ಅಡಿಕೆ ಹಾಕಿದರೆ ಚುರುಕಾಗುತ್ತದೆ ಎಂದಿಲ್ಲವಲ್ಲ. ಅವರರವ ಭಾವ ಅಷ್ಟೇ. ಬಾಯಿ ಒಂದು ಬದಿಯಲ್ಲಿ ತಾಂಬೂಲವನ್ನು ಸರಿಸಿ ಚೌಕಿಯಿಂದ ಒಂದಷ್ಟು ದೂರ ಹೋಗಿ ಬಾಯಿಯಲ್ಲೇ ಹಿಂಡಿದ ರಸವನ್ನು ಪಿಚಕ್ಕನೆ ಉಗಿದು ತಿರುಗಿದಾಗ ದೂರದಲ್ಲೇ ಬರುತ್ತಿರುವ ನಾರು ಭಟ್ಟರನ್ನು ಕಂಡು ಒಂದು ನಿಟ್ಟುಸಿರು ಬಿಟ್ಟರು. ನಾರು ಭಟ್ಟರ ಕುರಿತು ಹೇಳುವುದಿದ್ದರೆ ಅವರ ಪೂರ್ಣ ಹೆಸರು ಸಂತೇ ಮನೆ ನಾರಾಯಣ ಭಟ್ಟ ಅಂತ. ಅದನ್ನೇ ನಾರು ಅಂತ ಸಣ್ಣದು ಮಾಡುವುದಕ್ಕೂ ಒಂದು ಕಾರಣವಿದೆ. ಅವರ ಸ್ವಭಾವ ನಾರಿನಂತೆ ಅಂತ ಬಲ್ಲವರು ಹೇಳುವುದಿದ್ದರೂ ಆ ಸ್ವಭಾವಕ್ಕೆ ಸಹಜ ಎನ್ನುವಂತೆ ಅವರ ಒಂದೊಂದೇ ಕೆಲಸಗಳು. ಸಂತೇ ಮನೆ ಅವರ ಹಿರಿಯರಿಂದ ಬಂದ ಮನೆ. ಸ್ವಲ್ಪ ತೋಟ ಗುಡ್ಡೆ ಹೀಗೆ ಹಳ್ಳಿ ಜಮೀನು. ಆ ಊರಿಗೆ ಮೊತ್ತ ಮೊದಲಾಗಿ ರಬ್ಬರ್ ತಂದು ಅದರ ಕೃಷಿಮಾಡಿದವರು ಈ ನಾರು ಭಟ್ಟರು. ರಬ್ಬರಿನಂತಿರುವ ಅವರ  ಸ್ವಭಾವಕ್ಕೆ ಹೊಂದಿಕೊಂಡ ರಬ್ಬರು ಕೃಷಿ ಅವರಿಗೆ ಈ ಹೆಸರನ್ನು ತಂದಿದೆ ಅಂತ ಕೆಲವರ ಅಂಬೋಣ. ಕೆಲವು ವರ್ಷ ಮೊದಲು ಇದ್ದ ತೋಟ ಮನೆ ಮಾರಿ ಮಕ್ಕಳ ಸಂಪಾದನೆಯಲ್ಲಿ ಅಲ್ಲಿ ಇಲ್ಲಿ ಅಂತ ಜೀವನ ಸಾಗಿಸುತ್ತ ಇರುವಾಗ ಒಂದು ಸೈಡು ಬಿಸಿನೆಸ್ಸು ಅದುವೇ ಮದುವೇ ದಲ್ಲಾಳಿ. ಒಂದು ಸಲ ಗುರಿಯಿಟ್ಟು ಭಟ್ಟರು ಅಂಟಿಕೊಂಡರೆ ಅಲ್ಲಿಗೆ ಮುಗೀತು. ಸ್ವಭಾವ ಸಹಜದಂತೆ ಈ ನಾರು ಬೇಗನೇ ಬಿಡುವುದಿಲ್ಲ. ಕರಗುವುದೂ ಇಲ್ಲ.
ತನ್ನನ್ನೇ ಕಾಣಲು ಬರುವ ನಾರು ಭಟ್ಟರನ್ನು ಕಂಡ ಈಚಣ್ಣ ಚೌಕಿಯ ಒಳ ನಡೆಯುವ ಮನಸ್ಸು ಮಾಡಲಿಲ್ಲ. ಚೌಕಿಯ ಒಳಗೆ ಈ ನಾರು ಹಿಡಕೊಂಡರೆ ಉಳಿದವರು ಏನು ಕಥೆ ಅಂತ ಸಂಕಲನ ಶುರು ಮಾಡಿಬಿಡುತ್ತಾರೆ. ಹಾಗಾಗಿ ಮತ್ತೂ ಸ್ವಲ್ಪ ದೂರ ಹೋಗಿ ನಿಂತಾಗ ಊಹಿಸಿದಂತೆ ನಾರು ಅಲ್ಲಿಗೇ ಕಾಲೆಳೆದುಕೊಂಡು ಬಂದರು.
ಭಟ್ಟರು ಔಪಚಾರಿಕ ಮಾತುಗಳನ್ನು ಚುಟುಕಾಗಿ ಮುಗಿಸಿ ಹೇಳಿದರು “ ಕೂಸಿನ ಜಾತಕ ಸರಿ ಹೋಗ್ತದೆ...”  ಇನ್ನು ಮುಚ್ಚು ಮರೆ ಏಕೆ? ಈ ಭಟ್ಟರ ಆಗಮನದ ಮುಖ್ಯ ಕಾರಣವೇ ಅದು. ಈಚಣ್ಣನಿಗೆ ಪ್ರಾಯಕ್ಕೆ ಬಂದು ನಿಂತ ಮಗಳಿದ್ದಾಳೆ. ಒಬ್ಬಳೇ ಮಗಳು ಸುನಂದ. ಅವಳಿಂದ ನಂತರ ಮಗ ಒಬ್ಬ ಇದ್ದಾನೆ ಅವನಿನ್ನು ಸ್ವಲ್ಪ ಚಿಕ್ಕವನು. ಬಡತನದ ಜೀವನ ಏಂದೋ ಕಳೆದಿದ್ದರೂ ಈಚಣ್ಣನಿಗೆ ಈಗಲೂ ಬಹಳ ಅನುಕೂಲ ಎಂದು ಹೇಳುವ ಹಾಗಿಲ್ಲ. ಜೀವನ ಸಾಗುತ್ತದೆ. ಒಬ್ಬಳೇ ಮಗಳು.. ಇವಳು ಹುಟ್ಟುವ ಸಮಯದಲ್ಲಿ ಹೆಣ್ಣು ಮಗುವಾ.....  ಎಂದು ಗುಣು ಗುಣಿಸಿದವರೂ ಇದ್ದಾರೆ.  ಹಾಗೆಂದು ಇವರಿಗೆ ಅಧೀರತೆ ಎನೂ ಇರಲಿಲ್ಲ ಯಾವುದಾದರೇನು ಭ್ರೂಣ ಮಾಗಿ ಅವಯವ ತುಂಬಿ ಮನುಷ್ಯ ರೂಪ ಪಡೆದಿಲ್ಲವೇ?
ಈಚಣ್ಣ ಒಂದು ಕ್ಷಣ ಹೊತ್ತು ಕಣ್ಣು ಮುಚ್ಚಿ
“ ನಿಮಿಗೆ ಗೊತ್ತುಂಟಲ್ಲ ಈಗ ಬೇರೆ ಒಂದು ಕಡೆ ಕೊಟ್ಟಿದ್ದೇನೆ ಜಾತಕ, ಆ ಮಾಣಿ  ದೊಡ್ಡ ಕಂಪೆನಿಯಲ್ಲಿ  ಒಳ್ಳೆ ಕೆಲಸದಲ್ಲಿ   ಬೇರೆ ಇದ್ದಾನೆ. ಬಹುಷಃ ಅಸ್ಟ್ರೇಲಿಯ ಇಂಗ್ಲಂಡೊ ..ಅಲ್ಲಿದ್ದಾನ. ಬಹುಶಃ ಮಗಳು ಕೂಡ ಅದನ್ನೇ ನೋಡಿಯಾಳು.”
ಭಟ್ಟರಿಗೆ ಇದೆಲ್ಲ ಮಾಮೂಲಿ ಮಾತುಗಳು. ಬ್ರಾಹ್ಮಣರ ಹುಡುಗಿಯರಿಗೆ ಈ ಮಾದರಿ ಡಿಮಾಂಡು ಬಂದಮೇಲೆ ಅವರು ಹೇಳಿದ್ದೇ ಮಾತು. ತಾನು ತಂದ ಹುಡುಗ ನಾಗೇಶನಿಗೆ ಕೆಲಸ ಹೇಳುವಂತಹುದು ಏನೂ ಇಲ್ಲ. ಹಾಗೆಂದು ಅವನಿಗೆ ಕೆಲಸ ಮಾಡಿ ಬದುಕುವ ಅನಿವಾರ್ಯತೆಯೂ ಇಲ್ಲ.  ಹತ್ತಿರದ ನಗರದಲ್ಲಿ ಎರಡು ಫ್ಲಾಟ್ ಬಾಡಿಗೆ, ಒಂದು ವ್ಯಾಪಾರ   ಮನೆಯಲ್ಲಿ ತೋಟ ಅದು ಇದು ಅಂತ.. ಇರುವ ಒಬ್ಬನೇ ಮಗ. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸಂಭಾವಿತ ಹುಡುಗ...
ಹೌದು ಹುಡುಗ ನಾಗೇಶನ ಬಗ್ಗೆ ಈಚಣ್ಣ ಚೆನ್ನಾಗಿ ಬಲ್ಲರು. ಬಹಳ ಸಾಧು. ತೀರ ಅಪರಿಚಿತ ಏನೂ ಅಲ್ಲ. ಆದರೂ ನಾನು ಸೋಲ ಬಾರದಲ್ಲ. ಸುನಂದ ಇತ್ತೀಚೆಗಷ್ಟೆ ಎಂ.ಬಿ. ಎ ಮುಗಿಸಿ ಇನ್ನೇನೋ ಕಲೀತಾ ಇದ್ದಾಳೆ. ಅವಳಿಗೂ ಆತುರ ಏನಿಲ್ಲ. ತನ್ನ ಕಾಲ ಮೇಲೆ ತಾನು ನಿಲ್ಲುವುದು ಮಾತ್ರವಲ್ಲ ಉತ್ತಮ ಭವಿಷ್ಯದ ಯೋಜನೆ ಹಾಕಿಬಿಟ್ಟಿದ್ದಾಳೆ. ಹಾಗೆ ಹೀಗೆ ಯೋಚಿಸುವ ಹುಡುಗಿಯಲ್ಲ. ತಾನು ಕಲಿತು ಕೆಲಸ ಹಿಡಿದು ತನ್ನ ವಿದ್ಯಾಭ್ಯಾಸಕ್ಕಾಗಿ ಅಪ್ಪ ಮಾಡಿದ ಸಾಲವನ್ನು ತೀರಿಸಿದ ನಂತರೆವೇ ಮದುವೆ ಬಗ್ಗೆ ಯೋಚನೆ ಮಾಡುವ ಅವಳ ಮನಸ್ಸು ಕಂಡಾಗ ಹೆಣ್ಣು ಮಗುವಾದರೇನಂತೆ ಎಷ್ಟೆಲ್ಲಾ ಯೋಚನೆ ಮಾಡ್ತಿದ್ದಾಳೆ. ಮದುವೆಯಾದ ಮೇಲೆ ತನ್ನ ಆದಾಯ ಅಪ್ಪನಿಗೆ ಸಲ್ಲಿಸುವಲ್ಲಿ ಅವಳಿಗೆ ವಿಶ್ವಾಸವಿರೆಲಿಲ್ಲ. ಇದನ್ನೆಲ್ಲ ಈ ಭಟ್ಟರಿಗೆ ಹೇಳುವುದಕ್ಕೆ ಆಗ್ತದೆಯೆ? ಆದರೂ ಭಟ್ಟರು ಬಿಡಲಾರರು. ಭಟ್ಟರು ಒಂದುವಾರದಿಂದ ಬೆನ್ನು ಹತ್ತಿ ಪೋನ್ ಮಾಡಿ ಇಂದಿನವರೆಗೆ ಕಾದಿದ್ದರು. ಇಂದು ಮೇಳದ ಆಟ ಇಲ್ಲಿ ಅಂತ ಗೊತ್ತಿದ್ದ ಕಾರಣ ಏನೂ ಹೇಳುವ ಹಾಗಿಲ್ಲ. ನಾಗೇಶನ ಮನೆ ಇರುವುದು ಇಲ್ಲೆ ಹತ್ತಿರ..!!!
ಪಂಚೆ ಎತ್ತಿ ಕಟ್ಟುತ್ತ ಭಟ್ಟರು ಹೊರಡುವ ಸೂಚನೆಯನ್ನು ತೋರಿಸಿದರು. ಈಚಣ್ಣನನ್ನೇ ನೋಡುವ ಮುಖಭಾವದಲ್ಲಿ ಹಲವಾರು ಭಾವ ಒಂದೇ ಸಲಕ್ಕೆ ಕಂಡ ಹಾಗಾಯಿತು. ನವರಸಗಳನ್ನೂ ರಂಗದಲ್ಲಿ ನಾಜೂಕಾಗಿ ಅಭಿವ್ಯಕ್ತಿಗೊಳಿಸುತ್ತಿದ್ದ ಈಚಣ್ಣನೂ ಆ ಭಾವ ಪ್ರಕಟನೆಗೆ ಬೆರಗಾಗಿ ಹೋದರು. ಅಂದು ಆಟ ಆಡಿಸಿದ ಶೆಟ್ಟರ ಮನೆಯ ಹಿಂದಿನ ಗುಡ್ಡ ಹತ್ತಿ ಇಳಿದು ಚಿಕ್ಕ ತೊರೆಯನ್ನು ಸಂಕವನ್ನು ದಾಟಿದರೆ ನಾಗೇಶನ ಮನೆಯ ಬೇಲಿಯ ದಣಪೆಯನ್ನು ದಾಟಬೇಕು. ಅಲ್ಲಿಂದ ಸ್ವಲ್ಪದೂರ ಅವರದೇ ತೋಟದ ಓಣಿಯಲ್ಲಿ ನಡೆದು ಆ ತುದಿಯಲ್ಲಿರುವ ದಣಪೆ ದಾಟಿದರೆ ಒಂದು ಮಣ್ಣಿನ ರಸ್ತೆ. ಇದು ಇತ್ತೀಚೆಗೆ ಆದ ರಸ್ತೆ. ರಸ್ತೆಯ ಕೂಗಳತೆಯಲ್ಲೆ ನಾಗೇಶನ ಮನೆ.
ಐದಾರುವರ್ಷ ಕೆಳಗೆ ತಂದೆ ವಾಸುಭಟ್ಟರು ತೀರಿ ಹೋದಮೇಲೆ ಒಬ್ಬನೇ ಮಗ ನಾಗೇಶನದ್ದೇ ಕಾರುಬಾರು. ಒಂದಷ್ಟು ತೋಟ ಕೃಷಿ ಹೈನು ಗಾರಿಕೆ ಹೀಗೆ ಸಾಕಷ್ಟು ಆದಾಯವಿತ್ತು.  ತಂದೆಗೆ ವಂಶಪಾರಂಪರ್ಯದಲ್ಲಿನ ಪಿತ್ರಾರ್ಜಿತ ಸಂಪತ್ತು ಸಾಕಷ್ಟು ಇದ್ದರೂ ನಾಗೇಶನಿಗೆ ಇದುವರೆಗೆ ಕೂಸು ದಕ್ಕಲಿಲ್ಲ.  ಒಂದಷ್ಟು ಸಮಯ ತಂದೆಯ ಅಗಲಿಕೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಳ್ಳುವುದಕ್ಕೆ ಸರಿಹೋದರೆ ಮತ್ತಷ್ಟು ಸಮಯ ಹೆಣ್ಣಿನ ಹುಡುಕಾಟಕ್ಕೆ ಸಂದಿತು. ಕಾಲದ ಪ್ರಭಾವವೋ ಬ್ರಾಹ್ಮಣ ಹುಡುಗಿಯರು ಬೆಂಗಳೂರು ಮುಂತಾದ ನಗರಕ್ಕೆ ಮುಖಮಾಡಿಯಾದ ಮೇಲೆ ನಾಗೇಶನಂತಹವರು ಆಯಾಚಿತವಾಗಿ ಬ್ರಹ್ಮಚರ್ಯಕ್ಕೆ ಮೊರೆ ಹೋಗುವಂತಹ ಅನಿವಾರ್ಯ ಸನ್ನಿವೇಶದಿಂದ ನಾಗೇಶನೂ ಬಂದದ್ದನ್ನು ಸ್ವೀಕರಿಸುವ ಮನೋಭಾವಕ್ಕೆ ಶರಣಾದ ಎನ್ನಬೇಕು. ಆದರೂ ಪ್ರಯತ್ನ ಬಿಡುವ ಹಾಗಿಲ್ಲ.
ಇಬ್ಬರೂ ತೋಟವನ್ನು ಹಾದು ದಣಪೆ ದಾಟಿ ಮಣ್ಣರಸ್ತೆಗೆ ಇಬ್ಬರೂ ಬಂದರು. ದೂರದಲ್ಲಿ  ನಾಗೇಶನ ಮನೆಯ ಗೇಟು ಆ ಬದಿಗೆ ನಿಂತ ಕಾರು ಕಂಡಿತು. ಕಾರಿನ ಪಕ್ಕವೇ ಹೊಸ ಬೈಕು ಕಂಡಿತು. ಇದು ರಸ್ತೆಗೆ ತೆರೆದು ಕಾಣುವಂತೆ ಇದ್ದಹಾಗೆ ಭಾಸವಾಯಿತು. ಅದಕ್ಕೆ ಕಾರಣವಿಲ್ಲದಿಲ್ಲ. ಮದುವೆ ಪ್ರಾಯದ ಗಂಡು ಮಗ ಬ್ರಾಹ್ಮಣರ ಮನೆಯಲ್ಲಿದ್ದರೆ ಆ ಮನೆಯ ಸಿರಿವಂತಿಕೆ ಅಲ್ಪ ಸ್ವಲ್ಪ ಹೊರಗೆ ಪ್ರದರ್ಶನವಾಗದಿದ್ದರೆ ಹೇಗೆ? ಗೇಟು ತೆರೆದು ಸೂಕ್ಷ್ಮವಾದ ದೃಷ್ಟಿಯನ್ನು ಬೀರುತ್ತ ನಿಧಾನವಾಗಿ ಮನೆಯ ಅಂಗಳಕ್ಕೆ ಬಂದು ನಿಂತಾಗ ಈಚಣ್ಣ ದಂಗಾಗಿ ಬಿಟ್ಟರು.
    
ಭಾಗ - ೨
ಪದವಿಲ್ಲದೇ ಅರ್ಥ ಹೇಳಿದಂತೆ ಮಾತಿನ ಮಲ್ಲ...ಮಾತೇ ಇಲ್ಲ ಎಂಬಂತಾಗಿಬಿಟ್ಟಿತು. ಹಳೆಯ ಜೀವನ ಚರಿತ್ರೆ ಪುಟಗಳು  ಧೂಳು ಕೊಡವಿಕೊಂಡು ಅಕ್ಷರಗಳು ಸ್ಪುಟವಾಗಿ ಗೋಚರಿಸತೊಡಗಿದವು. ಹೌದು, ಸುಮಂಗಲ ಒಂದು ಕಾಲದ ರೋಮಾಂಚನ ತುಂಬುವ ಅಕ್ಷರಗಳು ಈಗ ಆ ರೋಮಾಂಚನವನ್ನು ನೆನಪಿಗೆ ತಂದವು. .ಸ್ನಾನ ಮಾಡಿ ಒದ್ದೆ ಕೂದಲಿಗೆ ಬಿಳಿ ಬೈರಾಸನ್ನು ಬಿಗಿಯಾಗಿ ಕಟ್ಟಿ ಶುಭ್ರ ಮುಖದಲ್ಲಿ ಪ್ರಸನ್ನ ಭಾವದಿಂದ ಅಚ್ಹರಿಯ ಕಣ್ಣುಗಳಿಂದ ತನ್ನನ್ನೇ ನೋಡುತ್ತಿದ್ದಾಳೆ..ಫಳ ಫಳ ಹೊಳೆಯುವ ಕಣ್ಣಿನ ಹೊಳಪು  ಇನ್ನೂ ಹಾಗೆ ಇದೇ ..ಹೊಳಪಲ್ಲೂ ಸೂರ್ಯಕಿರಣಗಳು ಮಿಂಚುತ್ತಿವೆಯೇ? ತೇವಗೊಂಡ ಕಣ್ಣುಗಳ ತೇವ ಇನ್ನೂ ಆರಿಲ್ಲವೇ? ಎಲ್ಲವೂ ಕ್ಷಣ ಚಿತ್ತದ ಭಾವಗಳು. ಆದರೆ  ಈಗ ಆ ಮನೋಭಾವದ ಕಿಂಚಿತ್ ಆದರೂ ಮುಖದಲ್ಲಿ ವ್ಯಕ್ತವಾದರೆ ಅಸಭ್ಯ ಎನಿಸಲಾರದೆ? ಯಾವ ವಿಪರೀತ  ಕಲ್ಪನೆಯೂ ಇಲ್ಲದ ಒಂದು ಸಾಮಾನ್ಯ ಭಾವ...ಸಂಸ್ಕೃತರಿಗೆ ಮಾತ್ರ ಸಾಧುವೇನೋ?  ಹಾಗಾಗಿ  ಪರಿಚಯದ ನಗೆ ನಕ್ಕು  ಪಡಸಾಲೆಯ ಕುರ್ಚಿಯಲ್ಲಿ ಕುಳತುಕೊಳ್ಳಲು ಅಣಿಯಾದಾಗ ಇಲ್ಲಿ ಬೇಡ ಒಳಗೆ ಬನ್ನಿ ಎಂದು ಅತ್ಮೀಯ ಭಾವದಿಂದ ಒಳಗೆ ಕರೆದ ಸುಮಂಗಲಳನ್ನು ಹಿಂಬಾಲಿಸಿ  ಮನೆಯ ಒಳಗೆ ನಡೆದರು. ಅದು ಹೌದು ಭಾವಗಳು ಸಂಸ್ಕಾರದ ಅಚ್ಚಿನಲ್ಲಿ ಎರಕ ಹೊಯ್ಯಲ್ಪಡುತ್ತವೆ. ಅಸಹಜವೇ ಸಹಜವಾಗಿರುವ ಸಂಸ್ಕಾರವೇ ಇದಕ್ಕೆ ನಿದರ್ಶನ. ಬಹಿರಂಗವಾಗುವ ಭಾವ ಹೇಗೆ ಸಂಸ್ಕಾರವನ್ನು ಅವಲಂಭಿಸದೇಯೋ ಅಂತರಂಗದ ಭಾವವೂ ಅದನ್ನೆ ಅವಲಂಬಿಸಿದೆ. ಕೆಲವೆಲ್ಲ ಕಲ್ಪಿಸುವುದೂ ಅಪರಾಧ ಎಂದು ಅನಿಸುತ್ತದೆ.  ತಾಯಿಯಲ್ಲಿ ಕಲ್ಪಿಸಲಾಗದೇ ಇದ್ದದ್ದನ್ನು ಸಹಧರ್ಮಿಣಿಯಲ್ಲಿ ಕಲ್ಪಿಸಿದ ಹಾಗೆ. ಮನಸ್ಸನ್ನು ರೂಪಿಸುವ ಸಂಸ್ಕಾರದ ನಿಯಂತ್ರಣ ವಿಚಿತ್ರ ಎನಿಸಲ್ಪಡುತ್ತದೆ. ನಿತ್ಯವೂ ರಾತ್ರಿಯಾಗುತ್ತಿದ್ದಂತೆ ನಶೆ ಏರಿಸುತ್ತಿದ್ದ ತಮ್ಮ ಸಹವರ್ತಿಗೆ ಒಂದು ಸಲ ಉಪದೇಶ ಮಾಡಿ ಹೇಳಿದ್ದು ವಿಚಿತ್ರ ಆದರೂ ಪರಿಣಾಮಕಾರಿಯಾಗಿತ್ತು. ಸಾಯಂಕಾಲದ ಹೊತ್ತು ಸ್ನಾನ ಮಾಡಿ ಶುಚಿಯಾಗಿ .ಬಿಳಿ ಪಂಚೆಯನ್ನು ಧರಿಸು.... ಸ್ನಾನ ಮಾಡಿ ಶುಚಿಯಾದ ದೇಹ ಮನಸ್ಸಿಗೆ ಮುದವನ್ನು ನೀಡಿದರೆ ಆ ಮುದವನ್ನು ಬಿಳಿ ವಸ್ತ್ರ ಕಾಪಿಡುತ್ತದೆ. ಮಾತ್ರವಲ್ಲ ಬಿಳಿ ವಸ್ತ್ರ ಉಟ್ಟು ಹೆಂಡದಂಗಡಿ ಹೊಕ್ಕುವುದು ಅಸಹಜವೆನ್ನಿಸುತ್ತದೆ. ಅಥವ ಶುಭ್ರವಾದ ನಂತರ ತೂರಾಡುವುದು ಒಂದು ರೀತಿಯಲ್ಲಿ ಕಿರಿ ಕಿರಿಯೇ ಅನ್ನಿಸಿಬಿಡುತ್ತದೆ. ಶುಭ್ರವಾಗಿ ಆದ ಮುದವಾದ ಅನುಭವ ಮತ್ತೆ ಬಿಳಿವಸ್ತ್ರ ಅದರಿಂದ ಹೊರ ಬಾರದ ಇಕ್ಕಟ್ಟಿಗೆ ತಂದು ಸಿಲುಕಿಸುತ್ತದೆ. ಈ ದ್ವಂದ್ವದಲ್ಲಿ ಆ ಸಮಯ ಕಳೆಯುತ್ತದೆ... ಮತ್ತೆ ಬೇರೆ ಇನ್ನೆನಾಗಬೇಕು ಸಂಸ್ಕಾರ ರೂಪುಗೊಳ್ಳುವ ಬಗೆ ಅದು.
     ಛೇ ಘಳಿಗೆಯೊಳಗೆ ಮನಸ್ಸು ಯಾವೆಲ್ಲ ಯೋಚನೆ ಮಾಡಿತಲ್ಲ. ಅಷ್ಟರಲ್ಲಾಗಲೇ ಒಳಗೆ ಬಂದಾಗಿತ್ತು. ಅದು ಅಡುಗೇ ಮನೆಯ ಪಕ್ಕದ ಹಜಾರ.  ಬಹುಷಃ  ತೀರ ಆತ್ಮೀಯ ಬಂಧುಗಳಿಗೆ ಮಾತ್ರ ಅಂತರಂಗದ ಗೃಹದ ಒಳಗೆ ಪ್ರವೇಶ.  ಈಚಣ್ಣ ಬಂಧು ಎಂಬ ಅಂಗೀಕಾರವೇ? ಈಚಣ್ಣನಿಗೆ ಹಾಗೆ ಅಂದುಕೊಳ್ಳುವುದಕ್ಕೆ ಕಾರಣವಿತ್ತಲ್ಲ?

     ಆಗಿನ್ನು ಹದಿ ಹರಯವನ್ನು ಮೀರಿದ ವಯಸ್ಸು. ಶಾಲೆಯಲ್ಲಿದ್ದಾಗಲೇ ಸಾಕಷ್ಟು ಯಕ್ಷಗಾನ ತರಬೇತಿಯಾಗಿದ್ದ ತಾನು ಬಾಲಕರಲ್ಲಾಗಲೇ ಪ್ರಸಿದ್ದ ಕಲಾವಿದನಂತಾಗಿದ್ದದ್ದು. ಶಾಲೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತನ್ನ ಅಂಗ ಪ್ರಾಧಾನ್ಯತೆಯನ್ನು ಪಡೆದದ್ದು.... ನೆರೆಕೆರೆ, ನಿತ್ಯ ಪರಿಚಿತರಂತಹ ಮನೆಯಿಂದ ತಾನು ಮತ್ತು ಸುಮಂಗಲ ಒಂದೇ ಹಾದಿಯಲ್ಲಿ ಶಾಲೆಯ ಹಾದಿಯಲ್ಲಿ ಪಯಣಿಗರಾಗಿ ಅದು ಹೇಗೋ ಆತ್ಮೀಯತೆ,  ಸಲುಗೆ ಬೆಳೆದದ್ದು. ಅಷ್ಟಿಷ್ಟು ಯಕ್ಷಗಾನದ ಅಭಿರುಚಿ ಆಕೆಯಲ್ಲಿ ತರಿಸಿ ಆಕೆಗೆ ಪ್ರಾಥಮಿಕ ಗುರುವಾದದ್ದು, ಅದು ಬಾಲ್ಯದ ದಿನಗಳಾದರೂ ಅದಕ್ಕೂ ಒಂದು ಅರ್ಥವಿದೆ ಎಂದು ಹಲವು ಸಲ ಅನ್ನಿಸಿದ್ದಿದೆ. ಅವಾಗ ಅಲ್ಲದಿದ್ದರೂ ಹದಿ ಹರಯ ದಾಟಿದ ನಂತರ ವಯೋಸಹಜವಾಗಿ ಆತ್ಮೀಯತೆ ಸಲುಗೆಯ ರೂಪವೇ ಬದಲಾಗಿ ಹೋದದ್ದು ಎಲ್ಲ ನಿಮಿತ್ತದಂತೆ ಆಗ ಅನಿಸಿತ್ತು.

     ಹೈಸ್ಕೂಲು ಮುಗಿಸಿ ಆಕೆ ಮುಂದಿನ ಶಿಕ್ಷಣಕ್ಕೆ ಇನ್ನೂ ಪ್ರೌಢೆಯಾಗಿ ಕಾಲೇಜು ಹೋಗ ತೊಡಗಿದರೂ ತಾನು ಹೈಸ್ಕೂಲು ಫೇಲ್ ಆಗಿ.. ಮುಂದೆ ಯಕ್ಷಗಾನವನ್ನೇ ಗಟ್ಟಿ ಮಾಡಿಕೊಂಡದ್ದು ಬಾಲ್ಯದ ಕನಸುಗಳೆಲ್ಲ ಯಕ್ಷಗಾನದ ವೇಷಗಳಂತೆ ಭಾಸವಾಗತೊಡಗಿತು. ಹೌದಲ್ಲ? ತಮ್ಮ ನಡುವಿನ ಪ್ರೀತಿಯಲ್ಲಿ ಅರ್ಥವಿತ್ತು.. ಆದರೆ ತನ್ನ ಜೇಬು ಎಂದೂ ಅರ್ಥವಿಲ್ಲದೇ ಜೀವನ ಅರ್ಥವನ್ನು ಮನವರಿಕೆ ಮಾಡಿಸುತ್ತಿತ್ತು. ಯಕ್ಷಗಾನದಲ್ಲಿ ಸಹಜವಾಗಿ ಒಂದೊಂದಾಗಿ ಸಿದ್ಧಿ ಸಾಧನೆಗಳು ರಂಗಸ್ಥಳದ ಒಡ್ಡೋಲಗದಂತೆ ಕಳೆ ಕಟ್ಟತೊಡಗಿದರೂ. ಭಲ್ಲಿರೇನಯ್ಯಾ ಎಂದು ತೊಡಗಿಸುವ ಮಾತು ನಿಜ ಜೀವನದಲ್ಲಿ ಅರ್ಥವನ್ನೇ ತರಲಿಲ್ಲ. ಯಕ್ಷಗಾನದಲ್ಲೂ ಹಾಗೆ ಕೆಲವು ಪದಗಳಿಗೆ ಅರ್ಥವೇ ಇಲ್ಲ!! ಅರ್ಥ ಎಂದರೆ ಅಲ್ಲಿ ಅರ್ಥ ಹೇಳುವುದಕ್ಕಿಲ್ಲ. ಸಂದರ್ಭೋತವಾಗಿ ಪದವನ್ನು  ಮಾತ್ರ ಭಾಗವತರು ಹಾಡಿ ಮುಂದಿನ ಹಂತಕ್ಕೆ ದಾಟಿಸುತ್ತಾರೆ.  ಒಂದು ವೇಳೆ ಅರ್ಥವನ್ನು ಹೇಳಿದರೂ ಅದು ಅಭಾಸವಾಗಿಬಿಡುತ್ತದೆ. ಅರ್ಥವೇ ಅರ್ಥವನ್ನು ಕಳೆದುಕೊಳ್ಳುತ್ತದಲ್ಲ ಎಂದು ಸಲ ವಿಡಂಬನೆಯಿಂದ ಸಂವಾದಿಸಿದ್ದು ಉಂಟು. ಆದರೆ ಅರ್ಥವಿಲ್ಲದ ಪದಗಳು ಅರ್ಥವಿಲ್ಲದೇ ಸಂದರ್ಭಕ್ಕೆ ಮತ್ತು ಕಥೆಗೆ ಅರ್ಥವನ್ನು ಕೊಡುತ್ತಿತ್ತು. ಅಲ್ಲಿ ಶೂನ್ಯಾರ್ಥವಾಗಿ ಅರ್ಥವನ್ನು ಕೊಡುತ್ತಿದ್ದದ್ದು ನಿಜ ಜೀವನದಲ್ಲಿ ಮಾತ್ರ ವಿಪರ್ಯಾಸವನ್ನೇ ಬಿಂಬಿಸತೊಡಗಿತ್ತು.  ಕೈಯಲ್ಲಿ ಅರ್ಥವಿಲ್ಲದಿದ್ದರೂ ಅರ್ಥಪೂರ್ಣ ಪ್ರೀತಿಗೆ ಕೊರತೆ ಇರಲಿಲ್ಲ. ಆದರೂ ಇಲ್ಲಿ ಇದ್ದ ಶೂನ್ಯಾರ್ಥ ಮತ್ತೂ ಶೂನ್ಯತೆಯನ್ನೇ ಬಿಂಬಿಸುವುದು ವಿಪರ್ಯಾಸವಲ್ಲವೇ.?
  ಬಹುಶಃ ಪ್ರೀತಿ ಗಾಢವಾಗುವುದು ಅಂತಹ ಸಂದಿಗ್ಧಾವಸ್ಥೆಯಲ್ಲೇ ಇರಬೇಕು. ಅನನುಕೂಲ,  ಪ್ರತಿಕೂಲ , ಪ್ರತಿರೋಧ ಇದ್ದಾಗಲೇ ನಮ್ಮೊಳಗಿನ ಕಥಾ ನಾಯಕತ್ವ ಆವೇಶಗೊಳ್ಳುವುದು. ಪ್ರತಿಯೊಬ್ಬರೂ ಅವರವರ ಬದುಕಿನ ಕಥೆಗೆ ಅವರೇ ನಾಯಕನೋ ನಾಯಕಿಯೋ ಆಗಿರುತ್ತಾರಲ್ಲ?  ಅತ್ಯಂತ ಉತ್ಕಟವಾದ ಪ್ರೇಮಾಚರಣೆಯಲ್ಲಿ ನಾವುಗಳು ಒಂದಾಗಿದ್ದೇವೆ ಭ್ರಮೆ ಆವರಿಸಿಕೊಳ್ಳುವುದು. ಎಲ್ಲ ವಯೋಸಹಜವಾದ ಮೌಢ್ಯ ಎಂದು ಈಗ, ಇಷ್ಟು ದೂರ ಸಾಗಿ ಬಂದ ಮೇಲೆ ಅನ್ನಿಸುವುದಿದೆ. ಹಸಿವೆಯಲ್ಲೋ, ಹೊಟ್ಟೆತುಂಬಿಯೋ ದುಃಖದಲ್ಲೋ ಸಂತಸದಲ್ಲೋ ಅಂತು ದಿನದ ಪ್ರತಿ ಘಳಿಗೆಯೂ ಸ್ವಲ್ಪ ಸ್ವಲ್ಪವಾಗಿ ಕಳೆದು ಹೋಗುತ್ತಿರುವಾಗ ಆನುಭವಿಸುವ ವರ್ತಮಾನದ ಸಮಯದ ಮೌಲ್ಯ ಅರಿವಾಗುವುದಿಲ್ಲ. ಇದ್ದ ಸ್ಥಿತಿಯೇ ಸ್ಥಾಯೀಭಾವವಾಗಿಬಿಡುತ್ತದೆ.

     ಹೌದಲ್ಲ..?  ತಾನು ಚಿಂತಿಸುವಾಗಲೂ ಯಕ್ಷಗಾನದ ಪಾತ್ರವಾಗುತ್ತಿದೇನೆಯೇ? ಮನದೊಳಗೇ ನಕ್ಕರು ಈಚಣ್ಣ.   ಆದರೆ ತನ್ನ ಪ್ರೇಮ ಸಂಪೂರ್ಣವಾಗಿ ಅರ್ಥವನ್ನು ಕಳೆದುಕೊಂಡದ್ದು ತಾನೊಬ್ಬ ಯಕ್ಷಗಾನ ಕಲಾವಿದನಾಗಿ ರೂಪುಗೊಂಡ ಕಾರಣ, ಆಟದವನಿಗೆ ಕೂಸನ್ನು ಕೊಡಲಾರೆ ಎಂದು ಸುಮಂಗಲಳ ಅಪ್ಪ ಛಲತೊಟ್ಟಾಗ ಬಹಳಷ್ಟು ಭ್ರಮನಿರಸನ ಗೊಂಡಿದ್ದರು. ಆವರೆಗೆ ತಪಸ್ಸು ಎಂದು ತಿಳಿದ ಯಕ್ಷಗಾನದ ಹಾದಿಯೂ ವೈಫಲ್ಯದ ದರ್ಶನವನ್ನೇ ಮಾಡಿಸಿತಲ್ಲ? ಯಕ್ಷಗಾನದ ವೇಷ ಭೂಷಣಗಳು ಕಳಚಿ ಬಿಚ್ಚಿಟ್ಟರೂ ಸಹ ಮತ್ತೂ ಅದು ಮತ್ತೊಂದು ರೂಪದಲ್ಲಿ  ಮೈಗೆ ಅಂಟಿಕೊಂಡು ಅಣಕಿಸಿದಂತೆ ಭಾಸವಾಗಿತ್ತು. ರಂಗಸ್ಥಳದಿಂದ ದೂರವಾದಾಗ ಬಣ್ಣ ಕಳೆದುಕೊಂಡ ವೇಷದಂತೆ, ವಜ್ರ ವೈಢೂರ್ಯ ಅಭರಣಗಳು ಹೊಳಪನ್ನು ಕಳೆದುಕೊಂಡಂತೆ ಬದುಕೂ ವೇಷ ಕಳಚಿ ನಿಂತು ಬಿಟ್ಟಿತಲ್ಲ?  ಸಂಸಾರಿಕ ಬದುಕಿಗೆ ಆಟದವನು ಸಲ್ಲುವುದಿಲ್ಲವೇ? ಆಟದವನೆಂದರೆ ವೇಷವೂ ಇಲ್ಲ ಪಾತ್ರೆವೂ ಇಲ್ಲ.  ಬರೀ ಆಟದ ನೋಟಿಸಿನಲ್ಲಿ ಮುದ್ರಿಸಿದ ಹೆಸರು ಮಾತ್ರವೇ ಆಗಿಹೋಯಿತು. ಸುಮಂಗಲ ಅನ್ಯರಿಗೆ ಮಂಗಲವಾಗಿ ಪರಿಣಮಿಸಿ ಅರ್ಥಹೀನತೆಯೇ ಬದುಕಿನ ಅರ್ಥ ಎಂದು ತೋರಿಕೊಟ್ಟ ಮೇಲೆ  ವಿಶ್ವಾಮಿತ್ರ ತಪಸ್ಸಿಗೆ ಕುಳಿತಂತೆ ಈಚಣ್ಣ ಸ್ತಿತ ಪ್ರಜ್ಞರಾಗಿರಾಗಿಬಿಟ್ಟರು. ಸುಮಂಗಲ ಎಂತಿದ್ದರೂ ಪರಕೀಯಳೇ. ವೈರಾಗ್ಯವೋ ಮತ್ಸರವೋ ಆಕೆಯ ಗಂಡನ ಹೆಸರೂ ಸಹ ಅಪರಿಚಿತವಾಗಿಯೇ ಉಳಿದುಕೊಂಡಿತು.  
ಭಾಗ – ೩

     ಅಕ್ಷರಶಃ ಸತ್ಯವಾಗಿದ್ದದ್ದು ಮನಸ್ಸನ್ನು ಉಲ್ಲಸಿತಗೊಳಿಸಿತ್ತು. ಹೌದು,  ಅಂದು ನೇಪಥ್ಯಕ್ಕೆ ಸರಿದು ಚೌಕಿಗೆ ಸೇರಿ ಮರೆಯಾದ ಪಾತ್ರ ಇಂದು ವೇಷ ಕಳಚದೇ  ಪ್ರತ್ಯಕ್ಷವಾಗಿಬಿಟ್ಟಿತ್ತು. ಇನ್ನೂ ತನ್ನ ಬಗ್ಗೆ ನೆನಪನ್ನೂ ಆ ಮಧುರ ಸ್ಮೃತಿಯನ್ನು ಹೃದಯದ ಅಂಚಿನಲ್ಲಿ ಇಟ್ಟಿರಬಹುದೇ? ಹಾಗಾಗಿಯೇ ಈಚಣ್ಣ ಅಂದುಕೊಂಡರು ವೇಷ ಇನ್ನೂ ಕಳಚಿಲ್ಲ. ಪಾತ್ರ ಬದಲಾಗಿಲ್ಲ. ಮಧುರಸ್ಮೃತಿ...!! ತೆಲೆ ಕೊಡವಿಕೊಂಡರು ಈಚಣ್ಣ. ತಪ್ಪು ಇದು, ಈಗ ಅದು ಮಧುರ ಸ್ಮೃತಿ ಎನ್ನಲಾಗದು. ಒಂದೇ ಪ್ರಸಂಗದ ಬದಲಾದ ವೇಷದಂತೆ ತನ್ನ ದೃಷ್ಠಿಕೋನವನ್ನು   ಬದಲಿಸಿಕೊಳ್ಳಬೇಕು. ನಿರ್ವಿಕಾರದಿಂದ ಕುಳಿತುಬಿಟ್ಟರು.
     ಆದರಿಸಿ ಉಪಚರಿಸುತ್ತಾ ಮಾತಿನ ಮಧ್ಯೆ ಅನೌಪಚಾರಿಕ ಎಂಬಂತೆ ಸುಮಂಗಲ ವಸ್ತುಸ್ಥಿತಿಯನ್ನು ವಿವರಿಸತೊಡಗಿದಳು. ಹಾಗೆ ನೋಡಿದರೆ ಈಕೆಯ ಮಗ ನಾಗೇಶನ ಬಗ್ಗೆ ಅಲ್ಪ ಸ್ವಲ್ಪ ಅರಿವಿದ್ದರೂ ಅದು ಈಕೆಯ ಮಗನೆಂಬ ಅರಿವಿರಲಿಲ್ಲ. ಬ್ರಾಹ್ಮಣರಲ್ಲಿ ಗಂಡು ಹೆತ್ತ ತಂದೆ ತಾಯಿಗಳ ಸಾಮಾನ್ಯ ಸಮಸ್ಯೆಯೇ ಅವಳದ್ದಾಗಿತ್ತು. ಲೋಕಕ್ಕೆ ಸಾಮಾನ್ಯವಾದರೂ ಅದರ ಗಂಭೀರತೆಯ ಅರಿವಾಗುವುದು ಅದು ಅನುಭವಕ್ಕೆ ಬಂದ ಮೇಲೆ. ಗಂಡು ಮಗ ಬೆಳೆದು ಬೆಳೆದು ವೃದ್ದ ಬ್ರಹ್ಮಚಾರಿಯಾಗುವ ಎಲ್ಲಾ ಲಕ್ಷಣಗಳು ಇರುವಾಗ ಹೆತ್ತವರ ಮುಖದಲ್ಲಿ ಹತಾಶೆಯ ರೇಖೆಗಳು ಒಂದೊಂದಾಗಿ ಎಳೆಯಲ್ಪಡುತ್ತವೆ.   ಹೆಣ್ಣು ಹೆತ್ತವರು ಮಾತ್ರವಲ್ಲ ಹೆಣ್ಣುಗಳು ಕೂಡ ನಗರದ ಹಾದಿಯನ್ನೇ ಇದಿರು ನೋಡಿದರೆ ಮೊದಲೇ ವೃದ್ಧಾಶ್ರಮ ಸದೃಶವಾದ ಹಳ್ಳಿಯಲ್ಲಿ ಕೌಟುಂಬಿಕ ವಾತಾವರಣದ ಆ ತಂಗಾಳಿ ಒಣಹವೆಯಾಗಿಯೇ ಬಿಸುಸುಯ್ಯಲಾರದೇ? ಹಳ್ಳಿಯಲ್ಲಿ ಅರಳಿದ ಹೂವಿಗೆ ಗಂಧವಿದ್ದರೂ ದುಂಬಿಬಾರದೆ, ದೂರದ ನಗರದ ಕೃತಕ ಹೂವಿಗೆ ಮುತ್ತಿಕ್ಕತೊಡಗಿವೆ. ನಗರದಲ್ಲಿ ಇದೇ ದುಂಬಿಗೆ ಮತ್ತೆ ನೊಣದ ಬದುಕಾದರೂ ಅಡ್ದಿಲ್ಲ ಊರು ಬೇಡವಾಗಿದೆ.
     ಈಚಣ್ಣ ಒಂದು ಕ್ಷಣ ವಿಚಲಿತರಾದರು. ಏನು ಪ್ರತಿಕ್ರಿಯಿಸಲಿ? ಹೆಣ್ಣು ಹೆತ್ತವರ ಬಗ್ಗೆ ಸಾರ್ವತ್ರಿಕ ಅಭಿಪ್ರಾಯವನ್ನು ವಿಮರ್ಶಿಸುವ ಅಗತ್ಯ ಕಾಣಲಿಲ್ಲ. ಇದು ಒಂದು ರೀತಿಯ ಸ್ಥಿತ್ಯಂತರ ಅಷ್ಟೇ. ಒಂದು ಕಾಲದಲ್ಲಿ ಗಂಡು ಮಕ್ಕಳ ಮಾತಾಪಿತೃಗಳೂ ಇದೇ ರೀತಿ ನಡೆದಿಲ್ಲವೆ? ತಾನಾದರೂ ಏನು ಹೇಳಬಹುದು? ಅವರ ಮನಸ್ಸು ಎಂದೂ ಇಷ್ಟು ಆಳಕ್ಕೆ ಚಿಂತಿಸಿರಲಿಲ್ಲ. ಹುಡುಗ ಯಾರಾದರೇನು? ತನ್ನ ಮಗಳ ಹೆಣೆಯಲ್ಲಿ ಚಿಂತೆಯ ನೆರಿಗೆಗಳು ಮೂಡದೇ ಆಕೆ ಸುಖಿಯಾಗಿದ್ದರೆ ಸಾಕು.ಇದನ್ನು ತೋರಿಕೊಡುವುದಾದರೂ ಹೇಗೆ?
            ಈಚಣ್ಣನ್ನಲ್ಲಿ ಈ ಭಟ್ರ ಹೆಂಗಸು ಹೀಗೆ ಮಾತನಾಡುವುದು ನಾರು ಭಟ್ಟರಿಗೆ ಆಚ್ಚರಿ ತಂದರೂ ಮತ್ತೆ ಅಂದುಕೊಂಡರು ಆಟದವರು ಎಲ್ಲಿ ಹೋದರೂ ತುಂಬ ಫೇಮಸ್ಸು.
 ಬಿಸಿ ಬಿಸಿ ದಪ್ಪ ಹಾಲಿನಲ್ಲಿ ಮಾಡಿದ ಚಹವನ್ನು ಕಂಚಿನ ಲೋಟದ ಜತೆಗೆ ಇನ್ನೊಂದು ಲೋಟದಲ್ಲಿ ತಂದಿಟ್ಟ ಸುಮಂಗಲ ಬಿಸಿ ಇದೆ ಆರಿಸಿಕೊಳ್ಳಿ ಎಂದು ಸೊಂಟದ ಮೇಲೆ ಕೈಯಿಟ್ಟು ದೂರ ನಿಂತುಕೊಂಡಳು.  ಚಹದ ಮಧುರ ಪರಿಮಳ. ಮೂಗಿಗೆ ಬಡಿಯಿತು. ಬಿಸಿ ಬಿಸಿ ಚಹ ಸೇರುತ್ತಿದ್ದಂತೆ ನಾರು ಭಟ್ಟರು ನಾಗೇಶನನ್ನು ವಿಚಾರಿಸತೊಡಗಿದರು. ಆದರೆ ಸುಮಂಗಲ ಅದಕ್ಕೆ ಗಮನ ಕೊಡದೆ ಈಚಣ್ಣನ ಸಂಸಾರ ಚರಿತ್ರೆಯೊಂದಿಗೆ ವಂಶ ಪರಂಪರೆಯ ಬಗ್ಗೆ ಮಾತನಾಡ ತೊಡಗಿದಳು. ತಾಯಿ ಅಕ್ಕ ನಾದಿನಿ ಹೀಗೆ ತನ್ನ ಓರಗೆಯವರಾಗಿದ್ದ ವ್ಯಕ್ತಿಗಳ ವಿಚಾರದತ್ತವೇ ಮಾತುಕತೆ ಗಿರಕಿಯಾಡಿದಾಗ ನಾರು ಭಟ್ಟರು ಪುನಃ ನಾಗೇಶನ ಬಗ್ಗೆ ಕೇಳಿದರು. ಅವರಿಗಾಗಲೇ ಗಾಬರಿಯಾಗಿಬಿಟ್ಟಿತ್ತು. ಇವರು ಇಷ್ಟು ಪರಿಚಿತರಾದರೆ ತಮ್ಮ ದಲ್ಲಾಳಿ ಕಮೀಷನ್ ಗೆ ಡಿಸ್ಕೌಂಟು ಮಾಡಬೇಕಾದಿತೋ ಏನೋ?
ಅಷ್ಟರಲ್ಲಾಗಲೇ ಡೈರಿಗೆ ಹಾಲು ಹಾಕಲು ಹೋಗಿದ್ದ ನಾಗೇಶ ಬಂದು ಬಿಟ್ಟ. ಎತ್ತರ ದೃಢಕಾಯದದ ನಾಗೇಶ ಅದಾಗಲೇ ಸ್ನಾನ ಮಾಡಿದ ದ್ಯೋತಕವೆಂಬಂತೆ ಮುಖದಲ್ಲಿ ಗೋಪೀಚಂದನದ ಬೊಟ್ಟು ವಿರಾಜಿಸುತ್ತಿತ್ತು. ಅವನ ಆಗಮನದೊಂದಿಗೆ ವಿಚಾರಗಳ ಮಹಾ ಪ್ರವಾಹವೇ ಬಂದಂತಾಯಿತು. ರಾಜಯಕೀಯ ಯಕ್ಷಗಾನ  ಕ್ರೀಡೆ ಹೀಗೆ ಉದಯವಾಣಿ ಪುಟಗಳನ್ನು ತಿರುಗಿಸಿದಂತಾಯಿತು. ಈ ನಡುವೆ ಶುಭ್ರವಾದ ಬೈರಾಸು ಪಂಚೆಯನ್ನು ಸುಮಂಗಲ ಹತ್ತಿರ ತಂದಿಟ್ಟು ಸ್ನಾನದ ಅವಕಾಶವನ್ನೂ ಉಪಚಾರದಲ್ಲಿ ಸೇರಿಸಿಬಿಟ್ಟಳು. ನಾರು ಭಟ್ಟರು ಒಂದು ರೀತಿ ತಳ ಮಳ ಅನುಭವಿಸುವುದನ್ನು ಕಂಡ ಸುಮಂಗಲ ಈಚಣ್ಣನಲ್ಲಿ ಹೇಳಿಯೇ ಬಿಟ್ಟಳು ಇವತ್ತು ಮಧ್ಯಾಹ್ನದ ಊಟ ಕೊಟ್ಟೇ  ನಿಮ್ಮನ್ನು ಬಿಡುವುದು ಎಂದು.
ಸುಮಂಗಲನ ಉಪಚಾರ ಎಂದ ಮೇಲೆ ಈಚಣ್ಣನ ದಾಕ್ಷಿಣ್ಯ ತುಸು ಹಾರಿಹೋದಂತಾಯಿತು. ಬೈರಾಸು ಪಂಚೆ ತೆಗೆದುಕೊಂಡು ಬಚ್ಚಲು ಎಲ್ಲಿ?  ಎಂದು ಕೇಳಿದಾಗ ಸಂಭಾಷಣೆಯ ಪ್ರವಾಹದ ವೇಗ ಕಡಿಮೆಯಾಯಿತು.
ಹಳ್ಳಿಯ ತೋಟದ ಮನೆಯಾದರೂ ಸ್ನಾನ ಮನೆ ಬಹಳ ಅಚ್ಚುಕಟ್ಟಾಗಿ ಶುಭ್ರವಾಗಿತ್ತು. ಬಿಸಿನೀರು ತಣ್ಣೀರು ಹೀಗೆ ವಿಶಾಲವಾದ ಸ್ನಾನದ ಕೋಣೆ ನೋಡಿ ಸ್ನಾನ ಒಂದಷ್ಟು ಹಿತಕರವಾಗಿಯೇ ಇತ್ತು. ಸ್ನಾನ ಮುಗಿಸಿ ದೇವರಕೊಣೆಯಲ್ಲಿ ಒಂದಷ್ಟು ಆಚಮನ ಮುಗಿಸಿ ಬಂದಾಗ ತುಂಡು ಬಾಳೆ ಎಲೆ ಮತ್ತು ಮಣೆ ಇಟ್ಟು ಸುಮಂಗಲ ತಿಂಡಿಗಾಗಿ ಕಾಯುತ್ತಿದ್ದಳು.  ಅವಲಕ್ಕಿ ಉಪ್ಪುಕರಿ  ಮತ್ತು ಮೊಸರು. ಒಂದೆರಡು ಕದಳಿ ಬಾಳೆ ಹಣ್ಣು. ...ನಾರು ಭಟ್ಟರು ಅದಾಗಲೆ ಕುಳಿತು ಶುರು ಹಚ್ಚಿಯಾಗಿತ್ತು.  ಕೆಂಪು ಕಂಪು ಅವಲಕ್ಕಿ ಉಪ್ಪುಕರಿ ನೋಡುತ್ತಿದ್ದಂತೆ ಬಾಲ್ಯದ ಸುಮಂಗಲನ ಬುತ್ತಿಪಾತ್ರೆ ಮತ್ತೆ ನೆನಪಾಯಿತು. ಬಹುಶಃ ಅದೇ ಬುತ್ತಿ ಪಾತ್ರೆಯ ಉಪ್ಪುಕರಿಯಾಗಿರಬಹುದೋ ಎಂಬ ಸಂದೇಹ.  ಶಾಲೆಗೆ ಹೋಗುವ ದಾರಿ ಮಧ್ಯೆ ಆಕೆಯಲ್ಲಿ ಗೋಗರೆದು ರುಚಿನೋಡುತ್ತಿದ್ದದ್ದು ನನಪಾಗಿ ಉಪ್ಪುಕರಿಯ ರುಚಿನೋಡುವುದಕ್ಕೆ ಉತ್ಸಾಹ ಮೂಡಿಬಂತು.
ಹುಳಿ ಮೊಸರು ಮತ್ತುಉಪ್ಪುಕರಿಯ ರುಚಿ ನೋಡುತ್ತಿದ್ದಂತೆ ತುಸು ದೂರದಲ್ಲಿ ನೆಲದ ಮೇಲೇನೆ ಕುಳಿತುಬಿಟ್ಟಳು ಸುಮಂಗಲ. ತನ್ನ ಹುಳಿ ಮಜ್ಜಿಗೆ ಮೊಸರಿನ ಪ್ರೀತಿ ಈಕೆಗೆ ಈಗಲೂ ನೆನಪಿದೆ ಎಂದುಕೊಂಡರು.   ತನ್ನ ಗಂಡನ ಕುಟುಂಬ ವೃತ್ತಿ ಬಂಧು ಬಳಗ ಹೀಗೆ ಹಲವು ಸುತ್ತಿ ಬಳಸಿದ ಕಥೆಗಳು ಹೇಳುತ್ತಾ ಸಾಗಿದಳು. ಗಂಡನ ಅಗಲಿಕೆಯ ನಂತರ ಒಬ್ಬನೇ ಮಗ ಯಾವುದೇ ಕೆಟ್ಟ ಬುದ್ಧಿ ಇಲ್ಲದೇ ಇದ್ದರೂ ಕಾಲವೇ ಕೆಟ್ಟು ಹೋದರೆ ಮಾಡುವುದೇನು?  ಮಗನ ಮದುವೆಯ ನಿರೀಕ್ಷೆ ಕ್ಷೀಣಿಸುತ್ತಾ ಕ್ಷೀಣಿಸುತ್ತಾ  ಇನ್ನು ಸಾಧ್ಯವೇ ಇಲ್ಲವೇನೋ ಎಂಬಂತಹ ಪರಿಸ್ಥಿತಿ.
  ಜೀವನದ ಹಲವು ಪುಟಗಳನ್ನು ಯಥಾವತ್ತಾಗಿ ತೆರೆದಿಡುತ್ತಾ ಸಾಗಿದಾಗ ಮಧ್ಯೆ ಮಧ್ಯೆ ಈಚಣ್ಣ ತನ್ನ ಪುಟಗಳನ್ನು ಒಂದಷ್ಟು ಬಿಡಿಸಿ ಇಡುತ್ತಿದ್ದರೂ ಸುಮಂಗಲನ ಮಾತಿಗೆ ಕಿವಿಯಾಗುವುದರಲ್ಲೇ ಈಚಣ್ಣ ಸುಖವನ್ನು ಕಂಡರು. ಈ ನಡುವೇ ನಾರು ಭಟ್ಟರು “ ನೀವು ವಿಶ್ರಾಂತಿ ತೆಕ್ಕೊಳ್ಳಿ ನಾನು ಈಗ ಬಂದೆ”  ಎಂದು ಹೊರ ಹೋದರು. ಸುಮಂಗಲನ ಮಾತಿನ ಪ್ರವಾಹದಲ್ಲಿ ಅದಾವುದೂ ಅಷ್ಟು ಗಮನಾರ್ಹವಾಗಲೇ ಇಲ್ಲ.  ಗಂಡನ ಮನೆಯ ಸಾಂಸಾರಿಕ ಜೀವನ ಅದು ಸುಖವಿತ್ತೋ ಕಷ್ಟವಿತ್ತೋ ಸುಮಂಗಲನ ಧ್ವನಿಯಲ್ಲಿ ಪ್ರತ್ಯೇಕಿಸುವುದು ಕಷ್ಟವಾಯಿತು. ಅವಳ ಮುಖದಲ್ಲೂ ಅದನ್ನು ಗುರುತಿಸುವುದು ಈಚಣ್ಣನಿಗೆ ಸಾಧ್ಯವೂ ಇರಲಿಲ್ಲ. ಮೊದಲಿನಿಂದಲೂ ಹಾಗೆ ಸುಮಂಗಲ ಹಲವು ವಿಚಾರಗಳಲ್ಲಿ ಬಹಳ ಗಟ್ಟಿಗಿತ್ತಿ. ಏನು ಬಂದರೂ ಎದುರಿಸಿ ನಿಲ್ಲುವ ಗಡಸುತನ.
ಹಲವು ಘಟನೆಗಳು ಕಥೆಗಳು ಮಾತಿನಲ್ಲಿ ಸುಳಿದರೂ ನಮ್ಮ ಸ್ನೇಹದ ವಿಚಾರ ಎಲ್ಲಿಯೂ ಸುಳಿಯಲಿಲ್ಲ. ಅದೆಷ್ಟು ಮರೆಯಲಾರದ ಘಟನೆಗಳು ಇದ್ದರೂ ಆಕೆ ಅದು ಮರೆತು ಬಿಟ್ಟಳೇನೋ ಅನ್ನಿಸಿತು. ಪ್ರಾಯಶಃ ಈಚಣ್ಣನಿಗೆ  ವರ್ತಮಾನದಲ್ಲಿ ಅದರ ನೆನಪಾಗುವುದೂ ಔಚಿತ್ಯ ಅಲ್ಲವೇನೋ ಎನಿಸಿತು. ಆದರೂ ಒಂದು ಮಾತ್ರ ಅಂದಿನಿಂದ ಇಂದಿನವರೆಗೂ ಹಾಗೇ ಉಳಿದು ಬಿಟ್ಟಿತ್ತು. ಅದು ಆ ಮುಗ್ಧ ಸ್ನೇಹ. ಮುಖದಲ್ಲೂ ಕಣ್ಣಿನಲ್ಲೂ ಮಾತಿನಲ್ಲೂ ವ್ಯಕ್ತವಾಗುವ ಆ ಆತ್ಮೀಯತೆ ತಾನಿನ್ನೂ ಪರಕೀಯನಲ್ಲವೆಂಬ ಭಾವನೆ ತರುತ್ತಿತ್ತು.
ಬೆಳಗಿನ ಉಪಾಹಾರವಾದ ಮೇಲೆ ಈಚಣ್ಣ ಹೊರಡುವ ಸೂಚನೆ ಕೊಟ್ಟರೂ ಸುಮಂಗಲ ಬಿಡುವ ಲಕ್ಷಣ ಕಾಣಲಿಲ್ಲ. ಮಧ್ಯಾಹ್ನದ ಊಟಕ್ಕೆ ಸಿದ್ಧ ಮಾಡುವ ತವಕ. ವಿಶ್ರಾಂತಿಗೋಸ್ಕರ ತಲೆದಿಂಬು ಚಾಪೆ ಚಾದರವನ್ನು ಹೊರ ವರಾಂಡಲ್ಲಿ ಹಾಸಿ ಕೊಟ್ಟಳು. ಈಚಣ್ಣ ಮತ್ತೇನೂ ಯೋಚಿಸುವ ಹಮ್ಮು ತೋರಲಿಲ್ಲ. ವಾಡಿಕೆಯಂತೆ  ಸ್ವಲ್ಪ ನಿದ್ದೆ ಮಾಡಲೇ ಬೇಕಿತ್ತು. ಇವತ್ತು ರಾತ್ರಿಯ ಆಟಕ್ಕೆ ತೊಂದರೆಯಾಗಬಾರದಲ್ಲ? ಒಂದಷ್ಟು ತಾಂಬೂಲ ಹಾಕಿ ಮತ್ತೆ ನಿಧಾನಕ್ಕೆ ಅಡ್ದವಾದರೆ ಅದಾವಗ ನಿದ್ದೆ ಹತ್ತಿತೋ ಆ ನೀರವತೆಯಲ್ಲಿ ಅವರ ಗೊರಕೆ ತನ್ನ ಇರವವನ್ನು ಸಾರುತ್ತಿತ್ತು.
ನಿಶ್ಯಬ್ಧ  ನೀರವ ಮೌನದಲ್ಲಿ ನಿದ್ದೆಯ  ಆನಂತರ ಅಪರೂಪದ ಸ್ವಾದಿಷ್ಟ ಭೋಜನ ಸವಿದು ಹೊತ್ತು ಸರಿಯುತ್ತಿದ್ದಂತೆ ಈಚಣ್ಣ ಹೊರಟು ನಿಂತರು. ಒಂದಷ್ಟು ಎಲೆ ಅಡಿಕೆಯನ್ನು ಕೈಚೀಲದ ಪೆಟ್ಟಿಗೆಯಲ್ಲಿ ಅದಾಗಲೇ ಸಿದ್ದಪಡಿಸಿಯಾಗಿತ್ತು.  ಪಂಚೆಯನ್ನು ಎತ್ತಿಕಟ್ಟಿ ಕೈಚೀಲ ಹೆಗಲಿಗೇರಿಸಿ ಹೊರಜಗಲಿಗೆ ಬಂದರು. ಹಿಂದೆಯೇ ಸುಮಂಗಲ ಬಂದಳು. ಅದುವರೆಗೆ ಸಂಕ್ಷಿಪ್ತವಾಗಿ ನಾಗೇಶನ ಬದುಕಿನ ಬಗೆಗಿನ ಕಳವಳವನ್ನು ಹೇಳಿದ್ದರೂ, ಹೇಳದೇ ಉಳಿದ ಸಂಗತಿಗಳು ವಿಶಾಲ ಅರ್ಥವನ್ನು ಈಚಣ್ಣನ ಮನಸ್ಸಿಗೆ ರವಾನಿಸಿದ್ದಳು. ತಾನಾದರೂ ಒಂಟಿ ಹೆಂಗಸು ಹೇಗೆ ಅವನ ಭವಿಷ್ಯವನ್ನು ಕಟ್ಟಿಕೊಟ್ಟೇನು? ಪ್ರತಿಕ್ಷಣವೂ ಅನುಭವಿಸುವ ಆತಂಕ ಆಕೆಯ ಮುಖದ ಕನ್ನಡಿ ಬಗೆ ಬಗೆಯಲ್ಲಿ ಭಟ್ಟರಿಗೆ ತಿಳಿಸಿತ್ತು.
ಗಂಟಲಲ್ಲಿ ಎದ್ದ ನಿಟ್ಟುಸಿರ ಭಾವ ಅಲ್ಲಿಯೇ ಹುದುಗಿಬಿಟ್ಟಿತು. ಅದು ಹೊರಬಂದರೆ ಅರ್ಥ ಕೆಡಬಹುದೇ ಎಂಬ ಸಂದೇಹ ಈಚಣ್ಣನಿಗೆ. ಮೌನವಾಗಿ ಹೊರ ಜಗಲಿಯ ಅಂಚಿಗೆ ಬಂದು ತಿರುಗಿನೋಡಿದರು. ಸುಮಂಗಲನ ಮುಖ ಮುಗುಳು ನಗೆಯನ್ನೇನೋ ಸೂಸಿತ್ತು. ಆದರೆ ಅಂತರಂಗದ ಅಳು ಅರ್ಥವಿಸದಷ್ಟು ನಿಷ್ಠೂರತೆ ಅವರಲ್ಲಿಲ್ಲ.   “ ಇದು ಬಿಟ್ಟರೆ ಬೇರೆ ಇನ್ನು ಹೆಣ್ಣ ಅರಸುವ ಚೈತನ್ಯ ತನಗಿಲ್ಲ”  ಅದೇ ದೈನ್ಯತೆ ಈಚಣ್ಣನ ಹೃದಯವನ್ನು ಇರಿಯತೊಡಗಿತು. ಆದರೆ ಅಂದು ತನಗೆ ಸಿಕ್ಕಿದ ನಿರಾಕರಣೆ ಬೇಡವೆಂದರೂ ನಾಲಗೆಗೆ ಕಹಿಯನ್ನು ಸವರಿದಂತೆ ನೆನಪಿಗೆ ಬರತೊಡಗಿತು. ಅದನ್ನು ಅರ್ಥವಿಸಿಕೊಂಡಂತೆ ಸುಮಂಗಲ ಮತ್ತಷ್ಟು ದೀನತೆಯಲ್ಲಿ ಸೊರಗಿದಳು.  ನೆರಿಗಟ್ಟಿದ ಹಣೆ ಮೌನದಲ್ಲೇ ಕಳವಳವನ್ನು ವ್ಯಕ್ತಪಡಿಸಿದರೂ ಮುಖದ ಮೇಲ ಮುಂಗುರುಳು ಅದನ್ನು ಮುಚ್ಚುವ ಸಾಹಸ ಮಾಡುತ್ತಿತ್ತು. ಆದರೆ.  ಹೃದ್ಗತವಾದ ಹೃದಯದ ಮಾತುಗಳನ್ನು ನಾಲಗೆ ಹೇಳುವುದಿಲ್ಲ. ಮುಖವೇ ಹೇಳಿಬಿಡುತ್ತದೆ. ಆದರೆ ಆತ್ಮೀಯತೆಯಲ್ಲಿ  ಮುಖವೂ ಹೇಳುವ ಅವಶ್ಯಕತೆ ಇರುವುದಿಲ್ಲ. ಸಂವೇದನೆಯೆ ಎಲ್ಲವನ್ನು ಮನವರಿಕೆ ಮಾಡಿಬಿಡುತ್ತದೆ.
ಈಚಣ್ಣ ಅಂಗಳಕ್ಕೆ ಇಳಿದನಂತರ ಮತ್ತೊಮ್ಮೆ ತಿರುಗಿ ನೋಡಿದಾಗ ಅದೇಭಾವ  ಮನಸ್ಸಿನಲ್ಲಿ ಮುದ್ರೆಯನ್ನೊತ್ತಿ ಅಂತರಂಗದ ಯೋಚನೆಗೆ  ಮತ್ತಷ್ಟು ಗ್ರಾಸವನ್ನೊದಗಿಸಿತು. ಹಾಗೆ ನಡೆದು ನಡೆದು ಮಣ್ಣಿನ ರಸ್ತೆಯ ಮಧ್ಯೆದಲ್ಲಿ ನಿಂತು ಮುಂದೊಮ್ಮೆ ಹಿಂದೊಮ್ಮೆ ದೃಷ್ಟಿಯನ್ನು ಬೀರಿದರು.  ಬದುಕಿನ ಅವಲೋಕನದಲ್ಲಿ ರಸ್ತೆಯಂತೆ ಬದುಕು ಹಾಸಿ ಮಲಗಿದರೆ ಅದರೆ ಏರು ತಗ್ಗುಗಳು ಬದುಕಿನ ಸ್ಥಿತ್ಯಂತರವನ್ನು ಸಾರಿ ಹೇಳುತ್ತಿತ್ತು.  ಈಗ ತನ್ನ ಮನಸ್ಸು ಸಂದು ಹೋದ ವೈಫಲ್ಯವನ್ನು ಲೆಕ್ಕ ಹಾಕುವುದೇ? ಇಲ್ಲ . ಒಡಲ ಬಳ್ಳಿಯ ಹೊಸ ಚಿಗುರ ನೆಲೆಯನ್ನು ಅರಿಯಬೇಕು.  ನಾಗೇಶನೇನು ಈಗ ಪರಕೀಯನೆಂದು ಅನಿಸುವುದಿಲ್ಲ. ಸುನಂದೆ ನನ್ನ ಯೋಚನೆಯನ್ನು ತಳ್ಳಿಹಾಕುವಳಲ್ಲ.  ಯೋಚಿಸುತ್ತ ಯೋಚಿಸುತ್ತಾ ಈಚಣ್ಣ ಒಂದರ ಮೇಲೊಂದು ಹೆಜ್ಜೆ ಊರುತ್ತಾ ಮುನ್ನಡೆದರು.



    















Saturday, April 7, 2018

ಅನಿವಾರ್ಯ ಬಂಧನ.


ಚಿಕ್ಕವನಿರುವಾಗ ಚಂದಮಾಮದಲ್ಲಿ ಬಂದ ಕಥೆ. ಒಂದಾನೊಂದು ಊರಲ್ಲಿ ಪುಟ್ಟ ಮನೆ, ಅಲ್ಲಿ, ತಾಯಿ ಮತ್ತು ಮಗನ  ಪುಟ್ಟ ಸಂಸಾರ ಮಾತ್ರ ವಾಸವಾಗಿತ್ತು. ತಾಯಿ ಮಗುವಾದಾಗಿನಿಂದ ಮಗನನ್ನು ಬಹಳ ಮುದ್ದಿನಿಂದ ಸಾಕಿದ್ದಳು. ಅಂಗಳ ಬಿಟ್ಟು ಹೊರ ಹೋಗದ ಆ ಮಗುವಿನ ಚೇಷ್ಟೆಯನ್ನು ಸಹಜವಾಗಿ ತಾಯಿ ಮುದ್ದಿನಿಂದ ಅನುಭವಿಸಿ ಆನಂದಿಸುತ್ತಿದ್ದಳು. ಮಗು ಏನು ಮಾಡಿದರೂ ಅವಳಿಗೆ ಅದು ಹಿತವಾಗಿ ಕಾಣುತ್ತಿತ್ತು. ಮಗು ಬೆಳೆದ ಹಾಗೆ ಅದರ ಚೇಷ್ಟೆಯ ರೂಪಗಳು ಬದಲಾಗತೊಡಗಿತು. ಆದರೂ ತಾಯಿ ಅದನ್ನು ಅನಂದಿಸುತ್ತಾ ಪ್ರೋತ್ಸಾಹಿಸುತ್ತಿದ್ದಳು.  ಮಗ ಬೆಳೆದು ದೊಡ್ಡ ಆಗಿ ಊರ ಮನೆಯಿಂದ ಹೋರ ಹೋಗುವುದಕ್ಕೆ ಆರಂಭಿಸಿದ. ತಾಯಿ ಆಗಲೂ ಅಭಿಮಾನದಿಂದ ಮಗುವಿನೆಡೆಗೆ ನೋಡುತ್ತಿದ್ದಳು. ತನ್ನ ಮಗುವಾದುದರಿಂದ ಎಂಬ ಮಮಕಾರ ಮತ್ತೂ ಹೆಚ್ಚಾಗತೊಡಗಿತು. ಇದರಿಂದ ಮಗನ ತುಂಟತನ ಮತ್ತೂ ಅಧಿಕವಾಗತೊಡಗಿತು. ಆರಂಭದಲ್ಲಿ ಮಗ ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ತಾಯಿಗೆ ತಿಳಿಯದೆ ಕದ್ದು ಹೊರ ಕೊಂಡೊಯ್ಯುತ್ತ ದುಂದುವೆಚ್ಚಗಳನ್ನು ಮಾಡುತ್ತಿದ್ದ. ಆದರೂ ತಾಯಿ ಎಚ್ಚತ್ತು ಕೊಳ್ಳದೇ ಮಗನ ಬುದ್ಧಿವಂತಿಕೆಯನ್ನು ಅಭಿಮಾನದಿಂದಲೇ ಕಾಣುತ್ತಿದ್ದಳು. ಮನೆಯಲ್ಲಿ ಮಾತ್ರವೇ ಕದಿಯುತ್ತಿದ್ದ ಮಗ ನಂತರ ಮನೆಯಿಂದ ಹೊರಗೆ ಊರವರ ವಸ್ತುಗಳನ್ನು ಕದಿಯುವುದಕ್ಕೆ ತೊಡಗಿದ. ಕದ್ದ ವಸ್ತುಗಳನ್ನು ತಂದು ತಾಯಿಗೆ ಕೊಟ್ಟಾಗ ತಾಯಿ ಸಂತೋಷದಿಂದ ಮತ್ತೂ ಪ್ರೋತ್ಸಾಹಿಸುತ್ತಿದ್ದಳು. ಅಂಧಾಭಿಮಾನದಿಂದ ಮಗು ಅಪರಾಧ ಎಸಗುತ್ತದೆ ಎಂದು ತಿಳಿದುಕೊಳ್ಳುವುದರಲ್ಲಿ ಆಕೆ ವಿಫಲಳಾದಳು. ಕೊನೆಗೊಂದು ದಿನ ಊರವರು ಈ ಮಗುವಿನ ಕಳ್ಳತನದ ಉಪಟಳ ಸಹಿಸದೆ ಹಿಡಿದು ಚೆನ್ನಾಗಿ ತದುಕಿದರು. ಈ ಕಥೆಯ ಸಾರಾಂಶ ಇಷ್ಟೇ. ಶಿಸ್ತು ನಿಯಮಗಳನ್ನು ನಮ್ಮ ಮಕ್ಕಳಿಗೆ ನಾವು ಮೊದಲು ಅಳವಡಿಸಿ ಶಿಸ್ತಿನಿಂದ ಬೆಳಸಬೇಕು. ಇಲ್ಲವಾದರೆ ಊರವರು ನಿಯಮವನ್ನು ಕಲಿಸುತ್ತಾರೆ. ಆದರೆ ಅದು ಇನ್ನೂ ಕ್ರೂರವಾಗಿರುತ್ತದೆ.

ಸಂಸ್ಕಾರ ಮನೆಯಿಂದ ರೂಪುಗೊಳ್ಳಬೇಕು. ಇಲ್ಲವಾದರೆ ಅನ್ಯರೂ ಮನೆಗೆ ಸಂಭಂಧಿಸಿದೇ ಇದ್ದವರು ಸಹ ಸಂಸ್ಕಾರ ನಿಯಮಗಳನ್ನು ಕಲಿಸುತ್ತಾರೆ ಅಲ್ಲ ಹೇರಿ ಬಿಡುತ್ತಾರೆ. ಸಮಾಜದಲ್ಲಿ ಬದುಕಬೇಕಾದರೆ ಆ ನಿಬಂಧನೆಯಲ್ಲಿರುವುದು ಅನಿವಾರ್ಯ.

ಒಂದು ಮಾವಿನ ಮರ ನಮ್ಮ ಹಿತ್ತಲಲ್ಲೇ ಬೆಳೆದರೂ ಅದು ನಮ್ಮ ಹಿತ್ತಲ ಒಳಗೇ ಬೆಳಿಯುವವರೆಗೆ ನಮ್ಮ ಹಿಡಿತದಲ್ಲೇ ಇರುತ್ತದೆ. ಅದರ ಗೆಲ್ಲುಗಳು  ಹಿತ್ತಲ ಪರಿಧಿ ಬಿಟ್ಟು ಹೊರ ಹಬ್ಬಿದಾಗ ಅದು ನಮ್ಮ ನಿಯಂತ್ರಣದಲ್ಲಿ ಇರುವುದಕ್ಕೆ ಕೆಲವೆಲ್ಲ ನಿಬಂಧನೆಗಳು ತನ್ನಿಂತಾನಾಗಿ ಬರುತ್ತದೆ. ನಮ್ಮ ಮನೆಯೊಳಗೆ ನಾವು ಕಿರುಚಿ ಬೊಬ್ಬಿಡಬಹುದು. ಆದರೆ ಸಾರ್ವಜನಿಕ ರಸ್ತೆಯಲ್ಲಿ ಅದನ್ನು ಮಾಡಿದರೆ …ಮತ್ತೆ ಹೇಳಬೇಕಿಲ್ಲ. ತಾತ್ಪರ್ಯ ಇಷ್ಟೆ ನಿಯಮ ಶಿಸ್ತು ಎಂಬುದು ಸಾರ್ವಜನಿಕವಾಗಿ ನಮಗೆ ನಾವೇ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಯಾರೋ ಒಬ್ಬ ಅದು ನಮ್ಮ ವೈರಿಯೇ ಆಗಿರಬಹುದು ನಮಗೆ ನಿಯಮ ಕಲಿಸುವುದಕ್ಕೆ ತೊಡಗುತ್ತಾನೆ. ಯಾಕೆಂದರೆ ಅದಕ್ಕೆ ನಾವೇ ಸ್ವತಃ ಆಸ್ಪದವನ್ನು ಕೊಟ್ಟಿರುತ್ತೇವೆ.  
ಇತ್ತೀಚೆಗಿನ ಕೆಲವು ವಿದ್ಯಮಾನಗಳಿಂದ ಈ ಸರಳವಾದ ತತ್ವ ನೆನಪಿಗೆ ಬಂತು. ಈ ಸರಳ ತತ್ವವೇ ಅರ್ಥವಾಗದೇ ಏನೇನೋ ಹಲುಬುವುದು ಸಾರ್ವಜನಿಕವಾಗಿ ನಾವೆಷ್ಟು ಬಡತನವನ್ನು ಅನುಭವಿಸುತ್ತೇವೆ ಎಂಬುದನ್ನು ತೋರಿಸುತ್ತದೆ. ಬಡತನವೆಂದರೆ ಹಣ ಸಂಪತ್ತಿಗೆ ಸಂಬಂಧಿಸಿದ್ದಲ್ಲ ಎಂಬುದು ಪ್ರಮುಖ ಅಂಶ. ಹಾಗಾದರೆ ಏನು ವಿದ್ಯಮಾನ?
ದಕ್ಷಿಣ ಕನ್ನಡ ಕರಾವಳಿಯಾದ್ಯಂತ ಜನಪ್ರಿಯ ಕಲೆ ಜೀವನಾಡಿಯ ಕಲೆ ಯಕ್ಷಗಾನ. ಅನುಮಾನವಿಲ್ಲ. ಆದರೆ ಇದು ಕರಾವಳಿಯನ್ನು ಬಿಟ್ಟು ಸೀಮೋಲ್ಲಂಘನ ಮಾಡಿದ್ದು ಈಗ ಇತಿಹಾಸ. ಇಂತಹ ಜನಪ್ರಿಯ ಜೀವನಾಡಿ ಒಮ್ಮೆ ಕಂಪಿಸುವಂತಾದದ್ದು ಸುಳ್ಳಲ್ಲ. ಚುನಾವಣಾ ನೀತಿ ಸಂಹಿತೆಯಂತೆ ಹಲವು ನಿಬಂಧನೆಗಳಿಗೆ ಒಳಗಾಗುವ ಅನಿವಾರ್ಯತೆ ತಾನಾಗಿ ಬಂದೆರಗಿತು. ಬಹುಶಃ ಈ ನಿಬಂಧನೆ ವಿಧಿಸಿದವರಿಗೆ ಯಕ್ಷಗಾನದ ಬಗ್ಗೆ ಅರಿವಿತ್ತೋ ಇಲ್ಲವೋ ಅದು ಬೇರೆ ಪ್ರಶ್ನೆ. ಅಂದು ವಿವಾದ ಸಮಸ್ಯೆ ಹೊಸದಾಗಿ ಹುಟ್ಟಿಕೊಂಡಿತು. ಯಕ್ಷಗಾನ  ಪ್ರದರ್ಶನ ತಾನೇ ತಾನಾಗಿ ಹಲವು ನಿಬಂಧನೆಗಳಿಗೆ ಒಳಗಾಗುವ ಅನಿವಾರ್ಯತೆ ಒದಗಿ ಬಂತು. ಈಗ ಏನೋ ತಾತ್ಕಾಲಿಕವಾಗಿ ಸಮಸ್ಯೆ ಬಗೆ ಹರಿದು ಒಂದು ರೀತಿಯಲ್ಲಿ ಯಕ್ಷಗಾನದ ಮಾನ ಉಳಿಯಿತು. ವಿವಾದ ನಿಷೇಧ ಇದು ಎಷ್ಟು ನ್ಯಾಯ ಸಮ್ಮತ ಎಂಬುದು ಬೇರೆ ವಿಚಾರ. ಅದರ ವಿಶ್ಲೇಷಣೆಯಲ್ಲ. ನಡೆದು ಹೋದ ಘಟನೆಯಲ್ಲಿ ನ್ಯಾಯಾನ್ಯಾಯದ ವಿಶ್ಲೇಷಣೆಯ ಮುಖ ನೋಡುವ ಮೊದಲು ನಮ್ಮ ಚೌಕಟ್ಟನ್ನು ನಾವು ತಡವಿನೊಡಬೇಕಾದ್ದು ಅನಿವಾರ್ಯ. ನಾವು ಧರಿಸಿದ ವಸ್ತ್ರ ನಾವು ಸರಿಮಾಡಿಕೊಳ್ಳದೇ ನಗ್ನತೆಯನ್ನು ಪ್ರದರ್ಶಿಸಿದರೆ ಅದನ್ನೂ ಇನ್ನು ಯಾರೋ ಸರಿಮಾಡುವುದಕ್ಕೆ ಯತ್ನಿಸುತ್ತಾರೆ. ಅದು ಕೆಲವೊಮ್ಮೆ ಬಲವಂತದ ಹೇರಿಕೆಯಾಗಬಹುದು. ಆದರೆ ಸಾರ್ವಜನಿಕ ಜೀವನ ಎಂದರೆ ಅದು ನಿಯಮಕ್ಕೆ ಹೊಂದಿಕೊಂಡಿರಬೇಕು.

ಯಕ್ಷಗಾನಕ್ಕೆ ಒಂದು ಲಾಕ್ಷಾಣಿಕ ಗ್ರಂಥದ ಆವಶ್ಯಕತೆ ಮತ್ತದರ ಗಂಭೀರತೆ ಈಗಲಾದರೂ ಅರಿವಿಗೆ ಬರಬೇಕು. ಆಕಾಲದಿಂದಲೂ  ಇದು ಹೀಗೆ ಇತ್ತು ಎಂದು ದಾರಿ ತಪ್ಪಿಸುವುದಕ್ಕಿಂತಲೂ ಒಂದು ನಿಯಮದ ಚೌಕಟ್ಟಿನಲ್ಲಿ ಇರಿಸುವುದು ಉತ್ತಮ. ಸಮಾಜದಲ್ಲಿ ಉಂಡಾಡಿಗುಂಡರಂತೆ ಇರುವ ಮನುಷ್ಯರನ್ನು ಕಾಣುತ್ತೇವೆ. ಯಾವುದೇ ಲಂಗು ಲಗಾಮು ಇಲ್ಲದ ಮಕ್ಕಳನ್ನು ಕಾಣುತ್ತೇವೆ.  ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ಅವರ ಬಗ್ಗೆ ಹೇಳಿ ಆದಷ್ಟು ಅಂತಹ ವ್ಯಕ್ತಿಗಳ ಸಹವಾಸಕ್ಕೆ ಸಭ್ಯರಾದವರು ಹೋಗುವುದಿಲ್ಲ. ಇದು ಸಮಾಜದಲ್ಲಿ ಒಂದು ಬದುಕನ್ನು ರೂಪಿಸಿ ಉತ್ತಮವಾಗಿ ಬದುಕುವುದಕ್ಕೆ ನಿಯಮ ಶಿಸ್ತಿನ ಆವಶ್ಯಕತೆಯನ್ನು ತೊರಿಸುತ್ತದೆ. ಮನುಷ್ಯನಿಗೆ ನಿಯಮ ಶಿಸ್ತಿನ ಅವಶ್ಯಕತೆ ಇದೆ ಎಂದ ಮೇಲೆ ಕಲೆಗೂ ಅದು ಭಾಧಕವಲ್ಲವೇ? ಯಕ್ಷಗಾನದ ಬಗ್ಗೆ ಅರಿವಿಲ್ಲದವರು, ಅದರ ಔನ್ನತ್ಯವನ್ನು ತಿಳಿಯದವರು ಮತ್ತು ಅದರ ಬಗ್ಗೆ ಗೌರವ ಇಲ್ಲದವರು ಬಂದು ಅದಕ್ಕೆ ನಿಯಮ ರೂಪಿಸುವುದಕ್ಕಿಂತಲೂ ಮೊದಲು ಸಂಬಂಧಿಸಿದವರು ಎಚ್ಚತ್ತುಕೊಳ್ಳಬೇಕು. ಇತ್ತೀಚೆಗಿನ ಹಲವು ವಿದ್ಯಮಾನಗಳು ಇದನ್ನು ತೋರಿಸಿಕೊಡುತ್ತವೇ. ಇಷ್ಟೆಲ್ಲಾ ಆದರೂ ನಾವು ಶಿಸ್ತುಬದ್ದರಾಗಿ ಇರುವುದು ಸ್ವಾತಂತ್ರ್ಯಹರಣವಾದಂತೆ ಎಂದು ತಿಳಿದುಕೊಂಡರೆ ಸಭ್ಯ ಸಮಾಜದ ಸಿಲೆಬ್ರಿಟಿಗಳಗುವುದಕ್ಕೆ ಇವರು ಅರ್ಹರಲ್ಲ.

Friday, March 16, 2018

ಯಕ್ಷಗಾನ ಸ್ಥಿತಿಗತಿ ಒಂದು ವಿಮರ್ಶೆ


ಇತ್ತೀಚೆಗೆ ಹಿರಿಯ ವಿದ್ವಾಂಸ,  ಯಕ್ಷ ಚಿಂತಕ ಶ್ರೀ  ಡಾ.  ಎಂ ಪ್ರಭಾಕರ ಜೋಷಿಯವರ ಮನೆಗೆ ಹೋಗಿದ್ದಾಗ ಎರಡು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದರು. ವೃತ್ತಿಯಲ್ಲಿ ಪ್ರಾಧ್ಯಾಪಕರೂ ಸಹ ಆಗಿದ್ದ ಜೋಷಿಯವರಿಗೆ ಓದುವಿಕೆಯ ಮಹತ್ವ ಬಹಳಷ್ಟು ತಿಳಿದಿದೆ. ಹಾಗಾಗಿ ಅದೇ ಬೆಳೆಯನ್ನು ನನ್ನಲ್ಲೂ ಗುರುತಿಸಿದ್ದು ನನಗೆ ಅಚ್ಚರಿಯನ್ನು ತಂದಿತು. ಸದ್ಯ ಪುಸ್ತಕ ಓದುವುದೆಂದರೆ ತುಸು ಶ್ರಮದಾಯಕ ಕೆಲಸ. ಮತ್ತದಕ್ಕೆ ಅತ್ಯಂತ ಕಟಿಬದ್ದತೆ ಅನಿವಾರ್ಯ. ಯಾಕೆಂದರೆ ದಿನದ ಇಪ್ಪತ್ನಾಲ್ಕು ಘಂಟೆಯಲ್ಲಿ ಕೇವಲ ದಿನ ಪತ್ರಿಕೆಯನ್ನು ಓದುವುದಕ್ಕೇ ಸಮಯ ಸಾಲುವುದಿಲ್ಲ.  ಇನ್ನು ಈ  ಪುಸ್ತಕ?

    ಆದರೂ ಕೆಲವು ಸಮಯದ ಮೊದಲು ಭಗವದ್ಗೀತೆ ಓದುವುದಕ್ಕೇ ಒಂದಷ್ಟು ಸಮಯ ಮೀಸಲಿರಿಸಿದ್ದೆ. ಎಲ್ಲರೂ ಭಗವದ್ಗೀತೆ ಎಂದು ಹೇಳುತ್ತಾ ಪವಿತ್ರ ಗ್ರಂಥವೆಂಬಂತೆ ಕಾಣುತ್ತಾರೋ ಆದರೆ ಅದನ್ನು ಪೂರ್ಣವಾಗಿ ಓದಿದವರೆಷ್ಟು ಮಂದಿ? ಅದನ್ನು ಗಮನಿಸಿದರೆ ಆಘಾತವಾಗಿಬಿಡುತ್ತದೆ. ಭಗವದ್ಗೀತೆ  ಕೇವಲ ಪವಿತ್ರ ಸ್ಥಾನಕ್ಕೆ ಮಾತ್ರ ಸೀಮಿತವಾಗುತ್ತದೆ. ಪವಿತ್ರವೆಂದರೆ ಗರ್ಭಗುಡಿಯ ದೇವರಂತೆ ಅದೂ ದೂರದಿಂದ ನೋಡಿ ನಮಸ್ಕರಿಸುವುದಕ್ಕಷ್ಟೇ ಸೀಮಿತ.

 ಬಾಲ್ಯದಲ್ಲಿ ನಾನು ಒಂದು ರೀತಿಯ ಪುಸ್ತಕದ ಹುಳುವೇ ಆಗಿದ್ದೆ. ಎನಾದರೂ ಒಂದು ಓದುವುದಕ್ಕೆ ಇರಲೇ ಬೇಕಿತ್ತು. ಅಂಗಡಿಯಿಂದ ಸಾಮಾನು ಕಟ್ಟಿತರುವ ಕಾಗದದ ಚೂರೂ ಸುಮ್ಮನೇ ಕೈಯಿಂದ ಜಾರುತ್ತಿರಲಿಲ್ಲ.  ಆದರೆ ಜೀವನ ನಿರ್ವಹಣೆಗಾಗಿ ಅರ್ಥದ ಹಿಂದೆ ಧಾವಿಸುವಾಗ ಜೀವನ ಅರ್ಥವಿಲ್ಲದಂತೆ ಭಾಸವಾಗಿತ್ತು. ಓದುವಿಕೆ  ವಾಚನ ಎಷ್ಟು ಅನಿವಾರ್ಯವೋ ಅಷ್ಟಕ್ಕೆ ಮಾತ್ರ ಸೀಮಿತವಾಗಿ ವರ್ಷಗಳು ಕಳೆದಿತ್ತು. ಜೋಷಿಯವರ ದ್ವಾರ ಮತ್ತೊಮ್ಮೆ ಚಿಗುರಿತು. ಹಾಗೆ ಸಿಕ್ಕಿದ ಎರಡು ಪುಸ್ತಕಗಳಲ್ಲಿ ಒಂದು ’ಯಕ್ಷಗಾನ ಸ್ಥಿತಿಗತಿ’  ಎಂಬುದು.  ಬಹಳ ಪ್ರಯತ್ನದಿಂದ ಆಸಕ್ತಿಯಿಂದ ಓದುವುದಕ್ಕೆ ತೊಡಗಿದೆ. ಇದಕ್ಕೆ ಒಂದು ಕಾರಣ ಆ ಪುಸ್ತಕ. ಅದು ಒಂದಷ್ಟು ಆಸಕ್ತಿಯನ್ನು ಮೂಡಿಸುತ್ತಾ ಸಾಗಿತ್ತು. ಓದುವುದು ಎಂದರೆ ಅದು ಕೇವಲ ಓದು ಅಲ್ಲ. ಅದರೊಂದಿಗೆ ನಮಗೆ ಅರಿವಿಲ್ಲದೇ ಅಧ್ಯಯನವೂ ಜತೆಗಿರುತ್ತದೆ.

ಅನುಭವ ಮತ್ತು ಅಧ್ಯಯನ ಬದುಕನ್ನು ಹಣ್ಣಾಗಿಸುತ್ತದೆ ಅಂದರೆ ಮಾಗಿಸುತ್ತದೆ. ಹಣ್ಣು ಹೆಚ್ಚಾದರೆ ಮರ ಬಾಗುತ್ತದೆ. ಆದರೆ ಅಧ್ಯಯನ ಹೆಚ್ಚಾದಂತೆ ಮನುಷ್ಯನ ತಲೆ ನೆಟ್ಟಗಾಗುತ್ತದೆ. ಆತ ತಲೆಬಾಗಿಸುವ ಪ್ರಮೇಯ ಒದಗುವುದಿಲ್ಲ. ಆತನ ವಿದ್ಯೆಗೆ ಜಗತ್ತೇ ಬಾಗುತ್ತದೆ. ಅಧ್ಯಯನದ ಮೂಲರೂಪವೇ ಬರಹ. ಅದು ಶಾಸನವಾಗಿ ಲೇಖನವಾಗಿ ಬದುಕನ್ನು ತೋರಿಸುತ್ತದೆ. ಓದುವ ಮನುಷ್ಯ ತಿಳಿಯುತ್ತಾ ಹೋಗುತ್ತಾನೆ. ಅದುವೇ ಜ್ಞಾನ. ಅ ಜ್ಞಾನದ ಹೆಜ್ಜೆಗಳೇ ಅಕ್ಷರಗಳು.

ವಿದ್ಯೆ ಮತ್ತು ಅನುಭವ ಅವುಗಳು ಹುಟ್ಟುವುದು ಮಾತ್ರ. ಅವುಗಳಿಗೆ ನಾಶವಿಲ್ಲ. ಅದು ಇಲ್ಲ ಎಂದಾದರೆ ಅದರ ಅರ್ಥ ನಾವು ಅದರ ಬಳಿಗೆ ಹೋಗಿಲ್ಲ ಎಂದೇ ಆಗುತ್ತದೆ. ಹಾಗಾಗಿಯೇ ವಿದ್ಯೆ ಮತ್ತು ಅಕ್ಷರ ಒಂದಾಗಿಯೇ ಭಾಸವಾಗುತ್ತದೆ. ಕ್ಷರ ಅಂದರೆ ಚ್ಯುತಿ, ಅಕ್ಷರವೆಂದರೆ ಬೇರೆ ಹೇಳಬೇಕಾಗಿಲ್ಲ. ಚ್ಯುತಿ ಇಲ್ಲದೇ ಇರುವಂತಹುದು, ಪೂರ್ಣಾರ್ಥದಲ್ಲಿ ನಾಶವಾಗದೇ ಶಾಶ್ವತವಾಗಿರುವಂತಹುದು. ಈ ಅಕ್ಷರಕ್ಕೆ ಮನುಷ್ಯ ಮೌಲ್ಯವನ್ನು ಕಟ್ಟುತ್ತಾನೆ. ಅದು ಅಪಮೌಲ್ಯವಾಗದೇ ಇರುವುದಕ್ಕೆ ಬಯಸುತ್ತಾನೆ. ಈ ಅಕ್ಷರರೂಪದಲ್ಲಿ ಯಾವುದು ಕಾಣಿಸುತ್ತಿದೆಯೋ ಅದು ಶಾಶ್ವತ ಎಂಬ ಭಾವನೆ ಬಂದುಬಿಡುತ್ತದೆ. ಹಾಗಾಗಿ ಅಕ್ಷರವೆಂಬುದು ದಾಖಲೆಯ ಮಾಧ್ಯಮವಾಗಿ ಆ ಅಕ್ಷರ ಸಮೂಹವೇ ಪುಸ್ತಕವಾಗಿ ಗ್ರಂಥವಾಗಿ ಸಾಕ್ಷ್ಯವಾಗಿಬಿಡುತ್ತದೆ. ವಿದ್ಯೆಯ ಮೂಲ ಸ್ವರೂಪವೇ ಅಕ್ಷರ. ವಿದ್ಯೆ ಅಂದರೆ ಜ್ಞಾನದ ಪ್ರತೀಕ. ಅಕ್ಷರದ ವೀಕ್ಷಣೆಯಲ್ಲಿ ಜ್ಞಾನ ಅಡಗಿದೆ. ಅಕ್ಷರವನ್ನು ಅವಲೋಕಿಸುತ್ತಿದ್ದರೆ ಅದು ಓದುವಿಕೆ ಅಥವಾ ಅಧ್ಯಯನವಾಗಿ  ಜ್ಞಾನ ಸಿದ್ದಿಯಾಗುತ್ತದೆ. ಜ್ಞಾನಕ್ಕೂ ಅಧ್ಯಯನಕ್ಕೂ ಇರುವ ಅವಿನಾಭಾವ ಸಂಭಂಧವಿದು. ಯಾವುದೇ ಜ್ಞಾನ ವಿದ್ಯೆ ಮೂಲ ರೂಪದಲ್ಲಿ ಅಕ್ಷರ ಸಮೂಹವೇ ಆಗಿರುತ್ತದೆ. ಹಾಗಾಗಿ ವಿದ್ಯೆ ಎಂಬುದು ಜ್ಞಾನ ಮಾತ್ರವಲ್ಲ ಅದು ಯಾರೂ ಅಪಹರಿಸದ ಶಾಶ್ವತ ಸಂಪತ್ತಾಗಿ  ಅಕ್ಷರ ಎಂಬುದು ಅರ್ಥದಿಂದಲೂ ಅನ್ವರ್ಥವಾಗಿಬಿಡುತ್ತದೆ. ಅಧ್ಯಯನ, ಓದುವಿಕೆಗೆ  ಅಕ್ಷರವಾದ ಪುಸ್ತಕವೂ ಅತ್ಯವಶ್ಯ. ಜ್ಞಾನದ ಮೂಲ ಮಾಧ್ಯಮವೇ ಪುಸ್ತಕ. ಯಾರು ಪುಸ್ತಕದ ಜತೆ ಮಸ್ತಕವನ್ನು ತೊಡಗಿಸುರುತ್ತಾರೋ ಅವರು ಜ್ಞಾನಿಗಳೇ ಆಗಿರುತ್ತಾರೆ. ಓದುವಿಕೆಗೂ ಓದುಗನಿಗೂ ಇರುವ ಮಹತ್ವವದು. ವಿದ್ಯೆ ಎಂದರೆ ಓದು.  ಮತ್ತೊಬ್ಬರ ಮನಸ್ಸನ್ನೂ ವ್ಯಕ್ತಿತ್ವವನ್ನೂ ಅರಿಯಬೇಕಾದರೆ,  ಅವರನ್ನು ಓದಲೇಬೇಕು. ಈ ಕಂಪ್ಯೂಟರ್ ಯುಗದಲ್ಲಿ ಎಲ್ಲವನ್ನೂ ನಾವು  ತತ್ರಾಂಶ ಅಂದರೆ ಸಾಪ್ಟ್ ರೂಪದಲ್ಲಿ ಕಾಣುವುದಕ್ಕೆ ಬಯಸುತ್ತೇವೆ. ಹಾಗಿದ್ದರೂ ಪುಸ್ತಕಕ್ಕೆ ಅದರದ್ದೇ ಆದ ಮಹತ್ವವಿದೆ.  ಈ ಪುಸ್ತಕವನ್ನು ಓದುವ ಮತ್ತು ಅಕ್ಷರೋಪಾಸನೆಯನ್ನು ಮಾಡುವ ಹವ್ಯಾಸ ಜ್ಞಾನ ವೃದ್ಧಿಗೆ ಕಾರಣವಾಗುತ್ತದೆ. ಪೀಠಿಕೆ ತುಸು ಉದ್ದ ಆದಂತೆ ಕಾಣಬಹುದು. ಇರಲಿ.

ಯಕ್ಷಗಾನ ಸ್ಥಿತಿಗತಿಯನ್ನು ಅವಲೋಕಿಸಿ  ಯಾರೂ ಸಹ ಹೇಳಬಲ್ಲರು. ಯಾಕೆಂದರೆ ಯಕ್ಷಗಾನ ತೀರ ಸರಳ ಮನುಷ್ಯನೂ ಅನುಭವಿಸಬಹುದಾದಂತಹ ಕಲೆ. ಏನೂ ತಿಳಿಯದವನಿಗೂ ಅಲ್ಲಿ ನೋಡುವಂತಹುದು ಇರುತ್ತದೆ. ಅದರೆ   ಯಕ್ಷಗಾನವನ್ನು ಅಮೂಲಾಗ್ರವಾಗಿ ತಿಳಿದ ಜೋಷಿಯವರು ಹೇಳಿದಾಗ ಅದರಲ್ಲಿ ಕುತೂಹಲ ಸಹಜ. ಯಕ್ಷಗಾನ ಅರ್ಥಗಾರಿಕೆಯಂತೆ ಮತ್ತವರ ಪ್ರವಚನದಂತೆ ಅದಕ್ಕೊಂದು ಜೋಷಿ ಸ್ಪರ್ಶ ಎಂಬುದು ಇದ್ದೇ ಇರುತ್ತದೆ.

“ಯಕ್ಷಗಾನ ಸ್ಥಿತಿಗತಿ” ಎಂಬ ಪುಸ್ತಕದಲ್ಲಿ ಮುಖ್ಯವಾಗಿ ಇಪ್ಪತ್ತೆರಡು  ಭಾಗಗಳ ಅಥವಾ ಅಧ್ಯಾಯಗಳ ಮೂಲಕ ಅವಲೋಕಿಸಲ್ಪಟ್ಟಿದೆ. ಇಲ್ಲಿ ಭೂತ ವರ್ತಮಾನ ನಂತರ ಭವಿಷ್ಯ ಇದರ ಹದವಾದ ವಿಶ್ಲೇಷಣೆ ಇದೆ. ವಾಡಿಕೆಯಲ್ಲಿ ಜೋಷಿ ಎಂದರೆ ಜೋಯಿಸರು ಎಂದೂ ಸಹ ಹೇಳುವಾಗ ಜೋಷಿಯವರ ಈ ಪುಸ್ತಕ ಮತ್ತು ಚಿಂತನೆ ಈ  ಭೂತ ಭವಿಷ್ಯತ್ ಗಳ ನಡುವಿನ ಸಂಚಾರ  ಅರ್ಥಪೂರ್ಣ ಎನಿಸುತ್ತದೆ. ಯಕ್ಷಗಾನದ ವರ್ತಮಾನದ ಸ್ಥಿತಿಗೆ ಈ ಚಿಂತನೆ ಎಷ್ಟು ಅನಿವಾರ್ಯ ಎಂಬುದು ಈ ವಿಭಾಗಗಳನ್ನು ಗಮನಿಸಿದರೆ ಅರಿವಿಗೆ ಬರುತ್ತದೆ. ಇದಕ್ಕೆ ಮಹತ್ವವಿರುವುದು, ಯಕ್ಷಗಾನವೆಂದರೆ ಪಂಡಿತರಿಂದ ಪಾಮರನ ವರೆಗೆ ಹೇಗೆ ಅದಕ್ಕೆ ಪ್ರೇಕ್ಷಕನಿದ್ದಾನೋ ಅದೇ ರೀತಿ ಯಕ್ಷಗಾನದ ಬಗ್ಗೆ ಹೇಳಿ ಅದನ್ನು ವ್ಯಾಖ್ಯಾನಿಸುವುದರಲ್ಲೂ ಆ ವರ್ಗವಿದೆ. ಹಾಗಾಗಿ ಈ ಪುಸ್ತಕ ಮತ್ತದರ ವಿಚಾರಗಳು ಮಹತ್ವವೆನಿಸುವುದು.

ಮೊದಲಿಗೆ ರಂಗಭೂಮಿಯ ವ್ಯಾಕರಣದ ಮೂಲಕ ಯಕ್ಷಗಾನ ಸೂಕ್ಷ್ಮ ಅವಲೋಕನವಿದೆ. ರಂಗಭಾಷೆಗೆ ಯಕ್ಷಗಾನ ಹೇಗೆ ಬೆಸೆದುಕೊಂಡಿದೆ ಎಂಬ ವಿವರಣೆಯಿಂದ ತೊಡಗಿ ಯಕ್ಷಗಾನದ ಪ್ರಾಥಮಿಕ ಪಾಠವನ್ನು ವಿವರಿಸಲಾಗುತ್ತದೆ. ಎಲ್ಲಾ ರಂಗಕಲೆಗಳಂತೆ ಯಕ್ಷಗಾನಕ್ಕೂ ಅದೇ ಸೌಂದರ್ಯ ವ್ಯಾಕರಣ ಎಲ್ಲವೂ ಇದೆ. ಹಲವು ರಂಗಕಲೆಗಳನ್ನು ಸೂಕ್ತವಾಗಿ ಉದಾಹರಿಸಿ ಬಹಳ ಅರ್ಥೈಸುವ ಹಾಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. “ಅವಸ್ಥಾನುಕರಣಂ” ಎಂಬುದಕ್ಕೆ ಯಕ್ಷಗಾನದಂತಹ ಕಲಾಪ್ರಕಾರಗಳು ಹೇಗೆ ಹೊಂದಿಕೆಯಾಗುತ್ತದೆ ಎಂಬುದನ್ನು, ಅವಸ್ಥಾನುಕರಣೆಯೇ ನಾಟ್ಯ ಹೀಗೆ ಅದನ್ನನುಸರಿಸಿ ಭರತನಾಟ್ಯ ಸೃಷ್ಟಿ ಈ ತತ್ವದ ಮೂಲಕ ಯಕ್ಷಗಾನದಂತಹ ಕಲಾಪ್ರಕಾರಗಳು ಭರತ ನಾಟ್ಯಕ್ಕಿಂತಲೂ ಮೊದಲು ಅಸ್ತಿತ್ವದಲ್ಲಿ ಇತ್ತು ಎಂಬುದರ ಪ್ರತಿಪಾದನೆ ಸುಂದರವಾಗಿದೆ.

ಈ ಲೇಖನ ಮಾಲೆಯ ಆರಂಭದಲ್ಲಿ ಯಕ್ಷಗಾನದ ಪ್ರಾಥಮಿಕ ಹಂತದಿಂದ ತೊಡಗಿ ಅದರ ಪ್ರತಿ ಅಂಗವನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಕೆಲವು ಕಡೆ  ವಿವರಿಸುತ್ತಾ ಅವುಗಳು ಬದಲಾದ ರೀತಿಯನ್ನೂ ಅವುಗಳ ಅಸಹಜತೆಯನ್ನು ವಿವರಿಸುತ್ತಾರೆ. ಅದು ಭಾಗವತಿಕೆ ಹಿಮ್ಮೇಳ ವೇಷ ಭೂಷಣ ಬಣ್ಣಗಾರಿಕೆ ಹೀಗೆ ಇವುಗಳು ಹೇಗಿತ್ತು ಮತ್ತೆ ಅದರಲ್ಲಿ ಬದಲಾವಣೆಗಳ ವಿಶ್ಲೇಷಣೆ ಸೊಗಸಾಗಿದೆ. ಕೆಲವು ಬದಲಾವಣೆಗಳು ಯಕ್ಷಗಾನಕ್ಕೆ ಹೇಗೆ ಅಸಹಜವಾಗಿವೆ ಮತ್ತು ಕೆಲವು ಬದಲಾವಣೆಗಳು ಸೂಕ್ತವೂ ಆಗಿದೆ ಇವುಗಳನ್ನು ಸ್ಥೂಲವಾಗಿ ವಿವರಿಸಿದ್ದಾರೆ. ಅದಕ್ಕೆ ಕೆಲವು ಸೂಕ್ತ ಉದಾಹರಣೆಯನ್ನೂ ನೀಡಿದ್ದಾರೆ.

ಇಲ್ಲಿ ಶಬ್ದ ಶಬ್ದಗಳಲ್ಲೂ ಯಕ್ಷಗಾನದ ಬಗೆಗಿನ ಮೋಹ ವ್ಯಕ್ತವಾಗುತ್ತದೆ. ಅದರ ನಡುವೆ  ಬದಾಲಾವಣೆಯ ಭೀತಿಯೂ ಅಲ್ಲಲ್ಲಿ ಕಾಣಬಹುದು. ಉತ್ತರಭಾರತದ ಕೆಲವೆಡೆ ಇಲ್ಲಿನ ತಂಡಗಳ ಯಕ್ಷಗಾನ ಪ್ರದರ್ಶನಗಳಾದಾಗ “ರಂಗ ರೂಢಿ” ಗಳಾದ ಪ್ರವೇಶ ಒಡ್ದೋಲಗ ಇವುಗಳ ಲೋಪವಾಗಬಾರದೆಂಬ ಅಭಿಪ್ರಾಯ ಅಲ್ಲಿ ವ್ಯಕ್ತವಾಗುತ್ತದೆ.ನಮ್ಮ ಕಲೆಯ ಶ್ರೀಮಂತಿಕೆಯನ್ನು ನಮಗೇ ನೆನಪಿಸುವುದು. ಅದೂ ಯಕ್ಷಗಾನದ ಬಗ್ಗೆ ಏನೊಂದೂ ಅರಿವಿರದ ಕ್ಷೇತ್ರದಲ್ಲಿ ವ್ಯಕ್ತವಾಗುವ ಅಭಿಪ್ರಾಯ. ರಂಗದ ಒಂದು ಸರಳ ಪೀಠ  (ರಥ),  ಅದು  ಪರ್ವತ ಆಕಾಶ ರಥ ಸಿಂಹಾಸನ ಎಲ್ಲವೂ ಆಗುವುದು ಕಲೆಯ ಬಡತನವಲ್ಲ. ಆದರೆ ಇದರ ಅರಿವಿಲ್ಲದವರು ಇದನ್ನು ಬಡತವೆಂದೇ ಪರಿಗಣಿಸುವುದು ಯಕ್ಷಗಾನದ ದೊಡ್ಡ ದುರಂತ ಎನ್ನಬೇಕು. (ಉದಾಃ ವೇಷಗಳ ಪ್ರವೇಶಕ್ಕೆ ಇವರಿಗೆ  ಚೆಂಡೆ ಮದ್ದಲೆ ಸಾಕಾಗುವುದಿಲ್ಲ. ಢೋಲು ವಾದ್ಯಗಳ ಹರಟೆಯೇ ಬೇಕು ಅದಕ್ಕಾಗಿ ಸಾವಿರ ಸಾವಿರ ವೆಚ್ಚ ಮಾಡುತ್ತಾರೆ. ಅರ್ಥಾತ್ ಯಕ್ಷಗಾನವನ್ನು ನಾಶ ಮಾಡುವುದಕ್ಕೆ  ಕೊಡುವ ಸುಪಾರಿಯದು.)   ಅಲ್ಲಿ ನೈಜತೆಗೋಸ್ಕರ ವಾಸ್ತವದ ದೃಶ್ಯಗಳನ್ನು ನಿರ್ಮಿಸಿದರೆ ಅದು ಯಕ್ಷಗಾನದ ವಿಕೃತಿಯಾಗುತ್ತದೆ. ಯಕ್ಷಗಾನದಲ್ಲಿ ಕಣ್ಣಿಗೆ ದೃಶ್ಯ ಕೇವಲ ಸಂಕೇತವಾಗಿರುತ್ತದೆ. ಅದು ಅದೃಶ್ಯವಾಗಿ ಸಂಕೇತದಿಂದ ಪ್ರೇಕ್ಷಕನ ಕಲ್ಪನಾ ಸಾಮಾರ್ಥ್ಯವನ್ನೂ ಭ್ರಮಾ ಲೋಕದ ವಿಸ್ತಾರವನ್ನು ಹೆಚ್ಚಿಸುತ್ತದೆ. ಇಲ್ಲಿ ಸ್ನಾನ ಮಾಡುವಾಗ ತಲೆಗೆ ನೀರು ಸುರಿದುಕೊಳ್ಳುವುದಿಲ್ಲ. ಮೈ ಸುಡುವಾಗ ಬೆಂಕಿ ಹಚ್ಚಿಕೊಳ್ಳುವುದಿಲ್ಲ. ತಲೆ ಕಡಿಯುವಾಗ ತೊಟ್ಟು ರಕ್ತದ ಕಲೆಯೂ ಇರುವುದಿಲ್ಲ. ಎಲ್ಲವೂ ಪ್ರೇಕ್ಷಕನ ಕಲ್ಪನೆಗೆ ಭ್ರಮೆಗೆ ಬಿಡಲ್ಪಡುತ್ತದೆ. ಯಕ್ಷಗಾನ ಪ್ರೇಕ್ಷಕ ಭ್ರಮಾಧೀನನಾಗುವುದಿಲ್ಲ ಎಂದರೆ ಅದು ಸುಳ್ಳು. ಆದರೆ ಇಂದು ಪ್ರೇಕ್ಷಕನ ಕಲ್ಪನೆಯನ್ನು ಮೊಟಕುಗೊಳಿಸಲಾಗುತ್ತದೆ. ಚಿಂತನೆಯ ಅಸ್ತಿತ್ವವನ್ನು ನಾಶಮಾಡಲಾಗುತ್ತದೆ.  ಇಂದಿನ ಯಕ್ಷಗಾನದ ಸ್ಥಿತಿಗಳು ಪ್ರೇಕ್ಷಕನನ್ನು ಈ ಭ್ರಮಾಲೋಕದಿಂದ ದೂರ ಮಾಡಿ ಯಕ್ಷಗಾನ ಕೇವಲ ವಾಸ್ತವದ ಚಿತ್ರವಾಗಿ ಬದಲಾಗುತ್ತದೆ. ಯಕ್ಷಗಾನ ನಾಟಕವೂ ಅಲ್ಲ ಸಿನಿಮಾವೂ ಅಲ್ಲ ಅತ್ತ ನಾಟ್ಯ ಪ್ರಕಾರವೂ ಅಲ್ಲ. ಇಷ್ಟೆಲ್ಲಾ  ಆದರೂ ಅಲ್ಲಿಲ್ಲದೇ ಇದ್ದದ್ದು ಇಲ್ಲಿ ಇದೆ. ಅದೇ ಯಕ್ಷಗಾನದ ಸಂಪತ್ತು. ಆದರೆ ನಾಟಕ ನೈಜತೆ  ಅದನ್ನೆಲ್ಲವನ್ನೂ ಅಲ್ಲಿ ಕಾಣುವ ಪ್ರೇಕ್ಷಕ ಇಲ್ಲಿ ಕಾಣ ಬಯಸುವುದು ಬೇರೆಯದನ್ನೆ. ಅದನ್ನೇ ಮತ್ತೂ ಇಲ್ಲಿ ಬಿಡಿ ಬಿಡಿಯಾಗಿ ತೋರಿಸಿದರೆ? ಯಕ್ಷಗಾನದ ಸ್ಥಿತಿಗತಿಯ ವಾಸ್ತವ ಇದು. ಇದಕ್ಕೆಲ್ಲ ರಂಗಭೂಮಿಯ ತತ್ವವನ್ನು ಅರಿಯಬೇಕು. ಆ ಅರಿವು ಈ ಪುಸ್ತಕದಲ್ಲಿದೆ.

ಯಕ್ಷಗಾನ ಕಲಾ ಸ್ವರೂಪವೆಂಬ ಎರಡನೇ ಭಾಗದಲ್ಲಿ ಯಕ್ಷಗಾನದ ಅಮೂಲಾಗ್ರ ವಿವರಣೆಯಿದೆ. ಪಠ್ಯ ಪುಸ್ತಕದ ವಿವರಣೆಗಳಿವು. ಇಲ್ಲಿ ಸ್ಥೂಲವಾಗಿ ಸಿಗುವ ಮಾಹಿತಿಯೇ ಯಕ್ಷಗಾನ ರಚನೆಯನ್ನು ಬಹಳಷ್ಟು ವಿವರಿಸುತ್ತದೆ.

ಯಕ್ಷಗಾನ ತಾಳ ಮದ್ದಲೆ ಅದು ಒಂದು ಕಲೆಯೇ ಅಲ್ಲ ಎಂದು ಸಾಹಿತ್ಯ ಸಮ್ಮೇಳನ ಒಂದರಲ್ಲಿ  ಹಿರಿಯ ವಿದ್ವಾಂಸರೊಬ್ಬರು ಹೇಳಿದ್ದರು.  ಅದರ ಬಗ್ಗೆ ಇರುವ ವಿಮರ್ಶೆ ಬಹಳ ಮಾರ್ಮಿಕವಾಗಿದೆ.. ಅದಕ್ಕೆ ಯಾರ ಅನುಗ್ರಹ ಮನ್ನಣೆಯ ಕೊಡುಗೆ ಮೇಲಿನಿಂದ ಕೊಡುವ ಒಪ್ಪಿಗೆ ಅಗತ್ಯವಿಲ್ಲ. ತಾಳ ಮದ್ದಲೆ ಕಲೆಯಲ್ಲದಿದ್ದರೆ ಬೇಡ , ಅದು ತಾಳ ಮದ್ದಲೆ ಎಂದೇ ಕರೆಯಬಹುದು. ಇದಕ್ಕೆ ಹಲವಾರು ಟಿಪ್ಪಣಿಗಳು ಇಲ್ಲಿವೆ. ಊರಲ್ಲಿ ಭಜನೆ ಮಾಡುವಾತನಲ್ಲಿ ಶಾಸ್ತ್ರಿಯ ಸಂಗೀತದ ರಾಗದ ಬಗ್ಗೆ ಹೇಳಿ ಭಜನೆಯೇ ಶಾಸ್ತ್ರೀಯವಾಗಿಲ್ಲ ಎಂದು ಹೇಳುವುದು ಎಷ್ಟು ಸರಿ? ಅದು ಭಜನೆ ಹೊರತು ಸಂಗೀತ ಕಛೇರಿಯಲ್ಲ. ಅಲ್ಲಿ ರಾಗಕ್ಕೆ ಪ್ರಾಮುಖ್ಯತೆ ಇಲ್ಲ.  ಯಕ್ಷಗಾನಕ್ಕೆ ಈ ಮಾತು ಬಹಳ ಅನ್ವಯವಾಗುತ್ತದೆ. ಇಲ್ಲಿನ ಅರ್ಥಗಾರಿಕೆಯಾಗಲಿ ಕುಣಿತ ವೇಷಗಾರಿಕೆಯ ಬಗ್ಗೆ ಹಲವು ಕಡೆ ಅಭಾಸ ಎನ್ನಬಹುದಾದ ವಿಶ್ಲೇಷಣೆ ಪ್ರತಿಕ್ರೆಯಗಳನ್ನು ನಾವು ಕಾಣುತ್ತೇವೆ. ಆ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರವನ್ನು ಕಂಡುಕೊಳ್ಳಲಾಗಿದೆ. ಯಕ್ಷಗಾನ ಅದು ಕೇವಲ ಯಕ್ಷಗಾನ ಒಂದು ಸ್ವತಂತ್ರ ಕಲೆ.  

ಯಕ್ಷಗಾನದ ಬಗ್ಗೆ ಹಲವಾರು ಸೂಕ್ಷ್ಮ ವಿಶ್ಲೇಷಣೆಗಳಿವೆ. ಅದು ಹಿಮ್ಮೇಳ ಕುಣಿತ  ಬಣ್ಣಗಾರಿಕೆ ಅರ್ಥಗಾರಿಕೆ ಹೀಗೆ ಪ್ರತಿಯೊಂದು ಅಂಶವನ್ನು ಯಥಾ ಸಾಧ್ಯ ಹಿಂಬಾಲಿಸಿ ವಿಶ್ಲೇಷಿಸಲಾಗಿದೆ. ಕೆಲವೆಲ್ಲ ಗಾಬರಿ ಎನ್ನುವಷ್ಟು ಚಿಂತನೆಗಳನ್ನು ಸ್ಫುರಿಸುತ್ತವೆ. ಯಕ್ಷಗಾನವೆಂದರೆ ಅದು ಕೇವಲ ಹಿಮ್ಮೇಳ ಮುಮ್ಮೇಳ ಕುಣಿತ ವೇಷಗಾರಿಕೆ ಯಲ್ಲ. ಅಲ್ಲಿರುವ ವ್ಯಾಪಾರೀ ವ್ಯವಹಾರಗಳು ಕಲಾವಿದರ  ಜೀವನ ಸಂಘಟನೆಯ ಸಮಸ್ಯೆ, ಪ್ರೇಕ್ಷಕ ಚಿಂತನೆ ಹೀಗೆ  ಈ ಎಲ್ಲದರ ಬಾಹುಳ್ಯತೆಯ ವಿಪುಲ ಚಿಂತನೆ ಇಲ್ಲಿದೆ.

ಯಕ್ಷಗಾನದಲ್ಲಿ ಚಿತ್ರಾಭಿನಯದ ಕುರಿತು ವೈಚಾರಿಕ ವಿಶ್ಲೇಷಣೆ ಇದೆ. ಬಹುಶಃ ಇಂದಿನ ಕಲಾವಿದರಲ್ಲಿ ಎಷ್ಟು ಮಂದಿಗೆ ಚಿತ್ರಾಭಿನಯದ ಬಗ್ಗೆ ಮಾಹಿತಿ ಇದೆಯೋ ತಿಳಿಯದು. ಅಭಿನಯ ಎಂದರೆ ಪ್ರೇಕ್ಷಕನಲ್ಲಿಗೆ ಭಾವನೆಗಳನ್ನು ಕೊಂಡುಹೋಗುವುದು ಎಂದರ್ಥ. ಇದಕ್ಕಾಗಿ ಹಲವು ಅಂಶಗಳನ್ನು ಬಳಸಿಕೊಳ್ಳುತ್ತಾರೆ. ಆಂಗಿಕ ವಾಚಿಕ ಆಹಾರ್ಯ ಮತ್ತು ಸಾತ್ವಿಕ. ಅಂಗಗಳಿಂದ ಮಾತಿನಿಂದ ವೇಷಗಳಿಂದ ಮತ್ತು ಸಾತ್ವಿಕ ಇದ್ದು ಭಾವನೆಯ ಉತ್ಕಟತೆಯ ದರ್ಶನ. ಇವುಗಳೆಲ್ಲ ಪ್ರೇಕ್ಷಕನಲ್ಲಿಗೆ ತಲುಪಿಸುವ ಮಾಧ್ಯಮಗಲು. ಯಕ್ಷಗಾನದಲ್ಲಿ ಎರಡು ಹಂತಗಳಲ್ಲಿ ಅಭಿನಯ ವ್ಯಕ್ತವಾಗುತ್ತದೆ ಒಮ್ಮೆ ಹಿಮ್ಮೇಳದ ಹಾಡುಗಾರಿಕೆಯೊಂದಿಗೆ ನಂತರ ಸಂಭಾಷಣೆಯೊಂದಿಗೆ. ಇವುಗಳಲ್ಲಿ ಮೂರು ವಿಧಾನಗಳನ್ನು ಬಹಳ ವಿಸ್ತೃತವಾಗಿ ಮತ್ತು ಮಾರ್ಮಿಕವಾಗಿ ವಿವರಿಸಲ್ಪಟ್ಟಿದೆ. ಇದು ಕಾಲ ಕಾಲಕ್ಕೆ ಹೇಗೆ ಬದಲಾವಣೆ ಕಂಡಿತು, ನಂತರದಲ್ಲಿ ಅದು ಹೇಗೆ ಅತಿಯಾಗಿ ಬಳಕೆಯಾಗಿ ಕೆಲವೆಲ್ಲ ಹೇಗೆ ಅಭಾಸವಾಗಿ ಮೂಲ ರಂಗ ವಿಧಾನಗಳನ್ನು ಬದಿಗೆ ಸರಿಸಿತು ಎಂಬುದನ್ನು ವಿವರಿಸಿದ್ದಾರೆ.
ಯಕ್ಷಗಾನದಲ್ಲಿ ಭಾವಾಭಿನಯ ಯಾವ ರೀತಿಯಲ್ಲಿರಬೇಕು, ಅದು ಕ್ರಮ ತಪ್ಪಿದಾಗ ಅಭಾಸವಾಗುತ್ತದೆ. ಭರತನಾಟ್ಯ ಅಥವಾ ಇನ್ನಾವುದೇ ನರ್ತನ ಪ್ರಕಾರದಿಂದ ಯಕ್ಷಗಾನ ಭಾವಾಭಿನಯ ಹೇಗೆ ಭಿನ್ನವಾಗಿದೆ ಎಂಬುದನ್ನು ಬಹಳ ಅರ್ಥವತ್ತಾಗಿ ವಿವರಿಸಿದ್ದಾರೆ. ಬಹಳ ಸೂಕ್ಷ್ಮವಿಚಾರಗಳ ಮಂಡನೆ ಇಲ್ಲಿದೆ. ಉದಾಃ ಯುದ್ದ ವಿಕ್ರಮದಲ್ಲಿ ನೀ ಮಡಿದೆಯಲ್ಲಾ ಎಂದು ತಂದೆ ರೋದಿಸುವಾಗ ಅಲ್ಲಿ ವಿಕ್ರಮವನ್ನು ವಿವರಿಸುವುದು ಅಥವಾ ತೋರಿಸುವುದು ಆಭಾಸವಾಗುತ್ತದೆ. ಅಲ್ಲಿ ವಿಕ್ರಮವೆಂದು ಕೇವಲ ನೆನಪು ಅಷ್ಟೇ.  ಯಾಕೆಂದರೆ ಅಲ್ಲಿ ಮುಖ್ಯವಾಗಿ ಇರುವುದು ತಂದೆಯಾದವನ ದುಃಖ. ಆದರೆ ಇಂದು ಈ ತತ್ವಗಳನ್ನು ತಿಳಿಯದೆ ಯಕ್ಷಗಾನ ಪಾತ್ರಧಾರಿಯಾಗುವುದನ್ನು ಕಾಣುತ್ತೇವೆ.

ಹೆಚ್ಚಿನ ಎಲ್ಲಾ ವಿಚಾರಗಳಲ್ಲೂ ಚಿಂತನೆ ನಡೆಸಿದ ಅಮೂಲ್ಯ ಲೇಖನ ಮಾಲೆ ಇದು. ಬಹಳ ಸೂಕ್ಷ್ಮ ವಿಚಾರಗಳಲ್ಲೂ ಕೈಗಾರಿಕೆ ನಡೆಸಿದ್ದಾರೆ. ಒಂದು ಪುಟ್ಟ ಪುಸ್ತಕದಲ್ಲಿ ಇಷ್ಟೇಲ್ಲಾ ಮಾಹಿತಿಗಳನ್ನು ವಿಶ್ಲೇಷಣೆ ಮಾಡಿ ಮನವರಿಕೆಯಾಗುವಂತೆ ಮಾಡುವುದು ನಿಜಕ್ಕೂ ಸಾಹಸದ ಕೆಲಸ. ಇನ್ನೊಂದು, ಯಾವುದೇ ವಿಚಾರದ ಬಗ್ಗೆ ಬಹಳ ದೀರ್ಘವಾದ ವಿವರಣೆ ಕೆಲವೊಮ್ಮೆ ಆಕರ್ಷಣೆಯನ್ನು ಉಳಿಸಿಕೊಳ್ಳುವುದಿಲ್ಲ. ತಿಳಿದುಕೊಳ್ಳುವವನ ಉತ್ಸಾಹ ಶ್ರದ್ದೆಯನ್ನು ಅವಲಂಬಿಸಿರುತ್ತದೆ. ಹಾಗಾದುದರಿಂದಲೇ ಈ ಪುಸ್ತಕದ ಲೇಖನಗಳು ಆಕರ್ಷಣೀಯವಾಗುವುದು. ಸ್ವತಃ ಪ್ರಾಧ್ಯಾಪಕರಾದ ಜೋಷಿಯವರು ಇದರಲ್ಲಿ ಯಶಸ್ವಿಯಾಗಿದ್ದಾರೆ. ಲೇಖನಗಳು ತಾಂತ್ರಿಕವಾಗಿಯೂ ಉತ್ತಮವಾಗಿ ತೋರುತ್ತದೆ.

ಪುಸ್ತಕವನ್ನು ಸಮಗ್ರವಾಗಿ ಓದಿ ಮುಗಿಸಿದಾಗ ಮತ್ತೂ ಒಂದು ಮುಖ್ಯ ಅನಿಸಿಕೆ ನನಗನಿಸಿದ್ದನ್ನು ಪ್ರಾಮಾಣಿಕವಾಗಿ ವ್ಯಕ್ತ ಪಡಿಸಬೇಕು. ಯಕ್ಷಗಾನದ ಬಗ್ಗೆ ಹೇಳುವಾಗ ಹೀಗಿತ್ತು ಹೀಗಾಗಬೇಕು ಎಂದು ಹಲವು ವಿಚಾರಗಳ ಮಂಡನೆಯನ್ನು ಸೂಕ್ತವಾಗಿ ಮಾಡಿದ್ದಾರೆ. ಆದರೆ ಕೆಲವೊಂದು ಕಡೆಗಳಲ್ಲಿ ಹೀಗೂ ಮಾಡಬಹುದು, ಹೀಗೂ ಆಗಬಹುದು ಎಂದು ತೃಪ್ತರಾಗಬಯಸುವ ನಿಲುವು ಕಂಡು ಬರುತ್ತದೆ. ಜೋಷಿಯವರದ್ದು ಯಕ್ಷಗಾನದಲ್ಲಿ ಒಂದು ಗುರು ಸ್ಥಾನ. ಬಹಳ ಹಿರಿಯ ವ್ಯಕ್ತಿತ್ವ. ಯಕ್ಷಗಾನವನ್ನು ಅಮೂಲಾಗ್ರವಾಗಿ ಕಂಡುಕೊಂಡು ಅನುಭವಿಸಿದವರು. ಅವರ ಮಾತು ಅಭಿಪ್ರಾಯಗಳು ಸರ್ವಮಾನ್ಯತೆಯನ್ನು ಗಳಿಸುವ ಅರ್ಹತೆಯನ್ನು ಗಳಿಸುತ್ತವೆ. ಹಾಗಾಗಿ ಹೀಗೂ ಆಗಬಹುದು  ಎಂದು ಹೇಳುವುದಕ್ಕಿಂತ ಹೀಗೇಯೇ ಆಗಬೇಕು ಎಂದು ಹೇಳುವುದು ಸೂಕ್ತ ಅನ್ನಿಸುತ್ತದೆ. ಹಾಗಾಗಿ ನಿರ್ದಿಷ್ಟವಾಗಿ ವಸ್ತುನಿಷ್ಠರಾಗಿ ಹೇಳುವಂತಾಗಬೇಕು. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಬೇರೆ. ಆದರೆ ಚರಿತ್ರೆಗೆ ಸೇರುವ ಅಭಿಪ್ರಾಯಗಳು ಅತ್ಯಂತ ವಸ್ತು ನಿಷ್ಠವಾಗಿರುವಾಗ ವ್ಯಕ್ತಿತ್ವವೂ ಚರಿತ್ರೆಗೆ ದಾಖಲಾಗುತ್ತದೆ. ಇದು ನನ್ನ ಅನಿಸಿಕೆಗೆ ಸೀಮಿತವಾದ ಅಭಿಪ್ರಾಯ.

          ಕಲಾವಿದನಾಗುವವನು ಯಕ್ಷಗಾನದ ಬಗ್ಗೆ ತುಸುವಾದರೂ ತಿಳಿಯಬೇಕೆಂಬ ಆಸಕ್ತಿಯಿರುವವನು ಇದನ್ನು ಅವಶ್ಯ ಓದಬೇಕು. ಬಹುಶಃ ಯಕ್ಷಗಾನದ ಒಂದು ಕೊರತೆ ಇದುವೇ ಆಗಿರಬಹುದು, ಅದು ಓದುವಿಕೆ ಅಥವಾ  ಅಧ್ಯಯನ ಅದು ಪ್ರತಿ ಕಲಾವಿದನಲ್ಲೂ ಪ್ರೇಕ್ಷಕನಲ್ಲೂ ಜಾಗ್ರತವಾಗಬೇಕು.