"ಇದು ವಿಮರ್ಶೆಯಲ್ಲದ ಚಿಂತನ"

Monday, January 25, 2021

ಸಂಗೀತ ದಹನ

ಸಂಗೀತ ದಹನ

ಸತ್ಯ ನ್ಯಾಯ ಎಲ್ಲರಿಗೂ ಒಂದೇ  ಆದರೂ ನಮ್ಮಿಂದ ಇನ್ನೊಬ್ಬರಿಗೆ ಅದು ಬೇರಾಗಿ ಬದಲಾಗುತ್ತದೆ. ನಮ್ಮ‌ ಹಾದಿ ಇನ್ನೊಬ್ಬರು ಕಡಿಸಿದರು ಅಂತ ನಾವು ಅಂದುಕೊಂಡರೆ,ನಮ್ಮ ಹಾದಿಯಲ್ಲಿ ಬಂದು ಅವರು ಕೆಟ್ಟರು ಎಂದಾಗಿರುತ್ತದೆ. ನನಗೊಬ್ಬ ಮಲಯಾಳಿ ಮಿತ್ರನಿದ್ದಾನೆ ಕೇರಳದ ತ್ರಿಶೂರ್ ನವನು.. ಮಿತ್ರ ಎನ್ನುವುದಕ್ಕಿಂತ ಕಕ್ಷೀದಾರ ಎನ್ನಬಹುದು. ನನ್ನ ಬಳಿಗೆ ಬಂದರೆ ನನ್ನ ಸಂಗ್ರಹದ ಶಾಸ್ತ್ರೀಯ ಸಂಗೀತ ಒಂದಷ್ಟು ಆಸ್ವಾದಿಸಿ ಒಂದಷ್ಟು ಹರಟೆ ಹೊಡೆಯುದು ವಾಡಿಕೆ. ಹಾಗೆ ನೋಡಿದರೆ ಅದ್ಭುತ ಮನುಷ್ಯ ಎ‌ನ್ನಬೇಕು. ಶಾಸ್ತ್ರೀಯ ಸಂಗೀತದ ಹವ್ಯಾಸದಂತೆ ಅದರ ಬಗ್ಗೆ ಅದ್ಭುತ ಜ್ಞಾನವಿದೆ. ಸ್ವರ ಲಯದ ಬಗ್ಗೆ ಅಪಾರವಾದ ಅರಿವಿದೆ. ಖ್ಯಾತ ಗಾಯಕ ದಾಸೇಟ್ಟನ ಪರಮ ಅಭಿಮಾನಿ. ಮತ್ತೆ ಕೇಳಬೇಕೆ? ಸಂಗೀತದ ಬಗ್ಗೆ ಅಲ್ಪಸ್ವಲ್ಪ ನನ್ನ ಕುತೂಹಲವೂ ರಸಭರಿತವಾಗಿ ಬಿಡುತ್ತದೆ. ಯಾವುದೇ ಹಾಡಿನ ರಾಗ ಭಾವವನ್ನು ತಟ್ಟನೇ ಹೇಳಿಬಿಡುವ ಈತನ ಹವ್ಯಾಸ ಮನೋರಮಣೀಯ.

          ಬರೀ ಸಂಗೀತವಾದರೇನು ಸ್ವಾರಸ್ಯ? ಜತೆಯಲ್ಲಿ ಕಥಕ್ಕಳಿ ಚೆಂಡ ಮೇಳ ಇದರ ಬಗ್ಗೆಯೂ ಹರಟುತ್ತಾನೆ. ಸಂಗೀತ ರಸಿಕತನವೆಂದರೆ ಹಾಗೆ ಅದಿದ್ದರೆ ಕಾಲಯಾಪನೆ ಎಂಬುದಿಲ್ಲ ಅಂತ ನನ್ನ ಭಾವನೆ. ಯಾಪನೆಗೆ ಇಲ್ಲಿ ಕಾಲವೇ ಇರುವುದಿಲ್ಲ. ಒಂದು ಸಲ ಇಲ್ಲಿನ ಯಕ್ಷಗಾನಕ್ಕೆ ನನ್ನ ಒತ್ತಾಯಕ್ಕೆ ಬಂದಿದ್ದ. ಆನಂತರ ನಮ್ಮ ಭೇಟಿಯಾಗಿರಲಿಲ್ಲ. ಮೊನ್ನೆ ಮೊನ್ನೆ ಬಂದವನು ಒಂದಷ್ಟು ಗಂಭೀರ ಚಿಂತನೆಯನ್ನು ಒದಗಿಸಿಯೇ ಬಿಟ್ಟ.

ನಾನು ಕೇಳಿದೆ. “ಎಂಙನೆ ಇಂಡಾಯಿರುನ್ನು ಕಳಿ?  (ಹೇಗಿತ್ತು ಆಟ)”

ಆತ ಹೇಳಿದ ಅಭಿಪ್ರಾಯ ನಿಜಕ್ಕೂ ಸ್ವಾರಸ್ಯವಾಗಿತ್ತು. ಹಾಗೆ ಹೇಳುವುದಕ್ಕೂ ಒಂದು ಮಾನಸಿಕ ಹಿಂಜರಿಕೆ. “ಎಂದೊರು ಪಾಡಾ...?(ಎಂಥಾ ಅವಸ್ಥೆ ?)”

ಶಾಸ್ತ್ರೀಯ ಸಂಗೀತವನ್ನು ಕರಾರುವಾಕ್ಕಾಗಿ ಹೇಳುವ ಆತ ಹಾಗೆ ಹೇಳಿದ್ದು ಅಚ್ಚರಿ ಎನಿಸಲಿಲ್ಲ.

ಆತ ಹೇಳುವಂತೆ ಶಾಸ್ತ್ರೀಯ ಸಂಗೀತವನ್ನು ಸಿನಿಮಾದವರು ಒಂದಷ್ಟು  ಕೆಡಿಸಿದರು.  ಅದರ ಬಗ್ಗೆ ಅಜ್ಞಾನದಿಂದ ಹಲವು ರೂಪದಲ್ಲಿ ಅದನ್ನು ಕೆಡಿಸಿದರು. ಇಲ್ಲಿ ನಿಮ್ಮ ಯಕ್ಷಗಾನವೂ ಸಂಗೀತವನ್ನು ಕೆಡಿಸುತ್ತಾ ಇದೆ. ಯಾಕೆ ಹೀಗೆ?  ಅದೊಂದು ಆನಂದ ಭೈರವಿ ರಾಗ ಹಾಡಿದರು, ಎಂತಹಾ  ಅವಸ್ಥೆ,  ಸಾಂಪ್ರದಾಯಿಕ ಕಲೆಗಳಲ್ಲೂ  ಸಂಗೀತವನ್ನು ಕೊಲ್ಲಲಾಗುತ್ತದೆ.  ಯಕ್ಷಗಾನದಂತಹ ಒಂದು ಪ್ರಾಚೀನ  ಕಲೆಯಲ್ಲಿ  ಈ ರೂಪದಲ್ಲೂ  ಅದು ಬಳಕೆಯಾಗ್ತಾ ಇದೆ.  ಆತ ಹೇಳಿದ್ದರಲ್ಲಿ ಎಷ್ಟು ಸತ್ಯಾಂಶವಿದೆಯೋ ಅದನ್ನು ವಿಶ್ಲೇಶಿಸುವಷ್ಟು ಸಂಗೀತ ಜ್ಞಾನ ನನಗೂ ಇಲ್ಲ.  ಇದು ಆತ ಹೇಳಿದ್ದರ ಸಾರಾಂಶ ಅಷ್ಟೇ. ಸಂಗೀತವನ್ನು ಕೆಡಿಸುವುದಕ್ಕೆ ಯಕ್ಷಗಾನವೂ ತನ್ನ ದೇಣಿಗೆಯನ್ನು ಸಲ್ಲಿಸುತ್ತಾ ಇದೆ.

ಯಕ್ಷಗಾನದಲ್ಲಿ ಸಂಗೀತದ ಅನುಸರಣೆಯಲ್ಲ, ಅನುಕರಣೆ ಇರುವುದು.  ಒಂದು ಕಲೆಯ ಅನುಕರಣೆ ಮಾಡುವುದೆಂದರೆ ಅದನ್ನು ಅಗೌರವಿಸಿ ಲೇವಡಿಯಾಡಿದಂತೆ.  ನನ್ನ ಆ ಕಕ್ಷೀದಾರ ಮತ್ತೊಂದು ಗಂಭೀರವಾದ ಮಾತು ಹೇಳಿದ ಜೇಸುದಾಸ್ ಆಗಲಿ ಬಾಲಮುರಳಿಯಾಗಲೀ ಅಂತಹ ಅತಿಶ್ರೇಷ್ಠ ಗಾಯಕರಾಗಲಿ ರಾತ್ರಿ ಬೆಳಗಾಗುವುದರಲ್ಲಿ ಗಾಯಕರಾಗಿದ್ದಲ್ಲ. ಸಂಗೀತದ ಹಿಂದೆ ಅವರ ಜೀವಿತಾವಧಿಯ ಪರಿಶ್ರಮ ಇದೆ. ಸತತ ಅಭ್ಯಾಸ ಇದೆ.  ಸಂಗೀತವೆಂದರೆ ಹಾಗೆ. ಅದನ್ನು ಅನುಕರಿವುದು ಅದು ಅಗೌರವ ತೋರಿದಂತೆ.  ಇಲ್ಲಿ ಒಂದು ರಾಗದಿಂದ ತೊಡಗಿ ವಿಳಾಸವಿಲ್ಲದೇ ಅಲೆಯುವಂತೆ ನೋಡುವಾಗ ಅಯ್ಯೋ ಸಂಗೀತದ ಅವಸ್ಥೆಯೇ ಅಂತ ಅನ್ನಿಸುತ್ತದೆ

ಸಂಗೀತ ಬಂದು ನಮ್ಮ ಯಕ್ಷಗಾನ ಸಂಪ್ರದಾಯದಿಂದ ದೂರ ಸರಿದು ಕೆಟ್ಟು ಹೋಗುತ್ತದೆ ಎಂದು ನಾವಂದುಕೊಂಡರೆ ಆತ ಯಕ್ಷಗಾನದಿಂದ ಸಂಗೀತ ಕೆಟ್ಟು ಹೋಯಿತು ಅಂತ ಹೇಳುತ್ತಿದ್ದಾನೆ.  ಸಂಗೀತವೆಂದರೆ ಶುಭ್ರವಾದ ವಸ್ತ್ರದಂತೆ ಯಾವ ನೀರಲ್ಲಿ ಅದ್ದಿ ತೆಗೆಯುತ್ತೇ ವೋ ಆ ನೀರಿನ ಗುಣವನ್ನು ತೋರಿಸುತ್ತದೆ. ಶುಭ್ರವಾದ ನೀರಲ್ಲಿ ಅದ್ದಿದರೆ ಅದು ಮತ್ತಷ್ಟು ಶುಭ್ರವಾಗಿ ನಳ ನಳಿಸುತ್ತದೆ. ನೀರು ಮಲಿನವಾದರೆ...??   ಸಂಗೀತ ಯಕ್ಷಗಾನದಲ್ಲಿ ಅದ್ದಿದಾಗ...? .ಮತ್ತೆ ಹೇಳಬೇಕಿಲ್ಲ.  ಮಾತಿಗೆ ಮಾತು ಎಸೆದು ಚರ್ಚಿಸಿ ಆತನ ವಾದವನ್ನು ಅಲ್ಲಗಳೆಯುವ ಸಾಮರ್ಥ್ಯ ನಮ್ಮ ವಿಕಟ ಮನಸ್ಸಿಗೆ ಹೊಳೆಯಬಹುದು. ಆದರೆ ಸತ್ಯ ಬೆನ್ನಟ್ಟಿ ಬರುತ್ತ ಇದೆ ಎಂಬುದು ತಿಳಿದಿರಬೇಕು.

ಯಕ್ಷಗಾನದಲ್ಲಿ ಮೂಲಭೂತವಾಗಿರುವ ಸಂಗತಿಗಳು ಅದೆಷ್ಟೋ ಇವೆ. ಅದರ ಬಗ್ಗೆ ಆಧ್ಯಯನ ಬೇಡ ಆಸಕ್ತಿಯೂ ಇರುವುದಿಲ್ಲ. ಹೀಗಿತ್ತು ಇದು ಅದಲ್ಲ ಎಂಬ ಸಾಮಾನ್ಯ ಜ್ಞಾನದತ್ತವೂ ಚಿತ್ತ ಸಂಚರಿಸುವುದಿಲ್ಲ. ಬದಲಾಗಿ ಅಪೂರ್ಣವಾಗಿ ಸಂಗೀತ ತಿಳಿದು ಅದನ್ನು ಮತ್ತಷ್ಟು ಕೆಡಿಸುವತ್ತ ಹಪ ಹಪಿಕೆ ಸದಾ ಇರುತ್ತದೆ. ಅತ್ತ ಸಂಗೀತವೂ ಇಲ್ಲ. ಇತ್ತ ಯಕ್ಷಗಾನವೂ ಇಲ್ಲ. ಕತ್ತಲೆಯಲ್ಲಿ ಕಣ್ಣು ಮುಚ್ಚಿ ಸಂಚರಿಸುವ ಪ್ರಾಮಾಣಿಕರು ನಾವು.

 ವಸ್ತ್ರವೇನು  ಯಾವ ನೀರಲ್ಲಿಯೂ ಅದ್ದಿ ತೆಗೆವ ಸ್ವಾತಂತ್ರ್ಯ ನಮಗಿದೆ. ನಮ್ಮ ಅಭಿರುಚಿ. ಆದರೆ ವಸ್ತ್ರ ನಮ್ಮದಾಗಿರಬೇಕು. ಯಾವುದೋ ವಸ್ತ್ರ ನಮ್ಮಂತೆ ಇನ್ನೊಬ್ಬರು ಧರಿಸುವಂತಿದ್ದರೆ ಅದನ್ನು ಮಲೀನಗೊಳಿಸುವ ಅಧಿಕಾರ ನಮಗೂ ಇಲ್ಲ.

ಸಂಗೀತದಂತೆ ಯಕ್ಷಗಾನವೂ ಪ್ರಾಚೀನ ಕಲೆ.  ಅದಕ್ಕೆ ಇರುವ ಶಾಸ್ತ್ರೀಯ ಗುಣ ಯಕ್ಷಗಾನಕ್ಕೂ ಇದೆ. ಅದನ್ನು  ಗೌರವದಿಂದ ಅನುಸರಿಸುವ ಬದ್ದತೆ ನಮ್ಮಲಿರಬೇಕಿತ್ತು. ಅದಿಲ್ಲ ಎಂದರೆ ಅದಕ್ಕೆ ನಾವೇ ಹೊಣೆಗಾರರು ಹೊರತು ಪ್ರಾಚೀನದಿಂದ ಹರಿದು ಬಂದ ಯಕ್ಷಗಾನ ಕಾರಣವಾಗುವುದಿಲ್ಲ.   ಯಕ್ಷಗಾನದಲ್ಲಿ ಶಾಸ್ತ್ರಿಯತೆ ಇಲ್ಲ ಅಂತ ಅದನ್ನು ಕೆಡಿಸುವ ಮನಸ್ಥಿತಿ  ನಮಗೆ ಬರಬಾರದು.  ಯಾವುದನ್ನೋ ಅನುಕರಿಸಿ ಯಕ್ಷಗಾನ ಉಳಿದ ಕಲೆಯನ್ನು ಹಾಳು ಮಾಡುವಂತಹ ಪ್ರಮೇಯ ಉಂಟಾಗಬಾರದು. ಯಾಕೆಂದರೆ, ಯಕ್ಷಗಾನಕ್ಕೆ ಸ್ವಂತವಾದ ಗುಣಗಳಿವೆ.    ಪರಂಪರೆಯಲ್ಲಿ ಅದು ದಾಖಲಾಗಿ ಹೋಗಿದೆ. ಅದನ್ನು ಅಳಿಸಿ ಕಸಿಕಟ್ಟಿ ಹೊಸ ಪ್ರಭೇದ ಸೃಷ್ಟಿಸುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಸಾಧ್ಯವಾದರೆ ಅದಕ್ಕೊಂದು ಶಾಸ್ತ್ರಿಯ ಬದ್ಧತೆಯನ್ನು ಒದಗಿಸಿ ಅದನ್ನು ಸುರಕ್ಷಿತಗೊಳಿಸಬೇಕು. ಯಾವುದೇ ಕಲೆಯ ಎರವಲು ಇಲ್ಲದೆ ಅದನ್ನು ಸ್ವತಂತ್ರವಾಗಿ ಬೆಳೆಸಬೇಕು. ಈ ನೀರು ಶುಭ್ರವಾಗಿದೆ. ಬೇರೆ ಯಾವುದೋ ವಸ್ತ್ರವನ್ನು ಇದರಲ್ಲಿ ಅದ್ಧಿ ಈ ನೀರನ್ನು ಮಲಿನ ಗೊಳಿಸದೇ ಶುಭ್ರವಾಗಿ ನಮಗಲ್ಲ ನಮ್ಮ ಮುಂದಿನ ಪೀಳಿಗೆಗೆ ಅದನ್ನು ಉಳಿಸಬೇಕು.

 ಈಗ ಯಕ್ಷಗಾನದಿಂದ ಸಂಗೀತ ಕೆಟ್ಟಿತು ಎಂಬ ಧ್ವನಿಯೊಂದಿಗೆ ಮತ್ತೂ ಒಂದಷ್ಟು ಕಲೆಗಳ ಧ್ವನಿಯೂ ಸೇರಿಕೊಳ್ಳಬಹುದು. ಯಕ್ಷಗಾನಕ್ಕೆ  ಈ ಹಂಗಿನ ಅವಶ್ಯಕತೆ ಖಂಡಿತಾ ಇರುವುದಿಲ್ಲ.. ಅದೊಂದು ಸ್ವತಂತ್ರ ಹಾಗೂ ಭವ್ಯವಾದ ಶ್ರೀಮಂತ ಕಲೆ. ಅದು ಹಾಗೇ ಉಳಿಯಲಿ.

 

 

 

 

 

 

 

Tuesday, December 22, 2020

ಯಕ್ಷ ಗೋವಿಂದ

ಪ್ರತೀ ವರ್ಷವೂ ಉದಯವಾಣಿ ಪತ್ರಿಕೆಯಲ್ಲಿ ಧರ್ಮಸ್ಥಳ ಮೇಳದ ಆಟದ ಸವಿವರ ಪ್ರಕಟವಾಗುತ್ತದೆ. ಈ ಸಲದ ಪ್ರಕಟನೆಯನ್ನು ಕಾಣುವಾಗ ಮನಸ್ಸು ಒಂದಿಷ್ಟು ಭಾರವದದ್ದು ಸತ್ಯ. ಮೊದಲು ಧರ್ಮಸ್ಥಳದ ಮೇಳ ಊರಿಗೆ ಬಂದಾಗ ಮೈಕು ಕಟ್ಟಿದ ಜೀಪು ರಸ್ತೆಯೆಲ್ಲ  ಕರಪತ್ರವನ್ನು ಚೆಲ್ಲಿ ಹೋದಾಗ ಸಂಭ್ರಮದಿಂದ ಕೈಗೆತ್ತಿಕೊಳ್ಳುವುದಿತ್ತು.  ಅದರಲ್ಲಿದ್ದ ಕಲಾವಿದರ ಹೆಸರು ಬಾಯಿಪಾಠ ಮಾಡಿಕೊಳ್ಳುವವರೆಗೂ ಆಟದ ಚಟ ಅಂಟಿಕೊಂಡಿತ್ತು. ಹಾಗಾಗಿ ಧರ್ಮಸ್ಥಳದ ಮೇಳದ ಆಟ ಎಂದರೆ ನಮಗೆ ಮಕ್ಕಳಿಗೆ ಯಕ್ಷಗಾನದ ಮಾದರೀ ಸಂಹಿತೆ ತೆರೆದಂತೆ.  ಉದಯವಾಣಿಯಲ್ಲಿ ಬರುತ್ತಿದ್ದ ಆಟದ ವಿವರ ನಮ್ಮೂರ ಅಂಗಡಿಯ ಗೋಡೆಗೆ ಅಂಟಿಸುತ್ತಿದ್ದರು. ಇವತ್ತು ಎಲ್ಲಿ ಆಟ ಅಂತ ನೋಡುವುದು, ನಮ್ಮೂರಲ್ಲಿ ಈವರ್ಷ ಇದೆಯೋ ಇಲ್ಲವೋ,  ಇದ್ದರೆ ಮರುದಿನ ರಜಾ ದಿನವೋ ಅಂತ ಲೆಕ್ಕ ಹಾಕುತ್ತಿದ್ದೆವು. ಎಲ್ಲದಕ್ಕಿಂತ ಮೊದಲು ಅದರಲ್ಲಿದ್ದ ಕಲಾವಿದರ ವಿವರ ಓದುವುದು.

     ಈ ಸಲವೂ ಉದಯವಾಣಿ ಜಾಹೀರಾತು ಪ್ರಕಟನೆ ನೋಡಿದಾಗ ಮೊದಲು ದೃಷ್ಟಿ ಹೋದದ್ದು ಕಲಾವಿದರ ಪಟ್ಟಿಗೆ. ನಾನು ಬಾಲ್ಯದಿಂದಲೂ ಅಲ್ಲಿ ಗಮನಿಸುತ್ತಿದ್ದ ಒಂದು ಹೆಸರು ಈ ಸಲ ಮಾಯವಾಗಿತ್ತು. ಅದುವೇ ಸೂರಿಕುಮೇರಿ ಗೋವಿಂದ ಭಟ್ಟರ ಹೆಸರು. ಹೆಚ್ಚಾಗಿ ಕಲಾವಿದರ ಅಗ್ರಪಂಕ್ತಿಯಲ್ಲಿ ಇರುತ್ತಿದ್ದ ಈ ಹೆಸರು ಇಂದು ಮಾಯವಾಗಿದೆ. ಮನಸ್ಸು ಭಾರವಾಗುತ್ತಿದೆ.  ಹಾಗೆ ನೋಡಿದರೆ ಧರ್ಮಸ್ಥಳ ಮೇಳಕ್ಕೆ ಬಂದ ಕಲಾವಿದರೆಷ್ಟು ಬಿಟ್ಟು ಹೋದ ಕಲಾವಿದರೆಷ್ಟು ಲೆಕ್ಕವಿಲ್ಲ. ಅದೆಷ್ಟೇ ಇರಬಹುದು ಆದರೆ ಅಂದಿನಿಂದ ಇಂದಿನವರೆಗೆ ಆ ಜಾಗವನ್ನು ಖಾಯಂ ತನ್ನದಾಗಿಸಿ ಉಮೇದುವಾರಿಕೆಯನ್ನು ಸಲ್ಲಿಸುತ್ತಿದ್ದ ಗೋವಿಂದ ಭಟ್ಟರ ಹೆಸರು ಈ ಸಲ ಬಿಟ್ಟು ಹೋದದ್ದಲ್ಲ. ಹಲವು ಸಲ ಕರಪತ್ರದಲ್ಲಿ ಧರ್ಮಸ್ಥಳದ ಮಂಜುನಾಥನ ಹೆಸರಿನಷ್ಟೇ ಇದೂ ಶಾಶ್ವತ ಅಂತ ಅನ್ನಿಸಿಬಿಡುತ್ತಿತ್ತು . ಸರಿ ಸುಮಾರು ಐದಾರು ದಶಕಗಳು ಸಂದು ಹೋಯಿತು. ಗೋವಿಂದ ಭಟ್ಟರು ಅಂತೂ ನಿವೃತ್ತರಾದರು. ವಯಸ್ಸಿಗೂ ಸವಾಲೆಸೆದು ರಂಗವೇರಿ ಧೂಳೆಬ್ಬಿಸುತ್ತಿದ್ದ ಕಾಲುಗಳು ಈಗ ವಿರಾಮವನ್ನು ಬಯಸಿದೆ ಎಂದರೆ  ಕಾಲಯಾವುದನ್ನೂ ಬಿಡುವುದಿಲ್ಲ. ಅಪಾರವಾದ ಶಿಷ್ಯವರ್ಗ ಇವರದ್ದು. ಇಂದು ಬಹಳಷ್ಟು ಮೇಳದ ಕಲಾವಿದರು ಒಂದಲ್ಲ ಒಂದು ವಿಧದಲ್ಲಿ ಇವರಿಗೆ ಶಿಷ್ಯರು. ತನ್ನ ಕಣ್ಣೆದುರೇ ಇವರ ಶಿಷ್ಯರು ನಿವೃತ್ತಿ ಪಡೆದರು ಇನ್ನು ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ..ಹಾಗಿದ್ದರೂ ಇವರು ಸಕ್ರಿಯವಾಗಿ ರಂಗದಲ್ಲಿ ಪ್ರವೃತ್ತರಾಗಿದ್ದರು. ಶಿಸ್ತುಬದ್ದ ಜೀವನ ಕ್ರಮವೇ ಇದಕ್ಕೆ ಕಾರಣ.

 

         ನಾನು ಗೋವಿಂದ ಭಟ್ಟರನ್ನು ಮೆಚ್ಚಿಕೊಂಡದ್ದು ಅವರ ವೇಷವನ್ನು ಕುಣಿತವನ್ನು ನೋಡಿಯಲ್ಲ. ಯಾಕೋ ಅವರನ್ನು ಇಷ್ಟ ಪಡುವುದರಲ್ಲಿ ಯಕ್ಷಗಾನ ಒಂದು ವಿಷಯವೇ ಅಲ್ಲ ಅಂತನ್ನಿಸುತ್ತದೆ. ಯಕ್ಷಗಾನದಲ್ಲಿ ಇವರನ್ನು  ಇಷ್ಟ ಪಡದೇ ಇರುವ ಹಲವು ಸಂಗತಿಗಳು ಇವೆ. ಇಷ್ಟಪಡುವ ಸಂಗತಿಗಳೂ ಇವೆ.  ನಾನು ಹಲವು ಯಕ್ಷಗಾನದ ಹಿರಿಯ ಕಲಾವಿದರನ್ನು ಹತ್ತಿರದಿಂದ ಕಾಣುತ್ತೇನೆ. ಹಲವರನ್ನು ಕಂಡಾಗ ಯಕ್ಷಗಾನವನ್ನೇ ಕಂಡ ಅನುಭವವಾಗುತ್ತದೆ. ಯಕ್ಷಗಾನವಲ್ಲದೇ ಬೇರೇನೂ ಇಲ್ಲ ಎಂಬಂತಹ ಅನುಭವವಾಗುತ್ತದೆ. ಇವರನ್ನು ಕಾಣುವಾಗ ನನಗೆ ಆ ಅನುಭವ ಆಗುವುದಿಲ್ಲ. ಹಾಗಾಗಿ ನಾನು ದೃಷ್ಟಿಯಲ್ಲಿ ಕಾಣುವುದೂ ಇಲ್ಲ. ಅದಕ್ಕೆ ಕಾರಣ ಇವರಲ್ಲಿರು ಗೌರವ. ಯಕ್ಷಗಾನದ ಬಗ್ಗೆ ಹೇಳಿದರೆ ಇದೊಂದು ವಿಮರ್ಶೆಯಾಗಬಹುದು. ಇದು ವಿಮರ್ಷೆಯಲ್ಲ. ಇದು ಕೇವಲ ಅನುಭವ ಅನಿಸಿಕೆಗಳು. 

        

         ಮೊನ್ನೆ ಮೊನ್ನೆ ಅವರು ಹೇಳಿದ್ದಿದೆ, ನಾನು ಯಕ್ಷಗಾನಕ್ಕೆ ಬಯಸಿ ಬಂದವನಲ್ಲ.  ಕಲೋಪಾಸಕನಾಗಿ ಬಂದೆ.  ಕಲೋಪಾಸನೆ ಎಂಬ ಪುಸ್ತಕದಲ್ಲೂ ಅವರು ಇದನ್ನೇ ಹೇಳಿದ್ದರು. ಈ ನನ್ನ ಮೆಚ್ಚಿಕೆಯೂ ಸರಿ ಸುಮಾರು ಅದೇ ಭಾವದಲ್ಲಿ ಇದೆ ಅಂತ ನನ್ನ ಅನಿಸಿಕೆ.  ಯಾಕೆಂದರೆ ಯಕ್ಷಗಾನ ಅವರಿಗೆ ಕಲೆಯಿಂದ ಬಯಸದೇ ಇದ್ದರೂ  ವೃತ್ತಿಯಲ್ಲಿ ಅದನ್ನು ಅನುಭವಿಸಿದರು. ಇಷ್ಟವನ್ನು ಬದಿಗಿಟ್ಟು  ಅದನ್ನು  ಬಹಳ ಶ್ರದ್ಧೆಯಿಂದಲೇ ನೋಡಿದರು.  ನಾನು ಮೆಚ್ಚಿಕೊಂಡದ್ದು ಆ ಶ್ರದ್ದೆಯನ್ನು. ಯಕ್ಷಗಾನ ದ್ವಿತೀಯ ವಿಷಯವಾಗಿ ಅವರಲ್ಲಿ ನಾನು ಕಾಣುತ್ತೇನೆ. ಬಹುಶಃ ಯಕ್ಷಗಾನವನ್ನು ಅವರು ತೀವ್ರವಾಗಿ ಬಯಸಿಕೊಂಡು ಬಂದಿದ್ದರೆ, ಅದು ಪ್ರಮುಖ ಆದ್ಯತೆಯಾಗಿದ್ದರೆ ಬಹುಶಃ ಇಂದು ಅವರ ಬಗೆಗಿನ ವಿಮರ್ಶೆಗೆ ಅವಕಾಶವೇ ಇರುತ್ತಿರಲಿಲ್ಲ. 

            ಒಬ್ಬ ವ್ಯಕ್ತಿಯಾಗಿ ಇವರು ಬಹಳ ಇಷ್ಟವಾಗುತ್ತಾರೆ.  ಅವರ ಸಾಧನೆ ಕೌತುಕದ ವಿಷಯವಾಗುತ್ತದೆ. ಇಂದಿಗೂ ನಂಗೆ ಕರೆ ಮಾಡಿ ಮಾತನಾಡುತ್ತಾರೆ. ಆ ಆತ್ಮೀಯತೆ. ಆ ಸರಳತೆ ಇಷ್ಟವಾಗುತ್ತದೆ. ದಶಕದ ಮೊದಲಿನ ಗೋವಿಂದ ಭಟ್ಠರಿಗೂ ಈಗಿನ ಗೋವಿಂದಣ್ಣನಿಗೂ ವೆತ್ಯಾಸವೇ ಇಲ್ಲ. ಎಷ್ಟೋ ಸಲ ನಾನೇ ಹೇಳಿದ್ದೆ ಇನ್ನೂ ಯಾಕೆ ವೇಷ ಮಾಡ್ತೀರಾ? ಆಗ ಕಿರು ನಗುವಷ್ಟೇ ಉತ್ತರ.  ಒಂದು ಸಲ ಕರೆ ಮಾಡಿ ಹೇಳಿದ್ದರು, ಕಣ್ಣ ದೃಷ್ಟಿ ಕಡಿಮೆಯಾಗಿದೆ. ನೋಡಿದರೆ ಪರಿಚಯವೇ ಸಿಗುವುದಿಲ್ಲ. ರಂಗಸ್ಥಳದ ಲೈಟು ಬಹಳ ಫ್ರಖರ. ಅದನ್ನು ಕಡಿಮೆ ಮಾಡಬೇಕು.‌ಇಲ್ಲದಿದ್ದರೆ ಕಲಾವಿದರ ಕಣ್ಣು ಉಳಿಯುವುದಿಲ್ಲ. ಹೌದು, ನಾವು ವೇಷ ಕಾಣಬೇಕು ಅಂತ  ಲೈಟು ಹೆಚ್ಚಿಸುತ್ತಾ ಹೋಗುತ್ತೇವೆ. ಆದರೆ ಕಲಾವಿದ ಜಗತ್ತನ್ನು ಕಾಣಬೇಕೆಂಬ ಪ್ರಜ್ಞೆ ನಮ್ಮಲ್ಲಿ ಇಲ್ಲ.

 

                ಅವರ ಶ್ರದ್ಧೆಯಬಗ್ಗೆ ಹೇಳುವುದಿದ್ದರೆ ಹಲವು ವಿಷಯಗಳು ಸಿಗುತ್ತವೆ. ಧರ್ಮಸ್ಥಳ ಮೇಳದ ಇತಿಹಾಸ ತೆರೆದು ನೋಡಿದರೆ ಅದಕ್ಕ ಹಲವು ಪುರಾವೆಗಳು ಸಿಗುತ್ತವೆ. ಮೊದಲೆಲ್ಲ ಬೇರೆ ಮೇಳೆದಲ್ಲಿ ಸಾಮಾಜಿಕ ಅಂದರೆ ಪೌರಾಣಿಕ ಅಲ್ಲದೇ ಇದ್ದ ಹೊಸ ಪ್ರಸಂಗಗಳು ಪ್ರತಿವರ್ಷವೂ ಇರುತ್ತಿತ್ತು. ಆಗ ಧರ್ಮಸ್ಥಳ ಮೇಳದಲ್ಲಿ ಹೊಸ ಹೊಸ ಪೌರಾಣಿಕ ಪ್ರಸಂಗಗಳು ಪ್ರತಿವರ್ಷವೂ ಇದ್ದು ಮೇಳದ ಪ್ರವಾಸ ಅತ್ಯಂತ ಉತ್ಕೃಷ್ಟವಾಗಿರುತ್ತಿತ್ತು. ಪ್ರಸಂಗಕರ್ತರಾದ ಅಮೃತ ಸೋಮೇಶ್ವರ, ರಾಘವ ನಂಬಿಯಾರರು ಬರೆದ ಪ್ರಸಂಗಗಳು ಮೇಳದ ಯಶಸ್ವೀ ಪ್ರಸಂಗಗಳಾಗಿ ಪ್ರದರ್ಶನ ಗೊಂಡವು. ಇಂದು ಆ ಪ್ರಸಂಗಗಳನ್ನು ಬೇರೆ ಮೇಳಗಳು ಆಡಿದರೂ ಧರ್ಮಸ್ಥಳ ಮೇಳದ ಆ ಪ್ರದರ್ಶನಗಳಿಗೆ ಹೋಲಿಸಿದರೆ ಪೇಲವವಾಗಿಬಿಡುತ್ತದೆ. ಅದಕ್ಕೆ ಕಾರಣವಾಗಿ ಗೋವಿಂದ ಭಟ್ಟರ ಪಾತ್ರವೂ ಇದೆ. ಹೊಸ ಪ್ರಸಂಗಗಳು ಬಂದಾಗ ಪಾತ್ರವಿಂಗಡನೆಯಾದಾಗ ಮೇಳದ  ಪ್ರಮುಖ ಮೂರು ಕಲಾವಿದರಲ್ಲಿ ಕೇಂದ್ರೀಕೃತವಾಗುತ್ತಿತ್ತು. ಯಾಕೆಂದರೆ ಇವರಲ್ಲಿ ಒಬ್ಬರಲ್ಲ ಒಬ್ಬರು ರಂಗದ ಮೇಲೆ ಇರುತ್ತಿದ್ದರು. ಸನ್ನಿವೇಶ ಪ್ರಸಂಗ ನಡೆಯೇ ಹಾಗಿರುತ್ತಿತ್ತು. ಕಡತೋಕ ಭಾಗವತರ ಚಾಣಾಕ್ಷತೆ ಅದು. ಆ ಮೂರು ಕಲಾವಿದರಲ್ಲಿ ಒಬ್ಬರು ಕುಂಬಳೆ ಸುಂದರಾವ್ ಆದರೆ ಇನ್ನೊಬ್ಬರು ಪುತ್ತೂರು ನಾರಾಯಣ ಹೆಗ್ಗಡೆಯವರು. ಇವರೊಂದಿಗೆ ಗೋವಿಂದ ಭಟ್ಟರು ಒಬ್ಬರಾಗಿದ್ದರು. ಉಳಿದಿಬ್ಬರು ವಯೋಮಿತಿಯಿಂದ ಮತ್ತು ಪ್ರವೃತ್ತಿಯಿಂದ ಹೆಚ್ಚು ಕುಣಿತಗಾರರಲ್ಲ. ಆದರೆ ಗೋವಿಂದ ಭಟ್ಟರು ಎಲ್ಲವನ್ನು ಅವಾಹನೆ ಪಡೆದು ಮೂವರಲ್ಲಿ ಒಬ್ಬರಾಗಿ ಮಿಂಚಿದರು. ಇವರಿರುವಷ್ಟು ಹೊತ್ತು ರಂಗಸ್ಥಳದಲ್ಲಿ ಮಿಂಚು ಹರಿಯುತ್ತಿತ್ತು.

 

                ಗೋವಿಂದ ಭಟ್ಟರು ಜೀವನದಲ್ಲಿ ಪಳಗಿದ ವ್ಯವಹಾರಸ್ಥ. ಹಾಗಾಗಿ ವಾಸ್ತವದ ಸತ್ಯವನ್ನು ಅವರು ಬೇಗ ತಿಳಿಯುತ್ತಾರೆ. ಹೀಗಾಗಿ ಬಿಡದೇ ಒಂದು ವಿರಕ್ತಿ ಅವರನ್ನು ಹಿಂಬಾಲಿಸುತ್ತಾ ಬರುತ್ತದೆ. ನನ್ನಲ್ಲಿ ಮಾತನಾಡುವಾಗ ಹಲವುಸಲ ನನಗೆ ಹೀಗೆ ಅನಿಸಿದ್ದಿದೆ.  ಹಾಗೆಂದು ವಿರಾಗಿಯಲ್ಲ. ಇದು ಕೇವಲ ನನ್ನ ಭಾವನೆ. ಪ್ರತಿ ಸಲ ನನ್ನನ್ನು ಕಂಡಾಗ ಪ್ರೀತಿಯಿಂದಲೇ ಹತ್ತಿರ ಕರೆದು ಮಾತನಾಡುತ್ತಾರೆ. ಚೌಕಿಕೆ ಹೋದರೆ ಬಣ್ಣದ ಪೆಟ್ಟಿಗೆಯ ಮೇಲೆ ನನ್ನನ್ನು ಕೂರಿಸಿ  ನನ್ನವರ ಕ್ಷೇಮ ಸಮಾಚಾರ ವಿಚಾರಿಸುತ್ತಾರೆ. ಮತ್ತು ಬಹಳಷ್ಟು ವಿಷಯಗಳನ್ನು ಮಾತನಾಡುತ್ತಾರೆ. ಇಲ್ಲೆಲ್ಲ ಯಕ್ಷಗಾನದ ವಿಷಯವೇ ಇರುವುದಿಲ್ಲ.

      ಗೋವಿಂದ ಭಟ್ಟರದು ಅವರು ಹೇಳುವಂತೆ ಬಾಲ್ಯದಿಂದಲೇ ಬಹಳ ಸಾಹಸಮಯ ಜೀವನ. ಬದುಕಬೇಕು ಎಂಬ ಛಲವೇ ಅವರನ್ನು ಬದುಕಿಸಿತು. ಆನಂತರ ಆ ಛಲವೇ ತಾನು ಉಳಿಯಬೇಕು ಎಂಬ ನೆಲೆಯಲ್ಲಿ ಪ್ರಕಟಗೊಂಡು ಇದೀಗ ಅರುವತ್ತಕ್ಕೂ ಹೆಚ್ಚು ವರ್ಷ ರಂಗದ ಮೇಲೆ ಸಕ್ರಿಯರಾಗಿರುವಂತೆ ಮಾಡಿದೆ. ಅಧ್ಬುತವಾದ ಕ್ಷಮತೆ. ಯಾವುದೇ ದುರ್ವ್ಯಸನಗಳಿಗೆ ಒಪ್ಪಿಸದೇ ಒಬ್ಬ ಯೋಗಿಯಂತೆ ಬದುಕಿದರು. ನನ್ನಲ್ಲೂ ಯೋಗ ಪ್ರಜ್ಞೆಯನ್ನು ಹುಟ್ಟಿಸಿದ್ದೂ ಅವರೆ. ಅದರಿಂದಲೇ ಬಹಳಷ್ಟು ಪ್ರಚೋದನೆಗೊಂಡೆ. ಯೋಗ ಎಷ್ಟು ಪ್ರಬಲ ಅಂತ ಅವರೇ ಸಾಕ್ಷಿಯಾಗಿ ಮುಂದಿರುವಾಗ ನನಗೆ ಆಯ್ಕೆ ಮಾಡುವುದು ಬಹಳ ಸುಲಭವಾಗಿತ್ತು. ವ್ಯಕ್ತಿಯಾಗಿ ಸೂರಿಕುಮೇರಿ ಗೋವಿಂದ ಭಟ್ಟರು ಇಷ್ಟವಾಗುತ್ತಾರೆ. ಈಗ ಧರ್ಮಸ್ಥಳ ಮೇಳದ ಕರಪತ್ರದಲ್ಲಿಇವರ ಹಸರು ಇಲ್ಲದೇ ಇರಬಹುದು. ಕೇವಲ ಮಂಜುನಾಥನ ಹೆಸರು ಇದೆ. ಆದರೆ ಅದು ಇರುವ ವರೆಗೆ ಇವರ ಸ್ಮರಣೆ ನೆನಪು ಉಳಿಯುತ್ತದೆ. ಮೇಳದ. ಚರಿತ್ರೆಯ ಕೆಲವು ಪುಟಗಳಲ್ಲಿ ಕೆಲವು ಪುಟಗಳಾದರೂ ಇವರಿಗೆ ಮೀಸಲಾಗುತ್ತವೆ.   ಧರ್ಮಸ್ಥಳ ಮೇಳದ ಮಹಾಬ್ರಾಹ್ಮಣ , ನಾನು ಬಾಲ್ಯದಲ್ಲಿ ನೋಡಿದ ಪ್ರಸಂಗ. ಅದರಲ್ಲಿ ಸೂರಿಕುಮೇರಿಯವರ ಕೌಶಿಕ ವಿಶ್ವಾಮಿತ್ರನ ಪಾತ್ರ ನೋಡಿ ಬಹಳ ಪ್ರಭಾವಿತನಾಗಿದ್ದೆ. ಇದನ್ನು ಹಲವು ಸಲ ಅವರಲ್ಲೇ ಮುಖತಃ ಹೇಳಿದ್ದೆ. ಯಕ್ಷ ಕೌಶಿಕ ಎಂಬ ಅನ್ವರ್ಥನಾಮದಲ್ಲಿ ಲೇಖನವನ್ನೂ ಬರೆದಿದ್ದೆ. ಇನ್ನು  ಯಕ್ಷಕೌಶಿಕನನ್ನು ರಂಗದಲ್ಲಿ ಕಾಣುವುದಕ್ಕೆಸಾಧ್ಯವಿರಲಾರದು.  ಅವರ ಮುಂದಿನ ಜೀವನ ಸುಖಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ.

Saturday, November 7, 2020

ಮಾತು ಮೌನವಾಗಿದೆ

 

ನಾಲಗೆ ಇದ್ದರೆ ಮಗ ಬದುಕಿಯಾನು ಎಂಬ ನಾಣ್ಣುಡಿ ಇದೆ. ಮಾತು ಎಂಬುದು ಮನುಷ್ಯನನ್ನು ಭೂಮಿಯ ಉಳಿದ ಜೀವ ಜಾಲಗಳಿಂದ   ಪ್ರತ್ಯೇಕಿಸುತ್ತದೆ. ಮನುಷ್ಯನಿಗಲ್ಲದೆ ಬೇರೆ ಯಾವುದಕ್ಕೂ ಈ ಗುಣ  ಇರುವುದಿಲ್ಲ ಮಾತು ಕೆಟ್ಟರೆ ದೇಶ‌ ಕೆಟ್ಟಿತು. ಹೀಗೆ ಮಾತು ಎಂಬುದು ಮನುಷ್ಯನ ಜೀವ ಅಸ್ತಿತ್ವದ ಅಂಗ.  ಅದರಲ್ಲೂ ಕರಾವಳಿ ಜನಗಳಿಗೆ ಇದು ಸಹಜ ಧರ್ಮ ಎನ್ನಬೇಕು. ಹಾಗಾಗಿಯೇ ಯಕ್ಷಗಾನ ಎಂಬುದು ಅವಿಭಾಜ್ಯ ಅಂಗವಾಯಿತು. ಯಾಕೆಂದರೆ ಈ ’ಮಾತು’ ಎಂಬುದು  ಯಕ್ಷಗಾನದ ಜೀವಭಾವ ಎಂದರೂ ತಪ್ಪಾಗಲಾರದು. ಹೊರ ಜಗತ್ತಿಗೆ ಈ ಕಲೆ ತೋರಿಸಿದ್ದು ಒಂದಾದರೆ ಇದರಲ್ಲಿ ಅಡಕವಾಗಿರುವುದೇ ಇನ್ನೊಂದು. ಅದರಲ್ಲಿ  ಹೇಳಬಹುದಾದ್ದು ಎಂದರೆ ಮತ್ತದೇ ಮಾತು.  ಹಾಗಾಗಿಯೇ ಇಲ್ಲಿ ಅವ್ಯಕ್ತವಾಗಿ ಭಾಸವಾಗುವುದು ಬಾಯಿ ಇದ್ದರೆ ಮಗ ಬದುಕಿಯಾನು.


ಯಕ್ಷಗಾನವೆಂದರೆ ಬಣ್ಣದ ವೇಷ ಕುಣಿತ  ಗಾಯನ ಹೀಗೆ ಹೊರ ಪ್ರಪಂಚಕಂಡುಕೊಂಡರೆ ಯಕ್ಷಗಾನದ ನಿಜವಾದ ಆಸ್ವಾದನೆಯ ರಸಿಕನ ಕಥೆಯೇ ಬೇರೆ. ಆತ ಇಲ್ಲಿ ಕಂಡುಕೊಂಡದ್ದು ಮಾತಿನ ಮಂಟಪವನ್ನು. ಈ ಮಾತಿನ ಮಂಟಪದ ಅದ್ಭುತವಾದ ಶಿಲ್ಪಿಗಳು ಕಟ್ಟಿ ಬೆಳೆಸಿದ ಪರಂಪರೆಯೇ ಯಕ್ಷಗಾನದ ಅರ್ಥಗಾರಿಕೆ. ಒಬ್ಬಬ್ಬರೂ ಕಟ್ಟಿದ ಮಾತಿನ ಮಂಟಪವೇನು ಜಗತ್ತನ್ನೇ ಇಲ್ಲಿ ಸೃಷ್ಟಿ ಮಾಡಿದರು. ರಸಿಕನ ಕಣ್ಣ ಕಾಣಲಾಗದೇ ಇದ್ದದ್ದನ್ನು, ಮನಸ್ಸು ಕಲ್ಪಿಸಲಾಗದೇ ಇದ್ದದ್ದನ್ನು ಇಲ್ಲಿ ಸೃಷ್ಟಿ ಮಾಡಿ ತೋರಿಸಿದರು. ಅದರಲ್ಲಿ ಖ್ಯಾತ ನಾಮರಾಗಿ ತನ್ನದೇ ವ್ಯಕ್ತಿ ವಿಶೇಷವನ್ನು ಹೊಂದಿ ರಸಿಕರ ಮನಗೆದ್ದವರು ಇತ್ತೀಚೆಗೆ ನಮ್ಮನ್ನಗಲಿದ  ಮಲ್ಪೆ ವಾಸುದೇವ ಸಾಮಗರು.

 

ಸಾಮಗರ ವೇಷಗಳನ್ನು ಪಾತ್ರಗಳನ್ನು ಅರ್ಥಗಾರಿಕೆಯನ್ನು ಅನುಭವಿಸುವಾಗ ಆ ವಾಕ್ ಚಾತುರ್ಯಕ್ಕೆ ಶಬ್ದ ವಿನ್ಯಾಸಗಳನ್ನು ಕಂಡಾಗ ನಾನು ಹೇಳಿಕೊಂಡದ್ದಿದೆ , ಬಾಯಿ ಇದ್ದರೆ ಮಗ ಬದುಕಿಯಾನು. ಇದು ಅವರೇ ಹೇಳುವ ಅರ್ಥಗಾರಿಕೆಯ ಶೈಲಿಯ ವಾಕ್ಯ. ಎಂತಹಾ ಮಾತುಗಾರಿಕೆ. ಶಬ್ದಗಳು ಇವರ ಅರ್ಥಗಾರಿಕೆಗೆ ಸೃಷ್ಟಿಯಾದಂತೆ ಅದರ ಸೂಕ್ತ ಬಳಕೆ. ಪಾತ್ರದ ಮಂಡನೆ ರಸಿಕರ ಚಿಂತನೆಗೆ ಕಿಚ್ಚು ಹಚ್ಚಿಸಿ ಆ ಬೆಳಕನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡುವ ಒಂದು ರೀತಿ ಮಿಂಚಿನ ಅರ್ಥಗಾರಿಕೆ ಸಾಮಗರದ್ದು.

 

ಯಕ್ಷಗಾನದಲ್ಲಿ ಮಾತಿನ ಪರಂಪರೆಗೆ ಮತ್ತೊಂದು ಅನ್ವರ್ಥ ಪರಂಪರೆಯನ್ನು ಸೃಷ್ಟಿಸಿದ್ದು ಸಾಮಗ ಪರಂಪರೆ. ಇದರಲ್ಲಿ ಹಲವರು ಯಕ್ಷಗಾನದ ಅರ್ಥಾಗಾರಿಕೆಯಲ್ಲೂ ಪಾತ್ರ ವೈಖರಿಯಲ್ಲೂ ತಮ್ಮದೇ ಸ್ಥಾನವನ್ನು ನಿರ್ಮಿಸಿದವರು. ಆ ಸಾಮಗ ಪರಂಪರೆ ಯಕ್ಷಗಾನದ ಅನಿವಾರ್ಯ ಅಂಗವೆಂಬಂತೆ ಅವಿನಾಭಾವ ಸಂಬಂಧವನ್ನು ಬೆಳೆಸಿ ಯಕ್ಷಗಾನಕ್ಕೆ ತಮ್ಮ ಪರಂಪರೆಯ ದೇಣಿಗೆಯನ್ನು ಸಲ್ಲಿಸಿದೆ. ಇಂದು ಯಕ್ಷಗಾನದ ಅರ್ಥಗಾರಿಕೆಯ ಪ್ರಪಂಚ ವಿಶಿಷ್ಟವಾಗಿರುವುದಕ್ಕೆ ಒಂದು ಕಾರಣವೇ ಈ ಸಾಮಗ ಪರಂಪರೆ. ಯಕ್ಷಗಾನದ ಅರ್ಥಗಾರಿಕೆಯ ಅಂಗಿಯ ಒಂದು ಗುಂಡಿ ಕಳಚಿ ಬಿದ್ದಿದೆ. ಮೊನ್ನೆ ಮೊನ್ನೆ ವರೆಗೂ ಭದ್ರವಾಗಿ ಯಕ್ಷಗಾನವನ್ನುಅಲಂಕರಿಸಿದ್ದ ಈ ಅಮೂಲ್ಯ ವಸ್ತು ಇಂದು ಇಲ್ಲ ಎಂದಾಗಬೇಕಾಗಿದ್ದರೆ ನಂಬುದುವುದಕ್ಕೆ ಸಾಧ್ಯವಿಲ್ಲ.

ನಾನು ಸಾಮಗರ ವೇಷವನ್ನು ಮೊದಲು ನೋಡಿದ್ದು ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಗೋವಿಂದ ಭಟ್ಟರ ಪಾತ್ರದಲ್ಲಿ. ಆವಾಗ ನಿಜಕ್ಕೂ ಬೆರಗಾಗಿದ್ದೇನೆ. ಇಂದು ಆ ಪಾತ್ರದಲ್ಲಿ ಹಲವರನ್ನು ಕಂಡಿದ್ದೇನೆ. ಆದರೆ ವಾಸುದೇವ ಸಾಮಗರ ಭಟ್ಟರು ಎಂದರೆ ಅದು ಅದ್ವಿತೀಯ. ಆ ಪಾತ್ರದ ವ್ಯಕ್ತಿತ್ವದ ಸಂಪೂರ್ಣ ಅಭಿವ್ಯಕ್ತಿಯನ್ನು ಇವರಂತೆ ಬಿಂಬಿಸಿದವರಿಲ್ಲ ಅಂತ ನನ್ನ ಭಾವನೆ.  ಆನಂತರ ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿ, ಕಾಯ ಕಲ್ಪದ ಅಶ್ವಿನಿ ದೇವತೆ...ಇದೆಲ್ಲ ಹಳೆಯ ಚರಿತ್ರೆಯ ಕಥೆಗಳು. ಬಯಲಾಟದಲ್ಲಿ ನೋಡಿದಕ್ಕಿಂತಲೂ ಹೆಚ್ಚು ತಾಳಮದ್ದಲೆಯಲ್ಲಿ ಕಂಡ ಪಾತ್ರಗಳೇ ಹೆಚ್ಚು. ಉತ್ತರನ ಪೌರುಷ ಪ್ರಸಂಗ ಇವರಿಗಾಗಿಯೇ ರಚಿಸಲ್ಪಟ್ಟಿತೇ ಎಂದು ಭಾಸವಾಗಬೇಕು. ಉತ್ತರನ ಪಾತ್ರ ಪ್ರಸ್ತುತಿಯದು.   ಏಕ ಮಾತ್ರ ವ್ಯಕ್ತಿಯಾಗಿ ಆ ಪ್ರಸಂಗವನ್ನು ಮೆರೆಸುವ ಪರಿ ಅದು ಸಹಜ ಸಾಮಗ ಶೈಲಿ ಅಂತ ಹೇಳಬೇಕು.  ದಮಯಂತಿ ಸ್ವಯಂವರ, ನಿಜಕ್ಕೂ ಯಕ್ಷಗಾನದ ಸಹಜ ಗದ್ದಲವಿಲ್ಲದ ಸೌಮ್ಯ ಪ್ರಸಂಗ. ಹಲವರು ಇದನ್ನು ಸಪ್ಪೆ ಪ್ರಸಂಗ ಅಂತ ಭಾವಿಸುತ್ತಾರೆ. ಸುರತ್ಕಲ್ ಮೇಳದ ಆಟದ ಇದೇ ಪ್ರಸಂಗದಲ್ಲಿ ಕೆಲವು ನಿಮಿಷಗಳ ಪುಷ್ಕಳನ ಪಾತ್ರ ನಿರ್ವಹಣೆ ಈಗಲೂ ನೆನಪಿಗೆ ಬರುತ್ತದೆ. ಅಚ್ಚುಕಟ್ಟಿನ ಪಾತ್ರ ನಿರ್ವಹಣೆ. ಸಪ್ಪೆ ಎನಿಸುವ ಪ್ರಸಂಗಕ್ಕೂ ಇವರ ಪುಷ್ಕರ ಕಿಚ್ಚು ಹತ್ತಿಸಿಬಿಡುತ್ತಾನೆ.

 

ಯಾವುದೇ ಪಾತ್ರವಾದರೂ ಆ ಪಾತ್ರದ ಮನೋಭಾವಕ್ಕೆ ಲಗ್ಗೆ ಇಡುವ ಪಾತ್ರ ನಿರ್ವಹಣೆ ಸಾಮಗರ ವೈಶಿಷ್ಟ್ಯ ಎನ್ನಬೇಕು. ತೆಂಕು ಬಡಗು ಎಂಬ ವೆತ್ಯಾಸವೇ ಇಲ್ಲದಂತೆ ಇವರ ಪಾತ್ರಗಳು ವಿಜ್ರಂಭಿಸುತ್ತವೆ. ಇವರ ವಾದಗಳಲ್ಲಿ ವಿತಂಡವಾದ ಮೊಂಡುತನ ಧಾರಾಳವಾಗಿ ಕಾಣಬಹುದು. ಬಹಳ ಅಪರೂಪ ಎನ್ನಿಸುವ ಶಬ್ದಗಳನ್ನು ಸಹಜ ಎಂಬಂತೆ ಪ್ರಯೋಗಕ್ಕೆ ತರುವ ಕ್ಷಮತೆ ನಿತ್ಯ ತೋರುತ್ತಾರೆ. ತಾಳ ಮದ್ದಲೆಗಳಲ್ಲಿ ಇವರು ಪಾತ್ರವನ್ನು ಕಟ್ಟುವ ಪರಿ ಅದ್ಭುತವಾಗಿರುತ್ತದೆ. ಹೆಚ್ಚಾಗಿ ರಾಮದಾಸ ಸಾಮಗರಂತೆ ಭಾವೋತ್ಕರ್ಷಕ್ಕೆ ಒಳಗಾಗುತ್ತಾರೆ. ಅರ್ಥಗಾರಿಕೆ ಕೇವಲ ವಿಚಾರ ಮಂಡನೆಯಾಗಬಾರದು. ಕೇವಲ ವಾದ ತರ್ಕಕ್ಕೆ ಸೀಮಿತವಾಗಬಾರದು. ಪ್ರತಿಸ್ಪರ್ಧಿಯ ಜತೆ ಸೀಮಿತವಾಗಿ ಸ್ಪರ್ಧಿಸಬೇಕು. ಹೆಚ್ಚಾಗಿ ಪ್ರತಿವಾದಿಯಲ್ಲಿ ಘರ್ಷಣೆಗೆ ಇಳಿದಾಗ ತನ್ನ ಪಾತ್ರದ ನಿಜವಾದ ವ್ಯಕ್ತಿತ್ವವನ್ನೂ ಸ್ವಭಾವವನ್ನು ಹಲವರು ಮರೆತು ಬಿಡುತ್ತಾರೆ. ಆದರೆ ಇವರ ಅರ್ಥಗಾರಿಕೆಯ ವೈಶಿಷ್ಟ್ಯವೇ ಎಂತಹಾ ವಾದವಿರಲಿ ಪಾತ್ರಕ್ಕೆ ಹೊಂದಿಕೊಂಡು ಸಂವಾದವಾಗುತ್ತದೆ. ಪಾತ್ರದ ಚೌಕಟ್ಟಿನೊಳಗೆ ಸಾಕಷ್ಟು ಸರ್ಕಸ್ ಮಾಡುವ ಅರ್ಥಗಾರಿಕೆ

 

ಸಾಮರ ವೈಶಿಷ್ಟ್ಯ ಕೇವಲ ಒಂದೆರಡು ವಾಕ್ಯದ ಪುಟ್ಟ ಅಂಕಣಕ್ಕೆ ಸೀಮಿತವಾಗುವಂಥದ್ದಲ್ಲ. ಅದೊಂದು ವಿಶಾಲವಾದ ಸಾಮ್ರಾಜ್ಯ. ವಾಸುದೇವ ಸಾಮಗರು ಇದ್ದಾರೆ ಎಂದರೆ ಅಲ್ಲಿ ಮಾತು...ಬರೇ ಮಾತು. ಹೀಗಿದ್ದರೂ ಮಾತುಗಾರಿಕೆಗೆ ಇವರು ಕೊಟ್ಟಿರುವ ಆಯಾಮ ಮಾತ್ರ ಅದ್ಭುತ. ತಾಳಮದ್ದಲೆಗೂ ಒಂದು ಮೇಳವನ್ನು ಕಟ್ಟಿಕೊಂಡು ಸಂಯಮದಿಂದ ತಿರುಗಾಟ ಮಾಡಿ ಮಾತಿನ ಅರಮನೆಗೆ ಕಲ್ಲು ಜೋಡಿಸಿದ ಕಾಯಕ ಪುರುಷ.  

 

ಮಾತುಗಾರಿಕೆಯ ಪಾತ್ರಗಳು ಇಂದು ಮೌನಕ್ಕೆ ಸರಿದು ರೋಧಿಸಿದ ಅನುಭವವಾಗುತ್ತದೆ. ಇನ್ನು ತಮ್ಮ ಪಾತ್ರಗಳು ವ್ಯಂಜನವಿಲ್ಲದ ಭೋಜನವಾದೀತೆ ಎಂದು ಆತಂಕ ಪಡುತ್ತವೆ.

 

ರಂಗದ ಮಟ್ಟಿಗೆ ಪಾತ್ರಗಳು ಕೇವಲ ರಂಗದ ಅಂಗವಾಗಿರಬಹುದು. ಆದರೆ ಒಬ್ಬ ಸಾಮಗರಂತಹ ಒಬ್ಬ ಅರ್ಥಧಾರಿ ಕಲಾವಿದನಿಗೆ ಅಷ್ಟಕ್ಕೇ ಸೀಮಿತವಾಗುವುದಿಲ್ಲ. ಅದರ ಹಿನ್ನೆಲೆಯಲ್ಲಿ ಸಾಕಷ್ಟು ಅಧ್ಯಯನ ಸಾಧನೆ ಬೇಕಾಗುತ್ತದೆ. ಇವೆಲ್ಲವೂ ಅವರ ಅರ್ಥಗಾರಿಕೆಯಲ್ಲಿ ವ್ಯಕ್ತವಾಗುತ್ತದೆ.

 

ಅದ್ಭುತ ಮಾತುಗಾರ ಈಗ ಮೌನಕ್ಕೆ ಜಾರಿದ್ದಾನೆ. ಪ್ರೇಕ್ಷಕ ಆ ಮೌನದಲ್ಲಿ ಮಾತನ್ನು ಹುಡುಕಬಹುದು. ಯಾಕೆಂದರೆ ಸಾಮಗರ ಪ್ರತಿಬೆ ಆ ರೀತಿಯದು. ಇದುವರೆಗು ಭೀಷ್ಮ ಪರಶುರಾಮರನ್ನು ಮೆರೆಸಿದ ನಾಲಗೆ ಇಂದು ಮೌನಕ್ಕೆ ಜಾರಿದೆ. ಇನ್ನು ಎಲ್ಲವೂ ನೆನಪು ಮಾತ್ರ.

 

ಮೃತರ ಆತ್ಮಕ್ಕೆ ಸದ್ಗತಿಯನ್ನು ಮೌನವಾಗಿ ಪ್ರಾರ್ಥಿಸುವುದಷ್ಟೇ ಉಳಿದಿದೆ.