"ಇದು ವಿಮರ್ಶೆಯಲ್ಲದ ಚಿಂತನ"

Monday, January 4, 2010

ವೇಷ ಕಳಚಿದ ಸಮಯ. ಭಾಗ ೨

ವೇಷ ಕಳಚಿದ ಸಮಯ. ಭಾಗ ೨







ಸ್ನಾನ ಪೂಜೆ ಮುಗಿಸಿದಾಗ ಬಿಸಿ ಬಿಸಿ ಕುಚ್ಸಿಲಕ್ಕಿ ಗಂಜಿ ತಟ್ಟೆಗೆ ಹಾಕಿ ಭಾಗಿರಥಿ ತಂದಿಟ್ಟಳು. ಉಪ್ಪಿನ ಕಾಯಿ ಚಪ್ಪರಿಸುತ್ತ ಉಂಡ ಭಟ್ಟರು ಪಂಚೆ ಅಂಗಿ ಧರಿಸಿ ಹೇಳಿದ ಜೀಪು ಬರುವುದನ್ನೇ ಕಾಯುತ್ತ ಕುಳಿತರು. ಭಾಗಿರಥಿ ಅದಾಗಲೇ ಹೊರಟು ಒಳಗೆ ಏನೋ ಸಣ್ಣ ಪುಟ್ಟ ಕೆಲಸದಲ್ಲಿ ನಿರತಳಾಗಿದ್ದಳು. ಅವಳಿಗೆ ಒಂದು ರೀತಿ ಸಂಭ್ರಮ. ತನಗೂ ಇರುತ್ತಿತ್ತು ಸಂಭ್ರಮ ಎಂದು ಭಟ್ಟರು ಪರಿತಪಿಸಿದರು.


ಮಗ ಬೆಳೆದು ದೊಡ್ಡವನಾದ. ಹೈಸ್ಕೂಲು ದಾಟಿ ಹತ್ತಿರದ ನಗರಕ್ಕೆ ಕಾಲೇಜು ವಿದ್ಯಾಭ್ಯಾಸಕ್ಕೆ ಹೋಗಲು ಶುರು ಮಾಡಿದಾಗ ಭಟ್ಟರಿಗೆ ಮನದಲ್ಲೇ ಆನಂದ. ಬಹುಶಃ ಯಕ್ಷಗಾನ ಕಲಾವಿದನೊಬ್ಬನ ಮಗ ಕಾಲೇಜು ಮೆಟ್ಟಲು ಹತ್ತುವುದು ಅದು ಮೊದಲು ಎಂಬ ಅಂಬೋಣ.


ಬಹುಶ: ಒಂದು ಅಲಿಖಿತ ಸಂಪ್ರದಾಯ ಇದೆ. ಪುರೋಹಿತರ ಮಗ ಪುರೋಹಿತ, ಚಾಲಕನ ಮಗ ಚಾಲಕ,ಅಧ್ಯಾಪಕನ ಮಗ ಅಧ್ಯಾಪಕ.. ಹೀಗೆ ವೃತ್ತಿ ಸಂಬಂಧವಾದ ಮುಂದುವರಿಕೆಯ ಸಂಪ್ರದಾಯ. ಹಲವರು ಮಗ ಬೆಳೆಯುತ್ತಿದ್ದಂತೆ ನನ್ನೆಡೆಗೆ ಮತ್ತು ಮಗ ಚಿನ್ಮಯನೆಡೆಗೆ ಈ ದ್ರಿಷ್ಟಿ ಇಟ್ಟದ್ದು ತಪ್ಪು ಅಂತ ಹೇಳುವುದು ಹೇಗೆ? ತಾನು ಕಲಾವಿದನಾದುದು ಏಕೋ ಈಗ ಮಗ ಅದೇ ಹಾದಿ ತುಳಿಯಬೇಕಾದುದು ಏಕೋ ಅಂತ ಹಲವು ಸಲ ಭಟ್ಟರು ಗೊಂದಲಕ್ಕೆ ಸಿಕ್ಕಿ ಹಾಕಿಕೊಂಡಿದ್ದರು. ಯಾವುದೇ ವೃತ್ತಿಯವನಾದರು ಬಯಸುವುದು ಒಂದೇ ನನ್ನ ವೃತ್ತಿ ನನ್ನ ಮಗನಿಗೆ ಬೇಡ. ವೃತ್ತಿಯಲ್ಲಿ ಅವನಿಗೆಷ್ಟು ಶ್ರದ್ದೆ ಇದೆ ಎಂಬುದರ ಮಾನದಂಡ ಇದಲ್ಲ. ಆದರೂ ಅದರ ಹಾದಿ ತುಂಬಾ ಕಠಿಣ, ತನ್ನ ಮಗನಿಗೆಕೆ ಆ ಕಷ್ಟ.? ಏನಿದ್ದರೂ ಮನಸ್ಸಿನ ಯೋಚನೆಗೇನು? ಮಿತಿಯಿದೆಯೇ? ಹಾಗೆಂದು ಮಗ ತನ್ನ ಹಾದಿ ತುಳಿಯಬಾರದೆಂದು ಎಂದೂ ನಿರ್ಧರಿಸಿದವರಲ್ಲ. ಅದರೂ ಪೂರ್ಣ ವಾಗಿ ಹೀಗೆ ಎಂದು ಹೇಳುವ ನಿರ್ಧಾರಕ್ಕೆ ಮನಸ್ಸೂ ಬರುವುದಿಲ್ಲ.


ಬೆಳೆಯುತ್ತಿದ್ದ ಪರಿಸರದ ಗುಣವೋ, ರಕ್ತ ಗುಣವೋ, ಅವನಲ್ಲೂ ಸರಸ್ವತಿ ಅವತಾರ ಎತ್ತುತ್ತಿದ್ದಳು. ತನ್ನ ಮಗ ಎಂಬ ಕಾರಣಕ್ಕೆ ಅದು ಅವನಿಗೆ ತುಂಬಾ ಸುಲಭವೂ ಆಗಿಬಿಡುತ್ತಿತ್ತು. ಹಲವು ಅವಕಾಶಗಳು ತನ್ನಿಂತಾನೆಯಾಗಿ ಬಂದುವು. ಮೇಳದ ಮದ್ದಲೆಗಾರರೊಬ್ಬರು ಈ ದಿಶೆಯಲ್ಲಿ ಆತನಿಗೆ ಗುರುವಾಗಿ ಹಲವು ವಿಷಯಗಳ ಭೋಧನೆ ಮಾಡಿದರು. ಹಾಗಾಗಿ ಸುಪ್ತವಾಗಿ ಅಂತರ್ಗಾಮಿಯಾದ ಕಲೆ ಅವನಲ್ಲಿ ಯಾವುದೇ ಪೋಷಣೆ ಇಲ್ಲದೆ ಅಪ್ರಯತ್ನವಾಗಿ ಬೆಳೆಯುತ್ತಿತ್ತು. ಕೆಲವೊಂದು ಸಲ ಭಟ್ಟರು ಮನಸ್ಸಿನಲ್ಲೇ ಹಿಗ್ಗುತ್ತಿದ್ದರು. ಯಕ್ಷಗಾನದ ಸೆಳೆತ ಆ ಬಗೆಯದು.



ಹವ್ಯಾಸವಾಗಿ ಬಳಸಿಕೊಂಡ ಯಕ್ಷಗಾನ ಕಲೆ ಅಲ್ಪ ಪ್ರಸಿದ್ದಿಯನ್ನು ಕೊಟ್ಟರೂ ಅದನ್ನೇ ಹವ್ಯಾಸವಾಗಿ ಮಾತ್ರವೇ ಬೆಳೆಸಿಕೊಂಡ. ಒಂದು ರೀತಿಯಲ್ಲಿ ಭಟ್ಟರ ಗೊಂದಲವನ್ನು ಆತನಾಗಿಯೇ ಬಗೆಹರಿಸಿದ.ವಿದ್ಯಾವಂತ ಯುವಕರು ಯಕ್ಷಗಾನವನ್ನು ಒಂದು ಹವ್ಯಾಸವಾಗಿ ಬೆಳೆಸುವುದು, ಬದಲಾದ ವಾತಾವರಣದ ದಿಶೆಯಲ್ಲಿ ಸೂಕ್ತ ಎಂದು ಅನ್ನಿಸುತ್ತಿತ್ತು. ಇದರಿಂದ ಕಲಾವಿದನ ವೈಯ್ಯಕ್ತಿಕ ಜೀವನಕ್ಕೆ ಅಷ್ಟೇನೂ ಬಾಧಕವೆನಿಸಲಾರದು. ವಿದ್ಯಾವಂತ ಸುಶಿಕ್ಷಿತರ ಆಗಮನ ಯಕ್ಷಗಾನ ಕಲಾ ಸಾಮ್ರಾಜ್ಯವನ್ನು ಇನ್ನೂ ಸಮ್ರಿದ್ದಿಯತ್ತ ಕೊಂಡೊಯ್ಯಬಹುದೇ? ಹಲವು ಮಹದಾಸೆ ಇಟ್ಟುಕೊಂಡು ಬೆಳೆಯುತ್ತ ಬಂದ ಮಗನ ಮಹದಾಸೆಗಳು ಯಾವುದೂ ಭಟ್ಟರಿಗೆ ಅಹಿತವಾಗಲಿಲ್ಲ. ಇನ್ನೂ ಉತ್ತಮ ಮಟ್ಟದ ಜೀವನ ನಡೆಸಬೇಕು. ಬಡತನದ ಜೀವನ ಒಂದು ರೀತಿಯಲ್ಲಿ ಇಲ್ಲವಾಗಿಸಬೇಕು. ತಂದೆಗೆ ವಿರಾಮದ ಜೀವನ ಒದಗಿಸಬೇಕು. ಹೀಗೆ ಹತ್ತು ಹಲವು ಧ್ಯೇಯಗಳನ್ನು ಇಟ್ಟು ಜತೆಗೆ ಹವ್ಯಾಸ ವಾಗಿ ತೆಂದೆಯ ಬಳುವಳಿಯಾದ ಕಲೆಯನ್ನು ಉಳಿಸಿಕೊಂಡ ರೀತಿ ಭಟ್ಟರಿಗೆ ಒಂದು ತನ್ಮಯತೆಯನ್ನು ಒದಗಿಸಿತು. ಶಾಲಾ ಕಾಲೇಜು ಎಂದು ಒಂದೊಂದೇ ಮಜಲುಗಳನ್ನು ದಾಟುತ್ತ ದಿನಗಳೊಂದೊದಾಗಿ ಸಾಗುತ್ತಿತ್ತು. ಭಟ್ಟರೂ ಒಂದು ರೀತಿ ನೆಮ್ಮದಿಯ ನಿಟ್ಟುಸಿರನ್ನು ಬಿಡತೊಡಗಿದರು. ಮಗ ಕಾಲೇಜು ವಿದ್ಯಾಭ್ಯಾಸ ಮುಗಿಸಿದ,ಮತ್ತೂ ಉನ್ನತ ವಿದ್ಯಾಭ್ಯಾಸವನ್ನು ಮುಗಿಸಿದ. ಅವನ ವಿದ್ಯಾಭ್ಯಾಸದ ರೂಪಗಳು ಯಾವುದೊ ಒಂದೂ ಭಟ್ಟರ ತಿಳುವಳಿಕೆಗೆ ನಿಲುಕದೆ ಯಾವುದೋ ಮಹತ್ವ ಪೂರ್ಣ ವಿದ್ಯಾಭ್ಯಾಸ ಎಂದು ಮಾತ್ರ ಊಹಿಸಬಲ್ಲರು.



ಹೀಗೆ ವಿದ್ಯಾಭ್ಯಾಸ ಒಂದು ಹಂತದಲ್ಲಿರುವಾಗಲೇ ಒಂದು ಉದ್ಯೋಗ ಅವನನ್ನೇ ಅರಸಿ ಬಂದಿತ್ತು. ಉತ್ತಮ ವೇತನ ಮಗನ ಉತ್ತಮ ಉದ್ಯೋಗ ಸಾಧನೆ ಯಾವ ಅಪ್ಪ ಅಮ್ಮನಿಗೆ ಸಂತಸವನ್ನು ತರುವುದಿಲ್ಲ.? ಅಂತೆಯೇ ಭಟ್ಟರು ಹಿರಿ ಹಿರಿ ಹಿಗ್ಗಿದರು.ಎಲ್ಲವೂ ಒಂದು ರೀತಿ ವ್ಯವಸ್ಥಿತವಾಗಿ ನಡೆಯುತ್ತಿದ್ದಂತೆ ಒಂದು ತೃಪ್ತ ಜೀವನದ ಪರಾಕಾಷ್ಠೆಯನ್ನು ತಲುಪಿದೆನೆಂಬ ಭ್ರಮೆಯಲ್ಲೇ ಭಟ್ಟರು ಇದ್ದರು. ಉದ್ಯೋಗ ಅದೂ ಬಹುರಾಷ್ಟ್ರೀಯ ಕಂಪೆನಿಯ ತಮಗೆ ತಿಳಿಯದ ಯಾವುದೊ ಪ್ರಮುಖ ಹುದ್ದೆ, ಕೈತುಂಬಾ ಸಂಬಳ ಇನ್ನು ಜೀವನ ಆರಾಮ ಎಂದು ಕಲ್ಪಿಸಿದರು.



ಉದ್ಯೋಗ ನಿಮಿತ್ತ ದೂರದ ನಗರಕ್ಕೆ ಹೋಗುವ ಅನಿವಾರ್ಯತೆ. ನಿತ್ಯವೂ ನೋಡುತ್ತಿದ್ದ ಮಗನ ಮುಖ ಅಪರೂಪವಾಯಿತು. ಇವರಾದರೋ ಮೇಳದ ತಿರುಗಾಟದಲ್ಲಿ ಸಮಯ ಕಳೆಯುತ್ತಿದ್ದರು ಸದಾ ಮನೆಯಲ್ಲೇ ಇರುತ್ತಿದ್ದ ಭಾಗಿರಥಿಯ ಪಾಡು ನೆನೆದು ಕೆಲವೊಂದು ಸಲ ತಳಮಳಿಸುತ್ತಿದ್ದರು. ಆದರೂ ಜೀವನ ಎಂದರೆ ಅದೇ ಅಲ್ಲವೇ. ಇಂದಿನ ನೋವು ನಾಳೆಗೆ ಅಭ್ಯಾಸವಾಗಿಬಿಡುತ್ತದೆ. ಎಲ್ಲವೂ ಹೊಂದಿಕೊಳ್ಳುವ ಅನಿವಾರ್ಯತೆ. ನಿತ್ಯವೂ ಜೀವನದ ಅಂಗವಾಗಿ ಮನೆಯ ಕಲರವಕ್ಕೆ ಕಾರಣನಾದ ಮಗ ಅತಿಥಿಯಂತೆ ಆದಾಗ ತುಂಬಾ ಕಂಗಾಲಾಗುವ ಪರಿಸ್ಥಿತಿ. ಆವಾಗೆಲ್ಲ ಮಗನೇ ಹಲವು ಸಲ ಸಮಾಧಾನ ಪಡಿಸಿದ್ದ. ಬದಲಾದ ಲೋಕ ಊರು ಕಾಲದ ಗತಿಯೊಂದಿಗೆ ಜೀವನ ವನ್ನು ಸರಿತೂಗಿಸಿಕೊಳ್ಳುವ ಅನಿವಾರ್ಯತೆ , ಸದ್ಯ ಇರುವ ಬಡತನದ ನಿವಾರಣೆ ಹೀಗೆ ಒಂದೊಂದಾಗಿ ವಿವರಿಸುತ್ತ ಹಲವು ವಿಧದ ಸಾಂತ್ವಾನ ಮಾತುಗಳನ್ನಾಡಿದ್ದ.



ಮಗ ಪ್ರಮುಖ ಉದ್ಯೋಗದಲ್ಲಿದ್ದು ಕೈತುಂಬಾ ವರಮಾನ ಬರುವವರ ಸಾಲಿನಲ್ಲಿ ಸೇರ್ಪಡೆಯಾದಾಗ ಸಹಜವಾಗಿ ಭಟ್ಟರ ನೆಲೆಯೂ ಕಂಡವರ ದೃಷ್ಟಿಯಲ್ಲಿ ಬದಲಾದಂತೆ ಅನಿಸಿತು. ಆದರೆ ಭಟ್ಟರು ಆದಷ್ಟು ಸಹಜವಾಗಿ ಇರುವ ಪ್ರಯತ್ನ ಮಾಡತೊಡಗಿದರು. ಎಷ್ಟೇ ಪ್ರಯತ್ನಿಸಿದರೂ ಸಹವರ್ತಿಗಳ ನಡುವಿನಲ್ಲಿ ಅಂತರ ಬೆಳೆದಂತೆ ಭಟ್ಟರಿಗೆ ಭಾಸವಾಗುತ್ತಿತ್ತು. ಮಗ ಅತ್ಯಂತ ದುಬಾರಿಯಾದ ಉಡುಗೆ ತೊಡುಗೆಗಳನ್ನು ತಂದು ಕೊಟ್ಟು ಬದಲಾದ ಜೀವನ ಶೈಲಿಗೆ ಅನಾಮತ್ತಾಗಿ ಎತ್ತಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದರೂ ಭಟ್ಟರು ಎಲ್ಲೋ ಒಂದು ಕಡೆ ಕುಂಟಿಕೊಂಡು ನಿಲ್ಲುವ ವಿಫಲ ಯತ್ನ ಮಾಡುತ್ತಿದ್ದರು. ಜೀವನ ಎಂತಿದ್ದರೂ ನಿಲ್ಲದ ಪಯಣ. ಅನಿವಾರ್ಯತೆಗೆ ಕಟ್ಟು ಬೀಳುವ ಮತ್ತೊಂದು ಅನಿವಾರ್ಯತೆ.ಮನೆಯ ವಾತಾವರಣವೇ ಬದಲಾಗತೊಡಗಿತು ವಿಶಾಲ ಮಂಚ ಜತೆಗೆ ಮೆತ್ತನೆಯ ಹಾಸಿಗೆ. ಮೊದಮೊದಲು ನಿದ್ದೆಯನ್ನು ತರಿಸುವ ಅನಿವಾರ್ಯತೆ ಕ್ರಮೇಣ ಅದೂ ಸಹಜವಾಗತೊಡಗಿತು. ಇದ್ದ ಕೋಣೆಗಳಲ್ಲಿ ಫ್ಯಾನುಗಳು ಆವಶ್ಯಕತೆಯನ್ನು ಮೀರಿ ಗಿರಿಗುಟ್ಟತೊಡಗಿದವು. ಅಡುಗೆ ಕೋಣೆಯಂತೂ ಹಲವು ಸಲಕರಣೆಗಳಿಂದ ತುಂಬಿ ಕೆಲವೊಂದು ಸಲ ಹಳೆಯ ಕಾಲ ಮಾನವೆಂದರೆ ಕೇವಲ ಕನಸು ಎಂದು ಭಾವಿಸುವ ಹಾಗೆ ಬದಲಾಯಿತು. ಇದೆಲ್ಲ ಮಗನ ಬಗ್ಗೆ ಹೆಮ್ಮೆ ಅನ್ನಿಸುವಂತೆ ಮಾಡಿತು.ಮಗ ಉದ್ಯೋಗಿಯಾದಾಗ ಹಲವು ಕನಸು ಸಹಜವಾಗಿ ಕಂಡಿದ್ದರು. ತನ್ನ ವೇಷ ಕಳಚುವ ಸಮಯವಾಯಿತು. ಸಾಕು ಈ ತಿರುಗಾಟ. ಇನ್ನು ಹವ್ಯಾಸಿಯಾಗಿಯೇ ಇದ್ದು ಬಿಟ್ಟು ಒಂದು ರೀತಿ ಸ್ವಚ್ಚಂದವಾಗುವ ಬಯಕೆ. ಆದರೂ ಒಂದು ರೀತಿ ಆತಂಕ ತನ್ನದಾದ ವೃತ್ತಿ ದುಡಿಮೆ ಇರುವಾಗ ಅದನ್ನು ಬಿಡುವುದು ಸರಿಯೇ. ಇಷ್ಟು ಸಮಯ ಏನೋ ತನ್ನನ್ನು ಪೊರೆದ ಈ ಕಲಾ ಬದುಕು ಸಾಕು ಎಂದು ಅನ್ನಿಸಿದ್ದಾದರೂ ಏಕೆ?



ಕೆಲವು ಸಮಯದಲ್ಲೇ ಕನ್ಯಾ ಪಿತೃಗಳ ಕಣ್ಣು ಮಗನ ಮೇಲೆ ಬಿದ್ದಾಗ ಭಟ್ಟರು ತನ್ನ ವಯಸ್ಸಿನಬಗ್ಗೆ ಒಂದು ಘಳಿಗೆ ಯೋಚಿಸುವಂತಾಯಿತು. ಮಗ ಇಷ್ಟು ಬೇಗ ಬೆಳೆದು ನಿಂತನೆ..?!!!



ದೂರದ ನಗರದ ಹೆಣ್ಣೊಂದು ಸೊಸೆಯಾಗಿ ಬರುವ ಅನುಬಂಧ ಕೂಡಿಬಂತು. ಮಗನಂತೆ ಉದ್ಯೋಗಿಯಾದ ಹೆಣ್ಣು ಶ್ಯಾಮಲೆ ಮಗನೊಂದಿಗೆ ತಮ್ಮ ಮನಸ್ಸನ್ನು ಗೆದ್ದದ್ದು ಸುಳ್ಳಲ್ಲ. ಎಂತಿದ್ದರೂ ಮಗ ಒಪ್ಪಿದ ಹೆಣ್ಣು. ಸಾಧಾರಣ ಅನುಕೂಲವಂತರ ಮನೆಯ ಹುಡುಗಿ ತಮ್ಮ ಮನೆಯ ಸೊಸೆಯಾಗಿ ಬಂದ ಮೊದಲ ದಿನಗಳು ಬಹುಶಃ ಬದುಕಿನ ಕೊನೆಯ ಸುಖದ ಕ್ಷಣಗಳೇ..ಹೀಗೆ ಭಾವಿಸುವಲ್ಲಿ ದಿಗಿಲ್ಗೊಳ್ಳುವ ಮನಸ್ಸು ಸಹಜವಾಗುವಲ್ಲಿ ಕಷ್ಟ ಪಡುವಂತಾಗುತ್ತದೆ. ಎಲ್ಲ ಬದುಕಿನ ಸಾಮಾನ್ಯ ಸ್ತಿತಿಯೇ ಹೀಗೆ. ಅದನ್ನೇ ಸಹಜವೆಂದೇ ಅಂಗೀಕರಿಸುವ ಅನಿವಾರ್ಯತೆಗೆ ಮನಸ್ಸು ಬೇಗನೆ ಸಿದ್ದವಾಗಿಬಿಡುತ್ತದೆ. ಮಗನ ಮದುವೆಯ ಸಂದರ್ಭ ಮಗ ಮುಂದಿಟ್ಟ ಬೇಡಿಕೆಯೇ ಅದು. ಸಾಕು ಇನ್ನು ಮೇಳದ ತಿರುಗಾಟ. ಬಂದ ಸೊಸೆ ಕೂಡ ಬಹಿರ್ಮುಖವಾಗಿ ಹೇಳಿದ್ದಳು ಇನ್ನು ಸಾಕು ವೇಷ ತೊಡುವುದು ಆದರೆ ಅದಕ್ಕೆ ಇಂಬು ಕೊಡುವಂತೆ ಮುಂದಿನ ವಿದ್ಯಮಾನಗಳು ಯಾವುದೂ ನಡೆಯದೆ ಭಟ್ಟರು ಅಂತರ್ಮುಖಿ ಯಾಗುವಂತೆ ಮಾಡಿತು. ಯಾರು ಏನೇ ಹೇಳಿದರು ಇದರಿಂದ ಅಷ್ಟು ಸುಲಭವಾಗಿ ಹೊರಬರುವ ಮನಸ್ಥಿತಿ ಕೂಡ ಭಟ್ಟರಲ್ಲಿ ಇರಲಿಲ್ಲ. ಜಗತ್ತಿನಲ್ಲಿ ಏಕಾಂಗಿ ಯಾದ ಅನುಭವ.ಹಲವು ರೀತಿ ಯೋಚನೆ ಮಾಡಿದರು ಕೊನೆಗೆ ಮೇಳದ ಯಜಮಾನರಲ್ಲಿ ಹೇಳಿಯೂ ಬಿಟ್ಟರು ಇನ್ನು ಆಗುದಿಲ್ಲ ಎಂದು. ಹಿರಿಯ ಕಲಾವಿದ ರಂಗವನ್ನು ಬಿಡುವುದು ಅಷ್ಟು ಸುಲಭವಲ್ಲ. ಯಜಮಾನರ ಬೇಡಿಕೆಯಂತೆ ಸಾಂಧರ್ಭಿಕವಾಗಿ ವೇಷ ತೊಡುವಲ್ಲಿ ಭಟ್ಟರ ಮನಸ್ಸು ಸಮ್ಮತಿಸಿತು. ಹಾಗೆಂದು ಪತ್ತನಾಜೆ ಸೇವೆ ಮುಗಿದು ಗೆಜ್ಜೆ ಬಿಚ್ಚಿಟ್ಟಾಗ ಭಟ್ಟರು ಭಾವುಕರಾದದ್ದು ಹೌದು. ಅಂತರಗದಲ್ಲಿ ಒಂದು ರೀತಿ ಉದ್ವೇಗ ತಳಮಳ ಆದಿನ ಅನುಭವಿಸಿದ್ದರು.




ಮದುವೆ ಮುಗಿದು ಒಂದೊಂದೇ ಕಾರ್ಯಕ್ರಮಗಳು ಮುಗಿದುವು. ಹಲವು ಕಡೆ ಹೋಗುವುದು. ಹೊಸ ಅತಿಥಿಗಳ ಭೇಟಿ ಎಲ್ಲವೂ ಯಾಂತ್ರಿಕವೆಂಬಂತೆ ನಡೆಯಿತು. ಕಲಾವಿದರಾದ ಇವರು ಅಪರಿಚಿತರಲ್ಲ.. ಎಲ್ಲ ಕಡೆ ಪರಿಚಿತರಾಗಿ ಒಂದು ರೀತಿ ಸಂಭ್ರಮದಲ್ಲೇ ಕಳೆದರು. ಮೇಳವನ್ನು ಸಂಪೂರ್ಣ ಮರೆತು ಬಿಟ್ಟಂತಹ ಅನುಭವ. ಹಲವರು ಕೇಳಿದರು ಇನ್ನು ತಿರುಗಾಟ ಇಲ್ಲವೋ ಎಂದು. ಭಟ್ಟರ ಮುಗಳು ನಗುವಿನ ಉತ್ತರ ಅಷ್ಟೇ. ಹಾಗೆಂದು ವೃತ್ತಿಯನ್ನು ಮುದುವರೆಸಲು ದೈಹಿಕವಾಗಿಯೋ ಅಥವಾ ಆರೋಗ್ಯದ ದ್ರಿಷ್ಟಿಯಲ್ಲೋ ಅಸಮರ್ಥರೆನೂ ಅಲ್ಲ ಆದರೂ ಒಂದು ರೀತಿಯ ಮಾತು ಬಂದು ಚರ್ಚೆಯಾಗುತ್ತಿದ್ದದ್ದು ಸಹಜ.

ಮದುವೆಯಾದ ಮಗ ಹೊಸ ಸಂಭ್ರಮದಿಂದಲೇ ನಗರಕ್ಕೆ ತೆರಳಿದ್ದ. ಜತೆಗೆ ಪತ್ನಿಯೂ. ಹಾಗಾಗಿ ಮತ್ತೆ ಅದೇ ವಾತಾವರಣ ಮನೆಯಲ್ಲಿ ಮರುಕಳಿಸಿತು. ಹೆಂಡತಿ ಭಾಗಿರಥಿ ಸಹಜ ವಾತಾರಣಕ್ಕೆ ಒಗ್ಗಿಕೊಂಡಳು. ಭಟ್ಟರಿಗೆ ಏಕಾಂಗಿ ತನದ ಬಿಸಿ. ಭಾಗವತರ ತಾಳಕ್ಕೆ ಕುಣಿಯುವುದಲ್ಲದೆ ಬೇರೇನೂ ಅರಿಯದ ಜೀವನ ಕ್ರಮ ಸುಧಾರಿಸುವುದೇ ಕಷ್ಟವಾಗತೊಡಗಿತು. ಮೈಮನಗಳೆಲ್ಲ ಜಡ್ಡುಗತ್ತಿದಂತಹ ಅನುಭವ. ಯಾವುದೇ ಚಟುವಟಿಕೆಯನ್ನು ತೊಡಗಿಸಿಕೊಳ್ಳುವಲ್ಲಿ ಗೊಂದಲ. ಹಿಡಿದ ಕೆಲಸ ಪೂರ್ಣಗೊಳಿಸದೆ ಇನ್ನೊಂದನ್ನು ತೊಡಗಿಸಿ ಅದನ್ನೂ ಅರ್ಧದಲ್ಲೇ ನಿಲ್ಲಿಸಿ ದಿನ ಕಳೆಯುತ್ತಿದ್ದರು. ಶಾಂತವಾಗಿದ್ದ ಮನಸ್ಸು ಕೂಡ ಕೆಲವೊಮ್ಮೆ ಸ್ಥಿಮಿತ ಕಳೆದು ಕೊಳ್ಳತೊಡಗಿತು. ಎಲ್ಲವನ್ನೂ ಸಹಿಸಿಕೊಳ್ಳಬಹುದಿತ್ತು ಆದರೆ .ತಿಂಗಳಿಗೊಮ್ಮೆ ಬರುತ್ತಿದ್ದ ಮಗ. ಮೊದಮೊದಲು ಸೊಸೆಯೂ ಜತೆಯಾಗಿ ಬರುತ್ತಿದ್ದಳು. ಜೋಡಿ ಹಕ್ಕಿಯಂತೆ ಅವರ ಕಲರವದಿಂದ ಏಕಾತನತೆಯನ್ನು ತೊರೆದ ಮನೆಯ ವಾತಾವರಣ ಮುದ ನೀಡುತ್ತಿತ್ತು. ಬರುಬರುತ್ತಾ ಮಗ ಏಕಾಂಗಿಯಾಗಿ ಬರುತ್ತಿದ್ದ. ರಜವಿಲ್ಲದ ಕಾರಣ, ಬಿಡುವಿಲ್ಲದ ಕೆಲಸದ ಸಮಸ್ಯೆ. ಇನ್ನೂ ಏನೇನೋ ಸಮಸ್ಯೆಗಳು. ಆಗೊಮ್ಮೆ ಈಗೊಮ್ಮೆ ಬಂದರೂ ಮನೆಯ ವಾತಾವರಣ ಆಕೆಗೆ ಅಸಹನಿಯವಾದಂತೆ ಭಟ್ಟರು ಭಾವಿಸತೊಡಗಿದರು.ಬದಲಾದ ಮಗನ ವಯೋ ಸಹಜ ಗುಣವೋ, ತಮ್ಮ ಅರಿವಿನ ಆಚೆಗಿನ ಲೋಕವೋ ಅಂತೂ ಒಂದನ್ನೂ ಅರಗಿಸಿಕೊಳ್ಳಲಾಗದ ಸ್ಥಿತಿ. ಮುಖತಃ ಮಗನಲ್ಲಿ ಹೆಲಿಬಿದೊನವೋ ಮೇಲ್ನೋಟಕ್ಕೆ ಮಗನಲ್ಲಿ ಯಾವುದೇ ಅಪರಾಧವನ್ನು ಕಾಣದೆ ಹೋದರು.ಜೀವನಾವಶ್ಯಕವಾದ ಯಾವುದೇ ಬೇಡಿಕೆಗಳನ್ನು ಸ್ವತಹ ಅರಿತೆ ನೆರವೇರಿಸಿ ಬಿಡುತ್ತಿದ್ದ. ಬರುವಾಗಲೆಲ್ಲ ಕೈತುಂಬಾ ಹಣ ಹಾಗೆ ಹೀಗೆ ಎಂಬ ವೆಚ್ಚಗಳು ಎಲ್ಲವನ್ನು ನಿಭಾಯಿಸುತ್ತಿದ್ದ. ಆದರೂ ಅಂತರ್ಗತವಾದ ಯಾವುದೊ ಒಂದು ಅದೇ ತಡೆ ಮಧ್ಯೆ ನಿರ್ಮಾಣವಾದ ಅನುಭವ. ಒಂದೊಂದು ಸಲ ಕೈಗೆ ಕೊಟ್ಟ ಹಣವನ್ನು ನಿರಾಕರಿಸಿದ್ದರು. ಭಾಗಿರಥಿ ಸಹ ಬದಲಾದ ಮಗನ ಗುಣಕ್ಕೆ ಮರುಗುತ್ತ ಕಣ್ಣೀರಿಟ್ಟರು ಏನೋ ಒಂದು ಸಾಂತ್ವಾನ ಮಗ ಹೇಳುತ್ತಿದ್ದ.. ಬಂದು ಇರುವ ಮೂರು ಘಳಿಗೆಯ ಹೊತ್ತು ನೆಮ್ಮದಿ ಕದಡುವ ಚರ್ಚೆ ಯಾಕೆ ಎಂದೇ ಹಲವು ಸಲ ಯಾವುದನ್ನೂ ಆಡದೆ ಬಂದ ಸಮಯವನ್ನು ಯಾಂತ್ರಿಕವಾಗಿ ಕಳೆದಿದ್ದರು.ಹಲವು ಸಲ ಹೆಂಡತಿಯೊಂದಿಗೆ ಆಕೆಯ ತವರು ಮನೆಯಲ್ಲೇ ಹಲವು ದಿನ ದೂಡುವ ಆತ ಸ್ವಂತವಾಗಿರುವ ಮನೆಗೆ ಬರುತ್ತಿರಲಿಲ್ಲ. ಬಂದರೂ ಹೆಚ್ಚು ಹೊತ್ತಿರದೇ ಅತ್ತೆ ಮನೆಗೆ ಹೋಗಿಬಿಡುತ್ತಿದ್ದ. ತಮ್ಮ ಮನೆ ಒಂದು ವ್ರಿದ್ದಾಶ್ರಮವಾದ ಅನುಭವ.

ಅಸಮಾಧಾನ ತೋಡಿಕೊಂಡಾಗ ಹಲವು ಸಲ ಚರ್ಚೆ ವಿಪರೀತ ಮಟ್ಟಕ್ಕೆ ಹೋಗಿಬಿಡುತ್ತಿತ್ತು. ತಮ್ಮ ಮನದ ಭಾವನೆ ಮಗ ಅರ್ಥ ಮಾಡಿಕೊಳ್ಳದೆ ಹೋದನಲ್ಲ ಎಂಬ ಅಸಹಾಯಕತೆ ಕೆಲವೊಮ್ಮೆ ನೆನೆದರೆ ಕಾಲದ ಗತಿಯೇ ಹೀಗಿರಬೇಕು ತಮ್ಮೆಣಿಕೆಗೆ ಮೀರಿದೆ ಎಂದು ಪಟ್ಟುಕೊಂಡರೂ ಸಮಾಧಾನ ಮಗನ ಬಗೆಗಿನ ಅಸಮಾಧಾನ ಕಡಿಮೆಯಾಗಲಿಲ್ಲ.

ಹಲವು ಸಲ ನೋಡಿ ಮಗನಲ್ಲಿ ನೇರವಾಗಿ ಹೇಳಿಬಿಟ್ಟರು. ನಮಗೆ ಖರ್ಚಿಗೊಸ್ಕರ ದುಡ್ಡು ಕೊಡುವುದಕ್ಕೆ ಬರುವ ಅಗತ್ಯ ಇಲ್ಲ.. ನಂಗೆ ಆ ಹಣದ ಅಗತ್ಯವೂ ಇಲ್ಲ. ಅದನ್ನು ತೋರಿಸುವುದಕ್ಕಾಗಿಯೇ ಮೇಳದ ತಿರುಗಾಟಕ್ಕೆ ಸೇರಿಕೊಂಡರು. ಮಗನ ಮೇಲಿನ ಅಸಮಧಾನವೋ, ಕಲೆಯನ್ನು ತಾನು ಬಿಡಲಾರೆನೆಂಬ ತಾದಾತ್ಮ್ಯವಾದ ಸಂಭಂಧವೋ ಯಕ್ಷಗಾನದ ಆ ಬದುಕು ಅಪ್ಯಾಯಮಾನವಾಗತೊಡಗಿತು. ರಂಗದ ಮೇಲೆ ಅಸುರ ಪಾತ್ರಗಳು ಒಂದು ರೀತಿ ವಿಜ್ರಂಭಿಸಿದುವು.
ಸಂಸಾರದಲ್ಲಿ ಒಂದು ಸಲ ಕಂದರ ನಿರ್ಮಾಣವಾದರೆ ಹಾಗೆ ಅದು ಮುಚ್ಚಿಕೊಳ್ಳುವುದು ಅಸಂಭವವಾಗಿ ಬಿಡುತ್ತದೆ. ತನ್ನ ಮೇಲಿನ ಹಟಕ್ಕೆ ಅಪ್ಪ ಮೇಳಕ್ಕೆ ಸೇರಿಕೊಂಡರು ಎಂದು ಮಗ ಭಾವಿಸಿದರೆ, ತಾನು ಯಾರ ಹಂಗಿಗೂ ಒಳಗಾಗಬೇಕಿಲ್ಲ ಎಂಬ ಭಾವನೆ ಭಟ್ಟರದ್ದಾಗಿಹೋಯಿತು.



Friday, January 1, 2010

ವೇಷ ಕಳಚಿದ ಸಮಯ.

ಒಂದು ಕಥೆ..ಇದನ್ನು ಬಹಳ ಹಿಂದೆಯೇ ಬರೆಯಲು ತೊಡಗಿದ್ದೆ. ಮೊದಲು ತೀರ ಸಂಕ್ಷೇಪವಾಗಿ ಬರೆಯ ಬೇಕೆಂದು ಭಾವಿಸಿದ್ದೆ. ಆದರೆ ಬರೆಯುತ್ತ ಹೋದಂತೆ ಭಾವನೆಗಳು ವಿಕಸಿಸುತ್ತಾ ಹೋಯಿತು. ಬಹುಶ: ಮನುಷ್ಯನ ಕಥೆ ಎಂದರೆ ಒಂದೇ ವಿಕಸನ. ಅದಕ್ಕೆ ಅಂತ್ಯ ಇಲ್ಲ . ಯಕ್ಷಗಾನಕ್ಕೆ ಸಂಬಂಧಿಸಿ ಹತ್ತು ಹಲವು ಕಥೆಗಳು ಬಂದಿರಬಹುದು. ಅದರಂತೆ ಇದೂ ಒಂದು. ಮನಸ್ಸಿನ ಭಾವನೆಗೆ ಕೊಟ್ಟ ರೂಪ ಮಾತ್ರ. ಇದರಲ್ಲಿ ಹೊಸತನ ಇದೆ ಎಂದು ನನಗೆ ವಿಶ್ವಾಸವಿಲ್ಲ. ಯಕ್ಷಗಾನ ಕಲಾವಿದನ ಬದುಕಿನ ಹಲವುಸ್ತರಗಳಲ್ಲಿ ಇದು ಒಂದು ಮಾತ್ರ ಅಂತ ನನ್ನ ಅನಿಸಿಕೆ.ಬವಣೆಗಳು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರೂ ಯಕ್ಷಗಾನ ಎಂದಾಗ ಏನೋ ಒಂದು ತನ್ನದು ಎಂಬ ಆಪ್ಯಾಯಮಾನ. ಇಂದು ಹತ್ತು ಹಲವು ಕಲೆಗಳು ಜನಜೀವನದ ಮಧ್ಯೆ ತಮ್ಮದೇ ಆದ ಅಸ್ತಿತ್ವವನ್ನು ಕಂಡಿರಬಹುದು ಇಲ್ಲ, ಕಾಣಲು ಹೆಣಗಾಡಬಹುದು. ಸಿನಿಮಾ ಎಂಬುದು ಎಲ್ಲ ಕಲೆಯನ್ನು ನುಂಗಿ ನಾಗರಿಕತೆಯನ್ನು ಎತ್ತಲೋ ಕೊಂಡೊಯ್ಯುತ್ತಿರುವಂತಹ ವರ್ತಮಾನದಲ್ಲಿ ಬೇರೆ ಕಲೆಗೆ ಭವಿಷ್ಯವಿದೆ ಎಂದು ನಂಬುವುದು ಕಷ್ಟ. ಹಾಗೇನೆ, ಈ ಕಲೆಯ ಅಂಗಗಳಾದ ಕಲಾವಿದರ ಬದುಕು ಸಹ. ಯಕ್ಷಗಾನ ಕಲಾವಿದನ ಮಾತ್ರ ವಲ್ಲ ಅದರ ರಂಗಕರ್ಮಿಯೇ ಆಗಲಿ ಬದುಕು ತೀರ ಅನಿಶ್ಚಿತ ಗುರಿಯತ್ತ ಸಾಗುವಾಗ.ಇಲ್ಲಿ ಬರೆಯುವ ಈ ಕಥೆ ಪ್ರಸ್ತುತ ವಾಗಬಹುದೋ ಎಂಬುದು ಒಂದು ಪ್ರಶ್ನೆ ಮಾತ್ರ.

ಭಾಗ ೧



ತೊಟ್ಟ ಕಿರೀಟವನ್ನು ಕಳಚಿಡುತ್ತಾ ಭಟ್ಟರು ಸುತ್ತಲೂ ಒಂದು ಸಲ ನೋಡಿದರು. ಚೌಕಿಯ ಮೇಲೆತ್ತಿದ ತರ್ಪಾಲಿನ ಸಂದಿಯಿಂದ ಹಲವು ಮುಖಗಳು ಇಣುಕುತ್ತಿದ್ದವು. ಎಲ್ಲವೂ ಅಪರಿಚಿತ ಮುಖಗಳು. ಪರಿಚಾರಕ ಕಿಟ್ಟ ಹತ್ತಿರ ಬಂದು " ಅಣ್ಣೆರೆ..." ಎಂದು ವಾಡಿಕೆಯಂತೆ ತೊಟ್ಟ ಭುಜ ಕೀರ್ತಿ ವಸ್ತ್ರಗಳನ್ನು ಕಳಚುವುದಕ್ಕೆ ಸಹಾಯ ಮಾಡಿದ.ಬೆವರುತ್ತಿದ್ದ ಬರಿ ಮೈಗೆ ತಂಗಾಳಿ ಸವರುತ್ತಲೇ ಹಾಯೆನಿಸಿತು. ಗೆಜ್ಜೆ ವಸ್ತ್ರಗಳನ್ನೇಲ್ಲ ಸ್ವಸ್ಥಾನದಲ್ಲಿ ಸೇರಿಸಿ ಮುಖಕ್ಕೆ ಹಚ್ಚಿದ್ದ ಬಣ್ಣವನ್ನು ಬಟ್ಟೆಯಿಂದ ಉಜ್ಜುತ್ತ ಕನ್ನಡಿಯಲ್ಲಿ ಒಂದು ಸಲ ಮುಖ ನೋಡಿಕೊಂಡರು. ಎಲ್ಲ ನಿತ್ಯದಂತೆ ಯಾಂತ್ರಿಕ ಕ್ರಿಯೆಗಳು. ಅದರೂ ಇಂದೇಕೋ ಅಬ್ಬರಿಸಿದ್ದು ಮತ್ತು ಕುಣಿದದ್ದು ಜಾಸ್ತಿಯಯಿತೋ ಏನೋ.. ಇವತ್ತು ತ್ರಿಜನ್ಮ ಮೋಕ್ಷ ಪ್ರಸಂಗದ ಹಿರಣ್ಯಕಶಿಪು ಪಾತ್ರ. ಹಿರಣ್ಯ ಕಶಿಪು ವಧೆಯಾಗುತ್ತಿದ್ದಂತೆ ನೆರೆದಿದ್ದ ಜನ ಚಪ್ಪಾಳೆ ಸುರಿಮಳೆಗೈದರೂ ಭಟ್ಟರ ಮನಸ್ಸು ಮ್ಲಾನವಾಗಿಯೇ ಇತ್ತು. ಕಯಾದುವಿನ ಪಾತ್ರ ಮಾಡಿದ ಪುರುಷೋತ್ತಮ ಹತ್ತಿರ ಬಂದು "ಎಂತ ಭಟ್ರೇ.ಇದು ಎಲ್ಲಿಂದ ಬಂತು ಆವೇಶ ? ಒಳ್ಳೆ ರೈಸಿದೆ ಇವತ್ತು. " ಕಿರುನಗು ಬೀರಿ ಭಟ್ಟರು ಚೌಕಿಯ ಹೊರಗೆ ಇಣುಕಿದರು. ವಸಂತ ದೂರದಲ್ಲೇ ಯಾರಲ್ಲೋ ಮಾತಾಡಿಕೊಂಡು ಬೈಕಿನ ಹತ್ತಿರ ನಿಂತು ಕೊಂಡಿರುವುದು ಕಣ್ಣಿಗೆ ಬಿತ್ತು. ಚೌಕಿಯ ಮೂಲೆಯಲ್ಲಿದ್ದ ಹಂಡೆಯಿಂದ ಒಂದು ಚೊಂಬು ನೀರು ಗಟಗಟನೆ ಕುಡಿದು ನಿಟ್ಟುಸಿರೊಂದನ್ನು ಬಿಟ್ಟು ಒಂದು ಕ್ಷಣ ಬಣ್ಣದ ಪೆಟ್ಟಿಗೆ ಮೇಲೆ ಕಾಲು ನೀಡಿ ಕುಳಿತು ತಮ್ಮ ಕೈ ಬ್ಯಾಗು ತೆರೆದು ಪಂಚೆ ಶರಟು ತೆಗೆದು ಧರಿಸಿದರು. ಚೌಕಿಯ ಮಹಾಗಣಪತಿಗೆ ಸಾಷ್ಟಾಂಗ ನಮಸ್ಕರಿಸಿ ಅಲ್ಲೇ ಕುಳಿತಿದ್ದ ಮ್ಯಾನೇಜರ್ ಮುಖ ಒಂದುಸಲ ನೋಡಿ ಕಣ್ಸನ್ನೆ ಮಾಡಿ ಹೊರನಡೆದರು. ವಸಂತ ಇವರನ್ನು ನೋಡಿ ಬೈಕು ಸ್ಟಾರ್ಟ್ ಮಾಡಿ ಹತ್ತಿರ ತಂದು ನಿಲ್ಲಿಸಿದಾಗ ಉಟ್ಟಿದ್ದ ಪಂಚೆ ಎತ್ತಿ ಕಟ್ಟಿ ವಸಂತನ ಹಿಂಭಾಗದಲ್ಲಿ ಕುಳಿತರು.


ಭಟ್ಟರಿಗೆ ತುಂಬಾ ಸುಸ್ತಾದಂತೆ ಅನ್ನಿಸಿತು. ಕಾಲು ಈಗ ಮೊದಲಿನಂತೆ ಕೇಳುತ್ತಿಲ್ಲ , ದೇಹಕ್ಕೆ ವಯಸ್ಸಾಯಿತು. ವಸಂತ ಮೆಲ್ಲನೆ ಉಸುರಿದ " ಎಂತದು ಇವತ್ತು ಹಿರಣ್ಯಕಶಿಪು ಆವೇಶ ಬಂತಾ?" "ನಿಮ್ಮ ಆರ್ಭಟೆಗೆ ಆ ಮಾಣಿ ಅಲ್ಲೇ ಉಚ್ಚೆ ಮಾಡಿರಬಹುದು.. !!!" ಎಂದ. ಮಾಣಿ ಎಂದದ್ದು ಪ್ರಹ್ಲಾದ ವೇಷಧಾರಿಯನ್ನು . "ಹೌದೆ?" ತನ್ನಲ್ಲೇ ಪ್ರಶ್ನಿಸಿಕೊಂಡರು ಭಟ್ಟರು. ಇಂದು ಸ್ವಲ್ಪ ಮಾನಸಿಕ ಉದ್ರೇಕ ಜಾಸ್ತಿಯಯಿತೆ? ಇಂದು ಬೆಳಗ್ಗಿನಿಂದಲೇ ಮನಸ್ಸು ತೀರ ನಿಯಂತ್ರಣವನ್ನು ಕಳೆದಂತೆ ವರ್ತಿಸುತ್ತಿತ್ತು. ಅದರೂ ಸ್ವಭಾವತಃ ತಣ್ಣಗಿನ ಸ್ವಭಾವದವರಾದುದರಿಂದ ಅದು ಹೊರಗೆ ವ್ಯಕ್ತವಾಗದೆ ಹಾಗೆ ಸುಪ್ತವಾಗಿದ್ದುದು, ರಂಗದ ಮೇಲೆ ತನ್ನ ಮಾತು ಕೇಳದ ಹಠಮಾರಿ ಪ್ರಹ್ಲಾದನ ಮುಖ ನೋಡಿದಾಗ ನಿಜಕ್ಕೂ ಉದ್ರೇಕಗೊಂಡಿತು. ದೊಡ್ಡ ನಿಟ್ಟುಸಿರು ಅರಿವಿಲ್ಲದೆ ಹೊರ ಬಂತು. ಮೈಕೈ ಎಲ್ಲ ಯಾಕೋ ಇಂದು ಅಧಿಕ ನೋವಾದಂತೆ ಎನಿಸಿತು.. ಇಂದು ಈ ಸಣಕಲು ದೇಹಕ್ಕೆ ಅಧಿಕ ಕೆಲಸ ಕೊಟ್ಟೆ ನೇ? ಅನುಮಾನಿಸಿದರು.



ಯಾವಾಗಲೂ ಆಟ ಮುಗಿದು ಹೀಗೆ ಮನೆಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ. ಇಂದು ೨೦ ಕಿ. ಮಿ ದೂರದ ಮನೆಗೆ ಹೋಗುವ್ದಕ್ಕಾಗಿಯೇ ಹತ್ತಿರದ ಮನೆಯ ವಸಂತನನ್ನು ಬೈಕು ತೆಕ್ಕೊಂಡು ಬರ ಹೇಳಿದ್ದರು. ತನ್ನ ಅಕ್ಕರೆ ಯಲ್ಲೇ ಬೆಳೆದ ಸರಿ ಸುಮಾರು ಮಗನ ವಯಸ್ಸಿನ ಹುಡುಗ.ಸ್ವಲ್ಪ ಯಕ್ಷಗಾನದ ಹುಚ್ಚು ಬಿಟ್ರೆ ಭಟ್ರಿಗೆ ಅವನಲ್ಲಿ ಬೇರೇನೂ ಕಂಡೂ ಇಲ್ಲ. ಹೀಗೆ ತುಂಬಾ ಅಗತ್ಯ ಬಿದ್ದಾಗ ವಸಂತನನ್ನು ಕರೆಯುವುದು ವಾಡಿಕೆ. ಇಂದು ಆಟಕ್ಕೆ ರಜೆ ಹಾಕುವ ಅವಕಾಶ ಇಲ್ಲದೆ ಅನಿವಾರ್ಯವಾಗಿ ಬಂದಿದ್ದರು. ಕೊನೆಗೆ ಇವರ ಒತ್ತಾಯಕ್ಕೆ ಹಿರಣ್ಯಕಶಿಪು ಪಾತ್ರ ಇವರ ಪಾಲಿಗೆ ಬಂದಿತ್ತು. ಇಲ್ಲವಾದರೆ ಬೆಳಗಿನ ಶಿಶುಪಾಲ ಮಾಡುವ ಭಟ್ಟರು ಇಂದು ತುಸು ಬೇಗ ಹೋಗುವ ಎಂದು ಕಶಿಪು ವೇಷ ವಹಿಸಿ , ಈಗ ಅದನ್ನು ಮುಗಿಸಿ ಮನೆ ಕಡೆ ಹೊರಟಿದ್ದರು. ಹೆಂಡತಿ ಭಾಗಿರಥಿ ಮುಖ ನೋಡಿ ಅವಳಿಗೆ ಸಮಾಧಾನ ಹೇಳದೆ ಇದ್ದರೆ ತಾನು ಹೇಗಿರಲು ಸಾಧ್ಯ. ಪಾಪ ಅವಳ ಮುಖ ನೆನಸಿ ದುಃಖ ಒತ್ತರಿಸಿ ಬಂದರೂ ಬರೀ ನಿಟ್ಟುಸಿರು ಬಿಟ್ಟು ಹತೋಟಿಗೆ ತಂದರು.



ವಸಂತ ಆಟದ ಬಗ್ಗೆ ಏನೋ ವಟವಟ ಎಂದು ವಟಗುಟ್ಟುತ್ತ ಮುಂಜಾವಿನ ನೀರವ ಮೌನವನ್ನು ಮುರಿಯುವ ಯತ್ನದಲ್ಲಿ ನಿರತವಾಗಿದ್ದ ಬೈಕಿನ ಸದ್ದಿನೊಂದಿಗೆ ಸಹಕರಿಸುತ್ತಿದ್ದ. ಇಂತಹ ಹಲವು ಸಂದರ್ಭಗಳಲ್ಲಿ ಭಟ್ಟರು ತಾವು ಸೇರಿಕೊಳ್ಳುತ್ತ ಕುಶಾಲು ಮಾತಾಡುತ್ತಾ ಹೋಗುತ್ತಿದ್ದರು. ಇಂದು ಮನಸ್ಸು ಅಂತರ್ಮುಖಿಯಾಗಿತ್ತು. ಮನಸ್ಸಿನ ಕವಾಟಗಳೆಲ್ಲ ಭದ್ರವಾಗಿ ಮುಚ್ಚಿ ಮೌನದ ನಿಟ್ಟುಸಿರಿಗೆ ಕಷ್ಟದಲ್ಲಿ ಸಕರಿಸುತ್ತಿತ್ತು. ಪ್ರಾಯ ಹೋದಂತೆಲ್ಲ ಮನುಷ್ಯ ಅಂತರ್ಮುಖಿಯಾಗುವುದೇ ಅಧಿಕ. ಜೀವನದ ಸತ್ಯತೆ ತಿಳಿಯುವ ಬಾಳಿನ ಅಸ್ತಂಗತ ದಿನಗಳೇ ಇವು? ಮನುಷ್ಯ ಎಂದರೆ ಇಷ್ಟೇ. ಆದರೂ ನಿರಪರಾಧಿ ಮನಸ್ಸು ಹೀಗೆ ವೇದನೆಯನ್ನು ಸಹಿಸುವ ಅಗತ್ಯವಿದೆಯೇ? ಭಟ್ಟರ ಮನಸ್ಸು ಹಾಗೆ ಎಂದೂ ಯಾರಿಗೂ ನೋವು ಕೊಟ್ಟವರಲ್ಲ. ಹಿಂಸೆ ಎಂಬುದನ್ನು ಸಹಿಸದ ಜೀವಾತ್ಮ ಅವರದ್ದು. ಬದುಕಿನುದ್ದಕ್ಕೂ ಎಲ್ಲಿ ವಾಗ್ವಾದ ಇದೆಯೋ, ಎಲ್ಲಿ ಸಂಘರ್ಷ ಇದೆಯೋ ಅಲ್ಲಿಂದ ಪಲಾಯನ ಹೇಳುವ ಮನಸ್ಸು. ಈ ಸಂಘರ್ಷ ವಾಗ್ವಾದ ಅಸಮಾಧಾನ ವ್ಯಕ್ತವಾದರೆ ಅದು ರಂಗದ ಮೇಲೆ ಪಾತ್ರಮುಖೇನ ಮಾತ್ರ. ರಂಗದ ಮೇಲೆ ಯಾವುದರಲ್ಲೂ ಸೋಲೊಪ್ಪದ ಅತೃಪ್ತ ಮನಸ್ಸಾದರೆ ರಂಗವಿಳಿದ ಮೇಲೆ ತೀರ ವ್ಯತಿರಿಕ್ತ. ಪಾಲಿಗೆ ಬಂದದ್ದರಲ್ಲೇ ಅಮೃತವನ್ನು ಕಾಣುವ ಮನೋಭಾವ. ಹಾಗಾಗಿ ಸಾಂಸಾರಿಕವಾಗಿ ಎಂದೂ ತನ್ನಾಭಿಲಾಷೆಗೆ ಕಟ್ಟುಬಿದ್ದವರಲ್ಲ.ತನ್ನ ಮನಸ್ಸು ಅರಿತು ಯಾರಾದರೂ ವ್ಯವಹರಿಸಿದರೆ ಅದನ್ನೇ ಖುಷಿಯಿಂದ ಸ್ವೀಕರಿಸುವ ಮನೋಭಾವ. ಮನೆಯಲ್ಲೇ ಆದರೂ ಹೊರಗಾದರೂ ಅಷ್ಟೇ. ಪತ್ನಿ ಭಾಗಿರಥಿ ಇವರ ಬದುಕಿಗೆ ನಿಜವರ್ಥದಲ್ಲಿ ಭಾಗಿರಥಿ ಸರ್ವಕಲ್ಪವೂ ಆದವಳು. ಇವರ ಮನಸ್ಸರಿತು ನಡೆದ ಹೆಣ್ಣು. ಮನೆಯ ನೆನಪಿನಲ್ಲಿ ಭಟ್ಟರ ಮನಸ್ಸು ಹಿಂದಕ್ಕೆ ಓಡಿತು.ಮನಸ್ಸು ಜೀವನದ ಮಜಲುಗಳ ಒಂದೊಂದೇ ಮೆಟ್ಟಲುಗಳನ್ನು ಇಳಿಯತೊಡಗಿತು.



ಯಾವಾಗಲೂ ಹಾಗೆ ಪ್ರಯಾಣದಲ್ಲಿ ಚಿಂತಿಸುವ ಮನಸ್ಸು ನೆಲೆಯೂರಿದಾಗ ತನ್ನ ಚಿಂತನೆಯ ಚಲನೆಯನ್ನು ಸ್ತಬ್ಧಗೊಳಿಸಿಬಿಡುತ್ತದೆ.ಹಲವು ವರ್ಷಗಳ ಹಿಂದೆ ಅಡುಗೆ ಭಟ್ಟರ ಮಗನಾಗಿ ದೊಡ್ಡ ಕುಟುಂಬದಲ್ಲಿ ಜನಿಸಿದ ಭಟ್ಟರಿಗೆ ಹಲವು ಜನ ದಾಯಾದಿಗಳು. ಸಾಕ್ಷಾತ್ ಬಡ ಬ್ರಾಹ್ಮಣನ ಅವತಾರವಾಗಿದ್ದ ತಂದೆ ಇಷ್ಟು ಜನ ಮಕ್ಕಳ ಹೊಟ್ಟೆ ತುಂಬಿಸಿದ್ದು ಹೇಗೋ? ಇಷ್ಟು ಜನ ಮಕ್ಕಳ ಮನಸ್ಸನ್ನು ಆಳಿ ಅದು ಹೇಗೆ ಸಾರ್ಥಕ ಬದುಕು ಕಂಡರೋ..ತನಗಿರುವ ಒಬ್ಬನ ಮಗನ ಚಿಂತೆಯಿಂದಲೇ ಸೋತುಹೋದ ಭಟ್ಟರು ತೆಂದೆಯ ಬಗ್ಗೆ ಹಲವು ಸಲ ಅಚ್ಚರಿ ಪಡುವುದು ಇದೆ. ಬಹುಶಃ ತಂದೆಯ ಮನಸ್ಥಿತಿ ಹಾಗೆ ಇರಬೇಕು.ಮಕ್ಕಳಿಂದ ಎಳ್ಳು ನೀರು , ಪಿಂಡ ಬಿಟ್ಟು ಮತ್ತೇನೂ ಬಯಸದ ಜೀವ ಅದು. ಹಾಗಾಗಿ ಮಮಕಾರ ಆತ್ಮೀಯತೆ ಎಲ್ಲ ಪುಸ್ತಕದಲ್ಲಿ ಹುಡುಕುವ ಪದಗಳಾಗಿದ್ದವು.



ಬಡತನದ ಬಾಲ್ಯ ಬಹುಶಃ ಬಡತನ ಅಂತ ಅರಿವಿಗೆ ಬಂದದ್ದು ಪ್ರಬುದ್ದರಾಗಿ ಪ್ರಾಪಂಚಿಕ ಜ್ಞಾನ ಬಂದ ನಂತರ. ಬಾಲ್ಯ ಹೇಗೋ ಹೊಟ್ಟೆ ತುಂಬಿದರೆ ಸಾಕು ಅಂತ ದಿನ ಕಳೆದ ರೀತಿ. ಉಪನಯನ ಆಗುವ ವರೆಗೆ ಒಂದು ರೀತಿ ಇದ್ದ ಜೀವನ ಮತ್ತೆ ಒಂದು ರೀತಿಯಿಂದ ತೊಡಗಿತು. ಅಣ್ಣ ತಮ್ಮಂದಿರ ಜತೆ ಕಷ್ಟದಲ್ಲೇ ಹೋದದ್ದು. ಹೊಟ್ಟೆ ಹಸಿವೆ ದೊಡ್ಡದಾಗಿ ಶಾಲೆ ತಪ್ಪಿಸಿ ಅಪ್ಪನ ಜತೆ ಅಡುಗೆ ಭಟ್ಟನಾದದ್ದು. ಸಹಜವಾಗಿ ಯಕ್ಷಗಾನದ ಹುಚ್ಚು ಬೆಳೆಸಿಕೊಂಡದ್ದು. ಮನೆಯಲ್ಲಿ ಕಲಾವಾಸನೆ ಇಲ್ಲವಾದರೂ ತಾವು ಹೇಗೆ ಅದರ ಬೆನ್ನು ಹತ್ತಿದೆವೋ ದೇವರೇ ಬಲ್ಲ. ಅಡುಗೆ ವೃತ್ತಿಯನ್ನು ಬಿಟ್ಟು ಗೆಜ್ಜೆ ಕಟ್ಟಿ ಹೊಸಬದುಕು ಕಂಡದ್ದು. ಬಿಸಿ ರಕ್ತದ ದಿನಗಳವು. ಮೇಳದಲ್ಲಿ ಬಹುಬೇಗನೆ ಪ್ರಸಿದ್ದಿಗೆ ಬಂದರು. ಕಲಾವಿದ ಜೀವನದ ಒಂದೊಂದೇ ಮಜಲುಗಳನ್ನು ಕಳೆದ ಇವರು ತುಂಬಿದ ಸಂಸಾರದಿಂದ ಬಹುಬೇಗನೆ ದೂರವಾಗಿಬಿಟ್ಟರು. ಬಹುಶಃ ವರ್ಷ ಪೂರ್ತಿ ಕಲಾವಿದನಾಗಿ ತಿರುಗಾಟದಲ್ಲೇ ಕಳೆದು ಮನೆ ಎಂಬುದು ಕೇವಲ ಸ್ವವಿಳಾಸದ ಗುರುತಿಗೆ ಪ್ರತೀಕವಾಗಿತ್ತು.ಅನುಕೂಲಕ್ಕೆಂದು ಬಾಡಿಗೆ ಮನೆಯನ್ನು ಮೇಳದ ದೇವಸ್ತಾನದ ಪಕ್ಕದಲ್ಲೇ ಮಾಡಿದ್ದರು. ಅದೇ ಮತ್ತೆ ಖಾಯಂ ಆಗಿ ಮನೆಯ ಸಂಬಂಧ ಕ್ಷೀಣಿಸುತ್ತಾ ಹೋಗಿ ಕೊನೆಗೆ ಅದು ಇಲ್ಲ ಎಂದೇ ಆಗಿಬಿಟ್ಟಿತು. ಮನೆಗೆ ತನ್ನಿಂದ ಆದಾಯವೇನೂ ಇಲ್ಲ, ಮನೆಯಲ್ಲಿ ಹಿದಿಡುವ ಆತ್ಮಿಯತೆಯೂ ಅದರ ಜತೆ ಬದುಕಿನ ಹೊಂದಾಣಿಕೆ ಎಂಬ ಸಮಾಧಾನ ಪ್ರವೃತ್ತಿಯೂ ಅಂತೂ ಆ ದಿನ ಕಳೆದುವು ಒಂದು ಹಂತದವರೆಗೆ. ಹೆಸರಾಂತ ಪುಂಡು ವೇಷಧಾರಿಯಾಗಿ ಬೆಳಕಿಗೆ ಬಂದ ಸಮಯ. ಆ ಸಮಯದಲ್ಲೇ ಭಾಗೀರಥಿ ಪತ್ನಿಯಾದಳು. ಆವಾಗ ಸಂಭ್ರಮಿಸಿದ ದಿನಗಳೆಂಥವು? ಎಲ್ಲವೂ ಒಂದು ಪರ್ವಕಾಲ. ಸರೀ ನೆನಪಿದೆ, ಸುಮಾರು ಇಪ್ಪತೇಳು ವರ್ಷದ ಹಿಂದಿನ ಕಥೆ. ಮೇಳ ಘಟ್ಟದ ಮೇಲೆ ಪ್ರವಾಸದಲ್ಲಿತ್ತು. ಎರಡು ಮೂರು ವಾರಕ್ಕೊಮ್ಮೆ ಕೂಡ ಬರುವುದು ಅಸಾಧ್ಯವಾಗಿತ್ತು. ಆವಾಗಿನ ದಿನಗಳು ಗಂಟೆ ಗಟ್ಲೆ ಬಸ್ಸಿಗೆ ಕಾದು ಕಷ್ಟ ಪಟ್ಟು ಮನೆಗೆ ಬರುವ ಹಾಗು ಇಲ್ಲ.ಬಂದರೂ ಪುನಃ ಆಟದ ಸಮಯಕ್ಕೆ ಹೋಗುವುದು ಕೂಡ ಅಸಾಧ್ಯವಾಗಿತ್ತು ಮದುವೆಯಾದ ಹೊಸತು. ಮನಸ್ಸು ರಂಗದ ಮೇಲೆ ಇರದೇ ಮನೆಯತ್ತ ಸೆಳೆಯುತ್ತಿತ್ತು. ಆಟಕ್ಕೆ ಬಂದ ಸಸಪತ್ನೀಕ ಜೋಡಿಯಾಗಿ ಬಂದ ಪ್ರೇಕ್ಷಕರನ್ನು ಕಂಡಾಗ ಕೆಲವೊಮ್ಮೆ ತೀರ ಅತೃಪ್ತವಾಗಿಬಿಡುತ್ತಿತ್ತು.






ಮೊದಲ ಮಗುವಿನ ತಾಯಿಯಾಗುವ ಸೌಭಾಗ್ಯವತಿ ಭಾಗಿರಥಿ ತಾಯಿ ಮನೆಯಲ್ಲಿರುವ ಕಾಲವದು. ಘಟ್ಟದ ಮೇಲಿನ ಪ್ರವಾಸದಲ್ಲಿದ್ದ ಮೇಳ ಬಿಟ್ಟು ಆಗಾಗ ಮನೆಗೆ ಬರುವಂತೆಯೂ ಇಲ್ಲ. ಇಂತಹ ಸಮಯದಲ್ಲಿ ಈಗಿರುವಂತೆ ಸಂಪರ್ಕ ಸುಲಭ ಸಾಧ್ಯವಲ್ಲ. ಊರಿಗೆ ಒಂದು ಫೋನ್ ಬಿಡಿ ರಸ್ತೆಯೇ ಇಲ್ಲದಂತಹ ಕಾಲ. ಹೀಗಾಗಿ ತುಂಬಿದ ಬಸುರಿನ ಪತ್ನಿಯ ಯಾವುದೇ ಸಮಾಚಾರ ದಿನಗಳು ಕಳೆದು ತಿಳಿಯುವ ಅನಿವಾರ್ಯತೆ. ಹೀಗಿದ್ದರೂ ಒಂದು ದಿನ ಭಾಗೀರಥಿ ಸೋದರ ಆಟ ನಡೆಯುವ ಜಾಗಕ್ಕೆ ಅದು ಹೇಗೆ ಬಂದನೋ ಸಿಹಿ ಸುದ್ದಿಯನ್ನು ತಂದಿದ್ದ.



" ಬಾವ, ಅಕ್ಕನ ಹೆರಿಗೆ ಆಯಿತು ನಿನ್ನೆ ಸಾಯಂಕಾಲ.ಗಂಡು ಮಗು "




ಸ್ನಾತಕ ಪದವಿ ಪಡೆದಂತೆ ಭಟ್ಟರು ಸಂಭ್ರಮಿಸಿದರು. ಒಂದು ಘಳಿಗೆಯಲ್ಲಿ ಮನಃಪಟಲದಲ್ಲಿ ಸರಿದು ಹೋದ ಕನಸುಗಳೇನು? ಭಾವನೆಗಳೇನು? ಅಪ್ಪನಾದ ವಿಚಾರ ಚೌಕಿಯಲ್ಲಿ ಹರಡಿ ಒಂದು ಗೌಜಿಯ ವಾತಾವರಣ ನಿರ್ಮಾಣವಾಯಿತು. ಆಟದ ಬಳಿಯಲ್ಲೇ ಇದ್ದ ಸಂತೆಯಿಂದ ಮಿಠಾಯಿಯನ್ನು ತಂದು ಸಿಕ್ಕವರಿಗೆ ಎಲ್ಲ ಹಂಚಿಯಾಯಿತು. ಚೌಕಿಯ ಗಣಪನಿಗೆ ಹಣ್ಣುಕ್ಕಾಯಿ ಪೂಜೆ ಮಾಡಿಯಾಯಿತು .ಮಗನಿಗೆ ಚಿನ್ಮಯನೆಂಬ ಹೆಸರು ಅದಾಗಲೇ ಮನಸ್ಸಿಗೆ ಹೊಕ್ಕಿತ್ತು. ಅದನ್ನೇ ಆರಿಸುವುದಕ್ಕೆ ಇಂತಹುದೇ ನಿರ್ದಿಷ್ಟ ಕಾರಣಗಳಿಲ್ಲ. ಹಲವುಸಲ ಭಗವಂತ ಶ್ರೀ ಕೃಷ್ಣನ ವ್ಯಕ್ತಿತ್ವ ಪಾತ್ರ ಚಿತ್ರಣವನ್ನು ತನ್ನ ಪಾತ್ರಗಳ ಮೂಲಕ ರಂಗದ ಮೇಲೆ ಮಾಡುವಾಗ ಈ ಶಬ್ದವನ್ನು ಹಲವು ಸಲ ಬಳಸಿಕೊಂಡಿದ್ದರು. ಅದೇಕೋ ಕೃಷ್ಣನ ಚಿನ್ಮಯ ಸ್ವರೂಪ ನೆನಸಿಯೇ ಭಾವ ಪರವಶರಾದದ್ದು ಇದೆ. ಬಹುಶಃ ಇದೆ ಭಾವನೆ ಆ ಚಿನ್ಮಯ ಸ್ವರೂಪವಾಗಿ ಮಗನಲ್ಲಿ ಕಂಡರೋ, ಚಿನ್ಮಯ ಮುಂದೆ ಭಟ್ಟರ ಬದುಕಿನ ಮೂಲ ಸೆಲೆಯಾದ.



ಆನಂತರದ ದಿನಗಳೆಷ್ಟು ಸುಂದರವಾಗಿತ್ತು. ಮಗುವಿನ ಪ್ರತಿಯೊಂದು ಬೆಳವಣಿಗೆಯಲ್ಲಿ ಸಂಭ್ರಮಿಸಿದ ಘಳಿಗೆಗಳು ಒಂದೊಂದಾಗಿ ಮನಃಪಟಲದಲ್ಲಿ ಅಚ್ಚೊತ್ತಿ ಬಿಟ್ಟಿವೆ. ಕಾಲ ಅಂದರೆ ಇದುವೇ ಅಲ್ಲವೇ ಕಳೆದು ಹೋಗುತ್ತಿರುವ ವರ್ತಮಾನದ ಅರಿವಿಲ್ಲದೆ ಭವಿಷ್ಯತ್ತಿನ ಕನಸು ಕಟ್ಟುವುದು. ಒಂದೊಂದು ಕಳೆದಂತೆ ಬದುಕು ಸವೆಯುತ್ತಿರುವ ಬಗೆ ಅರಿವೇ ಇರುವುದಿಲ್ಲ. ತಾನು ಪಟ್ಟ ಕಷ್ಟ ತನ್ನ ಮಗ ಪಡಬಾರದು. ಬಹುಶಃ ಪ್ರತಿಯೊಂದು ಮಾತಾ ಪಿತೃಗಳು ಯೋಚಿಸುವುದು ಇದನ್ನೇ. ತಮ್ಮ ಜೀವನವೇ ಅತ್ಯಂತ ಕಷ್ಟಕರ. ಯಾವುದರಿಂದ ಕಷ್ಟಕರ ? ಸಂಪತ್ತಿನಿಂದಲೇ ?ಆರೋಗ್ಯದಿಂದಲೇ? ಜೀವನ ಶೈಲಿಯಿಂದಲೇ? ಯಾವುದೂ ಯೋಚನೆಗೆ ನಿಲುಕುವುದಿಲ್ಲ. ಒಟ್ಟಿನಲ್ಲಿ ಮಕ್ಕಳು ಸುಖವಾಗಿರಬೇಕು.ಮಕ್ಕಳು ಬೆಳೆದಂತೆ ಮನೋಭಾವ ಬೇರಾಗುತ್ತದೆ.ಜೀವನ ಶೈಲಿಯೇ ಬದಲಾಗಿಬಿಡುತ್ತದೆ . ತಂದೆ ತಾಯಿ ಮಕ್ಕಳ ಚಿಂತನೆಗಳೇ ಬದಲಾಗಿಬಿಡುತ್ತವೆ. ಇಂದು ಇದ್ದ ಚಿಂತನೆ ಮುಂದೆ ಇರಲಾರದು. ಇಂದು ಬಯಸಿದ ಬಯಕೆಗಳು ಮುಂದೊಂದು ಕಾಲದಲ್ಲಿ ಹಾಸ್ಯಾಸ್ಪದವಾಗಿಬಿಡಬಹುದು. ಆದರೆ ಅಂತಹ ಬಯಕೆಗಳು ನಿರೀಕ್ಷೆಗಳು ಏನಿದ್ದವು? ಎಂದು ಈಗ ಆಲೋಚಿಸುವಂತಾಗುತ್ತದೆ. ಕೇವಲ ಮನೆಯೊಳಗೆ ನೆಮ್ಮದಿ ಪರಸ್ಪರ ಪ್ರೀತಿ ವಿಶ್ವಾಸ ಇಷ್ಟನ್ನೇ ಬಯಸಿದ್ದು. ಯಾರಲ್ಲೂ ರೇಗಿಕೊಳ್ಳದ ಭಟ್ಟರು ಮನೆಯಲ್ಲೂ ಒಂದು ರೀತಿ ಸೌಮ್ಯತೆಯನ್ನೇ ನಿತ್ಯಮಂತ್ರವಾಗಿಸಿದ್ದರು.


ಹಲವರು ಹೇಳಿದ್ದರು ಅಪ್ಪನಂತೆ ಮಗ ಕಲಾವಿದನಾಗುತ್ತಾನೆ ಎಂದು. ಭಟ್ಟರ ತೀರ ಅಂತರ್ಗತ ಭಾವನೆ ಬೇರೆಯೇ ಇತ್ತು . ಕಲಾವಿದನಾಗಿ ಮುಂದೆ ಸುಖದಲ್ಲಿ ಬದುಕಬಹುದೇ? ವೃತ್ತಿಪರ ಕಲಾವಿದರ ದೈನಂದಿನ ಬದುಕು ಸ್ವತಹ ಅನುಭವಿಸಿದ ಅವರಿಗೆ ಆ ಪ್ರಶ್ನೆ ತುಂಬಾ ಕಠಿಣದ್ದು ಅಂತ ಅನ್ನಿಸಿತ್ತು.



ಯೋಚಿಸುತ್ತಾ ಯೋಚಿಸುತ್ತಾ ಭಟ್ಟರ ಮನಸ್ಸು ಸ್ಥಿಮಿತಕ್ಕಾಗಿ ಪರಿಶ್ರಮಿಸಿತು. ಮನೆಯ ಅಂಗಳಕ್ಕೆ ಬಂದ ಬೈಕು ಮೌನಿಯಯಿತು. ಮುಂಜಾವಿನ ನೀರವ ಮೌನ. ಮನೆಯ ಒಳಗೆ ಭಾಗಿರಥಿ ಏನೋ ಕೆಲಸದಲಿದ್ದವಳು ಒಂದು ಸಲ ಹೊರಗಿಣಿಕಿದ್ದು ಭಟ್ಟರಿಗೆ ಗೊತ್ತಾಗಿ ಬಿಟ್ಟಿತ್ತು. ಗೊತ್ತಾಗದೆ ಇರಲು ಕಾರಣಗಳೂ ಇಲ್ಲ. ಜೀವನಾನುಭವವೇ ಅದು. ಆಕೆ ಇಣುಕಿದ್ದು ಏಕೆ ಎಂದು ಭಟ್ಟರು ಊಹಿಸಬಲ್ಲರು. ತನ್ನ ಮುಖಭಾವ ಹೇಗಿದೆ? ಇಷ್ಟಕ್ಕೆ ಎಂದು ತಿಳಿದ ಭಟ್ಟರು ಮನಸ್ಸಿನ ದುಮ್ಮಾನಗಳನ್ನು ಅದುಮುತ್ತ ಒಂದು ಸಲ ಒಣ ಖೆಮ್ಮನ್ನೇ ಜೋರಾಗಿ ಖೆಮ್ಮಿದರು. ಎಂದಿನಂತೆ ಕೈಕಾಲು ತೊಳೆದು ಜಗಲಿಯಲ್ಲಿ ಉದ್ದಕ್ಕೆ ಕಾಲು ಚಾಚಿ ಕುಳಿತರು. ಭಾಗಿರಥಿ ಎರಡು ಗ್ಲಾಸಿನಲ್ಲಿ ಬಿಸಿ ಚಹಾ ತಂದು ಮುಂದಿಟ್ಟಳು. ಒಂದನ್ನು ವಸಂತ ತೆಗೆದು ಕೊಂಡು ಜಗಲಿಯ ಇನ್ನೊದು ಮೂಲೆಯಲ್ಲಿ ಕುಳಿತ. ಅವನು ಇನ್ನು ಯಕ್ಷಗಾನ ಬಯಲಾಟದ ಗುಂಗಿನಲ್ಲೇ ಇದ್ದ.


ಭಟ್ಟರೊಮ್ಮೆ ಮಡದಿಯ ಮುಖ ನೋಡಿದರು.ತನ್ನೊಂದಿಗೆ ಹಲವು ವರುಷಗಳನ್ನು ಸವೆಸಿದ ಸಾಧ್ವಿಯ ಮುಖ ನೋಡುತ್ತಿದ್ದಂತೆ ಭಟ್ಟರು ಕರಗಿದರು. ನಿಧಾನವಾಗಿ ಕೇಳಿದರು " ಎಷ್ಟೊತ್ತಿಗೆ ಹೋಗೋಣ? ವಸಂತನಲ್ಲಿ ಜೀಪು ತರಲಿಕ್ಕೆ ಹೇಳುದ?" ಉತ್ತರವಿಲ್ಲದ ಮಾಮೂಲಿ ಪ್ರಶ್ನೆಯದು. ಎಂದಿನಂತೆ ಆವರೇ ಅಂತಹುದನ್ನೆಲ್ಲ ನಿರ್ಧರಿಸುವುದಾದರು ಪತ್ನಿಯಲ್ಲಿ ಒಂದು ಸಂವಹನ ಅಷ್ಟೇ.

(ಇನ್ನೂ ಮುಂದುವರಿಯುವುದು. )



Thursday, December 3, 2009

ಯಕ್ಷ ಭೋಜನ

ಇದೊಂದು ಸಮಾರಾಧನೆ ಕಥೆ . ಸಮಾರಾಧನೆ ಅಂದ್ರೆ ನಮ್ಮಗಳ ಭಾಷೆಯಲ್ಲಿ ಭರ್ಜರಿ ಊಟ.ಅದರ ನಿಜಾರ್ಥ ಏನೋ ಅದು ಇಲ್ಲಿ ಅಪ್ರಸ್ತುತ. ಕಥೆ ಅಂದಮೇಲೆ ಅದೊಂದು ಕಥೆ ಎಂದು ಮಾತ್ರ ನೈಜ ಘಟನೆ ಅಂತೂ ಅಲ್ಲ. ನೈಜತೆಯ ಲೇಪನ ಮಾತ್ರ. ಕಥೆ ಕಾಲ್ಪನಿಕ ಮಾತ್ರ. ಈಗ ಇದು ಎಷ್ಟು ಪ್ರಸ್ತುತವೋ ಅದು ಓದುಗರಿಗೆ ಬಿಟ್ಟ ವಿಚಾರ. ದಶಕದ ಹಿಂದೆ ಸೆಳೆದು ಈ ಕಥೆಯ ಪ್ರಸ್ತಾವನೆ ಸಾಗುತ್ತದೆ. ಹಾಗೆಂದು ಇದು ಕಥೆಯೂ ಅಲ್ಲ. ನಮ್ಮ ಬಾಲ್ಯದ ಕಾಲದಲ್ಲಿ ಒಂದು ಮಾದರಿ ಹಳ್ಳಿಯ ಮಾದರಿ ಯಕ್ಷಗಾನ ಕಾರ್ಯಕ್ರಮ ಅಷ್ಟೇ.


ಒಂದು ಊರು ನಮ್ಮ ಊರಿನಂತೆ ಇರುವವ ಒಂದು ಊರು. ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನದ ಅಂತಃಸತ್ವವನ್ನು ತನ್ನ ಜೀವಾಳದಲ್ಲಿ ಐಕ್ಯವಾಗಿಸಿದ ಜನಸಾಮಾನ್ಯರ ಒಂದು ಸಾಮಾನ್ಯ ಊರು ಎಂದರೆ ಸರಿ. ಊರು ಎಂದರೆ ಈಗಿನ ಅಧುನಿಕ ಅವಿಷ್ಕಾರಗಳು ತುಂಬಿದ ಊರಲ್ಲ. ಈಗಿನ ವಿದ್ಯಾವಂತರ ಪಾಲಿಗೆ ಕುಗ್ರಾಮ ಎಂದರೂ ಸರಿ. ಏನಾದರೂ ನಮ್ಮ ಊರು ಅದು ನಮ್ಮದು ಅಲ್ಲವೇ. ನಮ್ಮ ಹೆತ್ತ ತಾಯಿ ಯಾವ ರೂಪದಲ್ಲೇ ಇರಲಿ. ಹರುಕು ತುಂಡು ಸೀರೆ ಉಟ್ಟು, ತಾಂಬೂಲ ತಿಂದು ಕೆಂಪು ಹಲ್ಲು ಮಾಡಿಕೊಂಡು ಇದ್ದರೂ ನಮ್ಮ ಅಮ್ಮ ಅಮ್ಮನೇ ಬೇರೆ ಎಲ್ಲ ಸುಮ್ಮನೆ ಅಲ್ಲವೇ. ?

ಹೀಗೆ ಇರುವ ಊರು ಅಲ್ಲೊಂದು ಗೋಳಿಮರದ ಕಟ್ಟೆ. ಆ ಊರಿನ ವ್ಯಾಪಾರೀ ಕೇಂದ್ರ. ದಿವಸಕ್ಕೆಒಂದೆರಡು ಟ್ರಿಪ್ ಹೊಡಿವ ಹಳೆ ಬಸ್ಸು ಬಂದು ಇದೆ ಗೋಳಿಮರದ ಕಟ್ಟೆಗೆ ರೌಂಡ್ ಹೊಡೆದು ನಿಲ್ಲುವ ಜಾಗ.ಅಲ್ಲೊಂದೆರಡು ಅಂಗಡಿ, ಹೊಟೇಲು ಬಟ್ಟೆ ಯಾ ಟೈಲರ್ ಅಂಗಡಿ ಹಾಗೆ ಮರದ ಕುರ್ಚಿ ಇಟ್ಟುಕೊಂಡು ಒಂದೆರಡು ಹಳೆ ಬಾಚಣಿಗೆ ಕತ್ತರಿ ಕನ್ನಡಿ ಇಟ್ಟುಕೊಂಡ ಕ್ಷೌರಿಕನ ಅಂಗಡಿ. ಹೀಗೆ ಇದ್ದರೆ ನಮ್ಮ ಹಳೆ ಕಾಲದ ಒಂದು ಮಾದರಿ ಊರು ಆಗಿಬಿಡುತ್ತದೆ. ಈ ಊರಿಂದ ಒಂದು ತುಸುದೂರ ನಮ್ಮ ನಿಮ್ಮ ಮನೆ ಎಂದು ಕಲ್ಪಿಸಿ ಅಲ್ಲಿಂದ ತೊಡಗುವ. ಮನೆ ಅಂದರೆ ನಾವೆಲ್ಲ ಹಲವು ಮಕ್ಕಳು ಹಿರಿಯರು ಎಲ್ಲ ಜತೆಗೆ ವಾಸಿಸುವ ತುಂಬಿದ ಅವಿಭಕ್ತ ಕುಟುಂಬ.ಅಲ್ಲಿ ಎರಡು ಮೂರು ಸಣ್ಣ ಮಕ್ಕಳಾದರೂ ಇಲ್ಲದಿದ್ದರೆ ಹೇಗೆ. ಅವುಗಳದ್ದೇ ಒಂದು ಪ್ರಪಂಚ. ನಮ್ಮಲ್ಲಿ ಹಲವರ ಬಾಲ್ಯ ಹೀಗೆ ಕಳೆದಿರಬಹುದು. ದೊಡ್ಡ ಮನೆ ದೊಡ್ಡ ಕುಟುಂಬ . ಮನೆಗೆ ಹೊಂದಿಕೊಂಡಂತೆ ಅಡಿಕೆ ತೆಂಗಿನ ತೋಟ.ನಮ್ಮ ಮನೆ ಊರಿನ ಕೇಂದ್ರ ಭಾಗದಿಂದ ಸಾಕಷ್ಟು ದೂರವೇ ಇರುತ್ತದೆ. ಮೊದಲು ಹೇಳಿದ ಗೋಳಿಮರದ ಕಟ್ಟೆಯ ತುಸು ದೂರದಲ್ಲಿ ಇರುವ ಭೂತಸ್ತಾನದ ಬಳಿಯಲ್ಲೇ ಸಾಗುವ ಮಣ್ಣಿನ ಕಚ್ಚಾ ರಸ್ತೆಯಲ್ಲಿ ಸಾಗಿ ನಂತರ ರಸ್ತೆ ಬಿಟ್ಟು ತುಸು ದೂರಕ್ಕೆ ಸಾಗಿ, ಗುಡ್ಡ ಬಳಸಿ, ದಣಪೆ ದಾಟಿ ,ಗದ್ದೆ ಹುಣಿಯಲ್ಲಿ ಶಿಸ್ತಿನ ಸಿಪ್ಹಾಯಿಗಳಂತೆ ಸಾಗಿ ಗದ್ದೆಯ ಕೊನೆಗೆ ಇರುವ ತೋಟ ದಾಟಿ, ಮೇಲೆ ಹತ್ತಿದರೆ ಮನೆಯ ಜಾಲು ಯಾ ವಿಶಾಲವಾದ ಅಂಗಳ. ಇದು ನಮ್ಮೂರಿನ ಒಂದು ಸಾಮಾನ್ಯ ಮನೆ ಅಲ್ಲವೇ.? ಅಂದಿನ ಕಾಲವೇ ಹಾಗೆ. ಮನೆ ಊರಿಂದ ತುಂಬಾ ದೂರವೇ ಇದ್ದು ವಾಹನದ ಸದ್ದು ಕೇಳಿಸುವುದೇ ಇಲ್ಲ. ಹಾಗೂ ಕೇಳುವುದಿದ್ದರು ವಾರಕ್ಕೆ ಒಂದು ಸಲ ಬರುವ ಮಂಗಳೂರಿನ ಕಾಮತರ ಗೂಡ್ಸ್ ಲಾರಿ ಸದ್ದು. ನಿಯಮಿತವಾಗಿ ಅಡಿಕೆ ಸಂಗ್ರಹಕ್ಕೆ ಬರುವ ಈ ಲಾರಿ ಅಲ್ಲದೆ . ಸಾಯಿಬರ ಟಿ೦ಬರು ಲಾರಿಯ ಸದ್ದು ಅಲ್ಲದೆ ಬೇರೆ ಯಾವುದೇ ವಾಹನದ ಸದ್ದು ಇಲ್ಲದ ಒಂದು ಪ್ರಶಾಂತ ಜಾಗದಲ್ಲಿ ನಮ್ಮೆಲ್ಲರ ಮನೆ ಇರುವುದು ಎಂದುಕೊಳ್ಳೋಣ.


ಇಂತಹ ಸೀಮಿತ ಜೀವನ ವರ್ತುಲದಲ್ಲಿರುವಾಗ ಮುಖ್ಯ ಮನರಂಜನೆ ಎಂದರೆ ನಮ್ಮ ಹಳ್ಳಿಯಲ್ಲಿ ವರುಷಕ್ಕೆ ಹಲವು ಸಲ ಆಗುವ ಯಕ್ಷಗಾನ ಬಯಲಾಟಗಳು. ಕಲಾವಿದರ ಪರಿಚಯ ಅಷ್ಟಾಗಿ ಇಲ್ಲವಾದರೂ ಯಕ್ಷಗಾನ ಎಂದಾಕ್ಷಣ ಹತ್ತು ಹಲವು ನಿರೀಕ್ಷೆ. ಮೇಳ ಪ್ರಸಂಗ ಕಲಾವಿದರು ಎಲ್ಲವೂ ಇಲ್ಲಿ ಗೌಣ. ಇದಕ್ಕೊಂದು ಸೂಕ್ತ ಪುರಾವೆ ಎಂದರೆ, ಆ ಊರಿನ ಬಳಿಯಲ್ಲೇ ಗುಡ್ಡದ ಮೇಲೆ ಒಂದು ಪ್ರಾಥಮಿಕ ಶಾಲೆ ಇರುತ್ತದೆ. ಅದಕ್ಕೆ ಒತ್ತಿಕೊಂಡು ಮೈದಾನ. ಅಲ್ಲಿಯೇ ಯಕ್ಷಗಾನ ಬಯಲಾಟದ ಪುಣ್ಯ ಕ್ಷೇತ್ರ. ಈ ಶಾಲೆ ಎಂದಾಕ್ಷಣ ಅಲ್ಲಿ ಹತ್ತು ಹಲವು ಮಕ್ಕಳ ಕಾರ್ಯಕ್ರಮಗಳು ಇರಬೇಕಲ್ಲ. ಚಿಣ್ಣರ ಕಾರ್ಯಕ್ರಮ. ಹಗಲಿನಲ್ಲಿ ಯಾವುದೊ ಒಂದು ಸಾಂಸ್ಕೃತಿಕ ಕಲೋತ್ಸವ ಎಂದುಕೊಳ್ಳೋಣ. ಹಾಗು ಹೊತ್ತು ಕಾರ್ಯಕ್ರಮ ನಡೀತದೆ. ಮಕ್ಕಳ ಹತ್ತು ಹಲವು ಸ್ಪರ್ಧೆಗಳು. ಹಾಡುವುದು, ಕುಣಿಯುವುದು, ನಾಟಕ ಇತ್ಯಾದಿ. ಅದರಲ್ಲಿ ಚೆಂಡೆ ಮದ್ದಲೆ ವಾದನ ಕೂಡ ಇರುತ್ತದೆ. ಇದು ಸಾಮಾನ್ಯ. ಹೀಗೆ ಈ ಸ್ಪರ್ಧೆ ನಡೆಯುತ್ತಿರಬೇಕಾದರೆ ಚೆಂಡೆ ಸದ್ದು ಕೆಳಗಿನ ಬಜಾರಿನಲ್ಲಿ ಇರುವವರಿಗೆ ಕೇಳದಿರುತ್ತದೆಯೇ?ಶಾಲೆಯಲ್ಲಿ ಅದೂ ಹಗಲು ಹೊತ್ತು ಚೆಂಡೆ ಶಬ್ದ ಕೇಳಿದಾಕ್ಷಣ ಎಲ್ಲ ತಮ್ಮ ತಮ್ಮ ಕೆಲಸ ಅಲ್ಲಿಗೆ ಬಿಟ್ಟು, ಶಾಲೆಯ ಗೇಟ್ ಬಳಿ ದೌಡಾಯಿಸಿ ಕುತೂಹಲದಿಂದ ನೋಡುತ್ತಾರೆ . ಶಾಲೆಯಲ್ಲಿ ಮಕ್ಕಳ ಯಕ್ಷಗಾನ ಮತ್ತು ಉಂಟಾ? ಇಲ್ಲಿ ಇವರ ಕುತೂಹಲ ಇರುವುದು ಯಕ್ಷಗಾನದತ್ತ ಮಾತ್ರ. ಪ್ರಸಂಗ ಕಲಾವಿದ ಯಾವುದೂ ಅಲ್ಲ. ಅಷ್ಟೊಂದು ಚುಂಬಕ ಸ್ವರ ಈ ಚೆಂಡೆಯದ್ದು..!!!!


ಸಂಭ್ರಮದಿಂದ ಕಾಯುವ ದಿನಗಳು .ಹೀಗಿರುವ ದಿನಗಳ ಒಂದು ಕಥೆ ಯಿದು. ಕೇವಲ ಕಾಲ್ಪನಿಕ ಎಂದು ಮೊದಲೇ ಹೇಳಿಬಿಡುತ್ತೇನೆ. ತಿಂಗಳ ಮೊದಲೇ ಟೈಲರು ಕೃಷ್ಣಪ್ಪ ಊರಿನ ಮಧ್ಯದ ಗೋಳಿಕಟ್ಟೆಯ ಗೋಳಿಮರದ ಟೊಂಗೆಗೆ ಎಲ್ಲರೂ ಕಾಣುವಂತೆ ಒಂದು ಬ್ಯಾನರು ಹಾಕುತ್ತಾನೆ.ಅದು ಊರಲ್ಲಿ ಆಗುವ ಒಂದು ಪ್ರಮುಖ ಯಕ್ಷಗಾನ ಬಯಲಾಟದ ಜಾಹೀರಾತು. ಊರ ಪ್ರಮುಖ ಜಾಹೀರಾತು ಸಂಸ್ಥೆಯೇ ಟೈಲರು ಕೃಷ್ಣಪ್ಪನ ಅಂಗಡಿ ಮತ್ತು ಅವನ ಜಾಹೀರಾತು ಸ್ಥಳವೇ ಈ ಗೋಳಿಕಟ್ಟೆ. ಒಂದು ಪ್ರಮುಖ ಮೇಳವೊಂದರ ಬಯಲಾಟ. ಮಕ್ಕಳಾದ ನಮಗೆ ಮೊದಲೇ ಗೊತ್ತಾಗಿಬಿಡುತ್ತದೆ ಅಲ್ಲವೇ. ಅಲ್ಲಿಂದ ಆ ಆಟಕ್ಕೆ ಹೋಗುವ ಮಹತ್ತರ ಯೋಜನೆಯ ರೂಪುರೇಷೆ ಸಿದ್ದಗೊಳ್ಳುತ್ತದೆ. ಸಾಧಾರಣವಾಗಿ ಇದಕ್ಕೆಂದೆ ಕೆಲವು ಕಡೆ ಚಿಲ್ಲರೆ ಕಾಸು ಕೂಡಿ ಇಡುವ ತುಕ್ಕು ಹಿಡಿದ ಡಬ್ಬಿಯೂ ಇರುತ್ತದೆ.ಮನೆಯ ಹಿರಿಯರ ಕಣ್ಣು ತಪ್ಪಿಸಿಯೋ ಅಥವಾ ಶಾಲೆಗೆ ಹೋಗುವಾಗ ಬರುವಾಗ ಹಾದಿ ಬದಿಯ ಗೇರುಮರದಿಂದ ಸಿಕ್ಕಿದ ಗೇರು ಬೀಜ ಮಾರಿಯೋ ಅಂತೂ ಕಷ್ಟ ಪಟ್ಟು ಈ ಡಬ್ಬಿ ನಿಧಾನಕ್ಕೆ ತುಂಬಿರುತ್ತದೆ. ಆಟಕ್ಕೆ ಬೇಕಾಗುವ ಪಾಕೆಟ್ ಮನಿ ಇದುವೇ.

ಯಕ್ಷಗಾನ ಪ್ರಸಂಗ ಯಾವುದೇ ಆಗಿರಲಿ....ಮಾಡುವೆ ಇರಲಿ ಮುಂಜಿ ಇರಲಿ ಕಾರ್ಯಕ್ರಮ ಯಾವುದಾದರೇನು ಹೊಟ್ಟೆ ತುಂಬಾ ಊಟ ಇದು ಮುಖ್ಯವಲ್ಲವೆ ಮಕ್ಕಳಿಗೆ.? ಹೆಚ್ಚಾಗಿ ಎಲ್ಲ ಕಾರ್ಯಕ್ರಮದ ಊಟವೂ ಒಂದೇ ರೀತಿ.ಯಕ್ಷಗಾನ ವೆಂಬ ಊಟವೂ ಮಕ್ಕಳ ಪಾಲಿಗೆ ಇಷ್ಟೇ. ಜಗಜಗಿಸುವ ವೇಷಭೂಷಣ, ಕಣ್ಣು ಕೋರೈಸುವ ಬೆಳಕು.. (ಗಮನಿಸಿ ವಿದ್ಯುತ್ ಸಂಪರ್ಕ ಆ ಗ್ರಾಮಕ್ಕೆ ಇನ್ನೂ ಬಂದಿರದ ದಿನಗಳು), ಹಿಮ್ಮೇಳದ ಅಬ್ಬರ, ಹೀಗೆ ಇದು ಎಲ್ಲ ಬಯಲಾಟದಲ್ಲೂ ಅತಿ ಸಾಮನ್ಯವಾಗಿಬಿಡುವ ಸಂಗತಿಗಳು. ಹಿರಿಯರಾದರೋ ಪ್ರಸಂಗದ ಬಗ್ಗೆ ಹಿಮ್ಮೇಳ ಮುಮ್ಮೇಳ ಕಲಾವಿದರ ಬಗ್ಗೆ ಚರ್ಚಿಸುತ್ತಾರೆ. ಅದು ಹೀಗೆ ಇದು ಹೀಗೆ ಇತ್ಯಾದಿ.

ಇಂದಿನ ವಿಶೇಷ ಆಕರ್ಷಣೆ . ಯಾವುದೊ ಹೆಸರಾಂತ ಕಲಾವಿದರ ಪಾತ್ರದದ ಬಗ್ಗೆ ಅಥವಾ ಹಿಮ್ಮೇಳ ಕಲಾವಿದರ ಬಗ್ಗೆ ಬಿತ್ತಿ ಪತ್ರದಲಿ ಅಥವಾ ಬ್ಯಾನರಿನಲ್ಲಿ ಉಲ್ಲೇಖ ವಿರುತ್ತದೆ. ಯಾವುದಿದ್ದರೂ ಯಕ್ಷಗಾನದ ಆಕರ್ಷಣೆ ಮಾತ್ರ ತೀರ ಬಿನ್ನ.ಹೊಸತೊಂದನು ತೋರಿಸುವ ಪ್ರಯತ್ನವಿರುತ್ತದೆ. ನಿತ್ಯವೂ ನೂತನವಾಗಿ ತೋರುವ ಕಲೆಯೆಂದರೆ ಅದು ಯಕ್ಷಗಾನ. ಇವತ್ತಿನ ಕರ್ಣ, ಅರ್ಜುನ ಅಥವಾ ರಾಮ ರಾವಣ ಯಾರೇ ಅಗಲಿ ಮರುದಿನ ತೀರ ಭಿನ್ನವಾಗಿರುತ್ತಾರೆ. ಬಹುಶಃ ನಾಟಕ ಸಂಗೀತ ಯಾವುದೇ ಆಗಲಿ ಇಷ್ಟು ವಿಬಿನ್ನವಾಗಿ ಕಂಡುಬರುವುದು ತೀರ ಅಪರೂಪ. ಅತಿ ಪಾಮರನಿಗೂ ಕೂಡ ತನ್ನ ಬುದ್ದಿ ಮಟ್ಟಕ್ಕೆ ಅನುಸಾರವಾಗಿ ಈ ಕಲೆಯನ್ನು ಅನುಭವಿಸುವ ಅವಕಾಶವಿರುತ್ತದೆ. ಇಂದಿನ ವಿಶೇಷ ಆಕರ್ಷಣೆ . ಯಾವುದೊ ಹೆಸರಾಂತ ಕಲಾವಿದರ ಪಾತ್ರದದ ಬಗ್ಗೆ ಅಥವಾ ಹಿಮ್ಮೇಳ ಕಲಾವಿದರ ಬಗ್ಗೆ ಬಿತ್ತಿ ಪತ್ರದಲಿ ಅಥವಾ ಬ್ಯಾನರಿನಲ್ಲಿ ಉಲ್ಲೇಖ ವಿರುತ್ತದೆ. ಯಾವುದಿದ್ದರೂ ಯಕ್ಷಗಾನದ ಆಕರ್ಷಣೆ ಮಾತ್ರ ತೀರ ಬಿನ್ನ.ಹೊಸತೊಂದನು ತೋರಿಸುವ ಪ್ರಯತ್ನವಿರುತ್ತದೆ. ನಿತ್ಯವೂ ನೂತನವಾಗಿ ತೋರುವ ಕಲೆಯೆಂದರೆ ಅದು ಯಕ್ಷಗಾನ. ಇವತ್ತಿನ ಕರ್ಣ, ಅರ್ಜುನ ಅಥವಾ ರಾಮ ರಾವಣ ಯಾರೇ ಅಗಲಿ ಮರುದಿನ ತೀರ ಭಿನ್ನವಾಗಿರುತ್ತಾರೆ. ಬಹುಶಃ ನಾಟಕ ಸಂಗೀತ ಯಾವುದೇ ಆಗಲಿ ಇಷ್ಟು ವಿಬಿನ್ನವಾಗಿ ಕಂಡುಬರುವುದು ತೀರ ಅಪರೂಪ. ಅತಿ ಪಾಮರನಿಗೂ ಕೂಡ ತನ್ನ ಬುದ್ದಿ ಮಟ್ಟಕ್ಕೆ ಅನುಸಾರವಾಗಿ ಈ ಕಲೆಯನ್ನು ಅನುಭವಿಸುವ ಅವಕಾಶವಿರುತ್ತದೆ.ಮುನ್ನಾದಿನ cattering ಮಾಡಿ ಮಿಕ್ಕಿದ ಅನ್ನ ಹೋಟೆಲು ಯಜಮಾನ ಚಿತ್ರಾನ್ನ ಮಾಡುವಂತೆ ಮಾಡಿ ಇಂದಿನ ವಿಶೇಷ ಎಂದು ಇಲ್ಲಿ ಹೇಳಳಲು ಸಾಧ್ಯವಿಲ್ಲ. ನಿತ್ಯವೂ ಹೊಸದು.


ಬೆಳಗ್ಗೆ ತೋಟದ ಕೆಲಸದಾಳು ಬರುವಾಗ ಮಕ್ಕಳ ಮೊದಲ ಬೇಡಿಕೆ . ಒಣ ಮಡಲಿನ ಸೂಟೆಯ ಬೇಡಿಕೆ. ಆತನಿಗೆ ದುಂಬಾಲು ಬಿದ್ದು ಒಂದೆರಡಾದರೂ ಸೂಟೆ ಕಟ್ಟದಿದ್ದರೆ ಮಕ್ಕಳಿಗೆ ಸಮಾಧಾನ ಇರುವುದಿಲ್ಲ ಅದನ್ನು ಜಗುಲಿ ಮೂಲೆಗೆ ಒಪ್ಪ ಓರಣವಾಗಿ ತೆಗಿದಿಟ್ಟು ಸಂಭ್ರಮಿಸುವ ಪರಿ ಅನನ್ಯ.ಇದರ ಮಧ್ಯೆ ಮಕ್ಕಳಲ್ಲಿ ತುಸು ದೊಡ್ಡವರಾದವರು ಒಂದು ಸಲ ಅಂಗಡಿಗೆ ಅಂತ ಕೆಲಸ ಹಚ್ಚಿಕೊಂಡು ಹೋದವರು ಆಟ ನಡೆಯುವ ಜಾಗಕ್ಕೆ ಹೋಗಿ ಸಿದ್ದತೆಗಳನ್ನು ನೋಡಿ ಮನೆಗೆ ಬಂದು ಕಿರಿಯವರಿಗೆ ವರದಿ ಒಪ್ಪಿಸುವುದೂ ಇದೆ.

ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ "ಕೇಳಿಕೆ " ಬಡಿಯುವ ಸದ್ದು ಮಕ್ಕಳಿಗೆ ಕೇಳಿದ ತಕ್ಷಣ ಮನಸ್ಸನ್ನು ನಿಯಂತ್ರಿಸುವುದೇ ಕಷ್ಟವಾಗಿಬಿಡುತ್ತದೆ ಒಂದು ಸಲ ಹೋಗಿ ನೋಡಿ ಬರ್ತೇವೆ ಅಂತ ಅಪ್ಪ ಅಮ್ಮನಿಗೆ ದುಂಬಾಲು ಬಿದ್ದು ಬೈಸಿಕೊಳ್ಳುವುದು ಇದೆ. "ಹೆಂಗಿದ್ದರೂ ಮತ್ತೆ ಹೋಪಲೆ ಇದ್ದಲ್ಲದ . ಈಗೆಂತ ಜೀವ ಎಳೆವದು? ಮಕ್ಕೋ ಕೈಕಾಲು ತೊಳೆದು ಅಲ್ಲಿ ಕೂತು ಭಜನೆ ಮಾಡಿ." ನಿತ್ಯವೂ ಕತ್ತಲಾದರೂ ಕೈಕಾಲು ಮುಖ ತೊಳೆಯದ ಮಕ್ಕಳು ಅಂದು ಬೇಗನೆ ಭಜನೆ ಕೆಲಸ ಮುಗಿಸುವ ಗಡಿಬಿಡಿ. ಹೊತ್ತಿಗಿಂತ ಮೊದಲೇ ತಾಳ ಹಿಡಿದು ಕುಳಿತು ರಾಗವೆಳೆದು ಭಜನೆಗೆ ತೊಡಗಿದರು. ಭಜನೆ ಕಾರ್ಯಕ್ರಮ ಒಂದೆರಡು ಹಾಡಿನಲ್ಲೇ ಮುಗಿಸಿ ಒಳ ಹೋಗಿ ಊಟ ಮುಗಿಸುವ ಆತುರ. ಅಷ್ಟು ಹೊತ್ತಿಗೆ ಕತ್ತಲಾವರಿಸಿ ಕೆಲವರು ಸುತ್ತ ಮುತ್ತಲ ಹಳ್ಳಿಯವರು ಮನೆಯ ಪಕ್ಕದ ಓಣಿಯಲ್ಲೋ, ತೋಟದಲ್ಲೋ, ಗದ್ದೆಹುಣಿಯಲ್ಲೋ ಸೂಟೆ ಬೀಸುತ್ತ ಹೋಗುತ್ತೀರುವುದು ತಿಳಿದು ಬರುತ್ತದೆ.ಇದರ ಮಧ್ಯೆ ಕೆಲವರು ಅಜ್ಜನದ್ದೋ ಅಥವ ಅಪ್ಪನದ್ದೋ, ಚಿಕ್ಕಪ್ಪನದ್ದೋ ಕೈ ಗಡಿಯಾರ ನೋಡಿ ಗಂಟೆ ಅಂದಾಜು ಮಾಡುತ್ತಾ ಬೈಗಳು ತಿನ್ನುವುದೂ ಇರುತ್ತದೆ. ಮಕ್ಕಳ ಆತುರಕ್ಕೆ ಮಿತಿಯೇ ಇಲ್ಲ. ಹಿರಿಯರ ಒತ್ತಾಯಕ್ಕೆ ಅಥವಾ ಹೆದರಿಕೆಗೆ ಸಾಲಾಗಿ ಗಡಿಬಿಡಿಯಲ್ಲೇ ಊಟಕ್ಕೆ ಕುಳಿತು, ಮಂದವಾಗಿ ಉರಿಯುತ್ತಿರುವ ಸೀಮೆ ಎಣ್ಣೆ ದೀಪದ ಬೆಳಕಿಗೆ ಏನು ಬಡಿಸಿದ್ದಾರೆ ಎಂದು ನೋಡದೆ ಬೇಗ ಬೇಗ ಬಾಯಿಗೆ ಇಕ್ಕಿ ಊಟದ ಶಾಸ್ತ್ರ ಮುಗಿಸಿಬಿಡುತ್ತೇವೆ. ಹೊಟ್ಟೆ ತುಂಬಾ ಊಟ ಮಾಡುವಂತೆ, ಆಟಕ್ಕೆ ಹೋದಮೇಲೆ ಅಲ್ಲಿ ಹಸಿವಾದರೆ ಕಷ್ಟ ಅಂತಲೂ ಬುದ್ದಿವಾದ ಹೇಳುತ್ತಾರೆ. ಆದರೆ ನಮಗೆಲ್ಲಿಯ ತಾಳ್ಮೆ ಅಲ್ಲವೇ.?

ಅಂತು ಗಡಿಬಿಡಿಯ ಊಟ ಮುಗಿಸಿ ಕತ್ತಲೆಯಲ್ಲೇ ಅಂಗಳಲದ ಬದಿಯಲ್ಲೇ ಇಟ್ಟ ಸೂಟೆಯನ್ನು ಉರಿಸುವಲ್ಲಿ ಸಣ್ಣ ಸ್ಪರ್ಧೆ. ಮತ್ತೆ ಸೂಟೆ ಬೀಸುತ್ತ ಮಹಿಷಾಸುರನ ಬೂತ ಮೈಮೇಲೆ ಹೊಕ್ಕಿದ ಹಾಗೆ ಬಾಯಿ ಚೆಂಡೆ ಮೊಳಗಿಸುತ್ತ. ಕುಣಿದು ಕುಪ್ಪಳಿಸುತ್ತ ಸಾಗುತ್ತೇವೆ. ಕೆಲವೊಮ್ಮೆ ದಾರಿ ಬದಿಯ ಹೊಂಡಕ್ಕೋ.. ಗದ್ದೆ ಕೆಸರಿಗೋ ಬಿದ್ದು ಅವಾಂತರ ಆಗುವುದು ಇದೆ..

ಅಂತೂ ತವಕದಿಂದ ಆಟ ನಡೆಯುವಲ್ಲಿಗೆ ಬರುವಾಗ ದೂರದಿಂದಲೇ ಚೆಂಡೆ ಸದ್ದಿನೊಂದಿಗೆ ರಂಗಸ್ಥಳದಲ್ಲಿ ವೇಷಗಳ ಕುಣಿತ ಅಸ್ಪಷ್ಟವಾಗಿ ಕಾಣಿಸುತ್ತದೆ. ಅಷ್ಟರವರೆಗೆ ಶಿಸ್ತಿನಲ್ಲಿ ಒಟ್ಟಾಗಿ ಬಂದ ಮಕ್ಕಳು ಚದುರಿ ಕೊಂಡು ಕೈಯಲ್ಲಿ ಉರಿಯುತ್ತಿರುವ ಸೂಟೆಯನ್ನು ಅಲ್ಲೆಲ್ಲೋ ಬಿಸಾಡಿ ಕತ್ತಲಲ್ಲೇ ಓಟಕ್ಕೆ ತೊಡಗುತ್ತವೆ. ರಂಗಸ್ಥಳ ದ ಹತ್ತಿರ ಹೋದಾಗ ಕೋಡಂಗಿಯೋ ಬಾಲ ಗೋಪಾಲರ ವೇಷವೋ ಕುಣಿಯುವುದು ತಿಳಿದು ಸಪ್ಪಗಾಗಿ ಬಿಡುತ್ತವೆ. ನಂತರ ಅಲ್ಲಿ ಸೂಕ್ತ ಜಾಗವನ್ನು ಅರಸಿ ಒಂದು ಕಡೆ ಮನೆಯಿಂದ ತಂದ ಚಾಪೆಯೋ, ಬಟ್ಟೆಯೋ ಕೆಲವೊಮ್ಮೆ ಗೋಣಿ ಚೀಲವೂ, ಹಾಸಿ ಎಲ್ಲರೂ ಒಟ್ಟಾಗಿ ಕುಳಿತು ಕೊಳ್ಳುವಲ್ಲಿ ಆಟದ ಕಾರ್ಯಕ್ರಮ ಅಧಿಕೃತವಾಗಿ ಶುರುವಾಗಿ ಬಿಡುತ್ತದೆ.

ಸ್ವಲ್ಪ ಹೊತ್ತಿನಲ್ಲೇ ಅಲ್ಲೇ ಹೊರಗೆ ಸೇರಿದ ಸಂತೆಗೆ ಒಂದು ರೌಂಡು ಬರುವ ತವಕ. ಕೆಲವರೂ ಹೋಗಿಯೂ ಆಗುತ್ತದೆ. ಕಟ್ಲೆರಿ ಅಂಗಡಿ ಬಾಬಣ್ಣ ಆದಿನ ಆಟದ ಮೈದಾನದಲ್ಲೇ ವಿಶೇಷವಾಗಿ ಔಟ್ ಡೋರ್ ಅಂಗಡಿಯನ್ನು ತೆರೆದಿರುತ್ತಾನೆ. ಅದರಂತೆ ಸಾಮಾನ್ಯವಾಗಿ ಆಟ ಎಲ್ಲೆಲ್ಲಿ ಆಗುತ್ತದೋ ಅಲ್ಲೆಲ್ಲ ಜೊತೆಗೆ ಹೋಗಿ ಚುರುಮುರಿ ಸಂತೆ ಇಡುವವನು ಕೂಡ ಪೆಟ್ರೋ ಮಾಕ್ಸ್ ಉರಿಸಿ ಸಂತೆ ಇಟ್ಟಿರುತ್ತಾನೆ. ಮಸಾಲೆ ಬಳಿದಿರುವ ನೆಲಕಡಲೆ ವಿಶೇಷವಾಗಿ ತರಿಸಿದ ಇನ್ನಿತರ ವಸ್ತುಗಳು ಅಂತೂ ಬೆಳಗಿನವರೆಗೆ ಜಾಗರಣೆಗೆ ಏನೆಲ್ಲಾ ಬೇಕೋ ಅದೆಲ್ಲ ಸಿದ್ದವಾಗಿರುತ್ತದೆ. ಅಲ್ಲೇ ಕುಳಿತು ಕೆಲವರು ಕಲಾವಿದರಬಗ್ಗೆ ಆಟದ ಬಗ್ಗೆ ವಿಮರ್ಶೆ ಮಾಡುವುದೂ ದ್ರಿಷ್ಟಿಗೆ ಬೀಳದೆ ಇರಲಾರದು. ಅದರಂತೆ ಬಸ್ ಸ್ಟಾಪ್ ನ ಗೋಳಿಕಟ್ಟೆಯ ಬಳಿಯ ಭಟ್ಟರ ಹೋಟೆಲು ವಿಶೇಷವಾಗಿ ವ್ಯವಸ್ಥೆ ಗೊಂಡು, ಭಟ್ಟರು ಅ ದಿನಕ್ಕಾಗಿ ದೊಡ್ಡ ಟೇಬಲ್ ತಂದು ಹೋಟೆಲ್ ಬಾಗಿಲಲ್ಲೇ ದೊಡ್ಡ ಗಲ್ಲೆಯನ್ನು ತೆರೆದಿಟ್ಟು ದೊಡ್ಡ ವ್ಯಾಪಾರ ವಹಿವಾಟಿನ ನಿರೀಕ್ಷೆಯಲ್ಲಿರುತ್ತಾರೆ.

ಚೆಂಡೆ ಪೀಠಿಕೆ ಆಗುವವರೆಗೆ ಮಕ್ಕಳಿಗೆ ಒಂದು ರೀತಿ ಬೋರ್. ಹಾಗಾಗಿ ಸಂತೆಯ ಸುತ್ತಾಟ.. ಮಧ್ಯೆ ರಂಗಸ್ಥಲದಿಂದ ದೂರ ಇರುವ ಚೌಕಿಗೂ ಒಂದೆರಡು ಸಲ ಹೋಗಿ ಇಣುಕುವುದು ನಡೆಯುತ್ತದೆ. ಚೌಕಿಯ ಭೇಟಿ ಆಗೊಮ್ಮೆ ಈಗೊಮ್ಮೆ ಅನಿವಾರ್ಯವಾಗಿರುತ್ತದೆ. ಅಲ್ಲಿ ಹೋದಾಗ ಬಣ್ಣದ ವೇಷ ಚುಕ್ಕಿ ಇಡುತ್ತಿರುವುದು ಎಷ್ಟು ಚೋದ್ಯವೋ ಅರ್ಧ ಪೂರ್ತಿಯಾದ ಸ್ತ್ರೀವೇಷ ಅರೆ ವೇಷದಲ್ಲೇ ಹೊರ ಬಂದು ಬೀಡಿ ಎಳೆಯುತ್ತಿರುವುದು ಇನ್ನೊಂದು ಚೋದ್ಯವಾಗಿರುತ್ತದೆ.!!!!

ಪೀಠಿಕೆ ಚೆಂಡೆ ಪೆಟ್ಟು ಕೇಳಿದೊಡನೆ ಎಲ್ಲರು ಕುಳಿತ ಸ್ಥಳಕ್ಕೆ ವಾಪಸು. ಬರುವಾಗ ಏನಾದರೂ ಕಡಲೆ ತೊಟ್ಟೆ ಇರುತ್ತದೆ. ಅದನ್ನು ಮೆಲ್ಲುತ್ತ ಚೆಂಡೆ ಪೆಟ್ಟು ಕೇಳುವ ಆನಂದ ಬೇರೆಲ್ಲಿ ಸಿಗಲು ಸಾಧ್ಯ. ಪೀಠಿಕೆ ಮುಗಿದು ಕಟ್ಟುವೇಶ ಕುಣಿತ.. ಆನಂತರ ಒಡ್ಡೋಲಗ.. ಮತ್ತೆ ಒಂದೊಂದೇ ವೇಷದ ಆಗಮನ. ಮಧ್ಯೆವೇದಿಕೆ ಮೇಲೆ ಮುಖ್ಯ ವೇಷ ತುಂಬಾ ಹೊತ್ತು ಸಂಭಾಷಣೆ ನಡೆಯುತ್ತಿರಬೇಕಾದರೆ ಒಬ್ಬ ಹೊರ ಹೋಗಿ ಚೌಕಿಯಲ್ಲಿ ಇಣುಕಿ ಇನ್ನು ಯಾವ ಹೊಸ ವೇಷ ಇದೆ ಎಂದು ವರದಿ ಒಪ್ಪಿಸುವುದು ಇದೆ. ಅಷ್ಟರಲ್ಲಾಗಲೇ ನಡುವಿರುಳು ಕಳೆದು ಬಂದ ತಂಡದಲ್ಲಿ ಎಳೆಯ ಮಕ್ಕಳು ನಿದ್ದೆಗೆ ಜಾರಿರುತ್ತವೆ.

ಮನೆಯಿಂದ ಬಂದ ಹಿರಿಯರು ಮಕ್ಕಳನ್ನು ಹುಡುಕಿ ಭಟ್ಟರ ಹೋಟೆಲಿಗೆ ಕರೆದು ಕೊಂಡು ಹೋಗಿ ಬಿಸಿ ಬಿಸಿ ಚಾ ಕುಡಿಸುವುದು ಇರುತ್ತದೆ ಜತೆಗೆ ಆಟದ ಹೋಟೆಲಿನಲ್ಲಿ ಸಾಮಾನ್ಯವಾದ ತಿಂಡಿ ಬಾಳೆಕಾಯಿ ಪೋಡಿ!!!!!. ಆದಿನದ ಚಾ ದ ಬಗ್ಗೆ ಹಿರಿಯರು ಸ್ವಲ್ಪ ಅಸಮಾಧಾನ ಸೂಚಿಸುವುದು ಇದೆ.. ಆಟದ ಚಾ ಹೀಗೆ ಅಲ್ಲ ಭಟ್ರೇ ಸ್ವಲ್ಪ ಸ್ಟ್ರಾಂಗು ಬೇಕು ಅಂತ ರಾಗ ಎಳೆಯುವುದು ಇರುತ್ತದೆ. ನಿಜಕ್ಕೂ ಆಟದ ಚಾ ಅಂದ್ರೆ ಅದೊಂದು ಮಹತ್ವದ ಸಂಗತಿ. ಸ್ವಲ್ಪ ತೆಳ್ಳಗೆ ಅದರೂ ಕಡುವಾಗಿ ಹಾಲು ಸ್ವಲ್ಪ ಕಡಿಮೆ ಇದ್ದು ರಾತ್ರಿಯ ನಿದ್ದೆಯನ್ನು ಕಳೆಯುವುದಕ್ಕೆ ಮನಸ್ಸಿಗೆ ಉನ್ಮೆಶವನ್ನು ತರುವುದಕ್ಕೆ ಸಹಕಾರಿಯಾಗಿರುತ್ತದೆ.

ಹೀಗೆ ಬಯಲಾಟದ ಹಲವು ಮಜಲುಗಳನ್ನು ಸವಿಯುತ್ತಿರಬೇಕಾದರೆ..ಬೆಳಗಾಗುತ್ತದೆ. ಸಾಮಾನ್ಯವಾಗಿ ದೊಡ್ಡ ಕಿರೀಟದ ಬಣ್ಣದ ರಕ್ಕಸರ ವಧೆಯಾಗಿ ಲೋಕೊದ್ಧಾರ ಆಗುವುದನ್ನೇ ಮಕ್ಕಳು ಕಾದು ಕುಳಿತು ನೋಡುತ್ತಿರುತ್ತವೆ. ಸೂರ್ಯೋದಯದೊಂದಿಗೆ ಲೋಕವು ಉದ್ದರವಾದಂತೆ ಅನುಭವವಾಗಿ ಹೊಸ ಲೋಕದ ಉದಯಕ್ಕೆ ಮನಸ್ಸು ಆಹ್ಲಾದಗೊಳ್ಳುತ್ತದೆ.

ಆಟದ ಭೋಜನ ಇಷ್ಟಕ್ಕೆ ಸೀಮಿತವಾಗಿರುವುದಿಲ್ಲ.. ಕಿವಿಗೆ ಅಬ್ಬರದ ಗಾನ ಸುಧೆಯೊಂದಿಗೆ ಬಣ್ಣದ ಲೋಕದ ದರ್ಶನ..ಮಿಥ್ಯ ಎಂದು ಗೊತ್ತಿದ್ದರೂ ಏನೋ ಒಂದು ತನ್ಮಯತೆ, ತಾದಾತ್ಮ್ಯ ವಾಗುವ ಮಾನಸಿಕ ಸಂಭಂಧ ಅವರವರ ಭಾವಕ್ಕೆ ತಕ್ಕಂತೆ ಇರುತ್ತದೆ. ಬಿಟ್ಟ ರೀಲನ್ನೇ ಬಿಡುವುದಾಗಲಿ ಹೇಳಿದ ಸಂಭಾಷಣೆಯ ಪುನರಾವರ್ತನೆಯಾಗಲಿ ಇರುವುದಿಲ್ಲ. ಕಥೆ ಒಂದೇಯಾದರೂ ಪ್ರತಿ ದಿನವೂ ಹಲವು ಶತಮಾನಗಳಿಂದ ನಿತ್ಯ ನೂತನವಗಿರುತ್ತದೆ.ಹಲವು ಸಲ ಕಂಡ ದೇವಿ ಮಹಾತ್ಮೆಯೋ , ಕ್ಷೇತ್ರ ಮಹಾತ್ಮೆಯೋ ಯಾವುದೇ ಕಾಳಗವೋ ಯಾವುದೂ ಅನುಭವಿಸುವ ಮನಸ್ಸಿಗೆ ಮತ್ತು ಮತ್ತು ಹೊಸ ಅನುಭವವನ್ನು ಕೊಡುವ ಹೊಸ ರುಚಿಯನ್ನು ತೋರಿಸುವ ಅವಕಾಶವಾಗಿರುತ್ತದೆ.ಪುನರಾವರ್ತನೆ ಇದ್ದೂ ನಿತ್ಯ ನೂತನವಗಿರುವ ಈ ಯಕ್ಷಗಾನ ಮಕ್ಕಳಿಗೆ ಮಾತ್ರವಲ್ಲ ಮಕ್ಕಳೊಂದಿಗೆ ಹಿರಿಯರೂ ಒಂದಾಗಿ ಅನುಭವಿಸುವ ಕಲೆ. ಬೇರೆ ಯಾವುದಿದೆ?

ಬಯಲಾಟ ಮುಗಿದು..ಮನೆಯ ಕಡೆ ವಾಪಸಾಗುವಾಗ ಒಂದು ರೀತಿ ರಣರಂಗದಿಂದ ವಿಜಯೋತ್ಸಾಹ ಆಚರಿಸುವಂತಹ ಉನ್ಮಾದ ಮನಸ್ಸಿಗೆ. ಮೈಗೆ ಧೂಳು ಮೆತ್ತಿಕೊಂಡರೂ ಮನದೊಳಗೆ ನಿತ್ಯ ಚೇತನ ಜಾಗ್ರಿತವಾದ ಅನುಭವ.ಭೂರಿ ಭೋಜನ ಹೊಟ್ಟೆ ತುಂಬಾ ಉಂಡು ತೇಗುತ್ತ ಬರುವಂತೆ ಇಲ್ಲಿ ಮನಸ್ಸು ಉಂಡು ತೇಗುತ್ತ ಇರುತ್ತದೆ. ಅವರರವರ ಭಾವಕ್ಕೆ ತಕ್ಕಂತೆ ಇಲ್ಲಿ ಮನಸ್ಸಿಗೆ ಭಕ್ಷ್ಯಗಳಿರುತ್ತವೆ. ಉತ್ತಮ ಬಯಲಾಟ ನೋಡಿದರೆ ಅದರ ಗುಂಗು ಕೆಲವು ದಿನಗಳ ಕಾಲ ಮನಸ್ಸು ಬಿಟ್ಟು ಹೋಗುತ್ತಿಲ್ಲ. ಪುರಾಣ ಲೋಕದ ಹೊಸ ದರ್ಶನವಾದ ಅನುಭವ. ಇಂದಿಗೂ ಪುರಾಣದ ವ್ಯಕ್ತಿಗಳ ಕಥೆಯನ್ನು ಓದಿದಾಗ ಯಕ್ಷಗಾನದ ವೇಷವೇ ಕಣ್ಣೆದುರು ಬಂದು ನಿಲ್ಲುವ ರೀತಿ ಕಲೆಯ ಸೆಲೆ ಜೀವನಾಡಿಯಲ್ಲಿ ಬೆರೆತಂತೆ ಅಲ್ಲವೇ?

Saturday, November 14, 2009

ಪರಿಪೂರ್ಣ ಕಲಾವಿದನಲ್ಲಿ ಅಪೂರ್ಣವಾದ ಅರಿಕೆ



ಪ್ರಿಯ ಕಲಾವಿದ ಮಿತ್ರ ಪೇಜಾವರ,
ನಿಮ್ಮ ಪ್ರಥಮ ವೇಷವನ್ನು ಎಲ್ಲಿ ಕಂಡೆನೋ ನೆನಪಿಗೆ ಬರುವುದಿಲ್ಲ. ಬಹುಶಃ ಆ ಸಮಯದಲ್ಲಿ ತಮ್ಮ ಬಗ್ಗೆ ನನ್ನ ಗಮನ ಕಡಿಮೆ ಯಾ ಯಿತೋ ಏನೋ. ಆದರೆ ಎಡನೀರು ಮೇಳದ ಆಟ ಬೆಂಗಳೂರಿನ ಎಡನೀರು ಮಠದಲ್ಲಿ ಆದಾಗ ನಿಮ್ಮ ಕರ್ಣನ ಪಾತ್ರ ನೋಡಿ ತುಂಬಾ ಪ್ರಭಾವಿತನಾದೆ ಅನ್ನಿಸಿತು.

ಇರಲಿ,
ಅಂತರ್ಜಾಲದ orkut ಪುಟವೊಂದು ನಿಮ್ಮ ಮುಖವನ್ನು ತೆರೆದಿಟ್ಟಿತ್ತು. ನಿಮ್ಮ ಪುಟಗಳಲ್ಲಿ ಇದ್ದ ನಿಮ್ಮದೇ ಆದ ಹಲವು ಸ್ತಬ್ಧ ಚಿತ್ರಗಳನ್ನು ನೋಡಿದೆ. ಹಲವು ವಿಸ್ಮಯಕಾರಿ ಚಿತ್ರಗಳು. ದೇವಿಯ ಸ್ತ್ರೀ ವೇಷ ಒಂದೆಡೆಯಾದರೆ ಘರ್ಜಿಸಿ ನಿಂತ ಮಹಿಷಾಸುರ ವೇಷದ ಚಿತ್ರ ಇನ್ನೊದು . ಹೀಗೆ ಹಲವು ಚಿತ್ರಗಳು ನಿಮ್ಮ ಪ್ರತಿಭೆಯನ್ನು ತಕ್ಕ ಮಟ್ಟಿಗೆ ಸಾರುತ್ತಾ ಇದ್ದವು. ಅವುಗಳು ಕೇವಲ ಸ್ತಬ್ಧ ಚಿತ್ರಗಳೇ ? ಅಲ್ಲ ಅನ್ನಿಸಿತು. ಅದರಲ್ಲಿ ಅವ್ಯಕ್ತವಾದ ಚಲನೆ ಇದ್ದಂತೆ.ನಿರ್ಜೀವತೆಯಲ್ಲೂ ಜೀವ ತುಂಬುವ ನಿಮ್ಮ ಭಂಗಿಗಳು ನಿಜಕ್ಕೂ ಅವ್ಯಕ್ತ ಭಾವನೆಗಳನ್ನು ವ್ಯಕ್ತ ಪಡಿಸುತ್ತಾ ನಿಮ್ಮ ಪ್ರತಿಭೆಗೆ ಸಾಕ್ಷಿಯಾದಂತೆ ಎನಿಸಿತು. ಪ್ರತಿಭೆಎಂದರೆ ಅದೇ ಅಲ್ಲವೇ ತನ್ನ ಇರವನ್ನು ಸುಪ್ತವಾಗಿ ಇದ್ದರೂ ಬಹಿರಂಗಗೊಳ್ಳಲು ಕಾದಿರುತ್ತದೆ. ಯಕ್ಷಗಾನದ ಮಟ್ಟಿಗೆ ನಿಮ್ಮ ಪ್ರತಿಭೆ ಹೊರ ಹೊಮ್ಮುವುದು ಕಲೆಯ ಶ್ರೀಮಂತಿಕೆಯನ್ನು ಮೆರೆಸಿದಂತೆ.

ಕಲಾವಿದ ತನ್ನ ಪ್ರತಿಭೆಗೆ ತಕ್ಕಂತೆ ಅಲ್ಲ ಕಲೆಗೆ ತಕ್ಕಂತೆ ತೆರೆದು ಕೊಳ್ಳಬೇಕು.ಯಾವುದೇ ಕ್ಷಣಕ್ಕೂ ಯಾವುದೇ ಸನ್ನಿವೇಶಕ್ಕೂ ತನ್ನ ಪ್ರತಿಭೆಯನ್ನು ಪ್ರಕಟಿಸುವುದರಲ್ಲಿ ಸಮರ್ಥನಿರಬೇಕು. ಯಾವುದೇ ಪಾತ್ರವಾಗಲಿ ಯಾವುದೇ ಅಂಗವಾಗಲಿ ತುಂಬಿಸಿಕೊಳ್ಳುವ ಸಾಮಾರ್ಥ್ಯವಿದ್ದಲ್ಲಿ ಕಲೋನ್ನತಿ ಮತ್ತು ಕಲಾವಿದನ ಉನ್ನತಿ ಸಾಧ್ಯ. ಇಂದು ಯಕ್ಷಗಾನ ರಂಗದಲ್ಲಿ ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ಮಾಡಬಲ್ಲ ಸಾಮಾರ್ಥ್ಯವಿದ್ದರೆ ಅದು ನಿಮ್ಮಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಅಂತಹ ಸಾಮರ್ಥ್ಯವನ್ನು ಸೂರಿಕುಮೆರಿ ಗೋವಿಂದ ಭಟ್ಟರಂತಹ ಕಲಾವಿದರು ತೋರಿಸಿಕೊಟ್ಟಿದ್ದಾರೆ. ಯುವ ಕಲಾವಿದನಾಗಿ ಅಂತಹ ಸಾಮರ್ಥ್ಯ ನಿಮ್ಮಲ್ಲಿ ಗುರುತಿಸುವುದರಲ್ಲಿ ತಪ್ಪಿಲ್ಲ ಎಂದೆ ನನ್ನ ಭಾವನೆ.



ಪರರ ಕಲೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಮನ್ನಣೆ ಕೊಡುವ ಕಲಾವಿದನಿಗೆ ತನ್ನ ಕಲೆಯ ಮೆರುಗನ್ನು ಹೆಚ್ಚಿಸಲು ಸಾಧ್ಯ ಮಾತ್ರವಲ್ಲ ಇಂತಹ ಗುಣ ಕಲೆಯ ಒಟ್ಟಂದದಲ್ಲಿ ತುಂಬ ಸಹಕಾರಿಯಗಬಲ್ಲುದು. ನಿಮ್ಮಲ್ಲೂ ಆ ಮನೋಭಾವ ಇರುವುದರಿಂದ ನಿಮ್ಮ ಅಂತರಂಗದ ಕಲಾವಿದ ಬಹಿರಂಗವಾಗಿ ಮೆರೆಯಲು ಸಾಧ್ಯವಾಗಿರುವುದು. ಯಕ್ಷಗಾನದ ಲೋಕ ಇಂದು ಹಲವು ಬದಲಾವಣೆಯನ್ನು ಕಂಡಿದೆ. ಹವ್ಯಾಸಿಗಳು ತಮ್ಮದೇ ಒಂದು ವಾಹಿನಿಯನ್ನು ಕಲಾಸಾಮ್ರಾಜ್ಯದಲ್ಲಿ ಗುರುತಿಸಿಕೊಂಡ ಕಾಲ. ಇಂದು ಯಕ್ಷಗಾನ ಕಲೆ ಯಾವ ದಿಕ್ಕಿನತ್ತ ಮುಖ ಮಾಡಿದೆ ಎಂದು ಊಹಿಸುವುದು ಅಥವಾ ಕಲ್ಪಿಸುವುದು ಅಸಾಧ್ಯ. ಹೀಗಿದ್ದರೂ ನಿಮ್ಮಂತಹ ಯುವ ಕಲಾವಿದರು ಕಲೆಯ ಮಟ್ಟಿಗೆ ತೀರ ಅನಿವಾರ್ಯವಾಗುವಂತಹ ಕಾಲಘಟ್ಟ. ಯಾವುದೇ ಪಾತ್ರವನ್ನು ಅದು ಪುರುಷ ಅಥವ ಸ್ತ್ರೀ ಅಲ್ಲ ಬಣ್ಣ ಹೀಗೆ ಯಾವುದೇ ವೇಷಕ್ಕೂ ತಮ್ಮದೇ ಛಾಪನ್ನು ಮೂಡಿಸುವ ಸಾಮಾರ್ಥ್ಯ ನಿಮ್ಮಲ್ಲಿ ಗುರುತಿಸಬಲ್ಲವರು ಈ ಮಾತಿಗೆ ಪುಷ್ಟಿಯನ್ನು ಕಂಡುಕೊಳ್ಳಬಹುದು.

ವಾಡಿಕೆಯಲ್ಲಿ ಒಂದು ಮಾತು ಕೇಳಿ ಬರುವುದುಂಟು. ತೆಂಕು ತಿಟ್ಟು ಮಾತುಗಾರಿಕೆಗೆ ತೆರೆದುಕೊಂಡಷ್ಟು ನಾಟ್ಯ ಅಭಿನಯಕ್ಕೆ ಇಲ್ಲ ಎಂದು. ಆದರೆ ನಿಮ್ಮಂತಹ ಕಲಾವಿದ ಅದನ್ನು ಹೌದು ಎಂದು ನಂಬುವುದರಲ್ಲಿ ತೊಡಕಾಗಿ ಪರಿಣಮಿಸುತ್ತಾನೆ. ನಾಟ್ಯ ಅಭಿನಯ ಮಾತುಗಾರಿಕೆ ಎಲ್ಲದರಲ್ಲೂ ಸಮಾನ ಪ್ರತಿಭೆಯನ್ನು ಹೊಂದಿದ ನಿಮ್ಮಿಂದ ತೆಂಕು ತಿಟ್ಟು ಮಾತ್ರವಲ್ಲ ಸಮಗ್ರ ಯಕ್ಷಗಾನ ಲೋಕವೇ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಅದನ್ನು ಹುಸಿಗೊಳಿಸುವುದು ನಿಮ್ಮಿಂದ ಆಗದಂತಹ ಮಾತು ಎಂಬುದನ್ನು ನಾನು ಹೇಳಬಲ್ಲೆ. ಇಷ್ಟು ಮಾತ್ರವಲ್ಲ ತೆಂಕು ತಿಟ್ಟು ಯಕ್ಷಗಾನ ಲೋಕದಲ್ಲಿ ತಾಳಮದ್ದಲೆ ಪ್ರಾಕರವು ತನ್ನದೇ ಶೈಲಿಯಿಂದ ಜನಪ್ರಿಯತೆಯನ್ನು ಹೊಂದಿದೆ. ಮಾತ್ರವಲ್ಲ ಯಕ್ಷಗಾನದ ಅಶು ಕವಿತ್ವ ಎಂಬುದು ಏನಿದೆಯೋ ಅದಕ್ಕೆ ಸಾಕ್ಷಿಯಾಗಿಯೂ ಬೆಳೆದಿದೆ. ಯಕ್ಷಗಾನ ಬಯಲಾಟದಲ್ಲಿ ಸರ್ವಾಂಗೀಣ ಪ್ರತಿಭೆಯಿಂದ ಪ್ರಕಾಶಿತರಾಗುವ ನೀವು ತಾಳ ಮದ್ದಲೆ ಕೂಟಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ತೊಡಗಿಸಿಕೊಂಡರೆ ನಿಮ್ಮಲ್ಲಿ ಅಂತರ್ಗತವಾಗಿರುವ ಕಲಾವಿದನಿಗೂ ಒಂದು ಹೊಸ ಆಯಾಮವನ್ನು ಕೊಟ್ಟಂತೆ. ಇದು ನನ್ನಂತಹ ಅಭಿಮಾನಿಗಳ ಬೇಡಿಕೆ.ಯಾವುದೇ ವಿದ್ಯೆಯನ್ನಾದರೂ ನಿರತ ಸಾಧನೆಯಿಂದ ಅಭ್ಯಸಿಸಿ ಅದರಲ್ಲಿ ಪರಿಣತನಾಗಬಹುದು. ಆದರೆ ಕಲೆ ಎಂಬುದು ಅದು ದೈವದತ್ತವಾದುದು. ಸತತ ಸಾಧನೆಯಿಂದ ಅದನ್ನು ಪೋಷಿಸುವುದು ಮಾತ್ರ ಸಾಧ್ಯ. ಹೀಗಾಗಿ ದೈವದತ್ತ ಕಲೆ ನಿಮ್ಮಲ್ಲಿದೆ. ಅದು ಇನ್ನು ಬೆಳಗುವಂತೆ ದೈವಾನುಗ್ರಹ ಸದಾ ತಮ್ಮೊಂದಿಗೆ ಇರಲಿ. ಕಲಾಭಿಮಾನಿಗಳ ಅಭಿಮಾನ ನಿಮ್ಮಲ್ಲಿ ಸದಾ ಇರುವಂತೆ ಆನುಗ್ರಹಿಸಲಿ.

ಇಂತಿ ನಿಮ್ಮ ಅಭಿಮಾನಿ..



Thursday, November 12, 2009

ಮಧುರಗಾನದ ಅನ್ವರ್ಥ ತೆಂಕಬೈಲು


"ತೆಂಕಬೈಲು" ಎಂದಾಕ್ಷಣ ಯಕ್ಷಗಾನ ವಲಯದಲ್ಲಿ ಒಂದು ಶಬ್ದ ಉಚ್ಚಾರದಿಂದಲೇ ವಿಶಿಷ್ಟ ಅನುಭವ ಕೊಡುವ ಈ ಶಬ್ದ , ಕಲಾಭಿಮಾನಿಗಳಿಗೆ ಮಧುರ ಸಿಂಚನದ ನೆನಪು ಮರುಕಳಿಸಿ ಮಧುರಗಾನದ ಆಲಾಪನೆಯ ಅನುಭವವಾದರೆ ಅತಿಶಯವಲ್ಲ. ಯಕ್ಷಗಾನದ ಈ ಬೈಲು ದಕ್ಷಿಣ ಕನ್ನಡದ ಕುಗ್ರಾಮವಾದರೂ ಯಕ್ಷಗಾನ ಅಭಿಮಾನಿಗಳಿಗೆ ಒಂದು ಪುಣ್ಯಕ್ಷೇತ್ರ. ಈ ಕ್ಷೇತ್ರಕ್ಕೆ ಅನ್ವರ್ಥವಾಗಿ ಬೆಳೆದು ಬಂದ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಮಧುರವಾದ ಭಾಗವತಿಕೆಗೆ ಅನ್ವರ್ಥವಾದವರು.

ವಿಲಕ್ಷಣ ವ್ಯಕ್ತಿತ್ವದ ಅಪ್ಪಟ ಪ್ರತಿಭಾವಂತ ಯಾರೂ ಅನುಕರಿಸಲಾಗದ ತಮ್ಮ ವಿಶಿಷ್ಟ ಶೈಲಿಯಿಂದ ಹೆಸರಾದವರು. ಭಾಗವತಿಕೆಗೆ ಇಂಪಿನ ಮೆರುಗನ್ನು ಕೊಟ್ಟು ಕೇಳುಗರನ್ನು ತಟ್ಟಿ ಮಲಗಿಸುವ ಮುದ್ದಾದ ಶ್ರಾವ್ಯ ಭಾಗವತಿಕೆಗೆ ಹೆಸರಾದವರು. ಇಂದಿನ ಯುವ ಕಲಾವಿದರು ಇವರ ಶೈಲಿಯನ್ನು ಅನುಕರಿಸಿ ಆ ಶೈಲಿಯ ಅನರ್ಘ್ಯ ರತ್ನದಒಡೆಯರಾಗುವ ಕನಸನ್ನು ಕಂಡು ಅನುಕರಿಸಿದರೆ ಕೇವಲ ಇವರ ಛಾಯೆಯನ್ನಷ್ಟೇ ಕರರಗತ ಮಾಡಿಕೊಳ್ಳುವಲ್ಲಿ ಮಾತ್ರ ಯಶಸ್ವಿ. ಮರೀಚಿಕೆಯಾಗುವ ಇವರ ಶೈಲಿ ಇಂದಿನವರಿಗೆ ಕೇವಲ ನೆರಳು ಮಾತ್ರ ಕರಗತ. ಆ ಸ್ವರ ಶೈಲಿಗೆ ತೆಂಕಬೈಲು ಮಾತ್ರ ಸಮರ್ಥರು. ಅಷ್ಟು ಅನುಕರಿಸಲಾಗದ ಅದ್ಭುತ ಭಾಗವತಿಕೆಶೈಲಿ.
ಫಾರಂ ನಲ್ಲಿರುವ ಕ್ರಿಕೆಟ್ ಆಟಗಾರ ಅನುಕೂಲ ಪಿಚ್ ಮೇಲೆ ಹೇಗೆ ದಾಖಲೆ ಮೇಲೆ ದಾಖಲೆ ಹೇಗೆ ಗುಡ್ಡೆ ಹಾಕಬಲ್ಲನೋ ಅಂತೆ ತೆಂಕಬೈಲು ಹಾಡುಗಾರಿಕೆ. ಉತ್ತಮ ವಾತವರಣ , ಸಹಕಾರಿ ಹಿಮ್ಮೇಳ ಹಾಗು ಇದಕ್ಕೆಲ್ಲ ಒಪ್ಪುವಂತೆ ಹೊಂದಿಕೊಂಡ ಕಂಠ ಇದ್ದ ದಿನ ವೇಷದವರೊಂದಿಗೆ ಪ್ರೇಕ್ಷಕರನ್ನೂ ಹುಚ್ಚೆಬ್ಬಿಸಿ ಕುಣಿಸಬಲ್ಲರು.ಅಷ್ಟೊಂದು ಅಯಸ್ಕಾಂತಿಯ ಗುಣ ಇವರ ಇಂಪಾದ ಮಧುರವಾದ ಭಾಗವತಿಕೆಗೆ ಸಣಕಲು ಶರೀರದ ನರಗಳೇ ಎದ್ದು ಕಾಣುವ ಗಂಟಲಿಂದ ಸ್ವರವೆರಿಸಿ ಹಾಡಿದರೆಂದರೆ ಇವರು ಯಾರನ್ನು ಗಣ್ಯ ಮಾಡುವವರಲ್ಲ.ಸ್ವರವೇರಿಸಿದಂತೆ ಸ್ವರದ ಮೂರ್ಧನ್ಯಾವಸ್ಥೆಗೆ ಮುಟ್ಟುವಾಗ ಇವರ ಶ್ವೇತವರ್ಣದ ಮುಖವೂ ಕೆಂಪಾಗುವುದನ್ನು ನೋಡುವುದೇ ಒಂದು ಸೊಗಸು. ಹೀಗಾಯಿತೆಂದರೆ ಆದಿನ ತೆಂಕಬೈಲು ಫುಲ್ ಫಾರಂ ನಲ್ಲಿದ್ದಾರೆಂದೇ ಲೆಕ್ಕ.

ಹಲವರು ಇವರ ಶೈಲಿ ಯನ್ನು ಅನುಕರಿಸಿದರೂ ಇವರು ಹಾಡುವುದಕ್ಕೆ ತೊಡಗಿದರೆ ಎಲ್ಲರಿಗಿಂತ ಭಿನ್ನವಾಗಿ ತೋರುವ ಇವರ ಶೈಲಿ ಯಾರು ಮುಟ್ಟಲಾಗದ ಭದ್ರ ಕೋಟೆಯೋಳಗಿದ್ದಂತೆ ಭಾಸವಾಗುವುದು. ಅದಕ್ಕೆ ಇವರೇ ಏಕಮಾತ್ರ ವಾರಸುದಾರರು. ಅದಕ್ಕೆ ಕಾರಣ ಇವರ ಇಂಪಾದ ಮಧುರ ಸ್ವರ ಶ್ರೀಮಂತಿಕೆ. ಹಲವರ ಅಭಿಮತದಂತೆ ಇವರ ಭಾಗವತಿಕೆ ಕೇಳಲು ನಿರೀಕ್ಷೆಗಳೊಂದಿಗೆ ಹೋದರೆ ನಿರಾಶೆಯಾಗುವುದು ಅಧಿಕ ಆದರೂ ಇವರ ಹೆಸರು ಕರಪತ್ರದಲ್ಲಿ ನೋಡಿ ಹೋಗುವ ಅಭಿಮಾನಿಗಳಿಗೆ ಎಂದೂ ಕೊರತೆಯಿಲ್ಲ. ಯಾಕೆಂದರೆ ತೆಂಕಬೈಲು ಒಂದು ಸಲ ಸ್ವರ ಹೊಂದಿಸಿ ಆ ಸ್ವರ ಅವರ ಅಂಕೆಗೆ ಸಿಲುಕಿದರೆ ಮತ್ತೆ ಕಳೆದ ಎಲ್ಲ ನಿರಾಶೆಯನ್ನು ನೀಗಿಸಿ ಗಂಧರ್ವ ಲೋಕದ ಅದ್ಭುತ ರಸ ರಾಗದ ಸುಧೆಯನ್ನೇ ಹರಿಸಬಲ್ಲರು.!!! ಈ ನಿರೀಕ್ಷೆಯಲ್ಲೇ ಹಲವರು ತೆಂಕ ಬೈಲು ಹೆಸರಿಂದ ಆಕರ್ಷಿತರಾಗುವುದು. ಅಂತಹ ಮಾಂತ್ರಿಕ ಸ್ವರ ಸಂಪತ್ತು ಇವರದು. ಕಳಪೆಯನ್ನೇ ನಿರೀಕ್ಷಿಸಿ , ಗೊಣಗುತ್ತ ಇವರ ಪದ ಕೇಳಲು ಹೋಗುವ ನಿರೀಕ್ಷೆಯೇ ಅದು ಆ ಮಾಂತ್ರಿಕ ಸ್ವರ ಕೇಳುವ ಅವಕಾಶ ವಂಚಿತರಾಗಬಾರದಲ್ಲ? ಬೇರೆ ಯಾವ ಭಾಗವತರಲ್ಲೂ ಈ ರೀತಿಯ ನಿರೀಕ್ಷೆ ಇಟ್ಟು ಕಲಾಭಿಮಾನಿಗಳು ಮುಗಿ ಬೀಳುವುದನ್ನು ಕಾಣಲು ಸಾಧ್ಯವಿಲ್ಲ. ಅಂತಹ ಚುಂಬಕ ಸ್ವರದ ಚಕ್ರವರ್ತಿ ಇವರು.

ಬಹಳ ವಿಲಕ್ಷಣ ವ್ಯಕ್ತಿತ್ವ ಇವರದ್ದು. ಇದುವರೆಗೂ ಯಾವುದೇ ಮೇಳದ ಕಲಾವಿದನಾಗಿಯೋ, ಸದಸ್ಯನಾಗಿಯೋ, ವೃತ್ತಿಕಲಾವಿದನಾಗಿಯೋ, ಇವರನ್ನು ಕಂಡ ನೆನಪು ನನ್ನ ಅರಿವಿನಲ್ಲಿ ಇಲ್ಲ. ಬಹುಶ: ಅತ್ಯಂತ ಆಕರ್ಷಣೆಯನ್ನು ಇರಿಸಿಕೊಂಡು ಅತೀ ದೀರ್ಘಕಾಲ ಕಲಾರಂಗದಲ್ಲಿ ಹವ್ಯಾಸಿಯಾಗಿಯೇ ಉಳಿದ ಅತಿ ಶ್ರೇಷ್ಠ ಕಲಾವಿದರು ಇವರೊಬ್ಬರೇ ಅಂತ ನನ್ನ ಅನಿಸಿಕೆ.

ಇಂದಿಗೂ ಸಡ್ಡು ಹೊಡೆದು ನಿಲ್ಲ ಬಲ್ಲ ಇವರ ಕಂಠದ ಸ್ವರಭಾರ ಅದ್ಭುತ ಅನ್ನಿಸಿಬಿಡುತ್ತದೆ. ವೃತ್ತಿಯೋ, ಪ್ರವೃತ್ತಿಯೋ ಒಂದನ್ನೂ ತಲೆಗೆ ಹಚ್ಚಿಕೊಳ್ಳದೆ ಸಣಕಲು ಕೈಯಲ್ಲಿ ಜಾಗಟೆ ಕೋಲು ಹಿಡಿದು ವಾರೆ ಭಂಗಿಯಲ್ಲಿ , ಕಣ್ಣು ಮುಚ್ಚಿ ಸ್ವರ ಸಿದ್ದಿಗೊಳಿಸಿ ಹಾಡಿದರೆಂದರೆ ತೆಂಕಬೈಲಿಗೆ ತೆಂಕಬೈಲೇ ಸಾಟಿ. ತೆಂಕಣ ಸ್ವರಕ್ಕೆ ಯಾವುದೇ ಉತ್ತರ ಇಲ್ಲ.
ಹಲವು ಕಲಾವಿದರು ರಂಗದ ಮೇಲೆ ಸ್ಫೂರ್ತಿ ಪಡೆಯುವುದನ್ನು ಕಂಡೇ ಆಸ್ವಾದಿಸಬೇಕು. ಹಾಗೆ ಸಹಕಲಾವಿದರಿಂದ ಸ್ಫೂರ್ತಿಪಡೆದು ಇವರು ಹಾಡುತ್ತಾ ಸ್ವರ ಏರಿಸುತ್ತಾ ಹೋದಂತೆ ಬಿಳಿಯಾದ ಮುಖ ಕೆಂಪಾಗುವುದು ನೋಡುವುದೇ ಒಂದು ಚೆಂದ.ಕರ್ಣಪರ್ವ, ದಕ್ಷಯಜ್ಞ ಸುಧನ್ವಾರ್ಜುನ, ಹತ್ತು ಹಲವು ಪುರಾಣಿಕ ಪ್ರಸಂಗಗಳ ಪದಗಳು ಇವರದೇ ಶೈಲಿಯಲ್ಲಿ ಮೈತಳೆದು ಮೇಳೈಸಿದರೆ ಪ್ರೇಕ್ಷಕರು ರಾಗಸುಧೆಯಲ್ಲಿ ಇಹವನ್ನೇ ಮರೆತು ಲೋಕಾಂತರಿಗಳಾಗುತ್ತಾರೆ. ಅದ್ಭುತ ರಾಗಸುಧೆ ಈ ಬಡಕಲು ಶರೀರದ ಒಳಗಿಂದ ಹರಿದು ಬರುವಾಗ, ಯಕ್ಷಗಾನ ರಸಿಕರು ತಮ್ಮ ಮನಸ್ಸಿನ ತಂಬಿಗೆಯಲ್ಲಿ ಎಷ್ಟು ಬಂತೋ ಅಷ್ಟನ್ನು ಮೊಗೆದು ಹೀರಿಕೊಳ್ಳುವುದರಲ್ಲಿ ಪಾವನರಾಗಿಬಿಡುತ್ತಾರೆ.
ಅದ್ಭುತ ರಸಸಿದ್ದಿಯ ಈ ಗಂಧರ್ವ ಪುತ್ರ ಹಲವು ಕಾಲ ರಸಿಕರನ್ನು ತಮ್ಮ ಗಾನಾಮೃತದಲ್ಲಿ ಮುಳುಗಿಸಲಿ. ಆ ಹಿತವಾದ ಅನುಭವ ಪಡೆಯುವ ಕಲಾರಸಿಕರ
ಹರಕೆಯನ್ನು ಇನ್ನೂ ಭಗವಂತನು ಈಡೇರಿಸಲು ಈ ಕಲಾ ಚೇತನಕ್ಕೆ ಇನ್ನೂ ಸ್ಪೂರ್ತಿ ಶಕ್ತಿಯನ್ನು ಕರುಣಿಸಲಿ.




Thursday, October 15, 2009

ಅಮ್ಮಣ್ಣಾಯ ಎಂಬ ತಣ್ಣನೆಯ ಭಾಗವತ

ಎರಡು ವರ್ಷದ ಮೊದಲ ಒಂದು ದಿನ, ಎಡನೀರು ಮೇಳದ ಆಟ ಗಿರಿನಗರದ ಗಣಪತಿ ದೇವಾಲಯದ ಬಳಿ. ಪ್ರಸಂಗ ವೀರಮಣಿ ಕಾಳಗ ಮತ್ತು ರಕ್ತ ರಾತ್ರಿ . ಬೆಂಗಳೂರಿಗೆ ಬಂದಮೇಲೆ ಎಡನೀರು ಮೇಳದ ಹಲವು ಆಟ ನೋಡಿದ್ದರೂ ಈ ಆಟ ಮಾತ್ರ ಅಚ್ಚಳಿಯದ ನೆನಪನ್ನು ಛಾಪು ಮೂಡಿಸಿದೆ. ಅಂದು ಅಮ್ಮಣ್ಣಾಯರು ಭಾಗವತರಾಗಿ ಕುಳಿತಕೂಡಲೇ ಯಕ್ಷಗಾನದ ಲಯವೇ ಬದಲಾಗಿಬಿಟ್ಟಿತು.ಅಮ್ಮಣ್ಣಾಯಾರ ಭಾಗವತಿಕೆ ವೀರ ರಸದ ಪ್ರಸಂಗಗಳಿಗೆ ಹೊಂದುವುದಿಲ್ಲ ಎಂಬ ಸಣ್ಣ ಭಾವನೆ ಮನಸ್ಸಿನ ಮೂಲೆಯಲ್ಲಿತ್ತು.




ಅದು ಮೊದಲು ತುಳು ಪ್ರಸಂಗಗಳನ್ನೇ ಅಧಿಕವಾಗಿ ನೋಡಿದ ಪರಿಣಾಮವೋ ಏನೋ.? ವೀರಮಣಿ ಕಾಳಗ ಮತ್ತು ರಕ್ತ ರಾತ್ರಿಯಂತಹ ಪ್ರಸಂಗ ಅಮ್ಮಣ್ಣಾಯರ ಸೂತ್ರಧಾರಿಕೆಯಲ್ಲಿ ಹೇಗೆ ಪ್ರದರ್ಶನಗೊಳ್ಳಬಹುದು ? ಎಂಬ ಕುತೂಹಲ ಇದ್ದೆ ಇತ್ತು. ಆ ಕುತೂಹಲ ಒಂದು ಸುಂದರ ಆಟ ನೋಡುವಲ್ಲಿ ತಣಿಯಿತು.
ನಾನು ನೋಡಿದ ಅತ್ಯದ್ಭುತ ಹಿಮ್ಮೇಳದ ಜತೆಗಾರಿಕೆಯಲ್ಲಿ ಇದ್ದೂ ಒಂದು ಎಂದನಿಸಿತು. ಅಮ್ಮಣ್ಣಾಯರೊಂದಿಗೆ ಪ್ರಭಾಕರ ಗೋರೆ, ಚೆಂಡೆಯೊಂದಿಗೆ ಯುವ ಪ್ರತಿಭಾವಂತ ನಿಡ್ಲೆ ಅಜ್ಜನ ಪಟ್ಟ ಶಿಷ್ಯ ದೇಲಂತ ಮಜಲು ಸುಬ್ರಹ್ಮಣ್ಯ ಭಟ್ ಜತೆಗೂಡಿ ಮರೆಯದ ಹಿಮ್ಮೇಳದ ರಸಾಸ್ವಾದನೆಯನ್ನು ಅಂದು ಉಣಬಡಿಸಿದರು. ಹೊಂದಾಣಿಕೆಯ ಹಿಮ್ಮೇಳ ಇದ್ದರೆ ಯಕ್ಷಗಾನ ಹೇಗೆ ಕಳೆ ಕಟ್ಟುತ್ತದೆ ಎಂಬುದಕ್ಕೆ ಇದು ಸಾಕ್ಷಿಯದಂತೆನಿಸಿತು.
ಅಮ್ಮಣ್ಣಾಯಾರ ಭಾಗವತಿಕೆಯ ಇಂಪಾದ ಸ್ವರದ ಪ್ರಭಾವ ಅದು ಸವಿಯುವಾಗಲೇ ಅನುಭವವೇದ್ಯವಾಗುವುದು. ಮಾಧುರ್ಯ ತುಂಬಿದ ಕಂಠ ಸೌಮ್ಯತೆಯ ಅನುಭವ ತಂದರೂ ಗಡಸುತನದ ಛಾಯೆಯಲ್ಲೇ ಮಾರ್ದನಿಸುತ್ತದೆ. ಯಕ್ಷಗಾನಕ್ಕೆ ಒಪ್ಪುವ ಆ ಗಡಸು ಸ್ವರ ಇತ್ತೀಚಿಗೆ ತುಂಬಾ ಪಳಗಿದಂತೆ ಅನುಭವದ ಸೆಲೆಯನ್ನು ತೋರಿಸುತ್ತದೆ. ಸುಲಭವಾಗಿ ಯಕ್ಷಗಾನ ಭಾಗವತಿಕೆಯನ್ನು ಆಸ್ವಾದಿಸಬಹುದಾದ ಭಾಗವತಿಕೆ ಇವರದ್ದು. ರಂಗದ ಮೇಲೆ ಬಂದ ಮೇಲೆ ಶಿಸ್ತಿನ ಸಿಪ್ಹಾಯಿಯಂತೆ ತಣ್ಣಗೆ ಪಾತ್ರಧಾರಿಯನ್ನೇ ಗಮನಿಸುತ್ತಾ ಆತನ ಹಿನ್ನೆಲೆಯ ಅಭಿನಯದಲ್ಲೇ ಮುನ್ನೆಲೆಯನ್ನು ಸಮರ್ಥವಾಗಿ ನಿರ್ವಹಿಸುವ ಚಾಣಾಕ್ಷತೆ. ಅನಗತ್ಯ ಹರಟೆ ಹೊಡೆಯದ ಪ್ರದರ್ಶನದಲ್ಲೇ ತಲ್ಲೀನನಾಗುವ ಇವರ ಕಲೆಯ ಮೇಲಿನ ಅರ್ಪಣಾ ಭಾವ, ಶಿಸ್ತು ಇಂದಿನ ಯುವ ಕಲಾವಿದರಿಗೆ ಅನುಕರಣೀಯ. ಹೆಗಲ ಉತ್ತರೀಯದ ನೂಲಿನ ಎಳೆ ಕೂಡ ಅಲುಗದಂತೆ ಆರಂಭದಿಂದ ಕೊನೆಯವರೆಗೂ ಸ್ತಿತಪ್ರಜ್ಞರಾಗಿ ಪ್ರೇಕ್ಷಕರೊಂದಿಗೆ ಸ್ವರದಿಂದ ಒಂದಾಗಿ ಬೆರೆಯುತ್ತಾರೆ. ಇಂಪಾದ ಗಾನ ಮಾಧುರ್ಯದ ಹೊನಲನ್ನು ಯಕ್ಷಗಾನ ರೀತಿಯಲ್ಲಿ ಸವಿಯಬೇಕಾದರೆ ಇವರ ಭಾಗವತಿಕೆ ಹೆಚ್ಚು ಸೂಕ್ತವೆನಿಸುತ್ತದೆ. ಒಂದೊಮ್ಮೆ ಭೋರ್ಗರೆವ ಹೊಳೆಯಂತೆ ಧುಮ್ಮಿಕ್ಕಿದರೆ ಮರುಕ್ಷಣ ಮಂದಗಾಮಿನಿಯಂತೆ ಶಾಂತವಾಗಿ ಪ್ರವಹಿಸುತ್ತದೆ.

ದಿವಂಗತ ದಾಮೋದರ ಮಂಡೆಚ್ಚ ಭಾಗವತರ ಪ್ರಭಾವ ಹೆಚ್ಚಾಗಿ ಕಂಡು ಬಂದರೂ ದಿವಂಗತ ಕಾಳಿಂಗ ನಾವಡರ ಶೈಲಿಯನ್ನು ಇವರಷ್ಟು ಸಮರ್ಥವಾಗಿ ಕರಗತ ಯಾರೂ ಮಾಡಿಲ್ಲ ಇದು ನನ್ನ ಭಾವನೆ.ಆರಂಭದಲ್ಲಿ ತಣ್ಣಗೆ ನಿಧಾನವಾಗಿ ಆರಂಭವಾಗುವ ಇವರ ಭಾಗವತಿಕೆ ಮತ್ತೆ ರಾಗ ಸುಧೆಯಲ್ಲಿ ಪ್ರೇಕ್ಷಕರನ್ನು ಮುಳುಗಿಸಿ ಆ ರಾಗದ ಗುಂಗು ಯಕ್ಷಗಾನ ಮುಗಿದು ದಿನಕಳೆದರೂ ಹಾಗೇ ಮಧುರ ಅನುಭವದ ಸಿಂಚನವನ್ನು ಕೊಡುತ್ತದೆ.


ಇವರಿಗೆ ಹಲವರು ಹಿಮ್ಮೇಳಕ್ಕೆ ಸಹಕಾರಿ ಯಾಗಿದ್ದರೂ ಇವರ ಇತ್ತೀಚೆಗಿನ ಜತೆಗಾರಿಕೆ ಮಾಂತ್ರಿಕ ಹಸ್ತದ ಮದ್ದಲೆಗಾರ ಪ್ರಭಾಕರ ಗೋರೆ ಹಾಗು ದೇಲಂತ ಮಜಲು ಸುಬ್ರಹ್ಮಣ್ಯ ಭಟ್. ಈ ತ್ರೀ ಮೂರ್ತಿಗಳು ಜತೆಗೂಡಿದರೆ ಅದ್ಭುತ ಹಿಮ್ಮೇಳದ ಅನುಭವವನ್ನು ಖಂಡಿತವಾಗಿ ಸವಿಯಬಹುದು. ನನ್ನ ಅಂಬೋಣದಂತೆ ಗೋರೆಯವರ ಮದ್ದಲೆ ವಾದನ ಇವರ ಭಾಗವತಿಕೆಗೆ ಹೆಚ್ಚು ಒಪ್ಪುತ್ತದೆ. ಇವರ ಪ್ರತಿಯೊಂದು ಪದಕ್ಕೂ ಗೊರೆಯವರು ಮಾನಸಿಕ ಭಾಷೆಯಲ್ಲಿ ಹತ್ತಿರವಾಗುತ್ತಾರೆ. ಪದವನ್ನು ಹಿಂಬಾಲಿಸುವ ರೀತಿ, ಆ ಪದವನ್ನು ಸ್ವತಹ ಆಲಿಸಿ ಅದರಲ್ಲಿ ತಲ್ಲೀನನಾಗಿ ಬಾರಿಸುವ ಅವರ ವಾದನ ಶೈಲಿ ಆ ಶರೀರ ಭಾಷೆ ನೋಡುಗರಿಗೆ ಅದೊಂದು ಚಿತೊಹಾರಿ ಅನುಭವ. ಗೋರೆ ಎಂಬ ಈ ಅದ್ಭುತ ಕೈಚಳಕದ ಮದ್ದಲೆ ವಾದಕ, ಯಕ್ಷಗಾನದ ಮದ್ದಲೆ ವಾದನದಲ್ಲಿ, ಯಕ್ಷಗಾನ ಲಯಕ್ಕೆ ಒಪ್ಪುವಂತೆ ತಬಲಾ ವಾದನವನ್ನೂ ಆವಿಷ್ಕರಿಸಿದವರು. ಆ ಮೂಲಕ ಹಿಮ್ಮೇಳಕ್ಕೆ ಮಾಂತ್ರಿಕ ಸ್ಪರ್ಶವನ್ನು ನೀಡಿ ಯಾವುದೇ ಭಾಗವತರ ಭಾಗವತಿಕೆಯ ಯಶಸ್ಸಿಗೆ ದೇಣಿಗೆ ನೀಡುವಲ್ಲಿ ಸಮರ್ಥರಾದವರು. ಇವರೊಂದಿಗೆ ಹಿಮ್ಮೇಳಕ್ಕೆ ಜತೆಯಾದರೆ ಯಕ್ಷಗಾನ ರಸಿಕರಿಗೆ ಮತ್ತೆ ಬೇರೆ ಔತಣ ಬೇಡ.
ಅಮ್ಮಣ್ಣಾಯರೊಂದಿಗಿನ ಗೋರೆ ಯಕ್ಷಗಾನ ಲೋಕ ಇತ್ತೀಚಿಗೆ ಕಂಡ ಅದ್ಭುತ ಜೋಡಿ. ಇದರೊಂದಿಗೆ ದೇಲಂತ ಮಜಲು ಅವರ ಚೆಂಡೆ ಇದ್ದರೆ ಅದು ಇನ್ನೊದು ಮಜಲನ್ನು ತೆರೆದು ತೋರಿಸಿದಂತೆ. ಇವರು ಸೌಮ್ಯ ಪದಗಳಿಗೆ ಮಾತ್ರ ಸೀಮಿತ ಎಂಬ ಎಣಿಕೆಯನ್ನು ಇವರು ಹಲವು ಸಲ ತಮ್ಮ ರಂಗದ ಮೇಲಿನ ಕಸುಬಿನಿಂದಲೇ ತಪ್ಪೆಂದು ಸಾಧಿಸಿ ತೋರಿಸಿದ್ದಾರೆ. ಪ್ರಸಂಗ ಎಳ್ಳು ಎಡವದೇ ಒಂದೇ ರೀತಿ ಸಾಗುವುದು ಇವರ ಭಾಗವತಿಕೆಯಲ್ಲಿ ನಾನು ಕಂಡುಕೊಂಡ ಮುಖ್ಯ ಲಕ್ಷಣ. ಸೀತಾ ಪರಿತ್ಯಾಗ.. ಅಥವಾ ಮಾನಿಷಾದ ಎಂಬ ಯಶಸ್ವಿ ಪ್ರಸಂಗ ಇವರಂತೆ ಆಡಿಸುವವರು ಯಾರೂ ಇರರಲಾರರು.

ಹೊಗಳಿಕೆಗೆ ಉಬ್ಬದ ತೆಗಳಿಕೆಗೆ ಸ್ಥಿತಪ್ರಜ್ಞತೆ ತೋರುವ ಇವರು ತನ್ನ ಭಾಗವತಿಕೆಯ ಮಧುರ ಕಂಠದಿಂದಲೇ ಮಾತಾಡುವ ಮೌನಿ ಇವರು.ಯಕ್ಷಗಾನ ಲೋಕದಲ್ಲಿ ಇನ್ನೂ ರಸಿಕರನ್ನು ರಂಜಿಸಿ, ಆ ಮೂಲಕ ಅದ್ಭುತ ಕಲೆ ಯಕ್ಷಗಾನಕ್ಕೆ ಇವರ ಸೇವೆಯು ಲಭ್ಯವಾಗುವ ವಿಪುಲ ಅವಕಾಶಗಳು ಇನ್ನೂ ಭಗವಂತನು ಅನುಗ್ರಹಿಸಲಿ .ಇದು ಅಮ್ಮಣ್ಣಾಯ ಸ್ವರ ರಸಿಕರ ಹರಕೆ.