"ಇದು ವಿಮರ್ಶೆಯಲ್ಲದ ಚಿಂತನ"

Thursday, April 14, 2022

ಪ್ರಸಾದ ಮರಳಿ ಭಗವಂತನ ಮಡಿಲಿಗೆ

        ಚೆಂಡೆ ಮೃದಂಗ ಹೀಗೆ ಪಕ್ಕ ವಾದ್ಯಗಳೆಲ್ಲವೂ ಸಮಶ್ರುತಿಯಲ್ಲಿಟ್ಟು   ಭಾಗವತ ಹಾಡು ಹೇಳುವಾಗ ಎಲ್ಲವೂ ಸಮವಾಗಿದೆ ಎನ್ನುವಾಗ ಅಪಶ್ರುತಿಯೊಂದು ಸೂಕ್ಷ್ಮವಾಗಿಯಾದರೂ ಹೊರಬಂದರೆ ಎಲ್ಲವೂ ಒದಗಿಬಂದರೂ ಸಕಲವೂ  ಕಳೆದುಕೊಂಡಂತೆ. ಇನ್ನೇನು ಎಲ್ಲವೂ ಸುಖಪ್ರಾಪ್ತಿಕೆ ಹತ್ತಿರವಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದರೆ ಒಮ್ಮಿಂದೊಮ್ಮೆಲೇ ಎಲ್ಲವೂ ಕಳಚಿಹಾಕಿದ ಅನುಭವವಾಗಿಬಿಡುತ್ತದೆ.   ಒಂದು ಸಂಜೆಯಲ್ಲಿ  ಸೂರ್ಯಾಸ್ತವಾಗುತ್ತಿದ್ದಂತೆ ಅದಾಗಲೇ ಮತ್ತೊಂದು ಪ್ರಖರ ಸೂರ್ಯ ಅಸ್ತಮಿಸಿದ ವಾರ್ತೆ ಬಡಿದಪ್ಪಳಿಸಿ ಸರ್ವಾಂಗವು ತತ್ತರಿಸಿ ಕತ್ತಲಿಗೆ ದೂಕಿದ ಅನುಭವವಾಯಿತು.


            ಯುವ ಭಾಗವತ ಹಿತೈಷಿ ಶ್ರಿ ಪ್ರಸಾದ ಭಾಗವತನ  ಭೂಮಿಯ ಸಂಬಂಧ ಕಳಚಿಕೊಂಡ ಸುದ್ದಿ ನಂಬಲು ಸಾಧ್ಯವಿಲ್ಲದಂತಾಗಿತ್ತು. ಕೂಡಲೇ ಮಿತ್ರ ವೇಣೂರ  ಸುಬ್ಬಣ್ಣನಿಗೆ ಕರೆ ಮಾಡಿದೆ. ಕರೆ ತಾನೊಬ್ಬನೇ ರಿಂಗಣಿಸಿ  ನಿಂತು ಹೋಯಿತು.  ಖಂಡಿತ ಸುಬ್ಬಣ್ಣ ಅಳುತ್ತಿರಬಹುದು ಅದು ಸುಳ್ಳಾಗಲಿಲ್ಲ.  ತುಸು ಹೊತ್ತಿನಲ್ಲೇ ಸುಬ್ಬಣ್ಣ ಕರೆ ಮಾಡಿದರು. ನನ್ನ ಊಹೆ ನಿಜವಾಗಿತ್ತು. ಸುಬ್ಬಣ್ಣ ಅಕ್ಷರಶಃ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನಿಷ್ಕಲ್ಮಶ ಹೃದಯಕ್ಕೆ ನಿಷ್ಕಲ್ಮಶ ಹೃದಯದ ಕಂಬನಿಯದು. ನಿಜಕ್ಕೂ ದಿಗ್ಭ್ರಾಂತನಾದೆ. ಇಂತಹ ವಾರ್ತೆಗಳು ಇತ್ತೀಚೆಗೆ ಹೊಸತಲ್ಲ. ಆಗೆಲ್ಲ ಮನಸ್ಸಿನ ತುಮುಲಗಳನ್ನು ವ್ಯಕ್ತ ಪಡಿಸಲು ನುಡಿನಮನ ಸಲ್ಲಿಸುವುದಕ್ಕೆ ಮನಸ್ಸು ಸಿದ್ದವಾಗಿಬಿಡುತ್ತಿತ್ತು. ಇಂದೂ ಅದಕ್ಕೆ ಯತ್ನಿಸಿದರೆ ಕೈ ಮುಂದಕ್ಕೆ ಓಡದಂತಹ ಒಂದು ನಿಶ್ಯಕ್ತಿ ಆವರಿಸಿ ಬಿಟ್ಟಿತ್ತು. ಛೇ ....ಹೀಗೂ ಆಯಿತಲ್ಲ! 

    ಪ್ರಸಾದ ಭಾಗವತ, ಹೆಸರೇ ಸೂಚಿಸುವಂತೆ ಯಕ್ಷಗಾನ ಅದರಲ್ಲೂ ಪರಂಪರೆಯ ಹೆಸರು ಹೇಳುವಾಗ ಇದೊಂದು ವರಪ್ರಸಾದವೆಂಬಂತೆ ಹಲವು ಸಲ ಭಾಸವಾಗುತ್ತಿತ್ತು. ಪರಂಪರೆಯ ಮೊಗ್ಗು ಅರಳಿ ಇನ್ನೇನು ಒಂದು ಎಸಳು ಬಿರಿದು ಅರಳಿತು ಎನ್ನುವಾಗಲೇ ಕಮರಿ ಹೋದದ್ದು ದುರಂತ. ಯಾರು ಅಗಲಿದರು ಮನಸ್ಸು ಮೊದಲು ಯೋಚಿಸುವುದು ಅವರೊಂದಿಗೆ ಕಳೆದ ಘಟನೆಗಳನ್ನು. ಪ್ರಸಾದ ಬಲಿಪರನ್ನು ನಾನು ಮೊದಲು ಯಾವುದೋ ಕಾರ್ಯಕ್ರಮದಲ್ಲಿ ನೋಡಿದ್ದರು ವ್ಯಯಕ್ತಿಕವಾಗಿ ಭೇಟಿ ಯಾಗಿ ಪರಸ್ಪರ ಮಾತನಾಡಿಕೊಂಡದ್ದು ಆವಳ ಮಠದ ಗೋಪುರದಲ್ಲಿ. ಅಂದು ಯಾವುದೋ ತಾಳಮದ್ದಲೆಗೆ ಬಂದವರೊಂದಿಗೆ ಜತೆಯಲ್ಲಿ ಕುಳಿತು ದೇವರ ಪ್ರಸಾದ ಸ್ವೀಕರಿಸಿದ್ದೆ. ಆಗ ಅನ್ನಿಸಿತ್ತು, ಅದೆಂತಹ ವಿನಯ, ಅದೆಂತಹ ಸೌಮ್ಯತೆ. ನಿಜಕ್ಕೂ ಇದು ಬಲಿಪ್ಪಜ್ಜನ ವರ ಪ್ರಸಾದವೇ.

         ಪ್ರಸಾದನ ಅದ್ಭುತ ಕಂಠ ಸಿರಿ, ತಂದೆಯಂತೆ ಅವರಿಗೂ ಒಲಿದ ಒಂದು ಜನ್ಮ ಜಾತ ಪ್ರತಿಭೆ. ಸಣಕಲು ಶರೀರ,  ಹೊಳೆಯುವ ಚಂಚಲ ಕಣ್ಣುಗಳು,ಛೇ ಆ ಸ್ವರ ಎಲ್ಲಿಂದ ಹೊರಡುತ್ತದೆ ಎಂದು ಬೆರಗಾಗುತ್ತಿತ್ತು.   ಸ್ವರದ ಬಗ್ಗೆ ಹೇಳುವಾಗ ನಿನ್ನೆ ನಡೆದ ಒಂದು ಘಟನೆ ಹೇಳುವುದು ಸೂಕ್ತ ಅನ್ನಿಸುತ್ತದೆ. ಸಾಮಾನ್ಯವಾಗಿ ಮನೆಯಿಂದ ಹೊರಗೆ ಹೋದಾಗ, ಯಾವುದಾರೂ ಕೆಲಸದಲ್ಲಿ ಮಗ್ನನಾಗುವಾಗ ಕೆಲಸದ ಏಕತಾನತೆ ದೂರ ಮಾಡುವುದಕ್ಕೆ ಮೊಬೈಲ್ ನಲ್ಲಿ ಸಂಗೀತ ಯಕ್ಷಗಾನ ಹಾಕಿ ಹೆಡ್ ಸೆಟ್ ಕಿವಿಗೆ ಇರಿಸಿ ಆಲಿಸುತ್ತಾ ಕೆಲಸದಲ್ಲಿ ತಲ್ಲೀನನಾಗುವುದು ನನ್ನ ಸ್ವಭಾವ. ಇತ್ತೀಚೆಗೆ ಹೆಚ್ಚಾಗಿ ಶಾಸ್ತ್ರೀಯ ಸಂಗೀತವನ್ನೇ ಕೇಳುತ್ತಿದ್ದ ನನಗೆ ನಿನ್ನೆ ಪ್ರಸಾದನ ಅಗಲಿಕೆಗೆ ಅವರ ಒಂದಷ್ಟು ಪದಗಳನ್ನು ಕೇಳುತ್ತಾ ಕೆಲಸ ಮಾಡುತ್ತಿದ್ದೆ. ವಾಸ್ತವದಲ್ಲಿ ಹೆಡ್ ಸೆಟ್ ನಲ್ಲಿ ಹೊರಡುವ ಧ್ವನಿ ಹೊರ ಪ್ರಪಂಚಕ್ಕೆ ಕೇಳುವುದಿಲ್ಲ. ಆದರೆ ನಿನ್ನೆ ಬ್ಯಾಂಕ್ ಆಡಿಟ್ ನಿಮಿತ್ತ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರಬೇಕಾದರೆ, ಆ ನೀರವತೆಯಲ್ಲಿ ಪ್ರಸಾದನ ಸ್ವರ ಸ್ಪಷ್ಟವಾಗಿ ಹೊರಗೆ ಕೇಳಿಸಿ,  ಊರಿನವರೇ ಹೆಚ್ಚಿದ್ದ ಬ್ಯಾಂಕ್ ನಲ್ಲಿ ಒಬ್ಬರು ಕೇಳಿದರು ಅದು ಯಾರದು ಯಕ್ಷಗಾನ ಸ್ವರ? ಅದುವರೆಗೆ ಹೊರಗೆ ಕೇಳಿಸದೇ ಇದ್ದ ಧ್ವನಿ ಪ್ರಸಾದನ ಪದ ಹಾಕಿದ ಕೂಡಲೆ ಸೂಕ್ಷ್ಮವಾಗಿ ಧ್ವನಿ ತರಂಗಗಳನ್ನು ಬಡಿದೆಬ್ಬಿಸಿದ್ದು ನನಗೆ ಅಚ್ಚರಿ ತಂದಿತ್ತು. ಪ್ರಸಾದನ ಸ್ವರದ ಪ್ರಖರತೆ ಅದು. ಏರು ಶ್ರುತಿಯ ಪದಗಳು ಇನ್ನು ಕೇವಲ ನೆನಪು ಮಾತ್ರ.

         ಕೆಲವು ವರ್ಷಗಳ ಕೆಳಗೆ ಊರಿನ ಮಿತ್ರರೊಬ್ಬರು, ಹೀಗೆ ಹಲವರು ಹೇಳಿದ್ದಾರೆ,  ಕಟೀಲು ಮೇಳದ ಆಟಕ್ಕೆ ಅರ್ಧ ರಾತ್ರಿಗೆ ಹೋಗಿದ್ದರು. ಬೆಂಗಳೂರಿನಿಂದ ಊರಿಗೆ ಹೋಗುತ್ತಿರಬೇಕಾದರೆ ಅದು ಯಾವುದೋ ಊರಲ್ಲಿ ಕಟೀಲು ಎರಡನೇ ಮೇಳದ ಆಟ ಪ್ರದರ್ಶನವಾಗುತ್ತಿತ್ತು. ಬೆಳಗ್ಗಿನ ಜಾವದ ಯಕ್ಷಗಾನ. ಒಂದಷ್ಟು ಹೊತ್ತು ನೋಡೋಣ ಎಂದು ಕಾರು ಬದಿಗೆ ನಿಲ್ಲಿಸಿ ರಂಗಸ್ಥಳದ ಬಳಿಗೆ ಹೋದರು. ಅದು ಹರಕೆ ಬಯಲಾಟ. ಸಹಜವಾಗಿ ಆಟ ಆಡಿಸುವ ಸೇವಾ ಕರ್ತರು ಅದೂ ಒಂದೆರಡು ಮಂದಿ ಬಿಟ್ಟರೆ ಉಳಿದೆಲ್ಲ ಕುರ್ಚಿಗಳು ಮಂಜಿಗೆ ಮೈಯೊಡ್ಡಿ ತಣ್ಣನೇ ಕುಳಿತಿತ್ತು. ಇವರು ಅಷ್ಟೇ ಆ ಛಳಿಗೆ ಸ್ವಟರ್ ಮತ್ತಷ್ಟು ಗಟ್ಟಿ ಮಾಡಿಕೊಂಡು  ಒಂದೆರಡು ಪದ ಕೇಳುವ ಎಂದು ಕುಳಿತರೆ ಮಂಗಳವಾಗುವ ತನಕ ಕುಳಿತೇ ಇದ್ದದ್ದು ಕೇವಲ ಪ್ರಸಾದನ ಪದದ ಆಕರ್ಷಣೆ ಎಂದು ಬೇರೆ ಹೇಳಬೇಕಿಲ್ಲ.  ಅವರು ಹೇಳಿದ ಮಾತು ಇನ್ನೂ ನೆನಪಿದೆ, " ಎಂತ ರಾಜಣ್ಣ, ಕೇಳುವುದಕ್ಕೆ ಯಾರೂ ಜನ ಇಲ್ಲ. ಆದರೂ ಈ ಜನ ಒಂದು ಸ್ವರ ಬಿಡ್ತಿತ್ತು....ಮಾರಾಯ್ರೆ, ಹೀಗೆಯೂ ಒಬ್ಬ ಭಾಗವತ ಇರಬಹುದಾ ಅಂತ ಆಶ್ಚರ್ಯ ಆಯಿತು."    ಮಂಜಿನ ಛಳಿಗೆ  ಉರಿ ಬೆಂಕಿಯನ್ನು ಹಚ್ಚಿದ ಅನುಭವ ಅಂತ ಅವರೇ ಹೇಳಿದ್ದರು. ಈ ಮನುಷ್ಯನಿಗೆ ಯಾರೂ ಬೇಡ ಮಾರಾಯ್ರೆ, ಯಾವ ಚೆಂಡೆ ಮದ್ದಲೆಯಾದರೂ ಜನ ಇಲ್ಲದಿದ್ದರು ಭಯಂಕರ ಸ್ವರ ಅಂತ ಹೇಳುವಾಗ ಭಾಗವತ ಪ್ರೇಮ ಕಾಣಬಹುದಿತ್ತು.     ಅದು ಪ್ರಸಾದನ ಕಲಾಪ್ರೇಮ. ನಿಷ್ಕಲ್ಮಷ ಪ್ರವೃತ್ತಿ. ಬಹುಶಃ ಇಂದು ಅದು ಅತ್ಯಂತ ವಿರಳ.ಆಗೆಲ್ಲ ನನಗೂ ಅನ್ನಿಸಿತ್ತು, ಒಂದು ಸಲ ಕಟೀಲಿನ ಎರಡನೇ ಮೇಳದ ಆಟಕ್ಕೆ ಬೆಳಗ್ಗಿನ ಜಾವ ಹೋಗಿಬಿಡಬೇಕು. ಮಿತ್ರ ಸುಬ್ಬಣ್ಣನೂ ಹಲವು ಸಲ ಹೇಳಿದ್ದರು, ಬನ್ನಿ ನಮ್ಮ ಮನೆಗೆ ರಾಜಣ್ಣ. ನಾನು ಕರೆದುಕೊಂಡು ಹೋಗುತ್ತೇನೆ ಅಂತ. ಆದರೆ ಬೆಂಗಳೂರಿನಿಂದ ಊರಿಗೆ ಆಟಕ್ಕೆ ಹೋಗುವುದಕ್ಕೆ ಬಹಳ ಪರಿಶ್ರಮ ಪಡಬೇಕಾದ ಅವಸ್ಥೆ ನನ್ನದು. ಆ ಆಶೆ ಕೊನೆಗೂ ಆಶೆಯಾಗಿಯೇ ಉಳಿದು ಹೋಯಿತು.

            ಸಾಮಾನ್ಯವಾಗಿ ಒಬ್ಬ ಕಲಾವಿದ ಅಂತ ಅನ್ನಿಸಿಕೊಂಡ ಮೇಲೆ ಒಂದು ತಾರಾಮೌಲ್ಯ ( star value) ಗಳಿಸುವ ಹಂಬಲ ಇರುತ್ತದೆ. ಆನಂತರ ಆ ಸ್ಥಾನವನ್ನು ಶತಾಯ ಗತಾಯ ಉಳಿಸುವ ಪ್ರಯತ್ನ. ಆ ತಾರಾ ಮೌಲ್ಯವೇ ಪ್ರಧಾನವಾಗಿ  ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಅದೇ ತಮ್ಮ ಉಳಿವಿನ ಪ್ರಶ್ನೆಯನ್ನಾಗಿ ಕಾಣುತ್ತಾರೆ. ಇದು ಯಕ್ಷಗಾನಕ್ಕೂ ಹೊರತಲ್ಲ.  ಒಂದು ಕಾರ್ಯಕ್ರಮಕ್ಕೆ ಕರೆದರೆ, ಕರೆಯುವವರು ಯಾರು? ಕಾರ್ಯಕ್ರಮದ ಸ್ಥಳ ಯಾವುದು? ಆನಂತರ, ಸಹ ಕಲಾವಿದರು ಯಾರು? ಭಾಗವತನಾದರೆ ಚೆಂಡೆ ಮದ್ದಲೆಗೆ ಯಾರು? ಕುಣಿಯುವವರು ಯಾರು? ಹೀಗೆ ಎಲ್ಲಾ ವಿಷಯ ಪರಿಗಣಿಸಿ ತಮ್ಮ ತಾರಾಮೌಲ್ಯಕ್ಕೆ ಧಕ್ಕೆ ಬಾರದ ಆತಂಕವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಕ್ಕೆ ಹೋಗುತ್ತಾರೆ.    ಎಷ್ಟೋ ಸಲ ಭಾಗವತರು, ಇಂತಿಂತಹ ವ್ಯಕ್ತಿಗಳೇ  ಚೆಂಡೆ ಮದ್ದಲೆಗೆ ಬೇಕು ಅಂತ ಹಟ ಹಿಡಿಯುವುದು ಸಾಮಾನ್ಯ. ಯಾಕೆಂದರೆ ಅವರ ಪ್ರತಿಭೆಗೆ ಆಸರೆಯಾಗಿರುವುದು ಇನ್ನೊಬ್ಬರ ಪ್ರತಿಭೆ. ಅವರಿಲ್ಲವಾದರೆ ಇವರು ಏನೂ ಅಲ್ಲ ಎಂಬಂತೆ ಭಾಸವಾಗುತ್ತದೆ. ಸ್ವತಃ ತಮ್ಮ ಪ್ರತಿಭೆಯ ಮೇಲಿನ ಆತ್ಮವಿಶ್ವಾಸದ ಕೊರತೆ ಇದು.  ಅವರ ಮದ್ದಲೆ ಇಲ್ಲದೆ ಇವರ ಪದ ಏನೂ ಅಲ್ಲ ಅಂತ ಹೇಳಿಸಿಕೊಳ್ಳುತ್ತಾರೆ.  ಕೆಲವೊಮ್ಮೆ ಇದೇ ವಿಷಯ ಹೇಳಿಕೊಂಡು ಕೈ ಕೊಡುವುದು ಸಾಮಾನ್ಯ. ಆದರೆ ಪ್ರಸಾದ ಭಾಗವತರ ದೊಡ್ಡ ಗುಣ ಎಂದರೆ ತಾರಾಮೌಲ್ಯದ ಬಗ್ಗೆ ಯೋಚನೆಯೇ ಇವರು ಮಾಡಿದ್ದನ್ನು ನಾನು ಕಾಣಲೂ ಇಲ್ಲ ಕೇಳಲೂ ಇಲ್ಲ. ಯಾವ ಚೆಂಡೆ ಮದ್ದಲೆಯವರಾದರೂ ಸಹ ಯಾರು ಕಾರ್ಯಕ್ರಮ ಮಾಡಿದರೂ ಏಕ ಮನಸ್ಸಿನಿಂದ ಹೋಗಿ ಏಕ ಪ್ರಕಾರವಾಗಿ ಪದ ಹೇಳುವುದು ತಂದೆಯಂತೆ ಇವರ ಸಹಜ ಗುಣ.  ಇಂತಹ ಸನ್ಮನಸ್ಸಿನ   ಭಾಗವತ ಇನ್ನು ಕಂಡುಬರುವುದಕ್ಕಿಲ್ಲ.  ತಾರಾಮೌಲ್ಯದ  ಹಿಂದೆ ಇವರು ಎಂದಿಗೂ ಹೋದವರಲ್ಲ. ಆದರೆ ಅದೇ ತಾರಾಮೌಲ್ಯ ಇವರನ್ನು ಹಿಂಬಾಲಿಸಿ ಇವರನ್ನು ಬಿಡದೇ ಅಂಟಿಕೊಂಡಿತ್ತು.  ಇದಕ್ಕೆ ಸಾಕ್ಷಿ ಇವರ ಕಟ್ಟಾ ಅಭಿಮಾನಿಗಳ ಸಂಖ್ಯೆ. ಆ ಸ್ವರದ ಆಕರ್ಷಣೆ ಅಂತಹುದು.  ಪ್ರಸಾದನ ಸ್ವರ ಎಂದರೆ ಹಾರಿ ಬೀಳುವ ಅಭಿಮಾನಿಗಳಿಗೆ ಕಡಿಮೆ ಇಲ್ಲ. ಇದನ್ನು ಸ್ವತಃ ನಾನು ಕಂಡಿದ್ದೇನೆ.  ಭಾಗವತಿಕೆಗೆ ಯಾರು ಕರೆದರೂ ಹೋಗಿ ಪದಹೇಳುವ ನಮ್ಮ ಪ್ರಸಾದ, ಭಗವಂತ ಕರೆದಾಗಲೂ ಗಡಿಬಿಡಿಯಲ್ಲಿ ಎದ್ದು ಹೋಗಿದ್ದು ದುರ್ದೈವ. ದೈವದ ಬಯಕೆಗೂ ಮನಸ್ಸು ರೋದಿಸಿತು. ಒಂದು ಸಲ ಸಾಧ್ಯವಾದರೆ ಸ್ವರ್ಗದ ಬಾಗಿಲಿಗೆ ಕಿವಿಯಿಟ್ಟು ನೋಡಿ, ಪ್ರಸಾದನ ಏರು ಸ್ವರ ಅಲ್ಲೂ ಮೊಳಗುತ್ತಿರಬಹುದು. ಯಾಕೆಂದರೆ ಈ ಸಣಕಲು ಶರೀರಿ ಹಲವು ಸಲ ರಂಗಸ್ಥಳದಲ್ಲಿ ಕಾಣದೇ ಇದ್ದು ಕೇವಲ ರಮಣೀಯ  ಸ್ವರ  ಮಾತ್ರ ಮೊಳಗುತ್ತದೆ. 

        ಇತ್ತೀಚೆಗೆ ಮುಂಜಾನೆಯ ಸಮಯ ಇವರ ಭಾಗವತಿಕೆಗೆ ಮೀಸಲಾಗಿರುತ್ತದೆ. ಹೆಚ್ಚಾಗಿ ಚೆಂಡೆ ಪ್ರಧಾನವಾಗಿರುವ ಪ್ರಸಂಗಗಳು. ಇಂದ್ರಜಿತು, ಲವಕುಶ , ಅಗ್ರಪೂಜೆಯಂತಹ ವೀರ ರಸ ಪ್ರಧಾನದ ಧೂಳೆಬ್ಬಿಸುವ ಪ್ರಸಂಗಗಳು. ಒಂದು ರೀತಿಯ ಕೆಚ್ಚೆಬ್ಬಿಸುವ ಸ್ವರ. ಪದ ಆರಂಭಿಸುವಾಗಲೇ ಆ ಕಿಚ್ಚಿನ ಉರಿಯ ಪ್ರಹಾರಕ್ಕೆ  ಇಂದ್ರಜಿತು ಶಿಶುಪಾಲರಿಗೆ ಕುಣಿಯದೇ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ತನ್ನಿಂತಾನಾಗಿ ಹೊರ ಉಕ್ಕುವ ರೌದ್ರತೆಗೆ ಪ್ರಸಾದ ಬಲಿಪ್ಪರ ತಾರಕ ಸ್ವರವೇ ಕಾರಣವಾಗುತ್ತದೆ.  ಇಂತಹ ಪ್ರಸಂಗದ ಪಾತ್ರಗಳು ಇವರ ಪದಕ್ಕೇ ಮೀಸಲು ಎಂಬಂತೆ ಪ್ರಸಂಗವನ್ನು ಮೇಲೆತ್ತಿಬಿಡುತ್ತಾರೆ. ಇವರ ಉರಿ ಚೆಂಡಿನಂತಹ ಪದಕ್ಕೆ ಆರ್ಭಟಿಸಿ ಏಳದ ಇಂದ್ರಜಿತು ಇರಲಾರ. ಆ ಸ್ವರ ಪ್ರಚೋದನೆ  ಒಂದು ರೀತಿಯಲ್ಲಿ  ಸ್ಲಾಗ್ ಓವರ್ ನ ಆಟದಂತೆ. ಸುಂಟರಗಾಳಿಯ ಬೀಸುವಿಕೆ. ದುರ್ದೈವ ಎಂದರೆ ಇನ್ನು ಅದು ಕಾಣುವುದಕ್ಕಿಲ್ಲ.

        ಇಂತಹ ತಾರಾಮೌಲ್ಯದ ಒಬ್ಬ ಭಾಗವತ ಕೇವಲ ಸಾಮಾನ್ಯ ಮನುಷ್ಯನಾಗಿ ನನಗೆ ಹತ್ತಿರವಾಗಿದ್ದರು. ಊರಲ್ಲಿ ಎಲ್ಲಿ ಸಿಕ್ಕಿದರೂ, ನಮ್ಮ ಕರಾಡ ಭಾಷೆಯಲ್ಲಿ, " ಘರಾಣಿ ವಚ್ಚ್ಯಂಕಿ" (ಮನೆಗೆ ಹೋಗೋಣವೇ?) ಅಂತ ನನ್ನನ್ನು ಮನೆಗೆ ಕರೆದುಕೊಂಡು ಹೊಗುತ್ತಿದ್ದರು. ಅವರ ಮನೆಯಲ್ಲಿ ಹೊಟ್ಟೆ ತುಂಬ ಊಟಮಾಡಿ ಅಜ್ಜ ಬಲಿಪ್ಪರಲ್ಲಿ ಕುಶಲ ಮಾತನಾಡಿ ಬರುವುದೆಂದರೆ ಅದೊಂದು ಭಾಗ್ಯ.  ಒಂದು ಸಲ ಮಿತ್ರ ಸುಬ್ಬಣ್ಣನ ವೇಣೂರಿನ ಮನೆಗೆ ಹೋದಾಗ ನನಗಾಗಿ ಸುಬ್ಬಣ್ಣ ಪ್ರಸಾದ ಭಾಗವತರ  ಪದ ವ್ಯವಸ್ಥೆ ಮಾಡಿದ್ದರು. ಮದ್ದಲೆಗಾರರನ್ನು ಕರೆದು, ಪ್ರಸಾದ ಬಲಿಪರಿಗೆ ಕರೆ ಮಾಡಿದ್ದರು. ಕೇವಲ ನನಗಾಗಿ ಪದ ಹೇಳುವುದಕ್ಕೆ ಭಾಗವತರು ಸಮಯಕ್ಕೆ ಸರಿಯಾಗಿ ಜಾಗಟೆ ಹಿಡಿದು ಬಂದಿದ್ದರು. ವೇಣೂರಿನ ಮನೆಯ ಪುಟ್ಟ ಕೋಣೆಯಲ್ಲಿ ಚಾಪೆ ಹಾಸಿ ಶ್ರುತಿ ಪೆಟ್ಟಿಗೆ ತೆರೆದು ಕೇವಲ ಮದ್ದಲೆಯ ಜತೆಗೆ ಪದ ಹೇಳಿದ ಆ ದಿನ ನಾನು ಮರೆಯುವುದಕ್ಕಿಲ್ಲ. ಸುಬ್ಬಣ್ಣನ ಸ್ನೇಹ ಒಂದೆಡೆಯಾದರೆ, ಪ್ರತಿಷ್ಠಿತ  ಕಟೀಲು ಮೇಳದ ಪ್ರಧಾನ ಭಾಗವತರ ವಿನಯ ಇನ್ನೊಂದೆಡೆ.  ಅಂದು ಸುಮಾರು ಎರಡು ಮೂರು ಘಂಟೆ ಪದ ಹೇಳಿದ್ದರು. ಅಲ್ಲಿ ತಾರಾ ಕಲಾವಿದನ ಪದಕೇಳುವುದಕ್ಕೆ  ಸುಬ್ಬಣ್ಣ ಬಿಟ್ಟರೆ ಪ್ರೇಕ್ಷಕ ನಾಗಿ ಇದ್ದದ್ದು  ನಾನು ಮಾತ್ರ. ಇಂತಹ ಘಟನೆಗಳು ಎಲ್ಲೂ ನಡೆಯಲಾಗದಷ್ಟು ವಿರಳ.  ಆನಂತರ ಸುಬ್ಬಣ್ಣ ಹಲವು ಸಲ ಕರೆದಿದ್ದರು. ಪ್ರಸಾದನನ್ನು ಕರೆಯುತ್ತೇನೆ ಬನ್ನಿ ರಾಜಣ್ಣ. ಆದರೆ ಆ ದಿನ ಮತ್ತೆ ಬರಲಿಲ್ಲ. ಇನ್ನು ಬರುವುದಕ್ಕೂ ಇಲ್ಲ.  ಕೇವಲ ಒಬ್ಬ ಸಾಮಾನ್ಯನ ಮನ ತಣಿಸುವ ದೊಡ್ಡ ಮನಸ್ಸು ಪ್ರಸಾದ ಬಲಿಪ್ಪರಲ್ಲಿ ಮಾತ್ರ ಕಾಣಬಹುದು. ಕಲಾವಿದನಿಗೆ ವೃತ್ತಿಯಂತೆ  ಪ್ರವೃತ್ತಿಯೂ ಮುಖ್ಯವಾಗುತ್ತದೆ. 

        ಯಕ್ಷಗಾನದಲ್ಲಿ ಇಂದು ಹಲವು ಭಾಗವತರು ತಮ್ಮದೇ ರೀತಿಯಲ್ಲಿ ಪ್ರವೃತ್ತರಾಗಿರಬಹುದು.  ಆದರೆ ಯಕ್ಷಗಾನದ ಅಮೂಲಾಗ್ರ ಅರಿವಿರುವ ಭಾಗವತರು ಬಹಳ ಕಡಿಮೆ. ಪರಂಪರೆಯ ಪೂರ್ವರಂಗದ ಬಗ್ಗೆ ಖಚಿತವಾದ ಅರಿವು ಜ್ಞಾನ ಇದ್ದರೆ ಅದು ಪ್ರಸಾದ ಬಲಿಪ್ಪರಲ್ಲಿ ಮಾತ್ರ. ಯಾವುದೇ ಪೌರಾಣಿಕ ಪ್ರಸಂಗವನ್ನು ಆಡಿಸುವ ಇವರಂತಹ ಭಾಗವತ ಇನ್ನು ಇರುವುದಕ್ಕಿಲ್ಲ. ಇದು ಅವರ ಕ್ಷಮತೆ. ಸಮಯಕ್ಕೆ ತಕ್ಕ ಹಾಗೆ ಪ್ರದರ್ಶನವನ್ನು ಅಚ್ಚುಕಟ್ಟಾಗಿ ಮುಗಿಸುವ ಸಾಮಾರ್ಥ್ಯವಿರುವ ಏಕಮಾತ್ರ ಭಾಗವತ ಎಂದರೂ ತಪ್ಪಾಗಲಾರದು. ಇವರ ಆಟ ಕಳಪೆಯಾದ ನಿದರ್ಶನವೇ ಇಲ್ಲ ಎನ್ನಬಹುದು.  ಅದೇನಿದ್ದರು ಪರಮಾತ್ಮ ತೆರೆ ಎಳೆದು ಬಿಟ್ಟ. ಒಂದು ವರ್ಷದ ಮೊದಲು ಭಾಗವತಿಕೆಯಿಂದ ದೂರವಾಗುವಾಗ ಭಾಗವತರು ಗುಣಮುಖರಾಗಿ ಬರಬಹುದು ಎಂಬ ನಿರೀಕ್ಷೆಯಲ್ಲೇ ಇದ್ದರು. ಆದರೆ ಒಮ್ಮಿಂದೊಮ್ಮೆಲೇ ಬಿದ್ದ ಆಘಾತ ತೀವ್ರವಾದ ಸಂಕಟವನ್ನು ತಂದಿದೆ.  ಭಾಗವತರ ಆತ್ಮಕ್ಕೆ ಶಾಂತಿಯನ್ನು ಕೋರುವಾಗ ಒಂದು ಯೋಚನೆ ಬರುತ್ತದೆ.

             ಮೊನ್ನೆ ಅಂತ್ಯ ಕ್ರಿಯೆಯಲ್ಲಿ ಬಲಿಪ್ಪಜ್ಜ ಸುಬ್ಬಣ್ಣನಲ್ಲಿ ಹೇಳಿದರಂತೆ, " ನನಗೆ ಗೊತ್ತಿರುವುದೆಲ್ಲಾ ಅವನಿಗೆ ಗೊತ್ತುಂಟು. ಆದರೆ ಈಗ ಅವನೇ ಇಲ್ಲ......" ಇದನ್ನು ಕೇಳುವಾಗ ಆಗುವ ಸಂಕಟಕ್ಕೆ ಪರಿಹಾರ ಉಂಟೇ? ಅದೆಷ್ಟು ನೋವಾಗುತ್ತದೆ. ಮಗನ ಸಾವಿನಲ್ಲೂ ಯಕ್ಷಗಾನದ ಬಗ್ಗೆ ಯೋಚಿಸಿ ದುಃಖಿಸುವ ಬಲಿಪ್ಪರಿಗೆ ಸಾಂತ್ವನ ಯಾವ ಬಗೆಯಲ್ಲಿ ಹೇಳಬಹುದು? ಯಕ್ಷಗಾನ ಪರಂಪರೆ ಎಂದರೆ ಈಗಿನ ಮೂಗು ಮುರಿಯುವ ಪ್ರವೃತ್ತಿಯೇ ಅಧಿಕ.  ಅದು ಆಗಿನ ಕಾಲಕ್ಕೆ ಈಗ ಪರಂಪರೆಯ ಆವಶ್ಯಕತೆ ಇಲ್ಲ ಎಂಬಂತೆ ವರ್ತಿಸುವ  ಈ ಪ್ರವೃತ್ತಿಗೆ ದೈವ ಈ ರೀತಿಯಲ್ಲಿ ತನ್ನ ಮುನಿಸನ್ನು ತೋರಿಸಿರಬಹುದೇ ಎಂಬ ಅನುಮಾನ ಕಾಡುತ್ತದೆ. ಅದು ನಿಜವಾಗಿದ್ದರೆ ಇದಕ್ಕೆ ಇಂದಿನ ಯಕ್ಷಗಾನ ಉತ್ತರ ಕಾಣಬೇಕು. ಬಹುಶಃ ಹಿರಿಯ ಭಾಗವತರ ದುಃಖಕ್ಕೆ ಇದೊಂದು ಮಾತ್ರ ಸಾಂತ್ವನ ನೀಡಬಲ್ಲುದು.   ಇಂದು ಅವನೇ ಇಲ್ಲ ಎನ್ನುವ ಬಲಿಪ್ಪರ ಧ್ವನಿ ಶತಮಾನದ ಧ್ವನಿಯಾಗಿ ಯಕ್ಷಗಾನವನ್ನು ಕಾಡಬಹುದು ಇದು ಸತ್ಯ.

 

 

 

 

 

 

 

 

 

 

  

Friday, April 1, 2022

ಚೆಂಡೆಯ ದನಿ

ನಾನು ಚೆಂಡೆ........ನೋಡುವಾಗಲೇ ಅರ್ಥವಾಗಬಹುದು. ನನ್ನನ್ನು ಸೃಷ್ಟಿಸಿದವನು ಯಾವ ಮನೋಭಾವದಿಂದ ಸೃಷ್ಟಿಸಿರಬಹುದು ಎಂದು ಹಲವು ಸಲ ಸಂದೇಹವಾಗುತ್ತದೆ. ನಾನು ಹಿಂಸೆ ಅನುಭವಿಸಿದಾಗಲೇ ನನ್ನ ಅಸ್ತಿತ್ವ ಜೀವಂತವಾಗುವುದು ಒಂದು ವಿಪರ್ಯಾಸವೇ ಸರಿ. 


ಹಲವು ಸಲ ಕೇವಲ ನೋಡುವಾಗ ಒಂದೊಂದು ಬಗೆ ಪ್ರಚೋದನೆಯಾಗುವುದು ಜನರ ಮನಸ್ಸಿನ ರೋಗ ಅಂತ ನನ್ನ ಭಾವನೆ. ಕತ್ತರಿ ಚಾಕು ನೋಡಿದಾಗ ಏನಾದರೂ ಕತ್ತರಿಸುವ ಎಂದು ಪ್ರಚೋದನೆಯಾದರೆ ಅಲ್ಲಿ ಹಿಂಸೆ ಉಂಟಾದರೆ ಅದಕ್ಕೆ ಯಾರು ಮರುಗಬೇಕು? ಹಾಗಾಗಿ ನನ್ನನ್ನು ನೋಡುವಾಗ ನನ್ನನ್ನು ಬಡಿಯಬೇಕು ಎಂದು ಪ್ರಚೋದನೆಯಾಗುವುದು ನನ್ನ ದುರ್ದೈವ ಎನ್ನಬೇಕು. ಸಾಲದೇ ಇರುವುದಕ್ಕೆ ನನ್ನ ಬಗಲಲ್ಲೇ ಕೋಲು ಬೇರೆ ಇಟ್ಟಿರುವುದು ಇದಕ್ಕೆ ಬಹಳ ಅನುಕೂಲ. ಕೋಲು  ತೆಗೆದು ಒಂದು ಬಡಿಯದೇ ಇದ್ದರೆ ಏನೋ ಒಂದು ಅತೃಪ್ತಿಯ ಬಾಧೆಗೆ ಒಳಗಾದಂತೆ ಜನರ ವರ್ತನೆ. ಹಾಗಾಗಿ ಕಂಡಕೂಡಲೇ ಕೋಲು ತೆಗೆದು  ಠಂ.....ಅಂತ ಒಂದು ಬಡಿಯುತ್ತಾರೆ. ಇನ್ನು ನನ್ನ ಸ್ವರ ಅವರಿಗೆ ಸುಸ್ವರದಂತೆ ಭಾಸವಾದರೆ ನನ್ನ ಅವಸ್ಥೆ  ಹೇಳುವುದೇ  ಬೇಡ.  ಒಂದು ಪೆಟ್ಟಿನ ಜತೆಗೆ ಮತ್ತೂ ಪೆಟ್ಟುಗಳ ಸರಮಾಲೆಯೇ ಬೆನ್ನ ಮೇಲೆ ಪ್ರಹಾರವಾಗುತ್ತದೆ.  ಅಬ್ಬಾ ನನ್ನ ಅವಸ್ಥೆ ಆ ಯಮ ಯಾತನೆ  ಯಾರಿಗೆ ಹೇಳುವುದು? ನನ್ನ ರೋದನವೇ ಇವರಿಗೆ ಸಂತಸವನ್ನು ರಂಜನೆಯನ್ನು ಕೊಡುವುದಾದರೆ ನನ್ನ ದೌರ್ಭಾಗ್ಯ ಎನ್ನಬೇಕು.  ಸರಿ ನನ್ನ ಬೆನ್ನು ಎನ್ನುವುದು ಪರೀಕ್ಷಾ ಕೇಂದ್ರವಾಗುತ್ತದೆ.

 ನನ್ನ ಹುಟ್ಟಿಸಿದವನು ಅದೆಷ್ಟು ಶ್ರಮ ವಹಿಸಿದ್ದಾನೆ ಎಂದರೆ ಆತನ ಪರಿಶ್ರಮಕ್ಕೆ ಆಗ ನನಗೆ ನಿಜವಾಗಿ ಗೌರವ ಮೂಡಿತ್ತು. ತಪಸ್ಸಿನಂತೆ ಶ್ರಮ ವಹಿಸಿ ನಾನು ಒಳ್ಳೆ ಸ್ವರ ಹೊರಡಿಸುವ ತನಕ ನನ್ನನ್ನು ಬಡಿಯುತ್ತಿದ್ದ. ನನ್ನ ಹಾಗೆ ಮತ್ತೆ ಕೆಲವರು ಇದ್ದಾರೆ, ಅವರೆಲ್ಲ ತೆಳು ಚರ್ಮದವರಿರಬೇಕು. ಬರಿ ಗೈಯಲ್ಲೆ ಬಡಿದರೂ ರೋಧಿಸಿಬಿಡುತ್ತಾರೆ, ಆದರೆ ನನ್ನದು ದಪ್ಪ ಚರ್ಮ ಇರಬೇಕು. ಕೋಲು ಬೇಕೇ ಬೇಕು.

 

ಇಷ್ಟೆಲ್ಲಾ ಹೇಳುವಾಗ ಯಾರೂ ಹೇಳಬಹುದು, ಲೋಕದಲ್ಲಿ ಇದ್ದವರೆಲ್ಲ ಕೆಟ್ಟವರು ಅಂತ. ಆದರೆ ಹಾಗಲ್ಲ. ಹಲವರು ನನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ. ನನ್ನನ್ನು ಮಗುವಿನಂತೆ ಮುದ್ದಿಸಿ ಖುಷಿ ಪಡುವಾಗ ನಾನೂ ಪುಳಕಿತನಾಗಿ ಖುಷಿ ಪಡುತ್ತೇನೆ. ಆದರೂ ಕೆಲವೊಮ್ಮೆ ಪೆಟ್ಟು ಬೀಳುವಾಗ ಇದೆಲ್ಲ ಮರೆತು ಬಿಡುತ್ತೇನೆ.  ಆದರೂ ಇಂತಹ ಒಳ್ಳೆಯವರು ಸಿಕ್ಕಿದಾಗ ನಾನೂ ಖುಷಿ ಅನುಭವಿಸುತ್ತೇನೆ. ಅವರು ಹೆಚ್ಚು ಹೆಚ್ಚು ನನ್ನನ್ನು ಪ್ರೀತಿಸಿ ಮುದ್ದಿಸುತ್ತಾರೆ. ನನ್ನನ್ನು ಜೀವಕ್ಕಿಂತ ಹೆಚ್ಚು ಲಾಲಿಸುತ್ತಾರೆ. ನನ್ನನ್ನು ಹೆಗಲಿಗೆ ನೇತಾಡಿಸಿದಾಗ ಅವರ ಮುಖದ ನಗುವನ್ನು ಕಾಣಬೇಕು. ಆಗ ನನ್ನ ಅಳುವು ನನಗೆ ಮರೆತು ಹೋಗುತ್ತದೆ. ಇಂತಹ ಕೆಲವರು ಬಡಿದರೆ ನನಗೆ ನೋವು ಎಂದನಿಸುವುದಿಲ್ಲ. ನನ್ನ ನರನಾಡಿ ನೋಡಿ ನನ್ನ ಮಾಧುರ್ಯ ಎಲ್ಲಿ ಅಡಗಿದೆ ಎಂದು ಹುಡುಕಿ ತೆಗೆಯುತ್ತಾರೆ. ಈಗೀಗ ಇಂತಹವರು ಬಹಳ ಅಪರೂಪ ಅಂತ ನನಗೆ ಅನ್ನಿಸತೊಡಗಿದೆ. ಪೆಟ್ಟುಗಳು ಬೀಳತೊಡಗಿ ನನ್ನ ಶ್ರುತಿ ನನಗೇ ಮರೆತು ಹೋಗಿದೆ.

 ನನ್ನ ಮಿತ್ರನೊಬ್ಬ ಸಂತಸದಿಂದ ಹೇಳುತ್ತಿದ್ದ ವಿಚಾರ ಹೇಳಬೇಕೆನಿಸುತ್ತದೆ. ಒಬ್ಬರು ಅಜ್ಜ ಇದ್ದರಂತೆ. ಆತನನ್ನು ಬಹಳವಾಗಿ ಮುದ್ದಿನಿಂದ ಕಾಣುತ್ತಿದ್ದರಂತೆ. ಬಿಡುವಿದ್ದಾಗ ಎಲ್ಲಾ ತನ್ನನ್ನು ತಡವಿ ಪ್ರೀತಿಯಿಂದ ಮೈಸವರುತ್ತಿದ್ದರಂತೆ. ಸುಕ್ಕು ಕಟ್ಟಿದ ಅವರ ಕೈಯಲ್ಲಿ ಆತನ ಮೈದಡವಿ ಮೆಲು ದನಿ ಹೊರಡಿಸಿದರೆ ಈತನೂ ತನ್ನ ಸರ್ವಾಂಗವನ್ನು ಅವರಿಗೆ ಅರ್ಪಿಸುತ್ತಿದ್ದನಂತೆ. ಇಂತಹವರು ಸಿಗಬೇಕಾದರೆ ಜನ್ಮಾಂತರದ ಪುಣ್ಯ ಫಲ ಇರಬೇಕು. ಇವರಂತೆ ಇನ್ನೂ ಕೆಲವರಿದ್ದಾರೆ ಅವರ ಕುಶಲತೆ ಎಂದರೆ ನಮ್ಮಂತವರ ದೇಹ ಪುಟಿದೇಳುತ್ತದೆ. ನಮ್ಮ ಭಾಷೆ ಮಾತುಗಳೆಲ್ಲ ಸಂಗೀತವಾಗುತ್ತದೆ.  ಈಗೀಗ ನನಗೆ ಎಲ್ಲೋ ಒಬ್ಬಿಬ್ಬರು ಈ ರೀತಿ ಸಿಗುತ್ತಾರೆ. ಹಲವರು ನನಗೆ ಏಟು ಕೊಟ್ಟಮೇಲೆ ನನ್ನನ್ನು ಜೋಪಾನವಾಗಿ ನೋಡಿ ದಿನವೂ ಮೈ ತಡವಿ ನನ್ನನ್ನು ಹುರಿದುಂಬಿಸುತ್ತಾ ಇರುತ್ತಾರೆ. ನನ್ನ ಆರೋಗ್ಯ ಕ್ಷೀಣಿಸಿ ಅಪಸ್ವರ ಹೊರಟರೆ ಏನೋ ಕಳೆದುಕೊಂಡಂತೆ ಮರುಗುತ್ತಾರೆ. ಹೆಚ್ಚಿನ ಸಮಯ ನನ್ನ ಜತೆಯಲ್ಲೇ ಕಳೆದು ಬಿಡುತ್ತಾರೆ. ಇಂತಹವರ ಸಖ್ಯ ಬಹಳ ಆಪ್ಯಾಯ ಮಾನವಾಗುತ್ತದೆ.

 ನನ್ನ ಆತ್ಮ ಸಖ ಎಂದರೆ ನನ್ನ ಹಾಗೆ ಇನ್ನೊಬ್ಬ ಎರಡು ಮುಖದವನು, ಅವನೇ ಮದ್ದಲೆ. ಮುಖವನ್ನು ನಾವು ಬೆನ್ನು ಅಂತಲೇ ಹೇಳುವುದು, ಯಾಕೆಂದರೆ ನಮಗೆ ಸ್ವರ ಮಾತ್ರ ಇರುತ್ತದೆ. ಮುಖ ಇರುವುದಿಲ್ಲ. ನನ್ನ ನೋವು ತಡಿಯದೇ ಒಂದು ಸಲ ಅವನಲ್ಲಿ ನನ್ನ ಅಳವು ತೋಡಿಕೊಂಡೆ. " ಎಂತದು ಮಾರಾಯ, ಇವತ್ತು ಬಿದ್ದ ಪೆಟ್ಟು ಜನ್ಮಕ್ಕೆ ಮರೆಯುವುದಿಲ್ಲ. ಸಾಕಾಗಿ ಹೋಯಿತು. ಯಮ ಯಾತನೆ" ಅದಕ್ಕೆ ಅವನು ಹೇಳಿದ, " ಎನೇ ಹೇಳು ಮಾರಾಯ, ನಿನಗಾದರೆ ಒಂದೇ ಕಡೆ ಹಿಡಿದು ಬಡಿಯುತ್ತಾರೆ, ನನಗೋ ಎರಡು ಕಡೆ ಹಿಡಿದು ಬಡಿಯುತ್ತಾರೆ. ಈ ಕಡೆಯಿಂದ ಆಕಡೇ ಹೋಗುವಂತಿಲ್ಲ. ಆಕಡೆಯಿಂದ ಈ ಕಡೆ ಸರಿಯುವಂತಿಲ್ಲ. ತಿರು ತಿರುಗಿಸಿ ಬಡಿಯುತ್ತಲೇ ಇರುತ್ತಾರೆ. ನಿನಗಾದರೋ ಅಲ್ಪ ಸ್ವಲ್ಪ ವಿರಾಮ ಇರುತ್ತದೆ. ನನಗೋ ವಿರಾಮವೇ ಇಲ್ಲ."

 ಹಲವು ಸಲ ನನ್ನಂತಹವರು ಹೇಳುವ ಮಾತಿದೆ. ರಂಗದಮೇಲೆ ದೇವತೆ ಕುಣಿದರೂ ರಕ್ಕಸ ಕುಣಿದರೂ, ಪೆಟ್ಟು ಮಾತ್ರ ನಮಗೇ ಬೀಳುತ್ತದೆ. ಇದರ ನಡುವೆ ಇನ್ನು ಕೆಲವರಿದ್ದಾರೆ ನಾವೆಷ್ಟು ಅರಚಿಕೊಂಡರೂ ಏನೂ ಆಗಲಿಲ್ಲ ಎಂಬಂತೆ ಕುಣಿಯದವರೂ ಸಿಕ್ಕಿ ಬಿಡುತ್ತಾರೆ. ಬಡಿಯುವವರೂ ಅಷ್ಟೇ ಕುಣಿಯುವವರನ್ನು ನೋಡಿ ಬಡಿಯುತ್ತಾರೆ, ನನ್ನತ್ತ ದೃಷ್ಟೀಯೇ ಇಲ್ಲ. ಅವರಿಗೆ ಹಿತವಾಗುವಂತೆ ನನ್ನ ಸ್ವರ ಇದ್ದರೆ ಸರಿ, ಇಲ್ಲದಿದ್ದರೆ ನನ್ನ ನರ ನಾಡಿಗಳನ್ನೆಲ್ಲಾ ಹಿಡಿದೆಳೆದು ಸ್ವರ ಹೊರಡಿಸುವವರೆಗೆ ಬಿಡುವುದಿಲ್ಲ. ಒಂದು ಸಲ ನನ್ನ ನರ ಬಿಗಿಯುವಾಗಲೇ ಅರ್ಧ ಸುಸ್ತು ಹೊಡೆದಿದ್ದೆ. ಆದರೂ ಬಡಿಯುವವರಿಗೆ ತೃಪ್ತೀ ಸಿಕ್ಕಹಾಗಿಲ್ಲ. ಮಾತ್ರವಲ್ಲ ಯಾರೋ ಬಂದು ಅವರಲ್ಲಿ ಹೇಳಿಬಿಟ್ಟರು " ಎಂದಿನ ಹಾಗೆ ಇಂದು ರೈಸಲಿಲ್ಲ....." ಸರಿ ಸಿಟ್ಟು ನನ್ನ ಮೇಲೆ. ಇಲ್ಲ " ಈ ಚೆಂಡೆಯೇ ಸರಿ ಇಲ್ಲ. ಸ್ವರವೇ ಹೊರಡುವುದಿಲ್ಲ. "   ನಾನೂ ಹೇಳಿದೆ ಅದರೆ ಅದು ನನ್ನ ಭಾಷೆಯಲ್ಲಿ , " ಒಂದು ಸಲ ನನಗೆ ಅವಕಾಶ ಕೊಟ್ಟು ನೋಡಿ, ಇದಕ್ಕಿಂತ  ಚಿತ್ರ ವಿಚಿತ್ರ  ಸ್ವರ ನಿಮ್ಮ ಬಾಯಿಂದ ಹೊರಡುತ್ತದೆ" ಇದು ನನ್ನದೇ ಭಾಷೆಯಲ್ಲಿ ನಾನು ಹೇಳಿದ್ದು. ನನ್ನ ಭಾಷೆ ಎಂದರೆ ಅದುವೇ ಯಾರಿಗೆ ಗೊತ್ತಿಲ್ಲ. ಆದರೆ ಅವರು ಎಷ್ಟು ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ.

 ಮೊದಲೆಲ್ಲ ಯಕ್ಷಗಾನ ಬಯಲಾಟವಾದರೇ ನನ್ನ ಒಂದು ಸ್ವರ ಇದ್ದರೆ ಸಾಕಿತ್ತು.  ಈಗ ಹಾಗಲ್ಲ.....ನನಗೆ ವ್ಯಯಿಸುವುದಕ್ಕಿಂತ ಹೆಚ್ಚು ಹಣ ಖರ್ಚು ಮಾಡಿ ಬ್ಯಾಂಡಿನವರನ್ನು ಕರೆಯುತ್ತಾರೆ. ಕೆಲವೊಮ್ಮೆ ಮಾತ್ರ ಅವರೆಲ್ಲ ಬಡಿದು ನನ್ನ ಧ್ವನಿ ಅಡಗಿಸುವುದಕ್ಕೆ ನೋಡುತ್ತಾರೆ. ಯಾಕೆ ಹೀಗೆ? ನನಗೇ ಮೀಸಲಾಗಿರುವ ಒಂದೇ ಕ್ಷೇತ್ರದಲ್ಲೂ ನನ್ನ ಬಗ್ಗೆ ಗೌರವವಿಲ್ಲದೆ ನನ್ನ ಮರ್ಯಾದಿ ಕಳೆಯುತ್ತಾರೋ ಗೊತ್ತಿಲ್ಲ. ಒಟ್ಟು ಗಲಾಟೆ. ಅವರ ಮಾತೂ ಕೇಳುವುದಿಲ್ಲ. ನನ್ನದೂ ಧ್ವನಿ ಇಲ್ಲ.

 

 

ಈಗೀಗ ನನ್ನ ಬೇಡಿಕೆ ಹೆಚ್ಚಿದೆ. ಮೊದಲು ಕೇವಲ ಬಯಲಾಟಕ್ಕೆ ಉಪಯೋಗಿಸುತ್ತಿದ್ದರೆ, ಈಗ ಇದ್ದ ಬಿದ್ದ ಕಾರ್ಯಕ್ರಮಕ್ಕೆಲ್ಲ ನಾನು ಬೇಕು. ಯಾರೋ ಮಹನೀಯರು ಬಂದರೂ ಅವರು ಕೇಳಲಿ ಬಿಡಲಿ ನಾನು ಬೇಕು. ಯಾರೋ ಒಬ್ಬ ಏನೋ ಗೊತ್ತಿಲ್ಲ ಸಿಕ್ಕಿರುವುದೇ ಅವಕಾಶ ಎಂದು ನನಗೆ ಬಡಿಯುತ್ತಾನೆ. ಅಷ್ಟು ಜನರ ಎದುರು ನನ್ನ  ರೋದನ ಕೇಳುವವರಿಲ್ಲ. ಆದರೂ ನನಗೆ ಹಿಡಿದು ಬಡಿದು ಬಡಿದು ವಿಕೃತ ಆನಂದ ಅನುಭವಿಸುತ್ತಾನೆ.

 ಇಷ್ಟೆಲ್ಲ ಅಳಲು ತೊಡಿಕೊಂಡರೂ ನಾನು ಬಡಿಯುವವರ ಬಗ್ಗೆ ಯೋಚಿಸುತ್ತೇನೆ. ಅವರಿದ್ದರೆ ನಾನಿದ್ದೇನೆ. ನನ್ನ ಅಸ್ತಿತ್ವ ಇದೆ. ನನ್ನ ನಾಡಿ ಮಿಡಿತ ಇರುತ್ತದೆ. ಬಡಿಯುವವ ಇಲ್ಲ ಎಂದಾದರೆ ನಾನು ಮರಗಟ್ಟಿ ಹೋಗಿಬಿಡಬಹುದು. ಆದರೂ ಒಂದು ಪ್ರಾರ್ಥನೆ ನನ್ನ ಬಗ್ಗೆ ಚೆನ್ನಾಗಿ ತಿಳಿದು ಅಧ್ಯಯನ ಮಾಡಿ ಬಡಿಯುವವರಿದ್ದರೆ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ.

 

 

 

 

 

 

 

 

 

 

 

 

 

Saturday, January 15, 2022

ಅಜ್ಜ ಬಲಿಪರೋ?

  "ಭಾಗವತರು ಯಾರು?"  ಬಾಲ್ಯದಲ್ಲಿ ನಮ್ಮೂರ ಅಕ್ಕ ಪಕ್ಕ ಯಕ್ಷಗಾನ ಬಯಲಾಟ ತಾಳ ಮದ್ದಲೆಯಾಗುತ್ತಿದ್ದರೆ,  ಭಾಗವತರು ಬಲಿಪ್ಪರು ಎಂದು ಹೇಳಿದರೆ  ಹಿರಿಯರಾದ ನಮ್ಮಜ್ಜ ಕೇಳುವುದಿತ್ತು.      ಬಲಿಪರು   ದೊಡ್ಡವರ? ಸಣ್ಣವರಾ?   ದೊಡ್ಡ ಬಲಿಪ್ಪರು ಎಂದರೆ ಯಕ್ಷ ಬ್ರಹ್ಮ ಎಂದು ಅನ್ವರ್ಥವಾದ ದಿವಂಗತ ಅಜ್ಜ ಬಲಿಪರು.  ಯಕ್ಷಗಾನ  ಎಂದರೆ ಅದು ಅಜ್ಜ ಬಲಿಪರು ಮಾತ್ರ ಅಂತ ಬಲವಾಗಿ ನಂಬಿಕೊಂಡವರು ನಮ್ಮ ಹಿರಿಯರು. ಬೇರೆ ಯಾರಾದರೂ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ. ಅದರಲ್ಲೂ ನಮ್ಮಜ್ಜ ದೊಡ್ಡ ಬಲಿಪರ ಬಹಳ ದೊಡ್ಡ ಅಭಿಮಾನಿ. ಅವರು ಹೇಳುವುದಿತ್ತು, ಮೈಲು ದೂರದಲ್ಲಿ ಆಟ ಆದರೂ ಅವರ ಸ್ವರ ಕೇಳಿದರೆ ಅದರ ಜಾಡು ಹಿಡಿದು ಕೈಯಲ್ಲಿ ಒಂದು ಸೂಟೆ ಹಿಡಿದು ಗುಂಪು ಕಟ್ಟಿ ಹೋಗುತ್ತಿದ್ದರು. ಇನ್ನು ಅರ್ಥಗಾರಿಕೆ ಶಾಮುಖರು ( ಸಾಮಗರನ್ನು ವಾಡಿಕೆಯಲ್ಲಿ ಕರೆಯುತ್ತಿದ್ದದ್ದು) ಎಂದರೆ ದೊಡ್ಡ ಶಾಮುಖರೋ ಅಂತ ಕುತೂಹಲದ ಪ್ರಶ್ನೆ ಇದ್ದಂತೆ ಬಲಿಪರು ಎಂದಾಕ್ಷಣ ದೊಡ್ಡ ಬಲಿಪ ಎಂಬ ಹೆಸರೇ ಮಿಂಚಿನ ಸಂಚಲನ ಮೂಡಿಸುತ್ತಿತ್ತು. 

ಅಜ್ಜ ಬಲಿಪ ಎಂದಾಕ್ಷಣ ಹಲವಾರು ಸ್ವಾರಸ್ಯಕರ ಕಥೆಗಳನ್ನು ನಮ್ಮಜ್ಜ ಮಾವ ಹೇಳುತ್ತಿದ್ದದ್ದು ನಾನು ಬಾಲ್ಯದಲ್ಲಿ ಕೇಳೀದ್ದೆ. ದೊಡ್ಡ ಬಲಿಪರು ಎಂದರೆ ಅದೆಂತಹುದೋ ಎಂಬ ಆಕೃತಿ ಮನಸ್ಸಿನಲ್ಲಿ ಪ್ರಭಾವ ಬೀರಿದ್ದಂತೂ ಸತ್ಯ. ಹೀಗಿದ್ದರೂ ಬಾಲ್ಯದಲ್ಲಿ ಅಜ್ಜ ಬಲಿಪರ ಪದಗಳನ್ನು ಕೇಳಿದ್ದೇನೋ ಇಲ್ಲವೋ ಎಂದು ನನಗೆ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಹಲವಾರು ಯಕ್ಷಗಾನಗಳಿಗೆ ಹೋಗಿದ್ದರೂ,  ಮತ್ತು  ಬಲಿಪರ ಪದ ಕೇಳಿದ್ದರೂ ಬಾಲ್ಯದಲ್ಲಿ ಇದರ ಬಗ್ಗೆ ಹೆಚ್ಚು ತಿಳುವಳಿಕೆ ಇರುವುದಕ್ಕೆ ಸಾಧ್ಯವಿರಲಿಲ್ಲ. ಆಟ ತಾಳ ಮದ್ದಲೆಗೆ ಹೋದರೆ ಆಗಾಗ ಸಿಗುವ ಚಹ ತಿಂಡಿ ಮತ್ತೆ ಚೆಂಡೆಯ ಗದ್ದಲ ಇವಿಷ್ಟೇ ಆಸಕ್ತಿಯ ಸಂಗತಿಗಳಾಗಿತ್ತು.  ಆದರೆ ಬೆಳೆದು ಬೆಳೆದು ದೊಡ್ಡವನಾಗಿ ಆನಂತರ ಈಗಿನ  ಹಿರಿಯ ಬಲಿಪ್ಪರ ಪದದ ಹುಚ್ಚು ಹಿಡಿದ ಮೇಲೆ ಅಜ್ಜ ಬಲಿಪರ ಪದ ಹೇಗಿರಬಹುದು ಎಂಬ ಕುತೂಹಲ ಹುಟ್ಟಿಕೊಂಡದ್ದು ಸತ್ಯ.  ಆದರೆ ಆಗ ಕಾಲ ಸಂದು ಹೋಗಿತ್ತು. ಈ ಎಲ್ಲ ಕುತೂಹಲಕ್ಕೆ ಉತ್ತರವಾದ ಪ್ರಕರಣವೆಂದರೆ ಇತ್ತೀಚೆಗೆ ಬಹಿರಂಗಗೊಂಡ ಅಜ್ಜ ಬಲಿಪರ ಎರಡು ಧ್ವನಿ ಮುದ್ರಣಗಳು.  ಒಂದು ಬೆಂಗಳೂರು ಆಕಾಶವಾಣಿಯಲ್ಲಿ ಧ್ವನಿಮುದ್ರಣಗೊಂಡ ಅಜ್ಜ ಬಲಿಪರ  ಸಂದರ್ಶನ, ಇನ್ನೊಂದು ಅಜ್ಜ ಬಲಿಪರ ಭಾಗವತಿಕೆಯ ತಾಳ ಮದ್ದಲೆ.  ಇದನ್ನು ಕೇಳಿದಾಗ ಒಂದಷ್ಟು ಸಂದೇಹಗಳು ಬಗೆ ಬಗೆಯ ಜಿಜ್ಞಾಸೆ ವಿಶ್ಲೇಷಣೆಗಳು ಕುತೂಹಲಕರ ವಿಚಾರಗಳು ವಿನಿಮಯವಾಗಿದ್ದು ಅತ್ಯಂತ ವಿಶಿಷ್ಟವಾಗಿತ್ತು. 

ಮೊದಲಿಗೆ ಅಜ್ಜ ಬಲಿಪರದ್ದು ಎನ್ನಬಹುದಾದ ಸಂದರ್ಶನ. ಇದು ಪ್ರಕಟಗೊಂಡಾಗ ತಪ್ಪಿನಿಂದ ಈಗಿನ ಹಿರಿಯ ಬಲಿಪರ ಚಿತ್ರವನ್ನೇ ಹಾಕಿದ್ದರಿಂದ ಬಹಳಷ್ಟು ಗೊಂದಲವಾಗಿ ಅದರಲ್ಲಿ ಉಲ್ಲೇಖಗೊಂಡ ಕೆಲವು ವಿಷಯಗಳಿಂದ,  ಸಂದರ್ಶನ ಕೇಳಿದ ಮೇಲೆ ಇದು ಅಜ್ಜ ಬಲಿಪರದ್ದು ಅಂತ ಖಾತರಿಯಾಗಿತ್ತು.  ನಿಜಕ್ಕೂ ಅದೊಂದು ರೋಮಾಂಚದ ಕ್ಷಣ. ಒಂದೇ ಏಟಿಗೆ ಮೂರು ನಾಲ್ಕು ಬಾರಿ ಸಂದರ್ಶನ ಕೇಳಿದ್ದೆ. ಅದು ಕೇಳುವಾಗ ಯಕ್ಷಗಾನದಲ್ಲಿ ಭಾಗವತ ಸ್ಥಾನ ಯಾಕೆ ವರಿಷ್ಠತೆಯನ್ನು ಗಳಿಸಿಕೊಂಡಿದೆ ಎಂದು ಸಾರಿ ಹೇಳಿದಂತಾಗಿತ್ತು.  ಬಹಳ ಸ್ಪಷ್ಟ ಮಾತುಗಳಿಂದ ಅಂದಿನ ಯಕ್ಷಗಾನದ ಆಗುಹೋಗುಗಳನ್ನು ಸ್ಫುಟವಾಗಿ ಹೇಳಿದ್ದರು. 


ಇದುವರೆಗೆ ದೊಡ್ಡ ಬಲಿಪರ ಯಾವುದೇ ಧ್ವನಿಮುದ್ರಣ ಸಂಗ್ರಹದಲ್ಲಿಇದ್ದ ಮಾಹಿತಿ ಇರಲಿಲ್ಲ. ಅಲ್ಲಿ ಉಂಟು ಇಲ್ಲಿ ಉಂಟು ಎಂಬ ಊಹಾ ಪೋಹಗಳಲ್ಲದೇ ಬಲಿಪರ ಸ್ವರದ ಬಗ್ಗೆ ಪರಿಚಯಸ್ಥರು ಬಹಳ ಕಡಿಮೆ. ಇನ್ನು ಹಿರಿಯರಲ್ಲಿ ವಿಚಾರಿಸಿದರೆ ವರ್ಣರಂಜಿತವಾಗಿ ಹೇಳುವುದು ಬಿಟ್ಟರೆ ಸ್ವರದ ಪರಿಚಯದ ಇನ್ನೂ ಗೊಂದಲಗಳೇ ತುಂಬಿದ್ದವು. ಹಲವು ಸಲ ಈಗಿನ ಹಿರಿಯ ಬಲಿಪರ   ತುಂಬ ಹಳೆಯ ಧ್ವನಿ ಮುದ್ರಣ ಸಿಕ್ಕಿದಾಗೆಲ್ಲಾ ಇದೇ ಏನೋ ಅಜ್ಜ ಬಲಿಪರದ್ದು ಎಂದು ಸಂದೇಹ ಪಟ್ಟು ಕೊನೆಗೆ ಅದು ಅಲ್ಲ ಎಂದಾಗಿ ಒಂದು ರೀತಿಯ ನಿರಾಶೆಯೇ ಉತ್ತರವಾಗುತ್ತಿತ್ತು. ಹಿರಿಯ ಅಗರಿ ಶ್ರೀನಿವಾಸ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು,  ಹೀಗೆ ಹಲವು ಧ್ವನಿ ಮುದ್ರಣಗಳು ಲಭ್ಯವಿದ್ದರೂ ದೊಡ್ಡ ಬಲಿಪರ ಸ್ವರ ಇನ್ನೂ ನಿಗೂಢವಾಗಿಯೇ ಇತ್ತು. ಆದರೆ ಆಚಾನಕ್ ಆಗಿ ಈ ಎರಡು ಧ್ವನಿ ಮುದ್ರಣಗಳು ಬಹಿರಂಗಗೊಂಡಾಗ ಇದು ಹೌದೋ ಅಲ್ಲವೋ ಎಂದು ನಂಬುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಹಾಗೆ ಹೀಗೆ ಅಂತ ಅನುಮಾನದಲ್ಲಿ ಇರುವಾಗ ಸಿಕ್ಕ ಧ್ವನಿ ಮುದ್ರಣವನ್ನು ಹಿರಿಯರಿಗೆ ಕೇಳಿಸಿ ಖಚಿತ ಪಡಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದೆವು. 

ಸಿಕ್ಕ ಧ್ವನಿಮುದ್ರಣದಲ್ಲಿ ಒಂದು ಆಕಾಶವಾಣಿ ಕಾರ್ಯಕ್ರಮದಲ್ಲಿ ಮುದ್ರಣಗೊಂಡ ಒಂದು ತಾಸಿನ ಕಾರ್ಯಕ್ರಮ. ಅದರ ಧ್ವನಿಗ್ರಹಣವೂ ಸಾಕಷ್ಟು ಅಪಸ್ವರಗಳಿಂದ ಈಗಿನ ಬಲಿಪ್ಪರಿಗೂ ಆಗಿನ ಅಜ್ಜ ಬಲಿಪರ ಸ್ವರಕ್ಕೂ ವೆತ್ಯಾಸವನ್ನು ಗುರುತಿಸುವುದು ಬಹಳ ಕಷ್ಟವಾಗಿತ್ತು. ನಾನು ಸಿಕ್ಕಿದ ಧ್ವನಿ ಮುದ್ರಣದಲ್ಲಿದ್ದ ಅನಗತ್ಯ ಕಿರಿ ಕಿರಿಯನ್ನು ತೆಗೆದು ಸ್ವಚ್ಛಗೊಳಿಸಿದೆ. ಧ್ವನಿ ಮುದ್ರಣ ಅಜ್ಜ ಬಲಿಪರದ್ದು ಎಂದು ನಂಬುವುದು ನನಗೆ ಬಹಳ ಕಷ್ಟವಾಯಿತು. ಅದು ಈಗಿನ ಹಿರಿಯ ಬಲಿಪರ ಸ್ವರ ಮತ್ತು ಶೈಲಿಯೊಂದಿಗೆ ಯಾವುದೇ ವೆತ್ಯಾಸ ನನಗೆ ಅರಿವಿಗೆ ಬರಲಿಲ್ಲ. ಆದರೂ ಯಾವುದೋ ಒಂದು ಸಣ್ಣ ಅನುಮಾನ ವ್ಯಕ್ತ ಪಡಿಸುವುದಕ್ಕೆ ತಿಳಿಯದೇ ಕೊನೆಗೆ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಯತ್ನಿಸಿದೆ.  ಹಾಗೇ ಅದನ್ನು ಹಿರಿಯ ವಿದ್ವಾಂಸರಾದ ಡಾ. ರಾಘವ ನಂಬಿಯಾರರಿಗೆ ಕಳುಹಿಸಿಕೊಟ್ಟು ಅವರ ಅಭಿಪ್ರಾಯ ಕೇಳಿ ನೋಡೋಣ ಎಂದನಿಸಿತು. ಮಾತ್ರವಲ್ಲ ಇವರಿಗಿಂತ ಸೂಕ್ತ ವ್ಯಕ್ತಿ , ಮತ್ತದನ್ನು ಖಚಿತವಾಗಿ ವಿವರಿಸುವ ಮಹನೀಯರು ಸದ್ಯದಲ್ಲಿ ಯಾರೂ ಸಿಗುವುದಕ್ಕೆ ಸಾಧ್ಯವಿರಲಿಲ್ಲ. 


ಶ್ರೀ ನಂಬಿಯಾರರು ಅಷ್ಟೇ ಉತ್ಸಾಹದಿಂದ ಅದನ್ನು ಕೇಳಿ ನನಗೆ ಕರೆ ಮಾಡಿದರು.  ಅವರ ವಿಶ್ಲೇಷಣೆ ಅತ್ಯಂತ  ಉಪಯುಕ್ತ ಅಂತ ಅನ್ನಿಸಿತು. ಒಂದೆರಡು ಸಲ ಅವರಿಗೆ ಕರೆ ಮಾಡಿದಾಗ ಅವರು ಹೇಳಿದ ಕಾರಣಗಳು ಬಹಳ ಕುತೂಹಲಕಾರಿಯಾಗಿತ್ತು.   ಈ ಧ್ವನಿ ಮುದ್ರಣದ ಬಗೆಗಿಂತಲೂ ಒಟ್ಟು ಯಕ್ಷಗಾನದ ಮಾಹಿತಿಗಳು 


ಶ್ರೀ ನಂಬಿಯಾರರ ವಿಶ್ಲೇಷಣೆ ಎಂದರೆ ಅದರಲ್ಲಿ ಹಲವು ಆಯಾಮಗಳು ಇದ್ದೇ ಇರುತ್ತವೆ. ಯಕ್ಷಗಾನದ ಬಗ್ಗೆ ಅದರಲ್ಲೂ ಪರಂಪರೆಯ ಯಕ್ಷಗಾನದ ಬಗ್ಗೆ ಇದಮಿತ್ಥಂ ಎಂದು ಹೇಳಬಲ್ಲವರು. ಅವರು  ಹಲವಾರು ತಾಂತ್ರಿಕ ಕಾರಣಗಳನ್ನು ಮತ್ತು ಕೆಲವು ಕುತೂಹಲ ವಿಚಾರಗಳನ್ನು ತಿಳಿಸಿ ಇದು ಅಜ್ಜ ಬಲಿಪ್ಪರದ್ದೇ ಸ್ವರ ಎಂದು ಖಚಿತ ಪಡಿಸಿದಾಗ ಮನಸ್ಸಿಗೆ ಬಹಳಷ್ಟು ಸಮಾಧಾನವಾಯಿತು. ಇದು ಮಾತ್ರವಲ್ಲದೆ ಈ ಧ್ವನಿಮುದ್ರಣದ ಸಂಗ್ರಹ ಮಾಡಿದ ಶ್ರಿ ರಾಜಗೋಪಾಲ ಕನ್ಯಾನದವರಿಗೂ ಕರೆ ಮಾಡಿ ಅವರಲ್ಲಿ ಮಾತನಾಡಿದ ಮೇಲೆ ಮತ್ತೆ ಯಾವ ಅನುಮಾನವೂ ಉಳಿಯಲಿಲ್ಲ. ಇದು ಅಜ್ಜ ಬಲಿಪರದೇ ಸ್ವರ ಎಂದು ಖಚಿತವಾಯಿತು. 

ಧ್ವನಿ ಮುದ್ರಣದಲ್ಲಿ ಅಜ್ಜಬಲಿಪರಿಗೂ ಈಗಿನ ಹಿರಿಯ ಬಲಿಪರಿಗೂ ಮೇಲ್ನೋಟಕ್ಕೆ ಬಹಳ ಸಾಮ್ಯತೆ ಇತ್ತು. ಅದರಲ್ಲಿ ವೆತ್ಯಾಸವನ್ನು ಗುರುತಿಸುವುದು ಅಷ್ಟು ಸುಲಭವಲ್ಲ.           ಇದು ಈಗಿನ ಬಲಿಪ್ಪರದ್ದು ಅಲ್ಲ ಎಂದು ತಿಳಿವಾಗ ಅದು ಅರ್ಧ ಶತಮಾನಕ್ಕೂ ಹೆಚ್ಚುಅದೇ ಶೈಲಿಯನ್ನು ಉಳಿಸಿಕೊಂಡ ಬಗ್ಗೆ ಅವರ ಬಗ್ಗೆ ಗೌರವ ಮೂಡುತ್ತದೆ. ಇದು ತಪಸ್ವಿಯೊಬ್ಬನ ಸಾಧನೆ.  ನಂಬಿಯಾರರು  ಈ ಧ್ವನಿಮುದ್ರಣದಲ್ಲಿ  ಎರಡು ಮುಖ್ಯವಾದ ವೈಶಿಷ್ಟ್ಯವನ್ನು ಗುರುತಿಸಿದರು. ಒಂದು ಪದಗಳಲ್ಲಿನ ಬಿಡ್ತಿಗೆ ಕ್ರಮ. ಬಿಡ್ತಿಗೆ ಮತ್ತು  ಮುಕ್ತಾಯ ಬಾರಿಸುತ್ತಿದ್ದ ಕ್ರಮ   ಈಗ ಬಹಳ ಬದಲಾವಣೆಯಾಗಿದೆ. ಬಿಡ್ತಿಗೆ ಪೆಟ್ಟುಗಳಲ್ಲಿ ಮುಂಚಿನ ಕ್ರಮ ಬೇರೆ , ಈಗಿನ ಕ್ರಮಬೇರೆ. ಉದಾಹರಣೆಗೆ ಏಕ ತಾಳದ ಬಿಡ್ತಿಕೆಗೆ ಮದ್ದಲೆಗಾರರು ತದಿಗಿಣ ಧೀಂ ತದಿಗಿಣ ಧೀಂ ತದಿಗಿಣ ಧೀಂ ಎಂದು ನಿಲ್ಲಿಸಿ ಎರಡು ಅಕ್ಷರ  ಬಿಟ್ಟು ನಂತರ ತೊಂ ತೊಂ ಅಂತ ಬಡಿಯುತಿದ್ದಾರೆ. ವಾಸ್ತವದಲ್ಲಿ ಕುಣಿತದಲ್ಲಿ ಗಟ್ಟಿ ಇಲ್ಲದ ಕಲಾವಿದರು ರಂಗದಲ್ಲಿ ಬಂದನಂತರ ಆ ಕ್ರಮ ಬಂದದ್ದು. ಅದೊಂದು ರೀತಿಯ ಕುಣಿತದ ಹೊಂದಾಣಿಕೆಗೆ ಶುರು ಮಾಡಿಕೊಂಡ ಕ್ರಮ.  ನಾಟ್ಯದಲ್ಲಿ ಗಟ್ಟಿ ಇಲ್ಲದ ಕಲಾವಿದರನ್ನು ರಂಗದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಬಿಡ್ತಿಗೆಯನ್ನೇ ಕಡಿತ ಗೊಳಿಸಿದ್ದರು. ಕೊನೆಗೆ ಅದೇ ಕ್ರಮ ಮುಂದುವರಿಕೆಯಾಯಿತು. ಇದರ ಮಹತ್ವವನ್ನು ತಿಳಿಯದವರು ನಂತರ ಇದೇ ಕ್ರಮ ಎಂದು ಅನುಸರಿಸಿದ್ದು ಮಾತ್ರವಲ್ಲ ಯಕ್ಷಗಾನದ ಮೂಲ ಕ್ರಮ ಇಂದು ಯಾರಿಗೂ ತಿಳಿದಿಲ್ಲ ಎಂಬುದು ವಾಸ್ತವದ ಸತ್ಯ.  ಯಕ್ಷಗಾನ ಕಲಿಕಾ ಕೇಂದ್ರದಲ್ಲೂ ಅದನ್ನೇ ಅನುಸರಿಸತೊಡಗಿದರು. ಮೊದಲೆಲ್ಲ ನಾಟ್ಯದಲ್ಲಿ ಪರಿಣತಿ ಇಲ್ಲದೇ ಇದ್ದರೆ ಮೇಳದಲ್ಲಿ ಪ್ರವೇಶವೇ ಇರುತ್ತಿರಲಿಲ್ಲ.  ಆದರೆ ಕ್ರಮೇಣ ನಾಟ್ಯ ಒಂದಷ್ಟು ಗೌಣವಾಗಿ ಅರ್ಥಗಾರಿಕೆಯನ್ನೆ ಭಂಡವಾಳವಾಗಿ ಕಲಾವಿದರ ಆಗಮನವಾದಾಗ ಈ ಬಿಡ್ತಿಗೆ ಕ್ರಮದಲ್ಲಿ ಗಣನೀಯ ಬದಲಾವಣೆಯಾಯಿತು. ಕ್ರಮೇಣ ಪಳಗಿದ ಮದ್ದಲೆಗಾರರಿಗೂ ಇದು ಮರೆತು ಹೋಗಿ ಗೊತ್ತೇ ಇಲ್ಲ ಎಂಬಂತಹ ಪರಿಸ್ಥಿತಿ ಬಂದಿದೆ. ಅಜ್ಜ ಬಲಿಪರ ಈ ಧ್ವನಿಮುದ್ರಣದಲ್ಲಿ ಈ ಬಿಡ್ತಿಗೆಯ ವೆತ್ಯಾಸ  ಸ್ಪಷ್ಟವಾಗಿ ಅರಿವಿಗೆ ಬರುತ್ತದೆ.   ಮತ್ತೊಂದು ಆಗಿನ ಕಾಲದಲ್ಲಿ ಭಾಗವತರಿಗೆ ಮದ್ದಲೆಯ ಶ್ರುತಿಯೇ ಪ್ರಧಾನ. ಮದ್ದಲೆಯ ಶ್ರುತಿಯಲ್ಲಿಯೇ ಭಾಗವತರು ಪದ ಹೇಳುತ್ತಿದ್ದರು.  ಮದ್ದಲೆಯ ಶ್ರುತಿಗೆ ಪುಂಗಿ ಬಾರಿಸುತ್ತಿದ್ದರು. ಅದೂ ಶ್ರುತಿಬದ್ದವಾಗಿ ಬಾರಿಸಬೇಕಿದ್ದರೆ ಪುಂಗಿಯವನಿಗೂ ಶ್ರುತಿಯಬಗ್ಗೆ ಅರಿವಿರಬೇಕಿತ್ತು. ಶ್ರುತಿ ಜ್ಞಾನ ಇಲ್ಲದೇ ಪುಂಗಿ ಬಾರಿಸುವುದಕ್ಕೆ ಸಾಧ್ಯವಿರುತ್ತಿರಲಿಲ್ಲ.  ಆಗಿನ ಹಳೆಯ ಕ್ರಮದಲ್ಲೇ ಮದ್ದಲೆ ವಾದನವಿದೆ. ಹಾಗಾಗಿ ಇದು ಅಜ್ಜ ಬಲಿಪರದ್ದೇ ಎಂದು ನಂಬಿಯಾರರು ಖಚಿತವಾಗಿ    ಹೇಳಿದರು. 

ಇದೇ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಬಲಿಪ ಭಾಗವತರ ಸಂದರ್ಶನವನ್ನು ಮುದ್ರಿಸಿಕೊಳ್ಳಲಾಯಿತು.  ಆ ಸಂದರ್ಶನದಲ್ಲಿ ಇಬ್ಬರು ಶಿಷ್ಯರ ಬಗ್ಗೆ ಅವರು ಉಲ್ಲೇಖಿಸುತ್ತಾರೆ ಅದುಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ನೆಡ್ಲೆ ನರಸಿಂಹ ಭಟ್ಟರಾಗಿದ್ದಾರೆ ಅನುಮಾನ.   ಇವರಿಬ್ಬರೂ  ಬಲಿಪರ ಒಡನಾಟ ಇದ್ದುದನ್ನು ನೆನಪಿಸಿಕೊಳ್ಳುತ್ತಿದ್ದರು.   ಧ್ವನಿ ಮುದ್ರಣದಲ್ಲಿ  ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮದ್ದಲೆಗಿದ್ದರೆ ಚೆಂಡೆಗೆ ನೆಡ್ಲೆ ನರಸಿಂಹ ಭಟ್ಟರು ಇದ್ದಾರೆ ಎಂದು ಅನುಮಾನವಿದೆ. ಮಾತ್ರವಲ್ಲ ಆಗಿನ ಕಾಲದಲ್ಲಿ ಮದ್ದಲೆಯ ಬಳಕೆ ಇತ್ತು. ಈಗ ಮೊದಲಿನಂತೆ ಛಾಪು ಪೆಟ್ಟುಗಳನ್ನು ಬಾರಿಸುವುದಿಲ್ಲ. 

  ಈ ಎಲ್ಲಾ  ಅಂಶಗಳು ಹೆಚ್ಚು ತಾಂತ್ರಿಕ ಕಾರಣ ಅಂತ ನನಗನಿಸಿತು. ಹಿರಿಯ ಅಗರಿ ಭಾಗವತರು ಪದದ ನಡುವೆ ಆಗಾಗ ಮದ್ದಲೆಗಾರರಿಗೆ ಛಾಪು ಛಾಪೂ ಎಂದು ಎಚ್ಚರಿಸುತ್ತಿದ್ದದ್ದು ಆ ಕಾಲದಲ್ಲಿ ಭಾಗವತರಿಗೆ ಮದ್ದಲೆಯ ಶ್ರುತಿ ಪ್ರಧಾನವಾಗಿತ್ತು.   ಮೊದಲು ಶ್ರುತಿಗೆ ಪುಂಗಿಯ ನಾದವನ್ನು ಬಳಸುತ್ತಿದ್ದವರು ಕ್ರಮೇಣ ಅದರ ಸ್ಥಾನದಲ್ಲಿ ಹಾರ್ಮೋನಿಯಂ ಬಳಕೆಯಾಯಿತು. ಈಗ ಹಾರ್ಮೋನಿಯಂ  ಬದಲಾಗಿ ಶ್ರುತಿ ಪೆಟ್ಟಿಗೆ ಬಂದು ಇನ್ನೂ  ಕಂಪ್ಯೂಟರ್ ಯುಗದಲ್ಲಿ ಹೇಗೆ ಪರಿವರ್ತನೆಯಾಗುವುದೋ ಊಹಿಸುವುದು ಕಷ್ಟ. 

ಬೆಂಗಳೂರು ಆಕಾಶವಾಣಿಯಲ್ಲಿ ಸುಮಾರು ಎಪ್ಪತ್ತರ ದಶಕದಲ್ಲಿ ಹಿರಿಯ ಬಲಿಪರ ಸಂದರ್ಶನದ  ಧ್ವನಿಮುದ್ರಣ ಆಗಿದೆ. ಅದೇ ಸಂದರ್ಭದಲ್ಲಿ ಬೆಂಗಳೂರಲ್ಲೇ ಇದ್ದವರನ್ನು     ಸೇರಿಸಿಕೊಂಡು ಒಂದು ಘಂಟೆ ಅವಧಿಯ ಸುಧನ್ವಾರ್ಜುನ ಎಂಬ ಪ್ರಸಂಗದ ಆಕಾಶವಾಣಿ ತಾಳಮದ್ದಲೆಯನ್ನೂ ಧ್ವನಿ ಮುದ್ರಿಸಿದ್ದಾರೆ.  ಮಾತ್ರವಲ್ಲ ಈಗಿನ ಸಣ್ಣ ಬಲಿಪರೂ , ಈ ಧ್ವನಿ ಮುದ್ರಣದ ಬಗ್ಗೆ ಉಲ್ಲೇಖಿಸಿದ್ದಾರೆ.  ಈ ಎಲ್ಲ ಕಾರ್ಯಕ್ರಮವನ್ನು ಮುತುವರ್ಜಿಯಿಂದ ನಡೆಸಿಕೊಟ್ಟವರು ಆಗ ಹಿರಿಯ ಬಲಿಪರ ಬಹಳ ದೊಡ್ಡ ಅಭಿಮಾನಿಯಾದ ಶ್ರೀ ಸಿ ಆರ್ ರಾವ್ ರವರು,  ಅದೇ ಯಕ್ಷಗಾನ ಆಕಾಶವಾಣಿಯಿಂದ ಪ್ರಸಾರವಾಗುವಾಗ ತಮ್ಮ ಟೇಪ್ ರೆಕಾರ್ಡರ್ ನಲ್ಲಿ ಧ್ವನಿ ಮುದ್ರಿಸಿದರು ಎಂದು  ಈ ಧ್ವನಿ ಮುದ್ರಣ ಸಂಗ್ರಹಿಸಿಟ್ಟು ಕೊಂಡಿದ್ದ ಶ್ರೀ ರಾಜಗೋಪಾಲ ಕನ್ಯಾನ ಅವರೂ ಹೇಳುತ್ತಾರೆ.  ಇಲ್ಲಿ ಸಿ. ಆರ್ ರಾವ್ ಅವರ ಕಾರ್ಯವನ್ನು ಎಷ್ಟು ಸ್ಮರಿಸಿದರು ಸಾಲದು. ಅವರು ಮಾಡದೇ ಇರುತ್ತಿದ್ದರೆ ಇಂದು ಇಂತಹ ಅಮೂಲ್ಯ ಸಂಗ್ರಹ ಇರುವುದಕ್ಕೆ ಸಾಧ್ಯವಿರಲಿಲ್ಲ. 

ಆಸಕ್ತಿ ಇದ್ದರೆ ಪರಿಷ್ಕೃತ ಧ್ವನಿ ಮುದ್ರಣ ಈ ಕೊಂಡಿಯಿಂದ ಪಡೆದುಕೊಳ್ಳಬಹುದು. 


ಸುಧನ್ವಾರ್ಜುನ ಪ್ರಸಂಗದ ತಾಳ ಮದ್ದಲೆಯ ಭಾಗವತಿಕೆಯನ್ನು ಕೇಳಿ ಮಿತ್ರ ಶ್ರೀ ಕಟೀಲು ಸಿತ್ಲ ರಂಗನಾಥರೂ ಒಂದು ಅಭಿಪ್ರಾಯ ಹೇಳಿದ್ದನ್ನೂ ಇಲ್ಲಿ ಉಲ್ಲೇಖಿಸಬೇಕು. ಇದರಲ್ಲಿ ಒಂದು ನಿರ್ದಿಷ್ಟವಾದ ಗಮಕವನ್ನು ಹಿರಿಯ ಬಲಿಪ್ಪರು ಒಂದು ಬಾರಿ  ಹಾಡುತ್ತಾರೆ, ಅದನ್ನು ಈಗಿನ ಬಲಿಪ್ಪರು ಆ ನಿರ್ದಿಷ್ಟವಾದ ಗಮಕವನ್ನು ಒಂದಕ್ಕಿಂತ ಹೆಚ್ಚು ಬಾರಿ ಹಾಡುತ್ತಾರೆ. 

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಯಾವ ಧ್ವನಿಗಾಗಿ ನಾವು ಕೇಳುವುದಕ್ಕೆ ಉತ್ಸುಕರಾಗಿದ್ದೇವೋ ಆ ಹಿರಿಯ ಬಲಿಪ ನಾರಾಯಣ ಭಾಗವತರ ಸ್ವರ ಇದು ಎನ್ನುವುದಕ್ಕೆ ಯಾವುದೇ ಅನುಮಾನಗಳು ಉಳಿದಿಲ್ಲ. ಯಕ್ಷಗಾನದ ದೃಷ್ಟಿಯಲ್ಲಿ ಇದೊಂದು ಅತ್ಯಮೂಲ್ಯ ಸಂಗ್ರಹ. ಇದನ್ನು ಒದಗಿಸಿದ ರಾಜಗೋಪಾಲ್ ಕನ್ಯಾನ ಇವರ ಮನೆಯವರಿಗೆ ಒಂದು ಕೃತಜ್ಞತೆಯನ್ನು ಸಲ್ಲಿಸಬೇಕು. ಬಹಳ ಹಳೆಯ ಧ್ವನಿ ಮುದ್ರಣ ಇದು. ಇದರ ಗುಣ ಮಟ್ಟ ಕೇಳುವುದಕ್ಕೆ ಧ್ವನಿ  ಸ್ಪಷ್ಟತೆ (clarity) ಇರಲಿಲ್ಲ. ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ವಚ್ಛಗೊಳಿಸಿ ಸ್ಪಷ್ಟವಾಗಿ ಕೇಳುವಂತೆ ಒಂದಷ್ಟು ದುರಸ್ತಿಯನ್ನು ಮಾಡಿದ್ದೇನೆ. ಇದನ್ನು ಹಲವಾರು ಸಲ ಕೇಳಿ ಆನಂದಿಸಿದೆ. ಹಲವಾರು ವರ್ಷದಿಂದ ಇದ್ದ ಕುತೂಹಲ ತಣಿದಿದೆ.  ಇಂದಿನ ಯಕ್ಷಗಾನ ಕಲಾವಿದರು ಭಾಗವತರು ಮತ್ತು ಕೇಳುಗರು ಇದನ್ನು ಗಂಭೀರವಾಗಿ ಸ್ವೀಕರಿಸಬೇಕು. ಇದರ ಸ್ಪಷ್ಟ ಅಧ್ಯಯನವನ್ನು ಮಾಡಬೇಕು. ನಾವೇನು ಕಳೆದುಕೊಂಡಿದ್ದೇವೆ ಅದರ ಪುನರುತ್ಥಾನಕ್ಕೆ ಬಲ್ಲವರಲ್ಲಿ ಕೇಳಿ ಅಧ್ಯಯನ ಮಾಡಬೇಕು. ಬಲಿಪ್ಪರು ಒಂದು ಕಡೆ ಹೇಳುತ್ತಾರೆ, ಪರಂಪರೆಯಲ್ಲಿ ಇದ್ದದ್ದು ಎಷ್ಟು ಸೂಕ್ತ ಎಂಬುದು ವಿಮರ್ಶೆ ಮಾಡಬೇಕಿಲ್ಲ. ಆದರೆ ಪರಂಪರೆಯ ಅರಿವು ಅದು ಇರಬೇಕು. ಒಂದು ಕಾಲದಲ್ಲಿ ಹೀಗಿತ್ತು ಎಂಬ ಅರಿವಿದ್ದು ಅದನ್ನು ಕಲಿಯಬೇಕು. ನಾವು ಏನೇ ಬದಲಾವಣಿ ಮಾಡಿಕೊಂಡರೂ ಪರಂಪರೆಯಲ್ಲಿದ್ದ ಸಂಗತಿಗಳನ್ನು ಕಳೆದುಕೊಳ್ಳಬಾರದು. 

ಯಕ್ಷಗಾನದಲ್ಲಿ ಸಂಗೀತದ ಬಳಕೆ ತಪ್ಪೋ ಸರಿಯೋ ಅದು ಬೇರೆ ವಿಚಾರ. ಆದರೆ ಅದು ಬಳಕೆಗೆ ಬಂದನಂತರ ಮದ್ದಲೆಯ ಛಾಪು ಪೆಟ್ಟುಗಳು ಮಾಯವಾಗುತ್ತಾ ಬಂದಿವೆ. ತಬಲ ಮತ್ತು ಮದ್ದಲೆಗೆ ಯಾವ ವೆತ್ಯಾಸವೂ ಇರದಂತೆ ಇಂದಿನ ಭಾಗವತಿಕೆ ಎಂಬ ಪ್ರಹಸನ ಬೆಳೆದು ಬರುತ್ತದೆ. ಮದ್ದಲೆಯ ಶ್ರುತಿಗೆ ಪದ ಹೇಳಬೇಕು ಎನ್ನುವ ಪರಿಜ್ಞಾನ ಯಾರಿಗೆಲ್ಲ ಇದೆಯೊ ತಿಳಿಯದು. ಬಹಳಷ್ಟು ಹಿರಿಯ ಭಾಗವತರು ತೆರೆಯ ಹಿಂದೆ ಸರಿದು ಚೌಕಿಯಿಂದಲೂ ಮರೆಯಾಗಿದ್ದಾರೆ. ಕೆಲವು ತಿಂಗಳ ಸಂಗೀತ ಕಲಿತು ಭಾಗವತರಾಗಿ ರಂಗ ವೇರುವಾಗ ತಮಗೆಷ್ಟು ಅರ್ಹತೆಯಿದೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಈ ಧ್ವನಿಮುದ್ರಣ ಅತ್ಯಂತ ಸೂಕ್ತ. ಇದನ್ನು ಕೇಳಿದರೂ ಇಂದಿನ ಭಾವಗವತರಿಗೆ ಅದರ ವೆತ್ಯಾಸ ಗೊತ್ತಾಗುವುದಿಲ್ಲ ಎಂದರೆ ಅನುಮಾನ ಬೇಡ ಯಕ್ಷಗಾನ ದುರಂತದತ್ತ ಸಾಗುತ್ತದೆ. ಯಕ್ಷಗಾನ ಬದಲಾಗಲಿಲ್ಲ ಹಾಗೇ ಉಂಟು ಅಂತ ಹಲುಬುವವರು ಈ ಧ್ವನಿ ಮುದ್ರಣವನ್ನು ಗಮನವಿಟ್ಟು ಕೇಳುವ ವ್ಯವಧಾನವನ್ನಾದರೂ ತೋರಬೇಕು. ನನಗೆ ಯಕ್ಷಗಾನ ತಾಳ ಲಯ ಶ್ರುತಿಯ ಬಗ್ಗೆ ಅಷ್ಟೇನೂ ಅರಿವಿಲ್ಲ ಹಾಗಿದ್ದರೂ ಇದರಲ್ಲಿರುವ ಗಾಢವಾಗದ ನೈಜ ಯಕ್ಷಗಾನದ ಕಂಪನ್ನು ಅನುಭವಿಸಬಲ್ಲೆ. ಯಕ್ಷಗಾನದಲ್ಲಿ ಅನಗತ್ಯವಾದ ಅಸಂಗತವಾದುದನ್ನು ತರುವುದಕ್ಕೆ ಅದೆಷ್ಟೋ ಸಾಧನೆ ಮಾಡಿ ಯಕ್ಷಗಾನವನ್ನು ಯಾವುದೋ ರೂಪಕ್ಕೆ ಕೊಂಡೊಯ್ಯುವುದಕ್ಕೆ ಕಟಿಬದ್ಧರಾಗುತ್ತೇವೆ.  ಆದರೆ ಇಂತಹ ಅವಶ್ಯವೆನಿಸುವ ವಿಷಯಗಳ ಅಧ್ಯಯನಕ್ಕೆ ನಮ್ಮಲ್ಲಿ ಮನಸ್ಸೂ ಇಲ್ಲ ಸಮಯವೂ ಇಲ್ಲ ಎಂದಾದರೆ ಅನ್ನ ನೆಮ್ಮದಿ ಕೊಡುವ ಕಲೆಗೆ ನಾವು ದ್ರೋಹ ಮಾಡುತ್ತಿದ್ದೇವೆ ಎಂದು ಬೇರೆ ಹೇಳಬೇಕಿಲ್ಲ.