"ಇದು ವಿಮರ್ಶೆಯಲ್ಲದ ಚಿಂತನ"

Sunday, November 16, 2008

ಪರಂಪರೆಯ ಯಕ್ಷಗಾನ ಹಾಗೂ ಸೃಜನ ಶೀಲತೆ


ಇದು ಬಹಳ ಚರ್ಚೆಯಲ್ಲಿರುವ ವಿಷಯ. ಮೊದಲಾಗಿ ಈ ಪರಂಪರೆಯ ಆರಂಭ ಎಲ್ಲಿಂದ ಆಯಿತು ಒಂದು ಕಾಲದಿಂದ ಒಂದು ಕ್ರಮ ಬೆಳೆದು ಬಂದು ಮುಂದಿನ ತಲೆಮಾರಿಗೆ ಅದುವೇ ಒಂದು ಪರಂಪರೆಇದುಯಾಯಿತು. ಯಕ್ಷಗಾನದಲ್ಲೂ ಅದೇ ಪರಂಪರೆ ಶುರುವಾಯಿತು. ಅ ಕ್ಷೇತ್ರದ ಯುಗ ಪ್ರವರ್ತಕರಿಂದ ಬದಲಾವಣೆಯನ್ನು ಕಂಡು ಬೆಳೆಯುತ್ತಾ ಬಂತು.ಹೀಗಿದ್ದರೂ ಪ್ರತಿಯೊಂದು ಆವಿಷ್ಕಾರವಾದಾಗಲೂ ವಿವಾದಗಳು ಅದರ ಜತೆಯಲ್ಲೇ ಉಂಟಾಗಿತ್ತು.

ಇಂದು ಯಾವುದೇ ಕಲೆಗೆ ನವೀಕರಣಕ್ಕೆ ಮಾದರಿಯಾದ ಕ್ಷೇತ್ರ ಚಲನ ಚಿತ್ರ.. ಈ ಸಿನಿಮ ಎಂಬ ಕ್ಷೇತ್ರ ಹಲವು ಕಲೆಯ ಬದಲಾವಣೆಯಲ್ಲಿ ಪ್ರಧಾನ ಪಾತ್ರವಹಿಸಿದೆ. ಮೊದಲು ಭಾರತಿಯ ಸಿನಿಮಾ, ಕಥೆ ಪೌರಾಣಿಕ ಘಟನೆಗಳನ್ನೇ ಅವಲಂಬಿಸಿತ್ತು.
ಬರಬರುತ್ತ ಅದರಲ್ಲಿ ಹಲವು ಆವಿಷ್ಕಾರಗಳದುವು. ನಿಜ ಜೀವನದ ಪ್ರತಿಫಲನವೇ ಅಲ್ಲಿ ಗೋಚರಿಸಿತು. ಹೀಗಿದ್ದರೂ ಅದಕ್ಕೆ ಯಾವುದೇ ಸಾಂಪ್ರದಾಯಿಕ ಚೌಕಟ್ಟು ಇಲ್ಲದೆ ಆ ಬದಲಾವಣೆ ತಪ್ಪು ಎಂದು ಎಲ್ಲೂ ಅನಿಸೋದಿಲ್ಲ.ನಾಗರಿಕ ಆವಿಷ್ಕಾರದ ಕಲೆ ಸಿನಿಮ ಆಗಿರುವುದರಿಂದ ಅಲ್ಲಿ ಯಾವುದೇ ಬದಲಾವಣೆ ಅದರೂ ಅದು ಗೌಣವಾಗಿಬಿಡುತ್ತದೆ. ಮೊದಲು ಶಾಸ್ತಿಯ ಸಂಗೀತ ಭರತನಾಟ್ಯ ಅಥವಾ ಇನ್ನಿತರ ಸಾಂಪ್ರದಾಯಿಕ ಕಲೆ ಮುಖ್ಯ ವಸ್ತುಗಳಾಗಿದ್ದರೆ ಇಂದು ಪಾಪ್ ಸಂಗೀತ ಕ್ಯಾಬರೆ ಬ್ರೇಕ್ ಡಾನ್ಸ್ ಇಂದಿನ ನಿತ್ಯ ಸರಕುಗಳು. ಅದು ಅ ಕ್ಷೇತ್ರ ಹೊಂದಿಕೆಯಾಗಲೂಬಹುದು.ಇಂತಹ ಬದಲಾವಣೆ ಯಕ್ಷಗಾನದಲ್ಲಿ ನಾವು ನಿರೀಕ್ಷಿಸಬಹುದೇ? ಪರಂಪರೆಯ ಯಕ್ಷಗಾನದಲ್ಲಿ ಆವಿಷ್ಕಾರ ಆಗಬೇಕು ಜನಪ್ರಿಯತೆಗಳಿಸಬೇಕೆಂದು ಮಸಾಲೆ ಸರಕುಗಳನ್ನು ಸೇರಿಸಬಹುದೇ?

ಚೆಂಡೆ ವಾದಕ ಪ್ಯಾಂಟು ಕೋಟು ಸೂಟು ಹಾಕಿ ನಿಂತು ಕೊಂಡರೆ ಹೇಗಿರಬಹುದು. ಇಂಥ ಹಲವು ಆಭಾಸಗಳನ್ನು ಹುಟ್ಟು ಹಾಕಲು ಪರಂಪರೆ ವಿರೋಧಿಗಳು ಕೊಡುವ ಕ್ಷುಲ್ಲಕ ಕಾರಣಗಳು ಹಲವಿದೆ. ಮೊದಲು ಪಂಜಿನ ಬೆಳಕಲ್ಲೇ ಯಕ್ಷಗಾನ ಪ್ರದರ್ಶನ ವಾಗುತಿತ್ತು. ಮೊದಲು ಬೆಳಗ್ಗೆವರೆಗೆ ಇದ್ದರೆ ಈಗ ಅದಕ್ಕೂ ಕಾಲ ಮಿತಿ ಬಂದಿದೆ. ಹಾಗಿರುವಾಗ ಪರಂಪರೆ ಎಲ್ಲಿ ಉಳಿಯಿತು? ಮೊದಲು ಪೂರ್ವರಂಗ ಏನಿತ್ತೋ ಅ ಅವಧಿಯಸ್ಟು ಹೊತ್ತು ಯಕ್ಷಗಾನ ಪ್ರದರ್ಶನ ಸಹ ಇರುವುದಿಲ್ಲ. ಹೀಗಿರುವಾಗ ಪರಂಪರೆಯನ್ನು ಜೋತುಕೊಂಡರೆ ಯಕ್ಷಗಾನ ನಡೆಯುವುದು ಅಗಲಿ ಅ ಕಲೆಯ ಉಳಿವು ಹಾಗು ಬೆಳವಣಿಗೆ ಸಾಧ್ಯವಿಲ್ಲ ಎಂಬ ಮಾತನ್ನು ಆಡುವಾಗ ಏನು ಹೇಳಬಹುದು?

ಯಕ್ಷಗಾನ ಎಂದರೆ ಪರಂಪರೆಯ ಕಲೆ ಅದು ಪರಂಪರೆಯನ್ನೇ ಮೈಗೂಡಿಸಿಕೊಂಡಿದ್ದರೆ ಚಂದವಲ್ಲವೇ? ಅದರ ಚೌಕಟ್ಟನ್ನು ಮೀರಿ ಆಭಾಸಗಳನ್ನು ಪ್ರಯೋಗಿಸಿದರೆ ಅದು ಸೃಜನ ಶೀಲತೆ ಎಂದು ಕರೆಯಬಹುದೇ? ಕೆಲೆಗೆ ಪೂರಕ ಎಂದು ಹೇಳಬಹುದೇ.. ಇದೆಲ್ಲ ಹಲವು ಬಾರಿ ವಿದ್ವಾಂಸ ವಿಮರ್ಶಕರಿಂದ ಚರ್ಚಿತವಾಗಿರುವ ವಿಚಾರಗಳು. ಸಂಪ್ರದಾಯ ಪರಂಪರೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು ಬದುಕು ರೂಪಿತವಗಿರುವುದೇ ಈ ತಳಹದಿಯಲ್ಲಿ. ಮನೆಯ ಯಾವುದೇ ಭಾಗದಲ್ಲಿ ಕುಳಿತು ಊಟವೋ ಉಪಹರವೋ ಮಾಡುವ ನಾವು ಅ ಕೆಲಸವನ್ನು ಮಾಡಬಹುದೇ ಎಲ್ಲ ಕಡೆಯೂ ಮಾಡಬಹುದೇ ? ಇಲ್ಲಿ ಪರಂಪರೆ ಮೀರಿ ನಾವು ಹೋಗಬಹುದೇ? ಹಾಗಿರುವಾಗ ಯಾವ ಕ್ಷೇತ್ರಕ್ಕೆ ಯಾವುದು ಸೂಕ್ತವೋ ಅದನ್ನು ಆಯ್ಕೆ ಮಾಡಬೇಕು. ಸಂಪ್ರದಾಯದಲ್ಲಿ ಎಷ್ಟು ಆಚರಿಸಲ್ಪಡುತ್ತದೆ ಎಂಬ ಮಾನದಂಡ ಇಲ್ಲಿ ಅನಾವಶ್ಯಕ. ಕಲಾವಿದರ ಜೀವನ ನಿರ್ವಹಣೆಯೋ ಅಥವಾ ಇನ್ನಿತರ ವ್ಯಾಪಾರಿ ಚಿಂತನೆಯಾ ಬಗ್ಗೆ ಯೋಚಿಸುವಾಗ ಅಂಥಹ ಕಲೆಯ ಆಯಾಮಕ್ಕೆ ಹೊಸ ನಾಮಕರಣ ಮಾಡಿದರೆ ಸೂಕ್ತ.

ಯಕ್ಷಗಾನ ಒಂದು ಕಲೆ ಎಂಬ ಮಾತ್ರಕ್ಕೆ ಜನ ಮನ್ನಣೆ ಪದೆದದ್ದಲ್ಲ. ಇಂದಿಗೂ ದೇವಿ ಮಹಾತ್ಮೆಯ ದೇವಿ ವೇಶ ನೋಡುವಾಗ ಕೆಲವರು ಭಕ್ತಿ ಭಯದಿಂದ ಭಾವುಕಾಗುವುದುಂಟು. ಕಟೀಲು ಮೇಳ ಮುಂದಿನ ೨೫ ವರ್ಷಗಳಿಗೂ ಹರಿಕೆ ಆಟಕ್ಕೆ ನಿಗದಿಯಾಗಿದ್ದರೆ.. ಅದು ಕೇವಲ ಕಲೆಯ ಮನ್ನಣೆ ಎಂದು ಹೇಳುವ ಹಾಗಿಲ್ಲ. ಹಾಗಿರುವಾಗ ಇನ್ನೂ ಯಕ್ಷಗಾನ ಎಂಬುದು ಸಂಪ್ರದಾಯ ಹಾಗು ಆರಾಧನ ಭಾಗವಾಗಿ ಬೆಳದು ಬಂದಿರುವಾಗ ಮತ್ತು ಪುರಾಣಿಕ ಕಥಾನಕಗಳು ಪಂಚವಟಿ, ಕುಮಾರ ವಿಜಯ, ಕೃಷ್ಣ ಸಂಧಾನ ಇನ್ನೂ ಹಲವು ಪ್ರಸಂಗಗಳು ಇನ್ನೂ ಬೇರೆಲ್ಲ ಕಥೆಗಳಿಗಿಂತ ಅತಿ ಯಶಸ್ವಿಯಾಗಿ ಪ್ರದರ್ಶನ ಗೊಳ್ಳುವ ಇಂತಹ ಕಾಲದಲ್ಲಿ ಪರಂಪರೆಯಲ್ಲಿ ಯಾವುದೂ ಇಲ್ಲ ಎಂದು ಸೃಜನ ಶೀಲತೆ ಎಂದು ಕರೆದು ಅದನ್ನು ಸಾಕಾರಗೊಳಿಸುವ ಅಗತ್ಯ ಇದೆಯೇ?

ಮೊದಲು ಪಂಜಿನ ಬೆಳಕಲ್ಲಿ ಆಟ ನಡೆಯುತ್ತಿದ್ದರೆ ಇಂದು ಜಗಮಗಿಸುವ ಬೆಳಕು. ಸಾಪ್ರದಾಯಿಕ ಯಕ್ಷಗಾನದಲ್ಲಿ ಮೊದಲು ಶ್ರುತಿಗೆ ತಬೂರಿಯನ್ನು ಉಪಯೋಗಿಸುತ್ತಿದ್ದರೆ ಈಗ ಹಾರ್ಮೋನಿಯಮ್ ನಂತರ ಶ್ರುತಿ ಪೆಟ್ಟಿಗೆ.. ಈ ಪರಿಷ್ಕಾರಗಳೆಲ್ಲ ಮೂಲ ಸಂಸ್ಕಾರಕ್ಕೆ ಹೆಚ್ಚು ಪ್ರಭಾವವನ್ನುಂಟು ಮಾಡಲಿಲ್ಲ. ಹಾಗೆಂದು ಯಕ್ಷಗಾನದ ಮೂಲ ಸತ್ವವನ್ನು ದೂರ ಇಡುವ ಸೃಜನ ಶೀಲತೆ ಇಂದು ತನ್ನದೇ ಪ್ರಭಾವವನ್ನು ಬೀರಿದೆ. ಜನಪ್ರಿಯತೆಯೋ ಅಥವಾ ವಾಣಿಜ್ಯ ಕಾರಣವೋ ಏನೆ ಆಗಿದ್ದರೂ ಹೊಸತೊಂದು ಆಯಾಮ ಉಂಟು ಮಾಡಿ ಹೊಸ ಹೆಸರನ್ನು ನೀಡಿ ಯಕ್ಷಗಾನವೆಂಬ ಪರಿಧಿಯಿಂದ ಸಂಪೂರ್ಣ ಹೊರಬಂದು ಬೇರೆಯೇ ಹೆಸರನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವೇ?

ಸೃಜನ ಶೀಲತೆ ಹೆಸರಲ್ಲಿ ಜನಪ್ರಿಯಗೊಳಿಸುವ ಹಲವು ಸರಕುಗಳನ್ನು ನಾವು ನೋಡಬಹುದು. ಯಕ್ಷಗಾನ ಪರಮಪರೆಯ ಪ್ರಸಂಗಗಳಲ್ಲಿ ಅನಗತ್ಯ ಸನ್ನಿವೇಶಗಳನ್ನು ತುರುಕುವುದು. ಇದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ತ್ರಿಪುರ ಮಥತನದ ಆಟದೊಳಗಣ ಆಟ, ಇನ್ನೊಂದು ನಾನು ಉಲ್ಲೇಖಿಸಬಯಸುವುದು ಇಂದ್ರನಂದನ ವಾಲಿ ಎಮ್ಬ ಒಂದು ಪ್ರಸಂಗ ಇತ್ತೀಚಿಗೆ ನೋಡಿದ್ದೇ. ಈ ಪ್ರಸಂಗ ಸಂಪೂರ್ಣ ವಾಲಿಯ ಸಮಗ್ರ ಚಿತ್ರವನ್ನು ಹೊಂದಿದ ಪ್ರಸಂಗ. ವಾಲಿ ಜನ್ಮದಿಂದ ತೊಡಗಿ ವಾಲಿ ಮೋಕ್ಷದ ವರೆಗಿನ ಪ್ರಸಂಗ. ಇದರಲ್ಲಿ ಒಂದು ಸನ್ನಿವೇಶ.. ಹನುಮಂತನ ತಾಯಿ ಅಂಜನ ದೇವಿ ಕಲ್ಯಾಣ. ಆಕೆಯ ಪ್ರಣಯ. ಸನ್ನಿವೇಶ. ಈಗಿನ ಕಾಲಮಿತಿಯ ೪ ಗಂಟೆಯ ಅವದಿಯ ಇ ಯಕ್ಷಗಾನದಲ್ಲಿ ಈ ಕಲ್ಯಾಣ ಪ್ರಣಯ ಪ್ರಸಂಗಕ್ಕೆ ಬರೋಬರಿ ಒಂದು ಗಂಟೆ ಮೀಸಲು ಇಟ್ಟದ್ದು. ಮೇಳದ ಪುಂಡು ವೇಷಧಾರಿಗೆ ಯಾವುದೇ ವೇಷ ಇಲ್ಲದುದಕ್ಕೆ ಈ ಬೆಳವಣಿಗೆ . ಹೇಗಿದೆ? ವಾಲಿಯ ಬಹು ಮುಖ್ಯ ಸಂನಿವೆಶಗಳಾದ ರಾವಣ ಗರ್ವಭಂಗ .. ಸಮುದ್ರಮಥನ ಸನ್ನಿವೇಶ ಇವುಗಳಿಗೆ ಸಮಯವೇ ಇಲ್ಲ.. ಎಂಥ ಸೃಜನ ಶೀಲತೆ ಇದು ? ಒಂದು ಪ್ರಸಂಗದಲ್ಲಿ ಯಾವ ಸನ್ನಿವೇಶಕ್ಕೆ ಹೆಚ್ಚು ಮಹತ್ವ ಕೊಡಬೇಕೋ ಅದಕ್ಕೆ ಕೊಡದೆ ಕೇವಲ ಜನಪ್ರಿಯತೆಯನ್ನು ದ್ರಿಷ್ಟಿಯಲ್ಲಿತ್ತುಕೊಂಡು ಈ ಸೃಜನ ಶೀಲತೆ ಬೇಕಾಗಿದೆಯೇ?

Wednesday, November 12, 2008

ನಾನು ಮೊತ್ತ ಮೊದಲು ನೋಡಿದ ದೇವಿ ಮಹಾತ್ಮೆ ಬಯಲಾಟ

ಅದು ಉರ್ವ ಸ್ಟೋರ್ ಮಂಗಳೊರು ನಗರದ ಚಿಕ್ಕ ಕ್ಷೇತ್ರ . ಆವಾಗ ನಮ್ಮ ಮನೆ ಇದ್ದದ್ದು ದೇರೆಬೈಲು ಎಂಬ ಊರಿನ ಸಮೀಪ. ಮನೆಗೆ ಆವಶ್ಯಕ ಸಾಮಾನು ಬೇಕೆಂದರೆ ಅದು ಸಿಗುತ್ತಿದ್ದದ್ದು ಇಲ್ಲೇ. ಗುರುವಾರದ ಒಂದು ಸಾಯಂಕಾಲ ಮನೆಯ ಸಾಮಗ್ರಿಗಳನ್ನು ಹೊತ್ತುಕೊಂಡು ಹಿರಿಯರೊಂದಿಗೆ ನಡೆದು ಬರುತ್ತಾ ಇದ್ದೆವು. ಉರ್ವ ಸ್ಟೋರ್ ನ ಕೇಂದ್ರ ಭಾಗದಲ್ಲಿರುವ ಆಟದ ಮೈದಾನು  ಹಾದು ಹೋದಾಗ ಅಲ್ಲಿ ಬಣ್ಣ ಬಣ್ಣದ ನಾಲ್ಕು ಕಂಬಗಳನ್ನು ತಂದಿರಿಸಿದ್ದರು. ಅದು ಏಕೆ ಎಂದು ತಿಳಿಯದೆ ಹಿರಿಯರಲ್ಲಿ ಕೇಳಿದಾಗ

" ಶನಿವಾರ ಇಲ್ಲಿ ಹೋಟೆಲಿನ ಬಟ್ರು ಆಡಿಸುವ ದೇವಿ ಮಹಾತ್ಮೆ ಆಟ ಉಂಟು.."

              ಕಿವಿ ನೆಟ್ಟಗಾಯಿತು !! . ಮೊದಲು ಆಟ ಅಂದ್ರೆ ನಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ  ಅಲ್ಪ ಸ್ವಲ್ಪ ನೋಡಿದ ನೆನಪು. ಇದು ಹೇಗಿರಬಹುದು. ಆಟದ ರಂಗಸ್ಥಳದ  ಸಿದ್ಧತೆ  ಮೂರು ದಿನ ಮುಂಚಿತವಾಗಿಯೇ   ಶುರುವಾಗಿತ್ತು. ಕಟೀಲು ಮೇಳದ ರಂಗಸ್ಥಳ ಹೇಳಿದರೆ ಅಷ್ಟೂ ಭವ್ಯವೂ ದಿವ್ಯವೂ ಆಗಿರುತಿತ್ತು.. ವಿದ್ಯುದ್ದೀಪ ಗಳಿಂದ ಕಂಗೊಳಿಸುತ್ತಿತ್ತು. ಅಂತೂ ಇಂತು ಆಟದ ದಿನ ಶನಿವಾರ ಬಂದೆ ಬಿಟ್ಟಿತು ಬೆಳಗ್ಗೆ ಒಂದು ಸಲ ಆಟ ನಡೆಯುವ ಜಾಗಕ್ಕೆ ಹೋಗಿ ನೋಡುವ ಅಸೆ ಆದರೆ ಮನೆಯಿಂದ ಬಿಡಬೇಕಲ್ಲ.. ಬೆಳಗಿನ ಉಪಹಾರದ ಹೊತ್ತಿಗೆ ಅಂದಿನ ಭಾಗವತ ಬಲಿಪ್ಪರು ಸಹ ಕಲಾವಿದನ ಜತೆಗೆ ನಿಧಾನಕ್ಕೆ ನಮ್ಮ ಮನೆಗೆ ಬಂದರು.


             ಅವರ ಉಪಾಹಾರ ಎಲ್ಲ ಆದಮೇಲೆ ಹಿರಿಯರಲ್ಲಿ ಕುಶಲೋಪರಿ ಮಾತಾಡುವಾಗ ನನಗೆ ತಿಳಿದದ್ದು ಇವರು ಇಂದಿನ ಭಾಗವತರು ಎಂದು. ನಾನು ಅ ಮಹಾನ್ ವ್ಯಕ್ತಿಯನ್ನು ನೋಡುವುದೇ ಪ್ರಥಮ. ನಾವೆಲ್ಲ ಚಿಣ್ಣರು ನಮ್ಮಲ್ಲಿ ಅವರಿಗೆ ಮತಾಡುವಂತಹ ವಿಷಯವೇನೂ ಇಲ್ಲ ಮೇಲಾಗಿ ಘನಗಂಭೀರವಗಿರುತ್ತಿದ್ದ ಅವರ ಸ್ವರೂಪ ನೋಡಿ ನಾವು ಸ್ವಲ್ಪ ಭಯದಿಂದಲೇ ಅವರನ್ನು ಕಾಣುತ್ತಿದ್ದೆವು. ಕಟೀಲು ಮೇಳದ ಆಟ ಮಂಗಳೂರಿನ ಸುತ್ತ ಮುತ್ತ ಎಲ್ಲೇ ಆಗಲೀ ಅವರು ಸಾಧಾರಣವಾಗಿ ನಮ್ಮಲ್ಲಿಗೆ ಬರುತ್ತಿದ್ದರು. ಆದರೆ ನನ್ನ ನೆನಪಿನಲ್ಲಿ ನಾನು ಅವರನ್ನು ನೋಡಿದ್ದು ಅಲ್ಲೇ ಮೊದಲು.. ಬಾಲ್ಯದಲ್ಲಿ ನಮ್ಮ ಮನೆ ಕಾರಣಾಂತರದಿಂದ ಹಲವು ಕಡೆ ಬದಲಾವಣೆ ಆಗುತ್ತಿತ್ತು. ಅದು ಸಹ ಕಾರಣವಿದ್ದಿರಬಹುದು. ಸಾಯಂಕಾಲದ ವರೆಗೆ ಬಲಿಪ್ಪರು ನಿದ್ದೆ ಮಾಡಿ ಮತ್ತೆ ಎದ್ದು ಅವರ ತಾಂಬುಲ ಪೆಟ್ಟಿಗೆಯ ತೆರೆದರು ಅದುವೆ ಒಂದು ಅದ್ಭುತ ಕಂಡಿತು . ಅದರಲ್ಲಿ ಅಡಿಕೆ ಹೋಳು ಎಲೆ ಇತ್ಯಾದಿ ಇಡಲು ಪ್ರತ್ಯೇಕ ಕವಾಟಗಳು ಇದ್ದ ಸ್ಟೀಲ್ ನ ಪುಟ್ಟ ಪೆಟ್ಟಿಗೆಯಾಗಿತ್ತು. ಮತ್ತೆ ಕೆಲವು ಹೊತ್ತು ಅದರ ಸಿದ್ಧತೆ, ಬಹುಶ: ರಾತ್ರೆಯ ಸಿದ್ಧತೆಗೆ ತೊಡಗಿಕೊಂಡರು.

ಸ್ವಲ್ಪ ಹೊತ್ತಿನಲ್ಲೇ ಸ್ನಾನಾದಿಗಳನ್ನು ಮುಗಿಸಿ ಸಹಕಲಾವಿದನೊಂದಿಗೆ ಹೊರಟು ನಿಂತು ನಮ್ಮಲ್ಲಿ ಮಕ್ಕಳಲ್ಲಿ ತನ್ನ ಗೊರ ಗೊರ ಸಹಜ ಧ್ವನಿಯಲ್ಲಿ ಕೇಳಿದರು " ಆಟಕ್ಕೆ ಬರಲಿಕ್ಕೆ ಉಂಟ?" ನಮಗೆ ಖುಷಿಯೋ ಖುಷಿ .

                  ಬಲಿಪ್ಪರು ಹೋಗಿ ಮುಸ್ಸಂಜೆಯಗುತ್ತಿದ್ದಂತೆ ಚೆಂಡೆಯ ಸದ್ದು ಕೇಳಲಾರಂಭಿಸಿತು ನಾವು ಗಾಬರಿಯಾದೆವು. ಆಟ ಶುರುವಾಯಿತೋ ಹೇಗೆ? ಮತ್ತೆ ನಮ್ಮಜ್ಜಿ ಹೇಳಿದರು ಅದು ಕೇಳಿ ಅಂಥ ಬಡಿಯುದು. ಊರವರಿಗೆ ಆಟ ಉಂಟು ಅಂಥ ಗೊತ್ತಾಗೋದೇ ಆಗ.

                  ಕತ್ತಲೆಯಾಗುವ ಮೊದಲೇ ಹೋಗಲು ಅಣಿಯಾಗಬೇಕಲ್ಲ? ತೆಂಗಿನ ಮಡಲಿನ ಸೂಟೆ ಸಿದ್ದ ಮಾಡುವ ಕಾಯಕ ನಮಗೆ.. ಅದನ್ನೂ ಸಿದ್ದ ಮಾಡಿ ಊಟ ಎಲ್ಲ ಮುಗಿಸಿ ಒಂದು ಬಟ್ಟೆ ಚಾಪೆ.. ಇದು ಅಜ್ಜಿ ಸಿದ್ದ ಮಾಡಿ ಕೊಟ್ಟದ್ದು ಹಿಡಕೊಂಡು ನಂತರ ನಮ್ಮೊಂದಿಗೆ ಅಜ್ಜಿಯೂ ಹೊರಟರು. ದಾರಿಯಲ್ಲಿ ಸಿಕ್ಕಿದ ಪರಿಚಿತರಿಗೆ ಗತ್ತಿನಲ್ಲಿ ಹೇಳಿದವು ..." ಆಟೋಗು ಪೋಪುನೆ."

                        ಹೋದಾಗ ಕೋಡಂಗಿಗಳು ಕುಣಿಯುತ್ತ ಇದ್ದರು.ಏನೇನೊ ತಮಾಷೆಗಳನ್ನು ತೋರಿಸುತ್ತಾ ಮುಂದೆ ಕುಳಿತ ಮಕ್ಕಳನ್ನು ರಂಜಿಸುತ್ತ.. ಕುಣಿಯುತ್ತಿದ್ದರು. ನಾವು ಒಂದು ಕಡೆ ಚಾಪೆ ಹಾಸಿ ಕುಳಿತುಕೊಂಡೆವು. ತುಸು ಹೊತ್ತಿನಲ್ಲಿ ಬಾಲ ಗೋಪಾಲ ವೇಷ ಬಂತು. ಅನಂತರ ಶಂಖ ಜಾಗಟೆಯ ಶಬ್ದದೊಂದಿಗೆ ಚೌಕಿಯಿಂದ ದೇವರನ್ನು ಹೊತ್ತುಕೊಂಡು ಬಂದರು. ರಂಗಸ್ಥಳದಲ್ಲಿ ಪೂಜೆ ಆಗಿ ನೆನೆಯಿರೋ ಜನರರೆಲ್ಲ ಗುಣಯುತಗೆ ... ಅಂತ ಭಾಗವತರು ಪದ ಹೇಳಿದರು. ದೇವರ ನಿರ್ಗಮನವಾದಮೇಲೆ. ಮತ್ತೆ ಸ್ವಲ್ಪ ಹೊತ್ತು ಕುಣಿದು ಬಾಲಗೋಪಾಲ ಕೋಡಂಗಿ ತ್ಹೊಂಕ ತ್ಹೊಂಕ ದಿನತ್ಹೊಂ ಅಂತ ತಾವು ನಿರ್ಗಮಿಸಿದರು.. ಮತ್ತೆ ಚಿಕ್ಕ ಪ್ರಾಯದ ಬಾಲೆ ಚದುರೆ ಅಂಥ ೨ ಸ್ತ್ರಿ ವೇಷದ ಪ್ರವೇಶ.. ಹಾಸ್ಯಗಾರ ಬಂದ ಆಹೂಹು ದಕ್ಕಿತ್ತೋ ದಕ್ಕಿತ್ತು ಕಾರ್ಯಕ್ರಮ ಮುಗಿದು.. ಪೀಠಿಕೆ ಶುರುವಾಯಿತು ನಿಡ್ಲೆ ಅಜ್ಜನೊಂದಿಗೆ ಬಲಿಪ್ಪರು ಬಂದರು ನಿಡ್ಲೆ ಅಜ್ಜನನ್ನು ನೋಡುವುದು ಅದು ಶುರು. ಸಣಕಲು ಆಗಿದ್ದ ಅವರು ಅದು ಹೇಗೆ ಅ ಚೆಂಡೆಯನ್ನು ಹೆಗಲಲ್ಲಿ ಹೊರುತ್ತಾರೆ ಎಂಬುದೇ ನಮಗೆ ಸೋಜಿಗ.. ತಾಮ್ರದ ಮಡಕೆಯ ಶಬ್ದ ಚೆಂಡೆಯಿಂದ ಹೊರಹೊಮ್ಮಿದಾಗ ನಮಗೆಲ್ಲ ಸಂಭ್ರಮವೋ ಸಂಭ್ರಮ. ...

                                ಪೀಠಿಕೆ ಮುಗಿದು ಕಟ್ಟುವೇಶ ಪ್ರವೇಶ ಆಯಿತು.. ಒಂದು ಥರದ ಸ್ತ್ರೀ ಪುರುಷ ಎರಡನ್ನೂ ಬಿಂಬಿಸುವ ವೇಷಗಳು ವೀರರಸದ ಪದ್ಯದೊಂದಿಗೆ ಕುಣಿದು.. ಅನಂತರ .. ಬಲಿಪ್ಪರ ಕಂಠದಿಂದ ಹೊಮ್ಮಿದ ಅಂಬುರಹ ದಳ ನೇತ್ರೆ ಕೇಳಿ ಆಶ್ಚರ್ಯ ಬಲಿಪ್ಪರ ಮಾತಾಡುವಾಗ ಗೊರ ಗೊರ ಮಾತಾಡಿದರೂ ಮೈಕವನ್ನು ಮೀರಿಸಿದ ಅವರ ಈಗಿನ ಸ್ವರ ಕೇಳಿ. ! ತ್ರಿಮೂರ್ತಿಗಳೊಂದಿಗೆ ದೇವಿಯ ಪ್ರವೇಶ.. ಅಜ್ಜಿ ಹೇಳಿದ್ರು ನೋಡು ಪುರುಷ ಬಟ್ರ ದೇವಿ.. ಸಾಕ್ಷಾತ್ ದೇವಿಯೇ ..ಎದ್ದು ಬಂದಂತಿತ್ತು.. ಅನಂತರ ಮಧು ಕೈಟಭ ಸಭೆಯಲ್ಲಿ ಪ್ರವೇಶ ...ಮಹಿಷಾಸುರ.. ಪ್ರವೇಶ.. ಇದನು ಒಂದು ಅರ್ಧ ಗಂಟೆ ಅವಧಿ .. ಮಹಿಷಾಸುರ ವಧೆಗೆ ದೇವಿ ಪ್ರವೇಶ.. ಇದೆಲ್ಲ ಒಂದು ಅದ್ಭುತ ಲೋಕವನ್ನೇ ತೆರೆದಿಟ್ಟಿತು.. ಹಿಮ್ಮೇಳ ವೇಷದವರು.. ಪ್ರತಿಯೊಬ್ಬರೂ ಭಾಗವತರ ನಿರ್ಧೇಶನದಂತೆ ನಡೆಯುವುದು ನೋಡಿದಾಗ ಶಿಸ್ತಿನ ಸಿಪಾಯಿಗಳಂತೆ ತೋರುತಿದ್ದರು. ಬೆಳಗ್ಗೆಯವರೆಗೂ ಬಲಿಪ್ಪರು ಒಂದೇ ಏರು ಕಂಠದಿಂದ ಹಾಡುವುದು ನೋಡಿದಾಗ ಈಗಿನ ಯಾವ ಸ್ಟಾರ್ ಭಾಗವತರೂ ಅ ಮಟ್ಟಕ್ಕೆ ಎರಲಾರರು. ನಿಡ್ಲೆ ಅಜ್ಜನ್ನ ಚೆಂಡೆ . ..ಅವಾಗ ಅವರ ಶಿಷ್ಯ ವೃಂದ ಕೂಡ ದೊಡ್ಡದಿತ್ತು.. ಅಂಥ ಕೇಳಿದ್ದೆ.. ಕುರುಪ್.. ಪೆರುವೋಡಿ.. ಇವರೆಲ್ಲ ಮೇಳದಲ್ಲಿ ಅವರ ಜತೆಗೆ ಇರುತ್ತಿದ್ದರು.. ಅಂತೂ ಅ ದಿನಗಳು ಕಳೆದುವು ಹಸಿ ಹಸಿ ನೆನಪನ್ನು ಬಾಳಿನುದ್ದಕ್ಕೂ ನೀಡುತ್ತಾ ಗತಿಸಿದುವು. ಇಗಲೂ ಊರಿಗೆ ಹೋದಾಗ ಕಟೀಲು ಮೇಳದ ಆಟದ ಬ್ಯಾನರ್ ನೋಡಿದಾಗ ಅ ನೆನಪಿನ ವರ್ತುರಲಿದಿಂದ ಹೊರಬರಲಾಗದೆ ತಳಮಳಿಸಿದ್ದಿದೆ. ಅವಾಗ ಕಟೀಲು ಮೇಳ ಒಂದೇ ಆಗಿದ್ದುದ್ದು ಮತ್ತೆ ಎರಡಾಯಿತು ನಾಲ್ಕಾಯಿತು.. ೪೦ ವ ರ್ಷಗಳಿಗೂ ಹೆಚ್ಚು ಬಲಿಪ್ಪರ ಸೇವೆಯೂ ಸಂದಿತು.. ಬಹುಶ: ಒಬ್ಬ ಕಲಾವಿದ ಒಂದು ತಂಡದೊಂದಿಗೆ ಇಷ್ಟು ದೀರ್ಘ ಸಮಯ ಇದ್ದದ್ದು ಬೇರೆ ಎಲ್ಲೂ ಇಲ್ಲವೇನೋ.